ಪ್ರಸ್ತುತ ಭಾರತದ ಚರಿತ್ರೆ ಬರವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ ಸಾಮ್ರಾಜ್ಯವಾದಿ, ರಾಷ್ಟ್ರೀಯವಾದಿ, ಮಾರ್ಕ್ಸಿಸ್ಟ್‌, ಕೇಂಬ್ರಿಡ್ಜ್‌ ವಿದ್ವಾಂಸರ ಸೈದ್ಧಾಂತಿಕತೆಯನ್ನು ಒರೆಹಚ್ಚುವ ಕೆಲಸವನ್ನು ಸಬಾಲ್ಟರ್ನ್ ಅಧ್ಯಯನವು ಕಳೆದ ಎರಡೂವರೆ ದಶಕಗಳಿಂದೀಚೆಗೆ ಮಾಡುತ್ತಿದೆ. ಕಳೆದ ಒಂದು ದಶಕದಲ್ಲಿ ಸಬಾಲ್ಟರ್ನ್ ಅಧ್ಯಯನದ ಬಗ್ಗೆ ಕನ್ನಡದಲ್ಲಿ ಅಲ್ಲಲ್ಲಿ ಪ್ರಸ್ತಾಪವಾಗಿದ್ದರೂ ಅದರ ಸೈದ್ಧಾಂತಿಕತೆ, ಹುಟ್ಟು, ಬೆಳವಣಿಗೆ ಮತ್ತು ಪರಿಣಾಮಗಳನ್ನು ಕುರಿತಂತೆ ಸಂಕ್ಷಿಪ್ತವಾಗಿ ಚರ್ಚಿಸಬೇಕೆನ್ನುವ ಇರಾದೆಯಲ್ಲಿ ಪ್ರಸ್ತುತ ಲೇಖನವನ್ನು ರೂಪಿಸಲಾಗಿದೆ. ಇತ್ತೀಚೆಗೆ ಬಹುಬಗೆಯಲ್ಲಿ ಚರ್ಚೆಗೆ ಒಳಗಾಗುತ್ತಿರುವ ಬಹುಸಂಸ್ಕೃತಿ ನೆಲೆಗಳು, ಜಾನಪದ/ಮೌಖಿಕ ಚರಿತ್ರೆಯ ನೆಲೆಗಳು, ಕೆಳಸ್ತರದ ಜನರ/ಸಮುದಾಯಗಳ ಧ್ವನಿಗಳು, ಸಬಾಲ್ಟರ್ನ್ ಅಧ್ಯಯನಕ್ರಮದ ವ್ಯಾಪ್ತಿಯಲ್ಲಿ ಪ್ರತಿಧ್ವನಿಗಳಾಗುತ್ತಿರುವುದನ್ನು ನಾವು ಗಮನಿಸಬಹುದು. ನವಸಾಮಾಜಿಕ ಚಳವಳಿಗಳು ಅದರಲ್ಲಿಯೂ ದಲಿತ, ಕಾರ್ಮಿಕ, ರೈತ, ಮಹಿಳೆ, ಐಡೆಂಟಿಟಿ ಇತ್ಯಾದಿ ಚಳವಳಿಗಳ ಸೈದ್ಧಾಂತಿಕತೆಗಳು ಸಬಾಲ್ಟರ್ನ್ ಅಧ್ಯಯನಕ್ರಮದ ಪ್ರಭಾವಕ್ಕೆ ಒಳಗಾಗಿದ್ದನ್ನು ಕಾಣಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸಬಾಲ್ಟರ್ನ್ ಅಧ್ಯಯನಕ್ರಮದ ಮತ್ತು ಸಿದ್ಧಾಂತದ ವಿವಿಧ ನೆಲೆಗಳನ್ನು ಮತ್ತು ಅದರ ಮೇಲಿನ ಟೀಕೆ/ವಿಮರ್ಶೆಗಳನ್ನು ಇದೇ ಲೇಖನದಲ್ಲಿ ಚರ್ಚಿಸಲಾಗಿದೆ. ೧೯೨೦ರ ದಶಕದಲ್ಲಿ ಇಟಾಲಿಯನ್ ಮಾರ್ಕ್ಸಿಸ್ಟರ ಭಿನ್ನಮತೀಯ ಧ್ವನಿಯಾಗಿ ಹೊರಬಂದ ಸಬಾಲ್ಟರ್ನ್ ಅಧ್ಯಯನವು ಒಂದು ಅಧ್ಯಯನ ಶಿಸ್ತಾಗಿ ಬೃಹತ್ ಪ್ರಮಾಣದಲ್ಲಿ ಬೆಳೆದದ್ದು ಭಾರತದ ವಸಾಹತು ಕಾಲವನ್ನು ಮರುವಿಮರ್ಶಿಸಿದ ಸಂದರ್ಭದಲ್ಲಿ ಎನ್ನುವುದು ಇಲ್ಲಿ ಮುಖ್ಯವಾದ ವಿಚಾರವಾಗಿದೆ. ಇಟಲಿಯಲ್ಲಿ ಆಂಟೋನಿಯೊ ಗ್ರಾಂಸಿಯು ವ್ಯಕ್ತಪಡಿಸಿದ ಸೈದ್ಧಾಂತಿಕತೆಗೆ ದಕ್ಷಿಣ ಏಷಿಯಾದ ಸಂದರ್ಭದಲ್ಲಿ ಆ ಸೈದ್ಧಾಂತಿಕತೆಗೆ ಪ್ರಖರತೆಯನ್ನು ಕೊಟ್ಟವರು ಖ್ಯಾತ ಚರಿತ್ರೆಕಾರ ರಣಜಿತ್‌ಗುಹಾ ಮತ್ತು ಅವರ ಸಂಗಡಿಗರು. ‘ಒಪ್ಪಿತವಾದ ಚರಿತ್ರೆಯಲ್ಲಿ’ ದಾಖಲಾಗದೆ ಉಳಿದ ಕೆಳಜಾತಿ/ವರ್ಗ/ಸಮುದಾಯಗಳ ಚರಿತ್ರೆಯನ್ನು, ಈ ಗುಂಪುಗಳು ವಸಾಹತುಶಾಹಿಗೆ ಮತ್ತು ಸ್ಥಳೀಯ ಬಲಾಢ್ಯ ವರ್ಗಗಳಿಗೆ ಒಡ್ಡಿದ ಪ್ರತಿಭಟನೆ/ಪ್ರತಿರೋಧಗಳನ್ನು ಆಧರಿಸಿ, ಮೂಲೆಗೊತ್ತಲ್ಪಟ್ಟ ವ್ಯಕ್ತಿಗಳ/ಸಮುದಾಯಗಳ ಧ್ವನಿಗಳನ್ನು ಸಬಾಲ್ಟರ್ನ್ ಅಧ್ಯಯನ ಸಂಪುಟಗಳಲ್ಲಿ ಗುಹಾ ಮತ್ತು ಅವರ ಸಂಗಡಿಗರು ಅಸಾಂಪ್ರದಾಯಿಕ ರೀತಿಯಲ್ಲಿ ದಾಖಲು ಮಾಡಿದರು. ವಸಾಹತು ಶಾಹಿ ಶಕ್ತಿಗಳು ಮತ್ತು ಅವಕ್ಕೆ ಪ್ರತಿಸ್ಪರ್ಧಿ ಎಂದು ಬಿಂಬಿಸಿಕೊಂಡ ಕಾಂಗ್ರೆಸ್‌ಮಧ್ಯಮವರ್ಗದ ಹಿತಾಸಕ್ತಿಗಳು ತುಳಿತಕ್ಕೊಳಗಾದ ಸಮುದಾಯಗಳನ್ನು / ಬುಡಕಟ್ಟುಗಳನ್ನು ರಾಜಕೀಯ ಸಾಂಸ್ಕೃತಿಕ ಕೇಂದ್ರಗಳಿಂದ ದೂರ ಇಟ್ಟ ಬಗೆಗಳನ್ನು ಅಧ್ಯಯನ ಮಾಡಲು ಸಬಾಲ್ಟರ್ನ್ ಅಧ್ಯಯನಕಾರರು ಅಧ್ಯಯನ ಕ್ರಮವೊಂದನ್ನು ರೂಪಿಸಿದರು. ೧೯೮೦ರ ದಶಕದಲ್ಲಿ ರಣಜಿತ್‌ಗುಹಾ ಅವರು ಕೈಗೆತ್ತಿಕೊಂಡ ಸಬಾಲ್ಟರ್ನ್ ಅಧ್ಯಯನ ಯೋಜನೆ ಇಂದು ಸಮಾಜ ವಿಜ್ಞಾನಗಳಲ್ಲಿ ಮಾತ್ರವಲ್ಲದೆ ಸಾಹಿತ್ಯವಲಯಗಳಲ್ಲಿ ಕೂಡ ಪ್ರಭಾವಿಯಾಗಿ ಬೆಳೆದಿದೆ.

ಪ್ರಸ್ತುತ ಲೇಖನದ ಆರಂಭದ ಭಾಗದಲ್ಲಿ ಸಬಾಲ್ಟರ್ನ್ ಅಧ್ಯಯನಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ನೀಡಲಾಗಿದೆ. ಲೇಖನದ ಎರಡನೆಯ ಭಾಗದಲ್ಲಿ ಆಂಟಓನಿಯೊ ಗ್ರಾಂಸಿಯು ಯಾವ ಚಾರಿತ್ರಿಕ ಸಂದರ್ಭದಲ್ಲಿ ಸಬಾಲ್ಟರ್ನ್ ಸೈದ್ಧಾಂತಿಕತೆಯನ್ನು ಅಭಿವ್ಯಕ್ತಪಡಿಸಿದ ಈ ಸೈದ್ಧಾಂತಿಕತೆಗೆ ಸಂಬಂಧಿಸಿದಂತೆ ಗ್ರಾಂಸಿಯೋತ್ತರ ಚರ್ಚೆಗಳನ್ನು ಈ ಭಾಗದಲ್ಲಿ ಅಧ್ಯಯನ ಮಾಡಲಾಗಿದೆ. ಪ್ರಸ್ತುತ ಲೇಖನದ ಮೂರನೆಯ ಭಾಗದಲ್ಲಿ ರಣಜಿತ್ ಗುಹಾ ಮತ್ತು ಅವರ ಸಂಗಡಿಗರು ದಕ್ಷಿಣ ಏಷಿಯಾ ಅದರಲ್ಲಿಯೂ ಪ್ರಮುಖವಾಗಿ ಭಾರತದ ಚರಿತ್ರೆ ಬರವಣಿಗೆ ಕ್ರಮವನ್ನು ವಿಶ್ಲೇಷಿಸಿ ಸಬಾಲ್ಟರ್ನ್ ಅಧ್ಯಯನವನ್ನು ಸೈದ್ಧಾಂತೀಕರಿಸಿದ ಬಗೆಗಳ ಬಗ್ಗೆ ವಿವರಣೆ ನೀಡಲಾಗಿದೆ. ಪಾರ್ಥ ಚಟರ್ಜಿ, ಡೇವಿಡ್ ಆರ್ನಾಡ್ಡ್‌ ಮುಂತಾದ ವಿದ್ವಾಂಸರು ಯಾವ ರೀತಿಯಲ್ಲಿ ರಣಜಿತ್‌ ಗುಹಾ ಅವರ ಬೆನ್ನೆಲುಬಾದರು ಎನ್ನುವ ಚರ್ಚೆಯನ್ನೂ ಈ ಸಂದರ್ಭದಲ್ಲಿ ಮಾಡಲಾಗಿದೆ. ಲೇಖನದ ನಾಲ್ಕನೆಯ ಭಾಗದಲ್ಲಿ ಸಬಾಲ್ಟರ್ನ್ ಅಧ್ಯಯನದ ಮಿತಿಗಳ ಬಗ್ಗೆ ಮಾಡಿದ ವಿಮರ್ಶೆಗಳನ್ನು ಚರ್ಚಿಸಲಾಗಿದೆ. ಲೇಖನದ ಐದನೆಯ ಭಾಗದಲ್ಲಿ ಉಪಸಂಹಾರವಿದೆ.

೧. ಪ್ರಸ್ತಾವನೆ

ಆರಂಭದಲ್ಲಿ ಮೂರು ಸಂಪುಟಗಳಿಗೆ ಮಾತ್ರ ಮೀಸಲಿದ್ದ ಸಬಾಲ್ಟರ್ನ್ ಸ್ಟಡೀಸ್ ಲೇಖನಗಳು ವಸಾಹತುಗಾರರ ಮತ್ತು ಬೂರ್ಜ್ವಾ ರಾಷ್ಟ್ರೀಯವಾದಿಗಳ ‘ಎಲಿಟಿಸಂ’ಗಳು (ಗಣ್ಯವರ್ಗ) ಹುಟ್ಟುಹಾಕಿದ್ದ ಆಶಯಗಳನ್ನು ಮರುವಿಮರ್ಶೆ ಮಾಡುವ ಉದ್ದೇಶವನ್ನು ಹೊಂದಿದ್ದವು. ಪ್ರಸ್ತುತ ೧೨ ಸಂಪುಟಗಳನ್ನು ಕಂಡ ಸಬಾಲ್ಟರ್ನ್ ಸ್ಟಡೀಸ್‌ನ ಆಶಯಗಳು ಜಾಗತಿಕ ಮಟ್ಟದ ಅಕಾಡೆಮಿಕ್ ವಲಯಗಳಲ್ಲಿ ತನ್ನ ಪ್ರಭಾವವನ್ನು ಬೀರಿವೆ. ಈ ಸಂಪುಟಗಳ ಪ್ರಕಟಣಾ ವಿವರಗಳು ಹೀಗಿವೆ:

೧. ರಣಜಿತ್ ಗುಹಾ (ಸಂಪಾದಕರು), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೧, ಆಕ್ಸ್‌ಫರ್ಡ್‌ಯುನಿವರ್ಸಿಟಿ ಪ್ರೆಸ್, ನವದೆಹಲಿ, ೧೯೮೨

೨. ರಣಜಿತ್ ಗುಹಾ (ಸಂಪಾದಕರು), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೨, ಆಕ್ಸ್‌ಫರ್ಡ್‌ಯುನಿವರ್ಸಿಟಿ ಪ್ರೆಸ್, ನವದೆಹಲಿ, ೧೯೮೩.

೩. ರಣಜಿತ್ ಗುಹಾ (ಸಂಪಾದಕರು), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೩, ಆಕ್ಸ್‌ಫರ್ಡ್‌ಯುನಿವರ್ಸಿಟಿ ಪ್ರೆಸ್, ನವದೆಹಲಿ, ೧೯೮೪.

೪. ರಣಜಿತ್ ಗುಹಾ (ಸಂಪಾದಕರು), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೪, ಆಕ್ಸ್‌ಫರ್ಡ್‌ಯುನಿವರ್ಸಿಟಿ ಪ್ರೆಸ್, ನವದೆಹಲಿ, ೧೯೮೫.

೫. ರಣಜಿತ್ ಗುಹಾ (ಸಂಪಾದಕರು), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೫, ಆಕ್ಸ್‌ಫರ್ಡ್‌ಯುನಿವರ್ಸಿಟಿ ಪ್ರೆಸ್, ನವದೆಹಲಿ, ೧೯೮೭.

೬. ರಣಜಿತ್ ಗುಹಾ (ಸಂಪಾದಕರು), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೬, ಆಕ್ಸ್‌ಫರ್ಡ್‌ಯುನಿವರ್ಸಿಟಿ ಪ್ರೆಸ್, ನವದೆಹಲಿ, ೧೯೮೯.

೭. ಪಾರ್ಥ ಚಟರ್ಜಿ ಮತ್ತು ಗ್ಯಾನೇಂದ್ರ ಪಾಂಡೆ (ಸಂಪಾದಕರು), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೭, ಆಕ್ಸ್‌ಫರ್ಡ್‌ ಯುನಿವರ್ಸಿಟಿ ಪ್ರೆಸ್, ನವದೆಹಲಿ, ೧೯೯೩.

೮. ಡೇವಿಡ್‌ ಅರ್ನಾಲ್ಡ್‌ ಮತ್ತು ಡೇವಿಡ್ ಹಾರ್ಡಿಮನ್ (ಸಂಪಾದಕರು), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೮, ಆಕ್ಸ್‌ಫರ್ಡ್‌ಯುನಿವರ್ಸಿಟಿ ಪ್ರೆಸ್, ನವದೆಹಲಿ, ೧೯೯೪.

೯. ಶಾಹಿದ್ ಅಮಿನ್ ಮತ್ತು ದೀಪೇಶ್ ಚಕ್ರವರ್ತಿ (ಸಂಪಾದಕರು), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೯, ಆಕ್ಸ್‌ಫರ್ಡ್‌ ಯುನಿವರ್ಸಿಟಿ ಪ್ರೆಸ್, ನವದೆಹಲಿ, ೧೯೯೬.

೧೦. ಗೌತಮ್ ಭಾತ್ರಾ, ಗ್ಯಾನ್ ಪ್ರಕಾಶ್ ಮತ್ತು ಸೂಸಿ ಥಾರು (ಸಂಪಾದಕರು), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೧೦, ಆಕ್ಸ್‌ಫರ್ಡ್‌ಯುನಿವರ್ಸಿಟಿ ಪ್ರೆಸ್, ನವದೆಹಲಿ, ೧೯೯೯.

೧೧. ಪಾರ್ಥ ಚಟರ್ಜಿ ಮತ್ತು ಗ್ಯಾನೇಂದ್ರ ಪಾಂಡೆ (ಸಂಪಾದಕರು), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೭, ಆಕ್ಸ್‌ಫರ್ಡ್‌ ಯುನಿವರ್ಸಿಟಿ ಪ್ರೆಸ್, ನವದೆಹಲಿ, ೧೯೯೩.

೧೨. ಎಂ.ಎಸ್.ಎಸ್. ಪಾಂಡಿಯನ್, ಅಜಯ್ ಶರಿಯಾ ಶಾಹಿಲ್ ಮಾಯಾರಂ, (ಸಂಪಾದಕರು), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೧೨, ಪರ್ಮನೆಂಟ್ ಬ್ಲ್ಯಾಕ್‌, ನವದೆಹಲಿ, ೨೦೦೫.

‘ಸಬಾಲ್ಟರ್ನ್’ ಎನ್ನುವ ಪದವು ಯುರೋಪ್‌ನ ಮಧ್ಯಕಾಲೀನೋತ್ತರ ಸಂದರ್ಭದಲ್ಲಿ ರೈತರನ್ನು ಗುರುತಿಸುತ್ತಿದ್ದವು. ೧೭೦೦ರ ಸಂದರ್ಭದಲ್ಲಿ ರೈತ ಮೂಲವನ್ನು ಹೊಂದಿದ್ದ ಕೆಳವರ್ಗದ ಸೈನಿಕರನ್ನು ‘ಸಬಾಲ್ಟರ್ನ್’ ಎಂದು ಕರೆಯಲಾಗುತ್ತಿತ್ತು. ಆಂಟೋನಿಯೊ ಗ್ರಾಂಸಿಯು (೧೮೯೧-೧೯೩೭) ವರ್ಗ ಸಂಘರ್ಷದ ಹಿನ್ನೆಲೆಯಲ್ಲಿ ಸಬಾಲ್ಟರ್ನ್ ಐಡೆಂಟಿಟಿಯನ್ನು ಪ್ರಚಾರಪಡಿಸಿದನು. ೧೯೨೦ರ ದಶಕಗಳಲ್ಲಿ ಕಾರಾಗೃಹದಲ್ಲಿದ್ದ ಈತ ಮಾರ್ಕ್ಸ್‌‌ನ ಪರಿಭಾಷೆಯಾದ ‘ಪ್ರೊಲಟೇರಿಯನ್’ (ಕಾರ್ಮಿಕ) ಎನ್ನುವ ಪದದ ಬದಲಿಗೆ ‘ಸಬಾಲ್ಟರ್ನ್’ ಎಂದು ಅಧಿಕಾರಾರೂಢ ಫಾಸಿಸ್ಟ್ ಸರಕಾರದ ಹದ್ದಿನ ಕಣ್ಣಿನಿಂದ ಪಾರಾಗಲು ಬಳಸುತ್ತಿದ್ದನು ಎಂದು ಗಾಯಿತ್ರಿ ಸ್ಟಿವಾಕ್ ತಿಳಿಸುತ್ತಾರೆ (ಚತುರ್ವೇದಿ ೨೦೦೦:೩೨೪). ಚಾರಿತ್ರಿಕ ಅಧ್ಯಯನದ ಸಂದರ್ಭದಲ್ಲಿ ಗ್ರಾಂಸಿ ಸಿದ್ಧಾಂತಗಳನ್ನು ಸಬಾಲ್ಟರ್ನ್ ಅಧ್ಯಯನಕಾರರು ಬಹಳ ವಿಮರ್ಶಾತ್ಮಕವಾಗಿ ಉಪಯೋಗಿಸಿದರು.

ರಾಜ್ಯಕೇಂದ್ರಿತ ಅಧ್ಯಯನಗಳು ೧೯೭೦ರ ದಶಕದಲ್ಲಿ ವಿನಾಶವಾಗುತ್ತಿದ್ದ ಸಂದರ್ಭದಲ್ಲಿ ಸಮಾಜ ಚರಿತ್ರೆಯನ್ನು ‘ತಳದಿಂದ ನೋಡುವ’ ಅಧ್ಯಯನಗಳು ಪ್ರವರ್ಧಮಾನಕ್ಕೆ ಬಂದವು. ಇ.ಪಿ. ಥಾಮ್ಸನ್‌ಅವರು ೧೯೬೩ರಲ್ಲಿ ಪ್ರಕಟಿಸಿದ ‘ದಿ ಮೇಕಿಂಗ್ ಆಫ್ ಇಂಗ್ಲಿಷ್ ವರ್ಕಿಂಗ್ ಕ್ಲಾಸ್’ ಸಬಾಲ್ಟರ್ನ್ ಅಧ್ಯಯನಕಾರರಿಗೆ ಬಹಳ ದೊಡ್ಡ ಸ್ಫೂರ್ತಿಯಾಯಿತು. ೧೯೮೨ ರಲ್ಲಿ ಎರಿಕ್ ವೂಲ್ಫ್ ಅವರು ಪ್ರಕಟಿಸಿದ ‘ಯುರೋಪ್ ಆಂಡ್ ದಿ ಪೀಪಲ್ ವಿತೌಟ್ ಹಿಸ್ಟರಿ (ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಪ್ರೆಸ್, ೧೯೮೨) ಕೂಡ ಈ ನಿಟ್ಟಿನಲ್ಲಿ ಪ್ರಮುಖವಾದುದು. ಜಾಗತಿಕ ಚರಿತ್ರೆಯನ್ನು ಕೆಳಸ್ಥರದಿಂದ ನೋಡಿದ ಕೃತಿ ಇದು.

ಬ್ರಿಟನ್ನಿನ ಕೆಲವು ಯುವ ಇತಿಹಾಸಕಾರರ ಜೊತೆಗೂಡಿ ೧೯೭೦ರ ದಶಕದಲ್ಲಿ ಸಬಾಲ್ಟರ್ನ್ ಸ್ಟಡೀಸ್ ಸಂಪುಟಗಳ ಸ್ಥಾಪಕ ಸಂಪಾದಕ ರಣಜಿತ್ ಗುಹಾ ಅವರು ದಕ್ಷಿಣ ಏಷಿಯಾದ ಚರಿತ್ರೆರಚನಾಶಾಸ್ತ್ರದ ಕುರಿತು ಅನೇಕ ಹಂತಗಳಲ್ಲಿ ಚರ್ಚೆಗಳನ್ನೆತ್ತಿಕೊಂಡು ಒಂದು ಹೊಸಬಗೆಯ ಅಕಾಡೆಮಿಕ್ ಬೌದ್ಧಿಕತೆಗೆ ಚಾಲನೆಯನ್ನು ನೀಡಿದರು. ಶಾಹಿದ್ ಅಮಿನ್, ಡೇವಿಡ್ ಅರ್ನಾಲ್ಡ್, ಪಾರ್ಥ ಚಟರ್ಜಿ, ಡೇವಿಡ್ ಹರ್ಡಿಮನ್, ಗ್ಯಾನೇಂದ್ರ ಪಾಂಡೆ ಇವರನ್ನೊಳಗೊಂಡ ವಿದ್ವಾಂಸರ ಗುಂಪು ರಣಜಿತ್ ಗುಹಾ ಅವರ ನೇತೃತ್ವದಲ್ಲಿ ಭಾರತದ “ಸ್ವಾತಂತ್ರ‍್ಯ ಹೋರಾಟದಲ್ಲಿ” ಕೇವಲ “ಗಣ್ಯವ್ಯಕ್ತಿಗಳ” (ಎಲೈಟ್) ಕಾಣಿಕೆಗಳನ್ನು ಮಾತ್ರ ವೈಭವೀಕರಿಸುತ್ತ ಭಾರತದ ರಾಷ್ಟ್ರೀಯ ಚರಿತ್ರೆಯನ್ನು ನಿರ್ವಚಿಸುವ ಪ್ರಯತ್ನಗಳಿಗೆ ತೀವ್ರವಾದ ಆಕ್ಷೇಪಗಳನ್ನೆತ್ತಿದ್ದರು. ಇದರಲ್ಲಿ “ಸಾಮಾನ್ಯ ಜನರ ರಾಜಕಾರಣ”ವನ್ನು ಉಪೇಕ್ಷೆ ಮಾಡಿದ್ದರ ಬಗ್ಗೆ ಅವರು ಕ್ರೋಧವನ್ನು ವ್ಯಕ್ತಪಡಿಸಿದರು. ಒಂದರ್ಥದಲ್ಲಿ “ಸಾಂಪ್ರದಾಯಿಕ ಮಾರ್ಕ್ಸಿಸಂ” ಅನ್ನು ವಿಮರ್ಶಿಸುತ್ತ ಮತ್ತು ಕೇಂಬ್ರಿಜ್ಜ್ ಪಂಥದ ನಿಲುವನ್ನು ನಿರಾಕರಿಸುತ್ತಲೇ ಬೆಳೆದ ಹೊಸ ಪಂಥವನ್ನು “ಸಬಾಲ್ಟರ್ನ್ ಸ್ಟಡೀಸ್” ಎನ್ನಬಹುದು.

೧೯೮೦ರ ದಶಕದ ಆರಂಭದಲ್ಲಿ ಹೊರಬಂದ ಸಬಾಲ್ಟರ್ನ್ ಅಧ್ಯಯನ ಕೃತಿಗಳು ಮುಖ್ಯವಾಗಿ ವಸಾಹತುಕಾಲದ ಚರಿತ್ರೆಯನ್ನು ಕೇಂದ್ರಿಕರಿಸಿಕೊಂಡಿದ್ದರೆ ನಂತರ ಬಂದ ಕೃತಿಗಳು ಬಹುತೇಕವಾಗಿ ಪ್ರಾಂತೀಯ ಚರಿತ್ರೆಯ ರಚನೆಯ ಕಡೆಗೆ ಒತ್ತುಕೊಟ್ಟವು. ೧೯೮೦ರ ದಶಕದ ಕೊನೆಯ ಭಾಗದಲ್ಲಿ ಈ ಅಧ್ಯಯನವು ಆಂಗ್ಲೊ-ಅಮೆರಿಕನ್ ಚಾರಿತ್ರಿಕ ವಲಯಗಳಲ್ಲಿ ವಸಾಹತೋತ್ತರವಾದ ಮತ್ತು ಸಂಸ್ಕೃತಿ ಅಧ್ಯಯನಗಳು ರೂಪಿಸಿದ ಅಧ್ಯಯನಕ್ಕೆ ತೆರೆದುಕೊಂಡವು. ೧೯೯೩ರಲ್ಲಿ ಲ್ಯಾಟಿನ್ ಅಮೆರಿಕನ್ ಸಬಾಲ್ಟರ್ನ್ ವಿದ್ವಾಂಸರ ಸಂಘಟನೆಗಳು ಪ್ರವರ್ಧಮಾನಕ್ಕೆ ಬಂದವು. ಇದರೊಂದಿಗೆ ಆಫ್ರಿಕಾ, ಚೀನಾ, ಐರ್ಲೆಂಡ್, ಲ್ಯಾಟಿನ್ ಅಮೆರಿಕಾ ಮತ್ತು ಪ್ಯಾಲೆಸ್ಟೈನ್‌ಗಳಲ್ಲಿ ಹೊರಬಂದ ಸಬಾಲ್ಟರ್ನ್ ಚಿಂತನೆಗಳ ಅಧ್ಯಯನಗಳ ಪ್ರಭಾವವು ಸಬಾಲ್ಟರ್ನ್ ಸ್ಟಡೀಸ್‌ನ ವ್ಯಾಪಕತೆಗೆ ಸಾಕ್ಷಿಯಾಗಿವೆ.

* * *

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಇತಿಹಾಸಕಾರ ವಿನಾಯಕ ಚರ್ತುವೇದಿ ಅವರು ಸಬಾಲ್ಟರ್ನ್ ಸ್ಟಡೀಸ್‌ನ ಬೌದ್ಧಿಕತೆಯ ಆರಂಭಿಕ ಹಂತಗಳನ್ನು ತಮ್ಮ ‘ಮ್ಯಾಪಿಂಗ್‌ಸಬಾಲ್ಟರ್ನ್ ಸ್ಟಡೀಸ್ ಎಂಡ್ ದಿ ಪೋಸ್ಟ್‌ ಕಲೋನಿಯಲ್” ಎನ್ನುವ ಕೃತಿಯಲ್ಲಿ (೨೦೦೦) ಗುರಿತಿಸಿದ್ದಾರೆ. ರಣಜಿತ್ ಗುಹಾ ಅವರಿಗೆ ಗುರುಗಳು ಮತ್ತು ಮಾರ್ಗದರ್ಶಕರಾಗಿದ್ದ ಸುಶೋಭನ್ ಸರ್ಕಾರ್ ಕೋಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದವರು. ಭಾರತದ ಮಟ್ಟಿಗೆ ಸಬಾಲ್ಟರ್ನ್ ಚಿಂತನೆಗಳನ್ನು ಪರಾಮರ್ಶಿಸಲು ಪ್ರಯತ್ನಿಸಿದ ಮೊದಲನೆಯ ವಿದ್ವಾಂಸರು ಸುಶೋಭನ್ ಸರ್ಕಾರ್. “ಎ ರೂಲ್ ಆಫ್ ಪ್ರಾಪರ‍್ಟಿ ಫಾರ್ ಬೆಂಗಾಲ್” (೧೯೬೩, ಪ್ಯಾರಿಸ್) ಎನ್ನುವ ಪುಸ್ತಕವನ್ನು ರಣಜಿತ್ ಗುಹಾ ಅವರು ಸುಶೋಭನ್ ಸರ್ಕಾರ್ ಅವರಿಗೆ ಅರ್ಪಿಸಿದ್ದು ಎಷ್ಟು ಗಮನಾರ್ಹವೋ ಅಷ್ಟೇ ಗಮನಾರ್ಹವಾದ ಸಂಗತಿ ಎಂದರೆ ಆ ಪುಸ್ತಕದಲ್ಲಿ ಗ್ರಾಂಸಿಯ ಬರವಣಿಗೆಗಳನ್ನು ಪ್ರಸ್ತಾಪಿಸಿರುವ ವಿಚಾರವಾಗಿದೆ. ೧೯೫೦ರ ದಶಕದಲ್ಲಿ ಪಾಶ್ಚಾತ್ಯ ಬೌದ್ಧಿಕ ಜಗತ್ತಿಗೆ ಗ್ರಾಂಸಿಯ ಪರಿಚಯ ಆಗುವುದಕ್ಕಿಂತ ಮೊದಲೇ ಸುಶೋಭನ್ ಸರ್ಕಾರ್ ಗ್ರಾಂಸಿಯ ಕೃತಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದ ವಿಚಾರ ನಮಗೆ ತಿಳಿದುಬರುತ್ತದೆ. ೧೯೫೮-೫೯ ರಲ್ಲಿ ಔಧಪುರ ವಿಶ್ವವಿದ್ಯಾಲಯದಲ್ಲಿ ಸರ್ಕಾರ್ ಅವರ ಸಹೋದ್ಯೋಗಿಯಾದ ಗುಹಾ ಅವರು ಸರ್ಕಾರ್ ಅವರೊಂದಿಗೆ ಈ ಕುರಿತಂತೆ ನಿರಂತರ ಬೌದ್ಧಿಕ ಚರ್ಚೆಯಲ್ಲಿದ್ದರು. ೧೯೬೮ ರಲ್ಲಿ ಈ ಹಿನ್ನೆಲೆಯಲ್ಲಿ ಗುಹಾ ಅವರು “ದಿ ಥಾಟ್ ಆಫ್ ಗ್ರಾಂಸಿ” ಎನ್ನುವ ಪ್ರಕಟಣೆಯನ್ನು ಹೊರತಂದಿರುವುದು ಆಶ್ಚರ್ಯವೆಂದೇನು ಅನ್ನಿಸುವುದಿಲ್ಲ. ಗ್ರಾಂಸಿಯು ಬರೆದ “ದಿ ಮಾಡರ್ನ್ ಪ್ರಿನ್ಸ್ ಆಂಡ್ ಅದರ ಎಸ್ಸೇಸ್” (ಲಾರೆನ್ಸ್ ಆಂಡ್ ವಿಶಾರ್ಟ್, ಲಂಡನ್, ೧೯೫೭) ಎನ್ನುವ ಸಣ್ಣ ಪುಸ್ತಿಕೆಯ ಭಾಷಾಂತರವನ್ನು ಮಾಡಿದ ಸುಶೋಭನ್ ಸರ್ಕಾರ್ ಬಂಗಾಳದ ಚರಿತ್ರೆಕಾರರ ಗಮನ ಸೆಳೆದಿರುವುದು ಗಮನಾರ್ಹವಾಗಿದೆ.

ಭಾರತದಲ್ಲಿ ನಡೆದ ಈ ಬೆಳವಣಿಗೆಗಳ ನಡುವೆಯೂ ೧೯೬೦ರ ದಶಕದಲ್ಲಿ ಇಂಗ್ಲಿಶ್ ಮಾರ್ಕ್ಸಿಸ್ಟರಿಂದ ಸಬಾಲ್ಟರ್ನ್ ಅಧ್ಯಯನವು ಬೌದ್ಧಿಕ ವಲಯಗಳ ಗಮನ ಸೆಳೆಯಿತು. ೧೯೬೦ರ ಸುಮಾರಿಗೆ ಎರಿಕ್ ಹಾಬ್ಸ್‌ಬಾಮ್‌ಪ್ರಕಟಿಸಿದ “ಪ್ರಿಮಿಟಿವ್ ರೆಬೆಲ್ಸ್” (ಮ್ಯಾಂಚೆಸ್ಟರ್‌ಪ್ರೆಸ್, ೧೯೭೧) ಎನ್ನುವ ಕೃತಿ ಹಾಗೂ ‘ಸೊಸೈಟಿ’ ಎನ್ನುವ ಇಟಾಲಿಯನ್ ನಿಯತಕಾಲಿಕೆಯಲ್ಲಿ (೧೬, ೧೯೬೦) ಅವರು ಪ್ರಕಟಿಸಿದ “ಹಿಸ್ಟರಿ ಆಫ್ ಸಬಾಲ್ಟರ್ನ್ ಕ್ಲಾಸಸ್” ಎನ್ನುವ ಲೇಖನಗಳು ಚರಿತ್ರೆಯಲ್ಲಿ ರೈತ ಸಮಾಜಗಳನ್ನು (ಪೆಸೆಂಟ್ ಸೊಸೈಟೀಸ್) ಅಧ್ಯಯನವನ್ನು ಕೈಗೊಳ್ಳಲು ಸ್ಫೂರ್ತಿಯಾದವು. ಒಪ್ಪಿತವಾದ ಚರಿತ್ರೆ ಬರವಣಿಗೆಯಲ್ಲಿ ಅಪರಾಧೀಕರಣ ಮತ್ತು ಹಿಂದುಳಿದಿರುವುದಕ್ಕೆ ಮೀಸಲಾಗಿದ್ದ “ರೈತರ ಚರಿತ್ರೆ”ಯನ್ನು ಹಾಬ್ಸ್‌ಬಾಮ್ ಅವರು ವಿವೇಚಿಸಿರುವುದನ್ನು ನೋಡಬಹುದು. ರಣಜಿತ್‌ಗುಹಾ ಅವರು ೧೯೮೩ರಲ್ಲಿ ಪ್ರಕಟಿಸಿದ “ಎಲಿಮೆಂಟರಿ ಆಸ್‌ಪೆಕ್ಟ್ಸ್‌ ಆಫ್ ಪೆಸೆಂಟ್ ಇನ್‌ಸರ್ಜೆನ್ಸಿ ಇನ್‌ಕಲೋನಿಯಲ್ ಇಂಡಿಯಾ” ಎನ್ನುವ ಕೃತಿ ನೇರವಾಗಿ ಹಾಬ್ಸ್‌ಬಾಮ್ ಅವರಿಂದ ಪ್ರಭಾವಿತವಾಗಿದೆ ಎಂದರೆ ಉತ್ಪ್ರೇಕ್ಷೆಯಲ್ಲ. ೧೯೬೦ರ ದಶಕದಿಂದ ತೀರಾ ಇತ್ತೀಚಿನವರೆಗೂ ಗ್ರಾಂಸಿಯ ಸಿದ್ಧಾಂತಗಳನ್ನು ವಿಮರ್ಶೆಗೊಳಪಡಿಸಿ ಇಟಲಿಯಿಂದ ಹೊರಗೆ ಈ ಚರ್ಚೆಗಳು ವ್ಯಾಪಕವಾಗಲು ಪೆರಿ ಯಾಂಡರ್ಸನ್ ಮತ್ತು ಟಾಮ್ ನೇರನ್ ಮುಂತಾದವರು “ನ್ಯೂ ಲೆಫ್ಟ್‌ರಿವ್ಯೂ”ನಲ್ಲಿ ಬರೆದ ಲೇಖನಗಳು ಕಾರಣವಾದವು. ರೇಮಂಡ್ ವಿಲಿಯಮ್ಸ್‌ಮತ್ತು ಸ್ಟೂವರ್ಟ್‌ಹಾಲ್‌ಗಳಂತಹ ಬ್ರಿಟಿಶ್‌ ವಿದ್ವಾಂಸರ ಮೂಲಕ ೧೯೭೦ರ ದಶಕಗಳಲ್ಲಿ ಗ್ರಾಂಸಿಯ ತತ್ವಗಳು ಚರಿತ್ರೆ ಬರವಣಿಗೆಯ ಹೊಸ ಆಯಾಮಗಳಿಗೆ ಗ್ರಾಸವನ್ನು ಒದಗಿಸಿತು. ಯುರೋಪಿನ ರಾಜ್ಯವ್ಯವಸ್ಥೆಗಳ ಅಭಿವೃದ್ಧಿಯ ಸ್ವರೂಪವು ಅಸಮಾನವಾಗಿರುವ ಅಂಸಗಳನ್ನು ವಸಾಹತುಶಾಹಿ ಭಾರತದ ಜೊತೆಗಿನ ಅವುಗಳ ಸಂಬಂಧಗಳನ್ನು ನಿರ್ವಚಿಸುವ ಆಂಡರ್‌ಸನ್ ಮತ್ತು ನೇರನ್ ಅವರು ಸಬಾಲ್ಟರ್ನ್ ಅಧ್ಯಯನಕ್ಕೆ ಹೊಸ ರೂಪರೇಷೆಯನ್ನು ನೀಡಿದರು. ಕಾರ್ಮಿಕರ, ರೈತರ ಮತ್ತು ಸಾಮಾನ್ಯ ಜನರ ಐತಿಹಾಸಿಕ ಅನುಭವಗಳನ್ನು ‘ಮರು’ಕಟ್ಟುವುದರೊಂದಿಗೆ (ರೀಕನ್‌ಸ್ಟ್ರಕ್ಷನ್‌) ಬ್ರಿಟಿಶ್‌ ಚರಿತ್ರೆಕಾರರಾದ ಇ.ಪಿ.ಥಾಮ್ಸನ್, ಕ್ರಿಸ್ಟೋಫರ್‌ ಹಿಲ್‌ ಮತ್ತು ರೋಡ್ನಿ ಹಿಲ್ಟನ್ ಅವರು ಜಾಗತಿಕ ಮಟ್ಟದಲ್ಲಿ ಈ ಬಗೆಯ ಕ್ರಾಂತಿಕಾರಿ ಒಳನೋಟಗಳನ್ನು ಖ್ಯಾತಿಗೊಳಿಸಿದರು. ಗಣ್ಯ (ಎಲೈಟ್) ವಿದ್ವಾಂಸರು/ಚರಿತ್ರೆಕಾರರು ಕಟ್ಟಿದ ಚರಿತ್ರೆಗಿಂತ ಭಿನ್ನವಾಗಿ ‘ಕೆಳಗಿನವರ ಚರಿತ್ರೆ’ಗಳನ್ನು (ಹಿಸ್ಟರೀಸ್ ಫ್ರಂ ಬಿಲೋ) ಭಾರತದ ವಸಾಹತುಕಾಲದ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು ಹೊರತರಲು ಭಾರತದ ಸಬಾಲ್ಟರ್ನ್ ಚರಿತ್ರೆಕಾರರ ರಣಜಿತ್‌ಗುಹಾ ಅವರ ನೇತೃತ್ವದಲ್ಲಿ ಸಬಾಲ್ಟರ್ನ್ ಸಂಪುಟಗಳನ್ನು ತರಲು ಸಾಧ್ಯವಾಯಿತು.

ರಣಜಿತ್‌ ಗುಹಾ ಅವರಿಗಿಂತ ಭಿನ್ನವಾಗಿ ಸಬಾಲ್ಟರ್ನ್ ಅಥವಾ ಕೆಳಗಿನವರ ಚರಿತ್ರೆಯನ್ನು ನಿರ್ವಚಿಸಲು ಪ್ರಯತ್ನಿಸಿದರು ರಾಬರ್ಟ್ ಬ್ರೆನರ್. ಇವರು “ಊಳಿಗಮಾನ್ಯ ವ್ಯವಸ್ಥೆಯಿಂದ ಬಂಡವಾಳ ವ್ಯವಸ್ಥೆಗೆ ಸ್ಥಿತ್ಯಂತರ” (ಟ್ರಾನ್ಸಿಷನ್ ಫ್ರಂ ಫ್ಯೂಡಲಿಸಂ ಟು ಕ್ಯಾಪಿಟಲಿಸಂ) ಹೊಂದಿದ್ದ ವಿದ್ಯಮಾನಗಳನ್ನು ಕುರಿತು ನಿರ್ವಚಿಸಿದ ಪ್ರಮುಖ ವಿದ್ವಾಂಸರು. ಮಾರ್ಕ್ಸಿಸ್ಟ್ ಚರಿತ್ರೆಯನ್ನು ರೂಪಿಸುವಲ್ಲಿ ಸಾಂಪ್ರದಾಯಿಕವಾಗಿ ಪ್ರಭಾವ ಪಾತ್ರ ವಹಿಸುವ “ಆರ್ಥಿಕ ನಿರ್ಧಾರಕತೆ” (ಇಕಾನಮಿಕ್ ಡಿಟರ್ ಮಿನಿಸಂ) ಬದಲು “ಪ್ರತಿಭಟನೆ ಮತ್ತು ಹೋರಾಟಗಳ” ಮೂಲಕ ಚರಿತ್ರೆಯ ಪ್ರಕ್ರಿಯೆಗಳನ್ನು ನಿರ್ವಚಿಸಬಹುದು ಎಂದು ವ್ಯಾಖ್ಯಾನಿಸಿದವರು ಬ್ರೆನರ್ ಅವರು. ಭಾರತದಲ್ಲಿ ಪ್ರಮುಖವಾಗಿ ಪಾರ್ಥ ಚಟರ್ಜಿಯವರು ಬ್ರೆನರ್‌ಅವರ ಮಾದರಿಯನ್ನು ಪ್ರಶಂಸಿಸಿದ್ದು ಮಾತ್ರವಲ್ಲ, ಬ್ರೆನರ್‌ಅವರ ಮಾರ್ಕ್ಸಿಸ್ಟ್ ಸೋಶಿಯಲ್ ಥಿಯರಿಯನ್ನು ಫೂಕೊ ಕೇಂದ್ರಿತ “ಅಧಿಕಾರ”ದ ಅಂಶಗಳ ಮೂಲಕ ೧೯ ಮತ್ತು ೨೦ನೇ ಶತಮಾನದ ಭಾರತದ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರು. ಇದು ಸಬಾಲ್ಟರ್ನ್ ರಾಜಕೀಯದ ಮೂಲಭೂತ ಅಂಶವಾದ ‘ಸಮುದಾಯ’ದ (ಕಮ್ಯುನಿಟಿ) ಬಗ್ಗೆ ಬರೆಯಲು ಪ್ರಾಥಮಿಕವಾದ ಮಾದರಿಯಾಯಿತು.

* * *

೧೯೭೦ರ ದಶಕದ ಭಾರತದ ರಾಜಕೀಯ ಬೆಳವಣಿಗೆಗಳ ಭ್ರಮನಿರಸನವನ್ನು ಪ್ರತಿಫಲಿಸುವಂತೆ ಸಬಾಲ್ಟರ್ನ್ ಅಧ್ಯಯನದ ಯೋಜನೆ ರೂಪಿತವಾಯಿತು. ಆ ಮೂಲಕ ಕ್ರಾಂತಿಕಾರಿ ಸಿದ್ಧಾಂತಗಳ ಹಾಗೂ ಜನಹೋರಾಟದ (ಮಾಸ್‌ಸ್ಟ್ರಗಲ್‌) ನಡುವಿನ ಸಂಬಂಧಗಳನ್ನು ಶೋಧಿಸುವ ಸಂಶೋಧನೆಗಳು ಆರಂಭವಾದವು. ೧೯೭೦ರ ದಶಕದ ಕೊನೆಯಲ್ಲಿ ಭಾರತದ ಹೊಸ ತಲೆಮಾರಿನ ಕೆಲವು ಬುದ್ಧಿಜೀವಿಗಳು ಚೀನಾ ಹೋರಾಟದ ಎಡಪಂಥೀಯ ಧೋರಣೆಗಳಿಂದ ಪ್ರಭಾವಿತರಾದರು. ಅದು ಒಂದು ಬಗೆಯಲ್ಲಿ ಅಲ್ಲಿಯವರೆಗೂ ಭಾರತದ ರಾಜಕಾರಣದಲ್ಲಿ ಯಜಮಾನಿಕೆಯನ್ನು ನಡೆಸುತ್ತಿದ್ದ ಅಖಿಲ ಭಾರತೀಯ ಕಾಂಗ್ರೆಸ್ ಹಿತಾಸಕ್ತಿಗಳಿಗೆ ಸವಾಲಾಯಿತು. ನಕ್ಸಲ್‌ ಬಾರಿಯಲ್ಲಿ ಮಾವೋವಾದಿಗಳು ನಡೆಸಿದ ಹೋರಾಟದ ನಂತರ ಅದರಲ್ಲಿಯೂ ಪ್ರಮುಖವಾಗಿ ೧೯೭೫-೭೭ರ ಅವಧಿಯಲ್ಲಿ ಇಂದಿರಾಗಾಂಧಿ ಅವರ ಸರ್ವಾಧಿಕಾರಿ ಧೋರಣೆಯ ಅಭಿವ್ಯಕ್ತಿಯಾಗಿದ್ದ ತುರ್ತುಪರಿಸ್ಥಿತಿಯ ನಂತರ ಸಬಾಲ್ಟರ್ನ್ ಅಧ್ಯಯನಗಳು ಪ್ರಭಾವಶಾಲಿಯಾಗಿ ಅರಂಭವಾದವು.

ಸ್ವಾತಂತ್ರ‍್ಯದ ನಂತರ ಭಾರತೀಯ ಯುವಚರಿತ್ರೆಕಾರರು ಕೇಂಬ್ರಿಜ್ಜ್ ಸ್ಕೂಲಿನ ಸಿದ್ಧಾಂತಗಳ ಮುಖ್ಯವಾಗಿ ಫ್ಯಾಕ್ಷನ್‌ ಥಿಯರಿ ಅಥವಾ ಜಾತಿಕೇಂದ್ರಿತ ವಾದಗಳ ಅಥವಾ ಅಮೆರಿಕನ್ ಓರಿಯಂಟಲಿಸ್ಟ್ ‘ಸಮುದಾಯ’ ಮತ್ತು ದಕ್ಷಿಣ ಏಷ್ಯಾದ ಚಿಂತನೆಯ ಹುಡುಕಾಟದ ಸಂಶೋಧನೆಗಳ ಭರಾಟೆಗಳಿಂದ ಬೇಸತ್ತು ಹೋಗಿದ್ದರು. ಇವೆರಡು ಸೈದ್ಧಾಂತಿಕ ನೆಲೆಗಳು ಇನ್ನೂ ವಿಸ್ತಾರಗೊಳ್ಳಬೇಕೆಂದು ಈ ಯುವ ಚರಿತ್ರೆಕಾರರು ಆಸಿಸತೊಡಗಿದರು.

ತನ್ನ ವಿದ್ಯಾರ್ಥಿ ದೆಸೆಯಲ್ಲಿ ಮಾವೋಯಿಸ್ಟ್ ವಿದ್ಯಾರ್ಥಿ ಸಂಘಟನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ರಣಜಿತ್ ಗುಹಾ ಅವರು ರಾಜಕೀಯ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಹಿಂಸಾತ್ಮಕ ಸ್ವರೂಪದ ಸಬಾಲ್ಟರ್ನ್ ಸಂವೇದನೆಗಳನ್ನು ಸಿದ್ಧಾಂತೀಕರಿಸಿರುವುದನ್ನು ಈ ಸಂದರ್ಭದಲ್ಲಿ ಗಮನಿಸಬಹುದು. ೧೯೮೨ ರಲ್ಲಿ ಅಧ್ಯಯನ ಸಂಪುಟಗಳ ಯೋಜನೆ ಆರಂಭವಾಯಿತು. ನವದೆಹಲಿಯ ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್‌ನವರು ಸಬಾಲ್ಟರ್ನ್ ಸ್ಟಡೀಸ್‌ನ ಮೊದಲನೆಯ ಸಂಪುಟ (೧೯೮೩), ಎರಡನೆಯ ಸಂಪುಟ (೧೯೮೩), ಮೂರನೆಯ ಸಂಪುಟ (೧೯೮೪) ಮತ್ತು ನಾಲ್ಕನೆಯ ಸಂಪುಟಗಳನ್ನು (೧೯೮೫) ಪ್ರಕಟಿಸಿದವು. ಈ ನಾಲ್ಕು ಸಂಪುಟಗಳ ಸಂಪಾದಕರಾಗಿ ರಣಜಿತ್‌ಗುಹಾ ಅವರು ಕಾರ್ಯ ವಹಿಸಿದರು. ೧೯ ಮತ್ತು ೨೦ನೇ ಶತಮಾನದ ಭಾರತದ “ಕೆಳಸ್ತರದ” ಚರಿತ್ರೆಯನ್ನು ಕಟ್ಟಲು ಗುಹಾ ಅವರು ಶ್ರಮಿಸಿದರು. ಈ ಸಂಪುಟಗಳಲ್ಲಿ ಐದನೆಯದನ್ನು (೧೯೮೭) ಮತ್ತು ಆರನೆಯದನ್ನು (೧೯೮೯) ಕೂಡ ರಣಜಿತ್‌ಗುಹಾ ಅವರೇ ಸಂಪಾದಿಸಿದರು. ಈ ಕೃತಿಗಳಲ್ಲಿರುವ ಲೇಖನಗಳು ಕೇವಲ ಕೆಳಸ್ತರದ ಅಧ್ಯಯನ ಮಾಡುವುದಕ್ಕೆ ಮಾತ್ರ ಮೀಸಲಾಗದೆ ಯುರೋಪ್‌ಕೇಂದ್ರಿತ ಬರವಣಿಗೆಗಳನ್ನು ಸವಾಲಿಗೊಡ್ಡಿದವು. ಇದರೊಂದಿಗೆ ಮೆಟ್ರೋ ಪಾಲಿಟನ್ ಮತ್ತು ಅಧಿಕಾರಿಶಾಹಿಗಳು ರೂಪಿಸಿದ “ಜ್ಞಾನಪರಂಪರೆಗೂ” ಸಬಾಲ್ಟರ್ನ್ ಅಧ್ಯಯನಗಳು ಸವಾಲನ್ನೊಡ್ಡಿದವು.

೧೯೮೦ರ ದಶಕದಲ್ಲಿ ಭಾರತದ ಉದ್ದಗಲಕ್ಕೂ ಸಬಾಲ್ಟರ್ನ್ ಅಧ್ಯಯನದ ಬಗ್ಗೆ ವ್ಯಾಪಕವಾದ ಚರ್ಚೆಗಳಾದವು. ಉತ್ತರ ಅಮೆರಿಕಾ ಮತ್ತು ಬ್ರಿಟನ್ನಿನಲ್ಲಿ ಕೂಡ ಇದರ ಪ್ರತಿಧ್ವನಿಗಳು ಕೇಳಿಸಿತು. ಕೇಂಬ್ರಿಡ್ಜ್‌ನ ಇತಿಹಾಸಕಾರರು ಈ ಅಧ್ಯಯನಕ್ಕೆ ಸಂಬಂಧಿಸಿದ ಯೋಜನೆಗೆ ಒಲವು ತೋರಿಸಿದರು. ಸಿ.ಎ. ಬೇಲಿ, ಟಾಮ್‌ ಬ್ರಾಸ್, ರಾಜ್‌ನಾರಾಯಣ್ ಚಂದ್ರಾವರ್ಕರ್, ರೋಸಲಿಂಡ್‌ ಓ ಹನಲೂನ್ ಮತ್ತು ಡೇವಿಡ್ ವಾಶ್‌ ಬ್ರೂಕ್‌ ಇವರಲ್ಲಿ ಪ್ರಮುಖರು.

ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಈ ಸಂದರ್ಭದಲ್ಲೇ “ಬಹುಸಂಸ್ಕೃತಿ” ಮೇಲೆ ಚರ್ಚೆಗಳು ತೀವ್ರವಾಗಿದ್ದರಿಂದ ಸಬಾಲ್ಟರ್ನ್ ಅಧ್ಯಯನಗಳು ವಿದ್ವಾಂಸರ ಮನಸೆಳೆದವು. ರೋನಾಲ್ಡ್ ಇಂಡೇನ್ ಅವರು “ವಸಾಹತೋತ್ತರ ಭಾರತದಲ್ಲಿ ಪ್ರಥಮ ಬಾರಿಗೆ ಭಾರತೀಯರು ತಮ್ಮನ್ನು ತಾವು ಪ್ರತಿನಿಧಿಸಿಕೊಂಡಿದ್ದಾರೆ” ಎಂದು ಇದೇ ಸಂದರ್ಭದಲ್ಲಿ ಬರೆದರು (ಮಾಡರ್ನ್‌ ಏಷಿಯನ್‌ ಸ್ಟಡೀಸ್, ೨೦.೦೩.೧೯೮೬, ಪುಟ ೪೪೫). ನಂತರದ ಸಂಪುಟಗಳಲ್ಲಿ ಪ್ರಮುಖವಾಗಿ (೧೯೯೨-೯೯) ಸಬಾಲ್ಟರ್ನ್ ಅಧ್ಯಯನಗಳು “ಸಂಸ್ಕೃತಿ” ಕೇಂದ್ರಿತ ಅಧ್ಯಯನಗಳಿಗೆ ಬಹುಪಾಲು ಮೀಸಲಾಗಿದ್ದನ್ನು ಗಮನಿಸಬಹುದು. ಯು.ಎಸ್.ಎ.ನ ಮಾನವಿಕ ಅಧ್ಯಯನ ವಿಭಾಗಗಳ ಪಾತ್ರ ಈ ನಿಟ್ಟಿನಲ್ಲಿ ಪ್ರಮುಖವಾದುದು.

೨. ಆಂಟೋನಿಯೊ ಗ್ರಾಂಸಿ: ಜೀವನ, ರಾಜಕೀಯ ಮತ್ತು ಸಿದ್ಧಾಂತ

ಇತ್ತೀಚಿನ ವರ್ಷಗಳಲ್ಲಿ ಸಮಕಾಲೀನ ಪಾಶ್ಚಾತ್ಯ ಔದ್ಯೋಗಿಕ ಸಮಾಜದ ರಾಜಕಾರಣದ ಸಂದರ್ಭದಲ್ಲಿ ಪಶ್ಚಿಮದಲ್ಲಿ ಪರಿಷ್ಕಾರಗೊಂಡ ಮಾರ್ಕ್ಸಿಸಂಗೆ ಸಂಬಂಧಿಸಿದಂತೆ ಆಂಟೋನಿಯೋ ಗ್ರಾಂಸಿಯನ್ನು ಉಲ್ಲೇಖಿಸುವುದುಂಟು. ಡೇವಿಡ್ ಆರ್ನಾಲ್ಡ್ ಅವರು ‘ಗ್ರಾಂಸಿ ಆಂಡ್ ಪೆಸೆಂಟ್ ಸಬಾಲ್ಟರ‍್ನಿಟಿ ಇನ್ ಇಂಡಿಯಾ’ ಎನ್ನುವ (ವಿನಾಯಕ ಚತುರ್ವೇದಿ, ೨೦೦೦) ಲೇಖನದಲ್ಲಿ ವಿವರಿಸಿದ ಹಾಗೆ ರೈತರು ಮತ್ತು ಗ್ರಾಮೀಣ ಸಮಾಜದ ಬಗ್ಗೆ ಗ್ರಾಂಸಿಯು ಎತ್ತಿಕೊಂಡ ಚರ್ಚೆಯನ್ನು ಇಂಗ್ಲಿಶ್ ವಿದ್ವಾಂಸರು ಅಷ್ಟಾಗಿ ಗಮನಿಸಿಲ್ಲ ಎಂದು ಬರೆಯುತ್ತಾರೆ. ಡೇವಿಡ್ ಅರ್ನಾಲ್ಡರು ಗ್ರಾಂಸಿಯ ಬಗ್ಗೆ ನೀಡಿದ ದೀರ್ಘ ವಿವರಣೆಗಳನ್ನು ಲೇಖನದ ಈ ಭಾಗದುದ್ದಕ್ಕೂ ಬಳಸಿಕೊಳ್ಳಲಾಗಿದೆ. ಕನ್ನಡ ಭಾಷೆಯಲ್ಲಿ ಗ್ರಾಂಸಿಯ ಬಗ್ಗೆ ಬಂದ ಮನೋಹರ್ ಪ್ರಸಾದ್ ಅವರ ಪ್ರತಿ ಸಂಸ್ಕೃತಿ ಅಂತೋನಿ ಗ್ರಾಂಶ್ಚಿಯ ಚಿಂತನೆಗಳು (೨೦೦೨) ಮತ್ತು ಕೆ. ಫಣಿರಾಜ್ ಅವರ ಅಂಟೋನಿಯೊ ಗ್ರಾಮ್ಷಿ (೨೦೦೩) ಎನ್ನುವ ಕೃತಿಯ ಕೆಲವು ಭಾಗಗಳನ್ನು ಪ್ರಸ್ತುತ ಲೇಖನದ ಈ ಭಾಗದಲ್ಲಿ ಉಲ್ಲೇಖಿಸಲಾಗಿದೆ ಮತ್ತು ಬಳಸಿಕೊಳ್ಳಲಾಗಿದೆ. ಗ್ರಾಂಸಿಯ ವೈಯಕ್ತಿಕ ಮತ್ತು ರಾಜಕೀಯ ಜೀವನದ ಬಗ್ಗೆ ಮನೋಹರ ಪ್ರಸಾದ್ ಮತ್ತು ಫಣಿರಾಜ್‌ ಅವರು ಮನಮುಟ್ಟುವಂತೆ ನೀಡಿರುವ ವಿವರಗಳನ್ನು ಬಹುತೇಕ ಕಡೆ ಅವರ ಭಾಷೆಯಲ್ಲಿಯೇ ಉದ್ಧರಿಸಲಾಗಿದೆ. ಭಿನ್ನಮತೀಯ ಮಾರ್ಕ್ಸ್‌ವಾದಿಯೊಬ್ಬನ ಹೃದಯವಿದ್ರಾವಕ ರಾಜಕೀಯ ಜೀವನದ ಮತ್ತು ಅವನ ನಿಷ್ಠುರ ಸೈದ್ಧಾಂತಿಕತೆಯ ಪರಿಚಯವನ್ನು ಈ ಇಬ್ಬರು ಲೇಖಕರು ಮಾಡಿಕೊಡಲು ಯತ್ನಿಸಿದ್ದಾರೆ.

ಕೆ.ಫಣಿರಾಜ್ ಅವರು ಗ್ರಾಂಸಿಯ ಕಾಲದ ಫ್ಯಾಕ್ಟರಿ ಚಳುವಳಿಯ ಬಗ್ಗೆ ಮನಮುಟ್ಟುವಂತೆ ಬರೆದಿದ್ದಾರೆ. ತುಳಿತಕ್ಕೊಳಗಾದ ಕಾರ್ಮಿಕರು ರಕ್ತ ರಹಿತ ಆರ್ಥಿಕ ಬದಲಾವಣೆಯನ್ನು ಯಶಸ್ವಿಯಾಗಿ ತರುತ್ತಿದ್ದ ಸಂದರ್ಭದಲ್ಲಿ ಆಂದೋಳನವನ್ನು ಸಂಪೂರ್ಣವಾಗಿ ಹತ್ತಿಕ್ಕಲು ಬಯಸಿದ್ದ ಫ್ಯಾಕ್ಟರಿ ಮಾಲೀಕ ವರ್ಗಗಳಿಂದ ಮತ್ತು ಆಂದೋಳನದ ಒಳಗೇ ಇದ್ದ ಸ್ಥಾಪಿತ ಹಿತಾಸಕ್ತಿಗಳಿಂದಾಗಿ ಫ್ಯಾಕ್ಟರಿ ಚಳುವಳಿ ಕುಸಿದು ಫಾಸಿಸ್ಟ್‌ ಶಕ್ತಿಗಳು ರಕ್ತಪಿಪಾಸುಗಳಾಗಿ ಬೆಳೆದವು. ಫಣಿರಾಜ್ ಅವರು ಈ ಕುರಿತಾಗಿ ಮಾಡಿರುವ ಅಧ್ಯಯನವನ್ನು ಲೇಖನದ ಈ ಭಾಗದಲ್ಲಿ ನೀಡಲಾಗಿದೆ. ಆಧುನಿಕ ಯುರೋಪಿನ ಚರಿತ್ರೆಯಲ್ಲಿ ಇತ್ತೀಚಿನವರೆಗೂ ಈ ಘಟನೆಗಳು ಪಟ್ಟಭದ್ರರಿಂದಾಗಿ ದಾಖಲೆಯಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ಕನ್ನಡದಲ್ಲಿ ಈ ಕುರಿತಾದ ಅವಶ್ಯ ಮಾಹಿತಿಗಳನ್ನು ನೀಡಿದ ಫಣಿರಾಜ್ ಅವರ ಲೇಖನವು ಯುರೋಪಿನ ಚರಿತ್ರೆಯ ಇನ್ನೊಂದು ಮಗ್ಗುಲಿನ ಚಿತ್ರಣವನ್ನು ಯಶಸ್ವಿಯಾಗಿ ನೀಡುತ್ತವೆ.

ಫಾಸಿಸಂನ ಮೇಲೆ ಈಗಾಗಲೇ ಅನೇಕ ಬರಹಗಳು ಕನ್ನಡದಲ್ಲಿ/ಇಂಗ್ಲಿಶಿನಲ್ಲಿ ಲಭ್ಯವಿದ್ದರೂ ಫಾಸಿಸಂನ ಕುರಿತು ಮಾರ್ಕ್ಸಿಸ್ಟ್ ಭಿನ್ನಮತೀಯ ಗ್ರಾಂಸಿಯ ಅನುಭವ ಮತ್ತು ವಿಚಾರವೇ ತುಸು ಭಿನ್ನವಾದುದು. ತನ್ನ ರಾಜಕೀಯ ಜೀವನದ ಹಸಿ ಸತ್ಯಗಳನ್ನು ಅವನು ದಾಖಲಿಸಿದ್ದಾನೆ. ಮನೋಹರಚಂದ್ರ ಪ್ರಸಾದ್ ಅವರು ಫಾಸಿಸಂನ ಮೇಲೆ ಗ್ರಾಂಸಿಯು ಮಾಡಿದ ಟಿಪ್ಪಣಿಗಳನ್ನು ಈಗಾಗಲೇ ಕನ್ನಡದಲ್ಲಿ ದಾಖಲಿಸಿದ್ದಾರೆ. ಲೇಖನದ ಈ ಭಾಗದಲ್ಲಿ ಈ ಟಿಪ್ಪಣಿಗಳನ್ನು ಬಳಸಿಕೊಳ್ಳಲಾಗಿದೆ. ೧೯೨೦ ರ ದಶಕದಲ್ಲಿ ಗ್ರಾಂಸಿಯು ಕಂಡುಕೊಂಡ ಸತ್ಯಗಳು ನೆಲದಲ್ಲಿ ೨೦೦೦ದ ಸಹಸ್ರಮಾನ ವರ್ಷದ ಮೊದಲ ದಶಕದಲ್ಲಿ ಗೋಚರಿಸುತ್ತಿರುವುದು ಕಾಕತಾಳೀಯವೇನಲ್ಲ. ಪ್ರಸ್ತುತ ಭಾರತದ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳನ್ನು ಅಭ್ಯಾಸ ಮಾಡುತ್ತಿರುವವರಿಗೆ ಗ್ರಾಂಸಿಯ ಅನುಭವದ ಎಲ್ಲೆಗಳು ಭಾರತದಲ್ಲಿಯೂ ಗೋಚರಿಸಿದರೆ ಆಶ್ಚರ್ಯವೇನಿಲ್ಲ. ಡೇವಿಡ್ ಅರ್ನಾಲ್ಡ್ ಅವರು ಗ್ರಾಂಸಿಯ ರಾಜಕೀಯ ಸಿದ್ಧಾಂತಗಳ ಬಗ್ಗೆ ಮಾಡಿದ ಜಿಜ್ಞಾಸೆಗಳನ್ನು ಲೇಖನದ ಇದೇ ಭಾಗದಲ್ಲಿ ಚರ್ಚಿಸಲಾಗಿದೆ.

ಬಹಳ ಯಾಂತ್ರಿಕವಾದ ಮತ್ತು ಸಾಂಪ್ರದಾಯಿಕವಾದ ಅರ್ಥಶಾಸ್ತ್ರೀಯ ಕೇಂದ್ರಿತ ಮಾರ್ಕ್ಸ್‌‌ವಾದವನ್ನು ಓದಿವರಿಗೆ ಮಾರ್ಕ್ಸಿಸಂಗೆ ಹೊಸ ಪರಿಭಾಷೆಯನ್ನು ನೀಡಿದ ಗ್ರಾಂಸಿ ಹೊಸ ವ್ಯಾಖ್ಯಾನವನ್ನೇ ನೀಡಿದ್ದಾನೆ. ಬಹುತೇಕ ಮಾರ್ಕ್ಸಿಸ್ಟರು ಕೈಗಾರಿಕಾ ಬಂಡವಾಳವು ಎದ್ದು ನಿಂತಿರುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ರೈತವರ್ಗವು ಕಣ್ಮರೆಯಾಗಿದೆ ಎನ್ನುವ ಹಿನ್ನೆಲೆಯಲ್ಲಿ ಗ್ರಾಂಸಿಯನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.

ಗ್ರಾಂಸಿಯ ಜೀವನ ಮತ್ತು ರಾಜಕೀಯ

೧೯೧೦ರ ನಂತರದ ದಿನಗಳಲ್ಲಿ, ಉತ್ತರ ಇಟಲಿಯಲ್ಲಿ ಎಡಪಕ್ಷಗಳು – ಸೋಷಿಯಲಿಸ್ಟ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಸಾಕಷ್ಟು ಜನಬೆಂಬಲ ಪಡೆದುಪ್ರಭಾವಶಾಲಿಯಾಗಿದ್ದವು. ೧೯೧೮ ರಲ್ಲಿ ಉತ್ತರ ಇಟಲಿಯ ಟ್ಯೂರಿನ್ ನಗರದ ಕೈಗಾರಿಕಾ ಕಾರ್ಮಿಕರು ಪ್ರಾರಂಭಿಸಿದ ‘ಫ್ಯಾಕ್ಟರಿ ಕೌನ್ಸಿಲ್‌’ ಚಳುವಳಿ ಇತರೆ ಕೈಗಾರಿಕಾ ನಗರಗಳಿಗೂ ಹಬ್ಬಿ, ಆ ಕಾಲದ ಯುರೋಪಿನಲ್ಲಿಯೇ ಅತಿ ದೊಡ್ಡದಾದ ಕಾರ್ಮಿಕ ಚಳುವಳಿಯಾಗಿ ಬೆಳೆದಿತ್ತು. ೧೯೨೦ರ ನಂತರ ಮುಸಲೋನಿಯ ಫಾಸಿಸ್ಟ್‌ಚಳುವಳಿ ಪ್ರಬಲವಾಗಿ ಬೆಳೆದು, ೧೯೨೮ ರಲ್ಲಿ ಮುಸಲೋನಿ ಫಾಸಿಸ್ಟ್ ಸರ್ವಾಧಿಕಾರಿ ಪ್ರಭುತ್ವವನ್ನು ಸ್ಥಾಪಿಸಿದ. ಈ ಕಾಲಘಟ್ಟದ ಉದ್ದಕ್ಕೂ, ಸಾರ್ಡೀನಿಯ ಹಾಗೂ ಸಿಸಿಲಿ ದ್ವೀಪಗಳನ್ನು ಒಳಗೊಂಡ ದಕ್ಷಿಣ ಇಟಲಿಯ ಜನ, ದಮನಕಾರಿ ಜಮೀನುದಾರಿ ವ್ಯವಸ್ಥೆಯಡಿ, ಬೇಸಾಯವನ್ನು ನಂಬಿಕೊಂಡು ಬದುಕುತ್ತಿದ್ದರು. ಈ ಭಾಗದ ಮುಕ್ಕಾಲು ಪಾಲು ಜನ ಭೂಹೀನ ಕೃಷಿ ಕೂಲಿಗಳು ಮತ್ತು ಅತಿ ಕಡಿಮೆ ಭೂಮಿಯನ್ನು ಉಳ್ಳ ಸಣ್ಣ ರೈತರಾಗಿದ್ದರು. ಈ ಬಡ ಜನರೆಲ್ಲ ರೋಮನ್ ಕ್ಯಾಥೋಲಿಕ್‌ ಚರ್ಚಿನ ಬಗ್ಗೆ ಅಪಾರ ಶ್ರದ್ಧೆಯನ್ನು ಇಟ್ಟುಕೊಂಡು, ಚರ್ಚಿನ ಆಜ್ಞೆಗಳನ್ನು ದೇವರ ಆಜ್ಞೆ ಎಂದೇ ಪಾಲಿಸುತ್ತಿದ್ದರು. ಆದರೆ, ಸ್ವತಃ ದೊಡ್ಡ ಪ್ರಮಾಣದ ಭೂಮಿಯ ಒಡೆತನ ಹೊಂದಿದ್ದ ಚರ್ಚ್‌, ಶ್ರೀಮಂತ ಜಮೀನುದಾರರು ಹಾಗೂ ನಗರಗಳ ಆಸ್ತಿವಂತರ ಪರವಾಗಿದ್ದು, ಬಡವರನ್ನು ಸುಲಿಯುವ ಎಲ್ಲ ಕ್ರಮಗಳನ್ನು ಬೆಂಬಲಿಸುತ್ತಿತ್ತು. ನಗರಗಳ ವಿದ್ಯಾವಂತರು, ಸರ್ಕಾರಿ ಅಧಿಕಾರಿಗಳು ಮತ್ತು ಗುಮಾಸ್ತರು, ಈ ಸುಲಿಗೆ ವ್ಯವಸ್ಥೆಯನ್ನು ಸುಗಮವಾಗಿ ನಡೆಸಿಕೊಂಡು ಹೋಗುವುದನ್ನು ಲಾಭದಾಯಕ ವ್ಯಾಪಾರ ಮಾಡಿಕೊಂಡಿದ್ದರು.

ಗ್ರಾಂಸಿ (೧೮೯೧-೧೯೩೬) ಕೂಡ ಸಾರ್ಡೀನಿಯದಲ್ಲಿ ಹುಟ್ಟಿ ಬೆಳೆದವನು. ಅವನ ತಂದೆ ಸರ್ಕಾರಿ ಉದ್ಯೋಗದಲ್ಲಿ ಇದ್ದರು; ತಾಯಿ ಓದು-ಬರಹ ಬಲ್ಲ ಹೆಂಗಸು. ಸಾರ್ಡೀನಿಯದ ಸಾಮಾನ್ಯ ಜನರ ಜೀವನಮಟ್ಟಕ್ಕೆ ಹೋಲಿಸಿದರೆ ಗ್ರಾಂಸಿಯ ಕುಟುಂಬ ಸ್ಥಿತಿವಂತ ಮಧ್ಯಮವರ್ಗದ ಕುಟುಂಬವಾಗಿತ್ತು. ಗ್ರಾಂಸಿಗೆ ಶಾಲೆಗೆ ಹೋಗುವ ಭಾಗ್ಯವು ದೊರಕಿತ್ತು. ಆದರೆ ಇದು ಅವನ ಬಾಲ್ಯದ ಒಂದು ಮುಖ ಮಾತ್ರ. ಚಿಕ್ಕಂದಿನಲ್ಲಿಯೇ ಅಪಘಾತ ಒಂದರಲ್ಲಿ ಅವನ ಬೆನ್ನು ಮೂಳೆ ಜಖಂ ಆಗಿತ್ತು; ಸರಿಯಾದ ಸಮಯಕ್ಕೆ ತಕ್ಕುದಾದ ವೈದ್ಯಕೀಯ ಉಪಚಾರ ಸಿಗದೆ ಅವನು ಜೀವನಪೂರ್ತಿ ಗೂನು ಬೆನ್ನಿನವನಾಗೇ ಇದ್ದ. ಅವನ ಈ ಊನಕ್ಕೆ ಬಾಲ್ಯದಲ್ಲಿ ದೊರಕುತ್ತಿದ್ದ ಒಂದೇ ಒಂದು ಉಪಚಾರವೆಂದರೆ, ಕಾಲುಗಳನ್ನು ಸೂರಿಗೆ ಕಟ್ಟಿ, ತಲೆಕೆಳಗೆ ಮಾಡಿ ಗಂಟೆಗಟ್ಟಲೆ ಜೋತಾಡಿಸುತ್ತ ಇದ್ದದ್ದು; ಈ ಉಪಚಾರದಿಂದಾಗಿ ಬಾಲ್ಯದಿಂದಲೇ ಅವನಿಗೆ ಅಂಟಿಕೊಂಡಿದ್ದ ಉಸಿರಾಟದ ತೊಂದರೆ ಮತ್ತು ತಲೆನೋವು (ಮೈಗ್ರೇನ್)ಗಳು ಮತ್ತಷ್ಟು ಉಲ್ಬಣಗೊಂಡವು; ೪೫ ವರ್ಷಗಳ ಅವನ ಆಯುಷ್ಯದ ಪೂರ್ತಿ ಈ ರೋಗಗಳು ಅವನ ಜೀವ ಹಿಂಡಿದವು. ಗ್ರಾಂಸಿ ಫಾಸಿಸ್ಟರಿಂದ ಸಜೆಗೆ ಗುರಿಯಾಗಿ ಜೈಲುವಾಸ ಅನುಭವಿಸುತ್ತಿದ್ದಾಗ, ತಲೆನೋವು ತಡೆಯಲು ಅಸಾಧ್ಯವಾಗಿ, ರಾತ್ರಿ ಇಡೀ ಅವನು ಜೈಲಿನ ಗೋಡೆಗೆ ತಲೆ ಜಜ್ಜಿಕೊಳ್ಳುತ್ತಿದ್ದ. ಅವನು ಎಂಟು ವರ್ಷದವನಾಗಿದ್ದಾಗ, ಹಣದ ದುರುಪಯೋಗದ ಆರೋಪದ ಮೇಲೆ ಅವನ ತಂದೆಯನ್ನು ಕೆಲಸದಿಂದ ವಜಾಮಾಡಿ ಜೈಲಿಗೆ ಹಾಕಿದರು. ಅವರದು ಎಂಟು ಮಕ್ಕಳ ದೊಡ್ಡ ಕುಟುಂಬ. ತಾಯಿಯ ದರ್ಜಿ ಕೆಲಸದಿಂದ ಸಂಸಾರ ನಿರ್ವಹಿಸುವುದು ಕಷ್ಟವಾಗಿತ್ತು. ಗ್ರಾಂಸಿ ಶಾಲೆ ಬಿಟ್ಟು ದಿನಗೂಲಿಗೆ ಸಣ್ಣಪುಟ್ಟ ಕೆಲಸ ಮಾಡತೊಡಗಿದ. ಅವನು ಹನ್ನೆರಡನೆಯ ವರ್ಷದವನಾಗಿದ್ದಾಗ ಅವನ ತಂದೆಯ ಬಿಡುಗಡೆಯಾದರೂ ಬಡತನ ಕಡಿಮೆಯಾಗಲಿಲ್ಲ. ಆದರೂ ಅವನ ತಂದೆ-ತಾಯಿ ಅವನನ್ನು ಹೈಸ್ಕೂಲಿನವರೆಗೆ ಓದಿಸಿದರು. ಈ ಹೊತ್ತಿಗೆ ಅವನ ಅಣ್ಣ ಮಿಲಿಟರಿ ಸೇರಿದ್ದ. ಅವನು ಗ್ರಾಂಸಿಗೆ ಇಟಲಿಯ ಸೋಷಿಯಲಿಸ್ಟ್ ಪಾರ್ಟಿಯ ಪತ್ರಿಕೆ ‘ಅವಂತಿ!’ಯನ್ನು ಕಳಿಸಿಕೊಡುತ್ತಿದ್ದ. ಗ್ರಾಂಸಿ ಬಡ ವಿದ್ಯಾರ್ಥಿಗಳಿಗೆ ದೊರಕುತ್ತಿದ್ದ ವಿದ್ಯಾರ್ಥಿ ವೇತನ ಪಡೆದು ಉತ್ತರ ಇಟಲಿಯ ಟ್ಯೂರಿನ್ ವಿಶ್ವವಿದ್ಯಾಲಯ ಸೇರಿದ. ಮುಂದೆ ಅವನ ಜೊತೆ ಕಮ್ಯುನಿಸ್ಟ್‌ ಪಕ್ಷ ಕಟ್ಟಿದ ಅನೇಕ ಜನ ಅಲ್ಲಿ ಅವನ ಸಹಪಾಠಿಗಳಾಗಿದ್ದರು. ಗ್ರಾಂಸಿ, ಸೂಕ್ಷ್ಮ ಪ್ರತಿಭೆ ಹಾಗೂ ಜ್ಞಾನದಾಹಗಳಿಂದಾಗಿ ಅಧ್ಯಾಪಕರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದ. ಆದರೆ ಬಡತನ ಮತ್ತು ಅನಾರೋಗ್ಯಗಳ ಕಾರಣವಾಗಿ ಉನ್ನತ ಶಿಕ್ಷಣವನ್ನು ಪೂರ್ತಿಗೊಳಿಸಲು ಅವನಿಗೆ ಸಾಧ್ಯವಾಗಲಿಲ್ಲ. ಆ ಹೊತ್ತಿಗಾಗಲೇ ತತ್ವಶಾಸ್ತ್ರದಲ್ಲಿನ ಅವನ ಪಾಂಡಿತ್ಯ ವಿಶ್ವವಿದ್ಯಾಲಯದಲ್ಲಿ ಜನಜನಿತವಾಗಿತ್ತು. ಈ ಕಾಲದಲ್ಲಿಯೇ ಅವನು ಮಾರ್ಕ್ಸ್‌‌ವಾದವನ್ನು ವಿಸ್ತಾರವಾಗಿ ಅಧ್ಯಯನ ಮಾಡಿದ. ೧೯೧೫ ರಲ್ಲಿ ವಿದ್ಯಾಭ್ಯಾಸ ನಿಲ್ಲಿಸಿ, ಇಟಲಿಯ ಸೋಷಿಯಲಿಸ್ಟ್ ಪಾರ್ಟಿ ಸೇರಿ, ಪಕ್ಷದ ಪತ್ರಿಕೆ ‘ಅವಂತಿ!’ಯ ಪೂರ್ಣಾವಧಿ ಕಾರ್ಯಕರ್ತನಾದ. ಆಗ ಮುಸಲೋನಿ ಈ ಪತ್ರಿಕೆಯ ಸಂಪಾದಕನಾಗಿದ್ದ. ಗ್ರಾಂಸಿ ಪತ್ರಿಕೆಯಲ್ಲಿ ರಾಜಕೀಯ ವಿಶ್ಲೇಷಣೆ ಮತ್ತು ಕಲಾವಿಮರ್ಶೆಗಳನ್ನು ಬರೆಯುತ್ತಿದ್ದ.

ಆ ಹೊತ್ತಿಗೆ ಇಟಲಿಯ ಸೋಷಿಯಲಿಸ್ಟ್ ಪಾರ್ಟಿಯಲ್ಲಿ ಎರಡು ಬಣಗಳು ಇದ್ದವು. ಒಂದು ಸುಧಾರಣವಾದಿ ಬಣ, ಮತ್ತೊಂದು ಕ್ರಾಂತಿಕಾರಿ ಎಡಪಂಥೀಯ ಬಣ. ಸುಧಾರಣಾವಾದಿ ಬಣದ ನಲುವು ಹೀಗೆ ಇತ್ತು: ಕಾರ್ಮಿಕ ಸಂಘಟನೆಗಳು ಕಾರ್ಮಿಕರ ಸಂಬಳ, ಭತ್ಯೆ ಇತ್ಯಾದಿಯಾಗಿ ಸದ್ಯದ ವ್ಯವಸ್ಥೆಯಲ್ಲಿ ನ್ಯಾಯಬದ್ಧವಗಿರುವ ಬೇಡಿಕೆಗಳನ್ನು ಮಾತ್ರ ಮುಂದೆ ಇಟ್ಟುಕೊಂಡು ಹೋರಾಟಗಳನ್ನು ಮಾಡುವ ಮೂಲಕ ಕಾರ್ಮಿಕರ ಮಧ್ಯೆ ಪ್ರಭಾವ ಉಳಿಸಿಕೊಳ್ಳಬೇಕು; ಪಕ್ಷವು ಪಾರ್ಲಿಮೆಂಟಿನಲ್ಲಿ ಹೆಚ್ಚು ಸ್ಥಾನ ಗಳಿಸುವ ಕಡೆ ಗಮನ ಹರಿಸಬೇಕು; ಸರ್ಕಾರ ರಚಿಸುವ ಎಲ್ಲ ವಿದಾನಗಳನ್ನೂ ಬಳಸಿ, ಪಾರ್ಲಿಮೆಂಟಿನಲ್ಲಿ ಸಮಾಜವಾದಿ ನಿಲುವಿನ ಕಾನೂನುಗಳನ್ನು ಜಾರಿ ಮಾಡುವ ಮೂಲಕ, ನಿಧಾನವಾಗಿ ಸಮಾಜವಾದಿ ವ್ಯವಸ್ಥೆ ರೂಢಿಯಾಗುವ ಹಾಗೆ ಮಾಡಬೇಕು. ಈ ನಿಟ್ಟಿನಲ್ಲಿ ಬಂಡವಾಳ ಶಾಹಿಯನ್ನು ಬೆಂಬಲಿಸುವ ಕೆಲವು ಲಿಬರಲ್‌ ಪಕ್ಷಗಳ ಜೊತೆಗೆ ವಿಷಯಾಧಾರಿತ ಹೊಂದಾಣಿಕೆಯನ್ನು ಸಹ ಮಾಡಿಕೊಳ್ಳಬಹುದು. ಪಕಷದ ಕ್ರಾಂತಿಕಾರಿ ಎಡ ಪಂಥೀಯರು – ಮುಸಲೋನಿ ಇವರ ನಾಯಕನಾಗಿದ್ದ – ಸುಧಾರಣವಾದಿಗಳ ಈ ನಿಲುವನ್ನು ಖಡಾಖಂಡಿತವಾಗಿ ವಿರೋಧಿಸುತ್ತಿದ್ದರು. ಬಂಡವಾಳಶಾಹಿ ವ್ಯವಸ್ಥೆಯ ಜೊತೆ ಯಾವ ರೀತಿಯ ಹೊಂದಾಣಿಕೆಯನ್ನೂ ಮಾಡಿಕೊಳ್ಳಕೂಡದು. ಈ ವ್ಯವಸ್ಥೆಯನ್ನು ಬುಡಸಮೇತ ಕಿತ್ತು ಒಗೆಯುವ ಕಾರ್ಮಿಕವರ್ಗದ ಕ್ರಾಂತಿಯ ಮುಂದಾಳತ್ವ ವಹಿಸಿಕೊಳ್ಳುವ ಸರ್ವಸಿದ್ಧತೆ ಪಕ್ಷದ ಮುಖ್ಯ ಲಕ್ಷ್ಯವಾಗಿರಬೇಕು. ಕಾರ್ಮಿಕ ಸಂಘಟನೆಗಳು ಮತ್ತು ಪಾರ್ಲಿಮೆಂಟುಗಳನ್ನು ಈ ಸಂಪೂರ್ಣ ಕ್ರಾಂತಿಯ ಸಂದೇಶ ಬಿತ್ತರಿಸುವ ವೇದಿಕೆಗಳು ಎಂದು ಮಾತ್ರ ಪರಿಗಣಿಸಬೇಕು ಎನ್ನುವುದು ಎಡಪಂಥೀಯ ಬಣದ ನಿಲುವಾಗಿತ್ತು. ಗ್ರಾಂಸಿ ಎಡಪಂಥಕ್ಕೆ ಸೇರಿದವನು. ಆದರೆ ಎಡಪಂಥದವರ ಹಲವು ವಿಚಾರಗಳ ಬಗೆಗೆ ಅವನಿಗೆ ಸಹಮತವಿರಲಿಲ್ಲ. ಎಡಪಂಥದವರು ಸಂಪೂರ್ಣ ಕ್ರಾಂತಿಯ ಬಗ್ಗೆ ಉತ್ಸಾಹದಿಂದ ಮಾತನಾಡುತ್ತಿದ್ದರೂ, ಅವರ ಕಾರ್ಯಕ್ರಮಗಳು ಅಂತಹ ಕ್ರಾಂತಿಯನ್ನು ಕಾರ್ಯಸಾಧ್ಯ ಮಾಡುವಂತಹವಾಗಿರಲಿಲ್ಲ. ಉತ್ತರ ಇಟಲಿಯ ಕೈಗಾರಿಕ ಕಾರ್ಮಿಕರನ್ನು ಸಂಘಟಿಸುವ ಮೂಲಕ ಕ್ರಾಂತಿ ಸಾಧ್ಯವಾಗಿಬಿಡುತ್ತದೆ ಎಂದು ಇವರು ನಂಬಿದ್ದರು. ಉತ್ತರ ಹಾಗೂ ದಕ್ಷಿಣ ಇಟಲಿಯ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳ ನಡುವಿನ ಅಗಾಧ ಅಂತರ, ಒಟ್ಟಾರೆ ಉತ್ತರದ ಜನರ ಬಗ್ಗೆ ದಕ್ಷಿಣದ ಬಡವರಿಗೆ ಇದ್ದ ಸಕಾರಣವಾದ ವಿಪರೀತ ಸಿಟ್ಟು, ಇಟಲಿಯ ಒಂದು ಸಾವಿರ ವರ್ಷಗಳ ಇತಿಹಾಸದಲ್ಲಿ ಉತ್ತರ ಹಾಗೂ ದಕ್ಷಿಣದ ಬಡಜನರನ್ನು ಒಂದಾಗಿ ಹೆಣೆಯಬಲ್ಲ ಒಂದೇ ಒಂದು ಎಳೆಯೂ ರೂಪ ಪಡೆಯದಿರುವ ಚಾರಿತ್ರಿಕ ವಿಪರ್ಯಾಸ, ಇವುಗಳನ್ನು ಗಂಭೀರವಾಗಿ ಪರಿಗಣಿಸಿ, ದಕ್ಷಿಣದ ಬಡರೈತರು ಮತ್ತು ಉತ್ತರದ ಕಾರ್ಮಿಕರನ್ನು ಜೀವಂತವಾಗಿ ಬೆಸೆಯುವ ಕಾರ್ಯಕ್ರಮವನ್ನು ಪಕ್ಷ ರೂಢಿಸಿಕೊಳ್ಳದಿದ್ದರೆ ಇಟಲಿಯನ್ನು ಕ್ರಾಂತಿ ಅಸಾಧ್ಯ ಎನ್ನುವುದು ಗ್ರಾಂಸಿಯ ಸ್ಪಷ್ಟ ನಿಲುವಾಗಿತ್ತು; ಆದರೆ, ಎಡಪಂಥೀಯರು ಇಂಥ ಪಕ್ಷ ಒಂದನ್ನು ಕಟ್ಟುವ ಯೋಚನೆಯನ್ನೇ ಮಾಡಿರಲಿಲ್ಲ.

೧೯೧೩ರಲ್ಲಿ ಮೊದಲನೆಯ ಮಹಾಯುದ್ದ ಶುರುವಾಯಿತು. ಇಟಲಿಯು ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳ ಮೈತ್ರಿಕೂಟವನ್ನು ಸೇರಿಕೊಂಡಿತು. ಯುರೋಪಿನ ಎಲ್ಲಾ ಸಮಾಜವಾದಿ/ಕಮ್ಯುನಿಸ್ಟ್ ಪಕ್ಷಗಳು ಮೊದಲಿಗೆ ಈ ಯುದ್ಧವನ್ನು ಬಂಡವಾಲಶಾಹಿಗಳು ತಮ್ಮ ಲಾಭಕ್ಕಾಗಿ ನಡೆಸುತ್ತಿರುವ ಯುದ್ಧ ಎಂದು ಗುರುತಿಸಿ, ಯಾವ ಸಮಾಜವಾದಿ/ಕಮ್ಯುನಿಸ್ಟ್ ಪಕ್ಷಗಳೂ ಬಂಡವಾಳಶಾಹಿಯು ನಿರೂಪಿಸುತ್ತಿರುವ ರಾಷ್ಟ್ರಪ್ರೇಮದ ಸೋಗಿಗೆ ಮರುಳಾಗಿ ತಮ್ಮ ರಾಷ್ಟ್ರೀಯ ಪ್ರಭುತ್ವಗಳ ಯುದ್ಧನೀತಿಗೆ ಬೆಂಬಲ ಸೂಚಿಸಕೂಡದು ಎಂಬ ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದವು. ಆದರೆ ಯುದ್ಧ ಬೆಳೆಯುತ್ತ ಹೋದಂತೆ ಬಹುಪಾಲು ಪಕ್ಷಗಳು ತಮ್ಮ ತಮ್ಮ ಪ್ರಭುತ್ವಗಳ ಯುದ್ಧನೀತಿಗೆ ಸಕ್ರಿಯ ಬೆಂಬಲ ಸೂಚಿಸತೊಡಗಿದವು; ಇಟಲಿಯ ಸೋಷಿಯಲಿಸ್ಟ್ ಪಕ್ಷ ಕೂಡ ಇದೇ ಧೋರಣೆಯನ್ನು ಅನುಸರಿಸಿತು; ಸೋಷಿಯಲಿಸ್ಟ್ ಪಕ್ಷದ ಎಡಪಂಥೀಯ ಗುಂಪು ಮಾತ್ರ ತನ್ನ ಪಕ್ಷದ ಈ ನೀತಿಯನ್ನು ಬಹಿರಂಗವಾಗಿಯೇ ವಿರೋಧಿಸಿತು. ೧೯೧೭ ರಲ್ಲಿ ಮೊದಲನೆಯ ಮಹಾಯುದ್ದ ಕೊನೆಗೊಂಡಿತು. ಯುದ್ಧದಿಂದ ಕೈಗಾರಿಕ ಉತ್ಪನ್ನಗಳ ಮೇಲೆ ಯಾವ ದುಷ್ಪರಿಣಾಮವೂ ಉಂಟಾಗಿರಲಿಲ್ಲ. ಆದರೆ ಹಣದುಬ್ಬರ ಉಳಿದ ವಸ್ತುಗಳ ಬೆಲೆಗೆ ಹೋಲಿಸಿದರೆ ಹಣದ ಬೆಲೆ ಕಡಿಮೆಯಾಗಿ, ವಸ್ತುಗಳನ್ನು ಖರೀದಿಸಲು ಹಿಂದೆಗಿಂತ ಜಾಸ್ತಿ ಹಣ ವ್ಯಯ ಮಾಡಬೇಕಾದಂತಹ ಪರಿಸ್ಥಿತಿ ವಿಪರೀತ ಹೆಚ್ಚಾಗಿತ್ತು. ಉತ್ಪಾದನೆಯಾದ ಆಹಾರದ ಮುಕ್ಕಾಲುಪಾಲು ಯುದ್ಧಭೂಮಿಗೆ ಸಾಗಿಸಲ್ಪಡುತ್ತಿದ್ದ ಕಾರಣವಾಗಿ, ಸಾಮಾನ್ಯ ಜನರು ಆಹಾರದ ಅಭಾವವನ್ನು ಅನುಭವಿಸಬೇಕಾಯಿತು. ಇಟಲಿಯ ಸಾಮಾನ್ಯ ಜನರ ನಿತ್ಯದ ಆಹಾರವಾದ ಬ್ರೆಡ್ ವಾರಗಟ್ಟಲೆ ಸರಬರಾಜಾಗುತ್ತಿರಲಿಲ್ಲ. ಈ ಪರಿಸ್ಥಿತಿಯ ಪರಿಣಾಮವಾಗಿ ೧೯೧೭ರ ಆಗಸ್ಟ್‌ತಿಂಗಳಲ್ಲಿ, ಉತ್ತರ ಇಟಲಿಯ ನಗರಗಳ ಕಾರ್ಮಿಕರು ತಮ್ಮ ಸಂಬಳ ಹೆಚ್ಚಳಕ್ಕಾಗಿ ಶುರುಮಾಡಿದ ಮುಷ್ಕರ, ಜನರ ಬ್ರೆಡ್ ಹಾಹಾಕಾರದ ಜೊತೆಗೂಡಿ ದೊಡ್ಡ ಮಟ್ಟದ ಸಾರ್ವಜನಿಕ ಪ್ರತಿಭಟನೆಯ ರೂಪ ತಾಳಿತು. ಇದು, ನಿತ್ಯದ ಬವಣೆ ಅಸಹನೀಯ ವಾದಾಗ, ಯಾವ ನಾಯಕತ್ವದ ಪ್ರೇರಣೆಯೂ ಇಲ್ಲದೆ, ತತ್‌ಕ್ಷಣ ಜನರೇ ಪ್ರಾರಂಭಿಸಿದ ಪ್ರತಿಭಟನೆಯಾಗಿತ್ತು. ಈ ಪ್ರತಿಭಟನೆಯಲ್ಲಿ ಪಾಲ್ಗೊಂಡವರಲ್ಲಿ ಸಂಘಟಿತ ಫ್ಯಾಕ್ಟರಿ ಕಾರ್ಮಿಕರದ್ದು ಸಣ್ಣ ಪಾಲು; ಮುಕ್ಕಾಲುಪಾಲು ಜನ ನಗರ ಪ್ರದೇಶದ ಅಸಂಘಟಿತ ಬಡವರು. ಇವರಲ್ಲಿ ಹೆಂಗಸರ ಸಂಖ್ಯೆಯೇ ೪೦,೦೦೦ ದಷ್ಟು ಇತ್ತು. ೨ ಲಕ್ಷ ಜನ ಉತ್ತರ ಇಟಲಿಯ ನಗರಗಳ ಕಾರ್ಖಾನೆ ಹಾಗೂ ಬೀದಿಗಳನ್ನು ಆಕ್ರಮಿಸಿಕೊಂಡು ಬಿಟ್ಟರು. ‘ಬ್ರೆಡ್ ದಂಗೆ’ ಎಂದೇ ಖ್ಯಾತವಾಗಿರುವ ಈ ಪ್ರತಿಭಟನೆಯನ್ನು ಹದ್ದುಬಸ್ತಿಗೆ ತರುವುದಕ್ಕೆ ಪೊಲೀಸರಿಂದ ಸಾಧ್ಯವಾಗಲಿಲ್ಲ. ಸರ್ಕಾರ ಶಸ್ತ್ರಸಜ್ಜಿತ ಸೈನಿಕರ ತುಕಡಿಗಳನ್ನು ಕಳಿಸಿತು. ಸೈನ್ಯ ೨೦೦೦ ಜನರನ್ನು ಕೊಂದು ಪ್ರತಿಭಟನೆಯನ್ನು ಹತ್ತಿಕ್ಕಿತು. ಈ ಪ್ರತಿಭಟನೆಯಲ್ಲಿ ಸೋಷಿಯಲಿಸ್ಟ್ ಪಕ್ಷದ ಕಾರ್ಮಿಕ ಸಂಘಟನೆಗಳು ನೇರವಾಗಿ ಪಾಲ್ಗೊಳ್ಳಲಿಲ್ಲ.; ಪಕ್ಷ ಕೂಡ ಈ ಘಟನೆಯ ಬಗ್ಗೆ ಮುಗುಮ್ಮಾಗಿತ್ತು. ಪ್ರತಿಭಟನೆಯಲ್ಲಿ ಅನಾರ್ಕಿಸ್ಟರು (ಎಲ್ಲ ಬಗೆಯ ಪ್ರಭುತ್ವಗಳು ಜನರನ್ನು ತಮ್ಮ ಮೂಗಿನ ನೇರಕ್ಕೆ ಜೀವಿಸಬೇಕು ಎಂದು ಒತ್ತಾಯಿಸಿ ದಬ್ಬಾಳಿಕೆ ಮಾಡುತ್ತವೆ; ಹೀಗಾಗಿ ಎಲ್ಲಾ ನಮೂನೆಯ ಪ್ರಭುತ್ವಗಳ ಅಸ್ತಿತ್ವವನ್ನು ನಿರಾಕರಿಸುವುದರಿಂದ ಮಾತ್ರ ಮನುಷ್ಯರ ನಿಜವಾದ ವಿಮೋಚನೆ ಸಾಧ್ಯ ಎಂಬ ನಿಲುವು ಉಳ್ಳವರು ಅನಾರ್ಕಿಸ್ಟರು) ಮಾತ್ರ ಸಕ್ರಿಯವಾಗಿ ಭಾಗವಹಿಸಿದ್ದರು.

ಇದರ ಬೆನ್ನಿಗೇ ಉತ್ತರ ಇಟಲಿಯ ಟ್ಯೂರಿನ್ ನಗರದ ಫ್ಯಾಕ್ಟರಿಗಳಲ್ಲಿ ‘ಫ್ಯಾಕ್ಟರಿ ಕೌನ್ಸಿಲ್‌’ ಚಳುವಳಿ ಸಣ್ಣದಾಗಿ ಶುರುವಾಯಿತು. ಸೋಷಿಯಲಿಸ್ಟ್ ಪಕ್ಷದ ಸುಧಾರಣಾವಾದಿ ಗುಂಪು ಆರ್ಥಿಕ ಬೇಡಿಕೆಗಳಿಗೆ ಸೀಮಿತವಾದ ಕಾರ್ಮಿಕ ಸಂಘಟನೆಯ ಚಟುವಟಿಕೆಗಳನ್ನು ಮಾತ್ರ ಪ್ರೋತ್ಸಾಹಿಸುತ್ತಿದ್ದರೆ ಎಡಪಂಥದವರು ಪ್ರಭುತ್ವವನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಕಾರ್ಮಿಕರು ತೀವ್ರವಾಗಿ ತೊಡಗಿಕೊಳ್ಳಬೇಕು ಎಂದು ವಾದಿಸಿದರು.