‘ನ್ಯೂ ಹಿಸ್ಟಾರಿಸಿಸಂ’ ಎಂಬ ಈ ಪರಿಕಲ್ಪನೆಯನ್ನು ಕನ್ನಡದಲ್ಲಿ ‘ನವ ಚಾರಿತ್ರಿಕವಾದ’ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಆದರೆ ಈ ಪರಿಕಲ್ಪನೆ ಇದ್ದಕ್ಕಿದ್ದ ಹಾಗೆ ಹುಟ್ಟಿಕೊಂಡಿದ್ದಲ್ಲ. ಇದಕ್ಕೆ ತನ್ನದೇ ಆದ ಹಿನ್ನೆಲೆ ಹಾಗು ನಡೆದು ಬಂದ ಹಾದಿಯ ಚರಿತ್ರೆ ಇದೆ. ವಿದ್ವಾಂಸರಲ್ಲಿ ಈ ಕುರಿತು ಒಂದೇ ಮಾತಿನ ಉತ್ತರವಿಲ್ಲ. ಆದರೆ ಇದರ ಪ್ರಕ್ರಿಯೆಯ ಬಗ್ಗೆ ಚರಿತ್ರಕಾರರಲ್ಲಿ ಯಾವುದೇ ಅನುಮಾನಗಳು ಇದ್ದಂತೆ ಇಲ್ಲ. ಬಹುಶಃ ಈ ಹಿನ್ನೆಲೆಯಲ್ಲಿಯೇ ಜಗತ್ತಿನ ವಿವಿದೆಡೆಗಳಲ್ಲಿ ನವ ಚಾರತ್ರಿಕವಾದವು ಭಿನ್ನಸ್ವರೂಪಗಳಲ್ಲಿತ್ತು ಎಂಬುದನ್ನು ವಿದ್ವಾಂಸರು ವಿಶ್ಲೇಷಿಸಲು ಪ್ರಯತ್ನಿಸಿದ್ದಾರೆ. ಕಳೆದ ಶತಮಾನದ ಮಧ್ಯಭಾಗದಲ್ಲಿ ಮಾರ್ಕ್ಸ್‌ವಾದಿ ಸೈದ್ಧಾಂತಿಕತೆಯಲ್ಲಿ ಉಂಟಾದ ತಲ್ಲಣ, ಸಂಘರ್ಷಗಳಿಂದ ಹೊಸ ಬಗೆಯ ಚಿಂತನಾಧಾರೆಗಳು ಹುಟ್ಟಿಕೊಂಡವು. ಅಂಥ ಚಿಂತನಾಧಾರೆಗಳಲ್ಲಿ ನವ ಚಾರಿತ್ರಿಕವಾದದ ಚಿಂತನಾ ನೆಲೆಯೂ ಒಂದು.

ಸಾಂಪ್ರದಾಯಿಕ ಚಿಂತನೆಗಳು ಅನೇಕ ಪ್ರಶ್ನೆಗಳಿಗೆ ಉತ್ತರ ಕೊಡಲಾಗದ ಹಂತದಲ್ಲಿ ಮಾರ್ಕ್ಸ್‌ವಾದವೂ ಸಹ ಸಮಸ್ಯೆಗೆ ಸಿಲುಕಿತು. ಸಂರಚನಾವಾದಿ (Constructulist) ಹಾಗೂ ನಿರಚನಾವಾದಿ (De-constructulist) ಚಿಂತಕರು ಸಹ ತಮ್ಮದೇ ಆದ ಸೈದ್ಧಾಂತಿಕ ಸಂಘರ್ಷಗಳಲ್ಲಿ ತಲ್ಲೀನರಾಗುವಂತೆ ಆಯಿತು. ಹೊಸದಾಗಿ ಹುಟ್ಟಿಕೊಂಡಿದ್ದ ರಾಚನಿಕೋತ್ತರವಾದವೂ (Structuralism) ಅಂಥ ಭರವಸೆಯನ್ನೇನೂ ಮೂಡಿಸಿರಲಿಲ್ಲ. ಆಗ ‘ನವ ಚಾರಿತ್ರಿಕವಾದ’ವು ತನ್ನ ಟಿಸಿಲುಗಳನ್ನು ಒಡೆದುಕೊಂಡು ‘ಹೊಸ ಸಾಂಸ್ಕೃತಿಕ ಚರಿತ್ರೆ’ಯ (New Cultural History) ಹೆಸರಿನಲ್ಲಿ ಹುಟ್ಟಿಕೊಂಡಿತು.

ಕಳೆದ ಶತಮಾನದ ಎಪ್ಪತ್ತರ ದಶಕದ ವೇಳೆಗೆ ಒಂದು ಬಗೆಯ ಐಡಿಯಾಲಾಜಿಗಳ ಸಂಕೀರ್ಣತೆ ಕಾಣಿಸಿಕೊಂಡಿತು. ಫ್ರಾಂಕ್ ಲಿನ್ಟ್ರಿಚಿಯಂಥ ರೂಪನಿಷ್ಟ ವಿಮರ್ಶಕರೂ ಸಹ ಏಕಮುಖಿಯಾದ ಐತಿಹಾಸಿಕ ಧೋರಣೆಗಳಿಗೆ ಬೆಂಬಲಿಸಿದ್ದೇ ಹೆಚ್ಚು. ತನ್ನ ‘ಆಫ್ಟರ್‌ದಿ ನ್ಯೂ ಕ್ರಿಟಿಸಿಸಂ’ ಕೃತಿಯು ಇತಿಹಾಸ ವಿರೋಧಿ ನೆಲೆಯಿಂದಲೇ ಹೊರಟದ್ದು. ಕ್ರೈಸ್ತಧರ್ಮ ಪ್ರಭಾವಿತ ಇತಿಹಾಸದ ತತ್ವಗಳಿಗೆ ಹೇಗೆ ಪ್ರಭಾವಿತರಾಗಿದ್ದರೋ ಹಾಗೆಯೇ ಜಡ ಮಾರ್ಕ್ಸ್‌ವಾದಿ ಇತಿಹಾಸಕ್ಕೂ ಇವರು ಜೋತುಬಿದ್ದಿದ್ದರು. ಇದನ್ನೇ ‘ಮೀರಲಾಗದ ದಿಗಂತ’ ಮೊದಲಾದ ಬರೆಹಗಳಲ್ಲಿ ಫ್ರೆಡ್ರಿಕ್ ಜೇಮ್ಸನ್ ಪ್ರತಿಪಾದಿಸಿರುವುದು. ರಾಚನಿಕೋತ್ತರ ಕಾಲಘಟ್ಟದ ಚಿಂತನೆಗಳು ‘ಪುನರುಜ್ಜೀವನ’ (ರೆನೈಸಾನ್ಸ್), ಮಾರ್ಕ್ಸಿಸ್ಟೋತ್ತರ, ಸಂಸ್ಕೃತಿ ಮೀಮಾಂಸಾ ಚರಿತ್ರೆಯ ತತ್ವಗಳನ್ನು ಹುಟ್ಟುಹಾಕಿದವು. ಈ ಘಟ್ಟದಲ್ಲಿಯೆ ಹೊಸ ಬಗೆಯಲ್ಲಿ ಇತಿಹಾಸವನ್ನು ನೋಡಲು ಬಯಸುವ ವಿದ್ವಾಂಸರು ಒಂದುಗೂಡುವಂತೆ ಆಗಿದ್ದು. ಪಕ್ವಗೊಂಡ ಈ ಕಾಲಘಟ್ಟ ಏಕಮುಖಿ ನೆಲೆಯ ‘ಇತಿಹಾಸ’ವನ್ನು ಸೃಷ್ಟಿಸುವುದಕ್ಕಿಂತ ಬಹುಮುಖಿ ನೆಲೆಯ ‘ಇತಿಹಾಸಗಳು’ ಎಂದು ಕರೆಸಿಕೊಳ್ಳುವಲ್ಲಿ ತಯಾರಿ ನಡೆಸಿತ್ತು.

ಇಂಥ ಹಿನ್ನೆಲೆಗಳಲ್ಲಿ ಅಂದರೆ ೧೯೮೦ರ ದಶಕದ ಆರಂಭದಲ್ಲಿ ಹಿಂದಿನ ಎಲ್ಲ ಬಗೆಯ ಸಂಪ್ರದಾಯಬದ್ಧ ಮನೋ-ಚಿಂತನೆಗಳಿಗೆ ಹೊಸ ಆಲೋಚನ ಕ್ರಮದ ಪ್ರತಿರೋಧಗಳು ಕಾಣಿಸಿಕೊಂಡವು. ಒಂದು ಬಗೆಯ ಚಳವಳಿ ಸ್ವರೂಪದ ಈ ಪ್ರತಿಕ್ರಿಯೆ, ಪ್ರತಿರೋಧಗಳಿಗೆ ಜಗತ್ತಿನ ಚರಿತ್ರಕಾರರು ಒಂದುಗೂಡುವುದರ ಮುಖೇನ ಸ್ಪಂದಿಸತೊಡಗಿದರು. ಹೈಡೆನ್ ವೈಟ್ ರಂಥ ಚರಿತ್ರಕಾರರು ಈ ಚಳವಳಿಯ ಮುಂಚೂಣಿಯಲ್ಲಿದ್ದು ತಾವು ಪ್ರತಿಪಾದಿಸಿದ ಚಾರತ್ರಿಕಾಂಶಗಳಿಗೆ ‘ಹೊಸ ಸಾಂಸ್ಕೃತಿಕ ಚರಿತ್ರೆ’ಯ ಹೆಸರಿನ ಮೂಲಕ ಗುರುತಿಸಿಕೊಳ್ಳುವಂತೆ ಮಾಡಿದರು. ಫ್ರಾನ್ಸಿನಲ್ಲಿಯೂ ಲಿನ್ ಹಂಟ್, ಥಾಮಸ್ ಲಾಕ್ವಿಯರ್‌ ಮೊದಲಾದವರು ಈ ಪಂಥದ ಚರಿತ್ರಕಾರರೊಂದಿಗೆ ಕಾಣಿಸಿಕೊಳ್ಳುವಂತೆ ಆಯಿತು.

ರೋಜರ್ ಕಾರ್ಟಿಯರ್‌ನಂತೂ ಮೂಲಭೂತವಾದಿತನದ ಚರಿತ್ರೆಯ ಆಶಯಗಳನ್ನು ಪ್ರಶ್ನಿಸಲಾರಂಭಿಸಿದ. ಹೊಸ ತಂತ್ರದ ಪರಿಕರ, ವಿಧಾನಗಳು ಹಿಂದಿನದೆಲ್ಲವನ್ನೂ ವಿಭಿನ್ನ ನೆಲೆಗಳಲ್ಲಿ ವಿಶ್ಲೇಷಿಸುವಂಥ ಸ್ಥಿತ್ಯಂತಗಳಾದವು. ಈ ಬಗೆಯ ಪ್ರಭಾವ, ಪರಿಣಾಮಗಳು ಭಿನ್ನ ಬಗೆಯಲ್ಲಿ ಬೇರೆ ಬೇರೆ ಜ್ಞಾನಶಿಸ್ತುಗಳ ಮೇಲೆ ಹಾಗೂ ವಿದ್ವಾಂಸರನ್ನು ಗಮನ ಸೆಳೆಯುವಂತೆ ಮಾಡಿದ್ದವು. ಮಾರ್ಕ್ಸ್‌‌ವಾದಿ ಸೈದ್ಧಾಂತಿಕ ನೆಲೆಗಳಲ್ಲಿಯೆ ಒಂದು ಬಗೆಯ ಸಾಂಸ್ಕೃತಿಕ ನಿಲುವುಗಳು ಅನಾವರಣಗೊಂಡದ್ದು ಗಮನಾರ್ಹ. ೧೯೮೦ರ ದಶಕದಲ್ಲಿಯೆ ಇ.ಪಿ. ಥಾಂಪ್ಸನ್, ರೇಮಂಡ್ ವಿಲಿಯಂಸ್‌ರಂಥ ಖ್ಯಾತ ವಿದ್ವಾಂಸರು ‘ಕಲ್ಚರಲ್ ಮೆಟಿರೀಯಲಿಸಂ’ ಎಂಬ ಪರಿಕಲ್ಪನೆಯ ಮೂಲಕ ಗುರುತಿಸಿಕೊಳ್ಳುವಂತೆ ಮಾಡಿದ್ದರು. ೧೯೨೦ರ ದಶಕದಲ್ಲಿ ಫ್ರಾನ್ಸಿನ ‘ಆನಲ್ಸ್ ಪಂಥ’ದ ಹುಟ್ಟಿಗೆ ಕಾರಣರಾಗಿದ್ದ ಮಾರ್ಕ್ ಬ್ಲಾಕ್ ಹಾಗೂ ಫೇಬರ್‌ರಂಥ ಖ್ಯಾತ ಇತಿಹಾಸತಜ್ಞರ ಅನುಯಾಯಿಗಳು ಸಹ ಈ ಹೊಸ ಸಾಂಸ್ಕೃತಿಕ ಚರಿತ್ರೆಗೆ ಮಾರುಹೋದರು. ಈ ಬಗೆಯ ಚರಿತ್ರೆಯು ಫುಕೋನ ಚಿಂತನೆಗಳಿಂದಲೂ ವಿಸ್ತೃತವಾಯಿತು. ಅಂತೆಯೇ ಸಾಹಿತ್ಯ ತತ್ವಚಿಂತಕರಾದ ಜಾಕ್ಯೂಸ್ ಡೆರಿಡಾ ಹಾಗೂ ಮಿಖಾಯಿಲ್ ಭಕ್ತಿನ್, ಹೈಡೆನ್ ವೈಟ್‌ರಂಥವರಿಂದಲೂ ಹೊಸ ಸಾಂಸ್ಕೃತಿಕ ಚರಿತ್ರೆಯ ಚಹರೆಗಳು ಅನಾವರಣಗೊಂಡದ್ದು ಗಮನಾರ್ಹ. ಅನೇಕ ಚರಿತ್ರಕಾರರು ‘ನವ ಚಾರಿತ್ರಿಕವಾದ’ ಅಥವಾ ಹೊಸ ಸಾಂಸ್ಕೃತಿಕ ಚರಿತ್ರೆಯ ಪಂಥವನ್ನು ಪ್ರತಿನಿಧಿಸಿದರು. ಅದೇ ರೀತಿಯಲ್ಲಿ ಸಾಹಿತ್ಯ ಚಿಂತಕರು ಸಹ ಸಾಂಸ್ಕೃತಿಕ ಅಧ್ಯಯನದ ನೆಲೆಗಳಲ್ಲಿ ಕಾಣಿಸಿಕೊಳ್ಳುವಂತೆ ಆಯಿತು. ೧೯೮೨ರ ವೇಳೆಗೆ ಸ್ಟೀಫನ್ ಗ್ರೀನ್ ಬ್ಲಾಟ್ ಮೊಟ್ಟಮೊದಲ ಬಾರಿಗೆ ‘ನವ ಚಾರಿತ್ರಿಕವಾದ’ ಎಂಬ ನಿಖರವಾದ ಪರಿಕಲ್ಪನೆಯನ್ನೇ ಹುಟ್ಟು ಹಾಕಿದ್ದು ಗಮನಾರ್ಹ ಸಂಗತಿ.

ಸಾಹಿತ್ಯ ಮತ್ತು ಚರಿತ್ರೆಯ ವಿದ್ವಾಂಸರಿಂದ ರೂಪುತಳೆದ ಈ ಹೊಸ ಪರಿಕಲ್ಪನೆ ಅನ್ಯಜ್ಞಾನ ಶಿಸ್ತುಗಳಿಗೆ ಅಳವಡಿಕೆ ಆಗುವ ಮುನ್ನವೇ ಕೆಲವು ಅನುಮಾನ, ವಿವಾದಗಳಿಗೂ ಎಡೆಮಾಡಿಕೊಟ್ಟಿತು. ಆ ಮೊದಲಿಗೆ ಈ ಎರಡು ಜ್ಞಾನ ಶಾಖೆಗಳವರು ಪರಸ್ಪರ ‘ಅಹಂ’ ಹಾಗೂ ‘ಕೀಳರಿಮೆ’ಗಳ ಮುಖೇನ ನವ ಚಾರಿತ್ರಿಕವಾದದ ತಿರುಳನ್ನೇ ಅರ್ಥ ಮಾಡಿ ಕೊಳ್ಳುವಲ್ಲಿ ಸೋತದ್ದು ಉಂಟು. ಅಂದರೆ ಚರಿತ್ರಕಾರರಿಗೆ ಸಾಹಿತ್ಯ ನೆಲೆಯವರು ತಮ್ಮನ್ನು ತಾವು ‘ನವ ಚರಿತ್ರಕಾರ’ರೆಂದು ಗುರುತಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಎಂಬ ಅನುಮಾನ ಕಾಡಿತು. ಕತೆ, ಕಾವ್ಯ, ಕಾದಂಬರಿ, ನಾಟಕ ಮೊದಲಾದ ಸಾಹಿತ್ಯಕ ಪರಿಕರಗಳಿಂದ ಹಾದು ಹೋಗುವ ಸಾಹಿತ್ಯ ವಿಮರ್ಶಕರು ಸಾಹಿತ್ಯೇತರ ಅದರಲ್ಲೂ ಭಿನ್ನ ಬಗೆಯ ಚರಿತ್ರೆಯ ಪಠ್ಯಗಳನ್ನು ವಿಶ್ಲೇಷಿಸುವುದರ ಔಚಿತ್ಯವನ್ನು ಪ್ರಶ್ನಿಸಿದರು. ಅಂತೆಯೇ ಸಾಹಿತ್ಯ ವಿಮರ್ಶಕರೂ ಸಹ ಸಾಹಿತ್ಯ ಕೃತಿ ಅಥವಾ ಇನ್ನಾವುದೇ ಪಠ್ಯವೊಂದನ್ನು ಭಿನ್ನವಾಗಿಸಿ (ಪ್ರತ್ಯೇಕಿಸಿ) ನೋಡಲು ಸಾಧ್ಯವಿದೆಯೇ ಎಂಬ ತಕರಾರು ತೆಗೆದರು. ಅಲ್ಲದೆ ಸಾಹಿತ್ಯ, ಸಮಾಜ, ಭಾಷೆ, ಸಂಸ್ಕೃತಿ ಸಂಗತಿಗಳನ್ನು ಚಾರಿತ್ರಿಕ ಸಂದರ್ಭವೊಂದಕ್ಕೆ ಮೇಳೈವಿಸಿ ನೋಡಲಾಗದೆ, ಸಂವಾದಿ ರೂಪಿಯಾಗಿ ಅನುಭವ-ಅನುಭೂತಿಗಳನ್ನು ಹೊಂದದೆ ಹೇಗೆತಾನೆ ಸಂಸ್ಕೃತಿಕ ಸಂರಚನೆಗಳ ಮೊತ್ತವಾಗಿ ಚರಿತ್ರಕಾರರು ಫಲಿತಗಳನ್ನು ಪಡೆಯಲು ಸಾಧ್ಯ ಎಂಬ ಪ್ರಶ್ನೆಗಳನ್ನು ಹಾಕಿದರು. ಇದರಿಂದ ಸಾಹಿತ್ಯ-ಚರಿತ್ರೆಗಳೊಂದಿಗೆ ಬೆರೆತು ಹೋಗಿರುವ ನವ ಚಾರಿತ್ರಿಕವಾದದ ಅರ್ಥ. ವ್ಯಾಖ್ಯಾನಗಳು ಈ ಎರಡೂ ಪಂಥದವರ ಪ್ರತ್ಯೇಕಿಸಿ ನೋಡುವ ಚಿಂತನೆಗಳು ಎಷ್ಟರಮಟ್ಟಿಗೆ ಅರ್ಥಹೀನವಾದುವು ಎಂಬುದನ್ನು ಸಾಬೀತು ಮಾಡುವಂತೆ ಆಯಿತು. ಆದ್ದರಿಂದಲೇ ನವ ಚಾರಿತ್ರಿಕವಾದದ ಚಿಂತನೆಗಳು ಇನ್ನುಳಿದ ಜ್ಞಾನಶಾಖೆಗಳಲ್ಲೂ ಹೊಸ ಪ್ರಯೋಗಶೀಲತೆಗಳನ್ನು ಹೊಂದುವುದರ ಜೊತೆಗೆ ಗಂಭೀರವಾದ ಚರ್ಚೆಗಳಿಗೆ ಎಡೆಮಾಡಿಕೊಟ್ಟದ್ದು.

ಅರ್ಥ, ವ್ಯಾಖ್ಯಾನ, ವಿಶ್ಲೇಷಣೆ

ಆಧುನಿಕೋತ್ತರ ಚಿಂತನೆಗಳಲ್ಲಿ ‘ನವ ಚಾರಿತ್ರಿಕವಾದ’ವೂ ಒಂದು. ಕಳೆದ ಶತಮಾನದ ೧೯೭೦ರ ದಶಕದಲ್ಲಿ ಈ ಪರಿಕ್ಪನೆ ಒಂದು ಹೊಸ ವಿಮರ್ಶಾ ಪಂಥವಾಗಿಯೇ ತನ್ನ ನೆಲೆಗಳನ್ನು ಕಂಡುಕೊಂಡಿತು. ಅಮೆರಿಕಾದಲ್ಲಿ ಈ ಪರಿಕಲ್ಪನೆ ‘ನ್ಯೂ ಹಿಸ್ಟಾರಿಸಿಸಂ’ ಎಂತಲೇ ಅಸ್ತಿತ್ವಕ್ಕೆ ಬಂದಿತು. ಆದರೆ ಇಂಗ್ಲೆಂಡಿನಲ್ಲಿ ಇದು ತನ್ನನ್ನು ತಾನು ಗುರುತಿಸಿಕೊಂಡದ್ದು ‘ಕಲ್ಚರಲ್ ಮೆಟಿರೀಯಲಿಸಂ’ ಎಂದು. ಈ ಚಿಂತನೆಯ ಮೂಲ ಪ್ರವರ್ತಕರು ಫ್ರಾನ್ಸಿನ ಬುದ್ಧಿಜೀವಿಗಳು. ಈಗಾಗಲೇ ಪರಿಚಿತವಿರುವ ಅರ್ಥ, ಪರಿಕರ, ವಿಧಿ-ವಿಧಾನಗಳಿಂದ ಹೊರತುಪಡಿಸಿಯೂ ಹೊಸ ನೋಟದಲ್ಲಿ ಮಾನವನ ಮನೋ-ಚಟುವಟಿಕೆಗಳನ್ನು ನೋಡಲು ಸಾಧ್ಯ ಇದೆ ಎಂಬುದು ಈ ವಾದದ ತಿರುಳು. ಅಂದರೆ ಸಾಹಿತ್ಯದ ಪಠ್ಯವಂದು ಚಾರಿತ್ರಿಕ ಸಂದರ್ಭದಲ್ಲಿ ಬೆರೆತು ತನ್ನ ಅನ್ಯೋನ್ಯ ಸಂಬಂಧವನ್ನು ಪಡೆದಿರುತ್ತದೆ ಎಂಬ ವಾದವನ್ನು ನವ ಚರಿತ್ರಕಾರರು ಮಂಡಿಸಿದರು. ಒಂದು ಸಾಹಿತ್ಯಕ ಅಥವಾ ಸಾಂಸ್ಕೃತಿಕ ಪಠ್ಯಕ್ಕೆ ಕಾಲಾನುಕ್ರಮದ ಮೌಲ್ಯಮಾಪನಗಳು ಅಡಕ ಆಗುತ್ತಿರುತ್ತವೆ. ಅದನ್ನು ಹೊರತುಪಡಿಸಿ ನೋಡಲು ಸಾಧ್ಯವಿಲ್ಲ. ಅಲ್ಲದೆ ಚರಿತ್ರೆಯನ್ನು ಕೇವಲ ಸಾಹಿತ್ಯವನ್ನು ಗ್ರಹಿಸಲು ಬೇಕಾಗುವ ಹಿನ್ನೆಲೆಯಾಗಿ ಮಾತ್ರ ನೋಡುವ ನೋಟ ಬೇಕಿಲ್ಲ ಎಂಬುದನ್ನು ನವ ಚಾರಿತ್ರಿಕವಾದ ಮಂಡಿಸುತ್ತದೆ. ಸಂರಚನಾವಾದಿಗಳ ಗ್ರಹಿಕೆಯನ್ನು ಮೀರುವ ಪ್ರಯತ್ನವೂ ಈ ವಾದದಿಂದ ರುಜುವಾತು ಆಗತೊಡಗಿತು.

ಸಾಹಿತ್ಯವನ್ನು ಸೌಂದರ್ಯ ಮೀಮಾಂಸೆಯ ಹಿನ್ನೆಲೆಯಲ್ಲಿ ಮಾತ್ರ ನೋಡುತ್ತಿದ್ದ ನೋಟ ಬಹಳ ಹಿಂದಿನದು. ಆದರೆ ಅದನ್ನು ಇಂದು ಸಾಂಸ್ಕೃತಿಕ ಸಂರಚನೆಗಳ ಮೊತ್ತವಾಗಿಯೂ ಗ್ರಹಿಸಿ, ವಿಶ್ಲೇಷಿಸುವ ಪರಿಪಾಠವೂ ಬೆಳೆದುನಿಂತಿದೆ. ಇದನ್ನು ಮನವರಿಕೆ ಮಾಡಿಕೊಟ್ಟವರು ನವ ಚರಿತ್ರಕಾರರು. ಸಾಹಿತ್ಯ ಕೃತಿಯನ್ನು ಚರಿತ್ರೆಯೊಂದಿಗೆ ಮೇಳೈವಿಸಿ ನೋಡುವ ನೋಟವನ್ನು ಹುಟ್ಟುಹಾಕಿದ್ದರಿಂದಲೇ ಅದನ್ನು ಸಂವಾದರೂಪಿಯಾಗಿ ಗ್ರಹಿಸಲು ಸಾಧ್ಯವಾಯಿತು. ಹೀಗಾಗಿ ಪ್ರತ್ಯೇಕಿಸಿ ಅಥವಾ ಭಿನ್ನವಾಗಿ ನೋಡುತ್ತಿದ್ದ ನೋಟಗಳ ಮಿತಿಗಳು ಅರಿವಿಗೆ ಬಂದವು. ನವ ಚಾರಿತ್ರಿಕವಾದದ ತಿರುಳು ಅಡಗಿರುವುದು ಅದು ಇತರೆ ಜ್ಞಾನ ಶಿಸ್ತುಗಳನ್ನು ನೋಡುವ, ಗ್ರಹಿಸುವ ಹೊಸ ಕ್ರಮಗಳಲ್ಲಿ. ಅಂದರೆ ನವ ಚರಿತ್ರಕಾರರು ‘ಸಾಹಿತ್ಯ’ ಮತ್ತು ‘ಸಾಹಿತ್ಯೇತರ’ ಎಂಬ ವಾದ ಸರಣಿಗಳನ್ನು ವಿರೋಧಿಸುತ್ತಾರೆ. ಬದಲಾಗಿ ಅವುಗಳ ಸಾಂಸ್ಕೃತಿಕ ಮಹತ್ತ್ವಕ್ಕೆ ಹೆಚ್ಚಿನ ಗಮನ ನೀಡುತ್ತಾರೆ. ಹೀಗಾಗಿ ‘ಚರಿತ್ರೆ’ಯು ಕೇವಲ ‘ಗತ’ವನ್ನು ಗ್ರಹಿಸುವ ಮೊತ್ತವಾಗಿ ಇಲ್ಲಿ ಅನಾವರಣಗೊಂಡಿಲ್ಲ. ಅಂತೆಯೇ ಕೇವಲ ‘ವಾಸ್ತವಿಕತೆ’ಗಳನ್ನು ಹೇಳುವ ಶಿಸ್ತು ಅಲ್ಲ ಎಂಬುದು ಮನವರಿಕೆ ಆಯಿತು. ಇದೊಂದು ನಿರಂತರತೆಯ ಪ್ರಕ್ರಿಯೆಯೂ ಹೌದು. ಚರಿತ್ರೆಯನ್ನು ಹೊಸದಾಗಿ ನೋಡಿ, ಗ್ರಹಿಸಿ ವಿಶ್ಲೇಷಿಸುವ ಚಿಂತನೆಯನ್ನು ನವ ಚರಿತ್ರಕಾರರು ಹುಟ್ಟುಹಾಕಿದರು. ಇದರಿಂದ ಸಾಹಿತ್ಯ ಮತ್ತು ಚರಿತ್ರೆಯ ಅಂತರಶಿಸ್ತೀಯ ನೆಲೆಗಳು ಸಹ ಅಸ್ತಿತ್ವಕ್ಕೆ ಬಂದವು. ಅಷ್ಟೇ ಅಲ್ಲದೆ ಪಠ್ಯವೊಂದನ್ನು ಬಹುಮುಖಿ ನೆಲೆಗಳಿಂದಲೂ ಪರಿಭಾವಿಸಲು, ಅನು ಸಂಧಾನಗೊಳ್ಳಲು ಸಾಧ್ಯ ಇದೆ ಎಂಬುದು ಅನುಭವಕ್ಕೆ ಬಂದಿತು.

ನವ ಚಾರಿತ್ರಿಕವಾದವು ಹಿಂದಿನ ಸಾಂಪ್ರದಾಯಿಕ ವಿಮರ್ಶಾ ನೆಲೆಗಳಿಂದ ಮೊದಲ್ಗೊಂಡು ಸಂರಚನಾವಾದಿ, ಮಾರ್ಕ್ಸಿಸ್ಟ್, ನಿರಚನಾವಾದಿ ಹಾಗೂ ಇತ್ತೀಚಿನ ಸಾಂಸ್ಕೃತಿಕ ಮಾನವಶಾಸ್ತ್ರೀಯ ಅಂಶಗಳವರೆಗೂ ಹಾಗೂ ಲೂಯಿ ಅಲ್ತೂಸರ್, ಮೈಖೆಲ್ ಫುಕೋ ಮುಂತಾದ ವಿದ್ವಾಂಸರು ಮಂಡಿಸಿದ ವಿಷಯಗಳವರೆಗೂ ತನ್ನನ್ನು ತಾನು ವಿಸ್ತರಿಸಿಕೊಂಡು ಮುಂದುವರೆಯುತ್ತಿದೆ. ಈ ಮುಂದುವರಿಕೆಯಲ್ಲಿ ಎಲ್ಲಿಯೂ ಸಾಹಿತ್ಯ ಮತ್ತು ಚರಿತ್ರೆಯನ್ನು ಕುರಿತ ಸಂಬಂಧಗಳ ಬಗೆಗೆ ನವ ಚರಿತ್ರಕಾರರು ತಲೆಕೆಡಿಸಿಕೊಳ್ಳುವುದಿಲ್ಲ. ಈ ಥರದ ಅನುಮಾನ, ಪ್ರಶ್ನೆಗಳೇ ಅರ್ಥಹೀನ ಎಂಬುದು ಇವರ ವಾದ. ಏಕೆಂದರೆ ಇವೆರಡೂ ಒಂದರಲ್ಲಿ ಇನ್ನೊಂದು ಬೆರೆತುಹೋಗಿರುವಷ್ಟು ಆಪ್ತತೆಯನ್ನು ಹೊಂದಿವೆ ಎನ್ನುತ್ತಾರೆ. ಯಾವುದೇ ವಿಚಾರದ ಗ್ರಹಿಕೆಯ ಹಿನ್ನೆಲೆಯಲ್ಲಿ ಇವೆರಡೂ ಜ್ಞಾನಶಾಖೆಗಳು ತಮ್ಮ ವಿಶ್ಲೇಷಣೆ ಹಾಗೂ ಪಾರದರ್ಶಕತೆಯನ್ನು ರುಜುವಾತು ಪಡಿಸಲು ನ್ಯಾಯ ಒದಗಿಸುತ್ತವೆ ಎಂಬುದು ಇವರ ವಾದ. ಈ ಕುರಿತು ಸಾಕಷ್ಟು ವಿಚಾರಗಳನ್ನು ಮಂಡಿಸುವ ನವ ಚರಿತ್ರಕಾರರು ಸಾಹಿತ್ಯ ಮತ್ತು ಚರಿತ್ರೆಯನ್ನು ಒಟ್ಟೊಟ್ಟಿಗೆ ತೆಗೆದುಕೊಂಡು ಹೋಗುವುದನ್ನು ಉದಾಹರಣೆಗಳ ಮುಖೇನ ವಿಶ್ಲೇಷಿಸಿದ್ದಾರೆ. ಈ ದಿಸೆಯಲ್ಲಿ ರೀನೆ ವೆಲ್ಲೇಕನ ವಿಚಾರಗಳು ಮಹತ್ತ್ವದ್ದು, ರೀನೆ ತನ್ನ ‘ಲಿಟರರಿ ಥಿಯರಿ, ಕ್ರಿಟಿಸಿಸಂ ಮತ್ತು ಹಿಸ್ಟರಿ’ ಎಂಬ ಪ್ರಬಂಧದಲ್ಲಿ ಗತವನ್ನು ಪುನರ‍್ರಚಿಸಲು ಸಾಹಿತ್ಯಕ ಪಠ್ಯಗಳು ಒದಗಿಸುವ ಪುರಾವೆಗಳನ್ನು ಕುರಿತು ಆಪ್ತವಾಗಿ ವಿವರಿಸುತ್ತಾನೆ.

ಚಾರಿತ್ರಿಕತೆ ಹಾಗೂ ‘ನವ ಚಾರಿತ್ರಿಕತೆ’

‘ಚಾರಿತ್ರಿಕತೆ’ಯು (Histrocism) ಹೊಸ ರೂಪವನ್ನು, ಅರ್ಥಗ್ರಹಿಕೆಯನ್ನು ಹೊಂದುವುದರೊಂದಿಗೆ ‘ನವ ಚಾರಿತ್ರಿಕತೆ’ಯ (New Historicism) ಸ್ವರೂಪವನ್ನು ಪಡೆಯಿತು. ಈ ಪ್ರಕ್ರಿಯೆ ಚರಿತ್ರಕಾರರಲ್ಲಿ ಹೊಸ ಸಂಚಲನವನ್ನೇ ಉಂಟುಮಾಡಿತ್ತು. ಅಂದರೆ ಇಲ್ಲಿ ‘ಚಾರಿತ್ರಿಕತೆ’ಯ ಹಳೆಯ ಸ್ವರೂಪ ಯಾವ ಬಗೆಯದು? ಎಂಬ ಪ್ರಶ್ನೆ ಕಾಡದೆ ಇರುವುದಿಲ್ಲ. ‘ಹಿಸ್ಟಾರಿಸಿಸಂ’ ಎಂಬ ಪರಿಕಲ್ಪನೆಯ ಅರ್ಥಗ್ರಹಿಕೆ ನ್ಯೂ ಹಿಸ್ಟಾರಿಸಿಸಂನಷ್ಟೇ ಕಷ್ಟಕರವಾದುದು. ನಿಖರವಾದ ವ್ಯಾಖ್ಯೆ ಅಥವಾ ಅರ್ಥವನ್ನು ನೀಡಿ ಮುಗಿಸಲು ಬರುವುದಿಲ್ಲ. ಆದರೆ ಈ ಹಿಸ್ಟಾರಿಸಿಸಂ ಎಂಬುದು ಚರಿತ್ರಕಾರರು ಚರಿತ್ರೆಯನ್ನು ಕಟ್ಟುವ ಹಂತದಲ್ಲಿ ಅಲವಡಿಸಿಕೊಳ್ಳುವ ವಿಧಿ-ವಿಧಾನಗಳಿಗೆ ನ್ಯಾಯ ಸಲ್ಲಿಸುವುದರೊಂದಿಗೆ ನೇರವಾಗಿ ಕೈ ಜೋಡಿಸಿರುವುದಂತೂ ಸ್ಪಷ್ಟ. ಅಂದರೆ ಇದರಲ್ಲಿ ಆಯಾ ಚಾರಿತ್ರಿಕ ಸನ್ನಿವೇಶ, ವಸ್ತುನಿಷ್ಟತೆಯೊಂದಿಗೆ ತಳುಕುಹಾಕಿಕೊಂಡಿರುವ ಸಂಬಂಧ ಹಾಗೂ ವಿಭಿನ್ನ ಬದಲಾವಣೆಗಳನ್ನು ಒಳಗೊಂಡ ಚಾರಿತ್ರಿಕ ಪ್ರಕ್ರಿಯೆಗಳು ಅಡಕವಾಗಿವೆ. ಇವೆಲ್ಲದರ ಹಿನ್ನೆಲೆಯಲ್ಲಿಯೆ ಫ್ರೆಡರಿಕ್ ಮೈನೆಕ್‌ನು ಹಿಸ್ಟಾರಿಸಿಸಂನ್ನು ಕುರಿತು ಹೀಗೆ ಅರ್ಥೈಸುತ್ತಾನೆ. ಅವನ ಪ್ರಕಾರ ಹಿಸ್ಟಾರಿಸಿಸಂ ಎಂಬುದು ಚರಿತ್ರಕಾರನು ಯಾವುದೇ ಘಟನೆ, ಪ್ರತಿಕ್ರಿಯೆ ಅಥವಾ ಜನರ ಚಿಂತನೆಗಳನ್ನು ಅವುಗಳ ಚಾರಿತ್ರಿಕ ಸಂದರ್ಭಕ್ಕೆ ಚ್ಯುತಿ ಬಾರದ ರೀತಿಯಲ್ಲಿ ನ್ಯಾಯ ಒದಗಿಸುವಂಥದ್ದು ಆಗಿರುತ್ತದೆ. ಇಲ್ಲಿ ಕಾಲ ಮತ್ತು ಪ್ರದೇಶಗಳಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ನಂತರದ ಚರಿತ್ರಕಾರರು ಇದಕ್ಕೆ ಇನ್ನಷ್ಟು ವಿವರ-ವಿಶ್ಲೇಷಣೆಗಳನ್ನು ಅಳವಡಿಸಿದ್ದೂ ಉಂಟು. ಅವರಲ್ಲಿ ವಿಲ್ಹೆಲಂ ಡಿಲ್ತೆ ಮತ್ತು ಆರ್.ಜಿ. ಕಾಲಿಂಗವುಡ್ ಅವರು ಪ್ರಮುಖರು. ಇವರು ಗತದ ಎಲ್ಲ ಆಗು-ಹೋಗುಗಳಿಗೂ ಸಮಕಾಈನತೆಯೊಂದಿಗಿನ ನಂಟನ್ನು ನಿರಂತರವಾದ ಪ್ರಕ್ರಿಯೆಯನ್ನಾಗಿ ಅರ್ಥೈಸಿ, ವಿಶ್ಲೇಷಿಸಿದರು. ಅಲ್ಲದೆ ಸಾಮಾಜಿಕ-ಸಾಂಸ್ಕೃತಿಕ ಅಂಶಗಳನ್ನು ಪ್ರಧಾನವನ್ನಾಗಿಸಿದ್ದೂ ಉಂಟು. ಮುಂದೆ ಪಠ್ಯದ ಸಂದರ್ಭ, ಭಾಷಿಕ, ಸಾಹಿತ್ಯಕ ನೆಲೆಗಳು ಸಾಂಸ್ಕೃತಿಕ ಮೊತ್ತವಾಗಿ ‘ಹೊಸ’ ಹೊಳಹುಗಳನ್ನು ನೀಡುವಲ್ಲಿ ಕಾರಣ ಆದವು. ಈ ಹೊಸ ಬಗೆಯ ನೋಟದ ಪ್ರಕ್ರಿಯೆಯೇ ‘ನವ ಚಾರಿತ್ರಿಕತೆ’ಯ ವಿಶ್ಲೇಷಣೆಯಾಗಿ ರೂಪು ಹೊಂದಿತು. ಇದೇ ‘ನ್ಯೂ ಹಿಸ್ಟಾರಿಸಿಸಂ’.

ಹೊಸ ಪರಿಕಲ್ಪನೆಗಳೊಂದಿಗಿನ ಚರಿತ್ರೆ

ನವ ಚರಿತ್ರಕಾರರು ತಮ್ಮ ವಾದಗಳನ್ನು ಮಂಡಿಸುವಲ್ಲಿ ಬಳಸುವ ಪರಿಭಾಷೆ ಪರಿಕಲ್ಪನೆಗಳು ವಿಭಿನ್ನವಾದವು. ವಿಭಿನ್ನ ಸೈದ್ಧಾಂತಿಕ ಪಂಥಗಳಿಂದ ಪ್ರಭಾವಿತರಾದ ಇತರೆ ಜ್ಞಾನಶಾಖೆಗಳ ನವ ಚರಿತ್ರಕಾರರು ತಮ್ಮದೇ ಆದ ಪರಿಕಲ್ಪನೆಗಳನ್ನು ವಿಶ್ಲೇಷಣೆಯ ಹಂತಗಳಲ್ಲಿ ಬಳಸಿರುವುದು ಕಂಡು ಬರುತ್ತದೆ. ಇವರ ವಾದ ಸರಣಿಯಲ್ಲಿ ಮಂಡಿತವಾಗಿರುವ ವರ್ಗ (Class), ಅಧಿಕಾರ (Power), ಸರಕೀಕರಣ(Commodification) ಯಾಜಮಾನ್ಯ (Hegemony), ಅಂತರ್ಗತತೆ (Containment), ಸಂದರ್ಭ (Context), ನಿರ್ದಿಷ್ಟ ಪಠ್ಯ (Texuality), ಲೋಕದೃಷ್ಟಿ ಅಥವಾ ಚಿಂತನಾ ಪಂಥ (Idealogy), ಊಳಿಗ ಮಾನ್ಯ (Feudalism), ಬಂಡವಾಳಶಾಹಿ (Capitalism), ಸಾಂಸ್ಕೃತಿಕ ವಸ್ತುವಾದ (Cultural Materialism), ವಿನಿಮಯ, ವ್ಯವಹಾರ, ಪ್ರಸರಣ (Exchange, Transaction, Circulation) ಮೊದಲಾದ ಪರಿಕಲ್ಪನೆಗಳನ್ನು ಪರಿಶೀಲಿಸಬಹುದು. ಇವುಗಳಿಂದಾಗಿ ನವಚಾರಿತ್ರಿಕವಾದವನ್ನು ಇಂದು ಸಂರಚನೋತ್ತರವಾದದ (Post Structuralism) ಪ್ರಮುಖ ಶಾಖೆಯೆಂದೇ ಪರಿಗಣಿಸಲಾಗುತ್ತಿದೆ. ಅಲ್ಲದೆ ಇದು ‘ಹೊಸ ಚರಿತ್ರೆ’ಗಳ (New Histories) ರಚನೆ, ಪುನರ‍್ರಚನೆಯ ಹಿನ್ನೆಲೆಗೆ ಬೇಕಾದ ಸೈದ್ಧಾಂತಿಕತೆಯೂ ಹೌದು. ಉದಾಹರಣೆಗೆ ಈ ಹೊತ್ತು ಬೆರಗುಗೊಳಿಸುವಂಥ ಚರಿತ್ರೆಯ ಅಂಶಗಳನ್ನು ಹೊರಗೆಡಹುತ್ತಿರುವ ‘ಸೂಕ್ಷ್ಮ ಚರಿತ್ರೆ’ಯ (Micro Histories) ಅಧ್ಯಯನಗಳೇ ಸಾಕ್ಷಿ. ಫುಕೋ ತನ್ನ ‘ನವ ಚರಿತ್ರೆ’ಯ ಫಲಿತಗಳಲ್ಲಿ ಅಂಚಿಗೆ ದೂಡ್ಡಲ್ಪಟ್ಟ ಜನರ ಮತ್ತು ವಿಭಿನ್ನ ಸಂಸ್ಥೆಗಳ ಚಾರಿತ್ರಿಕಾಂಶಗಳನ್ನು, ಹುಚ್ಚು ಹಾಗೂ ಔಷಧಿ ಚರಿತ್ರೆ, ದೇಹವನ್ನು ಕುರಿತ ಚರಿತ್ರೆ ಇತ್ಯಾದಿಗಳನ್ನು ಪರಿಶೀಲಿಸಿರುವುದನ್ನು ಗಮನಿಸಬಹುದು. ಜಾಕ್ಯೂಸ್ ಡಾನ್ ಜೆಲಟ್ ಅವರು ಗುರುತಿಸಿರುವ ಸಮಾಜದ ಬೆಳವಣಿಗೆ ಹಾಗೂ ಕುಟುಂಬದ ಮೇಲೆ ಅದು ಬೀರುವ ಪ್ರಭಾವವನ್ನು ಕುರಿತ ಚರಿತ್ರೆ (The Policing of Families), ೧೯ನೆಯ ಶತಮಾನದ ಆಸ್ಟ್ರೇಲಿಯಾದಲ್ಲಿನ ವರ್ಗದ ಸಂರಚನೆ ಹಾಗೂ ಲೈಂಗಿಕತೆಯನ್ನು ಕುರಿತು ಹೇಳುವ ಚರಿತ್ರೆಗಳು (Lynette Finch, Sexuality, Class and Surveillance) ಕುತೂಹಲವನ್ನುಂಟು ಮಾಡುವಂಥವು.

ನವ ಚಾರಿತ್ರಿಕವಾದದ ಸಾಂಸ್ಕೃತಿಕ ಸಂರಚನೆ

ನವ ಚಾರಿತ್ರಿಕವಾದವು ‘ಚರಿತ್ರೆ’ ಎಂದರೇನು ಎಂಬ ಪ್ರಶ್ನೆಗೆ ಅದು ‘ನೋಡುವ ಕ್ರಮ’ ವೆಂದೇ ಉತ್ತರಿಸುತ್ತದೆ. ಈ ಕ್ರಮ ವಿಭಿನ್ನ ನೋಟಗಳಿಂದ ಕೂಡಿರುವಂಥದ್ದು (Forms of Seeing) ಅಲ್ಲದೆ ಅದು ಅನುಭವಿಸುವ ಕ್ರಮದೊಂದಿಗೆ (Preceiving) ತಾಳೇ ಹಾಕಿಕೊಂಡಿದೆ. ‘ಚರಿತ್ರೆ’ ಎನ್ನುವುದು ಪ್ರಾತಿನಿಧಿತ್ವವನ್ನು (Representation), ಸಂವಾದ ರೂಪವನ್ನು (Interactions) ಹೊಂದಿರುವುದಾಗಿರುತ್ತದೆ. ಅದನ್ನು ಕೇವಲ ವಸ್ತುನಿಷ್ಠತೆಯ ಚೌಕಟ್ಟಿನಲ್ಲಿ ನೋಡುವ ಜರೂರು ಸಲ್ಲದು ಎಂಬುದು ನವ ಚರಿತ್ರಕಾರರ ವಾದ. ಇವರು ಸಾಹಿತ್ಯ ಮತ್ತು ಚರಿತ್ರೆಗಳು ಸಂಸ್ಥೆಗಳಾಗಿರುವುದರಿಂದ (Institutions) ಅವುಗಳನ್ನು ಒಡೆದು ನೋಡಬೇಕಾದ ‌ಪ್ರಮೇಯ ಇಲ್ಲ ಎನ್ನುತ್ತಾರೆ.

‘ಸ್ಥಳೀಯ ಚರಿತ್ರೆ’ಗಳು ವಿಶ್ವಾತ್ಮಕ ಸ್ವರೂಪವನ್ನು ಪಡೆಯುವಂಥವು. ಇಂಥವು ಸಂರಚನೆಗೊಳ್ಳುವುದು ಸಾಹಿತ್ಯದ ಮೂಲಕವೇ. ಇದರಿಂದ ಸಂಸ್ಕೃತಿಗಳ ಗ್ರಹಿಕೆ ಸಾಧ್ಯ ಎಂಬುದು ಈ ವಾದದ ತಿರುಳು. ವಸಾಹತುಶಾಹಿ ಸ್ಥಿತ್ಯಂತರಗಳು ಕೇವಲ ಮನೋ-ಚಟುವಟಿಕೆಗಳನ್ನು ಮಾತ್ರ ನಾಶಪಡಿಸದೆ, ಸಂಸ್ಕೃತಿಗಳನ್ನು ನಾಶಮಾಡಿದವು. ತಮ್ಮ ಅನುಭವಜನ್ಯದ ಗ್ರಹಿಕೆಯ ಮೂಲಕ ಮತ್ತೆ ಅವುಗಳನ್ನು ಹೊಸದಾಗಿ ರೂಪಿಸುವುದು ಸಹ ನವ ಚರಿತ್ರಕಾರರ ಆಶಯವಾಗಿದೆ.

ಸಾಂಸ್ಕೃತಿಕ ಮಹತ್ತ್ವವುಳ್ಳ ಯಾವುದೇ ವಿಚಾರ (ಅಂದರೆ ವರ್ಗ, ಲಿಂಗ, ಜನಾಂಗ, ಸಮಾಜ ಇತ್ಯಾದಿ) ನವ ಚರಿತ್ರಕಾರರಿಗೆ ಪ್ರಧಾನವಾಗುತ್ತದೆ. ಏಕೆಂದರೆ ಇವುಗಳ ಗ್ರಹಿಕೆಯ ಮೂಲಕವೆ ಸಂಸ್ಕೃತಿಗಳ ವಿಭಿನ್ನ ಸ್ತರಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಆಗುತ್ತದೆ ಎಂಬ ನಂಬಿಕೆ ಅವರದು. ಅಲ್ಲದೆ ಸಾಹಿತ್ಯ, ಸಮಾಜ, ಚರಿತ್ರೆ, ಅಧಿಕಾರ, ಜ್ಞಾನ ಮೊದಲಾದವು ಸಂಸ್ಕೃತಿಯ ಹಲವು ವಿನ್ಯಾಸಗಳ ಮೊತ್ತವಾಗಿಯೇ ಅನಾವರಣ ಆಗುವಂಥವು ಎಂಬುದು ಈ ವಾದದ ತಿರುಳು.

ನವ ಚಾರಿತ್ರಿಕವಾದ ಮೇಲೆ ಆದಂಥ ಪ್ರಭಾವಗಳು

ನವ ಚಾರಿತ್ರಿಕವಾದವು ರೂಪುತಳೆಯುವಲ್ಲಿ ಕಾಲದಿಂದ ಕಾಲಕ್ಕೆ ವಿಭಿನ್ನ ಬಗೆಯ ಪ್ರಭಾವಗಳು ಆಗಿವೆ. ಈ ಪ್ರಭಾವಗಳ ಸ್ವರೂಪವನ್ನು ಅರಿಯುವುದರ ಮೂಲಕ ಅದರ ನೆಲೆ-ಹಿನ್ನೆಲೆಗಳನ್ನು ಗ್ರಹಿಸಲು ಸಾಧ್ಯ. ಉದಾಹರಣೆಗೆ –

೧. ಲೂಯಿ ಅಲ್ತುಸರ್‌ ಪಂಥದ ಪ್ರಭಾವ

ಫ್ರಾನ್ಸ್ ದೇಶದ ಸಂರಚನಾವಾದಿಗಳಲ್ಲಿ ಪ್ರಮುಖನಾದ ಲೂಯಿ ಅಲ್ತುಸರ್, ಒಬ್ಬ ತತ್ವಶಾಸ್ತ್ರಜ್ಞನೂ ಹೌದು. ಮಾರ್ಕಿಸ್ಟ್ ಚಿಂತನಾ ನೆಲೆಗಳನ್ನು ಮೈಗೂಡಿಸಿಕೊಂಡಿದ್ದ ಇವನು ನವ ಚಾರಿತ್ರಿಕವಾದದ ಸೈದ್ಧಾಂತಿಕತೆಯ ಮೇಲೆ ತನ್ನದೇ ಆದ ಪ್ರಭಾವವನ್ನು ಬೀರಿದ. ಇವನ ‘ಐಡಿಯಾಲಜಿ’ಯನ್ನು ಕುರಿತ ತಾತ್ವಿಕ ಚಿಂತನೆಗಳು ಅಮೆರಿಕಾ ಹಾಗೂ ಇಂಗ್ಲೆಂಡಿನ ಸಾಹಿತ್ಯ ವಿಮರ್ಶಕರ ಮೇಲೆ ಹೆಚ್ಚಿನ ಪ್ರಭಾವ ಬೀರಿದವು. ಹಿಂದಿನ ಸಾಂಪ್ರದಾಯಿಕ ‘ಜಡ ಮಾರ್ಕ್ಸಿಸಂ’ನ ತಾತ್ವಿಕತೆಯನ್ನು ಒಪ್ಪದ ಅಲ್ತುಸರ್‌‘ಪ್ರಭುತ್ವ’ಕ್ಕೆ (Power) ಮಣಿದು ಅಥವಾ ಅದರ ಅಧೀನದಲ್ಲಿ ಸೃಷ್ಟಿಶೀಲ ಕಲಾಕೃತಿಯೊಂದು (Product) ನಿರ್ಮಾಣ ಆಗುವುದಿಲ್ಲ’ ಎಂಬ ತನ್ನ ವಾದವನ್ನು ಮಂಡಿಸಿದ. ಇವನ ಪ್ರಕಾರ ಸೃಷ್ಟಿಶೀಲತೆಯು (Production) ತನ್ನ ಮೇಲಿನ ‘ಪ್ರಭುತ್ವ’ದ ಎಲ್ಲ ಬಗೆಯ ಶಕ್ತಿ-ಸಾಮರ್ಥ್ಯಗಳನ್ನು ಅದರ ಕಬಂಧ ಬಾಹುಗಳ ಮಿತಿ-ಎಲ್ಲೆಗಳನ್ನು ಮೀರುವ ಪ್ರಯತ್ನದಲ್ಲಿ ಇರುತ್ತದೆ.

ಆರ್ಥಿಕ ನೆಲೆಗಳಿಂದ ನೋಡಿದ ‘ಮೆಟೇರಿಯಲಿಸ್ಟಿಕ್’ ದೃಷ್ಟಿಕೋನಗಳನ್ನು ಮುಂದೆ ಬಂದಂಥ ಸಂರಚನಾವಾದಿಗಳು ಪ್ರಶ್ನಿಸತೊಡಗಿದರು. ಈ ಘಟ್ಟದಲ್ಲಿ ಅಲ್ತುಸರ್‌ನ ವಿಚಾರಗಳ ಪ್ರಭಾವ ಆಗಿದೆ. ಯಾವುದೇ ಕಲಾಕೃತಿಯು ಸಾಮಾಜಿಕ ಮತ್ತು ಆರ್ಥಿಕ ನಿಯಂತ್ರಣಗಳಿಂದ ಸೃಷ್ಟಿ ಆಗುವುದಿಲ್ಲ ಎಂದು ನಂಬಿದ್ದ ಅಲ್ತುಸರ್, ಕಲೆಯ ಸಾಪೇಕ್ಷ ಸ್ವಾಯತ್ತತೆಗೆ ಹೆಚ್ಚು ಒತ್ತು ಕೊಟ್ಟಿದ್ದ. ಏಕೆಂದರೆ ಇನ್ನುಳಿದ ಸಂಗತಿಗಳು ಸಹ ಅವನಿಗೆ ಮುಖ್ಯ ಅನ್ನಿಸಿದ್ದವು. ಸಾಮಾಜಿಕವಾದ ಅಧಿಕಾರವನ್ನು ಸಾಂಸ್ಕೃತಿಕವಾಗಿ ಉಳಿಸಿಕೊಳ್ಳುವಲ್ಲಿ ‘ಐಡಿಯಾಲಜಿ’ಯ ಪಾತ್ರ ಮಹತ್ತ್ವದ್ದು. ತನ್ನ ‘ಐಡಿಯಾಲಜಿ’ ಪರಿಭಾಷೆಯನ್ನು ‘ನಂಬಿಕೆ’, ‘ಧೋರಣೆ’, ‘ವರ್ತನೆ’, ‘ಅಭ್ಯಾಸ’ಗಳಲ್ಲಿ ನೋಡುವ ಅಲ್ತುಸರ್ ‘ಜಡ ಮಾರ್ಕ್ಸಿಸ್ಟ’ರಿಗಿಂತ ಭಿನ್ನವಾಗಿ ಗ್ರಹಿಸುವಲ್ಲಿ ಸಫಲನಾಗಿದ್ದಾನೆ. ಇವನ ಪ್ರಕಾರ ಓದುಗರು ಒಂದು ಐಡಿಯಾಲಜಿಯ ನಿರ್ಮಾಣಕಾರರೂ ಹೌದು, ಅದರ ಅಧೀನರೂ ಹೌದು. ಈ ಹಿನ್ನೆಲೆಯಲ್ಲಿಯೆ ಅಲ್ತುಸರ್ ವಾಸ್ತವಿಕತೆಯ ವೈರುಧ್ಯತೆಗಳನ್ನು ಅದುಮಿಡಲು ಸಾಧ್ಯ ಆಗುವುದಿಲ್ಲ ಎಂದಿರುವುದು. ಏಕೆಂದರೆ ಅವುಗಳಿಗೆ ತಾನೇ ತಾನಾಗಿ ಅನಾವರಣಗೊಳ್ಳುವ ಸಾಮರ್ಥ್ಯ ಇರುವುದರಿಂದ. ಕನ್ನಡದ ನವೋದಯದ ಸಂದರ್ಭಕ್ಕೆ ಹೋಲಿಕೆ ಮಾಡಿ ನೋಡಿದರೆ ಈ ವಾದದ ಅರ್ಥ ಇನ್ನಷ್ಟು ಗ್ರಹಿಕೆಗೆ ಬರಲು ಸಾಧ್ಯ. ನಮ್ಮ ನವೋದಯ ಕಾವ್ಯದಲ್ಲಿ ಪ್ರಕೃತಿಯನ್ನು ಆಪ್ತವಾಗಿ ಆದರ್ಶೀಕರಿಸಿರುವ ಉದಾಹರಣೆಗಳಿವೆ. ನಿಸರ್ಗದ ಉದಾತ್ತೀಕರಣಕ್ಕಾಗಿ ಹಲವು ಬಗೆಯ ಸಂಕೇತ, ರೂಪಕಗಳನ್ನು ಬಳಸಿರುವುದೂ ಉಂಟು. ಆದರೆ ಇವುಗಳನ್ನು ವಾಚ್ಯಾರ್ಥದಲ್ಲಿ ಗ್ರಹಿಸಲು ಪ್ರಯತ್ನಿಸಿದರೆ ಕಾವ್ಯವು ಸಾಮಾಜಿಕ ವೈರುಧ್ಯತೆಗಳಿಂದ ತಾನೇ ತಾನಾಗಿ ಬಿಡುಗಡೆ ಹೊಂದುವ ಪ್ರಕ್ರಿಯೆಯನ್ನು ಗಮನಿಸಬಹುದು.

‘ಥಿಯರಿ ಆಫ್ ಲಿಟರರಿ ಪ್ರೊಡಕ್ಷನ್’ ಕೃತಿಯ ಮೂಲಕ ನವ್ಯ ವಿಮರ್ಶಕರ ಗಮನಸೆಳೆದ ಪಿಯರೆ ಮ್ಯಾಷಿರೆ ಅಲ್ತುಸರ್‌ನ ಶಿಷ್ಯ, ಅನುಯಾಯಿಯೂ ಹೌದು. ಅಂತೆಯೇ ಸ್ಟೀಫನ್‌ಗ್ರೀನ್ ಬ್ಲಾಟ್‌ನು ಸಹ ಸಾಹಿತ್ಯವನ್ನು ಸಾಂಸ್ಕೃತಿಕ ಪ್ರಕ್ರಿಯೆಯ ಮೊತ್ತವಾಗಿ ಗ್ರಹಿಸುವಲ್ಲಿ ಹೆಚ್ಚಿನ ಪ್ರಭಾವ ಬೀರಿದ. ಸ್ಟೀಫನ್ ಗ್ರೀನ್ ಬ್ಲಾಟ್ ‘ನವ ಚಾರಿತ್ರಿಕವಾದ’ದ ಚಿಂತನೆಗಳಲ್ಲಿ ತನ್ನದೇ ಆದ ಸ್ಥಾನವನ್ನು ಉಳಿಸಿಕೊಂಡಿರುವ ಚಿಂತಕ.

೨. ಮೈಖೆಲ್ ಫುಕೋನ ತಾತ್ವಿಕ ಚಿಂತನೆಗಳ ಪ್ರಭಾವ

ಲೂಯಿ ಅಲ್ತುಸರ್ ಹಾಗೂ ಪಿಯರೆ ಮ್ಯಾಷಿರೆ ಅವರ ಚಿಂತನೆಗಳ ಮುಂದುವರಿಕೆಯ ಭಾಗವಾಗಿ ಮೈಖೆಲ್ ಫುಕೋನ ವಿಚಾರಗಳನ್ನು ಪರಿಶೀಲಿಸಬಹುದು. ಇವನು ಯಾವುದೇ ಕಾಲಘಟ್ಟದ, ಯಾವುದೇ ಸಮಾಜದ ‘ಅಧಿಕಾರ’ ಸಂಬಂಧಿ ಪ್ರಕ್ರಿಯೆಗಳನ್ನು ಕುರಿತು ಆಲೋಚಿಸಿದ ಚಿಂತಕ. ಫುಕೋನ ಪ್ರಕಾರ ಜ್ಞಾನ (Knowledge). ಸತ್ಯ (Truth), ಸಹಜ-ಅಸಹಜ (Normal-Abnormal) ಎಂಬಂಥ ಸಂಗತಿಗಳು ಸಾಮಾಜಿಕ ಅಧಿಕಾರದ ಚೌಕಟ್ಟಿನಿಂದಲೇ ರೂಪುತಳೆದು ಅನಾವರಣಗೊಳ್ಳುವಂಥವು. ಅಂತೆಯೇ ಹುಚ್ಚುತನ, ಲೈಂಗಿಕ ವಿಕೃತಿ, ಅಪರಾಧಗಳಂಥ ಪರಿಕಲ್ಪನೆಗಳ ವ್ಯಾಖ್ಯೆ, ಅರ್ಥಗಳು ಗ್ರಹಿಕೆಗೆ ಬರುವುದು ಆಯಾ ಸಮಾಜದ ವಿನ್ಯಾಸಗಳಿಂದಲೇ ಎಂಬುದು ಇವನ ವಾದ.

ಸಮಾಜವೊಂದರಲ್ಲಿನ ಅಧಿಕಾರ ಕೇಂದ್ರಿತ ಸಂಬಂಧಗಳು ಅಲ್ಲಿನ ಪರಿಕಲ್ಪನೆ, ವೈರುಧ್ಯ ಹಾಗೂ ಶ್ರೇಣೀಕರಣಗಳ (Concepts, Oppositions and Hierarchies) ಸಂಕಥನದ (Discourse) ಸ್ವರೂಪವನ್ನೇ ಅವಲಂಬಿಸಿರುತ್ತದೆ ಎಂಬುದು ಫುಕೋನ ಚಿಂತನೆ. ಇಂಥ ಅನೇಕ ವಿಚಾರಗಳು ನವ ಚಾರಿತ್ರಿಕವಾದದ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿದವು.

೩. ನಿರಚನವಾದಿ ಚಿಂತನೆಗಳ ಪ್ರಭಾವ

ನವ ಚಾರಿತ್ರಿಕವಾದವನ್ನು ಮಂಡಿಸುವ ಚಿಂತಕರು ನಿರಚನವಾದದ (De-Constructionism) ಕೆಲವು ವಿಚಾರಗಳಿಂದ ಪ್ರಭಾವಿತರಾಗಿದ್ದಾರೆ. ನಿರಚನವಾದಿಗಳು ಯಾವುದೇ ‘ಪಠ್ಯವು ಅಸಂಖ್ಯ ವಿರೋಧಗಳ ಮೊತ್ತ’ವೆಂದೇ ನೋಡುತ್ತಾರೆ. ಅಲ್ಲದೆ ಮಿಖಾಯಿಲ್ ಭಕ್ತಿನ್ ನಿರೂಪಿಸುವ ಪಠ್ಯವನ್ನು ಕುರಿತ ಚಿಂತನೆಗಳನ್ನು ನವ ಚಾರಿತ್ರಕಾರರು ಒಪ್ಪಿರುವುದುಂಟು. ಭಕ್ತಿನ್ ಪಠ್ಯವನ್ನು (Text) ಕುರಿತ ತನ್ನ ಚಿಂತನೆಯಲ್ಲಿ (Concept of the ‘dialogic’) ಅದು ಎಷ್ಟೇ ಸ್ವತಂತ್ರವಾದರೂ ಸಂವಾದಾತ್ಮಕ ಸ್ವರೂಪವನ್ನು ಒಳಗೊಂಡಿರುತ್ತದೆ ಎಂಬ ವಾದವನ್ನು ಮಂಡಿಸಿದ್ದಾನೆ. ಯಾವುದೇ ಪಠ್ಯದೊಂದಿಗೆ ಒಂದು ಬಗೆಯ ಸಾಂಸ್ಕೃತಿಕ ಸ್ವರೂಪದ ಸಂವಾದವನ್ನು (Interaction) ನಡೆಸಲು ಸಾಧ್ಯ ಎಂಬ ನವ ಚಾರಿತ್ರಿಕವಾದದ ಸೈದ್ಧಾಂತಿಕತೆ ಈ ದಿಸೆಯಲ್ಲಿ ನಿರಚನವಾದಿಗಳಿಂದ ಪ್ರಭಾವಿತವಾಗುವುದು ಕಂಡು ಬರುತ್ತದೆ.

೪. ಸಾಂಸ್ಕೃತಿಕ ಮಾನವ ಶಾಸ್ತ್ರೀ ಚಿಂತನೆಗಳ ಪ್ರಭಾವ

ಕ್ಲಿಫರ್ಡ್‌ ಗೀರ್ಟ್ಜ್‌‌ನು ಈ ವಾದದ ಮುಖ್ಯ ಪ್ರತಿಪಾದಕ. ಸಂಸ್ಕೃತಿಯೊಂದರಲ್ಲಿ ವಿಭಿನ್ನ ಬಗೆಯ ಅರ್ಥಗ್ರಹಿಕೆಗಳನ್ನು ನೀಡುವ ಸೂಚನೆಗಳು ದೊರೆಯುತ್ತವೆ. ಅಂತೆಯೇ ಸಮಾಜದಲ್ಲಿ ರೂಪುತಳೆಯುವ ಉತ್ಪಾದನೆ ಅಥವಾ ಘಟನೆಗಳನ್ನು ಸಮಂಜಸವಾಗಿ ಗ್ರಹಿಸಬೇಕಾದ ಜರೂರು ಇದೆ ಎನ್ನುವ ಗೀರ್ಟ್ಜ್ ಅದನ್ನು ‘ಥಿಕ್ ಡಿಸ್ಕ್ರಿಪ್ಶನ್’ ಎಂದು ಕರೆದಿದ್ದಾನೆ. ಈ ಥರದ ವೈಚಾರಿಕತೆ ನವ ಚರಿತ್ರಕಾರರಿಗೆ ಜ್ಞಾನದ ಹೊಸ ಹೊಳಹುಗಳಿಗೆ ಪ್ರವೇಶಿಸಲು ಎಡೆಮಾಟಿಕೊಟ್ಟಿತು. ಹೀಗಾಗಿ ಇದರಿಂದ ಪ್ರಭಾವಿತರಾಗುವಂತಾಯಿತು.

೫. ಲೂಯಿ ಮಾಂಟ್ರೋಸ್: ಸಾಹಿತ್ಯ ಹಾಗೂ ಚರಿತ್ರೆಯ ನಂಟು

ಲೂಯಿ ಮಾಂಟ್ರೋಸನು ಪಠ್ಯಕ್ಕೂ ಚಾರಿತ್ರಿಕಾಂಶಗಳಿಗೂ ಇರುವ ಅವಿನಾಭಾವ ಸಂಬಂಧವನ್ನು ಕುರಿತು ಚಿಂತನೆ ನಡೆಸಿದ. ಇವನ ಪ್ರಕಾರ ಎಲ್ಲ ಪಠ್ಯಗಳಿಗೂ ಚಾರಿತ್ರಿಕ ಗುಣವೆಂಬುದು ಇದ್ದೇ ಇರುತ್ತದೆ. ಸಾಹಿತ್ಯದ ಪಠ್ಯವೊಂದು ಹೇಗೆ ವ್ಯಾಖ್ಯಾನ, ನಿರೂಪಣೆಗಳನ್ನು ಬಯುಸುತ್ತದೆಯೋ ಹಾಗೆಯೇ ಚರಿತ್ರೆಯ ಪಠ್ಯವೂ ಬಯಸುತ್ತದೆ. ಅಂದರೆ ಚರಿತ್ರೆಗೆ ಪಠ್ಯಗುಣಗಳಿಂದಲೂ, ಪಠ್ಯಗಳಿಗೆ ಚಾರಿತ್ರಿಕ ಗುಣಗಳಿಂದಲೂ ಪ್ರತ್ಯೇಕವಾಗಿಸಿ ನೋಡಲು ಬರುವುದಿಲ್ಲ ಎಂಬಂಥ ವಾದ ನವ ಚರಿತ್ರಕಾರರಿಗೆ ಆಪ್ತವಾಯಿತು. ಚರಿತ್ರೆ ಎನ್ನುವುದು ಸತ್ಯ ಸಂಗತಿ, ವಾಸ್ತವತೆಗಳನ್ನು ಅರಿಯುವುದಕ್ಕಾಗಿ ಇರುವಂಥ ದಾಖಲೆಗಳ ಮೊತ್ತವಲ್ಲ ಎಂಬುದು ಪ್ರಧಾನವಾಯಿತು. ಬದಲಾಗಿ ಇದೊಂದು ನಿರ್ದಿಷ್ಟ ಕಾಲಘಟ್ಟದ ಸಾಂಸ್ಕೃತಿಕ ಸಂಕಥನವೂ ಹೌದು. ಅಂದರೆ ಹೊಸ ಪರಿಭಾಷೆಯ ಅಥವಾ ನೋಟದ ವಿಶ್ಲೇಷಣಾ ಕ್ರಮಗಳಿಗೆ ಹೆಚ್ಚಿನ ಮಹತ್ತ್ವ ಬಂದಿತು. ಇದರಿಂದಾಗಿ ದಾಖಲೆಗಳನ್ನು ವಿಭಿನ್ನ ರೀತಿಯಲ್ಲಿ ಸಂವಹನಗೊಳ್ಳಲು, ಅನುಸಂಧಾನಗೊಳ್ಳಲು ಸಾಧ್ಯ ಎಂಬುದು ಪ್ರಧಾನ ಆಯಿತು.

ಐತಿಹಾಸಿಕವಾದ ಯಾವುದೇ ಬಗೆಯ ಕಥನವು ರೂಪುಗೊಳ್ಳಲು ಆಯಾ ಸನ್ನಿವೇಶದ ಚಿಂತನಾ ನೆಲೆಯ (ಐಡಿಯಾಲಜಿ) ಪ್ರಭಾವ ಮಹತ್ತ್ವದ್ದು ಎಂಬ ವಿಚಾರ ಮಂಡಿತವಾಯಿತು. ಹೀಗಾಗಿ ಚರಿತ್ರೆಯ ಭಾಷಿಕ ರಚನೆಗಳ ಪರಿಶೀಲನೆಗೂ ಇಂಥ ಐಡಿಯಾಲಜಿಯ ಗ್ರಹಿಕೆ ಮುಖ್ಯವಾದುದು ಅನ್ನಿಸದಿರಲಿಲ್ಲ. ಸಾಹಿತ್ಯ ಅಥವಾ ಚರಿತ್ರೆಯ ಪಠ್ಯಗಳಲ್ಲಿನ ಸಂಗತಿಗಳು ಆಯಾ ಸಮಾಜದ ಅಧಿಕಾರದ ವಿನ್ಯಾಸಗಳೇ ಹೌದು. ಅಲ್ಲದೆ ಅದನ್ನು ಗಟ್ಟಿಗೊಳಿಸಿ ಮುಂದುವರೆಸುವ ಪ್ರಕ್ರಿಯೆಯೂ ಹೌದು. ಇಲ್ಲಿ ಪ್ರಧಾನ ಮತ್ತು ಅಧೀನತೆಯ ಗುಣಗಳು ಸಹಜ. ಸಾಹಿತ್ಯದ ಪಠ್ಯವೊಂದು ಆಯಾಕಾಲದ ಸಾಂಸ್ಕೃತಿಕ ಸಂರಚನೆಗಳ ಮೊತ್ತೂ ಆಗಿರುವುದರಿಂದ ಸಾಹಿತ್ಯ, ಸಾಹಿತ್ಯೇತರ ಎಂಬ ಭಿನ್ನತೆಗಳಿಲ್ಲ. ಇಂಥ ಅನೇಕ ವಿಚಾರಗಳು ನವ ಚಾರಿತ್ರಿಕವಾದದ ತಿರುಳಾಗಿ ಮಂಡಿತವಾದವು.

ನವ ಚಾರಿತ್ರಿಕವಾದದ ಸ್ವರೂಪ

ನವ ಚಾರಿತ್ರಿಕವಾದಿಗಳು ಕಾಲದಿಂದ ಕಾಲಕ್ಕೆ ಹೊಸ ಚಿಂತನೆಗಳ ಮೂಲಕ ಪ್ರತಿ ಕ್ರಿಯಿಸುತ್ತಾ ಬಂದಿದ್ದಾರೆ. ಈ ಪ್ರತಿಕ್ರಿಯೆ ಸಾಹಿತ್ಯದ ಸ್ವರೂಪ, ಚರಿತ್ರೆಯನ್ನು ಗ್ರಹಿಸುವ ಕ್ರಮ, ಮಾನವನ ಸ್ವಭಾವಕ್ಕೆ ಸಂಬಂಧಿಸಿದಂತೆ, ಓದುಗ ವರ್ಗವನ್ನು ಕುರಿತು ಹಾಗೂ ವಿಮರ್ಶೆಯ ವಿಧಿ-ವಿಧಾನದ ಸ್ವರೂಪಗಳನ್ನು ಕುರಿತು ನಡೆಸಿದ ಚಿಂತನೆಗಳೇ ಆಗಿವೆ. ಅವುಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಬಹುದು.

೧. ಸಾಹಿತ್ಯವನ್ನು ಗ್ರಹಿಸುವ ಬಗೆ

ಸಾಹಿತ್ಯವನ್ನು ಕೇವಲ ಸೌಂದರ್ಯಾತ್ಮಕ (Aesthetic) ಪರಿಧಿಗಳಲ್ಲಿಯೇ ನೋಡುವ ಜರೂರು ಇಲ್ಲ. ಸಾಹಿತ್ಯ ಕೃತಿಯೂ ಒಂದು ಪಠ್ಯವೇ ಆಗಿರುವುದರಿಂದ ಅದನ್ನು ಇನ್ನಿತರ ಪಠ್ಯಗಳಿಂದ ಹೊರತುಪಡಿಸಿ ನೋಡಲು ಬರುವುದಿಲ್ಲ. ಧರ್ಮ, ತತ್ವ, ಚರಿತ್ರೆ, ವಿಜ್ಞಾನ, ಕಾನೂನು ಮೊದಲಾದ ಜ್ಞಾನಶಾಖೆಗಳಂತೆಯೇ ಸಾಹಿತ್ಯಕ ಪಠ್ಯವೂ ನಿಗದಿತ ಕಾಲ, ಪ್ರದೇಶಗಳ ಸನ್ನಿವೇಶಗಳಿಗೆ ಬದ್ಧವಾಗಿಯೇ ಇರುತ್ತದೆ. ಹೀಗಾಗಿ ಆಯಾ ಕಾಲಘಟ್ಟದ ಆರ್ಥಿಕತೆ, ಸಮಾಜ, ರಾಜಕಾರಣ ಹಾಗೂ ಸಂಸ್ಕೃತಿ ಕೇಂದ್ರಿತ ವಿಚಾರಗಳಿಂದ ಸಾಹಿತ್ಯದ ಸ್ವರೂಪವನ್ನು ಅಥವಾ ಕಲಾತ್ಮಕ ಮೌಲ್ಯಗಳನ್ನು ಗುರುತಿಸಲು ಸಾಧ್ಯ ಆಗುವುದಿಲ್ಲ. ಅಲ್ಲದೆ ಸಾಹಿತ್ಯದ ಪಠ್ಯವನ್ನು ವಿಶೇಷವಾಗಿಯೋ ಅಥವಾ ಅನನ್ಯವಾಗಿಯೋ ನೋಡುವ ನೋಟವನ್ನು ನವ ಚರಿತ್ರಕಾರರು ಒಪ್ಪುವುದಿಲ್ಲ.

ಸಾಂಪ್ರದಾಯಿಕ ಕ್ರಮಗಳಿಂದ ಸಾಹಿತ್ಯದ ಸ್ವರೂಪವನ್ನು ಗ್ರಹಿಸುವ ಪರಿಪಾಠವನ್ನು ಇವರು ಒಪ್ಪದೆ, ಸಾಹಿತ್ಯವು ‘ಹೋಮೋಜೀನಿಯಸ್’ ಆದುದೆಂದು, ಸ್ವತಂತ್ರ ಘಟಕವೆಂದೂ, ಪರಿಪೂರ್ಣವಾದುದೆಂದೂ ಭಾವಿಸುವುದಿಲ್ಲ. ಇದನ್ನು ತಿರಸ್ಕರಿಸುವು ನವಚಾರಿತ್ರಕಾರರು ಸಾಹಿತ್ಯವು ವಾಸ್ತವತೆಯ ಪ್ರತಿರೋಧಗಳನ್ನು ಕಲಾತ್ಮಕವಾಗಿ ಬಗೆಹರಿಸಿಕೊಳ್ಳಬಲ್ಲದು ಎಂಬುದನ್ನು ಅಲ್ಲಗಳೆಯುತ್ತಾರೆ. ಇಂಥ ನೆಲೆಗಳಿಂದ ಹೊರಡುವ ನಂಬಿಕೆ, ವಿಮರ್ಶಾ ಸ್ವರೂಪವನ್ನು ನವ ಚರಿತ್ರಕಾರರು ಪ್ರಶ್ನಿಸಿ ತಿರಸ್ಕರಿಸಿದರು.

ನವ ಚರಿತ್ರಕಾರರು ಸಾಹಿತ್ಯ ಪಠ್ಯವು ಸೃಷ್ಟಿಯಾದ ಸನ್ನಿವೇಶದಲ್ಲಿ ವೈವಿಧ್ಯಮಯವಾದ ಧ್ವನಿಗಳನ್ನು ಅಂತರ್ಗತ ಮಾಡಿಕೊಂಡೇ ಹುಟ್ಟಿರುತ್ತದೆ ಎನ್ನುತ್ತಾರೆ. ಈ ಧ್ವನಿಗಳು ಆಯಾ ಸನ್ನಿವೇಶಕ್ಕೆ, ಕೆಲವು ಪ್ರತಿರೋಧಗಳಿಗೆ ಕಲಾತ್ಮಕ ಪರಿಹಾರಗಳನ್ನು ಸೂಚಿಸುವುದರ ಮುಖೇನ ತಾತ್ಕಾಲಿಕ ಸಂತಸವನ್ನುಂಟು ಮಾಡಿರುತ್ತವೆ. ಇಂಥ ಮರೆಮಾಚಿದ ಸಂಘರ್ಷಾತ್ಮಕ ಅಲಕ್ಷಿತ ಧ್ವನಿಗಳನ್ನು ಗುರುತಿಸುವುದೇ ನವ ಚರಿತ್ರಕಾರರ ಸಾಹಿತ್ಯಕ ಸ್ವರೂಪದ ನಿಲುವು.

ಜಾತಿ, ಲಿಂಗ, ವರ್ಗ, ಪ್ರಭುತ್ವ ಮೊದಲಾದವುಗಳ ಆಕ್ರಮಣಶೀಲತೆಗಳನ್ನು ಸಾಹಿತ್ಯದ ಪಠ್ಯವು ಅನಾವರಣಗೊಳಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಅದನ್ನು ಗ್ರಹಿಸಲು ಹೊಸ ಬಗೆಯ ದೃಷ್ಟಿ, ಅನುಭವಜನ್ಯ ಗ್ರಹಿಕೆಗಳನ್ನು ನವ ಚರಿತ್ರಕಾರರು ಪ್ರತಿಪಾದಿಸುತ್ತಾರೆ.

೨. ಚರಿತ್ರೆಯನ್ನು ಗ್ರಹಿಸುವ ಕ್ರಮ

ಚರಿತ್ರೆಯ ನಿರಂತರತೆಯನ್ನು ಪ್ರತಿಪಾದಿಸುವ ನವ ಚರಿತ್ರಕಾರರು ಹಿಂದಿನ ಜಡ್ಡುಗಟ್ಟಿದ ಮಾರ್ಕ್ಸ್‌ವಾದಿ ನಿಲುವುಗಳನ್ನು ತಿರಸ್ಕರಿಸುತ್ತಾರೆ. ಗತಕಾಲದ ಸತ್ಯ ಮತ್ತು ವಾಸ್ತವತೆಯ ಸಂಗತಿಗಳ ಮೊತ್ತವನ್ನಾಗಿ ಚರಿತ್ರೆಯ ವಿನ್ಯಾಸವನ್ನು ಇವರು ಒಪ್ಪುವುದಿಲ್ಲ. ಚರಿತ್ರೆಯನ್ನು ನೈಜ ಚಿತ್ರಣವೆಂತಲೂ, ಸಾಹಿತ್ಯವನ್ನು ನೈಜತೆಯ ಪ್ರತಿಬಿಂಬವೆಂತಲೂ ಪರಿಭಾವಿಸಿದ್ದ ಹಿಂದಿನ ಮಾರ್ಕ್ಸ್‌ವಾದಿ ಚಿಂತಕರನ್ನು ಇವರು ಒಟ್ಟಾಗಿ ತಿರಸ್ಕರಿಸಿದರು. ಬದಲಾಗಿ ಯುರೋಪಿನ ಪುನರುಜ್ಜೀವನದ ಕಾಲಘಟ್ಟದಲ್ಲಿ ಜ್ಞಾನಶಿಸ್ತುಗಳನ್ನು ಪ್ರತ್ಯೇಕಿಸಿ ನೋಡುವ ನೋಟವನ್ನು ಮನದಟ್ಟು ಮಾಡಿಕೊಡುತ್ತಾರೆ. ಈ ಬಗೆಯ ಪ್ರತ್ಯೇಕತೆಯ ಧೋರಣೆಯು (ಸಾಹಿತ್ಯ ಹಾಗೂ ಸಾಹಿತ್ಯೇತರ) ಐಡಿಯಾಲಜಿಗಳ ಪ್ರಭಾವದಿಂದಾಗಿಯೇ ಹುಟ್ಟಿಕೊಂಡಿತ್ತು. ಆದರೆ ಕೇವಲ ಸಾಹಿತ್ಯಕ ವಿಮರ್ಶೆಯ ಅನುಕೂಲಕ್ಕಾಗಿ ಈ ಭಿನ್ನತೆಯೆಂಬುದನ್ನು ನವ ಚರಿತ್ರಕಾರರು ಅನಾವರಣಗೊಳಿಸಿದರು.

ಚರಿತ್ರೆಯನ್ನು ಕೇವಲ ಖಚಿತತೆಯ ಚೌಕಟ್ಟಿಗೆ ಜೋಡಿಸದೆ ಅದನ್ನು ಪ್ರಾತಿನಿಧಿಕವಾಗಿ (Representation), ಸಂವಾದ ರೂಪಿಯಾಗಿ (Interaction) ಅನುಸಂಧಾನಗೊಳ್ಳುವ ನೆಲೆಯಲ್ಲಿ ಮಂಡಿಸುತ್ತಾರೆ. ಜಾತಿ, ವರ್ಗ, ಸಂಘರ್ಷ, ಜನಾಂಗ, ಪ್ರಭುತ್ವ ಮೊದಲಾದವುಗಳನ್ನು ನವ ಚರಿತ್ರಕಾರರು ತಮ್ಮ ವಿಶ್ಲೇಷಣೆಗಳ ಮುಖೇನ ಪರಿಶೀಲನೆ ಮಾಡಿದ್ದಾರೆ. ಅಧಿಕಾರದ ಸ್ತರಗಳನ್ನು ಗ್ರಹಿಸುವುದರ ಮೂಲಕ ಚರಿತ್ರೆಯು ಸಂಸ್ಕೃತಿಯ ಇನ್ನಿತರೆ ಚಹರೆಗಳನ್ನು, ಸ್ತರಗಳನ್ನು ತಿಳಿದುಕೊಳ್ಳಲು ಅನುಕೂಲ ಮಾಡಿಕೊಡುತ್ತದೆ ಎಂಬುದು ಇವರ ನಿಲುವು. ಪರಿಚಿತವಾದ ಅರ್ಥಗಳಿಂದ ಹೊರತುಪಡಿಸಿಯೂ ಚರಿತ್ರೆಯನ್ನು ನೋಡಲು ಸಾಧ್ಯವಿದೆ ಎಂಬುದೇ ಇವರ ಅಚಲವಾದ ನಂಬಿಕೆ.

೩. ಮಾನವನ ಸ್ವಭಾವವನ್ನು ಕುರಿತ ಚಿಂತನೆ

ಎಲ್ಲರನ್ನೂ ಸಮನಾಗಿ ಕಾಣುವ ಬಂಡವಾಳಶಾಹಿಗಳ ಮನುಷ್ಯತ್ವದ ಸ್ವಭಾವವನ್ನು ನವ ಚರಿತ್ರಕಾರರು ಒಪ್ಪುವುದಿಲ್ಲ. ಯಾವುದೇ ಕೃತಿಯ ಸೃಷ್ಟಿಯು ಸುಸಂಬದ್ಧ, ಸ್ವತಂತ್ರ, ವಿಶಿಷ್ಟ ವ್ಯಕ್ತಿಯೊಬ್ಬನ ಸಾಮರ್ಥ್ಯ ಎಂಬುದನ್ನು ಇವರು ನಿರಾಕರಿಸುತ್ತಾರೆ. ಮನುಷ್ಯನು ಸೃಷ್ಟಿಸುವ ಪ್ರಕ್ರಿಯೆಯಲ್ಲಿ ಸಮಾಜವೊಂದರ ಅಧಿಕಾರದ ಐಡಿಯಾಲಜಿಯ ಫಲಿತವಾಗಿಯೇ ಇರುತ್ತಾನೆ ಎಂಬುದು ಇವರ ನಿಲುವು. ಈ ವಾದವನ್ನು ಮಂಡಿಸಿದ ಸ್ಟೀಫನ್‌ ಗ್ರೀನ್‌ಬ್ಲಾಟನು ‘ಲೇಖಕ ಎಷ್ಟರ ಮಟ್ಟಿಗೆ ಸ್ವತಂತ್ರ’ ಎಂಬುದರ ಬಗೆಗೆ ತನ್ನ ವಿಚಾರಗಳನ್ನೂ ಮಂಡಿಸಿದ್ದಾನೆ. ಅಂತೆಯೇ ಇನ್ನಿತರೆ ನವ ಚರಿತ್ರಕಾರರು ಸಹ ಈ ಕುರಿತು ವಿಭಿನ್ನ ವಾದ-ವಿವಾದಗಳನ್ನು ಮಾಡಿದ್ದಾರೆ.

ಲೇಖಕನು ತನ್ನ ಕೃತಿಯಲ್ಲಿ ಮೂಡಿಸುವ ವಿಚಾರಗಳು ‘ಅವುಗಳನ್ನು ಓದುವ ಓದುಗರು’ ಮನುಷ್ಯತ್ವದ ಸಮಾನ ಲಕ್ಷಣಗಳನ್ನು ಹೊಂದಿರುತ್ತಾರೆ ಎಂಬುದನ್ನು ಸಾಂಪ್ರದಾಯಿಕ ವಿಮರ್ಶಾನೆಲೆಯ ಪ್ರತಿಆದನೆ ಎನ್ನುತ್ತಾರೆ. ಅಲ್ಲದೆ ಇಂಥ ವೈಚಾರಿಕತೆ ಬಂಡವಾಳಶಾಹಿಗಳ ಭ್ರಮಾಚಿಂತನೆಗಳಿಗೆ ಒಳ್ಳೆಯ ಉದಾಹರಣೆ ಎಂಬುದು ನವ ಚರಿತ್ರಕಾರರ ವಾದ. ಮಾನವನು ಐಡಿಯಾಲಜಿಯ ಫಲಿತವಾಗಿ ಸಮಾಜದಲ್ಲಿನ ಅಧಿಕಾರದ ಸ್ಥಿತ್ಯಂತರಗಳನ್ನು ಗ್ರಹಿಸಬಲ್ಲ. ಸಾಮರ್ಥ್ಯವನ್ನು ಹೊಂದಿರುತ್ತಾನೆ. ಜೊತೆಗೆ ಇಂಥ ಸ್ಥಿತ್ಯಂತರಗಳಿಗೆ ಆತ ಕಾರಣಕರ್ತನಾಗಬಲ್ಲವನೂ ಹೌದು ಎಂಬುದು ನವ ಚರಿತ್ರಕಾರರ ಅಭಿಮತ.

೪. ಓದುಗರನ್ನು ಕುರಿತ ಚಿಂತನೆ

ಒಂದು ಕೃತಿಯ ಓದು ಅಂದರೆ ಎಲ್ಲವನ್ನೂ ಕಳಚಿ ಓದುವ ನಿರ್ಲಿಪ್ತ ಕ್ರಮ ಅಲ್ಲ ಎಂಬುದು ನವ ಚರಿತ್ರಕಾರರ ವಾದ. ಅಂದರೆ ಓದುಗನ ಐಡಿಯಾಲಜಿಗಿಂತ ಭಿನ್ನವಾದ ಲೋಕದೃಷ್ಟಿಯನ್ನು ಹೊಂದಿರುವ ಲೇಖಕನ ಕೃತಿಯೊಂದನ್ನು ಓದುವಾಗ ಅದರಲ್ಲಿನ ವಿಚಾರಗಳನ್ನು ಈಗಾಗಲೇ ಅಂತರ್ಗತವಾಗಿರುವ ತನ್ನ ಸಂಸ್ಕೃತಿಯ ಪೂರ್ವಗ್ರಹಿಕೆಗಳಿಗೆ ಹೊಂದಿಸಿಕೊಂಡು, ಓದಿ, ವ್ಯಾಖ್ಯಾನಿಸಿಕೊಳ್ಳುವ ಕ್ರಮ ಎಂಬುದು ಇವರ ವಾದ. ಇಲ್ಲಿ ಎಲ್ಲ ಪ್ರದೇಶ, ಕಾಲಗಳಿಗೂ ಅನ್ವಯವಾಗುವ ಮಾನವೀಯ ಮೌಲ್ಯಗಳು ಪ್ರಾತಿನಿಧಿಕವಾಗಿ ಓದಿಸಿಕೊಂಡು ಹೋಗುವ ಪರಿಪಾಠವನ್ನು ಓದುಗ ಹೊಂದಿರುತ್ತಾನೆ. ಆದರೆ ಇದ್ದದ್ದನ್ನು ಇದ್ದ ಹಾಗೆಯೇ ನಿರ್ಲಿಪ್ತವಾಗಿ ವ್ಯಾಖ್ಯಾನಿಸಲು ಸಾಧ್ಯ ಎಂಬುದನ್ನು ಮಾನವತಾವಾದಿ ಆದರ್ಶೀಕರಣದ ಭ್ರಮೆ ಎಂತಲೇ ಇವರು ವಾದಿಸುತ್ತಾರೆ. ಏಕೆಂದರೆ ಲೇಖಕನಂತೆ ಓದುಗನೂ ಕೂಡ ತನ್ನ ಕಾಲದ ಸಾಮಾಜಿಕ ಸನ್ನಿವೇಶ ಹಾಗೂ ಐಡಿಯಾಲಜಿಗಳಿಂದಲೇ ರೂಪುತಳೆಯುತ್ತಿರುತ್ತಾನೆ. ಆದ್ದರಿಂದ ಓದುವಿಕೆಯ ಪ್ರಕ್ರಿಯೆಯನ್ನು ನವ ಚರಿತ್ರಕಾರರು ಎರಡು ರೀತಿಯಲ್ಲಿ ಗುರುತಿಸುತ್ತಾರೆ. ಅಂದರೆ ಒಂದು ಸಹಜ (Naturalization) ಅಂಗೀಕಾರದ ಕ್ರಮ, ಇನ್ನೊಂದು ಅಳವಡಿಕೆಯ (Appropriation) ಕ್ರಮ.