ಹಬ್ಬಹರಿದಿನಗಳ ಆಚರಣೆಗೂ ಬೆಳೆಗಳನ್ನು ಬಾಧಿಸುವ ಕೀಟಗಳಿಗೂ ಎಲ್ಲಿಂದೆಲ್ಲಿಯ ಸಂಬಂಧ! ಎಂದು ಆಶ್ಚರ್ಯ ಪಡಬೇಕಾಗಿಲ್ಲ. ಋತುಮಾನಕ್ಕನುಸರಿಸಿ ಮಾಡುವ ಬೆಳೆಗಳ ಬೆಳವಣಿಗೆಯ ಹಂತಹಂತದಲ್ಲಿ ಬರುವ ಹುಣ್ಣಿಮೆ, ಅಮವಾಸೆಗಳು ಮತ್ತು ಕಾಲಗಳು ಪರಿಣಾಮ ಬೀರುತ್ತವೆ. ಪಂಚಮಿ ಹಬ್ಬದಲ್ಲಿ ‘ಕೇರ್ಯಾಂಬಲಿ’, ಜೋಕುಮಾರನ ಹಬ್ಬದಲ್ಲಿ ‘ಅಳ್ಳಾಂಬಲಿ’, ಶೀಗಿ ಹುಣ್ಣಿಮೆ ಹಾಗೂ ಎಳ್ಳ ಅಮವಾಸೆಯಂದು ‘ಚರಗ’ಚೆಲ್ಲುವುದು. ಹಲವಾರು ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿದೆ.

ರಾಸಾಯನಿಕ ಕೃಷಿಯಿಂದಾಗಿ ಕೀಟನಾಶಕಗಳು ಹುಟ್ಟಿಕೊಂಡಿವೆ. ಸ್ಪ್ರೇಪಂಪುಗಳು, ಪೆಟ್ರೋಲ್ ಪಂಪುಗಳು, ರಾಸಾಯನಿಕ ಕೀಟನಾಶಕಗಳು ಬಳಕೆಯಲ್ಲಿ ಬಂದಿವೆ. ಹಲವಾರು ವಿದೇಶಿ ಕಂಪನಿಗಳ ಇದರಿಂದ ಲಾಭ ಪಡೆಯುತ್ತವೆ. ಆದರೆ ಅವರು ನಿಗದಿಪಡಿಸಿದ ದರಕ್ಕೆ, ಅವರು ಕೊಟ್ಟ ರಾಸಾಯನಿಕ ಕೀಟನಾಶಕಗಳನ್ನು ಖರೀದಿಸಿ ತಂದು ಸಿಂಪಡಿಸಿದ ರೈತರಿಂದು ಅದೇ ವಿಷ ಕುಡಿದು ಸಾಯುವ ಸ್ಥಿತಿಗೆ ತಲುಪಿದ್ದಾರೆ. ಕೀಟಗಳು ಸಾಯುತ್ತಿಲ್ಲ. ಬೆಳೆಗಳನ್ನು ಕಾಯಿಕೊರಕ ಕೀಟಗಳಿಂದ ರಕ್ಷಿಸಲಾಗುತ್ತಿಲ್ಲ. ಇದೊಂದು ಕಡೆಗಾದರೆ ಹೊಲದಲ್ಲಿ ಸಿಂಪಡಿಸಿದ ರಾಸಾಯನಿಕ ವಿಷದ ವಾಸನೆಯಿಂದ ರೈತರ ಬೆಳೆಗಳ ಮಿತ್ರರಾದ ಜೇನುದುಂಬಿಯಂತಹ ಕೀಟಗಳು ಸತ್ತು ಹೋದವು. ಈ ಕೀಟಗಳನ್ನು ಆರಿಸಿ ತಿನ್ನುವ ಬೆಳ್ಳಕ್ಕಿ, ಗುಬ್ಬಿ ಗೊರವಂಕ ಮೊದಲಾದ ಪಕ್ಷಿಗಳು ವಿಷದ ವಾಸನೆಯಿಂದಾಗಿ ಹೊಲದತ್ತ ಸುಳಿಯಲೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ರೈತರ ಆಚರಣೆಗಳು ಕೇವಲ ಧಾರ್ಮಿಕ ಸ್ವರೂಪ ತಾಳಿದವು. ಮೂಢನಂಬಿಕೆಗಳಾದವು. ಆದರೆ, ನಿಜವಾಗಿಯೂ ಈ ಆಚರಣೆಗಳಲ್ಲಿ ಎಂಥ ವೈಜ್ಞಾನಿಕ ಸಂಗತಿ ಅಡಗಿದೆ ಎಂಬುದು ಆಶ್ಚರ್ಯಕರ ಎನಿಸಿದರೂ ಸತ್ಯಸಂಗತಿ ಆಗಿದೆ.

ರೈತರು ಮುಂಗಾರಿ ಬಿತ್ತನೆಯನ್ನು ಜೂನ್ ತಿಂಗಳಲ್ಲಿ ಮಾಡುತ್ತಾರೆ. ಎರಡು ತಿಂಗಳಲ್ಲಿ ಪಂಚಮಿ ಹಬ್ಬ,. ನಾಗರ ಪಂಚಮಿ ಸಂದರ್ಭದಲ್ಲಿ ‘ಕೆರ್ಯಾಂಬಲಿ’ ಎಂದು ಆಚರಣೆ ಮಾಡುತ್ತಾರೆ. ಕೆರ್ಯಾಂಬಲಿ ಶುಭದಿನ ಎಂಬ ನಂಬಿಕೆಯೂ ಇದೆ. ಹೊಸದಾಗಿ ಮದುವೆಯಾದ ವರನು ಕೆರ್ಯಾಂಬಲಿ ದಿವಸ ಹೆಂಡತಿಯ ಮನೆಗೆ ಹೋಗುವುದು ರೂಢಿ. ಅದೇ ದಿವಸ ವಿಧವಿಧವಾದ ಉಂಡಿ, ತಂಬಿಟ್ಟು – ಅರಳಿಟ್ಟು, ಅರಳ ಎಲ್ಲವನ್ನೂ ಬುಟ್ಟಿಯಲ್ಲಿ ತುಂಬಿಕೊಂಡು ಹೊಲಕ್ಕೆ ಹೋಗುತ್ತಾರೆ. ಮಣ್ಣಿನ ಬಸವಣ್ಣಗಳನ್ನಿಟ್ಟು ಪೂಜೆ ಮಾಡುವರು. ಸುಣ್ಣ ಹಚ್ಚಿದ ಗಡಿಗೆ ಇಡುವರು. ನಂತರ ಮಾಡಿಕೊಂಡು ಹೋದ ಆಹಾರ ಪದಾರ್ಥಗಳನ್ನು ನೈವೇದ್ಯ ಹಿಡಿಯುತ್ತಾರೆ. ನಂತರ ಎಲ್ಲ ಆಹಾರ ಪದಾರ್ಥಗಳನ್ನು ಚೂರು ಚೂರು ಮಾಡಿ ಬೆಳೆಯಲ್ಲಿ ಸಿಂಪಡಿಸುತ್ತಾರೆ. ಎರಡು ತಿಂಗಳ ಬೆಳೆ ಇರುವಾಗ ಕೀಟಗಳು ಮರಿ ಹಂತದಲ್ಲಿರುತ್ತವೆ. ಈ ಸಂದರ್ಭದಲ್ಲಿ ಕೀಟಗಳತ್ತ ಪಕ್ಷಿಗಳನ್ನು ಆಕರ್ಷಿಸಲು ಕೆರ್ಯಾಂಬಲಿಯ ಆಚರಣೆ ಮಹತ್ವದ್ದಾಗಿದೆ. ಇದರಂತೆ ಜೋಕುಮಾರನ ಹಬ್ಬದಲ್ಲಿ ಜೋಕುಮಾರ(ದೇವರಿಗೆ) ಅರ್ಪಿಸಿ ಕೊಟ್ಟ ಅಳ್ಳಾಂಬಲಿಯನ್ನು ಹೊಲಕ್ಕೆ ಹೋಗಿ ಬೆಳೆಗಳಲ್ಲಿ ಚೂರು ಚೂರು ಮಾಡಿ ಚೆಲ್ಲುವ ಸಂಪ್ರದಾಯವಿದೆ.

ಶೀಗಿ ಹುಣ್ಣಿಮೆಯ ಚರಗ:

ಶೀಗಿ ಹುಣ್ಣಿಮೆಯ ಹಿಂದಿನ ದಿನ ಇಡೀ ರಾತ್ರಿ ವಡೆ, ಗಾರಿಗಿ, ಚಕ್ಕುಲಿ, ಕೋಡುಬಳಿಗಿ, ಹುರೆಕ್ಕಿ ಹೋಳಿಗಿ, ಕರ್ಚಿಕಾಯಿ ಮೊದಲಾದ ಖಾದ್ಯಗಳನ್ನು ಕರಿದು ತಯಾರಿಸುತ್ತಾರೆ. ಶೀಗಿ ಹುಣ್ಣಿಮೆ ದಿವಸ ಬೆಳಿಗ್ಗೆ ಎದ್ದವರೆ ಐದು ದೀನಸದ ಪಲ್ಯ ಹಾಗೂ ಅನ್ನ ತಯಾರಿಸುತ್ತಾರೆ. ಇವನ್ನೆಲ್ಲಾ ಬುಟ್ಟಿಯಲ್ಲಿ ತುಂಬಿಕೊಂಡು ಹೊಲಕ್ಕೆ ಹೋಗುತ್ತಾರೆ. ಹೊಲದಲ್ಲಿ ಬೇವಿನ, ಬನ್ನಿಯ ಅಥವಾ ಆರಿ ಗಿಡದ ಕೆಳಗೆ ಐದು ಕಲ್ಲುಗಳನ್ನಿಟ್ಟು ಪೂಜೆ ಮಾಡಿ ನೈವೇದ್ಯ ಸಮರ್ಪಣೆ ಮಾಡಿದ ನಂತರ ಎಲ್ಲ ಆಹಾರ ಪದಾರ್ಥಗಳನ್ನು ಚೂರು ಚೂರು ಮಾಡಿ ಹೊಲದ ತುಂಬ ‘ಹುಲುಲ್ಲೋ ಹುಲ್ಗಿ’ ಎನ್ನುತ್ತ ಬೆಳೆ ಹುಲುಸಾಗಲಿ ಎಂದು ಪ್ರಾರ್ಥಿಸುತ್ತ ಚೆಲ್ಲುತ್ತಾರೆ. ಅದೂ ಅಲ್ಲದೆ ಎಳ್ಳ ಅಮವಾಸೆಯ ದಿವಸ ಧಾರವಾಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಹಿಂಗಾರಿ ಬೆಳೆಗಳಲ್ಲಿ ಚರಗ ಚೆಲ್ಲುವ ಸಂಪ್ರದಾಯವಿದೆ.

ಚರಗ ಮೂಢನಂಬಿಕೆ ಅಲ್ಲ:

ಕೇರ್ಯಾಂಬಲಿ, ಅಳ್ಳಾಂಬಲಿ ಮತ್ತು ಚರಗ ಚೆಲ್ಲುವ ಸಂಪ್ರದಾಯ ಮೂಢನಂಬಿಕೆ ಅಲ್ಲ. ಅಂಧಾನುಕರಣೆಯಲ್ಲ. ಭೂಮಿ ತಾಯಿಯ ಮಡಿಲಲ್ಲಿ ಬೆಳೆದ ಬೆಳೆಯುತ್ತಿರುವ ಹಚ್ಚಹಸುರಾದ ಬೆಳೆಯು ಕಂಗೊಳಿಸುತ್ತಿರುವ ಸಂದರ್ಭದಲ್ಲಿ, ಬಸಿರಾದ ಹೆಂಗಸಿಗೆ ಬಯಕೆಯೂಟ ನೀಡಿದಂತೆ, ಹಸಿರುಡುಗೆ ತೊಟ್ಟು ಬಸಿರಾದ ಭೂಮಿತಾಯಿಗೆ ಬಯಕೆಯೂಟ ನೀಡುವರೆಂಬ ನಂಬಿಕೆ ಇದೆ. ಇದಷ್ಟೇ ಅಲ್ಲ. ಇದು ಸಂಪ್ರದಾಯ ಅಥವಾ ಪರಂಪರೆ ಅಲ್ಲ. ಇದರಲ್ಲಿ ಹಲವಾರು ವೈಜ್ಞಾನಿಕ ಸಂಗತಿಗಳಿವೆ. ಇದೊಂದು ಜೈವಿಕ ಕೀಟ ಹತೋಟಿ ವಿಧಾನ ಆಗಿದೆ. ಹೊಲದಲ್ಲಿರುವ ಬೆಳೆಗಳ ಆಯಾ ಹಂತಗಳಲ್ಲಿ ಕೀಟಗಳ ವಂಶವೃದ್ಧಿಯಾಗದಂತೆ ತಡೆಯಲು ಈ ಆಚರಣೆಗಳು ರೂಢಿಯಲ್ಲಿವೆ. ಕೋಲುಗಳಿಗೆ ತೂಗು ಹಾಕಿದ ಸುಣ್ಣ ಹಚ್ಚಿದ ಬಿಳಿ ಗಡಿಗೆಗಳು ಪಕ್ಷಿಗಳನ್ನು ಹೊಲದಲ್ಲಿ ಆಕರ್ಷಿಸುತ್ತವೆ. ಹೊಲದಲ್ಲಿ ಚೆಲ್ಲಿದ ಆಹಾರ ಪದಾರ್ಥಗಳನ್ನು ತಿನ್ನಲು ಪಕ್ಷಿಗಳು ಸಹಜವಾಗಿ ಆಕರ್ಷಿತವಾಗುವವು. ಆಗ ಪಕ್ಷಿಗಳಿಗೆ ಬೆಳೆಯನ್ನು ಬಾಧಿಸುವ ಕೀಟಗಳ ವಾಸನೆ ಬರುತ್ತದೆ. ಹೀಗಾಗಿ ಪಕ್ಷಿಗಳು ಕೀಟಗಳನ್ನು ತಿಂದು ತೇಗುತ್ತವೆ.

ಯಾವುದೇ ಖರ್ಚಿಲ್ಲದೇ, ವಿಷ ಸಿಂಪಡಿಸದೆ, ಕೀಟಗಳ ನಿಯಂತ್ರಣ ಮಾಡುವ ವಿಧಾನ ಇದಾಗಿದೆ. ಪರಿಸರಕ್ಕೆ ಹಾನಿ ಇಲ್ಲ. ಭೂಮಿ, ನೀರು ಮತ್ತು ಆಹಾರ ವಿಷಮುಕ್ತವಾಗುವುದು. ಉಪಕಾರಿ ಕೀಟಗಳನ್ನು ಸಾಯದಂತೆ ತಡೆಯುವ ಈ ವಿಧಾನ ಸಂಪೂರ್ಣ ಸ್ವಾವಲಂಬಿ ಮತ್ತು ಜೈವಿಕ ಕೀಟ ಹತೋಟಿ ವಿಧಾನವಾಗಿದೆ.