೧೯೩೮ರಲ್ಲಿ ಜನಿಸಿದ ಶ್ರೀ ಚನ್ನಕೇಶವ ಅವರು ಮೂಲತಃ ಸಂಗೀತ ವಿದ್ವಾಂಸರಾದರೂ ಕ್ಷೇತ್ರದಲ್ಲಿ ಜನಪ್ರಿಯರಾದುದು ನೃತ್ಯಕ್ಕೆ ಹಿನ್ನೆಲೆ ಗಾಯಕರಾಗಿ ಭಾವಪರವಶತೆ, ವಿದ್ವತ್ತು ಇವರ ಗಾಯನದ ವೈಶಿಷ್ಟ್ಯ ತಂದೆ ಶ್ರೀ ಚನ್ನಪ್ಪನವರಲ್ಲಿ ಮೊದಲು ದೇವರನಾಮಗಳನ್ನು ಕಲಿತ ಚನ್ನಕೇಶವ ಅವರು ನಂತರ ವಿದ್ವಾನ್ ಎಸ್. ವಿ. ವೆಂಕಟೇಶಯ್ಯನವರಲ್ಲಿ ಸುಮಾರು ಹದಿನೈದು ವರ್ಷಗಳಿಗೂ ಮಿಕ್ಕಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿ ಹಲವು ಕಚೇರಿಗಳನ್ನು ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಸುಮಾರು ೩೦ ವರ್ಷಗಳಿಂದ ಭರತನಾಟ್ಯ ಮತ್ತು ಕೂಚುಪುಡಿ ಶೈಲಿಗಳಿಗೆ ಹಿನ್ನೆಲೆ ಹಾಡುಗಾರಗಾಗಿ ಹಲವಾರು ಪ್ರತಿಷ್ಠಿತ ಹಾಗೂ ಉದಯೋನ್ಮುಖ ನೃತ್ಯ ಕಲಾವಿದರ ಜೊತೆ ದೇಶಾದ್ಯಂತ ಮತ್ತು ಕೆಲವು ಹೊರ ರಾಷ್ಟ್ರಗಳಲ್ಲೂ ಪ್ರವಾಸ ಮಾಡಿದ್ದಾರೆ. ಮುಖ್ಯವಾಗಿ ಪ್ರೊಫೆಸರ್ ಯು.ಎಸ್. ಕೃಷ್ಣರಾವ್ ದಂಪತಿಗಳ ಶಿಷ್ಯರು ಹಾಗೂ ನಾಟ್ಯ ಇನ್‌ಸ್ಟಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯೋಗ್ರಫಿ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಮಾಯಾರಾವ್ ಅವರ ಶಿಷ್ಯರ ಕಾರ್ಯಕ್ರಮಗಳಲ್ಲಿ ಇವರ ಹಿನ್ನೆಲೆ ಗಾಯನ ಹೆಚ್ಚು ಪ್ರಶಂಸೆಗೆ ಪಾತ್ರವಾಗಿದೆ. ಚನ್ನಕೇಶವ ಅವರ ಹಿನ್ನೆಲೆ ಗಾಯನವಿದ್ದ ಅನೇಕ ನೃತ್ಯ ಕಾರ್ಯಕ್ರಮಗಳು ಬೆಂಗಳೂರು ಮತ್ತು ಚೆನ್ನೈ ದೂರದರ್ಶನದಲ್ಲಿ ಪ್ರಸಾರವಾಗಿದೆ.

ಯಶವಂತಪುರದ ಗಾಯತ್ರಿ ದೇವಾಲಯದ, ಕೆಂಗೇರಿಯ ಬಲಮುರಿ ಗಣಪತಿ ದೇವಾಲಯ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ಮುಂತಾದ ಧಾರ್ಮಿಕ ಧಾರ್ಮಿಕ ಸಂಘಟನೆಗಳಿಂದ ಪುರಸ್ಕೃತರಾದ ಚನ್ನಕೇಶವ ಅವರು ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯಿಂದ ಗಾನ ಕಲಾಭೂಷಣ ಬಿರುದು ಪಡೆದಿರುವ ಶ್ರೀಯುತರಿಗೆ ೧೯೯೯-೨೦೦೦ನೇ ಸಾಲಿನ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ.