ವಿಜ್ಞಾನ ಮತ್ತು ತಂತ್ರಜ್ಞಾನದ ಇತಿಹಾಸ

ಕೇವಲ ರಾಜಕೀಯ ಘಟನೆಗಳ ಅಧ್ಯಯನವನ್ನು ಬಿಟ್ಟು ಪೂರ್ಣವಾದ ನಾಗರಿಕತೆಯ ಅಧ್ಯಯನವಾಗಬೇಕೆಂಬ ಹೊಸ ತತ್ವವೊಂದು ಇತಿಹಾಸಕಾರನ ಜಗತ್ತಿನಲ್ಲಿ ತಲೆಯೆತ್ತಲಾಗಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಇತಿಹಾಸವೆಂಬ ವಿಶಿಷ್ಟವಾದ ಹೊಸ ಲೋಕವೊಂದು ೧೮ನೇ ಶತಮಾನದಲ್ಲಿ ಹುಟ್ಟಿಕೊಂಡಿತು. ಅಂದಿನಿಂದ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯ ಅಧ್ಯಯನವನ್ನು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇತಿಹಾಸಕಾರರು ನಡೆಸುತ್ತಿದ್ದಾರೆ. ಇದರ ಪರಿಣಾಮದಿಂದಾಗಿ, ಇಂದು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನದ ಇತಿಹಾಸ ರಚನೆ ಎಂಬ ವಿಷಯದ ಬಗ್ಗೆ ಮಾತನಾಡಬಹುದಾಗಿದೆ. ಇತಿಹಾಸ ರಚನೆಯ ಹಲವು ರಂಗಗಳಲ್ಲಿ ಹೆಸರು ಮಾಡಿರುವ ಫ್ರಾನ್ಸ್‌ ದೇಶವೇ ಇಲ್ಲಿಯೂ ಕೂಡ ಮೊದಲಿಗೆ ಹಲವಾರು ಪ್ರಮುಖವಾದ ಬೆಳವಣಿಗೆಗಳನ್ನು ಕಂಡಿದೆ. ಆನಲ್ಸ್ ಇತಿಹಾಸಕಾರರು ಈ ಕ್ಷೇತ್ರವನ್ನು ಪೂರ್ಣ ಇತಿಹಾಸದ ಒಂದು ಭಾಗವೆಂದು ಪರಿಗಣಿಸಿ, ಇಲ್ಲಿಯೂ ಕೂಡ ಕೆಲಸ ಮಾಡಿರುತ್ತಾರೆ. ವಿಜ್ಞಾನದ ಹಲವು ರಂಗಗಳಲ್ಲಿ ಆದ ಬೆಳವಣಿಗೆಗಳನ್ನು, ಮತ್ತೆ ಇವುಗಳಿಂದ ಉಂಟಾಗಿರುವ ಪ್ರಭಾವಗಳನ್ನು, ವೈಜ್ಞಾನಿಕ ಮತ್ತು ತಂತ್ರಜ್ಞಾನೀಯ ಚಿಂತನೆಗಳನ್ನು ಪ್ರಮುಖವಾಗಿ ಪರೀಕ್ಷಿಸಲಾಗಿದೆ. ಜೆ. ಆಗಸ್ಸಿ, ಬ್ಲಂಡೆಲ್‌, ವಿ. ಗ್ಲೋರ್‌ಲೆಟ್, ಎಚ್. ಬಟರ್‌ಫೀಲ್ಡ್ ಮತ್ತು ಎಂ. ಕ್ಲಾಗೆಟ್ಟ್‌ ಎಂಬುವ ಪ್ರಮುಖ ವಿದ್ವಾಂಸರು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಆದ ವೈಜ್ಞಾನಿಕ ಬೆಳವಣಿಗೆಯ ಬಗ್ಗೆ, ಇತಿಹಾಸ ರಚನೆಯ ಕ್ರಿಯೆಯ ಬಗ್ಗೆ ಇತಿಹಾಸವನ್ನು ರಚಿಸಿರುತ್ತಾರೆ. ಭಾರತದ ಸಂದರ್ಭದಲ್ಲಿ ಹೇಳುವುದಾದರೆ, ಇತ್ತೀಚೆಗೆ ಮಾತ್ರ ಈ ಕ್ಷೇತ್ರವು ಭಾರತೀಯರನ್ನು ಆಕರ್ಷಿಸುತ್ತಿದೆ. ಈ ರಂಗದಲ್ಲಿ ಬಿ.ಎನ್.ಸೀಲ್ ಆರಂಭದಲ್ಲಿಯೇ ಕೆಲಸ ಮಾಡಿರುವ ಪ್ರಮುಖ ವ್ಯಕ್ತಿಯಾಗಿರುತ್ತಾರೆ. ದಿ ಪಾಸಿಟಿವ್ ಸೈನ್ಸಸ್‌ ಆಫ್ ದಿ ಹಿಂದುಸ್ ಎನ್ನುವ ಇವರ ಕೃತಿಯು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಇತಿಹಾಸಕಾರರಿಗೆ ಒಂದು ಮಾದರಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ದೇವಿಪ್ರಸಾದ ಚಟ್ಟೋಪಾಧ್ಯಾಯ, ಬಿ.ವಿ. ಸುಬ್ಬರಾಯಪ್ಪ ಮತ್ತು ದೀಪಕ್ ಕುಮಾರ್‌ ಎಂಬುವವರು ಈ ರಂಗದಲ್ಲಿ ಕೆಲಸ ಮಾಡಿದ್ದಾರೆ. ಇನ್ನೂ ಹೇಳಬಹುದೆಂದರೆ, ವಸಾಹತುಶಾಹಿಯ ಚೌಕಟ್ಟನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯನ್ನು ಇತಿಹಾಸಕಾರರು ಪರಿಶೀಲಿಸುತ್ತಿದ್ದಾರೆ.

ಮಹಿಳೆಯರ ಇತಿಹಾಸ[1]

ಕಳೆದ ಇಪ್ಪತ್ತು ವರ್ಷಗಳಿಂದೀಚೆಗೆ ಸ್ತ್ರೀಯರ ಇತಿಹಾಸವು ಒಂದು ವಿಶಿಷ್ಟವಾದ ಅಧ್ಯಯನ ಕ್ಷೇತ್ರವಾಗಿ ಬೆಳೆದು ಬಂದಿದೆ. ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಶಾಸ್ತ್ರೀಯ ಅಧ್ಯಯನ ಕೇಂದ್ರಗಳಲ್ಲಿ ಸ್ತ್ರೀಯರ ಇತಿಹಾಸ ಅಧ್ಯಯನಕ್ಕೆ ನೀಡಿರುವ ಶೈಕ್ಷಣಿಕ ಆದ್ಯತೆಯೇನೂ ಅಷ್ಟೊಂದು ಮುಖ್ಯವಲ್ಲದಿದ್ದರೂ, ಪ್ರಪಂಚದ ವಿವಿಧೆಡೆಗಳಲ್ಲಿ ಸ್ತ್ರೀಯರ ಇತಿಹಾಸ ಒಂದು ವಿಶಿಷ್ಟ ಅಧ್ಯಯನದ ಕ್ಷೇತ್ರವಾಗಿದೆ. ಆದರೂ, ಅಮೆರಿಕಾ ಸಂಯುಕ್ತ ಸಂಸ್ಥಾನದಂಥ ದೇಶಗಳಲ್ಲಿ ಸ್ತ್ರೀ ಇತಿಹಾಸದ ಅಧ್ಯಯನವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಅಲ್ಲಿ ಇದೇ ಸಂದರ್ಭದಲ್ಲಿ ಸ್ತ್ರೀ ಚಳವಳಿಯ ಬಿರುಸನ್ನು ನೋಡಬಹುದು. ಪ್ರಧಾನವಾದ ಮತ್ತು ಪ್ರಮುಖವಾದ ಐತಿಹಾಸಿಕ ಬರಹಗಳಲ್ಲಿ ಸ್ತ್ರೀಯರಿಗೆ ಸ್ವತಂತ್ರವಾದ ಸ್ಥಾನವನ್ನು ಕಲ್ಪಿಸಲು ಸ್ತ್ರೀವಾದಿಗಳು ಕರೆಯಿತ್ತರು. ಪರಿಣಾಮವಾಗಿ ಸ್ತ್ರೀ ಇತಿಹಾಸ ಒಂದು ವಿಶಿಷ್ಟವಾದ ಸಂಶೋಧನಾ ಕ್ಷೇತ್ರವಾಗಿ ೧೯೬೦ರ ವೇಳೆಗೆ ಹುಟ್ಟಿಕೊಂಡಿತು. ೧೯ನೇ ಶತಮಾನದ ಫ್ರಾನ್ಸಿನಲ್ಲಿ ಉದಾರವಾದಿ ಸ್ತ್ರೀವಾದ ಚಳವಳಿ, ಸ್ತ್ರೀಯರು ಮತ್ತು ಐರೋಪ್ಯ ಪ್ರಜಾಪ್ರಭುತ್ವ ರಾಜ್ಯಗಳ ಉಗಮ, ಐರೋಪ್ಯ ಇತಿಹಾಸದಲ್ಲಿ ಸ್ತ್ರೀಯರು, ಇಂಗ್ಲೆಂಡಿನಲ್ಲಿ ಮನೆಕೆಲಸದವರಾಗಿ ಸ್ತ್ರೀಯರು, ಕ್ರೈಸ್ತ ಧಮ್ದ ಆದಿಯಲ್ಲಿ ಸ್ತ್ರೀಯರು, ಅಮರಿಕದಲ್ಲಿ ಸ್ತ್ರೀಯರ ಚಳವಳಿಗಳು ಎಂಬ ವಿಷಯಗಳ ಮೇಲೆ ೧೯೭೦ರಿಂದೀಚೆಗೆ ಸಂಶೋಧನೆ ಮತ್ತು ಅಧ್ಯಯನವನ್ನು ಇತಿಹಾಸಕಾರರು ನಡೆಸುತ್ತಿದ್ದಾರೆ. ಎಲ್ಸ ಬೆರ್ಕ್ಲೆ ಬ್ರೌನ್‌, ಗಿಸೆಲಾ ಬಾಕ್, ಜೋನ್ ಸ್ಕಾಟ್, ಬೊನ್ನಿ ತಾರ್ನ್‌‌ಟನ್‌ಡಿಲ್, ಸೆಸಿಲಿ ಡಾಫಿನ್ ಮತ್ತು ಕ್ರಿಸ್ಟಿಯಾನೆ ಕ್ಲಾಪಿಸ್ಟ್‌ ಎಂಬುವ ವಿದ್ವಾಂಸರು ಈ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಭಾರತದ ಸಂದರ್ಭದಲ್ಲಿ ಹೇಳಬೇಕಾದರೆ, ಸ್ತ್ರೀ ಅಧ್ಯಯನವು ವಿದ್ವಾಂಸರನ್ನು ಆಕರ್ಷಿಸಿದೆ, ಆದರೆ ಸಂಶೋಧನೆಯ ವಿಷಯಗಳು ಅಮೆರಿಕದಲ್ಲಿರುವಂತೆ ಅಥವಾ ಪಾಶ್ಚಿಮಾತ್ಯ ರಾಷ್ಟ್ರಗಳಿಗಿರುವಂತೆ ತುಂಬಾ ವಿಸ್ತಾರವಾಗಿರುವುದಿಲ್ಲ.

ಕೆಳವರ್ಗಗಳ ಅಧ್ಯಯನ[2]

ದಕ್ಷಿಣ ಏಶಿಯಾದ ಇತಿಹಾಸ ಮತ್ತು ಅಲ್ಲಿನ ಸಮಾಜಗಳ ವಿಷಯಗಳನ್ನು ಕೆಳವರ್ಗಗಳ ದೃಷ್ಟಿಕೋನದಿಂದ, ವಿವಿಧ ಮಾರ್ಗಗಳ ಮೂಲಕ, ವಿವಿಧ ವಿಷಯಗಳ ಮೇಲೆ ಅಧ್ಯಯನ ಮಾಡುವ ಶಿಸ್ತು ಕೆಳವರ್ಗಗಳ ಅಧ್ಯಯನವಾಗಿದೆ. ಈ ಯೋಜನೆಯು ೧೯೮೨ ರಲ್ಲಿ ಆರಂಭವಾಯಿತು ಮತ್ತು ಇಂದಿನವರೆಗೆ ಸುಮಾರು ಹತ್ತು ಸಂಪುಟಗಳು ಹೊರಬಂದಿವೆ. ಮೊದಲನೆಯ ಆರು ಸಂಪುಟಗಳನ್ನು ರಣಜಿತ್ ಗುಹ ಸಂಪಾದಿಸಿದ್ದಾರೆ. ನಂತರದ ಮೂರು ಸಂಪುಟಗಳನ್ನು ಪಾಥ್ ಚಟರ್ಜಿ,ಗ್ಯಾನೇಂದ್ರ ಪಾಂಡೆ, ಡೇವಿಡ್ ಅರ್ನಾಲ್ಡ್, ಡೇವಿಡ್ ಹರ್ಡಿಮನ್, ಶಾಹಿರ್ ಅಮಿನ್ ಮತ್ತು ದೀಪೇಶ್ ಚಕ್ರವರ್ತಿ ಸಂಪಾದಿಸಿರುತ್ತಾರೆ. ಸಬಾಲ್ಟರ್ನ್ ಎನ್ನುವ ಶಬ್ದಕ್ಕೆ ಗುಹ ಅವರು ತಮ್ಮ ಮೊದಲನೆಯ ಸಂಪುಟದಲ್ಲಿ “ಕೆಳವರ್ಗದ ಗುಂಪಿನವರು” ಎಂಬ ಅರ್ಥವನ್ನು ಆಕ್ಸ್‌ಫರ್ಡ್‌ ಶಬ್ದಕೋಶವನ್ನು ಆಧರಿಸಿ ನೀಡಿರುತ್ತಾರೆ. ಸಬಾಲ್ಟರ್ನ್ ಎಂದರೆ ವರ್ಗಗದಲ್ಲಿ, ಜಾತಿಯಲ್ಲಿ, ವಯಸ್ಸಿನಲ್ಲಿ, ಲಿಂಗ ಭೇದದಲ್ಲಿ, ದಕ್ಷಿಣ ಏಷಿಯಾ ಸಮಾಜದಲ್ಲಿ, ಸಾಮಾನ್ಯವಾಗಿ ಅಧೀನರಾಗಿರುವವರು ಎಂದರ್ಥ.

ಮಾರ್ಕ್ಸ್‌ನ ಸಮಾಜ ವಿಕಾಸವಾದದ ಮತ್ತು ಮೇಲ್ವರ್ಗದವರ ರಾಷ್ಟ್ರ ಎಂಬ ಕಲ್ಪನೆಯ ಮತ್ತು ಪೂರ್ವಾತ್ಮ್ಯ ರಾಷ್ಟ್ರಗಳ ವಸಾಹತುಶಾಹಿಯ ಆಳವಾದ ಅಧ್ಯಯನದಿಂದ ಈ ಯೋಜನೆಯು ಪ್ರೇರೇಪಿತಗೊಂಡಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪುನರುಜ್ಜೀವನ ಕಾಲದ ನಂತರ ತಾತ್ವಿಕವಾಗಿ ಅಸ್ತಿತ್ವವನ್ನು ಕಳೆದುಕೊಂಡ ರೈತರು, ಆದಿವಾಸಿಗಳು, ಆದಿವಾಸಿ ರೈತರು ಮತ್ತು ಅಸ್ಪೃಶ್ಯರನ್ನು ಅರ್ಥಮಾಡಿಕೊಳ್ಳಲು ದೃಷ್ಟಿಕೋನದಲ್ಲಿ ಇತಿಹಾಸವನ್ನು ಬಳಸಿಕೊಳ್ಳಲಾಗಿದೆ.

ಇತಿಹಾಸದಲ್ಲಿ ಕಣ್ಮರೆಯಾಗಿರುವವರ ದೃಷ್ಟಿಕೋನದಲ್ಲಿ ಇತಿಹಾಸವನ್ನು ಸೃಷ್ಟಿಸುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದೆ. ಎರಿಕ್‌ ಹಾಬ್ಸ್‌ ಬಾಮ್‌ರ “ಸಮಾಜದ ಬಹಿಷ್ಕೃತ”, ಈ.ಪಿ. ಥಾಮ್ಸನ್‌ರ “ಇತಿಹಾಸ ಗುರುತಿಸದ ದಿನಗಳು,” ಯುಜೀನ್ ಜೆನೋವೆಸೆಯ “ಇತಿಹಾಸದ ವಿಷಯಗಳು ಮತ್ತು ವಸ್ತುಗಳು”, ಜೆ.ಬಾನಾಜಿಯ “ಬಂಡವಾಳ ಶಾಹಿಯಿಂದ ದುಡಿಯುವ ವರ್ಗದವರ ಆಕ್ರಮಣ,” ಜಾಕ್ಸ್‌ ಡೆರಿಡನ “ಡಿಕ” (ರಚನೆಭೇದ ತತ್ವದಿಂದ), ರೊಲಾಂಡ್ ಬಾರ್ಥ್‌‌ನ “ಕಥೆಗಳ ರಚನಾತ್ಮಕ ಪರಿಶೀಲನೆ” ಮತ್ತು ಜೆ.ಲಕನ್ನನ “ದಿ ಅದರ್” (ಅನ್ಯ) ಮುಂತಾದ ಮತ್ತು ವಿಭಿನ್ನವಾದ ಬೌದ್ಧಿಕ ವಿಷಯಗಳಿಂದ ಈ ಯೋಜನೆಯಲ್ಲಿ ಕೆಲಸ ಮಾಡಿರುವ ವಿದ್ವಾಂಸರು ಪ್ರಭಾವಿತರಾಗಿದ್ದಾರೆ. ಈ ಎಲ್ಲ ಪ್ರಭಾವಗಳಿಗಿಂತ ಮಿಗಿಲಾಗಿ ಆಂಟೋನಿಯೋ ಗ್ರಾಂಸಿಯ ಮತ್ತು ಮೈಕೇಲ್ ಫುಕೋನ ವಿಚಾರಗಳು ಹೆಚ್ಚು ನಿರಂತರವಾಗಿ ಮತ್ತು ಪ್ರಮುಖವಾಗಿ ಕಾಣಿಸಿಕೊಳ್ಳುತ್ತವೆ. ತನ್ನ ಪುಸ್ತಕವಾದ ಪ್ರಿಸನ್ ನೋಟ್ಸ್‌ನಲ್ಲಿ ಇಟಲಿಯ ಇತಿಹಾಸವನ್ನು ವಿಶ್ಲೇಷಿಸುವಾಗ ಗ್ರಾಂಸಿಯು ಬಳಸಿದ್ದ “ಸಬಾಲ್ಟರ್ನೋ” (ಕೆಳವರ್ಗದವರು) ಎನ್ನುವ ಶಬ್ದವು ಈ ಯೋಜನೆಯಲ್ಲಿ ಕೆಲಸ ಮಾಡುವವರಿಗೆ ಆರಂಭಿಕ ಸ್ಫೂರ್ತಿಯನ್ನು ನೀಡಿದೆ. ಹಲವು ಬಗೆಗಳಲ್ಲಿ ಮಾನವರು ಅಧೀನರಾದ ಇತಿಹಾಸವನ್ನು ಸೃಷ್ಟಿಸುವ ಧ್ಯೇಯಹೊಂದಿದ್ದ ಮೈಕೇಲ್ ಫುಕೋ ಈ ಯೋಜನೆಯಲ್ಲಿ ಕೆಲಸ ಮಾಡುತ್ತಿರುವವರ ಮೇಲೆ ಎರಡನೆ ಮುಖ್ಯ ಪ್ರಭಾವವಾಗಿದ್ದಾನೆ. ದಕ್ಷಿಣ ಏಶಿಯಾದ ಕೆಳವರ್ಗದವರ ಬಗ್ಗೆ ಕ್ರಮಬದ್ಧವಾದ ಅಧ್ಯಯನ ನಡೆಸುವುದು ಮತ್ತು ಆ ಮೂಲಕ ಉನ್ನತ ವರ್ಗದವರು ಕೆಳವರ್ಗದರ ಅಧ್ಯಯನದಲ್ಲಿ ಶೈಕ್ಷಣಿಕ ರಂಗದಲ್ಲಿ ಮಾಡಿರುವ ತಪ್ಪುಗಳನ್ನು ಸರಿಪಡಿಸುವುದೇ, ಕೆಳವರ್ಗದವರ ಅಧ್ಯಯನದಲ್ಲಿ ಶೈಕ್ಷಣಿಕ ರಂಗದಲ್ಲಿ ಮಾಡಿರುವ ತಪ್ಪುಗಳನ್ನು ಸರಿಪಡಿಸುವುದೇ, ಕೆಳವರ್ಗದವರ ಅಧ್ಯಯನದ ಮುಖ್ಯ ಗುರಿ ಎಂದು ಗುಹ ಅವರು ತಮ್ಮ ಮೊದಲನೆಯ ಸಂಪುಟದ ಮುನ್ನುಡಿಯಲ್ಲಿ ತಿಳಿಸಿದ್ದಾರೆ. ಎರಡು ವಿಷಯಗಳು ಮುಖ್ಯವಾಗಿ ಇಲ್ಲಿ ಸ್ಪಷ್ಟವಾಗುತ್ತವೆ. ಒಂದನೆಯದಾಗಿ, ಮೇಲ್ವರ್ಗದವರು ಸೃಷ್ಟಿಸಿರುವ ಇತಿಹಾಸ ರಚನೆಗೆ ಸವಾಲಾಗಿ ಈ ಯೋಜನೆಯನ್ನು ರಚಿಸಲಾಗಿದೆ ಮತ್ತು ಎರಡನೆಯದಾಗಿ, ಮೇಲ್ವರ್ಗದ ಇತಿಹಾಸಕಾರರು ಶ್ರಮಜೀವಿಗಳ ಮತ್ತು ದಡಿಯುವ ವರ್ಗದವರ ಮತ್ತು ಮಾರ್ಕ್ಸ್‌‌ನ ವ್ಯಾಖ್ಯಾನದಿಂದ ದೂರ ಸರಿದಿದ್ದಾರೆ ಎನ್ನುವ ಅಂಶ. ಈ (೧೬-೭) ಸಂಪುಟಗಳಲ್ಲಿ ಚರ್ಚಿಸಲಾಗಿರುವ ವಿಷಯಗಳು ತುಂಬಾ ವಿಶಾಲವಾಗಿವೆ. ಆದರೂ ಕೆಲವನ್ನು ಇಲ್ಲಿ ಪಟ್ಟಿ ಮಾಡಬಹುದಾಗಿದೆ. “ಪ್ರತಿ ದಂಗೆಯ ಭಾಷೆಯ” (ಆರ್. ಗುಹಾ), “ಮೊಗಲರ ಕಾಲದ ಗಡಿನಾಡಿನ ದಂಗೆಗಳು” (ಜಿ. ಭಂದ್ರ), “ಭೋಜಪುರಿ ಪ್ರಾಂತ್ಯದಲ್ಲಿ ಪಶುಸಂರಕ್ಷಣಾ ಚಳವಳಿ” (ಗ್ಯಾನ್ ಪಾಂಡೆ), “ಬಿಹಾರಿನಲ್ಲಿ ವ್ಯವಸಾಯದ ಬದಲಾವಣೆ” (ಅರವಿಂದ ದಾಸ್), “ಬ್ರಿಟಿಷರ ಕಾಲದಲ್ಲಿ ಕುಮಾಂವ್‌ ಪ್ರದೇಶದಲ್ಲಿ ಅರಣ್ಯ ಮತ್ತು ಸಾಮಾಜಿಕ ಅರಣ್ಯ” (ರಾಮಚಂದ್ರ ಗುಹ), “ಮಾಲ್ಡದಲ್ಲಿ ಜಿತು ಸಂತಾಲರ ಚಳವಳಿ” (ತನಿಕಾ ಸರ್ಕಾರ್‌), “ಬ್ರಿಟಿಷರ ಕಾಲದ ಗುಜರಾತಿನಲ್ಲಿ ಕುಡಿತದ ರಾಜಕೀಯ” (ಡಿ.ಹರ್ಡಿಮನ್) “ಭಾರತೀಯ ಪ್ಲೇಗು ರೋಗದ ಮೇಲೆ ದೃಷ್ಟಿಕೋನಗಳು” (ಡೇವಿಡ್ ಅರ್ನಾಲ್ಡ್‌), “ಮಹಾತ್ಮನಾಗಿ ಗಾಂಧಿ” (ಶಾಹಿದ್ ಅಮಿನ್), “ಶ್ರೀ ರಾಮಕೃಷ್ಣ ಹಾಗೂ ಕಲ್ಕತ್ತಾದ ಮಧ್ಯಮ ವರ್ಗ” (ಪಾರ್ಥ ಚಟರ್ಜಿ), “ಚತ್ತೀಸಗಢದ ಸತ್ನಾಮ ಪಂಥ” (ಸೌರಬ್ ದೂಬೆ) ಇವೇ ಈ ಸಂಪುಟಗಳಲ್ಲಿನ ಮುಖ್ಯವಾದ ವಿಷಯಗಳು. “ಇತಿಹಾಸದಲ್ಲಿ ಮುಚ್ಚಿಹೋಗಿರುವ ದನಿಗಳು” ಕೆಳವರ್ಗದವರ ಮೇಲೆ ಇತಿಹಾಸ ರಚಿಸುತ್ತಿದ್ದವರ ಒಂದೇ ಗುಂಪಿಗೆ ಸೇರಿದ ಆಸಕ್ತಿಯ ವಸ್ತುವೇನಾಗಿರಲಿಲ್ಲ. ಈ ವಿಷಯದಲ್ಲಿ ಕೆಳವರ್ಗದವರ ದೃಷ್ಟಿಕೋನದಿಂದ ಎರಿಕ್ ಸ್ಟೋಕ್ಸ್‌, ಸುದೀಪ್ತ ಕವಿರಾಜ, ಡೇವಿಡ್ ಕರ್ನಾರ್, ಎನ್.ಚಾರ್ಲ್ಸ್‌ವರ್ಥ್‌, ಧನಗೆರೆ, ಗೈಲ್ ಓಂವೆಡ್ತ್‌, ಶಶಿ ಜೋಶಿ, ಭಗವಾನ್ ಜೋಶ್ ಮತ್ತು ಬಿಖು ಪಾರೇಖ್ ಎಂಬ ವಿದ್ವಾಂಸರು ಕೂಡ ಕೆಲಸ ಮಾಡಿದ್ದಾರೆ. ರೈತರು, ಸ್ತ್ರೀಯರು ಮತ್ತು ದಲಿತರು ಈ ವಿಷಯಗಳ ಮೇಲೆಯೂ ಕೂಡ ಮೇಲೆ ಹೇಳಿದ ವಿದ್ವಾಂಸರು ಮತ್ತು ಹಲವರು ಕೆಲಸ ಮಾಡಿದ್ದಾರೆ.

ಕೆಳಸ್ತರದ ಇತಿಹಾಸ (ಹಿಸ್ಟರಿ ಫ್ರಂ ಬಿಲೋ)

ಸಾಂಪ್ರದಾಯಿಕವಾಗಿ ಇತಿಹಾಸವನ್ನು ಮಹಾಪುರುಷರ ಸಾಧನೆಗಳೆಂದೇ ಪರಿಭಾವಿಸಲಾಗಿದೆ. ೧೯ನೇ ಶತಮಾನದಲ್ಲಿ ವಿಶಾಲವಾದ, ಪ್ರಾಯೋಗಿಕವಾಗಿ ಮಾನವಂಗೆ ಸಂಬಂಧಿಸಿದ, ಗತಕಾಲದ ಎಲ್ಲಾ ವಿಷಯಗಳ ಬಗ್ಗೆ, ಎಲ್ಲರ ಬಗ್ಗೆ, ಹಾಗೂ ಮನುಷ್ಯರ ಎಲ್ಲ ಸಾಮಾಜಿಕ ಮತ್ತು ಆರ್ಥಿಕ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲ ಹುಟ್ಟಿಕೊಂಡಿತಾದರೂ, ಉಳ್ಳವರ, ಉನ್ನತ ವರ್ಗದವರ ರಾಜಕೀಯವೇ ಇತಿಹಾಸದ ಪ್ರಧಾನ ವಸ್ತುವಾಗಿ ಉಳಿದುಕೊಂಡಿತು. ಇಂತಹ ಪರಿಸ್ಥಿತಿಯ ಬಗ್ಗೆ ಇತಿಹಾಸಕಾರರು ಅಸಂತೋಷಗೊಂಡಿದ್ದರು. ೧೯೬೧ರಲ್ಲಿ ಇ.ಹೆಚ್. ಕಾರ್ ಎನ್ನುವ ಮಾರ್ಕ್ಸಿಸ್ಟ್ ಇತಿಹಾಸಕಾರ ಕೇಂಬ್ರಿಜ್ಜ್‌ನಲ್ಲಿ “ಜಾರ್ಜ್‌ ಮೆಕಾಲೆ ಟ್ರೆವೆಲ್ಯಾನ್ ದತ್ತಿ ಉಪನ್ಯಾಸ” ವನ್ನು ನೀಡುತ್ತಾ, “ಸೀಸರನು ರೂಬಿಕಾನ್ ಎನ್ನುವ ಒಂದು ಸುಂದರ ತೊರೆಯನ್ನು ಹಾದು ಹೋಗಿರುವುದು ಐತಿಹಾಸಿಕ ಸತ್ಯ ಎನ್ನುವನು. ಆದರೆ ಸೀಸರನಿಗಿಂತ ಮೊದಲು ಮತ್ತು ಅವನ ನಂತರ ಲಕ್ಷಾಂತರ ಜನರು ಅದನ್ನು ಹಾದು ಹೋಗಿರುವುದು ಯಾರಿಗೂ ಬೇಡವಾದ ಸಂಗತಿ” ಎಂದು ಹೇಳಿರುವುದು ಗಮನಾರ್ಹವಾದುದು. ಈ ಕೊರತೆಯನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನವನ್ನು ಅಥವಾ ಸಾಮಾನ್ಯ ಜನರ ಇತಿಹಾಸವನ್ನು ಬರೆಯುವ ಕೆಲಸವನ್ನು ಎಡ್ವರ್ಡ್‌ ಥಾಮ್ಸನ್ನನು ಟೈಮ್ಸ್ ಲಿಟರರಿ ಸಪ್ಲಿಮೆಂಟ್‌ನಲ್ಲಿ ‘ಹಿಸ್ಟರಿ ಫ್ರಂ ಬಿಲೋ’ (ಕೆಳಸ್ತರದವರ ಇತಿಹಾಸ) ಎನ್ನುವ ಲೇಖನವನ್ನು ೧೯೬೬ರಲ್ಲಿ ಬರೆಯುವ ಮೂಲಕ ಹೊಸಶಕೆಯೊಂದನ್ನು ಆರಂಭಿಸಿದನು. ಹೀಗೆ “ಕೆಳವರ್ಗದವರ ಇತಿಹಾಸ” ಎನ್ನುವ ಹೊಸ ರೀತಿಯ ಚರಿತ್ರೆ ಬರವಣಿಗೆಯ ಪರಿಣಾಮದಿಂದಾಗಿ ತಿರಸ್ಕೃತರಾಗಿದ್ದವರ, ಉಲ್ಲೇಖಗೊಳ್ಳದವರ ಮತ್ತು ಅವರ ಜೀವನಾನುಭವಗಳ ಮೇಲೆ ಇತಿಹಾಸ ಬರೆಯುವುದು ಕ್ರಮೇಣವಾಗಿ ಆರಂಭವಾಯಿತು. ಹೀಗಾಗಿ ಮುಖ್ಯವಾಹಿನಿಯ ಚರಿತ್ರೆಯಲ್ಲಿ ಎಂದೂ ಕಾಣಿಸಿಕೊಳ್ಳದ ಮೂಲೆಗೊತ್ತಲ್ಪಟ್ಟವರ ಚರಿತ್ರೆಯು ಮುಖ್ಯವಾಯಿತು. ಭಾರತದಲ್ಲಿಯಾಗಲಿ ಅಥವಾ ಜಗತ್ತಿನ ಇನ್ನೆಲ್ಲಿಯೇ ಆಗಲಿ, ಶಾಲಗಳಲ್ಲಿ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ, ಬೋಧಿಸಲಾಗುತ್ತಿರುವ ಇತಿಹಾಸದಲ್ಲಿ ಜನಸಾಮಾನ್ಯರ ಅನುಭವಗಳಿಗೆ ಯಾವ ಸ್ಥಾನವನ್ನೂ ನೀಡಿಲ್ಲ. ಅವುಗಳನ್ನು ಅಮುಖ್ಯ ಎಂದೋ ಅಥವಾ ಅವು ಬುದ್ಧಿಜೀವಿಗಳಿಗೆ ಕೈಗೆಟುಕದವು ಎಂದೋ ಭಾವಿಸಲಾಗಿದೆ.

“ಕೆಳಸ್ತರದ ಇತಿಹಾಸ”ದ ಬಗ್ಗೆ ಮಾತನಾಡುವಾಗ ಇಲ್ಲಿ ಎರಡು ಮುಖ್ಯವಾದ ವಿಷಯಗಳಿವೆ; ಒಂದು, ಸಾಮಾನ್ಯರ ಅನುಭವಗಳನ್ನು ಪುನರ‍್ರಚಿಸುವ ಕ್ರಿಯೆ; ಎರಡು, ಅದರ ಸೈದ್ಧಾಂತಿಕ ನಿಲುವು ಮತ್ತು ಕಲ್ಪನೆ. ಈ ಓಜಲುಗಳಿಗೆ ಇಲ್ಲಿ ತಲೆಹಾಕದೆ, ಸಾಮಾನ್ಯ ಜನರು ಕೂಡ ಮುಖ್ಯರೇ ಎಂಬ ರೀತಿಯಲ್ಲಿ ರಚಿತವಾದ ಕೆಲವೇ ಐತಿಹಾಸಿಕ ಬರಹಗಳ ಕಡೆ ನೋಡೋಣ.

ಬಿಷಪ್‌ ಪಾಯಿಟರ್ಸ್‌ ಮತ್ತು ಜಾಕ್ಸ್ ಫೋರ‍್ನಿಯರ್‌ ಎಂಬುವವರು ೧೩೧೮-೧೩೨೫ ರಲ್ಲಿ ಪೈರ‍್ನಿಯನ್ ರೈತ ಸಮುದಾಯಕ್ಕೆ ಸಂಬಂಧಿಸಿದ ತನಿಖಾ ವರದಿಗಳನ್ನು ಆಧಾರವನ್ನಾಗಿಟ್ಟು ಕೊಂಡು ರಾಯ್‌ಲಾದುರಿ ಎಂಬ ಚರಿತ್ರೆಕಾರನು ಒಂದು ಅಧ್ಯಯನವನ್ನು ೧೯೭೫ ರಲ್ಲಿ ಪ್ರಕಟಿಸಿದ್ದಾನೆ. ಕಾರ್ಲೋ ಗಿರ್ನ್ಸ್‌‌ಬರ್ಗ್ ಕೂಡ ಇದೇ ಆಧಾರಗಳನ್ನು ಅನುಸರಿಸಿದ ‘ಚೀಸ್’ ಮತ್ತು ‘ವರ್ಮ್ಸ್’ ಎನ್ನುವ ಪುಸ್ತಕವನ್ನು ಬರೆದನು. ಇದರ ಅನುವಾದ ೧೯೭೬ ರಲ್ಲಿ ಇಟಲಿ ಭಾಷೆಯಲ್ಲಿ ಪ್ರಕಟವಾಯಿತು. ಡೋಮಿನಿಕೋ ಸ್ಯಾಂಡೆಲ್ಲ ಎಂಬ ಒಬ್ಬ ಧಾನ್ಯ ಬೀಸುವವನ ಅನುಭವಗಳನ್ನು ಆಧಾರವಾಗಿಟ್ಟುಕೊಂಡು, ಗಿರ್ನ್ಸ್‌ಬರ್ಗ್‌ನು ರೈತರ ಆಧ್ಯಾತ್ಮಿಕ ಮತ್ತು ಬೌದ್ಧಿಕ ಪ್ರಪಂಚವನ್ನು ಪುನಃ ಸೃಷ್ಟಿಸಿದ್ದಾನೆ. ಮಧ್ಯ ಯುಗದ ಆಂಗ್ಲ ರೈತರ ಜೀವನವನ್ನು ಪುನರ‍್ರಚಿಸಲು ಬಾರ್ಬರ್ ಹನಾವಾಲ್ಟ್ ಎಂಬುವವನು ಕರೋನರ್ಸ್ನ ತನಿಖಾ ವರದಿಗಳನ್ನು ಬಳಸಿಕೊಂಡಿದ್ದಾನೆ. ಟ್ರೆವರ್ ರೋಪರ್ ಎಂಬುವವನು ಯುರೋಪಿನ ಆದಿ ಕಾಲದ ಮಾಟಮಂತ್ರ ವಿದ್ಯೆಯ ಅಧ್ಯಯನವನ್ನು ನಡೆಸಿದರೆ, ಆಲನ್ ಮ್ಯಾಕ್‌ಫರ್‌ಟೇನ್ ಎಂಬುವವನು ಟುಡರ್ ಮತ್ತು ಸ್ಟುವರ್ಟ್‌‌ರ ಕಾಲದ ಇಂಗ್ಲೆಂಡಿನ ಮಾಟಮಂತ್ರ ವಿದ್ಯೆಗಳ ಬಗ್ಗೆ ಅಧ್ಯಯನ ನಡೆಸಿದ್ದಾನೆ. ಪೀಟರ್ ಬರ್ಕ್ ಮತ್ತು ಬ್ಯಾರಿ ರಿಯಾ ಎಂಬುವವರು ೧೯೭೮ ರಲ್ಲಿ ಕ್ರಮವಾಗಿ ಆಧುನಿಕ ಪೂರ್ವ ಯೂರೋಪಿನ ಜನಪ್ರಿಯ ಸಂಸ್ಕೃತಿ ಮತ್ತು ೧೭ನೇ ಶತಮಾನದ ಇಂಗ್ಲೆಂಡಿನ ಮೇಲೆ ಅಧ್ಯಯನವನ್ನು ನಡೆಸಿದ್ದಾರೆ. ಭಾರತದಲ್ಲಿ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ರೈತರ ಮತ್ತು ದುಡಿಯುವ ವರ್ಗದವರ ಮೇಲೆ ಅಧ್ಯಯನವನ್ನು ನಡೆಸಿದ್ದಾರೆ.

ಐತಿಹಾಸಿಕ ಬರವಣಿಗೆಗಳಲ್ಲಿ ಹೊಸ ಒಲವುಗಳು

ಕಳೆದ ತಲೆಮಾರಿನಿಂದೀಚೆಗೆ, ಇತಿಹಾಸಕಾರ ವಿಶ್ವ ತಲೆ ತಿರುಗುವಷ್ಟು ವೇಗದಲ್ಲಿ ವಿಸ್ತಾರಗೊಳ್ಳುತ್ತಿದೆ. ಒಂದು ಕಡೆ, ಇತಿಹಾಸಕಾರ ಕ್ಷೇತ್ರ ನಿರಂತರವಾಗಿ ವಿಸ್ತಾರಗೊಳ್ಳುತ್ತಿದೆ. ಮತ್ತೊಂದು ಕಡೆ, ಸಾಮಾಜಿಕ ಇತಿಹಾಸ ರಂಗದಲ್ಲಿ ಇತಿಹಾಸವು ವಿಭಜನೆಗೆ ಗುರಿಯಾಗಿದೆ. ಆನಲ್ಸ್‌ ಚಳವಳಿಯು ಹುಟ್ಟಿಕೊಂಡ ನಂತರ ಈ ಹಲವು ಬಗೆಯ ಐತಿಹಾಸಿಕ ಬರವಣಿಗೆಗಳು ಹುಟ್ಟಿಕೊಂಡಿವೆ ಎಂದು ಹೇಳಬಹುದಾಗಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಇಂದಿನ ಇತಿಹಾಸಕಾರನು ಪ್ರವೇಶಿಸುತ್ತಿರುವ ಹೊಸ ಪ್ರಪಂಚಗಳು ಮೇಲ್ನೋಟಕ್ಕೆ ಮಾತ್ರ ಹೊಸ ಸೇರ್ಪಡೆಗಳಾಗಿವೆ. ಹೀಗಾಗಿ ಚರಿತ್ರೆ ಚರಿತ್ರೆ ಎನ್ನುವ ಶಿಸ್ತು ಮನುಷ್ಯನ ಭೂತಕಾಲಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು, ಅದರಲ್ಲಿ ಚರಿತ್ರೆಯು ಒಳಗೊಳ್ಳಬಹುದಾದ ಮನುಷ್ಯರಿಗೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಒಳಗೊಳ್ಳುತ್ತದೆ. ಸೈದ್ಧಾಂತಿಕವಾಗಿ ಪುನರ್ ನಿರ್ಮಿಸಬಹುದಾದ ಎಲ್ಲ ವಿಷಯಕ್ಕೂ ತನ್ನದೇ ಆದ ಇತಿಹಾಸವಿದೆ, ಅದು ಮತ್ತೆ ಉಳಿದೆಲ್ಲ ಇತಿಹಾಸಕ್ಕೆ ಸಂಬಂಧಿಸಿದೆ ಎಂದು ಹಾಲ್ಡೇನ್ ಎಂಬ ವಿಜ್ಞಾನಿ ಹೇಳಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.

ಸಾಂಪ್ರದಾಯಿಕ ಇತಿಹಾಸದ ಕಲ್ಪನೆಗೆ ತನ್ನದೇ ಆದ ಸಮಸ್ಯೆಗಳಿರುವಂತೆ ಹೊಸ ಅಥವಾ ಪೂರ್ಣ ಇತಿಹಾಸದ ಕಲ್ಪನೆಗೂ ಕೂಡ ವ್ಯಾಖ್ಯಾನದ, ವಿಧಾನದ, ವಿವರಣೆಯ ಮತ್ತು ಆಧಾರಗಳ ಸಮಸ್ಯೆ ಇರುತ್ತದೆ.

ಇತಿಹಾಸಕಾರರು ಹೊಸ ಹಾಗೂ ಪರಿಚಯವಿಲ್ಲದ ಕ್ಷೇತ್ರಗಳಿಗೆ ಪ್ರವೇಶ ಮಾಡುತ್ತಿರುವುದರಿಂದ ವ್ಯಾಖ್ಯಾನ ನೀಡುವುದರಲ್ಲಿ ತೊಂದರೆಯುಂಟಾಗಿದೆ. ತಮ್ಮದಲ್ಲದೆ ಸಂಸ್ಕೃತಿಯಲ್ಲಿ ತಾವೇನನ್ನು ಅರ್ಥ ಮಾಡಿಕೊಳ್ಳಲು ಹುಡುಕುತ್ತಿದ್ದಾರೋ, ಅದರ ತದ್ವಿರುದ್ಧ ರೂಪವನ್ನು ಕಂಡಂತೆ ಈ ಕೆಳಗೆ ಹೇಳಲಾಗುವ ವಿಷಯಗಳಲ್ಲಿ ಇತಿಹಾಸ ಸಂಶೋಧನೆ ನಡೆಯುತ್ತಿದೆ. ಉದಾಹರಣೆಗೆ ಹೇಳುವುದಾದರೆ, ಮಧ್ಯ ಏಷ್ಯಾ ಮತ್ತು ಪೂರ್ವ ಏಷ್ಯಾದ ನಡುವೆ, ಚೀನ ಮತ್ತು ಜಪಾನ್ ಸಂಸ್ಕೃತಿಗಳ ನಡುವೆ ಇರುವ ಎಲ್ಲ ವ್ಯತ್ಯಾಸಗಳನ್ನು ಕಡೆಗಣಿಸಿ ಪಾಶ್ಚಿಮಾತ್ಯವು ಪೌರ್ವಾತ್ಯಕ್ಕೆ ಪೂರ್ಣವಾಗಿ ವಿರುದ್ಧವಾದುದು ಎಂದು ಪರಿಭಾವಿಸಲಾಗಿದೆ. ಅಂತೆಯೇ ಪ್ರಪಂಚದ ಇತಿಹಾಸ ಎಂದರೆ ಪಾಶ್ಚಿಮಾತ್ಯ ಮತ್ತು ಉಳಿದ ದೇಶಗಳ ಸಂಬಂಧ ಎಂದು ಪರಿಭಾವಿಸಿ, ಏಷಿಯಾ ಆಫ್ರಿಕಾ ಮತ್ತು ಅಮೆರಿಕಾ ದೇಶಗಳ ಚರಿತ್ರೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದು ಎಂಬ ರೀತಿಯದ್ದಾಗಿದೆ. ಇದಕ್ಕೂ ಮಿಗಲಾಗಿ, ಕೆಳವರ್ಗದ ಇತಿಹಾಸವೆಂದರೆ ಮೇಲಿನ ಇತಿಹಾಸವನ್ನು ತಲಕೆಳಗೆ ಮಾಡಿರುವುದು ಎಂದು ವ್ಯಾಖ್ಯಾನಿಸಿರುವುದನ್ನು ಗಮನಿಸಬಹುದು. ಹಾಗೆಯೇ ಕೆಳವರ್ಗದ ಸಂಸ್ಕೃತಿ ಮೇಲ್ವರ್ಗದ ಸಂಸ್ಕೃತಿಯ ಸ್ಥಾನವನ್ನು ಆವರಿಸುತ್ತಿರುವುದು ಎಂದು ಅಭಿಪ್ರಾಯಪಡಲಾಗಿದೆ. ಈಗ, ಜನಸಾಮಾನ್ಯ ಸಂಸ್ಕೃತಿ ಜನರ ಸಂಸ್ಕೃತಿಯಾದರೆ, ಜನರೆಂದರೆ ಯಾರು ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಇನ್ನೂ ಮಿಗಿಲಾಗಿ, ಕೆಳಸ್ತರದಿಂದ ನೋಡುತ್ತ, ಔಷಧಿಗಳ ಇತಿಹಾಸದ ಬಗ್ಗೆ ಮಾತನಾಡುವಾಗ, ಜನಪದ-ವೈದ್ಯರನ್ನೇ ಇತಿಹಾಸ ಪರಿಗಣಿಸಬೇಕೇ ಅಥವಾ ರೋಗಿಗಳ ಅನುಭವಗಳನ್ನು ಮತ್ತು ರೋಗ ತಪಾಸಣೆ ನಡೆಸುವ ವೃತ್ತಿಪರ ವೈದ್ಯರನ್ನು ಇತಿಹಾಸ ಎಂದು ಪರಿಗಣಿಸಬೇಕೇ ಎಂಬುದು ಕೂಡ ಮುಖ್ಯ ಪ್ರಶ್ನೆಯಾಗಿದೆ.

ವ್ಯಾಖ್ಯಾನದ ಸಮಸ್ಯೆಗಿಂತ ಆಧಾರದ ಮತ್ತು ವಿಧಾನದ ಸಮಸ್ಯೆಗಳು ಹೆಚ್ಚಿವೆ. ಇತಿಹಾಸಕಾರರು ಗತಕಾಲದ ಬಗ್ಗೆ ಹೊಸ ಪ್ರಶ್ನೆಗಳನ್ನು ಕೇಳಲು ಆರಂಭಿಸಿದಾಗ, ಮತ್ತು ಶೋಧಿಸಲು ಹೊಸ ವಿಷಯಗಳನ್ನು ಆರಿಸಿಕೊಂಡಾಗ ಅಧಿಕೃತವಾದ ದಾಖಲೆಗಳನ್ನು ಬಿಟ್ಟು ಬೇರೆ ಹೊಸ ಆಧಾರಗಳನ್ನು ಹುಡುಕಲಾರಂಭಿಸಿದರು. ಆದರೆ ಈ ಆಧಾರಗಳು ತಮ್ಮದೇ ಆದ ಸಮಸ್ಯೆಗಳನ್ನು ಎತ್ತುತ್ತವೆ. ಉದಾಹರಣೆಗೆ, ಜನಸಾಮಾನ್ಯರ ಸಂಸ್ಕೃತಿಯ ಇತಿಹಾಸವನ್ನು ಪುನರ್‌ರಚಿಸುವಾಗ ಇತಿಹಾಸಕಾರರು ಕೈದಿಗಳ ಜೀವನದಲ್ಲಿ ನಡೆದಿರಬಹುದಾದ ಅಸಾಮಾನ್ಯ ಘಟನೆಗಳ ಆಧಾರವನ್ನು ಬಳಸಿಕೊಳ್ಳುತ್ತಾರೆ ಹಾಗೂ ವಿಚಾರಣೆಗಳು ಮತ್ತು ಹೇಳಿಕೆಗಳನ್ನು ಬಳಸುತ್ತಾರೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ. ಖೈದಿಗಳು ತಮ್ಮ ಸಮಯಕ್ಕೆ ಅನುಕೂಲವಾಗುವಂತೆ ನಿಜವನ್ನಲ್ಲದೇ ಏನನ್ನಾದರೂ ಹೇಳಿರಬಹುದು. ಅಂತೆಯೇ ಪ್ರಾಪಂಚಿಕ ಸಂಸ್ಕೃತಿಯ ಅಧ್ಯಯನದಲ್ಲಿ ಭಾವಚಿತ್ರಗಳನ್ನು, ಪ್ರತಿಮೆಗಳನ್ನು ಆಧಾರವನ್ನಾಗಿ ಬಳಸುತ್ತಾರೆ. ಆದರೆ ಇಲ್ಲಿ ನೆನಪಿನಲ್ಲಿಡಬೇಕಾದ ವಿಷಯವೆಂದರೆ, ಭಾವಚಿತ್ರ ತೆಗೆಯುವ ಕ್ಯಾಮೆರಾಗಕ್ಕೆ ಸಹಜತೆಯ ಬಗ್ಗೆ ವಸ್ತುನಿಷ್ಠವಾದ ನಿಲುವಿರುವುದಿಲ್ಲ ಮತ್ತು ಫೋಟೋಗ್ರಾಫರ್‌ನ ನಂಬಿಕೆಗಳು, ಮೌಲ್ಯಗಳು, ಆಸಕ್ತಿಗಳು ಮತ್ತು ಅವನ ಪೂರ್ವಭಾವಿ ಕಲ್ಪನೆಗಳು ಅವನು ತೆಗೆದ ಫೋಟೋಗಳಲ್ಲಿ ಅಡಕವಾಗಿರುತ್ತವೆ. ಅಂತೆಯೇ ಹೊಸಕ್ಷೇತ್ರಗಳು ಎಂದರೆ ಹೊಸಮಾರ್ಗ ಮತ್ತು ವಿಧಾನಗಳು ಎಂದರ್ಥ. ಪ್ರಮಾಣವನ್ನಾಧರಿಸಿ ವಿಧಾನ ಮತ್ತು ಪತ್ರಾಗಾರರಗಳಿಗೆ ಗಣಕಯಂತ್ರದ (ಕಂಪ್ಯೂಟರ್) ಪ್ರವೇಶಗಳು ಇತಿಹಾಸಕಾರನ ಜಗತ್ತ್ನು ಪ್ರವೇಶಿಸಿರುವ ಬಹುಮುಖ್ಯ ವಿಧಾನಗಳಿರುತ್ತವೆ.

ಸಾಂಸ್ಕೃತಿಕ ಮತ್ತು ಸಾಮಾಜಿಕ ಒಲವುಗಳನ್ನು ರಾಜಕೀಯ ಘಟನೆಗಳಂತೆ ವಿವರಿಸಲು ಬಾರದಿರುವುದರಿಂದ ವಿಸ್ತಾರವಾಗುತ್ತಿರುವ ಇತಿಹಾಸ ಜಗತ್ತಿನಲ್ಲಿ, ವಿವರಣೆಗಳನ್ನು ನೀಡಬೇಕಾದ ಸಂದರ್ಭಗಳಲ್ಲಿ ಹೊಸಚಿಂತನೆಯನ್ನು ನಡೆಸಬೇಕಾದ ಜವಾಬ್ದಾರಿಯು ಇತಿಹಾಸಕಾರನ ಮೇಲಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಇತಿಹಾಸಕಾರನು ಹೆಚ್ಚು ರಚನಾತ್ಮಕ ವಿವರಣೆಯನ್ನು ಇಂದು ನೀಡಬೇಕಾಗಿದೆ. ಅವನಗೆ ಇಷ್ಟವಿರಲಿ ಅಥವಾ ಇಷ್ಟವಿಲ್ಲದಿರಲಿ, ಬಹುಕಾಲದವರೆಗೆ ಸಮಾಜಶಾಸ್ತ್ರಜ್ಞರನ್ನು ಮತ್ತು ಸಮಾಜ ವಿಜ್ಞಾನಿಗಳನ್ನು ಗಮನ ಸೆಳೆದಿದ್ದ ಪ್ರಶ್ನೆಗಳನ್ನು ಇಂದು ಇತಿಹಾಸಕಾರರು ತೀವ್ರವಾಗಿ ಪರಿಗಣಿಸಬೇಕಾಗಿದೆ. ಹೀಗಿರುವಾಗ, ಹೊಂದಾಣಿಕೆ ಮಾಡುವ ಸಮಸ್ಯೆ ಎದುರಾಗುತ್ತದೆ. ಇತಿಹಾಸಶಾಸ್ತ್ರವು ಇಂದು ಗುಂಪುಗಳಾಗಿ ಒಡೆದುಹೋಗಿದೆ. ಜೊತೆಗೆ ಪ್ರತಿಗುಂಪು ಕೂಡ ತನ್ನದೇ ಆದ ಭಾಷೆಯನ್ನು ಬಳಸುವುದರಿಂದ ಗುಂಪುಗಳ ನಡುವೆ ಇಂದು ಭಾಷೆಯ ಸಮಸ್ಯೆ ಕೂಡ ಇದೆ. ಆದರೆ ವಿವಿಧ ಗುಂಪಿಗೆ ಸೇರಿದ ಇತಿಹಾಸಕಾರರಲ್ಲಿ ಇಂದು ಒಂದು ತೀರ್ಮಾನಕ್ಕೆ ಬರುವ ಸಾಧ್ಯತೆ ಇಲ್ಲದಿದ್ದರೂ ಸೌಹಾರ್ದತೆ ಮೂಡಿ ಬರುತ್ತಿರುವುದು ಒಂದು ಉತ್ತೇಜನಕಾರಿಯಾದ ಸಂಗತಿಯಾಗಿದೆ. ಚರಿತ್ರೆಯ ಹೊಸ ಒಲವುಗಳ ಕೆಲವು ಪ್ರಕಾರಗಳನ್ನು ಮುಂದೆ ಚರ್ಚಿಸಲಾಗಿದೆ.

ಮೌಖಿಕ ಚರಿತ್ರೆ[3]

ಹೆಚ್ಚಿನ ವೃತ್ತಿಪರ ಇತಿಹಾಸ ತಜ್ಞರು ಮೌಖಿಕ ಆಕರಗಳನ್ನು ಆಧರಿಸಿ ಇತಿಹಾಸ ರಚಿಸುವ ಕ್ರಮವನ್ನು ಸಂಶಯ ದೃಷ್ಟಿಯಿಂದ ನೋಡುವುದುಂಟು. ಎ.ಜೆ.ಪಿ. ಟೇಯ್ಲರ್‌ನಿಗೆ ಮೌಖಿಕ ಆಧಾರಗಳ ಮೇಲೆಯೇ ಸಂಶಯವಿದೆ. ಅವನ ಪ್ರಕಾರ ಬರವಣಿಗೆ ಮೂಲಕ ದಾಖಲಿಸಿದ ಇತಿಹಾಸವೇ ಸರಿಯಾದ ಇತಿಹಾಸ. ಮೌಖಿಕ ಆಕರಗಳು ಅಸಮರ್ಪಕ ಮತ್ತು ಅಪೂರ್ಣವಾಗಿರುತ್ತವೆ ಎನ್ನುವುದು ಅವನ ಅಭಿಪ್ರಾಯವಾಗಿತ್ತು. ಮುಲನಿವಾಸಿಗಳು ಸುತ್ತಿ ಬಳಸಿ ಹೇಳುವ ಅಸ್ಪಷ್ಟ ವಿಷಯಗಳನ್ನುಬಿಟ್ಟರೆ ಆಫ್ರಿಕಾ ಖಂಡಕ್ಕೆ ಇತಿಹಾಸವೆಂಬುದು ಇಲ್ಲ ಎಂದು ಹ್ಯೂ ಟ್ರೆವರ್ ರೋಪರ್ ೧೯೬೫ ರಲ್ಲಿ ಹೇಳಿದ್ದಾನೆ. ಆಫ್ರಿಕಾದ ಮೇಲೆ ದಾಖಲಾಗಿರುವ ವಿಷಯಗಳು ಇಂದು ಸಿಗದಿರುವ ಕಾರಣ, ಮೌಖಿಕ ಆಧಾರಗಳನ್ನು ಅರ್ಧಮನಸ್ಸಿನಿಂದ ಇತಿಹಾಸ ದಾಖಲೆಗಳೆಂದು ಚರಿತ್ರೆಕಾರರು ಒಪ್ಪಿಕೊಂಡಿರುತ್ತಾರೆ.

ಮೌಖಿಕ ಚರಿತ್ರೆಯ ಚಳವಳಿಯ ನಾಯಕರಾದ ಪೌಲ್ ಥಾಮ್ಸನ್ ಅವರು ಮೌಖಿಕ ಆಕರಗಳನ್ನು ಆಧಾರವಾಗಿಟ್ಟುಕೊಂಡು ನಿರೂಪಿಸುವ ಚರಿತ್ರೆಯ ನೂತನ ವಿಧಾನ ಕ್ರಮವು ಹಳೆಯ ತಲೆಮಾರಿನವರಿಗೆ ಕೈಗೆಟುಕದ್ದರಿಂದ ಆ ತಲೆಮಾರಿನವರು ಮೌಖಿಕ ಚರಿತ್ರೆಯನ್ನು ವಿರೋಧಿಸುತ್ತಾರೆ ಎಂದು ಬರೆದಿದ್ದಾರೆ. ಅನಕ್ಷರಸ್ಥ ಸಮಾಜಗಳನ್ನು ಅಧ್ಯಯನ ಮಾಡುವಾಗ ಮೌಖಿಕ ಸಾಕ್ಷ್ಯಗಳ ಮೌಲ್ಯ ಅಪಾರವಾದರೂ ಅವುಗಳಿಗೆ ತಮ್ಮದೇ ಆದ ಮಿತಿಗಳಿರುತ್ತವೆ ಎಂದು ಆಫ್ರಿಕಾದ ಪ್ರಸಿದ್ಧ ಮೌಖಿಕ ಇತಿಹಾಸಕಾರ ಜಾನ್ ವನ್ಸಿ ಅಭಿಪ್ರಾಯಪಟ್ಟಿದ್ದಾರೆ.

ಸಾಂಪ್ರದಾಯಿಕ ಇತಿಹಾಸಕಾರರು ಇತಿಹಾಸದ ಆಧಾರಗಳಿಗೆ ಸಂಬಂಧಿಸಿದಂತೆ ಮೂರು ಮುಖ್ಯವಾದ ಗುಣಗಳನ್ನು ಕಾಣಲು ಬಯಸಿದರೂ ಮೌಖಿಕ ಇತಿಹಾಸದಲ್ಲಿ ಈ ಗುಣಗಳಿರುವುದಿಲ್ಲ ಎಂದು ಗ್ವಿನ್ ಫ್ರಿನ್ಸ್ ಎಂಬ ಮತ್ತೊಬ್ಬ ಪ್ರಸಿದ್ಧ ಇತಿಹಾಸಕಾರ ಹೇಳಿರುತ್ತಾನೆ.

ಒಂದನೆಯದಾಗಿ ದಾಖಲೆಗಳು ಪಕ್ವವಾಗಿರಬೇಕು, ಶಿಲ್ಪದಂತೆ ಸ್ಥಿರವಾಗಿರಬೇಕು, ಭೌತಿಕವಾಗಿ ಒಂದೆಡೆ ಶಾಶ್ವತವಾಗಿರಬೇಕು ಮತ್ತು ಪರೀಕ್ಷೆಗೆ ಒಳಪಡುವಂತಿರಬೇಕು. ಎರಡನೆಯದಾಗಿ, ಅಂಗೈ ಮೇಲಿನ ಗಡಿಯಾರದಂತೆ ಆಧಾರಗಳು ಸ್ಪಷ್ಟವಿರಬೇಕು ಮತ್ತು ಮೂರನೆಯದಾಗಿ, ದಾಖಲಾತಿಯು ಸಾಕ್ಷಿ ಪೂರಕವಾಗಿರಬೇಕು, ಬೆಂಬಲಿಸುವಂತಿರಬೇಕು. ಕಾರಣ ಒಂದೇ ಸಾಕ್ಷಿ ಸಾಕ್ಷಿಯಲ್ಲ ಎಂಬ ವಿಚಾರ ಪ್ರಧಾನವಾಗಿದೆ. ಈ ಮಿತಿಗಳನ್ನು ಯಶಸ್ವಿಯಾಗಿ ನಿಭಾಯಿಸಬಹುದಾದರೂ, ಮೌಖಿಕ ಸಾಕ್ಷ್ಯಗಳನ್ನು ದಾಖಲಾತಿಯಂತೆ ಅಷ್ಟೊಂದು ಸುಲಭವಾಗಿ ಬಳಸಲು ಬರುವುದಿಲ್ಲ. ಆಫ್ರಿಕಾದಲ್ಲಿರುವಂತೆ, ಎಲ್ಲ ಭಾರತೀಯ ಬುಡಕಟ್ಟಿನ ಜನರಲ್ಲಿ ಅವರ ಇತಿಹಾಸವನ್ನು ಹೇಳುವ ಜನಪದಗಳಿವೆ. ಭಾರತೀಯ ಸಂದರ್ಭದಲ್ಲಿ ಹೇಳುವುದಾದರೆ ರಣಜಿತ್ ಗುಹ, ಕೆ.ಎಸ್. ಸಿಂಗ್ ಮತ್ತು ಎನ್.ಪಿ.ಎಸ್.ರಾವ್ ಅವರು ಮೌಖಿಕ ಆಕರಗಳನ್ನು ಬಳಸಿ ಬುಡಕಟ್ಟು ಜನರ ಚರಿತ್ರೆಯನ್ನು ರಚಿಸಿರುವ ಉದಾಹರಣೆ ನಮ್ಮ ಮುಂದೆ ಇದೆ (ಮೌಖಿ ಚರಿತ್ರೆಯ ಬಗ್ಗೆ ಪ್ರಸ್ತುತ ಕೃತಿಯಲ್ಲಿ ಪ್ರತ್ಯೇಕ ಅಧ್ಯಾಯಗಳಿವೆ).

ಓದುವ ಇತಿಹಾಸ

ಒಂದು ಪ್ರೇಮಪತ್ರವನ್ನು ಓದುವಾಗ ಪ್ರತಿ ಶಬ್ದವನ್ನು ತೂಕಮಾಡಬೇಕು, ಪ್ರತಿ ಶಬ್ದದ ಮೇಲೆ ಧ್ಯಾನ ಮಾಡಬೇಕು. ಆ ಮೂಲಕ ಪ್ರೇಮವು ಸತ್ಯವೋ ಅಥವಾ ಸುಳ್ಳೋ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ರೋಮನ್ನಿನ ಕವಿ ಓವಿಡ್ ಹೇಳಿದ್ದಾನೆ. ನೂರು ವರ್ಷದ ಹಿಂದಿನ ಬರಹಗಾರನೊಬ್ಬನ ಕೃತಿಯು ಯಾವ ಬದಲಾವಣೆಯೂ ಆಗದೆ ನಮ್ಮ ಕೈಗೆ ಬಂದಿದ್ದರೆ, ಸಂತೋಷವಾಗಿ ಓದಬಹುದು. ಆದರೆ, ಅವನ ಕಾಲದವರಿಗೆ ಅದು ಯಾವ ಅನುಭವವನ್ನು ಕೊಡುತ್ತಿತ್ತೊ ಅದೇ ಅನುಭವವನ್ನು ನಮಗೆ ಕೊಡಲು ಸಾಧ್ಯವಿಲ್ಲ. ಓದುವುದಕ್ಕೂ ಕೂಡ ಹೀಗೆಯೇ ತನ್ನದೇ ಆದ ಒಂದು ಇತಿಹಾಸವಿದೆ. ಓದುವ ಹವ್ಯಾಸದ ಮೇಲೆ ಅಧ್ಯಯನ ನಡೆಸಿರುವ ಫಾನ್ಸಿನ ಇತಿಹಾಸಕಾರರು ಅದನ್ನು ಬಹುಸಂಖ್ಯಾ ಸಾಮಾಜಿಕ ಸಂಗತಿ ಎಂದು ಪರಿಗಣಿಸಿರುತ್ತಾರೆ. ಗ್ರಂಥಗಳನ್ನು ಕೊಳ್ಳುತ್ತಿದ್ದವರ ದಾಖಲಾತಿ ಪುಸ್ತಕಗಳನ್ನು ಮತ್ತು ವಾರ್ಷಿಕ ಗ್ರಂಥ ಸಂಪಾದನೆಯ ಪುಸ್ತಕಗಳನ್ನು ಆಧಾರವನ್ನಾಗಿಟ್ಟುಕೊಂಡು ಜಾನ್ ಹೆನ್ರಿ ಮಾರ್ಟಿನ್, ಫ್ರಾನ್ಸ್‌ವಾ, ಫ್ಯೂರೆಟ್, ರಾಬರ್ಟ್ ಎಸ್ಪಿವಲ್ಸ್ ಮತ್ತು ಫ್ರೆಡರಿಕ್ ಬಾರ್ಬಿಯರ್‌ ಎಂಬುವವರು ಪುಸ್ತಕ ಓದುವ ಹವ್ಯಾಸವು ೧೬ನೆಯ ಶತಮಾನದಿಂದ ಆರಂಭವಾಗಿದೆ ಎಂದು ಅಭಿಪ್ರಾಯ ಪಟ್ಟಿರುತ್ತಾರೆ. ಲ್ಯಾಟಿನ್ ನಾಶವಾಗುವುದರ ಜೊತೆಗೆ ಕಾದಂಬರಿಗೆ ಓದುವ ಪ್ರವೃತ್ತಿ ಹೆಚ್ಚಾಯಿತೆಂದು ಈ ಅಧ್ಯಯನಗಳು ತೋರಿಸಿವೆ. ೧೬ನೇ ಶತಮಾನದಿಂದ ೧೯ನೇ ಶತಮಾನದ ಮಧ್ಯಭಾಗದವರೆಗೆ ಜರ್ಮನಿಯ ಫ್ರ‍್ಯಾಂಕ್‌ ಫರ್ಟ್‌ಮತ್ತು ಲೀಪ್‌ಜಿಗ್‌ನಲ್ಲಿ ಮಾಡಿರುವ ಪುಸ್ತಕ ಮೇಳಗಳ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ಪುನರುಜ್ಜೀವನದ ನಂತರದ ಜರ್ಮನಿಯಲ್ಲಿನ ಪುಸ್ತಕ ಓದುವ ಹವ್ಯಾಸವನ್ನು ಅಧ್ಯಯನ ಮಾಡಿರುತ್ತಾರೆ. ಪುಸ್ತಕ ವ್ಯಾಪಾರ ಇಂಗ್ಲೆಂಡಿನಲ್ಲಿ ಆರಂಭವಾದ ಇತಿಹಾಸವನ್ನು ಹೆಚ್.ಎಸ್.ಬೆನ್ನೆಟ್ ಮತ್ತು ಡಬ್ಲೂಗ್ರೇಸ್ ರಚಿಸಿರುತ್ತಾರೆ. ಜರ್ಮನಿ, ಇಂಗ್ಲೆಂಡ್ ಮತ್ತು ಅಮೆರಿಕದ ಗ್ರಂಥಾಲಯಗಳಲ್ಲಿ ಪುಸ್ತಕ ಎರವಲು ಮಾಡಿರುವ ದಾಖಲೆಗಳನ್ನು ಅಧ್ಯಯನ ಮಾಡಿರುವವರು. ಎಡ್ವರ್ಡ್ ರೆಯರ್‌ ಮತ್ತು ರುಡಾಲ್ಫ್‌ಸ್ಕೆಂಡ ಎಂಬುವವರು. ಇವರು ೧೯ನೆಯ ಶತಮಾನದ ಮುಗಿಯುವ ಕಾಲಕ್ಕೆ ಶೇ. ೭೦ ರಷ್ಟು ಕಾದಂಬರಿಗಳು ಶೇ. ೧೦ ರಷ್ಟು ಇತಿಹಾಸ, ಆತ್ಮ ಕಥನ ಮತ್ತು ಪ್ರಯಾಣದ ಪುಸ್ತಕಗಳು ತಮ್ಮ ಶೇ. ೧ ರಷ್ಟು ಮಾತ್ರ ಧರ್ಮದ ಮೇಲಿನ ಪುಸ್ತಕಗಳು ಎರವಲಾಗುತ್ತಿದ್ದವು ಎಂದು ಬರೆದಿರುತ್ತಾರೆ. ಈ ಅಧ್ಯಯನಗಳಿಂದ ಸುಮಾರು ೧೭೭೦ರ ವೇಳೆಗೆ ಕಾದಂಬರಿಯನ್ನು ಓದುವುದು ಹೆಚ್ಚಾದುದರಿಂದ ಧಾರ್ಮಿಕ ಸಾಹಿತ್ಯವನ್ನು ಓದುವುದು ಕಡಿಮೆಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ೧೭೬೦ ರಿಂದೀಚೆಗೆ ಸಮಾಜದ ಕೆಳವರ್ಗದ ಜನರಲ್ಲಿ ಪುಸ್ತಕವನ್ನು ಎರವಲು ಮಾಡುವುದು ಹೆಚ್ಚಾಗಿದೆ. ಇದರಿಂದ ಓದುಗರ ಸಂಖ್ಯೆ ಇಮ್ಮಡಿಗೊಂಡಿದೆ ಎಂಬ ವಿಚಾರವನ್ನು ಖಾಸಗಿ ಗ್ರಂಥಾಲಯಗಳಲ್ಲಿ ಎರವಲಾದ ಪುಸ್ತಕಗಳ ಅಧ್ಯಯನವನ್ನು ನಡೆಸಿರುವ ಡೇನಿಯಲ್ ಮಾರ್ನೆಟ್, ವಿಲ್ಫ್‌ಗಾಂಗ್ ಮೈಲ್ಡ್, ಪಾಲ್‌ ರಾಬಿ ಮತ್ತು ಜಾನ್ ಮೆಕಾರ್ತ ಎಂಬುವವರು ಹೇಳಿದ್ದಾರೆ.

ದೇಹದ ಇತಿಹಾಸ

ಇತ್ತೀಚಿನ ದಿನಗಳವರೆಗೂ ಮಾನವನ ದೇಹವನ್ನು ಇತಿಹಾಸದ ಅಧ್ಯಯನಕ್ಕೆ ಬಳಸಿಕೊಂಡಿರಲಿಲ್ಲ. ಆದರೆ, ಆನಲ್ಸ್‌ನ ಪೂರ್ಣ ಇತಿಹಾಸದ ಒಂದು ಯೋಜನೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಮಾನವ ದೇಹದ ಅಧ್ಯಯನವು ಇತಿಹಾಸದ ಒಂದು ಅಂಗವಾಗಿ ಬೆಳೆದಿದೆ. ಫ್ರಾನ್ಸಿನ್ ಬಾರ್ಕರ್, ಎಲೈನ್ ಸ್ಕರ‍್ರಿ ಮತ್ತು ಎಸ್.ಆರ್. ಸುಲೈಮಾನ್ ಎಂಬುವವರು ಮಾನವ ದೇಹದ ಇತಿಹಾಸದ ಮೇಲೆ ಆಳವಾದ ಅಧ್ಯಯನ ನಡೆಸಿದ್ದಾರೆ. ಅಂತೆಯೇ ರಾಯ್ ಪೋರ್ಟರ್ ಎಂಬುವವನು ಮಾನವನ ದೇಹದ ಸಂಶೋಧನೆಯಲ್ಲಿ ಗಮನವಿಡಬೇಕಾದ ಏಳು ಮುಖ್ಯವಾದ ಅಂಶಗಳನ್ನು ಗುರುತಿಸಿರುತ್ತಾನೆ.

೧. ಮಾನವಾತೀತವಾದ ದೇಹ, ಧಾರ್ಮಿಕ ತತ್ವಗಳು ಮತ್ತು ಕಲಾತ್ಮಕ ಅಭೀಕ್ಷೆಗಳು ಮಾನವನ ದೇಹವನ್ನು ಆವರಿಸಿರುವ ರೀತಿ;

೨. ವಿಜ್ಞಾನ, ಕಲೆ, ಔಷಧಿ, ಬಾಧೆಗಳು, ಹಾಸ್ಯಗಳು ಮತ್ತು ರೂಪಾಲಂಕಾರಗಳಲ್ಲಿ ಮಾನವನ ದೇಹದ ಕಲ್ಪನೆಯ ಪರೀಕ್ಷೆ;

೩. ದೇಹ, ಮನಸ್ಸು ಮತ್ತು ಆತ್ಮ ಇವುಗಳ ನಡುವೆ ಇರುವ ಸಂಬಂಧ ಮತ್ತು ವ್ಯತ್ಯಾಸಗಳು;

೪. ಪ್ರಣಯ ಮತ್ತು ಲಿಂಗ ಭೇದಗಳು, ಹೆಣ್ಣಿನ ಕಲ್ಪನೆ, ಸ್ತ್ರೀ ದೇಹದ ಕಲ್ಪನೆಯಲ್ಲಿನ ರಾಜಕೀಯ, ಪುರುಷತ್ವ ಮತ್ತು ಪೌರುಷಗಳ ಪರೀಕ್ಷೆ;

೫. ದೇಹ ಮತ್ತು ರಾಜಕೀಯ ವಲಯ, ಸರ್ಕಾರ ಪ್ರಜೆಗಳ ದೇಹದ ಮೇಲೆ ವಿಧಿಸಿರುವ ಅಧಿಕಾರದ ಸತ್ಯತೆಗಳು;

೬. ದೇಹ, ನಾಗರಿಕತೆ ಮತ್ತು ಅದರ ನ್ಯೂನ್ಯತೆಗಳು, ಸಂಸ್ಕೃತೀಕರಣದ ಪ್ರಕ್ರಿಯೆಯ ಪರೀಕ್ಷೆ;

೭. ದೇಹ ರಚನೆಯ ಪರೀಕ್ಷೆ.

ಉದಾಹರಣೆಗೆ ರಕ್ತ ಎಂದರೆ, ಶಬ್ದಾರ್ಥದಲ್ಲಿ ಮತ್ತು ಒಗಟಾಗಿ ಇದರ ನಿಜವಾದ ಅರ್ಥ ಮತ್ತು ಮಾನವನ ಅಂಗಾಂಗಗಳು ಮನುಷ್ಯನ ಮನೋಭಾವನೆಗಳನ್ನು ಹೇಗೆ ತುಂಬಿ ಕೊಂಡಿರುತ್ತವೆ ಮತ್ತು ನೋವಿನಿಂದ ನರಳುವಾಗ ದೇಹದ ಕಲ್ಪನೆ ಏನಾಗಿರುತ್ತದೆ ಎನ್ನುವ ವಿಚಾರದ ವಿಶ್ಲೇಷಣೆಯಾಗಿರುತ್ತದೆ.

ಚಲನಚಿತ್ರ ಇತಿಹಾಸ

೨೦ನೆಯ ಶತಮಾನದ ಸಾಂಸ್ಕೃತಿಕ ಜೀವನದ ಮೇಲೆ ಅತಿ ದೊಡ್ಡ ಪ್ರಭಾವ ಬೀರಿರುವ ಒಂದು ಕೈಗಾರಿಕಾ ಕಲಾ ಪ್ರಕಾರವೆಂದರೆ ಅದು ಚಲನಚಿತ್ರ. ಸಾಮಾನ್ಯ ತರದಲ್ಲಿ ಆರಂಭವಾದ ಈ ಕೈಗಾರಿಕೆ ಇಂದು ಕೋಟ್ಯಂತರ ರೂಪಾಯಿಗಳ ಉದ್ಯಮವಾಗಿದೆ ಮತ್ತು ಅತಿ ಸಹಜವೂ, ಅದ್ಭುತವೂ ಆದ ಒಂದು ಕಲಾ ಪ್ರಕಾರವಾಗಿದೆ. ಜನಪದ ಕಲೆಯ ಶಕ್ತಿಶಾಲಿ ಮಾಧ್ಯಮ ಚಲನಚಿತ್ರವಾಗಿದೆ. ಸಾಂಪ್ರದಾಯಿಕ ಅರ್ಥದಲ್ಲಿ ಚಲನಚಿತ್ರ ಒಂದು ಕಲಾಪ್ರಕಾರವಲ್ಲ ಮತ್ತು ಸಂಸ್ಕೃತವಂತರಿಮದ ಇದು ಸೃಷ್ಟಿಯಾಗುತ್ತಿಲ್ಲ. ಈ ಅರ್ಥದಲ್ಲಿ ಚಲನಚಿತ್ರ ಸಾಂಪ್ರದಾಯಿಕವಾದ ಕಲಾಪ್ರಕಾರವಲ್ಲ. ಆದರೆ ಇಂದು ಇದು ಸಾಮಾನ್ಯರಿಂದ ಸೃಷ್ಟಿಯಾಗುತ್ತದೆ. ಸಿನೆಮಾ ಒಂದು ನಿರ್ದಿಷ್ಟ ಸಮೂಹವಾಗಿರುವ ಸಾರ್ವಜನಿಕ ಬೇಡಿಕೆಗಳಿಂದ, ಆಸಕ್ತಿಗಳಿಂದ ಬಯಕೆಗಳಿಂದ ಶಕ್ತಿಯನ್ನು ಹೊಂದಿ, ತಾಂತ್ರಿಕ ವಸ್ತುಗಳ ಮೂಲಕ ಜ ನರಿಗೆ ಮನರಂಜನೆ ನೀಡುವ ೨೦ನೆಯ ಶತಮಾನದ ಒಂದು ವಿಶಿಷ್ಟವಾದ ಪ್ರಕಾರವಾಗಿದೆ. ೧೯೩೦ರಿಂದ ಮೂಕ ಚಲನಚಿತ್ರ ಆರಂಭಗೊಂಡಿತಾದರೂ, ಚಲನಚಿತ್ರದ ಇತಿಹಾಸ ೧೮೯೫ ಕ್ಕೆ ಹೋಗುತ್ತದೆ. ರಿಕ್ ಆಲ್ಟ್‌ಮನ್, ಫಿಲ್‌ರಾರ್ಕ್, ವಿವಿಯನ್ ಸಾಬ್ಜಕ್‌ ಮತ್ತು ಜಾನ್ ಬೆಲ್ಟನ್ ಎಂಬುವವರು ಸಿನಿಮಾದ ವಿವಿಧ ವಿಷಯಗಳ ಅಧ್ಯಯನ ನಡೆಸಿದ್ದಾರೆ. ಎಲ್ಲ ರಾಷ್ಟ್ರಗಳು ತಮ್ಮವರೇ ಆದ ಸಿನೆಮಾ ಇತಿಹಾಸಕಾರರನ್ನು ಸೃಷ್ಟಿಸಿಕೊಂಡಿವೆ. ಭಾರತದಲ್ಲಿ ೧೯೧೩ ರಿಂದ ೧೯೯೦ರ ದಶಕದವರೆಗೆ ನುರಾರು ಮೂಕ ಚಿತ್ರಗಳು, ಹತ್ತಾರು ಸಾವಿರ ಶಬ್ದ ಚಿತ್ರಗಳು ತಯಾರಾಗಿವೆ. ಆದರೆ ಭಾರತೀಯ ಇತಿಹಾಸಕಾರರಾಗಲಿ, ಪ್ರಪಂಚದ ಇನ್ನುಳಿದವರೇ ಆಗಲಿ, ಭಾರತೀಯ ಚಲನಚಿತ್ರವನ್ನು ಗಮನಾರ್ಹವಾಗ ಪರಿಗಣಿಸಿರುವುದರಿಲ್ಲ. ಕೋಟ್ಯಂತರ ಭಾರತೀಯರಿಗೆ ಅವರೆಲ್ಲೇ ಇದ್ದರೂ ಅವರ ಭಾರತ ಅವರಿಗೆ ಚಲನಚಿತ್ರದ ಮೂಲಕ ದೊರಕುತ್ತದೆ. ಎಲ್ಲ ಹಂತಗಳಲ್ಲೂ ಸಿನೆಮಾ ಭಾರತೀಯ ಜೀವನಕ್ಕೆ ಒಂದು ರೂಪ ನೀಡಿರುತ್ತದೆ. ಒಂದು ಅರ್ಥದಲ್ಲಿ ಹೇಳುವುದಾದರೆ, ಅಮೆರಿಕದ ಕ್ರೈಸ್ತ ಬಂಡಾಯ ವಾದವನ್ನು ಅರ್ಥ ಮಾಡಿಕೊಳ್ಳದ ವಿನಾ ಹೇಗೆ ೨೦ನೇ ಶತಮಾನದ ಅಮೆರಿಕಾವನ್ನು ಅರ್ಥ ಮಾಡಿಕೊಳ್ಳಲಾಗುವುದಿಲ್ಲವೋ, ಹಾಗೆಯೇ ಭಾರತದ ಸಿನೆಮಾವನ್ನು ಅರ್ಥ ಮಾಡಿಕೊಳ್ಳದೆ ೨೦ನೇ ಶತಮಾನದ ಭಾರತವನ್ನು ಅರ್ಥ ಮಾಡಿಕೊಳ್ಳುವುದ ಸಾಧ್ಯವಿಲ್ಲ.

ವ್ಯಾಪಾರ/ ವಾಣಿಜ್ಯ ಇತಿಹಾಸ

ವ್ಯಾಪಾರ ಇತಿಹಾಸ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಾದ ಇತ್ತೀಚಿನ ಬೆಳವಣಿಗೆಯಷ್ಟೆ. ಭಾರತದಲ್ಲಿ ಇತ್ತೀಚಿನವರೆಗೂ ಈ ರಂಗದಲ್ಲಿ ಯಾವುದೇ ಕೆಲಸ ನಡೆದಿರುವುದಿಲ್ಲ. ವಾಣಿಜ್ಯ ಇತಿಹಾಸದಲ್ಲಿ ಒಳ್ಳೆಯ ಸಂಶೋಧನೆಗೆ ಅವಕಾಶವಿರುವಂತೆ, ತೊಂದರೆಗಳೂ ಇವೆ.

ಮೂಲತಃ ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರಗಳನ್ನು ಒಳಗೊಂಡ ಅಂತಾರಾಷ್ಟ್ರೀಯ ದೃಷ್ಟಿಕೋನ ಬಹಳವಾಗಿ ಅವಶ್ಯಕವಾಗಿರುತ್ತದೆ. ಎರಡನೆಯದಾಗಿ, ಅರ್ಥಪೂರ್ಣವಾದ ಒಂದು ಅಧ್ಯಯನವನ್ನು ನಡೆಸಲು ಬೇಕಾದ ಮೂಲ ಆಧಾರ ಸಾಮಗ್ರಿಯ ಕೊರತೆಯಿರುತ್ತದೆ. ಬ್ಯಾಂಕಿಂಗ್ ಸಂಸ್ಥೆಗಳ ಇತಿಹಾಸವು ರಚನೆಯಾಗಬೇಕು, ಇದರಿಂದ ಭಾರತದ ರಾಷ್ಟ್ರೀಯ ಇತಿಹಾಸವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ೧೯೬೯ ರಲ್ಲಿ ಪ್ರಕಟಗೊಂಡ ಭಾರತದ ಬ್ಯಾಂಕಿಂಗ್ ಕಮೀಷನ್ ವರದಿಯು ತಿಳಿಸುತ್ತದೆ. ಈ ಸಲಹೆಯನ್ನು ತೀವ್ರವಾಗಿ ಪರಿಗಣಿಸಿ, ಸುಮಾರು ೬ ಅಧ್ಯಯನಗಳು ಈ ಕ್ಷೇತ್ರದಲ್ಲಿ ಬಂದಿರುತ್ತವೆ. ದ್ವಿಜೇಂದ್ರ ತ್ರಿಪಾಠಿಯವರು ಬರೋಡ ಬ್ಯಾಂಕಿನ ಮೇಲೆ ಬರೆದಿರುವ ಪುಸ್ತಕವು ಈ ರಂಗದ ಮೊದಲನೆಯ ಇತಿಹಾಸವಾಗಿರುತ್ತದೆ. ನಿಜವಾದ ಅರ್ಥದಲ್ಲಿ ವ್ಯಾಪಾರವು ಇಡಿಯಾಗಿ ಸಿಗುವ ವಸ್ತುವಲ್ಲ. ಸಮಾಜ ಮತ್ತು ವ್ಯಾಪಾರದ ನಡುವಿನ ಪ್ರಕ್ರಿಯೆಗಳ ಮತ್ತು ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕಾದ ಅವಶ್ಯಕತೆಯನ್ನು ಇದು ತಿಳಿಸುತ್ತದೆ. ಆದ್ದರಿಂದ, ವ್ಯಾಪಾರದ ಸಾಧನಗಳನ್ನು ಒಳಗೊಳ್ಳುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ವಾಣಿಜ್ಯದ ಇತಿಹಾಸಕಾರರು ವ್ಯಾಪಾರದ ಸಂಸ್ಥೆಗಳನ್ನು ಬಿಟ್ಟು ವ್ಯಾಪಾರದ ಪದ್ಧತಿಗಳನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ೧೯೮೭ ರಲ್ಲಿ ಎ.ಕೆ.ಬಾಗ್ಚಿಯವರು ಸ್ಟೇಟ್/ಬ್ಯಾಕ್ ಆಫ್ ಇಂಡಿಯಾದ ಮೇಲೆ ನಡೆಸಿರುವ ಅಧ್ಯಯನವು ವ್ಯಾಪಾರ ಇತಿಹಾಸ ರಂಗದಲ್ಲಿ ರಚಿತವಾಗಿರುವ ಮೈಲಿಗಲ್ಲಾಗಿರುತ್ತದೆ.

ಪರಿಸರ ಮತ್ತು ವನ್ಯಜೀವಿ ಇತಿಹಾಸ (ಇಕಾಲಜಿ)

ಇತಿಹಾಸ ಸಂಶೋಧನೆಯ ಈ ವಿಷಯಗಳು ಇತ್ತೀಚಿನ ವರ್ಷಗಳಲ್ಲಿ ಸಮರ್ಪಕವಾಗಿ ಕೆಲಸ ಮಾಡಿರುತ್ತವೆ. ಪರಿಸರ ಮತ್ತು ವನ್ಯಜೀವಿ ಎಂಬ ಎರಡೂ ಶಬ್ದಗಳನ್ನು ಒಂದೇ ಅರ್ಥದಲ್ಲಿ ಬಳಸಲಾಗುತ್ತಿದೆ. ಆದರೂ ಅವುಗಳ ನಡುವಿನ ವ್ಯತ್ಯಾಸವನ್ನು ತಿಳಿಯುವುದು ಅವಶ್ಯವೆನಿಸುತ್ತದೆ. ಜರ್ಮನಿಯ ಪ್ರಾಣಿಶಾಸ್ತ್ರಜ್ಞ, ಆರ್ನ್‌ಸ್ಟ್ ಹೇಕಲ್ ೧೮೬೬ ರಲ್ಲಿ ‘ಇಕಾಲಜಿ’ ಎಂಬ ಶಬ್ದವನ್ನು ರಚಿಸಿದನು. ಇದರರ್ಥ ಬದುಕಿರುವ ಜೀವಕೋಶಗಳ ನಡುವಿನ ಮತ್ತು ಬಾಹ್ಯ ಪ್ರಪಂಚದ ಸಂಬಂಧ, ಅವುಗಳ ಜೀವನ ಕ್ರಮ, ಪದ್ಧತಿ, ಶಕ್ತಿಗಳು, ಪರಾವಲಂಬನೆ ಇನ್ನೂ ಮುಂತಾದ ವಿಷಯಗಳಾಗಿರುತ್ತವೆ. ಪರಿಸರ ಮತ್ತು ಪ್ರಪಂಚದ ಮಾನವ ಕೇಂದ್ರೀಕೃತ ಅಧ್ಯಯನದಿಂದ ಪರಿಸರ ಪ್ರಧಾನವಾದ ಅಧ್ಯಯನದ ಕಡೆ ಗಮನ ಹರಿಸುತ್ತದೆ. ವನ್ಯಜೀವಿ ಇತಿಹಾಸವು ಮಾನವ ಕೇಂದ್ರೀಕೃತ ಅಧ್ಯಯನದಿಂದ ಮುಂದೆ ಹೋಗಿ ಪರಿಸರದ ಕ್ರಮ ಮತ್ತು ಬದಲಾವಣೆ ಮತ್ತು ಸ್ವಾಭಾವಿಕ ವಿಜ್ಞಾನಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಡುತ್ತದೆ. ಮತ್ತೊಂದು ಅರ್ಥದಲ್ಲಿ, ಪರಿಸರ ಇತಿಹಾಸವೆಂದರೆ ಅನಾದಿಕಾಲದಿಂದ ಮನುಷ್ಯ ಮತ್ತು ಭೌತಿಕ ಪ್ರಪಂಚದ ನಡುವಿನ ಸಂಬಂಧದ ಅಧ್ಯಯನವಾಗಿರುತ್ತದೆ. ಇಲ್ಲಿ ಪರಿಸರವೇ ಒಂದು ವಿಶೇಷ ಸಂದರ್ಭ, ಒಂದು ವಿಶೇಷವಾದ ಮಾನವ ಇತಿಹಾಸದ ಪ್ರಬುದ್ಧಮಾನವಾಗಿ ಬೆಳೆದಿದೆ ಮತ್ತು ಸಾಕಷ್ಟು ಕೆಲಸವೂ ನಡೆದಿರುತ್ತದೆ. ಆದರೆ ದಕ್ಷಿಣ ಏಷಿಯಾದಲ್ಲಿ ಪರಿಸರ ಇತಿಹಾಸವು ಇನ್ನೂ ಹೇಳಿಕೊಳ್ಳುವಂತಹ ಸ್ಥಿತಿಯನ್ನು ತಲುಪಿಲ್ಲ. ಅಲ್ಲಿ ಇಲ್ಲಿ ಬರೆದಿರುವ ಕೆಲವು ಲೇಖನಗಳನ್ನು ಬಿಟ್ಟರೆ, ಯಾವುದೇ ಪತ್ರಿಕೆಯನ್ನು ಈ ರಂಗದಲ್ಲಿ ಹೊರತರಲಾಗುತ್ತಿಲ್ಲ. ಪರಿಸರ ಇತಿಹಾಸದ ಅಡಿಯಲ್ಲಿ ಅರಣ್ಯ ಕಾನೂನುಗಳು, ಹಿಡುವಳಿಯ ಪದ್ಧತಿಗಳು, ವ್ಯವಸಾಯ, ಮೀನುಗಾರಿಕೆ ಮತ್ತು ಪರಿಸರ ಮಾಲಿನ್ಯದ ಅಧ್ಯಯನಗಳನ್ನು ನಡೆಸಬಹುದಾಗಿರುತ್ತದೆ. ಅಂತೆಯೆ ವನ್ಯಜೀವಿ ಇತಿಹಾಸದಲ್ಲೂ ಯುರೋಪ್ ಮತ್ತು ಅಮೆರಿಕದಲ್ಲಿ ಅಪಾರವಾದ ಕೆಲಸ ನಡೆದಿದೆ.

ರಾಯ್ ಲಾದುರಿ ೧೯೭೩ ರಲ್ಲಿ ಬರೆದ ಪುಸ್ತಕವನ್ನು ಟೆರ‍್ರಿಟರ‍್ರಿ ಆಫ್ ದಿ ಹಿಸ್ಟೋರಿಯನ್ ಎಂದು ೧೯೭೯ ರಲ್ಲಿ ಇಂಗ್ಲಿಷಿಗೆ ಅನುವಾದ ಮಾಡಲಾಗಿದೆ. ಈ ಪುಸ್ತಕವು ಇತಿಹಾಸ ಸಂಶೋಧನೆಯ ವಿವಿಧ ಹೊಸಕ್ಷೇತ್ರಗಳನ್ನು ಗುರುತಿಸುತ್ತದೆ. ಮೊದಲನೆಯ ಭಾಗವು ಇತಿಹಾಸದಲ್ಲಿನ ಪರಿಮಾಣಾತ್ಮಕ ಕ್ರಾಂತಿಗೆ ಸಂಬಂಧಪಟ್ಟಿರುತ್ತದೆ. ಇತಿಹಾಸಕಾರ ಮತ್ತು ಗಣಕಯಂತ್ರದ ನಡುವಿನ ಸಂಬಂಧಗಳನ್ನು, ಮಧ್ಯಯುಗದ ಅಂತ್ಯಭಾಗದಿಂದ ೧೮ನೆಯ ಶತಮಾನದವರೆಗೆ ಪ್ಯಾರಿಸ್‌ನಲ್ಲಿ ಮನೆಬಾಡಿಗೆಯ ವ್ಯತ್ಯಾಸಗಳನ್ನು ಈ ಕೃತಿಯು ಚರ್ಚಿಸುತ್ತದೆ. ಈ ಕೃತಿಯ ಎರಡನೆಯ ಭಾಗವು ಗ್ರಾಮ ಇತಿಹಾಸದ ಬಗ್ಗೆ ಚರ್ಚಿಸಿದರೆ, ಮೂರನೆಯ ಹಾಗೂ ನಾಲ್ಕನೆಯ ಭಾಗಗಳು ಜನಾಂಗ ಸ್ಥಿತಿಯ ಇತಿಹಾಸ, ಸಾವಿನ ವಿಷಯದಲ್ಲಿ ಬದಲಾಗುತ್ತಿರುವ ದೃಷ್ಟಿಕೋನ, ಮಳೆಯ, ಹವಾಗುಣದ, ಋತುಗಳ ಇತಿಹಾಸವನ್ನು ಕ್ರಮವಾಗಿ ಚರ್ಚಿಸುತ್ತವೆ. ಪುಸ್ತದ ಕಡೆಯ ಅಧ್ಯಾಯವನ್ನು ಅರ್ಥಪೂರ್ಣವಾಗಿ ಹೆಸರಿಸಲಾಗಿದೆ. ಅದೇನೆಂದರೆ; ಹಿಸ್ಟರಿ ವಿಥ್ ಓಟ್ ಪೀಪಲ್; ದಿ ಕ್ಲೈಮೇಟ್ ಏಸ್ ಎ ನ್ಯೂ ಪ್ರಾವಿನ್ಸ್ ಆಫ್ ಹಿಸ್ಟಾರಿಕಲ್ ರಿಸರ್ಚ್. ಗಣಕ ಯಂತ್ರವು ಇತ್ತೀಚಿನ ದಿನಗಳಲ್ಲಿ ಇತಿಹಾಸ ಅಧ್ಯಯನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಸಮಾಜ ವಿಜ್ಞಾನದ ಸಂಶೋಧನೆಗೆ ಸಂಬಂಧಿಸಿದಂತೆ, ಸಂಖ್ಯಾಶಾಸ್ತ್ರಗಳಿಗೆ ಸಂಬಂಧಿಸಿದಂತೆ, ಭಾರತೀಯ ಇತಿಹಾಸಕಾರರು ಗಣಕಯಂತ್ರವನ್ನು ಬಳಸುತ್ತಿದ್ದಾರೆ. ಗ್ರಾಮ ಇತಿಹಾಸ (ರೂರಲ್ ಹಿಸ್ಟರಿ), ಒಂದು ಇತಿಹಾಸ ಸಂಶೋಧನಾ ರಂಗವಾಗಿ ಇನ್ನೂ ಬೆಳೆಯಬೇಕಾಗಿದೆ. ಜನಸಂಖ್ಯಾ ಇತಿಹಾಸವೂ ಕೂಡ ಭಾರತದಲ್ಲಿ ಇನ್ನೂ ಬೆಳೆಯಬೇಕಾಗಿರುವ ವಿಷಯವಾಗಿದೆ. ರಾಯ್ ಲಾದುರಿ ತನ್ನ ಪುಸ್ತಕದಲ್ಲಿ ತುಂಬಾ ಕೌತುಕಮಯವಾದ ಲೇಖನವನ್ನು ಪ್ರಕಟಿಸಿದ್ದಾನೆ. ಅದರಲ್ಲಿ ಜಾನ್ ಮಾವರ್ಟ್‌ ಮತ್ತು ಪೀರ್ ಗೋಬರ್ಟ್ ಎಂಬ ಇಬ್ಬರು ಫ್ರೆಂಚ್ ಇತಿಹಾಸಕಾರರ ಬರಹಗಳನ್ನು ಸ್ಥೂಲವಾಗಿ ವಿವರಿಸುತ್ತಾನೆ. ಫ್ರಾನ್ಸಿನಲ್ಲಿ ೧೪ನೆಯ ಲೂಯಿಯ ಕಾಲದಲ್ಲಿ ಆದ ಬರಗಾಲದ ಒಂದು ಅಧ್ಯಯನವನ್ನು ೧೯೪೬ ರಲ್ಲಿ ಜಾನ್ ಮಾವರ್ಟ್‌ ಪ್ರಕಟಿಸಿರುತ್ತಾನೆ. ಇಲ್ಲಿ ಅವನು ಬರಗಾಲದಲ್ಲಿ ಸಾವಿನ ಸಂಖ್ಯೆ ಹೇಗೆ ಹೆಚ್ಚಾಗುತ್ತದೋ ಹಾಗೆಯೇ ಹುಟ್ಟಿನ ಸಂಖ್ಯೆಯೂ ಕೂಡ ಕಡಿಮೆಯಾಗುತ್ತದೆ ಎಂದು ಗಮನಿಸಿದ್ದಾನೆ. ಚರ್ಚಿನಲ್ಲಿ ಜ್ಞಾನ ದೀಕ್ಷೆಯನ್ನು ದಾಖಲಿಸಿರುವ ಪುಸ್ತಕಗಳನ್ನು ಆಧಾರವನ್ನಾಗಿ ಬಳಸಿ ತುಂಬಾ ಸೂಕ್ಷ್ಮತರಹದ ತಪಾಸಣೆಯ ಕ್ರಮವನ್ನು ಅನುಸರಿಸಿ, ಸ್ತ್ರೀಯರಿಗೆ ಬರಗಾಲದಲ್ಲಿ ಉಂಟಾಗುವ ಮುಟ್ಟಿನ ಸಮಸ್ಯೆಯಿಂದಾಗಿ ಬರಗಾಲದಲ್ಲಿ ಜನನ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಸೂಚಿಸಿದ್ದಾನೆ. ಸ್ತ್ರೀಯರಲ್ಲಿ ಗರ್ಭಧಾರಣೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುವುದು ಕೆಟ್ಟ ಆಹಾರ ಪದಾರ್ಥಗಳನ್ನು ತಿನ್ನುವುದರಿಂದೆಂದು ವರಿಸಿದ್ದಾನೆ. ಭಾರತವೂ ಕೂಡ ರೌದ್ರ ಬರಗಾಲಗಳನ್ನು ಕಂಡಿದೆಯಾದರೂ ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಅಧ್ಯಯನಗಳು ನಡೆದಿಲ್ಲ.

ಲಾದುರಿ ತನ್ನ ಪುಸ್ತಕದಲ್ಲಿ ಹೆಸರಿಸಿರುವ ಮತ್ತೊಂದು ಮುಖ್ಯವಾದ ಇತಿಹಾಸ ಕ್ಷೇತ್ರವೆಂದರೆ ಸಾವಿನ ಇತಿಹಾಸ. ಈ ರಂಗದಲ್ಲೂ ಕೂಡ ಫ್ರಾನ್ಸ್ ದೇಶವು ಹೆಚ್ಚಿನ ಪ್ರಗತಿಯನ್ನು ಸಾಧಿಸಿದೆ. ಪೀರ್, ಷಾನು, ಫ್ರಾಂಸ್ವಾ ಲೆಬ್ರನ್ ಮತ್ತು ಮೈಕೆಲ್ ವೋವೆಲ್ಲಿ ಎನ್ನುವವರು ಸಾವನ್ನು ಒಂದು ಐತಿಹಾಸಿಕ ಘಟ್ಟ ಎನ್ನುವ ಅಧ್ಯಯನವನ್ನು ನಡೆಸಿರುತ್ತಾರೆ. ವೊವೆಲ್ಲೆ ಸಾವನ್ನು ಭೌತಿಕ ಸಾವು, ಸಾವಿನ ಅನುಭವ ಮತ್ತು ಸಾವನ್ನು ಕುರಿತ ಚರ್ಚೆ ಎಂದು ಸಾವನ್ನು ಮೂರು ವಿವಿಧ ಹಂತಗಳಲ್ಲಿ ಚರ್ಚಿಸಿರುತ್ತಾನೆ. ತನ್ನ ಪುಸ್ತಕದ ಕಡೆಯ ಭಾಗದಲ್ಲಿ “ಇತಿಹಾಸವಿಲ್ಲದ ಜನ” ಎನ್ನುವ ಅಧ್ಯಾಯದಲ್ಲಿ ಹವಾಗುಣ ಮತ್ತು ಮಳೆಯ ಅಧ್ಯಯನವನ್ನು ನಡೆಸಿದ್ದಾನೆ. ಈ ರಂಗದಲ್ಲೂ ಪ್ರಮುಖನಾದ ಇತಿಹಾಸಕಾರನಾಗಿದ್ದಾನೆ. ಭಾರತದಲ್ಲಿ ಅಷ್ಟೇನೂ ಗೊತ್ತಿರದ ಈ ಪುಸ್ತಕದ ಹೆಸರು ಟೈಮ್ಸ್ ಆಫ್‌ ಪೀಸ್ಟ್, ಟೈಮ್ಸ್ ಆಫ್ ಫೆಮಿನ್: ಎ ಹಿಸ್ಟರಿ ಆಫ್ ಕ್ಲೈಮೆಟ್ ಸಿನ್ಸ್‌ ದಿ ಇಯರ್ ೧೦೦೦ (ಹಬ್ಬದ ಕಾಲಗಳು: ಬರದ ಕಾಲಗಳು; ೧೦೦೦ ವರ್ಷದಿಂದೀಚಿನ ಹವಾಗುಣ ಇತಿಹಾಸ). ಇದನ್ನು ಮೊದಲ ಬಾರಿಗೆ ೧೯೬೯ ರಲ್ಲಿ ಫ್ರೆಂಚ್ ಭಾಷೆಯಲ್ಲಿ ಪ್ರಕಟಿಸಲಾಯಿತು. ಕರಮೇಣ ೧೯೭೩ ರಲ್ಲಿ ಇಂಗ್ಲಿಷ್ ಭಾಷೆಗೂ ಅನುವಾದ ಮಾಡಲಾಗಿದೆ.

ಔಷಧ ಇತಿಹಾಸ

ಇತ್ತೀಚಿನ ದಿನಗಳಲ್ಲಿ ಹುಟ್ಟಿಕೊಂಡಿರುವ ಔಷಧ ಇತಿಹಾಸ ಮತ್ತೊಂದು ಹೊಸ ಇತಿಹಾಸದ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಅಪಾರವಾದ ಅಧ್ಯಯನ ಪ್ರಪಂಚದ ಎಲ್ಲೆಡೆ ನಡೆದಿದೆಯಾದರೂ, ಭಾರತದ ಸಂದರ್ಭದಲ್ಲಿ ಹೇಳುವುದಾದರೆ, ರಾಧಿಕಾರಾಮ ಸುಬ್ಬನ್, ಡೇವಿಡ್ ಅನಾಲ್ಡ್, ವಾಲ್ಟ್ರಾಡ್ ಆರ್ನ್‌‌ಸ್ಟ್ ಮತ್ತು ಐ.ಜೆ.ಕೆಟನಾಚ್ ಎಂಬ ವಿದ್ವಾಂಸರು ಕೆಲಸ ಮಾಡಿರುತ್ತಾರೆ.

***

 

[1] ಇದರ ಬಗ್ಗೆ ವಿವರಗಳನ್ನು ಪ್ರಸ್ತುತ ಕೃತಿಯ ೩೩೭-೩೬೫ರ ಪುಟಗಳಲ್ಲಿ ಚರ್ಚಿಸಲಾಗಿದೆ.

[2] ಇದರ ಬಗ್ಗೆ ವಿವರಗಳನ್ನು ಪ್ರಸ್ತುತ ಕೃತಿಯ ೨೧೫-೨೯೭ ರಪುಟಗಳಲ್ಲಿ ಚರ್ಚಿಸಲಾಗಿದೆ.
– ಸಂ.

[3] ಇದರ ಬಗ್ಗೆ ವಿವರಗಳನ್ನು ಪ್ರಸ್ತುತ ಕೃತಿಯ ೨೯೮-೩೩೬ರ ಪುಟಗಳಲ್ಲಿ ಚರ್ಚಿಸಲಾಗಿದೆ- ಸಂ.