ಐತಿಹಾಸಿಕ ಸಂಶೋಧನೆ ಮತ್ತು ಬರವಣಿಗೆಯಲ್ಲಿ “ರಾಂಕೆಯ ಕ್ರಾಂತಿ” ನಡೆದ ತರುವಾಯ ಫ್ರಾನ್ಸ್ ದೇಶವು ಇತಿಹಾಸದ ಬರವಣಿಗೆಯ ಪರಂಪರೆಯ ಮುಖ್ಯ ಕೇಂದ್ರವಾಗಿತ್ತು. ವಾಸ್ತವವಾಗಿ ಫ್ರಾನ್ಸ್ ದೇಶದಲ್ಲೇ ಇತಿಹಾಸದ ಅಧ್ಯಯನವು ಬೌದ್ಧಿಕ ಜೀವನದಲ್ಲೂ ಪ್ರಧಾನ ಸ್ಥಾನ ಪಡೆದಿತ್ತು. ಇಪ್ಪತ್ತನೇ ಶತಮಾನದ ಮೊದಲ ದಶಕಗಳಲ್ಲಿ ಪ್ರಾರಂಭವಾದ ನವ ಇತಿಹಾಸವೆಂದು (ಲಾ ನೊವೆಲ್ ಇಸ್ಟೊರಿ) ಕರೆಯಲಾದ ಪಂಥವು ಫ್ರಾನ್ಸ್‌ ದೇಶದಲ್ಲಿ ಮೊದಲು ಆರಂಭವಾಗ ಯುರೋಪಿನ ಇತರ ಭಾಗಗಳಿಗೆ ಮತ್ತು ಅಮೆರಿಕದ ಸಂಯುಕ್ತ ಸಂಸ್ಥಾನಗಳಿಗೆ ತರುವಾಯ ಹರಡಿತು. ಈ ವಿವಾದಾತ್ಮಕ ರೀತಿಯ ಇತಿಹಾಸದ ಬರವಣಿಗೆಯು ಬಹುತೇಕ ‘ಅನಾಲ್ ದಿಸ್ತೊರಿ ಎಕನಾಮಿಕ್ ಎ ಸೋಸಿಯಲ್’ ಎಂಬ ಹೆಸರಿನ ಪತ್ರಿಕೆಯೊಂದಿಗೆ ಸಂಯೋಜಿತರಾದ ಒಂದು ನಿರ್ದಿಷ್ಟ ಗುಂಪಿನ ಬರವಣಿಗೆಯು ಮಾರ್ಕ್‌ಬ್ಲಾಕ್ ಮತ್ತು ಲೂಯಿ ಫೆಬರ್ ಇವರ ಪ್ರಯತ್ನಗಳ ಪರಿಣಾಮವಾಗಿ ಸ್ವಾಸ್‌ಬರ್ಗ್‌ ವಿಶ್ವವಿದ್ಯಾಲಯದ ಬೌದ್ಧಿಕ ವಾತಾವರಣದಲ್ಲಿ ೧೯೨೯ ರಲ್ಲಿ ಪ್ರಾರಂಭವಾಯಿತು. ತರುವಾಯದ ವರ್ಷಗಳಲ್ಲಿ ಅನೇಕ ಬಾರಿ ಪತ್ರಿಕೆಯ ಹೆಸರು ಬದಲಾವಣೆಗೊಂಡಿತು. ೧೯೪೬ ರಲ್ಲಿ ಆನಾಲ್ ಎಕನಾಮಿಕ್‌ ಸೊಸೈಟಿಸ್, ಸಿವಿಲೈಜೇಷನ್ಸ್ ಎಂಬ ಹೆಸರಿನಲ್ಲಿ ಈ ಪತ್ರಿಕೆಯು ಮುಂದುವರಿಯಿತು. ಈ ನಿರ್ದಿಷ್ಟ ರೀತಿಯ ಐತಿಹಾಸಿಕ ಬರವಣಿಗೆಯೊಂದಿಗೆ ಸಂಯೋಜಿತರಾಗದವರು ಮತ್ತು ಹೊರಗಿನವರು ಈ ಪತ್ರಿಕೆಗೆ ಸಂಯೋಜಿತವಾದ ಗುಂಪನ್ನು ‘ಅನಾಲ್ ಪಂಥದವರು’ ಎಂದು ಕರೆದರು. ಒಳಗಿನವರು ಪಂಥದ ಅಸ್ತಿತ್ವವನ್ನು ನಿರಾಕರಿಸುತ್ತ ವ್ಯಕ್ತಿಗತ ದೃಷ್ಟಿಕೋನಗಳಿಗೆ ಮಹತ್ವ ಕೊಟ್ಟರು.

ಅನಾಲ್ ಕೇವಲ ಇತಿಹಾಸಕ್ಕೆ ಸಂಬಂಧಿಸಿದ ಒಂದು ನಿಯತಕಾಲಿಕೆಯಾಗಿರಲಿಲ್ಲ. ಇದು ಇತಿಹಾಸದ ಅಧ್ಯಯನದ ಹೊಸ ದೃಷ್ಟಕೋನಕ್ಕೆ ಸಂಬಂಧಿಸಿದಂತೆ ಸಂಪಾದಕನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಧ್ವನಿವರ್ಧಕವಾಗಿತ್ತು. ಬ್ಲಾಕ್‌ ಮತ್ತು ಫೆಬರ್‌ ಇವರಿಬ್ಬರೂ ಬೆಲ್ಜಿಯನ್ ಇತಿಹಾಸಕಾರ ಹೆನ್ರಿ ಪಿರೆನ್‌ನನ್ನು ಪತ್ರಿಕೆಯ ಸಂಪಾದಕನಾಗುವಂತೆ ಒತ್ತಾಯಿಸಿದರು. ಆದರೆ ಅವನು ನಿರಾಕರಿಸಿದ್ದರಿಂದ ಸ್ವತಃ ತಾವೇ ಜಂಟಿ ಸಂಪಾದಕರಾದರು. ೧೯೨೯ರ ಜನವರಿ ೧೫ ರಂದು ಬಿಡುಗಡೆಯಾದ ಆನಾಲ್ಸ್‌ನ ಮೊದಲ ಸಂಚಿಕೆಯಲ್ಲಿ ಅಂತರ್ ಶಿಸ್ತೀಯ ಅಧ್ಯಯನದ ಮೂಲಕ ಇತಿಹಾಸವನ್ನು ಅಧ್ಯಯನ ಮಾಡುವ ಒಂದು ಪತ್ರಿಕೆ ಯಾಗಬೇಕೆಂದು ಸಂಪಾದಕರು ಘೋಷಿಸಿದರು. ಸಂಪಾದಕೀಯ ಸಮಿತಿಯಲ್ಲಿ ಭೂಗೋಳ ಶಾಸ್ತ್ರಜ್ಞ ಆಲ್ಬೇರ್ ಡಿಮಾಂಗ್, ಸಮಾಜಶಾಸ್ತ್ರಜ್ಞ ಮೊರೀಸ್ ಹಾಲ್ಬ್‌ವಾಕ್‌, ಅರ್ಥಶಾಸ್ತ್ರಜ್ಞ ಚಾರ್ಲ್‌ರಿಸ್ಟ್ ಮತ್ತು ರಾಜಕೀಯ ವಿಜ್ಞಾನಿ ಆಂಡ್ರೆ ಸಿಗ್‌ಫ್ರೇಡ್‌ ಇವರು ಇದ್ದರು.

ನವ ಇತಿಹಾಸವನ್ನು ಸ್ಪಷ್ಟವಾಗಿ ಅರ್ಥೈಸುವುದು ಕಷ್ಟಕರ ಕೆಲಸ. ನವ ಇತಿಹಾಸ ಎಂದರೆ ಒಂದು ಸಂಪೂರ್ಣ ಇತಿಹಾಸ ಅಥವಾ ಸ್ವರೂಪಕ್ಕೆ ಸಂಬಂಧಿಸಿದ ಇತಿಹಾಸ ಎಂಬ ಅಸ್ಪಷ್ಟ ಅಭಿಪ್ರಾಯವನ್ನು ಮಾತ್ರ ನೀಡಬಹುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ರೀತಿಯ ಇತಿಹಾಸದ ಬರಹಗಾರರು ಸಾಂಪ್ರದಾಯಿಕ ಚರಿತ್ರೆಯ ವಿವಿಧ ಆಯಾಮಗಳನ್ನು ವಿರೋಧಿಸಿದ್ದಾರೆ. ಬಹುಶಃ ಇವುಗಳಿಂದಾಗಿ ಸಾಂಪ್ರದಾಯಿಕ ಇತಿಹಾಸವನ್ನು ವಿರೋಧಿಸುವಂಥ ಅಸಾಂಪ್ರದಾಯಿಕ ಇತಿಹಾಸ ಆರಂಭವಾಯಿತೆಂದು ಅರ್ಥೈಸಬಹುದು.

೧. ಪಾರಂಪರಿಕ ಚರಿತ್ರೆ ಬರವಣಿಗೆಯ ಬಗ್ಗೆ ಹೇಳುವುದಾದರೆ ಆ ರೀತಿಯ ಇತಿಹಾಸವು ಖಚಿತವಾಗಿಯೂ ರಾಜಕೀಯ ಇತಿಹಾಸಕ್ಕೆ ಮಾತ್ರ ಸಂಬಂಧಿಸಿದ್ದಾಗಿದ್ದು, ಮಾನವ ಜೀವನದ ಇತರ ಅಂಶಗಳು ಮತ್ತು ಪ್ರಯತ್ನಗಳಿಗೆ ಅತಿ ಕಡಿಮೆ ಗಮನ ನೀಡಲಾಗುತ್ತಿತ್ತು. ಆದರೆ ನವ ಇತಿಹಾಸ ಮಾನವ ಜೀವನದ ಪ್ರತಿಯೊಂದು ಅಂಶ ಮತ್ತು ಚಟುವಟಿಕೆಗಳಿಗೂ ಗಮನ ನೀಡುತ್ತದೆ. ಕೇಂಬ್ರಿಜ್ಜ್‌ನಲ್ಲಿ ಪ್ರೊಫೆಸರ್ ಆಗಿದ್ದ ಸರ್‌ಜಾನ್‌ಸೀಲಿ ಅವರ “ಇತಿಹಾಸ ಗತಕಾಲದ ರಾಜ್ಯಶಾಸ್ತ್ರ; ರಾಜ್ಯಶಾಸ್ತ್ರವು ಪ್ರಸ್ತುತದ ಇತಿಹಾಸ” ಎಂಬ ವ್ಯಾಖ್ಯಾನ ವಿಕ್ಟೋರಿಯಾ ರಾಣಿಯ ಕಾಲದ ಪರಿಭಾಷೆಯಾಗಿದ್ದು ಈಗ ಆನಲ್ಸ್ ಪಂಥದವರಿಂದ ತಿರಸ್ಕೃತವಾಗಿದೆ. “ಸಂಪೂರ್ಣ ಇತಿಹಾಸ” ಎಂಬುದಕ್ಕೆ ಇಲ್ಲಿ ಹೆಚ್ಚು ಒತ್ತು ಕೊಡಲಾಗಿದೆ.

೨. ಸಾಂಪ್ರದಾಯಿಕ ಇತಿಹಾಸಕಾರರು ಇತಿಹಾಸ ಎನ್ನುವುದು ಘಟನೆಗಳ ನಿರೂಪಣೆ ಎಂದು ಭಾವಿಸಿದರೆ, ನವ ಇತಿಹಾಸಕಾರರು ಅದರ ಸ್ವರೂಪದ ಬಗ್ಗೆ ಗಮನ ಹರಿಸುತ್ತಾರೆ.

೩. ಸಾಂಪ್ರದಾಯಿಕ ಇತಿಹಾಸವು, ಶ್ರೇಷ್ಠ ವ್ಯಕ್ತಿಗಳ ಸಾಧನೆ ಮತ್ತು ಬದುಕನ್ನು ಆಧಾರವಾಗಿಟ್ಟುಕೊಂಡು (ಇತಿಹಾಸವು ಶ್ರೇಷ್ಠ ವ್ಯಕ್ತಿಗಳ ಕತೆಯೆಂಬ ಕಾರ‍್ಲಿಲಿಯನ್ ಅಭಿಪ್ರಾಯ) ಗತಕಾಲದ ಚಿತ್ರವನ್ನು ನೀಡುತ್ತದೆ. ಇಲ್ಲಿ ಮಾನವ ಜೀವನದ ಬೇರೆ ಬೇರೆ ಆಯಾಮಗಳ ಕಡೆ ಲಕ್ಷ್ಯವಿಲ್ಲ. ನವ ಇತಿಹಾಸ ಸ್ಪಷ್ಟವಾಗಿ ತನ್ನನ್ನು “ಜನರ ಇತಿಹಾಸ”ದೊಂದಿಗೆ ಹೆಣೆದುಕೊಂಡಿದೆ. ಅದು ಜನಪ್ರಿಯ ಸಂಸ್ಕೃತಿ, ಮನೋಧರ್ಮ, ಮತ್ತಿತರ ಕೆಳವರ್ಗದ ಚರಿತ್ರೆಯ ಬಗ್ಗೆ ಹೆಚ್ಚು ಒತ್ತನ್ನು ನೀಡುತ್ತದೆ.

೪. ಸಾಂಪ್ರದಾಯಿಕ ರೀತಿಯಲ್ಲಿ ಇತಿಹಾಸಕ್ಕೆ ದಾಖಲೆಗಳೇ ಆಧಾರ. ಲಾಂಗ್ಲುವ ಮತ್ತು ಸಿನ್ಯೊ ಬಾ ಅವರು “ದಾಖಲೆಗಳು ಇಲ್ಲದೆ ಇತಿಹಾಸ ಇಲ್ಲ” ಎಂದಿರುವುದನ್ನು ಗಮನಿಸಬೇಕಾಗಿದೆ. ಈಗ ಗತದಿಂದ ವರ್ತಮಾನವನ್ನು ಹೆಣೆಯುವಾಗ, ಇತಿಹಾಸಕಾರರು ಇತರ ವಿವಿಧ ರೀತಿಯ ಆಕರಗಳನ್ನು ಅನಿವಾರ್ಯವಾಗಿ ಪರಗಣಿಸಬೇಕಾಗುತ್ತದೆ. ನವ ಇತಿಹಾಸ ಆಮೂಲಾಗ್ರವಾಗಿ ಮಾನವ ಸಂಬಂಧಿ ಚಟುವಟಿಕೆಗಳಿಗೆ ಸಂಬಂಧಪಟ್ಟಿರುವುದಾದ್ದರಿಂದ ಸಾಂಪ್ರದಾಯಿಕ ಇತಿಹಾಸಕಾರ ಪರಿಗಣಿಸದೆ ಇರುತ್ತಿದ್ದಂಥ ಆಕರಗಳು ಎಂದರೆ ದೃಶ್ಯ ಸಾಕಷ್ಯ, ಮೌಖಿಕ ಆಧಾರಗಳು, ವ್ಯಾಪರದ ಅಂಕಿ ಅಂಶಗಳು, ಜನಸಂಖ್ಯಾ ಅಂಕಿ ಅಂಶಗಳು, ಮತದಾನದ ಅಂಕಿ ಅಂಶಗಳು ಮುಂತಾದವುಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

೫. ತತ್ವಶಾಸ್ತ್ರಜ್ಞ ಮತ್ತು ಇತಿಹಾಸಕಾರ ಆರ್.ಜಿ. ಕಾಲಿಂಗ್‌ವುಡ್ ಅವರು ಹೇಳುವಂತೆ ಚಿಂತನೆಯ ಎಲ್ಲ ಇತಿಹಾಸವು ಮೂಲವನ್ನೇ ಹೊಂದಿರುತ್ತದೆ. ನವ ಇತಿಹಾಸ ಸಾಮುದಾಯಿಕ ಚಳವಳಿಗಳು, ಪ್ರವೃತ್ತಿಗಳು ಮತ್ತು ಅಭಿವೃದ್ಧಿಗಳೊಂದಿಗೆ ತನ್ನನ್ನು ಹೆಣೆದುಕೊಳ್ಳುತ್ತದೆ.

೬. ಸಾಂಪ್ರದಾಯಿಕ ರೀತಿಯಲ್ಲಿ ಹೇಳುವುದಾದರೆ ಇತಿಹಾಸ ವಸ್ತುನಿಷ್ಠವಾದದ್ದು. ಭೂತಕಾಲದಲ್ಲಿ ಘಟನೆ ಹೇಗೆ ಸಂಭವಿಸಿತು ಎಂದು ಹೇಳುವುದ ಇತಿಹಾಸಕಾರನ ಕೆಲಸ. ನವ ಇತಿಹಾಸ ಇದಕ್ಕೆ ವಿರೋಧ ಅಭಿಪ್ರಾಯಗಳನ್ನು ಹೇಳುತ್ತದೆ. ರಾಂಕೆಯ ವಿಚಾರಧಾರೆ ನೈಜವಾದುದಲ್ಲ ಎಂದು ಭಾವಿಸಲಾಗಿದೆ. ಇತರ ಇತಿಹಾಸಕಾರರೂ ಸಹ ವರ್ಣ, ದರ್ಜೆ, ಲಿಂಗ ಅಥವಾ ಜನಾಂಗದ ಹಿನ್ನೆಲೆಯಲ್ಲಿ ಭೂತಕಾಲವನ್ನು ಕಾಣುತ್ತಾರೆ. ಆದ್ದರಿಂದ ನವ ಇತಿಹಾಸಕಾರರು ಇತಿಹಾಸದ ಬಹುರೂಪಿ ವಿಷಯಗಳನ್ನು ಅಧ್ಯಯನ ಮಾಡುತ್ತಾರೆ.

೭. ಸಾಂಪ್ರದಾಯಿಕ ಇತಿಹಾಸಕಾರ ವೃತ್ತಿಪರನಾಗಿದ್ದ. ನವ ಇತಿಹಾಸ ಮಾನವನ ಚಟುವಟಿಕೆಗಳ ಸಂಪೂರ್ಣ ಕ್ಷೇತ್ರಕ್ಕೆ ಸಂಬಂಧಪಡುವುದರಿಂದ, ನವ ಇತಿಹಾಸಕಾರ ಸಮಾಜಶಾಸ್ತ್ರಜ್ಞನಾಗಿಯೂ, ಮಾನವಶಾಸ್ತ್ರಜ್ಞನಾಗಿಯೂ, ಅರ್ಥ ಶಾಸ್ತ್ರಜ್ಞನಾಗಿಯೂ, ಸಾಹಿತ್ಯ ವಿಮರ್ಶಕನಾಗಿಯೂ, ಮನಶ್ಯಾಸ್ತ್ರಜ್ಞನಾಗಿಯೂ ಮತ್ತು ಭೂಗೋಳ ಶಾಸ್ತ್ರಜ್ಞನಾಗಿಯೂ ಇರಬೇಕಾಗುತ್ತದೆ ಮತ್ತು ಈ ರೀತಿಯ ಭಿನ್ನ ಶಾಸ್ತ್ರಗಳೊಂದಿಗೆ ಸಂಪರ್ಕವನ್ನಿಟ್ಟುಕೊಂಡಿರಬೇಕಾಗುತ್ತದೆ. ಈ ದೃಷ್ಟಿಯಲ್ಲಿ ನವ ಇತಿಹಾಸವು ಅಂತರ್‌ಶಿಸ್ತೀಯ ಅಧ್ಯಯನಕ್ಕೆ ಸಂಬಂಧಪಟ್ಟಿರುವುದು ಮತ್ತು ಬಹುತ್ವಕ್ಕೆ ಪ್ರಾಮುಖ್ಯತೆ ನೀಡಿರುವುದು.

‘ನವ ಇತಿಹಾಸ’ ಎಂಬ ಪದಪುಂಜಕ್ಕೆ ತನ್ನದೇ ಆದ ಇತಿಹಾಸ ಇದೆ. ಹೆರೋಡೋಟಸ್ ಮತ್ತು ಥೂಸಿಡೈಡಸ್ ಇವರ ಕಾಲದಿಂದಲೂ ರಾಜಕೀಯ ಮತ್ತು ಸೇನಾಪಡೆಯ ಘಟನೆಗಳನ್ನು ಶ್ರೇಷ್ಠ ವ್ಯಕ್ತಿಗಳ ಕಥೆಗಳೆಂಬಂತೆ ನಿರೂಪಿಸುತ್ತ ಬಂದಿರುವುದೇ ಇತಿಹಾಸದ ಪುನರ‍್ರಚನೆಯ ಪ್ರಧಾನ ಅಂಶ. ಈ ಪ್ರಕಾರದ ಇತಿಹಾಸವು ಜ್ಞಾನೋದಯದ (ಎನ್‌ಲೈಟನ್ ಮೆಂಟ್) ಕಾಲದಲ್ಲಿ ತೀವ್ರವಾಗಿ ಸವಾಲಿಗೆ ಒಳಪಟ್ಟಿತು. ಸುಮಾರು ಹದಿನೆಂಟನೇ ಶತಮಾನದ ಮಧ್ಯಭಾಗದಲ್ಲಿ ಯುರೋಪಿನ ವಿವಿಧ ಭಾಗಗಳಲ್ಲಿ ವಿದ್ವಾಂಸರು ಮತ್ತು ಬರಹಗಾರರು ವ್ಯಾಪಾರ, ನೀತಿ, ನಡವಳಿಕೆ, ಕಾನೂನು ಹಾಗೂ ಅಶ್ವಸೈನ್ಯ, ಕಲೆ, ಸಾಹಿತ್ಯ ಮತ್ತು ಸಂಗೀತ ಮುಂತಾದ ಮೌಲ್ಯಗಳನ್ನೊಳಗೊಂಡ ಸಮಾಜದ ಇತಿಹಾಸದೊಂದಿಗೆ ತಮ್ಮನ್ನು ಬೆಸೆದುಕೊಳ್ಳಲು ಪ್ರಾರಂಭಿಸಿದರು. ಆ ಶತಮಾನದ ಕೊನೆಯ ವೇಳೆಗೆ, ವಿದ್ವಾಂಸರ ಈ ಗುಂಪು ಒಟ್ಟಾಗಿ ಅತ್ಯಂತ ಮಹತ್ವದ ಕೆಲಸವನ್ನು ಸಾಧಿಸಿದ್ದರು. ಕೆಲವು ಇತಿಹಾಸಕಾರರು, ಮುಖ್ಯವಾಗಿ ಎಡ್ವರ್ಡ್‌ಗಿಬ್ಬನ್‌ ಈ ಸಮಾಜೋ-ಸಾಂಸ್ಕೃತಿಕ ಇತಿಹಾಸವನ್ನು ತಮ್ಮ ಕೃತಿಗಳಲ್ಲಿ (ಡಿಕ್ಲೈನ್ ಆಂಡ್ ಫಾಲ್ ಆಫ್ ದಿ ರೋಮನ್ ಎಂಪೈರ್) ರಾಜಕೀಯ ಘಟನೆಗಳ ನಿರೂಪಣೆ ಮಾಡುವಾಗ ಸಂಯೋಜಿಸಿಕೊಂಡರು.

ರಾಂಕೆಯ ಆಸಕ್ತಿಯು ರಾಜಕೀಯ ಇತಿಹಾಸಕ್ಕೆ ಸೀಮಿತವಾಗಿರಲಿಲ್ಲ. ಹಾಗಿದ್ದರೂ, ಇತಿಹಾಸದ ಬರವಣಿಗೆಯಲ್ಲಿ ಲಿಯೊಪಾಲ್‌ವಾನ್ ರಾಂಕೆಯೊಂದಿಗೆ ಸಂಯೋಜಿತವಾದ ಕೋಪರ್ನಿಕನ್ ಕ್ರಾಂತಿಯು ಸಮಾಜೋ-ಸಾಂಸ್ಕೃತಿಕ ಇತಿಹಾಸವನ್ನು ಮಿತಗೊಳಿಸಿತು. ಪತ್ರಾಗಾರಗಳ ಆಧಾರದ ಬಗ್ಗೆ ರಾಂಕೆಯು ಒತ್ತು ನೀಡಿದ ಪರಿಣಾಮವಾಗಿ ಸಮಾಜೋ-ಸಾಂಸ್ಕೃತಿಕ ಇತಿಹಾಸಕಾರರು ಅಮೆಚೂರ್ (ಹವ್ಯಾಸಿ) ಇತಿಹಾಸಕಾರರು ಎಂದೆನಿಸಿಕೊಂಡರು. ರಾಂಕೆಯ ಅನುಯಾಯಿಗಳು ಗುರುವಿಗಿಂತ ಹೆಚ್ಚು ಸಂಕುಚಿತ ಸ್ವಭಾವದವರು. ಇದರಿಂದಾಗಿ ರಾಜಕೀಯೇತರ ಇತಿಹಾಸವನ್ನು ಶೈಕ್ಷಣಿಕ ಅಭ್ಯಾಸದಿಂದ ಕೈಬಿಡಲಾಯಿತು. ಹತ್ತೊಂಬತ್ತನೇ ಶತಮಾನದ ಕೊನೆಯ ಭಾಗದ ವೃತ್ತಿಪರ ಇತಿಹಾಸ ಪತ್ರಿಕೆಗಳು ಇತಿಹಾಸದ ವಿಧಾನದ ಬಗ್ಗೆ ಹೇಳಿದಂಥ ರಾಜಕೀಯ ಘಟನೆಗಳು ಮತ್ತು ಒಪ್ಪಂದಗಳ ಬಗ್ಗೆ ಗಮನ ಕೇಂದ್ರೀಕರಿಸಿದ್ದರಿಂದ, ಈ ಶಿಕ್ಷಣ ಕ್ಷೇತ್ರ ರಾಜಕೀಯ ಅಂಶಗಳಿಗೆ ಮಾತ್ರ ಸಂಬಂಧಪಡುವುದೆಂಬ ಇತಿಹಾಸಕಾರರ ಹೊಸ ವೃತ್ತಿಪರ ಆದರ್ಶಕ್ಕೆ ಒತ್ತು ನೀಡಿತು.

ಆದರೆ ಹತ್ತೊಂಬತ್ತನೇ ಶತಮಾನದಲ್ಲೇ ಇದಕ್ಕೆ ವಿರೋಧದ ಧ್ವನಿಗಳೆದ್ದಿದ್ದುವು. ಪುನರ್ಜೀವನದ ಬಗ್ಗೆ ಬರೆದ ಮಿಶಲ್ ಮತ್ತು ಬರ್ಕ್‌‌ಹಾರ್ಡ್‌ ಮುಂತಾದ ಇತಿಹಾಸಕಾರರು ಇತಿಹಾಸದ ಕ್ಷೇತ್ರ ಕೇವಲ ರಾಜಕೀಯಕ್ಕಷ್ಟೇ ಸೀಮಿತವಲ್ಲದೆ ಹೆಚ್ಚು ವ್ಯಾಪ್ತಿಯುಳ್ಳದ್ದು ಎಂದು ಗುರುತಿಸಿದ್ದರು. ಇತಿಹಾಸವು ರಾಜ್ಯ, ಧರ್ಮ ಮತ್ತು ಸಂಸ್ಕೃತಿ ಈ ಮೂರೂ ಶಕ್ತಿಗಳ ಪರಸ್ಪರ ಸಂಬಂಧಿತ ಕ್ಷೇತ್ರಗಳು ಎಂದ ಬರ್ಕ್‌‌ಹಾರ್ಡ್‌ ಅಭಿಪ್ರಾಯಪಟ್ಟಿದ್ದಾರೆ. ‘ನೊಂದವರ, ಕಾರ್ಮಿಕರ, ಅವನತಿ ಹೊಂದಿದವರ ಮತ್ತು ಶೋಷಣೆಯನ್ನು ಪ್ರತಿಭಟಿಸಲಾಗದೆ ಸತ್ತವರ ಚರಿತ್ರೆಯೇ ಇತಿಹಾಸ’ ಎಂದು ಮಿಶಲ್ ಅಭಿಪ್ರಾಯ ಪಟ್ಟಿದ್ದಾರೆ. ಅದೇ ಕಾಲದಲ್ಲಿದ್ದ ಮತ್ತೊಬ್ಬ ಫ್ರೆಂಚ್ ಇತಿಹಾಸಕಾರ ಫುಸಲ್ ದ ಕುಲಾಂಜನು ಧರ್ಮ, ಕುಟುಂಬ ಮತ್ತು ನೈತಿಕತೆಯ ಇತಿಹಾಸದ ಬಗ್ಗೆ ತನ್ನ ಗಮನವನ್ನು ಕೇಂದ್ರೀಕರಿಸಿರುವನು. ಕಾರ್ಲ್‌‌ಮಾರ್ಕ್ಸ್ ಇತಿಹಾಸದ ಬದಲಾವಣೆಯ ಮೂಲಭೂತ ಕಾರಣಗಳನ್ನು, ಸಾಮಾಜಿಕ ಮತ್ತು ಆರ್ಥಿಕ ಸ್ವರೂಪಗಳೊಳಗಿನ ಪ್ರವೃತ್ತಿಗಳಲ್ಲಿ ಕಾಣಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹತ್ತೊಂಬತ್ತನೇ ಶತಮಾನದ ಗುಸ್ತಾವ್, ಶ್ಮಾಲರ್, ವಿಲಿಯಂ ಕನ್ನಿಂ ಹ್ಯಾಂ, ಜೆ.ಇ. ಹೆರಾಲ್ಡ್ ರೋಜರ್ಸ್‌, ಹೆನ್ರಿ ಹೌಸರ್ ಮತ್ತು ಪಾಲ್ ಮಾಂತೂ ಇತ್ಯಾದಿ ಎಲ್ಲ ಇತಿಹಾಸಕಾರರೂ ಆರ್ಥಿಕ ಇತಿಹಾಸದ ಬಗ್ಗೆ ಬರೆದರು ಮತ್ತು ರಾಜಕೀಯ ಇತಿಹಾಸದ ಸಾಮ್ರಾಜ್ಯಶಾಹಿಯ ಬಗ್ಗೆ ವಿರೋಧ ವ್ಯಕ್ತಪಡಿಸಿದರು.

ಸಮಾಜಶಾಸ್ತ್ರದ ನವ ಶಿಕ್ಷಣದ ಸಂಸ್ಥಾಪಕರೂ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ಆಗಸ್ಟ್ ಕಾಮ್ಟೆ ಹೆಸರು ಈ ನಿಟ್ಟಿನಲ್ಲಿ ಮುಖ್ಯವಾದುದು.

೧೯೦೦ರ ಸುಮಾರಿಗೆ ರಾಜಕೀಯ ಇತಿಹಾಸದ ಬಗ್ಗೆ ಅತ್ಯಂತ ಕಟುವಾದ ಟೀಕೆಗಳು ಬಂದವು ಮತ್ತು ಅದನ್ನು ಬದಲಾಯಿಸುವುದಕ್ಕೆ ಅನೇಕ ಸಲಹೆಗಳು ಬಂದವು. ಜರ್ಮನಿಯ ಕಾರ್ಲ್‌ಲ್ಯಾಂಪ್ರೆ ರಾಜಕೀಯ ಇತಿಹಾಸವೆಂದರೆ ವ್ಯಕ್ತಿಗಳ ಇತಿಹಾಸ, ಸಾಂಸ್ಕೃತಿಕ ಮತ್ತು ಆರ್ಥಿಕ ಇತಿಹಾಸವೆಂದರೆ ಜನತೆಯ ಇತಿಹಾಸ ಎಂಬ ಅಭಿಪ್ರಾಯಗಳ ವ್ಯತ್ಯಾಸಗಳನ್ನು ಗುರುತಿಸಿದನು. ಅವನು ಇತಿಹಾಸವನ್ನು “ಸಾಮಾಜಿಕ ಮನೋವಿಜ್ಞಾನ” ಎಂದು ಸಹ ವ್ಯಾಖ್ಯಾನಿಸಿದನು. ಅಮೆರಿಕಾ ಸಂಯುಕ್ತ ಸಂಸ್ಥಾನದ ಫ್ರೆಡರಿಕ್ ಜಾಕ್ಸನ್ ಟರ್ಸರ್ ಗಡಿನಾಡಿನ ಮಹತ್ವದ ಬಗ್ಗೆ ಮಾಡಿದ ಅಧ್ಯಯನವು ರಾಜಕೀಯ ಘಟನೆಗಳ ಇತಿಹಾಸಕ್ಕೆ ಒಂದು ಸ್ಪಷ್ಟ ತಡೆ ನೀಡಿದರೆ, ಜೇಮ್ಸ್ ಹಾರ್ವೆ ರಾಬಿನ್‌ಸನ್‌‘ನವ ಇತಿಹಾಸ’ ಎಂಬ ಘೋಷಣೆಯ ಮೂಲಕ ಒಂದು ಚಳವಳಿಯನ್ನು ಪ್ರಾರಂಭಿಸಿದ. ಅಧ್ಯಯನ ವಿಧಾನದ ಬಗ್ಗೆ ಹೇಳುತ್ತ ಮಾನವಶಾಸ್ತ್ರಜ್ಞರು, ಅರ್ಥಶಾಸ್ತ್ರಜ್ಞರು, ಮನೋವಿಜ್ಞಾನಿಗಳು ಮತ್ತು ಸಮಾಜಶಾಸ್ತ್ರಜ್ಞರು ಮನುಕುಲದ ಬಗ್ಗೆ ಮಾಡಿದ ಎಲ್ಲ ಆವಿಷ್ಕಾರಗಳನ್ನೂ ನವ ಇತಿಹಾಸ ತಾನೇ ಪಡೆದುಕೊಳ್ಳುತ್ತದೆ ಎಂದು ಹೇಳಿದ್ದಾನೆ.

ಫ್ರಾನ್ಸ್ ದೇಶದಲ್ಲಿ ೧೯೦೦ರ ಸುಮಾರಿನಲ್ಲಿ ಇತಿಹಾಸದ ಸ್ವರೂಪ ಒಂದು ಸ್ವಾರಸ್ಯಕರ ವಿವಾದದ ವಿಷಯವಾಗಿತ್ತು. ದರ್ಕ್‌‌ಹೈಮ್‌ನ ಅನುಯಾಯಿಯಾದ ಫ್ರಾನ್ಸ್‌ವಾ ಸಿಮಿಯಾಂ ಎಂಬ ಚರಿತ್ರೆಕಾರ ಪ್ರಚಲಿತದಲ್ಲಿದ್ದ ಇತಿಹಾಸ ಪಂಥವನ್ನು ತೀವ್ರವಾಗಿ ಖಂಡಿಸಿದ. ೧೯೦೦ ರ‍್ಲಿ ಇನ್ನೊಬ್ಬ ಫ್ರೆಂಚ್ ಬುದ್ಧಿಜೀವಿ ಹೆನ್ರಿ ಬೆರ್ ಎಂಬಾತ ನಿಯತಕಾಲಿಕೆಯೊಂದನ್ನು ಆರಂಭಿಸಿ ಇತರ ಶಿಕ್ಷಣಗಳೊಂದಿಗೆ ಅದರಲ್ಲೂ ಮುಖ್ಯವಾಗಿ ಸಮಾಜಶಾಸ್ತ್ರ ಮತ್ತು ಮನಶ್ಯಾಸ್ತ್ರದ ಜೊತೆಗೆ ಕೆಲಸ ಮಾಡಲು ಇತಿಹಾಸಕಾರರಿಗೆ ಪ್ರೋತ್ಸಾಹ ನೀಡಿದನು. ಈ ಪ್ರಕ್ರಿಯೆಗೆ “ಐತಿಹಾಸಿಕ ಅಥವಾ ಸಾಮೂಹಿಕ ಮನಶ್ಯಾಸ್ತ್ರ” ಎಂದು ಕರೆದನು. ಬೆರ್‌ನ ಈ ಆದರ್ಶನವು ಅವನ ಪತ್ರಿಕೆಯಲ್ಲಿ ಬರೆಯುತ್ತಿದ್ದ ಲೂಯಿ ಫೆಬರ್ ಮತ್ತು ಮಾರ್ಕ್‌ಬ್ಲಾಕ್ ಎಂಬ ಇಬ್ಬರು ತರುಣರ ಮೇಲೆ ಮಹತ್ವದ ಪ್ರಭಾವ ಬೀರಿತು. ಇವರಿಬ್ಬರ ಮೊದಲ ಪೀಳಿಗೆಯ ಆನಲ್ಸ್ ಪಂಥದ ನಾಯಕರೂ ಆಗಿದ್ದರು.

ಆನಲ್‌ ಚಳವಳಿಯನ್ನು ಮೂರು ಹಂತವಾಗಿ ವಿಭಜಿಸಬಹುದು. ಮೊದಲನೆಯ ಹಂತ ೧೯೨೦ರಿಂದ ೧೯೪೫ ರವರೆಗೆ ಎಂದು ವಿಂಗಡಿಸಬಹುದು. ಸಾಂಪ್ರದಾಯಿಕ ರಾಜಕೀಯ ಇತಿಹಾಸದ ವಿರುದ್ಧ ಹೋರಾಡುತ್ತಿದ್ದ ಕ್ರಾಂತಿಕಾರರ (ರ‍್ಯಾಡಿಕಲ್ಸ್) ಒಂದು ಚಿಕ್ಕ ಗುಂಪಿನ ವಿವರಣೆಯನ್ನು ಒಳಗೊಳ್ಳುತ್ತದೆ. ಎರಡನೇ ಮಹಾಸಂಗ್ರಾಮದ ನಂತರದ ಎರಡನೇ ಹಂತದಲ್ಲಿ ಕ್ರಾಂತಿಕಾರಿಗಳು ಐತಿಹಾಸಿಕ ಸಂಸ್ಥೆಯನ್ನು ವಹಿಸಿಕೊಂಡದ್ದರಿಂದ ಅದು ವಿಶಿಷ್ಟ ಕಲ್ಪನೆಗಳು ಮತ್ತು ವಿಧಾನಗಳು ಒಂದು ಪಂಥವಾಗಿ ರೂಪುಗೊಂಡಿತು. ಇದರ ಪ್ರಧಾನ ವ್ಯಕ್ತಿ ಫರ್ಡಿನೆಂಡ್ ಬ್ರೋದೆಲ್. ೧೯೬೮ ರಿಂದೀಚೆಗಿನ ಮೂರನೇ ಹಂತದಲ್ಲಿ ಈ ಚಳುವಳಿಯು ತನ್ನ ವಿಶಿಷ್ಟತೆಯನ್ನು ಕಳೆದುಕೊಂಡಿತು.

ಆನಲ್ಸ್‌ನ ಮೊದಲ ಪೀಳಿಗೆಯಲ್ಲಿ ಲೂಯಿ ಫೆಬರ್ ಮತ್ತು ಮಾರ್ಕ್‌ಬ್ಲಾಕ್ ಎಂಬ ಇಬ್ಬರು ನಾಯಕರಿದ್ದರು. ಇವರಿಬ್ಬರ ಮನೋಭಾವ, ಪ್ರಭಾವ ಮತ್ತು ಕೆಲಸವನ್ನು ಪುನರ್‌ವಿಮರ್ಶಿಸಿದರೆ ಈ ಅವಧಿಯಲ್ಲಿನ ಆನಲ್ ಪಂಥದ ಕೆಲಸದ ಬಗ್ಗೆ ತಿಳಿಯಬಹುದು. ಲೂಯಿ ಫೆಬರ್ ಹದಿನಾರನೆ ಶತಮಾನದ ಯುರೋಪಿನ ಬಗ್ಗೆ ವಿಶೇಷ ಪರಿಣತಿ ಹೊಂದಿದವ ಮತ್ತು ಬ್ಲಾಕ್ ಮಧ್ಯಯುಗವಾದಿ. ಇತಿಹಾಸದ ಬಗ್ಗೆ ಅವರ ಮಾರ್ಗ ಒಂದೇ ರೀತಿಯದಾದರೂ ಅವರ ಮನೋಧರ್ಮ ವಿಭಿನ್ನ ರೀತಿಯದು.

ಲೂಯಿ ಫೆಬರ್ ೧೮೯೭ ರಲ್ಲಿ ‘ಎಕೋಲ್‌ನಾರ್ಮಾಲ್ ಸೊಪೀರಿಯರ್’ ಪ್ರವೇಶಿಸಿದ. ಇಲ್ಲಿನ ಶಿಕ್ಷಣದ ವಿಧಾನ ಉಪನ್ಯಾಸ ಆಗಿರಲಿಲ್ಲ. ವಿಚಾರ ಸಂಕಿರಣದ ಮೂಲಕ ಇಲ್ಲಿ ಶಿಕ್ಷಣ ನೀಡಲಾಗುತ್ತಿತ್ತು ಹಾಗೂ ಅದು ಬಹಳ ಕಟ್ಟುನಿಟ್ಟಾಗಿರುತ್ತಿತ್ತು. ಫೆಬರ್‌ಗೆ ಹೆನ್ರಿ ಬರ್ಗ್‌ಸನ್ ಬಗ್ಗೆ ಅನಾದರವಿದ್ದರೂ, ಬರ್ಗ್‌‌ಸನ್‌ನ ನಾಲ್ವರು ವಿದ್ಯಾರ್ಥಿಗಳಿಂದ ಇಲ್ಲಿ ಶಿಕ್ಷಣ ಪಡೆದ. ಭೂಗರ್ಭಶಾಸ್ತ್ರಜ್ಞ ಪಾಲ್ ವಿದಾಲ್‌ದ ಲಾ ಬ್ಲಾಕ್, ಮಾನವಶಾಸ್ತ್ರಜ್ಞ ಲೂಸಿಯನ್ ಲೆವಿಬ್ರುಲ್, ಕಲಾ ಇತಿಹಾಸಕಾರ ಎ ಮಿಲ್ ಮಾಲ್ ಮತ್ತು ಭಾಷಾಶಾಸ್ತ್ರಜ್ಞ ಆಂದುವಾನ್ ಮಿಲೆ ಇವರ ಪ್ರಭಾವಕ್ಕೆ ಫೆಬರ್‌ಒಳಗಾದ. ಹಿಂದಿನ ಇತಿಹಾಸಕಾರರಾದ ಮಿಶಲ್‌, ಲೂಯಿ ಕೋಜಾರ್ದ್ ಮತ್ತು ವಾಮಪಂಥ ರಾಜಕಾರಣಿಯಾದ ಜಾವ್ ಜೋರೆಸ್ ಇವರಿಗೂ ಸಹ ಅವನು ಋಣಿಯಾಗಿದ್ದ. ಫೆಬರ್‌ಬರೆದ ಪ್ರೌಢ ಪ್ರಬಂಧವು ಎರಡನೇ ಫಿಲಿಪ್‌ನ ಕಾಲದ ಗಡಿಗೆ ಸಂಬಂಧಿಸಿದ ವಿಚಾರಗಳು ಹಾಗೂ ಫ್ರಾಂಕ್‌ ಕಾಂಟೆಯನ್ನು ಕುರಿತದ್ದಾಗಿದೆ. ಇದು ಸಮಾಜೋ-ಸಾಂಸ್ಕೃತಿಕ ಮತ್ತು ರಾಜಕೀಯ ಇತಿಹಾಸಕ್ಕೆ ಒಂದು ಮಹತ್ವದ ಕೊಡುಗೆ. ಇದು ನೆದರ್‌ಲ್ಯಾಂಡ್‌ನಲ್ಲಿ ಆದ ದಂಗೆ ಮತ್ತು ನಿರಂಕುಶ ಪ್ರಭುತ್ವದ ಉದಯಕ್ಕೆ ಸಂಬಂಧಪಡುವುದಷ್ಟೇ ಅಲ್ಲ, ಸಾಲದ ಭಾರಕ್ಕೆ ಒಳಗಾಗುತ್ತಿದ್ದ, ಅವನತಿ ಹೊಂದಲು ಪ್ರಾರಂಭವಾಗಿದ್ದ ಶ್ರೀಮಂತವರ್ಗ ಹಾಗೂ ಇವರ ಸಂಪತ್ತನ್ನು ಖರೀದಿಸುತ್ತಿದ್ದ ಮಧ್ಯಮವರ್ಗದ ವ್ಯಾಪಾರಿಗಳು ಮತ್ತು ವಕೀಲರ (ಬೂರ್ಜ್ವಾಗಳು) ನಡುವಣ ಹೋರಾಟಕ್ಕೂ ಸಂಬಂಧಪಟ್ಟಿತ್ತು. ಇದು ಮಾರ್ಕ್ಸ್‌ವಾದಿಗಳ ಯೋಜನೆಯಲ್ಲ. ಇದು ವಿಚಾರಗಳು ಮತ್ತು ಭಾವನೆಗಳ ತಾಕಲಾಟವಾಗಿತ್ತು. ಮಾರ್ಕ್ ಬ್ಲಾಕ್‌ನ ಬೌದ್ಧಿಕ ಬದುಕು ಫೆಬರ್‌ಗಿಂತ ಭಿನ್ನವೇನಲ್ಲ. ಅವನೂ ಸಹ ಎಕೋಲ್ ನಾರ್ಮಾಲ್ ಸೇರ ಮಿಲೆ ಮತ್ತು ಲೆವಿಬ್ರುಲ್‌ನಿಂದ ಶಿಕ್ಷಣ ಪಡೆದ.ಆದರೆ ಅವನು ಇಕೋಲೆಯಲ್ಲಿ ಶಿಕ್ಷಕನಾಗಿದ್ದ ಸಮಾಜ ಶಾಸ್ತ್ರಜ್ಞ ಎಮಿಲ್ ದರ್ಕ್‌‌ಹೈಮ್‌ನಿಗೆ ಅತ್ಯಂತ ಋಣಿಯಾಗಿದ್ದ. ಫೆಬರ್‌ನಷ್ಟಲ್ಲದಿದ್ದರೂ ಬ್ಲಾಕನು ಐತಿಹಾಸಿಕ ಭೂಗರ್ಭಶಾಸ್ತ್ರದಲ್ಲಿ ಆಸಕ್ತಿ ಹೊಂದಿದವನಾಗಿದ್ದ ಮತ್ತು ಸಮಾಜಶಾತ್ರಕ್ಕೆ ಹೆಚ್ಚು ಬದ್ಧನಾಗಿದ್ದನು.ಅಂತರ‍್ಶಿಸ್ತೀಯ ಅಧ್ಯಯನದ ಹಿನ್ನೆಲೆಯಲ್ಲಿ ಚರಿತ್ರೆಯನ್ನು ಈತನು ಬೋಧಿಸಿದನು. ಎಲ್ಲಕ್ಕಿಂತ ಹೆಚ್ಚಾಗಿ ಸಮಕಾಲೀನ ರಾಜ್ಯ ಶಾಸತ್ರದಲ್ಲಿ ಇವನು ಹೆಚ್ಚು ಆಸಕ್ತಿ ಉಳ್ಳವನಾಗಿದ್ದನು.

ಬ್ಲಾಕ್ ಮತ್ತು ಫೆಬರ್ ಇಬ್ಬರೂ ೧೯೨೦ ರಲ್ಲಿ ಸ್ಟ್ರಾಸ್‌ಬರ್ಗ್ ವಿಶ್ವವಿದ್ಯಾಲಯಕ್ಕೆ ಪ್ರಾಚಾರ್ಯರಾಗಿ ಸೇರಿಕೊಂಡರು. ಆ ಕಾಲದಲ್ಲೇ ಇವರಿಬ್ಬರೂ ಸ್ನೇಹಿತರಾದರು ಹಾಗೂ ೧೯೩೩ ರವರೆಗೆ ಪರಸ್ಪರ ಭೇಟಿ ಮಾಡುತ್ತಿದ್ದರು. ಸ್ಟ್ರಾರ್ಸ್‌‌ಬರ್ಗ್‌‌ನಲ್ಲಿದ್ದ ಐತಿಹಾಸಿಕ ಮನೋವಿಜ್ಞಾನಿ ಹೆನ್ರಿ ಬ್ರಮೊ, ಫ್ರೆಂಚ್ ಕ್ರಾಂತಿಯ ಇತಿಹಾಸಜ್ಞ ಜಾರ್ಜ್ ಫೆಬರ್, ಧಾರ್ಮಿಕ ಐತಿಹಾಸಿಕ ಸಮಾಜಶಾಸ್ತ್ರದ ಮೂಲಕರ್ತ ಗೇಬ್ರಿಯಲ್‌ ಮತ್ತು ರೋಮನ್ನರ ಕ್ರೀಡೆಗಳ ಬಗ್ಗೆ ಅಧ್ಯಯನ ಮಾಡಿ ಪುಸ್ತಕ ಪ್ರಕಟಿಸಿದ ಅಂದ್ರೆ ಪಿಗಾನಿಯಲ್ ಇವರಿಬ್ಬರೂ ಬ್ಲಾಕ್ ಮತ್ತು ಫೆಬರ್‌ಇವರಿಬ್ಬರ ಜೊತೆ ಚರ್ಚಿಸುತ್ತಿದ್ದರು ಮತ್ತು ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು.

ಮಾರ್ಕ್ ಬ್ಲಾಕನು ೧೯೨೪ ರಲ್ಲಿ ೨೦ನೆಯ ಶತಮಾನದ ಅತಿ ಪ್ರಮುಖ ಐತಿಹಾಸಿಕ ಕೃತಿ ‘ರಾಯಲ್ ಟಚ್‌’ನ್ನು ಪ್ರಕಟಿಸಿದ. ಈ ಪುಸ್ತಕ ಮಧ್ಯಯುಗದಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್‌ದೇಶಗಳಲ್ಲಿ ರಾಜಸ್ಪರ್ಶದ ಶಕ್ತಿಯಿಂದ ‘ಗಂಡಮಾಲೆ’ (ಕಿಂಗ್ಸ್ ಈವಿಲ್) ಎಂದು ಕರೆಯಲಾಗುತ್ತಿದ್ದ ಚರ್ಮರೋಗವನ್ನು ವಾಸಿಮಾಡುವ ಶಕ್ತಿ ರಾಜರಿಗಿತ್ತು ಹಾಗೂ ಇದಕ್ಕಾಗಿ ರೋಗಿಗಳನ್ನು ಸ್ಪರ್ಶಿಸುವ ಒಂದು ಆಚರಣೆ ನಡೆಸಲಾಗುತ್ತಿತ್ತು ಎಂದು ಬೇರೂರಿದ್ದ ನಂಬಿಕೆಗೆ ಸಂಬಂಧಿಸಿದ್ದು. ಈ ಕೃತಿ ಇನ್ನೂ ಅನೇಕ ಕಾರಣಗಳಿಗಾಗಿಯೂ ಅತಿ ಮಹತ್ವವಾದದ್ದು. ಮೊಟ್ಟಮೊದಲಿಗೆ, ಫರ್ಡಿನೆಂಡ್ ಬ್ರೋದೆಲ್ ‘ದೀರ್ಘಾವಧಿಯ ಇತಿಹಾಸ’ ಎಂದು ನಂತರದ ವರ್ಷಗಳಲ್ಲಿ ಕರೆಯುತ್ತಿದ್ದಂಥ ಸಮಸ್ಯೆಗೆ ಸರಿಹೊಂದುವಂತೆ ಈ ಅವಧಿಯನ್ನು ಬ್ಲಾಕ್ ಆಯ್ಕೆ ಮಾಡಿದ್ದ. ಎರಡನೆಯದಾಗಿ ಈ ಪುಸ್ತಕ ರಾಜತ್ವದ ಕಲ್ಪನೆಗಳಿಗೆ ಸಂಬಂಧಿಸಿತ್ತು. ಮೂರನೆಯದಾಗಿ ಇದು ಧಾರ್ಮಿಕ ಮನಶ್ಯಾಸ್ತ್ರದ ಅಧ್ಯಯನವಾಗಿತ್ತು. ಕೊನೆಯದಾಗಿ, ಇದು ತೌಲನಿಕ ಇತಿಹಾಸಕ್ಕೆ ಒಂದು ಕೊಡುಗೆಯಾಗಿತ್ತು. ಐತಿಹಾಸಿಕ ಭೂಗೋಳಶಾಸ್ತ್ರದ ಅಧ್ಯಯನದ ತರುವಾಯ ಫೆಬರ್ ಪುನರುತ್ಥಾನ ಮತ್ತು ಪುನರುಜ್ಜೀವನದ ಬಗ್ಗೆ ಬರೆದನು.

ಈಗಾಗಲೇ ಗಮನಿಸಿರುವಂತೆ ಆನಲ್ಸ್‌ ೧೯೨೯ರ ಜನವರಿ ತಿಂಗಳಿನಲ್ಲಿ ಪ್ರಾರಂಭವಾಯಿತು. ಈ ಪತ್ರಿಕೆಯ ಪ್ರಾರಂಭಿಕ ಸಂಚಿಕೆಗಳಲ್ಲಿ ಪ್ರಮುಖವಾಗಿ ಆರ್ಥಿಕ ಇತಿಹಾಸಕಾರರನ್ನು ನಾವು ಕಾಣುತ್ತೇವೆ. ಉದಾಹರಣೆಗೆ ಹೆನ್ರ ಪಿರೆನ್ ಮಧ್ಯಯುಗದ ವ್ಯಾಪಾರಿಗಳ ಶಿಕ್ಷಣದ ಬಗ್ಗೆ ಬರೆದರೆ, ಸ್ವೀಡಿಷ್ ಇತಿಹಾಸಕಾರ ಎಲಿಹೆಕ್ಷರ್‌ ವ್ಯಾಪಾರೋದ್ಯಮದ ಬಗ್ಗೆ ಬರೆದ. ಅಮೆರಿಕದ ಇತಿಹಾಸಕಾರ ಅರ್ಲ್‌ಹ್ಯಾಮಿಲ್ಟನ್‌ಅಮೆರಿಕದ ಸಂಪತ್ತಿನ ಬಗ್ಗೆ ಮತ್ತು ಸ್ಪೈನ್ ದೇಶದಲ್ಲಿ ನಡೆದ ಬೆಲೆಯ ಕ್ರಾಂತಿಯ ಬಗ್ಗೆ ಬರೆದ. ಪ್ರಾರಂಭಿಕ ಹಂತಗಳಲ್ಲಿ ಅರ್ಥಶಾಸ್ತ್ರಕ್ಕೆ ನೀಡಲಾದ ಈ ಮಹತ್ವದಿಂದ ಬ್ಲಾಕ್‌ ಪ್ರಾರಂಭಿಕ ವರ್ಷಗಳಲ್ಲಿ ಪ್ರಬಲನಾದ ಸಹಸಂಪಾದಕನಾಗಿದ್ದ ಎಂದು ತಿಳಿದುಬರುತ್ತದೆ. ಆದರೆ ೧೯೩೦ ರಲ್ಲೇ, ಇನ್ನೂ ಕೃಷಿಯಾಗದ ಸಮಾಜೋ ಇತಿಹಾಸ ಹಾಗೂ ಇತಿಹಾಸ ವಿಧಾನ ಕ್ರಮಗಳಲ್ಲಿ ಸಹ ತನ್ನ ಹಿರಿಮೆಯನ್ನು ಸ್ಥಾಪಿಸಲು ಪತ್ರಿಕೆ ಉದ್ದೇಶಿಸಿದೆ ಎಂದು ಸಂಪಾದಕರು ಘೋಷಿಸಿದ್ದರು.

೧೯೨೯ರ ತರುವಾಯ ಮಾರ್ಕ್ ಬ್ಲಾಕ್ ಅನೇಕ ಪ್ರಬುದ್ಧ ಲೇಖನಗಳನ್ನು ಹಾಗೂ ಎರಡು ಪುಸ್ತಕಗಳನ್ನು ಬರೆದ. ಅಸ್ಟೋ ಸಂಸ್ಥೆಯಲ್ಲಿ ನಾಗರಿಕತೆಗಳ ತೌಲನಿಕ ಅಧ್ಯಯನದ ಬಗ್ಗೆ ಉಪನ್ಯಾಸ ನಡಲು ಅವನನ್ನು ಆಹ್ವಾನಿಸಲಾಯಿತು. ಅಲ್ಲಿ ಫ್ರೆಂಚ್ ಗ್ರಾಮೀಣ ಇತಿಹಾಸದ ಬಗ್ಗೆ ಅವನು ಅನೇಕ ಉಪನ್ಯಾಸಗಳನ್ನು ನೀಡಿದ. ೧೯೩೧ ರಲ್ಲಿ ಇವುಗಳನ್ನು ಪ್ರಕಟಿಸಲಾಯಿತು. ಹದಿಮೂರನೇ ಶತಮಾನದಿಂದ ಹದಿನೆಂಟನೇ ಶತಮಾನದವರೆಗಿನ ಅವಧಿಯನ್ನು ಈ ಪುಸ್ತಕ ಒಳಗೊಂಡಿದೆ ಹಾಗೂ ಫ್ರಾನ್ಸ್ ಮತ್ತು ಇಂಗ್ಲೆಂಡಿನ ಗ್ರಾಮೀಣ ಇತಿಹಾಸದ ತೌಲನಿಕ ಅಭ್ಯಾಸ ಇದರಲ್ಲಿದೆ.

೧೯೩೯-೧೯೪೦ರಲ್ಲಿ ಬ್ಲಾಕ್ ‘ಫ್ಯೂಡಲ್ ಸೊಸೈಟಿ’ ಎಂಬ ಪುಸ್ತಕವನ್ನು ಪ್ರಕಟಿಸಿ ಪ್ರಸಿದ್ಧನಾದ. ಇದು ಹತ್ತನೇ ಶತಮಾನದಿಂದ ಹದಿನಾಲ್ಕನೇ ಶತಮಾನದವರೆಗಿನ ನಾಲ್ಕು ಶತಮಾನಗಳ ಯುರೋಪ್ ಇತಿಹಾಸವನ್ನು ಒಳಗೊಂಡಿರುವ ಹಾಗೂ ದಾಸ್ಯ, ಸ್ವಾತಂತ್ರ‍್ಯ, ದೈವಿಕ ಪ್ರಭುತ್ವ, ಹಣದ ಮಹತ್ವ ಇತ್ಯಾದಿ ವಿವಿಧ ವಿಷಯಗಳನ್ನೊಳಗೊಂಡಿರುವ ಮಹತ್ವಾಕಾಂಕ್ಷೆಯ ಪ್ರಬಂಧವಾಗಿದೆ. ಊಳಿಗಮಾನ್ಯ ಪದ್ಧತಿಯ ಬಗೆಗಿನ ಇತರ ಅಧ್ಯಯನಗಳಂತಲ್ಲದೆ ಬ್ಲಾಕ್‌ನ ಈ ಅಧ್ಯಯನದಲ್ಲಿ ಊಳಿಗಮಾನ್ಯ ಪದ್ಧತಿಯ ಸಂಸ್ಕೃತಿ ಎಂದು ಕರೆಯಬಹುದಾದ ಅಂಶದೊಂದಿಗೆ ಊಳಿಗಮಾನ್ಯ ಪದ್ಧತಿಯ ಸಂಸ್ಕೃತಿ ಎಂದು ಕರೆಯಬಹುದಾದ ಅಂಶದೊಂದಿಗೆ ಊಳಿಗಮಾನ್ಯ ಪದ್ಧತಿಯ ಬಗ್ಗೆ ಸಮಗ್ರವಾಗಿ ವಿಚಾರ ಮಾಡಲಾಗಿದೆ. ಇದು ಐತಿಹಾಸಿಕ ಮನಶ್ಯಾಸ್ತ್ರಕ್ಕೆ ಸಂಬಂಧಪಟ್ಟ ಪುಸ್ತಕವೂ ಆಗಿದೆ.

೧೯೩೦ರ ದಶಕದಲ್ಲಿ ಸ್ಟ್ರಾಟ್‌ಬರ್ಗ್‌ ಗುಂಪು ಚದುರಿ ಹೋಯಿತು. ೧೯೩೩ ರಲ್ಲಿ ಫೆಬರ್‌ ಸ್ಟ್ರಾಟ್‌ಬರ್ಗ್‌ ಬಿಟ್ಟು ಕಾಲೇಜ್‌ದು ಫ್ರಾನ್ಸ್‌ನಲ್ಲಿ ಅಧ್ಯಾಪಕನಾಗಿ ಸೇರಿದ. ಬ್ಲಾಕ್ ೧೯೩೬ ರಲ್ಲಿ ಸಾರ್ಬಾನ್‌ನಲ್ಲಿ ಆರ್ಥಿಕ ಇತಿಹಾಸದ ಅಧ್ಯಾಪಕನಾಗಿ ಸೇರಿದ.

ಈ ವೇಳೆಗೆ ಆನಲ್ ಒಂದು ಇತಿಹಾಸ ವಿಚಾರಧಾರೆಯ ಮುಖ್ಯ ಕೇಂದ್ರವಾಗಿತ್ತು. ೧೯೩೦ ರಲ್ಲಿ ಹಾಗೂ ೧೯೪೦ರ ದಶಕದಲ್ಲಿ ಫೆಬರ್ ಸಂಕುಚಿತ ಪ್ರಯೋಗವಾದಿಗಳು (ಎಂಪಿರಿಸಿಸ್ಟ್‌) ಮತ್ತು ವಿಷಯತಜ್ಞರ ಬಗ್ಗೆ ಅನೇಕ ಲೇಖನಗಳನ್ನು ಬರೆದ. ಅವನ ಹೊಸ ರೀತಿಯ ಇತಿಹಾಸದ ಬರವಣಿಗೆಯ ಘೋಷಣೆಗಳು ಮತ್ತು ಕಾರ್ಯಕ್ರಮಗಳು ಆನಲ್ಸ್‌ಗೆ ಸಂಬಂಧಿಸಿದ್ದಾಗಿತ್ತು ಎಂದರೆ ಸಹಯೋಗಿ ಸಂಶೋಧನೆ, ಸಮಸ್ಯಾ ಕೇಂದ್ರಿತ ಇತಿಹಾಸ ಮತ್ತು ಸಂವೇದನ ಶಕ್ತಿಯ ಇತಿಹಾಸ ಮುಂತಾದವುಗಳ ಬಗ್ಗೆ ವಾದ ಮಾಡುವುದಾಗಿತ್ತು. ಈ ಹೊತ್ತಿಗಾಗಲೇ ಆನಲ್ಸ್‌ನ ಚೇತನವನ್ನು ಅನುಸರಿಸುವ ಅನುಯಾಯಿಗಳ ಗುಂಪೊಂದು ಹುಟ್ಟಿಕೊಂಡಿತು. ನಂತರದ ವರ್ಷಗಳಲ್ಲಿ ಆನಲ್ಸ್ ಪಂಥದ ನಾಯಕತ್ವ ವಹಿಸಿಕೊಂಡಂಥ ಫರ್ಡಿನೆಂಡ್ ಬ್ರೋದೆಲ್, ಹದಿನೇಳನೇ ಶತಮಾನದಲ್ಲಿ ತಜ್ಞತೆ ಪಡೆಯಲು ಬಂದ ಪಿಯರ್ ಗೂಬರ್, ಮೊರೀಸ್ ಆಗ್ಲುಹೊಂ ಮತ್ತು ಜಾರ್ಜ್‌ದುಬಿ ಮುಂತಾದವರು ಆ ಗುಂಪಿನಲ್ಲಿದ್ದರು.

ಈ ಬೆಳವಣಿಗೆಗಳು ಎರಡನೇ ಮಹಾಯುದ್ಧದ ಪ್ರಾರಂಭದೊಂದಿಗೆ ಸ್ಥಗಿತಗೊಂಡಿತು. ತನ್ನ ಐವತ್ಮೂರನೇ ವರ್ಷದಲ್ಲಿ ಬ್ಲಾಕ್ ಸೇನೆಗೆ ಸೇನಿದ. ಫ್ರಾನ್ಸ್ ಸೋತ ನಂತರವೂ ಪ್ರತಿಭಟನೆಯನ್ನು ಮುಂದುವರಿಸಿದ. ೧೯೪೪ ರಲ್ಲಿ ಅಂತಿಮವಾಗಿ ಅವನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಯುದ್ಧದ ವರ್ಷಗಳಲ್ಲಿ ಬ್ಲಾಕ್ ಎರಡು ಪುಸ್ತಕಗಳನ್ನು ಬರೆದ. ಇದರ ಪೈಕಿ ಇತಿಹಾಸಕಾರರ ಕುಶಲತೆಯನ್ನು ಕುರಿತು ಬರೆದ ಪ್ರಬಂಧ ಅತಿ ಮಹತ್ವದ್ದೆನಿಸಿಕೊಂಡಿದೆ. ಅವನು ಸಾಯುವಾಗ ಅದು ಅಪೂರ್ಣವಾಗಿದ್ದರೂ ವಿಷಯದ ಬಗ್ಗೆ ಸ್ಪಷ್ಟವಾದ, ಅರ್ಥಪೂಣವಾದ ಹಾಗೂ ನ್ಯಾಯಯುತವಾದ ಪ್ರವೇಶಿಕೆಯೆನಿಸಿದೆ.

ಈ ಮಧ್ಯೆ ಫೆಬರ್ ಮೊದಲು ಬ್ಲಾಕ್‌ನೊಂದಿಗೆ ಜಂಟಿ ಸಂಪಾದಕನಾಗಿದ್ದ. ತರುವಾಯ ತಾನೇ ಪತ್ರಿಕೆಯ ಸಂಪಾದಕನಾದ. ಯುದ್ಧದಲ್ಲಿ ಹೋರಾಡುವುದಕ್ಕೆ ಮುಪ್ಪು ಅಡ್ಡಿಯಾದ್ದರಿಂದ ತನ್ನ ಹಳ್ಳಿಯ ಗುಡಿಸಲಿನಲ್ಲಿ ಕುಳಿತು ಫ್ರೆಂಚ್ ಪುನರುತ್ಥಾನ ಹಾಗೂ ಕ್ರಾಂತಿಯನ್ನು ಕುರಿತ ಅನೇಕ ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದ. ಯುದ್ಧಾನಂತರ, ೧೮೮೪ ರಲ್ಲಿ ಸ್ಥಾಪಿಸಲಾದ ಫ್ರಾನ್ಸ್‌ನ ಉನ್ನತ ಶಿಕ್ಷಣಕ್ಕೆ ಮಾರ್ಗದರ್ಶನ ಮಾಡಲು ಫೆಬರ್‌ನನ್ನು ಆಹ್ವಾನಿಸಲಾಯಿತು. ಆತ “ಮಾನವ ಕುಲದ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಇತಿಹಾಸ”ವೆಂಬ ಅನೇಕ ಸಂಪುಟಗಳ ವ್ಯವಸ್ಥಾಪನೆಯಲ್ಲಿ ತೊಡಗಿದ್ದ ‘ಯುನೆಸ್ಕೊ’ಗೆ ಫ್ರೆಂಚ್ ಪ್ರತಿನಿಧಿಯೂ ಆಗಿದ್ದನು.

ಯುದ್ಧಾನಂತರದ ವರ್ಷಗಳಲ್ಲಿ ಫೆಬರ್‌ನ ಅತಿದೊಡ್ಡ ಸಾಧನೆಯೆಂದರೆ ೧೯೪೭ ರಲ್ಲಿ ನವ ಇತಿಹಾಸ ಬೆಳೆಯಲು ಸಾಧ್ಯವಾಗುವಂಥ ಎಕೋಲೆಯ ಆರನೇ ಶಾಖೆಯ ಸ್ಥಾಪನೆಯಲ್ಲಿ ತನ್ನನ್ನು ತೊಡಗಿಸಿಕೊಂಡದ್ದು. ಫೆಬರ್ ಸಮಾಜ ವಿಜ್ಞಾನಕ್ಕೆ ಸಂಬಂಧಪಟ್ಟ ಆರನೆ ಶಾಖೆಗೆ ಅಧ್ಯಕ್ಷನಾದ ಹಾಗೂ ಅದರ ಇನ್ನೊಂದು ಶಾಖೆಯಾದ ಇತಿಹಾಸ ಸಂಶೋಧನಾ ಕೇಂದ್ರಕ್ಕೆ ನಿರ್ದೇಶಕನಾದ. ಅವನು ಈ ಸಂಸ್ಥೆಯ ಪ್ರಮುಖ ಸ್ಥಾನಗಳಿಗೆ ತನ್ನ ಶಿಷ್ಯರನ್ನು ಹಾಗೂ ಸ್ನೇಹಿತರನ್ನು ನೇಮಿಸಿದ. ಇತಿಹಾಸ ಕೇಂದ್ರದ ಹಾಗೂ ಪತ್ರಿಕೆಯ ಆಡಳಿತವನ್ನು ನೋಡಿಕೊಳ್ಳುವುದಕ್ಕೆ ಬ್ರೋದೆಲ್ ಅವನಿಗೆ ಸಹಾಯ ಮಾಡಿದ. ಹತ್ತೊಂಬತ್ತನೇ ಶತಮಾನದ ಇತಿಹಾಸಕಾರ ಚಾಲರ್ಸ್ ಮೊರಾಜ್ ಪತ್ರಿಕಾ ನಿರ್ದೇಶಕ ಸಮಿತಿಗೆ ಅವನೊಂದಿಗೆ ಸೇರ್ಪಡೆಯಾದ. ೧೯೫೫ ರಲ್ಲಿ ಫೆಬರ್ ಮರಣ ಹೊಂದುವ ಮುನ್ನ ರಾಬರ್ಟ್ ಮಾಂದ್ರ ಪತ್ರಿಕೆಯ ವ್ಯವಸ್ಥಾಪಕ ಕಾರ್ಯದರ್ಶಿಯಾದ.

ಆನಲ್ ಸಂಪ್ರದಾಯ ವಿರೋಧಿ ಪಂಥದ ಒಂದು ಅಂಗವೆನಿಸಿಕೊಂಡಿತ್ತು. ಯುದ್ಧಾನಂತರ ಅದು ಒಂದು ಸಂಪ್ರದಾಯಸ್ಥ ಚರ್ಚಿನ ಅಧಿಕೃತ ಶಾಖೆಯಾಯಿತು. ಫೆಬರ್‌ನ ಮುಂದಾಳತ್ವದಲ್ಲಿ ಬುದ್ಧಿಜೀವಿ ಕ್ರಾಂತಿಕಾರಿಗಳು ಫ್ರೆಂಚ್ ಐತಿಹಾಸಿಕ ಸಂಸ್ಥೆಯನ್ನು ವಹಿಸಿಕೊಳ್ಳಲು ಸಾಧ್ಯವಾಯಿತು. ಫರ್ಡಿನಾಂಡ್ ಬ್ರೋದೆಲ್ ಫೆಬರ್‌ನ ಉತ್ತರಾಧಿಕಾರಿಯಾದ.

ಫರ್ಡಿನಾಂಡ್ ಬ್ರೋದೆಲ್ ಸಾರ್ಬಾನ್‌ನಲ್ಲಿ ಇತಿಹಾಸದ ಅಧ್ಯಯನ ಮಾಡಿದ್ದ ಮತ್ತು ಆ ತರುವಾಯ ಆಲ್ಜೀರಿಯಾದ ಸಾ ಪಾಲೋ ವಿಶ್ವವಿದ್ಯಾಲಯದಲ್ಲಿ ಶಿಕ್ಷಕನಾಗಿದ್ದ. ಲೂಯಿ ಫೆಬರ್‌ನನ್ನು ಬ್ರೆಜಿಲ್‌ನಿಂದ ಫ್ರಾನ್ಸಿಗೆ ಹಿಂತಿರುಗಿದ್ದಾಗ ಭೇಟಿ ಮಾಡಿದ. ಇಬ್ಬರೂ ಪರಸ್ಪರ ಅತೀವ ಗೌರವ ಇಟ್ಟುಕೊಂಡಿದ್ದರು. ಎರಡನೇ ಮಹಾಯುದ್ದದ ಸಮಯದಲ್ಲಿ ಬಹಳ ಹಿಂದೆ ಬರೆಯಲು ಪ್ರಾರಂಭಿಸಿದ್ದ ದಿ ಮೆಡಿಟರೇನಿಯನ್ ಕುರಿತ ಮಹಾಪ್ರಬಂಧವನ್ನು ಮುಕ್ತಾಯಗೊಳಿಸಿ ೧೯೪೯ ರಲ್ಲಿ ಅದನ್ನು ಪ್ರಕಟಿಸಿದ.

ದಿ ಮೆಡಿಟರೇನಿಯನ್ ಒಂದು ಬೃಹತ್ ಗ್ರಂಥ. ಮೊದಲ ಆವೃತ್ತಿಯಲ್ಲಿ ೬,೦೦,೦೦೦ ಪದಗಳ ಮೂರು ಭಾಗ ಇತ್ತು. ಈ ಮೂರು ಭಾಗಗಳೂ ಭೂತಕಾಲದ ಬಗ್ಗೆ ಬೇರೆ ಬೇರೆ ದೃಷ್ಟಿಕೋನಗಳನ್ನುಳ್ಳದ್ದು. ಮೊದಲ ಭಾಗದಲ್ಲಿ ಮನುಷ್ಯ ಮತ್ತು ಪರಿಸರದ ನಡುವೆ ಇರುವ ಅನಾದಿಕಾಲದ ಇತಿಹಾಸ, ಎರಡನೇ ಭಾಗದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸ್ವರೂಪಗಳ ಇತಿಹಾಸದಲ್ಲಿನ ಕ್ರಮೇಣ ಬದಲಾವಣೆ ಮತ್ತು ಕೊನೆಯ ಭಾಗದಲ್ಲಿ ಶೀಘ್ರವಾಗಿ ಬದಲಾವಣೆಯಾಗುವ ಘಟನೆಗಳ ಇತಿಹಾಸ ಇದೆ.

ಈ ಪುಸ್ತಕದ ಮೂರನೇ ಭಾಗ ಎರಡನೇ ಫಿಲಿಪ್‌ನ ವಿದೇಶಿ ನೀತಿಗೆ ಸಂಬಂಧ ಪಟ್ಟದ್ದಾಗಿದೆ. ಇದು ಇತಿಹಾಸದ ವೇದಿಕೆಯಲ್ಲಿನ ಪ್ರಮುಖ ವ್ಯಕ್ತಿಗಳ ಗುಣವೈಶಿಷ್ಟ್ಯಗಳನ್ನು ಸಂಕ್ಷಿಪ್ತವಾಗಿ ಚಿತ್ರೀಕರಿಸುವ ಹಾಗೂ ಲೆ ಪಾಂಟೊ ಯುದ್ಧ, ಮಾಲ್ಟಾ ಪರಿಹಾರ ಹಾಗೂ ೧೫೭೦ರ ಕೊನೆಯ ಭಾಗದ ಶಾಂತಿ ಸಂಧಾನಗಳ ಸುದೀರ್ಘ ನಿರೂಪಣೆಯನ್ನು ಕೊಡುವ, ರಾಜಕೀಯ ಮತ್ತು ಸೇನಾ ಇತಿಹಾಸವನ್ನು ಕುರಿತ ವೃತ್ತಿ ಸಂಬಂಧವಾದ ಒಂದು ಕೃತಿ. ಲೇಖಕ ಮತ್ತೆ ಮತ್ತೆ ಘಟನೆಗಳ ಅಪ್ರಾಮುಖ್ಯತೆಯನ್ನು ಮತ್ತು ವ್ಯಕ್ತಿಗಳ ಕ್ರಿಯಾ ಸ್ವಾತಂತ್ರ‍್ಯದ ಮೇಲಿನ ಮಿತಿಗಳನ್ನು ಒತ್ತಿ ಹೇಳುತ್ತಾನೆ. ಆದರೆ ಘಟನೆಗಳನ್ನು ವೈಭವೀಕರಿಸದೆ ಸರಳವಾಗಿ ನಿರೂಪಣೆ ಮಾಡುತ್ತಾನೆ. ಈ ಭಾಗದಲ್ಲಿ ಬ್ರೋದೆಲ್‌ವ್ಯಕ್ತಿಗಳನ್ನು ಮತ್ತು ಘಟನೆಗಳನ್ನು ಸಂದರ್ಭಕ್ಕೆ ತಕ್ಕಂತೆ ಸೂಕ್ತ ಸನ್ನಿವೇಶದಲ್ಲಿ ಚಿತ್ರಿಸುತ್ತಾನೆ ಮತ್ತು ಅವುಗಳ ಮೂಲಭೂತ ಅಪ್ರಾಮುಖ್ಯತೆಯನ್ನು ವ್ಯಕ್ತಪಡಿಸುತ್ತ, ವ್ಯಕ್ತಿಗಳು ಮತ್ತು ಘಟನೆಗಳು ಗ್ರಾಹ್ಯವಾಗುವಂತೆ ಮಾಡುತ್ತಾನೆ. ಇತಿಹಾಸದ ಘಟನಾವಳಿಗಳೇ ಮಾನವನ ಆಸಕ್ತಿಗಳಲ್ಲಿ ಅತ್ಯಂತ ಶ್ರೀಮಂತವಾದ, ಆದರೆ ಗೌಣವಾದ ಅಂಶ ಎಂದು ಹೇಳುತ್ತಾನೆ. ಭೂತಕಾಲವನ್ನು ತಿಳಿಯುವುದಕ್ಕೆ ಅಲೆಗಳನ್ನು ಭೇದಿಸಿ ಕಡಲಿನಾಳಕ್ಕೆ ಇಳಿದು ಹುಡುಕುವುದು ಅತ್ಯಾವಶ್ಯಕ.

“ಸಾಮುದಾಯಿಕ ಗುರಿ ಮತ್ತು ಸಾಮಾನ್ಯ ಪ್ರವೃತ್ತಿಗಳು” (ಕಲೆಕ್ಟೀವ್ ಡೆಸ್ಟಿನೀಸ್ ಆಂಡ್ ಜನರಲ್ ಟ್ರೆಂಡ್ಸ್) ಎಂಬ ಶೀರ್ಷಿಕೆಯ ಎರಡನೇ ಭಾಗ ಇತಿಹಾಸದ ಪ್ರಕ್ಷುಬ್ಧತೆಯನ್ನು ಕುರಿತದ್ದು. ಇದು ನಿರ್ಮಾಣಗಳು, ಆರ್ಥಿಕ ವ್ಯವಸ್ಥೆಗಳು, ಸಮಾಜಗಳು, ರಾಜ್ಯಗಳು, ನಾಗರಿಕತೆಗಳು ಮತ್ತು ಬದಲಾಗುವ ಯುದ್ಧದ ಸ್ವರೂಪಗಳ ಬಗ್ಗೆ ಹೇಳುತ್ತದೆ. ಇತಿಹಾಸವು ಘಟನೆಗಳಿಗಿಂತ ನಿಧಾನವಾಗಿ ಚಲಿಸುತ್ತದೆ. ಅದು ವಿವಿಧ ಪೀಳಿಗೆಗಳೊಂದಿಗೆ, ಅಷ್ಟೇ ಅಲ್ಲ ಶತಮಾನಗಳೊಂದಿಗೇ ಸಾಗುವುದರಿಂದ ಸಮಕಾಲೀನರಿಗೆ ಆ ಚಲನೆಯ ಅರಿವು ನಿಧಾನವಾಗಿರುತ್ತದೆ. ಆದರೆ ಅವು ಘಟನೆಗಳ ಗತಿಯೊಂದಿಗೇ ಸಾಗುತ್ತದೆ. ತನ್ನ ಅಧ್ಯಯನದ ಮೊದಲ ಭಾಗದಲ್ಲಿ ಅವನು ಇತಿಹಾಸವನ್ನು ಈ ಸಾಮಾಜಿಕ ಪ್ರವೃತ್ತಿಗಳ ಅಡಿಯಲ್ಲಿ, ವಿಳಂಬ ಹಾದಿಯುಳ್ಳ ನಿರಂತರ ಪುನರಾವರ್ತನೆಯ ನಿತ್ಯ ಅವರ್ತಕ ಚಕ್ರ ಎಂಬುದಾಗಿ ಗುರುತಿಸುತ್ತಾನೆ. ಮಾನವನ ಇತಿಹಾಸವನ್ನು ಪರಿಸರದೊಂದಿಗೆ ಅವನಿಗಿರುವ ಸಂಬಂಧದ ಜೊತೆಗೆ ಒಂದು ಬಗೆಯ ಐತಿಹಾಸಿಕ ಭೂಗೋಳ ಶಾಸ್ತ್ರವೆಂಬಂತೆ ಪರಿಗಣಿಸಬೇಕೆಂದು ಬ್ರೋದೆಲ್ ತಿಳಿಸುತ್ತಾನೆ. ಅವನು ಹೇಳುವಂತೆ ಪರ್ವತಗಳು, ಪ್ರಸ್ಥಭೂಮಿಗಳು, ಕರಾವಳಿಗಳು, ದ್ವೀಪಗಳು, ಹವಾಮಾನ, ಭೂಸಂಚಾರ ಮಾರ್ಗಗಳು ಮತ್ತು ಕಡಲು ಸಂಚಾರ ಮಾರ್ಗಗಳ ಕುರಿತ ಅಧ್ಯಯನವನ್ನು “ಭೂ-ಇತಿಹಾಸ”ವಾಗಿ ಅಭ್ಯಸಿಸುವುದೇ ಇತಿಹಾಸದ ಅಧ್ಯಯನಕ್ಕೆ ನಿಜವಾದ ಮೂಲಾಧಾರ.

ಈ ಪುಸ್ತಕ ಫ್ರೆಂಚ್ ಇತಿಹಾಸ ಪ್ರಪಂಚದಲ್ಲಿ ತೀವ್ರ ಸ್ಪಂದನ ಉಂಟುಮಾಡಿತು. ಈ ಗ್ರಂಥದ ಬಗೆಗಿನ ಗೌರವದಿಂದಾಗಿ ಇತರ ಶಿಕ್ಷಣ ಶಾಖೆಗಳು ಬಹಳಷ್ಟು ಪ್ರಭಾವಕ್ಕೊಳಗಾದವು. ಈ ಗ್ರಂಥವು ಪ್ರಪಂಚದ ಇತರ ಭಾಗಗಳಲ್ಲೂ ಅಲೆಗಳನ್ನೆಬ್ಬಿಸಿತು. ಇದು ಮೂಲಕೃತಿಯಾದರೂ ಲೇಖಕನಾದ ಬ್ರೋದೆಲ್ ತನ್ನ ವಿಚಾರಗಳು ಹಲವು ಐತಿಹಾಸಿಕ ಪರಂಪರೆಗಳಿಗೆ ಸಂಬಂಧಪಟ್ಟವು ಎನ್ನುತ್ತಾನೆ. ಈ ಪರಂಪರೆಗಳ ಪೈಕಿ ಅತ್ಯಂತ ಪ್ರಮುಖವಾದದ್ದು ಆನಲ್ಸ್ ಪರಂಪರೆ. ಆನಲ್ಸ್‌ಪರಂಪರೆಯು ನೀಡಿದ ಶಿಕ್ಷಣ ಮತ್ತು ಸ್ಫೂರ್ತಿಗೆ ತಾನು ಚಿರಋಣಿ ಎನ್ನುತ್ತಾನೆ. ಕೆಲವು ಇತಿಹಾಸಕಾರರು ಬ್ರೋದೆಲ್‌ನ ಮೆಡಿಟರೇನಿಯನ್ ಕೃತಿಯನ್ನು ಅನುಸರಿಸಿದರೂ, ಕೆಲವರಿಗೆ ಮಾತ್ರ ಸಫಲವಾಗಿ ಅನುಸರಿಸಲು ಸಾಧ್ಯವಾಯಿತು. ಈ ಕೃತಿಯು ಟಾಲ್‌ಸ್ಟಾಯ್‌ನ ವಾರ್ ಆಂಡ್ ಪೀಸ್‌ಗೆ ಹೋಲುತ್ತದೆ. ಇವೆರಡು ಗ್ರಂಥಗಳಲ್ಲಿ ಮನುಷ್ಯನ ಕ್ರಿಯೆಗಳ ಮಿತಿಗಳ ಬಗ್ಗೆ ವಿಶ್ಲೇಷಣೆ ಮಾಡಿರುವುದನ್ನು ಗಮನಿಸಬಹುದು.

೧೯೫೬ ರಲ್ಲಿ ಫೆಬರ್ ಮೃತನಾದ ತರುವಾಯ ಸುಮಾರು ಮೂವತ್ತು ವರ್ಷಗಳವರೆಗೆ ಎಂದರೆ ೧೯೮೫ ರಲ್ಲಿ ತಾನು ಮೃತನಾಗುವವರೆಗೆ, ಬ್ರೋದೆಲ್ ಇತಿಹಾಸಕಾರನಾಗಿ ಇರುವುದರ ಜೊತೆಗೆ ಪ್ರಭಾವಶಾಲಿಯೂ ಆಗಿದ್ದನು. ೧೯೪೯ ರಲ್ಲಿ ಅವನು ‘ಕಾಲೇಜ್‌ದು ಫ್ರಾನ್ಸ್’ ನಲ್ಲಿ ಪ್ರಾಧ್ಯಾಪಕನಾಗಿದ್ದನು. ೧೯೫೬ ರಲ್ಲಿ ಫೆಬರ್ ಮೃತನಾದ ನಂತರ ಬ್ರೋದೆಲ್ ಆನಲ್ಸ್‌ನ ಸಮರ್ಥ ನಿರ್ದೇಶಕನಾದ. ೧೯೬೯ ರಲ್ಲಿ ಬ್ರೋದೆಲ್ ತರುಣ ಇತಿಹಾಸಕಾರರಾದ ಜಾಕ್‌ಲ ಗಾಫ್, ಇಮ್ಯಾನ್ಯುಯಲ್ ಲಾದುರಿ ಮತ್ತು ಮಾರ್ಕೊ ಫೆರೊ ಇವರನ್ನು ಆನಲ್ಸನ್ನು ಮತ್ತಷ್ಟು ಪ್ರಭಾವಶಾಲಿಗೊಳಿಸಲು ತನ್ನ ಸಂಸ್ಥೆಗೆ ಸೇರಿಸಿಕೊಂಡನು. ಇವನು ಫೆಬರ್ ನಂತರ ಎಕೋಲ್‌ನ ಆರನೆ ಶಾಖೆಯ ಅಧ್ಯಕ್ಷನಾದನು.

೧೯೬೩ ರಲ್ಲಿ ಬ್ರೋದೆಲ್ ಅಂತರ್‌ಶಿಸ್ತೀಯ ಸಂಶೋಧನೆಗೆ ಮೀಸಲಾದ ಮತ್ತೊಂದು ಸಂಸ್ಥೆಯನ್ನು ಫ್ರಾನ್ಸಿನಲ್ಲಿ ಸ್ಥಾಪಿಸಿದನು. ಅವನ ಕಾಲದಲ್ಲಿ ಈ ಸಂಸ್ಥೆಯ ಶಾಖೆ ಹಾಗೂ ಕೇಂದ್ರಗಳು ಬುಲವಾರ್ ರಾಸ್‌ಪೈಲ್ ಎನ್ನುವ ಹೊಸ ಸ್ಥಳಕ್ಕೆ ವರ್ಗಾಯಿಸಲ್ಪಟ್ಟಿತು. ಇಲ್ಲಿ ಸಂವಾದಗಳು ಮತ್ತು ವಿಚಾರಸಂಕಿರಣಗಳಿಗೆ ಲಭ್ಯರಾಗುತ್ತಿದ್ದ ಲೆವಿಸ್ಟ್ರಾಸ್ ಮತ್ತು ಪಿಯರ್ ವಿಲಾರ್ ಇವರಿಗೆ ಸಮಾನರಾದ ಸಮಾಜವಿಜ್ಞಾನಿಗಳು ಮತ್ತು ಮಾನವಶಾಸ್ತ್ರಜ್ಞರ ನಿಕಟ ಸಂಪರ್ಕ, ಇತರ ಶಿಕ್ಷಣಗಳಲ್ಲಿನ ಹೊಸ ಬೆಳವಣಿಗೆಗಳು ಮತ್ತು ಹೊಸ ಕಲ್ಪನೆಗಳ ಜ್ಞಾನವು ಆನಲ್ಸ್‌ನ ಇತಿಹಾಸಕಾರರಿಗೆ ಒದಗಿತು. ೧೪೦೦ ರಿಂದ ೧೮೦೦ ರವರೆಗಿನ ಅವಧಿಯಲ್ಲಿ ಯುರೋಪ್ ಇತಿಹಾಸದ ಅಧ್ಯಯನವನ್ನು ಎರಡು ಸಂಪುಟಗಳಲ್ಲಿ ೧೯೪೯ರ ತರುವಾಯ ತರಲು ಫೆಬರ್ ಮತ್ತು ಬ್ರೋದೆಲ್‌ನನ್ನು ಆಹ್ವಾನಿಸಿದ್ದ. ಈ ಪೈಕಿ ಮೊದಲನೆಯದು ಫೆಬರ್ ವಿರಚಿತ ಆಲೊಚನೆ ಮತ್ತು ನಂಬಿಕೆಯನ್ನು ಕುರಿತ ಸಂಪುಟ. ಎರಡನೆಯದು ಬ್ರೋದೆಲ್ ವಿರಚಿತ “ಭೌತಿಕ ಸಂಸ್ಕೃತಿ” ಕುರಿತದ್ದು. ಫೆಬರ್ ಸಾಯುವ ಮುನ್ನ ತನ್ನ ಕೃತಿಯನ್ನು ಪೂರ್ಣಗೊಳಿಸಲಾಗಲಿಲ್ಲ. ಬ್ರೋದೆಲ್ ೧೯೬೭ ಮತ್ತು ೧೯೭೯ ರ ನಡುವೆ ಸಿವಿಲ್ಯೈಜೇಷನ್ ಮೆಟೀರಿಯೇಲ್ ಎ ಕ್ಯಾಪಿಟಲಿಸಂ ಎಂಬ ಹೆಸರಿನ ತನ್ನ ಕೃತಿಯನ್ನು ಮೂರು ಬೃಹತ್‌ಸಂಪುಟಗಳಲ್ಲಿ ಪೂರ್ಣಗೊಳಿಸಿದ.

ಈ ಮೂರು ಸಂಪುಟಗಳಲ್ಲಿ ಮೊದಲನೆಯದು ಸುಮಾರು ೪೦೦ ವರ್ಷಗಳವರೆಗಿನ ಪ್ರಚೀನ ಆರ್ಥಿಕ ವ್ಯವಸ್ಥೆಯ ಬಹುತೇಕ ನಿಶ್ಚಲವಾದ ಇತಿಹಾಸವನ್ನು ಕುರಿತದ್ದು. ಇದನ್ನು ಇಂಗ್ಲೀಷಿನಲ್ಲಿ ಈಗ ದಿ ಸ್ಟ್ರಕ್ಚರ್ಸ್ ಆಫ್ ಎವ್ವೆರಿಡೇ ಲೈಫ್ ಎಂದು ಕರೆಯಲಾಗುತ್ತದೆ. ಬ್ರೋದೆಲ್‌ನ ಗುರಿ ಜಾಗತಿಕವಾದದ್ದು. ವಿಷಯ ವಸ್ತುವನ್ನು ಕುರಿತು ಹೇಳುವಾಗ ಅವನು ಸಾಂಪ್ರದಯಿಕ ಆರ್ಥಿಕ ಇತಿಹಾಸದ ಅಡ್ಡಗೋಡೆಯನ್ನು ಮುರಿದು ಹಾಕುತ್ತಾನೆ. ಅವನ ಪ್ರಕಾರ ಪುಸ್ತಕದ ಗುರಿ “ದಿನನಿತ್ಯ ಜೀವನವನ್ನು ಇತಿಹಾಸೀಕರಿಸುವುದು.” ಇದನ್ನು ಸಾಧಿಸುವುದಕ್ಕೆ ಅವನು ‘ಕೃಷಿ’, ‘ವ್ಯಾಪಾರ’ ಮತ್ತು ‘ಕೈಗಾರಿಕೆ’ ಮುಂತಾದ ಪಾರಂಪರಿಕ ಪ್ರವರ್ಗಗಳನ್ನು ಬಿಟ್ಟು ದಿನನಿತ್ಯದ ಜೀವನ, ಜನತೆ ಮತ್ತು ವಸ್ತುಗಳು, ಮಾನವಕುಲ ಮಾಡುವ ಅಥವಾ ಬಳಸುವ ಪ್ರತಿಯೊಂದು ವಸ್ತು, ಆಹಾರ, ಬಟ್ಟೆಗಳು, ಮನೆ ನಿರ್ಮಾಣ, ಸಾಧನಗಳು, ಹಣ, ಪಟ್ಟಣಗಳು ಮುಂತಾದವುಗಳ ಬಗ್ಗೆ ಗಮನ ಹರಿಸುತ್ತಾನೆ. ಈ ಸಂಪುಟ ಮುಖ್ಯವಾಗಿ ದಿನನಿತ್ಯ ಜೀವನ ಮತ್ತು “ಭೌತಿಕ ಸಂಸ್ಕೃತಿ” ಈ ಎರಡು ಮೂಲಭೂತ ಪರಿಕಲ್ಪನೆಗಳನ್ನು ಹೊಂದಿದೆ. ಸರಕುಗಳ ವಿನಿಮಯ ನಡೆಯುವ ಅಥವಾ ವಿನಿಮಯ ನಡೆಯಲು ಸಾಧ್ಯವಾಗದ ಪ್ರದೇಶಗಳಲ್ಲಿ ಭೂಗೋಳಶಾಸ್ತ್ರಜ್ಞ ಅಥವಾ ಭೂಗೋಳ ಇತಿಹಾಸಕಾರನೆಂಬಂತೆ ಬ್ರೋದೆಲನು ನಾಗರಿಕತೆಯನ್ನು ಅವಲೋಕಿಸುತ್ತಾನೆ.

ದಿ ವೀಲ್ಸ್ ಆಫ್ ಕಾಮರ್ಸ್ ಎಂಬ ಹೆಸರಿನ ಎರಡನೇ ಸಂಪುಟ ಸಾಂಪ್ರದಾಯಿಕ ಮಾರುಕಟ್ಟೆಗೆ ಸಂಬಂಧಿಸಿದಂತೆ ಗದ್ದಲ ತುಂಬಿದ, ಪ್ರಾಣಿಗಳಿಂದ ಕೂಡಿದ, ಬಹು ಭಾಷೆಗಳ, ವರ್ಣಮಯ ಜಗತ್ತಿನ ಗಲಾಟೆ ಮತ್ತು ಗೊಂದಲದ ಚಿತ್ರಣದೊಂದಿಗೆ ಪ್ರಾರಂಭವಾಗಿ ಜಾತ್ರೆಗಳು, ಚಿಲ್ಲರೆ ವ್ಯಾಪಾರಿಗಳು ಮತ್ತು ದೊಡ್ಡ ವರ್ತಕರ ವರ್ಣನೆಯೊಂದಿಗೆ ಮುಂದುವರಿಯುತ್ತದೆ. ಅನೇಕ ವರ್ತಕರು ತಾವು ಮಾರಾಟ ಮಾಡುತ್ತಿದ್ದ ಮತ್ತು ಖರೀದಿಸುತ್ತಿದ್ದ ಸರಕುಗಳಂತೆಯೇ ವಿಲಕ್ಷಣವೆನಿಸಿದ್ದರು. ಅಂತರರಾಷ್ಟ್ರೀಯ ವ್ಯಾಪಾರವು ಫ್ರಾನ್ಸ್‌ನಲ್ಲಿ ಪ್ರಾಟೆಸ್ಟಂಟರು, ಸೆಂಟ್ರಲ್ ಯುರೋಪಿನಲ್ಲಿ ಯೆಹೂದಿಗಳು, ರಷ್ಯದಲ್ಲಿ ಹಳೆಯ ಪಂಥದವರು, ಈಜಿಫ್ಟಿನಲ್ಲಿ ಕಾಪ್ಟ್ ಪಂಥದವರು, ಭಾರತದಲ್ಲಿ ಪಾರ್ಸಿಗಳು, ಟರ್ಕಿಯಲ್ಲಿ ಆರ್ವೇನೀಯರು, ಸ್ಪ್ಯಾನಿಷ್ ಅಮೆರಿಕದಲ್ಲಿ ಪೋರ್ಚುಗೀಸರು ಮುಂತಾಗಿ ಬಹುತೇಕ ಹೊರಗಿನವರ ಕೈಯಲ್ಲೇ ಇತ್ತು. ವಿವರಣೆ ಮತ್ತು ವಿನಿಮಯದ ಈ ವ್ಯವಸ್ಥೆಗೆ ಸಂಬಂಧಿಸಿದಂತೆ ಬ್ರೋದೆಲ್ ರಚನಾತ್ಮಕವಾದ ಮತ್ತು ಬಹುವಿಧ ವರ್ಣನೆಗಳನ್ನು ಮಾಡಿದ. ವ್ಯಕ್ತಿಗತ ಬಗ್ಗೆ ವರ್ಣಿಸುವ ಆಸಕ್ತಿ ಅವನಿಗಿರಲಿಲ್ಲ. ಹಾಗೆಯೇ ಕೇವಲ ಒಂದು ಘಟನೆಯಾಧಾರಿತ ವಿಶ್ಲೇಷಣೆಯ ಬಗ್ಗೆ ಕೂಡ ಅವನಿಗೆ ಒಲವಿರಲಿಲ್ಲ. ‘ಕೇವಲ ಒಂದು ಸೀಮಿತ ಮೂಲದಿಂದ ಬಂಡವಾಳಶಾಹಿ ಪದ್ಧತಿ ಹುಟ್ಟುವುದಕ್ಕೆ ಸಾಧ್ಯವಿಲ್ಲ’ ಎಂದು ಅಭಿಪ್ರಾಯ ನೀಡಿ ಕಾರ್ಲ್‌‌ಮಾರ್ಕ್ಸ್ ಮತ್ತು ಫೆಬರ್ ಇವರಿಬ್ಬರ ಅಭಿಪ್ರಾಯಗಳನ್ನು ಅವನು ತಳ್ಳಿ ಹಾಕಿದ. ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜ, ಸಂಸ್ಕೃತಿ, ನಾಗರಿಕತೆ ಮತ್ತು ಇತಿಹಾಸ ಬಂಡವಾಳಶಾಹಿ ವ್ಯವಸ್ಥೆಯ ಹುಟ್ಟಿನಲ್ಲಿ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾನೆ. ಪರ್ಸ್ಪೆಕ್ಟಿವ್‌ ಆಫ್ ದಿ ವರ್ಲ್ಡ್‌ಎಂಬ ಹೆಸರಿನ ಮೂರು ಮತ್ತು ನಾಲ್ಕನೆಯ ಸಂಪುಟಗಳು ಇಮ್ಯಾನ್ಯುಯಲ್ ವ್ಯಾಲರ‍್ಸ್ಟಿನನ ವಿಚಾರಗಳ ಆಧಾರದ ಮೇಲೆ ರೂಪಿಸಲಾದ ಬಂಡವಾಳಶಾಹಿ ಪದ್ಧತಿಯ ಹುಟ್ಟಿನ ಸ್ವರೂಪವನ್ನು ಬಿಟ್ಟು, ಅದರ ಕಾರ್ಯವಿಧಾನದ ಬಗ್ಗೆ ನಮ್ಮ ಗಮನ ಸೆಳೆಯುತ್ತದೆ.

ತನ್ನ ಅಧಿಕಾರಾವಧಿಯಲ್ಲಿ, ಬ್ರೋದೆಲ್ ಇತಿಹಾಸವನ್ನು ಪ್ರಮುಖ ಪಾಲುದಾರನನ್ನಾಗಿ ಮಾಡಿ ಸಮಾಜವಿಜ್ಞಾನಗಳ ಸಾಮಾನ್ಯ ಮಾರುಕಟ್ಟೆಯ ಆದರ್ಶವನ್ನು ಅಭಿವೃದ್ಧಿಗೊಳಿಸಲು ಸಂಶೋಧನೆ, ಪ್ರಕಟಣೆ ಮತ್ತು ನೇಮಕಾತಿಗಳಿಗಾಗಿ ನಿಧಿಗಳನ್ನು ಬಳಸಿದ. ಪೋಲೆಂಡ್ ಮುಂತಾದ ಇತರ ದೇಶಗಳ ತರುಣ ಇತಿಹಾಸಕಾರರಿಗೆ ವಿದ್ಯಾರ್ಥಿವೇತನಗಳನ್ನು ನೀಡಿದ್ದರಿಂದಾಗಿ, ಅವರು ಪ್ಯಾರಿಸ್‌ನಲ್ಲಿ ಅಧ್ಯಯನ ಮಾಡಿ ಹೊರದೇಶಗಳಲ್ಲಿ ಫ್ರೆಂಚ್ ಮಾದರಿಯ ಇತಿಹಾಸವನ್ನು ಪ್ರಚಾರ ಮಾಡಲು ಸಾಧ್ಯವಾಯಿತು. ಆಧುನಿಕ ಯುಗದ ಆದಿ ಭಾಗದ ಅಧ್ಯಯನಕ್ಕೂ ಬ್ರೋದೆಲ್ ಪ್ರೋತ್ಸಾಹ ನೀಡಿದ. ಬ್ರೋದೆಲನು ಪಿಯರ್‌ಶೋನು ಮತ್ತು ಇಮ್ಯಾನ್ಯುಯಲ್ ಲಾದುರಿ ಮೊದಲಾದ ಹೊಸ ಪೀಳಿಗೆಯ ಚರಿತ್ರೆಕಾರರ ಮೇಲೆ ಬಹಳ ಪರಿಣಾಮ ಬೀರಿದ್ದನೆಂಬುದು ಗಮನಾರ್ಹ ಸಂಗತಿಯಾಗಿದೆ.

ಇತರರ ಮೇಲೆ ಪ್ರಭಾವ ಬೀರುವಂಥ ಆಕರ್ಷಕ ನಾಯಕತ್ವ ಮತ್ತು ಸಾಧನೆಗಳೇನೇ ಇದ್ದರೂ ಬ್ರೋದೆಲ್‌ನ ಕಾಲದಲ್ಲಿ ಆದ ಆನಲ್ಸ್‌ಚಳವಳಿಯ ಅಭಿವೃದ್ಧಿಯು ಕೇವಲ ಅವನ ಕಲ್ಪನೆಗಳು, ಪ್ರಭಾವ ಮತ್ತು ಹಿತಾಸಕ್ತಿಯಿಂದಲೇ ಆಯಿತು ಎಂದು ಹೇಳಲಾಗುವುದಿಲ್ಲ. ಈ ಚಳವಳಿಯ ಸಾಮುದಾಯಿಕ ಧ್ಯೇಯ ಮತ್ತು ಸಾಮಾನ್ಯ ಪ್ರವೃತ್ತಿಗಳನ್ನು ಸಹ ನಾವು ಇಲ್ಲಿ ಗಮನಿಸಬೇಕು.

೧೯೫೦ ರಿಂದ ೧೯೭೦ ರವರೆಗಿನ ಸಾಮಾನ್ಯ ಪ್ರವೃತ್ತಿಗಳ ಪೈಕಿ ಅತಿ ಮುಖ್ಯವಾದದ್ದೆಂದರೆ ‘ಪ್ರಮಾಣಾತ್ಮಕ ಇತಿಹಾಸ’ಕ್ಕೆ ಪ್ರಾಮುಖ್ಯತೆ ನೀಡುವ ಪದ್ಧತಿ ಪ್ರಾರಂಭವಾದದ್ದು. ಇದು ಮೊದಲು ಅರ್ಥಶಾಸ್ತ್ರದಲ್ಲಿ ‘ಪ್ರಮಾಣಾತ್ಮಕ ಕ್ರಾಂತಿ’ಯಾಗಿ ಕಾಣಿಸಿಕೊಂಡಿದ್ದು, ತರುವಾಯ ಸಾಮಾಜಿಕ ಇತಿಹಾಸ, ಜನಸಂಖ್ಯಾ ಇತಿಹಾಸ, ಧರ್ಮದ ಇತಿಹಾಸ ಮತ್ತು ಮನೋಧರ್ಮಗಳ ಇತಿಹಾಸ ಮುಂತಾದ ಇತರ ಕ್ಷೇತ್ರಗಳ ಮೇಲೂ ಪ್ರಭಾವ ಬೀರಿತು.

೧೯೩೦ ರಲ್ಲಿ ಇದ್ದಕ್ಕಿದ್ದಂತೆ ಸಂಖ್ಯಾಶಾಸ್ತ್ರದಲ್ಲಿ ಆಸಕ್ತಿ ಸ್ಫೋಟವಾಯಿತು. ೧೯೩೦-೩೨ ರಲ್ಲಿ ಬೆಲೆಗಳ ಬಗ್ಗೆ ಎರಡು ಮುಖ್ಯ ಪುಸ್ತಕಗಳು ಬಂದವು. ಮೊದಲನೆಯದು ಅರ್ಥಶಾಸ್ತ್ರಜ್ಞ ಫ್ರಾನ್ಯುವಾ ಸಿಮಿಯಾಂದ್ ಬರೆದ ರಿಸರ್ಚಸ್ ಆನ್ ದಿ ಜನರಲ್ ಮೂವ್‌ಮೆಂಟ್ ಆಫ್ ಪ್ರೈಸಸ್ ಎಂಬ ಪುಸ್ತಕ. ಎರಡನೆಯದು ತರುಣ ಇತಿಹಾಸಕಾರ ಆರ್ನೆಸ್ಟ್ ಲ್ಯಾಬ್ರೊಸ್ ಬರೆದ ಸ್ಕೆಚ್ ಆಫ್‌ ದಿ ಮೂವ್‌ಮೆಂಟ್ ಆಫ್ ಪ್ರೈಸಸ್ ಅಂಡ್ ರೆವಿನ್ಯೂಸ್ ಇನ್ ಏಯ್‌ಟೀನ್ತ್ ಸೆಂಚುರಿ ಫ್ರಾನ್ಸ್ ಎಂಬ ಹೆಸರಿನ ಪುಸ್ತಕ.

ಲ್ಯಾಬ್ರೂಸನು ಆನಲ್ಸ್ ಚಳವಳಿಯಲ್ಲಿ ಕೇಂದ್ರ ಬಿಂದುವಾದ ಹಾಗೂ ಅವನಿಂದಾಗಿ ನವ ಇತಿಹಾಸದಲ್ಲಿ ಮಾರ್ಕ್ಸ್‌ವಾದದ ಪ್ರವೇಶ ಪ್ರಾರಂಭವಾಯಿತು. ಹಳೆಯ ಆಡಳಿತದ ಕೊನೆಯ ಹಂತದಲ್ಲಿ ಫ್ರೆಂಚ್ ಆರ್ಥಿಕ ವ್ಯವಸ್ಥೆಯ ಪ್ರಮಾಣಾತ್ಮಕ ಅಧ್ಯಯನ ದಿ ಕ್ರೈಸಿಸ್ ಎಂಬ ಪುಸ್ತಕವನ್ನು ಲ್ಯಾಬ್ರೂ ೧೯೪೪ ರಲ್ಲಿ ಪ್ರಕಟಿಸಿದ. ಇದನ್ನು ಬ್ರೋದೆಲ್ ‘ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಫ್ರಾನ್ಸ್‌ದೇಶದಲ್ಲಿ ರಚಿತವಾಗಿರುವ ಇತಿಹಾಸದ ಬಗೆಗಿನ ಅತ್ಯುತ್ತಮ ಕೃತಿ’ ಎನ್ನುತ್ತಾನೆ. ದೀರ್ಘ ಕಾಲದ ಪ್ರವೃತ್ತಿಗಳ ಪರಿಕಲ್ಪನೆಯನ್ನು ಕುರಿತ “ಇತಿಹಾಸ ಮತ್ತು ಸಮಾಜ ವಿಜ್ಞಾನಗಳು” ಎಂಬ ಪ್ರಬಂಧದಲ್ಲಿ ಈ ಮೇಲಿನ ವಿಶ್ಲೇಷಣೆಯನ್ನು ಬ್ರೋದೆಲ್ ಹೇಳಿದ್ದಾನೆ. ಆನಲ್ಸ್ ಮೇಲೆ ಪ್ರಭಾವ ಬೀರಿದ ಪ್ರಮಾಣಾತ್ಮಕ ಇತಿಹಾಸದ ಇತರ ಶಾಖೆಗಳೆಂದರೆ ಐತಿಹಾಸಿಕ ಜನಸಂಖ್ಯಾಶಾಸ್ತ್ರ ವಿವರಣೆ ಮತ್ತು ಜನಸಂಖ್ಯಾಶಾಸ್ತ್ರ ವಿವರಣೆಯ ಇತಿಹಾಸ. ಈ ಕ್ಷೇತ್ರಗಳ ಬಗ್ಗೆ ಮೊದಲು ಬರೆದ ಇತಿಹಾಸಕಾರ ಜೀನ್ ಮಾರೆಟ್. ಮಾರೆಟ್ಸ್‌ಪ್ರಕಟಿಸಿದ ಕೃತಿಗಳು ಕಡಿಮೆ. ಆದರೆ ಆನಲ್ಸ್‌ ಮೇಲೆ ಅವನು ಬೀರಿದ ಪ್ರಭಾವ ಅತಿ ಮಹತ್ವದ್ದು. ಪಿಯರ್ ಗುಬೇಲ್ಟ್ ಮೊದಲಾದ ಅವನ ಶಿಷ್ಯರು ಇದೇ ಹಾದಿಯಲ್ಲಿ ತಮ್ಮ ಕೃತಿಗಳನ್ನು ರಚಿಸಿದರು. ಹಾಗೆಯೇ ಐತಿಹಾಸಿಕ ಜನಸಂಖ್ಯಾಶಾಸ್ತ್ರವನ್ನು ಸಮಾಜ ಇತಿಹಾಸದೊಂದಿಗೆ ಬೆಸೆಯಲಾಯಿತು. ೧೯೬೦ ರಲ್ಲಿ ‘ಜನಸಂಖ್ಯಾ ವಿವರಣೆ ಮತ್ತು ಸಮಾಜಗಳು’ ಎಂಬ ಹೊಸ ಐತಿಹಾಸಿಕ ಸರಣಿಯ ಮೂಲಕ ಪ್ರಾದೇಶಿಕ ಇತಿಹಾಸದ ಬಗ್ಗೆ ಅನೇಕ ಪ್ರಬಂಧಗಳು ಈ ಸಂದರ್ಭದಲ್ಲಿ ಹೊರಬಂದವು. ಪಿಯರ್ ಗುಬೇಲ್ಟ್, ಪಿಯರ್ ವಿಲಾರ್, ಮಿಶೆಲ್ ವೊವೆಲ್ ಮತ್ತು ಲಾದೂರಿ ಮುಂತಾದ ಇತಿಹಾಸಕಾರರು ಬ್ರೋದೆಲ್, ಲ್ಯಾಬ್ರೂ ಮತ್ತು ಮಾರೆಟ್ ಇವರ ವಿಚಾರಗಳನ್ನು ಸೇರಿಸಿ ಪ್ರಾದೇಶಿಕ ಇತಿಹಾಸದ ಬಗ್ಗೆ ಪ್ರಮುಖ ಕೃತಿಗಳನ್ನು ರಚಿಸಿದರು. ಇತಿಹಾಸಕಾರರು ಮೇಲೆ ಉಲ್ಲೇಖಿಸಿದ ಅನೇಕ ಕೃತಿಗಳ ಪೈಕಿ ವಿಶೇಷವಾಗಿ ಹೆಸರಿಸಬೇಕಾದ್ದು ಲಾದೂರಿಯ ಪೆಸೆಂಟ್ಸ್‌ ಆಫ್ ದಿ ಲಾಂಗದಾಕ್ ಎನ್ನುವ ಕೃತಿ. ಬ್ರೋದೆಲ್‌ನ ಅನೇಕ ಗುಣಲಕ್ಷಣಗಳು ಇವನಲ್ಲಿತ್ತು. ಪೆಸೆಂಟ್ಸ್ ಆಫ್ ದಿ ಲಾಂಗದಾಕ್ ಕೃತಿಯು ಸೂಕ್ಷ್ಮ, ಪ್ರಮಾಣಾತ್ಮಕ, ಆರ್ಥಿಕ ಮತ್ತು ಸಾಮಾಜಿಕ ಇತಿಹಾಸ ಹಾಗೂ ರಾಜಕೀಯ, ಧಾರ್ಮಿಕ ಮತ್ತು ಮನೋ ಇತಿಹಾಸದ ವಿಚಿತ್ರ ಸಂಯೋಜನೆ ಮತ್ತು ಯಶಸ್ಸಿನಿಂದಾಗಿ ಮೆಚ್ಚುಗೆ ಗಳಿಸಿದೆ. ಇದು ೧೫೦೦-೧೭೦೦ರ ನಡುವೆ ಆಧುನಿಕ ಪೂರ್ವ ಫ್ರಾನ್ಸ್‌ನ ಲಾಂಗದಾಕ್ ಪ್ರಾಂತ್ಯದಲ್ಲಿ ಇದ್ದ ಗ್ರಾಮೀಣ ಸಮಾಜವನ್ನು ಕುರಿತದ್ದಾಗಿದೆ. ಈ ಪುಸ್ತಕದಲ್ಲಿ ಬ್ರೋದೆಲ್‌ನ ಪಂಥವನ್ನು ಅನುಸರಿಸಿದ ಚರಿತ್ರೆಕಾರರ ಮಿತಿಗಳನ್ನು ಕಂಡು ಅದನ್ನು ಮಾರ್ಪಾಡು ಮಾಡಬೇಕಾದ ಸೂತ್ರಗಳನ್ನು ರೂಪಿಸಿದವರ ಪೈಕಿ ಲೀರಾಯ್‌ಮುಖ್ಯನಾದವನು. ಈ ಮಾರ್ಪಾಡುಗಳು ಆನಲ್ಸ್‌ನ ಮೂರನೇ ಪೀಳಿಗೆಯವರ ಕೊಡುಗೆಯಾಗಿದೆ.

೧೯೬೮ರ ತರುವಾಯ ಆನಲ್ಸ್‌ನ ಮೂರನೇ ಪೀಳಿಗೆ ಪ್ರಾಮುಖ್ಯತೆ ಪಡೆಯಿತು. ೧೯೬೯ ರಲ್ಲಿ ಅಂದ್ರೆ ಬರ್ಗರ್ ಮತ್ತು ಜ್ಯಾಕ್‌ರೆವೆಲ್ ಮುಂತಾದ ತರುಣರು ಆನಲ್ಸ್‌ನ ಆಡಳಿತದಲ್ಲಿ ಸೇರಿಕೊಂಡರು. ೧೯೭೨ ರಲ್ಲಿ ಎಕೋಲೆಯ ಅಧ್ಯಕ್ಷ ಸ್ಥಾನದ ಅಧಿಕಾರದಿಂದ ಬ್ರೋದೆಲ್ ನಿವೃತ್ತನಾದನು. ಈ ಸ್ಥಾನವನ್ನು ಜಾಕ್ ಲೀಗಾಫ್ ವಹಿಸಿಕೊಂಡನು. ೧೯೭೫ ರಲ್ಲಿ ಬ್ರೋದೆಲನು ಅಲಂಕರಿಸಿದ್ದ ಎಕೋಲ್‌ನ ಆರನೇ ಶಾಖೆಯೇ ಇಲ್ಲವಾಯಿತು. ಲೀಗಾಫ್‌, ಪುನರ್ ಸಂಘಟಿತ ಎಕೋಲ್‌ನ ಅಧ್ಯಕ್ಷನಾದ. ಅವನ ತರುವಾಯ ೧೯೭೭ ರಲ್ಲಿ ಫ್ರಾನ್ಸುವಾ ಪ್ಯೂರೆ ಆ ಹುದ್ದೆಯನ್ನು ವಹಿಸಿಕೊಂಡ.

ಈ ಆಡಳಿತಾತ್ಮಕ ಬದಲಾವಣೆಗಳಿಗಿಂತ ಮುಖ್ಯವಾದದ್ದು ೧೯೬೯ರ ತರುವಾಯ ನಡೆದ ಬೌದ್ಧಿಕ ಪರಿವರ್ತನೆಗಳು. ವಾಸ್ತವವಾಗಿ ಮೂರನೇ ಪೀಳಿಗೆಯ ಬೌದ್ಧಿಕ ಚಿತ್ರಣವನ್ನು ಸುಲಭವಾಗಿ ವಿವರಿಸಲಾಗುವುದಿಲ್ಲ. ಫೆಬರ್ ಮತ್ತು ಬ್ರೋದೆಲ್‌ರಂತೆ ಈ ಪೀಳಿಗೆಯಲ್ಲಿ ಯಾರೂ ಅವರಷ್ಟು ಪ್ರಭಾವಶಾಲಿಗಳಾಗಿರಲಿಲ್ಲ. ಆನಲ್ಸ್‌ನೊಳಗೆ ಬೌದ್ಧಿಕ ಭಿನ್ನಾಭಿಪ್ರಾಯ ಉಂಟಾಗಿರುವುದನ್ನೂ ಕೆಲವು ವಿದ್ವಾಂಸರು ಕಂಡುಕೊಂಡಿದ್ದಾರೆ.

ಆನಲ್ಸ್‌ ಪಂಥದಲ್ಲಿ ಬಹುಕೇಂದ್ರೀಯ ಪದ್ಧತಿ ಪ್ರಚಲಿತದಲ್ಲಿತ್ತು. ಆನಲ್ಸ್‌ಗುಂಪಿನ ಅನೇಕ ಸದಸ್ಯರು ಬಾಲ್ಯ, ಕನಸುಗಳು, ದೇಹ ಮತ್ತು ವಾಸನೆಗಳನ್ನು ಸಹ ಅಧ್ಯಯನ ಮಾಡುವುದಕ್ಕೆ ಇತಿಹಾಸದ ಎಲ್ಲೆಗಳನ್ನು ವಿಸ್ತರಿಸಿದರು. ಇತರರು ರಾಜಕೀಯ ಇತಿಹಾಸಕ್ಕೆ ಮರಳುವ ಮೂಲಕ ಪಂಥದ ಅಡಿಪಾಯವನ್ನು ಶಿಥಿಲಗೊಳಿಸಿದರು. ಕೆಲವರು ಪ್ರಮಾಣಾತ್ಮಕ ಇತಿಹಾಸದ ಅಭ್ಯಾಸ ಮುಂದುವರಿಸಿದರು. ಇತರರು ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಮೂರನೆಯ ಪೀಳಿಗೆಯ ಕಾಲದಲ್ಲಿ ಮಹಿಳೆಯರು ವಿಶ್ಲೇಷಕರಾಗಿ ಹಾಗೂ ಇತಿಹಾಸಕಾರರಾಗಿ ಆನಲ್ಸ್‌ ಪಂಥವನ್ನು ಪ್ರವೇಶಿಸಿದರು. ಆನಲ್ಸ್‌ ಪಂಥದ ಮಾದರಿಯೇ ಫ್ರಾನ್ಸ್‌ದೇಶದ ಗಡಿಯಾಚೆಗೆ ವಿಸ್ತರಿಸಿತು. ಬೇರೆ ದೇಶದ ಚರಿತ್ರೆಕಾರರಿಗೂ ಇದು ಮಾದರಿಯಾಯಿತು.

***