೪. ಸಬಾಲ್ಟರ್ನ್ ಅಧ್ಯಯನ ಕ್ರಮದ ಮೇಲಿನ ವಿಮರ್ಶೆಗಳು

ಸಬಾಲ್ಟರ್ನ್ ಅಧ್ಯಯನ ಕ್ರಮಕ್ಕೆ ಮೊಟ್ಟ ಮೊದಲು ಬಂದ ವಿಮರ್ಶೆಗಳನ್ನು ೧೯೮೨ ರಿಂದ ೧೯೮೮ರ ವಿವಿಧ ಸಂಚಿಕೆಗಳಲ್ಲಿ “ಸೋಷಿಯಲ್ ಸೈನ್ಟಿಸ್ಟ್” ಪ್ರಕಟಿಸಿದ್ದು ಗಮನಾರ್ಹವಾಗಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಪಕ್ಷದೊಂದಿಗೆ ಸಂಬಂಧಗಳನ್ನಿರಿಸಿ ಕೊಂಡಿರುವ ಈ ನಿಯತಕಾಲಿಕೆ ನವದೆಹಲಿಯಿಂದ ಪ್ರಕಟವಾಗುತ್ತಿರುವುದು ಗಮನಾರ್ಹವಾಗಿದೆ. ಆರಂಭದಲ್ಲಿ ಆ ವಿಮರ್ಶೆಗಳು ಮಾರ್ಕ್ಸಿಸಂನ ಒಳಗಿನ ವಾಗ್ವಾದಗಳು ಮತ್ತು ಜಿಜ್ಞಾಸೆಗಳು ಎನ್ನುವ ಹಾದಿಯಲ್ಲಿ ಮುಂದುವರಿದವು. ನಂತರ ಸಬಾಲ್ಟರ್ನ್ ಹಾಗೂ ಮಾರ್ಕ್ಸಿಸ್ಟ್ ಕ್ರಮಗಳ ಹಾದಿಗಳು ಭಿನ್ನವಾಗಿದ್ದನ್ನು ನಾವು ನೋಡಬಹುದು. ಲೇಖನದ ಈ ಭಾಗದಲ್ಲಿ ಸಬಾಲ್ಟರ್ನ್ ಅಧ್ಯಯನ ಕ್ರಮ ಮತ್ತು ಮಾದರಿಗಳ ಮೇಲೆ ನಡೆದಿರುವ ಕೆಲವು ಮುಖ್ಯವಾದ ವಿಮರ್ಶೆಗಳನ್ನು ಚರ್ಚಿಸಲು ಪ್ರಯತ್ನಿಸಲಾಗಿದೆ. ಜಗತ್ತಿನ ಶ್ರೇಷ್ಠ ನಿಯತಕಾಲಿಕೆಗಳಲ್ಲಿ ಮತ್ತು ಕೃತಿಗಳಲ್ಲಿ ಈ ಬಗೆಯ ಚರ್ಚೆಗಳು ಸಾಕಷ್ಟು ನಡೆದಿವೆ. ಪ್ರಸ್ತುತ ಲೇಖನದಲ್ಲಿ ಇಂತಹ ಚರ್ಚೆಗಳನ್ನು ಒಳಗೊಂಡ ಕೆಲವು ವಿದ್ವಾಂಸರ ಲೇಖನಗಳನ್ನು ಮತ್ತು ಅಭಿಪ್ರಾಯಗಳನ್ನು ಬಳಸಿಕೊಳ್ಳಲಾಗಿದೆ. ಸುಮಿತ್ ಸರ್ಕಾರ್, ಡೇವಿಡ್ ಲಡ್ಡೆನ್, ಸಿ.ಎ. ಬೇಯ್‌ಲಿ, ವಿನಯ್‌ಬಾಲ್‌ ಮುಂತಾದ ವಿದ್ವಾಂಸರ ಕೃತಿಗಳನ್ನು ಮತ್ತು ಲೇಖನಗಳನ್ನು ಈ ಸಂದರ್ಭದಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳಲಾಗಿದೆ. ಇವರು ಸಬಾಲ್ಟರ್ನ್ ಅಧ್ಯಯನ ವಿಧಾನದ ಬಗ್ಗೆ ಎತ್ತಿರುವ ಮಹತ್ವದ ಪ್ರಶ್ನೆಗಳನ್ನು ಮತ್ತು ವಿಮರ್ಶೆಗಳನ್ನು ಲೇಖನದ ಈ ಭಾಗದಲ್ಲಿ ಚರ್ಚಿಸುವ ಪ್ರಯತ್ನವನ್ನು ಮಾಡಲಾಗಿದೆ.

“ದಿ ಡಿಕ್ಲ್ಸೆನ್ ಆಫ್ ಸಬಾಲ್ಟರ್ನ್ ಇನ್ ಸಬಾಲ್ಟರ್ನ್ ಸ್ಟಡೀಸ್” ಎನ್ನುವ ಶೀರ್ಷಿಕೆಯ ಲೇಖನದಲ್ಲಿ ಸುಮಿತ್ ಸರ್ಕಾರ್ ಅವರು ಸಬಾಲ್ಟರ್ನ್ ಅಧ್ಯಯನದ ಇತ್ತೀಚನ ಬೆಳವಣಿಗೆಗಳನ್ನು ಕಟುವಾಗಿ ಟೀಕಿಸಿರುವುದು ಗಮನಾರ್ಹವಾಗಿದೆ (ಸರ್ಕಾರ್‌೧೯೯೭). ಭಾರತದ ಸಂದರ್ಭದಲ್ಲಿ ಗ್ರಾಂಸಿಯ ಬಗ್ಗೆ ಚಿಂತನೆ ಮಾಡಿದ ಆರಂಭಿಕರಲ್ಲಿ ಒಬ್ಬರಾದ ಸುಶೋಭನ್ ಸರ್ಕಾರ್ ಅವರ ಮಗ ಸುಮಿತ್ ಸರ್ಕಾರ. ಹಾಗೆ ನೋಡಿದರೆ ಸುಮಿತ್ ಸರ್ಕಾರ್ ಕೂಡ ಅವರೇ ಹೇಳುವಂತೆ ಸಬಾಲ್ಟರ್ನ್ ಸ್ಟಡೀಸ್‌ನ ಮೊದಲನೇ ಆವೃತ್ತಿ ಅವರ ಕೈಗೆ ತಲುಪುವ ಮೊದಲೇ ಅವರ “ಮಾಡರ್ನ್ ಇಂಡಿಯಾ” ಕೃತಿಯು ಮುದ್ರಣಕ್ಕೆ ಹೋಗಿತ್ತು. ಆ ಕೃತಿಯಲ್ಲಿ ಅವರು “ಸಬಾಲ್ಟರ್ನ್” ದೃಷ್ಟಿಕೋನದಿಂದ ಭಾರತದ ಚರಿತ್ರೆಯನ್ನು ನಿರ್ವಚಿಸಿರುವುದು ಕಂಡುಬರುತ್ತದೆ. ರವೀಂದರ್ ಕುಮಾರ್ ಅವರ “ಎಸ್ಸೇಸ್ ಆನ್ ಗಾಂಧಿಯನ್ ಪಾಲಿಟಿಕ್ಸ್” (ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ೧೯೭೧), ಮಾಜಿದ್ ಸಿದ್ಧಿಕ್ ಅವರ “ಅಗ್ರೇರಿಯನ್ ಅನ್‌ರೆಸ್ಟ್ ಇನ್ ನಾರ್ಥನ್‌ ಇಂಡಿಯಾ” ಮತ್ತು ಸುಮಿತ್‌ಸರ್ಕರ್ ಅವರ “ಪಾಪ್ಯುಲರ್ ಮೂವ್‌ಮೆಂಟ್ಸ್‌ ಆಂಡ್ ಮಿಡ್ಲ್‌ಕ್ಲಾಸ್ ಲೀಡರ್‌ಶಿಪ್ ಇನ್ ಲೇಟ್ ಕಲೋನಿಯಲ್ ಇಂಡಿಯಾ: ಪ್ರಾಬ್ಲಮ್ಸ್ ಆಂಡ್ ಪರ್‌ಸ್ಪೆಕ್ಟೀವ್ಸ್ ಆಫ್ ಎ ಹಿಸ್ಟರಿ ಫ್ರಂ ಬಿಲೋ” (ಕಲ್ಕತ್ತಾ, ೧೯೮೩) ಕೃತಿಗಳು ಸಬಾಲ್ಟರ್ನ್ ಸ್ಟಡೀಸ್‌ನ ಮೊದಲನೆಯ ಸಂಪುಟ ಪ್ರಕಟಣೆ ಪೂರ್ವದಲ್ಲಿ ಸಿದ್ಧವಾಗಿದ್ದರೂ ಸಬಾಲ್ಟರ್ನ್ ಮಾಲಿಕೆಯ ವಿದ್ವಾಂಸರು ತಮಗಿಂತ ಮೊದಲು ಪ್ರಕಟಿಸಿದ ಈ ಬಗೆಯ ಕೃತಿಗಳನ್ನು ತಮ್ಮ ಬೌದ್ಧಿಕ ಚರ್ಚೆಯಿಂದ ದೂರವಿಟ್ಟಿದ್ದನ್ನು ನಾವು ಗಮನಿಸಬಹುದು. ಹಾಗೆಯೇ ಸುಮಿತ್‌ ಸರ್ಕಾರ್ ಅವರು ಸಬಾಲ್ಟರ್ನ್ ಸ್ಟಡೀಸ್‌ನ ಮೂರನೇ ಸಂಪುಟದಲ್ಲಿ “ದಿ ಕಂಡೀಶನ್ಸ್ ಆಂಡ್ ನೇಚರ್ ಆಫ್ ದಿ ಸಬಾಲ್ಟರ್ನ್ ಮಿಲಿಟೆನ್ಸಿ: ಬೆಂಗಾಲ್ ಫ್ರಂ ಸ್ವದೇಶಿ ಟು ನಾನ್‌ಕೋ ಆಪರೇಶನ್, ಸಿ ೧೯೦೫-೨೨” ಎನ್ನುವ ಲೇಖನವನ್ನು ಪ್ರಕಟಿಸಿದ್ದರು ಎನ್ನುವ ವಿಚಾರ ಕೂಡ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸುಮಿತ್ ಸರ್ಕಾರ್ ಅವರು ಎತ್ತಿರುವ ಕೆಲವು ಗಂಭೀರವಾದ ಪ್ರಶ್ನೆಗಳ ವಿವರಗಳನ್ನು ಇಲ್ಲಿ ಚರ್ಚಿಸಲಾಗಿದೆ.

ಸಬಾಲ್ಟರ್ನ್ ಅಧ್ಯಯನ ಯೋಜನೆಯಲ್ಲಿ ಪ್ರಕಟವಾದ ಮೊದಲೆರಡು ಸಂಪುಟಗಳು ಭಾರತದ ಮೂಲೆಗೊತ್ತಲ್ಪಟ್ಟ ಗುಂಪುಗಳು ಮುಖ್ಯವಾಗಿ ರೈತರಿಗೆ ಬುಡಕಟ್ಟುಗಳಿಗೆ ಮತ್ತು ಕಾರ್ಮಿಕರಿಗೆ ಸಂಬಂಧಪಟ್ಟವಾಗಿತ್ತು. ಸುಮಿತ್ ಸರ್ಕಾರ್ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಅಧ್ಯಯನಗಳಿಗೆ ಸಮ್ಮತಿ ಸೂಚಿಸಿದರು. ನಂತರ ಬಂದ ಸಂಪುಟಗಳು ಅದರಲ್ಲಿಯೂ ಐದರಿಂದ ಹನ್ನೆರಡು ಸಂಪುಟಗಳು ಪೌರ್ವಾತ್ಯ ದೇಶಗಳ “ಸಮುದಾಯ ಪ್ರಜ್ಞೆಗಳ ಜೊತೆಗೆ ಪಾಶ್ಚಾತ್ಯ ವಸಾಹತುಗಳು ಹುಟ್ಟು ಹಾಕಿದ ಅಧಿಕಾರ ಜ್ಞಾನಗಳಿಗೆ ಸಂಬಂಧಿಸಿದ ವಿಮರ್ಶೆಗಳನ್ನು ಸಬಾಲ್ಟರ್ನ್ ಅಧ್ಯಯನದ ಗುರುತೆಂದು ಪರಿಗಣಿಸದ ವಿಚಾರವು ಸರ್ಕಾರ್ ಅವರ ತೀವ್ರವಾದ ಅಸಮಾಧಾನಕ್ಕೆ ಕಾರಣವಾಯಿತು. “ಜಾಗತಿಕ ವಿದ್ಯಮಾನಗಳಲ್ಲಾದ” ಬದಲಾವಣೆಯಿಂದ ಶೈಕ್ಷಣಿಕ (ಮತ್ತು ರಾಜಕೀಯ) ಆಯಾಮಗಳೂ ಬದಲಾವಣೆಯಾದ್ದರಿಂದ “ಸಬಾಲ್ಟರ್ನ್” ಎನ್ನುವ ಪದದ ಅರ್ಥವೂ ಪುನರ್ ವಿಶ್ಲೇಣೆಗೆ ಒಳಪಟ್ಟವು. ಯುರೋಪ್‌ ಕೇಂದ್ರಿತ, ಪ್ರಗತಿಪರ ಮತ್ತು ಎಡಪಂಥೀಯ ಸೈದ್ಧಾಂತಿಕತೆಗಳ ಕಾರಣಕ್ಕಾಗಿ “ಮಾರ್ಕ್ಸಿಸಂ’ ಮತ್ತು ಅದಕ್ಕೆ ಕಾರಣವೆಂದು ಭಾವಿಸಲಾದ ‘ಎನ್‌ಲೈಟೆನ್‌ಮೆಂಟ್ ರ‍್ಯಾಶನಲಿಸಂ’ನ್ನು (ಪುನರುಜ್ಜೀವನ ಚಳವಳಿಯಿಂದ ಉದ್ಭವವಾದ ಬುದ್ಧಿಪೂರ್ವಕ/ವೈಜ್ಞಾನಿಕ ಸಿದ್ಧಾಂತಗಳು) ಕಟು ಟೀಕೆಗೊಳಿಸಲಾಯಿತು. ಈ ಕಾರಣದಿಂದ ಮಾರ್ಕ್ಸಿಸಂ ಪ್ರೇರಿತ ಸೈದ್ಧಾಂತಿಕ ಚರ್ಚೆಗಳಿಂದ “ಸಂಸ್ಕೃತಿ ಅಧ್ಯಯನಗಳಿಗೆ” ನವಸಬಾಲ್ಟರ್ನ್ ಅಧ್ಯಯನಕಾರರು ಗಮನಹರಿಸಿದ್ದನ್ನು ಸುಮಿತ್ ಸರ್ಕಾರ ತಮ್ಮ ಕೃತಿಯಲ್ಲಿ ಟೀಕಿಸಿದ್ದಾರೆ.

ಪಾರ್ಥ ಚಟರ್ಜಿ ಅವರ ಕೃತಿಗಳು ಹೇಗೆ ‘ಸಬಾಲ್ಟರ್ನ್’ನಿಂದ ಆರಂಭವಾಗಿ ‘ರೈತ ಸಮುದಾಯ ಪ್ರಜ್ಞೆಗಳಿಗೆ’ ನಿಂತು, ಅಲ್ಲಿಂದ ಮುಂದೆ ‘ಸಮುದಾಯಗಳ’ ಅಧ್ಯಯನಕ್ಕೆ ಮೀಸಲಾಗಿದ್ದನ್ನು ನಾವು ಕಾಣಬಹುದು. ೧೯೮೦ ರ ದಶಕದಲ್ಲಿ ಸಬಾಲ್ಟರ್ನ್ ಅಧ್ಯಯನಗಳು ಸಾಂಪ್ರದಾಯಿಕ ಮಾರ್ಕ್ಸಿಸ್ಟ್ ನಡುವಳಿಕೆ ಮತ್ತು ಸಿದ್ಧಾಂತಗಳನ್ನು ಕಟು ವಿಮರ್ಶೆ ಮಾಡುತ್ತಲೇ ಮಾರ್ಕ್ಸಿಸ್ಟ್ ಭಿನ್ನಮತೀಯರಾಗಿ ಒಂದು ಬಗೆಯ ವಿಶಾಲವಾದ ಸೋಷಿಯಲಿಸ್ಟ್ ವಿಚಾರಧಾರೆಯನ್ನು ಬಿಂಬಿಸದವು ಎಂದು ಸುಮಿತ್ ಸರ್ಕಾರ್ ಅಭಿಪ್ರಾಯಪಡುತಾರೆ. ಎಡಪಂಥೀಯ ಪಕ್ಷಗಳ ಜೊತೆಗೆ ಭುಗಿಲೆದ್ದ ಅಸಮಾಧಾನಗಳು ಸಾರ್ವತ್ರಿಕ ಅದರಲ್ಲಿಯೂ ರೈತ ಪ್ರತಿಭಟನೆಗಳು ಮತ್ತು ಆ ಬಗೆಯ ಹೋರಾಟಗಳಲ್ಲಿ ಸಹಾನೂಭೂತಿಯುಳ್ಳವರು ಇಟ್ಟುಕೊಂಡ ಆಶಯಗಳನ್ನು “ಹಿಸ್ಟರಿ ಫ್ರಂ ಬಿಲೋ” (ತಳದಲ್ಲಿರುವವರ ಚರಿತ್ರೆ) ಅಧ್ಯಯನಕಾರರು ಅಭಿವ್ಯಕ್ತಗೊಳಿಸಿದರು. ಚರಿತ್ರೆ ರಚನಾಕ್ರಮದ ವಿನ್ಯಾಸಕ್ಕೆ ಹೊಸ ಆಯಾಮವನ್ನು ಕೊಟ್ಟ ಬ್ರಿಟಿಶ್‌ ಮಾರ್ಕ್ಸಿಸ್ಟರ ಸಮಾಜದ ಚರಿತ್ರೆಗಳೇ (ಸೋಶಿಯಲ್ ಹಿಸ್ಟರಿ) ಭಾರತದಲ್ಲಿ ಸಬಾಲ್ಟರ್ನ್ ಚರಿತ್ರೆಕಾರರಲ್ಲಿ ಹುರುಪನ್ನು ತಂದುಕೊಟ್ಟವು. ಹಿಲ್, ಹಾಬ್ಸ್‌ಬಾಮ್ ಮತ್ತು ಇ.ಪಿ. ಥಾಮ್ಸನ್ ಇವರು ಯುವ ಚರಿತ್ರೆಕಾರರಿಗೆ ಸ್ಫೂರ್ತಿಯಾದರು. ಇ.ಪಿ. ಥಾಮ್ಸನ್‌ಅವರು ೧೯೭೭ ರಲ್ಲಿ ನಡೆದ ಇಂಡಿಯನ್ ಹಿಸ್ಟರಿ ಕಾಂಗ್ರೆಸ್‌ನಲ್ಲಿ ಮಾಡಿದ ಭಾಷಣ ಈ ನಿಟ್ಟಿನಲ್ಲಿ ಮುಖ್ಯವಾದುದು. ೧೮ನೇ ಶತಮಾನದ ಇಂಗ್ಲೆಂಡಿನ ಚರಿತ್ರೆಯನ್ನು ನಿರ್ವಚಿಸಿದ ಸಂದರ್ಭದಲ್ಲಿ ಇ.ಪಿ. ಥಾಮ್ಸನ್ ಬಳಸಿದ “ಪ್ಲೆಬಿಯನ್” ಎನ್ನುವ ಪದ ಬಳಕೆಯ ರೀತಿಯಲ್ಲಿಯೇ ರಣಜಿತ್ ಗುಹಾ ಅವರು ‘ಸಬಾಲ್ಟರ್ನ್’ ಎನ್ನುವ ಪದ ಬಳಕೆ ಮಾಡಿದ್ದನ್ನು ಸುಮಿತ್ ಸರ್ಕಾರ್ ಗುರುತಿಸುತ್ತಾರೆ. ಪಾಶ್ಚಾತ್ಯ ಜಗತ್ತು ಇ.ಪಿ.ಥಾಮ್ಸನ್‌ ಅವರ ಕೊಡುಗೆಗಳನ್ನು ಸ್ವೀಕರಿಸುವುದಕ್ಕೆ ಹಿಂದೆ ಮುಂದೆ ನೋಡಿತು. ರಣಜಿತ್‌ ಗುಹಾ ಅವರ “ಎಲಿಮೆಂಟ್ರಿ ಆಸ್ಪೆಕ್ಟ್ಸ್‌ ಆಫ್ ಪೆಸೆಂಟ್ ಇನ್‌ಸರ್‌ಜೆನ್ಸಿ ಇನ್ ಕಲೋನಿಯಲ್ ಇಂಡಿಯಾ” (೧೯೮೩) ಕೃತಿಯ ಬಗ್ಗೆ ಕೂಡ ಪಾಶ್ಚಾತ್ಯ ವಿದ್ವತ್‌ಲೋಕ ನಿರ್ಲಕ್ಷ್ಯ ಮಾಡಿದರೂ ಆ ಕೃತಿಯ ಬಗ್ಗೆ ಭಾರತದಲ್ಲಿ ಎಡಪಂಥೀಯ ವಿಮರ್ಸಕರ ನಡುವೆ ವ್ಯಾಪಕವಾದ ಚರ್ಚೆಯಾಯಿತು. ಗಾಳಿ ಸುದ್ದಿಯ ಪಾತ್ರ, ಅಪರಾಧ ಮತ್ತು ಬಂಡೇಳುವಿಕೆ ನಡುವಿನ ಸಂಬಂಧ ಮತ್ತು ವ್ಯತ್ಯಾಸಗಳ ವಿಮರ್ಶೆ ಮುಂತಾದ ಹೊಸ ಬಗೆಯ ತನಿಖೆಗಳ ಮೌಲಕ “ಎಲಿಮೆಂಟ್ರಿ ಆಸ್ಪೆಕ್ಟ್ಸ್‌” ವಿದ್ವಾಂಸರ ಗಮನ ಸೆಳೆಯಿತು.

ಗ್ರಾಮೀಣ ಪ್ರದೇಶಗಳ ಮೊದಲ ಸಂಗ್ರಹಣೆ ಮೂಲಕ ಡೇವಿಡ್ ಹರ್ಡಿಮನ್ ಅವರು ಗುಜರಾತ್‌ನ ರೈತ ರಾಷ್ಟ್ರೀಯವಾದಿಗಳ ಚರಿತ್ರೆಯನ್ನು ಬರೆದರು. ಉತ್ತರ ಪ್ರದೇಶದ ಸ್ಥಳೀಯ ಕಾಂಗ್ರೆಸ್ ಸಂಘಟನೆಗಳ ಮತ್ತು ಮಿಲಿಟೆಂಟ್ ರೈತರ ನಡುವಿದ್ದ ಸಂಕೀರ್ಣ ಸಂಬಂಧಗಳನ್ನು ವಿಮರ್ಶಿಸುವ ಮೂಲಕ ಗ್ಯಾನೇಂದ್ರ ಪಾಂಡೆ ಅವರು ಚರಿತ್ರೆಯನ್ನು ನಿರ್ವಚಿಸಿದರು. ಗಾಂಧೀಜಿಯವರು ಕಾರ‍್ಯಕರ್ತರಿಗೆ ಪವಾಡ ಪುರುಷ ಎಂದು ಭಾವಿಸಲಾದ ವಿವರಗಳನ್ನು ಶಾಹಿದ್ ಅಮಿನ್ ಅವರು ಉತ್ತರ ಪ್ರದೇಶದ ಸಂದರ್ಭದಲ್ಲಿ ವಿವರಿಸಿದರು. ಮುಖ್ಯವಾಹಿನಿಯ ರಾಷ್ಟ್ರೀಯತೆಯನ್ನು ಈ ಸಂದರ್ಭದಲ್ಲಿ ಪುನರ್‌ವ್ಯಾಖ್ಯಾನಿಸಿದ ದೀಪೇಶ್ ಚಕ್ರವರ್ತಿ ಅವರ ಪ್ರಯತ್ನಗಳನ್ನು ನಾವಿಲ್ಲಿ ಗಮನಿಸಬಹುದು. ಆ ಮೂಲಕ ಅವರು ಬುಡಕಟ್ಟುಗಳ ಚಳುವಳಿಗಳನ್ನು ಮತ್ತು ಕಲ್ಟ್‌ಗಳ ಭೂಮಿಕೆಯನ್ನು ಚರಿತ್ರೆ ಅಧ್ಯಯನದಲ್ಲಿ ಬಳಸಿಕೊಂಡರು. ಸುಮಿತ್‌ಸರ್ಕಾರ್ ಅವರ ಪ್ರಕಾರ ನಂತರ ಬಂದ ಈ ಬಗೆಯ ಅನೇಕ ಲೇಖನಗಳು ಸಿದ್ಧಾಂತಗಳ ಹಿನ್ನೆಲೆಯಲ್ಲಿ ಪುನರಾವೃತ್ತಗೊಂಡವು. ಈ ರೀತಿ ಪುನರಾವೃತ್ತಗೊಂಡ ಲೇಖನಗಳ ಶೀರ್ಷಿಕೆ ಅಥವಾ ಕೇಸ್ ಸ್ಟಡಿಗಳು ಭಿನ್ನವೆಂದು ಹೊರನೋಟಕ್ಕೆ ಕಂಡುಬಂದರೂ ಬಹುತೇಕ ಇಂತಹ ಲೇಖನಗಳ ಆಶಯ ಒಂದೇ ಆಗಿತ್ತು. ಆದರೆ, ಅದಕ್ಕೆ ಬಳಸಲಾದ ಎಂಪಿರಿಕಲ್ ಡೇಟಾ ಮಾತ್ರ ಬೇರೆ ಬೇರೆಯವು ಎಂದು ಸುಮಿತ್ ಸರ್ಕಾರ್‌ ಅವರು ಸಬಾಲ್ಟರ್ನ್ ವಿದ್ವಾಂಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಆಶ್ಚರ‍್ಯ ಎನ್ನುವಂತೆ ಪಾಶ್ಚಾತ್ಯ ಶೈಕ್ಷಣಿಕ ವಲಯದಲ್ಲಿ ಪ್ರಭಾವಿಯಾಗಿರುವ ಪೋಸ್ಟ್‌ ಮಾರ್ಡರ್ನ್ (ಆಧುನಿಕೋತ್ತರ) ವಿದ್ವಾಂಸರು ಸಬಾಲ್ಟರ್ನ್ ಅಧ್ಯಯನಗಳಿಗೆ ಮಾರು ಹೋದರು. ವಸಾಹತು ಮತ್ತು ವಸಾಹತೋತ್ತರ ಅಧ್ಯಯನಗಳಲ್ಲಿ ಅತೀವ ಆಸಕ್ತಿ ತೋರಿಸುತ್ತಿರುವ ಈ ವಿದ್ವಾಂಸರಿಗೆ ಸಹಜವಾಗಿಯೇ ಸಬಾಲ್ಟರ್ನ್ ಅಧ್ಯಯನಗಳು ಹಿಡಿಸಿದವು. ಆಯಾ “ಸಂದರ್ಭದಲ್ಲಿ” ಮುನ್ನುಗ್ಗುವ ಚಾತುರ‍್ಯವಿರುವ ಈ ವಿದ್ವಾಂಸರು ೧೯೬೦-೭೦ರ ದಶಕದಲ್ಲಿ ‘ಜನ ಹೋರಾಟಗಳ’ ಅಧ್ಯಯನದ ಸ್ವರೂಪವನ್ನು ‘ಅಧಿಕಾರ-ಜ್ಞಾನ’ (ಪವರ್ ನಾಲೆಡ್ಜ್‌) ಸಂಕಥನಕ್ಕೆ ಸ್ಥಿತ್ಯಂತರಗೊಳಿಸಿದರು. ಪುನರ್ ಜೀವನೋತ್ತರ ಸಂದರ್ಭದ ಅಧಿಕಾರ ಜ್ಞಾನ ಸಂಕಥನವು ‘ಆಧುನಿಕ’ ಅಧಿಕಾರಶಾಹಿ ರಾಷ್ಟ್ರಗಳನ್ನು ಅವುಗಳ ಅನಗತ್ಯ “ಆರ್ಥಿಕ” ಹಿನ್ನೆಲೆಯ ವಿನ್ಯಾಸಗಳನ್ನು ವಿಮರ್ಶೆ ಮಾಡಿತು. ಆ ಮೂಲಕ “ಮಾರ್ಕ್ಸಿಸಂ” ಅನ್ನು ಮೂಲೆಗೊತ್ತಲು ಈ ವಿದ್ವಾಂಸರು ಪ್ರಯತ್ನವನ್ನು ಮಾಡಿದರು. ಪುನರುಜ್ಜೀವನದ ವೈಜ್ಞಾನಿಕತೆಯನ್ನು (ಎನ್‌ಲೈಟೆನ್‌ಮೆಂಟ್ ರ‍್ಯಾಶನಲಿಸಂ) ಈ ಆಧುನಿಕೋತ್ತರ ವಿದ್ವಾಂಸರು ಕಟು ಟೀಕೆಗೆ ಒಳಪಡಿಸಿ, ಮಾರ್ಕ್ಸಿಸಂನ “ಯುರೋಪ್ ಕೇಂದ್ರಿತ” ಮಾದರಿಯನ್ನು ಹಿಗ್ಗಾಮುಗ್ಗಾ ಟೀಕಿಸಿದರು. ಪ್ರಗತಿಪರ, ಎಡಪಂಥೀಯ ಮಾದರಿಯ ಸಮಾಜ ಚರಿತ್ರೆಯ ಅಧ್ಯಯನಗಳನ್ನು ನೇಪಥ್ಯಕ್ಕೆ ಸರಿಸಿ, ಅದರ ಬದಲು ಸಂಸ್ಕೃತಿ ಅಧ್ಯಯನಗಳನ್ನು ಮತ್ತು ವಸಾಹತುಕಾಲದ ವಾಙ್ಮಯಗಳ ವಿಮರ್ಶಾತ್ಮಕ ಅಧ್ಯಯನಗಳನ್ನು ಚಾಲ್ತಿಯಲ್ಲಿರುವಂತೆ ಮಾಡಿದರು. ಈ ಮೂಲಕ ವೈಜ್ಞಾನಿಕ ಚರಿತ್ರೆ ಬರವಣಿಗೆಯ ಥಾಮ್ಸನ್ನಿನ ಛಾಯೆಗಳು ಮಾಯೆಯಾಗಿ ಫುಕೋವಿನ ಛಾಯೆಗಳು ನಿಕರವಾಗಿ ಕಾಣತೊಡಗಿದವು. ಇತ್ತೀಚೆಗೆ ಅವು ಇನ್ನೂ ಸ್ಪಷ್ಟವಾಗಿ ಎಡ್ವರ್ಡ್‌ಸೈಯದ್‌ನ ಸುತ್ತಲೂ ಸುತ್ತುತ್ತಿರುವುದನ್ನು ಸುಮಿತ್ ಸರ್ಕಾರ್ ಅವರು ವಿಶ್ಲೇಷಿಸಿದ್ದಾರೆ.

* * *

ನಾಲ್ಕನೆಯ ಸಂಚಿಕೆಯ ನಂತರ ಬಂದ ಸಬಾಲ್ಟರ್ನ್ ಅಧ್ಯಯನ ಸಂಪುಟಗಳು ಅಶಿಶ್‌ನಂದಿ ಅವರ ‘ಇಂಟಿಮೇಟ್ ಎನಿಮಿ’ (ನವದೆಹಲಿ, ೧೯೮೩)ಯಿಂದೆ ಪ್ರಭಾವಗೊಂಡವುಗಳಾಗಿವೆ. ಆಧುನಿಕ ವಿರೋಧಿ ನವಸಾಂಪ್ರದಾಯಿಕತೆ ನಿಲುವುಗಳಿಂದಾಗಿ ಅಶಿಶ್‌ನಂದಿ ಅವರ ಚಿಂತನೆಗಳು ನಂತರದ ಸಬಾಲ್ಟರ್ನ್ ಅಧ್ಯಯನಕಾರರಿಗೆ ಸ್ಫೂರ್ತಿಯಾದದ್ದನ್ನು ಕಾನಬಹುದು. ಬಾಬ್ರಿ ಮಸೀದಿಯ ಧ್ವಂಸದ ಪ್ರಕರಣ ಮತ್ತು ಅದರಿಂದಾದ ಪ್ರೇರಿತವಾದ ಕೋಮುವಾದಿ ದಳ್ಳುರಿಯಲ್ಲಿ ನಡೆದ ಮಾರಣ ಹೋಮಗಳನ್ನು ಗಮನದಲ್ಲಿಟ್ಟುಕೊಂಡು ತೀವ್ರವಾದ ಬಲಪಂಥೀಯ ಹಿಂದೂ ಸಂಘಟನೆಗಳು ಧರ್ಮದ “ಪ್ರತಿನಿಧಿಗಳಾದ” ಅಂಶಗಳು “ಆಧುನಿಕವಾದದ್ದು”. ಬ್ರಿಟಿಶರು ಬರುವುದಕ್ಕಿಂತ ಮೊದಲಿದ್ದವೆಂದು ಭಾವಿಸಲಾದ (ವಿಸ್ಮೃತಿ) ಬಹು ಸಂಪ್ರದಾಯಗಳನ್ನು ಮತ್ತು ಸಂಸ್ಕೃತಿಗಳನ್ನು (ಆಧುನಿಕಪೂರ್ವಕಾಲ ಘಟ್ಟದ) ಗಣನೆಗೆ ತೆಗೆದುಕೊಂಡಿಲ್ಲದಿರುವುದು ಇದಕ್ಕೆ ಕಾರಣವೆಂದು ಭಾವಿಸಲಾಗಿದೆ. ಈ ಕಾರಣಕ್ಕಾಗಿಯೇ ಹಿಂದೂ ಬಲಪಂಥೀಯವಾದಿಗಳು ಪಶ್ಚಿಮದಿಂದ ಬಂದ ಆಧುನಿಕ ಚಿಂತನೆಗಳಿಂದಾಗಿ ಅದರಲ್ಲಿಯೂ ವಸಾಹತುಶಾಹಿಯ ಬಳುವಳಿಯಿಂದ ‘ಅಧಿಕಾರ ಜ್ಞಾನ’ ಮತ್ತು ಅದರ ಆಯಕಟ್ಟಿನ ನೆಲೆಗಳಾದ ಜನಗಣತಿಯಾಧಾರಿತ (ಹಿಂದೂಗಳ ಜನಸಂಖ್ಯೆ ಹೆಚ್ಚಿದೆ ಎನ್ನುವ ರೀತಿಯ ಅಂಶಗಳು) ವಿಚಾರಗಳಿಂದ ಪ್ರಭಾವಗೊಂಡಿದ್ದಾರೆ. ಈ ಕಾರಣಕ್ಕಾಗಿ ಪಾಶ್ಚಾತ್ಯ ಪ್ರೇರಿತವಾದ ಆಧುನಿಕತೆಯು ಭಯಾನಕವಾದುದಾಗಿದೆ. ಆಶಿಶ್‌ನಂದಿ ಅವರಾಗಲಿ ಅಥವಾ ನಂತರದ ಸಬಾಲ್ಟರ್ನ್ ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದನ್ನು ಸುಮಿತ್ ಸರ್ಕಾರ್ ಅವರು ಕಟುವಾಗಿ ಟೀಕಿಸುತ್ತಾರೆ. “ಧರ್ಮವನ್ನು ಒಂದು ಸಿದ್ಧಾಂತವನ್ನಾಗಿ” ಮಾಡಿದ ಕ್ರಮದ ನಡುವೆ ಸಹನೆಯ ಪ್ರತೀಕವಾದ ‘ಸೆಕ್ಯುಲರಿಸಂ’ನ ಆದರ್ಶದ ನಡುವೆ ವ್ಯತ್ಯಾಸಗಳನ್ನು ಗುರುತಿಸದ ಮೂಲಭೂತವಾದಿಗಳಿಗೂ ಮತ್ತು ಸೆಕ್ಯುಲರಿಸ್ಟ್‌ಗಳಿಗೂ ವ್ಯತ್ಯಾಸಗಳನ್ನು ಕಾಣದ, ವ್ಯತ್ಯಾಸಗಳನ್ನು ಗುರುತಿಸದ, ಈ ವಿದ್ವಾಂಸರ ವಿರುದ್ಧ ಸುಮಿತ್ ಸರ್ಕಾರ್ ಕಿಡಿ ಕಾರಿದ್ದಾರೆ.

ಸುಮಿತ್ ಸರ್ಕಾರ್ ಅವರು ಹೇಳುವಂತೆ ಭಾರತದ ಚರಿತ್ರೆಯ ಚೌಕಟ್ಟಿನಲ್ಲಿ ಸೆಕ್ಯುಲರ್ ಎಂದರೆ ಅದು ಕೋಮುವಾದದ ವಿರೋಧಿ ಅಥವಾ ಕೋಮುವಾದಿ ಅಲ್ಲದವರು ಎಂದರ್ಥ. ಮಹಾತ್ಮಾಗಾಂಧಿಯವರಿಗೂ ಈ ವಿಚಾರದಲ್ಲೇನೂ ಭಿನ್ನಮತವಿರಲಿಲ್ಲ. “ಗೀವಿಂಗ್ ಸೆಕ್ಯುಲರಿಸಂ ಇಟ್ಸ್ ಡ್ಯೂ” ಎನ್ನುವ ಲೇಖನದಲ್ಲಿ (ಇಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ಜುಲೈ ೯, ೧೯೯೪) ರಾಜೀವ್ ಭಾರ್ಗವ ಅವರು ನೆನಪಿಸಿದಂತೆ ಭಾರತದ ವಿಭಜನೆಯ ನಂತರ ಕಂಡ ಹಿಂದೂ-ಮುಸ್ಲಿಂ ಕೋಮು ಗಲಭೆಗಳಲ್ಲಿ ಅರ್ಧ ಮಿಲಿಯನ್ ಜನ ಸತ್ತ ಮೇಲೂ ದೇಶವನ್ನು ಮತ್ತೆ ಒಗ್ಗೂಡಿಸಿದ್ದು ಸೆಕ್ಯುಲರಿಸಂ. ಯುರೋಪಿನಲ್ಲಿ ಕೂಡ ಸುಧಾರಣೆಯ ಯುಗದ ಧಾರ್ಮಿಕ ಯುದ್ಧಗಳ ಸಂದರ್ಭದಲ್ಲಿ ಆದ ಹಿಂಸೆ ಮತ್ತು ಅಶಾಂತಿಯನ್ನು ತಹಬಂದಿಗೆ ತರಲು ಶ್ರಮಿಸಿದ್ದು ಸೆಕ್ಯುಲರಿಸಂ. ೧೬ನೆಯ ಶತಮಾನದಲ್ಲಿ ರಾಜ್ಯ ವ್ಯವಹಾರಗಳಿಂದ ಚರ್ಚನ್ನು ಪ್ರತ್ಯೇಕಿಸಿದ್ದು ರ‍್ಯಾಷನಲಿಸ್ಟ್ ಮುಕ್ತ ಚಿಂತಕರಲ್ಲ, ಬದಲಿಗೆ ಅನಾಬ್ಯಾಸಿಸ್ಟರಿಂದ ಎಂದು ಸುಮಿತ್‌ಸರ್ಕಾರ್ ಸಮರ್ಥಿಸುತ್ತಾರೆ. ರಾಜ್ಯವೊಂದಕ್ಕೆ ಕಡ್ಡಾಯವಾದ ರಾಜಧರ್ಮವಿರಬೇಕೆನ್ನುವ ವಿಚಾರಕ್ಕೆ ಭಿನ್ನಮತ ಹೊಂದಿ ಅದರಂತೆ ನಡೆದುಕೊಂಡವರೇ ಸೆಕ್ಯುಲರಿಸ್ಟರು ಎನ್ನುವ ಮಾತನ್ನೂ ಅವರು ಸೇರಿಸಿರುವುದು ಗಮನಾರ್ಹವಾಗಿದೆ. ಹಿಟ್ಲರ್ ಮತ್ತು ಸ್ಟಾಲಿನ್ ಅವರು ಸೆಕ್ಯುಲರಿಸ್ಟ್‌ಗಳಾದರೂ ಅವರ ಭಯೋತ್ಪಾದನೆಗೆ ಬಲಿಯಾದವರು ನಾಸ್ತಿಕರು. ಅದರಲ್ಲಿಯೂ ಕಮ್ಯುನಿಸ್ಟರು. ಸರ್ವಾಧಿಕಾರಿಗಳ ಸೆಕ್ಯುಲರಿಸ್ಟರಾದ ಮಾತ್ರಕ್ಕೆ ಸಮಸ್ಯೆ ಮುಗಿಯುವುದಿಲ್ಲ. ಈ ಕಾರಣಕ್ಕಾಗಿಯೇ ಭಾರತದಲ್ಲಿ ಸೆಕ್ಯುಲರಿಸಂ ಎನ್ನುವುದು ಯುರೋಪಿನ ಅನುಭವಗಳಿಗಿಂತ ಭಿನ್ನವಾಗಿದೆ ಮತ್ತು ಅದನ್ನು ಭಿನ್ನವಾಗಿಯೇ ಅರ್ಥ ಮಾಡಿಕೊಳ್ಳುವುದು ಸೂಕ್ತವಾಗಿದೆ. ನಂತರದ ಸಬಾಲ್ಟರ್ನ್ ವಿದ್ವಾಂಸರ ನಿಲುವುಗಳನ್ನು ಸಮರ್ಥಿಸಲು ಹೋದರೆ ಕೋಮುವಿರೋಧಿ ಮತ್ತು ರ‍್ಯಾಡಿಕಲ್ ಆಗಿರುವ ವಿದ್ವಾಂಸರಿಗೆ ಮುಜುಗರವಾಗುವುದು ಖಂಡಿತವೇ. ಜನಪ್ರಿಯವಾಗಿರುವ ಆದರೆ ಸಮರ್ಥಿಸಿಕೊಳ್ಳಲು ಸಾಧ್ಯವಾಗದಿರುವ ಕೋಮುಹಿಂಸೆಯ ಪ್ರಕ್ರಿಯೆಯನ್ನು ಈ ಕಾರಣಕ್ಕಾಗಿಯೇ ಸಬಾಲ್ಟರ್ನ್ ಅಧ್ಯಯನ ಕ್ರಮವನ್ನು ಅರ್ಥಮಾಡಿಕೊಳ್ಳಳು ಸಾಧ್ಯವಾಗದಿರುವುದು ಎಂಬ ಅಂಶವನ್ನು ಸುಮಿತ್ ಸರ್ಕಾರ ತಿಳಿಹೇಳುತ್ತಾರೆ.

* * *

ಸಬಾಲ್ಟರ್ನ್ ಅಧ್ಯಯನಕಾರರು ರೈತರನ್ನು ಅಥವಾ ಸಬಾಲ್ಟರ್ನ್ ಗಳನ್ನು ಕೇಂದ್ರವಾಗಿಟ್ಟು ಕೊಂಡು ಕಟ್ಟುತ್ತಿದ್ದೇವೆ ಎನ್ನಲಾಗುವ ಜನರ ಚರಿತ್ರೆಯನ್ನು ೧೯೫೦ರ ದಶಕದಲ್ಲಿಯೇ ವಾಲ್ಟರ್‌ಹಾಸರ್, ಪೀಟರ್ ರೀವೀಸ್, ಎರಿಕ್‌ಸ್ಟೋಕ್ಸ್ ಮತ್ತು ಎ.ಆರ್. ದೇಸಾಯಿ ಗ್ರಾಮೀಣ ವಸಾಹತು ಭಾರತದ ಮೇಲಿನ ತಮ್ಮ ಸಂಶೋಧನೆಗಳ ಮೂಲಕ ವ್ಯಕ್ತಪಡಿಸಿದ್ದನ್ನು ನೋಡಬಹುದಾಗಿದೆ. ಈ ಸಂದರ್ಭದಲ್ಲೆಲ್ಲ ಬಡ ಜನರು, ಬಡ ರೈತರು ಸಂಘಟಿಸಿದ ಬಂಡಾಯಗಳ ವಿವರಗಳನ್ನು ಕೇಂದ್ರವಾಗಿಟ್ಟುಕೊಂಡು ಬರೆದಿದ್ದನ್ನು ಗಮನಿಸಬಹುದಾಗಿದೆ. ಸಬಾಲ್ಟರ್ನ್ ಚರಿತ್ರೆಕಾರರ ಸಮಕಾಲೀನರಾದ ಮಜೀದ್‌ಸಿದ್ದಿಕಿ, ಜಿಮ್‌ಮ್ಯಾಸಲಸ್, ರಾಜ್ ಚಂದ್ರಾವರ್ಕರ್, ಆನಂದ್‌ಯಂಗ್, ರಜತ್‌ರೇ, ಡೇವಿಡ್ ಲಡ್ಡೆನ್ ಮತ್ತು ೧೯೭೦ ರ ದಶಕದಲ್ಲಿ ಜರ್ನಲ್ ಆಫ್ ಪೆಸೆಂಟ್‌ಸ್ಟಡೀಸ್‌ನಲ್ಲಿ ಸಂಶೋಧನೆಗಳನ್ನು ಪ್ರಕಟಿಸಿದ ನಾಕೆ ವಿದ್ವಾಂಸರು ಕಾರ್ಮಿಕರನ್ನು ಮತ್ತು ರೈತರನ್ನು ಕೇಂದ್ರವಾಗಿಟ್ಟುಕೊಂಡು ಚರಿತ್ರೆ ಬರವಣಿಗೆ ಮಾಡಿರುವುದನ್ನು ಸಬಾಲ್ಟರ್ನ್ ಅಧ್ಯಯನಕಾರರು ನಿರ್ಲಕ್ಷಿಸಿದ್ದನ್ನು ಸಿ.ಎಂ. ಬೇಯ್‌ಲಿ ಅವರು ಟೀಕಿಸಿದ್ದಾರೆ. ಈ ಕುರಿತಂತೆ ಅವರು ಸಮಗ್ರ ಲೇಖನವೊಂದರಲ್ಲಿ ತಮ್ಮ ಟೀಕೆಗಳನ್ನು ದಾಖಲಿಸಿದ್ದಾರೆ. (ಬೇಯ್‌ಲಿ, ಜರ್ನಲ್ ಆಫ್‌ ಪೆಸೆಂಟ್ ಸ್ಟಡೀಸ್, ೧೯೮೮:೧೧೦-೧೨೦)

ಡಿ.ಎನ್. ಧನಗೆರೆ, ಮಜೀದ್ ಸಿದ್ಧಿಕಿ ಮತ್ತು ಗ್ಯಾನೇಂದ್ರ ಪಾಂಡೆ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಚಳವಳಿಗಳ ನಡುವಿದ್ದ ಬಿರುಕುಗಳ ಬಗ್ಗೆ ಬರೆದಿರುವುದನ್ನು ಗಮನಿಸಬಹುದು. ಸುಮಿತ್ ಸರ್ಕಾರ್ ಅವರ ಮಾಡರ್ನ್ ಇಂಡಿಯಾ ದುಡಿಯುವ ವರ್ಗ ಹಾಗೂ ರೈತರ ಚಳವಳಿಗಳು ಸ್ವತಂತ್ರವಾದ ರಾಜಕೀಯ ಸ್ವಾಯತ್ತೆ (ಅಟಾನಮಿಕ್ ಪೊಲಿಟಿಕಲ್ ಸ್ಪೇಸ್) ಯನ್ನು ಹಿಂದೆಂದೂ ಯಾವ ವಿದ್ವಾಂಸನೂ ಮಾಡದ ರೀತಿಯಲ್ಲಿ ವಿಶ್ಲೇಷಿಸಿದರು ಎಂದು ಡೆವಿಡ್‌ ಲಡ್ಡೆನ್ ಅಭಿಪ್ರಾಯಪಟ್ಟಿದ್ದಾರೆ. ೧೯೭೯ ರಲ್ಲಿ ಎ.ಆರ್. ದೇಸಾಯಿ ಅವರು ಹೊರತಂದ ‘ಪೆಸೆಂಟ್ ಸ್ಟ್ರಗಲ್ಸ್‌ ಇನ್ ಇಂಡಿಯಾ’ ಹಾಗೂ ೧೯೮೬ ನಲ್ಲಿ ಅವರೇ ಹೊರತಂದ ‘ಅಗ್ರೇರಿಯನ್ ಸ್ಟ್ರಗಲ್ಸ್‌ ಇನ್ ಇಂಡಿಯಾ ಆಫ್ಟರ್‌ ಇಂಡಿಪೆಂಡೆನ್ಸ್’ ಈ ನಿಟ್ಟಿನಲ್ಲಿ ಮುಖ್ಯವಾದುದು (ಲಡ್ಡೆನ್‌ ೨೦೦೮: ೧-೩೯).

ದೇಸಿ ವಿದ್ವಾಂಸರು ತಮ್ಮ ಸಂಶೋಧನೆಯ ಸಂದರ್ಭದಲ್ಲಿ ವಿದೇಶಿ ಅದರಲ್ಲಿಯೂ ಪಾಶ್ಚಾತ್ಯ ವಿದ್ವಾಂಸರ ಕೃತಿಗಳನ್ನು ಅಭ್ಯಸಿಸಿ ಅವರ ವಿಚಾರಧಾರೆಗಳನ್ನು ಅರ್ಥ ಮಾಡಿಕೊಂಡು ಚರಿತ್ರೆ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದನ್ನು ನೋಡಬಹುದು. ಆದರೆ, ವ್ಯತಿರಿಕ್ತವಾಗಿ ಪಾಶ್ಚಾತ್ಯ ವಿದ್ವಾಂಸರು ದೇಸಿ ವಿದ್ವಾಂಸರು ಈ ಕುರಿತಂತೆ ಈಗಾಗಲೆ ಮಾಡಿದ ಸಂಶೋಧನೆಗಳನ್ನಾಗಲಿ ಅಥವಾ ರೂಪಿಸಿದ ತತ್ವಸಿದ್ಧಾಂತಗಳನ್ನಾಗಲಿ ಗಮನಿಸಿದಿರುವುದು ಅಥವಾ ಗಮನಿಸಿದರೂ ಅವಕ್ಕೆ ಸಿಗಬೇಕಾದ ಪ್ರಾಶಸ್ತ್ರ‍್ಯವನ್ನು ನೀಡದಿರುವುದು ಕಂಡುಬರುತ್ತದೆ. ೧೯ನೆಯ ಶತಮಾನದ ಅಂತ್ಯದಲ್ಲಿ ಭಾರತದ ಆರ್ಥಿಕ ಚರಿತ್ರೆಕಾರರು ಮತ್ತು ರಾಷ್ಟ್ರೀಯವಾದಿ ನಾಯಕರು ರೂಪಿಸಿದ ಸಂಪತ್ತಿನ ಸೋರಿಕೆ ಸಿದ್ಧಾಂತವು (ಡ್ರೈನ್ ಥಿಯರಿ) ಭಾರತದಲ್ಲಿನ ಬಡತನಕ್ಕಿರುವ ಕಾರಣಗಳನ್ನು ವಿಶ್ಲೇಷಿಸುತ್ತದೆ. ಈ ಕಾರಣದ ಹಿನ್ನೆಲೆಯನ್ನು ಅನುಲಕ್ಷಿಸಿ ಭಾರತದ ಸಂಪತ್ತು ಯಾವ ರೀತಿಯಲ್ಲಿ ಬ್ರಿಟಿಶ್‌ ವಸಾಹತುಕಾಲದಲ್ಲಿ ಬ್ರಿಟನ್ನಿಗೆ ಸೋರಿ ಹೋಗುತ್ತದೆ ಎಂಬುದನ್ನು ವಿವರಿಸಿದ ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ಪಾಶ್ಚಾತ್ಯ ವಿದ್ವಾಂಸರು ಗಂಭೀರವಾಗಿ ಪರಿಗಣಿಸಿಲ್ಲ. ಎರಡನೆಯ ಮಹಾಯುದ್ಧದ ನಂತರ ವಿಕಾಸಗೊಂಡ ಡಿಪೆಂಡೆನ್ಸ್ ಥಿಯರಿಯಲ್ಲಿ ಕೂಡ ಎಲ್ಲೋ ಅಲ್ಲಲ್ಲಿ (ಡ್ರೈನ್‌ಥಿಯರಿ) ಭಾರತದಲ್ಲಿನ ಬಡತನಕ್ಕಿರುವ ಕಾರಣಗಳನ್ನು ವಿಶ್ಲೇಷಿಸುತ್ತದೆ. ಈ ಸಂಪತ್ತಿನ ಸೋರಿಕೆ ಸಿದ್ಧಾಂತದ ಬಗ್ಗೆ ಉಲ್ಲೇಖಗಳು ಬಿಟ್ಟರೆ ಗಂಭೀರ ಸ್ವರೂಪದಲ್ಲಿ ಅದನ್ನು ಚರ್ಚಿಸದೆ ಇರುವುದು ಕಂಡು ಬರುತ್ತದೆ. ಈ ಕಾರಣಕ್ಕಾಗಿಯೇ ಏನೋ ‘ಡಿಪೆಂಡೆನ್ಸಿ ಥಿಯರಿ’ಯು ಶೈಕ್ಷಣಿಕ ಚರ್ಚೆಯಲ್ಲಿ ಪಡೆದುಕೊಂಡ ನಾಯಕತ್ವವನ್ನು ಸಂಪತ್ತಿನ ಸೋರಿಕೆ ಸಿದ್ಧಾಂತವು ಪಡೆದುಕೊಂಡಿಲ್ಲ. ಇಷ್ಟೆಲ್ಲದರ ನಡುವೆ ಸಬಾಲ್ಟರ್ನ್ ಚರಿತ್ರೆಕಾರರು ಪಾಶ್ಚಾತ್ಯ ಜಿಜ್ಞಾಸೆಗಳಿಂದ ಹೆಚ್ಚು ಪ್ರಭಾವಕ್ಕೆ ಒಳಗಾಗಿರುವುದು ಆಭಾಸಕರವಾಗಿದೆ (ವಿನಯ್ ಬಾಲ್, ಇ.ಪಿ. ಡಬ್ಲ್ಯು, ೧೯೯೭: ೩೨-೩೩).

೧೯೮೨ರ ವೇಳೆಗೆ ರಣಜಿತ್ ಗುಹಾ ಅವರು ಸಬಾಲ್ಟರ್ನ್ ಅಧ್ಯಯನವನ್ನು ವಿವರಿಸುವ ಸಂದರ್ಭದಲ್ಲಿ ಅದರಲ್ಲಿಯೂ ಅದರ ಮೊದಲನೆಯ ಸಂಪುಟವನ್ನು ಪ್ರಕಟಿಸಿದ ಸಂದರ್ಭದಲ್ಲಿ ‘ಸಬಾಲ್ಟರ್ನ್’ ಎನ್ನುವ ಪದವನ್ನು ಕನ್‌ಸೈಸ್ ಆಕ್ಸ್‌ಫರ್ಡ್‌ಡಿಕ್ಷನರಿ ನೀಡಿದ ಅರ್ಥ ವ್ಯಾಖ್ಯಾನದ ಮೂಲಕ ವಿಶ್ಲೇಷಿಸುತ್ತಾರೆ ಗ್ರಾಂಸಿಯು ಎತ್ತಿದ್ದ ಮೂಲಭೂತ ಪ್ರಶ್ನೆಗಳನ್ನು ‘ಸಬಾಲ್ಟರ್ನ್’ ಪದದ ಮೂಲಕ ಆರಂಭದಲ್ಲಿ ರಣಜಿತ್ ಗುಹಾ ಅವರು ಎತ್ತದೆ ಇರುವ ವಿಚಾರದ ಬಗ್ಗೆ ಸಾಕಷ್ಟು ಚರ್ಚೆಗಳಾದ ಮೇಲೆ ಗುಹಾ ಅವರು ಮುಂದಿನ ಹಂತಗಳಲ್ಲಿ ಗ್ರಾಂಸಿಯ ಪದ ವ್ಯಾಖ್ಯಾನವನ್ನು ಬಳಸಿಕೊಂಡಿರುವುದನ್ನು ಕಾಣಬಹುದಾಗಿದೆ ಎಂದು ಲಡ್ಡೆನ್ ಅವರು ಅಭಿಪ್ರಾಯಪಟ್ಟಿದ್ದಾರೆ. ಗುಹಾ ಅವರು ಎತ್ತಿರುವ “ಕಲೋನಿಯಲ್ ಎಲಿಟಿಸ್ಟ್” ಮತ್ತು “ಬೂರ್ಜ್ವಾ ನ್ಯಾಶನಲಿಸ್ಟ್ ಎಲಿಟೆಸ್ಟ್” ಎನ್ನುವ ವಿಚಾರಗಳ ಬಗ್ಗೆ ಲಡ್ಡೆನ್ ಅವರು ವಿಶ್ಲೇಷಿಸಿದ್ದಾರೆ. ಲಡ್ಡೆನ್ ಅವರು ಕಲೋನಿಯಲ್ ಎಲಿಟಿಸ್ಟ್ ಎಂದರೆ ಆಕ್ಸ್‌ಫರ್ಡ್‌ಮತ್ತು ಕೇಂಬ್ರಿಡ್ಜ್‌ನ ವಿದ್ವಾಂಸರು ಎಂದು ಬರೆದರು. ಹಾಗೆಯೇ ‘ಉಳಿದವರೆಲ್ಲರೂ’ ಬೂರ್ಜ್ವಾ ನೇಶನಲಿಸ್ಟ್ ಎಲಿಟಿಸ್ಟ್‌ಗಳಾಗಿದ್ದಾರೆ ಎಂದು ಅರ್ಥೈಸುವುದಾದರೆ ಮಾರ್ಕ್ಸಿಸ್ಟಸ್‌ಚರಿತ್ರೆಕಾರರು ಯಾವ ಬಗೆಯ ಚರಿತ್ರೆಕಾರರು ಎಂದು ಬಗ್ಗೆ ಗುಹಾ ಅವರು ಏಕೆ ಚಕಾರವೆತ್ತುವುದಿಲ್ಲ ಎಂಬ ಪ್ರರ್ಶನೆ ಇಲ್ಲಿ ಮುಖ್ಯವಾಗಿದೆ. ಗುಹಾ ಅವರ ‘ಎಲಿಮೆಂಟ್ರಿ ಆಸ್ಪೆಕ್ಟ್ಸ್ ಆಫ್ ಪೆಸೆಂಟ್‌ಇನ್‌ಸರ್ಜೆನ್ಸಿ’ ಎನ್ನುವ ಪುಸ್ತಕದಲ್ಲಿಯೂ ಈ ಬಗೆಯ ಜಾಣತನವನ್ನು ಗುಹಾ ಅವರು ಮಾಡಿದ್ದನ್ನು ಡೇವಿಡ್ ಲಡ್ಡೆನ್ ಟೀಕಿಸುತ್ತಾರೆ. ಗ್ರಾಂಸಿ ಮತ್ತು ಹಾಬ್ಸ್‌ಬಾಮ್ ಅವರನ್ನು ಅಲ್ಲಲ್ಲಿ ಉಲ್ಲೇಖಿಸಿದ್ದರೂ ದಕ್ಷಿಣ ಏಷ್ಯಾದಲ್ಲಿ “ತಳದಿಂದ ಇತಿಹಾಸ ಅಧ್ಯಯನವನ್ನು” ಈಗಾಗಲೇ ಮಾಡಿದ ವಿದ್ವಾಂಸರ ಬಗ್ಗೆಯಾಗಲಿ ಅಥವಾ ಅವರ ಕೃತಿಗಳ ಬಗ್ಗೆಯಾಗಲಿ ಉಲ್ಲೇಖಿಸದಿರುವುದು ಸಮಂಜಸವಲ್ಲ. ಪ್ರಾಬಲ್ಯತೆ, ಯಜಮಾನಿಕೆ, ಪ್ರತಿಬಟನೆ, ದಂಗೆ ಮತ್ತಿತರ ಸೈದ್ಧಾಂತಿಕ ಪರಿಭಾಷೆಗಳು ಸಬಾಲ್ಟರ್ನ್ ವಿದ್ವಾಂಸರ ತೆಕ್ಕೆಗೆ ಬಿದ್ದಿದ್ದನ್ನು ಲಡ್ಡೆನ್ ಗಮನಿಸಿ ಕೆಲವು ಟೀಕೆಗಳನ್ನು ಮಾಡಿದ್ದಾರೆ. ಹಿಂದಿನ ಸಂಶೋಧಕರ‍್ಯಾರು ಮಾಡದ ಸಾಹಸವನ್ನು ತಾವು ಮಾಡುತ್ತಿದ್ದೇವೆ ಎಂದು ಬೀಗುತ್ತಿರುವ ಸಬಾಲ್ಟರ್ನ್ ವಿದ್ವಾಂಸರ ಮೇಲೆ ಹರಿಹಾಯ್ದ ಲಡ್ಡೆನ್ ಅವರು ಹಳೆಯ ಸಂಶೋಧನೆಗಳನ್ನೆಲ್ಲ ‘ಎಲಿಟಿಸ್ಟ್‌’ ಎಂದು ಅರ್ಥೈಸಿದ ಸಬಾಲ್ಟರ್ನ್ ವಿದ್ವಾಂಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದನ್ನು ಗಮನಿಸಬಹುದಾಗಿದೆ.

ಬೇಯ್‌ಲಿ (ಬೇಯ್‌ಲಿ, ಜರ್ನಲ್ ಆಫ್ ಪೆಸೆಂಟ್ ಸ್ಟಡೀಸ್, ೧೯೮೮) ಅವರು ಸಬಾಲ್ಟರ್ನ್ ಅಧ್ಯಯನ ಕ್ರಮದ ಮೇಲೆ ಮಾಡಿದ ವಿಮರ್ಶೆಗಳ ಮುಖ್ಯವಾದ ಅಂಶಗಳು ಈ ಕೆಳಗಿನಂತಿವೆ.

೧. ಸಬಾಲ್ಟರ್ನ್ ಅಧ್ಯಯನಕಾರರು ಯಾವುದೇ ಬಗೆಯ ಹೊಸ ಆಕರಗಳ ಆವಿಷ್ಕಾರವನ್ನು ಮಾಡಲಿಲ್ಲ ಅಥವಾ ಮೌಖಿಕ ಆಕರಗಳ ಸಂಗ್ರಹದ ಮೂಲಕ ವಸಾಹತುಕಾಲದ ಆಕರಗಳಿಗೆ ಹೊಸ ಸೇರ್ಪಡೆಯನ್ನು ಮಾಡಲಿಲ್ಲ. ಹಾಗೆ ನೋಡಿದರೆ ಮಾನವಶಾಸ್ತ್ರಜ್ಞರಾದ ಗೀರ್ಟ್ಜ್, ಟ್ಯೂನರ್, ಸಪಾಲಿನ್ಸ್ ಮತ್ತು ಕೊಹೆನ್ ಅವರಿಂದ ಪ್ರೇರಿತರಾದ ಅಮೆರಿಕನ್ ಚರಿತ್ರೆಕಾರರು ಜನಪ್ರಿಯ ಲಾವಣಿಗಳನ್ನು ಸಂಗ್ರಹಿಸುವ ಮೂಲಕ ಸಾಂಸ್ಕೃತಿಕ ಅಂಶಗಳನ್ನು ಸಾರುವ ಆಕರಗಳನ್ನು ಹೊಂದುವ ಮೂಲಕ ಜನರ ಚರಿತ್ರೆಯನ್ನು ಬರೆಯುವ ಪ್ರಯತ್ನವನ್ನು ಸಬಾಲ್ಟರ್ನ್ ಅಧ್ಯಯನಕಾರರಿಗಿಂತ ಮೊದಲು ಆರಂಭಿಸಿದರು. ಆದರೆ ಸಬಾಲ್ಟರ್ನ್ ಅಧ್ಯಯನಕಾರರು ಈಗಾಗಲೆ ಲಭ್ಯವಿರುವ ಆಕರಗಳಿಗೆ ಹೊಸ ವಿಮರ್ಶೆಯನ್ನು ನೀಡಿರುವುದನ್ನು ಬಿಟ್ಟರೆ ಅಥವಾ ಈಗಾಗಲೆ ಪ್ರಕಟಗೊಂಡ ಲೇಖನಗಳಿಗೆ ಪ್ರತಿಕ್ರಿಯೆಗಳನ್ನು ನೀಡಿರುವುದನ್ನು ಬಿಟ್ಟರೆ ಹೊಸ ಆವಿಷ್ಕಾರವನ್ನೇನೂ ಮಾಡಿಲ್ಲ.

೨. ಸಬಾಲ್ಟರ್ನ್ ಅಧ್ಯಯನಕಾರರು ಅವರೇ ಗಮನಿಸಿರುವ/ಟೀಕಿಸುವ ಎಲೈಟ್ ಚರಿತ್ರೆಕಾರರು ಥಿಯರಿಯನ್ನು ಬಳಸಿದ ರೀತಿಯಲ್ಲಿಯೇ ಥಿಯರಿಯನ್ನು ಬಳಸಿರುವುದನ್ನು ಗಮನಿಸಬಹುದು. ಫೂಕೋ, ಗ್ರಾಂಸಿ ಮತ್ತು ಡೆರಿಡಾ. ಇವರ ವಾದಲಹರಿಯನ್ನು ವೆಬಲರ್ ಅಥವಾ ಮಾರ್ಕ್ಸ್‌‌ನ ವಾದಗಳಿಗೆ ಹೊಸ ನೆಲೆಗಳನ್ನು ನೀಡುವಷ್ಟರ ಮಟ್ಟಿಗೆ ಸಬಾಲ್ಟರ್ನ್ ಅಧ್ಯಯನಕಾರರು ಬಳಸಿದ್ದನ್ನು ಗುರುತಿಸಬಹುದಾಗಿದೆ. ಗ್ರಾಂಸಿಯನ್ನು ಮಾದರಿಯಾಗಿಟ್ಟುಕೊಂಡು ರೂಪಿಸಿದ ಹೆಜಿಮನಿಯ ಅಂಶವು ವಸಾಹತು ಕಾಲಘಟ್ಟದಲ್ಲಿ ನಡೆದವು ಎನ್ನಲಾದ ಪ್ರತಿಭಟನೆಗಳಲ್ಲಿ ಒಂದೇ ತರಹದಲ್ಲಿ ಕಂಡುಬರುವುದಿಲ್ಲ. ಶಾಹಿದ್ ಅಮಿನ್‌, ಗ್ಯಾನೇಂದ್ರ ಪಾಂಡೆ ಅಥವಾ ಡೇವಿಡ್ ಹರ್ಡಿಮನ್ ಅವರು ನೀಡಿರುವ ಮಾಹಿತಿಗಳನ್ನೇ ಗಮನಿಸಿದರೆ ಅನೇಕ ಸಂದರ್ಭಗಳಲ್ಲಿ ಬಡಜನರು ಅಥವಾ ತುಳಿತಕ್ಕೊಳಗಾದವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಎಲೈಟ್ ಸಿದ್ಧಾಂತಗಳನ್ನು ಬಳಸಿರುವುದನ್ನು ಬೇಯ್‌ಲಿ ಅವರು ಎತ್ತಿ ಹಿಡಿದ್ದಾರೆ.

೩. ‘ಸಾಮಾಜಿಕ ಸಂರಚನೆ’ಯಿಂದ ‘ಸಂವೇದನೆ’ಯವರೆಗಿನ ವಾದಗಳು ‘ಸ್ವಾಯತ್ತೆ’ ಮತ್ತು ‘ಭಿನ್ನತೆ’ ಕೇಂದ್ರಿತ ವಾದಗಳು ಎಡ ವಿಚಾರಧಾರೆಗಳ ಸುತ್ತ ಸುತ್ತುತ್ತಿರುವುದು ಅಷ್ಟು ಸರಿಯಲ್ಲ ಎಂದು ಬೇಯ್‌ಲಿ ವಾದಿಸುತ್ತಾರೆ. ಪಾಶ್ಚಿಮಾತ್ಯ ಸಾಮಾಜಿಕ ಸಿದ್ಧಾಂತಗಳ ಪರಿಣಾಮಗಳನ್ನು ಇಲ್ಲಿ ಗಮನಿಸಬೇಕೆಂದು ಬೇಯ್‌ಲಿ ಅವರು ವಾದಿಸುತ್ತ ಲೆವಿ ಸ್ಟ್ರಾಸ್‌ನ ಸೀಮಿಯಾಟಿಕ್ಸ್‌ನ ವಿವಿಧ ಪರಿಧಿಗಳು, ಸಂರಚನೋತ್ತರ ವಾದಿ ಮಾನವಶಾಸ್ತ್ರೀಯ ವಾದಗಳಲ್ಲಿ ಪುನರುತ್ಥಾನಗೊಂಡ ಜನಪದೀಯ ಅಂಶಗಳು ಅದರಲ್ಲಿಯ ಬಹುತ್ವಗಳು, ಬಹು ರ್ಧವನಿಗಳು (ಮೆನಿ ವಾಯ್ಸಸ್) ಈ ಸಂದರ್ಭದಲ್ಲಿ ಪ್ರಮುಖವಾಗಿದೆ ಎಂದೆನ್ನುತ್ತಾರೆ. ಇವು ಇತ್ತೀಚೆಗೆ ಅಮೆರಿಕನ್ ಮಾನವಶಾಸ್ತ್ರೀಯ ಸಂಘಟನೆಗಳ ಸಮ್ಮೇಳನಗಳಲ್ಲಿ ಪ್ರಧಾನ ಸ್ಥಾನ ಪಡೆದಿರುವುದನ್ನು ಬೇಯ್‌ಲಿ ಅವರು ವಿವರಿಸಿದ್ದಾರೆ.

೪. ಸಬಾಲ್ಟರ್ನ್ ಅಧ್ಯಯನದ ಜಾಡುಗಳು ಮಧ್ಯ ಹಾಗೂ ಎಡಪಂಥೀಯ ರಾಜಕಾರಣಗಳ ಸುತ್ತ ಇದೆ ಎಂಬ ಸೂತ್ರದ ಸುತ್ತ ಸುತ್ತುತ್ತಿದೆ ಎಂಬ ಅಂಶ ಮೇಲ್ನೋಟಕ್ಕೆ ಅದು ಸ್ಫೂರ್ತಿಯನ್ನು ನೀಡುವ ಸಾಧ್ಯತೆಗಳನ್ನು ಬೇಯ್‌ಲಿ ಅವರು ಚರ್ಚಿಸಿದ್ದಾರೆ. ಬ್ರಿಟನ್ ಮತ್ತು ಅಮೇರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಕಂಡುಬರುತ್ತಿರುವ ಬಲಪಂಥೀಯ ರಾಜಕಾರಣದ ಪ್ರೇಕ್ಷಕರು ಸಬಾಲ್ಟರ್ನ್ ಗಳೇ ಆಗಿದ್ದಾರೆ ಎಂಬ ವಿಚಾರವನ್ನು ಅವರಿಲ್ಲಿ ಉಲ್ಲೇಖಿಸಿದ್ದಾರೆ. “ಸಂವೇದನೆ” ಎನ್ನುವ ಅಂಶ ಕೇವಲ ಆರ್ಥಿಕತೆಯ ಹಿನ್ನೆಲೆಯಲ್ಲೇ ನಿರ್ವಚನೆಗೆ ಒಳಪಡಬೇಕಗಿಲ್ಲ. ಅದನ್ನು ಬಲಪಂಥೀಯ ಧಾರ್ಮಿಕ ವಿಚಾರಗಳ ಅಭಿವ್ಯಕ್ತತೆಗೆ ಅಥವಾ ಪಿತೃಪ್ರಧಾನ ಮೌಲ್ಯಗಳನ್ನು ಮತ್ತು ರಾಷ್ಟ್ರೀಯತೆಯನ್ನು ಉದ್ದೀಪನಗೊಳಿಸುವುದಕ್ಕೆ ಬಳಸಿದ್ದಾರೆಯೇ ವಿನಾ ಸಬಾಲ್ಟರ್ನ್ ಹೋರಾಟಗಳಲ್ಲಿ ಎಂಬುದನ್ನು ಬೇಯ್‌ಲಿ ಅವರು ಉಲ್ಲೇಖಿಸಿರುವುದು ಗಮನಾರ್ಹ. ಭಾರತದ ಚರಿತ್ರೆ ಬರವಣಿಗೆಯ ಸಂದರ್ಭದಲ್ಲಿ ಸಬಾಲ್ಟರ್ನ್ ವಿದ್ವಾಂಸರು ಪ್ರಕಟಿಸಿದ ಲೇಖನಗಳಲ್ಲಿ ಕಂಡುಬರುವ ಸಂವೇದನೆಗೆ ಸಂಬಂಧಿಸಿದ ವಿಷಯಗಳು, ಬಹುತೇಕ ಹೋರಾಟಗಳಲ್ಲಿ ಕಂಡುಬಂದಂತೆ ಧರ್ಮವೇ ಹೋರಾಟಗಳ ಸಿಂಬಲ್ ಆಗಿರುವ ವಿಚಾರಗಳನ್ನು ನೋಡಬಹುದು. ಪ್ರಸ್ತುತ ಭಾರತದಲ್ಲಿ ಕೋಮುವಾದಿ ರಾಜಕಾರಣವನ್ನೇ ಆಶಯವಾಗಿಟ್ಟುಕೊಂಡಿರುವ ರಾಜಕೀಯ ಸಂಘಟನೆಗಳು ಬಹುಬೇಗನೆ ಇಂತಹ ಸಿಂಬಲ್‌ಗಳನ್ನು ತಮ್ಮವಾಗಿಸಿಕೊಳ್ಳುವ ಸಾಧ್ಯತೆಗಳನ್ನು ಬೇಯ್‌ಲಿ ಅವರು ಗುರುತಿಸುತ್ತಾರೆ. ಇಂತಹ ಸಾಧ್ಯತೆಗಳ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಆಕ್ರಮಣಕಾರಿ ಪ್ರವೃತ್ತಿಗಾಗಿ ಕೋಮುವಾದಿ ರಾಜಕಾರಣಿಗಳು ಸಬಾಲ್ಟರ್ನ್ ಅಂಶಗಳನ್ನು ಬಳಸಿಕೊಳ್ಳುವ ಪ್ರಕ್ರಿಯೆಯನ್ನು ಸಬಾಲ್ಟರ್ನ್ ಅಧ್ಯಯನಕಾರರು ತಡೆಯಲು ಸಾಧ್ಯ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ.

ಇತ್ತೀಚಿನ ಅಂದರೆ ಸ್ವಾತಂತ್ರ‍್ಯೋತ್ತರ ಭಾರತದಲ್ಲಿ ಕಂಡುಬರುತ್ತಿರುವ ಎತ್ನಿಕ್ ಮತ್ತು ಕೋಮುವಾದಿ ಸಂಘರ್ಷಗಳನ್ನು ಸಬಾಲ್ಟರ್ನ್ ಅಧ್ಯಯನಕಾರರು ಯಾವ ರೀತಿಯಲ್ಲಿ ಬಗೆಹರಿಸುತ್ತಾರೆ ಎಂಬ ಇನ್ನೊಂದು ಮಹತ್ವದ ಪ್ರಶ್ನೆಯನ್ನು ಬೇಯ್‌ಲಿ ಅವರು ಎತ್ತಿದ್ದಾರೆ. ರೈತರ ಮತ್ತು ಕಾರ್ಮಿಕರ ಹೋರಾಟಗಳು ಭಾರತದ ಸಂದರ್ಭದಲ್ಲಿ ಶಾವಿನಿಸ್ಟ್ ಚಳವಳಿಗಾಗಿ ರೂಪಾಂತರಗೊಳ್ಳುವ ಪ್ರಕ್ರಿಯೆಗೆ ಯಾವ ರೀತಿ ಸಬಾಲ್ಟರ್ನ್ ಅಧ್ಯಯನಕಾರರು ಸ್ಪಂದಿಸುತ್ತಾರೆ ಎಂದು ಬೇಯ್‌ಲಿ ಅವರ ಹೋರಾಟದ ಹಾದಿಗಳಲ್ಲಿರುವ ಸಂಕೀರ್ಣತೆಯನ್ನು ಚರ್ಚಿಸಿದ್ದಾರೆ. ರೈತಾಪಿ ಅಥವಾ ಕಾರ್ಮಿಕ ವಲಯಗಳಲ್ಲಿನ ಆಂತರಿಕ ವಿದ್ಯಮಾನಗಳಿಂದಾಗಿ ರೂಪುಗೊಂಡ ವರ್ಗದ ಉನ್ನತೀಕರಣಕ್ಕಾಗಿ ಹೀಗೆ ಆಗುತ್ತಿರುವುದೋ ಅಥವಾ ಎಲೈಟ್ ರಾಜಕಾರಣ ಮತ್ತು ಪ್ರಬಲ ಸಂಘಟನೆ/ಸಂಸ್ಥೆಗಳ ಪ್ರವೇಶಗಳಿಂದಾಗಿ ಹೀಗೆ ಆಗುತ್ತಿರುವುದೋ ಎಂಬುದನ್ನು ಚರ್ಚಿಸಬೇಕಾಗಿದೆ. ಒಂದು ವೇಳೆ ಇದೇ ಹಾದಿಯಲ್ಲಿ ಪ್ರತಿಭಟನೆಗಳು ಅಭಿವ್ಯಕ್ತಗೊಂಡರೆ, ಸಬಾಲ್ಟರ್ನ್ ಅಧ್ಯಯನಕಾರರು ಎಲೈಟ್ ರಾಜಕಾರಣದ ಲೋಕವನ್ನು ಮರುವಿಮರ್ಶೆ ಮಾಡಿ ರೈತರ ಮತ್ತು ದುಡಿಯುವ ವರ್ಗಗಳ ಸ್ವಾಯತ್ತ ವಲಯಗಳ ಮಿತಿಗಳನ್ನು ಅರಿಯಲಿ ಎಂದು ಬೇಯ್‌ಲಿ ಅವರು ಸಲಹೆ ಮಾಡಿದ್ದಾರೆ. ೧೯೦೦ರ ದಶಕದಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಕೋಮು ಹೋರಾಟಗಳನ್ನು ವಿಮರ್ಶಿಸುತ್ತ ಗ್ಯಾನೇಂದ್ರ ಪಾಂಡೆ ಅವರು ಕೋಮು ಹೋರಾಟದ ಸಿದ್ಧಾಂತಗಳು ಮುಖ್ಯವಾಗಿ ಎಲೈಟ್ ರಾಜಕಾರಣದ್ದು ಎಂದಿರುವುದನ್ನು ಬೇಯ್‌ಲಿಯವರು ವಿಮರ್ಶಿಸಿರುವುದು ಗಮನಾರ್ಹ. ಕೋಮು ವಾದವು ಎಲೈಟ್ ರಾಜಕಾರಣದ ಅಭಿವ್ಯಕ್ತವಾದರೆ ಕೋಮುಗಲಭೆಗಳಲ್ಲಿ ಪಾಲ್ಗೊಂಡವರೂ ಎಲೈಟ್ ರಾಜಕಾರಣದ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿರುತ್ತಾರೋ ಮತ್ತು ಹಾಗೆಯೇ ಸಬಾಲ್ಟರ್ನ್ ಒಬ್ಬ ತನ್ನ ಸ್ವಾಯತ್ತೆಯನ್ನು ಬಿಟ್ಟುಕೊಟ್ಟು ಎಲೈಟ್ ರಾಜಕಾರಣದ ಭಾಗವಾಗುತ್ತಾನೋ ಎಂದು ಬೇಯ್‌ಲಿ ಅವರು ಪ್ರಶ್ನಿಸಿದ್ದಾರೆ.

೫. ಚಾರಿತ್ರಿಕ ಬದಲಾವಣೆಗಳನ್ನು ಗುರುತಿಸುವುದು ಚರಿತ್ರೆ ಬರವಣಿಗೆಯ ಮುಖ್ಯವಾದ ಆಶಯವಾಗಿದೆ. ಆದರೆ ಸಬಾಲ್ಟರ್ನ್ ಅಧ್ಯಯನಕಾರರಿಗೆ ಮಾತ್ರ ಈ ಬಗೆಯ ಬದಲಾವಣೆಗಳನ್ನು ಗುರುತಿಸಲು ಸಾಧ್ಯವಾಗಿಲ್ಲ. ರೈತರು, ಬುಡಕಟ್ಟು ಜನರು ಅಥವಾ ದುಡಿಯುವ ವರ್ಗಗಳು ತಮ್ಮ ವ್ಯಾಪ್ತಿಯನ್ನು ಬಿಟ್ಟುಕೊಡದೆ ಹಾಗೇ ತಮ್ಮ ಸ್ವರೂಪವನ್ನು ಉಳಿಸಿಕೊಂಡಿದ್ದರ ಬಗ್ಗೆ ಬರೆಯುವ ಸಬಾಲ್ಟರ್ನ್ ಗಳ ಅಧ್ಯಯನ ಕ್ರಮವನ್ನು ಬೇಯ್‌ಲಿ ಅವರು ಪ್ರಶ್ನಿಸಿದ್ದಾರೆ. ಬೇರೆ ಸಮುದಾಯ/ವರ್ಗಗಳು ಸರಕಾದ ಕಾರ‍್ಯ ಸ್ವರೂಪದಿಂದ, ಗೇಣಿ ನಿಯಮಗಳಿಂದ ಅಥವಾ ಮತ್ತಿತರ ಕಾನೂನುಗಳಿಂದ ಪ್ರಭಾವಕ್ಕೆ ಒಳಗಾಗಿದ್ದಾರೆ. ಸಬಾಲ್ಟರ್ನ್ ಅಧ್ಯಯನಕಾರರು ಕಂಡುಕೊಂಡ ರೈತ/ದುಡಿಯುವ ವರ್ಗ ಇತ್ಯಾದಿ ವರ್ಗಗಳನ್ನೇಕೆ ಸಾಂಸ್ಥಿಕ ಅಧಿಕಾರ ವಲಯಗಳಿಂದ ಪ್ರಭಾವಕ್ಕೆ ಒಳಗಾಗಲಿಲ್ಲ ಎಂಬುದು ಇಲ್ಲಿ ಮುಖ್ಯ ಪ್ರಶ್ನೆಯಾಗಿದೆ. ಸಹಜವಾದ ಬದಲಾವಣೆಗಳನ್ನು ಗುರುತಿಸುವಲ್ಲಿ ಸಬಾಲ್ಟರ್ನ್ ಅಧ್ಯಯನಕಾರರು ವಿಫಲವಾಗಿದ್ದನ್ನು ಬೇಯ್‌ಲಿಯವರು ವಿಮರ್ಶಿಸಿರುವುದನ್ನು ನೋಡಬಹುದು. ಬದಲಾಗದ ರೈತ ಸಮುದಾಯಗಳ ಸ್ವರೂಪದಿಂದಲೇ ವಸಾಹತುಶಾಹಿಯ ವಿರುದ್ಧ ರೈತರಿಗೆ ತಮ್ಮ ಸಂವೇದನೆಯನ್ನು ಕಾರ‍್ಯರೂಪಕ್ಕಿಳಿಸಲು ಸಾಧ್ಯವಾಯಿತು ಎನ್ನುವ ರಣಜಿತ್ ಗುಹಾ ಅವರ ಸಿದ್ಧಾಂತವು ಬಲಹೀನವಾಗಿದೆ. ಶಾಹಿದ್ ಅಮಿನ್‌ಅವರು ಗುರುತಿಸಿರುವಂತೆ ಯಾವುದೇ ಬದಲಾವಣೆಗಳಿಲ್ಲದ ರೈತರ ‘ನೈತಿಕ ಆರ್ಥಿಕತೆ’ ಅಥವಾ ‘ಪಾಪ್ಯುಲರ್ ಕಲ್ಚರ್’ (ಜನಪ್ರಿಯ ಸಂಸ್ಕೃತಿ) ಕೂಡ ಈ ನಿಟ್ಟಿನಲ್ಲಿ ಟೀಕೆಗೆ ಒಳಗಾಗಿದೆ.

೬. “ಕೊನೆಗೂ ಯಾಕೆ ಕ್ರಾಂತಿಯಾಗಲಿಲ್ಲ” ಎನ್ನುವ ಪ್ರಶ್ನೆಗೆ “ಕಾಂಗ್ರೆಸ್ ಯಜಮಾನತ್ವ ಮತ್ತು ವಸಾಹತುಗಾರರು ಮಾಡಿದ ದೌರ್ಜನ್ಯ” ಎನ್ನುವ ಉತ್ತರವನ್ನು ಸದಾ ನೀಡುವ ಸಬಾಲ್ಟರ್ನ್ ಅಧ್ಯಯನಕಾರರನ್ನು ಬೇಯ್‌ಲಿ ಅವರು ತಾತ್ವಿಕವಾಗಿ ಆಕ್ರಮಣ ಮಾಡಿದ್ದಾರೆ. ಗೋರಖ್‌ಪುರದಲ್ಲಿ ರೈತರ ಹೋರಾಟವನ್ನು ಬಲಹೀನಗೊಳಿಸಿದ ಗಾಂಧಿ ಮತ್ತು ಕಾಂಗ್ರೆಸ್ ನಾಯಕತ್ವವು ರೈತರ ಹೋರಾಟಕ್ಕೆ ಬೆನ್ನ ಹಿಂದೆ ಚೂರಿ ಹಾಕಿತು. ಗಾಂಧಿಯ ಆದರ್ಶಗಳನ್ನು ಮುಂದಿಟ್ಟುಕೊಂಡು ರೈತರ ನೈಜ ಹೋರಾಟಕ್ಕೆ ಸೇರಿದ ಭೂಮಾಲೀಕರಿಂದಾಗಿ ರೈತ ಹೋರಾಟಕ್ಕೆ ಈ ಗತಿ ಬಂದಿತು. ಇಂತಹ ಆಗ್ರಹ ಗಳಿಂದಲೇ ಅಂತಿಮವಾಗಿ ಬ್ರಿಟಿಶರು ತಮ್ಮ ಅಧಿಕಾರವನ್ನು ಸ್ಥಾಪಿಸಲು ಸಾಧ್ಯವಾಯಿತು ಎನ್ನುವ ಗ್ಯಾನೇಂದ್ರ ಪಾಂಡೆಯ ವರಸೆಯನ್ನೇ (ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೧) ಸುಮಿತ್ ಸರ್ಕಾರ್ ಅವರೂ ಮಾಡಿದ್ದನ್ನು (ಸಬಾಲ್ಟರ್ನ್ ಸ್ಟಡೀಸ್, ಸಂಪುಟ III) ಬೇಯ್‌ಲಿ ಅವರು ಟೀಕಿಸಿದ್ದಾರೆ. ಬೇಯ್‌ಲಿ ಅವರ ಪ್ರಕಾರ ಗ್ರಾಮೀಣಮಟ್ಟದ ವಿದ್ಯಮಾನಗಳು ಬಹುತೇಕವಾಗಿ ಆಂತರಿಕ ಕಲಹಗಳಿಂದಲೇ ನಿರ್ವಚನಕ್ಕೊಳಗಾಗುತ್ತವೆ. ರೈತರ ಧ್ವನಿಗಳು ನಾಶವಾಗುವುದು ಗ್ರಾಮೀಣ ಪ್ರದೇಶದ ಸಣ್ಣ ಭೂಮಾಲೀಕರಿಂದ ಎನ್ನುವುದು ಇಲ್ಲಿ ಮುಖ್ಯ ತಾರ್ಕಿಕತೆಯಾಗಿದೆ. ವಸಾಹತು ಸರಕಾರದ ಮತ್ತು ಕಾಂಗ್ರೆಸ್ ಇಂತಹ ಕಲಹಗಳ ಸಂದರ್ಭಗಳಲ್ಲಿ ತಮ್ಮ ಹಸ್ತಕ್ಷೇಪವನ್ನು ತಾಲೂಕ್‌ದಾರರಂತಹ ಅಥವಾ ತಾಲೂಕ್‌ದಾರರ ಸಹವರ್ತಿಗಳಾಗಿರುವ ಸಣ್ಣ ಭೂಮಾಲೀಕರಂತಹ ತಮ್ಮ ಏಜೆಂಟರ ಮೂಲಕ ಇದ್ದ ಕಲಹವನ್ನೇ ದೊಡ್ಡದು ಮಾಡಲು ಬೆಂಕಿಗೆ ತುಪ್ಪ ಸುರಿದರಷ್ಟೆ ಎಂದು ಬೇಯ್‌ಲಿ ವಾದ ಮಾಡಿದ್ದಾರೆ. ಮೇಲ್ಜಾತಿ ಹಾಗೂ ಕೆಳಜಾತಿಗಳ ಜಮೀನ್ದಾರರ/ಗೇಣಿದಾರರ ಕಲಹಗಳೇ ಇಲ್ಲಿ ಎದ್ದು ಕಾಣುತ್ತವೆ. ಕುಮಿ ರೈತ ಸಂಘಟನೆಯಿಂದ ಮತ್ತು ರಾಮಚಂದ್ರ ಚಳವಳಿಗೆ ಕೆಳಜಾತಿಗಳ ರೈತರನ್ನು ಮೇಲ್ಜಾತಿಯ ರೈತರು ಹೊರಗಿಟ್ಟಿದ್ದನ್ನು ಅವರಿಲ್ಲಿ ಉದಾಹರಿಸುತ್ತಾರೆ. ೧೯೩೦ರ ದಶಕದಲ್ಲಿ ಬಿಹಾರದ ಸ್ವಾಮಿ ಸಹಜಾನಂದ ಅವರ ನೇತೃತ್ವದಲ್ಲಿ ಕೆಳಜಾತಿಗಳ ರೈತರ ಹಿತಾಸಕ್ತಿಗಾಗಿ ಕೈಗೊಂಡ ರೈತ ಹೋರಾಟದಲ್ಲಿ ಮೇಲ್ಜಾತಿಯ ರೈತರು ಯಾವುದೇ ಬೆಂಬಲ ನೀಡದೆ ಇರುವ ವಿಚಾರವನ್ನೂ ಬೇಯ್‌ಲಿ ಅವರು ದಾಖಲಿಸಿದ್ದಾರೆ.

೭. ರೈತರ ಅಹಿಂಸಾತ್ಮಕ ಪ್ರತಿಭಟನೆ ಎನ್ನುವ ಅಂಶವನ್ನೇ ಬೇಯ್‌ಲಿ ಅವರು ಅಲ್ಲಗೆಳೆಯುತ್ತಾರೆ. ಬಹುತೇಕ ಎಲ್ಲ ಸಂಪುಟಗಳಲ್ಲಿಯೂ ಮೇಲಿಂದ ಮೇಲೆ ಉಲ್ಲೇಖಗೊಳ್ಳುವ ರೈತರ ಅಹಿಂಸಾತ್ಮಕ ಪ್ರತಿಭಟನೆಗಳು ಎಂದು ವ್ಯಾಖ್ಯಾನಿಸುವುದಕ್ಕೆ ಮಿತಿಗಳು ಹಲವಿವೆ. ಕೆಲವೊಂದು ಸಂದರ್ಭಗಳಲ್ಲಿ ಕಂಡುಬಂದ ಬಹುದೊಡ್ಡ ಗಲಭೆಗಳಲ್ಲಿ ಕೇವಲ ಅಲ್ಪ ಸಂಖ್ಯೆಯಲ್ಲಿರುವ ಜನರು ಮಾತ್ರ ಹಿಂಸೆ ಹಾದಿ ಹಿಡಿದಿರುತ್ತಾರಷ್ಟೆ. ಅಂತಹ ಘಟನೆಗಳೇ ಅತ್ಯಲ್ಪವಾಗಿದೆ. ೧೯೩೦ರ ದಶಕದಲ್ಲಿದ್ದ ಆರ್ಥಿಕ ಅತಿವೃಷ್ಟಿಯ ಸಂದರ್ಭದಲ್ಲಿ ಕಂದಾಯ ವಿರೋಧಿ ಆಂದೋಳನಗಳಿದ್ದರೂ ಬಹುತೇಕ ರೈತರು ಕಂದಾಯವನ್ನು ಪಾವತಿ ಮಾಡಿದಂಥ ಸಂದರ್ಭಗಳನ್ನು ಬೇಯ್‌ಲಿ ಅವರು ನೀಡುತ್ತಾರೆ.

೮. ಸಬಾಲ್ಟರ್ನ್ ಅಧ್ಯಯನಕಾರರು ಆಗಿಂದಾಗ್ಗೆ ಉಲ್ಲೇಖಿಸುವ “ರೈತರ ಸ್ವಾಯತ್ತೆ ವಲಯಗಳನ್ನು” ಕುರಿತಾದ ವ್ಯಾಖ್ಯಾನವನ್ನು ಬೇಯ್‌ಲಿ ಅವರು ತಳ್ಳಿ ಹಾಕುತ್ತ, ಅದೊಂದು ಯಾಂತ್ರಿಕವಾದ ಮತ್ತು ಸಂಕುಚಿತಗೊಂಡ (ಅಬ್‌ಸ್ಟ್ರ‍್ಯಾಕ್ಟ್‌) ಚರಿತ್ರೆ ಬರವಣಿಗೆ ಕ್ರಮವಷ್ಟೇ ಎಂದು ವಿಮರ್ಶಿಸಿದ್ದಾರೆ. ಯಾವುದೇ ಬಗೆಯ ಚಾರಿತ್ರಿಕ ಬದಲಾವಣೆಯನ್ನು ಇದು ಅರಿಯಲು ಅಶಕ್ತವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

* * *