೧
ಚಕ್ರರತ್ನದ ಹಿಂದೆ, ಶತಮಾನಗಳ ದಂಡ-
ಯಾತ್ರೆಯ ದಾರಿಯಲ್ಲಿ ಸವೆದುಹೋದವು
ಗಾಲಿ. ಪಡೆಗಳಡಿಯಿಟ್ಟ ಕಡೆ, ಕುಲಶೈಲ-
ಗಳೆ ಪುಡಿಪುಡಿಯಾಗಿ, ಕಡಲ ಹೂಳಿತು
ಧೂಳಿ. ಜಡೆಗಟ್ಟಿ ಕೂತ ಕಾನನದ ಹೆಮ್ಮ-
ರದ ಧ್ಯಾನವ ಕೆಡಿಸಿ ಕೆನೆದವು ಕುದುರೆ,
ನೆಲ ಅದಿರೆ, ಮುನ್ನಡೆದ ಚಕ್ರವರ್ತಿಯ ತೇಜಃ
ಪ್ರತಾಪಕ್ಕೆ, ಮತ್ತವನ ದಂಡರತ್ನಕ್ಕೆ
ಷಟ್ಖಂಡ ಮಂಡಲವೆಲ್ಲ ಸದ್ದಿರದೆ ಶರ
ಣಾದ ಚೋದ್ಯಕ್ಕೆ, ಕೊಳಗೊಂಡ ಗರ್ವರಸ
ಮಾನಸನಾದ ಭರತನಿಗೆ ಕಾಣಿಸಿತು ದಿಗ್ಭಿ-
ತ್ತಿಗೆದುರಾಗಿ ವೃಷಭಾದ್ರಿಯೆನ್ನುವ ಹೆಸರ
ಮಹಾಪರ್ವತವೊಂದು, ತನ್ನ ಮಹತ್ವಾ-
ಕಾಂಕ್ಷೆಯೇ ಮೈಗೊಂಡಿತೆಂಬಂತೆ ಮಲೆತು
ಸಂಜೆಯಾಕಾಶಕ್ಕೆ ಕೋಡೊತ್ತಿ ! ಚಕಿತ ಚ-
ಕ್ರೇಶ್ವರನ ಕಣ್ ಸನ್ನೆಯಲಿ ಸ್ತಬ್ಧವಾಯಿತು
ಸಮಸ್ತ ಸೇನಾ ಸಮುದ್ರ. ಬೀಡು ಬಿಟ್ಟುದು
ರಾಜಪರಿವಾರ ಆ ವೃಷಭಾಚಲದ
ತಪ್ಪಲಿನಲ್ಲಿ ಕಿಕ್ಕಿರಿದರಣ್ಯ ಶ್ರೇಣಿಯ
ಮಧ್ಯೆ, ನಕ್ಷತ್ರಗಳ ಹೆಡೆಬಿಚ್ಚಿದಿರುಳ
ನೆರಳಿನ ಕೆಳಗೆ. ಆ ಇರುಳು ಭರತೇಶನಿಗೆ ಕೆರ-
ಳಿತ್ತೊಂದು ಅಂತರಂಗದ ಬಯಕೆ: ಯಾರಿದ್ದಾರೆ
ನನ್ನಂತೆ ಈ ಸಮಸ್ತ ಷಟ್ಖಂಡ ಮಂಡಲವ
ಗೆದ್ದವರು? ಹಿಂದಿರಲಿಲ್ಲ, ಮುಂದೆ ಬಂದಾರೆ
ನನ್ನಂಥ ಮಹಿಮಾನ್ವಿತರು ಈ ಮನುಕುಲದ
ಚರಿತ್ರೆಯಲ್ಲಿ? ಶಾಶ್ವತವಾಗಿ ನಿಲ್ಲುವ ಹಾಗೆ
ಕೆತ್ತಿಸಬೇಕು, ಕವಿವಾಣಿಯಲ್ಲಿ ನನ್ನ ಈ
ಹೆಸರನ್ನು ಈ ಮಹಾ ಪರ್ವತದ ಮೇಖಲೆ-
ಯ ಭಿತ್ತಿಗಳ ಮೇಲೆ. ನಾಚಿ ತಲೆತಗ್ಗಿಸಲಿ
ಈ ಮಾರ್ಗದಲಿ ನಡೆವ ನಾಳಿನ ದಿನದ ವಿಜಿ-
ಗೀಷುಗಳು, ನನ್ನ ಈ ಮಹತ್ಸಾಧನೆಯ ಸಂ-
ಕೇತವನು ಕಂಡು. ನಟ್ಟನಡುರಾತ್ರಿಯಲಿ
ಹೇಳಿ ಕಳುಹಿಸಿ ಕರೆಸಿದನು ತನ್ನಾಪ್ತ ಮಂತ್ರಿ
ಗಳ ಮತ್ತೆ ಅಂತರಂಗದ ಕವಿಯ. ಆದೇಶ
ರೂಪದಲಿ ತಿಳಿಸಿದನು ತನ್ನಿಚ್ಛೆಯನು. ಪಿಸು-
ಗುಟ್ಟಿದವು ತಮ್ಮೊಳು ತಾವೆ ಈ ಕಾಲ-ದೇಶ!
೨
ಚರಿತ್ರೆಯ ಜತೆಗೆ ಯಾವತ್ತಿನಿಂದಲೋ, ಹೆ-
ಜ್ಜೆಯಿಕ್ಕುತ್ತ ಬಂದ ಕವಿ, ಚಿಂತಾಕ್ರಾಂತ
ಮಾನಸನಾಗಿ, ನೀರವ ಕುಟೀರದಲ್ಲಿ ಕೂತು
ಪರಿಭಾವಿಸಿದನಂದಿನ ಸ್ಥಿತಿಯ. ಎಂಥ
ಹುಚ್ಚು ಈ ರಾಜಾಧಿರಾಜನಿಗೆ, ಎಲ್ಲವನ್ನೂ ತೃಣ-
ವೆಂದೆಣಿಸಿ ಯೋಗಮಾರ್ಗವ ಹಿಡಿದ ಪುರುದೇವ-
ನಣುಗನಿಗೆ ! ತಲೆಯಲ್ಲೊಂದು ನರೆಗೂದಲನು
ಕಂಡಷ್ಟಕ್ಕೆ ವಿರಾಗಿಗಳಾಗಿ ಈ ಭೋಗಭಾಗ್ಯವ
ಬಿಸುಟು ನಡೆದಂಥ ಪೂರ್ವಜರ ಪರಂಪರೆಗೆ
ಸೇರಿದಾತನಿಗೆ ! ಅವರಿವರ ಬೆವರು ನೆತ್ತ-
ರಿನಲ್ಲಿ ಬೆಳೆಸಿದಹಂಕೃತಿಯ ಚಿತ್ತವಿಕಾ-
ರಕ್ಕೆ, ಶಾಶ್ವತವಾದ ಚೌಕಟ್ಟು ಹಾಕುವ ವ್ಯರ್ಥ
ಪ್ರಯತ್ನಕ್ಕೆ ಮುಖವಾಣಿಯಾಗಲೆ ನಾನು?
ಅಥವಾ ತಿಳಿಯಹೇಳಲೆ ಕೆಳೆತನದ ಸಲುಗೆಯ
ಬಳಸಿ, ಯಾಕೆ ಮತ್ತೆ ಮತ್ತೆ ಪಾಚಿಗಟ್ಟುವುದು
ಹೀಗೆ ಈ ಮನುಷ್ಯನ ಚಿತ್ತ ಎಂಬ ಸಂಗತಿಯ?
೩
ಅತಿಪುರಾತನ ಭೂಖಂಡಗಳಲ್ಲಿ ಸಂಚರಿಸಿ
ಬಂದ ಕಾಲಜ್ಞಾನಿ ಹೇಳಿದನಿಂತು : ನಿಂತಿವೆ
ಮುಂಡವೇ ಇರದ ವಿಗ್ರಹದ ಬೃಹದಾಕೃತಿಯ
ಕಾಲುಗಳೆರಡು ಮರಳುಗಾಡಿನ ನಡುವೆ.
ಅಲ್ಲೆ, ಹತ್ತಿರದಲ್ಲೆ ಮರಳಲ್ಲರ್ಧ ಮರೆಯಾ-
ದಂತೆ ಬಿದ್ದಿದೆ ರುಂಡ. ನೋಡಿದರದೊಂದು
ದರ್ಪಿಷ್ಠ ಮುಖಮುದ್ರೆ : ಕೊಂಕುತುಟಿ, ಬಿಗಿ ಹುಬ್ಬು,
ಥಣ್ಣನೆಯ ತಿರಸ್ಕಾರದಿಂದೆಲ್ಲವನು ಹಿಡಿದು
ನಡೆಸಿದ ಸೊಕ್ಕು, ಇಷ್ಟೆಲ್ಲವನ್ನೂ ಸರಿಯಾಗಿ
ಗ್ರಹಿಸಿದ್ದಾನೆ ಅಂದಿನ ಶಿಲ್ಪಿ, ಈ ನಿರ್ಜೀವ
ಶಿಲೆಯಲ್ಲೂ ! ಅಲ್ಲೇ ಕೆಳಗೆ ಪಾದಪೀಠದ ಮೇಲೆ
ಲಿಖಿತವಾಗಿದೆ ಹೀಗೆ: ‘ನಾನು ರಾಜರ ರಾಜ
ಓಝಿಮಂಡಿಯಾಸ್. ಈ ಜಗದ ವೀರಾಧಿವೀರರೇ
ನೋಡಿ ನನ್ನ ಈ ಸಾಹಸದ ಗೆಯ್ಮೆಗಳ
ನಿರಾಸೆಯಿಂದ ನಿಟ್ಟುಸಿರಿಡಿರಿ.’ ಈಗ ಏನೂ
ಇಲ್ಲ. ನೋಡಿದರೆ ಆ ಬೃಹದಾಕೃತಿಯ
ಭಗ್ನಾವಶೇಷದ ಸುತ್ತ ಮೇರೆಯರಿಯದ
ಹಾಗೆ ಅಲೆ ಅಲೆಯಾಗಿ ಹಬ್ಬಿದೆ ಮರಳು.
ವೃಷಭಾಚಲದ ಭಿತ್ತಿಯ ಮೇಲೆ ಯಾವತ್ತೋ
ಅಳಿಸಿಹೋಗಿವೆ ಅಸಂಖ್ಯ ರಾಜರ ಹೆಸರು !
Leave A Comment