೫. ವಿಮರ್ಶೆಯ ಸ್ವರೂಪವನ್ನು ಕುರಿತು

ನವ ಚರಿತ್ರಕಾರರು ತಮ್ಮ ವಿಮರ್ಶೆಯು ಸಮಕಾಲೀನ ಪರಿಸರ ಹಾಗೂ ಸಂಕಥನಗಳಿಂದ ರೂಪುಗೊಳ್ಳುತ್ತಿರುತ್ತದೆ ಎಂಬುದನ್ನು ಒಪ್ಪುತ್ತಾರೆ. ಪಠ್ಯವೊಂದರಲ್ಲಿ ಮೊದಲೇ ಸಿದ್ಧವಾಗಿರುವ ಅರ್ಥ ಗ್ರಹಿಕೆಗಳನ್ನು ಹುಡುಕುವುದು ಸರಿ ಅಲ್ಲ ಎಂಬುದು ಇವರ ವಾದ. ಇದಕ್ಕೆ ಬದಲಾಗಿ ಅದು ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಚರಿತ್ರೆಗಳನ್ನು ಸಂರಚಿಸುವ ದಿಸೆಯಲ್ಲಿ ರೂಪುಗೊಳ್ಳುವಂತಿರಬೇಕು ಎನ್ನುತ್ತಾರೆ. ನಮ್ಮ ಅಗತ್ಯಗಳಿಗೆ ತಕ್ಕಂತೆ ಹಿಂದಿನ ಪಠ್ಯಗಳನ್ನು ವಿಮರ್ಶಿಸಿಕೊಳ್ಳುವುದಕ್ಕೆ ಸಾಧ್ಯವಿದೆ ಎಂಬ ಎಚ್ಚರ ಈ ಪಂಥದವರಿಗೆ ಇದೆ. ಹೀಗಾಗಿ ನವ ಚರಿತ್ರಕಾರರು ಗತಕಾಲದಿಂದ ವರ್ತಮಾನದವರೆಗಿನ ಚರಿತ್ರೆಯನ್ನು ‘ನಿರಂತರ ಪ್ರಕ್ರಿಯೆ’ ಎಂದು ಗ್ರಹಿಸಿದರೂ, ಅದರಲ್ಲಿ ಅಡೆ-ತಡೆ, ಛಿದ್ರತೆಗಳ ತೊಡಕುಗಳಿವೆ ಎಂಬುದನ್ನು ಗ್ರಹಿಸಿದ್ದಾರೆ. ಹೀಗಾಗಿ ವಿಮರ್ಶೆಯ ಸ್ವರೂಪದಲ್ಲಿ ಐಡಿಯಾಲಜಿಗಳ ವಿಭಿನ್ನತೆಗಳು ತಲೆದೋರುತ್ತವೆ. ಈ ವ್ಯತ್ಯಾಸ, ವೈಪರೀತ್ಯಗಳ ಪರಿಜ್ಞಾನ ನವಚಾರಿತ್ರಿಕ ವಿಮರ್ಶೆಗೆ ಅವಶ್ಯಕ ಎಂಬುದು ಇವರ ಅಭಿಮತ.

ಭೂತಕಾಲದ ಪಠ್ಯಗಳನ್ನು ವಿಮರ್ಶಿಸುವಾಗ ವರ್ತಮಾನವನ್ನು ಜೋಡಿಸಿ ಕೊಟ್ಟು-ತೆಗೆದುಕೊಳ್ಳುವ ಅನುಸಂಧಾನ ಪ್ರಕ್ರಿಯೆಯನ್ನು ನವ ಚರಿತ್ರಕಾರರು ಅನುಸರಿಸುವುದುಂಟು. ಇದರಿಂದ ಹಿಂದಿನ ಪಠ್ಯಗಳ ವ್ಯಾಖ್ಯಾನದ ಮೂಲಕವೇ ಸಮಕಾಲೀನ ಸನ್ನಿವೇಶದ ಜಾತಿ, ಲಿಂಗ, ವರ್ಣ ಮೊದಲಾದ ಸಮಾಜದ ವಿಭಿನ್ನ ಅಧಿಕಾರದ ವಿನ್ಯಾಸಗಳನ್ನು ಗ್ರಹಿಸಲು ಸಾಧ್ಯ. ಉದಾಹರಣೆಗೆ ಹಿಂದಿನ ರಾಜಪ್ರಭುತ್ವಗಳನ್ನು ಇಂದಿನ ಹೊಸ ಸರ್ಕಾರಗಳೊಂದಿಗೆ ಹೋಲಿಸಿ ನೋಡುವಂಥದ್ದು. ಸಾಹಿತ್ಯಕ ಪಠ್ಯಗಳನ್ನು ರಾಜಕಾರಣದ ಹಿನ್ನೆಲೆಯಲ್ಲಿ ಓದಿ ವ್ಯಾಖ್ಯಾನಿಸುವ ಪ್ರಕ್ರಿಯೆ ೧೯೭೦ರ ದಶಕದ್ದು. ೧೯೮೦ರ ದಶಕದಲ್ಲಿ ಇದೇ ಪ್ರಕ್ರಿಯೆಯನ್ನು ಸಾಂಸ್ಕೃತಿಕ ಕಾವ್ಯಮೀಮಾಂಸೆಯ ಅಡಿಯಲ್ಲಿ ವ್ಯಾಖ್ಯಾನಿಸಿದ ನವ ಚರಿತ್ರಕಾರರು ಹೊಸ ಬಗೆಯ ವಿಮರ್ಶಾ ಸ್ವರೂಪಕ್ಕೆ ಅವಕಾಶಮಾಡಿ ಕೊಟ್ಟರು. ಈ ಹಂತದಲ್ಲಿ ಕೃತಿಕಾರನಿಗೆ ದೊರೆತಿದ್ದ ರಾಜಕಾರಣದ ಆಶ್ರಯ, ಅದರ ಸ್ವರೂಪ, ಪ್ರತಿಬಂಧನೆ, ಮುದ್ರಣದ ಮುಕ್ತತೆ ಇತ್ಯಾದಿಗಳನ್ನು ಅನುಸರಿಸಿ ಅವನು ಎಷ್ಟರಮಟ್ಟಿಗೆ ಆಳುವ ಅಧಿಕಾರಶಾಹಿಯ ಪ್ರತಿಬಿಂಬವಾಗಿದ್ದ ಎಂಬುದನ್ನು ಅನಾವರಣಗೊಳಿಸಲಾಯಿತು. ಈ ಘಟ್ಟದಲ್ಲಿ ಸಾಂಸ್ಕೃತಿಕ ಸ್ತರಗಳನ್ನು ಸಹ ಪರಿಗಣಿಸಿದ್ದು ನವ ಚರಿತ್ರಕಾರರ ವಿಶೇಷತೆಗಳಲ್ಲಿ ಒಂದು. ಕನ್ನಡದ ಸಂದರ್ಭದಲ್ಲಿ ಹೇಗೆ ಪಂಪನ ಕಾವ್ಯಗಳು ರಾಜಕೀಯ ಕೇಂದ್ರಿತವೋ, ಅಂತೆಯೇ ಸಂಸ್ಕೃತಿ ಕೇಂದ್ರೀತವೂ ಆಗಿದ್ದುದನ್ನು ಗಮನಿಸಬಹುದು.

೧೯೭೦-೮೦ರ ದಶಗಳಲ್ಲಿ ನವಚಾರಿತ್ರಿಕ ವಿಮರ್ಶಕರಲ್ಲಿ ಫ್ರಾಯ್ಡ್‌ನ ಚಿಂತನೆಗಳ ಪ್ರಭಾವವು ಆಯಿತು. ಅವನ ದಮನ (Suppression), ಪಲ್ಲಟ (Displacement), ಪರ್ಯಾಯ (Substitution) ಮೊದಲಾದ ಪರಿಕಲ್ಪನೆಗಳು ಬಳಕೆಗೆ ಬಂದವು. ಒಟ್ಟಾರೆ ೭೦ರ ದಶಕದಲ್ಲಿ ಪ್ರಾಚೀನ ಪಠ್ಯಗಳ ವಿಮರ್ಶೆ, ೧೯೮೦ರ ದಶಕದಲ್ಲಿ ಸ್ತ್ರೀವಾದಿ ವಿಮರ್ಶೆ ಹಾಗೂ ಸಮಕಾಲೀನ ಕೃತಿಗಳ ವಿಮರ್ಶೆಯನ್ನು ನವ ಚಾರಿತ್ರಿಕವಾದದ ಚಿಂತಕರು ನಡೆಸಿದ್ದನ್ನು ಪರಿಗಣಿಸಬಹುದು. ಅಲ್ಲದೆ ೧೯೯೦ರ ದಶಕದಲ್ಲಿ ವಿರಚನವಾದಿ ನಿಲುವುಗಳನ್ನು ಹಿಂದಕ್ಕೆ ಸರಿಸಿ ಹೊಸಬಗೆಯ ತಾತ್ವಿಕತೆ ಹಾಗೂ ಪ್ರಯೋಗಗಳನ್ನು ಮಾಡಿದ್ದು ನವ ಚರಿತ್ರಕಾರರ ಬದ್ಧತೆಯನ್ನು ಸ್ಪಷ್ಟಪಡಿಸುತ್ತದೆ. ಅಲ್ಲದೆ ಸ್ಟೀಫನ್ ಗ್ರೀನ್ ಬ್ಲಾಟ್ ಹಾಗೂ ರೇಮಂಡ್ ವಿಲಿಯಮ್ಸ್‌ರ ತಾತ್ವಿಕ ನಿಲುವುಗಳು ಸಾಂಸ್ಕೃತಿಕವಾಗಿ ನವ ಚಾರಿತ್ರಿಕವಾದವನ್ನು ಇನ್ನಷ್ಟು ಗಟ್ಟಿಗೊಳಿಸಿದವು. ಒಟ್ಟಾರೆ ನವ ಚಾರಿತ್ರಿಕವಾದದ ಪ್ರಭಾವ ‘ನವ ಚರಿತ್ರೆ’ಯ ಚಿಂತನೆಗಳ ಮೇಲೂ ಆಗಿದೆ ಎಂದರೆ ತಪ್ಪಾಗಲಾರದು.

ನವ ಚಾರಿತ್ರಿಕವಾದ ಹಾಗೂ ಸ್ಟೀಫನ್ ಜೆ ಗ್ರೀನ್‌ಬ್ಲಾಟ್

‘ನವ ಚಾರಿತ್ರಿಕವಾದ’ (New Historicism) ಎಂಬ ಪರಿಕಲ್ಪನೆ ರೂಪು ತಳೆದದ್ದೇ ಸ್ಟೀಫನ್ ಜೆ ಗ್ರೀನ್ ಬ್ಲಾಟ್‌ರಿಂದ. ಆದರೆ ಇದರ ರೂವಾರಿತನವನ್ನು ಗ್ರೀನ್ ಬ್ಲಾಟ್ ಸವಿನಯವಾಗಿ ಇತರರೊಂದಿಗೆ ಹಂಚಿಕೊಳ್ಳಲು ಬಯಸುವ ಸಂವೇದನಾಶೀಲ ಪ್ರಾಧ್ಯಾಪಕ. ೧೯೪೩ರಲ್ಲಿ ಕೇಂಬ್ರಿಡ್ಜ್‌ನಲ್ಲಿ ಹುಟ್ಟಿದ ಸ್ಟೀಫನ್‌ಇಪ್ಪತ್ತು ವರುಷಗಳಿಗೂ ಹೆಚ್ಚು ಕಾಲ ಬರ್ಕ್‌‌ಲಿಯ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯದಲ್ಲಿ ಬೋಧನೆ, ಅಧ್ಯಯನಗಳಲ್ಲಿ ನಿರತರಾದವರು. ಅಂದರೆ ಎಪ್ಪತ್ತರ ದಶಕದಲ್ಲಿ ಆದ ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ಬಹಳ ಹತ್ತಿರದಿಂದ ನೋಡಿದವರು. ‘ರೆಪ್ರೆಸೆಂಟೇಷನ್ಸ್‌’ ಎಂಬ ನಿಯತಕಾಲಿಕವನ್ನು ಹುಟ್ಟು ಹಾಕಿದವರ ಪೈಕಿ ಸ್ಟೀಫನ್ ಸಹ ಒಬ್ಬರು. ‘ನವ ಚಾರಿತ್ರಿಕವಾದ’ದ ಮೊದಲ ಟಿಸಿಲುಗಳು ಕಂಡದ್ದು (೧೯೮೨ರ ವೇಳೆಗೆ) ಈ ನಿಯತಕಾಲಿಕದ ಅವರ ಲೇಖನದ ಮುಖಾಂತರವೇ. ೧೯೮೦-೯೦ರ ದಶಕಗಳಲ್ಲಿ ಅಮೆರಿಕಾದ ಅನೇಕ ಆಂಗ್ಲ ಸಾಹಿತ್ಯದ ವಿಭಾಗಗಳಲ್ಲಿ ಪರಿಚಿತರಾಗಿದ್ದ ಸ್ಟೀಫನ್‌ಅಲ್ಲಿಂದ ಮುಂದಕ್ಕೆ ನಡೆದದ್ದು ಹಾವರ್ಡ್‌ ವಿಶ್ವವಿದ್ಯಾಲಯದ ಕಡೆಗೆ. ಈ ಎರಡು ಮೂರು ದಶಕಗಳ ಅಧ್ಯಾಪನ, ಅಧ್ಯಯನದ ವೃತ್ತಿ ಅವರನ್ನು ನವ ಚಾರಿತ್ರಿಕವಾದ ಜ್ಞಾನ ಶಿಸ್ತಿನ ಕಡೆಗೆ ಚಿಂತನೆ ನಡೆಸುವಂತೆ ಮಾಡಿತ್ತು. ಸಾಹಿತ್ಯದ ನೆಲೆಗಳಿಂದ ಸಾಂಸ್ಕೃತಿಕ ಮೀಮಾಂಸೆಯ ಕಡೆಗೆ ಹೊರಳಿದ ಸ್ಟೀಫನ್ ಚಿಂತನಾ ನೆಲೆಗಳೂ ಪಠ್ಯಗಳನ್ನು ಮೀರಿ ಸಂದರ್ಭಗಳ ಕಡೆಗೆ ನಿಲ್ಲುವಂತೆ ಮಾಡಿದವು. ಕೇಂಬ್ರಿಜ್ಜ್‌ನಲ್ಲಿ ರೇಮಂಡ್ ವಿಲಿಯಂಸ್‌ರ ಶಿಷ್ಯರಾಗಿದ್ದ ಇವರು, ಎಪ್ಪತ್ತರ ವೇಳೆಗೆ ಮಾರ್ಕ್ಸ್‌‌ವಾದಿ ವಿಮರ್ಶಾ ನೆಲೆಗಳಿಂದ ದೂರ ಸರಿಯುವ ಸ್ಥಿತಿಗೆ ಬಂದು ತಲುಪಿದ್ದರು. ಬಹುಶಃ ಇದಕ್ಕೆ ಕಾರಣ ಆ ಹೊತ್ತಿನ ಆಂಗ್ಲೋ-ಅಮೆರಿಕನ್ ಸಾಂಸ್ಕೃತಿಕ ಸಂದರ್ಭ ಹಾಗೂ ಅವಸಾನದ ಹಂತಕ್ಕೆ ಬಂದು ತಲುಪಿದ್ದ ಮಾರ್ಕ್ಸ್‌ವಾದಿ ಸೈದ್ಧಾಂತಿಕತೆ.

‘ರೆನೈಸಾನ್ಸ್ ಸೆಲ್ಫ್‌ಫ್ಯಾಶ್‌ನಿಂಗ್’ (೧೯೮೪) ಕೃತಿಯ ಮುಖೇನ ಗಮನ ಸೆಳೆದಿರುವ ಸ್ಟೀಫನ್ ‘ನಾರ್ಟನ್ ಷೇಕ್ಸ್‌ಪಿಯರ್’ ಬೃಹತ್ ಸಂಪುಟದ ಮೂಲಕ ಪ್ರಖ್ಯಾತರಾದವರು. ಅಲ್ತುಸರ್, ಮಾರ್ಕ್ಸ್, ಫ್ರಾಯ್ಡ್, ಫುಕೋ ಮೊದಲಾದವರ ಚಿಂತನೆಗಳಿಂದ ಹಾದು ಬಂದಿರುವ ಸ್ಟೀಫನ್ ಗ್ರೀನ್‌ಬ್ಲಾಟ್ ‘ನವ ಚಾರಿತ್ರಿಕವಾದ’ದ ಹುಟ್ಟು, ಬೆಳವಣಿಗೆ ಹಾಗೂ ಅದರ ಭವಿಷ್ಯತ್ತಿನ ಹರವಿನ ಬಗೆಗೆ ನಿಖರವಾಗಿ ಮಾತನಾಡಬಲ್ಲವರು. ಇತ್ತೀಚಿನ ಸಂದರ್ಶನವೊಂದರ (‘ದಿ ಹಿಂದೂ’ ದಿನಪತ್ರಿಕೆ, ೫.೬.೨೦೦೫, ಸಚ್ಚಿದಾನಂದ ಮೊಹಂತಿ ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ) ಮೂಲಕ ಅವರು ಈ ಪರಿಕಲ್ಪನೆಯನ್ನು ಕುರಿತು ವಿಸ್ತೃತವಾಗಿ ಚರ್ಚಿಸಿದ್ದಾರೆ. ಅಂದು ಸಾಹಿತ್ಯ ವಿಮರ್ಶೆಯು ಕಲಾಕೃತಿಯೊಂದು ತನ್ನ ಸೃಜನಶೀಲತೆಯ ಹುಟ್ಟಿಗೆ ಹೊರತುಪಡಿಸಿದ ಸನ್ನಿವೇಶದಿಂದ ಮಾತ್ರ ಗ್ರಹಿಕೆಗೆ ಒಳಗಾಗುತ್ತಿದ್ದ ಕಾಲವಾಗಿ ರೂಪತಳೆದಿತ್ತು. ಈ ಸನ್ನಿವೇಶದಿಂದ ಅದನ್ನು ಪಾರುಮಾಡಿದ ಯಶಸ್ಸು ಸ್ಟೀಫನ್ ಅವರಿಗೆ ಸಲ್ಲುತ್ತದೆ. ಅಂದರೆ ಪಠ್ಯವೊಂದನ್ನು ಅದು ಹುಟ್ಟಿದ ಸಾಮಾಜಿಕ, ಸಾಂಸ್ಕೃತಿಕ ಸಂದರ್ಭಗಳಿಂದ ಹೊರತುಪಡಿಸಿ ನೋಡಲು ಬರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಇದರ ಜೊತೆಗೆ ಅದು ಹುಟ್ಟಿದ ಚಾರಿತ್ರಿಕ ಸಂದರ್ಭವೂ ಪರಿಗಣನೆಗೆ ಒಳಗಾಗುವಂಥದ್ದು ಎಂಬುದನ್ನು ರುಜುವಾತುಪಡಿಸಿದರು. ಆ ಮೂಲಕ ನವ ಚಾರಿತ್ರಿಕವಾದದ ಹುಟ್ಟು ಅಥವಾ ಸಾಂಸ್ಕೃತಿಕವಾದ ಚಹರೆಗಳ ಅನಾವರಣ ಆಯಿತು. ಸ್ಟೀಫನ್ ಗ್ರಿನ್ ಬ್ಲಾಟರಿಗೂ ಮೊದಲು ಹೊಸ ಸಾಂಸ್ಕೃತಿಕ ಮೀಮಾಂಸೆಯ ಉಲ್ಲೇಖಗಳೇ ಇರಲಿಲ್ಲ ಎಂಬುದು ಈ ಮಾತಿನ ಅರ್ಥವಲ್ಲ. ಬದಲಾಗಿ ‘ನವ ಚಾರಿತ್ರಿಕವಾದ’ ಎಂಬ ಹೆಸರಿನಲ್ಲಿ ಇರಲಿಲ್ಲವಷ್ಟೇ. ಅದನ್ನು ಆಗು ಮಾಡಿಸಿದವನೇ ಗ್ರೀನ್‌ಬ್ಲಾಟ್.

ಪುನರುಜ್ಜೀವನ (ರೆನೈಸಾನ್ಸ್) ಕಾಲಘಟ್ಟದ ಪಠ್ಯಗಳ ಗಂಭೀರ ಹಾಗೂ ವಿಶೇಷವಾದ ಅಧ್ಯಯನಗಳು, ಅಂದಿನ ಸಾಂಸ್ಕೃತಿಕ ಅಂಶಗಳು ಹಾಗೂ ರಾಜಕಾರಣದ ನಡುವೆ ಇದ್ದ ಅಂತರ್‌ಸಂಬಂಧ ಮೊದಲಾದವುಗಳ ಬಗೆಗೆ ಸಂಶೋಧನೆಗಳು ಆಗಿದ್ದವು. ಈ ದಿಸೆಯಲ್ಲಿ ವಾರ್ಬರ್ಗ್ ಸ್ಟೀವೆನ್ ಆರ್ಗಲ್, ರಾಯ್‌ಸ್ಟ್ರಾಂಗ್, ಡಿ.ಜೆ.ಗೋರ್ಡನ್ ಮೊದಲಾದವರು ನವ ಚಾರಿತ್ರಿಕವಾದದ ಇನ್ನೊಂದು ರೂಪವಾದ ಸಾಂಸ್ಕೃತಿಕ ಮೀಮಾಂಸೆಯ ಪರಿಭಾಷೆಯಲ್ಲಿಯೇ ಕೆಲಸ ಮಾಡಿದ್ದರು. ಆದರೆ ಅವು ಸ್ಟೀಫನ್ ಗ್ರೀನ್‌ಬ್ಲಾಟ್, ಲ್ಯೂಯಿಸ್‌ ಮ್ಯಾಂಟ್ರೋಸ್, ಕ್ಯಾಥರಿನ್ ಗಲ್ಲಘೇರ್ ಮೊದಲಾದವರಂತೆ ನವ ಚಾರಿತ್ರಿಕವಾದದ ಹೆಸರಿನಲ್ಲಿ ಗುರುತಿಸಿಕೊಂಡಿರಲಿಲ್ಲ.

ರೆನೈಸಾನ್ಸ್ ಸೆಲ್ಫ್‌ಫ್ಯಾಶಿಯಾಂಗ್ : ಫ್ರಮ್‌ಮೋರ್ ಟು ಷೇಕ್ಸ್‌ಪಿಯರ್ (೧೯೮೦), ಅಲ್ಲಿಗೋಯ್‌ ಆಂಡ್ ರೆಪ್ರೆಸೆಂಟೇಶನ್ (೧೯೮೧), ದಿ ಪವರ್ ಆಫ್ ಫಾರ್ಮ್ಸ್ ಇನ್‌ ದಿ ಇಂಗ್ಲಿಶ್‌ ರೆನೈಸಾನ್ಸ್ (೧೯೮೨), ರೆಪ್ರೆಸೆಂಟಿಂಗ್ ದಿ ಇಂಗ್ಲಿಶ್‌ ರೆನೈಸಾನ್ಸ್ (೧೯೮೮), ನ್ಯೂ ವರ್ಲ್ಡ್ ಎನ್‌ಕೌಂಟರ್ಸ್ (೧೯೯೩), ದಿ ನಾರ್ಟನ್‌ ಷೇಕ್ಸ್‌ಪಿಯರ್ (೧೯೯೭), ದಿ ನಾರ್ಟನ್‌ಆಂಥೋಲಾಜಿ ಆಫ್ ಇಂಗ್ಲಿಶ್ ಲಿಟರೇಚರ್ (ಏಳನೆಯ ಪರಿಷ್ಕೃತ ಮುದ್ರಣ, ೧೯೯೯) ಹೀಗೆ ಹತ್ತು ಹಲವು ಲೇಖನಗಳು, ಕೃತಿಗಳು, ಸಂಪಾದಿತ ಸಂಪುಟಗಳು ಗ್ರೀನ್‌ಬ್ಲಾಟ್‌ರ ಹೆಸರನ್ನು ಸ್ಪಷ್ಟವಾಗಿ ‘ನವ ಚಾರಿತ್ರಿಕವಾದ’ ಎಂಬ ಹೆಸರಿನೊಂದಿಗೆ ನಿಖರವಾಗಿ ಗುರುತಿಸುವಂತೆ ಮಾಡಿದವು. ಅಂತೆಯೇ ಕ್ಯಾಥರಿನ್ ಗಲ್ಲಘೇರ್ ಅವರ ಪ್ರಾಕ್ಟೀಸಿಂಗ್ ದಿ ನ್ಯೂ ಹಿಸ್ಟಾರಿಸಿಸಂ (೨೦೦೦), ಲ್ಯೂಯಿಸ್ ಮ್ಯಾಂಟ್ರೋಸ್‌ರ ಪುನರುಜ್ಜೀವನದ ಕಾವ್ಯ ಹಾಗೂ ಅಧಿಕಾರವನ್ನು ಕುರಿತ ಅಧ್ಯಯನಗಳು ಸಹ ಮುಖ್ಯವಾದವು. ಇಂಥ ಬರೆಹಗಳು ಶೈಕ್ಷಣಿಕ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ವಲಯದಲ್ಲಿ ‘ನವ ಚಾರಿತ್ರಿಕವಾದ’ವನ್ನು ಒಂದು ವಿಮರ್ಶಾ ವಿಧಾನವನ್ನಾಗಿಯೇ ಗುರುತಿಸುವಂತೆ ಮಾಡಿದವು. ಅಲ್ಲದೆ ವಾಲ್ಟರ್‌ಬೆನ್ ಮೈಕೆಲ್ಸ್ ಮೊದಲಾದವರ ಪ್ರಯತ್ನಗಳಿಂದಾಗಿ ಇದು ಕೇವಲ ಸಿದ್ಧಾಂತವಾಗಿ ಮಾತ್ರವಲ್ಲದೆ ಆಶಯವಾಗಿ, ಧೋರಣೆಯಾಗಿ, ವಿಭಿನ್ನ ನೋಟದ ಅನುಭೂತಿಯಾಗಿ ರೂಪುತಳೆಯಿತು. ಕೇವಲ ಒಂದೇ ದಶಕದಲ್ಲಿ ಈ ವಾದವು ಅನೇಕ ಜ್ಞಾನ ಶಿಸ್ತುಗಳಲ್ಲಿ ಪ್ರಯೋಗಶೀಲತೆಯನ್ನು ಪಡೆಯಿತು. ಅಲ್ಲದೆ ಸಾಕಷ್ಟು ಬರೆಹಗಳು ಸಹ ಪ್ರಕಟಗೊಂಡವು. ಇದಕ್ಕೆಲ್ಲ ಸ್ಟೀಫನ್ ಗ್ರೀನ್‌ಬ್ಲಾಟ್ ಅಂಥವರ ಬದ್ಧತೆಯೇ ಕಾರಣ.

ನವ ಚಾರಿತ್ರಿಕವಾದ ಚಿಂತಕರಿಗೆ ಆಪ್ತವಾದ ಪ್ರಸರಣ, ವಿನಿಮಯ, ಅನುಸಂಧಾನ ಮೊದಲಾದ ಪರಿಕಲ್ಪನೆಗಳು ವಿಮರ್ಶಾ ನೆಲೆಗಳನ್ನೇ ಬದಲಿಸಬಲ್ಲಷ್ಟು ಪ್ರಬಲವಾಗಿ ಕಂಡವು. ಹೀಗೆ ಬಂಡವಾಳಶಾಹಿಯು ಪಠ್ಯವನ್ನಷ್ಟೇ ಅಲ್ಲದೆ ವಿಮರ್ಶಕನನ್ನು ಪ್ರಭಾವಿಸುತ್ತದೆಯೋ ಹಾಗೆಯೇ ನವ ಚಾರಿತ್ರಿಕವಾದವು ಪರಿಣಾಮ ಬೀರುವಂಥದ್ದು ಎಂಬುದನ್ನು ಕ್ಯಾಥರಿನ್ ಗಲ್ಲಘೇರ್ ಅಭಿಪ್ರಾಯಪಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿಯೇ ಗ್ರೀನ್‌ಬ್ಲಾಟ್ “ಈ ಸ್ವಾಧೀನತೆಯ ಪ್ರಕ್ರಿಯೆಯು ಹಣ, ಅಧಿಕಾರ, ಎಲ್ಲವೂ ಒಳಗೊಂಡಂಥದ್ದು” ಎಂದಿರುವುದು. ನವಚಾರಿತ್ರಿಕವಾದದ ಚಿಂತಕರು ತಮ್ಮ ಸೋಲಿನ ನೆಲೆಗಳನ್ನು ಸಹ ಹೀಗೆ ನಿರಂತರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ ಎಂಬುದನ್ನು ಈ ವಾದ ಪರಿಶೀಲಿಸಿತು. ಈ ಹಿನ್ನೆಲೆಯಲ್ಲಿಯೇ ಮ್ಯಾಂಟ್ರೋಸ್ ವಿನಿಮಯ ಪ್ರಕ್ರಿಯೆ ಕೇವಲ ಹಣ ಅಥವಾ ಜ್ಞಾನವನ್ನಷ್ಟೇ ಅಲ್ಲದೆ ಅಧಿಕಾರ, ಪ್ರತಿಷ್ಠೆಗಳನ್ನು ಸಹ ಸುತ್ತು ವರೆದಿರುತ್ತದೆ ಎಂದಿರುವುದು. ಸಾಮಾಜಿಕ ಆಸ್ತಿಪಾಸ್ತಿಗಳು ಸ್ವಾಧೀನತೆ, ಮನೆಯ ಆಡಳಿತದ ಸ್ವಾಧೀನತೆ ನೀಡುವ ಸಂತಸದಷ್ಟೇ ಪುರುಷ ಪ್ರಧಾನ್ಯತೆಯ ಖುಷಿಯೂ ನೀಡಬಲ್ಲದು ಎಂಬುದನ್ನು ನವಚಾರಿತ್ರಿಕವಾದ ಮನವರಿಕೆಮಾಡಿಕೊಟ್ಟಿತು. ದ್ರವರೂಪಿಯಾದ ಹಣ ಹೇಗೆ ಪತ್ತೆಯಾದ ರೀತಿಯಲ್ಲಿ ವಿನಿಮಯವಾಗುವುದೋ ಅದೇ ರೀತಿಯಲ್ಲಿ ಸಾಮಾಜಿಕ ಅನುಕೂಲಗಳೂ ಸಹ ನಿರಂತರವಾಗಿ ಪರಿಭ್ರಮಣೆ ಆಗುತ್ತಿರುತ್ತವೆ ಎಂಬುದನ್ನು ಗ್ರೀನ್‌ಬ್ಲಾಟ್, ಮ್ಯಾಂಟೋಸ್ ರಂಥ ಚಿಂತಕರು ರುಜುವಾತುಪಡಿಸಿದರು. ಮ್ಯಾಂಟ್ರೋಸನ ‘ಆಸ್‌ ಯು ಕ ಇಟ್‌’ ಎಂಬ ನವ ಚಾರಿತ್ರಿಕೆಯ ಅಧ್ಯಯನವೊಂದು ರೋಸ್‌ಲಿಂಡ್ ಎಂಬುವಳ ಲಿಂಗ ವ್ಯತ್ಯಾಸದಿಂದಾಗಿ ಅವಳಿಗಾಗುವ ಸಾಮಾಜಿಕವಾದ ಅನುಕೂಲಗಳನ್ನು ಪರಿಶೀಲನೆ ನಡೆಸುತ್ತದೆ. ಸಾಹಿತ್ಯದ ಪ್ರಕ್ರಿಯೆಯಲ್ಲಿ ಇದೊಂದು ಸಾಮಾನ್ಯ ಸಂಗತಿಯಾದರೂ ಸಮಾಜದ ನೆಲೆಗಳಲ್ಲಿ ಅಂತೆಯೇ ಚಾರಿತ್ರಿಕ ಸಂದರ್ಭದಲ್ಲಿ ಸಂಭೀರವಾದುದು ಎಂಬುದನ್ನು ಈ ಚಿಂತನೆ ಮನವರಿಕೆ ಮಾಡಿಕೊಟ್ಟಿತು.

ಲಾಭ ಮತ್ತು ನಷ್ಟಗಳ ನಡುವಿನ ಗೊಂದಲಗಳನ್ನು ಬಗೆಹರಿಸುವುದೇ ವಿಮರ್ಶಕನ ಕರ್ತವ್ಯ ಎಂದು ಗ್ರೀನ್‌ಬ್ಲಾಟ್ ಸ್ಪಷ್ಟಪಡಿಸುತ್ತಾನೆ. ಮೆಕರಿ, ಅಲ್ತುಸರ್, ಈಗಲ್ಟನ್ ಮೊದಲಾದ ಚಿಂತಕರು ಪಠ್ಯವೊಂದರಲ್ಲಿ ಅಡಗಿರಬಹುದಾದ ಆತ್ಮವಂಚನೆಯನ್ನು ನಿರೂಪಿಸುತ್ತಾರೆ ಎಂದಿದ್ದಾರೆ. ಆದರೆ ಇದೇ ಸ್ಥಿತಿಯಲ್ಲಿ ನವ ಚಾರಿತ್ರಿಕವಾದದ ಚಿಂತಕರು ಅದರೊಳಗಿನ ಬಿರುಕನ್ನು ತೋರಿಸಿಕೊಡುವುದರ ಜೊತೆ ಜೊತೆಗೆ ಒಬ್ಬ ಚಿಕಿತ್ಸಕರಂತೆಯೂ ವರ್ತಿಸುತ್ತಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿಯೇ ಇತ್ತೀಚೆಗೆ ಗಾಯತ್ರೀ ಸ್ಪಿವಾಕ್ ಅವರು ವಿಮರ್ಶಕರು ಕೃತಿಯೊಂದನ್ನು ತಮ್ಮ ಸಂಗಾತಿಯಂತೆಯೇ ಪರಿಭಾವಿಸಬೇಕೆ ಹೊರತು ರೋಗದಂತೆ ಅಲ್ಲವೆಂದು ವಾದಿಸಿದ್ದು.

ಗ್ರೀನ್‌ಬ್ಲಾಟ್ ಬೌದ್ಧಿಕ ವಿರೋಧಿ ಶಿಸ್ತೊಂದರ ವಿರುದ್ಧ ರೂಪುಗೊಳ್ಳುವ ಪ್ರತಿರೋಧದ, ಬಂಡಾಯದ ಧ್ವನಿಯನ್ನಾಗಿ ನವ ಚಾರಿತ್ರಿಕವಾದವನ್ನು ಪರಿಶೀಲಿಸಿದ್ದಾರೆ. ಸಾಂಪ್ರದಾಯಿಕ ಅಧ್ಯಯನಕಾರರು, ವಿದ್ವಾಂಸರು ಕೇವಲ ತಮ್ಮ ನಿಶ್ಚಿತವಾದ ಅಧ್ಯಯನದ ವಿಧಿ-ವಿಧಾನಗಳಿಗೆ ಜೋತುಬಿದ್ದು ಸಂವೇದನಾಶೀಲತೆಯನ್ನೇ ಕಳೆದುಕೊಂಡಿರುತ್ತಾರೆ ಎಂಬುದನ್ನು ಗ್ರೀನ್‌ಬ್ಲಾಟ್ ತಮ್ಮ ಚಿಂತನೆಗಳ ಮುಖೇನ ರುಜುವಾತು ಪಡಿಸಿದರು. ಏಕಮುಖಿ ನೀತಿಗಳನ್ನು ತುಂಡರಿಸಿದ ಅವರ ಪ್ರಯೋಗಗಳು, ಅನುಕರಣೀಯ ನೇಲೆಗಳಲ್ಲಿ ಅನೇಕ ಶಿಸ್ತುಗಳಲ್ಲಿ ಅಳವಡಿಕೆ ಆಗುತ್ತಿವೆ.

ಗ್ರೀನ್‌ಬ್ಲಾಟ್ ಅವರು ‘ನವ ಚಾರಿತ್ರಿಕವಾದ’ವು ಹೇಗೆ ಅದು ತನ್ನ ‘ಸಾಮಸ್ಕೃತಿಕ ವಿಮಶಾ’ ನೆಲೆಗಳಿಂದ, ವಿಧಾನದಿಂದ ಹಾದು ಬಂದಿದೆಯೋ ಹಾಗೆಯೇ ಹೊಸ ಓದಿನ ಪರಿಧಿಗಳನ್ನು ವಿಸ್ತರಿಸುತ್ತಾ ಹೋಗುತ್ತದೆ ಎಂಬುದರಲ್ಲಿ ನಂಬಿಕೆ ಇಟ್ಟವರು. ಕೇವಲ ಸಾಹಿತ್ಯಕಷ್ಟೇ ಸೀಮಿತವಾಗದೆ ರಾಜಕಾರಣ, ಸಮಾಜ, ಚರಿತ್ರೆ, ಸಂಸ್ಕೃತಿ ಅಧ್ಯಯನ ಮೊದಲಾದ ಜ್ಞಾನ ಶಾಖೆಗಳಲ್ಲಿ ನವ ಚಾರಿತ್ರಿಕವಾದವು ಅನೇಕ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಹಕರಿಸುತ್ತದೆ ಎಂಬ ಆಶಯದೊಂದಿಗೆ ಕೆಲಸ ಮಾಡುತ್ತಿರುವವರು.

ನವ ಚಾರಿತ್ರಿಕವಾದದ ಮುಂದುವರೆದ ಭವಿಷ್ಯದ ಬಗೆಗೂ ಆಶಾಭಾವನೆ ಹೊಂದಿರುವ ಗ್ರೀನ್‌ಬ್ಲಾಟ್ ಅದರ ಪರಿಚಲನೆ ಕುರಿತು ಉತ್ಸುಕತೆ ತೋರಿದ್ದಾರೆ. ಈ ವಾದವು ಕಾಲ, ಪ್ರದೇಶ ಹಾಗೂ ಸವಾಲುಗಳನ್ನು ಮೀರಿ ನಿಲ್ಲುವ ವಿಶಿಷ್ಟವಾದ ಪರಿಚಲನೆಯೊಂದನ್ನು ಪಡೆದಿದೆ ಎಂದು ನಂಬಿದ್ದಾರೆ.

ನವ ಚಾರಿತ್ರಿಕವಾದದ ವಿಭಿನ್ನ ಆಯಾಮಗಳು

ನವ ಚಾರಿತ್ರಿಕವಾದದ ಅಜೆಂಡಾ ಅಡಗಿರುವುದೇ ಎಲ್ಲ ಬಗೆಯ ಏಕಮುಖಿ ನೆಲೆಗಳನ್ನು, ಏಕಮುಖಿ ವೈಚಾರಿಕ ಚಿಂತನಾಧಾರೆಗಳನ್ನು ತುಂಡರಿಸುವುದರಲ್ಲಿ. ಹೀಗಾಗಿ ಒಂದು ದೊಡ್ಡದಾದ ಹಾಗೂ ಸಾಂಪ್ರದಾಯಿಕ ನೆಲೆಯ ಚಿಂತನಾಪಡೆಯೊಂದಿಗೆ ಸಂಘರ್ಷಕ್ಕೆ ನಿಲ್ಲಬೇಕಾಯಿತು. ಈ ಬಗೆಯ ಯುದ್ಧದಲ್ಲಿ ನವ ಚಾರಿತ್ರಿಕವಾದವು ನಿರೀಕ್ಷಿತ ಜಯವನ್ನು ಪಡೆಯಿತು. ಹೀಗಾಗಿ ಜಗತ್ತಿನಾದ್ಯಂತ ಯಾವುದೇ ಬಗೆಯ ಬೌದ್ಧಿಕ ತಡೆಗೋಡೆಗಳು ನವಚಾರಿತ್ರಿಕವಾದದ ಬಿರುಸಿಗೆ ಛಿದ್ರವಾಗದೆ ಉಳಿಯಲು ಸಾಧ್ಯ ಆಗಿಲ್ಲ. ಒಂದು ಇನ್ನೊಂದನ್ನು ಪ್ರತ್ಯೇಕಿಸಿ ನೋಡುವ ಅಡೆ-ತಡೆಗಳನ್ನು ಒಡ್ಡುವ ಜ್ಞಾನ ಶಿಸ್ತುಗಳ ಚಿಂತಕರಿಗೆ ಎಲ್ಲಿಲ್ಲದ ಸೈದ್ಧಾಂತಿಕವಾದ ಬಲ ಹಾಗೂ ಅಚಲವಾದ ದೃಢತೆಗಳು ಕಾಣಿಸಿಕೊಂಡವು. ಶ್ರೇಷ್ಟವಾದ ನಂಬಿಕೆ, ಆದರ್ಶಗಳಿಗೆ ಈ ವಾದದ ಚಿಂತಕರು ಪ್ರಬಲ ವಿರೋಧಿಗಳೆಂದು ಗುರುತಿಸುವ ಹುನ್ನಾರಗಳು ನಡೆಯದೇ ಇರಲಿಲ್ಲ. ಜಗತ್ತಿನ ದೊಡ್ಡಣ್ಣನಾದ ಅಮೆರಿಕಾದ ಮೌಲ್ಯ, ಆದರ್ಶಗಳಿಗೆ ನವ ಚಾರಿತ್ರಿಕವಾದವೇ ದೊಡ್ಡ ವಿರೋಧಿ ಅನ್ನುವಷ್ಟರಮಟ್ಟಿಗೆ ಅಲ್ಲಿನ ಶಿಕ್ಷಣ ತಜ್ಞ ವಿಲಿಯಮ್ ಬೆನ್ನೆಟ್‌ರಂಥವರು (‘ಟು ರಿಕ್ಲೇಮ್ ಲೆಗಸಿ’ ಎಂಬ ಭಾಷಣದ ಮುಖೇನ) ಮೂದಲಿಸಿದ್ದೂ ಉಂಟು. ಆದರೆ ಅವೆಲ್ಲವನ್ನೂ ಮೆಟ್ಟಿನಿಂತ ನವ ಚಾರಿತ್ರಿಕ ವಾದವು ತನ್ನ ಸಾಂಸ್ಕೃತಿಕವಾದ ವಿಭಿನ್ನತೆಯಲ್ಲಿಯೇ ಉತ್ತರವನ್ನು ನೀಡುತ್ತಾ ಬಂದಿದೆ.

ಈ ಪರಿಕಲ್ಪನೆಯು ಸೈದ್ಧಾಂತಿಕ ನೆಲೆಯಲ್ಲಿ ಬಹುಮುಖಿ ಆಯಾಮಗಳನ್ನು ಹೊಂದಿರುವುದರ ಜೊತೆಗೆ ಎಲ್ಲ ಜ್ಞಾನಗಳೊಂದಿಗೂ ತನ್ನದೇ ಆದ ತಾದಾತ್ಮ್ಯವನ್ನು ಪಡೆಯಿತು. ಕಳೆದ ಶತಮಾನದ ಕೊನೆಯ ಹಂತದಲ್ಲಿ ಹಾಗೂ ಈ ಶತಮಾನದ ಆರಂಭದಲ್ಲಿಯೇ ನವ ಚಾರಿತ್ರಿಕವಾದವು ಒಂದು ಬಗೆಯ ಬೌದ್ಧಿಕ ಚಳವಳಿಯ ನೇತೃತ್ವವನ್ನೇ ವಹಿಸಿಕೊಂಡಿದೆ ಎನ್ನಬಹುದು. ಮಾರ್ಕ್ಸ್‌ವಾದದ ಮಿತಿಗಳನ್ನು ಮೀರಿದ ಹೊಸರೂಪದ ಸೈದ್ಧಾಂತಿಕತೆಯಾಗಿ ನವ ಚಾರಿತ್ರಿಕವಾದ ತನ್ನ ಆಳ-ಅಗಲಗಳನ್ನು ವಿಸ್ತರಿಸಿಕೊಳ್ಳುತ್ತಿದೆ. ಆರಂಭದಲ್ಲಿ ಸಾಂಸ್ಕೃತಿಕ ಮೀಮಾಂಸೆ ಎಂದು ಗುರುತಿಸಿಕೊಂಡು ಮುಂದುವರೆದ ಈ ವಾದ ಇಂದು ಸಾಂಸ್ಕೃತಿಕ ಭೌತವಾದ, ಸ್ತ್ರೀವಾದ ಮಾರ್ಕ್ಸ್‌ವಾದ ಹಾಗೂ ಮನೋವಿಶ್ಲೇಷಣೆಯ ಇನ್ನೊಂದು ರೂಪವಾಗಿ ವಿಸ್ತೃತಗೊಂಡಿದೆ. ಇದರ ಜೊತೆಗೆ ಪುನರುಜ್ಜೀವನದ (ರೆನೈಸಾನ್ಸ್) ಅಧ್ಯಯನ ನೆಲೆಗಳಲ್ಲಿಯೂ ಹೆಚ್ಚು ಗಾಢವಾಗಿ, ಅಷ್ಟೇ ಪರಿಣಾಮಕಾರಿಯಾಗಿ ಈ ವಾದ ಪುನರ‍್ರಚನೆ ಗೊಂಡಿದೆ. ಈ ಬಗೆಯ ಚಳವಳಿ ಸ್ವರೂಪದ ಸೈದ್ಧಾಂತಿಕ ಸಾಹಿತ್ಯ ಹಾಗೂ ಇನ್ನಿತರ ಜ್ಞಾನಶಾಖೆಗಳಲ್ಲಿ ಪಠ್ಯ ಹಾಗೂ ಹೊರಗಿನ ಜಗತ್ತಿನಲ್ಲಿನ ಅನೇಕ ಸ್ಥಿತ್ಯಂತರಗಳನ್ನು ವಿಶ್ಲೇಷಿಸುವ ಕಾಳಜಿಯನ್ನು ಮೂಡಿಸಿರುವುದು ಭರವಸೆಯ ಸಂಕೇತವೇ ಸರಿ.

ಹಿಂದಿನ ಎಲ್ಲ ಬಗೆಯ ಸಾಂಪ್ರದಾಯಿಕವಾದ ಸೌಂದರ್ಯ ಮೀಮಾಂಸೆಗಳನ್ನು ಧಿಕ್ಕಿರಿಸುವ ಈ ಚಿಂತನೆ ಸಮಾಜ ಹಾಗೂ ಸಂಸ್ಕೃತಿಯ ವಿಭಿನ್ನ ಚಹರೆಗಳನ್ನು ಉಳಿಸಿ ಕೊಳ್ಳುವಲ್ಲಿ ಗಮನಹರಿಸುವಂಥದ್ದು, ಸಂಸ್ಕೃತಿ ವಿಮರ್ಶೆಯಲ್ಲಿನ ವೈವಿಧ್ಯತೆಗಳನ್ನು ಈ ವಾದವು ಪ್ರಧಾನ ಭಿತ್ತಿಯನ್ನಾಗಿಸಿಕೊಳ್ಳುತ್ತದೆ. ಪಶ್ಚಿಮದ ನಾಗರೀಕತೆಯಿಂದ ಭಿನ್ನವಾಗಿ ನಿಲ್ಲುವ ನವ ಚಾರಿತ್ರಿಕತೆಯ ಚಿಂತನೆ ಪ್ರತೀತ ಗುಣವನ್ನು ಹೊಂದಿರುವಂಥದ್ದು. ಜೊತೆಗೆ ಸಾಹಿತ್ಯದ ದೇಶಿ ಹಾಗೂ ಜನಪದ ಚಿಂತನೆಗಳನ್ನು ಒಪ್ಪಿಕೊಳ್ಳುತ್ತದೆ. ಅಂದರೆ ಮಾನವ ಶಾಸ್ತ್ರಜ್ಞರ ಹಾಗೂ ಸಂಸ್ಕೃತಿ ಚಿಂತಕರ ಹಿನ್ನೆಲೆಯಿಂದ ನೋಡುವ ಎಲ್ಲ ಬಗೆ ದೇಶೀ ಆಚರಣೆ, ರೂಢಿ-ಪದ್ಧತಿಗಳು, ನಂಬಿಕೆಗಳನ್ನು ನವ ಚಾರಿತ್ರಿಕವಾದ ಬಳಸಿಕೊಳ್ಳುತ್ತದೆ. ಹೀಗಾಗಿ ಸಾಂಸ್ಕೃತಿಕ ಅನುಸಂಧಾನ, ಹಿಂದಿನ ರಾಜಕಾರಣದ ವಿಶಿಷ್ಟತೆಗಳು, ಚಾರಿತ್ರಿಕವಾದ ಮಹತ್ತ್ವ, ಇತರೆ ಐಡಿಯಾಲಜಿಗಳೊಂದಿಗಿನ ಸಂಬಂಧ ಇತ್ಯಾದಿಗಳೆಲ್ಲವೂ ಇಲ್ಲಿ ಚರ್ಚೆಯ ವಿಷಯಗಳೇ ಆಗಿವೆ. ಸಂಸ್ಕೃತಿಯನ್ನು ಕ್ರಿಯಾಶೀಲತೆಯ ಪ್ರಯೋಗಗಳಲ್ಲಿ ರೂಪಿಸಿಕೊಳ್ಳುವಲ್ಲಿ ಕ್ಲಿಫೋರ್ಡ್‌ ಗಿರ್ಟ್ಸ್, ವಿಕ್ಟರ್ ಟರ್ನರ್ ಮೊದಲಾದ ಸಂಸ್ಕೃತಿನಿಷ್ಠ ಮಾನವ ಶಾಸ್ತ್ರಜ್ಞರ ಕೊಡುಗೆ ಅಪಾರವಾದುದು. ತಮ್ಮ ‘ಗಾಢವಾದ ನಿರೂಪಣೆ’ಗಳ (Thick Discription) ಮುಖೇನ ಚಾರಿತ್ರಿಕವಾಗಿ ನಡೆದುಹೋದ ಘಟನೆಗಳ ಹಿಂದಿನ ತತ್ತ್ವ, ಆಶಯಗಳನ್ನು ಪುನರ‍್ರಚಿಸಿಕೊಂಡು ಅಭ್ಯಾಸ ಮಾಡುವುದು ಈ ಪಂಥದವರ ವಿಶೇಷತೆ. ಇದರಿಂದಾಗಿ ಯಾವುದೇ ಸಮಾಜವೊಂದರ ನಿಯಂತ್ರಣ ಶಕ್ತಿ-ಸಾಮರ್ಥ್ಯಗಳನ್ನು ಅನಾವರಣ ಮಾಡಲು ಸಾಧ್ಯ ಎಂಬುದು ಇವರ ನಂಬಿಕೆ. ಈ ದಿಸೆಯಲ್ಲಿ ಜ್ಹಾನ್‌ರಾಲ್ಫ್‌, ಫೋಕ್ಹೊಂಟಾ ಮೊದಲಾದವರು ನಡೆಸಿದ ತಂದೆಯವರುಗಳೊಂದಿಗಿನ ಸಂವಾದವನ್ನು ಕುರಿತ ಅಧ್ಯಯನಗಳು ಒಳ್ಳೆಯ ಉದಾಹರಣೆಗಳು. ಅಂತೆಯೇ ಫ್ರೆಢ್ರಿಕ್ ನೀಷೆಯ ‘ನಾನು ನನ್ನ ಕೊಡೆಯನ್ನು ಕಳೆದುಕೊಂಡೆ’ ಎಂಬಂಥ ಬರೆಹಗಳನ್ನು ಉಲ್ಲೇಖಿಸಬಹುದು.

ಸಂಸ್ಕೃತಿ ಅಧ್ಯಯನಗಳೆಂಬುವು ಅನೇಕ ಜ್ಞಾನಶಿಸ್ತುಗಳು ಪರಸ್ಪರ ಕೊಟ್ಟು-ತೆಗೆದು ಕೊಳ್ಳುವುದರ ಸಂಬಂಧದೊಂದಿಗೆ ಬೆಸೆದುಕೊಂಡಿರುತ್ತವೆ. ಅಲ್ಲದೆ ಈ ಬಗೆಯ ಸಂಕೀರ್ಣತೆಯ ಸಂಬಂಧಗಳೇ ಸಮಾಜದ ಅಸ್ತಿತ್ವವನ್ನು ನಿರ್ಧರಿಸುತ್ತಿರುತ್ತವೆ. ಅಂತೆಯೇ ಯಾವುದೇ ಭಾಷೆಯ ಸ್ವರೂಪವು ಆ ಸಮಾಜದಲ್ಲಿನ ಸಂವಾದ, ಸಂವಹನ ಹಾಗೂ ಇತರೆ ವಿಷಯಗಳಿಂದ ನಿರ್ಧಾರ ಆಗುತ್ತಿರುತ್ತದೆ ಎಂಬುದು ಈ ಪಂಥದವರ ಹೇಳಿಕೆ. ಅಂದರೆ ಈ ಬಗೆಯ ಸಂಕೀರ್ಣತೆಗಳೆಲ್ಲವನ್ನೂ ಒಡೆದು ನೋಡಲು ಬರುವುದಿಲ್ಲ ಎಂಬ ವಾದ ಈ ಚಿಂತನೆಯದು. ಆದರೆ ಇದರಲ್ಲಿ ಹೊಸದೇನಿದೆ? ಗತವನ್ನು ವಿಶಿಷ್ಟ ನೆಲೆಗಳಿಂದ ಪರಿಶೀಲಿಸುವುದನ್ನು ಹೊರತುಪಡಿಸಿ ಎಂಬ ಮೂದಲಿಕೆಯ ಮಾತುಗಳು ಸಹ ನವ ಚಾರಿತ್ರಿಕವಾದದ ವಿರುದ್ಧ ಕೇಳಿ ಬಂದವು. ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಹಿಂದಿನ ಅಧ್ಯಯನ ಕ್ರಮಗಳು ತಮ್ಮ ವೈಧಾನಿಕತೆಯನ್ನು ರೂಪಿಸಿಕೊಂಡಿದ್ದವು. ಅವುಗಳನ್ನು ಮನವರಿಕೆ ಮಾಡಿಕೊಡುವುದರ ಮುಖೇನ ಪರಸ್ಪರ ಸಂಬಂಧಗಳನ್ನು ಬೆಸೆದು ತೋರಿಸಿದ ಹೆಗ್ಗಳಿಕೆ ನವ ಚಾರಿತ್ರಿಕವಾದದ ಚಿಂತಕರದು. ಅಲ್ಲಿಯವರೆಗೂ ಹಿಂದಿನ ಆಚರಣೆ, ನೃತ್ಯ, ಸಂಗೀತ, ಉಡುಗೆ-ತೊಡುಗೆ, ಜನಪ್ರಿಯ ಕತೆಗಳು, ಕ್ರೀಡೆ, ನಂಬಿಕೆ ಮೊದಲಾದವುಗಳಿಗೆ ಯಾವುದೇ ಸಂಬಂಧವೇ ಇಲ್ಲ ಅನ್ನುವ ರೀತಿಯಲ್ಲಿ ಅಧ್ಯಯನಗಳು ಅನಾವರಣಗೊಳ್ಳುತ್ತಿದ್ದವು. ಇಂಥ ಹಿನ್ನೆಲೆಗಳಿಂದಲೇ ಅನೇಕ ವಿದ್ವಾಂಸರು (ಉದಾಹರಣೆಗೆ ಜೆ. ಹಿಲ್ಲಿಸ್‌ಮಿಲ್ಲರ್ ಮೊದಲಾದವರು) ಭಾಷೆ ಹಾಗೂ ಸಮಾಜವನ್ನು ಪ್ರತ್ಯೇಕಿಸಿ ನೋಡಿದ್ದು.

ಹೊಸ ಸಂಸ್ಕೃತಿ ಮೀಮಾಂಸೆಯ ಅಧ್ಯಯನದ ಫಲಿತಗಳು ಬುದ್ಧಿಜೀವಿಗಳ ಗಮನವನ್ನು ಸೆಳೆದಿರಲಿಲ್ಲ. ಕೇವಲ ಒಂದು ದಶಕದಲ್ಲಿಯೇ ನವ ಚಾರಿತ್ರಿಕವಾದವು ಅನೇಕ ಜ್ಞಾನ ಪ್ರಕಟಣೆಗೂ ಕಾರಣವಾಗದಿರಲಿಲ್ಲ. ಇದಕ್ಕೆ ಹೆಚ್ಚು ಚಾಲನೆ ನೀಡಿದವರು ಪುನರುಜ್ಜೀವನದ (ರೆನೈಸಾನ್ಸ್) ವಿದ್ವಾಂಸರು. ಇವರು ನವ ಚಾರಿತ್ರಿಕವಾದದ ತಿರುಳನ್ನು ಅರ್ಥಮಾಡಿಕೊಂಡು ಅದರ ಆಶಯ, ತತ್ವಗಳನ್ನು ಪ್ರಚುರಪಡಿಸಿದ್ದು ಗಮನಾರ್ಹವಾದುದು. ಈ ಅವರ ವಿಚಾರಗಳಲ್ಲಿ ಕೆಲವನ್ನು ಪರಿಶೀಲಿಸಬಹುದು. ಇವರು ಜಗತ್ತಿನಲ್ಲಿ ಯಾವುದೇ ಪಠ್ಯವು (Text) ಸರ್ವತಂತ್ರ ಸ್ವತಂತ್ರ ಅಲ್ಲ ಎಂಬುದನ್ನು ರುಜುವಾತುಪಡಿಸಿದರು. ಅಲ್ಲದೆ ಪ್ರತಿಯೊಂದು ಪಠ್ಯವೂ ವಿರೋಧದ ನೆಲೆಗಳಿಂದಲೇ ಅರ್ಥ, ವ್ಯಾಖ್ಯಾನಗಳನ್ನು ಪಡೆದಿರುತ್ತದೆ ಎಂಬುದನ್ನು ಮನವರಿಕೆ ಮಾಡಿಸಿದರು (ಉದಾಹರಣೆಗೆ ಭಯಭೀತರಾದ ಯಹೂದ್ಯರು, ನೀಗ್ರೋಗಳು, ಭಾರತೀಯರು ಇತ್ಯಾದಿ). ಅಧಿಕಾರವು ಕೇಂದ್ರದೊಂದಿಗೆ ನೇರ ಸಂಬಂಧ ಹೊಂದಿರುತ್ತದೆ ಹಾಗೂ ಪ್ರಭುತ್ವ, ಧರ್ಮ ಮೊದಲಾದ ಪುರುಷಕೇಂದ್ರಿತ ಕಲ್ಪನೆಗಳು ಎಂಬ ವಿಚಾರಗಳನ್ನು ಹುಟ್ಟುಹಾಕಿದ್ದು ಸಹ ಇವರೇ. ರೆನೈಸಾನ್ಸ್ ಕಾಲದ ಪಠ್ಯಗಳನ್ನು ವಿಶೇಷವಾಗಿ ಅಧ್ಯಯನ ನಡೆಸಿ ಆ ಕಾಲದ ಸಂಸ್ಕೃತಿ ಹಾಗೂ ರಾಜಕಾರಣದ ಅಧಿಕಾರಕ್ಕೂ ಹೇಗೆ ನೇರವಾದ ಅಂತಃಸಂಬಂಧ ಇದೆ ಎಂಬುದನ್ನು ಈ ವಿದ್ವಾಂಸರು ಬಹಿರಂಗ ಗೊಳಿಸಿದ್ದುಂಟು. ಅದರಲ್ಲೂ ಇಂಗ್ಲೆಂಡಿನ ವಾರ್ಬರ್ಗ್ ಕೋರ್ಟಲ್ಡ್ ಸಮೂಹದಿಂದ ಗುರುತಿಸಿಕೊಂಡಿದ್ದ ಸ್ಟೀವೆನ್ ಆರ್ಗಲ್, ರಾಯ್‌ಸ್ಟ್ರಾಂಗ್, ಡಿ.ಜೆ.ಗೋರ್ಡನ್ ಮೊದಲಾದವರು ಆರಂಭಿಕ ಶೋಧಗಳನ್ನು ಮಾಡಿದವರು. ಆದರೆ ಇವರಾರೂ ‘ನವ ಚಾರಿತ್ರಿಕವಾದ’ ಎಂಬ ಈ ನಿಖರವಾದ ಪರಿಕಲ್ಪನೆಯಿಂದ ಗುರುತಿಸಿಕೊಂಡಿರಲಿಲ್ಲ. ಮುಂದೆ ಸ್ಟೀಫನ್ ಜೆ. ಗ್ರೀನ್ ಬ್ಲಾಟ್ ಅಂಥವರಿಂದ ಮಾತ್ರ ಈ ಪರಿಕಲ್ಪನೆ ಅದೇ ಹೆಸರಿನಲ್ಲಿ ಅನಾವರಣಗೊಂಡಿತು.

ಆರಂಭದಲ್ಲಿ ಸ್ಟೀಫನ್ ಗ್ರೀನ್‌ಬ್ಲಾಟ್ ಅವರು ಸಹ ೧೯೭೦ರ ದಶಕದ ಅಧ್ಯಯನಗಳ ಹಿನ್ನೆಲೆಯಲ್ಲಿ ‘ನವ ಚಾರಿತ್ರಿಕವಾದ’ ಎಂಬ ಹೆಸರಿನಡಿಯಲ್ಲಿ ಕರೆದುಕೊಳ್ಳಲು ಹಿಂದೆ ಸರಿದದ್ದು ಉಂಟು. ಏಕೆಂದರೆ ಅಂದು ರೆನೈಸಾನ್ಸ್ ಕಾಲದ ಸಾಹಿತ್ಯ, ನಾಟಕಗಳಲ್ಲಿನ ಸಮಾಜ ಹಾಗೂ ಸಂಸ್ಕೃತಿ ವಿಚಾರಗಳನ್ನು ಮಾತ್ರ ಚಿತ್ರಿಸುವ ಉದ್ದೇಶವನ್ನು ಹೊಂದಿದ್ದುದರಿಂದ. ಹೀಗಾಗಿ ‘ಸಂಸ್ಕೃತಿ ಮೀಮಾಂಸೆ’ಯಾಗಿಯೂ ನೋಡುವುದು ಸರಿ ಎನ್ನಿಸಿತ್ತು. ಅಂದರೆ ‘ಚರಿತ್ರೆ’ ಹಾಗೂ ‘ಸಂಸ್ಕೃತಿ’ಗಳನ್ನು ಅಂತರ್‌ಪಠ್ಯೀಯ (Intertexual) ನೆಲೆಯಲ್ಲಿಯೇ ನೋಡುವುದಾಗಿತ್ತು. ‘ಸಂಸ್ಕೃತಿ ಮೀಮಾಂಸೆ’ ಎಂಬ ಪದವೇ ಅದು ಸಂಸ್ಕೃತಿ ನಿಷ್ಠವಾಗಿರುವುದರಿಂದ ಚರಿತ್ರೆಗೂ ಮೀಮಾಂಸಾನಿಷ್ಠವಾದ ‘ಸಂಪ್ರದಾಯ’ಕ್ಕೂ ಬದ್ಧವಾಗಿದೆ ಎಂಬುದನ್ನು ತಿಳಿಸುವ ಪ್ರಯತ್ನಗಳು ನಡೆದವು. ಚರಿತ್ರೆ ಹಾಗೂ ಸಂಪ್ರದಾಯಗಳೆರಡಕ್ಕೂ ಅವಿಭಾಜ್ಯ ಸಂಬಂಧವಿರುವುದರಿಂದ ಅವೆರಡನ್ನು ವಿರೋಧದ ನೆಲೆಯಿಂದ ನೋಡಿ ಅಧ್ಯಯನ ಮಾಡಲು ಬರುವುದಿಲ್ಲ ಎಂಬ ಮಾತುಗಳೂ ಕೇಳಿಬಂದವು. ಆದರೆ ಇತ್ತೀಚೆಗೆ ನವ ಚಾರಿತ್ರಿಕವಾದವು ಈ ಸಾಂಪ್ರದಾಯಿಕ ವಿಧಾನಗಳನ್ನು ತನ್ನ ಅಧ್ಯಯನಗಳಲ್ಲಿ ಒಳಗು ಮಾಡಿಕೊಂಡಿದೆಯಾದರೂ, (ಕೆಲವೊಮ್ಮೆ ಹಿಂದಿನ ವಿದ್ವತ್ತನ್ನೇ ಅನುಸರಿಸಿದರೂ) ಸಾಹಿತ್ಯ ಚರಿತ್ರೆಗಳ, ಪಠ್ಯ-ಪರಿಸರಗಳ ನಡುವೆ ಇರುವ ನಂಟನ್ನು ವಿಭಿನ್ನ ರೀತಿಯಲ್ಲಿ ವಿಶ್ಲೇಷಿಸುತ್ತಿದೆ. ಅಂದರೆ ವ್ಯಕ್ತಿನಿಷ್ಟತೆ ಅಥವಾ ಪಠ್ಯವೊಂದರ ವಿಶಿಷ್ಟತೆಯನ್ನು ಸಮಾಜದ ಸಾಹಿತ್ಯಕ ನೆಲೆಗಳಲ್ಲಿ ಪರಿಶೀಲಿಸಬೇಕಾದ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ.

ಇಂದು ಪಠ್ಯದ ಚಾರಿತ್ರಿಕತೆ ಹಾಗೂ ಚಾರಿರಿಕ ಪಠ್ಯಾತ್ಮಕತೆಯ ಸಿದ್ಧ ಸೂತ್ರಗಳು ಚಾಲ್ತಿಯಲ್ಲಿವೆ. ಭಾಷೆ ಹಾಗೂ ಸಮಾಜದ ಸಂಬಂಧಗಳು ಸಾಹಿತ್ಯದ ಪರಿಭಾಷೆಯನ್ನು ಚಲನಶೀಲವನ್ನಾಗಿಸುವುದರ ಜೊತೆಗೆ ಒಂದು ಸಂಕಥನವನ್ನೇ ಹುಟ್ಟುಹಾಕಿವೆ. ಇತೀಚಿನ ವಿಮರ್ಶಾ ನೆಲೆಗಳು ಸಾಂಸ್ಕೃತಿಕ ಸಂಕಥನದ ಜೊತೆಗೆ ಸಮಾಜಿಕ ಚಳವಳಿಗಳನ್ನು ಸಹ ಹುಟ್ಟು ಹಾಕುವಷ್ಟರ ಮಟ್ಟಿಗೆ ಪ್ರಬಲತೆ ಹೊಂದಿರುವಂಥದ್ದು. ಹೀಗಾಗಿ ಸಾಹಿತ್ಯದ ಸಾಮಾಜಿಕ ನೆಲೆಗಳ ಪರಿಣಾಮ ಏಕಮುಖಿ ನೆಲೆಯದ್ದಲ್ಲ ಎಂಬುದನ್ನು ರುಜುವಾತು ಪಡಿಸಿದೆ. ಅಂದರೆ ಬರೆಹ, ಓದು ಹಾಗೂ ಗ್ರಹಿಕೆಗಳು ಸನ್ನಿವೇಶಗಳು ಸಮಾಜದಿಂದ ಪ್ರಭಾವಕ್ಕೆ ಒಳಗಾಗುತ್ತಿರುತ್ತವೆ. ಆದ್ದರಿಂದ ಚಾರಿತ್ರಿಕ ಸಂದರ್ಭ, ಸಮಾಜ ಹಾಗೂ ವಿಮರ್ಶಾ ವಿಧಾನಗಳ ವಿಶ್ಲೇಷಣೆಯ ಮೇಲೆ ಪ್ರಭಾವ ಬೀರುವಷ್ಟರಮಟ್ಟಿಗೆ ಗಾಢವಾಗಿರುತ್ತದೆ ಎಂಬುದನ್ನು ಇತ್ತೀಚಿನ ನವಚಾರಿತ್ರಿಕವಾದದ ಚಿಂತಕರು ನಿರೂಪಿಸಿದ್ದಾರೆ.

ಯಾವುದೇ ಗ್ರಹಿಕೆ ಹಾಗೂ ವಿಶ್ಲೇಷಣೆಗಳು ಚರಿತ್ರೆಯ ರಚನೆಯಲ್ಲಿ ಇತಿಹಾಸಕಾರರನ್ನು ಪೂರ್ವಾಗ್ರಹಪೀಡಿತರನ್ನಾಗಿಸುತ್ತವೆ ಎಂಬ ವಿಚಾರ ಅಧ್ಯಯನಕಾರನಿಗೆ ಮೊದಲೇ ತಿಳಿದಿರುತ್ತದೆ. ಹೀಗಾಗಿ ಸಂಶೋಧನೆಯ ಮಿತಿಗಳ ಅರಿವು ಸಹಜ. ಇದನ್ನು ಮರೆತವರಂತೆ ನಟಿಸಿ ತಮ್ಮದೇ ಅಂತಿಮ ಸತ್ಯ, ಅತ್ಯಂತ ನಿಖರವಾದ ಸತ್ಯ ಅಥವಾ ಅಧಿಕೃತವಾದ ಸತ್ಯ ಎಂಬ ಫಲಿತಗಳನ್ನು ಪ್ರಕಟಿಸುವ ಹುಂಬತನದ ಬಗೆಗೆ ನವ ಚಾರಿತ್ರಿಕವಾದವು ಎಚ್ಚರಿಕೆಯಿಂದ ಇರುತ್ತದೆ. ಸಾಂಪ್ರದಾಯಿಕ ಪಠ್ಯ-ಆಕರಗಳನ್ನು ಸರಿಪಡಿಸುವಲ್ಲಿ ಗತ ಹಾಗೂ ವರ್ತಮಾನದ ಸಂಬಂಧಗಳನ್ನು ನಿರೂಪಿಸುವಲ್ಲಿ ನವ ಚಾರಿತ್ರಿಕವಾದ ಸಹಕರಿಸುತ್ತದೆ. ಪ್ರತಿಯೊಬ್ಬ ಚರಿತ್ರೆಕಾರನ ರಚನೆಯೂ ಕಥನವೇ ಆಗಿದ್ದು, ಅವನೊಬ್ಬ ಕವಿ ಮಾಡುವಲ್ಲಿ ದಾರ್ಶನಿಕತೆ ವಿಶ್ಲೇಷಕನಾಗಿ ನೆಲೆಸಿರುತ್ತಾನೆ. ಹಿಂದಿನ ಪಠ್ಯಗಳ ಗ್ರಹಿಕೆ, ಅನುಸಂಧಾನ, ವ್ಯಾಖ್ಯಾನಗಳ ಮೇಲೆ ಪುನರುಜ್ಜೀವನದ ಅಥವಾ ಸ್ಥಿತ್ಯಂತರದ ಪ್ರಭಾವ ಇದ್ದೇ ಇರುತ್ತದೆ. ಇಂಥ ವಿಶ್ಲೇಷಣಾ ವೈಧಾನಿಕತೆಯನ್ನು ರೂಪಿಸುವ ನವ ಚಾರಿತ್ರಿಕವಾದವು ಸಂಸ್ಕೃತಿ ಮೀಮಾಂಸೆಯಾಗಿಯೂ, ಸಾಂಸ್ಕೃತಿಕ ರಾಜಕಾರಣದ ನಡುವೆ ನಿರಂತರ ಸಂಬಂಧವನ್ನು ಬೆಸೆಯುವ ಕೊಂಡಿಯಾಗಿಯೂ ಸಂವಾದವನ್ನು ನಡೆಸುವ ಆಯಾಮವನ್ನು ಹೊಂದಿದೆ.

ಕಳೆದ ಎರಡು-ಮೂರು ದಶಕಗಳಲ್ಲಿ ಸ್ತ್ರೀವಾದವು ಸಂಸ್ಕೃತಿ ಅಧ್ಯಯನದ ಬೌದ್ಧಿಕ ವಲಯದಲ್ಲಿ ಗಂಭೀರವಾದ ನೆಲೆಗಳನ್ನು ಕಂಡುಕೊಂಡಿದೆ. ಪಶ್ಚಿಮದ ಅಧ್ಯಯನದ ಕ್ಷೇತ್ರವು ಸಮಾಜದಲ್ಲಿನ ಹೆಣ್ಣಿನ ಬದುಕು ಹಾಗೂ ಲಿಂಗದ ಪ್ರಶ್ನೆ, ತಾರತಮ್ಯದ ನಿಲುವುಗಳನ್ನು ಪ್ರಧಾನ ಭಿತ್ತಿಗೆ ತರುತ್ತಿದೆ. ಇದು ಎಷ್ಟರಮಟ್ಟಿಗೆ ಪ್ರಭಾವ ಬೀರಿದೆಯೆಂದರೆ ಅದು ನಮ್ಮ ಮನೋ-ಚಟುವಟಿಕೆಗಳನ್ನು ನಿಯಂತ್ರಿಸುವಷ್ಟು. ಅಷ್ಟೇ ಅಲ್ಲದೆ ಓದುಗರ ಓದುವ ದೃಷ್ಟಿ ಕೋನವನ್ನೇ ಬದಲಾಯಿಸುವಷ್ಟರಮಟ್ಟಿಗೆ ಗಮನ ಸೆಳೆದಿದೆ. ರೆನೈಸಾನ್ಸ್ ಕಾಲದ ಸಾಹಿತ್ಯ ಕೃತಿಗಳು, ರಂಗಭೂಮಿ, ನಾಟಕಗಳಲ್ಲಿ ಹೆಣ್ಣನ್ನು ಹೇಗೆ ನಗಣ್ಯ ಮಾಡಲಾಗಿತ್ತು ಎಂಬುದನ್ನು ನವ ಚಾರಿತ್ರಿಕವಾದದ ಚಿಮತಕರು ಅನಾವರಣ ಮಾಡಿರು. ಫೆಮಿನಿಸ್ಟ್ ಆಲೋಚನೆ, ನಂಬಿಕೆಗಳಿಗಿಂತ ಭಿನ್ನವಾದ ನೆಲೆಗಳಲ್ಲಿ ಸಂಶೋಧನೆ, ಅಧ್ಯಯನಗಳು ನಡೆಯುವಷ್ಟರ ಮಟ್ಟಿಗೆ ನವ ಚಾರಿತ್ರಿಕವಾದವು ಪರಿಣಾಮ ಬೀರಿದೆ.

ಫಲಿತಗಳು

ನವ ಚಾರಿತ್ರಿಕವಾದದ ಚಿಂತನೆಗಳ ಜರೂರು ಎಷ್ಟರಮಟ್ಟಿಗೆ ಸರಿ ಅಥವಾ ಈ ವಾದದ ಮಿತಿಗಳು ಯಾವ ಸ್ವರೂಪದ್ದು ಎಂಬುದರ ಬಗೆಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಸರಳವಾಗಿ ಹೇಳುವುದಾದರೆ ಇತಿಹಾಸವನ್ನು ಹೇಗೆ ಹೊಸದಾಗಿ ನೋಡಲು ಸಾಧ್ಯವಿದೆ ಎಂಬುದನ್ನು ನವ ಚಾರಿತ್ರಿಕವಾದ ಕಲಿಸುವಂಥದ್ದು. ಅಂದರೆ ಇಲ್ಲಿಯವರೆವಿಗೂ ಚಾಲ್ತಿಯಲ್ಲಿದ್ದ ಇತಿಹಾಸ ತತ್ವ ಹಾಗೂ ವಿಧಾನದ ಸಿದ್ಧಮಾದರಿಗಳೆಲ್ಲವನ್ನೂ ಪಕ್ಕಕ್ಕೆ ಸರಿಸಿ ಗ್ರಹಿಸಲು ಸಾಧ್ಯವಿದೆ ಎಂಬ ಸಂಗತಿಯನ್ನು ಮನದಟ್ಟು ಮಾಡಿಕೊಡುತ್ತದೆ. ಈ ದಿಸೆಯಲ್ಲಿ ಮಾರ್ಕ್ಸ್‌ವಾದಿ ಆರ್ಥಿಕತೆಯ ನೆಲೆಗಳಾಗಲಿ, ಈಗಾಗಲೇ ರಚನೆಗೊಂಡಿರುವ ಏಕಮುಖಿ ನೆಲೆಯ ಚರಿತ್ರೆಯಾಗಲಿ ಅಥವಾ ಇವುಗಳಿಂದಾದ ಪ್ರಭಾವ ಪರಿಣಾಮಗಳನ್ನಾಗಲಿ ಈ ಪಂಥವು ಒಪ್ಪುವುದಿಲ್ಲ. ಬದಲಾಗಿ ಇತಿಹಾಸ ಮತ್ತು ಸಂಸ್ಕೃತಿಗಳ ನಡುವೆ ಇರುವಂಥ ಒಂದು ನಿರಂತರವಾದ ಅನ್ಯೋನ್ಯ ಸಂಬಂಧ, ಸಂವಾದದ ಬಗೆಗೆ ಅರಿವನ್ನು ಮೂಡಿಸುವ ಕೆಲಸವನ್ನು ಮಾಡುತ್ತದೆ ನವ ಚಾರಿತ್ರಿಕವಾದದ ಒಟ್ಟು ಸಾರರೂಪವನ್ನು ಸಂಕ್ಷಿಪ್ತವಾಗಿ ಹೇಳಬಹುದು.

೧. ವ್ಯವಹಾರಿಕವಾದ ಎಲ್ಲ ಬಗೆಯ ಪ್ರಯೋಗಶೀಲತೆಗಳೊಂದಿಗೆ ಮಾತ್ರ ಯಾವುದೇ ಅಭಿವ್ಯಕ್ತಿ ಅನಾವರಣಗೊಳ್ಳಲು ಸಾಧ್ಯ.

೨. ಸಾಹಿತ್ಯ ಅಥವಾ ಸಾಹಿತ್ಯೇತರ ಎಂಬ ವಿಂಗಡಣಕ್ರಮವೇ ಹುರುಳಿಲ್ಲದ್ದು.

೩. ಎಲ್ಲ ಬಗೆಯ ವಾದ-ವಿವಾದಗಳು ವಿಮರ್ಶಾನೆಲೆಗಳು, ಹೋರಾಟಗಳು ತಾನು ಯಾವುದನ್ನು ವಿರೋಧಿ ನೆಲೆಯಿಂದ ತಿರಸ್ಕರಿಸಿತ್ತೋ ಅವೇ ಪರಿಕರಗಳನ್ನೇ ಸತ್ಯದ ಹುಡುಕಾಟಕ್ಕಾಗಿ ಬಳಸಿಕೊಳ್ಳುತ್ತವೆ.

೪. ಯಾವುದೇ ಜ್ಞಾನ, ಚರ್ಚೆ, ಸಂಕಥನ, ಸಂವಾದ, ಅನುಸಂಧಾನಗಳು ಬದಲಾಗಲು ಸಾಧ್ಯತೆಯಿರುವ ಸತ್ಯಗಳನ್ನು ಮಾತ್ರ ಅನಾವರಣಗೊಳಿಸುತ್ತಿರುತ್ತವೆ. ಅಂತೆಯೇ ಮನುಷ್ಯ ಸ್ವಭಾವದ ಬದಲಾಯಿಸಲು ಸಾಧ್ಯವಾಗದ ಯಾವುದೇ ಅಂಶಗಳನ್ನು ಅಭಿವ್ಯಕ್ತಿಸಲು ಸಾಧ್ಯವಿಲ್ಲ.

೫. ಯಾವುದೇ ಒಂದು ಸಂಸ್ಕೃತಿಯನ್ನು ವಿವರಿಸುವ ಆರ್ಥಿಕತೆಯು ತನ್ನಲ್ಲಿ ಅಡಗಿರುವ ಬಂಡವಾಳಶಾಹಿಯ ನೆಲೆಗಳನ್ನೇ, ವಿಧಾನಗಳನ್ನೇ ಅಥವಾ ಅದರ ಭಾಷೆಯ ಮೂಲಕವೇ ವಿಶ್ಲೇಷಿಸಿಕೊಳ್ಳುವಲ್ಲಿ ಪರಿಸಮಾಸ್ತಿ ಕಾಣಬಯಸುತ್ತದೆ.

೬. ಯಾವುದೇ ಅಧ್ಯಯನದ ಫಲಿತಗಳು ಸಾಂಸ್ಕೃತಿಕ ಸಂರಚನೆಗಳ ಮೊತ್ತವಾಗಿಯೇ ಅನಾವರಣಗೊಳ್ಳುವಂಥದ್ದು.

ಹೀಗೆ ಅನೇಕ ಬಗೆಯ ತಾತ್ವಿಕ ನೆಲೆಗಳನ್ನು ನವ ಚಾರಿತ್ರಿಕವಾದದ ಚಿಂತನೆಗಳ ಮೊತ್ತದ ಸಾರರೂಪವೆಂದು ಹೇಳಲು ಬರುತ್ತದೆ. ಆದರೆ ಉದಾರವಾದಿ ಅಥವಾ ಮಾರ್ಕಿಸ್ಟ್‌ಚಿಂತನೆಗಳ ಸಿದ್ಧಮಾದರಿಯ ವಿಮರ್ಶಾನೆಲೆಗಳನ್ನೇ ಅನುಮಾನದಿಂದ ನೋಡುತ್ತಿದ್ದ ಈ ಪಂಥದವರು, ವಿಶಿಷ್ಟವಾದ ಸಿದ್ಧಾಂತಗಳನ್ನೇ ರೂಪಿಸಿಕೊಂಡಿದ್ದರು ಎಂಬ ಟೀಕೆ ಇವರ ಮೇಲಿದೆ. ಸಾಂಪ್ರದಾಯಿಕ ವಿಮರ್ಶೆಗಳನ್ನು ಮೆಟ್ಟಿ ನಿಲ್ಲುವ ಭರಾಟೆಯಲ್ಲಿ ಅನಿರೀಕ್ಷಿತ, ಅಸಾಧಾರಣ ವಾದ ಪರಿಕಲ್ಪನೆಗಳ ಹುಟ್ಟಿಗೆ ಹಾಗೂ ಪರಿವರ್ತನೆಗಳಿಗೆ ಇವರು ಕಾರಣೀಭೂತರಾಗಿದ್ದಾರೆ ಎನ್ನಲಾಗಿದೆ.

ನವ ಚಾರಿತ್ರಿಕವಾದದ ಆಶಯಗಳು ಸ್ಪಷ್ಟವಾಗಿದ್ದರೂ ಪ್ರತ್ಯೇಕಿಸಿ ನೋಡುವ ಕೆಲವು ಸಿದ್ಧಮಾದರಿಗಳಲ್ಲಿಯೆ ಅನೇಕ ತೊಡಕುಗಳನ್ನು ಕೆಲವು ವಿದ್ವಾಂಸರು ಗುರುತಿಸಿದ್ದಾರೆ. ಬ್ರೂಕ್ ಥಾಮಸ್‌ರಂಥವರು ‘ಅಷ್ಟೂ ಜನ ಇತಿಹಾಸಕಾರರಿಗೆ ಅಷ್ಟೇ ಇತಿಹಾಸಗಳಿರುವುದರಿಂದ ಅವೆಲ್ಲವನ್ನೂ ಒಂದೇ ಪ್ರಸ್ತಾವನೆಯ ಮುಖಾಂತರ ಪರಿಶೀಲಿಸಲು ಸಾಧ್ಯವಾಗುವುದಿಲ್ಲ’ ಎಂದಿದ್ದಾರೆ. ನವ ಚರಿತ್ರಕಾರರು ಹಿಂದಿನ ಇತಿಹಾಸವನ್ನೆಲ್ಲ ಪ್ರತ್ಯೇಕವಾಗಿ ನೋಡುವ ಇಲ್ಲವೇ ಸಮಗ್ರೀಕರಿಸಿ ನೋಡುವ ಮಿತಿಗಳಿಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಉದಾಹರಣೆಗೆ ಟಿಲ್ಲಿಯಾರ್ಡ್‌‌ನಂಥವನಿಗೆ ಶೇಕ್ಸ್‌ಪಿಯರನ ಒಂದು ಭಾಷಣ ಎಲಿಜಬತೆನ್‌ ಕಾಲದ ಎಲ್ಲರಿಗೂ ಒಪ್ಪುವಂಥ ವಿಚಾರ ಎಂಬುದಾಗಿ ಪರಿಗಣಿಸುವುದು. ಅಂತೆಯೇ ಜಾರ್ಜ್‌ಲುಕಾಕ್ಸ್‌ನಿಗೆ ಹ್ಯಾಮ್ಲೆಟನ ಸಾವು ಸಾಮ್ರಾಜ್ಯಶಾಹಿಯ ಸಾವು ಎಂದೇ ಪರಿಭಾವಿಸುವುದು, ಇತ್ಯಾದಿ.

ನವ ಚಾರಿತ್ರಿಕವಾದದ ಹೊಸ ಚಿಂತನೆಗಳಿಗೆ ಅನೇಕರು ತಮ್ಮನ್ನು ತಾವು ತೊಡಗಿಸಿಕೊಂಡಂತೆಯೇ ಟೀಕೆ-ಟಿಪ್ಪಣಿಗಳನ್ನು ಮಾಡಿದವರೂ ಉಂಟು. ಅದರಲ್ಲೂ ಕೆಲವು ಸಂಪ್ರದಾಯವಾದಿ ಬಲಪಂಥೀಯ ಚಿಂತಕರಂತೂ ತಮ್ಮ ಎಲ್ಲ ಬಗೆಯ ಪ್ರತಿರೋಧ, ಸಿಟ್ಟು-ಸೆಡವುಗಳನ್ನು ಅಭಿವ್ಯಕ್ತಿಸಿದ್ದಾರೆ. ಎಡ್ವರ್ಡ್‌‌ಪಾಟ್ಚರ್‌ ತನ್ನ ‘ದಿ ಕಮ್ಯುನಿಸ್ಟ್‌ಮ್ಯಾನಿಫೆಸ್ಟೋ’ ಎಂಬ ಲೇಖನದಲ್ಲಿ “ವಿಮರ್ಶೆಯ ಕಲ್ಪನೆಯೆಂಬ ಸೈತಾನನು ಭೇಟಿಯಾಡ ಹೊರಟಿದ್ದಾನೆ. ಆ ಸೈತಾನ ಬೇರಾರು ಅಲ್ಲ; ನವ ಚಾರಿತ್ರಿಕವಾದಿ” ಎಂಬ ಸಾಲುಳಿಂದಲೇ ಪ್ರಾರಂಭಿಸುತ್ತಾನೆ. ಜೆ. ಹಿಲ್ಲಿಸ್ ಮಿಲ್ಲರ್‌ನಂತೂ “ಇತಿಹಾಸದತ್ತ ನೋಡುವವರು ಎಲ್ಲ ಸಿದ್ಧಾಂತಗಳನ್ನು ಕಳಚಿ ಪಕ್ಕಕ್ಕಿಡಿ” ಎಂದಿದ್ದಾನೆ. ಕೆಲವು ಪತ್ರಿಕೆ, ನಿಯತಕಾಲಿಕಗಳು ಸಹ ನವ ಚಾರಿರಿಕವಾದವನ್ನು ಮೂದಲಿಸದೆ ಬಿಡಲಿಲ್ಲ. ‘ವಾಲ್‌ಸ್ಟ್ರೀಟ್ ಜರ್ನಲ್’ ಈ ವಾದದ ಅನುಕರಣೆ ‘ಪಶುತ್ವದ ಕಡೆಗೆ ಪಯಣ’ ಮಾಡಿದಂತೆ ಎಂದು ಜರಿಯಿತು. ಅಲ್ಲದೆ ನ್ಯೂಯಾರ್ಕ್‌ಟೈಮ್ಸ್, ನ್ಯೂಸ್ ವೀಕ್, ಎನ್‌.ವೈ.ಆರ್.ಬಿ. ಮೊದಲಾದುವು ಈ ವಾದವನ್ನು ‘ಸಿದ್ಧಾಂತ ವಿರೋಧಿ’ ಎನ್ನುವುದರ ಜೊತೆಗೆ ‘ಇದು ಎಡಪಂಥೀಯ ವಿಮರ್ಶೆಯಲ್ಲಿ ಬಂಡಾಯ ಸ್ವರೂಪಿ ಹಾಗೂ ಪರಿಣಾಮದಲ್ಲಿ ವಿನಾಶಕಾರಿ’ ಎಂದು ಪ್ರತಿಬಿಂಬಿಸಿದವು.

ನವ ಚಾರಿತ್ರಿಕವಾದದ ಬಗೆಗೆ ಅನೇಕ ವಿದ್ವಾಂಸರಲ್ಲಿ ದ್ವಂದ್ವಗಳೂ ಇವೆ. ಈ ವಾದವು ಐತಿಹಾಸಿಕ ಅಧಾರಗಳ ಮಹತ್ತ್ವವನ್ನೇ ಇಲ್ಲವಾಗಿಸಿ ಬಿಡಬಹುದು ಎಂಬು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಪುನರುಜ್ಜೀವನದ ಅಧ್ಯಯನದೊಂದಿಗೆ ಸ್ತ್ರೀವಾದವನ್ನು ಜೋಡಿಸಿದ್ದು ಅನೇಕರಿಗೆ ಇಷ್ಟವಾಗಲಿಲ್ಲ. ಅಟೆರ್ಡಿಯನ್, ಗಾಯಿತ್ರೀ ಸ್ಪಿವಾಕ್, ಪೆಕೋರ ಮೊದಲಾದವರು ‘ನವ ಚಾರಿತ್ರಿಕವಾದವು ತನಗೆ ಯಾವುದು ಅಧಿಕೃತವೆಂದು ಭಾವಿಸುತ್ತದೆಯೋ ಅದನ್ನೇ ಅನುಮಾನದಿಂದ ನೋಡಲು ಹೊರಡುವುದು, ಮತ್ತೆ ಅದನ್ನೇ ಅನುಕರಿಸಲು ಹೊರಡುವುದು ಸಮಂಜಸವಾದುದಲ್ಲ’ ಎಂದು ಹೇಳಿರುವುದುಂಟು. ಆದರೆ ಇಂಥ ಅನೇಕ ದ್ವಂದ್ವಗಳು, ಟೀಕೆಗಳು ಈ ಪಂಥವನ್ನು ಇನ್ನಷ್ಟು ಪಕ್ವವಾಗುವಂತೆ ಮಾಡಿವೆ.

ನವ ಚಾರಿತ್ರಿಕವಾದವು ಕಳೆದೆರಡು ಮೂರು ದಶಕಗಳಲ್ಲಿ ಬೆಳೆದುಬಂದ ವೇಗವನ್ನು ಗಮನಿಸಿದರೆ ಎಂಥವರನ್ನೂ ದಂಗು ಬಡಿಸುವಂಥದ್ದೇ. ಇಂದು ಅನೇಕ ಶಿಸ್ತುಗಳವರು ನವ ಚಾರಿತ್ರಿಕವಾದದ ಚಿಂತನೆಗಳನ್ನು ಪರಿಗಣಿಸದೆಯೇ ಮುಂದುವರೆಯಲು ಸಾಧ್ಯ ಎಂಬ ಹೇಳಿಕೆಯನ್ನು ನೀಡಲು ಹಿಂಜರಿಯುತ್ತಿದ್ದಾರೆ. ಬಹುಶಃ ಇದಕ್ಕೆ ಅದರ ತತ್ವಗಳಲ್ಲಿನ ಗಟ್ಟಿತನವೇ ಕಾರಣ. ಇದರ ವ್ಯಾಪ್ತಿ ಎಷ್ಟೆಂದರೆ ಇಲ್ಲಿಯವರೆವಿಗೂ ಬಂದಿರುವ ನವ ಚಾರಿತ್ರಿಕವಾದದ ಲೇಖನ, ಕೃತಿ, ಸಂಪುಟಗಳ ಗಾತ್ರವೇ ಅದರ ಯಶಸ್ಸನ್ನು ಸಾರುವಂಥದ್ದು. ಹೀಗಾಗಿ ಪ್ರಾತಿನಿಧಿಕ ಅನ್ನಿಸುವ ಕೆಲವನ್ನಾದರೂ ಪಟ್ಟಿ ಮಾಡಲು ಸಾಧ್ಯ ಆಗುತ್ತಿಲ್ಲ. ಆದರೆ ಈ ಮಾತು ಭಾರತ ಅಥವಾ ಕನ್ನಡದ ಸಂದರ್ಭಕ್ಕೆ ಅನ್ವಯಿಸುವುದಿಲ್ಲ. ಈ ದಿಸೆಯಲ್ಲಿ ನಮ್ಮಲ್ಲಿ ಇನ್ನಷ್ಟು ಕೆಲಸಗಳು ಆಗಬೇಕಿದೆ.

ನವ ಚಾರಿತ್ರಿಕವಾದವು ತನ್ನ ಅಧ್ಯಯನದ ಮಾರ್ಗದ ಬಗ್ಗೆ ಸ್ವತಃ ತಾವೇ ನಿಷ್ಟುರವಾದ ವಿಮರ್ಶೆ, ಪರಿಶೀಲನೆ ಮಾಡಿಕೊಳ್ಳುತ್ತಿರುವುದರಿಂದ ವ್ಯವಸ್ಥಿತವಾದ ವಿಧಿ-ವಿಧಾನ ಅಥವಾ ಪರಿಣಾಮಗಳನ್ನು ಅಧಿಕೃತವಾಗಿ ಅಂತಿಮಗೊಳಿಸುತ್ತಿಲ್ಲ. ಬಹುಶಃ ಆದ್ದರಿಂದಲೇ ಈ ಮಾರ್ಗ ಎಲ್ಲರಿಗೂ ಅಕ್ಕರೆಯಾಗುತ್ತಿರುವುದು. ಏಕೆಂದರೆ ಗೊಂದಲ, ಸಮಸ್ಯೆ, ವಾದ-ವಿವಾದಗಳು ಯಾವುದೇ ಜ್ಞಾನಶಿಸ್ತಿನ ಪರಿಚಲನೆಗೂ ಅಗತ್ಯವಾದುದು. ಇಲ್ಲವಾದಲ್ಲಿ ಅವು ಅಂತಿಮ ಸತ್ಯಗಳನ್ನು ಘೋಷಿಸುವಲ್ಲಿ ಅಂತ್ಯ ಕಾಣುವ ಸಾಧ್ಯತೆಗಳೇ ಹೆಚ್ಚು. ಈ ಬಗೆಯ ಎಚ್ಚರ, ಅರಿವುಗಳೂ ನವ ಚಾರಿತ್ರಿಕವಾದವನ್ನು ಜೀವಂತವಾಗಿಡುವಲ್ಲಿ ಸಹಕರಿಸುತ್ತಿವೆ.

ಅಮೆರಿಕಾದಲ್ಲಿ ಇತಿಹಾಸದ ಬಗೆಗಿನ ‘ವಿಸ್ಮೃತಿ’ಗೆ ಪೂರಕವಾಗಿ ಸಾಹಿತ್ಯಾಧ್ಯಯನದಲ್ಲಿ ಚರಿತ್ರೆಯ ಪ್ರಶ್ನೆಗಳನ್ನು ಕುರಿತಂತೆ ಒಂದು ವಿಭಿನ್ನ ದೃಷ್ಟಿಕೋನವನ್ನು ಹುಟ್ಟುಹಾಕುವಲ್ಲಿ ಈ ವಾದ ಯಶಸ್ವಿಯಾಗಿದೆ. ಮಾನವಿಕ ಅಧ್ಯಯನಗಳಲ್ಲಿ ತೊಡಗಿರುವ ಅಧ್ಯಯನಕಾರರಿಗೆ ಭರವಸೆ ಹಾಗೂ ಹೆಮ್ಮೆಯ ಸಂಗತಿಗಳಿಂದ ಬೀಗುವಂತೆ ಮಾಡಿದೆ. ತಾಂತ್ರಿಕ ಶಿಕ್ಷಣ, ಮಿಲಿಟರಿ ಕ್ಷೇತ್ರದ ವೈಜ್ಞಾನಿಕ ಸಂಶೋಧನೆಗಳು, ರಾಜಕಾರಣ ಹಾಗೂ ವಾಣಿಜ್ಯ ಸಂಘ-ಸಂಸ್ಥೆಗಳು ಮೊದಲಾದವು ಸಮಾಜ ಹಾಗೂ ಸಂಸ್ಕೃತಿ ನೆಲೆಗಳಲ್ಲಿನ ಸಹಕಾರವನ್ನು ಬಯಸುವಂತೆ ಮಾಡಿದ್ದು ಈ ವಾದದ ಫಲಿತಗಳೇ. ಈ ಹಿನ್ನೆಲೆಯಲ್ಲಿ ನವ ಚಾರಿತ್ರಿಕವಾದವನ್ನು ಕುರಿತ ಮಹತ್ತ್ವ ಮನವರಿಕೆ ಆಗುವಂಥದ್ದು. ಅದರಲ್ಲೂ ‘ಚರಿತ್ರೆ’ ಎಂದರೆ ‘ಗತಿಸಿಹೋದುದರ ಕತೆ’ ಎಂದು ಪರಿಭಾವಿಸುವ ವಿದ್ಯಾರ್ಥಿಗಳ ಪೂರ್ವಗ್ರಹವನ್ನು ತೊಡೆದುಹಾಕುವುದರ ಜೊತೆಗೆ ‘ನಾವು ಇತಿಹಾಸದಲ್ಲಿಯೇ ಬದುಕುತ್ತಿದ್ದೇವೆ, ಇತಿಹಾಸವನ್ನೇ ಬದುಕಿಸುತ್ತಿದ್ದೇವೆ, ವರ್ತಮಾನವು ಸಹ ಇತಿಹಾಸದ ಭಾಗವೇ’ ಎಂಬುದನ್ನು ಮನವರಿಕೆ ಮಾಡಿಕೊಡುವುದರ ಮುಖೇನ ನವ ಚಾರಿತ್ರಿಕವಾದದ ಸಾಂಸ್ಕೃತಿಕ ಚಹರೆಗಳನ್ನು ಅನಾವರಣ ಮಾಡಿಕೊಡುವ ಸವಾಲು ಚರಿತ್ರಕಾರರ ಮುಂದಿದೆ.

ಪರಾಮರ್ಶನ ಗ್ರಂಥಗಳು

೧. ಪೌಲ್ ಹ್ಯಾಮಿಲ್ಟನ್, ೨೦೦೭, ಹಿಸ್ಟಾರಿಸಿಸಂ, ಲಂಡನ್‌: ರೂಟ್ಲೇಜ್.

೨. ವಿಲ್ಸನ್‌ಸ್ಕಾಟ್ (ಸಂ), ೧೯೯೫. ಕಲ್ಚರಲ್‌ ಮೆಟಿರಿಯಲಿಸಂ ಥಿಯರಿ ಆಂಡ್ ಪ್ರಾಕ್ಟೀಸ್‌, ಆಕ್ಸ್‌ಫರ್ಡ್‌: ಬ್ಲ್ಯಾಕ್‌ವೆಲ್.

೩. ಸ್ಟೀಫನ್‌ಗ್ರೀನ್‌ಬ್ಲಾಟ್, ೧೯೯೦. ಲರ್ನಿಂಗ್‌ಟು ಕರ್ಸ್‌: ಎಸ್ಸೇಸ್ ಇನ್ ಅರ್ಲಿ ಮಾಡರ್ನ್‌ ಕಲ್ಚರ್‌, ಲಂಡನ್‌: ರೂಟ್ಲೇಜ್.

೪. ಹೆರಾಲ್ಡ್ ಆರ್ಮ್‌ ವೀಸರ್ (ಸಂ.) ೧೯೮೯. ದಿ ನ್ಯೂ ಹಿಸ್ಟಾರಿಸಿಸಂ. ಲಂಡನ್ : ರೂಟ್ಲೇಜ್‌.

* * *