ಚಪ್ಪರದವರೆಯನ್ನು ಸ್ಥಳೀಯವಾಗಿ ಚಿಕ್ಕಡುಕಾಯಿ ಎನ್ನುತ್ತಾರೆ. ಇದರ ಎಳೆಯ ಕಾಯಿ ಮತ್ತು ಕಾಳು ಉತ್ತಮ ತರಕಾರಿ. ಇದು ಬಳ್ಳಿ ಸಸ್ಯ. ಚಪ್ಪರದ ಮೇಲೆ ಹಬ್ಬಿಸುವುದರಿಂದ ಚಪ್ಪರದವರೆ ಎನ್ನಲಾಗಿದೆ.

ಪೌಷ್ಟಿಕ ಗುಣಗಳು : ಕಾಯಿ ಮತ್ತು ಕಾಳುಗಳಲ್ಲಿ ಅಧಿಕ ಪ್ರಮಾಣದ ಪ್ರೊಟೀನ್, ಶರ್ಕರಪಿಷ್ಟ, ನಾರು ಮತ್ತು ಕಬ್ಬಿಣಾಂಶ ಇರುತ್ತವೆ.

೧೦೦ ಗ್ರಾಂ ಕಾಯಿಗಳಲ್ಲಿನ ವಿವಿಧ ಪೋಷಕಾಂಶಗಳು

ತೇವಾಂಶ ೮.೪ ಗ್ರಾಂ
ನಾರು ಪದಾರ್ಥ ೨.೦  ಗ್ರಾಂ
ಶರ್ಕರಪಿಷ್ಟ ೧೦.೦  ಗ್ರಾಂ
ಕಬ್ಬಿಣ ೧.೩  ಗ್ರಾಂ
ಪ್ರೊಟೀನ್ ೪.೫  ಗ್ರಾಂ
ಕ್ಯಾಲ್ಸಿಯಂ ೦.೦೫  ಗ್ರಾಂ
ಕೊಬ್ಬು ೦.೧  ಗ್ರಾಂ
ರಂಜಕ ೦.೦೬  ಗ್ರಾಂ

’ಎ, ಬಿ ಮತ್ತು ಸಿ ಜೀವಸತ್ವಗಳು ಸ್ವಲ್ಪ ಪ್ರಮಾಣದಲ್ಲಿ.

ಔಷಧೀಯ ಗುಣಗಳು : ಇದರ ಸೂಪ್ ಜೊತೆಗೆ ಸ್ವಲ್ಪ ಉಪ್ಪು ಬೆರೆಸಿ ಕುಡಿಯುತ್ತಿದ್ದಲ್ಲಿ ಕೆಮ್ಮು ಗುಣವಾಗುತ್ತದೆ. ಇದು ಮೂತ್ರೋತ್ಪಾದಕವೂ ಹೌದು. ಕಾಳುಗಳನ್ನು ನುಣ್ಣಗೆ ಅರೆದು ಮುಖಕ್ಕೆ ಲೇಪಿಸಿ, ತೊಳೆಯುತ್ತಿದ್ದಲ್ಲಿ ಕಲೆಗಳು ಇರುವುದಿಲ್ಲ. ನಿಂಬೆಹಣ್ಣಿನ ರಸ ಸೇರಿಸಿದರೆ ಮುಖದ ಕಾಂತಿ ಹೆಚ್ಚುತ್ತದೆ. ಹುಳುಕಡ್ಡಿಯ ಬಾಧೆ ಇದ್ದಾಗ ಎಲೆಗಳನ್ನು ಅರೆದು ಹಚ್ಚುವುದುಂಟು. ಎಲೆಗಳನ್ನು ಅರೆದು ತಲೆಗೆ ಹಚ್ಚಿ ಸ್ನಾನ ಮಾಡುತ್ತಿದ್ದರೆ ತಲೆಯಲ್ಲಿನ ಹೊಟ್ಟು ನಿವಾರಣೆಯಾಗುತ್ತದೆ.

ಸಸ್ಯ ವರ್ಣನೆ : ದೃಢವಾಗಿ ಹಬ್ಬಿ ಬೆಳೆಯುವ ಬಳ್ಳಿ; ಒಮ್ಮೆ ಬೆಳೆದಲ್ಲಿ ಬಹುಕಾಲ ಇರುತ್ತದೆ. ಲೆಗ್ಯೂಮಿನೋಸೀ ಕುಟುಂಬದ ಫ್ಯಾಬೇಸೀ ಉಪಕುಟುಂಬಕ್ಕೆ ಸೇರಿದ ಸಸ್ಯ. ಕಾಂಡ ಹಾವಿನಂತೆ ಆಸರೆಗೆ ಸುತ್ತಿ ಮೇಲೇರುವುದು. ಅನೇಕ ಕವಲುಗಳು, ಬಣ್ಣ ಹಸುರು, ಕಾಂಡ ಬಲಿತಂತೆಲ್ಲಾ ತೊಗಟೆ ಮಾಸಲು ಬಣ್ಣಕ್ಕೆ ಮಾರ್ಪಡುತ್ತದೆ. ಎಲೆಗಳು ಹಾಗೂ ಉಪ ಎಲೆಗಳಲ್ಲಿ ತೊಟ್ಟು, ಪ್ರತಿ ಎಲೆಗೆ ಮೂರು ಉಪ ಎಲೆಗಳು, ಹಸುರು ಬಣ್ಣ. ಉಪ ಎಲೆಗಳು ಈಟಿಯಾಕಾರ, ಬುಡದಲ್ಲಿ ಪರ್ವಪುಚ್ಛಗಳು. ಎಲೆಗಳು ಸಂಯೋಗ ಪ್ರತ್ಯೇಕ, ಮೇಲೆಲ್ಲಾ ನವಿರಾದ ತುಪ್ಪಳ, ನರಗಳು ಸ್ಪಷ್ಟ. ಹೂವು ಉದ್ದನಾದ ಗೊಂಚಲುಗಳಲ್ಲಿ, ಬಿಳಿ ಬಣ್ಣ, ಕೆಲವೊಮ್ಮೆ ಹಳದಿ, ಕೆನ್ನೀಲಿ, ಮೂಸಿದರೆ ವಿಶಿಷ್ಟ ಕಂಪು (ಸೊಗಡು). ಹೂಗಳಲ್ಲಿ ಹೆಚ್ಚಾಗಿ ಸ್ವ-ಪರಾಗಸ್ಪರ್ಶ, ಪರಕೀಯ-ಪರಾಗಸ್ಪರ್ಶ ಕೇವಲ ಶೇಕಡಾ ೫ ರಷ್ಟು. ಕಾಯಿಗಳು ಗಂಟು ಗಂಟು ಬಾಗಿರುತ್ತವೆ. ಬಿಳಿ ಹಳದಿ ಬಣ್ಣ, ಶಲಾಕಾಗ್ರ ಕಡೆಯವರೆಗೂ ಕಾಯಿಗಳ ತುದಿಗೆ ಅಂಟಿಕೊಂಡೇ ಇರುತ್ತದೆ. ಕಾಳು ದುಂಡು ಇಲ್ಲವೇ ಸ್ವಲ್ಪ ಅದುಮಿದಂತೆ, ಬಲಿತ ಕಾಳುಗಳ ಸಿಪ್ಪೆಯ ಬಣ್ಣ ಬಿಳುಪು, ಕಪ್ಪು, ಕೆಂಪು, ಹಳದಿ, ಕಂದು ಮುಂತಾಗಿ, ಕೆಲವೊಂದರಲ್ಲಿ ಮಚ್ಚೆಗಳಿರುತ್ತವೆ. ಬೀಜ ಅಥವಾ ಕಾಳು ಕಾಯಿಗಳ ಒಳಗೋಡೆಯ ಉದ್ದಕ್ಕೆ ಅಂಟಿಕೊಂಡಿರುತ್ತವೆ. ಬೀಜ ಮಚ್ಚೆ ಬೆಳ್ಳಗಿರುತ್ತದೆ, ಕಾಳಿನ ಒಂದು ಪಾರ್ಶ್ವಕ್ಕೆ ಅಂಟಿಕೊಂಡಿರುತ್ತದೆ. ಕಾಯಿಗಳಲ್ಲಿ ತಲಾ ೪ ರಿಂದ ೫ ಕಾಳು ಇರುತ್ತವೆ. ಕಾಯಿಗಳು ೭ ರಿಂದ ೧೫ ಸೆಂ.ಮೀ. ಉದ್ದ, ೧.೫ ರಿಂದ ೫ ಸೆಂ.ಮೀ. ದಪ್ಪ, ಬಲಿತ ಬೀಜ ಸುಮಾರು ೧ ಸೆಂ.ಮೀ. ದಪ್ಪ, ಬೇರು ಸಮೂಹ ಆಳಕ್ಕೆ ಇಳಿದಿದ್ದು ಕವಲುಗಳಿಂದ ಕೂಡಿರುತ್ತದೆ. ಬೇರುಗಳಲ್ಲಿ ಗಂಟುಗಳಿರುತ್ತವೆ.

ಹವಾಗುಣ : ಚಪ್ಪರದವರೆಗೆ ಬಿಸಿಲಿನಿಂದ ಕೂಡಿದ ಹವಾಗುಣ ಸೂಕ್ತ. ಬಳ್ಳಿಗಳ ಬೆಳವಣಿಗೆ ಮಳೆಗಾಲದಲ್ಲಿ ಹೆಚ್ಚು. ಚಳಿಗಾಲದಲ್ಲಿ ಕಡಿಮೆ. ಇದನ್ನು ಸಮುದ್ರ ಮಟ್ಟದಿಂದ ೨೦೦೦ ಮೀಟರ್ ಎತ್ತರದ ವರೆಗೆ ಬೆಳೆಯಬಹುದು. ಉಷ್ಣವಲಯದ ಬೆಳೆಯಾದಾಗ್ಯೂ ಅಧಿಕ ಮಳೆಯಾದಲ್ಲಿ ತಡೆದುಕೊಳ್ಳುವುದಿಲ್ಲ.

ಭೂಗುಣ : ಇದನ್ನು ಎಂತಹ ಭೂಮಿಯಲ್ಲಾದರೂ ಬೆಳೆಯಬಹುದು. ನೀರು ನಿಲ್ಲಬಾರದು. ಮರಳುಮಿಶ್ರಿತ ಕೆಂಪುಗೋಡು ಅತ್ಯುತ್ತಮ. ಮಣ್ಣಿನ ಒಳಪದರಗಳಲ್ಲಿ ಗರಜು ಇರಬಾರದು.

ತಳಿಗಳು : ಇದರಲ್ಲಿ ಅನೇಕ ಬಗೆಗಳಿವೆ. ಕಾಯಿಗಳ ಬಣ್ಣ, ಆಕಾರ ಮುಂತಾದುವುಗಳ ಆಧಾರದ ಮೇಲೆ ವಿವಿಧ ಬಗೆಗಳಾಗಿ ವಿಂಗಡಿಸಲಾಗಿದೆ. ಕೆಲವು ಹಸುರು ಬಣ್ಣವಿದ್ದರೆ ಮತ್ತೆ ಕೆಲವು ಕುಡುಗೋಲಿನಂತೆ ಬಾಗಿರುತ್ತವೆ. ನಮ್ಮ ದೇಶದಲ್ಲಿ ದೀರ್ಘ ಬೆಳಕು ಮತ್ತು ಬಿಸಿಲು ಅಗತ್ಯವಿರುವ ಬಗೆಗಳಿವೆ. ಇವುಗಳ ಆಯ್ಕೆ ಹಾಗೂ ಸುಧಾರಣಾ ಕಾರ್ಯಗಳು ಟ್ರೆನಿಡಾಡ್‌ನಲ್ಲಿ ನಡೆಯುತ್ತಿವೆ.

ಸಸ್ಯಾಭಿವೃದ್ಧಿ : ಬೀಜ ಬಿತ್ತಿ ಬೆಳೆಯುವುದೊಂದೇ ಮಾರ್ಗ. ಬಿತ್ತನೆಗೆ ಬಳಸುವ ಕಾಳು ಉತ್ತಮ ಮಟ್ಟದ್ದಿರಬೇಕು, ಚೆನ್ನಾಗಿ ಬಲಿತು ಒಣಗಿದ ಕಾಳನ್ನು ಮಾತ್ರ ಬಿತ್ತಬೇಕು. ತೀರಾ ಹಳೆಯ, ಹುಳು ತಿಂದ, ಬೂಜು ಹಿಡಿದ ಕಾಳನ್ನು ಬಿತ್ತಬಾರದು. ಬಿತ್ತುವ ಮುಂಚೆ ಸ್ವಲ್ಪ ಕಾಳನ್ನು ನೀರಿನಲ್ಲಿ ನೆನೆಸಿಟ್ಟು ಮೊಳಕೆಯೊಡೆಯುವುದನ್ನು  ಪರೀಕ್ಷಿಸಬಹುದು.

ಭೂಮಿ ಸಿದ್ಧತೆ ಮತ್ತು ಬಿತ್ತುವುದು : ತಿಪ್ಪೆಗೊಬ್ಬರ ಹರಡಿ ಮಿಶ್ರ ಮಾಡಬೇಕು. ಅನಂತರ ೩ ಮೀಟರ್ ಅಂತರದಲ್ಲಿ ೬೦ ಸೆಂ.ಮೀ. ಗಾತ್ರದ ಗುಂಡಿಗಳನ್ನು ತೆಗೆದು ತಿಪ್ಪೆಗೊಬ್ಬರ ಮತ್ತು ಮೇಲ್ಮಣ್ಣುಗಳ ಮಿಶ್ರಣ ತುಂಬಿ ನೀರು ಹಾಯಿಸಬೇಕು. ಪ್ರತಿ ಗುಂಡಿಯಲ್ಲಿ ೩-೪ ಕಾಳು ಬಿತ್ತಬೇಕು. ಬಿತ್ತನೆಗೆ ಜುಲೈ-ಆಗಸ್ಟ್ ಉತ್ತಮ. ಬಿತ್ತುವ ಆಳ ೨.೫ ರಿಂದ ೪ ಸೆಂ.ಮೀ. ಇದ್ದರೆ ಸಾಕು. ಹೆಕ್ಟೇರಿಗೆ ೪ ರಿಂದ ೫ ಕಿ.ಗ್ರಾಂ ಬಿತ್ತನೆ ಮಾಡಬೇಕು. ಹಗುರವಾಗಿ ನೀರುಕೊಟ್ಟರೆ ನಾಲ್ಕೈದು ದಿನಗಳಲ್ಲಿ ಮೊಳೆಯುತ್ತವೆ.

ಗೊಬ್ಬರ : ಇದಕ್ಕೆ ಬೇರೆ ರಾಸಾಯನಿಕ ಗೊಬ್ಬರಗಳನ್ನೂ ಕೊಡುವ ಅವಶ್ಯಕತೆ ಇಲ್ಲ. ಇದರ ಬೇರುಗಳಲ್ಲಿ ಗಂಟುಗಳಿದ್ದು ಗಾಳಿಯಲ್ಲಿನ ಸಾರಜನಕವನ್ನು ಹೀರಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯವಿದೆ.

ನೀರಾವರಿ : ಒಮ್ಮೆ ಸ್ಥಿರಗೊಂಡರೆ ಅನಂತರ ಅಷ್ಟೊಂದು ನೀರು ಬೇಕಾಗಿರುವುದಿಲ್ಲ. ಎಂಟು ಹತ್ತು ದಿನಗಳಿಗೊಮ್ಮೆ ನೀರು ಕೊಡಬೇಕು. ಬೇಸಿಗೆಯಲ್ಲಿ ಪಾತಿಗಳ ಅಗಲಕ್ಕೆ ಒಣಹುಲ್ಲು ಮುಂತಾದುವುಗಳನ್ನು ಹರಡಿದರೆ ತೇವ ಹೆಚ್ಚು ಕಾಲ ಉಳಿಯುತ್ತದೆ.

ಆಸರೆ ಮತ್ತು ಹಬ್ಬಿಸುವಿಕೆ : ಬಳ್ಳಿಗಳನ್ನು ಬಹು ಎತ್ತರಕ್ಕೆ ಹಬ್ಬಿಸಬಾರದು. ಕೊಯ್ಲು ಮಾಡಲು ಕಷ್ಟವಾಗುತ್ತದೆ. ನೆಲಮಟ್ಟದಿಂದ ೨ ಮೀಟರ್ ಎತ್ತರದಲ್ಲಿ ತಂತಿ ಜಾಲರಿ ಅಥವಾ ಮರ, ಬೇಲಿ ಮೇಲೆ ಹಬ್ಬಿಸುವುದುಂಟು. ಸಸಿಗಳು ಚಪ್ಪರದ ಎತ್ತರಕ್ಕೆ ಬೆಳೆದಾಗ ಗುಂಡಿಗಳಲ್ಲಿ ತಲಾ ಒಂದು ಗಿಡ ಇದ್ದರೆ ಸಾಕು.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಕಳೆಗಳನ್ನು ಕೈಯಿಂದ ಕಿತ್ತು ತೆಗೆಯಬೇಕು. ಪಾತಿಗಳ ಮಣ್ಣನ್ನು ಹಗುರವಾಗಿ ಒಂದೆರಡು ಸಾರಿ ಸಡಿಲಿಸಿದರೆ ಸಾಕು.

ಕೊಯ್ಲು ಮತ್ತು ಇಳುವರಿ : ಬಿತ್ತನೆಯಾದ ಮೂರು ನಾಲ್ಕು ತಿಂಗಳಲ್ಲಿ ಹೂವು ಕಾಣಿಸಿಕೊಳ್ಳುತ್ತವೆ. ಹೆಚ್ಚು ಹೂವು ಕಾಣಿಸಿಕೊಳ್ಳುವುದು ಚಳಿಗಾಲದಲ್ಲಿ. ಹೂಬಿಟ್ಟು ಕಾಯಿ ಕಚ್ಚುವ ಅವಧಿ ಬಹು ದೀರ್ಘ. ಹಾಗಾಗಿ ಬಹು ಕಾಲ ಕಾಯಿ ಸಿಗುತ್ತಿರುತ್ತವೆ. ಪ್ರತಿ ಬಳ್ಳಿಗೆ ಕಡೇ ಪಕ್ಷ ೨೦-೨೫ ಕಿ. ಗ್ರಾಂ ಕಾಯಿ ಸಿಗುತ್ತವೆ. ಅವು ಸಾಕಷ್ಟು ಬಲಿತಾಗ ಕಿತ್ತು ತೆಗೆಯಬೇಕು. ಮೂರು ದಿನಗಳಿಗೊಮ್ಮೆ ಕಾಯಿಗಳನ್ನು ಬಿಡಿಸಿದರೆ ಸಾಕು. ಸುಮಾರು ಮೂರು ನಾಲ್ಕು ವರ್ಷಗಳವರೆಗೆ ಫಸಲು ಸಿಗುತ್ತಿರುತ್ತದೆ. ಮೊದಲ ಒಂದೆರಡು ವರ್ಷ ಹೆಚ್ಚು ಫಸಲು ಸಿಗುತ್ತದೆ. ಕಾಯಿಗಳನ್ನು ಹೆಚ್ಚು ಕಾಲ ಸಂಗ್ರಹಿಸಿಡಬಾರದು, ಸರಕಿನ ಗುಣಮಟ್ಟ ಕೆಡುತ್ತದೆ.

ಕೀಟ ಮತ್ತು ರೋಗಗಳು : ಕೀಟಗಳಲ್ಲಿ ಕಪ್ಪು ಬಣ್ಣದ ಸಸ್ಯಹೇನು ಮತ್ತು ಗಬ್ಬು ತಿಗಣೆ ಮುಖ್ಯವಾದುವು. ಇವುಗಳ ಹತೋಟಿಗೆ ೧೦ ಲೀ. ನೀರಿಗೆ ೧೦ ಮಿ.ಲೀ. ಡಿಮೆಕ್ರಾನ್ ಅಥವಾ ಮತ್ತಾವುದಾದರೂ ಸೂಕ್ತ ಕೀಟನಾಶಕ ಬೆರೆಸಿ ಸಿಂಪಡಿಸಬಹುದು. ಒಂದೆರಡು ಸಾರಿ ಸಿಂಪಡಿಸಿದರೆ ಸಾಕು. ರೋಗಗಳಲ್ಲಿ ಅಣುಜೀವಿಗಳಿಂದ ಉಂಟಾಗುವ ಬಾಡುವ ರೋಗ ಮುಖ್ಯವಾದುದು. ಹಾನಿಗೀಡಾದ ಬಳ್ಳಿ ಇದ್ದಕ್ಕಿದ್ದಂತೆ ಬಾಡಿ ಸಾಯುತ್ತದೆ. ಅವುಗಳನ್ನು ಬೇರು ಸಹಿತ ಕಿತ್ತು ನಾಶಗೊಳಿಸಬೇಕು.

ಬೀಜೋತ್ಪಾದನೆ : ಇದು ಸ್ವ-ಪರಾಗಸ್ಪರ್ಶದ ಬೆಳೆ. ಆದಾಗ್ಯೂ ಸ್ವಲ್ಪಮಟ್ಟಿನ ಪರಕೀಯ ಪರಾಗಸ್ಪರ್ಶ ಸಹ ಇರಬಹುದು. ಯಾವುದೇ ಎರಡು ತಳಿ ಅಥವಾ ಬಗೆಗಳನ್ನು ಬೆಳೆದಾಗ ಅವುಗಳ ಮಧ್ಯೆ ೨೦೦ ಮೀಟರ್‌ಗಳಷ್ಟು ಅಂತರ ಇರಬೇಕು. ಪೂರ್ಣಬಲಿತು ಒಣಗಿದ ದೃಢವಾದ ಕಾಯಿಗಳನ್ನು ಕಿತ್ತು, ಚೆನ್ನಾಗಿ ಒಣಗಿಸಿ, ಸುಲಿದು, ಕಾಳುಗಳನ್ನು ಡಬ್ಬಿಗಳಲ್ಲಿ ತುಂಬಿಸಬೇಕು. ದಾಸ್ತಾನು ಮಾಡುವ ಮುಂಚೆ ಯಾವುದಾದರೂ ಕೀಟನಾಶಕ ಬೆರೆಸಿದರೆ ಹುಳುಗಳ ಕಾಟ ಇರುವುದಿಲ್ಲ.

* * *