ಉಳ್ಳ ಒಬ್ಬಳು ತನ್ನ ಕಣ್ಣಿನ ದೃಷ್ಟಿಯು ಎಲ್ಲ ಕಡೆಗೂ ವ್ಯಾಪಿಸುತ್ತಿರಲು ನೀಳವಾದ ಹುಬ್ಬುಗಳು ಕುಣಿಯುತ್ತಿರುವ ಬಾಯ ವಾಸನೆಯ ಮುತ್ತುತ್ತಿರುವ ದುಂಬಿಯ ಸಮೂಹವು ಸೂರ್ಯಪಾನೆ (ಬಿಸಿಲನ್ನು ಮರೆಮಾಡಲು ಉಪಯೋಗಿಸುವ ಒಂದು ಸಾಧನ) ಯಂತಾಗಲು ಲಜ್ಜೆಯಿಲ್ಲದೆ ನೋಡುವವರನ್ನು ಮೆಟ್ಟಿ ತಾಳಕ್ಕೆ ಸರಿಯಾಗಿ ಕುಣಿದಳು. ವ|| ಊರ್ವಶಿಯನ್ನೇ ಹೋಲುವ ಮತ್ತೊಬ್ಬಳು ಗಂಭೀರವಾದ ತನ್ನ ಹೊಸಯವ್ವನದ ಮದದಿಂದಲೂ ಮದ್ಯಪಾನ ಮದದಿಂದಲೂ ಅಳತೆ ಮೀರಿ ಸೊಕ್ಕಿ- ೯೦. ತನ್ನ ತುರುಬು ಮನ್ಮಥನ ಮೀನಿನ ಬಾವುಟದಂತೆ ಮೆಲ್ಲಮೆಲ್ಲಗೆ ಜೋಲಾಡುತ್ತಿರಲು ಒಳಉಡುಪು ಉಡಿದಾರದ ಹತ್ತಿರವೇ ಸಡಿಲವಾಗಿ ಜೋತುಬಿದ್ದಿರಲು ಮರ್ಮಸ್ಥಳವು ಹೊರಗೆ ಕಾಣಿಸುತ್ತಿರಲು ಒಡನೆಯೇ ಮೇಲಕ್ಕೆ ನೆಗೆದು ಹಕ್ಕಿಯಂತೆ ಶಬ್ದಮಾಡಿ ಬಿಕ್ಕಳಿಸುವ ತೇಗುವ ತನ್ನ ತೊಡಕುಗಳೇ ಮನಸ್ಸನ್ನು ನೂರು ಬಾರಿ ತಗುಲಿ ಹಿಂಸಿಸುತ್ತಿರಲು ಢಕ್ಕಾವಾದ್ಯಕ್ಕನುಗುಣವಾಗಿ ಆಶ್ಚರ್ಯವಾಗುವ ಹಾಗೆ ಕುಣಿದಳು. ವ|| ಹಾಗೆ ಅವರು ಆ ಕಡೆಗೂ ಈ ಕಡೆಗೂ ಅಳ್ಳಾಡುವ ತೂಗಾಟಗಳನ್ನೂ ಮರಸರಿಗೆ (?)ಯನ್ನೂ ಬಿಲ್ಲನ್ನೂ ಹಿಡಿದು ಭೂತಗಳ ಆಟವನ್ನು (ಬೂತಾಟಂ?) ಆಡುವುದನ್ನೂ ಗಂದೇಭವಿದ್ಯಾಧರನಾದ ಅರ್ಜುನನು ನೋಡಿ ಹೀಗೆಂದನು- ೯೧. ಕುಡಿಯುವವರನ್ನು ಕಳ್ ಕುಡಿಯುವವರು ಎಂದು ಹೇಳಬಹುದೇ? ಆಗದು. ಕುಡಿಯುವವರನ್ನು ಹಾಗೆ ಕುಡುಕರೆಂದರೆ ಅವರು ಲಜ್ಜಿತರಾಗುತ್ತಾರೆ. ಹಾಗೆ ಕುಡಿದರೂ ಅವರು ಎಲ್ಲರ ಹೃದಯವನ್ನೂ ಸೆರೆಹಿಡಿಯುತ್ತಾರಲ್ಲವೇ. ದೋಷವಾದುದೂ ಅವಲಂಬನದಿಂದ ಒಳ್ಳೆಯದೇ ಆಗುವುದಿಲ್ಲವೇ? ವ|| ಎನ್ನುತ್ತ ಬರುತ್ತಿದ್ದವನು ಒಂದೆಡೆಯಲ್ಲಿ ತನ್ನನ್ನು ಬಯ್ಯುತ್ತಿದ್ದ ಪ್ರಿಯಳನ್ನು ಬಿಡಲಾರದೆ ಅವಳ ಮನೆಯ ಮುಂದೆಯೇ ಸುಳಿದಾಡುತ್ತಿರಲು ಕೋಪಿಸಿಕೊಂಡ ಅವನ ಸ್ನೇಹಿತನು ಹೀಗೆಂದು ಅವನಿಗೆ ಬುದ್ಧಿ ಹೇಳಿದನು. ೯೨. ರತಿಕ್ರೀಡೆಗೆ ಒಪ್ಪದೆ ಜುಗುಪ್ಸೆಯಿಂದ ನಿನ್ನನ್ನು ಅವಳು ತ್ಯಜಿಸಿದರೂ (ನಿನಗೆ ಬೇಕಾದ) ಇಂತಿಂಥಾದ್ದನ್ನೆಲ್ಲ ಕೊಡುವನೆಂದ ನಿನಗೆ ಸುಳ್ಳು ಹೇಳಿದರೂ ನೀನು ಆಸೆ ತೋರಿಸಿ ನಿನ್ನ

ಮನಸ್ಸನ್ನು ಪ್ರಕಟಿಸಿದರೂ ಅವಳು ತನ್ನ ಮನಸ್ಸನ್ನು (ಪ್ರೇಮವನ್ನೂ) ಪ್ರಕಟಿಸದಿದ್ದರೂ ನೀನು ಅವಳನ್ನು ಕೂಡಿಕೊಂಡಿದ್ದರೂ ಅವಳು ತನ್ನ ಪ್ರತಿಪ್ರೇಮವನ್ನು ಪ್ರಕಟಿಸದಿದ್ದರೂ ನಿನಗೆ ಬಲವೂ ಛಲವೂ ಇದ್ದ ಪಕ್ಷದಲ್ಲಿ ಅವಳಿಗೆ ಅಸಹ್ಯಪಡದೆ ಪುನ ಅವಳಿಗಾಗಿ ಆಸೆ ಪಡುವುದೇ, ಅಂಜುವುದೇ, ಪುನ ವ್ಯಸನ ಪಡುವುದೇ, ಪುನ ಅವಳಿಗೆ (ಧನಕನಕಾದಿಗಳನ್ನು) ಕೊಡುವುದೇ? ವ|| ಎಂಬುದಾಗಿ ಹೇಳಿ (ಅವಳನ್ನು) ಬಿಸಾಡಿದನು. ಮತ್ತೊಬ್ಬನು ತನಗೆ ಕಪಟವಿಲ್ಲದೆ ಪ್ರೀತಿಸುತ್ತಿದ್ದ ಪ್ರಿಯಳನ್ನು ಯಾವುದರಲ್ಲಿಯೂ ಅಸಮಾಧಾನವನ್ನುಂಟುಮಾಡದೆ ಪ್ರೀತಿಯನ್ನು ನಿಲ್ಲಿಸಿದುದಕ್ಕೆ ಸಂತೋಷಪಟ್ಟು ಮುಂದಕ್ಕೆ ಕಾವಲಿಟ್ಟು ಹೀಗೆ ಹೇಳಿದನು.

ವ|| ಇನಿಯಂ ನೊಯ್ದುಮೊಡಂಬಡಂ ನುಡಿದೊಡೆಂದೆಂದಪ್ಪೊಡಂ ನಿನ್ನೊಳೆ
ಳ್ಳನಿತುಂ ದೋಷಮನುಂಟುಮಾಡದಿರೆಯುಂ ಕಣ್ಪಿಂತೆ ಸಂದಪ್ಪುದೊಂ|
ದನೆ ಕೇಳ್ದೋಪಳೆ ಕೂರ್ಮೆಗೆಟ್ಟೆನಗೆ ನೀನೇನಾನುಮೊಂದೇವಮಂ
ಮನದೊಳ್ ಮಾಡಿದೊಡಂದೆ ದೀವಳಿಗೆಯಂ ಮಾನಾಮಿಯಂ ಮಾಡೆನೇ|| ೯೩

ವ|| ಎಂದು ನುಡಿದಂ ಮತ್ತಮೊಂದೆಡೆಯೊಳೊರ್ವನೊರ್ವಳ ನಡೆಯ ನುಡಿಯ ಮುಡಿಯ ಗಾಂಪಿಂಗೆ ಮುಗುಳ್ನಗೆ ನಕ್ಕು ತನ್ನ ಕಳೆಯಂಗೆ ತೋಱ-

ಚಂ|| ನಯದೊಳೆ ನೋಡಿ ನೋಟದೊಳೆ ಮೇಳಿಸಿ ಮೇಳದೊಳಪ್ಪುಕೆಯ್ದು ಗೊ
ಟ್ಟಿಯೊಳೊಳಪೊಯ್ದು ಪತ್ತಿಸುವ ಸೂಳೆಯರಂದಮನೆಯ್ದೆ ಪೋಲ್ವಂ ಸೂ|
ಳೆಯರ ತುಱುಂಬು ಸೂಳೆಯರ ಮೇಲ್ನುಡಿ ಸೂಳೆಯರಿರ್ಪ ಪಾಂಗು ಸೂ
ಳೆಯರ ನೆಗೞ್ತೆ ನಾಡೆ ತನಗೞ ದಲಕ್ಕನೆ ಸೂಳೆಯಾಗಳೇ|| ೯೪

ವ|| ಎನೆ ಕೇಳ್ದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳೊಂದು ಕಂದದ ಮೊದಲುಮಂ ವೃತ್ತದ ತುದಿಯುಮನೊಂದುಮಾಡಿ ಪದಮಿಕ್ಕಿಯೋದಿ ಪಂಡಿತಿಕ್ಕೆಗೆ ಮುಯ್ವಾಂತು ಮಾವ ಕಾಳೆಗದೊಳಂ ತಾನೆ ಓಡಿಯಾರೋಡಿದರೆಂಬಂತೆ ಬೀರಕ್ಕೆ ಮುಯ್ವಾಂತುಮೊಂದು ವೀಸನಪ್ಪೊಡಮಾರ್ಗಮಿತ್ತಱಯದೆ ಚಾಗಕ್ಕೆ ಮುಯ್ವಾಂತುಂ ತಮ್ಮಂ ನಗುವರನಱಯದೆಣ್ಬರೇಱದ ಕೞ್ತೆಯಂತೆ ದೆಸೆದೆಸೆಗೆ ಬೆಸೆವ ಪಚ್ಚಪಸಿಯೆಗ್ಗರುಮಂ ಕಂಡು

ಚಂ|| ಇಱಯದ ಬೀರಮಿಲ್ಲದ ಕುಲಂ ತಮಗಲ್ಲದ ಚಾಗಮೋದದೋ
ದಱಯದ ವಿದ್ದೆ ಸಲ್ಲದ ಚದುರ್ ನೆ ಕಲ್ಲದ ಕಲ್ಪಿ ಕೇಳ ಮಾ||
ತಱಯದ ಮಾತು ತಮ್ಮ ಬಱುವಾತುಗಳೊಳ್ ಪುದಿದೆಗ್ಗರೆಯ್ದೆ ಕ
ಣ್ಣೆವಿನಮಾರ್ ಪೞಯದೇನೆಳೆಯಂ ಕಿಡಿಸಲ್ಕೆ ಬಲ್ಲರೋ|| ೯೫

ವ|| ಎನೆ ನಗುತ್ತುಂ ಬರೆಯೊಂದೆಡೆಯೊಳ್ ನಾಲ್ವರಯ್ವರ್ ಗಾೞ್ದೊೞರಿರ್ದಲ್ಲಿಗೊರ್ವ ನೆಗ್ಗಂ ಗೊಟ್ಟಿಗೆ ವಂದು ಕಣ್ಣಱಯದೆ ಸೋಂಕೆಯುಂ ಮನಮಱಯದೆ ನುಡಿಯೆಯುಮಾತನ ನಾಕೆಗಳ್ ಬಾಸೆಯೊಳಿಂತೆಂದರ್-

೯೩. ಅಡ್ಡಮಾತನ್ನಾಡಿದರೆ ಪ್ರಿಯನು ನೊಂದುಕೊಳ್ಳುತ್ತಾನೆ ಎಂದು ನನ್ನಲ್ಲಿ ನಾನು ಎಳ್ಳಷ್ಟು ದೋಷವನ್ನುಂಟುಮಾಡಿಕೊಳ್ಳದಿದ್ದರೂ ನೀನು ನನ್ನನ್ನು ಸರಿಯಾಗಿ ನೋಡುತ್ತಿಲ್ಲ ಎಂಬ ಭಾವನೆಯೇ ಇದೆ. ಎಲೈ ಪ್ರಿಯಳೇ ಕೇಳು. ಹೀಗೆ ನಿನ್ನ ಪ್ರೀತಿಯನ್ನು ಕಳೆದುಕೊಂಡಿರುವ ನನಗೆ ನೀನೇನಾದರೂ ಬಂದು ಆತನನ್ನು ಮನಸ್ಸಿನಲ್ಲಿ ಮಾಡಿದರೂ ಅಂದೇ ನಾನು ದೀವಳಿಗೆಯನ್ನೂ ಮಹಾನವಮಿಯನ್ನೂ ಮಾಡದಿರುತ್ತೇನೆಯೇ? ವ|| ಎಂಬುದಾಗಿ ನುಡಿದನು. ಬೇರೊಂದೆಡೆಯಲ್ಲಿ ಒಬ್ಬನು ಒಬ್ಬಳ ನಡತೆಯ ಮಾತಿನ ತುರುಬಿನ ದಡ್ಡತನಕ್ಕೆ ಮುಗುಳ್ನಗೆ ನಕ್ಕು ತನ್ನ ಸ್ನೇಹಿತನಿಗೆ ತೋರಿಸಿ ಹೇಳಿದನು. ೯೪. ನಯವಾಗಿ ನೋಡಿ, ನೋಡುವುದರಿಂದಲೇ ಪ್ರೀತಿಯುಂಟಾಗುವಂತೆ ಮಾಡಿ ಪ್ರೀತಿಯಿಂದಲೇ ಆಲಂಗಿಸಿ, ಆಲಿಂಗನದಿಂದಲೇ ಕೂಡಿಕೊಂಡು ಕೂಡುವುದರಿಂದಲೇ ವಶಪಡಿಸಿಕೊಂಡು ತಮ್ಮ ಮನಸ್ಸನ್ನು ಬೆಸೆಯುವ ಸೂಳೆಯರ ರೀತಿಯನ್ನು ಚೆನ್ನಾಗಿ ಹೋಲುವ ಸೂಳೆಯರ ತುರುಬು, ಸೂಳೆಯರ ಮೃದುವಾದ ಮಾತು, ಸೂಳೆಯರು ಇರುವ ಸ್ಥಿತಿ, ಸೂಳೆಯರ ನಡೆವಳಿಕೆ ಇವು ನನಗೆ ವಿಶೇಷವಾಗಿ ಪ್ರೀತಿಕರವಾದುವಲ್ಲವೇ? ಈ ಅಕ್ಕನ ಆಟ, ನೋಟ, ತುರುಬು, ರೀತಿ, ಚೇಷ್ಟೆಗಳನ್ನು ನೋಡಿದರೆ ಇವಳೂ ಸೂಳೆಯಾಗಿಯೇ ಇರಬೇಕಲ್ಲವೆ? ವ|| ಎಂಬುದನ್ನು ಕೇಳಿ ಮುಗುಳ್ನಗೆ ನಗುತ್ತ ಬರುತ್ತಿದ್ದವನು ಒಂದು ಕಡೆಯಲ್ಲಿ ಒಂದು ಕಂದಪದ್ಯದ ಆದಿಯನ್ನೂ ಮತ್ತೊಂದು ವೃತ್ತದ ಅಂತ್ಯವನ್ನೂ ಒಂದುಗೂಡಿಸಿ ಓದಿ ತನ್ನ ಪಾಂಡಿತ್ಯಕ್ಕೆ ಮೆಚ್ಚಿಕೊಳ್ಳುತ್ತಲೂ ಯಾವ ಕಾಳಗದಲ್ಲಿಯೂ ತಾನು ನಿಲ್ಲದೆ ಓಡಿಹೋಗಿ ಹೋರಾಡಿದನು ಎಂಬಂತೆ ತನ್ನ ಪರಾಕ್ರಮವನ್ನು ಹೊಗಳಿಕೊಳ್ಳುತ್ತಲೂ ಒಂದು ವೀಸವನ್ನಾದರೂ ಯಾರಿಗೂ ದಾನಮಾಡದೆ ತಾನು ತ್ಯಾಗಿಯೆಂದು ಜಂಭ ಕೊಚ್ಚಿಕೊಳ್ಳುತ್ತಲೂ ತಮ್ಮನ್ನು

ನೋಡಿ ನಗುವವರನ್ನು ತಿಳಿಯದೆ ಎಂಟುಜನ ಹತ್ತಿಕೊಂಡಿರುವ ಕತ್ತೆಯಂತೆ ದಿಕ್ಕುದಿಕ್ಕಿನಲ್ಲಿಯೂ ಗರ್ವವನ್ನು ಪ್ರದರ್ಶಿಸುತ್ತಲೂ ಇರುವ ಶುದ್ಧ ಹಸಿಯ ದಡ್ಡರನ್ನು ನೋಡಿ ೯೫. ಕಾದದ ಶೌರ್ಯ, ಇಲ್ಲದ ಕುಲ, ತಮ್ಮಲ್ಲಿಲ್ಲದ ತ್ಯಾಗ, ತಾವು ಓದದ ಓದು, ತಿಳಿಯದ ವಿದ್ಯೆ, ಸಲ್ಲದ ಜಾಣ್ಮೆ, ವಿಶೇಷವಾಗಿ ಕಲಿಯದ ಕಲಿಕೆ, ಆಡಲು ತಿಳಿಯದ ಮಾತು, ಇವು ತಮ್ಮ ವ್ಯರ್ಥಾಲಾಪಗಳಲ್ಲಿ ಸೇರಿರುವ ದಡ್ಡರು ಹೆಚ್ಚುತ್ತಿರಲು-ಗುಂಪಾಗಿರಲು-ಯಾರು ತಾನೆ ಅವರನ್ನು ಹಳಿಯುವುದಿಲ್ಲ? ಅವರು ಲೋಕವನ್ನು ಕೆಡಿಸಲು ಬಲ್ಲರೇನು? ವ|| ಎನ್ನಲು ಅದನ್ನು ಕೇಳಿ ನಗುತ್ತ ಬರುತ್ತಿರಲು ಒಂದು ಕಡೆಯಲ್ಲಿ ನಾಲ್ಕೈದು ಜನ ತಂಟಲುದಾಸಿಯರಿದ್ದ ಕಡೆಗೆ ಒಬ್ಬ ದಡ್ಡನು ಅವರ ಅಭಿಪ್ರಾಯವನ್ನು ತಿಳಿಯದೆ ಮುಟ್ಟಿ ಇಷ್ಟವನ್ನು ತಿಳಿಯದೆ ನುಡಿಯಲು ಆ ದಾಸಿಯರು ಅವನನನ್ನು ಕುರಿತು ತಮ್ಮ

ಉ|| ಭಾವಕನೆಂದೊಡಂ ಚದುರನೆಂದೊಡಮಾರ್ ಪೆಱರಾರೊ ನೀನೆ ನಿ
ನ್ನಾವ ಗುಣಂಗಳಂ ಪೊಗೞ್ವೊಡೆಲ್ಲವಱಂ ನೆದೆಮ್ಮೊಳಿಂತು ಸ|
ದ್ಭಾವದೆ ಗೊಟ್ಟಿರಲ್ ಬಯಸಿ ಬಂದೆಯದೀಗಳಿದೊಳ್ಳಿತಾಯ್ತು ಮಾ
ದೇವರ ಮುಂದಣಾತನೆನಲಲ್ಲದೆ ಪೇೞು ಪೆಱತೇನನೆಂಬುದೋ|| ೯೬

ವ|| ಎಂದಾತನನಾಕೆಗಳ್ ಕಾಡಿ ಕೊಱಚಾಡಿ ಕಳೆದರ್ ಮತ್ತಮೊಂದೆಡೆಯೊಳೊರ್ವಳ್ ತನ್ನನುೞದ ಪೊಸ ಬೇಟದಾಣ್ದನನೇಗೆಯ್ದುಂ ಪೊಗಲೀಯದೆ ತನ್ನಳಿಪನೆ ತೋಱ-

ಚಂ|| ಮನೆಯನಿವಂ ಮನೋಭವನಿವಂ ಪೊಸ ಸುಗ್ಗಿಯೊಳಾದದೊಂದು ಕಿ
ತ್ತನಿವನಿದೆನ್ನನೇನುೞಯಲೀಗುಮೆ ನೀನುೞದಾಗಳೆಂದು ಪೋ|
ಪನನಿರದೋಪನಂ ಮಿಡುಕಲೀಯದೆ ಕಾಲ್ವಿಡಿದೞ್ತು ತೋರ ಕ
ಣ್ಬನಿಗಳನಿಕ್ಕಿದಳ್ ತರಳಲೋಚನೆ ಸಂಕಲೆಯಿಕ್ಕಿದಂತೆವೋಲ್|| ೯೭

ವ|| ಮತ್ತೊರ್ವಂ ತನ್ನ ಸೂಳೆಯೊಳಾದ ಬೇಸಱಂ ತನ್ನ ಕೆಳೆಯಂಗಿಂತೆಂದಂ-

ಚಂ|| ಮುಳಿಸಱದಂಜಿ ಬಾೞ್ತೆಯಱದಿತ್ತು ಮನಂಗೊಳೆಯುಂ ಕನಲ್ವುದ
ರ್ಕಳವಿಯುಮಂತುಮಿಲ್ಲ ಸನಿಯನ್ನಳೆ ಕುಂಟಣಿ ಪೋದ ಮಾರಿಯ|
ನ್ನಳೆ ಮನೆದೊೞ್ತು ಸೀರ್ಕರಡಿಯನ್ನಳೆ ನಾದುನಿಯೊಲ್ದುಮೊಲ್ಲದ
ನ್ನಳೆ ಗಡ ಸೂಳೆಯೆಂದೊಡಿನಿತಂ ತಲೆವೇಸಱನೆಂತು ನೀಗುವೆಂ|| ೯೮

ವ|| ಎಂದು ನುಡಿದು ಗೆಂಟಾದಂ ಮತ್ತೊರ್ವ ಬೇಟಕಾರ್ತಿ ತಾಯ ಕಣ್ಣಂ ಬಂಚಿಸಿ ತನ್ನ ಮೋಪಿನಾಕೆಯ ಮನೆಗೆ ಪೋಪ ಬೇಟದಾಣ್ಮನಂ ಪಿಡಿದು-

ಉ|| ತಪ್ಪುದು ಮಾತು ದೂದವರ ಕೆಯ್ಯೊಳೆ ಕಾಲ್ವಿಡಿದಟ್ಟಿ ಕಣ್ಣ ನೀರ್
ತಪ್ಪುವು ನಿಚ್ಚಮಚ್ಚಿಗದೊಳೞ್ತು ಕರಂ ಬಿಸುಸುಯ್ಯೆ ಸುಯ್ದ ಸುಯ್|
ತಪ್ಪುದು ತಪ್ಪುದೆನ್ನ ತನು ಬೇಟದ ಕಾಟದೊಳಿಂತು ಕಂಡುಮಿ
ನ್ನಪ್ಪೊಡಮಾಸೆವಾತನೆನಗೋಪನೆ ನೀಂ ದಯೆಗೆಯ್ಯಲಾಗದೇ|| ೯೯

ರಹಸ್ಯಭಾಷೆಯಲ್ಲಿ ಹೀಗೆಂದರು -೯೬. ನಿನಗಿಂತ ರಸಿಕರೂ ಚತುರರೂ ಯಾರಿದ್ದಾರೆ. ನಿನ್ನ ಎಲ್ಲ ಗುಣಗಳನ್ನೂ ಹೊಗಳಲು ಹೊರಟರೆ ನೀನು ಸರ್ವಗುಣಸಂಪನ್ನನೆನ್ನಲೇಬೇಕು. ನೀನು ಸದ್ಭಾವದಿಂದ ನಮ್ಮಲ್ಲಿ ಕೂಡಲು ಬಯಸಿ ಬಂದಿದ್ದೀಯೆ; ಅದೀಗ ಒಳ್ಳೆಯದಾಯಿತು. ನೀನು ಮಹಾದೇವನಾದ ಶಿವನ ಮುಂದಿರು ಬಸವನಲ್ಲದೆ ಮತ್ತೇನೆಂದು ಹೇಳೋಣ- ವ|| ಎಂದು ಅವರು ಆತನನ್ನು ಕಾಡಿ ಕಡೆಗಣಿಸಿ ಮಾತನಾಡಿ ಕಳುಹಿಸಲು ಬೇರೊಂದೆಡೆಯಲ್ಲಿ ಒಬ್ಬಳು ತನ್ನನ್ನು ಬಿಟ್ಟುಹೋಗುತ್ತಿದ್ದ ಹೊಸ ಪ್ರೇಮದ ಒಡೆಯನನ್ನು ಏನು ಮಾಡಿದರೂ ಹೋಗುವುದಕ್ಕೆ ಬಿಡದೆ ತನ್ನ ಪ್ರೀತಿಯನ್ನು ತೋರಿಸಿ ೯೭. ಇವನು ಮನೆಯ ಯಜಮಾನ, ಇವನು ಮನ್ಮಥ, ಪ್ರಥಮ ಪ್ರೇಮಕಾಲದ ಚಿಕ್ಕ ಹರೆಯದವ; ಇವ ನನ್ನನ್ನು ಬಿಟ್ಟಾಗ ನಾನು ಉಳಿಯುವುದು ಸಾಧ್ಯವೇ? ಎಂದು ಹೋಗುತ್ತಿರುವ ಪ್ರಿಯನನ್ನು ಸುಮ್ಮನೆ ಚಲಿಸುವುದಕ್ಕೂ ಬಿಡದೆ ಕಾಲುಗಳನ್ನು ಕಟ್ಟಿಕೊಂಡು ಅತ್ತು ಸಂಕೋಲೆ ಹಾಕಿದಂತೆ ಚಂಚಲನೇತ್ರೆಯಾದ ಅವಳು ವಿಶೇಷವಾಗಿ ಕಣ್ಣೀರನ್ನು ಸುರಿಸಿದಳು. ವ|| ಮತ್ತೊಬ್ಬನು ತನ್ನ ಸೂಳೆಯಲ್ಲಾದ ಬೇಸರವನ್ನು ತನ್ನ ಸ್ನೇಹಿತನಿಗೆ ಹೀಗೆ ಹೇಳಿದನು. ೯೮. (ಅವಳ) ಕೋಪಕ್ಕೆ ಹೆದರಿ (ಅವಳ) ಅಭಿಪ್ರಾಯವನ್ನು ತಿಳಿದು ಕೊಟ್ಟು ಅವಳ ಮನಸ್ಸನ್ನು

ವಶಪಡಿಸಿಕೊಂಡಿದ್ದರೂ ಅವಳು ರೇಗುವುದಕ್ಕೆ ಅಳತೆಯೂ ಅಂತ್ಯವೂ ಅಲ್ಲ. ತಲೆಹಿಡಿಕಿಯೂ ಶನಿಯಂತಹವಳೇ. ಮನೆಕೆಲಸ ಮಾಡುವ ದಾಸಿಯೂ ಮಾರಿಯಂತಹವಳೇ. ನಾದಿನಿಯು ಸೀರ್ಕರಡಿಯಂತಹವಳೇ. ಎಷ್ಟಾದರೂ ಸೂಳೆಯು ಒಲಿದೂ ಒಲ್ಲದಂತಿರುವವಳೆ ತಾನೆ! ಈ ತಲೆಬೇನೆಯನ್ನು ಹೇಗೆ ನೀಗಲಿ. ವ|| ಎಂದು ಹೇಳಿ ಮುಂದೆ ಹೋದನು. ಬೇರೊಬ್ಬ ಪ್ರಿಯಳು ತನ್ನ ತಾಯಿಯ ಕಣ್ಣನ್ನು ವಂಚಿಸಿ ತನ್ನ ಪ್ರಿಯಳ ಮನೆಗೆ ಹೋಗುತ್ತಿರುವ ತನ್ನ ಪ್ರೇಮದೊಡೆಯನನ್ನು ಹಿಡಿದುಕೊಂಡು

೯೯. ದೂದವಿಯರ ಕಯ್ಯಲ್ಲಿ ನಿನ್ನ ಕಾಲುಹಿಡಿದು ಕಳುಹಿಸಿದ ಮಾತುಗಳು ನಾಶವಾಗುತ್ತಿವೆ. (ನಿಷ್ಪ್ರಯೋಜಕವಾಗುತ್ತಿವೆ) ನಿತ್ಯವೂ ದುಖಪಟ್ಟು ಅಳುವುದರಿಂದ ಕಣ್ಣೀರು ವ್ಯರ್ಥವಾಗುತ್ತಿದೆ. ನಿಟ್ಟುಸಿರಿನ ಬಿಸಿಯುಸಿರು ಹಾಳಾಗುತ್ತಿದೆ. ನನ್ನ ಶರೀರವು ಬೇಟದ ಕಾಟದಿಂದ ಕ್ಷೀಣಿಸುತ್ತಿದೆ. ಇದನ್ನು ನೋಡಿಯೂ ಇನ್ನು ಮೇಲಾದರೂ ಆಶೆಯ ಮಾತನ್ನು ದಯೆಗೆಯ್ಯಬಾರದೇ? ವ|| ಎಂದು

ವ|| ಎಂದು ಕರುಣಂಬಡೆ ನುಡಿದೊಡಗೊಂಡು ಪೋದಳ್ ಮತ್ತಮೊಂದೆಡೆಯೊಳೊರ್ವಳ್ ಕುಂಟಣಿಯುಪರೋಧಕ್ಕೆ ಪಿರಿದೀವ ಮುದುಪನನುೞಯಲಂಜಿ ತನ್ನ ಬೇಸಱಂ ತನ್ನ ಸಬ್ಬವದಾಕೆಗಿಂತೆಂದಳ್-

ಚಂ|| ಕೊರೆವೊಡೆ ಬೆಟ್ಟುಗಳ್ ಬಿರುವುವುಣ್ಮುವ ಲಾಳೆಯ ಲೋಳೆಗಳ್ ಪೊನ
ಲ್ವರಿವುವು ಕೆಮ್ಮಿ ಕುಮ್ಮಿದೊಡೆ ತೋಳೊಳೆ ಜೀವ ವಿಯೋಗಮಪ್ಪುದೆಂ|
ದಿರದೆರ್ದೆಗಪ್ಪುದತ್ತಳಗಮಾ ನೆರೆಪಂ ನೆರೆವಂದು ಪೊಂಗಳಂ
ಸುರಿವೊಡಮಾರೊ ಸೈರಿಸುವರಾತನ ಪಲ್ಲಿಲ್ಲಿವಾಯ ನಾತಮಂ|| ೧೦೦

ವ|| ಎಂದು ನಗಿಸುತ್ತಿರ್ದಳ್ ಮತ್ತಮೊಂದೆಡೆಯೊಳೊರ್ವಳ್ ತನ್ನ ನಲ್ಲನಲ್ಲಿಗೆದೂದುವೋಗಿ ಬಂದ ದೂದವಿಗೇಗಯ್ವ ತೆಱನುಮನಱಯದೆ ಪದೆದು ಪಡೆಮಾತಂ ಬೆಸಗೊಳ್ವಳಂ ಕಂಡು-

ಚಂ|| ಬಿರಯಿಸಿ ಬೇಟದೊಳ್ ಬಿರಿವ ನಲ್ಲರಗಲ್ದು ಕನಲ್ದೊನಲ್ದು ನ
ಲ್ಲರ ದೆಸೆಯಿಂದಮೞವರೆ ಕೋಗಿಲೆಯಕ್ಕೆಲರಕ್ಕೆ ತುಂಬಿಯ|
ಕ್ಕರಗಿಳಿಯಕ್ಕೆ ಬಂದೊಡಮೊಱಲ್ದೆರ್ದೆಯಾಱುವರೆಂದೊಡೋತ ದೂ
ತರೆ ತರೆ ಬಂದ ಸಬ್ಬವದ ಮಾತುಗಳಂ ಗುಡಿಗಟ್ಟಿ ಕೇಳರೇ ೧೦೧

ವ|| ಅಂತುಮಲ್ಲದೆಯುಂ-

ಚಂ|| ಮನದೊಳಲಂಪನಾಳ್ದಿನಿಯನಟ್ಟಿದ ದೂದರ ಸೀಯನಪ್ಪ ಮಾ
ತಿನ ರಸದೊಳ್ ಕೊನರ್ವುದು ತಳಿರ್ವುದು ಪೂವುದು ಕಾಯ್ವುದಂತು ಕಾ
ಯ್ತನಿತಳಂತು ನಿಂದು ಮನದೊಳ್ ತೊದಳಿಲ್ಲದ ನಲ್ಮೆಯೆಂಬ ನಂ
ದನವನಮೋಪರೊಳ್ ನೆರೆದೊಡಂತು ರಸಂ ಬಿಡೆ ಪಣ್ತುದಾಗದೇ|| ೧೦೨

ವ|| ಅಂತುಮಲ್ಲದೆಯುಂ-

ಚಂ|| ಅನುವಿಸೆ ಬೇಟಕಾಱನೊಲವಿರ್ಮಡಿಯಪ್ಪುದು ಬಯ್ಕೆ ಬೇಟಕಾ
ಱನ ಬಗೆ ನಿಲ್ಲದಿಕ್ಕೆಗೊಳಗಪ್ಪುದು ನಿಟ್ಟಿಸೆ ಬೇಟ ಬೇಟಕಾ|
ಱನ ರುಚಿ ಬಂಬಲುಂ ತುಱುಗಲುಂ ಕೊಳುತಿರ್ಪುದು ನೂಂಕೆ ಬೇಟಕಾ
ಱನ ಮನವಟ್ಟಿ ಪತ್ತುವುದು ಬೇಟವಿದೇಂ ವಿಪರೀತವೃತ್ತಿಯೋ|| ೧೦೩

ಕರುಣೆಯು ಬರುವ ಹಾಗೆ ಮಾತನಾಡಿ ಜೊತೆಯಲ್ಲಿ ಕರೆದುಕೊಂಡು ಹೋದಳು. ಬೇರೊಂದು ಕಡೆಯಲ್ಲಿ ಕುಂಟಣಿಯ ಬಲಾತ್ಕಾರಕ್ಕೆ ವಿಶೇಷ ಧನವನ್ನು ಕೊಡುವ ಮುದುಕನನ್ನು ಬಿಡಲು ಅಂಜಿ ತನ್ನ ಬೇಸರವನ್ನು ತನ್ನ ಪ್ರಿಯಸಖಿಗೆ ಹೀಗೆಂದಳು. ೧೦೦. (ಆ ಮುದುಕನು) ಗೊರಕೆಹೊಡೆದರೆ ಬೆಟ್ಟಗಳೇ ಬಿರಿದು ಹೋಗುತ್ತವೆ. ಸುರಿಯುವ ಜೊಲ್ಲಿನ ಲೋಳೆಗಳು ಪ್ರವಾಹವಾಗಿ ಹರಿಯುತ್ತವೆ. ಕೆಮ್ಮಿ ಎದುಗುಟ್ಟಿದರೆ ತೋಳಿನಲ್ಲಿಯೇ ಜೀವ ಹೋಗುತ್ತದೆಯೆಂಬ ಭಯವುಂಟಾಗುತ್ತದೆ. (ಇಂತಹ) ಆ ಮುದುಕನು (ನನ್ನಲ್ಲಿ) ಕೂಡುವುದಕ್ಕೆ ಬಂದು (ಎಷ್ಟೇ) ಹೊನ್ನುಗಳನ್ನು ಸುರಿದರೂ ಅವನ ಹಲ್ಲಿಲ್ಲದ ಬಾಯಿನ ದುರ್ಗಂಧವನ್ನು ಯಾರು ತಾನೆ ಸಹಿಸುತ್ತಾರೆ. ವ|| ಎಂದು ನಗಿಸುತ್ತಿದ್ದಳು, ಇನ್ನೊಂದೆಡೆಯಲ್ಲಿ ಒಬ್ಬಳು ತನ್ನ ಪ್ರಿಯನ ಕಡೆಗೆ ಪ್ರೇಮಸಂದೇಶವನ್ನು ಕೊಂಡುಹೋಗಿ ಬಂದ ದೂತಿಗೆ ಏನು ಮಾಡಬೇಕೆಂಬುದನ್ನು ತಿಳಿಯದೆ ಆಶೆಪಟ್ಟು (ಅವನು ಕಳುಹಿಸಿದ) ಪ್ರತ್ಯುತ್ತರವನ್ನು ಕೇಳುವವಳನ್ನು ನೋಡಿ

೧೦೧. ವಿರಹವೇದನೆಯಿಂದ ನರಳುತ್ತಿರುವ ಪ್ರೇಮಿಗಳ ಕೋಪದಿಂದ ಅಗಲಿಹೋದ ತಮ್ಮನಲ್ಲರ ಕಡೆಯಿಂದ ಪ್ರೇಮಸಮಾಚಾರವು ಬರಲು ಕೋಗಿಲೆಯಾಗಲಿ, ಗಾಳಿಯಾಗಲಿ, ತುಂಬಿಯಾಗಲಿ, ಗಿಳಿಯಾಗಲಿ, ಬಂದರೂ ನಲಿದು ಮನಸ್ಸಮಾಧಾನವನ್ನು ಪಡೆಯುತ್ತಾರೆ ಎಂದಾಗ ತಮ್ಮ ಪ್ರೀತಿಪಾತ್ರರಾದ ದೂರತೇ ತಂದಿರುವ ಪ್ರಿಯವಾರ್ತೆಯನ್ನು ಪುಳಕಿತರಾಗಿ ಕೇಳುವುದಿಲ್ಲವೇ? ವ|| ಹಾಗಲ್ಲದೆಯೂ ೧೦೨. ಪ್ರಿಯನು ಮನಸ್ಸಿನಲ್ಲಿ ಸಂತೋಷಗೊಂಡು ಕಳುಹಿಸಿದ ದೂತರ ತಂದಿರುವ ಪ್ರಿಯವಾರ್ತೆಯನ್ನು ಪುಳಕಿತರಾಗಿ ಕೇಳುವುದಿಲ್ಲವೇ?

ವ|| ಹಾಗಲ್ಲದೆಯೂ ೧೦೨. ಪ್ರಿಯನು ಮನಸ್ಸಿನಲ್ಲಿ ಸಂತೋಷಗೊಂಡು ಕಳುಹಿಸಿದ ದೂತರ ಸಿಹಿಯಾದ ಮಾತಿನ ರಸದಲ್ಲಿ ಶುದ್ಧಪ್ರೇಮವೆಂಬ ನಂದನವನವು ಕವಲೊಡೆಯುವುದು, ಚಿಗುರುವುದು, ಹೂ ಬಿಡುವುದು. ಹಾಗೆಯೇ ಕಾಯಾಗುವುದು -ಮನಸ್ಸಿನಲ್ಲಿ ನಿಂತು ನಲ್ಲನಲ್ಲರ ಸಮಾಗಮದಲ್ಲಿ ಹಣ್ಣಾಗುವುದಿಲ್ಲವೇ? ವ|| ಹಾಗಲ್ಲದೆಯೂ ೧೦೩. ಬಲಾತ್ಕಾರ ಮಾಡಿದರೆ ಪ್ರೇಮಿಯ

ಪ್ರೀತಿ ಎರಡರಷ್ಟಾಗುತ್ತದೆ. ಬಯ್ದರೆ ಪ್ರಿಯನ ಮನಸ್ಸು ಅಸ್ಥಿರವಾಗುತ್ತದೆ. ದೃಷ್ಟಿಸಿ ನೋಡಿದರೆ ಪ್ರೇಮವೂ ಬೇಟೆಕಾರನ ಸವಿಯೂ

ವ|| ಇಂದಿವಿ ದೂದವರೆಂಬರ್ ಬೇಟಕಾಱರ ಬೇಟಮೆಂಬ ಲತೆಗಳಡರ್ಪಿರ್ಪಂತಿರ್ದರೆಂತಪ್ಪ ಬೇಟಂಗಳುಮವರ್ ಪೊಸಯಿಸೆ ಪೊಸತಪ್ಪುದು ಕಿಡಿಸೆ ಕಿಡುವುದಂತುಮಲ್ಲದೆಯುಂ-

ಚಂ|| ನುಡಿಗಳೊಳಾಸೆಯುಂಟೆನಲೊಡಂ ತಳೆದಂತಿರೆ ನಿಲ್ವುದೆಂತುಮಾ
ವೆಡೆಯೊಳಮಾಸೆಗಾಣೆನೆನೆ ತೊಟ್ಟನೆ ಪೋಪುವು ನಲ್ಲರಿರ್ವರೀ|
ರೊಡಲೊಳಗಿರ್ಪ ಜೀವಮದುಕಾರಣದಿಂದಮೆ ಪೋಪ ಬರ್ಪೊಡಂ
ಬಡನೊಳಕೊಂಡ ದೂದವರ ಕೆಯ್ಯೊಳೆ ಕೆಯ್ಯೆಡೆಯಿರ್ಪುದಾಗದೇ|| ೧೦೪

ವ|| ಎಂದು ನುಡಿಯುತ್ತುಂ ಬರೆವರೆ ಮತ್ತೊಂದೆಡೆಯೊಳೊರ್ವಂ ಗರ್ಭೇಶ್ವರಂ ತನ್ನ ಹೃದಯೇಶ್ವರಿಯನಗಲ್ದು ಬಂದು ಪೆಱರಾರುಮಂ ಮೆಚ್ಚದಾಕೆಯಂ ನೆನೆದು-

ಚಂ|| ಮಿಱುಗುವ ತೋರಹಾರಮುಮನಪ್ಪಿನ ಕಾಳಸೆಗಡ್ಡಮೆಂಬ ಬೇ
ಸಱನೊಳೆ ಕಟ್ಟಲೊಲ್ಲದನಿತೞ್ಕಱನಿೞ್ಕುಳಿಗೊಂಡಲಂಪಿನ|
ತ್ತೆಱಗಿದ ನಲ್ಲಳಳ್ಳೆರ್ದೆಯೊಳಕ್ಕಟ ಬೆಟ್ಟುಗಳುಂ ಬನಂಗಳುಂ
ತೊಗಳುವಿಗಳೊಡ್ಡೞಯದೊಡ್ಡಿಸೆ ಸೈರಿಸುವಂತುಟಾದುದೇ|| ೧೦೫

ಮುನಿಸಿನೊಳಾದಮೇವಯಿಸಿ ಸೈರಿಸದಾದೞಲೊಳ್ ಕನಲ್ದು ಕಂ
ಗನೆ ಕನಲುತ್ತುಮುಮ್ಮಳಿಸಿ ಸೈರಿಸಲಾಱದೆ ಮೇಲೆವಾಯ್ದು ಬ
ಯ್ದನುವಿಸಿ ಕಾಡಿ ನೋಡಿ ತಿಳಿದೞ್ಕಱನಿೞ್ಕುಳಿಗೊಂಡಲಂಪುಗಳ್
ಕನಸಿನೊಳಂ ಪಳಂಚೆಲೆವುವೆನ್ನೆರ್ದೆಯೊಳ್ ತರಾಳಾಯತೇಕ್ಷಣೇ|| ೧೦೬

ವ|| ಎಂದು ಸೈರಿಸಲಾರದೆ ತನ್ನ ಪ್ರಾಣವಲ್ಲಭೆಯೊಡನಿರ್ದಂದಿನ ಮುಳಿಸೊಸಗೆಗಳಂ ನೆನೆದು-

ಚಂ|| ಬಗೆ ಗೆಲಲೆಂದು ಕಾಡಿ ಪುಸಿನಿದ್ದೆಯೊಳಾನಿರೆ ಲಲ್ಲೆಗೆಯ್ದು ಲ
ಲ್ಲೆಗೆ ಮದಿರ್ದೊಡೞ್ಕಱನೊಳೊಂದಿ ಮೊಗಂ ಮೊಗದತ್ತ ಸಾರ್ಚಿ ಬೆ|
ಚ್ಚಗೆ ನಿಡುಸುಯ್ದ ನಲ್ಲಳ ಮುಖಾಂಬುಜ ಸೌರಭದೊಳ್ ಪೊದಳ್ದದೇಂ
ಮಗಮಗಿಸಿತ್ತೊ ಕತ್ತುರಿಯ ಕಪ್ಪುರದೊಂದು ಕದಂಬದಂಬುಲಂ|| ೧೦೭

ರಾಶಿರಾಶಿಯಾಗುತ್ತದೆ. ನೂಂಕಿದರೆ ಬೇಟೆಕಾರನ ಮನಸ್ಸು ಬೆನ್ನಟ್ಟಿ ಬರುತ್ತದೆ. ಆದುದರಿಂದ ಈ ಬೇಟವೆಂಬುದು ಎಂಥ ಪರಸ್ಪರ ವಿರೋಧ ಸ್ವಭಾವವುಳ್ಳುದೋ? ವ|| ಹೀಗೆ ದೂದವಿಯರೆಂಬುವರು ಬೇಟೆಕಾರರ ಬೇಟವೆಂಬ ಲತೆಗೆ ಆಶ್ರಯದಂತಿದ್ದಾರೆ. ಎಂತಹ ಪ್ರೇಮವೂ ಅವರು ಹೊಸದು ಮಾಡಿದರೆ ಹೊಸದಾಗುತ್ತದೆ. ಕೆಡಿಸಿದರೆ ಕೆಟ್ಟುಹೋಗುತ್ತದೆ. ಅಲ್ಲದೆಯೂ ೧೦೪. ಪ್ರೇಮಿಗಳಿಬ್ಬರ ಶರೀರದಲ್ಲಿರುವ ಪ್ರಾಣವು ದೂತರು ತರುವ ಮಾತುಗಳಲ್ಲಿ ಆಸೆಯಿದೆಯೆಂದೊಡನೆ ಜೀವಧಾರಣೆ ಮಾಡಿದ ಹಾಗೆ ಎದ್ದು ನಿಲ್ಲುತ್ತದೆ. ಯಾರ ಕಡೆಯಲ್ಲಿಯೂ ಆಸೆಯಿಲ್ಲವೆಂದೊಡನೆ ತಟಕ್ಕನೆ ಹೊರಟು ಹೋಗುತ್ತದೆ. ಆದುದರಿಂದ ಪ್ರಿಯರಲ್ಲಿಗೆ ಹೋಗಿ ಬಂದು ಅವರ ಒಪ್ಪಿಗೆಯನ್ನು ಪಡೆದಿರುವ ದೂತಿಯರ ಕಯ್ಯಲ್ಲಿಯೇ ಪ್ರಣಯಿಗಳ ಪ್ರಾಣವು ಮೀಸಲಾಗಿರುವುದು ವ|| ಎಂದು ಮಾತನಾಡುತ್ತ (ಅಷ್ಟು ಗಾಢವಾದ ಪ್ರೇಮವನ್ನು ಅಗಲಿ ನಾನು ದೂರವಿರುವುದನ್ನು ಹೇಗೆ ಸಹಿಸಲಿ ಎಂದು ಭಾವ) ಬರುತ್ತಿರಲು ಮತ್ತೊಂದು ಕಡೆಯಲ್ಲಿ ಒಬ್ಬ ಆಗರ್ಭ ಶ್ರೀಮಂತನು ತನ್ನ ಪ್ರಾಣಪ್ರಿಯೆಯನ್ನು ಅಗಲಿ ಬಂದು ಬೇರೆ ಯಾರನ್ನೂ ಮೆಚ್ಚದೆ ಆಕೆಯನ್ನು ಜ್ಞಾಪಿಸಿಕೊಂಡು ೧೦೫. ಪ್ರಿಯಳು ಮುತ್ತಿನ ಹಾರವನ್ನು ಧರಿಸಿದರೆ ನಮ್ಮ ಆಲಿಂಗನದ ಬೆಸುಗೆಗೆ ಅಡ್ಡಿಯಾಗುತ್ತದೆಂದು ಅವಳ ಕತ್ತಿನಲ್ಲಿ ಅದನ್ನು ತೊಡಿಸದೇ ಅಷ್ಟು ಪ್ರೇಮವನ್ನು ಸೆಳೆದುಕೊಂಡ ನಾನು ಈಗ ಸುಖದ ಕಡೆಗೇ ಬಾಗಿದ ನಲ್ಲಳ ನಡುಗುವ ಎದೆಗೂ ನನಗೂ ಮಧ್ಯೆ ಅಯ್ಯೋ ಬೆಟ್ಟಗಳೂ ತೊರೆಗಳೂ ಕಾಡುಗಳೂ ರಾಶಿ ರಾಶಿಯಾಗಿ ಅಡ್ಡವಾಗಿರುವಂತೆ ಚಾಚಿಕೊಂಡಿರಲು ಸಹಿಸುವ ಹಾಗಾಯಿತೆ? ಎ ೧೦೬. ಎಲೌ ಚಂಚಲಾಕ್ಷಿಯೇ ಕೋಪದಲ್ಲಿ ವಿಶೇಷವಾಗಿ ಅಸಮಾಧಾನಗೊಂಡು ಸಹಿಸಲಾರದೆ ವಿಶೇಷ ಕೋಪಿಸುತ್ತ ದುಖಿಸಿ ಹೇಗೂ ತಾಳಲಾರದೆ ಮೇಲೆ ಬಿದ್ದು ಬಯ್ದು ಬಲಾತ್ಕರಿಸಿ ಕಾಡಿ ನೋಡಿ ಸಮಾಧಾನವನ್ನು ಹೊಂದಿ ಮುತ್ತನ್ನು ಸೆಳೆದುಕೊಂಡ ಸುಖದ ನೆನಪುಗಳು ಕನಸ್ಸಿನಲ್ಲಿಯೂ ನನ್ನೆದೆಯನ್ನು ತಗುಲಿ ಪೀಡಿಸುತ್ತಿರುವುವು ವ|| ಎಂದು ಸೈರಿಸಲಾರದೆ ತನ್ನ ಪ್ರಾಣವಲ್ಲಭೆಯ ಜೊತೆಯಲ್ಲಿದ್ದ ಆ ದಿನದ ಕೋಪ ಪ್ರಸಾದಗಳನ್ನು ನೆನೆಸಿಕೊಂಡು ೧೦೭. (ಪ್ರಿಯೆಯೊಡನೆ) ಜಗಳವಾಡಿ ಅವಳ ಮನಸ್ಸನ್ನು ಗೆಲ್ಲಬೇಕೆಂದು ನಾನು ಹುಸಿನಿದ್ದೆಯಲ್ಲಿರಲು ತಾನು ಮುದ್ದುಮಾತುಗಳನ್ನಾಡಿ ಆ ಮುದ್ದುಮಾತಿಗೂ ನಾನು

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಚಂ|| ಒಲವಿನೊಳಾದ ಕಾಯ್ದು ಮೀಗೆ ಕಾದಲನಂ ಬಿಸುಟಂತೆ ಪೋಪ ಕಾ
ದಲಳೞುತಂ ತೆಱಂದಿರಿದು ನೋಡಿದ ನೋಟದೊಳೆಯ್ದೆ ತಳ್ತ ಪೆ|
ರ್ಮೊಲೆ ಪೊಱಮುಯ್ವು ಬೆನ್ನಿನಿತುಮೊರ್ಮೆಯೆ ನಾಂಬಿನಮುಣ್ಮಿ ಪೊಣ್ಮಿ ಕ
ಣ್ಮಲರ್ಗಳಿನೆಚ್ಚು ಪಾಯ್ದುವರಲಂಬುಗಳಂತೆ ವಿಲೋಚನಾಂಬುಗಳ್|| ೧೦೮

ವ|| ಮತ್ತಮೊಂದೆಡೆಯೊಳೊಂದು ಕಾಳಾಗರು ಧೂಪ ಧೂಮ ಮಲಿನ ಶ್ಯಾಮಲಾಲಂ ಕೃತವಿಚಿತ್ರಭಿತ್ತಿವಿರಾಜಿತರಮ್ಯಹರ್ಮ್ಯತಳದೊಳ್ ಪಲಕಾಲಮಗಲ್ದ ನಲ್ಲರಿರ್ವರುಮೊಂದೆಡೆಯೊಳ್ ಕೂಡಿ-

ಮ|| ಸಮಸಂದೞ್ಕಱಲಂಪನೀಯೆ ಶಯನಂ ಘರ್ಮಾಂಬುವಿಂ ನಾನೆ ಮು
ನ್ನಮೆ ನಾಣೊೞ್ಕುಡಿವೋಗಿ ಸೂಸುವ ಪದಂ ಗಂಗಾಂಬುವಂ ಪೋಲೆ ವಿ|
ಭ್ರಮಮಂ ಕಂಠರವಕ್ಕೆ ತಾಡನ ರವಂ ತಂದೀಯೆ ತಚ್ಛಯ್ಯೆಯೊಳ್
ಸಮಹಸ್ತಂಬಿಡಿವಂತುಟಾಯ್ತು ಸುರತ ಪ್ರಾರಂಭ ಕೋಳಾಹಳಂ|| ೧೦೯

ವ|| ಅಂತನೇಕಪ್ರಕಾರ ಪುರ ಜನಜನಿತ ವಿಕಾರಂಗಳಂ ತೊೞಲ್ದು ನೋೞ್ಪನ್ನೆಗಂ-

ಚಂ|| ಸೊಡರ್ಗುಡಿಯೊಯ್ಯನಾಗೆ ಪೊಸ ಮಲ್ಲಿಗೆ ಮೆಲ್ಲಗೆ ಕಂಪು ನಾ ತ
ಣ್ಪಿಡಿದೆಲರೂದೆ ಗಾವರದ ಮೆಲ್ಲುಲಿ ತುಂಬಿಯ ಗಾವರಂಗಳಂ|
ಗೆಡೆಗೊಳೆ ಚಂದ್ರಿಕಾಪ್ರಭೆ ಮೊದಲ್ಗಿಡೆ ನಾಡೆ ವಿತರ್ಕದಿಂ ಬೆರ
ಲ್ಮಿಡಿದು ಗುಣಾರ್ಣವಂ ನೆಯೆ ನಿಟ್ಟಿಸಿದಂ ಬೆಳಗಪ್ಪ ಜಾವಮಂ|| ೧೧೦

ವ|| ಆಗಳ್ ತನ್ನೊಡನೆ ತೊೞಲ್ವ ನಾಗರಕ ವಿಟ ವಿದೂಷಕ ಪೀಠಮರ್ದಕರ್ಕಳನಿರಲ್ವೇೞ್ದು ರಾಜಮಂದಿರಮಂ ಪೊಕ್ಕು ತನ್ನ ಪವಡಿಸುವ ಮಾಡಕ್ಕೆವಂದು ಹಂಸ ಧವಳ ಶಯ್ಯಾತಳದೊಳ್ ಗಂಗಾನದೀ ಪುಳಿನ ಪರಿಸರ ಪ್ರದೇಶದೊಳ್ ಮದೊಱಗುವೈರಾವತದಂತೆ ಪವಡಿಸಿ ಕಿಱದಾನುಂ ಬೇಗದೊಳ್ ಸುಭದ್ರೆಯಂ ಕನಸಿನೊಳ್ ಕಂಡು ನನಸೆಂದು ಬಗೆದು ಮಂಗಳಪಾಠಕರವಂಗಳೊಳ್ ಭೋಂಕನೆೞ್ಚತ್ತನನ್ನೆಗಂ-

ಮೈಮರೆತವನಂತಿರಲು ಪ್ರೇಮದಿಂದ ಕೂಡಿ ನನ್ನ ಮುಖದೊಡನೆ ತನ್ನ ಮುಖವನ್ನು ಸೇರಿಸಿ ಬಿಸಿಯಾಗಿ ನಿಟ್ಟುಸಿರು ಬಿಟ್ಟ ಪ್ರಿಯಳ ಮುಖಕಮಲದ ಸುಗಂಧದಲ್ಲಿ ಸೇರಿಕೊಂಡ ಪಚ್ಚಕರ್ಪೂರ ಮಿಶ್ರಿತವಾದ ತಾಂಬೂಲದ ಉಂಡೆಯೂ ಎಷ್ಟು ಗಮಗಮಿಸಿತ್ತೊ? ವ|| ಎಂದು ತನ್ನಲ್ಲಿಯೇ ಹಲುಬುತ್ತಿದ್ದವನನ್ನು ಅರ್ಜುನನು ಕಂಡು ಇವನೂ ನಮ್ಮಂತಹವನೂ ನಮ್ಮ ನಂಟನೂ ಆಗಿದ್ದಾನೆ ಎಂದು ಮುಗುಳ್ನಗೆ ನಗುತ್ತ ಬರುತ್ತಿದ್ದವನು ಒಂದು ಕಡೆಯಲ್ಲಿ ೧೦೮. ಪ್ರಣಯಕಲಹದಲ್ಲಿ ಉಂಟಾದ ಕೋಪವು ಹೆಚ್ಚಾಗಲು ಪ್ರಿಯನನ್ನು ತೊರೆದು ಹೋಗುತ್ತಿರುವ ಪ್ರಿಯಳು ಬಗೆಬಗೆಯಾಗಿ ಅಳುತ್ತಾ ಹಿಂತಿರುಗಿ ನೋಡಿದ ನೋಟದಲ್ಲಿ ಅವಳ ಗಾಢವಾದ ಪೆರ್ಮೊಲೆಗಳೂ ಹೆಗಲ ಹಿಂಭಾಗವೂ ಬೆನ್ನೂ ಏಕಕಾಲದಲ್ಲಿ ತೊಯ್ದುಹೋಗುವ ಹಾಗೆ ಅವಳ ಹೂವಿನಂತಿರುವ ಕಣ್ಣುಗಳಿಂದ ಕಣ್ಣೀರು ಪುಷ್ಟಬಾಣಗಳಂತೆ

ಹೆಚ್ಚಿ ಚಿಮ್ಮಿ ಸೂಸಿ ಹರಿದುವು. ವ|| ಮತ್ತೊಂದು ಕಡೆಯಲ್ಲಿ ಕಪ್ಪಾದ ಅಗುರು ಧೂಪದ ಹೊಗೆಯಿಂದ ಮಾಸಿದ ಶ್ಯಾಮಲ ವರ್ಣದಿಂದ ಅಲಂಕರಿಸಲ್ಪಟ್ಟು ಚಿತ್ರಮಯವಾದ ಗೋಡೆಗಳಿಂದ ವಿರಾಜಮಾನವಾಗಿರುವ ರಮಣೀಯವಾದ ಉಪ್ಪರಿಗೆಯ ಪ್ರದೇಶದಲ್ಲಿ ಹಲವು ಕಾಲ ಅಗಲಿದ್ದ ಇಬ್ಬರು ಪ್ರೇಮಿಗಳು ಒಂದು ಕಡೆ ಕೂಡಿದ್ದರು. ೧೦೯. ಆ ಪ್ರಿಯ ಪ್ರೇಯಸಿಯರಲ್ಲಿ ಸಮಾನವಾಗಿ ಉಂಟಾದ ಪ್ರೀತಿಯು ಸೌಖ್ಯವನ್ನುಂಟುಮಾಡಲು ಬೆವರಿನಿಂದ ಹಾಸಿಗೆಯು ತೊಯ್ದು ಹೋಯಿತು. ಮೊದಲೇ ಲಜ್ಜೆಯಿಂದ ಪ್ರಸರಿಸಿ ಹರಿಯುವ ಸುರತದ್ರವವು ಗಂಗಾಜಲವನ್ನು ಹೋಲುತ್ತಿತ್ತು. ಕತ್ತಿನ ಗರಗರಿಕೆಯ ಶಬ್ದಕ್ಕೆ ಸುರತಧ್ವನಿ ಸೊಗಸನ್ನುಂಟುಮಾಡುತ್ತಿತ್ತು. ಆ ಹಾಸಿಗೆಯಲ್ಲಿ ರತಿಕ್ರೀಡೆಯ ಪ್ರಾರಂಭದ ಆರ್ಭಟವು ಸಮಾನ ಹಸ್ತವನ್ನು ಹಿಡಿಯುವ ಹಾಗಾಯಿತು. ಪ್ರಿಯ ಪ್ರೇಯಸಿಯರ ಸುರತಕ್ರೀಡೆಯು ಸಮಾನ ಪ್ರಮಾಣವುಳ್ಳದ್ದಾಯಿತು. ವ|| ಹೀಗೆ ಪುರಜನರ ಅನೇಕ ಪ್ರಕಾರವಾದ ವಿಕಾರಗಳನ್ನು ಅರ್ಜುನನು ನೋಡುತ್ತ ಬರುತ್ತಿರಲು ೧೧೦. ದೀಪದ ಕುಡಿಯು ಮಲಿನವಾಯಿತು, ಮಲ್ಲಿಗೆಯು ಮೃದುವಾಗಿ ವಾಸನೆಯನ್ನು ಬೀರಿತು, ತಂಪಾದ ಗಾಳಿ ಬೀಸಿತು. ಪ್ರಾತಕಾಲದ ಮೃದುವಾದ ಧ್ವನಿಯು ದುಂಬಿಯ ಧ್ವನಿಯೊಡನೆ ಕೂಡಿಕೊಂಡಿತು. ಬೆಳುದಿಂಗಳಿನ ಕಾಂತಿ ಕಡಮೆಯಾಯಿತು. ವಿಶೇಷವಾದ ತರ್ಕದಿಂದ ಅರ್ಜುನನು ಬೆಳಗಾಗುವ ಹೊತ್ತನ್ನು ಪೂರ್ಣವಾಗಿ ತಿಳಿದನು. ವ|| ಆತ ತನ್ನೊಡನೆ

ಚಂ|| ಪುದಿದ ತಮಂ ಮದೀಯ ಕಿರಣಾಳಿಯನಾನದವೋಲೆ ನಿನ್ನ ನಾ
ವದಟರುಮಾನರೆನ್ನುದಯಮಭ್ಯುದಯಂ ನಿನಗೆಂದು ಕನ್ನೆಯಂ|
ಪದೆದೊಡಗೊಂಡು ಪೋಗಿರದಿರೆಂದು ಗುಣಾರ್ಣವ ಭೂಭುಜಂಗೆ ಕ
ಟ್ಟಿದಿರೊಳೆ ಬಟ್ಟೆದೋಱುವವೊಲಂದೊಗೆದಂ ಕಮಲೈಕಬಾಂಧವಂ|| ೧೧೧

ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್ ಚತುರ್ಥಾಶ್ವಾಸಂ

ತೊಳಲುತ್ತಿದ್ದ ನಾಗರಿಕ, ವಿಟ, ವಿದೂಷಕ, ಪೀಠಮರ್ದಕರನ್ನು ಇರಹೇಳಿ ಅರಮನೆಯನ್ನು ಪ್ರವೇಶಿಸಿ ತಾನು ಮಲಗುವ ಉಪ್ಪರಿಗೆಯ ಮನೆಗೆ ಬಂದು ಹಂಸದಷ್ಟು ಬೆಳ್ಳಗಿರುವ ಹಾಸಿಗೆಯಲ್ಲಿ ಗಂಗಾನದಿಯ ಮರಳು ದಿಣ್ಣೆಯ ಪ್ರದೇಶದಲ್ಲಿ ಮರೆತು ಮಲಗಿರುವ ಐರಾವತದ ಹಾಗೆ ಮಲಗಿದ್ದು ಕೆಲವು ಕಾಲದ ಮೇಲೆ ಸುಭದ್ರೆಯನ್ನು ಕನಸಿನಲ್ಲಿ ಕಂಡು ಅದು ಪ್ರತ್ಯಕ್ಷವೇ ಎಂದು ಭಾವಿಸುವಷ್ಟರಲ್ಲಿ ಮಂಗಳವನ್ನು ಹಾಡುವ ಹೊಗಳುಭಟರ ಶಬ್ದಗಳಿಂದ ಇದ್ದಕ್ಕಿದ್ದ ಹಾಗೆ ಎದ್ದನು. ಅಷ್ಟರಲ್ಲಿ ೧೧೧. ವ್ಯಾಪ್ತವಾದ ಕತ್ತಲೆಯು ನನ್ನ ಕಿರಣಸಮೂಹಗಳನ್ನು ಎದುರಿಸಲಾರದು. ಹಾಗೆಯೇ ನಿನ್ನನ್ನು ಯಾವ ಶೂರರೂ ಎದುರಿಸರು. ನನ್ನ ಉದಯವು ನಿನಗೆ ಶ್ರೇಯಸ್ಕರವಾದುದು, ಕನ್ಯೆಯಾದ ಸುಭದ್ರೆಯನ್ನು ಬಯಸಿ ಜೊತೆಯಲ್ಲಿ ಕರೆದುಕೊಂಡು ಹೋಗು (ಹೋಗದೇ ಇರಬೇಡ) ಇಲ್ಲಿರಬೇಡ ಎಂದು ಅರ್ಜುನ ಮಹಾರಾಜನಿಗೆ ಮುಂದಿನ ದಾರಿ ತೋರಿಸುವ ಹಾಗೆ ಸೂರ್ಯನು ಆ ದಿನ ಉದಯವಾದನು. ವ|| ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದ ಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯೂ ಗಂಭೀರವೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾ ಗುಣಾರ್ಣವನಿಂದ ರಚಿತವಾದ ವಿಕ್ರಮಾರ್ಜುನ ವಿಜಯದಲ್ಲಿ ನಾಲ್ಕನೆಯ ಆಶ್ವಾಸವು.