ಥೂಸಿಡೈಡ್ಸ್ (ಕ್ರಿ.ಪೂ. ೪೫೧-೪೦೦)

ಗ್ರೀಕ್ ಚರಿತ್ರೆ ಲೇಖನ ಸಂಪ್ರದಾಯದಲ್ಲಿ ಬರುವ ಮತ್ತೊಂದು ಪ್ರಸಿದ್ಧ ಹೆಸರು ಹೆರೊಡೋಟಸ್‌ನಿಗಿಂತ ಕೇವಲ ೧೩ ವರ್ಷಗಳು ಚಿಕ್ಕವನಾಗಿದ್ದ ಥೂಸಿಡೈಡ್ಸನದು. ಇವನ ‘ಹಿಸ್ಟೋರಿ ಆಫ್ ದಿ ಪೆಲೋಪೋನೇಷಿಯನ್ ವಾರ್’ ಚರಿತ್ರೆ ಲೇಖನಶಾಸ್ತ್ರ ಸಂಪ್ರದಾಯದ ಪ್ರಸಿದ್ಧ ಕೃತಿ. ಹೆರೋಡೋಟಸನಿಗೂ ಮತ್ತು ಇವನಿಗೂ ಚರಿತ್ರೆಯನ್ನು ಗ್ರಹಿಸುವ ಕ್ರಮದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಚರಿತ್ರೆಕಾರನಾಗಿ ಹೆರೊಡೋಟಸನಿಗಿಂತ ಮಿಗಿಲೆನಿಸಿದ್ದಾನೆ. ಹೆರೊಡೋಟಸನು ಸತ್ಯ ಮತ್ತು ಶೈಲಿಗಳ ನಡುವೆ ಶೈಲಿಯತ್ತಲೇ ಹೆಚ್ಚು ವಾಲುತ್ತಾನೆ. ಆದರೆ ಥೂಸಿಡೈಡ್ಸನು ಸತ್ಯವನ್ನು ಹೇಳುವ ಬಗೆಗೆ ಒತ್ತು ನೀಡುತ್ತಾನೆ. ಹೋಮರನ ಕಾವ್ಯ ಮತ್ತು ಹೆರೊಡೋಟಸನ ಬರಹಗಳನ್ನು ಅಧ್ಯಯನ ಮಾಡಿದ್ದ ಇವನಿಗೆ ಚರಿತ್ರೆಯನ್ನು ಬೇರೆ ರೀತಿಯಲ್ಲಿ ಗ್ರಹಿಸಲು ಸಾಧ್ಯವಾಯಿತು.

ಥೂಸಿಡೈಡ್ಸನು ತನ್ನ ಬರವಣಿಗೆಗಳಲ್ಲೇ ಅವನ ವೈಯಕ್ತಿಕ ವಿವರಗಳನ್ನು ನೀಡುತ್ತಾನೆ. ಥ್ರೇಸ್‌ನ ಅರಸು ಮನೆತನವೊಂದರಲ್ಲಿ ಸುಮಾರು ಕ್ರಿ.ಪೂ.೪೫೬ ರಲ್ಲಿ ಜನಿಸಿದನು. ಅವನ ತಂದೆಯ ಹೆಸರು ಓಲರಸ್‌. ಈತನು ನೌಕಾ ಸೇನೆಯಲ್ಲಿ ಪ್ರಮುಖವಾದ ಹುದ್ದೆಯನ್ನು ಹೊಂದಿದ್ದ. ಇವನು ಪೆಲೋಪೋನೇಷಿಯನ್ ಯುದ್ಧದಲ್ಲಿ ಭಾಗವಹಿಸಿದ್ದನು. ಈ ಯುದ್ಧವು ಗ್ರೀಸ್‌ನ ನಗರ ರಾಜ್ಯಗಳಾದ ಅಥೆನ್ಸ್ ಮತ್ತು ಸ್ಪಾರ್ಟಗಳ ಒಕ್ಕೂಟಗಳ ನಡುವಣ ಯುದ್ಧವಾಗಿತ್ತು. ಸೈನಿಕ ಸರಕಾರ ಹೊಂದಿದ ಸ್ಪಾರ್ಟಾ, ಪ್ರಜಾಪ್ರಭುತ್ವ ವ್ಯವಸ್ಥೆಯೊಂದಿದ್ದ ಅಥೆನ್ಸ್‌ನಗರಗಳ ನಡುವಣ ಯುದ್ಧವಾಗಿ, ಎರಡು ವ್ಯವಸ್ಥೆಗಳ ಯುದ್ಧದ ಮಿಲನವಾಗಿತ್ತು. ಆಂಪಿಪಾಲಸ್ ನಗರದ ಮೇಲೆ ನಡೆದ ಆಕ್ರಮಣವನ್ನು ತಡೆಯಲು ಅಸಮರ್ಥನಾದ್ದರಿಂದ ಕೊನೆಗೆ ಗಡಿಪಾರು ಶಿಕ್ಷೆಯನ್ನು ಅನುಭವಿಸಬೇಕಾಯಿತು. ಈ ಶಿಕ್ಷೆಯು ಥೂಸಿಡೈಡ್ಸನ ಪಾಲಿಗೆ ವರದಾನವಾಯಿತೆಂದು ಹೇಳಲೇಬೇಕು. ಏಕೆಂದರೆ ಇಲ್ಲಿಂದ ನಂತರವೇ ಅವನು ಚರಿತ್ರೆಯ ವಿಷಯದಲ್ಲಿ ಆಸಕ್ತಿ ತಳೆದು ಗಂಭೀರ ಅಧ್ಯಯನದಲ್ಲಿ ತೊಡಗಿಸಿಕೊಂಡನು. ಈ ಅಧ್ಯಯನಶೀಲತೆ ಮುಂದೆ ಅವನನ್ನು ಸಂಶೋಧಕನನ್ನಾಗಿಸಿತು. ಇಲ್ಲಿಂದಲೇ ಚರಿತ್ರೆಕಾರನಾಗಿ ರೂಪುಗೊಂಡ ಥೂಸಿಡೈಡ್ಸನನ್ನು ನಾವು ಕಾಣುತ್ತೇವೆ. ಥೂಸಿಡೈಡ್ಸನು ತನ್ನ ಸಂಶೋಧನಾ ಅಧ್ಯಯನಕ್ಕೆ ಫೆಲೋಪೋನೇಶಿಯನ್ ಯುದ್ಧಗಳನ್ನೇ ಆಯ್ಕೆಮಾಡಿಕೊಂಡನು. ವಿಷಯ ಸಂಗ್ರಹಿಸಲು ದೇಶ ಪರ್ಯಟನೆಯನ್ನು ಕೈಗೊಂಡನು. ಅಥೆನ್ಸ್‌ನಲ್ಲಿದ್ದ ಕೌಟುಂಬಿಕ ಸಂಬಂಧಗಳು ಸಾಮಾಜಿಕ ಒಳ ಅರಿವುಗಳನ್ನು ತಿಳಿಯಲು ಸಹಾಯಕವಾದ ಹಾಗೆ, ಯುದ್ಧದ ಅನುಭವಗಳು ಅದರ ಚರಿತ್ರಕಾರನಾಗಿ ರೂಪುಗೊಳ್ಳಲು ನೆರವಾದವು. ಈ ಎಲ್ಲಾ ಅನುಭವಗಳು ಅವನಿಗೆ ಲೇಖಕನೊಬ್ಬನಿಗೆ ಬೇಕಾದ ಪ್ರಬುದ್ಧತೆಯನ್ನು ತಂದುಕೊಟ್ಟವು. ಈ ಹಿನ್ನೆಲೆಯ ಮೂಸೆಯಲ್ಲಿ ರೂಪ ತಳೆದದ್ದೇ ಅವನ ಪ್ರಸಿದ್ಧ ಕೃತಿಯಾದ ‘ಹಿಸ್ಟರಿ ಆಫ್ ದಿ ಪೆಲೋಪೋನೇಷಿಯನ್ ವಾರ್’ ಎಂಬುದು. ಈ ಗ್ರಂಥವನ್ನು ಎರಡು ಪ್ರಧಾನ ಭಾಗಗಳಾಗಿ ವಿಭಾಗಿಸಲಾಗಿದೆ.

ಈತನು ಪ್ರಾರಂಭದಲ್ಲಿ ಯುದ್ಧ ಸಂಭವಿಸಿದಂತೆ ಅದರ ಬಗ್ಗೆ ಟಿಪ್ಪಣಿಗಳನ್ನು ಮಾಡ ತೊಡಗಿದನು. ಅನಂತರದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಗಳನ್ನು ಕೈಗೊಂಡು ವಿಷಯಗಳನ್ನು ಸಂಗ್ರಹಿಸಿದನು. ಹೀಗೆ ಸಂಗ್ರಹಿಸಿದ ವಿಷಯಗಳನ್ನು ಅನುಬಂಧವಾಗಿ ಸೇರಿಸಿದನು. ನಂತರದ ಹಂತದಲ್ಲಿ ಹೀಗೆ ಶೇಖರಿಸಿದ ಆಕರಗಳನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡಿ ಅವುಗಳನ್ನು ಕ್ರಮಬದ್ಧವಾಗಿ ವರ್ಗೀಕರಿಸಿ ಅನುಕ್ರಮವಾದ ರೀತಿಯಲ್ಲಿ ವಿಷಯವನ್ನು ಮಂಡಿಸಿದನು. ಇದನ್ನು ಮತ್ತೊಮ್ಮೆ ಪರಾಮರ್ಶಿಸುವ ಕೆಲಸವನ್ನು ಮಾಡುತ್ತಾನೆ.

ಥೂಸಿಡೈಡ್ಸ್‌ನ ಪ್ರಕಾರ ಘಟನೆಗಳು ಬಿಡಿ ಬಿಡಿಯಾಗಿರದೆ ಅಂತರ್‌ಸಂಬಂಧವನ್ನು ಹೊಂದಿರುತ್ತವೆ. ಒಂದು ಘಟನೆಯ ಪರಿಣಾಮ ಇನ್ನೊಂದು ಘಟನೆಯ ಸ್ಫೋಟದಲ್ಲಿ ಪರ್ಯಾವಸಾನವಾಗುತ್ತದೆ ಎಂದು ನಂಬಿದ್ದನು. ತನ್ನ ಸಮಕಾಲೀನ ಯುದ್ಧ ಸಂದರ್ಭಗಳನ್ನು ಕುರಿತು ಮಾತನಾಡುವಾಗ ಈ ರೀತಿಯ ತೀರ್ಮಾನಗಳಿಗೆ ಬರುತ್ತಾನೆ. ತನ್ನ ಕಾಲದ ಯುದ್ಧಾನ್ವೇಷಣೆಗೆ ತೊಡಗಿದ್ರೂ. ಮನುಷ್ಯನ ಸ್ವಭಾವಗಳನ್ನು ಅಭ್ಯಸಿಸಿ ಅವು ಸ್ಥಾಯಿ ಯಾಗಿರುತ್ತವೆ ಎಂದೇ ಭಾವಿಸುತ್ತಾನೆ. ಸಮಕಾಲೀನ ಚರಿತ್ರೆಗೆ ಮುಖಾಮುಖಿಯಾಗಿ, ಹಿಂದಿನದನ್ನು ವರ್ತಮಾನದಲ್ಲಿ ಗ್ರಹಿಸಬಹುದೆಂದು ತಿಳಿಯುತ್ತಾನೆ. ಈ ಚಿಂತನಾ ಮಾದರಿಯಲ್ಲೇ ಸತ್ಯವನ್ನು ಯಥಾರ್ಥವಾಗಿ ನಿರೂಪಿಸಲು ಸಾಧ್ಯವೆಂದು ಹೇಳುತ್ತಾನೆ. ಈ ಹಿನ್ನೆಲೆಯಲ್ಲಿಯೇ ಹೆರೊಡೋಟಸನ ಬರವಣಿಗೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಾನೆ. ಸತ್ಯವನ್ನು ತಿಳಿಯಲು ಸಾಧ್ಯವಿಲ್ಲದ ಕಥನವನ್ನು ಬರೆದಿದ್ದಕ್ಕಾಗಿ ಛೇಡಿಸುತ್ತಾನೆ. ಒಂದು ಕೃತಿ ಸತ್ಯವನ್ನಲ್ಲದೆ ಮತ್ತೇನನ್ನೂ ಹೇಳಬಾರದು. ರಂಜನೀಯ ವಿಷಯಗಳನ್ನು ತರಲೇಬಾರದೆಂದು ಹೇಳುತ್ತಾನೆ. ತಾನು ಅನ್ವೇಷಿಸುತ್ತಿರುವ ಘಟನೆಗಳಿಗೆ ಪ್ರತ್ಯಕ್ಷದರ್ಶಿಯಾಗಬೇಕು ಎಂದು ಬಯಸುತ್ತಾನೆ. ತನ್ನ ಕಾಲದ ರಾಜಕೀಯ ಮತ್ತು ಮಿಲಿಟರಿ ಕಾರ್ಯಾಚರಣೆಗಳಿಗೆ ಚರಿತ್ರೆಕಾರನಾಗಿ ವಿಶೇಷವಾಗಿ ಮುಖಾಮುಖಿಯಾದನು. “ನನ್ನ ಕಥನವು ನಾನು ಸ್ವತಃ ನೋಡಿದ ಮತ್ತು ಇತರರ ವರದಿಗಳ ಮೇಲೆ ಎಚ್ಚರದಿಂದ ನಿರ್ವಹಿಸಿದ ಸಂಶೋಧನೆ… ನನ್ನ ನಿರ್ಣಯಗಳು ಅತಿ ಪ್ರಯತ್ನದಿಂದ ಬಂದವುಗಳಾಗಿವೆ…” ಎಂದು ಹೇಳುವುದರ ಮುಖಾಂತರ ವಸ್ತುನಿಷ್ಠ ಚರಿತ್ರೆಯನ್ನು ಕಟ್ಟುವ ಚರಿತ್ರೆಕಾರನೊಬ್ಬನಿಗೆ ಇರಬೇಕಾದ ಬದ್ಧತೆಯನ್ನು ಮತ್ತೆ ಮತ್ತೆ ನೆನಪಿಸುತ್ತಾನೆ.

ಇವನು ತನ್ನ ಕೃತಿಗಳಲ್ಲಿ ಕ್ರಿ.ಪೂ. ೫ನೆಯ ಶತಮಾನದ ಉತ್ತರಾರ್ಧದಲ್ಲಿ ಅಥೆನ್ಸ್‌ನ ಮತ್ತು ಒಟ್ಟಾರೆ ಗ್ರೀಸ್‌ನ ಬೌದ್ಧಿಕ ಚಿಂತನೆಯ ನೆರಳನ್ನು ಕಟ್ಟಿಕೊಡುತ್ತಾನೆ. ಹೆಲೆನಿಕ್‌ ಸಂಸ್ಕೃತಿಯ ಸೂಕ್ಷ್ಮಗಳನ್ನು ಅನಾವರಣಗೊಳಿಸುತ್ತಾನೆ. ಆಧರೆ ಚರಿತ್ರೆಕಾರನಾಗಿ ಅವನಲ್ಲಿಯೂ ಮಿತಿಗಳಿದ್ದವು. ವರ್ತಮಾನಕ್ಕೆ ಅತಿಯಾಗಿ ಅಂಟಿಕೊಂಡಿದ್ದುದೇ ಅವನ ದೊಡ್ಡಮಿತಿ. ಗ್ರೀಕ್‌ನಿಂದಾಚೆಗಿನ ಜಗತ್ತಿನ ಬಗೆಗೆ ಒಂದು ರೀತಿಯ ನಿರ್ಲಕ್ಷ್ಯ ಅವನಲ್ಲಿ ಕಾಣುತ್ತದೆ. ಸಮಾಜವನ್ನು ಒಟ್ಟಾರೆ ನೋಡದೆ ಕೇವಲ ರಾಜಕೀಯ ಮತ್ತು ಯುದ್ಧ ಚರಿತ್ರೆಯನ್ನು ಕಟ್ಟುವುದರಲ್ಲಿಯೇ ಮಗ್ನನಾಗಿ ಬಿಡುತ್ತಾನೆ. ಇಷ್ಟೆಲ್ಲಾ ಮಿತಿಗಳ ನಡುವೆಯೂ ಥೂಸಿಡೈಡ್ಸ್‌ನಮಗೆ ಹೆರಡೋಟಸ್‌ನಿಗಿಂತ ಹೆಚ್ಚು ವೈಜ್ಞಾನಿಕವಾಗಿ ಕಾಣುತ್ತಾನೆ.

ಥೂಸಿಡೈಡ್ಸ್‌ನ ನಂತರದಲ್ಲಿ ಗ್ರೀಸ್ ಚರಿತ್ರೆ ಲೇಖನ್ ಸಂಪ್ರದಾಯ ಕ್ಷೀಣಸ್ಥಿತಿಯಲ್ಲಿ ಮುಂದುವರಿದದ್ದನ್ನು ಕಾಣಬಹುದು. ಈ ಅವಧಿಯನ್ನು ಹೆಲೆನಿಸ್ಟಿಕ್‌ ಕಾಲವೆಂತಲೇ ಕರೆಯಲಾಗಿದೆ. ಈ ಅವಧಿಯಲ್ಲಿ ಜೆನೋಫನ್ ಮತ್ತು ಪೋಲಿಬಿಯಸ್ ಪ್ರಮುಖ ಚರಿತ್ರೆಕಾರರಾಗಿದ್ದರು. ಆದರೆ ಈ ಇಬ್ಬರು ಕೂಡ ಮೊದಲಿನ ಇಬ್ಬರ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಲಿಲ್ಲ. ಜೆನೋಫನ್ (ಕ್ರಿ.ಪೂ. ೪೩೦-೩೪೫) ಸಾಕ್ರೆಟಿಸನ ಶಿಷ್ಯನಾಗಿದ್ದನು. ಇವನು ‘ಹೆಲೆನಿಕ’ ಮತ್ತು ‘ಅನಬಸಿಸ್’ ಎಂಬ ಕೃತಿಗಳನ್ನು ರಚಿಸಿದನು. ಇವನ ಕೃತಿಗಳಲ್ಲಿ ವಸ್ತುನಿಷ್ಠತೆ ಮತ್ತು ಖಚಿತತೆಯ ಮಿತಿಯು ಕಾಣುತ್ತದೆ. ಬರವಣಿಗೆ ಶೈಲಿಯಲ್ಲೂ, ಜಾಳುಜಾಳನ್ನು ಕಾಣುತ್ತೇವೆ.

ಪೋಲಿಬಿಯಸ್, ಗ್ರೀಕ್ ದೇಶದವನಾದರೂ ರೋಮನ್ ಸಾಮ್ರಾಜ್ಯದಲ್ಲಿ ನೆಲೆಸುವ ಸಂದರ್ಭ ಒದಗಿಬರುತ್ತದೆ. ಅವನ ಬರವಣಿಗೆಯ ಕೃಷಿ ನಡೆದದ್ದು ರೋಮ್ ಚರಿತ್ರೆಯನ್ನು ಕುರಿತಂತೆ. ಈ ಕಾರಣಕ್ಕಾಗಿಯೆ ಇವನನ್ನು ರೋಮನ್ ಚರಿತ್ರ ಲೇಖನ ಸಂಪ್ರದಾಯದ ಭಾಗವಾಗಿಯೇ ನೋಡುವುದು ಹೆಚ್ಚು ಸೂಕ್ತವಾಗಿದೆ.

ಒಟ್ಟಾರೆ ಗ್ರೀಕ್ ಚರಿತ್ರ ಲೇಖನ ಸಂಪ್ರದಾಯ ಒಂದು ಹೊಸ ಬೌದ್ಧಿಕ ಅನ್ವೇಷಣೆಗೆ ನಾಂದಿಯಾಡಿತು. ಗ್ರೀಕ್ ಚರಿತ್ರೆಕಾರರಿಗೆ ಜಗತ್ತೆಂದರೆ ಕೇವಲ ಅಥೆನ್ಸ್ ಅಥವಾ ಗರಿಷ್ಠ ಪ್ರಮಾಣದಲ್ಲಿ ಗ್ರೀಕ್ ದೇಶ ಮಾತ್ರವಾಗಿತ್ತು. ಅವರಲ್ಲಿ ತಾವು ಗ್ರೀಕರೆನ್ನುವುದು ಒಂದು ಬೌದ್ಧಿಕ ಅಹಂ ಅನ್ನು ತಂದಿತ್ತು. ಅಲೆಗ್ಸಾಂಡರನ ಪ್ರಪಂಚ ಪರ್ಯಟನ ಘಟನೆ ನಂತರ ಅವರಲ್ಲಿ ಜಗತ್ತಿನ ಬಗೆಗಿನ ಕಲ್ಪನೆ ವಿಸ್ತಾರಗೊಳ್ಳುತ್ತಾ ಹೋಯಿತು. ಘಟನೆಗಳನ್ನು ವೀಕ್ಷಿಸಿ ಮತ್ತು ಇತರರಿಂದ ಪಡೆದ ಮಾಹಿತಿಯನ್ನು ವಿಶ್ಲೇಷಿಸಿ ಚರಿತ್ರೆಯನ್ನು ರಚಿಸುವ ಕೆಲಸ ಪ್ರಧಾನವಾಗಿ ಗ್ರೀಕರಲ್ಲಿತ್ತು. ರೋಮನ್ ಸಂಪ್ರದಾಯದ ಪ್ರಾರಂಭದಿಂದ ಚರಿತ್ರೆಯನ್ನು ಬರೆಯುವ ವಿಧಾನದಲ್ಲಿ ಹೊಸ ಹೊಸ ಕ್ರಮಗಳು ಮೂರ್ತಗೊಳ್ಳಲು ಪ್ರಾರಂಭವಾಗಿದ್ದನ್ನು ಪ್ರಮುಖವಾಗಿ ಗಮನಿಸಬಹುದು. ಹಾಗೆಯೇ ಚರಿತ್ರೆ ಎಂಬುದು ಕೇವಲ ಸಮಕಾಲೀನ ಘಟನೆಗಳನ್ನು ಕುರಿತು ಬರೆಯುವುದಿಲ್ಲ, ಹಿಂದಿನ ಶತಮಾನಗಳನ್ನು ಪರಿಗಣಿಸಿ ಅವುಗಳ ಚರಿತ್ರೆಯನ್ನು ಬರೆಯುವುದು ಹೊಸ ಪರಂಪರೆ ಪ್ರಾರಂಭವಾಯಿತು. ಒಟ್ಟಾರೆ ಗ್ರೀಕ್ ಚರಿತ್ರ ಲೇಖನ ಸಂಪ್ರದಾಯ ಹೊಸ ಬೌದ್ಧಿಕ ಬೆಳಕೊಂದರ ಆವಿಷ್ಕಾರವನ್ನು ಸಾಧ್ಯವಾಗಿಸಿತು.

ಗ್ರೀಕ್ ಚರಿತ್ರೆಕಾರರು ಚರಿತ್ರೆಯೆಂದರೆ ತಮ್ಮ ಸಮಕಾಲೀನ ಸಂದರ್ಭದ ಜೀವನ ಚರಿತ್ರೆ ಎಂದು ಭಾವಿಸಿ ಬರೆದಿದ್ದನ್ನು ಈಗಾಗಲೇ ನೋಡಿದ್ದೇವೆ. ಈ ಸಂಪ್ರದಾಯದಿಂದ ಹೊರಗಡೆ ಬಂದು ಚರಿತ್ರೆಯೆಂದರೆ ತಮ್ಮ ಸಮಾಜ ರೂಪುಗೊಂಡ ದೀರ್ಘ ಹಿನ್ನೆಲೆಯನ್ನು ಅಧ್ಯಯನ ಮಾಡುವುದೆಂಬ ಹೊಸ ಆಲೋಚನೆಯನ್ನು ಕ್ರಮೇಣ ಆವಿಷ್ಕರಿಸಿದರು. ಹೀಗಾಗಿ ಅವರು ಚರಿತ್ರೆಯನ್ನು ರಚಿಸಲು ಬಳಸಿಕೊಳ್ಳಲು ಹೊಸ ಆಕರಗಳ ಹುಡುಕಾಟಕ್ಕೆ ತೊಡಗಿದರು. ಈ ಹೊಸ ಸ್ವರೂಪದ ಚರಿತ್ರೆಯನ್ನು ಬರೆಯುವ ಆಲೋಚನಾಕ್ರಮ, ಹುಟ್ಟಿನಿಂದ ಗ್ರೀಕನಾದರೂ ರೋಮನ್ ಚರಿತ್ರೆಯನ್ನು ಬರೆದ ಪೋಲಿಬಿಯಸ್‌ನಲ್ಲಿ ಸ್ಪಷ್ಟವಾಗಿ ಕಾಣಬಹುದು.

ಪೋಲಿಬಿಯಸ್ (ಕ್ರಿ.ಪೂ. ೨೦೪-೧೨೨)

ಪೋಲಿಬಿಯಸ್ ಅಥೆನ್ಸ್ ಲೀಗಿನ ಒಬ್ಬ ಪ್ರಮುಖ ರಾಜಕಾರಣಿಯ ಮಗನಾಗಿದ್ದನು. ಬಾಲ್ಯದಿಂದಲೇ ರಾಜಕೀಯ ಆಗು ಹೋಗುಗಳಲ್ಲಿ ಆಸಕ್ತಿಯನ್ನು ತಳೆದಿದ್ದನು. ಗ್ರೀಕ್-ರೋಮನ್ ಯುದ್ಧದಲ್ಲಿ ಭಾಗವಹಿಸಿದ್ದ ಇವನು ಕ್ರಮೇಣ ಒತ್ತೆಯಾಳಾಗಿ ರೋಮನ್ ಸೇನಾ ನಾಯಕನ ಮನೆ ಸೇರಿದನು. ಬುದ್ಧಿವಂತನಾದ ಪೋಲಿಬಿಯಸ್‌ನ ಈ ಘಟನೆಯ ಲಾಭಪಡೆದು ರೋಮನ್ನರ ಜೊತೆ ಸಾಂಸ್ಕೃತಿಕವಾಗಿ ಸಮ್ಮಿಲನಗೊಳ್ಳಲು ಪ್ರಯತ್ನಿಸಿ ರೋಮನ್ ಸಂಸ್ಕೃತಿಯ ಕುರಿತಾದ ಒಳನೋಟಗಳನ್ನು ಗಳಿಸಿಕೊಂಡನು. ಅಥೆನ್ಸ್‌ನ ಬೌದ್ಧಿಕ ಹಿನ್ನೆಲೆ ಅವನ ಯೋಚನಾಕ್ರಮದ ಹಿನ್ನೆಲೆಯಲ್ಲಿ ದೊಡ್ಡ ಬಂಡವಾಳವಾಗಿ ಯಾವತ್ತೂ ಕೆಲಸಮಾಡಿತ್ತು. ಹೀಗಾಗಿಯೇ ಗ್ರೀಕ್ ಚರಿತ್ರೆ ಕುರಿತಾದ ಯೋಚನಾಕ್ರಮವನ್ನು ಅವನು ದೊಡ್ಡದಾಗಿಯೇ ಮೀರಲು ಸಾಧ್ಯವಾಯಿತು.

ಗಾಢ ಪ್ರತಿಭೆಯ ಪೋಲಿಬಿಯಸ್ ತನ್ನ ಕಾಲಕ್ಕಿಂತ ಹಿಂದಿನ ೧೫೦ ವರ್ಷಗಳ ರೋಮನ್ ಯುದ್ಧಗಳ ಚರಿತ್ರೆಯನ್ನು ಕಟ್ಟುವ ಕೆಲಸವನ್ನು ಕೈಗೆತ್ತಿಕೊಂಡನು. ತಮ್ಮ ತಲೆಮಾರಿಗೆ ಸೀಮಿತವಾಗಿದ್ದ ಗ್ರೀಕರ ಚರಿತ್ರೆ ಅಧ್ಯಯನ ಪೋಲಿಬಿಯಸ್‌ನಲ್ಲಿ ತನ್ನ ಹಿಂದಿನ ಐದು ತಲೆಮಾರುಗಳಿಗೆ ವಿಸ್ತರಿಸಿತು. ಚರಿತ್ರೆಯ ಬಗೆಗೆ ರೋಮನ್ನರಲ್ಲಿದ್ದ ಭಾವನೆ; ಚರಿತ್ರೆಯೆಂಬುದು ನಿರಂತರ ಹರಿಯುವ ಧಾರೆ ಎಂಬುದು ಅವನ ಮೇಲೆ ಪರಿಣಾಮವನ್ನುಂಟು ಮಾಡಿದ್ದೇ ಅಷ್ಟೊಂದು ದೊಡ್ಡ ವಿಸ್ತಾರದ ಚಾರಿತ್ರಿಕ ಅಧ್ಯಯನವನ್ನು ಅವನು ಕೈಗೆತ್ತಿಕೊಳ್ಳಲು ಸಾಧ್ಯವಾಗಿಸಿತು. ರೋಮನ್ನರು ತಮ್ಮ ಪೂರ್ವಜರಿಂದ ಬಂದ ಸಂಸ್ಥೆಗಳನ್ನು, ಸಂಪ್ರದಾಯಗಳನ್ನು ಪ್ರಜ್ಞಾಪೂರ್ವಕವಾಗಿ ಸಂರಕ್ಷಿಸುವ ಮನೋಧರ್ಮದವರಾಗಿದ್ದರು. ಹಿಂದಿನ ತಲೆಮಾರು ಬಿಟ್ಟುಹೋದ ಎಲ್ಲವನ್ನು ಗೌರವಿಸುತ್ತಿದ್ದರು. ಇದು ರೋಮನ್ನರಲ್ಲಿ ತಮ್ಮ ಚರಿತ್ರೆಯನ್ನು ಕುರಿತಾದ ವಿಫುಲ ಸಾಮಗ್ರಿಯನ್ನು ರಕ್ಷಿಸಿಟ್ಟುಕೊಳ್ಳುವಲ್ಲಿ ಸಹಕಾರಿಯಾಯಿತು. ಈ ಸಂರಕ್ಷಿಸಲ್ಪಟ್ಟ ದಾಖಲೆಗಳನ್ನೇ ಪೋಲಿಬಿಯಸ್ ಬಳಸಿಕೊಂಡನು.

ಇವನ ರೋಮನ್ ಚರಿತ್ರೆ ಪ್ರಾರಂಭವಾಗುವುದು ಅದು ಪೂರ್ಣಪ್ರಮಾಣದಲ್ಲಿ ರೂಪುಗೊಂಡ ನಂತರವೇ. ರೋಮನ್ ಚರಿತ್ರೆಯ ಬಾಲ್ಯಾವಸ್ಥೆಯನ್ನು ಅವನು ಗುರುತಿಸುವ ಪ್ರಯತ್ನ ಮಾಡುವುದಿಲ್ಲ. ರೋಮನ್ ಯುದ್ಧಗಳನ್ನು ಮಾಡಿ ಗೆಲ್ಲುವ ಹಂತಕ್ಕೆ ಬಂದಾಗಿನ ಚರಿತ್ರೆ ಪೋಲಿಬಿಯಸನಿಗೆ ಆಸಕ್ತಿ ತರುತ್ತದೆ. ಅವರ ಸಮಾಜ, ಸಂಸ್ಕೃತಿಯ ಮೂಲಗಳ ಪ್ರಶ್ನೆ ಬಂದಾಗ ಗ್ರೀಕ್ ಚರಿತ್ರೆಕಾರರು ಹಾಗೂ ಪೋಲಿಬಿಯಸ್ ಒಂದೆಡೆಯೇ ನಿಲ್ಲುತ್ತಾರೆ, ಎಂದರೆ ಅವನು ಗ್ರೀಕನಾಗಿಯೆ ಇರುತ್ತಾನೆ.

ಪೋಲಿಬಿಯಸ್‌ನ ಇನ್ನೊಂದು ವಿಶೇಷತೆಯೆಂದರೆ ಚರಿತ್ರೆಯನ್ನು ಒಂದು ಅವಶ್ಯಕ ಅಥವಾ ಮೌಲಿಕ ಶಾಸ್ತ್ರವನ್ನಾಗಿ ನೋಡುವ ಕ್ರಮ. ಚರಿತ್ರೆಯ ಅಧ್ಯಯನ ಅತ್ಯವಶ್ಯವೆಂದು ಪ್ರಜ್ಞಾಪೂರ್ವಕವಾಗಿ ಸಾರಿದ ಪ್ರಪ್ರಥಮ ಚರಿತ್ರೆಕಾರ. ಚರಿತ್ರೆ ಎನ್ನುವುದು ವಿಜ್ಞಾನವೆಂದೇ ಭಾವಿಸಿದ ತನ್ನ ಹಿಂದಿನ ಗ್ರೀಕ್ ಚರಿತ್ರೆಕಾರರನ್ನು ಒಪ್ಪದೇ, ಇದು ಬೇರೆಯದೆ ಶಾಸ್ತ್ರವೆಂದು ಪ್ರತಿಪಾದಿಸಿದನು ಹಾಗೂ ರಾಜಕೀಯ ಜೀವನಕ್ಕೆ ಅತ್ಯವಶ್ಯವಾದುದೆಂದನು. ಇದರರ್ಥ ಚರಿತ್ರೆಯನ್ನು ಅಧ್ಯಯನ ಮಾಡಿದವನು. ಅದರಲ್ಲಾಗಿರಬಹುದಾದ ತಪ್ಪುಗಳನ್ನು ಮತ್ತೆ ಮಾಡುವುದಿಲ್ಲವೆಂಬ ಪ್ರಮೇಯವನ್ನು ಇವನು ಒಪ್ಪುವುದಿಲ್ಲ. ಸಂದರ್ಭವೊಂದರ ಯಶಸ್ಸಿಗಿಂತ ತನ್ನ ಮೇಲಿನ ಯಶಸ್ಸು ಈ ಅಧ್ಯಯನದಿಂದ ಲಭ್ಯವೆಂದು ನಂಬಿದ್ದನು. ಚರಿತ್ರೆಯ ದೊಡ್ಡನಾಯಕರು ಅನುಭವಿಸಿದ ದುರಂತಗಳನ್ನು ನಮ್ಮ ಜೀವನದಲ್ಲಿ ನುಸುಳದಂತೆ ತಡೆಯುವುದಕ್ಕಿಂತ ಬಂದ ದುರಂತಗಳನ್ನು ಹೇಗೆ ಎದುರಿಸುವುದೆಂಬುದನ್ನು ಚರಿತ್ರೆಯ ಓದಿನಿಂದ ಸಾಧ್ಯವೆಂಬುದನ್ನು ಸಾರಿದ. ಪೋಲಿಬಿಯಸನಿಗೆ ರೋಮನ್ನರ ಮನೋಧರ್ಮ ನಡೆದುಕೊಳ್ಳುತ್ತಿದ್ದ ರೀತಿ, ಹೊಂದಾಣಿಕೆಗಳು, ಧರ್ಮ ಕುರಿತಾದ ಚಿಂತನೆಗಳು, ಚುನಾವಣೆ ನಡೆಸುವ ಅವರ ಕ್ರಮ ಎಲ್ಲವನ್ನು ಮೆಚ್ಚಿಕೊಂಡ ಹಾಗೆ ಅವರ ಆರ್ಥಿಕ ಸಂಪತ್ತಿನ ಅತಿಯಾದ ವ್ಯಾಮೋಹವನ್ನು ತಿರಸ್ಕರಿಸುತ್ತಾನೆ.

ಪೋಲಿಬಿಯಸ್‌ ಮೇಲೆ ಹೇಳಿದ ಅನೇಕ ವಿಚಾರಗಳನ್ನು ತಮ್ಮ ಕೃತಿ ‘ಯುನಿವರ್ಸಲ್ ಹಿಸ್ಟರಿ’ಯ ೪೦ ಸಂಪುಟಗಳಲ್ಲಿ ಚರ್ಚಿಸುತ್ತಾನೆ. ಆದರೆ ಎಲ್ಲಾ ಸಂಪುಟಗಳು ಲಭ್ಯವಾಗಿಲ್ಲ. ಈ ಕೃತಿ ರಚನೆಯಲ್ಲಿ ಶಾಸನಗಳು, ದಾಖಲೆಗಳು ಮುಂತಾದುವುಗಳನ್ನು ಬಳಸುತ್ತಾನೆ. ಪ್ರವಾಸ ಸಾಹಸಿಯೂ ಆಗಿದ್ದ ಪೋಲಿಬಿಯಸ್ ಯುರೋಪಿನ ಅನೇಕ ದೇಶಗಳಲ್ಲಿ ಸಂಚರಿಸಿ ನಕ್ಷೆಗಳನ್ನು ತಯಾರಿಸಿದನು. ಅಲ್ಲಿನ ಇತಿಹಾಸ ದಾಖಲೆಗಳನ್ನು ಸಂಗ್ರಹಿಸಿ ವಸ್ತುನಿಷ್ಠ ಅಧ್ಯಯನವನ್ನು ನಡೆಸಿದನು. ಚರಿತ್ರೆ ರಚಿಸುವವರಿಗೆ ಮೂರು ವಿಷಯಗಳು ಅತ್ಯವಶ್ಯಕವೆಂದು ಭಾವಿಸಿದನು. ೧. ಭೌಗೋಳಿಕ ಜ್ಞಾನ ೨. ಯುದ್ಧಗಳೂ ಸೇರಿದಂತೆ ರಾಜಕೀಯದ ಅರಿವು ಮತ್ತು ೩. ಚರಿತ್ರೆಯ ಲಿಖಿತ ಆಧಾರಗಳ ಸಂಗ್ರಹಣ, ವರ್ಗೀಕರಣ ಮತ್ತು ವಿಶ್ಲೇಷಣೆ. ಚರಿತ್ರೆಯಲ್ಲಿನ ಯಾವುದೇ ಘಟನೆಯಾದರೂ ಅದು ಬಹುರೂಪಿ ಆಯಾಮಗಳನ್ನು ಹೊಂದಿರುತ್ತದೆ ಹಾಗೂ ಚರಿತ್ರೆಕಾರನು ಈ ಬಹುರೂಪಿ ಆಯಾಮಗಳನ್ನು ಅವಶ್ಯಕವಾಗಿ ತಿಳಿದಿರಬೇಕು ಎಂದು ತಿಳಿಸಿದನು. ಇವನಿಂದ ಹೆಲೆನಿಕ್ ಸಂಪ್ರದಾಯದ ಚರಿತ್ರೆ ರಚನಾಚಿಂತನೆಯು ಲ್ಯಾಟಿನ್‌ಚರಿತ್ರೆಕಾರರ ಕೈಸೇರಿತು.

ರೋಮನ್ ಚರಿತ್ರೆ ಲೇಖನ ಪ್ರಾರಂಭ

ರೋಮನ್ನರು ಯುದ್ಧಮುಖಿಗಳಾಗಿಯೇ ಬಹುತೇಕ ತೊಡಗಿಸಿಕೊಂಡಿದ್ದರು. ದ್ವಿತೀಯ ಪ್ಯೂನಿಕ್‌ ಯುದ್ದದ ಕೊನೆಯವರೆವಿಗೂ ರೋಮ್ ಇತಿಹಾಸದ ರಚನೆಗೆ ಚಾಲನೆ ಸಿಗಲಿಲ್ಲ. ಅವರು ಬೇರೆ ಬೇರೆ ದೇಶಗಳ ಮೇಲೆ ಧಾಳಿ ನಡೆಸಿ ಸಾಮ್ರಾಜ್ಯ ವಿಸ್ತರಿಸುವ ಹಾಗೂ ರಾಜಕೀಯ ಸಂಸ್ಥೆಗಳನ್ನು ಕಟ್ಟುವ ಕಾಯಕದಲ್ಲಿ ಮಗ್ನರಾಗಿದ್ದರು. ಲೌಕಿಕ ಉದ್ದೇಶಗಳಲ್ಲೇ ಮುಳುಗಿ ಹೋಗಿದ್ದರು. ಪ್ಯೂನಿಕ್‌ ಯುದ್ಧದ ನಂತರ ಇವರ ಬೌದ್ಧಿಕ ದರ್ಶನದ ಬಗೆಗೆ ಚಿಂತನೆ ಪ್ರಾರಂಭವಾಯಿತು. ಇವರ ಬೌದ್ಧಿಕ ಪ್ರೇರಣೆಗೆ ಗ್ರೀಕ್ ಚಿಂತನಾಕ್ರಮ ಕಾರಣವೆಂಬುದು ಗಮನಾರ್ಹವಾದುದು. ಗ್ರೀಕ್ ಚರಿತ್ರೆಯನ್ನು ಓದಿದ ಇವರು ರೋಮನ್ನರ ಸಾಧನೆಗಳನ್ನು ದಾಖಲು ಮಾಡಬೇಕೆಂದು ಹೊರಟರು ಹಾಗೂ ಸ್ವತಂತ್ರ ಬೌದ್ಧಿಕ ಮಾರ್ಗಗಳನ್ನು ಕಟ್ಟತೊಡಗಿದರು. ಪೋಲಿಬಿಯಸನ ಕೊಡಗೆಯು ಈ ಹೊಸ ಚಿಂತನೆಯ ಹಿನ್ನೆಲೆಯಲ್ಲಿದೆ ಎಂಬುದು ಮುಖ್ಯವಾಗಿ ಗಮನಿಸಬೇಕಾದ ಅಂಶವಾಗಿದೆ. ಪೋಲಿಬಿಸನ ನಂತರ ರೋಮನ್ ಚರಿತ್ರೆ ಲೇಖನ ಸಂಪ್ರದಾಯ ರೋಮನ್ನರ ಕೈಸೇರಿತು. ಫೇಬಿಯಸ್, ಪಿಕ್ಟರ್ ಚರಿತ್ರೆಯ ರಚನೆಗೆ ತೊಡಗಿಸಿಕೊಳ್ಳುವುದಕ್ಕೆ ಮೊದಲು ಅವನು ಯೋಧನಾಗಿದ್ದನು. ಇವನು ‘ಹಿಸ್ಟರಿ ಆಫ್ ರೋಮ್’ ಎಂಬ ಕೃತಿಯನ್ನು ರಚಿಸಿದನು. ಲಿವಿಯ ಕಾಲದವರೆಗೂ ಈ ಕೃತಿಯನ್ನು ಅನೇಕ ಚರಿತ್ರೆ ಲೇಖಕರು ಬಳಸಿಕೊಂಡಿದ್ದಾರೆ.

ಆದರೆ ಹಿರಿಯ ಕ್ಯಾಟೋ ಅಥವಾ ಸ್ಪೆನ್ಸರ್ ಕ್ಯಾಟೋ (ಕ್ರಿ.ಪೂ. ೨೩೪-೧೪೯) ರೋಮನ್ ಚರಿತ್ರೆ ಲೇಖನ ಸಂಪ್ರದಾಯದ ಮೊದಲ ನಿರ್ಮಾತೃ. ಇವನಿಂದ ರೋಮನ್ ಚರಿತ್ರೆ ಲೇಖನ ಸಂಪ್ರದಾಯದ ಸ್ವರೂಪ ಬದಲಾವಣೆಗೊಳಗಾಯಿತು. ವಸ್ತುವಿನ ಆಯ್ಕೆ, ಆಧಾರಗಳನ್ನು ನೋಡುವ ಕ್ರಮ, ಬರೆಯುವ ವಿಧಾನ, ಬಳಸುವ ಭಾಷೆ-ಹೀಗೆ ಎಲ್ಲ ಹಂತದಲ್ಲೂ ಚರಿತ್ರೆ ಲೇಖನ ಕ್ರಿಯೆ ದೊಡ್ಡ ಬದಲಾವಣೆಗೊಳಗಾಯಿತು. ಪ್ರಥಮ ಬಾರಿಗೆ ರೋಮನ್ನರ ಭಾಷೆಯಾದ ಲ್ಯಾಟಿನ್‌ನಲ್ಲಿ ಚರಿತ್ರೆಯನ್ನು ರಚಿಸಿ ‘ರೋಮನ್’ ಎಂಬ ಸಾಂಸ್ಕೃತಿಕ ಮುದ್ರೆಯನ್ನೊತ್ತಿದನು.

ಕ್ಯಾಟೋ ಸಾಮಾನ್ಯ ರೈತ ಕುಟುಂಬದಿಂದ ಬಂದವನು. ತನ್ನ ಸ್ವಂತ ಪರಿಶ್ರಮ ಮತ್ತು ಪ್ರತಿಭೆಯ ಫಲವಾಗಿ ಅನೇಕ ಹುದ್ದೆಗಳನ್ನು ಪಡೆದನು. ಕೊನೆಗೆ ಜನಗಣತಿ ಅಧಿಕಾರಿ ಪದವಿಗೇರಿದನು. ಅವನು ಹೊಂದಿದ್ದ ಇತರ ಹುದ್ದೆಗಳೆಂದರೆ ಕೋಶಾಧ್ಯಕ್ಷ (ಸಾರ್ವಜನಿಕ ಕಟ್ಟಡ), ನಗರ ರಕ್ಷಕರ ಮೇಲ್ವಿಚಾರಕ, ನ್ಯಾಯಾಧಿಕಾರಿ (ಈಡ್ಕೈಲ್), ಸೇನಾ ಪ್ರಧಾನ ದಂಡಾಧಿಕಾರಿ (ಪ್ರೀಟರ್), ದಂಡಾಧಿಕಾರಿ (ಕಾನ್ಸರ್), ಪ್ರಾಂತಾಧಿಪತಿ (ಪ್ರೊಕಾನ್ಸಲ್) ಮುಂತಾದುವು. ಇವ ಅಧ್ಯಯನದ ಆಸಕ್ತಿ ವಲಯಗಳು ಅನೇಕವಿದ್ದವು. ಕೃಷಿಯನ್ನು ಕುರಿತ ಅವನ ಕೃತಿ ‘ದಿ ಅಗ್ರಿಕಲ್ಚರ್’ ಆ ಕಾಲದ ಆರ್ಥಿಕ ಚರಿತ್ರೆಯನ್ನು ಅರಿಯುವುದಕ್ಕೆ ಉಪಯುಕ್ತ ಆಕರವಾಗಿದೆ.

ಈತನ ಮತ್ತೊಂದು ಪ್ರಸಿದ್ಧ ಚಾರಿತ್ರಿಕ ಕೃತಿ ‘ದಿ ಆರಿಜನ್ಸ್‌’ ಇದನ್ನು ಲ್ಯಾಟಿನ್ ಭಾಷೆಯಲ್ಲಿ ಬರೆದನು. ಈ ಕೃತಿಯಲ್ಲಿ ರಾಜರ ಅಥವಾ ದಂಡನಾಯಕರ ಅಂಕಿತಗಳನ್ನು ಇವನು ಬಳಸಿಲ್ಲ. ಅವನೇ ಹೇಳುವಂತೆ ರೋಮಿನ ಯುದ್ಧಗಳನ್ನು ಗೆದ್ದುಕೊಟ್ಟವರು ಸಾಮಾನ್ಯ ಸೈನಿಕರು, ಆನೆಗಳು, ಕುದುರೆಗಳು. ಅವನ ಕೃತಿಯಲ್ಲಿ ‘ಸುರಸ್’ ಎನ್ನುವ ಹೆಸರು ಬರುವುದು ಕೂಡ ಒಂದು ಆನೆಯ ಹೆಸರಾಗಿದೆ. ಯುದ್ಧದಲ್ಲಿ ಭಾಗವಹಿಸಿದ ಅಧಿಕಾರಿಗಳನ್ನು ಅಧಿಕಾರ ಸೂಚಕ ನಾಮಪದಗಳಲ್ಲಿಯೇ ಹೆಸರಿಸುತ್ತಾನೆಯೇ ವಿನಾ ಅವರ ಹೆಸರುಗಳಿಂದಲ್ಲ. ಇಂದಿನ ಸಬಾಲ್ಟರ್ನ್ ಚರಿತ್ರೆಕಾರರ ಕಾಳಜಿಗಳ ಪ್ರಾರಂಭವನ್ನು ಇವನಲ್ಲಿಯೇ ಕಾಣಬಹುದು. ಚರಿತ್ರೆಕಾರರಿಗೆ ಸಿಕ್ಕಿರುವ ಆಕರಗಳ ಮುಖೇನ ಅವನ ಸಂವೇದನೆಗಳ ಅನಾವರಣವನ್ನು ಅವನ ಕೃತಿಯಲ್ಲಿಯೇ ಕಾಣಬಹುದಾಗಿದೆ. ದುರಾದೃಷ್ಟವಶಾತ್‌ಅವನ ಪುಸ್ತಕ ಕಳೆದು ಹೋಗಿದೆ.

ರೋಮನ್ ಚರಿತ್ರೆ ಲೇಖನ ಕಲೆಯ ಪರಂಪರೆಯಲ್ಲಿ ಕಾಣುವ ಇನ್ನೊಂದು ಹೆಸರು ಜ್ಯೂಲಿಯಸ್ ಸೀಸರ್ (ಕ್ರಿ.ಪೂ. ೧೦೦-೪೪). ಸೀಸರನು ಜಗತ್ತಿನ ಅತ್ಯುನ್ನತ ಸೇನಾ ನಾಯಕರಲ್ಲೊಬ್ಬನಾಗಿದ್ದನು. ಹಾಗೆಯೇ ಕವಿಯು, ಚರಿತ್ರೆಕಾರನಾಗಿದ್ದನು. ಚರಿತ್ರೆಯನ್ನು ನಿರ್ಮಾಣ ಮಾಡಿದ ಹಾಗೆ ಚರಿತ್ರೆ ಲೇಖನಕಾರನಾಗಿ ತನ್ನನ್ನು ತೊಡಗಿಸಿಕೊಂಡು ‘ಕಾಮೆಂಟರೀಸ್ ಆನ್ ಗಾಲಿಕೆ ವಾರ್ಸ್’ ಎಂಬ ಯುದ್ಧ ಚರಿತ್ರೆಯನ್ನು ರಚಿಸಿದನು. ರೋಮ್‌ನ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವ ತಂತ್ರಗಾರಿಕೆಯಾಗಿಯೂ ಈ ಕೃತಿಯನ್ನು ಅವನು ರಚಿಸಿದನೆನ್ನುವ ಅಭಿಪ್ರಾಯವಿದೆ. ತನ್ನ ಇನ್ನೊಂದು ಕೃತಿಯಾದ ‘ಅನಾಲಜಿ’ಯನ್ನು ತನ್ನ ಸ್ಫೂರ್ತಿಯ ಮೂಲವಾದ ಸಿಸಿರೊಗೆ ಅರ್ಪಿಸಿದ್ದಾನೆ. ಸಿಸಿರೊ ಕೂಡ ‘ಬುಕ್ ಆಫ್‌ ಅರೇಷನ್ಸ್‌’ ಮತ್ತು ‘ಬುಕ್‌ ಆಫ್ ಲೆಟರ್ಸ್‌’ ಎನ್ನುವ ಕೃತಿಗಳನ್ನು ರಚಿಸಿದ್ದಾನೆ. ಇವನು ರೋಮ್‌ನಲ್ಲಿ ಸೆನೆಟರ್ ಆಗಿದ್ದನು. ಸೀಸರನ ಸಮಕಾಲೀನನಾದ ಇವನು ಸೇವೆಯಿಂದ ನಿವೃತ್ತಿಯಾದ ನಂತರ ಚರಿತ್ರೆ ಲೇಖನ ಕಲೆಯಲ್ಲಿ ತೊಡಗಿಸಿಕೊಂಡನು.

ಟೈಟಸ್ ಲಿವಿ (ಕ್ರಿ.ಪೂ. ೫೯- ಕ್ರಿ.ಶ.೧೭)

ರೋಮನ್ ಚರಿತ್ರೆ ಲೇಖನ ಸಂಪ್ರದಾಯದಲ್ಲಿ ಟೈಟಸ್ ಲಿವಿ ಮತ್ತು ಕಾರ್ನೇಲಿಯನ್ ಟ್ಯಾಸಿಟಸ್ ಉತ್ತುಂಗದ ಹೆಸರುಗಳು. ಲಿವಿಯು ಅದ್ಭುತ ಪ್ರತಿಭೆಯ ಚರಿತ್ರೆಕಾರ. ಇವನು ಕ್ರಿ.ಪೂ. ೫೯ ರಲ್ಲಿ ಪಡುವ ಎಂಬ ಸ್ಥಳದಲ್ಲಿ ಜನಿಸಿದನು. ರೋಮ್‌ನಲ್ಲಿ ಜರುಗಿದ ಅನೇಕ ದೊಡ್ಡ ಸ್ಥಿತ್ಯಂತರಗಳಿಗೆ ಇವನು ಸಾಕ್ಷಿಪ್ರಜ್ಞೆಯಾಗಿದ್ದನು. ರೋಮ್‌ನಲ್ಲಿದ್ದ ಜನತಾಂತ್ರಿಕ ವ್ಯವಸ್ಥೆಯ ಪತನ, ರೋಮನ್ ಸಾಮ್ರಾಜ್ಯದ ಉದಯ ಹಾಗೂ ಅಗಸ್ಟಸ್‌ ಆಳ್ವಿಕೆಯ ಆರಂಭ ಕಾಲದ ವೈಭವ ಇವುಗಳನ್ನು ಕಣ್ಣಾರೆ ಕಂಡಿದ್ದನು. ರೋಮ್‌ಗೆ ಒಂದು ಹೊಸ ಸುವರ್ಣಯುಗದ ಪಾದಾರ್ಪಣೆಯಾಯಿತು ಎಂದು ನಂಬಿದ್ದನು. ಜೂಲಿಯಸ್ ಸೀಸರನ ಕೊಲೆಯ ನಂತರ ಇಡೀ ರೋಮ್ ಏಕಾಚಕ್ರಾಧಿಪತ್ಯಕ್ಕೆ ಒಳಪಟ್ಟಿತು. ಲಿವಿಯು ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಚಿಸದೆ ತನ್ನ ಸಮಯ ಶಕ್ತಿಯನ್ನೆಲ್ಲಾ ಅಧ್ಯಯನಕ್ಕೆ ಮೀಸಲಿಟ್ಟನು. ಇವನು ರೋಮ್‌ನ ಚರಿತ್ರೆಯನ್ನು ಅದರ ಶೈಶವದ ಹಂತದಿಂದಲೇ ಬರೆಯುವ ಪ್ರಯತ್ನ ಮಾಡಿದನು.

ಈ ರಾಜಕೀಯ ಬೆಳವಣಿಗೆಗಳು ಲಿವಿ ಚರಿತ್ರೆಯನ್ನು ಗ್ರಹಿಸಿ ಬರೆಯುವುದರ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡಿತು. ರೋಮ್‌ನ ಸುಮಾರು ೭೦೦ ವರ್ಷಗಳ ಚರಿತ್ರೆಯನ್ನು ಇಡಿಯಾಗಿ ಬರೆಯುವ ಪ್ರಯತ್ನ ಮಾಡಿದ್ದಾನೆ. ಅಲ್ಲಿಯವರೆವಿಗೂ ಬಂದಿದ್ದ ಕೃತಿಗಳನ್ನು ಅಭ್ಯಸಿಸಿ ಅದರ ಅರಿವನ್ನು ಬಳಸಿಕೊಂಡಿದ್ದಾನೆ. ರೋಮ್ ಚರಿತ್ರೆಯನ್ನು ಅಗಸ್ಟಸ್‌ನ ಸಾವಿನೊಂದಿಗೆ ಮುಗಿಸುತ್ತಾನೆ.

ಇವನು ಕೃತಿಯ ಪ್ರಾರಂಭದಲ್ಲಿಯೇ ರೋಮನ್ ಚರಿತ್ರೆಯನ್ನು ಪ್ರಾಚೀನ ಮತ್ತು ಅರ್ವಾಚೀನವಾಗಿ ಎರಡು ಭಾಗಗಳಲ್ಲಿ ಗುರುತಿಸುತ್ತಾನೆ. ಇಡೀ ಕೃತಿಯನ್ನು ೧೪೨ ಕೈಪಿಡಿಗಳಲ್ಲಿ ವಿಭಾಗಿಸುತ್ತಾನೆ. ಕೈಪಿಡಿಗಳ ಸಂಖ್ಯೆಯೇ ಅವನು ಎಂತಹ ಪ್ರತಿಭಾವಂತ ಬರಹಗಾರ ಎಂಬುದನ್ನು ಹೇಳುತ್ತದೆ. ೧೪೨ ಕೈಪಿಡಿಗಳಲ್ಲಿ ಕೇವಲ ೩೫ ಮಾತ್ರ ಉಳಿದು ಕೊಂಡಿವೆ. ರೋಮ್‌ನ ಬಹುದೊಡ್ಡ ಸಾಂಸ್ಕೃತಿಕ ಕಥನದ ಕಳವು ಇದಾಗಿದೆ. ಚರಿತ್ರೆಯ ಉದ್ದಕ್ಕೂ ಇಂತಹ ಅನೇಕ ಕಳವುಗಳನ್ನು ಕಾಣಬಹುದು.

ಲಿವಿಯು ಚರಿತ್ರೆ ರಚಿಸಲು ಸರ್ಕಾರಿ ಹಾಗೂ ಖಾಸಗಿ ದಾಖಲೆಗಳನ್ನು ಬಳಸಿಕೊಂಡಿದ್ದಾನೆ. ದಾಖಲೆಗಳನ್ನು ಪೋಣಿಸುತ್ತ ಚರಿತ್ರೆಯನ್ನು ಬರೆಯುತ್ತಾ ಹೋಗುತ್ತಾನೆ. ಪೋಲಿಬಿಯಸ್‌ನ ನಂತರ ನೈತಿಕತೆಯನ್ನು ಸಾರಿದ ಚರಿತ್ರೆಕಾರರೆಂದರೆ ಲಿವಿಯೇ. ಹೀಗಾಗಿಯೇ ಅವನು ತನ್ನನ್ನು ವಸ್ತುನಿಷ್ಠ ಚರಿತ್ರೆಕಾರನೆಂದು ಹೇಳಿಕೊಳ್ಳುವುದಿಲ್ಲ. ರೋಮ್‌ನೈತಿಕವಾಗಿ ಬಲಿಷ್ಠವಾಗಿದ್ದರಿಂದಲೇ ಅದು ದೊಡ್ಡ ಜಗತ್ತೊಂದನ್ನು ಕಟ್ಟಲು ಸಾಧ್ಯವಾಯಿತು ಎಂದು ಹೆಮ್ಮೆಯಿಂದ ಭಾವಿಸುತ್ತಾನೆ.

ರೋಮ್‌ನ ಚರಿತ್ರೆಯನ್ನು ಬರೆಯುವಾಗ ಇಟಲಿಯನ್ನೆ ಪ್ರಧಾನವಾಗಿಟ್ಟುಕೊಂಡು ಬರೆಯುತ್ತಾನೆ. ಇಟಲಿಯಾಚೆಗಿನ ಚರಿತ್ರೆಯನ್ನು ಕಟ್ಟಲು ಆಕರಗಳನ್ನು ನಿಖರವಾಗಿ ಬಳಸಿಕೊಳ್ಳುವ ವಿಷಯದಲ್ಲಿ ಅವನಿಗೆ ಅನುಮಾನ.

ಒಟ್ಟಾರೆ ಲಿವಿಯಲ್ಲಿ ಕೇವಲ ಮೇಲ್ಪದರ ಸಂಶೋಧನೆಯನ್ನು ಕಾಣುತ್ತೇವೆಯೇ ಹೊರತು, ಒಟ್ಟು ರೋಮ್ ಸಂಸ್ಕೃತಿ ಅದರ ಆಂತರಿಕ ಸಂಘರ್ಷಗಳಿಂದ ಹೇಗೆ ರೂಪುಗೊಂಡಿತು ಎಂಬುದನ್ನಲ್ಲ. ಒಟ್ಟು ರೋಮ್ ಪರಂಪರೆಯನ್ನು ಪುನರ್‌ವ್ಯಾಖ್ಯಾನಕ್ಕೆ ಒಳಪಡಿಸುವುದಿಲ್ಲ. ಮೇಲ್ನೋಟಕ್ಕೆ ಕಾಣುವುದನ್ನೇ ಸತ್ಯವೆಂದು ಹೇಳುತ್ತಾ ಹೋಗುತ್ತಾನೆ. ಈ ಎಲ್ಲಾ ಮಿತಿಗಳಲ್ಲಿಯೂ ಲಿವಿ ಪ್ರಮುಖ ಸಂಸ್ಕೃತಿ ಚರಿತ್ರಕಾರನಾಗಿ ಕಾಣುತ್ತಾನೆ.

ಕಾರ್ನೇಲಿಯನ್ ಟ್ಯಾಸಿಟಸ್ (ಕ್ರಿ.ಶ. ೫೫-೧೨೦)

ರೋಮನ್ ಚರಿತ್ರಕಾರರಲ್ಲೆ ಅತ್ಯಂತ ಪ್ರಮುಖನೆಂದು ಪರಿಗಣಿಸಲ್ಪಟ್ಟಿದ್ದಾನೆ. ಇವನು ವಿಫುಲವಾಗಿ ಚರಿತ್ರೆಯನ್ನು ಬರೆದಿರುವ ಲೇಖಕನಾಗಿ ಪ್ರಮುಖವಾಗಿ ಒಪ್ಪಬಹುದೇ ಹೊರತು, ಚರಿತ್ರೆಯನ್ನು ಕಟ್ಟುವಾಗಿನ ವೈಜ್ಞಾನಿಕ ಬದ್ಧತೆಯಿಂದಲ್ಲ. ರೋಮ್‌ಗೆ ಸಂಬಂಧಿಸಿದ ವಿಷಯಗಳ ಬಗೆಗೆ ಸೀಮಿತಗೊಳ್ಳುತ್ತಾನೆಯೇ ವಿನಹ ರೋಮ್ ಚಕ್ರಾಧಿಪತ್ಯವನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ರೋಮ್‌ ಎಂಬ ಮನೆಯೊಳಗಿನವನಾಗಿ ಭಾವೋದ್ದೀಪನ ಸ್ಥಿತಿಯಲ್ಲೇ ರೋಮನ್ನು ನೋಡುತ್ತಾನೆಯೇ ಹೊರತು ವಸ್ತುನಿಷ್ಠ ಕನ್ನಡಕದಲ್ಲಿ ನೋಡಲು ಪ್ರಯತ್ನಿಸುವುದಿಲ್ಲ. ಯುದ್ಧಗಳ ಒಳಗಡೆಯ ಕ್ರೌರ್ಯ, ಅಮಾನವೀಯತೆ, ವಾಸ್ತವತೆ, ಮುಂತಾದವುಗಳನ್ನು ಗ್ರಹಿಸದೆ ಯುದ್ಧ ಜಯವನ್ನೇ, ಯುದ್ಧೋನ್ಮಾದವನ್ನೇ ವಿಜೃಂಭಿಸಿ ಬರೆಯುತ್ತಾನೆ. ವಸ್ತುನಿಷ್ಠ ಚರಿತ್ರೆಕಾರನೊಬ್ಬನಿಗೆ ಇರಬೇಕಾದ ಸಂಶೊಧನಾ ಬದ್ಧತೆಯನ್ನು ಅವನು ತೋರಿಸುವುದಿಲ್ಲ. ಚರಿತ್ರೆಯನ್ನು ತಾತ್ವಿಕತೆಯ ಪರಿಧಿಗೂ ತರುವುದಿಲ್ಲ. ಕೇವಲ ಸಮಕಾಲೀನ ತುರ್ತುಗಳಿಗೆ ಮಾತ್ರ. ಚರಿತ್ರೆಯನ್ನು ಕಟ್ಟುವ ಕೆಲಸ ಮಾಡುತ್ತಾನೆ.

ಟ್ಯಾಸಿಟಸನು ನ್ಯಾಯಶಾಶ್ತ್ರವನ್ನು ಅಧ್ಯಯನ ಮಾಡಿ ವಕೀಲಿ ವೃತ್ತಿಯನ್ನು ಕೈಗೊಂಡಿದ್ದನು. ಇವನು ಒಂದು ಶ್ರೀಮಂತ ಕುಟುಂಬಕ್ಕೆ ಸೇರಿದವನಾಗಿದ್ದನು. ರಾಜಕೀಯದಲ್ಲೂ ಆಸಕ್ತಿ ಹೊಂದಿದ್ದನು ಎಂಬುದು ಅವನು ಶಾಸನ ಸಭೆಯ ಸದಸ್ಯನಾಗಿದ್ದುದರಲ್ಲಿ ತಿಳಿಯುತ್ತದೆ. ಕ್ರಿ.ಶ. ೮೮ ರಲ್ಲಿ ಪ್ರಧಾನ ದಂಡಾಧಿಕಾರಿಯಾದನು. ಪ್ರೀಟರ್, ಕ್ರಿ.ಶ. ೯೭ ರಲ್ಲಿ ಕಾನ್ಸಲ್‌ ಆದನು ಮತ್ತು ಕ್ರಿ.ಶ. ೧೧೨-೧೧೬ರ ನಡುವೆ ಪ್ರೊಕಾನ್ಸಲ್‌ ಆಗಿ ಸೇವೆ ಸಲ್ಲಿಸಿದನು. ಈ ವಿವಿಧ ಹುದ್ದೆಗಳನ್ನು ನಿರ್ವಹಿಸುವಾಗ ಮನುಷ್ಯ ನಡವಳಿಕೆಗಳನ್ನು ಕುರಿತು ಆಳವಾದ ಅನುಭವಗಳನ್ನು ಪಡೆಯಲು ಸಾಧ್ಯವಾಯಿತು. ಮನುಷ್ಯನ ಅಂತರಂಗವನ್ನು ಅರಿಯುವ ತವಕವಿದ್ದುದರಿಂದಲೇ ಇವನಲ್ಲಿ ಸೃಜನಶೀಲ ಮನಸ್ಸಿನ ಗುಣಗಳು ಕಣ್ಣಿಗೆ ಕಟ್ಟುತ್ತವೆ. ಈ ಸೃಜನಶೀಲತೆಯನ್ನು ಅವನ ಕೃತಿಗಳಲ್ಲೆ ಕಾಣಬಹುದು.

ಟ್ಯಾಸಿಟಸ್‌ನು ಅನೇಕ ಕೃತಿಗಳನ್ನು ರಚಿಸಿದ್ದಾನೆ. ಅವುಗಳೆಂದರೆ ‘ಲೈಫ್‌ ಆಫ್ ಆಗ್ರಿಕೋಲ’, ‘ಜರ‍್ಮೇನಿಯ’, ‘ಹಿಸ್ಟರೀಸ್’ ಮತ್ತು ‘ಆನಲ್ಸ್‌’. ಈತನು ಸಾಹಿತಿಯೂ ಆಗಿದ್ದನು. ‘ಡಯಲಾಗ್ ಆನ್ ಆರೇಟರಿ’ ಎಂಬುದು ಅವನ ಪ್ರಥಮ ಪ್ರಬಂಧ. ಅವನ ಸಾರ್ವಜನಿಕ ಭಾಷಣಗಳನ್ನು ಈ ಪ್ರಬಂಧದಲ್ಲಿ ಕಾಣಬಹುದು. ಡಾಮಿಷಿಯಾ ಚಕ್ರವರ್ತಿಯ ದಬ್ಬಾಳಿಕೆಯು ಅವನ ಕುಟುಂಬಕ್ಕೂ ಹೇಗೆ ತೊಂದರೆಯುಂಟು ಮಾಡಿತೆಂಬುದನ್ನು ಇವನ ಬರವಣಿಗೆಯಲ್ಲಿ ಕಾಣಬಹುದು. ಅವನ ಮಾವ ಹೆಂಡತಿಯ ತಂದೆ ಕ್ರಿ.ಶ. ೯೩ ರಲ್ಲಿ ತೀರಿಕೊಂಡನು. ಅವನನ್ನು ಕುರಿತಂತೆ ಲೈಫ್ ಆಫ್‌ ಅಗ್ರಿಕೋಲ ಎಂಬ ಕೃತಿಯನ್ನು ರಚಿಸಿದನು. ಈ ಕೃತಿಯಲ್ಲಿಯು ಸಹ ಅವನು ಚರಿತ್ರೆಕಾರನು ಎನ್ನುವುದಕ್ಕಿಂತ ಸೃಜನಶೀಲ ಸಾಹಿತಿ ಎನ್ನುವುದನ್ನೇ ಸಾಬೀತುಪಡಿಸುತ್ತಾನೆ. ವಸ್ತುವಿನ ದೃಷ್ಟಿಗಳಿದ್ದುದೇ ಅವನು ಇಟಲಿಗೆ ಅಂಟಿ ಕೊಳ್ಳುವಂತೆ ಮಾಡಿತು. ಚರಿತ್ರೆಯನ್ನು ಹೇಳುವಾಗ ಹೇಳುವ ಕ್ರಮದಲ್ಲಿ ಹೆರಡೋಟಸನಂತೆ ರಮ್ಯತೆಯನ್ನು ಮೆರೆಯುತ್ತಾನೆ. ಓದುಗ ಬೆರಗುಗೊಳ್ಳುವಂತೆ ಬರೆಯುತ್ತಾನೆ. ಆದರೆ ಚರಿತ್ರೆಯು ಅವನಿಗೆ ನೈತಿಕತೆಯನ್ನು ಮನುಷ್ಯನಿಗೆ ಹೇಳುವ ಸಾಧನವೆಂದು ಭಾವಿಸುತ್ತಾನೆ. ಈ ವಿಷಯದಲ್ಲಿ ಥೂಸಿಡೈಡ್ಸನಲ್ಲಿದ್ದ ಸಂವೇದನೆಗಳನ್ನು ಇವನಲ್ಲೂ ಕಾನಬಹುದು. ನೈತಿಕತೆಯನ್ನು ಮನುಷ್ಯರಲ್ಲಿ ತುಂಬುತ್ತಾ ಸಾಮಾಜಿಕವಾಗಿ ಉಪಯುಕ್ತರಾಗುವಂತೆ ಮಾಡುವುದೇ ಅವನ ಉದ್ದೇಶವೆಂದು ತೋರುತ್ತದೆ. ಇವನ ಕಥನಗಳಲ್ಲಿ ಹೀಗಾಗಿಯೇ ‘ತೆರೆದ ಮುಕ್ತಾಯ’ವನ್ನು (Open End) ಕಾಣುವುದಿಲ್ಲ. ಜೊತೆಗೆ ಕಾಲಸೂಚಿಯನ್ನು ನಿಖರವಾಗಿ ಬಳಸುವುದಿಲ್ಲ. ಇದು ಅವನ ಲೇಖನಗಳ ಮಿತಿಯೂ ಆಗಿತ್ತು. ಈ ಕೃತಿಯು ಬ್ರಿಟನ್ನಿನಲ್ಲಿ ರೋಮನ್ನರ ಯುದ್ಧಗಳನ್ನು ಚಿತ್ರಿಸುತ್ತದೆ ಹಾಗೆಯೇ ರೋಮನ್ನರ ಕಾಲದ ಆಡಳಿತದಲ್ಲಿ ಬ್ರಿಟನ್‌ನ ಪರಿಸ್ಥಿತಿ ಅದರಲ್ಲೂ ವಿಶೇಷವಾಗಿ ಅಗ್ರಿಕೋಲದ ಆಡಳಿತವನ್ನು ವಿವರಿಸುತ್ತಾನೆ. ಕ್ರಿ.ಶ. ೧ನೆಯ ಶತಮಾನದ ಬ್ರಿಟನ್ನಿನ ಚರಿತ್ರೆಯನ್ನು ತಿಳಿಯಲು ಸಹಾಯಕವಾಗಿದೆ. ಪ್ರಾಚೀನ ಜರ್ಮನ್ನರ ಆಲೋಚನಾಕ್ರಮ, ನಡವಳಿಕೆಗಳು ಮತ್ತು ಸಂಪ್ರದಾಯಗಳು ‘ಜರ್ಮನಿಯಾ’ ಕೃತಿಯಲ್ಲಿ ಅನಾವರಣಗೊಳ್ಳುತ್ತವೆ. ‘ಆನಲ್ಸ್’ ಮತ್ತು ‘ಹಿಸ್ಟೋರಿಯಾ’ಗಳಲ್ಲಿ ಚರಿತ್ರೆಯ ವ್ಯಾಪ್ತಿಯನ್ನು ಕುರಿತು ಬರೆಯುತ್ತಾನೆ. ಪ್ರಾಂತೀಯ ರಾಜಕೀಯ, ಸಾರ್ವಜನಿಕ ಆಡಳಿತ, ಸಾಮಾಜಿಕ ಹಾಗೂ ಆರ್ಥಿಕ ಜೀವನವನ್ನು ಕುರಿತು ವಿವರಿಸುತ್ತಾನೆ. ಹೀಗೆ ವಿವರಿಸುವಾಗ ನೀತಿ ಬೋಧನೆಯು ಅವನ ಪ್ರಮುಖ ಆಶಯವಾಗಿತ್ತು. ಕುಲೀನ ವರ್ಗಗಳು ರಾಜರೊಂದಿಗೆ ಹೊಂದಿದ್ದ ಸಂಬಂಧಗಳನ್ನು ಕುರಿತಂತೆ ದೀರ್ಘವಾಗಿ ಬರೆಯುತ್ತಾನೆ.

ರಾಜರು ಮತ್ತು ಕುಲೀನ ವರ್ಗಗಳು ತಮಗಾಗಿಯೇ ಕಟ್ಟಿಕೊಂಡ ವ್ಯವಸ್ಥೆಯನ್ನು ತೀಕ್ಷ್ಣವಾಗಿ ವಿಮರ್ಶೆಗೊಳಪಡಿಸುತ್ತಾನೆ. ಅವನು ರಾಜರ ಮನದೊಳಗಣ ಜಗತ್ತನ್ನು ಪ್ರವೇಶಿಸುವ ಪ್ರಯತ್ನ ಮಾಡುತ್ತಾನೆ. ಅವರ ಪರಿಕಲ್ಪನೆಗಳು ಅವರ ಕಾರ್ಯಗಳ ಹಿಂದಿನ ಜರೂರುಗಳು ಮತ್ತು ಅವರ ಸಂವೇದನೆಯ ಗುಣಗಳು ಮತ್ತು ಮಿತಿಗಳನ್ನು ಕುರಿತು ಆಸಕ್ತಿ ತಾಳುತ್ತಾನೆ. ಹೀಗೆ ಮಾಡುವಾಗ ವಸ್ತುನಿಷ್ಠತೆಯನ್ನು ಬೇಗನೆ ಕಳೆದುಕೊಳ್ಳುತ್ತಾನೆ. ಚರಿತ್ರೆ ಎನ್ನುವುದು ಇವನಿಗೆ ಕೇವಲ ನೀತಿಬೋಧಕ ವಿಷಯವಾಗುತ್ತದೆ. ಬಹುಶಃ ಯುದ್ಧಮುಖಿಯಾಗಿದ್ದ ರೋಮನ್ ವ್ಯವಸ್ಥೆಯಲ್ಲಿ ನೈತಿಕ ಅಧಃಪತನ ಉಂಟಾದದ್ದು ಇವನಿಗೆ ಬಹುವಾಗಿ ತಟ್ಟಿರಬೇಕು. ಈ ಕಾರಣದಿಂದಲೇ ಇವನು ನೈತಿಕತೆಯ ಅವಶ್ಯಕತೆಯನ್ನು ತೀವ್ರವಾಗಿ ಬೆನ್ನಟ್ಟುತ್ತಾನೆ. ಇದರಿಂದಾಗಿ ಅವನ ‘ಆನಲ್ಸ್’ ಮತ್ತು ‘ಹಿಸ್ಟೋರಿಯಾ’ಗಳು ಚರಿತ್ರೆಯ ವಿದ್ಯಾರ್ಥಿಗಳಿಗೆ ಬಹು ಮುಖ್ಯವಾಗುತ್ತವೆ. ಈ ಕೃತಿಗಳನ್ನು ಬರೆಯುವಾಗ ಜನರ ಸ್ಮೃತಿ ಪರಂಪರೆಯನ್ನು ಹೇರಳವಾಗಿ ಬಳಸಿಕೊಳ್ಳುತ್ತಾನೆ. ಅನುಮಾನಗಳನ್ನು ಪರಿಹರಿಸಿಕೊಳ್ಳಲು ಭಿನ್ನದಾಖಲೆಗಳ ಸಂಯೋಜನೆ ಬಹಳ ಮುಖ್ಯವಾಗುತ್ತದೆ. ಆದರೆ ಈ ಬಗೆಯ ಭಿನ್ನ ದಾಖಲೆಗಳ ಸಂಯೋಜನೆ ಇವನ ಕೃತಿಗಳಲ್ಲಿ ಕಂಡುಬರುವುದಿಲ್ಲ. ಈ ಸಂಯೋಜನೆಯ ಮುಖಾಂತರ ಸಿಗಬಹುದಾದ ಅನುಮಾನಾತೀತ ಸತ್ಯವನ್ನು ತಿಳಿಯುವ ಆರ್ದ್ರತೆಯನ್ನು ಇವನಲಿಲ್ಲ. ಈ ದೃಷ್ಟಿಯಲ್ಲಿ ಇವನು ಒಟ್ಟು ರೋಮನ್ ಚರಿತ್ರೆಕಾರರಲ್ಲಿ ಸಾಮಾನ್ಯವಾಗಿದ್ದ ಮಿತಿಗಳನ್ನು ಪ್ರತಿನಿಧಿಸುತ್ತಾನೆ. ಉತ್ಕೃಷ್ಟ ಬೌದ್ಧಿಕತೆಯ ಗುಣಗಳು ಇವನಲ್ಲಿ ಯಥೇಚ್ಛವಾಗಿದ್ದರೂ ಚರಿತ್ರೆಯನ್ನು ನಿರ್ದಿಷ್ಟ ಉದ್ದೇಶಕ್ಕೆ ಮಾತ್ರ ಸೀಮಿತಗೊಳಿಸಿದ್ದರಿಂದ ಅವನ ನಿಜವಾದ ಬೌದ್ಧಿಕ ಶಕ್ತಿಯನ್ನು ಬಳಸಿಕೊಳ್ಳುವಲ್ಲಿ ವಿಫಲನಾದನು.

ಲಿವಿ ಮತ್ತು ಟ್ಯಾಸಿಟಸ್‌ರೊಂದಿಗೆ ರೋಮಿನ ಪ್ರಧಾನ ಚರಿತ್ರೆಕಾರರ ಕಾಲ ಮುಗಿಯುತ್ತದೆ. ಸಾಲ್ಲಸ್ಟ್‌ನು ಥೂಸಿಡೈಡ್ಸನ ಮಾರ್ಗವನ್ನು ತುಳಿಯಲು ಪ್ರಯತ್ನಿಸಿ ವಿಫಲನಾದನು. ಈ ಸಾಲಿನಲ್ಲಿ ಸೆಟೋನಿಕಸ್ ಟ್ರಾಂಕ್ಲಿಲ್ಲಸ್, ಉಕ್ರೇಷಿಯಸ್, ಡಮಾಸ್ಕಸ್ಸಿನ್‌ನಿಕಲಸ್, ಡಯಾನ್ ಕ್ಯಾಷಿಯಸ್ ಎಂಬುವರನ್ನು ಕಾಣಬಹುದು. ಉಕ್ರೇಷಿಯಸ್ಸನು ತನ್ನ ಕೃತಿ ‘ಡಿ ರೀರಮ್ ನ್ಯಾಚುರ’ ಎಂಬುದರಲ್ಲಿ ಚರಿತ್ರೆಯ ವಿಕಾಸವನ್ನು ಆಧುನಿಕ ವಿಕಾಸವಾದದ ಮಾದರಿಯಲ್ಲಿಯೇ ವಿವರಿಸುವ ಪ್ರಯತ್ನ ಮಾಡುತ್ತಾನೆ. ಒಂದು ವಿಭಿನ್ನ ರೀತಿಯಲ್ಲಿ ಚರಿತ್ರೆಯನ್ನು ನೋಡುವ ಪ್ರಯತ್ನವನ್ನು ಮಾಡುತ್ತಾನೆ. ಹಾಗೆಯೇ ನಿಕಲಸ್ಸನ ಪ್ರಸಿದ್ಧ ಕೃತಿ ‘ಲೈವ್ಸ್ ಆಫ್‌ ಇಲ್ಲಸ್ಟ್ರಿಯಸ್ ಮೆನ್’ ಪ್ರಸಿದ್ಧರ ಜೀವನ ಚರಿತ್ರೆಗಳ ಮೂಲಕ ರೋಮನ್ ಸಾಮ್ರಾಜ್ಯದ ಚರಿತ್ರೆಯನ್ನು ಅನಾವರಣಗೊಳಿಸುವ ಪ್ರಯತ್ನ ಮಾಡುತ್ತದೆ. ಚರಿತ್ರೆಯೆಂದರೆ ಪ್ರಸಿದ್ಧ ವ್ಯಕ್ತಿಗಳ ಜೀವನ ಚರಿತ್ರೆಯೆಂದು ವ್ಯಾಖ್ಯಾನಿಸಿದ ಥಾಮಸ್ ಕಾರ್ಲೈಲ್‌ನ ಸಿದ್ಧಾಂತವನ್ನು ಅವನಿಗಿಂತ ಅನೇಕ ಶತಮಾನಗಳ ಕಾಲ ಹಿಂದೆಯೇ ಬದುಕಿದ್ದ ನಿಕಲಸ್ಸನಲ್ಲೇ ಕಾಣಬಹುದು. ಹಾಗೆಯೆ ಡಯಾನ್ ಕ್ಯಾಷಿಯಸನು ತನ್ನ ಎಪ್ಪತ್ತರ ದಶಕದ ಇಳಿವಯಸ್ಸಿನಲ್ಲಿ ‘ಹಿಸ್ಟರಿ ಆಫ್ ರೋಮ್’ ಎಂಬ ಕೃತಿಯನ್ನು ರಚಿಸಿದನು. ಆದರೆ ಈ ಯಾವ ಪ್ರಯತ್ನಗಳು ಬೃಹತ್ ಪ್ರತಿಭೆಯೊಂದರ ಮೂಸೆಯಲ್ಲಿ ಹುಟ್ಟಲಿಲ್ಲ. ಇದಾದನಂತರ ಚರಿತ್ರೆಯನ್ನು ಬರೆಯುವ ವಿಷಯದಲ್ಲಿ ರೋಮ್ ನೇಪತ್ಯಕ್ಕೆ ಸರಿದದ್ದನ್ನು ಕಾಣುತ್ತೇವೆ.

ಗ್ರೀಕ್ ಮತ್ತು ರೋಮನ್ ಚರಿತ್ರೆ ಲೇಖನ ಸಂಪ್ರದಾಯಗಳ ಪ್ರಮುಖ ಗುಣಗಳು

ಗ್ರೀಕ್-ರೋಮನ್ ಚರಿತ್ರೆ ಲೇಖನ ಸಂಪ್ರದಾಯಗಳು ಮಾನವತಾವಾದದ ಚರಿತ್ರೆಯನ್ನು ಕಟ್ಟಿಕೊಡುತ್ತವೆ. ಈ ಎರಡು ಸಂಪ್ರದಾಯಗಳ ಆಶಯಗಳಲ್ಲಿ ಈ ಗುಣವನ್ನು ಕಾಣಬಹುದು. ಮಾನವನ ವರ್ತನೆಗಳು, ಗುಣ ದೋಷಗಳು ಹಾಗೂ ಸೋಲುಗಳು ಇವರ ಲೇಖನ ಪರಂಪರೆಯಲ್ಲಿ ಕಾಣಬಹುದು. ಮನುಷ್ಯನ ಕ್ರಿಯೆಯ ಹಿನ್ನೆಲೆಯಲ್ಲಿ ದೈವಿಕ ಹಾಜರಾತಿಯನ್ನು ನಂಬುತ್ತಲೇ ಮಾನವನ ಸೋಲು-ಗೆಲುವುಗಳಿಗೆ ಅವನ ಪೂರ್ವ ಯೋಜನೆಗಳೇ ಕಾರಣವೆಂದು ನಂಬಿ ಬರೆಯುತ್ತಾರೆ. ಹೀಗಾಗಿ ಚರಿತ್ರೆಯ ರಚನೆಯಲ್ಲಿ ಮನುಷ್ಯನ ಪ್ರಯತ್ನಗಳು ಬಹುಮುಖ್ಯವೆಂದು ಸಾರುತ್ತಾರೆ. ಅವನ ಪ್ರಯತ್ನಗಳನ್ನು ಗಮನಿಸಿ ಅವರಿಗೆ ಸೋಲು ಅಥವಾ ಗೆಲುವನ್ನು ದೇವರು ತರುತ್ತಾನೆ ಎಂದು ಹೇಳುತ್ತಾರೆ. ಇದರಿಂದಲೇ ಅವರು ಮನುಷ್ಯನ ನಡವಳಿಕೆಯ ಯೋಚನೆಗಳ ಹಾಗೂ ಕ್ರಿಯೆಗಳ ವಿಶ್ಲೇಷಣೆಯನ್ನು ಮಾಡುತ್ತಾರೆ. ಮಾನವನಲ್ಲಿ ನೈತಿಕ ಶಕ್ತಿಯನ್ನು ತುಂಬುವ ಒಂದು ಶಕ್ತಿಯಾಗಿ ಚರಿತ್ರೆಯನ್ನು ಗ್ರಹಿಸುತ್ತಾರೆ. ವ್ಯಾಪಕ ಅರ್ಥದಲ್ಲಿ ಮನುಷ್ಯನ ಬೌದ್ಧಿಕ ಶಕ್ತಿಯು ಅವನ ಯಶಸ್ಸನ್ನು ನಿರ್ಧರಿಸುತ್ತದೆ ಎಂದು ಅವರು ಭಾವಿಸಿದ್ದುದರಿಂದಲೇ ಮಾನವನ ಪ್ರಯತ್ನಗಳಿಗೆ ಅವರು ಅಷ್ಟೊಂದು ಪ್ರಾಮುಖ್ಯತೆಯನ್ನು ನೀಡಿದ್ದುದು.

ರಾಜಕೀಯ ಇಚ್ಛಾಶಕ್ತಿಯನ್ನು ಚಾರಿತ್ರಿಕ ನಾಯಕರು ಪ್ರದರ್ಶಿಸಿದ್ದು ಅವರಲ್ಲಿ ಬೌದ್ಧಿಕ ಸಾಮರ್ಥ್ಯವಿದ್ದಾಗ ಮಾತ್ರ ಎಂದು ಇವರು ನಂಬಿ ಅದನ್ನೇ ಬರೆದರು. ಮನುಷ್ಯನ ಬುದ್ಧಿ ಮತ್ತೆ ಪಕ್ವವಾದಗಲೆಲ್ಲಾ ಸಮಾಜಗಳು ಕ್ರಿಯಾಶೀಲವಾಗಿದ್ದವು ಎಂಬುದನ್ನು ಅಪ್ರಜ್ಞಾಪೂರ್ವಕವಾಗಿಯೇ ನಿರೂಪಿಸುತ್ತಾರೆ. ಚರಿತ್ರೆಯನ್ನು ಗ್ರಹಿಸುವ ಕ್ರಮದಲ್ಲಿ ಈ ಎರಡೂ ಪರಂಪರೆಯಲ್ಲಿ ಅವರು ಈ ರೀತಿ ಯೋಚಿಸುವುದನ್ನು ಕಾಣಬಹುದು.

ಎರಡನೆದಾಗಿ ಗ್ರೀಕ್ ಮತ್ತು ರೋಮನ್ ಚರಿತ್ರೆಕಾರರ ಪ್ರಪಂಚ ಕೇವಲ ಗ್ರೀಸ್ ಮತ್ತು ರೋಮ್‌ಗಳಾಗಿದ್ದವು. ಇವರು ಚರಿತ್ರೆಯನ್ನು ಸ್ಥಳೀಯ ನೆಲೆಯಲ್ಲಿಯೇ ಗ್ರಹಿಸಿದರು. ಯುದ್ಧಗಳ ಮುಖೇನ ಅವರ ಸಾಮ್ರಾಜ್ಯದ ರಾಜಕೀಯ ವ್ಯಾಪ್ತಿ ವಿಸ್ತರಣೆಯಾದಂತೆ ಅವರ ಚಾರಿತ್ರಿಕ ಕಲ್ಪನೆಯ ವಿಸ್ತರಣೆಯೂ ಆಯಿತು. ಯುದ್ಧಗಳನ್ನು ಬಹುವಾಗಿ ಕಂಡಿದ್ದ ಈ ಚರಿತ್ರೆಕಾರರಿಗೆ ಅವರ ಅಸ್ತಿತ್ವದ ತಳಮಳಗಳು ಇದ್ದವು. ಹೀಗಾಗಿ ಹಿಂಸೆಯನ್ನು ಮೀರಿದ ನೆಮ್ಮದಿಯನ್ನು ಅವರು ಬಹುವಾಗಿ ಬಯಸಿದರು. ಅವರ ಬರವಣಿಗೆಯ ಹಿಂದೆ ಇದು ಒಂದು ದೊಡ್ಡ ತುಡಿತವಾಗಿ ಕೆಲಸ ಮಾಡಿರುವುದನ್ನು ಕಾಣಬಹುದ. ಅವರ ಕೃತಿಗಳಲ್ಲಿನ ವಿವರಗಳು ಕೇವಲ ತಮ್ಮ ಪರಿಸರಕ್ಕೆ ಸಂಬಂಧಪಟ್ಟವುಗಳು ಮಾತ್ರ. ತಾವು ನೋಡಿದ ಕೇಳಿದ ಘಟನೆಗಳಿಗೆ ಸಂಬಂಧಪಟ್ಟದ್ದು ಮಾತ್ರ. ಆದ್ದರಿಂದಲೇ ಆರಂಭದಲ್ಲಿಯೇ ಹೇಳಿದ್ದು ಅವರು ಚರಿತ್ರೆಯನ್ನು ಸ್ಥಳೀಯ ನೆಲೆಯಲ್ಲಿಯೇ ಗ್ರಹಿಸುತ್ತಾರೆಂದು.

ಕೊನೆಯದಾಗಿ ಎರಡು ಲೇಖನ ಸಂಪ್ರದಾಯದ ಚರಿತ್ರೆಕಾರರು ಬಹುತೇಕ ತಮ್ಮ ಸಮಕಾಲೀನ ಹಾಗೂ ಜೀವಿತ ಪ್ರತ್ಯಕ್ಷದರ್ಶಿಗಳ ಸ್ಮರಣೆಗಳ ಚರಿತ್ರೆಗಷ್ಟೆ ಮುಖಾಮುಖಿಯಾಗುತ್ತಾರೆ. ಅವರು ಬರೆದ ಬಹುತೇಕ ಕೃತಿಗಳು ಅವರ ಕಾಲಕ್ಕೆ ಸಂಬಂಧಪಟ್ಟಂತಹ ಚರಿತ್ರೆ ಕೃತಿಗಳೇ ಆಗಿವೆ. ಈ ಸಂಪ್ರದಾಯಕ್ಕೆ ಹೊರತಾದ ಚರಿತ್ರೆಕಾರರೆಂದರೆ ಪೋಲಿಬಿಯಸ್.

ಆದರೆ ಗ್ರೀಕರು ಹೆಚ್ಚು ತತ್ವಜ್ಞಾನಿಗಳಂತೆ ಕಾಣುತ್ತಾರೆ. ಹೆರೊಡೋಟಸ್‌ನಲ್ಲಿ ಇದನ್ನು ವಿಶೇಷವಾಗಿ ಕಾಣುತ್ತೇವೆ. ಅನುಭವಿಯೊಬ್ಬನ ರೀತಿಯಲ್ಲಿ ಅನೇಕ ಸಂದರ್ಭಗಳಲ್ಲಿ ಕಾಣಿಸುತ್ತಾನೆ. ರೋಮನ್ ಚರಿತ್ರೆಕಾರರು ಈ ಬಗೆಯ ತತ್ವಜ್ಞಾನಿಗಳಾಗಿ ಕಾಣುವುದಿಲ್ಲ. ಇವರಲ್ಲಿ ಹೆಚ್ಚಿಗೆ ‘ಎಂಪಿರಿಕ್’ ಆಗಿ ಕಾಣುತ್ತಾರೆ. ಆಕರಗಳು ಮೇಲ್ನೋಟಕ್ಕೆ ಹೇಳುವ ಸಂಗತಿಗಳನ್ನು ಪೂರ್ಣಪ್ರಮಾಣದ ಸತ್ಯಗಳೆಂದು ಭಾವಿಸುತ್ತಾರೆ. ಗ್ರೀಕ್ ಮತ್ತು ರೋಮನ್ ಚರಿತ್ರೆಕಾರರಲ್ಲಿ ಗ್ರೀಕರೇ ಹೆಚ್ಚು ವೃತ್ತಿಪರ ಚರಿತ್ರೆಕಾರರಾಗಿ ಕಾಣುತ್ತಾರೆ.

ಆಕರಗಳನ್ನು ಬಳಸಿಕೊಳ್ಳುವ ವಿಚಾರದಲ್ಲೂ ಗ್ರೀಕರು ಹೆಚ್ಚಿನ ಪ್ರೌಢಿಮೆಯನ್ನು ಹೊಂದಿದ್ದರು. ಅವುಗಳನ್ನು ವೈಜ್ಞಾನಿಕವಾಗಿ ಹೇಗೆ ಬಳಸಿಕೊಳ್ಳಬೇಕೆಂಬುದನ್ನು ಥೂಸಿಡೈಡ್ಸ್ ತೋರಿಸುತ್ತಾನೆ. ವಿವರಗಳು ಮತ್ತು ದಾರ್ಶನಿಕತೆಯನ್ನು ಗ್ರೀಕರು ಹದವಾಗಿ ಬೆಸೆಯುವ ಪ್ರಯತ್ನವನ್ನು ಅನೇಕ ಮಿತಿಗಳ ಮಧ್ಯದಲ್ಲೂ ಮಾಡುತ್ತಾರೆ. ರೋಮನ್ನರಲ್ಲಿ ಆಳಕ್ಕಿಳಿಯದ ಬುರುಬುರು ನೊರೆಯಂತೆ ಕಾಣುತ್ತೇವೆ.

ಒಟ್ಟಾರೆ ಈ ಪರಂಪರೆಗಳು ಚರಿತ್ರೆಗೆ ಒಂದು ವಿಷಯವಾಗಿ ನಿರ್ದಿಷ್ಟ ಚೌಕಟ್ಟನ್ನು ನೀಡಿದವು. ಚರಿತ್ರೆಯ ಅಧ್ಯಯನ ಅನಿವಾರ್ಯವೆಂದು ಸಾಬೀತುಪಡಿಸಿದವು.