ಸಮಾಜಶಾಸ್ತ್ರೀಯ ಸೈದ್ಧಾಂತಿಕ ಮತ್ತು ತಾತ್ವಿಕ ಚರ್ಚೆಯಲ್ಲಿ ಇಂದು ಒಂದು ರೀತಿಯ ನಿರ್ವಾತ ಸೃಷ್ಟಿಯಾಗಿದೆ ಎಂಬ ವಾತಾವರಣವಿದೆ. ಐತಿಹಾಸಿಕವಾಗಿ ಮಾನವನ ಸಾಮಾಜಿಕ ತತ್ವಾನ್ಷೇಷಣೆಯಲ್ಲಿ ಹಾಗೂ ಸೈದ್ಧಾಂತಿಕ ಚಿಂತನೆಯಲ್ಲಿ ಇದು ಹೊಸದೇನೂ ಅಲ್ಲವಾದರೂ ಇಂದು ಕಾಣುತ್ತಿರುವ ಇಂತಹ ನಿರ್ವಾತದ ಸಮಸ್ಯೆಯಲ್ಲಿ ಹಿಂದಿಗಿಂತ ಕೆಲವು ಬೇರೆಯವೇ ಆದ ಆಯಾಮಗಳು ಗೋಚರಿಸುತ್ತವೆ. ಅಂತೆಯೇ ವ್ಯಕ್ತಿ ಮತ್ತು ಸಮಾಜಗಳ ನಡುವಿನ ಸಂಬಂಧವನ್ನು ಅರ್ಥೈಸುವ ಹಾಗೂ ಪುನರ್ ನಿರ್ಮಿಸುವ ಬೌದ್ಧಿಕ ಕಾರ್ಯದಲ್ಲಿ ಇತ್ತೀಚಿನ ದಶಕಗಳಲ್ಲಿ ನಡೆದ ಕೆಲವು ಆರ್ಥಿಕ, ಸಾಂಸ್ಕೃತಿಕ ಹಾಗೂ ಸಾಂಸ್ಥಿಕ ಬದಲಾವಣೆಗಳು ಹೊಸ ದಿಕ್ಕನ್ನೇ ಸೂಚಿಸಿವೆ. ಪ್ರತಿನಿಮಿಷಕ್ಕೂ ಹೆಚ್ಚಾಗುತ್ತಿರುವ-ಬದಲಾಗುತ್ತಿರುವ ಮಾಹಿತಿಗಳು ಬಲವಾಗಿ ಬೇರೂರಿದ ನಿನ್ನೆಯ ಮೂಲಭೂತ ನಂಬಿಕೆಗಳನ್ನು ಇಂದು ಸಂಪೂರ್ಣ ಬುಡಮೇಲು ಮಾಡುವ ಶಕ್ತಿ ಹೊಂದಿವೆ. ಮಾಹಿತಿಯ ಯುಗವಾದ ಇಂದು ಮೊಟ್ಟಮೊದಲ ಬಾರಿಗೆ ಮಾನವನು ತನ್ನ ಸಮಗ್ರ ತಳಿಯ ಅಭ್ಯುದಯದ ಅನ್ವೇಷಣೆಯಲ್ಲಿ, ಸಮಗ್ರ ಪರಿಸರದ ಅಭ್ಯಾಸದಲ್ಲಿ ಸಮಗ್ರ ಭೌತಿಕ ಬದಲಾವಣೆಯ ಚಿಂತನೆಯಲ್ಲಿ ತೊಡಗಿದ್ದಾನೆ. ಜಗತ್ತಿನ ಯಾವುದೋ ಒಂದೆಡೆ ನಡೆದ ಘಟನೆ, ನಡೆಸಿದ ಪ್ರಯೋಗ ಅಥವಾ ದೊರಕಿದ ಮಾಹತಿ ಯಾವುದೋ ಇನ್ನೊಂದೆಡೆಯಲ್ಲಿರುವ ವ್ಯಕ್ತಿಯ ಜೀವನವಿಧಾನವನ್ನೇ ಬದಲಿಸಬಹುದಾಗಿದೆ. ಜಾಗತಿಕ ಮಾರುಕಟ್ಟೆ ವ್ಯವಸ್ಥೆ, ಅಂತಾರಾಷ್ಟ್ರೀಯ ರಾಜಕೀಯ ತತ್ವಾದರ್ಶಗಳು, ಪೃಥ್ವಿಯೆಲ್ಲೆಡೆ ಮಾನವನ ಹಕ್ಕು-ಬಾಧ್ಯತೆಗಳ ಕುರಿತಾದ ಎಚ್ಚರ, ಕೋಮು, ಕುಲ, ಜನಾಂಗ, ಜಾತಿ, ಲಿಂಗಗಳ ನಡುವಿನ ತಾರತಮ್ಯಗಳ ವಿರೋಧಿ ಕೂಗು ಇವೆಲ್ಲವೂ ವ್ಯಕ್ತಿ ಹಾಗೂ ಸಮಾಜದ ಸಂಬಂಧಕ್ಕೆ ಹೊಸ ತಿರುವುಗಳನ್ನು ಹೊಸ ವಿಶ್ಲೇಷಣೆಯ ಸಾಧ್ಯತೆಗಳನ್ನು ನೀಡಿವೆ. ಅನೇಕ ಮೂಲಭೂತ ಪ್ರಶ್ನೆಗಳು ಈ ಸಂದರ್ಭದಲ್ಲಿ ಕೇಳಲ್ಪಡುತ್ತಿವೆ; ಅರ್ಧದೂರ ಕ್ರಮಿಸಿ ಮುಂದಿನ ದಾರಿಗಾಗಿ ಹುಡುಕುತ್ತಿರುವ ಪ್ರಯತ್ನಗಳು ನಮ್ಮೆದುರು ಇವೆ. ಇಂತಹ ಪ್ರಶ್ನೆಗಳಿಗೆ ವಿಶ್ಲೇಷನೆಯ ಮಂಥನಕ್ಕೆ ಉತ್ತರಗಳು ಇನ್ನೂ ದೊರಕಬೇಕಾಗಿವೆ. ಆದ್ದರಿಂದಲೇ ಈ ಬೌದ್ಧಿಕ ಚಿಂತನೆಯ ಕ್ಷೇತ್ರದಲ್ಲಿ ನಿರ್ವಾತ ಪ್ರದೇಶವಿದೆ.

ಬದಲಾವಣೆಯೇ ಇಂದಿನ ಹೊಸ ಸಮಾಜದ ಕಲ್ಪನೆಯ ಮೂಲಭೂತ ಅಂಶ. ಹಾಗೆ ನೋಡಿದರೆ ಇಂದು ಬದಲಾವಣೆಯೊಂದೇ ನಿಶ್ಚಲವಾದುದು. ಆದ್ದರಿಂದ ಇಪ್ಪತ್ತೊಂದನೇ ಶತಮಾನದತ್ತ ಮಾನವನು ದಾಪುಗಾಲು ಹಾಕುತ್ತಿದ್ದ ಹಾಗೇ ಸಾಮಾಜಿಕ ಜೀವನದ ಅನೇಕ ಅಂಶಗಳು ಅರ್ಥಗಳು ಬದಲಾಗತೊಡಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಉದಾಹರಣೆಗೆ ಬದಲಾಗುತ್ತಿರುವ ಆಧುನಿಕ ಭಾರತದ ಸಾಮಾಜಿಕ ಸಂದರ್ಭದಲ್ಲಿ ಶಕ್ತಿ, ಅಧಿಕಾರ, ದಬ್ಬಾಳಿಕೆ ಮುಂತಾದ ಪರಿಕಲ್ಪನೆಗಳು ಹಿಂದಿಗಿಂತ ಬೇರೆಯವೇ ಆದ ಅರ್ಥ ಪಡೆಯಲು ಪ್ರಾರಂಭಿಸಿವೆ. ಅಂತೆಯೇ ಸಮುದಾಯಗಳಲ್ಲಿ ವ್ಯಕ್ತಿಗಳ ನಡುವಿನ ಲೈಂಗಿಕ ಸಂಬಂಧಗಳಿಗೆ ಹೊಸರೀತಿಯ ತಾತ್ವಿಕ ವಿವರಣೆಗಳು ಲಭ್ಯವಿದೆ. ಸಮಾಜದಲ್ಲಿ ತನ್ನನ್ನು ಗುರುತಿಸಿಕೊಳ್ಳುವ ಮತ್ತು ‘ತನ್ನತನ’ವನ್ನು ವ್ಯಾಖ್ಯಾನಿಸಿಕೊಳ್ಳುವ ವಿಷಯದಲ್ಲಿಯೂ ವ್ಯಕ್ತಿಗೆ ಮೊದಲಿಗಿಂತ ಭಿನ್ನವಾದ ದೃಷ್ಟಿಕೋನವೂ ಸಾಧ್ಯವಾಗಿದೆ. ಇವೆಲ್ಲವೂ ಹೊಸ ಜ್ಞಾನದ ಸೃಷ್ಟಿ ಹಾಗೂ ಪ್ರಸರಣೆಯ ವಿಚಾರದಲ್ಲಿ ಹೊಸದಾರಿಗಳನ್ನು ಹುಡುಕುವ ಪ್ರಯತ್ನದಲ್ಲಿರುವ ಗುರುತುಗಳು. ಇಂಥ ಹುಡುಕಾಟವನ್ನು ವಿಮರ್ಶಾತ್ಮಕವಾಗಿ ಹಾಗೂ ಆನ್ವಯಿಕವಾಗಿ ಯಾರೂ ಹಗುರವಾಗಿ ಗಣಿಸುವುದಿಲ್ಲ. ಇಂದಿನ ಹೊಸ ಯುಗದಲ್ಲಿ ‘ವೇಗ’ವೇ ಒಂದು ಸಾಮಾಜಿಕ ಮೌಲ್ಯವಾಗಿ, ಬದಲಾವಣೆಯೇ ಒಂದು ಸಾಂಸ್ಕೃತಿಕ ನಿಯಮವಾಗಿ, ಸ್ಥಳ ಸಮಯಗಳ ಅಳತೆಯೇ ಮಾಯವಾಗಿ, ಹಿಂದೆಂದಿಗಿಂತ ಹೊಸ ರೀತಿಯ ಅನುಭವಗಳನ್ನು ನಾವು ಪಡೆಯುತ್ತಿದ್ದೇವೆ. ಮಾನವಕುಲದ ನಾಳೆಯು ಅದ್ಭುತವಾಗಿರುವದೆಂಬ ವಿಜ್ಞಾನದ ಆಶಾವಾದದ ಜೊತೆಗೆ ಮಾನವನ ವಿನಾಶಕುಲವು ಹತ್ತಿರವಿದೆಯೆಂಬ ಪರಿಸರವಾದಿಗಳ ಎಚ್ಚರಿಕೆಯೂ ಸೇರಿ ಸಾಮಾಜಿಕ ಚಿಂತನೆಯ ಅಗತ್ಯವನ್ನು, ಆಳವನ್ನು ಗಣನೀಯವಾಗಿ ಹೆಚ್ಚಿಸಿವೆ. ಈ ಎಲ್ಲ ಸಂಕೀರ್ಣ ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು, ಅಗತ್ಯವಿದ್ದಾಗ ಅಭ್ಯಾಸ ಮಾಡಲು, ಕೆಲವು ಪ್ರಮುಖ ಸೈದ್ಧಾಂತಿಕ ದೃಷ್ಟಿಕೋನಗಳು ಲಭ್ಯವಿವೆ. ಇಂಥ ಕೆಲವು ಪರಿಕಲ್ಪನೆಗಳನ್ನು ಮತ್ತು ಸೈದ್ಧಾಂತಿಕ ದೃಷ್ಟಿಕೋನಗಳನ್ನು ಸಾಧ್ಯವಾದಷ್ಟು ಸರಳವಾಗಿ ಚರ್ಚಿಸಲು ಈ ಲೇಖನದಲ್ಲಿ ಯತ್ನಿಸಲಾಗಿದೆ. ಮೊದಲಿಗೆ ಇವುಗಳನ್ನು ಬಿಡಿಬಿಡಿಯಾಗಿ ಚರ್ಚಿಸಿ ಲೇಖನದ ಕೊನೆಯಲ್ಲಿ ಎಲ್ಲವನ್ನೂ ಇಡಿಯಾಗಿ ನೋಡುವ ಯತ್ನವನ್ನು ಮಾಡಲಾಗಿದೆ.

ಜ್ಞಾನದ ಪ್ರಸರಣ

ನಾವಿರುವ ಜಗತ್ತಿನಲ್ಲಿ ‘ಸಂಕೇತ’ಗಳು, ಚಿಹ್ನೆಗಳು ಹಾಗೂ ಗುರುತುಗಳು ಬಹು ಪ್ರಮುಖವಾದ ಪಾತ್ರ ನಿರ್ವಹಿಸುತ್ತಿವೆ. ಇಂದು ಜಗತ್ತಿನೆಲ್ಲೆಡೆ ವೈವಿಧ್ಯಮಯ ಸಂಕೇತಗಳ ಕಾರ್ಯಾತ್ಮಕ ಬಳಕೆ, ಹೊಸ ಸಂಕೇತಗಳ ಉತ್ಪಾದನೆ ಹಾಗು ವಿನಿಮಯಗಳು ತುಂಬ ಮಹತ್ವದ್ದೆನಿಸಿವೆ. ಇಂತಹ ಸಂಕೇತಗಳು ಶಾಬ್ದಿಕ-ವಾಚಕ ಅಭಿವ್ಯಕ್ತಿಗಳಾಗಿರಬಹುದು, ಆಂಗಿಕ ಹಾವಭಾವಗಳಿರಬಹುದು, ಸಾಮಾಜಿಕ ಕ್ರಿಯೆಗಳು – ಕಲಾತ್ಮಕಗಳು ಕೂಡ ಆಗಿರಲು ಸಾಧ್ಯ. ಇಂಥ ಅನೇಕ ರೂಪಗಳಲ್ಲಿ ಇವು ಸಾಮಾಜಿಕ ಜೀವನದ ಅನ್ಯೋನ್ಯ ಅಂಶಗಳಾಗಿ ಕೆಲಸ ಮಾಡುವುದನ್ನು ನಾವು ಗಮನಿಸಬೇಕು. ಆರ್ಥಿಕ-ಸಾಮಾಜಿಕ ಅಂಶಗಳ ತಳಹದಿಯ ಮೇಲೆ ಅಭಿವೃದ್ಧಿಯಾದ ಬಂಡವಾಳಶಾಹಿ ಅರ್ಥವ್ಯವಸ್ಥೆ. ಅದಕ್ಕೆ ಪೂರಕವಾಗಿ ಹೊರಹೊಮ್ಮಿದ ವಿಜ್ಞಾನ-ತಂತ್ರಜ್ಞಾನ ಮತ್ತು ಹೊಸ ಮಾಹಿತಿಯ ವ್ಯವಸ್ಥೆಗಳು ಗುಣಾತ್ಮಕವಾಗಿ ಹೊಸ ಅರ್ಥರಚನೆಯ ಜಗತ್ತನ್ನೇ ಸೃಷ್ಟಿಸಿವೆ. ವಿದ್ಯುನ್ಮಾನ ಮತ್ತು ಉಳಿದ ಹೊಸ ಸಮೂಹ ಮಾಧ್ಯಮ ವ್ಯವಸ್ಥೆಗಳು ಇಂತಹ ಅರ್ಥರಚನೆಯ ಸ್ವರೂಪವನ್ನು ಇಡಿಯಾಗಿ ಒಪ್ಪಿ, ತುಸು ಕೂಡ ವಿಮರ್ಶಿಸದೆ ಸಮಾಜಕ್ಕೆ ಕೊಡತ್ತಿವೆ. ಇದರಿಂದಾಗಿ ವ್ಯಕ್ತಿಯು ಹಲವೊಮ್ಮೆ ವ್ಯವಸ್ಥೆಯ ಕೈಗೊಂಬೆಯಾಗಿ, ತನ್ನನ್ನು ತಾನೇ ದೃಢಪಡಿಸಿಕೊಳ್ಳಲಾರದೆ ನಿಸ್ಸಹಾಯಕನಾಗಿರುವುದೂ ಗೊತ್ತಿರದ ವಿಷಯವೇನಲ್ಲ. ಜಾಗತೀಕರಣಗೊಂಡಿರುವ ಹೊಸ ಮಾಹಿತಿ ವ್ಯವಸ್ಥೆಯು ವ್ಯಕ್ತಿಗಳ ಅನುಭವಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತ ಹೋಗುವುದರ ಜೊತೆಗೆ, ಇನ್ನೊಂದು ಆಯಾಮದಲ್ಲಿ ವ್ಯಕ್ತಿಯು ತನ್ನ ಒಳಗಡೆಯೇ ಹೆಚ್ಚು-ಹೆಚ್ಚು ಸಂಕೀರ್ಣವಾಗಿ ಬೆಳೆಯುವ ಪ್ರಕ್ರಿಯೆಯನ್ನೂ ಪ್ರಚೋದಿಸುವುದೆಂದು ಹೇಳಬಹುದು. ಈ ದೃಷ್ಟಿಯಿಂದ ಗಮನಿಸಿದಾಗ ಇಂದಿನ ಜ್ಞಾನ ಪ್ರಸರಣ ಪ್ರಕ್ರಿಯೆಯು ಮಾನವನ ಇತಿಹಾಸದಲ್ಲಿ ಹಿಂದೆಂದೂ ಕಾಣದ ಹೊಸ ವಿಚಾರಗಳ ಅಲೆಗಳನ್ನೇ ಸೃಷ್ಟಿಸಿದೆ; ವ್ಯಕ್ತಿಯು ತನ್ನ ಹಾಗೂ ಸಮುದಾಯದ ಕುರಿತಾಗಿ ಸಾವಿರಾರು ವರ್ಷಗಳಿಂದ ಕೇಳುತ್ತ ಬಂದಿರುವ ಮೂಲಭೂತ ಪ್ರಶ್ನೆಗಳಿಗೆ ಹೊಸ ಅರ್ಥಗಳನ್ನು ನೀಡುವ ಯತ್ನ ಮಾಡುತ್ತಿವೆ.

ಇಂದು ನಾವು ‘ಔದ್ಯಮಿಕೋತ್ತರ ಸಮಾಜ’ವನ್ನು ಪ್ರವೇಶಿಸುತ್ತಿದ್ದೇವೆ. ಔದ್ಯಮಿಕ ಪೂರ್ವ ಮತ್ತು ಔದ್ಯಮಿಕ (ಕೈಗಾರಿಕಾ) ಸಮಾಜಗಳಿಗಿಂತ ಇಂದಿನ ಹೊಸ ಕಲಿಕೆಯ ಯುಗದಲ್ಲಿ ಮಾಹಿತಿಯ ಪಾತ್ರ ಬಹು ದೊಡ್ಡದು. ಈ ಲೇಖನದಲ್ಲಿ ಮುಂದೆ ಈ ಬಗ್ಗೆ ಚರ್ಚಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಒಂದು ಮಹತ್ವದ ಅಂಶವೆಂದರೆ ಇಂದು ಕಾಣುವ ಮಾಹಿತಿ ವ್ಯವಸ್ಥೆಯಲ್ಲಿನ ಬದಲಾವಣೆಗಳು ಕೇವಲ ಒಮ್ಮುಖ ವಿಸ್ತರಣೆಯಾಗಿರದೆ ವೈವಿಧ್ಯಪೂರ್ಣ ಗುಣಾತ್ಮಕ ವರ್ಗಾವಣೆಯಾಗಿವೆ. ಆದ್ದರಿಂದಲೇ ಇಪ್ಪತ್ತನೇ ಶತಮಾನದ ಅಂಚಿನಲ್ಲಿಂದು ನಾವು ಹೊಸ ಕಲಿಕೆಯ ದಾರಿಯಲ್ಲಿ ರೂಪುಗೊಂಡ ಕೆಲವು ಮಹತ್ವದ ಪರಿಕಲ್ಪನೆಗಳನ್ನು ಮತ್ತು ತತ್ವಾದರ್ಶನಗಳನ್ನು ಚರ್ಚೆ ಮಾಡದೆ ಮುಂದುವರಿಯುವುದು ಸೂಕ್ತವಲ್ಲ.

ವಿವಿಧ ಚಿಂತಕರು ಇಂಥ ತತ್ವಾದರ್ಶಗಳನ್ನು ಬೇರೆಬೇರೆಯಾದ ದೃಷ್ಟಿಕೋನಗಳಿಂದ ಚರ್ಚಿಸಿದ್ದು ಹೊಸ ಕಲಿಕೆಯ ಸಿದ್ಧಾಂತವು ಸಂಕೀರ್ಣವಾಗಿ ರೂಪುಗೊಳ್ಳಲು ಮುಖ್ಯ ಕಾರಣವೆಂದು ನನಗನಿಸುತ್ತಿದೆ. ಉದಾಹರಣೆಗೆ: ಜಾರ್ಜ್‌ಲಿಢ್‌ಧಿಮ್ ಚರ್ಚಿಸಿದ ‘ಬೂರ್ಜ್ವಾ ನಂತರದ ಸಮಾಜ’, ರಾಲ್ಧ್ ಡೆಹರಂಢಾರ್ಫ್‌ನ ‘ಬಂಡವಾಳ ಶಾಹಿಯೋತ್ತರ ಸಮಾಜ,’ ಎಟ್ಜಿಯಾನಿಯ ‘ಆಧುನಿಕೋತ್ತರ ಸಮಾಜ’, ಬೌಲ್ಡಿಂಗ್‌ನ ‘ನಾಗರಿಕೋತ್ತರ ಸಮಾಜ’ ಕಾಹೆನ್‌ನ ‘ಆರ್ಥಿಕೋತ್ತರ ಸಮಾಜ’, ಎಹಲ್‌ಸ್ಟ್ರನ್ ಪ್ರೊಟೆಸ್ಟಂಟ್ ನಂತರದ ಸಮಾಜ, ಪ್ಯೂರರ್‌ನ ತತ್ವಾದರ್ಶೋತ್ತರ ಸಮಾಜ, ಸೈಡನ್‌ಬರ್ಗ್‌ನ ಇತಿಹಾಸೋತ್ತರ ಸಮಾಜ, ಡೇನಿಯಲ್ ಬಿಲ್‌ನ ಕೈಗಾರಿಕೋತ್ತರ ಸಮಾಜ ಮುಂತಾದವ ಇಂತಹ ಸೈದ್ಧಾಂತಿಕ ವೈವಿಧ್ಯತೆಯ ಕೆಲವು ಪ್ರಮುಖ ಉದಾಹರಣೆಗಳು.

ಹೊಸ ಕಲಿಕೆಯ ಎಲ್ಲ ಹಂತಗಳನ್ನೂ ಹಾಗೂ ಎಲ್ಲ ಪ್ರಮುಖ ಸಿದ್ಧಾಂತಗಳನ್ನು ಸ್ಥೂಲವಾಗಿ ಚರ್ಚಿಸಲಾಗಿದೆ. ಆದ್ದರಿಂದ ಐತಿಹಾಸಿಕವಾಗಿ ಮಹತ್ವದ್ದೆನಿಸಿದ, ಮುಂದಿನ ಚಿಂತನೆಗಳ ಮೇಲೆ ಗಣನೀಯ ಪ್ರಭಾವ ಬೀರಿದ ಕೆಲವು ಮಹತ್ವದ ಸಿದ್ಧಾಂತಗಳನ್ನು ಇಲ್ಲಿ ಚರ್ಚಿಸಲಾಗಿದೆ.

ರಚನಾತ್ಮಕ – ರಚನೋತ್ತರವಾದ

‘ರಚನಾತ್ಮಕವಾದ (structuralism) ಅಥವಾ ರಚನಾತ್ಮಕ ಸಿದ್ಧಾಂತ’ವು ಬಿಡಿ ಭಾಗಗಳ ವ್ಯವಸ್ಥಿತವಾದ ಜೋಡಣೆಯ ವಿಷಯ ಕುರಿತು ಹೆಚ್ಚಿನ ಒತ್ತು ನೀಡಿದೆ. ಘಟಕಗಳ ಅಥವಾ ಬಿಡಿಭಾಗಗಳ ನಡುವಿನ ಸಂಬಂಧಗಳು ಇವುಗಳಿಂದ ರೂಪುಗೊಂಡ ಇಡಿಯಾದ ರಚನೆಗೆ ಅಥವಾ ವ್ಯವಸ್ಥೆಗೆ ಅಖಂಡತೆಯ ರೂಪ ನೀಡುವುದರ ಜೊತೆಗೇ ಈ ‘ಇಡಿಯಾದ ರೂಪವು ಬಿಡಿಭಾಗಗಳ ಒಟ್ಟೂ ಸೇರಿಸುವಿಕೆಗಿಂತ ದೊಡ್ಡದು’ ಎಂಬ ಅಂಶವನ್ನು ನಿರೂಪಿಸುತ್ತವೆ. ಇಡಿಯಾದ ರಚನೆಯ ಬಿಡಿ-ಬಿಡಿ ಘಟಕಗಳ ಜೊತೆಗೆ ಧನಾತ್ಮಕ ಸಂಬಂಧ ಹಾಗೂ ತಾರ್ಕಿಕವಾದ ಆದ್ಯತೆ ಹೊಂದಿರುವುದು ಸಹಜ. ಹೀಗೆ ಬಿಡಿಭಾಗಗಳ ನಿಯಮಿತ, ನಿರಂತರ ಮತ್ತು ವ್ಯವಸ್ಥಿತವಾದ ಸಂಬಂಧಗಳ ಜೋಡಣೆಯೇ ಅಮೂರ್ತವಾದ ರಚನೆಗೆ ತಾರ್ಕಿಕವಾದ ರೂಪ ಕೊಡುತ್ತವೆ. ಇದು ಸಮಾಜ ವಿಜ್ಞಾನದಲ್ಲಿ ರಚನಾತ್ಮಕವಾದದ ಪ್ರಾಥಮಿಕ ಅಂಶ.

‘ರಚನೆ’ ಎಂಬ ಪರಿಕಲ್ಪನೆಯು ಸಮಾಜವಿಜ್ಞಾನದಲ್ಲಿ ಭಿನ್ನ ರೂಪಗಳನ್ನೂ, ವಿವಿಧ ಆಯಾಮಗಳನ್ನು ಹೊಂದಿದೆ. ಕೆಲವೊಮ್ಮೆ ‘ರಚನೆ’ಯು ಸ್ಥಾನಿಕವಾಗಿ ಗುರುತಿಸಲ್ಪಟ್ಟರೆ, ಮತ್ತೆ ಕೆಲವೊಮ್ಮೆ ಇದು ಹೆಚ್ಚಿನ ವೈಶಾಲ್ಯ ಪಡೆಯುತ್ತದೆ ಎಂದರೆ ಸಮಾಜದ ವಿಭಿನ್ನ ಅಂಶಗಳಾದ ಜಾತಿ, ವರ್ಗ, ಸಾಮಾಜಿಕ ಸಂಚಲನೆ, ಒಳಬಾಂಧವ್ಯ ಹಾಗೂ ಸಾಮಾಜಿಕ ಸ್ತರವಿನ್ಯಾಸದ ಉಳಿದ ಅಂಗಗಳು ರಚನೆಯ ವಿಸ್ತಾರವನ್ನು ಹೆಚ್ಚಿಸುತ್ತವೆ. ಸಾಮಾಜಿಕ-ಸಾಂಸ್ಕೃತಿಕ ಅಂತರ ಹಾಗೂ ಅಸಮಾನತೆಗಳೂ ಕೂಡ ಇಲ್ಲಿ ಗಣನೆಗೆ ತರಬೇಕಾದ ಅಂಶಗಳು. ಸಮುದಾಯದ ಸ್ತರದಲ್ಲಿ ಪಾತ್ರಗಳ ನಡುವಿನ ಸಂಬಂಧದ ದೃಷ್ಟಿಯಿಂದ ರಚನೆಯೆಂದರೆ ಒಂದು ಘಟಕವು ಇನ್ನೊಂದು ಘಟಕಕ್ಕೆ ಪ್ರತಿಕ್ರಿಯಿಸುವ ಪ್ರಕ್ರಿಯೆ ಎಂದು ಹೇಳಬಹುದು. ಜೋಡಣೆಗಳ ಜಾಲದ ದೃಷ್ಟಿಯಿಂದ ‘ರಚನೆ’ ಎಂದರೆ ಸಂಬಂಧಗಳ ಜೊತೆಯೊಂದು ಮತ್ತೊಂದು ಸಂಬಂಧಗಳ ಜೊತೆಯೊಂದಿಗೆ ಅಂತರ್‌ಕ್ರಿಯೆಯಲ್ಲಿ ತೊಡಗುವ ಪ್ರಕ್ರಿಯೆ ಎಂದು ಹೇಳಬಹುದು. ಸಾಮಾಜಿಕ ರಚನಾತ್ಮಕವಾದವು ಮೂಲಭೂತವಾಗಿ ಈ ಎಲ್ಲ ಪರಿಕಲ್ಪನೆಗಳನ್ನೂ ಒಳಗೊಂಡ ಸಿದ್ಧಾಂತವಾಗದ್ದು ಸಾಮುದಾಯಿಕ ಕ್ರಿಯೆ-ಪ್ರತಿಕ್ರಿಯೆಗಳನ್ನು ವಿಶ್ಲೇಷಿಸುವಲ್ಲಿ ಒಂದು ಪ್ರಮುಖ ವಿಚಾರ ಧಾರೆಯನ್ನು ನಿರ್ಮಿಸಿದೆ.

ಸಾಮಾಜಿಕವಾಗಿ ರಚನಾತ್ಮಕವಾದದ ಬೆಳವಣಿಗೆಯಲ್ಲಿ ನಾವು ಫ್ರೆಂಚ್ ಸಮಾಜಶಾಸ್ತ್ರಜ್ಞ ಎಮೈಲ್ ಡರ್ಕ್‌‌ಹ್ಯಾಮ್‌ನಿಂದ ಪ್ರಭಾವಿತರಾದ ಮಾನವಶಾಸ್ತ್ರಜ್ಞ ಮೆಲಿನೋಸ್ಕಿ, ರ‍್ಯಾಡ್‌ಕ್ಲಿಫ್ ಬ್ರೌನ್‌, ಲೆವಿಸ್ತ್ರಾಸ್ ಇವರ ಕೊಡಗೆಗಳನ್ನು ಸಮಾಜಶಾಸ್ತ್ರೀಯ ದೃಷ್ಟಿಕೋನದಿಂದ ಗುರುತಿಸಬಹುದಾದರೆ ಸಾರ್ತ್ರೆ, ಮೆರ್ಲೊ-ಪೊಂಟಿ ಫುಕೋ, ಅಲ್ಥೂಸರ್‌ಮೊದಲಾದವರನ್ನು ಮಾನವ ಮೂಲ ಶಾಸ್ತ್ರದ ದೃಷ್ಟಿಕೋನದಿಂದ ಗುರುತಿಸಬಹುದು. ಇವರೆಲ್ಲರಲ್ಲೂ ಸಾಮಾನ್ಯವಾಗಿರುವ ಅಂಶಗಳು ಸಾಮಾಜಿಕ ರಚನೆ ಹಾಗೂ ಅಂಥ ರಚನೆಯು ಸಂವರ್ಧನೆಗೆಂದು ನಡೆಯುವ ಕಾರ್ಯಾತ್ಮಕ ವಿಧಿಗಳ ವ್ಯವಸ್ಥೆ. ವಿವಿಧ ಸಮಾಜಗಳಲ್ಲಿರುವ ಜಾಗತಿಕ ಅಂಶಗಳ ಅನ್ವೇಷಣೆಯೇ ಈ ಎಲ್ಲ ಚಿಂತಕರ ಸಾಮಾನ್ಯ ಗುರಿ.

ರಚನಾತ್ಮಕವಾದದ ಮುಖ್ಯ ತರ್ಕಗಳನ್ನು ಈ ಕೆಳಗಿನಂತೆ ಸಂಗ್ರಹಿಸಬಹುದಾಗಿದೆ:

೧. ಚಾರಿತ್ರಿಕವಾದ ಹಾಗೂ ಮಾನವತಾವಾದದ ನಿರಾಕರಣೆಯತ್ತ ಒಲವು.

೨. ಪಾಶ್ಚಿಮಾತ್ಯ ಸಂಸ್ಕೃತಿಯ ಉಳಿದ ಸಂಸ್ಕೃತಿಗಳಿಗಿಂತ ವಿಶೇಷವಾದದ್ದು ಎಂಬ ವಿಚಾರದ ನಿರಾಕರಣೆ.

೩. ಅಂತರ್ಗತ ವಿಚಾರದ ವಸ್ತುವಿಗಿಂತ ಆ ವಿಚಾರದ ಪರಿಧಿ ಹಾಗೂ ರೂಪು-ರೇಷೆಗಳೇ ಹೆಚ್ಚು ಮಹತ್ವದ್ದು.

೪. ಮಾನವನ ನಡವಳಿಕೆಯು ರಚನಾತ್ಮಕವಾಗಿದ್ದು ಸಂಸ್ಕೃತಿಯು ಈ ನಡವಳಿಕೆಯ ಮೇಲಿರುವ ನಿಬಂಧನೆಯಾಗಿದೆ.

೫. ರಚನಾತ್ಮಕ ವಿಶ್ಲೇಷಣೆಯೆಂದರೆ ಸಾಮಾಜಿಕ ಸಂಗತಿಗಳ ವಿವಿಧ ಮಜಲುಗಳನ್ನು ಬೇರ್ಪಡಿಸುವ ಮತ್ತು ವಿವಿಧ ಸಮುದಾಯಗಳ ಸದಸ್ಯರ ಸುಪ್ತ ಮತ್ತು ಪ್ರಜ್ಞಾವಸ್ಥೆ ಮಾದರಿಗಳನ್ನು ಜೋಡಿಸುವ ವಿಶ್ಲೇಷಣಾತ್ಮಕ ಸಿದ್ಧಾಂತವೆನ್ನಬಹುದು.

‘ರಚನೋತ್ತರವಾದ’ವು ಇತ್ತೀಚಿಗಿನ ವರ್ಷಗಳಲ್ಲಿ ರಚನಾತ್ಮಕವಾದಕ್ಕೆ ಸಂವಾದಿಯಾಗಿ ರೂಪುಗೊಂಡ ಸೈದ್ಧಾಂತಿಕ ದೃಷ್ಟಿಕೋನ. ರಚನೋತ್ತರವಾದ (Post-structuralism) ದಲ್ಲಿ ನಾವು ಕೆಲವು ಮಹತ್ವದ ಅಂಶಗಳನ್ನು ಕಾಣಬಹುದಾಗಿದೆ. ಅಂಥ ಅಂಶಗಳನ್ನು ಈ ಕೆಳಗಿನಂತೆ ಗುರುತಿಸಬಹುದು.

‘ರಚನೋತ್ತರವಾದ’ ಎಂಬ ಪದವು ೧೯೬೦ರ ದಶಕದ ನಂತರ ರಚನಾತ್ಮಕವಾದದ ಸಂವಾದಿಯೆಂದು ಅಮೆರಿಕಾದ ಭಾಷಾಶಾಸ್ತ್ರಜ್ಞರಿಂದ ಮೂಲತಃ ಬಳಕೆಯಾಯಿತು. ವಿಶೇಷತಃ ಈ ವಾದವನ್ನು ಸಾಹಿತ್ಯ ವಿಮರ್ಶೆ ಮತ್ತು ಮಾನವಶಾಸ್ತ್ರೀಯ ಸೈದ್ಧಾಂತಿಕ ವಿಮರ್ಶೆಯು ಸಂದರ್ಭದಲ್ಲಿ ಉಪಯೋಗಿಸಲಾಗುತ್ತದೆ. ಸಮಾಜಶಾಸ್ತ್ರೀಯ ದೃಷ್ಟಿಯಿಂದ ಅಭ್ಯಸಿಸುವ ರಚನಾತ್ಮಕ ಅಂಶಗಳ (ಉದಾಹರಣೆಗೆ: ಸಾಮಾಜಿಕ ರಚನೆ) ಪೂರ್ಣತಮ ವಿಮರ್ಶೆಯೆಂದು ಈ ವಾದವನ್ನು ಬಳಸುವುದು ಸರಿಯಲ್ಲವೆಂದು ಅನೇಕ ಸಮಾಜಶಾಸ್ತ್ರಜ್ಞರು ವಾದಿಸಲೂ ಕೂಡ ಇದೇ ಕಾರಣ. ಯುರೋಪಿನಲ್ಲಿ ಅದರಲ್ಲೂ ಹೆಚ್ಚಾಗಿ ಫ್ರಾನ್ಸ್ ದೇಶದಲ್ಲಿ ರಚನಾತ್ಮಕ ಸಿದ್ಧಾಂತದ ಹೊಸ ವಿಮರ್ಶೆಯ ಸ್ವರೂಪದಲ್ಲಿ ಹುಟ್ಟಿದ ಡೆಲ್ಯೂಸ್, ಡೆರಿಡಾ, ಫುಕೋ ಮುಂತಾದವರ ಸಾಮಾನ್ಯೀಕೃತ ವಿಚಾರಗಳನ್ನೆಲ್ಲ ಒಂದು ಸ್ವರೂಪ ಹಾಗೂ ಚೌಕಟ್ಟಿನ ಒಳಗೆ ಸೇರಿಸಿ ಇಂಥ ಸ್ವರೂಪದ ಸಿದ್ಧಾಂತವನ್ನು ‘ರಚನೋತ್ತರವಾದ’ ಎಂಬುದಾಗಿ ಪರಿಗಣಿಸಲಾಗಿದೆ. ಜೊತೆಗೆ ಈ ವಾದದಲ್ಲಿ ಮಾರ್ಕ್ಸ್, ಫ್ರಾಯ್ಡ್, ನೀಶೆ ಮುಂತಾದ ಚಿಂತಕರ ಮಹತ್ವದ ಪರಿಕಲ್ಪನೆಗಳೂ ಅವೆಲ್ಲವುಗಳ ಬದಲಾದ ವಿಶ್ಲೇಷಣೆಗಳೂ ಸಹ ಕಾಣಸಿಗುತ್ತದೆ.

ರಚನೋತ್ತರವಾದದಲ್ಲಿಯೂ ಸಹ ರಚನಾತ್ಮಕವಾದದ ಹಾಗೇ ವ್ಯಕ್ತಿಯೂ ಸ್ವತಂತ್ರನಾಗಿರದೇ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳಿಂದ ಬಂಧಿಸ್ಪಟ್ಟ ‘ಸಾಮಾಜಿಕ ಕ್ರಿಯಾಕಾರ’ನಾಗಿರುತ್ತಾನೆ. ಇಂಥ ಕ್ರಿಯೆಗಳ ಮುಖ್ಯ ನಿಯೋಗಿಯಾಗಿ ರಚನೆಯ ವಿವಿಧ ಅಂಶಗಳು ಕಾರ್ಯ ನಿರ್ವಹಿಸುತ್ತವೆ. ಸಾಮಾಜಿಕ ವೈವಿಧ್ಯತೆಯು ಬೇರೆ-ಬೇರೆ ‘ಪ್ರಕಾರ’ (Typology) ಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ರಚನೋತ್ತರ ದೃಷ್ಟಿಕೋನದಲ್ಲಿ ‘ಆಳ’ವು ಮಹತ್ವದ ಆಯಾಮವಾಗಿ ಸಾಮಾಜಿಕ ಬದಲಾವಣೆಗಳ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದಲೇ ಹೊಸ ಚಿಂತನೆಗಳು, ಬೌದ್ಧಿಕ ಕಲ್ಪನೆಗಳು, ವ್ಯಕ್ತಿಯ ಮಟ್ಟದಿಂದ ಮೇಲೇರಿ ಸಮೂಹ, ಸಮುದಾಯದ ಇಡಿಯಾದ ಪರಿವರ್ತನೆಯಲ್ಲಿ ತಮ್ಮ ಪಾತ್ರ ನಿರ್ವಹಿಸುತ್ತವೆ. ಉದಾಹರಣೆಗೆ ಈ ವಾದದಲ್ಲಿ ಗುಂಪಿನ ‘ಸುಪ್ತ ಕಾರ್ಯಸೂಚಿ’, ಭಾಷೆಯ ಮೂಲಕ ಪ್ರಸರಿಸಲ್ಪಡುವ ಮಿಥ್ಯಾವಾದಗಳು ಹಾಗೂ ಇದಕ್ಕೆ ಸಂಬಂಧಿಸಿದ ಅಂಶಗಳ ಚರ್ಚೆ ಮಹತ್ವದ್ದೆನಿಸುತ್ತದೆ.

ಜನರು ತಮ್ಮ ದೈನಂದಿನ ಜೀವನದಲ್ಲಿ ಬಳಸುವ ಸಾಮಾನ್ಯ ವಸ್ತುಗಳು, ವಿಚಾರಗಳು ಹಾಗೂ ಪರಿಕಲ್ಪನೆಗಳೆಲ್ಲವೂ ತಾರ್ಕಿಕ ಪರೀಕ್ಷೆಗೆ ಒಳಪಡಬೇಕು; ಶುದ್ಧ ಸಮಾಜ ಅಥವಾ ಪರಿಶುದ್ಧ ವ್ಯಕ್ತಿಗಳಂತಹ ಕಲ್ಪನೆಯು ಇತ್ತೀಚಿಗಿನ ಶತಮಾನಗಳಲ್ಲಿ ಮೂಡಿದ ಕಟ್ಟುಕಥೆ. ರಚನೋತ್ತರವಾದವು ಇಂಥ ಕಟ್ಟುಕಥೆಗಳು ಹುಟ್ಟಿಕೊಳ್ಳಲು ಕಾರಣವನ್ನು ಊಹಿಸುತ್ತದೆ. ಧರ್ಮ ನಿರಪೇಕ್ಷ ದೃಷ್ಟಿಕೋನದಿಂದಾಗಿ ‘ದೈವತ್ವ’ ಪರಿಕಲ್ಪನೆಯು ಮಾಯವಾಗಿದ್ದರಿಂದ ಆ ಖಾಲಿಜಾಗ ತುಂಬಲೆಂದು ಮಾನವನನ್ನೂ ದೈವತ್ವದತ್ತ ಎತ್ತುವ ಪ್ರಯತ್ನ ನಡೆದಿದೆ. ಇಂಥ ಎಲ್ಲ ‘ಆಳ’ವಾದ ವಿಶ್ಲೇಷಣೆಗಳ ನಡುವೆಯೂ ರಚನೋತ್ತರವಾದವು ವ್ಯಕ್ತಿ, ಅವನು ಆಧರಿಸುವ ಸಂಸ್ಕೃತಿ ವ್ಯವಸ್ಥೆ ಹಾಗೂ ಉಳಿದ ವಸ್ತುಗಳ ಜೊತೆಗೆ ಅವನ ತಾತ್ವಿಕ ಸಂಬಂಧ ಇವುಗಳನ್ನು ವ್ಯವಸ್ಥಿತವಾಗಿ ಜೋಡಿಸಿ ವಿಶ್ಲೇಷಿಸುವಲ್ಲಿ ಗೆಲುವು ಕಂಡಿಲ್ಲ.

ಆಧುನೀಕರಣ ಪರಿಕಲ್ಪನೆ-ಆಧುನಿಕೋತ್ತರವಾದ

‘ಆಧುನೀಕರಣ’ ಮತ್ತು ‘ಆಧುನಿಕತೆ’ (Modernitiy) ಗಳು ಎರಡನೇ ಮಹಾಯುದ್ಧದ ನಂತರ ಪಶ್ಚಿಮದ ಸಮಾಜವಿಜ್ಞಾನ ರಂಗದಲ್ಲಿ ಪ್ರಚಲಿತವಾದ ಪರಿಕಲ್ಪನೆಗಳು. ಅಧುನೀಕರಣ ಪ್ರಕ್ರಿಯೆಯು ವಿಜ್ಞಾನ ಹಾಗೂ ತಂತ್ರಜ್ಞಾನಗಳನ್ನು ಆಧರಿಸಿದ ಜಾಗತಿಕ ಸಂಸ್ಕೃತಿಯನ್ನು ಬಿಂಬಿಸುವ ಪ್ರಯತ್ನಗಳ ಗುಂಪು. ತಾರ್ಕಿಕ ಹಾಗೂ ಧರ್ಮ ನಿರಪೇಕ್ಷ ಸಾಮೂಹಿಕ ದೃಷ್ಟಿಕೋನ, ಸಾಮಾಜಿಕ ನ್ಯಾಯಕ್ಕೆ ಒತ್ತು, ತೆಗೆದ ದೃಷ್ಟಿಕೋನ ಹಾಗೂ ಸಾಮಾಜಿಕ ಜೀವನದಲ್ಲಿ ವಸ್ತುನಿಷ್ಠತೆ ಇವು ಆಧುನೀಕರಣದ ಪ್ರಮುಖ ಗುಣಲಕ್ಷಣಗಳೆಂದು ಗಣಿಸಲಾಗಿದೆ. ಈ ಪ್ರಕ್ರಿಯೆಯು ವಿಶ್ವವ್ಯಾಪಿಯಾಗಿದ್ದು ಒಮ್ಮೆ ಆಧುನಿಕತೆಯಿಂದ ಪ್ರಭಾವಿಸಲ್ಪಟ್ಟ ಸಮಾಜವು ಪುನಃ ಅದರಿಂದ ಹಿಂದೆ ಸರಿಯಲು ಸಾಧ್ಯವೇ ಇಲ್ಲ ಎಂಬುದು ಸಮಾಜಶಾಸ್ತ್ರಜ್ಞರ ವಾದ. ಆಧುನಿಕ ವ್ಯಕ್ತಿಯು ಪರಂಪರಾಗತ ಜ್ಞಾನ ಹಾಗೂ ನಂಬಿಕೆಯ ವ್ಯವಸ್ಥೆಗಳಿಂದ ಹೊರಬಂದು ವೈಜ್ಞಾನಿಕ ಹಾಗೂ ತಾರ್ಕಿಕವಾದ ತೆರೆದ ದೃಷ್ಟಿಕೋನವನ್ನು ಬೆಳೆಸಿಕೊಳ್ಳುತ್ತಾನೆ. ಆಧುನೀಕರಣಗೊಂಡ ಸಮಾಜದಲ್ಲಿ ಜ್ಞಾನ ಮತ್ತು ಮಾಹಿತಿಯ ಪಾತ್ರ ಮತ್ತು ಹರಡುವಿಕೆಗಳು ಬಹಳ ಮಹತ್ವದವೆಂದು ಪರಿಗಣಿಸಲ್ಪಟ್ಟಿವೆ. ಆಧುನೀಕರಣ ಪ್ರಕ್ರಿಯೆಯು ಜೀವನದ ಎಲ್ಲ ರಂಗಗಳಲ್ಲಿಯೂ ತನ್ನ ಪ್ರಭಾವ ಬೀರುತ್ತದೆ. ಜಾತ್ಯತೀಕರಣ, ನಗರೀಕರಣದ ಅವಿಭಾಜ್ಯ ಅಂಗಗಳಾಗಿ ಕೆಲಸ ಮಾಡುತ್ತವೆ. ಆಧುನೀಕಣ ಪ್ರಕ್ರಿಯೆಯ ಪ್ರಭಾವದಿಂದಾಗಿ ದೇಶ-ಕಾಲಗಳ ಭೇದಗಳು ದುರ್ಬಲಗೊಂಡು ವ್ಯಕ್ತಿಯ ಜೀವನಾನು ಭವಗಳು ಜಾಗತಿಕ ಸ್ಥಳದಲ್ಲಿ ಅನುರೂಪತೆ ಪಡೆಯುತ್ತವೆ.

‘ಆಧುನಿಕತೆ’ ಪರಿಕಲ್ಪನೆ ಹಾಗೂ ‘ಆಧುನೀಕರಣ’ವಾದದಲ್ಲಿ ಪಶ್ಚಿಮದ ಸಮಾಜಗಳ ಮೌಲ್ಯಗಳನ್ನಾಧರಿಸಿದ ವಸ್ತುನಿಷ್ಠತೆ, ಜಾಗತೀಕರಣ, ತಂತ್ರಜ್ಞಾನದ ಮೇಲೆ ಪೂರ್ಣಾವಲಂಬನ, ವೈಜ್ಞಾನಿಕ ದೃಷ್ಟಿಕೋನ ಮುಂತಾದವು ಅಡಗಿಕೊಂಡಿದ್ದು, ಈ ವಾದವನ್ನು ಒಪ್ಪಿದ ಮರುಕ್ಷಣವೇ ‘ಪಶ್ಚಿಮದ ನಾಡು-ನುಡಿ-ಸಂಸ್ಕೃತಿಗಳು ಪೌರ್ವಾತ್ಯ ನಾಡು-ನುಡಿ ಸಂಸ್ಕೃತಿಗಿಂತ ಶ್ರೇಷ್ಠವಾದವು’ ಎಂಬ ತತ್ವಾದರ್ಶವನ್ನು (Ideology) ಒಪ್ಪುವುದು ಅನಿವಾರ‍್ಯವಾಗಿ ಬಿಡುತ್ತದೆ. ಈ ಸಮಸ್ಯೆಯಿಂದ ಹೊರಬಂದು ಸಾಮಾಜಿಕ ವೈವಿಧ್ಯತೆ, ವಿಭಿನ್ನತೆಗಳನ್ನು ಒಪ್ಪಿ ಮಾನವನ ಅಭಿವೃದ್ಧಿ ಹಾಗೂ ವಿಕಾಸಕ್ಕೆ ಬೇರೊಂದು ಆಯಾಮವನ್ನು ‘ಆಧುನಿಕೋತ್ತರ ವಾದ’ವು ನೀಡಿದೆ. ೧೯೭೦ರ ದಶಕದ ನಂತರ ‘ರಚನೋತ್ತರವಾದ’ದಂತೆ ‘ಆಧುನಿಕೋತ್ತರ ವಾದ’ವೂ ಕೂಡ ಅನೇಕ ಪ್ರಶ್ನೆಗಳನ್ನು ಅನೇಕ ಸಮಸ್ಯೆಗಳನ್ನು ಮತ್ತು ವೈರುಧ್ಯಗಳನ್ನು ಎತ್ತಿ ಹೇಳಿದೆ.

‘ಆಧುನಿಕೋತ್ತರವಾದ’ ಮತ್ತು ಆಧುನಿಕೋತ್ತರತೆ ಈ ಶಬ್ದಗಳು ಹೊಸ ಕಲಿಕೆಯ ಇತ್ತೀಚಿಗಿನ ವರ್ಷಗಳಲ್ಲಿ ವಿವಾದಾತ್ಮಕ ಪರಿಕಲ್ಪನೆಗಳಾಗಿ ಪರಿಣಮಿಸಿವೆ. ಈ ವಿಷಯದಲ್ಲಿ ಅನೇಕ ಸಮಸ್ಯೆಗಳೂ ಭಿನ್ನಮತಗಳೂ ಇದ್ದರೂ ಇವೆರಡೂ ಪರಿಕಲ್ಪನೆಗಳು ಸಮಾಜಶಾಸ್ತ್ರ, ಮಾನವಶಾಸ್ತ್ರ, ಅರ್ಥಶಾಸ್ತ್ರ, ಸಾಹಿತ್ಯ, ಕಲೆ, ತತ್ವಶಾಸ್ತ್ರ ಮುಂತಾದ ರಂಗಗಳಲ್ಲಿ ಪರಿಣಾಮಕಾರಿಯಾಗಿ ಬಳಸಲ್ಪಡುತ್ತಿವೆ.

ಆಧುನಿಕೋತ್ತರವಾದದ ತಾತ್ವಿಕ ಬೇರುಗಳು ೧೯ನೇ ಶತಮಾನದ ಉತ್ತರಾರ್ಧದಲ್ಲಿಯೇ ಕಾಣಸಿಗುತ್ತವಾದರೂ ಈ ಪರಿಕಲ್ಪನೆಯು ಆಧುನೀಕರಣ ಪರಿಕಲ್ಪನೆಯ ವಿಮರ್ಶೆಯ ಸ್ವರೂಪದಲ್ಲಿ ೧೯೭೦ರಿಂದ ಈಚೆಗೆ ಗಂಭೀರವಾಗಿ ಬಳಸಲ್ಪಡುತ್ತಿದೆ. ಕಲೆದ ಸುಮಾರು ಒಂದೂವರೆ ದಶಕದಿಂದ ಈಚೆಗೆ ಆಧುನಿಕವಾದ-ಆಧುನಿಕೋತ್ತರವಾದಗಳ ತಾತ್ವಿಕ ಹೆಪ್ಪುಗಟ್ಟುವಿಕೆಯು ಲಲಿತಕಲೆಯ ರಂಗದಲ್ಲಿ ನೆಲೆಗೊಂಡರೆ, ಆಧುನೀಕತೆ-ಆಧುನಿಕೋತ್ತರತೆ ಎಂಬ ತಾತ್ವಿಕ ಕ್ರೋಢೀಕರಣವು ಸಮಾಜ-ವೈಜ್ಞಾನಿಕ ಚಿಂತನೆಯಲ್ಲಿ ಅತ್ಯಂತ ಚುರುಕಾದ ಬೌದ್ಧಿಕ ಚರ್ಚೆಗೆ ಒಳಪಟ್ಟು ವಿಷಯವೆನಿಸಿದೆ.

ಕೆಲವು ಚಿಂತನಕಾರರ ಪ್ರಕಾರ ಆಧುನಿಕೋತ್ತರತೆಯೆಂದರೆ ಭೌಗೋಳಿಕವಾಗಿ-ರಾಜಕೀಯವಾಗಿ ಪಾಶ್ಚಿಮಾತ್ಯ ಸಮಾಜಗಳ ಮಾದರಿಯಿಂದ ಬೇರೆಯೇ ಆದ ಕ್ರಿಯಾತ್ಮಕ ಜೀವನ ಶೈಲಿ. ಇನ್ನೊಂದರ್ಥದಲ್ಲಿ ಆಧುನಿಕೋತ್ತರತೆ ಎಂದರೆ ‘ಅಮೆರಿಕಾದ ಶತಮಾನ’ ಎನಿಸಿದ ೨೦ನೇ ಶತಮಾನದಲ್ಲಿ ಇದುವರೆಗೂ ಇರುವ ಅಮೆರಿಕೆಯ ಅರ್ಥವ್ಯವಸ್ಥೆ ಮತ್ತು ಸಂಸ್ಕೃತಿಗಳ ಒಡೆತನದಿಂದ ವಿಮುಕ್ತಿ. ಪರಿಣಾಮವಾಗಿ ಆಧುನಿಕೋತ್ತರತೆಯು ಜಗತ್ತಿನ ಹಲವೆಡೆಗಳಲ್ಲಿ ಹೊಸ ಶಕ್ತಿಯ ಹೊಸ ಕೇಂದ್ರಗಳನ್ನು ಸ್ಥಾಪಿಸಲು ಯತ್ನಸುವ ಬೌದ್ಧಿಕ ಪ್ರಯೋಗ ಚಿಂತನೆ ಎನ್ನಲಡ್ಡಿಯಿಲ್ಲ.

ಸಮಾಜಶಾಸ್ತ್ರೀಯ ಸಿದ್ಧಾಂತದ ದೃಷ್ಟಿಕೋನದಲ್ಲಿ ಆಧುನಿಕೋತ್ತರತೆಯು ಮಹತ್ವದ್ದೆನಿಸಿದೆ. ಇದುವರೆಗಿನ ಸಮಾಜ ವಿಜ್ಞಾನದ ಮೀಮಾಂಸೆಯಲ್ಲಿ ಪರಸ್ಪರ ಪ್ರತಿರೋಧಿಗಳಾಗಿ ಬೆಳೆದು ಬಂದ, ಅನೇಕ ಬಾರಿ ವ್ಯವಸ್ಥಿತವಾದ ಗುರಿಯಿರದೆ ಅತಿ ಪ್ರಾಯೋಗಿಕತೆ ಹಾಗೂ ಅತಿ ತಾರ್ಕಿಕತೆಗಳ ಘರ್ಷಣೆಗೆ ಪ್ರತಿಕ್ರಿಯೆಯಾಗಿ ಆಧುನಿಕೋತ್ತರವಾದವು ರೂಪುಗೊಂಡಿದೆ ಎಂಬ ಅಂಶವನ್ನು ನಾವು ಗಮನಿಬೇಕು. ಆದ್ದರಿಂದಲೇ ಈ ವಾದವು ಪರ್ಯಾಯ ಸಾಮಾಜಿಕ ಚಿಂತನೆಗೆ, ವ್ಯವಸ್ಥೆಯ ಹೊಸ ವಿಶ್ಲೇಷಣಾತ್ಮಕ ವಿಧಾನಕ್ಕೆ ಮತ್ತು ಬೌದ್ಧಿಕ ಪುನಶ್ಚೇತನಕ್ಕೆ ಚೌಕಟ್ಟೊಂದನ್ನು ಒದಗಿಸಬಲ್ಲದೆಂದು ಹಲವರು ವಾದಿಸುತ್ತಾರೆ. ಮೇಲಿನ ಎಲ್ಲ ಅಂಶಗಳನ್ನು ಗಣನೆಗೆ ತಂದುಕೊಂಡು ಆಧುನಿಕೋತ್ತರವಾದದ ಮುಖ್ಯ ಗುಣಲಕ್ಷಣಗಳನ್ನು ಈ ಕೆಳಗಿನಂತೆ ಸೂಚಿಸಬಹುದು.

೧. ಆಧುನಿಕೋತ್ತರವಾದವು ‘ವೈಜ್ಞಾನಿಕ ವಿಧಾನವೊಂದೇ ಸತ್ಯದ ವಾಹಕ ಹಾಗೂ ತಾರ್ಕಿಕತೆಯ ನಿಖರ ಮಾದರಿ’ ಎಂಬ ವಾದವನ್ನು ಅಲ್ಲಗಳೆಯುತ್ತದೆ; ಬದಲಾಗಿ ವಿಜ್ಞಾನದ ಆನ್ವಯಿಕ ಹಾಗೂ ನೈತಿಕ ಆಯಾಮಗಳನ್ನು ಸಮರ್ಥಿಸುತ್ತದೆ.

೨. ಆಧುನಿಕೋತ್ತರವಾದವು ವಿಜ್ಞಾನಸಿದ್ಧ ಜ್ಞಾನವು ಜಾಗತಿಕವಾದುದು ಎಂಬ ಹೇಳಿಕೆಯನ್ನು ನಿರಾಕರಿಸಿ, ‘ಸತ್ಯದ ಮಾನದಂಡವು ಸಂದರ್ಭಾನುಸಾರವಾಗಿರುತ್ತದೆ’ ಎಂದು ವಾದಿಸುತ್ತದೆ.

೩. ಆಧುನಿಕೋತ್ತರವಾದದ ಪ್ರಕಾರ ಸಮಕಾಲೀನ ಸಾಮಾಜಿಕ ಸಿದ್ಧಾಂತಗಳು ಸಾಂಸ್ಕೃತಿಕ ಸಂಪ್ರದಾಯಗಳಿಂದ ಪ್ರಭಾವಿಸಲ್ಪಟ್ಟಂತಹವು. ಪಾಶ್ಚಿಮಾತ್ಯ ಸಂಸ್ಕೃತಿ ಹಾಗೂ ಮಾಹಿತಿಯ ವ್ಯವಸ್ಥೆಗಳು ಉಳಿದ (ವಿಶೇಷವಾಗಿ ಮೂರನೇ ಜಗತ್ತಿನ) ಸಾಂಸ್ಕೃತಿಕ ವ್ಯವಸ್ಥೆಯ ಮೇಲೆ ದಬ್ಬಾಳಿಕೆ ನಡೆಸುತ್ತಿವೆ.

೪. ಈ ಎಲ್ಲ ಕಾರಣಗಳಿಂದಾಗಿ ಆಧುನಿಕೋತ್ತರವಾದವು ಈಗಿರುವ ವಿಜ್ಞಾನ ತಂತ್ರಜ್ಞಾನಗಳ ಕೇಂದ್ರವನ್ನು ಬದಲಾಯಿಸಿ ದಲಿತ-ಶೋಷಿತ ಸಮುದಾಯಗಳತ್ತ ಕೊಂಡೊಯ್ಯುವ ಕರೆ ನೀಡುತ್ತದೆ. ಪ್ರಸ್ತುತದಲ್ಲಿರುವ ಸಮಾಜಶಾಸ್ತ್ರೀಯ ಜ್ಞಾನವು ವರ್ಗ, ಜನಾಂಗ, ಲಿಂಗ, ಜಾತಿ ಮುಂತಾದ ಪೂರ್ವಗ್ರಹ ಕಲ್ಪನೆಗಳಿಂದ ಪೀಡಿತವಾಗಿದೆ. ಆದ್ದರಿಂದ ಇಂತಹ ಜ್ಞಾನ ಕೇಂದ್ರದ ಪ್ರತಿಗ್ರಹ ಅಥವಾ ಪ್ರತಿಭಟನೆ ಆಗುವುದು ಅತಿ ಅವಶ್ಯಕ.

೫. ಸದ್ಯದಲ್ಲಿ ಒಪ್ಪಿಕೊಂಡು ಪ್ರಚಾರದಲ್ಲಿರುವ ಚಾರಿತ್ರಿಕ ಹಾಗೂ ಸಮಾಜಶಾಸ್ತ್ರೀಯ ಜ್ಞಾನವು ಕೆಲವೇ ಕೆಲವು ವ್ಯಕ್ತಿಗಳು ತಮ್ಮ ಸ್ವಾರ್ಥ ಹಾಗೂ ಅಧಿಕಾರಕ್ಕಾಗಿ ಪ್ರಚಾರ ಪಡಿಸುತ್ತಿರುವ ನಿಯಮಿತವಾದ ಪರಿಣತಿ ಹಾಗೂ ಮಾಹಿತಿ ವ್ಯವಸ್ಥೆ.

ಇಂಥ ಹಿನ್ನೆಲೆಯಲ್ಲಿ ಗಮನಿಸಿದಾಗ ವಿಜ್ಞಾನವೂ ರಾಜ್ಯಾಂಗ, ಕುಟುಂಬ, ಧರ್ಮ ಅಥವಾ ಅರ್ಥ ವ್ಯವಸ್ಥೆಗಳಂತೆಯೇ ಒಂದು ಪ್ರಮುಖ ಸಾಮಾಜಿಕ ಮತ್ತು ರಾಜಕೀಯ ಶಕ್ತಿಯಾಗಿ ಗೋಚರಿಸುತ್ತದೆ. ಈ ಸೈದ್ಧಾಂತಿಕ ದೃಷ್ಟಿಕೋನದ ವಿಶ್ಲೇಷಣೆಯ ಆಧಾರದ ಮೇಲೆ ಸಮಾಜ ವಿಜ್ಞಾನಿಗಳು ಸಾಮಾಜಿಕ ಸಂಗತಿಯ ಚರ್ಚೆಯನ್ನು ಪ್ರಾಯೋಗಿಕ ಹಾಗೂ ನೈತಿಕ ಕಟ್ಟುಪಾಡುಗಳಿಗೊಳಪಡಿಸಿ ಸಂದರ್ಭೋಚಿತವಾಗಿ ಬಳಸಿಕೊಂಡಾಗಷ್ಟೇ ಪ್ರಗತಿ ಸಾಧ್ಯ.

ರಚನೋತ್ತರವಾದವು ಸಾಹಿತ್ಯ ವಿಮರ್ಶೆಯಲ್ಲಿ ಒಂದು ಸೈದ್ಧಾಂತಿಕವಾದವೆಂದು ಪರಿಗಣಿಸಲ್ಪಟ್ಟರೆ ಆಧುನಿಕೋತ್ತರವಾದವು ಜನವಾದಿ ಸಂಸ್ಕೃತಿಯನ್ನು ಒಳಗೊಂಡಂತೆ ಒಂದು ಸಾಂಸ್ಕೃತಿಕ ವಾದವಾಗಿ ಇತ್ತೀಚಿಗಿನ ವರ್ಷಗಳಲ್ಲಿ ಮಾನ್ಯತೆ ಪಡೆದಿದೆ. ‘ವ್ಯತ್ಯಯ’ (difference) ಹಾಗೂ ‘ವಿರೋಧಾಭಾಸ’ (Irony) ಎನ್ನುವ ಈ ಎರಡು ಪರಿಕಲ್ಪನೆಗಳು ಈ ದೃಷ್ಟಿಕೋನದಲ್ಲಿ ಮಹತ್ವದ ಅಂಶಗಳು. ‘ಸತ್ಯ’ವೂ ಉಳಿದ ಪ್ರಾಕ್‌ ಕಲ್ಪನೆಗಳಂತೇ ಚರ್ಚೆಗೊಳಗಾಗಬೇಕಾದ ಸಾಮಾಜಿಕ ಅಂಶ. ಅಂತೆಯೇ ವಿಚಾರವಾಹಕವಾದ ಭಾಷೆಯೇ ಸಮಾಜದಲ್ಲಿರುವ ಎಲ್ಲ ಸಾಂಸ್ಕೃತಿಕ ಸಂಬಂಧಗಳಿಗೂ ಮೂಲಭೂತ ಪ್ರೇರಣೆ.

ಒಟ್ಟಿನಲ್ಲಿ ಹೇಳಬೇಕೆಂದರೆ ರಚನೋತ್ತರವಾದ ಮತ್ತು ಆಧುನಿಕೋತ್ತರವಾದಗಳೆರಡೂ ಇಂದು ತೃತೀಯ ವಿಶ್ವದ ಸಮಾಜಗಳ ಮೇಲೆ ದಾಳಿ ನಡೆಸಿದ ಪಾಶ್ಚಿಮಾತ್ಯ ಕೈಗಾರೀಕೃತ ಆಧುನಿಕ ಜೀವನವಿಧಾನ ಹಾಗೂ ಬಂಡವಾಳಶಾಹಿ ಅರ್ಥವ್ಯವಸ್ಥೆಯಿಂದ ಉಂಟಾದ ಸಾಮಾಜಿಕ ದೃಷ್ಟಿಕೋನಕ್ಕೆ ಪ್ರತಿಕ್ರಿಯೆ, ಒಂದು ಪರ್ಯಾಯ ದೃಷ್ಟಿಕೋನ. ತಾರ್ಕಿಕತೆಯ ಬದಲಾದ ಭಾವನಾತ್ಮಕತೆ, ಸ್ಪರ್ಧಿಯ ಬದಲಾಗಿ ಸಹಕಾರ, ವಿಶೇಷಜ್ಞತೆಯ ಬದಲು ಸಾಮಾನ್ಯತೆ, ‘ಬಿಡಿ’ಯ ಬದಲು ‘ಇಡಿ’, ವ್ಯಕ್ತಿವಾದದ ಬದಲು ಸಮೂಹವಾದ ಇವು ಆಧುನಿಕೋತ್ತರವ ಸೈದ್ಧಾಂತಿಕ ನೆಲೆಗಟ್ಟಿ ಪ್ರಮುಖ ಅಂಶಗಳು.

ಸ್ತ್ರೀವಾದ (Feminism)[1]

ಸಾಮಾನ್ಯವಾಗಿ ಸ್ತ್ರೀವಾದವನ್ನು ಲಿಂಗ ಸಮಾನತೆಯ ಅವಕಾಶಗಳನ್ನು ಕಲ್ಪಿಸಿ, ಸ್ತ್ರೀ ಪುರುಷರ ನಡುವೆ ಇರುವ ಸಾಮಾಜಿಕ-ಆರ್ಥಿಕ ಕಂದಕವನ್ನು ಮುಚ್ಚುವ ಗುರಿ ಹೊಂದಿರುವ ಒಂದು ಸೈದ್ಧಾಂತಿಕ ತತ್ವಾದರ್ಶವೆಂದು ಗುರುತಿಸಲಾಗಿದೆ. ಐತಿಹಾಸಿಕವಾಗಿ ನೋಡಿದಾಗ, ಮಾನವನ ಸಂಸ್ಕೃತಿಯ ಉದ್ದಕ್ಕೂ ಪುರುಷಪ್ರಧಾನ ಸಾಮಾಜಿಕ ವ್ಯವಸ್ಥೆಯಿಂದಾಗಿ ಪುರುಷನಂತೆ ಮಹಿಳೆಗೆ ನ್ಯಾಯವಾಗಿ ದೊರಕಬೇಕಾಗಿದ್ದ ಅವಕಾಶ, ಅಂತಸ್ತು, ಅಧಿಕಾರಗಳು ದೊರಕಿಲ್ಲವೆನ್ನುವುದು ಎಲ್ಲರೂ ತಿಳಿದಿರುವ ವಿಚಾರ. ಪಿತೃಪ್ರಧಾನ ಕುಟುಂಬ ವ್ಯವಸ್ಥೆ, ಪುರುಷಪ್ರಧಾನ ಸಾಮಾಜಿಕ ರಚನೆ ಮತ್ತು ಕಾರ್ಯಗಳಿಂದಾಗಿ ಮಹಿಳೆಗೆ ದೊರಕಬೇಕಾದಷ್ಟು ಜೀವನಾವಕಾಶಗಳು ದೊರೆಯದೇ, ವಿವಿಧ ರಂಗಗಳಲ್ಲಿ, ವಿವಿಧ ಬಗೆಗಳಲ್ಲಿ ಆಕೆ ಇಂದಿಗೂ ಶೋಷಿಸಲ್ಪಡುತ್ತಿದ್ದಾಳೆ. ಇಂತಹ ಶೋಷಣೆ ಹಾಗೂ ಇದರಿಂದುಂಟಾಗುವ ದೀರ್ಘಕಾಲಿಕ ಸಾಮಾಜಿಕಾರ್ಥಿಕ ಅಸಮತೋಲನವನ್ನು ಸ್ತ್ರೀವಾದವು ಸ್ಪಷ್ಟವಾಗಿ ವಿರೋಧಿಸುತ್ತದೆ. ಅಂತೆಯೇ ಸಕಾರಾತ್ಮಕ ಆಯಾಮದಲ್ಲಿ ಸ್ತ್ರೀವಾದವು ಮಹಿಳೆಯ ಪ್ರತ್ಯೇಕ ಜೀವನಾನುಭವದ ಹಿನ್ನೆಲೆಯಲ್ಲಿ ಪುರುಷಪ್ರಧಾನವಲ್ಲದ ಸಾಮಾಜಿಕ-ಸಾಂಸ್ಕೃತಿಕ ಜೀವನ ವಿಧಾನವನ್ನನುಸರಿಸುವ ಅಗತ್ಯವನ್ನು ಒತ್ತಿ ಹೇಳುತ್ತದೆ.

ಸ್ತ್ರೀವಾದದ ಸಮಾಜಶಾಸ್ತ್ರೀಯ ಅಭ್ಯಾಸದಲ್ಲಿ ನಾವು ಪ್ರಮುಖವಾಗಿ ಮೂರು ಸೈದ್ಧಾಂತಿಕ ದೃಷ್ಟಿಕೋನಗಳನ್ನು ಕಾಣುತ್ತೇವೆ. ಮೊದಲನೆಯದನ್ನು ಉದಾರವಾದಿ (ಲಿಬರಲ್) ಸ್ತ್ರೀವಾದವೆಂದು ಗುರುತಿಸಲಾಗಿದೆ. ಈ ವಾದಸರಣಿಯು ಪುರುಷ ಮತ್ತು ಮಹಿಳೆಯರ ನಡುವಿನ ದೈಹಿಕ ವ್ಯತ್ಯಾಸಗಳು ಹಾಗೂ ಅಂತಹ ಅಂತರಕ್ಕೆ ಸಂಬಂಧಿಸಿದ ಕೆಲವು ಸಾಮಾಜಿಕ ಅಂಶಗಳು ಅನಿವಾರ್ಯವಷ್ಟೇ ಅಲ್ಲ, ಕೆಲವು ಸಂದರ್ಭಗಳಲ್ಲಿ ಅವಶ್ಯಕವೂ ಎಂಬ ಅಂಶವನ್ನು ಒಳಗೊಂಡಿದೆ. ಹಾಗಿದ್ದರೂ ಶೋಷಣೆಯಿಂದೊಡಗೂಡಿದ ಲಿಂಗ ಸಂಬಂಧಗಳು ಸಮಾಜಕ್ಕೆ ಕೆಡುಕನ್ನು ಉಂಟುಮಾಡುವುದರಿಂದಾಗಿ ಇಂಥ ತಾರತಮ್ಯಗಳು ದೂರವಾಗಬೇಕೆಂದೂ, ಈ ವಿಷಯದಲ್ಲಿ ಅಗತ್ಯವಿದ್ದ ಸಾಮಾಜಿಕ ಬದಲಾವಣೆ ನಿಧಾನಗತಿಯಲ್ಲಿ ಅಗುವುದೆಂದೂ ವಾದಿಸುತ್ತದೆ. ಎರಡನೆಯ ಸೈದ್ಧಾಂತಿಕ ದೃಷ್ಟಿಕೋನವನ್ನು ರ‍್ಯಾಡಿಕಲ್ ಫೆಮಿನಿಸಂ ಎಂದು ಹೆಸರಿಸಲಾಗಿದ್ದು ಈ ವಾದವು ಜರ‍್ನಮನ್‌ ಅರ್ಥಶಾಸ್ತ್ರಜ್ಞ ಹಾಗೂ ಸಮಾಜವಾದದ ಪಿತಾಮಹ ಕಾರ್ಲ್‌ಮಾರ್ಕ್ಸ್‌‌ನ ವಿಚಾರಗಳಿಂದ ಆಳವಾಗಿ ಪ್ರಭಾವಿತವಾಗಿದೆ. ಈ ವಾದದ ನಿಲುವೆಂದರೆ ಇಂದು ಪುರುಷ ಹಾಗೂ ಮಹಿಳೆಯ ನಡುವಿನ ತಾರತಮ್ಯದ ಹಾಗೂ ಶೋಷಣೆಯ ಸಂಬಂಧವು ಚಾರಿತ್ರಿಕವಾಗಿ ವರ್ಗವ್ಯವಸ್ಥೆಯ ಭಾಗವಾಗಿ ಬೆಳೆದಿದೆ; ಆದ್ದರಿಂದ ವರ್ಗವ್ಯವಸ್ಥೆಯನ್ನು ಬದಲಿಸುವ, ವರ್ಗರಹಿತ ಸಮಾಜ ನಿರ್ಮಿಸಲು ಉದ್ದೇಶಿಸುವ, ಕ್ರಾಂತಿಕಾರ ಪ್ರಯತ್ನಗಳಷ್ಟೇ ಸ್ತ್ರೀ-ಪುರುಷರ ಸಮಾನತೆಯಲ್ಲಿ ಮಹತ್ವದ ಪಾತ್ರವಹಿಸಬಲ್ಲವು. ‘ಮಹಿಳೆಯ ಇಂದಿನ ದಯನೀಯ ಸ್ಥಿತಿಗೆ ಆಕೆಯ ಆರ್ಥಿಕ ಅವಲಂಬನೆಯೇ ಮುಖ್ಯ ಕಾರಣವಾಗಿದ್ದರಿಂದ ಆರ್ಥಿಕ ಸ್ವಾತಂತ್ರ‍್ಯ ಸಿಗದೇ ಮಹಿಳೆಯು ಉಳಿದ ಯಾವುದೇ ಸೌಲಭ್ಯಗಳನ್ನೂ ಉಪಯೋಗಿಸಿಕೊಳ್ಳಲು ಅಸಮರ್ಥಳಾಗುವಳು’ ಎಂಬುದು ಈ ವಾದದ ಮುಖ್ಯ ಅಂಶ.

ಮೂರನೆಯ ದೃಷ್ಟಿಕೋನವಾದ ಸ್ತ್ರೀ-ಸಮಾಜವಾದವೂ ಮಾರ್ಕ್ಸ್‌ನ ಸಿದ್ಧಾಂತಗಳನ್ನು ತಳಹದಿಯಾಗಿ ಬಳಸಿಕೊಂಡರೂ, ಸ್ತ್ರೀ ಶೋಷಣೆಯಲ್ಲಿ ಸಾಂಸ್ಕೃತಿಕ ಹಾಗೂ ಅಧಿಕಾರದ ಅಂಶಗಳಿಗೂ ಸಮಾನ ಸ್ಥಾನವಿದೆಯೆಂದೂ ವಾದಿಸುತ್ತದೆ. ಎಂದರೆ ಆರ್ಥಿಕ ಅಸಮಾನತೆಯ ಜೊತೆಗೇ ಸಾಮಾಜಿಕ ಸಾಂಸ್ಕೃತಿಕ ಅಸಮಾನತೆ ಹಾಗೂ ಅಧಿಕಾರದ ಹಂಚುವಿಕೆಯಲ್ಲಿರುವ ತಾರತಮ್ಯಗಳು ಮಹಿಳೆಯ ಮೇಲೆ ಪುರುಷನು ಎಸಗುತ್ತಿರುವ ದೌರ್ಜನ್ಯ ಮತ್ತು ಶೋಷಣೆಗೆ ಕಾರಣ. ಹುಟ್ಟಿನಿಂದಲೇ ಲಿಂಗಭೇದ ಹಾಗೂ ತಾರತಮ್ಯಗಳನ್ನು ಮೌಲ್ಯಗಳ ರೂಪದಲ್ಲಿ ಎತ್ತಿ ಹಿಡಿಯುವ ಸಮಾಜೀಕರಣ ಪ್ರಕ್ರಿಯೆಯು ವ್ಯಕ್ತಿಯು ಪುರುಷ ಅಥವಾ ಮಹಿಳೆಯಾಗಿ ರೂಪುಗೊಳ್ಳುವಾಗ ಇಂಥ ತಾರತಮ್ಯಪ್ರಧಾನ ವ್ಯವಸ್ಥೆಯನ್ನು ಒಪ್ಪಿಕೊಳ್ಳಲು ಅನುಗುಣವಾದ ವ್ಯಕ್ತಿತ್ವವನ್ನು ರೂಪಿಸುತ್ತದೆ. ಪ್ರತಿಯೊಂದು ಸಮಾಜದಲ್ಲಿಯೂ ಮಹಿಳೆಯ ಹಾಗೂ ಪುರುಷನ ಗುಣಲಕ್ಷಣಗಳು ಪ್ರತ್ಯೇಕವಾಗಿ ವ್ಯಾಖ್ಯಾನಿಸಲ್ಪಡುವುದರಿಂದ ಮಹಿಳೆಯು ತಾನು ದುರ್ಬಲಳು, ಪರಾವಲಂಬಿ ಹಾಗೂ ಅಧಿಕಾರಕ್ಕೆ ಅಯೋಗ್ಯಳೆಂಬ ಕೀಳರಿಮೆಯ ಪ್ರಜ್ಞೆಯನ್ನು ಆಂತರ್ಗಿಕ ಮಾಡಿಕೊಳ್ಳುತ್ತಾಳೆ. ಹುಡುಗರ ಹಾಗೂ ಹುಡುಗಿಯರ ಸಾಮಾಜಿಕ ಪಾತ್ರ ಅಂತಸ್ತುಗಳು ಅವರಿಗೆ ಕುಟುಂಬ, ಶಾಲೆ ಹಾಗೂ ಇನ್ನಿತರ ಸಾಮಾಜಿಕ ಸಂಸ್ಥೆಗಳಲ್ಲಿ ಕೊಡಲ್ಪಡುವ ಜವಾಬ್ದಾರಿ ಮತ್ತು ಅವಕಾಶಗಳೆಲ್ಲವೂ ಸುಪ್ತವಾಗಿ ಅಥವಾ ಮುಕ್ತವಾಗಿ ಪುರುಷನು ಮಹಿಳೆಗಿಂತ ಶ್ರೇಷ್ಠ ಎಂಬ ಅಂಶವನ್ನು ವ್ಯಕ್ತಿತ್ವದಲ್ಲಿ ಸ್ಥಾಪಿಸಿಬಿಡುತ್ತವೆ. ಅಧಿಕಾರದ ಹಂಚಿಕೆಯಲ್ಲಿ ನಿರ್ಣಯ ತೆಗೆದುಕೊಳ್ಳುವಲ್ಲಿ ಅಥವಾ ಒದಗಿಬಂದ ಅವಕಾಶಗಳನ್ನು ಉಪಯೋಗಿಸುವಲ್ಲಿ ಮಹಿಳೆ ಅಸಮರ್ಥಳಾಗಲು ಪಿತೃಪ್ರಧಾನ ಕುಟುಂಬ ಪದ್ಧತಿ ಮತ್ತು ಪುರುಷಪ್ರಧಾನ ಸಾಮಾಜಿಕ ರಚನೆಗಳು ಕಾರಣ ಎಂದು ಈ ವಾದವ ಘೋಷಿಸಿ ಮಹಿಳಾ ಸಮಾನತೆ ಹಾಗೂ ‘ಮಹಿಳಾ ವಿಮೋಚನೆ’ಗಳು ಈ ಎಲ್ಲ ಅಂಶಗಳನ್ನೂ ಗಮನಿಸುವುದು ಅತ್ಯಗತ್ಯ ಎಂದು ದಾಖಲಿಸುತದೆ. ಅಸಮಾನತೆಯನ್ನು ದೃಢೀಕರಿಸುವಲ್ಲಿ ಸಾಂಸ್ಕೃತಿಕ ಮವಲ್ಯ ನಿಯಮಗಳೊಂದಿಗೆ ಅನೇಕ ಬಾರಿ ಕಾಯ್ದೆ-ಕಾನೂನುಗಳು ಸೇರಿ ‘ಸಹಜಸ್ಥಿತಿ’ ಮುಂದುವರಿಯುತ್ತದೆ.

ಒಟ್ಟಿನಲ್ಲಿ ಅನೇಕ ಸಮಾಜವಿಜ್ಞಾನಿಗಳು ಅಭಿಪ್ರಾಯಪಟ್ಟಿರುವಂತೆ ಲಿಂಗ ಸಮಾನತೆಯನ್ನು ಕೇವಲ ಆರ್ಥಿಕ ವ್ಯವಸ್ಥೆಯ ಬದಲಾವಣೆಯೊಂದರಿಂದಲೇ ತರುವುದು ದೂರದ ಮಾತು. ಸಾಮಾಜಿಕ ರಚನೆ ಮತ್ತು ಸಾಂಸ್ಕೃತಿಕ ಮೌಲ್ಯಗಳಲ್ಲಿಯೂ ಈ ದಿಸೆಯಲ್ಲಿ ಬದಲಾವಣೆಯಾಗುವುದು ಅತ್ಯಗತ್ಯ. ಮಹಿಳಾ ಜಾಗೃತಯ ಕಾರ್ಯಕ್ರಮಗಳು, ಎಲ್ಲ ರಂಗಗಳಲ್ಲಿಯೂ ಮಹಿಳೆಗೆ ಹೆಚ್ಚಿನ ಅವಕಾಶಕ್ಕಾಗಿ ಚರ್ಚೆ, ಸ್ತ್ರೀವಾದಿ ನೆಲೆಯಲ್ಲಿ ಮೂಡಿಬರುವ ಸಾಹಿತ್ಯ ಸೃಷ್ಟಿ. ಸ್ತ್ರೀವಾದಿ ಕಲೆ ಹಾಗೂ ಇತರ ಅಭಿವ್ಯಕ್ತಿಗಳು ಮುಂತಾದವು ಈ ಸಮಸ್ಯೆಯ ಆಳವನ್ನೂ ಮಹತ್ವವನ್ನೂ ತೋರಿಸುತ್ತವೆ. ಇಂದು ಸ್ತ್ರೀವಾದವು ಸಮಾಜಶಾಸ್ತ್ರೀಯ ಚಿಂತನೆಯ ಒಂದು ಪ್ರಮುಖ ಆಯಾಮವಾಗಿ ಹೊರಹೊಮ್ಮಿದ್ದು ಮುಂದಿನ ದಿನಗಳಲ್ಲಿ ಈ ವಾದಕ್ಕೆ ಇನ್ನೂ ಹೆಚ್ಚಿನ ಮಹತ್ವ ಸಿಗುವುದರಲ್ಲಿ ಸಂದೇಹವಿಲ್ಲ. ಬಲಪಂಥೀಯ ಹಾಗೂ ಕೇಂದ್ರಪಂಥೀಯವಾದ ಅನೇಕ ಸಾಮಾಜಿಕ ಸಿದ್ಧಾಂತಗಳ ವಿಶೇಷವಾಗಿ ಯುರೋಪಿನಲ್ಲಿ ಒಮ್ಮೆ ಪ್ರಸಿದ್ಧವಾಗಿದ್ದ ಮಾನವತಾವಾದದ ವಸ್ತುನಿಷ್ಠ ವಿಮರ್ಶೆಯಲ್ಲಿ ಸ್ತ್ರೀವಾದವು ಒಂದು ಮುಖ್ಯ ಸಾಧನವೆನಿಸಿದೆ.

ಮಾಹಿತಿಯ ಕ್ರಾಂತಿ

ನಾವು ೨೦ನೆಯ ಶತಮಾನದಿಂದ ೨೧ನೆಯ ಶತಮಾನದಲ್ಲಿ ಕಾಲಿಟ್ಟಿರುವ ಈ ಸಂದರ್ಭದಲ್ಲಿ ಈ ಶತಮಾನದ ಅತ್ಯಂತ ರೋಚಕವಾದ ಕಥೆಯನ್ನು ಹೇಳಬೇಕೆಂದರೆ ಆ ಕಥೆ ಕಳೆದ ನೂರು ವರ್ಷಗಳಲ್ಲಿ ನಡೆದ ಮಾಹಿತಿ ಕ್ರಾಂತಿಯ ಕಥೆಯಾಗುತ್ತದೆ. ಪೃಥ್ವಿಯ ಪ್ರಯೋಗಶಾಲೆಯೊಂದರಲ್ಲಿ ಕುಳಿತು ವಿಜ್ಞಾನಿಗಳು ಮಂಗಳಗ್ರಹದ ಮೇಲಿರುವ ಯಂತ್ರ ಮಾನವನಿಂದ ಕೆಲಸ ತೆಗೆದುಕೊಳ್ಳುತ್ತಿರುವುದು ಇಂದು ಸತ್ಯವಾದರೂ ಕೇವಲ ಅರ್ಧಶತಮಾನಗಳ ಹಿಂದೆ ಇದೊಂದು ಭ್ರಮಾಲೋಕದ ಕಟ್ಟುಕತೆಗಿಂತ ಹೆಚ್ಚಿನ ಗೌರವ ಪಡೆಯುತ್ತಿರಲಿಲ್ಲ. ವಿದ್ಯುನ್ಮಾನ ಮಾಧ್ಯಮಗಳಿಂದಾಗಿ ಇಂದು ಜಗತ್ತು ಎಷ್ಟು ಚಿಕ್ಕದೆನಿಸಿದೆಯೆಂದರೆ ಮಾರ್ಶಲ್ ಮಿಕ್ಲುಹಾನ್ ಹೇಳಿದ ‘ವಿಶ್ವಗ್ರಾಮ’ (Global Village) ಪರಿಕಲ್ಪನೆಯಲ್ಲಿ ತುಸು ಕೂಡ ಅತಿಶಯೋಕ್ತಿ ಇಂದಿಲ್ಲ. ಮಾಹಿತಿಯ ಚದುರುವಿಕೆಯಿಂದಾಗಿ ಜಗತ್ತಿನ ಎಲ್ಲ ಭಾಗಗಳೂ ಉಳಿದೆಲ್ಲ ಭಾಗಗಳಿಗೆ ಪರಿಚಿತವಾಗಿರುವಂತೆಯೇ ಪೃಥಿಯ ಎಲ್ಲೋ ಒಂದೆಡೆ ನಡೆದ ಘಟನೆ ಸಂಶೋಧನೆಗಳು ಇತರ ಅನೇಕ ಕಡೆಗಳಲ್ಲಿ ಪರಿಣಾಮ ಬೀರುತ್ತವೆ. ಹಾಗಾಗಿ ಮಾಹಿತಿಯು ಇಂದು ಕೇವಲ ಜ್ಞಾನ ಪ್ರಸರಣದ ಕಾರ್ಯವೊಂದನ್ನೇ ಮಾಡದೆ, ಅಧಿಕಾರ, ಅಂತಸ್ತು, ಸಂಪತ್ತುಗಳ ಹಂಚಿಕೆಯಲ್ಲಿಯೂ ಅತಿ ಪ್ರಮುಖ ಪಾತ್ರ ವಹಿಸಿದೆ. ರಾಷ್ಟ್ರ ರಾಷ್ಟ್ರಗಳಲ್ಲಿರುವ ಸಂಬಂಧಗಳ ಸ್ವರೂಪವು ಪರಸ್ಪರರ ಕುರಿತಾದ ಹಾಗೂ ಸುತ್ತಲಿನ ವಾತಾವರಣದ ಮಾಹಿತಿಯ ಮೇಲೆ ಆಧಾರವಾಗಿರುವುದರಿಂದ ಮಾಹಿತಿ ವ್ಯವಸ್ಥೆಯು ಶಾಂತಿಗೆ ಅಥವಾ ಕ್ರಾಂತಿಗೆ ಬಳಸಲ್ಪಡುವ ಸಾಧನವಾಗಿಯೂ ಮಾರ್ಪಟ್ಟಿದೆ. ಸಮಾಜದ ಅಭಿವೃದ್ಧಿಯ ಮಟ್ಟ ಹಾಗೂ ಸಾಧನೆಗಳು ಆ ಸಮಾಜದಲ್ಲಿರುವ ಮಾಹಿತಿ ವ್ಯವಸ್ಥೆಯ ಮಟ್ಟ ಹಾಗೂ ಗುಣಗಳನ್ನು ಹೊಂದಿರುವುವೆಂದು ಗುರುತಿಸಲಾಗುತ್ತಿದೆ. ದಿನದಿಂದ ದಿನಕ್ಕೆ, ನಿಮಿಷದಿಂದ ನಿಮಿಷಕ್ಕೆ ಬದಲಾಗುತ್ತಿರುವ ಜೀವನಸಂಬಂಧಿ ಮಾಹಿತಿಯು ವ್ಯಕ್ತಿಯನ್ನು ಸದಾ ಬದಲಾವಣೆಯ ಹೊಸ ಕಲಿಕೆಯ ಯುಗ ಮಾನವನ ಇತಿಹಾಸದಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿದ ಅದ್ಭುತ ಯುಗ. ಈ ಯುಗದಲ್ಲಿ ನಡೆದ, ನಡೆಯುತ್ತಿರುವ ವೈಚಾರಿಕ ಕ್ರಾಂತಿ, ಬೌದ್ಧಿಕ ಪರಿಶ್ರಮ ಸರಿಸಾಟಿಯಿಲ್ಲದ್ದು. ಭೌತಿಕ ಸಾಧನಗಳಾದ ಕಂಪ್ಯೂಟರ್‌ಗಳು ಕೃತ್ರಿಮ ಉಪಗ್ರಹಗಳು ಅಥವಾ ಅತಿವೇಗಯುತ ಕೇಬಲ್ ಹಾಗೂ ಇಂಥ ಅನೇಕ ಸಂಶೋಧನೆಗಳು ಜಗತ್ತಿನ ಮೂಲೆ ಮೂಲೆಗಳಲ್ಲಿಯೂ ಆಧುನಿಕತೆಯ ಸಂದೇಶವನ್ನು ಪ್ರಚಾರ ಮಾಡಿ ವೈಚಾರಿಕವಾಗಿ ಎಲ್ಲ ಸಮುದಾಯಗಳು ಇನ್ನೆಲ ಸಮುದಾಯಗಳನ್ನು ಗುರುತಿಸುವಲ್ಲಿ ಮಾಡಿದ ಕಾರ್ಯ ಬಹಳ ಪ್ರಮುಖವಾದದ್ದು. ಆದರೆ ಇದಕ್ಕಿಂತ ಮಹತ್ವದ ಅಂಶವೆಂದರೆ ಆಧುನಿಕೋತ್ತರ ಸಮಾಜ ನಿರ್ಮಾಣದ ಈ ಹಂತದಲ್ಲಿ ವ್ಯಕ್ತಿಯು ಸಾಮಾಜಿಕ ಜೀವಿಯಾಗಿ ವಿಶಾಲ ಜಾಗತಿಕ ವ್ಯವಸ್ಥೆಯಲ್ಲಿ ಉಳಿದವರಿಗೆ ಸಂಬಂಧಿಸಿದಂತೆ ತನ್ನ ಪಾತ್ರವನ್ನು ಗುರುತಿಸಿಕೊಳ್ಳುವಲ್ಲಿ ನಡೆಸಿದ ವೈಚಾರಿಕ ಕ್ರಾಂತಿ.

ಆಧುನಿಕೋತ್ತರವಾದ, ರಚನೋತ್ತರವಾದ, ಸ್ತ್ರೀವಾದಗಳೆಲ್ಲವೂ ಒಂದು ಮಹತ್ವದ ಅಂಶವನ್ನು ಗುರುತಿಸಿವೆ. ತಂತ್ರಜ್ಞಾನದ ಉತ್ಪಾದನಾಶಕ್ತಿ ಬಹುಗುಣಿತವಾಗಿ ಹೆಚ್ಚುತ್ತಿರುವಂತೆಯೇ ಸಾಮಾಜಿಕ ಸ್ಥಿರತೆಯನ್ನು ಕಾಪಾಡುವ ಇದರ ಶಕ್ತಿ ಗಣನೀಯವಾಗಿ ಕ್ಷೀಣಿಸುತ್ತಿದೆ. ಎಂದರೆ ತಾಂತ್ರಿಕತೆಯಿಂದಾಗಿ ಉಂಟಾದ ಬೆಳವಣಿಗೆಯು, ಸಾಮಾಜಿಕ ಅಭಿವೃದ್ಧಿಯನ್ನು ಉಂಟುಮಾಡುವ ಶಕ್ತಿಯನ್ನು ನಿಧಾನವಾಗಿ ಕಳೆದುಕೊಳ್ಳುತ್ತ ‘ನವ ತಂತ್ರಜ್ಞಾನದಿಂದ ಸಂಪತ್ತಿಗಿಂತ ಆಪತ್ತೇ ಹೆಚ್ಚು ಎಂಬ ಭಾವನೆ ಜನಸಾಮಾನ್ಯನಲ್ಲಿ ಮೂಡತೊಡಗಿದೆ. ಇಂದು ಹೊಸ ಸಮಾಜಕ್ಕೆ ಲಭ್ಯವಿರುವ ಎಲ್ಲ ಮಾಹಿತಿಯು ಅವಶ್ಯಕವೇ ಎಂಬ ಶಂಕೆಯೂ ಸೃಷ್ಟಿಯಾಗಿದೆ. ಹೊಸ ಕಲಿಕೆಯ ಯುಗದಲ್ಲಿ ದೈಹಿಕ-ಐಹಿಕ ಸುಖಗಳು ಹೆಚ್ಚುತ್ತಿರುವ ಹಾಗೆಯೇ ಸಾಂಸ್ಕೃತಿಕ ಮೌಲ್ಯಗಳು, ಸಾಮಾಜಿಕ ಸಂಸ್ಥೆಗಳಾದ ಕುಟುಂಬ, ಶಿಕ್ಷಣ, ವಿವಾಹ, ರಕ್ತಸಂಬಂಧಗಳ ಬಂಧನಗಳೂ ಶಿಥಿಲವಾಗುತ್ತಿವೆ. ಹೊಸ ಕಲಿಕೆಯ ಯುಗದಲ್ಲಿ ಹಿಂದೆಂದೂ ಕಂಡಿರದ, ಊಹಿಸಲು ಅಸಾಧ್ಯವಾದ ಮಾಹಿತಿಯ ರಾಶಿಯನ್ನೂ, ಜೊತೆಗೆ ಅತ್ಯಂತ ಆಳವಾದ ಸಾಮಾಜಿಕ ಸಾಂಸ್ಕೃತಿಕ ಚಿಂತನೆಯ ಸ್ತರಗಳನ್ನೂ ಜಗತ್ತು ಕಂಡಿದೆ. ಆದರೆ ತಂತ್ರಜ್ಞಾನ ಹಾಗೂ ಮೌಲ್ಯಗಳ ನಿರಂತರ ಬದಲಾವಣೆಯಿಂದಾಗಿ ಮಾನವ ಸಮಾಜ ಬೇರೂರಿ ನಿಲ್ಲದೇ ಸದಾ ಓಡುತ್ತಿರುವ ರಚನೆಯಾಗಿ ಬಿಡಬಹುದೇ? ಮನುಷ್ಯರೆಲ್ಲರೂ ಒಂದೇ ಮಾದರಿಯ ಪಡಿಯಚ್ಚುಗಳಾಗಿ ಮಾನವ ಸಮಾಜದ ವೈವಿಧ್ಯತೆ ಮಾಯವಾಗಿ, ಜೀವನಲ್ಲಿ ಏಕತಾನತೆಯೊಂದೇ ನಿಶ್ಚಲವಾಗಬಹುದೇ? ಈ ಪ್ರಶ್ನೆಗಳಿಗೆ ಹಾಗೂ ಇಂಥ ಅನೇಕ ಮುಖ್ಯ ಪ್ರಶ್ನೆಗಳಿಗೆ ಉತ್ತರವಿನ್ನೂ ದೊರಕಬೇಕಾಗಿದೆ.

***

 

[1] ಇದರ ಬಗ್ಗೆ ವಿವರಗಳನ್ನು ಪ್ರಸ್ತುತ ಕೃತಿಯ ೩೩೭-೩೬೫ ರ ಪುಟಗಳಲ್ಲಿ ಚರ್ಚಿಸಲಾಗಿದೆ – ಸಂ.