ಗ್ರಾಂಸಿಯ ಸಿದ್ಧಾಂತದ ಉಗಮ ಮತ್ತು ವಿಕಾಸ

‘ಗ್ರಾಮೀಣ ಬದುಕಿನ ಮೂರ್ಖತನ’ (ಈಡಿಯಾಸಿ ಆಫ್ ರೂರಲ್ ಲೈಫ್) ಮತ್ತು ರೈತರ ಕ್ರೌರ‍್ಯ ಹಾಗೂ ಕ್ರಾಂತಿಕಾರಿಯಾದ ನಗರ ಸಂವೇದನೆಯುಳ್ಳ ಕೈಗಾರಿಕಾ ಕಾರ್ಮಿಕರ ನಡುವೆ ಕಂಡುಬಂದ ವೈರುಧ್ಯವನ್ನು ಗಮನಿಸಿದ ಗ್ರಾಂಸಿಯು ರೈತರು ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಜೀವಂತವಿರುವ ಶಕ್ತಿ ಎಂದೆನ್ನುತ್ತಾನೆ. ಈ ಶಕ್ತಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಬಹಳ ಎಚ್ಚರಿಕೆಯ ವಿಮಶೆ, ಅವಲೋಕನ ಅಗತ್ಯ ಎನ್ನುತ್ತಾನೆ ಗ್ರಾಂಸಿ. ಈ ಹಿನ್ನೆಲೆಯಲ್ಲಿ ಜನರ ನಂಬಿಕೆಗಳನ್ನು ಮತ್ತು ಜಾನಪದವನ್ನು ಗಣನೆಗೆ ತೆಗೆದುಕೊಳ್ಳುವುದು ಸೂಕ್ತ ಎಂದು ಅವನು ಸಲಹೆ ಮಾಡಿದ್ದಾನೆ. ಗ್ರಾಂಸಿಯ ಚಿಂತನೆ ಮಾದರಿಗಳನ್ನು ಭಾರತೀಯ ರೈತರ ಬಗ್ಗೆ ಅಧ್ಯಯನ ನಡೆಸಿದ ಸಂದರ್ಭದಲ್ಲಿ ಸಬಾಲ್ಟರ್ನ್ ಸ್ಟಡೀಸ್‌ನ ಮೂರು ಸಂಪುಟಗಳಲ್ಲಿ (೧೯೮೨, ೧೯೮೩, ೧೯೮೪) ರಣಜಿತ್ ಗುಹಾ ಅವರು ಚರ್ಚಿಸಿದ್ದಾರೆ. ಸಬಾಲ್ಟರ್ನ್ ಚಿಂತಕರು ಮುಂದಿನ ಹಂತಗಳಲ್ಲಿ ಗ್ರಾಂಸಿಯ ಮಾದರಿಯನ್ನು ಭಾರತದ ಚರಿತ್ರೆಯನ್ನು ನಿರ್ವಚಿಸುವ ಸಂದರ್ಭದಲ್ಲಿ ಬಳಸಿಕೊಂಡರು. ಈ ಮೂಲಕ ಭಾರತದ ಚರಿತ್ರೆ ರಚನಾಪರಂಪರೆಯಲ್ಲಿ ‘ಮಹಾತ್ಮ’ ಗ್ರಾಂಸಿಯ ಹೆಸರೂ ಸೇರಿಕೊಂಡಿತು ಎಂದು ಡೇವಿಡ್ ಅರ್ನಾಲ್ಡ್ ವಿವರಿಸುತ್ತಾರೆ. ಮಾರ್ಕ್ಸಿಸಂ ಅನ್ನು ಬಹಳಷ್ಟು ಮಂದಿ ಕಬ್ಬಿಣದ ಕಡಲೆಕಾಯಿ ತರಹ ಜಟಿಲಗೊಳಿಸುವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಗ್ರಾಂಸಿಯ ನಿಲುವನ್ನು ಇಲ್ಲಿ ಗಮನಿಸಬಹುದು.

ಗ್ರಾಂಸಿಯು ೧೯೨೦ ದಶಕದಲ್ಲಿ ಇಟಲಿಯ ರೈತಹೋರಾಟಗಳನ್ನು ಉಗ್ರವಾಗಿ ಪ್ರತಿಪಾದಿಸುತ್ತಿದ್ದ. ಇಟಲಿಯ ದಕ್ಷಿಣ ಭಾಗವು ರೈತಾಪಿ ಜನರಿಂದ ಆವೃತವಾಗಿದ್ದು ಅವರ ರೋದನವನ್ನು ಸೈದ್ಧಾಂತಿಕವಾಗಿ ಹಾಗೂ ಹೋರಾಟದ ಮೂಲಕ ಹೋಗಲಾಡಿಸಲು ಆತನು ಕಟಿಬದ್ಧನಾಗಿದ್ದ. ಇಟಲಿಯ ಉತ್ತರಭಾಗದಲ್ಲಿ ಪ್ರಬಲವಾಗಿದ್ದ ಕಾರ್ಖಾನೆಗಳ ಕಾರ್ಮಿಕರ ಬಗ್ಗೆ ಆ ಕಾಲದ ಇಟಾಲಿಯನ್ ಸೋಷಿಯಲಿಸ್ಟ್ ಪಾರ್ಟಿಗಳು ಸಹಾನುಭೂತಿ ತೋರಿಸುತ್ತಿದ್ದ ಸಂದರ್ಭದಲ್ಲಿ ಗ್ರಾಂಸಿಯು ದಕ್ಷಿಣದವರ ಪ್ರಶ್ನೆಗಳನ್ನು (ಸದರನ್ ಕ್ವಶ್ಚನ್) ಪಾರ್ಟಿಯು ನಿರ್ಣಯಕ್ಕೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ. ಉತ್ತರ ಇಟಲಿಯ ಉದ್ದಿಮೆದಾರರಿಗೆ, ಬ್ಯಾಂಕರ್‌ಗಳಿಗೆ ಮತ್ತು ಅಧಿಕಾರಶಾಹಿಗಳಿಗೆ ದಕ್ಷಿಣದ ರೈತರು ಅಡಿಯಾಳಾಗಿರುವುದನ್ನು ಗ್ರಾಂಸಿಯು ಪ್ರಬಲವಾಗಿ ವಿರೋಧಿಸಿದ ಅಂಶಗಳನ್ನು ಈಗಾಗಲೆ ಚರ್ಚಿಸಲಾಗಿದೆ. ಇದನ್ನು ಇಟಲಿಯ ರಾಷ್ಟ್ರೀಯ ಪ್ರಶ್ನೆಯನ್ನಾಗಿ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ ಗ್ರಾಂಸಿಯು ರೈತರ ಬವಣೆಯನ್ನು ಇಟಾಲಿಯನ್ ಕಮ್ಯುನಿಸ್ಟ್‌ಪಾರ್ಟಿಯು ತನ್ನ ಸಿದ್ಧಾಂತ ಮತ್ತು ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡು ಹೋರಾಟದ ಭಾಗವನ್ನಾಗಿ ಮುಂದುವರಿಸಬೇಕೆಂದು ಒತ್ತಾಯ ಮಾಡುವನು. ೧೯೧೭ ರಲ್ಲಿ ರಷ್ಯಾದ ಕ್ರಾಂತಿಯಾಗುವ ಹೊತ್ತಿಗೆ ಗ್ರಾಂಸಿಯು ರೈತರೆಲ್ಲರೂ ಒಗ್ಗಟ್ಟಾಗಿ ಇಟಲಿಯ ಬೂರ್ಜ್ವಾ ರಾಜ್ಯದ ಅಧಿಕಾರವನ್ನು ಕೊನೆಗಾಣಿಸಬೇಕೆಂದು ಕರೆ ನೀಡಿದ್ದು ಸರಿಯಷ್ಟೆ. ರೈತರ ಸಂಖ್ಯೆಯು ಇಟಲಿಯಲ್ಲಿ ಪ್ರಧಾನವಾಗಿರುವುದರಿಂದ ರೈತರು ನಡೆಸುವ ಕ್ರಾಂತಿಯು ಸಫಲವಾಗುತ್ತದೆ ಎಂದು ಈತ ನಂಬಿದ್ದನು.

೧೯೧೯-೨೦ರ ಸುಮಾರಿಗೆ ಕೈಗಾರಿಕಾ ಕೇಂದ್ರವಾದ ಟ್ಯೂರಿನ್‌ನಲ್ಲಿ ಸಂಘಟಿಸಲಾದ ಫ್ಯಾಕ್ಟರಿ ಕೌನ್ಸಿಲ್ ಚಳವಳಿಯು ಕೇವಲ ಕಾರ್ಮಿಕರಿಂದ ಹೋರಾಟ ಸಾಧ್ಯವಿಲ್ಲವೆಂದು ಸ್ವತಃ ಆ ಚಳವಳಿಯಲ್ಲಿ ಭಾಗವಹಿಸಿದ್ದ ಗ್ರಾಂಸಿಗೆ ಅರಿವಾಗಿತ್ತು. ನಗರಗಳಲ್ಲಿ ಪ್ರಬಲವಾಗಿರುವ ಕ್ರಾಂತಿಕಾರಿ ಹೋರಾಟಗಳಿಂದ ಗ್ರಾಮಗಳ ರೈತರ ಆಶಯಗಳಿಗೆ ಹಿನ್ನಡೆಯಾಗುತ್ತದೆ ಎಂದ ಗ್ರಾಂಸಿಯು ಈ ಕಾರಣಗಳಿಂದಾಗಿ ನಗರ ಕೇಂದ್ರಗಳಲ್ಲಿ ಕಾರ್ಮಿಕರ ಮತ್ತು ಬಡರೈತರ ಸಹಯೋಗದೊಂದಿಗೆ ಹೋರಾಟ ಮುಂದುವರಿಯಬೇಕೆಂದು ಆಶಿಸಿದನು. ಬಹುತೇಕ ಸೋಶಿಯಲಿಸ್ಟರಿಗಿಂತ ಮತ್ತು ಕಮ್ಯುನಿಸ್ಟರಿಗಿಂತ ವ್ಯತಿರಿಕ್ತವಾಗಿ ಗ್ರಾಂಸಿಯು ನಿರ್ಲಕ್ಷ್ಯ ಕ್ಕೊಳಗಾದ ದಕ್ಷಿಣದ ರೈತರಿಗೆ ಸ್ಫೂರ್ತಿ ನೀಡುವ ನಾಯಕತ್ವ ಬೇಕೆಂದು ಹೋರಾಟ ಮಾಡಿದ್ದನ್ನು ಗಮನಿಸಬಹುದಾಗಿದೆ. ಮೊದಲನೆಯ ಮಹಾಯುದ್ಧದ ಬಳಿಕ ಇಟಲಿಯಲ್ಲಿ ಕಾರ್ಮಿಕರ ಮತ್ತು ರೈತರ ನೇತೃತ್ವದ ಹೋರಾಟವು ಇಟಲಿಯನ್ನು ಕಬಂಧಶಕ್ತಿಗಳಿಂದ ಮುಕ್ತಿಗೊಳಿಸುತ್ತದೆ ಎಂಬ ಆಶಾಭಾವನೆಯೂ ಅವನಿಗಿತ್ತ. ೧೯೨೬ರ ಹೊತ್ತಿಗೆ ಗ್ರಾಂಸಿಯು “ಸಮ್‌ಆಸ್ಪೆಕ್ಟ್ಸ್‌ ಆಫ್ ದಿ ಸದರನ್ ಕ್ವೆಶ್ಚನ್‌” ಎನ್ನುವ ಲೇಖನವನ್ನು ಪೂರ್ಣಗೊಳಿಸುವ ಮೊದಲೇ ಇಟಲಿಯ ಫಾಸಿಸ್ಟ್ ಸರಕಾರದಿಂದ ಬಂಧನಕ್ಕೊಳಗಾದನು. ನಂತರದ ವರ್ಷಗಳಲ್ಲಿ ಅವನು ಜೈಲಿನಲ್ಲಿ ಬರೆದ “ನೋಟ್ಸ್‌”ಗಳು ಹೇಗೆ ಪ್ರಬಲ ವರ್ಗಗಳು ಚಾರಿತ್ರಿಕವಾಗಿ ರೈತರನ್ನು ತಮ್ಮ ಅಧೀನಕ್ಕೊಳಪಡಿಸಿದರು ಎನ್ನುವ ವಿಚಾರಗಳತ್ತ ವಿವರಗಳನ್ನು ತಿಳಿಸುತ್ತವೆ. ಯಾವ್ಯಾವ ಕಾರಣಕ್ಕಾಗಿ ರೈತರ ಹೋರಾಟಗಳು ತಮ್ಮ ಆಳರಸರನ್ನು ರಾಜ್ಯಾಧಿಕಾರದಿಂದ ಹೊರತಳ್ಳಲು ವಿಫಲವಾದವು ಅಥವಾ ರೈತರು ತಮ್ಮ ಅಧಿಕಾರವನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಗಳನ್ನು ತನ್ನ “ಪ್ರಿಸನ್ ನೋಟ್ಸ್”ನಲ್ಲಿ ಚರ್ಚಿಸುತ್ತಾನೆ. ಇಂಥ ಪ್ರಶ್ನೆಗಳನ್ನು ಗ್ರಾಂಸಿಯು ಕೇಳಿದ ಸಂದರ್ಭದಲ್ಲಿ ಅಥವಾ ಅದಕ್ಕೆಲ್ಲ ಉತ್ತರ ಹುಡುಕುವ ಸಂದರ್ಭದಲ್ಲಿ ಗ್ರಾಂಸಿಯು ಕೈಗಾರಿಕಾಕೇಂದ್ರಿತ ಕಾರ್ಮಿಕಶಕ್ತಿಯನ್ನು ಅವಗಣನೆಗೆ ತೆಗೆದು ಕೊಂಡನೆಂದಲ್ಲ. ಕಾರ್ಮಿಕರು ಕ್ರಾಂತಿಯನ್ನು ಯಶಸ್ವಿಯಾಗಿ ಮುಂದುವರೆಸಲು ಕಾರ್ಮಿಕ ಮತ್ತು ರೈತರ ಸಹಯೋಗ ಅಗತ್ಯ ಎಂದು ಬಿಂಬಿಸುವುದು ಅವನ ಸೈದ್ಧಾಂತಿಕತೆಯಾಗಿತ್ತು. ಆ ಮೂಲಕ ದುಡಿಯುವ ವರ್ಗಗಳು ಬಂಡವಾಳಶಾಹಿ ಮತ್ತು ಬೂರ್ಜ್ವಾ ರಾಜ್ಯವನ್ನು ಕೊನೆಗಾಣಿಸಬಹುದಾಗಿದೆ ಎಂದು ಆತ ಬರೆಯುತ್ತಾನೆ. ಈ ಬಗೆಯ ಸಹಯೋಗವು ರಾಜಕೀಯ ಅವಕಾಶವಾದಕ್ಕಲ್ಲ. ಒಂದು ವೇಳೆ ಹಾಗಾದರೆ ರೈತಾಪಿ ವರ್ಗವು ಮತ್ತೊಮ್ಮೆ ಸಂಕಷ್ಟಕ್ಕೀಡಾಗುತ್ತದೆ ಎಂದು ಅವನು ಎಚ್ಚರಿಸುತ್ತಾನೆ. ಉತ್ತರ ಇಟಲಿಯ ಬಂಡವಾಳಶಾಹಿ ಮತ್ತು ಬೂರ್ಜ್ವಾ ರಾಜ್ಯದ ದಮನಕಾರಿ ಕಾರ‍್ಯಗಳನ್ನು ಕೊನೆಗಾಣಿಸಲು ರೈತರು ಕ್ರಾಂತಿಕಾರಿಗಳಾಗುವುದು ಅಗತ್ಯ ಎಂದು ಗ್ರಾಂಸಿಯು ಅಭಿಪ್ರಾಯಪಡುತ್ತಾನೆ. ಉತ್ತರ ಮತ್ತು ದಕ್ಷಿಣ ಇಟಲಿಯವರ ನಡುವೆ ಕಂದಕ ಏರ್ಪಡದಿರಲು ಉತ್ತರದ ಕಾರ್ಮಿಕ ವಲಯವು ದಕ್ಷಿಣದ ರೈತರ ಸಮಸ್ಯೆಗಳನ್ನು ತಮ್ಮ ಸಮಸ್ಯೆ ಎಂದು ಬಗೆದರೆ ಆ ಬಗೆಯ ಕಂದಕಗಳಾಗುವುದಿಲ್ಲ. ಆ ಮೂಲಕ ದಕ್ಷಿಣದ ರೈತರೆಂದರೆ ದೈಹಿಕವಾಗಿ ಕುಗ್ಗಿದವರು ಮತ್ತು ನಿರಂತರ ಹಿಂದುಳಿಕೆಯಲ್ಲಿರುವವರು ಎನ್ನುವ ಪಾರಂಪರಿಕ ಪೂರ್ವಗ್ರಹದಿಂದ ಉತ್ತರದವರು ಹೊರಬರಬಹುದು ಎಂದು ಅಭಿಪ್ರಾಯಪಡುತ್ತಾನೆ. ಅಧಿಕಾರ ವರ್ಗದವರು ಹುಟ್ಟುಹಾಕಿದ ಈ ಬಗೆಯ ಮಿಥ್‌ಗಳು ಅಧಿಕಾರವರ್ಗದ ಹೆಜಿಮನಿಗೆ ಸಬಾಲ್ಟರ್ನ್ ವರ್ಗಗಳ ಹಿತಾಸಕ್ತಿಗಳು ಪರಸ್ಪರ ಕಚ್ಚಾಡಲು ಪ್ರೇರೇಪಿಸಿದೆ ಎಂಬ ಅಂಶವನ್ನೂ ಗ್ರಾಂಸಿಯು ಚರ್ಚಿಸಿದ್ದಾನೆ.

ಒಮ್ಮೆ ಕ್ರಾಂತಿಯ ಹೋರಾಟ ಮುಗಿದ ನಂತರ ಫ್ಯಾಕ್ಟರಿ ಕೌನ್ಸಿಲ್ ಹೋರಾಟದ ಅಂಶಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ವಿಸ್ತರಿಸಿ ಅದರೊಳಗೆ ರೈತ ಸಮುದಾಯಗಳು ಪಾಲ್ಗೊಳ್ಳಬೇಕೆಂದು, ಹಾಗೆಯೇ ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಂತರಗಳನ್ನು ಕಡಿಮೆ ಮಾಡಬೇಕೆಂದು ಆತ ಆಶಿಸುತ್ತಾನೆ. ನಗರದ ತಂತ್ರಜ್ಞಾನ ಮತ್ತು ಸಂಪನ್ಮೂಲಗಳ ಮೂಲಕ ಶೋಷಣೆಯಾಗುತ್ತಿರುವ ರೈತರನ್ನು ರಕ್ಷಿಸಬೇಕೆಂದು ಮತ್ತು ಆ ಮೂಲಕ ರೈತ ಸಮುದಾಯಗಳಿಗೂ ತಂತ್ರಜ್ಞಾನ ಹಾಗೂ ಸಂಪನ್ಮೂಲಗಳಿಂದ ಸ್ವಾವಲಂಬಿಗಳನ್ನಾಗಿ ಮಾಡಬೇಕೆಂದು ಗ್ರಾಂಸಿಯು ಕರೆ ನೀಡುತ್ತಾನೆ.

ಸಾರ್ಡೀನಿಯಾದಲ್ಲಿನ ಗ್ರಾಂಸಿಯ ಬಾಲ್ಯದ ನೆನಪುಗಳಿಂದಾಗಿ ರೈತರ ಸಂಕಷ್ಟದ ಪರಮಾವಧಿಯನ್ನು ಗ್ರಾಂಸಿಯು ಅರ್ಥ ಮಾಡಿಕೊಂಡಿದ್ದನು. ಆ ಕಾರಣದಿಂದಾಗಿಯೇ ರೈತರ ಬಗೆಗಿರುವ ರೊಮ್ಯಾಂಟಿಕ್ ನಿಲುವುಗಳು ಅವನಿಗೆ ಅಪಥ್ಯವಾಗಿತ್ತು. ಭೂತಕಾಲದ ಸೆಂಟಿಮೆಂಟ್‌ಗಳ ಸಹಾಯದಿಂದ ಕೈಗಾರಿಕಾ ಬಂಡವಾಳಶಾಹಿಯನ್ನು ಗೆಲಲ್ಲು ಸಾಧ್ಯವಿಲ್ಲದ್ದನ್ನು ಆತನು ಮನಗಂಡಿದ್ದನು. ಗ್ರಾಂಸಿಯು “ಸೆಲೆಕ್ಷನ್‌ಫ್ರಂ ದಿ ಪ್ರಸನ್ ನೋಟ್ಸ್‌”ನಲ್ಲಿ ಮೆಟಿರಿಯಲ್ ಡಿಟರ್‌ಮೆಂಟ್ಸ್‌ಗಿಂತ ಹೆಜಿಮಾನಿಕ್ ಮತ್ತು ಸಬಾಲ್ಟರ್ನ್ ವರ್ಗಗಳ ಐಡಿಯಾಲಜಿಗಳು ಒಂದು ನಿರ್ದಿಷ್ಟವಾದ ಐತಿಹಾಸಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಬರೆಯುತ್ತಾನೆ. ಸಾಂಪ್ರದಾಯಿಕ ಮಾರ್ಕ್ಸಿಸ್ಟರಿಗೆ ಸಬಾಲ್ಟರ್ನ್ ಸಂವೇದನೆ ಎನ್ನುವ ಸೈದ್ಧಾಂತಿಕತೆಯು ಅಸಂಗತ ಎಂದೆನ್ನಿಸಿದರೂ, ಸಬಾಲ್ಟರ್ನ್ ತಳಹದಿಯ ಕ್ರಾಂತಿಕಾರಿ ಹೋರಾಟವು ನಿರುಪಯೋಗಿ ಮತ್ತು ಅರ್ಥವಿಲ್ಲದ್ದು ಎಂದೆನ್ನಿಸಿದರೂ, ಶುದ್ಧರೂಪದ ಕ್ರಾಂತಿಕಾರಿ ಹೋರಾಟವು ನಡೆಯುವ ಬಗ್ಗೆ ಗ್ರಾಂಸಿಯು ಸಂದೇಹ ವ್ಯಕ್ತಪಡಿಸುತ್ತಾನೆ. ಚಾರಿತ್ರಿಕತೆಯ ಪ್ರಕ್ರಿಯೆ ಬಗ್ಗೆ, ಅದರ ಸಂಕೀರ್ಣತೆ ಬಗ್ಗೆ ಇರುವ ವಿಚಾರವನ್ನು ಬುದ್ಧಿಜೀವಿಗಳು ‘ಭಾಷಾಂತರ’ ಮಾಡಿ ಜನರಿಗೆ ತಲುಪಿಸಬೇಕೆಂಬ ಕರೆಯನ್ನು ಇವನು ನೀಡುತ್ತಾನೆ.

“ವರ್ಗ ಹಿತಾಸಕ್ತಿ” ಎನ್ನುವುದು ಸಮಾಜದ ಗುಂಪುಗಳ ಒಳಗೇ ಉದಯಿಸಬೇಕೇ ವಿನಾ ಯಾರೋ ಹೊರಗಿನಿಂದ ಬಂದು ಅದನ್ನು ಹೇಳಿ ಅರ್ಥೈಸುವುದಲ್ಲ. ಧುತ್ತನೆ ಭುಗಿಲೇಳುವ ಸಬಾಲ್ಟರ್ನ್ಗಳ ಸ್ವಭಾವವನ್ನು ಅರಿಯುವುದು ಈ ಸಂದರ್ಭದಲ್ಲಿ ಮುಖ್ಯವಾಗುತ್ತದೆ. ಅದರ ಸ್ವರೂಪದ ಮಟ್ಟಿಗೆ ಇಂತಹ ರೈತರ ಸ್ವಭಾವ ಅಥವಾ ರೈತ ಸಮುದಾಯದ ರಚನೆ ಹಸಿಹಸಿಯಾಗಿರುತ್ತದೆ. ಅದು ಶಿಷ್ಟರೂಪದ ತಾರ್ಕಿಕತೆಯನ್ನು ಹೊಂದಿರುವುದಿಲ್ಲ. ಆದರೆ ಅದು ನಂಬಿಕೆಗಳ ಮತ್ತು ಭಾವನೆಗಳ ಅಭಿವ್ಯಕ್ತಿಯಾಗಿರುತ್ತದೆ. ಏಕೆಂದರೆ ಅವು ತಾರ್ಕಿಕವಾಗಿ ಸರಿ ಅಥವಾ ತಪ್ಪು ಎನ್ನುವ ಕಾರಣಕ್ಕಾಗಿಯಲ್ಲ. ಬದಲಿಗೆ ಅವು ಜನಸಾಮಾನ್ಯರ ಹೃದಯದಿಂದ ಬಂದ ಅಭಿವ್ಯಕ್ತಿಗಳೆಂಬ ಕಾರಣಕ್ಕಾಗಿ. ಹಾಗಾಗಿ ಇದನ್ನು ನಾವು ನಿರ್ಲಕ್ಷ್ಯ ಮಾಡುವಂತಿಲ್ಲ.

ಆಲ್ಬರ್ಟೋ ಮರಿಯಾ ಸೈರಸ್ ಅವರು ಗ್ರಾಂಸಿಯ ನಂತರದ ಬರವಣಿಗೆಗಳನ್ನು ವ್ಯಾಖ್ಯಾನಿಸುತ್ತ ಗ್ರಾಂಸಿಯು ಸಬಾಲ್ಟರ್ನ್ ಸಂವೇದನೆಗಳನ್ನು ಕುರಿತು ಮಾಡಿದ ಚರ್ಚೆಗೆ ತಾನೇ ಆಂಟಿ ಥೀಸಿಸ್ ಅನ್ನು ಮಾಡಿದ ವಿವರಗಳನ್ನು ನೀಡಿದ್ದಾನೆ (“ಗ್ರಾಂಸೀಸ್ ಅಬ್ಸರ್ವೇಶನ್ಸ್‌ ಆನ್ ಲೋಕ್‌ಲೋರ್” ಎ.ಎಸ್.ಸಸ್ಸೂನ್ ಸಂಪಾದಿಸಿದ ಅಪ್ರೋಚಸ್ ಟು ಗ್ರಾಂಸಿ, ರೈಟರ್ಸ್ ಆಂಡ್ ರೀಡರ್ಸ್‌, ಲಂಡನ್ ೧೯೮೨). ನಕಾರಾತ್ಮಕವಾಗಿ ರೈತರ ಸಂವೇದನೆಗಳನ್ನು ನೋಡುವುದಾದರೆ ಅದಕ್ಕಿರುವ ಮಿತಿಗಳನ್ನು ನೋಡಬೇಕಾಗುತ್ತದೆ ಎನ್ನುತ್ತಾನೆ ಗ್ರಾಂಸಿ. ಎಲ್ಲ ಕಡೆ ಚದುರಿ ಹೋಗಿರುವ ಮತ್ತು ಐಸೋಲೇಟ್ ಆಗಿರುವ ರೈತ ಸಮುದಾಯಗಳನ್ನು ಒಂದು ‘ಬೃಹತ್ ಸಂಘಟನೆಯ’ ರೂಪದಲ್ಲಿ ನೋಡುವುದು ಸಾಧ್ಯವಾಗುವುದಿಲ್ಲ. ರೈತರು ತಮ್ಮೊಳಗೇ ತಾವು ಭೂ ಒಡೆಯರು, ತಾವು ಗೇಣಿದಾರರು ಮತ್ತು ತಾವು ಕೃಷಿ ಕೂಲಿಕಾರ್ಮಿಕರು ಎಂದು ರೈತ ಸಮುದಾಯದೊಳಗೇ ಒಡೆದು ಹೋಗಿರುವುದರಿಂದ, ಜಮೀನ್ದಾರಿ ಶಕ್ತಿಗಳು ಇಂತಹ ಸನ್ನಿವೇಶದ ದುರ್ಲಾಭವನ್ನು ಪಡೆಯುತ್ತಾರೆ. ಇಟಲಿಯಲ್ಲಿನ ತನ್ನ ಅನುಭವದ ಹಿನ್ನೆಲೆಯಲ್ಲಿ ಕಂಡುಕೊಂಡಂತೆ ರೈತಾಪಿ ವರ್ಗಗಳು ಸಾಂಪ್ರದಾಯಿಕವಾಗಿ ಅರಾಜಕೀಯರಾಗಿ (ಎಪೊಲಿಟಿಕಲ್) ಮತ್ತು ಸೌಮ್ಯರಾಗಿ ಇರುವುದರಿಂದ ಆಡಳಿತಶಾಹಿಗಳು ತಮ್ಮ ರಾಜಕೀಯಕ್ಕೆ ಬಹಳ ಸುಲಭವಾಗಿ ಇವರನ್ನು ಬಳಸಿಕೊಳ್ಳುತ್ತಾರೆ. ಸಬಾಲ್ಟರ್ನ್ ವರ್ಗದಿಂದ ಮುಖ್ಯವಾಗಿ ರೈತಾಪಿ ಸಮುದಾಯಗಳಿಂದ ಸೈನಿಕರನ್ನು ಹಾಗೂ ಮರ್ಸಿನರೀಸ್‌ಗಳನ್ನು (ನಿರ್ದಿಷ್ಟ ಉದ್ದೇಶಕ್ಕಾಗಿ ಹತ್ಯೆಯನ್ನು ಮಾಡುವವರು) ಆಯ್ಕೆ ಮಾಡಿ ಅವರನ್ನು ತಮ್ಮ ಪುರೋಗಾಮಿ ಮತ್ತು ಗತಕಾಲದ ಪಳೆಯುಳಿಕೆಗಳನ್ನು ಕಾಪಾಡಲು ಬಳಸಿಕೊಂಡಿರುವುದನ್ನು ಗ್ರಾಂಸಿಯು ದಾಖಲು ಮಾಡಿದ್ದಾನೆ. ಒಗ್ಗಟ್ಟಾಗಿಲ್ಲದಿರುವುದು ಮತ್ತು ಸಮುದಾಯ ಪ್ರಜ್ಞೆಯ ಕೊರತೆ ಇಲ್ಲದಿರುವುದು ಸಬಾಲ್ಟರ್ನ್ ಸಿದ್ಧಾಂತದ ಪ್ರಮುಖ ಲಕ್ಷಣವಾಗಿದೆ. ಈ ಸಂಕೀರ್ಣತೆಗಳನ್ನು ರೈತ ಸಮುದಾಯಗಳು ಗ್ರಾಂಸಿಯ ಹೇಳುವ ‘ಕಾಮನ್ ಸೆನ್ಸ್’ ಮೂಲಕ ಅರ್ಥ ಮಾಡಿಕೊಂಡರೂ, ಅವರ ನಂಬಿಕೆಗಳು ಏಕ ಸ್ವರೂಪವಾಗಿಲ್ಲದಿರುವುದನ್ನು ನಾವು ನೋಡಬಹುದು.

ರೈತನೊಬ್ಬನ ಆಲೋಚನೆಗಳಲ್ಲಿ ತಾರ್ಕಿಕತೆಯಾಗಲಿ, ಸಿದ್ಧ ಸಿದ್ಧಾಂತಗಳಾಗಲಿ ಇರುವುದಿಲ್ಲ. ಅವನ ಆಲೋಚನೆಗಳಲ್ಲಿ ದ್ವಂದ್ವಗಳಿರುತ್ತವೆ. ಸಾಮಾಜಿಕ ಮತ್ತು ಪ್ರಸ್ತುತ ಸನ್ನಿವೇಶಗಳಲ್ಲಿ ಕಂಡುಬರುವ ಇಂತಹ ಆಲೋಚನೆಗಳು ಒಂದು ತತ್ವವಾಗಿ ಜನಸಾಮಾನ್ಯರಲ್ಲಿ ಗೋಚರಿಸುತ್ತವೆ. ಯಾವುದಾದರೂ ಒಂದು ಹೊಸ ವಿಚಾರಕ್ಕೆ ರೈತರು ತಮ್ಮನ್ನು ತೆರೆದುಕೊಳ್ಳುವುದು ವಿರಸ. ಆದರೆ, ಅವರು ಬಹಳಷ್ಟು ವಿಚಾರಗಳನ್ನು ಮತ್ತು ಬಹು ಬಗೆಯ ವಿನ್ಯಾಸಗಳನ್ನು ತಲೆಯಲ್ಲಿ ತುಂಬಿಕೊಳ್ಳಲು ಯತ್ನಿಸುವುದನ್ನು ಕಾಣಬಹುದಾಗಿದೆ. ತಾವಿರುವ ಸನ್ನಿವೇಶವು ಬದಲಾದರೂ ಅದರೊಂದಿಗೆ ತಮ್ಮ ವಿಚಾರಗಳು ಬದಲಾಗಲು ಸಮಯ ತೆಗೆದುಕೊಳ್ಳುವ ಮಂದಿ ರೈತರು. ಬಹುತೇಕ ಸಂದರ್ಭದಲ್ಲಿ ರೈತರು ತಮ್ಮೂರಿನ ಜಮೀನ್ದಾರರ ಅಥವಾ ಪೆಟಿ ಬೂರ್ಜ್ವಾಗಳ ವಿರುದ್ಧ ತಗಾದೆ ತೆಗೆಯುವುದಕ್ಕಿಂತ ಹೆಚ್ಚಾಗಿ ನಗರದ ಅಧಿಕಾರಿಗಳ ವಿರುದ್ಧವೇ ತಗಾದೆ ತೆಗೆದಿದ್ದನ್ನು ಗಮನಿಸಬಹುದು ಎನ್ನುತ್ತಾನೆ ಗ್ರಾಂಸಿ.

ಗ್ರಾಂಸಿಯ ‘ಸಬಾಲ್ಟರ್ನ್’ ಎನ್ನುವ ಪದವನ್ನು ಉಪಯೋಗಿಸಿದ ಬಗೆಗಳು ಸಬಾಲ್ಟರ್ನ್ ಅಧ್ಯಯನ ಕ್ರಮವನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ. ಮೂಲೆಗೊತ್ತಲ್ಪಟ್ಟ ಸಮುದಾಯಗಳಾದ ಕಾರ್ಮಿಕರು, ರೈತರು, ಕೂಲಿಕಾರರು, ಕುಶಲಕರ್ಮಿಗಳು, ಕುರಿ ಕಾಯುವವರು ಮತ್ತಿತರರು ಈ ಬಗೆಯ ಸಬಾಲ್ಟರ್ನ್ಗಳಾಗುತ್ತಾರೆ. ಫಾಸಿಸ್ಟ್‌ಸರಕಾರದ ರಾಜಕೀಯ ದೌರ್ಜನ್ಯಗಳಿಂದ ತಪ್ಪಿಸಿಕೊಳ್ಳಲು ಗ್ರಾಂಸಿಯು ‘ಪ್ರೊಲಟರಿಯೇಟ್’ ಎನ್ನುವ ಮಾರ್ಕ್ಸಿಸ್ಟ್‌ಪರಿಭಾಷೆಯ ಬದಲಿಗೆ ಸಬಾಲ್ಟರ್ನ್ ಸಮುದಾಯಗಳನ್ನು ಹೆಸರಿಸಿದ್ದನ್ನು ಡೇವಿಡ್ ಅರ್ನಾಲ್ಡ್‌ಅವರು ವಿವರಿಸಿದ್ದಾರೆ. ಹಾಗೆಯೇ ಮಾರ್ಕ್ಸಿಸಂ ಬದಲಿಗೆ ಗ್ರಾಂಸಿಯು ‘ದಿ ಫಿಲಾಸಫಿ ಆಫ್ ಪ್ರಾಕ್ಸೀಸ್‌’ ಎಂದು ಹೆಸರಿಸಿರುವುದನ್ನು ಗಮನಿಸಬಹುದಾಗಿದೆ. ಸಬಾಲ್ಟರ್ನ್ ಎನ್ನುವ ಪದವು ಕೇವಲ ರೈತರ ಮತ್ತು ಭೂ ಒಡೆಯರ ನಡುವಿನ ವಿಚಾರವನ್ನು ಮಾತ್ರ ಅಭಿವ್ಯಕ್ತಗೊಳಿಸದೆ ನಿಯಂತ್ರಣದಲ್ಲಿರುವವರು ಮತ್ತು ನಿಯಂತ್ರಣಕ್ಕೊಳಪಡಿಸುವವರ ನಡುವಿನ ಸಂಬಂಧದ ಪ್ರಕ್ರಿಯೆಯನ್ನು ವಿವರಿಸುತ್ತದೆ ಎಂದು ಗ್ರಾಂಸಿಯು ಭಾವಿಸಿದ್ದನು. ೧೯ನೆಯ ಶತಮಾನದ ಇಟಲಿ ಅಥವಾ ಭಾರತವು ಬಂಡವಾಳಪ್ರಧಾನ ದೇಶಗಳಾಗಿ ಇನ್ನೂ ರೂಪುಗೊಂಡಿಲ್ಲದ್ದರಿಂದ ವರ್ಗದ ಬಳಕೆಗಿಂತ ‘ಸಬಾಲ್ಟರ್ನ್’ ಬಳಕೆ ಹೆಚ್ಚು ಸೂಕ್ತವಾಗಿದೆ. ವಾಸ್ತವಿಕ ಚಾರಿತ್ರಿಕ ಸಂದರ್ಭವನ್ನು ಅರ್ಥ ಮಾಡಿಕೊಳ್ಳುವ ಸಂದರ್ಭದಲ್ಲಾಗುವ ಸಂಘರ್ಷ ಮತ್ತು ದ್ವಂದ್ವತೆಗಳನ್ನು ಹೊರಹೊಮ್ಮಿಸಲು ಗ್ರಾಂಸಿಯು ಬಳಸುವ ಹೆಜಿಮನಿ/ಸಬಾರ್ಡಿನೇಶನ್, ಫೋರ್ಸ್‌/ಕನ್ಸೆಂಟ್, ಆಕ್ಟಿವ್/ಪ್ಯಾಸಿವ್ ಎನ್ನುವ ಡೈಲೆಕ್ಟಿಕಲ್ ಜಾರ್ಗನ್‌ಗಳ ಬಳಕೆಯನ್ನು ನೋಡಬಹುದು.

ಮಾರ್ಕ್ಸ್ ಮತ್ತು ಏಂಗಲ್ಸ್ ಇವರು ಕಮ್ಯುನಿಸ್ಟ್ ಮ್ಯಾನಿಫೆಸ್ಟೋವಿನಲ್ಲಿ ಉಲ್ಲೇಖಿಸಿದಂತೆ ಸಂವೇದನೆ ಮತ್ತು ಸಂಘಟನೆಗೆ ಸಂಬಂಧಿಸಿದಂತೆ ಪ್ರೊಲಟರಿಯೇಟ್‌ಗೆ ಇರುವ ಅನುಕೂಲಗಳಿಂದ ಪ್ರೊಲಟರಿಯೇಟ್ ಶಕ್ತಿಶಾಲಿಯಾಗಿದ್ದಾನೆ. ಗ್ರಾಂಸಿ ಅದನ್ನು ಅನುಮೋದಿಸಿದರೂ ಪ್ರೊಲಟರಿಯೇಟ್ ಕಾರ್ಮಿಕವರ್ಗವು ಶೋಷಣೆಗೊಳಪಟ್ಟ ಮತ್ತು ದಮನಕ್ಕೊಳಪಟ್ಟ ಉಳಿದ ಸಬಾಲ್ಟರ್ನ್ಗಳನ್ನು ಗಣನೆಗೆ ತೆಗೆದುಕೊಳ್ಳಬೇಕೆಂದು ಆಶಿಸುತ್ತಾನೆ. ಹಾಗಾಗಿ ಪ್ರೊಲಟರಿಯೇಟ್ ಮತ್ತು ರೈತರ ಅಥವಾ ಕ್ರಾಂತಿಕಾರಿಗಳ ಹಾಗು ಪ್ರತಿಗಾಮಿಗಳ ನಡುವಿನ ದ್ವಂದ್ವಗಳಿಗಿಂತ ಹೆಚ್ಚಾಗಿ ಇವರೆಲ್ಲರೂ ಕ್ರಾಂತಿಕಾರಿಗಳಾಗಿ ಒಟ್ಟಾಗಿ ಹೋರಾಟ ಮಾಡುವ ಸಂದರ್ಭದಲ್ಲಿ ಕಾಣಬರುವ ಸಂವೇದನಾಶೀಲತೆ ಮತ್ತು ಒಗ್ಗಟ್ಟು ಈ ಸಂದರ್ಭದಲ್ಲಿ ಮುಖ್ಯವಾಗುತ್ತದೆ ಎಂದು ಗ್ರಾಂಸಿಯು ಅಭಿಪ್ರಾಯಪಟ್ಟಿದ್ದಾನೆ.

ಭಾರತದ ರೈತಾಪಿ ವರ್ಗದ ಬಗ್ಗೆ ಗ್ರಾಂಸಿಯ ತತ್ವವನ್ನು ಒಂದು ನಿರ್ದಿಷ್ಟ ಚಾರಿತ್ರಿಕ ಸಂದರ್ಭದಲ್ಲಿ ಅನ್ವಯಿಸುವಾಗ ನಮಗೆ ಬಹಳ ಮುಖ್ಯವೆಂದು ಅನ್ನಿಸುವ ವಿಷಯ ‘ಸ್ವಾಯತ್ತೆ’ (ಅಟಾನಮಿ). ಕೆಳವರ್ಗದ ಮೇಲೆ ಆಳುವವರು ತಮ್ಮ ಆಳ್ವಿಕೆಯನ್ನು ಮತ್ತು ಯಜಮಾನಿಕೆಯನ್ನು ದಬ್ಬಾಳಿಕೆ ಮೂಲಕ ಪ್ರತಿಪಾದಿಸುವುದನ್ನು ಗ್ರಾಂಸಿಯು ಈಗಾಗಲೇ ಚರ್ಚಿಸಿರುವುದು ಸರಿಯಷ್ಟೆ. ಆಧುನಿಕ ಬಂಡವಾಳಶಾಹಿ ಸಮಾಜದಲ್ಲಿ ರಾಜ್ಯಾಡಳಿತವನ್ನು ಕಿತ್ತೆಸೆಯಲು ಸಬಾಲ್ಟರ್ನ್ ವರ್ಗಗಳಿಗೆ ಅಸಾಧ್ಯವಾದದ್ದನ್ನು ಮತ್ತು ಸಬಾಲ್ಟರ್ನ್ ವರ್ಗಗಳು ಆಳುವ ವರ್ಗದ ಅಡಿಯಾಳಾದ ವಿಚಾರವನ್ನು ಚರ್ಚಿಸುವುದು ಗ್ರಾಂಸಿಯ ಉದ್ದೇಶವಾಗಿತ್ತು. ಅಲ್ಲಲ್ಲಿ ಸ್ವಾಯತ್ತೆಯ ಅಂಶಗಳು ಕಂಡುಬಂದರೂ ಸಬಾಲ್ಟರ್ನ್‌ಗಳ ನಡುವೆ ಸಮರ್ಥ ನಾಯಕತ್ವದ ಕೊರತೆ ಕಂಡುಬಂದದ್ದನ್ನು, ಸಬಾಲ್ಟರ್ನ್‌ಗಳು ಸಮರ್ಥವಾಗಿ ತಮ್ಮ ಬೇಡಿಕೆಗಳನ್ನು ಮಂಡಿಸಲು ವಿಫಲವಾಗಿದ್ದನ್ನು, ಆಳುವ ವರ್ಗದ ಹಿತಾಸಕ್ತಿಗಳನ್ನು ಸೋಲಿಸಲು ಸಮರ್ಥವಾದ ಸೈದ್ಧಾಂತಿಕ ಹಾಗೂ ರಾಜಕೀಯ ನಿರ್ಣಯಗಳನ್ನು ಮಂಡಿಸಲು ವಿಫಲವಾದದ್ದನ್ನು ಗ್ರಾಂಸಿಯು ಚರ್ಚಿಸಿರುವುದು ಗಮನಾರ್ಹ. ಸಬಾಲ್ಟರ್ನ್ ಗುಂಪುಗಳು ದಂಗೆ ಎದ್ದ ಸಂದರ್ಭದಲ್ಲಿ ಮತ್ತು ಸೆಟೆದು ನಿಲ್ಲುವ ಸಂದರ್ಭದಲ್ಲಿಯೂ ಆಳುವ ವರ್ಗಗಳ ಕಪಿಮುಷ್ಟಿಯಲ್ಲಿದ್ದ ವಿಚಾರವನ್ನು ತನ್ನ “ಸೆಲೆಕ್ಷನ್‌ಫ್ರಂ ದಿ ಪ್ರಿಸನ್‌ನೋಟ್ಸ್‌”ನಲ್ಲಿ ಗ್ರಾಂಸಿಯು ಮಂಡಿಸಿದ್ದನ್ನು ನಾವು ನೋಡಬಹುದು.

ಭಾರತದ ಚರಿತ್ರೆ ಬರವಣಿಗೆಯನ್ನು ವಿಮರ್ಶಿಸಿದ ಸಂದರ್ಭದಲ್ಲಿ ರಣಜಿತ್ ಗುಹಾ ಅವರು ಗ್ರಾಂಸಿಯ ಮೇಲ್ಕಾಣಿಸಿದ ವಿಷಯಗಳಿಗೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿರುವರು. ಭಾರತದಲ್ಲಿ ಸಬಾಲ್ಟರ್ನ್ ವರ್ಗಗಳ ಸ್ವಾಯತ್ತ ವಲಯಗಳು ಎಲೈಟ್ ರಾಜಕೀಯದ ಶಿಶುಗಳಾಗಿರಲಿಲ್ಲ ಮತ್ತು ಅವುಗಳ ಮೇಲೆ ಅವಲಂಬಿಸಿಕೊಂಡಿರಲಿಲ್ಲ ಎಂದು ಸಬಾಲ್ಟರ್ನ್ ಸ್ಟಡೀಸ್‌ನ ಪ್ರಥಮ ಸಂಪುಟದಲ್ಲಿ ರಣಜಿತ್ ಗುಹಾ ಅವರು ಬರೆದಿರುವುದು ಗಮನಾರ್ಹ.

ಸಬಾಲ್ಟರ್ನ್ಗಳೂ ಅಂತಿಮವಾಗಿ ಆಡಳಿತಶಾಹಿಗಳ ನಿಯಂತ್ರಣಕ್ಕೊಳಪಡುತ್ತಾರೆ ಎನ್ನುವ ಗ್ರಾಂಸಿಯ ಸೈದ್ಧಾಂತಿಕತೆಯನ್ನು ಒಪ್ಪದಿರುವವರ ಪೈಕಿ ಇ.ಪಿ. ಥಾಮ್ಸನ್‌ಅವರು ಪ್ರಧಾನರು. ಸಬಾಲ್ಟರ್ನ್ ಸ್ಟಡೀಸ್ ಅಧ್ಯಯನದ ಪ್ರವರ್ತಕ ರಣಜಿತ್ ಗುಹಾ ಅವರು ಕೂಡ ಇದೇ ಸಾಲಿಗೆ ಬರುತ್ತಾರೆ. ಈ ಕುರಿತಂತೆ ಗುಹಾ ಅವರು ಎರಡು ವಲಯಗಳ ರಚನೆಯ ಬಗ್ಗೆ ವ್ಯಾಖ್ಯಾನಿಸಿದ್ದನ್ನೂ ಗಮನಿಸಬಹುದು. ೧೮ನೇ ಶತಮಾನದ ಗ್ರಾಮೀಣ ಸಮಾಜ ಪ್ರಧಾನವಾದ ಇಂಗ್ಲೆಂಡಿನ ಚರಿತ್ರೆ ಪ್ರಧಾನವಾಗಿ ಸ್ಥಳೀಯ ಭೂ ಒಡೆಯರ ಮನೆತನ ಹಾಗೂ ಅವರ ಎಸ್ಟೇಟ್‌ಗಳನ್ನೇ ಕೇಂದ್ರವಾಗಿರಿಸಿಕೊಂಡಿದ್ದರ ಬಗ್ಗೆ ತೀವ್ರವಾದ ಆಕ್ಷೇಪವನ್ನು ಎತ್ತಿದವರು ಇ.ಪಿ. ಥಾಮ್ಸನ್‌ಅವರು. ಇಂಗ್ಲೆಂಡಿನ ಉನ್ನತ ವರ್ಗದವರ ಅಧಿಕಾರ, ದರ್ಪ ಹಾಗೂ ದೊಡ್ಡಸ್ತಿಕೆಗಳನ್ನು ಪ್ರದರ್ಶಿಸಲು ಅನುಕೂಲವಾಗುವಂತಹ ಚರಿತ್ರೆ ಬರವಣಿಗೆ ಕ್ರಮ ಅದು ಎಂದು ಥಾಮ್ಸನ್ ಅವರು ಚರಿತ್ರೆ ಬರವಣಿಗೆಯಲ್ಲಿ ಉನ್ನತ ವರ್ಗದವರ ಅಭಿಪ್ರಾಯ ದಟ್ಟವಾಗಿ ಮನ್ನಣೆ ಪಡೆದಿರುವುದನ್ನು ಟೀಕಿಸಿದ್ದಾರೆ. ಬದಲಿಗೆ, ಜನಸಾಮಾನ್ಯರ ದೃಷ್ಟಿಕೋನವು ಈ ಹಿನ್ನೆಲೆಯಲ್ಲಿ ಮಹತ್ವ ಪಡೆಯುತ್ತದೆ ಎಂದು ವಾದಿಸುತ್ತಾರೆ. ಈ ಸಂದರ್ಭದಲ್ಲೇ ಅವರು ಜನಸಾಮಾನ್ಯರು ಖ್ಯಾತರೊಂದಿಗಿಟ್ಟುಕೊಂಡ ಅಸಮಾಧಾನಗಳನ್ನೂ ಪರಿಗಣಿಸಬೇಕೆಂದು ಸಲಹೆ ಮಾಡುತ್ತಾರೆ. ಆ ಮೂಲಕ ರಾಜಕಾರಣ ಮತ್ತು ಸಂಸ್ಕೃತಿಗಳೆರಡೂ ವಿಚಾರಗಳಲ್ಲಿ ಬಡವರು ಮತ್ತು ಗಣ್ಯರ ನಡುವೆ ಇಲ್ಲದಿರುವ ಸಂಬಂಧಗಳು ಗ್ರಾಂಸಿಯ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿದೆ. ಈ ಎರಡೂ ವರ್ಗಗಳ ನಡುವಿರುವ ಅಂತರಗಳು ಥಾಮ್ಸನ್ನರ ವಾದಕ್ಕೆ ಪುಷ್ಟಿ ನೀಡುತ್ತವೆ. “ಆಳುವ ವರ್ಗದ ಪ್ರಭುತ್ವದ ಯಜಮಾನಿಕೆ ಏನೇ ಇದ್ದರೂ ಅದು ಬಡವರ್ಗವು ಮಾಡುತ್ತಿರುವ ಯಾವ ಕೆಲಸದ ಮೇಲೂ ಪರಿಣಾಮ ಬೀರಿಲ್ಲ. ಅದು ಬಡವರ್ಗದ ವಿರಾಮ ಅಥವಾ ಅವರು ಅನುಸರಿಸುತ್ತಿರುವ ವಿಧಿವಿಧಾನಗಳ ಮೇಲಾಗಲಿ ಅಥವಾ ಅವರ ಸುಖ ಸಂತೋಷಗಳ ಮೇಲಾಗಲಿ ಪರಿಣಾಮವನ್ನು ಬೀರಿಲ್ಲ” ಎಂದು ಥಾಮ್ಸನ್‌ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣಕ್ಕಾಗಿ ಯಜಮಾನಿಕೆ ಎನ್ನುವ ಅಂಶವು ಬಹಳ ಜಟಿಲವಾಗಿರಲಿಲ್ಲ ಅಥವಾ ಸ್ವಯಂಚಾಲಿತವಾಗಿರಲಿಲ್ಲ ಅಥವಾ ಅದು ಎಲ್ಲವನ್ನು ನಿರ್ಧರಿಸುವ ಶಕ್ತಿಯನ್ನು ಹೊಂದಿರಲಿಲ್ಲ. ಬದಲಿಗೆ, ಪ್ರಭುತ್ವ ಮತ್ತು ದಬ್ಬಾಳಿಕೆಗೆ ಒಳಗು ಮಾಡುವ ಸಂಬಂಧಗಳ ಸಂರಚನೆಯನ್ನು ರಚಿಸಿಕೊಂಡ ವಾಸ್ತುಶಿಲ್ಪ ಅದು ಎಂದು ಥಾಮ್ಸನ್ ವ್ಯಂಗ್ಯವಾಡುತ್ತಾರೆ. ಆ ವಾಸ್ತುಶಿಲ್ಪದಡಿಯಲ್ಲಿ ಭಿನ್ನವಾದ ದೃಶ್ಯಗಳನ್ನು ಸಂಯೋಜಿಸಲಾಗಿದೆ ಮತ್ತು ಬೇರೆ ಬೇರೆ ನಾಟಕಗಳನ್ನು ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಕುಟುಕುತ್ತಾರೆ (ಥಾಮ್ಸನ್ ಇ.ಪಿ. “ಎಯ್‌ಟೀನ್ಸ್ ಸೆಂಚುರಿ ಇಂಗ್ಲಿಶ್ ಸೊಸೈಟಿ ಕ್ಲಾಸ್ ಸ್ಟ್ರಗಲ್‌ವಿಥೌಟ್ ಕ್ಲಾಸ್‌” ಸೋಶಿಯಲ್ ಹಿಸ್ಟರಿ III, ೧೯೭೮). ರೇಮಂಡ್ ವಿಲಿಯಮ್ಸ್‌ ಅವರು ಕೂಡ ಇದೇ ಬಗೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದನ್ನು ನೋಡಬಹುದು (ವಿಲಿಯಮ್ಸ್‌೧೯೭೭). ಈ ರೀತಿಯಲ್ಲಿ ಥಾಮ್ಸನ್‌, ರೇಮಂಡ್ ವಿಲಿಯಮ್ಸ್‌ ಮತ್ತು ರಣಜಿತ್‌ ಗುಹಾ ಅವರು ಗ್ರಾಂಸಿಯು ಪ್ರಭುತ್ವದ ಯಜಮಾನಿಕೆಯು ಜಟಿಲವಾಗಿರುತ್ತದೆ, ದೃಢವಾಗಿರುತ್ತದೆ ಎಂದು ಹೇಳಿರುವುದಕ್ಕೆ ಭಿನ್ನಾಭಿಪ್ರಾಯಗಳನ್ನು ಸೂಚಿಸುತ್ತ ಅದು ನಿರಂತರ ಬದಲಾವಣೆಗೆ ಒಳಗಾಗುವ ಪ್ರಕ್ರಿಯೆಯನ್ನು ಹೊಂದಿದೆ ಮತ್ತು ಅದು ತೀವ್ರವಾಗಿ ಕೆಳಸ್ತರಗಳನ್ನು ಬಾಧಿಸಿಲ್ಲ ಎಂದು ಅಭಿಪ್ರಾಯಪಡುತ್ತಾರೆ.

“ಅಧೀನಕ್ಕೊಳಪಡಿಸುವುದು” ಎನ್ನುವ ಪ್ರಕ್ರಿಯೆ ಜೀವಂತವಾಗಿರುವುದೇ ಅದರೊಳಗಿರುವ ಸಂಬಂಧಗಳಿಂದ ಎಂದು ಪಾರ್ಥ ಚಟರ್ಜಿ ಅವರು ಗುರುತಿಸುತ್ತಾರೆ. ಅಧೀನಗೊಂಡ ವರ್ಗಗಳನ್ನು ನಾಶಪಡಿಸಿದರೆ ಅಧೀನಕ್ಕೊಳಪಡಿಸುವ ವರ್ಗಗಳು ಇರಲಿಕ್ಕೆ ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಬಾಲ್ಟರ್ನ್ಗಳ ಸ್ವಾಯತ್ತೆ (ಅಟಾನಮಿ) ಇಲ್ಲದಿದ್ದರೆ ದಬ್ಬಾಳಿಕೆ ಮಾಡುವವರಿಗೂ ತಮ್ಮ ಐಡೆಂಟಿಟಿ ಇರುವುದಿಲ್ಲ. ಪ್ರಬಲವರ್ಗಗಳ ಜೀವನ ಚರಿತ್ರೆಯನ್ನು ಬೆಸೆಯುವುದಕ್ಕಾಗಿ ಸಬಾಲ್ಟರ್ನ್ಗಳನ್ನು ಉಪಯೋಗಿಸಲಾಯಿತು ಎಂದು ಪಾರ್ಥ ಚಟರ್ಜಿ ಅವರು ರಣಜಿತ್‌ಗುಹಾ ಅವರನ್ನು ಬೆಂಬಲಿಸಿರುವುದು ಗಮನಾರ್ಹವಾಗಿದೆ. (ಪಾರ್ಥ ಚಟರ್ಜಿ ೧೯೮೩).

೩. ದಕ್ಷಿಣ ಏಷಿಯಾದಲ್ಲಿ ಸಬಾಲ್ಟರ್ನ್ ಅಧ್ಯಯನದ ಹುಟ್ಟು ಮತ್ತು ವಿಕಾಸ

ಸಬಾಲ್ಟರ್ನ್ ಅಧ್ಯಯನದ ಸ್ವರೂಪ

ಲೇಖನದ ಈ ಭಾಗದಲ್ಲಿ ರಣಜಿತ್ ಗುಹಾ ಅವರು ಸಬಾಲ್ಟರ್ನ್ ಅಧ್ಯಯನದ ಯೋಜನೆಯನ್ನು ಕಾರ್ಯರೂಪಕ್ಕೆ ಇಳಿಸಿದ ಸಂದರ್ಭದಲ್ಲಿ ಹೊರತಂದ ಮೊದಲನೆಯ ಸಂಚಿಕೆಯಲ್ಲಿ ವ್ಯಕ್ತಗೊಳಿಸಿದ ಅಭಿಪ್ರಾಯಗಳನ್ನು ಸಂಕ್ಷಿಪ್ತಗೊಳಿಸಲಾಗಿದೆ. ೧೯೮೨ ರಲ್ಲಿ ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್‌ನವರು ಪ್ರಕಟಿಸಿದ “ಸಬಾಲ್ಟರ್ನ್ ಸ್ಟಡೀಸ್‌I” ರಲ್ಲಿ ರಣಜಿತ್‌ ಗುಹಾ ಅವರು ಪ್ರಕಟಿಸಿದ “ಆನ್ ಸಮ್‌ ಆಸ್‌ಪೆಕ್ಟ್ಸ್‌ ಆಫ್ ದಿ ಹಿಸ್ಟಾರಿಯಾಗ್ರಫಿ ಆಫ್‌ ಕಲೋನಿಯಲ್‌ ಇಂಡಿಯಾ” ಎನ್ನುವ ಲೇಖನದಲ್ಲಿ ವ್ಯಕ್ತಪಡಿಸಿದ ಆಶಯಗಳನ್ನು ಒಂದೆಡೆ ತರುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ರಣಜಿತ್‌ಗುಹಾ ಅವರು ತಮ್ಮ ೧೬ ಅಂಶಗಳ ಮೂಲಕ ಸಬಾಲ್ಟರ್ನ್ ಅಧ್ಯಯನ ಆಶಯಗಳನ್ನು ವ್ಯಕ್ತಪಡಿಸಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ. ಅವುಗಳ ವಿವರಗಳು ಹೀಗಿವೆ:

೧. ವಸಾಹತುಶಾಹಿ “ಎಲಿಟಿಸಂ” (ಗಣ್ಯ ಉನ್ನತವರ್ಗದಿಂದ ನಿರ್ವಚಿಸಲ್ಪಟ್ಟ ಬೌದ್ಧಿಕ ತಿಳುವಳಿಕೆಯನ್ನು ‘ಎಲಿಟಿಸಂ’ ಎನ್ನಬಹುದು) ಮತ್ತು ಬೂರ್ಜ್ವಾ ರಾಷ್ಟ್ರೀಯವಾದಿ ‘ಎಲಿಟಿಸಂ’ಗಳು ಭಾರತದ ರಾಷ್ಟ್ರೀಯವಾದಿ ಚರಿತ್ರೆ ಲೇಖನ ಪರಂಪರೆಯಲ್ಲಿ ಬಹಳ ಪ್ರಧಾನವಾಗಿರುವ ಮತ್ತು ಪ್ರಭಾವಶಾಲಿಯಾಗಿರುವ “ಎಲಿಟಿಸಂಗಳು”.

‘ಎಲೈಟ್‌’ ಎನ್ನುವ ಪದವು ಪ್ರಾಬಲ್ಯದಲ್ಲಿದ್ದ ಗುಂಪುಗಳನ್ನು ಸಂಕೇತಿಸುತ್ತದೆ. ವಿದೇಶಿ ಹಾಗೂ ದೇಸಿ ಗುಂಪುಗಳು ಇವುಗಳಲ್ಲಿ ಮುಖ್ಯವಾದವು. ಬ್ರಿಟಿಶ್ ವಸಾಹತು ಕಾಲದ ಎಲ್ಲ ಭಾರತೀಯೇತರ ಬ್ರಿಟಿಶ್ ಅಧಿಕಾರಿಗಳು, ವಿದೇಶಿ ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು, ಪ್ಲಾಂಟರ್‌ಗಳು, ಭೂ ಒಡೆಯರು ಮತ್ತು ಮಿಶನರಿಗಳು ವಿದೇಶಿ ಪ್ರಾಬಲ್ಯದ ಗುಂಪಿನ ಒಳಗೆ ಬರುತ್ತಾರೆ.

ದೇಸಿ ಪ್ರಾಬಲ್ಯದ ಗುಂಪುಗಳಲ್ಲಿ ತಮ್ಮ ತಮ್ಮ ವರ್ಗ ಮತ್ತು ಹಿತಾಸಕ್ತಿಗಳನ್ನು ಪ್ರತಿನಿಧಿಸುವುದನ್ನು ಎರಡು ಹಂತಗಳಲ್ಲಿ ನೋಡಬಹುದು. ಅದರಲ್ಲಿ ಅಖಿಲ ಭಾರತದ ಮಟ್ಟದಲ್ಲಿ ಕಂಡುಬರುವ ಮೊದಲ ಗುಂಪು ಬಹುದೊಡ್ಡ ಫ್ಯೂಡಲ್‌ಗಳನ್ನು, ಕೈಗಾರಿಕಾ ಹಾಗೂ ವಾಣಿಜ್ಯೋದ್ಯಮದ ಬೂರ್ಜ್ವಾಗಳನ್ನು ಮತ್ತು ಬ್ರಿಟಿಶ್ ಅಧಿಕಾರಶಾಹಿಯ ಉನ್ನತ ಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸ್ಥಳೀಯರನ್ನು ಒಳಗೊಂಡಿದೆ.

ಪ್ರಾಂತೀಯ ಹಾಗೂ ಸ್ಥಳೀಯ ಪ್ರದೇಶಗಳಲ್ಲಿ ಕೂಡ ಅಖಿಲ ಭಾರತೀಯ ಮಟ್ಟದಲ್ಲಿ ಪ್ರಾಬಲ್ಯದಲ್ಲಿದ್ದ ಗುಂಪುಗಳು ಪ್ರಧಾನ ಪಾತ್ರವನ್ನು ತೋರಿಸುತ್ತಿತ್ತು. ಇದರೊಂದಿಗೆ ಅಖಿಲ ಭಾರತೀಯ ಮಟ್ಟದಲ್ಲಿ ಸಾಮಾಜಿಕವಾಗಿ ಪ್ರಾಬಲ್ಯ ಹೊಂದದೆ ಇರುವ ಶ್ರೇಣೀಕೃತ ವ್ಯವಸ್ಥೆಯಲ್ಲಿ ಕೆಳಹಂತದಲ್ಲಿದ್ದ ಕೆಲವು ಗುಂಪುಗಳು ಅಖಿಲ ಭಾರತೀಯ ಮಟ್ಟದಲ್ಲಿ ಪರಾಬಲ್ಯವಾಗಿರುವವರ ಹಿತಾಸಕ್ತಿಗಳನ್ನು ಕಾಯುತ್ತಿದ್ದವು. ಈ ಸಂದರ್ಭದಲ್ಲಿ ಕೆಳಹಂತದ ಈ ಬಗೆಯ ಗುಂಪುಗಳು ತಮ್ಮ ಸಮುದಾಯಗಳ ಹಿತಕ್ಕಿಂತ ಅಖಿಲ ಭಾರತೀಯ ಮಟ್ಟದಲ್ಲಿ ಪ್ರಭಾವಿಯಾಗಿದ್ದ ಸಾಮಾಜಿಕವಾಗಿ ಪ್ರತಿಷ್ಠಿತರಾಗಿರುವವರ ಹಿತಾಸಕ್ತಿಗಳನ್ನು ಕಾಯುವ ಕಾಯಕವನ್ನು ಮಾಡುತ್ತಿದ್ದವು. ದೇಸಿ ಎಲೈಟ್ ಗುಂಪಿಗೆ ಈ ಬಗೆಯ ಗುಂಪುಗಳೂ ಸೇರ್ಪಡೆ ಹೊಂದಿವೆ.

ದೇಸಿ ಎಲೈಟ್ ವರ್ಗಗಳು ಬಹುರೂಪಿಗಳಾಗಿವೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಾದೇಶಿಕ, ಆರ್ಥಿಕ ಹಾಗೂ ಅಭಿವೃದ್ಧಿ ಹಿನ್ನೆಲೆಯಲ್ಲಿ ವ್ಯತ್ಯಾಸಗಳಿರುವುದರಿಂದ ಈ ವರ್ಗಗಳ ಸ್ವರೂಪ ಕೂಡ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಿರುತ್ತವೆ. ಒಂದು ಸ್ಥಳದಲ್ಲಿ ದೇಸಿ ಎಲೈಟ್‌ಗಳ ಕೆಲವು ಗುಂಪುಗಳು ಶೋಷಣೆಗೆ ಒಳಪಟ್ಟರೆ, ಇನ್ನೊಂದು ಸ್ಥಳದಲ್ಲಿ ದೇಸಿ ಎಲೈಟ್‌ಗಳೇ ಶೋಷಕರಾಗಿರುವುದು ಕಂಡುಬರುತ್ತದೆ. ಇವುಗಳ ಸ್ವರೂಪವು ವೈರುಧ್ಯವಾಗಿರುವುದನ್ನು ಮತ್ತು ದ್ವಂದ್ವ ಸ್ವರೂಪವನ್ನು ಹೊಂದಿರುವುದನ್ನು ನಾವಿನಲ್ಲಿ ಗಮನಿಸಬಹುದಾಗಿದೆ.

ಈ ಎರಡೂ ಬಗೆಯ ಎಲಿಟಿಸಂಗಳು ಭಾರತದ ವಸಾಹತುಕಾಲದ ಬಹಳ ಮುಖ್ಯವಾದ ಸೈದ್ಧಾಂತಿಕ ಉತ್ಪನ್ನವಾಗಿದೆ. ವಸಾಹತೋತ್ತರ ಕಾಲದಲ್ಲಿ ಬ್ರಿಟನ್ ಮತ್ತು ಭಾರತದಲ್ಲಿ ಕೂಡ ಇವು “ನವವಸಾಹತುಶಾಹಿ” ಮತ್ತು “ನವರಾಷ್ಟ್ರೀಯವಾದಿ” ವಾಙ್ಮಯಗಳಾಗಿ ಮುಂದುವರಿದವು. ವಸಾಹತುಶಾಹಿ ಅಥವಾ ನವವಸಾಹತುಶಾಹಿ ಬರವಣಿಗೆ ಪರಂಪರೆಗಳು ಎಲಿಟಿಸ್ಟ್ ಬರವಣಿಗೆ ಕ್ರಮವನ್ನು ಉದ್ದೀಪಿಸಿದ ಬ್ರಿಟಿಶ್ ಬರಹಗಾರರನ್ನು ಮತ್ತು ಅವರ ಶೈಕ್ಷಣಿಕ ಸಂಸ್ಥೆಗಳನ್ನು ಭಾರತ ಹಾಗೂ ಉಳಿದ ದೇಶಗಳ ಬಹುತೇಕರು ಅನುಸರಿಸಿದರು.

೨. ಭಾರತ ದೇಶವನ್ನು ಕಟ್ಟುವಲ್ಲಿ ಮತ್ತು ಭಾರತೀಯ ರಾಷ್ಟ್ರೀಯ ಸಂವೇದನೆಯ ಬೆಳವಣಿಗೆಯಲ್ಲಿ ವಸಾಹತುಶಾಹಿ ಹಾಗೂ ಬೂರ್ಜ್ವಾ ಎಲಿಟಿಸಂಗಳಿಂದ ರೂಪಿಸಲ್ಪಟ್ಟ ಪೂರ್ವಗ್ರಹಗಳ ಪಾತ್ರ ಮಹತ್ವದ್ದಾಗಿದೆ. ಒಂದು ರೀತಿಯಲ್ಲಿ ಈ ಬಗೆಯ ರಾಷ್ಟ್ರೀಯತೆಯ ಪ್ರಕ್ರಿಯೆಯು ಮೂಲಭೂತವಾಗಿ “ಎಲೈಟ್‌ಗಳ” ಸಾಧನೆಗಳು ಎಂದು ಬಿಂಬಿಸಲ್ಪಟ್ಟವು. ವಸಾಹತುಶಾಹಿ ಮತ್ತು ನವವಸಾಹತುಶಾಹಿ ಚರಿತ್ರೆ ಬರವಣಿಗೆಗಳು ಬ್ರಿಟಿಶ್‌ ಆಳರಸರ, ಆಡಳಿತಗಾರರ, ಬ್ರಿಟಿಶ್ ನಿಯಮಗಳ, ಸಂಸ್ಥೆಗಳ ಮತ್ತು ಸಂಸ್ಕೃತಿ ಸಾಧನೆಗಳನ್ನು ಈ ಮೂಲಕ ಬಿಂಬಿಸಿದವು. ಅದೇ ರೀತಿಯಲ್ಲಿ ರಾಷ್ಟ್ರೀಯವಾದಿ ಮತ್ತು ನವರಾಷ್ಟ್ರೀಯವಾದಿ ಬರವಣಿಗೆಗಳು ಭಾರತದ ಉಚ್ಚವರ್ಗದ ವ್ಯಕ್ತಿತ್ವಗಳನ್ನು, ಸಂಸ್ಥೆಗಳನ್ನು, ಕಾರ್ಯ ಚಟುವಟಿಕೆಗಳನ್ನು ಮತ್ತು ಬೌದ್ಧಿಕತೆಯನ್ನು ಭಾರತದ ಚರಿತ್ರೆಯೆಂದು ಮತ್ತು ಅದನ್ನೇ ಭಾರತದ ರಾಷ್ಟ್ರೀಯತೆ ಎಂದು ಬಿಂಬಿಸಿದವು.

೩. ವಸಾಹತುಶಾಹಿ ಮತ್ತು ಬೂರ್ಜ್ವಾ ರಾಷ್ಟ್ರೀಯವಾದಿ ಎಲಿಟಿಸಂಗಳು ಭಾರತೀಯ ರಾಷ್ಟ್ರೀಯತೆಯನ್ನು ಮುಖ್ಯವಾಗಿ ಉತ್ತೇಜಿಸುವ ಮತ್ತು ಪ್ರತಿಕ್ರಿಯಿಸುವ ಪ್ರಕ್ರಿಯೆಗಳಿಗೆ ಮೀಸಲಿರಿಸಿವೆ. ವಸಾಹತುಶಾಹಿತ್ವವು ಕಟ್ಟಿಕೊಟ್ಟ ಸಂಸ್ಥೆಗಳು, ಅವಕಾಶಗಳು, ಸಂಪನ್ಮೂಲಗಳು ಇತ್ಯಾದಿಗಳಿಗೆ ಸ್ಪಂದಿಸಿದ ಭಾರತೀಯ ‘ಎಲೈಟ್‌’ಗಳ ಚಟುವಟಿಕೆಗಳನ್ನು ರಾಷ್ಟ್ರೀಯತೆ ಎಂದು ಬಿಂಬಿಸಲಾಯಿತು. ಭಾರತೀಯ ರಾಷ್ಟ್ರೀಯತೆಯನ್ನು “ಕಲಿಯುವ ಪ್ರಕ್ರಿಯೆ”ಯನ್ನಾಗಿ ಮಾಡಿಕೊಂಡ ಸ್ಥಳೀಯ ಎಲೈಟ್‌ಗಳು ವಸಾಹತುಶಾಹಿಗಳು ಭಾರತವನ್ನು ಆಳಲು ಹುಟ್ಟುಹಾಕಿದ ಆಡಳಿತ ಕ್ರಮಗಳಿಗೆ ಪ್ರತಿಸ್ಪಂದಿಸುತ್ತ ಅಥವಾ ಪ್ರತಿಕ್ರಿಯಿಸುತ್ತ ಇದ್ದ ಪ್ರಕ್ರಿಯೆಯನ್ನು ಗಮನಿಸಬಹುದು. ಅಂತಿಮವಾಗಿ, ಆಡಳಿತಾರೂಢ ಶಕ್ತಿಗಳ ಮತ್ತು ಸ್ಥಳೀಯ ಎಲೈಟ್‌ಗಳ ನಡುವೆ ನಡೆದ ಸಹಭಾಗಿತ್ವ ಹಾಗೂ ಸ್ಪರ್ಧೆಗಳು ಭಾರತೀಯ ರಾಷ್ಟ್ರೀಯತ್ವವನ್ನು ಹುಟ್ಟುಹಾಕಿದವು ಎಂದು ಬಿಂಬಿಸಿರುವುದನ್ನು ಗಮನಿಸಬಹುದು.

೪. ಆದರ್ಶಮಯ ಕಾರ್ಯ ಚಟುವಟಿಕೆಯ ಭಾಗವೆಂದು ಭಾರತೀಯ ರಾಷ್ಟ್ರೀಯತೆಯನ್ನು ನಿರ್ವಚಿಸಿದ ಎಲಿಟಿಸ್ಟ್ ಇತಿಹಾಸ ಬರವಣಿಗೆ ಕ್ರಮವು ಸ್ಥಳೀಯ ಎಲೈಟ್‌ಗಳು ಜನರನ್ನು ದಾಸ್ಯದಿಂದ ಸ್ವತಂತ್ರದೆಡೆಗೆ ಕೊಂಡೊಯ್ಯುವ ಸಾಧನವೆಂದು ರಾಷ್ಟ್ರೀಯತೆಯನ್ನು ಬಿಂಬಿಸಿರುವ ಪ್ರಯತ್ನಗಳನ್ನು ನೋಡಬಹುದು. ಅನೇಕ ನಾಯಕರು ಅಥವಾ ಉಚ್ಚ ವರ್ಗದ ಸಂಸ್ಥೆಗಳು ಅಥವಾ ಸಂಘಟನೆಗಳು ಈ ದಿಸೆಯಲ್ಲಿ ಪ್ರಧಾನ ಪಾತ್ರಗಳನ್ನು ವಹಿಸಿದವು. ವಸಾಹತು ವಿರೋಧಿ ನೆಲೆಯ ಸ್ವರೂಪದ ಹಿನ್ನೆಲೆಯಲ್ಲಿ ಸ್ಥಳೀಯ ಎಲೈಟ್‌ಗಳು/ಉಚ್ಚ ವರ್ಗಗಳು ಭಾರತೀಯ ರಾಷ್ಟ್ರೀಯ ಹೋರಾಟಗಳ ವಕ್ತಾರರಾದರು. ಈ ಸಂದರ್ಭಗಳಲ್ಲೆಲ್ಲ ಸ್ಥಳೀಯ ಎಲೈಟ್‌ಗಳು ಬ್ರಿಟಿಶ್‌ ಆಡಳಿತಶಾಹಿಯೊಂದಿಗೆ ಇಟ್ಟುಕೊಂಡಿದ್ದ ಸಹಭಾಗಿತ್ವದ ಅಂಶಗಳನ್ನು ಮರೆಮಾಚಲಾಯಿತು. ಸ್ಥಳೀಯ ಉಚ್ಚವರ್ಗಗಳ ಶೋಷಕರ ಮತ್ತು ದಮನಕರ ಪರ ವಿಚಾರಧಾರೆಗಳನ್ನು ಇವು ಜನವರ್ಗದ ಹಿತಾಸಕ್ತಿಗಾಗಿ ಹೋರಾಟ ಮಾಡುತ್ತವೆ ಎಂಬ ರೀತಿಯಲ್ಲಿ ಭಾರತೀಯ ರಾಷ್ಟ್ರೀಯ ಹೋರಾಟವು ಬಿಂಬಿಸಿವೆ. ಈ ರೀತಿಯಲ್ಲಿ ಭಾರತೀಯ ಎಲೈಟ್‌ಗಳಿಂದ ರೂಪಿತವಾದ ಈ ಬಗೆಯ ಚಟುವಟಿಕೆಗಳನ್ನೇ ಭಾರತ ರಾಷ್ಟ್ರೀಯತೆಯ ಚರಿತ್ರೆ ಎಂದು ಕರೆಯಲಾಯಿತು.

೫. ಎಲಿಟಿಸ್ಟ್‌ ಚರಿತ್ರೆ ಬರವಣಿಗೆ ಕ್ರಮಗಳಿಂದ ಕೂಡ ಅನೇಕ ಉಪಯೋಗಗಳಾಗಿವೆ. ವಸಾಹತು ರಾಜ್ಯದ ಬುನಾದಿಯ ಬಗ್ಗೆ, ಕೆಲವು ನಿರ್ದಿಷ್ಟ ಐತಿಹಾಸಿಕ ಸನ್ನಿವೇಶಗಳಲ್ಲಿ ಅದು ಹೇಗೆ ತನ್ನ ವಿವಿಧ ಘಟಕಗಳ ಮೂಲಕ ಕೆಲಸ ಮಾಡುತ್ತಿದ್ದ ವಿವರಗಳ ಬಗ್ಗೆ, ಉಚ್ಚ ವರ್ಗಗಳ ಸಂಸ್ಥೆಗಳಲ್ಲಿದ್ದ ಬ್ರಿಟಿಶ್ ಮತ್ತು ಭಾರತೀಯ ವ್ಯಕ್ತಿತ್ವಗಳ ಬಗ್ಗೆ ಮತ್ತು ಎಲೈಟ್‌ ಸಂಘಟನೆಗಳ ಬಗ್ಗೆ ಎಲಿಟಿಸ್ಟ್‌ ಚರಿತ್ರೆ ಬರವಣಿಗೆಯಲ್ಲಿ ಸಾಕಷ್ಟು ವಿವರಗಳು ದೊರಕುತ್ತವೆ.

೬. ಇಷ್ಟೆಲ್ಲ ಆದರೂ ಈ ಬಗೆಯ ಚರಿತ್ರೆ ಬರವಣಿಗೆಗಳು ಭಾರತದ ರಾಷ್ಟ್ರೀಯತೆಯನ್ನು ವಿವರಿಸಲು ಶಕ್ಯವಾಗುವುದಿಲ್ಲ. ಈ ಬಗೆಯ ಚರಿತ್ರೆ ಬರವಣಿಗೆಗಳು ಜನ ಹೋರಾಟಗಳ ಅಭಿವ್ಯಕ್ತತೆಯನ್ನು ದಾಖಲಿಸಲು ವಿಪಲವಾಗಿವೆ. ಈ ಬಗೆಯ ಜನರ – ಜನಸಾಮಾನ್ಯರ ಅಭಿವ್ಯಕ್ತಿಯನ್ನು ಎಲಿಟಿಸ್ಟ್ ಚರಿತ್ರೆ ಬರವಣಿಗೆಗಳು “ಕಾನೂನು ಮತ್ತು ಸುವ್ಯವಸ್ಥೆಯ” ಭಾಗವಾಗಿ ನೋಡಿ ನೆಗೆಟೀವ್ ಅಪ್ರೋಚ್ ಮಾಡಿದ್ದೇ ಹೆಚ್ಚು. ಕೆಲವೊಮ್ಮೆ ಇವುಗಳನ್ನು ಸಕಾರಾತ್ಮಕವಾಗಿ ವಿಮರ್ಶಿಸಿದರೂ, ಇವುಗಳನ್ನು ಉಚ್ಚವರ್ಗಗಳ ನಾಯಕರ ಚರಿಷ್ಮಾಗೆ ಪ್ರಭಾವಕ್ಕೊಳಗಾದ ಅಥವಾ ಪ್ರತಿಕ್ರಿಯೆ ನೀಡಿದ ಗುಂಪುಗಳು ಎಂದು ವಿವರಿಸಲು ಮಾತ್ರ ಬಳಸಿಕೊಳ್ಳಲಾಯಿತು. ಹೀಗಾಗಿ ಸಹಸ್ರಾರು, ಲಕ್ಷಾಂತರ ಜನರು ಅನೇಕ ಬಾರಿ ಬೇರೆ ಬೇರೆ ಕಾರಣಗಳಿಗಾಗಿ ಪ್ರತಿಭಟನೆ ಮಾಡಿದ ಅಂಶಗಳನ್ನು ಜನರ ದೃಷ್ಟಿಕೋನದಲ್ಲಿ ವ್ಯಾಖ್ಯಾನಿಸದೆ ಉಚ್ಚವರ್ಗದ ಎಲೈಟ್ ಹಿತಾಸಕ್ತಿಯ ಹಿನ್ನೆಲೆಯಲ್ಲಿ ನಿರ್ವಚಿಸಲಾಯಿತು. ೧೯೧೯ ರಲ್ಲಿ ರೌಲತ್‌ ಕಾಯಿದೆ ವಿರೋಧಿ ಹೋರಾಟದಲ್ಲಿ ಮತ್ತು ೧೯೪೨ ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಲಕ್ಷಾಂತರ ಜನರು ಭಾಗವಹಿಸಿದ ಹೋರಾಟವು ಸ್ಪಾಂಟೇನಿಯಸ್‌ ಆಗಿ, ಯಾವುದೇ ಎಲೈಟ್ ನಾಯಕರಿಲ್ಲದೆ ಹೊರಹೊಮ್ಮಿದ ವಿಚಾರಳನ್ನು ಎಲಿಟಿಸ್ಟ್ ಚರಿತ್ರೆ ಬರವಣಿಗೆಗಳು ದಾಖಲು ಮಾಡಲು ಸೋತಿವೆ. ಈ ಬಗೆಯ ಏಕಪಕ್ಷೀಯ ಚರಿತ್ರೆ ಬರವಣಿಗೆಗಳು ಎಲಿಟಿಸ್ಟ್ ರಾಜಕೀಯದ ಕೆಳಗೇ ನಡೆದ ಚೌರಿಚೌರಾ ಘಟನೆಗಳ ಅಥವಾ ರಾಯಲ್ ಇಂಡಿಯನ್ ನೇವಿಯು ರೂಪಿಸಿದ ದಂಗೆಗಳನ್ನು ಅಥವಾ ಆ ಬಗೆಯ ಪ್ರತಿರೋಧಕ್ಕೆ ಸಂಬಂಧಿಸಿದ ಘಟನೆಗಳನ್ನು ವಿವರಿಸಲು ವಿಫಲವಾಗಿವೆ.

೭. ಎಲಿಟಿಸ್ಟ್ ಚರಿತ್ರೆ ಬರವಣಿಗೆ ಕ್ರಮವು ಬಹಳ ಮಟ್ಟಿಗೆ ನೆಚ್ಚಿಕೊಂಡಿರುವ ವರ್ಗಾಧಾರಿತ ನೋಟವೇ ಅದರ ಆ ಕ್ರಮದ ವಿಫಲತೆಗೆ ಕಾರಣವಾಯಿತು. ಬ್ರಿಟಿಶರು ಭಾರತದ ಆಡಳಿತ ವ್ಯವಸ್ಥೆಗೆ ಅನುಕೂಲವಾಗಲೆಂದು ರೂಪಿಸಿದ ಕಾನೂನುಗಳು, ನಿಯಮಗಳು ಮತ್ತು ಸಂಸ್ಥೆಗಳು ಮತ್ತು ಅದಕ್ಕೆ ಸ್ಪಂದಿಸಿದ ಸ್ಥಳೀಯವಾದ ಪ್ರಬಲ ಸಮಾಜಗಳ ಚಟುವಟಿಕೆಗಳನ್ನೇ ಭಾರತದ ರಾಜಕೀಯ ಸ್ಥಿತ್ಯಂತರಗಳನ್ನು ಅಳೆಯುವ ಮಾಪನವನ್ನಾಗಿ ಎಲಿಟಿಸ್ಟ್ ಚರಿತ್ರೆ ಬರವಣಿಗೆ ರೂಪಿಸಿರುವುದು ಚರಿತ್ರೆ ಬರವಣಿಗೆ ಕ್ರಮದ ಮುಖ್ಯ ದೋಷವಾಗಿದೆ. ಬ್ರಿಟಿಶ್ ಆಡಳಿತಗಾರರಿಗೆ ಮತ್ತು ಅವರು ರೂಪಿಸಿರುವ ವ್ಯವಸ್ಥೆಗೆ ಪ್ರತಿಕ್ರಿಯಿಸಿದ ಸ್ಥಳೀಯ ಎಲೈಟ್‌ಗಳ ಪರಸ್ಪರ ವ್ಯವಹಾರಗಳನ್ನು ಮತ್ತು ಸಂಬಂಧಗಳನ್ನು ಭಾರತದ ರಾಷ್ಟ್ರೀಯತೆಯ ಮಜಲೆಂದು ಬಿಂಬಿಸಿರುವುದ್ನು ಗಮನಿಸಬಹುದು.

೮. “ಜನತೆಯ ರಾಜಕೀಯ” (ಪಾಲಿಟಿಕ್ಸ್ ಆಫ್ ದಿ ಪೀಪಲ್) ಎನ್ನುವ ವಿಚಾರದ ಮೇಲೆ ಎಲಿಟಿಸ್ಟ್ ಚರಿತ್ರೆ ಬರವಣಿಗೆ ಕ್ರಮವು ರೂಪಿಸಿದ ಆಚಾರಿತ್ರಿಕ ಇತಿಹಾಸ ಬರವಣಿಗೆ ಕ್ರಮವನ್ನು ಇಲ್ಲಿ ಗಮನಿಸಬಹುದಾಗಿದೆ. ಭಾರತದ ಎಲೈಟ್ ಅಥವಾ ಸ್ಥಳೀಯ ಪ್ರಬಲ ಉಚ್ಚ ಸಮುದಾಯಗಳು ರೂಪಿಸಿದ ಅಥವಾ ವಸಾಹತುಶಾಹಿಗಳು ರೂಪಿಸಿದ ವ್ಯವಸ್ಥೆಯ ರಾಜಕಾರಣಕ್ಕೆ ಸಮಾನಾಂತರವಾದ ರಾಜಕೀಯವನ್ನು ಪಟ್ಟಣ ಮತ್ತು ಗ್ರಾಮಗಳಲ್ಲಿನ ಸಬಾಲ್ಟರ್ನ್ ವರ್ಗಗಳು, ಮೂಲೆಗೊತ್ತಲ್ಪಟ್ಟ ವರ್ಗಗಳ ಜನಾಮಾನ್ಯರು ವಸಾಹತು ಕಾಲದುದ್ದಕ್ಕೂ ಮಾಡಿರುವುದನ್ನು ನಾವು ಗಮನಿಸಬಹುದು. ಈ ಬಗೆಯ ಸಮಾನಾಂತರ ರಾಜಕೀಯದ ಕೇಂದ್ರಬಿಂದುವೇ ಜನರು. “ಜನರೇ” ಕೇಂದ್ರಬಿಂದುವಾಗಿರುವ ಈ ಸ್ವಾಯತ್ತ ವಲಯ (ಆಟಾನಮಸ್ ಡೊಮೈನ್) ಎಲೈಟ್ ರಾಜಕೀಯದ ಉತ್ಪನ್ನವೂ ಅಲ್ಲ ಅಥವಾ ಆ ರಾಜಕೀಯದ ಪರಾವಲಂಬಿಯೂ ಆಗಿಲ್ಲ. ಸಾಂಪ್ರದಾಯಿಕ ಮೂಲಗಳನ್ನು ಹೊಂದಿದ ಸಬಾಲ್ಟರ್ನ್ ವರ್ಗಗಳ ಚಲನಶೀಲತೆಯನ್ನು ವಸಾಹತುಪೂರ್ವ ಕಾಲಘಟ್ಟದಿಂದ ಗುರುತಿಸಬಹುದು. ಹಾಗೆಂದ ಮಾತ್ರಕ್ಕೆ ಇದು ಯಾವುದೋ ಬಗೆಯ ಅರಾಜಕತೆಯ ಅಭಿವ್ಯಕ್ತಿಯೂ ಅಲ್ಲ. ವಸಾಹತುಶಾಹಿಯ ಆಳ್ವಿಕೆಯ ನಂತರ ಅಸ್ತಿತ್ವ ಕಳೆದುಕೊಂಡ ಸಾಂಪ್ರದಾಯಿಕ ಎಲೈಟ್‌ಗಳಿಗಿಂತ ತಮ್ಮ ಚಹರೆಯನ್ನು ವಸಾಹತುಕಾಲದಲ್ಲಿಯೂ ಭದ್ರವಾಗಿಟ್ಟುಕೊಂಡ ಜನವರ್ಗ ಇದು. ಸಾಂಪ್ರದಾಯಿಕ ಎಲಿಟಿಸ್ಟರು ವಸಾಹತುಕಾಲದ ವ್ಯವಸ್ಥೆಯೊಂದಿಗೆ ಮಾಡಿಕೊಂಡ ಹೊಂದಾಣಿಕೆಯನ್ನು ಭಾರತದ ಈ ಜನವರ್ಗವು ಮಾಡಿಕೊಳ್ಳದೆ ನಿರಂತರವಾಗಿ ತನ್ನ ಅಸ್ತಿತ್ವವನ್ನು ಈ ವರ್ಗವು ಕಾಯ್ದುಕೊಂಡಿತು.

೯. “ಜನವರ್ಗದ” ಮುಖ್ಯ ಗುಣಲಕ್ಷಣವೆಂದರೆ ಜನ ಸಮೂಹ (ಮೊಬಿಲೈಸೇಶನ್). ಎಲಿಟಿಸ್ಟ್ ಚರಿತ್ರೆ ಬರವಣಿಗೆಗಳು ಇದರ ಬಗ್ಗೆ ಹೇಳಿದ್ದು ಕಡಿಮೆ. ಎಲೈಟ್ ರಾಜಕೀಯದ ಭಾಗವಾಗಿ ಕೂಡ ಜನವರ್ಗದ ಭಾಗವಹಿಸುವಿಕೆ ಇದ್ದರೂ ಅದು ಬಹುತೇಕ ವಸಾಹತುಶಾಹಿ ಕಟ್ಟಿಕೊಟ್ಟ ಭೂಮಿಕೆಯಡಿಯಲ್ಲಿ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಬ್ರಿಟಿಶ್ ಪಾರ್ಲಿಮೆಂಟರಿ ವ್ಯವಸ್ಥೆಯು ರೂಪಿಸಿದ ಅಂಶಗಳಲ್ಲಿ ಕಂಡುಕೊಂಡ ಜನಸಮೂಹದ ಅಂಶವಿದು. ಸಬಾಲ್ಟರ್ನ್ ಅಥವಾ ಕೆಳವರ್ಗದ ಸಮುದಾಯದ ಜನಸಮೂಹವು ಬಹುತೇಕವಾಗಿ ರಕ್ತಸಂಬಂಧಿ ಮೂಲದವು. ಕೆಲವೊಮ್ಮೆ ಅದು ನಿರ್ದಿಷ್ಟ ಪ್ರದೇಶದ ಅಥವಾ ವರ್ಗ ಸಂಬಂಧಿ ಸಂಘಟನೆಗಳ ಮೂಲವನ್ನೂ ಹೊಂದಿರುತ್ತಿದ್ದವು. ಕಾನೂನಿನ ಪರಿಧಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮತ್ತು ಸಂವಿಧಾನದ ಮಿತಿಯಲ್ಲಿರುವ ಎಲೈಟ್ ರಾಜಕೀಯದ ಜನ ಹೋರಾಟದ ರಾಜಕೀಯವನ್ನು ನೋಡಬಹುದಾಗಿದೆ. ಅಲ್ಲಿಯೇ ಅದರ ರಾಜಕೀಯ ಮಿತಿನ್ನೂ ಗಮನಿಸಬಹುದಾಗಿದೆ. ಆದರೆ ಸಬಾಲ್ಟರ್ನ್ ಜನಸಮುದಾಯದ ಅಭಿವ್ಯಕ್ತಿಯು ಬಹುತೇಕವಾಗಿ ಹಿಂಸೆಯೇ ಆಗಿರುತ್ತದೆ. ಎಲೈಟ್ ರಾಜಕಾರಣವು ಬಹಳ ಬುದ್ಧಿಪೂರ್ವಕವಾಗಿದ್ದು ಒಂದು ರೀತಿಯಲ್ಲಿ ನಿಯಂತ್ರಣದಲ್ಲಿದ್ದರೆ ಸಬಾಲ್ಟರ್ನ್ ರಾಜಕಾರಣವು ಸ್ಟಾಂಟೇನಿಯಸ್ ಆಗಿರುವುದು. ವಸಾಹತುಕಾಲದಲ್ಲಿ ನಾವು ಕಂಡ ರೈತರ ದಂಗೆಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದಾಗಿದೆ. ನಗರ ಪ್ರದೇಶದ ದುಡಿಯುವ ಜನ ಸಮುದಾಯಗಳನ್ನು ಮತ್ತು ಸಣ್ಣ ಸಣ್ಣ ವೃತ್ತಿಪರರನ್ನು (ಪೆಟ ಬೂರ್ಜ್ವಾಸಿ) ಕೂಡ ಈ ಸಂದರ್ಭದಲ್ಲಿ ಹೆಸರಿಸಬಹುದು.

೧೦. ಸಬಾಲ್ಟರ್ನ್ ವರ್ಗಗಳು ಎಲೈಟ್‌ಗಳಿಗೆ ಪ್ರತಿರೋಧವನ್ನು ನೀಡಿರುವುದು ಸಬಾಲ್ಟರ್ನ್ ಗಳ ಲಕ್ಷಣವಾಗಿದೆ.

೧೧. ಉತ್ಪಾದನೆಯ ಸಂದರ್ಭದಲ್ಲಿ ಶೋಷಣೆಗೆ ಒಳಪಟ್ಟ ಸಂದರ್ಭಗಳಲ್ಲಿ ಸಬಾಲ್ಟರ್ನ್ ವರ್ಗಗಳು ಸಿಡಿದಿದ್ದನ್ನು ನಾವು ಗಮನಿಸಬಹುದು. ಕಾರ್ಮಿಕರು ಮತ್ತು ರೈತರಿಂದ ಆರಂಭಗೊಂಡು ವರ್ಗ ಪ್ರದೇಶದ ಅಸಂಘಟಿತ ಕಾರ್ಮಿಕರು, ಬಡವರು, ಕೆಳವರ್ಗಗಳ ಜನರು ಅನುಭವಿಸಿದ ಶೋಷಣೆಯ ಸಂದರ್ಭದಲ್ಲಿ ಕೂಡ ಸಬಾಲ್ಟರ್ನ್ ಪ್ರತಿಭಟನೆಗಳು ಹುಟ್ಟಿಕೊಳ್ಳುತ್ತವೆ. ಪೆಟ ಬೂರ್ಜ್ವಾಸಿಯ ಕೆಳವರ್ಗಗಳ ಪ್ರತಿಭಟನೆಗಳ ಮೂಲಗಳನ್ನೂ ಇಲ್ಲಿ ನೋಡಬಹುದು.

೧೨. ಸಬಾಲ್ಟರ್ನ್ ವರ್ಗಗಳ ಮತ್ತು ಎಲೈಟ್‌ವರ್ಗಗಳ ನಡುವಿರುವ ರಾಜಕೀಯದ ಎಲ್ಲೆಗಳ ನಡುವೆ ಆಗಾಗೆ ವ್ಯತ್ಯಾಸಗಳಾಗುವುದುಂಟು. ಕೆಲವು ಸಂದರ್ಭಗಳಲ್ಲಿ ಈ ಎರಡು ಭಿನ್ನ ವರ್ಗಗಳು ಒಟ್ಟಾಗಿರುವ ಸಂದರ್ಭಗಳನ್ನೂ ಗುರುತಿಸಬಹುದು. ಈ ವರ್ಗಗಳ ನಡುವೆ ವೈರುಧ್ಯಗಳಿರುವುದನ್ನೂ ನಾವು ಕಾಣಬಹುದು.

೧೩. ಹೋರಾಟಗಳಲ್ಲಿ ವೈರುಧ್ಯಗಳಿದ್ದರೂ ಅನೇಕ ಸಂದರ್ಭಗಳಲ್ಲಿ ಈ ಎರಡು ವರ್ಗಗಳು ಒಟ್ಟಾಗಿದ್ದು ಹಾಗೂ ಒಗ್ಗಟ್ಟಾಗಿ ಹೋರಾಡಿದ್ದೂ ಉಂಟು. ಸ್ಥಳೀಯ ಉಚ್ಚ ವರ್ಗಗಳು/ಎಲೈಟ್‌ಗಳು ಬಹಳ ಮುಖ್ಯವಾಗಿ ಬೂರ್ಜ್ವಾಸಿಗಳು ಇಂತಹ ಮೈತ್ರಿಗಳ ಉಗಮಕ್ಕೆ ಕಾರಣಕರ್ತರಾಗಿದ್ದಾರೆ. ಸಾಮ್ರಾಜ್ಯಶಾಹಿ ವಿರೋಧಿ ಹೋರಾಟಗಳ ಸಂದರ್ಭದಲ್ಲೆಲ್ಲ ಈ ಬಗೆಯ ಮೈತ್ರಿಗಳು ಹೋರಾಟದ ಕಾರ್ಯಚಟುವಟಿಕೆಗಳಿಗೆ ಸಹಾಯಕವಾದವು. ಆದರೆ, ಬಹುತೇಕ ಸಂದರ್ಭಗಳಲ್ಲಿ ಈ ಎರಡೂ ವರ್ಗಗಳು ಒಟ್ಟಿಗೆ ರೂಪಿಸಿದ ಹೋರಾಟಗಳು ಸಾಮ್ರಾಜ್ಯವಿರೋಧಿ ಆಶಯವನ್ನು ಬಿಟ್ಟುಕೊಟ್ಟಿರುವುದನ್ನು ಗಮನಿಸಬಹುದು. ಈ ಕಾರಣಕ್ಕಾಗಿಯೇ ಮೈತ್ರಿ ಹೋರಾಟಗಳು ವಿಫಲವಾಗಿರುವುದು. ಈ ಮೈತ್ರಿ ಹೋರಾಟಗಳು ಸ್ಥಳೀಯ ಉಚ್ಚ ವರ್ಗ/ಎಲೈಟ್‌ಗಳ ನಿರ್ದೇಶನಂತೆ ನಡೆದದ್ದರಿಂದ ಸಹಜವಾಗಿಯೇ ಅವು “ಸಂವಿಧಾನಾತ್ಮಕವಾಗಿ, ನ್ಯಾಯಯುತವಾಗಿ” ವಸಾಹತುಶಾಹಿ ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ಹೋರಾಟಗಳನ್ನು ಹಮ್ಮಿಕೊಂಡವು. ಪರಿಣಾಮವಾಗಿ ಈ ಹೋರಾಟಗಳು ನೆಲಕಚ್ಚಿದವು. ಇಲ್ಲವೇ ವಸಾಹತುಶಾಹಿ ಶಕ್ತಿಗಳಿಂದ ದಮನಕ್ಕೊಳಗಾಗಿ ಅವಮಾನವನ್ನು ಅನುಭವಿಸಿದವು. ಅಂತಿಮವಾಗಿ ಇವು ಉಚ್ಚ ವರ್ಗಗಳ ಎಲೈಟ್‌ಗಳ ಆಶಯವನ್ನು ಕಾಪಾಡುವ ನಿಟ್ಟಿನಲ್ಲೇ ಬಳಸಲ್ಪಟ್ಟವು.

೧೪. ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೂ ಸಬಾಲ್ಟರ್ನ್ ರಾಜಕೀಯಕ್ಕೆ ರಾಷ್ಟ್ರ ವಿಮುಕ್ತಿಗಾಗಿ ಒಂದು ಪ್ರಬಲವಾದ ಪೂರ್ಣ ಪ್ರಮಾಣದ ರಾಷ್ಟ್ರೀಯ ಚಳವಳಿಯನ್ನು ರೂಪಿಸಲು ಸಾಧ್ಯವಾಗಲಿಲ್ಲ. ದುಡಿಯುವ ವರ್ಗಗಳು ಈ ಹಿನ್ನೆಲೆಯಲ್ಲಿ ಸಾಕಷ್ಟು ಪಕ್ವತೆಯನ್ನು ಹೊಂದಿಲ್ಲದಿರುವುದು ಮತ್ತು ಬಹಳ ಮುಖ್ಯವಾಗಿ ರೈತಾಪಿ ವರ್ಗಗಳ ಜೊತೆಗೆ ಸಾಕಷ್ಟು ಹೊಂದಾಣಿಕೆ ಮಾಡಿಕೊಳ್ಳದಿರುವುದು ಸಬಾಲ್ಟರ್ನ್ ರಾಜಕೀಯದ ಹಿನ್ನೆಡೆಗೆ ಕಾರಣಗಳಾಗಿವೆ. ಬೂರ್ಜ್ವಾಗಳು ಕಂಡ ವೈಫಳ್ಯತೆಯ ಲಾಭವನ್ನು ಈ ಕಾರಣಗಳಿಂದಾಗಿಯೇ ಸಬಾಲ್ಟರ್ನ್ ವರ್ಗಗಳು ಬಳಸಿಕೊಳ್ಳಲಾಗಲಿಲ್ಲ. ಬಹಳ ಪ್ರಬಲವಾದ ಮತ್ತು ವ್ಯಾಪ್ತಿಯುಳ್ಳ ವಸಾಹತುವಿರೋಧಿ ಸಂವೇದನೆಗೆ ಸಂಬಂಧಿಸಿದಂತೆ ಬಹಳ ಶ್ರೀಮಂತ ಹಿನ್ನೆಲೆಯ ಇಂತಹ ರೈತ ಪ್ರತಿಭಟನೆಗಳು ಸೂಕ್ತ ನಾಯಕತ್ವ ಇಲ್ಲದೆ ನೇಪಥ್ಯಕ್ಕೆ ಸರಿದವು. ಸ್ಥಳೀಯ ಹೋರಾಟಗಳಾಗಿಯೇ ಉಳಿದ ಈ ಪ್ರತಿಭಟನೆಗಳು ಸಮರ್ಥ ವಸಾಹತುವಿರೋಧಿ ಹೋರಾಟವಾಗಿ ಸರ್ವವ್ಯಾಪಿಯಾಗಲಿಲ್ಲ. ದುಡಿಯುವ ವರ್ಗಗಳ, ರೈತರ ಮತ್ತು ನಗರ ಕೇಂದ್ರಗಳ ಪೆಟಿ ಬೂರ್ಜ್ವಾಗಳ ಹೋರಾಟಗಳು ರಾಷ್ಟ್ರ ವಿವೇಚನೆ ಹೋರಾಟದ ಪಾಡಿಗೆ ಹೋಗದೆ ಕ್ರಾಂತಿಕಾರಿ ನಾಯಕತ್ವವನ್ನು ಹೊಂದದೆ ಭಿನ್ನಭಿನ್ನವಾದ ಮಾರ್ಗಗಳನ್ನು ತುಳಿದು ಬಹುತೇಕ ಸ್ಥಳೀಯವಾಗಿ ಉಳಿದುಬಿಟ್ಟವು.

೧೫. ಉದ್ದೇಶಿಸಲಾದ ಸಬಾಲ್ಟರ್ನ್ ಅಧ್ಯಯನವು ತನ್ನದೇ ಆದ ದೇಶವನ್ನೂ ಹೊಂದಲು ಸಾಧ್ಯವಾಗದ ಚಾರಿತ್ರಿಕ ವೈಫಲ್ಯದ ಬಗ್ಗೆ ಸಂಶೋಧನೆಯನ್ನು ಮಾಡುವ ಇರಾದೆಯನ್ನು ಹೊಂದಿದೆ. ಬೂರ್ಜ್ವಾ ಮತ್ತು ದುಡಿಯುವ ವರ್ಗಗಳು ನಿರಂತರತೆ ಮತ್ತು ಸ್ಪಷ್ಟತೆಯನ್ನು ಕಾಯ್ದುಕೊಳ್ಳದಿರುವುದರಿಂದ ವಸಾಹತುವಿರೋಧಿ ಹೋರಾಟದಲ್ಲಿ ವಿಜಯ ಸಾಧಿಸಲಾಗಲಿಲ್ಲ. ಹಾಗೆಯೇ ೧೯ನೇ ಶತಮಾನದ ಕ್ಲಾಸಿಕ್ ಸ್ವರೂಪದ ಬೂರ್ಜ್ವಾ ಹೆಜಿಮನಿ/ನಾಯಕತ್ವದ ಬೂರ್ಜ್ವಾ ಪ್ರಜಾಪ್ರಭುತ್ವೀಯ ಕ್ರಾಂತಿಗಳಾಗಲಿ ಅಥವಾ ದುಡಿಯುವ ವರ್ಗಗಳು ಮತ್ತು ರೈತರಿಂದ ರೂಪಿತವಾಗಬಹುದಾಗಿದ್ದ “ಹೊಸ ಪ್ರಜಾಪ್ರಭುತ್ವದ” ಸ್ಥಾಪನೆಯಾಗಲಿ ಸಾಧ್ಯವಾಗಲಿಲ್ಲ. ವಸಾಹತು ಭಾರತದ ಚರಿತ್ರೆ ಬರವಣಿಗೆಯ ಕೇಂದ್ರಬಿಂದುವಾದ ಈ ಬಗೆಯ ವೈಫಲ್ಯಗಳ ಸ್ವರೂಪದ ಕುರಿತಾದ ಅಧ್ಯಯನವನ್ನು ಸಬಾಲ್ಟರ್ನ್ ಅಧ್ಯಯನವು ಕೈಗೊಳ್ಳುತ್ತದೆ. ಎಲಿಟಿಸ್ಟ್ ಚರಿತ್ರೆ ಬರವಣಿಗೆಯು ಜನಸಾಮಾನ್ಯರ ಸಂವೇದನೆಗೆ ಸ್ಪಂದಿಸದೆ ಅಂತಹ ಪ್ರತಿಭಟನೆಗಳನ್ನೆಲ್ಲ ನೆಗೆಟೀವ್ ಆಗಿ ನೋಡಿದ್ದೇ ಹೆಚ್ಚು. ಅದು ಅಳವಡಿಸಿಕೊಂಡ ಬರವಣಿಗೆ ಕ್ರಮವು ಉಚ್ಚ ವರ್ಗ/ಎಲೈಟ್ ಮತ್ತು ಸಬಾಲ್ಟರ್ನ್ ಗಳ ನಡುವಿನ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲಿಲ್ಲ ಮತ್ತು ಅವು ಒಟ್ಟೊಟ್ಟಿಗೆ ಕಾರ‍್ಯಚಟುವಟಿಕೆಗಳನ್ನೂ ಹಮ್ಮಿಕೊಂಡ ಅಂಶಗಳನ್ನು ದಾಖಲಿಸಲು ವಿಫಲವಾಗಿರುವುದನ್ನು ಗಮನಿಸಬಹುದು.

೧೬. ಭಾರತದ ಚರಿತ್ರೆ ಬರವಣಿಗೆಯ ಎಲೈಟ್ ಮಾದರಿಗಳನ್ನು ಈಗಾಗಲೆ ಕಟು ವಿಮರ್ಶೆಗೆ ಒಳಪಡಿಸಿರುವ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಬಾಲ್ಟರ್ನ್ ಪಂಥದ ಲೇಖಕರು ಒಂದೆಡೆ ನಿಂತು ಭಾರತದ ಚರಿತ್ರೆ ಬರವಣಿಗೆ ಕ್ರಮಕ್ಕೆ ಹೊಸ ಆಯಾಮವನ್ನು ನೀಡಬೇಕಾಗಿದೆ.