‘ಮೌಖಿಕ ಇತಿಹಾಸ’ದ ವ್ಯಾಖ್ಯೆಗೆ ಮೊದಲು ಮೌಖಿಕ ಎಂಬುದರ ಬಗ್ಗೆ ಪರಿಶೀಲಿಸುವ. ಮೌಖಿಕ, ಮೌಖಿಕತೆ, ಬಾಯಿಮಾತು, ತೋಂಡಿ ಎಂಬ ಈ ಶಬ್ದಗಳು ಭಾಷಾ ವಿಜ್ಞಾನದ ದೃಷ್ಟಿಯಲ್ಲಿ ಅತ್ಯಂತ ಪ್ರಮುಖವಾದವು. ಹಾಗೆಯೇ ಜಾನಪದದಲ್ಲಂತೂ ಇನ್ನೂ ವಿಶಿಷ್ಟವಾದವು. ಈ ಪದಗಳ ವಾಚ್ಯಾರ್ಥ ಸೀಮಿತವೆನಿಸಿದರೂ ಅವು ಅಂತರ‍್ಗತಿಸಿ ಕೊಂಡಿರುವ ಬಹುರೂಪಿ ವಿಶಾಲಾರ್ಥವು ಬಯಲನ್ನು ಆವರಿಸುವಂತಹದ್ದು. ಧ್ವನಿತಾರ್ಥದಿಂದ ಮೌಖಿಕತೆಯನ್ನು ಗಮನಿಸಿದರೆ, ಅದರ ಅರ್ಥವು ತನ್ನ ಅಸ್ತಿತ್ವವನ್ನು ಬಹುರೂಪಿಯಾಗಿ ವ್ಯಕ್ತಪಡಿಸುವ ಭಾಷಿಕ ಸ್ವಭಾವ ಎಂದಾಗುತ್ತದೆ. ಘನವಾದ ಅರ್ಥದಲ್ಲಿ ಬಿಂಬಿಸುವುದಾದರೆ ಅದು ಸಾಂಸ್ಕೃತಿಕ ಪ್ರವೃತ್ತಿ. ಇಂತಹ ಭಾಷಿಕ ಹಾಗೂ ಸಾಂಸ್ಕೃತಿಕ ಸ್ವಭಾವ-ಪ್ರವೃತ್ತಿಗಳೆರಡೂ ಕೂಡಿಯೇ ಅವರವರ ಅಸ್ತಿತ್ವವನ್ನು ವ್ಯಕ್ತಪಡಿಸುವ ನಿರೂಪಣೆಗಳಾಗಿ ಮೌಖಿಕ ಆಕೃತಿಯನ್ನು ಪಡೆಯುವುದು. ಪರಂಪರೆಯನ್ನು ಪುನರ್‌ಸೃಷ್ಟಿಸುವ ಹಾಗೆಯೇ ಅದನ್ನು ಸಂವಹನ ಮಾಡುತ್ತಲೇ ನಿರಂತರಿಸುವ ಕ್ರಿಯೆಯನ್ನು ಮೌಖಿಕತೆಯು ಮಾಡುತ್ತಲೇ ಇರುತ್ತದೆ. ಈ ಬಗೆಯ ನಿರೂಪಣೆಗಳು ಸಮುದಾಯಗಳು ಎದುರುಗೊಳ್ಳುವ ಕಾಲದ ಬೇರೆ ಬೇರೆ ಅವಸ್ಥೆಗಳನ್ನೆಲ್ಲ ಮೌಖಿಕವಾಗಿಯೇ ಪುನರ್ ಅಭಿನಯಸುತ್ತಿರುತ್ತವೆ.

ಇಂತಹ ಅರ್ಥಗಳನ್ನೆಲ್ಲ ಸರಳಗೊಳಿಸಿಕೊಳ್ಳುವುದಾದರೆ, ಮೌಖಿಕತೆಯು ನುಡಿಯ ಸಂಭ್ರಮ; ಮಾತಿನ ಬೆಡಗು; ವ್ಯಕ್ತಪಡಿಸುವ ತುಡಿತ; ಹಾಡುವ ಹಂಬಲ; ಹೇಳುವ ಅನಿವಾರ್ಯತೆ; ಮುಟ್ಟುವ ಬಯಕೆ; ತೆರೆದುಕೊಳ್ಳುವ ಬಗೆ; ಮೌನವನ್ನು ಧ್ವನಿಸುವ ಕ್ರಿಯೆ; ಆನಂದ ಮತ್ತು ಆಕ್ರಂಧನದ ಕೂಗು. ಇಂತಹ ಬಿಡಿಬಿಡಯಾದ ಎಲ್ಲ ಅರ್ಥಗಳು ಬೆಸುಗೆಯಾಗುವ ಬೃಹತ್ ವಿಮೋಚನೆಯ ಅಭಿವ್ಯಕ್ತಿ. ಜನಪದರು ಲೌಕಿಕದ ಜೊತೆಗೆ ನುಡಿಯುತ್ತಲೇ ಅಲೌಕಿಕತೆಯ ಜೊತೆಗೆ ದಿವ್ಯವಾದ ಸಂವಾದವನ್ನು ಕೂಡ ಮೌಖಿಕತೆಯ ಒಳಗೆಯೇ ಸಾಧಿಸಿಕೊಂಡಿದ್ದಾರೆ. ಹೀಗಾಗಿಯೇ ಮೌಖಿಕತೆಯು ಬಹುರೂಪಿ ಸಂಕೀರ್ಣತೆಯ ಅರ್ಥಸಾಧ್ಯತೆಗಳ ಸಂಯುಕ್ತ ಧ್ವನಿ. ಅದು ಕೇವಲ ಬಾಯಿಂದ ಬಾಯಿಗೆ ಸಾಗಿಬಂದ ಹಳೆಯ ನುಡಿ ಮಾತ್ರವೇ ಅಲ್ಲ (ಪರಮಶಿವಯ್ಯ ೧೯೮೪: ೪೮).

ಈ ಬಗೆಯ ಅರ್ಥ ಸಂಬಂಧಗಳಿಂದ ಮೌಖಿಕ ಇತಿಹಾಸದ ವ್ಯಾಖ್ಯಾನ ಮಾಡಬಹುದು. ಇತಿಹಾಸದ ಹೊರಗಿದ್ದವರ ಇತಿಹಾಸ ಸಿದ್ಧಮಾದರಿಯ ಲಿಖಿತ ಇತಿಹಾಸದ ಹಂಗಿಗೆ ಒಳಪಟ್ಟಿರುವುದಿಲ್ಲ. ಹೀಗಾಗಿಯೇ ಮೌಖಿಕ ಇತಿಹಾಸದ ಪ್ರತಿ ಹಂತವನ್ನು ಹೊಸದಾಗಿ ಸಂರಚಿಸಿಕೊಳ್ಳುತ್ತಲೇ ಜನಪದ ಪರಂಪರೆಯ ಮೌಖಿಕ ವಿವರಗಳನ್ನೆಲ್ಲ ಸಮಗ್ರವಾಗಿ ಗ್ರಹಿಸಿ ಚಿಂತಿಸಬೇಕಾಗುತ್ತದೆ. ಅಂತಹ ಪುಟ್ಟ ಯತ್ನವಾಗಿ ಮೌಖಿಕ ಇತಿಹಾಸವನ್ನು ಕೆಳಗಿನಂತೆ ಭಾವಿಸಬಹುದು.

ಸಮುದಾಯಗಳ ಸಾಂಸ್ಕೃತಿಕ ಆತ್ಮಕಥನವೇ ಮೌಖಿಕ ಇತಿಹಾಸ. ಜನಪದರು ತಮ್ಮ ಅಸ್ತಿತ್ವದ ಮೂಲನೆಲೆಗಳನ್ನು ಮತ್ತು ನಡೆದುಬಂದ ದಾರಿಯನ್ನು ಸಾಂಸ್ಕೃತಿಕ ನಿರೂಪಣೆಗಳ ಮೂಲಕ ಬಹುರೂಪಿಯಾಗಿ ಕಟ್ಟಿಕೊಳ್ಳುತ್ತಲೇ ಬಂದಿದ್ದಾರೆ. ಸಮಷ್ಟಿಯಾದ ಸುಪ್ತ ಪ್ರಜ್ಞೆಯಲ್ಲಿ ಮೌಖಿಕತೆಯು ರೂಪುಗಂಡು ಸಾಮಾಜಿಕವಾದ ಆಯಾಮವನ್ನು ಪಡೆದುಕೊಂಡಿರುತ್ತದೆ (ಗಣೇಶ್‌ ೨೦೦೬: ೧೩೪). ಹೀಗಾಗಿಯೇ ಮೌಖಿಕ ಚರಿತ್ರೆಯು ಆಯಾ ಸಮುದಾಯದ ಅಸ್ತಿತ್ವದ ಜೊತೆಗೆ ಅವರ ಚಹರೆಯನ್ನು ಹೇಳುತ್ತಿರುತ್ತದೆ. ತಳಸಮುದಾಯಗಳು ತಮ್ಮ ಇರುವಿಕೆಯನ್ನು ಸಮರ್ಥಿಸಿಕೊಳ್ಳುವುದು ಇಂತಹ ಚಹರೆಗಳಿಂದಲೇ. ಇದು ಸಾಂಸ್ಕೃತಿಕವಾದ ಪ್ರವೃತ್ತಿಯಿಂದ ಉಂಟಾಗುವ ಕಥನ. ಈ ಕಥನವು ನೆನಪುಗಳ ಮೂಲಕ ಸದಾ ರೂಪಾಂತರಗೊಳ್ಳುವ ಬಹುರೂಪಿ ಪ್ರಜ್ಞೆ. ಕಾಲಾತೀತವಾದ ಸ್ವಭಾವದಲ್ಲಿ ಸಾಗುವ ಮೌಖಿಕ ನಿರೂಪಣೆಗಳು ಅಂತಃಸಾಕ್ಷಿಯ ಮೂಲಕ ವರ್ತಮಾನದ ಜೊತೆಗೆ ಪ್ರತಿಕ್ರಿಯಿಸುತ್ತವೆ. ಆದರೆ ವರ್ತಮಾನದ ಯಾವುದೇ ಸಂಗತಿಗಳನ್ನೂ ಮೌಖಿಕ ಇತಿಹಾಸವು ನೇರವಾಗಿ ಪ್ರಶ್ನಿಸುವುದಿಲ್ಲ. ವರ್ತಮಾನದಲ್ಲಿ ಇದ್ದೂ ಇಲ್ಲದಂತೆ, ಗತಕಾಲದಲ್ಲಿ ಮುಳುಗಿಯೂ ಅದರಿಂದ ತಪ್ಪಿಸಿಕೊಂಡಂತೆ ಹಾಗೂ ಭವಿಷ್ಯತ್‌ಕಾಲಕ್ಕೆ ಧ್ಯಾನಿಸಿದಂತೆ ಕಂಡರೂ ಆ ಮೂರನೆಯ ಕಾಲದ ಹಂಗನ್ನೂ ತೊರೆದುಕೊಳ್ಳುವಂತೆ ಮೌಖಿಕ ಕಥನಗಳು ಚರಿತ್ರೆಯ ಗಡಿಗಳನ್ನು ದಾಟಿಬಿಟ್ಟಿರುತ್ತವೆ. ಇದರಿಂದಾಗಿಯೇ ಕಾಲಾತೀತ ಪ್ರಜ್ಞೆಯ ನಿರೂಪಣೆಯಾಗಿ ಮೌಖಿಕ ಇತಿಹಾಸವು ವರ್ತಿಸುತ್ತಿರುತ್ತದೆ.

ಇಂತಹ ಸ್ಥಿತಿಯಲ್ಲಿ ಮೌಖಿಕ ಇತಿಹಾಸವು ಸಾಮಾಜಿಕ ಸಂಬಂಧವನ್ನು ಪುರಾಣವಾಗಿಸುವ ಹಾಗೂ ಗತಕಾಲವನ್ನು ಸಮಕಾಲೀನಗೊಳಿಸುವ ಕೆಲಸವನ್ನು ಮಾಡುತ್ತಿರುತ್ತದೆ. ಇದು ಬಹಳ ವಿಶೇಷಾದ ಸಂಗತಿ. ಚರಿತ್ರೆ ಎಂದರೆ ಗತಕಾಲದ ಪಾಠ ಎಂದು ಭಾವಿಸುವುದನ್ನು ಮೌಖಿಕ ನಿರೂಪಣೆಗಳು ಅಲ್ಲಗಳೆಯುತ್ತವೆ. ಚರಿತ್ರೆ ಇರುವುದು ಗತಕಾಲದಲ್ಲಲ್ಲ. ಇತಿಹಾಸವು ನಿರೂಪಿತವಾಗುವುದು ವರ್ತಮಾನದ ಗ್ರಹಿಕೆಯಿಂದಲೇ ಮತ್ತು ನಾವು ಬದುಕಿರುವ ಕಾಲದ ಒತ್ತಡಗಳಿಂದಲೇ ಎಂಬುದನ್ನು ಮೌಖಿಕ ಇತಿಹಾಸವು ಧ್ವನಿಸುತ್ತದೆ (ಗಣೇಶ್, ೧೯೯೭:೭೨). ಇಲ್ಲಿ ಏಕಕಾಲಕ್ಕೆ ಮೌಖಿಕ ಇತಿಹಾಸವು ಕಾಲದ ಮೂರು ಹಂತಗಳನ್ನು ಸಂಯೋಗಿಸಿಕೊಂಡು ಕಾಲಾತೀತವಾಗುವ ಹಂಬಲವನ್ನು ವ್ಯಕ್ತಪಡಿಸುತ್ತಿರುತ್ತದೆ. ಹೀಗೆ ಕಾಲದ ಹಂಗಿಲ್ಲದ ಕಥನವು ಚರಿತ್ರೆಯಾಗುವುದು ಹೇಗೆ ಸಾಧ್ಯ ಎಂಬ ಸಮಸ್ಯೆ ಎದುರಾಗುವುದು ಸಹಜ. ಕಾಲಬದ್ಧವಾದ ಚರಿತ್ರೆಯ ಹೊರಗಿನ ಚರಿತ್ರೆಯು ಕಾಲದ ನಿಯಂತ್ರಣಗಳನ್ನು ಮೀರಿರುತ್ತದೆ. ಹೀಗೆ ಮೀರುವುದು ಮೌಖಿಕ ಪರಂಪರೆಗೆ ಅನಿವಾರ್ಯ. ತನ್ನ ಕಾಲಕ್ಕೆ ಬದ್ಧವಾಗಿ ಅದು ತನ್ನ ನಿರೂಪಣೆಗಳನ್ನು ಮಾಡಿದ್ದೇ ಆದರೆ ಅದರ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ. ಯಾಜಮಾನ್ಯ ಕಥನಗಳ ಮುಂದೆ, ಪ್ರಭುತ್ವದ ಸಾಕ್ಷಿಯ ಎದುರು, ಲಿಖಿತ ಆಧಾರಗಳ ಶ್ರೇಷ್ಠ ಮಾನದಂಡಗಳ ಇಕ್ಕಟ್ಟಿನ ನಡುವೆ ಮೌಖಿಕತೆಯು ತನಗೆ ಬೇಕಾದ ಬೇರೊಂದು ಬಗೆಯ ಅಭಿವ್ಯಕ್ತಿಯನ್ನು ಹುಡುಕಿಕೊಳ್ಳುವಾಗಲೆಲ್ಲ ರಮ್ಯಮಾಂತ್ರಿಕ ಆಶಯಗಳ ಕಡೆಗೆ ಹಾರಿಬಿಡುತ್ತದೆ.

ರಮ್ಯಮಾಂತ್ರಿಕ ನಿರೂಪಣೆಗೆ ಕೇವಲ ಚರಿತ್ರೆಯೇ ದೊಡ್ಡ ಸಂಗತಿಯಲ್ಲ. ಮೌಖಿಕ ಪರಂಪರೆಯು ಯಾವಾಗಲೂ ಚರಿತ್ರೆಯನ್ನು ಬಚ್ಚಿಡುವುದರಲ್ಲಿ ತೊಡಗಿರುತ್ತದೆ. ಯಾಜಮಾನ್ಯ ಕಥೆಗಳು ಸಾಕ್ಷಿಯ ಗರ್ವದಲ್ಲಿ ಲಿಖಿತ ಚೌಕಟ್ಟುಗಳನ್ನು ಸಾಮ್ರಾಜ್ಯದ ನಿರ್ದೇಶನದಂತೆ ರೂಪಿಸಿಕೊಂಡು ನಿಜವಾದ ಸಾಕ್ಷಿಪ್ರಜ್ಞೆಯ ಮೇಲೆ ದಾಳಿ ಮಾಡುವಾಗ, ಜನಪದರು ವರ್ತಮಾನದ ಬಗ್ಗೆ ಮೌನವಹಿಸಿ ಮಾಂತ್ರಿಕರಮ್ಯತೆಯನ್ನು ಆವಾಹಿಸಿಕೊಂಡು ಸಾಂಸ್ಕೃತಿಕವೀರರ ಮೂಲಕ ತಮ್ಮ ಆತ್ಮಕಥನಗಳನ್ನು ನಿರೂಪಿಸಿದ್ದಾರೆ. ಇದರಿಂದಲೇ ಮೌಖಿಕ ಇತಿಹಾಸವು ವರ್ತಮಾನದ ಯಾವ ನಿರ್ದಿಷ್ಟ ಪ್ರಶ್ನೆಗೂ ಮುಖಮಾಡದೆ ಅದರ ಆಚೆಗೆ ವಿಹರಿಸಿ ವರ್ತಮಾನವನ್ನು ಮರೆಯುವುದರ ಮೂಲಕವೇ ವರ್ತಮಾನವನ್ನು ನೆನಪಿಸುತ್ತದೆ. ಇದು ಅವರಿಗಿದ್ದ ಅಭಿವ್ಯಕ್ತಿಯ ಸಾಂಸ್ಕೃತಿಕ ಹಾಗೂ ಚಾರಿತ್ರಿಕ ಇಕ್ಕಟ್ಟು. ವರ್ತಮಾನವನ್ನು ಮರೆತು ಅವು ಹೇಗೆ ವರ್ತಮಾನವನ್ನು ನೆನಪಿಸಬಲ್ಲವು ಎಂಬ ಪ್ರಶ್ನೆ ಅನೇಕರಿಗೆ ಎದುರಾಗಬಹುದು. ತನ್ನ ಬಗ್ಗೆ ಏನೊಂದನ್ನೂ ಹೇಳಿಕೊಳ್ಳದೆ, ತನ್ನ ಕಾಲದ ಸಂಗತಿಗಳ ಬಗ್ಗೆ ಮೌನವಹಿಸಿ ಗತಕಾಲವನ್ನು ಮಾತ್ರವೇ ಮೈದುಂಬಿಕೊಳ್ಳುವುದು ಅಸಾಮಾನ್ಯ ವರ್ತನೆ. ಸಾಮ್ರಾಜ್ಯಗಳ ವರ್ತಮಾನವನ್ನು ಮರೆತು ತಳಸಮುದಾಯಗಳು ತಮ್ಮ ಗತಕಾಲವನ್ನು ತಾವೇ ರೂಪಿಸಿಕೊಂಡ ಸಾಂಸ್ಕೃತಿಕವೀರರ ಮೂಲಕ ನಿರೂಪಿಸುತ್ತ ಆ ಮೂಲಕ ವರ್ತಮಾನಕ್ಕೆ ಪ್ರತಿಕ್ರಯಿಸುತ್ತಿರುತ್ತವೆ. ವರ್ತಮಾನಕ್ಕೆ ತಮ್ಮ ಗತಕಾಲವನ್ನು ಹೀಗೆ ಎದುರುಮಾಡಿ ತಮ್ಮ ಸ್ಥಿತಿಯನ್ನು ಪ್ರತಿಬಿಂಬಿಸುವ ರೀತಿಯು ಸಾಮಾನ್ಯವಾದುದಲ್ಲ. ಹೀಗೆ ಸ್ವಭಾವದಲ್ಲಿ ಮೌಖಿಕ ಇತಿಹಾಸವು ಕಾಲದ ಗಡಿಗಳಿಂದ ವಿಮುಕ್ತವಾಗಲು ತೊಡಗಿರುತ್ತದೆ.

ಈ ಮೇಲೆ ಹೇಳಿದ ಮಾತುಗಳನ್ನೆಲ್ಲ ಬಿಡಿಸಿ ಹೇಳಲು ಪ್ರಯತ್ನಿಸುವೆ. ಮೌಖಿಕ ಇತಿಹಾಸವು ವರ್ತಮಾನಕ್ಕೆ ವಿಮುಖವಾಗಿದ್ದು ಗತಕಾಲಕ್ಕೆ ಮುಖಮಾಡಿರುತ್ತದೆ. ಅಂದರೆ ಗತದ ಮೂಲಕ ವರ್ತಮಾನವನ್ನು ಮೀರುತ್ತಿರುತ್ತದೆ. ಚರಿತ್ರೆ ಹೀಗೆ ಗತದಿಂದ ವರ್ತಮಾನಕ್ಕೆ ಬರುವ ಪ್ರಕ್ರಿಯೆಯು ಮೌಖಿಕ ನಿರೂಪಣೆಗಳಲ್ಲಿ ಬಹಳ ಸಹಜ. ಇದು ಚರಿತ್ರೆಯನ್ನು ಜೀವಂತಗೊಳಿಸುವ ವಿಧಾನ. ಗತವನ್ನು ವರ್ತಮಾನಕ್ಕೆ ಎದುರಾಗಿ ಮಂಡಿಸುವುದೇ ಆತ್ಯಂತಿಕವಾಗಿ ಅದು ತನ್ನ ಸಮಕಾಲೀನತೆಗೆ ಪ್ರತಿರೋಧವನ್ನು ತೋರಲು ಇಂತಹ ಪ್ರತಿರೋಧವು ರಮ್ಯಮಾಂತ್ರಿಕ ಸ್ವಭಾವವನ್ನು ಹೊಂದಿರುತ್ತದೆ. ರಮ್ಯಮಾಂತ್ರಿಕ ನಿರೂಪಣೆಯು ಇತಿಹಾಸವನ್ನು ಆಚರಿಸುತ್ತದೆಯೇ ವಿನಹ ಅದನ್ನು ಮರೆಯುವುದಿಲ್ಲ. ಗತಕಾಲವನ್ನು ವರ್ತಮಾನದ ಜೊತೆಗಿನ ಮುನಿಸಿನಿಂದ ಮೌನದಿಂದ ಪುನರ್ ಸೃಷ್ಟಿಸಿದಾಗಲೆಲ್ಲ ಆಯಾ ಜನಪದದ ಇತಿಹಾಸವು ವಸ್ತುನಿಷ್ಠತೆಗಿಂತಲೂ ಮುಖ್ಯವಾಗಿ ಭಾವನಿಷ್ಠವಾಗಿ ಆಕಾರ ಪಡೆಯುತ್ತದೆ. ಮೌಖಿಕ ಕಥನಗಳು ನಮ್ಮ ತಾಳ್ಮೆಯನ್ನು ವಿಪರೀತವಾಗಿ ಪರೀಕ್ಷಿಸುವಷ್ಟೇ ವರ್ತಮಾನವನ್ನು ಉಪೇಕ್ಷಿಸಿರುವಂತೆ ಕಾಣುತ್ತವೆ. ಆದರೆ ವರ್ತಮಾನದ ಬಗೆಗಿನ ಮೌನವೇ ಚರಿತ್ರೆಯ ಬಗೆಗಿನ ಆಸ್ಫೋಟವೆಂದು ತಾವು ತಿಳಯಬೇಕು.

ಹೀಗಾಗಿಯೇ ಮೌಖಿಕ ಇತಿಹಾಸವು ವರ್ತಮಾನದ ಮೌನವೂ ಆಗಿ ಅದರ ಮುಲಕವೇ ಆಸ್ಫೋಟಕ ನಿಶ್ಯಬ್ದವನ್ನು ಪ್ರತಿಧ್ವನಿಸುತ್ತಿರುತ್ತದೆ. ನಿಶ್ಯಬ್ದದ ಅರ್ಥವೇ ಮೌಖಿಕ ಇತಿಹಾಸದ ಸೂಕ್ಷ್ಮ ಪ್ರಜ್ಞೆ. ಸಾಮ್ರಾಜ್ಯಶಾಹಿ ಇತಿಹಾಸವು ಆರ್ಭಟಿಸಿ ವರ್ತಮಾನದ ದಿಗ್ವಿಜಯವನ್ನು ದಾಖಲು ಮಾಡಿಕೊಳ್ಳುವಾಗಲೆಲ್ಲ ಮೌಖಿಕ ಪರಂಪರೆಗಳು ಗತಕಾಲವನ್ನು ಸಾಂಸ್ಕೃತಿಕ ವಿವರಗಳಿಂದ ಪುನರ್ ರಚಿಸಿಕೊಂಡಿವೆ. ಹಾಗಾಗಿಯೇ ಇಲ್ಲಿ ಇತಿಹಾಸವು ಮೌನವಾಗಿದೆ; ಭಾರವಾಗಿದೆ; ಹೆಪ್ಪು ಗಟ್ಟಿದೆ; ಅಭಿವ್ಯಕ್ತಿಗೆ ದಿಕ್ಕಿಲ್ಲದೆ ವೇಷಗಳನ್ನು ರೂಪಕ ಭಾಷೆಗಳಿಂದ ಹಾಕಿಕೊಂಡಿದೆ. ಮೌಖಿಕವಾದ ಎಲ್ಲ ನಿರೂಪಣೆಗಳು ಇತಿಹಾಸವನ್ನು ಹೇಳುವುದಕ್ಕಿಂತ ಹೆಚ್ಚಾಗಿ ಅದನ್ನೇ ಆಚರಿಸುತ್ತವೆ. ಹಾಗೆ ಆಚರಿಸುವುದರಿಂದಲೇ ಚರಿತ್ರೆಯು ಮೌಖಿಕ ಪರಂಪರೆಯಲ್ಲಿ ಗತವೈಭವವೂ ಆಗದೆ ನಿರ್ದಿಷ್ಟ ಗುರಿಯನ್ನು ನಿರಾಕರಿಸುತ್ತದೆ. ಹಾಗಾದರೆ ಚರಿತ್ರೆಗೆ ಒಂದು ಉದ್ದೇಶ ಗುರಿ, ನಿಲುವು, ಆಶಯ ಇರಬೇಕಲ್ಲವೇ ಎಂದು ನಿರೀಕ್ಷಿಸುವುದು ಮೌಖಿಕ ಇತಿಹಾಸದ ವ್ಯಾಪ್ತಿಯಲ್ಲಿ ಕಷ್ಟವಾಗುತ್ತದೆ. ಮೊದಲೇ ಹೇಳಿದಂತೆ, ಜನಪದರಿಗೆ ಚರಿತ್ರೆಯೇ ಮುಖ್ಯವಲ್ಲ. ಹಾಗೊಂದು ವೇಳೆ ಚರಿತ್ರೆಯನ್ನೇ ದಾಖಲಿಸಬೇಕು ಎಂಬ ಬಲವಾದ ಒತ್ತಡ ಅವರಿಗಿದ್ದಿದ್ದರೆ ಅನಾಮಧೇಯತ್ವವನ್ನು ಅವರು ಭಾವಿಸುತ್ತಲೇ ಇರಲಿಲ್ಲ. ಸಮಷ್ಟಿ ಸೃಷ್ಟಿಯ ಸಹಭಾಗಿತ್ವದಲ್ಲಿ ಇಡಿಯಾಗಿ ಇತಿಹಾಸದ ಪ್ರಜ್ಞೆಯನ್ನೆ ಅಖಂಡವಾಗಿ ಜನಪದರು ಭಾವಿಸುವುದರಿಂದ, ಅವರಿಗೆ ಇತಿಹಾಸದ ಆಚೆಗಿನ ವಿಮುಕ್ತಿಯೇ ದೊಡ್ಡ ಸವಾಲಾಗಿ ಕಂಡಿದೆ. ಆದರೆ ಜನಪದರು ಇತಿಹಾಸವನ್ನು ಆಚರಿಸುತ್ತಾರೆಯೇ ವಿನಹ ಅದನ್ನು ಮೃತಸ್ಥಿತಿಯಲ್ಲಿ ದಾಖಲಿಸುವುದಿಲ್ಲ. ಇದು ಚರಿತ್ರೆಯ ಚಲನಶೀಲತೆಯನ್ನು ತೋರುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದರೆ, ಬದುಕಿನ ಚಲನಶೀಲ ಅಭಿವ್ಯಕ್ತಿಯೇ ಮೌಖಿಕ ಇತಿಹಾಸ ಎಂದಾಗುತ್ತದೆ.

ಯಾವುದು ಚಲನಶೀಲವೋ ಅದು ಉಳಿಯುತ್ತದೆ. ಯಾವುದು ಚಲನೆಗೆ ವಿರುದ್ಧವಾಗಿ ಕೋಟೆ-ಕೊತ್ತಲ-ಬತೇರುಗಳನ್ನು, ಅರಮನೆ-ಗುರುಮನೆಗಳನ್ನು ಕಟ್ಟಿಕೊಂಡು ಯುದ್ಧದಾಹಿ ಯಾಗಿರುತ್ತದೋ ಅಥವಾ ಲೋಲುಪವಾಗಿರುತ್ತದೋ ಅಥವಾ ಹಿಂಸಕವಾಗಿರುತ್ತದೋ ಅಂತಹದು ಇತಿಹಾಸವಲ್ಲ. ಇತಿಹಾಸವು ನಿರಂತರ ಚಲನಶೀಲವಾದುದು. ಮೌಖಿಕ ಕಥನಗಳು ಸದಾ ಬಹುರೂಪಿ ಆಕೃತಿಗಳಲ್ಲಿ ಚಲನಶೀಲವಾದ ಅಭಿವ್ಯಕ್ತಿಗಳಲ್ಲಿ ಕಾಲದ ಹಂಗನ್ನು ಮೀರುತ್ತಿರುತ್ತವೆ. ಚಲನೆಯೇ ಅವರವರ ಅಸ್ತಿತ್ವವನ್ನು ಸ್ಥಾಪಿಸುವುದು. ಸದಾ ವಿಸ್ತರಣೆ ಗೊಳ್ಳುವ ಸ್ವಭಾವ ಮೌಖಿಕ ಕಥನಗಳಿಗೆ ಪ್ರವೃತ್ತಿಯಂತಾಗಿದೆ. ಹೀಗಾಗಿಯೇ ಚರಿತ್ರೆಯ ನಿರ್ದಿಷ್ಟ ಆಕೃತಿಗೆ, ಗುರಿಗೆ ಅವು ಒಳಗಾಗುವುದಿಲ್ಲ. ಚರಿತ್ರೆಯನ್ನು ನಿರ್ದಿಷ್ಟಗೊಳಿಸಿದ ಕೂಡಲೇ ಸ್ವತಃ ಚರಿತ್ರೆಗೇ ಇರುವ ಸ್ವಾತಂತ್ರ‍್ಯವನ್ನು ಸೀಮಿತಗೊಳಿಸಿದಂತಾಗುತ್ತದೆ (ಕಾಲಿಂಗ್‌ವಡ್ ೧೯೯೪: ೧೯೪). ಅಲ್ಲದೆ ಇತಿಹಾಸಕಾರನೂ ಅಂತಹ ನಿರ್ಮಿತಿಗೆ ಬದ್ಧನಾಗಿ ತೀರ್ಮಾನಗಳಿಗೆ ಬರಬೇಕಾಗುತ್ತದೆ. ಮೌಖಿಕ ಕಥನಗಳಿಗೆ ಸ್ವೋಪಜ್ಞವಾದ ಸ್ವಾತಂತ್ರ‍್ಯವಿದೆ. ಇಂತಹ ಸ್ವಾತಂತ್ರ‍್ಯದಿಂದಾಗಿಯೇ ಅವು ಬಹುಪಠ್ಯಗಳನ್ನು ಸಂಕಲಿಸುತ್ತಾ ನಡೆಯುವುದು. ಇತಿಹಾಸವನ್ನು ತಿದ್ದುವ ಪರಿಯಲ್ಲಿ ಮೌಖಿಕ ಕಥನಗಳು ಸಂಕಲಿಸಲ್ಪಡುತವೆ. ಅಂದರೆ ಜನಪದರು ತಮ್ಮ ಚಾರಿತ್ರಿಕ ಕಥನಗಳನ್ನು ಸಂಕಲಿಸುವಲ್ಲಿ ತುಂಬ ಆಸಕ್ತರು. ಇದರಿಂದ ಅವರ ಚಾರಿತ್ರಿಕ ಎಚ್ಚರವು ಸೃಜನಶೀಲವಾದ ನಿರೂಪಣೆಗಳಲ್ಲಿ ಪ್ರತಿಧ್ವನಿಸುತ್ತಿರುತ್ತದೆ. ಇತಿಹಾಸದ ನಿರೂಪಣೆಯನ್ನೇ ಸಂಕಲಿಸುತ್ತಿರುತ್ತಾರೆ. ಇಂತಹ ಸ್ಥಿತಿಯಲ್ಲಿ ಜನಪದರಿಗೆ ಖಚಿತವಾದ ಆಧಾರ ಮುಖ್ಯವೆನಿಸುವುದಿಲ್ಲ. ಇದ್ದ ವಿವರಗಳಿಗೆ ತಮ್ಮ ಬದುಕಿನ ಜೀವ ತುಂಬುವುದೇ ಅವರಿಗೆ ಮುಖ್ಯ. ಹೀಗಾಗಿ ಮೂಲ ವಿವರಗಳು ಮರೆಯಾಗಿ ಅದರ ಮೇಲೆ ಬೇರೆ ಬೇರೆ ಘಟಕಗಳು, ಸಂದರ್ಭಗಳು, ಅನುಭವಗಳು ಬೆರೆತು ಇತಿಹಾಸದ ಕಥನದಿಂದಲೇ ಮತ್ತೊಂದು ಚರಿತ್ರೆಯನ್ನು ನಿರೂಪಿಸಲು ಸಾಧ್ಯವಾಗುತ್ತದೆ. ಮೌಖಿಕ ಚರಿತ್ರೆಯ ಉದ್ದಕ್ಕೂ ಇಂತಹ ಸ್ವಭಾವ ದಟ್ಟವಾಗಿದೆ.

ಚರಿತ್ರೆಯ ಜೊತೆಗೆ ಬದುಕುವ ಜನಪದರು ಚರಿತ್ರೆಯನ್ನು ಎಂದೂ ಗತಸ್ಥಿತಿ ಎಂದು ನಂಬುವುದೇ ಇಲ್ಲ. ಅವರಿಗೆ ಎಲ್ಲವೂ ಇರುವ ಕಾಲವೇ; ಹಾಗೆಯೇ ಇರುವ ಎಲ್ಲ ಕಾಲವೂ ಮೀರುವುದಕ್ಕಾಗಿಯೇ. ಈ ಮಾತನ್ನು ಮೌಖಿಕಕಾವ್ಯಗಳ ಸಾಂಸ್ಕೃತಿಕ ವೀರರ ನಿರೂಪಣೆಗಳಿಗೆ ಅನ್ವಯಿಸಿ ಪರಿಶೀಲಿಸಬಹುದು. ಜನಪದರ ಕಾಲಾತೀತಪ್ರಜ್ಞೆಯು ಇದಕ್ಕೆ ಪೂರಕವಾಗಿದೆ. ಜನಪದರ ಸಾಂಸ್ಕೃತಿಕ ವೀರರ ಕಾಲದ ಹಂಗಿಗೆ ಒಳಗಾಗುವುದೇ ಇಲ್ಲ. ಆದರೆ ಸಾರ್ವಕಾಲಿಕ ವಾದ ರೀತಿಯಲ್ಲಿ ಆ ನಾಯಕರನ್ನು ಪ್ರತಿಬಿಂಬಿಸಲಾಗುತ್ತದೆ (ಲೋರಿಹಾಂಕೋ ೧೯೯೮: ೧೧೮). ಅಂದರೆ ಆ ಕಥನಗಳ ನಾಯಕರ ಮೂಲಕ ಆ ಕಾವ್ಯಗಳ ಸಮುದಯಗಳು ಕಾಲದ ವಿಂಗಡಣೆಗೆ ಒಳಪಡದೆ ಇರುವ ತಮ್ಮ ಕಾಲವನ್ನೆ ಅತಿಮಾನುಷಗೊಳಿಸಿ ಬಿಡುತ್ತವೆ. ಕಾಲವನ್ನು ಅತಿಮಾನುಷಗೊಳಿಸುವುದು ಮೌಖಿಕ ಇತಿಹಾಸದಲ್ಲಿ ಒಂದು ಬದ್ಧತೆ ಎಂಬಂತಿದೆ. ಹೀಗೆ ಕಾಲವನ್ನು ಮನುಷ್ಯಾತೀತ ವಲಯದಲ್ಲಿ ಅಳತೆ ಮಾಡಿದ ಕೂಡಲೇ ಮೌಖಿಕ ಕಥನಗಳ ನಿರೂಪಕರಿಗೆ ಚರಿತ್ರೆಯ ಕಾಲನಿಷ್ಠತೆಯು ಮುಖ್ಯವಾಗುವುದಿಲ್ಲ. ಹೀಗೇಕೆ ಜನಪದರು ಚರಿತ್ರೆಯನ್ನು ಕಾಲಬದ್ಧಗೊಳಿಸುವುದಿಲ್ಲ ಎಂಬುದು ಸರಳ ವಿವರಗಳಿಗೆ ಸಿಲುಕಿರುವುದಿಲ್ಲ. ಕಾಲವನ್ನು ಪುರಾಣ-ಐತಿಹ್ಯಗಳ ಮೂಲಕ ಭಾವಿಸಿದಾಗಲೂ ಇಂತಹದೇ ಸಮಸ್ಯೆ ಎದುರಾಗುತ್ತದೆ. ಕಾಲವನ್ನು ಅತಿಮಾನುಷಗೊಳಿಸುವುದು ಸಾಮ್ರಾಜ್ಯಗಳ ಗರ್ವವನ್ನು ಮುರಿಯುವುದಕ್ಕಾಗಿ; ಪ್ರಭುತ್ವದ ಅಂಕುಶದಿಂದ ತಪ್ಪಿಸಿಕೊಳ್ಳುವುದಕ್ಕಾಗಿ; ಹಾಗೂ ತನ್ನ ಮೇಲಿರುವ ಶ್ರೇಣೀಕೃತ ಜಾತಿನಿಷ್ಠ ಸಮಾಜಗಳ ಯಾಜಮಾನ್ಯದಿಂದ ಪಾರಾಗುವುದಕ್ಕಾಗಿ. ಇದರಿಂದಲೇ ಮೌಖಿಕ ಇತಿಹಾಸವು ಕಾಲವನ್ನು ಅತಿಮಾನುಷ ಮಾಪನಗಳಿಂದ ಗುರುತಿಸಿ ಕೊಂಡಿರುತ್ತದೆ.

ಈ ಹಿನ್ನೆಲೆಯಿಂದ, ಮೌಖಿಕ ಇತಿಹಾಸವನ್ನು ಇನ್ನೊಂದು ಆಯಾಮದಿಂದಲೂ ವಿವರಿಸಬಹುದು. ಸಾಮಾನ್ಯರ ಸಾಮಾಜಿಕ ಬದುಕಿನ ಅತಿಮಾನುಷ ಅಭಿವ್ಯಕ್ತಿಯೇ ಮೌಖಿಕ ಇತಿಹಾಸ. ಸಮಾಜದಲ್ಲಿ ತಾವು ಅನುಭವಿಸುವ ದೈನಂದಿನ ಸುಖ ದುಃಖಗಳನ್ನೆಲ್ಲ ಬೇರೆ ಬೇರೆ ಪಾತ್ರಗಳಲ್ಲಿ, ಘಟನೆಗಳಲ್ಲಿ, ಹಳೆಯ ಕಥನಗಳಲ್ಲಿ, ಆಚರಣೆಗಳಲ್ಲಿ ಜನಪದರು ಪ್ರತಿಸೃಷ್ಟಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಹೀಗೆ ಖಾಸಗಿ ಬದುಕಿನ ಎಲ್ಲ ಸೋಲು-ಗೆಲುವು, ಆಸೆ-ನಿರಾಸೆ, ಕನಸು-ಆಶಯಗಳನ್ನೆಲ್ಲ ಸಾರ್ವಜನಿಕವಾಗಿ ಹಾಡಿಕೊಳ್ಳುತ್ತಲೇ ಜನಪದರ ಪುರಾಣ-ಐತಿಹ್ಯ-ಆಚರಣೆಗಳ ಪರಕಾಯ ಪ್ರವೇಶವನ್ನು ಮಾಡಿ ತಮ್ಮ ಒಡಲಕಿಚ್ಚನ್ನು ಪರಿಹರಿಸಿಕೊಳ್ಳುತ್ತಾರೆ. ಖಾಸಗಿಯಾದದ್ದನ್ನೆಲ್ಲ ಜನಪದರು ತಮ್ಮ ಮೌಖಿಕ ಪರಂಪರೆಯ ನಿರೂಪಣೆಗಳಿಗೆ ವರ್ಗಾಯಿಸಿ ಅವುಗಳಲ್ಲಿ ಪರಕಾಯ ಪ್ರವೇಶ ಮಾಡುವುದರಿಂದ ಅವರು ಚರಿತ್ರೆಯ ಜೊತೆಗೆ ಮುಖಾಮುಖಿಯಾಗುತ್ತಿರುತ್ತಾರೆ. ನಿನ್ನೆಯ ಮಹಿಳೆಯ ದುರಂತ ಕಥನಗೀತೆಗಳಲ್ಲಿ ವರ್ತಮಾನದ ಮಹಿಳೆಯರು ಹೀಗೆಯೇ ಪರಕಾರ ಪ್ರವೇಶಗೊಂಡು ನಿನ್ನೆಯ ಇತಿಹಾಸದ ದುರಂತದ ಜೊತೆಗೆ ತಮ್ಮ ಮೌನ ಆಕ್ರಂದನವನ್ನು ಪ್ರತಿಧ್ವನಿಸುತ್ತಾರೆ. ಕೆರೆಗೆ ಹಾರವಾದ ಭಾಗೀರಥಿ ಇಲ್ಲಿ ಕೇವಲ ಒಂದು ಬೃಹತ್ ರೂಪಕ. ಆದರೆ ಅಂತಹ ಅಸಂಖ್ಯಾತ ಜೀವಂತ ರೂಪಕಗಳು ಅಥವಾ ನಿರೂಪಕರು ನಿನ್ನೆಯ ಚರಿತ್ರೆಯನ್ನು ವರ್ತಮಾನದ ಅನುಭವದಿಂದ ಪುನರ್ ಅಭಿನಯಿಸುತ್ತಿರುತ್ತಾರೆ. ಹೀಗಾಗಿ ಗತಕಾಲದ ಪುನರ್ ಅಭಿನಯವೇ ಮೌಖಿಕ ಇತಿಹಾಸವಾಗಿ ಕಾಣುವುದು.

ಗತಕಾಲವನ್ನು ಅರ್ಥಾತ್‌ ಚರಿತ್ರೆಯನ್ನು ಅಭಿನಯಿಸುವುದು ಒಂದು ಸಂಕೀರ್ಣ ವ್ಯವಸ್ಥೆ. ಮೌಖಿಕ ಪರಂಪರೆಯ ಕಥನಗಳು ಎಷ್ಟೊಂದು ಶಕ್ತಿಶಾಲಿ ಎಂದರೆ ಇಡೀ ಗತಕಾಲವನ್ನೆ ಅವು ಕ್ಷಣದಲ್ಲಿ ಜೀವಂತಗೊಳಿಸಿಬಿಡಬಲ್ಲವು. ಜನಪದರ ಹಬ್ಬ-ಜಾತ್ರೆ-ಉತ್ಸವಗಳು ಗತಕಾಲದ ಜೀವಂತ ಮಾದರಿಗಳನ್ನು ಸೃಷ್ಟಿಸುತ್ತವೆ. ಗ್ರಾಮದೈವಗಳ ಆಚರಣೆಗಳು ಒಂದೇ ಹೊತ್ತಿನಲ್ಲಿ ಆದಿಯುಗವನ್ನೂ ಮಧ್ಯಯುಗವನ್ನೂ ವರ್ತಮಾನವನ್ನೂ ಒಟ್ಟಿಗೇ ಸೃಷ್ಟಿಸಿ ಗತಕಾಲವನ್ನು ಅದ್ಧೂರಿಯಾಗಿ ಪ್ರತಿಬಿಂಬಿಸುತ್ತವೆ. ಹೀಗೆ ಕಾಲವನ್ನು ಪುನರ್‌ಸೃಷ್ಟಿಸಿ ಅದನ್ನು ಅಭಿನಯಿಸುವ ಮೌಖಿಕ ಕಥನಗಳು ತಮ್ಮ ಇತಿಹಾಸವನ್ನು ಆಗಾಗ್ಗೆ ಪುನರ್‌ನವೀಕರಿಸಿ ಕೊಳ್ಳುತ್ತವೆ. ಚರಿತ್ರೆಯನ್ನು ಹೀಗೆ ಅಭಿನಯಿಸುತ್ತ ಅದನ್ನು ಸಾಂಸ್ಕೃತಿಕವಾದ ಆಚರಣೆಯಾಗಿಸಿ ಕೊನೆಗೆ ಇತಿಹಾಸವನ್ನೇ ದೈವವಾಗಿ, ಆಧ್ಯಾತ್ಮವಾಗಿ, ವಿಮುಕ್ತಿಯಾಗಿ ವಿಸ್ತರಿಸಿಕೊಳ್ಳುವುದು ಅಸಾಧಾರಣವಾದ ಗುಣ (ದತ್ತ ೨೦೦೨: ೭೮). ಚರಿತ್ರಕಾರರು ಇಂತಹ ವಿಶಿಷ್ಟ ಭಾವಲೋಕದ ಚಾರಿತ್ರಿಕ ಪ್ರಜ್ಞೆಯನ್ನು ಗಮನಿಸದೆ ಮೌಖಿಕ ವಿವರಗಳನ್ನು ತೇಲಿಕೆಯಿಂದ ಬಳಸುವುದು ಅನೈತಿಕ. ಗತಕಾಲವನ್ನು ಸಮಕಾಲೀನತೆಯಿಂದ ಆಚರಿಸುವುದು ಮೌಖಿಕ ಇತಿಹಾಸಕ್ಕೆ ಬಹಳ ಸುಲಭ. ಆದರೆ ಲಿಖಿತವಾದ ನಿರ್ದಿಷ್ಟ ಇತಿಹಾಸದಲ್ಲಿ ಕಾಲವು ಯಾವತ್ತೂ ಸ್ಥಾವರವಾಗಿಯೇ ಉಳಿದಿರುತ್ತದೆ.

ಈ ಅಂಶಗಳಿಂದ ಮೌಖಿಕ ಇತಿಹಾಸದ ಮುಖ್ಯ ಸ್ವಭಾವವನ್ನು ಕೆಳಕಂಡಂತೆ ಗುರುತಿಸಿಕೊಳ್ಳಬಹುದು.

 • ಮೌಖಿಕ ಇತಿಹಾಸವು ಮೂಲತಃ ಭಾವನಾತ್ಮಕವಾದುದು.
 • ಅತಿಮಾನುಷವಾದ ಪರಿವೇಷ ಅದರ ರಕ್ಷಾಕವಚವಾಗಿರುತ್ತದೆ.
 • ಕಾಲಾತೀತ ತುಡಿತವು ಮೌಖಿಕ ಇತಿಹಾಸದ ವರ್ತನೆಯಾಗಿದೆ.
 • ಸೃಜನಶೀಲ ಸಂವೇದನೆಯಿಂದ ಬಹುರೂಪಗಳಿಗೆ ತೆರೆದುಕೊಳ್ಳುತ್ತದೆ.
 • ಪರೋಕ್ಷವಾದ ನಿರೂಪಗಳಲ್ಲಿ ಪರಕಾಯ ಪ್ರವೇಶದಿಂದ ತನ್ನನ್ನು ಕಂಡುಕೊಳ್ಳುತ್ತದೆ.
 • ಮಾಂತ್ರಿಕರಮ್ಯತೆಯಲ್ಲಿ ಸಮುದಾಯದ ಚಹರೆಯ ಮೂಲಕ ಅಭಿನಯಿಸುತ್ತದೆ. ನೆನಪುಗಳನ್ನು ಹಿಂಬಾಲಿಸಿ ನೆನಪಿನಾಚೆಗೆ ಅಭಿವ್ಯಕ್ತಿಸುತ್ತದೆ.
 • ಸಮಷ್ಟಿಪ್ರಜ್ಞೆಯಲ್ಲಿ ಅಡಗಿ ಅನಾಮಧೇಯತೆಯನ್ನು ಬಿಂಬಿಸುತ್ತದೆ.
 • ಸಂಸ್ಕೃತಿನಿಷ್ಠವಾಗಿ ಕಥನಾತ್ಮಕವಾಗಿಯೂ ನಾಟಕೀಯವಾಗಿಯೂ ಆಚರಣಾತ್ಮಕವಾಗಿಯೂ ನಿರೂಪಣೆಯನ್ನು ವೈಭವೀಕರಿಸುತ್ತದೆ.
 • ಮೌನದಲ್ಲಿ ಅಸ್ಫೋಟಿಸುತ್ತದೆ; ಮೌನದಲ್ಲೆ ಅರ್ಥವನ್ನು ಬಿತ್ತಿರುತ್ತದೆ.
 • ನಿರೂಪಣೆಯ ಸ್ವಾತಂತ್ರ‍್ಯಕ್ಕೆ ಹೆಚ್ಚು ಬದ್ಧವಾಗಿರುತ್ತದೆ.
 • ತಳಜಾತಿಗಳ ಹಾಗೂ ಅಂಚಿನ ಮಹಿಳೆಯರ ಸುಪ್ತಪ್ರಜ್ಞೆಯ ಪ್ರತೀಕವಾಗಿರುತ್ತದೆ.

ಈ ಅಂಶಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ವಿಶಿಷ್ಟ ಸ್ವಭಾವಗುಣದ ಮೌಖಿಕ ಇತಿಹಾಸವನ್ನು ದಲಿತ ಮತ್ತು ಮಹಿಳಾ ಚಿಂತನೆಗಳ ನೆಲೆಯಿಂದ ವಿಶ್ಲೇಷಿಸುವುದಕ್ಕೆ ವಿಪುಲ ಅವಕಾಶಗಳಿವೆ. ಭಾರತೀಯ ಇತಿಹಾಸವನ್ನು ಪ್ರಧಾನವಾಗಿ ಎರಡು ನೆಲೆಗಳಿಂದ ರಚಿಸಲಾಗಿದೆ. ಮೊದಲನೆಯದು ಬಲಪಂಥೀಯ ರಾಷ್ಟ್ರೀಯ ಇತಿಹಾಸ. ಇದು ವೈದಿಕ ನೆಲೆಯಿಂದಲೇ ಬೃಹತ್ ಭಾರತದ ಅಖಂಡ ಕಥನವನ್ನು ಉದಾರವಾಗಿ ನಿರೂಪಿಸುವಂತಹದು. ಆದರೆ ಉದಾರತೆಯು ಕೃತಕವೂ ಏಕಮುಖವೂ ಆದುದು. ಈ ಹಾದಿಯಲ್ಲಿ ಇತಿಹಾಸವು ಈ ಕಾಲದಲ್ಲಿ ಕೇಸರಿಮಯವಾಗಿ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತದೆ. ಇದು ಅಪಾರ ಪೂರ್ವಗ್ರಹಗಳಿಂದ ಕೂಡಿದೆ. ಆದರೆ ಮರ್ಯಾದೆಯ ರತ್ನಖಚಿತ ಕವಚ ಧರಿಸಿದ ಸ್ವಾಮಿನಿಷ್ಠ ಇತಿಹಾಸವೇ ಹೊರತು ಜನನಿಷ್ಠವಾದುದಲ್ಲ. ಈ ಬಗೆಯ ಇತಿಹಾಸಕ್ಕೆ ಭಿನ್ನವಾದದ್ದು ಮಾರ್ಕ್ಸ್‌ವಾದಿ ನೆಲೆಯ ಕೆಂಪು ಇತಿಹಾಸ. ಜನಪರವಾದ, ಬಂಡಾಯದ, ವಿಶೇಷವಾಗಿ ವಸಾಹತುಷಾಹಿಗೆ ಪ್ರತಿರೋಧವನ್ನು ಒಡ್ಡಿದ ಈ ಇತಿಹಾಸದ ನಿರ್ವಚನವು ಅತ್ಯಂತ ಆಕರ್ಷಕವಾದುದು ಹಾಗೆಯೇ ನ್ಯಾಯೋಚಿತವಾದುದು. ಭಾರತೀಯ ಇತಿಹಾಸವನ್ನು ಇವೆರಡೇ ಆತ್ಯಂತಿಕವಾಗಿ ಮಂಡಿಸಿರುವುದು. ಆದರೆ ಇವೆರಡರ ಆಚೆಗೆ ಭಾರತಿಯ ಇತಿಹಾಸವನ್ನು ನಿರ್ವಚಿಸಲು ಮೂರನೇ ಆಯಾಮವೂ ಇದೆ. ಅದು ಬಹಿಷ್ಕೃತರ ಕಪ್ಪು ಇತಿಹಾಸ. ಇತಿಹಾಸದಲ್ಲಿ ಅನೇಕ ಬಗೆಯ ಕತ್ತಲಯುಗಗಳಿವೆ. ಮುಟ್ಟಿಸಿಕೊಳ್ಳದ, ಮುಟ್ಟಲಾಗದ, ಹೇಳಲಾಗದ, ಕೇಳಲಾಗದ, ನೋಡಲಾಗದ, ತಿಳಿಯಲಾಗದ ಅಸಂಖ್ಯ ವಿವರಗಳು ಮುಚ್ಚಿ ಹೋಗಿವೆ ಮತ್ತು ಬಚ್ಚಿಡಲ್ಪಟ್ಟಿವೆ. ತಳಜಾತಿಗಳು ಮತ್ತು ಅಂಚಿನ ಮಹಿಳೆಯರು ಕಟ್ಟಿಕೊಂಡ ಮೌಖಿಕ ವಿವರಗಳಲ್ಲಿ ಗತಕಾಲದ ಮೌನವು ಅಡಗಿದೆ. ನಿನ್ನೆಯ ಮೌನವನ್ನು ವರ್ತಮಾನದ ಆಸ್ಫೋಟವಾಗಿಸುವುದಕ್ಕೆ ಮೌಖಿಕ ಇತಿಹಾಸದಲ್ಲಿ ಅವಕಾಶವಿದೆ. ನಿನ್ನೆಯ ಮೌನವನ್ನು ಇಂದಿನ ರ್ಧವನಿಯಾಗಿಸುವುದಕ್ಕೆ ಮೇಲೆ ಹೇಳಿದ ಎರಡು ಬಗೆಯ ಕೇಸರಿ-ಕೆಂಪು ಇತಿಹಾಸಗಳಲ್ಲಿ ನೆಲೆಯಿಲ್ಲ. ಕತ್ತಲೆಯಲ್ಲಿ ಮುಳುಗಿದ್ದವರ ಸಾಕ್ಷಿಗಳೆಲ್ಲವೂ ಬೆಳಕಿನಲ್ಲಿದ್ದವರಿಂದ ಕಳೆದು ಹೋಗಿವೆ. ಇದರಿಂದಾಗಿಯೇ ಮೌಖಿಕ ಇತಿಹಾಸದಲ್ಲಿ ಸಾಕ್ಷಿಗಳಿಲ್ಲ. ಆದರೆ ಸಾಕ್ಷಿಯ ಮನಃಸಾಕ್ಷಿಯಿದೆ, ಅಂತಃಸಾಕ್ಷಿಯಿದೆ. ಅವುಗಳಾಚೆಗೆ ಇರುವ ಅಮೂರ್ತತೆಯಲ್ಲಿ ಮೌನವಿದೆ. ಈ ಮೌನದ ಲಿಪಿಯನ್ನು ನೋಡುವ ಮೂರನೇ ದೃಷ್ಟಿಯೇ ಕಪ್ಪು ಇತಿಹಾಸ. ಕಪ್ಪು ಇತಿಹಾಸವೆಂದರೆ ಅದು ಅಂತಃಕರಣವನ್ನು ಮಾನವೀಯ ಸಂಬಂಧಗಳ ದಾಹದಲ್ಲಿ ನಿರ್ವಚಿಸುವುದು. ಜಾತಿ ಮತ್ತ ಲಿಂಗಸಂಬಂಧಗಳೆರಡೂ ಕೂಡಿದ ಸಂವೇದನೆಯು ಮೌಖಿಕ ಇತಿಹಾಸದ ಮೂಲಕ ಸಾಧ್ಯ. ಬಹುಪಾಲು ಎಲ್ಲ ಮೌಖಿಕ ಕಥನಗಳು ತಳಜಾತಿಗಳ ಹಾಗೂ ಅಂಚಿನ ಮಹಿಳೆಯರ ಅಭಿವ್ಯಕ್ತಿಯೇ ಆಗಿವೆ.

ಅಂಬೇಡ್ಕರ್‌ ಅವರು ನೇರವಾಗಿ ಭಾರತೀಯ ಇತಿಹಾಸವನ್ನು ಬರೆಯದಿದ್ದರೂ ಅವರ ಬಹುಪಾಲು ಎಲ್ಲ ಬರಹಗಳು ಭಾರತೀಯ ಇತಿಹಾಸಕ್ಕೆ ಮಾಡಿದ ಪ್ರತಿಕ್ರಿಯೆಯೇ ಆಗಿವೆ. ಜಾತಿನಿರ್ಮೂಲನೆಯ ಅವರ ಬೌದ್ಧಿಕ ಕಥನಗಳೆಲ್ಲವೂ ಭಾರತೀಯ ಇತಿಹಾಸದ ವಿಮರ್ಶೆಯೇ ಆಗಿದ್ದು, ಪ್ರಭುತ್ವ ಹಾಗೂ ಧರ್ಮಕೇಂದ್ರಿತ ಇತಿಹಾಸದ ವಿರುದ್ಧದ ಬಂಡಾಯವೇ ಆಗಿವೆ. ಮೌಖಿಕ ಇತಿಹಾಸದ ತಾತ್ವಿಕತೆಯನ್ನು ಸಂರಚಿಸಿಕೊಳ್ಳುವಾಗ ಅಂಬೇಡ್ಕರ್‌ಅವರ ಆಲೋಚನೆಗಳು ನಮ್ಮ ನೆರವಿಗೆ ಬರುತ್ತವೆ. ಮೇಲೆ ಪ್ರಸ್ತಾಪಿಸಿದ ಮೌಖಿಕ ಚರಿತ್ರೆಯ ಗುಣಸ್ವಭಾವಗಳೆಲ್ಲವೂ ಅಂಬೇಡ್ಕರ್‌ ಅವರ ವೈಚಾರಿಕತೆಗೆ ಸಂಬಂಧಪಡುತ್ತವೆ. ಹಾಗಿದ್ದರೂ ತಳಸಮುದಾಯದ ವಿಮುಕ್ತಿಗೆ ಇದ್ದ ಜಾಗೃತಿಗೂ ಅಭಿವ್ಯಕ್ತಿಯ ವಿಧಾನಕ್ಕೂ ಬಹಳ ವ್ಯತ್ಯಾಸವಿದೆ. ಅಂಬೇಡ್ಕರ್‌ಅವರ ಅಭಿವ್ಯಕ್ತಿಯು ದಟ್ಟವಾದ ಪ್ರತಿರೋಧದ ಮೂಲಕ ವೈಚಾರಿಕ ದಂಗೆಗೆ ಕಹಳೆ ಮೊಳಗಿಸಿದರೆ; ಮೌಖಿಕ ಪರಂಪರೆಯ ಅಭಿವ್ಯಕ್ತಿಯ ಕಥನಗಳೆಲ್ಲವೂ ಆಧ್ಯಾತ್ಮದ ರೂಪದಲ್ಲಿ, ಮಾಂತ್ರಿಕವಾದ ಭಾಷಿಕ ವಿನ್ಯಾಸದಲ್ಲಿ ಸಿದ್ಧವಾದ ಸಾಮ್ರಾಜ್ಯದ ಚರಿತ್ರೆಯ ಆಚೆಗೆ ಹಾರುವ ಸಾಹಸವನ್ನು ಮಾಡುತ್ತವೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶಗಳ ಕಡೆಗೆ ಬರುವುದಾದರೆ, ದಲಿತ ಇತಿಹಾಸವನ್ನು ಪರೋಕ್ಷವಾಗಿ ಮೌಖಿಕ ಇತಿಹಾಸದ ಮೂಲಕ ಪರಂಪರೆಯ ಅನುಸಂಧಾನದ ಜೊತೆ ವಿಸ್ತರಿಸಿಕೊಳ್ಳಬೇಕಾಗಿದೆ.

ಮೌಖಿಕ ಇತಿಹಾಸವು ಅಮೂರ್ತವಾಗಿರುವುದರಿಂದಲೇ ಅದನ್ನು ವೈಚಾರಿಕ ನಿಕಷದಿಂದ ಬಿಡಿಸಿ, ವರ್ತಮಾನದ ಬೌದ್ಧಿಕತೆಯಿಂದ ಮಥಿಸಿ ನಮ್ಮ ಕಾಲವನ್ನು ಮೌಲ್ಯಮಾಪನ ಮಾಡಬಹುದು. ಚರಿತ್ರೆಯು ಯಾವತ್ತೂ ಕಳೆದು ಹೋದದ್ದಲ್ಲ. ಅದು ನಮ್ಮಿಂದಲೇ ಪುನರ್‌ಸೃಷ್ಟಿಗೆ ಒಳಪಡುವ ಭಾವನಾತ್ಮಕ ವಿಷಯ. ವರ್ತಮಾನದ ಮೂಲಕವೆ ಗತಕಾಲವನ್ನು ಪುನರ‍್ರಚಿಸಲು ಸಾಧ್ಯ. ಗತಕಾಲದಿಂದ ವರ್ತಮಾನವನ್ನು ಭಾವಿಸಬೇಕಾದ್ದಿಲ್ಲ. ಮೌಖಿಕ ಇತಿಹಾಸವು ಹೀಗಾಗಿಯೇ ಗತಕಾಲದ ಸ್ಮರಣೆಯಲ್ಲ. ಮೌಖಿಕ ಕಥನಗಳು ವರ್ತಮಾನದಿಂದ ಇತಿಹಾಸವನ್ನು ನಿರೂಪಿಸುತ್ತವೆ. ಆದ್ದರಿಂದಲೇ ಅವುಗಳ ಕಥನಕ್ಕೆ ನಿನ್ನೆಯು ಇಂದಿನ ಘಟನೆಯಾಗಿರುತ್ತದೆ. ಗತಕಾಲದಿಂದ ಲಿಖಿತ ಇತಿಹಾಸವು ವರ್ತಮಾನವನ್ನು ಅನುಸಂಧಾನ ಮಾಡಿದರೆ; ಮೌಖಿಕ ಇತಿಹಾಸವು ಇದಕ್ಕೆ ವಿರುದ್ಧವಾಗಿ ತನ್ನ ಬದುಕಿನ ಸಮಕಾಲೀನತೆಯಿಂದಲೇ ಗತಕಾಲವನ್ನು ಪರಿಶೀಲಿಸಿಕೊಳ್ಳುತ್ತದೆ. ಇದರಿಂದಾಗಿಯೇ ಮೌಖಿಕ ಚರಿತ್ರೆಯ ಪ್ರಜ್ಞೆಯು ಹೆಚ್ಚು ಜನನಿಷ್ಠವಾದುದು ಹಾಗೂ ಸ್ವಭಾವದಲ್ಲಿ ಸಮಷ್ಟಿಯಾದುದು. ಅಂಬೇಡ್ಕರ್ ಅವರು ಭಾರತೀಯ ಇತಿಹಾಸವನ್ನು ವಿಮರ್ಶಿಸಿದ್ದುದು ವರ್ತಮಾನದ ಅನುಭವಗಳಿಂದಲೇ. ನಿನ್ನೆಯ ಚರಿತ್ರೆಯ ಪರಿಣಾಮವು ಇಂದಿನ ಸಾಮಾಜಿಕ ವ್ಯವಸ್ಥೆಗೆ ಕಾರಣ ಎಂಬುದನ್ನು ಹೇಳುತ್ತಲೇ ಅವರು ಗತಕಾಲದ ಚರಿತ್ರೆಯ ಅಪರಾಧಗಳನ್ನು ಬೆರಳು ಮಾಡಿ ತೋರಿದರು. ವರ್ತಮಾನದಿಂದ ಜನಪದರು ಗತವನ್ನು ಸೃಷ್ಟಿಸುವಂತೆಯೇ ಚರಿತ್ರಕಾರರು ಕೂಡಾ ತಾವು ಬದುಕಿರುವ ಕಾಲದ ಸಮಾಜಗಳ ಒಳಗಿನವರಾಗಿಯೇ ಚರಿತ್ರೆಯ ಪೂರ್ವಗ್ರಹಗಳನ್ನು ಗ್ರಹಿಸಬೇಕು.

ಆದ್ದರಿಂದಲೇ ಮೌಖಿಕ ಚರಿತ್ರೆ ಎಂದರೆ ಸುಮ್ಮನೆ ಐತಿಹ್ಯ, ಲಾವಣಿ, ವೀರಗೀತೆ ಹಾಗೂ ವೀರಕಾವ್ಯಗಳ ಸಂಗ್ರಹ ಮಾತ್ರ ಅಲ್ಲ. ಮೌಖಿಕ ವಿವರಗಳ ಹೊರಮೈಯಲ್ಲಿರುವುದು ನಿಜವಾದ ಇತಿಹಾಸವಲ್ಲ. ಏಕಕಾಲಕ್ಕೆ ಮೌಖಿಕ ಕಥನಗಳು ಎರಡು ಬಗೆಯ ಇತಿಹಾಸವನ್ನು ನುಡಿಸುತ್ತಿರುತ್ತವೆ. ಮೇಲುಮಟ್ಟದಲ್ಲಿ ತನ್ನದಲ್ಲದ ಅಲಂಕಾರಗಳನ್ನು ಮೌಖಿಕ ಕಥನಗಳು ಧರಿಸಿಕೊಂಡಿದ್ದರೆ, ಒಳಮೈಯಲ್ಲಿ ಮಾತ್ರ ತಮ್ಮದೇ ಪ್ರತಿಬಿಂಬವನ್ನು ವ್ಯಕ್ತಪಡಿಸುವ ಕುರುಹನ್ನು ಬಿತ್ತುತ್ತವೆ. ಸರಳವಾಗಿ ಹೇಳುವುದಾದರೆ, ಹೊರಮೈಯಲ್ಲಿ ವ್ಯವಸ್ಥೆಯ ಪರವಾದ ಇತಿಹಾಸವನ್ನು ವೈಭವೀಕರಿಸಿ ಒಪ್ಪಿ ಅದನ್ನು ಅಭಿನಯಿಸುವುದು ಒಂದು ಕಡೆಗಿದ್ದರೆ ಅದಕ್ಕೆ ವಿರುದ್ಧವಾಗಿ ಒಳಮೈಯಲ್ಲಿ ತಾನು ಹಾಡುವುದರ ವಿರುದ್ಧವಾಗಿಯೇ ಮೌನವಾಗಿ ರಮ್ಯ ಆಕ್ರಂದನದಲ್ಲಿ ದುರಂತಪ್ರಜ್ಞೆಯನ್ನು ವ್ಯಕ್ತಪಡಿಸುವ ಗುಣ ಮತ್ತೊಂದು ಕಡೆಗಿದೆ. ಇಂತಹ ವೈರುಧ್ಯದ ಚಾರಿತ್ರಿಕತೆಯು ಹೆಚ್ಚಾಗಿ ಮಹಿಳೆಯರ ಕಥನಗೀತೆಗಳಲ್ಲಿ ದಟ್ಟವಾಗಿ ಕಾಣಿಸಿಗುತ್ತದೆ. ಮಹಿಳೆಯರು ಪುರುಷ ಸಮಾಜದ ಯಾಜಮಾನ್ಯವನ್ನು ತಮ್ಮ ಅಭಿವ್ಯಕ್ತಿಯ ಹೊರ ರಚನೆಯಲ್ಲಿ ಒಪ್ಪಿ ವೈಭವೀಕರಿಸುತ್ತಲೇ ಒಳದನಿಯಲ್ಲಿ ಪಿಸುಮಾತ ಆಕ್ರಂದನದಲ್ಲಿ ದುರಂತವನ್ನು ಹಾಡುತ್ತ ಶಾಪಾಶಯದಲ್ಲಿ ಚರಿತ್ರೆಯ ವ್ಯಂಗ್ಯವನ್ನು ಅನಾಮಧೇಯವಾಗಿ ಹೊರಡಿಸಿರುತ್ತಾರೆ. ಇದು ಚರಿತ್ರೆಯ ದ್ವಿರುಕ್ತಿ ರೂಪ. ಮೌಖಿಕ ಇತಿಹಾಸದ ಉದ್ದಕ್ಕೂ ಚರಿತ್ರೆಯು ಮೌನದಲ್ಲಿ ಸಂಘರ್ಷಕ್ಕೆ ಒಳಗಾಗುವ ಪರಿಯು ಅಸಾಮಾನ್ಯವಾದುದು. ಇದರಿಂದಲೇ ಮೌಖಿಕ ಕಥನಗಳು ಒಂದೇ ಹೊತ್ತಿನಲ್ಲಿ ಸಾಮ್ರಾಜ್ಯಗಳ ಅಂಕುಶವನ್ನು ಮೀರುವುದಕ್ಕೂ ಯತ್ನಿಸುತ್ತ; ಜಾತಿ, ಧರ್ಮ ಹಾಗೂ ಪುರಷಾಧಿಪತ್ಯದ ಸಂಕೋಲೆಗಳ ಜೊತೆ ಒಪ್ಪಂದವನ್ನೂ ವಿರಸವನ್ನೂ ನಿರಂತರವಾದ ಶೀತಲಯುದ್ಧವನ್ನೂ ಮಾಡುತ್ತ ಸಾಗುತ್ತವೆ. ಇಂತಹ ಇಕ್ಕಟ್ಟಿನಲ್ಲಿ ತಮ್ಮ ಚಹರೆಗಳನ್ನು ಉಳಿಸಿಕೊಳ್ಳುವುದೇ ಸಮುದಾಯಗಳಿಗೆ ಮಹಾ ಸಾಹಸವಾಗಿತ್ತು. ಆದ್ದರಿಂದಲೇ ಮೌಖಿಕ ನಿರೂಪಣೆಗಳು ಒಂದೇ ನಿರೂಪಣೆಯಲ್ಲಿ ಎರಡು ಬಗೆಯ ಇತಿಹಾಸವನ್ನು ಪ್ರತಿಬಿಂಬಿಸುತ್ತವೆ.

ಈ ಬಗೆಯ ಮೌಖಿಕ ಚರಿತ್ರೆಗೆ ಚೌಕಟ್ಟುಗಳು ಇಲ್ಲವಾದ್ದರಿಂದ ಅದನ್ನು ವರ್ಗೀಕರಿಸಿ ಕಾಲಾನುಕ್ರಮದಲ್ಲಿ ನಿರೂಪಿಸಲು ಬರುವುದಿಲ್ಲ. ಕಾಲಾತೀತವಾಗುವುದನ್ನು ಕಾಲದ ವಿಂಗಡಣೆಗೆ ಒಳಪಡಿಸಿದರೆ ಆ ನಿರೂಪಣೆಗಳಿಗೆ ಇರುವ ಮುಕ್ತ ಸ್ವಾತಂತ್ರ‍್ಯವನ್ನು ತುಂಡರಿಸಿದಂತಾಗುತ್ತದೆ. ಮೌಖಿಕ ಸಮಾಜದ ನಿರೂಪಣೆಯ ಪ್ರಜ್ಞೆಯು ಸಂಕೀರ್ಣವಾದುದು. ಅದರ ಸಂಕೀರ್ಣತೆಯನ್ನು ನಿರ್ದಿಷ್ಟಗೊಳಿಸಿದರೆ ಕಥನಳ ಸೂಚ್ಯಾರ್ಥಗಳು ಕಳೆದುಹೋಗುತ್ತವೆ. ಮೌಖಿಕ ಚರಿತ್ರೆಯು ಬಹಳ ಮುಖ್ಯವಾಗಿ ಸುಪ್ತಪ್ರಜ್ಞೆಯ ನಿರೂಪಣೆ. ಸುಪ್ರಪ್ರಜ್ಞೆಯು ನಿರಾಕಾರದಲ್ಲಿ ಗಡಿಗಳನ್ನು ದಾಟಿರುತ್ತದೆ. ಭೌತಿಕ ಸ್ವರೂಪಕ್ಕಿಂತಲೂ ಭಾವಸ್ವರೂಪವೇ ಇಲ್ಲಿ ಮುಖ್ಯ. ಭಾವವಾದಾಗ ಸಾಕ್ಷಿಗಳು ಕೂಡ ಸಂಕೀರ್ಣವಾಗಿರುತ್ತವೆ. ಹೀಗಾಗಿಯೇ ಮೌಖಿಕ ಇತಿಹಾಸವನ್ನು ವರ್ಗೀಕರಿಸಿ ಅಧ್ಯಯನ ಮಾಡುವುದಕ್ಕಿಂತ ಅದನ್ನು ಅಖಂಡವಾಗಿ ಗ್ರಹಿಸಬೇಕು. ಸಮಷ್ಟಿಯಾಗಿ ಅದನ್ನು ತಾತ್ವೀಕರಿಸಿ ವರ್ತಮಾನ ಪ್ರತಿಧ್ವನಿಯ ಜೊತೆ ಅನುಸಂಧಾನ ಮಾಡಬೇಕು. ಮೌಖಿಕ ಕಥನಗಳನ್ನು ಸಂಗ್ರಹಿಸಿ ವಿಭಜಿಸುವುದು ಕಠಿಣವಾದ ಕ್ರಮ. ಹಾಗೆ ವಸ್ತು-ವಿಷಯದ ನೆಲೆಯಿಂದ ವಿಭಜಿಸಿದರೂ ಹೆಚ್ಚಿನದೇನನ್ನೂ ಸಾಧಿಸಿದಂತಾಗುವುದಿಲ್ಲ. ಯಾಕೆಂದರೆ ಪ್ರತಿಯೊಂದು ಜನಪದ ರಚನೆಯೂ ಸಮಷ್ಟಿಯಾಗುವುದರಿಂದ ಅವು ಖಚಿತವಾದ ವಸ್ತುನಿಷ್ಠತೆಯನ್ನು ಅನುಸರಿಸುವುದಿಲ್ಲ. (ಡಾರ್ಸನ್ ೧೯೭೭: ೨೦೬).

ಮೌಖಿಕ ಚರಿತ್ರೆಯನ್ನು ಹೇಗೆ ರಚಿಸಬೇಕು ಎಂಬುದು ದೊಡ್ಡ ಸಮಸ್ಯೆಯಲ್ಲವೇ ಎಂಬುದು ಅನೇಕರ ಪ್ರಶ್ನೆ. ನಿಜಕ್ಕೂ ಮೌಖಿಕ ಇತಿಹಾಸದ ನಿರ್ವಚನವು ಕಠಿಣವಾದ ಸವಾಲು. ಚರಿತ್ರೆ ಬರಹದ ವಿಧಾನವನ್ನೆ ಬದಲಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಯೋಚಿಸಿದರೆ ಮಾತ್ರ ಹೊಸದಾದ ಗ್ರಹಿಕೆಗಳು ಸಾಧ್ಯ. ಲಿಖಿತ ಇತಿಹಾಸದ ರಚನೆಯ ರೀತಿ ನೀತಿಗಳಿಗೂ ಮೌಖಿಕ ಇತಿಹಾಸದ ರಚನೆಯ ಕ್ರಮಕ್ಕೂ ಹಳ ಅಂತರವಿದೆ. ಲಿಖಿತ ಇತಿಹಾಸ ರಚನೆಗೆ ಸಾಕ್ಷ್ಯಗಳು, ಆಧಾರಗಳು ದಟ್ಟವಾಗಿರುವುದರಿಂದ ಅಂತಹ ಆಧಾರಗಳನ್ನು ಆಧರಿಸಿಯೇ ಚರಿತ್ರೆಯನ್ನು ಬರೆಯಬೇಕಾಗುತ್ತದೆ. ಆಧಾರವಿಲ್ಲದ್ದು ಲಿಖಿತ ಚರಿತ್ರೆಯಲ್ಲಿ ಇತಿಹಾಸವಾಗುವುದಿಲ್ಲ. ಮೌಖಿಕ ಇತಿಹಾಸದಲ್ಲಿ ಆಧಾರ ರಹಿತವಾಗಿಯೇ ಅಧಿಕೃತತೆಯನ್ನು ಪ್ರತಿಪಾದಿಸಲಾಗುತ್ತದೆ. ಮನಃಸಾಕ್ಷಿಯ ಆಧಾರದಿಂದ ಗತಕಲವನ್ನು ಅನುಸಂಧಾನ ಮಾಡುವ ಜನಪದ ಸುಪ್ತಪ್ರಜ್ಞೆಯ ಅಮೂರ್ತರೂಪಗಳನ್ನು ಮೂರ್ತೀಕರಿಸುವುದು ಸ್ವೋಪಜ್ಞವಾದ ಗ್ರಹಿಕೆಗಳಿಂದ ಸಾಧ್ಯ (ಡನ್‌ವೇ ೧೯೯೯: ೨೬೦).

ಇತಿಹಾಸದ ರಚನೆಗೆ ಬೇಕಾದುದು ಕೇವಲ ಆಧಾರಗಳು ಮಾತ್ರವೇ ಅಲ್ಲ. ಗತಕಾಲದ ಪ್ರಜ್ಞೆಯು ಸಾಕ್ಷಿಗಿಂತಲೂ ಮಿಗಿಲು. ಲಿಖಿತ ಆಧಾರಗಳು ವ್ಯಕ್ತಿನಿಷ್ಠವಾದವು. ಮೌಖಿಕ ಸಾಕ್ಷ್ಯವು ಸಮಷ್ಟಿಯಾದುದು. ಹಾಗೆಯೇ ಲಿಖಿತಾಧಾರಗಳು ಮೃತಸ್ಥಿತಿಯಿಂದ ಗತವನ್ನು ನೆನಪಿಸಿದರೆ, ಮೌಖಿಕ ಆಧಾರಗಳು ಜೀವಂತವಾಗಿ ಬದುಕಿನ ಭಾವನೆಗಳಲ್ಲಿ ಬೆರೆತು ಹೋಗಿರುತ್ತವೆ. ಹಾಗೆಯೇ ಜನಪದರ ದೈನಂದಿನ ಚಟುವಟಿಕೆಯ ಭಾಗವಾಗಿರುತ್ತವೆ. ಜೀವಂತಸಾಕ್ಷ್ಯವೇ ಅತ್ತ್ಯುತ್ತಮವಾದ ಆಧಾರ. ಮೌಖಿಕ ಇತಿಹಾಸವು ಹೀಗೆ ಜೀವಂತ ವಿಧಾನಗಳನ್ನು ರೂಢಿಸಿಕೊಂಡಿರುವುದರಿಂದ ಚರಿತ್ರೆಯು ಅವರಿಗೆ ಯಾವತ್ತೂ ದೈನಂದಿನ ಕ್ರಿಯೆ. ಹೀಗೆ ದೈನಂದಿಕವಾದುದು ಚರಿತ್ರೆ ಹೇಗಾದೀತು ಎಂಬ ಅನುಮಾನ ಗುಣಾತ್ಮಕ ವಾದುದಲ್ಲ. ರಾಜನ ಶಾಸನಗಳನ್ನು ನಂಬುವುದಕ್ಕಿಂತ ಬದುಕಿರುವ ಜನರ ಮೌಖಿಕ ಕಥನಗಳನ್ನು ವಿಶೇಷವಾಗಿ ವಿಶ್ವಾಸಪಡುವುದು ತಪ್ಪಲ್ಲ. ಮೌಖಿಕ ಚರಿತ್ರೆಯಲ್ಲಿ ಸಾಕ್ಷಿಪ್ರಜ್ಞೆಯೇ ದೊಡ್ಡದು. ಅಂದರೆ ಜನಪದರ ಸಾಕ್ಷಿಯು ಭೌತಿಕವಾದುದಲ್ಲ. ಭೌತಿಕವಾದುದನ್ನು ಮೀರಿದ್ದು ಸಾಕ್ಷಿಪ್ರಜ್ಞೆ. ಇಂತಹ ಸಾಕ್ಷಿಪ್ರಜ್ಞೆಯಲ್ಲಿ ಮನುಷ್ಯ ಸಂಬಂಧಗಳನ್ನು ಮೌಖಿಕ ಚರಿತ್ರೆಯು ನಿರೂಪಿಸುತ್ತದೆ. ಇದು ಹೀಗೆಯೇ ಆಯಿತು ಎಂದು ವಿಶ್ವಾಸಪಡುವುದು ಮೌಖಿಕ ಇತಿಹಾಸದಲ್ಲಿ ಸಾಮಾನ್ಯ. ವಿಶ್ವಾಸದಿಂದಲೇ ಅವರ ಸಾಕ್ಷಿಪ್ರಜ್ಞೆಯು ನಂಬಿಕೆಯನ್ನು ಬೆಳೆಸಿಕೊಳ್ಳುವುದು.

ಇಂತಹ ಮೌಖಿಕ ಕಥನಗಳ ಸಂವೇದನೆಯನ್ನು ಪುನರ‍್ರಚಿಸಲು ಚರಿತ್ರಕಾರನಿಗೆ ವಿಶೇಷ ಎಚ್ಚರವಿರಬೇಕು. ಅಂತಹ ಕೆಲವು ಅಂಶಗಳನ್ನಿಲ್ಲಿ ಪ್ರಸ್ತಾಪಿಸಬಹುದು;

 • ಗತಕಾಲದ ಮೌನದ ಆಸ್ಫೋಟವನ್ನು ಕೇಳಿಸಿಕೊಳ್ಳುವಂತಿರಬೇಕು; ಹಾಗೆಯೇ ನಿನ್ನೆಯ ಮೌನವನ್ನು ಇಂದಿನ ಪ್ರತಿಧ್ವನಿಯಾಗಿಸಬೇಕು.
 • ಸೃಜನಶೀಲವಾದ ಗ್ರಹಿಕೆಯಿಂದ ಸಾಕ್ಷಿಪ್ರಜ್ಞೆಯನ್ನು ಬಿಡಿಸುವಂತಿರಬೇಕು.
 • ಜಾತ್ಯತೀತವಾದ ಮಾನವ ಸಂಬಂಧಗಳನ್ನು ಬೆಸೆಯುವಂತಿರಬೇಕು.
 • ಇತಿಹಾಸದ ಆಚೆಗಿನ ಭಾವಜಗತ್ತನ್ನು ಪುನರ್‌ಸೃಷ್ಟಿಸಬೇಕು.
 • ಸಮುದಾಯಗಳ ಆತ್ಮಕಥನವನ್ನು ನಿರೂಪಿಸುವಂತಿರಬೇಕು.
 • ಗದ್ಯದ ಸೂಕ್ಷ್ಮ ರೂಪಕ ಪ್ರತಿಭೆಯಿಂದ ಅರ್ಥೈಸಬೇಕು.
 • ಸಂಸ್ಕೃತಿನಿಷ್ಠವಾದ ಅರಿವಿನಿಂದ ಸಾಮಾಜಿಕ ವಾಸ್ತವವನ್ನು ತೆರೆಯಬೇಕು.
 • ವೈಚಾರಿಕವಾದ ಬೌದ್ಧಿಕ ದಂಗೆಯನ್ನು ಪ್ರೇರೇಪಿಸುವಂತಿರಬೇಕು.
 • ಪೂರ್ವಗ್ರಗಳನ್ನು ಬಯಲುಮಾಡಿ ಚರಿತ್ರಯೆ ನಿರೂಪಣೆಯನ್ನು ಮಾನವೀಕರಣ ಗೊಳಿಸುವಂತಿರಬೇಕು.
 • ಅಧ್ಯಯನಕಾರ, ನಿರೂಪಕ, ಸಂಗ್ರಹಕಾರರ ನಡುವಿನ ಅಂತರವಳಿದು ಆ ಸಮುದಾಯವೇ ಅದರ ವರ್ತಮಾನವೇ ನಮ್ಮ ನಿರೂಪಣೆಯಲ್ಲಿ ಮಾತನಾಡುವಂತಿರಬೇಕು.
 • ಪ್ರಭುತ್ವದ ಯಾಜಮಾನ್ಯವನ್ನು ಮುರಿದು ಚರಿತ್ರೆಯ ಬಹುಧ್ವನಿಗಳನ್ನು ಅಂತರ‍್ಗತಿಸಿ ಕೊಳ್ಳುವಂತಿರಬೇಕು.
 • ಸಾಮಾಜಿಕನ್ಯಾಯದ ದನಿಯಲ್ಲಿ ಸ್ಥಾನೀಯವಾಗಿ ಸಂವೇದಿಸಬೇಕು.
 • ಜಾತಿ ಮತ್ತು ಲಿಂಗತಾರತಮ್ಯಗಳನ್ನು ಮೀರಿ ಅಲಕ್ಷಿತ ಜ್ಞಾನಪರಂಪರೆಗಳನ್ನು ಆಧುನಿಕೋತ್ತರ ಜಗತ್ತಿನ ಅನುಸಂಧಾನಗಳ ಜೊತೆ ಬೆಸೆಯುವಂತಿರಬೇಕು.
 • ನಿರ್ದಿಷ್ಟ ಬೌದ್ಧಿಕ ವಿನ್ಯಾಸಕ್ಕೆ ಕಟ್ಟು ಬೀಳಬಾರದು
 • ಲಿಖಿತ ಚರಿತ್ರೆಯ ಸಿದ್ಧಮಾದರಿಗಳನ್ನು ನಿರಾಕರಿಸಿ ಸ್ವೋಪಜ್ಞಮಾದರಿಗಳಿಗಾಗಿ ಹುಡುಕುವಂತಿರಬೇಕು.
 • ಚರಿತ್ರೆಯು ಆಗಿಹೋದ ಗತವಲ್ಲ; ಇನ್ನು ಮುಂದೆ ತನ್ನ ವರ್ತಮಾನದಿಂದಲೇ ಅದು ಪುನರ್‌ಸೃಷ್ಟಿಯಾಗಬೇಕಾದದ್ದು ಎಂಬ ದೃಷ್ಟಿಯಿರಬೇಕು.

ಈ ಬಗೆಯ ತಾತ್ವಿಕ ಅಥವಾ ಬೌದ್ಧಿಕ ಭಾವದಿಂದ ಮೌಖಿಕ ಇತಿಹಾಸವನ್ನು ರಚಿಸಬಹುದು. ಮೇಲಿನ ಅಂಶಗಳು ಕೂಡಾ ಆಯಾಮ ಚರಿತ್ರಕಾರರಿಗೆ ಭಿನ್ನವಾಗಬಹುದಾದರೂ ಇಂತಹ ಆಲೋಚನೆಗಳಿಂದ ಆರಂಭಿಸಿದರೆ ಚರಿತ್ರೆಯ ನಿರೂಪಣೆಯು ಸುಲಭವಾಗಬಹುದು. ಲೌಕಿಕವನ್ನು ಅಲೌಕಿಕ ಪರಿಭಾಷೆಗಳಿಂದ ನಿರೂಪಿಸುವ ಜನಪದರು ಮೂಲ ಘಟನೆ, ವಸ್ತು, ವಿಷಯವನ್ನು ಅನೇಕ ಬಾರಿ ನೆಪಕ್ಕೆ ಇಟ್ಟುಕೊಂಡು ಅದರ ಮೂಲಕ ಅರ್ಥವನ್ನು ಬಚ್ಚಿಟ್ಟುಕೊಂಡು ಬಿಡುತ್ತಾರೆ. ತಮ್ಮ ಕಥೆಯನ್ನು ಬೇರೆಯವರ ಕಥೆಎಂಬಂತೆ ಹೇಳುತ್ತಲೇ ಬೇರೆಯವರ ಕಥೆಯ ಪ್ರತಿಬಿಂಬದಲ್ಲೂ ತಮ್ಮ ಚಹರೆಯನ್ನು ಬೆರೆಸಿಕೊಳ್ಳುತ್ತಾರೆ. ಮಧ್ಯಕಾಲೀನ ಸಾಮ್ರಾಜ್ಯಗಳ ಹೊತ್ತಿನಲ್ಲಿ ಛಿದ್ರಗೊಂಡಿದ್ದ ಹಲವಾರು ಸಮುದಾಯಗಳು ತಮ್ಮ ತಮ್ಮ ಚಹರೆಗಳಿಗಾಗಿ ಮಾಡಿರುವ ಮೌಖಿಕ ಯತ್ನವು ಗಂಭೀರವಾದ ಅಧ್ಯಯನಗಳಿಗೆ ಫಲವತ್ತಾದ ನೆಲೆ. ಬಹುಪಾಲು ಎಲ್ಲಾ ಮೌಖಿಕ ಕಥನಗಳು ಸಮುದಾಯದ ಆತ್ಮಕಥನವನ್ನೇ ಬಿಂಬಿಸುತ್ತಿದ್ದರೂ ಅವರ ಸಾಂಸ್ಕೃತಿಕ ವೀರರ ಕಾವ್ಯಗಳು ಸಾಮಸ್ಕೃತಿಕ ಚರಿತ್ರೆಯ ಸಂಘರ್ಷಗಳನ್ನು ಧ್ವನಿಸುತ್ತಿರುತ್ತವೆ. ಕನ್ನಡನಾಡಿನ ಜನಪದ ಕಾವ್ಯಗಳ ಮೂಲಕ ಕನ್ನಡ ಸಂಸ್ಕೃತಿ ಚರಿತ್ರೆಯನ್ನು, ಸಮುದಾಯ ಚರಿತ್ರೆಯನ್ನು ರಚಿಸುವುದಕ್ಕೆ ಇದು ತಕ್ಕ ಕಾಲ. ಜಾತಿ ಮತ್ತು ಲಿಂಗಸಂಬಂಧಿ ಇತಿಹಾಸವನ್ನು ಮೌಖಿಕ ಇತಿಹಾಸದ ಜೊತೆಗೇ ಸಂಯೋಜಿಸಿ ಬರೆಯುವುದು ಜರೂರಾಗಿದೆ. ಮೌಖಿಕ ಕಥನಗಳನ್ನೇ ಪ್ರಧಾನವಾಗಿ ಅನುಸರಿಸಿ ಅವುಗಳ ಮೂಲಕ ಮಧ್ಯಕಾಲೀನ ಕರ್ನಾಟಕದ ಅವಸ್ಥೆ ಹೇಗಿತ್ತು ಎಂಬುದನ್ನು ಸಂರಚಿಸಲು ವಿಪುಲ ಅವಕಾಶಗಳಿವೆ. ಹಾಗೆ ಬರೆಯಲ್ಪಡುವ ಚರಿತ್ರೆಯಿಂದ ಈಗಾಗಲೇ ನಿರ್ಮಿತವಾಗಿರುವ ಚರಿತ್ರೆಗಿಂತಲೂ ಮಿಗಿಲಾದ ಇತಿಹಾಸವು ಸಾಧ್ಯವಾಗುತ್ತದೆ. ಅಂತಹ ದಿಕ್ಕಿನಲ್ಲಿ ಈಗ ತಾನೆ ಗಂಭೀರವಾದ ಅಧ್ಯಯನಗಳು ಆರಂಭಗೊಂಡಿವೆ. ಇತಿಹಾಸದ ಬಗ್ಗೆ ಅಧಿಕೃತ ವಾರಸುದಾರಿಕೆಯಿಂದ ಮಾತನಾಡುವ ಕೇಸರಿ ಮತ್ತು ಕೆಂಪು ವಿದ್ವಾಂಸರಿಬ್ಬರಿಗೂ ಮೌಖಿಕ ಇತಿಹಾಸದ ಸಂರಚನೆಯಿಂದ ಮತ್ತೊಂದು ಆಯಾಮವನ್ನು ಪರಿಚಯಿಸಿಕೊಡಬೇಕಾಗಿದೆ. ಆ ಮೂಲಕ ಇತಿಹಾಸವನ್ನು ಚಲನಶೀಲಗೊಳಿಸಿದಂತಾಗುತ್ತದೆ. ರಾಷ್ಟ್ರೀಯ ಇತಿಹಾಸದ ಏಕಾಕೃತಿಯ ಇತಿಹಾಸದ ಮಾದರಿಯು ಈ ತನಕ ಚರಿತ್ರಕಾರರನ್ನು ತನ್ನ ಹುಸಿ ಘನತೆಗೆ ಬಿಗಿದುಕಟ್ಟಿ ಆಳಿದೆ. ಆದರಿಂದ ಬಿಡಿಸಿಕೊಳ್ಳುವುದು ಇತಿಹಾಸಕ್ಕೂ ವಿಮುಕ್ತಿಯನ್ನು ನೀಡಿದಂತೆಯೆ. ಇನ್ನಾದರೂ ಪ್ರತಿಷ್ಠಿತ ಚರಿತ್ರೆಯಿಂದ ಹೊರಬಂದು ಚರಿತ್ರಕಾರರು ಮೌಖಿಕ ಇತಿಹಾಸದ ರಚನೆಗೆ ಮುಂದಾಗಬೆಕಿದೆ.

ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯನ್ನು ಮಹಿಳೆಯರ ಕಥನಗೀತೆ, ಕಾವ್ಯ, ಆಚರಣೆ ಹಾಗೂ ಸಂಪ್ರದಾಯಗಳ ಮೂಲಕವೇ ರಚಿಸಿದ್ದೇ ಆದರೆ, ಇತಿಹಾಸದ ಎಷ್ಟೋ ಪೂರ್ವ ಗ್ರಹಗಳಿಗೆ ತಕ್ಕ ಉತ್ತರವನ್ನು ನೀಡಿದಂತಾಗುತ್ತದೆ. ಪುರುಷಾಧಿಪತ್ಯದ ಚರಿತ್ರೆಯ ಅಪರಾಧ ಗಳಿಂದ ದೂರವಾದ ಕಥನಗೀತೆಗಳ ಒಳಗಿನ ಸುಪ್ತ ಇತಿಹಾಸವು ನಮ್ಮ ಅರಿವಿಗೆ ಬೇಕಾಗಿದೆ. ಜನಪದ ಸಾಹಿತ್ಯದ ಅನೇಕ ಸಂಗತಿಗಳನ್ನು ಕೇವಲ ಸಾಹಿತ್ಯದ ನೆಲೆಯಿಂದಲೇ ಗುರುತಿಸುವ ಪರಿಪಾಠ ಈಗ ಕಡಿಮೆ ಆಗಿದ್ದು, ಅವುಗಳ ಚಾರಿತ್ರಿಕ ಅಂಶವನ್ನು ಪತ್ತೆ ಮಾಡುವುದು ವಿಶೇಷವಾಗಿದೆ. ಆರಂಭದಲ್ಲಿ ನವೋದಯಪ್ರಜ್ಞೆಯ ಜಾನಪದ ಅಧ್ಯಯನಕಾರರು ಮೌಖಿಕ ಪರಂಪರೆಯನ್ನು ಗಂಭೀರವಾಗಿ ಪರಿಗಣಿಸಿ ಕ್ಷೇತ್ರನಿಷ್ಠವಾಗಿ ಸಂಗ್ರಹಿಸಿ, ಇಡಿಯಾಗಿ ಜನಪದ ಸಮಾಜವನ್ನು ರಾಷ್ಟ್ರೀಯ ಭಾವೈಕ್ಯತೆಯಲ್ಲಿ ಉದಾರವಾಗಿ ವಿವರಿಸಿದ್ದಾರೆ. ಇಂತಹ ಒಲವಿನ ಸಂಗ್ರಹಗಳನ್ನು ಪುನರ್‌ಪರಿಶೀಲಿಸಿಯೇ ಇನ್ನೊಮ್ಮೆ ಕ್ಷೇತ್ರಕಾರ್ಯವನ್ನು ಕೈಗೊಳ್ಳುವುದರ ಮೂಲಕವೇ ಮೌಖಿಕ ಚರಿತ್ರೆಯನ್ನು ಅನುಸಂಧಾನ ಮಾಡಬೇಕು. ಇಪ್ಪತ್ತೊಂದನೇ ಶತಮಾನದ ಆಧುನಿಕೋತ್ತರ ನಿರ್ವಚನೆಗಳೆಲ್ಲವೂ ಅಲಕ್ಷಿತ ಜ್ಞಾನಪರಂಪರೆಗಳ ಮೂಲಕವೇ ಜಾಗತಿಕವಾದ ಮಾನವ ಸಂಬಂಧಗಳನ್ನು ಪುನರ್ ಭಾವಿಸುತ್ತಿವೆ. ಸ್ಥಳೀಯವಾದದ್ದರ ಅರಿವಿನಿಂದಲೇ ಜಾಗತಿಕವಾದ ವಿಶ್ವಾಕೃತಿಗಳು ಜನ್ಮ ತಳೆಯುವುದು. ಮೌಖಿಕ ಚರಿತ್ರೆಯ ನಿರ್ವಚನದಿಂದಲೂ ಇಂತಹ ಬೌದ್ಧಿಕ ವಿಸ್ತರಣೆ ಸಾಧ್ಯ. ಏಕಕಾಲಕ್ಕೆ ಸ್ಥಳೀಯವೂ ವಿಶ್ವಾತ್ಮಕವೂ ಆಗಿಬಿಡುವ ಮತ್ತು ಎಲ್ಲ ಬಗೆಯ ಕೃತಕ ಆವರಣಗಳನ್ನು ಮೀರಿಬಿಡುವ ಮೌಖಿಕ ಇತಿಹಾಸದ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ನೆಲೆಗಳು ತುಂಬ ಸಂಕೀರ್ಣವಾದವು. ಅಂತಹ ಕಥನಗಳ ಮೂಲಕವೇ ನಮ್ಮ ಕಾಲದ ಚರಿತ್ರೆಯನ್ನು ನಾವು ಬೆಸೆಯಲು ಸಾಧ್ಯ.

ಪರಾಮರ್ಶನ ಗ್ರಂಥಗಳು

೧. ಕಾಲಿಂಗ್‌ವುಡ್ ಆರ್.ಜಿ., ೧೯೯೪. ದಿ ಐಡಿಯಾ ಆಫ್ ಹಿಸ್ಟರಿ, ನ್ಯೂಡೆಲ್ಲಿ: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್.

೨. ಡೇವಿಡ್‌ಕೆ. ಡನ್‌ವೇ, ೧೯೯೯. ಓರಲ್ ಹಿಸ್ಟ್ರಿ ಆನ್ ಇಂಟರ್‌ಡಿಸಿಪ್ಲಿನರಿ ಆಂಥೋಲಜಿ, ಕ್ಯಾಲಿಫೋರ್ನಿಯಾ: ಆಲ್ಟಮಿರ ಪ್ರೆಸ್.

೩. ಪರಮಶಿವಯ್ಯ ಜೀ.ಶಂ., ೧೯೮೪. ದಕ್ಷಿಣ ಕರ್ನಾಟಕ ಜನಪದ ಕಾವ್ಯ ಪ್ರಕಾರಗಳು, ಮೈಸೂರು: ಪ್ರಸಾರಾಂಗ ಮೈಸೂರು ವಿಶ್ವವಿದ್ಯಾನಿಲಯ.

೪. ಬೀರೆಂದ್ರನಾಥ ದತ್ತ, ೨೦೦೨. ಫೋಕ್‌ಲೋರ್ ಅಂಡ್ ಹಿಸ್ಟೋರಿಯಾಗ್ರಫಿ, ಚನ್ನೈ: ನ್ಯಾಷನಲ್‌ ಫೋಕ್‌ಲೋರ್‌ ಸಪೋರ್ಟ್ ಸೆಂಟರ್.

೫. ಮೊಗಳ್ಳಿ ಗಣೇಶ್, ೨೦೦೬. ಮೌಖಿಕ ಕಥನ, ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೬. ಮೊಗಳ್ಳಿ ಗಣೇಶ್, ೧೯೯೭. ದೇಶಿ, ವಿದ್ಯಾರಣ್ಯ : ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೭. ರಿಚರ್ಡ್ ಎಂ. ಡಾರ್ಸನ್, ೧೯೭೭. ಫೋಕ್‌ಲೋರ್ ಅಂಡ್‌ ಫೋಕ್‌ ಲೈಫ್‌, ನ್ಯೂಯಾರ್ಕ್‌: ಇಂಡಿಯಾನ ಯೂನಿವರ್ಸಿಟಿ ಪ್ರೆಸ್.

೮. ಲೋರಿಹಾಂಕೊ, ೧೯೯೮. ಟೆಕ್ಸಚುವಲೈಸೇಷನ್‌ ಆಫ್ ಸಿರಿ ಎಪಿಕ್, ಹೆಲ್ಸಿಂಕ್: ಎಫ್‌.ಎಫ್‌.ಕಮ್ಮೆನಿಕಾರನ್.

* * *