ಸದಾ ಹೊಸ ಹೊಸತನ್ನು ಅನ್ವೇಷಿಸುತ್ತಲೇ ಹೊರಡುವ ಚದುರಂಗರು ಮೈಸೂರುಜಿಲ್ಲೆಯ ಕಲ್ಲಹಳ್ಳಿಯಲ್ಲಿ ೧ ಜನವರಿ ೧೯೧೬ ರಂದು ಜನಿಸಿದರು. ತಂದೆ ಮುದ್ದುರಾಜ ಅರಸು, ತಾಯಿ ಗೌರಮ್ಮಣ್ಣಿ, ಚದುರಂಗರ ಮೂಲಹೆಸರು ಶ್ರೀ ಎಂ.ಸುಬ್ರಹ್ಮಣ್ಯರಾಜು. ಚದುರಂಗರು ಕಾದಂಬರಿ, ಸಣ್ಣಕಥೆ, ನಾಟಕ, ಹೀಗೆ ನಾನಾ ಪ್ರಕಾರಗಳಲ್ಲಿ ಕೃತಿರಚಿಸಿದ್ದಾರೆ. ಅದರಂತೆ ಸಿನಿಮಾ ಮತ್ತು ಲಲಿತಕಲೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಚದುರಂಗರಿಗೆ ಬಾಲ್ಯದಿಂದಲೂ ಕಥೆಕೇಳುವ ಮತ್ತು ಹೇಳುವ ಆಸಕ್ತಿ ಇದ್ದವು. ಆರಂಭದ ದಿನಗಳಲ್ಲಿ ಕಥೆಗಳನ್ನು ಮತ್ತು ಕಾವ್ಯವನ್ನೂ ಬರೆಯುತ್ತಿದ್ದರು. ಇವರ ಗದ್ಯವನ್ನು ಓದಿದ ಬಿ.ಎಂ.ಶ್ರೀ, ಎ.ಆರ್.ಕೃಷ್ಣಾಶಾಸ್ತ್ರಿ, ಡಿ.ಎಲ್.ಎನ್ ಮೆಚ್ಚಿ ಪ್ರೋತ್ಸಾಹಿಸಿದರು.

ಹಾಗೆಯೇ ಇವರ ಸಾಹಿತ್ಯ ಜೀವನದಲ್ಲಿ ಮಾಸ್ತಿ, ಗೊರೂರುರಾಮಸ್ವಾಮಿ ಅಯ್ಯಂಗಾರರು ಪ್ರಮುಖವಾಗಿ ಪ್ರಭಾವ ಬೀರಿದ್ದಾರೆ. ಪಾಶ್ಚಾತ್ಯ ಬರಹಗಾರರಾದ ಲಿಯೋಟಾಲ್‌ಸ್ಟಾಯ್, ಗಾರ್ಕಿ, ದಾಸ್ತಾವೋಸ್ಕಿ ಇವರ ಮೆಚ್ಚಿನ ಬರಹಗಾರರಾದಂತೆಯೇ, ಬಾಲ್‌ಜಾಕ್ ಹಾಗೂ ಆಲ್ಬರ್ಟ್ ಕಮೂ ಕೂಡ ಇವರ ಮೇಲೆ ಪ್ರಭಾವ ಬೀರಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಕಥೆಗಾರರಾಗಿ ಗಮನಸೆಳೆದವರು ಚದುರಂಗರು.

ಇವರ ಮೊದಲ ಕಥಾಸಂಕಲನ ಸ್ವಪ್ನಸುಂದರಿ ಇದರಂತೆಯೇ ಶವದಮನೆ, ಇಣುಕುನೋಟ, ಬಂಗಾರದಗೆಜ್ಜೆ, ಮೀನಿನಹೆಜ್ಜೆ, ಪ್ರಮುಖ ಕಥಾ ಸಂಕಲನಗಳು. ಶವದಮನೆ- ಕಥೆಯಲ್ಲಿ ಆಸ್ಪತ್ರೆಗಳು ಬಡವರ ಪಾಲಿಗೆ ಒಂದು ದೊಡ್ಡ ಶವದ ಮನೆಯಾಗಿ ಬಾಸವಾಗುವುದರೊಂದಿಗೆ ಇಂದಿನ ಸಾಮಾಜಿಕ ಅನ್ಯಾಯಗಳೊಂದಿಗೆ ಬದುಕುವುದಕ್ಕಿಂತ ಸಾವೇವಾಸಿ ಎನ್ನುವಂತಹ ದೃಷ್ಯಮೂಡುತ್ತದೆ. ಸರ್ವಮಂಗಳ, ಉಯ್ಯಾಲೆ, ವೈಶಾಖ, ಹೆಜ್ಜಾಲ ಎಂಬ ಕಾದಂಬರಿಗಳನ್ನು ಬರೆದಿದ್ದಾರೆ. ಉಯ್ಯಾಲೆ ಕಾದಂಬರಿಯಲ್ಲಿ ಗಂಡು ಹೆಣ್ಣಿನ ಸಂಬಂಧಗಳ ಸೂಕ್ಷ್ಮತೆ ಚಿತ್ರವಾಗಿದೆ. ಠಾಕೂರರ ಚಾರುಲತ ಕಾದಂಬರಿಯನ್ನು ಹೋಲುವ ಈ ಕೃತಿ ತನ್ನ ವಿಶಿಷ್ಟ ಗುಣದಿಂದ ಉತ್ತಮ ಕೃತಿಯಾಗಿದೆ. ವೈಶಾಖ ಬಹಳಷ್ಟು ವಿಚಾರ ವಿಮರ್ಶೆಗೆ ಒಳಗಾದ ಕೃತಿ. ಬ್ರಾಹ್ಮಣ-ಶೂದ್ರ ಪ್ರಜ್ಞೆಯನ್ನೇ ಕೇಂದ್ರವಾಗುಳ್ಳ ಈ ಕಾದಂಬರಿಯು ಭಾಷಾ ಪ್ರಯೋಗದಲ್ಲೂ ಕೂಡ ಬಹು ವಿಶಿಷ್ಟವಾದ ಯಶಸ್ವಿ ಕೃತಿಯಾಗಿದೆ. ಚದುರಂಗರು ಇಲಿಬೋನು ಮತ್ತು ಕುಮಾರರಾಮ ಎಂಬ ನಾಟಕಗಳನ್ನು ಬರೆದಿದ್ದು ಇಲಿಬೋನು ಅಸಂಗತನಾಟಕ ಪರಂಪರೆಯಲ್ಲಿ ಸೃಷ್ಟಿಯಾಗಿದೆ. ಅಲೆಗಳು ಚದುರಂಗರ ಹನಿಗವನಗಳ ಸಂಕಲನವಾಗಿದೆ. ಚಲನ ಚಿತ್ರ ಕ್ಷೇತ್ರದಯೂ ಕೈಯಾಡಿಸಿರುವ ಇವರು ಕಥೆಗಾರರಾಗಿ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ತಾವೇ ಸರ್ವಮಂಗಳಾ ಚಿತ್ರವನ್ನು ನಿರ್ಮಿಸಿದರು ಇದಕ್ಕೆ ೧೯೬೭-೬೮ ರ ರಾಜ್ಯ ಚಲನ ಚಿತ್ರ ಪ್ರಶಸ್ತಿ ದೊರೆಯಿತು.