ಚರಿತ್ರೆಯನ್ನು ರಚಿಸುವಾಗ ಚರಿತ್ರೆಕಾರರು ಲಿಖಿತ ಗ್ರಂಥಗಳು, ಪತ್ರಗಳು, ಪತ್ರಿಕೆಗಳು, ದಿನಚರಿಗಳು, ಸರ್ಕಾರಿ ದಾಖಲೆಗಳು, ಅಲ್ಲದೆ ಸ್ಮಾರಕಗಳು, ಮ್ಯೂಸಿಯಂ ಇತ್ಯಾದಿಯನ್ನು ಆಧರಿಸುತ್ತಾರೆ; ಎಂದರೆ ಎಲ್ಲ ಐತಿಹಾಸಿಕ ಬರವಣಿಗೆಗಳಿಗೂ ಹಿಂದಿನಿಂದ ಉಳಿದುಬಂದ ಮಾಹಿತಿಯನ್ನೇ ಆಧರಿಸಲಾಗುತ್ತದೆ. ಹಾಗೆಯೇ ಸ್ಮರಣೆಯಲ್ಲಿ ಉಳಿದ ಅಥವಾ ಜನರ ಬಾಯಿಯಿಂದ ಬಾಯಿಗೆ ಹರಿದುಬಂದ ವಿಚಾರಗಳೂ ಉತ್ತಮವಾದ ಮಾಹಿತಿಯನ್ನು ನೀಡುತ್ತವೆ ಎನ್ನುವುದನ್ನು ಮರೆಯಲಾಗದು. ಜನರ ಸ್ಮರಣೆಯಲ್ಲಿ ಉಳಿದ ವಿಚಾರವನ್ನು ಇತಿಹಾಸವಾಗಿ ರೂಪಾಂತರಗೊಳಿಸುವ ನಡುವಿನ ಪ್ರಕ್ರಿಯೆಯೇ ಮೌಖಿಕ ಇತಿಹಾಸ. ಆದ್ದರಿಂದ ಮೌಖಿಕ ಇತಿಹಾಸ ಚರಿತ್ರೆಯ ಒಂದು ಪ್ರಕಾರವಾಗದೆ, ಆಧಾರಗಳಲ್ಲಿನ ಒಂದು ಬಗೆಯಾಗುತ್ತದೆ. ಮೌಖಿಕ ಇತಿಹಾಸ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಉಳಿದ ಬಗೆಗಳಂತಲ್ಲದೆ ಅದು ಬದುಕಿರುವ ವ್ಯಕ್ತಿಗಳೊಡನೆ ವ್ಯವಹರಿಸುತ್ತದೆ. ಮೌಖಿಕ ಇತಿಹಾಸ ಚರಿತ್ರೆಯ ರಚನೆಗೆ ಮಾತ್ರವಲ್ಲದೆ ಜಾನಪದ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಜೀವನ ಚರಿತ್ರೆ ಮುಂತಾದ ಶಾಸ್ತ್ರಗಳ ರಚನೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.

ಸಮಾಜದ ಮಹತ್ವದ ಘಟನೆಗಳಲ್ಲಿ ಪಾಲ್ಗೊಂಡವರಾಗಲಿ, ಅದನ್ನು ವೀಕ್ಷಿಸಿದವರಾಗಲಿ ತಮ್ಮ ಅನುಭವವನ್ನೆಲ್ಲ ಬರೆಯಬಲ್ಲವರಾಗಿರುವುದಿಲ್ಲ. ಬರವಣಿಗೆಯ ಕಲೆಯನ್ನು ಬಲ್ಲವರಿಗೆ ಎಲ್ಲ ಚಾರಿತ್ರಿಕ ಮಹತ್ವದ ಘಟನೆಯಲ್ಲಿ ಅನುಭವವನ್ನು ಹೊಂದಿರಲು ಸಾಧ್ಯವಿಲ್ಲ. ಇಂತಹ ಅನುಭವಗಳು ನೆನಪಿನಲ್ಲೇ ಉಳಿದು ವ್ಯಕ್ತಿಯ ಜೀವನದೊಂದಿಗೆ ಅಂತ್ಯವಾಗುವುದನ್ನು ಮೌಖಿಕ ಇತಿಹಾಸ ತಪ್ಪಿಸುತ್ತದೆ. ಪ್ರಾಚೀನ ಭಾರತದಲ್ಲಿ ಹಲವಾರು ವೈದ್ಯರು ತಾವು ಕಂಡುಕೊಂಡ ವಿಶೇಷವಾದ ಔಷಧೀಯ ಜ್ಞಾನವನ್ನು ತಮ್ಮ ಮುಂದಿನ ತಲೆಮಾರಿಗೆ ತಿಳಿಸದೆ ತುಂಬಲಾರದ ನಷ್ಟವನ್ನುಂಟು ಮಾಡಿದ್ದಾರೆ. ಅಂತಹ ಕೆಲವಾದರೂ ನಷ್ಟಗಳನ್ನು ಮೌಖಿಕ ಇತಿಹಾಸಕಾರರು ತಪ್ಪಿಸಲು ಸಾಧ್ಯ.

ಇತಿಹಾಸದ ಪುನರ್ ನಿರ್ಮಾಣಕ್ಕಾಗಿ ಮಾಡಿದ ಹೊಸ ಹೊಸ ಆಧಾರಗಳ ಅನ್ವೇಷಣೆಯಲ್ಲಿ ಮೂಡಿಬಂದುದು ‘ಮೌಖಿಕ ಇತಿಹಾಸ’. ಚರಿತ್ರೆಕಾರರು ಮೂಲ ಘಟನೆಗೆ ಹೆಚ್ಚು ಸಮೀಪವಾದ ನೈಜವಾದ ಹಾಗೂ ನಿಖರವಾದ ಆಧಾರವನ್ನು ಹೊರತೆಗೆಯಲು ಯಾವಾಗಲೂ ಉತ್ಸುಕರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರತ್ಯಕ್ಷದರ್ಶಿಗಳಿಂದ ನೇರವಾಗಿ ಮಾಹಿತಿಯನ್ನು ಸಂಗ್ರಹಿಸಲು ಮಾಡಿದ ಪ್ರಯತ್ನದಿಂದಾಗಿ ಮೌಖಿಕ ಇತಿಹಾಸದ ಬೆಳವಣಿಗೆಯಾಯಿತು. ಇಲ್ಲಿ ಚರಿತ್ರೆಕಾರರ ಉದ್ದೇಶ ಸತ್ಯದ ಸಾಕ್ಷಾತ್ಕಾರವಾಗಿದೆ. ಒಂದು ನಿಟ್ಟಿನಿಂದ ನೋಡಿದರೆ ‘ಮೌಖಿಕ ಇತಿಹಾಸ’ ಚರಿತ್ರೆಯಷ್ಟೇ ಹಳೆಯದು. ‘ಇತಿಹಾಸದ ಪಿತಾಮಹ’ನೆಂದು ಕರೆಸಿಕೊಳ್ಳುವ ಪ್ರಾಚೀನ ಗ್ರೀಕ್‌ನ ವಿದ್ವಾಂಸ ಹೆರೊಡೊಟಸ್‌ನೇ ಮೌಖಿಕ ಇತಿಹಾಸವನ್ನು ಆಧರಿಸಿ ತನ್ನ ಕೃತಿಯನ್ನು ರಚಿಸಿದ್ದಾನೆ.

ತಮ್ಮ ತಂತ್ರಜ್ಞಾನ ನಕಲೀಕರಣದಲ್ಲಿ ವೇಗವಾದ ಬೆಳವಣಿಗೆಯನ್ನು ಸಾಧಿಸಿ ತತ್‌ಕ್ಷಣದ ಫಲಿತಾಂಶವನ್ನು ನಿರೀಕ್ಷಿಸುತ್ತದೆ. ಧ್ವನಿಸುರುಳಿ, ಚಿತ್ರಸುರುಳಿ, ಮುದ್ರಣ, ಛಾಯಾಚಿತ್ರ, ಎಲ್ಲವೂ ನಕಲು ಮಾಡುವ ತಂತ್ರಜ್ಞಾನವೇ ಆಗಿದೆ. ಇವು ಸಂಶೋಧನೆಗೆ ಹೊಸ ಹೊಸ ಆಯಾಮವನ್ನು ತಂದುಕೊಡುತ್ತಿವೆ. ಮೌಖಿಕ ಇತಿಹಾಸ ಧ್ವನಿ ಸುರುಳಿಯ ತಂತ್ರಜ್ಞಾನದ ಬೆವಳವಣಿಗೆಯಿಂದ ಹೆಚ್ಚು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳತೊಡಗಿತು ಅಥವಾ ಕ್ರಮಬದ್ಧವಾದ ಅಧ್ಯಯನಕ್ಕೆ ದಾರಿ ಮಾಡಿಕೊಟ್ಟಿತು ಎಂದರೂ ತಪ್ಪಾಗಲಾರದು. ತಂತ್ರಜ್ಞಾನದೊಂದಿಗೆಬೆಳೆದು ಬಂದರೂ ಅದು ಯಾಂತ್ರಿಕವಾದ ಸಂಶೋಧನೆಯಲ್ಲ. ‘ಮೌಖಿಕ ಇತಿಹಾಸ’ ಮಾಹಿತಿ ಸಂಗ್ರಹವಾಗಿ ಮಾತ್ರ ಉಳಿಯುವುದಿಲ್ಲ. ಸಂಶೋಧಕ ಹಾಗೂ ಸಂದರ್ಶಿತ ಅಥವಾ ಪ್ರತ್ಯಕ್ಷದರ್ಶಿಯ ನಡುವೆ ಭಾವನಾತ್ಮಕ ಸಂಬಂಧವಿರುತ್ತದೆ. ವ್ಯಕ್ತಿ ವಿಚಾರಗಳನ್ನು ಹೇಳಿಕೊಳ್ಳುವಾಗ ಯಾವುದೋ ಹಳೆಯ ಕಡತ ತೆಗೆದಂತೆ ಇರದೆ ಅವರ ನೋವು-ನಲಿವುಗಳು, ರಾಗದ್ವೇಷಗಳು, ದೌರ್ಬಲ್ಯಗಳು ಎಲ್ಲವೂ ಹೊರಬರಬೇಕಾದರೆ ಆತ್ಮೀಯವಾಗಿ ನಡೆದುಕೊಳ್ಳಬೇಕಾದ ಅಗತ್ಯವಿರುತ್ತದೆ. ಈ ಅನುಭವ ‘ಮೌಖಿಕ ಇತಿಹಾಸದ’ ಒಂದು ವಿಶಿಷ್ಟತೆ ಎಂದರೆ ತಪ್ಪಾಗಲಾರದು. ಪ್ರತಿ ಸಂದರ್ಶನವು ಸಂದರ್ಶನದಾಚೆಯ ಸಮಾಜವನ್ನು ಹತ್ತಿರದಿಂದ ನೋಡುವ ಅವಕಾಶವನ್ನು ಕಲ್ಪಿಸುತ್ತದೆ.

ಸಾಮಾನ್ಯವಾಗಿ ಆಳುವ ವರ್ಗದ, ಮೇಲ್ವರ್ಗದ ಬದುಕಿನ ಬಗೆಗೆ ಬರೆಯಲು ಸಾಕಷ್ಟು ಲಿಖಿತ ದಾಖಲೆಗಳು ದೊರೆಯುವುದರಿಂದ ಮೌಖಿಕ ಮಾಹಿತಿಯ ಅಗತ್ಯವಿಲ್ಲವೆಂದು ಭಾವಿಸುತ್ತೇವೆ. ಅದರಲ್ಲೂ ಸಮಕಾಲೀನ ರಾಜಕೀಯ ಇತಿಹಾಸ ಬರೆಯುವ ಸಂದರ್ಭದಲ್ಲಿ ಟೆಲಿಗ್ರಾಂ, ಪತ್ರಗಳು, ಸರ್ಕಾರಿ ವರದಿಗಳು, ಪತ್ರಿಕಾವರದಿಗಳು, ದಿನಚರಿಗಳು ಇವೆಲ್ಲ ಆಧಾರವಾಗಿ ಬಳಕೆಯಾಗುತ್ತವೆ. ಪುಸ್ತಕದಲ್ಲಿ ದೂರವಾಣಿ, ಈ-ಮೇಲ್ ಇತ್ಯಾದಿಗಳಿಂದ ಖಾಸಗಿ ಪತ್ರಗಳೂ ಅಪರೂಪವಾಗಿವೆ. ದಿನಚರಿಯನ್ನು ಬರೆದಿಡುವ ಹವ್ಯಾಸ ಸಹ ವೇಗದ ಪ್ರಪಂಚದಲ್ಲಿ ಕಡಿಮೆಯಾಗಿದೆ. ಆದ್ದರಿಂದ ಉಳಿದ ಅಧಿಕೃತ ದಾಖಲೆಗಳನ್ನೇ ಅವಲಂಬಿಸಬೇಕಾಗುತ್ತದೆ. ಸರ್ಕಾರಿ ವರದಿಗಳು ನಿರ್ದಿಷ್ಟ ಉದ್ದೇಶದೊಂದಿಗೆ ರಚಿತವಾಗುವುದರಿಂದ ಅದರಾಚೆಗಿನ ಮಾಹಿತಿಗೆ ಪ್ರತ್ಯಕ್ಷದರ್ಶಿಗಳಿಂದ ವಿಷಯವನ್ನು ಸಂಗ್ರಹಿಸಬೇಕಾಗುತ್ತದೆ. ರಾಜಕೀಯ ಆಗುಹೋಗುಗಳು ಪತ್ರಿಕಾವರದಿಗಳಿಗಿಂತ ಬಹು ಭಿನ್ನವಾಗಿರುತ್ತದೆಂಬುದು ಎಲ್ಲರ ಗಮನಕ್ಕೆ ಬಂದಿರುವ ಅನುಭವ. ರಾಜಕೀಯದಲ್ಲೂ ಅಂತರಂಗದ ಮಾಹಿತಿಯನ್ನು ಪಡೆಯಬೇಕಾದರೆ ಪ್ರತ್ಯಕ್ಷದರ್ಶಿಗಳಿಂದ ಸಂಗ್ರಹಿಸಬೇಕಾಗುತ್ತದೆ. ಯಾವುದೇ ಸರ್ಕಾರ ತನ್ನ ಪಕ್ಷಕ್ಕೆ ಅನುಗುಣವಾದ ಮಾಹಿತಿಯನ್ನು ಪ್ರಕಟಿಸುತ್ತದೆ. ಆದ್ದರಿಂದ ಪ್ರಕಟಿತ ವಿಚಾರಗಳಿಗೂ ವಾಸ್ತವ ಸಂಗತಿಗೂ ಅಜಗಜಾಂತರ ವ್ಯತ್ಯಾಸವಾಗುವ ಸಾಧ್ಯತೆಯಿರುತ್ತದೆ. ಒಂದು ಸಮತೋಲನ ರಾಜಕೀಯ ಚರಿತ್ರೆಯ ರಚನೆಗೆ ಅಥವಾ ರಾಜಕಾರಣಿಗಳ ಜೀವನ ಚರಿತ್ರೆಯ ರಚನೆಗೆ ಸಂಬಂಧಪಟ್ಟವರ ಅಭಿಪ್ರಾಯಗಳು, ವರದಿಗಳು, ಮಹತ್ವದ ಸ್ಥಾನ ಪಡೆದಿರುತ್ತವೆ. ಪ್ರತಿಷ್ಠಿತರ ಬಗೆಗಿನ ಇತಿಹಾಸ (ಎಲೈಟ್ ಹಿಸ್ಟರಿ) ಬರೆಯಲು ಹೊರಟಾಗ ಪ್ರಕಟಿತ ಚರಿತ್ರೆಗಿಂತ ವಿರುದ್ಧವಾದ ವಿಚಾರಗಳು ಮೌಖಿಕ ಇತಿಹಾಸದಿಂದ ಹೊರಬರುತ್ತವೆ. ಹಾಗೆಂದು ತಮ್ಮ ಮೂಗಿನ ನೇರಕ್ಕೆ ಮಾಹಿತಿಯನ್ನು ಸ್ಪಷ್ಟಿಸುವ ಪೂರ್ವಾಗ್ರಹ ಪೀಡಿತ ಚರಿತ್ರಯೆ ರಚನೆಯೂ ಆಗದಂತೆ ಎಚ್ಚರ ವಹಿಸಬೇಕಾಗುತ್ತದೆ.

ಒಂದು ಅಥವಾ ಎರಡು ದಶಕಗಳಿಂದ ಸಮಕಾಲೀನ ಇತಿಹಾಸ ಮತ್ತು ಮೌಖಿಕ ಇತಿಹಾಸದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕೆಲವು ವಿಮರ್ಶಕರು ಈ ಎರಡು ವಿಷಯವನ್ನು ‘ನ್ಯೂ ಹಿಸ್ಟರಿ’ ಎಂದು ಕರೆದದ್ದೂ ಇದೆ. ಇವು ಹೊಸ ಕ್ಷೇತ್ರಗಳಲ್ಲದಿದ್ದರೂ ಹೊಸದಾಗಿ ಪರಿಗಣಿಸುವುದು ನಿಂತಿಲ್ಲ. ಮೌಖಿಕ ಇತಿಹಾಸ ವಿಸ್ತಾರವಾಗಿ ಬೆಳೆದಿರುವ ಅಮೆರಿಕದಲ್ಲೇ ಇಂತಹ ಪರಿಸ್ಥಿತಿಯಾದರೆ, ಭಾರತದಲ್ಲಿ ಇನ್ನೂ ಪರಿಚಯದ ಹಂತದಲ್ಲಿದೆ.

ಚರಿತ್ರೆಕಾರರು ಸಮಕಾಲೀನ ಇತಿಹಾಸವನ್ನು ಬದಿಗೊತ್ತಿ ಧ್ವನಿಗಳ ದಾಖಲೆಯನ್ನು ಕೈಬಿಟ್ಟರೆ ಅವರೆಡು ಪತ್ರಿಕೋದ್ಯಮಿಯ ವಶವಾಗುತ್ತವೆ. ಅನಂತರ ಪತ್ರಿಕೋದ್ಯಮಿಯನ್ನು ಆಧರಿಸಿ ಎಲ್ಲವೂ ಹಳೆಯದಾದ ಸುದ್ಧಿಯನ್ನು ಚರಿತ್ರೆಕಾರ ಹುಡುಕುತ್ತ ಹೋಗುತ್ತಾನೆ. ಒಬ್ಬ ಪತ್ರಿಕೋದ್ಯಮಿಗೂ ಘಟನೆಯ ಪುನರ್ ನಿರ್ಮಾಣಕಾರ್ಯದಲ್ಲಿ ತೊಡಗುವ ಚರಿತ್ರೆಕಾರನ ಉದ್ದೇಶಕ್ಕೂ ವ್ಯತ್ಯಾಸವಿದೆ. ಸಮಕಾಲೀನ ಚರಿತ್ರೆ ಅದರಲ್ಲೂ ಸಮಕಾಲೀನ ರಾಜಕೀಯ ಚರಿತ್ರೆ ರಚನೆಯಲ್ಲಿ ಇತಿಹಾಸ ಅದ್ವಿತೀಯ ಪಾತ್ರವನ್ನು ನಿರ್ವಹಿಸುತ್ತದೆ. ಅದನ್ನು ಬಿಟ್ಟು ಸಮಕಾಲೀನ ಚರಿತ್ರೆಯ ರಚನೆ ಪರಿಪೂರ್ಣವಾಗಲಾರದು.

ಯಾವುದೇ ಚರಿತ್ರೆಯ ರಚನೆಗೆ ಮೂಲಭೂತವಾಗಿ ಸಾಮಾಜಿಕ ಅಗತ್ಯವಿರಬೇಕು. ಸಮಾಜದಿಂದ ದೂರವಾದ, ಅದಕ್ಕೆ ಬೇಡವಾದ ವಿಚಾರವೊಂದರ ಅಧ್ಯಯನದ ಫಲವಾದರೂ ಏನು? ಚರಿತ್ರೆಯ ರಚನೆಗೆ ಸಾಮಾಜಿಕ ಅಗತ್ಯವಿರುವುದರಿಂದ ಚರಿತ್ರೆಕಾರರು ಕೆಲವು ಬಾರಿ ಅತೀ ಎಚ್ಚರಿಕೆ ವಹಿಸುವುದು ಅಥವಾ ಆವೇಶಭರಿತರಾಗುವುದೂ ಕಂಡು ಬರುತ್ತದೆ. ಇಂತಹ ಇತಿಹಾಸದ ರಚನೆಗೆ ಪೂರಕವಾದ ಸಾಮಗ್ರಿಯಾಗಿ ನಿಲ್ಲಬಲ್ಲ ‘ಮೌಖಿಕ ಇತಿಹಾಸ’ ಸಮಾಜ ಮುಖಿಯಾದುದು. ಸಮಾಜದಲ್ಲೇ ಹುಟ್ಟಿ ಸಮಾಜವನ್ನೇ ತಲುಪುವ ಇದು ಸಮಾಜದ ನಾಡಿ ಮಿಡಿತವನ್ನು ಅರಿಯುವ ಪ್ರಯತ್ನ ಮಾಡುತ್ತದೆ. ಇಂತಹ ಆಧಾರವೊಂದರ ಬಗೆಗೆ ವಿದ್ವಾಂಸರು ಮೂಗು ಮುರಿಯುವುದರಲ್ಲಿ ಅರ್ಥವಿಲ್ಲವೆಂದೇ ಭಾವಿಸಬೇಕಾಗುತ್ತದೆ ಹಾಗೆಂದು ಮೌಖಿಕ ಇತಿಹಾಸದ ವಿಜೃಂಭಣೆಯೂ ಈ ಬರವಣಿಗೆಯ ಉದ್ದೇಶವಲ್ಲ. ಸಮಾಜದಲ್ಲಿ ಮತ್ತು ಚರಿತ್ರೆಯಲ್ಲಿ ಧ್ವನಿ ಕಳೆದುಕೊಂಡವರ ಧ್ವನಿಯಾಗಬೇಕಾದುದು ಮೌಖಿಕ ಇತಿಹಾಸ.

ವಿದ್ವಾಂಸರು ಪತ್ರಾಗಾರಗಳಲ್ಲೋ, ಗ್ರಂಥಾಲಯಗಳಲ್ಲೋ ಕುಳಿತು ವರ್ಷಾನುಗಟ್ಟಲೆ ಸಂಶೋಧನೆಯಲ್ಲಿ ತೊಡಗುತ್ತಾರೆ. ಕೆಲವೊಮ್ಮೆ ವಿದ್ವತ್‌ಪ್ರಪಂಚ ಸಮಾಜದಿಂದ ದೂರವಾಗಿ ಉಳಿಯುವುದನ್ನು ಕಾಣುತ್ತೇವೆ. ಮೌಖಿಕ ಇತಿಹಾಸ ಸಮಾಜ ಮತ್ತು ವಿದ್ವಾಂಸರ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಒಂದು ರೀತಿಯಲ್ಲಿ ಸತ್ತ ಸಮಾಧಿಗಳ ಬದಲು ಜೀವಂತ ವ್ಯಕ್ತಿಗಳು ಇತಿಹಾಸಕ್ಕೆ ಮಾಹಿತಿಯನ್ನು ಒದಗಿಸುತ್ತಾರೆ. ಆದ್ದರಿಂದ ಚರಿತ್ರೆ ಸತ್ತವರ ಕತೆ ಮಾತ್ರವಾಗಿರದೆ ಜೀವಂತ ವ್ಯಕ್ತಿಗಳ ಇತಿಹಾಸಕ್ಕೆ ಮಾಹಿತಿಯನ್ನು ಒದಗಿಸುತ್ತದೆ. ಆದ್ದರಿಂದ ಚರಿತ್ರೆ ಸತ್ತವರ ಕತೆ ಮಾತ್ರವಾಗಿರದೆ ಜೀವಂತ ವ್ಯಕ್ತಿಗಳ ಬದುಕೂ ಆಗಿರುತ್ತದೆ. ಚರಿತ್ರೆ ಸಮಾಜವನ್ನು, ಒಟ್ಟಾರೆಯಾಗಿ ನೋಡುವ ರೀತಿ ಬದಲಾಗುವುದರಲ್ಲಿ ಆಶ್ಚರ್ಯವಿಲ್ಲ. ಭಿನನವಾದಾಗ ಅದರ ಅನ್ವಯವೂ ಭಿನ್ನವಾಗುತ್ತದೆ. ಹೀಗೆ ಮೌಖಿಕ ಇತಿಹಾಸ ಚರಿತ್ರೆಯ ನಿರ್ಮಾಣಕ್ಕೊಂದು ಹೊಸ ಆಯಾಮ ತರಬಲ್ಲದು.

ಈವರೆಗೆ ಚರಿತ್ರೆಕಾರ ಕತೆ ಹೇಳುವವನಾಗಿದ್ದು ಚರಿತ್ರೆಯಲ್ಲಿ ಆಧಾರಗಳ ಪರವಾಗಿ ತಾನೇ ಮಾತನಾಡುತ್ತಾ ಹೋಗುತ್ತಿದ್ದ. ಅದರೀಗ ಮೊದಲು ಕೇಳುಗನಾಗುತ್ತಾನೆ. ಅನಂತರ ತಾನು ಕೇಳಿದ ನಿರೂಪಣೆಯನ್ನು ವಿಶ್ಲೇಷಿಸಿ ಚರಿತ್ರೆಯ ನಿರ್ಮಾಣಕ್ಕೆ ತೊಡಗುತ್ತಾನೆ. ಕೇಳುವ ವಿಚಾರ ವ್ಯಕ್ತಿಯೊಬ್ಬನ ವೈಯಕ್ತಿಕ ಬದುಕಿನ ಇಲ್ಲವೆ ಸಾಮಾಜಿಕ ಬದುಕಿನ ಅನುಭವವಾಗಿರುತ್ತದೆ. ಅನುಭವಗಳಲ್ಲಿ ಜೀವಂತಿಕೆ ತುಂಬಿರುತ್ತದೆ. ಎಲ್ಲರೂ ತಮ್ಮ ಬದುಕಿನ ಅನುಭವಗಳನ್ನು ಬರೆದಿಡಲಾರರು. ಬರೆಯಬಲ್ಲವರೂ ಸಹ ತಮಗೆ ಹೇಳಿಕೊಳ್ಳಬೇಕೆನಿಸುವ ವಿಚಾರಗಳನ್ನು ಮಾತ್ರವೇ ಬರೆದಿಡುತ್ತಾರೆ. ಬರವಣಿಗೆಯ ಸಂದರ್ಭದಲ್ಲಿ ಹೇಳಲಾಗದ್ದನ್ನೂ ಮಾತಾಡುವಾಗ ನೈಜವಾಗಿ ಹೇಳಬಲ್ಲರು. ಇಲ್ಲಿ ಚರಿತ್ರೆಕಾರನ ಬರವಣಿಗೆ ಜೀವಂತಿಕೆಯನ್ನು ಮೈಗೂಡಿಸಿಕೊಳ್ಳಬಲ್ಲದು.

ಆಧುನಿಕ ಸಂದರ್ಭದಲ್ಲಿ ಮೌಖಿಕ ಇತಿಹಾಸಕ್ಕೆ ಚಾಲನೆ ಕೊಟ್ಟವರು ಪಾಶ್ಚಿಮಾತ್ಯರು. ಅದರಲ್ಲೂ ಅಮೆರಿಕದ ವಿದ್ವಾಂಸರೆಂದರೆ ತಪ್ಪಾಗಲಾರದು. ಅವರು ‘ಓರಲ್ ಹಿಸ್ಟರಿ’ ಎಂಬ ಪಾರಿಭಾಷಿಕ ಪದದೊಂದಿಗೆ ಅದನ್ನೊಂದು ಅಧಿಕೃತ ಶಾಖೆಯಾಗಿ ಬೆಳೆಸುತ್ತ ಬಂದಿದ್ದಾರೆ. ಅದರ ಬಗೆಗಿನ ಎಲ್ಲ ಟೀಕೆ ಟಿಪ್ಪಣಿಗಳಾಚೆಗೆ ಅದರ ಮಹತ್ವವನ್ನು ಮನಗಂಡು ಅಧ್ಯಯನಕ್ಕೆ ಸೂಕ್ತ ಸ್ವರೂಪ ನೀಡುವ ಪ್ರಯತ್ನ ಮಾಡುತ್ತ ಬಂದಿದ್ದಾರೆ. ಅದಕ್ಕೆ ಸಮಾನಾರ್ಥ ಪದವಾಗಿ ‘ಮೌಖಿಕ ಇತಿಹಾಸ’ ಇಲ್ಲವೆ ‘ಮೌಖಿಕ ಚರಿತ್ರೆ’ ಎಂಬ ಪದಗಳು ಭಾರತದಲ್ಲಿ ಚಲಾವಣೆಯಲ್ಲಿವೆ. ಈಗಾಗಲೇ ಪಾಶ್ಚಿಮಾತ್ಯ ಸಮಾಜದಲ್ಲಿ ಬೆಳೆದು ಒಂದು ರೀತಿಯಲ್ಲಿ ಆ ದಿಕ್ಕಿನ ಆಲೋಚನೆಯನ್ನು ಎರವಲಾಗಿ ಪಡೆಯುತ್ತಿರುವುದರಿಂದ ಹಾಗೂ ಜಗತ್ತಿನಾದ್ಯಂತ ವಿದ್ವತ್‌ ಪ್ರಪಂಚದಲ್ಲಿ ಸ್ವೀಕೃತವಾಗಿರುವುದರಿಂದ ಆ ಮಾದರಿಯೊಂದರ ಪರಿಚಯದ ಪ್ರಯತ್ನವೂ ಇದಾಗಿದೆ.

ಓರಲ್ ಟ್ರಡೀಶನ್ ಎಂದರೆ ಮೌಖಿಕ ಪರಂಪರೆ ಅಥವಾ ಮೌಖಿಕ ಸಂಪ್ರದಾಯ. ಇದನ್ನು ‘ತೋಂಡಿ’ ಸಂಸ್ಕೃತಿ ಎಂದೂ ಕರೆಯಲಾಗುತ್ತದೆ. ಮೌಖಿಕ ಸಂಪ್ರದಾಯವನ್ನು ತಲೆಮಾರುಗಳಿಂದ ಹರಿದು ಬಂದ ಮಾಹಿತಿ ಎಂದೂ, ಮೌಖಿಕ ಇತಿಹಾಸವನ್ನು ಪ್ರತ್ಯಕ್ಷದರ್ಶಿಯಿಂದ ಪಡೆದ ಮಾಹಿತಿಯೆಂದೂ ಅರ್ಥೈಸಲಾಗಿದೆ. ಸಂದರ್ಶಕ ಸಂಶೋಧಕನೂ ಆಗಿರುವುದರಿಂದ ಸಂದರ್ಶಕನನ್ನು ಸಂಶೋಧಕ ಎಂದೂ ಸಂಬೋಧಿಸಬಹುದು. ಹಾಗೆಯೇ ಮಾಹಿತಿದಾರ ಸಂದರ್ಶನ ಮಾಡಿಸಿಕೊಳ್ಳುವವನನ್ನು ಸಂದರ್ಶನಾರ್ಥಿ ಅಥವಾ ಸಂದರ್ಶಿತ ಎಂದು ಕರೆಯಬಹುದು. ಜನಪದ ವಿದ್ವಾಂಸರು ಜನಪದ ಕಥೆ ಅಥವಾ ಹಾಡು ಹೇಳುವವನ್ನು ‘ವಕ್ತೃ’ ಎಂಬ ಪದದಿಂದ ಸಂಬೋಧಿಸುತ್ತ ಎಂದಿದ್ದಾರೆ. ಯಾವುದೇ ಚಾರಿತ್ರಿಕ ಘಟನೆಯಲ್ಲಿ ಪಾಲ್ಗೊಂಡ ವ್ಯಕ್ತಿಗಳು ಬದುಕಿದ್ದರೆ, ಆ ವ್ಯಕ್ತಿ ಜೀವಂತ ಸಾಕ್ಷಿಯಾಗುತ್ತಾನೆ.

ಚರಿತ್ರೆ ಒಂದು ಸ್ವತಂತ್ರ ಅಧ್ಯಯನ ಶಿಸ್ತಾಗಿ ಮೊದಲು ಕಾಣಿಸಿಕೊಂಡುದು ಕ್ರಿ.ಪೂ. ಐದನೆಯ ಶತಮಾನದಲ್ಲಿ, ಮಹಾಕಾವ್ಯಗಳು ರಚನೆಯಾಗುತ್ತಿದ್ದ ಗ್ರೀಕ್‌ನಲ್ಲಿ ಕಲ್ಪನೆಯನ್ನು ಬಿಟ್ಟು ವಾಸ್ತವವನ್ನು ಹೇಳಬೇಕೆಂದು ಹೆರೊಡೊಟಸ್ ‘ಹಿಸ್ಟೋರಿಯ’ ಕೃತಿಯನ್ನು ರಚಿಸಿದನು. ಪರ್ಷಿಯನ್‌ರವರು ಮತ್ತು ಗ್ರೀಕರ ನಡುವೆ ನಡೆದ ಯುದ್ಧವನ್ನು ವಸ್ತುವಾಗಿ ಆರಿಸಿಕೊಂಡುದರಿಂದ ಆ ಯುದ್ಧದಲ್ಲಿ ಭಾಗವಹಿಸಿದವರಿಂದ ಮಾಹಿತಿಯನ್ನು ಸಂಗ್ರಹಿಸಿ ಅದರ ಆಧಾರದ ಮೇಲೆ ಚರಿತ್ರೆಯ ರಚನೆಗೆ ತೊಡಗಿಕೊಂಡನು. ಹೆರೊಡೊಟಸ್ ಮೌಖಿಕ ಆಕರವನ್ನು ಬಳಸಿಕೊಂಡಿರುವುದರಿಂದ ‘ಮೌಖಿಕ ಇತಿಹಾಸ’ ಚರಿತ್ರೆಯ ಬರವಣಿಗೆಯಷ್ಟೇ ಹಳೆಯದೆಂದು ಹೇಳಬಹುದು. ಇದರಿಂದ ಅವನಿಗೆ ಯುದ್ಧದಲ್ಲಿ ಭಾಗಿಯಾಗಿದ್ದ ಸಾಮಾನ್ಯ ಸೈನಿಕರ ಭಾವನೆಗಳನ್ನು ಸೆರೆಹಿಡಿಯಲು ಸಾಧ್ಯವಾಯಿತು. ಹೆರೊಡೊಟಸ್ ಬಳಸಿದ ಕಾವ್ಯದ ಭಾಷೆಯನ್ನೂ ಬಿಟ್ಟು ಹೆಚ್ಚು ವೈಜ್ಞಾನಿಕವಾಗಿ ಇತಿಹಾಸವನ್ನು ಬರೆದ ಗ್ರೀಕ್‌ನ ಮತ್ತೊಬ್ಬ ಇತಿಹಾಸಕಾರ ಥೂಸಿಸೈಡಸ್. ಈತನು ‘ಪೆಲೊಪನೇಷಿಯನ್‌ವಾರ್’ ಎಂಬ ಕೃತಿ ರಚಿಸುವಾಗಲೂ ಜನರ ಬಾಯಿಂದ ಮಾಹಿತಿಯನ್ನು ಸಂಗ್ರಹಿಸಿದನು. ಇವರಿಬ್ಬರೂ ಆರಿಸಿಕೊಂಡ ವಿಷಯ ಸಮಕಾಲೀನ ರಾಜಕೀಯ ಯುದ್ಧವಾಗಿದ್ದರೂ ಮುಕ್ತವಾಗಿ ಜನ ಸಾಮಾನ್ಯರಿಂದ ಮಾಹಿತಿಯನ್ನು ಸಂಗ್ರಹಿಸಿದ. ಹೆರೊಡೊಟಸ್‌ನಿಗೆ ಭಾಷಾ ಸಮಸ್ಯೆಯಿದ್ದೂ ಅದನ್ನು ಹೇಗೆ ನಿಭಾಯಿಸಿದನೆಂಬುದು ಆಶ್ಚರ್ಯವನ್ನುಂಟುಮಾಡುತ್ತದೆ.

ಹೀಗೆ ಬಹು ಸಹಜವಾಗಿ ರೂಢಿಗೆ ಬಂದ ‘ಮೌಖಿಕ ಇತಿಹಾಸ’ ಕಾಲಾನಂತರದಲ್ಲಿ ಆದ್ಯತೆಯನ್ನು ಕಳೆದುಕೊಂಡಿತು. ರೋಂ ಸಾಮ್ರಾಜ್ಯದಲ್ಲಿ ವಿದ್ವಾಂಸರು ಆಸ್ಥಾನದಲ್ಲಿ ಕುಳಿತು ಇತಿಹಾಸ ಬರೆಯಲು ತೊಡಗಿದಾಗ ಜನಸಾಮಾನ್ಯರ ಚರಿತ್ರೆಗಾಗಲೀ, ಅಭಿಪ್ರಾಯಗಳಿಗಾಗಲೀ ಮನ್ನೆಯಿರಲಿಲ್ಲ. ಅದರ ಬದಲು ಆಸ್ಥಾನದ ದಾಖಲೆಗಳು, ವಂಶಾವಳಿಗಳು ಆಧಾರಗಳಾಗಿ ಬಳಕೆಯಾಗತೊಡಗಿದವು. ರಾಜಮಹಾರಾಜರ ವೀರಾಗಾಥೆಗಳನ್ನು ಬರೆಯತೊಡಗಿದರು.

ಮೌಖಿಕ ಇತಿಹಾಸದ ನಿರಾಕರಣೆಯಲ್ಲಿ ಬಹುಶಃ ರಾಂಕೆಯವರ ಪಾತ್ರ ಪ್ರಮುಖವಾಗಿ ಕಂಡುಬರುತ್ತದೆ. ಲಿಯೋಪಾಲ್ಡ್ ವಾನ್ ರಾಂಕೆ ಬಹು ಶಿಸ್ತಿನ ಕ್ರಮವನ್ನು ಸಂಶೋಧನೆಗೆ ಅಳವಡಿಸಿಕೊಂಡರು. ಮಧ್ಯಕಾಲೀನ ಜರ್ಮನಿಯ ವಿಷಯವನ್ನು ಕೈಗೆತ್ತಿಕೊಂಡ ರಾಂಕೆ ಲಿಖಿತ ದಾಖಲೆಗಳಿಗೆ ಆದ್ಯತೆಯನ್ನು ನೀಡಿದನು. ಕಟು ವಿಮರ್ಶೆಗೆ ಒಳಪಡಿಸುವ ಸಂಶೋಧನೆಯನ್ನು ವೈಜ್ಞಾನಿಕ ಇತಿಹಾಸ ಎಂದು ಅರ್ಥೈಸುವ ಮೂಲಕ ಸಂಶೋಧನಾ ವಿಧಾನಕ್ಕೊಂದು ಚೌಕಟ್ಟನ್ನು ಹಾಕಿದ. ರಾಂಕೆ ತೋರಿಸಿದ್ದು ಇತಿಹಾಸಕಾರರಿಗೆ ರಾಜಮಾರ್ಗವಾಯಿತು. ರಾಂಕೆ ಮಾದರಿಯ ಚರಿತ್ರೆಯ ಸಂಶೋಧನೆ ಇಂದಿಗೂ ಬಹುತೇಕವಾಗಿ ಸಂಪ್ರದಾಯವಾಗಿ ಮುಂದುವರಿದಿದೆ.

ಚರಿತ್ರೆಯ ಸಂಶೋಧನೆಯಲ್ಲಿ ಪ್ರಮುಖವಾಗಿ ಮೂರು ಹಂತಗಳನ್ನು ಕಾಣುತ್ತೇವೆ. ಪ್ರಾಥಮಿಕ ಹಂತದಲ್ಲಿ ಇತಿಹಾಸಕಾರರು ಅಥವಾ ಸಂಶೋಧಕರು ಆಧಾರಗಳನ್ನು ಒಂದು ಕಡೆ ಸಂಗ್ರಹಿಸುವ ಕಾರ್ಯವನ್ನು ನಿರ್ವಹಿಸುತ್ತಾರೆ. ಬಿ.ಎಲ್.ರೈಸ್, ಫ್ಲೀಟ್‌ ಮುಂತಾದವರು ಶ್ರಮವಹಿಸಿ ಶಾಸನಗಳನ್ನು ಒಂದು ಕಡೆ ಸಂಗ್ರಹಿಸಿದರು. ಜನಪದ ವಿದ್ವಾಂಸರು ಕರ್ನಾಟಕದಲ್ಲಿ ಹಾಗೂ ಜಗತ್ತಿನಾದ್ಯಂತ ಜನಪದ ಸಾಹಿತ್ಯವನ್ನು ಸಂಗ್ರಹಿಸುತ್ತ ಬಂದಿರುವುದನ್ನು ಗಮನಿಸಬಹುದು. ಮೌಖಿಕ ಪರಂಪರೆಯ ಅಧ್ಯಯನದ ದೃಷ್ಟಿಯಿಂದ ಇದು ಮುಖ್ಯವಾದುದು. ಈ ಪ್ರಾಥಮಿಕ ಹಂತದ ಕಾರ್ಯದಲ್ಲಿ ತೊಡಗಿರುವ ಸಂಶೋಧಕರನ್ನು ಕ್ರಿಟಿಕಲ್ ಹಿಸ್ಟಾರಿಯನ್ಸ್ ಎಂದು ಗುರುತಿಸಲಾಗಿದೆ.

ಎರಡನೇ ಹಂತದಲ್ಲಿ, ಸಂಗ್ರಹಿಸಿದ ಮಾಹಿತಿಯನ್ನು ನಿರೂಪಣಾತ್ಮಕ ಬರವಣಿಗೆಗೆ ಅಳವಡಿಸಲಾಗುತ್ತದೆ. ಯಾವುದೇ ಆಧಾರವನ್ನು ಬಳಸಿಕೊಂಡಾಗಲೂ ಎರಡನೆಯ ಹಂತದಲ್ಲಿ ನಿರೂಪಣಾತ್ಮಕವಾದ ಚರಿತ್ರೆಯ ರಚನೆಯನ್ನು ಕಾಣುತ್ತೇವೆ. ಹಾಗೆಯೆ ಮೌಖಿಕ ಇತಿಹಾಸವನ್ನೂ ಬಳಿಸಿಕೊಳ್ಳಲಾಗುತ್ತದೆ.

ಮೂರನೆಯ ಹಂತದಲ್ಲಿ ರಚಿತವಾಗುವುದು ವಿಶ್ಲೇಷಣಾತ್ಮಕ ಹಾಗೂ ತಾತ್ವಿಕ ವಿಮರ್ಶೆಯನ್ನು ಒಳಗೊಂಡ ಬರವಣಿಗೆಗಳು. ಕೆಲವು ಸಂಶೋಧಕರು ಒಬ್ಬರೇ ಮೂರೂ ಹಂತದ ಕಾರ್ಯವನ್ನು ನಿರ್ವಹಿಸಿರುವುದನ್ನು ಕಾಣಬಹುದು. ಕೆ.ಎ.ನೀಲಕಂಠಶಾಸ್ತ್ರಿ, ಬಿಪನ್ ಚಂದ್ರರ ಕೃತಿ ರಚನೆಯಲ್ಲಿ ಪ್ರಾಥಮಿಕ ಆಕರಗಳನ್ನೂ ಸಂಗ್ರಹಿಸಿಕೊಳ್ಳುತ್ತ, ವಿಶ್ಲೇಷಣಾತ್ಮಕ ಬರವಣಿಗೆಗೆ ತೊಡಗುವ ಪ್ರತಿಭೆಯನ್ನು ಕಾಣಬಹುದು.

ಕೇವಲ ಮಾಹಿತಿ ಸಂಕಲನಕ್ಕಾಗಿಯೇ ಸಂದರ್ಶನಗಳನ್ನು ನಡೆಸಿ, ಧ್ವನಿ ಸುರುಳಿಗಳನ್ನು ಸಂಗ್ರಹಿಸುವುದು ಮತ್ತು ಅವುಗಳನ್ನು ಬರಹ ರೂಪಕ್ಕೆ ತರುವುದು ಈ ಕಾರ್ಯದಲ್ಲಿ ತೊಡಗಿಕೊಂಡ ಸಂಶೋಧಕರಿಗೆ ದಾಖಲೀಕರಣವೇ ಮಹತ್ವದ ಉದ್ದೇಶವಾಗಿರುತ್ತದೆ. ವಿಚಾರವೊಂದರ ವಿಶ್ಲೇಷಣೆಗೆ ತೊಡಗಿದ್ದು ಅದಕ್ಕೆ ಪೂರಕ ಸಾಮಗ್ರಿಯಾಗಿ ಸಂಬಂಧಪಟ್ಟ ವ್ಯಕ್ತಿಗಳ ಸಂದರ್ಶನ ಕೈಗೊಂಡಾಗ ಮೌಖಿಕ ಮಾಹಿತಿ ನೇರವಾಗಿ ಬಳಕೆಯಾಗುತ್ತದೆ.

ಮೌಖಿಕ ಇತಿಹಾಸ ಸಂಗ್ರಹಣೆಯ ಉದ್ದೇಶದ ಆಧಾರದ ಮೇಲೆ ಮೂರು ಪ್ರಕಾರವಾಗಿ ವಿಂಗಡಿಸಬಹುದು.

೧. ವೈಯಕ್ತಿಕ ಸಂಶೋಧನೆ: ಸ್ನಾತಕೋತ್ತರ ಮಟ್ಟದ ವಿದ್ಯಾರ್ಥಿಯಿಂದ ಹಿರಿಯ ವಿದ್ವಾಂಸರವರೆಗೆ ವೈಯಕ್ತಿಕ ಬರವಣಿಗೆ, ಲೇಖನ ಅಥವಾ ಮಹಾಪ್ರಬಂಧಗಳಿಗಾಗಿ ನಡೆಸುವ ಸಂದರ್ಶನಗಳು ಈ ಗುಂಪಿಗೆ ಒಳಪಡುತ್ತವೆ. ಇಲ್ಲಿ ಸಂಶೋಧಕರು ಸಂದರ್ಶನದ ಪೂರ್ಣಲಾಭವನ್ನು ಪಡೆಯುತ್ತಾರೆ. ತಮ್ಮ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಹಾಕಿ ಉತ್ತರವನ್ನು ಪಡೆಯುತ್ತಾರೆ.

೨. ಮೌಖಿಕ ಇತಿಹಾಸದ ಕಾರ್ಯಯೊಜನೆಗಾಗಿ ನಡೆಸುವ ಸಂದರ್ಶನಗಳು: ಇವು ಖಾಸಗಿ ಸಂಸ್ಥೆಗಳು ಅಥವಾ ವಿಶ್ವವಿದ್ಯಾಲಯಗಳಲ್ಲಿ ಕೈಗೆತ್ತಿಕೊಂಡ ಕಾರ್ಯಯೋಜನೆಗಳಾಗಿರುತ್ತವೆ. ಇವು ತನ್ನ ವೈಯಕ್ತಿಕ ಸಂಶೋಧನೆ ಮತ್ತು ಮೌಖಿಕ ಸಂಗ್ರಹಾಲಯಗಳ ನಡುವಿನ ಹಂತದಲ್ಲಿ ಪರಿಗಣಿಸಬೇಕಾಗುತ್ತದೆ.

೩. ಮೌಖಿಕ ಇತಿಹಾಸ ಸಂಗ್ರಹಾಲಯ ಮುಂದಿನ ಸಂಶೋಧಕರಿಗಾಗಿ ‘ಮೌಖಿಕ ಇತಿಹಾಸ ಸಂಗ್ರಹಾಲಯಗಳು’ ಹಲವು ರಾಷ್ಟ್ರಗಳಲ್ಲಿ ಸ್ಥಾಪನೆಯಾಗಿವೆ. ಇಲ್ಲಿ ರಾಷ್ಟ್ರೀಯ ಮಾನ್ಯತೆಯಿರುವಂತಹ ವಿಚಾರಗಳನ್ನು ಆರಿಸಿಕೊಂಡು ಸಂದರ್ಶನಗಳನ್ನು ನಡೆಸಿ, ಧ್ವನಿಸುರಳಿಗಳನ್ನು ಮಾಡಿ ಅವುಗಳನ್ನು ಸಂಗ್ರಹಿಸಲಾಗುತ್ತದೆ. ರೇಡಿಯೋ ಪ್ರಸಾರಕ್ಕಾಗಿ ಮಾಡಿದ ಸಂದರ್ಶನಗಳೂ, ಶೈಕ್ಷಣಿಕ ಕಾರಣಕ್ಕಾಗಿ ಮಾಡಿದ ಧ್ವನಿಸುರುಳಿ ಹಾಗೂ ವೀಡಿಯೋ ಚಿತ್ರೀಕರಣ, ಭಾಷಣಗಳು, ಪಾಠಗಳು ಇವುಗಳನ್ನೆಲ್ಲ ಇಲ್ಲಿ ಸಂಗ್ರಹಿಸಲಾಗುತ್ತದೆ. ಇಲ್ಲಿ ಮಾಡುವ ಧ್ವನಿ ಮತ್ತು ಚಿತ್ರಗಳ ದಾಖಲೀಕರಣ ತಮ್ಮ ಅನುಕೂಲಕ್ಕಾಗಿ ಆಗದಿರುವುದರಿಂದ ಮಾಹಿತಿಯ ಕರ್ತೃತ್ವ ಇತ್ಯಾದಿ ವಿಚಾರಗಳ ಬಗೆಗೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಉದ್ದೇಶ ವಿಭಿನ್ನವಾಗಿರುವುದರಿಂದ ಅವನ್ನು ಬಳಸಿಕೊಳ್ಳುವಾಗಲೂ ವಿಶೇಷ ಎಚ್ಚರಿಕೆ ವಹಿಸಬೇಕಾಗುತ್ತದೆ. ಇಲ್ಲಿನ ವಿಚಾರಗಳು ವೈಯಕ್ತಿಕ ಸಂಶೋಧನೆಯಷ್ಟು ನೇರವಾದ ಮಾಹಿತಿಯನ್ನು ನೀಡಲಾರವು.

ಅತ್ಯಂತ ಟೀಕೆ ಮತ್ತು ಅನುಮಾನಕ್ಕೆ ಒಳಗಾಗಿರುವ ಐತಿಹಾಸಿಕ ಆಧಾರ ಮೌಖಿಕ ಇತಿಹಾಸ. ಅದಕ್ಕಿರುವ ಪರಿಮಿತಿಗಳು ಇಂತಹ ಕಟು ವಿಮರ್ಶೆಗೆ ಎಡೆಮಾಡಿಕೊಡುತ್ತಿವೆ.

ಬಹುಮಟ್ಟಿಗೆ ಮೌಖಿಕ ಇತಿಹಾಸದ ಸತ್ಯಾಸತ್ಯತೆಯನ್ನು ಆತ್ಮಕಥೆಗಳ ಸತ್ಯಾಸತ್ಯತೆಯ ಮಟ್ಟಕ್ಕೆ ಹೋಲಿಸಬಹುದು. ಚರಿತ್ರೆ ಶಿಸ್ತಿನ ಹಿನ್ನೆಲೆಯಲ್ಲಿ ಗಮನಿಸಿದಾಗ ಆತ್ಮಕಥೆಯೇ ಚರಿತ್ರೆಯಲ್ಲ. ಆತ್ಮಕಥೆಯ ಆಧಾರದ ಮೇಲೆ ಚರಿತ್ರೆಯನ್ನು ಬರೆಯಲಾಗುತ್ತದೆ. ಆತ್ಮಕಥೆಯನ್ನು ಪ್ರಮುಖ ಐತಿಹಾಸಿಕ ಆಧಾರವಾಗಿ ಒಪ್ಪಿಕೊಳ್ಳಲಾಗಿದೆ. ಮೌಖಿಕ ಇತಿಹಾಸದ ಸ್ಮರಣೆಯ ಕುರಿತು ಅನುಮಾನವನ್ನು ವ್ಯಕ್ತಪಡಿಸುವುದಾದರೆ ಆತ್ಮ ಕಥೆಗಳನ್ನೂ ಅನುಮಾನದಿಂದಲೇ ನೋಡಬೇಕಾಗುತ್ತದೆ. ಆತ್ಮಕಥೆಗಳಲ್ಲಿ ತಮಗೆ ಇಷ್ಟವಾದ ವಿಚಾರಗಳನ್ನು ಹೇಳಿಕೊಂಡಿರುತ್ತಾರೆ. ಮೌಖಿಕ ಇತಿಹಾಸದಲ್ಲಿ ಸಂಶೋಧಕನ ಅಗತ್ಯಕ್ಕೆ ಬೇಕಾದ ವಿಚಾರಗಳನ್ನು ಸ್ಮರಿಸಬೇಕಾಗುತ್ತದೆ.

‘ಮೌಖಿಕ ಇತಿಹಾಸ’ದಲ್ಲಿ ಸುಳ್ಳುಗಳು ಅಗತ್ಯಕ್ಕೆ ಬೇಕಾದ ವಿಚಾರಗಳನ್ನು ಸ್ಮರಿಸಬೇಕಾಗುತ್ತದೆ. ಸೇರಿಹೋಗುವ ಸಂಭವ ಹೆಚ್ಚೆಂಬುದು ಇದರ ಬಗೆಗೆ ಕಾಣಬರುವ ಮತ್ತೊಂದು ಪ್ರಮುಖ ಟೀಕೆ. ಆಡಳಿತದ ಅನುಕೂಲಕ್ಕಾಗಿ ಲಿಖಿತ ದಾಖಲೆಗಳಲ್ಲಿ ಸುಳ್ಳುಗಳನ್ನು ಸೇರಿಸಬಹುದೆಂಬುದು ಸಾಮಾನ್ಯವಾಗಿ ತಿಳಿದ ಸಂಗತಿಯೇ. ಮೌಖಿಕ ಇತಿಹಾಸದಲ್ಲಿ ಉದ್ದೇಶಪೂರ್ವಕವಾದ ಸುಳ್ಳುಗಳಿದ್ದರೆ ಅದು ವೈಯಕ್ತಿಕ ಕಾರಣದಿಂದ ಕೂಡಿರುತ್ತದೆ ಎಂದು ಅರ್ಥೈಸಬಹುದು. ಸಂಸ್ಥೆಯೊಂದು ತನ್ನ ಅಭಿವೃದ್ಧಿಯನ್ನು ಕುರಿತು ವರದಿಯನ್ನು ನೀಡುವಾಗ ಹಲವಾರು ಸುಳ್ಳುಗಳನ್ನು ಸೃಷ್ಟಿಸುತ್ತದೆ. ನಡೆಯದೇ ಇರುವ ಅಭಿವೃದ್ಧಿ ಕಾರ‍್ಯವನ್ನು ದಾಖಲೆಗಳಲ್ಲಿ ವರದಿಮಾಡುವುದು ಅಪರೂಪವಾದುದಲ್ಲ. ಹಾಗೆಯೇ ಮಾತಿನಲ್ಲಿ ಸುಳ್ಳುಗಳನ್ನು ಹೇಳುವಾಗ ಆತಮ್ ಪ್ರತಿಷ್ಠೆ ಮುಖ್ಯ ಕಾರಣವಾಗಿರುತ್ತದೆ.

ಫಿಲಿಪ್ ವಿಲಿಯಮ್ಸ್‌ ಎಂಬ ಇತಿಹಾಸಕಾರರು ಬರೆಯುತ್ತ ಉದ್ದೇಶಪೂರ್ವಕವಾಗಿ ಮಾಡುವ ತಪ್ಪುಗಳನ್ನು ಪತ್ತೆ ಹಚ್ಚಬಹುದು. ಆದರೆ ಬಹಳಷ್ಟು ಜನ ತಮ್ಮ ಕಲ್ಪನೆಗಳನ್ನು ಸತ್ಯವೆಂದು ಹೇಳುತ್ತಾರೆ, ಅಂತಹ ಸಮಯದಲ್ಲಿ ತೊಂದರೆಯಾಗುತ್ತದೆಂದು ಅಭಿಪ್ರಾಯಪಡುತ್ತಾರೆ ಇಲ್ಲಿ ಸುಳ್ಳು ಉದ್ದೇಶಪೂರ್ವಕವಾಗಿರದೆ ನಂಬಿಕೆಯಾಗಿರುತ್ತದೆ. ಇಂತಹ ನಂಬಿಕೆಯ ಪೂರ್ವಗ್ರಹ ಎಲ್ಲ ಆಧಾರಗಳಲ್ಲೂ ಕಡೆಗೆ ಸ್ವತಃ ಇತಿಹಾಸಕಾರನಿಗೂ ಇರುವ ಸಾಧ್ಯತೆಯಿರುತ್ತದೆ. ಚರಿತ್ರೆಯ ನಿರ್ಮಾಣದಲ್ಲಿರಬಹುದಾದ ದೋಷಗಳನ್ನು ಗಮನಿಸುವಾಗ ನಂಬಿಕೆಯ ಪೂರ್ವಗ್ರಹ ಚರ್ಚೆಗೆ ಒಳಗಾಗುವ ವಿಚಾರ. ಆದ್ದರಿಂದ ಸಮಸ್ಯೆ ಆಧಾರದಲ್ಲಿರದೆ ಅದು ಆಧಾರದ ಸೃಷ್ಟಿಯಲ್ಲೇ ಇರಬೇಕು. ಇದರ ಬಗೆಗೆ ಆಫಿಕ್ರಾದ ವಿದ್ವಾಂಸರಾದ ಹಂಪಾಟೆ ಬಾ ಹೇಳುವ ಮಾತುಗಳು ಅರ್ಥಗರ್ಭಿತವಾಗಿ ಕಂಡು ಬರುತ್ತವೆ.

ಹಿಂದಿನ ದಾಖಲೆಗಳ ವಿಷಯಕ್ಕೆ ಬಂದಾಗ, ಕೆಲವು ವಿದ್ವಾಂಸರಿಗೆ, ಲಿಖಿತ ದಾಖಲೆಯಷ್ಟೇ ನಂಬಿಕೆಯನ್ನು ಮೌಖಿಕ ಆಧಾರಗಳ ಬಗೆಗೆ ಇರಿಸಬಹುದೇ ಎಂಬ ಸಮಸ್ಯೆ ಎದುರಾಗುತ್ತದೆ. ಸಮಸ್ಯೆಯನ್ನು ನೋಡುವ ಕ್ರಮ ಅದಲ್ಲ. ದಾಖಲೆ ಲಿಖಿತವಾಗಲಿ, ಮೌಖಿಕವಾಗಲಿ ಅಂತಿಮವಾಗಿ ವ್ಯಕ್ತಿ ನಂಬಿಕೆಗೆ ಎಷ್ಟು ಅರ್ಹ ಎನ್ನುವುದು ಮುಖ್ಯ.

ಅನುಮಾನಿಸಬೇಕಾದುದು ವ್ಯಕ್ತಿಯನ್ನೇ ಹೊರತು ವ್ಯಕ್ತಿ ಸೃಷ್ಟಿಸಿದ ಆಧಾರವನ್ನಲ್ಲ ಎಂಬುದು ಇವರ ಮೂಲ ಚರ್ಚೆ. ಬರಹಗಾರರೊಬ್ಬರ ಬರಹಕ್ಕೆ ಮನ್ನಣೆಯಿರುವುದಾದರೆ, ಅವರು ಹೇಳುವ ಮಾತುಗಳಿಗೂ ಅಷ್ಟೆ ಮನ್ನಣೆ ದೊರೆಯಬೇಕೆಂಬುದು ‘ಮೌಖಿಕ ಇತಿಹಾಸದ’ ಪ್ರಯತ್ನವಾಗಿದೆ. ಮಾತಿನಲ್ಲಿ ಸುಳ್ಳನ್ನು ಹೇಳಬಲ್ಲವರು ಬರಹದಲ್ಲಿ ಸತ್ಯವನ್ನೇ ಬರೆಯುತ್ತಾರೆಂದು ನಿರೀಕ್ಷಿಸುವುದು ಹೇಗೆ? ಆಧಾರವನ್ನು ಆರಿಸಿಕೊಳ್ಳುವಾಗ ಮಾಧ್ಯಮಕ್ಕಿಂತ ವ್ಯಕ್ತಿಯ ಪೂರ್ವಾಪರಗಳನ್ನು ತಿಳಿಯಬೇಕಾಗುತ್ತದೆ. ಭಾರತದ ಚರಿತ್ರೆಯ ರಚನೆ ಬೆಳೆದು ಬಂದ ರೀತಿಯನ್ನು ಗಮನಿಸಿದರೆ ಬ್ರಿಟಿಶರು ಭಾರತದ ಚರಿತ್ರೆಯ ಒಳಗೆ ಹಲಾರು ಸುಳ್ಳುಗಳನ್ನು ಸೇರಿಸಿರುವುದು ಕಂಡುಬರುತ್ತದೆ. ಬಹುಶಃ ಆ ಹೊತ್ತಿನಲ್ಲಿ ಅವರ ಮಾತುಗಳಲ್ಲೂ ಅಂತಹದೇ ವಿಚಾರ ಹೊರಬರುತ್ತಿತ್ತು. ಅವರು ಬರೆದ ಚರಿತ್ರೆಯೊಳಗಿನ ಸುಳ್ಳನ್ನು ಹೊರಹಾಕಬೇಕಾದರೆ ಮತ್ತೊಂದು ಮುಖದ ಮೌಖಿಕ ಇತಿಹಾಸವನ್ನು ಸಂಗ್ರಹಿಸಬೇಕಾಗುತ್ತದೆ.

ಮೌಖಿಕ ಇತಿಹಾಸದ ಬಗೆಗಿನ ದೊಡ್ಡ ಸಮಸ್ಯೆ ಹಾಗೂ ಟೀಕೆ ಜನರ ಬಾಯಲ್ಲಿ ಹರಡಿದ ವಿಚಾರಗಳನ್ನು ಸಂಗ್ರಹಿಸುತ್ತ ಅದಕ್ಕೆ ಮೌಲ್ಯಯುತವಾದ ಸ್ಥಾನ ನೀಡುವುದು ಸಾಧುವಲ್ಲ. ‘ಅಂತೆ’, ‘ಇರಬಹುದು’ ಎಂಬ ಉತ್ತರಗಳು ಬಂದಾಗ ಎಚ್ಚರಿಕೆಯಿಂದ ಮುಂದಿನ ಪ್ರಶ್ನೆಯನ್ನು ಕೇಳಬೇಕಾಗುತ್ತದೆ. ನೇರವಾಗಿಯೂ ಅದು ಕೇವಲ ವದಂತಿಯಾಗಿದ್ದರೆ ಅಂತಹವನ್ನು ಬಿಟ್ಟು ನಿಮ್ಮ ನೇರ ಅನುಭವಗಳನ್ನು ತಿಳಿಸಿ ಎಂದೂ ಕೇಳಬಹುದು. ವದಂತಿಯನ್ನು ಹೆಚ್ಚು ಒತ್ತುಕೊಟ್ಟು ಸಂದರ್ಶಿತ ಹೇಳಲು ಬಯಸಿದರೆ ಆ ಮಾಹಿತಿಯನ್ನು ನಿಮ್ಮ ಹೆಸರಿನಲ್ಲಿ ಪ್ರಕಟಿಸಬಹುದೇ ಎಂದೂ ಕೇಳಬೇಕಾಗುತ್ತದೆ.

ವದಂತಿಗಳ ಆಧಾರದ ಮೇಲೆ ಹಲವು ಬಾರಿ ಐತಿಹ್ಯಗಳು, ಸ್ಥಳ ಪುರಾಣಗಳು, ಕಥೆಗಳೂ ಹುಟ್ಟಿಕೊಳ್ಳುತ್ತವೆ. ಸಂಪ್ರದಾಯವಾಗಿ ಹರಿದುಬಂದಾಗ ಅದನ್ನು ಇತಿಹಾಸಕ್ಕೆ ಬಳಸಿಕೊಳ್ಳುವ ಕ್ರಮವೇ ಬೇರೆ. ವದಂತಿಯ ಒಳಗೆ ವಾಸ್ತವಾಂಶ ಅವನಿಗಿರಬಹುದಾದ ಸಾಧ್ಯತೆಯಿದ್ದರೂ ಅದು ಬೆಳೆಯುವ ಸಂದರ್ಭದಲ್ಲಿ ರೆಕ್ಕೆಪುಕ್ಕ ಕಟ್ಟಿಕೊಂಡು ಸುದ್ದಿ ಬೆಳೆಯುತ್ತ ಹೋಗುತ್ತದೆ. ವದಂತಿಗಳು ಹೆಚ್ಚಾಗಿ ವ್ಯಕ್ತಿಗಳ ಸುತ್ತ ಹರಡುತ್ತವೆ. ಚರಿತ್ರೆಯ ನಿರ್ಮಾಣಕಾರರ ಉದ್ದೇಶ ರೋಚಕವಾದ ಕಥೆಯನ್ನು ಬರೆಯುವುದಲ್ಲ. ಅವರ ಬರವಣಿಗೆಗೆ ಸಾಮಾಜಿಕ ಜವಾಬ್ದಾರಿಯಿರುತ್ತದೆ. ವ್ಯಕ್ತಿಯ ಸುತ್ತ ಹರಡಿಕೊಂಡ ವದಂತಿಗಳು ವ್ಯಕ್ತಿತ್ವ ಹಾಳುಮಾಡುವುದಕ್ಕಾಗಿಯೇ ಹುಟ್ಟಿಕೊಂಡಿದ್ದರೆ ಜೀವನ ಚರಿತ್ರೆಕಾರರು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಸಾಮಾಜಿಕ ವಿಚಾರಗಳು, ಧಾರ್ಮಿಕ ವಿಚಾರಗಳ ಬಗೆಗೆ ಹರಡಿದ ವದಂತಿಗಳು ಅಷ್ಟೊಂದು ಅನುಮಾನಕ್ಕೆ ಎಡೆಮಾಡಿಕೊಡುವುದಿಲ್ಲ. ಸಾಮೂಹಿಕ ವಿಚಾರಗಳನ್ನೂ ವೈಯಕ್ತಿಕ ವಿಚಾರಗಳನ್ನೂ ಬೇರೆ ಬೇರೆಯಾಗಿ ಮೌಲ್ಯೀಕರಿಸಬೇಕಾಗುತ್ತದೆ. ವ್ಯಕ್ತಿ ವಿಚಾರಗಳನ್ನು ತಿಳಿಯುವಾಗ ಸಾಧ್ಯವಾದಷ್ಟು ಹೆಚ್ಚು ಜನರನ್ನು ಸಂದರ್ಶನಕ್ಕೆ ಒಳಪಡಿಸಬೇಕಾಗುತ್ತದೆ.

ಸುಳ್ಳು ವದಂತಿಗಳು ಮೌಖಿಕ ರೂಪದ ವರದಿಗಳಲ್ಲಿ ಮಾತ್ರವಲ್ಲದೆ, ಎಲ್ಲ ರೀತಿಯ ದಾಖಲೆಗಳಲ್ಲೂ ಸೇರಿರಬಹುದಾದ ಸಾಧ್ಯತೆಯಿರುತ್ತದೆ. ಶಾಸನಗಳಲ್ಲಿ, ಸರ್ಕಾರಿ ದಾಖಲೆಗಳಲ್ಲಿ ವೃತ್ತಪತ್ರಿಕೆಗಳಲ್ಲೂ ಸುಳ್ಳು ವದಂತಿಗಳು ಸೇರಿರುತ್ತವೆ. ಮೌಖಿಕ ಇತಿಹಾಸದಂತೆ ಉಳಿದ ಯಾವ ದಾಖಲೆಗಳಲ್ಲೂ ಮರುಪ್ರಶ್ನಿಸುವ ಸಾಧ್ಯತೆಯಿಲ್ಲದಿರುವುದರಿಂದ ಸುಳ್ಳು ವದಂತಿಗಳು ಅಧಿಕೃತವಾಗಿ ಸೇರಿಹೋಗುತ್ತವೆ.

ಮೌಖಿಕ ಇತಿಹಾಸ ಉತ್ಪ್ರೇಕ್ಷಿತ ಮಾಹಿತಿಯನ್ನು ಒದಗಿಸುತ್ತದೆಯೆ? ಹೇಗೆ ಅನುಭವಗಳನ್ನು ಎಲ್ಲರೂ ಬರೆದಿಡಲಾರರೊ ಹಾಗೆಯೇ ಎಲ್ಲರೂ ತಮ್ಮ ಬದುಕಿನ ಅನುಭವಗಳನ್ನೂ ಹೇಳಿಕೊಳ್ಳಲಾರರು. ಉತ್ತಮ ಮಾತುಗಾರರು, ವಾಚಳಿಗಳು ಇರುವ ಸಣ್ಣಪುಟ್ಟ ವಿಚಾರಗಳನ್ನು ವಿಜೃಂಭಿಸಿ ಉತ್ಪ್ರೇಕ್ಷಿಸಿ ಹೇಳುವುದರಲ್ಲಿ ಆಶ್ಚರ್ಯವಿಲ್ಲ. ಮಾತುಗಾರಿಕೆಯಲ್ಲಿ ಇಲ್ಲದ ಬಣ್ಣವನ್ನು ಹಚ್ಚಿ ತಾವು ಮಾಡಿದ ಸಾಧನೆ ಮರಳಷ್ಟಿದ್ದರ ಅದನ್ನು ಬೆಟ್ಟವಾಗಿಸುತ್ತಾರೆ. ನೀಡಿದ ವಿವರಣೆಯ ಒಳಗೆ ವಾಸ್ತವದ ಎಳೆ ಮುಳುಗಿ ಹೋಗುತ್ತದೆ. ಇಷ್ಟೆಲ್ಲಾ ತಿಳಿದೂ ಮೌಖಿಕ ಆಧಾರಗಳನ್ನು ಸಂಗ್ರಹಿಸಬೇಕೆ? ಚರಿತ್ರೆಯ ನಿರ್ಮಾಣದ ಸಂದರ್ಭದಲ್ಲಿ ಸಾಹಿತ್ಯವನ್ನು ಪ್ರಮುಖ ಆಧರವೆಂದು ಪರಿಗಣಿಸಲಾಗುತ್ತದೆ. ಹೇಗೆ ಸಾಹಿತ್ಯಾಧಾರಗಳು ಬಳಸಿಕೊಳ್ಳುವಾಗ ವಾಸ್ತವವನ್ನು ಹೊರ ತೆಗೆಯುವ ಪ್ರಯತ್ನ ನಡೆಯುತ್ತದೆಯೋ ಆ ಎಲ್ಲ ತರ್ಕ ಮತ್ತು ವಿಮರ್ಶೆಗೆ ಒಳಪಡಿಸುತ್ತ ಆಧಾರವನ್ನು ಬಳಸಿಕೊಳ್ಳಬೇಕಾಗುತ್ತದೆ.

ಹಲವು ಭಾರಿ ಇತಿಹಾಸದ ವಿದ್ಯಾರ್ಥಿಗಳು ‘ಮೌಖಿಕ ಇತಿಹಾಸವನ್ನು’ ‘ಮೌಖಿಕ ಸಂಪ್ರದಾಯ’ದೊಂದಿಗೆ ಗೊಂದಲ ಮಾಡಿಕೊಳ್ಳುವುದು ಕಂಡುಬರುತ್ತದೆ. ಈ ಗೊಂದಲಗಳು ಪದೋಕ್ತಿಗಳ ಬಗ್ಗೆಯೇ ಹೊರತು ಅದರ ಬಳಕೆಯಲ್ಲಲ್ಲ. ‘ಮೌಖಿಕ ಚರಿತ್ರೆ’ ಮತ್ತು ‘ಮೌಖಿಕ ಸಂಪ್ರದಾಯ’ ಎರಡೂ ಮೌಖಿಕಕವಾಗಿಯೇ ಬಂದವಾದರೂ, ಸಂಗ್ರಹಿಸುವ ಮಾದರಿ ಒಂದೇ ಆದರ ಒಳವಿಚಾರ ಬೇರೆಯೇ ಆಗುತ್ತದೆ. ವ್ಯಕ್ತಿಯ ಪೂರ್ವಸ್ಮೃತಿಗು, ಪ್ರತ್ಯಕ್ಷದರ್ಶಿಯ ಅನುಭವಗಳು ಹಾಗೂ ಸಮಾಜದಲ್ಲಿ ಕೇಳಿ ಬಂದ ವದಂತಿಗಳು ಮೌಖಿಕ ಇತಿಹಾಸಕಾರರ ಆಧಾರಗಳಾಗುತ್ತವೆ. ಬದುಕಿರುವ ವ್ಯಕ್ತಿಯೊಬ್ಬನ ಬದುಕಿನಲ್ಲಿ ನಡೆದ ಘಟನೆಯ ಅನುಭವ, ಕಂಡು ಕೇಳಿದ ವಿಚಾರ, ಪೂರ್ವಸ್ಮೃತಿಯನ್ನು ದಾಖಲಿಸುವುದು ಮೌಖಿಕ ಇತಿಹಾಸವಾಗುತ್ತದೆ. ಇದು ಸಮಕಾಲೀನ ಇತಿಹಾಸ ರಚನೆಯಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತದೆ.

ವಿಚಾರವೊಂದು ಮೌಖಿಕ ಸಂಪ್ರದಾಯವಾಗುವಾಗ ಅದು ಬಾಯಿಂದ ಬಾಯಿಗೆ ಒಂದು ಪೀಳಿಗೆ ಮತ್ತೊಂದು ಹರಿದುಬರುತ್ತದೆ. ಮೂಲದಲ್ಲಿ ಪೂರ್ವಸ್ಮೃತಿ, ಅನುಭವ ಇವೇ ಆಗಿದ್ದರೂ ಸಾಗಿ ಬರುವಾಗ ಅದು ಪಡೆದುಕೊಳ್ಳುವ ರೂಪ ಭಿನ್ನವಾಗಿರುತ್ತದೆ. ನೆನಪಿನಲ್ಲಿಟ್ಟುಕೊಳ್ಳಲು ಬಳಸಿಕೊಳ್ಳಲುವ ತಂತ್ರ ಸಹ ಭಿನ್ನವಾಗುತ್ತದೆ. ಕಥೆಯಾಗಿ, ಗೀತೆಯಾಗಿ, ಗಾದೆ, ಒಗಟುಗಳಾಗಿ ರೂಪವನ್ನು ಪಡೆಯುತ್ತ ಸಾಗುತ್ತದೆ.

ಮೌಖಿಕ ಇತಿಹಾಸದ ಸಂದರ್ಭದಲ್ಲಿ ಸಂದರ್ಶಿತ ಮಾಹಿತಿಯ ಕರ್ತೃವಾಗುತ್ತಾರೆ ಎಂದರೆ ಯಾರು ಮಾಹಿತಿಯನ್ನು ನೀಡುತ್ತಾರೋ ಅವರೇ ಆ ಮಾಹಿತಿಯ ಜನಕ ಅಥವಾ ಕರ್ತವ್ಯವಾಗುತ್ತಾರೆ. ಏಕೆಂದರೆ ವ್ಯಕ್ತಿ ಪ್ರತ್ಯಕ್ಷದರ್ಶಿಯಾಗಿರುತ್ತಾರೆ. ಆ ಕೃರ್ತೃತ್ವವನ್ನು ಅಧಿಕೃತಗೊಳಿಸಲು ಸಂದರ್ಶಕ ಮಾಹಿತಿದಾರನಿಂದ ಸಂಗ್ರಹಿಸಿದ ವಿಷಯವನ್ನು ಪ್ರಕಟಿಸಲು ಅನುಮತಿ ಪಡೆಯಬೇಕಾಗುತ್ತದೆ. ಅದೇ ಮೌಖಿಕ ಪರಂಪರೆಯ ಸಂದರ್ಭದಲ್ಲಿ ಪರಂಪರೆಯಿಂದ ಬಂದ ಹಾಡನ್ನೋ ಕಥೆಯನ್ನೋ ದಾಖಲಿಸಿ ಅದನ್ನು ಹೇಳಿದ ವಕ್ತೃವಿನ ಹೆಸರು, ಊರು ಸ್ಥಳವನ್ನು ಗ್ರಂಥದಲ್ಲಿ ಉಲ್ಲೇಖಿಸುವುದು ಸಂಗ್ರಾಹಕನ ಸೌಜನ್ಯ ಅಥವಾ ಜವಾಬ್ದಾರಿ ಆಗಿರುತ್ತದೆ. ನೀಡಿದ ಮಾಹಿತಿ ನೈಜವಾಗಿದೆಯೇ ಎನ್ನುವ ಪ್ರಶ್ನೆಗೆ ಒಳಗಾಗುವುದಿಲ್ಲ. ಜನಪದ ಸಂಶೋಧಕರೊಬ್ಬರು ಗೀಗೀ ಪದಗಳನ್ನು ಸಂಗ್ರಹಿಸಿದರೆ ಆ ಹಾಡನ್ನು ಹಾಡಿದವರೇ ಅದರ ಕರ್ತೃವಾಗುವುದಿಲ್ಲ. ಆ ಕೇವಲ ಅದರ ವಕ್ತೃವಾಗುತ್ತಾನೆ. ಮೌಖಿಕ ಪರಂಪರೆ ಅಥವಾ ಜನಪದ ಸಾಹಿತ್ಯದ ಕರ್ತೃ ಯಾರೆಂಬ ಪ್ರಶ್ನೆ ಬಹುಮುಖ್ಯವಾದುದು. ಮೂಲದಲ್ಲಿ ಒಬ್ಬ ಪ್ರತ್ಯಕ್ಷದರ್ಶಿ, ಒಬ್ಬ ಕಲಾವಿದ ಸೃಷ್ಟಿಕರ್ತನಾಗಿರುತ್ತಾನೆ ಎನ್ನುವುದಕ್ಕಿಂತ ಬದುಕಿನ ನೋವು ನಲಿವು ಹಾಡಾಗಿ, ಕಥೆಯಾಗಿ ಒಗಟಾಗಿ ಹೊರಹೊಮ್ಮುತ್ತದೆ. ಕಾಲಾನುಕ್ರಮದಲ್ಲಿ ಸಮಾಜ ತನ್ನ ಅನುಭವಗಳನ್ನು ಸೇರಿಸುತ್ತ ಬರುತ್ತದೆ. ಆದ್ದರಿಂದ ಮೌಖಿಕ ಪರಂಪರೆಯ ಕರ್ತೃ ಒಂದು ಸಮಾಜವಾಗಿರುತ್ತದೆ. ಮೂಲಕಥೆಯ ಹಂದರ ಒರಿಜಿನಲ್ ಆಗಿದ್ದರೂ ಅದು ನಿರಂತರವಾಗಿ ಬೆಳೆಯುತ್ತ ಸಮಕಾಲೀನ ಅಂಶಗಳನ್ನು ಸೇರಿಸಿಕೊಳ್ಳುತ್ತ ಸಾಗುತ್ತದೆ.

ಚರಿತ್ರೆಯ ರಚನೆಯ ಸಂದರ್ಭದಲ್ಲಿ ಮೌಖಿಕ ಇತಿಹಾಸವನ್ನೂ, ಮೌಖಿಕ ಪರಂಪರೆಯನ್ನೂ ಭಿನ್ನ ಸ್ತರಗಳಲ್ಲೇ ವಿಶ್ಲೇಷಣೆ ಮಾಡಬೇಕಾಗುತ್ತದೆ. ಮೌಖಿಕವಾಗಿ ಬಂದಿತೆಂಬ ಒಂದು ಕಾರಣಕ್ಕೆ ಎರಡನ್ನೂ ಒಂದೇ ಸಂಶೋಧನಾ ಕ್ರಮಕ್ಕೆ ಅಳಡಿಸಲು ಸಾಧ್ಯವಿಲ್ಲ. ಮೌಖಿಕ ಇತಿಹಾಸವನ್ನು ಅದರ ಸತ್ಯಾಸತ್ಯತೆ ಅಳೆಯಲು ತರ ಸಮಕಾಲೀನ ಆಧಾರಗಳೊಂದಿಗೆ ತುಲನೆ ಮಾಡಲಾಗುತ್ತದೆ. ಒಬ್ಬ ವ್ಯಕ್ತಿ ಹೇಳಿದ ವಿಚಾರವನ್ನು ಮತ್ತೊಬ್ಬರಲ್ಲೋ ಇಲ್ಲವೇ ಗ್ರಂಥಗಳಲ್ಲೋ ಹೋಲಿಸುವ ಮೂಲಕ ಅದರ ಸತ್ಯಾಸತ್ಯತೆಯನ್ನು ಅಳೆಯಬೇಕಾಗುತ್ತದೆ. ಮೌಖಿಕ ಪರಪರೆಯ ವಿಷಯದಲ್ಲಿ ಘಟನೆಯ ಅಥವಾ ಮಾಹಿತಿಯ ಸತ್ಯಾಸತ್ಯತೆಗಿಂತ ಆಶಯ ಮುಖ್ಯವಾಗುತ್ತದೆ. ಘಟನೆಯ ನಿಖರತೆಗಿಂತ ಸಮಾಜ ಪ್ರತಿಕ್ರಿಯೆ, ಹರಿದುಬರಬೇಕಾದರೆ ಯಾವುದೇ ಮಹತ್ವವಲ್ಲದ ಘಟನೆಯ ನಿಖರತೆಗಿಂತ ಸಮಾಜದ ಪ್ರತಿಕ್ರಿಯೆ, ಅಭಿಪ್ರಾಯ, ಸಂಸ್ಕೃತಿ ಈ ಎಲ್ಲ ವಿಚಾರಗಳು ಗಮನೀಯವಾಗುತ್ತವೆ. ಪರಂಪರೆಯಲ್ಲಿ ಹರಿದುಬರಬೇಕಾದರೆ ಯಾವುದೇ ಮಹತ್ವವಿಲ್ಲದ ಘಟನೆಯ ಸುತ್ತ ಕಥೆ ಹುಟ್ಟಲಾರದು. ಭಾವನಾತ್ಮಕ ಅಂಶಗಳು, ತ್ಯಾಗ ಬಲಿದಾನ, ಶೋಷಣೆ, ನೋವು ನಲಿವುಗಳಿಗೆ ಆದ್ಯತೆ ದೊರೆಯುತ್ತದೆ. ಹಾಗೆಂದ ಮಾತ್ರಕ್ಕೆ ರಾಜಕೀಯ ವಿಚಾರಗಳನ್ನು ಚರ್ಚಿಸಿಲ್ಲವೆಂದು ಅರ್ಥವಲ್ಲ. ರಾಜಕೀಯ ವಿಚಾರಗಳು ಪುರಾಣೀಕರಣಗೊಂಡಿರುತ್ತವೆ. ಯಾವುದು ಮೌಖಿಕ ಸಂಪ್ರದಾಯದಲ್ಲಿ ಸಾಧ್ಯವಿಲ್ಲವೆಂದು ಭಾವಿಸಿರುತ್ತೇವೆಯೋ ಅಂತಹ ವಿಚಾರಗಳು ಪರಂಪರೆಯಲ್ಲಿ ಹರಿದು ಬರುವ ಸಾಧ್ಯತೆಯಿದೆ. ಭಾರತದಲ್ಲಿ ಮತ್ತು ಆಫ್ರಿಕದಲ್ಲಿ ವಂಶಾವಳಿಗಳನ್ನು ಹಾಡುವ ಬುಡಕಟ್ಟುಗಳು ಕಾಣಬರುತ್ತವೆ. ಇಲ್ಲಿ ಆಶಯಕ್ಕಿಂತ ಮಾಹಿತಿ ಮುಖ್ಯವಾಗುತ್ತದೆ. ಇದು ಅಪರೂಪದ ಸಂದರ್ಭ, ಉಳಿದಂತೆ ಮೌಖಿಕ ಪರಂಪರೆಯಲ್ಲಿ ಹರಿದುಬಂದ ವಿಚಾರಗಳಲ್ಲಿ ಆಶಯ ಮುಖ್ಯವಾಗಿ ಮಾಹಿತಿ ಪೂರಕವಾಗಿ ಕಂಡುಬರುತ್ತದೆ.

ಮೌಖಿಕ ಇತಿಹಾಸ ಮತ್ತು ಮೌಖಿಕ ಪರಂಪರೆಯಲ್ಲಿ ಕಾಣುವ ಪ್ರಮುಖವಾದ ವ್ಯತ್ಯಾಸ ಮರುಪ್ರಶ್ನಿಸುವ ಸಾಧ್ಯತೆ. ಮೌಖಿಕ ಇತಿಹಾಸದ ಸಂದರ್ಭದಲ್ಲಿ ಅನುಮಾನ ಬಂದಲ್ಲಿ ಮಾಹಿತಿದಾರರಿಂದ ಉತ್ತರ ಪಡೆಯಬಹುದು. ಮೌಖಿಕ ಪರಂಪರೆಯಲ್ಲಿ ಪಠ್ಯದ ಬಗೆಗೆ ಪ್ರಶ್ನಿಸಿದರೆ ಹಿಂದಿನಿಂದ ಹಾಗೇ ಹರಿದು ಬಂದಿದೆ, ಅದನ್ನೇ ನಾವೂ ಹೇಳುತ್ತೇವೆ ಎಂದು ಮಾತ್ರ ಉತ್ತರಿಸಬಲ್ಲರು. ಆ ಪರಂಪರೆಯನ್ನು ಕಲಾವಿದನೊಬ್ಬ ಹೇಗೆ ರೂಢಿಸಿಕೊಂಡನೆಂಬ ವಿಚಾರವನ್ನಾಗಲಿ, ಆತನ ಬದುಕಿನ ಕ್ರಮವನ್ನಾಗಲಿ ಪ್ರಶ್ನಿಸಿದರೆ ಉತ್ತರ ದೊರೆಯಬಲ್ಲದು. ಮೌಖಿಕ ಇತಿಹಾಸದ ವಿಚಾರದಲ್ಲಿ ಮರುಪಶ್ನೆಯೇ ಪ್ರಬಲವಾದ ಅಂಶ. ಪಾಕಿಸ್ತಾನದ ವಿಭಜನೆಯ ಸಂದರ್ಭದಲ್ಲಿ ಪ್ರತ್ಯಕ್ಷದರ್ಶಿಯೊಬ್ಬನನ್ನು ಸಂದರ್ಶಿಸುವಾಗ, ಆವೇಶದಿಂದ ತನ್ನ ನೋವುಗಳನ್ನು ಹೇಳುತ್ತಾ ಹೋಗುತ್ತಾನೆ. ಸಂಶೋಧಕ ತನ್ನ ಬಳಿ ಈಗಾಲಗೇ ಇರುವ ಅಧಿಕೃತ ಸರ್ಕಾರಿ ದಾಖಲೆಗಳ ಆಧಾರದ ಮೇಲೆ ಆ ಊರಿನಿಂದ ತೆರವಾದವರು ೨೦ ಜನ ಎಂದಿದೆಯಲ್ಲ. ನೀವು ೬೦ ಎಂದು ಹೇಳುತ್ತೀರಿ ಎಂದು ಪ್ರಶ್ನಿಸಬಹುದು. ಬಹು ಸಹಜವಾಗಿ ಅವರು ಹೀಗೆ ಉತ್ತರಿಸುತ್ತಾರೆ. ನಿಜವಾಗಿ ಲೆಕ್ಕ ಹಾಕಿದವರು ಯಾರು? ನಮ್ಮ ಹೆಂಗಸರು ಮಕ್ಕಳನ್ನು ಮೊದಲೇ ಬೇರೆ ಊರಿಗೆ ಕಳುಹಿಸಿದ್ದೆವು, ಅವರ ಲೆಕ್ಕಕ್ಕೆ ಅದೆಲ್ಲ ಎಲ್ಲಿ ಸಿಗಬೇಕು. ಗಲಭೆ ಸಮಯದಲ್ಲಿ ಸತ್ತವರೆಷ್ಟೋ ಹೀಗೆ ವಿವರಣೆ ಸಾಗುತ್ತಾ ಹೋಗುತ್ತದೆ. ಯೋಜಿತ ಅಥವಾ ಉದ್ದೇಶಿತ ಮಾಹಿತಿಗಿಂತ ಮಾತುಕತೆಯಲ್ಲಿ ಹೆಚ್ಚಿನ ಮಾಹಿತಿ ಹೊರ ಬರುತ್ತದೆ. ಉತ್ಪ್ರೇಕ್ಷೆಯಿದ್ದರೂ ಅದು ಉದ್ದೇಶಿತವಾಗಿರದೆ ತಪ್ಪು ಗ್ರಹಿಕೆಯಾಗಿರಬಹುದು. ಮತ್ತಷ್ಟು ಪ್ರಶ್ನೆಗಳಿಂದ ಅದನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಮೌಖಿಕ ಇತಿಹಾಸ ಸಮಕಾಲೀನವಾದುದು ಎಂದು ಈ ಹಿಂದೆಯೇ ಚರ್ಚಿಸಿದ್ದೇವ. ಎಷ್ಟೋ ಬಾರಿ ಅದನ್ನು ಇಮ್ಮಿಡಿಯೆಟ್ ಹಿಸ್ಟರಿ ಎಂದೂ ಸಹ ಕರೆಯಲಾಗಿದೆ. ಮೌಖಿಕ ಸಂಪ್ರದಾಯ ಸಮಕಾಲೀನದಲ್ಲಿ ಪ್ರಕಟವಾದ ತಲೆಮಾರುಗಳಿಂದ ಹರಿದು ಬಂದ ವಿಚಾರವಾಗುತ್ತದೆ. ಇವೆರಡರ ದಾಖಲೀಕರಣದ ಉದ್ದೇಶ ಸಹ ಭಿನ್ನವಾಗಿರುತ್ತದೆ. ಮೌಖಿಕ ಇತಿಹಾಸ ಮತ್ತು ಸಂಪ್ರದಾಯದ ಮಾದರಿಗಳನ್ನುಈ ಕೆಳಗಿನಂತೆ ವಿವರಿಸಬಹುದು.

ಮೌಖಿಕ ಆಕರ
ಮೌಖಿಕ ಇತಿಹಾಸ ಮೌಖಿಕ ಸಂಪ್ರದಾಯ
ಪ್ರತ್ಯಕ್ಷದರ್ಶಿ ಸಾಹಿತ್ಯಾತ್ಮಕ ಕ್ರಿಯಾತ್ಮಕ
ಪೂರ್ವಸ್ಮೃತಿ
ವದಂತಿ
ಸುದ್ದಿ
ಭಾಷಣ ರೂಢಿ, ಸಂಪ್ರದಾಯ ವೃತ್ತಿ
ವೃತ್ತಿಯಲ್ಲಿ ಹರಿದು ಬಂದ ಸಾಹಿತ್ಯ ಬದುಕಿನ ಅನುಭವ
ಶಿಷ್ಟ ಜನಪದ
ವೇದಸಾಹಿತ್ಯ: ಸ್ಮೃತಿಗಳು, ಕಾವ್ಯ, ಐತಿಹ್ಯ, ವದಂತಿ, ಕಾವ್ಯ

ಮೌಖಿಕವಾಗಿ ಸಂಗ್ರಹಿಸಿದ ಅಥವಾ ಬಂದ ವಿಚಾರಗಳನ್ನು ವಿಸ್ತಾರವಾದ ಅರ್ಥದಲ್ಲಿ ಮೌಖಿಕ ಇತಿಹಾಸ ಮತ್ತು ಮೌಖಿಕ ಸಂಪ್ರದಾಯ ಎಂದುಎರಡು ಭಾಗವಾಗಿ ಮಾಡಿಕೊಳ್ಳಬಹುದು.

ಪ್ರತ್ಯಕ್ಷದರ್ಶಿ ವರದಿ, ವ್ಯಕ್ತಿಯ ಅನುಭವದ ಪೂರ್ವಸ್ಮೃತಿಗಳು ಮೌಖಿಕ ಇತಿಹಾಸವಾಗುತ್ತವೆ. ವದಂತಿಗಳು ಮೌಖಿಕ ಇತಿಹಾಸವಾಗಬೇಕೆ ಎಂಬುದು ಬಹು ದೊಡ್ಡ ಸಮಸ್ಯೆ. ವದಂತಿಗಳನ್ನು ಯಾವಾಗ ಸ್ವೀಕರಿಸಬೇಕು ಮತ್ತು ಯಾವಾಗ ಸ್ವೀಕರಿಸಬಾರದೆಂಬುದು ಸಂಶೋಧಕರಿಗೆ ಅರಿವಾಗಬೇಕು. ರಾಜಕೀಯ ಕ್ಷೇತ್ರದಲ್ಲಿ ವದಂತಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಮಾಜದಲ್ಲಿ ವದಂತಿಗಳು ಹೇಗೆ ದಾರಿ ತಪ್ಪಿಸುತ್ತ ಬಂದಿದೆ ಎಂಬುದನ್ನುತಿಳಿಯುವ ಮೂಲಕ ಅರಿವು ಮೂಡಿಸಬಹುದು. ಎಷ್ಟೋ ವೇಳೆ ವದಂತಿಗಳೇ ಇತಿಹಾಸದ ಸ್ಥಾನವನ್ನು ಪಡೆದಿದ್ದು ಅದನ್ನುಒಡೆಯುವ ಜವಾಬ್ದಾರಿಯೂ ಮೌಖಿಕ ಇತಿಹಾಸಕಾರರ ದಾಗಿರುತ್ತದೆ.

ಯುರೋಪ್, ಆಫ್ರಿಕ, ಏಷ್ಯಾ ಖಂಡಗಳ ಚರಿತ್ರೆ ಮತ್ತು ಚರಿತ್ರೆಯ ರಚನೆ ಮೂರು ವಿಭಿನ್ನ ಸ್ವರೂಪವನ್ನು ಹೊಂದಿವೆ. ಈ ಹಿನ್ನೆಲೆಯಲ್ಲೇ ಮೌಖಿಕ ಇತಿಹಾಸದ ಪಾತ್ರವೂ ನಿಂತಿದೆ. ಯುರೋಪಿನ ಚರಿತ್ರೆಯ ರಚನೆಗೆ ಸಾಕಷ್ಟು ಲಿಖಿತ ಆಧಾರಗಳಿದ್ದರೆ, ಮೌಖಿಕ ಪರಂಪರೆಯ ಸಹಾಯದಿಂದ ಮಾತ್ರವೆ ಆಫ್ರಿಕ ಜನರ ಚರಿತ್ರೆಯನ್ನು ಕಟ್ಟಿಕೊಡಬೇಕಾಗುತ್ತದೆ. ಅದೇ ಭಾರತದ ಚರಿತ್ರೆಯನ್ನು ಲಿಖಿತ ಹಾಗೂ ಅಲಿಖಿತ ಆಧಾರಗಳೆರಡನ್ನೂ ಬಳಸಿಕೊಂಡೇ ರಚಿಸಬೇಕಾಗುತ್ತದೆ. ಭಾರತದ ಚರಿತ್ರೆ ಎಷ್ಟು ವೈವಿಧ್ಯಮಯವಾಗಿದೆಯೋ ಆಕರಗಳೂ ಅಷ್ಟೇ ವೈವಿಧ್ಯಮಯವಾಗಿವೆ. ಪರಂಪರೆಯಲ್ಲಿ ಹರಿದು ಬಂದ ವಿಚಾರಗಳನ್ನು ಸ್ಥೂಲವಾಗಿ ಹೀಗೆ ವರ್ಗೀಕರಿಸಬಹುದು.

೧. ಶಿಷ್ಟ ಮೌಖಿಕ ಪರಂಪರೆ-ವೇದಗಳು,ಉಪನಿಷತ್ತು, ಸ್ಮೃತಿ.
೨. ಶಿಷ್ಟ ಲಿಖಿತ ಪರಂಪರೆ-ಶಾಸನಗಳು, ಲಿಖಿತ ರೂಪದ ಶಾಸ್ತ್ರಗ್ರಂಥಗಳು

೩. ಶಿಷ್ಟ ಕ್ರಿಯಾ ಪರಂಪರೆ-ಯಜ್ಞ, ಯಾಗ, ಯೋಗ
೪. ಶಿಷ್ಟ ಭೌತಿಕ ಪರಂಪರೆ-ವಾಸ್ತು ಶಿಲ್ಪದ ಚೌಕಟ್ಟಿನಲ್ಲಿ ನಿರ್ಮಾನವಾದ ಕಟ್ಟಡಗಳು, ದೇವಾಲಯ, ಕೋಟೆ
೫. ಶಿಷ್ಟ ಕಲಾ ಪರಂಪರೆ-ಭಾರತ ನಾಟ್ಯ, ಶಾಸ್ತ್ರೀಯ ಸಂಗೀತ.

ಇವೆಲ್ಲವೂ ಶಿಷ್ಟವರ್ಗದಿಂದ ರಚಿತವಾಗಿದ್ದರೆ, ಜನಪದರಿಂದ ಹರಿದು ಬಂದ ವಿಚಾರಣೆಗಳನ್ನು ಒಟ್ಟಾರೆಯಾಗಿ ಹೀಗೆ ವರ್ಗೀಕರಿಸಬಹುದು.

೧. ಜನಪದ ಮೌಖಿಕ ಪರಂಪರೆ-ಲಾವಣಿ, ಕಥೆ, ಗಾದೆ, ಒಗಟು.
೨. ಜನಪದ ಕ್ರಿಯಾ ಪರಂಪರೆ-ವೃತ್ತ ಕಸಬುಗಳು, ಕೃಷಿ, ಕಮ್ಮಾರಿಕೆ.
೩. ಜನಪದ ಭೌತಿಕ ಪರಂಪರೆ-ಮಣ್ಣಿನ ಮನೆ, ಗುಡಿಸಲು
೪. ಜನಪದ ಕಲಾಪರಂಪರೆ-ಕೋಲಾಟ, ರಂಗವಲ್ಲಿ, ಬಯಲಾಟ

ಬದುಕಿನ ಸಮಗ್ರತೆಯನ್ನು ಅರ್ಥ ಮಾಡಿಕೊಳ್ಳಬಲ್ಲ ಬರಹಗಾರರು ಎಲ್ಲ ಆಧಾರಗಳನ್ನೂ ಸಮಾನ ಆದ್ಯತೆಯಿಂದ ಬಳಸಿಕೊಳ್ಳಬಲ್ಲರು. ಆದರೆ ಶಿಷ್ಟ ಪರಂಪರೆಯಿಂದ ಬಂದ ವಿಚಾರಗಳಿಗೆ ಹೆಚ್ಚಿನ ಮಾನ್ಯತೆಯೂ ಜನಪದ ಪರಂಪರೆಯಿಂದ ಬಂದ ವಿಚಾರಗಳು ಈವರೆಗೆ ಕಡೆಗಣಿಸಲ್ಪಟ್ಟಿದ್ದುದು ಭಾರತದಲ್ಲಿ ಇತಿಹಾಸ ಲೇಖನ ಕಲೆ ಬೆಳೆದು ಬಂದ ರೀತಿಯನ್ನು ಸೂಕ್ಷ್ಮವಾಗಿ ಸಾಬೀತುಪಡಿಸುತ್ತದೆ.

ಪರಂಪರೆಯೆಂದರೆ ಶಿಷ್ಟವೆಂದೂ, ಮೌಖಿಕವೆದರೆ ಜನಪದವೆಂದೂ ಸರಳವಾಗಿ ಭಾವಿಸುವುದು ಕಂಡುಬರುತ್ತದೆ. ಶಿಷ್ಟ ವಿಚಾರಗಳು ಮೌಖಿಕವಾಗಿಯೂ ಹರಿದುಬರಬಲ್ಲವು ಎಂಬುದಕ್ಕೆ ವೇದ ಉಪನಿಷತ್ತುಗಳು ಉತ್ತಮ ಉದಾಹರಣೆಯಾಗುತ್ತದೆ. ಜನಪದೀಯ ಅಂಶಗಳಿಗೆ ಶಾಸ್ತ್ರೀಯ ಚೌಕಟ್ಟು ದೊರೆತು ಶಿಷ್ಟವಾಗುವ, ಶಿಷ್ಟವಾದ ವಿಚಾರಗಳನ್ನು ಜನಪದರು ಸ್ವೀಕರಿಸಿ ಜನಪದೀಯವಾಗಿಸುವ ಕ್ರಿಯೆ ಸಮಾಜದಲ್ಲಿ ನಿರಂತರವಾಗಿ ನಡೆಯುತ್ತಿರುತ್ತದೆ. ಶಿಷ್ಟ ಹಾಗೂ ಜನಪದ ಬದುಕುಗಳೆರಡೂ ಒಟ್ಟಾಗಿಯೇ ಅಸ್ತಿತ್ವದಲ್ಲಿರುತ್ತವೆ.

ಮೌಖಿಕ ಸಂಪ್ರದಾಯವನ್ನು ಚರಿತ್ರೆ ನಿರ್ಮಾನ ಪ್ರಕ್ರಿಯೆಗೆ ತೊಡಗಿಸುವಾಗ ಜನಪದ ಆಕರಗಳಲ್ಲಿ ಸೂಕ್ಷ್ಮ ಒಳನೋಟವಿರಬೇಕಾಗುತ್ತದೆ. ಮೌಖಿಕ ಪರಂಪರೆಯನ್ನು ಇತಿಹಾಸಕ್ಕೆ ಬಳಸುವಾ ಅಧ್ಯಯನ ಕ್ರಮವನ್ನು ಮೂರು ರೀತಿಯಲ್ಲಿ ವಿಂಗಡಿಸಿಕೊಳ್ಳಬಹುದು.

೧. ಜನಪದ ಸಾಹಿತ್ಯವೊಂದನ್ನು ತೆಗೆದುಕೊಂಡು ಅದರ ಐತಿಹಾಸಿಕ ವಿಶ್ಲೇಷಣೆಯನ್ನು ಮಾಡುವುದು ಒಂದು ಕ್ರಮ. ಉದಾಹರಣೆಗೆ ಗೋವಿನ ಹಾಡನ್ನು ಅಧ್ಯಯನಕ್ಕೆ ಒಳಪಡಿಸಿ ಅದರ ಕಾಲ, ರಚಿತವಾಗಿರಬಹುದಾದ ಪ್ರದೇಶ ಪೂರ್ಣವಾಗಿ ಒಂದು ಜನಪದ ಸಾಹಿತ್ಯವೇ ಅಲ್ಲವೇ ಎಂಬಿತ್ಯಾದಿ ವಿಚಾರಗಳನ್ನು ಅಳೆಯಬಹುದು.

೨. ಯಾವುದಾದರೂ ಒಂದು ಪ್ರದೇಶದ ಇಲ್ಲವೇ, ಒಂದು ವಿಷಯಕ್ಕೆ ಸಂಬಂಧಿಸಿದಂತೆ ಸಿಗುವ ಎಲ್ಲ ಮೌಖಿಕ ಆಧಾರಗಳನ್ನು ಸಂಗ್ರಹಿಸಿ ಅನಂತರ ಲಿಖಿತ ಅಥವಾ ಪ್ರಾಕ್ತನ ಆಧಾರದೊಂದಿಗೆ ತುಲನೆ ಮಾಡುವುದು ಮತ್ತೊಂದು ಕ್ರಮ. ವಿಜಯನಗರದ ಜಾನಪದ ಅಧ್ಯಯನವನ್ನು ಇಲ್ಲಿ ನೆನೆಯಬಹುದು.

೩. ಉಳಿದೆಲ್ಲ ಆಕರಗಳ ಜೊತೆ ಜನಪದ ಆಕರವನ್ನೂ ಬಳಸುತ್ತ ವಾದ ಮಂಡನೆ ಮಾಡುವುದು ಮೂರನೆಯ ಕ್ರಮವಾಗುತ್ತದೆ. ಟಿಪ್ಪುವಿನ ಚರಿತ್ರೆಯನ್ನು ಬರೆಯುವ ಸಂದರ್ಭದಲ್ಲಿ ಇತರ ಎಲ್ಲ ದಾಖಲೆಗಳೊಂದಿಗೆ ಮೌಖಿಕ ಆಕರವನ್ನು ಬಳಸಿ ವಿಶ್ಲೇಷಣೆಯನ್ನು ಮಾಡುವುದರಿಂದ ಚರ್ಚೆ ಏಕಮುಖವಾಗದೆ ಅರ್ಥಗರ್ಭಿತವಾಗಬಹುದು. ಈ ಮೂರು ಮೌಖಿಕ ಆಕರವನ್ನು ಚರಿತ್ರೆಯ ನಿರ್ಮಾಣಕ್ಕೆ ಬಳಸಿಕೊಳ್ಳಬಹುದಾದ ಕ್ರಮಗಳು. ಇದಲ್ಲದೆ ಬೇರೊಂದು ಹೊಳಹಿನಲ್ಲಿ ಬದುಕನ್ನು ನೋಡಲು ಸಾಧ್ಯವಾದ ಮುಕ್ತ ಅವಕಾಶವನ್ನು ಕಲ್ಪಿಸಿಕೊಳ್ಳಬೇಕಾಗುತ್ತದೆ.

ಮೌಖಿಕ ಇತಿಹಾಸ ಮತ್ತು ಪರಂಪರೆಯನ್ನು ಚರಿತ್ರೆಯ ನಿರ್ಮಾಣ ಪ್ರಕ್ರಿಯೆಯಲ್ಲಿ ಒಂದೇ ಸಂಶೋಧನಾ ಕ್ರಮವನ್ನು ಬಳಸಲಾಗುವುದಿಲ್ಲ. ಮೌಖಿಕ ಇತಿಹಾಸದಲ್ಲಿ ಸಂದರ್ಶಿತ ನೀಡುವ ಮಾಹಿತಿ, ನಿರೂಪಣೆ, ಅಭಿಪ್ರಾಯ ಎಲ್ಲವೂ ಮುಖ್ಯವಾಗುತ್ತದೆ. ಮೌಖಿಕ ಪರಂಪರೆಯನ್ನು ಬಳಸಿಕೊಳ್ಳುವಾಗ ಅದರ ಆಶಯ ಮುಖ್ಯ ಎಂದು ಹೇಳುವ ಮಾತನ್ನು ಕೇಳುತ್ತೇವೆ. ಯಾವುದು ಆಶಯ? ಜನಪದರ ನಾಡಿಮಿಡಿತವನ್ನು ಅರ್ಥ ಮಾಡಿಕೊಂಡಾಗ ಮಾತ್ರ ಈ ಆಶಯವನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಜನಪದ ಭಾಷೆಯನ್ನು ಅರ್ಥೈಸುವಾಗಲೂ ವಾಚ್ಯಾರ್ಥಕ್ಕಿಂತ ಧ್ವನಿ, ಸಂಕೇತ, ಗೂಡಾರ್ಥ ಇವನ್ನೆಲ್ಲ ಗಮನಿಸಬೇಕಾಗುತ್ತದೆ. ಪ್ರಾದೇಶಿಕ ಅಭಿವ್ಯಕ್ತಿ ತಿಳಿದಿರಬೇಕಾಗುತ್ತದೆ. ಇಲ್ಲದಿದ್ದರೆ ಅಪಾರ್ಥಕ್ಕೆ ಕಾರಣವಾಗುತ್ತದೆ. ‘ಕೆರೆಗೆ ಹಾರ’ ಒಂದು ಜನಪದ ಕಥನ ಕಾವ್ಯ. ಈ ಕಥೆಯನ್ನು ಭಾವುಕ ನೆಲೆಯಲ್ಲಿ, ಕಾವ್ಯದ ನೆಲೆಯಲ್ಲಿ, ಸ್ತ್ರೀವಾದ ನೆಲೆಗಳಲ್ಲಿ ವಿಮರ್ಶೆಯನ್ನು ಮಾಡುತ್ತ ಬಂದಿದ್ದಾರೆ. ಚಾರಿತ್ರಿಕ ದೃಷ್ಟಿಯಿಂದ ನೋಡಿದಾಗ ಕೆಲವು ಅಂಶಗಳು ಸ್ಪಷ್ಟವಾಗುತ್ತವೆ. ಕೆರೆಗಳನ್ನು ಕಟ್ಟಿಸುವುದು ಒಂದು ಸಾಮಾಜಿಕ ಕಾಯವಾಗಿತ್ತು. ಅದಕ್ಕಾಗಿ ನರಬಲಿಯನ್ನು ಕೊಡಲಾಗುತ್ತಿತ್ತು. ನರಬಲಿ ಕೊಡುವಾಗ ಪ್ರಾಯದ ಹೆಣ್ಣುಮಕ್ಕಳನ್ನು ವಿವಾಹಿತ ಅಥವಾ ಅವಿವಾಹಿತರನ್ನು ಆರಿಸಿಕೊಳ್ಳುತ್ತಿದ್ದರು. ಇದನ್ನು ಎಲ್ಲ ಸಾಮಾಜಿಕ ವರ್ಗಗಳೂ ರೂಢಿಸಿ ಕೊಂಡು ಬಂದಿರಲಿಲ್ಲ. ಸ್ತ್ರೀವಾದಿ ಹಿನ್ನೆಲೆಯಲ್ಲಿ ನಿಂತು ಮಹಿಳಾ ವಿರೋಧಿ, ಬಲಿದಾನದ ಪರವಾದ ಸಾಹಿತ್ಯವೆಂದರೆ ಅದು ಜನಪದರ ಆಶಯವಲ್ಲ ನಿಂತು ಮಹಿಳಾ ವಿರೋಧಿ, ಬಲಿದಾನದ ಪರವಾದ ಸಾಹಿತ್ಯವೆಂದರೆ ಅದು ಜನಪದರ ಆಶಯವಲ್ಲ ಸ್ತ್ರೀವಾದಿ ಚಿಂತನೆಯ ಆಶಯ ವಾಗುತ್ತದೆ.

ಪುರುಷಪ್ರಧಾನ ಸಮಾಜವಾದ್ದರಿಂದ ಮಾವ ಆಖೆಯ ಬಲಿಯನ್ನು ಹಾರೈಸುತ್ತಾನೆಂದು ಸರಳೀಕರಿಸಿದ ಸೂತ್ರದಲ್ಲಿ ಟೀಕೆ ಮಾಡುವುದು ಅವರ ಬದುಕಿನ ಕ್ರಮ ಅರಿತಿಲ್ಲವೆಂದೇ ವ್ಯಕ್ತವಾಗುತ್ತದೆ.ನುಂಗಲಾರದ ನೋವನ್ನುಕಾವ್ಯರೂಪದಲ್ಲಿ ಜನಪದ ಕವಿ ಹೊರಹಾಕುತ್ತಾನೆ. ನರಬಲಿಯನ್ನು ಒಪ್ಪಿಕೊಂಡ ಸಮಾಜದಲ್ಲಿ ಪುರಷನೆಷ್ಟು ಅಪರಾಧಿಯೋ ಮಹಿಳೆಯೂ ಅಷ್ಟೇ ಪಾಲುದಾರಳಾಗುತ್ತಾಳೆ. ಪ್ರತಿಪಾತ್ರದ ತಪ್ಪು ಒಪ್ಪುಗಳನ್ನು ಅಳೆಯುವುದಕ್ಕಿಂತ ಚರಿತ್ರೆಯಲ್ಲಿ ಒಟ್ಟಾರೆ ಸಮಾಜ ಹೇಗೆ ಅಸ್ತಿತ್ವತದಲ್ಲಿತ್ತೆಂದು ಗ್ರಹಿಸಬೇಕಾಗುತ್ತದೆ. ಕವಿಯ ಆಶಯ ಬಲಿದಾನವಾಗಿದ್ದರೆ ಭಾಗೀರಥಿಯ ವ್ಯಕ್ತಿತ್ವದ ಬಗೆಗೆ ಕರುಣೆ ಬರುವಂತೆ ಚಿತ್ರೀಸುತ್ತಿರಲಿಲ್ಲ. ಅವಳ ಅಸಹಾಕತೆಯಲ್ಲಿ ಕವಿಯ ಅಸಹಾಯಕತೆ ವ್ಯಕ್ತವಾಗಿದೆ.

ಜನಪದ ಸಾಹಿತ್ಯಗಳಲ್ಲಿ ಅವರ ಸಾಂಕೇತಿಕ ಭಾಷೆಯನ್ನು, ಧ್ವನಿಯನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಮೌಖಿಕ ಸಂಪ್ರದಾಯಗಳನ್ನು ತಿರಸ್ಕಾರದಿಂದ ನೋಡುವ ವಿದ್ವಾಂಸರು ಅವೆಲ್ಲ ದಂತ ಕಥೆಯೆಂತಲೋ, ಉತ್ಪ್ರೇಕ್ಷೆಯೆಂದೋ, ನಿರಾಕರಿಸುವುದು ಸಹಜ. ಜನಪದರ ಹಿನ್ನೆಲೆಯಲ್ಲಿ ವಿಚಾರವನ್ನು ಅರ್ಥ ಮಾಡಿಕೊಂಡ ಹೊಸ ವಿಚಾರಗಳೇ ಪ್ರಕಟವಾಗುತ್ತವೆ. ಬೆಂಗಳೂರು ಕೆಂಪೇಗೌಡನ ಕಥೆಯಲ್ಲಿ ಆತ ರಾಜನಾಗುವ ಮೊದಲು ಮರದ ಕೆಳಗೆ ಮಲಗಿದ್ದಾಗ ಸರ್ಪವೊಂದು ತಲೆಯ ಮೇಲೆ ಹೆಡೆಯಾಡಿಸಿತು ಎಂಬ ಐತಿಹ್ಯ ಕರ್ನಾಟಕದ ಹಲವು ರಾಜರ ಕಥೆಗಳಲ್ಲಿ ತಳುಕು ಹಾಕಿಕೊಂಡಿದೆ. ಮಾತ್ರವಲ್ಲ ಭಾರತದ ಹಲವಾರು ಮಹಾನ್ ವ್ಯಕ್ತಿಗಳ ಸುತ್ತಲೂ ಈ ಬಗೆಯ ಐತಿಹ್ಯಗಳು ಕೇಳಿ ಬರುತ್ತದೆ. ಈ ಐತಿಹ್ಯಗಳು ರಾಜರು ಅಧಿಕಾರಕ್ಕೆ ಬಂದಾಗ ಇರದೆ ಅವರು ಪ್ರಸಿದ್ಧಿಗೆ ಬಂದಾಗ ಜನಜನಿತಗೊಳ್ಳುತ್ತವೆ. ಆತ ಪ್ರಸಿದ್ಧಿಗೆ ಬಂದಾಗ ಆತನನ್ನು ಸಾಮಾನ್ಯವಾಗಿ ಕಾಣಲು ಜನ ಬಯಸುವುದಿಲ್ಲ. ಸಾಮಾನ್ಯನಾಗಿದ್ದ ವ್ಯಕ್ತಿಯೊಬ್ಬ ಆ ಹಂತಕ್ಕೆ ಬರೆಲು ಅವನಿಗೆ ದೈವ ಸಂಕಲ್ಪ ಇತ್ತು ಎಂದು ಭಾವಿಸಲು ಬಯಸುತ್ತ ಇಂತಹ ಐತಿಹ್ಯಗಳು ಹುಟ್ಟಿಕೊಳ್ಳುತ್ತವೆ. ಇದರ ಒಳಗಿನ ಆಶಯ ರಾಜತ್ವದಲ್ಲಿ ದೈವತ್ವವನ್ನು ಕಾಣುವುದಾಗಿದೆ. ಇಂತಹ ಪ್ರಯತ್ನ ನಡೆದಿರುವುದನ್ನು ಎಲ್ಲ ಕಾಲಕ್ಕೂ ನಾವು ಕಾಣಬಹುದು.

ಪರಾಮರ್ಶನ ಗ್ರಂಥಗಳು

೧. ಕ್ಲಾರ್ಕ್‌ಜಿ., ೧೯೫೩. ಆರ್ಕಿಯಾಲಾಜಿಕಲ್ ಥಿಯರೀಸ್ ಆಂಡ್ ಇಂಟರ್ ಪ್ರಿಟೇಶನ್ಸ್‌, ಎ.ಎಲ್.ಕ್ರೋಬರ್ (ಸಂ.), ಆಂತ್ರಪಾಲಜಿ ಟುಡೇ, ಚಿಕಾಗೋ.

೨. ಗಿಬ್ಬನ್ ಜಿ.೧೯೮೪. ಆಂತ್ರಪಾಲಜಿಕಲ್ ಆರ್ಕಿಯಾಲಾಜಿ, ನ್ಯೂಯಾರ್ಕ್‌.

೩. ನಿಕೋಲಸ್ ಡರ್ಕ್ಸ್, ೧೯೮೭. ದಿ ಹಾಲೋಕ್ರೌನ್‌. ಎತ್ನೋ ಹಿಸ್ಟರಿ ಆಫ್‌ ಆನ್ ಇಂಡಿಯನ್ ಕಿಂಗ್‌ಡಂ.

೪. ವಾಲ್ಟರ್ ಜೆ. ಆಂಗ್, ೧೯೯೦. ಕ್ವಾಲಿಟಿ ಆಂಡ್ ಲಿಟರಸಿ, ಲಂಡನ್: ರೂಟ್ಲೇಜ್.

೫. ವಸು ಎಂ.ವಿ., ೨೦೦೪. ಮೌಖಿಕ ಇತಿಹಾಸ, ಬೆಂಗಳೂರು: ಅಂಕಿತ ಪ್ರಕಾಶನ.

೬. ವಿಜಯ್ ಪೂಣಚ್ಚ ತಂಬಂಡ, ೨೦೦೪. ಪಳಮೆ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

* * *