ಸಬಾಲ್ಟರ್ನ್ ಅಧ್ಯಯನದ ಕ್ರಮದ ವಿಕಾಸ

ಸ್ವಾಯತ್ತೆಯಾಗಿರುವ ಸಬಾಲ್ಟರ್ನ್ ಗಳ ರಾಜಕಾರಣದ ವಲಯಗಳು (ಡೊಮೈನ್‌ಗಳು) ಸಬಾಲ್ಟರ್ನ್ ಅಧ್ಯಯನಗಳ ವಸ್ತು ವಿಷಯವಾಗಿತ್ತು. ೧೯೧೯-೨೨ರ ಸಂದರ್ಭದ ಔಧ್‌ನಲ್ಲಿ ರೈತವರ್ಗವು ಕೈಗೊಂಡ ಚಳವಳಿಯು ಸ್ವಾಯತ್ತೆಯಾಗಿ, ಸ್ವತಂತ್ರವಾಗಿ, ತನ್ನ ಶೋಷಣೆಗೆ ಪ್ರತ್ಯುತ್ತರವಾಗಿ ಭೂಮಾಲೀಕರ ಮತ್ತು ಬ್ರಿಟಿಶರ ವಿರುದ್ಧ ದಂಗೆ ಎದ್ದಿತು ಎಂದು ಗ್ಯಾನೇಂದ್ರಪಾಂಡೆ ಅವರು ವಿವರಿಸಿದ್ದಾರೆ. ಈ ಹೋರಾಟವನ್ನು ಆರಂಭಿಸುವ ಅಥವಾ ಭಾಗವಹಿಸುವ ಯಾವುದೇ ಜವಾಬ್ದಾರಿಯನ್ನು ಹೊರದೆ, ದಂಗೆಯ ನಂತರದ ದಿನಗಳಲ್ಲಿ ಗಾಂಧಿ ಮತ್ತು ನೆಹರೂ ಅವರ ಮಧ್ಯಮವರ್ಗದ ರಾಷ್ಟ್ರೀಯವಾದಿ ಹಿಂಬಾಲಕರು ಪ್ರಸ್ತುತ ದಂಗೆಯು “ರಾಷ್ಟ್ರೀಯ ಐಕ್ಯತೆ”ಯನ್ನು ಮತ್ತು ಗಾಂಧೀಜಿಯವರ “ಅಹಿಂಸಾತ್ಮಕ ನಿಲುವನ್ನು” ಸಮರ್ಥಿಸದೆ ಭೂಮಾಲೀಕರ ವಿರುದ್ಧದ ಹಿಂಸಾತ್ಮಕ ದಂಗೆಯಲ್ಲಿ ರೈತರು ಪಾಲ್ಗೊಂಡಿರುವುದನ್ನು ನೋಡಬಹುದಾಗಿದೆ. (ಗ್ಯಾನೇಂದ್ರ ಪಾಂಡೆ, ಪೆಸೆಂಟ್ ರಿವೋಲ್ಟ್‌ ಆಂಡ್ ಇಂಡಿಯನ್ ನ್ಯಾಶನಲಿಸಂ: ದಿ ಪೆಸೆಂಟ್ ಮೂವ್‌ಮೆಂಟ್ ಇನ್ ಔಧ್, ೧೯೨೧-೨೨, ಸಬಾಲ್ಟರ್ನ್ ಸ್ಟಡೀಸ್, ರಣಜಿತ್ ಗುಹಾ (ಸಂ) ಸಂಪುಟ I, ೧೯೮೨).

೧೯೨೨-೨೩ರ ಸುಮಾರಿಗೆ ದಕ್ಷಿಣ ಗುಜರಾತಿನಲ್ಲಿ ನಡೆದ ‘ದೇವಿ ಚಳವಳಿ’ಯನ್ನು ವಿಶ್ಲೆಷಿಸಿದ ಡೇವಿಡ್ ಹರ್ಡಿಮನ್ ಅವರ ಬರಹ ಈ ನಿಟ್ಟಿನಲ್ಲಿ ಮುಖ್ಯವಾದುದು. ಪಾರ್ಸಿ ಭೂಮಾಲೀಕರ ಆರ್ಥಿಕ ದಬ್ಬಾಳಿಕೆಯನ್ನು ಮತ್ತು ಮದ್ಯ ದೊರೆಗಳ ಪ್ರಭಾವವನ್ನು ಕಿತ್ತೊಗೆಯಲು ಅಲ್ಲಿನ ಆದಿವಾಸಿಗಳು ನಡೆಸಿದ ಹೋರಾಟ ಸ್ವಾಯತ್ತ ಹೋರಾಟವಾಗಿತ್ತು. ಸ್ವತಂತ್ರ ಹೋರಾಟವಾಗಿತ್ತು. ಸಮುದಾಯ ಸುಧಾರಣೆಗಾಗಿ ಆದಿವಾಸಿಗಳು ನಡೆಸಿದ ಹೋರಾಟವಿದು. ಹೋರಾಟದ ಆರಂಭದಲ್ಲಿ ಕಾಂಗ್ರೆಸ್ಸಿನ ಪ್ರಭಾವವೇನೂ ಇರಲಿಲ್ಲ. ಹೋರಾಟ ಒಂದು ಹಂತಕ್ಕೆ ತಲುಪಿದ ಮೇಲೆ ಮಧ್ಯಮ ವರ್ಗದ ಕಾಂಗ್ರೆಸ್ ನಾಯಕರು ಆದಿವಾಸಿಗಳು ನಡೆಸಿದ ಈ ಚಳವಳಿಗೆ ದುಮುಕಿ ಮಾರ್ಗದರ್ಶನ ನೀಡಲು ಆರಂಭಿಸಿದರು. ಇವರು ಆದಿವಾಸಿಗಳಿಗೆ ಗಾಂಧೀಜಿಯ ಕಾರ್ಯಕ್ರಮಗಳನ್ನು ಅನುಸರಿಸಲು ಕರೆ ನೀಡಿದರು. ಈ ಮೂಲಕ ಪಾರ್ಸಿ ಭೂಮಾಲೀಕರ ವಿರುದ್ಧ ಆರ್ಥಿಕ ಬೇಡಿಕೆಗಳನ್ನು ಮುಂದಿಟ್ಟು ಸಮರ ಸಾರಿದ ಆದಿವಾಸಿಗಳ ಹೋರಾಟದ ಅಲೆಯನ್ನು ತಣ್ಣಗೆ ಮಾಡಿದರು. ತುಳಿತಕ್ಕೊಳಗಾದ ಮತ್ತು ಶೋಷಣೆಗೆ ಒಳಗಾದ ಸಬಾಲ್ಟರ್ನ್ ಗುಂಪುಗಳು ಯಾವ ರೀತಿಯಲ್ಲಿ ತಮ್ಮ ಹಕ್ಕಿಗಾಗಿ ಸ್ವಯಂ ಒತ್ತಾಯವನ್ನು ಮಾಡಿದರು ಎಂಬ ವಿವರಗಳನ್ನು ಡೇವಿಡ್ ಹರ್ಡಿಮನ್ ಚರ್ಚಿಸಿರುವುದು ಗಮನಾರ್ಹವಾಗಿವೆ. (ಡೇವಿಡ್ ಹರ್ಡಿಮನ್, ಆದಿವಾಸಿ ಅಸ್ಸರ್ಶನ್ ಇನ್ ಸೌತ್‌ ಗುಜರಾತ್: ದಿ ದೇವಿ ಮೂವ್‌ಮೆಂಟ್ ಆಫ್ ೧೯೨೨-೨೩, ಸಬಾಲ್ಟರ್ನ್ ಸ್ಟಡೀಸ್ ಸಂಪುಟ III, ೧೯೮೪). ಸಬಾಲ್ಟರ್ನ್ ವರ್ಗಗಳಿಗೆ ಪ್ರತ್ಯೇಕ ಐಡೆಂಟಿಟಿ-ಸ್ವಾಯತ್ತೆ ಇರುವುದೆಂದು ವಾದಿಸಿದ ರಣಜಿತ್ ಗುಹಾ ಅವರ ಥಿಯರಿಗೆ ಡೇವಿಡ್ ಹರ್ಡಿಮನ್ ನೀಡಿರುವ ಘಟನೆಗಳು ಇನ್ನೂ ಪುಷ್ಟಿಯನ್ನು ನಿಡಿವೆ. ೧೯೨೧-೨೨ರ ಸಂದರ್ಭದಲ್ಲಿ ಯುನೈಟೆಡ್ ಪ್ರಾಂತ್ಯದ ಗೋರಖ್‌ಪುರದ ರೈತರು ಗಾಂಧಿಯ ಬಗ್ಗೆ ಇಟ್ಟುಕೊಂಡ ಪ್ರತೀಕಗಳಿಗೆ ಮೂಲ ಗಾಳಿಮಾತೆಂದು ಶಾಹಿದ್ ಅಮೀನ್ ಅವರ ಬರಹದಿಂದ ತಿಳಿಯುತ್ತದೆ. ಆ ಭಾಗದ ರೈತರ ಭಾವನೆ, ನಂಬುಗೆ ಮತ್ತು ಅಪೇಕ್ಷೆಗೆ ಅನುಗುಣವಾಗಿ ಅವರು ರೂಪಿಸಿಕೊಂಡ ಗಾಂಧಿಗೂ, ನಿಜವಾದ ಗಾಂಧಿಯ ರಾಜಕೀಯ ಕಾರ್ಯಕ್ರಮಕ್ಕೂ ಅಥವಾ ಅವರ ಅನುಯಾಯಿಗಳು ಕಟ್ಟಿಕೊಡುವ ಗಾಂಧಿಯ ಚಿತ್ರಕ್ಕೂ ಯಾವುದೇ ಸಂಬಂಧಗಳಿರುವುದಿಲ್ಲ. ಗೋರಖ್‌ಪುರದ ರೈತರು ಕಟ್ಟಿಕೊಟ್ಟ ‘ಮಹಾತ್ಮನ’ ಪ್ರತೀಕವನ್ನು ಶಾಹಿದ್ ಅಮೀನ್ ಅವರು ಅನಾವರಣ ಮಾಡಿರುವುದು ಕುತೂಹಲಕಾರಿಯಾಗಿದೆ (ಶಾಹಿದ್ ಅಮೀನ್, ‘ಗಾಂಧಿ ಈಸ್ ಮಹಾತ್ಮ: ಗೋರಖ್‌ಪುರ ಡಿಸ್ಟ್ರಿಕ್ಟ್, ಈಸ್ಟರ್ನ್ ಯು.ಪಿ. ೧೯೨೧-೨೨,’ ಸಬಾಲ್ಟರ್ನ್ ಸ್ಟಡೀಸ್ III , ರಣಜಿತ್ ಗುಹಾ (ಸಂ) ೧೯೮೪).

ಮೇಲ್ಕಂಡ ಮೂರು ಭಿನ್ನ ಘಟನೆಗಳಲ್ಲಿ ರೈತ ವರ್ಗವು ತನ್ನದೇ ಅನುಭವದಿಂದ ಕಂಡುಕೊಂಡ ಸ್ವತಂತ್ರ ಚಿಂತನೆಯ ಮೂಲಕ ತಮ್ಮ ಶೋಷಣೆಯ ವಿರುದ್ಧ ಹೋರಾಟದ ಮಾರ್ಗಗಳನ್ನು ಆವಿಷ್ಕಾರ ಮಡಿಕೊಂಡದ್ದನ್ನು ನಾವು ಗಮನಿಸಬಹುದು. ಎಲೈಟ್ ಮತ್ತು ಸಬಾಲ್ಟರ್ನ್ ಡೊಮೈನ್‌ಗಳು ಸ್ವತಂತ್ರವಾಗಿ ತಮ್ಮ ಕಾರ‍್ಯವ್ಯಾಪ್ತಿಯಲ್ಲಿ ತಮ್ಮ ತಮ್ಮ ಉದ್ದೇಶಗಳಿಗಾಗಿ ಕೆಲಸಗಳನ್ನು ಮಾಡುತ್ತಿದ್ದರೂ, ರಣಜಿತ್ ಗುಹಾ ಅವರು ವಿವರಿಸಿದ ಹಾಗೆ ಕೆಲವೊಮ್ಮೆ ಅವು ಪರಸ್ಪರ ಒಂದೆಡೆ ನಿಂತು ಕೆಲಸ ಮಾಡಿದವು. ಸಬಾಲ್ಟರ್ನ್ ಗಳ ಹೋರಾಟದ ಅಂತಿಮ ಕ್ಷಣದಲ್ಲಿ ಕಾಂಗ್ರೆಸ್‌ನ ಮಧ್ಯಮವರ್ಗದ ಕಾರ್ಯಕರ್ತರ ಪ್ರವೇಶವನ್ನು ಇಂತಹ ಸಂದರ್ಭಗಳಲ್ಲಿ ಕಾಣಬಹುದಾಗಿದೆ. ಇವರು ಸಬಾಲ್ಟರ್ನ್ ಮತ್ತು ಎಲೈಟ್‌ಗಳ ನಡುವೆ ಸೇತುವೆಯಂತೆ ಕೆಲಸ ಮಾಡಿದರು ಎಂದು ಡೇವಿಡ್ ಅರ್ನಾಲ್ಡ್‌ ಅಭಿಪ್ರಾಯಪಟ್ಟಿರುವುದನ್ನು ನಾವು ನೋಡಬಹುದು. ಇದಕ್ಕೆ ಪ್ರತಿಯಾಗಿ ಸಬಾಲ್ಟರ್ನ್ ಗಳು ತಮ್ಮ ಧ್ಯೇಯವನ್ನು ಪೂರ್ಣಗೊಳಿಸಲು ಎಲೈಟ್‌ಗಳ ಸಹಾಯ ಪಡೆದಿದ್ದನ್ನು ಮತ್ತು ಅಂತಹ ಸಂದರ್ಭದಲ್ಲಿ ಎಲೈಟ್‌ಗಳ ಹಿತಾಸಕ್ತಿಯನ್ನು ಸಬಾಲ್ಟರ್ನ್ ಗಳು ಸಾಕಷ್ಟು ಬದಿಗೆ ಸರಿಸಿದ್ದನ್ನು ಸುಮಿತ್ ಸರ್ಕಾರ್ ಅವರು ದಾಖಲಿಸಿದ್ದಾರೆ. ಬಂಗಾಳದ ಉದಾಹರಣೆಯನ್ನು ನೀಡುತ್ತ, ಸ್ವದೇಶಿ ಹಾಗೂ ಅಸಹಕಾರ ಚಳುವಳಿಯ ಸಂದರ್ಭದಲ್ಲಿ ಗಣನೀಯ ಪ್ರಮಾಣದ ಸ್ವಾಯತ್ತೆಯನ್ನು ಪಡೆದಿದ್ದರು ಎನ್ನಲಾದ ಸಬಾಲ್ಟರ್ನ್ ವರ್ಗಗಳು ಎಲೈಟ್ ರಾಜಕಾರಣದಲ್ಲಿನ ಭಿನ್ನವರ್ಗಗಳನ್ನು ಗ್ರಹಿಸಿ, ಅವುಗಳ ಮೂಲಕ ತಮ್ಮ ಶೋಷಣೆಗೆ ಮುಕ್ತಿ ಹೇಳಲು, ತಮಗೆ ನ್ಯಾಯ ದೊರಕಿಸಿಕೊಳ್ಳಲು ಮತ್ತು ಸ್ವತಂತ್ರರಾಗಲು ಹವಣಿಸಿದ್ದನ್ನು ನಾವು ಈ ಸಂದರ್ಭದಲ್ಲಿ ಗುರುತಿಸಬಹುದಾಗಿದೆ. ಈ ಮೂಲಕ ಸಬಾಲ್ಟರ್ನ್ ಗಳು ಎಲೈಟ್‌ಗಳ ‘ಸೂಕ್ತ ಮಾರ್ಗದರ್ಶನ’ದ ಹೊರತಾಗಿ (ಇದ್ದರೂ ಅಲ್ಪ ಪ್ರಮಾಣದಲ್ಲಿ) ವಸಾಹತುಶಾಹಿ ಸರಕಾದ ವಿರುದ್ಧ ಸುದೀರ್ಘ ಕಾಲಘಟ್ಟದವರೆಗೆ ಸಮರ ಸಾರಲು ಸಾಧ್ಯವಾದ ಬಗೆಗಳನ್ನು ನಾವು ಕಾಣಬಹುದಾಗಿದೆ. (ಸರ್ಕಾರ್ ಸುಮಿತ್, “ದಿ ಕಂಡೀಶನ್ಸ್ ಆಂಡ್ ನೇಚರ್ ಆಫ್ ಸಬಾಲ್ಟರ್ನ್ ಮಿಲಿಟೆನ್ಸಿ: ಬೆಂಗಾಲ್ ಫ್ರಂ ಸ್ವದೇಶಿ ಟು ನಾನ್-ಕೋಆಪರೇಶನ್, ಸಿ ೧೯೦೫-೨೨,” ಸಬಾಲ್ಟರ್ನ್ ಸ್ಟಡೀಸ್ III, ರಣಜಿತ್‌ಗುಹಾ (ಸಂ) ೧೯೮೪).

ದಂಗೆಗಳಾಗುವುದು ಕೇವಲ ರಾಜಕೀಯ ಮತ್ತು ಆರ್ಥಿಕ ಒತ್ತಡಗಳಿಗಾಗಿ ಮಾತ್ರವಲ್ಲ, ರೈತರ ದಂಗೆಯೆನ್ನುವುದು ಸಮಷ್ಟಿ ಸಂವೇದನೆಯ ಅಭಿವ್ಯಕ್ತಿಯಾಗಿದೆ. ತಾವು ಆಳುವ ವರ್ಗಕ್ಕೆ ಅಧೀನರಾಗದಿರಲು ಮಾಡಿದ ಹೋರಾಟ ಫಲಕಾರಿಯಾಗದಿರುವುದನ್ನು ಚಿತ್ರಿಸುವುದಷ್ಟ ಸಬಾಲ್ಟರ್ನ್ ಅಧ್ಯಯನದ ಉದ್ದೇಶವಲ್ಲ. ಬದಲಿಗೆ ರೈತ ಸಂವೇದನೆಯ ಭಾಗವಾಗಿರುವ ಹೋರಾಟವು ಒಂದು ಸ್ವಾಯತ್ತೆ ವಲಯವಾಗಿದ್ದನ್ನೂ ಅಭ್ಯಸಿಸುವುದು ಕೂಡ ಈ ಬಗೆಯ ಅಧ್ಯಯನದ ಉದ್ದೇಶವಾಗಿದೆ. ವಸಾಹತು ಕಾಲಾವಧಿಯಲ್ಲಿ ಬ್ರಿಟಿಶ್ ಆಳರಸರು ಮತ್ತು ಸ್ಥಳೀಯ ಎಲೈಟ್‌ಗಳಿಗಿಂತ ಭಿನ್ನ ಸಂರಚನೆಯನ್ನು ಹೊಂದಿದ ಸಬಾಲ್ಟರ್ನ್ ವಲಯಗಳು ಗ್ರಾಂಸಿಯು ಚರ್ಚಿಸಿದ ಇಟಲಿಯ ಪುನರುಜ್ಜೀವನೋತ್ತರ ವಿದ್ಯಮಾನಗಳಿಗಿಂತ ೧೯ ಮತ್ತು ೨೦ನೇ ಶತಮಾನದ ಭಾರತದಲ್ಲಿ ಪ್ರಮುಖವಾಗಿ ಕಂಡುಬಂದಿದ್ದನ್ನು ನೋಡಬಹುದು. ವಸಾಹತುಪೂರ್ವ ಭಾರತದಲ್ಲಿ ಪ್ರವರ್ಧಮಾನದಲ್ಲಿದ್ದ ಊಳಿಗಮಾನ್ಯ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯು ಬಿಟ್ಟುಕೊಟ್ಟ ಅಧಿಕಾರ ಸೂತ್ರಗಳು ಸ್ಥಳೀಯ ಅರಸರ ಮತ್ತು ದೊಡ್ಡ ಭೂಮಾಲೀಕರ ಕೈಗಳನ್ನು ಬಲಪಡಿಸಿದವು. ಹೊರಜಗತ್ತಿಗೆ ಅವರ ಸಂಬಂಧಗಳು ಅಷ್ಟಕಷ್ಟೇ ಇದ್ದರೂ ಅವರಿದ್ದ ವ್ಯವಸ್ಥೆ ಒಂದು ಬಗೆಯಲ್ಲಿ ಹೊರಜಗತ್ತಿನ ವಿದ್ಯಮಾನಗಳಿಂದ ದೂರ ಉಳಿದವು. ಪರಿಣಾಮವಾಗಿ ರೈತರು ಪ್ರಧಾನವಾಗಿದ್ದ ಸ್ಥಳೀಯ ಸಮಾಜವು ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ಬಹಳಷ್ಟು ಸ್ವಾಯತ್ತೆಯನ್ನು ಹೊಂದಿತ್ತು. ೧೯ನೆಯ ಶತಮಾನದ ಅಂತ್ಯ ಭಾಗದವರೆಗೂ ಹೆಚ್ಚು ಕಡಿಮೆ ಇದೇ ವ್ಯವಸ್ಥೆಯನ್ನು ಭಾರತದ ಸಂದರ್ಭದಲ್ಲಿ ಕಂಡುಬಂದಿತು ಎನ್ನುವ ವಿಚಾರವನ್ನು ಡೇವಿಡ್ ಅರ್ನಾಲ್ಡ್ ಅವರು ವಿಮರ್ಶಿಸಿದ್ದಾರೆ. ಡೇವಿಡ್ ಅರ್ನಾಲ್ಡ್‌ಅವರು ಮುಂದುವರಿದು, ಯಾವ ಗಳಿಗೆಯಿಂದ ಭಾರತವು ಅಂತಾರಾಷ್ಟ್ರೀಯ ಮಾರುಕಟ್ಟೆಯ ಅರ್ಥವ್ಯವಸ್ಥೆಯ ಭಾಗವಾಗಿ ಕಾರ‍್ಯ ಚಟುವಟಿಕೆಯನ್ನು ನಿರ್ವಹಿಸಲು ಮುಂದಾಯಿತೋ ಆ ಹೊತ್ತಿನಿಂದ ರಾಜ್ಯ ವ್ಯವಸ್ಥೆಯ ಸ್ವರೂಪ, ನಿರ್ವಹಣಾ ವಿಧಾನ ಮತ್ತು ಮೂಗು ತೂರಿಸುವ ವಿಧಾನ ಇವೆಲ್ಲದರಲ್ಲೂ ಬದಲಾವಣೆ ಕಂಡುಬಂದವು ಎನ್ನುತ್ತಾರೆ. ಸಹಜವಾಗಿ ಸರಕು ಸಾಗಾಟಕ್ರಮಗಳಲ್ಲಿ ಮತ್ತು ಸಂವಹನ ಕ್ರಮಗಳಲ್ಲಿಯೂ ಭಾರಿ ಬದಲಾವಣೆಗಳನ್ನು ನಾವು ಈ ಸಂದರ್ಭದಲ್ಲಿ ಗಮನಿಸಬಹುದು. ಚರಿತ್ರೆಯ ಈ ಕಾಲಘಟ್ಟದಲ್ಲಿ ನಡೆದ ಈ ಬಗೆಯ ಮಹತ್ವದ ಸ್ಥಿತ್ಯಂತರದ ವ್ಯಾಪ್ತಿ ಭಾರತದ ಎಲ್ಲ ಕಡೆ ಒಂದೇ ತರಹದ್ದಾಗಿರಲಿಲ್ಲ. ಸಂಪರ್ಕವೇ ದುಸ್ತರವಾಗಿದ್ದ ಭಾರತದ ಪೂರ್ವಭಾಗಗಳ ಗುಡ್ಡಗಾಡು ಪ್ರದೇಶಗಳಲ್ಲಿ ಬದಲಾವಣೆ ತೀವ್ರಗತಿಯಲ್ಲಿ ಆಯಿತು. ಗತಕಾಲದಿಂದ ಸಾಂಪ್ರದಾಯಿಕವಾಗಿ ಅಧಿಕಾರವನ್ನು ಹೊಂದಿದ್ದ, ಸ್ವಾಯತ್ತ ವಲಯಗಳ ಮುಖ್ಯಸ್ಥರು ಸಾರ್ವಜನಿಕವಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರೂ ಹತ್ತೊಂಬತ್ತನೇ ಶತಮಾನದಲ್ಲಿ ಕಂಡುಬಂದ ಈ ಬದಲಾವಣೆಯನ್ನು ತಡೆಯಲು ಅವರಿಗೆ ಸಾಧ್ಯವಾಗಲಿಲ್ಲ (ಡೇವಿಡ್ ಅರ್ನಾಲ್ಡ್, “ರೆಬೆಲ್ಲಿಯಸ್ ಹಿಲ್‌ಮನ್: ದಿ ಗುಡೇಮ್ ರಾಮ್ವಾ ರೈಸಿಂಗ್ಸ್, ೧೮೩೯-೧೯೨೪,” ಸಬಾಲ್ಟರ್ನ್ ಸ್ಟಡೀಸ್, ಸಂಪುಟ I, ೧೯೮೨). ಉಳಿದ ಬಹುತೇಕ ಪ್ರದೇಶಗಳಲ್ಲಿ ಈ ಬದಲಾವಣೆಗಳನ್ನು ಜನರು ಭಿನ್ನಭಿನ್ನ ರೀತಿಯಲ್ಲಿ ಸ್ವೀಕರಿಸಿದರು. ಕೆಲವೆಡೆ ಇದೊಂದು ಸಹಜ ಪ್ರಕ್ರಿಯೆ ಎಂಬಂತೆ ಸ್ವೀಕರಿಸಿದರೂ, ಉಳಿದೆಡೆ ಮಿಶ್ರ ಪ್ರತಿಕ್ರಿಯೆಗಳು ಕಂಡುಬಂದವು. ಆರ್ಥಿಕ ಮತ್ತು ಆಡಳಿತಾತ್ಮಕ ಬದಲಾವಣೆಗಳು ಮತ್ತು ಗ್ರಾಮೀಣ ಬಂಡವಾಳವು ವ್ಯವಸ್ಥೆಯ ಕೇಂದ್ರ ಸ್ಥಾನವನ್ನು ಅಲಂಕರಿಸಿದ ಪರಿಣಾಮವಾಗಿ ಸ್ಥಳೀಯ ಮಟ್ಟದಲ್ಲಿಯೂ ಸಂಬಂಧಗಳು ಏರುಪೇರಾಯಿತು. ಇಂತಹ ಸಂದರ್ಭದಲ್ಲಿ ಹೊರಜಗತ್ತಿನ ಶಕ್ತಿಗಳೊಡನೆ ವ್ಯವಹರಿಸಲು ಅಥವಾ ಅವರ ಆಕ್ರಮಣಗಳಿಂದ ರೈತ ವರ್ಗಗಳನ್ನು ರಕ್ಷಿಸಲು ಸ್ಥಳೀಯ ಎಲೈಟ್‌ಗಳು ಹೊರಜಗತ್ತಿನ ಶಕ್ತಿಗಳ ದಲ್ಲಾಳಿಗಳಾದರು ಅಥವಾ ಅವರ ಮಿತ್ರರಾದರು. ಈ ವಿಷಮ ಪರಿಸ್ತಿತಿಯಲ್ಲಿ ರೈತರು ಸ್ಥಳೀಯ ಎಲೈಟ್‌ಗಳನ್ನು ನಂಬಿ ಅವರ ಮೂಲಕ ಸ್ಥಳೀಯವಲ್ಲದ ಶಕ್ತಿಗಳೊಂದಿಗೆ ವ್ಯವಹಾರ ನಡೆಸುವಂತಹ ಸಂದರ್ಭದ ನಿರ್ಮಾಣವಾಯಿತು. ಹೊಸ ವ್ಯವಸ್ಥೆಯ ಆರ್ಥಿಕ ವೈರುಧ್ಯಗಳಿಂದ ರೈತವರ್ಗಗಳ ಒಳಗೇ ಒಂದು ಬಗೆಯ ಸಂಘರ್ಷ ಉಂಟಾಯಿತು. ೧೯೨೦ ಮತ್ತು ೧೯೩೦ರ ದಶಕಗಳಲ್ಲಿ ಬಂಗಾಳದ ಸಂದರ್ಭದಲ್ಲಿ ಪಾರ್ಥ ಚಟರ್ಜಿಯವರು ಅಧ್ಯಯನ ಮಾಡಿರುವಂತೆ ಕೆಲವು ರೈತವರ್ಗಗಳು ಪ್ರಖರವಾದ ತಮ್ಮ ‘ಸಮುದಾಯ’ದ(ಕಮ್ಯುನಲ್) ಐಡೆಂಟಿಟಿಯನ್ನು ಹೊರಜಗತ್ತಿನ ಪ್ರಭಾವದಿಂದಾಗಿಯೋ ಅಥವಾ ಆಂತರಿಕ ಜಗತ್ತಿನ ವಿಪ್ಲವಗಳಿಂದಾಗಿಯೋ ಬಿಟ್ಟುಕೊಡಲು ತಯಾರಾಗಲಿಲ್ಲ. ಈ ಬಗೆಯ ಸಾಮುದಾಯಿಕ ಪ್ರಜ್ಞೆ ಅನೇಕ ಬಾರಿ ಧಾರ್ಮಿಕ ಚೌಕಟ್ಟಿನಲ್ಲಿ ವ್ಯಕ್ತವಾಯಿತು. ಪರಿಣಾಮವಾಗಿ ಮುಸ್ಲಿಂ ರೈತರು ಹಿಂದೂ ವ್ಯಾಪಾರಿಗಳ ಮತ್ತು ಲೇವಾದೇವಿಗಾರರ ವಿರುದ್ಧ ಬಂಡೆದ್ದರು. ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ಆಕ್ರಮಣ ಮಾಡಿದರು. ಹೀಗಾಗಿ, ಇದು ರೈತರ ಮತ್ತು ಭೂಮಾಲೀಕರ ನಡುವಿನ ಹೋರಾಟ ಎಂದು ಬಿಂಬಿತವಾಗಿದೆ. ಆದರೆ, ಭಾರತೀಯ ಪರಿಭಾಷೆಯಲ್ಲಿ ಈ ಹೋರಾಟಗಳು ಕೋಮುಗಲಭೆಗಳೆಂದೇ ಬಿಂಬಿತವಾದವು (ಚಟರ್ಜಿ ಪಾರ್ಥ, ‘ಅಗ್ರೇರಿಯನ್ ರಿಲೇಶನ್ಸ್ ಆಂಡ್ ಕಮ್ಯುನಲಿಸಂ ಇನ್ ಬೆಂಗಾಲ್, ೧೯೨೫-೧೯೩೫,’ ಸಬಾಲ್ಟರ್ನ್ ಸ್ಟಡೀಸ್, ಸಂಚಿಕೆ ೧, ರಣಜಿತ್ ಗುಹಾ(ಸಂ), ೧೯೮೨). ಇಲ್ಲಿ “ಧರ್ಮ” ಎನ್ನುವ ಅಂಶ ಸಮಷ್ಟಿಪ್ರಜ್ಞೆಯಾಗಿ ಒಂದು “ವರ್ಗ”ದ ವಿರುದ್ಧ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿತು ಎಂಬ ಅಂಶವನ್ನು ಗಮನಿಸಬಹುದಾಗಿದೆ.

ಮೇಲ್‌ಜಾತಿ/ವರ್ಗಗಳು ಹಿಡಿತದಲ್ಲಿಟ್ಟುಕೊಂಡಿದ್ದ ಸಾಂಪ್ರದಾಯಿಕ ಅಧಿಕಾರ ಸಂಬಂಧಗಳು ೧೯ ಮತ್ತು ೨೦ ನೆಯ ಶತಮಾನಗಳಲ್ಲಿ ಪ್ರವರ್ಧಮಾನಕ್ಕೆ ಬಂದ ವಸಾಹತುಶಾಹಿ ಮತ್ತು ಬಂಡವಾಳಶಾಹಿ ಶಕ್ತಿಗಳು ಬೆಸೆದ ಹೊಸ ವ್ಯವಸ್ಥೆಯಿಂದಾಗಿ ವಿಚಲಿತವಾದವು. ಈ ಹೊಸ ವ್ಯವಸ್ಥೆಯಲ್ಲಿ ಅಧಿಕಾರಕ್ಕೆ ಹತ್ತಿರವಾದ ವರ್ಗವೆಂದರೆ ಭಾರತೀಯ ಬೂರ್ಜ್ವಾಗಳು. ಹಳೆಯ ವ್ಯವಸ್ಥೆಗೆ ಒಗ್ಗಿ ಹೋಗಿದ್ದ ರೈತವರ್ಗಗಳಿಗೆ ಈ ವ್ಯವಸ್ಥೆ ನಿಜಕ್ಕೂ ನುಂಗಲಾಗದ ವ್ಯವಸ್ಥೆಯಾಯಿತು. ರೈತವರ್ಗಗಳ ಐಡೆಂಟಿಟಿ ಮತ್ತು ನಾಯಕತ್ವಗಳು ಈ ಕಾರಣಕ್ಕಾಗಿ ನಿಧಾನವಾಗಿ ನಶಿಸುತ್ತ ಬಂದವು. ಇಂತಹ ಸಂದರ್ಭಗಳಲ್ಲಿ ರೈತವರ್ಗಗಳು ತಮ್ಮ ಅಸ್ತಿತ್ವಕ್ಕಾಗಿ ಮತ್ತು ಹಿತಾಸಕ್ತಿಗೆ ರೈತರ ಸ್ವಾಯತ್ತೆಯನ್ನುಳಿಸಿಕೊಳ್ಳುವುದು ಅನಿವಾರ‍್ಯವಾಗಿತ್ತು.

ರೈತರ ಸ್ವಾಯತ್ತೆಯು ಬಹಳ ಪ್ರಬಲವಾಗಲು ೧೯ ಮತ್ತು ೨೦ನೆಯ ಶತಮಾನಗಳಲ್ಲಿ ಬಹಳಷ್ಟು ಅವಕಾಶಗಳಿದ್ದವು. ಆ ಕಾಲಘಟ್ಟದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಹೋರಾಟಗಳು ರೈತವರ್ಗಕ್ಕೆ ಈ ಬಗೆಯ ಭೂಮಿಕೆಯನ್ನು ಸಿದ್ಧಮಾಡಿಕೊಟ್ಟಿತ್ತು. ಗಾಂಧೀಜಿಯವರ ನಾಯಕತ್ವದಲ್ಲಿ ಮಧ್ಯಮವರ್ಗಗಳು ರೈತರನ್ನು ಒಲಿಸಿಕೊಂಡು ಹೋಗುವ ರಾಷ್ಟ್ರೀಯ ಹೋರಾಟದ ಮಾರ್ಗಗಳನ್ನು ರೂಪಿಸಿದ್ದವು. ಈ ದಿಸೆಯಲ್ಲಿ ಅಲ್ಪಸ್ವಲ್ಪ ಸಫಲತೆಯೂ ಆಗಿತ್ತು. ಆದರೆ ಸಬಾಲ್ಟರ್ನ್ ಅಧ್ಯಯನಗಳ ಪ್ರಕಾರ ಗ್ರಾಂಸಿಯು ಪ್ರತಿಪಾದಿಸಿದ ದ್ವಿತೀಯ ರೈತವರ್ಗದ ನಾಯಕತ್ವದ ಮಾತ್ರ ಈ ಸಂದರ್ಭದಲ್ಲಿ ಕಾಣಲಿಲ್ಲ. ಭಾರತೀಯ ಬೂರ್ಜ್ವಾಗಳು ರೈತವರ್ಗದ ದಾಪುಗಾಲಿಗೆ ತೊಡಕಾದವು. ಗಾಂಧೀಜಿಯವರು ರೈತರ ಒಪ್ಪಿಗೆ/ಸಹಮತದೊಂದಿಗೆ ರೂಪಿಸಬೇಕೆಂದು ಹೊರಟಿದ್ದ ರಾಷ್ಟ್ರೀಯ ಹೋರಾಟವು ಸಮರ್ಥ ನಾಯಕತ್ವದ ಕೊರತೆಯಿಂದ ಸೊರಗಿತು. ಗ್ಯಾನೇಂದ್ರ ಪಾಂಡೆಯವರು ಔಧ್‌ನ ರೈತ ಹೋರಾಟವನ್ನು ವಿಮರ್ಶಿಸಿದಂತೆ, ಕಾಂಗ್ರೆಸ್ ನಾಯಕರಿಗೆ ರೈತರ ಬಹುಮುಖ್ಯವಾದ ಬೇಡಿಕೆಗಳನ್ನು ತಕ್ಷಣವೇ ಈಡೇರಿಸುವುದಕ್ಕಿಂತ ಮುಖ್ಯವಾಗಿ “ರಾಷ್ಟ್ರೀಯ ಐಕ್ಯತೆಗಾಗಿ” ಅಹಿಂಸೆಯನ್ನು ಪಾಲಿಸುವುದು ಮತ್ತು ಅಂತರ್‌ವರ್ಗಗಳ ನಡುವೆ ಸಹಮತ ಏರ್ಪಡಿಸುವುದು ಮುಖ್ಯವಾಯಿತು. ಸಮರ್ಥವಾದ ನಾಯಕತ್ವವಿಲ್ಲದೆ ರೈತವರ್ಗಗಳಿಗೆ ಪರಿಪಕ್ವತೆಯ ರಾಜಕೀಯ ಸಂವೇದನೆಯನ್ನು ರೂಪಿಸಲು ಸಾಧ್ಯವಾಗಲಿಲ್ಲ. ಇದೇ ಸಂದರ್ಭದಲ್ಲಿ ಕಾರ್ಮಿಕ ವರ್ಗವು ತನ್ನ ವಾಸ್ತವಿಕತೆಯ ಹಿನ್ನೆಲೆಯಲ್ಲಾಗಲಿ ಅಥವಾ ತನ್ನ ಸಂವೇದನೆಯನ್ನು ರೂಪಿಸಿಕೊಳ್ಳುವ ಹಿನ್ನೆಲೆಯಲ್ಲಾಗಲಿ ಒಂದು ಶಕ್ತಿಯಾಗಿ ರೂಪುಗೊಳ್ಳಲಿಲ್ಲ. ಇಂತಹ ಸಂದರ್ಭದಲ್ಲಿ ನಾಯಕತ್ವದ ಹೊರೆ ಸಹಜವಾಗಿಯೇ ಎಂಬಂತೆ ಭಾರತೀಯ ಬೂರ್ಜ್ವಾಗಳ ಹೆಗಲ ಮೇಲೆ ಬಿದ್ದಿತು. ಆದರೆ ಅವರು ಈ ಹೊರೆಯನ್ನು ನಿಭಾಯಿಸಲು ಸಂಪೂರ್ಣವಾಗಿ ವಿಫಲವಾದರು. ರೈತರ ಸತ್ವಕಾಲಿ ಹೋರಾಟಗಳನ್ನು ಸಾಮಾನ್ಯೀಕರಣಗೊಳಿಸಿ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟವನ್ನಾಗಿ ಪರಿವರ್ತಿಸಲು ಅವರಿಗೆ ಸಾಧ್ಯವಾಗಲೇ ಇಲ್ಲ.

ಸಬಾಲ್ಟರ್ನ್ ಸಿದ್ಧಾಂತದ ಬೆಳವಣಿಗೆ ಮತ್ತು ವಿವಿಧ ಆಯಾಮಗಳು

ಆಧುನಿಕ ಯುಗವು ಪಾಶ್ಚಾತ್ಯ ಜಗತ್ತಿನಲ್ಲಿ ಸಂಸ್ಥೀಕರಣವಾಗುವುದರ ಜೊತೆಜೊತೆಗೆ ರೈತಾಪಿ ವರ್ಗದ ವಿನಾಶವಾಯಿತು. ಭಾರತದ ಸಂದರ್ಭದಲ್ಲಿ ವಸಾಹತುಶಾಹಿ ಬುದ್ಧಿಮತ್ತೆಯು ರೈತರನ್ನು ಸರಳ, ಬುದ್ಧಿಹೀನ, ಭೂ ಒಡೆಯರಿಂದ ಶೋಷಣೆಗೆ ಒಳಗಾಗುವವ, ವ್ಯಾಪಾರಿಗಳ ಮತ್ತು ಬಡ್ಡಿ ದೊರೆಗಳ ಕೈಯಲ್ಲಿ ಸಿಕ್ಕಿ ನರಳಾಡುವವ, ಅಧಿಕಾರ ಕೇಂದ್ರಗಳಿಗೆ ತಲೆಬಾಗುವವ ಎಂದು ಚಿತ್ರಿಸಿತು. ಹಾಗೆಯೇ ಭಾರತೀಯ ರೈತ ಮಾನವತೀತ ಶಕ್ತಿಗಳಿಗೆ ತಲೆಬಾಗುವವ ಮತ್ತು ವಿವೇಚನೆಯಿಲ್ಲದ ಹೋರಾಟಗಾರ ಎಂದೂ ಕರೆಯಿತು. ಈ ಕಾರಣಕ್ಕಾಗಿಯೇ ಭಾರತೀಯ ‘ಎಲೈಟರು’ ರೈತರನ್ನು ತಮ್ಮ ಸ್ವಾರ್ಥಕ್ಕೆ ಅವರನ್ನು ಬಳಸಿ ಬಿಸಾಕಿತು. ಭಾರತದ ರಾಷ್ಟ್ರೀಯವಾದಿಗಳ ನಿಲುವು ವಸಾಹತುಶಾಹಿಗಳ ನಿಲುವಿಗಿಂತ ಭಿನ್ನವಾಗಿಯೇನಿಲ್ಲದಿರುವುದನ್ನು ಪಾರ್ಥ ಚಟರ್ಜಿಯವರು ತಮ್ಮ ‘ದಿ ನೇಶನ್ ಆಂಡ್ ಇಟ್ಸ್ ಪೆಸೆಂಟ್ಸ್’ (ಚಟರ್ಜಿ ೧೯೯೭:೧೫೮-೧೭೨) ಎನ್ನುವ ಲೇಖನದಲ್ಲಿ ಚರ್ಚಿಸುತ್ತಾರೆ. ತೀವ್ರವಾದ ಬಡತನದ ಕಾರಣದಿಂದಾಗಿ ರೈತರನ್ನು ವಸಾಹತುಶಾಹಿಗಳು ಶೋಷಿಸುತ್ತಾರೆ ಎಂದೆನ್ನುತ್ತಾರೆ ರಾಷ್ಟ್ರೀಯವಾದಿಗಳು. ಈ ಕಾರಣದಿಂದಾಗಿಯೇ ರೈತರಲ್ಲಿ ಅರಿವು ಮೂಡಿ ವಸಾಹತುಶಾಹಿಗಳ ವಿರುದ್ಧ ಪ್ರತಿಭಟಿಸುತ್ತಾರೆ. ಆದರೆ ಅದರಲ್ಲಿ ಬೌದ್ಧಿಕತೆಯ ಅಂಶ ಬಲಹೀನವಾಗಿದ್ದರಿಂದ ರೈತರು ಸೋಲೋಪ್ಪುತ್ತಾರೆ. ರೈತರನ್ನು ತಮ್ಮ ತಮ್ಮ ಆಯಕಟ್ಟಿನ ಕಾರಣಕ್ಕಾಗಿ ಹೇಗೆ ಬೇಕಾದರೂ ಬಳಸಿಕೊಳ್ಳಬಹುದು ಎನ್ನುವ ಅಂಶವನ್ನು ವಸಾಹತುಶಾಹಿಗಳು ಮತ್ತು ರಾಷ್ಟ್ರೀಯವಾದಿಗಳು ಕರಗತ ಮಾಡಿಕೊಂಡಿದ್ದರು ಎನ್ನುವ ಕಟು ಟೀಕೆಯನ್ನು ಪಾರ್ಥ ಚಟರ್ಜಿಯವರು ಮಾಡಿರುವುದನ್ನು ಗಮನಿಸಬಹುದು. ಲೇಖನದ ಈ ಭಾಗದಲ್ಲಿ ಪಾರ್ಥ ಚಟರ್ಜಿಯವರು ಭಾರತದ ಆಧುನಿಕ ಚರಿತ್ರೆಯಲ್ಲಿ ರೈತರ ಪ್ರತಿಭಟನೆಗಳನ್ನು ಮತ್ತು ಸಂವೇದನೆಗಳನ್ನು ಅಭ್ಯಸಿಸಿ ಪ್ರಕಟಿಸಿದ ತಮ್ಮ ಕೃತಿಯ ಆಶಯಗಳನ್ನು ಲೇಖನದ ಈ ಭಾಗದಲ್ಲಿ ವಿವರಿಸಲು ಯತ್ನಿಸಲಾಗಿದೆ.

ಭಾರತದಲ್ಲಿ ವಸಾಹತು ವಿರೋಧಿ ಹೋರಾಟಗಳ ಹಾದಿಗಳು ವಸಾಹತುಶಾಹಿ ಹಾಗೂ ರಾಷ್ಟ್ರೀಯವಾದಿ ಚರಿತ್ರೆ ಬರವಣಿಗೆ ಕ್ರಮಗಳನ್ನು ಪ್ರಶ್ನಿಸಿವೆ. ಭಾರತದ ರೈತ ವರ್ಗಗಳು ಎಲೈಟ್‌ಗಳ ಹಿತಾಸಕ್ತಿಯನ್ನು ಕಾಪಾಡುವ ಅಥವಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ರಾಜಕಾರಣದ ಭಾಗಗಳಾಗಿ ಸಂಕ್ಷಿಪ್ತಗೊಳ್ಳದೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಮತ್ತು ತೀವ್ರತೆಯನ್ನು ವಸಾಹತು ವಿರೋಧಿ ಹೋರಾಟಗಳಲ್ಲಿ ತೋರಿಸಿರುವುದನ್ನು ಗಮನಿಸಬಹುದಾಗಿದೆ. ಈ ಸಂದರ್ಭದಲ್ಲಿ ಪಾರ್ಥ ಚಟರ್ಜಿಯವರು ರೈತ ವರ್ಗದ ಎರಡು ಸ್ವಾಯತ್ತ ವಲಯಗಳನ್ನು (ಡೊಮೈನ್) ಗುರುತಿಸುತ್ತಾರೆ. ವಸಾಹತುಶಾಹಿ ವ್ಯವಸ್ಥೆಯು ಕಟ್ಟಿಕೊಟ್ಟಿರುವ ವ್ಯವಸ್ಥೆಯೊಳಗೆ ಇರುವ ಸಂಘಟಿತ ರಾಜಕೀಯ ಪಕ್ಷಗಳು ಅದೇ ವ್ಯವಸ್ಥೆಯ ಪರಿಧಿಯಲ್ಲಿ ಜನಹೋರಾಟದ ಮೂಲಕ ವಸಾಹತುಶಾಹಿ ಸರಕಾರವನ್ನು ಕಿತ್ತೊಗೆದು ತಮ್ಮ ಅಧಿಕಾರವನ್ನು ಕೇಂದ್ರೀಕರಿಸುವುದು ಒಂದನೇ ಬಗೆಯ ಡೊಮೈನ್. ಎರಡನೇ ಬಗೆಯ ಡೊಮೈನ್ ರೈತ ರಾಜಕೀಯ ಕೇಂದ್ರದ್ದಾಗಿದೆ. ಸಂವಿಧಾನಬದ್ಧ ವ್ಯವಸ್ಥೆಯ ಹೊರಗಡೆ ಕಂಡುಬರುವ ಪ್ರಕ್ರಿಯೆ ಇದು. ಯಾರ ದಾಳಕ್ಕೂ ಬಲಿಯಾಗದ ಈ ವರ್ಗದ ಅಭಿವ್ಯಕ್ತಿಯು ತತ್‌ಕ್ಷಣದ ಪ್ರತಿಕ್ರಿಯೆಯಿಂದ (ಸ್ಪಾಂಟೇನಿಯಸ್) ಕೂಡಿರುತ್ತದೆ.

ಭಾರತದ ರಾಷ್ಟ್ರೀಯ ಹೋರಾಟದಲ್ಲಿ ಕಂಡುಬರುವ ಜನಸಾಮಾನ್ಯರ ಹೋರಾಟಕ್ಕೆ (ಮೂಸ್ ಮೂವ್‌ಮೆಂಟ್) ಎರಡು ಆಯಾಮಗಳಿವೆ. ರೈತ ಕೇಂದ್ರಿತವಾಗಿರುವ ಎರಡು ಡೊಮೈನ್‌ಗಳು ಪರಸ್ಪರ ಜೊತೆಗೂಡಿ ಹೋರಾಡುವುದು ಬಗೆಹರಿಸಲಿಕ್ಕಾಗದ ಒಂದು ದೊಡ್ಡ ವೈರುಧ್ಯವಾಗಿದೆ. ಮೊದಲನೆಯ ಆಯಾಮದ ಪ್ರಕಾರ, ಎರಡು ಡೊಮೈನ್‌ಗಳು ಒಟ್ಟು ಸೇರುವ ಸಂದರ್ಭದಲ್ಲಿ, ವಸಾಹತು ವಿರೋಧಿ ಹೋರಾಟಗಳ ನೇತೃತ್ವವನ್ನು ರಾಷ್ಟ್ರೀಯ ವಾದಿಗಳು ವಹಿಸಿಕಳ್ಳುತ್ತಾರೆ. ಇಂತಹ ಯೋಜನೆಯಲ್ಲಿ ರೈತರನ್ನು ಪೂರ್ಣ ಪ್ರಮಾಣದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ವಸಾಹತೋತ್ತರ ಕಾಲಘಟ್ಟದಲ್ಲಿ ನೇಶನ್ ಸ್ಟೇಟನ್ನು ಸ್ಥಾಪಿಸಲು ರಾಷ್ಟ್ರೀಯವಾದಿಗಳು ಪ್ರಯತ್ನ ಪಡುತ್ತಾರೆ. ರೈತರು ಅಪ್ರಬುದ್ಧರು ಮತ್ತು ಸಂವೇದನಾ ಶೀಲರಲ್ಲದವರು ಎನ್ನುವ ಪೂರ್ವಗ್ರಹದಿಂದ ರಾಷ್ಟ್ರೀಯವಾದಿಗಳು ರೈತರನ್ನು ದುಡಿಸಿಕೊಂಡು ರಾಜ್ಯಕೇಂದ್ರಿತ ವ್ಯವಸ್ಥೆಗಳಿಂದ ದೂರವಿಡುತ್ತಾರೆ. ಇನ್ನೊಂದು ಕಡೆಯಿಂದ ಈ ಆಯಾಮವನ್ನು ನೋಡುವುದಾದರೆ, ಇಂತಹ ಸಂದರ್ಭದಲ್ಲೆಲ್ಲ ರಾಷ್ಟ್ರೀಯವಾದಿ ನಾಯಕರ ವ್ಯೂಹಕ್ಕೆ ಬಿದ್ದ ರೈತ ವರ್ಗವು ರಾಜಕಾರಣವನ್ನು ಆಧುನಿಕ ಬೂರ್ಜ್ವಾ ರಾಜಕೀಯ ನೆಲಗಟ್ಟಿನಲ್ಲಿ ನೋಡದೆ, ತನ್ನ ಸಂವಹನದ ಮೂಲಕ ರಾಷ್ಟ್ರೀಯವಾದಿ ರಾಜಕಾರಣದ ಮಜಲುಗಳನ್ನು ತನ್ನದೇ ಭಾಷೆಯಲ್ಲಿ ಭಾಷಾಂತರಿಸಿಕೊಳ್ಳುತ್ತದೆ. ರೈತರ ಡೊಮೈನ್‌ನಲ್ಲಿ (ವಲಯ) ಇದು ಪರಿಣಾಮಕಾರಿ ಸಂಚಲನೆಯನ್ನು ಉಂಟುಮಾಡಿರುವುದನ್ನು ನಾವು ಗಮನಿಸಬಹುದು. ಹೀಗಾಗಿ ರಾಷ್ಟ್ರೀಯವಾದಿಗಳ ನೇತೃತ್ವದ ಮೊದಲನೆಯ ಡೊಮೈನ್ ಎರಡನೆ ಬಗೆಯ ಡೊಮೈನ್ ಅನ್ನು ಅಂತರ್ಗತ ಮಾಡಿಕೊಂಡು ರೈತರನ್ನು ನಿಷ್ಕ್ರಿಯ ಸ್ತಿತಿಯಲ್ಲಿಟ್ಟಿರುತ್ತಾರೆನ್ನುವ ಅಂಶವು ಸರಿಯಲ್ಲ. ಹೀಗಾಗಿ ರೈತ ವರ್ಗದ ಹೋರಾಟವೆನ್ನುವುದು ಒಂದೇ ಆಶಯದ ಒಂದೇ ಹೋರಾಟವಲ್ಲ. ಬದಲಿಗೆ ರೈತ ಹೋರಾಟಗಳು ಬಹುತ್ವವಾದವು ಮತ್ತು ವಸಾಹತು ಕಾಲಘಟ್ಟದಲ್ಲಂತೂ ಅವು ಭಿನ್ನ ಭಿನ್ನ ನೆಲೆಗಟ್ಟಿನವು.

ಎರಡೂ ಡೊಮೈನ್‌ಗಳು ಒಟ್ಟು ಸೇರುವ ರಾಜಕೀಯ ಇನ್ನೊಂದು ಆಯಾಮದ ಪ್ರಕಾರ, ಇಂತಹ ಸಂದರ್ಭದಲ್ಲಿ ಸರಳರೇಖಾತ್ಮಕ ರೀತಿಯಲ್ಲಿ ರೈತರು ರಾಷ್ಟ್ರೀಯವಾದಿ ಸಂವೇದನೆಗೆ ಒಳಗಾಗುವುದಿಲ್ಲ. ಭಾರತದ ಭಿನ್ನಭಿನ್ನ ಪ್ರದೇಶಗಳಲ್ಲಿ ರೈತ ರಾಜಕಾರಣವು ರಾಷ್ಟ್ರೀಯವಾದಿ ರಾಜಕಾರಣದ ಭಿನ್ನಭಿನ್ನ ವಸ್ತುಸ್ಥಿತಿಗಳನ್ನು ಎದುರಿಸುತ್ತಿರುವುದು ಇದಕ್ಕೆ ಮುಖ್ಯವಾದ ಕಾರಣವಾಗಿದೆ. ಈ ಕಾರಣಕ್ಕಾಗಿಯೇ ಅನೇಕ ರೈತ ಹೋರಾಟಗಳು ಅಲ್ಲಲ್ಲಿ ಸಫಲತೆಯನ್ನು ಕಮಡರೂ, ನಂತರದಲ್ಲಿ ವಿಮುಖವಾಗುತ್ತವೆ. ಉಗ್ರ ಸ್ವರೂಪದ ಅನೇಕ ವಸಾಹತು ವಿರೋಧಿ ರೈತ ಹೋರಾಟಗಳು ನಂತರ ತನ್ನ ಪಥದಿಂದ ದೂರ ಸರಿದು ಸಂಕುಚಿತ ಸಮುದಾಯ ಹೋರಾಟಗಳಲ್ಲಿ (ಸೆಕ್ಟೇರಿಯನ್) ಅಂತ್ಯ ಕಾಣುತ್ತವೆ.

ಮೇಲ್ಕಂಡ ತಾರ್ಕಿಕ ಅಂಶಗಳ ಮೂಲಕ ಪಾಥ್ ಚಟರ್ಜಿ ಅವರು ರೈತ ಹೋರಾಟಗಳ ಕೆಲವು ಆಯಾಮಗಳನ್ನು ಚರ್ಚಿಸುತ್ತ, ರಣಜಿತ್ ಗುಹಾ ಅವರು ಸಬಾಲ್ಟರ್ನ್ ಅಧ್ಯಯನದ ಸೈದ್ಧಾಂತೀಕರಣಕ್ಕೆ ಸಂಬಂಧಿಸಿದಂತ ಎತ್ತಿರುವ ಅಧ್ಯಯನ ಕ್ರಮಗಳನ್ನು ಬೆಂಬಲಿಸುತ್ತಾರೆ. ಇವರು ೧೭೮೩ ರಿಂದ ೧೯೦೦ ರ ಅವಧಿಯೊಳಗೆ ನಡೆದ ರೈತ ಬಂಡಾಯಗಳನ್ನು ಚರ್ಚಿಸುತ್ತ ಅಧಿಕಾರಕ್ಕೆ ಸಂಬಂಧಿಸಿದಂತಿರುವ ದಬ್ಬಾಳಿಕೆ ಮತ್ತು ಶೋಷಣೆಗೆ ರೈತರು ಒಳಗಾಗುತ್ತಾರೆ ಎಂಬ ಅಂಶವನ್ನು ತಿಳಿಸುತ್ತಾರೆ. ಕೇವಲ ಪ್ರತಿರೋಧವನ್ನು ಮಾತ್ರ ಅಧ್ಯಯನಕ್ಕೆ ಒಳಪಡಿಸುವುದಲ್ಲ. ಬದಲಿಗೆ ಪ್ರತಿರೋಧಕ್ಕೆ ಕಾರಣವಾದ ದಬ್ಬಾಳಿಕೆಯ ಪ್ರಕಾರಗಳನ್ನು ಈ ಸಂದರ್ಭದಲ್ಲಿ ಅಧ್ಯಯನಕ್ಕೊಳಪಡಿಸಬೇಕಾಗುತ್ತದೆ. ರೈತರ ಪ್ರತಿರೋಧಕ್ಕೆ ಸಂಬಂಧಿಸಿದ ಬಂಡಾಯಗಳ ಅಧ್ಯಯನಕ್ಕೆ ಪೂರಕವಾದ ಆಕರಗಳು, ದಾಖಲೆಗಳು ಶೋಷಕ ವರ್ಗವು ಹುಟ್ಟುಹಾಕಿರುವವು ಎಂಬ ವಿಚಾರವೂ ಇಲ್ಲಿ ಮುಖ್ಯವಾಗಿದೆ. ಈಗಿರುವ ದಾಖಲೆಗಳು, ಅದಕ್ಕೆ ಸಂಬಂಧಿಸಿದ ವಿವರಗಳು ಶೋಷಕವರ್ಗದ ಜ್ಞಾನವಲಯದ ಅಭಿವ್ಯಕ್ತಿಯಾಗಿದ್ದರಿಂದ ಶೋಷಣೆಗೆ ಒಳಪಟ್ಟ ರೈತಾಪಿ ಜನವರ್ಗವು ಅಧಿಕಾರ ಕೇಂದ್ರದಿಂದ ವಿಮುಖರಾಗಿದ್ದರಿಂದ ರೈತವರ್ಗದ ಸಂವೇದನೆಯ ದಾಖಲಾತಿಯು ಈ ಸಂದರ್ಭದಲ್ಲಿ ಮುಖ್ಯವಾಗುತ್ತದೆ. ರಣಜಿತ್‌ ಗುಹಾ ಅವರು ಈ ಬಗೆಯ ರೈತರ ಪ್ರತಿರೋಧಗಳ ಸಂವೇದನೆಗಳನ್ನು ಅರ್ಥ ಮಾಡಿಕೊಳ್ಳಲು ಸಲಹೆ ಮಾಡಿದ ಆರು ಮುಖ್ಯ ಅಂಶಗಳನ್ನು ಪಾರ್ಥ ಚಟರ್ಜಿ ಅವರು ಅನುಮೋದಿಸುತ್ತಾರೆ. ಈ ಆರು ಅಂಶಗಳ ವಿವರಗಳು ಹೀಗಿವೆ. ಅವು ನಕಾರಾತ್ಮಕತೆ (ನೆಗೇಶನ್), ಅಸ್ಪಷ್ಟತೆ (ಆಂಬಿಗ್ವಿಟಿ), ಕಾರ್ಯವೈಖರಿ (ಮೊಡಾಲಿಟಿ), ಒಗ್ಗಟ್ಟು (ಸಾಲಿಡಾರಿಟಿ), ವಿಚಾರ ಹರಡುವಿಕೆ (ಟ್ರಾನ್ಸ್‌ಮಿಶನ್‌) ಮತ್ತು ಗಡಿ (ಟೆರ‍್ರಿಟೊರಿಯಾಲಿಟಿ)ಗಳನ್ನು ಒಳಗೊಂಡಿವೆ. ಒಂದನೆಯ ಅಂಶವಾದ ನಕಾರಾತ್ಮಕತೆಗೆ ಸಂಬಂಧಿಸಿದಂತೆ ಮಾತಾಡುವುದಾದರೆ, ರೈತರ ಯಾವುದೇ ಪ್ರತಿರೋಧಗಳನ್ನು ತಮ್ಮ ಶೋಷಕರ ವಿರುದ್ಧ ವ್ಯಕ್ತಪಡಿಸುವಲ್ಲಿ ಕಂಡುಬುತ್ತದೆ. ದಬ್ಬಾಳಿಕೆ ನಡೆಸುವವರು ಏನೇ ಹೇಳಿದರೂ, ಮಾಡಿದರೂ ಅದಕ್ಕೆ ಋಣಾತ್ಮಕ ಪ್ರತಿಕ್ರಿಯೆ ನೀಡುವುದು ನಕಾರಾತ್ಮಕ ಸ್ವರೂಪವಾಗಿದೆ. ತಾವು ಭಾವಿಸುವ ದೌರ್ಜನ್ಯದ ಸಂಕೇತಗಳಾದ ಕಂದಾಯ ವಸೂಲಿ ಸಂದರ್ಭದಲ್ಲಿ, ಗೇಣಿಯನ್ನು ನಿಗದಿಪಡಿಸುವ ಸಂದರ್ಭದಲ್ಲಿ ಅಥವಾ ಶೋಷಕರು ಕಾನೂನುಬದ್ಧವಾಗಿ ಶಿಕ್ಷೆ ನೀಡುವ ಹಕ್ಕನ್ನು ಚಲಾಯಿಸುವ ಸಂದರ್ಭದಲ್ಲಿ ರೈತರ ಪ್ರತಿರೋಧಗಳು ನಕಾರಾತ್ಮಕವಾಗಿರುತ್ತದೆ. ಎರಡನೆಯ ಅಂಶವಾದ, ಅಸ್ಪಷ್ಟತೆ ಎನ್ನುವ ಅಂಶವು ಮುಖ್ಯವಾಗಿ ಆಡಳಿತಶಾಹಿಗೆ ಸಂಬಂಧಪಟ್ಟದ್ದಾಗಿದೆ. ರೈತರ ಪ್ರತಿಭಟನೆಗಳ ಮತ್ತು ಅಪರಾಧಗಳ ನಡುವಿನ ವ್ಯತ್ಯಾಸವನ್ನು ತಿಳಿಯಲು ಸಹಜವಾಗಿ ಆಡಳಿತಗಾರರಿಗೆ ಸಾಧ್ಯವಾಗದೆ ಸದಾ ಅವರು ಅಸ್ಪಷ್ಟತೆಯಲ್ಲಿರುತ್ತಾರೆ. ರೈತರ ಪ್ರತಿರೋಧಗಳು ಸಾರ್ವಜನಿಕ ಮತ್ತು ಸಾಮುದಾಯಿಕ ಘಟನೆಗಳಾಗಿರುವುದನ್ನು ಶೋಷಕವರ್ಗವು ಗಮನಿಸುವುದಿಲ್ಲ. ಮೂರನೆಯ ಅಂಶ, ರೈತರ ಪ್ರತಿರೋಧಗಳ ಕಾರ‍್ಯ ವೈಖರಿಯು ಬಹುತೆಕವಾಗಿ ಅಧಿಕಾರಸ್ಥರ ಅಧಿಕಾರ ಚಿಹ್ನೆಗಳನ್ನು ಧ್ವಂಸ ಮಾಡುವುದಾಗಿದೆ. ರೈತರ ಪ್ರತಿರೋಧದ ಈ ಬಗೆಯ ಕಾರ‍್ಯವೈಖರಿಗಳಲ್ಲಿ ಪೊಲೀಸ್ ಸ್ಟೇಶನ್‌ಗಳನ್ನು ಅಥವಾ ಜಮೀನ್ದಾರರ ಗೇಣಿ ಕಚೇರಿಗಳನ್ನು ಅಥವಾ ಲೇವಾದೇವಿಗಾರರ ಮನೆಗಳನ್ನು ನಾಶ ಮಾಡುವುದು ಮುಖ್ಯವಾಗಿರುತ್ತದೆ. ಗುಹಾ ಅವರು ಧ್ವಂಸ ಮಾಡುವುದು, ಸುಡುವುದು, ತಿನ್ನುವುದು ಮತ್ತು ಊಟ ಮಾಡುವುದು ಎನ್ನುವ ಅಂಶಗಳನ್ನು ಅಧಿಕಾರದ ಲಾಂಛನಗಳನ್ನು ಧ್ವಂಸ ಮಾಡಿದ ಸಂದರ್ಭದಲ್ಲಿ ಗುರುತಿಸಿದ್ದಾರೆ. ಕೆಲವು ಸಂದರ್ಭಗಳಲ್ಲಿ ಈ ಪ್ರದೇಶಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ತಾವೇ ತಮ್ಮ ರೆಬೆಲ್ ಅಧಿಕಾರವನ್ನು ಸ್ಥಾಪಿಸಿದ ರೈತರ ಹೋರಾಟಗಳನ್ನು ನಾವು ಗಮನಿಸಬಹುದು. ಒಗ್ಗಟ್ಟು ಎನ್ನುವ ನಾಲ್ಕನೆಯ ಅಂಶವು ರೈತರ ಸಾಮುದಾಯಿಕತೆಯ ಸ್ವರೂಪದ್ದಾಗಿದೆ. ತನ್ನ ವೈರಿಯ ವಿರುದ್ಧ ನಿಂತ ಈ ಗುಂಪಿನ ಒಗ್ಗಟ್ಟು ಮತ್ತು ಸಹಭಾಗಿತ್ವವು ಇಲ್ಲಿ ಮುಖ್ಯವಾಗಿದೆ. ಈ ಸಮುದಾಯದ ಒಗ್ಗಟ್ಟು ಮತ್ತು ಸಹಭಾಗಿತ್ವವು ಒಂದು ಪ್ರತಿರೋಧದ ಘಟನೆಗಿಂತ ಭಿನ್ನವಾಗಿರುತ್ತವೆ ಅಥವಾ ಕೆಲವೊಮ್ಮೆ ಈ ಪ್ರತಿರೋಧಗಳ ನೆಲೆಗಳು ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಭಿನ್ನವಾಗಿರುತ್ತವೆ. ಬಹಳಷ್ಟು ಬಾರಿ ಈ ಬಗೆಯ ಪ್ರತಿರೊಧಗಳಲ್ಲಿ ರಕ್ತ ಸಂಬಂಧಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇದರಿಂದಾಗಿ ಸಾಮುದಾಯಿಕ ಪ್ರಜ್ಞೆಯು ಪ್ರಬಲವಾಗಿದ್ದನ್ನು ಗುರುತಿಸಬಹುದಾಗಿದೆ. ಐದನೆಯ ಅಂಶವಾದ ವಿಚಾರ ಹರಡುವಿಕೆ ಎನ್ನುವ ಅಂಶವು ರೈತರ ಪ್ರತಿರೋಧದ ಎಲ್ಲೆಯನ್ನು ವಿಸ್ತರಿಸಿದೆ. ಅಧಿಕಾರಸ್ಥರು ಊಹಿಸಲಿಕ್ಕೂ ಸಾಧ್ಯವಾಗದ ರೀತಿಯಲ್ಲಿ ವಿಚಾರಗಳು ಟ್ರಾನ್ಸ್‌ಮಿಟ್ ಆಗುತ್ತಿರುತ್ತವೆ. ಉದಾಹರಣೆಗೆ, ಗಾಳಿ ಸುದ್ದಿಗಳು ಬಹಳ ಬೇಗ ಧುತ್ತೆಂದು ಸಮುದಾಯಗಳೊಳಗೆ ವಿದ್ಯುತ್ತಿನಂತೆ ಸಂಚರಿಸಿ ರೈತರು ತತ್‌ಕ್ಷಣವೇ ಪ್ರತಿಭಟನೆಯನ್ನು ಮಾಡಲು ಕಾರಣವಾಗುತ್ತವೆ. ಬಹುತೇಕ ಸಂದರ್ಭಗಳಲ್ಲಿ ಇಂತಹ ಗಾಳಿಸುದ್ದಿಗಳ ಉಗಮ ನಿಗೂಢವಾಗಿರುತ್ತದೆ. ಕೊನೆಯದಾಗಿ, ಯಾವುದೇ ಪ್ರತಿರೋಧಗಳು ಮತ್ತು ಪ್ರತಿಭಟನೆಗಳು ನಿರ್ದಿಷ್ಟವಾದ ಗಡಿಗಳಲ್ಲಿ ನಡೆಯುತ್ತವೆ. ಅನೇಕ ಸಂದರ್ಭಗಳಲ್ಲಿ ತನ್ನ ಶತ್ರುವಿನ ಗಡಿಯೇ ರೈತರ ಪ್ರತಿರೋಧದ ಎಲ್ಲೆಗಳಾಗಿರುತ್ತವೆ. ರಕ್ತ ಸಂಬಂಧ ಗಡಿಗಳೂ ಈ ಹಿನ್ನೆಲೆಯಲ್ಲಿ ಮುಖ್ಯವಾಗಿರುತ್ತವೆ. ಈ ಗಡಿಗಳೇ ರೈತ ಸಮುದಾಯದ ಐಕ್ಯಕ್ಕೆ ಕಾರಣವಾಗಿರುತ್ತವೆ.

ರೈತರ ಸಂವೇದನೆಗಳು ಬೂರ್ಜ್ವಾ ಸಂವೇದನೆಗಳಿಗೆ ವಿರುದ್ಧವಾಗಿರುತ್ತದೆ ಎಂದು ಪಾರ್ಥ ಚಟರ್ಜಿ ಅವರು ವಿಮರ್ಶಿಸಿದ್ದಾರೆ. ಬೂರ್ಜ್ವಾ ಸಂವೇದನೆಗಳು ವ್ಯಕ್ತಿಗತವಾಗಿರುತ್ತದೆ. ವ್ಯಕ್ತಿಕೇಂದ್ರವಾಗಿರುವ ಈ ಸಂವೇದನೆಗಳ ಮೂಲಕ ಬೂರ್ಜ್ವಾಗಳು ತಮ್ಮ ತಮ್ಮ ಹಿತಾಸಕ್ತಿಗಳನ್ನು ಪ್ರತಿನಿಧೀಕರಿಸಲು ತಮ್ಮ ತಮ್ಮೊಳಗೆ ಒಪ್ಪಂದವನ್ನು ಮಾಡಿಕೊಂಡಿರುತ್ತಾರೆ. ತಮ್ಮ ತಮ್ಮ ಸಾಮಾನ್ಯ ಹಿತಾಸಕ್ತಿಗಳಾಗಿ ಅವರೆಲ್ಲ ಒಪ್ಪಂದಗಳನ್ನು ಮಾಡಿಕೊಂಡು ಪರಸ್ಪರ ಸಹಕರಿಸುತ್ತಿರುತ್ತಾರೆ. ದಂಗೆಯೆದ್ದ ರೈತವರ್ಗಗಳಲ್ಲಿ ಇದಕ್ಕೆ ವಿರುದ್ಧವಾದ ನೆಲೆಯಲ್ಲಿ ಸಂವೇದನಾ ನೆಲೆಗಳಿರುತ್ತವೆ. ವೈಯಕ್ತಿಕ ನೆಲೆಯಲ್ಲಿ ಅಥವಾ ವ್ಯಕ್ತಿಕೇಂದ್ರಿತ ನೆಲೆಗಳಲ್ಲಿ ಅವರ ಸಂವೇದನೆಗಳಿಲ್ಲದೆ ಸಾಮುದಾಯಿಕ ನೆಲೆಗಟ್ಟಿನಲ್ಲಿರುತ್ತದೆ ಎನ್ನುವುದು ಗಮನಾರ್ಹ. ವ್ಯಕ್ತಿಗಳ ನಡುವಿನ ಒಪ್ಪಂದಕ್ಕಿಂತ ಸಮುದಾಯದ ಪ್ರತಿನಿಧಿಗಳಾಗಿ ರೈತ ವರ್ಗವು ಕಾರ್ಯ ನಿರ್ವಹಿಸುವುದು.

ಇಲ್ಲಿಯವರೆಗೆ ಬೂರ್ಜ್ವಾ ಸಂವೇದನೆಗಳ ಮೂಲಕ ರೈತ ವರ್ಗದ ಸಂವೇದನೆಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದ ಕ್ರಮಕ್ಕಿಂತ ರೈತರ ಸಂವೇದನೆಯ ಮೂಲಕವೇ ರೈತರ ಡೋಮೈನ್ ಅನ್ನು ಅರ್ಥ ಮಾಡಿಕೊಳ್ಳುವ ಕ್ರಮದ ಬಗ್ಗೆ ವ್ಯಾಖ್ಯಾನಿಸಿದ ರಣಜಿತ್ ಗುಹಾ ಅವರ ಕ್ರಮವನ್ನು ಪಾರ್ಥ ಚಟರ್ಜಿ ಅವರು ಅನುಮೋದಿಸಿದ್ದಾರೆ. ಈ ಮೂಲಕ ಅವರು ಬೂರ್ಜ್ವಾ ಅರ್ಥಶಾಸ್ತ್ರಜ್ಞ ಮತ್ತು ಸಮಾಜ ಶಾಸ್ತ್ರಜ್ಞರನ್ನು ಮಾತ್ರವಲ್ಲ “ಅಗ್ರೇರಿಯನ್” ಪ್ರಶ್ನೆಗಳನ್ನು ಎತ್ತುತ್ತಿರುವ ಮಾರ್ಕ್ಸಿಸ್ಟ್ ವಿದ್ವಾಂಸರಿಗೂ ಸವಾಲನ್ನು ಎಸೆದಿದ್ದಾರೆ.

ರೈತರ ಅನುಭವ ಮತ್ತು ಅವರ ದೃಷ್ಟಿಕೋನವನ್ನು ಈಗಿರುವ ಅಧ್ಯಯನ ಕ್ರಮದಲ್ಲಿ ವಿವರಿಸಲು ಅಸಾಧ್ಯ ಎನ್ನುವ ಹಿನ್ನೆಲೆಯಲ್ಲಿ ರೈತರ ಸಂವೇದನೆಗೆ ಸಂಬಂಧಿಸಿದ ಚರಿತ್ರೆ ಬರವಣಿಗೆ ಅಗತ್ಯವಿದೆ. ಸಬಾಲ್ಟರ್ನ್ ಅಧ್ಯಯನದ ಸಂದರ್ಭದಲ್ಲಿ ಆಗಾಗ್ಗೆ ಉಲ್ಲೇಖವಾಗುವ ರೈತ ‘ಸಮುದಾಯ’ ಎನ್ನುವ ತಾತ್ವಿಕ ಶಬ್ದಕ್ಕೆ ನಿರ್ದಿಷ್ಟ ಅರ್ಥವನ್ನು ರಣಜಿತ್ ಗುಹಾ ಆರೋಪಿಸಿಲ್ಲದಿರುವುದನ್ನು ಗಮನಿಸಬಹುದಾಗಿದೆ. ಕುಲ, ಬುಡಕಟ್ಟು, ಜಾತಿ, ಹಳ್ಳಿ ಮುಂತಾದ ರೂಪದಲ್ಲಿ ರೈತ ಸಮುದಾಯದ ಅಭಿವ್ಯಕ್ತಿಯನ್ನು ಕಾಣಬಹುದಾಗಿದೆ. ‘ಅವರು’ ಮತ್ತು ‘ನಾವು’ ಎನ್ನುವ ಸಮೀಕರಣದ ಮೂಲಕ ಸಮುದಾಯವು ಕಾಲ ಕಾಲಕ್ಕೆ, ಸಂದರ್ಭದಿಂದ ಸಂದರ್ಭಕ್ಕೆ ರಚನೆ ಹಾಗೂ ಪುನಾರಚನೆಗೊಳ್ಳುವುದು. ಕೇವಲ ಒಗ್ಗಟ್ಟು ಮತ್ತು ಸಹಭಾಗಿತ್ವಕ್ಕೆ ಸಂಬಂಧಿಸಿದಂತೆ ಮಾತ್ರವಲ್ಲ ಪ್ರತಿಭಟನಾಕಾರರ ನಡುವಿನ ಒಳಜಗಳ ಮತ್ತು ವಿಶ್ವಾಸ ದ್ರೋಹಗಳಿಗೆ ಸಂಬಂಧಿಸಿದಂತೆ ಕೂಡ ಸಮುದಾಯದ ಅರ್ಥದ ವಿನ್ಯಾಸವು ಬದಲಾಗುತ್ತಿರುತ್ತದೆ. ೧೭೮೩ರ ರಂಗಾಪುರ ದಂಗೆಯಲ್ಲಿ ರೈತರು ತಮ್ಮ ಪಕ್ಕದ ಹಳ್ಳಿಯ ರೈತರನ್ನುದ್ದೇಶಿಸಿ “ನೀವು ನಮ್ಮ ಅಣ್ಣತಮ್ಮಂದಿರು. ಈ ಸಮರದಲ್ಲಿ ನೀವು ಪಾಲ್ಗೊಳ್ಳಿ” ಎನ್ನುವ ಮಾತನ್ನು ಚರಿತ್ರೆಕಾರರು ದಾಖಲು ಮಾಡಿದ್ದಾರೆ. ಈ ವಿನ್ಯಾಸವನ್ನು ಭಾರತದ ನೆಲದಲ್ಲಿ ನಡೆದ ಭಿನ್ನಭಿನ್ನ ರೈತ ಹೋರಾಟಗಳಲ್ಲಿ ನೋಡಬಹುದಾಗಿದೆ. ಇದು ಒಪ್ಪಂದವಲ್ಲ. ಆದರೆ ಪರಸ್ಪರರು ತಮಗಾಗಿ ಮಾಡಿಕೊಂಡ ಕರ್ತವ್ಯದ ಭಾಗವಾಗಿದೆ. ೧೮೭೫ರ ಡೆಕ್ಕನ್‌ ದಂಗೆಯ ಸ್ವರೂಪದಲ್ಲಿ ಇದರ ಇನ್ನೊಂದು ವಿನ್ಯಾಸವನ್ನು ನೋಡಬಹುದಾಗಿದೆ. ಅಲ್ಲಿ ಒಗ್ಗಟ್ಟಿನಿಂದ ಕಾದಾಡುತ್ತಿದ್ದ ಕಲ್ಲ ಮತ್ತು ಅಕೋಲ ಎನ್ನುವ ಹಳ್ಳಿಗಳ ರೈತರು ಕಾರಣಾಂತರಗಳಿಂದ ಪರಸ್ಪರ ವಿಮುಖರಾಗುತ್ತಾರೆ. ಆ ಸಂದರ್ಭದಲ್ಲಿ ಕಲ್ಲು ಗ್ರಾಮದವರು ಅಕೋಲ ಗ್ರಾಮದವರೊಂದಿಗೆ ಪರಸ್ಪರ ಹಿತಾಸಕ್ತಿಗಳ ಬಗ್ಗೆ ಮಾತನಾಡುವುದಿಲ್ಲ. ಬದಲಿಗೆ, ಅಕೋಲ ಗ್ರಾಮದವರು ಕಲ್ಲ ಗ್ರಾಮದವರ ವೈರಿಗಳ ಜೊತೆ ಸೇರಿಕೊಳ್ಳುವುದು ಸರಿಯಲ್ಲ. ಏಕೆಂದರೆ ಕಲ್ಲ ಮತ್ತು ಅಕೋಲ ಗ್ರಾಮದವರು ಒಂದೇ ಗ್ರಾಮಕ್ಕೆ ಸೇರಿದವರು ಎಂದು ಇಲ್ಲಿಯವರೆಗೆ ನಂಬಿಕೊಂಡಿದ್ದರಿಂದ ಈ ಹಾದಿ ಒಳ್ಳೆಯದಲ್ಲ ಎಂದು ಅವರೆನ್ನುತ್ತಾರೆ. ಗ್ಯಾನೇಂದ್ರ ಪಾಂಡೆ ಅವರು ತಮ್ಮ “ಎನ್‌ಕೌಂಟರ್ಸ್‌ ಆಮಡ್ ಕಲಾಮಿಟೀಸ್ : ಹಿಸ್ಟರಿ ಆಫ್ ನಾರ್ಥ್ ಇಂಡಿಯನ್ ಕಸ್ಟ್ ಇನ್ ದಿ ನೈನ್‌ಟೀನ್ತ್ ಸಂಚುರಿ” ಎನ್ನುವ ಲೇಖನದಲ್ಲಿ (ಸಬಾಲ್ಟರ್ನ್ ಸ್ಟಡೀಸ್ III, ಓ.ಯು.ಪಿ. ೧೯೮) ಉತ್ತರ ಪ್ರದೇಶದ ರಜಪೂತ ಭೂ ಒಡೆಯರು ಮತ್ತು ಮುಸ್ಲಿಮ್ ನೇಕಾರರಿಗೆ ಸಂಬಂಧಿಸಿದಂತೆ ನೋಡಿರುವ ಸಂಕೀರ್ಣ ಸಂಬಂಧವನ್ನು ಪಾರ್ಥ ಚಟರ್ಜಿ ಅವರು ಬೆಂಬಲಿಸಿದ್ದಾರೆ. ಪರಸ್ಪರ ವರ್ಷವಿಡೀ ಕಾದಾಡುತ್ತಿದ್ದ ಈ ಎರಡು ಸಮುದಾಯಗಳು ೧೯ನೇ ಶತಮಾನದ ಮಧ್ಯಭಾಗದಲ್ಲಿ “ಹೊರಗಿನವರು” ತಮ್ಮ ಗ್ರಾಮಕ್ಕೆ ಆಕ್ರಮಣ ಮಾಡಿದಾಗ ಪರಸ್ಪರ ಸೇರಿ, ಹೊರಗಿನವರನ್ನು ಹಿಮ್ಮೆಟ್ಟಿಸಿದರು ಒಮ್ಮೆ ಶತ್ರುವನ್ನು ಹಿಮ್ಮೆಟ್ಟಿಸಿದ ಮೇಲೆ ಈ ಎರಡೂ ಸಮುದಾಯಗಳು ಮತ್ತೆ ತಮ್ಮಲ್ಲೇ ಕಚ್ಚಾಡಿಕೊಳ್ಳಲು ಮತ್ತೆ ಆರಂಭಿಸಿದವು. ‘ನಾವು’ ಮತ್ತು ‘ಅವರು’ ಎನ್ನುವ ಅಂಶ ಕೂಡ ರೈತ ಸಮುದಾಯಗಳಲ್ಲಿ ಸಂದರ್ಭದಿಂದ ಸಂದರ್ಭಕ್ಕೆ ಬದಲಾಗುವ ಮಾದರಿಗಳನ್ನು ಈ ಸಂದರ್ಭದಲ್ಲಿ ಅವಲೋಕಿಸಬಹುದಾಗಿದೆ.

ಭಾರತೀಯ ಸಂದರ್ಭದಲ್ಲಿ ಜಾತಿ ಪದ್ಧತಿಯ ರೈತ ಸಮುದಾಯಗಳ ಐಡೆಂಟಿಟಿ ಮತ್ತು ಭಿನ್ನತೆಗಳನ್ನು ಗುರುತಿಸಲು ಸಹಾಯವಾಗಿದೆ. ಶ್ರೇಣೀಕೃತ ವ್ಯವಸ್ಥೆಯಲ್ಲಿ ಜಾತಿ ವ್ಯವಸ್ಥೆಯಿದ್ದರೂ, ಅವುಗಳಲ್ಲಿ ಭಿನ್ನತೆಗಳಿದ್ದರೂ ಅವುಗಳ ನಡುವೆ ಒಪ್ಪಿತ ಮೌಲ್ಯಗಳು ಸಾಮಾನ್ಯವಾಗಿದ್ದು, ಅವು ಪರಸ್ಪರರನ್ನು ಬೆಸೆದಿವೆ. ಆದರೆ ಶ್ರೇಣೀಕೃತ ವ್ಯವಸ್ಥೆಯ ತಳಗಿನ ಜಾತಿಗಳು ಇತ್ತೀಚೆಗೆ “ಒಪ್ಪಿತ ಮೌಲ್ಯಗಳನ್ನು” ಒಪ್ಪಲಿಕ್ಕೆ ಸಿದ್ಧವಿರದ ಘಟನೆಗಳನ್ನು ನಾವು ಗಮನಿಸಬಹುದು. ಸಾಮಾಜಿಕ ಸಂಬಂಧಗಳನ್ನು ಗುರುತಿಸುವ ಈ ಪ್ರಕ್ರಿಯೆಯಲ್ಲಿ ದಬ್ಬಾಳಿಕೆ ಮಾಡುವ ಅಥವಾ ಅದಕ್ಕೆ ಪ್ರತಿಯಾಗಿ ಪ್ರತಿಭಟನೆ ತೋರುವ ಈ ಸಂದರ್ಭದಲ್ಲಿ ಜಾತಿಯ ಚರಿತ್ರೆಯ ಜೊತೆಗೆ ರೈತರ ಪ್ರತಿರೋಧಗಳನ್ನು ತಳಕು ಹಾಕುತ್ತ, ಆ ಮೂಲಕ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬಹುದಾಗಿದೆ ಎಂದು ಪಾರ್ಥ ಚಟರ್ಜಿ ಅವರು ಅಭಿಪ್ರಾಯಪಟ್ಟಿದ್ದಾರೆ. ಜಾತಿ ಎನ್ನುವ ಪರಿಭಾಷೆಯ ಮೂಲಕ ಬಹುಬಗೆಯ ಸಾಮಾಜಿಕ ಗುಂಪುಗಳ ಐಡೆಂಟಿಟಿ ಮತ್ತು ಭಿನ್ನತೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹೆಚ್ಚಿನ ಭಾರತೀಯ ಭಾಷೆಗಳಲ್ಲಿ ಉಪಯೋಗಿಸಲ್ಪಡುವ ಜಾತಿ ಎನ್ನುವ ಪರಿಭಾಷೆಯ ಮೂಲಕ ಕೇವಲ ಜಾತಿಯನ್ನು ಮಾತ್ರ ನೋಡದೆ, ಸಮುದಾಯಗಳು ಜಾತಿಗಳಾಗಿ ಮಾರ್ಪಾಡಾಗುವ ಪ್ರಕ್ರಿಯೆಯನ್ನು ಬುಡಕಟ್ಟು, ಜನಾಂಗ, ಭಾಷಿಕ ಗುಂಪುಗಳು, ಧಾರ್ಮಿಕ ಗುಂಪುಗಳು ರಾಷ್ಟ್ರೀಯತೆಗಳಾಗಿ ಮತ್ತು ರಾಷ್ಟ್ರಗಳಾಗಿ ರೂಪುಗೊಳ್ಳುವ ಪ್ರಕ್ರಿಯೆಗಳನ್ನು ಅವಲೋಕಿಸಬಹುದಾಗಿದೆ. ಜಾತಿ ಪ್ರಕಾರಗಳ ಮಾದರಿಯಲ್ಲಿರುವ ಈ ಬಗೆಯ ಗುಂಪುಗಳು ಕೇವಲ ವೈದಿಕಶಾಹಿಗಳಿಗೆ ಸಡ್ಡು ಹೊಡೆದ ಬೌದ್ಧರಿಗೆ, ಜೈನರಿಗೆ ಅಥವಾ ‘ಮಧ್ಯಕಾಲೀನ’ ಭಕ್ತಿಪರಂಪರೆಯ ಪಂಥಗಳಿಗೆ ಮಾತರ ಸೀಮಿತವಾಗಿರದೆ ಭಾರತೀಯ ಮುಸ್ಲಿಮ್ ಮತ್ತು ಕ್ರೈಸ್ತರಿಗೆ ಕೂಡ ಸಂಬಂಧಪಟ್ಟವುಗಳಾಗಿವೆ. ಜಾತಿಗಳು ಮತ್ತು ಜಾತಿ ತರಹದ ವ್ಯವಸ್ಥೆಗಳ ಅಧ್ಯಯನದ ಮೂಲಕ ದಬ್ಬಾಳಿಕೆ ಮತ್ತು ಅದಕ್ಕೆ ಪ್ರತಿರೋಧವನ್ನು ಒಡ್ಡುವ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ ಎಂದು ಪಾರ್ಥ ಚಟರ್ಜಿಯವರು ವಾದಿಸಿದ್ದಾರೆ.

ರೈತ ಸಮುದಾಯದ ಆಂತರಿಕ ಸಂರಚನೆಯನ್ನು ಅಭ್ಯಸಿಸಿದರೆ ಮುಖ್ಯವಾಗಿ ಬುಡಕಟ್ಟೇತರ ಜನಸಮುದಾಯಗಳಲ್ಲಿ ಸಮಾನತೆಯ ಅಂಶವನ್ನು ಪರಿಭಾವಿಸಿಕೊಂಡಿರುವುದು ಕಂಡುಬರುವುದಿಲ್ಲ. ಈ ಸಮಾನತೆಯ ಕಾರಣಗಳಿಂದಾಗಿ ಕೆಳಜಾತಿಗಳ ಭೂರಹಿತ ಸಮುದಾಯಗಳು ತಮ್ಮ ಹಕ್ಕಿಗಾಗಿ ಹೋರಾಡುವುದನ್ನು ನಾವು ಗಮನಿಸಬಹುದು. ಈ ಸಂದರ್ಭದಲ್ಲಿ ಕೇವಲ ರೈತರು ಮತ್ತು ಅವರ ಶೋಷಕರ ನಡುವೆ ಮಾತ್ರ ಸಂಘರ್ಷವನ್ನು ಕಾಣದೆ ರೈತರ ಒಳಗೇ ಇರುವ ಸಂಘರ್ಷಗಳನ್ನು ಸಬಾಲ್ಟರ್ನ್ ಅಧ್ಯಯನ ಕ್ರಮದಲ್ಲಿ ಗುರುತಿಸಲಾಗಿದೆ. ರೈತರ ನಡುವೆ ಅಸಮಾನತೆಯನ್ನು, ದೌರ್ಜನ್ಯವನ್ನು, ಆಂತರಿಕ ಕಲಹವನ್ನು ಮತ್ತು ಪ್ರತಿರೋಧಗಳನ್ನು ನಾವು ಗಮನಿಸಬಹುದಾಗಿದೆ.

* * *

ಭಾರತದಲ್ಲಿ ರೈತರ ಪ್ರತಿರೋಧಗಳನ್ನು ಅಭ್ಯಸಿಸಬೇಕಾದ ಸಂದರ್ಭದಲ್ಲಿ ಕಂಡುಬರುವ ದ್ವಂದ್ವಗಳು ರೈತರ ಸಂವೇದನೆಗಳನ್ನು ಅರ್ಥ ಮಾಡಿಕೊಳ್ಳುವ ಸಂದರ್ಭದಲ್ಲಿ ಕಂಡುಬರುತ್ತದೆ. ಈ ದ್ವಂದ್ವಗಳ ಸಮನ್ವಯವನ್ನು ನಾವಿಲ್ಲಿ ಗುರುತಿಸಬಹುದು. ಮೊದಲನೆಯ ಅಂಶದ ಪ್ರಕಾರ, ರೈತರೆಂದರೆ ವಿಧೇಯರು ಎನ್ನುವ ಅರ್ಥೈಸುವಿಕೆಯಾಗಿದೆ. ಅಧಿಕಾರ ಸಂಬಂಧಿ ವಿಚಾರಕ್ಕೆ ಸಂಬಂಧಿಸಿದ ದಬ್ಬಾಳಿಕೆ ಮತ್ತು ಶೋಷಣೆಗಳನ್ನು ನಾವಿಲ್ಲಿ ಕಾಣಬಹುದಾಗಿದೆ. ಇದು ಒಂದು ಬಗೆಯ ರೈತರ ಸಂವೇದನೆ. ಎರಡನೆಯ ಅಂಶದ ಪ್ರಕಾರ ಎಲ್ಲ ಬಗೆಯ ಶೋಷಣೆಯಿಂದ ಮುಕ್ತವಾಗಿದ್ದು ತನ್ನ ಸ್ವಾಯ್ತೆಯನ್ನು ಉಳಿಸಿಕೊಂಡ ರೈತನ ಸಂವೇದನೆಯಾಗಿದೆ. ಪರಸ್ಪರ ವೈರುಧ್ಯಗಳಿದ್ದರೂ ಈ ಸಂವೇದನೆಗಳ ಮೂಲಕವೇ ರೈತರ ಐಡೆಂಟಿಟಿ ಇರುವುದನ್ನು ಗಮನಿಸಬಹುದು. ಸಂಕ್ಷಿಪ್ತವಾಗಿ ರೈತ ಸಮುದಾಯವನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಭಿನ್ನವಾಗಿ, ಸಮುದಾಯಗಳನ್ನು ಸೂಕ್ತವಾಗಿ ಅರ್ಥೈಸುವುದರ ಮೂಲಕ ರೈತರ ಪ್ರತಿರೋಧಗಳಲ್ಲಿ ಕಂಡುಬಂದ ಹಕ್ಕು ಮತ್ತು ಬಾಧ್ಯತೆಗಳನ್ನು ಸ್ಥಾಪಿಸುವ ಅಥವಾ ಅವನ್ನು ಸವಾಲಿಗೊಡ್ಡುವ ಪ್ರಕ್ರಿಯೆಯನ್ನು ಅಭ್ಯಸಿಸಬಹುದಾಗಿದೆ.

ಯುರೋಪಿನಲ್ಲಿ ಸಾಂಪ್ರದಾಯಿಕವಾಗಿ ರೈತರ ಪ್ರತಿರೋಧಗಳನ್ನು ಅಥವಾ ದಂಗೆಗಳನ್ನು ಅರ್ಥೈಸಿಸುವ ಮಾದರಿಗಿಂತ ಭಿನ್ನವಾಗಿ ಭಾರತದ ರೈತರ ಪ್ರತಿರೋಧಗಳ ಘಟನೆಗಳನ್ನು ಅಭ್ಯಸಿಸಬೇಕಿದೆ. ಭಾರತದಲ್ಲಿ ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿ ಅಭ್ಯಾಸ ಮಾಡಲಾದ ರೈತರ ದಂಗೆಗಳ/ಹೋರಾಟದ ಅಧ್ಯಯನ ಕ್ರಮಗಳಿಂದ ಭಿನ್ನವಾಗಿ ಅಭ್ಯಸಿಸಬೇಕಾದ ಜರೂರಿದೆ. ಚರಿತ್ರೆ ಲೇಖನ ಬರವಣಿಗೆಯಲ್ಲಾದ ಆಮೂಲಾಗ್ರವಾದ ಬದಲಾವಣೆಯೇ ಇದಕ್ಕೆ ಮುಖ್ಯವಾದ ಕಾರಣವಾಗಿದೆ. ಜಾಗತಿಕ ಚರಿತ್ರೆಯ ಬರವಣಿಗೆಯ ಸಂದರ್ಭದಲ್ಲಿ ಪ್ರಧಾನವಾಗಿರುವ ಊಳಿಗಮಾನ್ಯ ವ್ಯವಸ್ಥೆಯಿಂದ ಬಂಡವಾಳಶಾಹಿ ವ್ಯವಸ್ಥೆಗೆ ಸ್ಥಿತ್ಯಂತರವಾಗುವ (ಟ್ರಾನ್ಸಿಷನ್‌ಫ್ರಮ್ ಫ್ಯೂಡಲಿಸಂ ಟು ಕ್ಯಾಪಿಟಲಿಸಂ) ಪ್ರಮೇಯಗಳಿಗಿಂತ ಭಿನ್ನವಾದ ಪ್ರಮೇಯಗಳ, ಅಧ್ಯಯನ ಕ್ರಮಗಳ ಜರೂರು ಭಾರತ ಚರಿತ್ರೆ ಬರವಣಿಗೆಗೆ ಇದೆ. ಈ ಕಾರಣಕ್ಕಾಗಿಯೇ ಚರಿತ್ರೆ ಬರವಣಿಗೆಯಲ್ಲಿ ಪ್ರಧಾನವಾಗಿರುವ ಇಂತಹ ಪ್ರಮೇಯಗಳನ್ನು ಪ್ರಶ್ನಿಸುವ ಅಥವಾ ಅವಕ್ಕೆ ಸವಾಲೊಡ್ಡುವ ಅಥವಾ ಅವನ್ನು ಸೂಕ್ತ ಮಾರ್ಪಾಡುಗೊಳಿಸುವ ಅಥವಾ ಅವನ್ನು ಸುಧಾರಣೆಗೊಳಿಸುವ ಅಥವಾ ಅವನ್ನು ಇನ್ನೂ ಶ್ರೀಮಂತಗೊಳಿಸುವ ಪ್ರಯತ್ನವನ್ನು ಮಾಡಬಹುದಾಗಿದೆ ಎಂದು ಪಾರ್ಥಚಟರ್ಜಿ ಅವರು ಅಭಿಪ್ರಾಯಪಟ್ಟಿದ್ದಾರೆ.

೧೮ ಮತ್ತು ೧೯ನೆಯ ಶತಮಾನದ ವಿದ್ಯಮಾನಗಳನ್ನು ದಾಖಲಿಸಿದ ಯುರೋಪಿಯನ್ ಬರಹಗಾರರು ಭಾರತದ ಜನರಿಗೆ ಚಾರಿತ್ರಿಕ ಸಂವೇದನೆಗಳಿಲ್ಲವೆಂದು ಪ್ರತಿಪಾದಿಸಿದರು. ಕೇವಲ ಕೆಲವು ಆಸ್ಥಾನದ ವೃತ್ತಾಂತಗಳು, ವಂಶಾವಳಿ ಪಟ್ಟಿ ಇತ್ಯಾದಿಗಳನ್ನು ಬಿಟ್ಟರೆ ಚರಿತ್ರೆ ಬರವಣಿಗೆಗೆ ಆಕರಗಳೇ ಇಲ್ಲ ಎಂಬ ಅಂಶವನ್ನು ಈ ಸಂದರ್ಭದಲ್ಲಿ ಎತ್ತಿ ಹಿಡಿಯಲಾಯಿತು. ಆಳಿಸಿಕೊಳ್ಳುವ ಭಾರತೀಯರ ಭಾವನೆಗಳಿಗೆ ನೋವುಂಟು ಮಾಡಬೇಕೆಂಬ ಉದ್ದೇಶದಿಂದ ಈ ರೀತಿ ಬರೆಯಲಾಗದಿದ್ದರೂ ಯುರೋಪಿನ ಪುನರುಜ್ಜೀವನೋತ್ತರ ಕಾಲಘಟ್ಟದ ವಿದ್ಯಮಾನಗಳು ಈ ಬಗೆಯ ತಿಳುವಳಿಕೆ ಕಾರಣಗಳಾಗಿವೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಈ ಹಿನ್ನೆಲೆಯಿಂದ ಜೀವಂತಿಕೆಯಿರುವ ರಾಶಿಗಟ್ಟಲೆ ಆಕರಗಳನ್ನು ಭಾರತದಲ್ಲಿ ಶೋಧಿಸಲಿಕ್ಕೆ ಇವರಿಗೆ ಸಾಧ್ಯವಾಗಲಿಲ್ಲ. ಯುರೋಪ್‌ನಲ್ಲಿ ಪ್ರಬಲವಾಗಿ ಕಂಡುಬರುವ ಸರಳರೇಖಾತ್ಮಕ ಕಾಲಘಟ್ಟದಲ್ಲೇ (ಲೀನಿಯರ್ ಆರ್ಡರ್) ದೇಶಗಳ, ರಾಜ್ಯಗಳ ಮತ್ತು ಸಾಮ್ರಾಜ್ಯಗಳ ಅರ್ಥ ಮಾಡಿಕೊಳ್ಳಬೇಕೆಂಬ ಇರಾದೆ ಇದ್ದದ್ದರಿಂದ ಭಾರತದ ಜನಾಂಗಗಳಲ್ಲಿ ಕಂಡುಬರುವ ಸಮಯೇತರ (ಟೈಮ್‌ಲೆಸ್) ವಲಯಗಳಲ್ಲಿ ಅವರಿಗೆ ಚರಿತ್ರೆಯ ವ್ಯಾಪಕತೆ ತೃಣವಾಗಿ ಕಂಡಿತು. ಭಾರತದ ಬಹುಬಗೆಯ ಸಾಮಾಜಿಕ ಸಂಕಥನಗಳಲ್ಲಿ ಕಂಡುಬರುವ ಸಮುದಾಯಗಳ ಅಂತರ್ ಸಂಬಂಧಗಳು, ಅವುಗಳ ಬಹುತ್ವದ ವಿನ್ಯಾಸಗಳು, ಐಡೆಂಟಿಟಿ ಮತ್ತು ಭಿನ್ನತೆಗಳನ್ನು ರೂಪಿಸುವ ಸೈದ್ಧಾಂತಿಕತೆಗಳು, ಇನ್ನೂ ಜೀವಂತಿಕೆಯಿರುವ ಜನರ ನಂಬುಗೆ ಮತ್ತು ಆಚರಣೆಗಳ ಮೂಲಕ ವ್ಯಕ್ತವಾಗುತ್ತಿರುವ ಸಾಮಾಜಿಕ ಸಂಘರ್ಷಗಳ ವಿನ್ಯಸಗಳು ಯುರೋಪಿನ ಸಾಂಪ್ರದಾಯಿಕ ವಿದ್ವತ್‌ಲೋಕದ ವಿದ್ವಾಂಸರಿಗೆ ಪರಿಚಯವಿರಲಿಲ್ಲ. ಅಗಾಧವಾಗಿರುವ ಈ ಆಕರಗಳ ಸಮೂಹವು ಯುರೋಪಿನ ಚರಿತ್ರೆಗಿರುವ ಆಕರಗಳಿಗಿಂತ ಅತಿ ಶ್ರೀಮಂತವಾಗಿವೆ ಎಂದು ಪಾರ್ಥ ಚಟರ್ಜಿ ಅವರು ಅಭಿಪ್ರಾಯ ಪಟ್ಟಿದ್ದಾರೆ. ಇಷ್ಟೊಂದು ಅಗಾಧ ಪ್ರಮಾಣದ ಆಕರಗಳನ್ನು ನಿಗೂಢ ಪೂರ್ವಜಗತ್ತಿನ ಅಸಂಗತಗಳೆಂದು ವಸಹತುಶಾಹಿ ಎತ್ನೋಗ್ರಾಫರ್‌ಗಳು ಅವಲೋಕಿಸಿದರು. ರಾಷ್ಟ್ರೀಯವಾದಿಗಳು ಬಹುತ್ವ ಸಂಸ್ಕೃತಿಯ ಆಕರಗಳನ್ನು ಮತ್ತು ವಿನ್ಯಾಸಗಳನ್ನು ಗಮನಿಸುತ್ತ ವಿವಿಧತೆಯಲ್ಲಿ ಏಕತೆ ಎಂದರು. ಸಬಾಲ್ಟರ್ನ್ ಅಧ್ಯಯನಕಾರರಿಗೆ ಆರಂಭದಲ್ಲಿ ಇದೊಂದು ಸವಾಲಾಗಿ ಕಂಡಿತು. ಆದರೆ ಸಮಸ್ಯೆ ಇದ್ದದ್ದು ಭಾರತದ ಆಕರಗಳಲ್ಲಲ್ಲ. ಬದಲಿಗೆ ಆಮದು ಮಾಡಿಕೊಂಡ ವಿಚಾರಗಳಿಗೆ ಎಂಬುದು ಅವರಿಗೆ ನಂತರ ಸ್ಪಷ್ಟವಾಗುತ್ತ ಹೋಯಿತು.

ಭಾರತದಲ್ಲಿ ರೈತರು ದಂಗೆ ಎದ್ದ ಘಟನೆಗಳನ್ನು ಮಧ್ಯಕಾಲೀನ ಯುರೋಪ್ ಅಥವಾ ಚೀನಾಕ್ಕೆ ಹೋಲಿಸುತ್ತ ಭಾರತೀಯ ರೈತರ ಸಾಮರ್ಥ್ಯವನ್ನು ಬದಿಗೆ ಸರಿಸುವ ಪ್ರಯತ್ನವನ್ನು ಪಾರ್ಥ ಚಟರ್ಜಿ ಅವರು ಪ್ರಶ್ನಿಸಿರುವುದು ಈ ಸಂದರ್ಭದಲ್ಲಿ ಮುಖ್ಯವಾಗಿದೆ. ಅವರ ಪ್ರಕಾರ ಭಾರತದಲ್ಲಿ ರೈತ ದಂಗೆಗಳು ಆರಂಭವೇ ಆಗಿಲ್ಲ ಎನ್ನುತ್ತ, ಭಾರತದಲ್ಲಿ ನಡೆದ ರೈತರ ಪ್ರತಿಭಟನೆಗಳು ಬಹುತೇಕವಾಗಿ ಸ್ಥಳೀಯವಾದದ್ದು ಮತ್ತು ನಂಬಿಕೆಯ ಭಾಗವಾಗಿ ಅವು ನಡೆದವು ೧೭ನೇ ಶತಮಾನದಿಂದ ಕಾಣಸಿಗುವ ರೈತರ ದಂಗೆಗಳು ಬ್ರಿಟಿಶರ ಆಳ್ವಿಕೆಯಲ್ಲಿ ಮಾತ್ರವಲ್ಲ ವಸಾಹತೋತ್ತರ ಕಾಲಘಟ್ಟದಲ್ಲಿಯೂ ಮುಂದುವರೆದಿರುವುದನ್ನು ಅವರು ಉಲ್ಲೇಖಿಸುತ್ತಾರೆ. ನೂರಾರು ರೈತರು ದೇಶದಲ್ಲೆಲ್ಲ ದಂಗೆ ಎದ್ದ ಬಗೆಗಳನ್ನು ಚಾರಿತ್ರಿಕ ದಾಖಲೆಗಳಲ್ಲಿ ನೋಡಬಹುದಾಗಿದೆ. ಭಾರತದಲ್ಲಿ ‘ಸ್ಥಳೀಯವಾಗಿ’ ನಡೆದ ಬಹುತೇಕ ದಂಗೆಗಳಲ್ಲಿ ಭಾಗವಹಿಸಿದ ರೈತರ ಸಂಖ್ಯೆಯು ಯುರೋಪಿನ ಬಹುದೊಡ್ಡ ದೇಶಗಳಲ್ಲಿ ನಡೆದ ರೈತ ದಂಗೆಗಳಲ್ಲಿ ಭಾಗವಹಿಸಿದ ಜನರಿಗಿಂತ ಅಗಾಧ ಪ್ರಮಾಣದ್ದು ಎಂಬ ವಿಚಾರ ಗಮನಾರ್ಹವಾದುದು. ಹೀಗಿದ್ದಾಗ್ಯೂ ಯುರೋಪ್ ಮತ್ತು ಚೀನಾದಲ್ಲಿ ನಡೆದ ರೈತ ದಂಗೆಗಳಿಂದಾಗಿ ಆದ ರಾಜಕೀಯ ಪರಿಣಾಮಗಳೇನೂ ಭಾರತದಲ್ಲಿ ಆಗಲಿಲ್ಲ ಎನ್ನುವ ಮಾತಿದೆ. ಆದರೆ ಇದಕ್ಕೂ ಒಂದು ಕಾರಣವಿದೆ. ಭಾರತದಲ್ಲಿ ಸರಕಾರದ ಸಾರ್ವಭೌಮಾಧಿ ಕಾರದ ನೆಲೆಗಟ್ಟಿನಲ್ಲಿ ರೂಪಿಸಲ್ಪಟ್ಟ ಕಾನೂನಿನ ಮೂಲಕ ಭಾರತೀಯ ಸಮಾಜವನ್ನು ದಮನ ಮಾಡದಿರುವುದೇ ಇದಕ್ಕೆ ಕಾರಣವಾಗಿದೆ. ಹೀಗಾಗಿ ರೈತರ ಪ್ರತಿಭಟನೆಗಳಿಗೆ ಸರಕಾರದ ಸಾರ್ವಭೌಮಾಧಿಕಾರದ ಕಾನೂನಿನ ನೆಲೆಗಟ್ಟಿನಲ್ಲಿ ನಿಂತಿರುವ ಆಡಳಿತ ವ್ಯವಸ್ಥೆಯನ್ನು ವಿಫಲಗೊಳಿಸುವುದು ಅವರ ಪರಮಧ್ಯೇಯವಾಗಿರಲಿಲ್ಲ. ಹೀಗಾಗಿ ಮಧ್ಯಕಾಲೀನ ಯುರೋಪ್ ಅಥವಾ ಚೀನಾದ ರೈತರ ದಂಗೆಗಳಿಗಿಂತ ಭಾರತದ ರೈತರ ದಂಗೆಗಳು ವೈಶಿಷ್ಟ್ಯಪೂರ್ಣವಾಗಿವೆ (ಚಟರ್ಜಿ ೧೯೯೭:೧೫೮-೧೭೨).