ಕಣ್ಣಿನ ಮುಂದೆ ನಿಂದು ಪಾತ್ರವಾಡುವ ನೋಟಗಳು ಅಸಂಖ್ಯ; ಅದರ ಪರಿಣಾಮವಾಗಿ ಈ ಹೃದಯವೇದಿಕೆಯಲ್ಲಿ ಬಂದು ನರ್ತಿಸುವ ಭಾವಗಳು ಅಸಂಖ್ಯ. ಈ ಭಾವಗಳ ಲಾಸ್ಯ ತಾಂಡವಗಳ ಬಹುಬಗೆಯ ಮುದ್ರೆಯನ್ನು ತಳೆದ ಈ ಹೃದಯ ಕಲ್ಲಿನಲ್ಲಿ, ವರ್ಣದಲ್ಲಿ, ನಾದದಲ್ಲಿ, ವಿವಿಧ ಅಂಗಭಂಗಿಗಳಲ್ಲಿ, ಮಾತುಕತೆಗಳಲ್ಲಿ, ಲಿಪಿಗಳಲ್ಲಿ, ಕಡೆಗೆ ಸಂಜ್ಞೆಗಳಲ್ಲಿ – ಇನ್ನೂ ಸಾಧ್ಯವಾಗಬಹುದಾದ ನಾನಾ ವಿಧಾನಗಳಲ್ಲಿ ಸಮಾನ ಹೃದಯವೊಂದಕ್ಕೆ ತನ್ನ ಭಾವಪ್ರವಾಹವನ್ನು ಹರಿಯಿಸಲು ನಿರ್ಮಿಸಿಕೊಳ್ಳುವ ಪಾತ್ರನಿರ್ಮಾಣ ಪ್ರಕಾರಗಳೂ ಅಸಂಖ್ಯ.

ವ್ಯಕ್ತಿಯ ಸೌಂದರ್ಯಾನುಭವದ ಪರಿಗಳನ್ನು ಗುರುತಿಸಲು ಈ ಕಲಾ ಪಾತ್ರಗಳೇ ಮಾಧ್ಯಮ. ಕಲಾಕೃತಿಯೊಂದನ್ನು ನೋಡಿ ನಾವು, ಕವಿ ಸೌಂದರ್ಯಾನುಭವದಲ್ಲಿ ಏರಿರುವ ಮಜಲುಗಳನ್ನು ಗುರುತಿಸುತ್ತೇವೆ. ಶ್ರೀ ಅರವಿಂದರು ಒಂದೆಡೆ, ಕಲಾ ಕೃತಿಗಳಲ್ಲಿ ನಾವು ಗುರುತಿಸಬಹುದಾದ ಸೌಂದರ್ಯಾನುಭವದ ಪರಿಗಳು ನಾಲ್ಕು ಎಂದು ಸೂಚಿಸಿದ್ದಾರೆ.  ಅವುಗಳನ್ನು ಇಂದ್ರಿಯ ಸೌಂದರ್ಯ (Sensuous Beauty), ಕಲ್ಪನಾಸೌಂದರ್ಯ (Imaginative Beauty), ಚಿತ್ತದ ಸೌಂದರ್ಯ ಅಥವಾ ತಾತ್ವಿಕ (Intellectual Beauty) ಸೌಂದರ್ಯ ಮತ್ತು ಆತ್ಮದ ಸೌಂದರ್ಯ (Ideal Beauty)  ಎಂದು ಕರೆದಿದ್ದಾರೆ.[1] ಇವು ಒಂದಾದಮೇಲೊಂದರಂತೆ ಅನುಭವಕ್ಕೆ ಬರುವುವೆಂದಾಗಲೀ, ಈ ನಾಲ್ಕೂ ಬೇರೆ ಬೇರೆ ಇರುತ್ತವೆ ಎಂದಾಗಲಿ ಅರ್ಥವಲ್ಲ. ಸೌಂದರ್ಯಬ್ರಹ್ಮನ ಚತುರ್ಮುಖಗಳು ಇವು. ಇವುಗಳಲ್ಲಿ ಹಲವರು ಎರಡು ಮುಖಗಳನ್ನು ಕಂಡಿದ್ದಾರೆ, ಹಲವರು ಮೂರನ್ನು ಕಂಡಿದ್ದಾರೆ, ಎಲ್ಲೊ ಕೆಲವರು ನಾಲ್ಕನ್ನೂ ಕಂಡಿದ್ದಾರೆ.

 

[ಚಿತ್ರ]

 

ಪಂಚೇಂದ್ರಿಯಗಳ ಮೂಲಕ ಅನುಭವಕ್ಕೆ ಬರುವ ಈ ಇಂದ್ರಿಯ ಸೌಂದರ್ಯ, ಕೇವಲ ಆ ಐಂದ್ರಿಯ ಸುಖಾನುಭವದಲ್ಲೇ ನಮ್ಮನ್ನು ನಿಲ್ಲಿಸಿದರೆ ಆ ಘಟ್ಟವನ್ನು ಇಂದ್ರಿಯ ಸೌಂದರ್ಯ ಎಂದು ಕರೆಯಬಹುದು. ಸೌಂದರ್ಯದ ಪ್ರವೇಶ ಇಂದ್ರಿಯದ ಬಾಗಿಲಿನ ಮೂಲಕವೇ ಎಂಬುದು ನಿಜವಾದರೂ ಸೌಂದರ್ಯ ಮೊದಲು ಪಂಚೇಂದ್ರಿಯಗಳನ್ನು ರಮಿಸುವುದರ ಮೂಲಕ ಮನಸ್ಸನ್ನು ಸೆರೆ ಹಿಡಿಯುತ್ತದೆ. ಹೂವುಗಳ ರಂಗು, ಕಂಪು; ಗಿಡಮರಗಳ ವರ್ಣವಿನ್ಯಾಸ, ಬಳುಕು; ಗುಡ್ಡ ಬೆಟ್ಟಗಳ ರೇಖಾವಿನ್ಯಾಸ, ರೂಕ್ಷತೆ; ತಂಗಾಳಿಯ ತಂಪು, ನೆಳಲು ಬೆಳಕುಗಳ ಆಟ-ಹೀಗೆ ಪ್ರಕೃತಿಲೋಕದಲ್ಲಾಗಲೀ ಮಾನವಲೋಕದಲ್ಲಾಗಲೀ ವಸ್ತುಗಳು ಹಾಗೂ ಘಟನೆಗಳು ನಮ್ಮ ಇಂದ್ರಿಯಗಳ ಮೇಲೆ ಒಂದು ಬಗೆಯ ಪರಿಣಾಮವನ್ನುಂಟು ಮಾಡುತ್ತವೆ. ಆಯಾ ವಸ್ತುಗಳನ್ನು ಘಟನೆಗಳನ್ನು ಕಂಡು ನಮ್ಮಲ್ಲಿ ಒಂದು ಬಗೆಯ ಆಹ್ಲಾದವೋ ವಿಷಾದವೋ ಉಂಟಾಗಬಹುದು ನಮ್ಮ ಅಂದಿನ ಮನಸ್ಥಿತಿಯನ್ನವಲಂಬಿಸಿ. ಚೆಲುವು ಪ್ರಕೃತಿ ಪಾತ್ರವಾಗಿಯೋ ಮಾನವಪಾತ್ರವಾಗಿಯೋ ಮೊದಲು ಕಣ್ಣಿನ ಮುಂದೆ ಸುಳಿದು ಸೆಳೆಯುತ್ತದೆ-

ಬಣ್ಣ ಬಣ್ಣದ ಹಕ್ಕಿ ಹೊನ್ನರನ್ನದ ಮೋಡ
ನುಣ್ಣನೆಯ ಕಂಪು ಹೂ ತಣ್ಣನೆಯ ತಂಪುದೊರೆ
ಕಣ್ಣ ಮುಂದೆನ್ನ ತಾಳತಂತಿಯನರಿಯ
ದಂಥ ಸಂತೆಯನು ನೆರಸಿ
ಕಣ್ಣಕಟ್ಟಲು ಬಯಸುವುವು ಬಣ್ಣದಾಟದಲಿ
[2]

ಮೊದಲು ಅನ್ನಿಸುತ್ತದೆ, ಕಣ್ಣ ಮುಂದೆ ನೆರೆದ ಈ ಬಣ್ಣದಾಟದ ಸಂತೆಗೆ ತಾಳ ತಂತಿ ಯಾವುದೂ ಇಲ್ಲವೇ – ಎಂದು. ಮೊದಮೊದಲು ತಾನು ಬೇರೆ ಅದು ಬೇರೆ, ಈ ಎಲ್ಲವೂ ತನ್ನನ್ನು ಹೇಗೋ ಏನೊ ಹೀಗೆ ಸೆಳೆಯಲು ಬಯಸುತ್ತವೆ – ಎನ್ನಿಸುತ್ತದೆ. ಆದರೆ ಈ ದ್ವಂದ್ವ ಎಲ್ಲಿಯವರೆಗೆ?-

ನನ್ನ ನೆತ್ತರು ಅವರ ತಾಳ ಮೇಳವ ಕೂಡಿ
ಭಿನ್ನ ಆಟದ ಮರವೆ ಮನಸಿಗಾಗುವವರೆಗೆ
[3]

ಸರಿ, ಆಮೇಲೆ ? ಚೆಲುವನ್ನು ಕಂಡು ಒಲಿಯುವ ಅಂತರಂಗದ ಕಣ್ಣು ಒಮ್ಮೆ ತೆರೆಯಿತೆಂದಮೇಲೆ, ಸೌಂದರ್ಯದ ತೃಷೆಯುರಿ ಕೆರಳಿತೆಂದಮೇಲೆ ಆ ಮಾತೇ ಬೇರೆ. ಕವಿ ಹೊರಡುತ್ತಾನೆ ಸೌಂದರ್ಯದ ಬೇಟೆಗೆ !-

ಸ್ವರ್ಗವನು ಬೇಟೆಯಾಡಲು ಹೊರಟೆ ಹೊತ್ತಾರೆ
ಹಸಿದ ಹೆಬ್ಬುಲಿಯಂತೆ ಸೌಂದರ್ಯ ಧೇನುವಾ
ಎದೆಯನೆತ್ತರ ಹೀರುವಾತುರದಿ, ಹಸುರಿಡಿದ
ಮಲೆಯ ಕಣಿವೆಯ ಹೊದರು ಹುಲ್ಲಿನ ಬಯಲಿನಲ್ಲಿ
[4]

ಅಂತಹ ದಾಹ ಅದು ! ಹಸಿದ ಹೆಬ್ಬುಲಿಗೆ ಹಸುವಿನ ಎದೆಯ ಬಿಸಿನೆತ್ತರಿನ ಬಗ್ಗೆ ಎಂತಹ ದಾಹವೋ, ಕವಿಗೂ ಸೌಂದರ್ಯದ ಬಗ್ಗೆ ಅಂತಹ ದಾಹ ! ಅದೊಂದು ತೀರದ ಪಿಪಾಸೆ, ಹುಚ್ಚು ! ಇಂತಹ ಉನ್ಮಾದದಲ್ಲಿ ಅವನು ಚೆಲುವಿನ ನಾನಾ ಬಗೆಯ ರುಚಿಗಳನ್ನು ಗುರುತಿಸುತ್ತಾನೆ. ಲೋಕದ ಮಂದಿಗೆ ತೀರಾ ಸಾಧಾರಣವೆಂಬಂತೆ ತೋರುವ ದಿನಬಳಕೆಯ ಮನೆಯಂಗಳದಲ್ಲೂ ಕವಿ ಚೆಲುವನ್ನು ಕಂಡು ನಲವನ್ನು ಪಡೆಯುತ್ತಾನೆ. ಲೋಕದ  ಚೆಲುವಿನ ವಸ್ತುಗಳು ತನ್ನ ಮನವನ್ನು ಮುಟ್ಟುವ ಮತ್ತು ತಟ್ಟುವ ಪರಿಗಳನ್ನು ಕವಿ ಹೀಗೆ ಗುರುತಿಸುತ್ತಾನೆ:

ಮೈ ಮುಟ್ಟಿ ಮನಮುಟ್ಟಿ ಬರುವೆ, ರೂಪವ ನೋಡೆ
ನೀ ಮೂಡಿ ಬುದ್ಧಿಯೊಳು ನಡುವೆ, ರಸವನು ಸವಿಯೆ

ಧೀ ಮೂಢತೆಯನೊಡೆದು ನಿಲ್ಲಿಸುವೆ ಚಿತ್ತವನು
ಚಿತ್ರಿಸಿದ ಬೊಂಬೆಯಂತೆ |
[5]

ಲೋಕದ ವಸ್ತು ಹೀಗೆ ಕವಿಯ ರಸಾನುಭವದ ವಸ್ತುವಾಗುತ್ತಲೇ ಸೌಂದರ್ಯದಲ್ಲಿ ಅವನನ್ನು ಮೈಮರೆಸುತ್ತದೆ. ಇಂದ್ರಿಯಗಳ ಮೂಲಕ ಚಿತ್ತವನ್ನು ಸೆರೆಗೊಂಡು ಅವನಲ್ಲಿ ಒಂದು ಬಗೆಯ ಹಿಗ್ಗಿನ ಅಥವಾ ಕುಗ್ಗಿನ ಭಾವನೆಗಳನ್ನೇಳಿಸುವ ಇಂದ್ರಿಯ ಸೌಂದರ‍್ಯ ಅವನ ಕವಿತೆಯ ಮೊದಲ ಮೆಟ್ಟಿಲಾಗುತ್ತದೆ. ಹೆಚ್ಚು ಕಡಿಮೆ ಕವಿಯ ಅನುಭವ ಮೊದಲಾಗುವುದು ಈ ಇಂದ್ರಿಯ ಸೌಂದರ್ಯದಿಂದಲೇ. ಗೌರಿಹುಣ್ಣಿಮೆಯ ಕಾಲದಲ್ಲಿ ಕವಿಕಂಡ ಇಂದ್ರಿಯ ಸೌಂದರ್ಯಾನುಭವ –

ಉಗುರು ಬೆಚ್ಚಗೆ ಬಿದ್ದ ಬಿಸಿಲು ಗಾಳಿಗೆ ನಲುಗೆ
ಚಳಿಯ ಮಂಚೂಣಿ ಎಂದೆನಿಸುತಿಹುದು
ಸೊಂಪುಳ್ಳ ಸೇವಂತಿಗೆಗಂಪು, ಪೇರಲಗಂಪು
ಬಂತು ಬಿಡದಿರಲು ಮುಂಜಾವ ಜೊಂಪು
[6]

ಎಂಬ ಮಾತಿನಲ್ಲಿ; ಹಸುರು ಹುಲ್ಲಿನಲ್ಲಿ ವಿಷ್ಣು ಕ್ರಾಂತಿಯ ಹೂವನ್ನು ಕಂಡು –

ಇದೆಕೋ ದಾರಿಯ ಬದಿಯಲಿ ಹುಲ್ಲಲಿ
ವಿಷ್ಣು ಕ್ರಾಂತಿಯ ಪರಿಮಿತ ನೀಲ
[7]

ಎಂದು ವಿಷ್ಣುಕ್ರಾಂತಿಯ ಪರಿಮಿತ ನೀಲಕ್ಕೆ ಕಣ್ಣುಸೋತ ಪರಿಯನ್ನು ಬಣ್ಣಿಸುವಲ್ಲಿ,

ತೆನೆಯ ಕಂಪುಗಾಳಿ ಬೀಸಿ ಬರುತಲಿರುವುದು
ಗದ್ದೆಗಳಲಿ ಪೈರು ತಲೆಯ ತೂಗುತಿರುವುದು
ಗಿರಿಜೆ ಬಾರೆ ವನಗಳಲ್ಲಿ ತಿರುಗಿ ನಲಿಯುವ
ಒಲಿದ ಎದೆಯ ಮುದ್ದಿಸುತ್ತ ಮತ್ತೆ ಒಲಿಯುವ
[8]

ಎಂದು ತನ್ನ ಕೆಳದಿಯನ್ನು ಚೆಲುವಿನಾಸ್ವಾದನೆಗೆ ಆಹ್ವಾನಿಸುವಲ್ಲಿ; ಹೂ ತುಂಬಿದ ಮಾವಿನ ಮರಗಳನ್ನು ಕಂಡು ಅವು ಮನಸ್ಸಿನ ಮೇಲೆ ಮಾಡಿದ ಆಹ್ಲಾದರೂಪವಾದ ಸುಖಾನುಭವಕ್ಕಾಗಿ ಅವುಗಳನ್ನು ಪ್ರಶಂಸಿಸುತ್ತಾ –

ತಳಿರೊಳ್ ನೀನೆ ಬೆಡಂಗನಯ್, ನನೆಗಳೊಳ್ ನೀಂ ನೀರನೈ,
ಪುಷ್ಪ ಸಂಕುಳದೊಳ್ ನೀನೆ ವಿಳಾಸಿಯೈ, ಮಿಡಿಗಳೊಳ್

ನೀಂ ಚೆಲ್ವನೈ, ಪಣ್ತಪಣ್ಗಿಳಿನೋವೋ ಪೆರತೇನೋ
ನೀನೆ ಭುವನಕ್ಕಾರಾಧ್ಯನೈ ಭೃಂಗಕೋಕಿಳ ಕೀರಪ್ರಿಯ
ಚೂತರಾಜ, ತರುಗಳ್ ನಿನ್ನಂತೆ ಚೆನ್ನಂಗಳೇ
[9]

ಎಂದು ಉದ್ಗಾರವೆತ್ತುವಲ್ಲಿ; ಹೆಣ್ಣಿನ ಮೈಸಿರಿಯನ್ನು ಕುರಿತು.

ಮಲ್ಲಿಕಾಸ್ಮಿತ ರುಚಿರೆ ಕುಂದಕುಟ್ಮಲ ರದನೆ
ಪಲ್ಲವಾಧರೆ ಭೃಂಗಕುಂತಲೆ ಕುಸುಮಗಂಧಿ
[10]

ಎಂದು ವರ್ಣಿಸುವಲ್ಲಿ, ಶೃಂಗಾರದ ಚಿತ್ರಣಗಳಲ್ಲಿ, ನೃತ್ಯದ ಗೀತದ ಸೌಂದರ‍್ಯವನ್ನು ಹೇಳುವಲ್ಲಿ, ಕವಿಗಳು ಕಣ್ಣಿಗೆ ಕಂಡ, ಕಿವಿಗೆ ಕೇಳಿದ, ಮೈಯನ್ನು ಮುಟ್ಟಿದ ಚೆಲುವಿನ ಮನೋಹಾರಿತ್ವವನ್ನು ಹಿಡಿದಿಟ್ಟಿದ್ದಾರೆ. ವಸ್ತು ನೀಡುವ ನಲವು, ಅದರಿಂದ ಒದಗಿಬಂದ ಒಂದು ಬಗೆಯ ಮನೋಹಾರಿತ್ವದ ಕ್ಷಣವಿಸ್ಮ ತಿ – ಇದು ಇಂದ್ರಿಯ ಸೌಂದರ್ಯಾನುಭವದ ಲಕ್ಷಣ.

ಇಂದ್ರಿಯಗಳಿಗೆ ಗೋಚರವಾಗುವ ಬಗೆಬಗೆಯ ಚೆಲುವಿನ ನೋಟಗಳು ನಮ್ಮ ಸುತ್ತಲೂ ಹೀಗೆ ಚೆಲ್ಲವರಿದಿರುವಾಗ, ಕವಿ ಕಂಡ ಹಾಗೆ ಈ ಚೆಲುವನ್ನು ಎಷ್ಟು ಜನ ಕಂಡಿದ್ದಾರೆ? ಕವಿಯಂತೆ ಚೆಲುವನ್ನು ನಿಸ್ಸಂಗ ಪರಿಭಾವನೆಯಿಂದ ನೋಡದೆ, ಬೇರೆ ಬೇರೆ ಲೌಕಿಕ ಪ್ರಯೋಜನಾತ್ಮಕವಾದ ದೃಷ್ಟಿಯಿಂದ ನೋಡಿ ಈ ಜನ ಕವಿ ಪಡುವ ಅನುಭವದಿಂದ ವಂಚಿತರಾಗುವರಲ್ಲ; ತಮ್ಮ ಮನೆಯ ಮುಂದೇ ಹರಿಯುವ ಚೆಲುವಿನ ಪರಿಗಳನ್ನು ಕಾಣರಲ್ಲಾ – ಎನ್ನುವ ಕೊರಗೂ ಕವಿಗೆ ಸೌಂದರ್ಯಾನುಭವ ಸಮಯದಲ್ಲಿ ಆಗುವುದುಂಟು. ಅಂತಹ ಹೊತ್ತಿನಲ್ಲಿ ಕವಿ ವಡ್ಸ್‌ವರ್ತ್,

‘The world is too much with us; late and soon
getting and spending, we lay waste our powers;
Little we see in nature that is ours;
We have given our hearts away, a sordid boon!’[11]

ಎಂದು ಕೊರಗುತ್ತಾನೆ. ಕಣ್ಣಿನ ಮುಂದಿರುವ ಈ ದೈನಂದಿನ ಚೆಲುವಿನ ಬಗ್ಗೆ ಕುರುಡಾಗಿರುವ ಈ ಜನಕ್ಕೆ ಸೌಂದರ್ಯಾನುಭವ ಶಕ್ತಿ ಲಭಿಸುವುದೆಂದಿಗೆ ಎಂಬ ಹಂಬಲದಲ್ಲಿ ನಿಡುಸುಯ್ಯವ ಕವಿ-

‘ಪೃಥ್ವಿಯಲಿ ಕ್ಲೇಶಕಷ್ಟಗಳೆಲ್ಲ ಕೊನೆಮುಟ್ಟಿ
ಸರ್ವರೂ ರಸದೃಷ್ಟರಾಗಿ ದರ್ಶನ ಪಡೆದು
ಕಾವ್ಯದಾಸ್ವಾದನೆಗೆ ಸೌಂದರ್ಯ ಸಾಧನೆಗೆ
ಕಲೆಯ ಆರಾಧನೆಗೆ ಮನವೀಯುವಾ ಪುಣ್ಯ –
ಸ್ವರ್ಗವೆಂದೈತರುವುದೋ ಕಾಣೆ’
[12]

ಎನ್ನುವುದು ಸಹಜ. ಇದೊಂದು ದೊಡ್ಡ ಆಕಾಂಕ್ಷೆಯಾದರೂ ಬಹು ದೊಡ್ಡ ಕನಸು ಮಾತ್ರ! ತಮ್ಮ ದೈನಂದಿನ ಪರಿಸರದಲ್ಲಿ ಕಾಣುವ ಚೆಲುವು ಏನೆಂದರಿಯದ ಜನಕ್ಕೆ ಈ ಸಾಮಾನ್ಯವಾದ ಚೆಲುವನ್ನು ಕವಿ ತೆರೆದು ತೋರಿದಾಗ, ತಾವು ಹೊಸತಾಗಿ ಕಂಡ ಚೆಲುವಿನಂತೆಯೇ ಕವಿಯೂ ಪರಿಚಿತಾಪರಿಚಿತ ನೂತನವಾಗಿ ಕಾಣುತ್ತಾನೆ. ಬಹು ಮಂದಿಗೆ ಪ್ರಕೃತಿಯನ್ನು ಕುರಿತ ಆಸಕ್ತಿ ಮತ್ತು ಪ್ರೀತಿ ಬೆಳೆಯುವುದು, ಕವಿಯ ಕಾವ್ಯ ದಿನಬಳಕೆಯ ವಸ್ತುಗಳ ಮೇಲೆ ತನ್ನ ರಸದೃಷ್ಟಿಯ ಬೆಳಕನ್ನು ಚೆಲ್ಲಿ ತೋರಿದ ಮೇಲೆಯೇ ಎನ್ನಿಸುತ್ತದೆ. ಅಲ್ಲಿಯ ತನಕ ಆ ಚೆಲುವು ಅವರ ಪಾಲಿಗೆ ಇದ್ದೂ ಇಲ್ಲದಂತೆ. ಏಕೆಂದರೆ ಅವರಿಗೆ ಕವಿ ತೆರೆದು ತೋರಿದಲ್ಲದೆ, ಸ್ವತಂತ್ರವಾಗಿ  ಚೆಲುವನ್ನು ಕಾಣುವ ಕಣ್ಣು ತೆರೆದಿರುವುದಿಲ್ಲ. ಅಷ್ಟೇ ಅಲ್ಲ, ಈ ಜೀವನಕಂದರವನ್ನು ಬಳಸಿರುವ ಎಷ್ಟೋ ಪರ್ವತಮಂಡಲಗಳಲ್ಲಿ ಇಂದ್ರಿಯ ಸೌಂದರ್ಯ ಮೊದಲ ಮಂಡಲ ಮಾತ್ರ ! ಕೋಲ್‌ರಿಜ್ ಕವಿಯ ಮಾತಿನಲ್ಲಿ ಹೇಳುವುದಾದರೆ, “ಬಹು ಜನಕ್ಕೆ ಈ ಮೊದಲ ಮಂಡಲವೇ ಕ್ಷಿತಿಜ ! ಅದರಂಚಿನಿಂದಲೇ ದೈನಂದಿನ ಸೂರ್ಯನ ಮೂಡೂ ಮುಳುಗೂ. ಅಲ್ಲಿಂದಲೇ ತಾರೆಗಳೆದ್ದು ಮಿನುಗಿ ಮರೆಯಾಗುವಂತೆ ತೋರುತ್ತವೆ. ಅವರಿಗೆ ಈ ಮೊದಲ ಮಂಡಲದ ಮಿತಿಯಾಗಲೀ, ಹರಹಾಗಲೀ ಅಲ್ಪಸ್ವಲ್ಪ ಪರಿಚಿತ ಮಾತ್ರ. ಇನ್ನು ಸದಾ ಮಂಜಿನಿಂದ ಮೇಘಗಳಿಂದ ಆವೃತವಾದ ಅದರ ಉನ್ನತ ಶಿಖರಗಳು ಎಲ್ಲೋ ಕೆಲವು ಧೀರ ಪರ್ವತಾರೋಹಿಗಳಿಗೆ ಮಾತ್ರ ಪರಿಚಿತ. !”[13]

ಇಂದ್ರಿಯ ಸೌಂದರ್ಯಾನುಭವದಲ್ಲಿ, ಕವಿ ವಸ್ತುವಿನಲ್ಲಿ ತಾನು ಕಂಡ ಚೆಲುವಿಗಾಗಿ, ಅದು ನೀಡಿದ ನಲವಿಗಾಗಿ ಅದನ್ನವನು ಒಲಿಯುತ್ತಾನೆ. ಆ ವಸ್ತುವಿನ ಗುಣ ಸ್ವಭಾವಗಳ ಬಗೆಗಾಗಲೀ ವಸ್ತುವಿನ ಹಿಂದಿರುವ ಬೇರೊಂದು ತತ್ವದ ಬಗೆಗಾಗಲೀ ಅವನು ಆಳವಾಗಿ ಹೋಗಲೆಳಸುವುದಿಲ್ಲ. ಅದು ಅವನ ಮನಸ್ಸನ್ನು ತಟ್ಟಿದಂತೆ ಅದನ್ನು ಒಪ್ಪಿಕೊಂಡು ತನ್ನ ಆನಂದಕ್ಕೂ ಪರರ ಆನಂದಕ್ಕೂ ಅದನ್ನು ಎತ್ತಿ ಹಿಡಿದು ತೋರುತ್ತಾನೆ. ಪ್ರತಿಯೊಬ್ಬ ಕವಿಯೂ ವಸ್ತುವಿನ ಆಯ್ಕೆಯನ್ನು ಅವನವನ ಅಭಿರುಚಿಗನುಸಾರವಾಗಿ ಮಾಡಿಕೊಳ್ಳುವಷ್ಟರ ಮಟ್ಟಿಗೆ ಅದು ಆತ್ಮನಿಷ್ಠವಾಗುತ್ತದೆ – ಎನ್ನಬಹುದು. ಪ್ರತಿಯೊಬ್ಬ ಕವಿಗೂ ಅವನವನ ಇಷ್ಟ ಯಾವುದೋ ಒಂದು ನಿರ್ದಿಷ್ಟ ಕ್ಷೇತ್ರವಲಯದ ಮೇಲಿರಬಹುದು; ಅಂತೆಯೇ ಅಲ್ಲಲ್ಲಿಂದ ಅವನು ಪಡೆಯುವ ಅನುಭವದಲ್ಲೂ ವ್ಯತ್ಯಾಸವಿರಬಹುದು. ಆದರೆ ಕವಿಯ ಅನುಭವ ಇಂದ್ರಿಯಸೌಂದರ್ಯದಿಂದ ಮೊದಲಾದರೂ, ಅದು ಕೇವಲ ಆಹ್ಲಾದವಷ್ಟರಲ್ಲೇ ನಿಲ್ಲುವುದಿಲ್ಲ. ಅವನ ಏರುವೆ ಚೆಲುವಿನ ವಸ್ತು ನೀಡಿದ ಒಂದು ಬಗೆಯ ಐಂದ್ರಿಯ ಸಂತೃಪ್ತಿಯಲ್ಲೇ, ಅದನ್ನು ಎತ್ತಿ ಹಿಡಿಯುವುದರಲ್ಲೇ ನಿಲ್ಲುವುದಿಲ್ಲ. ಅವನು ತನ್ನ  ಕಲ್ಪನೆಯ ಅಥವಾ ಪ್ರತಿಭೆಯ ನೆರವಿನಿಂದ ತಾನು ಕಂಡ ಚೆಲುವನ್ನು ಹೊಸಹೊಸತನ್ನಾಗಿ ಸೃಷ್ಟಿಸಿ ನೀಡುವ ಕಾರ್ಯಕ್ಕೆ ತೊಡಗುತ್ತಾನೆ. ಕಲ್ಪನೆಯ ಕಣ್ಣಿನಿಂದ ಚೆಲುವನ್ನು ಕಂಡು,  ಅದನ್ನು ಹೊಸತೆಂಬಂತೆ ನೀಡುವ ಈ ಪರಿಯನ್ನು ಕಲ್ಪನಾ ಸೌಂದರ್ಯವೆಂದು ಕರೆಯಬಹುದು. “ಕಲ್ಪನಾ ಸೌಂದರ್ಯಾನುಭವವು ಮುಖ್ಯವಾಗಿ ಮಾನಸಿಕವಾದುದು. ಇಲ್ಲಿ ಕವಿಯ ಕಲ್ಪನೆಯಿಂದ ಅವನ ಅನುಭವವು ಮಾರ್ಪಡುವುದು. ಅವನು ಅಘಟಿತ ಘಟನಾ ನೂತನ ಬ್ರಹ್ಮನಾಗುವನು. ಇದು ಕಾವ್ಯದಲ್ಲಿ ಕಂಡುಬರುವ ವಿಶೇಷ ಪ್ರಕಾರ.”[14]

ಇಲ್ಲಿ ತನ್ನ ಕಣ್ಣಿಗೆ ಹೇಗೆ ಕಂಡಿತೋ, ತನ್ನ ಮನಸ್ಸನ್ನು ಹೇಗೆ ತಟ್ಟಿತೋ ಹಾಗೆಯೇ ತನ್ನ ಆನಂದಕ್ಕೂ ಪರರ ಆನಂದಕ್ಕೂ ವಸ್ತುವನ್ನು ಎತ್ತಿಹಿಡಿಯುವುದರಲ್ಲೇ ಕವಿಕರ್ಮ ಮುಗಿಯುವುದಿಲ್ಲ. ತಾನು ಕಂಡದ್ದನ್ನು ಕಲ್ಪನೆಯ ಸಹಾಯದಿಂದ ಅದು ಬೇರೊಂದೆಂಬಂತೆ ರೂಪಿಸಿ ತೋರಿಸುವ ಶಕ್ತಿ ಕವಿಯಲ್ಲಿ ಉದಯವಾಗುತ್ತದೆ. ಇಂದ್ರಿಯಾನುಭವಕ್ಕೆ ಬಂದ ಚೆಲುವನ್ನು, ಅದರ ಅನುಭವವನ್ನು ಅವನ ಕಲ್ಪನೆ ಬೇರೊಂದೆಂಬಂತೆ ಮಾರ್ಪಡಿಸಿ ತೋರಿಸುವುದರಿಂದಲೇ ಅದು ಕವಿಕರ್ಮವೆನಿಸಿಕೊಳ್ಳುತ್ತದೆ. ಈ ಕಲ್ಪನೆಯ ಮೋಡಿಗಳೂ ನಾನಾ ಬಗೆಯಾಗಿವೆ. ಇದು ಬಹಿರಂಗದ ವಸ್ತುವನ್ನು ತೆಗೆದುಕೊಂಡು ಹೊಸತೆಂಬಂತೆ ರೂಪಿಸುವಂತೆಯೆ, ಅಂತರಂಗದ ಅರೂಪಾನುಭವಗಳನ್ನೂ ಹೊಸತೆಂಬಂತೆ ರೂಪಿಸಿ ತೋರಬಹುದು. ಈ ಸೌಂದರ್ಯದ ಶಕ್ತಿಯಿಂದಲೇ ನಾವು ಕವಿಕೃತಿಯನ್ನು ಆದರಿಸುತ್ತೇವೆ. ಕವಿ-

ಇದೆಕೋ ದಾರಿಯ ಬದಿಯಲಿ ಹುಲ್ಲಲಿ
ವಿಷ್ಣು ಕ್ರಾಂತಿಯ ಪರಿಮಿತ ನೀಲ
[15]

ಎಂದು ತನ್ನ ನಲವಿನ ವಸ್ತುವನ್ನು, ಅದರ ಚೆಲುವನ್ನು ಎತ್ತಿಹಿಡಿಯುತ್ತಲೇ, ಅಂಥದೇ ಹೂವನ್ನು ಕುರಿತು –

ಗಿಡ ಗರುಕೆ ಹಸುರಿನಲ್ಲಿ
ಕೆನೆಹಾಲಿನ ಬಟ್ಟಲು;
ಹೂವೆನ್ನುವ ಹೆಸರಿನಲ್ಲಿ
ಬೆಳ್ದಿಂಗಳ ತೊಟ್ಟಿಲು
[16]

ಎಂದು ಅಲ್ಲಿ ತಾನು ಕಂಡ ಹೂವಿನ ಚೆಲುವನ್ನು ‘ಕೆನೆಹಾಲಿನ ಬಟ್ಟಲು’ ಬೆಳ್ದಿಂಗಳ ತೊಟ್ಟಿಲು’ – ಎಂಬ ಕಲ್ಪನಾ ನಿರ್ಮಿತವಾದ ಮಾತುಗಳಲ್ಲಿ ಹಿಡಿದಿರಿಸಿ ಬೇರೊಂದು ಚೆಲುವನ್ನು ತೆರೆಯುತ್ತಾನೆ. ಹೂವು ತನಗೆ ತಾನೇ ಚೆಲುವಾಗಿದ್ದರೂ, ನಾವು ಕಾಣದ ಬೇರೊಂದು ಚೆಲುವನ್ನು ತೋರುವುದರ ಜೊತೆಯಲ್ಲೇ ಕವಿ ಅದಕ್ಕೆ ಹೊಸತೊಂದು ಮೆರುಗನ್ನು ರೂಪಿಸಿಕೊಡುವುದರಿಂದ ಇಲ್ಲಿ ಆಗುವ ಸಂತೋಷ ಮೊದಲಿನದಕ್ಕಿಂತ ವಿಶೇಷವಾದದ್ದು. ಮಾವಿನ ಮರಗಳನ್ನು ಕಂಡು ‘ತಳಿರೊಳ್ ನೀನೆ ಬೆಡಂಗನಯ್ ….. ತರುಗಳ್ ನಿನ್ನಂತೆ ಚೆನ್ನಂಗಳೇ’ – ಎಂದು ಚೆಲುವು ನೀಡಿದ ಇಂದ್ರಿಯ ಸಂತೃಪ್ತಿಯನ್ನು ಬಣ್ಣಿಸುವುದರ ಜೊತೆಗೆ-

ನಕ್ಷತ್ರಾರತಿಯಂದದಿ ಹೂಗಳ
ಗೊಂಚಲನೆತ್ತಿರುವ
ಮಾವಿನ ಮರವಿದು ಮರವೋ ? ನಭದಲಿ
ಬರೆದರೊ ಚಿತ್ತರವ !
[17]

ಎಂದು ಬೆರಗಾಗುವುದು, ಆ ಬೆರಗನ್ನು ಕಲ್ಪನೆಯ ಮಿರುಗಿನಲ್ಲಿ ತೆರೆದು ತೋರುವುದು ಇಲ್ಲಿನ ವಿಶೇಷತೆ. ಚಿತ್ರಕಶಕ್ತಿಯಿಂದ ಪ್ರತಿಮಾನಿರ್ಮಾಣದವರೆಗೆ ಈ ಕಲ್ಪನಾ ಸೌಂದರ‍್ಯದಲ್ಲಿ ಹಲವು ಮಜಲುಗಳಿವೆ. ಹೂ ಬಿಟ್ಟ ಬಳ್ಳಿಯೊಂದನ್ನು –

ಪುಲ್ಲ ಕುಸುಮ ಫಣಾಜಟಿ
ಪವನ ಲೀಲಾ ಲೋಲಕಟಿ
ಕುಣಿಯುತಿಹಳದೋ ಲತಾನಟಿ
ಪ್ರೇಮವಧೂನ್ಮಾದಿನಿ
[18]

ಎಂದು ಕವಿ ಹೇಳಿದಾಗ ‘ಲತಾನಟಿ’ ಕಲ್ಪನಾ ಸೌಂದರ‍್ಯದಿಂದ ಸೃಜನೆಯಾದ ಮೂರನೆಯ ಒಂದು ಚೇತನ. ನಾವು ಲೋಕದಲ್ಲಿ ಲತೆಯನ್ನು ನೋಡಿದ್ದೇವೆ, ನಟಿಯನ್ನು ನೋಡಿದ್ದೇವೆ. ಮಾನವಲೋಕದ ಮತ್ತು ಪ್ರಕೃತಿ ಲೋಕದ ಈ ಎರಡು ಚೆಲುವಿನ ವಸ್ತುಗಳನ್ನು ಕವಿ ಕೂಡಿಸಿ ಮೂರನೆಯದೊಂದನ್ನು ತೆರೆಯುತ್ತಾನೆ. ‘ನಟಿಯಂತಿರುವ ಲತೆ’ ಎಂಬ ಉಪಮೆಯಲ್ಲಿ ಕಲ್ಪನೆಯ ಕಾರ‍್ಯವಿದ್ದರೂ, ಅಲ್ಲಿ, ನಟಿಯನ್ನೂ ಲತೆಯನ್ನೂ, ನಮ್ಮ ಮನದಲ್ಲಿ ಮೂಡಿಸಿ ಅವೆರಡಕ್ಕೂ ಒಂದು ರೀತಿಯ ಸಾದೃಶ್ಯವನ್ನು ತಿಳಿಸುವುದರಲ್ಲೇ ಮುಗಿದಿದೆ. ಆದರೆ ‘ಲತಾನಟಿ’ ಎಂಬ ಒಂದು ರೂಪಕದಲ್ಲಿ, ಕವಿ ಅವೆರಡನ್ನೂ ತನ್ನ ಅನುಭವದಲ್ಲಿ ಒಂದಾಗಿಸಿ ಮೂರನೆಯದೊಂದು ಚಿತ್ರವನ್ನು ನಮ್ಮೆದುರು ತೆರೆಯುತ್ತಾನೆ. ಕವಿಯು ಪಡೆದ ಇಂದ್ರಿಯ ಸೌಂದರ‍್ಯಾನುಭವ ಹೀಗೆ ಮಾನಸಿಕವಾದ ಕಲ್ಪನಾ ಸೃಷ್ಟಿಯಿಂದ ಬೇರೊಂದು ಮೆರುಗನ್ನು ಪಡೆಯುವ ಪರಿಯನ್ನು ಕುರಿತು ಕವಿ –

ಜಗದ ಜಗುಲಿಯ ಕಟ್ಟೆಯೊಂದೆ ಕಾಲಲಿ ಮೆಟ್ಟಿ
ಜಿಗಿಜಿಗಿಯುತಿಹ ಸಪ್ತ ಸಾಗರಂಗಳ ಕಟ್ಟಿ
ನಗು ನಗುತಲೆದ್ದು ಹೊರಬಿದ್ದು ಮೇಲಕ್ಕೇರಿ
ಮರುತಲೋಕವನು ಮುಟ್ಟಿ

ದಿಗಿಲೆದ್ದ ಗಾಳಿಗಳ ಗೂಳಿಗಳ ಬಿಗಿದಿಟ್ಟು
ಹಗಲಹೆಗಲಿನ ಮೇಲೆ ಒಂದು ಕಾಲನ್ನಿಟ್ಟು
ಮುಗಿಲಿನೊಳು ಮುಗಿಯದಂತಾಗಿ ಮೇಲಕೆ ಸಾಗಿ
ನಿಂತೆಯೋ ವಿರಾಟನಾಗಿ !
[19]

ಎಂದು ಹಾಡುತ್ತಾನೆ. ಕವಿಯ ಕಲ್ಪನೆಯು ಜಗದ ಜಗುಲಿಯಮೇಲೆ ಒಂದು ಕಾಲನ್ನಿಟ್ಟರೂ ಅದು ತ್ರಿವಿಕ್ರಮನಂತೆ ಅನಂತವನ್ನೇ ಆಕ್ರಮಿಸಿ ನಿಲ್ಲುವುದು. ಇದು ಕಲ್ಪನಾ ಸೌಂದರ‍್ಯದ ಸಾಧನೆ. ಈ ಕಲ್ಪನಾ ಸೌಂದರ‍್ಯವೇ ಒಂದು ಮೂರ್ತಿಯಾಗಿ ಕವಿಗೆ ಗೋಚರಿಸಿ ಕವಿಯ ಮೂಲಕ ಈ ಪ್ರತಿಭಾಸೃಷ್ಟಿಯನ್ನು ಮಾಡುವಂತೆ ತೋರುವುದು –

ಕಠಿನ ಕಟುಭುವನ ಮಂಡಲವೆಲ್ಲ ಕಂಪಿಸುತ
ಕನಸಾಗುವುದು ನಿನ್ನ ವಿದ್ಯುದ್ವಿಲಾಸದಲಿ
ನೀರಸ ಜಗಜ್ಜೀವನದಿ ಸವಿಯ ಸಿಂಪಿಸುತೆ
ಬಂಧಿಸುವೆ ಜೀವಗಳನಿಂದ್ರಧನು ಪಾಶದಲಿ !
[20]

ಕಲ್ಪನಾ ಸುಂದರಿಯ ವಿದ್ಯುದ್ವಿಲಾಸದಿಂದ ‘ಕಠಿಣ ಕಟುಭವನ’ವೆಲ್ಲ ಕನಸಾಗುವುದು. ನೀರಸವಾದ ಜಗಜ್ಜೀವನಕ್ಕೆ ಸವಿಯನ್ನು ಚುಮುಕಿಸಿ ಜೀವರನ್ನು ಕಾಮನಬಿಲ್ಲಿನ ಸೂತ್ರದಲ್ಲಿ  ಬಿಗಿಯುವಳು ಇವಳು. ಅಂಥದು ಈ ಕಲ್ಪನಾ ಸುಂದರಿಯ ಮೋಡಿ.

ಕಲ್ಪನಾ ಸೌಂದರ‍್ಯದಲ್ಲಿ ಕವಿಯ ಲೋಕಾನುಭವಗಳು ಅವನ ಪರಿಭಾವನೆಯ ಒಳಗಣ್ಣಿನ ಬೆಳಕಿನಲ್ಲಿ ಮಿಂದು ನೂತನರೂಪ ಪಡೆದು ಬರುತ್ತವೆ. ಕವಿಕಲ್ಪನೆ ನಮ್ಮನ್ನು ಅನೂಹ್ಯಲೋಕಗಳಿಗೆ ಒಯ್ಯುತ್ತದೆ. ‘ಕಟುಗೆ ಕಟ್ಟದಿರ್ಕೆ ಕಡಲಂ ಕಪಿ ಸಂತತಿ’ ಎಂಬ ನೇಮಿಚಂದ್ರನ ಪದ್ಯವೂ ಇದನ್ನೇ ಹೇಳುತ್ತದೆ. ಈ ಕಲ್ಪನೆಯಲ್ಲೂ ಅನೇಕ ಪ್ರಕಾರಗಳುಂಟೆಂದು ಶ್ರೀಅರವಿಂದರು ಹೇಳುತ್ತಾರೆ. “ಜೀವನದ ಬಹಿರ್ಮುಖಗಳನ್ನೇ ದರ್ಶಿಸುವ ವಸ್ತುನಿಷ್ಠಕಲ್ಪನೆ (Objective Imagination); “ಮನಸ್ಸಿನ, ಊಹೆಯನ್ನು ಚಿತ್ರಿಸುವ ಚಿತ್ರಶಕ್ತಿ (Fancy); ಬೇರೆ ಯಾವ ಉದ್ದೇಶವೂ ಇಲ್ಲದೆ ತಮಗೆ ತಾವೇ ಪರ‍್ಯವಸಾನಗೊಳ್ಳುವ ಶಬ್ದ ಮತ್ತು ಪ್ರತಿಮಾ ರಚನಾಕೌಶಲದ ಕಲ್ಪನೆ, ಹೀಗೆ ಇವೆಲ್ಲ ಕವಿಯ ಕಾವ್ಯ ಸೃಷ್ಟಿಯ ಉಪಕರಣಗಳು ಮಾತ್ರ. ಆದರೆ ನಿಜವಾದ, ಸಾರಭೂತವಾದ ಕಲ್ಪನೆ ಕೇವಲ ಬಹಿರಂಗ ಅಂತರಂಗಗಳ ಸೂಕ್ಷ್ಮ ಚಿತ್ರಣವಷ್ಟರಲ್ಲೇ, ಅದ್ಭುತ ಊಹಾ ವಿಲಾಸವಷ್ಟರಲ್ಲೇ, ಸುಂದರ ಪದಬಂಧುರತೆ ಮತ್ತು ಪ್ರತಿಮಾಕೌಶಲವಷ್ಟರಲ್ಲೇ ನಿಲ್ಲುವುದಿಲ್ಲ. ಅದು ಸೃಷ್ಟಿಶೀಲವಾದುದು. ಅದು ವಸ್ತುಗಳ ಅಂತರಂಗಸತ್ಯವನ್ನು ದರ್ಶಿಸುತ್ತದೆ.”[21] ಈ ಒಂದು ಸತ್ಯದರ್ಶನದ ಹಂಬಲವಿಲ್ಲದಿದ್ದರೆ ಕವಿಯ ಕಾವ್ಯ ಕೇವಲ ಕಲ್ಪನಾವಿಲಾಸವಾಗುತ್ತದೆ. ಮನಸ್ಸನ್ನು ರಂಜಿಸಿ ಉಲ್ಲಾಸಗೊಳಿಸುವುದರಲ್ಲೇ ಪರ‍್ಯವಸಾನಗೊಳ್ಳುತ್ತದೆ. ಆದರೆ ಕವಿಯ ಅನುಭವ ವಿಕಾಸವಾಗತೊಡಗಿದಂತೆ ಅವನ ಶಕ್ತಿ ಕೇವಲ ಇಂದ್ರಿಯಸೌಂದರ‍್ಯ ಮತ್ತು ಕಲ್ಪನಾಸೌಂದರ‍್ಯವಷ್ಟರಲ್ಲೇ ನಿಲ್ಲದೆ, ತನ್ನ ನಾಲಗೆಗೆ ಬೇರೊಂದು ರುಚಿ ಹತ್ತಿರುವುದನ್ನು ಗಮನಿಸುತ್ತದೆ. ಆಗ ಅನ್ನಿಸುತ್ತದೆ –

ಬೇಸಗೆಯ ಬಿಸಿಲ ಹೂವಿನ ಜೇನಿನಿನಿಹನಿಯು
ಸೂಸಿ ಮೋಡದಿ ಹನಿವ ಮಿಂಚು ಮುತ್ತಿನ ತೊಟಕು
ಹಾಸಸಾಗರನಾದ ಚಂದಿರನ ಚಂದ್ರಿಕೆಯ
ಮೊಲೆಹಾಲಿನೊಂದೆ ಗುಟುಕು
ಈ ಸವಿಗಳನು ಸವಿದು ಸವೆದ ನಾಲಗೆಗೀಗ
ಯಾ ಸವಿಯು ಹತ್ತಿಹುದೋ?
[22]

ಕವಿಯ ರಸನೆಗೆ ನೂರಾರು ಬಗೆಯ ಇಂದ್ರಿಯ ಸೌಂದರ‍್ಯದ ರುಚಿ ಹತ್ತಿದರೂ, ಕವಿಕಲ್ಪನೆ ತನ್ನ ಮಿಂಚಿನ ಗರಿಗಳನ್ನು ಕೆದರಿ ನೆಲ ಮುಗಿಲನ್ನೆಲ್ಲಾ ವಿಹರಿಸಿದರೂ ಅದು ಬೇರೊಂದು ನಿಲುವಿಗಾಗಿ ಕಾತರಿಸುತ್ತದೆ. ಲೋಕದ ನೋವುಗಳು ವೇದನೆಗಳು ತಾಕಲಾಟಗಳು ಕವಿಯನ್ನು ಕಲ್ಪನೆಯ ಅರಮನೆಯಿಂದ ವಾಸ್ತವದ ಮುಳ್ಳಿನ ಹಾದಿಗೆ ಎಳೆಯುತ್ತವೆ. ಈ ಲೋಕದ ವಿವಿಧಾನುಭವಗಳಲ್ಲಿ ನೊಂದು ಬೆಂದು ಈ ಎಲ್ಲ ದ್ವಂದ್ವಗಳ ಹಿಂದಿರುವ ಏಕಸೂತ್ರದ ಅನ್ವೇಷಣೆಗೆ ಕವಿಚೇತನ ತೊಡಗುತ್ತದೆ. ಲೋಕದ ಈ ಎಲ್ಲ ಎಲುವಿನ ಆಚೆ ಇದೆಲ್ಲಕ್ಕೂ ಆಧಾರವಾದ ಆ ಮೂಲ ಸೂತ್ರವನ್ನು ಅರಿಯುವ ತನಕ ಈ ಸೌಂದರ‍್ಯದ ಚಂಚಲತೆಯ ಬಗೆಗೆ ತಳಮಳ. ಮಾನವನ ರೂಪಗುಣಗಳನ್ನೆಲ್ಲಾ ತನ್ನ ಬಣ್ಣದಿಂದ ಪವಿತ್ರಗೊಳಿಸುವ ಈ ಸೌಂದರ‍್ಯ ಇದ್ದಕ್ಕಿದ್ದ ಹಾಗೆ ಮರೆಯಾಗಿ ಕಣ್ಣೀರಿನ ಕಂದರದಂತಿರುವ ಈ ಲೋಕವನ್ನು ಹಾಳುಬೀಳಾಗಿಸುವುದೇತಕ್ಕೆ – ಎಂಬ ಪ್ರಶ್ನೆ ಕವಿಯಲ್ಲಿ ಮೂಡುತ್ತದೆ. ಇಷ್ಟೊಂದು ಚೆಲುವು – ನಲವೂ ತಟಕ್ಕನೆ ತನ್ನನ್ನು ಶೋಕಪೂರ್ಣವಾದ ಅಂಧಕಾರದಲ್ಲಿ ಅದ್ದಿದಾಗ, ಶೆಲ್ಲಿ ಕವಿ ಸೌಂದರ‍್ಯದ ಅಧಿದೇವಿಯನ್ನು ಪ್ರಶ್ನಿಸುತ್ತಾನೆ –

Spirit of Beauty, thou dost consecrate
With thine own hues all thou dost shine upon
Of human thought or form – where art thou gone
Why dost thou pass away and leave our state
This dim vast vale of tears, vacant and desolate?[23]

ಇಂತಹ ಸ್ಥಿತಿಯಲ್ಲಿ ಇರುವುದೆಲ್ಲವನ್ನೂ ಬಿಟ್ಟು, ಅದರಾಚೆಯ ನಿಲುವಿಗೆ ಕಾತರಿಸುವಾಗ-

ಕಂಡರೂಪಕ್ಕಿಂತ ಕಾಣದೊಡವೆಯ ಸೊಬಗು
ಉಂಡ ರುಚಿಗಳಿಗಿಂತ ಉಣ್ಣದಮೃತದ ಸವಿಯು
ಮಿಂದ ನೀರಿಂದಲೂ ಮೀಸಲಿರುವಂಥ ನೀರಿಂದ ಬಂದಂಥ ತಂಪು –
ಅಂದ ಹಾಡಿಂದಲೂ ಬಂದ ಹಾಡಿನ ಸೊಗಸು
ಬಂದ ಗಂಧಕ್ಕಿಂತ ಬರಲಿರುವ ಹೂಗಂಪು
ಅಂದವದು ಚೆಂದವದು ಆನಂದಕಂದವದು
ಕಂದದದು ಕುಂದದೆಂದೂ
[24]

ಎನ್ನಿಸುತ್ತದೆ. ಈ ಎಲ್ಲ ರೂಪ ರುಚಿ ಸ್ಪರ್ಶಾದಿಗಳಾಚೆಯ ಬೇರೊಂದನ್ನು ಕಾಣಲು ಕಾತರಿಸುತ್ತದೆ ಕವಿಯ ಕಣ್ಣು. ಇಂಥ ಅನ್ವೇಷಣೆಯಲ್ಲೇ ಅಕ್ಕಮಹಾದೇವಿ –

ಈಳೆ ನಿಂಬೆ ಮಾವು ಮಾದಲಕ್ಕೆ
ಹುಳಿನೀರನೆರೆದವರಾರಯ್ಯ
ಮರುಗ ಮಲ್ಲಿಗೆ ಪಚ್ಚೆ ದವನಕ್ಕೆ
ಪರಿಮಳದುದಕವನೆರೆದವರಾರಯ್ಯ?
[25]

ಎಂದು ಪ್ರಶ್ನಿಸಿದ್ದು. ಇಲ್ಲಿ ಈಳೆ ನಿಂಬೆ ಮಾವು ಮಾದಲಗಳಂಥ ವಸ್ತುವನ್ನು ಕುರಿತ ದೃಷ್ಟಿಗಿಂತ, ಅವುಗಳ ‘ರಸ’ವನ್ನು ಕುರಿತ ಜಿಜ್ಞಾಸೆ ಇದೆ. ಮಾವಿನ ಮರವನ್ನು ಕಂಡು ಅದು ಮನಸ್ಸಿನ ಮೇಲೆ ಮಾಡಿದ ಪರಿಣಾಮವನ್ನು ಕುರಿತು ‘ತಳಿರೊಳ್ ನೀನೇ ಬೆಡಂಗನೈ, ಪುಷ್ಪಸಂಕುಳದೊಳ್ ನೀನೆ ವಿಳಾಸಿಯೈ’ ಎಂದು ಪ್ರಶಂಸೆಗಾರಂಭಿಸಿ, ‘ಭೃಂಗಕೋಕಿಲ ಕೀರಪ್ರಿಯ ಚೂತರಾಜ, ತರುಗಳ್ ನಿನ್ನಂತೆ ಚೆನ್ನಂಗಳೇ’ – ಎಂದು ಪಂಪನಂತೆ ಮಾವಿನ ಮರಕ್ಕೆ ಪಟ್ಟಗಟ್ಟುವುದು ಇಂದ್ರಿಯ ಸೌಂದರ‍್ಯಾನುಭವದ ಉತ್ಕಟತೆಯನ್ನು ಸೂಚಿಸುತ್ತದೆ. ಆದರೆ ಅದೇ ಮಾವಿನ ಮರವನ್ನು ನಕ್ಷತ್ರಾರತಿಯೆತ್ತುವ ಮಾವಿನ ಮರ ಬರೆದ ಚಿತ್ರ ಬರೆದಂತಿದೆ ಎಂದಾಗಲೀ, ವಸಂತ ಋತುವಿನಲ್ಲಿ ಮಾವಿನಮರವೆಂಬ ಮತ್ತಗಜ ವಿಯೋಗಿಗಳನ್ನು ಬೆದರಿಸಿತೆಂದಾಗಲೀ, ಬರೆದಾಗ ಕಲ್ಪನಾಸೌಂದರ‍್ಯದ ಪರಿಯನ್ನು ಸೂಚಿಸುತ್ತದೆ. ಆದರೆ ಅಕ್ಕಮಹಾದೇವಿ –

‘ಈಳೆ ನಿಂಬೆ ಮಾವು ಮಾದಲಕ್ಕೆ ಹುಳಿನೀರನೆರೆದವರಾರಯ್ಯ?’

ಎನ್ನುವಲ್ಲಿ ಅವಳ ದೃಷ್ಟಿ ಆ ವಸ್ತುಗಳು ತನ್ನ ಇಂದ್ರಿಯಕ್ಕೆ ಮತ್ತು ಕಲ್ಪನೆಯ ಕಣ್ಣಿಗೆ ಹೇಗೆ ಗೋಚರಿಸುತ್ತವೆ ಎನ್ನುವ ವಿಚಾರದಲ್ಲಿನ ರುಚಿಯನ್ನು ವರ್ಜಿಸಿಕೊಂಡು, ಅದರ ಹಿಂದಿನ ‘ರಸ’ವನ್ನು ಅರಿಯುವ ಒಂದು ಚಿಂತನೆಯನ್ನು ಬೆಳೆಸಿಕೊಂಡಿದೆ. ಈ ಅನುಭವದ ಜಿಜ್ಞಾಸೆಯನ್ನು ಬಹು ಸುಂದರವಾಗಿ ನಿರೂಪಿಸುತ್ತದೆ, ಕವಿ ಪು.ತಿ.ನ. ಅವರ ‘ದಾಳಿಂಬೆ’ ಎಂಬ ಒಂದು ಸಾನೆಟ್-

“ಇದು ಮೀಸಲೇ ನನಗೆ, ಈ ಬೆಳ್ಳಿಬಟ್ಟಲೊಳು
ರತ್ನಕಾಂತಿಯ ಚೆಲ್ಲಿ ಕಳಕಳಿಪ ದಾಳಿಂಬೆ?
ನೂತ್ನ ಋದ್ಧಿಯ ಪಡೆದ ಮೋದದೊಳಗೀ ಜಿಹ್ವೆ
ಇದುವರೆಗು ಕಾರ್ಪಣ್ಯದೊಳಗಿದ್ದೆನೆನುತಿಹುದು.
ಬಿತ್ತಬಿತ್ತದ ರಸವ ಸವಿದು ಸವಿದಾಕ್ಷಣದಿ
ಆಯುಷ್ಯಸಾರವನು ಬಟ್ಟಿಯಿಳಿಸುವ ತೆರದಿ
ದೇಯವಿದನಾ ರೂಕ್ಷವೃಕ್ಷವೀ ಪೃಥ್ವಿಯಿಂ
ದೆತ್ತಿ ಮುದವೆರೆವವೊಲಾವರ್ತಿ ಚೋದಿಸಿತು?
ಋತು ಋತುಗಳಾದರವ, ಗಾಳಿಯಪ್ಪುಗೆ ಸೊಬಗ
ಬೆಂಗದಿರ ರಕ್ತಿಯನು ತಂಗದಿರ ಸಕ್ತಿಯನು
ತಂಗಿಸಿತೊ ಮಳೆ ಮಂಜಿನೊಲವ ಮಧುರಾಮ್ಲದೊಳು
ಇತರೇಂದ್ರಿಯದ್ಯುತಿಯ ರಸನೆಗನುವದಿಸುವೊಲು?
ರಸವಿದೇನ್ ಇದ ಸವಿವರಾರ್ ಏನಿದಚ್ಚರಿಯ ಭೋಗ
ರಸನೆಹಸೆಯೊಳಗಿಂತು ಪ್ರಕೃತಿ ಪುರುಷರ ದಿವಯೋಗ!’
[26]

ಇದು ದಾಳಿಂಬೆಯನ್ನು ಕುರಿತ ಒಂದು ಚಿಂತನೆ. ಕವಿತೆ ಆರಂಭವಾಗುವುದು ಇಂದ್ರಿಯ ಸೌಂದರ‍್ಯಾನುಭವದಿಂದ. ದಾಳಿಂಬೆ ಹಣ್ಣನ್ನು ತಿನ್ನುವ ಕವಿ ಅದನ್ನು ತಿನ್ನುತ್ತಾ ತೆಕ್ಕನೆಯೆ ಆ ಸವಿಯ ಮೂಲಕ್ಕೆ ಹೊರಟಿರುವುದು ಇದರ ವಿಶೇಷತೆ. ಇಲ್ಲಿ ಕಲ್ಪನೆ ‘ರತ್ನ ಕಾಂತಿಯ ಚೆಲ್ಲಿ ಕಳಕಳಿಪ ದಾಳಿಂಬೆ’ ಎನ್ನುವಷ್ಟರಲ್ಲೇ ಮುಗಿದಿದೆ. ಇನ್ನು ಉಳಿದುದು ಆ ರಸದ ಚಿಂತನೆ. ಏಕಕಾಲದಲ್ಲಿಯೇ ಕವಿ ಇಂದ್ರಿಯ ಸೌಂದರ‍್ಯದಿಂದ ನೆಗೆದು, ಕಲ್ಪನಾ ಸೌಂದರ‍್ಯವನ್ನು ಕಿಂಚಿತ್ ಸ್ಪರ್ಶಿಸಿ, ಚಿತ್ತಸೌಂದರ‍್ಯದಲ್ಲಿ ನಿಂತು ಆತ್ಮ ಸೌಂದರ‍್ಯದೆಡೆ ಕಣ್ಣು ಚಾಚಿದ್ದಾರೆ.

ಈ ಕವಿತೆಯ ಮೊದಲ ನಾಲ್ಕು ಸಾಲು ಇಂದ್ರಿಯ ಸೌಂದರ‍್ಯಾನುಭವವನ್ನು ಸೂಚಿಸುತ್ತವೆ. ಬೆಳ್ಳಿಯ ಬಟ್ಟಲಲ್ಲಿ ರತ್ನಕಾಂತಿಯಿಂದ ಕಳಕಳಿಪ ದಾಳಿಂಬೆಯ ರಮ್ಯಚಿತ್ರ, ಆ ಸವಿಯನ್ನು ಸವಿದ ನಾಲಗೆಯ ಸಂತೃಪ್ತಿ. ಮುಂದಿನ ನಾಲ್ಕು ಸಾಲು ಈ ಸವಿಯನ್ನು, ಅದರ ರಹಸ್ಯವನ್ನು ಕುರಿತ ಚಿಂತನೆ. ಈ ರೂಕ್ಷವಾದ ವೃಕ್ಷದಲ್ಲಿ ಇಂತಹ ಮುದವನ್ನು ನೀಡುವ ಈ ಹಣ್ಣನ್ನು ಯಾವ ಪ್ರೀತಿ ಸೃಜಿಸುವಂತೆ ಚೋದಿಸಿತು – ಎಂದು ಈ ಸೌಂದರ‍್ಯದ ಹಿಂದಿರುವ ಪ್ರೀತಿಯ ಚಿಂತನೆಯನ್ನು ಕಾಣುತ್ತೇವೆ. ಪಂಚಭೂತಾತ್ಮಕವಾದ ಪ್ರಕೃತಿವ್ಯಾಪಾರದಲ್ಲಿ ಸೃಷ್ಟಿಯ ಎಲ್ಲ ಶಕ್ತಿಯೂ ಸೇರಿ ನಮ್ಮ ರಸನೆಗೆ ರಸವನ್ನು ಅನುವದಿಸುವಂತೆ ಯಾವ ಗಾರುಡಿ ಇದನ್ನು ಮೂಡಿಸಿದೆ ಎನ್ನುತ್ತಾರೆ ಕವಿ. ಎಂದರೆ ಇಲ್ಲಿ ಕವಿ ವಸ್ತುವನ್ನು ಕೇವಲ ಪ್ರೀತಿಸುವುದಲ್ಲ, ಆ ಪ್ರೀತಿಯ ಮೂಲ ತತ್ವವನ್ನು ಕಾಣಲು ಹವಣಿಸಿದ್ದಾರೆ. ಕಡೆಗೆ –

ರಸವಿದೇನ್ ಇದ ಸವಿವರಾರ್ ಏನಿದಚ್ಚರಿಯ ಭೋಗ
ರಸನೆಹಸೆಯೊಳಗಿಂತು ಪ್ರಕೃತಿ ಪುರುಷರ ದಿವ್ಯಯೋಗ!

ಎನ್ನುವಲ್ಲಿ ಆ ರಸದ ಪರಿಯನ್ನು ಕಂಡು ಬೆರಗಾಗಿದ್ದಾರೆ. ಅದನ್ನು ಸವಿಯುವವರು ತಾವು ಎಂಬುದೂ ಅಲ್ಲವಾಗಿ, ಯಾವ ಚೈತನ್ಯ ಹೀಗೆ ರೂಕ್ಷವಾದ ವೃಕ್ಷದಲ್ಲಿ ದಾಳಿಂಬೆಯನ್ನು ಸೃಜಿಸಿ ರಸವನ್ನೆರೆಯಲು ಚೋದಿಸುವ ಪ್ರೀತಿಯಾಗಿದೆಯೋ, ಅದೇ ಚೈತನ್ಯ ರಸನೆಯೂ ಆಗಿ ತನ್ನ ರಸವನ್ನು ತಾನೇ ಸವಿದು ‘ರಸನೆಹಸೆಯೊಳಗಿಂತು ಪ್ರಕೃತಿ ಪುರುಷರ ದಿವ್ಯಯೋಗವನ್ನುಂಟುಮಾಡಿದೆ ಎಂದು ಆ ಆತ್ಮ ಸೌಂದರ‍್ಯದ ಅಂಚನ್ನು ಮುಟ್ಟಿದ್ದಾರೆ. ಹೀಗೆ ಕವಿ ಸೌಂದರ‍್ಯಾನುಭವವನ್ನು ಕುರಿತು ಜಿಜ್ಞಾಸೆ ನಡೆಸಿರುವ ಕ್ರಮವೂ ಗಮನಾರ್ಹವಾಗಿದೆ. ದಾಳಿಂಬೆಯಂಥ ಹಣ್ಣನ್ನು ತಿನ್ನುತ್ತಿರುವಾಗಲೇ, ತಮ್ಮ ಉಪಭೋಗದ ಆ ವಸ್ತುವನ್ನು, ಅದು ನೀಡುವ ಐಂದ್ರಿಯಸಂತೃಪ್ತಿಯನ್ನು, ಕೂಡಲೇ ತಮ್ಮ ಚಿಂತನೆಯಲ್ಲಿ ನಿರ್ಲಿಪ್ತಪರಿಭಾವನೆಗೇರಿಸುವುದರ ಮೂಲಕ ಅವರು ಪಡೆದ ಸೌಂದರ‍್ಯಾನುಭವವನ್ನು ಹೇಳತೊಡಗಿದ್ದಾರೆ. ಅನ್ನಮಯದ ರುಚಿಯಿಂದ ಮೊದಲಾದ ಈ ಅನುಭವ ಆನಂದಮಯದತ್ತ ಹೋಗಿದೆ. ಪ್ರಕೃತಿ – ಪುರುಷ ಇವೆರಡರ ದಿವ್ಯ ಯೋಗ (ಲಗ್ನ)ವನ್ನು ತಮ್ಮ ರಸನೆಯ ‘ಹಸೆ’ ಯಲ್ಲಿ ಗುರುತಿಸಿದ್ದಾರೆ. ಈ ಯೋಗವೇ ಸೌಂದರ‍್ಯ. ಇಲ್ಲಿ ಗುರುತಿಸಿರುವುದು ಚಿತ್ತದ ಸೌಂದರ‍್ಯ ಅಥವಾ ಈ ಎಲ್ಲ ಚೆಲುವಿನ ಮಣಿಗಣದ ಅಂತರಂಗದ ಸೂತ್ರಸೌಂದರ‍್ಯ.

ಇದು ಚಿತ್ತದ ಸೌಂದರ‍್ಯ ಅಥವಾ ತಾತ್ವಿಕ ಸೌಂದರ‍್ಯ. “ಇದು ಬುದ್ಧಿ ಪ್ರಧಾನವಾದುದು. ಇಲ್ಲಿ ಮೊದಲನೆಯ ಎರಡು ಪ್ರಕಾರಗಳೂ ಬೆರೆತಿರುವುದಲ್ಲದೆ, ಆತ್ಮ ಸೌಂದರ‍್ಯಾನುಭವದ ಸೂಚನೆಯೂ ಇಲ್ಲಿದೆ. ಇಲ್ಲಿ ಕವಿಯ ರುಚಿ ಐಂದ್ರಿಯ ಮತ್ತು ಕಲ್ಪನಾಮಯ. ಸೌಂದರ‍್ಯವನ್ನು ಮೀರಿ ಬೇರೊಂದು ನಿತ್ಯಚೈತನ್ಯವನ್ನು ತನ್ನ ಪ್ರತಿಭೆಯ ಮೂಲಕ ದರ್ಶಿಸಿ ಪ್ರಕಟಿಸುತ್ತದೆ. ಈ ಲೋಕದ ಅರೆ – ಕೊರೆಗಳ ಹಿಂದಿರುವ ಒಂದು ತತ್ವವನ್ನು ಕಾಣಲು ಕವಿ ಹೊರಡುತ್ತಾನೆ. ಪ್ಲೇಟೋ ಹೇಳುವ “Archetypal Beauty” ಎನ್ನುವ ಮಾತು ಈ ಮಜಲಿಗೆ ಅನ್ವಯಿಸುತ್ತದೆ. ಲೋಕದಲ್ಲಿ ಕಾಣುವ ಸೌಂದರ‍್ಯದ ಆವಿರ್ಭಾವಗಳೆಲ್ಲ ಅಪೂರ್ಣವಂತೆ; ಅವುಗಳ ಪೂರ್ಣಮಾದರಿಗಳು ಸ್ವರ್ಗಲೋಕದಲ್ಲಿವೆಯೆಂದು ಪ್ಲೇಟೋ ಹೇಳುತ್ತಾನೆ. ತಾತ್ವಿಕ ಕವಿಯ ರಸಜೀವನವು ಇಂಥ ಮಾದರಿಗಳ ಸಹವಾಸದಲ್ಲಿ ಬೆಳೆಯುವುದು.’’[27] ಈ ಮಾದರಿಗಳನ್ನು ಅವನು ಕೇವಲ ಅಧ್ಯಯನದಿಂದ, ಕೇವಲ ಆಲೋಚನೆಯಿಂದ ಗ್ರಹಿಸಿ ಹೇಳುತ್ತಾನೆಂದಲ್ಲ; ಅವನು ಅವುಗಳನ್ನು ತನ್ನ ಪ್ರತಿಭೆಯ ಮೂಲಕ ಗ್ರಹಿಸಿ ಅಭಿವ್ಯಕ್ತಿಗೊಳಿಸುತ್ತಾನೆ. “ತಾತ್ವಿಕ ಸೌಂದರ‍್ಯ ಎನ್ನುವುದು ಕೇವಲ ತತ್ವವಲ್ಲ; ಅದೊಂದು ತತ್ವದೃಷ್ಟಿ.”[28] ಹಾಗಲ್ಲದಿದ್ದರೆ ಅವನ ಕಾವ್ಯ ಬರಿಯ ತತ್ವದ ಕಂತೆಯಾಗುತ್ತಿತ್ತೇ ಹೊರತು ಕಾವ್ಯವಾಗುತ್ತಿರಲಿಲ್ಲ. ಅವನು ಶಾಸ್ತ್ರಕಾರನಾಗುತ್ತಿದ್ದನೇ ಹೊರತು ಕವಿಯಾಗುತ್ತಿರಲಿಲ್ಲ. ಕವಿ ಪ್ರತಿಭಾನದ ಮೂಲಕ ಗ್ರಹಿಸುವ ಈ ತತ್ವ ಅವನ ಅನುಭವವಾಗಿ ಅವನಲ್ಲಿ ರಕ್ತಗತವಾಗಿ ಬಂದಾಗಲೇ ಅವನ ಕಾವ್ಯ ನಿತ್ಯಸತ್ಯವೊಂದರ ಪ್ರತಿಮೆಯಾಗುವುದು. ಇಂತಹ ಅನುಭವದ ಸ್ಪರ್ಶದಿಂದ ಕವಿಕಾಣುವ ಹೂವು ಅವನ ಕಣ್ಣಿಗೆ –

ಕಾಣುವ ಸೃಷ್ಟಿಯ ಕಾಣದೆ ಸುತ್ತಿಹ
ಆನಂದಾಬ್ಧಿಯ ಅಮೃತದ ತುಂತುರು
[29]

ಎಂದು ಕಾಣುತ್ತದೆ. ಇಂಥ ಅನುಭವಕ್ಕೆ ಪ್ರಕೃತಿ –

ಜಡವಲ್ಲ ಸ್ಥೂಲವಸ್ತುಗಳಲ್ಲ;
ಮೃತನಿಸರ್ಗದ ಚೇತನವಿಹೀನ ಶವವಲ್ಲ !
ಈಶ್ವರ ಶರೀರದಲಿ ಚಿನ್ಮಯ ಮಹಾಂಗಗಳು;
ಬ್ರಹ್ಮದ ಮಹಾ ಚಿತ್ತಶರಧಿಯ ತರಂಗಗಳು.
[30]

ಈ ದೃಷ್ಟಿಯಿಂದ ಷೆಲ್ಲಿ ಕವಿಯ ಬಾನಾಡಿ (Skylark) ಒಂದು ಹಕ್ಕಿ ಮಾತ್ರವಲ್ಲ; ಅದೊಂದು ಚೈತನ್ಯ. ನಾವರಿಯದ ಆನಂದದ ರಹಸ್ಯಗಳನ್ನು ಅದು ಕಂಡು ಆ ಆನಂದದ ಲಹರಿಗಳನ್ನೇ ಹಾಡಾಗಿ ಹೊಮ್ಮಿಸುತ್ತದೆ. ಪು.ತಿ.ನ. ಅವರ ‘ಚಿಕುಹೂ’ ಕವನದಲ್ಲಿ ನಾವು ಕಾಣುವ ಕೋಗಿಲೆ ಬರಿಯ ಹಕ್ಕಿಯಲ್ಲ; ಚಿರಂತನವಾದ ದನಿಯೊಂದನ್ನು ಹಿಡಿದು ಬಿಡುವ ಮಾಧ್ಯಮಗಳಲ್ಲಿ ಒಂದು. ಇಂತಹ ಚೆಲುವಿನ ನೆಲೆಯ ಅನುಭವದ ಕಣಸನ್ನು (vision) ಷೆಲ್ಲಿಕವಿ ‘ಅಲ್ಯಾಸ್ಟರ್’ (Alastor) ಎಂಬ ಕವಿತೆಯಲ್ಲಿ, ಅರಬ್ ಕನ್ಯೆಯ ಪ್ರತಿಮೆಯಲ್ಲಿ ರೂಪಿಸಿದ್ದಾನೆ. ಕುವೆಂಪು ಅವರು ಈ ‘ಚೈತನ್ಯದ ಚಿರನಿಧಿ’ಯನ್ನು ‘ಕಲಾಸುಂದರಿ’ಯಾಗಿ ಪ್ರತಿಮಿಸಿದ್ದಾರೆ. ಸೃಷ್ಟಿಸೌಂದರ‍್ಯದ ಚಿನ್ಮೂರ್ತಿಯಾದ ಕಲಾಸುಂದರಿಯನ್ನು ಕುರಿತು –

ನಿನ್ನ ಮುಡಿಯ ಮೇಲುಗಡೆ ಇನಶಶಿಗಳ ನಿಚ್ಚನಡೆ
ಓ ಸುಮನಸ ಸಂಗಿನಿ
ಕಡಲಲೆಗಳ ಗಡಿಬಿಡಿ ನೀನಿಡುತಿಹ ಮೆಲ್ಲಡಿ
ದುಃಖ ಸುಖ ತರಂಗಿನಿ

ಮೊದಲ ಬಯಕೆ ಸಿಡಿದ ಕಿಡಿ
ಮೊದಲ ಗಾನವೊಗೆದ ನುಡಿ
ನೀನೇ ಕಡಲು ನೀನೆ ತಡಿ
ಹೇ ವಿಶ್ವದೇಹಿನಿ !
ನರ್ತಿಪ ತವ ಚರಣನ್ಯಾಸ
ಜನನ ಮರಣ ಕಾಲ ದೇಶ
ನೃತ್ಯದೊಳವು ಲಯವಿಶೇಷ
ಹೇ ತ್ರಿಭುವನ ಮೋಹಿನಿ!
………………………………….
ಲಲಿತ ಚರಣ ಭಂಗಿಯಿಂದೆ
ನಡೆಯೆ ನೀನು ಮುಂದೆ ಮುಂದೆ
ಬಹವು ಋತುಗಳೆಲ್ಲ ಹಿಂದೆ
ಸ್ಥಿರ ಅಸ್ಥಿರ ಗಾಮಿನಿ !
……………………………………
ಹೂವುಗಳಿಗೆ ಬಣ್ಣ ಬಳಿದು
ದುಂಬಿಗಳನು ಬಳಿಗೆ ಸೆಳೆದು
ಅವರನೊಲಿಸಿ ಒಲುಮೆಗಲಿಪೆ
ಓ ನಣ್ಪಿನ ಚಿಲುಮೆಯೆ
…………………………………..
ಹಣತೆ ಸೊಡರು ಹಿಡಿದು ಮುಂದೆ
ನಡೆಯೆ ನೀನು ಬಹೆನು ಹಿಂದೆ
ಕವಿಯ ಕಣ್ಗೆ ಬೆಳಕು ತಂದೆ
ಹೇ ಅಸೀಮ ಸ್ಫೂರ್ತಿಯೇ !
[31]

ಎಂದು ಹಾಡಿದ್ದಾರೆ. ಇದರಲ್ಲಿ ಕವಿ ಸೃಷ್ಟಿಯ ಸಮಸ್ತ ವ್ಯಾಪಾರಗಳಿಗೂ ಮೂಲವಾದ ಚೈತನ್ಯವನ್ನು ಮೂರ್ತೀಕರಿಸಿದ್ದಾರೆ. ಇಂತಹ ಒಂದು ದರ್ಶನ ದೊರೆಕೊಂಡ ಮೇಲೆ ಕವಿಯ ಕಣ್ಣಿಗೆ ಇದು ಸುಂದರ ಇದು ಸುಂದರವಲ್ಲ, ಇದು ಮೇಲು ಇದು ಕೀಳು ಎಂಬ ಭಾವನೆ ಉಳಿಯುವುದಿಲ್ಲ. ಎಲ್ಲವೂ ಆ ದಿವ್ಯಚೇತನದ ಆವಿರ್ಭಾವಗಳೆಂಬ ಅನುಭವವಾಗುತ್ತದೆ. ಎಲ್ಲವೂ ಅಂತರ‍್ಯಾಮಿಯ ಸೋಗಿನ ರೂಪದಂತೆ ತೋರುತ್ತದೆ. ಶ್ರೀ ಪು.ತಿ.ನ. ಅವರ ‘ಅಂತರ‍್ಯಾಮಿಯ ಸೋಗಿನ ದರ್ಶನ’ ಎಂಬ ಕವಿತೆ ಇದಕ್ಕೊಂದು ಅಪೂರ್ವ ನಿದರ್ಶನ. ಒಂದು ಬೆಳಿಗ್ಗೆ ದೇವನಹಳ್ಳಿಯ ಹಸುರು ಬಯಲಿನಲ್ಲಿ ಕವಿ ವಿಹರಿಸುತ್ತಿರುತ್ತಾರೆ. ತಂಗಾಳಿ ತೀಡುತ್ತಿದೆ. ವಾತಾವರಣ ಉಲ್ಲಾಸಕಾರಿಯಾಗಿದೆ. ಕವಿಯ ಮನಸ್ಸು ಪಟವಿಳಿಸಿದ ಓಡಿನಂತೆ (ಸೌಂದರ‍್ಯಾನುಭವಕ್ಕೆ ತಕ್ಕ ಮನಸ್ಥಿತಿಯ ಲಕ್ಷಣವೇ ಇದು) ಇರುವಾಗ ಅವರು ದೂರದಲ್ಲಿ ಒಂದು ಆಕೃತಿಯನ್ನು ಕಾಣುತ್ತಾರೆ –

ಕೊಂಕಿದ ಕೋಡಿನ ಮುರುಟಿದ ಮುಸುಡಿನ
ಹಳ್ಳದ ಮೂಗಿನ ಬಿರಿ ಹೊಳ್ಳೆಗಳ
ಬಾಳೆಯ ಮೋತೆಯ ಗಾತ್ರದ ಕಿವಿಗಳ !
ಮೃಗವಿದಿಗೋ ಗುಡ್ಡೆಯ ಕಣ್ಣುಗಳ !

ಅಂತಹ ವಿಕೃತವಾದ ಪ್ರಾಣಿ ಹೊರಗಣ್ಣಿಗೆ ; ಆದರೆ ಅವರ ಅಂತರಂಗಕ್ಕೆ ಕೇಳುವ ದನಿ ಬೇರೆ:

“ಬಲ್ಲೆ ಬಲ್ಲೆ ನಾ ನಿನ್ನ, ನೀನೋ ನನ್ನನು
ಗುರುತಿಸಲಾಗದ ಭ್ರಮೆಯಿಂದಿರುವೆ.
ಇದುವೇ ಬಿನದಂ ಅಹಹಾ !” ಎಂಬೊಲು
ನಗಲಾರದೆ ನಗುತಿತ್ತೇನೊರವೆ

ಆ ಒಂದು ಕ್ಷಣದಲ್ಲಿ ಆ ವಿಕೃತಿ ನಗುವಂತೆ ತೋರಿತು, ‘ನಾನು ನಿನ್ನನ್ನು ಬಲ್ಲೆ, ನೀನು ಮಾತ್ರ ನನ್ನನ್ನು ತಿಳಿಯಲಾರೆಯಲ್ಲ, ಎಂದು. ಆದರೆ ಕವಿ ಅದರ ನಿಜವನ್ನರಿಯುತ್ತಾರೆ –

ಇಂತಾ ಮೃಗವೇಷನು ಬಿನದಿಸುತಿರೆ
ವೇಷವನಾಂತವನಾರೆಂದಾನಿರೆ
ಸೂಟಿಯೊಳಾ ಸೋಗಿನ ಒಳಹೊಕ್ಕು
ನಿಜವರಿತೋಹೋ ಎಂದೆನು ನಕ್ಕು –
ಬಲ್ಲೆ ಬಲ್ಲೆ ಈ ನಗೆಯಾಟವ, ಬಾ
ಮೊಗವಾಡವ ಕಳೆ – ಏನಿದು ಹುಚ್ಚು
ಇನ್ನೀ ವಂಚಿಸುವಾಟವು ಸಾಗದು
ಬಿನದ ಸಾಕಣ್ಣ, ಯಾರಿಗೆ ಮೆಚ್ಚು?
ಇಂತೀ ತೆರ ನಾ ಸರಸದಿ ನುಡಿಯಲು
ದೌಡೋಡಿತು ಮೃಗ ಬಲು ನಾಚಿದವೊಲು –
ಮರುಚಣವೆಲ್ಲವೂ ನಿತ್ಯದೊಲಾಯ್ತು
ದೂರ ಒಂದೆಮ್ಮೆ ಮೇಯುತಲಿತ್ತು !

ಕಡೆಗೆ ಅವರು ಕಂಡುದು ಒಂದು ಎಮ್ಮೆ ! ಎಮ್ಮೆ ಸುಂದರವಾದ ಪ್ರಾಣಿ ಎಂದು ಕವಿಯಲ್ಲದೆ ಇನ್ನಾರು ಒಪ್ಪಿಕೊಂಡಾರು? ಅದರಲ್ಲಿ ಚೆಲುವನ್ನು ಕಾಣುವುದೂ ಸುಲಭ ಸಾಧ್ಯವಲ್ಲ. ಆದರೆ ಕವಿಗೆ ಆ ಒಂದು ಕ್ಷಣದಲ್ಲಿ, ಆ ವಿಕೃತಿ ಪ್ರಾಣಿಯಲ್ಲಿ, ವಿಕೃತಿಯ ಮೊಗವಾಡವನ್ನು ಧರಿಸಿದ ಚೈತನ್ಯದ ದರ್ಶನವಾಯಿತು. ಆ ಒಂದು ಕ್ಷಣದಲ್ಲಿ ಕವಿಗಾದ ಅನುಭವ, ‘ದರ್ಶನ’ ಪರಮಸತ್ಯ. ವಿಕೃತಿಯ ಮೊಗವಾಡವನ್ನು ತಾಳಿ ನಮ್ಮನ್ನು ವಂಚಿಸುವುದೂ ಪರಮ ಸೌಂದರ‍್ಯವೇ ಎಂಬ ತತ್ವವನ್ನು ಕವಿ ಇಲ್ಲಿ ಕಂಡಿದ್ದಾರೆ. ಮತ್ತೆ ಕವಿ ಮಾನವನಾದಾಗ ‘ದೂರ ಒಂದೆಮ್ಮೆ ಮೇಯುತಲಿತ್ತು!’ ಹೀಗೆ ಕ್ಷಣ ಒಂದರಲ್ಲಿ ಕವಿ ಕಂಡ ಆ ದಿವ್ಯ ಸೌಂದರ‍್ಯ ಕವಿಯ ನಿರಂತರ ಹಂಬಲದ ವಸ್ತುವಾಗಿದೆ. ಆ ಅನುಭವದ ನಂತರ ಕವಿ ಹೇಳುತ್ತಾರೆ-

“ದೇವನಹಳ್ಳಿಯೊಳಾ ಒಂದರೆಚಣ
ಮಾಯೆ ತೆರೆದು ದರ್ಶನವಿತ್ತವನಂ
ಅಂದಿಂದೆಲ್ಲಾ ರೂಪದ ಮರೆಯೊಳು
ಹುಡುಕುತ ಹಂಬಲಿಸಿದೆ ನನ್ನ ಮನಂ’’
[32]

ಎಂದು. ಹೀಗೆ ಕವಿ ತನಗೆ ಪ್ರತಿಭಾನ ಸಂವೇದ್ಯವಾದ ನಿತ್ಯಚೈತನ್ಯದ ಕ್ಷಣದರ್ಶನಗಳಿಂದ ಸ್ಫೂರ್ತನಾಗಿ ತನ್ನ ಕೃತಿಗಳಲ್ಲಿ ಆ ಸತ್ಯವನ್ನು ಸಾರುತ್ತಾನೆ. ಈ ತತ್ವ ಬರಿಯ ವೇದಾಂತವಲ್ಲ; ತತ್ವದೃಷ್ಟಿ. ಇದನ್ನು ‘ದರ್ಶನ’ ಎನ್ನಬಹುದು ಒಂದು ಮಟ್ಟದಲ್ಲಿ. ನಾಗಚಂದ್ರ ‘ಕವಿಗೆ ದರ್ಶನವಿಶುದ್ಧಿಯೇ ಮೌಲ್ಯ’ ಎಂದುದೂ ಬಹುಶಃ ಈ ಅರ್ಥದಲ್ಲೆ. ಹಿರಿಯ ಕವಿಗಳ ಕಾವ್ಯದಲ್ಲಿ ಈ ಒಂದು ದರ್ಶನವಿರುತ್ತದೆ. ಎಲ್ಲ ತತ್ವಗಳನ್ನು ಒಂದಾಗಿಸುವ ಮೂಲತತ್ವದ ದರ್ಶನ ಕವಿಗೆ ಆದರೂ ಅದು ಅವನಲ್ಲಿ ನಿರಂತರವಾಗಿ ಉಳಿದಿರುವುದಿಲ್ಲ. ಅದು ಅವನಲ್ಲಿ ನಿರಂತರವಾಗಿ ಉಳಿದಾಗ ಅವನು ಅನುಭಾವಿಕವಿ, ಋಷಿಕವಿ, ಮಂತ್ರಕವಿ ಆಗುತ್ತಾನೆ. ಆತ್ಮ ಸೌಂದರ‍್ಯಾನುಭವದ ಮಜಲಿನಲ್ಲಿ ನಿಲ್ಲುತ್ತಾನೆ.

ಕಲೆ ಮೃಣ್ಮಯದಿಂದ ಮೊದಲಾದರೂ ಅದು ಸೇರಬೇಕಾದುದು ಚಿನ್ಮಯವನ್ನು. ನಾಲ್ಕನೆಯ ಮಜಲಾದ ಆತ್ಮ ಸೌಂದರ‍್ಯಾನುಭವದಲ್ಲಿ, ಹಿಂದೆ ಹೇಳಿದ ಮೂರು ರೀತಿಗಳೂ ಇರುತ್ತವೆ. ಇಲ್ಲಿ ಆ ಪೂರ್ಣ ಮಾದರಿಗಳಷ್ಟೇ ಅಲ್ಲ ಅವುಗಳನ್ನು ಸಮರಸಗೊಳಿಸುವ ಆ ಪರಾತ್ಪರವೂ ಕವಿಗೆ ಗೋಚರಿಸುತ್ತದೆ. ಇಲ್ಲಿ ಕವಿ ಅನುಭಾವಿಯಾಗಿ ಪರಮಸತ್ಯದ ಒಂದು ನೋಟವನ್ನು, ಸ್ಪರ್ಶವನ್ನು ಪಡೆಯುತ್ತಾನೆ. ಇಲ್ಲಿ ಎಷ್ಟೋ ವೇಳೆ ಅವನ ಸೌಂದರ‍್ಯಾನುಭವ ಇಂದ್ರಿಯ ಸಾಪೇಕ್ಷವಲ್ಲ. ಸಾಮಾನ್ಯ ಕವಿಗಾದರೋ ಬಾಹ್ಯವಸ್ತು ಅತ್ಯಂತ ಆವಶ್ಯಕ; ಆದರೆ ಆತ್ಮಸೌಂದರ‍್ಯಾನುಭವಿಯಾದ ಕವಿಗೆ ಬಾಹ್ಯವಸ್ತು ಅನಿವಾರ‍್ಯವೇನಲ್ಲ. ಕವಿ ನೇರವಾಗಿ ಅತೀತದ ಅನುಭವವನ್ನು ಪಡೆದು ಆ ಸತ್ಯವನ್ನು  ಪ್ರಕಟಿಸುತ್ತಾನೆ. ಇಲ್ಲಿ ಕೃತಿ ಬರಿಯ ಲೋಕಾನುಕೃತಿಯಾಗದೆ ನಿತ್ಯಸತ್ಯಗಳನ್ನು ಪ್ರತಿಮಿಸುವ ‘ಸತ್ಯಸ್ಯಸತ್ಯಕಥನ’ವಾಗುತ್ತದೆ. ಇಲ್ಲಿ ಕವಿ ಋಷಿಯಾಗುತ್ತಾನೆ. ತಾನು ಪಡೆದ ಸತ್ಯಾನುಭವವನ್ನು ಉಕ್ತಿಸೌಂದರ‍್ಯವಾಗಿ ಪರಿವರ್ತಿಸಿ ಹೇಳುವುದರಿಂದ ಅವನ ಕೃತಿ ಸೌಂದರ‍್ಯದ ಮುಖಾಂತರ ಪರಮ ಸತ್ಯವನ್ನು ಪ್ರಕಟಿಸುತ್ತದೆ. ವೇದೋಪನಿಷತ್ತುಗಳಲ್ಲಿ ಮತ್ತು ಮಹಾಕವಿಗಳು ಚಿತ್ರಿಸಿರುವ ಮಹೋನ್ನತ ಪಾತ್ರಗಳಲ್ಲಿ ಈ ಆತ್ಮ ಸೌಂದರ‍್ಯದ ಚಿತ್ರಣವನ್ನು ಕಾಣುತ್ತೇವೆ. ಇಲ್ಲಿ ಕವಿದೃಷ್ಟಿಗೆ, ಸೃಷ್ಟಿ ಸಮಸ್ತವೂ ಆ ಪರಮ ಸತ್ಯದ ಛಾಯೆ ಮಾತ್ರವಲ್ಲ, ಆ ಪರಮ ಸತ್ಯವೇ ಎಂದು ಅನುಭವಕ್ಕೆ ಬರುತ್ತದೆ. ಆಗ ಕವಿ-

“ಸುಂದರಮಹೇಶ್ವರ ರಸಮಯಶರೀರವಿದು
ವಿಶ್ವರೂಪದಿ ನಮಗೆ ತೋರುತಿದೆ. ಜೀವನಂ
ಕ್ಷಣ ಕ್ಷಣಕೆ ಮುಟ್ಟುತಿಹುದಾತನಂ ಘ್ರಾಣದಲಿ
ಸ್ಪರ್ಶದಲಿ, ರುಚಿಯಲ್ಲಿ, ಶ್ರೋತ್ರ ದೃಷ್ಟಿಗಳಲ್ಲಿ”
[33]

ಎನ್ನುವ ಅನುಭವಸತ್ಯವನ್ನು ಪ್ರಕಟಿಸುತ್ತಾನೆ. ಈ ಒಂದು ಸ್ಥಿತಿಯಲ್ಲಿ ವಿಜಯದಾಸರು

“ಅಂತರಂಗದ ಕದವು ತೆರೆಯಿತಿಂದು” ಎಂದು ಹಾಡುತ್ತಾರೆ. ಜಗನ್ನಾಥದಾಸರು ‘ಅತಿ ಸುಂದರಕೆ ಸುಂದರ ರಸಕೆ ರಸರೂಪ’ – ಎಂದು ಭಗವಂತನ ಚೆಲುವನ್ನು ಸಾರುತ್ತಾರೆ. ‘ಮಧುರ ಚೆನ್ನ’ರು –

ತಂದೆ ನೀ ಕಣ್ದೆರೆದರಂದಿಗರುಣೋದಯವು
ಮುಂದೆ ಸೂರ್ಯೋದಯದ ಚಿಂತೆಯಿಲ್ಲ.
ಹಿಂದೆ ಕತ್ತಲೆಯಲ್ಲಿ ಕಂಗೆಟ್ಟು ಕೊರಗಿದೆನು
ಇಂದೊಳಗು ಹೊರಗು ಬೆಳಗಾಯಿತಲ್ಲ !
[34]

ಎನ್ನುತ್ತಾರೆ. ಒಳಗೂ ಹೊರಗೂ ತುಂಬಿದ ಆ ಬೆಳಕಿನ ಅನುಭವದಲ್ಲಿ ಸರ್ವವೂ ಪರಮ ಸುಂದರವಾಗಿ ತೋರುತ್ತದೆ. ‘ದಿಟವಾಗಿ ಹೃದಯವು ಶಿವಮಯವಾದಲ್ಲಿ ಸ್ಫುಟವಾಗಿ ಎಲ್ಲೆಲೂ ಶಿವಮಯವಾಗಿಯೇ ಬೆಳಗುತಿದೆ’ – ಎಂದು ಧ್ವನ್ಯಾಲೋಕ ಲೋಚನದಲ್ಲಿ ಅಭಿನವಗುಪ್ತರು ಹೇಳಿದ ಮಾತು ಇಲ್ಲಿಗೆ ಅನ್ವಯಿಸುತ್ತದೆ. ಯಾವ ಅಕ್ಕಮಹಾದೇವಿ ‘ಈಳೆ ನಿಂಬೆಮಾವು ಮಾದಲಕ್ಕೆ ಹುಳಿನೀರನೆರೆದವರಾರಯ್ಯ?’ ಎಂದು ರಸಜಿಜ್ಞಾಸೆಗೆ ಹೊರಟಳೊ ಅವಳು ಆತ್ಮ ಸೌಂದರ‍್ಯಾನುಭವದ ಸೀಮೆಯನ್ನು ತಲುಪಿದಾಗ –

ವನವೆಲ್ಲ ನೀವೆ, ವನದೊಳಗಣ ದೇವ ತರುವೆಲ್ಲ ನೀವೆ
ತರುವಿನೊಳಗಾಡುವ ಖಗಮೃಗವೆಲ್ಲ ನೀವೆ

ಎನ್ನುತ್ತಾಳೆ. ರತ್ನಾಕರವರ್ಣಿಯ ಭರತೇಶನು ದರ್ಶಿಸಿದ ಆ ಪರಾತ್ಪರ ಸೌಂದರ‍್ಯವು ಬರಿಯ ಬೆಳಗು –

ಎಳೆಮಿಂಚಿನಂದದ ಬೊಂಬೆಯೊ ತಿಂಗಳ
ತಿಳಿವೆಳಗಿನೊಳಾದ ರೂಪೋ
ಪಳುಕಿನ ಪುತ್ಥಳಿಯೋ ಎನೆ ಕ್ರಮದಿಂದ
ಹೊಳೆವುದೊಳಗೆ ತನ್ನ ರೂಪು!
[35]

ನಮ್ಮ ವೇದೋಪನಿಷತ್ತುಗಳ ಋಷಿದರ್ಶನಕ್ಕೆ ಪ್ರತಿಭಾಸವಾದ ಆತ್ಮಸೌಂದರ‍್ಯವೂ ಬರಿಯ ಬೆಳಗೇ. ‘ವೇದಾಹಮೇತಂ ಪುರುಷಂ ಮಹಾಂತಂ ಆದಿತ್ಯವರ್ಣಂ ತಮಸಸ್ತುಪಾರೇ’ – ಎಂದು ವೇದಋಷಿ ಬಣ್ಣಿಸುತ್ತಿರುವುದು, ಆ ಪರಮವಾದ ಆತ್ಮಸೌಂದರ‍್ಯದ ಜ್ಯೋತಿರ್ಮೂರ್ತಿಯನ್ನೇ. ಕೇವಲ ಜ್ಯೋತಿರೂಪವಾದ ತಮಸ್ಸಿನಿಂದಾಚೆಗಿರುವ, ಆತ್ಮ ಸೌಂದರ‍್ಯವನ್ನು ವೇದಋಷಿಯಿಂದ ಹಿಡಿದು ಆಧುನಿಕ ಅನುಭಾವಿಗಳವರೆಗೆ ಅನುಭವಿಸಿ ಹಾಡಿದ್ದಾರೆ. ಈ ಒಂದು ಪೂರ್ಣದೃಷ್ಟಿಯ ದರ್ಶನವನ್ನು ಪಡೆದ ಕವಿ ಜೀವನದ ಯಾವ ಮುಖವನ್ನಾದರೂ ಕಾವ್ಯಕ್ಕೆ ವಸ್ತುವಾಗಿ ತೆಗೆದುಕೊಂಡು, ಮಹಾಕಾವ್ಯವನ್ನು ಬರೆಯಲಿ, ನಾಟಕವನ್ನು ಬರೆಯಲಿ, ಭಾವಗೀತೆಯನ್ನು ಬರೆಯಲಿ – ಅದೆಲ್ಲವೂ ಈ ದರ್ಶನದಿಂದ ದೀಪ್ತವಾಗಿರುತ್ತದೆ.

ಇದುವರೆಗೂ ವಿವರಿಸಿದ ಸೌಂದರ‍್ಯದ ನಾಲ್ಕು ಮುಖದ ಪರಿಶೀಲನೆಯಿಂದ ನಾವು ಒಂದು ಅಂಶವನ್ನು ಗುರುತಿಸಬಹುದು : ಇಂದ್ರಿಯ ಸೌಂದರ‍್ಯಾನುಭವದ ಮಜಲಿನಲ್ಲಿ ಸೌಂದರ‍್ಯ ವಸ್ತುನಿಷ್ಠವೆಂಬಂತೆ ಭಾಸವಾಗುತ್ತದೆ. ವಸ್ತುವಿನಲ್ಲಿ ವರ್ಣವಾಗಿಯೋ, ನಾದವಾಗಿಯೋ, ಗಂಧವಾಗಿಯೋ ತೋರುವ ಸೌಂದರ‍್ಯ ವಸ್ತುನಿಷ್ಠವಾದ ಒಂದು ಗುಣವೆಂಬಂತೆ ನಮ್ಮ ಇಂದ್ರಿಯಗಳನ್ನು ರಮಿಸಿ ಒಂದು ಬಗೆಯ ಸೌಂದರ‍್ಯಭಾವನೆಯನ್ನುಂಟುಮಾಡುತ್ತದೆ. ಎರಡನೆಯದಾದ ಕಲ್ಪನಾಸೌಂದರ‍್ಯಾನುಭವದ ಮಜಲಿನಲ್ಲಿ ಸೌಂದರ‍್ಯ ವಸ್ತುನಿಷ್ಠವೆನ್ನುವ ಬದಲು ಮನೋನಿಷ್ಠವೆಂಬ ಭಾವನೆ ಉಂಟಾಗುತ್ತದೆ. ವಸ್ತುವನ್ನು ಕುರಿತು, ಅದರ ಸೌಂದರ‍್ಯಾನುಭವವನ್ನು ನಮ್ಮ ಕಲ್ಪನೆಯಿಂದ, ಕಲ್ಪನಾಶಕ್ತಿಯೆಂಬ ಮನೋನಿಷ್ಠಶಕ್ತಿಯಿಂದ ಬಣ್ಣಿಸುತ್ತೇವೆ. ಇಲ್ಲಿ ಹೊರಗಣ್ಣಿಗೆ ಚೆಲುವಲ್ಲವೆಂದು ತೋರುವ ವಸ್ತುವನ್ನು ಕೂಡ, ಕವಿಯ ಕಲ್ಪನೆ ಅದನ್ನು ಬೇರೊಂದೆಂಬಂತೆ, ರೂಪಿಸಿ ತೋರುತ್ತದೆ. ಮೂರನೆಯದಾದ ಚಿತ್ತದ ಸೌಂದರ‍್ಯ ಅಥವಾ ತಾತ್ವಿಕ ಸೌಂದರ‍್ಯಾನುಭವವದಲ್ಲಿ ಸೌಂದರ್ಯ ಕೇವಲ ವಸ್ತುನಿಷ್ಠವೋ ಮನೋನಿಷ್ಠವೋ ಮಾತ್ರ ಆಗದೆ ಅದು ಬೇರೊಂದು ಅತೀತಶಕ್ತಿಯ ಛಾಯೆಯಂತೆ ತೋರುತ್ತದೆ. ಕವಿ ಈ ಸುರೂಪ- ಕುರೂಪಗಳಾಚೆಯ ಚೆಲುವಿನ ಸೂತ್ರದ ಸಕೃದ್ದರ್ಶನವನ್ನು ಇಲ್ಲಿ ಪಡೆದು ಅದನ್ನು  ಪ್ರಕಟಿಸುವುದರ ಮೂಲಕ, ಆ ಮೂಲ ಪರಾತ್ಪರವನ್ನೇ ಕಾಣುವ ಹಂಬಲವನ್ನು ಅಭಿವ್ಯಕ್ತಗೊಳಿಸುತ್ತಾನೆ. ನಾಲ್ಕನೆಯದಾದ ಆತ್ಮಸೌಂದರ‍್ಯಾನುಭವದಲ್ಲಿ ವಸ್ತು ಪರಾತ್ಪರದ ಕೇವಲ ಛಾಯೆಯಲ್ಲ; ಪರಾತ್ಪರದ ಆವಿರ್ಭಾವವೇ ಎಂಬ ಅನುಭವವಾಗುತ್ತದೆ. ಯಾವುದು ಅತೀತವೊ ಅದು ಅಂತರ‍್ಯಾಮಿಯೂ ಹೌದು, ಯಾವುದು ವಸ್ತುವಾಗಿದೆಯೋ ಅದೇ ಅನುಭವಿಸುವ ಶಕ್ತಿಯೂ ಆಗಿದೆ; ಎಲ್ಲವೂ ಆ ಪರಾತ್ಪರವಾದ ಆತ್ಮಸೌಂದರ‍್ಯವೇ- ಎನ್ನುವ ಹಂತದಲ್ಲಿ ಕವಿ ನಿಲ್ಲುತ್ತಾನೆ. ಈ ಚತುರ್ಥ ಘಟ್ಟವನ್ನೇ ಕವಿ ಹೀಗೆ ಹಾಡಿರುವುದು:

ಹೆಸರಾಚೆಗಿರುವ ಚೆಲ್ವಿಕೆಯೆ ನಿನ್ನಯ ಹೆಸರ
ಕುಸುರು ಕುಶಲತೆಯಿಂದಲೂ ಉಸಿರಲಳವುಂಟೆ
ಎಸೆವೆ ದಶದಿಶೆಗಳಲಿ ಮಸಗಿ ಪೊಸಪೊಸತೆರದಿ
ಜಡಜೀವ ಜ್ಯೋತಿಯಿಂದ
ಒಸಗೆಯಾಯಿತು ಬಾಳು ಹೊಸತು ಕಂಡಿತು ಹಾಳು
ಬೆಸಲಾಯಿತೀಗ ಬಯಲೆಲ್ಲ, ಅಹ ! ಬಗೆ ಸೊಲ್ಲ
ಬಸಿರು ಹಿಡಿಸದು, ಬಾಯಿಗೇನೊ ಬಂದಿತು, ಎಂದೆ
‘ನಮೋ ಪರಾತ್ಪರವೆ’ ಎಂದು
[36]


[1] Sri Aurobindo : Future Poerty : p. 185.

ಶ್ರೀ ಅರವಿಂದರು ಕೀಟ್ಸ್ ಕವಿಯ ಬಗೆಗೆ ಬರೆಯುತ್ತಾ “And he saw her in three of her four forms, Sensuous Beauty, Imaginative Beauty, Intellectual Beauty and Ideal Beauty” ಎಂದು ಹೆಸರಿಸುವುದರ ಹೊರತು ಅವುಗಳನ್ನು ಕುರಿತ ವಿವರಣೆಯೇನೂ ಇಲ್ಲ.

[2] ಬೇಂದ್ರೆ : ಗರಿ : ಪು. ೧೧

[3] ಬೇಂದ್ರೆ : ಗರಿ. ಪು. ೧೧

[4] ಕುವೆಂಪು. ಪಕ್ಷಿಕಾಶಿ. ಪು. ೬೭

[5] ಬೇಂದ್ರೆ : ಗರಿ ಪು. ೯.

[6] ಬೇಂದ್ರೆ : ಸಖೀಗಿತ. ಪು. ೧೨-೧೩

[7] ಶ್ರೀನಿವಾಸ : ಚೆಲುವು. ಪು. ೫

[8] ಕುವೆಂಪು : ಕೊಳಲು. ಪು. ೮೫

[9] ಪಂಪ : ಆದಿಪುರಾಣ. ೧೧.೯೬

[10] ಲಕ್ಷ್ಮೀಶ : ಜೈಮಿನಿಭಾರತ. ೧೮-೨೪

[11] Palgrave : Golden Treasury. p. 280

[12] ಕುವೆಂಪು : ಪಕ್ಷಿ ಕಾಶಿ. ಪು. ೩೧

[13] Coleridge : Biographia Literaria, 12th Chapter. p. 117-118.

[14] ವಿ.ಕೃ. ಗೋಕಾಕ್ : ಸಾಹಿತ್ಯದಲ್ಲಿ ಪ್ರಗತಿ. ಪು. ೨೨

[15] ಶ್ರೀನಿವಾಸ : ಚೆಲುವು. ಪು. ೫

[16] ಕೆ.ಎಸ್.ನ. ಉಂಗುರ. ಪು. ೪೪

[17] ಶ್ರೀನಿವಾಸ : ರಾಮನವಮಿ. ಪು. ೧೩

[18] ಕುವೆಂಪು : ಪಕ್ಷಿಕಾಶಿ. ಪು. ೧೨.

[19] ಬೇಂದ್ರೆ: ಗರಿ. ಪು. ೯.

[20] ಕುವೆಂಪು : ಕಲಾಸುಂದರಿ, ಪು. ೭೪.

[21] Sri Aurobindo : The Future Poetry. p. 34-35.

[22] ಬೇಂದ್ರೆ: ಗರಿ. ಪು. ೧೧.

[23] Shelley : “The Poems of Shelley” Hymn to Intellectual  Beauty. p. 348.

[24] ಬೇಂದ್ರೆ: ಗರಿ. ಪು. ೯-೧೦

[25] ಎಂ.ಆರ್.ಶ್ರೀ : ವಚನಧರ್ಮಸಾರ, ಪು. ೨೨೭.

[26] ಪು.ತಿ.ನ : ರಸಸರಸ್ವತಿ ಮತ್ತು ಇತರ ಕವನಗಳು. ಪು. ೨೯.

[27] ವಿ.ಕೃ. ಗೋಕಾಕ್ : ಸಾಹಿತ್ಯದಲ್ಲಿ ಪ್ರಗತಿ. ಪು. ೩೧೪.

[28] V.K. Gokak : The Romanist’s Conception of Beauty.
p. 155 (an Article) Pathamandir Sri Aurobindo Annual.
August 1948, Calcutta.

[29] ಶ್ರೀನಿವಾಸ : ಚೆಲುವು. ಪು. ೮

[30] ಕುವೆಂಪು: ಕಲಾಸುಂದರಿ. ಪು. ೬೯, ೭೦.

[31] ಕುವೆಂಪು : ಕಲಾಸುಂದರಿ. ಪು. ೧-೮

[32] ಪು.ತಿ.ನ. : ಶಾರದಯಾಮಿನಿ, ಪು. ೩,೪,೫.

[33] ಕುವೆಂಪು : ಪಕ್ಷಿಕಾಶಿ, ಪು. ೩೧.

[34] ಮಧುರಚೆನ್ನ : ನನ್ನ ನಲ್ಲ. ಪು. ೩೧.

[35] ರತ್ನಾಕರ : ಭರತೇಶ ವೈಭವ, ೧. ಪು. ೨-೭೭.

[36] ಬೇಂದ್ರೆ : ಗರಿ ಪು. ೧೦.