ಸ್ಪೆಂಗ್ಲರ್ ಮತ್ತು ಟಾಯನ್‌ಬಿ
ಓಸ್ಟಾಲ್ಡ್‌ ಸ್ಪೆಂಗ್ಲರ್ ೯೧೮೮೦-೧೯೩೬)

ತಮ್ಮ ಸಂಸ್ಕೃತಿಯನ್ನು ಬಹುವಿಧದಲ್ಲಿ ಪರೀಕ್ಷಿಸಿ ಅದರ ನ್ಯೂನ್ಯತೆಗಳನ್ನು ಗಮನಿಸಿರುವುದು ಪಾಶ್ಚಿಮಾತ್ಯ ವಿಚಾರ ಸರಣಿಯಲ್ಲಿ ಕಂಡುಬರುವ ಒಂದು ವಿಶೇಷ ಲಕ್ಷಣವಾಗಿದೆ. ತಮ್ಮ ಸಂಸ್ಕೃತಿಯ ಮೇಲಣ ಅವರ ಈ ಅಸಮಾಧಾನ ಇಂದಿನ ಜೀವನಕ್ಕೆ ಚೈತನ್ಯ ಕೊಡುವ ಹಾಗೂ ಮುಂದಿನ ಜೀವನಕ್ಕೆ ಭರವಸೆಯನ್ನುಂಟು ಮಾಡುವ ಒಂದು ಹೊಸ ಸ್ಫೂರ್ತಿಯನ್ನು ಕಂಡುಹಿಡಿಯಲು ಪ್ರೋತ್ಸಾಹವಿತ್ತಿತ್ತು. ಮೊದಲನೆಯ ಮಹಾಯುದ್ದದಲ್ಲಿ ಸಂಭವಿಸಿದ ಅನರ್ಥಗಳ ನಂತರ ಸಾಂಪ್ರದಾಯಿಕ ಪಾರಮಾರ್ಥಿಕತೆಯ ಮಾನದಂಡದಿಂದ ಹೊಸ ಜೀವನವನ್ನು ನಿಭಾಯಿಸಬೇಕಾಗಿರುವುದರ ಅನಿವಾರ್ಯದ ಅರಿವು ಯೂರೋಪಿನಾದ್ಯಂತ ನಿರಾಶಾಭಾವನೆಯನ್ನು ಉಂಟು ಮಾಡಿತು. ಯುರೋಪಿನ ಇತಿಹಾಸದ ಈ ಸಂದಿಗ್ಧ ಕಾಲದಲ್ಲಿ ಸಂಸ್ಕೃತಿಯ ಮೇಲೆ ತಮ್ಮ ವಿನೂತನ ವಿಚಾರ ಸರಣಿಯೊಂದಿಗೆ ಸ್ಪೆಂಗ್ಲರ್ ಇತಿಹಾಸ ರಂಗವನ್ನು ಪ್ರವೇಶಿಸಿದರು.

೧೮೮೦ರ ಮೇ ೨೯ ರಲ್ಲಿ ಜರ್ಮನಿಯ ಬ್ಯಾಕನ್‌ಬರ್ಗ್‌ನಲ್ಲಿ ಸ್ಪೆಂಗ್ಲರ್ ಜನಿಸಿದರು. ಅವರು ದಿ ಡೈಕ್ಲೈನ್ ಆಫ್ ದಿ ವೆಸ್ಟ್ ಎನ್ನುವ ಕೃತಿಯನ್ನು ೧೯೧೪ ರಲ್ಲಿ ಪೂರ್ಣಗೊಳಿಸಿದರು. ಆದರೆ ಪ್ರಥಮ ಜಾಗತಿಕ ಯುದ್ದದ ಕಾರಣಗಳಿಂದಾಗಿ ಆಗ ಅದನ್ನು ಪ್ರಕಟಿಸಲಾಗಲಿಲ್ಲ. ಈ ಕೃತಿಯ ಮೂಲ ಪ್ರತಿಯನ್ನು ಪುನಃ ನಕಲು ಮಾಡಿ, ೧೯೧೮ರ ಜುಲೈನಲ್ಲಿ ಪ್ರಕಟಿಸಿದರು. ಇದರಲ್ಲಿ ಎರಡು ಸಂಪುಟಗಳಿವೆ. ೧೯೨೨ ರಲ್ಲಿ ಮುದ್ರಿತವಾದ ಈ ಗ್ರಂಥದ ಪುನರ್‌ಮುದ್ರಣದಲ್ಲಿ ತಮ್ಮ ಇತಿಹಾಸ ದರ್ಶನದ ಮೇಲೆ ಪ್ರಭಾವ ಬೀರಿದವರನ್ನು ಹೆಸರಿಸಿದ್ದಾರೆ. “ಗೈತೆಯು ಕ್ರಮಾನುಸರಣಿಯನ್ನೂ (ವಿಧಾನ), ನೀಷೆಯು ಪ್ರಶ್ನಿಸುವ ಸಹಜ ಶಕ್ತಿಯನ್ನು ನನಗೆ ಕೊಟ್ಟರು” ಎಂದು ಈ ಗ್ರಂಥದ ಪೀಠಿಕೆಯಲ್ಲಿ ಹೇಳಿದ್ದಾರೆ.

ಪಶ್ಚಿಮ ಯೂರೋಪಿನ ಇತಿಹಾಸವನ್ನು ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಯುಗಗಳಾಗಿ ವಿಭಜಿಸುವ ಯೋಜನೆಯನ್ನು ಅವರು ವಿರೋಧಿಸಿದರು. ಈ ರೀತಿಯಲ್ಲಿ ಇತಿಹಾಸವನ್ನು ವಿಭಜಿಸುವುದು ಸಂಸ್ಕೃತಿಯ ದೃಷ್ಟಿಯಿಂದ ಅರ್ಥಹೀನವಾದುದೆಂದು ಅವರು ಹೇಳಿದ್ದಾರೆ. “ಕ್ರಿ.ಶ. ೧೯ನೆಯ ಶತಮಾನವು ಕ್ರಿ.ಪೂ. ೧೯ನೆಯ ಶತಮಾನಕ್ಕಿಂತ ನಮಗೆ ಮುಖ್ಯವಾಗಿದೆ; ಅಲ್ಲದೆ ಚಂದ್ರನೂ ಕೂಡ ಗುರು ಅಥವಾ ಶನಿಗಿಂತ ಹೆಚ್ಚು ದೊಡ್ಡದಾಗಿ ಕಾಣುತ್ತಾರೆ!” ಎಂದು ಸ್ಪೆಂಲರ್ ವ್ಯಂಗ್ಯವಾಗಿ ನುಡಿದಿದ್ದಾರೆ. ಈ ವಿಭಜನೆ ಟಾಲಮಿಯ ವಿಧಾನವನ್ನು ಹೋಲುತ್ತದೆ. ಇದಕ್ಕೆ ಬದಲಾಗಿ ಕೋಪರ್ನಿಕಸ್ ಅವರ ಇತಿಹಾಸ ಪರಿಶೀಲನೆ ಹೆಚ್ಚು ಉಪಯುಕ್ತವಾಗುತ್ತದೆ. ಇತಿಹಾಸವು ಜೈವಿಕ ಏಕತೆಯನ್ನು ಸೂಚಿಸುತ್ತದೆ ಎಂದು ಸ್ಪೆಂಗ್ಲರ್ ಹೇಳುತ್ತಾರೆ.

ಸಂಸ್ಕೃತಿಗಳು ಜೀವಿಗಳಾಗಿದ್ದು, ಜಗತ್ತಿನ ಇತಿಹಾಸ ಅವುಗಳ ಸಂಯುಕ್ತ ಜೀವನ ಚರಿತ್ರೆ. ಅವು ಜನ್ಮತಾಳಿ, ಬೆಳೆದು ತಮ್ಮ ನಿಯಮಗಳನ್ನು ಪೂರೈಸಿ ಮರಣವನ್ನುಪ್ಪುತ್ತವೆ. ಪ್ರತಿಯೊಬ್ಬ ಮಾನವನ ಜೀವನದಲ್ಲಿ ಕಾಣುವ ನಾಲ್ಕು ಹಂತಗಳ ಹಾದಿಯಲ್ಲಿ ಸಂಸ್ಕೃತಿಯೂ ಮುನ್ನಡೆಯುತ್ತದೆ. ಪ್ರತಿಯೊಂದು ಸಂಸ್ಕೃತಿಯೂ ಬಾಲ್ಯಾವಸ್ಥೆ, ಯೌವ್ವನ, ಪ್ರಾಯ ಮತ್ತು ಮುಪ್ಪು – ಈ ಅವಸ್ಥೆಗಳನ್ನು ಹೊಂದಿರುತ್ತದೆ.

ಬಾಲ್ಯಾವಸ್ಥೆಯಲ್ಲಿ ಸಂಸ್ಕೃತಿಯು ಎಳೆಯದಾಗಿ, ನಡಗುತ್ತಿರುವ ಜೀವನವನ್ನು ಹೊಂದಿದ್ದು ಹೆಚ್ಚು ದಿಗಿಲುನಿಂದ ಕೂಡಿರುತ್ತದೆ. ಯೌವ್ವನಾವಸ್ಥೆಗೆ ಬರುವ ವೇಳೆಗೆ ಅದು ಪ್ರಕಾಶಮಾನವಾಗಿ, ದೃಢವಾಗಿ ನಿಯಂತ್ರಿತಗೊಂಡು ತನ್ನ ವೈಯಕ್ತಿಕ ಲಕ್ಷಣಗಳನ್ನು ಸ್ಪಷ್ಟಗೊಳಿಸುತ್ತಾ ಬರುತ್ತದೆ. ಆಗ ಅದು ತನ್ನ ಶಕ್ತಿಯಲ್ಲಿ ಆತ್ಮವಿಶ್ವಾಸವುಳ್ಳದ್ದಾಗಿರುತ್ತದೆ. ಸಂಸ್ಕೃತಿಯ ಜೀವ ಜ್ವಾಲೆಯು ನಶಿಸಿದಾಗ ತನ್ನ ಅಂತಿಮ ಹಂತವಾದ ನಾಗರಿಕತೆಯನ್ನು ತಲುಪುತ್ತದೆ. ಪ್ರತಿಯೊಂದು ಸಂಸ್ಕೃತಿಗೂ ನಾಗರಿಕತೆ ಇರುತ್ತದೆ. ನಾಗರಿಕತೆಯು ಸಂಸ್ಕೃತಿಯ ಅನಿವಾರ್ಯ ವಾದ ವಿಧಿಯಾಗಿದೆ.

ನಾಗರಿಕತೆಯ ಹಂತವು ಕೆಲವು ವೈಯಕ್ತಿಕ ಲಕ್ಷಣಗಳಿಂದ ಕೂಡಿರುತ್ತದೆ. ಸರ್ವಸಮದರ್ಶಿತ್ವ, ಬೃಹತ್‌ಕೈಗಾರಿಕಾ ಘಟಕಗಳು, ವೈಜ್ಞಾನಿಕ ಅಧರ್ಮತ್ವ, ಬಲಿಷ್ಠವಾದ ವಾಸ್ತವಾಂಶತೆ, ಅಂತಾರಾಷ್ಟ್ರೀಯ ಸಮಾಜ, ಸಹಜವಾದ ಹಕ್ಕುಗಳು, ಸಾಮ್ರಾಜ್ಯದ ವಿಸ್ತರಣೆ, ನಗರೀಕರಣ, ಗಣ್ಯತೆಯ ಆರಾಧನೆ ಇವು ನಾಗರಿಕತೆಯ ಲಕ್ಷಣಗಳು. ಕೊನೆಯಲ್ಲಿ, ನಾಗರಿಕತೆಯು ಉತ್ಸಾಹಗುಂದಿ, ಹೆಣಗಾಡುತ್ತಾ ವಿಶ್ವಾಸಹೀನವಾಗಿ, ಶಿಥಿಲಗೊಳ್ಳುತ್ತಾ, ಇತಿಹಾಸವಿಲ್ಲದ ಮತ್ತು ನಿರಾಕಾರ ಸ್ಥಿತಿಗೆ ಮರಳುತ್ತದೆ. ಇವು ಸ್ಪೆಂಗ್ಲರ್ ಪ್ರಕಾರ, ಸಂಸ್ಕೃತಿ-ನಾಗರಿಕತೆಯ ಜೀವನ ಚಕ್ರದ ಅವಶ್ಯಕವಾದ ಅಂಶಗಳಾಗಿವೆ. ಈ ಜೀವನ ಚಕ್ರಕ್ಕೆ ಬೆಂಬಲವಾಗಿ ‘ವಿಶ್ವದ ಚೈತನ್ಯ’ ಇರುತ್ತದೆ. ಈ ಚೈತನ್ಯ ನಮ್ಮನ್ನು ಪ್ರೇರೇಪಿಸುತ್ತಲ್ಲದೆ, ಸಂಸ್ಕೃತಿಯನ್ನು ಚೈತನ್ಯಗೊಳಿಸಿ ಅದರ ಜೀವನ ಚಕ್ರವನ್ನು ನಿರ್ಣಯಿಸುತ್ತದೆ.

ಇತಿಹಾಸವನ್ನು ಒಂಭತ್ತು ಸಂಸ್ಕೃತಿಗಳ ಜೀವನವಾಗಿ ಅರ್ಥ ವಿವರಣೆ ನೀಡಿದ್ದಾರೆ. ಈಜಿಪ್ಟ್ (ಕ್ರಿ.ಪೂ. ೩೪೦೦-೧೨೦೫), ಭಾರತ (ಕ್ರಿ.ಪೂ. ೧೫೦೦-೧೧೦೦), ಚೀನಾ (ಕ್ರಿ.ಪೂ. ೧೩೦೦-೨೦೦), ಗ್ರೀಕ್ ಮತ್ತು ರೋಮನ್ ಕ್ಲಾಸಿಕಲ್ (ಕ್ರಿ.ಪೂ. ೧೧೦೦-೪೦೦), ಬೈಜಾಂಟೈನ್ (ಕ್ರಿ.ಶ. ೩೦೦-೧೨೫೦), ಮಾಯ (ಕ್ರಿ.ಶ. ೯೦೦-೯೬೦), ಅರೆಲಿರನ್ (ಕ್ರಿ.ಶ. ೩೦೦-೧೨೫೦), ಅಜ್‌ಟೆಕ್ (ಕ್ರಿ.ಶ. ೧೩೨೫-೧೫೦೦) ಮತ್ತು ಪಾಶ್ಚಿಮಾತ್ಯ ಇವೇ ಆ ಒಂಭತ್ತು ಸಂಸ್ಕೃತಿಗಳು. ರಷ್ಯದ ಸಂಸ್ಕೃತಿಯು ಮುಂದಿನ ಸಾಧ್ಯತೆಯೆಂದು ಅವರು ಭಾವಿಸುತ್ತಾರೆ. ಮಾಯಾ ಸಂಸ್ಕೃತಿಯು ಘೋರ ಮರಣಕ್ಕೆ ತುತ್ತಾಯಿತು. ಅರೆಲಿರನ್ ಮತ್ತು ಅಜೆಟೆಕ್ ಸಂಸ್ಕೃತಿಗಳು ಪ್ರಾಚೀನ ಕಾಲದಲ್ಲಿಯೇ ಮಿಥ್ಯಾ ರೂಪವನ್ನು ತಾಳಿತೆಂದು ಹೇಳಿ ಮಿಕ್ಕ ಆರು ಸಂಸ್ಕೃತಿಗಳನ್ನು ವಿವರಿಸಿದ್ದಾರೆ. ಪ್ರತಿಯೊಂದು ಸಂಸ್ಕೃತಿಯೂ ತನ್ನ ವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಳ್ಳುತ್ತದೆ. ವಿಜ್ಞಾನ ಲಲಿತ ಕಲೆಗಳು ಹಾಗೂ ಇತರ ಸಾಂಸ್ಕೃತಿಕ ಮತ್ತು ಸಾಮಾಜಿಕ ಘಟಕಗಳಿಗೆ ತನ್ನ ಅರ್ಥ ಹಾಗೂ ಮಾದರಿಯನ್ನು ಕೊಡುತ್ತದೆ ಎಂದು ಸ್ಪೆಂಗ್ಲರ್ ತಮ್ಮ ಗ್ರಂಥದಲ್ಲಿ ಸೂಚಿಸಿದ್ದಾರೆ., ಈ ದೃಷ್ಟಿಯಿಂದ ವಿವೇಚಿಸಿದಾಗ, ಮನಸ್ಸಿನ ಸಮಗ್ರ ಕೃತಿಗಳ ಒಂದು ವ್ಯವಸ್ಥಿತ ಸಾಮಸ್ಕೃತಿಕ ವ್ಯಾಪ್ತಿಯ ನಿರ್ಣಯವನ್ನು ಅವರ ಗ್ರಂಥದಲ್ಲಿ ಕಾಣುತ್ತೇವೆ.

ಪ್ರತೀ ಸಂಸ್ಕೃತಿಯ ಪ್ರಧಾನ ಪ್ರಜ್ಞೆಯ ಲಕ್ಷಣಗಳನ್ನು ಸ್ಪೆಂಗ್ಲರ್‌ವಿವರಿಸಿದ್ದಾನೆ. ಪ್ರಧಾನ ಸಂಕೇತದ ಆಧಾರದ ಮೇಲೆ ಸಂಸ್ಕೃತಿಯ ಜೀವದ ಕಲ್ಪನೆ, ಮಾನಸಿಕ ಶಿಸ್ತು ಇವುಗಳ ಸಾಂಸ್ಕೃತಿಕ ವ್ಯಾಪ್ತಿಯನ್ನು ನಿರ್ಣಯಿಸುವುದು ಹೆಚ್ಚು ಉಗ್ರವಾಗಿ ಕಾಣುತ್ತದೆ. ಅಲ್ಲದೆ ಪ್ರತಿಯೊಂದು ಸಂಸ್ಕೃತಿಯಲ್ಲೂ ಲಲಿತ ಕಲೆಗಳು ತಮ್ಮದೇ ಆದ ರೂಪವನ್ನು ಹೊಂದಿದ್ದು ಒಂದೊಂದು ವಿಶಿಷ್ಟ ಸಂಸ್ಕೃತಿಯಲ್ಲೂ ವ್ಯತ್ಯಾಸವನ್ನು ತೋರಿಸಿದ್ದಾರೆ. ಆದರೆ ಅವುಗಳು ಒಂದೇ ಮುಖ್ಯ ಹಂತದಲ್ಲಿ, ಅಷ್ಟೇ ಶತಮಾನಗಳಲ್ಲಿ ಮುಂದುವರಿಯುತ್ತಾ, ಪರಿಮಿತಿಯಾಗಿ, ತಾಂತ್ರಿಕವಾಗಿ, ಅನುಕರಣೀಯವಾಗಿ ಮತ್ತು ತಿಳುವಳಿಕೆ ಇಲ್ಲದಂತಾಗಿ ನಾಗರಿಕ ಹಂತಗಳಲ್ಲಿ ಕಲ್ಲಾಗುತ್ತದೆ.

ಪ್ರತೀ ಸಂಸ್ಕೃತಿಯೂ ತನ್ನ ವೈಯಕ್ತಿಕ ಜ್ಞಾನವನ್ನು ಪಡೆದಿರುತ್ತದೆ. ಪ್ರತೀ ಸಂಸ್ಕೃತಿ ಜೀವನ ಚಕ್ರದ ಮುಖ್ಯ ನೆಲೆಗಳ ಸಾರಾಂಶವನ್ನು ಕೊಟ್ಟು ಅವು ಹಾದೂ ಹೋದ ಸಮಕಾಲೀನ ಯುಗದ ಆಧ್ಯಾತ್ಮಿಕ ಮತ್ತು ಸಾಮಾಜಿಕ ರೀತಿಗಳನ್ನು ಸ್ಪೆಂಗ್ಲರ್‌ತೋರಿಸಿದ್ದಾರೆ. ಸ್ಪೆಂಗ್ಲರ್‌ನೀಡುವ ಸಾಮಾಜಿಕ ರೀತಿಗಳ ಜೀವನ ಚಕ್ರದ ವಿಶ್ಲೇಷಣೆ ವ್ಯವಸ್ಥಿತವಾಗಿಲ್ಲ. ಆದರೆ ಅವಶ್ಯ ಅಂಶಗಳು ಸ್ಪಷ್ಟವಾಗಿವೆ. ಸಂಸ್ಕೃತಿಯ ಹುಟ್ಟಿನಿಂದ ನಾಗರಿಕತೆಯನ್ನು ತಲುಪುವವರೆಗೆ ಕ್ರಿಯಾತ್ಮಕವಾದ ಸಾಮಾಜಿಕ ರೂಪಗಳು ಒಂದನ್ನೊಂದು ಹೇಗೆ ಸ್ಥಳಾಂತರಿಸುತ್ತವೆ ಎಂಬ ಸಂಕ್ಷಿಪ್ತ ವಿವರಣೆಯನ್ನು ಕೊಟ್ಟಿದ್ದಾರೆ. ಸಂಸ್ಕೃತಿಯ ಪೂರ್ವ ಹಂತವನ್ನು ವಿಶದವಾಗಿ ವಿವರಿಸಿದ್ದಾರೆ. ಈ ಹಂತದಲ್ಲಿ ರಾಜಕೀಯವಾಗಲೀ, ವರ್ಗಗಳಾಗಲೀ, ಜನ ಸಮೂಹವಾಗಲಿ, ರಾಜ್ಯವಾಗಲೀ ಇರಲಿಲ್ಲ. ರಕ್ತ ಸಂಬಂಧದ, ವ್ಯವಸಾಯನಿರತ ಹಾಗೂ ಅಲೆಮಾರಿ ಗಿರಿಜನರು ಮಾತ್ರ ಇರತ್ತಾರೆ.

ಈ ಹಂತ ಸಂಸ್ಕೃತಿ ಯುಗಕ್ಕೆ ಎಡೆ ಮಾಡಿಕೊಡುತ್ತದೆ. ಈ ಯುಗದಲ್ಲಿ ಊಳಿಗಮಾನ್ಯ ಪದ್ಧತಿ ಮತ್ತು ಶ್ರೀಮಂತರ ಆಳ್ವಿಕೆಯ ರಾಜ್ಯ ಎಂಬ ಎರಡು ಹಂತಗಳಿರುತ್ತವೆ. ಊಳಿಗಮಾನ್ಯ ಪದ್ಧತಿಯು ನಗರಗಳ ಉದಯ, ಶ್ರೀಮಂತ, ಮತ್ತು ಪುರೋಹಿತ ವರ್ಗಗಳಿಂದ ಕೂಡಿರುತ್ತದೆ. ಈ ಹಂತದಲ್ಲಿ ಜಾಣ್ಮೆ, ಧರ್ಮ, ವೀರ ಭಾವನೆಗಳು, ಕಲ್ಪನೆಗಳು ಹಾಗೂ ಮೌಲ್ಯಗಳು ಉದ್ಭವಿಸುತ್ತವೆ. ಪೂರ್ಣ ಸಂಘ ರಚನೆ ಊಳಿಗಮಾನ್ಯವೂ ಮತ್ತು ವ್ಯವಸಾಯಾವಲಿಂಬಿತವೂ ಆಗಿರುತ್ತದೆ. ಇದು ಶ್ರೀಮಂತರ ಆಳ್ವಿಕೆಗೆ ಎಡೆಮಾಡಿಕೊಡುತ್ತದೆ. ನಗರ ಹಾಗೂ ಜಾಣ್ಮೆಯ ಪಾತ್ರವು ವೃದ್ಧಿಗೊಳ್ಳುತ್ತದೆ. ಸಂಸ್ಕೃತಿಯ ಪೂರ್ವ ಹಂತವು ಮುಗಿದು ಸಂಜೆಯ ಕಾಲವನ್ನು ಸೇರುತ್ತದೆ.

ಈ ಕಾಲದಲ್ಲಿ ರಾಷ್ಟ್ರೀಯ ಸರ್ಕಾರವು ತನ್ನ ಪೂರ್ಣ ರೂಪವನ್ನು ಪಡೆಯುತ್ತದೆ. ಮಧ್ಯಮ ವರ್ಗವು ಉದಯವಾಗಿ ವೃದ್ಧಿಗೊಳ್ಳುತ್ತದೆ. ನಗರೀಕರಣ ಮತ್ತು ಹಣದ ಚಲಾವಣೆಯುಳ್ಳ ಆರ್ಥಿಕ ಸ್ಥಿತಿ ಅದರ ಇತರ ಲಕ್ಷಣಗಳು. ಈ ಕಾಲದಲ್ಲಿ ರಾಜ್ಯಗಳ ರಚನಾಕ್ರಮಗಳು ಮತ್ತು ಅದರ ರೂಪ ನಿರಂಕುಶ ಪ್ರಭುತ್ವಗಳ ಅವಸಾನ ಮತ್ತು ಕ್ರಾಂತಿ ಎಂಬ ಮೂರು ಹಂತಗಳಿರುತ್ತವೆ. ಉತ್ಕೃಷ್ಟವಾದ ಸಂಸ್ಕೃತಿಯ ಈ ಹಂತದಲ್ಲಿ ಜನರ ಶರೀರವು ಕರಗಿ ರೂಪವಿಲ್ಲದ ರಾಶಿಯಾಗಿ ಮಾರ್ಪಾಡಾಗುತ್ತದೆ. ರಾಜ್ಯ, ರಾಷ್ಟ್ರ ಮತ್ತು ಸಾಮಾಜಿಕ ವ್ಯವಸ್ಥೆಗಳು ಐಕ್ಯತೆಯನ್ನು ಕಳೆದುಕೊಳ್ಳಲಾರಂಭಿಸುತ್ತವೆ. ನಗರಗಳು ರೋಗಗ್ರಸ್ಥ ಕೈಗಾರಿಕಾ ಘಟಕಗಳಾಗಿ ಪರಿಣಮಿಸುತ್ತವೆ. ನಾಗರಿಕತೆ ಅಳಿಸಿ ಹೋಗುವ ಮುನ್ನ ಈ ಮೂರು ನೆಲೆಗಳನ್ನು ಹಾದು ಹೋಗುತ್ತವೆ.

ಜಗತ್ತಿನಲ್ಲಿ ತಾಂತ್ರಿಕ ಬೆಳವಣಿಗೆ ಹೆಚ್ಚು ಅಪಾಯಕಾರಿ ಎಂದು ಸ್ಪೆಂಗ್ಲರ್ ಹೇಳುತ್ತಾರೆ. ಕೈಗಾರಿಕಾ ಘಟಕಗಳಲ್ಲಿನ ತಾಂತ್ರಿಕ ವಿಧಾನಗಳ ಇತಿಹಾಸವು ಅವುಗಳನ್ನು ಅನಿವಾರ್ಯ ಅಂತ್ಯಕ್ಕೆ ಸೆಳೆಯುತ್ತದೆ ಎಂಬುದನ್ನು ತೋರಿಸುತ್ತದೆ. ಪ್ರತಿಯೊಂದು ಸಂಸ್ಕೃತಿಯನ್ನೂ ಅದು ಒಳಗಿನಿಂದ ತಿನ್ನುತ್ತಾ ಬರುತ್ತದೆ. ಇದು ಯಾವಾಗ ಮತ್ತು ಯಾವ ರೀತಿಯಲ್ಲಿ ಆಗುತ್ತದೆ ಎಂಬುದು ನಮಗೆ ತಿಳಿಯದು. ಇದೇ ರೀತಿಯಲ್ಲಿ ಹಣ ಹಾಗೂ ಪ್ರಜಾಪ್ರಭುತ್ವ ಮೌಲ್ಯವನ್ನು ಕಳೆದುಕೊಂಡು ಇತರ ಶಕ್ತಿಗಳಿಗೆ ಅವು ಎಡೆಮಾಡಿಕೊಡುತ್ತದೆ. ಸೀಸರ್ ತತ್ವ ಬೆಳೆದು ರಾಜಕೀಯ ದಬ್ಬಾಳಿಕೆ ಪ್ರಾರಂಭವಾಗುತ್ತದೆ. ಈ ಬೆಳವಣಿಗೆ ನಾಗರಿಕತೆಯ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳ ಕೊನೆಯ ಅಂಕವನ್ನು ಸೂಚಿಸುತ್ತದೆ. ಅಂತಿಮವಾಗಿ ಅನಾಗರಿಕತೆ ಮೂಡಿ ಸಂಸ್ಕೃತಿಯ ಸಾಮಾಜಿಕ ರೂಪ ಏಕ ಪ್ರಕಾರವಾಗಿ ಸಂಯುಕ್ತತೆಯನ್ನು ಕಳೆದುಕೊಳ್ಳುತ್ತಾ ಬರುತ್ತದೆ.

ಇದು ಸಂಕ್ಷಿಪ್ತವಾಗಿ ಸ್ಪೆಂಗ್ಲರ್ ವಿವರಿಸುವ ಇತಿಹಾಸ ದರ್ಶನದ ತಿರುಳಾಗಿದೆ. ಆದರೆ ಅವರ ವಿಚಾರ ಸರಣಿಯು ಇತ್ತೀಚೆಗೆ ವಿಮರ್ಶಕರ ಟೀಕೆಗೆ ಗುರಿಯಾಗಿದೆ. ಈ ಟೀಕೆಗಳತ್ತ ಇಲ್ಲಿ ಗಮನ ಹರಿಸುವುದು ಅತ್ಯಾವಶ್ಯಕ.

ಸಂಸ್ಕೃತಿಗಳಿಗೆ ಅವರು ನೀಡುವ ಪ್ರಧಾನ ಸಂಕೇತಗಳು ಹಾಗೂ ಸಂಸ್ಕೃತಿಯ ಕೆಲವು ಪ್ರಕೃತಿ ಘಟನೆಗಳ ನಡುವೆ ಸ್ಪೆಂಗ್ಲರ್ ಸ್ಥಾಪಿಸಲು ಯತ್ನಿಸುವ ಕಲ್ಪನೆಗಳು ಅವರ ಅನೇಕ ಉದಾಹರಣೆಗಳಲ್ಲಿ ದೂರವಾಗಿವೆ. ಅವು ಮನವೊಲಿಸುವಂತಹದ್ದಲ್ಲದ್ದೂ ಮತ್ತು ಕೃತಕವೂ ಆಗಿವೆ. ಪ್ರತೀ ಸಂಸ್ಕೃತಿಯ ಪೂರ್ಣರೂಪದಲ್ಲಿ ಅದರ ಪ್ರಧಾನ ಸಂಕೇತ ಸ್ಪಷ್ಟವಾಗಿರುತ್ತದೆಂಬು ವಿಲಕ್ಷಣವಾಗಿ ಕಾಣುತ್ತದೆ. ಸ್ಪೆಂಗ್ಲರ್ ವಿವರಿಸುವ ಪ್ರಧಾನ ಸಂಕೇತವು ಹೆಚ್ಚೂ ಕಡಿಮೆ ಒಂದು ಸಂಸ್ಕೃತಿಯ ವಿಶಾಲವಾದ ಅರ್ಥವನ್ನು ಕೊಡುತ್ತದೆಂದು ಮಾತ್ರ ಒಪ್ಪಬಹುದು.

ಸಂಸ್ಕೃತಿ ಮತ್ತು ಸಾಮಾಜಿಕ ವ್ಯವಸ್ಥೆಗಳನ್ನು ಒಂದುಗೂಡಿಸುವುದು ಸಮಂಜಸ ವಾಗಿರುವುದಿಲ್ಲ. ಸ್ಪೆಂಗ್ಲರ್‌ತಾವೇ ತಿಳಿಸಿರುವಂತೆ ಪ್ರತಿಯೊಂದು ಸಂಸ್ಕೃತಿ ಮತ್ತು ನಾಗರಿಕತೆ ಏಕ ರೀತಿಯ ರಾಜ್ಯದಲ್ಲಿ ಅವತರಿಸುತ್ತದೆ. ಇದರಿಂದಾಗಿ ಅವುಗಳ ವ್ಯವಸ್ಥಿತ ಮತ್ತು ಪೂರ್ಣ ವ್ಯವಸ್ಥಿತವಲ್ಲದ ಗುಂಪುಗಳ ಸಾಮಾಜಿಕ ಅಂಗಗಳ ವಿಂಗಡಣೆಗಳಾಗಿವೆ. ನಾಗರಿಕತೆ ಅಥವಾ ಸಂಸ್ಕೃತಿಯ ಮಾದರಿಯು ಐಕ್ಯಗೊಂಡ ವ್ಯವಸ್ಥೆಯಾಗಿದ್ದಲ್ಲಿ ಐಕ್ಯತೆಯನ್ನು ಕಳೆದುಕೊಳ್ಳಲಾರವು. ಇದು ಒಂದು ಅರ್ಥಪೂರ್ಣವಾದ ಕಾರಣವುಳ್ಳ ಐಕ್ಯಮತ್ಯವಾಗಿರದಿದ್ದಲ್ಲಿ ಅದು ಉದಯವಾಗಿ ಬೆಳೆದು, ಪ್ರಾಯಕ್ಕೆ ಬಂದು, ಕೊನೆಯಲ್ಲಿ ಮರಣವನ್ನಪ್ಪುವ ಪ್ರಶ್ನೆ ಏಳುವುದಿಲ್ಲ. ಇವುಗಳ ಬಗ್ಗೆ ಅವರು ಕೊಡುವ ವಿಶ್ಲೇಷಣೆ ಅರ್ಥಹೀನವಾಗಿ ತೋರುತ್ತದೆ.

ಮಾನವನ ವ್ಯವಹಾರಗಳಲ್ಲಿ ವಿಶ್ವ ಚೈತನ್ಯದ ಮಧ್ಯ ಪ್ರವೇಶದಿಂದಾಗಿ ಉತ್ಕೃಷ್ಟವಾದ ಸಂಸ್ಕೃತಿಗಳು ಹುಟ್ಟಿ ಬೆಳೆಯುತ್ತದೆಂದು ಸ್ಪೆಂಗ್ಲರ್‌ ವಾದಿಸುತ್ತಾರೆ. ಈ ಭೂಮಿಯ ಅನಂತವೂ, ವಿಶಾಲವೂ ಆದ ವಿಶ್ವದ ಅಂಶವೆಂದು ಭಾವಿಸಿ, ಪ್ರತಿಯೊಂದು ಸಂಸ್ಕೃತಿಯ ಹುಟ್ಟನ್ನು ಪರಿಗಣಿಸುತ್ತಾರೆ. ಜನರು ಈ ಸೃಷ್ಟಿ ಶಕ್ತಿಯ ಉಪಕರಣಗಳು. ಈ ಶಕ್ತಿಯ ರಮ್ಯತೆಯನ್ನು ಇವುಗಳಲ್ಲಿ ಕಾಣಬಹುದು. ಆದರೆ ದೊಡ್ಡ ನಾಗರಿಕತೆಗಳು ಏಕೆ ಹುಟ್ಟುತ್ತವೆಂಬುದನ್ನು ತಿಳಿಯಲು ಈ ಉತ್ತರ ಸಹಾಯಕವಾಗಿಲ್ಲ. ಈ ಸಮಸ್ಯೆಯು ಮತ್ತಷ್ಟು ಗೂಢವಾಗುತ್ತದೆ.

ಸಂಸ್ಕೃತಿ ಒಂದು ದೊಡ್ಡ ಜೀವಿಯ ಅಭಿವ್ಯಕ್ತಿಯಾಗಿದ್ದು ಕೆಲವು ಮಾನವ ಜೀವಿಯಲ್ಲಿ ತನ್ನನ್ನು ವ್ಯಕ್ತಪಡಿಸುತ್ತದೆ ಎಂದು ಸ್ಪೆಂಗ್ಲರ್ ಸೂಚಿಸುವಂತೆ ತೋರುತ್ತದೆ. ಈ ದೃಷ್ಟಿ ಸೃಷ್ಟಿಗೆ ಕಾರಣವಾದ ವ್ಯಕ್ತಿಗಳನ್ನು ಗಣನೆಗೆ ತಂದುಕೊಳ್ಳದೆ ಅವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಪ್ರತಿಯೊಂದು ಸಂಸ್ಕೃತಿಯೂ ವೈವಿಧ್ಯಮಯವಾಗಿರುವುದರಿಂದ ಒಂದು ಸಂಸ್ಕೃತಿಯ ಉಪಾಸಕರು ಮತ್ತೊಂದನ್ನು ಗ್ರಹಿಸಲಾರರು. ಹೀಗಿದ್ದರೂ, ಸ್ಪೆಂಗ್ಲರ್‌ಅವರ ಪ್ರತಿಯೊಂದು ಸಂಸ್ಕೃತಿಯನ್ನು ವಿವರಿಸುತ್ತಾರಲ್ಲದೆ ಒಂದರ ಪ್ರಾಥಮಿಕ ಬೆಳವಣಿಗೆ ಪೂರ್ವ ಸಂಸ್ಕೃತಿಯ ಪ್ರಭಾವ ಕಾರಣ ಎಂದು ಹೇಳುತ್ತಾರೆ. ಸಂಸ್ಕೃತಿಯ ವ್ಯತ್ಯಾಸಗಳ ಮೇಲೆ ಅವರು ಗಮನವಿಟ್ಟು ಅವುಗಳಿಗಿರುವ ಸಾಮ್ಯಗಳನ್ನು ಉಪೇಕ್ಷಿಸಿದ್ದಾರೆ. ಅವರ ಜೀವ ವಿಜ್ಞಾನ ರೀತಿಯ ಹೋಲಿಕೆಗಳು ಅವರನ್ನು ತಪ್ಪುದಾರಿಗೆ ಎಳೆದ ಹಾಗೆ ಕಾಣುತ್ತದೆ. ವಿವಿಧ ಜನಾಂಗಗಳ ಮತ್ತು ಗುಂಪುಗಳು ಯಾವ ಭಾಗದಲ್ಲಿಯೇ ಇರಲಿ ಸಸ್ಯಗಳಲ್ಲಿ ಕಂಡುಬರುವಂತೆ ವಿವಿಧ ತೆರನಾಗಿರಲಾರದು. ಎಚ್‌.ಜಿ. ವೇಲ್ಸ್ ತೋರಿಸಿರುವಂತೆ, ಮಾನವ ಕುಲದಲ್ಲಿ ಮೂಲತಃ ವ್ಯತ್ಯಾಸ ಕಾಣುವುದಿಲ್ಲ. ಪಾಶ್ಚಿಮಾತ್ಯ ನಾಗರಿಕತೆಯಲ್ಲಿ ತಾಂತ್ರೀಕರಣ ಅದರ ಅವನತಿಗೆ ಹಾದಿ ಮಾಡಿಕೊಡುತ್ತದೆ ಎಂಬ ಅವರ ವಾದವನ್ನು ತಿರಸ್ಕರಿಸಬೇಕಾಗುತ್ತದೆ. ಪಾಶ್ಚಿಮಾತ್ಯ ನಾಗರಿಕತೆ ಅಳಿಯುವುದರ ಬದಲು ಆಧುನಿಕ ಕಾಲದಲ್ಲಿ ಚಿಂತನೆ ಹಾಗೂ ಸಂಸ್ಕೃತಿಯ ಬೆಳವಣಿಗೆಯಲ್ಲಿ ಮುಂದುವರಿಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಈ ಎಲ್ಲ ಕಾರಣಗಳಿಂದಾಗಿ, ಸ್ಪೆಂಗ್ಲರ್‌ಅವರ ಇತಿಹಾಸ ದರ್ಶನ ಎಷ್ಟೇ ಆಳವೂ, ಪ್ರಚೋದನಾತ್ಮಕವೂ ಮತ್ತು ವಿಚಾರಯುತವೂ ಆಗಿದ್ದರೂ ಅದು ದೋಷಯುಕ್ತವಾಗಿದ್ದು ಓದುಗರಿಗೆ ಸಂಪೂರ್ಣ ಸಮಾಧಾನ ನೀಡಲು ಅಶಕ್ತವಾಗಿದೆ.

ಆರ್ನಾಲ್ಡ್ ಜೆ. ಟಾಯನ್ ಬಿ (೧೮೮೯-೧೯೭೬)

ಸ್ಟಡಿ ಆಫ್ ಹಿಸ್ಟರಿಯ ಕರ್ತೃವೂ, ಪ್ರಸಿದ್ಧ ಇತಿಹಾಸಕಾರರೂ ಆದ ಟಾಯನ್‌ಬಿ ಅವರು ಜಗತ್ತಿನ ಇತಿಹಾಸಕಾರರಲ್ಲಿ ಪ್ರಸಿದ್ಧ ಸ್ಥಾನವನ್ನೂ ಪಡೆದಿದ್ದಾರೆ. ೧೯೭೬ ರಲ್ಲಿ ಮರಣ ಹೊಂದಿದ ಅವರು ಇಪ್ಪತ್ತನೆಯ ಶತಮಾನದ ಇತಿಹಾಸಕಾರರಲ್ಲಿ ಪ್ರಮುಖರೂ ಆಗಿದ್ದಾರೆ. “ಇತಿಹಾಸ ದರ್ಶನವನ್ನು” ರಚಿಸುವ ಪ್ರಯತ್ನಗಳಲ್ಲಿ ಮತ್ತು ಆಧುನಿಕ ನಾಗರಿಕತೆಯನ್ನು ಅದರ ಬೆಳಕಿನಲ್ಲಿ ವಿಶ್ಲೇಷಿಸುವ ಪ್ರವೃತ್ತಿಗಳಲ್ಲಿ ಟಾಯನ್‌ಬಿ ಅವರು ಸಫಲರಾಗಿದ್ದಾರೆ. ಮಾತ್ರವಲ್ಲ, ಸುಧಾರಣೆ ಮತ್ತು ಪರಿಣತಿಗಳತ್ತ ಮುಂದೆ ಸಾಗುವ ಸಾಧ್ಯತೆಯ ಅರಿವನ್ನು ಪಾಶ್ಚಿಮಾತ್ಯರ ಮನದಲ್ಲಿ ಉಂಟು ಮಾಡುವಲ್ಲಿ ಅವರು ಶಕ್ಯರಾಗಿದ್ದಾರೆ. ಈ ವಿಚಾರವನ್ನು ಅವರು ೧೨ ಬೃಹತ್‌ ಸಂಪುಟಗಳಿಂದ ಕೂಡಿದ ಇತಿಹಾಸದ ಅಧ್ಯಯನದಲ್ಲಿ ಜಗತ್ತಿನ ಮುಂದೆ ಪ್ರಕಟಿಸಿದ್ದಾರೆ. ಅದರ ವ್ಯಾಪ್ತಿ, ಅದರ ವಿವರ, ಅವರ ಕಾರ್ಯಕಾರಣ ಸಂಬಂಧವಾದ ಸೂಕ್ಷ್ಮ ದೃಷ್ಟಿ, ಅದರ ಏಕೀಭಾವಗಳ ಧಾರಣಶಕ್ತಿ, ಅದರ ಮೂಲಗಳ, ಬೆಳವಣಿಗೆಗಳ, ಮತ್ತು ಅಳಿವುಗಳ ಶೋಧನೆ, ಅದರ ಮೂಲಭೂತ ಸ್ವಭಾವ ಮತ್ತು ಇತಿಹಾಸದ ಅರ್ಥ ವಿವರಣೆಯ ವಿವೇಚನೆ ಇವುಗಳಲ್ಲಿ ಟಾಯನ್‌ಬಿ ಅವರ ಗ್ರಂಥವು ಮಾನವನು ಇಲ್ಲಿಯವರೆಗೆ ಸಾಧಿಸಿರುವ ಸಾರ್ವತ್ರಿಕ ಇತಿಹಾಸದ ಆಗಮನಕ್ಕೆ ಅತಿ ಸಮೀಪವಾಗಿದೆ. ಈ ಗ್ರಂಥವು ಅವರ ಮಹತ್ವಪೂರ್ಣ ಪಾಂಡಿತ್ಯ, ಗತಕಾಲದ ಮತ್ತು ವರ್ತಮಾನದ ಕಾಲದ ಬಗ್ಗೆ ಅವರ ಆಳವಾದ ಹಾಗೂ ಅಪರಿಮಿತ ಜ್ಞಾನದ ಸ್ಪಷ್ಟವಾದ ಪ್ರಮಾಣಗಳು ಈ ಗ್ರಂಥದಲ್ಲಿದೆ. ಅವರ ಇತಿಹಾಸದ ಅಧ್ಯಯನವು ಮಾರ್ಪಡಿಸುವಂತಹದೂ, ಶ್ರೇಷ್ಠವೂ ಮತ್ತು ಸದಾಕಾಲ ವಚನೀಯವೂ ಆಗಿದೆ. ಅವರ ಇತರ ಪ್ರಮುಖ ಗ್ರಂಥಗಳಲ್ಲಿ ನ್ಯಾಷನ್ಯಾಲಿಟಿ ಆಂಡ್ ವಾರ್, ಗ್ರೀಕ್ ಹಿಸ್ಟಾರಿಕಲ್ ಥಾಟ್, ಸಿವಿಲಿಜೇಷನ್ ಆನ್ ಟ್ರಯಲ್, ಎಕ್ಸ್‌ಪೀರಿಯನ್ಸ್‌(ಆತ್ಮಕಥೆ) ಇವುಗಳನ್ನು ಹೆಸರಿಸಬಹುದು. ಆದರೆ ಅವರ ಸ್ಟಡಿ ಆಫ್ ಹಿಸ್ಟರಿ ಪಾಂಡಿತ್ಯವನ್ನು ವೃತ್ತಿಯಾಗಿಸಿಕೊಂಡವರ ಟೀಕೆಗೆ ತುತ್ತಾಗಿದೆ. ಈ ಗ್ರಂಥವು ಅಸತ್ಯವಾದ, ತರ್ಕಬದ್ಧವಲ್ಲದ ವಿಚಾರ ಸರಣಿಯಿಂದ ಕೂಡಿದೆ ಎಂದು ವಿಮರ್ಶಕರು ಅಭಿಪ್ರಾಯಪಡುತ್ತಾರೆ. ಗಿಬ್ಬನ್ ಅವರಿಗೆ ಹೋಲಿಸಬಹುದಾದ ಅವರ ಶೈಲಿಯಲ್ಲಿ ಸ್ವಚ್ಛತೆ ಇದೆ.

ಟಾಯನ್‌ಬಿ ಅವರು ಪಕ್ಷಪಾತವಿಲ್ಲದ ವೀಕ್ಷಕರಾಗಿ ಇತಿಹಾಸವನ್ನು ರಚಿಸಿದರು. ಇತಿಹಾಸವು ಅವರಿಗೆ ಸತ್ಯದ ದೃಷ್ಟಿಕೋನಗಳಲ್ಲಿ ಒಂದಾಗಿದೆ. ಇತಿಹಾಸದಲ್ಲಿ ವಾಸ್ತವ ತೀರ್ಮಾನಗಳಿಗೆ ಅವಕಾಶವಿಲ್ಲ ಎನ್ನುವ ಎಚ್.ಎ.ಎಲ್. ಫಿಷರ್ ಅವರ ಅಭಿಪ್ರಾಯವನ್ನು ಟೀಕಿಸುತ್ತಾ, ಇತಿಹಾಸದ ವಿಶಿಷ್ಟ ಗುಣಲಕ್ಷಣಗಳ ಕುರಿತು ವಾಸ್ತವ ತೀರ್ಮಾನಗಳಿಗೆ ಸಾಕಷ್ಟು ಆಧಾರಗಳ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಸ್ಪೆಂಗ್ಲರ್ ಕೊಡುವ ಜೀವಿಕ ಸಾದೃಶ್ಯಗಳು ಅವರಿಗೆ ಒಪ್ಪಿಗೆಯಾಗಲಿಲ್ಲ. ಇತಿಹಾಸವು ಶಿಥಿಲವಾಗುವ ಹಾಗೂ ನಾಶ ಹೊಂದುವ ನಿಯಮಗಳ ಸರ್ವಶಕ್ತ ಅಗತ್ಯದಿಂದ ಪ್ರಭಾವಿತಗೊಂಡಿದೆ ಎಂದು ಸ್ಪೆಂಗ್ಲರ್ ಕೊಡುವ ವಿವರವನ್ನು ಟಾಯನ್‌ಬಿ ತಿರಸ್ಕರಿಸಿದರು.

ಟಾಯನ್‌ಬಿ ಅವರು ತಮ್ಮ ವಿಚಾರ ಸರಣಿಯನ್ನು ಹೀಗೆ ಪ್ರಾರಂಭಿಸುತ್ತಾರೆ. ಅನಂತ ರೂಪದ ಅಪೂರ್ವ ಸಂಭವವನ್ನು ವಿವರಿಸುವುದೇ ಆಗಲೀ ಅಥವಾ ಮಾನವ ಜನಾಂಗದ ರಾಜ್ಯಾಂಗಗಳ ಇತಿಹಾಸವನ್ನು ಒಂದು ಸಮಷ್ಟಿಯೆಂದು ಭಾವಿಸುವುದೇ ಆಗಲಿ ಇತಿಹಾಸ ಅಧ್ಯಯನವಾಗದು. ಸಮಾಜ ಒಂದು ಅರ್ಥಪೂರ್ಣವಾದ ಕ್ಷೇತ್ರ. ಇದು ಸ್ವರೂಪ ಹಾಗೂ ವಿಸ್ತಾರದಲ್ಲಿ, ನಗರ ರಾಜ್ಯಗಳು, ರಾಷ್ಟ್ರೀಯತೆಯ ರಾಜ್ಯಗಳು, ಸೈನ್ಯ ಮತ್ತು ಇತರ ರಾಜಕೀಯ ಬಣಗಳಿಂದ ಹೆಚ್ಚು ವಿಸ್ತಾರವುಳ್ಳದ್ದಾಗಿದೆ. ರಾಜ್ಯ ಮತ್ತು ಸಮಾಜ ಸಾಮಾಜಿಕ ಅಣುಗಳು. ಇವೇ ಇತಿಹಾಸ ಅಧ್ಯಯನದ ಪ್ರಧಾನ ವಸ್ತುಗಳು. ಧರ್ಮದ ಲಕ್ಷಣಗಳು ಮತ್ತು ಕ್ರಾಂತೀಯ ಹಾಗೂ ರಾಜಕೀಯ ಸ್ವಭಾವ ಲಕ್ಷಣಗಳನ್ನೂ ಸೇರಿಸಿ ನಾಗರಿಕತೆಯು ಇತಿಹಾಸ ಅಧ್ಯಯನಕ್ಕೆ ಸಮಂಜಸವಾದ ವಸ್ತುವೆಂದು ಟಾಯನ್‌ಬಿ ಗ್ರಹಿಸಿದ್ದಾರೆ. ಅವರು ತಿಳಿಸುವಂತೆ ನಾಗರಿಕತೆಯು ಸಮಾಜದ ಒಂದು ಅಂಶ. ಈ ಆಧಾರದ ಮೇಲೆ ಅವರು ಇಪ್ಪತ್ತಾರು ಸಂಸ್ಕೃತಿಗಳನ್ನು ಕೂಲಂಕುಶ ವಿವರಣೆಗೆ ಒಳಪಡಿಸಿದ್ದಾರೆ. ಪಾಶ್ಚಿಮಾತ್ಯ – ರಷ್ಯಾ ; ಮಧ್ಯಪ್ರಾಚ್ಯ ರಾಷ್ಟ್ರಗಳು (Near East) – ಇರಾನ್, ಅರೇಬಿಯಾ, ಹಿಂದೂ; ಎರಡು ದೂರ ಪ್ರಾಚ್ಯ ದೇಶಗಳು – ಹೆಲನಿಕ್, ಸಿರಿಯಕ್, ಇಂಡಿಕ್, ಸಿನಿಕ್, ಸುಮೇರಿಯನ್, ಹಿಟೈಟಸ್ ಊಬೆಬಿಲೋನಿಕ್, ಅಂಡಿಯಕ್, ಮೆಕ್ಸಿಕ್, ಯಕಾಟೆಲ್, ಮಾಯನ್, ಈಜಿಫ್ಟ್, ಪೋಲಿನೀಸಿಯನ್, ಎಕ್ಸಿಮೊ, ನೋಮಾಡಿಕ್, ಅಖೋಮನ್ ಮತ್ತು ಸ್ವಾರ್ಟನ್ ಇವೇ ಆ ಇಪ್ಪತ್ತಾರು ಸಂಸ್ಕೃತಿಗಳು.

ಟಾಯನ್‌ಬಿ ಅವರ ಪ್ರಕಾರ, ಸಂಸ್ಕೃತಿಯ ಅಧ್ಯಯನವು ರಾಷ್ಟ್ರಗಳಿಗೆ ಸೀಮಿತವಾಗಿರದೆ ಅವುಗಳಿಂದ ಮುಂದೆ ಹೋಗಬೇಕಲ್ಲದೆ ನಾಗರಿಕ ಸಮಾಜಗಳ ವ್ಯಾಪಕವಾದ ಏಕೀಭಾವನೆಗಳನ್ನು ಒಳಗೊಂಡಿರಬೇಕು. ಮೇಲೆ ಹೆಸರಿಸಿರುವ ಸಂಸ್ಕೃತಿಗಳ ವರ್ಗೀಕರಣದಲ್ಲಿ ಅವರು ಯಾವ ರೀತಿಯ ಸಾರ್ವತ್ರಿಕ ಸಾಧಾರದ ಸಿಂಧುತ್ವವನ್ನು ಪ್ರತಿಪಾದಿಸುವುದಿಲ್ಲ. ಅನಾಗರಿಕ ಸಮಾಜಗಳು ನಾಗರಿಕ ಸಮಾಜಗಳಾಗಿ ಬದಲಾವಣೆಯಾಗುವುದು ಸ್ಥಿರ ಸ್ಥಿತಿಯಿಂದ ಚಲನೆಯ ಪ್ರವೃತ್ತಿಯಿಂದ. ಸಾಮಾನ್ಯರಲ್ಲಿ ಬಹು ಸಂಖ್ಯೆಯವರು ಅನಾಗರಿಕರಾಗಿರುತ್ತಾರೆಂದು ಅವರು ಹೇಳಿದ್ದಾರೆ. ನಾಗರಿಕ ಸಮಾಜಗಳಲ್ಲಿ ಜೀತಕಾರರು ಇತಿಹಾಸದಲ್ಲಿ, ಮುಖ್ಯವಾಗಿ ಧರ್ಮದಲ್ಲಿ, ಹೆಚ್ಚು ಪ್ರಮುಖವಾದ ಪಾತ್ರವನ್ನು ವಹಿಸುತ್ತಾರೆ. ಟಾಯನ್‌ಬಿ ಅವರು ವಿಭಿನ್ನ ನಾಗರಿಕತೆಗಳ ವಿವರವಾದ ಸೃಷ್ಟೀಕರಣವನ್ನು ‘ಸವಾಲು’ ಮತ್ತು ‘ಜವಾಬು’ ಇವುಗಳ ಸಂಬಂಧದಲ್ಲಿ ನೀಡಿದ್ದಾರೆ.

ನಾಗರಿಕತೆಯ ಬೆಳವಣಿಗೆ ಮತ್ತು ಶಿಥಿಲತೆ ಜವಾಬುಗಳ ರೀತಿಗಳು ಮತ್ತು ವ್ಯಾಪಕತೆಯನ್ನು ಅವಲಂಬಿಸಿದ್ದರೆ, ಅವುಗಳ ಜಯ ಮತ್ತು ಅಪಜಯಗಳು ಭೌತಿಕ ಮತ್ತು ಸಾಮಾಜಿಕ ಪರಿಸರಗಳ ಸವಾಲುಗಳಿಗೆ ಸಂಬಂಧಿಸಿರುತ್ತದೆ. ಅಂತರಂಗದಲ್ಲಿ ಉಂಟಾದ ಸಾಮಾಜಿಕ ಪರಿಸರಗಳ ಸವಾಲುಗಳಿಗೆ ಸಂಬಂಧಿಸಿರುತ್ತದೆ. ಅಂತರಂಗದಲ್ಲಿ ಉಂಟಾದ ಜವಾಬುಗಳ ಮೇಲೆ ಟಾಯನ್‌ಬಿ ಅವರು ಹೆಚ್ಚು ಸ್ವರಭಾರ ಹಾಕುತ್ತಾರೆ. ಜಯ ಮತ್ತು ಅಪಜಯಗಳು ಜವಾಬು ಕೊಡುವುದರ ಸಾಮರ್ಥ್ಯ ಮತ್ತು ಶಕ್ತಿಗೆ ಸಂಬಂಧಿಸಿದಂತೆ ಸವಾಲುಗಳ ನಿಷ್ಠುರತೆಯನ್ನು ಅವಲಂಬಿಸಿರುತ್ತದೆ. ಬೆಳವಣಿಗೆ ಮತ್ತು ಶಿಥಿಲತೆಯ ವಿಧಾನಗಳ ನಡುವೆ ನಿಶ್ಚಿತವಾದ ವೈಶಿಷ್ಟ್ಯಗಳಿವೆ. ಭೌತಿಕ ಪರಿಸರದ ಸವಾಲುಗಳು ವಿಭಿನ್ನ ನಾಗರಿಕತೆಯ ಉಗಮಗಳಿಗೆ ಕಾರಣವಾಗುತ್ತವೆ. ಆರೋಗ್ಯಕರವಾದ ನಾಗರಿಕತೆಯು ಸ್ಥಿರವಾದ ವಿಶ್ರಾಂತಿಯನ್ನು ಅನುಭೋಗಿಸುವುದಿಲ್ಲ. ಏಕೆಂದರೆ ವಿಶ್ರಾಂತಿಯು (ಸುಸ್ಥಿತಿ) ನಾಗರಿಕತೆಗೆ ಅಪಾಯಕಾರಿಯಾಗುತ್ತದೆ. ಆದರೆ ಭೌತಿಕ ಜಗತ್ತು ಅದಕ್ಕೆ ಅಡ್ಡಿಯಾಗುತ್ತದೆ. ಆದ್ದರಿಂದ ಪ್ರಕೃತಿಯ ಪ್ರತಿಘಾತದ ವಿರುದ್ಧ ಮಾನವರು ಎದ್ದು ನಿಲ್ಲಬೇಕಾಗುತ್ತದೆ.

ಪ್ರಕೃತಿಯನ್ನು ಸಂಸ್ಕೃತಿಯ ಉದ್ದೇಶಗಳಿಗಾಗಿ ಅನುಗೊಳಿಸುವುದು ಇತಿಹಾಸದ ಪ್ರಮುಖ ಕಾರಣವಾಗಿದೆ. “ಸಮಸ್ತ ಬುಡಕಟ್ಟುಗಳು (ಜನಾಂಗಗಳು) ನಾಗರಿಕತೆಯ ಸಾಮರ್ಥ್ಯವನ್ನು ಹೊಂದಿರುತ್ತವೆ.” ಆದರೆ ನಾಗರಿಕತೆಗಳ ವ್ಯತ್ಯಾಸಗಳಿಗೆ ಬುಡಕಟ್ಟುಗಳು ಕಾರಣವಲ್ಲ. ಭೌಗೋಳಿಕ ವಿಸ್ತರಣೆ ಮತ್ತು ಸಾಮಾಜಿಕ ಶಿಥಿಲತೆಗಳು ಪರಸ್ಪರ ಸಂಬಂಧವುಳ್ಳದ್ದಾಗಿವೆ ಎಂದು ಟಾಯನ್‌ಬಿ ಅವರು ಹೇಳುತ್ತಾರೆ. ಮುಂದುವರಿಯುತ್ತಿರುವ ನಾಗರಿಕತೆಯಲ್ಲಿ ಹೊಸ ತಾಂತ್ರಿಕ ವಿಧಾನಗಳು ಮಾನವನ ಮನಸ್ಸನ್ನು ಇತರ ಉದ್ದೇಶಗಳಿಗಾಗಿ ಬಿಡುವಾಗಿಸುತ್ತದೆ. ಈ ಸಂಬಂಧದಲ್ಲಿ ತಮ್ಮ ಹೆಚ್ಚಿನ ಶಕ್ತಿಯನ್ನು ವ್ಯಯಿಸುವಲ್ಲಿ ಮಾನವ ಅಣಿಯಾಗುತ್ತಾನೆ ಎಂದು ಅವರು ಹೇಳಿರುವುದು ಗಮನಾರ್ಹವಾಗಿದೆ.

ನಾಗರಿಕತೆಗೆ ತುಲನಾತ್ಮಕ ವಿಶ್ರಾಂತಿ, ಆರ್ಥಿಕ ಚಟುವಟಿಕೆ ಹಾಗೂ ಮುನ್ನಡೆಯ ಕೆಲವು ಅವಧಿಗಳು ಮತ್ತು ಸ್ಥಿತಿಗಳು ಇರುತ್ತವೆ. ಅಂತೆಯೇ ಈ ನಾಗರಿಕತೆಗಳಿಗೆ ಗಳಭೆಗಳ ಮತ್ತು ಉಗ್ರವಾದ ಸವಾಲುಗಳ ಕೆಲವು ಅವಧಿಗೂ ಇರುತ್ತವೆ. ಇದನ್ನು ಗಲಭೆಗಳ ಕಾಲಗಳು ಎಂದು ಟಾಯನ್‌ಬಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಟಾಯನ್‌ಬಿ ಅವರ ಪ್ರಕಾರ ನಾಗರಿಕತೆಗಳು ತಮ್ಮ ಸಮಸ್ತ ಇಂಗಿತವನ್ನು ಹೊಂದಿಲ್ಲದ ಕಾರಣ ಅವುಗಳನ್ನು ‘ಸ್ಪಷ್ಟ ತಿಳಿಯುವಂತಹ ಕ್ಷೇತ್ರ’ಗಳಾಗಿ ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಅವರು ನಾಗರಿಕತೆಗಳಿಗೆ ಬದಲಾಗಿ ವಿಶಾಲವಾದ ವ್ಯಾಪ್ತಿಯುಳ್ಳ ಸಾರ್ವತ್ರಿಕ ರಾಜ್ಯಗಳ ಪರಿಗಣನೆಯಲ್ಲಿ ಆಸಕ್ತರಾಗುತ್ತಾರೆ. ಆದರೂ ನಾಗರಿಕತೆಗಳನ್ನು ಅವರು ಮರೆಯುವುದಿಲ್ಲ. ಯುದ್ಧಗಳಿಗೆ ವಿರಾಮ ಕೊಡಲು ಮತ್ತು ರಕ್ತಪಾತಕ್ಕೆ ಬದಲಾಗಿ ಸಹಕಾರವನ್ನು ಸ್ಥಾಪಿಸಲು ಈ ಸಾರ್ವತ್ರಿಕ ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ಅವುಗಳ ತೊಂದರೆಗಳ ಕಾಲದ ಉದ್ದವೂ ಹಾಗೂ ವಿರಮಿಸದ ಹಾದಿಯಿಂದ ಕೂಡಣೆಯನ್ನು ಒಳಪಡಿಸುತ್ತದೆ. ಆದರೆ ಸಾರ್ವತ್ರಿಕ ರಾಜ್ಯವು ಮಾನವನ ವಿಶೇಷ ಪ್ರಯತ್ನಗಳ ನಿಜವಾದ ಉದ್ದೇಶವಲ್ಲವೆಂಬುದನ್ನು ಇತಿಹಾಸವು ವ್ಯಕ್ತಪಡಿಸಿವೆ. ಸಾರ್ವತ್ರಿಕ ರಾಜ್ಯಗಳು ಕೆಲವು ವೇಳೆಗಳಲ್ಲಿ ಧರ್ಮಗಳನ್ನು ಪೀಡಿಸಿದರೂ ಹಾಗೂ ಅವುಗಳನ್ನು ಅಡಗಿಸಲು ಪ್ರಯತ್ನಿಸಿದರೂ, ಸಾರ್ವತ್ರಿಕ ಚರ್ಚುಗಳು ಆ ರಾಜ್ಯಗಳಿಂದ ಉಪಕಾರವನ್ನು ಪಡೆದವರಲ್ಲಿ ಪ್ರಮುಖವಾಗಿವೆ ಎಂದು ಅವರು ಹೇಳುತ್ತಾರೆ. ಸಾರ್ವತ್ರಿಕ ರಾಜ್ಯಗಳ ಸ್ವಭಾವವನ್ನು ಕೇವಲ ಲೋಕಾನುರಾಗವುಳ್ಳದ್ದಾಗಿರುವುದರಿಂದ ಇತಿಹಾಸದ ಸಮಸ್ಯೆಗಳನ್ನು ಎದುರಿಸಲು ಅವುಗಳಿಗೆ ಸಾಧ್ಯವಾಗುವುದಿಲ್ಲ.

ನಾಗರಿಕತೆಗಳ ಅಥವಾ ಸಾರ್ವತ್ರಿಕ ರಾಜ್ಯಗಳಿಗಿಂತ ಸಾರ್ವತ್ರಿಕ ಚರ್ಚುಗಳು ಸಮಾಜದ ಉತ್ತಮ ವರ್ಗವೆಂದು ಟಾಯನ್‌ಬಿ ಅವರು ಪರಿಗಣಿಸುತ್ತಾರೆ. ಹಿಂದೂ ಧರ್ಮ, ಮಹಾಯಾನ ಬೌದ್ಧ ಧರ್ಮ, ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮ ಈ ನಾಲ್ಕು ಧರ್ಮಗಳು ಅವರ ಪರಿಗಣನೆಗೆ ಒಳಪಡಿಸುತ್ತವೆ. ಅವರ ಪ್ರಕಾರ, ಈ ನಾಲ್ಕು ಧರ್ಮಗಳು ಅವುಗಳ ಪ್ರಬಲ ಬೆಳವಣಿಗೆಯ ಉತ್ಪನ್ನಗಳಾಗಿವೆ ಎಂಬ ನಿಲುವನ್ನು ಅವರು ತಾಳುತ್ತಾರೆ. ಅವರ ಪ್ರಕಾರ, ಈ ಧರ್ಮಗಳು

ಒಂದು ನಿಜವಾದ ದೇವನಲ್ಲಿ ನಂಬಿಕೆ ಇಟ್ಟಿದ್ದವು. ಈ ನಂಬುಗೆಯು, ಅನಾಗರಿಕ ಸಮಾಜಗಳು ಅಥವಾ ನಾಗರಿಕತೆಗಳಲ್ಲಿ ಕಂಡುಬರದ, ಕೆಲವು ಅತೀ ಮಹತ್ವದ ಸದ್ಗುಣಗಳನ್ನು ಕೊಟ್ಟಿತು. ಮಾನವ ಸಮಾಜದಲ್ಲಿ ಬಹುಕಾಲದಿಂದ ಬೇರೂರಿದ್ದ ದೋಷಗಳಲ್ಲಿ ಒಂದಾದ ವೈಮನಸ್ಸನ್ನು ಪರಾಭವಗೊಳಿಸಲು ಅದು ಶಕ್ತಿಯನ್ನು ಕೊಟ್ಟಿತು. ಇತಿಹಾಸದ ಇಂಗಿತದ ಸಮಸ್ಯೆಗೆ ಪರಿಹಾರವನ್ನು ಕೊಟ್ಟಿತು. ಈ ಜಗತ್ತಿನಲ್ಲಿ ಮಾನವ ಜೀವನವು ಸಾಧ್ಯವಾಗುವಂತೆ ಮಾಡಲು ಅಗತ್ಯವಾದ ಚೇತನವನ್ನುಂಟು ಮಾಡಲು ಆದರ್ಶವಾದ ನಡಾವಳಿಯನ್ನು ಅದು ಪ್ರೇರಿಸಿತು.

ಭವಿಷ್ಯದ ಜಗತ್ತಿನಲ್ಲಿ ಕೇವಲ ಒಂದು ನಾಗರಿಕತೆ ಮಾತ್ರ ಇರಲು ಸಾಧ್ಯವೆಂಬುದು ಟಾಯನ್‌ಬಿ ಅವರಿಗೆ ಸ್ಪಷ್ಟವಾಗಿದ್ದಂತೆ ತೋರುತ್ತದೆ. ಏಕೆಂದರೆ, ಒಂದಕ್ಕೊಂದರ ಅರಿವಿಲ್ಲದೆ ಆನಂದದಾಯಕ ಅಜ್ಞಾನದಲ್ಲಿ ನಾಗರಿಕತೆಗಳು ಜೀವಿಸುವುದು ಸಾಧ್ಯವಾಗುವುದಿಲ್ಲ. ವಿಶ್ವವು ಒಂದಾಗಿ ಸಂಭವಿಸುವ ಪ್ರವೃತ್ತಿ ಈಗ ಕಂಡುಬರುತ್ತಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಪ್ರಾವೀಣ್ಯತೆಯ ಮೇಲೆ ಎಡವಿರುವುದರಿಂದ ಇದು ಒಂದು ಇತಿಹಾಸದ ಆಕಸ್ಮಿಕ ಸಂಗತಿಯಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ರಾಷ್ಟ್ರೀಯತೆಯ ಸುಧಾರಣೆ ಯುಗವು ಮಾರಕವಾಗಿ ಬೆಳೆಯುತ್ತಿದೆ. ಅಲ್ಲದೆ ಅವು ಇಡೀ ಜಗತ್ತಿಗೆ ಅವುಗಳ ಸೋಂಕು ಅಂಟಿಸಿ, ಮೂರನೆಯ ಜಾಗತಿಕ ಯುದ್ಧದಲ್ಲಿ ಪರ್ಯವಸಾನವಾಗುವ ಬೆದರಿಕೆಯನ್ನುಂಟುಮಾಡಿದೆ. ಒಂದು ನಿಜವಾದ ಧರ್ಮವು ವರ್ಧಿಸಿದರೆ ಅದು ಈ ಸಾಮುದಾಯಿಕ ದಿಗಿಲುಗಳಿಂದ ನಮ್ಮನ್ನು ಬಿಡುಗಡೆ ಮಾಡುತ್ತದೆ. ಆದ್ದರಿಂದ ಸಮಸ್ತ ನಾಗರಿಕತೆಗಳ ಈಗಿನ ಅತಿ ಮಹತ್ವದ ಅಗತ್ಯವೆಂದರೆ ವ್ಯಕ್ತಿಯನ್ನು ಸಾಮುದಾಯಿಕದ ವಿರುದ್ಧ ಪುನಃ ಖಂಡಿತ ಮಾಡಿಕೊಳ್ಳುವುದಾಗಿದೆ. ಈ ಕಾರ್ಯವನ್ನು ಈ ನಾಲ್ಕು ಶ್ರೇಷ್ಠ ಧರ್ಮಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಧರ್ಮಗಳು ನಿರ್ವಹಿಸಬೇಕಾಗುತ್ತದೆ. ನ್ಯಾಯವಾದ ಯುದ್ಧದ ಅಗತ್ಯವನ್ನು ಟಾಯನ್‌ಬಿ ಅವರು ಮನಗಂಡರೂ, ಯುದ್ಧ ಕಾರರನ್ನು ಅವರು ದ್ವೇಷಿಸುತ್ತಾರೆ. ಅಹಿಂಸಾತ್ಮಕವಾದ ಬೌದ್ಧ ಧರ್ಮದ ವೈಭವವನ್ನು ಮೆಚ್ಚಿಕೊಂಡ ಅವರು ಶಾಂತಿ ಪ್ರಿಯತೆಯನ್ನು ಗೌರವಿಸುತ್ತಾರೆ. ಚರ್ಚ್ ಕೈಯಲ್ಲಿ ಕತ್ತಿ ಎತ್ತಿಕೊಳ್ಳುವುದನ್ನು ಯಾವಾಗಲೂ ಅವರು ಸಮ್ಮತಿಸಲಿಲ್ಲ. ತಮ್ಮ ೮, ೯ ಮತ್ತು ೧೦ನೆಯ ಸಂಪುಟಗಳಲ್ಲಿ ವಿಭಿನ್ನ ನಾಗರಿಕತೆಗಳ ಸಂಬಂಧಗಳ ಕಾಲ ಹಾಗೂ ವ್ಯಾಪಕತೆಯ ಪರಿಣಾಮಗಳ ಮೇಲೆ ಅವರು ಹೆಚ್ಚು ಚರ್ಚಿಸಿರುವುದನ್ನು ಗಮನಿಸಬಹುದು. ಈ ಅವಲೋಕನಗಳಿಂದ ಅವರು ಪುನರುಜ್ಜೀವನವು ಬರಡು ಹಾಗೂ ಅಪಾಯಕಾರಿಯಾಗಿದ್ದಿತೆಂಬ ತೀರ್ಮಾನಕ್ಕೆ ಬರುತ್ತಾರೆ.

ಟಾಯನ್‌ಬಿ ಅವರು ಇತಿಹಾಸ ದರ್ಶನವು ಹಲವು ಟೀಕೆಗಳಿಗೆ ಒಳಗಾಗಿದೆ. ಹಿಂದಿನ ತಲೆಮಾರಿನ ವಿದ್ವಾಂಸರಂತೆ ಟಾಯನ್‌ಬಿ ಅವರು ಸಹ ನಾಗರಿಕತೆಯನ್ನು ಒಂದು ರೀತಿಯ ಸಾಮಾಜಿಕ ಪಂಗಡ ಅಥವಾ ವರ್ಗದೊಂದಿಗೆ ಹೋಲಿಸುತ್ತಾರೆ. ಆದರೆ ಸಮಸ್ತ ಸಂಸ್ಕೃತಿಯ ನೋಟವು ಸ್ಪಷ್ಟವಾಗಿ ಉಚ್ಚರಿಸುವ ಅಂತಿಮ ಮೂಲತತ್ವವನ್ನು ಅವರು ಸೂಚಿಸುವುದಿಲ್ಲ. ಹೆಲನಿಕ್ ನಾಗರಿಕತೆಯು ಪ್ರಬಲವಾಗಿತ್ತು. ಭಾರತೀಯ ಸಂಸ್ಕೃತಿಯು ಪ್ರಧಾನವಾಗಿ ಧಾರ್ಮಿಕವಾಗಿತ್ತು ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯು ಯಾಂತ್ರಿಕತೆಯಿಂದ ಕೂಡಿತ್ತೆಂದು ಮಾತ್ರ ಹೇಳಿದ್ದಾರೆ. ಮೇಲೆ ಉದಾಹರಿಸಿರುವ ಮೂರು ನಾಗರಿಕತೆಗಳನ್ನು ಬಿಟ್ಟು ಉಳಿದ ನಾಗರಿಕತೆಗಳ ನಿಶ್ಚಿತ ಸಾಂಸ್ಕೃತಿಕ ಪ್ರವೃತ್ತಿಯನ್ನಾಗಲೀ ಅಥವಾ ದಾರ್ಶನಿಕ ಪೂರ್ವ ಕಲ್ಪನೆಯನ್ನಾಗಲೀ ಅವರು ಸೂಚಿಸುವುದಿಲ್ಲ. ಈ ಮೂರು ಉದಾಹರಣೆಗಳಲ್ಲಿಯೂ ಸಹ ಅವುಗಳ ಸೌಂದರ್ಯಯುತ, ಧಾರ್ಮಿಕ ಮತ್ತು ಯಾಂತ್ರಿಕತೆಯನ್ನು ಯಾವ ಪುರಾವೆಯೂ ಇಲ್ಲದೆ ತೋರಿಕೆಯ ರೀತಿಯಲ್ಲಿ ಅವರು ವಿವರಿಸಿದ್ದಾರೆ.

ಮನುಕುಲದ ಸಾಂಸ್ಕೃತಿಕ ಕ್ಷೇತ್ರದಿಂದ ಏಕೀಕರಿಸಲ್ಪಟ್ಟ ನಾಗರಿಕತೆಯ ಬಾಡಿಹೋಗುವುದಕ್ಕೆ ಟಾಯನ್‌ಬಿ ಅವರು ಕೊಡುವ ವ್ಯವಹಾರಿಕ ಉಪಯುಕ್ತತೆಯ ಪಟ್ಟಿಯು ಪರಿಸ್ಥಿತಿಯನ್ನು ಉತ್ತಮಪಡಿಸುವುದಿಲ್ಲ. ಅವರು ತಮ್ಮ ನಾಗರಿಕತೆಯನ್ನು ಸಮಾಜದ ವರ್ಗ ಎಂದು ಪರಿಗಣಿಸುತ್ತಾರೆ. ಆದರೆ ಈ ವರ್ಗವು ಯಾವ ಒಂದು ವ್ಯವಸ್ಥಿತ ಗುಂಪಿಗೆ ಸೇರಿದ್ದಿತೆಂದು ನಿಶ್ಚಿತವಾಗಿ ಅವರು ವಿಶ್ಲೇಷಿಸುವುದಿಲ್ಲ. ಇದರ ಪರಿಣಾಮವಾಗಿ ಈ ಎರಡು ವಿಂಗಡನೆಗಳಾದ ವ್ಯವಸ್ಥಿತ ಗುಂಪುಗಳು ಹಾಗೂ ಅರ್ಥವ್ಯವಸ್ಥಿತ ಸಾಮಾಜಿಕ ಅಂಗಗಳು ಅಸಂಗತ ವಿಂಗಡನೆಗಳಾಗಿವೆ.

ಪ್ರಸಿದ್ಧ ನಾಗರಿಕತೆಗಳ ಉದಯಕ್ಕೆ ಮೂರು ಅಂಶಗಳು ಕಾರಣವೆಂದು ಟಾಯನ್‌ಬಿ ಅವರು ಅಭಿಪ್ರಾಯ ಪಡುತ್ತಾರೆ. ಅವುಗಳೆಂದರೆ:

೧. ಹೆಚ್ಚು ಆದರಣೀಯವೂ ಅಥವಾ ಹೆಚ್ಚು ಅನಾಧರಣೀಯವೂ ಅಲ್ಲದೆ ಭೌಗೋಳಿಕ ವಾತಾವರಣ.

೨. ಸಮಾಜದಲ್ಲಿನ ಸೃಷ್ಟಿಕಾರಕ ಅಥವಾ ರಚನಾತ್ಮಕ ಅಲ್ಪಸಂಖ್ಯಾತರು.

೩. ಸವಾಲು (ಪ್ರತಿಭಟನೆ) ಹಾಗೂ ಜವಾಬು (ಪ್ರತ್ಯುತ್ತರ) ನೀಡುವುದು ಮತ್ತು ಹಿಂಜರಿಯುವುದು.

ಹಾಗೆಯೇ ಮರಳುವಿಕೆ ಇವುಗಳ ನಿರಂತರ ಪ್ರಕ್ರಿಯೆ ಇವೇ ಆ ಮೂರು ಅಂಶಗಳು. ಸೃಷ್ಟಿಕಾರಕ ಅಲ್ಪಸಂಕ್ಯಾತರು, ಹೆಚ್ಚು ಆದರಣೀಯವೂ ಅಥವಾ ಹೆಚ್ಚು ಅನಾಧರಣೀಯವೂ ಅಲ್ಲದ ಪರಿಸ್ಥಿತಿಯಲ್ಲಿರುವ ಪಂಗಡಗಳು ಮಾತ್ರ ನಾಗರಿಕತೆಯ ಹೊಸ್ತಿಲನ್ನು ಮೆಟ್ಟಿದವು; ಇವುಗಳಿಗೆ ಹೊರತಾದ ಪಂಗಡಗಳು ನಾಗರಿಕತೆಯ ಕೆಳಸ್ತರದಲ್ಲಿ ಉಳಿದವು ಎಂದು ಅವರು ತಿಳಿಸುತ್ತಾರೆ. ವಾತಾವರಣವು ಅನಾದಾರಣೀಯವಾಗಿದ್ದರೆ ಪಂಗಡದ ಸೃಷ್ಟಿಕಾರಕ ಪ್ರಯತ್ನವನ್ನು ಗರಿಷ್ಠ ಮಟ್ಟಕ್ಕೆ ಏರಿಸುವಂತಹ ಯಾವ ಪ್ರತಿಭಟನೆಯೂ ಇಲ್ಲದಂತಾಗುತ್ತದೆ. ಮಿಗಿಲಾಗಿ, ಈ ಪರಿಸ್ಥಿತಿಯು ಆಲಸ್ಯಕ್ಕೆ ಎಡೆಮಾಡಿಕೊಟ್ಟು ಪ್ರತಿಭಟನೆಗಳಿಗೆ ಸರಿಯಾದ ಪ್ರತ್ಯುತ್ತರಗಳನ್ನು ನೀಡಲು ಶಕ್ತಿಹೀನಗುಂದುವಂತೆ ಸಮಾಜ ತನ್ನ ಸೃಷ್ಟಿಕಾರಕ ಅಲ್ಪಸಂಖ್ಯಾತರ ಮೂಲಕ ಸಮರ್ಪಕವಾದ ಪ್ರತ್ಯುತ್ತರಗಳನ್ನು ನೀಡುತ್ತಾ ತನ್ನ ಉಳಿವನ್ನು ಕಾಪಾಡಿಕೊಳ್ಳುತ್ತದೆ. ಈ ಪ್ರತಿಭಟನೆ ಪ್ರತ್ಯುತ್ತರಗಳ ಪ್ರಕ್ರಿಯೆ ಸತತವಾಗಿ ಮುಂದುವರಿಯುತ್ತದೆ. ಈ ನಿರಂತರ ಪ್ರಕ್ರಿಯೆಯಿಂದ ರಚನಾತ್ಮಕ ಶಕ್ತಿಗಳು ವೃದ್ಧಿಗೊಂಡು, ಅಪೇಕ್ಷಿತ ಪ್ರಸಿದ್ಧ ನಾಗರಿಕತೆಯ ಹಂತವನ್ನು ತಲುಪುತ್ತದೆ. ಈ ಪರಿಸ್ಥಿತಿಯಿಂದ ಸಮಾಜಕ್ಕೆ ಸ್ವಲ್ಪವೂ ವಿಶ್ರಾಂತಿ ದೊರೆಯದೆ ಗಡಿಯಾರದೋಪಾದಿಯಲ್ಲಿ ಕಾರ್ಯನಿರತವಾಗಿರುವುದರಿಂದ ನಾಗರಿಕತೆಯ ಹಂತವನ್ನು ತಲುಪುತ್ತದೆ. ಇದು ಟಾಯನ್‌ಬಿ ಅವರ ಸಂಸ್ಕೃತಿ ಅಧ್ಯಯನದ ಒಂದು ಮುಖ.

ನಂತರ ಟಾಯನ್‌ಬಿ ಅವರು ೨೯ ನಾಗರಿಕತೆಗಳ ಪರಿಚಯ ಮಾಡಿಕೊಟ್ಟು ಇವುಗಳಲ್ಲಿ ಕೆಲವು ಹೇಗೆ ಮತ್ತು ಏತಕ್ಕೆ ಅವಸಾನ ಹೊಂದಿದವೆಂಬುದನ್ನು ವಿವರಿಸಿದ್ದಾರೆ. ನಾಲ್ಕು ನಾಗರಿಕತೆಗಳು ಕಾಲಕ್ಕೆ ಮುಂಚೆ ಹುಟ್ಟಿದವು. ನಂತರದ ಐದು ನಾಗರಿಕತೆಗಳು ಬೆಳವಣಿಗೆ ಪೂರ್ವ ಹಂತದಲ್ಲಿಯೇ ಕುಂಟಿಗೊಂಡವು. ಉಳಿದ ನಾಗರಿಕತೆಗಳು ಬೆಳೆಯಲಾರಂಭಿಸಿದವು. ಸೃಷ್ಟಿಕಾರಕ ಅಲ್ಪಸಂಖ್ಯಾತರು ಸತತವಾಗಿ ಹಿಂಜರಿದು ತಮ್ಮ ಬಲವನ್ನು ವೃದ್ಧಿಸಿಕೊಂಡು ಮತ್ತೇ ವಾಪಸ್ಸಾಗಿ ಸವಾಲುಗಳಿಗೆ ಜವಾಬು ಕೊಡುತ್ತಾ ಬೆಳವಣಿಗೆಯನ್ನು ಮುಂದುವರೆಸಿಕೊಂಡು ಬರುತ್ತಾರೆ. ಐಕ್ಯತೆಯು ಬೆಳೆಯುವ ಸಂಸ್ಕೃತಿಯ ಲಕ್ಷಣ. ಬೆಳೆಯುವ ಸಮಾಜವು ಸೃಷ್ಟಿಕಾರಕ ಅಲ್ಪಸಂಖ್ಯಾತರು ಮತ್ತು ಅವರಿಂದ ದೀಕ್ಷೆ ಪಡೆದ ಬಹುಸಂಖ್ಯಾತ ಅನುಯಾಯಿಗಳನ್ನು ಹೊಂದಿರುತ್ತದೆ. ಇಂತಹ ಸಮಾಜದಲ್ಲಿ ಭ್ರಾತೃಘಾತಕ ಕಲಹವಾಗಲೀ ಅಥವಾ ಯಾವ ರೀತಿಯ ವರ್ಗೀಕರಣವಾಗಲೀ ಇರುವುದಿಲ್ಲ. ಬೆಳೆಯುವ ನಾಗರಿಕತೆ ಪ್ರಭಾವಯುತವಾದ ಸಾಮರ್ಥ್ಯವನ್ನು ಎತ್ತಿಹಿಡಿಯುತ್ತದೆ. ಈ ಸಾಮರ್ಥ್ಯ ಒಂದೊಂದು ಸಂಸ್ಕೃತಿಯಲ್ಲಿ ಒಂದೊಂದು ರೀತಿಯಲ್ಲಿರುತ್ತದೆ. ಇದು ಟಾಯನ್‌ಬಿ ಅವರ ಇತಿಹಾಸ ಅಧ್ಯಯನದ ಮತ್ತೊಂದು ಮುಖ.

ಟಾಯನ್‌ಬಿ ಅವರ ಮೊದಲ ವಿಚಾರ ಸಣಿ ಹೆಚ್ಚು ಆದರಣೀಯವಾದ ಹಾಗೂ ಹೆಚ್ಚು ಅನಾದರಣೀಯವಲ್ಲದ ಭೌಗೋಳಿಕ ವಾತಾವರಣವು ಅನಿಶ್ಚಿತವಾಗಿದೆ. ಎಲ್ಲ ಪ್ರಖ್ಯಾತ ಸಂಸ್ಕೃತಿಗಳು ಅಂತಹ ವಾತಾವರಣದಲ್ಲಿಯೇ ಸೃಷ್ಟಿಯಾದವೆಂದು ಹೇಳಲು ಸಾಧ್ಯವಾಗುವುದಿಲ್ಲ. ಅಲ್ಲದೆ ಓದು ಬರಹ ಪೂರ್ವಕಾಲದ ನೂರಾರು ಗುಂಪುಗಳು (ಪಂಗಡಗಳು) ಮಿತಶೀಲವಾದ ವಾತಾವರಣದಲ್ಲಿದ್ದರೂ ಸಹ ಟಾಯನ್‌ಬಿ ಅವರು ಹೇಳುವ ನಾಗರಿಕತೆಯ ಹಂತವನ್ನು ತಲುಪಲಿಲ್ಲವೆಂಬುದಕ್ಕೆ ಉದಾಹರಣೆಗಳಿವೆ. ಮಾತ್ರವಲ್ಲ, ಭೌಗೋಳಿಕ ವಾತಾವರಣದಲ್ಲಿನ ಬದಲಾವಣೆಯು ನಿಧಾನವೂ ಮತ್ತು ಅಲ್ಪ ಪ್ರಮಾಣದ್ದೂ ಆಗಿರುತ್ತದೆ. ಪೂರ್ವ ಕಾಲದಲ್ಲಿ ಹೆಚ್ಚಿನ ಪಮಗಡಗಳು ಶತಮಾನಗಳ ಅವಧಿಯಲ್ಲಿ ಯಾವ ಬದಲಾವಣೆಯನ್ನೂ ಕಾಣದೆ ಒಂದೇ ರೀತಿಯಲ್ಲಿದ್ದುದು ಕಂಡುಬರುತ್ತದೆ. ಶತಮಾನಗಳವರೆಗೆ ಅನೇಕ ಪಮಡಗಳು ಓದು-ಬರಹ ಬಾರದ ಸ್ಥಿತಿಯಲ್ಲಿದ್ದವು. ಅನಂತರ, ಆಕಸ್ಮಾತ್ತಾಗಿ, ವಾತಾವರಣದಲ್ಲಿ ಯಾವ ಗಮನಾರ್ಹವಾದ ಬದಲಾವಣೆಯಿಲ್ಲದೆ, ಅಲ್ಲಿ ನಾಗರಿಕತೆಯು ವಿಕಸಿತವಾಗಲು ಪ್ರಾರಂಭವಾದುದು ಕಂಡು ಬರುತ್ತದೆ. ಕೆಲವು ನಾಗರಿಕತೆಗಳ ಕಂಗಾಲಾಗುವಿಕೆ ಮತ್ತು ಶಿಥಿಲತೆಗಳು ತಮ್ಮ ಭೌಗೋಳಿಕ ಅಂಶಗಳಲ್ಲಿ ಯಾವ ಗಮನಾರ್ಹವಾದ ಬದಲಾವಣೆಯಿಲ್ಲದೆ ಉಂಟಾಗಿವೆ. ಮಿಗಿಲಾಗಿ, ಒಂದೇ ವಾತಾವರಣದಲ್ಲಿ ಜೀವಿಸುತ್ತಿರುವ ಹಲವಾರು ಬುಡಕಟ್ಟುಗಳಲ್ಲಿ ಒಂದು ಬುಡಕಟ್ಟು ನಾಗರಿಕತೆಯಲ್ಲಿ ಮುಂದುವರಿದು, ಮಿಕ್ಕವರು ಪೂರ್ವಸ್ಥಿತಿಯಲ್ಲಿಯೇ ಉಳಿದು ಬಂದಿರುವುದು ಸರ್ವವೇದ್ಯವಾಗಿದೆ. ಇವೇ ಮೊದಲಾದ ಉದಾಹರಣೆಗಳು ಟಾಯನ್‌ಬಿಯವರು ಪೂರ್ವ ಸಿದ್ಧಾಂತವನ್ನು ಪ್ರತಿಕ್ಷೇಪಿಸುತ್ತವೆ.

ಅವರ ಸೃಷ್ಟಿಕಾರಕ ಅಲ್ಪಸಂಖ್ಯಾತರ ವಿಚಾರ ಸರಣಿಯೂ ಸಹ ಸಮಾಧಾನಕರವಾಗಿಲ್ಲ. ಜನಾಂಗ ಹಾಗೂ ಜೀವಿಕ ಅನುವಂಶಿಕತೆಯ ಅಂಶವನ್ನು ಅವರು ತಿರಸ್ಕರಿಸುತ್ತಾರೆ. ನಾವು ಈ ಅಂಶವನ್ನು ಪರಿಗಣನೆಗೆ ತಂದುಕೊಳ್ಳದಿದ್ದರೆ, ಎಲ್ಲಿ ಮತ್ತು ಹೇಗೆ ಈ ಸೃಷ್ಟಿಕಾರಕ ಅಲ್ಪಸಂಖ್ಯಾತರು ಕಾಣಿಸಿಕೊಳ್ಳುತ್ತಾರೆ ಮತ್ತು ಅವರು ಹೇಗೆ ಸೃಷ್ಟಿಕಾರಕರಾಗುತ್ತಾರೆ. ಟಾಯನ್‌ಬಿ ಅವರ ಅಲ್ಪಸಂಖ್ಯಾತರು ಏತಕ್ಕೆ, ಹೇಗೆ, ಎಲ್ಲಿ ಮತ್ತು ಏನು ಎನ್ನುವ ಕಾರಣಗಳಿಗಾಗಿ ಉದಯಿಸಿದರು ಮತ್ತು ಅದೃಶ್ಯವಾದರು ಎಂಬ ವಿಷಯಗಳು ಸಂಪೂರ್ಣವಾಗಿ ರಹಸ್ಯವಾಗಿಯೇ ಉಳಿಯುತ್ತದೆ. ಒಂದು ನಿರ್ದಿಷ್ಟ ಪಂಗಡದ ರಚನಾತ್ಮಕತೆಯನ್ನು ವಿವರಿಸುವುದಕ್ಕೆ ಬದಲಾಗಿ, ಸ್ವಯಂ ಸಿದ್ಧವೆಂದು ತಿಳಿದ ಅವರ ವಿಚಾರ ಸರಣಿಯು ಹೇಗೆ ಕೆಲವು ಪಂಗಡಗಳು ನಾಗರಿಕತೆಯನ್ನು ಪಡೆದವು, ಮತ್ತೆ ಕೆಲವು ಏಕೆ ಪೂರ್ವ ಸ್ಥಿತಿಯಲ್ಲಿಯೇ ಉಳಿದವು ಎಂಬ ಪ್ರಶ್ನೆಗಿಂತ ಹೆಚ್ಚು ಸೃಷ್ಟೀಕರಣವನ್ನು ಅಪೇಕ್ಷಿಸುತ್ತದೆ.

ಮಿಗಿಲಾಗಿ, ಅವರ ಪ್ರತಿಭಟನೆ (ಸವಾಲು) ಮತ್ತು ಪ್ರತ್ಯುತ್ತರ (ಜವಾಬು). ಈ ನಿಲುವೂ ಸಹ ಬೋಧಕವಾಗಿಲ್ಲ. ಒಂದು ಪಂಗಡವು ತನ್ನ ಜೀವಿತ ಕಾಲದಲ್ಲಿ ಸತತವಾಗಿ ಪ್ರತಿಭಟನೆಗಳನ್ನು ಎದುರಿಸಿ ಪ್ರತ್ಯುತ್ತರಗಳನ್ನು ಕೊಡುತ್ತಿರಬೇಕಾಗುತ್ತದೆ. ಈ ಪರಿಸ್ಥಿತಿಗೆ ಒಳಗಾಗದ ಯಾವ ಒಂದು ಜೀವಿತ ಪಂಗಡವಿಲ್ಲ. ಅಂದಿನಿಂದ ಇಂದಿನವರೆಗೆ ಅದು ಸಾರ್ವತ್ರಿಕವೂ, ಅಖಂಡವೂ ಮತ್ತು ಸಮಸ್ತ ಜೀವಂತ ಪಮಗಡಗಳಿಗೆ ಸಾಮಾನ್ಯವಾಗಿರುವುದರಿಂದ, ಅದು ಸೃಷ್ಟಿಕಾರಕ ಪಂಗಡಗಳಲ್ಲಿ ಮಾತ್ರ ಪ್ರವರ್ತಿಸುವ ಅಂಶವೆಂದು ಪರಿಗಣಿಸಲಾಗುವುದಿಲ್ಲ. ಇದೇ ಟೀಕೆಯನ್ನು ಹಿಂಜರಿಯುವಿಕೆ ಮತ್ತು ಮರುಳುವಿಕೆಯ ವಿಷಯದ ಬಗೆಗೂ ಮಾಡಬಹುದಾಗಿದೆ. ಇವೆಲ್ಲವೂ ಸೃಷ್ಟಿಕಾರಕ ಹಾಗೂ ಸೃಷ್ಟಿಕಾರಕವಲ್ಲದ, ಮತ್ತು ಯಶಸ್ಸು ಪಡೆದ ಹಾಗೂ ಪಡೆಯದ ಪಂಗಡಗಳಿಗೂ ಅನ್ವಯಿಸುತ್ತದೆ. ಆದ್ದರಿಂದ ನಮ್ಮ ವಿಚಾರಣೆಗೆ ಗುರಿಯಾಗಿರುವ ಸಮಸ್ಯೆಯನ್ನು ಇದು ಬಗೆಹರಿಸುವುದಿಲ್ಲ. ಯಾವ ಪರಿಸ್ಥಿತಿಯಲ್ಲಿ ಈ ಅಂಶಗಳು ಪರಿವರ್ತಿಸುವವೆಂದು ಟಾಯನ್‌ಬಿ ಅವರು ವಿವರಿಸುವುದಿಲ್ಲ. ಆದ್ದರಿಂದ ಈ ಸಮಸ್ಯೆಯನ್ನು ಬಗೆಹರಿಸಲು ಈ ಅಂಶಗಳು ಸಹಾಯಕವಾಗುವುದಿಲ್ಲ.

ಈ ನಾಗರಿಕತೆಗಳನ್ನು ನಿಶ್ಚಿತ ವ್ಯವಸ್ಥೆಗಳೆಂದು ತೆಗೆದುಕೊಂಡಿರುವುದರಿಂದ ಅವು ಮರಣವನ್ನು ಹೊಂದಲೇಬೇಕು. ಅವು ‘ನಿರರ್ಥಕವಾಗಿ ಜನಿಸಿದವು’, ‘ಪ್ರತಿಬಂಧಿಸಲ್ಪಟ್ಟವು’, ‘ಗಾಬರಿಪಡಿಸಲ್ಪಟ್ಟವು’, ‘ಬಲಹೀನವಾದುಗಳು’, ‘ಶಿಥಿಲವಾದವು’ ಅಥವಾ ‘ಮರಣ ಹೊಂದಿದವು’ ಮತ್ತು ‘ಮಣ್ಣುಗಾಣಿಸಲ್ಪಟ್ಟವು’ ಎಂದು ಟಾಯನ್‌ಬಿ ಅವರು ಘೋಷಿಸಿದ್ದಾರೆ. ಅವರ ಪ್ರಕಾರ ೨೬ ನಾಗರಿಕತೆಗಳಲ್ಲಿ ಒಂದು ಮಾತ್ರ ಇಂದಿಗೂ ಜೀವಂತವಾಗಿದೆ ಮತ್ತು ನಾಗರಿಕತೆಗಳು ಮರಣವನ್ನಪ್ಪಿವೆ ಅಥವಾ ಅರೆಜೀವ ಹೊಂದಿವೆ. ಜೀವಂತವಾಗಿರುವ ನಾಗರಿಕತೆ ಪಾಶ್ಚಾತ್ಯ ನಾಗರಿಕತೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪಾಶ್ಚಾತ್ಯ ನಾಗರಿಕತೆಯ ವಿಚಾರದಲ್ಲಿ ಅವರ ಸ್ವಭಾವ ಪರೀಕ್ಷಣವು ಅಸ್ಪಷ್ಟವೂ ಅಥವಾ ದ್ವಂದ್ವಾರ್ಥವುಳ್ಳದ್ದೂ ಆಗಿದೆ. ಪಾಶ್ಚಾತ್ಯ ನಾಗರಿಕತೆಯು ಅದರ ಬಲಹೀನತೆಯ ಪ್ರವೃತ್ತಿಯಲ್ಲಿದೆ ಎಂದು ಅನೇಕ ಸ್ಥಳಗಳಲ್ಲಿ ಹೇಳಿದ್ದರೆ ಮಿಕ್ಕ ಕೆಲವೆಡೆ ಅವರು ಯಾವ ಅಭಿಪ್ರಾಯವನ್ನೂ ವ್ಯಕ್ತಪಡಿಸುವುದಿಲ್ಲ. ಅವರ ಪ್ರಕಾರ ಪಾಶ್ಚಾತ್ಯ ನಾಗರಿಕತೆಯು ೧೫ ನೆಯ ಶತಮಾನಕ್ಕೆ ಮುನ್ನ ಬೆಳವಣಿಗೆಯ ಹಂತದಲ್ಲಿದ್ದಿತು. ಇದು ಹೀಗಿದ್ದಲ್ಲಿ, ಅವರ ಯೋಜನೆಯ ಪ್ರಕಾರ, ಕ್ರಾಂತಿಗಳು, ಮಹತ್ವದ ಯುದ್ಧಗಳು, ವರ್ಗ ಬೇಧಗಳು ಆ ಶತಮಾನಕ್ಕೆ ಮುನ್ನ ಯುರೋಪಿನಲ್ಲಿ ಇರಲಿಲ್ಲವೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ವಸ್ತು ಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ. ಯುರೋಪಿನ ಇತಿಹಾಸದಲ್ಲಿ ೧೩ ಮತ್ತು ೧೪ನೆಯ ಶತಮಾನಗಳು ಕ್ರಾಂತಿಕಾರಕ ಯುಗಗಳಾಗಿತ್ತಲ್ಲದೆ, ಈ ಪ್ರವೃತ್ತಿಯು ೨೦ನೆಯ ಶತಮಾನದವರೆಗೂ ಮುಂದುವರೆಯಿತು. ಅಂತೆಯೇ ಜೀತ ಪದ್ಧತಿ ಹಾಗೂ ವಿಭಜನೆಯೂ ಜೀವಂತವಾಗಿದ್ದುದು ಕಂಡು ಬರುತ್ತದೆ. ಅಲ್ಲದೆ ಸಣ್ಣದೂ ಮತ್ತು ದೊಡ್ಡದಾದ ಯುದ್ಧಗಳು ಸಹ ಸಂಭವಿಸಿದವು. ಈ ಪ್ರವೃತ್ತಿಗಳು ನಾಗರಿಕತೆಯ ಬೆಳವಣಿಗೆಗೆ ಮಾರಕವಾಗಿದ್ದರಿಂದ, ಪಾಶ್ಚಾತ್ಯ ನಾಗರಿಕತೆಯು ೧೫ನೆಯ ಶತಮಾನಕ್ಕೆ ಮುನ್ನ ಬೆಳವಣಿಗೆಯ ಹಂತದಲ್ಲಿದ್ದಿತೆಂಬ ಹೇಳಿಕೆಯನ್ನು ಒಪ್ಪಲಾಗುವುದಿಲ್ಲ.

ಟಾಯನ್‌ಬಿ ಅವರ ಸಮಸ್ತ ನಾಗರಿಕತೆಗಳು ಪ್ರಮುಖ ಸಂಕೀರ್ಣಗಳಾಗಿದ್ದು ವಿಶಾಲವಾದ ಪ್ರದೇಶಗಳ ಹಾಗೂ ಜನಗಳ ಮೇಲೆ ವ್ಯಾಪಿಸಿದೆ. ಆದರೆ ಈ ಅತಿ ವಿಶಾಲದ ರೂಪದಲ್ಲಿ ತಕ್ಷಣ ಅವು ಉದ್ಭವವಾಗಲಿಲ್ಲ. ಒಂದು ಸಣ್ಣ ಪ್ರದೇಶದಿಂದ ಪ್ರಾರಂಭವಾಗಿ, ಕಾಲ ಕ್ರಮೇಣದಲ್ಲಿ ವಿಶಾಲವಾದ ಪ್ರದೇಶಗಳ ಹಾಗೂ ಜನಗಳ ಮೇಲೆ ವಿಸ್ತರಿಸಿ ಐತಿಹಾಸಿಕವಾಯಿತು. ಅದು ಶಾಂತಿಯುತವಾಗಿ ವಿಶಾಲವಾದ ಪ್ರದೇಶಗಳ ಮೇಲೆ ಹಬ್ಬಿತೆಂದು ಹೇಳುವುದು ತಪ್ಪಾಗುತ್ತದೆ. ಅವರ ೨೧ ನಾಗರಿಕತೆಗಳು ತಮ್ಮ ಬೆಳವಣಿಗೆಯ ಅವಧಿಯಲ್ಲಿ ಶಾಂತಿಯುತವಾಗಿ ಅಲ್ಲದೆ ಹೆಚ್ಚು ಬಲದ ಪ್ರಯೋಗದಿಂದ ಹಬ್ಬಿತ್ತು. ತಮ್ಮ ಶಿಥಿಲತೆಯ ಅವಧಿಯಲ್ಲಿ ನಾಗರಿಕತೆಗಳು ಹಬ್ಬುವುದಕ್ಕೆ ಬದಲಾಗಿ ಸಂಕುಚಿತಗೊಂಡವು.

ನಾಗರಿಕತೆಗಳು ಸದೃಶ. ಅವುಗಳೆಲ್ಲವೂ ಸಾಮಾನ್ಯ ನಿಯಮಗಳಿಗೆ ಅನುಗುಣವಾಗಿ ಒಂದೇ ಹಂತದಲ್ಲಿ ಹುಟ್ಟಿ, ಬೆಳೆದು, ಕ್ಷೀಣಿಸುತ್ತದೆ. ಅವುಗಳ ಬೆಳವಣಿಗೆ ಏಕ ಕಾಲಮಾಪನದಲ್ಲಿ ಜರುಗುತ್ತವೆ ಮತ್ತು ಅಂತ್ಯದಲ್ಲಿ ಮರಣ ಹೊಂದುತ್ತವೆ ಎಂಬದು ಟಾಯನ್‌ಬಿ ಅವರ ಪ್ರಮುಖವಾದ ವಿಚಾರ ಸರಣಿಯಾಗಿದೆ. ಅವುಗಳ ಅವಸಾನದ ರೂಪಗಳು ವಿಭಿನ್ನವಾಗಿರಬಹುದು. ಕೆಲವು ತಕ್ಷಣ ಸಾಯುತ್ತದೆ; ಕೆಲವು ನಾಗರಿಕತೆಗಳ ಸಾವು ಹಿಂಸಾತ್ಮಕವಾಗಿರುವುದಿಲ್ಲ; ಮತ್ತೆ ಕೆಲವು ಹೆಣಗಾಡುತ್ತಿರುತ್ತವೆ; ಆದರೆ ಅವು ನಿಜವಾಗಿ ಜೀವಂತವಾಗಿರುವುದಿಲ್ಲ. ಇದು ಟಾಯನ್‌ಬಿ ಅವರ ಸಂದೇಹವೂ, ನಿಯತಿವಾದವೂ ಆಗಿರುತ್ತದೆ.

ಪ್ರತಿಯೊಂದು ನಾಗರಿಕತೆಯೂ ಅದರ ಇತಿಹಾಸದ ಅವಧಿಯನ್ನು ಲಕ್ಷಿಸದೆ ಅವ್ಯಾಹಕ ಪ್ರವೃತ್ತಿಯನ್ನು ಆರೋಪಿಸುವುದು ದಾರಿ ತಪ್ಪಿಸುವ ಕ್ರಮವಾಗಿದೆ. ನಾಗರಿಕತೆಯ ವಿಶ್ಲೇಷಣೆ ಪಕ್ಷಪಾತವಲ್ಲದ್ದೂ ಮತ್ತು ವೈಜ್ಞಾನಿಕವಾಗಿದ್ದರೂ, ಟ್ರೆವರ್ ರೋಪರ್ ತಿಳಿಸಿರುವಂತೆ, ಹೆಚ್ಚು ಅವೇಶಪರ ಪಕ್ಷಪಾತದಿಂದ ಕೂಡಿದೆ. ಮಾನವ ತರ್ಕ ಮತ್ತು ಮಾನವ ಚೇತನ ಇವುಗಳ ಸ್ವಾತಂತ್ರ‍್ಯವನ್ನು ಸೂಚಿಸುವುದೆಲ್ಲವೂ ಟಾಯನ್‌ಬ ಅವರಿಗೆ ಜಿಗುಪ್ಸೆ ಹುಟ್ಟಿಸುತ್ತದೆ. ಇದರ ಪರಿಣಾಮವಾಗಿ ಅವರ ತರ್ಕವೂ ವಿಭಿನ್ನವಾಗಿ ಕಾಣುತ್ತದೆ. ಅಳಿವು ಮತ್ತು ಅವಸಾನ ಸ್ಥಿತಿ ಮುಂತಾದ ಪದಗಳಿಗೆ ನೈತಿಕ ಅರ್ಥವನ್ನು ಕೊಟ್ಟು ತಮಗೆ ಅಪೇಕ್ಷೆಯಿಲ್ಲದ ವಿಧಾನಗಳಿಗೆ ಇವುಗಳನ್ನು ಬಳಸಲಾಗಿದೆ. ಯುರೋಪಿನ ಪುನರುಜ್ಜೀವನವು ಅವರಿಗೆ ಪಾಶ್ಚಿಮಾತ್ಯ ಸಂಸ್ಕೃತಿಯ ಅಳಿವಿನ ಆರಂಭವನ್ನು ಸೂಚಿಸುತ್ತದೆ. ಅಂತೆಯೇ ಮಾನವನ ಪ್ರತಿಯೊಂದು ತಾರ್ಕಿಕ ಪ್ರಕಾಶನವೂ ಅವನತಿಯ ಮೈಲಿಗಲ್ಲಾಗುತ್ತದೆ. ಯುರೋಪಿನ ಇತಿಹಾಸದ ಪ್ರಸಿದ್ಧ ಶತಮಾನಗಳು ಅವರ ಪಾಲಿಗೆ ಅಂಧಾಕಾರ ಯುಗಗಳಾಗಿವೆ. ಯುರೋಪಿನ ಕೈಗಾರೀಕರಣ, ತಾಂತ್ರಿಕ ಅಭಿವೃದ್ದಿ, ಕಮ್ಯುನಿಸಂನ ಉದಯ ಮತ್ತು ಹೈಡ್ರೋಜನ್ ಬಾಂಬ್ ಮುಂತಾದವುಗಳು ಬೆಳಕಿಗೆ ಬರುವ ಮೊದಲೇ ಅಲ್ಲಿನ ನಾಗರಿಕತೆಯ ಆಳವನ್ನು ನಿರ್ಣಯಿಸಲಾಗಿದೆ. ಈ ನಿರ್ಣಯವಾಗಿ ನಾಲ್ಕು ಶತಮಾನಗಳು ಕಳೆದರೂ ಪಾಶ್ಚಿಮಾತ್ಯ ಸಂಸ್ಕೃತಿಯು ಅಳಿಯದೆ ಹೆಚ್ಚು ಸೌಂದರ್ಯಯುತವೂ, ದೃಢವೂ ಆಗಿ ಅರಳುತ್ತಿರುವುದು ಟಾಯನ್‌ಬಿ ಅವರ ಭವಿಷ್ಯವನ್ನು ಸುಳ್ಳಾಗಿಸಿದೆ.

ಟಾಯನ್‌ಬಿ ಅವರ ಪ್ರಕಾರ, ಅಳಿಯುತ್ತಿರುವ ಪಾಶ್ಚಿಮಾತ್ಯ ನಾಗರಿಕತೆಯ ಗತಿ ಏನು, ಅದನ್ನು ಉಳಿಸಲು ಸಾಧ್ಯವಿಲ್ಲದೆ ಎಂಬ ಪ್ರಶ್ನೆಗಳಿಗೆ ಅವರು ನಿರುತ್ತರರಾಗಿದ್ದಾರೆ. ಇದಕ್ಕಿರುವ ಏಕೈಕ ಮಾರ್ಗವೆಂದರೆ ಪುನರುಜ್ಜೀವನದ ಪೂರ್ವಕಾಲಕ್ಕೆ ಮರಳುವುದಾಗಿದೆ. ಪುನರುಜ್ಜೀವನ ಕಾಲದಿಂದ ಕೈಗಾರಿಕಾ, ತಾಂತ್ರಿಕ ಹಾಗೂ ವೈಜ್ಞಾನಿಕ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿಗಳನ್ನು ಕಡೆಗಣಿಸಿ ಮಧ್ಯ ಯುಗದ ಊಳಿಗಮಾನ್ಯ ಪದ್ಧತಿಗೆ ಹಿಂತಿರುಗುವುದಾಗಿದೆ.

ಈ ಲೋಪದೋಷಗಳಿದ್ದಾಗ್ಯೂ ಟಾಯನ್‌ಬಿ ಅವರ ಇತಿಹಾಸದ ಅಧ್ಯಯನ ಮನಸ್ಸಿಗೆ ನಾಟುತ್ತದಲ್ಲದೆ, ತಮ್ಮ ವಿಚಿತ್ರವಾದ ವಿಚಾರವನ್ನು ಉದ್ರೇಕಿಸುವಂತೆ ಹಾಗೂ ಉಧೃತವಾಗಿ ತಿಳಿಸುವಾಗ ಮನಸ್ಸನ್ನು ಹೆಚ್ಚು ಆಕರ್ಷಿಸುತ್ತದೆ. ಓದುಗರು ಅವರು ವಿವರಿಸುವ ಪ್ರತ್ಯೇಕ ಚಳವಳಿಗಳು, ಸಂಘಟನೆಗಳು ಅಥವಾ ಜನರ ಮೇಲೆ ತನ್ನ ಮನಸ್ಸನ್ನು ಕೇಂದ್ರೀಕರಿಸುವುದಕ್ಕಿಂತ ಹೆಚ್ಚಾಗಿ ಅವರ ಇತಿಹಾಸ ವಿಚಾರ ಸರಣಿಯ ಮೇಲೆ ಸಾಮಾನ್ಯವಾಗಿ ಕೇಂದ್ರೀಕರಿಸಬೇಕಾಗುತ್ತದೆ. ಅವರ ಈ ಗ್ರಂಥ ಅವರು ಪ್ರತಿಪಾದಿಸುವ ತತ್ವದ ಬೆಂಬಲವಾಗಿರುವುದಕ್ಕಿಂತ ಮಿಗಿಲಾಗಿದೆ. ತಮ್ಮ ಮನ ಹೊಕ್ಕುವ ಬುದ್ಧಿಶಕ್ತಿ ಮತ್ತು ಉಜ್ವಲ ಕಲ್ಪನಾಶಕ್ತಿಯಿಂದ ಇತಿಹಾಸದ ಭಾಗಗಳನ್ನು ವಿಭಿನ್ನ ಕೋನಗಳಿಂದ ಪರೀಕ್ಷಿಸಿ, ಚಕಿತಗೊಳಿಸುವಂತಹ ಹಾಗೂ ಭಾವಗರ್ಭಿತ ಬೆಳಕನ್ನು ಈ ಕೃತಿಯಲ್ಲಿ ಚೆಲ್ಲಿದ್ದಾರೆ.

ಪರಾಮರ್ಶನ ಗ್ರಂಥಗಳು

೧. ಗೋಪಾಲ ಬಾ.ರಾ., ೧೯೯೬, ಇತಿಹಾಸ ಶಾಸ್ತ್ರ ಮತ್ತು ಸಿದ್ಧಾಂತ, ಮೈಸೂರು: ಪ್ರಸಾರಾಂಗ, ಮಾನಸಗಂಗೋತ್ರಿ.

೨. ಶ್ರೀನಿವಾಸಮೂರ್ತಿ ಹೆಚ್.ವಿ., ೨೦೦೦. ಇತಿಹಾಸ ಸಂಶೋಧನಾ ಸಮೀಕ್ಷೆ, ಬೆಂಗಳೂರು: ಪದ್ಮ ಪ್ರಕಾಶನ.

೩. ವೆಂಕಟರತ್ನಂ ಎ.ವಿ., ಮತ್ತು ಪದ್ಮ ಎಂ.ಬಿ. ೧೯೯೧. ಇತಿಹಾಸ ಸಂಶೋಧನಾ ಮಾರ್ಗ, ಬೆಂಗಳೂರು: ಬೆಂಗಳೂರು ಪ್ರಿಂಟಿಂಗ್ ಆಂಡ್ ಪಬ್ಲಿಶಿಂಗ್.

೪. ಕಾಲಿಂಗ್‌ವುಡ್ ಆರ್.ಜಿ., ೧೯೮೫. ದಿ ಐಡಿಯಾ ಆಫ್ ಹಿಸ್ಟರಿ, ಮದರಾಸ: ಆಕ್ಸಫರ್ಡ್‌ಯುನಿವರ್ಸಿಟಿ ಪ್ರೆಸ್.

೫. ಷೇಕ್‌ಅಲಿ ಬಿ., ೨೦೦೧. ಹಿಸ್ಟರಿ ಇಟ್ಸ್ ಥಿಯರಿ ಆಂಡ್ ಮೆಥಡ್, ನೂಡೆಲ್ಲಿ: ಮ್ಯಾಕ್‌ಮಿಲನ್ ಇಂಡಿಯಾ ಲಿಮಿಟೆಡ್.

೬. ಶ್ರೀಧರನ್‌ ಇ., ೨೦೦೪, ಎ ಟೆಕ್ಸ್ಟ್‌ಬುಕ್ ಆಫ್ ಹಿಸ್ಟಾರಿಯಾಗ್ರಫಿ – ೫೦೦೦ ಬಿ.ಸಿ. ಟು ಎ.ಡಿ. ೨೦೦೦, ನ್ಯೂಡೆಲ್ಲಿ: ಓರಿಯಂಟ್ ಲಾಂಗ್‌ಮನ್.

* * *