ಅವರ ಆಧಾರಗಳು

ಇತರರ ಸಂಶೋಧನೆಗಳನ್ನು ಬಳಸಿಕೊಳ್ಳುವುದರಲ್ಲಿ ಗಿಬ್ಬನ್ ಅದ್ಭುತವಾದ ಜಾಣ್ಮೆಯನ್ನು ಹೊಂದಿದ್ದರು. ಅವರಿಗೆ ತಮ್ಮ ಋಣವನ್ನು ಸಮರ್ಪಿಸಿದ್ದಾರೆ. ಅವರ ಪ್ರಮುಖ ಆಧಾರಗಳೆಂದರೆ ಲ್ಯಾಟಿನ್ ಮತ್ತು ಗ್ರೀಕ್ ಇತಿಹಾಸಕಾರರು. ವಿಷಯ ಸಂಕಲನಗಳ ಬಗ್ಗೆ ಅವರಿಗೆ ಗೌರವವಿರಲಿಲ್ಲ. ಅವು ಪಕ್ಷಪಾತಗಳಿಂದ ಕೂಡಿವೆ ಎಂಬುದು ಅವರ ಭಾವನೆ. ಅವರ ಇತರ ಆಧಾರಗಳೆಂದರೆ ನಾಣ್ಯಗಳು, ಪದಕಗಳು, ಭೂಗೋಳಶಾಸ್ತ್ರ ಮತ್ತು ಕಾಲಗಣನಾ ಶಾಸ್ತ್ರ. ಗ್ರೀಕ್ ಇತಿಹಾಸಕಾರ ಡಿಯೆ ಕ್ಯಾಸಿಯಸ್ ಮತ್ತು ಅಮಯಾನಸ್ ಮರ್‌ಸಿಲಿನಸ್ ಅವರ ಕೃತಿಗಳನ್ನು ಪ್ರಾಚೀನ ಇತಿಹಾಸಕ್ಕೆ ಬಳಸಿಕೊಂಡರು. ಬೈಜಾಂಟೈನ್ ಇತಿಹಾಸಕಾರರಿಗೆ ಛೀಮಾರಿ ಹಾಕಿ, ಪತ್ರಗಳು ಮತ್ತು ಥಿಯೊಡೋಸಿಯನ್ ಸಂಹಿತೆಯನ್ನು ಬಳಸಿಕೊಂಡರು. ಪ್ರಾಚೀನ ಯುಗದ ಇತಿಹಾಸಕ್ಕೆ ಹೆಚ್ಚಾಗಿ ಕ್ಲಾಸಿಕಲ್ ಇತಿಹಾಸಕಾರರನ್ನು ಅವಲಂಬಿಸಿದ್ದರು. ಮಧ್ಯಕಾಲೀನ ಇತಿಹಾಸಕ್ಕೆ ಮಧ್ಯಯುಗದ ವೃತ್ತಾಂಶಗಳ ಜೊತೆಗೆ ಟೆಲ್ಲಿಮಾಂಟ್ ಮತ್ತು ಮುರೆಟೂರಿ ಅವರ ಕೃತಿಗಳನ್ನು ವ್ಯಾಪಕವಾಗಿ ಬಳಸಿಕೊಂಡರು. ಮುರಟೊರಿ ಅವರನ್ನು “ನನ್ನ ಮಾರ್ಗದರ್ಶಿ ಮತ್ತು ಇಟಲಿಯ ಇತಿಹಾಸದ ಗುರು” ಎಂದು ಹೇಳಿದ್ದಾರೆ ಇವು ಅವರ ರಚನೆಯಲ್ಲಿ ಬಳಸಿಕೊಂಡ ಪ್ರಮುಖ ಆಧಾರಗಳು. ತಮ್ಮ ಸ್ವಂತ ಜೀವನ ಚರಿತ್ರೆಯಲ್ಲಿ ಹೀಗೆ ಬರೆದಿದ್ದಾರೆ:

ನಾನು ಬರೆಯಲು ಹೊರಟಿರುವ ವಿಷಯಕ್ಕೆ ಸಂಬಂಧಿಸಿದ ಎಲ್ಲ ಮೂಲಾಧಾರಗಳನ್ನು ಎಚ್ಚರಿಕೆಯಿಂದ ಪರೀಕ್ಷಿಸಿದ್ದೇನೆ. ಕೆಲವು ಸಂದರ್ಭ ಗಳಲ್ಲಿ ಮೂಲಾಧಾರಗಳನ್ನು ಪರಾಮರ್ಶಿಸುವ ಅವಕಾಶವಿಲ್ಲದಾಗ ಆಧುನಿಕ ಮಾರ್ಗದರ್ಶಿಗಳ ನಂಬಿಕೆಯ ಮೇಲೆ ಅವರ ಸಾಕ್ಷಿಗಳನ್ನು ಅಂಗೀಕರಿಸಿದ್ದೇನೆ. ಈ ಮಾರ್ಗದರ್ಶಿಗಳ ನಿಷ್ಠೆಯ ಬಗ್ಗೆ ನನಗೆ ತೃಪ್ತಿ ಇದೆ. ಆದರೆ ಇಂತಹ ಸನ್ನಿವೇಶಗಳಲ್ಲಿ, ಎರವಲು ಪಡೆದ ಆಕರಗಳನ್ನು ನಾನು ಜೋಡಿಸಿಕೊಳ್ಳುವುದರ ಬದಲು ನನ್ನ ವ್ಯಾಪಕವಾದ ಓದುವಿಕೆ ಮತ್ತು ನನ್ನ ಸುದ್ದಿಕಾರರ ಆಧಾರಗಳನ್ನು ಬಳಸಿಕೊಂಡಿದ್ದೇನೆ.

ಗಿಬ್ಬನ್ ಅವರು ಕಟ್ಟಡ ಸಾಮಾಗ್ರಿಗಳನ್ನು ಮಾತ್ರ ಸಂಗ್ರಹಿಸಿದ್ದರು. ಅವುಗಳಿಗೆ ಇತಿಹಾಸ ದರ್ಶನದ ವಿವೇಚನಾಯುತ ವಾಸ್ತುಶಿಲ್ಪದ ರೂಪದ ಕೊಡುವುದು ಉಳಿದಿತ್ತು. ಶೈಲಿಯ ಬಗ್ಗೆ ಅವರಿಗೆ ಹೆಚ್ಚಿನ ಕಾಳಜಿ ಇತ್ತು.

ಕೃತಿಕಾರನ ಶೈಲಿಯು ಅವನ ಮನಸ್ಸಿನ ಬಿಂಬವಾಗಿರಬೇಕು. ಆದರೆ ಭಾಷೆಯ ಆಯ್ಕೆ ಮತ್ತು ಪೂರ್ಣ ಪ್ರಭುತ್ವ ಪ್ರಯೋಗದ ಫಲ. ಒಂದು ಮಂದವಾದ ಮತ್ತು ಅಲಂಕಾರಿಕ ಉದ್ವೇಗದ ನಡುವೆ ಮಧ್ಯಮ ಹದವನ್ನು ಪಡೆಯಲು ನಾನು ಈ ಹಿಂದೆ ಅನೇಕ ಪ್ರಯೋಗಗಳನ್ನು ಮಾಡಿದೆ. ಮೂರು ಸಾರಿ ಮೊದಲನೆಯ ಅಧ್ಯಾಯವನ್ನು ರಚಿಸಿದೆ. ಎರಡು ಮತ್ತು ಮೂರನೆಯದನ್ನು ಎರಡು ಸಾರಿ ರಚಿಸಿದೆ; ಅವುಗಳ ಪರಿಣಾಮದಿಂದ ತಕ್ಕಮಟ್ಟಿಗೆ ಸಮಾಧಾನಗೊಂಡಿದ್ದೇನೆ.

ಎಂದು ಅವರು ಹೇಳಿದ್ದಾರೆ. ಅವರು ಮೊದಲನೆಯ ಸಂಪುಟವನ್ನು ಮೂರು ಸಾರಿ ಬರೆದರು. ಉಳಿದವುಗಳನ್ನು ಕೆಲವು ಬದಲಾವಣೆಗಳೊಂದಿಗೆ ಕ್ಷಿಪ್ರದಲ್ಲಿ ರಚಿಸಿದರು. ಕೊನೆಯ ಸಂಪುಟದ ಹಸ್ತಪ್ರತಿಯನ್ನು ಬೆರಳಚ್ಚು ಮಾಡದೆ ಮುದ್ರಕರಿಗೆ ಕಳುಹಿಸಿದರು. ತಮ್ಮ ಪಾಂಡಿತ್ಯದ ನಿಷ್ಕೃಷ್ಟತೆಯ ಹಾಗೂ ಬರವಣಿಗೆಯ ಸಾಮರ್ಥ್ಯದ ಬಗ್ಗೆ ಗಿಬ್ಬನ್ ಅವರಿಗೆ ಪೂರ್ಣ ನಂಬಿಕೆ ಇತ್ತು. ಆದರೆ ಯಾವ ಇತಿಹಾಸಕಾರನೂ ಗಿಬ್ಬನ್ ಅವರಷ್ಟು ಇತರ ಇತಿಹಾಸಕಾರರಿಗೆ ಋಣಿಯಾಗಿರುವುದು ಕಂಡುಬರುವುದಿಲ್ಲ. ಅವರ ಶೈಲಿಯು ಥೂಸಿಡೈಡ್ಸ್ ಅವರಷ್ಟೇ ಸ್ವಭಾವಸಿದ್ದವಾದುದೂ, ವೈಯಕ್ತಿಕವಾದೂದೂ ಆಗಿದೆ.

ಅವರ ಕೃತಿಯ ಪ್ರಥಮ ಸಂಪುಟವು ೧೭೭೬ರಲ್ಲಿ ಪ್ರಕಟವಾಯಿತು. ಅದನ್ನು ಜನರು ಉತ್ಸಾಹದಿಂದ ಬರಮಾಡಿಕೊಂಡರು. ಆದರೆ ಅದರ ೧೫ ಮತ್ತು ೧೬ನೆಯ ಅಧ್ಯಾಯಗಳ ವಿಷಯವಾದ ರೋಮನ್ ಸಾಮ್ರಾಜ್ಯದ ಕಾಲದ ಚರ್ಚಿನ ಇತಿಹಾಸ ವಿವಾದಕ್ಕೆ ಎಡೆಮಾಡಿಕೊಟ್ಟಿತು. ತಮ್ಮ ಧರ್ಮವನ್ನಲ್ಲದೆ ಇತಿಹಾಸಕಾರನಾಗಿ ತಮ್ಮ ನಿಷ್ಠೆಯ ಮೇಲೆ ಆಕ್ರಮಣ ಮಾಡುತ್ತಿರುವುದಾಗಿ ತಾವು ಭಾವಿಸಿರುವುದಾಗಿ ಕಹಿಯಾಗಿ ಹೇಳಿದರು. ಐದು ವರ್ಷಗಳ ನಂತರ ಎರಡು ಮತ್ತು ಮೂರನೆಯ ಸಂಪುಟಗಳು ಪ್ರಕಟಗೊಂಡವು. ಆರನೆಯ ಹಾಗೂ ಕಡೆಯ ಸಂಪುಟವು ೧೭೮೮ ರಲ್ಲಿ ಪ್ರಕಟವಾಯಿತು. ಈ ಅಮರ ಕೃತಿಯನ್ನು ರಚಿಸಲು ಅವರು ೨೦ ವರ್ಷಗಳನ್ನು ತೆಗೆದುಕೊಂಡರು. ಅದರ ಫ್ರೆಂಚ್, ಜರ್ಮನ್, ಇಟಾಲಿಯನ್ ಭಾಷೆಗಳಲ್ಲಿನ ಭಾಷಾಂತರಗಳು ಕ್ಷಿಪ್ರದಲ್ಲಿಯೆ ಪ್ರಕಟಗೊಂಡವು. ಈ ಭಾಷಾಂತರಗಳಿಂದ ಅವರು ಸಮಾಧಾನಗೊಳ್ಳಲಿಲ್ಲ.

ಗಿಬ್ಬನ್ ಅವರ ಪ್ರಸಿದ್ಧ ಕೃತಿಯನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಮೊದಲ ನಾಲ್ಕು ಸಂಪುಟಗಳನ್ನು ಒಳಗೊಂಡಿರುವ ಮೊದಲ ಭಾಗದಲ್ಲಿ ಸುಮಾರು ೫೦೦ ವರ್ಷಗಳ ಇತಿಹಾಸವನ್ನು ಚಿತ್ರಿಸಲಾಗಿದೆ. ಇತರ ಎರಡು ಸಂಪುಟಗಳನ್ನು ಹೊಂದಿರುವ ಎರಡನೆಯ ಭಾಗದಲ್ಲಿ ೧೦ ಶತಮಾನಗಳ ಘಟನೆಗಳನ್ನು ವಿವರಿಸಲಾಗಿದೆ. ಬೈಜಾಂಟೈನ್ ಇತಿಹಾಸ ಕುರಿತಾದ ೧೮ನೆಯ ಶತಮಾನದ ಪಾಂಡಿತ್ಯದ ಬಗ್ಗೆ ಗಿಬ್ಬನ್ ಅವರಿಗೆ ತಾತ್ಸರವಿತ್ತು. ಈ ಪಾಂಡಿತ್ಯವನ್ನು “ಏಕರೂಪದ ದೌರ್ಬಲ್ಯ ಮತ್ತು ದುರವಸ್ತೆ” ಎಂದು ಕರೆದಿದ್ದಾರೆ. ಅವರ ಕಾಲದಲ್ಲಿ ಬೈಜಾಂಟೈನ್‌ಬಗ್ಗೆಯಾಗಲೀ, ಅದರ ಸಂಸ್ಕೃತಿಯ ಬಗ್ಗೆಯಾಗಲೀ ಅನುಕಂಪ ಕಂಡುಬರುತ್ತಿರಲಿಲ್ಲ. ಗಿಬ್ಬನ್ ಅವರಿಗೆ ತಿಳಿದಿದ್ದ ಒಂದೇ ಒಂದು ಬೈಜಾಂಟಿನ್ ಕಟ್ಟಡವೆಂದರೆ ವೆನಿಸ್‌ನ ಸೈಂಟ್ ಮಾರ್ಕ್‌ಕೆಥೆಡ್ರಲ್. ಆ ಕಟ್ಟಡ ಚೌಕವನ್ನು “ನಾನು ಇಲ್ಲಿಯವರೆಗೆ ನೋಡಿರುವ ಕೀಳು ವಾಸ್ತುಶಿಲ್ಪ” ಎಂದು ವರ್ಣಿಸಿದ್ದಾರೆ. ಬೈಜಾಂಟಿನ್ ೧೮ನೆಯ ಶತಮಾನದ ಸಾಮಾಜಿಕ ಮತ್ತು ರಾಜಕೀಯ ಚಿಂತನೆಯ ಪ್ರತಿನಿಧಿಸುತ್ತಿತ್ತು.

ಗಿಬ್ಬನ್ ಅವರ ಪ್ರಕಾರ “ರೋಮ್‌ನ ಪತನವು ಅದರ ಅತಿಯಾದ ಪ್ರಸಿದ್ಧತೆಯ ಸ್ವಾಭಾವಿಕ ಮತ್ತು ಅನಿವಾರ್ಯವಾದ ಪರಿಣಾಮವಾಗಿತ್ತು.” ಬೈಜಾಂಟಿಯನ್ ಬಗ್ಗೆ ಗಿಬ್ಬನ್ ಅವರಿಗೆ ಪ್ರೀತಿಯಿರಲಿಲ್ಲ. ರೋಮ್‌ನ ಪತನಕ್ಕೆ ಅವರು ನಿಮಿತ್ತ ಹೇಳುವ ಮತ್ತು ಪ್ರಾಮುಖ್ಯತೆ ನೀಡಿರುವ ಮತ್ತೊಂದು ಕಾರಣ ಕ್ರೈಸ್ತ ಧರ್ಮ. ಜನರಿಗೆ ಪ್ರಧಾನವಾಗಿ ಆಧ್ಯಾತ್ಮ ವಿಚಾರಗಳ ಬಗ್ಗೆ ಚಿಂತಿಸಬೇಕೆಂದು ಬೋಧಿಸುವ ಮೂಲಕ ಕ್ರೈಸ್ತ ಧರ್ಮವು ಜನರನ್ನು ಪೌರ ಹಾಗೂ ಮಿಲಿಟರಿ ಧರ್ಮಗಳಿಂದ ವಿಮುಖರನ್ನಾಗಿಸಿತು. ಸೈನ್ಯ ದಳದ ಶಿಸ್ತಿಗಿಂತ ಸನ್ಯಾಸಿ ಮಠದ ಶಿಸ್ತನ್ನು ಹೆಚ್ಚು ಆಸೆಪಟ್ಟು ಇಷ್ಟಪಡುವಂತೆ ಬೋಧಿಸಿತು. ರೋಮ್‌ನ ಅವನತಿಯಲ್ಲಿ ಗಿಬ್ಬನ್‌ಅವರು ಕ್ರೈಸ್ತ ಧರ್ಮಕ್ಕೆ ಮಹತ್ತರವಾದ ಪಾತ್ರವನ್ನು ವಹಿಸಿದ್ದಾರೆ.

ಗಿಬ್ಬನ್‌ ಅವರು ದೇವಶಾಸ್ತ್ರ ಸಮ್ಮತವಾದ ಇತಿಹಾಸದ ಅರ್ಥ ವಿವರಣೆಯನ್ನು ತಿರಸ್ಕರಿಸಿದರು. ಇತಿಹಾಸದ ಬದಲಾವಣೆಗೆ ಮಾನವನ ಸ್ವಭಾವ ಕಾರಣವೆಂದು ಹೇಳಿದ್ದಾರೆ. ಅವರು ತಮ್ಮನ್ನು ಮಾನವತಾವಾದಿ ಮತ್ತು ಭಾವನಾಶೀಲರಾಗಿ ಮಧ್ಯದ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಮಾನವತಾವಾದಿಯಾಗಿ ಅವರು ಇತಿಹಾಸವು ಮಾನವನಿಗೆ ಸಂಬಂಧಿಸಿದುದೆಂದು ನೋಡಿದರೆ ಭಾವನಾಶೀಲರಾಗಿ, ಗತಕಾಲದಲ್ಲಿ ಸುವರ್ಣ ಯುಗವನ್ನು ಕಂಡರು. ಆದರೆ ಇದು ವಿವೇಚನಾರಹಿತವಾಗಿರಲಿಲ್ಲ. ಅವರು ಒಂದು ವ್ಯಾಪಕವಾದ ವಿಷಯ ವಸ್ತುವನ್ನು ಆಯ್ದುಕೊಂಡಿದ್ದರೂ, ಎಲ್ಲ ವಿವರಣೆಗಳತ್ತ – ವಿಶ್ಲೇಷಣೆ, ವಿಮರ್ಶೆ ಮತ್ತು ನಿಷ್ಕೃಷ್ಟತೆಗೆ-ಯಥಾರ್ಥವಾದ ಗಮನವನ್ನು ಹರಿಸಿದ್ದಾರೆ.

ಕೀರ್ತಿಯ ಉತ್ಕಟಾಂಕ್ಷೆಯಿಂದ ನಾನು ಹಿಗ್ಗಿರಲಿಲ್ಲ ಅಥವಾ ತಿರಸ್ಕಾರದ ಭಯದಿಂದ ಖಿನ್ನನಾಗಿರಲಿಲ್ಲ. ನನ್ನ ಆತ್ಮಸಾಕ್ಷಿಯು ನನ್ನ ಕಾರ್ಯತತ್ಪರತೆ ಮತ್ತು ನಿಷ್ಕೃಷ್ಟತೆಗೆ ಸಾಕ್ಷಿಯಾಗಿದೆ. ಇತಿಹಾಸವು ಅತಿ ಜನಪ್ರಿಯ ಬರವಣಿಗೆಯ ವಿಭಾಗಗಳಲ್ಲಿ ಒಂದಾಗಿದೆ. ಅದು ಅತ್ಯುತ್ತಮ ಅಥವಾ ಕೆಳದರ್ಜೆಯ ಧಾರಣ ಶಕ್ತಿಗೆ ಹೊಂದಿಕೊಳ್ಳುತ್ತದೆ. ನಾನು ಒಂದು ಪ್ರಖ್ಯಾತ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದೇನೆ.

ಎಂದು ತಿಳಿಸಿದ್ದಾರೆ. ಈ ಭಾವ ಹಾಗೂ ಇತಿಹಾಸದಲ್ಲಿ ಅವಿಚ್ಛಿನ್ನತೆಯನ್ನು ಕಂಡು ಹಿಡಿದಿರುವುದು ಅವರ ಕೃತಿಗೆ ಅಮರತ್ವವನ್ನು ಗಳಿಸಿಕೊಟ್ಟಿದೆ.

ಅವರ ಕೊನೆಯ ಎರಡು ಸಂಪುಟಗಳಲ್ಲಿ ನ್ಯೂನತೆಗಳು ಇದ್ಯಾಗ್ಯೂ ಬೈಜಾಂಟೈನ್‌ಇತಿಹಾಸವನ್ನು ರಚಿಸಿದುದಕ್ಕೆ ಕೀರ್ತಿ ಸಲ್ಲತಕ್ಕುದಾಗಿದೆ. ಅವರಿಗೆ ನ್ಯಾಯ ಸಲ್ಲಿಸಬೇಕಾದಲ್ಲಿ ಅವರ ಮೊದಲ ನಾಲ್ಕು ಸಂಪುಟಗಳ ಮೇಲೆ ನಿರ್ಧರಿಸಬೇಕು. ಈ ಸಂಪುಟಗಳಲ್ಲಿ ಅವರ ನಿಷ್ಕೃಷ್ಟತೆ, ಪಾಂಡಿತ್ಯದ ಘನತೆ ಮತ್ತು ವಿನ್ಯಾಸದ ಗಾತ್ರ ಪ್ರತಿಬಿಂಬಿತವಾಗಿದೆ. ಆಧಾರಗಳನ್ನು ಓದುವಲ್ಲಿ ಅವರು ತೋರುತ್ತಿದ್ದ ಜಾಗ್ರತೆ ಮತ್ತು ಅವರ ಚಿಂತನೆಯ ಆಳ ಓದುಗರಿಗೆ ವ್ಯಕ್ತವಾಗುತ್ತದೆ. ೫೨೯ ರಲ್ಲಿ ಜಸ್ಟಿಮನ್ ಅಥೆನ್ಸ್‌ನ ಶಾಲೆಯನ್ನು ಮುಚ್ಚಿದುದರ ಹಾಗೂ ಗ್ರೀಕರು ತಮ್ಮ ವೈಜ್ಞಾನಿಕ ಅಧ್ಯಯನಗಳನ್ನು ಪರ್ಶಿಯಕ್ಕೆ ವರ್ಗಾಯಿಸಿದುದರ ಮಹತ್ವವನ್ನು ಅರಿತವರಲ್ಲಿ ಗಿಬ್ಬನ್‌ಮೊದಲಿಗರಾಗಿದ್ದಾರೆ. ಮುಂದಿನ ಶತಮಾನದಲ್ಲಿ ಪರ್ಷಿಯ ಅರಬ್ಬರ ಕೈ ವಶವಾಗಿ ಮಧ್ಯ ಯುಗದಲ್ಲಿ ಅರೇಬಿಕ್ ವಿಜ್ಞಾನದ ಪ್ರಗತಿಗೆ ನಾಂದಿಯಾಯಿತು.

ಗಿಬ್ಬನ್ ಇತಿಹಾಸದ ಮೌಲ್ಯಗಳನ್ನು ಗ್ರಹಿಸಲಿಲ್ಲವೆಂದು ದೂಷಿಸುವುದು ತಪ್ಪಾಗುತ್ತದೆ. ಅದನ್ನು ಗ್ರಹಿಸಿದ್ದು ೧೯ ಮತ್ತು ೨೦ನೆಯ ಶತಮಾನಗಳಲ್ಲಿ ಮಾತ್ರ. ಅವರು ಇತಿಹಾಸದಲ್ಲಿ ಆರ್ಥಿಕ ಸ್ಥಿತಿಗಳು ಹಾಗೂ ಸಾಮಾಜಿಕ ಶಕ್ತಿಗಳ ಪ್ರಭಾವ ಮತ್ತು ಸಾಹಿತ್ಯ ಹಾಗೂ ಕಲೆಯ ಪ್ರಾಮುಖ್ಯತೆಯನ್ನು ಪರೀಕ್ಷಿಸುವುದರಲ್ಲಿ ವಿಫಲರಾದರು ನಿಜ. ಗಿಬ್ಬನ್ ಅಸಾಧಾರಣ ಪ್ರತಿಭಾಶಾಲಿಯಾಗಿದ್ದರೇ ವಿನಃ ಭವಿಷ್ಯ ಜ್ಞಾನವುಳ್ಳವರಾಗಿರಲಿಲ್ಲ. ಅವರಿಗೂ ಮತ್ತು ಅವರ ತಲೆಮಾರಿನವರಿಗೆ “ಯುದ್ಧ ಮತ್ತು ಸಾರ್ವಜನಿಕ ವ್ಯವಹಾರಗಳ ಆಡಳಿತ ಇತಿಹಾಸದ ಪ್ರಧಾನ ವಿಷಯಗಳಾಗಿದ್ದವು.” ಅಭಿವೃದ್ಧಿ ಹಾಗೂ ಸ್ವಭಾವ ಸಿದ್ಧ ನ್ಯಾಯ-೧೮ನೆಯ ಶತಮಾನದ ಪ್ರಸಿದ್ಧ ಮಾಯ- “ಇತಿಹಾಸವು ಮಾನವ ಕುಲದ ಅಪರಾಧಗಳು, ತಪ್ಪುಗಳು ಮತ್ತು ಸಂಕಷ್ಟಗಳ ದಾಖಲೆ ಪುಸ್ತಕಕ್ಕಿಂತ ಹೆಚ್ಚಿನದೆಂಬ” ನಂಬಿಕೆಯನ್ನು ಹುಟ್ಟಿಸಲು ಸಾಧ್ಯವಾಗಲಿಲ್ಲ. ಆಧಾರಗಳ ಕೊರತೆಯಿರುವ ಕಡೆ ಹೊರತಾಗಿ, ಅವರ ನಿರ್ಧಾರ ಹಾಗೂ ನಿಷ್ಕೃಷ್ಟತೆ ಆಶ್ಚರ್ಯಕರವಾದ ರೀತಿಯಲ್ಲಿ ಕಂಡುಬರುತ್ತದೆ. ಅವರ ಕೃತಿಯು ನಿರುಕ್ತಿಕಾರವಾಗಿರದೆ ಅತಿಶಯವಾದ ವೈಯಕ್ತಿಕ ಸಂಕಲನವಾಗಿದ್ದು ತಪ್ಪಾಗಿ ಗ್ರಹಿಸದ ಧ್ವನಿಯಲ್ಲಿ ವ್ಯಕ್ತಪಡಿಸಿಸಲ್ಪಟ್ಟಿದೆ. ಬೈರನ್ ಅವರು ಗಿಬ್ಬನ್ ಅವರನ್ನು “ಅಣಕದ ಸ್ವಾಮಿ” ಎಂದು ಅಭಿನಂದಿಸಿ, ರೂಸೊ ಮತ್ತು ವಾಲ್ಟೈರ್ ಅವರ ಸಾಲಿನಲ್ಲಿ ಸೇರಿಸಿದರು.

ಜ್ಞಾನೋದಯ ಯುಗದ ಇತಿಹಾಸ ಲೇಖನಗಳಲ್ಲಿ ನ್ಯೂನ್ಯತೆಗಳಿಲ್ಲದಿರಲಿಲ್ಲ. ಈ ಇತಿಹಾಸಕಾರರ ವೈಜ್ಞಾನಿಕ ನೆಲೆ ಪ್ರಾಚೀನ ಯುಗದ ಕೆಲವು ಪ್ರಮುಖ ಕಾಲಗಳನ್ನು ಅವುಗಳ ವೈಯಕ್ತಿಕತೆಗನುಗುಣವಾಗಿ ಅರಿತುಕೊಳ್ಳುವ ಸಾಮರ್ಥ್ಯವನ್ನು ಮಿತಿಗೊಳಿಸಿತು. ಈ ಇತಿಹಾಸಕಾರರು ಮಾನವ ಸ್ವಭಾವವು ದೃಢಪಡಿಸಿದ ಅಂಶವೆಂದು ಭಾವಿಸಿದರು. ಇದರಿಂದ ಅವರು ವಿಭಿನ್ನತೆಯನ್ನು ಕಡೆಗಣಿಸುವಂತಾಯಿತು. ಈ ಕಾರಣದಿಂದಾಗಿ ಇತಿಹಾಸ ಜೀವನದ ಬಹು ಪ್ರಕಾರದ ರೂಪಗಳಿಗೆ ನ್ಯಾಯ ಒದಗಿಸುವುದು ಕಷ್ಟವಾಯಿತು. ಮಿಗಿಲಾಗಿ, ಅವರು ಗತಾಲವನ್ನು ವರ್ತಮಾನದ ಪ್ರಮಾಣಗಳ ಮೇಲೆ ಪರಿಗಣಿಸಿದರು. ಅವರ ಚರ್ಚ್‌ಮತ್ತು ಧಾರ್ಮಿಕ ವಿರೋಧಿ ಭಾವನೆಗಳು ಪಶ್ಚಿಮ ಯುರೋಪಿನ ಪ್ರಸಿದ್ಧ ಧಾರ್ಮಿಕ ಯುಗಗಳನ್ನು ಯಥಾರ್ಥವಾಗಿ ಅರ್ಥಮಾಡಿಕೊಳ್ಳಲು ಅಡ್ಡಿ ಉಂಟು ಮಾಡಿದವು. ಗತಕಾಲದ ಅಧ್ಯಯನದಿಂದ ಸಂಗ್ರಹಿಸಿದ ಪಾಠಗಳೂ ಸಹ ಚರ್ಚೆಗೆ ವಿರೋಧವಾಗಿದ್ದವು. ಆದ ಕಾರಣ ಮಧ್ಯ ಯುಗದ ಸಂಸ್ಕೃತಿಯನ್ನು ತಿಳಿದುಕೊಳ್ಳುವಲ್ಲಿ ಅವರು ವಿಫಲರಾದರು. ಕೊನೆಯದಾಗಿ, ಅಭಿವೃದ್ಧಿಯು ಒಂದೇ ಮಾರ್ಗದ ಚಳವಳಿಯೆಂದು ಅವರು ಭಾವಿಸಿದ್ದರು. ಇದು ಮಾನವನಲ್ಲಿ ಅಂತರ್ಗತವಾಗಿರಬಹುದೆಂದು ನಂಬಲಾದ ಕೆಲವು ಸಾಧ್ಯತೆಗಳನ್ನು ಪಡೆಯುವುದಾಗಿತ್ತು. ಈ ನಿಲುವು ಇತಿಹಾಸದ ಬೆಳವಣಿಗೆಯಲ್ಲಿನ ಜಟಿಲತೆಗಳನ್ನು ಅರ್ಥಮಾಡಿಕೊಳ್ಳಲು ಅನುಕೂಲಕರವಾಗಿರಲಿಲ್ಲ. ಈ ಚಳವಳಿಯು ಚರ್ಚಿನ ವಿರೋಧವನ್ನು ಅಧಿಕಗೊಳಿಸಿತು.

ಈ ನ್ಯೂನ್ಯತೆಗಳಿದ್ದಾಗ್ಯೂ ಜ್ಞಾನೋದಯ ಯುಗದ ಇತಿಹಾಸ ಲೇಖನದ ಸಾಧನೆಯನ್ನು ಅಲ್ಲಗಳೆಯಲಾಗದು. ಇತಿಹಾಸದ ಆಳವನ್ನು ಹೆಚ್ಚಿಸಿದುದರ ಪರಿಣಾಮವಾಗಿ ಇತಿಹಾಸ ಕೇವಲ ಘಟನೆಗಳ ಕಣಜವಾಗಿರದೆ ಚಿಂತನೆಗಳ, ಕಲ್ಪನೆಗಳ ಮತ್ತು ಚೈತನ್ಯದ ಅಭಿವೃದ್ಧಿಯ ಸರಪಣಿಯಾಗಿ ಪರಿಣಮಿಸಿತು. ಈ ಯುಗದಲ್ಲಿ ಇತಿಹಾಸ ರಚನಾಕಲೆಯಲ್ಲಿ ಹೊಸತನ ಕಂಡುಬಂದಿತಲ್ಲದೆ, ಇತಿಹಾಸದ ಪೂರ್ಣ ಭಾವನೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಉಂಟಾದವು.

ಭಾವನಾ ಸ್ವಾತಂತ್ರ‍್ಯ ಯುಗ

ಇತಿಹಾಸದ ಮುಂದಿನ ಬೆಳವಣಿಗೆಗೆ ಎರಡು ವಿಷಯಗಳು ಅಗತ್ಯವಾಗಿದ್ದವು. ಒಂದು, ಇತಿಹಾಸದ ಕ್ಷೇತ್ರವನ್ನು ವಿಸ್ತರಿಸಿ ಗತಕಾಲದ ಘಟನೆಗಳನ್ನು ಅನುಕಂಪದಿಂದ ವಿಚಾರಣೆ ಮಾಡುವದು. ಎರಡು, ಮಾನವನ ಸ್ವಭಾವವನ್ನು ಏಕ ರೀತಿಯದು ಮತ್ತು ಬದಲಾವಣೆಯಾಗದಿರುವುದು ಎಂಬ ಭಾವನೆಯನ್ನು ವಿರೋಧಿಸುವುದು. ಈ ಎರಡು ವಿಷಯಗಳು ಈ ಯುಗದ ಇತಿಹಾಸಕಾರರ ಗಮನವನ್ನು ಆಕರ್ಷಿಸಿದವು.

ಈ ಎರಡು ನಿಲುವುಗಳ ಪ್ರಸಿದ್ಧ ಪ್ರತಿಪಾದಕ ಹರ್ಡರಂ. ಅವರು ಅಸದೃಶ ಇತಿಹಾಸದ ರೂಪಗಳ ಮತ್ತು ಬೆಳವಣಿಗೆಯತ್ತ ಗಮನ ಹರಿಸಬೇಕೆಂದು ಪ್ರತಿಪಾದಿಸಿದರು. ಗತಕಾಲವನ್ನು ವರ್ತಮಾನ ಕಾಲದಿಂದ ಪ್ರತ್ಯೇಕಿಸಬೇಕೆಂಬುದು ಅದರ ವಾದವಾಗಿತ್ತು. ಪ್ರತಿಯೊಂದು ಕಾಲ ಮತ್ತು ಸಂಸ್ಕೃತಿಯನ್ನು ಸ್ಪಷ್ಟವಾಗುವ ರೀತಿಯಲ್ಲಿ ತಿಳುವಳಿಕೆ ಹೊಂದಿರುವುದು ಅವಶ್ಯಕವೆಂದು ಅವರು ತಿಳಿಸಿದರು.

ಜ್ಞಾನೋದಯದ ಶಿಶುವಾದ ರೂಸೊ (೧೭೧೨-೧೭೯೯) ಭಾವನಾ ಸ್ವಾತಂತ್ರ‍್ಯ ಯುಗದ ತತ್ವಗಳನ್ನು ಪುನರ್ ವಿವೇಚಿಸಿ, ಆ ಚಳವಳಿಯ ಪಿತರಾದರು. ಜನರು ತರ್ಕಕ್ಕೆ ಬದಲಾಗಿ ಸಹಜ ಪ್ರವೃತ್ತಿಗಳನ್ನು ಅನುಸರಿಸಬೇಕು. ಏಕೆಂದರೆ ಅವು ಪ್ರಕೃತಿಯ ಮಾರ್ಗಗಳು. ರಾಜರು ತಾವು ಸಮ್ಮತಿಸಲು ಸಿದ್ಧರಾಗಿರುವುದನ್ನು ಜನರಿಗೆ ಕರುಣಿಸಬೇಕು. ಜ್ಞಾನೋದಯ ಹೊಂದಿದ ಅರರು ಜ್ಞಾನೋದಯ ಪಡೆದಿರುವ ಪ್ರಜೆಗಳನ್ನು ಹೊಂದಿರಬೇಕೆಂಬುದು ಪೂರ್ವ ಸೂಚಿತವಾಗುತ್ತದೆ. ನಿರಂಕುಶ ಪ್ರಭುತ್ವವು ತನ್ನ ನಿರ್ಧಾರವನ್ನು ಬಡಜನತೆಯ ಮೇಲೆ ಹೇರುವುದನ್ನು ರೂಸೊ ಸಹಿಸಲಿಲ್ಲ. ಇದಕ್ಕೆ ಬದಲಾಗಿ ಗುಂಪಿನ ಸಾಮಾನ್ಯ ನಿರ್ಧಾರ (General Will) ದ ಕಲ್ಪನೆಯನ್ನು ಮುಂದಕ್ಕೆ ತಂದರು. “ಪ್ರಕೃತಿಗೆ ಮರಳಿ” ಎಂಬ ರೂಸೊ ಅವರ ಘೋಷಣೆ ಈ ಯುಗದ ಅಡಿಪಾಯವಾಯಿತು.

ಜ್ಞಾನೋದಯ ಯುಗವು ಜ್ಞಾನೋದಯದಿಂದ ದೊರೆಗಳನ್ನು ಪಡೆಯುವ ಭರವಸೆಯನ್ನು ಹೊಂದಿರದೆ ಭಾವನಾ ಸ್ವಾತಂತ್ರ‍್ಯ ಯುಗದವರು ಜ್ಞಾನೋದಯ ಪಡೆದ ಪ್ರಜೆಗಳನ್ನು ಪಡೆಯುವ ಭರವಸೆಯನ್ನು ಹೊಂದಿದ್ದರು. ಆದರೆ ಇತಿಹಾಸ ಕ್ಷೇತ್ರದಲ್ಲಿ ಇದರ ಪರಿಣಾಮಗಳು ಬಹು ರೀತಿಯದು ಮತ್ತು ಕ್ರಾಂತಿಕಾರಿಯೂ ಆಗಿದ್ದಿತು. ಯಾವ ತತ್ವದ ಆಧಾರದ ಮೇಲೆ ರೂಸೊ ಇತಿಹಾಸವನ್ನು ವಿಶ್ಲೇಷಿಸಿದರೂ, ಆ ತತ್ವವನ್ನು ನಾಗರಿಕ ಪ್ರಪಂಚದ ಇತ್ತೀಚಿನ ಇತಿಹಾಸಕ್ಕಲ್ಲದೆ ವಿಶಿಷ್ಟ ಜನಂಗಗಳ ಮತ್ತು ಯುಗಗಳ ಇತಿಹಾಸಕ್ಕೆ ಪ್ರಯೋಗಿಸ ಬಹುದಾಗಿತ್ತು. ಬರ್ಬರ ಹಾಗೂ ಮೂಢನಂಬಿಕೆಗಳ ಯುಗಗಳು ಕೇವಲ ತಾತ್ವಿಕವಾಗಿ ಬುದ್ಧಿಗ್ರಾಹ್ಯವಾದಂತಾಯಿತು. ಮಾತ್ರವಲ್ಲ, ಮಾನವನ ಸಂಪೂರ್ಣ ಇತಿಹಾಸವನ್ನು ಮಾನವನ ನಿರ್ಧಾರದ ಇತಿಹಾಸವೆಂದು ನೋಡುವುದು ಸಾಧ್ಯವಾಯಿತು. ರೂಸೊ ಅವರ ಶಿಕ್ಷಣದ ಕಲ್ಪನೆಯು, ಶಿಶುವು ತನ್ನದೇ ಆದ ಆತ್ಮಭಾವನೆ ಮತ್ತು ಕಲ್ಪನೆಯನ್ನು ಹೊಂದಿದೆ ಎಂಬ ಸಿದ್ಧಾಂತವನ್ನು ಅವಲಂಬಿಸಿತ್ತು. ಇದನ್ನು ಉಪದೇಶಕನು ಗ್ರಹಿಸಿ, ಅನುಕಂಪ ತೋರಿ ಅದು ಕ್ರಮವಾಗಿ ಬೆಳೆಯಲು ನೆರವಾಗಬೇಕು. ಈ ಭಾವನೆಯನ್ನು ಇತಿಹಾಸದ ಮೇಲೂ ಪ್ರಯೋಗಸಲಾಯಿತು. ಪ್ರಾಚೀನ ಯುಗಗಳನ್ನು ತಾತ್ಸಾರದಿಂದ ಕಾಣುತ್ತಿದ್ದ ಜ್ಞಾನೋದಯ ಯುಗದ ಇತಿಹಾಸಕಾರರ ಉದಾಹರಣೆಗಳನ್ನು ಅನುಕರಿಸಬಾರದೆಂದು ಭಾವನಾ ಸ್ವಾತಂತ್ರ‍್ಯ ಯುಗದ ಇತಿಹಾಸಕಾರರು ಕರೆಯಿತ್ತರು.

ಪುರಾತನ ಕಾಲಗಳನ್ನು ಕುರಿತ ಹಿನ್ನೋಟ ಭಾವನಾ ಸ್ವಾತಂತ್ರ‍್ಯ ಯುಗದ ಇತಿಹಾಸಕಾರರಿಗೆ ಒಂದು ಅಭ್ಯಾಸವಾಗಿ ಪರಿಣಮಿಸಿತು. ಅವರ ಪ್ರಕಾರ, ಆ ಕಾಲಗಳಲ್ಲಿ ತಮ್ಮದೇ ಆದ ಮೌಲ್ಯಗಳುಳ್ಳ ಸಮಾಜಗಳು ಪ್ರತಿನಿಧಿತವಾಗಿದ್ದವು. ನಾಗರಿಕತೆಯ ಬೆಳವಣಿಗೆಯಲ್ಲಿ ಆ ಮೌಲ್ಯಗಳು ಕಾಣೆಯಾದವು. ಈ ಕಾರಣಕ್ಕಾಗಿ, ಆ ಯುಗಗಳನ್ನು ಬರ್ಬರ ಯುಗ ಅಥವಾ ಅಂಧಾಕಾರ ಯುಗ ಎಂದು ಕರೆಯುವುದು ಸರಿತೋರದೆಂದು ಈ ಯುಗದ ಇತಿಹಾಸಕಾರರು ಪ್ರತಿಪಾದಿಸಿರು. ಈ ಪ್ರವೃತ್ತಿಯು ಇತಿಹಾಸದ ಹೊರ ನೋಟವನ್ನು ಶ್ರೀಮಂತಗೊಳಿಸಿತು.

ಈ ಭಾವನೆಗೆ ದೃಢವಾದ ಬೆಂಬಲವು ಇಮ್ಯಾನ್ಯುಯಲ್ ಕಾಂತ್‌ನಲ್ಲಿ ದೊರೆಯಿತು. ಅವರು ತಮ್ಮ ಆನ್ ಐಡಿಯಾ ಫಾರ್ ಎ ಯೂನಿವರ್ಸಲ್ ಹಿಸ್ಟರಿ ಫ್ರಂ ದಿ ಕಾಸ್ಮೋಪಾಲಿಟನ್ ವ್ಯೂ ಎಂಬ ಕೃತಿಯಲ್ಲಿ ಪ್ರಕೃತಿಯ ನಿಯಮಗಳು ವಿಜ್ಞಾನಿಗೆ ಹೇಗೆ ಪ್ರಾಮುಖ್ಯವಾಗುತ್ತದೆಯೋ ಹಾಗೆ ಪ್ರಕೃತಿಯ ಯೋಜನೆಗಳು ಇತಿಹಾಸಕಾರನಿಗೆ ಆಸಕ್ತಿಯುತವಾಗಿರುತ್ತವೆ ಎಂದು ಹೇಳಿದ್ದಾರೆ. ವ್ಯಕ್ತಿ, ಆತನ ಸ್ವಾತಂತ್ರ‍್ಯ ಮತ್ತು ಆತನ ನೈತಿಕ ಬೆಲೆಗೆ ಕಾಂತ್ ಹೆಚ್ಚು ಪ್ರಾಮುಖ್ಯತೆ ಕೊಟ್ಟರು. ಗತಕಾಲವು ಮಾನವನ ಅವಿವೇಕ, ಮಹತ್ವಾಕಾಂಕ್ಷೆ, ಲೋಭ ಹಾಗೂ ದುರ್ನಡತೆಯ ದೃಶ್ಯವಾಗಿ ಅವರಿಗೆ ತೋರಿತು. ಕಾಂತ್ ಅವರು ಇತಿಹಾಸಕಾರನನ್ನು ವೀಕ್ಷಕನಾಗಿಯೂ ಪ್ರಕೃತಿಯನ್ನು ಒಂದು ದೃಶ್ಯವಾಗಿಯೂ ಕಂಡರು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಸಹಜ ಪ್ರವೃತ್ತಿಗಳು ಮತ್ತು ಮನೋಭಾವವನ್ನು ಶ್ಲಾಘಿಸುವುದು ಭಾವನಾ ಸ್ವಾತಂತ್ರ‍್ಯ ಯುಗದ ಮೂಲ ತತ್ವವಾಗಿತ್ತು. ತರ್ಕ ಮತ್ತು ಪೂಜೆಯ ಆರಾಧನೆಗೆ ಅದರ ವಿರೋಧವಿತ್ತು. ಪ್ರಕೃತಿಯ ಆಳವಾದ ಆರಾಧನೆ ಮತ್ತು ಅತಿ ನಿಯಮ ಬದ್ಧತೆಯ ಬಗ್ಗೆ ತಾತ್ಸರ ಎದ್ದು ಕಾಣುತ್ತಿತ್ತು. ದೀನ ವರ್ಗಗಳನ್ನು ಪ್ರೀತಿಸುವುದು ಮತ್ತು ಪ್ರಪಂಚವನ್ನು ಪುನರ‍್ರಚಿಸುವ ಉತ್ಸಾಹ ಇವು ಈ ಯುಗವು ಪ್ರತಿಪಾದಿಸಿದ ಇತರ ತತ್ವಗಳಾಗಿವೆ.

ಕಾಮ್ಟ್

ಆಗಸ್ಟ್‌ಕಾಮ್ಟ್ (೧೭೯೮-೧೮೫೩) ಅವರು ಇತಿಹಾಸ ಅಧ್ಯಯನದ ಬೆಳವಣಿಗೆಯ ಮೇಲೆ ಅಗಾಧವಾದ ಪರಿಣಾಮಗಳನ್ನು ಬೀರಿದ್ದಾರೆ. ಸರಹದ್ದನ್ನು ಗುರುತಿಸಲು ಗೆರೆಯನ್ನು ಎಳೆದಾಗ ಕಾಮ್ಟ್‌ಅವರು ಆಧುನಿಕ ಸಮಾಜಶಾಸ್ತ್ರದ ಶಿಸ್ತಿನ ಸ್ಥಾಪಕರಾಗಿ ವಿಭಾಗಿಸಲ್ಪಡುತ್ತಾರೆ. ಸಮಾಜದ ಅಧ್ಯಯನಕ್ಕೆ ಪ್ರಾಕೃತಿಕ ಅಥವಾ ನಿಶ್ಚಿತ ವಿಜ್ಞಾನಗಳ ವಿಧಿಗಳನ್ನು ಅಳವಡಿಸಿ ಕೊಳ್ಳುವುದು ಅವರ ಉದ್ದೇಶವಾಗಿತ್ತು. ಸಮಾಜದ ಅಧ್ಯಯನಕ್ಕೆ ಇತಿಹಾಸವು ಅವಶ್ಯಕವಾದ ಕಚ್ಚಾ ಸಾಮಾಗ್ರಿಗಳನ್ನು ಒದಗಿಸುತ್ತೆಂಬುದು ಅವರ ಅಭಿಪ್ರಾಯವಾಗಿತ್ತು. ಈ ಉದ್ದೇಶದಿಂದ ಅವರು ಇತಿಹಾಸದ ಅಧ್ಯಯನವನ್ನು ಪ್ರಾರಂಭಿಸಿದರು. ಇತಿಹಾಸದ ಬೆಳವಣಿಗೆಯಲ್ಲಿ ಅಡಕವಾಗಿರುವ ನಿಯಮಗಳನ್ನು ಅವರು ಅರಸುತ್ತಿದ್ದರು. ಈ ನಿಯಮಗಳು ಮುಂಬರುವ ಘಟನೆಗಳ ಗೆರೆಯನ್ನು ನಿರ್ಧರಿಸಲು ಮಾನವನಿಗೆ ನೆರವಾಗುತ್ತದೆಂದು ಅವರು ಭಾವಿಸಿದ್ದರು. ಅವರ ಪ್ರಮುಖ ಗ್ರಂಥಗಳಲ್ಲಿ ದಿ ಕೋರ್ಸ್‌ ಆಫ್‌ ಪಾಸಿಟಿವಿಸ್ಟ್ ಫಿಲಾಸಫಿ (೧೮೩೦-೧೮೪೨) ಮತ್ತು ಸಿಸ್ಟಂ ಆಫ್‌ ಪಾಸಿಟಿವಿಸ್ಟ್ ಪಾಲಿಟಿಕ್ಸ್ (೧೮೫೧-೧೮೫೪) ಇವುಗಳನ್ನು ಹೆಸರಿಸಬಹುದು. ಮಾನವನ ಸಮಾಜವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಬಹುದೆಂದು ಈ ಗ್ರಂಥಗಳಲ್ಲಿ ಪ್ರತಿಪಾದಿಸಿದ್ದಾರೆ. ಈ ನಿಶ್ಚಿತತೆಯಿಂದ (Positivism) ಆಧುನಿಕ ಸಮಾಜಶಾಸ್ತ್ರ ಉದಯಿಸಿತು.

ತಮ್ಮ ತತ್ವಜ್ಞಾನಗಳಲ್ಲಿ ಕಾಮ್ಟ್‌ ಅವರು ಸಮಸ್ತ ಜ್ಞಾನ ಮತ್ತು ಕ್ರಿಯೆಗಳನ್ನು ಒಳಗೊಂಡ ಪರಿಪೂರ್ಣ ಹಾಗೂ ವ್ಯಾಪಕವಾದ ಸಿದ್ಧಾಂತವನ್ನು ಪರಿಷ್ಕೃತ ಮಾಡುವ ಒಂದು ಪರಿಶ್ರಮದ ಪ್ರಯತ್ನವನ್ನು ಮಾಡಿದರು. ಆದರೆ ವಿಶೇಷವಾದ ಅಮೂಲ್ಯ ನಿಯಮಗಳನ್ನು ಶೋಧಿಸುವುದರಲ್ಲಿ ಅಥವಾ ಪ್ರತ್ಯೇಕವಾದ ಭಾವನೆಗಳನ್ನು ಸ್ಪಷ್ಟೀಕರಿಸುವಲ್ಲಿ ಅಥವಾ ಸತ್ಯಗಳನ್ನು ವಿವರವಾಗಿ ಅಧ್ಯಯನ ಮಾಡಲು ಒಂದು ಸ್ವತಂತ್ರವಾದ ಘಟಕವನ್ನು ಸ್ಥಾಪಿಸುವುದರಲ್ಲಿ ಅವರು ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಐತಿಹಾಸಿಕ ಆಧಾರವುಳ್ಳ ಹಾಗೂ ಅಂತಸ್ತಿಗನುಗುಣವಾಗಿ ವರ್ಗೀಕರಸಲ್ಪಟ್ಟು ಮತ್ತು ವ್ಯಾವಹಾರಿಕವಾಗಿ ಉಪಯುಕ್ತವಾದ ಚಿಂತನೆಯ ಒಂದು ವ್ಯವಸ್ಥೆಯನ್ನು ರಚಿಸುವುದು ಅವರ ಉದ್ದೇಶವಾಗಿತ್ತು.

ಸಾರ್ವತ್ರಿಕ ಸಿದ್ಧಾಂತದಲ್ಲಿ, ಇತಿಹಾಸದ ದರ್ಶನವು ವಿಜ್ಞಾನವಾಗಿ ವರ್ಗೀಕರಿಸಲ್ಪಡುತ್ತದೆ. ಎರಡನೆಯ ಹಂತದಲ್ಲಿ ಇತಿಹಾಸದ ಒಂದು ಭಾಗವು ವಿಜ್ಞಾನದಲ್ಲೂ ಮತ್ತೊಂದು ಸಮಾಜಶಾಸ್ತ್ರದಲ್ಲೂ ವರ್ಗೀಕರಿಸಲ್ಪಡುತ್ತದೆ. ಸಮಾಜಶಾಸ್ತ್ರವನ್ನು ಸಾಮಾಜಿಕ ಸಂಖ್ಯಾ ವಿಜ್ಞಾನ ಮತ್ತು ಸಾಮಾಜಿಕ ಗತಿ ವಿಜ್ಞಾನ ಎಂದು ವಿಭಾಗಿಸಲಾಗಿದೆ. ಈ ಎರಡು ಭಾಗಗಳೂ ಒಂದಕ್ಕೊಂದು ಕೂಡಿಕೆಯಾಗಿ ಅಥವಾ ಪೂರಕವಾಗಿದೆಯೆಂದು ಪರಿಗಣಿಸುವುದು ಅವಶ್ಯಕವೆಂದು ಕಾಮ್ಟ್ ಅಭಿಪ್ರಾಯ ಪಡುತ್ತಾರೆ. ಸಮಾಜಶಾಸ್ತ್ರದಲ್ಲಿ ಕಂಡು ಬರುವ ಶಿಸ್ತು, ಅಭಿವೃದ್ಧಿಯ ಭಾವನೆಗಳು, ಪ್ರಾಣಿಶಾಸ್ತ್ರದ ವ್ಯವಸ್ಥೆ ಮತ್ತು ಜೀವನದ ಭಾವನೆಗಳಿಗೆ ಸರಿಸಮಯವಾಗಿದೆ. ಈ ಎರಡನ್ನೂ ಸಂಯೋಜಿಸುವುದರಲ್ಲಿ ಕಾಮ್ಟ್ ಯಶಸ್ವಿಯಾದರೆಂದು ತಿಳಿದು ಅವರನ್ನು ಸಮಾಜಶಾಸ್ತ್ರದ ಸ್ಥಾಪಕರೆಂದು ಗುರುತಿಸಲಾಗಿದೆ.

ಈ ಮೂರು ಹಂತಗಳ ನಿಯಮಗಳು ಕ್ರಮಾನುಗತ ಹಂತಗಳಾಗಿದ್ದು, ಇವುಗಳ ಮೂಲಕ ಮಾನವನ ಮನಸ್ಸು ತನ್ನ ಇತಿಹಾಸದ ಗತಿಯಲ್ಲಿ ಸಾಗುತ್ತದೆಂದು ಅವರು ಪ್ರತಿಪಾದಿಸಿದರು. ಮೊದಲನೆಯದು ಪಾರಮಾರ್ಥ ವಿದ್ಯೆಯ ಹಂತ. ಈ ಹಂತದಲ್ಲಿ ಜಗತ್ತಿನ ಸಂಗತಿಗಳು ಮತ್ತು ಘಟನೆಗಳು ಅಲೌಕಿಕ ಮನೋಭಾವ ಅಥವಾ ದೈವವೆಂದು ಆರಾಧಿಸುವ ಸತ್ವಕ್ಕೆ ವಿಶ್ಲೇಷಿಸಲಾಗಿದೆ. ಈ ಹಂತದ ಕೆಳಸ್ತರದ ಮತ್ತು ಮಧ್ಯ ಹಂತದಲ್ಲಿ ಮಾನವನು ಸಮಸ್ತ ಬಾಹ್ಯ ವಸ್ತುಗಳನ್ನು ತನ್ನ ಸ್ವಂತ ಸಾದೃಶ್ಯದ ಮೇರೆಗೆ, ಜೀವ ಪಡೆದಿರುವವುಗಳೆಂದು ಗ್ರಹಿಸುತ್ತಾನೆ. ದೈವಜ್ಞ ವಿದ್ಯೆಯು ವಸ್ತು ಪೂಜೆ ಹಾಗೂ ಬಹು ದೇವರ ಪೂಜೆಯನ್ನು ಸಂಯೋಜಿಸುವ ಕೊಂಡಿಯಾಗಿದೆ. ಬಹು ದೇವರ ಪೂಜೆಯು ಪಾರಮಾರ್ಥ ವಿದ್ಯೆಯು ಎರಡನೆಯ ಹಂತವಾಗಿದೆ. ಅದು ಸಾಂಪ್ರದಾಯಿಕವಾಗಲೀ, ಪರಮೇಶ್ವರ ಪ್ರಭುತ್ವದ್ದಾಗಲೀ, ಅಭಿವೃದ್ಧಿ ಗೊಳ್ಳುತ್ತಿರುವುದಾಗಲೀ ಮತ್ತು ಸೈನಿಕವಾಗಲೀ ಆಗಿರದೆ ಕ್ರಮೇಣವಾಗಿ ಮಾರ್ಪಾಡು ಹೊಂದಿ ಏಕದೇವತಾ ಪೂಜೆಯ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಇದರೊಂದಿಗೆ ಮಾನವನ ಬಾಲ್ಯಾವಸ್ಥೆಯು ಅಂತ್ಯವಾಗುತ್ತದೆ. ಮೊದಲನೆಯ ಹಂತದಿಂದಲೂ ಕಾರ್ಯಪ್ರವೃತ್ತವಾಗಿದ್ದ ಆಧ್ಯಾತ್ಮ ವಿದ್ಯೆಯ ಚೇತನವು ಬಲಗೊಂಡು, ಪಾರಮಾರ್ಥ ವಿದ್ಯೆಯನ್ನು ಬದಿಗೊತ್ತಿ ಆಧ್ಯಾತ್ಮ ವಿದ್ಯೆಯ ಅವಸ್ಥೆಯನ್ನು ಸ್ಥಾಪಿಸುತ್ತದೆ. ಪಾರಮಾರ್ಥ ವಿದ್ಯೆಯು ಅಂತ್ಯಗೊಂಡ ಮೇಲೆ ಮಾನವನ ಬುದ್ಧಿಶಕ್ತಿಯು ಮತ್ತೊಂದು ರೂಪದಲ್ಲಿ ಒಳ ಸೇರುತ್ತದೆ.

ಈ ಎರಡನೆಯ ಹಂತದಲ್ಲಿ ಅಲೌಕಿಕ ಕರ್ತರಿಗೆ ಬದಲಾಗಿ ಗೂಢ ಶಕ್ತಿಗಳನ್ನು ಬದಲು ಇಡಲಾಗುತ್ತದೆ. ಅದ್ಭುತ ವಸ್ತುಗಳು ಆ ವಸ್ತುಗಳಲ್ಲಿರುವ ಕಾರಣಗಳು ಮತ್ತು ಅವಶ್ಯಕ ಗುಣಗಳಿಂದ ಉಂಟಾಗುವುವೆಂದು ಇಲ್ಲಿ ಭಾವಿಸಲಾಗಿದೆ. ಮೊದಲನೆಯ ಹಾಗೂ ಅಂತ್ಯದ ಹಂತದ ಕಾರಣಗಳನ್ನು ಅರಿಯಲು ಮನಸ್ಸು ಕಾತುರವಾಗಿರುತ್ತದೆ. ಆದರೆ, ಇವುಗಳ ಅರಿವನ್ನು ಪಡೆಯುವುದು ಸಾಧ್ಯವಿಲ್ಲವೆಂಬುದನ್ನು ನಿಧಾನವಾಗಿ ಹಾಗೂ ಕ್ರಮೇಣದಲ್ಲಿ ಅದು ಗುರುತಿಸಲು ಪ್ರಾರಂಭಿಸುವುದು. ಆದ್ದರಿಂದ ಅದು ಕೊನೆಯ ಹಂತವಾದ ನಿಶ್ಚಿತ ವಿಜ್ಞಾನವನ್ನು (Positive Science) ತಲುಪುತ್ತದೆ. ಈ ಹಂತದಲ್ಲಿ ಮನಸ್ಸು ಬಾಲ್ಯ ಮತ್ತು ಯೌವನಾವಸ್ಥೆಯ ಭ್ರಮೆಗಳನ್ನು ತ್ಯಜಿಸುತ್ತದೆ. ಪ್ರಕೃತಿಯನ್ನು ಅತಿಶಯಿಸಬಹುದೆಂಬ ಹಾಗೂ ಜಗತ್ತಿನ ಮೊದಲ ಹಾಗೂ ಅಂತಿಮ ಕಾರಣಗಳನ್ನು ಅರಿಯಬಹುದೆಂಬ ಚಪಲವನ್ನು ತೊರೆಯುತ್ತದೆ. ಅನುಭವಗಳು ಹೇಳಬಹುದಾದ ವಸ್ತುಗಳು ಅಥವಾ ವಿಷಯಗಳನ್ನು ವಿಚಾರಣೆ ಮಾಡಲು ಸಾಧ್ಯವೆಂಬುದನ್ನು ಅದು ಮನಗಾಣುತ್ತದೆ. ಇದು ಒಂದು ರೀತಿಯ ಕಲಿತ ಅಜ್ಞಾನಾವಸ್ಥೆಯಾಗಿದೆ. ಈ ಸ್ಥಿತಿಯಲ್ಲಿ ಬುದ್ಧಿಶಕ್ತಿಯು ತನ್ನ ಮಿತಿಗಳನ್ನು ಸ್ಪಷ್ಟವಾಗಿ ಮತ್ತು ಶೀಘ್ರವಾಗಿ ಕಂಡುಕೊಳ್ಳುತ್ತದೆ. ಈ ಮಿತಿಗಳ ಮೇಲೆ ನಿಶ್ಚಿತ ವಿಜ್ಞಾನಗಳು ರೂಪುಗೊಳ್ಳುತ್ತವೆ. ಇವುಗಳಾಚೆ ಪರಮಾರ್ಥ ವಿದ್ಯೆ ಮತ್ತು ಆಧ್ಯಾತ್ಮ ವಿದ್ಯೆಯನ್ನು ಕಾಣಬಹುದು.

ಧಾರ್ಮಿಕ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ – ಈ ಮೂರು ವಿಧಾನಗಳಲ್ಲಿ ವಸ್ತುಗಳನ್ನು ಪರೀಕ್ಷಿಸಬಹುದೆಂಬುದು ನಿಜ. ಆದರೆ ಈ ಮೂರು ಕೋನಗಳಿಂದ ಪರೀಕ್ಷಿಸುವುದು ಮತ್ತು ಅವುಗಳನ್ನು ಸಾಧಿಸುವುದು ಮನಸ್ಸಿಗೆ ಸಹಜವಾದುದು. ಆದರೆ ಅವು ಮೂರು ಹಂತಗಳಾಗಲೀ ಅಥವಾ ಅವಸ್ಥೆಗಳಾಗಲೀ ಅಲ್ಲ. ಅವು ಮೂಲದಲ್ಲಿ ಏಕಕಾಲಿಕವಾಗಿರುತ್ತದೆ ಮತ್ತು ಬೆಳವಣಿಗೆಯಲ್ಲಿ ಸಮಾನಾಂತರವಾಗಿರುತ್ತವೆ.

ಮಾನವನು ತನ್ನ ಬೆಳವಣಿಗೆಯನ್ನು ಧರ್ಮದಿಂದ ಆರಂಭಿಸಿದನೆಂದು ಕಾಮ್ಟ್ ನಂಬಿದ್ದಾರೆ. ಧರ್ಮಕ್ಕಿಂತ ಹಿಂದೆ ಒಂದು ಹಂತ – ವಸ್ತು ಪೂಜೆ – ಇದ್ದಿತೆಂಬ ವಾದವನ್ನು ಅವರು ಒಪ್ಪುವುದಿಲ್ಲ. ಆಗ ಮಾನವನು ನಿಶ್ಚಿತವಾದ ಊಹನೆಗಳನ್ನು ಹೊಂದಿರಲಿಲ್ಲವೇ? ಎಂದು ಅವರು ಪ್ರಶ್ನಿಸುತ್ತಾರೆ. ಮಾನವನ ಇತಿಹಾಸದ ಆರಂಭದೊಂದಿಗೆ ನಿಶ್ಚಿತವಾದ ಊಹನೆಗಳು ಆರಂಭವಾದವು ಮತ್ತು ಇತಿಹಾಸದ ಮುಂದುವರಿಕೆಯೊಂದಿಗೆ ಅವುಗಳೂ ಬೆಳೆಯುತ್ತವೆ. ಆಧ್ಯಾತ್ಮ ವಿದ್ಯೆಯು ಸಮಗ್ರ ಪಾರಾಮಾರ್ಥ ವಿದ್ಯಾವಸ್ತೆಯಲ್ಲಿ ಪಸರಿಸಿತ್ತು. ಪ್ರಾಚೀನ ಭಾರತ ಮತ್ತು ಗ್ರೀಸ್ ರಾಷ್ಟ್ರಗಳು ಆಶ್ಚಾರ್ಯಾತೀತವಾದ ಮಾರ್ಮಿಕ ಆಧ್ಯಾತ್ಮ ವಿದ್ಯೆಯು ಹೆಚ್ಚು ಕಲ್ಪನಾತೀತವಾದ ಬಹುದೇವತಾ ಆರಾಧನೆಯೊಂದಿಗೆ ಜೊತೆಯಲ್ಲಿದ್ದುದ ನಿಸ್ಸಂಶಯವಾದ ನಿದರ್ಶನವಾಗಿದೆ.

ಪಾರಮಾರ್ಥ ವಿದ್ಯೆ, ಆಧ್ಯಾತ್ಮ ವಿದ್ಯೆ ಮತ್ತು ನಿಶ್ಚಿತವಾದ ಊಹನೆಗಳು ಅತಿ ಪ್ರಾಚೀನ ಕಾಲದಿಂದ ಇಂದಿನವರೆಗೂ ಜೊತೆ ಜೊತೆಯಲ್ಲಿ ಅಸ್ತಿತ್ವದಲ್ಲಿರುವುದು ಕಂಡು ಬಂದಿವೆ. ಅವುಗಳಲ್ಲಿ ಯಾವೊಂದೂ ಅಂತ್ಯಗೊಳ್ಳಲಿಲ್ಲ. ಪಾರಮಾರ್ಥ ಹಾಗೂ ಆಧ್ಯಾತ್ಮಿಕ ವಿದ್ಯೆಗಳು ಸ್ಪಷ್ಟವಾಗಿ ತನ್ನ ಆಸ್ತಿಯೆಂದು ಇತಿಹಾಸ ಮೊರೆಯಿಡಲಾರದು. ಅವು ನಿಶ್ಚಿತ ವಿಜ್ಞಾನಕ್ಕೆ ಉಪಕ್ರಮದ ಅವಸ್ಥೆಯಾಗಿದೆ. ಇದು ಪ್ರಕೃತಿಯನ್ನು ವಿವರಿಸಲು ಮನಸ್ಸು ಶೈಶವಾವಸ್ಥೆಯಿಂದ ಪರಿಪಕತ್ವೆಯನ್ನು ಪಡೆಯುವ ಹಂತಗಳಾಗಿವೆ. ಅವು ಏಕ ಕಾಲದಲ್ಲಿ ಆರಂಭಿಸಿ ಇತಿಹಾಸದಾದ್ಯಂತ ಜೊತಯೆಲ್ಲಿ ಬೆಳೆದವು.ಇತಿಹಾಸ ಮತ್ತು ಈ ಹಂತಗಳ ಜನನ ಏಕ ಕಾಲದಲ್ಲಾಯಿತು. ಅವುಗಳ ಅಂತ್ಯವನ್ನು ದಾಖಲು ಮಾಡುವ ಕಾಲ ಬಂದಿಲ್ಲ.

ಮಾನವ ಜನಾಂಗದ ಪ್ರಾಚೀನ ಇತಿಹಾಸದಲ್ಲಿ ವಸ್ತುಗಳ ಮೂರು ಅತಿ ಮುಖ್ಯವಾದ ಅವಲೋಕನಗಳು ಸ್ಪಷ್ಟವಾಗಿ ವ್ಯಕ್ತೀಕರಿಸಲ್ಪಟ್ಟಿಲ್ಲ. ಅವು ಒಟ್ಟಿಗೆ ಸಂಯೋಜಿಸಲ್ಪಟ್ಟಿದ್ದು ಅವುಗಳ ಬೆಳವಣಿಗೆ ತೊಡಕಿನಲ್ಲಿ ಸಿಕ್ಕಿವೆ. ಆದರೆ ಇಲ್ಲಿ ಅಭಿವೃದ್ಧಿಯ ಪರಿಣಾಮವೆಂದರೆ ಎಲ್ಲೆಡೆಯೂ ಅವುಗಳ ಅಂತರವನ್ನು ತೋರಿಸುವಿಕೆ. ವಾಸ್ತವವಾಗಿ ಯಥಾರ್ಥವಾಗಿ ವ್ಯತಿರಿಕ್ತವಾದ ವಸ್ತುಗಳು ಅಧಿತ್ಯ ಸ್ವಂತ ವಲಯಗಳಲ್ಲಿ ಅವುಗಳ ಸೇರ್ಪಡೆ ಮತ್ತು ಇತರರೊಂದಿಗೆ ಅವುಗಳ ನಿರಾಕರಣೆ – ಹೀಗೆ ಪರಸ್ಪರ ಕ್ರಿಯೆಗಳುಂಟಾಗುತ್ತಿರುತ್ತವೆ.

ಕಾಮ್ಟ್ ಅವರ ಮೂರು ಹಂತಗಳು ನಿಶ್ಚಿತವಾದ ಊಹನೆಗಳ ನಿಜವಾದ ಶಿಸ್ತುಕ್ರಮವಾಗಿದೆ. ಪ್ರತಿಕ್ರಮವನ್ನೂ ಪಾರಮಾರ್ಥ ವಿದ್ಯೆ ಅಥವಾ ಆಧ್ಯಾತ್ಮಿಕ ವಿದ್ಯೆಯು ಮಧ್ಯ ಪ್ರವೇಶದಿಂದ ವಿಮುಕ್ತಿಗೊಳಿಸಬೇಕು. ತನಗೆ ಸಂಬಂಧವಿಲ್ಲದುದನ್ನು ಬಹಿಷ್ಕರಿಸುವುದು ಅವುಗಳಿಗೆ ಉಪಯುಕ್ತವಾಗುತ್ತದೆ. ಈ ಸಮಸ್ತ ವಿಜ್ಞಾನದಡಿಯಲ್ಲಿ ಆಧ್ಯಾತ್ಮಿಕ ವಿದ್ಯೆಯೂ, ಅವುಗಳ ಮೇಲೆ ಪಾರಮಾರ್ಥ ವಿದ್ಯೆ ಇರುತ್ತದೆ. ಅವುಗಳಿಗಿರುವ ನಿಕಟ ಸಂಬಂಧದಿಂದ ಸಮಾಜದ ಅಭಿವೃದ್ಧಿಯು ನಿಜವಾದ ಆಧ್ಯಾತ್ಮ ವಿದ್ಯೆ ಮತ್ತು ನಿಜವಾದ ಪಾರಮಾರ್ಥ ವಿದ್ಯೆಯ ವಲಯಗಳಿಗೆ ಪಸರಿಸುತ್ತದೆ. ಅವುಗಳು ಕೇವಲ ಅಂತ್ಯಗೊಳ್ಳುವ ಚಿಂತನೆಯ ಮಜಲುಗಳು. ಮಾನವನ ಶೈಶಾವಸ್ಥೆ ಮತ್ತು ಯೌವನಾವಸ್ಥೆಯ ಭ್ರಮೆಗಳು ಮತ್ತು ಅವುಗಳಿಗೆ ಹೊಂದಿಕೆಯಾಗುವ ಸತ್ಯದ ವಲಯಗಳನ್ನು ಹೊಂದಿಲ್ಲದವು ಎಂಬುದನ್ನು ಸಮರ್ಥಿಸುವಲ್ಲಿ ಕಾಮ್ಟ್ ವಿಫಲರಾಗಿದ್ದಾರೆ. ಇತಿಹಾಸದ ಪ್ರಮಾಣವು ಬೇರೆಯ ರೀತಿಯಲ್ಲಿರುತ್ತವೆ. ಅಸ್ತಿತ್ವದ ನಿಜವಾದ ಅವಲೋಕನೆಗಳನ್ನು ಅವು ಪ್ರತಿನಿಧಿಸುತ್ತವೆ ಮತ್ತು ಮಾನವನ ಹೃದಯದ ನಿತೃವಾದ ಮಹತ್ವಾಕಾಂಕ್ಷೆಗಳಿಗೆ ಎಡೆ ತೋರುತ್ತವೆ ಎಂದು ಇತಿಹಾಸವು ಸದಾ ಕಾಲವೂ ಭರವಸೆ ನೀಡುತ್ತದೆ.

ನಿಶ್ಚಿತವಾದ ವಿಜ್ಞಾನವು ಪಾರಮಾರ್ಥ ವಿದ್ಯೆ ಮತ್ತು ಆಧ್ಯಾತ್ಮಿಕ ವಿದ್ಯೆ ಇವುಗಳ ಅವಸ್ಥೆಯ ಮೂಲಕ ಆಯಿತೆಂಬುದು ಭಾಗಶಃ ನಿಜವಾಗಿದೆ. ಮೊದಲಿನಿಂದಲೂ ಈ ನಿಶ್ಚಿತವಾದ ಊಹನೆ ಇದ್ದಿರಬಹುದು. ಆಹಾರ ಮತ್ತು ಬೆಂಕಿ, ಬಾಣ ಮತ್ತು ಬಿಲ್ಲು ಮೊದಲಾದವುಗಳು ಜೀವವನ್ನು ಹೊಂದಿರುವವೆಂದು ಅನೇಕ ಬುಡುಕಟ್ಟುಗಳು ನಂಬಿದ್ದರೂ, ಅವುಗಳನ್ನು ಉಪಯೋಗಿಸಲು ಅವರು ಆ ವಸ್ತುಗಳ ನಿಶ್ಚಿತವಾದ ಸಮಕಟ್ಟುಗಳಿಗೆ ಗಮನ ಹರಿಸಬಹುದು. ಇದು ಎಷ್ಟು ಸ್ಪಷ್ಟವಾಗಿದೆ ಎಂದರೆ ಕಾಮ್ಟ್‌ಮತ್ತು ಅವರ ಅನುಯಾಯಿಗಳು ಅವುಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲವಾಗಿದೆ. ಆದಾಗ್ಯೂ ಅಂತಹ ಸಂಗತಿಗಳಿಂದ ಅವರ ನಿಯಮವು ನಾಟಿಲ್ಲವೆಂದು ಹೇಳುತ್ತಾರೆ.

ಕ್ರಮಾನುಗತ ಹಾಗೂ ಜೊತೆಯಲ್ಲಿ ಅಸ್ತಿತ್ವದಲ್ಲಿರುವ ಸಂಗತಿಗಳಿಗೆ ಏಕರೂಪತೆಯ ಸಂಬಂಧಗಳಿವೆ ಎಂಬುದು ಪ್ರಕೃತಿ ನಿಯಮವಾಗಿದೆ. ಆದಾಗ್ಯೂ, ತಮ್ಮ ಅವಸ್ಥೆಗಳ ನಿಯಮಗಳನ್ನು ಪ್ರತಿಪಾದಿಸುತ್ತಾ, ಅಯೋನ್ಯವಾಗಿ ಅಸ್ತಿತ್ವದಲ್ಲಿರುವ ಈ ಮೂರು ಹಂತಗಳ ಚಿಂತನೆಯ ಇತಿಹಾಸ ವಿಕಾಸನದ ನಿಯಮವೆಂದು ಕಾಮ್ಟ್ ಪರಿಗಣಿಸುತ್ತಾರೆ. ಬೌದ್ಧಿಕ ಬೆಳವಣಿಗೆಯೇ ಇತಿಹಾಸದ ಏಕಮಾತ್ರ ಬೆಳವಣಿಗೆಯಾಗಿತ್ತೆಂಬುದನ್ನು ಕಾಮ್ಟ್‌ಅರಿತಿದ್ದರು. ಮಾತ್ರವಲ್ಲ, ಐಗಾರಿಕೆ, ನೈತಿಕತೆ, ಲಲಿತ ಕಲೆ, ವಿಜ್ಞಾನ ಮತ್ತು ಬೌದ್ಧಿಕ ಬೆಳವಣಿಗೆಗಳ ಇರುವಿಕೆ ಅವರಿಗೆ ತಿಳಿದಿತ್ತು. ಅವುಗಳ ಗತಿಯನ್ನು ಎಚ್ಚರಿಕೆಯಿಂದ ಹಾಗೂ ಮಹತ್ವದ ಯಶಸ್ಸಿನಿಂದ ಶೋಧಿಸಿದ್ದಾರೆ. ಇತಿಹಾಸದ ತತ್ವಜ್ಞಾನವನ್ನು ಗ್ರಹಿಸಲು ಯಾವುದಾದರೂ ಒಂದರ ಅವಶ್ಯಕತೆಯನ್ನು ಮನಗಂಡರು. ವಿಶೇಷ ಬೆಳವಣಿಗೆಯನ್ನೊಳಗೊಂಡ ಸಾರ್ವತ್ರಿಕ ಬೆಳವಣಿಗೆ ಇರಬೇಕೆಂದು ಅವರು ಸೂಚಿಸಿದರು. ಈ ಬೆಳವಣಿಗೆಯು ಕೇವಲ ಬೆಳವಣಿಗೆಯ ಹಂತವಾಗಿರದೆ, ಮೊದಲಿನಿಂದ ಕೊನೆಯವರೆಗೆ ಅದನ್ನು ವ್ಯಾಪಿಸಿರುವ ಮತ್ತು ಪರಸ್ಪರ ಸಮಾನಾಂತರವಾಗಿರುವ ಚಳವಳಿಗಳಾಗಿರಬೇಕಿತ್ತು. ಸಾಮಾಜಿಕ ವಿಕಸನದ ವಸ್ತುಗಳು ಸಂಬಂಧವನ್ನು ಪಡೆದಿರುತ್ತವೆ ಎಂಬುದನ್ನು ಮನಗಂಡರು. ಅದು ಇತಿಹಾಸದ ತತ್ವಜ್ಞಾನದ ರಚನೆಗೆ ಅತ್ಯಾವಶ್ಯಕವೆಂದು ಪರಿಗಣಿಸಿದರು. ಸಮಾಜದ ಇತಿಹಾಸವನ್ನು ಮಾನವನ ತಿಳುವಳಿಕೆಯ ಇತಿಹಾಸದೊಂದಿಗೆ ಕ್ರಮ ಪಡಿಸಬೇಕೆಂದು ಅವರು ವಾದಿಸಿದರು. ಸಮಾಜದ ಗತಿಯನ್ನು ನಿರ್ಧರಿಸುವುದನ್ನು ಮತ್ತು ಮಾರ್ಗದರ್ಶನವನ್ನು ನೀಡುವುದು ಚಿಂತನೆ ಎಂದು ಅವರು ಅಭಿಪ್ರಾಯಪಟ್ಟರು.

ಈ ನಿಯಮವನ್ನು ಅನುಸರಿಸಿದರೂ, ಒಂದು ಹೊಸ ಧರ್ಮವನ್ನು ಸ್ಥಾಪಿಸಲು ಯತ್ನಿಸಿ ಸ್ವತಃ ಪ್ರತ್ಯಕ್ಷ ವಿರೋಧದಲ್ಲಿ ಸಿಲುಕಿಕೊಂಡರು. ವಸ್ತು ಪೂಜೆ, ನಾಸ್ತಿಕತೆ, ಸಂಪ್ರದಾಯತೆ ಮತ್ತು ವಿಜ್ಞಾನದ ಒಂದು ಅಸಾಧಾರಣ ಸಂಮಿಶ್ರಣವೇ ಈ ಹೊಸ ಧರ್ಮವಾಗಿತ್ತು. ಇದಕ್ಕೆ ‘ನರಕುಲ ಧರ್ಮ’ ಎಂದು ಹೆಸರಿಟ್ಟರು. ಮಾನವನು ಧರ್ಮವನ್ನು ವರ್ಜನೆ ಮಾಡುವುದಾಗಲೀ ಅಥವಾ ನಿಶ್ಚಿತತೆಯ ತತ್ವಜ್ಞಾನದ ತಳಹದಿಯ ಮೇಲೆ ಹೊಸ ಧರ್ಮವನ್ನು ರಚಿಸುವುದಾಗೀ ಸಾಧ್ಯವಿಲ್ಲವೆಂದೂ, ನಿಶ್ಚಿತತಾ ಧರ್ಮವು ಕೇವಲ ಕವಿತೆಯ ಕಟ್ಟು ಕಥೆಯ ಮೇಲೆ ಸ್ಥಾಪಿತವಾಗಿದೆ ಎಂಬ ಅಂಶವನ್ನು ಭಾಗಶಃ ಒಪ್ಪಿಕೊಂಡಂತೆ ಆಗುತ್ತದೆ. ಮಾನವನು ತನ್ನ ಬಲ್ಯಾವಸ್ಥೆಯ ಧರ್ಮದ ರೂಪಕ್ಕೆ ಹಿಂತಿರುಗುವುದು ಮತ್ತು ಸುಧಾರಿಸಿದ ಹಾಗೂ ವ್ಯಾಪಕವಾದ ಅರಿವುಳ್ಳ ಸ್ವೀಕಾರವು ಇತಿಹಾಸದ ಬೆಳವಣಗೆಯ ಅಂತಿಮ ಪರಿಣಾಮವೆಂದು ಕಾಮ್ಟ್ ಅಭಿಪ್ರಾಯಪಡುತ್ತಾರೆ.

ಒಂದು ವ್ಯವಸ್ಥಿತವಾದ ಮಾನಸಿಕ ಶಕ್ತಿಯನ್ನು ರಚಿಸುವುದು ಕಾಮ್ಟ್‌ರ ಅಂತರಾಳದ ಆಶಯವಾಗಿತ್ತು. ಸಮಾಜದ ಪುನರ‍್ರಚನೆಯು ಅವರ ಜೀವನದ ಪ್ರಮುಖ ಉದ್ದೇಶವಾಗಿತ್ತು. ಒಂದು ಹೊಸ ವಿಧದ ಶಿಕ್ಷಣದ ಅವಶ್ಯಕ ಆಧಾರವಾಗಿ ತಮ್ಮ ನಿಶ್ಚಿತ ತತ್ವಜ್ಞಾನವನ್ನು (Positivisit Philosphy) ಬೆಳೆಸಿದರು. ಈ ಶಿಕ್ಷಣವು ಒಂದು ನೂತನ ಸಾಮಾಜಿಕ ಶಿಸ್ತಿನ ನೆಲಗಟ್ಟಾಗಿತ್ತು. ಸಂತ ಪಾಲರು ತಮ್ಮ ಕ್ರೈಸ್ತ ಧರ್ಮೀಯರಿಗೆ ಸಲ್ಲಿಸಿದಂತೆ ಕಾಮ್ಟ್‌ರು ತಮ್ಮ ಜನಾಂಗಕ್ಕೆ ಸೇವೆ ಸಲ್ಲಿಸಲು ಬಯಸಿದಿರು. “ತನ್ನ ತಾತ್ಕಾಲಿಕ ಸೇವೆಗಳನ್ನು ಮರೆಯದೆ ಮಾನವ ಕುಲವು ನಿಶ್ಚಯವಾಗಿ ದೇವರನ್ನು ಪ್ರತಿನಿಧಿಸುತ್ತದೆ” ಎಂದು ಕಾಮ್ಟ್‌ಬರೆದರು. ದೇವರು ಕಲ್ಪಿತವೆನ್ನುವ ವಿಚಾರಕ್ಕೆ ಅವರು ಅಸಮ್ಮತಿಸಿದರು. ಅಲ್ಲದೆ ವ್ಯಕ್ತಿಗಳು ತಮ್ಮ ಭವಿಷ್ಯ ಜೀವನದ ಬಗ್ಗೆ ನಿಜವಾದ ಅರಿವನ್ನು ಹೊಂದಿರುತ್ತಾರೆಂಬ ಭಾವನೆಯನ್ನು ಸಹ ಅವರು ನಿರಾಕರಿಸಿದರು. ಅವರ ತತ್ವವು ಇತರರ ಹೃದಯಗಳಲ್ಲಿ ಮತ್ತು ಮನಸ್ಸಿನಲ್ಲಿ ಅರಿವಿಲ್ಲದ, ಆದರೆ ಚಿರಕಾಲಿಕ ಜೀವನದಲ್ಲಿ ಮಾತ್ರ ಸಂಗತವಾಗಿರುತ್ತದೆಂದು ಅವರು ಅಭಿಪ್ರಾಯಪಟ್ಟರು. ಇತಿಹಾಸವು ಯುದ್ಧದ ಸ್ಥಿತಿಗಳಿಂದ ಶಾಂತಿಯುತ ಕೈಗಾರಿಕೆಯ ಮುನ್ನಡೆ ಎಂದು ಅವರು ವಿವರಿಸಿದರು. ಆಧುನಿಕ ಇತಿಹಾಸದಲ್ಲಿ ಸಾಮುದಾಯಿಕ ವೈಜ್ಞಾನಿಕ ಚಿಂತನೆ ಮತ್ತು ಕೈಗಾರಿಕೆಯ ವ್ಯಾಪಕರತೆ ಮಾನವನನ್ನು ವಿಶ್ವಶಾಂತಿಯ ಕಡೆಗೆ ಮುನ್ನಡೆಸುತ್ತದೆ. ಅವರ ಪ್ರಕಾರ, “ನೈತಿಕ ಸುಧಾರಣೆಯು ಮಾನವನ ವಿಶೇಷ ಪ್ರಯತ್ನದ ಮುಖ್ಯ ಗುರಿ ಹಾಗೂ ಉದ್ದೇಶವಾಗಿದೆ.” ಈ ಸದಾಚಾರದ ಅರ್ಥ “ಇತರಿಗಾಗಿ ಜೀವಿಸುವುದಾಗಿದೆ.”

ಕಾಮ್ಟ್‌ರ ವಿಮರ್ಶೆಯು ವಿಜ್ಞಾನದ ಸ್ವಭಾವದ ಬಗ್ಗೆ ತಮ್ಮ ದೃಷ್ಟಿಯನ್ನು ಇತಿಹಾಸಕ್ಕೆ ಹೊಂದಿಸುವ ಪ್ರಯತ್ನವಾಗಿದೆ. ಪಾರಮಾರ್ಥಿಕ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ವಿದ್ಯೆಗಳು ಪರಸ್ಪರ ಸಂಪರ್ಕವಿಲ್ಲದೆ ಇರುವುದಿಲ್ಲ. ಇವು ಚಿಂತನೆ ಮತ್ತು ಜೀವನದ ಶಾಶ್ವತವಾದ ಪ್ರಮುಖ ಅವಲೋಕನೆಗಳಾಗಿವೆ ಎಂಬುದನ್ನು ಇತಿಹಾಸವು ವ್ಯಕ್ತಪಡಿಸುತ್ತದೆ. ನಿಶ್ಚಿತತೆಯ ತೊಡರುಗಳನ್ನು ಅರಿಯುವಲ್ಲಿ ಮತ್ತು ವೈಜ್ಞಾನಿಕ ಸಾಂದ್ರತ್ವದಿಂದ ಮಾನವ ಕುಲದ ಧರ್ಮವನ್ನು ಸ್ಥಾಪಿಸುವಲ್ಲಿ ಅವರು ಮೊದಲಿಗರಾಗಿದ್ದಾರೆ.

ನೆಬರ್

ನೆಬರ್ ಇತಿಹಾಸವನ್ನು ಒಂದು ಅಧೀನದ ಸ್ಥಾನದಿಂದ ಸ್ವತಂತ್ರ ವಿಜ್ಞಾನದ ಗೌರವಕ್ಕೆ ಎತ್ತಿದರಲ್ಲದೆ ಮುಂದಿನ ಪೀಳಿಗೆಯ ಪ್ರಸಿದ್ಧ ಇತಿಹಾಸಕಾರರಿಗೆ ಮಾದರಿ ಹಾಗೂ ಸ್ಫೂರ್ತಿಯನ್ನು ಒದಗಿಸಿದರು.

ಪ್ರಸಿದ್ಧ ಪ್ರವಾಸಿಗನ ಮಗನಾದ ಅವರು ತಂದೆಯ ಒಳಗಾಗಿದ್ದರು. ಅವರು ನಮ್ಮ ತಂದೆಯ ಜೊತೆ ಈಜಿಫ್ಟ್‌, ಸಿರಿಯ, ಅರೇಬಿಯ, ಇಂಡಿಯ, ಪರ್ಷಿಯ, ಬಾಗ್ದಾದ್ ಮತ್ತು ಪ್ಯಾಲಸ್ಟೈನ್ ದೇಶಗಳ ವಿಶೇಷ ಕಾರ್ಯಯಾತ್ರೆಗಳಲ್ಲಿ ಪಾಲ್ಗೊಂಡಿದ್ದರು. ಹಲವು ಭಾಷೆಗಳನ್ನು ಅರಿತ ಅವರು ಇತಿಹಾಸದ ಅಧ್ಯಯನಕ್ಕೆ ಒಲವು ತೋರಿದರು.

ಭೌಗೋಳಿಕ ಅನ್ವೇಷಣೆಯ ಕಾರ್ಯವನ್ನು ಮುಂದುವರಿಸಬೇಕೆಂಬುದು ಅವರ ತಂದೆಯವರ ಅಪೇಕ್ಷೆಯಾಗಿತ್ತು. ಅದನ್ನು ವಿರೋಧಿಸಿದ ಅವರ ತಾಯಿಯವರಿಗೆ ಮಗನು ರಾಜ್ಯತತಂತ್ರಜ್ಞನಾಗಬೇಕೆಂಬ ಹಂಬಲವನ್ನು ಹೊಂದಿದ್ದರು. ಆದರೆ ನೆಬರ್‌ಇತಿಹಾಸವನ್ನು ಆಯ್ದುಕೊಂಡರು. ತಮ್ಮ ೧೯ನೆಯ ವಯಸ್ಸಿನಲ್ಲಿ ಹೀಗೆ ಬರೆದರು: “ನನ್ನ ಹೆಸರು ಜೀವಂತವಾಗಿ ಉಳಿಯಬೇಕಾದರೆ ಅದು ಒಬ್ಬ ಇತಿಹಾಸಕಾರನಾಗಿ ಮತ್ತು ಅಂತಾರಾಷ್ಟ್ರೀಯ ನೀತಿ ವಿಮರ್ಶಕನಾಗಿ, ಕ್ಲಾಸಿಕ್ ಮತ್ತು ಭಾಷಾ ಶಾಸ್ತ್ರಜ್ಞರಾಗಿ.” ಕಿಯಲ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ, ನ್ಯಾಯಶಾಸ್ತ್ರ ಮತ್ತು ಇತಿಹಾಸವನ್ನು ಅಧ್ಯಯನ ಮಾಡಿದರು. ಪ್ರಾಚೀನ ಜಗತ್ತಿನ ಸಮಸ್ಯೆಗಳು ಅವರಿಗೆ ಅರಿವಾದುದು ಆಗಲೇ. ಅವರ ಕಲಿಕೆಗೆ ಕೊನೆಯಿರಲಿಲ್ಲ.

ಅವರು ಅಧ್ಯಯನವು ಪೂರ್ಣಗೊಂಡ ಮೇಲೆ ಡೇನಿಶ್ ವಿತ್ತ ಸಚಿವರ ಆಪ್ತ ಕಾರ್ಯದರ್ಶಿಯಾಗಿ ನೇಮಕಗೊಂಡರು. ಬ್ರಿಟನ್ನಿಗೆ ಭೇಟಿಯಿತ್ತಾಗ ಅಲ್ಲಿನ ಆಡಳಿತ ವಿಧಾನಗಳ ಪರಿಜ್ಞಾನವನ್ನು ಪಡೆದುಕೊಂಡರಲ್ಲದೆ ಇಂಗ್ಲಿಷ್ ಇತಿಹಾಸ ಮತ್ತು ಅಲ್ಲಿನ ಸ್ಥಿತಿಗತಿಗಳ ಒಳನೋಟವನ್ನು ಪಡೆದುಕೊಂಡರು. ಡೆನ್ಮಾರ್ಕ್‌‌ನಿಂದ ಹಿಂತಿರುಗಿದ ಮೇಲೆ ಸರ್ಕಾರಿ ಸೇವೆಯಲ್ಲಿ ಸೇರ್ಪಡೆಯಾಗಿ ದೇಶದ ಆರ್ಥಿಕ ಹಾಗೂ ವಾಣಿಜ್ಯ ನೀತಿಯನ್ನು, ವಿಶೇಷವಾಗಿ ಅದರ ವಸಾಹತುಗಳ ಬ್ಯಾಂಕಿಂಗ್ ಮತ್ತು ವಾಣಿಜ್ಯವನ್ನು ಕುರಿತಂತೆ ನಿರ್ದೇಶಿಸಲಾರಂಭಿಸಿದರು. ನಂತರ ಬರ್ಲಿನ್‌ಗೆ ಹೋಗಿ ಆರ್ಥಿಕ ಹಣಕಾಸು ವ್ಯವಹಾರಗಳ ಬಗ್ಗೆ ತಮ್ಮ ಆಸಕ್ತಿಯನ್ನು ಮುಂದುವರಿಸಿದರು. ತಮ್ಮ ಸರ್ಕಾರಿ ಹುದ್ದೆಗೆ ರಜೀನಾಮೆ ನೀಡಿ ಇತಿಹಾಸದತ್ತ ತಮ್ಮ ಗಮನವನ್ನು ಹರಿಸಿದರು.

ವೃತ್ತ ಪತ್ರಿಕೆಗಳಿಂದ ಫ್ರೆಂಚ್ ಕ್ರಾಂತಿಯ ನಡೆಯನ್ನು ತಿಳಿದುಕೊಂಡರು. ಆದರೆ ಆ ಕ್ರಾಂತಿಯ ಬಗ್ಗೆ ಅವರಿಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಮಾತ್ರವಲ್ಲ, ಆ ಕುರಿತಾಗಿ ಅವರಿಗೆ ಅಪನಂಬಿಕೆ ಇತ್ತು. ಹಿಂದಿನ ಆಡಳಿತದ ದೋಷಗಳ ಅರಿವು ಅವರಿಗಿತ್ತು.

ಪ್ರಾಚೀನ ಜಗತ್ತು ಕುರಿತಾಗಿ ಅವರು ಹಲವಾರು ಕೃತಿಗಳನ್ನು ರಚಿಸಿದರು. ಅವರು ರೋಮನ್ ಇತಿಹಾಸದ ಮೇಲೆ ೧೮೧೦ ರಲ್ಲಿ ನೀಡಿದ ಉಪನ್ಯಾಸಗಳನ್ನು ೧೮೧೧-೧೨ ರಲ್ಲಿ ರೋಮನ್ ಹಿಸ್ಟರಿ ಎಂಬ ಶೀರ್ಷಿಕೆಯಲ್ಲಿ ಎರಡು ಸಂಪುಟಗಳಲ್ಲಿ ಪ್ರಕಟಿಸಲಾಯಿತು. ಅವರ ಈ ಕೃತಿಯು ಒಂದು ಹೊಸ ಯುಗವನ್ನು ತೆರೆಯಿತು. ಇದು ರೋಮನ್ ಇತಿಹಾಸದ ವ್ಯವಸ್ಥಿತವಾದ ಅಧ್ಯಯನಕ್ಕೆ ನಾಂದಿಯಾಯಿತು.

ರೋಮನ್ನರ ಉಗಮ ಮತ್ತು ರಾಜಕೀಯ ನ್ಯಾಯಶಾಸ್ತ್ರ ಮತ್ತು ಆರ್ಥಿಕ ಸಂಸ್ಥೆಗಳಲ್ಲಿನ ಅನುಕ್ರಮ ಬದಲಾವಣೆಗಳನ್ನು ಅವರು ವಿವರಿಸಿದ್ದಾರೆ. ಸರ್ಕಾರದ ಸೇವೆಯಲ್ಲಿನ ಅನುಭವ ಈ ಬದಲಾವಣೆಗಳನ್ನು ಯಥಾರ್ಥವಾಗ ಚಿತ್ರಿಸಲು ನೆರವಿಗೆ ಬಂದಿತು. ಬೇರೆ ಯಾರಲ್ಲದೆ ರಾಜ್ಯತಂತ್ರಜ್ಞನಿಗೆ ಮಾತ್ರ ರೋಮ್‌ನ ಇತಿಹಾಸವನ್ನು ರಚಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಪ್ರತಿಯೊಂದು ರಾಷ್ಟ್ರದ ಪ್ರಾಚೀನ ಇತಿಹಾಸವು ಘಟನೆಗಳಿಗಿಂತ ಸಂಸ್ಥೆಗಳ, ವ್ಯಕ್ತಿಗಳಿಗಿಂತ ವರ್ಗಗಳ, ನಿಯಮಗಳಿಗಿಂತ ಪದ್ಧತಿಗಳ ಇತಿಹಾಸವಾಗಿರಬೇಕೆಂಬ ಸತ್ಯವನ್ನು ಅವರು ಗ್ರಹಿಸಿದ್ದರು. ಇವುಗಳ ಜೊತೆಗೆ ವ್ಯವಸಾಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ವಿಮರ್ಶಿಸಿದರು.

ರೋಮ್‌ ಇತಿಹಾಸಕ್ಕೆ ಸಂಬಂಧಿಸಿದ ಆಧಾರಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಿ ಪ್ರಾಚೀನ ರೋಮನ್ ಇತಿಹಾಸದ ನಿಷ್ಕೃಷ್ಟತೆಯ ಬಗ್ಗೆ ಚರ್ಚಿಸಿದರು. ಈ ದೃಷ್ಟಿಯಿಂದ ಅವರು ಯಾರೂ ತುಳಿಯದ ಹಾದಿಯನ್ನು ಪ್ರವೇಶಿಸಿದರು. ಕವನಗಳನ್ನೂ ವಿಮರ್ಶಾತ್ಮಕವಾಗಿ ಪರೀಕ್ಷಿಸಿದರು. ಹೀಗೆ ಬೇರೆ ಬೇರೆ ತುಂಡುಗಳ ಆಧಾರದ ಮೇಲೆ ಚಿತ್ರವನ್ನು ಪೂರ್ಣಗೊಳಿಸಲು ಸಾಧ್ಯವಾಯಿತು. “ಅಂಗರಚನ ಶಾಸ್ತ್ರಜ್ಞನು ಶರೀರವನ್ನು ತುಂಡು ತುಂಡಾಗಿ ಕತ್ತರಿಸಿ ಪರೀಕ್ಷಿಸುವಂತೆ ನಾನು ಪದಗಳನ್ನು ತುಂಡು ತುಂಡು ಮಾಡಿ ಪರೀಕ್ಷಿಸುತ್ತೇನೆ” ಎಂದು ಅವರು ಹೇಳಿದ್ದಾರೆ. ಇತಿಹಾಸಕಾರನು ಕತ್ತಲೆ ಕೋಣೆಯಲ್ಲಿರುವ ಮನುಷ್ಯನಂತೆ, ಕ್ರಮೇಣ ಆತನ ಕಣ್ಣುಗಳು ಕತ್ತಲೆಗೆ ಹೊಂದಿಕೊಂಡು ಎಲ್ಲ ವಸ್ತುಗಳನ್ನೂ ಅವನು ಕಾಣಬಲ್ಲವನಾಗುತ್ತಾನೆ. ಆದರೆ ಹೊಸದಾಗಿ ಪ್ರವೇಶಿಸಿದ ವ್ಯಕ್ತಿಗೆ ಯಾವುದೂ ಕಾಣುವುದಿಲ್ಲವಲ್ಲದೆ, ಏನೂ ಕಾಣುವುದಿಲ್ಲವೆಂದು ಘೋಷಿಸುತ್ತಾನೆ ಎಂದು ಹೇಳಿದ್ದಾರೆ. ಅಂದರೆ ಇತಿಹಾಸಕಾರನು ತನ್ನ ಶಿಸ್ತಿನ ವಿಧಾನಗಳಲ್ಲಿ ನುರಿತಿರುವುದರಿಂದ ಅನೇಕ ವಿಷಯಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ಕವನಕ್ಕೆ ಸೀಮಿತವಾದ ಹಾಗೂ ಸಂಪೂರ್ಣ ಇತಿಹಾಸ ಯುಗದ ಮಧ್ಯೆ ಎಲ್ಲಾ ರಾಷ್ಟ್ರಗಳ ಇತಿಹಾಸದಲ್ಲಿಯೂ ಐತಿಹಾಸಿಕ ಮಿಥ್ಯೆಯ ಯುಗ ಇರುತ್ತದೆಂದು ಅವರು ತಿಳಿಸಿದ್ದಾರೆ. ನೆಬರ್ ಅವರ ಚಟುವಟಿಕೆಗಳು ಭಾಷಾಶಾಸ್ತ್ರದ ಎಲ್ಲ ವಿಭಾಗಗಳಿಗೂ ವಿಸ್ತರಿಸಿತ್ತು. ಬೈಜಾಂಟೈನ್ ಇತಿಹಾಸ ಆಕರಗಳನ್ನು ಸಂಗ್ರಹಿಸುವ ಕಾರ್ಯವನ್ನು ಕೈಗೆತ್ತಿಕೊಂಡರು.

ನೆಬರ್ ಅವರ ವಿಧಾನವನ್ನು ಹಲವಾರು ವಿಮರ್ಶಕರು ಪ್ರಶ್ನಿಸಿದ್ದಾರೆ. ಶ್ಲೆಗೆಲ್ ಅವರು ಲಾವಣಿಗಳ ವಿಚಾರ ಸರಣಿಯನ್ನು ನಿರಾಕರಿಸಿದರು. ಅವುಗಳು ನಿಜವಾಗಿ ಅಸ್ತಿತ್ವದ್ಲಿದ್ದಲ್ಲಿ ವ್ಯಾಖ್ಯಾನಕಾರರಾಗಲೀ, ವ್ಯಾಕರಣಕಾರರಾಗಲೀ ಉದಾಹರಿಸುತ್ತಿದ್ದರು. ಆ ರೀತಿ ಅವು ಎಲ್ಲಿಯೂ ಕಂಡುಬರುವುದಿಲ್ಲ. ಮಾತ್ರವಲ್ಲ, ಅವುಗಳ ಅಸ್ತಿತ್ವದ ಬಗ್ಗೆ ಯಾವ ಪುರಾವೆಗಳೂ ಇಲ್ಲ. ನೆಬರ್ ಅವರು ಸಮರ್ಥಿಸಿದ ಸತ್ಯ ಮತ್ತು ಊಹೆಗಳ ನಡುವೆ ವ್ಯತ್ಯಾಸ ಕಾಣಲಿಲ್ಲವೆಂದು ಮೆಕಾಲೆ ಹೇಳಿದ್ದಾರೆ. ಸ್ವಿಗ್ಲೆರ್ ಅವರು ಲಾವಣಿಗಳ ಊಹೆಯನ್ನು ನಿರಾಕರಿಸಿ, ಮಾನವ ಕುಲ ಶಾಸ್ತ್ರಕ್ಕೆ ಸಂಬಂಧಿಸಿದ ಅವರ ನಿರ್ಣಯಗಳನ್ನು ದೂರೀಕರಿಸಿ, ನೆಬರ್ ಅವರು ಪೆಟ್ರೀಸಿಯನ್ನರಿಗೆ ಅನ್ಯಾಯ ಮಾಡಿದ್ದಾರೆಂದು ದೂರಿದ್ದಾರೆ. ಆದರೆ ಅವರ ವಿಶ್ಲೇಷಣಾ ವಿಧಾನವನ್ನು ಮೆಚ್ಚಿಕೊಂಡು ರೋಮನ್ ಸಂಸ್ಥೆಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಅವರು ಮೊದಲಿಗರೆಂದು ಒಪ್ಪಿಕೊಂಡಿದ್ದಾರೆ.

ಆದಾಗ್ಯೂ, ಆಧಾರಗಳೊಂದಿಗೆ ವ್ಯವಹರಿಸುವ ರೀತಿ ಹಾಗೂ ಭಾಷಾ ಶಾಸ್ತ್ರದ ವಿಮರ್ಶೆಗೆ ಒಂದು ಹೊಸ ವಿಧಾನವನ್ನು ರೂಪಿಸಿದವರಲ್ಲಿ ನೆಬರ್ ಮೊದಲಿಗರು. ಆಧಾರಗಳನ್ನು ಅವುಗಳ ಅಂಗ ಭಾಗಗಳನ್ನು ಆಂತರಿಕ ವಿಮರ್ಶೆಗೆ ಒಳಪಡಿಸಿ ಹೇಗೆ ಕತೃವಿನ ಸಂಗತಿಗಳ ಹೇಳಿಕೆಗಳು ಅವರ ಅಭಿಪ್ರಾಯವನ್ನು ಬಾಧಿಸಿತೆಂಬುದನ್ನು ತೋರಿಸುವುದು. ಈ ರೀತಿಯ ರೂಪ ವಿಕಾರಗಳಿಗೆ ಸ್ವಲ್ಪ ಅವಕಾಶ ನೀಡಲು ಈ ವಿಧಾನ ಇತಿಹಾಸಕಾರರಿಗೆ ನೆರವಾಗುತ್ತದೆ. ಲಿವಿ ಅವರ ರೋಮನ್ ಇತಿಹಾಸವನ್ನು ವ್ಯಾಪಕವಾದ ವಿಮರ್ಶೆಗೆ ಒಳಪಡಿಸಿ ಅವರು ಹೇಗೆ ಪ್ರಾಚೀನ ರೋಮನ್ ಇತಿಹಾಸವನ್ನು ನಂತರ ಕಾಲದ ರಾಷ್ಟ್ರ ಪ್ರೇಮ ಕಥೆಗಳನ್ನು ಬಳಸಿಕೊಂಡರೆಂಬುದನ್ನು ಎತ್ತಿ ತೋರಿಸಿದರು. ಅಲ್ಲದೆ, ಆ ಕಾಲದ ಇತಿಹಾಸವು ಲಾವಣಿ ಸಾಹಿತ್ಯವನ್ನು ಹೋಲುತ್ತಿದ್ದು ಅದು ಪ್ರಾಚೀನ ರೋಮನ್ನರ ರಾಷ್ಟ್ರೀಯ ಮಹಾಕಾವ್ಯವಾಗಿದೆ ಎಂದು ಹೇಳಿದ್ದಾರೆ.

ನೆಬರ್ ಅವರ ಪ್ರಭಾವಕ್ಕೆ ಒಳಗಾಗಿದ್ದವರಲ್ಲಿ ರ‍್ಯಾಂಕೆ, ವೈಟ್ಜ ಮತ್ತು ಗ್ರೋಟ್ ಪ್ರಮುಖರು. ಮಾಂಮ್‌ಸೆನ್ ಪ್ರಕಾರ, ಎಲ್ಲ ಹೆಸರಾಂತ ಇತಿಹಾಸಕಾರರೂ ಅವರ ಶಿಷ್ಯರಾಗಿದ್ದರು.