ಚನ್ನರಾಯಪಟ್ಟಣದಲ್ಲಿ ಜಿಲ್ಲಾ ಕೇಂದ್ರವಾದ ಹಾಸನಕ್ಕೆ ೪೦ಕಿ.ಮೀ ದೂರದಲ್ಲಿದೆ. ಈ ನಗರವನ್ನು ಕೊಳತ್ತೂರ, ಅಮೃತನಾಥ ಪುರ ಮುಂತಾದ ಹೆಸರುಗಳಿಂದ ಕರೆಯುತ್ತಿದ್ದರು. ಚನ್ನಿಗರಾಯನ ಆಳ್ವಿಕೆಯ ನಂತರ ಈ ಊರನ್ನು ಚನ್ನರಾಯಪಟ್ಟಣವೆಂದು ಕರೆಯಲಾಗಿದೆ.

ಊರ ಪೂರ್ವಭಾಗದಲ್ಲಿ ಅಮಾನಿ ಕೆರೆ ಇದ್ದು, ಇದು ಜನರ ಜೀವನವನ್ನು ಹಸನುಗೊಳಿಸಿದೆ. ಗ್ರಾಮದಲ್ಲಿ ಚಂದ್ರಮೌಳೇಶ್ವರ ದೇವಾಲಯ ಚನ್ನಕೇಶವಸ್ವಾಮಿ ದೇವಾಲಯ, ಗಣಪತಿ ದೇವಾಲಯ, ಕಾಳಿಕಾಂಬಾ ದೇವಾಲಯ ಗದ್ದೇರಾಮೇಶ್ವರ ದೇವಾಲಯಗಳಿವೆ. ಊರಿಗೆ ೬ಕಿ.ಮೀ ದೂರದಲ್ಲಿ ಹೇಮಾವತಿ ಸಕ್ಕರೆ ಕಾರ್ಖಾನೆಯೂ, ಊರಿಂದ ಪೂರ್ವಕ್ಕೆ ಶೆಟ್ಟಿಹಳ್ಳಿ ಗ್ರಾಮದ ಹತ್ತಿರ, ಆಧುನಿಕ ಕೆ.ಎಂ.ಎಫ್ ಈ ಘಟಕವೂ ಇದೆ.

 

ಶ್ರವಣ ಬೆಳಗೊಳ:-

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೫೨ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೧೪ ಕಿ.ಮೀ

ತಾಲ್ಲೂಕು ಕೇಂದ್ರವಾದ ಚನ್ನರಾಯಪಟ್ಟಣಕ್ಕೆ ೧೪ ಕಿ.ಮೀ ಜಿಲ್ಲಾ ಕೇಂದ್ರವಾದ ಹಾಸನಕ್ಕೆ ೫೨ ಕಿ.ಮೀ ದೂರದಲ್ಲಿದೆ. ಇಲ್ಲಿ ಜಗದ್ವಿಖ್ಯಾತ ಗೊಮ್ಮಟೇಶ್ವರನ ಭವ್ಯ ಮೂರ್ತಿ ಇಂದ್ರಗಿರಿ ಬೆಟ್ಟದ ಮೇಲೆ ಶಾಂತವಾಗಿ ನಿಂತಿದೆ. ಇದು ಏಕ ಶಿಲಾ ವಿಗ್ರಹ ೫೭ ಅಡಿ ಎತ್ತರವಿದೆ.

ಈ ಊರಲ್ಲಿ ಎರಡು ಬೆಟ್ಟಗಳಿವೆ. ೧. ಇಂದ್ರಗಿರಿ, ೨. ಚಂದ್ರಗಿರಿ. ಇಂದ್ರಗಿರಿಯ ಬೆಟ್ಟದಲ್ಲಿ ಗೊಮ್ಮಟೇಶ್ವರ ಮೂರ್ತಿ ಇದ್ದರೆ, ಚಂದ್ರಗಿರಿಯ ಬೆಟ್ಟದ ಮೇಲೆ ಅನೇಕ ಬಸದಿಗಳಿವೆ.

ಊರೊಳಗೆ ಜೈನರ ಧರ್ಮಶಾಲೆಯೂ, ಶ್ರೀ ಮಠವೂ ಇದೆ, ಇಲ್ಲಿ ಚಾರು ಕೀರ್ತಿ ಭಟ್ಟಾರಕಸ್ವಾಮಿಜಿಯವರ ವಾಸ್ತವ್ಯ ಇದೆ. ಅನೇಕ ಜೈನಮುನಿಗಳೂ ಯತಿಗಳೂ ಇಲ್ಲಿ ನೆಲೆನಿಂತಿದ್ದಾರೆ. ದಿಗಂಬರ ಜೈನ ಮಹಾಮುನಿಗಳ ನೆಲೆವೀಡು ಈ ಗೊಮ್ಮಟನ ನಾಡು.

ಬೆಟ್ಟದ ಮೇಲೆ ನಿಂತು ನೋಡಿದರೆ, ಬಹು ದೂರದವರೆಗಿನ ರಮ್ಯನೋಟ ನೋಡುಗರನ್ನು ಮನಸೂರೆಗೊಳ್ಳುತ್ತದೆ. ಗಂಗರ ಮಂತ್ರಿಯಾಗಿದ್ದ ಚಾವುಂಡರಾಯ ಕೆತ್ತಿಸಿದ ಈ ಶಿಲ್ಪವನ್ನು
ಅರಿಷ್ಟನೇಮಿ ಎಂಬ ಶಿಲ್ಪಿ ನಿರ್ಮಿಸಿದ.

 

ಆನೆಕೆರೆ ರಥೋತ್ಸವ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೪೦ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೦೫ ಕಿ.ಮೀ

ಕಿ.ಮೀ ದೂರದಲ್ಲಿದೆ. ಹಾಸನ – ಚನ್ನರಾಯಪಟ್ಟಣ ಕಾರೇಕೆರೆ ಮಾರ್ಗವಾಗಿ ಈ ಗ್ರಾಮವನ್ನು ತಲುಪಬಹುದು.

ಈ ಗ್ರಾಮದ ಗ್ರಾಮ ದೇವತೆ ಆನೆಕೆರೆ ಅಮ್ಮ ಯುಗಾದಿ ಕಳೆದ ಎರಡನೆಯ ಮಂಗಳವಾರ ಬುಧವಾರ ಗ್ರಾಮದೇವತೆಯ ಬೃಹತ್ ಜಾತ್ರೆ ನಡೆಯುತ್ತದೆ. ಮೂರು ರಥಗಳು, ಐದು ಬಂಡಿಗಳು ಈ ರಥೋತ್ಸವದಲ್ಲಿ ಭಾಗವಹಿಸುತ್ತವೆ. ಚೋಮನ ಕುಣಿತ, ಭೂತನ ಕುಣಿತ ವೀರ ಭದ್ರ ಕುಣಿತ ಖ್ಯಾತವಾದವುಕೊಂಡ ಹಾಯುವಿಕೆ, ಬಾಯಿಬೀಗ, ಸೋಬಾನೆ ಪದ, ರಂಗದಪದ, ಕೋಲಾಟ ಈ ಗ್ರಾಮದ ಕಲೆಗಳು

ಈ ಗ್ರಾಮ ಮೂರು ಕೆರೆಗಳನ್ನು ಹೊಂದಿದೆ. ಐದು ಶಿವಾಲಯಗಳೂ ಒಂದು ಚನ್ನಕೇಶವ ದೇವಾಲಯವೂ ಗ್ರಾಮದೇವತೆ, ವೀರಭದ್ರದೇವರ ದೇವಾಲಯಗಳಿವೆ.

ಈ ಊರಿಗೆ ಅನಗನ ಕೆರೆ ಕೇಶವಪುರ ಎಂಬುದಾಗಿ ಕರೆಯಲಾಗುತ್ತಿತ್ತು. ಜನ್ನನ ಕಾವ್ಯದಲ್ಲಿ ಈ ಊರಿನ ಪ್ರಸ್ಥಾಪ ಬರುತ್ತದೆ. ಕ್ರಿ.ಶ. ೧೧೧೩ರಲ್ಲಿ ಚನ್ನಕೇಶವ ದೇವಾಲಯವನ್ನು ಕಟ್ಟಲಾಗಿದೆ.

ಜೀರ್ಣಾವಸ್ಥೆಯತ್ತ ವಾಲುತ್ತಿದ್ದ ಈ ದೇವಾಲಯವನ್ನು ಸುಮಾರು ೨೦ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರಹೆಗ್ಗಡೆಯವರು ಜೀರ್ಣೋದ್ಧಾರ ಮಾಡಿದ್ದಾರೆ.

 

ನುಗ್ಗೇಹಳ್ಳಿ ಸೋಮನಾಥ ದೇವಾಲಯ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೬೦ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೨೦ ಕಿ.ಮೀ

ಚನ್ನರಾಯಪಟ್ಟಣ ತಾಲ್ಲೂಕಿನ ಹೋಬಳಿ ಕೇಂದ್ರ ಇದು ಚನ್ನರಾಯಪಟ್ಟಣಕ್ಕೆ ಸುಮಾರು ೨೦ಕಿ.ಮೀ ಹಾಸನಕ್ಕೆ ೬೦ ಕಿ.ಮೀ ದೂರದಲ್ಲಿದೆ. ಚನ್ನರಾಯಪಟ್ಟಣ ತಿಪಟೂರು ರಸ್ತೆಯಲ್ಲಿ ಈ ಗ್ರಾಮ ಬರುತ್ತದೆ.

ಈ ಗ್ರಾಮವನ್ನು ಹಿಂದೆ ವಿಜಯ ಸೋಮನಾಥಪುರ ಎಂದು ಕರೆಯಲಾಗುತ್ತಿತ್ತು. ವೀರ ಸೋಮೇಶ್ವರನ ದಂಡನಾಯಕನಾದ ಬೊಮ್ಮಣ್ಣ ದಂಡನಾಯಕ ಜಯಗೊಂಡೇಶ್ವರ ದೇವಾಲಯವನ್ನು ನಿರ್ಮಿಸಿದ. ಇದು ಚೋಳರ ಕಾಲದ ನಿರ್ಮಾಣ.

ಪ್ರಖ್ಯಾತ ವಿಜಯ ಸೋಮನಾಥಪುರ ಅಗ್ರಹಾರವಾಗಿತ್ತು. ೧೨೪೬ರಲ್ಲಿ ಲಕ್ಷ್ಮೀ ನರಸಿಂಹ ದೇವಾಲಯ ನಿರ್ಮಾಣವಾಯಿತು. ಸದಾಶಿವ ದೇವಾಲಯವನ್ನು ೧೨೪೯ರಲ್ಲಿ ನಿರ್ಮಿಸಲಾಯಿತು. ಇಲ್ಲಿ ಚೋಳ ಮತ್ತು ಹೊಯ್ಸಳ ಸಂಪ್ರದಾಯದ ಕಲಾವೈಭವವನ್ನು ಕಾಣಬಹುದಾಗಿದೆ.  ನುಗ್ಗೇಹಳ್ಳಿಗೆ ೨ ಕಿ.ಮೀ ದೂರದಲ್ಲಿ ಜಂಬೂರು ಕ್ರೋಮೈಟ್ ಗಣಿ ೫ ಕಿ.ಮೀ ದೂರದಲ್ಲಿ ತಗಡೂರು ಗಣಿಗಳಿವೆ.

 

ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ :

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೫೨ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೦೭ ಕಿ.ಮೀ

ಇದು ತಾಲ್ಲೂಕು ಕೇಂದ್ರವಾದ ಚನ್ನರಾಯಪಟ್ಟಣಕ್ಕೆ ಸುಮಾರು ೭ ಕಿ.ಮೀ ದೂರದಲ್ಲಿ ಹೊಳೆನರಸೀಪುರ ಚನ್ನರಾಯಪಟ್ಟಣ ರಸ್ತೆಯಲ್ಲಿದೆ.

ಈ ಕಾರ್ಖಾನೆಗೆ ೧೯೭೫ರಲ್ಲಿ ಶಂಕು ಸ್ಥಾಪನೆ ನೆರವೇರಿಸಿ ೧೯೮೪ರಲ್ಲಿ ಕಬ್ಬು ಅರೆಯುವಿಕೆಯನ್ನು ಪ್ರಾರಂಭಿಸಿತು. ದಿನನಿತ್ಯ ೧೪೦೦ ಟನ್ ಕಬ್ಬು ಅರೆಯುವ ಸಾಮರ್ಥ್ಯವನ್ನು ಹೊಂದಿರುವ ಈ ಕಾರ್ಖಾನೆ ಚನ್ನರಾಯಪಟ್ಟಣ, ಹೊಳೆನರಸೀಪುರ, ಕೆ.ಆರ್.ಪೇಟೆಯ ಜೀವನಾಡಿಯಾಗಿದೆ.

೧೫೦ ಎಕರೆ ಪ್ರದೇಶ ಹೊಂದಿರುವ ಈ ಕಾರ್ಖಾನೆ ೨೦ ಎಕರೆ ಪ್ರದೇಶದಲ್ಲಿ ಇದೆ. ೬೦೦ಜನ ಕಾರ್ಮಿಕರಿದ್ದಾರೆ. ೩೦,೦೦೦ ಷೇರುದಾರರನ್ನು ಹೊಂದಿರುವ ಈ ಕಾರ್ಖಾನೆ ಪರೋಕ್ಷವಾಗಿ ಲಕ್ಷಾಂತರ ಕುಟುಂಬಗಳ ಜೀವನ ನಿರ್ವಹಣೆಗೆ ಸಹಕಾರಿಯಾಗಿದೆ.

 

ನಾಗರ ನವಿಲೆ– ದೇವಸ್ಥಾನ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೬೨ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೩೦ ಕಿ.ಮೀ

ತಾಲ್ಲೂಕು ಕೇಂದ್ರವಾದ ಚನ್ನರಾಯಪಟ್ಟಣಕ್ಕೆ ೩೦ ಕಿ.ಮೀ ದೂರವಿರುವ ಈ ಗ್ರಾಮ ನಾಗಲಿಂಗೇಶ್ವರ ದೇವಾಲಯವನ್ನು ಹೊಂದಿದೆ. ಈ ಗ್ರಾಮಕ್ಕೆ ನಾಗರ ನವಿಲೆ ಎಂದು ಹೆಸರು ಬರಲು ಕಾರಣ ನವಿಲೊಂದು ನಾಗನಿಗೆ ಆಶ್ರಯ ನೀಡಿದ್ದರಿಂದ ಈ ಹೆಸರು ಬಂತೆಂದು ಸ್ಥಳ ಪುರಾಣ ಹೇಳುತ್ತದೆ.

 

ನವಿಲೆ ಬಾಗೂರು ಸುರಂಗ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೫೭ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೧೨ ಕಿ.ಮೀ

ಚನ್ನರಾಯ ಪಟ್ಟಣಕ್ಕೆ ೧೨ ಕಿ.ಮೀ. ದೂರದಲ್ಲಿ ಬಾಗೂರು ಗ್ರಾಮವಿದೆ. ಈ ಬಾಗೂರಿನಿಂದ ೧ ಕಿ.ಮೀ. ದೂರದಲ್ಲಿ ಹೇಮಾವತಿ ಎಡದಂಡೆ ನೀರು ಸುರಂಗವನ್ನು ಪ್ರವೇಶಿಸುತ್ತದೆ. ನೀರು ಸುರಂಗದಲ್ಲಿ ಹರಿದು ನಾಗರ ನವಿಲೆಯ ಹತ್ತಿರ ಹೊರಬಂದು ತುಮಕೂರು ಜಿಲ್ಲೆಯನ್ನು ಪ್ರವೇಶಿಸುತ್ತದೆ. ಈ ಸುರಂಗಮಾರ್ಗದಿಂದ ಸುಮಾರು ೮ ಕಿ.ಮೀ. ಸುರಂಗದಲ್ಲಿ ನೀರು ಸರಾಗವಾಗಿ ಹರಿಯುತ್ತಿದೆಯೆ ಇಲ್ಲವೆ ಎಂಬುದನ್ನು ಪರೀಕ್ಷಿಸಲು ಏಳು ಜಾಗಗಳಲ್ಲಿ ಸುರಂಗ ಮಾರ್ಗಕ್ಕೆ ಬಾವಿ ತೋಡಲಾಗಿದೆ. ಈ ಬಾವಿ ಸುರಂಗಕ್ಕೆ ಕೊಂಡಿಯಂತಿದ್ದು ಸಾವಿರಾರು ಅಡಿ ಆಳವಾಗಿರುತ್ತದೆ. ಇದಕ್ಕೆ ರಕ್ಷಣಾತ್ಮಕವಾಗಿ ದಪ್ಪ ದಪ್ಪ ಕಬ್ಬಿಣದ ಸರಳನ್ನು ಜೋಡಿಸಲಾಗಿದೆ. ಸುರಂಗವನ್ನು ಈ ಬಾವಿಯ ಮೂಲಕ ನೋಡಬಹುದು. ಇದು ರುದ್ರರಮಣೀಯ ದೃಶ್ಯ.

 

ಚಿಕ್ಕೋನಹಳ್ಳಿ ಗುಡ್ಡ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೬೨ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೨೬ ಕಿ.ಮೀ

ತಗಡೂರು ಮೈನ್ಸ್, ಚಿಕ್ಕೋನಹಳ್ಳಿ ಮೈನ್ಸ್ ಎಂದು ಕರೆಯುವ ಈ ಜಾಗ ನುಗ್ಗೆ ಹಳ್ಳಿಗೆ ೮ ಕಿ.ಮೀ. ನವಿಲೆಗೆ ೮ ಕಿ.ಮೀ. ದೂರದಲ್ಲಿದೆ. ಇಲ್ಲಿ ಗಣಿಗಾರಿಕೆ ನಡೆಯುತ್ತದೆ. ಸುಂದರವಾದ ಕಾಡಿದೆ.

ಗುಡ್ಡವನ್ನು ಹತ್ತಿದರೆ ರಂಗನಾಥನ ದೇವಾಲಯವಿದೆ. ಇಲ್ಲಿ ಒಂದು ಗುಂಡುಕಲ್ಲಿದೆ ಈ ಕಲ್ಲು ನಿಶ್ಚಲವಾಗಿ ಬಿದ್ದಿದೆ. ಯಾರಾದರೂ ಈ ಕಲ್ಲಿನ ಮೇಲೆ ಹತ್ತಿ ಕುಳಿತರೆ ಅದು ಗಿರರ ಹೊಡೆಯುತ್ತ ಸುತ್ತುತ್ತದೆ. ಜನ ತಮ್ಮ ಅಭೀಷ್ಟೆಯನ್ನು ನೆನೆದು ಈ ಕಲ್ಲಿನಲ್ಲಿಕುಳಿತು ತಮ್ಮ ಇಷ್ಟಾರ್ಥ ನೆರವೇರುವುದೆಂದು ನಂಬುತ್ತಾರೆ.

 

ಕಬ್ಬಳಿ ಬಸವೇಶ್ವರ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೬೫ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೨೮ ಕಿ.ಮೀ

ಇಲ್ಲಿ ಕಾರ್ತಿಕಮಾಸದಲ್ಲಿ ವಿಶೇಷ ಪೂಜೆ ನೆರವೇರುತ್ತದೆ. ಪ್ರತಿ ಸೋಮವಾರ ಭಕ್ತರು ಇಲ್ಲಿ ವಿಶೇಷವಾಗಿ ನೆರೆಯುತ್ತಾರೆ. ಕಾರ್ತಿಕ ಮಾಸದಲ್ಲಿ ಜಾತ್ರೆ ಕೂಡ ನಡೆಯುತ್ತದೆ. ಇಲ್ಲಿನ ದನಗಳ ಜಾತ್ರೆ ವಿಶೇಷವಾದುದು. ಕಬ್ಬಳಿ ಬಾಗೂರು ಮತ್ತು ನುಗ್ಗೇಹಳ್ಳಿ ಹಾಗೂ ಹಿರಿಸಾವೆಗಳಿಗೆ ೧೫ ಕಿ.ಮೀ. ಅಂತರದಲ್ಲಿದೆ.

ಇಲ್ಲಿ ಸುಂದರವಾದ ಕೊಳವಿದೆ. ಶ್ರೀ ಆದಿಚುಂದನಗಿರಿ ಮಹಾಸಂಸ್ಥಾನ ಮಠದವರು ಶಾಲೆಯನ್ನು ನಡೆಸುತ್ತಿದ್ದಾರೆ. ಬಸವೇಶ್ವರ ಸ್ವಾಮಿಯ ದೇವಾಲಯದ ಆವರಣ ತುಂಬಾ ಶುಭ್ರವಾಗಿ ಶುಚಿತ್ವವನ್ನು ಕಾಪಾಡಿದೆ.

ಇಲ್ಲಿ ಸುಂದರವಾದ ಬಸವನ ಮೂರ್ತಿಯಿದೆ. ಇಲ್ಲಿಂದ ಯಾರೂ ಒಂದು ಚಿಕ್ಕ ಕಲ್ಲನ್ನಾಗಲಿ ಹುಲ್ಲು ಕಡ್ಡಿಯನ್ನಾಗಲಿ ಬೇರೆಡೆ ಕೊಂಡೊಯ್ಯುವುದಿಲ್ಲ. ಹಾಸನ ತಾಲ್ಲೂಕಿನ ಪ್ರಮುಖ ಸ್ಥಳಗಳು.

 

ಉಪಗ್ರಹ ನಿಯಂತ್ರಣ ವ್ಯವಸ್ಥೆ (ಎಂ.ಸಿ.ಎಫ್.)

ಹಾಸನ ತಾಲ್ಲೂಕಿನ ಸಾಲಗಾಮೆಯ ಬಳಿ ಹಳೇಬೀಡು ರಸ್ತೆಯಲ್ಲಿರುವ ಉಪಗ್ರಹ ನಿಯಂತ್ರಣ (ಒಅಈ) ಕೇಂದ್ರವು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯಿಂದ ಕರ್ನಾಟಕ ರಾಜ್ಯದ ಹಾಸನದಲ್ಲಿ ಸ್ಥಾಪಿಸಲ್ಪಟ್ಟಿತು. ೧೯೮೨ರಲ್ಲಿ ಆರಂಭವಾದ ಉಪಗ್ರಹ ನಿಯಂತ್ರಣ ಕೇಂದ್ರವು ಇಸ್ರೋದಿಂದ ಉಡಾವಣೆಯಾದ ಉಪಗ್ರಹಗಳ ಉಸ್ತುವಾರಿ ನೋಡಿಕೊಳ್ಳುವುದು ಮತ್ತು ಉಪಗ್ರಹಗಳನ್ನು ನಿಯಂತ್ರಿಸುವ ಜವಬ್ದಾರಿಯನ್ನು ನಿರ್ವಹಿಸುತ್ತಿದೆ. ಮಧ್ಯಪ್ರದೇಶದ ಭೂಪಾಲದಲ್ಲಿ ೨೦೦೫ರಲ್ಲಿ ಇನ್ನೊಂದು ಉಪಗ್ರಹ ನಿಯಂತ್ರಣ ಕೇಂದ್ರ ಸ್ಥಾಪನೆಯಾಗುವವರೆಗೆ ಭಾರತದಲ್ಲಿ ಇದ್ದದ್ದು ಹಾಸನದ ಉಪಗ್ರಹ ನಿಯಂತ್ರಣ ಕೇಂದ್ರ ಒಂದೇ.

ಉಪಗ್ರಹ ನಿಯಂತ್ರಣ ಕೇಂದ್ರ ಸ್ಥಾಪಿಸಲು ಇಸ್ರೋ ಹಲವಾರು ರಾಜ್ಯಗಳಲ್ಲಿ ಹಲವಾರು ಸ್ಥಳಗಳನ್ನು ಪರಿಶೀಲಿಸಿತು. ಆದರೆ ಇಸ್ರೋ ಹಾಸನವನ್ನೇ ಆಯ್ಕೆಮಾಡಿತು.

ಏಕೆಂದರೆ ಈ ಪ್ರದೇಶ ಹೆಚ್ಚು ಶಬ್ದಮಾಲಿನ್ಯವಿಲ್ಲದೆ ಪ್ರಶಾಂತವಾಗಿದೆ ಮತ್ತು ತರಂಗಗಳನ್ನು ಸ್ವೀಕರಿಸಲು ಸೂಕ್ತವಾಗಿದೆ ಎಂಬ ಕಾರಣದಿಂದ ತುಂಬಾ ದುರ್ಬಲವಾದ ತರಂಗಗಳನ್ನು ಸ್ವೀಕರಿಸಲು ಸಾಧ್ಯವಾಗಬಹುದಾದ ಕಡಿಮೆ ಅಡಚಣೆಯುಳ್ಳ ಸ್ಥಳ ಇದಾಗಿದೆ. ಈ ನಿಯಂತ್ರಣ ಕೇಂದ್ರವು ೧೭.೨ ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿದ್ದು ಕರ್ನಾಟಕ ಸರ್ಕಾರವು ಈ ಭೂಮಿಯನ್ನು ಒದಗಿಸಿದೆ.

 

ಒಳವಿಭಾಗಗಳು
 ಉಪಗ್ರಹ ನಿಯಂತ್ರಣ ಕೇಂದ್ರವು ಮೂರು ವಿಭಾಗಗಳನ್ನು ಹೊಂದಿದೆ. ಅವುಗಳೆಂದರೆ

೧. ಉಪಗ್ರಹ ನಿಯಂತ್ರಣ ಕೇಂದ್ರ ೨. ಉಡಾವಣಾ ನಿಯಂತ್ರಣ ಕೇಂದ್ರ ಮತ್ತು ೩. ಭೂ ಕೇಂದ್ರ.

೨. ಉಪಗ್ರಹ ನಿಯಂತ್ರಣ ಕೇಂದ್ರ:- ಈ ಕೇಂದ್ರವು ಉಪಗ್ರಹಗಳನ್ನು ನಿಯಂತ್ರಿಸುವುದು ಮತ್ತು ಉಪಗ್ರಹಳಿಗೆ ವಿವಿಧ ರೀತಿಯ ಕೆಲಸಮಾಡುವಂತೆ ಸೂಚನೆಗಳನ್ನು ಕಳುಹಿಸುವ ಜವಾಬ್ದಾರಿಯನ್ನು ಹೊಂದಿದೆ.

೩. ಉಡಾವಣಾ ನಿಯಂತ್ರಣ ಕೇಂದ್ರ:- ಈ ಕೇಂದ್ರವು ಮುಖ್ಯವಾಗಿ ಉಪಗ್ರಹಗಳನ್ನು ಹಾರಿಸುವಾಗ ಮತ್ತು ಹಾರಿಸಿದ ಆರಂಭದ ಸಮಯದಲ್ಲಿ ಬಹಳ ಮುಖ್ಯವಾದ ಕಾರ್ಯಗಳನ್ನು ನಿರ್ವಹಿಸುತ್ತದೆ. ಈ ಕೇಂದ್ರದಲ್ಲಿ ಹಾರಿಸಿದ ಉಪಗ್ರಹ ಹೇಗೆ ಕಾರ್ಯನಿರ್ವಹಿಸುತ್ತದೆ, ಹೇಗೆ ಚಲಿಸುತ್ತದೆ ಎಂಬ ಬಗ್ಗೆ ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಉಪಗ್ರಹದಲ್ಲಿ ಏನಾದರೂ ದೋಷ ಕಂಡುಬಂದರೆ ತಕ್ಷಣ ಅಪಾಯದ ಘಂಟೆ ಹೊಡೆದುಕೊಳ್ಳಲಾರಂಭಿಸುತ್ತ ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಉಪಗ್ರಹಕ್ಕೆ ಸೂಕ್ತ ಸಂದೇಶ ರವಾನಿಸಿ ಅದನ್ನು ಸರಿಪಡಿಸುತ್ತಾರೆ.

೪. ಭೂ ಕೇಂದ್ರ:- ಏಳು ಭೂಕೇಂದ್ರಗಳಿಂದ ಸಂಯೋಜನೆಗೊಂಡ ಭೂ ಕೇಂದ್ರ ಸೌಲಭ್ಯವನ್ನು ಉಪಗ್ರಹ ನಿಯಂತ್ರಣ ಕೇಂದ್ರ ಹೊಂದಿದೆ. ಈ ಭೂ ಕೇಂದ್ರಗಳಿಗೆ ಅಂಟೆನಾಗಳು ಸಹಕರಿಸುವ ಮೂಲಕ ಉಪಗ್ರಹಗಳ ಮತ್ತು ಉಪಗ್ರಹ ನಿಯಂತ್ರಣ ಕೇಂದ್ರಗಳ ನಡುವೆ ಸಂಪರ್ಕವನ್ನು ಉಂಟುಮಾಡುತ್ತದೆ.

ಉಪಗ್ರಹಗಳು:-
ಹಾಸನದ ಉಪಗ್ರಹ ನಿಯಂತ್ರಣ ಈ ಕೆಳಗಿನ ಏಳು ಉಪಗ್ರಹಗಳನ್ನು ನಿಯಂತ್ರಿಸುತ್ತದೆ. ೧. ಇನ್ಸಾಟ್-೨ಇ, ೨. ಇನ್ಸಾಟ್-೩ಸಿ, ೩. ಇನ್ಸಾಟ್-೩ಎ, ೪. ಇನ್ಸಾಟ್-೩ಇ, ೫. ಇನ್ಸಾಟ್-೪ಎ, ೬ .ಕಲ್ಪನಾ-೧ ಮತ್ತು ೭. ಜಿಸ್ಯಾಟ್-೨.

ವಿಜ್ಞಾನಿಗಳು:-
ಸಿ.ಜಿ. ಪಾಟೀಲ್‌ರವರು ಉಪಗ್ರಹ ನಿಯಂತ್ರಣ ಕೇಂದ್ರ ಈಗಿನ ನಿರ್ದೇಶಕರಾಗಿದ್ದಾರೆ. ಇನ್ನೊಂದು ಮುಖ್ಯ ಸಂಗತಿಯೆಂದರೆ ಯಾವುದೇ ಉಪಗ್ರಹ ಹಾರಿಸುವುದಕ್ಕಿಂತ ಮುಂಚೆ ವಿಜ್ಞಾನಿಗಳ ಒಂದು ಗುಂಪು ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿಯ ದೇವಸ್ಥಾನಕ್ಕೆ ತೆರಳಿ ಉಪಗ್ರಹದ ಯಶಸ್ಸಿಗಾಗಿ ಪ್ರಾರ್ಥಿಸುತ್ತಾರೆ.

ಹಾಲಿನ ಡೈರಿ:-
ಹಾಲಿನ ಡೈರಿಯು ೦೧-೦೫-೧೯೮೪ರಲ್ಲಿ ಸ್ಥಾಪಿತವಾಗಿದೆ. ಚನ್ನರಾಯಪಟ್ಟಣ ಮತ್ತು ಹೊಳೇನರಸೀಪುರದಲ್ಲಿ ಹಾಲು ಶೀಥಲೀಕರಣ ಕೇಂದ್ರಗಳಿವೆ. ಹಾಸನದಲ್ಲಿ ೪೧೫ ಜನರು ಉದ್ಯೋಗಿಗಳಿದ್ದಾರೆ. ಹಾಸನ ಮಡಿಕೇರಿ, ಕೂಡಿಗೆಯನ್ನು ಒಕ್ಕೂಟವನ್ನಾಗಿ ಮಾಡಿದ್ದಾರೆ. ಹಾಲು, ಪೇಡಾ, ತುಪ್ಪ ಉತ್ಪಾದನೆ, ಮೈಸೂರುಪಾಕು, ಹಾಲಿನಪುಡಿ, ಇವುಗಳನ್ನು ಬೆಂಗಳೂರಿನಿಂದ ಆಮದು ಮಾಡಿಕೊಂಡು ಜಿಲ್ಲಾದ್ಯಂತ ವಿತರಿಸಲಾಗುತ್ತಿದೆ.

 

ಗೊರೂರು ಅಣೆಕಟ್ಟು-ಹೇಮಾವತಿ ಜಲಾಶಯ:-

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೨೩ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೨೩ ಕಿ.ಮೀ

ಗೊರೂರು ಅಣೆಕಟ್ಟು ಹಾಸನದಿಂದ ಸುಮಾರು ೨೩ ಕಿ.ಮೀ. ದೂರದಲ್ಲಿದೆ. ಹಾಸನ- ಅರಕಲಗೂಡು ಮಾರ್ಗದಲ್ಲಿದೆ. ಹೇಮಾವತಿ ಜಲಾಶಯವೆಂದು ಕರೆಯುತ್ತಿದ್ದು ನೋಡಲು ನಯನ ಮನೋಹರವಾಗಿದೆ.

 

ಕೈಗಾರಿಕಾ ವಲಯ

ದೂರ ಜಿಲ್ಲೆಯಿಂದ ೮.ಕಿ.ಮೀ

ಹಾಸನದಿಂದ ಸುಮಾರು ೮ಕಿ.ಮೀ.ದೂರದಲ್ಲಿದೆ. ಹಾಸನ ಜಿಲ್ಲೆಯಲ್ಲಿ ಪ್ರಸಿದ್ಧವಾಗಿರುವ ಸ್ಥಳಗಳಲ್ಲಿ ಕೈಗಾರಿಕಾವಲಯವು ಒಂದು. ಲಕ್ಷಾಂತರ ಜನರಿಗೆ ಉದ್ಯೋಗವನ್ನು ಒದಗಿಸಿರುವ ಕೈಗಾರಿಕೆಗಳು ಉನ್ನತಮಟ್ಟದಲ್ಲಿ ಪ್ರಗತಿಸಾಧಿಸಿವೆ. ಇದರಲ್ಲಿ ಮುಖ್ಯವಾದವು ಹರಿಯಾಣ ಉಕ್ಕು ಕಾರ್ಖಾನೆ. ಇದರಲ್ಲಿ ಸಾವಿರಾರು ಟನ್‌ಗಳಷ್ಟು ಅದಿರಿನ್ನು ಉತ್ಪಾದನೆ ಮಾಡಲಾಗುತ್ತಿದೆ. ಹಿಮ್ಮತ್ ಸಿಂಗ್, ಗೋಗೋ ಇಂಟರ್ ನ್ಯಾಷನಲ್ ಕಾರ್ಖಾನೆಗಳು, ಬಟ್ಟೆಗಳು, ಸಿದ್ದ ಉಡುಪುಗಳ ತಯಾರಿಕೆಯನ್ನು ಸಿದ್ದಪಡಿಸುತ್ತಾರೆ. ಇದರ ಜೊತೆಗೆ ಗ್ರಾನೈಟ್, ಮೊಸಾಯಿಕ್ ಕಂಪನಿಗಳು ಇವೆ. ಉಪ್ಪಿನಕಾಯಿ ಕಾರ್ಖಾನೆಗಳು ಸಾವಿರಾರು ಜನರಿಗೆ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಉದ್ಯೋಗ ನೀಡಿ ಮಹಿಳಾ ಸಬಲೀಕರಣಕ್ಕೆ ಅವಕಾಶ ಮಾಡಿಕೊಟ್ಟು ಮಹಿಳೆ ಸ್ವತಂತ್ರವಾಗಿ ತಮ್ಮ ಜೀವನವನ್ನು ಯಶಸ್ವಿಯಾಗಿ ನಡೆಸಲು ದಾರಿಮಾಡಿಕೊಟ್ಟಿವೆ. ಅನೇಕ ಆಟೋಮೊಬೈಲ್ ಕಾರ್ಖಾನೆಗಳನ್ನು ಇಲ್ಲಿ ಕಾಣಬಹುದಾಗಿದೆ.

 

ಮೊಸಳೆಗ್ರಾಮ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೧೬ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೧೬ ಕಿ.ಮೀ

ಈ ಸ್ಥಳದಲ್ಲಿ “ಚೆನ್ನಕೇಶವ” ಮತ್ತು “ನಾಗೇಶ್ವರ” ದೇವಸ್ಥಾನಗಳು ಅಕ್ಕಪಕ್ಕದಲ್ಲೇ ನಿರ್ಮಾಣಗೊಂಡಿದ್ದು ಹೊಯ್ಸಳ ವಾಸ್ತುಶೈಲಿಯನ್ನು ನೆನಪುಮಾಡಿಕೊಡುತ್ತವೆ. ಆದರೆ ಈ ದೇವಸ್ಥಾನಗಳು ನಿರ್ಮಾಣಗೊಂಡ ಸಮಯ ಮತ್ತು ಯಾವ ರಾಜನ ಆಳ್ವಿಕೆಯಲ್ಲಿ ಎಂದು ಈ ಪ್ರಶ್ನೆಗಳಲ್ಲಿಗೆ ಉತ್ತರಗಳು ಲಭ್ಯವಿರುವುದಿಲ್ಲ. ಆದರೆ ಈ ದೇವಸ್ಥಾನಗಳ ನಿರ್ಮಾಣ ಶೈಲಿ ಮತ್ತು ಆಕಾರ ಪ್ರಕೃತಿಯನ್ನು ಅವಲೋಕಿಸಿದಾಗ ಕಂಡುಬರುವುದು ಅಥವ ಊಹಿಸಬಹುದಾದ ಸಮಯವೆಂದರೇ ಸುಮಾರು ೧೩ನೇ ಶತಮಾನ. ಈ ೧೩ನೇ ಶತಮಾನದಲ್ಲಿ ಹೊಯ್ಸಳ ಶೈಲಿಯ ರಚನೆಗಳು / ವಾಸ್ತುಗಳು ಹಾಸನ ಜಿಲ್ಲೆಯಲ್ಲಿ ಹೇರಳವಾಗಿ ಕಂಡು ಬರುವುದು ಮತ್ತೊಂದು ವಿಶೇಷ.

 

ದೊಡ್ಡಗದ್ದವಳ್ಳಿ – ಶ್ರೀ ಲಕ್ಷ್ಮೀದೇವಸ್ಥಾನ

ದೂರ ಎಷ್ಟು?
ಜಿಲ್ಲಾ ಕೇಂದ್ರದಿಂದ : ೧೫ ಕಿ.ಮೀ
ತಾಲ್ಲೂಕು ಕೇಂದ್ರದಿಂದ : ೧೫ ಕಿ.ಮೀ

ಈ ಗ್ರಾಮವು ಹಾಸನ-ಬೇಲೂರು ಮಾರ್ಗದಲ್ಲಿ ಸರಿ ಸುಮಾರು ೧೫ ಕಿಲೋಮೀಟರ್ ದೂರದಲ್ಲಿ ಇದೆ. ಈ ದೇವಸ್ಥಾನದ ಗೋಪುರಗಳು ನೋಡುಗರನ್ನು ದೂರದಿಂದಲ್ಲೇ ಆಕರ್ಷಿಸುತ್ತವೆ. ಈ ಸ್ಥಳ ಆರಾಧ್ಯದೇವತೆ “ ಶ್ರೀಲಕ್ಷ್ಮಿ ಅಮ್ಮನವರು”, ಈ ಭಾಗದ ಈಶಾನ್ಯದಲ್ಲಿ ಹೊಯ್ಸಳ ಕಾಲದ ನಿರ್ಮಾಣದ “ಶ್ರೀ ವೀರಭದ್ರ” ದೇವಸ್ಥಾನವೂ ಕಂಡು ಬರುತ್ತದೆ ಮಾತ್ರವಲ್ಲದೆ ಅತ್ಯಂತ ಆಕರ್ಷಕವೂ ಹೌದು. ಇಲ್ಲಿ ದೊರಕಿರುವ ಶಾಸನಗಳು ಹಾಗೂ ಇನ್ನೀತರೆ ಆಧಾರಗಳ ಮೇಲೆ ಇದರ ನಿರ್ಮಾಣವು ಚಾಲುಕ್ಯರು ಅಥವ ಹೊಯ್ಸಳ ಆರಂಭ ಆಳ್ವಿಕೆಯಲ್ಲಿ ನಿರ್ಮಾಣಗೊಂಡಿದೆ ಎಂದು ಕಂಡು ಬರುತ್ತದೆ. ಇದರ ಆಕಾರ, ಆಕೃತಿ, ಗೋಡೆಗಳು, ಗೋಪುರಗಳಲ್ಲಿ ಚಿತ್ರಣಗೊಂಡಿರುವ ಘಟನೆಗಳಿಂದ ತಿಳಿದುಬರುವ ಅಂಶವೆಂದರೆ ಕ್ರಿ.ಶ. ೧೧೧೩ರಲ್ಲಿ ವಿಷ್ಣುವರ್ಧನನ ರಾಜಾಳ್ವಿಕೆಯಲ್ಲಿ ನಿರ್ಮಾಗೊಂಡಿದೆ ಎಂದು ಖಚಿತಪಡಿಸಿಕೊಳ್ಳಬಹುದು.