ಮುಂದಕ್ಕೆ ಚಲಿಸುತ್ತಿದ್ದರೆ ಅದು ಚರಿತ್ರೆ
ನಿಂತು ಮಡುಗಟ್ಟಿದರೆ ಪುರಾಣ
ಪರಿಸ್ಥಿತಿ ಹೀಗೆ ಪುರಾಣವಾಗುತ್ತಲೇ
ಶುರುವಾಗುತ್ತದೆ ಅದರ ಪಾರಾಯಣ.

ಈ ಪುರಾಣದೊಳಗಿಂದ ಎದ್ದು ಬರುತ್ತವೆ
ಎಂತೆಂಥವೋ ಅವತಾರ
ಯಾರ‍್ಯಾರೋ ದೇವಾಂಶ ಸಂಭೂತರಾಗಿ
ಕೇಳುತ್ತಾರೆ ಪುರಸ್ಕಾರ
ಪೂಜಾರಿಗಳ ತಂಡ ಸುತ್ತಲೂ ಸೇರಿ
ಕಟ್ಟುತ್ತದೆ ಗುಡಿ-ಗೋಪುರ.

ಭಕ್ತಾದಿಗಳಿಂದ ನಡೆಯುತ್ತದೆ
ಹಗಲೂ ಇರುಳೂ ಭಜನೆ
ಒಂದಿಷ್ಟೂ ತಡವಾಗದೆ ತುಂಬುತ್ತದೆ
ಯಥಾಸ್ಥಿತಿಯ ಖಜಾನೆ.

ಬಿಡಬೇಡ ಚರಿತ್ರೆಯನ್ನು ಪುರಾಣವಾಗುವುದಕ್ಕೆ
ನಿನ್ನೆಲ್ಲವನ್ನೂ ಅರೆವ ಗಾಣವಾಗುವುದಕ್ಕೆ.
ಇರಲಿ, ತಕ್ಕಷ್ಟು ಅಸ್ವಸ್ಥತೆ
ನಿನ್ನ ಒಳ್ಳೆಯದಕ್ಕೆ
ನಡೆವುದೆಲ್ಲವ ಹಿಡಿದು
ಪ್ರಶ್ನೆ ಮಾಡುವುದಕ್ಕೆ
ಪ್ರಶ್ನೆ ಮಾಡುತ್ತಲೇ ಚರಿತ್ರೆಗೆ
ಚಲನೆ ನೀಡುವುದಕ್ಕೆ.

ಯಥಾಸ್ಥಿತಿಯ ಕದಲಿಸದೆ
ಸ್ವಸ್ಥವಾಗಿದ್ದೆಯೋ
ಆವರಿಸುತ್ತದೆ ನಿನ್ನನ್ನೂ
ಪುರಾಣದ ಪಾಚಿ
ಕೊಳಕು ನಾಲಗೆ ಚಾಚಿ !