ಅಮೆರಿಕ ಸಂಯುಕ್ತ ಸಂಸ್ಥಾನಗಳು

ವಸಾಹತು ದಿನಗಳಿಂದಲೂ ಅಮೆರಿಕನ್ ಮಹಿಳೆಯರು ಮಾನವ ಮತ್ತು ಮಹಿಳಾ ಹಕ್ಕುಗಳಿಗಾಗಿ ನಡೆದ ಸಾಮಾಜಿಕ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಮಾನವಹಕ್ಕುಗಳಿಗಾಗಿ ೧೭ನೆಯ ಶತಮಾನದಲ್ಲಿ ನಡೆದ ವಿಚಾರವಾದಿ ಚಳವಳಿಗಳು ಆಶೋತ್ತರಗಳನ್ನು ಹೆಚ್ಚಿಸಿದವು. ಡೇನಿಯಲ್‌ಡಿಫೋ, ಬೆಂಜಮಿನ್ ಫ್ರಾಂಕ್ಲಿನ್ ಮತ್ತು ಡಾ. ಬೆಂಜಮಿನ್ ರಶ್ ಅಂತಹ ಖ್ಯಾತನಾಮರು ಮಹಿಳೆಯರಿಗೆ ಶಿಕ್ಷಣವನ್ನು ಪ್ರತಿಪಾದಿಸಿದರು. ಆದರೆ ಮಹಿಳೆಯರಿಗೆ ತಮ್ಮ ಕೀಳರಿಮೆಯ ಆಳ ಅರಿವಾದದ್ದು ಗುಲಾಮಗಿರಿಯನ್ನು ತೊಡೆದು ಹಾಕಲು ನಡೆಸಿದ ಹೋರಾಟದಲ್ಲಿ. ತಮ್ಮದೇ ಸಾಮಾಜಿಕ ಹಕ್ಕುಗಳನ್ನು ವಿಸ್ತರಿಸಲು ಹೇಗೆ ಸಂಘಟಿತರಾಗಬೇಕೆನ್ನುವುದೂ ಆಗ ಅವರ ಅರಿವಿಗೆ ಬಂದಿತು. ೧೬೪೭ ರಷ್ಟು ಹಿಂದೆಯೇ ಮೇರಿಲ್ಯಾಂಡ್ ಶಾಸನ ಸಭೆಯಲ್ಲಿ ಮಾರ್ಗರೆಟ್ ಬ್ರೆಂಟ್ ತನಗೆ “ಸ್ಥಾನವಿರಬೇಕು, ಮಾತಿಗೆ ಅವಕಾಶವಿರಬೇಕು” ಎಂದು ಒತ್ತಾಯಪಡಿಸಿದ್ದಳು. ಆಕೆಯ ಗವರ್ನರ್ ಲಿಯೋನಾರ್ಡ್ ಕಾಲ್‌ವರ್ಟಿನು ಮಾಡಿದ ಉಯಿಲಿನ ನಿರ್ವಾಹಕಿಯಾಗಿದ್ದರೂ ಅವಳ ಕೋರಿಕೆಯನ್ನು ನಿರಾಕರಿಸಲಾಯಿತು. ೧೬೯೧ರಿಂದ ೧೭೮೦ರವರೆಗೆ ಆಸ್ತಿಗೆ ಒಡತಿಯರಾಗಿದ್ದ ಸ್ತ್ರೀಯರು ಮಸಾಚುಸೆಟ್‌ನಲ್ಲಿ ವೋಟು ಚಲಾಯಿಸುತ್ತಿದ್ದರು. ಕ್ರಾಂತಿಯ ನಂತರ ನ್ಯೂಜೆರ್ಸಿಯು ಮಹಿಳೆಯರಿಗೆ ತಾತ್ಕಾಲಿಕವಾಗಿ ಮತದಾನದ ಹಕ್ಕನ್ನು ನೀಡಿತು. ೧೭೯೦ರಲ್ಲಿ ಚುನಾವಣಾ ಕಾನೂನಿನ ಪರಿಷ್ಕರಣವಾದಾಗ “ಅವನು ಅಥವಾ ಅವಳು” ಎಂಬ ಪದಗಳನ್ನು ಉಪಯೋಗಿಸಲಾಯಿತು. ಈ ಅವಕಾಶದ ಅನ್ವಯ ೧೮೦೭ರವರೆಗೆ ಕೆಲವು ಮಹಿಳೆಯರು ಮತದಾನದಲ್ಲಿ ಭಾಗವಹಿಸಿದರು. ಆಗ ಶಾಸನ ಸಭೆಯು ಮತವನ್ನು ಬಿಳಿಯ ಪುರುಷ ಪೌರರಿಗೆ ಸೀಮಿತಗೊಳಿಸಿತು.

ಆದರೂ ೧೮೯೦ರ ಕೊನೆಯ ವರ್ಷಗಳಲ್ಲಿ ಹಾಗೂ ಮೊದಲನೆಯ ಮಹಾಯುದ್ಧಕ್ಕೆ ಮೊದಲು ನಡೆದ ಸಾಮಾಜಿಕ ಸುಧಾರಣಾ ಚಳುವಳಿಗಳು, ದುಡಿಯುವ ಗಂಡಸರ ಮತ್ತು ಹೆಂಗಸರ ಹಕ್ಕುಗಳಿಗಾಗಿ ನಡೆದ ಆಂದೋಲನಗಳು, ಬೇರೆಡೆಯಿಂದ ಬಂದ ವಲಸಿಗರು ಮತ್ತು ಬಡವರ ಪರವಾಗಿ, ನಡೆದ ಚಳವಳಿಗಳು ಇವೆಲ್ಲದರಲ್ಲೂ ಸ್ತ್ರೀಯರು ಪ್ರಧಾನಪಾತ್ರ ವಹಿಸಿದ್ದರು. ಮಹಾಕುಸಿತದ (ಗ್ರೇಟ್ ಡಿಪ್ರೆಷನ್) ಸಮಯದಲ್ಲಿ, ಮಹಿಳೆಯರು ಸಂಘಗಳ ರಚನೆಯಲ್ಲಿ ನಿರುದ್ಯೋಗಿಗಳ ಕಷ್ಟವನ್ನು ಪರಿಹರಿಸಲು ಸರಕಾರವು ಕೈಗೊಂಡ ಕಲ್ಯಾಣ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲುಗೊಂಡಿದ್ದರು. ೧೯ನೆಯ ಶತಮಾನದಲ್ಲಿ ಮತ್ತು ನಂತರ, ಮೊದಲನೆಯ ಮಹಾಯುದ್ಧದ ನಂತರ ಮಾಡಿದ ಹಾಗೆ ಮಹಿಳೆಯರು ರಾಜಕೀಯದಲ್ಲಿ ಭಾಗವಹಿಸಿದರು. ಈ ಚಳುವಳಿಗಳಲ್ಲಿ ಅವರಿಗೆ ದೊರೆತ ಅನುಭವದಿಂದ ಅವರ ಸ್ಥಾನಮಾನದ ಅರಿವುಂಟಾಯಿತು. ಏಕೆಂದರೆ ಮಹಿಳಾ ಮತಚಲಾವಣೆಯ ಆಂದೋಲನದ ಪ್ರಾರಂಭಕ್ಕೆ ಇದು ದಾರಿಯಾಯಿತು.

ಲಂಡನ್ನಿನಲ್ಲಿ ೧೯೪೦ರಲ್ಲಿ ನಡೆದ ಜಾಗತಿಕ ದಾಸ್ಯ ವಿರೋಧಿ ಸಮ್ಮೇಳನದಲ್ಲಿ ಇಲ್ಲಿಯ ಪ್ರಮುಖ ದಾಸ್ಯವಿರೋಧಿ ನಾಯಕರಿಗೆ ಭಾಗವಹಿಸಲು ಅವಕಾಶ ನೀಡಲಿಲ್ಲ. ಪೌರಹಕ್ಕುಗಳು ಮತ್ತು ಯುದ್ಧವಿರೋಧಿ ಚಳುವಳಿಗಳಲ್ಲಿ ಪಾಲುಗೊಂಡ ಮಹಿಳೆಯರು, ಅದುವರೆಗೂ ಪುರುಷರು ಮಹಿಳೆಯರನ್ನು ಹಾಸಿಗೆಯ ಸಂಗಾತಿಗಳನ್ನಾಗಿ, ಮನೆಯ ಕೆಲಸದಾಳುಗಳಾಗಿ, ಮಗುವಿಗೆ ತಾಯಿಯಾಗಿ, ಆರ್ಥಿಕ ಉತ್ಪಾದಕರಾಗಿ ನೋಡಿದ್ದಾರೆಯೇ ಹೊರತು ನೀತಿ ನಿರ್ಮಾಪಕರನ್ನಾಗಿ ಎಂದೂ ಪರಿಗಣಿಸಿಲ್ಲ ಎಂದು ದೂರಿದರು.

೧೮೩೦ ಮತ್ತು ೧೮೪೦ರ ವರ್ಷಗಳಲ್ಲಿ ಪೂರ್ಣಮತದಾನದ ಹಕ್ಕನ್ನು ಒತ್ತಾಯಿಸುವಂತೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಹೆಚ್ಚು ಹೆಚ್ಚು ಪ್ರಯತ್ನಗಳು ನಡೆದವು. ಪೌಲಿನಾ ರೈಟ್ ಡೇವಿಸ್, ಲೂಕ್ರೇಷಿಯಾ ಮೋಟ್, ಲೂಸಿ ಸ್ಟೋನ್, ಆರ್ನ್‌ಸ್ವೀನ್ ರೋಸ್, ಅಬಿಗೇಲ್ ಕೆಲ್ಲಿ ಫಾಸ್ಟರ್ ಮತ್ತು ಆಂಜೆಲಿನಾ ಹಾಗೂ ಸಾರಾ ಗ್ರಿಮ್ಕೆ ಮಹಿಳಾ ಹಕ್ಕುಗಳಿಗಾಗಿ ವಾದಿಸಿದರು. ಮಾರ್ಗರೇಟ್ ಫುಲ್ಲರ್‌ಳ ವುಮನ್ ಇನ್‌ದಿ ನೈಟೀಂನ್ತ್ ಸೆಂಚುರಿ (೧೮೪೫) ಎನನ್ನುವಂತಹ ಪುಸ್ತಕಗಳು ಪ್ರಭಾವ ಬೀರಿದವು. ಆಮೇಲೆ ೧೮೪೮ರ ಜೂನ್‌ನಲ್ಲಿ ಎಲಿಜಿಬೆತ್ ಕ್ಯಾಡೀ ಸ್ಟಾಂಟನ್, ಲೂಕ್ರೇಷಿಯಾ ಮೋಟ್, ಮಥಾಟ ಸಿ-ರೈಟ್ ಮತ್ತು ಮೇರಿ ಆನ್ ಮೆಕ್ಲಿಂಟಾಕ್ ಇವರು ಮಹಿಳೆಯರ ಹಕ್ಕುಗಳನ್ನು ಚರ್ಚಿಸಲು ಒಂದು ಸಮ್ಮೇಳನಕ್ಕಾಗಿ ಕರೆ ನಿಡಿದರು. ನ್ಯೂಯಾರ್ಕಿನ ಸೆನೆಕಾಫಾಲ್ಸ್‌ನ ವೆಸ್ಲಿಯನ್ ಚೇಪಲ್‌ನಲ್ಲಿ ಜುಲೈ ೧೯ ಮತ್ತು ೨೦ರಂದು ನಡೆದ ಈ ಸಮಾವೇಶವು ಅಮೆರಿಕದ ಸ್ವಾತಂತ್ರ್ಯ ಘೋಷಣೆಯ ಮಾದರಿಯಲ್ಲಿ ತತ್ವಗಳ ಘೋಷಣೆಯೊಂದನ್ನು ಅಂಗೀಕರಿಸಿತು. ೬೮ ಜನ ಮಹಿಳೆಯರೂ ೩೨ ಪುರುಷರೂ ಸಹಿ ಮಾಡಿದ್ದ ಈ ಸೆನೆಕಾಫಾಲ್ಸ್ ಘೋಷಣೆಯು ಹೀಗೆ ಹೇಳಿತು:

ಈ ಸತ್ಯಗಳು ಸ್ವಯಂಸ್ಪಷ್ಟವಾಗಿವೆಯೆಂದು ನಾವು ಭಾವಿಸುತ್ತೇವೆ. ಎಲ್ಲ ಪುರುಷರು ಮಹಿಳೆಯರೂ ಸಮಾನರಾಗಿಯೇ ಸೃಷ್ಟಿಸಲ್ಪಟ್ಟಿದ್ದಾರೆ.. ಮಾನವ ಜನಾಂಗದ ಇತಿಹಾಸವೆಂದರೆ ಪುರುಷರು ಮಹಿಳೆಯ ಮೇಲೆ ಮತ್ತ ಮತ್ತೆ ಎಸಗುತ್ತಲೇ ಬಂದ ದಬ್ಬಾಳಿಕೆ, ದೌರ್ಜನ್ಯಗಳ ಇತಿಹಾಸವಾಗಿದೆ. ಅವಳ ಮೇಲೆ ಸಂಪೂರ್ಣ ನಿರಂಕುಶ ಅಧಿಕಾರವನ್ನು ಸ್ಥಾಪಿಸುವ ಉದ್ದೇಶವನ್ನು ಅದು ಹೊಂದಿದೆ…

ಮಹಿಳೆಗೆ ಸಮಾನ ಶಿಕ್ಷಣದ ಹಕ್ಕನ್ನೂ ಬೋಧಿಸಲು, ಕಲಿಸಲು ಜೀವಿಕೆಗಾಗಿ ದುಡಿಯಲು ಹಕ್ಕುಗಳಿಗಾಗಿ ಈ ಸಮಾವೇಶವು ಒತ್ತಾಯಿಸಿತು. “ಮತದಾನದ ಪವಿತ್ರ ಹಕ್ಕನ್ನು ತಮಗಾಗಿ ಪಡೆದುಕೊಳ್ಳುವುದು ಈ ದೇಶದ ಮಹಿಳೆಯರ ಪವಿತ್ರ ಕರ್ತವ್ಯವಾಗಿದೆ” ಎಂಬ ನಿರ್ಣಯವನ್ನು ಸಮಾವೇಶವು ಅಂಗೀಕರಿಸತು. ಹೀಗೆ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಸ್ತ್ರೀ ಮತದಾನದ ಹಕ್ಕಿಗಾಗಿ ಹೋರಾಟದ ತಳಹದಿಯನ್ನು ಹಾಕಲಾಯಿತು. ಸೆನೆಕಾಫಾಲ್ಸ್ ಸಮಾವೇಶದ ಬೆನ್ನಿಗೇ ಇತರ ರಾಜ್ಯಗಳಲ್ಲೂ ಸಮ್ಮೇಳನಗಳು ನಡೆದುವು. ಸಿವಿಲ್‌ವಾರ್ (ಅಂತರ್‌ಯುದ್ಧ) ನಂತರ ಮಹಿಳಾ ಮತದಾನದ ಹೋರಾಟವು ಕಾರ‍್ಯವಿಧಾನದ ಆಧಾರದಿಂದ ಒಡೆಯಿತು. ಇದು ಸಂಭವಿಸಿದ್ದು ೧೮೬೯ರಲ್ಲಿ. ಎರಡು ಸಂಘಟನೆಗಳು ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಂಚೂಣಿಯಲ್ಲಿದ್ದವು. ದಿ ನ್ಯಾಷನಲ್ ವುಮನ್ ಸಫ್ರೇಜ್ ಅಸೋಸಿಯೇಷನ್ ಎನ್ನುವ ಸಂಘಟನೆಗೆ ಸುಸಾನ್ ಬಿ ಆಂಥೋಣಿ ಮತ್ತು ಎಲಿಜಬೆತ್ ಕ್ಯಾಡಿ ಸ್ಟಾಂಟನ್ ಮುಖ್ಯಸ್ಥೆಯರಾಗಿದ್ದರು. ಇನ್ನೊಂದು, ಅಮೆರಿಕನ್ ವುಮನ್ ಸಫ್ರೇಜ್ ಅಸೋಸಿಯೇಷನ್. ಇದಕ್ಕೆ ಲೂಸಿ ಸ್ಟೋನ್ ಮತ್ತು ಜೂಲಿಯಾ ವಾರ್ಡ್ ಹೋವಿ ಮುಖ್ಯಸ್ಥರು. ೧೮೯೦ರಲ್ಲಿ ಎರಡೂ ಸಂಸ್ಥೆಗಳು ಮತ್ತೆ ನ್ಯಾಷನಲ್ ಅಮೆರಿಕನ್ ವುಮೆನ್ ಸಫ್ರೆಜ್ ಅಸೋಸಿಯೇಷನ್ ಎಂದು ಒಂದುಗೂಡಿದವು. ಈ ಸಂಸ್ಥೆಯ ಸಾಧನೆಗಳು ಶ್ಲಾಘನೀಯವಾಗಿದ್ದರೂ, ಪೂರ್ಣಪ್ರಮಾಣದಲ್ಲಿ ಮಹಿಳಾ ಮತದಾನ ಹಕ್ಕನು ಅಮೆರಿಕ ಸಂಯುಕ್ತ ಸಂಸ್ಥಾನಗಳ ಸಂವಿಧಾನಕ್ಕೆ ತಿದ್ದುಪಡಿ ತರಲು ಒತ್ತಾಯಿಸಿತು. “ಆಂತೋಣಿ ಅಮೆಂಡ್‌ಮೆಂಟ್” ಎಂದು ಪ್ರಸಿದ್ಧವಾದ ಈ ತಿದ್ದುಪಡಿಯು ಎರಡು ಸಾರಿ ಸೋತಿತು. ಆ ವೇಳೆಗೆ ಮಹಾಯುದ್ಧದ ಆರಂಭ ಕಾಲವಾಗಿತ್ತು. ಯುದ್ಧ ಸಮಯದ ಅನುಭವಗಳೂ ಮಹಿಳೆಯರಿಗೆ ತಮ್ಮ ನೆಲೆಯನ್ನು ಕಂಡುಕೊಳ್ಳಲು ದಾರಿಮಾಡಿದವು. ಮಹಿಳೆಯರು ಲೈಂಗಿಕ ಜೀವನವನ್ನು ತ್ಯಾಗ ಮಾಡಿ, ಅದೇ ಸಮಯಕ್ಕೆ ಸಾಮಾನ್ಯವಾಗಿ ಪುರುಷರ ಕ್ಷೇತ್ರವಾಗಿದ್ದ ರಾಜಕೀಯ ಮತ್ತು ಆರ್ಥಿಕ ಹೊಣೆಗಾರಿಕೆಗಳನ್ನು ನಿರ್ವಹಿಸಬೇಕಾಗಿ ಬಂದಾಗ, ಅವರ ರಾಜಕೀಯ ಸಾಮರ್ಥ್ಯ ಮತ್ತು ಆರ್ಥಿಕಶಕ್ತಿ ಪ್ರಧಾನವಾದುವು. ಅಂತಹ ಸಂದರ್ಭಗಳಲ್ಲಿ ದುಡಿಯುವ ಕಾರ್ಮಿಕ ಶಕ್ತಿಯಾಗಿ ಮಹಿಳೆಯ ಅಗ್ತಯ ಕಂಡುಬಂದಿತು. ಅವರು ಫ್ಯಾಕ್ಟರಿಗಳಿಗೆ ಹೋಗಬೇಕಾಯಿತು, ಕಚೇರಿಗಳಲ್ಲಿ ದುಡಿಯಬೇಕಾಯಿತು. ಆದರೆ ಪುರುಷರು ಅವರ ಸ್ಥಾನವನ್ನು ದುಡಿಯುವ ರ್ಸತಿತಿ ಬಂದಾಗ ಇವರನ್ನು ಹೊರನೂಕಲಾಯಿತು. ಈ ಚಟುವಟಿಕೆಗಳಿಂದಾಗಿ ತಾವೂ “ಪುರುಷರ ಕಾರ್ಯ”ಗಳನ್ನು ನಿರ್ವಹಿಸಲು ಸಾಧ್ಯವಿರುವುದು ಮಹಿಳೆಯರಿಗೆ ಮನದಟ್ಟಾಯಿತು. ಉದಾಹರಣೆಗೆ ಸಿವಿಲ್‌ವಾರ್ ಸಮಯದಲ್ಲಿ ಮಹಿಳೆಯರು ದರ್ಜಿಗಳಾದರು, ನರ್ಸುಗಳಾದರು, ಉಪಧ್ಯಾಯಿನಿಯರಾದರು, ಸರಕಾರಿ ಕಚೇರಿಗಳಲ್ಲಿ ಗುಮಾಸ್ತೆಯರಾದರು, ತೋಟಗಳಲ್ಲಿ ದುಡಿಯುವ ಆಳಾದರು. ೧೩ನೆಯ ತಿದ್ದುಪಡಿಗಾಗಿ ಕೆಲಸ ಮಾಡುವಾಗ ರಾಜಕೀಯ ಕೌಶಲ್ಯವನ್ನು ಬೆಳೆಸಿಕೊಂಡರು.

ಮೊದಲನೆಯ ಮಹಾಯುದ್ಧದ ಗಂಭೀರ ಪರಿಣಾಮಗಳು ಮಹಿಳೆಯರ ಮೇಲೆ ಪ್ರಭಾವ ಬೀರಿತು. ಗೈರುಹಾಜರಾದ ಪುರುಷರ ಬದಲಿಗಾಗಿ ಕಾರ್ಯತಂಡದಲ್ಲಿ ಭಾಗವಹಿಸಿದ್ದರಿಂದ ಅವರಿಗೆ ತಮ್ಮ ಉತ್ಪಾದಕ ಸಾಮರ್ಥ್ಯಗಳ ವಿಷಯದಲ್ಲಿ ಹೆಚ್ಚಿನ ವಿಶ್ವಾಸ ಮೂಡಿತು. ಗರ್ಭನಿರೋಧಕ ಸಾಧನಗಳಲ್ಲಿ ಸುಧಾರಣೆ ಉಂಟಾಗಿ ಅವರಿಗೆ ವಿವಾಹೇತರ ಲೈಂಗಿಕ ಸಂಪರ್ಕದಲ್ಲಿ ಸ್ವಾತಂತ್ರ್ಯ ಹೆಚ್ಚಿತು. ಮಹಿಳಾ ಕಾಲೇಜು ಪದವೀಧರರ ಪ್ರಮಾಣ ಹೆಚ್ಚಿತು. ಕಾರ್ಮಿಕ ವರ್ಗದಲ್ಲಿ ವಿವಾಹಿತ ಮಹಿಳೆಯರ ಪ್ರಮಾಣವು ಹೆಚ್ಚಿತು. ಹಾಗೆಯೇ ಮಹಿಳೆಯರು ಒತ್ತಾಯಿಸಿ ಮಂಜೂರು ಮಾಡಿಸಿಕೊಂಡ ಲೈಂಗಿಕ ಸಾತಂತ್ರ್ಯದ ಪರಿಧಿಯು ಹೆಚ್ಚಾಯಿತು. ಆದರೆ “ನವ ಮಹಿಳೆ”ಯುಬಹುಬೇಗ ಮಹಾಕುಸಿತದ (Great Depression) ಸಂಕಷ್ಟಗಳಲ್ಲಿ ಮುಳುಗಿಹೋದಳು. ಅಷ್ಟರಲ್ಲಿ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಗಿತ್ತು. ಆರ್ಥಿಕ ಕುಸಿತದ ಸಮಯದಲ್ಲಿ ಔಪಚಾರಿಕ ರಾಜಕೀಯ ಸಮಾಣತೆಯು, ವಾಸ್ತವವಾದ ರಾಜಕೀಯ ಅಥವಾ ಆರ್ಥಿಕ ಸಮಾನತೆಯಲ್ಲಿ ಮಹಿಳೆಯರು ಇನ್ನೂ ಪ್ರಬಲವಾಗಿಲ್ಲ ಎಂಬ ವಿಚಾರ ಅರಿವಿಗೆ ಬಂದಿತು. ಸಾವಿರಾರು ಜನ ಮಹಿಳೆಯರು ಉದ್ಯೋಗವಿಲ್ಲದೆ ಕುಳಿತರು. ಎರಡನೆಯ ಮಹಾಯುದ್ಧದಿಂದಾಗಿ ಮಹಿಳೆಯರನ್ನು ಹೆಚ್ಚು ಸಂಖ್ಯೆಯಲ್ಲಿ ದುಡಿಮೆಯ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಆದರೆ ಗಂಡಸರು ಹಿಂದಿರುಗಿ ಬಂದೊಡನೆ ಇವರನ್ನು ಮನೆಗಟ್ಟಲಾಯಿತು. ಆದರೆ ಯುದ್ಧ ಮುಗಿದೊಡನೆಯೇ ತರುಣ ತರುಣಿಯರಲ್ಲಿ ಕೌಟುಂಬಿಕ ಪ್ರಜ್ಞೆ ಹೆಚ್ಚಾಗಿ ಬೆಳೆಯಿತು. ಬೆಟ್ಟಿ ಫ್ರೀಡನ್ನಳ ದಿ ಫೆಮಿನೈನ್ ಮಿಸ್ಟೀಕ್ ಇದರಿಂದಾಗಿ ಪ್ರಾಧಾನ್ಯ ಪಡೆಯಿತು. ಆದರೆ ೧೯ನೆಯ ಶತಮಾನದ ಉತ್ತರಾರ್ಧದ ವೇಳೆಗೆ ತಾಂತ್ರಿಕ ಸುಧಾರಣೆಗಳಿಂದಾಗಿ ಕ್ರಮೇಣ ಗೃಹಿಣಿಯ ಕೆಲಸದ ಹೊರೆ ಕಡಿಮೆಯಾಗಿತ್ತು. ಹಾಗೆಯೇ ಶಿಶುಜನನದ ಮೇಲೆ ತಾಂತ್ರಿಕ ಹತೋಟಿ ಬಂದುದರಿಂದ ಮಹಿಳೆಗೆ ಆಕೆಯ ಅತ್ಯಂತ ಅಪಾಯಕಾರಿಯಾದ ಹೊರೆ, ಪದೇ ಪದೇ ದುರ್ಬಲಗೊಳಿಸುವ ಗರ್ಭದಾರಣೆ ಹಾಗೂ ಶಿಶುಜನನ ಸಂದರ್ಭದ ಮರಣದ ಹೊರೆಗಳು ತಪ್ಪಿತು. ೧೯೬೦ರಂದೀಚೆಗೆ ಮಹಿಳೆಯರು ತಮ್ಮ ಸಂತಾನವೃದ್ಧಿಯ ವಿಷಯದಲ್ಲಿ ಸಂಪೂರ್ಣ ಹತೋಟಿಯನ್ನು ಇಟ್ಟುಕೊಂಡಿದ್ದಾರೆ. ಇದು ಅನೇಕಾನೇಕ ಆಧುನಿಕ ತಂತ್ರಜ್ಞಾನದ ಸುಧಾರಣೆಗಳಿಂದಾಗಿ ಮಹಿಳೆಯರಿಗೆ ರಾಷ್ಟ್ರಕ್ಕೂ ಮತ್ತು ತಮಗೂ ಮುಡುಪಾಗಿಡಲು ಬೇಕಾದಷ್ಟು ಸಮಯ ದೊರಕಿದೆಯೆಂದು ಹೇಳಬಹುದು.

ಜರ್ಮನಿ

ಫ್ರೆಂಚ್ ಮಹಾಕ್ರಾಂತಿಯಾದಾಗಿನಿಂದ ಜರ್ಮನಿಯಲ್ಲಿ ಸಮಾಜವಾದಿ ಚಿಂತನೆಯ ಪ್ರಭಾವವು ಎದ್ದ ಕಾಣುತ್ತದೆ. ಇದರಿಂದಾಗಿ ಅಲ್ಲಿಯ ಸ್ತ್ರೀವಾದಿ ಮುಖಂಡರು ಮಹಿಳೆಯರ ಮೇಲೆ, ಒಟ್ಟಾರೆ ಇಡೀ ದುಡಿಯುವ ವರ್ಗದ ಮೇಲೆ ನಡೆಯುತ್ತಿರವ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟಿಸಲು ಕಾರಣವಾಯಿತು. ಹಾಗೆಯೇ, ಸಮಾಜದ ವರ್ಗ ರಚನೆಯು ಅಳಿಯುವವರೆಗೂ ಮಹಿಳೆಯರು ತಮ್ಮ ಪೂರ್ಣ ಸ್ವಾತಂತ್ರವನ್ನು ಪಡೆಯಲಾರರು ಎಂಬ ಸಮಾಜವಾದಿ ನಿಲುವನ್ನು ತಳೆಯುವಂತಾಯಿತು. “ಯಾವುದೇ ದೇಶದಲ್ಲಿ ಸಾಮಾಜಿಕ ಪ್ರಗತಿಯನ್ನು ಅಲ್ಲಿ ಮಹಿಳೆಗೆ ಇರುವ ಸಾಮಾಜಿಕ ಸ್ಥಾನಮಾನದಿಂದ ಕರಾರುವಕ್ಕಾಗಿ ಅಳೆಯಬಹುದು” ಎಂದು ಮಾರ್ಕ್ಸ್ ೧೮೬೮ರಲ್ಲಿ ಘೋಷಿಸಿದರು. ೧೮೮೧ರಲ್ಲಿ ಜರ್ಮನ್ ಸೋಷಲಿಸ್ಟ್ ಡೆಮೊಕ್ರಾಟರು, ಆಗಸ್ಟ್ ಬೆಜಿಲ್‌ನ ಪ್ರಭಾವದಿಂದ “ಮಹಿಳೆಯರಿಗೆ ಅನನುಕೂಲವಾಗಿ ವರ್ತಿಸುತ್ತಿರುವ ಎಲ್ಲ ಕಾನೂನುಗಳನ್ನು ರದ್ದುಪಡಿಸಬೇಕೆಂದು” ಒತ್ತಾಯಪಡಿಸಿದರು. ಸಾಮಾಜಿಕ ಮತ್ತು ನ್ಯಾಯಿಕ ಹಕ್ಕುಗಳಿಗಾಗಿ ಮೊದಲನೆಯ ಸ್ಪಷ್ಟ ನಿಲುವು ಕಂಡದ್ದು ಬೆಬೆಲ್‌ನ ಡೀ ಫ್ರೌ ಅಂಡ್ ಡೇರ್ ಸೋಸಿಯಾಲಿಸ್ಮ್‌ಸ್ (ಜೂರಿಚ್ ೧೮೮೩) ಎಂಬ ಕೃತಿಯಲ್ಲಿ. ಮಹಿಳೆಯರು ತಮ್ಮ ಸ್ವಂತ ಆರ್ಥಿಕ ಒತ್ತಡದಿಂದ ಮಾತ್ರವೇ ಸಾಮಾಜಿಕ ಮತ್ತು ನ್ಯಾಯಿಕ ಹಕ್ಕುಗಳನ್ನು ಪಡೆಯುವುದು ಸಾಧ್ಯ ಎಂಬ ಆಧಾರದ ಮೇಲೆ ಮಹಿಳೆಯರು ಹೆಚ್ಚು ಹೆಚ್ಚಾಗಿ ಕೈಗಾರಿಕೆಗಳನ್ನು ಸೇರಿಕೊಳ್ಳುವಂತೆ ಒತ್ತಾಯಪಡಿಸಿದವರಲ್ಲಿ ಮೊದಲಿಗ ಬೆಬಲ್.

ಬಿಸ್ಮಾರ್ಕನು ಕೈಸರನಷ್ಟೇ ಸ್ತ್ರೀವಾದಿ ವಿರೋಧಿ. ಸ್ತ್ರೀವಾದದ ಪ್ರಗತಿಗೆ ಅವನು ತಡೆಯೊಟ್ಟಿದನು. ಆದರೂ ಸೋಷಿಯಲಿಸ್ಟರು ಮತ್ತು ಲಿಬರಲ್‌ರ ಕೂಡು ಪ್ರಯತ್ನದಿಂದ ಜರ್ಮನ್ ಮಹಿಳೆಯರು ೧೯೧೮ರಲ್ಲಿ ತಮ್ಮ ವೀಮರ್ ರಿಪಬ್ಲಿಕ್‌ನಿಂದ ಮತದಾನದ ಹಕ್ಕನ್ನು ಪಡೆದರು. ಹಿಟ್ಲರನು ಮಹಿಳಾ ನಿಯಂತ್ರಿತ “ಬೇರೂತ್‌ಗೆ” ಮರುಳಾದರೂ ಅವನ ಕಾಲದಲ್ಲಿ ಸ್ತ್ರೀವಾದಿಗಳು ಸುಮ್ಮನೆ ಕಾದಿರಬೇಕಾಯಿತು. ಈಗ ಇರುವ ಬಾನ್ ರಿಪಬ್ಲಿಕ್, ಮಹಿಳೆಯು ವೀಮರ್ ಆಳ್ವಿಕೆಯಲ್ಲಿ ಸವಿದ ರಾಜಕೀಯ ಮತ್ತು ನ್ಯಾಯಿಕ ಹಕ್ಕುಗಳನ್ನು ಮತ್ತೆ ನೀಡಿದೆ. ಇಲ್ಲಿಯೂ ಕೈಗೆ ಬಂದದ್ದು ಬಾಯಿಗಿಲ್ಲವಾಗುವ ಹಲವು ಸಂದರ್ಭಗಳು ಇವೆ. ಆದರೂ ಪ್ರಚಲಿತ ನಂಬಿಕೆಗೆ ವಿರುದ್ಧವಾಗಿ, ಜರ್ಮನ ಮಹಿಳೆಯು ಇತರ ಪಶ್ಚಿಮ ಯುರೋಪಿಯನ್ ಮಹಿಳೆಯರಂತೆ ಹೆಚ್ಚು ಕಷ್ಟಕ್ಕೆ ಸಿಕ್ಕಿಕೊಳ್ಳಲಿಲ್ಲ. ಕೈಸರ್ ಮತ್ತು ಹಿಟ್ಲರ್ ಇವರ ಆಳ್ವಿಕೆಯ ಎರಡು ಕಾಲಾವಧಿಗಳಲ್ಲಿ ಮಾತ್ರ ಸ್ಯ್ರೀ ಚಟುವಟಿಕೆಗಳು ಕಿಂಡರ್, ಕುಚಿ ಮತ್ತು ಕುರ್ಚಿ (ಮಕ್ಕಳು, ಅಡಿಗೆ ಮಾಡುವುದು ಮತ್ತು ಚರ್ಚು) ಈ ಮೂರಕ್ಕೆ ಸೀಮಿತವಾಗಿತ್ತು. ಸಂಗೀತ, ಕಲೆ ಮತ್ತು ಸಾಹಿತ್ಯಗಳಲ್ಲಿನ ಯುರೋಪಿಯನ್ ರೊಮಾಂಟಿಕ್ ಚಳವಳಿಯ ನಾಯಕರು ಬ್ಲೇಕ್ ಮತ್ತು ಶೆಲ್ಲಿಯಿಂದ ಗೊಯೆತ್ ಮತ್ತು ಸ್ಕಿಲ್ಲರ್‌ವರೆಗಿನ, ಮೊಸಾರ್ಟ್‌ನಿಂದ ಬೀತೋವನ್ ಮತ್ತು ಸ್ಕುಬರ್ಟ್‌ವರೆಗಿನ ಮಹಾಕವಿಗಳಿಗೆ “ನಾಯಕಿ” ಯಾರಾದರೂ ಇದ್ದರೆ ಅವಳು ಜರ್ಮನ್ ಮಹಿಳೆಯೇ ಆಗಿದ್ದಳು. ಒಂದು ಅರ್ಥದಲ್ಲಿ ಇಡೀ ರೊಮಾಂಟಿಕ್ ಚಳವಳಿ ಶಿಖರವನ್ನು ಮುಟ್ಟಿದ್ದು ಮಹಿಳೆಯ ವೈಭವೀಕರಣ ಮತ್ತು ಆರಾಧನೆಯಲ್ಲಿ.

ಹೆಣ್ಣು ದೈಹಿಕ ಸೌಂದರ್ಯದ ಹಾಗೆಯೇ ಆಧ್ಯಾತ್ಮಿಕ ಸೌಂದರ್ಯದ ಸಂಕೇತವಾದಳು. ಗೊಯತೆಯ ಫೌಸ್ಟ್‌ನಲ್ಲಿ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವ ನಿತ್ಯವಾದ ನಾರಿತ್ವವು, ಕೆಲವು ಅವಸರಗಾರ ಓದುಗರು ಭಾವಿಸುವಂತೆ, ಹೆಂಗಸಿನ ಕರ್ತವ್ಯವು ಮೇಲ್ಮಟ್ಟದ ಗಂಡಸಿಗೆ ಪ್ರೋತ್ಸಾಹ ನೀಡುತ್ತ ‘ಸಲಹೆ ನೀಡುವ ದೇವತೆ’ಯ ಕರ್ತವ್ಯವಲ್ಲ. ಅಲ್ಲಿ ನಮ್ಮನ್ನು ಮೇಲಕ್ಕೊಯ್ಯುವುದು ಬದುಕಿನ ರಚನಾತ್ಮಕ ಶಕ್ತಿಯೇ ಹೊರತು ಪ್ರೇಮದ್ದಲ್ಲ. ಗೊಯತೆಯು ಆಕೆಯನ್ನು ಬದುಕಿನ ರಚನಶೀತನೆಯ ಸಂಕೇತವನ್ನಾಗಿ ಮಾಡಿ ಅವಳಿಗೆ ಅತ್ಯಧಿಕ ಗೌರವ ಮನ್ನಣೆಗಳನ್ನು ನೀಡುತ್ತಾನೆ.

ಪೆರಿತ್ರೋಯಿಸ್ಕ ಪೂರ್ವದ ಸೋವಿಯತ್ ರಷ್ಯಾ ಮತ್ತು ಚೀನಾ

ನವೆಂಬರ್ ೧೯೧೭ ರಲ್ಲಿ ಜಾರಿಗೆ ಬಂದ ಸೋವಿಯತ್ ಸಂವಿಧಾನವು ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಯ ಎಲ್ಲ ಕ್ಷೇತ್ರಗಳಲ್ಲೂ ಹೆಣ್ಣು – ಗಂಡುಗಳ ನಡುವೆ ಸಂಪೂರ್ಣ ಸಮಾನತೆಯನ್ನು ಸ್ಥಾಪಿಸಿತು. ರಷ್ಯಾದ ಕ್ರಾಂತಿಯು ಬೇರೆಯೇ ಆದ ಅನುಭವವನ್ನು ಕೊಟ್ಟಿತು. ೧೯೨೦ ರ ವರ್ಷಗಳಲ್ಲಿ ಮುಂದುವರಿದ ಸಾಮಾಜಿಕ ಕಾನೂನುಗಳು ಸ್ವಾತಂತ್ರ್ಯವನ್ನು ನೀಡಲು ಉದ್ದೇಶಿತವಾಗಿದ್ದವು. ವಿವಾಹ ವಿಚ್ಚೇದನವು ಮುಕ್ತವಾಯಿತು. ಗಂಡ, ಹೆಂಡತಿ ಯಾರು ಬೇಕಾದರೂ ಬಹು ಸುಲಭವಾಗಿ ವಿಚ್ಛೇದನವನ್ನು ಪಡೆಯಬಹುದಾಯಿತು. ಹಾಗಾಗಿ ವಿವಾಹ ವ್ಯವಸ್ಥೆಯೇ ರದ್ದಗೊಂಡಿತು. ಕಾನೂನು ಬಾಹಿರತೆ ಹೋಯಿತು, ಗರ್ಭಪಾತವು ಅನಿರ್ಬಂಧಿತವಾಯಿತು ಇತ್ಯಾದಿ. ಹಿಂದುಳಿದ ಅರೆ ಸಾಕ್ಷರ ಸಮಾಜವೊಂದು ಅತಿವೇಗವಾಗಿ ಔದ್ಯಮೀಕರಣದ್ತ ಸಾಗುತ್ತಿರಲು ಈ ಕಾನೂನುಗಳು ಸಾಮಾಜಿಕವಾಗಿ ಮತ್ತು ಜನಸಂಖ್ಯೆ ದೃಷ್ಟಿಯಿಂದ ಮಾಡಿದ ಪರಿಣಾಮಗಳಿಂದಾಗಿ ಗಂಡಾಂತರಕಾರಿಯಾಗಿದ್ದವು. ಬಹುಬೇಗ ಸ್ಟಾಲಿನಿಸಂ ಬಂದು ಸಾಂಪ್ರದಾಯಿಕ ಮೌಲ್ಯಗಳ ಉಕ್ಕಿನ ಚೌಕಟ್ಟನ್ನು ಬಿಗಿಪಡಿಸಿತು. ವಾರಸುದಾರಿಕೆ ಚಾಲ್ತಿಗೆ ಬಂದಿತು. ವಿಚ್ಛೇದನೆ ಅಸಾಧ್ಯವಾಯಿತು, ಗರ್ಭಪಾತ ಕಾನೂನು ಬಾಹಿರವಾಯಿತು, ಇತ್ಯಾದಿ. ಮಳೆಯರು ದುಡಿಯುವ ಹಕ್ಕನ್ನೂ, ಬಾಧ್ಯತೆಯನ್ನು ಉಳಿಸಿಕೊಂಡೇ ಇದ್ದರು. ಆದರೆ ಈ ಪ್ರಯೋಜನಗಳನ್ನು ಕುಟುಂಬವನ್ನು ತೊಡೆದು ಹಾಕುವ ಮತ್ತು ಮುಕ್ತ ಲೈಂಗಿಕತೆಯ ಮುಂದಿನ ಪ್ರಯತ್ನಗಳೊಂದಿಗೆ ತಳಕು ಹಾಕಲಿಲ್ಲವಾದ ಕಾರಣ, ಸಾಮಾನ್ಯವಾದ ಬಿಡುಗಡೆಯು ಸಿದ್ಧಿಸಲಿಲ್ಲ. ಶಿಕ್ಷಣವು ಸರಕಾರದ ಸ್ವಾಮ್ಯವಾಗಿದೆ, ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನ ಆಧಾರದ ಮೇಲೆ ಶಾಲಾ ಶಿಕ್ಷಣವನ್ನು ನೀಡಲಾಗುತ್ತಿತ್ತು. ಏಳರಿಂದ ಹದಿನೇಳು ವಯಸ್ಸಿನವರೆಗಿನ ಮಕ್ಕಳಿಗೂ ಉಚಿತವಾದ ಮತ್ತು ಕಡ್ಡಾಯವಾದ ಶಿಕ್ಷಣವನ್ನು ನೀಡುವುದು ರಷ್ಯಾದ ನೀತಿಯಾಗಿದೆ. ೧೯೧೭ ರಲ್ಲಿ ರಷ್ಯನ್ ಕ್ರಾಂತಿಯಾದ ಮೇಲೆ ಪ್ರಾರಂಭವಾದ ಸಹ ಶಿಕ್ಷಣವು ೧೯೪೩ರಲ್ಲಿ ನಿಂತುಹೋಗಿದ್ದದ್ದು ಮತ್ತೆ ೧೯೫೪ ರಲ್ಲಿ ಪ್ರಾರಂಭಗೊಂಡಿತು.

ಚೀನಾ ದೇಶವೂ ೧೯೨೧ ರಲ್ಲಿ ಸಂವಿಧಾನವನ್ನು ರಚಿಸಿದಾಗ ಸ್ತ್ರೀಪುರುಷರಿಗೆ ಸಮಾನತೆಯನ್ನು ನೀಡಿತು. ಆದರೆ ಮಹಿಳೆಯರಿಗೆ ಮತದಾನದ ಹಕ್ಕ ದೊರೆತದ್ದು ೧೯೪೭ ರಲ್ಲಿ ಮಾತ್ರವೇ. ಸಂತಾನೋತ್ಪಾದನೆಯಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಕೊಡುವಲ್ಲಿ ಚೀನಾದಲ್ಲಿ ಹೆಚ್ಚಿನ ಪ್ರಾಮುಖ್ಯ ನೀಡಲಾಗಿದೆ. ಇದರಿಂದಾಗಿ ಮಹಿಳೆಯರ ಸಾಮಾಜಿಕ ಜಾಗೃತಿ ಸುವ್ಯಕ್ತವಾಗಿದೆ. ಆದರೆ ಅದರ ಜೊತೆಯಲ್ಲೇ ಲೈಂಗಿಕತೆಯ ದಮನವೂ ಉಗ್ರ ಮಡಿವಂತಿಕೆಯೂ ಅಲ್ಲಿ ಕಾಣಿಸಿಕೊಂಡಿವೆ ಎಂಬ ವಾದವೂ ಇದೆ. ಇದರಿಂದಾಗಿ ಮಹಿಳೆಯರು ಆರ್ಥಿಕ ಜೀವನದಲ್ಲಿ ಅಪಾರ ಸಂಖ್ಯೆಯಲ್ಲಿ ಪಾಲುಗೊಳ್ಳುವಂತಾಗಿದೆ. ಕುವೋಮಿಂಗ್ ಟಾಂಗ್ ಚೀನಾದಲ್ಲಿ ಪ್ರಚಾರವಾಗಿರುವ ಭ್ರಷ್ಟಾಚಾರ ಮತ್ತು ವೇಶ್ಯಾವೃತ್ತಿಗಳ ವಿರುದ್ಧವಾಗಿ ಸಾಂಸ್ಕೃತಿಕ ಪ್ರತಿಕ್ರಿಯೆಗಳನ್ನು ತೋರಿಸಬೇಕಾದ ಅಗತ್ಯವುಂಟಾಗಿದೆ. ಹಿಂದಿನ ಆಳ್ವಿಕೆಗಳಲ್ಲಿ ಕಂಡುಬಂದ ಮಹಿಳೆಯರ ಶೋಷಣೆ ತೀವ್ರವಾಗಿದ್ದರಿಂದ ಚೀನಾ ಕ್ರಾಂತಿಯ ಸಮಯದಲ್ಲಿ ಗ್ರಾಮಗಳ ಮಟ್ಟದಲ್ಲಿ ಮಹಿಳೆಯರು ಅಸಾಧಾರಣವಾಗಿ ಅಧಿಕ ಪ್ರಮಾಣದಲ್ಲಿ ಪಾಲ್ಗೊಂಡರು. ಸರಕಾರವೇ ಉಚಿತವಾಗಿ ಅಧಿಕೃತವಾಗಿ ಗರ್ಭನಿರೋಧಕಗಳನ್ನು ಬೃಹತ್ ಪ್ರಮಾಣದಲ್ಲಿ ಜನತೆಗೆ ವಿತರಣೆ ಮಾಡತೊಡಗಿದ ಮೊದಲ ಕೆಲವೇ ದೇಶಗಳಲ್ಲಿ ಚೀನಾ ಒಂದು.

ಭಾರತ

ಭಾರತದ ಭೌತಿಕ, ಸಾಂಸ್ಕೃತಿಕ, ಧಾರ್ಮಿಕ, ಭಾಷಿಕ, ಜನಾಂಗಿಕ ಮತ್ತು ರಾಜಕೀಯ ಸ್ತರಗಳ ವೈವಿಧ್ಯ ಹಾಗೂ ಅವುಗಳನ್ನು ರೂಪಿಸಿದ ಇತಿಹಾಸಗಳು ಭಾರತೀಯ ಮಹಿಳಾ ಆಂದೋಲನವನ್ನು ದಾಖಲುಪಡಿಸುವುದನ್ನು ಕಷ್ಟವಾಗಿಸಿವೆ. ಸ್ಥೂಲವಾಗಿ ಸ್ತ್ರೀವಾದಿ ಚಟುವಟಿಕೆಗಳು ಎಂದು ಕರೆಯಬಹುದಾದ ಚಟುವಟಿಕೆಗಳು ಅಥವಾ ಅಭಿವ್ಯಕ್ತಿಗಳು ಭಾರತದಲ್ಲಿ ಬಹು ಪ್ರಾಚೀನ ಕಾಲಕ್ಕೆ ಹೋಗುತ್ತವೆ. ಆ ಬಗೆಗೆ ಇನ್ನೂ ಬೇಕಾದಷ್ಟು ಸಂಶೋಧನೆಗಳು ನಡೆಯಬೇಕಾಗಿದೆ. ಆ ಶೋಧನೆಗಳೇ ಸಮಕಾಲೀನ ಸ್ತ್ರೀವಾದಿ ಕಾಳಜಿಗಳ ಮುಖ್ಯವಾದ ಭಾಗವಾಗಿ, ಭಾರತದ ಇಂದಿನ ರಾಜಕೀಯ ಚಟುವಟಿಕೆಗಳೊಂದಿಗೆ ಹೆಣೆದುಕೊಂಡಿವೆ. ಬೇರೆ ದೇಶಗಳಲ್ಲಿನಂತೆಯೇ ಇಲ್ಲೂ ಅವು ಇತಿಹಾಸದ ಭಾಗವಾಗುತ್ತವೆ. ಉಪಯುಕ್ತ ಭೂತಕಾಲವಾಗಿ, ಸ್ತ್ರೀವಾದಿ ಧ್ವನಿಗಳ ಒಂದು ದೇಶೀಯ ಪರಂಪರೆಯನ್ನೇ ಒದಗಿಸುತ್ತವೆ. ಆದರೆ ಕವಿಯತ್ರಿಯರ, ಸಂತಮಹಿಳೆಯರ ಮತ್ತು ಹಿಂದಿನ ರಾಜಕೀಯ ಚಟುವಟಿಕೆಗಳ ಅಧ್ಯಯನ ಅಥವಾ ಭಾರತದಲ್ಲಿ ಪ್ರಚಲಿತವಾಗಿದ್ದ ಮಾತೃಪ್ರಧಾನ ಕುಟಂಬ ರಚನೆ, ಆಮೇಲೆ ಪಿತೃಪ್ರಧಾನ ಕುಟುಂಬ ರಚನೆಗಳಲ್ಲಿ ಸೇರಿ ಹೋದುದರ, ರೈತರ ಮತ್ತು ಕಾರ್ಮಿಕರ ಹೋರಾಟಗಳಲ್ಲಿ ಮಹಿಳೆಯರು ಭಾಗವಹಿಸಿದುದರ ಅಧ್ಯಯನ ನಮಗೆ ಬೇಕಾದಷ್ಟು ಫಲಗಳನ್ನು ನೀಡುತ್ತವೆ. ಪುರುಷ ಪ್ರಧಾನ ನಿಲುವು ಮಹಿಳಾಪರ ‘ಭಾರತೀಯ ಸಂಸ್ಕೃತಿ’ಯನ್ನು ಕುರಿತು ವಾದಿಸುವುದನ್ನು ಪ್ರಶ್ನಿಸುತ್ತವೆ. ೧೯ನೆಯ ಶತಮಾನದಿಂದೀಚೆಗೆ ಅದನ್ನು ರಾಷ್ಟ್ರೀಯತೆ ಎಂಬ ಹೆಸರಿನಲ್ಲಿ ನಮ್ಮ ಸಂಸ್ಕೃತಿಗಳ ಸ್ತ್ರೀದ್ವೇಷಿ ಅಂಶಗಳನ್ನು ಸಮರ್ಥಿಸಲು ಬಳಸಲಾಗಿದೆ. ವಸಾಹತುಶಾಹಿಯೂ ಆಗಲೇ ಇದ್ದ ಪ್ರವೃತ್ತಿಗಳಿಗೆ ಇನ್ನಷ್ಟು ಪಿತೃಪ್ರಧಾನ ಪ್ರವೃತ್ತಿಗಳನ್ನು ಉದ್ದೀಪಿಸಿತು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ‘ಪರಂಪರೆ’ ಮತ್ತು ‘ಆಧುನಿಕತೆ’ ಈ ಎರಡು ಪದಗಳನ್ನು ಭಾರತೀಯ ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯ – ದಬ್ಬಾಳಿಕೆಗಳಿಗೆ ಪೂರಕವಾಗುವ ರೀತಿಯಲ್ಲಿ ವಿವರಿಸಲಾಗುತ್ತದೆ

೧೯೫೦ ಜನವರಿ ೨೬ ರಂದು ಭಾರತೀಯ ಸಂವಿಧಾನವನ್ನು ಅಂಗೀಕರಿಸಿದಾಗ ಭಾರತೀಯ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಯಿತು. ಸಂವಿಧಾನವು ೧೫ ಮತ್ತು ೧೬ನೆಯ ಅನುಚ್ಛೇದಗಳಲ್ಲಿ ಮಹಿಳೆಯರಿಗೆ ಪುರುಷರಿಗೆ ಸಮಾನವಾದ ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳನ್ನು ನೀಡಿತು. ಅಷ್ಟೇ ಅಲ್ಲದೆ ನಾಡಿನ ಅತ್ಯುನ್ನತ ಪದವಿಗೆ ಬರುವ ಅವಕಾಶವನ್ನೂ ಮಹಿಳೆಗೆ ನೀಡಿತು.

ಇಂದು ಭಾರತದಲ್ಲಿ ಕಂಡುಬರುವ ಸಮಸ್ಯೆ ಯುಗಗಳಷ್ಟು ಹಿಂದಿನ ತೆರನಾದದ್ದು. ಈಗ ಚಳವಳಿಯು ಮಧ್ಯಯುಗದ ದೌರ್ಜನ್ಯಗಳಾದ ವರದಕ್ಷಿಣೆಗಾಗಿ ಕೊಲೆ, ವಿಧವೆಯ ಆತ್ಮಾಹುತಿ ಮತ್ತು ಬಾಲ್ಯವಿವಾಹ ಇವುಗಳೆದುರು ಹೋರಾಡಬೇಕಾಗಿದೆ. ಇತ್ತೀಚಿನ ಸಂಶೋಧನೆಯಿಂದ ಅಮ್ನಿಯೋಸೆಂಟೆಸಿಸ್ (Amniocentesis) ಅನ್ನು ವ್ಯಾಪಕವಾಗಿ ಬಳಸಿ ಹೆಣ್ಣು ಭ್ರೂಣವನ್ನು ಗರ್ಭಪಾತ ಮಾಡಿಸುವ, ಬಹುರಾಷ್ಟ್ರೀಯ ಕಂಪನಿಗಳು ಗರ್ಭ ನಿರೋಧಕ ಉಪಕರಣಗಳನ್ನು, ಮದ್ದುಗಳನ್ನು ಬಡ ಹೆಂಗಸರ ಮೇಲೆ ಪ್ರಯೋಗ ಮಾಡುವ ಬಗ್ಗೆ ವಿವರಗಳನ್ನು ನೀಡುತ್ತದೆ. ಗ್ರಾಮೀಣ ಮತ್ತು ಆದಿವಾಸಿ ಮಹಿಳೆಯ ಮೇಲೆ ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವ ಅರಣ್ಯನಾಶದ ಪರಿಣಾಮಗಳಿಂದಾಗಿ ಹಾಗೂ ಇವುಗಳಿಗಾಗಿ ಅತ್ಯಾಧುನಿಕ ವೈಜ್ಞಾನಿಕ ತಂತ್ರಜ್ಞಾನ ಸಂಶೋಧನೆಗಳನ್ನು ಬಳಸುವುದರ ಎದುರಾಗಿ ಚಳವಳಿಯು ನಡೆಯುತ್ತಿದೆ. ವಾಸ್ತವವಾಗಿ ವಿಧವಾ ಆತ್ಮಾಹುತಿ ಮತ್ತು ವರದಕ್ಷಿಣೆಯ ಸಮಸ್ಯೆಗಳು ಸಮಕಾಲೀನ ಸಮಾಜದ ಗ್ರಾಹಕತೆ, ಜಾತೀಯತೆ ಮತ್ತು ವ್ಯಾಪಾರಿ ಮನೋಭಾವಗಳ ಅಂತರ್ಗತ ಭಾಗವಾಗಿವೆ.

ಭಾರತೀಯ ಚಳವಳಿಯು ಪಾಶ್ಚಾತ್ಯ ಸ್ತ್ರೀವಾದಿ ಚಳವಳಿಗಿಂತ ಬೇರೆಯೇ ಆದ ವಿಚಾರಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಇಲ್ಲಿ ದೇವಾಲಯಗಳಿಗೆ ದೇವದಾಸಿಯರನ್ನು ಬಿಡುವ ಪದ್ಧತಿ, ವರದಕ್ಷಿಣೆಯ ಕೆಟ್ಟ ವ್ಯವಸ್ಥೆ, ಆದಿವಾಸಿ ಮತ್ತು ದಲಿತ ಹೆಂಗಸರ ಮೇಲೆ ದೌರ್ಜನ್ಯಗಳು ಹೆಚ್ಚು ಮಹತ್ವ ಪಡೆಯುತ್ತವೆ. ಹಾಗೆಯೇ ಅತ್ಯಾಚಾರ, ಹೆಂಡತಿಯನ್ನು ಹೊಡೆದು ಬಡಿದು ಹಿಂಸಿಸುವುದು, ಕೆಲಸದ ಸ್ಥಳದಲ್ಲಿ ಮಹಿಳೆಯ ಲೈಂಗಿಕ ಶೋಷಣೆ, ಎಳೆ ಹುಡುಗಿಯರ ಮೇಲೆ ಅತ್ಯಚಾರ ಇವೂ ಇಲ್ಲಿ ಮಾಮೂಲಾಗಿ ನಡೆಯುತ್ತಿವೆ. ಆದರೆ ಇಲ್ಲಿ ಇನ್ನೂ ಒಂದು ಮಾತು ಹೇಳಬೇಕು. ಕೋಟ್ಯಂತರ ಜನರು ದಟ್ಟ ದಾರಿದ್ರ್ಯದಲ್ಲಿ ನರಳುತ್ತಿರುವಾಗ ಈ ವಿಚಾರಗಳನ್ನು ಸಾಮಾನ್ಯವಾಗಿ ಉತ್ಪ್ರೇಕ್ಷಿಸಲಾಗುತ್ತದೆ ಮತ್ತು ವರ್ಗ, ನ್ಯಾಯಿಕ, ಸರಕಾರಿ ಪೊಲೀಸ್ ಮತ್ತು ಅಧಿಕಾರಶಾಹಿ ದಮನಗಳೊಂದಿಗೆ ತಳಕು ಹಾಕಲಾಗುತ್ತದೆ. ವರದಕ್ಷಿಣೆ ವಿರೋಧಿ ಮತ್ತು ಅತ್ಯಾಚಾರ ವಿರೋಧಿ ಚಳವಳಿಗಳು ಪ್ರಸಕ್ತ ಮಹಿಳಾ ಆಂದೋಲನವನ್ನು ತೊಡಗಿಸಿದ್ದವು ಮತ್ತು ವಿಭಿನ್ನ ಸ್ತ್ರೀವಾದಿಗಳನ್ನು ಒಂದುಗೂಡಿಸಿದವು.

ಒಂದಾದ ಮೇಲೊಂದರಂತೆ ಸರಕಾರಗಳು ಮಹಿಳಾ ವಿಮೋಚನೆಯನ್ನು ಕುರಿತು ಬಾಯಲ್ಲಿ ಮಾತ್ರ ಘೋಷಣೆಗಳನ್ನು ಕೂಗುತ್ತಲೇ ಇವೆ. ಸರಕಾರಿ ಯಂತ್ರವಾಗಲಿ, ವಿವಿಧ ರಾಜಕೀಯ ಪಕ್ಷಗಳಾಗಲಿ ಹಾಗೆ ಮಾತನಾಡುವುದು ರೂಢಿಯಾಗಿದ್ದು, ಭಾರತದಲ್ಲಿ ಮಹಿಳೆಯ ಸಂಕಷ್ಟ ಸ್ಥಿತಿಯ ಬಗೆಗೆ ಸರಕಾರದ ಅಲಕ್ಷ್ಯವನ್ನು ತೋರಿಸುತ್ತದೆ. ಆದರೆ ಹೆಂಗಸಿಗೂ ಗಂಡಸಿಗೂ ವ್ಯತ್ಯಾಸ, ತಾರತಮ್ಯ ಸ್ಪಷ್ಟವಾಗಿ ತೋರಿಕೊಳ್ಳುವುದು ಗ್ರಾಮಾಂತರ ಪ್ರದೇಶಗಳಲ್ಲಿ. ಶಿಶು ರಕ್ಷಣಾ ಸೌಲಭ್ಯಗಳು, ಹೆರಿಗೆ ಸೌಲಭ್ಯ ಸವಲತ್ತುಗಳು, ಆರೋಗ್ಯ, ರಕ್ಷಣೆ ಇವೆಲ್ಲ ಇನ್ನೂ ಕೈಗೆತ್ತಿಕೊಳ್ಳಬೇಕಾದ ಪ್ರಶ್ನೆಗಳಾಗಿವೆ.

ಸಾಹಿತ್ಯಿಕ ಹಂತದಲ್ಲಿ ಬಹುಶಃ ಒಂದಿಷ್ಟು ಬದಲಾವಣೆಯಾಗಿರುವುದನ್ನು ಗುರುತಿಸಬಹುದಾಗಿದೆ. ಸ್ತ್ರೀವಾದಿ ಪತ್ರಿಕೆಗಳು, ಮಹಿಳಾ ಅಧ್ಯಯನ ಪೀಠಗಳು, ಬರಹಗಾರ್ತಿಯರು ವೇಗವಾಗಿ ಬೆಳೆಯುತ್ತಿದ್ದಾರೆ. ಭಾರತದಲ್ಲಿ ಈ ಚಳವಳಿಯು ಇತರ ಏಷ್ಯನ್ ದೇಶಗಳಿಗೆ ಹೋಲಿಸಿದರೆ ಬಹುಮಟ್ಟಿಗೆ ಜೀವಂತವಾಗಿದೆ.

ಐತಿಹಾಸಿಕವಾಗಿ ಹೇಳುವುದಾದರೆ, ಭಾರತದಲ್ಲಿ ಬದಲಾವಣೆಗಳು ಆದುದಕ್ಕೆ ಕಾರಣ ವಿಜಯಲಕ್ಷ್ಮಿ ಪಂಡಿತ್ ಅವರ ನಾಯಕತ್ವ ಮತ್ತು ಅಖಿಲ ಭಾರತ ಮಹಿಳಾ ಸಮ್ಮೇಳನ. ೧೯೨೯ರ ವೇಳೆಗೆ ಒಂಬತ್ತು ಪ್ರಾಂತಗಳ ಪೈಕಿ ಏಳರಲ್ಲಿ ಮಹಿಳೆಯರು ಪ್ರಾಂತೀಯ ಚುನಾವಣೆಗಳಲ್ಲಿ ಮತ ನೀಡುವ ಹಕ್ಕು ಪಡೆದಿದ್ದರು; ೧೯೩೫ ರಲ್ಲಿ ಮತದಾನದ ಹಕ್ಕನ್ನು ರಾಷ್ಟ್ರೀಯ ಚುನಾವಣೆಯಲ್ಲಿ ಸೀಮಿತ ಸಂಖ್ಯೆಯ ಮಹಿಳೆಯರಿಗೆ ವಿಸ್ತರಿಸಲಾಯಿತು.

ಅಂತರರಾಷ್ಟ್ರೀಯ ಸ್ತ್ರೀವಾದ

ವಿಶ್ವಸಂಸ್ಥೆಗೆ ತನ್ನ ಸದಸ್ಯ ರಾಷ್ಟ್ರಗಳಲ್ಲಿನ ಮಹಿಳೆಯರಿಗೆ ಸಮಾನ ಸ್ಥಾನಮಾನವನ್ನು ಕೊಡುವ ಕಾರ‍್ಯಾಂಗ ಅಥವಾ ಶಾಸಕಾಂಗ ಅಧಿಕಾರ ಇಲ್ಲ. ಆದರೆ ಪ್ರಚಾರದ ಮೂಲಕ, ಶಿಕ್ಷಣದ ಮೂಲಕ ಪೂರ್ಣವಾದ ಬೇಷರತ್ತಾದ ಸಮಾನತೆಯನ್ನು ನೀಡುವಂತೆ ಜಾಗತಿಕ ಅಭಿಪ್ರಾಯವನ್ನು ರೂಪಿಸಲು ಅದು ಶ್ರಮಿಸಬಹುದು ಮತ್ತು ಶ್ರಮಿಸುತ್ತಿದೆ. ಇದು ಸ್ತ್ರೀವಾದ ಚಳವಳಿಗೆ ನೆರವಾಗುತ್ತಿದೆ.

ಇದಕ್ಕಿಂತ ಮೊದಲು “ಲೀಗ್ ಆಫ್ ನೇಷನ್ಸ್” ತನ್ನ ಸದಸ್ಯ ದೇಶಗಳಲ್ಲಿ ಮಹಿಳೆಯರಿಗೆ ಇರುವ ಸ್ಥಾನಮಾನದ ಖಚಿತವಾದ ಚಿತ್ರವನ್ನು ಪಡೆದುಕೊಳ್ಳಲು ಪ್ರಯತ್ನಿಸಿತ್ತು. ಆದರೆ ೧೯೧೯ರ ಲೀಗ್ ಒಡಂಬಡಿಕೆಯು ಮಹಿಳೆಗೆ ಸಮಾನ ಹಕ್ಕಿರಬೇಕೆಂಬ ವಿಷಯದಲ್ಲಿ ಯಾವುದೇ ನಿರ್ಣಯವನ್ನು ಒಳಗೊಂಡಿಲ್ಲ. ೧೯೪೫ರ ಯುನೈಟೆಡ್ ನೇಷನ್ಸ್ ಚಾರ್ಟರ್, ಜಗತ್ತಿನಾದ್ಯಂತ ಮಹಿಳೆಯನ್ನು ಪುರುಷನೊಂದಿಗೆ ಸರಿಸಮನಾಗಿ ಪರಿಗಣಿಸಬೇಕಾದ ಮಹಿಳೆಯ ಪವಿತ್ರ ಹಕ್ಕನ್ನು ಸ್ಪಷ್ಟವಾಗಿಯೂ ನಿಸ್ಸಂಶಯವಾಗಿಯೂ ಹೇಳುತ್ತದೆ. ಸನ್ನದಿನ ಪೀಠಿಕಾ ವಾಕ್ಯದಲ್ಲಿ ಅದು ಹೀಗೆ ಹೇಳಿದ: “ಪುರುಷರು ಮತ್ತು ಸ್ತ್ರೀಯರ ಸಮಾನ ಹಕ್ಕುಗಳಲ್ಲಿ ಪೂರ್ಣ ವಿಶ್ವಾಸವನ್ನು ಪುನರ್ ಸ್ಥಾಪಿಸಲು” ವಿಶ್ವಸಂಸ್ಥೆಗೆ ಸೇರಿದ ಜನರು ನಿರ್ಧರಿಸುತ್ತಾರೆ. ಈ ಉದ್ದೇಶವನ್ನು ಕಾರ‍್ಯಗತಗೊಳಿಸಲು ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯು ಲಂಡನ್ನಿನಲ್ಲಿ ನಡೆದ ತನ್ನ ಮೊದಲನೆಯ ಅಧಿವೇಶನದಲ್ಲಿ ಮಹಿಳೆಯರ ಸ್ಥಾನಮಾನವನ್ನು ಪರಿಶೀಲಿಸಲು ಒಂದು ಉಪ ಆಯೋಗವನ್ನು ಸ್ಥಾಪಿಸಿತು. ಅದಕ್ಕೆ ಕಾಲಕ್ರಮದಲ್ಲಿ ಸಂಯುಕ್ತ ಸಂಸ್ಥಾನಗಳ ಡೊರೊಥಿಕೆನ್ಯನ್, ಭಾರತದ ಲಕ್ಷ್ಮಿ ಎನ್. ಮೆನನ್ ಹಾಗೂ ಬ್ರಿಟನ್ನಿನ ಮೇರಿ ಸುರ್ದಾಲ್ಯಾಂಡ್ ಸೇರಿದ್ದರು. ಮೊದಲನೆಯ ‘ಪರಮಾಣು ಉಪ ಆಯೋಗ’ವು ನ್ಯೂಯಾರ್ಕಿನ ಹಂಟರ್ ಕಾಲೇಜಿನಲ್ಲಿ ೧೯೪೬ ಏಪ್ರಿಲ್ ೨೯ ರಂದು ಸಭೆ ಸೇರಿ ಒಂದು ಕಾರ್ಯಕ್ರಮದ ರೂಪುರೇಷೆಯನ್ನು ಸಿದ್ಧಪಡಿಸಿತು. ಧ್ಯೇಯೋದ್ದೇಶಗಳ ನಾಲ್ಕು ಗುಂಪುಗಳನ್ನು ಅದು ರೂಪಿಸಿತು; ಅವೆಂದರೆ, ರಾಜಕೀಯ, ಪೌರ, ಶೈಕ್ಷಣಿಕ, ಸಮಾಜಿಕ ಹಾಗೂ ಆರ್ಥಿಕ. ಈ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳಾ ಸಮಾನತೆಗೆ ಹಾದಿಯನ್ನು ಸುಗಮಗೊಳಿಸುವುದು, ಲಿಂಗ ಕಾರಣವಾಗಿ ಮಹಿಳೆಯರಿಗೆ ತೋರಿಸುತ್ತಿರುವ ತಾರತಮ್ಯಗಳೆಲ್ಲವನ್ನೂ ತೊಡೆದು ಹಾಕುವುದು ಆಯೋಗದ ಉದ್ದೇಶವಾಗಿತ್ತು. ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ, ಆರೋಗ್ಯ ಮತ್ತು ವಿಮೆಯ ವ್ಯವಸ್ಥೆ, ತಾಯಿಗೆ ಮತ್ತು ಮಗುವಿಗೆ ಅನುಕೂಲವಾಗುವ ನಿಯಮಗಳು, ಸಮಾನ ಕೆಲಸಕ್ಕೆ ಸಮಾನ ವೇತನ, ವಿಶಿಷ್ಟ ಕ್ಷೇತ್ರಗಳಿಗೆ ಅರ್ಹ ಮಹಿಳೆಯರ ಮುಕ್ತ ಪ್ರವೇಶ ಇಂತಹ ಹಲವು ಅಂಶಗಳನ್ನು ಪ್ರತಿಯೊಂದು ದೇಶದಲ್ಲೂ ಜಾರಿಗೆ ತರುವಂತೆ ಶ್ರಮಿಸುವುದಾಗಿ ಆಯೋಗವು ಭರವಸೆ ನೀಡಿತು.

ಸ್ತ್ರೀವಾದ ಸಾಹಿತ್ಯ ಸಂಕ್ಷಿಪ್ತ ಸಮೀಕ್ಷೆ

೧೯೮೦ ರ ಪ್ರಾರಂಭ ವರ್ಷಗಳಿಂದಲೇ ಸ್ತ್ರೀವಾದ ಸಾಹಿತ್ಯತತ್ವವನ್ನು ಕುರಿತು ಬೇಕಾದಷ್ಟು ಬರವಣಿಗೆಗಳು ಕಾಣಿಸಿಕೊಂಡಿವೆ. ಓದುಗರು ಸ್ತ್ರೀವಾದ ಕುರಿತ ಸಾಹಿತ್ಯದಲ್ಲಿ ದೊರಕುವ ವ್ಯಾಪಕ ಸಾಧ್ಯತೆಗಳನ್ನು ತಿಳಿದುಕೊಳ್ಳುವುದು ಅತ್ಯವಶ್ಯವಾಗಿದೆ. ಅಪಾರ ಬಹುಳತೆಯಿಂದ, ವೈವಿಧ್ಯದಿಂದ ಕೂಡಿದ ಸ್ತ್ರೀವಾದ ಕುರಿತ ವಿಮರ್ಶೆಯು ಸಹಕಾರಿ ಪ್ರಜ್ಞೆಯ ಪರಿಣಾಮವಾಗಿರುವುದರಿಂದ ಕಳೆದ ೨೦ ವರ್ಷಗಳ ಸಾಹಿತ್ಯವನ್ನು ಐತಿಹಾಸಿಕ ಬೆಳವಣಿಗೆ ಅಥವಾ ವಿಕಾ ಎಂದು ಪರಿಗಣಿಸಬಹುದಾಗಿದೆ. ಜೂಲಿಯ ಕ್ರಿಸ್ಟೇನಾ ತನ್ನ ವುಮೆನ್ಸ್ ಟೈಮ್ ಎಂಬ ಲೇಖನದಲ್ಲಿ ವಿವರಿಸಿದಂತೆ ಸ್ತ್ರೀವಾದ ತತ್ವದಲ್ಲಿ ಬೆಳವಣಿಗೆಯ ಮೂರು ಹಂತಗಳನ್ನು ಗುರುತಿಸಬಹುದು:

೧. ಸ್ತ್ರೀಯರನ್ನು ಕುರಿತು ನೇತ್ಯಾತ್ಮಕ ಚಿತ್ರ ಕೊಟ್ಟು ಪುರುಷರು ಬರೆದ ಸೈದ್ಧಾಂತಿಕ ಸಾಹಿತ್ಯದ ವಿಮರ್ಶೆ;

೨. ಮಹಿಳಾ ಸಾಹಿತ್ಯ ಪರಂಪರೆಯೊಂದನ್ನು ಗುರುತಿಸುವುದು ಮತ್ತು ಸ್ಥಾಪಿಸಲು ಗಮನ ಕೊಟ್ಟಿದ್ದು ಹಾಗೂ ಮಹಿಳೆಯರು ಬರೆದ ಕೃತಿಗಳ ಪುನರ್ ಮೌಲ್ಯ ನಿರ್ಣಯ ಮಾಡಿದುದು;

೩. ಲಿಂಗ ಪಕ್ಷಪಾತವನ್ನು ಪ್ರಶ್ನಿಸಲು ಕರೆ ನೀಡಿದುದು.

ಆರಂಭದಲ್ಲಿ, ಸಾಹಿತ್ಯಕ ಬರವಣಿಗೆಗಳನ್ನು ಪರಿಶೀಲಿಸಿ, ಅದರಲ್ಲಿ ಮಹಿಳೆಯರ ಬರವಣಿಗೆ ಇಲ್ಲದುದಕ್ಕೆ ಕಾರಣವನ್ನು ವಿವರಿಸುವುದು ಸ್ತ್ರೀವಾದಿ ವಿಮರ್ಶಕರ ಕೆಲಸವಾಗಿತ್ತು. ಟೆಲ್ಲೀ ಆಲ್‌ಸನ್ ಬರೆದ ಸೈಲೆನ್ಸಸ್ ಎನ್ನುವ ಕೃತಿ ಹೆಂಗಸರು ಗಂಡಸರು ಇಬ್ಬರ ಪತ್ರಗಳು ಮತ್ತು ದಿನಚರಿಗಳನ್ನು ಆಧಾರವಾಗಿಟ್ಟುಕೊಂಡು ಅವರ ರಚನಶೀಲತೆಗಿರುವ ಸೀಮಿತಗಳನ್ನು ಪಟ್ಟಿ ಮಾಡುತ್ತದೆ. ಮಹಿಳೆಯರು ತಮ್ಮ ಕೆಲಸಕ್ಕೆ ಅದರಲ್ಲೂ ಬರಹಗಾರ್ತಿಯಾಗಿ ಶ್ರಮಿಸುವುದಕ್ಕೆ ಸಮಯವನ್ನು ಕಂಡುಕೊಳ್ಳುವುದೇ ಕಷ್ಟವಾದ ಪರಿಸ್ಥಿತಿಯನ್ನು ವಿಶೇಷವಾಗಿ ಆಕೆ ತೋರಿಸಿಕೊಡುತ್ತಾಳೆ.

ತಾತ್ವಿಕ ವಿಚಾರವಾಗಿ ಸ್ತ್ರೀವಾದಿ ಸಾಹಿತ್ಯ ವಿಮರ್ಶೆಯು ವೇಗವನ್ನು ಪಡೆದುಕೊಂಡದ್ದು ೧೯೬೯ ರಲ್ಲಿ ಕೇಟ್ ಮಿಲ್ಲೆಟ್‌ಳ ಸೆಕ್ಷುಯಲ್ ಪಾಲಿಟಿಕ್ಸ್ ಎಂಬ ಕೃತಿಯಿಂದ. ಪುರುಷರು ಬರೆದ ಕೃತಿಗಳಲ್ಲಿ ಲೈಂಗಿಕ ಸಮರ್ಥನೆಗಳನ್ನು ಕಂಡುಹಿಡಿಯುವುದರ ಕಡೆಗೆ ಕೃತಿಯು ಗಮನವನ್ನು ಕೇಂದ್ರೀಕರಿಸುತ್ತದೆ. ಈ ಕೃತಿಯು ‘ಪೇಟ್ರಿಯಾರ್ಕಿ’ (ಪಿತೃಪ್ರಧಾನ) ಅಥವಾ ‘ಪೇಟ್ರಿಯಾರ್ಕಲ್’ (ಪಿತೃಪ್ರಧಾನ ವ್ಯವಸ್ಥೆ) ಎಂಬ ಪದವನ್ನು ಮೌಲ್ಯಯುತ ವಿಮರ್ಶನ ಉಕ್ತಿಯಾಗಿ ಪರಿಗಣಿಸುತ್ತದೆ. ಇದಕ್ಕಿಂತ ಮೊದಲು ೧೯೬೮ ರಲ್ಲಿ ಮೇರಿ ಎಲ್ಮನ್ ತನ್ನ ತಿಂಕಿಂಗ್ ಎಬೌಟ್ ವಿಮೆನ್ ಎಂಬ ಕೃತಿಯಲ್ಲಿ ಮಹಿಳೆಯರ ಬರವಣಿಗೆಯನ್ನು ಕುರಿತು ಒಂದು ಪ್ರಚೋದಕ ಅಧ್ಯಯನ ನಡೆಸಿದ್ದರು. ಆದರೆ ಅದಕ್ಕೆ ಒಂದು ಮಹತ್ವದ ಸ್ಥಾನವನ್ನು ನೀಡಿದ್ದು ಸೆಕ್ಷುಯಲ್ ಪಾಲಿಟಿಕ್ಸ್ ಕೃತಿಯ ಚರ್ಚಾಸ್ಪದ ಸ್ವರೂಪ. ವಿಶೇಷವಾಗಿ ಈ ಗ್ರಂಥವು ಅಪಾರ ಪ್ರಮಾಣದಲ್ಲಿ ಸಾರ್ವಜನಿಕ ವಾದವಿವಾದವನ್ನು, ಸ್ತ್ರೀವಾದಿ ಸಾಹಿತ್ಯ ವಿಮರ್ಶೆಯಲ್ಲಿ ಆಸಕ್ತಿಯನ್ನು ಕೆರಳಿಸಿತು. ಆರ್ಲಿನಿ ಡೈಮಂಡ್‌ಳ ದಿ ಅಥಾರಿಟಿ ಆಫ್ ಎಕ್ಸ್‌ಪೀರಿಯೆನ್ಸ್ (೧೯೭೭) ಎನ್ನುವ ಕೃತಿಯು ಪುರುಷರು ಬರೆದ ಗ್ರಂಥಗಳಲ್ಲಿ ಚಿತ್ರಿತವಾದ ಮಹಿಳೆಯ ವ್ಯಕ್ತಿತ್ವವನ್ನು ವಿಮರ್ಶಿಸುವ ಧ್ಯೇಯವನ್ನು ಹಾಕಿಕೊಂಡಿತು. ಇದಾದ ಸ್ವಲ್ಪದರಲ್ಲೇ, ವಿಮರ್ಶಕರು ಸ್ತ್ರೀವಾದಿ ಸಾಹಿತ್ಯ ವಿಮರ್ಶೆಯನ್ನು ಸಮಗ್ರವಾಗಿ ಕೈಗೆತ್ತಿಕೊಂಡಿರು. ೧೯೭೫ ರಲ್ಲಿ ಕೋಸೆಫೈನ್ ಡೊನೋವನ್ನಳ ಫಿಮಿನಿಸ್ಟ್ ಲಿಟರರಿ ಕ್ರಿಟಿಸಿಸಂ ಎನ್ನುವ ಸಂಕಲನ ಕೃತಿ ಹೊರಬಂದಿತು. ಇದರಲ್ಲಿ ಚೆರಿ ರೆಜಿಸ್ಟರ್ ಎನ್ನುವವಳು, ‘ಅಮೆರಿಕನ್ ಫೆಮಿನಿಸ್ಟ್ ಲಿಟರರಿ ಕ್ರಿಟಿಸಿಸಂ’ ಎಂಬ ಲೇಖನವನ್ನು ಬರೆದಳು. ಈ ಸಾಹಿತ್ಯಿಕ ಪ್ರಕ್ರಿಯೆಯಲ್ಲಿ ಇದೊಂದು ಪ್ರಮುಖವಾದ ಘಟ್ಟವಾಗಿದೆ. ಸ್ತ್ರೀವಾದಿ ವಿಮರ್ಶೆಯು ಶೈಕ್ಷಣಿಕ ನೆಲೆಯನ್ನು ಹೊಂದಿರಬೇಕು, ವಿಮರ್ಶಕರು ‘ಸ್ತ್ರೀವಾದಿ ವಿಮರ್ಶೆಯು ಶೈಕ್ಷಣಿಕ ನೆಲೆಯನ್ನು ಹೊಂದಿರಬೇಕು, ವಿಮರ್ಶಕರು ‘ಸ್ತ್ರೀವಾದಿ ದೃಷ್ಟಿಯಿಂದ ಉತ್ತಮವಾದ ಸಾಹಿತ್ಯವನ್ನು’ ಸೃಷ್ಟಿಸಲು ಲೇಖಕರಿಗೆ ಮಾರ್ಗಗಳನ್ನು ಸೂಚಿಸಬೇಕು ಎಂದು ಈ ಕೃತಿ ಸಲಹೆ ಮಾಡಿತು. ಮುಖ್ಯವಾಗಿ ಪುರುಷ ರಚಿತ ಕೃತಿಗಳನ್ನು ಪರೀಕ್ಷಿಸುವ ಈ ಪ್ರವೃತ್ತಿಯ ಶಿಖರಾವಸ್ಥೆಯನ್ನು ಜುಡಿತ್ ಫೆಟ್‌ರ್ಲಿಯ ದಿ ರೆಸಿಸ್ಟಿಂಗ್ ರೀಡರ್ (೧೯೭೮) ಎನ್ನುವ ಕೃತಿಯಲ್ಲಿ ನೋಡಬಹುದು. ಅಮೆರಿಕನ್ ಸಾಹಿತ್ಯದ ಬಹುಭಾಗವು ವಿಶಿಷ್ಟವಾಗಿ ಪುರುಷ ಓದುಗರನ್ನು ಸಂಬೋಧಿಸಿದ್ದಾಗಿದೆ. ಆದ್ದರಿಂದ ಮಹಿಳಾ ಶ್ರೋತೃಗಳು ತಮ್ಮನ್ನು ಪುರುಷರ ಸ್ಥಾನದಲ್ಲಿ ಇರಿಸಿಕೊಂಡು ಓದಬೇಕು. ಇಲ್ಲವೆ, ತಮಗೆ ನಿಗದಿಪಡಿಸಲಾಗಿರುವ ವಾಚಕ ಸ್ಥಾನವನ್ನು ಪ್ರತಿಭಟಿಸಬೇಕು ಎಂದು ಅದು ಸೂಚಿಸಿತು. ಮುಂದೆ ಈ ಪ್ರವೃತ್ತಿ ಬದಲಾಗಿ ಪುರುಷ ಲಿಖಿತ ಕೃತಿಗಳ ಸ್ಥಾನಮಾನವನ್ನು ವಿರೋಧಿಸುವುದಕ್ಕಿಂತ ಮಿಗಿಲಾಗಿ, ಸ್ತ್ರೀ ರಚಿತ ಕೃತಿಗಳ ಅಧ್ಯಯನ ಮತ್ತು ವಿಶ್ಲೇಷಣೆಗಳಿಗೆ ತೊಡಗಿತು.

ಎಲೈನ್ ಷೊವಾಲ್ಟರ್ ಅವರು ಎ ಲಿಟರೇಚರ್ ಆಫ್ ದೇರ್ ಓನ್ (೧೯೭೭) ಎನ್ನುವ ಕೃತಿಯಲ್ಲಿ, ಎಲೆನ್ ಮೂರ್ಸ್‌ ಅವರು ಲಿಟರರಿ ವಿಮೆನ್ (೧೯೭೬) ಎಂಬ ಕೃತಿಯಲ್ಲಿ ಸ್ತ್ರೀವಾದಿ ಸಾಹಿತ್ಯಕ ವಿದ್ವತ್ತಿನಲ್ಲಿ ಹೊಸ ಹಂತವನ್ನು ಪ್ರಾರಂಭಿಸಿದರು. ಅವರು ತಮ್ಮ ಗಮನವನ್ನು ಪುರುಷ ಬರವಣಿಗೆಯ ವಿಮರ್ಶೆಯಿಂದ ಬೇರೆ ಕಡೆಗೆ ತಿರುಗಿಸಿ, ಮಹಿಳೆಯರು ರಚಿಸಿದ ಕೃತಿಗಳ ಅಧ್ಯಯನ ಮತ್ತು ವಿವೇಚನೆಗಳ ಕಡೆಗೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಆ ಮೂಲಕ ಮಹಿಳಾ ಪರಂಪರೆಯೊಂದನ್ನು ಸ್ಥಾಪಿಸಿದರು. ಪ್ರಾಚೀನ ಬರಹಗಾರ್ತಿಯರ ಕೃತಿಗಳ ಪುನರ್ ಅಧ್ಯಯನ ಮಾಡಿ, ಮೊದಲು ಅಷ್ಟಾಗಿ ಪ್ರಸಿದ್ಧಿಗೆ ಬಾರದಿದ್ದ ಬರಹಗಾರ್ತಿಯರಿಗೆ ಉತ್ತಮ ಕೃತಿಗಾರ್ತಿಯರ ಸ್ಥಾನಮಾನವನ್ನು ದೊರಕಿಸಿ ಕೊಡಬೇಕೆಂದು ವಾದಿಸಿದರು. ಹೀಗೆ ಮಾಡುವುದರಲ್ಲಿ ಅವರಿಗಿದ್ದ ಉದ್ದೇಶ, ಹಿಂದೆ ಮಹಿಳಾ ಬರವಣಿಗೆಯ ಪರಂಪರೆ ಹೇಗಿತ್ತು, ಅದನ್ನು ಬ್ರಿಟೀಷ್ ಮತ್ತು ಅಮೆರಿಕನ್ ಸಾಹಿತ್ಯ ಚರಿತ್ರೆಗಳು ಹೇಗೆ ಅಲಕ್ಷಿಸುತ್ತ ಬಂದುವು ಎಂಬುದನ್ನು ತೋರಿಸಿಕೊಡುವುದಾಗಿತ್ತು.

೧೯೮೧ ರಲ್ಲಿ ಬರೆದ ಫೆಮಿನಿಸ್ಟ್ ಕ್ರಿಟಿಸಿಸಂ ಇನ್ ದಿ ವೈಲ್ಡರ್‌ನೆಸ್ ಎಂಬ ಲೇಖನದಲ್ಲಿ ಎಲೈನ್ ಶೋವಾಲ್ಟರ್ಸ್ ಸ್ತ್ರೀವಾದಿ ಸಾಹಿತ್ಯ ವಿಮರ್ಶನದಲ್ಲಿ ನಡೆಯುತ್ತಿದ್ದ ಕೆಲಸವನ್ನು ಪಟ್ಟಿ ಮಾಡಿ, ಅದನ್ನು ಎರಡು ಭಾಗವಾಗಿ ವರ್ಗೀಕರಿಸಬಹುದು ಎಂದು ಹೇಳಿದಳು. ಅದು ಸ್ತ್ರೀವಾದಿ ವಿಮರ್ಶೆ ಹಾಗೂ ಸ್ತ್ರೀಯರು ಮಾಡಿದ ವಿಮರ್ಶೆ. ಮೊದಲನೆಯದರಲ್ಲಿ ಮಹಿಳೆಗೆ ಓದುಗ ಸ್ಥಾನವಿರುವುದರ ಕುರಿತಂತಿರುವುದು. ಪುರುಷರು ಬರೆದ ಸಾಹಿತ್ಯವನ್ನು ಓದಿ ಅಲ್ಲಿ ನಿರೂಪಿತವಾದ ಮಹಿಳೆಯ ಚಿತ್ರಕ್ಕೆ ಬೇರೆಯೇ ವ್ಯಾಖ್ಯಾನಗಳನ್ನು ನೀಡುವುದು. ಎರಡನೆಯದು, ಮಹಿಳೆಯರು ರಚಿಸಿದ ವಿಮರ್ಶೆಯ ಬಗ್ಗೆಯಾಗಿರುತ್ತದೆ. ಮಹಿಳೆ ಇಲ್ಲಿ ಬರಹಗಾರ್ತಿ. ಈ ವಿವೇಚನೆಯ ಉದ್ದೇಶ ಮಹಿಳೆಯ ಬರವಣಿಗೆಗಳು ಪುರುಷರಕ್ಕಿಂತ ಹೇಗೆ ಭಿನ್ನ ಮತ್ತು ಏಕೆ ಎಂದು ಸಾಧಿಸಿ ತೋರಿಸುವುದು.

ಸಾಂಡ್ರಾ ಗಿಲ್ಬರ್ಟ್ ಕೂಡ ಮಹಿಳೆಯರ ಬರವಣಿಗೆ ಪುರುಷರದಕ್ಕಿಂತ ಯಾವ ರೀತಿಗಳಲ್ಲಿ ಭಿನ್ನವಾಗಿದೆ ಎಂಬುದನ್ನು ಪರೀಕ್ಷಿಸುವುದರಲ್ಲಿ ಆಸಕ್ತಿ ತೋರಿಸಿದರು. ಅವರು ತಮ್ಮ ದಿ ಮ್ಯಾಡ್ ವುಮನ್ ಇನ್ ದಿ ಆಟಿಕ್ (೧೯೭೯) ಎಂಬ ಕೃತಿಯಲ್ಲಿ ತಮಗಿಂತ ಹಿಂದಿನ ಪುರುಷರು ಬರೆದ ಕೃತಿಗಳೊಂದಿಗೆ ಸಂಬಂಧಿತವಾದ ಮಹಿಳಾ ಬರವಣಿಗೆಯಲ್ಲಿನ ಸಮಾನ ವಸ್ತು ವಿಷಯಗಳನ್ನು ಪರಿಶೀಲಿಸಿದರು. ೧೯ನೆಯ ಶತಮಾನದ ಬರಹಗಾರ್ತಿಯರಿಗೆ ಸಾಹಿತ್ಯಿಕ ಪರಂಪರೆಯೆಂಬುದೊಂದು ಇರಲಿಲ್ಲ ಎಂಬುದರ ಕಡೆಗೂ ಅವರು ಗಮನ ಸೆಳೆದರು. ಆದ್ದರಿಂದ ಮಹಿಳೆಯರು ಪುರುಷರ ಬರವಣಿಗೆಗಳನ್ನೇ ಉಪಯೋಗಿಸಿಕೊಂಡು ತಮ್ಮ ಉದ್ದೇಶ ಸಾಧನೆ ಮಾಡಿಕೊಳ್ಳ ಬೇಕಾಯಿತು ಎಂದರು.

ಫ್ರಾನ್ಸಿನಲ್ಲಿ ೧೯೬೦ ಮತ್ತು ೧೯೭೦ರ ದಶಕಗಳಲ್ಲಿ ಅನೇಕ ಫ್ರೆಂಚ್ ಸ್ತ್ರೀವಾದಿಗಳು ಅದರಲ್ಲಿಯೂ ಹೆಲನ್ ಸಿಕ್ಸಸ್, ಜೂಲಿಯ ಕ್ರಿಸ್ಟೇನಾ ಮತ್ತು ಲೂಸಿ ಇರಿಗೆರಿ ಮೊದಲಾದವರು ಬ್ರಿಟನ್ ಮತ್ತು ಅಮೆರಿಕಾಗಳಲ್ಲಿ ಚಾಲ್ತಿಯಲ್ಲಿ ಇದ್ದುದಕ್ಕಿಂತ ತೀರಾ ಭಿನ್ನವಾದ ಒಂದು ವಿಶ್ಲೇಷಣೆಯ ವ್ಯವಸ್ಥೆಯನ್ನು ವಿಕಾಸಪಡಿಸಿದರು. ಕೃತಿಗಳ ಆಯ್ಕೆ ಮತ್ತು ನಿರ್ದಿಷ್ಟ ಸಾಹಿತ್ಯ ಕೃತಿಗಳ ಪುಸ್ತಕ ವಾಚನಕ್ಕಿಂತ ತತ್ವವು ಈ ಫ್ರೆಂಚ್ ಸ್ತ್ರೀವಾದಿಗಳಲ್ಲಿ ಪ್ರಧಾನವಾಯಿತು. ಲೇಖಕರು ವಿಮರ್ಶೆಯನ್ನು ಮಾಡುವುದು ಮಹಿಳೆಯರು ಸಾಹಿತ್ಯದಲ್ಲಿ ಪಡೆದಿರುವ ಅನುಭವದ ಪ್ರಾತಿನಿಧ್ಯದಿಂದ ಅಲ್ಲ, ಬದಲಾಗಿ ಮಹಿಳಾ ಕೃರ್ತತ್ವ ಹಾಗೂ ಕ್ರಿಯಾಶೀಲತೆಯ ಸಾಂಕೇತಿಕ ವಾದ ಭಾಷೆಗಳ ಆಧಾರದಿಂದ ಪರಸ್ಪರ ಸಂಬಂಧಿಸಿರುವ ಭಾಷಾವಿಜ್ಞಾನ, ಮನೋವಿಶ್ಲೇಷಣೆ ಮತ್ತು ತತ್ವಶಾಸ್ತ್ರಗಳ ಮೂಲಕ ಪ್ರತಿಯೊಬ್ಬ ಚಿಂತಕನೂ ಬರವಣಿಗೆಯಲ್ಲಿ ಹೆಣ್ಣು ಮತ್ತು ಗಂಡುಗಳ ಬಗ್ಗೆ ಚಿತ್ರಿಸುವ ಮೂಲಕ ಎಂದು ವಾದಿಸುತ್ತಾರೆ. ಆಧುನಿಕ ಕಥನ ಸಾಹಿತ್ಯ ಮತ್ತು ಅವಂತ್‌ಗಾರ್ಡೆ ಕಾವ್ಯಗಳಲ್ಲಿ ಕಂಡುಬರುವ ವಿಚಾರರಹಿತ ಬರವಣಿಗೆಗೆ ಸ್ತ್ರೀ ಬರವಣಿಗೆಯನ್ನು ಅವರು ತಳಕು ಹಾಕುತ್ತಾರೆ. ಸಸೂರಿಯನ್ ಭಾಷಾವಿಜ್ಞಾನ ಮತ್ತು ಭಾಷೆಯಲ್ಲಿ ವ್ಯಕ್ತವಾದ ವಿಷಯವನ್ನು ಕುರಿತ ಲೆಕೇನಿಯನಸ್ ಸಿದ್ಧಾಂತಗಳು ಫ್ರೆಂಚ್ ಸ್ತ್ರೀವಾದದ ಕೇಂದ್ರವಾಗಿದೆ. ಪಿತೃಪ್ರಧಾನವಾಗಿ ಹೆಸರಿಡುವ ಮತ್ತು ವರ್ಗೀಕರಿಸುವ ಒಂದು ಸಾಂಕೇತಿಕತೆಗೆ ಅದನ್ನು ಒಳಪಡಿಸುತ್ತದೆ. ಇರಿಗರೈ ಮತ್ತು ಸಿಕ್ಸಸ್‌ರಿಗೆ ಬರೆಯುವ ಮಹಿಳೆ ಒಂದು ಆದರ್ಶ, ಇನ್ನೂ ಅಸ್ತಿತ್ವಕ್ಕೆ ಬರಬೇಕಾದ ಸಿದ್ಧಿ. ಅವರ ಬರವಣಿಗೆಯ ಅಭ್ಯಾಸಗಳು ಸಾಹಿತ್ಯಕ ತತ್ವಗಳನ್ನೂ ನೀಡಬಲ್ಲುವು. ಅವು ಪಠ್ಯಗಳನ್ನು ಬಿಡಿ ಲೇಖಕನ ಅನುಭವವೆಂಬಂತಲ್ಲದೆ ವಿವೇಚನಾತ್ಮಕ ರಚನೆಗಳೆಂಬಂತೆ ಓದುವ ಸ್ತ್ರೀವಾದಿ ಅಭ್ಯಾಸವನ್ನು ರೂಪಿಸುತ್ತವೆ. ಈ ಲೇಖಕರು ಪಠ್ಯಗಳಲ್ಲಿ ಲಿಂಗ ಸ್ಥಾನಮಾನದ ಕಲ್ಪನೆಯನ್ನು ಅಸ್ಥಿರಗೊಳಿಸುವ ಸಲುವಾಗಿ ಡೆರಿಡಾ ಮತ್ತು ಲಿಕಾನ್ನರ ಶಾಬ್ದಿಕ ಹಾಗೂ ದಾರ್ಶನಿಕ ರಚನೆಗಳನ್ನು ಉಪಯೋಗಿಸುತ್ತಾರೆ. ಅವರ ವಿಧಾನಗಳನ್ನು ಪೆಗ್ಗಿ ಕಾಮಫ್, ಆಲಿಸ್ ಜಾರ್ಡಿನ್, ಗಾಯಿತ್ರಿ ಸ್ಟಿವಾಕ್ ಮತ್ತು ಶೋಷನಾ ಫೆಲ್ಮನ್ ಇಂತಹ ವಿಮರ್ಶಕರು ಮುಂದಕ್ಕೆ ಬೆಳೆಸಿದ್ದಾರೆ.

ವಿಕಾಸದ ಈ ಎಲ್ಲ ಹಂತಗಳ ಮೂಲಕ ಸ್ತ್ರೀವಾದಿ ವಿಮರ್ಶೆಯಲ್ಲಿ ತಮ್ಮ ದನಿಯು ಕೇಳಿಸುವಂತಾಗಲು ಹೋರಾಡುತ್ತಿರುವ ಇತರ ಕೆಲವರೂ ಇದ್ದಾರೆ. ಬಾರ್ಬರಾ ಸ್ಮಿತ್ ಮೊದಲಾದ ಕರಿಯ ಸ್ತ್ರೀವಾದಿ ವಿಮರ್ಶಕರು ಪಠ್ಯಗಳಲ್ಲೂ, ಕೃತಿರಚನೆಯಲ್ಲೂ ಸಾಂದ್ರವಾಗಿರುವ ಜನಾಂಗೀಯ ಅಂಶವನ್ನು ಕುರಿತ ಮೂಲ ವ್ಯತ್ಯಾಸಗಳನ್ನು ಗುರುತಿಸಿದ್ದಾರೆ. ಈ ರೀತಿಯಲ್ಲಿ ಅವರು ಒಂದು ಘಟಕ ಶಬ್ದವಾಗಿ ಲಿಂಗದ ಕಲ್ಪನೆಯನ್ನೇ ಪ್ರಶ್ನಿಸಿದ್ದಾರೆ. ಬಿಳಿಯ ಸ್ತ್ರೀವಾದಿಗಳು ತಮ್ಮ ಸ್ವಂತ ಅನುಭವವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಸಾರ್ವತ್ರಿಕಗೊಳಿಸಿದ ಜನಾಂಗಿಕತೆಯ ರಾಜಕೀಯ ನಿಲುವನ್ನು ಕೂಡ ಪ್ರಶ್ನಿಸಿದ್ದಾರೆ.

ಅದೇ ರೀತಿ ಲೆಸ್ಬಿಯನ್ (ಸಲಿಂಗಕಾಮಿಗಳು) ವಿಮರ್ಶಕರು ಲೆಸ್ಬಿಯನ್ ವಿಮರ್ಶೆಯ ನಿರ್ದಿಷ್ಟ ಹಿತಾಸಕ್ತಿಗಳನ್ನು ಸ್ಪಷ್ಟಗೋಚರವಾಗುವಂತೆ ಮಾಡಲು ಪ್ರಯತ್ನಿಸಿದ್ದಾರೆ. ಲೆಸ್ಪಿಯನ್ ಮಹಿಳೆಯರಿಗಾಗಿ ವಾಚನ ವಿಧಾನಗಳು ಮತ್ತು ಪಠ್ಯ ನಿರ್ಮಾಣಗಳಲ್ಲಿರುವ ವ್ಯತ್ಯಾಸಗಳನ್ನು ಪ್ರಚಲಿತದಲ್ಲಿರುವ ಸ್ತ್ರೀವಾದಿ ವಿಮರ್ಶೆಯಲ್ಲಿ ಗಂಭೀರವಾಗಿ ತೆಗೆದುಕೊಳ್ಳದಿರುವುದರ ಬಗ್ಗೆ ಟೀಕಿಸಿದ್ದಾರೆ.

ಮಾರ್ಕ್ಸಿಸ್ಟ್-ಫೆಮಿನಿಸ್ಟ್ ವಿಮರ್ಶೆಯು ೧೯೭೦ರ ದಶಕದಲ್ಲಿ ವಿಕಾಸಗೊಂಡಿತು. ಪಠ್ಯಗಳ ವಿಶ್ಲೇಷಣೆಯಲ್ಲಿ ಲಿಂಗ ತಾರತಮ್ಯದ ಪ್ರಶ್ನೆಯು ಸಾಕಷ್ಟು ಮಟ್ಟಿಗೆ ಅರಿವಿಗೆ ಬಾರದಿದ್ದಾಗ, ಇನ್ನೂ ಹೆಚ್ಚು ಪ್ರಮುಖವಾದ ವರ್ಗಕಲ್ಪನೆಯೊಳಗೆ ಲಿಂಗ ತಾರತಮ್ಯದ ಪ್ರಶ್ನೆಗಳನ್ನು ಅವರು ವಿಮರ್ಶಿಸುವ ಪ್ರಯತ್ನ ಮಾಡಿದರು. ಅನೇಕ ಮಾರ್ಕ್ಸಿಸ್ಟ್ ಸ್ತ್ರೀವಾದಿ ವಿಮರ್ಶಕರು ಮತ್ತು ಗುಂಪುಗಳು ಮಾರ್ಕ್ಸಿಸ್ಟ್ ತತ್ವದ ಜೊತೆಗೆ ಮನೋವಿಶ್ಲೇಷಣಾತ್ಮಕ ತತ್ವದ ಆಲ್ತುಸ್ಸೇರಿಯನ್ ಪರಂಪರೆಯ ಹಾದಿಯಲ್ಲಿ ಪಠ್ಯಗಳನ್ನು ರಚಿಸಿದರು. ಮಾರ್ಕ್ಸಿಸ್ಟ್ ಸ್ತ್ರೀವಾದಿ ವಿಮರ್ಶೆಯನ್ನು ವಿವರಿಸುವುದು ಕಷ್ಟವಾದರೂ ಅದರ ಬಹುಭಾಗವು ಮಾರ್ಕ್ಸಿಸ್ಟ್ ವಿಶ್ಲೇಷಣೆಯ ಸರಳ ರೂಪಾಂತರವಾಗಿದೆ. ಅದು ವರ್ಗದ ಜೊತೆಗೆ ಲಿಂಗಭೇದದ ವಿಚಾರವನ್ನು ಪರಿಗಣಿಸುತ್ತದೆ. ಈ ಅಭ್ಯಾಸವು ಮೊದಲು ಸಮಾಜವಿಜ್ಞಾನದಲ್ಲಿ ರೂಪುಗೊಂಡಿತು. ನಂತರ ಈ ಬಗೆಯ ಸ್ತ್ರೀವಾದಿ ವಿಮರ್ಶೆಯು ಸಾಂಸ್ಕೃತಿಕ ಅಧ್ಯಯನಗಳ ಕ್ಷೇತ್ರದಲ್ಲಿ ಬೆಳೆಯಿತಲ್ಲದೆ ಸಾಹಿತ್ಯ ವಿಮರ್ಶೆಯಲ್ಲಲ್ಲ.

ಕೊನೆಯದಾಗಿ ಒಂದು ಮಾತು. ಮೇಲೆ ಹೇಳಿದ ತತ್ವಸಿದ್ಧಾಂತಗಳೆಲ್ಲವೂ ಪ್ರತ್ಯೇಕವೆಂಬಂತೆ ಮೇಲ್ನೋಟಕ್ಕೆ ತೋರಿದರೂ ಅವು ಪ್ರತ್ಯೇಕವಲ್ಲ. ಏಕೆಂದರೆ ಅವೆಲ್ಲ ಪರಸ್ಪರ ಸಂಬಂಧವನ್ನಿಟ್ಟು ಕೊಂಡಿರುವ ವಿಚಾರವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ಪರಾಮರ್ಶನ ಗ್ರಂಥಗಳು

೧. ಡ್ಯೂಷ್ ಹೆಲೀನ್, ೧೯೪೪. ಸೈಕಾಲಜಿ ಆಫ್ ವಿಮನ್, ನ್ಯೂಯಾರ್ಕ್.

೨. ಮೈಕೇಲ್ ಬ್ಯಾರೆಟ್, ೧೯೮೫. ವಿಮನ್ಸ್ ಅಪ್ರೆಷನ್ ಟುಡೇ, ಲಂಡನ್: ವರ್ಸೋ.

೩. ಸಿಮೋನ್ ದು ಬ್ಯೂವ, ೧೯೫೩. ದಿ ಸೆಕೆಂಡ್ ಸೆಕ್ಸ್, ನ್ಯೂಯಾರ್ಕ್: ನಾಫ್.

೪. ಹೆಲೆನೆನ್ ಸಿಕ್ಸಸ್, ೧೯೭೫. ದಿ ಲಾಫ್ ಆಫ್ ದಿ ಮೆಡುಸಾ, ಸೈನ್ಸ್, ಸಮ್ಮರ್.

* * *