ಚರಿತ್ರೆ ಅಂದರೆ ಅದೊಂದು ಮಬ್ಬು ಕವಿದ
ಸುರಂಗ. ಪಂಜು ಹಿಡಿದು ಹೊರಟರೆ ನೀವು
ಪಿತೂರಿಗಳ ಸಂದಿಗೊಂದಿಗಳಲ್ಲಿ ಕೈ-ಕಾಲ್
ಮುರಿದು ಬಿದ್ದಿರುವ ಶತಮಾನಗಳ ನೋವು !
ಹಾಗೆಯೇ ತಡವರಿಸಿಕೊಂಡು ನಡೆದರೆ ಮುಂದೆ
ಯುಗಯುಗಾಂತರದ ನೆತ್ತರ್-ಕೆಸರು
ಮೆತ್ತುವುದು ಕಾಲಿಗೆ. ಗೂಢಲಿಪಿಗಳ ಕಲ್ಲು
ಒಡೆದ ಮಡಕೆಯ ಚೂರು, ಮೂಳೆಗಳ ನಿಟ್ಟುಸಿರು.
ಮುಸ್ಸಂಜೆ ಬೆಳಕಲ್ಲಿ ಕೂತ ಪಿರಮಿಡ್ಡುಗಳು;
ಮಹಲುಗಳು; ಗೋರಿಗಳ ಮೇಲೆ ಕಿರೀಟಗಳು.
ಅಪರಾಧಗಳ ಶೂಲಗಳಲ್ಲಿ ಪ್ರೇತಗಳಾಗಿ, ಜೋ-
ತಾಡುತ್ತಿರುವ ಅಮಾಯಕರ ಶಾಪಗಳು.


ಚರಿತ್ರೆ ಅಂದರೆ ತುಂಗಭದ್ರೆಯ ತಡಿಯ
ಹಾಳು ಹಂಪೆಯ ನೋಟ. ಬಂಡೆಯ
ಮೇಲೆ ಬಂಡೆ. ಶತಮಾನಗಳ ರಣಬಿಸಿಲಿಗೂ
ಒಂದಿಷ್ಟೂ ಮೆತ್ತಗಾಗದ ನಿಷ್ಠುರ ಶಿಲೆಯ
ಅಸ್ತವ್ಯಸ್ತ ವಿಸ್ತಾರ. ಹೆಜ್ಜೆ ಹೆಜ್ಜೆಗೂ ಮುರಿದ
ಗುಡಿ-ಗೋಪುರ. ನೆಲಸಮವಾದ ನಗರ. ಮರೆತು
ಹೋದೊಂದು ಮಹಾಸಾಮ್ರಾಜ್ಯದವಶೇಷ-
ಗಳು ಸಂಶೋಧಕರ ಗುದ್ದಲಿಗೆ ತೆರೆದು-
ಕೊಳ್ಳುತ್ತಲಿವೆ ಹಳೆಯ ನೆನಪುಗಳನ್ನು,
ಏನೇನೂ ಆಗಿಲ್ಲವೆಂಬಂತೆ ಈ ಪ್ರಕೃತಿ
ಸಂತೈಸುತ್ತ ಕೂತಿದ್ದಾಳೆ, ಬಿದ್ದ ಬದು-
ಕಿನ ಮೇಲೆ ಹೊದಿಸಿ ಹಸುರಿನ ಪ್ರೀತಿ.


ಚರಿತ್ರೆ ಅಂದರೆ ಬಾಬರೀ ಮಸೀದಿಯ
ಧ್ವಂಸ. ದೇಶಾದ್ಯಂತ ಬಿದ್ದ ಗೊಮ್ಮಟದ
ಧೂಳು : ಸರಯೂನದಿಯ ನೀರಲ್ಲಿ, ಕಾಶಿ
ವಿಶ್ವೇಶ್ವರನ ಜಟೆಯಲ್ಲಿ, ಬೃಂದಾವನದ

ಕೃಷ್ಣನ ಕೊಳಲಿನಲ್ಲಿ, ಕನ್ಯಾಕುಮಾರಿಯ ಕಣ್ಣು-
ಗಳಲ್ಲಿ. ಆ ಧೂಳಿನೊಂದೊಂದು ಕಣವೂ ಸಿಡಿ-
ಮದ್ದಾಗಿ, ಚಾಕುಚೂರಿಗಳಾಗಿ, ಹರಿದ ನೆತ್ತ-
ರಿಗೆ ಕೊನೆ ಎಲ್ಲಿ? ಈ ಚರಿತ್ರೆಯ ಚಕ್ರದಡಿ

ನುಚ್ಚುನೂರಾದವರು ಯಾವಾಗಲೂ ಈ ಸಾ-
ಮಾನ್ಯ ಜನರೇ. ಯಾರು ಬರೆದಿಟ್ಟಿದ್ದಾರೆ
ಈಇವರು ಪಟ್ಟಪಾಡುಗಳನ್ನು? ಶಾಸನದ ತುಂಬ
ರಾರಾಜಿಸಿವೆ ಸದಾ ಪಟ್ಟಭದ್ರರ ಹೆಸರೇ!


ಚರಿತ್ರೆ ಅಂದರೆ ನಡೆದುದಷ್ಟೇ ಅಲ್ಲ, ನಡೆಯು
ತ್ತಿರುವುದೂ ಕೂಡ. ಎಲ್ಲ ಪಾಠಗಳೂ ಮರೆತು
ಮತ್ತೆ ಚಿತ್ತ ವಿಕಾರ. ಈ ಮಾನವತೆಯ ಹೃದ-
ಯದ ಮೇಲೆ ಎಷ್ಟೊಂದು ಗಾಯಗಳ ಗುರುತು!