ರ‍್ಯಾಂಕೆ

ಗಿಬ್ಬನ್ ಅವರ ‘ಯುಗದ ಇತಿಹಾಸದಲ್ಲಿ’ ಮೂರು ಮೂಲಭೂತವಾದ ದೌರ್ಬಲ್ಯಗಳಿದ್ದವು. ಮೊದಲನೆಯದು ಮತ್ತು ಅತಿ ಮುಖ್ಯವಾದುದು ಮಾನವನ ಬೆಳವಣಿಗೆ ಮತ್ತು ಬದಲಾವಣೆ ಕುರಿತಾದ ಭಾವನೆಗಳ ಬಗ್ಗೆ ಆ ಯುಗವು ಏನೂ ತಿಳಿಯದಂತಿತ್ತು. ಎರಡನೆಯದಾಗಿ, ಪ್ರಮುಖವಾದ ಹಾಗೂ ವಿದ್ವತ್ಪೂರ್ಣ ಮತ್ತು ಪ್ರಸಿದ್ಧ ಅರ್ಥ ವಿವರಣಾ ಕೃತಿಗಳು ಆ ಯುಗದಲ್ಲಿ ರಚಿಸಲ್ಪಟ್ಟರೂ, ಅವುಗಳ ನಡುವೆ ಅವಿನಾಭಾವ ಸಂಬಂಧವಿರಲಿಲ್ಲ. ಮೂರನೆಯದಾಗಿ, ಒಂದು ಬೌದ್ಧಿಕ ಶಿಸ್ತಾಗಿ ಇತಿಹಾಸವನ್ನು ಎಲ್ಲೂ ಕಲಿಸುತ್ತಿರಲಿಲ್ಲ. ಇತಿಹಾಸದ ಅಧ್ಯಯನವು ಕೇವಲ ರಾಜರ ಅರಮನೆಗಳಿಗೆ ಮತ್ತು ರಾಜ್ಯನೀತಿಜ್ಞರಿಗೆ ಸೀಮಿತವಾಗಿತ್ತು. ಎಲ್ಲ ಪ್ರಮುಖ ವಿದ್ಯಾ ಕೇಂದ್ರಗಳು ಇತಿಹಾಸವನ್ನು ಅಂಗೀಕರಿಸದ ಹೊರತು ಇತಿಹಾಸವು ಒಂದು ನಿಜವಾದ ಬೌದ್ಧಿಕ ಶಿಸ್ತಾಗಿ ಬೆಳೆಯುವ ಭರವಸೆ ಇರಲಿಲ್ಲ.

ಈ ಮೂರು ದೌರ್ಬಲ್ಯಗಳ ಮೇಲೆ ಏಕಕಾಲದ ಆಕ್ರಮಣದಿಂದ ಆಧುನಿಕ ಇತಿಹಾಸ ಒಂದು ಶಿಸ್ತಾಗಿ ಜನಿಸಿತು. ೧೮ನೆಯ ಶತಮಾನದ ಪ್ರಸಿದ್ಧ ಕ್ರಾಂತಿಗಳ ನಂತರ ಬದಲಾವಣೆ ಮಾನವನ ಸ್ವಭಾವ ಅಥವಾ ಸಾಮಾಜಿಕ ಸಂಸ್ಥೆಗಳ ಮಾರ್ಪಾಡಾಗದ ಸ್ವಭಾವಗಳನ್ನು ನಂಬುವುದು ಸಾಧ್ಯವಾಗದಾಯಿತು. ನೆಬರ್ ಇತಿಹಾಸದ ಅಧ್ಯಯನದಲ್ಲಿ ಬರ್ಲಿನ್ ಕ್ರಾಂತಿಯನ್ನು ಆರಂಭಿಸಿದರು. ಐತಿಹಾಸಿಕ ಉಗಮಗಳು ಮತ್ತು ಐತಿಹಾಸಿಕ ಬದಲಾವಣೆಯ ಹೊಸ ಆಸಕ್ತಿಯನ್ನು ವಿಶ್ಲೇಷಿಸಿದರು. ಹರ್ಡರ್ ಅವರು ಇತಿಹಾಸವನ್ನು ಮುಂದುವರಿಯುತ್ತಿರುವ ನಡೆಗೆ ಅಥವಾ ಪ್ರಗತಿ ಎಂದು ಭಾವಿಸಿದರು. ಜ್ಞಾನೋದಯ ಇತಿಹಾಸಕಾರರ ಪೂರ್ಣ ವಿಶ್ವಾಸದ ತಾತ್ಸರದ ಕಲ್ಪನೆ ಐತಿಹಾಸಿಕ ಸಂದರ್ಭಗಳಲ್ಲಿ ಪ್ರತಿಯೊಂದೂ ಸಹ ಸಾಪೇಕ್ಷವಾಗಿ ಯಥಾರ್ಥವಾದುದು ಎಂಬುದನ್ನು ವಿರೋಧಿಸಿದವರಲ್ಲಿ ಅವರು ಮೊದಲಿಗರು.

ಗತಕಾಲದಲ್ಲಿ ನಡೆದುದನ್ನು ಒಳಹೊಕ್ಕು ನೋಡುವ ಹಂಬಲ, ರ‍್ಯಾಂಕೆ ಅವರ ಪ್ರಸಿದ್ಧ ಪದಗಳಲ್ಲಿ ಹೇಳುವುದಾದರೆ, “ಅದು ನಿಜವಾಗಿ ಇದ್ದಂತೆ” ಭಾವನಾ ಸ್ವತಂತ್ರ ಕಲ್ಪನೆಯು ಪ್ರಖ್ಯಾತ ಪ್ರವಾಹದ ಒಂದು ಭಾಗವಾಗಿತ್ತು. ಇತಿಹಾಸಕಾರರು ದಾಖಲೆಗಳ ಋಜುವಾತನ್ನೂ ಪ್ರಮಾಣಗಳಲ್ಲೂ ಉಪಯೋಗಿಸಿಕೊಳ್ಳಲು ಒಂದು ನಿಷ್ಕೃಷ್ಟತೆಗೆ ಒತ್ತಾಯಿಸಿದರು. ವಿಮರ್ಶಾತ್ಮಕ ತತ್ವಗಳ ಆಳವಾದ ಪ್ರಯೋಗ, ಕೇವಲ ದುಡಿಮೆ ಮತ್ತು ಹಠದ ಸಂಶೋಧನೆಯಿಂದ ಒಂದು ಹೊಸ ಮತ್ತು ಹೆಚ್ಚು ಶುದ್ಧೀಕರಣದ ಇತಿಹಾಸ ವಿಧಾನ ಶಾಸ್ತ್ರವನ್ನು ನಿರ್ಮಿಸಲಾಯಿತು. ಅಂತಿಮವಾಗಿ ಮೂಲಾಧಾರದ ಪ್ರಾಮುಖ್ಯದ ಕಲ್ಪನೆಯು ಆಯಾಸ ಉಂಟುಮಾಡುವ ಶುಷ್ಕ ಪಂಡಿತ ಪ್ರಭುತ್ವವನ್ನು ಭೇದಿಸಿಕೊಂಡು ಹೋಗಲು ನೆಪವಾಯಿತು. ಇತಿಹಾಸದ ಬದಲಾವಣೆ ಭಾವಕ್ಕೆ ಅನುಗುಣವಾಗಿ ಮೂಲ ಆಧಾರಗಳನ್ನು ವಿಮರ್ಶಾತ್ಮಕವಾಗಿ ಉಪಯೋಗಿಸುವಲ್ಲಿ ರ‍್ಯಾಂಕೆ ಅವರ ಕೊಡುಗೆ ಅನನ್ಯವಾದುದು. “ಇತಿಹಾಸ ಲೇಖನ ಸಂಪ್ರದಾಯದ ಉಚ್ಚತಮ ಹಾಗೂ ಪೂರ್ಣ ಭಾವನೆಯ ಅವತಾರ ಪುರುಷರಾಗಿ” ರ‍್ಯಾಂಕೆ ತೋರುತ್ತಾರೆಂದು ಕ್ರೋಚ್ ಹೇಳಿದ್ದಾರೆ. ಜರ್ಮನಿಯ ಇತಿಹಾಸಕಾರರಲ್ಲಿ ರ‍್ಯಾಂಕೆ ಅವರು ಬಹುಶಃ ಅಗ್ರಗಣ್ಯರಾಗಿದ್ದಾರೆ. ಆಧುನಿಕ ಇತಿಹಾಸದ ಬರಹಗಾರರಲ್ಲಿ ಅವರು ವಾಸ್ತವಿಕತೆಗೆ ಹೆಸರಾಗಿದ್ದರು. ಇತಿಹಾಸವನ್ನು ತತ್ವಜ್ಞಾನದ ಬಂಧನದಿಂದ ವಿಮೋಚನೆಗೊಳಿಸಿದುದರಲ್ಲಿ ಅವರ ಪ್ರತಿಭೆ ನಿಂತಿದೆ.

ಶ್ರೀಮಂತ ಲೂಥೆರಿಯನ್ ಕುಟುಂಬದಲ್ಲಿ ಜನಿಸಿದ ರ‍್ಯಾಂಕೆ ಲೈಪ್‌ಜಿಗ್‌ನಲ್ಲಿ ಭಾಷಾ ಶಾಸ್ತ್ರ ಮತ್ತು ದೇವತಾ ಶಾಸ್ತ್ರವನ್ನು ಅಧ್ಯಯನ ಮಾಡಿದರು. ನಂತರ ತಮ್ಮ ಅಧ್ಯಯನವನ್ನು ಹೆಚ್ಚಾಗಿ ಬೈಬಲ್ಲಿಗೆ ಸೀಮಿತಗೊಳಿಸಿದರು. ಆರಂಭದಲ್ಲಿ ಯುವಕ ರ‍್ಯಾಂಕೆ ಇತಿಹಾಸದ ಬಗ್ಗೆ ಆಸಕ್ತಿ ತೋರಿಸಲಿಲ್ಲ. ಕಾಂತ್‌ಅವರ ಕ್ರಿಟಿಕ್ ಆಫ್ ಪೂರ್ ರೀಸನ್ ಅವರ ಮನಸ್ಸಿನ ಮೇಲೆ ಹೆಚ್ಚು ಪ್ರಭಾವವನ್ನು ಬೀರಿದವರಾಗಿದ್ದರು. ಅವರ ಬಗ್ಗೆ ರ‍್ಯಾಂಕೆಗೆ ಬಹಳ ಮೆಚ್ಚುಗೆ ಇತ್ತು. ಇತಿಹಾಸಕಾರರಲ್ಲಿ ರ‍್ಯಾಂಕೆ ಅವರ ಮೇಲೆ ಪ್ರಭಾವ ಬೀರಿದವರಲ್ಲಿ ಒಬ್ಬರೆಂದರೆ ನೆಬರ್. ನೆಬರ್ ಅವರ ರೋಮನ್ ಇತಿಹಾಸವನ್ನು ಅಧ್ಯಯನ ಮಾಡಿದ ರ‍್ಯಾಂಕೆ ಅವರು “ಈ ಯುಗದಲ್ಲಿಯೂ ಕೂಡ ಇತಿಹಾಸಕಾರರು ಇರಬಹುದು” ಎಂದು ಹೇಳಿದರು. ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದ ಮೇಲೆ ಫ್ರಾಂಕ್‌ ಫರ್ಟ್‌‌ನಲ್ಲಿ ಲ್ಯಾಟಿನ್ ಮತ್ತು ಗ್ರೀಕ್ ಕ್ಲಾಸಿಕ್ಸ್‌ನ ಪ್ರಾಧ್ಯಾಪಕರಾದರು. ಕ್ಲಾಸಿಕಲ್ ಬರವಣಿಗೆಗಳಿಗೆ ಇತಿಹಾಸದ ಹಿನ್ನೆಲೆಯನ್ನು ತಿಳಿದುಕೊಳ್ಳಲು ಉತ್ಸುಕರಾಗಿದ್ದ ಅವರು ಇತಿಹಾಸ ಮತ್ತು ಇತಿಹಾಸಕಾರರತ್ತ ತಿರುಗಿದರು. ಪ್ರಾಚೀನ ಗ್ರೀಸ್, ರೋಮ್ ಮತ್ತು ಮಧ್ಯಕಾಲೀನ ಜರ್ಮನಿ ಕುರಿತಾದ ಕೃತಿಗಳನ್ನು ಓದಿದರು. ಕಾದಂಬರಿಗಳಲ್ಲಿಯೂ ವಸ್ತು ಸ್ಥಿತಿಯನ್ನು ಕುರಿತಂತೆ ನಿಷ್ಕೃಷ್ಟತೆ ಇಲ್ಲದಿರುವುದಕ್ಕೂ ತೀವ್ರ ಅಸಮಾಧಾನವನ್ನು ತೋರಿದರು. ಇದರ ಪರಿಣಾಮವಾಗಿ ಇತಿಹಾಸದ ಸಂಶೋಧನೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು.

ಅವರ ಈ ನಿಲುವು ಸಂಗತಿಗಳಿಗೆ ಅವರು ತೋರುತ್ತಿದ್ದ ಅಪರಿಮಿತ ಗೌರವ ಮತ್ತು ನಿಷ್ಕೃಷ್ಟತೆಗೆ ಅವರ ಅಪೇಕ್ಷೆಯನ್ನು ವ್ಯಕ್ತಪಡಿಸುತ್ತದೆ. ತಮ್ಮ ಪ್ರಥಮ ಕೃತಿ, ಹಿಸ್ಟರೀಸ್ ಆಫ್‌ ದಿ ಲ್ಯಾಟಿನ್ ಆಂಡ್ ಜರ್ಮಾನಿಕ್ ನೇಷನ್ಸ್‌ನ (೧೮೯೪-೧೫೧೪) ನಿರಭಿಮಾನದ ಹಾಗೂ ಆತ್ಮ ನಿಕೃಷ್ಟ ವಿಧಿವಿಹಿತ ಕರ್ಮವನ್ನು ತಿಳಿಸಲು ಅವಕಾಶ ಕಲ್ಪಿಸಿಕೊಂಡಿದ್ದಾರೆ. “ಇತಿಹಾಸಕ್ಕೆ ಗತಕಾಲವನ್ನು ನಿರ್ಧರಿಸುವ, ವರ್ತಮಾನ ಕಾಲಕ್ಕೆ ತಿಳಿಯಹೇಳುವ, ಭವಿಷ್ಯದ ಯುಗಗಳಿಗೆ ಪ್ರಯೋಜನ ಕೊಡುವ ಅಧಿಕಾರವನ್ನು ನಿರ್ದೇಶಿಸಲಾಗಿದೆ… ಇದು ವಾಸ್ತವಿಕವಾಗಿ ನಡೆದುದನ್ನು ಮಾತ್ರ ತೋರಿಸಲು ಅಪೇಕ್ಷಿಸುತ್ತದೆ.” ಸುಮಾರು ಒಂದೂವರೆ ಶತಮಾನದವರೆಗೆ ಇತಿಹಾಸಕಾರರು ರ‍್ಯಾಂಕೆ ಅವರ ಭಾವನೆಯನ್ನು ಅಕ್ಷರಶಃ ಅನುಸರಿಸಿದರು. ಇತಿಹಾಸದ ಅಧ್ಯಯನ ಮತ್ತು ಬರವಣಿಗೆಯಲ್ಲಿ ಅವರು ಹೆಚ್ಚು ಸಂತೋಷವನ್ನು ಪಡೆದರು. ತಮ್ಮ ೯೧ನೆಯ ವರ್ಷದವರೆಗೂ ಈ ಕಾರ್ಯವನ್ನು ಮುಂದುವರೆಸಿದರು.

ರ‍್ಯಾಂಕೆ ಅವರು ಭಾವನಾ ಸ್ವಾತಂತ್ರ‍್ಯ ಚಳವಳಿ ಮತ್ತು ಮೆಟರ್ನಿಕ್ ಪ್ರತಿ ಪರಿಣಾಮದಿಂದ ದೂರವಿದ್ದರು. ರಾಜಕೀಯವಾಗಿ ಅವರು ಸುಲಭ ಸಂವೇಗಿಯಾಗಿರಲಿಲ್ಲ. ಅವರು ಭಾವೋದ್ರೇಕವುಳ್ಳ ಹಾಗೂ ಅಪ್ಪಟ ಧಾರ್ಮಿಕ ಆಸಕ್ತಿಯುಳ್ಳವರಾಗಿದ್ದರು.

ಇತಿಹಾಸದೊಂದಿಗೆ ಆಳುವಿಲ್ಲದೆ ವರ್ತಿಸಿದ್ದಲ್ಲಿ ದೇವರು ಶಿಕ್ಷಿಸುತ್ತಾನೆ ಮತ್ತು ಐತಿಹಾಸಿಕ ಅತಃಕರಣ ಸೇಡು ತೀರಿಸಿಕೊಳ್ಳುತ್ತದೆ. ಇತಿಹಾಸವು ದೇವರ ಅಸ್ತಿತ್ವಕ್ಕೆ ಸಮರ್ಥನೆಯಾಗಿದೆ. ಎಲ್ಲ ಇತಿಹಾಸದಲ್ಲಿಯೂ ದೇವರು ವಾಸಿಸುತ್ತಾನೆ, ಜೀವಸಿರುತ್ತಾನೆ, ನೋಡಬಹುದೂ ಕೂಡ. ಪ್ರತಿಯೊಂದು ಕಾರ್ಯವೂ ಆತನನ್ನು ಪ್ರದರ್ಶಿಸುತ್ತದೆ. ಪ್ರತಿ ಕ್ಷಣವೂ ಆತನ ಹೆಸರನ್ನು ಬೋಧಿಸುತ್ತದೆ. ಆದರೆ ಹೆಚ್ಚಾಗಿ ನನ್ನ ಮುಂದೆ ಪ್ರತ್ಯಕ್ಷವಾಗುತ್ತದೆ. ಅದು ಇತಿಹಾಸದ ಮುಂದುವರಿಕೆಯ ರೂಪದಲ್ಲಿ.

ಈ ಧಾರ್ಮಿಕ ಭಾವನೆಯು ಅವರ ಇಡೀ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಿತ್ತು. ಇದರ ಜೊತೆಯಲ್ಲಿದ್ದುದು ಅವರ ನೈತಿಕ ಕರ್ತವ್ಯವೆಂಬ ಭಾವನೆ.

ಅವರ ಪ್ರಥಮ ಕೃತಿ ೧೮೨೪ ರಲ್ಲಿ ಪ್ರಕಟವಾಯಿತು. ಈ ಕೃತಿಯು ಅವರಿಗೆ ರಾಷ್ಟ್ರೀಯ ಪ್ರಖ್ಯಾತಿಯನ್ನು ಗಳಿಸಿತು. ಇದರೊಂದಿಗೆ ಬರ್ಲಿನ್ ವಿಶ್ವವಿದ್ಯಾಲಯಕ್ಕೆ ಕರೆ ಬಂದಿತು. ನವಚೈತನ್ಯವನ್ನುಂಟು ಮಾಡುವಷ್ಟು ಮೂಲಭೂತವಾಗಿರುವ ಈ ಕೃತಿಯು ಮೂರು ಅರ್ಪೂ ಕೊಡುಗೆಗಳನ್ನು ನೀಡಿತು.

೧. ರೋಮನ್ ಮತ್ತು ಜರ್ಮನ್ ಜಗತ್ತಿನ ಐಕ್ಯತೆಯ ಕಲ್ಪನೆ.
೨. ಇತಿಹಾಸ ಆಧಾರಗಳ ಆಳವಾದ ವಿಮರ್ಶೆ
೩. ಕೃತಿಕಾರರು ಏನು ವಾಸ್ತವವಾಗಿ ನಡೆಯಿತೆಂದು ತೋರಿಸುವ ಬಯಕೆ.

ಯುರೋಪಿನ ನೆಲದ ವಿಶಿಷ್ಟ ಸಂಸ್ಥೆಗಳಾದ ರಾಜ್ಯ ಮತ್ತು ಚರ್ಚ್, ಸಾಮ್ರಾಜ್ಯ ಮತ್ತು ಪೋಪ್ ಗುರುವಿನ ಅಧಿಕಾರ (Papacy) ಆ ಕಾಲದಲ್ಲಿ ಪ್ರಮುಖವಾಗಿ ಬೆಳೆದಿತ್ತು. ಈ ಸಂಸ್ಥೆಗಳ ಉದಯವನ್ನು ರ‍್ಯಾಂಕೆ ಎದ್ದು ಕಾಣುವ ಗೆರೆಗಳಲ್ಲಿ ಚಿತ್ರಿಸಿದ್ದಾರೆ.

ಇತಿಹಾಸದ ಆಧಾರಗಳ ವಿಮರ್ಶೆಯನ್ನು ಅಭಿವೃದ್ಧಿಗೊಳಿಸಿ ಆಧುನಿಕ ವಿಮರ್ಶಾತ್ಮಕ ಇತಿಹಾಸ ಲೇಖನ ಪರಂಪರೆಯನ್ನು ಅವರು ಪ್ರಾರಂಭಿಸಿದರು. ಸಾರ್ವತ್ರಿಕ ಇತಿಹಾಸಗಳು ಆಧಾರಗಳಾಗಿ ಉಪಯುಕ್ತವಾಗಿಲ್ಲವೆಂಬುದನ್ನು ತೋರಿಸಿದರು. ಇಂತಹ ಜವಾಬ್ದಾರಿಯುತವಲ್ಲದ ದತ್ತಾಂಶಗಳನ್ನು ನಿರಾಕರಿಸಿ ಇತಿಹಾಸಕಾರರು ಪತ್ರಾಗಾರಗಳನ್ನು ಮತ್ತು ದಾಖಲೆಗಳನ್ನು ಉಪಯೋಗಸಬೇಕೆಂದು ತಿಳಿಸಿದರು.

ಅವರು ಮೇ ೧೮೨೫ ರಲ್ಲಿ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಆ ನೇಮಕವನ್ನು ಸ್ವೀಕರಿಸಿದ ಮೇಲೆ ಇತಿಹಾಸದ ಪ್ರೌಢ ವಿದ್ಯಾರ್ಥಿ ವರ್ಗವನ್ನು (Seminar) ಪ್ರಾರಂಭಿಸಿದರು. ಈ ಸೆಮಿನಾರ್ ಮೂಲಕ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ, ಸುಮಾರು ನೂರಕ್ಕೂ ಮೀರಿ ಪ್ರಸಿದ್ಧ ಹೆಸರಾಂತ ವಿದ್ವಾಂಸರು ಹೊರಬಂದರು. ಈ ವಿದ್ವಾಂಸರು ರ‍್ಯಾಂಕೆಯ ಸಂಪ್ರದಾಯದಲ್ಲಿ ವಿದ್ಯಾರ್ಥಿಗಳನ್ನು ತಯಾರಿಸಿದರು. ಆ ವಿದ್ಯಾಥಿಗಳು ಜರ್ಮನಿ ಮತ್ತು ಅಮೆರಿಕಾದ ವಿಶ್ವವಿದ್ಯಾಲಯಗಳಲ್ಲಿ ಪ್ರಭಾವಿಯಾಗಿ ಕೆಲಸ ಮಾಡತೊಡಗಿದರು. ಇತಿಹಾಸವನ್ನು ಅಭ್ಯಾಸ ಮಾಡುವ ಕ್ರಮವನ್ನು ಈ ಸೆಮಿನಾರ್‌ನಲ್ಲಿ ಅಳವಡಿಸಲಾಗಿತ್ತು. ಸಮರ್ಥ ವಿದ್ಯಾರ್ಥಿಗಳಿಗೆ ಗುರುಗಳ ಅವಶ್ಯಕವಾದ ಸಂಬಂಧವನ್ನು ಕಲ್ಪಿಸುವುದು ಮತ್ತು ಇತಿಹಾಸದ ಅಧ್ಯಾಪಕರಿಗೆ ತರಬೇತಿ ನೀಡುವುದು ಇದರ ಮುಖ್ಯ ಉದ್ದೇಶವಾಗಿತ್ತು. ಇತಿಹಾಸವನ್ನು ತಮ್ಮ ಉದ್ಯೋಗವನ್ನಾಗಿ ಮಾಡಿಕೊಳ್ಳಲು ಉದ್ದೇಶಿಸಿರುವವರಿಗೆ ಮಾತ್ರ ರ‍್ಯಾಂಕೆಯವರ ಸೆಮಿನಾರಿಗೆ ಪ್ರವೇಶ ನೀಡಲಾಗುತ್ತಿತ್ತು. ರ‍್ಯಾಂಕೆಯವರು ಕೇವಲ ಒಬ್ಬ ಸ್ನೇಹಿಮಯಿ ಆದರೆ ನಿಷ್ಠುರ ಮಾರ್ಗದರ್ಶಿಯಾಗಿ ವ್ಯವಹರಿಸುತ್ತಿದ್ದರು. ಅವರು ವಾದ ಹೂಡುವುದು ಅಪರೂಪವಾಗಿತ್ತು. ತಮ್ಮ ವಿದ್ಯಾರ್ಥಿಗಳಿಗೆ ಅವರು ಬೋಧಿಸಿದ ಸಾಮಾನ್ಯ ನಿಯಮವೆಂದರೆ, “ವಿಷಯದ ನಿಜತ್ವವನ್ನು ತಿಳಿದುಕೊಳ್ಳುವುದು ಮತ್ತು ಆಧಾರವನ್ನು ಭೇದಿಸಿಕೊಂಡು ಹೋಗುವುದು, ಪ್ರತಿಯೊಂದು ದಾಖಲೆಯೂ ಸ್ವನಿಷ್ಠವಾದ ಘಟಕಾಂಶವನ್ನು ಹೊಂದಿರುತ್ತದೆ. ವಾಸ್ತವವಾದುದನ್ನು ಸ್ವನಿಷ್ಠವಾದುದರಿಂದ ಪ್ರತ್ಯೇಕಿಸುವುದು, ಸಾರಭೂತವಾದುದನ್ನು ಹಿಂದಕ್ಕೆ ಪಡೆದುಕೊಳ್ಳುವುದು ಇತಿಹಾಸಕಾರನ ಕರ್ತವ್ಯವಾಗಿದೆ.”

ಐತಿಹಾಸಿಕ ಘಟನೆಗಳ ಮೂಲವನ್ನು ನಿರ್ಧರಿಸುವ ತೊಂದರೆಯನ್ನು ಇತಿಹಾಸಕಾರನು ತೆಗೆದುಕೊಳ್ಳಬಾರದೆಂಬುದು ರ‍್ಯಾಂಕೆ ಅವರ ನಿಲುವಾಗಿತ್ತು. ಭಾವನೆಗಳು ಅಥವಾ ಪ್ರವೃತ್ತಿಗಳು ಮುಂತಾದುವುಗಳು ವಿಭಿನ್ನ ಮಹತ್ವದ ಕಾಲಗಳಲ್ಲಿ ಅಸ್ತಿತ್ವದಲ್ಲಿ ಇದ್ದವೆಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ. ಆದರೆ ಅವುಗಳ ಅರ್ಥ ವಿವರಣೆಯನ್ನಾಗಲೀ ಅಥವಾ ಊಹನೆಗಳನ್ನು ವಿಶ್ಲೇಷಿಸುವ ಗೋಜಿಗಾಗಲೀ ಅವರು ಪ್ರಯತ್ನ ಪಡುವುದಿಲ್ಲ. ಒಂದು ಘಟನೆಯಾಗಿ ಅವುಗಳನ್ನು ನೋಡುವುದರಿಂದ ಅವುಗಳ ಅಂತರ್ಜ್ಞಾನವನ್ನು ಪಡೆಯಬಹುದೆಂಬುದು ಅವರ ಅಭಿಪ್ರಾಯವಾಗಿತ್ತು.

ಬರಹಗಾರನ ವ್ಯಕ್ತಿತ್ವವನ್ನು ಶೋಧಿಸಿ, ಆತನು ತಿಳಿಸಿರುವ ವಿಷಯವನ್ನು ಎಲ್ಲಿ ಮತ್ತು ಹೇಗೆ ಪಡೆದನೆಂಬುದನ್ನು ತನಿಖೆ ಮಾಡುವುದು ಅವರ ವಿಧಾನದ ನವೀನತೆಯಾಗಿತ್ತು. ಈ ಉದ್ದೇಶ ಸಾಧನೆಗಾಗಿ ೧೮೨೭ ರಿಂದ ಸುಮಾರು ನಾಲ್ಕು ವರ್ಷಗಳ ಕಾಲ ಸಂಚಾರ ಕೈಗೊಂಡರು. “ತಿಳಿದಿರದ ಮೂಲಾಧಾರಗಳನ್ನು ಶೋಧಿಸಿ, ಅವುಗಳನ್ನು ಆಧುನಿಕ ರಾಜ್ಯಗಳ, ವಿಶೇಷವಾಗಿ ದಕ್ಷಿಣ ಯುರೋಪಿನ, ಇತಿಹಾಸದಲ್ಲಿ ಉಪಯೋಗಿಸಿಕೊಳ್ಳುವುದು ನನ್ನ ವೈಜ್ಞಾನಿಕ ಪ್ರಮಾಣದ ಉದ್ದೇಶವಾಗಿದ್ದಿತೆಂದು” ಅವರು ಬರೆದಿದ್ದಾರೆ. ವಿಯೆನ್ನದಲ್ಲಿ ತಂಗಿದ್ದಾಗ ಅವರ ಮನಸ್ಸು ಹಾಗೂ ಚಿಂತನೆಯ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರಿದ ಹೊಸ ವಿಚಾರಗಳು ಬೆಳಕಿಗೆ ಬಂದವು. ಆಗ ಅವರು ರಾಜಕೀಯ ವಿಷಯಗಳಿಗೆ ಆಸಕ್ತಿ ತೋರಲು ಪ್ರಾರಂಭಿಸಿದರು. ಫ್ರೆಂಚ್ ರಾಜಕೀಯ ಮತ್ತು ಯುರೋಪಿನಾದ್ಯಂತ ವಿಭಿನ್ನ ತಾತ್ವಿಕ ಸಂಪ್ರದಾಯಗಳ ಹೋರಾಟಕ್ಕೆ ಫ್ರಾನ್ಸಿನ ಮಹಾಕ್ರಾಂತಿಯ ಕಾರಣವೆಂಬುದನ್ನು ಮನಗಂಡರು.

೧೮೨೭ ರಲ್ಲಿ ಅವರ ಎರಡನೆಯ ಕೃತಿ ಎ ಹಿಸ್ಟರಿ ಆಫ್ ಸರ್ಬಿಯನ್ ಆಂಡ್ ದಿ ಸರ್ಬಿಯನ್ ರೆವಲ್ಯೂಶನ್ ಪ್ರಕಟಗೊಂಡಿತು. ಈ ಕೃತಿಯು ೫೦ ವರ್ಷಗಳ ನಂತರ ಗ್ರೀಕರು ಟರ್ಕರ ವಿರುದ್ಧ ಹೂಡಿದ ದಂಗೆಯ ಮೇಲೆ ಪ್ರಭಾವ ಬೀರಿತು. ಹೆಚ್ಚಾಗಿ ಹಣಕಾಸು ಪರಿಸ್ಥಿತಿ, ಆರ್ಥಿಕ ವ್ಯವಸ್ಥೆ ಮುಂತಾದ ವಿಷಯಗಳನ್ನು ಈ ಕೃತಿಯಲ್ಲಿ ಅವರು ವಿವರಿಸಿದ್ದಾರೆ. ವಿನೇಶಿಯನ್ ಪತ್ರಾಗಾರದಲ್ಲಿನ ಮೂಲಾಧಾರಗಳ ಮೇಲೆ ಈ ಕೃತಿಯು ಆಧಾರಿತವಾಗಿದೆ.

೧೮೩೦ರ ದಶಕದಲ್ಲಿ ಫ್ರಾನ್ಸಿನ ಪ್ರಭಾವವನ್ನು ವಿರೋಧಿಸಲು ಪ್ರಷ್ಠದ ಸರ್ಕಾರವು ಹಿಸ್ಟಾರಿಕೊ ಪೊಲಿಟಿಕಲ್ ರಿವ್ಯೂ ಎಂಬ ನಿಯತಕಾಲಿಕ ಪತ್ರಿಕೆಯನ್ನು ಪ್ರಾರಂಭಿಸಿತು. ರ‍್ಯಾಂಕೆ ಆ ಪತ್ರಿಕೆಯ ಸಂಪಾದಕರಾದರು. ಒಂದು ಅತಿ ಚಿಕ್ಕದಾದ ಅಂಶದಲ್ಲಿ ಸರ್ಕಾರವು ಹೊರಗಿನ ಒಂದು ರೂಪವಾಗಿದೆ ಎಂಬುದು ರ‍್ಯಾಂಕೆ ಅವರ ಅಭಿಪ್ರಾಯವಾಗಿತ್ತು. ಸಂವಿಧಾನಗಳು ಸರ್ವರೋಗಕ್ಕೂ ಮದ್ದಲ್ಲ ಮತ್ತು ಪ್ರತಿಯೊಂದು ರಾಜ್ಯಕ್ಕೂ ಅದು ಹೊಂದಿಕೊಳ್ಳುವುದಿಲ್ಲ ಎಂಬುದು ರ‍್ಯಾಂಕೆ ಅವರ ಅಭಿಪ್ರಾಯವಾಗಿತ್ತು. ಸ್ಥಳೀಯ ಸಂಸ್ಥೆಗಳನ್ನು ನಡೆಸಿಕೊಂಡು ಬರುವುದರಲ್ಲಿ ಅವರು ವಿಶ್ವಾಸ ಹೊಂದಿದ್ದರು. ಎಸ್ಟೇಟುಗಳಿಗೆ ಬದಲಾಗಿ ಪಾರ್ಲಿಮೆಂಟುಗಳನ್ನು ಇಷ್ಟಪಟ್ಟರು. ನಿಯತಕಾಲಿಕಕ್ಕೆ ಅವರ ಇತಿಹಾಸದ ಕೊಡುಗೆಗಳು ಬಾಹುಳ್ಯವೂ ಮತ್ತು ಪ್ರಮುಖವೂ ಆಗಿದ್ದವು. ಐತಿಹಾಸಿಕ ಮಾರ್ಗಗಳಲ್ಲಿ ಒಳ್ಳೆಯ ರಾಜ್ಯಗಳು ತಮ್ಮ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳಬೇಕೆಂಬುದು ಅವರ ಸಂದೇಶದ ಸಾರವಾಗಿತ್ತು.

ಯಾವುದಾದರೂ ಒಂದು ರೂಪದಲ್ಲಿ ಜನತೆಯನ್ನು ಸರ್ಕಾರದ ಜೊತೆ ಸೇರಿಸಿಕೊಳ್ಳುವುದರ ಪ್ರಾಮುಖ್ಯತೆಯನ್ನು ರ‍್ಯಾಂಕೆ ನಿರ್ಲಕ್ಷಿಸಲಿಲ್ಲ. ನಾಲ್ಕನೆಯ ಫೆಡ್ರಿಕ್ ವಿಲಿಯಂನ ಮಾರ್ಗ ದರ್ಶನಕ್ಕಾಗಿ ಮುಖ್ಯ ನಿವೇದನ ಪತ್ರಿಕೆಗಳನ್ನು ಬರೆದರೂ ಸಹ ರಾಜಕೀಯ ವಿವಾದಗಳಲ್ಲಿ ಪುನಃ ಅವರು ಪ್ರವರ್ತಕ ಪಾತ್ರವನ್ನು ವಹಿಸಲಿಲ್ಲ. ಅವರ ರಾಜಕೀಯದಲ್ಲಿನ ಅನಾಸಕ್ತಿ ಗಮನಾರ್ಹವಾದುದು. ತಮ್ಮ ದಿ ಹಿಸ್ಟರಿ ಆಫ್ ಜರ್ಮನಿ ಇನ್ ದಿ ಏಜ್‌ ಆಫ್ ರಿಫಾರಮ್ಸ್‌ಕೃತಿಯಲ್ಲಿ ಕ್ಯಾಥೋಲಿಕ್ ಚರ್ಚಿನೊಂದಿಗೆ ಜರ್ಮನಿಯು ಒಪ್ಪಂದಕ್ಕೆ ಬರುವುದರಲ್ಲಿ ವಿಫಲವಾದುದಕ್ಕೆ ಖೇದವನ್ನು ವ್ಯಕ್ತಪಡಿಸಿದರು. “ಪ್ರತಿಯೊಂದು ರಾಜ್ಯವೂ ತನ್ನದೇ ಆದ ವ್ಯಕ್ತಿತ್ವವನ್ನು ಹೊಂದಿರುತ್ತದೆ… ಆದ್ದರಿಂದ ಹಡಗು ನಡೆಸುವವನು ಚಲನವನ್ನಲ್ಲದೆ ಹಡಗನ್ನೂ ಅರಿತಿರುವಂತೆ, ರಾಜನೀತಿಜ್ಞನು ತನ್ನ ರಾಜ್ಯ ಮತ್ತು ಅದರ ಇತಿಹಾಸವನ್ನು ತಿಳಿದಿರಬೇಕು. ೧೮ನೆಯ ಶತಮಾನಕ್ಕೆ ಪ್ರಿಯವಾದ ಸರ್ಕಾರದ ಸಾರ್ವತ್ರಿಕ ಸಿದ್ಧಾಂತಗಳು ನಿಷ್ಪ್ರಯೋಜಕ ಮತ್ತು ಅಪಾಯಕಾರಿಯಾಗಿದೆ” ಎಂದು ೧೮೩೬ ರಲ್ಲಿ ಅವರು ಹೇಳಿದರು.

ರ‍್ಯಾಂಕೆ ಅವರ ಪ್ರಸಿದ್ಧ ಕೃತಿ ದಿ ಹಿಸ್ಟರಿ ಆಫ್ ಪೋಪ್ಸ್‌‌ನ ಮೊದಲುನೆಯ ಸಂಪುಟವು ೧೯೩೪ ರಲ್ಲಿ, ಎರಡು ಮತ್ತು ಮೂರನೆಯ ಸಂಪುಟಗಳು ೧೮೩೬ ರಲ್ಲಿ ಪ್ರಕಟಗೊಂಡವು. ಯುರೋಪಿನ ಬೆಳವಣಿಗೆಯಲ್ಲಿ ‘ಪೆಪಸಿಯೂ’ ಒಂದು ಅಂಶವೆಂದು ತೋರಿಸುವುದು ಈ ಕೃತಿಯ ಉದ್ದೇಶವಾಗಿತ್ತು. ಕ್ರೈಸ್ತ ಧರ್ಮದ ಚರ್ಚುಗಳ ಆಂತರಿಕ ಐಕ್ಯತೆಯನ್ನು ಮನಗಂಡು ಅವರು ಅವುಗಳ ಬಾಹ್ಯ ವಿಭಿನ್ನತೆಯನ್ನು ಅಧ್ಯಯನ ಮಾಡಿದರು. ಪೆಪಸಿಯನ್ನು ಅವರು ಒಂದು ಪ್ರಸಿದ್ದ ಐತಿಹಾಸಿಕ ಅದ್ಭುತ ವಸ್ತುವಾಗಿ ಪರಿಗಣಿಸಿದರು. ಯುರೋಪಿನ ಇತಿಹಾಸದಲ್ಲಿ ಕೆಲವು ಅತಿ ಮುಖ್ಯ ಪ್ರಾಂತಗಳ ಬಗ್ಗೆ ಫಲಕಾರಿಯಾದ ತನಿಖೆಯನ್ನು ಮಾಡಲು ಈ ದೃಷ್ಟಿಯು ಅನುಕೂಲವಾಯಿತು. ಪೋಪರ ಇತಿಹಾಸವು ಇತಿಹಾಸ ಸಂಶೋಧನೆಯ ಪ್ರಮುಖ ಸಾಧನೆಯಾಗಿದೆಯಲ್ಲದೆ ಕಲಾ ಕೌಶಲ್ಯದ ಕೃತಿಯೂ ಆಗಿದೆ. ಸಂಶೋಧನೆಯ ಸಾಧನೆಗಳು ತೀರ್ಪು,ವಿವರಣೆ ಮುಂತಾದವುಗಳ ಚಿತ್ರವನ್ನು ಪ್ರಥಮವಾಗಿ ಈ ಗ್ರಂಥವು ನೀಡುತ್ತದೆ. ವಿಶಾಲೆಯಿಂದ ಕೂಡಿದ ನೈಪುಣ್ಯ ವಿವರಣೆ ಮತ್ತು ಯಥಾರ್ಥತೆಯನ್ನು ಸಂಯೋಜಿಸುತ್ತದೆ. ಘಟನೆಗಳನ್ನು ಸ್ಪಷ್ಟವಾಗಿ ಐತಿಹಾಸಿಕ ದೃಷ್ಟಿಕೋನದಿಂದ ಪರೀಕ್ಷಿಸಿರುವುದಾಗಿ ರ‍್ಯಾಂಕೆ ಪದೇ ಪದೇ ಘೋಷಿಸಿದ್ದಾರೆ. ಆದರೆ ಅವರು ಶವವನ್ನು ಸುಗಂಧಿತ ಮಾಡುವ ಕಲಾ ಕೌಶಲದಲ್ಲಿ ನಿರತರಾಗಿದ್ದರೆಂದು ಕ್ರೋಚ್ ಅಭಿಪ್ರಾಯಪಡುತ್ತಾರೆ. ಮುಂದುವರಿದು ಅವರು ರ‍್ಯಾಂಕೆ ಅವರು ತಮ್ಮ ಗ್ರಂಥಗಳನ್ನು ರಚಿಸಲು ಯಾವುದಾದರೂ ಆಸಕ್ತಿಯಿಂದ ತೆರಳಿದ್ದಲ್ಲಿ ಅದು ಮಾನಸಿಕ ಆಸಕ್ತಿಯಾಗಿದ್ದಿತೇ ವಿನಃ ಐತಿಹಾಸಿಕವಲ್ಲ ಎಂದು ಕ್ರೋಚ್ ಅಭಿಪ್ರಾಯ ಪಟ್ಟಿರುವುದನ್ನು ಗಮನಿಸಬಹುದು.

ಸುಧಾರಣ ಯುಗವನ್ನು ತಲುಪಿದ ಮೇಲೆ ರ‍್ಯಾಂಕೆ ಅವರು ಪಾರಾಮಾರ್ಥಿಕ ಸಮಸ್ಯೆ ಗಳಿಗಿಂತ ಹೆಚ್ಚಾಗಿ ರಾಜಕೀಯ ಸಮಸ್ಯೆಗಳತ್ತ ತಮ್ಮ ಗಮನವನ್ನು ಹರಿಸಿದರು.

ಇತಿಹಾಸ ಮತ್ತು ಧರ್ಮ ಅವೆರಡರ ಮಧ್ಯೆ ನಿಕಟವಾದ ಸಂಬಂಧವಿದೆ. ದೇವರು ಮತ್ತು ದೈವಿಕ ವಸ್ತುಗಳಿಗೆ ಇರುವ ಸಂಬಂಧದಂತೆ ಬೌದ್ಧಿಕವಾಗಿ ಯಾವ ಒಂದು ಪ್ರಮುಖವಾದ ಮಾನವನ ಚಟುವಟಿಕೆಯು ಹುಟ್ಟು ವುದಿಲ್ಲ. ಅದೇ ರೀತಿಯಲ್ಲಿ ತನ್ನ ರಾಜಕೀಯ ಜೀವನದ ಹುಟ್ಟು ಹಾಗೂ ಮಾರ್ಗದರ್ಶನದಲ್ಲಿ ಧಾರ್ಮಿಕ ಭಾವನೆಗಳಿಂದ ಪ್ರಭಾವಿತಗೊಳ್ಳದ ರಾಷ್ಟ್ರವಿಲ್ಲ.

ಎಂದು ಬರೆದಿದ್ದಾರೆ.

ರ‍್ಯಾಂಕೆ ಅವರು ಫ್ರಾನ್ಸಿನ ಕ್ರಾಂತಿಯನ್ನು ಅಧ್ಯಯನ ಮಾಡಲು ಆಸಕ್ತರಾಗಿದ್ದರು. ಆದರೆ ಅದು ನೆರವೇರಲಿಲ್ಲ. ಸ್ವದೇಶಕ್ಕೆ ಮರಳಿದ ನಂತರ ನೈನ್‌ ಬುಕ್ಸ್ ಆಫ್ ಪ್ರಷ್ಯನ್ ಹಿಸ್ಟರಿಯನ್ನು ರಚಿಸಿದರು. ಪ್ರಸಿದ್ಧ ರಾಜ್ಯಗಳು ಮತ್ತು ಜನರು ಎರಡು ಬಗೆಯ (ಕಪಟ) ನಡೆತೆಗಳನ್ನು ಹೊಂದಿದ್ದರು. ಒಂದು ರಾಷ್ಟ್ರೀಯ ಮತ್ತು ಎರಡನೆಯದು ಜಗತ್ತಿನ ವಿಧಿಗೆ ಸಂಬಂಧಿಸಿದುದು ಎಂದು ಅವರು ತಮ್ಮ ಪ್ರಸ್ತಾವನೆಯಲ್ಲಿ ಘೋಷಿಸಿದ್ದಾರೆ. ರ‍್ಯಾಂಕೆ ಅವರು ಯುರೋಪಿನವರಾಗಿ ಬರೆದರೇ ವಿನಃ ಜರ್ಮನಿಯರಾಗಿ ಅಲ್ಲ ಎನ್ನುವುದನ್ನು ಇಲ್ಲಿ ಗಮನಿಸಬಹುದು.

ರ‍್ಯಾಂಕೆ ಅವರು ಎ ಹಿಸ್ಟರಿ ಆಫ್ ಫ್ರಾನ್ಸ್ ಪ್ರಿನ್ಸಿಪಾಲಿಟಿ ಇನ್‌ಸಿಕ್ಸ್‌ಟಿನ್ತ್ ಅಂಡ್ ಸೆವೆನ್‌ಟೀನ್ತ್ ಸೆಂಚುರಿ ಈ ಕೃತಿಗಳನ್ನು ರಚಿಸಿದರು. ಫ್ರಾನ್ಸ್ ಕುರಿತ ಅವರ ಇತಿಹಾಸ ೧೮೫೩ ರಲ್ಲಿ ಕಾಣಿಸಿಕೊಳ್ಳಲಾರಂಭಿಸಿತು. ಇಂಗ್ಲೆಂಡ್‌ನ ಇತಿಹಾಸವನ್ನು ರಚಿಸಲು ಫ್ರೆಂಚ್ ಇತಿಹಾಸದ ಮಾದರಿಯನ್ನೇ ಅವರು ಅನುಸರಿಸಿದರು. ಈ ಕಾರ್ಯದ ಬಗ್ಗೆ ಅವರು ಹೆಚ್ಚು ಸಹಾನುಭೂತಿಯುಳ್ಳವರಾಗಿದ್ದರು. ಫ್ರಾನ್ಸ್ ನಿರಂಕುಶ ಪ್ರಭುತ್ವ, ಬದಲಾವಣೆಗಳು ಮತ್ತು ದಾಳಿಗಳಿಗೆ ತುತ್ತಾಗಿದ್ದ ದೇಶವಾಗಿತ್ತು. ಆದರೆ ಇಂಗ್ಲೆಂಡ್ ಸಂಪ್ರದಾಯಿಕವೂ ಹಾಗೂ ಶಿಸ್ತಿನಿಂದಕೂಡಿದ ರಾಷ್ಟ್ರವಾಗಿತ್ತು. ರಾಣಿ ಎಲಿಜಬೆತ್ ಆಳ್ವಿಕೆಯ ಸಮೀಕ್ಷೆಯನ್ನು ಪೂರ್ಣಗೊಳಿಸಿದ ಮೇಲೆ, ಯಾವ ರಾಜ ಸಂತತಿಯಲ್ಲಿಯೂ ಪ್ರಸಿದ್ಧ ರಾಷ್ಟ್ರೀಯ ಬದಲಾವಣೆಗಳು ರಾಜರ ವೈಯಕ್ತಿಕ ಗುರಿಗಳನ್ನು ಅವಲಂಭಿಸಿರಲಿಲ್ಲ ಎಂದು ಟೀಕೆ ಮಾಡಿದ್ದಾರೆ. ಹೊಸ ಆಧಾರಗಳಿಂದ ೧೬೮೮ರ ಕ್ರಾಂತಿಯ ಯೂರೋಪಿಯನ್ ಸ್ವಭಾವವನ್ನು ಸ್ಥಾಪಿಸಿದವರಲ್ಲಿ ರ‍್ಯಾಂಕೆ ಮೊದಲಿಗರು.

ದಿ ಅರಿಜನ್ ಆಫ್ ದಿ ವಾರ್ಸ್‌ ಅಂಡ್ ದಿ ರೆವಲ್ಯೂಷನ್ ಎಂಬ ಕೃತಿಯು ಹೆಚ್ಚು ಆಸಕ್ತಿಯನ್ನು ಕೆರಳಿಸುತ್ತದೆ. ಕೊನೆಯ ಇಬ್ಬರು ಫ್ರೆಂಚ್ ದೊರೆಗಳ ನಿರಂಕುಶ ಪ್ರಭುತ್ವ ಮತ್ತು ದೋಷಗಳನ್ನು ಅವರನ್ನು ಹೆಚ್ಚಾಗಿ ವಿರೋಧಿಸಿದ ಪುರೋಹಿತ ವರ್ಗ ಮತ್ತು ಕುಲೀನ ವರ್ಗದ ಮೇಲೆ ಹೊರಿಸುತ್ತಾರೆ. ಕ್ರಾಂತಿಕಾರಕ ಭಾವನೆಗಳಿಗೆ ಅವರ ವಿರೋಧವು ಕಡಿಮೆಯಾಗಿರಲಿಲ್ಲ. ಆದರೂ ಪಕ್ಷಪಾತವಿಲ್ಲದೆ ಭಾವನೆಯನ್ನು ಅವರು ಎಂದೂ ತ್ಯಜಿಸಲಿಲ್ಲ.

ಮಾನವ ಕುಲಕ್ಕೆ ಸಂಬಂಧಿಸಿದಂತೆ ಅವರ ಅಗಾಧ ಪರಿಜ್ಞಾನವನ್ನು ಸಂಕ್ಷೇಪವಾಗಿ ವಿವರಿಸುವ ಯೋಜನೆಯನ್ನು ತಮ್ಮ ೮೩ನೆಯ ವಯಸ್ಸಿನಲ್ಲಿ ರೂಪಿಸಿದರು. ಇದೇ ಅವರ ಹಿಸ್ಟರಿ ಆಫ್ ದಿ ವರ್ಲ್ಡ್‌ ಎನ್ನುವ ಕರತಿ. ಇದು ಅವರ ಕೊನೆಯ ಕೃತಿಯೂ ಹೌದು. ಈ ಕೃತಿಯು ರ‍್ಯಾಂಕೆ ಅವರ ದರ್ಶನ ಮತ್ತು ವಿಧಾನಕ್ಕೆ ಒಂದು ಉತ್ತಮ ಪೀಠಿಕೆಯಾಗಿದೆ. ಇದರ ಮೊದಲ ಸಂಪುಟ ೧೮೮೦ ರಲ್ಲಿ ಪ್ರಕಟವಾಯಿತು. ನಂತರ ವರ್ಷಕ್ಕೆ ಒಂದು ಸಂಪುಟದಂತೆ ಅವರು ೧೮೮೩ ರಲ್ಲಿ ಮರಣ ಹೊಂದುವ ಕಾಲಕ್ಕೆ ಆರು ಸಂಪುಟಗಳ ಪ್ರಕಟಗೊಂಡಿದ್ದವು ಮತ್ತು ಏಳನೆಯ ಸಂಪುಟವು ಪ್ರಕಟಣೆಗೆ ಸಿದ್ಧವಾಗಿತ್ತು. ತಮ್ಮ ೯೧ನೆಯ ವಯಸ್ಸಿನಲ್ಲಿ ಎ ಫಿಲಾಸಫಿ ಆಫ್ ಹಿಸ್ಟರಿಯನ್ನು ರಚಿಸುವ ಹೊಸ ಯೋಜನೆಯನ್ನು ಹಾಕುತಿದ್ದರು. ಆದರೆ ಅದನ್ನು ಪ್ರಾರಂಭಿಸುವ ಮುನ್ನ ಅವರು ಮರಣ ಹೊಂದಿದರು.

ಜಗತ್ತಿನ ಇತಿಹಾಸ ಹೊರತಾಗಿ ರ‍್ಯಾಂಕೆಯವರು ೫೪ ಸಂಪುಟಗಳನ್ನು ರಚಿಸಿದರು. ಇತಿಹಾಸ ಕಥನವನ್ನು ರಚಿಸುವಾಗ ಪಕ್ಷಪಾತವಿಲ್ಲದ, ನೆಮ್ಮದಿಯ ವಾಸ್ತವಿಕತಾ ಸಂಶೋಧನೆಯಲ್ಲಿ ಅವರು ತೊಡಗಿದ್ದರು. ಈ ಉದ್ದೇಶದ ಈಡೇರಿಕೆಗಾಗಿ ಸಂಗತಿಗಳು ಎಷ್ಟೇ ಸುಮದರ ವಲ್ಲದಿದ್ದರೂ ಅವುಗಳನ್ನು ನಿಷ್ಠುರವಾಗಿ ಪರಿಚಯಿಸಬೇಕೆಂಬ ಶ್ರೇಷ್ಠ ನಿಯಮವನ್ನು ಸೇರಿಸಿದರು. ಆಧಾರಗಳನ್ನು ವಿಶೇಷವಾಗಿ ಪತ್ರಾಗಾರದ ಸಾಮಗ್ರಿಗಳನ್ನು ಉಪಯೋಗಿಸಿ ಕೊಂಡು ಇತಿಹಾಸದ ಸತ್ಯವನ್ನು ಕಂಡುಹಿಡಿಯಬಹುದೆಂದು ಅನ್ನುವ ಇತಿಹಾಸಕಾರರಲ್ಲಿ ಇವರೇ ಮೊದಲಿಗರು. ಆಧಾರಗಳನ್ನು ಸಂಗ್ರಹಿಸಿ, ಅವುಗಳ ಮೌಲ್ಯವನ್ನು ನಿರ್ಧರಿಸಿದ ಮೇಲೆ ರಚನಾಕ್ರಿಯೆಯಲ್ಲಿ ತೊಡಗುತ್ತಿದ್ದರು. “ಇತಿಹಾಸವು ಏಕ ಕಾಲದಲ್ಲಿ ಕಲೆಯೂ ಮತ್ತು ವಿಜ್ಞಾನವೂ ಆಗಿದೆ. ಇದು ವಿಮರ್ಶೆಗಳು ಮತ್ತು ಪಾಂಡಿತ್ಯದ ಬೇಡಿಕೆಗಳನ್ನು ಈಡೇರಿಸಬೇಕಾಗಿದೆ… ಆದರೆ ಅದೇ ಸಮಯದಲ್ಲಿ, ಇದರ ಯಶಸ್ವೀ ಸಾಹಿತ್ಯದ ರಚನೆಗಳಂತೆ, ಶಿಕ್ಷಿತ ಚೇತನಗಳಿಗೆ ಸಂತೋಷವನ್ನು ಒದಗಿಸಬೇಕು” ಎಂದು ಅವರು ಬರೆದಿದ್ದಾರೆ. ಈ ಹೇಳಿಕೆಯಿಂದ ಅವರು ನಿಸ್ಸಂದೇಹವಾಗಿ ಒಬ್ಬ ಕಲಾಕಾರರಾಗಿದ್ದರು ಎಂಬುದು ವ್ಯಕ್ತವಾಗುತ್ತದೆ. ತಮ್ಮ ಕೃತಿಗೆ ಅಮುಖ್ಯ, ಕ್ಷುಲ್ಲಕ ಮತ್ತು ಪುನವರ್ತಿತವಾಗುವ ವಿವರಣೆಗಳ ಹೊರೆಯನ್ನು ಹಾಕಲಿಲ್ಲ. ಜ್ಞಾನೋದಯ ಉಂಟು ಮಾಡುವ ವಿವರಣೆ, ತೀಕ್ಷ್ಣ ಬುದ್ಧಿಯ ವ್ಯಾಖ್ಯೆ, ಚುರುಕಾದ ಹಾಗೂ ಪರಿಣಾಮಕಾರಿಯಾದ ಪ್ರಮೇಯಗಳಿಗೆ ಅವರು ಸ್ವಾಭಾವಿಕವಾಗಿ ಸ್ಪಂದಿಸಿದ್ದರು.

ನಿಸ್ಸಂಶಯವಾಗಿ ರ‍್ಯಾಂಕೆ ಅವರು ಒಬ್ಬ ಪ್ರಸಿದ್ಧ ವಿದ್ವಾಂಸರೂ, ವಿಮರ್ಶಾತ್ಮಕ ಇತಿಹಾಸಕಾರರು ಮತ್ತು ತೀಕ್ಷ್ಣ ಬುದ್ಧಿಯುಳ್ಳ ಬರಹಗಾರರೂ ಆಗಿದ್ದರು. ಆದರೆ ಅವರ ಕೆಲವು ಅಭಿಪ್ರಾಯಗಳು ಮತ್ತು ನಿಯಮಗಳನ್ನು ನಂತರದ ಇತಿಹಾಸಕಾರರು ಪ್ರಶ್ನಿಸಿದ್ದಾರೆ. ರ‍್ಯಾಂಕೆ ಅವರ ಬೋಧನೆ “ಏನು ವಾಸ್ತವವಾಗಿ ನಡೆಯಿತು” ಎಂಬುದನ್ನು ತೋರಿಸುವುದನ್ನು ಅನುಸರಿಸಿದ ಅವರ ಅನುಯಾಯಿಗಳ ಮೇಲೆ ಒಂದು ಟೀಕೆಯಿದೆ. ಅದೇನೆಂದರೆ ಅವರ ಮೇಲೆ ಕಲ್ಪನಾ ವಿಫಲತೆಯ ಅಪರಾಧವನ್ನು ಹೊರಿಸಿ, ಇತಿಹಾಸಕ್ಕೆ ಅಪಖ್ಯಾತಿ ತಂದವರೆಂದು ಪರಿಗಣಿಸಲಾಗಿದೆ. ಆದ್ಯಾಗ್ಯೂ ಈ ವಿವಾದವು ನಿರ್ಣಾಯಕವಾಗಿದೆ.

ಅವರ ಕೃತಿಗಳು ರಾಯಭಾರದ ಮತ್ತು ರಾಜ್ಯದ ದಾಖಲೆಗಳ ಮೇಲೆ ಅವಲಂಬಿತವಾಗಿದ್ದವು. ರ‍್ಯಾಂಕೆಯವರ ದಾಖಲೆಗಳು ಒಂದು ವಿಧದ ‘ಇತಿಹಾಸ’ವನ್ನು ಅವರಿಗೆ ಒದಗಿಸಿತು. ಆದರೆ ರಾಜ್ಯಗಳು, ರಾಷ್ಟ್ರಗಳು, ಧರ್ಮ, ಸಂಸ್ಕೃತಿ ಮುಂತಾದುವುಗಳನ್ನು ವಿಶ್ಲೇಷಿಸಲು ಸಾಕಷ್ಟು ದತ್ತಾಂಶಗಳನ್ನು ಈ ಆಧಾರಗಳು ನೀಡದಾದವು. ಅವು ಕೇವಲ ಸಂಧಿಗಳು, ಯುದ್ಧಗಳು ಮತ್ತು ರಾಜವಂಶಗಳಿಗೆ ಸೀಮಿತವಾಗಿದ್ದವು.

ರ‍್ಯಾಂಕೆ ಮತ್ತು ಅವರ ಪಂಥದ “ವಾಸ್ತವಿಕ” ಹಾಗೂ “ವೈಜ್ಞಾನಿಕ” ಇತಿಹಾಸದ ವಿರುದ್ಧವೂ ಟೀಕೆಗಳಿವೆ. ವೈಜ್ಞಾನಿಕವಾಗಿರುವುದಕ್ಕಿಂತ ರ‍್ಯಾಂಕೆ ಅವರು ತೀವ್ರವಾಗಿ ಪಕ್ಷ ಪಾತಿಯಾಗಿದ್ದಾರೆಂದು ಕೆಲವರು ವಾದಿಸಿದ್ದಾರೆ. ಏಕೆಂದರೆ ಎಲ್ಲ ಇತಿಹಾಸದಲ್ಲಿಯೂ ಅವರು ದೇವರ ಮಹಿಮೆಯನ್ನು ಗಮನಿಸಿದರು. ಒಂದು ನಿಜವಾದ ದರ್ಶನ ಅಥವಾ ಮನಃ ಶಾಸ್ತ್ರವನ್ನು ಸೂತ್ರೀಕರಿಸುವ ಪ್ರಯತ್ನವನ್ನು ಮಾಡಲಿಲ್ಲ. ರ‍್ಯಾಂಕೆ ಅವರು ತಮ್ಮ ಕಾಲದ ಪ್ರಭಾವಿಯಾಗಿ, ಪ್ರಷ್ಯದ ರಾಜ ಸಂತತಿಯ ಒಬ್ಬ ನಿಷ್ಠ ಸೇವಕರಾಗಿದ್ದರು. ಅವರು ಚರ್ಚ್‌ಮತ್ತು ರಾಜ್ಯದ ಒಬ್ಬ ರಕ್ಷಕರಾಗಿದ್ದರು.

ಕ್ರೋಚ್ ಅವರು ಅಭಿಪ್ರಾಯಪಡುವಂತೆ “ರ‍್ಯಾಂಕೆ ಅವರಲ್ಲಿ ವ್ಯಾವಹಾರಿಕ ಪ್ರಯೋಜನದ ದೃಷ್ಟಿ ವಿಧಾನಕ್ಕೆ ಇಳಿಯುವ ಅನಿವಾರ್ಯವಾದ ಪ್ರವೃತ್ತಿಯನ್ನು ನಾವು ಕಾಣುತ್ತೇವೆ. ಇದು ಅವರ ಪ್ರಖ್ಯಾತಿಗೆ ಕಾರಣವಾಗಿದೆ. ಸಂಪ್ರದಾಯ, ಹೇಳಿ ಕೇಳಿದ್ದು, ಬೀದಿ ಮಾತು, ಪ್ರಮಾಣ ಕೊಟ್ಟು ದೃಢೀಕರಿಸಲಾಗದ ಯಾವುದರಲ್ಲಿಯೂ ಅವರಿಗೆ ನಂಬಿಕೆಯಿರಲಿಲ್ಲ.” ಮಿಗಿಲಾಗಿ ಕಾಗದದ ಮೇಲೆ ಕಾಣದ ಅವರಿಗೆ ತನಿಖೆ ಮಾಡಲಾಗದುದನ್ನು ನಂಬುತ್ತಿರಲಿಲ್ಲವಾದುದರಿಂದ ದಾಖಲೆಯಿಲ್ಲದ ಯುಗಗಳ ಇತಿಹಾಸವನ್ನು ಅವರು ಕಡೆಗಣಿಸಿದರು. ಈ ಕಾರಣಕ್ಕಾಗಿ ಅವರು ಪ್ರಾಚೀನರ ಬಗ್ಗೆಯಾಗಲೀ ಅಥವಾ ಆರ್ಥಿಕ ಇತಿಹಾಸ ಬಗ್ಗೆಯಾಗಲಿ ಬರೆಯಲಿಲ್ಲ. ಗೂಢವಾದ ವಿಷಯ ಮತ್ತು ಊಹಾಪೋಹಗಳನ್ನು ಅವರು ತಿರಸ್ಕರಿಸಿದರು. ಅವರ ಜೀವನ ಚರಿತ್ರೆಕಾರ ಡೋಮೇ ತಿಳಿಸಿರುವಂತೆ “ಅವರು ಕೇವಲ ಬೆಳಕನ್ನು ಮಾತ್ರ ಅಪೇಕ್ಷಿಸುತ್ತಿದ್ದರು.” ಸಮರ್ಥನೀಯವಾದುದನ್ನು ಮಾತ್ರ ಅವರು ಅರಸುತ್ತಿದ್ದರು. ಬರವಣಿಗೆಯಲ್ಲಿ ರಕ್ಷಿಸಿರುವ ಆಧಾರಗಳ ಮೇಲೆಯೇ ಇತಿಹಾಸವನ್ನು ರಚಿಸಬೇಕೆಂಬ ಪ್ರತಿಪಾದನೆಯನ್ನು ಕುರಿತು ರ‍್ಯಾಂಕೆ ಅವರು ಸತತವಾಗಿ ಪ್ರತಿಪಾದಿಸುತ್ತಿದ್ದರು.

ರ‍್ಯಾಂಕೆ ಅವರ ಬರವಣಿಗೆಯಲ್ಲಿ ಈ ಮಿತಿಗಳು ಕಂಡು ಬಂದಾಗ್ಯೂ ಅವರು ಆಧುನಿಕ ಇತಿಹಾಸ ನಿರ್ಮಾಪಕರೆಂಬುದರಲ್ಲಿ ಸಂದೇಹವಿಲ್ಲ. ಇತಿಹಾಸವು ಯಾವುದರ ದಾಸಿಯಾಗಿರದೆ, ಮತ್ತೆ ಯಾವುದರ ಸಂಬಂಧವೂ ಇಲ್ಲದೆ, ಒಂದು ಸ್ವತಂತ್ರ ವಿಜ್ಞಾನವಾಗಿದೆ ಎಂದು ಅವರು ದೃಢಪಡಿಸಿದರು. ಈ ವಿಧಾನದಲ್ಲಿ ಇತಿಹಾಸ ರಚನಾ ಕಾರ್ಯದಲ್ಲಿ ತಮ್ಮ ಇಡೀ ಜೀವನವನ್ನು ತೊಡಗಿಸಿದುದರಲ್ಲಿ ಅವರ ಕೊಡುಗೆಯನ್ನು ಆಧುನಿಕ ಇತಿಹಾಸ ಲೇಖನಶಾಸ್ತ್ರದಲ್ಲಿ ಕಾಣಬಹುದಾಗಿದೆ. ವಾಸ್ತವಿಕ ನಿಜಾಂಶಗಳನ್ನು ತಿಳಿಯಲು ಒಂದು ವೈಜ್ಞಾನಿಕ ವಿಧಾನವನ್ನು ರೂಪಿಸಲು ಅವರು ಮಾಡಿದ ಪ್ರಯತ್ನಗಳು, ಸಮರ್ಥಿಸಲಾಗದ ಅಥವಾ ಸಮರ್ಥಿಸಿದವುಗಳನ್ನು ಅವರು ನಿರಾಕರಿಸಿದ ರೀತಿ ಮತ್ತು ಗೂಢವಾದ ವಿಷಯ ಹಾಗೂ ಊಹಾಪೋಹಗಳನ್ನು ತಿರಸ್ಕರಿಸುವಲ್ಲಿ ಅವರು ತೋರಿದ ಮನೋಬಲ, ಇವುಗಳು ವಸ್ತುನಿಷ್ಠ ಹಾಗೂ ವೈಜ್ಞಾನಿಕ ಇತಿಹಾಸ ರಚನೆಗೆ ಅವರ ಕಾಳಜಿಯನ್ನು ವ್ಯಕ್ತಪಡಿಸುತ್ತವೆ. ಡ್ರಾಯ್‌ಸೆನ್ ಟೀಕಿಸಿರುವಂತೆ ರ‍್ಯಾಂಕೆ ಅವರ ವಾಸ್ತವಿಕತೆಯು “ನಪುಂಸಕನ ವಾಸ್ತವಿಕತೆಯಾಗಿತ್ತು.” ಅವರ ವಿಧಾನ, ರಾಯಭಾರದ ದಾಖಲೆಗಳನ್ನು ಮಾತ್ರ ಅವರು ಬಳಸಿಕೊಂಡುದುದು, ಅವರ ಸ್ಪಷ್ಟವಾದ ರಾಜಕೀಯ ಪ್ರಸ್ತಾವ – ಅವೆಲ್ಲವೂ ಇತಿಹಾಸದ ಛಾಯೆಯಾಗಿದ್ದಿತೇ ವಿನಃ ಇತಿಹಾಸವಲ್ಲ ಮತ್ತು ನಿಶ್ಚಿತವಾಗಿ ಸತ್ಯವೂ ಅಲ್ಲ. ತಾವು ವಾಸ್ತವಿಕ ಇತಿಹಾಸವನ್ನು ರಚಿಸಿ ಸತ್ಯದ ಹತ್ತಿರ ಸಮೀಪಿಸುತ್ತಿರುವುದಾಗಿ ಹೇಳಿಕೊಂಡು ತಮ್ಮ ತಲೆಮಾರಿನವರನ್ನು ದಾರಿ ತಪ್ಪಿಸಿದರೆಂದು ರ‍್ಯಾಂಕೆಯವರನ್ನು ಆಪಾದಿಸಲಾಗಿದೆ. ಅವರ ವಿಧಾನದ ಬಗ್ಗೆ ಯಥಾರ್ಥವಾಗಿ ಹೇಳುವುದಾದರೇ, ಈ ವಿಧಾನವು ಹೆಚ್ಚಿನ ನಿಷ್ಪಕ್ಷಪಾತ, ಉತ್ತಮ ಗುಣದ ಸಮಸ್ಥಾಯಿತ್ವ ಮತ್ತು ವಿಶಾಲವಾದ ಹೊರ ನೋಟಕ್ಕೆ ಎಡೆಮಾಡಿಕೊಟ್ಟಿತು. ಅವರಿಗಿಂತ ಹಿಂದೆ ಈ ವಿಧಾನವು ಸಾಂಪ್ರದಾಯಿಕವಾಗಿರಲಿಲ್ಲ. ಮಾನವ ಕುಲದ ಅಭಿವೃದ್ಧಿ ಕುರಿತಾದ ಹತ್ತೊಂಭತ್ತನೆಯ ಶತಮಾನದ ಹೆಮ್ಮೆಯ ಆಶಾವಾದವನ್ನು ಅವರು ಹೊಂದಿದ್ದರು. ಸಂಶೋಧನೆಗೆ ಮೂಲಭೂತವಾದ ತಾಂತ್ರಿಕತೆಗಳನ್ನು ಬೋಧಿಸಲು ತಮ್ಮ ಪ್ರಸಿದ್ಧ ಸೆಮಿನಾರ್‌ಗಳನ್ನು ನಡೆಸಿಕೊಂಡು ಹೋಗಿ, ತನ್ಮೂಲಕ ಇತಿಹಾಸವನ್ನು ಒಂದು ಬೌದ್ಧಿಕ ಶಿಸ್ತಿನ ಮಟ್ಟಕ್ಕೆ ಏರಿಸಿ, ವಿಶ್ವವಿದ್ಯಾಲಯದ ಮಟ್ಟದಲ್ಲಿ ಇತಿಹಾಸ ಬೋಧನೆಯನ್ನು ಸ್ಥಾಪಿಸುವುದರಲ್ಲಿ ರ‍್ಯಾಂಕೆಯವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ರ‍್ಯಾಂಕೆ ಅವರು ಮನೋಹರವಾದ ಮತ್ತು ಸರಳವಾದ ವಿವರಣಕಾರರಾಗಿದ್ದರು. ಜರ್ಮನಿಯ ಇತಿಹಾಸ ಲೇಖನ ಸಂಪ್ರದಾಯದ ಮೇಲೆ ಅವರ ಪ್ರಭಾವವು ಆಳವೂ, ಅಪರಿಮಿತವೂ ಆಗಿತ್ತು.

ರ‍್ಯಾಂಕೆ ಅವರ ನಂತರದ ಬೆಳವಣಿಗೆ

ರ‍್ಯಾಂಕೆ ಅವರ ನಂತರ ಇತಿಹಾಸ ಲೇಖನ ಶಾಸ್ತ್ರದಲ್ಲಿ ಪ್ರಮುಖ ಬದಲಾವಣೆಗಳು ಉಂಟಾದವು. ಈ ಬದಲಾವಣೆಗಳು ಇತಿಹಾಸ ಸಂಶೋಧನಾ ವಿಧಾನಕ್ಕೆ ಸೀಮಿತವಾಗಿರದೆ, ಇತಿಹಾಸದ ವ್ಯಾಪ್ತಿ ಮತ್ತು ಅರ್ಥ ವಿವರಣೆಗೆ ಸಂಬಂಧಿಸಿದುದಾಗಿತ್ತು. ಅವರೆಂದರೆ ಕಾಮ್ಟ್‌, ಕಾರ್ಲ್‌‌ಮಾರ್ಕ್ಸ್, ಸ್ಪೆಂಗ್ಲರ್, ಟಾಯನ್‌ಬಿ, ಕಾಮ್ಟ್ ಮುಂತಾದವರು. ನಿಶ್ಚಿತತಾ ವಾದವನ್ನು ಮಾರ್ಕ್ಸ್ ಅವರು ಇತಿಹಾಸವು ವರ್ಗ ಹೋರಾಟದ ಕಥನವೆಂಬ ನಿಲುವನ್ನು, ಸ್ಪೆಂಗ್ಲರ್ ಹಾಗೂ ಟಾಯನ್‌ಬಿ ಅವರು ಜೀವ ವಿಜ್ಞಾನ ಅನುರೂಪಿತ ವಿಧಾನವನ್ನು ಮುಂದಿಟ್ಟರು.

ಕಾರ್ಲ್‌ಮಾರ್ಕ್ಸ್‌ನ ಬರವಣಿಗೆಗಳು ಮತ್ತು ಚರಿತ್ರೆ ಬೆಳವಣಿಗೆ

ಇತಿಹಾಸವನ್ನು ವಿಜ್ಞಾನಗಳ ರಾಣಿ ಎಂದು ಪರಿಗಣಿಸಲಾಗಿದೆ. ನಮ್ಮ ಕಾಲದಲ್ಲಿ ಇತಿಹಾಸವು ಅತಿ ವಾದಗ್ರಸ್ತವೂ, ಅತಿ ಮುಂಗೋಪಿಯೂ ಆದ ಅಧ್ಯಯನವಾಗಿದೆ. ಪ್ರತಿಯೊಂದು ರಾಜಕೀಯ ಪಕ್ಷ, ಪ್ರತಿಯೊಂದು ವೈಚಾರಿಕ ಚಳವಳಿಯೂ ತನ್ನ ಐತಿಹಾಸಿಕ ತತ್ವವನ್ನು ಹೊಂದಿದೆ. ಅವುಗಳಲ್ಲಿ ಕೆಲವು ಶಾಸ್ತ್ರಾನುಸರಣೆಯ ರೀತಿಯಲ್ಲಿದ್ದಾರೆ, ೨ ಮತ್ತೆ ಕೆಲವು ನಾಸ್ತಿಕತೆಗಳಾಗಿವೆ. ಮಾರ್ಕ್ಸ್‌‌ರ ಇತಿಹಾಸ ಸಿದ್ಧಾಂತವು ಪ್ರಸಿದ್ಧ ಶಾಸ್ತ್ರಾನುಸರಣೆಯೂ ಮತ್ತು ಪ್ರಸಿದ್ಧವಾದ ನಾಸ್ತಿಕತೆಯೂ ಆಗಿದೆ. ಕಮ್ಯುನಿಸ್ಟ್‌ಸಿದ್ಧಾಂತವು ಯುರೋಪು ಮತ್ತು ಏಷ್ಯಾಗಳ ಇತಿಹಾಸ ಚಿಂತನೆಯ ಮೇಲೆ ಇದು ಪ್ರಭಾವ ಬೀರಿದೆ. ಕಮುನಿಸ್ಟ್ ಪ್ರಭಾವಕ್ಕೆ ಹೊರತಾದ ಪಾಶ್ಚಾತ್ಯ ದೇಶಗಳಲ್ಲಿಯೂ ಸಹ ಅದು ಅನೇಕ ಪ್ರಬಲವಾದ ಪ್ರತಿಪಾದಕರನ್ನು ಹೊಂದಿದೆ.

ವಕೀಲರ ಮಗನಾದ ಮಾರ್ಕ್ಸ್ ೧೮೧೯ ರಲ್ಲಿ ಜರ್ಮನ್ ರೈನ್‌ಲ್ಯಾಂಡಿನಲ್ಲಿ ಜನಿಸಿದರು. ಆದರೆ ಅವರ ಬರಹಗಾರ ಜೀವನವು ಇಂಗ್ಲೆಂಡಿನಲ್ಲಿ ಕಳೆಯಿತು. ಅಲ್ಲಿಯೇ ಅವರು ೧೮೮೩ರಲ್ಲಿ ಮರಣ ಹೊಂದಿದರು. ವೈಜ್ಞಾನಿಕ ಸಮಾಜವಾದದ ಸ್ಥಾಪಕರೆಂದು ಅವರನ್ನು ಪರಿಗಣಸಲಾಗಿದೆ. ಅವರು ಇತಿಹಾಸದ ಆರ್ಥಿಕ ಅರ್ಥ ವಿವರಣೆಯನ್ನು ವಿಶದವಗಿ ಪ್ರತಿಪಾದಿಸಿದರು. ಇದರ ಪೂರ್ಣವಾದ ಮೊದಲ ಹೇಳಿಕೆಯು ಫ್ರೆಡ್ರಿಕ್ ಏಂಜಲ್ಸ್ ಜೊತೆಯಲ್ಲಿ ಸೇರಿ ಅವರು ರಚಿಸಿದ ಜರ್ಮನ್ ಐಡಿಯಾಲಜಿಯಲ್ಲಿ ಕಂಡುಬರುತ್ತದೆ. ಇದರ ಜೀವಂತ ಸಂಕ್ಷಿಪ್ತ ಮಾಹಿತಿಯನ್ನು ಏಂಜಲ್ಸ್ ಜೊತೆ ಸೇರಿ ರಚಿಸಿದ ಕಮ್ಯುನಿಸ್ಟ್‌ಮ್ಯಾನಿಫೆಸ್ಟೊನಲ್ಲಿ (೧೮೪೮) ಕಾಣಬಹುದು. ಅದರ ಸಂಕ್ಷಿಪ್ತ ಸಾರಾಂಶವು ಮಾರ್ಕ್ಸ್ ರಚಿಸಿದ ಎ ಕಾಂಟ್ರಿಬ್ಯೂಷನ್ ಟು ದಿ ಕ್ರಿಟೀಕ್ ಆಫ್ ಪೊಲಿಟಿಕಲ್ ಎಕಾನಮಿಯಲ್ಲಿ (೧೮೫೯) ದೊರೆಯುತ್ತದೆ. ಅವರ ಪ್ರಧಾನ ಗ್ರಂಥವಾದ ದಾಸ್ ಕ್ಯಾಪಿಟಲ್ (೧೮೯೭-೯೪) ಬಂಡವಾಳ ಶಾಹಿ ಆರ್ಥಿಕ ನೀತಿಯನ್ನು ಕುರಿತದ್ದಾಗಿದೆ. ಮಾರ್ಕ್ಸ್ ಅವರ ಪ್ರಕಾರ, ಬಂಡವಾಳಶಾಹಿ ಆರ್ಥಿಕ ನೀತಿಯು ಆಧುನಿಕ ಇತಿಹಾಸದ ನೈತಿಕ ಅಂಶವಾಗಿದೆ.

ಮಾರ್ಕ್ಸ್‌‌ರ ಇತಿಹಾಸ ಸಿದ್ಧಾಂತ ಎಂದರೇನು? ಎಂಬ ಪ್ರಶ್ನೆ ಸ್ವಾಭಾವಿಕವಾಗಿ ಏಳುತ್ತದೆ. ಅದು ಪ್ರಾಬಲ್ಯವನ್ನು ಗಳಿಸಲು ಕಾರಣಗಳೇನು? ಈ ಎರಡನೆಯ ಪ್ರಶ್ನೆಗೆ, ಇತಿಹಾಸದ ತತ್ವಜ್ಞಾನಕ್ಕೆ ಸಾರ್ವತ್ರಿಕ ಬೇಡಿಕೆಯಿದ್ದುದು ಕಾರಣವೆಂದು ಉತ್ತರಿಸಬಹುದು. ಮಾರ್ಕ್ಸಿಸಂ ಎಂದು ಕರೆಯಲ್ಪಡುವ ಒಂದು ವಿಶಿಷ್ಟ ರೀತಿಯ ಇತಿಹಾಸದ ತತ್ವಜ್ಞಾನವು ಅದನ್ನು ಸಾಧಿಸಿತು. ಅದರ ಅರ್ಹತೆಗಳೇ ಇತರ ಸಾದೃಶ ಆದರೆ ವಿರೋಧಿ ತತ್ವಜ್ಞಾನಗಳೊಡನೆ ಸ್ಪರ್ಧಿಸಲು ಸಹಾಯಕವಾದವು.

ಎರಡನೆಯದಾಗಿ, ಇತಿಹಾಸವು ದಿಗ್ಭ್ರಮೆಗೊಳಿಸುವ ವಿವರಣೆಗಳ ಭಾರವನ್ನು ಹೊತ್ತಿದ್ದುದು ಜನಸಾಮಾನ್ಯರಿಗೆ ಉತ್ತೇಜನಕಾರಿಯಾಗಲಿಲ್ಲ. ಆದ್ದರಿಂದ ಅವರು ಇತಿಹಾಸದಿಂದ ದೂರ ಸರಿದು, ಈ ವಿವರಣೆಗಳಿಂದ ಹೊರತಾದುದನ್ನು ಅರಸುತ್ತಿದ್ದರು. ನಮ್ಮ ಮುಂದಿರುವ ಇತಿಹಾಸದ ಆಧುನಿಕ ಪ್ರವಾದಿಗಳಲ್ಲಿ ಮಾರ್ಕ್ಸ್, ಸ್ಪೆಂಗ್ಲರ್, ಟಾಯನ್‌ಬಿ ಇವರುಗಳನ್ನು ಈ ಸಂದರ್ಭಗಳಲ್ಲಿ ಗಮನಿಸಬಹುದು.

ಈ ಮೂವರಲ್ಲಿ ಮಾರ್ಕ್ಸ್ ಹೆಚ್ಚು ಪರಿಣಾಮಕಾರಿಯಾಗಿದ್ದಾರೆ. ಒಂದು ರೀತಿಯಲ್ಲಿ ಸ್ಪೆಂಗ್ಲರ್‌ಮತ್ತು ಟಾಯನ್‌ಬಿ ಅವರಿಗೆ ಸಹಾಯಕರಾಗಿ ತೋರುತ್ತಾರೆ. ಮಾರ್ಕ್ಸ್‌ವಾದವು ಸಮಕಾಲೀನ ನಾಗರಿಕತೆಯು ನಾಶ ಹೊಂದುವ ಭವಿಷ್ಯದ ಒಂದು ನಿಶ್ಚಿತವಾದ ಬದಲಾವಣೆಯನ್ನು ನಮ್ಮ ಮುಂದಿಡುತ್ತದೆ. ಮಾರ್ಕ್ಸ್‌ವಾದದ ಒಂದೇ ಭರವಸೆಯಿಂದ ಚಲಿಸುತ್ತದೆ. ಮಾರ್ಕ್ಸ್‌ವಾದಿಗಳ ಗತಕಾಲದ ಅರ್ಥ ವಿವರಣೆಯು ವೈಜ್ಞಾನಿಕವಾಗಿ ಸರಿಯೆಂದು ಸಮರ್ಥಿಸಲಾಗಿದೆ. ಈ ಕಾರಣಗಳು ಮಾರ್ಕ್ಸ್‌ವಾದಿಗಳ ಇತಿಹಾಸವು ಇಂದು ಪ್ರಭಾವಿಯಾಗಿರುವಂತೆ ಮಾಡಿವೆ.

ಮಾರ್ಕ್ಸ್‌ವಾದಿಗಳ ಇತಿಹಾಸ, ಅರ್ಥ ವಿವರಣೆಯ ಮೂಲಭೂತ ಊಹನೆಗಳು ಭಾವನೆಗಳು ಅಥವಾ ಸಂಘ ಸಂಸ್ಥೆಗಳು ಅಥವಾ ಮಾನವ ನಿರ್ಮಿತ ನಿಯಮಗಳಿಂದ ನಿಯಂತ್ರಿಸಲ್ಪಟ್ಟಿಲ್ಲ. ಆದರೆ ಅದು ಸಮಾಜದ ಆರ್ಥಿಕ ವ್ಯವಸ್ಥೆಯ ಮೇಲೆ ಕೇಂದ್ರಿಕೃತವಾಗಿದೆ. ಈ ಆರ್ಥಿಕ ವ್ಯವಸ್ಥೆಯು ಸರಕುಗಳ ಉತ್ಪಾದನೆ ಮತ್ತು ವಿನಿಮಯ ಕ್ರಿಯೆಗಳ ಮೇಲೆ ಆಧರಿಸಿವೆ. ಸಂಘ-ಸಂಸ್ಥೆಗಳು, ನಿಯಮಗಳು, ಭಾವನೆಗಳು, ಸಮಾಜವನ್ನು ಕಾಪಾಡುತ್ತವೆಯೇ ವಿನಃ ಅದನ್ನು ಸೃಷ್ಟಿಸುವುದಿಲ್ಲ. ಅದು, ಸಮಕಾಲೀನರು ಅರಿಯದ, ಆದರೆ ಇತಿಹಾಸಕಾರರು ಕಂಡು ಹಿಡಿಯಬಲ್ಲ ಒಂದು ಸಂಕೀರ್ಣವಾದ ಆರ್ಥಿಕ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಇತಿಹಾಸದ ಮೂಲವಾಗಿರುವ ಈ ಆರ್ಥಿಕ ನೀತಿಯು ಸ್ಥಿರವಾಗಿರದೆ ಚಲಿಸುತ್ತಿರುತ್ತದೆ. ಇತಿಹಾಸವು ಆಸ್ಥಾನಗಳ, ಮಂತ್ರಿ, ಮಂಡಲಗಳ ಮತ್ತು ಸೈನ್ಯಗಳ ಇತಿಹಾಸವಾಗಿದೆ ವರ್ಗ ಹೋರಾಟದ ಇತಿಹಾಸವಾಗಿರುತ್ತದೆ. ಮಾರ್ಕ್ಸ್‌ವಾದಿಗಳ ಮಾರ್ಗದರ್ಶನದಲ್ಲಿ ಜನ ಸಾಮಾನ್ಯರೂ ಕೂಡ ಇತಿಹಾಸದ ಉಪಯುಕ್ತವಾದ ಭಾಗ. ಆರ್ಥಿಕ ವ್ಯವಸ್ಥೆ ಮತ್ತು ಸಾಮಾಜಿಕ ರಚನೆಗಳಿಗೆ ನೇರವಾಗಿ ಹೋಗಬಹುದಾಗಿದೆ. ಇದು ಮಾರ್ಕ್ಸ್‌ವಾದಿ ಇತಿಹಾಸಕಾರರ ಮೊದಲು ಪೂರ್ವಪಕ್ಷವಾಗಿದೆ.

ರಾಜಕೀಯ ಶಕ್ತಿಯು ಆರ್ಥಿಕ ಶಕ್ತಿಯ ಪ್ರತಿಬಿಂಬವೆಂಬ ಸಿದ್ಧಾಂತವನ್ನು ಹದಿನೇಳನೆಯ ಶತಮಾನದ ಇಂಗ್ಲಿಷ್ ತತ್ವಜ್ಞ ಜೇಮ್ಸ್‌ಹ್ಯಾರಿಂಗ್‌ಟನ್ ಪ್ರತಿಪಾದಿಸಿದರು. ಆರ್ಥಿಕ ಹಾಗೂ ರಾಜಕೀಯ ವ್ಯವಸ್ಥೆಗಳ ಸಂಬಂಧವನ್ನು ಹದಿನೆಂಟನೆಯ ಶತಮಾನದ ಸ್ಕಾಟ್‌ಲೆಂಡಿನ ಪ್ರಸಿದ್ಧ ತತ್ವಜ್ಞಾನಿಗಳಾದ ಡೇವಿಡ್ ಹ್ಯೂಮ್ ಮತ್ತು ಆಡಮ್ ಸ್ಮಿತ್ ಪರಿಶೋಧಿಸಿದರು. ಆಧುನಿಕ ಇತಿಹಾಸದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಇತಿಹಾಸಗಳಲ್ಲಿ ಆಸಕ್ತಿಯನ್ನು ಕೆರಳಿಸಿದವರು ಮಾರ್ಕ್ಸ್ ಮತ್ತು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ಮಾರ್ಕ್ಸ್ ಎನ್ನುವಂತೆ ಆಧುನಿಕ ಸಮಾಜದಲ್ಲಿ ವರ್ಗಗಳ ಅಸ್ತಿತ್ವ ಮತ್ತು ವರ್ಗಗಳ ನಡುವಣ ಹೋರಾಟಗಳನ್ನು ಕಂಡು ಹಿಡಿದುದಕ್ಕೆ ಕೀರ್ತಿ ನನಗೆ ಸಲ್ಲಬೇಕಾಗಿಲ್ಲ. ಬಹಳ ಹಿಂದೆ ಮಧ್ಯಮ ವರ್ಗದ (ಸಮಾನಾಭಿಪ್ರಾಯವುಳ್ಳ) ಇತಿಹಾಸಕಾರರು ಈ ವರ್ಗ ಹೋರಾಟದ ಐತಿಹಾಸಿಕ ಬೆಳವಣಿಗೆಯನ್ನು ಮತ್ತು ಮಧ್ಯಮ ವರ್ಗದ ಆರ್ಥಿಕ ಶಾಸ್ತ್ರಜ್ಞರು ವರ್ಗಗಳ ಆರ್ಥಿಕ ಸ್ವರೂಪವನ್ನು ವಿವರಿಸಿದ್ದಾರೆ. ಮಾರ್ಕ್ಸ್ ಹೇಳುವಂತೆ,

೧. ವರ್ಗಗಳ ಅಸ್ತಿತ್ವವು ಒಂದು ವಿಶಿಷ್ಟ ಐತಿಹಾಸಿಕ ಹಂತಗಳ ಉತ್ಪಾದನೆಯ ಬೆಳವಣಿಗೆಗಳಲ್ಲಿ ಸೇರಿಕೊಂಡಿದೆ.

೨. ಈ ವರ್ಗ ಹೋರಾಟವು ಶ್ರಮಜೀವಿಗಳ ನಿರಂಕುಶ ಪ್ರಭುತ್ವಕ್ಕೆ ಅವಶ್ಯಕವಾಗಿ ಎಡೆ ಮಾಡಿಕೊಡುತ್ತದೆ.

೩. ಈ ನಿರಂಕುಶ ಪ್ರಭುತ್ವವು ಸಮಸ್ತ ವರ್ಗಗಳ ರದ್ದಿಗೆ ಮತ್ತು ವರ್ಗರಹಿತ ಸಮಾಜದ ಉದಯಕ್ಕೆ ಕಾರಣವಾಗುತ್ತದೆ.

ಮಾರ್ಕ್ಸ್‌ವಾದವನ್ನು ಇತರ ಮಧ್ಯಮ ವರ್ಗದ ಸಾಮಾಜಿಕ ಅಧ್ಯಯನಗಳಿಂದ ಬೇರ್ಪಡಿಸುವುದು ಅವಶ್ಯಕವಾಗಿದೆ. ಇತರ ಚಿಂತನಾಕಾರರು ಪ್ರತಿಪಾದಿಸಿದ ಭಾವನೆಗಳನ್ನು ಸಂಗ್ರಹಿಸಿ, ಅವುಗಳನ್ನು ತಾತ್ವಿಕ ಸಿದ್ಧಾಂತಕ್ಕೆ ಸಂಯೋಜಿಸುವ ಕಾರ್ಯವನ್ನು ಮಾರ್ಕ್ಸ ನಿರ್ವಹಿಸಿದರೆಂಬುದು ಅವರ ಮಾತುಗಳಿಂದಲೇ ವ್ಯಕ್ತವಾಗುತ್ತದೆ. ಮಾರ್ಕ್ಸ್ ಎರವಲು ಪಡೆದ ಸಾಮಾಜಿಕ ವಿಶ್ಲೇಷಣೆಯು ಒಂದು ಅಮೂಲ್ಯವಾದ ಇತಿಹಾಸದ ಸಾಧನವಾಗಿದೆ.

ಮಾರ್ಕ್ಸ್ ಅವರ ಪ್ರಕಾರ ಮಾನವನ ಇತಿಹಾಸವನ್ನು ಐತಿಹಾಸಿಕ ಸ್ವರೂಪಗಳಾಗಿ ವಿಭಜಿಸಬಬಹುದು. ಇವು ವಿಭಿನ್ನ ಸಾಮಾಜಿಕ ವ್ಯವಸ್ಥೆಯ ರೂಪಗಳಿಂದ ವಿಶ್ಲೇಷಿಸಲ್ಪಡುತ್ತವೆ. ಇವು ತಾಂತ್ರಿಕ ವಿಧಾನದ ಮೇರೆಗೆ ಒಂದನ್ನೊಂದು ಬದಲಿಸುತ್ತವೆ. ಆಧುನಿಕ ಮಾರ್ಕ್ಸ್‌ವಾದಿಗಳು ಒಪ್ಪಿಕೊಳ್ಳುವಂತೆ ಈ ದ್ವಂದಮಾನ ಪ್ರಕ್ರಿಯೆಯು (Dialectical Process) ಮಾರ್ಕ್ಸ್‌ವಾದದ ಬೆನ್ನುಲುಬಾಗಿದೆ. ಊಳಿಗಮಾನ್ಯ ಪದ್ಧತಿಯನ್ನು ಬಂಡವಾಳಶಾಹಿ ಪದ್ಧತಿಯು ಸ್ಥಳಾಂತರಿಸಿದುದು ಅವರ ಕೊಡುವ ಒಂದು ಉದಾಹರಣೆಯಾಗಿದೆ. ಈ ಒಂದು ಉದಾಹರಣೆಯ ಬಲದ ಮೇಲೆ ಅವರು ಈ ಬಂಡವಾಳಶಾಹಿ ಪದ್ಧತಿಯನ್ನು ವರ್ಗರಹಿತ ಸಮಾಜವು ಸ್ಥಿತ್ಯಂತರಗೊಳಿಸುತ್ತದೆ ಎಂದರು. ಶ್ರಮಜೀವಿಗಳ ನಿರಂಕುಶ ಪ್ರಭುತ್ವದಿಂದ ಇದನ್ನು ಸಾಧಿಸಬಹುದೆಂದು ಅವರು ತಿಳಿಸಿದ್ದಾರೆ. ಆದ್ದರಿಂದ ಮಾರ್ಕ್ಸ್‌ವಾದದ ಇತಿಹಾಸವನ್ನು ಸಾರ್ವತ್ರಿಕ ವಿಚಾರ ಸರಣಿಯು ಎರಡು-ಒಂದು ಗತಕಾಲದಲ್ಲಿ, ಮತ್ತೊಂದು ಭವಿಷ್ಯದಲ್ಲಿ ಪರಸ್ಪರ ಸಮರ್ಥಿಸುವ ಉದಾಹರಣೆಗಳ ಮೇಲೆ ಆಧಾರಿತವಾಗಿದೆ ಎಂದು ಹೇಳಲಾಗಿದೆ.

ಮಾರ್ಕ್ಸ್‌ವಾದಿ ಇತಿಹಾಸಕಾರರು ಕಾಲಕ್ಕೆ ಅನುಗುಣವಾಗಿ ಪುರಾವೆಗಳನ್ನು ಬದಲಾಯಿಸುತ್ತಾ ಗತಕಾಲ ಹಾಗೂ ಭವಿಷ್ಯದ ಇತಿಹಾಸವನ್ನು ಪುನರ‍್ರಚಿಸುತ್ತಾರೆ. ಆದಾಗ್ಯೂ, ಹೊಸ ಪುರಾವೆಗಳ ಹಳೆಯ ತೀರ್ಮಾನಗಳಿಗೇ ಕರೆದೊಯ್ಯುತ್ತವೆಂದು ಪ್ರತಿಪಾದಿಸುತ್ತಾರೆ. ಅದರ ಪರಿಣಾಮಗಳು ಏನಿದ್ದರೂ ಮಾನವರು ತಮ್ಮ ಸ್ವಂತ ಇತಿಹಾಸವನ್ನು ಸಿದ್ಧಪಡಿಸುತ್ತಾರೆ. ಅದರಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತಾನು ಅಪೇಕ್ಷಿಸಿದ ಗುರಿಯನ್ನು ಅನುಸರಿಸುತ್ತಾನೆ. ವಿಭಿನ್ನ ಮಾರ್ಗಗಳಲ್ಲಿ ಪ್ರವರ್ತಿಸುವ ಅನೇಕ ಸಂಕಲ್ಪಗಳ ಪರಿಣಾಮಗಳು ಮತ್ತು ಬಾಹ್ಯ ಪ್ರಪಂಚದ ಮೇಲೆ ಅವುಗಳ ಪ್ರಭಾವವು ಇತಿಹಾಸವನ್ನು ವ್ಯವಸ್ಥಾಪಿಸುತ್ತವೆ. ಇತಿಹಾಸವು ಆಂತರಿಕ ನಿಯಮಗಳಿಂದ ಸದಾಕಾಲವೂ ಅಧಿಕಾರ ನಡೆಸಲ್ಪಡುತ್ತದೆ. ಅಂತ್ಯದಲ್ಲಿ ಈ ನಿಯಮಗಳು ಆರ್ಥಿಕವಾಗಿದ್ದು ಅವು ಐತಿಹಾಸಿಕ ನಿರ್ಣಯದಲ್ಲಿ ಸಿಕ್ಕಿರುತ್ತವೆ. ಸಮಗ್ರ ಸಮಾಜದ ತಿಳುವಳಿಕೆ ಪರಿಶ್ರಮದ ಐತಿಹಾಸಿಕ ಬೆಳವಣಿಗೆಯು ಕೀಲಿಯಾಗಿದೆ. ಪರಿಶ್ರಮ ಮತ್ತು ಬಂಡವಾಳದ ಅಂತಿಮ ಸಂಯೋಜನೆಯನ್ನು ವರ್ಗರಹಿತ ಸಮಾಜದಲ್ಲಿ ಸಾಧಿಸಬಹುದಾಗಿದೆ. ಇದನ್ನು ಸಾಧಿಸಿದಾಗ “ಇತಿಹಾಸ ಪೂರ್ವವು ಕೊನೆಗೊಂಡು ಇತಿಹಾಸವು ಆರಂಭವಾಗುತ್ತದೆ.”

ಮಿಗಿಲಾಗಿ, ಮಾರ್ಕ್ಸ್ ಸಿದ್ಧಾಂತವು, ಅದರ ತಾರ್ಕಿಕ ಆದಿ ಭೌತಿಕವಾದವನ್ನು ಆಧ್ಯಾತ್ಮಿಕವಾಗಿ ಅರಿತರೂ, ದೇವರನ್ನು ಸೃಷ್ಟಿಕರ್ತನೆಂದಾಗಲೀ ಅಥವಾ ಇತಿಹಾಸದಲ್ಲಿ ದೇವರ ದಯೆ ಅಥವಾ ಅನುಕಂಪ ಎಂದಾಗಲೀ ಮಾನ್ಯ ಮಾಡಿಲ್ಲ. ಇವುಗಳಲ್ಲಿ ನಂಬಿಕೆಯಿದ್ದ ಧರ್ಮವು ಮೂಢನಂಬಿಕೆಯಾಗಿತ್ತು. ಇತಿಹಾಸದಲ್ಲಿ ಇದನ್ನು ಅಲ್ಪಸಂಖ್ಯಾತರು ಬಹು ಸಂಖ್ಯಾತರನ್ನು ಶೋಷಣೆ ಮಾಡುವ ಒಂದು ಸಾಧನವನ್ನಾಗಿ ಸ್ವೀಕರಿಸಲಾಗಿದೆ. ಬಹುಸಂಖ್ಯಾತರ ಗಮನವನ್ನು ಅಲ್ಪಸಂಖ್ಯಾತರು ಭವಿಷ್ಯ ಜೀವನದಲ್ಲಿ ನೀಡುವ ‘ಪ್ರತಿಫಲ’ ಮತ್ತು ‘ಆನಂದ’ದ ಕಡೆಗೆ ತಿರುಗಿಸುವುದಾಗಿದೆ. ಐಹಿಕ ನಿಯಂತ್ರಣವನ್ನು ಅಲ್ಪಸಂಖ್ಯಾತರು ವಹಿಸಿಕೊಂಡಿರುತ್ತಾರೆ. ಬಹುಸಂಖ್ಯಾತ ಕಾರ್ಮಿಕರು ತಮ್ಮ ಬೆವರು ಸುರಿಸಿ ಉತ್ಪಾದಿಸಿದ ಪ್ರಾಪಂಚಿಕ ಭೋಗ ವಸ್ತುಗಳನ್ನು ಅಲ್ಪಸಂಖ್ಯಾತರು ಭೋಗಿಸುತ್ತಾರೆ. ಮಾರ್ಕ್ಸ್‌ವಾದದ ಅನುನಾಯಿಗಳು ಭವಿಷ್ಯ ಧ್ಯೇಯದ (ಗುರಿ) ಚಿಂತನೆಯಿಂದ ಉತ್ತೇಜಿತರಾಗಿ, ಅದರ ಸಾಧನೆಗಾಗಿ ಯಾವ ತ್ಯಾಗಗಳಿಗೂ ಸಿದ್ಧರಾಗಿರುತ್ತಾರೆ. ಇತಿಹಾಸದಲ್ಲಿ ಮಾನವರು ಮನುಷ್ಯತ್ವಕ್ಕಾಗಿ ಕಾರ್ಯತತ್ಪರರಾಗಬೇಕು. ಈ ಧ್ಯೇಯವನ್ನು ಪೂರ್ಣಗೊಳಿಸುವ ಉದ್ದೇಶದಿಂದ ಮುನ್ನಡೆಯುತ್ತಿರುವಾಗ, ಈ ಧ್ಯೇಯದ ಸೂಚನೆಗೆ ಅವರು ನೀಡುವ ಮೌಲ್ಯಗಳನ್ನು ಅನುಭೋಗಿಸಬಹುದು.