ವಿ.ಗೋರ್ಡನ್ ಚೈಲ್ಡ್ ಅವರು ಒಂದು ಗ್ರಾಮೀಣ ಪ್ರದೇಶ, ನಗರವಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಯನ್ನು ‘ನಗರ ಕ್ರಾಂತಿ’ ಎನ್ನುವ ಪರಿಕಲ್ಪನೆಯೊಂದಿಗೆ ವಿವರಿಸಿದ್ದಾರೆ. ಅದೇ ರೀತಿ ಮಾನವ ತನ್ನ ಬದುಕಿಗಾಗಿ ನಗರಗಳನ್ನು ನಿರ್ಮಿಸಿಕೊಂಡ ಬಗೆ ಹಾಗೂ ಅವುಗಳ ಹಂತಗಳನ್ನೂ ವಿಶ್ಲೇಷಿಸಿದ್ದಾರೆ. ಈ ಎಲ್ಲ ವಿವರಗಳು ಅವರ ಮ್ಯಾನ್ ಮೇಕ್ಸ್ ಹಿಮ್‌ಸೆಲ್ಪ್ (ಲಂಡನ್ ೧೯೩೬) ಮತ್ತು ದಿ ಅರ್ಬನ್ ರೆವಲ್ಯೂಶನ್‌ಗಳಲ್ಲಿ (ಲಿವರ್‌ಪೂಲ್ ೧೯೫೦) ಸಿಗುತ್ತವೆ. ಚೈಲ್ಡ್ ಅವರು ಗ್ರಾಮೀಣ ಪ್ರದೇಶಗಳು ನಗರ ಪ್ರದೇಶಗಳಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಯನ್ನು ಅಥವಾ ನಗರೀಕರಣವನ್ನು ‘ಕ್ರಾಂತಿ’ ಎನ್ನುವ ಅರ್ಥದಲ್ಲಿ ವ್ಯಾಖ್ಯಾನಿಸಿದ್ದಾರೆ. ಆರಂಭದ (ಪ್ರಾಚೀನ) ಪಟ್ಟಣಗಳು ನಂತರದ ಅವಧಿಯ ಪಟ್ಟಣಗಳಿಗಿಂತ ಹೇಗೆ ಭಿನ್ನವಾಗಿದ್ದವು, ಅವುಗಳಲ್ಲಿನ ವ್ಯತ್ಯಾಸಗಳು ಹಾಗೂ ಪರಿವರ್ತನೆಯ ಪ್ರಕ್ರಿಯೆಯನ್ನು ಹತ್ತು ಲಕ್ಷಣಗಳನ್ನು ಸೂಚಿಸುವುದರ ಮೂಲಕ ವಿವರಿಸಿದ್ದಾರೆ. ಅವುಗಳೆಂದರೆ:

೧. ಆರಂಭದ ಪಟ್ಟಣಗಳು ಹೆಚ್ಚು ವಿಸ್ತಾರವಾಗಿದ್ದು ದಟ್ಟವಾದ ಜನಸಂದಣಿಯಿಂದ ಕೂಡಿರುತ್ತಿದ್ದವು. ಚೈಲ್ಡ್ ಅವರು ಆರಂಭದ ಪಟ್ಟಣಗಳನ್ನು ಅದಕ್ಕಿಂತ ಹಿಂದಿನ ವ್ಯವಸ್ಥೆಗೆ ಹೋಲಿಸಿ ಈ ತೀರ್ಮಾನವನ್ನು ತೆಗೆದುಕೊಂಡರು. ಇಂದಿನ ವ್ಯವಸ್ಥೆಗೆ ಹೋಲಿಸಿದರೆ ಆರಂಭದ ಪಟ್ಟಣಗಳ ವ್ಯಾಪ್ತಿ ಮತ್ತು ಜನಸಂಖ್ಯೆ ತೀರಾ ಕಡಿಮೆ.

೨. ನಗರ ಮಿತಿಯ ಹೊರಗಡೆ ಕೃಷಿಕರು ವ್ಯವಸಾಯ ಮಾಡುತ್ತಿದ್ದರು. ನಗರ ಪ್ರದೇಶ ಅನುತ್ಪಾದಕ ವರ್ಗಗಳಿಂದ ಕೂಡಿತ್ತು. ತಾತ್ಕಾಲಿಕವಾಗಿ ಜೀವಿಸುತ್ತಿದ್ದ ವರ್ಗಗಳು ಇದ್ದವು. ಕೃಷಿ ಮತ್ತು ಕೃಷಿ ಸಂಬಂಧಿ ಉದ್ದಿಮೆಗಳಲ್ಲಿ ತೊಡಗಿಸಿಕೊಂಡಿದ್ದ ಜನರು ಈ ರೀತಿ ತಾತ್ಕಾಲಿಕವಾಗಿ ಜೀವಿಸುತ್ತಿದ್ದರು. ಕುಶಲಕರ್ಮಿಗಳು, ವ್ಯಾಪಾರಸ್ಥರು, ಅಧಿಕಾರಿಗಳು, ಪುರೋಹಿತವರ್ಗ ನಗರ ಪ್ರದೇಶಗಳಲ್ಲಿ ಜೀವಿಸುತ್ತಿದ್ದು ಕೃಷಿಕರ ಉತ್ಪಾದನೆ ಹಾಗೂ ಹೆಚ್ಚುವರಿ ಉತ್ಪಾದನೆಯನ್ನು ಅವಲಂಬಿಸಿದ್ದರು.

೩. ಉತ್ಪಾದನೆ ಮಾಡುವ ಪ್ರತಿಯೊಬ್ಬರೂ ತಮ್ಮ ಹೆಚ್ಚುವರಿ ಉತ್ಪಾದನೆಯನ್ನು ದೇವತೆಗೆ ಅಥವಾ ದೇವಾಂಶಸಂಭೂತ ನಾಯಕನಿಗೆ ಕೊಡಬೇಕಾಗಿತ್ತು. ಅವನು ಹೆಚ್ಚುವರಿ ಉತ್ಪಾದನೆಯನ್ನು ಕೇಂದ್ರೀಕರಿಸಿದ.

೪. ಸ್ಮಾರಕ ಕಟ್ಟಡಗಳು ನಗರ ಪ್ರದೇಶಗಳನ್ನು ಗ್ರಾಮೀಣ ಪ್ರದೇಶಗಳಿಂದ ಬೇರ್ಪಡಿಸಿದ್ದೇ ಅಲ್ಲದೆ ಹೆಚ್ಚುವರಿ ಸಂಪತ್ತಿನ ಕೇಂದ್ರೀಕರಣವನ್ನು ಸಂಕೇತಿಸುತ್ತಿದ್ದವು.

೫. ಗ್ರಾಮೀಣ ಪ್ರದೇಶದ ಹೆಚ್ವುವರಿ ಸಂಪತ್ತು ದೇವಾಲಯಗಳಲ್ಲಿ ಮತ್ತು ಅಧಿಕಾರಿಗಳ ಮನೆಗಳಲ್ಲಿ ಸಂಗ್ರಹವಾಗುತ್ತಿತ್ತು. ಈ ಸಂಪತ್ತಿನ ಹೆಚ್ಚಿನ ಭಾಗ ಪುರೋಹಿತರು, ಸೈನಿಕ ಮುಖಂಡರು ಹಾಗೂ ಅಧಿಕಾರಿಗಳಿಗೆ ಹೋಗುತ್ತಿತ್ತು. ಇದು ಆಳುವ ವರ್ಗ ರೂಪುಗೊಳ್ಳುವುದಕ್ಕೂ ಕಾರಣವಾಯಿತು. ಇನ್ನಿತರ ಅನುತ್ಪಾದಕ ವರ್ಗದವರು ಆಳುವ ವರ್ಗವನ್ನು ಸಂಪತ್ತಿಗಾಗಿ ಅವಲಂಬಿಸಬೇಕಾಯಿತು.

೬. ಕ್ರೋಡೀಕರಣಗೊಳ್ಳುವ ಹೆಚ್ಚುವರಿ ಸಂಪತ್ತು ಮತ್ತು ಕಂದಾಯಗಳನ್ನು ದಾಖಲಿಸುವ ಹೊಸ ವ್ಯವಸ್ಥೆಯೊಂದು ಕಾಣಿಸಿಕೊಂಡಿತು. ಅಂಕಿ-ಸಂಖ್ಯೆಗಳ ಮೂಲಕ ಬರೆದಿಡುವ ವಿಧಾನ ಆರಂಭಗೊಂಡಿತು. ಈ ವಿಧಾನವನ್ನು ಪ್ರಾಚೀನ ನಾಗರಿಕತೆಗಳ ಸಂದರ್ಭದಿಂದಲೇ ಗುರುತಿಸಬಹುದು.

೭. ಬರವಣಿಗೆಯ ಅನ್ವೇಷಣೆ ನಿಧಾನವಾಗಿ ಕೆಲಸ ಮಾಡುತ್ತಿದ್ದ ಗುಮಾಸ್ತರನ್ನು ಚುರುಕು ಗೊಳಿಸಿತು. ಅಂಕಗಣಿತ, ರೇಖಾಗಣಿತ ಮತ್ತು ಖಗೋಳ ವಿದ್ಯೆ ಪ್ರಚಾರಗೊಳ್ಳಲಾರಂಭಿಸಿತು.

೮. ಕಲಾತ್ಮಕವಾದ ಕೆಲಸಗಳಿಗೆ ಹೊಸ ನಿರ್ದೇಶನ ನೀಡಲಾಯಿತು. ಕುಶಲಕರ್ಮಿಗಳು ಹೊಸ ಕಲಾಶೈಲಿಗಳಿಂದ ನಗರ ಜೀವನದ ವಿಭಿನ್ನ ಲಕ್ಷಣಗಳನ್ನು ಸೂಚಿಸಿದರು.

೯. ಹೆಚ್ಚುವರಿ ಸಂಪತ್ತಿನ ಕೆಲವು ಭಾಗವನ್ನು ಕೈಗಾರಿಕೆಗಳಿಗೆ ಕಚ್ಚಾವಸ್ತುಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ಪ್ರತಿಯಾಗಿ ನೀಡಲಾಗುತ್ತಿತ್ತು. ವಿದೇಶಿ ವ್ಯಾಪಾರ ಎಲ್ಲ ಪ್ರಾಚೀನ ನಾಗರಿಕತೆಗಳ ಲಕ್ಷಣವಾಗಿತ್ತು.

೧೦. ಕುಶಲಕರ್ಮಿಗಳಿಗೆ ಅವರ ಉದ್ಯೋಗಕ್ಕೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಸರಬರಾಜು ಮಾಡಲಾಗುತ್ತಿತ್ತು. ಅವರಿಗೆ ರಕ್ಷಣೆಯನ್ನೂ ನೀಡಲಾಗುತ್ತಿತ್ತು. ಪಟ್ಟಣ ಒಂದು ಸಮುದಾಯವಾಗಿದ್ದರಿಂದಾಗಿ ಕುಶಲಕರ್ಮಿಗಳು ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಅದಕ್ಕೆ ಸಂಬಂಧಿಸಿದ್ದವರಾಗಿದ್ದರು.

ಚೈಲ್ಡ್‌ರವರ ‘ನಗರ ಕ್ರಾಂತಿ’ ಎನ್ನುವ ಈ ಪರಿಕಲ್ಪನೆ ವಿಮರ್ಶಕರ ಕೈಯಲ್ಲಿ ಹಲವು ವಿಧದ ವ್ಯಾಖ್ಯಾನಗಳಿಗೆ ಒಳಗಾಯಿತು. ಚೈಲ್ಡ್‌ರವರು ಸೂಚಿಸುವ ಲಕ್ಷಣಗಳು ಪರಸ್ಪರ ಒಂದಕ್ಕೊಂದು ಸಂಬಂಧ ಇಲ್ಲದ ರೀತಿಯಲ್ಲಿವೆ ಹಾಗೂ ಕೆಲವು ಲಕ್ಷಣಗಳು ಪಟ್ಟಣಗಳ ಹುಟ್ಟಿಗೆ ತಕ್ಷಣದ ಕಾರಣಗಳಾಗಿ ಕಂಡುಬರುವುದಿಲ್ಲ ಎನ್ನುವುದು ಪ್ರಮುಖ ಟೀಕೆಯಾಗಿದೆ. ಚೈಲ್ಡ್‌ರವರ ವಾದವನ್ನು ಟೀಕಿಸಿದವರಲ್ಲಿ ಪ್ರಮುಖರಾದ ಅಮೆರಿಕಾದ ಮಾನವಶಾಸ್ತ್ರಜ್ಞ ರಾಬರ್ಟ್ ಮೆಕ್‌ಕಾರ್‌ಮಿಕ್ ಆಡಮ್ಸ್ ಅವರು ‘ನಗರ ಕ್ರಾಂತಿ’ ಚುರುಕುಗೊಳ್ಳಲು ಹೊಸ ರಾಜಕೀಯ ಮತ್ತು ಧಾರ್ಮಿಕ ಸಂಸ್ಥೆಗಳ ಹುಟ್ಟು ಮೂಲಕಾರಣ ಎಂದಿದ್ದಾರೆ. ಈ ಬದಲಾವಣೆ ಸಂಸ್ಕೃತಿ ಮತ್ತು ತಂತ್ರಜ್ಞಾನದಲ್ಲಿ ಬದಲಾವಣೆಯನ್ನು ತಂದಿತು ಎನ್ನುವುದು ಅವರ ವಾದ.

ಲೂಯಿ ಮುಮ್‌ಫರ್ಡ್ ಅವರು ತಮ್ಮ ದಿ ಸಿಟಿ ಇನ್ ಹಿಸ್ಟರಿ (ನ್ಯೂಯಾರ್ಕ್ ೧೯೫೧) ಮತ್ತು ದಿ ಮಾಡರ್ನ್ ಸಿಟಿ (ನ್ಯೂಯಾರ್ಕ್ ೧೯೫೨) ಗ್ರಂಥಗಳಲ್ಲಿ ನಗರಗಳು ಚರಿತ್ರೆಯ ವಿವಿಧ ಅವಧಿಗಳಲ್ಲಿ ಬೆಳೆದು ಬಂದ ಬಗೆಯನ್ನು ವವಿವರಿಸಿದ್ದಾರೆ. ಅವರ ಪ್ರಕಾರ, ವಿಕೇಂದ್ರೀಕೃತ ಗ್ರಾಮೀಣ ಆರ್ಥಿಕತೆಯಿಂದ ಕೇಂದ್ರೀಕೃತ ನಗರ ಆರ್ಥಿಕತೆಗೆ ಬದಲಾವಣೆಯನ್ನು ತರುವ ಪ್ರಮುಖ ವ್ಯವಸ್ಥೆಯೆಂದರೆ ರಾಜಪ್ರಭುತ್ವ ಅಥವಾ ರಾಜ. ವಸಾಹತು ಸಂದರ್ಭದಲ್ಲಿ ವಸಾಹತುಶಾಹಿಯೇ ಈ ವ್ಯವಸ್ಥೆ. ಮುರ್ಮ್‌ಫರ್ಡ್ ಅವರು ನಗರ ಪ್ರದೇಶಗಳು, ಸಾಮಾಜಿಕ ಸಂಬಂಧಗಳು, ಸಾಮಾಜಿಕ ರಚನೆ ಮುಂತಾದ ಅಂಶಗಳ ಕಡೆಗೂ ಗಮನ ಹರಿಸಿದ್ದಾರೆ. ಬ್ರೂಸ್ ಟ್ರಿಗರ್ ಅವರು ಡಿಟರ್ಮಿನೆಂಟ್ಸ್ ಆಫ್ ಅರ್ಬನ್ ಗ್ರೋತ್ ಇನ್ ಪ್ರಿ ಇಂಡಸ್ಟ್ರಿಯಲ್ ಸೊಸೈಟಿ (ಲಂಡನ್ ೧೯೭೩) ಗ್ರಂಥದಲ್ಲಿ ಪಟ್ಟಣದ ವ್ಯಾಖ್ಯಾನ ಮತ್ತು ಪಟ್ಟಣಗಳ ಹುಟ್ಟಿಗೆ ಕಾರಣವಾದ ಅಂಶಗಳ ಕುರಿತು ಚರ್ಚಿಸಿದ್ದಾರೆ. ಅವರ ಪ್ರಕಾರ,

ಪಟ್ಟಣ ಎನ್ನುವುದು ವಿಶೇಷವಾದ ಮತ್ತು ಪ್ರತ್ಯೇಕವಾದ ಕೆಲಸ ಕಾರ್ಯ ಗಳನ್ನು ಮಾಡುವ ಜನವರ್ಗಗಳು ವಾಸಿಸುತ್ತಿರುವ ಒಂದು ಪ್ರದೇಶ. ಇವರು ಪಟ್ಟಣದ ಒಳಪ್ರದೇಶಗಳೊಡನೆ ಉತ್ತಮ ಸಂಬಂಧವಿರಿಸಿಕೊಂಡಿರುತ್ತಾರೆ. ಕೆಲವರು ಆಹಾರ ಉತ್ಪಾದನೆಯಲ್ಲಿ ತೊಡಗಿರಬಹುದಾದರೂ ಅದು ಪಟ್ಟಣದ ವಿಶೇಷವಾದ ಕೆಲಸ ಕಾರ್ಯವಿಲ್ಲ.

ಟ್ರಿಗರ್ ಅವರು ಪಟ್ಟಣದಲ್ಲಿ ನಡೆಯುತ್ತಿರುವ ಕೆಲಸ ಕಾರ್ಯಗಳ ಕುರಿತಾಗಿ ಹೆಚ್ಚಿನ ಅಧ್ಯಯನ ನಡೆಸಿದರು. ಅವರ ಪ್ರಕಾರ ಹೆಚ್ಚುವರಿ ಉತ್ಪಾದನೆಯ ನಿರಂತರ ಸರಬರಾಜು, ಸಾರಿಗೆ-ಸಂಪರ್ಕ ವ್ಯವಸ್ಥೆ, ಆಡಳಿತ ಮತ್ತು ಧಾರ್ಮಿಕ ಸಂಘ ಸಂಸ್ಥೆಗಳು, ಪೇಟೆ-ಪಟ್ಟಣಗಳು ಅಸ್ತಿತ್ವಕ್ಕೆ ಬರಲು ಹಾಗೂ ಬೆಳವಣಿಗೆ ಹೊಂದಲು ಮೂಲ ಕಾರಣ.

ಗಿಡ್ಯಾನ್ ಸ್ಜೋಬರ್ಗ್ ಅವರು ದಿ ಪ್ರಿ ಇಂಡಸ್ಟ್ರಿಯಲ್ ಸಿಟಿ ಪಾಸ್ಟ್ ಅಂಡ್ ಪ್ರೆಸೆಂಟ್ (ನ್ಯೂಯಾರ್ಕ್ ೧೯೬೦) ಎನ್ನುವ ಗ್ರಂಥದಲ್ಲಿ ನಗರ ಪ್ರದೇಶಗಳ ಹುಟ್ಟು, ವಿವಿಧ ಹಂತಗಳು, ಅವುಗಳ ವಿಂಗಡನೆಗಳ ಕುರಿತು ಕೂಲಂಕಷವಾಗಿ ಚರ್ಚಿಸಿದ್ದಾರೆ. ಸ್ಜೋಬರ್ಗ್ ಅವರು ನಗರಗಳ ಹುಟ್ಟಿಗೆ ಕಾರಣವಾಗುವ ನಾಲ್ಕು ಪ್ರಮುಖ ಅಂಶಗಳನ್ನು ನೀಡಿದ್ದಾರೆ. ಅವುಗಳೆಂದರೆ, ಅನುಕೂಲಕರವಾದ ಭೌಗೋಳಿಕ ಸನ್ನಿವೇಶ, ಕೃಷಿ ಮತ್ತು ಕೃಷಿಯೇತರ ಕ್ಷೇತ್ರಗಳಲ್ಲಿ ಮುಂದುವರಿದ ತಂತ್ರಜ್ಞಾನ, ಸಂಕೀರ್ಣ ಸಾಮಾಜಿಕ ಸಂಘ ಸಂಸ್ಥೆಗಳು ಮತ್ತು ವ್ಯವಸ್ಥಿತ ಅಧಿಕಾರದ ರಚನೆ. ಸ್ಜೋಬರ್ಗ್ ಅವರು ಯುರೋಪಿನಲ್ಲಾದ ಕೈಗಾರಿಕಾ ಕ್ರಾಂತಿಯನ್ನು ಕೇಂದ್ರವನ್ನಾಗಿಟ್ಟುಕೊಂಡು ನಗರಗಳನ್ನು ಕೈಗಾರಿಕಾಪೂರ್ವ ಹಾಗೂ ಕೈಗಾರಿಕಾ ನಗರಗಳೆಂಬುದಾಗಿ ವಿಂಗಡಿಸಿದರು. ಕೈಗಾರಿಕಾಪೂರ್ವ ನಗರಗಳಲ್ಲಿ ಶ್ರೇಣೀಕೃತ ಸಮಾಜ ವ್ಯವಸ್ಥೆ ಇತ್ತು ಮತ್ತು ಶ್ರೀಮಂತ ವರ್ಗದ ಪ್ರಭುತ್ವ ಸ್ಥಾಪನೆಗೊಂಡಿತ್ತು. ಕೈಗಾರಿಕಾ ನಗರಗಳಲ್ಲಿ ಬಂಡವಾಳಶಾಹಿ ಉತ್ಪಾದನಾ ವಿಧಾನ ಆರಂಭಗೊಂಡು ಅದಕ್ಕೆ ಪ್ರತಿಕ್ರಿಯೆಯಾಗಿ ಸಮಾಜವಾದಿ ಚಿಂತನೆಗಳು ರೂಪುಗೊಂಡವು. ಕೈಗಾರಿಕಾ ಕ್ರಾಂತಿಯ ನಂತರ ನಗರಗಳು ವಿಸ್ತಾರವಾಗಿ ಬೆಳೆದು ಮಹಾನಗರ, ಮೆಗಾಸಿಟಿಗಳು ರಚನೆಗೊಂಡು ಹೊಸ ಹೊಸ ಸಿದ್ಧಾಂತಗಳು, ಚಿಂತನೆಗಳು ರೂಪುಗೊಳ್ಳಲಾರಂಭಿಸಿದವು. ಈ ಸಂದರ್ಭದಲ್ಲಿಯೇ ಅವಸರದ ನಗರೀಕರಣ, ಅತಿರೇಕದ ನಗರೀಕರಣ ಮುಂತಾದ ಕಲ್ಪನೆಗಳೂ ಕಾಣಿಸಿಕೊಂಡವು.

ಯುರೋಪಿನಲ್ಲಾದ ಕೈಗಾರಿಕಾ ಕ್ರಾಂತಿಯನ್ನು ಒಂದು ಚಾರಿತ್ರಿಕ ಘಟ್ಟವನ್ನಾಗಿಟ್ಟುಕೊಂಡು ನಗರಗಳ ಅಧ್ಯಯನ ಮಾಡುವ ವಿಧಾನ ಹೆಚ್ಚು ಪ್ರಚಾರದಲ್ಲಿತ್ತು. ಅದೇ ರೀತಿ ಬಂಡವಾಳ ಶಾಹಿಗಳು ಕೈಗಾರಿಕೀಕರಣಕ್ಕೆ ಪೂರಕವಾಗುವಂಥ ಉತ್ಪಾದನಾ ವ್ಯವಸ್ಥೆಗೆ ಒತ್ತು ನೀಡುತ್ತಲೇ ಬಂದರು. ಈ ಬೆಳವಣಿಗೆಗಳು ನಗರೀಕರಣ ಪ್ರಕ್ರಿಯೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳುವಂತೆ ಮಾಡಿದವು. ನಗರೀಕರಣವನ್ನು ವಸಾಹತುಶಾಹಿಯ ಅಥವಾ ಬಂಡವಾಳಶಾಹಿಯ ಹಿನ್ನೆಲೆಯಿಂದ ಅಧ್ಯಯನ ನಡೆಸಿದಾಗ ಮತ್ತು ವಿಶಾಲಾರ್ಥದಲ್ಲಿ ಅಧ್ಯಯನ ನಡೆಸಿದಾಗ ಸಿಗುವ ಫಲಿತಾಂಶ ಬೇರೆ ಬೇರೆಯದೇ ಆಗಿರುತ್ತದೆ ಎನ್ನುವುದು ವಾಸ್ತವ. ನಗರೀಕರಣ ಒಂದು ನಿರಂತರ ಪ್ರಕ್ರಿಯೆಯಾಗಿದ್ದು ಪ್ರತಿಯೊಂದು ಹಂತದಲ್ಲೂ ಬದಲಾವಣೆಗಳನ್ನು ಕಂಡಿದೆ. ಕೈಗಾರಿಕಾ ಕ್ರಾಂತಿಯೂ ಇಂಥ ಒಂದು ಹಂತ. ಆದರೆ ಕೈಗಾರಿಕೀಕರಣವು ಉತ್ಪಾದನಾ ವಿಧಾನ ಮತ್ತು ಸಂಬಂಧಗಳಲ್ಲಿ ಮೂಲಭೂತ ಬದಲಾವಣೆಗಳನ್ನು ತಂದಿರುವುದರಿಂದಾಗಿ ನಗರೀಕರಣದ ವ್ಯಾಖ್ಯಾನವೂ ಬದಲಾಗಬೇಕಾಯಿತು. ಕೈಗಾರಿಕಾಪೂರ್ವ ನಗರಗಳಲ್ಲಿ ಕೈಗಾರಿಕೆಗಳು ಅಸ್ತಿತ್ವದಲ್ಲಿದ್ದವಾದರೂ ಅವು ಉತ್ಪಾದನಾ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರುವಷ್ಟರ ಮಟ್ಟಿಗೆ ಬೆಳೆದಿರಲಿಲ್ಲ. ಅವು ನಗರೀಕರಣ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಕೆಲಸವನ್ನು ನಿರಂತರವಾಗಿ ಮಾಡಿದವು. ಆದರೆ ಕೈಗಾರಿಕಾ ಕ್ರಾಂತಿಯ ನಂತರ ಬಂಡವಾಳಶಾಹಿ ವ್ಯವಸ್ಥೆ ಇಡೀ ಆರ್ಥಿಕತೆಯ ಹಿಂದಿನ ಚಾಲಕಶಕ್ತಿಯಾಗಿ ಬೆಳೆಯಿತು.

ಪ್ರಾಚೀನ ಮತ್ತು ಮಧ್ಯಕಾಲೀನ ಪೇಟೆ-ಪಟ್ಟಣಗಳನ್ನು ಸಾಂಪ್ರದಾಯಿಕ ಪೇಟೆ-ಪಟ್ಟಣಗಳು ಎಂಬರ್ಥದಲ್ಲಿ ವ್ಯಾಖ್ಯಾನಿಸಲಾಗಿದೆ. ಇದಕ್ಕೆ ಕಾರಣ ಆಧುನಿಕ ಸಂದರ್ಭದಲ್ಲಿ ಸಂಪ್ರದಾಯ ಮತ್ತು ಆಧುನಿಕತೆಯ ಪರಿಕಲ್ಪನೆಗಳು ಹೆಚ್ಚು ಬಲಗೊಳ್ಳುತ್ತಿರುವುದು. ಸಂಸ್ಕೃತಿ ಅಧ್ಯಯನದ ಹೆಸರಿನಲ್ಲಿ ಅನೇಕ ಪಂಥಗಳು ಹುಟ್ಟಿಕೊಂಡು ಸಂಕೀರ್ಣ ಸ್ಥಿತಿಯನ್ನು ಹುಟ್ಟುಹಾಕಿವೆ. ನಗರ ಅಧ್ಯಯನವೂ ಇದಕ್ಕಿಂತ ಹೊರತಾಗಿಲ್ಲ. ಸಂಪ್ರದಾಯ ಮತ್ತು ಆಧುನಿಕತೆಗಳು ಚರಿತ್ರೆಯ ಪ್ರತಿಯೊಂದು ಹಂತದಲ್ಲೂ ಇದ್ದವು. ಅದೇ ರೀತಿ ಆಧುನಿಕತೆಯ ಸೌಲಭ್ಯ ಮತ್ತು ಸವಲತ್ತುಗಳನ್ನು ಪಡೆಯುವ ವರ್ಗ ಹಾಗೂ ಅದರಿಂದ ವಂಚಿತವಾಗುವ ವರ್ಗವೂ ಇತ್ತು. ಇಲ್ಲಿ ಆಧುನಿಕ ಎಂದರೆ ಅಂದಿನ ಸಂದರ್ಭದಲ್ಲಿ ಮುಂದುವರಿದ ಅಥವಾ ಶ್ರೀಮಂತ ಎಂದರ್ಥ. ಉದಾಹರಣೆಗೆ, ರಾಜಧಾನಿ ಕೇಂದ್ರಗಳು ಎಲ್ಲ ಸೌಲಭ್ಯ, ಸವಲತ್ತುಗಳನ್ನು ಪಡೆದು ಅತ್ಯಂತ ಮುಂದುವರಿದ ಕೇಂದ್ರಗಳಾಗಿದ್ದವು. ಆದರೆ ಇಂದಿನ ಒಂದು ರಾಜಧಾನಿ ನಗರಕ್ಕೆ ಅಂದಿನ ರಾಜಧಾನಿ ನಗರವನ್ನು ಹೋಲಿಸಿ ನೋಡಿದರೆ ಸಿಗುವ ಚಿತ್ರಣವೇ ಬೇರೆ. ಆದ್ದರಿಂದ ಕೈಗಾರಿಕಾ ಪೂರ್ವ ಮತ್ತು ಕೈಗಾರಿಕೋತ್ತರ ಎನ್ನುವ ವಿಂಗಡಣೆ ನಗರ ಅಧ್ಯಯನಕ್ಕೆ ಸಂಬಂಧಿಸಿದಂತೆ ಅಷ್ಟೊಂದು ಸಮಂಜಸ ಎಂದೆನಿಸುವುದಿಲ್ಲ. ಆಧುನಿಕ ಸಂದರ್ಭದ ನ್ಯೂಯಾರ್ಕ್ ನಗರವನ್ನು ಪ್ರಾಚೀನ ಕಾಲದ ಅಥೆನ್ಸ್ ಪಟ್ಟಣಕ್ಕೆ ಹೋಲಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಸರಿಯಾದ ಅಧ್ಯಯನ ವಿಧಾನವಲ್ಲ. ಪ್ರತಿಯೊಂದು ಪೇಟೆ-ಪಟ್ಟಣವೂ ತನ್ನದೇ ಆದ ಚರಿತ್ರೆಯನ್ನು ಹೊಂದಿದ್ದು ಆ ಹಿನ್ನೆಲೆಯಿಂದಲೇ ಅಧ್ಯಯನ ನಡೆಸಬೇಕಾಗುತ್ತದೆ. ಆದರೆ ನಗರೀಕರಣ ಪ್ರಾಚೀನ ನಾಗರಿಕತೆಗಳಿಂದ ಇಂದಿನ ಸಂದರ್ಭದ ವರೆಗೂ ನಿರಂತರವಾಗಿ ನಡೆದು ಬಂದುದರಿಂದ ಅಧ್ಯಯನದ ಅನುಕೂಲತೆಗಾಗಿ ಕೈಗಾರಿಕಾ ಪೂರ್ವ ಮತ್ತು ಕೈಗಾರಿಕೋತ್ತರ ಎಂಬುದಾಗಿ ವರ್ಗೀಕರಿಸುವುದು ಅನಿವಾರ್ಯವಾಗುತ್ತದೆ.

ಕಿಂಗ್‌ಸ್ಲೀ ಡೇವಿಸ್ ಅವರು ತಮ್ಮ ವರ್ಲ್ಡ್ ಅರ್ಬನೈಸೇಷನ್ (ಕ್ಯಾಲಿಫೋರ್ನಿಯಾ ೧೯೬೯) ಗ್ರಂಥದಲ್ಲಿ ಪ್ರಾಚೀನ ಪಟ್ಟಣಗಳ ಲಕ್ಷಣಗಳನ್ನು ಹಾಗೂ ಪ್ರಪಂಚದ ನಾನಾ ಪ್ರದೇಶಗಳಲ್ಲಿ ನಗರ ಪ್ರದೇಶಗಳು ಅಸ್ತಿತ್ವಕ್ಕೆ ಬಂದ ಬಗೆ ಮತ್ತು ಭಿನ್ನತೆಗಳನ್ನು ಚರ್ಚಿಸಿದ್ದಾರೆ. ಡೇವಿಸ್ ಅವರ ಪ್ರಕಾರ,

ಪ್ರಾಚೀನ ಪೇಟೆ-ಪಟ್ಟಣಗಳಲ್ಲಿ ಸಾಂಪ್ರದಾಯಿಕ ರೀತಿಯ ಜೀವನ ನಡೆಯುತ್ತಿತ್ತು. ವಸ್ತುಗಳನ್ನು ಸಾಗಿಸಲು ಮಾನವ ತನ್ನ ಸ್ವಂತ ಶ್ರಮ ಅಥವಾ ಪ್ರಾಣಿಗಳನ್ನು ಅವಲಂಬಿಸುತ್ತಿದ್ದ. ಗ್ರಾಮ ಮತ್ತು ನಗರಗಳಲ್ಲಿ ಹೆಚ್ಚಿನ ವ್ಯತ್ಯಾಸವನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ.

ನಗರ ಎನ್ನುವ ಹೊಸ ವ್ಯವಸ್ಥೆಯೊಂದು ಪ್ರಾಚೀನ ಕಾಲದಲ್ಲಿಯೇ ರೂಪುಗೊಂಡಿತ್ತು ಎನ್ನುವುದು ಇದರಿಂದ ತಿಳಿದುಬರುತ್ತದೆ. ಅಲೆಮಾರಿ ಜೀವನವನ್ನು ನಡೆಸುತ್ತಿದ್ದ ಮಾನವ ಒಂದೇ ಕಡೆ ನೆಲೆ ನಿಂತು ಜೀವಿಸಲು ತೊಡಗಿದಂದಿನಿಂದ ಪೇಟೆ-ಪಟ್ಟಣಗಳ ಪ್ರಾಮುಖ್ಯತೆಯನ್ನು ಅರಿತುಕೊಂಡ ಎನ್ನುವುದು ಪ್ರಾಕ್ಚಾರಿತ್ರಿಕ ಜಗತ್ತಿನ ಅಧ್ಯಯನದಿಂದ ತಿಳಿದುಬರುತ್ತದೆ. ಅದೇ ರೀತಿ ಪ್ರಾಚೀನ ಪೇಟೆ-ಪಟ್ಟಣಗಳು ನದಿ ದಂಡೆಯಲ್ಲೇ ಅಸ್ತಿತ್ವಕ್ಕೆ ಬಂದವು ಎನ್ನುವುದಕ್ಕೆ ಈಜಿಫ್ಟ್‌ನ ನೈಲ್, ಮೆಸಪೊಟೋಮಿಯಾದ ಯೂಪ್ರಟಿಸ್ ಮತ್ತು ಟೈಗ್ರಿಸ್, ಪಾಕಿಸ್ತಾನದ ಸಿಂಧೂ ಮತ್ತು ಚೀನಾದ ಹ್ವಾಂಗ್ಹೋ, ಯಾಂಗ್ ಮತ್ತು ಸಿಕಿಯಾಂಗ್ ನದಿ ದಂಡೆಗಳಲ್ಲಿ ಸಾಕಷ್ಟು ಪುರಾವೆಗಳು ಸಿಕ್ಕಿವೆ. ಕ್ರಮೇಣ ಪೇಟೆ ಪಟ್ಟಣಗಳು ತಮ್ಮ ವ್ಯಾಪ್ತಿ, ಜನಸಂಖ್ಯೆ, ತಂತ್ರಜ್ಞಾನದಲ್ಲಿ ಬದಲಾವಣೆಗೊಂಡಂತೆ ಹೊಸ ಹೊಸ ಮಾದರಿಯ ನಗರ ಪ್ರದೇಶಗಳು ರೂಪುಗೊಳ್ಳಲಾರಂಭಿಸಿದವು. ಕೈಗಾರಿಕಾ ಕ್ಷೇತ್ರದಲ್ಲಾದ ಕ್ರಾಂತಿ ನಗರೀಕರಣದ ವೇಗವನ್ನು ಹೆಚ್ಚಿಸಿತು. ನಗರಗಳು ವಿಸ್ತಾರವಾಗಿ ಬೆಳೆದು ಉಪನಗರಗಳು ರಚನೆಗೊಳ್ಳಲಾರಂಭಿಸಿದವು. ಮಾರ್ಕ್ಸ್‌ವಾದಿ ಚಿಂತಕರ ಪ್ರಕಾರ ಉಪನಗರಗಳು ರಚನೆಗೊಳ್ಳಲು ಬಂಡವಾಳಶಾಹಿ ಧೋರಣೆಯೇ ಮುಖ್ಯ ಕಾರಣ. ಮುಖ್ಯ ನಗರ ಕೇಂದ್ರಗಳಲ್ಲಿ ಬೇರೂರಿದ್ದ ಕಾರ್ಮಿಕರ ಅಸಮಾಧಾನವನ್ನು ತಡೆಗಟ್ಟಲು ಮತ್ತು ಹೆಚ್ಚಿನ ತೆರಿಗೆ ಹಾಗೂ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ನಗರಗಳ ಹೊರವಲಯಗಳಲ್ಲಿ ಉದ್ದಿಮೆಗಳನ್ನು ನಿರ್ಮಿಸುವುದು ಮತ್ತು ಉಪನಗರಗಳನ್ನು ಸೃಷ್ಟಿಸುವುದು ಬಂಡವಾಳಶಾಹಿಗೆ ಅನಿವಾರ್ಯವಾಗಿತ್ತು.

ಮಾನ್ಯುಲ್ ಕಾಸ್ಟೆಲ್ಸ್ ಅವರು ಸಿಟಿ, ಕ್ಲಾಸ್ ಆಂಡ್‌ಪವರ್ (ನ್ಯೂಯಾರ್ಕ್‌೧೯೭೮) ಎನ್ನುವ ಗ್ರಂಥದಲ್ಲಿ ನಗರ ಪ್ರದೇಶಗಳಲ್ಲಿನ ಸಮಸ್ಯೆಗಳ ಕುರಿತು ಚರ್ಚಿಸಿದ್ದಾರೆ. ಈ ಕೃತಿಯು ಫ್ರಾನ್ಸಿನ ನಗರಗಳಿಗೆ ಸಂಬಂಧಿಸಿದ್ದಾದರೂ ಫ್ರಾನ್ಸಿಗಷ್ಟೇ ಸೀಮಿತವಾಗಿ ಉಳಿಯುವುದಿಲ್ಲ. ನಗರಗಳಲ್ಲಿನ ಸಂಕೀರ್ಣತೆ ಹಾಗೂ ಅವುಗಳಿಗೆ ಅಧಿಕಾರದ ಪ್ರವೇಶ, ನಗರ ವಿರೋಧಾಭಾಸಗಳು, ಬಂಡವಾಳಶಾಹಿಯ ಮಧ್ಯಪ್ರವೇಶ, ನಗರ ಸಾಮಾಜಿಕ ಚಳವಳಿಗಳು ದುಡಿಯುವ ವರ್ಗ, ಬೂರ್ಜ್ವಾವರ್ಗ, ನಗರ ಬಿಕ್ಕಟ್ಟು, ವಿವಿಧ ಸೈದ್ಧಾಂತಿಕ ನಿಲುವುಗಳು ಮುಂತಾದ ವಿಚಾರಗಳ ಕುರಿತು ಈ ಕೃತಿಯು ಚರ್ಚೆ ನಡೆಸುತ್ತದೆ. ಈ ವಿಷಯಗಳನ್ನೇ ಇಟ್ಟುಕೊಂಡು ಇಂದು ಜಗತ್ತಿನಾದ್ಯಂತ ವಿವಿಧ ರೀತಿಯ ಅಧ್ಯಯನಗಳು ನಡೆಯುತ್ತಿವೆ.

ಭಾರತದಲ್ಲಿ ಪ್ರಾಚೀನ ನಗರ ಚರಿತ್ರೆಯ ಕುರಿತು ಅನೇಕ ವಿದ್ವಾಂಸರು ಕೆಲಸ ಮಾಡಿದ್ದಾರೆ. ಅವರ ಹೆಸರುಗಳನ್ನು ಲೇಖನದ ಮೊದಲನೆಯ ಭಾಗದಲ್ಲಿ ನೀಡಲಾಗಿದೆ. ಅವರೆಲ್ಲರೂ ಶಾಸನಗಳು, ನಾಣ್ಯಗಳು, ಸ್ಮಾರಕಗಳು ಮತ್ತು ಸಾಹಿತ್ಯ ಕೃತಿಗಳನ್ನು ಆಧಾರವನ್ನಾಗಿ ತೆಗೆದು ಕೊಂಡಿರುವುದು ಅವರ ಕೃತಿಗಳಿಂದ ತಿಳಿದುಬರುತ್ತದೆ. ಇಲ್ಲಿ ಕೆಲವು ವಿದ್ವಾಂಸರ ಅಭಿಪ್ರಾಯಗಳನ್ನಷ್ಟೇ ಚರ್ಚೆಗೆ ಎತ್ತಿಕೊಳ್ಳಲಾಗಿದೆ. ಎ.ಘೋಷ್ ಅವರು ದಿ ಸಿಟಿ ಇನ್ ಅರ‍್ಲೀ ಹಿಸ್ಟಾರಿಕಲ್ ಇಂಡಿಯಾ (ಸಿಮ್ಲಾ ೧೯೭೩) ಎನ್ನುವ ಗ್ರಂಥದಲ್ಲಿ ನಗರೀಕರಣ ಕುರಿತ ವಿವಿಧ ಸಿದ್ಧಾಂತಗಳು, ಸಮುದಾಯಗಳು, ನಗರಗಳ ಅಧ್ಯಯನಕ್ಕೆ ಬೇಕಾದ ಆಕರಗಳು ಮುಂತಾದ ವಿಷಯಗಳ ಕುರಿತು ಚರ್ಚಿಸಿದ್ದಾರೆ. ಘೋಷ್ ಅವರ ನಗರ ವ್ಯಾಖ್ಯಾನ ಈ ರೀತಿ ಇದೆ:

೧. ಗ್ರಾಮೀಣ ಪ್ರದೇಶಕ್ಕಿಂತ ಹೆಚ್ಚು ದಟ್ಟವಾಗಿ ಜನವಸತಿ ಇರುವ ಒಂದು ಪ್ರದೇಶ
೨. ಜನರು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ನೆಲೆಸಿರುತ್ತಾರೆ
೩. ಕೃಷಿ ಉತ್ಪನ್ನಗಳ ವ್ಯಾಪಾರ ನಡೆಯುವ ಕೇಂದ್ರ
೪. ಅಲ್ಲಿನ ಜನರು ಅನುತ್ಪಾದಕ ವರ್ಗದವರು. ಆಹಾರ ಮತ್ತು ಕಚ್ಚಾಸಾಮಗ್ರಿಗಳಿಗೆ ಅವರು ಗ್ರಾಮೀಣ ಪ್ರದೇಶವನ್ನು ಅವಲಂಬಿಸಿರುತ್ತಿದ್ದರು.

ನಗರ ಪ್ರದೇಶಗಳಲ್ಲಿ ಆಡಳಿತ ಕೇಂದ್ರಗಳು, ವ್ಯಾಪಾರ ಕೇಂದ್ರಗಳು ಹಾಗೂ ಧಾರ್ಮಿಕ ಕೇಂದ್ರಗಳೆನ್ನುವ ಬೇರೆ ಬೇರೆ ವಿಧಗಳಿದ್ದವು ಎನ್ನುವ ವಿವರಣೆಯೂ ಗ್ರಂಥದಲ್ಲಿದೆ. ಘೋಷ್ ಅವರ ಇನ್ನೊಂದು ವಾದವೆಂದರೆ ಭಾರತದ ಪೇಟೆ-ಪಟ್ಟಣಗಳು ಸಿಂಧೂ ನದಿ ನಾಗರಿಕತೆಯಂದ ಪ್ರಭಾವಿತಗೊಂಡಿಲ್ಲ ಎನ್ನುವುದಾಗಿದೆ. ಇದಕ್ಕೆ ಸಾಕಷ್ಟು ಆಧಾರಗಳನ್ನು ಕೊಟ್ಟು ವಿವರಿಸಿದ್ದಾರೆ.

ಪ್ರಾಚೀನ ಭಾರತದಲ್ಲಿನ ನಗರೀಕರಣದ ಕುರಿತು ಅಧ್ಯಯನ ಮಾಡಿದವರಲ್ಲಿ ವಿಜಯಕುಮಾರ್ ಟಾಕೂರ್ ಅವರು ಪ್ರಮುಖರು. ಅವರು ತಮ್ಮ ಅರ್ಬನೈಸೇಷನ್ ಇನ್ ಏನ್ಸಿಯೆಂಟ್ ಇಂಡಿಯಾ (ಡೆಲ್ಲಿ ೧೯೮೧) ಗ್ರಂಥದಲ್ಲಿ ನಗರಗಳ ಹುಟ್ಟು, ಬೆಳವಣಿಗೆ ಮತ್ತು ಅವನತಿಗೆ ಕಾರಣವಾದ ಅಂಶಗಳು, ನಗರ ಆರ್ಥಿಕತೆ, ನಗರ ಸಮಾಜ, ನಗರ ಸಂಸ್ಕೃತಿ, ನಗರ ಆಡಳಿತ ಮುಂತಾದ ವಿಚಾರಗಳ ಕುರಿತು ಕೂಲಂಕಷ ಅಧ್ಯಯನ ನಡೆಸಿದ್ದಾರೆ. ನಗರಗಳ ಬಗ್ಗೆ ಅಧ್ಯಯನ ಮಾಡಿದ ಬಿ.ಬಿ. ದತ್ತ, ಎಸ್. ಪಿಗ್ಗಾಟ್, ಅಮಿತ್‌ರಾಯ್, ಬಿ.ಎನ್.ಪುರಿ, ಸ್ಜೋಬರ್ಗ್, ಚೈಲ್ಡ್‌ ಮುಂತಾದ ವಿದ್ವಾಂಸರ ಚರ್ಚೆಗಳನ್ನು ತಮ್ಮ ಗ್ರಂಥದಲ್ಲಿ ಬಳಸಿಕೊಂಡಿದ್ದಾರೆ. ಟಾಕೂರ್ ಅವರು ನಗರೀಕರಣ ಮತ್ತು ನಗರತ್ವ ಪದಗಳ ಕೆಳಕಂಡ ವ್ಯಾಖ್ಯಾನವನ್ನು ಒಪ್ಪಿಕೊಳ್ಳುತ್ತಾರೆ. ಅವು ಹೀಗಿವೆ:

೧. ಗ್ರಾಮೀಣ ಪ್ರದೇಶ ಪಟ್ಟಣವಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಯೇ ನಗರೀಕರಣ, ಇದು ನಿರಂತರ ಪ್ರಕ್ರಿಯೆಯಾಗಿದ್ದು ನಗರ ಬೆಳವಣಿಗೆಯ ಹೊರನೋಟದ ಮುಖಗಳನ್ನು ಸಂಕೇತಿಸುತ್ತದೆ.

೨. ನಗರ ಜೀವನಕ್ರಮವೇ ನಗರತ್ವ. ಇದು ನಗರ ಜೀವನ ಮಾದರಿಯನ್ನು ಸಂಕೇತಿಸುತ್ತದೆ. ನಗರತ್ವವು ನಗರ ಬೆಳವಣಿಗೆಯ ಒಳನೋಟ. ನಗರೀಕರಣ ಮತ್ತು ನಗರತ್ವ ಪರಸ್ಪರ ಪೂರಕವಾಗಿದ್ದು ನಗರ ವ್ಯವಸ್ಥೆ ರೂಪುಗೊಳ್ಳುವಂತೆ ಮಾಡುತ್ತವೆ ಎನ್ನುವುದು ಟಾಕೂರ್ ಅವರ ವಾದ.

ನಗರಗಳ ಹುಟ್ಟಿಗೆ ಟಾಕೂರ್ ಅವರು ನೀಡುವ ಕಾರಣಗಳೆಂದರೆ, ಕೃಷಿ ಕ್ಷೇತ್ರದಲ್ಲಿ ಹೆಚ್ಚುವರಿ ಉತ್ಪಾದನೆ, ಜನಸಂಖ್ಯೆಯ ಹೆಚ್ಚಳ, ಕುಶಲಕರ್ಮಿಗಳು, ವ್ಯಾಪಾರ ವಾಣಿಜ್ಯ ವರ್ತಕ ಸಂಘಗಳು, ಧರ್ಮ, ಶಿಕ್ಷಣ, ಆಡಳಿತ, ಜಮೀನ್ದಾರರು, ಭೌಗೋಳಿಕ ಸನ್ನಿವೇಶ ಇತ್ಯಾದಿ. ಅದೇ ರೀತಿ ಅವನತಿಗೆ ಪ್ರಮುಖ ಕಾರಣಗಳೆಂದರೆ, ಸ್ವಾಭಾವಿಕ ಮತ್ತು ಭೌಗೋಳಿಕ, ರಾಜಕೀಯ, ವಿದೇಶಿ ಆಕ್ರಮಣ, ಊಳಿಗಪದ್ಧತಿ ಮತ್ತು ಧಾರ್ಮಿಕ ನೀತಿ. ನಗರ ಕೇಂದ್ರಗಳಲ್ಲಿ ಆಡಳಿತ ಕೇಂದ್ರಗಳು, ವಾಣಿಜ್ಯ ಕೇಂದ್ರಗಳು, ಶೈಕ್ಷಣಿಕ ಕೇಂದ್ರಗಳು ಮತ್ತು ಧಾರ್ಮಿಕ ಕೇಂದ್ರಗಳೆನ್ನುವ ವಿಧಗಳಿದ್ದವು ಎನ್ನುವ ಮಾಹಿತಿಯೂ ಟಾಕೂರ್ ಅವರ ಗ್ರಂಥದಲ್ಲಿ ಸಿಗುತ್ತದೆ. ಇಂಥ ನಗರಕೇಂದ್ರಗಳಲ್ಲಿ ಯಾವುದೋ ಒಂದು ಪ್ರಧಾನ ಲಕ್ಷಣವಿದ್ದರೂ ಇನ್ನಿತರ ಹಲವಾರು ಚಟುವಟಿಕೆಗಳೂ ನಡೆಯುತ್ತಿದ್ದವು ಎನ್ನುವುದು ತಿಳಿದುಬರುತ್ತದೆ. ಪ್ರಾಚೀನ ಭಾರತದಲ್ಲಿ ಎರಡು ಹಂತಗಳಲ್ಲಿ ನಗರೀಕರಣ ನಡೆಯಿತು ಎನ್ನುವುದನ್ನು ಟಾಕೂರ್‌ಅವರು ಗುರುತಿಸಿದ್ದಾರೆ. ಅವುಗಳೆಂದರೆ:

೧. ಕ್ರಿ.ಪೂ. ೨೩೫೦ ರಿಂದ ಕ್ರಿ.ಪೂ. ೧೬೦೦, ಇದು ಮೊದಲನೆಯ ನಗರೀಕರಣ. ಸಿಂಧೂ ನದಿ ದಂಡೆಯಲ್ಲಿ ಪೇಟೆ-ಪಟ್ಟಣಗಳು ಕಾಣಿಸಿಕೊಂಡಿರುವುದು ಈ ಅವಧಿಯಲ್ಲಿ. ಕೆಲವು ವಿದ್ವಾಂಸರ ಪ್ರಕಾರ ಮೊದಲ ನಗರೀಕರಣದ ಅವಧಿ ಕ್ರಿ.ಪೂ. ೩೦೦೦ ದಿಂದ ಕ್ರಿ.ಪೂ. ೨೪೦೦.

೨. ಎರಡನೆಯ ನಗರೀಕರಣ ಕಾಣಿಸಿಕೊಂಡಿರುವುದು ಕ್ರಿ.ಪೂ. ೬೦೦ ರಿಂದ ಕ್ರಿ.ಶ. ೩೦೦ ರವರೆಗೆ. ಈ ಅವಧಿಯಲ್ಲಿ ಕಬ್ಬಿಣದ ಉಪಯೋಗ ಪಡೆದುಕೊಂಡು ಕೃಷಿ ಹಾಗೂ ಕೃಷಿಯೇತರ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲಾಯಿತು. ನಾಣ್ಯದ ಚಲಾವಣೆಯೂ ಆರಂಭಗೊಂಡಿತು.

ಆರ್‌.ಎಸ್.ಶರ್ಮ ಅವರು ಪ್ರಾಚೀನ ಭಾರತದಲ್ಲಿ ಕಬ್ಬಿಣದ ಪ್ರಯೋಗದಿಂದ ಕೃಷಿ ಕ್ಷೇತ್ರದಲ್ಲಿ ಹೊಸ ಬದಲಾವಣೆಗಳು ಕಾಣಿಸಿಕೊಂಡಿರುವುದು ಪೇಟೆ-ಪಟ್ಟಣಗಳ ಹುಟ್ಟಿಗೆ ಕಾರಣವಾಯಿತು ಎಂದಿದ್ದಾರೆ. ಅವರ ಪ್ರಕಾರ ಕೃಷಿ ಕ್ಷೇತ್ರದಲ್ಲಾದ ಬದಲಾವಣೆ ಹೆಚ್ಚುವರಿ ಉತ್ಪಾದನೆಗೆ ಎಡೆಮಾಡಿಕೊಟ್ಟು ಗ್ರಾಮೀಣ ಪ್ರದೇಶಗಳ ಮಧ್ಯದಲ್ಲಿಯೇ ನಗರ ಪ್ರದೇಶಗಳು ಕಾಣಿಸಿಕೊಂಡವು. ಶರ್ಮ ಅವರ ಅರ್ಬನ್ ಡಿಕೇ (ಡೆಲ್ಲಿ ೧೯೮೭) ಗ್ರಂಥ ನಗರ ಚರಿತ್ರೆಯ ಅಧ್ಯಯನಕ್ಕೆ ಬಹುಮುಖ್ಯ ಕೊಡುಗೆ. ನಗರ ಪ್ರದೇಶಗಳ ಹುಟ್ಟಿಗೆ ಕಾರಣವಾದ ಅಂಶಗಳು ಕಣ್ಮರೆಯಾದಾಗ ಇಲ್ಲವೇ ದುರ್ಬಲಗೊಂಡಾಗ ಸಹಜವಾಗಿಯೇ ನಗರಗಳು ಅವನತಿ ಹೊಂದುತ್ತವೆ. ಈ ಅವನತಿ ಉತ್ಪಾದನಾ ವ್ಯವಸ್ಥೆಯ ಮೇಲೆ ಬದಲಾವಣೆಗಳನ್ನು ತಂದು ಸಮಾಜದಲ್ಲಿ ಸಂಕೀರ್ಣತೆ ಮತ್ತು ವಿರೋಧಾಭಾಸಗಳು ಕಾಣಿಸಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ನಗರಗಳ ಅವನತಿಯ ಹಿಂದಿರುವ ಉದ್ದೇಶಗಳು ಹಾಗೂ ಅವುಗಳಿಂದಾಗಿ ಉತ್ಪಾದನಾ ವಿಧಾನ ಮತ್ತು ಸಂಬಂಧಗಳ ಮೇಲಾಗುವ ಪರಿಣಾಮಗಳ ಕುರಿತು ಆರ್.ಎಸ್.ಶರ್ಮ ಅವರು ಚರ್ಚಿಸಿದ್ದಾರೆ. ಅವರು ನಗರ ಪ್ರದೇಶಗಳ ವ್ಯಾಖ್ಯಾನ ಮಾಡುವಾಗ ಪೇಟೆ-ಪಟ್ಟಣಗಳ ಅಳಿದುಳಿದ ಅವಶೇಷಗಳನ್ನು ಹೆಚ್ಚಾಗಿ ಬಳಸಿಕೊಂಡಿರುವುದು ಕಂಡುಬರುತ್ತದೆ. ಪುರಾತತ್ವ ಕುರುಹುಗಳ ವ್ಯವಸ್ಥಿತ ಶೋಧನೆ ನಡೆಸಿ ಅವುಗಳ ಆಧಾರದ ಮೇಲೆ ನಗರ ಜೀವನವನ್ನು ಪತ್ತೆ ಹಚ್ಚುವಲ್ಲಿ ಶರ್ಮ ಯಶಸ್ವಿಯಾಗಿದ್ದಾರೆ.

ಓ.ಪಿ.ಪ್ರಸಾದ್ ಅವರ ಡಿಕೇ ಆಂಡ್ ರಿವೈವಲ್ ಆಫ್ ಅರ್ಬನ್ ಸೆಂಟರ್ಸ್‌ ಇನ್ ಮಿಡೀವಲ್ ಸೌತ್ ಇಂಡಿಯಾ ಕ್ರಿ.ಶ. ೬೦೦-೧೨೦೦ (ಪಾಟ್ನಾ ೧೯೮೯) ಗ್ರಂಥವು ದಕ್ಷಿಣ ಭಾರತದ ನಗರ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಸಹಕಾರಿಯಾಗುತ್ತದೆ. ಈ ಗ್ರಂಥವು ಸಂಪೂರ್ಣವಾಗಿ ಶಾಸನಗಳು ಮತ್ತು ಸಾಹಿತ್ಯ ಕೃತಿಗಳನ್ನು ಅವಲಂಬಿಸಿಕೊಂಡಿದೆ. ಇವುಗಳ ಆಧಾರದಿಂದ ದಕ್ಷಿಣ ಭಾರತದ ಹಲವಾರು ಪೇಟೆ-ಪಟ್ಟಣಗಳ ಚರಿತ್ರೆಯನ್ನು ನಿರ್ಮಿಸುವ ಪ್ರಯತ್ನವನ್ನು ಮಾಡಲಾಗಿದೆ. ಭಾರತದ ನಗರ ಚರಿತ್ರೆಗೆ ಸಂಬಂಧಿಸಿದ ಕೆಲವು ಕೃತಿಗಳ ಕುರಿತಾಗಿಯೂ ಚರ್ಚೆ ನಡೆಸಲಾಗಿದೆ. ಅವುಗಳೆಂದರೆ ಎ.ಘೋಷ್ ಅವರ ದಿ ಸಿಟಿ ಇನ್ ಅರ‍್ಲೀ ಹಿಸ್ಟಾರಿಕಲ್ ಇಂಡಿಯಾ (೧೯೭೩), ಬಿ.ಬಿ.ದತ್ತ ಅವರ ಟೌನ್ ಪ್ಲಾನಿಂಗ್ ಇನ್ ಏನ್ಸಿಯೆಂಟ್ ಇಂಡಿಯಾ (ಕಲ್ಕತ್ತಾ ೧೯೨೫), ಪಿ.ವಿ. ಬೆಗ್ಡೆ ಅವರ ಏನ್ಸಿಯೆಂಟ್ ಆಂಡ್ ಮಿಡೀವಲ್ ಟೌನ್ ಪ್ಲಾನಿಂಗ ಇನ್ ಇಂಡಿಯಾ (ನವದೆಹಲಿ ೧೯೭೮), ಸಿ.ಪಿ.ವಿ. ಅಯ್ಯರ್‌ ಅವರ ಟೌನ್ ಪ್ಲಾನಿಂಗ್ ಇನ್ ಏನ್‌ಶ್ಯಂಟ್ ಡೆಕ್ಕನ್ (ಮದರಾಸು ೧೯೧೬), ಎ. ಅಪ್ಪಾದೊರೈ ಅವರ ಇಕನಾಮಿಕ್ ಕಂಡೀಷನ್ಸ್ ಇನ್ ಸದರ್ನ್‌ಇಂಡಿಯಾ (ಮದರಾಸು ೧೯೩೬), ಕೆ.ಸಿ.ಜೈನ್ ಅವರ ಏನ್‌ಶ್ಯಂಟ್ ಸಿಟೀಸ್ ಆಂಡ್ ಟೌನ್ಸ್‌ ಆಫ್ ರಾಜಸ್ತಾನ್ (ದೆಹಲಿ ೧೯೭೨), ಜಿ.ಎಸ್.ದೀಕ್ಷಿತ್ ಅವರ ಲೋಕಲ್ ಸೆಲ್ಫ್‌ಗವರ‍್ನಮೆಂಟ್ ಇನ್ ಮಿಡೀವಲ್ ಕರ್ನಾಟಕ (ಧಾರವಾಡ ೧೯೬೪), ಆರ್.ಕುಪ್ಪುಸ್ವಾಮಿ ಅವರ ‘ಇಕನಾಮಿಕ್ ಕಂಡೀಷನ್ಸ್ ಇನ್ ಕರ್ನಾಟಕ’ (ಧಾರವಾಡ ೧೯೭೫) ಮುಂತಾದವು. ಪ್ರಸಾದ್ ಅವರು ಭಾರತದ ಮೂರನೆಯ ಹಂತದ ನಗರೀಕರಣದ ಅವಧಿಯಲ್ಲಿ ಕ್ರಿ.ಶ. ೯೦೦ ರಿಂದ ಕ್ರಿ.ಶ. ೧೨೦೦ ಎಂಬುದಾಗಿ ಗುರುತಿಸಿದ್ದಾರೆ. ಅವರ ಪ್ರಕಾರ ನಗರ ಪ್ರದೇಶಗಳ ಹುಟ್ಟು ಮತ್ತು ಬೆಳವಣಿಗೆಗೆ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕಾ ಉತ್ಪಾದನೆ ಬಹುಮುಖ್ಯ ಕಾರನವೇ ಹೊರತು ಸೈನಿಕ ಮತ್ತು ಆಡಳಿತಾತ್ಮಕ ಕಾರಣಗಳಲ್ಲ. ಚರಿತ್ರೆಯ ವಿವಿಧ ಅವಧಿಗಳಲ್ಲಿ ನಗರ ಕೇಂದ್ರಗಳು ಅವನತಿ ಹೊಂದಲು ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕೆಗಳ ಇಳಿಮುಖವೇ ಮೂಲ ಕಾರಣ.

ನಗರ ಪ್ರದೇಶಗಳ ಚರಿತ್ರೆಗೆ ಸಂಬಂಧಿಸಿದ ಹೆಚ್ಚಿನ ಗ್ರಂಥಗಳು ಯುರೋಪ್ ಕೇಂದ್ರಿತ ಅಧ್ಯಯನ ಕ್ರಮವನ್ನು ಅಳವಡಿಸಿಕೊಂಡಿವೆ. ಇದು ಹೆಚ್ಚಾಗಿ ವಸಾಹತುಶಾಹಿ ಆಳ್ವಿಕೆಯ ಸಂದರ್ಭದಲ್ಲಿನ ನಗರ ಚರಿತ್ರೆಗೆ ಅನ್ವಯಿಸುತ್ತದೆ. ಸುಮಾರು ಕ್ರಿ.ಶ. ಹದಿನೆಂಟನಯ ಶತಮಾನದಿಂದ ಇಪ್ಪತ್ತನೆಯ ಶತಮಾನದವರೆಗಿನ ನಗರ ಪ್ರದೇಶಗಳ ಚರಿತ್ರೆಯನ್ನು ಅಧ್ಯಯನ ನಡೆಸಬೇಕಾದರೆ ಯುರೋಪಿನ ದಾಖಲೆಗಳನ್ನು ಅವಲಂಬಿಸುವುದು ಅನಿವಾರ್ಯವಾಗುತ್ತದೆ. ಇಂಥ ಸಂದರ್ಭಗಳಲ್ಲಿ ಅಧ್ಯಯನಕಾರ ಜಾಗರೂಕತೆಯಿಂದ ನಗರ ಪ್ರಶ್ನೆಯನ್ನು ಎದುರಿಸಬೇಕಾಗುತ್ತದೆ. ವಸಾಹತುಶಾಹಿ ಸಂದರ್ಭದಲ್ಲಿ ನಗರಗಳಲ್ಲಿ ಅನೇಕ ವರ್ಗೀಕರಣವನ್ನು ಕಾಣಬಹುದಾಗಿದೆ. ಅವುಗಳೆಂದರೆ ಬಂದರು ಪಟ್ಟಣಗಳು, ವಸಾಹತು ನಗರಗಳ ಹುಟ್ಟು ಮತ್ತು ಬೆಳವಣಿಗೆ, ಬಂದರು ಪಟ್ಟಣಗಳು ವಸಾಹತು ಬಂದು ಪಟ್ಟಣಗಳಾಗಿ ಪರಿವರ್ತನೆಗೊಂಡಿರುವುದು, ನಗರ ಪ್ರದೇಶಗಳ ವಿಸ್ತರಣೆ ಮತ್ತು ಗ್ರಾಮೀಣ ಪ್ರದೇಶಗಳೊಂದಿಗೆ ಸಂಬಂಧ, ವಸಾಹತುಶಾಹಿ ಅನುಭವ ಮುಂತಾದ ವಿಚಾರಗಳ ಕುರಿತು ಇಂದು ಬಂಗಾ, ದಿಲೀಪ್ ಕೆ.ಬಸು, ಆಶಿಸ್ ದಾಸ್ ಗುಪ್ತ, ಎಂ.ಎಸ್.ಎ. ರಾವ್ ಮುಂತಾದವರು ಅಧ್ಯಯನ ನಡೆಸಿದ್ದಾರೆ.

ದಿಲೀಪ್‌ಕೆ.ಬಸು ಅವರು ಸಂಪಾದಿಸಿದ ರೈಸ್ ಆಂಡ್ ಗ್ರೋಥ್ ಆಫ್ ಪೋರ್ಟ್ ಸಿಟೀಸ್ ಇನ್ ಏಷ್ಯಾ (ಕ್ಯಾಲಿಫೋರ್ನಿಯಾ ೧೯೮೩) ಗ್ರಂಥದಲ್ಲಿ ವಸಾಹತು ಬಂದರು ಪಟ್ಟಣದ ಕುರಿತಾದ ಚರ್ಚೆಯಿದೆ. ವಸಾಹತುಶಾಹಿ ಸಂದರ್ಭದಲ್ಲಿ ನಿರ್ಮಾಣಗೊಂಡ ಪಟ್ಟಣ ಅಥವಾ ನಗರ ‘ವಸಾಹತುನಗರ’ ಎಂಬ ಸರಳೀಕೃತ ವ್ಯಾಖ್ಯಾನವನ್ನು ಬಹು ಅವರು ಒಪ್ಪುವುದಿಲ್ಲ. ಅವರ ಪ್ರಕಾರ ವಸಾಹತು ಸಂದರ್ಭದ ಯಾವುದೇ ನಗರ ಪ್ರದೇಶದ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾದರೆ ಅವುಗಳ ಸಂಪೂರ್ಣ ಚರಿತ್ರೆಯ ಅಧ್ಯಯನ ಕೈಗೊಳ್ಳಬೇಕು. ವಸಾಹತು ಆಳ್ವಿಕೆ ಆರಂಭಗೊಂಡ ನಂತರದ ದಿನಗಳಲ್ಲಿ ಸ್ಥಳೀಯ ಪೇಟೆ-ಪಟ್ಟಣಗಳು ತಮ್ಮ ರಚನೆ ಮತ್ತು ಕಾರ್ಯವೈಖರಿಯಲ್ಲಿ ಬದಲಾವಣೆನ್ನು ಕಂಡುಕೊಂಡು ವಸಾಹತು ನಗರಗಳಾಗಿ ಪರಿವರ್ತನೆಗೊಂಡವು. ಈ ಬದಲಾವಣೆಯ ಪ್ರಕ್ರಿಯೆಯನ್ನು ಅರ್ಥೈಸಿಕೊಳ್ಳದೆ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವುದ ಬಸು ಅವರ ವಾದ. ಇದು ಬಂಗಾ ಅವರ ಸ್ಟಡೀಸ್ ಇನ್ ಅರ್ಬನ್ ಹಿಸ್ಟರಿ (ನವದೆಹಲಿ ೧೯೮೧) ಗ್ರಂಥವು ನಗರೀಕರಣ ಕುರಿತ ತಾತ್ವಿಕ ವಿಚಾರಗಳನ್ನು ಒಳಗೊಂಡಿದೆ. ಅವರು ಸಂಪಾದಿಸಿದ ದಿ ಸಿಟಿ ಇನ್ ಇಡಿಯನ್ ಹಿಸ್ಟರಿ (ನವದೆಹಲಿ ೧೯೯೧) ಗ್ರಂಥದಲ್ಲಿ ನಗರಗಳು ಪ್ರಾಕ್ಚಾರಿತ್ರಿಕ ಕಾಲದಿಂದ ಆಧುನಿಕ ಸಂದರ್ಭದವರೆಗೆ ಬೆಳೆದು ಬಂದ ಬಗೆಯನ್ನು ಚಿತ್ರಿಸಲಾಗಿದೆ. ಮೊಗಲರ ಅವನತಿ ಮತ್ತು ಯುರೋಪಿಯನ್ನರ ಆಳ್ವಿಕೆಯ ಆರಂಭ ಭಾರತದಲ್ಲಿ ಅನೇಕ ನಗರ ಕೇಂದ್ರಗಳ ಅವನತಿಗೆ ಕಾರಣವಾದ ಅಂಶಗಳ ಕುರಿತೂ ಚರ್ಚಿಸಲಾಗಿದೆ. ಇಂದು ಬಂಗಾ ಅವರು ಸಂಪಾದಿಸಿದ ಇನ್ನೊಂದು ಗ್ರಂಥ ಪೋರ್ಟ್ ಆಂಡ್ ದೇಯರ್ ಹಿಂಟರ್‌ಲ್ಯಾಂಡ್ಸ್‌ಇನ್ ಇಂಡಿಯಾ ೧೭೦೦-೧೯೫೦ (ಚಂಡೀಗರ್ ೧೯೯೨) ಮೊಗಲರು, ಮರಾಠರು ಮತ್ತು ಬ್ರಿಟಿಷರ ಆಳ್ವಿಕೆಯಲ್ಲಿ ಭಾರತದಲ್ಲಿ ಬಂದರು ಪಟ್ಟಣಗಳು ಹೇಗೆ ಬೆಳೆದು ಬಂದವು ಹಾಗೂ ಅವುಗಳು ಒಳನಾಡಿನೊಡನೆ ಹೊಂದಿದ್ದ ಸಂಪರ್ಕಗಳು, ಅವುಗಳ ಅಧ್ಯಯನ ವಿಧಾನ ಮುಂತಾದ ವಿಚಾರಗಳ ಕುರಿತು ಚರ್ಚೆ ನಡೆಸುತ್ತದೆ.

ಆಶಿನ್ ದಾಸ್ ಗುಪ್ತ ಅವರ ಮಲಬಾರ್ ಇನ್‌ಏಷ್ಯನ್ ಟ್ರೇಡ್ ೧೭೦೦-೧೮೦೦ (ಲಂಡನ್ ೧೯೬೭) ಗ್ರಂಥವು ಬ್ರಿಟಿಷ್ ಆಳ್ವಿಕೆಯಿಂದಾಗಿ ಸ್ಥಳೀಯ ಪೇಟೆ-ಪಟ್ಟಣಗಳು ಅವನತಿಯತ್ತ ಸಾಗಿದುದರ ಚಿತ್ರಣವನ್ನು ನೀಡುತ್ತದೆ. ಸ್ಥಳೀಯ ಕೈಗಾರಿಕೆಗಳು, ವ್ಯಾಪಾರ-ವಾಣಿಜ್ಯ ಹಾಗೂ ನಗರ ವ್ಯವಸ್ಥೆ ಸಂಪೂರ್ಣವಾಗಿ ಬದಲಾವಣೆಗೊಂಡು ಹೊಸ ನಗರ ವ್ಯವಸ್ಥೆ ರೂಪುಗೊಂಡಿದ್ದು ಏನೆಲ್ಲ ಅನಾಹುತಗಳಿಗೆ ಕಾರಣವಾಯಿತು ಎನ್ನುವುದರ ಕುರಿತು ದಾಸ್‌ಗುಪ್ತ ಅವರು ವಿವರಿಸುತ್ತಾರೆ. ಸ್ಥಳೀಯ ಅರಸುಮನೆತನಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡಿದ್ದೇ ಅವುಗಳನ್ನು ಅವಲಂಬಿಸಿದ್ದ ಉದ್ದಿಮೆಗಳು, ವ್ಯಾಪಾರದ ಅವನತಿಗೆ ಮೂಲ ಕಾರಣ. ಇರ್ಫಾನ್ ಹಬೀಬ್‌ಅವರು ಸ್ಟಡೀಯಿಂಗ್ ಎ ಕೊಲೋನ್ಯಲ್ ಇಕಾನಮಿ-ವಿದೌಟ್ ಪರ್ಸೀವಿಂಗ್ ಕಲೋನಿಯಾಲಿಸಂ (೧೯೮೪) ಎನ್ನುವ ಲೇಖನದಲ್ಲಿ ಬ್ರಿಟಿಶ್ ಆಳ್ವಿಕೆ ಸ್ಥಳೀಯ ಪೇಟೆ-ಪಟ್ಟಣಗಳ ಅವನತಿಗೆ ಹೇಗೆ ಕಾರಣವಾಯಿತು ಎನ್ನುವುದರ ಚರ್ಚೆ ನಡೆಸಿದ್ದಾರೆ. ೧೮೧೩ ರಲ್ಲಿ ಜಾರಿಗೆ ಬಂದ ಚಾರ್ಟರ್ ಕಾಯಿದೆ ಸಣ್ಣ ಕೈಗಾರಿಕೆಗಳ ಅವನತಿಗೆ ಕಾರಣವಾಗಿ, ಬ್ರಿಟಿಷ್ ಕೈಗಾರಿಕಾ ಉತ್ಪನ್ನಗಳ ಪ್ರವೇಶವನ್ನು ಸುಲಭವಾಗಿಸಿತು. ಇದು ಸ್ಥಳೀಯ ಅರಸುಮನೆತನಗಳು, ವ್ಯಾಪಾರಸ್ಥರು ಮತ್ತು ಕುಶಲಕರ್ಮಿಗಳನ್ನು ಮೂಲೆಗುಂಪು ಮಾಡಿತು. ತಪನ್ ರಾಯ್ ಚೌಧುರಿ ಮತ್ತು ಇರ್ಫಾನ್ ಹಬೀಬ್‌ ಸಂಪಾದಿಸಿದ ದಿ ಕೇಂಬ್ರಿಜ್ಜ್ ಇಕನಾಮಿಕ್ ಹಿಸ್ಟರಿ ಆಫ್ ಇಂಡಿಯಾ (ದೆಹಲಿ ೧೯೮೪) ಗ್ರಂಥವು ವಸಾಹತು ಆಳ್ವಿಕೆಯ ಸಂದರ್ಭದಲ್ಲಿ ಸ್ಥಳೀಯ ಆರ್ಥಿಕತೆ ಮತ್ತು ಸಮಾಜ ಪರಿವರ್ತನೆಗೊಂಡಿರುವುದು ಹಾಗೂ ಅವುಗಳು ಪಡೆದ ವಸಾಹತುಶಾಹಿ ಅನುಭವದ ಕುರಿತು ಚರ್ಚಿಸುತ್ತದೆ.

ಯುರೋಪಿಯನ್ನರ ಆಳ್ವಿಕೆಯಿಂದಾಗಿ ಭಾರತದಲ್ಲಿ ಅನೇಕ ಸಾಂಪ್ರದಾಯಿಕ ಪೇಟೆ-ಪಟ್ಟಣಗಳು ಅವನತಿಯನ್ನು ಹೊಂದಿದವು ಎನ್ನುವ ರಾಷ್ಟ್ರೀಯವಾದಿ ನಿಲುವು ಹಾಗೂ ಯುರೋಪಿಯನ್ನರ ಆಳ್ವಿಕೆಗೆ ಮೊದಲೇ ಅನೇಕ ಪೇಟೆ-ಪಟ್ಟಣಗಳು ತಮ್ಮದೇ ಆದ ಕಾರಣಗಳಿಂದಾಗಿ ಅವನತಿಯ ಅಂಚಿನಲ್ಲಿದ್ದವು ಎನ್ನುವ ಸಾಮ್ರಾಜ್ಯಶಾಹಿ ನಿಲುವು ಅನೇಕ ರೀತಿಯ ವಾದ-ಪ್ರತಿವಾದಗಳಿಗೆ ಎಡೆಮಾಡಿಕೊಟ್ಟಿತು. ಈ ಕುರಿತು ಈಗಾಗಲೇ ಲೇಖನದಲ್ಲಿ ಚರ್ಚಿಸಲಾಗಿದೆ. ಯುರೋಪಿಯನ್ನರ ಆಳ್ವಿಕೆಯಿಂದಾಗಿ ಅನೇಕ ಪೇಟೆ-ಪಟ್ಟಣಗಳು ತಮ್ಮ ರಚನೆ ಮತ್ತು ಕಾರ್ಯವೈಖರಿಯಲ್ಲಿ ಬದಲಾವಣೆಯನ್ನು ಕಂಡುಕೊಂಡು ಹೊಸ ವ್ಯವಸ್ಥೆಯಾಗಿ ರೂಪುಗೊಂಡವು. ಈ ಬದಲಾವಣೆ ಸಣ್ಣ ಮತ್ತು ಗೃಹ ಕೈಗಾರಿಕೆಗಳ ಮೇಲೆ ಮಹತ್ತರ ಪರಿಣಾಮವನ್ನು ಬೀರಿರುವುದು, ನಿಜ. ಆದರೆ ವಸ್ತುಗಳ ಉತ್ಪಾದನೆಯಲ್ಲಿ ಹೊಸ ತಂತ್ರವನ್ನು ಬಳಸುವುದು, ಯಂತ್ರಗಳ ಆವಿಷ್ಕಾರ ಮುಂತಾದ ಹೊಸ ಬೆಳವಣಿಗೆಯನ್ನು ವಿರೋಧಿಸುವುದು ತಪ್ಪಾಗುತ್ತದೆ. ಅದರಲ್ಲೂ ಆಧುನಿಕತೆಯ ಸೌಲಭ್ಯ, ಸವಲತ್ತುಗಳೊಂದಿಗೆ ಜೀವಿಸುತ್ತಿರುವ ಜನವರ್ಗ ಸಾಂಪ್ರದಾಯಿಕ ಪೇಟೆ-ಪಟ್ಟಣಗಳು, ಸಾಂಪ್ರದಾಯಿಕ ಜೀವನ ಸಾಧನ, ಉತ್ಪಾದನಾ ರೀತಿ ಮುಂತಾದವುಗಳ ಕುರಿತು ಅಧಿಕಾರವಾಣಿಯಿಂದ ಮಾತನಾಡುವುದು ವ್ಯಂಗ್ಯವೆನಿಸುತ್ತದೆ. ಇವರ‍್ಯಾರೂ ಸಣ್ಣ ಮತ್ತು ಗೃಹ ಕೈಗಾರಿಕೆಗಳಲ್ಲಿ ತಮ್ಮ ಹಣವನ್ನು ವಿನಿಯೋಗಿಸಲು ಸಿದ್ಧರಿಲ್ಲ, ಕುಶಲಕರ್ಮಿಗಳಿಗೆ ಬೆಂಬಲ ನೀಡುವಲ್ಲೂ ಮುಂದೆ ಬರುತ್ತಿಲ್ಲ. ಅದೇ ರೀತಿ ತಮ್ಮ ವಾಸಸ್ಥಾನವನ್ನಾಗಿ ಮಹಾನಗರ ಇಲ್ಲವೇ ಮೆಗಾಸಿಟಿಗಳನ್ನೇ ಆಯ್ಕೆ ಮಾಡಿಕೊಂಡಿರುತ್ತಾರೆ. ಇಂಥ ದ್ವಂದ್ವಗಳುಳ್ಳ ಅನೇಕ ಸಿದ್ಧಾಂತಗಳು ನಗರ ಚರಿತ್ರೆಯ ಅಧ್ಯಯನ ಸಂದರ್ಭದಲ್ಲಿ ಕಂಡುಬರುತ್ತವೆ. ಇಂಥ ಸಿದ್ಧಾಂತಗಳಿಂದ ಸಮಸ್ಯೆಗಳಿಗೆ ಸಮರ್ಪಕ ಉತ್ತರವನ್ನು ಕಂಡುಹಿಡಿಯಲು ಸಾಧ್ಯವಿಲ್ಲ. ನಗರ ಪ್ರದೇಶಗಳ ತಲಸ್ಪರ್ಶಿ ಅಧ್ಯಯನ ಕೈಗೊಂಡಾಗ ಮಾತ್ರ ಅಲ್ಲಿನ ನಿಜವಾದ ಸಮಸ್ಯೆಗಳು ಬೆಳಕಿಗೆ ಬರಲು ಸಾಧ್ಯ. ಆಧುನಿಕತೆ ಮತ್ತು ಸಾಂಪ್ರದಾಯಿಕತೆಗಳು ಗ್ರಾಮ ಮತ್ತು ನಗರ ಇವುಗಳನ್ನು ಪರಸ್ಪರ ವಿರುದ್ಧ ದಿಕ್ಕಿನಲ್ಲಿಟ್ಟು ನೋಡುವ ಬದಲು ಪರಸ್ಪರ ಸಂಬಂಧಗಳ ಹಿನ್ನೆಲೆಯಲ್ಲಿ ನೋಡುವುದು ಹೆಚ್ಚು ಸೂಕ್ತ ಎಂದೆನಿಸುತ್ತದೆ.

ಶ್ಯಾಮಾಚರಣ ದುಬೆ ಅವರು ತಮ್ಮ ಇಂಡಿಯನ್ ಸೊಸೈಟಿ (ನವದೆಹಲಿ ೧೯೯೦) ಗ್ರಂತದಲ್ಲಿ ನಗರ ಮತ್ತು ಗ್ರಾಮಗಳ ನಡುವಿನ ಸಂಬಂಧಗಳು ಹಾಗೂ ಅವುಗಳ ವ್ಯಾಖ್ಯಾನವನ್ನು ನೀಡಿದ್ದಾರೆ. ಅವರು ಜನಗಣತಿಯ ಆಧಾರದ ಮೇಲೆ ಇಪ್ಪತ್ತನೆಯ ಶತಮಾನದ ನಗರಗಳನ್ನು ವ್ಯಾಖ್ಯಾನಿಸಿದ್ದಾರೆ. ಅವರ ಪ್ರಕಾರ,

ಒಂದು ಪ್ರದೇಶ ನಗರಪ್ರದೇಶ ಎಂಬ ಅರ್ಹತೆ ಪಡೆಯಬೇಕಾದರೆ ಮುನಿಸಿಪಲ್ ಕಾರ್ಪೋರೇಷನ್, ಮುನಿಸಪಲ್ ಪ್ರದೇಶಗಳು, ನಗರ ಸಂಸ್ಥೆಗಳಿಗೆ ಸೇರಿದ ಪ್ರದೇಶಗಳು, ಸೂಚಿತ ಪ್ರದೇಶಗಳು ಅಥವಾ ಕಂಟೋನ್ಮೆಂಟ್ ಮಂಡಲಿಗಳು ಇರಬೇಕಲ್ಲದೆ ಐದು ಸಾವಿರ ಅಥವಾ ಅದಕ್ಕಿಂತ ಹೆಚ್ಚು ಜನರು ವಾಸ ಮಾಡುತ್ತಿರಬೇಕು.

ದುಬೆ ಅವರು ನಗರ ಪ್ರದೇಶಗಳ ವಿವಿಧ ಹಂತಗಳನ್ನು ಜನಸಂಖ್ಯೆಯ ಆಧಾರದ ಮೇಲೆ ಈ ರೀತಿ ಗುರುತಿಸಿದ್ದಾರೆ; ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪ್ರದೇಶ-ಪಟ್ಟಣ, ಒಂದು ಲಕ್ಷದಿಂದ ಹತ್ತು ಲಕ್ಷದವರೆಗೆ ಜನಸಂಖ್ಯೆ ಇರುವ ಪ್ರದೇಶ-ನಗರ, ಹತ್ತು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪ್ರದೇಶ-ಮಹಾನಗರ. ಜನಸಂಖ್ಯೆಯನ್ನು ಆಧಾರವನ್ನಾಗಿಟ್ಟು ಕೊಂಡು ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ನಗರ ಪ್ರದೇಶದ ವ್ಯಾಖ್ಯಾನ ಯಾವ ರೀತಿ ಇತ್ತು ಎನ್ನುವ ಕುರಿತು ಡೆಮೋಗ್ರಾಫಿಕ್ ಈಯರ್ ಬುಕ್ ಮಾಹಿತಿ ನೀಡುತ್ತದೆ. ಜನಸಂಖ್ಯೆಯ ಆಧಾರದ ಮೇಲಿನ ನಗರ ವ್ಯಾಖ್ಯಾನ ದೇಶದಿಂದ ದೇಶಕ್ಕೆ ಭಿನ್ನವಾಗಿರುವುದು ಈ ಪುಸ್ತಕದಿಂದ ಕಂಡುಬರುತ್ತದೆ.

ಭಾರತದಲ್ಲಿ ಎಸ್.ನೂರುಲ್ ಹಸನ್ ಅವರ ನೇತೃತ್ವದಲ್ಲಿ ಅರ್ಬನ್ ಹಿಸ್ಟರಿ ಗ್ರೂಪ್ ಎನ್ನುವ ಸಂಸ್ಥೆಯೊಂದು ೧೯೭೮ ರಲ್ಲಿ ಹುಟ್ಟಿಕೊಂಡಿತು. ೧೯೭೯ ರಲ್ಲಿ ಈ ಸಂಸ್ಥೆಗೆ ‘ಅರ್ಬನ್ ಹಿಸ್ಟರಿ ಅಸೋಸಿಯೇಶನ್ ಆಫ್ ಇಂಡಿಯಾ’ ಎನ್ನುವ ಹೆಸರನ್ನು ಇಡಲಾಯಿತು. ನೂರುಲ್ ಹಸನ್ ಈ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದರು. ಸಮಾಜ ವಿಜ್ಞಾನಗಳಿಗೆ ಸಂಬಂಧಿಸಿದ ಅನೇಕ ವಿದ್ವಾಂಸರು ಈ ಸಂಸ್ಥೆಯ ಸದಸ್ಯರಾದರು. ಸಂಸ್ಥೆಯು ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್, ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್ ಮತ್ತು ಇಂಡಿಯನ್ ಹಿಸ್ಟರಿ ಕಾಂಗ್ರೆಸ್‌ಗಳ ಸಹಯೋಗದೊಂದಿಗೆ ಅನೇಕ ಉಪನ್ಯಾಸಗಳು, ಕಮ್ಮಟಗಳು ಹಾಗೂವಿಚಾರ ಸಂಕಿರಣಗಳನ್ನು ಆಯೋಜಿಸಿದೆ. ಈ ಸಂಸ್ಥೆಯ ಕೆಲಸ ಕಾರ್ಯಗಳು ನಗರ ಚರಿತ್ರೆಯ ಅಧ್ಯಯನಕ್ಕೆ ಹೊಸ ಆಯಾಮವನ್ನು ನೀಡಿವೆ. ಈ ರೀತಿಯಾಗಿ ನಗರ ಚರಿತ್ರೆಗೆ ಸಂಬಂಧಿಸಿದಂತೆ ಪ್ರಪಂಚದಾದ್ಯಂತ ವಿವಿಧ ಅಧ್ಯಯನ ಶಿಸ್ತುಗಳಿಗೆ ಸಂಬಂಧಿಸಿದ ವಿದ್ವಾಂಸರು ಹಾಗೂ ಸಂಘ ಸಂಸ್ಥೆಗಳು ಕೆಲಸ ಮಾಡುತ್ತಿದ್ದು, ವಿವಿಧ ಸಿದ್ಧಾಂತಗಳು ರೂಪುಗೊಂಡವು. ಆರಂಬದಲ್ಲಿ ನಗರ ಚರಿತ್ರೆ ಅಧ್ಯಯನವು ಚರಿತ್ರೆ ಬರವಣಿಗೆಯಲ್ಲಿಯೇ ತುಂಬಾ ನಿರ್ಲಕ್ಷ್ಯಕ್ಕೆ ಒಳಪಟ್ಟ ವಿಷಯವಾಗಿತ್ತು. ಆದರೆ ಒಂದು ಸಮಾಜದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಅರ್ಥೈಸಿಕೊಳ್ಳಲು ನಗರ ಚರಿತ್ರೆಯ ಅಧ್ಯಯನ ಅನಿವಾರ್ಯವಾದಾಗ ಅದೊಂದು ಹೊಸ ಅಧ್ಯಯನ ಶಿಸ್ತಾಗಿ ರೂಪುಗೊಂಡಿತು.

* * *

ಯಾವುದೇ ಒಂದು ದೇಶದ ಚರಿತ್ರೆಯನ್ನು ಅಧ್ಯಯನ ನಡೆಸುವಾಗ ಅಲ್ಲಿನ ಗ್ರಾಮ ಹಾಗೂ ನಗರ ವ್ಯವಸ್ಥೆಗಳು ಬಹುಮುಖ್ಯವಾದ ವಿಚಾರಗಳಾಗಿ ಕಂಡುಬರುತ್ತವೆ. ಪ್ರಪಂಚದ ಪ್ರತಿಯೊಂದು ದೇಶವೂ ಈ ಎರಡೂ ಬಗೆಯ ಅನುಭವಗಳಿಗೆ ಒಳಗಾಗಿ ಆ ಮೂಲಕ ತಮ್ಮ ಅಸ್ತಿತ್ವವನ್ನು ಕಂಡುಕೊಂಡಿರುವುದು ವಾಸ್ತವ ಸಂಗತಿ. ನಗರ ಚರಿತ್ರೆಯನ್ನು ಅಧ್ಯಯನ ನಡೆಸಬೇಕಾಗಿರುವುದು ಗ್ರಾಮ ಹಾಗೂ ನಗರ ಎನ್ನುವ ಎರಡು ಘಟಕಗಳನ್ನು ಪ್ರತ್ಯೇಕಿಸಿ ನೋಡುವ ಕಾರಣಕ್ಕಾಗಿ ಅಲ್ಲ. ಈ ಎರಡೂ ವ್ಯವಸ್ಥೆಗಳು ಒಂದಕ್ಕೊಂದು ಪೂರಕವಾಗಿ ದೇಶದ ಅಭಿವೃದ್ಧಿಗೆ ಹೇಗೆ ಕಾರಣವಾಗಿವೆ ಎನ್ನುವುದನ್ನು ಅರ್ಥೈಸಿಕೊಳ್ಳಲು ನಗರ ಚರಿತ್ರೆ ಅಧ್ಯಯನ ಅತ್ಯಾವಶ್ಯಕ. ನಗರಗಳನ್ನು ನಾಗರಿಕ, ಆಧುನಿಕ ಅಥವಾ ಕೈಗಾರಿಕಾ ಎನ್ನುವ ಹಿನ್ನೆಲೆಯಿಂದ ಹಾಗೂ ಗ್ರಾಮಗಳನ್ನು ಅನಾಗರಿಕ ಹಾಗೂ ಸಾಂಪ್ರದಾಯಿಕ ಎನ್ನುವ ಹಿನ್ನೆಲೆಯಿಂದ ಅಧ್ಯಯನ ನಡೆಸಿರುವುದನ್ನು ಕಾಣಬಹುದಾಗಿದೆ. ಇದನ್ನು ಯುರೋಪ್‌ ಕೇಂದ್ರಿತ ಅಧ್ಯಯನ ಕ್ರಮ ಎಂಬುದಾಗಿ ವಿಮರ್ಶಿಸಲಾಗಿದೆ. ಏಷ್ಯಾ, ಆಫ್ರಿಕಾ ಹಾಗೂ ಲ್ಯಾಟಿನ್ ಅಮೆರಿಕದ ದೇಶಗಳನ್ನು ಯುರೋಪಿನ ವಿದ್ವಾಂಸರು ಈ ವಿಂಗಡನೆಯ ಮೂಲಕವೇ ಅಧ್ಯಯನ ನಡೆಸಿದರು. ವಸಾಹತುಶಾಹಿ ಆಳ್ವಿಕೆಯನ್ನು ಸ್ಥಾಪಿಸುವುದಕ್ಕೆ ಯುರೋಪಿಗೆ ಈ ವಿಧಾನ ಅನಿವಾರ್ಯವಾಗಿತ್ತು. ಗ್ರಾಮ ಸಮಾಜ ಹಾಗೂ ನಗರ ಸಮಾಜ ಎನ್ನುವ ವಿಂಗಡನೆ ಊಳಿಗಮಾನ್ಯ ಹಾಗೂ ಬಂಡವಾಳಶಾಹಿ ಎನ್ನುವ ಉತ್ಪಾದನಾ ವಿಧಾನದ ಚೌಕಟ್ಟಿನಲ್ಲಿಯೂ ವ್ಯಾಖ್ಯಾನಕ್ಕೊಳಗಾಯಿತು.ಪ್ರಪಂಚವನ್ನು ಕೈಗಾರಿಕ ಪ್ರಧಾನ ಹಾಗೂ ಕೃಷಿ ಪ್ರಧಾನ ಎಂಬುದಾಗಿ ವಿಂಗಡಿಸಿ, ಈ ವಿಂಗಡನೆಯನ್ನು ಆಧುನಿಕ ಹಾಗೂ ಸಾಂಪ್ರದಾಯಿಕ ಎನ್ನುವ ಸೈದ್ಧಾಂತಿಕತೆಯ ಮೂಲಕ ಸಮರ್ಥಿಸಿ, ಆ ಮೂಲಕ ವಸಾಹತುಶಾಹಿ ಆಳ್ವಿಕೆಗೆ ಭದ್ರ ಬುನಾದಿಯನ್ನು ಹಾಕಲಾಯಿತು. ಈ ಪ್ರಕ್ರಿಯೆಯಲ್ಲಿ ನಿರ್ಮಾಣಗೊಂಡ ನಗರ ಚರಿತ್ರೆ ಪೂರ್ವಾಗ್ರಹ ಪೀಡಿತವಾದದ್ದು.

ಆಧುನಿಕೋತ್ತರ ಅಥವಾ ವಸಾಹತೋತ್ತರ ಚಿಂತನೆಗಳು ಈ ಬಗೆಯ ಪೂರ್ವಗ್ರಹಗಳಿಗೆ ಒಳಗಾಗದೆ ಗ್ರಾಮ ಹಾಗೂ ನಗರಗಳನ್ನು ಆಯಾ ಸಮಯ ಹಾಗೂ ಸಂದರ್ಭದ ಚಾರಿತ್ರಿಕ ಬೆಳವಣಿಗೆಗಳ ಮೂಲಕ ನೋಡುವ ಪ್ರಯತ್ನವನ್ನು ಮಾಡಿದವು. ಪೇಟೆ-ಪಟ್ಟಣಗಳ ಹುಟ್ಟು ಹಾಗೂ ಬೆಳವಣಿಗೆ ಯಾವುದೋ ಒಂದು ಚಾರಿತ್ರಿಕ ಕಾಲಘಟ್ಟದ ಬೆಳವಣಿಗೆಯಲ್ಲ. ಅವು ನಿರಂತರ ಪ್ರಕ್ರಿಯೆಯಾಗಿರುವ ವಾಸ್ತವ ಸ್ಥಿತಿ. ಪೇಟೆ-ಪಟ್ಟಣಗಳು ಚರಿತ್ರೆಯ ಪ್ರತಿಯೊಂದು ಅವಧಿಯಲ್ಲಿಯೂ ಅಸ್ತಿತ್ವದಲ್ಲಿದ್ದವು. ಆರ್ಥಿಕತೆಯಲ್ಲಾಗುತ್ತಿದ್ದ ಬದಲಾವಣೆಗಳಿಗೆ ಅನುಗುಣವಾಗಿ ಅವುಗಳ ಸ್ವರೂಪದಲ್ಲಿ ಬದಲಾವಣೆಗಳು ಆಗುತ್ತಿದ್ದವು. ನಗರ ಅರ್ಥ ವ್ಯವಸ್ಥೆ ಕೆಲವೊಂದು ಸಂದರ್ಭದಲ್ಲಿ ಪ್ರಧಾನವಾಗಿರುತ್ತಿದ್ದರೆ ಇನ್ನು ಕೆಲವು ಸಂದರ್ಭಗಳಲ್ಲಿ ಅಧೀನ ವ್ಯವಸ್ಥೆಯಾಗಿ ಪರಿವರ್ತನೆಗಳಿಗೆ ಒಳಗಾಗುತ್ತಿತ್ತು. ಕೈಗಾರಿಕೀಕರಣದ ಮೂಲಕ ನಗರೀಕರಣವನ್ನು ಅರ್ಥೈಸಿಕೊಳ್ಳುವ ವಿಧಾನ ಆರಂಭಗೊಂಡ ನಂತರ ನಗರ ಚರಿತ್ರೆಯ ಅಧ್ಯಯನ ವಿಧಾನವೇ ಬದಲಾಗತೊಡಗಿತು. ಇದರಿಂದಾಗಿ ಬಂಡವಾಳ, ಮಾರುಕಟ್ಟೆ, ಉದ್ಧಿಮೆ, ತಂತ್ರಜ್ಞಾನ ಮುಂತಾದವೇ ಪ್ರಧಾನವಾದ ಸೈದ್ಧಾಂತಿಕತೆ ನಗರ ಚರಿತ್ರೆಯನ್ನು ಆವರಿಸಿಕೊಂಡಿತು. ಇಷ್ಟಕ್ಕೇ ನಗರ ಚರಿತ್ರೆಯನ್ನು ಸೀಮಿತಗೊಳಿಸಿಕೊಂಡರೆ ನಗರ ಕೇಂದ್ರಗಳ ಚಾರಿತ್ರಿಕ ಅಧ್ಯಯನವಾಗಲಿ ಅಥವಾ ನಗರ ಕೇಂದ್ರಗಳ ಹುಟ್ಟು, ಬೆಳವಣಿಗೆ ಹಾಗೂ ಸ್ಥಿತ್ಯಂತರಗಳ ವಿವರಗಳಾಗಲಿ ಗೋಚರವಾಗಲು ಸಾಧ್ಯವಿಲ್ಲ. ಪರಿಸರ ಚರಿತ್ರೆ, ಮಹಿಳಾ ಚರಿತ್ರೆ ಮುಂತಾದ ಹೊಸ ಚರಿತ್ರೆಗಳ ಅಧ್ಯಯನ ಮಾದರಿಯಲ್ಲಿಯೇ ನಗರ ಚರಿತ್ರೆಯನ್ನು ಅಧ್ಯಯನ ನಡೆಸಬೇಕಾಗುತ್ತದೆ. ಹಾಗಾದಾಗ ಮಾತ್ರ ಚರಿತ್ರೆಯ ಬಹುತ್ವದ ನೆಲೆಗಳನ್ನು ಗುರುತಿಸಲು ಹಾಗೂ ಅರ್ಥೈಸಿಕೊಳ್ಳಲು ಸಾಧ್ಯವಾಗುವುದು.

ಪರಾಮರ್ಶನ ಗ್ರಂಥಗಳು

೧. ಇಂದು ಬಂಗಾ, ೧೯೮೧. ಸ್ಟಡೀಸ್ ಇನ್ ಅರ್ಬನ್ ಹಿಸ್ಟರಿ, ನವದೆಹಲಿ.

೨. ಗೋರ್ಡನ್ ಚೈಲ್ಡ್ ವಿ. ಏಪ್ರಿಲ್ ೧೯೫೦. “ದಿ ಅರ್ಬನ್ ರೆವಲ್ಯೂಷನ್”, ದಿ ಟೌನ್ ಪ್ಲಾನಿಂಗ್ ಜರ್ನಲ್, xxi, ಲಿವರ್‌ಪೂಲ್.

೩. ಘೋಷ್ ಎ., ೧೯೭೩. ದಿ ಸಿಟಿ ಇನ್ ಅರ‍್ಲಿ ಹಿಸ್ಟಾರಿಕಲ್ ಇಂಡಿಯಾ, ಸಿಮ್ಲಾ.

೪. ಡೇವಿಸ್ ಕಿಂಗ್‌ಸ್ಲೀ, ೧೯೬೯. ವರ್ಲ್ಡ್ ಅರ್ಬನೈಸೇಷನ್, ಕ್ಯಾಲಿಫೋರ್ನಿಯಾ.

೫. ಪೆರ‍್ರಿಭಾನ್ ಎ ಮತ್ತು ಫೆರ‍್ರಿ ಎರ‍್ನಾಕೆ., ೧೯೯೩. “ದಿ ಸೋಶ್ಯಲ್ ವೆಬ್”, ಕಾಂಟ್ರಿಬ್ಯೂಷನ್ ಟು ಸೋಶ್ಯಾಲಜಿ, ನ್ಯೂಯಾರ್ಕ್.

೬. ಬ್ಲಾಕ್ ಮಾರ್ಕ್, ೧೯೬೧. ಪ್ಯೂಡಲ್ ಸೊಸೈಟಿ, ಲಂಡನ್.

೭. ರಾಬರ್ಟ್ ಆಡಮ್, ೧೯೮೪. ದಿ ಇವಲ್ಯೂಷನ್‌ ಆಫ್ ಅರ್ಬನ್ ಸೊಸೈಟಿ.

೮. ವಿಜಯಕುಮಾರ್ ಟಕೂರ್, ೧೯೮೧. ಅರ್ಬನೈಸೇಷನ್ ಇನ್ ಏನ್ಸಿಯೆಂಟ್ ಇಂಡಿಯಾ, ನವದೆಹಲಿ.

೯. ಶರ್ಮ ಆರ್.ಎಸ್., ೧೯೮೭. ಅರ್ಬನ್ ಡಿಕೇ, ನವದೆಹಲಿ.

೧೦. ಹಿಲ್ಟನ್ ರೋಡ್ನಿ, ೧೯೭೮. ಟ್ರಾನ್ಸಿಷನ್ ಫ್ರಮ್ ಫ್ಯೂಡಲಿಸಮ್ ಟು ಕ್ಯಾಪಿಟಾಲಿಸಮ್, ಲಂಡನ್: ವರ್ಸೋ.

* * *