ಚರಿತ್ರೆಯು ನಡೆದು ಹೋದ ಘಟನೆ ವಿದ್ಯಮಾನಗಳ ನೇರ ನಿರೂಪಣೆಯಾಗಿ ಉಳಿದರೆ ದೀರ್ಘಕಾಲ ಅಭ್ಯಾಸಿಗಳಲ್ಲಿ ತನ್ನ ಕುರಿತ ಆಕರ್ಷಣೆಯನ್ನು ಉಳಿಸಿಕೊಳ್ಳುವುದು ಅಸಂಭವ. ಘಟನೆ, ವಿದ್ಯಮಾನ, ಸಂಗತಿಗಳನ್ನು ಒಂದು ವಿಸ್ತೃತ, ಸೈದ್ಧಾಂತಿಕ ಅಥವಾ ತಾರ್ಕಿಕ ಪರಿಕಲ್ಪನೆಯ ಚೌಕಟ್ಟಿನಲ್ಲಿಟ್ಟು ಗ್ರಹಿಸುವ, ವಿಶ್ಲೇಷಿಸುವ ಪ್ರಯತ್ನಗಳು ಹೆಚ್ಚು ಅರ್ಥಪೂರ್ಣ ಫಲಿತಾಂಶಗಳನ್ನು ನೀಡಿವೆ. ಜಗತ್ತಿನ ವಿವಿಧ ಸಮಾಜಗಳ ಒಂದು ಹಂತದ ಚರಿತ್ರೆಯನ್ನು ಊಳಿಗಮಾನ್ಯವಾದದ ಪರಿಕಲ್ಪನೆಯಲ್ಲಿ ಅಭ್ಯಸಿಸುವ ಪ್ರಯತ್ನಗಳಿಗೆ ಸುದೀರ್ಘವಾದ ಹಿನ್ನೆಲೆಯಿದೆ.

‘ಊಳಿಗಮಾನ್ಯವಾದ’ದ ವ್ಯಾಖ್ಯಾನ ಸರಳವಾಗಿಲ್ಲ. ಊಳಿಗಮಾನ್ಯ ವ್ಯವಸ್ಥೆಗಳ ಅಧ್ಯಯನದಲ್ಲಿ ನಿರತರಾದ ವಿದ್ವಾಂಸರು ನೀಡಿರುವ ವಿಭಿನ್ನ ರೀತಿಯ ವ್ಯಾಖ್ಯಾನಗಳು ಊಳಿಗಮಾನ್ಯದ ಕುರಿತಾಗಿವೆ ಎನ್ನುವುದೊಂದು ಕ್ಲೀಷೆಯಾಗಿದೆ. ಫ್ಯೂಡಲ್ ಅಥವಾ ‘ಫ್ಯೂಡಲಿಸಂ’ ಶಬ್ದ ಮೂಲವನ್ನು ಸುಮಾರು ಕ್ರಿ.ಶ. ೯ನೆಯ ಶತಮಾನದ ಕೊನೆಗಾಲದ ಬರ್ಗಂಡಿಯ ದಾಖಲೆಗಳಲ್ಲಿ ಬರುವ ಫೋಸ್ (Foes) ಎಂಬ ಶಬ್ದಕ್ಕೆ ಕೊಂಡೊಯ್ಯಲಾಗಿದೆ. ಆದರೂ ಪ್ರಾಚೀನ ವ್ಯವಸ್ಥೆಯಿಂದ ಆರ್ಜಿತವಾದ ಅಸಂಬದ್ಧ ಮತ್ತು ಅಪ್ರಸ್ತುತ ರೂಢಿಗಳ ವ್ಯವಸ್ಥೆ ಎಂಬರ್ಥದಲ್ಲಿ ಅದು ಜ್ಞಾನೋದಯ ಮತ್ತು ಫ್ರೆಂಚ್ ಕ್ರಾಂತಿಗಳ ಕಾಲದಲ್ಲಿ ಸರ್ವೆಸಾಮಾನ್ಯವಾಗಿ ಬಳಕೆಗೆ ಬಂದಿತು. ಅದೇ ಕಾಲದಿಂದ ಫ್ಯೂಡಲ್ ಅಥವಾ ಫ್ಯೂಡಲಿಸಂ ಎನ್ನುವ ಶಬ್ದವು ಅರ್ಥ ಮತ್ತು ಬಳಕೆಗೆ ಸಂಬಂಧಿಸಿ ಎರಡು ಬಗೆಯಾಗಿ ಕವಲೊಡೆಯಿತು. ಯುರೋಪಿನ ಇತಿಹಾಸ ಕಥನದಲ್ಲಿ ಈ ದ್ವಿವಿಧ ಬಳಕೆ ಈಗಲೂ ಜಾರಿಯಲ್ಲಿದೆ. ಕೆಲವು ಇತಿಹಾಸಜ್ಞರು ಊಳಿಗ ಮಾನ್ಯವಾದವನ್ನು ಉನ್ನತ ಸೇನಾಪದವಿಯನ್ನು (knights) ಹೊಂದಿದ ಗಣ್ಯವರ್ಗದ ಬೆಂಬಲ ಹಾಗೂ ಸೇವೆಗೆ ಸಂಬಂಧಿಸಿದ ಸಂಸ್ಥೆ, ಹಾಗೂ ಆಡಳಿತಾತ್ಮಕ ವಿಕೇಂದ್ರೀಕರಣವನ್ನು ಪ್ರಧಾನ ಲಕ್ಷಣವಾಗಿ ಉಳ್ಳ ಕಾನೂನು, ಸರಕಾರ ಮತ್ತು ಸೈನ್ಯ ಸಂರಚನೆಗಳ ಒಂದು ವ್ಯವಸ್ಥೆ ಎಂಬರ್ಥದಲ್ಲಿ ವ್ಯಾಖ್ಯಾನಿಸಿದ್ದಾರೆ.

ಭಾರತೀಯ ಇತಿಹಾಸಕಾರರಲ್ಲಿ ಕೆಲವರು ಈ ದೃಷ್ಟಿಕೋನದಿಂದ ಪ್ರಭಾವಿತರಾಗಿ ಒಮ್ಮೊಮ್ಮೆ ಸಾರ್ವಭೌಮಾಧಿಕಾರದ ವಿಘಟನೆಯ ಸಂದರ್ಭಗಳನ್ನು ವಿವರಿಸಲು ಫ್ಯೂಡಲ್ ಎಂಬ ಶಬ್ದವನ್ನು ಬಳಸಿದ್ದಾರೆ. ಹೆಚ್.ಸಿ. ರಾಯ್‌ಚೌಧರಿ, ಎ.ಎಸ್. ಅಳ್ಟೇಕರ್‌, ಡಿ.ಸಿ. ಸರ್ಕಾರ್, ಟಿ.ವಿ. ಮಹಾಲಿಂಗಂ ಮೊದಲಾದವರನ್ನು ಇದಕ್ಕೆ ಉದಾಹರಣೆಯಾಗಿ ಹೆಸರಿಸಬಹುದು. ಹಾಗೇ ಲಲ್ಲಾಂಜಿ ಗೋಪಾಲ್ ಅವರು ಊಳಿಗಮಾನ್ಯ ವ್ಯವಸ್ಥೆಯನ್ನು ಭಾರತದಲ್ಲಿ ಕ್ರಿಸ್ತಶಕ ಮೊದಲ ಸಹಸ್ರಮಾನದ ದ್ವಿತೀಯಾರ್ಧದಲ್ಲಿ ತಲೆದೋರಿದ ಸಾಮಂತ ವ್ಯವಸ್ಥೆಗೆ ಸಮೀಕರಿಸುತ್ತಾರೆ. ವಿಕೇಂದ್ರಿತ ರಾಜ್ಯವ್ಯವಸ್ಥೆಯೊಂದರ ಇರುವಿಕೆಯನ್ನು ಈ ವಿದ್ವಾಂಸರು ಊಳಿಗಮಾನ್ಯ ವ್ಯವಸ್ಥೆಯ ಅಗತ್ಯ ಆಧಾರವೆಂದು ಪರಿಭಾವಿಸಿದಂತೆ ತೋರುತ್ತದೆ. ವಿಶೇಷ ಪರಿಕಲ್ಪನಾತ್ಮಕ ಆಳ ಇವುಗಳಲ್ಲಿ ಕಂಡುಬರುವುದಿಲ್ಲ.

ಊಳಿಗಮಾನ್ಯ ವ್ಯವಸ್ಥೆಯ ಕುರಿತ ಸೂತ್ರೀಕರಣಕ್ಕೆ ಸಂಬಂಧಿಸಿದಂತೆ ಭಾರತದ ಮಾರ್ಕ್ಸ್‌‌ವಾದಿ ಇತಿಹಾಸಜ್ಞರು ಬಂಡವಾಳಶಾಹಿಪೂರ್ವ ಸಾಮಾಜಿಕ, ಆರ್ಥಿಕ ರಚನೆಗಳ ಕುರಿತ ಮಾರ್ಕ್ಸ್‌‌ನ ಪ್ರಮೇಯದಿಂದ ಪ್ರೇರಿತರಾದವರು. ಆ ಪ್ರಮೇಯವನ್ನು ಈ ಸಂದರ್ಭದಲ್ಲಿ ಸ್ವಲ್ಪ ವಿವರವಾಗಿ ನೋಡುವುದು ಅಗತ್ಯವಿದೆ. ಏಕೆಂದರೆ ೧೯ನೆಯ ಶತಮಾನದ ಮಧ್ಯಭಾಗ ಮೊದಲ್ಗೊಂಡು ಆರ್ಥಿಕ ವ್ಯವಸ್ಥೆಯ ರಾಜಕೀಯ ರಚನೆಗಳು, ಸಾಮಾಜಿಕ ಸಂರಚನೆಗಳು, ಕಲೆ, ಸಂಸ್ಕೃತಿ, ಸಾಹಿತ್ಯ, ಧರ್ಮ, ದರ್ಶನಗಳಂತೆ ಇತಿಹಾಸ ಅಧ್ಯಯನವೂ ಮಾರ್ಕ್ಸ್‌‌ವಾದದ ಪ್ರಭಾವಕ್ಕೆ ಒಳಗಾಗಿದೆ. ಭಾರತೀಯ ಇತಿಹಾಸ ಅಧ್ಯಯನ ಕ್ಷೇತ್ರವೂ ಈ ಪ್ರಭಾವಕ್ಕೆ ಹೊರತಾಗಿಲ್ಲ. ಮಾರ್ಕ್ಸ್ ಮತ್ತು ಏಂಗಲ್ಸ್ ಅವರ ಪ್ರಕಾರ ತಾವು ಪ್ರತಿಪಾದಿಸುತ್ತಿದ್ದ ವೈಜ್ಞಾನಿಕ ಸಮಾಜವಾದ ಅಥವಾ ಕಮ್ಯೂನಿಸಂ ಎಂಬುದು ಆಧುನಿಕ ಔದ್ಯಮಿಕ ಶ್ರಮಿಕವರ್ಗ ಮತ್ತು ಬಂಡವಾಳಶಾಹಿ ವರ್ಗಗಳೆಂಬ ಎರಡು ಪರಸ್ಪರ ವಿರುದ್ಧವಾದ ವರ್ಗಗಳ ಸಂಘರ್ಷದ ಅನಿವಾರ್ಯ ಪರಿಣಾಮವಾಗಿ ಅಸ್ತಿತ್ವಕ್ಕೆ ಬರುವಂಥದು. ಅವರ ಗ್ರಹಿಕೆಯಲ್ಲಿ ಈ ಶೋಷಿತ ಶ್ರಮಿಕವರ್ಗ ಹಾಗೂ ಶೋಷಕ ಬೂರ್ಜ್ವಾ ವರ್ಗಗಳು ಚಾರಿತ್ರಿಕವಾಗಿ ಬೆಳೆದುಕೊಂಡು ಬಂದಂಥವು. ಇವೆರಡು ವರ್ಗಗಳು ಹಾಗೂ ಅವುಗಳ ನಡುವಿನ ವೈರುಧ್ಯಗಳ ಉಗಮ ಹಾಗೂ ರೂಪಾಂತರಗಳನ್ನು ಚಾರಿತ್ರಿಕ, ಆರ್ಥಿಕ ಹಂತಗಳಲ್ಲಿ ಪರೀಕ್ಷಿಸುವತ್ತ ಮಾರ್ಕ್ಸ್‌ವಾದದ ವಿಶೇಷ ಗಮನ ನೀಡಿತು. ಚಾರಿತ್ರಿಕ ಭೌತವಾದವೆಂಬ ಒಂದು ಇತಿಹಾಸ ತತ್ವವನ್ನು ಪ್ರತಿಪಾದಿಸಿದ ಮಾರ್ಕ್ಸ್ ಮತ್ತು ಏಂಗಲ್ಸ್ ಇತಿಹಾಸದ ಭೌತಿಕ ನೆಲೆಯ ನಿರೂಪಣೆಯ ಮುಖಾಂತರ ಸಾಮಾಜಿಕ ಬೆಳವಣಿಗೆಯ ಸ್ವರೂಪವನ್ನು ಗ್ರಹಿಸಿದರು. ಸಾಮಾಜಿಕ ವ್ಯವಸ್ಥೆಯಲ್ಲಿ ಒಂದು ಬೆಳವಣಿಗೆಯ ಕ್ರಮವಿರುವುದನ್ನು ಕಂಡುಕೊಂಡರು. ಸಮಾಜದ ಪ್ರತಿಯೊಂದು ಹಂತದ ಸ್ವರೂಪವು ಒಂದು ನಿಶ್ಚಿತ ರೂಪಕ್ಕೆ ಅಧೀನವಾಗಿತ್ತು ಹಾಗೂ ಸಾಮಾಜಿಕ ವ್ಯವಸ್ಥೆಯ ಪ್ರತಿಹಂತವೂ ಆ ಮೊದಲಿನ ಹಂತದಿಂದ ಉಗಮಿಸಿತ್ತು ಎಂಬ ತಮ್ಮ ಗ್ರಹಿಕೆಯ ಹಿನ್ನೆಲೆಯಲ್ಲಿ ಮಾರ್ಕ್ಸ್‌ವಾದದ ಪ್ರವರ್ತಕರು ಬಂಡವಾಳಶಾಹಿ ಪೂರ್ವದ ಇತಿಹಾಸದ ಗತಿಯ ಕುರಿತು ಎರಡು ಸೂತ್ರಗಳನ್ನು ಮುಂದಿಟ್ಟರು. ಇದರಲ್ಲಿ ಮೊದಲನೆಯದು ೧೮೪೫ ರಿಂದ ೧೮೪೮ ರವರೆಗಿನ ಮಾರ್ಕ್ಸ್‌ನ ಬರವಣಿಗೆಗಳಲ್ಲಿ (ಪ್ರಮುಖವಾಗಿ ಜರ್ಮನ್ ಐಡಿಯಾಲಜಿ, ಕಮ್ಯುನಿಸಟ್ ಮ್ಯಾನಿಫೆಸ್ಟೊ) ಕಂಡುಬರುವುದು. ಈ ಕ್ರಮಗಳಲ್ಲಿ ಕಂಡುಬರುವ ಹಾಗೆ ಮಾನವ ಸಮಾಜದ ಬೆಳವಣಿಗೆಯ ಅನುಕ್ರಮ ಹಂತಗಳು ಅದರಲ್ಲಿ ಹೀಗಿವೆ:

೧. ಆದಿ ಪುರಾತನ ಸಾಮ್ಯ ಸಮಾಜ (Primitive Communism)
೨. ಪ್ರಾಚೀನ ಸಮಾಜ (Ancient Society)
೩. ಊಳಿಗಮಾನ್ಯ ಸಮಾಜ (Feudal Society)
೪. ಆಧುನಿಕ ಬಂಡವಾಳಶಾಹಿ (Modern Burgeoisie)

ಮಾರ್ಕ್ಸ್‌‌ನ ನಂತರದ ಬರವಣಿಗೆಗಳಲ್ಲಿ ಬರುವ ಇನ್ನೊಂದು ಸೂತ್ರದ ಪ್ರಕಾರ ಆ ಹಂತಗಳು ಹೀಗಿವೆ:

೧. ಏಷಿಯಾಟಿಕ್ ಉತ್ಪಾದನಾ ವಿಧಾನ
೨. ಪ್ರಾಚೀನ ವಿಧಾನ
೩. ಊಳಿಗಮಾನ್ಯ ವಿಧಾನ
೪. ಆಧುನಿಕ ಬಂಡವಾಳಶಾಹಿ ಉತ್ಪಾದನಾ ವಿಧಾನ

ಇವೆರಡನ್ನೂ ಗಮನಿಸಿದಾಗ ಒಂದು ಹಂತದವರೆಗೆ ಮಾರ್ಕ್ಸ್‌‌ನು ಏಷ್ಯನ್ ಉತ್ಪಾದನಾ ವಿಧಾನವನ್ನು ಆದಿ ಪುರಾತನ ಸಾಮ್ಯ ಸಮಾಜವೆಂಬುದಾಗಿ ಪರಿಕಲ್ಪಿಸಿಕೊಂಡನೆಂದು ಗೊತ್ತಾಗುತ್ತದೆ. ವರ್ಗಪೂರ್ವ ಆದಿಮ ಸಾಮ್ಯಸಮಾಜವನ್ನು ಏಷ್ಯದಲ್ಲಿ ವಿಶಿಷ್ಟವೆಂಬುದಾಗಿ ಮಾರ್ಕ್ಸ್ ಗಮನಿಸಿದ್ದೇಕೆ ಎಂಬ ಪ್ರಶ್ನೆಗೆ ಆದಿಪುರಾತನ ‘ಸಮಸಮಾಜ’ ಮೂಲತಃ ಏಷ್ಯದ್ದಾಗಿದ್ದರೂ ಏಷ್ಯಕ್ಕಷ್ಟೇ ಸೀಮಿತವಾಗಿರಲಿಲ್ಲವೆಂಬುದು ಮಾರ್ಕ್ಸ್‌ನ ನಂಬಿಕೆಯಾಗಿತ್ತು ಎಂದು ಉತ್ತರಿಸಲಾಗಿದೆ. ಆದರೆ ಭಾರತದ ಮಾರ್ಕ್ಸ್‌ವಾದಿಗಳು ಏಷ್ಯನ್ ಉತ್ಪಾದನಾ ವಿಧಾನ (Asiatic Mode of Production-AMP)ದ ಪರಿಕಲ್ಪನೆಯನ್ನು ನಿರಾಕರಿಸಿದರು. ಅದಕ್ಕೆ ಮುಖ್ಯ ಕಾರಣ ಮಾರ್ಕ್ಸ್‌ನ ಏಷ್ಯನ್ ಉತ್ಪಾದನಾ ವಿಧಾನದ ಪ್ರಮೇಯದಲ್ಲಿರುವ ಪೌರಾತ್ಯ ನಿರಂಕುಶ ಪ್ರಭುತ್ವದ (Oriental Despotism) ಕುರಿತ ಗ್ರಹಿಕೆ. ಏಷ್ಯವು ಪ್ರಬಲ, ನಿರಂಕುಶ ದೊರೆಗಳ ಆಳ್ವಿಕೆಗೊಳಪಟ್ಟದ್ದು ಎನ್ನುವ ವಿಚಾರದ ಬೇರುಗಳು ಪ್ರಾಚೀನ ಗ್ರೀಕ್ ನಾಗರಿಕತೆಯಷ್ಟು ಹಿಂದಕ್ಕೆ ಹೋಗುತ್ತದೆ. ಏಷ್ಯದ ಈ ಪ್ರಬಲ ನಿರಂಕುಶ ಸಾಮ್ರಾಜ್ಯಗಳು ತಮ್ಮ ಅಂದರೆ ಗ್ರೀಕರ ಸ್ವಾತಂತ್ರ‍್ಯಕ್ಕೂ, ಹಾಗೂ ಅಂಥ ಪ್ರಭುತ್ವಗಳಡಿ ಇರುವ ಪ್ರಜೆಗಳ ಗುಲಾಮಗಿರಿ ಸ್ಥಿತಿಗತಿಗಳು ತಮ್ಮ ಸೀಮಿತ ಪ್ರಭುತ್ವ ಹಾಗೂ ಮುಕ್ತ ಪ್ರಜೆಯಂಥ ಆದರ್ಶಗಳಿಗೂ ಗಂಡಾಂತರಕಾರಿ ಎಂದು ಗ್ರೀಕರು ಭಾವಿಸಿದ್ದರು. ಈಸ್ಕೈಲಸ್, ಹೆರೊಡಟಸ್, ಅರಿಸ್ಟಾಟಲ್ ಮೊದಲಾದವರ ಚಿಂತನೆಯಲ್ಲಿದ್ದ ಈ ಗ್ರಹಿಕೆಗಳು ಹತ್ತೊಂಬತ್ತನೆ ಶತಮಾನದ ಲೇಖಕರನ್ನು, ದಾರ್ಶನಿಕರನ್ನು ಪ್ರಭಾವಿಸಿದಂತೆ ಮಾರ್ಕ್ಸ್‌ನನ್ನೂ ಪ್ರಭಾವಿಸಿದ್ದವು. ಆ ಹಂತದಲ್ಲಿ ಮಾರ್ಕ್ಸ್‌ನಿಗೆ ಭಾರತೀಯ ಚರಿತ್ರೆಯ ಕುರಿತು ಲಭ್ಯವಿದ್ದ ಆಧಾರ ಸಾಮಗ್ರಿಯೂ ಸೀಮಿತವಾಗಿತ್ತು.

ಭಾರತಕ್ಕೆ ಸಂಬಂಧಿಸಿದಂತೆ ನಿರಂಕುಶ ಪ್ರಭುತ್ವಗಳ ಉಗಮಕ್ಕೆ ಕೊಡಲಾದ ಕಾರಣವೆಂದರೆ ಬ್ರಿಟಿಷ್‌ಪೂರ್ವ ಭಾರತದಲ್ಲಿ ಕೃಷಿಭೂಮಿಯಲ್ಲಿ ಖಾಸಗಿ ಸ್ವಾಮ್ಯವೆಂಬುದು ಇರಲಿಲ್ಲವೆನ್ನುವುದು. ಮಾರ್ಕ್ಸ್ ರೂಪಿಸಿದ ಏಷಿಯನ್ ಉತ್ಪಾದನಾ ವಿಧಾನದ ಸೂತ್ರೀಕರಣದಲ್ಲಿ ಈ ಗ್ರಹಿಕೆ ಇದೆ. ಆ ಸೂತ್ರೀಕರಣವನ್ನು ಸಂಗ್ರವಾಗಿ ಹೇಳಬೇಕೆಂದರೆ, ಭಾರತೀಯ ಕೃಷಿಯಲ್ಲಿ ಕೃತ್ರಿಮ ನೀರಾವರಿಯ ಪಾತ್ರ ಗುರುತರವಾದುದಾಗಿತ್ತು. ಭಾರತೀಯ ಕೃಷಿಗೆ ಅಗತ್ಯವಿರುವ ಅಗಾಧ ಪ್ರಮಾಣದ ನೀರಾವರಿಯ ಹೊಣೆಯನ್ನು ರಾಜ್ಯ ಮಾತ್ರ ಹೊರಬಲ್ಲುದಾಗಿತ್ತು. ರಾಜ್ಯವು ಬೃಹತ್ ಸಾರ್ವಜನಿಕ ಕಾಮಗಾರಿಗಳ, ಅದರಲ್ಲೂ ಮುಖ್ಯವಾಗಿ ನೀರಾವರಿಯ ಮೇಲೆ ನಿಯಂತ್ರಣ ಹೊಂದಿದ್ದುದು ಗ್ರಾಮೀಣ ಜನ ಸಮುದಾಯಗಳನ್ನು ಸುಲಭವಾಗಿ ರಾಜ್ಯಕ್ಕೆ ಅಧೀನವಾಗಿಸಿತು.

ಎಲ್ಲ ಭೂಮಿಯ ಒಡೆತನ ರಾಜ್ಯದ್ದಾಗಿದ್ದರಿಂದ ಖಾಸಗಿ ಭೂಹಿಡುವಳಿಗಳು ಇರಲಿಲ್ಲ. ಒಂದೊಂದೂ ಪ್ರತ್ಯೇಕ ಹಾಗೂ ಸ್ವಯಂಪೂರ್ಣವಾದ ಘಟಕಗಳಾಗಿದ್ದ ಹಲವಾರು ಗ್ರಾಮ ಸಮಾಜಗಳಿದ್ದು, ಅವುಗಳಲ್ಲಿ ಕೃಷಿ ಮತ್ತು ಕೈಗಾರಿಕೆಗಳ ನಡುವಿದ್ದ ಹೊಂದಾಣಿಕೆ ಅವುಗಳ ಸಹಜ ಅರ್ಥವ್ಯವಸ್ಥೆಯ ನಿರಂತರತೆಯ ನೆಲೆಯಾಗಿತ್ತು. ಅಂದರೆ ಪ್ರತಿಯೊಂದು ಗ್ರಾಮವೂ ತನ್ನ ಕೃಷಿ ಅಗತ್ಯಗಳನ್ನು ತಾನೇ ಪೂರೈಸಿಕೊಂಡು ಅಗತ್ಯವಿರುವ ಇತರ ವಸ್ತುಗಳನ್ನು ತಾನೇ ಉತ್ಪಾದಿಸಿಕೊಳ್ಳುತ್ತಿತ್ತು. ಅರ್ಥವ್ಯವಸ್ಥೆಯು ಪ್ರಧಾನವಾಗಿ ಗ್ರಾಮೀಣವಾಗಿದ್ದು ಎಲ್ಲೋ ಅಲ್ಲೊಂದು ಇಲ್ಲೊಂದು ಪಟ್ಟಣಗಳು ಇದ್ದರೂ ಅವು ವಾಣಿಜ್ಯ ಕೇಂದ್ರವೆಂಬುದಕ್ಕಿಂತ ಸೈನ್ಯ ಬಿಡಾರವಾಗಿ ಕೆಲಸ ನಿರ್ವಹಿಸಿದ್ದೇ ಹೆಚ್ಚು. ಇಡೀ ಸನ್ನಿವೇಶವು ಕಾಣಿಕೆ ಅಥವ ಕರಗಳ ರೂಪದಲ್ಲಿ ಕೃಷಿ ಮಿಗಿತಾಯ (surplus) ವಸೂಲು ಮಾಡುತ್ತಿದ್ದ ಸರ್ವಾಧಿಕಾರಿ ರಾಜ್ಯದ ಪ್ರಭಾವದಲ್ಲಿತ್ತು.

ಈಗಾಗಲೇ ಚರ್ಚಿಸಿದಂತೆ ಭಾರತೀಯ ಮಾರ್ಕ್ಸ್‌ವಾದಿಗಳು ಏಷ್ಯನ್ ಉತ್ಪಾದನಾ ವಿಧಾನದ ಕುರಿತ ಮಾರ್ಕ್ಸ್‌ನ ಪ್ರಮೇಯದ ಕುರಿತು ಉತ್ಸಾಹ ತೋರಲಿಲ್ಲ. ಅದಕ್ಕೆ ಕಾರಣವೆಂದರೆ ಮಾರ್ಕ್ಸ್‌ಆಗಲಿ ಏಷ್ಯನ್ ಉತ್ಪಾದನಾ ಕ್ರಮದ ಕುರಿತು ವಿವರವಾದ ಅಧ್ಯಯನವನ್ನೇನೂ ಮಾಡಲಿಲ್ಲ. ಯುರೋಪಿನ ಇತಿಹಾಸದ ಗತಿ ತಾರ್ಕಿಕತೆಯನ್ನು ಅರ್ಥೈಸುವುದು ಅವರ ಪ್ರಮುಖ ಕಾಳಜಿಯಾಗಿದ್ದು ಏಷ್ಯನ್ ಉತ್ಪಾದನಾ ವಿಧಾನವು ಎಲ್ಲೋ ಅವರ ಚಿಂತನೆಯ ಪರಿಧಿಯಲ್ಲಿ ಇತ್ತಷ್ಟೆ. ಅದಕ್ಕಿಂತ ಮುಖ್ಯವಾಗಿ ಈ ಏಷ್ಯನ್ ಉತ್ಪಾದನಾ ವಿಧಾನದ ಪರಿಕಲ್ಪನೆಯು ಮೂಲಭೂತವಾಗಿ ದೋಷಪೂರ್ಣವಾಗಿದ್ದು ಅದು ಪ್ರಯೋಗಸಿದ್ಧತೆಯ ನಿಕಷವನ್ನು ಭರಿಸದೆಂದು ಮತ್ತು ಸೈದ್ಧಾಂತಿಕವಾಗಿ ಸಮರ್ಥಿಸಿಕೊಳ್ಳಲಾಗದಂಥದೆಂದು ಭಾವಿಸಿ ಭಾರತದ ಮಾರ್ಕ್ಸ್‌ವಾದಿಗಳು ಅದನ್ನು ನಿರಾಕರಿಸಿದರು. ಹಾಗೆಯೇ ಆಧುನಿಕಪೂರ್ವ ಸಾಮಾಜಿಕ, ಆರ್ಥಿಕ ರಚನೆಗಳ ಕುರಿತ ಸೂತ್ರೀಕರಣದಲ್ಲಿರುವ ಎರಡನೆ ಹಂತವಾದ ಪ್ರಾಚೀನ ಸಮಾಜಕ್ಕೆ ಸಂಬಂಧಿಸಿದ ಮಾರ್ಕ್ಸ್‌ನ ಪ್ರಮೇಯವನ್ನು ಅವಿಮರ್ಶಾತ್ಮಕವಾಗಿ ಅನ್ವಯಿಸಿ ಮಾಡಿದ ಭಾರತೀಯ ಹಾಗೂ ಯುರೋಪಿನ ಸನ್ನಿವೇಶಗಳ ಹೋಲಿಕೆಯ ಸಮೀಕರಣವನ್ನು ಭಾರತೀಯ ಮಾರ್ಕ್ಸ್‌ವಾದಿ ಇತಿಹಾಸಜ್ಞರು ನಿರಾಕರಿಸಿದ್ದಾರೆ. ಉದಾಹರಣೆಗೆ ಎಸ್.ಎ. ಡಾಂಗೆಯವರು ವೈದಿಕ ಪಠ್ಯಗಳಿಂದ ಜಾಣತನದಿಂದಾಯ್ದ ಸಾಮಗ್ರಿಯನ್ನು ಆಧರಿಸಿ ಉತ್ತರವೇದ ಕಾಲದಲ್ಲಿ “ಗುಲಾಮ ಸಮಾಜದ ಉಗಮವನ್ನು” ಪ್ರತಿಪಾದಿಸಲು ನೋಡಿದ್ದು ಭಾರತೀಯ ಮಾರ್ಕ್ಸ್‌ವಾದಿ ಇತಿಹಾಸಜಞರ ಒಲವನ್ನು ಗಳಿಸುವಲ್ಲಿ ವಿಫಲವಾಯಿತು. ಚಾರಿತ್ರಿಕ ಬೆಳವಣಿಗೆಗಳ ಗತಿ ಭಿನ್ನವಾಗಿರುವ ಭಾರತೀಯ ಚರಿತ್ರೆಯ ಪುನಾರಚನೆಯಲ್ಲಿ ಯುರೋಪಿನ ಹೋಲಿಕೆಗಳು ಎಲ್ಲ ಸಂದರ್ಭಗಳಲ್ಲೂ ಉಪಯುಕ್ತವಾಗಿರಲಿಲ್ಲವೆಂದು ಬಹುತೇಕ ಭಾರತೀಯ ಮಾರ್ಕ್ಸ್‌‌ವಾದಿ ಇತಿಹಾಸಜ್ಞರ ಅಭಿಪ್ರಾಯ. ಗ್ರೀಕ್ ಮತ್ತು ರೋಮನ್ ಸಮಾಜಗಳಂತೆ ಪ್ರಾಚೀನ ಭಾರತ ಸಮಾಜವನ್ನು ವ್ಯಾಪಕ ಪ್ರಮಾಣದ ಗುಲಾಮಗಿರಿಯನ್ನಾಧರಿಸಿದ ಸಮಾಜವೆಂದು ಗುರುತಿಸಲು ಭಾರತದ ಮಾರ್ಕ್ಸ್‌ವಾದಿ ಇತಿಹಾಸಜ್ಞರು ನಿರಾಕರಿಸಿದರು. ಪ್ರಾಚೀನ ಭಾರತದಲ್ಲಿ ಗುಲಾಮಗಿರಿಯನ್ನು ಆಧರಿಸಿದ ಉತ್ಪಾದನಾ ವಿಧಾನವೊಂದು (Slave Mode of Production) ಇತ್ತೆಂಬುದನ್ನು ಕೋಸಾಂಬಿಯವರು ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ. ಪ್ರಾಚೀನ ಭಾರತೀಯ ಸಮಾಜವನ್ನು ಯುರೋಪಿನ ಅಭಿವೃದ್ಧಿ ಹೊಂದಿದ ಗುಲಾಮ ಸಾಮಾಜಿಕ ರಚನೆಯೊಂದಿಗೆ ಸಮೀಕರಿಸಲು ಭಾರತೀಯ ಮಾರ್ಕ್ಸ್‌ವಾದಿ ಇತಿಹಾಸಜ್ಞರಲ್ಲಿ ಸಾಮಾನ್ಯವಾಗಿ ಇದ್ದ ನಿರುತ್ಸಾಹವನ್ನು ಆರಂಭಿಕ ಮಧ್ಯಕಾಲೀನ ಭಾರತದ ಅಧ್ಯಯನದ ಸಂದರ್ಭದಲ್ಲಿ ನಾವು ಕಾಣುವುದಿಲ್ಲ. ಭಾರತೀಯ ಮತ್ತು ಐರೋಪ್ಯ ಬೆಳವಣಿಗೆಗಳಲ್ಲಿ ಸಮಾನವೆಂದು ತೋರುವಂಥ, ಊಳಿಗಮಾನ್ಯವೆಂದು ಅವರು ಗುರುತಿಸುವ ಆರಂಭಿಕ ಭಾರತೀಯ ಸನ್ನಿವೇಶದ ಅವರ ವಿಶ್ಲೇಷಣೆಯಲ್ಲಿ ಇದು ವ್ಯಕ್ತವಾಗುತ್ತದೆ.

ಊಳಿಗಮಾನ್ಯವೆಂಬುದು ಒಂದು ಆಳ್ವಿಕೆಯ ವ್ಯವಸ್ಥೆ ಎಂಬ ಅಂಶದ ಮೇಲೆ ಈಗಾಗಲೇ ಚರ್ಚಿಸಿದಂತೆ ಸಾಂಪ್ರದಾಯಿಕ ಕಲ್ಪನೆಗೆ ವಿರುದ್ಧವಾಗಿ ಮಾರ್ಕ್ಸ್‌ವಾದಿ ಇತಿಹಾಸಜ್ಞರ ಬಣವು ಊಳಿಗಮಾನ್ಯ ವ್ಯವಸ್ಥೆಯೆಂಬ ಒಟ್ಟು ಸಂಗತಿಯನ್ನು ಉತ್ಪಾದನಾ ಕ್ರಮವೊಂದಕ್ಕೆ ಸಮೀಕರಿಸುತ್ತದೆ. ಈ ಉತ್ಪಾದನಾಕ್ರಮದ ಆಧಾರವೆಂದರೆ ಭೂ ಮಾಲೀಕರ, ಭೂಸ್ವಾಮ್ಯವುಳ್ಳ ಮಧ್ಯವರ್ತಿಗಳ ಒಂದು ವರ್ಗ; ಮುಖ್ಯವಾಗಿ, ಈ ವರ್ಗದ ಒಡೆತನದಲ್ಲಿರುವ ಭೂಮಿಯ ಜೊತೆ ನಿರ್ದಿಷ್ಟ ಸಂಬಂಧ ಹೊಂದಿದ ಉತ್ಪಾದಕ ರೈತಪಿಗಳ ಮತ್ತೊಂದು ಪ್ರಧಾನ ವರ್ಗ ಮತ್ತು ಇವೆರಡನ್ನೊಳಗೊಂಡ ಪ್ರಧಾನವಾಗಿ ಸ್ವಯಂಪೂರ್ಣ ಸ್ವಾವಲಂಬಿಯಾದ, ಮಾರುಕಟ್ಟೆ ವ್ಯವಸ್ಥೆಗೆ ಅವಕಾಶವಿಲ್ಲದ, ಕೃಷಿ ಅರ್ಥವ್ಯವಸ್ಥೆ. ಈ ಚೌಕಟ್ಟಿನಲ್ಲಿ ಊಳಿಗಮಾನ್ಯವನ್ನು ವ್ಯಾಖ್ಯಾನಿಸಿಕೊಳ್ಳುವ ಅಧ್ಯಯನಗಳು ಜೀತಪದ್ಧತಿ (serfdom) ಮತ್ತು ರೈತಾಪಿಗಳ ಸ್ವಾತಂತ್ರ‍್ಯದ ಮೇಲೆ ವಿಧಿಸಲ್ಪಟ್ಟ ಇತರ ನಿರ್ಬಂಧಗಳತ್ತ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುತ್ತವೆ.

ಆರಂಭಿಕ ಭಾರತದಲ್ಲಿ ಊಳಿಗಮಾನ್ಯ ವ್ಯವಸ್ಥೆಯ ಬೆಳವಣಿಗೆಯನ್ನು ಸ್ಪಷ್ಟವಾಗಿ ಉಲ್ಲೇಖಿಸಿದ ಮೊದಲ ಭಾರತೀಯ ಮಾರ್ಕ್ಸ್‌ವಾದಿ ಇತಿಹಾಸಜ್ಞ ಬಿ.ಎನ್.ದತ್ತಾ ಎಂದು ಗುರುತಿಸಲಾಗಿದ್ದರೂ, ಡಿ.ಡಿ. ಕೊಸಾಂಬಿಯವರ ‘ಆನ್ ಇಂಟ್ರಡಕ್ಷನ್ ಟು ದಿ ಸ್ಟಡಿ ಆಫ್ ಇಂಡಿಯನ್ ಹಿಸ್ಟರಿ’ ಕೃತಿಯ ಪ್ರಕಟಣೆಯೊಂದಿಗೆ (೧೯೫೬) ಊಳಿಗಮಾನ್ಯವಾದದ ಚರ್ಚೆ ಹೆಚ್ಚಿನ ಪ್ರಸ್ತುತತೆಯನ್ನು ಪಡೆದುಕೊಂಡಿತು. ಕೊಸಾಂಬಿಯವರ ಪ್ರಕಾರ ಕ್ರಿಸ್ತಶಕೆಯ ಆರಂಭದ ಶತಮಾನಗಳಲ್ಲಿ ದೊರೆಗಳು ಅಧೀನ ನಾಯಕರಿಗೆ ಕಂದಾಯಾಕರಣೆ ಮಾಡುವ ಹಾಗೂ ಆಡಳಿತಾತ್ಮಕವಾದ ತಮ್ಮ ಹಕ್ಕುಗಳನ್ನು ವರ್ಗಾಯಿಸತೊಡಗಿದರು. ಅಂದಿನಿಂದ ಅಂಥ ಅಧೀನ ನಾಯಕರು ರೈತಾಪಿಗಳೊಂದಿಗೆ ನೇರ ಸಂಪರ್ಕಕ್ಕೆ ಬರುವಂತಾಗಿ ಸರಳ ಆವೃತ ಕೃಷಿಕ ಅರ್ಥ ವ್ಯವಸ್ಥೆಯಲ್ಲಿ (Closed peasant economy) ಒಂದು ಕದಲಿಕೆ ಉಂಟಾಯಿತು. ಈ ಪ್ರಕ್ರಿಯೆಯನ್ನು ಕೊಸಂಬಿಯವರು ‘ಮೇಲ್‌ಸ್ತರದ ಊಳಿಗಮಾನ್ಯ ವ್ಯವಸ್ಥೆ’ (ಫ್ಯೂಡಲಿಸಂ ಫ್ರಂ ಅಬೋವ್) ಎಂದು ಕರೆದಿದ್ದಾರೆ. ಅವರ ಪ್ರಕಾರ ಮೇಲ್‌ಸ್ತರದ ಊಳಿಗಮಾನ್ಯ ಪದ್ಧತಿ ಎಂದರೆ ಓರ್ವ ಸಾಮ್ರಾಟ ಅಥವಾ ಪ್ರಬಲ ದೊರೆಯು ಅಧೀನರು ತನಗೆ ಕಪ್ಪ ಕಾಣಿಕೆಗಳನ್ನು ಸಲ್ಲಿಸುವಂತೆ ವಿಧಿಸುವ, ಮತ್ತು ಹಾಗೆ ಅವರು ತನಗೆ ಸಲ್ಲಿಸಬೇಕಾದ್ದನ್ನು ಸಲ್ಲಿಸುವ ತನಕ ತಮ್ಮ ಪ್ರದೇಶಗಳಲ್ಲಿ ತಾವು ಹಕ್ಕುಬದ್ಧವಾಗಿ ತಮಗೇನಿಷ್ಟವೋ ಅದನ್ನು ಅನುಸರಿಸುತ್ತ ಆಳ್ವಿಕೆ ಮಾಡಿಕೊಂಡಿರಲು ಅವಕಾಶ ಮಾಡಿಕೊಡುವ ಸ್ಥಿತಿ. ಈ ಅಧೀನ ಅರಸರು ಬುಡಕಟ್ಟು ನಾಯಕರೂ ಆಗಿರಬಹುದು. ತಮ್ಮ ಪ್ರದೇಶವನ್ನು ಭೂಮಾಲೀಕತ್ವ ಹೊಂದಿದ ಒಂದು ಮಧ್ಯವರ್ತಿ ವರ್ಗದ ಅಗತ್ಯವಿಲ್ಲದೆ ನೇರ ಆಡಳಿತದಿಂದ ಆಳಿರಬಹುದು. ಗುಪ್ತರ ಮತ್ತು ಹರ್ಷನ ಆಳ್ವಿಕೆಯ ಅವಧಿಯನ್ನು ಮೇಲ್‌ಸ್ತರದ ಊಳಿಗಮಾನ್ಯ ವ್ಯವಸ್ಥೆ ತನ್ನ ಬೆಳವಣಿಗೆಯ ವಿಕಸಿತ ಹಂತವನ್ನು ತಲುಪಿದ ಅವಧಿ ಎಂದು ಕೊಸಾಂಬಿಯವರು ಪ್ರತಿಪಾದಿಸುತ್ತಾರೆ. ಈ ಬೆಳವಣಿಗೆಯ ಮುಂದಿ ಹಂತವೆಂದರೆ ‘ಕೆಳಸ್ತರದ ಊಳಿಗಮಾನ್ಯ ವ್ಯವಸ್ಥೆ’ (ಫ್ಯೂಡಸಲಿಂ ಫ್ರಂ ಬಿಲೊ). ಈ ಹಂತದಲ್ಲಿ ರಾಜ್ಯ ಮತ್ತು ರೈತಾಪಿವರ್ಗಗಳ ನಡುವೆ ಭೂಮಾಲೀಕರ ವರ್ಗವೊಂದು ಗ್ರಾಮೀಣ ಪ್ರದೇಶದಲ್ಲಿ ಬೆಳೆಯುತ್ತದೆ. ಸ್ಥಳೀಯ ಸಮುದಾಯಗಳ ಮೇಲೆ ಸಶಸ್ತ್ರ ನಿಯಂತ್ರಣವನ್ನು ಹೊಂದುವ ಈ ವರ್ಗ ಸೈನ್ಯ ಸೇವೆ ಸಲ್ಲಿಸಲು ಬದ್ಧವಾಗಿದ್ದರಿಂದ ಇನ್ನಾವುದೇ ವರ್ಗದ ಮಧ್ಯಪ್ರವೇಶವಿಲ್ಲದೆ ರಾಜ್ಯಶಕ್ತಿಯ ಜೊತೆ ನೇರ ಸಂಬಂಧ ಹೊಂದುತ್ತದೆ.

ಭಾರತೀಯ ಊಳಿಗಮಾನ್ಯವಾದದ ಕುರಿತ ಗ್ರಹಿಕೆಗಳು ಹೆಚ್ಚಿನ ವ್ಯಾಪಕತೆ ಮತ್ತು ಸ್ಪಷ್ಟತೆಯನ್ನು ಪಡೆದುಕೊಂಡದ್ದು ೧೯೬೫ ರಲ್ಲಿ ಆರ್.ಎಸ್.ಶರ್ಮ ಅವರು ತಮ್ಮ ‘ಇಂಡಿಯನ್‌ಫ್ಯೂಡಲಿಸಂ’ ಎನ್ನುವ ಕೃತಿಯನ್ನು ಪ್ರಕಟಿಸುವುದರೊಂದಿಗೆ. ಉತ್ತರ ಭಾರತಕ್ಕೆ ಸೀಮಿತಗೊಂಡಂತೆ ಸುಮಾರು ಕ್ರಿಸ್ತಶಕ ೩೦೦ ರಿಂದ ೧೨೦೦ ರವರೆಗಿನ ಒಂಬತ್ತು ಶತಮಾನಗಳ ಕಾಲಾವಧಿಯ ಊಳಿಗಮಾನ್ಯ ವ್ಯವಸ್ಥೆಯ ರಾಜಕೀಯ ಮತ್ತು ಆರ್ಥಿಕ ಆಯಾಮಗಳ ಮೇಲೆ ತನ್ನ ಗಮನವನ್ನು ಈ ಕೃತಿಯು ಕೇಂದ್ರೀಕರಿಸಿತು. ಈ ಕೃತಿಯು ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ಮೇಲೆ ಊಳಿಗಮಾನ್ಯ ವ್ಯವಸ್ಥೆಯ ಪ್ರಭಾವವನ್ನು ಪರಿಗಣಿಸಿಲ್ಲದಿರುವುದು ಕಂಡುಬರುತ್ತದೆ.

ಕೊಸಾಂಬಿಯವರು ಎರಡು ಹಂತಗಳಲ್ಲಿ ರೂಪಿಸಿದ ಊಳಿಗಮಾನ್ಯ ಪದ್ಧತಿಯ ಬೆಳವಣಿಗೆಯ ಪ್ರಮೇಯವನ್ನು ಆರ್.ಎಸ್.ಶರ್ಮ ಅವರು ಬೆಳೆಸದೇ ಬೇರೊಂದು ನಿಟ್ಟಿನಿಂದ ಭಾರತೀಯ ಊಳಿಗಮಾನ್ಯವಾದವನ್ನು ಗ್ರಹಿಸಿ ಅಭ್ಯಸಿಸಿದ್ದಾರೆ. ೧೯೬೫ ರಲ್ಲಿ ಅವರ ಕೃತಿಯು ಪ್ರಕಟವಾದಂದಿನಿಂದ ಭಾರತೀಯ ಊಳಿಗಮಾನ್ಯವಾದದ ಕುರಿತಾದ ತೀಕ್ಷ್ಣವಾದ ಚರ್ಚೆಯು ಆರಂಭವಾಯಿತು. ಈ ಚರ್ಚೆಯ ಮೊನಚು ಈಗ ಸ್ವಲ್ಪ ಕಡಿಮೆಯಾಗಿದೆಯಾದರೂ, ಇಪ್ಪತ್ತನೇ ಶತಮಾನದ ಕೊನೆಯ ದಶಕಗಳಲ್ಲಿ ಮತ್ತೊಮ್ಮೆ ಸಾಕಷ್ಟು ಸಂಚಲನವನ್ನು ಮೂಡಿಸಿದೆ.

ಆರ್.ಎಸ್. ಶರ್ಮಾ ಅವರು ಯುರೋಪಿನ ಊಳಿಗಮಾನ್ಯ ವ್ಯವಸ್ಥೆಯ ಲಕ್ಷಣಗಳನ್ನು ಸ್ಥೂಲವಾಗಿ ಈ ಕೆಳಕಂಡಂತೆ ಗುರುತಿಸಿಕೊಳ್ಳುತ್ತಾರೆ:

೧. ಇಡೀ ಆಡಳಿತಾತ್ಮಕ ರಚನೆಯು ಭೂಮಿಯನ್ನಾಧರಿಸಿರುವಲ್ಲಿ ಊಳಿಗಮಾನ್ಯ ವ್ಯವಸ್ಥೆಯ ರಾಜಕೀಯ ಸಾರವು ಅಡಗಿತ್ತು.

೨. ರಾಜ್ಯ ಮತ್ತು ವಾಸ್ತವ ಉಳುಮೆಗಾರರ ನಡುವೆ ಇದ್ದ ಭೂಸ್ವಾಮ್ಯವುಳ್ಳ ಮಧ್ಯವರ್ತಿಗಳ (landed intermediatories) ಜಮೀನುಗಳಿಗೆ ಜೀತಗಾರರಿದ್ದರು. ರಾಜ್ಯ ಮತ್ತು ವಾಸ್ತವ ಉಳುಮೆಗಾರರಿಗೆ ಬಾಡಿಗೆಯನ್ನೂ, ಶ್ರಮವನ್ನೂ ಸಂದಾಯ ಮಾಡುತ್ತ ಬದುಕುವ ರೈತರ ಜೀತಗಾರಿಕೆಯಲ್ಲಿ ಆ ವ್ಯವಸ್ಥೆಯ ಆರ್ಥಿಕ ಸಾರವು ಅಡಗಿತ್ತು.

೩. ಉತ್ಪಾದಿತ ವಸ್ತುಗಳು ಮಾರುಕಟ್ಟೆಗಾಗಿರದೇ ಪ್ರಮುಖವಾಗಿ ರೈತಾಪಿಗಳ ಮತ್ತು ಅವರ ಧಣಿಗಳ ಸ್ಥಳೀಯ ಬಳಕೆಗಾಗಿ ಉತ್ಪಾದಿಸಲ್ಪಡುತ್ತಿದ್ದ ಸ್ವಯಂಪೂರ್ಣ ಸ್ವಾವಲಂಬಿ ಆರ್ಥಿಕತೆಯನ್ನು ಯುರೋಪಿನ ಊಳಿಗಮಾನ್ಯ ವ್ಯವಸ್ಥೆ ಆಧರಿಸಿತ್ತು.

ಹೀಗೆ ಗುರುತಿಸಿಕೊಂಡ ಊಳಿಗಮಾನ್ಯ ವ್ಯವಸ್ಥೆಯ ಸ್ಥೂಲ ಲಕ್ಷಣಗಳ ಹಿನ್ನೆಲೆಯಲ್ಲಿ ಆರ್.ಎಸ್.ಶರ್ಮ ಅವರು ಭಾರತದಲ್ಲಿ ಊಳಿಗಮಾನ್ಯ ವ್ಯವಸ್ಥೆಯ ಹುಟ್ಟು ಮತ್ತು ಬೆಳವಣಿಗೆಯನ್ನು ಚರ್ಚಿಸಿದ್ದಾರೆ.

ಶರ್ಮ ಅವರ ಪ್ರಕಾರ ಮೌರ್ಯ ಕಾಲಾನಂತರ, ವಿಶೇಷವಾಗಿ ಗುಪ್ತರ ಆಳ್ವಿಕೆಯ ಕಾಲದಿಂದ ಕಂಡುಬಂದ ಕೆಲವು ರಾಜಕೀಯ ಮತ್ತು ಆಡಳಿತಾತ್ಮಕ ಬೆಳವಣಿಗೆಗಳು ರಾಜ್ಯಯಂತ್ರವನ್ನು ಊಳಿಗಮಾನ್ಯ ವ್ಯವಸ್ಥೆಯತ್ತ ಕೊಂಡೊಯ್ದವು. ಇವುಗಳಲ್ಲಿ ಅತ್ಯಂತ ಎದ್ದುಕಾಣುವ ಬೆಳವಣಿಗೆ ಎಂದರೆ ಬ್ರಾಹ್ಮಣರಿಗೆ, ದೇವಾಲಯಗಳಿಗೆ, ವಿಹಾರಗಳಿಗೆ ಭೂಮಿಯನ್ನು ದಾನವಾಗಿ ಕೊಡುವ ಪದ್ಧತಿ. ರಾಜ್ಯಾದಾಯದ ಎಲ್ಲ ಮೂಲಗಳ ಪರಭಾರೆ ಮತ್ತು ಎಲ್ಲ ಕಾನೂನುಪಾಲನೆ ಸಂಬಂಧಿ ಹಾಗೂ ಆಡಳಿತಾತ್ಮಕವಾದ ಹಕ್ಕುಗಳ ಶರಣಾಗತಿ ಇವುಗಳನ್ನು ಇಂಥ ದಾನಗಳ ಮುಖ್ಯ ಲಕ್ಷಣವೆಂಬುದಾಗಿ ಶರ್ಮ ಅವರು ಗುರುತಿಸುತ್ತಾರೆ. ಅಂದರೆ ರಾಜ್ಯಪ್ರಭುತ್ವವು ತನ್ನ ಸ್ವೀಕರಸುವ ಕಂದಾಯ ಮೊದಲಾದ ಆದಾಯಗಳನ್ನು, ಬಿಟ್ಟಿ ದುಡಿಮೆಯ ಆಚರಣೆ, ಹುಲ್ಲುಗಾವಲು, ಭೂಮ್ಯಾಂತರ್ಗತ ಸಂಪತ್ತು, ಗಣಿಗಳು, ಹೂತಿಟ್ಟ ನಿಧಿ ಮುಂತಾದವುಗಳ ಉಪಭೋಗದ ಹಕ್ಕನ್ನು ದಾನ ಪಡೆದವರಿಗೆ ನೀಡಿತು. ಕೃಷಿಕರು ಮತ್ತು ಕುಶಲಕರ್ಮಿ ವರ್ಗಗಳು ತಾವು ಸಾಂಪ್ರದಾಯಿಕವಾಗಿ ರಾಜ್ಯಕ್ಕೆ ಕೊಡುತ್ತಿದ್ದ ತೆರಿಗೆಗಳನ್ನು ಇನ್ನು ಮುಂದೆ ದಾನವನ್ನು ಪಡೆದವರಿಗೆ ಸಲ್ಲಿಸಬೇಕು. ಅಷ್ಟೇ ಅಲ್ಲ, ಅವರಿಗೆ ವಿಧೇಯರಾಗಿರಬೇಕು ಎಂದು ಸ್ಪಷ್ಟ ನಿರ್ದೇಶನವನ್ನು ಆಳರಸರು ನೀಡಿದರು. ಅಂದರೆ ದಾನ ಕೊಡುವಾಗ ತನ್ನ ಆದಾಯಗಳನ್ನಷ್ಟೇ ಅಲ್ಲ, ದಾನವಾಗಿ ಕೊಡಲ್ಪಟ್ಟ ಗ್ರಾಮವಾಸಿಗಳ ಮೇಲಿನ ತನ್ನ ಆಳ್ವಿಕೆಯ ಹಕ್ಕನ್ನು ರಾಜ್ಯವು ದಾನವಾಗಿ ಪಡೆದವರಿಗೆ ಬಿಟ್ಟುಕೊಟ್ಟಿತು. ಕ್ರಿ.ಶ. ೫ನೆಯ ಶತಮಾನದಿಂದ ಭಾರತದ ವಿವಿಧೆಡೆ ಇಂಥ ರಾಜ್ಯ ವಿಶಿಷ್ಟ ಹಕ್ಕು ಬಾಧ್ಯತೆಗಳನ್ನು ದಾನವನ್ನು ಪಡೆದವರಿಗೆ ವರ್ಗಾಯಿಸುವ ಪ್ರವೃತ್ತಿಗಳು ಬಲವಾದವು.

ಮೊದಲ ಹಂತ ಹಂತವಾಗಿ ಪುರೋಹಿತವರ್ಗಕ್ಕೆ ಕೊಡಮಾಡಲ್ಪಟ್ಟ ಇಂಥ ವಿನಾಯ್ತಿಗಳು, ಹಕ್ಕುಗಳು, ಅಧಿಕಾರಗಳು ನಂತರದ ಅವಧಿಯಲ್ಲಿ ಯೋಧವರ್ಗಕ್ಕೂ ಕೊಡಲ್ಪಟ್ಟವು. ಗ್ರಾಮಾಂತರದಲ್ಲಿ ಊಳಿಗಮಾನ್ಯ ಸ್ವತ್ತು (Feudal Property) ಬೆಳವಣಿಗೆ ಹೊಂದಿ ಕ್ರಮೇಣ ಭೂಮಿಯ ಮೇಲಿನ ಸಾಮುದಾಯಿಕ ಒಡೆತನವೂ ಕಡೆಗಣಿಸಲ್ಪಟ್ಟಿತೆಂಬುದಕ್ಕೆ ಗೋಮಾಳ, ಕಾಡು, ಜಲಾಗಾರಗಳೇ ಮೊದಲಾದವುಗಳನ್ನು ವರ್ಗಾಯಿಸುವ ನಂತರದ ಅವಧಿಯ ದಾನ ಶಾಸನಗಳನ್ನು ಶರ್ಮ ಅವರು ಉದಾಹರಿಸುತ್ತಾರೆ. ವಾಣಿಜ್ಯ ಸಂಬಂಧಗಳ ಗೈರುಹಾಜರಿ, ಸ್ಥಳೀಯ ಮತ್ತು ಸ್ವಾವಲಂಬಿ ಅರ್ಥವ್ಯವಸ್ಥೆ, ಹಾಗೂ ನಗರ ಜೀವನದ ಅವನತಿ ಮತ್ತು ನಾಣ್ಯಗಳ ಚಲಾವಣೆಯಲ್ಲಿ ಇಳಿಕೆಗಳೊಂದಿಗೆ ಧಾರ್ಮಿಕ ಮತ್ತು ಧಾರ್ಮಿಕೇತರ (ಸೇವೆಗಳಿಗೆ ಸಂಬಂಧಿಸಿದ) ಭೂಮಿದಾನಗಳು ಹೆಚ್ಚಾಗುತ್ತ ಹೋದವು ಎಂಬುದು ಶರ್ಮ ಅವರ ನಿಲುವು. ಭಾರತೀಯ ಊಳಿಗಮಾನ್ಯ ಪದ್ಧತಿಯ ಮೂಲಲಕ್ಷಣ ಯುರೋಪಿನ ಊಳಿಗಮಾನ್ಯ ಪದ್ಧತಿಯಲ್ಲಿದ್ದಂತೆಯೇ ಭೂಮಾಲೀಕ ಮಧ್ಯಮವರ್ಗದ ಉದಯದಲ್ಲಿತ್ತು. ರೈತಾಪಿಗಳ ಚಲನೆ ಹಾಗೂ ಸ್ವಾತಂತ್ರ‍್ಯದ ಮೇಲಿನ ನಿರ್ಬಂಧಗಳು, ಬಿಟ್ಟಿ ದುಡಿಮೆಗೈಯಲು ಬದ್ಧವಾಗಿರುವಂತೆ ಹೆಚ್ಚಿನ ಆಗ್ರಹಗಳು, ಏರುತ್ತಿದ್ದ ತೆರಿಗೆಭಾರ ಮತ್ತು ಕೆಳಹಂತದಲ್ಲಿ ಊಳಿಗ ಪದ್ಧತಿ ಪುನರುತ್ಪಾದನೆಗೊಳ್ಳುವಿಕೆ (Subinfeudation) ಇವೆಲ್ಲ ಅಂತಿಮವಾಗಿ ರೈತಾಪಿ ವರ್ಗದ ಜೀತಗಾರಿಕೆಯಾಗಿ ಪರ‍್ಯವಸಾನವಾಯಿತು ಎನ್ನುತ್ತಾರೆ ಶರ್ಮ ಅವರು.

ಆರ್.ಎಸ್.ಶರ್ಮ ಅವರ ಭಾರತೀಯ ಊಳಿಗಮಾನ್ಯವಾದದ ಪ್ರಮೇಯವು ವಿವಿಧ ಬಗೆಯ ಟೀಕೆ, ವಿಮರ್ಶೆ, ಚಿಂತನ ಮಂಥನಗಳಿಗೆ ಗುರಿಯಾಗಿದೆ.

ಶರ್ಮ ಅವರ ಭಾರತೀಯ ಊಳಿಗಮಾನ್ಯವಾದದ ಕುರಿತ ಪ್ರತಿಪಾದನೆಗಳ ಬಹುಮುಖ್ಯ ಗ್ರಹೀತವೆಂದರೆ ಕ್ರಿ.ಶ. ಒಂದನೇ ಸಹಸ್ರಮಾನದ ಮಧ್ಯದ ವೇಳೆಗೆ ಭಾರತದ ಸರಕು ಉತ್ಪಾದನೆ ಹಾಗೂ ವಿದೇಶಿ ವ್ಯಾಪಾರದಲ್ಲಿ ಅವನತಿ ಉಂಟಾಯಿತು. ಇದರ ಪರಿಣಾಮವಾಗಿ ಬೆಳೆದ ಸ್ವಾವಲಂಬಿ ಸ್ವಯಂಪೂರ್ಣ ಅರ್ಥವ್ಯವಸ್ಥೆಯಲ್ಲಿ ಲೋಹದ ನಾಣ್ಯಗಳು ಕಡಿಮೆಯಾಗುತ್ತ ಹೋಗಿ ಪುರೋಹಿತ ವರ್ಗಗಳಿಗೆ ಅಥವಾ ಆಡಳಿತಾಧಿಕಾರಿ ವರ್ಗಕ್ಕೆ ಮಾಡಬೇಕಾದ ಎಲ್ಲ ಸಂದಾಯಗಳನ್ನು ಭೂಮಿ ಅಥವಾ ಭೂಮಿಯಿಂದ ಬರುವ ಆದಾಯವನ್ನು ದಾನವಾಗಿ ಕೊಡುವ ಮೂಲಕ ಮಾಡಬೇಕಾಯಿತು ಎಂಬುದು.

ಡಿ.ಸಿ. ಸರ್ಕಾರ್ ಅವರು ಗುಪ್ತರ ಆಳ್ವಿಕೆಯ ಕಾಲಾನಂತರದಲ್ಲಿ ವ್ಯಾಪಾರ ವಾಣಿಜ್ಯ ಅವನತಿ ಹೊಂದತೆಂಬ ಪ್ರಮೇಯವನ್ನು ಒಪ್ಪುವುದಿಲ್ಲ. ಈ ಅವಧಿಯಲ್ಲಿ ನಾಣ್ಯಗಳ ವಿರಳ ಬಳಕೆಯ ಕುರಿತ ಅಂಶವನ್ನು ಒಪ್ಪಿಕೊಂಡರೂ ವ್ಯಾಪಾರ ವಹಿವಾಟುಗಳಲ್ಲಿ ಹಣದ ಸಂಕೇತವಾಗಿ ಕವಡೆಗಳ ಬಳಕೆಯಾಗುತ್ತಿತ್ತೆಂದು ಸರ್ಕಾರ್ ವಾದಿಸುತ್ತಾರೆ. ಹಾಗೇ ಬಿ.ಡಿ. ಚಟ್ಟೋಪಾಧ್ಯಾಯ ಅವರು ಏಳನೇ ಶತಮಾನದ ಮಧ್ಯಭಾಗದಿಂದ ಹದಿಮೂರನೇ ಶತಮಾನದವರೆಗೆ ಬಂಗಾಲದಲ್ಲಿ ಸಾಪೇಕ್ಷವಾಗಿ ನಾಣ್ಯಗಳ ಕೊರತೆಯನ್ನು ಮಾನ್ಯ ಮಾಡಿದರೂ, ಸರ್ಕಾರ್ ಅವರನ್ನು ಅನುಸರಿಸಿ ಅವರೂ ಚರಿತ್ರೆಯುದ್ದಕ್ಕೂ ಆ ಪ್ರದೇಶದಲ್ಲಿ ಕವಡೆಗಳು ಹಣಕಾಸು ವ್ಯವಸ್ಥೆಯ ಪ್ರಧಾನಾಂಶವಾಗಿದ್ದವೆನ್ನುತ್ತಾರೆ.

ನಾಣ್ಯಗಳ ಸಾಪೇಕ್ಷ ಕೊರತೆಯ ಅನಿಸಿಕೆಯು ಆ ಕುರಿತ ಅಂಕಿ ಸಂಖ್ಯಾತ್ಮಕ ಅಧ್ಯಯನಗಳ ಗೈರುಹಾಜರಿಯಲ್ಲಿ ಮೇಲ್ನೋಟದ ಅನಿಸಿಕೆ ಆಗಿರಬಹುದು ಎನ್ನುತ್ತಾರೆ ಡಿ.ಎನ್.ಝಾ. ಅದಕ್ಕಿಂತ ಮುಖ್ಯವಾಗಿ ಭಾರತದಲ್ಲಿ ಊಳಿಗಮಾನ್ಯ ವ್ಯವಸ್ಥೆ ಎಂಬ ಸಂಗತಿಯ ಉಗಮವನ್ನು ಕೊಸಾಂಬಿ ಮತ್ತು ಶರ್ಮ ಅವರು ವಿದೇಶಿ ವ್ಯಾಪಾರದ ಅವನತಿ ಮತ್ತು ತತ್ಪರಿಣಾಮದ ಸ್ಥಳೀಯ ಸ್ವಯಂಪೂರ್ಣ ಅರ್ಥವ್ಯವಸ್ಥೆಯ ಬೆಳವಣಿಗೆಯ ಹಿನ್ನೆಲೆಯಲ್ಲಿ ನೋಡುವುದಕ್ಕೂ ಯುರೋಪಿನ ಊಳಿಗಮಾನ್ಯ ವ್ಯವಸ್ಥೆಯನ್ನು ಬೆಲ್ಜಿಯಂ ಇತಿಹಾಸಜ್ಞ ಹೆನ್ರಿ ಪಿರೆನ್ನೆ ಕೂಡ ಅದೇ ಪರಿಪ್ರೇಕ್ಷ್ಯದಲ್ಲಿ ನೋಡಿದ್ದಕ್ಕೂ ಎದ್ದು ಕಾಣುವ ಸಾಮ್ಯವಿರುವುದನ್ನು ಡಿ.ಎನ್. ಝಾ ಪ್ರಸ್ತಾಪಿಸುತ್ತಾರೆ.

ಸಾಪೇಕ್ಷವಾಗಿ ಸರಕು ಉತ್ಪಾದನೆ ಮತ್ತು ವ್ಯಾಪಾರದಲ್ಲಿ ಇಳಿಕೆ ಮತ್ತು ಅದರ ಪರಿಣಾಮವಾಗಿ ಸ್ವಯಂಪೂರ್ಣ ಆರ್ಥಿಕತೆಯ ಬೆಳವಣಿಗೆಳು ಪುರಾವೆಗಳಿಂದ ಸಿದ್ಧವಾಗಿವೆಯಾದರೂ ಕಳೆದ ಕೆಲ ವರ್ಷಗಳಲ್ಲಿ ಊಳಿಗಮಾನ್ಯ ಬೆಳವಣಿಗೆಗಳನ್ನು ಕೇವಲ ವಿದೇಶಿ ವ್ಯಾಪಾರದ ಪರಿಪ್ರೇಕ್ಷ್ಯದಲ್ಲಿ ವಿವರಿಸುವಲ್ಲಿನ ಸೈದ್ಧಾಂತಿಕ ಮಿತಿಗಳು ಮನದಟ್ಟಾಗುತ್ತಿವೆ. ವಿದೇಶಿ ವ್ಯಾಪಾರದ ಅವನತಿ ಬಹಳ ಮಟ್ಟಿಗೆ ಭಾರತೀಯ ಸನ್ನಿವೇಶಕ್ಕೆ ಹೊರತಾದ ಕಾರಣಗಳನ್ನವಲಂಬಿಸಿತ್ತು. ಅಂದರೆ ಭಾರತೀಯ ಸಂದರ್ಭಕ್ಕೆ ನೇರವಾಗಿ ಸಂಬಂಧ ಪಟ್ಟಿರದ ಅಂಶಗಳಲ್ಲಿ ಊಳಿಗಮಾನ್ಯ ಬೆಳವಣಿಗೆಯ ಕಾರಣಗಳನ್ನು ಗುರುತಿಸುವ ಚಿಂತನೆ ಅಕ್ಷೇಪಾರ್ಹವೆನ್ನಿಸಿದೆ.

ಈ ಕಾರಣಕ್ಕಾಗಿ ಭಾರತೀಯ ಊಳಿಗಮಾನ್ಯವಾದದ ಸಮರ್ಥಕರಲ್ಲಿ ಕೆಲವರು ಅದರ ಬೆಳವಣಿಗೆಯ ಕಾರಣಗಳನ್ನು ಭಾರತದ ಆಂತರಿಕ ಸಾಮಾಜಿಕ ವೈರುಧ್ಯಗಳಲ್ಲಿ ಶೋಧಿಸಲೆತ್ನಿಸಿದರು. ಬಿ.ಎನ್.ಎಸ್.ಯಾದವ ಅವರು ತಮ್ಮದೊಂದು ಲೇಖನದಲ್ಲಿ ಪ್ರತಿಪಾದಿಸಿದ ವಿಷಯವೊಂದರ ಜಾಡನ್ನು ಮುಂದುವರೆಸಿ ಡಿ.ಎನ್.ಝಾ ಅವರು ಕಲಿಯುಗದ ಕಲ್ಪನೆಯನ್ನು ಅದು ತಥಾಗಥಿತವಾಗಿ ತೀವ್ರತರ ವರ್ಗ ವೈರುಧ್ಯಗಳ ಅವಧಿ ಎಂಬುದಾಗಿ ವಿಸ್ತರಿಸಿದರು. ಈ ಹೊಸ ಮಾರ್ಕ್ಸ್‌‌ವಾದಿ ನಿರೂಪಣೆಯ ಪ್ರಕಾರ ಊಳಿಗಮಾನ್ಯ ವ್ಯವಸ್ಥೆಯ ಉದಯಕ್ಕೆ ಕಾರಣವಾದದ್ದು ವರ್ಗ ಹೋರಾಟಗಳ ಈ ವೈರುಧ್ಯವೇ. ಕಾಲಾಂತರದಲ್ಲಿ ಸುಮಾರು ಕ್ರಿ.ಶ. ೧೦೦೦ದ ವೇಳೆಗೆ ಅಂಥದೇ ಸಾಮಾಜಿಕ ಬಿಕ್ಕಟ್ಟು ಮತ್ತು ವ್ಯಾಪಾರದ ಪುನರುತ್ಥಾನ ಕಾರಣವಾಗಿ ಭಾರತದಲ್ಲಿ ಊಳಿಗಮಾನ್ಯ ವ್ಯವಸ್ಥೆ ದುರ್ಬಲಗೊಂಡಿತು. ಅದೇ ಕಾಲಕ್ಕೆ ಝಾ ಅವರು ಹೇಳುವುದು ಭೂದಾನ ಆಧರಿಸಿದ ಅರ್ಥವ್ಯವಸ್ಥೆಯು ಮೊದಲಾಗಿ ಕಾಣಿಸಿಕೊಳ್ಳುವುದು ಬ್ರಾಹ್ಮಣ ವ್ಯವಸ್ಥೆ ದೃಢವಾಗಿ ಬೇರೂರಿದ ಪ್ರದೇಶಗಳಲ್ಲಿ ಅಲ್ಲ. ವಾಸ್ತವವಾಗಿ, ಅದು ಕಾಣಿಸಿಕೊಂಡಿದ್ದು ಆ ಪ್ರದೇಶಗಳ ಅಂಚಿನ ಭಾಗಗಳಲ್ಲಿ(ಪೆರಫರಿ). ಹೀಗೆ ಹೇಳುವ ಮೂಲಕ ಝಾ ಭಾರತೀಯ ಊಳಿಗಮಾನ್ಯವಾದದ ಒಂದು ಮೂಖ್ಯಭೂಮಿಕೆಯನ್ನೇ ಪ್ರಶ್ನಿಸುತ್ತಾರೆ.

ಮೊದಲ ಸಹಸ್ರಮಾನದ ಮಧ್ಯಭಾಗದಿಂದ ಭಾರತದಲ್ಲುಂಟಾದ ಸಾಮಾಜಿಕ ಬದಲಾವಣೆಗಳನ್ನು ವಿವರಿಸಲು ಭಾರತೀಯ ಮಾರ್ಕ್ಸ್‌‌ವಾದಿ ಇತಿಹಾಸ ಲೇಖನವು ಯುರೋಪಿನ ಊಳಿಗಮಾನ್ಯ ವ್ಯವಸ್ಥೆಯ ಮಾದರಿಯನ್ನು ಬಳಸಿಕೊಂಡಿದೆಯೆಂಬುದು ಸ್ಪಷ್ಟ. ಉದಾಹರಣೆಗೆ ಶರ್ಮ ಅವರ ಪ್ರಮೇಯದ ಒಂದು ಮುಖ್ಯಗ್ರಹೀತ ಜೀತಗಾರಿಕೆಯ (Serfdom) ಕುರಿತಾದ ಪ್ರಶ್ನೆಗಳು. ಕ್ರಿ.ಶ. ೬ನೆಯ ಶತಮಾನದಿಂದ ಗ್ರಾಮಗಳನ್ನು ಆ ಗ್ರಾಮಗಳಲ್ಲಿ ನೆಲೆಸಿದ್ದ ಎಲ್ಲ ಕೃಷಿಕರ ಸಮೇತ ದಾನ ಪಡೆದವರಿಗೆ ವರ್ಗಾಯಿಸುವ ಪರಿಪಾಟ ಆರಂಭವಾಯಿತೆಂದು ಗುರುತಿಸುವ ಶರ್ಮ ಅವರು ತಾವು ಉತ್ತಿ ಬಿತ್ತಿ ಮಾಡುವ ಜಮೀನುಗಳಿಗೆ, ಗ್ರಾಮಗಳಿಗೆ ಅಂಟಿಕೊಂಡಿರುವಂತೆ ರೈತಾಪಿಗಳು ನಿರ್ದೇಶಿತರಾದ ಪರಿಣಾಮವಾಗಿ ಕ್ರಿ.ಶ. ಎಂಟನೇ ಶತಮಾಣದ ಹೊತ್ತಿಗೆ ಜೀತಗಾರಿಕೆ ಎಂಬುದು ಸರ್ವೆ ಸಾಮಾನ್ಯವಾಯಿತೆನ್ನುತ್ತಾರೆ.

ಆದರೆ ಭಾರತೀಯ ಬೆಳವಣಿಗೆಗಳಿಂದ ಯುರೋಪಿಯನ್ ಬೆಳವಣಿಗೆಗಳನ್ನು ಊಳಿಗ ಹಿಡುವಳಿ ಪದ್ಧತಿ (Manorial System) ಭಿನ್ನವಾಗಿರಿಸುತ್ತದೆಂಬುದು ಈಗ ಹೆಚ್ಚಾಗಿ ಸಮ್ಮತವಾಗಿದೆ. ಊಳಿಗಮಾನ್ಯವನ್ನು ಪಡೆದಾತನ (ಸೆನೂರಿ ಅಥವಾ seignurie) ಹಿಡುವಳಿಯು (Manor) ಯುರೋಪಿನಲ್ಲಿ ಸಾಮಾನ್ಯವಾಗಿ ಡಿಮೆನ್(demesne) ಮತ್ತು ಮಾನ್ಸ್ (Manse) ಎಂಬೆರಡು ಭಾಗಗಳಲ್ಲಿ ವಿಭಜಿತವಾಗಿತ್ತು. ಈ ಡಿಮೆನ್ ಮತ್ತು ಮಾನ್ಸ್ ಪ್ರತ್ಯೇಕವಾಗಿದ್ದರೂ ಆಂತರಿಕವಾಗಿ ನಿಕಟವಾಗಿ ಪರಸ್ಪರ ಅವಲಂಬನೆಯ ಬಂಧಗಳಿಂದಾಗಿ ಒಂದರೊಡನೊಂದು ಸಂಬಂಧಗೊಂಡಿದ್ದವು. ವಾಸದ ಮನೆಗಳು, ಕೃಷಿ ಬಳಕೆ ಕಟ್ಟಡಗಳು, ತೋಟ ಪಟ್ಟಿಗಳು, ಉದ್ಯಾನ ಅಥವಾ ವನಗಳು, ಹೊಲಗಳು, ಗೋಮಾಳಗಳೆಲ್ಲ ಸೇರಿದಂತೆ ಒಂದು ವಿಶಾಲವಾದ ಕೃಷಿ ಭೂಮಿಯು ಧಣಿಯ ಅಥವಾ ಆತನ ಪ್ರತಿನಿಧಿಗಳ ನೇರ ನಿರ್ದೇಶನದಡಿ ಉಳುಮೆಗೊಳಪಟ್ಟಿತ್ತು. ಮಾನ್ಸ್‌ಗಳು ಸಣ್ಣ ಅಥವಾ ಮಧ್ಯಮ ಪ್ರಮಾಣದ ಹಿಡುವಳಿಗಳಾಗಿದ್ದು ಅವುಗಳನ್ನು ಧಣಿಯ ಗೇಣಿದಾರ ರೈತರು ಊಳೂತ್ತಿದ್ದರು. ಮಾಮೂಲಾಗಿ ಧಣಿಗೆ ಪಾಲು ಕೊಡಬೇಕಿದ್ದ ಮತ್ತು ಸೇವೆಗಳನ್ನು ಸಲ್ಲಿಸಬೇಕಿದ್ದ ಆ ರೈತಾಪಿಗಳು ಡಿಮೆನ್‌ಗಳ ಉಳುಮೆಗೂ ನೆರವಾಗುತ್ತಿದ್ದರು. ಮಾನ್ಸ್‌ಗಳು ಮೂಲತಃ ಊಳಿಗಮಾನ್ಯ ಪಡೆದ ಧಣಿಯ ಕಂದಾಯ ಘಟಕಗಳಾಗಿದ್ದು ಹಲವು ಗೇಣಿದಾರ ರೈತಾಪಿ ಕುಟುಂಬಗಳು ಅಲ್ಲಿರುತ್ತಿದ್ದವು. ಆ ರೈತಾಪಿಗಳು ಧಣಿಗಾಗಿ ಅಪೇಕ್ಷಿತ ಮೊತ್ತದ ಹಣ ಹಾಗೂ ಅಪೇಕ್ಷಿತ ಪ್ರಮಾಣದ ದವಸ ಧಾನ್ಯಗಳನ್ನು ಉತ್ಪಾದಿಸುತ್ತ ನಿಗದಿಪಡಿಸಿದಷ್ಟು ಕೋಳಿ ಹಾಗೂ ಮೊಟ್ಟೆಗಳನ್ನು ಪೂರೈಸುತ್ತ ತಮಗೆ ನಿಗದಿಯಾದ ಸಂಖ್ಯೆಯ ಕೆಲಸದ ದಿನಗಳಲ್ಲಿ ಧಣಿಯ ಡಿಮೆನ್ ಭೂಮಿಯಲ್ಲಿ ಕೆಲಸ ಮಾಡುತ್ತಿರುತ್ತಿದ್ದರು. ಮಾನ್ಸ್‌ಗಳ ಅಸ್ತಿತ್ವ ಡಿಮೆನ್‌ನ ಅಸ್ತಿತ್ವವನ್ನಾಧರಿಸಿತ್ತು. ಮಧ್ಯಕಾಲೀನ ಯುರೋಪಿನ ಕೃಷಿ ಉತ್ಪಾದನೆಯ ಆರಂಭಿಕ ಹಂತದಲ್ಲಿ ಈ ಸಣ್ಣ ಮತ್ತು ಮಧ್ಯಮ ಹಿಡುವಳಿಗಳಿಗೂ ದೊಡ್ಡ ಹಿಡುವಳಿ ಜಮೀನುಗಳಿಗೂ ಮಧ್ಯೆ ಇದ್ದ ಸಂಬಂಧ ಆಧಾರಪ್ರಾಯವಾಗಿತ್ತಲ್ಲದೆ ಮಿಗಿತಾಯ ವಸೂಲಿ ವಿಧಾನದ (Mechanism of Surplus Extraction) ಅತಿ ಮುಖ್ಯ ಲಕ್ಷಣವಾಗಿತ್ತು. ಈ ಸನ್ನಿವೇಶದಲ್ಲಿ ಎಲ್ಲ ಕೃಷಿ ಉತ್ಪಾದನೆಯಲ್ಲಿ ಮೂಲಭೂತ ಪ್ರಮುಖ್ಯತೆ ಜೀತಪದ್ಧತಿಯಾಗಿತ್ತು.

ಭಾರತದಲ್ಲಿ ಗುಪ್ತರ ನಂತರ ಆರ್ಥಿಕ ಸನ್ನಿವೇಶವನ್ನು ಯುರೋಪಿನ ಸನ್ನಿವೇಶದೊಂದಿಗೆ ಹೋಲಿಸಿದಾಗ ಇಲ್ಲಿ ದಾಣ ಕೊಡಲ್ಪಟ್ಟ ಗ್ರಾಮವನ್ನಾಗಲಿ, ಭೂಮಿಯನ್ನಾಗಲಿ ಯುರೋಪಿನ ಮೆನೊರ್‌ಗಳ ಜೊತೆ ಸಮೀಕರಿಸಲಾಗುವುದಿಲ್ಲ. ಇಲ್ಲಿ ದಾನ ಕೊಡಲ್ಪಟ್ಟ ಭೂಮಿಗಳು ಜೀತದ ಒಕ್ಕಲುಗಳಿಂದ ಕೂಡಿದ ಸಣ್ಣ ಮತ್ತು ಮಧ್ಯಮ ಹಿಡುವಳಿಗಳಾಗಿ ವಿಭಾಗಿಸಲ್ಪಟ್ಟದ್ದು ಕಾಣುವುದಿಲ್ಲ. ಜೀತದ ಒಕ್ಕಲುಗಳ ಬದಲು ಸ್ವತಃ ರೈತ ಕುಟುಂಬಗಳ ಉತ್ಪಾದನೆಯ ಮತ್ತು ಊಳಿಗಾಧಿಪತಿಯ ಕಂದಾಯ ಘಟಕಗಳಾಗಿ ಧಣಿಯ ಜೊತೆ ಪರಸ್ಪರಾವಲಂಬನೆಯ ನಿಕಟ ಆರ್ಥಿಕ ಸಂಬಂಧಗಳನ್ನು ಬೆಳೆಸಿಕೊಂಡದ್ದು ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ ಮಧ್ಯಕಾಲೀನ ಯುರೋಪಿನಲ್ಲಿನ ಉತ್ಪಾದನಾ ಪ್ರಕ್ರಿಯೆಗಳು ಆರಂಭಿಕ ಭಾರತೀಕ ಪ್ರಕ್ರಿಯೆಗಳಿಂದ ಭಿನ್ನವಾಗಿದ್ದವೆಂದು ಸಕಾರಣವಾಗಿಯೇ ವಾದಿಸಲಾಗಿದೆ.

ಭಾರತೀಯ ಊಳಿಗಮಾನ್ಯ ವಾದವನ್ನು ವಿಮರ್ಶಿಸಿದ ಇನ್ನೊಬ್ಬ ಪ್ರಮುಖರಾದ ಹರ್ಬನ್ಸ್ ಮುಖಿಯಾ ಅವರು ಊಳಿಗಮಾನ್ಯವೆಂಬ ಒಂದು ವ್ಯವಸ್ಥೆ ಇತ್ತೆನ್ನುವ ಬಗೆಗೆ ಸಂದೇಹ ವ್ಯಕ್ತಪಡಿಸುತ್ತಾರೆ.

ಯುರೋಪಿನ ಊಳಿಗಮಾನ್ಯ ವ್ಯವಸ್ಥೆಯ ವಿವಿಧ ಗ್ರಹಿಕೆಗಳನ್ನು ಕೂಲಂಕಷವಾಗಿ ವಿಶ್ಲೇಷಿಸುವ ಮುಖಿಯಾ ಅವರು ಯುರೋಪಿನ ಊಳೀಗಮಾನ್ಯ ವ್ಯವಸ್ಥೆ ಉದಿಸಿದ್ದು ಸಮಾಜದ ಬುನಾದಿಯ ಮಟ್ಟದಲ್ಲಿ ಉಂಟಾದ ಬದಲಾವಣೆಗಳಿಂದಾದರೆ, ಭಾರತೀಯ ಊಳಿಗಮಾನ್ಯ ವ್ಯವಸ್ಥೆಯ ಉಗಮವನ್ನು ಅದರ ಪ್ರತಿಪಾದಕರು ಪ್ರಾಥಮಿಕವಾಗಿ ಭೂಮಿಯನ್ನು ದಾನವಾಗಿ ಕೊಡುವ ರಾಜ್ಯಪ್ರಭುತ್ವದ ಕ್ರಿಯೆಗೆ ತಳಕು ಹಾಕುತ್ತಾರೆಂಬುದನ್ನು ಎತ್ತಿ ತೋರಿಸುತ್ತ “ಊಳಿಗಮಾನ್ಯ ವ್ಯವಸ್ಥೆಯಂಥ ಸಂಕೀರ್ಣ ಸಾಮಾಜಿಕ ರಚನೆಗಳು ಆಡಳಿತಾತ್ಮಕ ಅಥವಾ ಕಾನೂನಾತ್ಮಕ ವಿಧಿ ವಿಧನಗಳ ಮೂಲಕ ಸ್ಥಾಪಿತವಾಗಬಲ್ಲವು ಎಂಬುದು ಚಚಾರ್ಹ” ಎನ್ನುತ್ತಾರೆ. ಮುಖಿಯಾ ಅವರ ಪ್ರಕಾರ ಒತ್ತಾಯದ ದುಡಿಮೆ (forced labour) ಎಂಬುದು ಭಾರತದಲ್ಲಿ ಪ್ರಮುಖವಾಗಿ ಉತ್ಪಾದನಾ ಪ್ರಕ್ರಿಯೆಯ ಭಾಗವಾಗಿರುವುದಕ್ಕಿಂತ ಹೆಚ್ಚಾಗಿ ಆಳುವ ವರ್ಗಗಳ ರಾಜಕೀಯ ಮತ್ತು ಆಡಳಿತಾತ್ಮಕ ಅಧಿಕಾರದ ಅನುಷಂಗಿಕ ಅಭಿವ್ಯಕ್ತಿಯಾಗಿತ್ತು. ಈ ಹಿನ್ನೆಲೆಯಲ್ಲಿ ಜೀತಗಾರಿಕೆಯು ಮಧ್ಯಕಾಲೀನ ಭಾರತದ ಒಂದು ಪ್ರಬಲ ಲಕ್ಷಣವಾಗಿತ್ತೆಂಬುದರ ಕುರಿತಾಗಿ ಮುಖಿಯಾ ಸಂದೇಹ ವ್ಯಕ್ತಪಡಿಸುತ್ತಾರೆ. ಅವರ ವಾದವೆಂದರೆ ಭಾರತದ ಫಲವತ್ತಾದ ಭೂಮಿಯು ಭಾರತೀಯ ಕೃಷಿಕನಿಗೆ ಯುರೋಪಿನ ಕೃಷಿಕನಿಗಿಂತ ಕಡಿಮೆ ಮಟ್ಟದ ಸಂಪನ್ಮೂಲಗಳನ್ನಾಧರಿಸಿ ಜೀವಿಸಲು ಕೃಷಿಕನಿಗೆ ಯುರೋಪಿನ ಕೃಷಿಕನಿಗಿಂತ ಕಡಿಮೆ ಮಟ್ಟದ ಸಂಪನ್ಮೂಲಗಳನ್ನಾಧರಿಸಿ ಜೀವಿಸಲು ಅವಕಾಶವಿತ್ತಿತ್ತು. ಭಾಗಶಃ ಈ ಅಂಶ ಕಾರಣವಾಗಿ ಭಾರತದ ಚರಿತ್ರೆಯ ಲಕ್ಷಣವಾಗಿದ್ದುದು (ಕಾನೂನುರೀತ್ಯಾ ಅಲ್ಲದಿದ್ದರೂ ಆರ್ಥಿಕ ಅರ್ಥದಲ್ಲಿ) ಮುಕ್ತ ರೈತಾಪಿವರ್ಗ, ಅವರ ಪ್ರಕಾರ ಮಧ್ಯಕಾಲೀನ ಭಾರತದ ಕೃಷಿ ವ್ಯವಸ್ಥೆಯ ಇತಿಹಾಸದ ಈ ಲಕ್ಷಣಗಳು, ಅಂದರೆ ಭೂಮಿಯ ಹೆಚ್ಚಿನ ಫಲವತ್ತತೆ, ಜೀವನ ನಿರ್ವಹಣೆಯ ಕನಿಷ್ಟ ಮಟ್ಟ ಹಾಗೂ ಸ್ವತಂತ್ರ ರೈತಾಪಿ ಇವು ಭಾರತದ ಸಾಮಾಜಿಕ ಆರ್ಥಿಕ ಇತಿಹಾಸದಲ್ಲಿನ ಸ್ಥಿರತೆಯನ್ನು ಸಾಮಾನ್ಯವಾಗಿ ಸ್ಥಿರವಾಗಿದ್ದ ಸನ್ನಿವೇಶದಲ್ಲಿ ರಾಜ್ಯವು ಕೃಷಿಕರಿಂದ ಮಿಗಿತಾಯವನ್ನು ವಸೂಲಿ ಮಾಡಲು ಸಾಧ್ಯವಾದ ಸಮತೋಲನವನ್ನು ವಿವರಿಸುತ್ತವೆ.

ಮುಖಿಯಾ ಅವರು ಮಾಡಿದ ಭಾರತೀಯ ಊಳಿಗಮಾನ್ಯವಾದದ ನಿರಚನವನ್ನು (deconstruction) ಬರ್ಟನ್ ಸ್ಟೈನ್ ಸ್ವಾಗತಿಸುತ್ತಾರೆ. ಅದಕ್ಕೆ ಕಾರಣ ದಕ್ಷಿಣ ಭಾರತದ ಸಾಮಾಜಿಕ ಆರ್ಥಿಕ ರಚನೆಗಳಿಗೆ ಭಾರತೀಯ ಊಳಿಗಮಾನ್ಯವಾದ ಸರಿಹೊಂದುವುದಿಲ್ಲ ಎಂಬುದು. ಆದರೆ ಮುಖಿಯಾ ಮುಕ್ತ ರೈತಾಪಿ ವರ್ಗವೆಂದು ಯಾವುದನ್ನು ತಾವು ಗುರುತಿಸುತ್ತಾರೋ ಅದಕ್ಕೆ ಸೈದ್ಧಾಂತಿಕವಾಗಿ ಮತ್ತು ಪ್ರಯೋಗಸಿದ್ಧವಾಗಿ ಪೂರಕವಾದ ರಾಜ್ಯ ವ್ಯವಸ್ಥೆ ಎಂಥದ್ದೆಂಬುದನ್ನು ವ್ಯಾಖ್ಯಾನಿಸಿಲ್ಲವೆಂದು ಸ್ಟೈನ್ ಆಕ್ಷೇಪಿಸುತ್ತಾರೆ. ಮುಖಿಯಾ ಅವರ ಹಲವು ವಾದಗಳನ್ನು ಸ್ಟೈನ್ ಅವರು ನಿರಾಕರಿಸುತ್ತಾರೆ. ಉದಾಹರಣೆಗೆ ಸ್ಟೈನ್ ಅವರ ಅಭಿಪ್ರಾಯದಲ್ಲಿ ಸಾಪೇಕ್ಷವಾಗಿ ಕೃಷಿ ಚರಿತ್ರೆಯು ಸ್ಥಿರವಾಗಿದ್ದುದಕ್ಕೆ ಭೂಮಿಯ ಫಲವತ್ತತೆಯಾಗಲಿ, ಜೀವನ ನಿರ್ವಹಣೆಯ ಮಟ್ಟದ ಕನಿಷ್ಠತೆಯಾಗಲಿ ಕಾರಣವಾಗಿರಲಿಲ್ಲ. ಬದಲಿಗೆ ಗಮನಾರ್ಹ ಸಾಮಾಜಿಕ ವ್ಯತ್ಯಾಸಗಳನ್ನುಳ್ಳ ಆದರೆ ಕನಿಷ್ಟವೇನೂ ಅಲ್ಲದ ಜೀವನಮಟ್ಟ ಹೊಂದಿದ ಜನರ ನಡುವೆ ಚಾರಿತ್ರಿಕವಾಗಿ ರೂಪುಗೊಂಡ ಮತ್ತು ಸ್ಥಳೀಕೃತವಾದ ಸಹಕಾರದ ವಿನ್ಯಾಸಗಳು ಕಾರಣವಾಗಿದ್ದವು.

೧೯೮೫ರಲ್ಲಿ ಬೈರೆಸ್ ಮತ್ತು ಹರ್ಬನ್ಸ್ ಮುಖಿಯಾ ಸಂಪಾದಕತ್ವದಲ್ಲಿ ಐರೋಪ್ಯೇತರ ಸಮಾಜಗಳಲ್ಲಿ ಉಳಿಗಮಾನ್ಯ ವ್ಯವಸ್ಥೆಯ ಕುರಿತಾಗಿಯೇ ಇದ್ದ ಒಂದು ವಿಶೇಷ ಸಂಚಿಕೆ ಜರ್ನಲ್ ಆಫ್ ಪೆಸೆಂಟ್ ಸ್ಟಡೀಸ್‌ನಲ್ಲಿ ಪ್ರಕಟವಾಯಿತು. ಇದರಲ್ಲಿ ತಮ್ಮ ಪ್ರಮೇಯದ ಟೀಕೆ, ವಿಮರ್ಶೆಗಳಿಗೆ ಉತ್ತರ ರೂಪವಾಗಿ ಶರ್ಮ ಅವರು ಬರೆದ “ಹೌ ಫ್ಯೂಡಲ್ ವಾಸ್ ಇಂಡಿಯನ್ ಫ್ಯೂಡಲಿಸಂ” ಎಂಬ ಬರಹವೂ ಇದೆ. ಅದರಲ್ಲಿ ಭಾರತೀಯ ಊಳಿಗಮಾಣ್ಯ ವಾದದ ಪರಿಕಲ್ಪನೆಯನ್ನು ಕೆಲವು ವಿವರಗಳಿಗೆ ಸಂಬಂಧಿಸಿ ಶರ್ಮ ಅವರು ಬದಲಿಸಿದರಾದರೂ ಅದು ಪ್ರಾಥಮಿಕವಾಗಿ ಭಾರತೀಯ ಊಳಿಗಮಾನ್ಯವಾದ ಕೃತಿಯಲ್ಲಿ ವಿವರಿಸಲ್ಪಟ್ಟ ಶರ್ಮಾ ಅವರ ಗ್ರಹಿಕೆಗಳನ್ನೇ ಆಧರಿಸಿದೆ. ಸಾಂಪ್ರದಾಯಿಕ ಮಾರ್ಕ್ಸ್‌‌ವಾದಿ ಚೌಕಟ್ಟಿನಲ್ಲಿ ಶರ್ಮ ಅವರು ತಮ್ಮ ಪ್ರಮೇಯವನ್ನು ವಾಚ್ಯವಾಗಿಯೂ ಉತ್ಸಾಹದಿಂದಲೂ ಸಮರ್ಥಿಸಿಕೊಳ್ಳುವುದನ್ನು ನೋಡಿದರೆ ಶರ್ಮಾ ಅವರ ಆ ಬರಹ ಭಾರತೀಯ ಊಳಿಗಮಾನ್ಯವಾದದ ಕುರಿತು ಚಾಲ್ತಿಯಲ್ಲಿರುವ ಪರಿಕಲ್ಪನೆಯ ಅಂತಿಮ ವಿಸ್ತೃತ ನಿರೂಪಣೆ ಎನ್ನಬಹುದು.

ಭಾರತೀಯ ಊಳಿಗಮಾನ್ಯದ ಕುರಿತ ತಮ್ಮ ಸೂತ್ರೀಕರಣದ ಕುರಿತಾಗಿ ಬಂದ ಬಹುಪಾಲು ಟೀಕೆಗಳು ಊಳಿಗಮಾನ್ಯ ವ್ಯವಸ್ಥೆಯ ಪಶ್ಚಿಮ ಯುರೋಪಿನ ಮಾದರಿಯ ಜೊತೆಗಿನ ಹೋಲಿಕೆಯಿಂದ ಉದ್ಯುಕ್ತವಾದವು ಎಂಬುದು ಶರ್ಮ ಅವರ ಅಸಮಾಧಾನ. ಊಳಿಗಮಾಣ್ಯ ರಚನೆ ಎಂಬುದು ವಿವಿಧ ದೇಶ, ಸಮಾಜಗಳಲ್ಲಿ ವಿವಿಧ ರೂಪಗಳಲ್ಲಿ ಅಸ್ತಿತ್ವದಲ್ಲಿದ್ದ ವ್ಯಾಪಕವಾಗಿ ಹರಡಿಹೋಗಿದ್ದ ವ್ಯವಸ್ಥೆ ಎಂಬುದನ್ನು ತಮ್ಮ ಪ್ರಮೇಯದ ಕುರಿತ ಟೀಕೆಗಳು ಗಮನಿಸಿಲ್ಲವೆನ್ನುತ್ತಾರೆ ಶರ್ಮ ಅವರು. ೧೯೮೦ರಲ್ಲಿ ಪ್ರಕಟವಾದ ಶರ್ಮ ಅವರು ತಮ್ಮ ಕೃತಿಯ ಎರಡನೆಯ ಆವೃತ್ತಿಯಲ್ಲಿಯೂ ತಮ್ಮ ಮೊದಲಿನ ವಾಸರಣಿಯನ್ನೇ ಉಳಿಸಿಕೊಂಡಿರುವುದು ಕಂಡು ಬರುತ್ತದೆ. ಭೂಮಾಲೀಕ ವರ್ಗದ ಉಗಮ ಮತ್ತು ರೈತಾಪಿ ವರ್ಗದ ಪರಾಧಿನತೆಯಂತಹ ಮೂಲಭೂತ ಅಂಶಗಳನ್ನು ಇನ್ನಷ್ಟು ಸ್ಪಷ್ಟಗೊಳಿಸುವ ಪ್ರಯತ್ನದ ಹೊರತಾಗಿ ಇನ್ಯಾವ ಮೂಲಭೂತ ಮಾರ್ಪಾಡುಗಳೂ ಅದರಲ್ಲಿಲ್ಲ.

ಭಾರತೀಯ ಊಳಿಗಮಾನ್ಯವಾದವನ್ನು ಸಾರಾಸಗಟಾಗಿ ನಿರಾಕರಿಸಿದ ಉದಾಹರಣೆಗಳೂ ಇವೆ. ಮುಖ್ಯವಾಗಿ ಡಿ.ಸಿ. ಸರ್ಕಾರ್ ಅವರು ಊಳಿಗಮಾನ್ಯವಾದವೆಂಬುದು ಆರಂಭಿಕ ಭಾರತೀಯ ಸಂದರ್ಭದಲ್ಲಿ ಅಪಪ್ರಯೋಗವೆನ್ನುತ್ತಾರೆ. ಊಳಿಗಮಾನ್ಯವಾದದ ಪರಿಕಲ್ಪನೆಯ ಆನ್ವಯಿಕತೆಯ ವಿರುದ್ಧ ಅವರ ಮುಖ್ಯವಾದವೆಂದರೆ ಭೂಮಿದಾನಳಲ್ಲಿ ಸೇವಾ ಹಿಡುವಳಿಗಳ (Service Tenures) ಕುರಿತ ಸಾಕ್ಷ್ಯ ಅತ್ಯಂತ ವಿರಳವಾಗಿದ್ದು ಬಹುಪಾಲು ಭೂಮಿದಾನಗಳು ಬ್ರಾಹ್ಮಣರಿಗೂ ಧಾರ್ಮಿಕ ಸಂಸ್ಥೆಗಳಿಗೂ ಕೊಡಲ್ಪಟ್ಟಂಥವು. ಇವುಗಳಲ್ಲಿ ಬಹುಪಾಲು ದಾನಗಳು ದಾನಿಗಳಿಂದ ದಾನವನ್ನು ಪಡೆದವರು ಯಾವುದೇ ಬದ್ಧತೆಗಳನ್ನು ಹೊಂದಿರಬೇಕಾದ ನಿಯಮಗಳನ್ನು ನಿರೂಪಿಸಿಲ್ಲ. ಸ್ಪಷ್ಟವಾಗಿ ಊಳಿಗಮಾನ್ಯ ಬಗೆಯ ಸೇವೆಗಳನ್ನು ಸಲ್ಲಿಸಲು ಪುರೋಹಿತವರ್ಗ ಸೂಕ್ತವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಡಿ.ಸಿ. ಸರ್ಕಾರ್ ಹೇಳುವುದು ಜಮೀನುದಾರಿ ವ್ಯವಸ್ಥೆಯನ್ನು ಊಳಿಗಮಾನ್ಯ ವ್ಯವಸ್ಥೆ (Fedualism) ಎಂದು ತಪ್ಪಾಗಿ ಗ್ರಹಿಸಲಾಗಿದೆ ಎಂದು.

ಭಾರತೀಯ ಊಳಿಗಮಾನ್ಯವಾದದ ಕುರಿತು ರಚನಾತ್ಮಕ ವಿಮರ್ಶೆಗಳ ಮತ್ತೊಂದು ಸರಣಿ ಬಿ.ಡಿ. ಚಟ್ಟೋಪಾಧ್ಯಾಯ ಅವರಿಂದ ಬಂದಿದೆ. ಭಾರತೀಯ ಊಳಿಗಮಾನ್ಯವಾದದ ಪ್ರತಿಪಾದನೆಯಲ್ಲಿ ಮೊದಲ ಬಾರಿಗೆ ಊಳಿಗಮಾನ್ಯ ರಾಜ್ಯವ್ಯವಸ್ಥೆ ತನ್ನಷ್ಟಕ್ಕೆ ತಾನೇ ಒಂದು ಇರುವಿಕೆಯಾಗಿರದೇ ಭಾರತದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ರಾಚನಿಕ ಬದಲಾವಣೆಯನ್ನು ಪ್ರತಿನಿಧಿಸುವ ಒಂದು ಹಂತವೆಂದು ವಾದಿಸಲ್ಪಟ್ಟದ್ದು ಚಟ್ಟೋಪಾಧ್ಯಯ ಅವರ ಮಟ್ಟಿಗೆ ಮುಖ್ಯ. ಒಂದೆಡೆ ರಾಜ್ಯ ಮತ್ತು ಇನ್ನೊಂದೆಡೆ ರೈತಾಪಿ ಎಂಬ ಸರಳ ವಿಭಜನೆಯ ಬದಲಾಗಿ ಸಮಾಜದ ಶ್ರೇಣೀಕೃತ ರಚನೆಯ ಉಗಮವನ್ನು ಕೊಸಾಂಬಿ ಹಾಗೂ ಶರ್ಮ ಅವರು ಪ್ರತಿಪಾದಿಸಿದರು. ಅವರ ಪ್ರಕಾರ ಮಧ್ಯವರ್ತಿಗಳ ವಿವಿಧ ಸ್ತರಗಳನ್ನೊಳಗೊಂಡ ಈ ಶ್ರೇಣೀಕೃತ ರಚನೆಯ ಪರಿಕಲ್ಪನೆಯಿಂದಲೇ ರಾಜ್ಯದ ಶೋಷಕ ಹಾಗೂ ಬಲಪ್ರಯೋಗ ಸಂಬಂಧಿ ಕಾರ್ಯತಂತ್ರವನ್ನು ಊಳಿಗಮಾನ್ಯವಾದವು ವಿವರಿಸಲೆತ್ನಿಸಿದ್ದು ಕೂಡ ಗಮನಾರ್ಹವೇ.

ಆದರೆ ಅದೇ ಕಾಲಕ್ಕೆ ಇತಿಹಾಸ ಪರಂಪರೆಯ ಗತಪ್ರವೃತ್ತಿಗಳಲ್ಲಿನ ಗ್ರಹಿಕೆಗಳ ಮುಂದುವರಿಕೆಯನ್ನು ಭಾರತೀಯ ಊಳಿಗಮಾನ್ಯವಾದದಲ್ಲಿ ಕಾಣಬಹುದು. ರಾಜ್ಯವ್ಯವಸ್ಥೆಯಲ್ಲಿಯ ಬದಲಾವಣೆಗಳು ಹಾಗೂ ಊಳಿಗಮಾನ್ಯ ಪ್ರವೃತ್ತಿಗಳ ನಡುವೆ ಒಂದು ಸಂವಾದಿ ಸಂಬಂಧವನ್ನು ಕಾಣುವ ಗ್ರಹಿಕೆಗಳು ನಮ್ಮ ಇತಿಹಾಸ ಕಥನದಲ್ಲಿದ್ದೇ ಇವೆ. ಊಳಿಗಮಾನ್ಯವಾದವು ಇತಿಹಾಸ ಕಥನದ ಹೊಸ ಉಪಕ್ರಮವಾಗಿರದೇ ರಾಜಕೀಯ ಸ್ತರಕ್ಕೆ ಸೀಮಿತವಾಗಿ ರಾಜಕೀಯ ವಿಘಟನೆಯ ಸಮಾನಾರ್ಥಕವಾಗಿ ಬಳಕೆಗೊಳ್ಳುತ್ತಲೇ ಬಂದಿವೆ. ರಾಜಕೀಯ ದಿಗಂತದಲ್ಲಿ ಏಕತ್ರಿಕತ ಸಾಮ್ರಾಜ್ಯವೆಂಬುದು ಕಂಡುಬಾರದ ಯಾವುದೇ ಅವಧಿಗೆ ಅನ್ವಯಿಸಿ ‘ಫ್ಯೂಡಲ್’ ಶಬ್ದವನ್ನು ಭಾರತದ ಇತಿಹಾಸ ಕಥನದಲ್ಲಿ ಬಳಸಲಾಗಿದೆ. ಊಳಿಗಮಾನ್ಯ ರಾಜ್ಯಾಡಳಿತ ರಾಜಕೀಯ ವಿಚ್ಛಿದ್ರೀಕರಣ-ಕೇಂದ್ರೀಕೃತ ರಾಜ್ಯದ ವಿಘಟನೆ ಇದು ಸಾಮಾನ್ಯವಾಗಿ ಬಳಕೆಯಾಗಿರುವ ಸಮೀಕರಣ. ಉದಾಹರಣೆಗೆ ಭಾರತೀಯ ಊಳಿಗಮಾನ್ಯವಾದದ ಪ್ರಕಾರ ಮೌರ‍್ಯ ರಾಜ್ಯ ವ್ಯವಸ್ಥ೩ಎ ಪ್ರತಿನಿಧಿಸುತ್ತಿದ್ದ ಕೇಂದ್ರೀಕೃತ ಅಧಿಕಾರಶಾಹಿ ವ್ಯವಸ್ಥೆ ಕ್ರಮೇಣ ಮುರಿದು ಬಿದ್ದು ಅದರಿಂದ ಊಳಿಗಮಾನ್ಯ ರಾಜ್ಯವ್ಯವಸ್ಥೆ ಉದಿಸಿತು. ಬಹುಶಃ ಮೌರ‍್ಯರ ಕಾಲದಲ್ಲಿ ಸೇವೆಗಳಿಗೆ ಪ್ರತಿಯಾಗಿ ಧನರೂಪದ ಸಂಭಾವನೆ ಕೊಡುವ ಪದ್ಧತಿಯಿಂದಾಗಿ ಭೂ ಜಹಗೀರು ಕೊಡುವ ವ್ಯವಸ್ಥೆ ಇರಲಿಲ್ಲ. ಆದರೆ ಮೌರ‍್ಯ ಕಾಲಾನಂತರ ವಿಶೇಷವಾಗಿ ಗುಪ್ತರ ಕಾಲದಲ್ಲಿ ಮತ್ತು ಗುಪ್ತರ ನಂತರದ ಅವಧಿಯಲ್ಲಿ ಭೂ ಕೊಡುಗೆ ಪ್ರವೃತ್ತಿ ವ್ಯಾಪಕವಾಗಿ ಬೆಳೆಯಿತು. ಆಡಳಿತಾತ್ಮಕ ಹಕ್ಕುಗಳನ್ನು ರಾಜ್ಯವು ದಾನ ಪಡೆದವರಿಗೆ ಪರಭಾರೆ ಮಾಡಿದ ಪರಿಣಾಮ ರಾಜ್ಯಾಧಿಕಾರ ಶಿಥಿಲಗೊಂಡು ಸಾರ್ವಭೌಮಾಧಿಕಾರದ ವಿಘಟನೆಗೆ ಕಾರಣವಾಯಿತು. ಅಂದರೆ ಶರ್ಮ ಪ್ರಣೀತ ಊಳಿಗಮಾನ್ಯವಾದದಲ್ಲಿ ಆಡಳಿತಾತ್ಮಕ ಕ್ರಮಗಳೆಂದೇ ಬಿಂಬಿಸಲಾಗಿದೆ. ಇದರರ್ಥ ಊಳಿಗಮಾನ್ಯ ರಾಜಕೀಯ ವ್ಯವಸ್ಥೆ ಏಕೆ ಹುಟ್ಟಿಕೊಳ್ಳುತ್ತದೆಂದರೆ ಊಳಿಗಮಾನ್ಯ ಪೂರ್ವದ ರಾಜಕೀಯ ವ್ಯವಸ್ಥೆಯು ತನ್ನದೇ ಅಧಕಾರ ವಿಘಟನೆಯ ಮೇಲೆ ಸುಖಾಸೀನವಾಗಿರಲು ನಿರ್ಧರಿಸುತ್ತದೆ! ಚಟ್ಟೋಪಾಧ್ಯಾಯ ಅವರ ಪ್ರಕಾರ ಇದೊಂದು ವಿಲಕ್ಷಣ ನಿಲುವು; ಒಂದು ರಾಚನಿಕ ಮಹತ್ವದ ಬಿಕ್ಕಟ್ಟಿನ ಇರುವಿಕೆಯ ಹೊರತು ಅರ್ಥವಾಗದಂಥದು.

ಸಾಮಂತ ವ್ಯವಸ್ಥೆ ಪ್ರಾರಂಭಿಕ ಮಧ್ಯಕಾಲೀನ ರಾಜಕೀಯ ಪದ್ಧತಿಯ ಮುಖ್ಯ ಲಕ್ಷಣವಾಗಿತ್ತೆಂಬುದು ನಿಜ. ಕ್ರಮೇಣ ಸಾಮಂತರು ರಾಜ್ಯ ವ್ಯವಸ್ಥೆಯು ಒಟ್ಟು ರಚನೆಯಲ್ಲಿ ಅಂತರ್ಗತಗೊಂಡು ರಾಜಕೀಯ ರಚನೆಯಲ್ಲಿ ಉಳಿದೆಲ್ಲ ಸಂಬಂಧಗಳಿಗಿಂತ ಅಧಿಪತಿ ಅಧೀನ ಸಂಬಂಧ ಪ್ರಬಲವಾಯಿತು ಎಂಬುದೂ ನಿಜ. ಆದರೆ ಊಳಿಗಮಾನ್ಯ ರಚನೆ ಎಂದು ಕರೆಯಲಾಗುವ ಒಟ್ಟು ರಾಜಕೀಯ ವಿನ್ಯಾಸವನ್ನು ಭಾರತೀಯ ಊಳಿಗಮಾನ್ಯವಾದದ ಪ್ರತಿಪಾದನೆಗಳು ತಕ್ಕ ಪ್ರಮಾಣದಲ್ಲಿ ವಿವರಿಸುತ್ತವೆಯೆ ಎನ್ನುವುದು ಚಟ್ಟೋಪಾಧ್ಯಾಯರ ಸಂದೇಹ. ಅವರ ಪ್ರಕಾರ ಆ ವಿವರಣೆ ನಿರ್ದಿಷ್ಟ ರಾಜಸತ್ತೆಗಳ ರಚನೆಗಷ್ಟೇ ಅಲ್ಲ, ಯಾವುದೇ ಅವಧಿಯಲ್ಲಿ ಉಪಖಂಡದಲ್ಲಿದ್ದ ರಾಜಕೀಯ ಭೂಗೋಲಕ್ಕೂ ಪ್ರಸ್ತುತವಾಗಿರಬೇಕು. ಸಾರ್ವಭೌಮ ರಾಜ್ಯವಾಗಿರು ಒಂದು ಕೇಂದ್ರ ಮತ್ತು ಹಲವು ವಿಧದ ಇತರ ರಾಜ್ಯ ವ್ಯವಸ್ಥೆಗಳ ನಡುವಿನ ಸಂಬಂಧವನ್ನು ಪ್ರತಿನಿಧಿಸುವ ಮೌರ‍್ಯ ರಾಜ್ಯದ ಪತನದಿಂದಾಗಿ ರಾಜ್ಯ ರಾಜಕೀಯ ವ್ಯವಸ್ಥೆ (State Polity) ಅಸ್ತಿತ್ವದಲ್ಲಿದ್ದ ಪ್ರದೇಶಗಳಲ್ಲಾಗಲಿ ಅಥವಾ ಮೌರ‍್ಯ ಸಾಮ್ರಾಜ್ಯ ತನ್ನೊಳಗೆ ಅಡಕಗೊಳಿಸುತ್ತ ಬಂದಿದ್ದ ರಾಜ್ಯಪೂರ್ವ ರಾಜಕೀಯ ವ್ಯವಸ್ಥೆಯ (Pre-State Polity) ಪ್ರದೇಶಗಳಲ್ಲಾಗಲಿ ರಾಜಕೀಯ ಆರ್ಥಿಕ ಬಿಕ್ಕಟ್ಟು ಉಂಟಾಗಲಿಲ್ಲ. ವಾಸ್ತವವಾಗಿ ಮೌರ‍್ಯರ ಪ್ರಾದೇಶಿಕ ವಿಸ್ತರಣೆ ಹಾಗೂ ನಂತರದ ಅವಧಿಯ ಅಂಥದೇ ವಿಸ್ತರಣೆಗಳು ರಾಜ್ಯಪೂರ್ವ ರಾಜಕೀಯ ವ್ಯವಸ್ಥೆಯ ಪ್ರದೇಶಗಳಲ್ಲಿ ಸ್ಥಳೀಯ ರಾಜ್ಯಗಳ ಉಗಮದ ಒಂದು ಹೊಸ ಉಬ್ಬರವನ್ನೇ ಸೃಷ್ಟಿಸಿದವು. ಚಟ್ಟೋಪಾಧ್ಯಾಯರ ಪ್ರಕಾರ ಈ ವಿದ್ಯಮಾನವನ್ನು ಕೇಂದ್ರೀಕೃತ ಆಡಳಿತವೊಂದು ವಿಕೇಂದ್ರೀಕರಣ ಹೊಂದಿದ ಪ್ರಕ್ರಿಯೆ ಎಂದು ತಪ್ಪಾಗಿ ಗ್ರಹಿಸಬೇಕಿಲ್ಲ. ಗುಪ್ತರ ಕಾಲಾವಧಿಯಿಂದ ವಿಶೇಷವಾಗಿ ಬೆಳೆದುಬಂದ ಅಧಿಪತಿ ಅಧಿನ ಸಂಬಂಧಗಳನ್ನಾಧರಿಸಿದ ಸಾಮಂತ ವ್ಯವಸ್ಥೆಯನ್ನು ಭಾರತೀಯ ಊಳಿಗಮಾನ್ಯವಾದ ಮಾದರಿಯು ನೋಡಿದಂತೆ ವಿಕೇಂದ್ರೀಕೃತ ರಾಜ್ಯಾಡಳಿತ ಕ್ರಮದ ಸೂಚನೆಯಾಗಿ ನೋಡುವ ಪರಿಕಲ್ಪನೆಗೆ ಪರ್ಯಾಯವಾಗಿ ಚಟ್ಟೋಪಾಧ್ಯಾಯರು ಅದನ್ನು ರಾಜಕೀಯ ಅನುಕುಲದ (Political Integration) ಪರಿಪ್ರೇಕ್ಷ್ಯದಲ್ಲಿ ನೋಡುತ್ತಾರೆ.

ಸಮತಲವಾಗಿ ವಿಸ್ತಾರಗೊಳ್ಳುತ್ತಿದ್ದ, ಸ್ಥಳೀಯತೆ ಮೀರಿ ಬೆಳೆದ, ರಾಜ್ಯ ವ್ಯವಸ್ಥೆಗಳು ವಿವಿಧ ಸ್ಥಳೀಯ ನೆಲೆಗಳಲ್ಲಿ ಆಳುವ ವಂಶಗಳು ಪ್ರತಿನಧಿಸುತ್ತಿದ್ದ ರಾಜ್ಯಾಡಳಿತ ವ್ಯವಸ್ಥೆಗಳೊಂದಿಗೆ ಸಂಬಂಧವನ್ನು ಏರ್ಪಡಿಸಿಕೊಳ್ಳಬೇಕಿತ್ತು. ಏಕೆಂದರೆ ರಾಜ್ಯಾಡಳಿತ ವ್ಯವಸ್ಥೆಗಳ ರಚನೆ ಸದಾಕಾಲ ಪೂರ್ವಸ್ಥಿತ ಅಧಿಕಾರ ಕೇಂದ್ರಗಳ ಉಚ್ಛಾಟೆನಯನ್ನು ಆಧರಿಸಿರಲಿಲ್ಲ. ಅಸ್ತಿತ್ವದಲ್ಲಿರುವ ಅಧಿಕಾರ ಕೇಂದ್ರಗಳನ್ನು ಒಳಗೊಳ್ಳುವುದು ರಚನೆಯ ನಿರ್ಮಾಣದಲ್ಲಿ ಪ್ರಮುಖ ವಿಧಾನವಾಗಿತ್ತು. ಹಲವಾರು ಕ್ರಮಗಳಿಂದ ಕ್ರೋಢೀಕೃತ ಸಂಪನ್ಮೂಲಗಳ ಪುನರ್ವಿತರಣೆ, ಪದವಿ ಶ್ರೇಣೀಕರಣ ವ್ಯವಸ್ಥೆ ಇತ್ಯಾದಿ ಇದನ್ನು ಸಾಧಿಸಲಾಗುತ್ತಿತ್ತು.

ಒಟ್ಟಿನಲ್ಲಿ ಭಾರತೀಯ ಊಳಿಗಮಾನ್ಯವಾದವು ಭಾರತದ ಎಲ್ಲ ರಾಜಕೀಯ ಪ್ರದೇಶಗಳಿಗೆ ಅನ್ವಯಿಸಬಹುದಾದ ಸಮಗ್ರ ಮಾದರಿಯಾಗಿ ಸ್ವೀಕೃತವಾಗಿಲ್ಲ. ಭೂ ಕೊಡುಗೆಗಳ ಕುರಿತಾಗಿ ಶಾಸನಗಳಲ್ಲಿರುವ ಪುರಾವೆಗಳ ಕುರಿತು ಭಾರತೀಯ ಊಳಿಗಮಾನ್ಯ ವಾದದ ಪ್ರತಿಪಾದಕರು ಹೊಂದಿದ ವಾದವು ಒಂದೇ ಜಾಡಿನಲ್ಲಿ ಸಾಗುವುದು ಅದರ ವಿಮರ್ಶಕರ ಟೀಕೆಗಳಿಗೆ ಕಾರಣವಾಗಿದೆ. ರಾಜಕೀಯ ಪ್ರಕ್ರಿಯೆಗಳಿಗೆ ಸಮಾನಾಂತರವಾಗಿ ನಡೆಯುತ್ತಿದ್ದ ಸಾಮಾಜಿಕ, ಆರ್ಥಿಕ ಪ್ರಕ್ರಿಯೆಗಳ ಒಟ್ಟು ಸಂಕೀರ್ಣ ಗ್ರಹಿಕೆ ಭಾರತೀಯ ಊಳಿಗಮಾನ್ಯವಾದ ಪ್ರಮೇಯದಲ್ಲಿ ಕಾಣದು. ಭಾಗಶಃ ಭಾರತೀಯ ಊಳಿಗಮಾನ್ಯವಾದದ ಪ್ರತಿಪಾದನೆಯ ಸಮಸ್ಯೆಗಳು ಆ ಕುರಿತು ತಿಳಿಯಪಡಿಸುವ ಆಕರಗಳ ಸ್ವರೂಪದಲ್ಲೇ ಇವೆ. ಅತ್ಯಂತ ಮಹತ್ವಪೂರ್ಣವಾದ ಅಂಶಗಳ ಕುರಿತಾಗಿಯೇ ದಾನಶಾಸನಗಳಲ್ಲಿ ದಾಖಲಾಗಿರುವ ವಿವರಗಳು ಅಸಂಪೂರ್ಣವಾಗಿಯೋ, ಅಸ್ಪಷ್ಟವಾಗಿಯೋ ಇರುವುದನ್ನು ಶರ್ಮ ಅವರು ಹಲವು ಸಂದರ್ಭಗಳಲ್ಲಿ ಪ್ರಸ್ತಾಪಿಸುತ್ತಾರೆ. ಉದಾಹರಣೆಗೆ ಊಳಿಗಮಾನ್ಯ ಭೂಹಿಡುವಳಿದಾರರು ತೆರಿಗೆಯ ಪ್ರಮಾಣವನ್ನು ಹೆಚ್ಚಿಸುವ ಅಥವಾ ಹೊಸ ತೆರಿಗೆಗಳನ್ನು ವಿಧಿಸುವ ಸ್ವಾತಂತ್ರ‍್ಯವನ್ನು ಹೊಂದಿದ್ದರೆ ಎಂಬುದು ಸ್ಪಷ್ಟವಿಲ್ಲವೆಂಬುದನ್ನು ಶರ್ಮ ಅವರು ಪ್ರಸ್ತಾಪಿಸುತ್ತಾರೆ. ಹಾಗೆಯೇ ಸಾಮಾನ್ಯವಾಗಿ ತಮ್ಮ ಅಧಿಪತಿ ರಾಜನಿಗೆ ಸೈನ್ಯಸೇವೆ ಒದಗಿಸುವುದು ಅಧೀನ ಅರಸರ ಮತ್ತು ಸಾಮಂತರ ಮುಖ್ಯ ಕರ್ತವ್ಯವಾಗಿತ್ತು ಎಂದು ಹೇಳುತ್ತಲೇ, ಸಾಮಂತರು ಗ್ರಾಮಗಳ ಆದಾಯದ ಕೊಡುಗೆಯನ್ನು ಪಡೆದ ಕಾರಣಕ್ಕಾಗಿ ಅಂಥ ಕರ್ತವ್ಯಗಳಿಗೆ ಬದ್ಧರಾಗಿದ್ದರೆ ಎಂಬುದು ಸ್ಪಷ್ಟವಿಲ್ಲ ಎಂದೂ ಶರ್ಮ ಅವರು ಹೇಳುತ್ತಾರೆ.

ಒಟ್ಟಿನಲ್ಲಿ ಊಳಿಗಮಾನ್ಯ ವ್ಯವಸ್ಥೆಯ ಉಗಕ್ಕೆ ಪೂರಕವಾದ ಸನ್ನಿವೇಶಗಳನ್ನು ನಿರ್ಮಿಸಿದ ಆರ್ಥಿಕ ಬೆಳವಣಿಗೆಗಳನ್ನು ನಿರ್ಧರಿಸುವುದು ಕಷ್ಟಕರ. ಇದಕ್ಕೆ ಸಂಬಂಧಿಸಿದಂತೆ ಕೆಲವು ವಿಷಯಗಳು ಅಸ್ಪಷ್ಟವಾಗಿವೆ. ಉದಾಹರನೆಗೆ,

೧. ನಾವು ಪರಿಗಣಿಸಬೇಕಾದುದು ಬ್ರಾಹ್ಮಣರಿಗಾಗಲಿ, ದೇವಾಲಯಗಳಿಗಾಗಲಿ ಕೊಡುಗೆಯಾಗಿ ಕೊಡಲ್ಪಟ್ಟ ಭೂಮಿಯು ಬೇಸಾಯಕ್ಕೊಳಪಟ್ಟ ಭೂಮಿಯಾಗಿತ್ತೋ, ಬೇಸಾಯಕ್ಕೊಳಪಡದ ಭೂಮಿಯಾಗಿತ್ತೋ ಎಂಬುದು.

೨. ಹೀಗೆ ಕೊಡಲ್ಪಟ್ಟ ವಾದಗಳ ಫಲಾನುಭವಿಗಳು ಅಥವಾ ಇತರ ಭೂಮಾಲೀಕರು ತಮ್ಮ ಮಣ್ಣಿನ ವಾಸ್ತವ ಉಳುಮೆಗಾರರಾಗಿದ್ದರೋ ಅಥವಾ ತಮ್ಮ ಜಮೀನುಗಳನ್ನು ಇತರ ರೈತಾಪಿಗಳಿಂದ ಉಳುಮೆ ಮಾಡಿಸಿಕೊಳ್ಳುತ್ತಿದ್ದರೋ ಎಂಬುದು.

ಸಮಸ್ಯೆಯೆಂದರೆ ಇಂತಹ ಮೂಲಭೂತವಾದ ವಿಷಯಗಳ ಕುರಿತಾಗಿಯೇ ಶಾಸನೋಕ್ತ ವಿವರಗಳು ಸಂದಿಗ್ಧವಾಗಿಯೋ, ಸಂಕ್ಷಿಪ್ತವಾಗಿಯೋ ಇರುವುದು. ಅಲ್ಲದೇ ಭಾರತದ ಬೇರೆ ಬೇರೆ ರಾಜಕೀಯ ಪ್ರಾದೇಶಿಕ ಘಟಕಗಳಲ್ಲಿ ತಲಸ್ಪರ್ಶಿಯಾಗಿ ಗ್ರಾಮೀಣ ಸಾಮಾಜಿಕ ಆರ್ಥಿಕ ರಚನೆಯನ್ನು ಅಧ್ಯಯನಕ್ಕೊಳಪಡಿಸುವ ಪ್ರಯತ್ನಗಳು ಅಷ್ಟಾಗಿ ಆಗಿಲ್ಲದಿರುವುದು ಕೂಡ ಭಾರತೀಯ ಊಳಿಗಮಾನ್ಯವಾದದ ಪ್ರಮೇಯವನ್ನು ಪ್ರಯೋಗಸಿದ್ಧವಾಗಿ ಸ್ಥಾಪಿಸುವಲ್ಲಿ ಅಡೆತಡೆಯಾಗಿದೆ.

ಭಾರತೀಯ ಊಳಿಗಮಾನ್ಯವಾದದ ಮಿತಿಗಳೇನೇ ಇದ್ದರೂ, ಸ್ವತಃ ಚಟ್ಟೋಪಾಧ್ಯಾಯರೇ ಗುರುತಿಸಿರುವಂತೆ ಭಾರತದ ಸಾಮಾಜಿಕ, ಆರ್ಥಿಕ ವ್ಯವಸ್ಥೆಯಲ್ಲಿ ರಾಚನಿಕ ಬದಲಾವಣೆಗಳನ್ನು ಪ್ರತಿನಿಧಿಸುವ ಒಂದು ಬೆಳವಣಿಗೆ ಎಂದು ಊಳಿಗಮಾನ್ಯವಾದವನ್ನು ಮೊದಲ ಬಾರಿಗೆ ವ್ಯಾಖ್ಯಾನಿಸಿದವರು ಡಿ.ಡಿ. ಕೋಸಾಂಬಿ ಮತ್ತು ಪ್ರಮುಖವಾಗಿ ಆರ್.ಎಸ್.ಶರ್ಮ ಅವರು. ಭಾರತೀಯ ಊಳಿಗಮಾನ್ಯವಾದದ ಕುರಿತ ವಾದವಿವಾದ, ಚಿಂತನ ಮಂಥನಗಳಲ್ಲಿ ಇತಿಹಾಸದ ವಿವರಗಳನ್ನು ಗ್ರಹಿಸುವಲ್ಲಿ ಇತಿಹಾಸಕಾರನ ತಾತ್ವಿಕ, ಸೈದ್ಧಾಂತಿಕ ಪರಿಪ್ರೇಕ್ಷ್ಯ ಮುಖ್ಯವಾಗುತ್ತ ಹೋದುದು, ಹೊಸ ಹೊಸ ಆಯಾಮಗಳು ತೆರೆದುಕೊಂಡದ್ದು ಭಾರತೀಯ ಇತಿಹಾಸ ಕಥನದಲ್ಲಿ ಲಕ್ಷಿಸತಕ್ಕ ಸಂಗತಿಗಳೇ.

ಪರಮಾರ್ಶನ ಗ್ರಂಥಗಳು

೧. ಕೋಸಾಂಬಿ ಡಿ.ಡಿ., ೧೯೭೫, ಆನ್ ಇಂಟ್ರಡಕ್ಷನ್ ಟು ದಿ ಸ್ಟಡಿ ಆಫ್ ಇಂಡಿಯನ್ ಹಿಸ್ಟರಿ, ಎರಡನೇ ಪರಿಷ್ಕೃತ ಆವೃತ್ತಿ, ಬಾಂಬೆ : ಪಾಪ್ಯುಲರ್ ಪ್ರಕಾಶನ.

೨. ಚಟ್ಟೋಪಾಧ್ಯಾಯ, ಬಿ.ಡಿ., ೧೯೯೪. ದಿ ಮೇಕಿಂಗ್ ಆಫ್ ದಿ ಅರ್ಲಿ ಮಿಡಿವಲ್ ಇಂಡಿಯಾ, ನ್ಯೂ ಡೆಲ್ಲಿ: ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್.

೩. ಝಾ. ಡಿ.ಎನ್., ೧೯೭೯. ಅರ್ಲಿ ಇಂಡಿಯನ್ ಫ್ಯೂಡಲಿಸಂ ಏ ಹಿಸ್ಟಾರಿಯೋಗ್ರಫಿಕಲ್ ಕ್ರಿಟಿಕ್, ಪ್ರೆಸಿಡೆನ್ಸಿಯಲ್ ಅಡ್ರೆಸ್, ಏನ್ಸಿಯಂಟ್ ಇಂಡಿಯಾ ಸೆಕ್ಷನ್, XL ಸೆಶನ್ ಆಫ್ ಇಂಡಿಯನ್ ಹಿಸ್ಟರಿ ಕಾಂಗ್ರೆಸ್, ವಾಲ್ಟೇರ್.

೪. ಮಾರ್ಕ್‌ಬ್ಲೊಕ್, ೧೯೭೮. ಫ್ಯೂಡಲ್ ಸೊಸೈಟಿ (ಎರಡು ಸಂಪುಟಗಳು), ಲಂಡನ್: ರೂಟ್ಲೆಜ್ ಆಂಡ್ ಕೆಗಾನ್‌ಪಾಲ್.

೫. ಮುಖಿಯಾ ಹರ್ಬನ್ಸ್, ೧೯೭೯. “ವಾಜ್ ದೇರ್‌ಫ್ಯೂಡಲಿಸಂ” ಇನ್ ಇಂಡಿಯನ್ ಹಿಸ್ಟಾರಿಕಲ್ ಪ್ರೆಸಿಡೆನ್ಸಿಯಲ್ ಅಡ್ರೆಸ್, ಮಿಡಿವಲ್ ಇಂಡಿಯಾ ಸೆಕ್ಷನ್, ಟೆನ್ತ್ ಸೆಶನ್ ಆಫ್ ಇಂಡಿಯನ್ ಹಿಸ್ಟರಿ ಕಾಂಗ್ರೆಸ್, ವಾಲ್ಟೇರ್.

೬. ರಾಜಾರಾಮ ಹೆಗಡೆ, ಅಶೋಕ ಶೆಟ್ಟರ್, ೨೦೦೦. “ರಾಜ್ಯ ಸಂಸ್ಕೃತಿಯ ನಿರ್ಮಾಣ ಸಾಂಸ್ಕೃತಿಕ ಮತ್ತು ರಾಜಕೀಯ ಆಯಾಮಗಳು,” ಮಲೆಕರ್ನಾಟಕ ಅರಸು ಮನೆತನಗಳು, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.

೭. ಶರ್ಮ. ಆರ್.ಎಸ್., ೧೯೮೦. ಇಂಡಿಯನ್ ಫ್ಯೂಡಲಿಸಂ, ದ್ವಿತೀಯ ಆವೃತ್ತಿ, ಡೆಲ್ಲಿ: ಮ್ಯಾಕ್‌ಮಿಲ್ಲನ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್.

೮. ಸರ್ಕಾರ್‌. ಡಿ.ಸಿ., ೧೯೭೪. ಪೊಲಿಟಿಕಲ್ ಆಂಡ್ ಅಡ್ಮಿನಿಸ್ಟ್ರೇಟಿವ್ ಸಿಸ್ಟಂ ಇನ್ ಏನ್ಶಿಯಂಟ್ ಆಂಡ್ ಮಿಡಿವಲ್ ಇಂಡಿಯಾ, ನ್ಯೂಡೆಲ್ಲಿ.

* * *