ಚರಿತ್ರೆ ರಚನಾಶಾಸ್ತ್ರ ಮತ್ತು ವಿಧಾನಗಳಿಗೆ ಸಂಬಂಧಿಸಿದ ಪ್ರಕಟಣೆಗಳು ಎರಡು ಮೂರು ದಶಕಗಳ ಹಿಂದೆ ಕನ್ನಡದಲ್ಲಿ ಅಲ್ಲಲ್ಲಿ ಬಂದಿವೆ. ಈ ಜ್ಞಾನಶಾಖೆಗೆ ಸಂಬಂಧಿಸಿದಂತೆ ಕಳೆದೆರಡು ದಶಕಗಳಲ್ಲಿ ಜಗತ್ತಿನಾದ್ಯಂತ ತೀವ್ರವಾದ ಚರ್ಚೆಗಳಾಗುತ್ತಿದ್ದರೂ ಕನ್ನಡದಲ್ಲಿ ಅವುಗಳ ಸಂವಾದ ಕಡಿಮೆ. ಈ ಅಪವಾದದಿಂದ ಹೊರ ಬರಬೇಕೆನ್ನುವ ಪ್ರಯತ್ನವನ್ನು ಸುಮಾರು ಒಂದು ದಶಕದ ಹಿಂದೆ ನಾವು ಹೊರತಂದ ಚರಿತ್ರೆ ವಿಶ್ವಕೋಶದಲ್ಲಿ ಮಾಡಲಾಯಿತು. ಅದರಲ್ಲಿ ಬಂದ ಲೇಖನಗಳನ್ನು ಬಳಸಿಕೊಂಡು, ಕೆಲವನ್ನು ಮಾರ್ಪಡಿಸಿಕೊಂಡು ಮತ್ತೂ ಕೆಲವು ಲೇಖನಗಳನ್ನು ಹೊಸದಾಗಿ ಸೇರಿಸಿ ಪ್ರಸ್ತುತ ಸಂಪುಟದಲ್ಲಿ ಅವುಗಳನ್ನು ಪ್ರಕಟಿಸಲಾಗಿದೆ. ಚರಿತ್ರೆ ಕುರಿತಾದ ಇತ್ತೀಚಿನ ಜಿಜ್ಞಾಸೆಗಳನ್ನು, ಸೈದ್ಧಾಂತಿಕತೆಗಳನ್ನು ಹಾಗೂ ತತ್ವಶಾಸ್ತ್ರಿಯ ಪ್ರಶ್ನೆಗಳನ್ನು ಚರ್ಚಿಸಲು ಪ್ರಸ್ತುತ ಸಂಪುಟವು ಪ್ರಯತ್ನಿಸಿದೆ.

ಜಗತ್ತಿನ ಬೇರೆ ಬೇರೆ ಕಡೆದ ಇದ್ದ/ಇರುವ ಚರಿತ್ರೆಯ ತಾತ್ವಿಕ ಪ್ರಶ್ನೆಗಳನ್ನು ಚರಿತ್ರೆಯ ಬೇರೆ ಬೇರೆ ಕಾಲ ಸಂದರ್ಭಗಳಲ್ಲಿ ವಿಮರ್ಶೆ ಮಾಡಿದ ವಿವರಗಳನ್ನು ಈ ಸಂಪುಟವು ಚರ್ಚಿಸಿದೆ. ಧಾರ್ಮಿಕ, ರಾಷ್ಟ್ರೀಯ ಪ್ರಶ್ನೆಗಳಿಂದ ಹಿಡಿದು ಇಪ್ಪತ್ತನೆಯ ಶತಮಾನದ ಪ್ರಬಲ ಸೈದ್ಧಾಂತಿಕ ಕ್ರಮವಾದ ಮಾರ್ಕ್ಸ್‌ವಾದದ ತೀವ್ರತೆಗಳನ್ನು ಜಗತ್ತಿನ ಬೇರೆ ಬೇರೆ ಕಾಲಘಟ್ಟದ ಐತಿಹಾಸಿಕ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಚರ್ಚಿಸಲಾಗಿದೆ. ಆಧುನಿಕತೆಯನ್ನು ತನ್ನ ವಿಮರ್ಶೆಯ ಜಾಡಿಗೆ ಹಿಡಿದ ಆಧುನಿಕೋತ್ತರ ಚಿಂತನೆ ಹಾಗೂ ಅದಕ್ಕೆ ಸಂಬಂಧಿಸಿದ ವಿವಿಧ ಜ್ಞಾನಶಾಖೆಗಳ ಪರಿಚಯವನ್ನು ಕನ್ನಡದಲ್ಲಿ ಮಾಡಿಕೊಡುವ ಪ್ರಯತ್ನವನ್ನು ಪ್ರಸ್ತುತ ಸಂಪುಟವು ಹೊಂದಿದೆ.

ಚರಿತ್ರೆ ಬರವಣಿಗೆ ಎನ್ನುವುದು ದಾಖಲೆಗಳ ಸಂಗ್ರಹ ಮಾತ್ರ ಎನ್ನುವ ತಿಳುವಳಿಕೆಯನ್ನು ಮೀರುವ ಪ್ರಸ್ತುತ ಸಂಪುಟದ ಲೇಖನಗಳು ಚರಿತ್ರೆಯ ಸಂವೇದನೆಗಳ ವಿವಿಧ ಆಯಾಮಗಳನ್ನು ನಮಗೆ ತಿಳಿ ಹೇಳುತ್ತವೆ. ಆ ಮೂಲಕ ಚರಿತ್ರೆಯ ಇನ್ನೊಂದು ಮುಖವನ್ನು ಈ ಲೇಖನಗಳು ಅನಾವರಣ ಮಾಡಲು ಪ್ರಯತ್ನಿಸಿವೆ. ವರ್ತಮಾನಕಾಲದ ಆಶಯಗಳಾಗಿ ಇವು ತಮ್ಮ ಹಾದಿಯನ್ನು ಸ್ಪಷ್ಟಪಡಿಸಿಕೊಳ್ಳುತ್ತಿವೆ.

ಚರಿತ್ರೆ ವಿಶ್ವಕೋಶವನ್ನು ಹೊರತರಲು ಪ್ರೇರಕಶಕ್ತಿಯಾಗಿದ್ದ ಆರಂಭಿಕ ಕುಲಪತಿ ಡಾ. ಚಂದ್ರಶೇಖರ ಕಂಬಾರ, ಕುಲಸಚಿವರಾಗಿದ್ದ ಡಾ. ಕೆ.ವಿ. ನಾರಾಯಣ ಅವರನ್ನು ಈ ಸಂದರ್ಭದಲ್ಲಿ ನೆನೆಯುತ್ತೇವೆ. ಈಗಾಗಲೇ ತಿಳಿಸಿದ ಹಾಗೆ ಇಲ್ಲಿನ ಬಹುತೇಕ ಲೇಖನಗಳು ಚರಿತ್ರೆ ವಿಶ್ವಕೋಶದಲ್ಲಿ ಪ್ರಕಟವಾದವು. ಅವುಗಳಲ್ಲಿ ಬಹಳಷ್ಟು ಪರಿಷ್ಕಾರವಾದವು. ಇವುಗಳೊಂದಿಗೆ ಹಲವು ಹೊಸ ಲೇಖನಗಳನ್ನು ನಮ್ಮ ವಿದ್ವಾಂಸರು ಬರೆದುಕೊಟ್ಟಿದ್ದಾರೆ. ಈ ಬಗೆಯ ಕೃತಿಗಳು ಹೊರಬರಲೇಬೇಕೆಂದು ಒತ್ತಾಸೆ ನೀಡಿದ ಹಿಂದಿನ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಅವರಿಗೆ ನಮ್ಮ ಕೃತಜ್ಞತೆಗಳು. ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರಿಗೆ, ಕುಲಸಚಿವರಾದ ಹಾಗೂ ಪ್ರಸಾರಾಂಗದ ನಿರ್ದೇಶಕರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ ಮತ್ತು ಪ್ರಸಾರಾಂಗದ ಹಿಂದಿನ ನಿರ್ದೇಶಕರಾದ ಡಾ. ಎ. ಮೋಹನ ಕುಂಟಾರ್ ಅವರಿಗೆ ನಾವು ಆಭಾರಿಯಾಗಿದ್ದೇವೆ.

ಈ ಯೋಜನೆಯ ವಿಷಯತಜ್ಞರಾದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ಎ. ಬಾರಿ ಹಾಗೂ ಇತಿಹಾಸ ಪ್ರಾಧ್ಯಾಪಕರಾದ ಡಾ. ರಾಜಾರಾಮ ಹೆಗಡೆ ಅವರಿಗೆ ವಿಶೇಷ ಕೃತಜ್ಞತೆಗಳು. ಈ ಕೃತಿಯನ್ನು ಹೊರತರಲು ಶ್ರಮಿಸಿದ ವಿಭಾಗದ ಹಿಂದಿನ ಮುಖ್ಯಸ್ಥರಾದ ಡಾ. ಕೆ. ಮೋಹನ್‌ಕೃಷ್ಣ ರೈ ಹಾಗೂ ವಿಭಾಗದ ಇಂದಿನ ಮುಖ್ಯಸ್ಥರಾದ ಡಾ. ಎನ್. ಚಿನ್ನಸ್ವಾಮಿ ಸೋಸಲೆ ಅವರಿಗೂ, ಸಹೋದ್ಯೋಗಿಗಳಾದ ಪ್ರೊ. ಲಕ್ಷ್ಮಣ್‌ತೆಲಗಾವಿ ಹಾಗೂ ಡಾ. ಸಿ.ಆರ್. ಗೋವಿಂದರಾಜು ಅವರಿಗೆ ನಾವು ಆಭಾರಿಯಾಗಿದ್ದೇವೆ.

ಈ ಕೃತಿಯ ಪುಸ್ತಕವಿನ್ಯಾಸ ಮಾಡಿದ ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರಿಗೆ, ಮುಖಪುಟ ವಿನ್ಯಾಸ ಮಾಡಿದ ಶ್ರೀ ಯು.ಟಿ. ಸುರೇಶ್ ಅವರಿಗೆ, ವಿಷಯಸೂಚಿ ತಯಾರಿಯಲ್ಲಿ ನೆರವಾದ ಶ್ರೀ ಅಮರೇಶ ಆಲ್ಕೋಡ್ ಮತ್ತು ಶ್ರೀ ಎಸ್. ಮುನಿರಾಜು ಅವರಿಗೆ ಅಕ್ಷರ ಜೋಡಣೆ ಮಾಡಿದ ಹೊಸಪೇಟೆಯ ಯಾಜಿ ಗ್ರಾಫಿಕ್ಸ್‌ನ ಶ್ರೀಮತಿ ಸವಿತಾ ಯಾಜಿ, ಶ್ರೀ ಗಣೇಶ ಯಾಜಿ ಅವರಿಗೆ ಹಾಗೂ ಕೃತಿಯನ್ನು ಆಕರ್ಷಕವಾಗಿ ಮುದ್ರಿಸಿದ ಲಕ್ಷ್ಮೀ ಮುದ್ರಣಾಲಯ ಬೆಂಗಳೂರು ಅವರಿಗೆ ನಮ್ಮ ಕೃತಜ್ಞತೆಗಳು.

– ವಿಜಯ್‌ ಪೂಣಚ್ಚ ತಂಬಂಡ
– ವಿರೂಪಾಕ್ಷ ಪೂಜಾರಹಳ್ಳಿ