ವಿನಯ್‌ಬಾಲ್ ಅವರು ಇಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ (೩೨, ೩೩, ಜೂನ್‌೭-೧೩, ೧೯೯೭) ಪ್ರಕಟಿಸಿದ “ರಿವೆಲೆನ್ಸ್‌ಆರ್ (ಇರ‍್ರಿಲೆವೆನ್ಸ್‌) ಆಫ್ ಸಬಾಲ್ಟರ್ನ್ ಸ್ಟಡೀಸ್” ಎನ್ನುವ ಲೇಖನದಲ್ಲಿ ಲೇಖನದಲ್ಲಿ ವಿವರಿಸಿದಂತೆ ಸಬಾಲ್ಟರ್ನ್ ಅಧ್ಯಯನವು ಸಂಪೂರ್ಣವಾಗಿ ಭೌತಿಕ ಸಂಸ್ಕೃತಿ (ಮೆಟರಿಯಲ್ ಕಲ್ಚರ್‌) ಮತ್ತು ಅದರ ಅಭಿವ್ಯಕ್ತಗಳಾದ ಬಟ್ಟೆ, ಊಟ, ಪೀಠೋಪಕರಣಗಳು, ಬದುಕಲು ಅವಶ್ಯವಿರುವ/ಅವಶ್ಯವಿಲ್ಲದಿರುವ ವಸ್ತುಗಳು, ವಸತಿ, ತಂತ್ರಜ್ಞಾನ ಮತ್ತು ಆರ್ಥಿಕ ವ್ಯವಸ್ಥೆಗಳ ಉತ್ಪಾದನಾ ಸಂಬಂಧಗಳನ್ನು ಮತ್ತು ಪಾತ್ರಗಳನ್ನು ನಿರ್ಲಕ್ಷತೆ, ಭೌತಿಕ ಸಂಸ್ಕೃತಿಯು ರೂಪಿಸುವ ಜನರ ಮೌಲಿಕ ಸಂಸ್ಕೃತಿ ಕೂಡ ಜನರ ಭಾವನೆಗಳನ್ನು ಪ್ರತಿನಿಧೀಕರಿಸುವುದರಿಂದ ಭೌತಿಕ ಸಂಸ್ಕೃತಿಯ ಪಾತ್ರದ ನಿರ್ಲಕ್ಷ ಸಲ್ಲ ಎಂದು ವಿನಯ್‌ಬಾಲ್ ಅಭಿಪ್ರಾಯಪಟ್ಟಿದ್ದಾರೆ. ಅವರು ಸಬಾಲ್ಟರ್ನ್ ಅಧ್ಯಯನ ಮಾದರಿಯ ಮೇಲೆ ಎತ್ತಿರುವ ಬಹುಮುಖ್ಯ ಪ್ರಶ್ನೆಗಳನ್ನು ಇಲ್ಲಿ ಚರ್ಚಿಸಲಾಗಿದೆ.

೧. ಪಾಶ್ಚಾತ್ಯ ಚರಿತ್ರಕಾರರು ‘ತಳದಿಂದ ಇತಿಹಾಸ ಬರೆಯುವ ಪ್ರಯತ್ನವನ್ನು ಮಾಡಿದ ಸಂದರ್ಭದಲ್ಲಿ, ಅದರಲ್ಲಿಯೂ ಬ್ರಿಟಿಶ್ ಕಾರ್ಮಿಕರು ಬಿಟ್ಟು ಹೋದ ‘ಡೈರಿಗಳನ್ನು’ ಆಧರಿಸಿ ಕಾರ್ಮಿಕರ ಕೂಗನ್ನು ದಾಖಲಿಸಿದರು. ಭಾರತದ ಕಾರ್ಮಿಕರ ಹಾಗೂ ರೈತರು ಈ ಬಗೆಯ ‘ಡೈರಿಗಳನ್ನು’ ಬಿಟ್ಟುಹೋಗದಿದ್ರೂ ಸಬಾಲ್ಟರ್ನ್ ಚರಿತ್ರೆಕಾರರು ಲಭ್ಯವಿರುವ ದಾಖಲೆ/ಆಕರಗಳ ಮೂಲಕ ಅವರ ಕೂಗಿಗೆ ಸ್ಪಂದಿಸದೆ ಸಬಾಲ್ಟರ‍್ನಿಟಿ ಎನ್ನುವ ಅಂಶ ಹೇಗೆ ರೂಪಿಸಲ್ಪಟ್ಟಿದೆ ಎನ್ನುವುದಕ್ಕೆ ತಮ್ಮ ಶ್ರಮವನ್ನು ಸೀಮಿತ ಗೊಳಿಸಿದ್ದನ್ನು ನೋಡಬಹುದು. ಸಬಾಲ್ಟರ್ನ್ ಅಧ್ಯಯನಕಾರರ ಒಂದು ಮುಖ್ಯ ಮಿತಿ ಇದಾಗಿದೆ ಎಂಬುದು ಇಲ್ಲಿ ವೇದ್ಯವಾಗಿದೆ.

೨. ದಕ್ಷಿಣ ಭಾರತದಲ್ಲಿ ರೂಪುಗೊಂಡ ಸಬಾಲ್ಟರ್ನ್ ಅಧ್ಯಯನದ ಮಾದರಿಗಳು ನಂತರ ಲ್ಯಾಟಿನ್‌ಅಮೆರಿಕಾ ಹಾಗೂ ಆಫ್ರಿಕಾದ ವಿದ್ವಾಂಸರಿಗೆ ಒಂದು ಮಾದರಿ ಅಧ್ಯಯನವಾಗಿ ಬೆಳೆದಿವೆ ಎನ್ನುವುದು ಇತ್ತೀಚಿನ ಚರ್ಚೆಗಳಲ್ಲಿ ಕಂಡುಬಂದ ವಿಚಾರವಾಗಿದೆ. ಆದರೆ ಇದರ ಬಗ್ಗೆ ಎತ್ತಿಕೊಂಡ ವಿಶೇಷ ಚರ್ಚೆಯಲ್ಲಿ ವಿನಯ್ ಬಾಲ್ ಅವರು ನೀಡಿರುವ ವಿಮರ್ಶೆಯನ್ನು ಗಮನಿಸಬಹುದು. ಲ್ಯಾಟಿನ್‌ ಅಮೆರಿಕಾದ ಹಲವು ವಿದ್ವಾಂಸರು ಮಾರ್ಕ್ಸ್‌ವಾದಿ ದೃಷ್ಟಿಕೋನ ಅಥವಾ ಅದು ಉಲ್ಲೇಖಿಸುವ ಪ್ರಗತಿ ಮತ್ತು ಆಧುನಿಕತೆ ಅಥವಾ ಕ್ರಾಂತಿಯನ್ನು ಎದುರು ನೋಡುವ ಛಲದ ಬಗ್ಗೆ ಮತ್ತು ಏಕಮುಖಿಯಾಗುವ (ಲೀನಿಯರ್) ಅಭಿವೃದ್ಧತಿ ಸ್ಥಿತ್ಯಂತರಗಳ ಬಗ್ಗೆ ಸಂದೇಹವನ್ನು ವ್ಯಕ್ತಪಡಿಸಿದ್ದಾರೆ. ಹಾಗೆಯೇ ಅವರು ಆಧುನಿಕೋತ್ತರ ಮತ್ತು ಸಂರಚನೋತ್ತರವಾದಿಗಳು ನೀಡಿದ ಪರ‍್ಯಾಯಗಳ ಬಗ್ಗೆಯೂ ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ‘ಆಧುನಿಕವೇ ಆಗದ ದೇಶಗಳಲ್ಲಿ ಈ ಬಗೆಗಿನ ‘ಸಂಕಥನ’ವು ಅಚಾರಿತ್ರಿಕವೆಂದೂ ಅವರು ಪರಿಗಣಿಸಿದ್ದಾರೆ. ಆಧುನಿಕೋತ್ತರ ಸಿದ್ಧಾಂತಕ್ಕೆ ಯಾವುದೇ ರಾಜಕೀಯ ಉದ್ದೇಶಗಳಿಲ್ಲದಿರುವುದರಿಂದ ಮತ್ತು ಯಾವುದೇ ನಿರ್ದಿಷ್ಟವಾದ ರಾಜಕೀಯದಲ್ಲಿ ತೊಡಗಿಸಿಕೊಳ್ಳದಿರುವ ಅಂಶಗಳಿರುವುದರಿಂದ ಈ ವಿದ್ವಾಂಸರು ಈ ಕುರಿತಂತೆ ಅಷ್ಟಾಗಿ ಒಲವು ತೋರಿಸಲಿಲ್ಲ. ಸಂದೇಹಗಳು ಮತ್ತು ಸಂಶಯಗಳು ನಿರ್ಣಾಯಕ ಸ್ಥಿತಿಯಲ್ಲಿದ್ದ ಸಂದರ್ಭದ ಚಾರಿತ್ರಿಕ ಸನ್ನಿವೇಶದಲ್ಲಿ ಲ್ಯಾಟಿನ್ ಅಮೇರಿಕಾದ ಪ್ರಗತಿಗಾಮಿ ವಿದ್ವಾಂಸರಿಗೆ ಪಾಶ್ಚ್ಯಾತ್ಯೇತರ ಜಗತ್ತು ಹುಟ್ಟು ಹಾಕಿದ ಸಬಾಲ್ಟರ್ನ್ ಅಧ್ಯಯನದ ಮಾದರಿಗಳಿಗೆ ಒಗ್ಗುವುದು ಅನಿವಾರ‍್ಯವಾದ ಅನುಸಂಧಾನವಾಯಿತು. ಭಾರತೀಯ ವಿದ್ವಾಂಸರ ವಸಹತು ವಿರೋಧಿ ಮತ್ತು ಪ್ರಗತಿಗಾಮಿ ರಾಜಕೀಯ ನಿಲುವು ಸಿದ್ಧಾಂತಗಳು ಲ್ಯಾಟಿನ್ ಅಮೆರಿಕಾದ ವಿದ್ವಾಂಸರಿಗೆ ಆಕರ್ಷಕವಾಗಿ ಕಂಡವು. ಲ್ಯಾಟಿನ್‌ಅಮೆರಿಕನ್ ಸಬಾಲ್ಟರ್ನ್ ಅಧ್ಯಯನ ಕಾರರಲ್ಲಿ ಒಬ್ಬನೇ ಒಬ್ಬ ಚರಿತ್ರೆಕಾರನಿರುವುದು ಬಿಟ್ಟರೆ ಉಳಿದವರೆಲ್ಲರೂ ಸಾಹಿತ್ಯ ವಿಮರ್ಶಕರಿರುವುದೇ ಇದರ ಒಂದು ದೊಡ್ಡ ಸಮಸ್ಯೆಯಾಗಿದೆ ಮತ್ತು ಮಿತಿಯಾಗಿದೆ. ಆಧುನಿಕೋತ್ತರ ಸಿದ್ಧಾಂತಗಳ ವಿಧಾನ ಮತ್ತು ತಂತ್ರಗಳನ್ನು ಎರವಲು ತರಲಿಕ್ಕೆ ಈ ಸಾಹಿತ್ಯ ವಿಮರ್ಶಕರಿಗೆ ಕೆಲವು ಇರುಸು ಮುರುಸುಗಳಿದ್ದರೂ ನಂತರ ಅದಕ್ಕೂ ಅವರು ಒಗ್ಗಿಕೊಂಡರು. ಈ ಬಗೆಯ ಮಿತಿಗಳು ಆವರಿಸಿರುವುದರಿಂದ ಸಹಜವಾಗಿಯೇ ಸಬಾಲ್ಟರ್ನ್ ಅಧ್ಯಯನಗಳು ಬೊಟ್ಟು ಮಾಡುವ ಸಂಕೀರ್ಣತೆಗಳನ್ನು ಅರ್ಥ ಮಾಡಿಕೊಳ್ಳಲು ಈ ವಿದ್ವಾಂಸರಿಗೆ ಸಾಧ್ಯವಾಗುವುದಿಲ್ಲ. ಲ್ಯಾಟಿನ್ ಅಮೇರಿಕನ್ ಅಧ್ಯಯನಕಾರರಲ್ಲಿ ಪ್ರಧಾನ ಗುಂಪಾದ ಸಾಹಿತ್ಯ ವಿಮರ್ಶಕರ ಈ ಬಗೆಯ ಸರಳೀಕೃತವಾದ ನಿಲುವುಗಳಿಂದಾಗಿ “ಚರಿತ್ರೆ ರಚನಾಕ್ರಮದ ಅಧ್ಯಯನವು ತೀರಾ ಬಡವಾಗಿರುವುದನ್ನು” ವಿನಯ್‌ಬಾಲ್‌ಗುರುತಿಸುತ್ತಾರೆ. ಭಾರತೀಯ ಸಬಾಲ್ಟರ್ನ್ ವಿದ್ವಾಂಸರಿಂದ ಎರವು ತಂದ ಸಬಾಲ್ಟರ‍್ನಿಟಿಯ ಮೂಲ ಆಶಯವು ಲ್ಯಾಟಿನ್‌ಅಮೆರಿಕನ್ ವಿದ್ವಾಂಸರ ಕೈಲ್ಲಿ “ಸರಳೀಕೃತವಾಗಿ ಅಪ್ರತಿನಿಧೀಕರಣವಾಯಿತು” ಎಂದು ಲ್ಯಾಟಿನ್‌ಅಮೆರಿಕನ್‌ಚರಿತ್ರಕಾರನೊಬ್ಬ ವಿಮರ್ಶಿಸಿರುವ ವಿಚಾರ ಇಲ್ಲಿ ಮುಖ್ಯವಾಗುತ್ತದೆ.

ಲ್ಯಾಟಿನ್ ಅಮೆರಿಕಾದ ವಿದ್ವಾಂಸರಿಗೆ ಹೋಲಿಸಿದರೆ ಆಫ್ರಿಕನ್ ರಿತ್ರೆ ಬರವಣಿಗೆಗಳು ಸಬಾಲ್ಟರ್ನ್ ಅಧ್ಯಯನಗಳಿಗೆ ಅಷ್ಟು ತೀವ್ರವಾಗಿ ಸ್ಪಂದಿಸದೆ ಇರುವುದನ್ನು ನಾವು ನೋಡಬಹುದು. “ತಳದಿಂದ ರಚನೆಗೊಳ್ಳುವ ಚರಿತ್ರೆ” ಬರವಣಿಗೆಗಳ ಬಗ್ಗೆ ಅವರು ಒಲವು ತೋರಿದರೂ ಸಬಾಲ್ಟರ್ನ್ ಅಧ್ಯಯನಕಾರರು ಶಿಫಾರಸ್ಸು ಮಾಡಿದ “ಸಬಾಲ್ಟರ್ನ್ ಸ್ವಾಯತ್ತೆ” ವಿಚಾರವನ್ನು ಅವರು ಒಪ್ಪದಿರುವುದು ಕಂಡುಬರುತ್ತದೆ. ಭಾರತದ ಮತ್ತು ಆಫ್ರಿಕಾದ ಸಬಾಲ್ಟರ್ನ್ ಚರಿತ್ರಕಾರರ ನಡುವೆ ಮತ್ತೊಂದು ಮುಖ್ಯವಾದ ವ್ಯತ್ಯಾಸವಿದೆ. ಭಾರತದ ಸಬಾಲ್ಟರ್ನ್ ಚರಿತ್ರೆಕಾರರು “ಭಾರತದ” ಒಳಗಿರುವ ಪ್ರಭೇದಗಳನ್ನು ಬಹಳ ಮುಖ್ಯವಾಗಿ ಸಮುದಾಯಗಳ ಮತ್ತು ಐಡೆಂಟಿಟಿಗಳ ನಡುವಿನ ವ್ಯತ್ಯಾಸಗಳನ್ನು ತೋರಿಸುವುದು ಅಥವಾ ಅವುಗಳ ಮೂಲಕ ಚರಿತ್ರೆಯನ್ನು ರೂಪಿಸಿರುವುದು ಸರಿಯಷ್ಟೇ. ಆದರೆ, ಆಫ್ರಿಕನ್‌ಚರಿತ್ರಕಾರರಿಗೆ ಪ್ರಭೇದಗಳಿಗಿಂತ, ವ್ಯತ್ಯಾಸಗಳಿಗಿಂತ ‘ಆಫ್ರಿಕಾ’ ಎನ್ನುವ ಸಾಮಾನ್ಯ ಪರಿಪ್ರೇಕ್ಷ್ಯೆ ಮುಖ್ಯವಾಗಿದೆ. ಹೀಗಾಗಿ ಅವರು ಆಫ್ರಿಕಾವನ್ನು ಬಹುತೇಕವಾಗಿ ಇಡಿಯಾಗಿ ಗ್ರಹಿಸಲು ಪ್ರಯತ್ನಪಟ್ಟಿರುವುದನ್ನು ನಾವು ಗಮನಿಸಬಹುದು. ಇಷ್ಟೆಲ್ಲದರ ನಡುವೆಯೂ ಆಫ್ರಿಕಾದ ವಿದ್ವಾಂಸರಿಗೆ ಭಾರತದ ಸಬಾಲ್ಟರ್ನ್ ಮಾದರಿಗಳು ದಿಗ್ಭ್ರಮೆಯನ್ನೇನೂ ಉಂಟುಮಾಡಿಲ್ಲ. ವಸಾಹತುಕಾರರ ಆಕರಗಳಿಗಿಂತ ಭಿನ್ನವಾದ ಆಕರಗಳನ್ನು ಶೋಧಿಸುವಲ್ಲಿ ಆಫ್ರಿಕಾದ ಚರಿತ್ರಕಾರರು ೧೯೬೦ರ ದಶಕದಲ್ಲೇ ಸಕ್ರಿಯವಾಗಿದ್ದರು. ಪರಿಣಾಮವಾಗಿ ವಸಾಹತುಶಾಹಿಯು ಕಟ್ಟಿಕೊಟ್ಟ ವಿರೂಪಗೊಂಡ ಚರಿತ್ರೆಗೆ ಪ್ರತಿಯಾಗಿ ಆಫ್ರಿಕನ್ ಚರಿತ್ರೆಕಾರರು ೧೯೬೦ರ ದಶಕದಲ್ಲಿಯೇ ಮೌಖಿಕ ಆಕರಗಳ ಮೂಲಕ ತಮ್ಮದೇ ಆದ ಚರಿತ್ರೆಯನ್ನು ಕಟ್ಟಿಕೊಳ್ಳಲು ಶ್ರಮಿಸಿದರು. ಹೀಗಾಗಿ ಅವರು ತಮ್ಮದೇ ಆದ ಚರಿತ್ರೆಯನ್ನು ಕಟ್ಟಿಕೊಳ್ಳಲು ಶ್ರಮಿಸಿದರು. ಹೀಗಾಗಿ ಅವರು ಆಫ್ರಿಕನ್ನರ ಚರಿತ್ರೆಯನ್ನು ರೂಪಿಸುವಲ್ಲಿ ಶ್ರಮಿಸಿದರೇ ವಿನಾ ಆಫ್ರಿಕಾದ ಚರಿತ್ರೆಯು ಹೇಗೆ “ಅಧಿಕಾರಕ್ಕೆ” ಸವಾಲನ್ನೊಡ್ಡಿತು ಅಥವಾ ಅದು ಹೇಗೆ ತನ್ನನ್ನು ಸ್ಥಾಪಿಸಿಕೊಂಡಿತು ಎನ್ನುವ ವಿಚಾರವನ್ನು ರೂಪಿಸಲಿಕ್ಕೆ ಅಲ್ಲ ಎನ್ನುವ ಅಂಶ ಇಲ್ಲಿ ಕಂಡುಬರುತ್ತದೆ.

ಆಫ್ರಿಕನ್ ಚರಿತ್ರೆಕಾರರಿಗೆ ಸಬಾಲ್ಟರ್ನ್ ಅಧ್ಯಯನಕ್ರಮದ ಬಗೆಗಿನ ಅದರಲ್ಲಿಯೂ ವಸಾಹತು ಸರಕಾರಗಳು ಅಧಿಕಾರ ಕೇಂದ್ರ ಶಕ್ತಿಗಳಾಗಿ ವ್ಯವಸ್ಥೆಯನ್ನು ನಿಯಂತ್ರಿಸಿದ ಕುರಿತಾಗಿ ಮಾಡಿದ ನಿರೂಪಣೆಯ ಬಗ್ಗೆ ಅಥವಾ ಇಡೀ ವ್ಯವಸ್ಥೆಯನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗುತ್ತಿರುವ ‘ನೇಶನ್ ಸ್ಟೇಟ್‌’ಗಳ ಎಡಬಿಡಂಗಿತನದ ಬಗ್ಗೆ ನೀಡಿದ ವಿಮರ್ಶೆಯ ಬಗ್ಗೆ ಸಹಾನುಭೂತಿಯಿರುವುದನ್ನು ಕಾಣಬಹುದು. ಇಷ್ಟಾಗಿಯೂ ಅವರಿಗೆ ಪ್ರಬಲಚರಿತ್ರೆಗೆ ಪ್ರತಿಯಾಗಿ ನೀಡಿದ “ಸಮುದಾಯಗಳ ಸ್ವಾಯತ್ತೆ”ಯ ಅಂಶಗಳ ಬಗ್ಗೆ ಒಲವಿಲ್ಲ. ವಿನಯ್‌ಬಾಲ್ ಅವರು ವಿವರಿಸಿದಂತೆ, ಇತ್ತೀಚೆಗೆ ಸೋಮಾಲಿಯಾದಲ್ಲಿ ಒಂದು ಕೇಂದ್ರೀಕೃತ ವ್ಯವಸ್ಥೆಯ ಗೈರುಹಾಜರಿಯಲ್ಲಿ ಸಮುದಾಯಗಳು ತಮ್ಮ ತಮ್ಮ ಕೈಗಳಿಗೆ ಕೈಗೆಟುಕುವ ಯಂತ್ರಚಾಲಿತ ಆಯುಧಗಳನ್ನು ಬಗಲಲ್ಲಿಟ್ಟುಕೊಂಡು ನೆತ್ತರು ಹೊಳೆಯನ್ನು ಹರಿಸಿದ ಘಟನೆಗಳನ್ನು ನೋಡಿದ ಮೇಲೆ ಆಫ್ರಿಕಾದ ಚರಿತ್ರೆಕಾರರು ಸಬಾಲ್ಟರ್ನ್ ಅಧ್ಯಯನ ಮಾದರಿಯಲ್ಲಿ ಪ್ರಬಲವಾಗಿರುವ ಮರುಸಂರಚಿಸುವ (ಡಿಕನ್‌ಸ್ಟ್ರಕ್ಷನ್) ಸಿದ್ಧಾಂತಗಳಿಂದ ದೂರವಾಗಿದ್ದಾರೆ. ಹಾಗೆ ನೋಡಿದರೆ, ೧೯೫೬ರಲ್ಲಿ ಆನ್ವಾಕ ಡೈಕ್‌ ಎಂಬ ವಿದ್ವಾಂಸ “ಟ್ರೇಡ್ ಅಂಡ್ ಪಾಲಿಟಿಕ್ಸ್ ಇನ್ ದಿ ನಿಗರ್ ಡೆಲ್ಟಾ” ಎನ್ನುವ ಪ್ರಕಟಣೆಯಲ್ಲಿ ಆಫ್ರಿಕಾದ ಚರಿತ್ರೆಯನ್ನು ರಚಿಸುವ ಸಂದರ್ಭದಲ್ಲಿ ಆಫ್ರಿಕನ್ನರನ್ನು ಅವರು ಪ್ರತಿಭಟನೆಕಾರರಾಗಿಯೋ ಅಥವಾ ಸಹವರ್ತಿಗಳನ್ನಾಗಿಯೋ (ಕೊಲಾಬರೇಟರ್ಸ್‌) ನೋಡದೆ ಇರುವುದು ಈ ಸಂದರ್ಭದಲ್ಲಿ ಮುಖ್ಯ ವಿಚಾರವಾಗುತ್ತದೆ. ಸಾಗರೋತ್ತರ ವ್ಯವಹಾರದ ಸಂದರ್ಭದಲ್ಲಿ ಪ್ರಾದೇಶಿಕ ರಾಜಕೀಯ ವ್ಯವಸ್ಥೆಯ ಅಂಗವಾಗಿ ಯುರೋಪಿಯನ್ನರನ್ನು ಅರ್ಥ ಮಾಡಿಕೊಂಡ ಈ ಲೇಖನವು ಸಬಾಲ್ಟರ್ನ್ ಅಧ್ಯಯನ ಕ್ರಮವು ಪ್ರಚಲಿತಕ್ಕೆ ಬರುವ ಮೂರು ದಶಕಗಳ ಹಿಂದೆ ಪ್ರಕಟವಾಗಿತ್ತು ಎಂಬ ವಿಚಾರವು ನಮ್ಮ ಗಮನವನ್ನು ಸೆಳೆಯುತ್ತದೆ.

೩. ಡೈಕನ ಮಾದರಿಗಳಿಗಿಂತ ಅಥವಾ ಅವನ ನಂತರ ಬಂದ ಉಳಿದ ಆಫ್ರಿಕನ್ ಚರಿತ್ರೆಕಾರರ ಮಾದರಿಗಳಿಗಿಂತ ಭಿನ್ನವಾದ ಸಬಾಲ್ಟರ್ನ್ ಅಧ್ಯಯನ ಕ್ರಮವು “ಭಿನ್ನತೆಗಳನ್ನು” ಮತ್ತು “ವ್ಯತ್ಯಾಸಗಳನ್ನು” ವ್ಯವಸ್ಥೆಯಲ್ಲಿ ಗುರುತಿಸುವ ಹಾದಿಯಲ್ಲಿ ಮುಂದುವರಿಯಿತು. ವರ್ಣ, ರಾಷ್ಟ್ರೀಯತೆ ಮತ್ತು ಲಿಂಗಸಂಬಂಧಿ ವಿಚಾರಗಳಲ್ಲಿ “ವ್ಯತ್ಯಸಗಳನ್ನು” ಕಂಡುಕೊಳ್ಳುವ ಸಂದರ್ಭದಲ್ಲಿ ಭೌತಿಕ ವ್ಯವಸ್ಥೆ (ಮೆಟೀರಿಯಲ್ ಕಂಡೀಶನ್ಸ್) ಹುಟ್ಟು ಹಾಕಿರುವ ಸಾಮಾನ್ಯ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದಿರುವುದನ್ನು ನೋಡಬಹುದು. ವ್ಯತ್ಯಾಸಗಳಾಗಲಿ ಅಥವಾ ಅವುಗಳಿಂದ ರೂಪುಗೊಳ್ಳುವ ಐಡೆಂಟಿಟಿಗಳಾಗಲಿ ಸ್ಥಾವರವಾಗಿರುವುದಿಲ್ಲ. ಬದಲಿಗೆ ಅವು ಬದಲಾಗುತ್ತಲೇ ಇರುತ್ತವೆ. ನಮ್ಮಲ್ಲಿ ರೂಪುಗೊಂಡ ಸಾಂಸ್ಕೃತಿಕ ಐಡೆಂಟಿಟಿಗಳ ಪ್ರಕ್ರಿಯೆ ಹಂತದಲ್ಲಿರುವುವು ಮತ್ತು ಅದಕ್ಕಾಗಿಯೇ ಅವು ಒಂದೊಂದು ಸಂದರ್ಭದಲ್ಲಿ ಒಂದೊಂದು ಅರ್ಥವನ್ನು ಪಡೆದುಕೊಳ್ಳುವುವು. ಕೆಲವೊಂದು ಸಂದರ್ಭಗಳಲ್ಲಿ ಏಕತೆಯನ್ನು ಸಾಧಿಸಲು ಅಥವಾ ಅದನ್ನು ನ್ಯಾಯಸಮ್ಮತೀಕರಿಸಲು ಒಂದು ಎತ್ನಿಕ್ ಗುಂಪು ಬಹು ಸಮುದಾಯಗಳನ್ನು ವರ್ಗ ಅಥವಾ ಜಾತಿ ಹೆಸರಿನಲ್ಲಿ ಒಂದೆಡೆಗೆ ತರುವ ಪ್ರಯತ್ನಗಳನ್ನು ಮಾಡಿರುವ ವಿಚಾರಗಳನ್ನು ಈ ಸಂದರ್ಭದಲ್ಲಿ ಗಮನಿಸಬಹುದು. ಈ ಹಿನ್ನೆಲೆಯಲ್ಲಿ ವಿವಿಧ ಗುಂಪುಗಳಲ್ಲಿರುವ ತಾರತಮ್ಯ ಅಥವಾ ವ್ಯತ್ಯಾಸಗಳನ್ನು ಅರಿತುಕೊಳ್ಳುವುದು ಹೆಚ್ಚು ಸೂಕ್ತವಾಗುತ್ತದೆ. ಒಂದು ಸಬಾಲ್ಟರ್ನ್ ಗುಂಪು ಇನ್ನೊಂದು ಸಬಾಲ್ಟರ್ನ್ ಗುಂಪನ್ನು ಅಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯ ಅಧ್ಯಯನ ಈ ನಿಟ್ಟಿನಲ್ಲಿ ಹೊಸ ಆವಿಷ್ಕಾರವನ್ನು ಹುಟ್ಟುಹಾಕಿದೆ. ಇತ್ತೀಚಿನ ದಿನಗಳಲ್ಲಿ ದಲಿತ ಪುರುಷರು ಮತ್ತು ನಾಯಕರು ದಲಿತ ಮಹಿಳೆಯರನ್ನು ಅಧೀನಗೊಳಿಸುವ ವಿಚಾರಗಳನ್ನು ಪ್ರತಿಭಟಿಸಿ ತಮ್ಮದೇ ವೇದಿಕೆಗಳನ್ನು ರೂಪಿಸಿಕೊಳ್ಳುತ್ತಿರುವ ದಲಿತ ಮಹಿಳೆಯರ ಸಂಘಟನೆಗಳಲ್ಲಿ ಕೆಲವು ಹೊಸ ಪ್ರಶ್ನೆಗಳನ್ನು ನಮ್ಮ ಮುಂದಿಟ್ಟಿವೆ. ಈ ಮೂಲಕ ತಮ್ಮ ಮೇಲಿನ ಶೋಷಣೆಗೆ ಪ್ರತಿಯಾಗಿ ಸ್ವತಂತ್ರವಾಗಿ ರಾಜಕೀಯ ಅಭಿವ್ಯಕ್ತಗಳನ್ನು ವ್ಯಕ್ತಪಡಿಸುವ ಅಂಶಗಳು ಕಾಣುತ್ತವೆ. ದಲಿತ ಮಹಿಳೆಯರು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಗಳಲ್ಲಿ ದಲಿತ ಪುರುಷರ ಪ್ರಾಬಲ್ಯದಿಂದ ಹಿಂದೆ ಸರಿಯಬೇಕಾದ ವಿಚಾರಗಳನ್ನು ವಿಮರ್ಶಿಸಿರುವುದನ್ನು ವಿನಯ್‌ಬಾಲ್ ದಾಖಲಿಸಿದ್ದಾರೆ. ದಲಿತ ಸಾಹಿತ್ಯ ಸಮ್ಮೇಳನಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ದಲಿತ ಮಹಿಳೆಯರಿಗೆ ಉನ್ನತ ಸ್ಥಾನಮಾನ ಸಿಗುವಲ್ಲಿ ದಲಿತ ಪುರುರು ಅಡ್ಡಗಾಲು ಹಾಕುತ್ತಿದ್ದಾರೆಂಬ ಟೀಕೆಗಳೂ ಅಲ್ಲಲ್ಲಿ ಕಂಡುಬರುತ್ತವೆ.

ದಲಿತ ಮಹಿಳೆಯರನ್ನು ಒಂದು ಸಬಾಲ್ಟರ್ನ್ ಗುಂಪೆಂದು ಭಾವಿಸಿದರೂ ಅಲ್ಲಿ ಕೂಡ ಕೆಲವು ಆಭಾಸಗಳನ್ನು ನಾವು ನೋಡಬಹುದು. ಶಿಕ್ಷಣ ಹಾಗೂ ಉದ್ಯೋಗದ ಅವಕಾಶಗಳನ್ನು ಕರ್ನಾಟಕದ ದಲಿತ ಮಹಿಳೆಯರಿಗಿಂತ ಹೆಚ್ಚು ಪ್ರಮಾಣದಲ್ಲಿ ಹಾಗೂ ಪ್ರಭಾವಿಯಾಗಿ ಮಹಾರಾಷ್ಟ್ರದ ಮಹಿಳೆಯರು ಪಡೆಯುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಮಹಾರಾಷ್ಟ್ರದ ಮಹಿಳೆಯು ಬೀಜಿಂಗ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ “ಭಾರತೀಯ ದಲಿತ ಮಹಿಳೆಯನ್ನು” ಪ್ರತಿನಿಧೀಕರಿಸುತ್ತಾಳೆ. ಸಹಜವಾಗಿ ಕರ್ನಾಟಕದ ದಲಿತ ಮಹಿಳೆಯ ಪ್ರಶ್ನೆಗಳು ಅಲ್ಲಿ ಪ್ರಭಾವಿಯಾಗಿರುವುದಿಲ್ಲ ಎಂಬ ವಿಚಾರವನ್ನು ಗೋಪಾಲಗುರು ಅವರು ಇಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ (ಅಕ್ಟೋಬರ್‌, ೧೪, ೧೯೯೫) ಬರೆದ ‘ದಲಿತ್ ವುಮೆನ್’ ಎನ್ನುವ ಲೇಖನದಲ್ಲಿ ವ್ಯಕ್ತಪಡಿಸಿರುವುದು ಗಮನಾರ್ಹವಾಗಿದೆ. ಇನ್ನೊಂದು ಅರ್ಥದಲ್ಲಿ ತನ್ನ ಮುನ್ನಡೆಗೆ ದಲಿತ ಮಹಿಳೆಯು ‘ರಾಜ್ಯದ’ ಸಹಕಾರವನ್ನು ಅಪೇಕ್ಷಿಸಿದರೆ ಅದು ಕೂಡ ವ್ಯರ್ಥವೇ. ದಲಿತ ಮಹಿಳೆಯರ ಈ ಬಗೆಯ ಸಂಕೀರ್ಣ ಪ್ರಶ್ನೆಗಳಿಗೆ ದಲಿತ ಪುರುಷಪ್ರಧಾನ ವ್ಯವಸ್ಥೆಯು ರಾಜ್ಯದ ಜೊತೆಗೆ ಬೆಸೆದುಕೊಂಡಿರುವುದರಿಂದ ಉತ್ತರ ನೀಡಲು ರಾಜ್ಯವ್ಯವಸ್ಥೆ ಕೂಡ ಅಸಮರ್ಥವಾಗಿರುತ್ತದೆ. ಬಿಹಾರದ ಭೋದಗಯಾದಲ್ಲಿ ಸರಕಾರವು ದಲಿತರಿಗೆ ಭೂಹಂಚಿಕೆಯನ್ನು ಮಾಡಬೇಕೆಂದ ಸಂದರ್ಭದಲ್ಲಿ, ದಲಿತ ಮಹಿಳೆಯರು ದಲಿತ ಪುರುಷರ ಬದಲಿಗೆ ತಮ್ಮ ಹೆಸರಿಗೆ ಭೂಮಿಯನ್ನು ಹಂಚಬೇಕೆಂದು ಮಾಡಿದ ಬೇಡಿಕೆಗೆ ಸರಕಾರ ಜಪ್ಪಯ್ಯ ಎನ್ನದಿರುವುದನ್ನು ನಾವು ನೋಡಬಹುದು. ಮಹಾರಾಷ್ಟ್ರದಲ್ಲಿ ದಲಿತ ಮಹಿಳೆ ‘ಬಹುಜನ ಮಹಿಳಾ ಅಗಾದಿಯ’ ನೇತೃತ್ವದಲ್ಲಿ ಉದಾರವಾದವನ್ನು ಪ್ರತಿಭಟಿಸಿದರೆ, ಬೆಂಗಳೂರಿನಲ್ಲಿ ಅವರು ಹಿಂದುತ್ವದ ವಿರುದ್ಧ ಚಳವಳಿಯನ್ನು ಮಾಡಿದ ಘಟನೆಗಳು ಸಿಗುತ್ತವೆ. ದಲಿತ ಮಹಿಳೆ ಎನ್ನುವ ಒಂದು ಐಡೆಂಟಿಟಿಯು ಬಹುಮುಖ್ಯ ಭಿನ್ನತೆಗಳನ್ನು, ವ್ಯತ್ಯಾಸಗಳನ್ನು ಮತ್ತು ತಾರತಮ್ಯಗಳನ್ನು ಅಭಿವ್ಯಕ್ತಗೊಳಿಸಿರುವುದನ್ನು ನಾವಿಲ್ಲಿ ಗಮನಿಸಬಹುದು. ಭಿನ್ನತೆಗಳನ್ನು ಮುಖ್ಯವಾಗಿ ಗಂಡು ಹೆಣ್ಣುಗಳ ನಡುವೆ, ಅಕ್ಷರಸ್ಥ ಅನಕ್ಷರಸ್ಥರ ನಡುವೆ, ಉದ್ಯೋಗಿ ನಿರುದ್ಯೋಗಿಗಳ ನಡುವೆ, ಪ್ರಾಂತೀಯತೆ ಮತ್ತು ಭಾಷಿಕ ವ್ಯತ್ಯಾಸಗಳ ನಡುವೆ ಕಾಣಬಹುದಾಗಿದೆ. ದಲಿತ ಮಹಿಳೆ ಎನ್ನುವ ಕೆಟಗರಿಯು ಬೇರೆ ಬೇರೆ ಸಂದರ್ಭದಲ್ಲಿ ಮತ್ತು ಪ್ರದೇಶಗಳಲ್ಲಿ ಲಿಂಗಸಂಬಂಧಿ ತಾರತಮ್ಯದ ವಿರುದ್ಧ, ಉದಾರವಾದಿ ನಿಲುವಿನ ವಿರುದ್ಧ, ಹಿಂದುತ್ವ ವಿರುದ್ಧ ಧ್ವನಿ ಎತ್ತಿರುವುದು ಇಲ್ಲಿ ವೇದ್ಯವಾಗಿದೆ. ಇಷ್ಟೊಂದು ಬಗೆಯ ಸಂಕೀರ್ಣತೆಗಳನ್ನು ಮತ್ತು ಹೋರಾಟಗಳನ್ನು ‘ದಲಿತರು’ ಎನ್ನುವ ಒಂದು ಕೆಟಗರಿ ಮೂಲಕ ಅಥವಾ ‘ಸಮುದಾಯದ’ ಮೂಲಕ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದಿರುವುದು ಸಬಾಲ್ಟರ್ನ್ ಅಧ್ಯಯನ ಕ್ರಮದ ಮಿತಿಯಾಗಿದೆ. ವ್ಯತ್ಯಾಸಗಳು ಅಥವಾ ತಾರತಮ್ಯಗಳನ್ನು ಕೇವಲ ಸಮಾಜದ ಒಂದು ಸಣ್ಣ ಘಟಕಕ್ಕೆ ಸೀಮಿತಗೊಳಿಸದೆ ಸಮಷ್ಟಿಯಾಗಿ ನೋಡಿದರೆ ಈ ಬಗೆಯ ಮಿತಿಗಳನ್ನು ಮೀರಬಹುದಾಗಿದೆ.

ಇನ್ನೂ ಒಂದು ಹೆಜ್ಜೆಯನ್ನಿಟ್ಟು ಮಾತನಾಡುವುದಾದರೆ ದಲಿತರ ಪ್ರಶ್ನೆಯೊಂದಿಗೆ, ಮಹಿಳಾ ಪ್ರಶ್ನೆಗಳು ಮತ್ತು ನಕ್ಸಲರು ಪ್ರತಿಪಾದಿಸುವ ಬುಡಕಟ್ಟುಗಳ ಪ್ರಶ್ನೆಗಳು ಭಾರತದಲ್ಲಿ ಬಹಳ ಮುಖ್ಯವಾಗಿವೆ. ಈ ಮೂರು ಪ್ರಶ್ನೆಗಳು ಬೇರೆ ಬೇರೆ ಹಂತಗಳಲ್ಲಾಗುತ್ತಿರುವ ಘೋಷಣೆಗಳಿಂದಾಗಿ ಹುಟ್ಟಿಕೊಂಡಂತವು. ಆಶ್ಚರ‍್ಯವೆಂದರೆ, ಈ ಮೂರು ಬಗೆಯ ಭಾರತದ ಪ್ರಧಾನ ಹೋರಾಟಗಳು ಪರಸ್ಪರ ಬಹಳ ಅಸಹನೆಗಳನ್ನಿಟ್ಟುಕೊಂಡಂತಹವು. ಬಹುತೇಕ ನಕ್ಸಲರು “ಉನ್ನತಜಾತಿಗಳಿಗೆ ಸೇರಿರುವ ಕಾರಣಕ್ಕಾಗಿ” ನಕ್ಸಲರಿಗೆ ‘ಜಾತಿ’ ಸಂಬಂಧಿತ ಪ್ರಶ್ನೆಗಳು ಮುಖ್ಯವಾಗಿಲ್ಲ ಎಂದು ದಲಿತರು ಆಪಾದಿಸುತ್ತಾರೆ. ದಲಿತರು ‘ಆತ್ಮಗೌರವಕ್ಕಾಗಿ’ ಮತ್ತು ‘ಅಧಿಕಾರವನ್ನು ಹಿಡಿಯುವುದಕ್ಕಾಗಿ’ ಹೋರಾಟ ಮಾಡುತ್ತಿರುವುದಕ್ಕಾಗಿ ನಕ್ಸಲರು ದಲಿತರ ಹೋರಾಟವು ‘ಬೂರ್ಜ್ವಾ ಹೋರಾಟ’ವಾಗಿದೆ ಎಂದು ಭಾವಿಸಿದ್ದಾರೆ. ‘ಭೂ ಹಂಚಿಕೆಯನ್ನು’ ಮಾಡಬೇಕೆನ್ನುವ ಬೇಡಿಕೆ ಬದಲು ಭಿನ್ನ ಬೇಡಿಕೆಗಳನ್ನು ಮಂಡಿಸುತ್ತಿರುವ ದಲಿತ ಚಳವಳಿ ‘ವರ್ಗಹೋರಾಟವನ್ನು’ ಸೋಲಿಸುತ್ತಿದೆ ಎಂದು ನಕ್ಸಲರು ಟೀಕಿಸಿದ್ದಾರೆ. ಬಹುತೇಕ ಮಹಿಳಾ ಚಳವಳಿಗಳು ಕೆಳವರ್ಗಗಳ ಮಹಿಳೆಯರ ಕಷ್ಟಕಾರ್ಪಣ್ಯಗಳನ್ನು ಗಂಭೀರವಾಗಿ ತೆಗೆದುಕೊಳ್ಳದಿರುವುದರಿಂದಾಗಿ ಇವು ‘ಎಲೈಟ್‌’ ಹಿತಾಸಕ್ತಿಗಳನ್ನು ಪ್ರತಿನಿಧಿಸಿವೆ ಎಂದು ವರ್ಗಾಧಾರಿತ ಚಳವಳಿಗಳು ಆರೋಪಿಸಿವೆ. ಇದಕ್ಕೆ ಪ್ರತಿಯಾಗಿ ಮಹಿಳಾ ಚಳವಳಿಗಾರರು ಭಿನ್ನವಾದ ವಾದವನ್ನು ಮಂಡಿಸಿದ್ದಾರೆ. ದಲಿತರ ಮೇಲಿನ ದೌರ್ಜನ್ಯದ ಸಂದರ್ಭದಲ್ಲಿ ಅಥವಾ ನಕ್ಸಲೈಟರನ್ನು ಬೇಟೆಯಾಡುತ್ತ ಪೊಲೀಸರು ನುಗ್ಗಿದ ಸಂದರ್ಭದಲ್ಲಿ ನೇರವಾದ ದೌರ್ಜನ್ಯಕ್ಕೆ ಮತ್ತು ಅತ್ಯಾಚಾರಕ್ಕೆ ಈಡಾಗುವವರು ಮಹಿಳೆಯರು. ಇಂತಹ ಸಂದರ್ಭದಲ್ಲಿ ಮಹಿಳೆಯರು ಯಾವ ಜಾತಿ, ವರ್ಗ ಮತ್ತು ಧರ್ಮಗಳಿಗೆ ಸೇರಿದವರು ಎನ್ನುವ ಪ್ರಶ್ನೆಯೇ ನುಸುಳುವುದಿಲ್ಲ ಎನ್ನುತ್ತಾರೆ ಮಹಿಳಾ ಚಳವಳಿಗಾರರು. ಈ ಎಲ್ಲ ಸಂದರ್ಭಗಳಲ್ಲಿ ಬಹುತೆಕ ಚಳವಳಿಗಳು ಶೋಷಣೆಯ ವಿರುದ್ಧ ಹೋರಾಟಗಳನ್ನು ಒಂದಾಗಿ ಮಾಡದೆ ಪರಸ್ಪರ ಕಾಲೆಳೆದುಕೊಳ್ಳುತ್ತಿರುವುದನ್ನು ನಾವಿಲ್ಲಿ ಗಮನಿಸಬಹುದು. ಪರಸ್ಪರ ಸ್ನೇಹಕ್ಕಿಂತ ವೈರತ್ವವೇ ಅಥವಾ ದ್ವೇಷ ಸಾಧನೆಯೇ ಇಲ್ಲಿ ಪ್ರಧಾನವಾಗಿರುವುದು. ಈ ಕಾರಣಗಳಿಂದಾಗಿ ಈ ಚಳವಳಿಗಳು ಪರಸ್ಪರ ಮುನ್ನಡೆಗೆ ಅಡ್ಡಗಾಲಾಗಿವೆ (ಜಿ.ವಿಜಯ್, ‘ಡಿಸ್ಕಷನ್: ಮಾಸ್‌ಮೂವ್‌ಮೆಂಟ್ಸ್ ಆಂಡ್ ಮಾರ್ಕ್ಸಿಸ್ಟ್ಸ್ ಮೆಥೆಡ್ಸ್,’ ಇಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ನವೆಂಬರ್, ೪, ೧೯೯೫.)

ಭೂಮಿಯ ಪ್ರಶ್ನೆಯನ್ನು ಮಾತನಾಡುವ ನಕ್ಸಲೈಟ್‌ಗಳಾಗಲಿ, ಲಿಂಗತಾರತಮ್ಯದ ಮಾತನಾಡುವ ಮಹಿಳೆಯರಾಗಲಿ ಅಥವಾ ಜಾತಿತಾರತಮ್ಯದ ಬಗ್ಗೆ ಮಾತನಾಡುವ ದಲಿತರಾಗಲಿ ಒಂದಲ್ಲ ಒಂದು ರೀತಿಯಲ್ಲಿ ಶೋಷಣೆಗೆ ಒಳಗಾದವರೇ. ಪರಸ್ಪರ ಸಹಕಾರದಿಂದ ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಸಾಧ್ಯತೆಗಳು ಜಾಸ್ತಿಯಾಗಿವೆ. ಏಕೆಂದರೆ ಈ ಮೂರು ಬಗೆಯ ಹೋರಾಟಗಳಿಗೆ ಇರುವ ಇತಿಹಾಸ ಮತ್ತು ಚೌಕಟ್ಟು ಭಾರತದ ಮಟ್ಟಿಗೆ ಒಂದೇ ಆಗಿವೆ. ಹಾಗಾಗಿ “ವ್ಯತ್ಯಾಸಗಳು” “ಭಿನ್ನತೆಗಳಿಗಿಂತ” ಹೆಚ್ಚು ತಮ್ಮ ಉದ್ದೇಶಗಳನ್ನು ಈಡೇರಿಸಲು ಇವು ಪೂರಕವಾಗಿಯೇ ಹೋರಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಭಿನ್ನತೆ ಮತ್ತು ವ್ಯತ್ಯಾಸಗಳ ಅಧ್ಯಯನಕ್ಕಿಂತ ಹೆಚ್ಚಾಗಿ ಈಗ ಅಗತ್ಯವಾಗಿರುವುದು ಸದೃಢವಾದ ನಿರಂತರತೆ (ಪೊಟೆನ್ಷಿಯಲ್ ಟ್ರಾನ್ಸ್‌ಫಾರ್ಮರ್). ಹೀಗಾಗಿ ಸಬಾಲ್ಟರ್ನ್ ಅಧ್ಯಯನ ಕ್ರಮವು ಪ್ರತಿಪಾದಿಸುವ ವ್ಯತ್ಯಾಸಗಳ ಭಿನ್ನತೆಗಳ ಚರಿತ್ರೆ ಒಂದು ಮಿತಿಯಾಗಿ ಉಳಿಯುತ್ತದೆ.

೪. ಸಬಾಲ್ಟರ್ನ್ ಅಧ್ಯಯನ ಕ್ರಮವು ಆರಂಭದಲ್ಲಿ ಎತ್ತಿದ್ದ ಪ್ರಶ್ನೆಗಳು ಸಮರ್ಥನೀಯವೇ ಆಗಿತ್ತು. ಜನರ ಹೋರಾಟಗಳು ದಮನಿಸಲ್ಪಟ್ಟ ವಿವರಗಳ ಬಗ್ಗೆ ಅದರ ಒಲವಿತ್ತು. ದಮನಕ್ಕೊಳಗಾದವರ ಬಗ್ಗೆ ಅದಕ್ಕೆ ಸಹಾನುಭೂತಿಯಿತ್ತು. ಆದರೆ, ಈ ದಿನಗಳಲ್ಲಿ ದಮನಿತರ “ಭಿನ್ನಭಿನ್ನ’ ವ್ಯತ್ಯಾಸಗಳುಳ್ಳ ಕೂಗನ್ನು ದಾಖಲು ಮಾಡಿಕೊಳ್ಳುವ ಭರದಲ್ಲಿ ಸಬಾಲ್ಟರ್ನ್ ಅಧ್ಯಯನ ಕ್ರಮಕ್ಕೆ ದಮನಿತರು ಎದುರು ನೋಡುತ್ತಿರುವ ಒಳ್ಳೆಯ ಭವಿಷ್ಯಕ್ಕೆ ಯಾವುದೇ ಬಗೆಯಲ್ಲಿ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಬಡವರು ಭಿನ್ನವಾಗಿಯೇ ಇರುವುದು (ಅಥವಾ ದೇಸಿ ಸಂಸ್ಕೃತಿ) ಸಹಜವಾಗಿದೆ. ಆ ಕಾರಣಕ್ಕಾಗಿಯೇ ಆ ಬಗೆಯ ಭಿನ್ನತೆಯನ್ನು ಉಳಿಸಿಕೊಂಡು, ಅದರ ಬಗ್ಗೆ ಹೆಮ್ಮೆಪಟ್ಟುಕೊಂಡು ಮತ್ತು ಆ ಸಂಭ್ರಮವನ್ನು ಆಚರಿಸಿಕೊಂಡು ಹಾಗೆಯೇ ಇರುವುದು ಸಹಜವೆಂದು ಈ ಅಧ್ಯಯನ ಕ್ರಮವು ಭಾವಿಸಿರುವುದು ಮತ್ತು ಇದರ ಬದಲಾವಣೆಗೆ ಯಾವುದೇ ಚರ್ಚೆಗಳಿಲ್ಲದಿರುವುದು ಸಬಾಲ್ಟರ್ನ್ ಅಧ್ಯಯನ ಕ್ರಮದ ಆಶಯಕ್ಕೆ ಭಂಗ ಬಂದಿದೆ. ಇದು ಈ ಅಧ್ಯಯನ ಕ್ರಮದ ಒಂದು ಮಿತಿ ಕೂಡ ಹೌದು.

೫. ದುಡಿಯುವ ಜನತೆಯ ಹೋರಾಟವನ್ನು ಸಬಾಲ್ಟರ್ನ್ ಅಧ್ಯಯನಕಾರರು ‘ಪ್ರತಿಭಟನೆ’ ಎಂದು ನಕಾರಾತ್ಮಕವಾಗಿ ನೋಡುವ ಬದಲು “ಹೀರೋಯಿಕ್” ಎಂದು ನೋಡುವುದು ಸೂಕ್ತ ಎಂದು ವಿನಯ್ ಬಾಲ್ ಸಲಹೆ ಮಾಡಿರುವುದನ್ನು ಗಮನಿಸಬಹುದು. ಎಲೈಟ್‌ಗಳದ್ದಾದರೆ ಅದು ಹೀರೋಯಿಕ್, ಸಬಾಲ್ಟರ್ನ್ ಗಳದ್ದಾದರೆ ಅದು ‘ರೆಸಿಸ್ಟೆನ್ಸ್’ (ಪ್ರತಿಭಟನೆ) ಎಂದು ಹೋರಾಟದ ಉತ್ಸಾಹಕ್ಕೆ ತಣ್ಣೀರೇಕೆ ಎರಚಬೇಕೆಂದು ಅವರು ಪ್ರಶ್ನಿಸಿದ್ದಾರೆ. ಉಪವಾಸ ಮತ್ತು ದಿನನಿತ್ಯದ ಬದುಕನ್ನು ದಾಟಲು ಪ್ರಯತ್ನ ಪಡುತ್ತಿರುವ ದುಡಿಯುವ ವರ್ಗದ ಜನರ ಜೀವನವನ್ನು ‘ಸಹಜ’ ಎಂಬಂತೆ ಅಥವಾ ಒಪ್ಪಿಕೊಂಡ ಸಹಜತೆ ಎಂದು ಬಿಂಬಿಸುವುದು ಅಥವಾ ಅದರಿಂದ ಹೊರಕ್ಕೆ ಬರಲು ತಾಕಲಾಟ ಪಡುತ್ತಿರುವುದನ್ನು ‘ಪ್ರತಿಭಟನೆ’ ಎಂದು ಬಿಂಬಿಸುವುದು ಆಭಾಸಕರವಾಗಿದೆ. ಆ ಹೆಜ್ಜೆಗಳು ‘ಹೀರೋಯಿಕ್’ ಆಗಿರುವುದು ಎಂದು ವಿನಯ್ ಬಾಲ್‌ವಾದಿಸಿದ್ದಾರೆ. ಸಬಾಲ್ಟರ್ನ್ ಅಧ್ಯಯನಕಾರರು ಬಂಡವಾಳಶಾಹಿ ವ್ಯವಸ್ಥೆಯ ಚೌಕಟ್ಟಿನಲ್ಲಿ ವಸಾಹತು ವಾದವು ಸೃಷ್ಟಿಸಿರುವ ವ್ಯಾಕುಲತೆಗಳನ್ನು ಅರಿಯುವಲ್ಲಿ ಉತ್ಸಾಹ ತೋರಿರುವುದು ಕಂಡುಬರುತ್ತದೆ. ವಸಾಹತುಶಾಹಿಯ ಸ್ವರೂಪ ಮತ್ತು ಪರಿಣಾಮಗಳನ್ನು ಅವರು ನಿರ್ಲಕ್ಷಿಸಿರುವುದನ್ನು ಈ ಸಂದರ್ಭದಲ್ಲಿ ನಾವು ಗಮನಿಸಬಹುದು. ಬಂಡವಾಳಶಾಹಿ ವ್ಯವಸ್ಥೆಯ ಚೌಕಟ್ಟಿನಲ್ಲಿ ವರ್ಗದ ಪಾತ್ರವನ್ನು ಅವರು ನಿರಾಕರಿಸಿರುವುದರಿಂದ ವಸಾಹತುಕಾಲದ ಬಂಡವಾಳಗಾರರು ‘ವರ್ಗ’ದ (ಬಂಡವಾಳಶಾಹಿ) ಚೌಕಟ್ಟಿನಲ್ಲಿ ಬರುವುದಿಲ್ಲ. ಹೀಗಾಗಿ ಜನಸಾಮಾನ್ಯರ ವರ್ಗದ ಪ್ರತಿಭಟನೆಗಳು ಬಂಡವಾಳಶಾಹಿ ವರ್ಗದ ಅಥವಾ ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ನಡೆದಿಲ್ಲ ಎಂಬ ನಿರ್ಣಯಕ್ಕೆ ಬರಬೇಕಾಗುತ್ತದೆ. ಈ ರೀತಿಯಲ್ಲಿ ಸಬಾಲ್ಟರ್ನ್ ಅಧ್ಯಯನಕಾರರು “ಬಂಡವಾಳಶಾಹಿ/ವಸಾಹತುಶಾಹಿ” ಮತ್ತು “ಪ್ರತಿಭಟನೆ” ಎನ್ನುವ ಎರಡು ಲೋಕಗಳನ್ನು ಅದರಷ್ಟಕ್ಕೆ ಬಿಟ್ಟುಬಿಡುತ್ತಾರೆ. ಆದರೂ, ಅವರು “ಜನರ ಚರಿತ್ರೆ” ಬರೆಯುತ್ತೇವೆ ಎನ್ನುವುದು ಆಭಾಸವಾಗಿದೆ ಎನ್ನುತ್ತಾರೆ ಟೀಕಾಕಾರರು. ‘ವರ್ಗ’ ಎನ್ನುವುದರ ಬದಲಿಗೆ ‘ಸಬಾಲ್ಟರ್ನ್ ‘ ಅಥವಾ ‘ಸಮುದಾಯ’ ಎಂಬ ಪರಿಭಾಷೆಯನ್ನು ಉಪಯೋಗಿಸಿದ ಮಾತ್ರಕ್ಕೆ ಇತಿಹಾಸದ ಸಂಕೀರ್ಣತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಸುಮಿತ್ ಸರ್ಕಾರ್.

೫. ಉಪಸಂಹಾರ

ಸಬಾಲ್ಟರ್ನ್ ಅಧ್ಯಯನವು ಸಮಾಜದ ಕೆಳಸ್ತರವನ್ನು ಪರಿಗಣನೆಗೆ ತೆಗೆದು ಕೊಂಡಿದೆಯಾದರೂ ಬಂಡವಾಳದ ಲಜಿಕ್ಕನ್ನೇ ಸಂಪೂರ್ಣವಾಗಿ ನೆಚ್ಚಿಕೊಂಡಿಲ್ಲ. ಬಂಧಿಯಾಗಿದ್ದ ಗ್ರಾಂಸಿಯು ಜೈಲಿನ ಸೆನ್ಸಾರ್‌ನಿಂದ ತಪ್ಪಿಸಿಕೊಳ್ಳಲು ಮಾರ್ಕ್ಸಿಸ್ಟ್‌ಪರಿಭಾಷೆಯಾದ ‘ಸಬಾಲ್ಟರ್ನ್’ ಎನ್ನುವ ಪದವನ್ನು ‘ಪ್ರೊಲಟರಿಯೇಟ್’ ಎನ್ನುವ ಪದಕ್ಕೆ ಸಂವಾದಿಯಾಗಿ ಹೊರತಂದಿದ್ದು ಸರಿಯಷ್ಟೆ. ಫಾಸಿಸ್ಟ್ ಇಟಲಿ ಸರಕಾರ ರೂಪಿಸಿದ ವ್ಯವಸ್ಥೆಯನ್ನು ವಿರೋಧಿಸಿದ ಗ್ರಾಂಸಿಯು ಸಬಾಲ್ಟರ್ನ್ ಎನ್ನುವ ಪದವನ್ನು ವ್ಯಾಖ್ಯಾನಿಸಿರಲಿಲ್ಲ.

ಯಾವ ವ್ಯಕ್ತಿ ಅಥವಾ ಸಮುದಾಯವು ಚಲನಶೀಲತೆಯಿಂದ ಬೇರ್ಪಡೆಗೊಂಡರೋ ಅಥವಾ ಸಾಮಾಜಿಕವಾಗಿ ‘ಹೊರಗುಳಿದರೊ’ ಅಥವಾ ವಸಾಹತುಶಾಹಿಗಳ ಸಹಭಾಗಿಗಳು ಉತ್ಪಾದಿಸಿದ ಸಾಂಸ್ಕೃತಿಕ ಲೋಕದಿಂದ ಹೊರಗುಳಿದರೋ ಅವರು ಸಬಾಲ್ಟರ್ನ್ ಗಳಾಗುತ್ತಾ ರೆನ್ನುವ ಪಾರ್ಥ ಚಟರ್ಜಿ ಅವರ ನಿಲುವನ್ನು ಗಾಯಿತ್ರಿ ಸ್ಪಿವಾಕ್‌ ಅವರು ಸಮರ್ಥಿಸಿದ್ದಾರೆ. ದಕ್ಷಿಣ ಏಷ್ಯಾದ ಸಂದರ್ಭದಲ್ಲಿ ಇದೊಂದು ಸೂಕ್ತ ವಿವರಣೆಯಾಗಿದೆ. ಗ್ರಾಂಸಿಯ ದಾರಿಯಲ್ಲಿ ಯೋಚಿಸುವುದಾದರೆ ಈ ಬಗೆಯ ವ್ಯಾಖ್ಯಾನವು ಸಬಾಲ್ಟರ್ನ್ ಅಧ್ಯಯನವು ವಸಾಹತು ಕಾಲದ ಸಂದರ್ಭದಲ್ಲಿ ಮಾರ್ಕ್ಸಿಸ್ಟ್‌ಸಿದ್ಧಾಂತವನ್ನು ಹೆಚ್ಚು ಡೈನಮಿಕ್ ಆಗಿ ನೋಡಲು ಪ್ರಯತ್ನಿಸಿದೆ ಎನ್ನಬಹುದು. ಹಾಗೆ ನೋಡಿದರೆ ಸಾಂಸ್ಕೃತಿಕ ಸಮಸ್ಯಾತ್ಮಕಗಳನ್ನು (ಪ್ರಾಬ್ಲೆಮೆಟಿಕ್ಸ್) ಸಬಾಲ್ಟರ್ನ್ ಅಧ್ಯಯನಗಳು ಪರಿಗಣಿಸಿದ್ದನ್ನು ನೋಡಿದರೆ ಸಬಾಲ್ಟರ್ನ್ ಅಧ್ಯಯನಗಳು ಮಾರ್ಕ್ಸಿಸ್ಟ್‌ಸಿದ್ಧಾಂತಕ್ಕೆ ಪೂರಕವಾಗಿದೆ ವಿನಾ ಸಪ್ಲಿಮೆಂಟ್ ಆಗಿಲ್ಲ ಎನ್ನುತ್ತಾರೆ ಗಾಯಿತ್ರಿ ಸ್ಪಿವಾಕ್.

ವಸಾಹತೋತ್ತರ ಭಾರತದ ಶೈಕ್ಷಣಿಕ ವ್ಯವಸ್ಥೆಯು ಅಪ್ರಜಾಪ್ರಭುತ್ವೀಯ ಬುನಾದಿಯಿಂದ ಕೂಡಿದ್ದರಿಂದಾಗಿ ನಗರ ಮತ್ತು ಹಳ್ಳಿಗಳ ನಡುವಿನ ವರ್ಗ ವ್ಯತ್ಯಾಸಗಳು ಕಣ್ಣಿಗೆ ರಾಚುಂತಿವೆ. ಈ ಸಂದರ್ಭವನ್ನು ಸಬಾಲ್ಟರ್ನ್ ಸಿದ್ಧಾಂತದ ಮೂಲಕ ವಿವರಿಸುವುದು ಕಷ್ಟ. ಇಂದಿನ ಸಂದರ್ಭದಲ್ಲಿ ‘ಸಬಾಲ್ಟರ್ನ್’ ಎನ್ನುವ ಸಿದ್ಧಾಂತವನ್ನು ಮರುಪರಿಶೀಲಿಸಬೇಕಾದ ಅಗತ್ಯವಿದೆ. ಕೇಂದ್ರ ವ್ಯವಸ್ಥೆಯಿಂದ ಕಡಿತಗೊಂಡ, ಮೂಲೆಗೊತ್ತಲ್ಪಟ್ಟ ಸಮುದಾಯಗಳ ಬಗ್ಗೆ ಮಾತಾಡುವ ಸಂದರ್ಭದಲ್ಲಿ ‘ಕೇಂದ್ರ’ ಎನ್ನುವುದು ಇತಿಹಾಸದ ಈ ಸಂದರ್ಭದಲ್ಲಿ ಯಾವುದೆಂಬುದು ಮುಖ್ಯವಾಗುತ್ತದೆ.

ಈ ಲೇಖನದ ವಿಮರ್ಶೆಯ ಭಾಗದಲ್ಲಿ ವಿವರಿಸಿದಂತೆ ರಣಜಿತ್ ಗುಹಾ ಅವರು ‘ಎಲೈಟ್’ ಚರಿತ್ರೆ ಬರವಣಿಗೆ ಎಂದು ಅರ್ಥೈಸಿದ ಸಂದರ್ಭದಲ್ಲಿ ಆ ಎಲೈಟ್‌ಗಳಲ್ಲಿ ಮಾರ್ಕ್ಸಿಸ್ಟರಿದ್ದಾರೆಯೇ ಎನ್ನುವ ವಿಚಾರವನ್ನು ಸ್ಪಷ್ಟಪಡಿಸಲಿಲ್ಲ. ವಿಮರ್ಶೆಯ ಸಂದರ್ಭದಲ್ಲಿ ಕೆಳಸ್ತರದ ಚರಿತ್ರೆಯನ್ನು ಸ್ವಾತಂತ್ರ‍್ಯೋತ್ತರ ಭಾರತದಲ್ಲಿ ವಿಶ್ಲೇಷಿಸಿದವರಲ್ಲಿ ಬಹುತೇಕರು ಮಾರ್ಕ್ಸಿಸ್ಟರು ಎಂಬುದನ್ನು ಗಮನಿಸಬಹುದು. ಕೆಳಸ್ತರದ ಚರಿತ್ರೆ ಬರವಣಿಗೆ ಕ್ರಮವನ್ನು ಅಸಂಪ್ರದಾಯವಾದಿ ಇಂಗ್ಲಿಶ್ ಮತ್ತು ಭಾರತೀಯ ಮಾರ್ಕ್ಸಿಸ್ಟರು ತಮ್ಮ ಬರವಣಿಗೆಯಲ್ಲಿ ರೂಢಿಸಿಕೊಂಡಿದ್ದರು. ಹಾಗೆ ನೋಡಿದರೆ ಸುಮಿತ್ ಸರ್ಕಾರ್ ಅವರಂಥ ಈ ಮಾದರಿಯ ಮಾರ್ಕ್ಸಿಸ್ಟ್ ಚರಿತ್ರೆಕಾರರು ರಣಜಿತ್ ಗುಹಾ ಅವರ ಜೊತೆಗೂಡಿ ಆರಂಭಿಕ ಸಬಾಲ್ಟರ್ನ್ ಸಂಪುಟಗಳು ಬರಲು ಕಾರಣರಾದರು. ಸರ್ಕಾರ್ ಅವರೇ ಹೇಳಿದಂತೆ ಸಬಾಲ್ಟರ್ನ್ ಅಥವಾ ತಳದಲ್ಲಿರುವವರ ಚರಿತ್ರೆ ಆರಂಭದ ಸಂಪುಟಗಳಲ್ಲಿ ಬಂದ ಹಾಗೆ ನಂತರದ ಸಂಪುಟಗಳಲ್ಲಿ ಬರಲಿಲ್ಲ. ಆದ್ದರಿಂದ ಅವರು ನಂತರದ ಸಬಾಲ್ಟರ್ನ್ ಸಂಪುಟಗಳನ್ನು ಉಗ್ರವಾಗಿ ಟೀಕಿಸಿದರು. ನಂತರದ ಸಂಪುಟಗಳಲ್ಲಿ “ಯುರೋಪ್‌ಕೇಂದ್ರಿತ” ಮತ್ತು “ಆರ್ಥಿಕ ನಿರ್ಧಾರಕತೆ” (ಇಕಾನಾಮಿಕ್ ಡಿಟರ್‌ಮಿನಿಸಂ) ಮತ್ತು “ಸಾರ್ವತ್ರೀಕರಣ”ದ ಹಿನ್ನೆಲೆಯಲ್ಲಿ ಮತ್ತು ಪುನರುತ್ಥಾನ ಕಾಲದ ರ‍್ಯಾಶನಲಿಸಂನ ಉತ್ಪತ್ತಿಯಾದ ಮಾರ್ಕ್ಸ್‌ವಾದವನ್ನು ಸಬಾಲ್ಟರ್ನ್ ಅಧ್ಯಯನ ಕ್ರಮವು ಟೀಕಿಸಿದ್ದನ್ನು ನಾವು ಕಾಣಬಹುದಾಗಿದೆ. ಆದರೂ ಸಬಾಲ್ಟರ್ನ್ ಚರಿತ್ರೆ ಮೂಲೋದ್ದೇಶಗಳನ್ನು ಮರೆಯದೆ “ಜ್ಞಾನಕೇಂದ್ರಿತ” ಜಿಜ್ಞಾಸೆಗಳನ್ನು ಗಮನಿಸಿಕೊಂಡು ಮತ್ತು ಅಂತಹ ಜಿಜ್ಞಾಸೆಗಳು ಎತ್ತಿರುವ ವಿಮರ್ಶೆಗಳನ್ನು ಮನನ ಮಾಡಿಕೊಂಡು ಜ್ಞಾನ ಪರಂಪರೆಯ ಪ್ರಕ್ರಿಯೆ ಮುಂದುವರಿಯುವುದು ಭಾರತೀಯ ಚರಿತ್ರೆ ಬರವಣಿಗೆ ಕ್ರಮಕ್ಕೆ ಇನ್ನೊಂದು ವಿನ್ಯಾಸ ನೀಡಿದಂತೆ ಎಂದು ಅಭಿಪ್ರಾಯಪಡಬಹುದು. ಸಬಾಲ್ಟರ್ನ್ ಯೋಜನೆ ವಸಾಹತುಕಾಲದ ಜಿಜ್ಞಾಸೆಗಳಿಗೆ ಮತ್ತು ವಾಙ್ಮಯಗಳಿಗೆ ಸಂಬಂಧಿಸಿದ್ದಾದರೂ ರೇಮಂಡ್ ವಿಲಿಯಮ್ಸ್‌ಅವರಂಥ ವಿದ್ವಾಂಸರು ವರ್ತಮಾನಕಾಲದ ಆಶಯಗಳಾಗಿ ಹೆಜಿಮನಿಯನ್ನು ಅರ್ಥೈಸಿದ್ದಾರೆ.[1]

* * *

ಸಬಾಲ್ಟರ್ನ್ ಅಧ್ಯಯನ ಕ್ರಮಕ್ಕೆ ಇದೊಂದು ಹೊಸ ಆಯಾಮ ಎಂದರೆ ಉತ್ಪ್ರೇಕ್ಷೆಯಾಗಲಾರದು. ಸಬಾಲ್ಟರ್ನ್ ವಿದ್ವಾಂಸರು ಬಹುತೇಕ ಕಡೆ ವಸಾಹತುಕಾಲವನ್ನು ಸಮಸ್ಯೀಕರಿಸುತ್ತಿದ್ದಾರೆಂದು ಮೇಲ್ನೋಟಕ್ಕೆ ಅನ್ನಿಸಿದರೂ ಅವರ ಸಮಸ್ಯೀಕರಣ ವರ್ತಮಾನ ಕಾಲದ ರಾಜಕೀಯ ಮತ್ತು ಸಾಂಸ್ಕೃತಿಕ ಜಿಜ್ಞಾಸೆಗಳಿಗೆ ಸಂಬಂಧಪಟ್ಟವುಗಳಾಗಿವೆ ಎಂಬುದು ವೇದ್ಯವಾಗುತ್ತದೆ. ಭೂತ ಮತ್ತು ವರ್ತಮಾನ ಕಾಳದ ಶೋಷಣಾ ಕ್ರಮದಲ್ಲಿ ವ್ಯತ್ಯಾಸಗಳಿದ್ದರೂ ಆಶಯಗಳು ಒಂದೇ ರೀತಿ ಇರುವುದನ್ನು ನಾವು ಗಮನಿಸಬಹುದು. ವ್ಯವಸ್ಥೆಯ ಸಂಘಟಿತ ಶೋಷಣೆಗೆ ಅಸಾಂಪ್ರದಾಯಿಕವಾಗಿ ತಮ್ಮ ಅಸಹನೆ ತೋರಿಸಿದ, ಶೋಷಣೆಯ ಪರಾಕಾಷ್ಠೆಯ ಸಂದರ್ಭದಲ್ಲಿ ಕೆಳಸ್ತರದವರು ಬಂಡೆದ್ದ, ಬಂಡೆದ್ದರೂ ಎಲೈಟ್ ರಾಜಕಾರಣದಿಂದಾಗಿ ಬಹುತೇಕವಾಗಿ ಈ ಬಂಡಾಯಗಳ ವಿಫಲತೆಯ ಹಾದಿಯನ್ನು ತುಳಿದಿದ್ದ ಅಂಶಗಳು ಗತ ಹಾಗೂ ವರ್ತಮಾನಕಾಲದ ತಾರ್ಕಿಕ ಹಾಗೂ ತಾತ್ವಿಕ ಸಂಬಂಧಗಳನ್ನು ಸೂಚಿಸುತ್ತದೆ. ವಿಫಲತೆಗೆ ಸಂಬಂಧಿಸಿದಂತೆ ಗ್ರಾಂಸಿಯ ಜೊತೆಗೆ ಹಾಬ್ಸ್ ಬಾಮ್, ರೇಮಂಡ್ ವಿಲಿಯಮ್ಸ್, ರಣಜಿತ್ ಗುಹಾ ಮುಂತಾದ ವಿದ್ವಾಂಸರು ಭಿನ್ನಮತವನ್ನು ಹೊಂದಿದ್ದ ವಿಚಾರವನ್ನು ಈಗಾಗಲೇ ಚರ್ಚಿಸಿರುವುದು ಸರಿಯಷ್ಟೆ. ಈ ವಿದ್ವಾಂಸರ ಪ್ರಕಾರ ಹೋರಾಟದ ಪ್ರಕ್ರಿಕೆಯಗಳು ಗ್ರಾಂಸಿಯು ತನ್ನ ಜೀವಿತಾವಧಿಯ ಅಂತಿಮ ಘಟ್ಟದಲ್ಲಿ ಅರ್ಥೈಸಿದಂತೆ ಪ್ರತಿಭಟನೆಗಳು ಮತ್ತು ಪ್ರತಿರೋಧಗಳು ವಿಫಲತೆಯ ಹಾದಿಯನ್ನು ಹಿಡಿಯಲೇಬೇಕಾಗಿಲ್ಲ. ಅವುಗಳಿಗೆ ಧನಾತ್ಮಕ ವಿನ್ಯಾಸವೂ ಇವೆ ಎಂದು ಅಭಿಪ್ರಾಯಪಟ್ಟಿರುವುದನ್ನು ನಾವು ಗಮನಿಸಬಹುದಾಗಿದೆ.

ಸಬಾಲ್ಟರ್ನ್ ವಿದ್ವಾಂಸರು ತಳದಿಂದ ಇತಿಹಾಸ ನೋಡುವ ಬಗ್ಗೆ ಅಥವಾ ರೈತರ/ ಕೆಳವರ್ಗದ ಹೋರಾಟಗಳನ್ನು ಕೇಂದ್ರವಾಗಿಟ್ಟುಕೊಂಡು ಚರಿತ್ರೆ ಬರೆದ ಬಗ್ಗೆ ಇತಿಹಾಸ ಬರವಣಿಗೆಯಲ್ಲಿ ಹೊಸ ಪುಟಗಳನ್ನು ಬರೆದವರು ಎನ್ನುವ ರೀತಿ ಠೇಂಕಾರವನ್ನು ಟೀಕಾಕಾರರು ಅದರಲ್ಲೂ ಮಾರ್ಕ್ಸಿಸ್ಟ್ ವಿದ್ವಾಂಸರು ಟೀಕಿಸಿದ್ದು ಸರಿಯಷ್ಟೆ. ಎ.ಆರ್. ದೇಸಾಯಿ, ರವೀಂದರ್‌ಕುಮಾರ್, ಮಾಜಿದ್ ಸಿದ್ಧಿಕ್, ಸುಮಿತ್ ಸರ್ಕಾರ್ ಮುಂತಾದ ಭಾರತೀಯ ವಿದ್ವಾಂಸರು ಅಥವಾ ಇ.ಪಿ. ಥಾಮ್ಸ್‌ನ್ ಮತ್ತು ಎರಿಕ್ ಹಾಬ್ಸ್‌ವಾಮ್ ಅವರಂತಹ ಇಂಗ್ಲಿಶ್ ವಿದ್ವಾಂಸರು ಯಾವುದನ್ನು ಸಬಾಲ್ಟರ್ನ್ ಸಂಪುಟಗಳನ್ನು ಹೊರತರುವ ಮೊದಲೇ ಬರೆಯಲು ಶ್ರಮಿಸಿದ್ದು ಸುಳ್ಳಲ್ಲ. ಅವುಗಳಲ್ಲಿ ಕೆಲವು ಸಬಾಲ್ಟರ‍್ನ ಚರಿತ್ರೆ ಬರವಣಿಗೆಗೆ ಸ್ಫೂರ್ತಿಯಾದುದ್ದನ್ನು ನಾವಿಲ್ಲಿ ಗಮನಿಸಬಹುದಾಗಿದೆ. ಯಾರು ಕೆಳವರ್ಗಗಳ ಚರಿತ್ರೆಯನ್ನು ಬರೆಯುವ ಪ್ರಕ್ರಿಯೆಯನ್ನು ಆರಂಭಿಸಿದ್ದರು ಎನ್ನುವ ಜಿಜ್ಞಾಸೆಗಳಿಗಿಂತ ಕೆಳವರ್ಗಗಳ ಚರಿತ್ರೆ ಬರವಣಿಗೆಯ ಆಸಯಗಳು ಇಂದಿನ ಅವಶ್ಯಕತೆಯಾಗಿದೆ. ಮೂಲೆಗೊತ್ತಲ್ಪಟ್ಟ ಸಮುದಾಯಗಳ/ವರ್ಗಗಳ ಚರಿತ್ರೆ ಮತ್ತು ಸಂಸ್ಕೃತಿಯ ಅಧ್ಯಯನಗಳಿಂದಾಗಿ ಇತಿಹಾಸದ ಇನ್ನೊಂದು ಮಗ್ಗುಲನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಈ ಮೂಲಕ ಭಾರತದ ಜನಸಂಖ್ಯೆಯ ಬಹುಸಂಖ್ಯಾತರ ಅಂದರೆ ಕೆಲಸಮುದಾಯದ/ವರ್ಗಗಳ ಜನರು ಬೆರಳೆಣಿಕೆ ಸಂಖ್ಯೆಯಲ್ಲಿರುವ ಬಲಾಢ್ಯರು ರೂಪಿಸಿದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗೆ ಚಾರಿತ್ರಿಕವಾಗಿ ನಲುಗಿ ಹೋಗಿರುವ ಪ್ರಕ್ರಿಯೆಯನ್ನು ಅರಿಯಬೇಕಾಗಿದೆ ಮತ್ತು ಅಭ್ಯಸಿಸಬೇಕಾಗಿದೆ. ಇದು ನಾಗರಿಕ ಸಮಾಜದ ಇಂದಿನ ಅವಶ್ಯಕತೆಯಾಗಿದೆ.

ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಲವಾರು ಸಾಮ್ಯತೆಗಳನ್ನು ಹೊಂದಿದ ಭಾರತ ಉಪಖಂಡ, ಲ್ಯಾಟಿನ್ ಅಮೆರಿಕಾ ಮತ್ತು ಆಫ್ರಿಕಾದಲ್ಲಿನ ಸಮುದಾಯ ಪ್ರಜ್ಞೆಗಳ ಪ್ರಭಾವದ ಬಗ್ಗೆ ವಿಮರ್ಶೆಗಳೇನೇ ಇದ್ದರೂ, ಈ ಪ್ರದೇಶಗಳ ಸಬಾಲ್ಟರ್ನ್ ಆಶಯಗಳು ಮತ್ತು ಸೈದ್ಧಾಂತಿಕತೆಗಳು ಅನೇಕ ಸಂದರ್ಭಗಳಲ್ಲಿ ಮುಖ್ಯವಾಗಿ ಜಾತ/ಸಮುದಾಯ/ಧರ್ಮಗಳ ಅಧ್ಯಯನ/ರಾಜಕಾರಣದ ಸಂದಭ್ದಲ್ಲಿ ಬುಡಕಟ್ಟು/ಮಾವೋಯಿಸ್ಟ್ ಹೋರಾಟಗಳ ಸಂದರ್ಭದಲ್ಲಿ, ರೈತ/ಮಹಿಳೆ/ದಲಿತ ಕಾರ್ಮಿಕ ಇತ್ಯಾದಿ ಪ್ರತಿಭಟನೆಗಳ ಸಂದರ್ಭದಲ್ಲಿ, ಪ್ರತ್ಯೇಕ ರಾಜ್ಯ/ರಾಷ್ಟ್ರ ಮುಂತಾದ ಹೋರಾಟದ ಸಂದರ್ಭಗಳಲ್ಲಿ, ಸೆಕ್ಟೇರಿಯನ್ ಹೋರಾಟಗಳಲ್ಲಿ ಕುಬ್ಜಗೊಂಡಿದ್ದನ್ನು ಕಾಣಬಹುದಾಗಿದೆ. ಕರ್ನಾಟಕದ ಸಂದರ್ಭಕ್ಕೂ ಇದೇ ವಿಚಾರಗಳು ಅನ್ವಯವಾಗುತ್ತದೆ. ಬಹುಸಂಸ್ಕೃತಿ, ಉಪಸಂಸ್ಕೃತಿ, ಅಧೀನ ಸಂಸ್ಕೃತಿ, ಪ್ರತಿಸಂಸ್ಕೃತಿಕ, ದೌರ್ಜನ್ಯ/ಯಜಮಾನಿಕ ಇತ್ಯಾದಿ ಸಬಾಲ್ಟರ್ನ್ ಪರೀಕ್ಷೆಗಳ ಮೂಲಕ ಸಂಶೋಧನೆ/ಬರಹ ಮಾಡಿದ ಬಹುತೇಕ ಸಂದರ್ಭಗಳಲ್ಲಿ ಸಬಾಲ್ಟರ್ನ್ ರಾಜಕಾರಣದ ತಾತ್ವಿಕತೆಯು ಸೈದ್ಧಾಂತಿಕವಾಗಿ ಅಭಿವ್ಯಕ್ತಗೊಳ್ಳುವಲ್ಲಿ ಅಲ್ಲಲ್ಲಿ ಅಷ್ಟು ಸಫಲತೆ ಕಂಡುಬರದಿದ್ದರೂ ಆ ಬಗೆಯ ಆಶಯಗಳನ್ನು ಬೌದ್ಧಿಕ ಲೋಕದಲ್ಲಿ ಹರಿಯಬಿಟ್ಟಿರುವುದು ಶ್ಲಾಘನೀಯ. ಒಪ್ಪಿತವಾದ ಚರಿತ್ರೆಗೆ ಸವಾಲಾಗಿ ಇಂದಿನ ಸಂದರ್ಭದಲ್ಲಿ ತಾತ್ವಿಕ/ಸೈದ್ದಾಂತಿಕ ಅವಶ್ಯಕತೆಯಾಗಿ ಸಬಾಲ್ಟರ್ನ್ ಅಧ್ಯಯನ ಕ್ರಮವು ತನ್ನ ಅಂರ್ಗತವಾಗಿರುವ ಮಿತಿಗಳೊಂದಿಗೆ ಚರಿತ್ರೆ ಬರವಣಿಗೆ ಪ್ರಕ್ರಿಯೆಗೆ ಒಂದು ಹೊಸ ನೋಟವನ್ನು ಪ್ರಭಾವಿಯಾಗಿ ನೀಡಿರುವುದು ಒಂದು ದಿಟ್ಟ ಹೆಜ್ಜೆಯೆಂದರೆ ಉತ್ಪ್ರೇಕ್ಷೆಯಾಗಲಾರದು.

ಪರಾಮರ್ಶನ ಗ್ರಂಥಗಳು

೧. ಆಂಟನಿಯೋ ಗ್ರಾಂಸಿ, ೧೯೭೧, ಸೆಲೆಕ್ಷನ್ ಫ್ರಂ ದಿ ಪ್ರಿಸನ್ ನೋಟ್ ಬುಕ್ಸ್, ಕ್ವಿಂಟಿನ್ ಹೋರೆ, ನಿಯೋಪ್ರಿ ನಾವೆಲ್ ಸ್ಮಿತ್ (ಸಂಪಾದಕರು ಮತ್ತು ಅನುವಾದಕರು), ಲಂಡನ್.

೨. ಅಶಿಶ್ ನಂದಿ, ೧೯೮೩. ಇಂಟಿಮೇಟ್ ಎನಿಮಿ, ನವದೆಹಲಿ.

೩. ಎರಿಕ್ ಹಾಬ್ಸ್‌ವಾಮ್, ೧೯೭೧(೧೯೫೯). ಪ್ರಿಮಿಟಿವ್ ರೆಬೆಲ್ಸ್, ಮ್ಯಾಂಚೆಸ್ಟರ್ ಯೂನಿವರ್ಸಿಟಿ ಪ್ರೆಸ್.

೪. ಕ್ರಿಸ್ಟೀನ್ ಬ್ಯುಸಿ ಗ್ಲಕ್ಸ್‌ಮಾ, ೧೯೯೮. ಗ್ರಾಂಸಿ ಆಂಡ್ ದಿ ಸ್ಟೇಟ್, ಲಂಡನ್.

೫. ಥಾಮ್ಸನ್ ಇ.ಪಿ., ೧೯೭೭(೧೯೬೩). ದಿ ಮೇಕಿಂಗ್ ಆಫ್ ಇಂಗ್ಲಿಶ್ ವರ್ಕಿಂಗ್ ಕ್ಲಾಸ್, ಪೆಂಗ್ವಿನ್.

೬. ಡೇವಿಡ್ ಲಡ್ಡೆನ್(ಸಂಪಾದಕರು), ೨೦೦೮. ರೀಡಿಂಗ್ ಸಬಾಲ್ಟರ್ನ್ ಸ್ಟಡೀಸ್, ನವದೆಹಲಿ: ಪರ್ಮನೆಮಟ್ ಬ್ಲ್ಯಾಕ್.

೭. ಪಾರ್ಥ ಚಟರ್ಜಿ, ೧೯೯೭. “ದಿ ನೇಶನ್ ಆಂಡ್ ಇಟ್ಸ್ ಪೆಸೆಂಟ್ಸ್,” ದಿ ನೇಶನ್ ಆಂಡ್ ಇರ್ಟ್ಸ್‌ ಫ್ರಾಗ್ಮೆಂಟ್ಸ್ ಕಲೋನಿಯಲ್ ಆಂಡ್ ಪೋಸ್ಟ್ ಕಲೋನಿಯಲ್ ಹಿಸ್ಟರೀಸ್, ನವದೆಹಲಿ: ಆಕ್ಸ್‌ಫರ್ಡ್‌ಯೂನಿವರ್ಸಿಟಿ ಪ್ರೆಸ್.

೮. ಪಾರ್ಥ ಚಟರ್ಜಿ, ೧೯೮೩. “ಪೆಸೆಂಟ್ಸ್, ಪಾಲಿಟಿಕ್ಸ್ ಆಂಡ್ ಹಿಸ್ಟಾರಿಯಾಗ್ರಫಿ: ಎ ರೆಸ್ಪಾನ್ಸ್‌” ಸೋಶಿಯಲ್ ಸೈಂಟಿಸ್ಟ್, ನಂ. ೧೨೦.

೯. ಫಣಿರಾಜ್ ಕೆ., ೨೦೦೩. ಅಂಟೋನಿಯೋ ಗ್ರಾಮ್ಷಿ, ಜಿ.ರಾಜಶೇಖರ್ (ಪ್ರಧಾನ ಸಂಪಾದಕರು), ಬೆಂಗಳೂರು: ಶತಮಾನ ಚಿಂತನೆ.

೧೦. ಬೇಯ್‌ಲಿ ಸಿ.ಎ., “ರ‍್ಯಾಲಿಂಗ್ ಅರೌಂಡ್ ದಿ ಸಬಾಲ್ಟರ್ನ್.” ದಿ ಜರ್ನಲ್ ಆಫ್ ಪೆಸೆಂಟ್ ಸ್ಟಡೀಸ್, ೧೬ನೇ ಸಂಚಿಕೆ, ನಂ.೧, ೧೯೮೮.

೧೧. ಮನೋಹರ ಚಂದ್ರ ಪ್ರಸಾದ್ ಡಿ., ೨೦೦೨. ಪ್ರತಿಸಂಸ್ಕೃತಿ ಅಂತೋನಿ ಗ್ರಾಂಶ್ಚಿಯ ಚಿಂತನೆಗಳು, ಬೆಂಗಳೂರು: ರಚನಾ ಪ್ರಕಾಶನ.

೧೨. ರಣಜಿತ್ ಗುಹಾ, ೧೯೮೩. ಎಲಿಮೆಂಟ್ರಿ ಆಸ್ಪೆಕ್ಟ್ಸ್ ಆಫ್ ಪಡೆಸೆಂಟ್ ಇನ್‌ಸರ್ಜೆನ್ಸಿ ಇನ್ ಕಲೋನಿಯಲ್ ಇಂಡಿಯಾ, ದೆಹಲಿ: ಆಕ್ಸ್‌ಫರ್ಡ್‌ಯೂನಿವರ್ಸಿಟಿ ಪ್ರೆಸ್‌.

೧೩. ರಾಬರ್ಟ್‌ಬೊಕಾಕ್, ೧೯೮೬. ಹೆಜಿಮನಿ, ನ್ಯೂಯಾರ್ಕ್‌: ಟವಿಸ್ಟಾಕ್ ಪಬ್ಲಿಕೇಷನ್ಸ್‌.

೧೪. ರೇಮಂಡ್ ವಿಲಿಯಮ್ಸ್, ೧೯೭೭. ಮಾರ್ಕ್ಸಿಸಂ ಆಂಡ್ ಲಿಟರೇಚರ್, ಆಕ್ಸ್‌ಫರ್ಡ್‌: ಆಕ್ಸ್‌ಫರ್ಡ್‌ಯೂನಿವರ್ಸಿಟಿ ಪ್ರೆಸ್.

೧೫. ವಿನಯ್ ಬಾಲ್, “ರಿಲೆವೆನ್ಸ್ ಆರ್ (ಇರ‍್ರಿಲೆವೆನ್ಸ್) ಆಫ್ ಸಬಾಲ್ಟರ್ನ್ ಸ್ಟಡೀಸ್” ಇಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ೩೨, ೩೩, ಜೂನ್ ೭-೧೩, ೧೯೯೭.

೧೬. ವಿನಾಯಕ ಚತುರ್ವೇದಿ (ಸಂಪಾದಕರು), ೨೦೦೦. ಮ್ಯಾಪಿಂಗ್ ಸಬಾಲ್ಟರ್ನ್ ಸ್ಟಡೀಸ್ ಆಂಡ್ ಆಂಡ್ ದಿ ಪೋಸ್ಟ್‌ಕಲೋನಿಯಲ್, ಲಂಡನ್: ವರ್ಸೋ.

೧೭. ಸಬಾಲ್ಟರ್ ಸ್ಟಡೀಸ್‌ನ ೧೦ ಸಂಪುಟಗಳು, ೧೯೮೨-೧೯೯೯. ನವದೆಹಲಿ: ಆಕ್ಸಫರ್ಡ್‌ ಯೂನಿವರ್ಸಿಟಿ ಪ್ರೆಸ್.

೧೮. ಸಬಾಲ್ಟರ್ನ್ ಸ್ಟಡೀಸ್‌ನ ೧೧ ಮತ್ತು ೧೨ನೇ ಸಂಪುಟಗಳು, ೨೦೦೨, ೨೦೦೫. ನವದೆಹಲಿ” ಪರ್ಮನೆಂಟ್ ಬ್ಲ್ಯಾಕ್.

೧೯. ಸುಮಿತ್ ಸರ್ಕಾರ್, ೧೯೯೭. “ದಿ ಡಿಕ್ಲೈನ್ ಆಫ್ ಸಬಾಲ್ಟರ್ನ್ ಇನ್ ಸಬಾಲ್ಟರ್ನ್ ಸ್ಟಡೀಸ್,” ರೈಟಿಂಗ್ ಸೋಷಿಯಲ್ ಹಿಸ್ಟರಿ, ದೆಹಲಿ: ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್.

 

[1] ೧. ಹೆಜಿಮನಿ ಅಥವಾ ಯಜಮಾನಿಕೆ ಎನ್ನುವ ಪರಿಭಾಷೆಯನ್ನು ಆರಂಭದಲ್ಲಿ ಕಾರ್ಲ್‌‌ಮರ್ಕ್ಸ್‌ಬಳಸಿದ್ದನು. ಆರ್ಥಿಕವಾಗಿ ಸದೃಢವಾಗಿರುವ ಒಂದು ವರ್ಗ ಬಲಹೀನವಾಗಿರುವ ಇನ್ನೊಂದು ವರ್ಗವನ್ನು ತನ್ನ ಶಕ್ತಿ ಸಾಮರ್ಥ್ಯದ ಮೂಲಕ ದಮನ ಮಾಡುವ ಮತ್ತು ಆ ಮೂಲಕ ತನ್ನ ಅಧಿಕಾರವನ್ನು ಸ್ಥಾಪಿಸುವ ಕ್ರಿಯೆಯನ್ನು ‘ಹೆಜಿಮನಿ’ ಎಂದು ಅರ್ಥೈಸಲಾಗಿದೆ. ಗ್ರಾಂಸಿಯು ‘ಹೆಜಿಮನಿ’ಗೆ ಭಿನ್ನವಾದ ಅರ್ಥವನ್ನು ಕೊಟ್ಟಿದ್ದಾನೆ. ಸಮಾಜದ ಬಹುತೇಕ ಗುಂಪು/ಸಮುದಾಯಗಳ ಇಚ್ಛೆ/ ಒಪ್ಪಿಗೆಯಂತೆ ಗಳಿಸಿಕೊಂಡ ನೈತಿಕ ಮತ್ತು ತತ್ವಶಾಸ್ತ್ರೀಯ (ಫಿಲಾಸಾಫಿಕಲ್) ನಾಯಕತ್ವವನ್ನು ‘ಹೆಜಿಮನಿ’ ಎಂದು ಅರ್ಥೈಸಲಾಗಿದೆ ಎಂದು ರಾಬರ್ಟ್‌ಬೊಕಾಕ್ ತನ್ನ ‘ಹೆಜಿಮನಿ’ ಎನ್ನುವ ಪುಸ್ತಕದಲ್ಲಿ (ಲಂಡನ್, ೧೯೮೬) ಅಭಿಪ್ರಾಯ ಪಟ್ಟಿದ್ದಾನೆ. ಯಾಂತ್ರಿಕ ರೀತಿಯಲ್ಲಿ ಆರ್ಥಿಕತೆಯ ಮೂಲಕಮಾತ್ರವೇ ಅರ್ಥೈಸುತ್ತಿದ್ದ ಮಾರ್ಕ್ಸಿಸಂನ ಪರಿಭಾಷೆ ‘ಹೆಜಿಮನಿ’ಯನ್ನು ಗ್ರಾಂಸಿಯು ಭಿನ್ನವಾಗಿ ಅರ್ಥೈಸಿದನು. ಕ್ರಾಂತಿಗಿಂತ ಮೊದಲು ಕ್ರಾಂತಿಯ ನೇತೃತ್ವ ವಹಿಸುವ ನಾಯಕರು ಮತ್ತು ಜನಸಾಮಾನ್ಯರ ನಡುವೆ ಅವಿನಾಭಾವ ಸಂಬಂಧವಿರಲೇಬೇಕೆಂದು ಈತ ವಾದಿಸಿದ್ದ. ಇಲ್ಲದಿದ್ದರೆ, ಕ್ರಾಂತಿಯ ನಂತರ ಜನಸಾಮಾನ್ಯ ಮತ್ತು ಅಧಿಕಾರಸ್ಥರ ನಡುವಿರುವ ಸಂಬಂಧವು ಅಧಿಖಾರಸ್ಥರ ಸರ್ವಾಧಿಕಾರಿ ಮನೋಭಾವದಿಂದ ಕೂಡಿರುತ್ತದೆ ಎಂದು ಅವನು ನಂಬಿದ್ದನು. ಶೋಷಣೆಗೆ ಒಳಗಾದ ಎಲ್ಲರೂ ತಮ್ಮ ಶಿಕ್ಷಣ ಮತ್ತು ಪರಸ್ಪರ ಒಪ್ಪಂದಿಂದ “ಫಿಲಾಸಫಿ ಆಫ್ ಪ್ರಾಕ್ಸಿ”ಯನ್ನು ಅಂದರೆ ಮಾರ್ಕ್ಸ್‌‌ವಾದವನ್ನು ಒಪ್ಪಿಕೊಳ್ಳಬೇಕೇ ವಿನಾ ಯಾವುದೇ ವಾಮಮಾರ್ಗದ ಪ್ರಕ್ರಿಯೆಯಿಂದಲ್ಲ ಅಥವಾ ಪಕ್ಷದ ಎಲೈಟ್ ನಾಯಕರ ಆಜ್ಞೆಯನ್ನು ಅನುಸರಿಸುವ ಮೂಲಕ ಅಲ್ಲ ಎಂದು ಗ್ರಾಂಸಿಯು ‘ಹೆಜಿಮನಿ’ಗೆ ಅರ್ಥ ವಿವರಣೆ ನೀಡಿದ್ದಾನೆ. ‘ಜೀವಂತವಿರುವ ಹಿಜಿಮನಿ’ ಎಂದರೆ ‘ಅದೊಂದು ಪ್ರಕ್ರಿಯೆ’ ಎಂದು ರೇಮಂಡ್‌ವಿಲಿಯಮ್ಸ್ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ಹೆಜಿಮನಿ ಎಂದರೆ ಜಿಗುಟಲ್ಲ, ಇದೊಂದು ಬಗೆಯಲ್ಲಿ ಸಂರಚನೆಯನ್ನು ಸವಾಲಿಗೆ ಒಡ್ಡದ ಪ್ರಕ್ರಿಯೆ. ಆದರೆ ಈ ಸಂದರ್ಭದಲ್ಲಿ ಹೆಜಿಮನಿಯ ಸಂಬಂಧಗಳು ಸತತವಾಗಿಪುನರಾವೃತ್ತವಾಗಬೇಕು, ಮತ್ತೊಮ್ಮೆ ಸಂಬಂಧಗಳ ಪರಾಮರ್ಶೆಯಾಗಬೇಕು, ಮಾರ್ಪಾಡಿಗೆ ಆಗಾಗ್ಗೆ ಒಗ್ಗಿಕೊಳ್ಳುವಂತಿರಬೇಕು ಎಂದು ಹೆಜಿಮನಿಯನ್ನು ರೇಮಂಡ್ ವಿಲಿಯಮ್ಸ್ ಅರ್ಥೈಸಲು ಪ್ರಯತ್ನಿಸಿದ್ದಾರೆ. ಇಲ್ಲಿ ‘ಹೆಜಿಮನಿ’ ಯ ಅಂಶ ಭೂತಕಾಲಕ್ಕೆ ಮಾತ್ರವಲ್ಲ ವರ್ತಮಾನಕ್ಕೂ ಸಂಬಂಧಿಸಿದೆ ಎಂಬ ವಿಚಾರವನ್ನು ಗಮನಿಸಬಹುದಾಗಿದೆ (ವಿಲಿಯಮ್ಸ್ ೧೯೭೭:೧೧೨-೧೧೩).