ಸತ್ಯ, ಅಧಿಕೃತ, ಸಮಗ್ರ, ವಸ್ತುನಿಷ್ಠ, ರಾಷ್ಟ್ರ, ಕೇಂದ್ರೀಯ, ಏಕರೂಪ, ಅಕ್ಷರ ಈ ಮುಂತಾದವು ಸಾರ್ವಭೌಮ ಅಧಿಕಾರ ರಾಜಕಾರಣದ ಸ್ವಯಂಘೋಷಿತ ಆಧುನಿಕ ಪರಿಕಲ್ಪನೆಗಳು ಆಧುನಿಕೋತ್ತರ ಸನ್ನಿವೇಶದಲ್ಲಿ ಪ್ರಶ್ನೆಗೊಳಗಾಗುತ್ತಿವೆ. ಇವುಗಳಿಗೆ ಬದಲಿಯಾಗಿ ಸ್ಥಳೀಯ, ಪಂಥೀಯ, ಬಹುರೂಪದ, ಮೌಖಿಕ ಮುಂತಾದ ಪರಿಕಲ್ಪನೆಗಳು ಆಧುನಿಕೋತ್ತರ ಚಿಂತನೆಯ ಬೌದ್ಧಿಕ ವಲಯದಲ್ಲಿ ರೂಪುಗೊಂಡವು. ನಾವಿಂದು ಸಾಂಪ್ರದಾಯಿಕ ಇತಿಹಾಸ ರಚನೆಗೆ ಬದಲಿಯಾಗಿ ಮೌಖಿಕ ಇತಿಹಾಸವನ್ನು ಕಥನವಾಗಿಸುವ ಚಟುವಟಿಕೆಯೂ ಆಧುನಿಕೋತ್ತರ ಚಿಂತನೆಯ ಎಳೆಯೇ ಆಗಿದೆ. ಅಕ್ಷರಲೋಕ ಅಥವಾ ಲಿಪಿಬದ್ಧತೆ, ಇಂದು ಎಲ್ಲ ಬಗೆಯಲ್ಲೂ ಮೌಖಿಕತೆಯ ಸವಾಲನ್ನು ಎದುರಿಸುತ್ತಿದೆ. ಆಧುನಿಕ ಕಾಲದ ತಂತ್ರಜ್ಞಾನದ ಆವಿಷ್ಕಾರಗಳು, ಅಕ್ಷರಕ್ಕೆ ಒದಗಿಸಿದ ಅಧಿಕಾರವನ್ನು, ಆಧುನಿಕೋತ್ತರ ತಂತ್ರಜ್ಞಾನಗಳು ನವಮೌಖಿಕತೆಗೆ ಪಲ್ಲಟಗೊಳಿಸುತ್ತಿದೆ. ಚಾರಿತ್ರಿಕ ಸನ್ನಿವೇಶದ ಈ ತಿಳುವಳಿಕೆಯ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಇತಿಹಾಸ ರಚನೆಗೆ ಎದುರಾಗಿ ಮೌಖಿಕ ಚರಿತ್ರೆಯನ್ನು ಊರ್ಜಿತಗೊಳಿಸುವ ಈ ಸಂದರ್ಭದಲ್ಲಿ, ಮೌಖಿಕ ಚರಿತ್ರೆಯನ್ನು ಕಟ್ಟುವ ನಮ್ಮ ವಿಧಾನಕ್ರಮವನ್ನು, ಚರಿತ್ರೆ ಕುರಿತ ಇಂದಿನ ಈ ನಮ್ಮ ಕಥನವನ್ನು ಮೂಲಜಿಜ್ಞಾಸೆಗೆ ಒಳಪಡಿಸುವ ಪ್ರಯತ್ನವನ್ನು ಈ ಪ್ರಬಂಧದಲ್ಲಿ ಮಾಡಲಾಗಿದೆ.

ಪಶ್ಚಿಮದಲ್ಲಿ ರೂಪುಗೊಂಡಿರುವ “ಓರಲ್ ಹಿಸ್ಟ್ರೀ” ಕನ್ನಡದಲ್ಲಿ ಅದರಲ್ಲೂ ಜಾನಪದ ಅಧ್ಯಯನದಲ್ಲಿ ಮೌಖಿಕ ಇತಿಹಾಸವಾಗಿ ದೇಶಾಂತರಗೊಳ್ಳುತ್ತಿದೆ. ಜಾನಪದ ಅಧ್ಯಯನದಲ್ಲಿ ಮೌಖಿಕ ಇತಿಹಾಸದ ಬಗ್ಗೆ ತಾತ್ವಿಕ ಚರ್ಚೆಗಳು ನಡೆದಿರುವುದು ಕಡಿಮೆ. ಜಾನಪದವನ್ನು ಇತಿಹಾಸ ರಚನೆಗೆ ಆಕರ ಸಾಮಗ್ರಿಯಾಗಿ ಹೇಗೆ ಬಳಸಿಕೊಳ್ಳಬಹುದು, ಆ ಮೂಲಕ ಇತಿಹಾಸವನ್ನು ಹೇಗೆ ಪುನರ್‌ರಚಿಸಿಕೊಳ್ಳಬಹುದು ಎನ್ನುವ ಬರಹಗಳು ವಿರಳ.

ಮೌಖಿಕ ಇತಿಹಾಸ ಪುನರ‍್ರಚನೆಯ ಸಂದರ್ಭದಲ್ಲಿ ೧೯ನೆಯ ಶತಮಾನದಲ್ಲಿ ಯೂರೋಪಿನಲ್ಲಿ ಬಂಡವಾಳಶಾಹಿಯ ಉಚ್ಛ್ರಾಯ ಕಾಲದಲ್ಲಿ ಸೃಷ್ಟಿಗೊಂಡ, ಚರಿತ್ರೆಯನ್ನು ಗ್ರಹಿಸಿದ ಕೇಂದ್ರ ಮತ್ತು ಪಂಥಿ ಎನ್ನುವ ಪರಿಕಲ್ಪನೆ ಹಾಗೂ ಆ ವರ್ಗೀಕರಣದ ವಿನ್ಯಾಸದಲ್ಲೇ ‘ಮೌಖಿಕ ಇತಿಹಾಸ’ವನ್ನು ನಾವಿಂದು ಪುನರ್ ನಿರೂಪಿಸಿಕೊಳ್ಳುತ್ತಿದ್ದೇವೆ. ಹೀಗೆ ಮೇಲಿನ/ ಕೆಳಗಿನ, ಕೇಂದ್ರ/ ಅಂಚು, ನಗರ/ಗ್ರಾಮ್ಯ, ಗಂಡು/ಹೆಣ್ಣು, ರಾಜ/ಜನ ಈ ಬಗೆಯ ಶ್ರೇಣೀಕೃತ ಸಿದ್ಧ ಸ್ಥಿತಿಗಳನ್ನು ಒಪ್ಪಿಕೊಂಡೇ ಮೌಖಿಕ ಚರಿತ್ರೆಯನ್ನು ಮೌಖಿಕ ಇತಿಹಾಸವಾಗಿ ಸಾಂಪ್ರದಾಯಿಕ ಇತಿಹಾಸ ರಚನೆಗೆ ಬದಲಿಯಾಗಿ ನಿರೂಪಿಸುತ್ತಿದ್ದೇವೆ. ಈ ಗ್ರಹಿಕೆಯ ಕಾರಣದಿಂದ, ಸಾಂಪ್ರದಾಯಿಕ ಇತಿಹಾಸ ರಚನೆಯ ಆಕ್ಷರಿಕ ಆಕರಗಳಿಗೆ ಬದಲಿಯಾಗಿ ಮೌಖಿಕ ಆಕರಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆ ಮೂಲಕ ರಾಜನ ಬದಲು ಜನರ ದೃಷ್ಟಿಯಲ್ಲಿ ರಾಜತ್ವವನ್ನು ನಿರೂಪಿಸಲಾಗುತ್ತಿದೆ. ಅಂದರೆ ಪ್ರಭುತ್ವದ ಸಾಂಪ್ರದಾಯಿಕ ಇತಿಹಾಸಕ್ಕೆ ವಿರುದ್ಧವಾಗಿ ವಿಲೋಮ ಸ್ಥಿತಿಯಲ್ಲಿ ಪ್ರಭುತ್ವದ ಚರಿತ್ರೆಯನ್ನುಹೆಣೆಯಲಾಗುತ್ತಿದೆ. ಹಾಗೆಯೇ ಕೇಂದ್ರ/ಪರಿಧಿ ಎನ್ನುವ ಪಶ್ಚಿಮ ಪ್ರಣೀತ ಗೃಹೀತಗಳ ಆಧಾರದಲ್ಲಿ ಮೌಖಿಕ ಚರಿತ್ರೆಯನ್ನು ಪರಿಧಿಯಲ್ಲಿ ಗ್ರಹಿಸಿ ಕೊಳ್ಳಲಾಗುತ್ತಿದೆ. ಇದರಿಂದ ಅಂಚಿಗೆ ಸರಿಸಲ್ಪಟ್ಟ ಚರಿತ್ರೆ ಕೇಂದ್ರಕ್ಕೆ ಬರುತ್ತದೆ. ಅಂಚಿನಲ್ಲಿರುವ ಹೆಣ್ಣಿನ ಮೂಲಕ ಗಂಡಿನ,ಆಳಿನ ಮೂಲಕ ಒಡೆಯನ, ಜನರ ಮೂಲಕ ರಾಜನ, ಕೆಳಗಿನ ಮೂಲಕ ಮೇಲಿನ ಚರಿತ್ರೆ ಮರುನಿರ್ಮಿತವಾಗುತ್ತದೆ. ಈ ವಿನ್ಯಾಸದಲ್ಲಿ ಮೌಖಿಕ ಚರಿತ್ರೆಯನ್ನು ನಿರೂಪಿಸುವುದು ಮೌಖಿಕ ಇತಿಹಾಸವಾಗಿಮತ್ತು ಈಗಾಗಲೇ ನಿರೂಪಿಸಲ್ಪಟ್ಟ ಸಾಂಪ್ರದಾಯಿಕ ಇತಿಹಾಸಕ್ಕೆ ವಿರುದ್ಧವಾಗಿ ಅಧೀನವೇ ಇಲ್ಲಿ ಪ್ರಧಾನವಾಗುತ್ತದೆ.

ಈ ಹಿನ್ನೆಲೆಯಲ್ಲಿ ಮೌಖಿಕ ಚರಿತ್ರೆಯನ್ನು ಗ್ರಹಿಸುವ ನಮ್ಮ ವಿಧಾನಕ್ರಮದ ಕುರಿತಂತೆ ಕೆಲವು ಪ್ರಶ್ನೆಗಳು ಏಳುತ್ತವೆ. ಮೌಖಿಕ ಚರಿತ್ರೆ ಅನ್ನುವುದು ವಿಧಾನವೇ? ಐಡಿಯಾಲಜಿಯೇ? ಮೌಖಿಕ ಚರಿತ್ರೆ ಅಂದರೆ ಇತಿಹಾಸದ ಪುನರ‍್ರಚನೆಯೇ? ಇತಿಹಾಸದ ಪುನರ‍್ರಚನೆ ಅಂದರೆ ಬದಲಿ ಆಕರಗಳ ಮೂಲಕ ತಲುಪುವ ತೀರ್ಮಾನವೇ? ಎನ್ನುವ ಪ್ರಶ್ನೆಗಳು ಇಲ್ಲಿ ಮುಖ್ಯವಾಗಿವೆ.

ಒಂದು ಶಿಸ್ತಾಗಿ, ಇತಿಹಾಸವನ್ನು ಭೂತಕಾಲದ ದಾಖಲೆ ಎಂದೆ ಪರಿಗಣಿಸಲಾಯಿತು. ಅಂದರೆ, ಭೂತಕಾಲದಲ್ಲಿ ನಡೆದು ಹೋದ ಘಟನೆಗಳು ಒಂದು ಕ್ರಮಾಗತ ಸರಣಿಯಲ್ಲಿ ನಡೆದವು ಮತ್ತು ಆ ಘಟನೆಗಳ ವಿವರಗಳನ್ನು, ಅವುಗಳ ಸಂದರ್ಭಗಳಿಗೆ ಅನುಗುಣವಾಗಿ ಕಂಡುಕೊಳ್ಳಬಹುದೆಂಬ ಅರ್ಥದಲ್ಲಿ, ಇತಿಹಾಸವನ್ನು ಭೂತಕಾಲದ ಬಗೆಗಿನ ದಾಖಲೆ ಎಂದೇ ಪರಿಗಣಿಸಲಾಗುತ್ತಿದೆ. ಇತಿಹಾಸವನ್ನು “ಕಾಲ ಮತ್ತು ಸ್ಥಳದ ನಿರ್ದಿಷ್ಟತೆಯಲ್ಲಿ ವಸ್ತುಸ್ಥಿತಿಗಳನ್ನು ವಸ್ತುನಿಷ್ಠವಾಗಿ ಸಾಬೀತುಪಡಿಸುವ ವಿಜ್ಞಾನ”ವೆಂದು ನಿರ್ವಚಿಸಿಕೊಳ್ಳುತ್ತದೆ. “ಸಾಮಾಜಿಕ ಜೀವಿಯಾದ ಮನುಷ್ಯನ ವ್ಯಕ್ತಿಗತ ಮತ್ತು ಸಾಮೂಹಿಕ ಅಲ್ಲದೆ ಮನುಷ್ಯನದೇ ಆದ ವಿಶಿಷ್ಟ ಚಟುವಟಿಕೆಗಳ ಮೂಲಕ ಆತನ ವಿಕಾಸವಾಯಿತು. ಈ ವಿಕಾಸದ ವಿವಿಧ ಹಂತಗಳಲ್ಲಿ ಸ್ಥಳ ಮತ್ತು ಕಾಲಗಳ ಮೂಲಕ ನಿರ್ಣಯಿಸಲ್ಪಡುವ ವಸ್ತುಸ್ಥಿತಿಗಳನ್ನು, ಆ ವಸ್ತುಸ್ಥಿತಿಗಳ ಹಿಂದಿರುವ ಮಾನಸಿಕ ಭೌತಿಕ ಕಾರಣಗಳ ಸಂದರ್ಭದಲ್ಲಿಟ್ಟು ಶೋಧಿಸುವ ಮತ್ತು ಆ ವಸ್ತುಸ್ಥಿತಿಗಳನ್ನು ಮುಂದಿರಿಸುವ ವಿಜ್ಞಾನವೇ ಇತಿಹಾಸ.

ಇತಿಹಾಸ ಹೇಗೆ ವಿಜ್ಞಾನವಾಗುತ್ತದೆ ಎಂದರೆ, ಇದು ಬದುಕಿನ ವಾಸ್ತವನ್ನು ಆಧರಿಸಿ ಮೂರ್ತಗೊಂಡ ವ್ಯವಸ್ಥಿತ ಜ್ಞಾನ. ಇದು ನಿಜವಾಗಿಯೂ ನಡೆದ ಘಟನೆಗಳನ್ನು ವಸ್ತುನಿಷ್ಠವಾಗಿ ಹೇಳುತ್ತದೆ. ಇತಿಹಾಸದ ಮುಖ್ಯ ಉದ್ದೇಶವೆಂದರೆ, ಈ ಘಟನೆಗಳನ್ನು ಅವುಗಳೇ ಸಂದರ್ಭದಲ್ಲಿ ನಿರೂಪಿಸುವುದು. ಆದರೆ ಅದರ ಮುಖ್ಯ ಕಾರ್ಯವೆಂದರೆ, ಘಟನೆಗಳ ಕಾರಣಗಳನ್ನು ವಿವರಿಸುವುದು. ಆದರೆ ಘಟನೆಗಳ ಸರಣೀಕರಣ ಮತ್ತು ಅವುಗಳ ಕಾರಣಗಳ ಶೋಧ ಮಾತ್ರ ಇತಿಹಾಸದ ಸಮಸ್ಯೆ ಅಲ್ಲ. ಘಟನೆ ಮತ್ತು ಅವುಗಳ ಕಾರಣ ಹಾಗೂ ಪರಿಣಾಮಗಳು, ಯಾರಿಂದ ಹಾಗೂ ಹೇಗೆ ನಿರೂಪಿಸಲ್ಪಡುತ್ತದೆ ಎನ್ನುವುದೂ ಇತಿಹಾಸ ಪ್ರಮುಖ ಸಮಸ್ಯೆ. ಹೀಗಾಗಿ ಇತಿಹಾಸಕಾರ ಕೇವಲ ಇತಿಹಾಸದ ನಿರೂಪಕ ಮಾತ್ರ ಅಲ್ಲ; ಆತ ಇತಿಹಾಸದ ನಿರ್ಮಾಪಕ ಕೂಡ. ಅಂದರೆ ಇತಿಹಾಸಕಾರ ತನ್ನ ವರ್ತಮಾನದ ಮಾನಸಿಕ ಸಂದರ್ಭಕ್ಕೆ ಅನುಸಾರವಾಗಿ ಆತ ಭೂತದ ಘಟನೆಗಳನ್ನು ನಿರ್ಮಿಸಿಕೊಳ್ಳುತ್ತಾನೆ. ಹೀಗಾಗಿ ಚರಿತ್ರೆ ಅನ್ನುವುದು ಇ.ಹೆಚ್. ಕಾರ್ ಪ್ರಕಾರ “ವರ್ತಮಾನ ಮತ್ತು ಭೂತದ ನಡುವೆ ನಡೆಯುವ ಮುಕ್ತಾಯವಿಲ್ಲದ ನಿರಂತರ ಸಂವಾದ”. ಇದು ಏನನ್ನು ಸೂಚಿಸುತ್ತದೆಂದರೆ ಇತಿಹಾಸ ಎನ್ನುವುದು ಇತಿಹಾಸಕಾರನ ದೃಷ್ಟಿಕೋನಕ್ಕೆ ಅನುಸಾರವಾಗಿ ವ್ಯಕ್ತಗೊಂಡುದಾಗಿದೆ. ಈ ಅರ್ಥದಲ್ಲಿ ಅಪ್ಪಟ ವಸ್ತುನಿಷ್ಠ ಇತಿಹಾಸ ಅನ್ನುವುದು ಕೇವಲ ಭ್ರಮೆ ಮಾತ್ರ. ಇತಿಹಾಸಕಾರ ತನ್ನಲ್ಲಿರುವ ವಸ್ತುಸತ್ಯಾಂಶಗಳ ಜೊತೆಗೆ ವ್ಯವಹರಿಸುವಾಗ ಆ ವಸ್ತು ಸತ್ಯಾಂಶಗಳನ್ನು ಯಾವುದೇ ಪೂರ್ವಾಪರದ ಸ್ಪರ್ಶ ಇಲ್ಲದ, ಅದರ ಜೊತೆಗಿನ ಇತರ ಸಂಗತಿಗಳಿಂದ ಅದು ಬೇರ್ಪಟ್ಟ, ಸಮೃದ್ಧ, ಪವಿತ್ರ ವಸ್ತು ಸತ್ಯಾಂಶಗಳೆಂದು ಅವನ್ನು ಗ್ರಹಿಸಿಕೊಳ್ಳುತ್ತಾನೆ. ಈ ವಸ್ತು ಸತ್ಯಾಂಶಗಳು ವಸ್ತುನಿಷ್ಠ ವಾಸ್ತವವನ್ನು ನಿರೂಪಿಸುವ ಕಾರಣದಿಂದ, ಇತಿಹಾಸಕಾರ ಆ ವಸ್ತು ಸತ್ಯಾಂಶಗಳಿಗೆ ಅಧಿಕೃತತೆಯನ್ನು ತಂದುಕೊಡುತ್ತಾನೆ. ಹೀಗೆ ಇತಿಹಾಸಕಾರ ಮಾನಸಿಕವಾಗಿ ಅನ್ವಯಿಸಿಕೊಂಡ ವಿವರಗಳನ್ನೇ ಭೌತಿಕವಾಗಿ ಸಂಭವಸಿದ ವಿವರಗಳು ಎನ್ನುವಂತೆ ಅವನ್ನು ಮಂಡಿಸುತ್ತಾನೆ. ಈ ಕಾರಣದಿಂದಲೇ, ಭೂತಕಾಲದಲ್ಲಿ ನಡೆದ ಘಟನೆಗಳ ದಾಖಲಿತರೂಪ ಇತಿಹಾಸ ರಚನೆಗೆ ಆಕರವಾಗುತ್ತದೆ. ಯಾವುದೇ ವ್ಯಕ್ತರೂಪದಲ್ಲಿ ತನ್ನಿಂದ ತಾನೇ ದಾಖಲಾಗಲು ಸಾಧ್ಯವಿಲ್ಲದ ಮೌಖಿಕತೆಗಿಂತ ದಾಖಲಾಗಿರುವ ಆಖ್ಷರಿಕ ರೂಪಕ್ಕೆ ಮಾತ್ರ ಇತಿಹಾಸದಲ್ಲಿ ಪ್ರಾಧಾನ್ಯತೆ ನೀಡುವಂತಾಯಿತು.

ಆಧುನಿಕ, ಆಕ್ಷರಿಕ, ಔದ್ಯೋಗಿಕ ಸಮಾಜಗಳಲ್ಲಿ ಬದುಕುತ್ತಿರುವ ಇತಿಹಾಸಕಾರರು ಗತಕಾಲವನ್ನು ಪುನರ್‌ರಚಿಸುವ ಇತಿಹಾಸದ ರಚನೆಗೆ ಮೌಖಿಕ ಆಕರಗಳನ್ನು ಬಳಸಿಕೊಳ್ಳುವಲ್ಲಿ ಸಂದೇಹವಾದಿಗಳಾಗಿದ್ದರೆ. ಕಾಲ ಮತ್ತು ಸ್ಥಳದ ನೆಲೆಯಲ್ಲಿ ವಿಶ್ವಾತ್ಮಕಗೊಳ್ಳು ಹಾಗೂ ಸರಿಪಡಿಸಲಾರದ ದೋಷಗಳು ಮೌಖಿಕ ಆಕರಗಳ ದೌರ್ಬಲ್ಯವೆಂದು ಪ್ರತಿಪಾದಿಸಿ ಇತಿಹಾಸ ರಚನೆಯ ಸಂದರ್ಭದಲ್ಲಿ ಮೌಖಿಕ ಚರಿತ್ರೆಯನ್ನು ಕಡೆಗಣಿಸಲಾಗಿದೆ.

ಇತಿಹಾಸದ ವೈಧಾನಿಕ ಮತ್ತು ತಾತ್ವಿಕ ವಿವರಣೆಯ ಆಧಾರದಲ್ಲಿ ಹೇಳುವುದಾದರೆ, ಹಿಸ್ಟರಿಯನ್ನು ಇತಿಹಾಸವಾಗಿ ಅಥವಾ ಚರಿತ್ರೆಯಾಗಿ ಭಾಷಾಂತರಿಸಿಕೊಳ್ಳುವ ಭಾಷೆಗೆ ಸಂಬಂಧಪಟ್ಟ ಸಮಸ್ಯೆ ಮಾತ್ರವಲ್ಲ. ಇದು ಆ ಕುರಿತ ನಮ್ಮ ವಿಧಾನಕ್ರಮ ಮತ್ತು ತಾತ್ವಿಕತೆಗೆ ಸಂಬಂಧಪಟ್ಟ ಸಮಸ್ಯೆ. ಇತಿಹಾಸ ಅಂದರೆ ಹೀಗೆ ಇತ್ತು ಅನ್ನುವ ವ್ಯಾಖ್ಯೆಯನ್ನು ಒಪ್ಪಿಕೊಂಡಾಗ ಇತಿಹಾಸವನ್ನು ಭುತಕಾಲದ ದಾಖಲೆಯಾಗಿ ಮಾತ್ರ ಗ್ರಹಿಸುವ ವಿಧಾನ ಕ್ರಮವನ್ನು ರೂಪಿಸಿಕೊಳ್ಳುತ್ತೇವೆ. ಈ ತಿಳುವಳಿಕೆಯ ಹಿನ್ನೆಲೆಯಲ್ಲಿ ಓರಲ್ ಹಿಸ್ಟರಿಯನ್ನು ಮೌಖಿಕ ಇತಿಹಾಸವಾಗಿ ಪುನರ್‌ರಚಿಸುವ ಬದಲು, ಮೌಖಿಕ ಚರಿತ್ರೆಯಾಗಿ ಕಂಡುಕೊಳ್ಳುವ ಅಗತಯ್ವಿದೆ. ಆ ಮೂಲಕ ವರ್ತಮಾನವನ್ನು ರೂಪಿಸುವ, ನಿರ್ವಹಿಸುವ, ನಿರೂಪಿಸುವ ಅದರ ಭೂತದ ಜೊತೆಗಿನ ಅಖಂಡತೆಯಲ್ಲಿ ಮೌಖಿಕ ಚರಿತ್ರೆಯನ್ನು ನಿರೂಪಿಸಲಾಗಿದೆ.

ಈಗಾಗಲೇ ವಿವರಿಸಿದಂತೆ, ೧೯ನೆಯ ಶತಮಾನದಲ್ಲಿ ಹಿಸ್ಟರಿ ಬಗ್ಗೆ ಇದ್ದ ಕಲ್ಪನೆ ಚರಿತ್ರೆಯದ್ದಲ್ಲ. ಚರಿತ್ರೆಯನ್ನು ಗ್ರಹಿಸಿದ ಆ ಕಾಲದ ಇತಿಹಾಸಕಾರರು ಅಕ್ಷರಿಕ, ಔದ್ಯೋಗಿಕ, ಆಧುನಿಕ ಸಮಾಜದಲ್ಲಿ ಜೀವಿಸುವವರಾದುದರಿಂದ, ಭೂತವನ್ನು ಪುನರ್‌ರಚಿಸುವುದಕ್ಕೆ ಆ ಮೂಲಕ ಇತಿಹಾಸ ರಚನೆಗೆ ಅವರು ವಾಸ್ತವಿಕ, ಅಧಿಕೃತ ವಸ್ತುಸ್ಥಿತಿಗಳೆಂದು ಪರಿಗಣಿಸಿದ್ದು, ಆಕ್ಷರಿಕ ದಾಖಲೆಗಳನ್ನು ಮಾತ್ರ. ಆಕ್ಷರಿಕ ಆಧುನಿಕ ಸಮಾಜದಲ್ಲಿ ಬದುಕುತ್ತಿರುವ ಇವರು ಮೌಖಿಕ ವಸ್ತುಸ್ಥಿತಿಗಳನ್ನು ಅಲಕ್ಷಿಸಿದ್ದು ಮಾತ್ರವಲ್ಲ, ಆಕ್ಷರಿಕವಲ್ಲದ ಮೌಖಿಕ ಸಮಾಜಗಳನ್ನು ಚರಿತ್ರಹೀನವೆಂದು ನಿರ್ಲಕ್ಷಿಸಿದರು. ಹಾಗಾಗಿ ಅಕ್ಷರ ಮತ್ತು ಮೌಖಿಕತೆಗೂ ಮೌಲ್ಯಾತ್ಮಕ ಮಾತ್ರವಲ್ಲ ಶ್ರೇಣಿಕೃತ ಸ್ವರೂಪ ಸಂಬಂಧದ ಗ್ರಹಿಕೆ ಇದೆ. ಈ ಗ್ರಹಿಕೆಯಲ್ಲಿ ಅಕ್ಷರ ನಾಗರಿಕ ಬದುಕಿನ ಚಿಹ್ನೆ; ಅನಕ್ಷರತೆ ಅನಾಗರಿಕತೆಯ ಸೂಚನೆ. ಮೌಲ್ಯಾತ್ಮಕ ಮಾತ್ರವಲ್ಲ ಶ್ರೇಣೀಕೃತ ಸ್ವರೂಪ ಸಂಬಂಧದ ಗ್ರಹಿಕೆ ಇದೆ. ಈ ಗ್ರಹಿಕೆಯಲ್ಲಿ ಅಕ್ಷರ ಸಾಂಸ್ಕೃತಿಕ ಪ್ರಗತಿಯ ಆಧುನಿಕತೆಯ ಸಂಕೇತ; ಅನಕ್ಷರತೆ ಸಾಂಸ್ಕೃತಿಯ ಚಲನಶೀಲತೆಯನ್ನೂ ಪ್ರತಿಪಾದಿಸುವುದೆಂದು ವಾದಿಸಲಾಯಿತು. ಹೀಗೆ ಮಾನವನ ಸಾಂಸ್ಕೃತಿಕ ಇತಿಹಾಸದ ಸರಳರೇಖಾತ್ಮಕ ಬೆಳವಣಿಗೆಯಲ್ಲಿ ಅಕ್ಷರ ಮತ್ತು ಅನಕ್ಷರತೆ ಸಾಂಸ್ಕೃತಿಕ ವಿಕಾಸದ ಮಾನದಂಡಗಳಾದುವು. ಈ ಹಿನ್ನೆಲೆಯಲ್ಲಿ ೧೯ನೆಯ ಶತಮಾನದ ಇತಿಹಾಸ ಹಾಗೂ ಚರಿತ್ರೆ ನಿರ್ಮಿತಿಯ ಚಾರಿತ್ರಿಕ ವಿದ್ಯಮಾನದಲ್ಲಿ, ಅನಕ್ಷರಸ್ಥ ದೇಸಗಳನ್ನು ಚರಿತ್ರಹೀನವೆಂದು ಪರಿಗಣಿಸಿ ಅವನ್ನು ಪ್ರಗತಿಯ ಕಲ್ಪನೆಯಲ್ಲಿ ಅನಾಗರಿಕ ದೇಶಗಳೆಂದು ಅಂಚಿಗೆ ಸರಿಸಲಾಯಿತು. ಮಾತ್ರವಲ್ಲ, ಪ್ರಗತಿ ಹೊಂದಿದ ಆಧುನಿಕಗೊಂಡ ಅವರ ಆಳ್ವಿಕೆಯನ್ನು ನ್ಯಾಯಸಮ್ಮತಗೊಳಿಸಲಾಯಿತು.

೧೯ನೆಯ ಶತಮಾನದ ಜರ್ಮನಿಯ ಲಲಿಯೋಪೋಲ್ಡ್ ವಾನ್ ರಾಂಕೆ(೧೭೯೫-೮೬) ಪ್ರತಿಪಾದಿಸಿದ ವಸ್ತುನಿಷ್ಠ ಇತಿಹಾಸ ರಚನೆಯ ಸಾಂಪ್ರದಾಯಿಕ ವಿಧಾನದಲ್ಲಿ ಲಿಖಿತ ದಾಖಲೆಗಳಿಲ್ಲದ ಸಮಾಜಗಳನ್ನು ಕಡೆಗಣಿಸಲಾಯಿತು. ೧೮೩೧ರಲ್ಲಿ ಹೆಗೆಲ್ ಆಫ್ರಿಕಾ ಖಂಡ ಜಗತ್ತಿನ ಚಾರಿತ್ರಿಕ ಭಾಗವಾಗಿ ಇಲ್ಲ ಎಂದು ಹೇಳಿದಂದಿನಿಂದ, ಆಕ್ಷರಿಕ ದಾಖಲೆಗಳಿಲ್ಲದ ಆಫ್ರಿಕಾ ಖಂಡವನ್ನು ಅಚಾರಿತ್ರಿಕ, ಚರಿತ್ರಹೀನ ದೇಶವೆಂದು ಕಡೆಗಣಿಸಲಾಯಿತು. “ಏಶಿಯಾದ ಉತ್ಪಾದನಾ ವಿಧಾನದಲ್ಲಿ” ಮಾರ್ಕ್ಸ್‌ಭಾರತವನ್ನು ಗುರುತಿಸಿಕೊಂಡಾಗಲೂ ಈ ಗ್ರಹಿಕೆ ಇದೆ ಎಂದೂ ಹೇಳಲಾಗಿದೆ. ಈ ಬಗೆಯ ಇತಿಹಾಸ ರಚನೆ ಮತ್ತು ಆಧುನಿಕ ರಾಷ್ಟ್ರಗಳ ಉಗಮ ಹಾಗೂ ರಾಷ್ಟ್ರ ಪರಿಕಲ್ಪನೆಯಲ್ಲಿ, ಚರಿತ್ರೆ ಬಗೆಗಿನ ಮೌಲ್ಯಾತ್ಮಕ ಶ್ರೇಣೀಕರಣದ ಬೇರುಗಳಿವೆ.

ಇತ್ತೀಚಿನ ದಶಕಗಳಲ್ಲಿ ಲಿಖಿತ ದಾಖಲೆಗಳನ್ನು ಆಧರಿಸಿದ ವಸ್ತುನಿಷ್ಠ ಇತಿಹಾಸದ ಕಲ್ಪನೆ ಅಪಕಲ್ಪನೆ ಎನಿಸಿಕೊಳ್ಳುತ್ತಿದೆ. ಸತ್ಯಾಸತ್ಯತೆಯನ್ನು ಪರೀಕ್ಷಿಸುವ ವಸ್ತುನಿಷ್ಠ ಇತಿಹಾಸವನ್ನು ಪತ್ತೆ ಹಚ್ಚುವ ೧೯ನೆಯ ಶತಮಾನದ ಪ್ರತ್ಯಕ್ಷ ಪ್ರಮಾಣವಾದಿ ವೈಜ್ಞಾನಿಕ ಕಲ್ಪನೆಯ ಇತಿಹಾಸ ರಚನೆ ಇಂದು ಪ್ರಶ್ನೆಗೊಳಗಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಮೌಖಿಕ ಆಕರಗಳ ಆಧಾರದಲ್ಲಿ ಇತಿಹಾಸ ನಿರೂಪಿತವಾಗುತ್ತಿದೆ.

ಮೌಖಿಕ ಆಕರಗಳ ಇತಿಹಾಸ ರಚನೆಯ ಆಕರಗಳಾಗಿ ಬಳಸಿಕೊಳ್ಳುವಲ್ಲಿ ಎರಡು ಅಲೆಗಳಿವೆ. ಒಂದು ದೃಷ್ಟಿಯಲ್ಲಿ ಮೌಖಿಕ ಆಕರಗಳ ಬಗ್ಗೆ ಪೂರ್ತಿ ತಿರಸ್ಕಾರವಿದೆ. ಆದರೆ ಈ ಎರಡೂ ದೃಷ್ಟಿಗಳಲ್ಲಿ ಇತಿಹಾಸ ರಚನೆಗೆ ಲಿಖಿತ ದಾಖಲೆಗಳೇ ಅಧಿಕೃತ ಆಕರಗಳು. ಮೌಖಿಕ ಆಕರಗಳ ಬಗ್ಗೆ ಅನುಕಂಪದ ದೃಷ್ಟಿಕೋನದಲ್ಲಿ, ಲಿಖಿತ ದಾಖಲೆಗಳ ಆಧಾರದಲ್ಲಿ ಇತಿಹಾಸದ ಸತ್ಯಾಸತ್ಯತೆಯನ್ನು ಪರೀಕ್ಷೆಗೆ ಒಡ್ಡುವಾಗ ಲಿಖಿತ ದಾಖಲೆಗಳು ಪ್ರಾಥಮಿಕ ಆಕರಗಳಾಗುತ್ತವೆ. ಮೌಖಿಕ ಆಕರಗಳು ಈ ಲಿಖಿತ ಸಾಕ್ಷ್ಯಾಧಾರಗಳ ಪರೀಕ್ಷೆಗೆ ಬೇಕಾಗುವ ಅನುಷಂಗಿಕ ಆಕರಗಳಾಗುತ್ತವೆ. ರಾಂಕೆ ವಿಧಾನದ ಶ್ರೇಣಿಕೃತ ಕಲ್ಪನೆಯಲ್ಲಿ ಲಭ್ಯವಿರುವ ಲಿಖಿತ ಆಕರಗಳೇ ಅಧಿಕೃತ ದಾಖಲೆ. ಎಲ್ಲಿ ಇದು ಅಲಭ್ಯವೋ ಆವಾಗ ಎರಡನೆಯ ಉತ್ತಮವೆನಿಸುವ ಆಖರವನ್ನು ನಾವು ಬಳಸಿಕೊಳ್ಳಬಹುದು. ಹೀಗೆ ಇತಿಹಾಸ ರಚನೆಯಲ್ಲಿ ದಾಖಲಿತ ಆಕರವಾಗಿರುವ ಅಕ್ಷರವನ್ನು ಪ್ರಾಥಮಿಕವೆಂದೂ ದಾಖಲಿತವಲ್ಲದ ಮೌಖಿಕವನ್ನು ಆನುಷಂಗಿಕವೆಂದು ಪರಿಗಣಿಸಲಾಗಿದೆ.

ಇತಿಹಾಸಕಾರನಿಗೆ ಮೌಖಿಕಕ್ಕೆ ಬದಲಾಗಿ ಲಿಖಿತ ದಾಖಲೆಗಳು ಯಾಕೆ ಅಧಿಕೃತವಾಗುತ್ತದೆ ಎಂಬುದನ್ನು ಮೂರು ಅಂಶಗಳಲ್ಲಿ ಪ್ರತಿಪಾದಿಸಲಾಗಿದೆ.

೧. ರೂಪ: ಲಿಖಿತ ದಾಖಲೆಗಳಿಗೆ ನಿಶ್ಚಿತ ರೂಪವಿರುತ್ತದೆ. ಹೀಗಾಗಿ ಇದು ವ್ಯಕ್ತವಾಗಿರುವ ಪ್ರತ್ಯಕ್ಷ ದಾಖಲೆ. ಕಣ್ಣಿಗೆ ಕಾಣುವ ಸಾಕ್ಷ್ಯಾಧಾರ. ನಿಶ್ಚಿತ ರೂಪದಲ್ಲಿ ಭೌತಿಕ ಆಕಾರವನ್ನು ಪಡೆದಿರುವ ಈ ಸಾಕ್ಷ್ಯಾಧಾರದ ಭೌತಿಕ ಅಸ್ತಿತ್ವದ ಬಗ್ಗೆ ಯಾವುದೇ ಅನಮಾನಗಳಿರುವುದಿಲ್ಲ. ಅಕ್ಷರ ಅನ್ನುವುದು ಸತ್ಯವನ್ನು ಸಾಧಿಸುವ ತಾಂತ್ರಿಕ ಸಾಧನ. ಪುರಾವೆ, ಊಹೆ, ಕಲ್ಪನೆಗಳಿಲ್ಲದ ವಾಸ್ತವಿಕ ವಸ್ತುಸ್ಥಿತಿ. ಈ ನಿಶ್ಚಿತ ಪಠ್ಯಗಳು ಇತರ ಆಕರಗಳೊಂದಿಗೆ, ತೌಲನಿಕ, ಪಠ್ಯಾತ್ಮಕ, ಸಂರಚನಾತ್ಮಕ ಪರೀಕ್ಷೆಗೆ ಒಡ್ಡಬಹುದಾದದ್ದು.

೨. ಕಾಲ: ಕ್ಯಾಲೆಂಡರ್ ಮತ್ತು ರಿಸ್ಟ್‌ವಾಚ್‌ಗಳ ಮೂಲಕ ಕಾಲಮಾಪನ ಮಾಡುವ ಆಕ್ಷರಿಕ ಸಮಾಜದ ಇತಿಹಾಸಕಾರರು ಇತಿಹಾಸ ರಚನೆಯ ಆಕರಗಳಲ್ಲಿ ಕ್ರಮಾನುಗತವಾಗಿ ಬರುವ ಸರಣಿ ಕಾಲವನ್ನು ಕಾಣಬಯಸುತ್ತಾರೆ.

೩. ಬಹುಪಠ್ಯ: ಇತಿಹಾಸದ ಆಕರವಾಗಿರುವ ಪಠ್ಯದ ಸಂದೇಶಗಳನ್ನು ಅದೇ ಪಠ್ಯದಿಂದ ಪಡೆಯುವುದಲ್ಲ. ಇತರ ಪಠ್ಯದ ತೌಲನಿಕ ಓದಿನ ಮೂಲಕ ಆ ಪಠ್ಯದ ಸಂದೇಶವನ್ನು ಪಡೆಯಬೇಕು. ಹೀಗಾಗಿ ಒಂದೇ ಸಾಕ್ಷ್ಯ ಸಾಕ್ಷಿ ಆಗುವುದಿಲ್ಲ. ವೈವಿಧ್ಯಮಯವಾದ ಬಹುಪಠ್ಯಗಳ ಆಧಾರದಲ್ಲಿ ಸಾಕ್ಷ್ಯದ ಸತ್ಯತೆಯನ್ನು ಪರೀಕ್ಷಿಸಬೇಕು.

ಈ ಮೂರು ನೆಲೆಗಳಲ್ಲಿ ಮೌಖಿಕ ಆಕರಗಳನ್ನು ಲಿಖಿತ ಆಕರಗಳಿಗೆ ಹೋಲಿಸಿದರೆ, ಮೌಖಿಕ ಆಕರಕ್ಕೆ ನಿಶ್ಚಿತ ಆಕಾರವಿಲ್ಲ. ಅದರ ಘಟನಾ ಕಾಲಸೂಚಿಯೂ ಅನಿಶ್ಚಿತ. ಅದರ ಸಂವಹನಕ್ಕೂ ಯಾವುದೇ ಆಧಾರಗಳಿಲ್ಲ. ಈ ರೀತಿಯ ಪ್ರತಿಪಾದನೆಯಿಂದಾಗಿ ರೂಪ, ಕಾಲ, ಸಂವಹನದ ನೆಲೆಯಲ್ಲಿ ಅಕ್ಷರ ಪವಿತ್ರ, ವಾಸ್ತವಿಕ, ಭೌತಿಕ, ಅಧಿಕೃತವೆಂದಾಗುತ್ತದೆ. ಅದರ ಎದುರು ಮೌಖಿಕ ಅಪವಿತ್ರ, ಕಾಲ್ಪನಿಕ, ಮಾನಸಿಕ, ಅನಧಿಕೃತವೆಂದಾಗುತ್ತದೆ. ಲಿಖಿತವನ್ನು ಭೌತಿಕ, ವಾಸ್ತವಿಕ ಹಾಗೂ ಮೌಖಿಕವನ್ನು ಮಾನಸಿಕ, ಕಾಲ್ಪನಿಕ ಅನ್ನುವ ಈ ವರ್ಗೀಕರಣದಲ್ಲಿ ಮೌಲ್ಯಾತ್ಮಕವಾದ ಶ್ರೇಣೀಕರಣವಿದೆ. ಆ ಮೂಲಕ ಅಕ್ಷರಕ್ಕೆ ಶುದ್ಧತೆಯ, ಪಾವಿತ್ರ‍್ಯದ ಗುಣಗಳನ್ನು ಧಾರೆ ಎರೆಯಲಾಗುತ್ತದೆ. ಹಾಗೆಯೇ ಮೌಖಿಕತೆಯಲ್ಲಿ ಅನಿಶ್ಚಿತತೆಯ ದೋಷವನ್ನು ಆರೋಪಿಸಲಾಗುತ್ತಿದೆ.

ಈಗಾಗಲೇ ಗಮನಿಸಿರುವಂತೆ, ಇತಿಹಾಸ ರಚನೆಯಲ್ಲಿ ಮೌಖಿಕವನ್ನು ಕೇವಲ ಪೂರಕವಾದ ಆನುಷಂಗಿಕ ಸಾಕ್ಷ್ಯಾಧಾರವಾಗಿ ಪರಿಭಾವಿಸಲಾಗಿದೆ. ಕಾರಣ, ಮೌಖಿಕತೆ ಕಾಲ ಮತ್ತು ಸ್ಥಳದ ನಿರ್ದಿಷ್ಟತೆಯನ್ನು ಅಥವಾ ಪ್ರಾಪಂಚಿಕತೆಯನ್ನು ದಾಟಿ ಹೋಗುತ್ತದೆ. ಇದು ಆಧುನಿಕತೆಯ ಕಲ್ಪನೆ. ಆಧುನಿಕತೆ ಕಾಲದೇಶವನ್ನು ಅವುಗಳ ಲಾಗಾಯ್ತಿನ ಸಾಂದರ್ಭಿಕ, ಸಾಮುದಾಯಿಕ ನೆಲೆಗಳಿಂದ ಬೇರ್ಪಡಿಸಿ, ಅದಕ್ಕೆ ವಿಶ್ವಾತ್ಮಕ ಮೌಲ್ಯಗಳ ಏಕರೂಪವನ್ನು ನೀಡಿತು. ಕಾಲ ಮತ್ತು ಸ್ಥಳದ ಸಾಂದರ್ಭಿಕತೆಯನ್ನು ವಿವರಿಸುವ ‘ಸಂಬಂಧವಾದ’ ದ ಪರಿಕಲ್ಪನೆ ಯನ್ನು ಮೌಖಿಕತೆಯ ಗುಣಲಕ್ಷಣಗಳು ಒಪ್ಪುವುದಿಲ್ಲ. ಮೌಖಿಕ ಚರಿತ್ರೆ ಗತಿತಾರ್ಕಿಕವಾದುದು. ಯಾಕೆಂದರೆ ಇತಿಹಾಸಕಾರ ಪರಿಗಣಿಸುವ ವಸ್ತುಸ್ಥಿತಿಗಳು ಅವು. ಮೌಖಿಕ ಚರಿತ್ರೆಯನ್ನು ನಿರೂಪಿಸುವ ಮತ್ತು ಆತನ ಕಥನಗಳನ್ನು ನಂಬುವ ಸಮುದಾಯದ ಬದುಕಿನ ಸತ್ಯಗಳು. ಇತಿಹಾಸಕಾರನಿಗೆ ಸತ್ಯವೆನಿಸುವ ಭೌತಿಕವಾಗಿ ಸಂಭವಿಸಿದುದರ ವಿವರಗಳಿಗಿಂತ ಹೆಚ್ಚಾಗಿ ನಿರೂಪಕ ತನ್ನ ಮನಸ್ಸಿನಲ್ಲಿ ಅನ್ವಯಿಸಿಕೊಂಡಂತಹ ವಿವರಗಳೇ ಮೌಖಿಕ ಚರಿತ್ರೆಯ ವಸ್ತುವಾಗುತ್ತದೆ. ಮೌಖಿಕ ಚರಿತ್ರೆಯ ಕಥನ, ನಿರೂಪಕನ ಇರುವಿಕೆ ಜೊತೆಗೆ ಆ ಕಥನ ಆತನ ನಿರೂಪಿಸುವ ಆತನ ಚರಿತ್ರೆಯೂ ಆಗಿರುತ್ತದೆ. ಇಲ್ಲಿ ವಸ್ತು ಬೇರೆ ಅಲ್ಲ, ವ್ಯಕ್ತಿ ಬೇರೆ ಅಲ್ಲ. ವಸ್ತುನಿಷ್ಠ, ವ್ಯಕ್ತಿನಿಷ್ಠ ಅನ್ನುವ ವರ್ಗೀಕರಣಗಳು ಇಲ್ಲಿ ತಲೆದೋರುವುದೇ ಇಲ್ಲ. ಒಬ್ಬ ವ್ಯಕ್ತಿ ಅಥವಾ ಒಂದು ಸಮುದಾಯ ಮಾನಸಿಕವಾಗಿ ಅನ್ವಯಿಸಿಕೊಂಡಿರುವುದೇ ಮೌಖಿಕ ಚರಿತ್ರೆಯಾಗುತ್ತದೆ. ಈ ಚರಿತ್ರೆ ಜ್ಞಾಪಕ ಶಕ್ತಿಯ ಕಾರಣದಿಂದ ನೆನಪಿನಲ್ಲಿ ಉಳಿಯುತ್ತದೆ. ಹಾಗೆಯೇ ಮಾನಸಿಕ ಪಠ್ಯವಾಗಿ, ಮೌಖಿಕವಾಗಿ ಪುನರ್ ಉತ್ಪಾದಿತಗೊಳ್ಳುತ್ತಿರುತ್ತದೆ. ಈ ನೆಲೆಗಳಿಂದ ಸಾಂಪ್ರದಾಯಿಕ ಇತಿಹಾಸದ ಕಲ್ಪನೆಗಿಂತ ಮೌಖಿಕ ಚರಿತ್ರೆಯ ಕಲ್ಪನೆ ತೀರಾ ವಿರೋಧಾತ್ಮಕವಾದುದು.

ಮೌಖಿಕ ಚರಿತ್ರೆಯಲ್ಲಿ ಕಾಲ ಮತ್ತು ಸ್ಥಳದ ನಿರ್ದಿಷ್ಟತೆಯು ಏಕರೂಪದ ಸರಳ ರೇಖಾತ್ಮಕ ಪಂಚಾಂಗೀಯ ನೆಲೆಯಲ್ಲಿ ಗ್ರಹಿಸಲ್ಪಡುವುದಿಲ್ಲ. ಅದರ ಬದಲಾಗಿ, ಸಾಮಾಜಿಕ ಪ್ರಕ್ರಿಯೆಗಳು ಹಾಗೂ ಸಂಕಥನಗಳ ಮೂಲಕ ಕಾಲವನ್ನು ಅರ್ಥಮಾಡಿಕೊಳ್ಳಲಾಗುತ್ತದೆ. ಎಲ್ಲ ಕಡೆಯೂ ಒಂದೇ ಆಗಿರುವ, ವಿಕಾಸವಾದದ, ಏಕರೂಪದ ಕಾಲವನ್ನು ಮೌಖಿಕ ಚರಿತ್ರೆ ಅಲ್ಲಗಳೆಯುತ್ತದೆ.

ಸಾಂಪ್ರದಾಯಿಕ ಇತಿಹಾಸಕಾರರು ಕಾಲವನ್ನು ಸರಳರೇಖಾತ್ಮಕವಾದ ಕಾಲವೆಂದೂ ಸ್ಥಳವನ್ನು ಸ್ಥಿತಸ್ಥಳವೆಂದೂ ಗ್ರಹಿಸಿದರು. ಹೀಗಾಗಿ ಕಾಲ ಮತ್ತು ಸ್ಥಳದ ಚರಿತ್ರೆಯನ್ನು ಇತಿಹಾಸಕಾರ ಅವಧೀಕರಣಗೊಳಿಸಿದ (Periodisation) ಇತಿಹಾಸಕಾರನಂತೆ ಚರಿತ್ರೆಯನ್ನು ಅವಧೀಕರಣಗೊಳಿಸುವುದು ಮೌಖಿಕ ಚರಿತ್ರೆಯಲ್ಲಿ ತಕರಾರಿನ ವಿಷಯವಾಗುತ್ತದೆ. ಯಾಕೆಂದರೆ ಕಾಲದ ಒಂದು ಅವಧಿಯನ್ನು ಸಾಮಾಜಿಕ ಪದ್ಧತಿಯಿಂದ ಅಥವಾ ಆಚರಣೆಯಿಂದ ಬೇರ್ಪಡಿಸಿದರೆ, ಅಂತಹ ಅವಧಿಯೊಂದು ಕೇವಲ ಯಾದೃಚ್ಛಿಕ ‘ತುಣುಕು’ ಮಾತ್ರ ಆಗಿ ಉಳಿಯುತ್ತದೆ. ಹೀಗಾಗಿ ಇತಿಹಾಸಕಾರ ಭೂತವನ್ನು ಸಂಘಟಿಸುವಂತೆ ಮೌಖಿಕ ಚರಿತ್ರೆ ಭೂತಕಾಲವನ್ನು ಕಾಲದ ತುಣುಕುಗಳ ಮೂಲಕ ರೂಪಿಸುವುದಿಲ್ಲ. ಬದಲಾಗಿ ಘಟನೆಗಳಿಗೆ ಸಂಬಂಧಿಸಿದಂತೆ ಹಾಗೂ ಆ ಘಟನೆಗಳ ಮಧ್ಯೆ ಇರುವ ಕೊಂಡಿಗಳಿಗೆ ಸಂಬಂಧಿಸಿದಂತೆ, ಭೂತಕಾಲವನ್ನು ರೂಪಿಸಬೇಕಾಗುತ್ತದೆ. ಆಗ ಬೇರೆ ಬೇರೆ ಘಟನೆಗಳು ಅವುಗಳದೇ ಆದ ಅವಧೀಕರಣವನ್ನು ಹೊಂದಿರಬೇಕಾಗುತ್ತದೆ. ಎಲ್ಲ ಘಟನೆಗಳಿಗೆ ಅನ್ವಯಿಸುವಂತಹ ಒಂದು ನಿರ್ದಿಷ್ಟ ಅವಧೀಕರಣವಾಗಲೀ ಒಂದು ನಿರ್ದಿಷ್ಟ ಕಾಲವಾಗಲೀ ಇಲ್ಲಿ ಇರಲು ಸಾಧ್ಯವಿಲ್ಲ.

ಇತಿಹಾಸ ರಚನಾ ವಿಧಾನದಲ್ಲಿ ಬೇರೆ ಬೇರೆ ಕಾಲ ಮತ್ತು ಸ್ಥಳದ ನಿರ್ದಿಷ್ಟತೆಯನ್ನು ಹೊಂದಿದ ಭಿನ್ನ ಭಿನ್ನ ಚರಿತ್ರೆಗಳು ಇರುತ್ತದೆ. ಘಟನೆಗಳ ಚರಿತ್ರೆ, ರಾಜಕೀಯ ಸಂಸ್ಥೆಗಳ ಚರಿತ್ರೆ, ಮನುಷ್ಯ-ಪರಿಸರ ಸಂಬಂಧ ಈ ಮುಂತಾದ ವಿಷಯಗಳ ಚರಿತ್ರೆ ಹೀಗೆ ಇವುಗಳನ್ನು ಪ್ರತ್ಯೇಕಗೊಳಿಸಿ ನೋಡುವ ಇತಿಹಾಸ ರಚನಾ ವಿಧಾನವಿದೆ. ಮೌಖಿಕ ಚರಿತ್ರೆಯಲ್ಲಿ ಪ್ರತ್ಯೇಕ ಘಟನೆಗಳ ಚರಿತ್ರೆ ಅನ್ನುವುದು ಇರುವುದಿಲ್ಲ. ಮೌಖಿಕ ಚರಿತ್ರೆಯಲ್ಲಿ ಈ ರೀತಿಯ ಸಾಮಾಜಿಕ ಕಾಲಗಳ ಬಹುತ್ವದ ಬಗೆಗಿನ ಅರಿವು ಬಹಳ ಮುಖ್ಯವಾಗುತ್ತದೆ. ಈ ಅರ್ಥದಲ್ಲಿ ಸಾಂಪ್ರದಾಯಿಕ ಇತಿಹಾಸ ಭೂತ ವರ್ತಮಾನದ ನಡುವಿನ ಸಂವಾದ ಎಂದು ಪರಿಗಣಿಸಲ್ಪಟ್ಟರೆ, ಮೌಖಿಕ ಚರಿತ್ರೆಯು ವರ್ತಮಾನ ಮತ್ತು ಭೂತದ ಬಗೆಗಿನ ವರ್ತಮಾನದ (ಘಟನೆಗಳು) ಅಖಂಡತೆ ಇವುಗಳ ನಡುವಿನ ‘ಸಂವಾದಾತ್ಮಕ ಕಥನ’ ವಾಗುತ್ತದೆ. ಮೌಖಿಕವಾಗಿ ಅಭಿವ್ಯಕ್ತಗೊಳ್ಳು ಎಲ್ಲ ಕಥನಗಳಲ್ಲಿ ಈ ಅಂಶವನ್ನು ಗುರುತಿಸಬಹುದು. ವರ್ತಮಾನದಲ್ಲಿ ಕಥನವಾಗುವ ಮೌಖಿಕ ಕಥನಗಳು ವರ್ತಮಾನ ಮತ್ತು ಭೂತದ ಅಖಂಡತೆಯನ್ನು ಸಾಧಿಸುತ್ತವೆ. ಹೀಗಾಗಿ ಮೌಖಿಕ ಕಥನಗಳು ವಾಸ್ತವಿಕವೂ ಹೌದು ಚಾರಿತ್ರಿಕವೂ ಹೌದು. ಇತಿಹಾಸದಂತೆ ಜಾನಪದ ಅಧ್ಯಯನವೂ ವ್ಯಕ್ತತೆಯಲ್ಲಿ ಅಥವಾ ಪಠ್ಯವಾಗಿ ಪ್ರತ್ಯೇಕವಾಗಿ ವರ್ಗೀಕರಿಸಿ ಗುರುತಿಸಿಕೊಳ್ಳುವ ಜನಪದ ಬಗೆಗಳು ವರ್ತಮಾನ ಮತ್ತು ಭೂತದ ಚರಿತ್ರೆಯನ್ನು ಅಖಂಡವಾಗಿ ನಿರೂಪಿಸುತ್ತವೆ. ಜನಪದ ಕಾಲ್ಪನಿಕ ಕತೆಯ ಲೋಕ ವಾಸ್ತವ ಜಗತ್ತನ್ನೇ ಪ್ರತಿನಿಧಿಸುತ್ತದೆ. ಇದು ಇರುವಿಕೆಗೆ ಸಂಬಂಧಿಸಿದ ಕಥನ. ಹೀಗಾಗಿ ಮೌಖಿಕ ಚರಿತ್ರೆ ಮೂಲತಃ ಭೂತಕಾಲದ ಕುರಿತಾದ ವರ್ತಮಾನ ಅಖಂಡತೆಯ ಸಂವಾದಾತ್ಮಕ ಕಥನ. ಇದು ಸಾಂಪ್ರದಾಯಿಕ ಇತಿಹಾಸಕಾರನ ಕಾಳ ಮತ್ತು ಸ್ಥಳದ ನಿರ್ದಿಷ್ಟತೆಯನ್ನು ಉಲ್ಲಂಘಿಸುತ್ತದೆ. ಕಿವಿಯಿಂದ ಬಾಯಿಗೆ ಹರಡಿ, ಬಾಯಿಯಿಂದ ಕಿವಿಗೆ ಹರಡುವ, ಜ್ಞಾಪಕ ಶಕ್ತಿಯಿಂದ ನೆನಪಿನಲ್ಲಿ ಉಳಿಯುವ ಮಾನಸಿಕ ಪಠ್ಯ, ಕಥನದ ಮೂಲಕ ತನ್ನ ಚರಿತ್ರೆಯನ್ನು ಕಟ್ಟುವ ಕಟ್ಟುಕತೆ. ಹೀಗಾಗಿ ಚರಿತ್ರೆ ಅನ್ನುವ ಸಂಗತಿ ಇಲ್ಲ. ಕಥನದ ಮೂಲಕ ಚರಿತ್ರೆ ಉತ್ಪತ್ತಿ ಮತ್ತು ಮರು ಉತ್ಪತ್ತಿಯಾಗುತ್ತಿರುತ್ತದೆ. ಹೀಗಾಗಿ ಚರಿತ್ರೆ ಅನ್ನುವ ನಿರ್ಮಿತಿಯು ಅದು ಮಿತಿ ಇರುವ ನಿರ್ಮಿತಿ.

ಜಾನಪದ ಅಧ್ಯಯನದಲ್ಲಿ ಮೌಖಿಕ ಚರಿತ್ರೆಯ ಈ ತಿಳುವಳಿಕೆ ಇಲ್ಲದಿದ್ದರೆ ಸಾಂಪ್ರದಾಯಿಕ ಇತಿಹಾಸ ರಚನೆಯ ಗ್ರಹಿಕೆಗಳೇ ಮೌಖಿಕ ಚರಿತ್ರೆಯ ನಿರ್ಮಿತಿಯಲ್ಲಿ ಮುಂದುವರಿಯುತ್ತದೆ. ಅಕ್ಷರಕ್ಕೆ ಬದಲಿಯಾಗಿ ಮೌಖಿಕವನ್ನು ಆಕರವಾಗಿ ಮಾತ್ರ ಬಳಸಿಕೊಂಡು, ಕೇಂದ್ರದ ಬದಲು ಪರಧಿಯಿಂದ ಪ್ರಭುತ್ವದ ಇತಿಹಾಸವನ್ನು ಪುನರ್ ರಚಿಸಿಕೊಳ್ಳುತ್ತೇವೆ. ಇದರ ಬದಲು ವ್ಯವಸ್ಥೆಯೊಂದರಲ್ಲಿ ಒಪ್ಪುವಂತೆ ಒತ್ತಾಯಿಸುವ, ಮನವೊಲಿಸುವ, ನ್ಯಾಯಸಮ್ಮತಗೊಳಿಸುವ ಹಲವು ಬಗೆಯ ಮತವ್ಯೂಹಗಳ ಕೂಟವನ್ನು ಅಭ್ಯಾಸ ಮಾಡಿದಾಗಲೇ, ಮೌಖಿಕ ಚರಿತ್ರೆ ಕೇವಲ ಸಾಂಪ್ರದಾಯಿಕ ಇತಿಹಾಸಕ್ಕೆ ಬದಲಿ ಮಾತ್ರ ಆಗದೆಯೇ ಅದೊಂದು ಪ್ರತ್ಯೇಕ ಜ್ಞಾನವಾಗಿಯೂ ಬೆಳೆಯಬಹುದು.

ಪರಮಾರ್ಶನ ಗ್ರಂಥಗಳು

೧. ನಿಕೋಲಸ್ ಡರ್ಕ್ಸ್‌, ೧೯೮೭. ದಿ ಹಾಲೋ ಕ್ರೌನ್‌, ಎತ್ನೋ ಹಿಸ್ಟರ ಆಫ್ ಆನ್ ಇಂಡಿಯನ್ ಕಿಂಗ್‌ಡಂ.

೨. ರಿಚರ್ಡ್‌ಎಂ. ಡಾರ್ಸನ್, ೧೯೭೭. ಫೋಕ್‌ ಲೋರ್‌ ಆಂಡ್ ಫೋಕ್‌ ಲೈಫ್, ನ್ಯೂಯಾರ್ಕ್‌: ಇಂಡಿಯಾನ ಯೂನಿವರ್ಸಿಟಿ ಪ್ರೆಸ್.

೩. ಲೋರಿಹಾಂಕೊ, ೧೯೯೮. ಟೆಕ್ಸಚುವಲೈಸೇಷನ್ ಆಫ್ ಸಿರಿ ಎಪಿಕ್, ಹೆಲ್ಸಿಂಕ್: ಎಫ್‌.ಎಫ್.ಕಮ್ಮೆನಿಕಾರನ್.

೪. ವಾಲ್ಟರ್‌ ಜೆ.ಅಂಗ್‌, ೧೯೯೦. ಕ್ವಾಲಿಟಿ ಆಂಡ್ ಲಿಟರಸಿ, ಲಂಡನ್: ರೂಟ್ಲೇಜ್.

* * *