ಚರಂಡಿಗಳು ಮತ್ತು ನಾಯಿಗಳು ಯಾವುದೇ ಊರಿನ
ಅನಿವಾರ್ಯವಾದ ಒಂದು ಭಾಗ ; ಪರಿಸ್ಥಿತಿ ಹೀಗಿರುವಾಗ
ಅವನ್ನು ಮೂಗು-ಕಿವಿ ಮುಚ್ಚಿಕೊಂಡು ಸಹಿಸಿಕೋ ಬೇಕು.
ಚರಂಡಿಗಳನ್ನು ಹೇಗೋ ಮಾಡಿ ಮುಚ್ಚಬಹುದು ;
ಆದರೆ ಈ ನಾಯಿಗಳ ಬಾಯನ್ನು ಮುಚ್ಚುವುದು ಕಷ್ಟ.
ಆಗಾಗ ಬೀದಿ ನಾಯಿಗಳನ್ನು ಹಿಡಿದು ಬೋನಿಗೆ ತುಂಬಿ
ಸಾಗಿಸುವ ಗಾಡಿ ಬಂದಾಗ, ಒಂದಷ್ಟು ಬೊಗಳುವ ಬಾಯಿ
ಕಡಿಮೆಯಾದೀತು. ಆದರೂ ಕೆಲವು ಕೊರಳ ಪಟ್ಟಿಯ
ತಾಳಿ ಕಟ್ಟಿಸಿಕೊಂಡ ನಾಯಿಗಳನ್ನು ಹಿಡಿಯುವಂತಿಲ್ಲ.
ಹೀಗಾಗಿ ಅವು ಸದಾ ಬೊಗಳುತ್ತಲೇ ಇರುತ್ತವೆ : ಬೀದಿ
ಬೀದಿಗಳಲ್ಲಿ, ಗಲ್ಲಿಗಳಲ್ಲಿ, ಮಠಗಳಲ್ಲಿ, ‘ನಾಯಿಗಳಿವೆ
ಎಚ್ಚರಿಕೆ’ ಬರೆದ ಕಾಂಪೋಂಡುಗಳಲ್ಲಿ, ವೇದಿಕೆಗಳಲ್ಲಿ,
ಸಿಕ್ಕ ಸಿಕ್ಕ ಅವಕಾಶವಾಣಿಗಳಲ್ಲಿ, ದೊಡ್ಡ
ಕುರ್ಚಿಗೆ ಹಾಕಿರುವ ಏಣಿಗಳಲ್ಲಿ, ವಾಚಕರ ವಾಣಿ
ಗಳಲ್ಲಿ, ಕೀಚಕರ ಓಣಿಗಳಲ್ಲಿ, ಹೀಗೇ ನೂರಾರು
ಶ್ರೇಣಿಗಳಲ್ಲಿ. ಆದ್ದರಿಂದ ನಾವೇ ಕಿವಿ ಮುಚ್ಚಿಕೊಂಡು
ಅವು ಬೊಗಳಿ ಬೊಗಳಿ ಸುಸ್ತಾಗಿ ಸುಮ್ಮನಾಗುವ ತನಕ
ತೆಪ್ಪಗಿರಬೇಕು, ಅಥವಾ ಕೊರಳಿನ ಪಟ್ಟಿ ಒಂದು ದಿನ ಸವೆದು
ಉದುರಿದ ಹೊತ್ತು, ಕಾರ್ಪೊರೇಷನ್ ಗಾಡಿಯ ಕಣ್ಣು
ಉರುಳು ಹಾಕುವ ತನಕ ಕಾಯುತ್ತ ಕೂರಬೇಕು.