ಫೆಮಿನಿಸಂ ಅಥವಾ ಸ್ತ್ರೀವಾದವು ವಿಶ್ವಾದ್ಯಂತ ನಡೆಯುತ್ತಿರುವ ಚಳವಳಿ ಯಾಗಿದ್ದು, ನೈತಿಕ, ಧಾರ್ಮಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ನ್ಯಾಯಿಕ ಹಾಗೂ ಆರ್ಥಿಕ ಹೀಗೆ ಎಲ್ಲ ಮಾನವ ಹಕ್ಕುಗಳನ್ನು ಅನುಭವಿಸಲು ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ‍್ಯದ ರಕ್ಷಣೆ ನಿಡುವುದೇ ಇದರ ಉದ್ದೇಶವಾಗಿದೆ. ಫೆಮಿನಿಸಂ ಎನ್ನುವುದು ಮೂಲತಃ ಒಂದು ಫ್ರೆಂಚ್‌ಶಬ್ದ. ೧೮೭೨ ರಲ್ಲಿ ಕಿರುಹೊತ್ತಿಗೆಯೊಂದರಲ್ಲಿ ಕಿರಿಯ ಅಲೆಗ್ಸಾಂಡರ್‌ ಡ್ಯೂಮ್‌ಇದನ್ನು ಮೊತ್ತಮೊದಲ ಸಲ ಬಳಸಿದ. ಮಹಿಳೆಯರ ಹಕ್ಕುಗಳಿಗಾಗಿ ಆಗ ನಡೆಯುತ್ತಿದ್ದ ಚಳವಳಿಯನ್ನು ಈ ಶಬ್ದ ಸೂಚಿಸುತ್ತಿತ್ತು. ೧೯ನೆಯ ಶತಮಾನದಲ್ಲಿ ಸಂಯುಕ್ತ ಸಂಸ್ಥಾನದಲ್ಲಿ ಇದು ‘ಮಹಿಳಾ ಚಳವಳಿ’ಯೆಂದೇ ಉಲ್ಲೇಖಿತವಾಗಿದೆ. ಒಂದಲ್ಲ ಒಂದು ವಿಧದಲ್ಲಿ ಮಹಿಳೆಯರ ಸ್ಥಾನಗಳನ್ನು ಸುಧಾರಿಸುವ ಹಾಗೂ ಅವರನ್ನು ಮೇಲೆತ್ತುವ ಉದ್ದೇಶ ಹೊಂದಿದ್ದ ಇದು ಬೇರೆ ಬೇರೆ ಗುಂಪುಗಳ ಒಂದು ಸಮೂಹವಾಗಿತ್ತು.

ಇದು ಪುರುಷರ ಜಗತ್ತು. ಆದರೆ ಒಂದು ರೀತಿಯಲ್ಲಿ ಸ್ತ್ರೀವಾದ ಸದಾ ಇಲ್ಲಿ ಅಸ್ತಿತ್ವದಲ್ಲಿತ್ತು. ಎಲ್ಲೆಲ್ಲಿ ಮಹಿಳೆಯರನ್ನು ಪ್ರಧಾನವಾಗಿ ಪರಿಗಣಿಸಲಾಗಿದೆಯೋ, ಅಲ್ಲೆಲ್ಲಾ ಯಾವಾಗಲೂ ಒಂದಲ್ಲ ಒಂದು ಬಗೆಯ ವಿರೋಧ ಮತ್ತು ಪ್ರತಿಭಟನೆಗಳು ಕಾಣಸಿಕೊಂಡಿವೆ. ಇದು ಎಲ್ಲೆಡೆಯೂ ಸತ್ಯ. ಕೆಲವು ಸಲ ಈ ಪ್ರತಿಭಟನೆ ಸಾಮೂಹಿಕವಾಗಿ ಪ್ರಜ್ಞಾಪೂರ್ವಕವಾಗಿದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಇದು ವೈಯಕ್ತಿಕವಾಗಿ, ಅಪ್ರಜ್ಞಾಪೂರ್ವಕವಾಗಿ ನಡೆದಿರುವುದೂ ಉಂಟು. ಅನಾರೋಗ್ಯ, ಔಷಧ ಸೇವನಾಭ್ಯಾಸ ಮತ್ತು ಕೆಲವು ಸಲ ಉನ್ಮಾದದಂತಹ ಕಾರಣಗಳಿಂದಾಗಿ ಸಾಮಾಜಿಕವಾಗಿ ತಮಗೆ ನಿಗದಿಪಡಿಸಲಾದ ಪಾತ್ರಗಳನ್ನು ನಿರ್ವಹಿಸಲಾಗದೆ ಪಾರಾಗಲು ಪ್ರಯತ್ನಿಸುವಾಗ ಮಹಿಳೆಯರೇ ಏಕಾಕಿಯಾಗಿ ಪ್ರತಿಭಟಿಸಿರುವುದುಂಟು. ಹೀಗಿದ್ದರೂ ಸ್ತ್ರೀವಾದದ ಇತಿಹಾಸ ದಾಖಲಾಗಲು ಪ್ರಾರಂಭವಾದದ್ದು ಪ್ರತಿಭಟನೆಗೆ ಸಂಬಂಧಿಸಿದಂತಹ ಕೃತಿಗಳು ಪ್ರಕಟವಾಗತೊಡಗಿದಾಗಲೇ. ಇದಕ್ಕೆ ಪ್ರಾಯಶಃ ಕೆಲವೇ ಕೆಲವು ಅಪವಾದಗಳಿರೂ ಬಹುದು. ಆದರೆ ಸ್ತ್ರೀವಾದಿಗಳ ಪ್ರತಿಭಟನೆ ಮೊತ್ತಮೊದಲು ವ್ಯಕ್ತವಾದದ್ದು ೧೬೩೦ ರ ದಶಕಗಳಲ್ಲಿ. ಇದು ಮತ್ತೆ ೧೫೦ ವರ್ಷಗಳವರೆಗೆ ಮುಂದುವರಿಯಿತು. ಈ ಪ್ರತಿಭಟನೆ ಪ್ರಬಲವಾಗಿಲ್ಲ; ದೃಗ್ಗೋಚರವೂ ಆಗಿಲ್ಲ. ಆದರೂ ಈ ಸಂದರ್ಭದಲ್ಲಿ ಸ್ತ್ರೀವಾದಿ ಪ್ರಚಾರಗಳು ತುಂಬ ಪ್ರಸ್ತುತವಾಗಿದೆ. ಮುಂದಿನ ಎರಡು ಶತಮಾನಗಳಲ್ಲಿ ಎಂದರೆ ೧೭೮೦ ರಿಂದ ಈವರೆಗೆ, ಸ್ತ್ರೀವಾದಿ ಬರವಣಿಗೆ ಪ್ರಜ್ಞಾಪೂರ್ವಕವಾದ, ಮಹತ್ವದ ಹಾಗೂ ಸಾಮೂಹಿಕವಾದ ಪರಯತ್ನವಾಗಿದ್ದು, ಇಂತಹ ಕೃತಿಗಳು ಸಂಖ್ಯೆಯಲ್ಲಿ ಮಾತ್ರವ್ಲದೆ, ವಿಮರ್ಶನ ವ್ಯಾಪ್ತಿಯಲ್ಲಿಯೂ ಬೆಳೆದಿದೆ.

ಸ್ತ್ರೀವಾದಕ್ಕೆ ಸಂಬಂಧಿಸಿದ ಬರವಣಿಗೆ ಏಕಪ್ರಕಾರವಾಗಿ ಅಭಿವೃದ್ಧಿಗೊಂಡಿಲ್ಲ ಅಥವಾ ಏಕಪ್ರಕಾರವಾಗಿ ಅಭಿವೃದ್ಧಿಗೊಳ್ಳುತಲೂ ಇಲ್ಲ. ಮಹಿಳೆಯರು ಹೆಚ್ಚು ಕಡಿಮೆ ಅಲ್ಪ ಸಂಖ್ಯಾತರು. ಒಂದೊಮ್ಮೆ ಅವರ ಸಂಖ್ಯೆ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಅಥವಾ ಕನಿಷ್ಠಪಕ್ಷ ಅರ್ಧದಷ್ಟು ಇದ್ದಾಗಲೂ ಅವರು ಸದಾ ಬಹುಸಂಖ್ಯಾತರ ಎಂದರೆ ಪುರುಷರ ದಬ್ಬಾಳಿಕೆಗೆ ಗುರಿಯಾಗುತ್ತ ಬಂದಿದ್ದಾರೆ. ಒಂದೆಡೆ ಪರಿವರ್ತನೆಯ ಕಾಲ ಮತ್ತು ಸೂಕ್ಷ್ಮ ಗ್ರಹಣಶಕ್ತಿ ಹಾಗೂ ಇನ್ನೊಂದೆಡೆ ರಕ್ಷಣೆಯ ಅವಧಿ ಮತ್ತು ದಮನ ಇವುಗಳ ನಡುವೆ ಒಂದು ಸಮಾಜ ಹೊಯ್ದಾಡುತ್ತಿರುವಾಗ ಪ್ರತಿಭಟನೆಗೆ ಅವಕಾಶ ಒದಗಿ ಬರುತ್ತದೆ.

ಸ್ತ್ರೀವಾದಿ ಕಾರ್ಯಚಟುವಟಿಕೆಗಳಲ್ಲಿ ದಾಖಲಾಗಿರುವಂತಹ ಉಚ್ಛ್ರಾಯ ಸ್ಥಿತಿಗಳನ್ನು ೧೭೮೦ ಮತ್ತು ೧೭೯೦ರ ದಶಕಗಳಲ್ಲಿಯೂ, ಹೆಚ್ಚು ಸಂಘಟಿತವಾದಂತಹ ಪ್ರಯತ್ನಗಳನ್ನು ೧೮೫೦ರ ದಶಕಗಳಲ್ಲಿಯೂ, ಸ್ತ್ರೀಯರಿಗೆ ಮತಾಧಿಕಾರ ನಿಡಬೇಕೆಂಬ ಬೇಡಿಕೆಯೊಡನೆ ನಡೆದ ಭಾರೀ ಗುಂಪು ಚಳವಳಿಯನ್ನು ಇಪ್ಪತ್ತನೆಯ ಶತಮಾನದ ಆದಿ ಭಾಗದಲ್ಲಿಯೂ ಮತ್ತು ಇತ್ತೀಚಿನ ಆಧುನಿಕ ವಿಸ್ತೃತ ಮಹಿಳಾ ಚಳವಳಿಯನ್ನು ಇಪ್ಪತ್ತನೆಯ ಶತಮಾನದ ಉತ್ತರಾರ್ಧ ಭಾಗದಲ್ಲಿಯೂ ಕಾಣಬಹುದು.

ಸಂಪೂರ್ಣ ಸ್ವಾತಂತ್ರ‍್ಯಕ್ಕಾಗಿ ಸ್ತ್ರೀವಾದಿಗಳು ಮುಂದಿಡುವ ಬೇಡಿಕೆ ಮೂಲತಃ ಸಾಮಾಜಿಕ ಸಮಸ್ಯೆಗಿಂತ ಮಿಗಿಲಾಗಿರುವ ಒಂದು ನೈತಿಕ ಸಮಸ್ಯೆಯಾಗಿದೆ. ಆದ್ದರಿಂದ ಸ್ತ್ರೀವಾದಿಗಳು ಮನವಿ ಮಾಡಿಕೊಳ್ಳುವುದು ಮಾನವ ಜನಾಂಗದ ಸಾಮಾನ್ಯ ಅರಿವಿಗಲ್ಲ ಬದಲಾಗಿ ಅಂತಃ ಸಾಕ್ಷಿಗೆ.

ಸ್ತ್ರೀವಾದದ ಇತಿಹಾಸ

ನಮ್ಮ ಪ್ರಸ್ತುತ ನಂಬಿಕೆಗಳನ್ನು ಮತ್ತು ವರ್ತನೆಗಳನ್ನು ಅರಿತು ವಿಮರ್ಶೆ ಮಾಡಿಕೊಳ್ಳುವುದಾದರೆ ನಾವು ಬೈಬಲ್ ಬೋಧನೆಯ ಕಾಲಕ್ಕೆ ಸರಿಯಬೇಕು. ‘ಈವ್‌’ಳ ಸೃಷ್ಟಿಯಾದದ್ದು ಆಡಂನ ಬರಿಯ ಪಕ್ಕೆಲುಬಿನಿಂದ ಎನ್ನುವ ವಾದವು ಪ್ರಬಲವಾಗಿರುವುದನ್ನು ನಾವು ನೋಡಬಹುದು. ಧಾರ್ಮಿಕ ವಿಧಿಗಳಲ್ಲಿ ಏನೂ ಸ್ಥಾನವಿಲ್ಲದ ಮಹಿಳೆ ಬರಬರುತ್ತಾ ನೇತ್ಯಾತ್ಮಕ ಸಂಕೇತವಾದಳು. ಸಾವಿರಾರು ವರ್ಷಗಳು ಹೀಗೆಯೇ ಕಳೆದುಹೋದವು. ಹೆಚ್ಚು ಹೆಚ್ಚು ಜನರು ವೈಯಕ್ತಿಕ ಸ್ವಾತಂತ್ರ‍್ಯದಲ್ಲಿ ನಂಬಿಕೆ ಶ್ರದ್ಧೆಗಳನ್ನಿರಿಸಿ ಅದನ್ನು ಪಡೆಯುತ್ತ ಬಂದಂತೆ, ದಮನಕಾರಿ ಚಟುವಟಿಕೆಗಳು ಕಮ್ಮಿಯಾದವು. ಆದರೂ ಮಹಿಳೆಯರ ಸ್ಥಾನಮಾನಗಳಲ್ಲಿ ಹೆಚ್ಚಿನ ಬದಲಾವಣೆಗಳೇನೂ ಆಗಲಿಲ್ಲ. ಮಹಿಳೆಯರ ಸಾಮಾಜಿಕ ಸ್ಥಿತಿ-ಗತಿಗಳು ಭೂತಕಾಲದಲ್ಲಿ ಬೇರೂರಿರುವುದರಿಂದ, ಈ ವಿಷಯದಲ್ಲಿ ನಿಖರವಾದ, ಆದರೆ ಸಂಕ್ಷಿಪ್ತವಾದ ವಿಶ್ಲೆಷಣೆ ಸಾಕಾಗುತ್ತದೆ.

ಪುರುಷರ ಪ್ರಾಬಲ್ಯ ಹಾಗೂ ಸ್ತ್ರೀಯರು ಅವರ ಅಧೀನದಲ್ಲಿರುವ ಪ್ರಕ್ರಿಯೆ ಒಂದೇ ದಿನದಲ್ಲಿ ಘಟಿಸಿದ ವಿದ್ಯಮಾನವಲ್ಲ. ಪ್ರಾಚೀನ ಕಾಲದಲ್ಲಿದ್ದ ಸ್ತ್ರೀಯರ ಪ್ರಭಾವವು ಮಾನವಕುಲದ ಅತ್ಯಂತ ಪ್ರಾರಂಭಕಾಲದ ತಂಡಗಳಲ್ಲಿ ಅಥವಾ ನೆಲೆಗಳಲ್ಲಿ ಇನ್ನೂ ಹೆಚ್ಚು ಪ್ರಮುಖವಾದ ಪಾತ್ರಗಳನ್ನು ನಿರ್ವಹಿಸಿದ್ದನ್ನು ಮಾರ್ಗರೆಟ್ ಮೀಡ್, ರಾಬರ್ಟ್ ಲೂಯಿ, ವೀರ್ಟಿಂಗ್ಸ್‌ ಮತ್ತು ಪ್ರಾಚೀನ ಸಂಸ್ಕೃತಿಗಳ ಬಗ್ಗೆ ಅನ್ವೇಷಣೆ ನಡೆಸಿದ ಇತರ ಸಂಶೋಧನೆಗಳು ತೋರಿಸುತ್ತವೆ.

ಆರಂಭಕಾಲದಲ್ಲಿ ಪ್ರಾಚೀನ ಬುಡಕಟ್ಟಿಗೆ ಸೇರಿದ ಪ್ರತಿಯೊಬ್ಬರೂ ತಮ್ಮ ತಾಯಿಯ ಬಗ್ಗೆ ತಿಳಿದಿರುತ್ತಿದ್ದರು. ಆದರೆ ಪಿತೃತ್ವವನ್ನು ಸ್ಥಾಪಿಸುವುದು ಅಸಾಧ್ಯವಾದ್ದರಿಂದಾಗಿ, ತಂದೆ ಯಾರು ಎಂದು ಗುರುತಿಸುವುದು ಮಹತ್ವದ ವಿಷಯವಾಗಿರಲಿಲ್ಲ. ಸಹಜವಾಗಿಯೇ ವಂಶಾವಳಿ ಪ್ರಶ್ನಾತೀತ ತಾಯಿಯಿಂದ ಇಳಿದು ಬರುತ್ತಿತ್ತಲ್ಲದೆ, ತಂದೆಯೆಂದು ಪ್ರತೀತಿಯಿರುವ ವ್ಯಕ್ತಿಯಿಂದ ಅಲ್ಲ. ಮಾತೃವಂಶದಿಂದ ವಂಶಾವಳಿಯನ್ನು ನಿರ್ಧರಿಸುವ (ಗುರುತಿಸುವ) ಈ ಕ್ರಮಕ್ಕೆ ಮಾತೃವಂಶೀಯ ವಿಧಾನ ಎಂದು ಹೇಳುತ್ತಾರೆ. ಅಲೆಮಾರಿ ಜನಾಂಗದವರು ಒಂದೆಡೆ ನೆಲೆಸಿ, ಅರೆಕಾಲಿಕ ಕೃಷಿಕರಾಗುವ ಹಾಗೂ ತಮ್ಮ ಗುಹೆಗಳ ಮತ್ತು ಸ್ತ್ರೀಯರ ಮೇಲೆ ನಿಯಂತ್ರಣವಿರಿಸಿಕೊಂಡ ಕ್ರೂರ ಧಣಿಗಳಾಗುವವರೆಗೆ ಪಿತೃವಂಶೀಯ ಸ್ವರೂಪ ಕಾಣಿಸಿಕೊಳ್ಳುವ ಅವಕಾಶ ಲಭಿಸಲಿಲ್ಲ. ಆ ವೇಳೆಯಲ್ಲಿಯೇ ಪುರುಷರು ಸ್ತ್ರೀಯರ ಚಲನವಲನಗಳನ್ನು ನಿರ್ಬಂಧಿಸಿದ್ದು. ಅನಂತರವೇ ಅವರು ಮಹಿಳೆಯರು ಹಾಗೂ ಮಕ್ಕಳ ಮೇಲೆ ತಮಗೆ ಹಕ್ಕು ಮತ್ತು ಅಧಿಕಾರಗಳಿವೆಯೆಂದು ವಾದಿಸಿದ್ದನ್ನು ಕಾಣಬಹುದು. ಹೀಗೆ ಮಹಿಳೆಯರು ತಾಯಿಯಾಗಿ ತಮಗಿರುವ ಮೂಲಭೂತ ಹಕ್ಕಿನಿಂದ ವಂಚಿತರಾದರು. ಆ ಸ್ಥಾನದಲ್ಲಿ ತಂದೆಯ ಅಧಿಕಾರ ಸ್ಥಾಪಿತವಾಯಿತು. ಸಾಮಾಜಿಕ ಅಧಿಕಾರವು ಮಹಿಳೆಯರಿಂದ ಪುರುಷರಿಗೆ ವರ್ಗಾವಣೆಗೊಂಡ ಬಗೆಯನ್ನು “ಸ್ತ್ರೀಯರಿಗೆ ಎದುರಾದ ಮಹಾ ಐತಿಹಾಸಿಕ ಪರಾಜಯ” ಎಂದು ಮಾಜಿ ಜರ್ಮನ್ ಸಾಮಾಜಿಕ ಮುಖಂಡ ಆಗಸ್ಟ್ ಬೆಬೆಲ್ ಅಭಿಪ್ರಾಯಪಟ್ಟಿದ್ದಾನೆ.

ತಾಯಂದಿರೇ ಆಡಳಿತ ನಿರ್ವಹಿಸುವುದನ್ನು ಸೂಚಿಸುವ, ಸಾಮಾಜಿಕ ಸಂಘಟನೆಯಲ್ಲಿ ಅತ್ಯಂತ ವೃದ್ಧರೂ, ಗೌರವಾರ್ಹರೂ ಆಗಿದ್ದ ಮಹಿಳೆಯರ ಆಡಳಿತವನ್ನು ಗೌರವಿಸುವ ಮಾತೃಯಾಜಮಾನ್ಯರ ಸಂದರ್ಭದಲ್ಲಿ, ಮಾತೃವಂಶೀಯ ಪದ್ಧತಿ ಹಾಗೂ ಮಾತೃ ಯಾಜಮಾನ್ಯಗಳು ಒಟ್ಟೊಟ್ಟಿಗೆ ಮುಂದೆ ಸಾಗುತ್ತಿದ್ದರೂ, ಸನ್ನಿವೇಶದಲ್ಲಿ ಸ್ವಲ್ಪ ಬದಲಾವಣೆಯುಂಟಾಯಿತು. ಇರೋಕ್ವಿಸ್ (Iroquois) ಭಾರತೀಯರನ್ನು ಮಹಿಳೆಯರು ಆಳುತ್ತಿದ್ದರೆಂದೂ, ಕೆಲವು ಆಸ್ಟ್ರೇಲಿಯರು ಮತ್ತು ದಕ್ಷಿಣ ಪ್ಯಾಸಿಫಿಕ್‌ನ ದ್ವೀಪನಿವಾಸಿಗಳು ಈಗಲೂ ಮಹಿಳೆಯರ ಆಡಳಿತಕ್ಕೊಳಪಟ್ಟಿದ್ದಾರೆಂದೂ ಕೆಲವು ಮಾನವಶಾಸ್ತ್ರಜ್ಞರು ಹೇಳುತ್ತಾರೆ. ದಿ ಡಮಿನೆಂಟ್ ಸೆಕ್ಸ್‌ಎನ್ನುವ ಕೃತಿಯಲ್ಲಿ ವೀರ್ಟಿಂಗ್ಸ್ ಅವರು ಮಾತೃ ಯಾಜಮಾನ್ಯ ಪದ್ಧತಿಯು ಪ್ರಾಚೀನ ಈಜಿಫ್ಟ್, ಲಿಬಿಯಾ ಹಾಗೂ ಸ್ಪಾರ್ಟಾದಲ್ಲಿ ಅಸ್ತಿತ್ವದಲ್ಲಿತ್ತೆಂದು ಪ್ರತಿಪಾದಿಸಿದ್ದಾರೆ. ಆದರೆ ಈ ಎಲ್ಲ ಸಂದರ್ಭಗಳಲ್ಲಿನ ಸಾಕ್ಷ್ಯಾಧಾರಗಳನ್ನು ಅಂತಿಮ ತೀರ್ಮಾನಗಳೆಂದು ಭಾವಿಸಲು ಸಾಧ್ಯವಿಲ್ಲ. ಆದ್ದರಿಂದ ಮಾತೃಯಾಜಮಾನ್ಯ ಪದ್ಧತಿಗೆ ಸೇರಿದವರೆಂದು ಕರೆಯಲಾಗುವವರು ಯಾವಾಗಲೂ ಆರ್ಥಿಕ ಮತ್ತು ಸಾಮಾಜಿಕ ಅಧಿಕಾರಗಳನ್ನು ಬಳಸುವ ಪುರುಷರ ನಿಯಂತ್ರಣಕ್ಕೆ ಒಳಪಟ್ಟಿರುತ್ತಾರೆ ಎಂದು ಅನೇಕ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಪ್ರಾಚೀನ ಸಮಾಜಗಳನ್ನು ಕುರಿತು ಗಾಢವಾದ ಅಧ್ಯಯನ ನಡೆಸಿದ ಲೆವಿ ಸ್ಟ್ರಾಸ್ ಹೀಗೆನ್ನುತ್ತಾರೆ:

ರಾಜಕೀಯ ಅಧಿಕಾರ ಯಾವಾಗಲೂ ಪುರುಷರ ಕೈಯಲ್ಲಿಯೇ ಇರುತ್ತದೆ. ಸರಳವಾಗಿ ಹೇಳುವುದಾದರೆ, ಸಾಮಾಜಿಕ ಅಧಿಕಾರವೂ ಸದಾ ಪುರುಷರಿಗೇ ಸೇರಿರುತ್ತದೆ… ಆದರೂ ಮಹಿಳೆಯರ ಸ್ಥಾನಮಾನಗಳು, ಅತ್ಯಂತ ಕೆಳಗಿರುವಾಗ ಅವರಿಗೆ ತಮ್ಮ ಸ್ಥಿತಿ-ಗತಿಗಳ ಬಗ್ಗೆ ಅ‌ಲ್ಪ ಸಮಾಧಾನ ಮಾತ್ರ ಇರುತ್ತದೆ. ಸ್ತ್ರೀಯರು ಪುರುಷರಿಗೆ ಸರಿಸಮಾನರೆಂಬ ಎಂದೂ ಅಳಿಯದ ಭಾವನೆ ಕೆಲವು ವಿಚಿತ್ರ ವಿಧಾನಗಳಲ್ಲಿ ಉಳಿದುಕೊಂಡು ಬಂದಿದೆ. ಉದಾಹರಣೆಗೆ, ಸಶಕ್ತ ಸ್ತ್ರೀದೇವತೆಗಳಲ್ಲಿನ ನಂಬಿಕೆ.

ಸ್ತ್ರೀದೇವತೆಗಳ ಪ್ರತಿಷ್ಠಾಪನೆ ಮತ್ತು ಸ್ತ್ರೀಶಕ್ತಿಯಲ್ಲಿನ ನಂಬಿಕೆ ಸ್ತ್ರೀಯರ ಫಲವತ್ತತೆಯನ್ನು ಭೂಮಿಯ ಫಲವತ್ತತೆಗೆ ಸರಿಸಮಾನವೆಂದು ಭಾವಿಸಿದುದರ ಪರಿಣಾಮವಾಗಿ ಮೂಡಿದ ಭಾವನೆಯಾಗಿದೆ. ಇವೆರಡೂ ಫಲವತ್ತತೆಗಳ ಬಗ್ಗೆ ಪ್ರಾಚೀನ ಬುಡಕಟ್ಟುಗಳಿಗೆ ಸೇರಿದ ಜನರ ಮನಸ್ಸಿನಲ್ಲಿ ಒಂದು ಬಗೆಯ ನಿಗೂಢತೆ ಬೆಳೆದಿತ್ತು. ನಿಸರ್ಗವನ್ನು ಅನೇಕ ರೂಪಗಳಲ್ಲಿ ಮತ್ತೆ ಹೆಸರುಗಳಲ್ಲಿ ಸ್ತ್ರೀಯೆಂದೇ ಪರಿಗಣಿಸಿ ಪೂಜಿಸಲಾಗುತ್ತಿತ್ತು. ಸೈಬೆಲೆ, ಡೆಮೆಟರ್, ಅಸ್ಟಾರ್ಟೆ, ಐಸಿಸ್‌ಮೊದಲಾದವು ಇಂಥ ಕೆಲವು ಹೆಸರುಗಳಾಗಿವೆ. ಕ್ರೈಸ್ತಮ ಪ್ರಚಾರಕ್ಕೆ ಬಂದಾಗ, ಐಸಿಸ್ ಪಂಥ ಕ್ರೈಸ್ತಮತದ ಅತ್ಯಂತ ಅಪಾಯಕಾರಿ ಪ್ರತಿಸ್ಪರ್ಧಿಯಾಯಿತು. ದೇವಮಾತೆಯೆನಿಸಿದ ಮೇರಿಯ ಮೇಲೆ ಬೆಳೆದ ಅತಿಪೂಜ್ಯಭಾವನೆಯ ಪರಿಣಾಮವಾಗಿ ಸ್ವರ್ಗದ ರಾಣಿಯೆನಿಸಿದ ಐಸಿಸ್‌ಳ ಆರಾಧನೆ ಮತ್ತು ಐಸಿಸ್ ಪಂಥ ಅಳಿಸಿ ಹೋಯಿತು.

ಸ್ತ್ರೀ ದೇವತೆಗಳಿಗೆ ಸಂಬಂಧಿಸಿದ ಬಹುಸಂಖ್ಯೆಯ ಆರಾಧನಾ ಪಂಥಗಳು ಸ್ತ್ರೀಯರ ಸಾಮಾಜಿಕ ಸ್ಥಾನಮಾನಗಳನ್ನು ಎತ್ತರಿಸಿದವು ಎಂಬುದರಲ್ಲಿ ಸಂದೇಹವಿಲ್ಲ. ಅಲ್ಲೆ, ಸ್ತ್ರೀಯರ ಸಮಾನತೆಯ ಬಗೆಗಿನ ಹಳೆಯ ನೈತಿಕ ಸಂಪ್ರದಾಯವೂ ಪುನಶ್ಚೇತನ ಪಡೆಯಿತು. ಆದ್ದರಿಂದ, ಕೃಷಿಗ್ರಾಮಗಳ ನಡುವೆ ವ್ಯಾಪಾರ ವ್ಯವಹಾರಗಳು ಅಭಿವೃದ್ಧಿಗೊಳ್ಳತೊಡಗಿದಾಗ ಹಾಗೂ ಬ್ಯಾಬಿಲೋನ್ ಅಥವಾ ರೋಂನಂತಹ ಪ್ರಮುಖ ಗ್ರಾಮಕೇಂದ್ರಗಳು ನಗರ ರಾಜ್ಯಗಳಾದಾಗ, ಅನಂತರ ರಾಜ್ಯಗಳಾದಾಗ, ತರುವಾಯ ಸಾಮ್ರಾಜ್ಯಗಳೂ ಆಗಿ ಪರಿವರ್ತಿತವಾದಾಗ, ದೊಡ್ಡ ವ್ಯಾಪಾರಿಗಳ ಹಾಗೂ ವಾಣಿಜ್ಯ ಪ್ರಮುಖರ ಪತ್ನಿಯರಂತೆ ಮತ್ತೆ ಪುತ್ರಿಯರಂತೆ, ಸಾಮಾನ್ಯ ಸ್ತ್ರೀಯರೂ, ಸಾರ್ವಜನಿಕ ಜೀವನದಲ್ಲಿ ಪ್ರವೇಶ ಪಡೆಯತೊಡಗಿದರು. ಹೀಗೆ, ಈಜಿಫ್ಟ್, ಬ್ಯಾಬಿಲೋನ್, ಕ್ರೆಟೆ ಮತ್ತು ಫಿರ್ಗಿಯಾಗಳಲ್ಲಿ ಸ್ತ್ರೀಯರ ಸಾಮಾಜಿಕ ಹಾಗೂ ಆರ್ಥಿಕ ಅಂತಸ್ತನ್ನು ಅಭಿವೃದ್ಧಿಗೊಳಿಸುವ ಉದ್ದೇಶದಿಂದ, ಸ್ತ್ರೀವಾದಿಗಳು ಮತ್ತು ಸ್ತ್ರೀವಾದಿಗಳಲ್ಲದವರ ನಡುವೆ ಘರ್ಷಣೆಗಳು ನಡೆಯಲು ವೇದಿಕೆ ಸಿದ್ಧವಾಯಿತು. ಮಾನವ ಸಂಸ್ಕೃತಿಯ ಆದಿಭಾಗದಲ್ಲಿಯೇ ಸ್ತ್ರೀವಾಸವಿದ್ದುದು ಕಂಡು ಬರುತ್ತದೆ. ಗ್ರೀಕರು ತಮ್ಮ ಹಾಡುಗಳಲ್ಲಿ ಹಾಗೂ ಕಥೆಗಳಲ್ಲಿ ಅಮೆಜಾನ್ ಅನ್ನು ವೈಭವೀಕರಿಸುವ ವೇಳೆಗೇ ಸ್ತ್ರೀವಾದದ ಸಮಸ್ಯೆ ಅತ್ಯಂತ ಹಳೆಯದೆನಿಸಿತು.

ಸ್ತ್ರೀವಾದದ ಪ್ರಾಚೀನತೆ

ಕ್ರಿ.ಪೂ. ೧೬೮೬ ರಲ್ಲಿ ಮರಣ ಹೊಂದಿದ ಮೆಸಪೊಟೆಮಿಯ ಸಾಮ್ರಾಜ್ಯದ ಹಮ್ಮೂರಾಬಿ, ತನ್ನ ಸಾಮ್ರಾಜ್ಯದ ಕಾನೂನುಗಳನ್ನು ಕ್ರೋಢೀಕರಿಸಿ ಶಿಲಾಶಾಸನಗಳಲ್ಲಿ ಕೆತ್ತಿಟ್ಟಿದ್ದಾನೆ. ಅವುಗಳಲ್ಲಿ ಒಂದು ಶಿಲಾಶಾಸನವನ್ನು ನಾವು ಪ್ಯಾರಿಸ್‌ನ ಲೌವ್ರೆವಸ್ತು ಸಂಗ್ರಹಾಲಯದಲ್ಲಿ ನೋಡಬಹುದು. ಪ್ರಪಂಚದಲ್ಲಿಯೇ ಬೇರೆಯಲ್ಲಿಯೂ ಕಾಣಸಿಗದ, ಹಾಗೂ ಸ್ತ್ರೀವಾದಿ ಚಳವಳಿಯ ಬಗೆಗಿನ ಮೊತ್ತಮೊದಲನೆಯ ಲಿಖಿತ ಸಾಕ್ಷ್ಯವೆನಿಸಿದ ಈ ಶಾಸನವು ನ್ಯಾಯಸೂತ್ರ, ಸ್ತ್ರೀಯನ್ನು ಉತ್ತಮ ನ್ಯಾಯಿಕ ನೆಲೆಯನ್ನಾಗಿ ನೋಡಿದೆ. ಹಮ್ಮೂರಾಬಿಯ ಈ ನ್ಯಾಯಸೂತ್ರ, ಮಹಿಳೆಯರ ಪಕ್ಷಗಳಿಗಾಗಿ ನಡೆದ ಹೋರಾಟದ ಅಂತ್ಯದ್ದೇ ಅಥವಾ ಪ್ರಾರಂಭದ್ದೇ ಎಂಬುದು ಖಚಿತವಾಗಿಲ್ಲ. ಆದರೆ ಎಷ್ಟು ಹೇಳಬಹುದು; ಅತ್ಯುನ್ನತ ಸಾರ್ವಜನಿಕ ಹುದ್ದೆಗಳಿಗೆ ಸ್ತ್ರೀಯರು ಏರಿದ್ದು ಮೆಸಪೊಟೇಮಿಯಾ ಜೀವನದಲ್ಲಿ ಹೊಸ ವಿಷಯವೇನೂ ಅಲ್ಲ. ಇತಿಹಾಸದಲ್ಲಿ ದಾಖಲಾದ ಮೊತ್ತಮೊದಲನೆಯ ಸ್ತ್ರೀ ಸಾಮ್ರಜ್ಯವನ್ನು ಎರಡು ನದೀಕಣಿವೆಗಳು ಸೃಷ್ಟಿಸಿವೆ. ಆ ಸಾಮ್ರಾಜ್ಯದ ರಾನಿಯೇ ಕು ಬಾವ್. ಹಮ್ಮೂರಾಬಿ ಬ್ಯಾಬಿಲೋನಿನಲ್ಲಿ ತನ್ನ ನ್ಯಾಯಸೂತ್ರವ್ನು ಬರೆದಿಟ್ಟ ಕಾಲದಿಂದ ಆರು ಶತಮಾನಗಳ ಮೊದಲೇ ವ್ಯಭಿಚಾರ ಗೃಹವೊಂದರಿಂದ ಬಂದ ಈಕೆ ಮೆಸಪೋಟೇಮಿಯಾದ ಸಿಂಹಾಸನವನ್ನು ಏರಿದ್ದಳು. ಎಲ್ಲ ಮಹಿಳೆಯರ ಸ್ಥಾನವೂ ಪುರುಷರಿಗಿಂತ ಕೆಳಗೆ ಎಂದು ಪರಿಗಣಿಸುವ ಯಾವುದೇ ರಾಷ್ಟ್ರವು ಸ್ತ್ರೀಯರನ್ನು ರಾಣಿಯರನ್ನಾಗಿ ಅಥವಾ ದೇವತೆಗಳನ್ನಾಗಿ ಪರಿಭಾವಿಸುವುದು ಎಂದಿಗೂ ಸಾಧ್ಯವಿಲ್ಲ.

ಹಮ್ಮೂರಾಬಿಯ ನ್ಯಾಯಸೂತ್ರದಲ್ಲಿ ಸ್ತ್ರೀವಾದಕ್ಕೆ ಸಂಬಂಧಿಸಿದ ಭಾಗವು ಮಹಿಳೆಯರ ಆಸ್ತಿಪಾಸ್ತಿಗಳನ್ನು ವಿವಾಹದ ಹಕ್ಕುಗಳನ್ನು ನಿಗದಿಪಡಿಸಿದೆ. ಈ ಸಂಬಂಧದಲ್ಲಿ, ಹಮ್ಮೂರಾಬಿಯ ಆಡಳಿತದಲ್ಲಿದ್ ಬೆಬಿಲೋನಿಯದ ಸ್ತ್ರೀಯರಿಗೆ ಅತಿಪ್ರಬಲವಾದ ನ್ಯಾಯಿಕ ಸ್ಥಾನಮಾನವಿತ್ತೆಂದು ನ್ಯಾಯಸೂತ್ರ ತೋರಿಸುತ್ತದೆ. ಕಾನೂನನ್ನು ಸ್ವತಃ ತನ್ನ ಕೈಗೆ ತೆಗೆದುಕೊಳ್ಳುವ ಗಂಡಂದಿರಿಗೆ ಹಮ್ಮೂರಾಬಿ ಉಗ್ರ ದಂಡನೆಗಳನ್ನೂ ಕೂಡ ವಿಧಿಸಿದ್ದ.

ಈಜಿಫ್ಟ್

ಅಮೆರಿಕದ ಖ್ಯಾತ ಮಾನವಶಾಸ್ತ್ರಜ್ಞ ಮಾರ್ಗರೆಟ್ ಮೀಡ್ “ಮಾನವ ಸಂಬಂಧಗಳ ಹಿಂದಿನ ಸಾಂಸ್ಕೃತಿಕ ನೆಲೆ”ಯನ್ನು ಶೋಧಿಸಲು ಕೈಗೊಂಡ ಸಂಶೋಧನೆಯಲ್ಲಿ ಲೈಂಗಿಕ ಸಂಬಂಧಗಳ ವಿಷಯವೂ ಸೇರಿತ್ತು. ತನ್ನ ಸಂಶೋಧನೆ ಕೊನೆಗೊಳ್ಳುವಾಗ, ಮೀಡ್ ಅನೇಕ ಮೂಲತೀರ್ಮಾನಗಳಿಗೆ ಬಂದಿದ್ದಳು. ವ್ಯಕ್ತಿಗಳಿಗಿರುವಂತೆ ಸಮಾಜಗಳಿಗೂ ವ್ಯಕ್ತಿತ್ವ ಗಳಿರುತ್ತವೆ. ಆದ್ದರಿಂದ ಸಮಾಜಗಳನ್ನು “ಯಾವುದೇ ಒಂದು ಲಿಂಗಕ್ಕೆ ಸೇರದವರು” ಎಂದರೆ ಕೇವಲ ಪುರುಷರು ಅಥವಾ ಕೇವಲ ಸ್ತ್ರೀಯರು “ಪ್ರಾಮುಖ್ಯ ಹೊಂದಿದ ಸಮಾಜ” ವೆಂದು ಸಮಾಜಗಳನ್ನು ವರ್ಗೀಕರಿಸುವುದು ವೈಜ್ಞಾನಿಕವಾಗಿ ತಪ್ಪು ಎಂಬುದು ಮೀಡಳ ಅತ್ಯಂತ ಪ್ರಮುಖ ತೀರ್ಮಾನಗಳಲ್ಲಿ ಒಂದು. ಈ ಸಾಮಾಜಿಕ ವ್ಯವಸ್ಥೆಯಲ್ಲಿ ರಾಜಕೀಯ ಮತ್ತು ಸಮಾಜಿಕ ನಡವಳಿಕೆಗಳು, ಜನಸಾಮಾನ್ಯರ ಅಥವ ಅಲ್ಪಸಂಖ್ಯಾತರ ಮನೋಭಾವ ಹಾಗೂ ಅನಿಸಿಕೆಗಳು ಪ್ರಜ್ಞಾಪೂರ್ವಕ ಅಥವಾ ಅಪ್ರಜ್ಞಾಪೂರ್ವಕವಾದ ಧ್ಯೇಯೋದ್ದೇಶಗಳೆಲ್ಲ ಒಳಗೊಂಡಿರುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಪ್ರತಿಯೊಂದು ರೀತಿಯಲ್ಲಿಯೂ ಪುರುಷರೇ ಅಥವಾ ಸ್ತ್ರೀಯರೇ ಸಾಮಾಜಿಕ ಪ್ರಾಮುಖ್ಯ ಹೊಂದಿರುವ ಸಮಾಜವೆಂಬುದು ಇಲ್ಲ.

ಸ್ತ್ರೀಯರು ಹಾಗೂ ಪುರುಷರ ನಡುವೆ ಅನೇಕ ಸಲ ಅಧಿಕಾರಗಳು ವರ್ಗಾವಣೆಗೊಂಡ ಬಗ್ಗೆ ಉಲ್ಲೇಖಗಳಿವೆ. ನಾಗರಿಕತೆಯ ಅನೇಕ ಸಾವಿರ ವರ್ಷಗಳ ಇತಿಹಾಸವಿದ್ದ ಈಜಿಫ್ಟಿನ ಹಲವು ಪ್ರಸಂಗಗಳನ್ನು ಉಲ್ಲೇಖಿಸಿ ಮೀಡ್ ಅವರ ತೀರ್ಮಾನವನ್ನು ಸಮರ್ಥಿಸಬಹುದು.

ಈಜಿಪ್ಟ್ ಸಾಮ್ರಾಜ್ಯದ ರಾಣಿ ಹಟ್ಟೆಪ್ಸುಟಳು (ಹ್ಯಾಪ್‌ಶೆಟ್‌ಸೂಟ್‌) ಆಸ್ತಿಪಾಸ್ತಿಗಳನ್ನು ಸುಲಭವಾಗಿ ಹೊಂದಬಲ್ಲ, ಅನುವಂಶಿಕವಾಗಿ ಪಡೆಯಬಲ್ಲ ಹಾಗೂ ಅದನ್ನು ವರ್ಗಾಯಿಸಬಲ್ಲ ಮಹಿಳೆಯಾಗಿದ್ದಳು. ಅವಳ ರಾಜ್ಯಭಾರದಲ್ಲಿ ಕೆಲಸದ ಹುಡುಗಿಯರನ್ನು ಮದುವೆಯಾಗಲು ಒತ್ತಾಯಿಸುವಂತಿರಲಿಲ್ಲ. ವಿಧವೆಯರಿಗೆ ಪುನರ್ವಿವಾಹ ಮಾಡಿಕೊಳ್ಳುವ ಅವಕಾಶವಿತ್ತು. ವಿವಾಹಗಳು ಒಪ್ಪಂದಕ್ಕೆ ಒಳಪಡುತ್ತಿದ್ದವು. ಮದುಮಗಳು ತನ್ನ ಆಸ್ತಿಪಾಸ್ತಿಗಳನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಲು ಹಾಗೂ ವಿಚ್ಛೇದನದ ಪ್ರಸಂಗ ಬಂದ ಸಂದರ್ಭದಲ್ಲಿ ವರನಿಗೆ ಸಂದಾಯವಾದ ವರದಕ್ಷಿಣೆಯನ್ನು ಖಚಿತವಾಗಿ ವಾಪಸು ಪಡೆಯಲು ಸಾಧ್ಯವಾಗುವಂತೆ ಈ ಒಪ್ಪಂದಗಳನ್ನು ಬರೆಯಲಾಗುತ್ತಿತ್ತು. ಪುರುಷರು ಎಷ್ಟು ಸುಲಭವಾಗಿ ಹಾಗೂ ಎಷ್ಟು ಬೇಗನೆ ವಿಚ್ಛೇದನ ಪಡೆಯಬಹುದೋ ಅದೇ ರೀತಿ ವಿಚ್ಛೇದನ ಪಡೆಯಲು ಮಹಿಳೆಯರಿಗೂ ಸಾಧ್ಯವಾಗಿತ್ತು. ವಿವಾಹಾ ನಂತರ ಗಂಡ ಸಂಪಾದಿಸಿದ ಎಲ್ಲ ಸ್ವತ್ತುಗಳಿಗೆ ಸಂಬಂಧಿಸಿದಂತೆ ಹೆಂಡತಿಗೂ ಸಮಾನಾಧಿಕಾರವಿತ್ತು. ಹಾಗಿದ್ದರೂ, ಸಾರ್ವಜನಿಕ ಧೋರಣೆಗಳನ್ನು ರೂಪಿಸುವ ವಿಷಯದಲ್ಲಿ ಅಥವಾ ಆಡಳಿತ ಸಂಬಂಧದ ವ್ಯವಹಾರಗಳಲ್ಲಿ ಮಹಿಳೆಯರು ಪಾತ್ರವಹಿಸುತ್ತಿದ್ದಿಲ್ಲವೆಂಬುದು ನಿಜ. ಎಲಿಜಬೆತ್ ಅಥವಾ ವಿಕ್ಟೋರಿಯಾಳ ಯುಗಗಳಿಗಿಂತ ಕ್ರಿ.ಪೂ. ೧೫೦೦ ರಲ್ಲಿ ಈಜಿಪ್ಟಿನಲ್ಲಿಯೇ ಮಹಿಳೆಯರು ಹೆಚ್ಚು ಸ್ವತಂತ್ರರಾಗಿದ್ದಂತೆ ಕಂಡುಬರುತ್ತದೆ. ಮಹಾರಾಣಿಯರ ಸಾಧನೆಗಳು ಮತ್ತೆ ಮತ್ತೆ ದಾಖಲಾಗಿರುವುದು ಪ್ರಾಚೀನ ಈಜಿಪ್ಟಿನಲ್ಲಿ ಮಹಿಳೆಯದ್ದೆ. ಸ್ತ್ರೀಯರ ಸಾಧನೆಯ ಪ್ರಾಮುಖ್ಯಕ್ಕೆ ಇದು ಒಂದು ಸಾಕ್ಷ್ಯವಾಗಿದೆ. ಮಹಾಚಕ್ರವರ್ತಿನಿಯರಲ್ಲಿ ಅತ್ಯಂತ ಪ್ರಮುಖಳಾದ ಹೆಟ್ಷಪ್ಸಟ್‌ಕ್ರಿ.ಪೂ. ೧೫೦೦ ರಲ್ಲಿಯೇ ಪುರುಷ ಪ್ರಾಧಾನ್ಯ ಸಮಾಜಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವಿಪತ್ಕಾರಕ ಯುದ್ಧಗಳಿಗೆ ವ್ಯತಿರಿಕ್ತವಾಗಿ, ತನ್ನ ಸಾಮ್ರಾಜ್ಯದಲ್ಲಿ ಸುದೀರ್ಘಕಾಲ ಉಳಿದುಬರುವಂತಹ ಶಾಂತಿಯನ್ನು ಸ್ಥಾಪಿಸಿದ್ದಳು.

ಗ್ರೀಸ್

ವಿಕ್ಟೋರಿಯಾಳ ಯುಗ ಕೊನೆಗೊಳ್ಳುವುದಕ್ಕೆ ಹಿಂದಿನ ಅನೇಕ ಶತಮಾನಗಳ ಕಾಲ, ಪ್ರಾಚೀನ ಗ್ರೀಕರೇ ನಾಗರಿಕತೆಯನ್ನು ಅತ್ಯುನ್ನತ ಮಟ್ಟಕ್ಕೆ ಒಯ್ದವರು ಎಂಬ ನಂಬಿಕೆಗೆ ಪಾಶ್ಚಾತ್ಯ ಜಗತ್ತಿನಲ್ಲಿ ಒಮ್ಮತವಿತ್ತು. ಹಿಂದೆಂದೂ ಅಂತಹ ನಾಗರಿಕತೆಯನ್ನು ಮಾನವ ಕುಲ ಕಂಡಿರಲಿಲ್ಲ. ಈ ಏಕಾಭಿಪ್ರಾಯ ಎಷ್ಟು ಸರಿಯಾದುದು ಎಂಬ ಬಗ್ಗೆ ಸಂದೇಹಗಳನ್ನು ವ್ಯಕ್ತಪಡಿಸಿದವರು ಜಾನ್ ರಸ್ಕಿನ್ ಹಾಗೂ ಜೆ.ಎಸ್. ಮಿಲ್‌ರಂತಹ ಸ್ತ್ರೀವಾದಿಗಳು. ಗ್ರೀಕ್ ಮಹಿಳೆಯರು ಅತ್ಯಂತ ಕೆಳಗಿನ ಸ್ಥಾನವನ್ನು ಹೊಂದಿದ್ದರು ಎಂದು ಈ ಸ್ತ್ರೀವಾದಿಗಳು ಪ್ರತಿಪಾದಿಸಿದರು. ಗ್ರೀಕ್‌ ಮಹಿಳೆಗೆ ಎಂದೂ ಪೌರತ್ವ ನೀಡಲಾಗಿರಲಿಲ್ಲ. ಗ್ರೀಸಿನ ಸ್ತ್ರೀಯರನ್ನು ‘ಅಟಕಾದ ಸ್ತ್ರೀಯರು’ ಎಂದು ಕರೆಯಲಾಗುತ್ತಿತ್ತು. ಗ್ರೀಕ್ ಮಹಿಳೆ ಪೌರನ ಮಗಳಾಗಿ ಅಥವಾ ಹೆಂಡತಿಯಾಗಿ ಮಾತ್ರ ಗುರುತಿಸಲ್ಪಡುತ್ತಿದ್ದಳು. ಮಹಿಳೆಯರು ಹೊಂದಿದ್ದ ಕೆಳಗಿನ ಸ್ಥಾನಮಾನಗಳು ಗ್ರೀಕ್ ಸಂಸ್ಕೃತಿಗೇ ಕಳಂಕಪ್ರಾಯವೆಂಬ ಅಭಿಪ್ರಾಯವನ್ನು ರಸ್ಕಿನ್ ವ್ಯಕ್ತಪಡಿಸಿದ್ದಾರೆ.

ಆದರೂ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ವಿವೇಚಿಸಿದ ಮಾರ್ಗದಲ್ಲಿ ಗ್ರೀಕ್ ಸಮಾಜ ಇಷ್ಟೊಂದು ಕೆಟ್ಟದಾಗಿ ಕಂಡುಬರುವುದಿಲ್ಲ. ಪ್ಲೇಟೋನಂತಹ ಸಂತರ ಸಿದ್ಧಾಂತಗಳ ಕಡೆ, ಪುರಾಣ ಕಥೆ ಅಥವಾ ಜನಪದದ ಕಡೆ ಸಾಂಪ್ರದಾಯಿಕ ಪಂಥದ ಇತಿಹಾಸಕಾರರು ಹೆಚ್ಚು ಗಮನಹರಿಸಿಲ್ಲ. ಇವುಗಳನ್ನು ಅವರು ನಿರ್ಲಕ್ಷಿಸಿದ್ದಾರೆ ಎಂದರೂ ತಪ್ಪಾಗದು. ಅರಿಸ್ಟೋಫೆನಿಸ್ ನನ್ನು ಒಳಗೊಂಡಂತೆ, ಅಭಿಜಾತ ನಾಟಕಕಾರರು ವ್ಯಕ್ತಪಡಿಸಿದ ಭಾವನಾತ್ಮಕ ಪ್ರವೃತ್ತಿಗಳೂ ಈ ಇತಿಹಾಸಕಾರರ ಗಮನ ಸೆಳೆದಿಲ್ಲ.

ಸ್ತ್ರೀವಾದಕ್ಕೆ ಸಂಬಂಧಿಸಿದಂತೆ ಗ್ರೀಸ್ ಬಗ್ಗೆ ನಡೆಸಿದ ಚರ್ಚೆಯಲ್ಲಿ ಪುರುಷರಿಗೆ ಎಲ್ಲ ಸ್ವಾತಂತ್ರ‍್ಯವನ್ನು ನೀಡಲಾಗಿತ್ತೆಂದೂ, ಸ್ತ್ರೀಯರನ್ನು ಜನಾನಗಳಲ್ಲಿ ಇರಿಸಲಾಗಿತ್ತೆಂದೂ, ಅವರಿಗೆ ಯಾವ ಔಪಚಾರಿಕ ಶಿಕ್ಷಣವನ್ನು ನೀಡದೆ, ಹಮ್ಮೂರಾಬಿಯ ಬೆಬಿಲೋನ್ ಮಹಿಳೆಯರಿಗಿಂತ ಹೆಚ್ಚು ಕೆಟ್ಟದಾದ ರೀತಿಯಲ್ಲಿ ಆರ್ಥಿಕವಾಗಿ ಅವರೊಡನೆ ವ್ಯವಹರಿಸಲಾಗುತ್ತಿತ್ತೆಂದೂ ವಿದ್ವಾಂಸರು ವಾದಿಸಿದ್ದಾರೆ. ಹಾಗಿದ್ದಾಗ್ಯೂ ಸ್ಪಾರ್ಟಾದಲ್ಲಿ ಪುರುಷರಿಗೆ ನೀಡಲಾಗುತ್ತಿದ್ದ ಶಿಕ್ಷಣವೇ ಸ್ತ್ರೀಯರಿಗೆ ದೊರಕುತ್ತಿತ್ತು. ಅಲ್ಲಿ ೧೩ ರಿಂದ ೧೯ ವರ್ಷದೊಳಗನ ಹುಡುಗ-ಹುಡುಗಿಯರಿಗೆ ನಗ್ನರಾಗಿ ಒಂದೇ ವ್ಯಾಯಾಮ ಶಾಲೆಗೆ ಹೋಗಿ ಮುಕ್ತವಾಗಿ ಓಡುವ, ಹಾರುವ, ಡಿಸ್ಕಸ್ ಎಸೆಯುವ ಹಾಗೂ ಆರೋಗ್ಯ ಮತ್ತು ಬಲಗಳ ವೃದ್ಧಿಗಾಗಿ ಒಬ್ಬರೊಡನೊಬ್ಬರು ಕುಸ್ತಿ ಮಾಡುವ ಅವಕಾಶವಿದ್ದಿತ್ತು. ಸ್ಪಾರ್ಟಾ ಒಂದು ಸೈನಿಕ ರಾಷ್ಟ್ರವಾಗಿದ್ದು, ಸೈನ್ಯಶಿಸ್ತಿನ ರೀತಿಯಲ್ಲಿಯೇ ಅಲ್ಲಿ ವಿದ್ಯಾಭ್ಯಾಸ ನೀಡಲಾಗುತ್ತಿತ್ತು. ಅಲ್ಲದೆ ಸಾಮಸ್ಕೃತಿಕ ಕಲೆಗಳಿಗೆ ಅಲ್ಲಿ ಯಾವುದೇ ಪ್ರಾಮುಖ್ಯವೂ ಇರಲಿಲ್ಲ ಎಂಬುದನ್ನು ನಾವು ಮನಸ್ಸಿನಲ್ಲಿಟ್ಟುಕೊಲ್ಳಬೇಕು. ಆದರೆ ಅಥೆನ್ಸಿನ ಸಾಂಸ್ಕೃತಿಕ ಚಿತ್ರಣ ಬೇರೊಂದು ಕಥೆಯನ್ನೇ ಹೇಳುತ್ತದೆ. ಅಲ್ಲಿ ಮಹಿಳೆಯರು ಮನೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿರಲಿಲ್ಲ. ನಿರಂತರ ಚಟುವಟಿಕೆಗಳ ಕೇಂದ್ರವಾದ ಕಛೇರಿ ಅಥವಾ ಕಾರ್ಯಾಗಾರಗಳಲ್ಲಿ ಅವರು ಹೆಚ್ಚು ಸಮಯವನ್ನು ಕಳೆಯುತ್ತಿದ್ದರು. ಪೆರಿಕ್ಲಸ್‌ನ ಅವಧಿಯಲ್ಲಿ ಅಥೆನ್ಸಿನಲ್ಲಿ ಕಿರಿಯ ವಯಸ್ಸಿನ ಸ್ತ್ರೀ ಬುದ್ಧಿಜೀವಿಗಳ ತಲೆಮಾರಿತ್ತು. ಅವರು ಮುಕ್ತ ಲೈಂಗಿಕ ಜೀವನ ನಡೆಸುತ್ತಿದ್ದರು. ಗಿರ್‌ಬರ್ಟ್ ಮತ್ತು ಸಲ್ಲಿವನ್ ತಮ್ಮ ‘ದಿ ಪ್ರಿನ್ಸಸ್’ ಕೃತಿಯಲ್ಲಿ ತಮ್ಮ ಇಂಗ್ಲಿಶ್ ಸೋದರಿಯರ ಬಗ್ಗೆ ಗೇಲಿ ಮಾಡಿದಂತೆಯೇ, ಅರಿಸ್ಟೋಫೆನಿಸ್ ಕೂಡ ಅಥೆನ್ಸ್‌ಯುವತಿಯರ ಬಗ್ಗೆ ತಮಾಷೆ ಮಾಡಿದ್ದಾನೆ. ಈ ಯುವತಿಯರೂ ಅಸ್ಪಾಸಿಯಾ, ಲಾಯಿಸ್, ಫ್ರಿನೆ ಮೊದಲಾದ ಹೆಚ್ಚಿನವರನ್ನು ಉಪಪತ್ನಿಯರೆಂದೇ ಅಥವಾ ಗಂಡಸರು ತಮ್ಮ ಜೊತೆಗಾಗಿ ಇಟ್ಟುಕೊಂಡವರೆಂದೇ ಕರೆಯಲಾಗುತ್ತಿತ್ತು ಎಂದು ತಿಳಿಸುತ್ತಾನೆ. ಪೆರಿಕ್ಲಸ್ ಅಸ್ಪಾಸಿಯಾಳನ್ನು ಮದುವೆಯಾದ. ಈ ಘಟನೆ ನಡೆದುದರಿಂದಲೇ ಸ್ತ್ರೀಯರ ಸ್ಥಾನಮಾನ ಕಡಿಮೆಯಾಗಿರಬಹುದು. ಆ ಕಾಲದ ಮೂಲಭೂತವಾದಿಗಳು ಅನಂತರ ಅಸ್ಪಾಸಿಯಾಳ ವಿಚಾರಣೆ ನಡೆಸಿದರು. ಅವಳನ್ನು ಅನುರಾಗದಿಂದ ಪೆರಿಕ್ಲಸ್ ರಕ್ಷಿಸಿದ. ವಿಚಾರಣೆಗೆ ಒಳಪಡುವ ಹಕ್ಕನ್ನು ನಿರ್ಮಿಸುವ ಆರೋಪಕ್ಕೆ ಅವಳನ್ನು ಒಳಪಡಿಸಲಾಯಿತು. ಇದೇ ಹಕ್ಕಿನ ಬಗ್ಗೆ ಹೋರಾಡಿದ್ದ ಪ್ಲೇಟೋನನ್ನು ಮರಣ ಶಿಕ್ಷೆಗೆ ಒಳಪಡಿಸಿದ್ದನ್ನು ಇತಿಹಾಸ ತೋರಿಸಿದೆ.

ರೋಂ

ಗ್ರೀಸಿನ ಪ್ರಭಾವಕ್ಕೆ ರೋಮ್ ಒಳಪಡುವವರೆಗೂ ಪ್ರಾಚೀನ ರೋಂ ಸ್ತ್ರೀಯರು ತಮ್ಮ ಗಂಡಂದಿರ ನಿಯಂತ್ರಣಕ್ಕೆ ಒಳಪಟ್ಟಿದ್ದರು. ಆದ್ದರಿಂದ ಮಹಿಳೆಯರು ಸ್ಥಿತಿಗತಿಗಳು ಗ್ರೀಸಿನಲ್ಲಿ ಬಹುಶಃ ರೋಮಿನಲ್ಲಿಗಿಂತ ಹೆಚ್ಚು ಉತ್ತಮವಾಗಿದ್ದವು ಎಂದು ಕೆಲಮಟ್ಟಿಗೆ ನಂಬ ಬಹುದಾಗಿದೆ. ಗ್ರೀಕ್ ಸ್ತ್ರೀದೇವತೆಗಳನ್ನು, ಗ್ರೀಸಿನ ಕೆಲವು ಪ್ರಖ್ಯಾತ ಮಹಿಳೆಯರನ್ನು ರೋಮನರು ವೈಭವೀಕರಿಸಿದ್ದರು. ಸ್ಟೋರಿಕ್ ಹಾಗೂ ನವಪೈಥಾಗೊರಿಯನ್ ತತ್ವಶಾಸ್ತ್ರಗಳ ಸೂತ್ರಗಳಲ್ಲಿ ವಿವರಿಸಲಾದಂತೆ ಸ್ತ್ರೀಯರನ್ನು ಗೌರವಿಸಲು, ಯೂರಿಪಿಡಿಸ್ ಮತ್ತು ಅರಿಸ್ಪೋಫೆನಿಸ್‌ರಂತಹ ಗ್ರೀಕ್‌ ನಾಟಕಕಾರರ ಕೃತಿಗಳಲ್ಲಿ ನಿರೂಪಿಸಲಾದಂತೆ ಗ್ರೀಕರ ಸ್ತ್ರೀವಾದಿ ವಿಚಾರಗಳನ್ನು ಪರಿಗಣಿಸಲು ಅವರು ಕಲಿತಿದ್ದರು. ತನ್ನ ಹಾಸ್ಯನಾಟಕ ‘ಲಿಸಿಸ್ಟ್ರಾಟ’ದಲ್ಲಿ ಸ್ತ್ರೀವಾದಿ ಚಳವಳಿಯನ್ನು ಕುರಿತ ಅವನ ವ್ಯಂಗ್ಯ ಎಷ್ಟು ಹರಿತವಾಗಿದೆಯೆಂದರೆ, ಸ್ತ್ರೀವಾದಿ ವಿರೋಧಿಗಳೂ ಆಗಾಗ ಸ್ತ್ರೀವಾದಿಗಳಾಗಿ ಮತಾಂತರ ಹೊಂದುವಂತಿದೆ.

ರಾಜಕೀಯ ರಕ್ಷಣೆಯಿಂದ ಮಹಿಳೆಯನ್ನು ಮುಕ್ತಗೊಳಿಸುವ ಉದ್ದೇಶ ಹೊಂದಿದ್ದ ರೋಮನ್ ಸುಧಾರಣೆಗಳು ಕ್ರಿ.ಪೂ. ೨೧೫ ರಲ್ಲಿ ಲೆಕ್ಸ್ ಅಪಿಯೋಡ್ (Lex oppida) ದೊಂದಿಗೆ ಪ್ರಾರಂಭವಾದವು. ದಂಗೆಯ ಕಾಲದ ಸುಮಾರಿನಲ್ಲಿಯೇ ಮಂಜೂರಾದ ಈ ಶಾಸನ ಮಹಿಳೆಯರಿಗೆ ಆಸ್ತಿಪಾಸ್ತಿಗಳ ಹಕ್ಕನ್ನು, ವೈವಾಹಿಕ ಹಕ್ಕುಗಳನ್ನು ನೀಡಿದೆಯಲ್ಲದೆ ಅವರಿಗೆ ಹೆಚ್ಚು ಸುಧಾರಿತವಾದ ಸಮಾಜಿಕ ಅಂತಸ್ತು ದೊರೆಯುವಂತೆ ಮಾಡಿದೆ. ಮಹಿಳೆಯರಿಗೆ ಮತದಾನದ ಅಧಿಕಾರ ನೀಡುವ ವಿಚಾರ ಕುರಿತ ಈ ಶಾಸನದ ಭಾಗ, ಸಂಯುಕ್ತ ಸಂಸ್ಥಾನಗಳಲ್ಲಿ ಸ್ತ್ರೀಮತಾಧಿಕಾರಕ್ಕಾಗಿ ಚಳವಳಿ ನಡೆಯುತ್ತಿದ್ದ ಕಾಲದಲ್ಲಿ ಸೇರಿದ ಅಧಿವೇಶನದ ವರದಿಯ ಪ್ರಕಟಣೆಗಳಷ್ಟೇ ಸಾರವತ್ತಾಗಿದೆ. ಆಗ ಮಹಿಳೆಯರ ತಂಡಗಳು ಹಿರಿಯ ಕಾಟೊನಂತಹ ಪ್ರಮುಖ ಸ್ತ್ರೀವಾದಿ ವಿರೋಧಿ ಸೆನೆಟ್ ಸದಸ್ಯರ ಮನೆಗಳನ್ನು ಸುತ್ತುಗಟ್ಟಿದ್ದವು. ಬೇಡಿಕೆಗಳಿಗೆ ಮಣಿಯದ ಶಾಸಕರಿಗೆ ಪ್ರತೀಕಾರ ತೋರಿಸುವ ಬೆದರಿಕೆಯನ್ನು ಆಗ ಒಡ್ಡಲಾಗಿತ್ತು. ಈ ಚಳವಳಿಯ ಫಲಿತಾಂಶವಾಗಿ ಸಾಂಪ್ರದಾಯಿಕ ಪಕ್ಷಕ್ಕೆ ಸೇರಿದ ಸೆನೆಟ್ ಅವಸರದಿಂದ ಸುಧಾರಣೆಯ ಮೊದಲ ಚಿಕ್ಕ ಕಂತೊಂದನ್ನು ಮಹಿಳೆಯರಿಗೆ ನೀಡಲೇಬೇಕಾಗಿ ಬಂತು.

ಆ ತರುವಾಯ, ಸ್ತ್ರೀವಾದಿ ಸಮರ್ಥಕರು ನಿಧಾನವಾಗಿ ಪುರುಷ ವಿರೋಧವನ್ನು ಜಯಿಸಿದರು. ಸೀಸರನ ಹಂತಕ ಬ್ರೂಟಸ್‌ನ ತಾಯಿ ಸರ್ವಿಲಿಯಾ, ಗ್ರಾಚ್ಛಿಯ ತಾಯಿ ಕಾರ್ಸಿಲಿಯಾರಂತಹ ಪ್ರಸಿದ್ಧಿ ಮಹಿಳೆಯರು ಬೆಳಕಿಗೆ ಬಂದರು. ಸ್ತ್ರೀಯರಿಗೆ ಸ್ವಲ್ಪಸ್ವಲ್ಪ ವಾಗಿ ಹೊಸ ಹಕ್ಕುಗಳನ್ನು ಬಿಟ್ಟುಕೊಡಲಾಯಿತು. ಉದಾಹರಣೆಗೆ, ಅವರಿಗೆ ವಿವಾಹ ಒಪ್ಪಂದಗಳನ್ನು ಮಾಡಿಕೊಳ್ಳುವ ಅವಕಾಶ ಒದಗಿಬಂತು. ಪರಿಣಾಮವಾಗಿ ಗಂಡಂದಿರು ಸುಲಿಗೆ ಮಾಡದಂತೆ ಅವರ ಖಾಸಗಿ ಸ್ವತ್ತುಗಳಿಗೆ ರಕ್ಷಣೆ ಸಿಕ್ಕಿತು. ಆಗಸ್ಟನ್‌ನ ಕಾಲದ ವೇಳೆಗೆ, ಅಬ್ರಹಾಮನ ಅವಧಿಯಲ್ಲಿ ಅಮೆರಿಕನ್ ಮಹಿಳೆಯರು ಹೊಂದಿದ್ದಕ್ಕಿಂತಲೂ ಹೆಚ್ಚು ಪ್ರಬಲವಾದ ನ್ಯಾಯಿಕ, ಸಾಮಾಜಿಕ ಹಾಗೂ ಆರ್ಥಿಕ ಸ್ಥಾನಮಾನಗಳನ್ನು ರೋಮಿನ ಮಹಿಳೆಯರು ಹೊಂದಿದ್ದರು.

ಮಧ್ಯಕಾಲ

ರೋಮನ್ ಸಾಮ್ರಾಜ್ಯ ಕುಸಿದು ಬಿದ್ದಾಗ, ಸಂಭವಿಸಿದ ರಾಜಕೀಯ ಅನಾಯಕತೆ ಅವ್ಯವಸ್ಥೆಗಳು ಶತಮಾನಗಳ ಕಾಲ ಉಳಿದವು. ಎಲ್ಲ ಅತ್ಯುನ್ನತ ಸಾಂಸ್ಕೃತಿಕ ಮೌಲ್ಯಗಳೂ ಅವತಿ ಹೊಂದಿದವು ಅಥವಾ ನಶಿಸಿಹೋದವು ಎನ್ನುವ ಮಾತಿದೆ. ಜೀವಚ್ಛವದಂತಾದ ರೋಮನ್ ಶಾಸನಕ್ಕೆ ಔಪಚಾರಿಕ ಮಹತ್ವವಷ್ಟೇ ಉಳಿಯಿತು. ವಾಸ್ತವವಾಗಿ ಸಾಮಾಜಿಕ ರಂಗದಲ್ಲಿ, ಕೆಲವು ಬ್ಯಾರನ್‌ಗಳು ತಮ್ಮ ಅಸಹಾಯಕರಾದ ಕೈಕೆಳಗಿನವರ ಮೇಲೆ ಅನೇಕ ಬಗೆಯ ದಬ್ಬಾಳಿಕೆ ನಡೆಸುತ್ತಲೇ ಇದ್ದರು. ಬ್ಯಾರನ್‌ಗಳ ಪತ್ನಿಯರು ಅವರ ಸುಖ-ಭೋಗಕ್ಕಾಗಿ ಮಾತ್ರ ಇರುತ್ತಿದ್ದರು. ಒಟ್ಟಿನಲ್ಲಿ ಸಾಮಾನ್ಯ ಪ್ರಜೆಗಳು ಬ್ಯಾರನ್‌ಗಳ ಜೀತದಾಳುಗಳಾಗಿ, ಅವರ ಹೆಂಡಂದಿರು ಜೀತದಾಳುಗಳ ಗುಲಾಮರಂತೆ ಬಾಳುತ್ತಿದ್ದರು.

ಮಧ್ಯಯುಗದಾದ್ಯಂತ ಸ್ತ್ರೀಯರನ್ನು ಸುತ್ತುವರಿದ ಸುತ್ತುವರಿದ ಖಿನ್ನತೆಯ ಮೋಡದಲ್ಲಿ ಒಂದೇ ಒಂದು ಬೆಳ್ಳಿರೇಖೆಯು ಕಂಡುಬರುವುದಿಲ್ಲ. ‘ಕತ್ತಲಯುಗದಲ್ಲಿ’ ಸ್ತ್ರೀಯರ ಸ್ಥಿತಿಗತಿಗಳನ್ನು ಸುಧಾರಿಸುವ ಪ್ರಯತ್ನಗಳು ನಡೆದವು ಎಂದಷ್ಟೇ ಹೇಳಿ ಇತಿಹಾಸವನ್ನು ಸಮರ್ಥಿಸಬಹುದು. ಆದರೆ ಅವರ ಪರಿಸ್ಥಿತಿಯಲ್ಲಿ ಕೆಲವು ಬದಲಾವಣೆಗಳನ್ನು ಕಾಣಲು ಸಾಧ್ಯವಾದದ್ದು ಔದ್ಯೋಗಿಕ ಯುಗ ಪ್ರಾರಂಭವಾದಾಗಲೇ.

೧೭ನೆಯ ಶತಮಾನ ಮತ್ತು ಅನಂತರ

೧೭ನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಮೊತ್ತ ಮೊದಲ ಬಾರಿಗೆ ಸ್ತ್ರೀವಾದಿಗಳ ಧ್ವನಿಗಳು ಸ್ಪಷ್ಟವಾಗಿ ಕೇಳಿಬರತೊಡಗಿದವು. ಮುಂದಿನ ೨೦೦ ವರ್ಷಗಳ ಅವಧಿಯಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸ್ತ್ರೀವಾದಿಗಳು ಮಾತನಾಡತೊಡಗಿದರು ಹಾಗೂ ಫ್ರಾನ್ಸ್‌ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಕೂಡ ಇಂಥ ಧ್ವನಿ ಕೇಳಿಬರತೊಡಗಿತು. ಆರ್ಥಿಕ ಹಾಗೂ ರಾಜಕೀಯ ಪರಿವರ್ತನೆಗಳ ಅವಧಿಯಲ್ಲಿ ಸ್ತ್ರೀವಾದಿಗಳ ಸಂಘಟನೆಗಳು ಉದಯಿಸಿದವು. ಔದ್ಯಮಿಕ ಬಂಡವಾಳವಾದ ಅಭಿವೃದ್ಧಿ ಹೊಂದುತ್ತಿತ್ತು. ಬ್ರಿಟನ್, ಫ್ರಾನ್ಸ್‌ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನಗಳು ಪ್ರಾತಿನಿಧಿಕ ಪ್ರಜಾಪದ್ಧತಿಯ ರಾಜಕೀಯ ಪದ್ಧತಿಗಳನ್ನು ಅಳವಡಿಸಿಕೊಳ್ಳುತ್ತಿದ್ದುವು. ಈ ಆರ್ಥಿಕ ಹಾಗೂ ರಾಜಕೀಯ ಪರಿವರ್ತನೆಗಳು ಪರಿಣಾಮಕರ ರೀತಿಯಲ್ಲಿ ಮಹಿಳೆಯರ ಸನ್ನಿವೇಶವನ್ನು ಬದಲಾಯಿಸಿದವು. ಅಷ್ಟೇ ಅಲ್ಲ, ಆ ಸನ್ನಿವೇಶದಲ್ಲಿ ಮಹಿಳೆಯರನ್ನು ನೋಡುವ ದೃಷ್ಟಿ ಕೂಡ ಬದಲಾಯಿತು. ಈ ಬದಲಾವಣೆಗಳಲ್ಲಿ ಹೆಚ್ಚಿನವು ಕುಟುಂಬದ ಆರ್ಥಿಕ ಹಾಗೂ ರಾಜಕೀಯದಲ್ಲಿ ಉಂಟಾದ ಮಹತ್ವದ ಪರಿವರ್ತನೆಯ ಫಲಿತಾಂಶವೆನ್ನಬಹುದು.

ಆಧುನಿಕ ಅವಧಿಯ ಆದಿ ಕಾಲದಲ್ಲಿ, ಮನೆಗಳಲ್ಲಿಯೇ ಉತ್ಪಾದನ ಸಂಬಂಧಿ ಕಾರ್ಯಚಟುವಟಿಕೆಗಳು ಸಂಘಟಿತವಾಗಿ ನಡೆಯುತ್ತಿದ್ದವು. ಗಣ್ಯ ಕುಟುಂಬಗಳು ಸಮಾಜದಲ್ಲಿ ಈಗಲೂ ವಾಸ್ತವ ರಾಜಕೀಯ ಪ್ರಭಾವವನ್ನು ಹೊಂದಿವೆ. ಕೇಂದ್ರೀಕೃತ ರಾಷ್ಟ್ರ, ರಾಜ್ಯ ಪದ್ಧತಿಯಿಂದ ಊಳಿಗಮಾನ್ಯ ಪದ್ಧತಿ ಮಾಯವಾದರೂ ಕುಟುಂಬಗಳ ಶ್ರೇಷ್ಠತೆ ನಶಿಸಿ ಹೋಗಿಲ್ಲ. ತಾವು ಕುಟುಂಬದಲ್ಲಿ ಹೊಂದಿದ ಸದಸ್ಯತ್ವದ ಪ್ರಭಾವದಿಂದಾಗಿ, ಉತ್ಪಾದನೆ ಹಾಗೂ ಆಡಳಿತ ಇವೆರಡು ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ಯಾವಾಗಲೂ ಪುರುಷರಿಗಿಂತ ಕೆಳಗಿನದ್ದೇ ಆದರೂ ನಿಶ್ಚಿತವಾದ ಒಂದು ಅಂತಸ್ತು ಇತ್ತು. ಕುಲೀನ ಮಹಿಳೆಯರು ತಮ್ಮ ಕುಟುಂಬಗಳ ಪ್ರಭಾವದಿಂದಾಗಿ ಗಮನಾರ್ಹವಾದ ರಾಜಕೀಯ ಅಧಿಕಾರವನ್ನು ಹೊಂದಿದ್ದರು. ಕುಲೀನ ಅಥವಾ ಶ್ರೀಮಂತವರ್ಗಕ್ಕೆ ಸೇರದ ವಿವಾಹಿತ ಮಹಿಳೆಯರಿಗೆ ತಮ್ಮ ಕುಟುಂಬಗಳ ಒಳಗೆ ಸಾಕಷ್ಟು ಆರ್ಥಿಕ ಅಧಿಕಾರವಿತ್ತು. ಉತ್ಪಾದನ ಸಂಬಂಧಿ ಕಾರ್ಯಚಟುವಟಿಕೆಗಳು ಮನೆಯಲ್ಲಿ ನಡೆಯುತ್ತಿದ್ದುದೇ ಇದಕ್ಕೆ ಕಾರಣ. ಪೂರ್ವ ಔದ್ಯಮಿಕಯುಗದಲ್ಲಿ ಬಹುಮಂದಿ ಮಹಿಳೆಯರು ಕುಟುಂಬದ ಉಳಿವಿಗಾಗಿ ಅವಶ್ಯಕವೆನಿಸಿದ ಉತ್ಪಾದನ ಚಟುವಟಿಕೆಗಳಲ್ಲಿ ಒಂದಾಗುತ್ತಿದ್ದರು. ಈ ಯುಗದಲ್ಲಿ ಮಕ್ಕಳ ಪಾಲನೆ-ಪೋಷಣೆ ಹಾಗೂ ನಾವು ಈಗ ಮನೆಕೆಲಸವೆಂದು ಪರಿಗಣಿಸುವ ಕಾರ್ಯಗಳಿಗೆ ಮಹಿಳೆಯರ ಸಮಯದ ಅಲ್ಪ ಭಾಗ ಮಾತ್ರ ವ್ಯಯವಾಗುತ್ತಿತ್ತು. ಈ ಕೆಲಸ ಕಾರ್ಯಗಳಲ್ಲದೆ, ಬಹುಮಂದಿ ಮಹಿಳೆಯರು ಕೋಳಿಗಳನ್ನು ಮತ್ತು ಜೇನುಹುಳುಗಳನ್ನು ಸಾಕುವ ಮೂಲಕ, ಹೈನೋತ್ಪನ್ನಗಳನ್ನು ತಯಾರಿಸುವ ಮೂಲಕ ಹಾಗೂ ತರಕಾರಿ ಕೃಷಿಯ ಮೂಲಕ ಆಹಾರ ಉತ್ಪಾದನೆಗೆ ವಾಸ್ತವ ಕೊಡುಗೆ ನೀಡುತ್ತಿದ್ದರು. ಮಹಿಳೆಯರು ಆಹಾರ ಪದಾರ್ಥಗಳ ಉತ್ಪಾದನೆ ಮತ್ತು ಅವುಗಳ ಸಂಸ್ಕರಣಗಳ ಹೊಣೆ ಹೊತ್ತಿದ್ದರು. ಅವರು ಹತ್ತಿಯ ಮತ್ತು ಉಣ್ಣೆಯ ಬಟ್ಟೆಗಳನ್ನು ನೇಯುತ್ತಿದ್ದರು, ಉಡುಗೆ ತೊಡುಗೆಗಳನ್ನು ಹೊಲಿಯುತ್ತಿದ್ದರು. ಸಾಬೂನು ಮತ್ತು ಮೋಂಬತ್ತಿಗಳನ್ನು ತಯಾರಿಸುವ ಕಲೆ ಅವರಿಗೆ ತಿಳಿದಿತ್ತು. ಅಲ್ಲದೆ ಅವರು ಪರಿಗಣನಾರ್ಹವಾದ ಪ್ರಾಯೋಗಿಕ (ಅನುಭವಾತ್ಮಕ) ವೈದ್ಯಕೀಯ ಜ್ಞಾನವನ್ನು ಹೊಂದಿದ್ದರು. ಕಾಯಿಲೆ-ಕಸಾಲೆಗಳನ್ನು ಗುಣಪಡಿಸುವ ಗಿಡಮೂಲಿಕೆ ಶಾಸ್ತ್ರವೂ ಅವರಿಗೆ ತಿಳಿದಿತ್ತು. ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ಸಹಜವಾಗಿ ಅವಶ್ಯಕವಾಗಿತ್ತು.

ಪ್ರಜಾಸತ್ಯಾತ್ಮಕ ರಾಷ್ಟ್ರಗಳ (ಸರ್ಕಾರಗಳ) ಉದಯದೊಂದಿಗೆ, ಔದ್ಯಮೀಕರಣದ ಪ್ರಭಾವ ಕೂಡ, ಔದ್ಯಮೀಕರಣಪೂರ್ವಕ್ಕೆ ಸಂಬಂಧಿಸಿದಂತೆ ಮೇಲೆ ಹೇಳಲಾದ, ಸಾಂಪ್ರದಾಯಿಕ ಸಂಬಂಧವನ್ನು, ಅಡಿಪಾಯವನ್ನು ಶಿಥಿಲಗೊಳಿಸಿತು ಹಾಗು ಕೊನೆಯಲ್ಲಿ ಅವುಗಳನ್ನು ಪರಿವರ್ತಿಸಿತು. ಪರಿಣಾಮವಾಗಿ ಮೊದಲು ಕುಟುಂಬದಲ್ಲಿ ಬದಲಾವಣೆ ಯುಂಟಾಯಿತು. ಮಹಿಳೆಯರು ಹೊಂದಿದ್ದ ಸಾಂಪ್ರದಾಯಿಕ ಸ್ಥಾನಮಾನಗಳು ಅಳಿಸಿ ಹೋದವು. ಶ್ರೀಮಂತ ಕುಟುಂಬಗಳು ಅವನತಿ ಹೊಂದಿದಂತೆ, ಮೇಲ್ವರ್ಗಕ್ಕೆ ಸೇರಿದ ಮಹಿಳೆಯರು ತಮ್ಮ ರಾಜಕೀಯ ಅಧಿಕಾರವನ್ನು ಕಳೆದುಕೊಂಡರು. ಇದೇ ರೀತಿಯಲ್ಲಿ ಕೆಳವರ್ಗಕ್ಕೆ ಸೇರಿದ ಮಹಿಳೆಯರು ಹೊಂದಿದ್ದ ಆರ್ಥಿಕ ಅಧಿಕಾರದ ನೆಲೆಗಟ್ಟು ಕುಸಿಯಿತು. ಅವರ ಹೆಚ್ಚಿನ ಸಾಂಪ್ರದಾಯಿಕ ಕಾರ್ಯಚಟುವಟಿಕೆಗಳಿಗೆ, ಕಾರ್ಖಾನೆಗಳ ಸ್ಥಾಪನೆಯಿಂದಾಗಿ, ಮನೆಯಲ್ಲಿ ಅವಕಾಶ ಸಿಗಲಿಲ್ಲ. ಬಹುಸಂಖ್ಯೆಯ ಮಹಿಳೆಯರಿಗೆ ಕಾರ್ಖಾನೆಗಳಲ್ಲಿ ಉದ್ಯೋಗ ದೊರೆತರೂ, ಅವರ ಸಾಂಪ್ರದಾಯಿಕ ಕಾರ್ಯಚಟುವಟಿಕೆಳಿಗೆ ಔದ್ಯಮೀಕರಣದಲ್ಲಿ ಸರಿಯಾದ ಸ್ಥಾನ ಸಿಗದೆ ಹೋದದರಿಂದ, ಆಹಾರಧಾನ್ಯಗಳ ಉತ್ಪಾದನೆ ಮತ್ತು ಸಂಸ್ಕರಣ, ವಸ್ತ್ರೋತ್ಪಾದೆ, ಸಿದ್ಧ ಉಡುಪುಗಳ ತಯಾರಿ ಮೊದಲಾದಂಥ ಪ್ರಮುಖ ಕೈಗಾರಿಕೆಗಳ ಮೇಲಿನ ಅವರ ನಿಯಂತ್ರಣ ಕಡಿಮೆಯಾಯಿತು. ಇದರ ಪರಿಣಾಮವಾಗಿ ಗೃಹಕಾರ್ಯಗಳಲ್ಲಿ ಮಹಿಳೆಯರ ಕೊಡುಗೆ ಹೆಚ್ಚಿತು. ಅವರು ತಮ್ಮ ಗಂಡಂದಿರನ್ನು ಆರ್ಥಿಕವಾಗಿ ಅವಲಂಬಿಸಬೇಕಾಗಿ ಬಂದಿತು. ಆಗ ಪತಿ-ಪತ್ನಿಯರಲ್ಲಿ ಪತಿಯ ಕೈಯೇ ಮೇಲಾಯಿತು.

ಇದೇ ಕಾಲದಲ್ಲಿ ಕುಟುಂಬದ ಆರ್ಥಿಕ ಮತ್ತು ರಾಜಕೀಯ ಮಹತ್ವ ಕಡಿಮೆಯಾದ್ದರಿಂದ ಮಹಿಳೆಯರೂ ಸಮಾಜದಲ್ಲಿ ತಮ್ಮ ಆರ್ಥಿಕ ಹಾಗೂ ರಾಜಕೀಯ ಅಂತಸ್ತನ್ನು ಕಳೆದುಕೊಂಡರು. ಮಹಿಳೆಯರು ಹೊಸ ಅಂತಸ್ತನ್ನು ಹೊಂದುವುದು ಅನಿವಾರ್ಯವಾಯಿತು. ಉದಾಹರಣೆಗೆ, ಕಾರ್ಖಾನೆ ಪದ್ಧತಿ ಹಾಗೂ ಕೂಲಿಗಾಗಿ ಕಾರ್ಮಿಕರಾಗಿ ದುಡಿಯುವ ಅವಕಾಶ-ಇವು ಮೊತ್ತ ಮೊದಲ ಬಾರಿಗೆ ಮನೆಯಿಂದ ಹೊರಗೆ, ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ‍್ಯವನ್ನು ನೀಡಿದ್ದರಿಂದ, ಅವರು ತಮ್ಮ ಗಂಡಂದಿರ ಮೇಲಿನ ಪರಾವಲಂಬನೆಯಿಂದ ಕೆಲಮಟ್ಟಿಗೆ ಪಾರಾಗಲು ಸಾಧ್ಯವಯಿತು. ಅಲ್ಲದೆ, ಸಮಾನತೆ ಹಾಗೂ ವೈಯಕ್ತಿಕ ಸ್ವಾಯತ್ತತೆಗಳೆಂಬ ಹೊಸ ಪ್ರಜಾಸತ್ತಾತ್ಮಕ ಆದರ್ಶಗಳ ಮಹಿಳೆಯರು ಸ್ವಾಭಾವಿಕವಾಗಿಯೇ ಪುರುಷರಿಗಿಂತ ಕೆಳಗಿನ ಸ್ಥಾನಮಾನಗಳನ್ನು ಹೊಂದಿದವರು ಎಂಬ ರೂಢಿಗತ ಮನೋಭಾವನೆಗೆ ಸವಾಲೆಸೆಯಲು ಸ್ತ್ರೀಯರಿಗೆ ಅವಕಾಶ ಒದಗಿಸಿದವು. ಈ ಆರ್ಥಿಕ ಮತ್ತು ರಾಜಕೀಯ ಅಭಿವೃದ್ಧಿಗಳ ಪರಸ್ಪರ ವಿರುಧ ಫಲಿತಂಶಗಳಿಂದಾಗಿ ಸಮಾಜದಲ್ಲಿ ಸ್ತ್ರೀಯರ ಸಹಜ ಸ್ಥಾನಮಾನಗಳು ಬಹುಕಾಲ ಅಷ್ಟೇನೂ ವಾಸ್ತವ ಅವಶ್ಯಕತೆಯಾಗಿ ಉಳಿಯುವಂತೆ ಕಂಡುಬರಲಿಲ್ಲ. ಬದಲಾಗಿ, ಮಾರ್ಕ್ಸ್‌ವಾದಿಗಳು ಕರೆದಂತೆ ಮಹಿಳೆಯರ ಸಮಸ್ಯೆ ಒಂದು ಪ್ರಶ್ನೆಯಾಗಿ ಉದ್ಭವಿಸಿತು. ಹೊಸ ಔದ್ಯಮಿಕ ಸಮಾಜದಲ್ಲಿ ಮಹಿಳೆಯರಿಗೆ ತಕ್ಕದಾದ ಸ್ಥಾನವೇನೆಂಬುದೇ ಈ ಪ್ರಶ್ನೆಯಾಗಿತ್ತು. ಇದಕ್ಕೆ ಅನೇಕ ಉತ್ತರಗಳನ್ನು ಪ್ರಸ್ತಾಪಿಸಲಾಯಿತು. ಈ ಪ್ರಶ್ನೆಗೆ ಮಹಿಳೆಯರ ಉತ್ತರವಾಗಿ ಸಂಘಟಿತ ಸ್ತ್ರೀವಾದ ಅಸ್ತಿತ್ವಕ್ಕೆ ಬಂತು.

ಫ್ರಾನ್ಸ್: ಫ್ರೆಂಚ್ ಕ್ರಾಂತಿ ಮತ್ತು ಸ್ತ್ರೀವಾದ

ಫ್ರೆಂಚ್ ಕ್ರಾಂತಿಯ ಕಾಲದಲ್ಲಿ ಉಚ್ಛ್ರಾಯಸ್ಥಿತಿಗೆ ಏರಿದ ಮಹಾಸಾಮಾಜಿಕ ಕ್ಷೋಭೆಯು ಹೊಸತಲ್ಲ. ಆದರೂ ಆದರ್ಶವೆಂದು ಪರಿಗಣಿಸಲಾದ ಒಂದು ವಿಚಾರದ ಮೇಲೆ ಮಾನವನ ಪ್ರಜ್ಞೆಯನ್ನುಕೇಂದ್ರೀಕರಿಸಿದ ಸಂಗತಿಯನ್ನನಿ ಇಲ್ಲಿ ಗಮನಿಸಬಹುದು. ಬದುಕಿರುವ ಪ್ರತಿಯೊಬ್ಬ ಗಂಡಸು, ಹೆಂಗಸು ಮತ್ತು ಮಗು ಆತ್ಮವಿಕಾಸದ ಪೂರ್ಣ ಜೀವನವನ್ನು ನಡೆಸುವ ನೈತಿಕ ಹಕ್ಕನ್ನು ಹೊಂದಿದ್ದಾರೆ, ಅವನಿಗೆ ಅಥವಾ ಅವಳಿಗೆ ಆ ಹಕ್ಕನ್ನು ನೀಡುವುದು ಸಮಾಜದ ಕರ್ತವ್ಯವಾಗಿದೆ ಎಂಬುದೇ ಆ ವಿಚಾರ. ಈ ಅಭಿಪ್ರಾಯವು ದಮನಕ್ಕೊಳಗಾದ ಹೆಣ್ಣಿಗೆ ಒಂದು ದೊಡ್ಡ ಅವಕಾಶವನ್ನು ಒದಗಿಸಿತು. ಈ ಹೊಸತಾದ ಸ್ತ್ರೀವಾದ ಹೋರಾಟವನ್ನು ಥಾಮಸ್ ಪೈನೆನ್‌ನ ದಿ ರೈಟ್ಸ್ ಆಫ್ ಮ್ಯಾನ್‌ಕೃತಿಯಲ್ಲಿ ಪ್ರಾಸಂಗಿಕವಾಗಿ ಸೂಚಿಸಲಾಯಿತು. ಅಲ್ಲಿ ಮನುಷ್ಯನು ಎರಡು ಲಿಂಗಗಳನ್ನು ಪ್ರತಿನಿಧಿಸುತ್ತಾನೆ. ಹೆಣ್ಣಿನ ಸ್ಥಿತಿಗತಿಗಾಗಿ ವಿಶೇಷ ಪ್ರಾಮುಖ್ಯವನ್ನೇನೂ ಕೊಟ್ಟಿಲ್ಲ. ಆದಿವಾಸಿಗಳ ಒಬ್ಬ ಜಾಣ ಹೀಗೆ ಹೇಳಿದ: ಮಹಿಳೆಯ ಹಕ್ಕುಗಳಿಗಾಗಿ ಹೋರಾಟವು ಪುರುಷನ ಹಕ್ಕುಗಳ ಹೋರಾಟದಿಂದಲೇ ಪ್ರಾರಂಭವಾಗಿತ್ತು.

ಅಜಾಗರೂಕ ಓದುಗರು ಸಾಮಾಜಿಕ ನ್ಯಾಯಕ್ಕಾಗಿ ಪೈನೆನ್ ಒತ್ತಾಯ ಪಡಿಸಿದ್ದು ಪುರುಷರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಭಾವಿಸಿದರು. ಈ ದೋಷದಿಂದ ವಿಚಲಿತಳಾದ ಓರ್ವ ಇಂಗ್ಲಿಷ್ ಮಹಿಳೆಯು ತನ್ನ ಎ ಇಂಡಿಕೇಷನ್‌ ಆಫ್ ದಿ ರೈಟ್ಸ್ ಆಫ್ ವಿಮನ್ ಎಂಬ ಕೃತಿಯಲ್ಲಿ ಸ್ತ್ರೀವಾದಕ್ಕೆ ವಿಶೇಷವಾದ ಗಮನ ಕೊಟ್ಟಳು. ಈ ಕೃತಿಯು ಪ್ರಕಟವಾದದ್ದು ೧೭೯೨ ರಲ್ಲಿ. ಅವಳ ಇಂಡಿಕೇಷನ್ ಕೃತಿಯು ಸ್ತ್ರೀಯರ ಮಾನವೀಯ ಗೌರವವನ್ನು ಗುರುತಿಸಿ, ಅವರಿಗೆ ಮುಕ್ತ ವಿದ್ಯಾಭ್ಯಾಸಕ್ಕೆ ಅವಕಾಶ ನೀಡಿ, ಆರ್ಥಿಕ ಸ್ವಾತಂತ್ರ‍್ಯವನ್ನು ಕೊಡಲು ಕಳಕಳಿಯಿಂದ ಮನವಿ ಮಾಡಿಕೊಂಡಿತು. ಹೊಲ್‌ಬಾಚ್ ಮತ್ತು ಕಂಡಾರ್ಸೆಟ್‌ಎಂಬ ಫ್ರೆಂಚ್ ತತ್ವಜ್ಞಾನಿಗಳು ಈ ದಿಸೆಯಲ್ಲಿ ಅಪಾರ ಕೊಡುಗೆ ನೀಡಿದರು. ಮಹಿಳೆಯ ಹಕ್ಕು ಎಂಬ ವಿಚಾರವು ಸಾರ್ವಜನಿಕ ಅಭಿಪ್ರಾಯವನ್ನು ಕಲಕಿತಾದರೂ ಯಾವುದೇ ವಾಸ್ತವಿಕ ಫಲಿತಾಂಶವು ಅದರಿಂದ ಹೊರಬರಲಿಲ್ಲ. ಜಾಕೋಬಿನ್ನರು ಕೂಡ ಸ್ತ್ರೀ ಸುಧಾರಣಾ ಸಲಹೆಗಳೆಲ್ಲವನ್ನು ನಿರಾಕರಿಸಿದರು.

ನೆಪೋಲಿಯನ್‌ನ ನೇತೃತ್ವದಲ್ಲಿ ನಡೆದ ಪ್ರತಿಕ್ರಾಂತಿಯು ಶಾಸನಬದ್ಧ ಪ್ರಯೋಜನಗಳಿಗೆ ತಡೆಹಾಕಿತು. ಆದರೂ ಜಾರ್ಜ್‌ಸಾಂಡ್, ಒಲಿಂಪೆ ಡಿ ಗೌಜೆಸ್‌ನ ಶಿಷ್ಯರು ಮತ್ತು ಫ್ರೆಂಚ್‌ಸಮಾಜವಾದಿಗಳ ಬರವಣಿಗೆಗಳ ಮೂಲಕ ಸಾರ್ವಜನಿಕ ಚಳವಳಿ ನಡೆದೇ ಇತ್ತು. ೧೮೭೦ ರಲ್ಲಿ ಸಮುದಾಯಕ್ಕೆ ನೆರವಾಗಲು ಲೂಯಿ ಮಿಚೆಲ್ ಒಂದು “ಯೂನಿಯನ್ ಡೆಸ್ ಫೆಮ್ಮೆಸ್” ಸ್ಥಾಪಿಸಿದರು. ೧೮೭೯ರ ಫ್ರೆಂಚ್ ಸಮಾಜವಾದಿ ಕಾಂಗ್ರೆಸ್, ಮಹಿಳೆಯ ಪೂರ್ಣ ಸಾಮಾಜಿಕ ಮತ್ತು ರಾಜಕೀಯ ಹಕ್ಕುಗಳನ್ನು ಒತ್ತಾಯಪಡಿಸಿದ ಮೊತ್ತಮೊದಲ ರಾಜಕೀಯ ಪಕ್ಷವಾಯಿತು. ೧೯೨೪ ರಲ್ಲಿ ಕಾಲೇಜುಗಳು ಹೆಣ್ಣು ಮಕ್ಕಳನ್ನು ಸೇರಿಸಿಕೊಳ್ಳತೊಡಗಿದುವು. ಹೆಚ್ಚು ಹೆಚ್ಚು ಮಹಿಳೆಯರು ವಿಜ್ಞಾನಿಗಳಾಗಿ, ರಸಾಯನಶಾಸ್ತ್ರಜ್ಞರಾಗಿ, ಅರ್ಥತಜ್ಞರಾಗಿ, ವಿಮಾನ ನಡೆಸುವ ಪೈಲಟ್‌ಗಳಾಗಿ ಪ್ರಸಿದ್ಧರಾಗತೊಡಗಿದರು. ಮೇಡಂ ಜೋಲಿಯಟ್ ಕ್ಯೂರಿ, ಲೂಯಿಸ್ ಹರ್‌ವ್ಯೂಸ್‌ ಮತ್ತು ಮಾರಿಸ್‌ಬ್ಯಾಸ್ಟಿ ಇವರು ಈ ದಿಸೆಯಲ್ಲಿ ಸುಪ್ರಸಿದ್ಧರಾದವರು. ಅಂತಿಮವಾಗಿ, ೧೯೪೪ ಏಪ್ರಿಲ್ ೨೧ ರಂದು ಫ್ರೆಂಚ್ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಯಿತು. ಯುದ್ಧ ಮುಗಿದ ಮೇಲೆ ಅವರು ಶಾಸನಸಭೆಗಳಿಗೆ ಚುನಾಯಿತರಾದರು. ಅಮೆರಿಕಾಕ್ಕೆ ಹೋಲಿಸಿದರೆ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಸರಕಾರಿ ಹುದ್ದೆಗಳಿಗೆ ಮಹಿಳೆಯರು ನೇಮಿತರಾದರು. ನಾಲ್ಕನೆಯ ರಿಪಬ್ಲಿಕ್ಕಿನ ಸಿವಿಲ್ ಸಂಹಿತೆಯು ವಿವಾಹ ವಿಚ್ಛೇದನ, ಆಸ್ತಿಪಾಸ್ತಿ ಮತ್ತು ಹಣಕಾಸು ಸಂಬಂಧಿತ ವ್ಯವಹಾರಗಳಲ್ಲಿ ಮಹಿಳೆಗೆ ಸಮಾನ ಹಕ್ಕುಗಳನ್ನು ನೀಡಿತು.

ಗ್ರೇಟ್ ಬ್ರಿಟನ್

ಬ್ರಿಟನ್ನಿನಲ್ಲಿ ಪ್ರತಿ-ಕ್ರಾಂತಿಯ ಹಿನ್ನೆಡೆಯ ಪರಿಣಾಮ ತೀವ್ರವಾಗಿತ್ತು. ಅದು ಒಂದು ಪೀಳಿಗೆಯಷ್ಟು ಕಾಲ ಸಾರ್ವಜನಿಕ ಅಭಿಪ್ರಾಯವನ್ನು ಸ್ತ್ರೀವಾದಕ್ಕೆ ವಿರುದ್ಧವಾಗಿ ಇರುವಂತೆ ಮಾಡಿತು. ೧೮೬೯ ರಲ್ಲಿ ಜಾನ್ ಸ್ಟುಯರ್ಟ್ ಮಿಲ್ ದಿ ಸೆಬ್ಜೆಕ್ಷನ್ ಆಫ್ ವಿಮನ್ ಎಂಬ ತನ್ನ ಕೃತಿಯ (ಲಂಡನ್ ಪ್ರಕಟಣೆ) ಮೂಲಕ ಸ್ತ್ರೀವಾದವನ್ನು ಎತ್ತಿಹಿಡಿದಾಗ ಚಳವಳಿಗೆ ಪುನರ್ಜನ್ಮ ದೊರಕಿತು. ಮತ ಚಲಾಯಿಸಲು ಮತ್ತು ಉನ್ನತ ಅಧಿಕಾರಗಳನ್ನು ನಿರ್ವಹಿಸಲು ಮಹಿಳೆಗೆ ಇರುವ ಹಕ್ಕನ್ನು ಮಿಲ್ ಒತ್ತಿ ಹೇಳಿದನು. ಯಾವುದೇ ರೀತಿಯಲ್ಲೂ ಅದಷ್ಟೇ ಅಂತಿಮವಲ್ಲ, ಸಂಪೂರ್ಣ ಸಮಾನತೆಯ ಕಡೆಗೆ ಹೋರಾಟದಲ್ಲಿ ಮೊದಲನೆಯ ಅತಿಮುಖ್ಯವಾಗಿದ್ದ ಹೆಜ್ಜೆಗಳು ಇವು ಎಂದು ಅವನು ಹೇಳಿದನು. ಅದಕ್ಕಿಂತ ಮೊದಲು ೧೫ನೆಯ ಶತಮಾನದಲ್ಲೇ ಮಹಿಳೆಯರು ಮತ ಚಲಾಯಿಸುವ ಹಕ್ಕಿಗಾಗಿ ಒತ್ತಾಯ ಪಡಿಸಿದ್ದರು. ಮೇರಿ ವುಲ್‌ಸ್ಟನ್ ಕ್ರಾಫ್ಟ್ ಕೂಡ ಮಹಿಳೆಯ ಮತದಾನಕ್ಕಾಗಿ ವಾದ ಮಾಡಿದ್ದಳು. ಚಾರ್ಟಿಸ್ಟ್ ಚಳವಳಿಯು ೧೮೪೯ ರ ದಶಕಗಳಲ್ಲಿ ಈ ಬೇಡಿಕೆಯನ್ನು ಮುಂದಿಟ್ಟಿತ್ತು. ೧೮೫೧ ರಲ್ಲಿ ವೆಸ್ಟ್ ಮಿನಿಸ್ಟರ್ ರಿವ್ಯೂ ಪತ್ರಿಕೆಯಲ್ಲಿ ಜಾನ್‌ಸ್ಟುಯರ್ಟ್ ಮಿಲ್‌ನ ಪತ್ನಿಯು ಬರೆದ ಲೇಖನವು ವ್ಯಾಪಕವಾದ ಆಸಕ್ತಿಯನ್ನು ಕೆರಳಿಸಿತು. ಮೊದಲ ಮಹಿಳಾ ಮತದಾರ ಸಮಿತಿಯನ್ನು ಮ್ಯಾಂಚೆಸ್ಟರಿನಲ್ಲಿ ೧೮೬೫ ರಲ್ಲಿ ರಚಿಸಲಾಯಿತು. ಅದಾದ ಎರಡು ವರ್ಷಗಳ ನಂತರ ಜಾನ್ ಸ್ಟುಯರ್ಟ್ ಮಿಲ್‌ನು, ಸುಮಾರು ೧೫೦೦ ಜನರು ಸಹಿ ಹಾಕಿದ ಒಂದು ಮನವಿಯನ್ನು ಪಾರ್ಲಿಮೆಂಟಿಗೆ ಒಪ್ಪಿಸಿದನು. ಅದಕ್ಕೆ ಸಹಿ ಮಾಡಿದವರಲ್ಲಿ ಫ್ಲಾರೆನ್ಸ್ ನೈಟಿಂಗೇನ್, ಫ್ರಾನ್ಸಿನ ಪವರ್‌ಕೋಬ್, ಜೋಸೆಫೈನ್ ಬಟ್ಲರ್, ಹ್ಯಾರಿಯೆಟ್ ಮಾರ್ಟಿನ್ಯೂ ಮತ್ತು ಮೇರಿ ಸೋಮರ್‌ವಿಲ್ ಇವರು ಸೇರಿದ್ದರು. ಮಹಿಳೆಯರಿಗೆ ಸಮಾನ ಮತದಾನದ ಹಕ್ಕನ್ನು ಈ ಮನವಿಯು ಕೋರಿತ್ತು. ೧೮೬೭ ರಲ್ಲಿ ಈ ಸುಧಾರಣಾ ಮಸೂದೆಯ ತಿದ್ದುಪಡಿಯ ಪರವಾಗಿ ೭೩, ವಿರುದ್ಧವಾಗಿ ೧೯೬ ಮತಗಳು ಚಲಾವಣೆಯಾದ್ದರಿಂದ ಮಸೂದೆಯು ಬಿದ್ದು ಹೋಯಿತು.

೧೮೯೭ ರಲ್ಲಿ ಲಂಡನ್ನಿನಲ್ಲಿ ನ್ಯಾಷನಲ್ ಯೂನಿಯನ್ ಆಫ್ ವಿಮನ್ಸ್ ಸಫ್ರೇಜ್ ಸಂಘಗಳ ಸ್ಥಾಪನೆಯಾದುದರಿಂದ ಮಹಿಳಾ ಮತ ಚಲಾವಣೆಯ ವಿಚಾರಕ್ಕೆ ಹೆಚ್ಚಿನ ಚಾಲನೆ ದೊರಕಿತು. ‘ವೋಟು’ ಹೋರಾಟದ ಮೊದಲನೆಯ ಹಂತ ಮಾತ್ರ ಎಂದು ಪರಿಗಣಿಸಿದ ಸ್ತ್ರೀವಾದಿಗಳಾದ ಮಹಿಳೆಯರು ಮತ್ತು ಪುರುಷರು ಪಾರ್ಲಿಮೆಂಟಿನಲ್ಲಿ, ವೇದಿಕೆಗಳ ಮೇಲೆ, ಪತ್ರಿಕೆಗಳಲ್ಲಿ ಈ ವಿಚಾರವಾಗಿ ತಮ್ಮ ಹೋರಾಟವನ್ನು ಕೇಂದ್ರೀಕರಿಸಿದರು. ಸರ್ ಆಮ್ರೋತ್ ರೈಟಿ ಎಂಬ ವೈದ್ಯಕೀಯ ಪರಿಣತನು ಹೆಂಗಸು ಜೈವಿಕವಾಗಿಯೂ, ಮಾನಸಿಕವಾಗಿಯೂ ಗಂಡಸಿಗಿಂತ ಕೆಳಮಟ್ಟದವಳು ಎಂಬ ತನ್ನ ನಂಬಿಕೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದನು. ಅವನ ವಾದವನ್ನು ಧ್ವಂಸಗೊಳಿಸುವ ಉತ್ತರವನ್ನು ಶ್ರೇಷ್ಠ ನಾಟಕಕಾರನೂ, ಸಂವೇದನಾಶೀಲ ಬರಹಗಾರನೂ ಆದ ರೆಸೆಲ್ ಘೋ ಬರೆದನು. ಇಮೆಲಿನ್ ಪ್ಯಾಂಕ್‌ಹರ್ಸ್ಟ್ ಮತ್ತು ಆಕೆಯ ಮಗಳು ಕ್ರಿಸ್ಟಬೆಲ್, ಅದುವರೆಗೆ ಶಾಂತಿಯುತವಾಗಿದ್ದ ಹೋರಾಟವನ್ನು ಹಿಂಸಾತ್ಮಕವಾಗಿ, ಉಗ್ರ ರೀತಿಯದಾಗಿ ಪರಿವರ್ತಿಸಿದರು. ಪರಿಣಾಮವಾಗಿ ಇಂಗ್ಲೆಂಡ್ ಕೋಲಾಹಲಕ್ಕೊಳಗಾಯಿತು. ಸ್ತ್ರೀವಾದಿ ವಿರೋಧಿ ಪ್ರಧಾನಮಂತ್ರಿ ಆಸ್ಕ್ವತ್, ೧೯೧೭ ರಲ್ಲಿ ಮಹಿಳೆಯರಿಗೆ ಮತಚಲಾವಣೆಯ ಹಕ್ಕು ನೀಡಲೇಬೇಕಾಯಿತು. ಜನಪ್ರಾತಿನಿಧ್ಯ ಶಾಸನವನ್ನು (The Represenatation of People Act) ಕಾಮನ್ಸ್ ಸಭೆಯು ೧೯೧೭ರ ಜೂನ್ ತಿಂಗಳಲ್ಲಿ ಅಂಗೀಕರಿಸಿತು. ಹೌಸ್ ಆಫ್ ಲಾರ್ಡ್ಸ್ ಅದನ್ನು ೧೯೧೮ ಫೆಬ್ರವರಿ ೬ ರಂದು ಅನುಮೋದಿಸಿತು. ಗ್ರೇಟ್ ಬ್ರಿಟನ್ ಮತ್ತು ಐರ‍್ಲೆಂಡ್‌ಗಳಲ್ಲಿದ್ದ ೩೦ ವರ್ಷಕ್ಕೆ ಮೇಲ್ಪಟ್ಟ ಎಲ್ಲ ಮಹಿಳೆಯರಿಗೂ ಸಂಪೂರ್ಣ ಮತ ಚಲಾವಣೆಯ ಅಧಿಕಾರವನ್ನು ಈ ಶಾಸನವು ನೀಡಿತು. ೧೯೨೮ ರಲ್ಲಿ ವಯೋಮಿತಿಯನ್ನು ೨೧ ವರ್ಷಕ್ಕೆ ಇಳಿಸಲಾಯಿತು. ಹೆಂಗಸರೂ ಗಂಡಸರಂತೆಯೇ ಅದೇ ಆಧಾರದ ಮೇಲೆ ಮತ ಚಲಾಯಿಸಿದರು.

ವೋಟು ದಪ್ಪಕ್ಷರದ ತಲೆಬರಹದ ಸುದ್ದಿಯಾಯಿತು. ಆದರೆ ಅದು ಸಮಾನತೆಗೆ ಮಹಿಳೆಯು ನಡೆಸುತ್ತಿದ್ದ ಹೋರಾಟದ ಆಂತರಂಗಿಕವಾದ ಆಧ್ಯಾತ್ಮಿಕ ಶಕ್ತಿಯ ಹೊರ ಸಂಕೇತವಾಗಿತ್ತು. ೨೦ನೆಯ ಶತಮಾನದಲ್ಲಿ ಗ್ರೇಟ್ ಬ್ರಿಟನ್ನಿನಲ್ಲಿ ವಿಶ್ವವಿದ್ಯಾನಿಲಯಗಳಿಗೆ, ವೈದ್ಯಕೀಯ, ಕಾನೂನು, ಎಂಜಿನಿಯರಿಂಗ್ ಶಾಲೆಗಳಿಗೆ, ವ್ಯಾಪಾರ, ವೃತ್ತಿಗಳಿಗೆ, ಕುಶಲ ಕಲೆಗಳು ಕಸುಬುಗಳಿಗೆ, ಇತರ ಹಲವು ತೆರನಾದ ವೃತ್ತಿಗಳಿಗೆ ಮಹಿಳೆಯರು ಲಗ್ಗೆಯಿಟ್ಟರು. ಎರಡು ಮಹಾಯುದ್ಧಗಳ ಸಮಯದಲ್ಲಿ ಮಹಿಳೆಯರು ನಿರ್ವಹಿಸಿದ ಬಹುಮುಖವಾದ ಸೇವೆಗಳಿಂದ, ಹೆಂಗಸು ಗಂಡಸಿಗೆ ಸಮ ಎಂಬ ತತ್ವವನ್ನು ಕುರಿತಾಗಿ ಇದ್ದ ಸಮಸ್ತ ಆಕ್ಷೇಪಣೆಗಳೂ ಕೊನೆಗೊಂಡವು.