೨. ಅರಬ್ ಮತ್ತು ಚರ್ಚ್ ಚರಿತ್ರೆ ಲೇಖನ ಪರಂಪರೆ

ಅರಬ್ ಮತ್ತು ಚರ್ಚ್ ಚರಿತ್ರೆ ಲೇಖನ ಪರಂಪರೆಯನ್ನು ಮಧ್ಯಕಾಲೀನ ಪಶ್ಚಿಮದ ಲೇಖನ ಪರಂಪರೆಯೆಂದೂ ಕರೆಯಲಾಗಿದೆ. ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮದಲ್ಲಿನ ನಂಬಿಕೆಗಳೇ ಆ ಚರಿತ್ರೆಕಾರರ ಲೇಖನಗಳಲ್ಲಿ ಚರಿತ್ರೆ ಲೇಖನ ಪರಂಪರೆಯಾಗಿ ಬೆಳೆದಿದ್ದನ್ನು ಕಾಣುತ್ತೇವೆ. ಈ ಪರಂಪರೆಯ ಅಧ್ಯಯನದಿಂದ ಈ ಧರ್ಮಗಳ ವಿಕಸನದ ಚರಿತ್ರೆಯನ್ನು ಕಾಣಬಹುದು. ಅರಬ್ ಮತ್ತು ಚರ್ಚ್‌ಚರಿತ್ರೆ ಲೇಖನ ಪರಂಪರೆಗಳು ಕಾಲದ ದೃಷ್ಟಿಯಿಂದ ಬೇರೆ ಬೇರೆಯಾಗಿಯೇ ಇದ್ದರೂ, ಅಧ್ಯಯನದ ದೃಷ್ಟಿಯಿಂದ ಒಂದು ಘಟ್ಟವಾಗ ಅಭ್ಯಾಸ ಮಾಡಲಾಗುತ್ತದೆ.

ಅರಬ್‌ ಚರಿತ್ರೆ ಲೇಖನ ಪರಂಪೆಯ ಆರಂಭ

ಮಧ್ಯಕಾಲೀನ ಚರಿತ್ರೆ ಲೇಖನ ಪರಂಪರೆಯಲ್ಲಿ ಅರಬ್ ಚರಿತ್ರೆಕಾರರು ತಮ್ಮ ರಂಗಸ್ಥಳವನ್ನು ಸೃಷ್ಟಿಸಿಕೊಂಡರು. ಗ್ರೀಕ್-ರೋಮನ್ ಮತ್ತು ಆಧುನಿಕ ಚರಿತ್ರೆ ಲೇಖನ ಪರಂಪರೆಯ ನಡುವಿನ ಕೊಂಡಿ ಅರಬ್ ಲೇಖನ ಪರಂಪರೆ. ಅರಬ್ ಭಾಷೆಯಲ್ಲಿ ಸೃಷ್ಟಿಗೊಂಡ ಈ ಪರಂಪರೆಯು ಅರೇಬಿಯಾ, ಇರಾಕ್, ಮೊರಾಕೋ, ಟರ್ಕಿ, ಟುನಿಶಿಯಾ ಮುಂತಾದ ದೇಶಗಳಲ್ಲಿ ರೂಪುಗೊಂಡಿತು. ಈ ಭಾಗದ ಪ್ರಮುಖ ಶೈಕ್ಷಣಿಕ ಕೇಂದ್ರಗಳಾದ ಬಾದಾದ್, ಕೈರೊ, ಇಸ್ತಾಂಬುಲ್ ಮುಂತಾದವು ಈ ಚರಿತ್ರೆ ಲೇಖನ ಪರಂಪರೆಯ ಕೇಂದ್ರಗಳಾಗಿದ್ದವು. ಕ್ರೈಸ್ತ ಚರಿತ್ರೆ ಲೇಖಕರಂತೆ ಇವರೂ ದೈವೀ ಶಕ್ತಿಯಲ್ಲಿ ನಂಬಿಕೆಯಿಟ್ಟಿದ್ದರು. ಆದರೂ ಚರ್ಚ್‌‌ಗಳಲ್ಲಾದಂತೆ ಇಲ್ಲಿ ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಲೇಖನ ಕೃಷಿ ನಡೆಯಲಿಲ್ಲ. ತಾತ್ವಿಕವಾಗಿಯೂ ಚರ್ಚ್ ಮತ್ತು ಅರಬ್ ಪರಂಪರೆಗಳಲ್ಲಿ ಭಿನ್ನತೆಯನ್ನು ಕಾಣುತ್ತೇವೆ. ಚರ್ಚ್ ಸಂಪ್ರದಾಯದಲ್ಲಿ ಗಾಢವಾಗಿ ಚಾಲ್ತಿಯಲ್ಲಿರುವಂತೆ ಅರಬ್ ಸಂಪ್ರದಾಯದಲ್ಲಿ ಬ್ರಹ್ಮಚರ್ಯೆ ಒಂದು ಜೀವನ ಮೌಲ್ಯವಾಗಿಲ್ಲ. ಐಹಿಕ ಬದುಕಿನ ತ್ಯಾಗವನ್ನು ಅದು ಪ್ರತಿಪಾದಿಸುವುದಿಲ್ಲ. ಕೇವಲ ಧರ್ಮನಿಷ್ಠೆ ಮಾತ್ರ ಈ ಎರಡೂ ಪರಂಪರೆಗಳಲ್ಲಿ ಸಾಮಾನ್ಯವಾಗಿ ಕಾಣುತ್ತೇವೆ.

ಅರಬ್ ಚರಿತ್ರೆ ಲೇಖನ ಪರಂಪರೆಯಲ್ಲಿ ಎರಡು ಹಂತಗಳನ್ನು ಕಾಣಬಹುದು. ಇಸ್ಲಾಂ ಧರ್ಮ ಸ್ಥಾಪನೆಗೆ ಪೂರ್ವದ ಹಂತ ಮತ್ತು ಇಸ್ಲಾಂ ಧರ್ಮ ಸ್ಥಾಪನೆಯ ನಂತರದ ಹಂತ. ಮೊದಲ ಹಂತದಲ್ಲಿ, ಜಗತ್ತಿನ ಅನೇಕ ರಾಷ್ಟ್ರಗಳ ಚರಿತ್ರೆಯಲ್ಲಿರುವಂತೆ ಇಲ್ಲಿಯೂ ಚರಿತ್ರೆಯೆಂಬುದು ಸಾಹಿತ್ಯಿಕ ರೂಪದಲ್ಲಿದ್ದು, ಪುರಾಣ, ಕಾವ್ಯ, ದಂತಕತೆ ಮತ್ತು ಲಾವಣಿಗಳಲ್ಲಿ ಹಂಚಿಹೋಗಿತ್ತು. ಅನೇಕ ಪುರಾಣ ನಾಯಕರ ಹೋರಾಟ, ಬಲಿದಾನ, ಧರ್ಮ, ನೀತಿ ಮುಂತಾದವುಗಳಿಂದ ತುಂಬಿತ್ತು. ಆದಿವಾಸಿ ಗುಂಪುಗಳ ನಡುವೆ ನಡೆಯುತ್ತಿದ್ದ ಯುದ್ಧಗಳು ಅವರ ಆಸಕ್ತಿಯನ್ನು ಗಳಿಸಿದವು. ಜೊತೆಗೆ ರಾಜರ ವಂಶಾವಳಿಯ ಪಟ್ಟಿಗಳನ್ನು ಸಿದ್ಧಪಡಿಸುವ ಕಾರ್ಯವನ್ನು ನಿರಂತರವಾಗಿ ಮುಂದುವರೆಸಿದರು. ಹೀಗೆ ಚರಿತ್ರೆ ಬರವಣಿಗೆಯೆಂದರೆ ಕೇವಲ ವಂಶಾವಳಿಗಳು ಹಾಗೂ ಧರ್ಮ ಕೇಂದ್ರಿತ ಚಟುವಟಿಕೆಗಳನ್ನು ಕುರಿತು ಬರೆಯುವುದಷ್ಟೇ ಆಗಿತ್ತು.

ಗ್ರೀಕ್‌ರೊಡನೆ ಒಡನಾಟವಿದ್ದರೂ, ಚರಿತ್ರೆ ಬರವಣಿಗೆಯಲ್ಲಿ ಅವರಿಂದ ಹೆಚ್ಚಿನದನ್ನು ಸ್ವೀಕರಿಸಲಿಲ್ಲ. ಅರಬ್ಬರಲ್ಲಿ ಚರಿತ್ರೆ ಲೇಖನ ಪರಂಪರೆಯ ಪ್ರಾರಂಭಿಕ ಸಂವೇದನೆ ಬಂದದ್ದೇ ಅವರ ವಿಸ್ತಾರ ರಾಜ್ಯ ನಿರ್ಮಾಣದ ಮೂಲಕ. ಪ್ರಾಚೀನ ರೋಮನ್ನರಂತೆ ಅರಬ್ಬರು ಒಂದು ದೊಡ್ಡ ಸಾಮ್ರಾಜ್ಯವನ್ನು ನಿರ್ಮಾಣ ಮಾಡಿದರು. ಏಶಿಯಾ, ಆಫ್ರಿಕಾ ಮತ್ತು ಯುರೋಪಿನ ಅನೇಕ ಭಾಗಗಳನ್ನೊಳಗೊಂಡ ಸಾಮ್ರಾಜ್ಯವನ್ನು ಕಟ್ಟಿದರು. ಅರಬ್ಬರನ್ನು ಒಟ್ಟಿಗೆ ಒಂದು ದೊಡ್ಡ ಶಕ್ತಿಯನ್ನಾಗಿ ಹಿಡಿದಿಟ್ಟಿದುದೇ ಅವರ ಭಾಷೆಯಾದ ಅರಾಬಿಕ್ ಮತ್ತು ಇಸ್ಲಾಂ ಧರ್ಮ. ಅವರ ಪರ್ಶಿಯಾದ ಆಕ್ರಮಣ ಚರಿತ್ರೆ ಲೇಖನ ಪರಂಪರೆಗೆ ಒಂದು ದೊಡ್ಡ ಒತ್ತಾಸೆಯನ್ನು ನಿರ್ಮಿಸಿತು. ಪರ್ಶಿಯನ್ನರು ಚರಿತ್ರೆ ಬರವಣಿಗೆಗೆ ವಿಶೇಷ ಆದ್ಯತೆಯನ್ನು ನೀಡಿದರು. ಅಥೆನ್ಸ್ ಮತ್ತು ಈಡೆಸ್ಸಾಗಳಿಂದ ತಲೆಮರೆಸಿಕೊಂಡು ಬಂದು ನೆಲೆಸಿದ್ದ ಗ್ರೀಕ್ ಚಿಂತನಕಾರರಿಂದಲೇ ಇಲ್ಲಿ ಚರಿತ್ರೆಯನ್ನು ಬರೆಯಲು ಭೂಮಿಕೆ ಸಿದ್ಧವಾಯಿತು ಎನ್ನುವ ಅಭಿಪ್ರಾಯವೂ ಇದೆ. ಅರಬ್ಬರ ಪರ್ಶಿಯಾದ ಆಕ್ರಮಣ ಕಾಲದಲ್ಲಿ (ಕ್ರಿ.ಶ. ೬೧೧೪ರ ನೆಹವಾನ್ದ ಯುದ್ಧ) ಕುಡಯ್-ನಮಕ್ (ರಾಜರ ಪುಸ್ತಕ) ಎಂಬ ಪ್ರಮುಖ ಗ್ರಂಥ ಸಿಕ್ಕಿತು. ಈ ಗ್ರಂಥವನ್ನು ಡಿಮಾಸ್ಕಸ್‌ನ ಖಲೀಫನಿಗೆ ಕಳುಹಿಸಿಕೊಡಲಾಯಿತು. ಕ್ರಿ.ಶ. ೮ನೆಯ ಶತಮಾನದಲ್ಲಿ ಇಸ್ಲಾಂಗೆ ಮತಾಂತರ ಹೊಂದಿದವನೊಬ್ಬ ಇದನ್ನು ಅರೇಬಿಕ್ ಭಾಷೆಗೆ ತರ್ಜುಮೆ ಮಾಡಿದನು. ಈ ಕೃತಿಯೇ ಅರಬ್ಬರಿಗೆ ತಾವು ಕಟ್ಟಿದ ಸಾಮ್ರಾಜ್ಯದ ಚಾರಿತ್ರಿಕ ವಿಸ್ತಾರವನ್ನು ಪರಿಚಯಿಸಿದ್ದು. ಇಲ್ಲಿಂದ ನಂತರ ಅರಬ್ಬರು ಚರಿತ್ರೆ ರಚನೆಯ ಕೆಲಸದಲ್ಲಿ ಅಪಾರ ಆಸಕ್ತಿಯನ್ನು ತಳೆದರು. ಮತ್ತೊಂದು ಮುಖ್ಯ ಪ್ರೇರಕ ಅಂಶವೆಂದರೆ ಪೈಗಂಬರನು ಕ್ರಿ.ಶ. ೭೩೩ ರಲ್ಲಿ ಮೆಕ್ಕಾದಿಂದ ಮದೀನಕ್ಕೆ ಓಡಿಹೋದ ಘಟನೆ. ಇದು ಒಂದು ಹೊಸ ಶಕೆಯನ್ನು ಆರಂಭಿಸಿತು. ಈ ಘಟನೆಯು ಒಂದು ಹೊಸ ಕ್ಯಾಲೆಂಡರ್ ಯುಗವನ್ನು ಸೃಷ್ಟಿಸಿದ್ದರಿಂದ ಕಾಲಗಣನೆ ತುಂಬಾ ಸುಲಭವಾಯಿತು. ಚರಿತ್ರೆಯಲ್ಲಿ ಕಾಲದ ಪಾತ್ರ ಪ್ರಮುಖವಾದದ್ದು ಮತ್ತು ಇದು ಚರಿತ್ರೆಗೆ ಒಂದು ನಿಖರತೆಯನ್ನು ನೀಡುತ್ತದೆ. ಈ ಭಾವನೆಯು ಅರಬ್ಬರಲ್ಲಿ ಪ್ರಭಾವಬೀರಿತು. ಈ ಹಿನ್ನೆಲೆಯಲ್ಲಿಯೇ ಅಲ್ಲಿ ಜಾಗತಿಕ ಚರಿತ್ರೆಯೆಂಬ ಹೊಸ ಕಲ್ಪನೆ ಹುಟ್ಟಿಕೊಂಡಿತು. ಇದರ ಜೊತೆಗೆ ಮುಸ್ಲಿಮರ ಅಧೀನದಲ್ಲಿದ್ದ ರಾಜ್ಯ ಅಥವಾ ರಾಷ್ಟ್ರಗಳ ಚರಿತ್ರೆಯ ಬರವಣಿಗೆಗಳೂ ಪ್ರಾರಂಭವಾದವು. ಹೀಗೆ ಚರಿತ್ರೆಯ ವಿಸ್ತಾರ ಹೆಚ್ಚುತ್ತಾ ಹೋಗಿ ವಂಶಾವಳಿ ಚರಿತ್ರೆ, ನಗರ ಚರಿತ್ರೆ, ಜೀವನ ಚರಿತ್ರೆ ಹಾಗೂ ಪ್ರವಾಸ ಸಾಹಿತ್ಯ ಮುಂತಾದವು ಹುಟ್ಟಿಕೊಂಡವು.

ಮಹಮದ್ ಬಿನ್ ಇಶಾಕ್ ಎಂಬ ೮ನೆಯ ಶತಮಾನದ ವಿದ್ವಾಂಸನೇ ಅರಬ್ ಚರಿತ್ರೆ ಲೇಖನ ಪರಂಪರೆಯ ಪಿತಾಮಹನೆನಿಸಿಕೊಂಡಿದ್ದಾನೆ. ಇವನು ಮಹಮದ್ದನ ಯುದ್ಧಗಳನ್ನು ಕುರಿತು ದಾಖಲಿಸಿದ್ದಾನೆ. ಇವನ ಡಿಮಾಸ್ಕಸ್ಸ್‌ನ ಉಮಯ್ಯದ್ ವಂಶ ಎಂಬುದು ಪ್ರಮುಖ ಕೃತಿಯಾಗಿದೆ. ಇನ್ನೊಬ್ಬ ಚರಿತ್ರೆ ಬರಹಗಾರನೆಂದರೆ ಅಬು ಇಬನ್ ಯಾಹ್ಯಾ. ಇವನ ‘ಇರಾಕಿನ ಆಕ್ರಮಣದ ಚರಿತ್ರೆ’ ಪ್ರಮುಖ ಗ್ರಂಥವಾಗಿದೆ. ಜೊತೆಗೆ ವಿವಿಧ ಘಟನೆಗಳು ಹಾಗು ವ್ಯಕ್ತಿಗಳನ್ನು ಕುರಿತಂತೆ ಮೂವತ್ತಮೂರು ಕಥನಗಳನ್ನು ಬರಿದಿದ್ದಾನೆ. ಈ ಕಾಲದಲ್ಲಿ ಅಬ್ಬಾಸಿಡ್ ಸಂತತಿಯು ಆಳ್ವಿಕೆಯನ್ನು ನಡೆಸಿತ್ತು. ಈ ಸಂತತಿಯನ್ನು ಕುರಿತಂತೆ ಬಂದಿರುವ ಲೇಖನ ಪರಂಪರೆಯನ್ನು ಅಬ್ಬಾಸಿಡ್ ಚರಿತ್ರೆ ಲೇಖನ ಪರಂಪರೆ ಎನ್ನಲಾಗಿದೆ.

ಮಹಮ್ಮದನ ಪ್ರಥಮ ಜೀವನ ಚರಿತ್ರೆಯನ್ನು ಬರೆದವನು ಇಬ್ನೆ ಇಸಾಕ್ ಎಂಬುವನು. ಹಾಗೆಯೆ ಮದೀನಾಕ್ಕೆ ಸೇರಿದ ಅಲ್‌ವಾಖಿದಿಯು ಹರೂನ್ ಅಲ್‌ರಶೀದ್‌ನ ಆಪ್ತನಾಗಿದ್ದನು. ಅವನು ಮುಸ್ಲಿಮರ ಆಕ್ರಮಣಕಾರಿ ಯುದ್ಧಗಳನ್ನು ಹಾಗೂ ಇಸ್ಲಾಂ ಧರ್ಮ ಪ್ರಚಾರವನ್ನು ಕುರಿತು ‘ಕಿತಾಬುಲ್ ಮಫಾಜಿ’ ಎಂಬ ಕೃತಿಯನ್ನು ಬರೆದನು. ವಾಖಿದಿಯು ಎಂತಹ ಹಿನ್ನೆಲೆಯ ಲೇಖಕನೆಂದರೆ ಅವನು ಪ್ರಯಾಣ ಮಾಡುವ ಸಂದರ್ಭದಲ್ಲಿ ಸುಮಾರು ೧೨೦ ಬಂಡಿಗಳು ಅವನ ಗ್ರಂಥ ಭಂಡಾರವನ್ನು ಸಾಗಿಸಲು ಬೇಕಾಗಿದ್ದವು. ಇವನ ಕಾರ್ಯದರ್ಶಿಯಾಗಿದ್ದ ಇಬ್ನೆಸಾದ್ ಎಂಬುವನು ವರ್ಗೀಕೃತ ಜೀವನ ಚರಿತ್ರೆಗಳ ದೊಡ್ಡ ಗ್ರಂಥವನ್ನು ರಚಿಸಿದನು. ಅಲ್‌ಬಲಾಧೂರಿ ಎಂಬ ಪರ್ಶಿಯನ್ನನು ವಿವಿಧ ಬಗೆಯ ಆಕ್ರಮಣಗಳನ್ನು ಕುರಿತು ಕಥೆಗಳನ್ನು ಸಂಯೋಜಿಸಿದನು.

ಕ್ರಿ.ಶ. ೯ನೆಯ ಶತಮಾನದ ಪ್ರಮುಖ ಚರಿತ್ರೆಕಾರನೆಂದರೆ ಅಲ್‌ಮದೈನಿ. ‘ಅಬುಬಕರ್ ನಿಂದ ಅಥ್‌ಮಾನ್‌ವರೆಗಿನ ಆಕ್ರಮಣಗಳ ಪುಸ್ತಕ’, ‘ಖಲೀಫರ ಮೇಲಿನ ಪುಸ್ತಕ’ ಎಂಬ ಎರಡು ಗ್ರಂಥಗಳು ಭಾರತವನ್ನೊಳಗೊಂಡಂತೆ ಅನೇಕ ಭೂ ಭಾಗಗಳ ವಿವರಣೆಗಳನ್ನೊಳಗೊಂಡಿವೆ. ತಾರೀಖ್‌ ಅಲ್-ಖುಲಾಫ ಅಲ್-ಬಲಾಧುರಿ ಎಂಬುವವನು ಮತ್ತೊಬ್ಬ ಪ್ರಮುಖ ಚರಿತ್ರೆಕಾರ. ಇವನು ಇಸ್ಲಾಂ ಪಶ್ಚಿಮಾಭಿಮುಖವಾಗಿ ಚಲಿಸಿದನ್ನು ದಾಖಲಿಸಿದ್ದಾನೆ. ‘ಅವನ ಆಕ್ರಮಣಗಳ ಚರಿತ್ರೆ’ ಎನ್ನುವ ಪುಸ್ತಕವು ಸಿರಿಯಾ, ಮೆಸಪಟೋಮಿಯಾ, ಅರ‍್ಮೇನಿಯಾ, ಈಜಿಪ್ಟ್‌, ಸೈಪ್ರೆಸ್, ಸ್ಟೇಯಿನ್ ಮತ್ತು ನುಬಿಯಾ ದೇಶಗಳು ಇಸ್ಲಾಂನ ಅಧೀನಕ್ಕೊಳಪಟ್ಟ ವಿವರವಾದ ಚರಿತ್ರೆಯನ್ನು ದಾಖಲಿಸುತ್ತದೆ. ತಬರಿಯಾ (ಕ್ರಿ.ಶ. ೮೩೮-೯೨೩) ಆ ಕಾಲದ ಚರಿತ್ರೆಕಾರರಲ್ಲಿ ವಿಶಿಷ್ಟ ಚರಿತ್ರೆಕಾರನಾಗಿದ್ದನು. ಒಬ್ಬ ನಿಜವಾದ ಚರಿತ್ರೆಕಾರನಿಗಿರಬೇಕಾದ ಅನೇಕ ಗುಣಗಳು ಅವನಲ್ಲಿದ್ದವು. ಪಯಣದಲ್ಲಿ ಆಸಕ್ತಿಯನ್ನು ಹೊಂದಿದ್ದ ಇವನು ತಾನು ಬರೆಯುವ ಘಟನೆಗಳಿಗೆ ಸಂಬಂಧಿಸಿದಂತೆ ನಿಖರ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದನು. ಅವನ ‘ಹಿಸ್ಟರಿ ಆಫ್ ದ ಪ್ರಾಫೆಟ್ಸ ಆಂಡ್ ಕಿಂಗ್ಸ್ ಎನ್ನುವ ಪುಸ್ತಕವು ಅರೆಬಿಕ್ ಭಾಷೆಯಲ್ಲಿ ಬರೆಯಲ್ಪಟ್ಟ ಮೊದಲ ಸಮಗ್ರ ಚರಿತ್ರೆಯ ಗ್ರಂಥ. ಅಲ್-ಮಸೂದಿ ಎಂಬುವವನು ೩೬ ಪುಸ್ತಕಗಳನ್ನು ಬರೆದಿದ್ದಾನೆ. ಅವುಗಳಲ್ಲಿ ‘ಮುರುದ್ಸ’ ಪ್ರಮುಖವಾದುದು. ಈ ಗ್ರಂಥದಲ್ಲಿ ಅನೇಕ ರಾಷ್ಟ್ರಗಳ ಸಮುದ್ರಗಳು, ನದಿಗಳು, ಧಾರ್ಮಿಕ ಆಚರಣೆಗಳನ್ನೊಳಗೊಂಡ ಅನೇಕ ವಿವರಗಳಿವೆ. ಘಟನೆಗಳ ಕಾಲವನ್ನು ತಿಳಿಸುತ್ತಾನೆ. ಅವನ ಗ್ರಂಥದಲ್ಲಿ ಚರಿತ್ರೆ, ಭೂಗೋಳ ಮುಂತಾದ ಶಾಸ್ತ್ರೀಯ ಅವಶ್ಯಕ ಅಂಶಗಳು ಅನುಸಂಧಾನಗೊಳ್ಳುತ್ತವೆ. ಇಬನ್ ಖಲ್ಲಿಖಾನ್ (೧೨೧೧-೧೨೮೨) ‘ಅಬಿಚಯರೀಸ್ ಆಫ್ ಎಮಿನೆಂಟ್ ಮೆನ್’ ಎನ್ನುವ ಗ್ರಂಥವನ್ನು ಬರೆಯುವುದರ ಮೂಲಕ ಅರಬ್ ಜಗತ್ತಿನಲ್ಲಿ ಪ್ರಪ್ರಥಮ ಜೀವನ ಚರಿತ್ರೆಯ ಮಾದರಿಯ ಗ್ರಂಥವನ್ನು ರಚಿಸಿದನು.

ಅಲ್‌ಬರುನಿ (ಕ್ರಿ.ಶ. ೯೭೩-೧೦೪೮)

ಮಹಮದ್ ಘಜನಿಯ ಒತ್ತೆಯಾಳಾಗಿದ್ದು ಅವನೊಂದಿಗೆ ಸಂಚರಿಸಿದ ಅಲ್‌ಬರುನಿ ಬಹುಮುಖಿ ಚರಿತ್ರೆಕಾರನಾಗಿದ್ದನು. ಆ ಕಾಲದ ವಿಶ್ವಕೋಶವೆಂದೇ ಅವನನ್ನು ಭಾವಿಸಲಾಗಿತ್ತು. ಅವನ ಬೌದ್ಧಿಕ ವಿಸ್ತಾರ ಅನನ್ಯವಾದದ್ದು. ಅವನ ‘ಹಿಂದಿನ ತಲೆಮಾರುಗಳ ಉಳಿದಿರುವ ಸ್ಮಾರಕಗಳು’ ಎಂಬುದು ವಿವಿಧ ಘಟನೆಗಳ ಕಾಲಘಟ್ಟಗಳನ್ನು ಸೂಚಿಸುವ ಪ್ರಮುಖ ಗ್ರಂಥ. ಘಜನಿ ಮಹಮ್ಮದನ ಜೊತೆ ಭಾರತಕ್ಕೂ ಬಂದಿದ್ದ ಅಲ್‌ಬರುನಿ, ಸಂಸ್ಕೃತವನ್ನು ಕಲಿಯುತ್ತ ಇಲ್ಲಿಯೇ ೧೩ ವರ್ಷಗಳನ್ನು ಕಳೆದನು. ಸಂಸ್ಕೃತವನ್ನು ಕಲಿತ ಇವನು ಇಲ್ಲಿಂದ ಅನೇಕ ಪುಸ್ತಕಗಳನ್ನು ಅರೆಬಿಕ್ ಭಾಷೆಗೆ ತರ್ಜುಮೆ ಮಾಡಿದನು. ಅವನ ‘ಕಿತಾಬ ಉಲ್ ಹಿಂದ್’ ಭಾರತೀಯ ಸಮಾಜಕ್ಕೆ ಹಿಡಿದ ಕನ್ನಡಿಯಾಗಿತ್ತು. ಈ ಪುಸ್ತಕದಲ್ಲಿ ಅವನು ತತ್ವಶಾಸ್ತ್ರ, ಗಣಿತ, ಖಗೋಳಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ಭಾರತೀಯರು ಮಾಡಿದ್ದ ಸಾಧನೆಗಳನ್ನು ದಾಖಲಿಸಿದನು. ಅವನು ಚರಿತ್ರೆ ಮತ್ತು ಕಾಲ ಗಣನೆಗಳ ಬಗೆಗಿನ ಅಸಡ್ಡೆಯನ್ನು ಕುರಿತು ಬರೆದಿದ್ದಾನೆ. ಹೊರಜಗತ್ತು ಗೊತ್ತಿಲ್ಲದ ಭಾರತೀಯರು ತಾವೇ ಶ್ರೇಷ್ಠರು, ತಮ್ಮ ರಾಜರೇ ಶ್ರೇಷ್ಠರು ಎಂದು ಭಾವಿಸಿದ್ದಾರೆ ಎಂದು ಬರೆಯುತ್ತಾನೆ. ಆದರೆ ಇವರ ಬೌದ್ಧಿಕ ಸಾಧನೆಗಳನ್ನು ಕುರಿತು ಹೊಗಳುತ್ತಾನೆ. ಅಲ್‌ಬರುನಿಯ ವೈಶಿಷ್ಟ್ಯವೆಂದರೆ ಮುಸ್ಲಿಮ್ ಜಗತ್ತಿನಾಚೆಗಿನ ಸಂಸ್ಕೃತಿಗಳನ್ನು ಕುರಿತು ಸಮಚಿತ್ರದಿಂದ ನೋಡುವ ಮನೋಧರ್ಮ. ಹೀಗೆ ಪೂರ್ವ ರಾಷ್ಟ್ರಗಳ ಕಡೆಗಿನ ಮುಸ್ಲಿಮ್ ಚರಿತ್ರೆಕಾರರ ಆಸಕ್ತಿ ಅನೇಕ ಮಹತ್ವದ ಕೃತಿಗಳು ಬರುವಂತೆ ಪ್ರೇರೇಪಿಸಿತು.

ಇಬನ್ ಬತೂತ (ಕರಿ.ಶ. ೧೩೦೪-೧೩೭೭)

ಇವನು ಈಜಿಪ್ಟ್, ಸಿರಿಯಾ, ರಶಿಯಾ, ಪರ್ಶಿಯಾ, ಅರೇಬಿಯಾ, ಟರ್ಕಿಸ್ಥಾನ್, ಅಫ್ಘಾನಿಸ್ಥಾನ, ಭಾರತ, ಶ್ರೀಲಂಕಾ, ಮಲಯ, ಸುಮಾತ್ರ, ಜಾವ, ಫಿಲಿಫೈನ್ಸ್, ಚೀನಾ ಮುಂತಾದ ಪೂರ್ವ ಹಾಗೂ ಪಶ್ಚಿಮ ದೇಶಗಳನ್ನು ಸುತ್ತಿ ೧೩೪೯ ರಲ್ಲಿ ವಾಪಾಸ್ಸಾದನು. ೧೩೩೪ ರಲ್ಲಿ ದೆಹಲಿಯಲ್ಲಿದ್ದನು. ಮಹಮದ್ ಬಿನ್ ತೊಘಲಕ್‌ನ ಆಸ್ತಾನದಲ್ಲಿ ಕ್ವಾಜಿಯಾಗಿ (ನ್ಯಾಯಾಧೀಶ) ೮ ವರ್ಷಗಳ ಸೇವೆ ಸಲ್ಲಿಸಿದನು. ಅವನ ‘ರಿಹ್ಲಾ’ ಗ್ರಂಥ ಭಾರತವನ್ನು ಕುರಿತಾದದ್ದು. ಮಹಮದ್ ಬಿನ್ ತೊಘಲಕ್‌ನ ಕುರಿತಂತೆ ಅವನು ನೀಡುವ ವಿವರಗಳು, ತೊಘಲಕ್‌ನ ಒಟ್ಟು ಕಾಲವನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದೆ. ದೆಹಲಿ ಸುಲ್ತಾನರ ಕಾಲದ ಇನ್ನೊಬ್ಬ ಚರಿತ್ರೆಕಾರನಾದ ಬರುನಿಯ ಬರವಣಿಗೆಯ ವಿವರಗಳು ಮತ್ತು ಇವನ ವಿವರಗಳು ಪೂರಕವಾಗಿಯೇ ಇವೆ. ಹೀಗೆ ಇಬನ್‌ಬತೂತನು ಮಧ್ಯಕಾಲೀನ ಭಾರತ ಚರಿತ್ರೆ ಹಾಗೂ ಜಾಗತಿಕ ಚರಿತ್ರೆಯನ್ನು ತನ್ನ ಬರವಣಿಗೆಯಲ್ಲಿ ಮೌಲಿಕವಾಗಿ ಕಟ್ಟಿಕೊಡುತ್ತಾನೆ.

ಅಲ್‌ ಖುರೇಶಿ ಎಲ್-ಕಿಂಡಿ, ಇಬನ್ ತಫರಿ ಬಿರ್ಡಿ ಮುಂತಾದವರು ಈಜಿಫ್ಟಿನ ಬಗೆಗೆ ಅನೇಕ ಪ್ರಮುಖ ಗ್ರಂಥಗಳನ್ನು ರಚಿಸಿದರು. ಹಾಗೆಯೇ ಸ್ಪೇನಿನ ಚರಿತ್ರೆಕಾರರಾದ ಅಲ್-ರಾಜಿ ಅರಿಬ್ ಬೆನ್ ಸಾದ್, ಇಬನ್ ಆಧಾರಿ ಮುಂತಾದವರು ಸ್ಪೇನ್ ಮತ್ತು ಇತರ ಪಶ್ಚಿಮದ ಭಾಗಗಳನ್ನು ಕುರಿತು ಬರೆದರು. ಇದರ ಜೊತೆಗೆ ಇಸ್ಲಾಂ ಧರ್ಮ ಯುದ್ಧಗಳು, ಭೂಗೋಳ, ಪ್ರಯಾಣ ಮುಂತಾದ ಅಂಶಗಳನ್ನು ಕೇಂದ್ರವನ್ನಾಗಿಟ್ಟುಕೊಂಡು ಅನೇಕ ಗ್ರಂಥಗಳು ಸೃಷ್ಟಿಯಾದವು. ಮುಸ್ಲಿಮೇತರ ಜಗತ್ತುಗಳನ್ನು ಕುರಿತು ಬರೆಯುವಾಗ ಸಹನಶೀಲರಾಗಿ ಬರೆಯುವ ಚರಿತ್ರೆಕಾರರಂತೆ, ಅಸನೆಯಿಂದ ಬರೆದ ಲೇಖಕರು ಇದ್ದಾರೆ. ಬಹುಮಂದಿ ಬರಹಗಾರರಿಗೆ ಇಸ್ಲಾಂ ಧರ್ಮ ನಾವಿಕ ಶಕ್ತಿಯನ್ನು ಒದಗಿಸಿತ್ತು ಎಂಬುದನ್ನು ಗಮನಿಸಬಹುದು. ಇವರ ಬರಹಗಳು ಅರ್ಥ ಚರಿತ್ರೆ, ತತ್ವಶಾಸ್ತ್ರ, ವ್ಯಾಪಾರ, ಆಚರಣೆಗಳು ಮುಂತಾದ ಅಂಶಗಳ ಬಗೆಗೆ ಬೆಳಕನ್ನು ಚೆಲ್ಲುತ್ತವೆ.

ಇಬನ್ ಖಾಲ್ದೂನ್ (ಕ್ರಿ.ಶ. ೧೩೩೨-೧೪೦೬)

ಇಬನ್‌ ಖಾಲ್ದೂನ್ ಅರಬ್ ಚರಿತ್ರೆಕಾರರಲ್ಲೇ ವಿಶಿಷ್ಟನಾದವನು. ಚರಿತ್ರೆಕಾರನಂತೆ ದಾರ್ಶನಿಕನಾಗಿದ್ದ ಈತನು ಸಮಾಜ ವಿಜ್ಞಾನಿಯಾಗಿದ್ದನು. ಇವನು ಉತ್ತರ ಆಫ್ರಿಕಾದ ಟುನಿಸ್ ನಗರದಲ್ಲಿ ವಿದ್ವಾಂಸರ ಹಾಗೂ ರಾಜಕೀಯ ಮುತ್ಸದ್ಧಿಗಳ ಬೆರ್‌ಬರ್ ಕುಟುಂಬದಲ್ಲಿ ಜನಿಸಿದನು. ಇದೇ ನಗರದಲ್ಲಿ ಸಾಕಷ್ಟು ಒಳ್ಳೆಯ ಶಿಕ್ಷಣವನ್ನು ಪಡೆದ ಇವನು ಅನಂತರ ಕೈರೊ ವಿಶ್ವವಿದ್ಯಾನಿಲಯದಲ್ಲಿ ಧರ್ಮಶಾಸ್ತ್ರ ಹಾಗೂ ಚರಿತ್ರೆಯ ಪ್ರಾಧ್ಯಾಪಕನಾಗಿ ಕೆಲಸ ನಿರ್ವಹಿಸಿದನು. ಪ್ರವೃತ್ತಿಯಲ್ಲಿ ಸಾಹಸಮಯಿಯಾಗಿದ್ದನು. ತನ್ನ ಪ್ರಮುಖ ಗ್ರಂಥವಾದ ಕಿತಾಬ್-ಅಲ್-ಇಬರ್ (ಜಾಗತಿಕ ಚರಿತ್ರೆ)ಗೆ ಅಂಟಿಕೊಂಡಂತಿರುವ ‘ಅಲ್‌ತಾರೀಫ್’ ಎಂಬ ಅವನ ಪುಟ್ಟ ಆತ್ಮ ಕಥನವನ್ನು ನೋಡಿದರೆ ಅವನ ವಿಚಿತ್ರ ನಡವಳಿಕೆಗಳ ಮನೋಭೂಮಿಕೆ ಅರ್ಥವಾಗುತ್ತದೆ.

ಅವನ ಆತ್ಮಚರಿತ್ರೆಯ ಪ್ರಕಾರ ಅವನು ೧೩೩೨ರ ಮೇ ತಿಂಗಳ ೨೭ ರಂದು ಜನಿಸಿದನು. ದಕ್ಷಿಣ ಅರೇಬಿಯಾದ ಬುಡಕಟ್ಟಿಗೆ ಸೇರಿದ ಖಾಲ್ದೂನ ಅವನ ಕುಟುಂಬದ ಮೂಲ ಪುರುಷನಾಗಿದ್ದನು. ಅವನ ಕುಟುಂಬ ಆ ಹಂತದಲ್ಲಿ ರಾಜಕೀಯ ಕಾರಣಗಳಿಗಾಗಿ ಸ್ಪೇನಿಗೆ ಬಂದು ಅನಂತರ ಆಫ್ರಿಕಾಕ್ಕೆ ಬಂದು ನೆಲೆಸಿತು. ಸಿವಿಲ್ಲಿಯಲ್ಲಿದ್ದಾಗ ಉಮ್ಮಯಾದ್, ಅಲ್ಮೋರವಿದ್ ಮತ್ತು ಅಲ್ಮೊರಹಾದ್ ಮನೆತನಗಳ ಆಳ್ವಿಕೆಯಲ್ಲಿ ಅವರಿಗೆ ಸೇವೆ ಸಲ್ಲಿಸಿ ಪ್ರಮುಖ ಕುಟುಂಬವಾಗಿ ಏಳ್ಗೆಗೆ ಬಂದರು. ನಂತರ ಆಫ್ರಿಕಾಕ್ಕೆ ಬಂದು ಮತ್ತಷ್ಟು ಪ್ರಮುಖವಾಗಿ ಬೆಳೆದರು.

ಖಾಲ್ದೂನನಿಗೆ ತನ್ನ ತಂದೆಯೇ ಮೊದಲ ಗುರು. ತನ್ನ ಬಾಲ್ಯದ ಶಿಕ್ಷಣ, ಅಧ್ಯಾಪಕರು ಹಾಗೂ ಪುಸ್ತಕಗಳ ಬಗ್ಗೆ ತನ್ನ ಆತ್ಮಚರಿತ್ರೆಯಲ್ಲಿ ಅನೇಕ ವಿವರಗಳನ್ನು ನೀಡುತ್ತಾನೆ. ಅವನು ಕುರಾನನ್ನು ಸಂಪೂರ್ಣವಾಗಿ ಮನನ ಮಾಡಿಕೊಂಡನು. ಅದರ ಭಾಷ್ಯ, ವಿವರಣೆಗಳು ಹಾಗೂ ಉಚ್ಛಾರ ಕ್ರಮಗಳನ್ನು ಗ್ರಹಿಸಿದನು. ಸಂಪ್ರದಾಯ (ಹದೀಸ್‌)ಗಳನ್ನು ಕುರಿತು ವಿಶೇಷ ಆಸ್ಥೆಯಿಂದ ತಿಳಿದುಕೊಂಡನು. ಆಧ್ಯಾತ್ಮ, ನ್ಯಾಯಶಾಸ್ತ್ರ, ತರ್ಕಗಳನ್ನು ಅಭ್ಯಾಸ ಮಾಡಿದನು. ಇವುಗಳ ಜೊತೆಗೆ ಅರಬ್ಬೀ ಭಾಷೆಯ ಸಾಹಿತ್ಯ ಕೃತಿಗಳನ್ನು ಅಭ್ಯಾಸ ಮಾಡಿದನು. ವಿಜ್ಞಾನ ಶಾಸ್ತ್ರಗಳಾದ ಗಣಿತ, ಭೌತಶಾಶ್ತ್ರ ಮುಂತಾದವುಗಳ ಬಗೆಗೂ ಆಸಕ್ತಿ ತಳೆದನು. ರಾಜಕೀಯ, ವಿಜ್ಞಾನ ನೀತಿಶಾಸ್ತ್ರಗಳನ್ನು ಅಭ್ಯಸಿಸಿದನು. ಅರಬ್ಬೀ ದಾರ್ಶನಿಕ ಮತ್ತು ಗಣಿತಜ್ಞ ಅಬಿಲಿ ಅವಿಸಿನ್ನನ ಕೃತಿಗಳನ್ನು ಪರಿಚಯಿಸಿಕೊಂಡನು. ಹೀಗೆ ಶೈಕ್ಷಣಿಕವಾಗಿ ಒಂದು ವಿಸ್ತಾರವಾದ ನೆಲೆಯಲ್ಲಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡನು. ತನ್ನ ೧೮ನೆಯ ವಯಸ್ಸಿನವರೆಗೆ ವಿದ್ಯಾಭ್ಯಾಸವನ್ನು ಮುಂದುವರೆಸಿದನು. ೧೩೪೯ ರಲ್ಲಿ ಬಂದ ಪ್ಲೇಗು ಅವನ ತಂದೆ, ತಾಯಿ ಗುರುಗಳನ್ನು ಬಲಿ ತೆಗೆದುಕೊಂಡಿತು.

ತನ್ನ ಕುಟುಂಬದ ಪ್ರಮುಖರನ್ನು ಕಳೆದುಕೊಂಡ ನಂತರ ಸಾರ್ವಜನಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿ ರಾಜಕೀಯಕ್ಕೆ ಬಂದನು. ಟ್ಯೂನಿಸ್‌ನ ಸರ್ವಾಧಿಕಾರಿ ರಾಜ ಇವನನ್ನು ರಾಜ ಮನೆತನದ ಪತ್ರ ಹಾಗೂ ಕಟ್ಟಳೆಗಳಿಗೆ ಮುದ್ರೆ ಒತ್ತುವ ಕೆಲಸಕ್ಕೆ ನೇಮಿಸಿದನು. ಅನಂತರದಲ್ಲಿ ಮೊರಾಕೋವಿನ ಸುಲ್ತಾನನ ಬಳಿ ಅವನು ಕಾರ್ಯದರ್ಶಿಯಾದನು. ಇವನ ಇಡೀ ಜೀವನ ಅಲೆಮಾರಿ ಜೀವನವಾಗಿತ್ತು. ತನ್ನ ಮುಂದಿನ ೩೦ ವರ್ಷಗಳಲ್ಲಿ ಅನೇಕ ರಾಜರ ಬಳಿ ಕೆಲಸ ಮಾಡಿದನು. ತನ್ನದೇ ಆದ ಅವಿವೇಕದ ಹಾಗೂ ಅವಿಧೇಯ ನಡವಳಿಕೆಗಳಿಂದ ಅನೇಕ ತೊಂದರೆಗಳನ್ನೂ ಅನುಭವಿಸಿದನು. ಮೊದಲನೇ ಹೆಸರಿಸಿದ ಖಾಲ್ದೂನನ ‘ಕಿತಾಬ್-ಅಲ್-ಇಬರ್’ ಗ್ರಂಥವು ಮೂರು ಭಾಗಗಳಲ್ಲಿ ವಿಂಗಡನೆಗೊಂಡಿತ್ತು. ಮೊದಲನೆ ಭಾಗವು ನಾಗರಿಕತೆಯನ್ನು ಕುರಿತಂತೆ ಅದರ ಪ್ರಮುಖ ಲಕ್ಷಣಗಳನ್ನು ಅರಿಯುವ ಪ್ರಯತ್ನವಾಗಿದೆ. ಮನುಷ್ಯನ ಮೇಲೆ ಅದು ಮಾಡಿರುವ ಪ್ರಭಾವವನ್ನು ಹೇಳುತ್ತದೆ. ಎರಡನೆಯ ಭಾಗವು ವಿಶೇಷವಾಗಿ ಅರಬ್ಬರ ಚರಿತ್ರೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಮಧ್ಯ ಏಶಿಯಾದಿಂದ ಇಟಲಿಯವರೆಗಿನ ಅನೇಕ ರಾಷ್ಟ್ರಗಳ ಚರಿತ್ರೆಯನ್ನು ಹೇಳುತ್ತದೆ. ಮೂರನೆಯ ಭಾಗವು ಉತ್ತರ ಆಫ್ರಿಕಾ ಮತ್ತು ಅದನ್ನು ಆಳಿದ ಬುಡಕಟ್ಟು ವಂಶಗಳನ್ನು ಕುರಿತಂತಿದೆ. ಈ ಪುಸ್ತಕಕ್ಕೆ ಒಂದು ದೀರ್ಘ ಮುನ್ನುಡಿಯಿದೆ. ಈ ಮುನ್ನಡಿಯು ಖಾಲ್ದೂನನ ಚರಿತ್ರೆ ಬಗೆಗಿನ ಗ್ರಹಿಕೆಗೆ ಸಂಬಂಧಪಟ್ಟಿದ್ದ ಹಾಗೂ ಒಟ್ಟಾರೆ ಸಮಾಜ ಬೆಳೆದ ರೀತಿಯನ್ನು ಚರ್ಚಿಸುತ್ತದೆ. ಈ ಮುನ್ನುಡಿಯು ಮುಂದಿನ ತಲೆಮಾರುಗಳನ್ನು ತನ್ನತ್ತ ಆಕರ್ಷಿಸುತ್ತಲೇ ಹೋಯಿತು. ಚರಿತ್ರೆಯನ್ನು ತಾತ್ವಿಕವಾಗಿ ನೋಡುವ ಮೊದಲ ಪ್ರಯತ್ನ ಇವನಲ್ಲಿ ಕಾಣುವುದೇ ಈ ಆಕರ್ಷಣೆಗೆ ಕಾರಣವಾಗಿದೆ. ಅವನ ಬೃಹತ್ ಪ್ರತಿಭೆ ಈ ಮುನ್ನುಡಿಯಲ್ಲಿ ಆವಿರ್ಭವಿಸಿದೆ. ಬೌದ್ಧಿಕ ಚರಿತ್ರೆಯಲ್ಲಿ ಅವನಿಗೆ ಪ್ರಮುಖ ಸ್ಥಾನ ಲಭಿಸಿರುವುದು ಈ ಮುನ್ನುಡಿಯಿಂದಲೇ. ಚರಿತ್ರೆಯನ್ನು ನೋಡುವ ಕ್ರಮದಲ್ಲಿ ಇವನು ೧೮ನೆಯ ಶತಮಾನದ ವಿಕೊಗೆ ಹೋಲುತ್ತಾನೆ.

ಇನ್ನೊಂದು ಪ್ರಮುಖ ಅಂಶವೆಂದರೆ ಚರಿತ್ರೆಯು ಘಟಿಸುವ ಗತಿಯಲ್ಲಿ ಸಂಪೂರ್ಣವಾಗಿ ದೇವರ ಪಾತ್ರವನ್ನೇ ನೋಡುತ್ತಿದ್ದ ಕಾಲದಲ್ಲಿ, ಸಮಾಜಕ್ಕೆ ಚರಿತ್ರೆಯನ್ನು ಸೃಷ್ಟಿಸುವ ಆಂತರಿಕ ಕಾರಣಗಳಿರುತ್ತವೆ ಎಂಬುದನ್ನು ಗ್ರಹಿಸುತ್ತಾನೆ. ಇದೊಂದು ನಿರಂತರ ಪ್ರಕ್ರಿಯೆ ಎನ್ನುತ್ತಾನೆ. ಮನುಷ್ಯನ ದೈನಂದಿನ ಬದುಕಿನ ಎಲ್ಲ ಕ್ರಿಯೆಗಳ ಹಿಂದೆ ದೇವರಿರುವುದಿಲ್ಲ ಎಂಬುದನ್ನು ವಿಶದೀಕರಿಸುತ್ತಾನೆ. ಕೇವಲ ವಿಶೇಷ ಘಟನೆಗಳ ಹಿಂದೆ ಮಾತ್ರ ದೇವರಿರುತ್ತಾನೆ ಎಂದು ನಂಬುತ್ತಾನೆ. ಮತ್ತೊಂದು ಅವನ ಬಗೆಗಿನ ವಿಶೇಷತೆಯೆಂದರೆ ತನಗಿಂತ ಹಿಂದಿನ ಚರಿತ್ರೆಕಾರರ ಚರಿತ್ರೆಯನ್ನು ರಚಿಸುವಲ್ಲಿ ಅನುಸರಿಸಿದ ಅವೈಜ್ಞಾನಿಕ ಪದ್ಧತಿಯನ್ನು ಅವನು ಟೀಕಿಸುವ ಕ್ರಮ. ಅವರಿಗೆ ಚರಿತ್ರೆಕಾರನಿಗೆ ಇರಬೇಕಾದ ಒಳನೋಟಗಳಿರಲಿಲ್ಲ ಎಂದು ಬರೆಯುತ್ತಾನೆ. ಚರಿತ್ರೆ ಬರೆಯುವುದೆಂದರೆ ಸತ್ಯದ ಹುಡುಕಾಟ. ಈ ಹುಡುಕಾಟ ಅವರಲ್ಲಿರಲಿಲ್ಲ ಎಂದು ಹೇಳುತ್ತಾನೆ. ಕೇಳಿದ್ದೆಲ್ಲವೂ ಸತ್ಯವೆಂದು ನಂಬಿದ್ದರಿಂದಲೇ ಅವರು ನಿಜವಾದ ಚರಿತ್ರೆಯನ್ನು ಬರೆಯಲಿಲ್ಲವೆನ್ನುತ್ತಾನೆ. ಅವನ ಪ್ರಕಾರ ಒಬ್ಬ ಸಹಜ ಚರಿತ್ರೆಕಾರನಿಗೆ ಒಂದು ವಿಷಯವನ್ನು ಕುರಿತು ಬರೆಯುವಾಗ ಆ ವಿಷಯದ ಸಂಪೂರ್ಣ ಆಕರಗಳು ಅವನಲ್ಲಿರಬೇಕು. ರಾಜಕೀಯದ ಪ್ರಾಥಮಿಕ ಸತ್ಯಗಳು ಗೊತ್ತಿರಬೇಕು, ಅವನು ಬರೆಯುವ ಘಟನೆಯ ಹಿಂದಿರುವ ನಾಗರಿಕತೆಯ ಅರಿವಿರಬೇಕು ಮತ್ತು ಮಾನವ ಸಮಾಜದ ವಿವಿಧ ಮುಖಗಳ ಪರಿಚಯವಿರಬೇಕು ಎಂದೆಲ್ಲಾ ಅಪೇಕ್ಷಿಸುತ್ತಾನೆ. ಹಾಗೆಯೇ ಚರಿತ್ರೆಕಾರ ವಸ್ತುನಿಷ್ಠನಾಗಿರಬೇಕು, ತನಗೆ ಇಷ್ಟವಾದುದ್ದನ್ನು ಮಾತ್ರ ತೆಗೆದುಕೊಳ್ಳುವ ಮನೋಧರ್ಮ ಸಲ್ಲದೆಂದು ಸ್ಪಷ್ಟವಾಗಿ ಹೇಳುತ್ತಾನೆ (ಒಟ್ಟಾರೆ ಚರಿತ್ರೆಕಾರನೊಬ್ಬನಿಗೆ ಮೌಲಿಕವಾದುದನ್ನು ಬರೆಯಲು ವಿಶೇಷ ಗುಣಗಳು ಅವಶ್ಯಕವೆನ್ನುತ್ತಾನೆ. ಒಂದು ವಿಸ್ತಾರ ನೆಲೆಯಲ್ಲಿ ವೈಜ್ಞಾನಿಕ ಮನೋಧರ್ಮ ಅವನಿಗೆ ಅನಿವಾರ್ಯವೆಂದು ಪ್ರತಿಪಾದಿಸಿದ್ದಾನೆ. ಈ ಕಾರಣದಿಂದಲೇ ಖಾಲ್ದೂನ್‌ಅನನ್ಯ ಚರಿತ್ರೆಕಾರನೆನಿಸಿಕೊಂಡಿದ್ದಾನೆ.)

ಇಬನ್ ಖಾಲ್ದೂನ್ ಕೇವಲ ಚರಿತ್ರೆಕಾರನಾಗಿ ಮಾತ್ರ ಕಾಣುವುದಿಲ್ಲ. ಅವನು ಬಹುಶಃ ಜಗತ್ತು ಕಂಡ ಪ್ರಥಮ ಸಮಾಜಶಾಸ್ತ್ರಜ್ಞನಾಗಿದ್ದಾನೆ. ಜನರು ಹೇಗೆ ಜೀವನ ನಡೆಸುತ್ತಾರೆ, ಸಮಾಜಗಳು ಹೇಗೆ ಹುಟ್ಟುತ್ತವೆ, ಬೆಳೆಯುತ್ತವೆ ಹಾಗೂ ನಶಿಸುತ್ತವೆ ಎಂಬುದನ್ನು ವಿವರಿಸುತ್ತಾನೆ. ಮನುಷ್ಯರು ಹೇಗೆ ಸಮೂಹಗಳಾಗಿ ಬದುಕುತ್ತಾರೆ, ಪ್ರಕೃತಿಯು ಅವರ ಬದುಕಿನ ಮೇಲುಂಟುಮಾಡುವ ಪರಿಣಾಮ, ಅವರು ಅನಿವಾರ್ಯವಾಗಿ ಒಟ್ಟಾರೆಯಾಗಿ ಬದುಕಲೇ ಬೇಕಾದ ಅನಿವಾರ್ಯತೆ, ಸಮೂಹ ನಡವಳಿಕೆಗಳು ವೈಯಕ್ತಿಕ ನಡವಳಿಕೆಗಳಿಂದಾಗಿ ಹೇಗೆ ಭಿನ್ನವಾಗಿರುತ್ತಾರೆ, ಸಮಾಜ ಪರಿವರ್ತನೆಯ ನಿಯಮಗಳು, ಮನುಷ್ಯನ ನಡವಳಿಕೆಯ ಮೇಲೆ ಧಾರ್ಮಿಕ ಪ್ರಭಾವಗಳು ಮುಂತಾದ ಅನೇಕ ಕುತೂಹಲಕಾರಿ ಅಂಶಗಳನ್ನು ಕುರಿತು ಚರ್ಚಿಸಿದ್ದಾನೆ.

ಇಬನ್ ಖಾಲ್ದೂನನಿಗೆ ಚರಿತ್ರೆಯೆನ್ನುವುದು ಕೇವಲ ಘಟನೆಗಳ ಪ್ರತ್ಯೇಕ ಅಧ್ಯಯನವಲ್ಲ. ಅದು ಘಟನೆಗಳ ನಡುವಿನ ಅಂತರ ಸಂಬಂಧಗಳನ್ನು ಅರಿಯುವುದು. ಚರಿತ್ರೆಯ ಅಧ್ಯಯನವೇ ಸಂಸ್ಕೃತಿಯ ಅಧ್ಯಯನವೆಂದು ಹೇಳುವುದರ ಮುಖಾಂತರ ಚರಿತ್ರೆಗೆ ವಿಸ್ತಾರವಾದ ತಾತ್ವಿಕ ನೆಲೆಯನ್ನು ಒದಗಿಸುತ್ತಾನೆ. ಪ್ರಕೃತಿ ಮನುಷ್ಯ ಚರಿತ್ರೆಯ ಹಿಂದೆ ದೊಡ್ಡ ಶಕ್ತಿಯಾಗಿ ಯಾವತ್ತೂ ಕೆಲಸ ಮಾಡಿದೆ ಎಂದು ಹೇಳುತ್ತಾನೆ. ಹೀಗಾಗಿ ಮನುಷ್ಯ ಸಾಮಾಜಿಕ ಬದುಕಿನ ಮೇಲೆ ಪ್ರಕೃತಿ ಸದಾ ಪ್ರಭಾವ ಬೀರುತ್ತಿರುತ್ತದೆ ಎಂದು ಗುರುತಿಸುತ್ತಾನೆ. ವಾತಾವರಣ, ಸಸ್ಯಸಂಪತ್ತು, ಸಂತಾನೋತ್ಪತ್ತಿ ಹಾಗೂ ದುಡಿಮೆ ಎಲ್ಲವೂ ಚರಿತ್ರೆಯ ಘಟನೆಗಳ ಹಿಂದೆ ಜಾಗೃತವಾಗಿರುತ್ತವೆ ಎಂದು ಭಾವಿಸುತ್ತಾನೆ. ಹಾಗೆಯೇ ಸಮಾಜದ ಹುಟ್ಟು ಬೆಳವಣಿಗೆಯನ್ನು ಗುರುತಿಸುತ್ತಾ ಹೀಗೆ ಹಿಂದಿನ ಚರಿತ್ರೆ ಈಗಿನ ವಾಸ್ತವವನ್ನು ರೂಪಿಸಿದೆ ಎಂದು ವಿವರಿಸುತ್ತಾನೆ. ಮನುಷ್ಯರ ಮನೋಭೂಮಿಕೆ ಅವರ ಸಾಮಾಜಿಕ ನಡವಳಿಕೆಗಳನ್ನು ರೂಪಿಸುತ್ತದೆ ಎನ್ನುತ್ತಾನೆ. ಸತ್ಯದ ಅನ್ವೇಷಣೆ, ಕ್ರಿಯಾಶೀಲ ಪ್ರಯತ್ನಗಳು ಹಾಗೂ ಶ್ರೇಷ್ಠ ಮತ್ತು ಅಂತಿಮವಾದುದ್ದನ್ನು ನಿರ್ಮಿಸುತ್ತವೆ. ಮನುಷ್ಯನ ಬಯಕೆಗಳು ಮನುಷ್ಯನ ಒಟ್ಟಾರೆ ಚರಿತ್ರೆಯನ್ನು ರೂಪಿಸುತ್ತವೆ ಎನ್ನುತ್ತಾನೆ.

ಇಬನ್‌ ಖಾಲ್ದೂನ ಚರಿತ್ರೆಯ ಕೇಂದ್ರಬಿಂದು ಮಾನವ. ಅರಿಸ್ಟಾಟಲ್ ಮನುಷ್ಯನನ್ನು ರಾಜಕೀಯ ಪ್ರಾಣಿ ಎಂದು ಕರೆದರೆ ಇವನು ಸಾಮಾಜಿಕ ಪ್ರಾಣಿ ಎಂದು ಕರೆದನು. ಮನುಷ್ಯರು ಪರಸ್ಪರ ಸಹಕರಿಸದಿದ್ದರೆ ಮಾನವ ನಾಗರಿಕತೆ ನಶಿಸುತ್ತದೆ. ಮನುಷ್ಯ ಎಷ್ಟೇ ಭೌದ್ಧಿಕನಾದರೂ ಅವನು ಸ್ವಭಾವತಃ ಪ್ರಾಣಿ. ಏಕಾಂಗಿಯಾಗಿ ಅವನಿಗೆ ಜೀವಿಸಲು ಸಾಧ್ಯವಿಲ್ಲ. ಸಂಘಜೀವಿಯಾಗಿ ಅವನು ರೂಪುಗೊಂಡಿದ್ದೇ ಚರಿತ್ರೆಯಲ್ಲಿ ಮೊದಲನೆಯ ಮೈಲಿಗಲ್ಲು. ಏಕೆಂದರೆ ಅದು ನಾಗರಿಕತೆಯ ಪ್ರಾರಂಭ. ಈ ಎಲ್ಲ ಅಂಶಗಳನ್ನು ವಿವರಿಸಲು ಅವನು ಅಲ್-ಉಮ್‌ರಾನ್ ಎನ್ನುವ ಹೊಸ ಪದದ ಆವಿಷ್ಕಾರ ಮಾಡಿದನು. ಅಲ್-ಉಮ್‌ರಾನ್ ಎಂದರೆ ಸಮಾಜಶಾಸ್ತ್ರವೆಂದೇ ಅರ್ಥ. ಖಾಲ್ದೂನನು ಮತ್ತೊಂದು ಇಂತಹುದೇ ವಿಶಿಷ್ಟ ಪದ ‘ಅಸಬಿಯ’ವನ್ನು ಬಳಸುತ್ತಾನೆ. ಅಸಬಿಯ ಎಂದರೆ ಸಮೂಹ ಭಾವನೆ ಎಂದರ್ಥ. ಮನುಷ್ಯರು ಸಮೂಹಗಳಾಗಿ ಎಲ್ಲರಿಗೂ ಅನ್ವಯಿಸುವ ಕಾರಣಗಳಿಗಾಗಿಯೆ ಬದುಕುತ್ತಾರೆ. ತಾವೆಲ್ಲರೂ ಒಂದೇ ರಕ್ತಮೂಲಕ್ಕೆ ಸೇರಿದವನು ಎನ್ನುವ ಭಾವನೆ. ಅನಾಗರಿಕ, ಅಲೆಮಾರಿ ಜೀವನದಿಂದ ಆಧುನಿಕ ನಗರ ಬದುಕಿನವರೆಗೂ ಮನುಷ್ಯ ಬೆಳದಿರುವ ಹಾದಿಯನ್ನು ತೆರೆದಿಡುತ್ತಾನೆ. ಈ ನಗರ ಬದುಕಿನ ಕ್ರಮವನ್ನು ಮನುಷ್ಯನ ಅತ್ಯಾಧುನಿಕ ಸಾಮಾಜಿಕ ಬೆಳವಣಿಗೆಯೆಂದು ಭಾವಿಸುತ್ತಾನೆ.

ಖಾಲ್ದೂನನ ಬಹುಮುಖಿ ಚಿಂತನೆಯಲ್ಲಿ ಕಾಣುವ ಇನ್ನೊಂದು ಪ್ರಮುಖ ಅಂಶವೆಂದರೆ ಅವನು ರಾಜ್ಯವನ್ನು ನೋಡುವ, ಪರಿಭಾವಿಸುವ ಕ್ರಮಕ್ಕೆ ಸಂಬಂಧಿಸಿದ್ದು. ರಾಜ್ಯವನ್ನು ಒಂದು ರಾಜಕೀಯ ಅಧಿಕಾರಕ್ಕೆ ಸಂವಾದಿಯಾಗಿ ಅವನು ನೋಡುತ್ತಾನೆ. ರಾಜ್ಯವೆನ್ನುವುದು ಸಹಜವಾಗಿ ಬೆಳೆಯುವ ವ್ಯವಸ್ಥೆ, ರಾಜ್ಯದಲ್ಲಿರುವ ಸಾಮಾಜಿಕ ವ್ಯವಸ್ಥೆಯಾಗಿ ಕೂಡ ರಾಜಕೀಯ ಸ್ವರೂಪದ್ದೇ ಎಂದು ಭಾವಿಸುತ್ತಾನೆ. ಒಂದು ರಾಜ್ಯವು ಬೆಳೆದಂತೆಲ್ಲಾ ನಗರೀಕರಣ ರೂಪ ಪಡೆಯತೊಡಗುತ್ತದೆ. ನಗರೀಕರಣ ಬೆಳೆದಂತೆಲ್ಲಾ ಸಮೂಹ ಭಾವನೆ ಕಡಿಮೆಯಾಗ ತೊಡಗುತ್ತದೆ. ಅಲೆಮಾರಿ ಜನರಲ್ಲಿ ಅತ್ಯಂತ ತೀವ್ರವಾದ ಗುಂಪಿನ ಬದ್ಧತೆಯಿರುತ್ತದೆ. ಗುಂಪಿನ ನಾಯಕನ ಬಗೆಗೆ ಅಪ್ರತಿಮ ವಿಶ್ವಾಸವಿರುತ್ತದೆ. ಈ ಕಾರಣದಿಂದಲೇ ಇಂತಹ ಅಲೆಮಾರಿ ಗುಂಪುಗಳ ಕ್ರಮೇಣ ಹೊಸ ಹೊಸ ರಾಜ್ಯಗಳನ್ನು ಕಟ್ಟಲು ಸಾಧ್ಯವಾದದ್ದು ಎಂದು ವಿವರಿಸುತ್ತಾನೆ. ಖಾಲ್ದೂನನು ಆರು ಅಲೆಮಾರಿ ಜನಾಂಗಗಳನ್ನು ಕುರಿತು ಬರೆದಿದ್ದಾನೆ. ಅವರ ನಾಯಕನನ್ನು ಖಾಲ್ದೂನ್ ವಾಜಿ ಎಂದು ಕರೆಯುತ್ತಾನೆ. ಈ ನಾಯಕನು ಕ್ರಮೇಣ ಮುಲ್ಕ್ ಎಂದರೆ, ರಾಜಾಧಿಕಾರವನ್ನು ಪಡೆಯುತ್ತಾನೆ. ಈ ರೀತಿಯ ಪ್ರಕ್ರಿಯೆಯನ್ನು ಆರಂಭಿಕ ಮುಸ್ಲಿಮ್ ದಾಳಿಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಅರಬ್ಬರು, ಪ್ರವಾದಿ ನೇತೃತ್ವದಲ್ಲಿ ರಾಜ್ಯವನ್ನು ಕಟ್ಟಿದ ಬಗೆಯನ್ನು ಕಾಣಬಹುದು. ಹೀಗೆ ಬೆಳೆದ ಮನೆತನಗಳು ಮೂರು ಅಥವಾ ನಾಲ್ಕು ತಲೆಮಾರುಗಳ ವರೆಗೆ ಆಳುತ್ತವೆ ಮತ್ತು ಅನಂತರ ನಶಿಸುತ್ತವೆ ಎಂದು ವಿವರಿಸುತ್ತಾನೆ. ಇದಕ್ಕೆ ಕಾರಣವನ್ನು ಹೇಳುತ್ತಾನೆ. ಹೀಗೆ ರೂಪುಗೊಂಡ ರಾಜಮನೆತನ ಮುಂದಿನ ದಿನಗಳಲ್ಲಿ ದಬ್ಬಾಳಿಕೆಯಲ್ಲಿ ತೊಡಗುತ್ತದೆ. ದಬ್ಬಾಳಿಕೆ ಎಷ್ಟರವರೆಗೆ ಬೆಳೆಯುತ್ತದೆ ಎಂದರೆ, ರಾಜನಾದವನು, ಸಂಬಳದ ಸೇವಕರ ಇಟ್ಟುಕೊಂಡು ಅಧಿಕಾರ ಚಲಾಯಿಸುತ್ತಾನೆ. ತನ್ನವರೇ ಜನರ ಪ್ರೀತಿಯನ್ನು ಕಳೆದುಕೊಳ್ಳುತ್ತಾನೆ. ಇದೆಲ್ಲದರ ಪರಿಣಾಮ ಈ ರೀತಿಯ ಮನೆತನಗಳು ನಶಿಸುತ್ತವೆ ಎನ್ನುತ್ತಾನೆ. ನಾಗರಿಕತೆ ಬೆಳೆದಂತೆಲ್ಲಾ ಅದು ಅಂತಿಮ ಘಟ್ಟಕ್ಕೆ ಬರುತ್ತದೆ. ಈ ಹಂತದಲ್ಲಿ ವಿಜ್ಞಾನ ಬೆಳೆಯುತ್ತದೆ. ವಿಜ್ಞಾನದ ಮುಖಾಂತರ ಭೋಗದ ವಸ್ತುಗಳು ಉತ್ಪಾದನೆ ಯಾಗುತ್ತವೆ. ಇಲ್ಲಿಂದ ಅವನತಿ ಪ್ರಾರಂಭವಾಗುತ್ತದೆ. ಇನ್ನೊಂದು ಮನೆತನ ಅಧಿಕಾರದ ಗದ್ದುಗೆಯನ್ನು ಏರುತ್ತದೆ ಎಂದು ಹೇಳುತ್ತಾನೆ.

ರಾಜ್ಯದ ಬೆಳವಣಿಗೆಯ ಹಂತಗಳನ್ನು ವಿವರಿಸುವಾಗ ಸಮಾಜದ ವಿವಿಧ ಆಯಾಮಗಳನ್ನು ಕುರಿತು ಚರ್ಚಿಸುತ್ತಾನೆ. ಅವನ ವಿಶ್ಲೇಷಣೆ ಆಧುನಿಕ ವಿಶ್ಲೇಷಣೆಯ ಬಹುಮುಖ್ಯ ಲಕ್ಷಣಗಳನ್ನು ಒಳಗೊಂಡಿದೆ. ಅವನು ಉತ್ಪಾದನಾ ವಿಧಾನ, ಅದರಲ್ಲಿ ಶ್ರಮಿಕ ವರ್ಗದ ಪಾತ್ರದ ಮುಂತಾದವುಗಳನ್ನು ವಿವರಿಸುವಾಗ ಆಧುನಿಕ ಅರ್ಥಶಾಸ್ತ್ರಜ್ಞರಂತೆ ಭಾಸವಾಗುತ್ತಾನೆ. ಜನಸಂಖ್ಯೆ ಹೆಚ್ಚಿದಂತೆ ಕಾರ್ಮಿಕರ ಸಂಖ್ಯೆಯು ಹೆಚ್ಚುತ್ತದೆ. ಹೆಚ್ಚಿದ ಕಾರ್ಮಿಕರ ಸಂಖ್ಯೆಯು, ಸಮಾಜಕ್ಕೆ ಬೇಕಾದ ಅವಶ್ಯಕತೆಗಳನ್ನು ಉತ್ಪಾದಿಸಲು ತೊಡಗಿಕೊಳ್ಳುವ ಬದಲು, ಭೋಗದ ವಸ್ತುಗಳನ್ನು ಉತ್ಪಾದಿಸುತ್ತಾರೆ. ಚರಿತ್ರೆಯ ವಿಶ್ಲೇಷಣೆಯಲ್ಲಿ ಇವನು ಕಾರ್ಲ್‌‌ಮಾರ್ಕ್ಸ್‌ನಿಗೆ ಹೋಲುತ್ತಾನೆ. ಅವನ ‘ಮುಖದ್ದಿಮಾ’ದಲ್ಲಿ ಬೆರಗಾಗುವಷ್ಟು ಖಾಲ್ದೂನನ ಅನನ್ಯ ಪ್ರತಿಭೆಯನ್ನು ಕಾಣಬಹುದು.

ಖಾಲ್ದೂನನು ಮನುಷ್ಯ ಮೂಲತಃ ಸಂಘಜೀವಿ ಎನ್ನುವುದನ್ನು ವಿವರಿಸುತ್ತಾನೆ. ಅವನ ಕಾಳಜಿಯೆಲ್ಲವೂ ಮನುಷ್ಯನ ಸುತ್ತಲೇ ಸುತ್ತುತ್ತದೆ. ಚರಿತ್ರೆಯನ್ನು ವಿಶ್ಲೇಷಣಾ ವಿಧಾನಕ್ಕೆ ಒಳಪಡಿಸಿ ಆ ಮೂಲಕ ಅನೇಕ ಒಳನೋಟಗಳನ್ನು ವಿವರಿಸುವಾಗಲೂ ಮನುಷ್ಯನನ್ನೇ ಅವನು ಮುಖಾಮುಖಿಯಾಗಿಸುವುದು. ಬರವಣಿಗೆಯ ಕ್ರಮದಲ್ಲೂ ವಿಶಿಷ್ಟತೆಯನ್ನು ಮೆರೆದಿದ್ದಾನೆ. ಸಾಮಗ್ರಿಗಳನ್ನು ಬಳಸಿಕೊಳ್ಳುವ ವಿಧಾನದಲ್ಲೂ ವೈಜ್ಞಾನಿಕ ಕ್ರಮವನ್ನು ಮೆರೆದಿದ್ದಾನೆ. ಸಾಮಗ್ರಿಗಳನ್ನು ಬಳಸಿಕೊಳ್ಳುವ ವಿಧಾನದಲ್ಲೂ ವೈಜ್ಞಾನಿಕ ಕ್ರಮವನ್ನು ಗುರುತಿಸಬಹುದಾಗಿದೆ. ಅಸಂಖ್ಯಾತ ಘಟನೆಗಳನ್ನು ಒಂದುಗೂಡಿಸುವಾಗ ಅತ್ಯಂತ ಎಚ್ಚರದಿಂದಿದ್ದುದನ್ನು ಗಮನಿಸಬಹುದು. ಒಟ್ಟಾರೆಯಾಗಿ ಅನನ್ಯ ಆಧುನಿಕ ಚರಿತ್ರೆಕಾರನನ್ನು ಇಬನ್ ಖಾಲ್ದೂನ್‌ನಲ್ಲಿ ಕಾಣಬಹುದು.

ಅರಬ್ ಚರಿತ್ರೆ ಲೇಖನ ಪರಂಪರೆಯ ಬರವಣಿಗೆಯಲ್ಲಿ ಚಾರಿತ್ರಿಕ ಸಂವೇದನೆಗಳನ್ನು ಕಟ್ಟಿಕೊಟ್ಟಿರುವುದನ್ನು ಮುಖ್ಯವಾಗಿ ಗಮನಿಸಬೇಕು. ಅನೇಕ ಬಗೆಯ ಲೇಖನ ಕ್ರಮಗಳಲ್ಲಿ, ಎಂದರೆ ಸಿರಾಹ್‌ಗಳು (ಜೀವನ ಚರಿತ್ರೆ), ತಹಕೇಕ್ (ತನಿಖಾ ವರದಿ), ತಾರೀಖ್ (ಕಾಲಸೂಚಿ), ಕೈಫಿಯತ್ತುಗಳು (ದಿನಚರಿಗಳು), ಮೆಗಾಜಿಗಳು (ಯುದ್ಧ ವಿಜಯಗಳು), ತಬಾಖತ್ (ಕವಿಚರಿತ್ರೆ), ಅನ್‌ಸಾಬ್ (ವಂಶಾವಳಿ), ಬಖೈರು (ಆಸ್ಥಾನಿಕ ವರದಿ) ಹಾಗೂ ಪ್ರಮುಖವಾಗಿ ಮುಖದ್ದಿಮಾಗಳು (ನಾಗರಿಕತೆಗಳು) ಚರಿತ್ರೆಯನ್ನು ಅವರು ಕಟ್ಟಿ ಕೊಟ್ಟಿದ್ದಾರೆ.

ಒಟ್ಟಾರೆಯಾಗಿ ಅರಬ್ ಚರಿತ್ರೆ ಲೇಖನ ಪರಂಪರೆಯು ಆ ಕಾಲದ ಜೀವನಕ್ರಮ, ಮೌಲ್ಯಗಳು, ಸಾಮಾಜಿಕ ಬೆಳವಣಿಗೆ, ವಿಜ್ಞಾನದ ಆವಿಷ್ಕಾರಗಳು, ತರ್ಕ, ಕಾವ್ಯ, ಮೀಮಾಂಸೆ, ರಾಜಕೀಯ ಬೆಳವಣಿಗೆಗಳು ಮುಂತಾದ ಅನೇಕ ಮುಖಗಳನ್ನು ನಮಗೆ ತೆರೆದಿಡುತ್ತದೆ. ಮೇಲ್ನೋಟಕ್ಕೆ ಧಾರ್ಮಿಕ ಪರಂಪರೆಗಳನ್ನು ಮಾತ್ರ ಕಟ್ಟಿಕೊಡುವ ಪರಂಪರೆಗಳು ಎಂದು ಕಾಣಿಸಿದರೂ, ಲೌಕಿಕ ಜಗತ್ತಿನ ಆಯಾಮಗಳನ್ನು ಅವುಗಳ ದಟ್ಟ ವಿವರಣೆಗಳಲ್ಲಿ ಕಾಣಬಹುದು. ಆಧುನಿಕ ಚರಿತ್ರೆಯ ಬೆಳವಣಿಗೆಯ ಮುನ್ನುಡಿಯನ್ನು ಇಬನ್ ಖಾಲ್ದೂನ್‌ನಲ್ಲಿಯೇ ಸಾಕಷ್ಟು ಕಾಣುತ್ತೇವೆ.

ಕ್ರೈಸ್ತ ಧರ್ಮ ಮತ್ತು ಚರಿತ್ರೆಯ ಬರವಣಿಗೆ

ಕ್ರೈಸ್ತ ಧರ್ಮ ಏಳಿಗೆಯೊಂದಿಗೆ ಹೊಸ ಜೀವನವಿಧಾನ ಪ್ರಾರಂಭವಾಯಿತು. ಕ್ರೈಸ್ತ ಜೀವನ ವಿಧಾನದ ಪ್ರಗತಿಯಿಂದಾಗಿ ಪಶ್ಚಿಮದಲ್ಲಿ ಗ್ರೀಕ್ ಮತ್ತು ರೋಮನ್ ಸಂಸ್ಕೃತಿಯ ಅವನತಿಗೆ ಕಾರಣವಾಯಿತು. ಇದರ ಪರಿಣಾಮವಾಗಿ ಕ್ರಿ.ಶ. ಮೂರನೆಯ ಶತಮಾನದಿಂದ ಗ್ರೀಕ್ ಮತ್ತು ರೋಮನ್ ಚರಿತ್ರೆ ಲೇಖನ ಪರಂಪರೆಯ ಪ್ರಕ್ರಿಯೆ ತೀವ್ರ ಹಿನ್ನಡೆಯನ್ನು ಕಂಡಿತು. ಕ್ರೈಸ್ತ ಧರ್ಮವು ಪಶ್ಚಿಮದ ಮನುಷ್ಯನನ್ನು ವರ್ತಮಾನದಿಂದ ಭವಿಷ್ಯಮುಖಿಯನ್ನಾಗಿಸಿತು. ಆತ್ಮದ ಮುಕ್ತಿಯೇ ಜೀವನದ ಪರಮೋದ್ದೇಶವೆಂದು ಸಾರಿತು. ಇದರಿಂದ ಮನುಷ್ಯನ ಸಾಮಾನ್ಯ ಬದುಕು, ರಾಜ್ಯದ ಅಸ್ತಿತ್ವ, ಎಲ್ಲರ ಸಂಪತ್ತಿನ ಪೋಷಣೆ ಮುಂತಾದ ಗ್ರೀಕ್ ಮತ್ತು ರೋಮನ್ ಸಮಾಜಗಳ ಕಾಳಜಿಗಳನ್ನು ಮೂಲೆಗೆ ದೂಡಿತು. ಸಾರ್ವಜನಿಕ ಹಿತಾಸಕ್ತಿ ಬಗೆಗಿನ ನಿರುತ್ಸಾಹವು ಆರಂಭಿಕ ಕ್ರೈಸ್ತಧರ್ಮವನ್ನು ಜನರಿಂದ ದೂರಮಾಡಿತು. ಈ ಹಿನ್ನೆಲೆಯಲ್ಲಿಯೇ ‘ಕ್ರೈಸ್ತನು ಮತ್ತೆ ಭೂಮಿಗೆ ಬರುತ್ತಾನೆ ಮತ್ತು ತನ್ನ ಶಕ್ತಿಯನ್ನು ನೆಲೆಗೊಳಿಸುತ್ತಾನೆ’ ಎಂಬ ಘೋಷಣೆ ಬಂದದ್ದು. ಆ ಹಂತದಲ್ಲಿ ಚರಿತ್ರೆಯ ಬಗೆಗೆ ಆಸಕ್ತಿಯನ್ನು ಅಳಿಸಿ ಹಾಕುವ ಪ್ರಯತ್ನ ನಡೆಯಿತು. ಹೊಸ ಸ್ವರ್ಗ ನಿರ್ಮಾಣವಾಗುವಾಗ ಚರಿತ್ರೆಯ ಬಗೆಗೇಕೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂಬ ಕೂಗು ಆ ಚಾರಿತ್ರಿಕ ಘಟ್ಟದಲ್ಲಿ ಜೋರಾಗಿಯೇ ಪ್ರತಿಧ್ವನಿಸಿತ್ತು. ಇದು ಚಾರಿತ್ರಿಕ ಪ್ರಜ್ಞೆಯ ಬೆಳವಣಿಗೆಗೆ ತೀವ್ರ ಸವಾಲನ್ನೊಡ್ಡಿತು.

ಆರಂಭಿಕ ಕ್ರೈಸ್ತ ಧರ್ಮವು ಆಧ್ಯಾತ್ಮದ ಕಡೆಗೆ ಹೊಸ ಒತ್ತನ್ನು ನೀಡುವುದರ ಮುಖಾಂತರ ನಿತ್ಯದ ಬದುಕಿಗೆ ಜನರನ್ನು ವಿಮುಖರನ್ನಾಗಿಸಿತು. ಆದರೆ ಬಹುಕಾಲ ಅದನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಚರಿತ್ರೆಯಿಂದುಂಟಾದ ವಿಮುಖತೆಯನ್ನು ತೊಡೆಯಲು ಚರಿತ್ರೆಗೆ ಬರಬೇಕಾಯಿತು. ಕ್ರೈಸ್ತ ಧರ್ಮವೇ ಒಂದು ಹೊಸ ಚರಿತ್ರೆಯನ್ನು ಕಟ್ಟುತ್ತಿತ್ತು. ಕ್ರೈಸ್ತ ಧರ್ಮದ ಚರಿತ್ರೆಯನ್ನು ದಾಖಲೆಗಳಲ್ಲಿ ಉಳಿಸುವುದು ಕ್ರೈಸ್ತ ಧರ್ಮದ ಅನುಯಾಯಿಗಳಿಗೆ ಅನಿವಾರ್ಯವಾಯಿತು. ಕ್ರೈಸ್ತನ ಪವಾಡಗಳ ದಾಖಲೆಗಳ ಸಾದೃಶ್ಯದ ಮುಖಾಂತರವೇ ಕ್ರೈಸ್ತ ಧರ್ಮದ ಪ್ರಚಾರವಾಗಬೇಕಾದ್ದಿತು. ಅನಿವಾರ್ಯವಾಗಿ ಕ್ರೈಸ್ತ ಧರ್ಮದ ಪರಂಪರೆಯನ್ನು ಪ್ರಜ್ಞಾಪೂರ್ವಕವಾಗಿ ಕಾಪಾಡಬೇಕಾಯಿತು. ಮುಖ್ಯವಾದುದೆಂದರೆ, ಅವರ ಚಾರಿತ್ರಿಕ ಪ್ರಜ್ಞೆಯು ಚರ್ಚ್‌‌ನ ಚರಿತ್ರೆಗೆ ಮಾತ್ರ ಸೀಮಿತವಾಯಿತು. ಕ್ರೈಸ್ತ ಧರ್ಮದ ಬಗೆಗಿನ ಅನುಯಾಯಿಗಳ ಪರಿಹಾರಕ್ಕೆ ಅದರ ಚರಿತ್ರೆಯಿಂದಲೇ ಉತ್ತರಗಳನ್ನು ನೀಡಬೇಕಾಗಿತ್ತು. ಹೀಗೆ ಅನಿವಾರ್ಯವಾಗಿ ಚರ್ಚ್ ಸಂಪ್ರದಾಯದ ಲೇಖಕರು ಅದರ ಚರಿತ್ರೆಯಿಂದ ದೂರ ಸರಿಯಾಗಲೇ ಇಲ್ಲ.

ಆದರೆ ಅವರ ಚರಿತ್ರೆಯ ಬಗೆಗಿನ ಆಸಕ್ತಿ ಚರಿತ್ರೆಯ ಸಾಮಾನ್ಯ ನೆಲೆಯಿಂದ ಪ್ರಾರಂಭವಾದುದಲ್ಲ. ಜೆರುಸಲೇಮಿನ ಚರ್ಚ್‌ನ ತೀರ್ಮಾನಗಳನ್ನು ತಿಳಿದುಕೊಂಡು ನೆನಪಿನಲ್ಲಿಟ್ಟುಕೊಳ್ಳುವುದು, ಕ್ರೈಸ್ತ ಧರ್ಮಕ್ಕೋಸ್ಕರ ಪ್ರಾಣ ನೀಡಿದ ಹುತಾತ್ಮರನ್ನು ನೆನೆಯುವುದು ಹಾಗೂ ಅವರ ಹೆಸರುಗಳಲ್ಲಿ ಚರ್ಚ್‌ಗಳನ್ನು ನಿರ್ಮಿಸುವುದು, ರೋಮನ್ ಸಾಮ್ರಾಜ್ಯದಲ್ಲಿ ನಡೆಯುತ್ತಿರುವ ಕ್ರೈಸ್ತ ಧರ್ಮದ ಪ್ರಸಾರ ಕೆಲಸಗಳನ್ನು ತಿಳಿಸಿ ಹೇಳುವುದು ಮುಂತಾದ ಚಟುವಟಿಕೆಗಳೇ ಚರಿತ್ರೆಯ ಅಧ್ಯಯನಗಳಾಗಿದ್ದವು. ಇದರ ಜೊತೆಗೆ ಆರಂಭಿಕ ಚರ್ಚ್ ಅನುಯಾಯಿಗಳು ಕ್ರೈಸ್ತನನ್ನು ಗಲ್ಲಿಗೇರಿಸಿದ್ದು ಮತ್ತು ಅವನ ಪುನರುತ್ಥಾನವಾದದ್ದು ಮುಂತಾದ ಅಂಶಗಳೇ ‘ಚರಿತ್ರೆಯ ಅಧ್ಯಯನ’ ಗಳಾಗಿದ್ದವು.

ಆರಂಭದಿಂದಲೂ ಚರ್ಚ್ ಚರಿತ್ರೆ ಲೇಖನ ಪರಂಪರೆಯು ಚರ್ಚ್ ಅಥವಾ ಕ್ರೈಸ್ತ ಧರ್ಮದ ಸಿದ್ಧಾಂತಕ್ಕೆ ಬದ್ಧವಾಗಿಯೇ ರೂಪುಗೊಳ್ಳತೊಡಗಿತು. ಯಹೂದಿ ಚರಿತ್ರೆ ಚರ್ಚ್ ಪೂರ್ವದ ಚರಿತ್ರೆಯೆಂದು ಬಿಂಬಿಸುವುದರೊಂದಿಗೆ ಈ ಪರಂಪರೆ ಆರಂಭವಾಯಿತು. ಧರ್ಮವನ್ನು ಕಾಪಾಡುವುದು, ಒಳ್ಳೆಯದನ್ನು ಉಳಿಸುವುದು ಮುಂತಾದ ಅಂಶಗಳೇ ಚರ್ಚ್ ಚರಿತ್ರೆಯ ಪ್ರಧಾನ ಲಕ್ಷಣಗಳು. ಪ್ರಶ್ನಿಸುವುದನ್ನು ಈ ಪರಂಪರೆಯು ನಿರಾಕರಿಸುತ್ತದೆ. ವಸ್ತು ಕ್ರಿಸ್ತನಾಚೆಗಿನ ಎಲ್ಲವೂ ಮಿಥ್ಯೆಗಳಾದ್ದರಿಂದ ಸತ್ಯಾನ್ವೇಷಣೆಯೇ ಪಾಪವೆಂದು ಪರಿಗಣಿತವಾಯಿತು. ಪ್ರಶ್ನಿಸುವ ಪರಂಪರೆಯು ಗ್ರೀಕ್ ಚರಿತ್ರೆ ಲೇಖನ ಪರಂಪರೆಯೊಂದಿಗೆ ಸೇರಿ ಹೋಯಿತು.

ಈ ಎಲ್ಲಾ ಮಿತಿಗಳಲ್ಲಿಯೆ ಉದಯವಾದದ್ದು ಚರಿತ್ರೆಯ ಸಾರ್ವತ್ರಿಕ ಪರಿಕಲ್ಪನೆಯ ಕಲ್ಪನೆ. ಆರಂಭಿಕ ಚರ್ಚ್ ಚರಿತ್ರೆಯ ಕೊಡುಗೆಯೆಂದರೆ ಈ ಕಲ್ಪನೆ ಮಾತ್ರ. ಸಂತ ಪಾಲ್ ಎಂಬುವವನು ದೇವನು ಒಂದೇ ರಕ್ತದ ಜನರನ್ನು ಸೃಷ್ಟಿಸಿದ್ದಾನೆ. ಮನುಷ್ಯರೆಲ್ಲರೂ ಆಡಮ್ ಮತ್ತು ಈವ್‌ನ ಮಕ್ಕಳಾಗಿರುವುದರಿಂದ ಅವರೆಲ್ಲರೂ ಒಂದೇ ರಕ್ತದ ಮೂಲದವರೆಂದು ಸಾರಿದನು. ಕ್ರೈಸ್ತಮತ ಪ್ರಚಾರಕರು ಒತ್ತಾಯ ಪೂರ್ವಕವಾಗಿ ಹೇಳುತ್ತಿದ್ದ ಅಂಶವೊಂದನ್ನು ಇಲ್ಲಿ ಹೇಳಬೇಕು. ಅದೆಂದರೆ, ಕ್ರೈಸ್ತ ಧರ್ಮವು ಜಗತ್ತಿನ ಅಸ್ತಿತ್ವದ ಆರಂಭದಿಂದಲೇ ವಿಶ್ವ ಧರ್ಮವಾಗಿ ಬೆಳೆಯುವುದು ಪೂರ್ವ ನಿರ್ಧಾರವಾಗಿತ್ತು ಎಂಬ ಪ್ರಚಾರ ಮತ್ತು ಇದರಿಂದ ಇದು ಎಲ್ಲ ಜನರ ಧರ್ಮವೆಂದು ಹೇಳತೊಡಗಿತು. ಜಗತ್ತಿನ ಎಲ್ಲ ಆಗುಹೋಗುಗಳೂ ದೇವರ ನಿರ್ದೇಶನದಂತೆ ನಡೆಯುತ್ತವೆ ಎಂಬುದನ್ನು ಅವರು ಪ್ರಚಾರ ಮಾಡಿದರು. ಘಟನೆಗಳ ಆರಂಭ ಮತ್ತು ಅಂತ್ಯ, ಉದಯಾಸ್ತಮಗಳಂತೆ ಜರುಗುವುದು ಭಗವತ್ಸಂಕಲ್ಪ ಎಂದು ನಂಬಿಸಿದರು. ಚರ್ಚ್‌ನ ಅನುಯಾಯಿಗಳು ಗ್ರೀಕ್ ಚರಿತ್ರೆಯ ಕಾಲ ಪ್ರಾಚೀನವೆಂತಲೂ, ರೋಮನ್ ಚರಿತ್ರೆಯ ಕಾಲವನ್ನು ಮಧ್ಯಕಾಲೀನವೆಂತಲೂ ಮತ್ತು ಚರ್ಚಿನ ಇತಿಹಾಸವನ್ನು ಅವಾರ್ಚಿನ ಎಂದು ತಿಳಿದರು. ಕ್ರಿ.ಶ. ೩ನೆಯ ಶತಮಾನದಿಂದ ಚರ್ಚು ಚರಿತ್ರೆಯ ‘ರಚನೆ’ ಯಲ್ಲಿ ತೊಡಗಿತು. ಕ್ರಿ.ಶ. ೪ನೆಯ ಶತಮಾನದಲ್ಲಿ ಕ್ರೈಸ್ತ ಧರ್ಮವು ರೋಮನ್ ಚಕ್ರಾಧಿಪತ್ಯದಲ್ಲಿ ರಾಜಕೀಯ ಜಯವನ್ನು ಪಡೆಯುವುದರ ಮುಖಾಂತರ ಹೊಸ ಬಗೆಯ ಚರಿತ್ರೆ ಲೇಖನ ಪರಂಪರೆ ಪ್ರಾರಂಭವಾಯಿತು. ಯಹೂದ್ಯರ ಧಾರ್ಮಿಕ ಬರಹಗಳು ಹಳೆಯ ಒಡಂಬಡಿಕೆಯಾಗಿ ರೂಪುಗೊಂಡವು. ಕ್ರೈಸ್ತರು ಕ್ರಮೇಣ ತಮ್ಮ ಚರಿತ್ರೆಯನ್ನು ಸೇರಿಸಿ ನೂತನ ಒಡಂಬಡಿಕೆಯನ್ನು ಸೃಷ್ಟಿಸಿದರು. ಹೀಗೆ ೩ನೆಯ ಶತಮಾನದಲ್ಲಿ ಪ್ರಾರಂಭವಾದ ಚರ್ಚ್‌ನ ಚರಿತ್ರೆ ಲೇಖನ ಪರಂಪರೆ ಮುಂದಿನ ಎಂಟು ಶತಮಾನಗಳಲ್ಲಿ ಮುಂದುವರೆಯಿತು. ಆಶ್ಚರ್ಯವೆಂದರೆ ವಿಶ್ವ ಧರ್ಮ, ವಿಶ್ವ ಭ್ರಾತೃತ್ವ ಪರಿಕಲ್ಪನೆಗಳ ಜತೆಗೆ ಬೆಳೆದಿದ್ದು ವಿಶ್ವ ಕಾಲಗಣನಾ ಪರಿಕಲ್ಪನೆ. ಒಂದು ಪ್ರದೇಶದ ಘಟನೆಗಳ ಕ್ರಮವನ್ನು ಮತ್ತೊಂದು ಪ್ರದೇಶದ ಘಟನೆಗಳ ಜೊತೆಗೆ ಇಟ್ಟು ನೋಡುವ ಪ್ರಯತ್ನವೂ ನಡೆಯಿತು. ಈ ಹಿನ್ನೆಲೆಯಲ್ಲಿ ಸುಮಾರು ಕ್ರಿ.ಶ. ೨೨೧ ರಲ್ಲಿ ಬಂದ ಸೆಕ್ಸಟಸ್ ಜೂಲಿಯಸ್ ಆಫ್ರಿಕಾನಸ್‌ನ ಕೃತಿ ‘ಕ್ರನೊಗ್ರಾಫಿಯ’ ಮುಖ್ಯವಾದದ್ದು.

ಈ ಕಾಲದಲ್ಲಿ ಧರ್ಮನಿಷ್ಠೆಯಾಗಿದ್ದವರ ಅನುಕೂಲಕ್ಕಾಗಿ ಹಾಗೂ ಮಾರ್ಗದರ್ಶನಕ್ಕಾಗಿ ಚರಿತ್ರೆಯನ್ನು ಕುರಿತಾದ ಗ್ರಹಿಕೆಗಳನ್ನು ಬೆಲೆಸಲಾಯಿತು. ಚರಿತ್ರೆಯು ಚರ್ಚಿನ ಉನ್ನತಿಗೆ ಸಾಧನವಾಗಿ ಬಳಕೆಯಾಗತೊಡಗಿತು. ಚರ್ಚನ್ನು ಗೌರವಿಸಿದ ರಾಷ್ಟ್ರಗಳು ಉನ್ನತಿಗೇರಿದವು; ಮತ್ತುಳಿದವು ಕಷ್ಟಗಳಿಗೆ ಗುರಿಯಾದವು ಎಂದು ಉದಾಹರಣೆಗಳನ್ನು ನೀಡಿ ಅವರ ವಾದವನ್ನು ಸಮರ್ಥಿಸಲು ಪ್ರಯತ್ನಿಸಿದರು. ಈ ಕಾಲದಲ್ಲಿ ಪಾರಮಾರ್ಥಿಕ ಮತ್ತು ಅತೀಂದ್ರಿಯತೆಯ ಭಾವನೆಗಳು ಸಮಾಜದ ಭಾವಕೋಶವನ್ನು ತುಂಬಿಕೊಂಡವು. ಅಲೌಕಿಕ ವಿಷಯಗಳನ್ನು ವಿಜೃಂಭಿಸಲಾಯಿತು. ಚರಿತ್ರೆ ಲೇಖನಗಳಲ್ಲಿ ಪುರಾಣ ಕತೆಗಳು, ಪವಾಡಗಳು ಕೇಂದ್ರ ಸ್ಥಾನವನ್ನಾಕ್ರಮಿಸಿದವು. ಕ್ರೈಸ್ತ ಧರ್ಮವನ್ನು ವಿಶ್ವಧರ್ಮವಾಗಿ ರೂಪಿಸುವ ಪ್ರಯತ್ನಗಳು ನಿರಾತಂಕವಾಗಿ ನಡೆದವು. ಕ್ರೈಸ್ತ ಧರ್ಮದ ಚರಿತ್ರೆಯನ್ನು ವಿಶ್ವ ಚರಿತ್ರೆಯಾಗಿ ಬಿಂಬಿಸುವ ಪ್ರಯತ್ನಗಳಾದವು.

ಆಫ್ರಿಕಾನಸ್‌ನು ಬರೆದ ‘ಕ್ರನೊಗ್ರಾಫಿಯ’ ಗ್ರಂಥವು ನಾಲ್ಕನೆಯ ಶತಮಾನದಲ್ಲಿ ಯುಸೆಬಿಯಸ್ಸ್‌ನಿಗೆ ಆ ಕಾಲದ ಚರಿತ್ರೆಗೆ ಮೂಲ ಆಕರವಾಯಿತು. ಯುಸೆಬಿಯಸ್ಸ್‌ಪಾರೋಲಸ್ಸ್‌ನು (ಕ್ರಿ.ಶ. ೨೬೦-೩೪೦) ಚರ್ಚ್ ಚರಿತ್ರೆ ಲೇಖನ ಪರಂಪರೆಯ ಮೊದಲ ಮುಖ್ಯ ಬರಹಗಾರನೆಂದು ಪರಿಗಣಿಸಲ್ಪಟ್ಟಿದ್ದಾನೆ. ಅವನು ಏಶಿಯಾ ಮೈನರ್‌ಗೆ ಸೇರಿದ ಪಾಲೆಸ್ಟೇನಿನ ಸಿಸಾರಿಯಾ ಎಂಬ ಸ್ಥಳದಲ್ಲಿ ನೆಲೆಸಿ ಬರವಣಿಗೆಯ ಕೃಷಿಯನ್ನು ನಡೆಸಿದನು. ಇವನ ಪ್ರಮುಖ ಕೃತಿಗಳು ಕ್ರನೊಗ್ರಾಫಿಯ, ಲೈವ್ಸ ಆಫ್ ದಿ ಮಾರ್ರ‍್ಟಿ‍ಯರ್ಸ್‌ ಆಫ್ ಜಿರುಸಲೇಮ್, ಲೈಫ್ ಆಫ್‌ ಕಾನ್‌ಸ್ಟೆಂಟನ್, ವಾಕ್ಲಿಜಿಯಾಸ್ಟಿಕಲ್ ಹಿಸ್ಟರಿ ಎಂಬವು. ಇವನ ನಿಜವಾದ ಕಾಳಜಿ ದೇವರು ಮತ್ತು ಸೈತಾನನ ನಡುವೆ ನಡೆದ ಹೋರಾಟದಲ್ಲಿ ಜೀಸಸ್ಸನ ತತ್ವಗಳಿಗೆ ಜಯ ದೊರೆಯಿತು ಎಂಬುದನ್ನು ನಿರೂಪಿಸುವುದು. ಚಕ್ರವರ್ತಿ ಕಾನ್‌ಸ್ಟೆಂಟೆನ್‌ನ ಸತ್ಕಾರ್ಯಗಳನ್ನು ಕುರಿತು ವಿಶೇಷವಾಗಿ ಬಣ್ಣಿಸಿದ್ದಾನೆ. ಆದರೆ ಅಟ್ಟೋಸೀಕನ ಪ್ರಕಾರ ಈ ಕೃತಿಯು ಕಾನ್ಸಂಟೈನ್ ಜೀವನಕ್ಕೆ ವ್ಯತಿರಿಕ್ತವಾಗಿದ್ದು. ಅದನ್ನು ಅವನು ‘ಬುಕ್‌ ಆಫ್ ಲೈಸ್’ ಎಂದು ಕರೆದಿದ್ದಾನೆ. ಕ್ರನೊಗ್ರಾಫಿಯ ಅವನ ಕೃತಿಗಳಲ್ಲೇ ವಿಶಿಷ್ಟವಾದದ್ದು. ಅವನಿಗೆ ತಿಳಿದಿದ್ದವರ ಬಗೆಗಿನ ಕಾಲ ವಿವರಣೆಗಳನ್ನು ನೀಡುತ್ತಾನೆ. ಬೈಬಲನ್ನೇ ಮಾನದಂಡವನ್ನಾಗಿಟ್ಟುಕೊಂಡು ಘಟನೆಗಳ ಅಥವಾ ಚಾರಿತ್ರಿಕ ವ್ಯಕ್ತಿಗಳ ಕಾಲವನ್ನು ನಿರ್ಧರಿಸುತ್ತಾನೆ. ಜೆರೋಮ್ ಎಂಬುವನು ಯುಸೆಬಿಯಸ್‌ನ ಈ ಕೃತಿ ಲ್ಯಾಟಿನ್ ಭಾಷೆಗೆ ತರ್ಜುಮೆ ಮಾಡಿದನು. ಯುಸೆಬಿಯಸ್‌ನು ಚರಿತ್ರೆಗೆ ಬೇಕಾದ ಕಾಲದ ಕಲಪನೆಯ ಚೌಕಟ್ಟನ್ನು ಒದಗಿಸಿದನು. ಅವನ ‘ಎಕ್ಲಿಸಿಯಾಸ್ಟಿಕಲ್ ಹಿಸ್ಟರಿ’ ಪುಸ್ತಕವು ಚರ್ಚಿನ ಚರಿತ್ರೆಯೇ ಆಗಿತ್ತು. ಹಾಗೆಯೆ ‘ಲೈವ್ಸ್‌ ಆಫ್ ಮಾರ್ಟಿಯರ್ಸ್’ ಪುಸ್ತಕವು ಪವಾಡಗಳು ಮತ್ತು ಆಶ್ಚರ್ಯಗಳನ್ನು ಕುರಿತ ಪುಸ್ತಕವಾಗಿದೆ. ಈ ಕೃತಿಗಳ ಮುಖಾಂತರ ಯುಸೆಬಿಯಸ್ ಪಾಂಪಿಲಸ್ಸನು ಕ್ರೈಸ್ತ ಮತೀಯ ಚರಿತ್ರೆ ಪರಂಪರೆಗೆ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ.

ಕ್ರೈಸ್ತ ಧರ್ಮವನ್ನು ತನ್ನ ಉಸಿರಾಗಿಸಿಕೊಂಡ ಜೆರೋಮ್ ಹಿರೋನಿಮಸ್ ರೋಮನ್ ಸಾಮ್ರಾಜ್ಯದ ಡಾಲ್ಮೇಷಿಯ ಪ್ರಾಂತ್ಯದವನು. ಈತನು (ಕ್ರಿ.ಶ. ೩೪೦-೪೨೦) ಯುಸೇಬಿಯಸ್ ಹಾಗೂ ಇತರರ ಪ್ರಭಾವದಲ್ಲಿ ಬೆಳೆದವನು. ಇವನು ಅನೇಕ ಕ್ರೈಸ್ತಧರ್ಮದ ಸಂತರ ಬಗೆಗೆ ಕೃತಿಗಳನ್ನು ರಚಿಸಿದ್ದಾನೆ. ಅವುಗಳಲ್ಲಿ ಮುಖ್ಯವಾದುವೆಂದರೆ ‘ಸಂತಪಾಲ್’ ಹಾಗೂ ‘ದಿ ವಲ್ವೆಟ್ ಕ್ರಾನಿಕಲ್’ ಮುಂತಾದವು.

ಈ ಕಾಲದ ಇನ್ನೊಬ್ಬ ಲೇಖಕನೆಂದರೆ ಪಾಲಸ್ ಒರೋಸಿಯಸ್ (ಕ್ರಿ.ಶ. ೩೮೦-೪೨೦). ಇವನು ಸಂತ ಆಗಸ್ಟೆನ್‌ನ ನಂತರ ಹುಟ್ಟಿ ಇವನಿಗಿಂತ ಹತ್ತು ವರ್ಷಗಳ ಮೊದಲೇ ತೀರಿಕೊಂಡನು. ಸ್ಪೈನ್ಸ್‌ದೇಶದವನಾದ ಇವನು ಸಂತ ಆಗಸ್ಟೆನ್‌ನ ಶಿಷ್ಯನಾಗಿದ್ದನು. ತನ್ನ ಗುರುವಿನ ಸಲಹೆಯಂತೆ ‘ಸೆವೆನ್ ಬುಕ್ಸ್ ಆಫ್ ಹಿಸ್ಟರಿ ಎಗೇನ್‌ಸ್ಟ್‌ ಪೇಗನಿಸಮ್’ ಬರೆದನು. ಈ ಕೃತಿಯಲ್ಲಿ ಪೇಗನರು ಮಾಡಿದ್ದ ಆರೋಪವನ್ನು ಕ್ರೈಸ್ತ ಧರ್ಮವೇ ರೋಮನ್ ಪತನಕ್ಕೆ ಕಾರಣ ಎಂಬುದನ್ನು ತೀವ್ರವಾಗಿ ಖಂಡಿಸಿದ್ದಾನೆ. ಇವನ ಕೃತಿಯಲ್ಲಿ ಮನುಷ್ಯರು, ಪೇಗನರು, ಯಹೊದಿಗಳು ಅಥವಾ ಕ್ರೈಸ್ತರು ಯಾರೇ ಆದರೂ ಅವರ ಜೀವನದ ಮಾರ್ಗಗಳು ದೇವರಿಂದಲೇ ನಿರ್ಧರಿಸಲ್ಪಟ್ಟಿರುತ್ತವೆ ಎಂದು ಸಾರಿದನು. ದೈವಕೃಪೆಯಿಂದ ಮೋಕ್ಷದ ಮಾರ್ಗಗಳು ರೂಪಗೊಳ್ಳುತ್ತವೆ ಎಂದು ಹೇಳಿದನು. ಇವನ ನಂತರದ ಅನೇಕ ಈ ಸಾಂಪ್ರದಾಯಿಕ ಲೇಖಕರಿಗೆ ಅವನೇ ಗುರುವಾದನು. ಮೋಕ್ಷ ಎಂಬುದೇ ಎಲ್ಲರ ಪ್ರಧಾನ ಕಾಳಜಿಯಾಗುತ್ತದೆ. ಈ ಪರಂಪರೆಯಲ್ಲಿ ಸೃಷ್ಟಿಯಾದ ಲೇಖನಗಳನ್ನು ಒಟ್ಟಾರೆಯಾಗಿ ಮೋಕ್ಷದ ಮಾರ್ಗದ ಚಾರಿತ್ರಿಕ ಲೇಖನ ಪರಂಪರೆ (Salvation Historiography) ಎಂದು ಕರೆಯಬಹುದು.