ಚರಿತ್ರೆಯನ್ನು ಭೌಗೋಳಿಕ ಪರಿಸರ ಹಾಗೂ ಮಾನವ ಪರಿಸರಗಳ ನಡುವಿನ ಸಂಬಂಧಗಳ ಕಥನವಾಗಿ ನೋಡುವಾಗ ಗ್ರಾಮ, ನಗರ ಪರಿಸರ ಮುಂತಾದ ವಿಚಾರಗಳು ಮಹತ್ವದ್ದಾಗಿ ಕಂಡುಬರುತ್ತವೆ. ಮಾನವನ ವ್ಯವಸ್ಥಿತ ಬದುಕು ರೂಪುಗೊಂಡಿರುವುದೇ ಪ್ರಕೃತಿಯೊಂದಿಗೆ ಮುಖಾಮುಖಿಯಾದಾಗಿನಿಂದ. ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳು ಆಗುತ್ತಿದ್ದಂತೆ ಮಾನವ ಹಾಗೂ ಪ್ರಕೃತಿಯ ನಡುವಿನ ಸಂಬಂಧಗಳೂ ವ್ಯವಹಾರಿಕ ರೂಪ ಪಡೆಯುತ್ತಾ ಹೋದವು. ಅಭಿವೃದ್ಧಿ ಎನ್ನುವ ಪರಿಕಲ್ಪನೆ ಅವಸರದ ಅಥವಾ ಅತಿರೇಕದ ಮಾರ್ಗವನ್ನು ಹಿಡಿದಾಗ ಗ್ರಾಮ ಹಾಗೂ ನಗರಗಳ ನಡುವಿನ ಕೊಂಡಿ ಕಳಚಲಾರಂಭಿಸಿ ಸಂಬಂಧಗಳು ಅಸ್ಪಷ್ಟವಾಗಲಾರಂಭಿಸಿತು. ಈ ವಿಚಾರಗಳನ್ನು ಪ್ರಸ್ತುತ ಲೇಖನದ ಮೊದಲನೆಯ ಭಾಗದಲ್ಲಿ ಚರ್ಚಿಸಲಾಗಿದೆ. ನಗರೀಕರಣದ ಅರ್ಥ ಹಾಗೂ ಸ್ವರೂಪದ ಚರ್ಚೆಯನ್ನು ಇಲ್ಲಿ ಬೆಳೆಸಲಾಗಿದೆ. ನಗರ ಕೇಂದ್ರಗಳ ಉಗಮಕ್ಕೆ ಕಾರಣವಾದ ಹೆಚ್ಚುವರಿ ಉತ್ಪಾದನೆ, ಭೌಗೋಳಿಕ ಸನ್ನಿವೇಶ, ಆಡಳಿತಾತ್ಮಕ ಒತ್ತಡಗಳು, ಭೂಮಾಲಿಕ ವ್ಯವಸ್ಥೆ, ವ್ಯಾಪಾರ ಹಾಗೂ ವಾಣಿಜ್ಯ ಮುಂತಾದ ಅಂಶಗಳ ಕುರಿತು ಅಧ್ಯಯನವನ್ನು ಕೇಂದ್ರೀಕರಿಸಲಾಗಿದೆ. ಆಡಳಿತ, ವ್ಯಾಪಾರ, ವಾಣಿಜ್ಯ, ಶೈಕ್ಷಣಿಕ, ಧಾರ್ಮಿಕ ಮುಂತಾದ ನಾನಾ ಸ್ವರೂಪದ ನಗರ ಕೇಂದ್ರಗಳ ಉಗಮ ಹಾಗೂ ಸ್ಥಿತ್ಯಂತರಗಳ ಅಧ್ಯಯನವನ್ನು ಇಲ್ಲಿ ಕೈಗೊಳ್ಳುವ ಪ್ರಯತ್ನ ಮಾಡಲಾಗಿದೆ. ಕೈಗಾರಿಕಾ ಕ್ರಾಂತಿಯ ನಂತರ ನಗರ ಪ್ರದೇಶಗಳ ಸ್ವರೂಪದಲ್ಲಾದ ಬದಲಾವಣೆಗಳು ಕುತೂಹಲಕರ ಅಧ್ಯನಕ್ಕೆ ಎಡೆ ಮಾಡಿಕೊಡುತ್ತವೆ. ಪ್ರಪಂಚದ ನಾನಾ ದೇಶಗಳಿಗೆ ವಸಾಹತುಶಾಹಿಗಳ ಪ್ರವೇಶವಾದಂದಿನಿಂದ ನಗರ ಎನ್ನುವ ಪರಿಕಲ್ಪನೆ ಬಂಡವಾಳದ ಮೂಲಕ ನಿರ್ವಚನೆಗೊಳ್ಳಲಾರಂಭಿಸಿ ಹೊಸ ಬಗೆಯ ನಗರ ಸಂಸ್ಕೃತಿ ರೂಪುಗೊಳ್ಳಲಾರಂಭಿಸಿತು. ಈ ಪ್ರಕ್ರಿಯೆಯ ವಿವಿಧ ಆಯಾಮಗಳನ್ನು ಇಲ್ಲಿ ಪರಿಚಯಿಸಲಾಗಿದೆ.

ಲೇಖನದ ಎರಡನೆಯ ಭಾಗದಲ್ಲಿ ನಗರ ಚರಿತ್ರೆಯ ತಾತ್ವಿಕತೆಯ ಕುರಿತು ಚರ್ಚಿಸಲಾಗಿದೆ. ಚರಿತ್ರೆ ಅಧ್ಯಯನದಲ್ಲಿ ನಗರ ಚರಿತ್ರೆ ಎನ್ನುವ ಹೊಸ ಶಿಸ್ತು ಆರಂಭಗೊಂಡ ಬಗೆ ಹಾಗೂ ಚರಿತ್ರೆಕಾರರ ಅಧ್ಯಯನ ವಿಧಾನ ಹಾಗೂ ಸೈದ್ಧಾಂತಿಕ ನೆಲೆಗಳನ್ನು ಕುರಿತಂತೆ ವಿಶ್ಲೇಷಣೆ ನಡೆಸಲಾಗಿದೆ. ಯುರೋಪ್ ಕೇಂದ್ರಿತ ಅಧ್ಯಯನಗಳು ನಿರ್ಮಿಸಿದ ನಗರ ಚರಿತ್ರೆ ಜಾಗತಿಕ ನಿರೂಪಣೆಯಾಗಿದ್ದು, ಕೈಗಾರಿಕಾ ಬಂಡವಾಳದ ಮೂಲಕ ರೂಪುಗೊಂಡ ಆಧುನಿಕತೆಯ ಪ್ರಣಾಳಿಕೆಯಂತಿವೆ. ತಂತ್ರಜ್ಞಾನ ಕ್ಷೇತ್ರದಲ್ಲಾದ ಬದಲಾವಣೆ, ಕೈಗಾರಿಕಾ ಬಂಡವಾಳದ ಹುಟ್ಟು, ಹೊಸ ಪ್ರಯೋಗ ಹಾಗೂ ಆಲೋಚನೆಗಳ ಹಿನ್ನೆಲೆಯಲ್ಲಿ ನಗರ ಚರಿತ್ರೆ ರಚನೆಗೊಂಡಿತು. ಇವುಗಳ ಪ್ರಕಾರ ಕೈಗಾರಿಕಾಪೂರ್ವ ಅವಧಿ ಸಂಪ್ರದಾಯಸ್ಥ ಹಾಗೂ ಸ್ವತಂತ್ರ ಅಸ್ತಿತ್ವ ಇಲ್ಲದೇ ಇರುವ ಸ್ಥಿತಿ. ನಗರೀಕರಣ ಪ್ರಕ್ರಿಯೆಯ ವೈಭವೀಕರಣ ಹೆಚ್ಚಾದಂತೆಲ್ಲ ನಗರ ಸಮುದಾಯಗಳ ಬಹುಮುಖಿ ಚಟುವಟಿಕೆಗಳು, ರಾಜ್ಯ ನಿರ್ಮಾಣ ಪ್ರಕ್ರಿಯೆಯಲ್ಲಿ ನಗರಗಳು ವಹಿಸುತ್ತಿದ್ದ ಪಾತ್ರ, ವರ್ತಕ ಸಂಘ ನಿರ್ವಹಿಸುತ್ತಿದ್ದ ಕೆಲಸ-ಕಾರ್ಯಗಳು ಮುಂತಾದ ಮಹತ್ವದ ವಿಚಾರಗಳು ಅಂಚಿಗೆ ತಳ್ಳಲ್ಪಟ್ಟವು. ಮಾರ್ಕ್ಸ್‌ವಾದಿ ವಿಚಾರಧಾರೆಯ ಮೂಲಕ ರಚನೆಗೊಂಡ ಕೃತಿಗಳು ನಗರಗಳನ್ನು ಆರ್ಥಿಕ ಚರಿತ್ರೆಯ ಚೌಕಟ್ಟಿನಲ್ಲಿಟ್ಟು ವ್ಯಾಖ್ಯಾನಿಸಿದವು. ಇದು ನಗರ ಚರಿತ್ರೆ ಅಧ್ಯಯನಕ್ಕೆ ಹೊಸ ಆಯಾಮವೊಂದನ್ನು ಒದಗಿಸಿತು. ಈ ಪಂಥವು ನಗರಗಳನ್ನು ಪ್ರಾಕ್ಚಾರಿತ್ರಿಕ ಕಾಲದಿಂದ ಆಧುನಿಕ ಸಂದರ್ಭದವರೆಗೆ ದುಡಿಮೆಯ ತಾಣಗಳಾಗಿ ನೋಡುವುದರ ಮೂಲಕ ಜನರ ಚರಿತ್ರೆ ಎನ್ನುವ ಹೊಸ ಪರಿಕಲ್ಪನೆಯನ್ನು ಹುಟ್ಟುಹಾಕಿತು. ಆಧುನಿಕೋತ್ತರವಾದ ಹಾಗೂ ನವಚಾರಿತ್ರಿಕವಾದ ನಗರೀಕರಣದ ಅಖಂಡ ನಿರೂಪಣೆಯನ್ನು ನಿರಚಿಸಿ ನಗರಗಳ ಶ್ರೇಷ್ಠತೆಯ ಮುಖವಾಡವನ್ನು ಕಳಚಿತು. ಈ ಎಲ್ಲ ತಾತ್ವಿಕ ವಿಚಾರಗಳನ್ನು ನಗರ ಚರಿತ್ರೆ ಲೇಖನದ ಚೌಕಟ್ಟಿನಲ್ಲಿ ವಿಶ್ಲೇಷಿಸುವ ಪ್ರಯತ್ನವನ್ನು ಮಾಡಲಾಗಿದೆ.

ನಗರಗಳು ಪ್ರಾಚೀನ ಕಾಲದಿಂದಲೂ ನಾಗರಿಕ ಜೀವನದ ಸಂಕೇತವಾಗಿದ್ದರೂ ನಗರಗಳ ಬಗ್ಗೆ ಅಧ್ಯಯನ ಮಾಡುವುದು ಇತ್ತೀಚೆಗೆ ಬೆಳೆದುಬಂದಿರುವ ಶೈಕ್ಷಣಿಕ ಶಿಸ್ತು, ನಗರದ ನಿಜಾರ್ಥವನ್ನು ತಿಳಿಯಬೇಕಾಗಿದ್ದರೆ ಅದನ್ನು ಇತಿಹಾಸದ ಹಿನ್ನೆಲೆಯಿಂದಲೇ ಅಭ್ಯಸಿಸುವುದು ಸೂಕ್ತ. ಇತ್ತೀಚಿನ ದಿನಗಳಲ್ಲಿ ನಾವು ಕಂಡುಕೊಂಡ ವಿಷಯವೇನೆಂದರೆ, ನಗರದ ಇತಿಹಾಸವನ್ನು ಅಭ್ಯಾಸ ಮಾಡುವುದು ಒಂದು ಸಮಾಜದ ಸಾಮಾಜಿಕ ಮತ್ತು ಆರ್ಥಿಕ ದೃಷ್ಟಿಯಿಂದ ಪ್ರಾಮುಖ್ಯವಾದದ್ದು. ಮಾವನ ಜೀವನದ ವಿಕಾಸದಲ್ಲಿ ನಗರವು ಒಂದು ವಿಶಿಷ್ಟ ಹಂತ. ಮಾನವನು ತನ್ನ ಜೀವನ ಶೈಲಿಯಲ್ಲಿ ಎಷ್ಟು ಮಾರ್ಪಾಡು ಮಾಡಿಕೊಂಡಿದ್ದಾನೆಮಬುದನ್ನು ಇದು ತಿಳಿಸುತ್ತದೆ. ಮಾನವನ ನಾಗರಿಕತೆಯನ್ನು ರೂಪಿಸುವಲ್ಲಿ ನಗರದ ಪಾತ್ರವು ಮಿಶ್ರವಾದದ್ದಾಗಿದೆ. ಒಂದು ರೀತಿಯಲ್ಲಿ ನಗರವು ಮಾನವನನ್ನು ಹಳ್ಳಿ ಜೀವನದ ಸೀಮಿತ ನೆಲೆಯಿಂದ ಹಾಗೂ ಸಂಪ್ರದಾಯ ಪದ್ಧತಿಯ ಬಿಗಿಮುಷ್ಠಿಯಿಂದ ಸ್ವತಂತ್ರಗೊಳಿಸಿದೆ ಮತ್ತು ಆತನ ಜೀವನವನ್ನು ಶ್ರೀಮಂತಗೊಳಿಸಿದೆ ಎಂದು ವ್ಯಾಖ್ಯಾನಿಸಲು ಅವಕಾಶಗಳಿವೆ. ಇನ್ನೊಂದು ರೀತಿಯಲ್ಲಿ ನೋಡುವುದಾದರೆ ನಗರದ ಜೀವನವು ಮಾನವನನ್ನು ಯಾಂತ್ರಿಕ ಜೀವಿಯನ್ನಾಗಿಸಿದೆ ಹಾಗೂ ಮಾನವ ಸಂಬಂಧಗಳ ಗುಣಮಟ್ಟ ಹೆಚ್ಚು ಅವೈಯಕ್ತಿಕವಾಗಿಯೂ, ಔಪಚಾರಿಕವಾಗಿಯೂ ಮಾರ್ಪಾಡಾಗುವಂತೆ ರೂಪಿಸಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕೈಗಾರಿಕಾ ಕ್ರಾಂತಿ ಮತ್ತು ತಾಂತ್ರಿಕ ಕ್ರಾಂತಿಯ ಸಮಯದಲ್ಲೇ ಮಹತ್ವದ ನಗರ ಕ್ರಾಂತಿಯೂ ಆಗಿದೆ. ಮಿಲಿಯಗಟ್ಟಲೆ ಜನರು ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ವಲಸೆ ಬಂದರು. ಚಿಕ್ಕಪುಟ್ಟ ಪೇಟೆ-ಪಟ್ಟಣಗಳು ಬೃಹತ್ ನಗರಗಳಾಗಿ ಬೆಳೆದವು. ನಗರ ಪ್ರದೇಶಕ್ಕೆ ವಲಸೆ ಬಂದ ಜನರು ನಗರ ಕ್ರಾಂತಿಗೆ ತಮ್ಮನ್ನು ತಾವೇ ತೊಡಗಿಸಿಕೊಂಡರು. ಈ ರೀತಿಯ ಕ್ರಾಂತಿಕಾರಿ ಇಲ್ಲವೇ ಪ್ರಗತಿಯ ಬದಲಾವಣೆಯು ಸಾಮಾಜಿಕವಾಗಿ ಅಂಗವೈಕಲ್ಯ ಗೊಂಡ ನಾಗರಿಕತೆಯ ಉಗಮಕ್ಕೆ ನಾಂದಿಯಾಗುವುದು ಸಹಜ. ಇದು ಬದುಕನ್ನು ಯಾಂತ್ರಿಕ ಮತ್ತು ಕೃತಕವನ್ನಾಗಿಸುತ್ತದೆ. ನಗರ ಜೀವನವು ತನ್ನೆಲ್ಲಾ ಸ್ವಾರಸ್ಯವನ್ನು ಕಳೆದುಕೊಳ್ಳುತ್ತದೆ. ನಗರಗಳ ಸ್ವರೂಪದಲ್ಲಾಗುವ ಬದಲಾವಣೆ, ಜನಸಂಖ್ಯೆಯ ಒತ್ತಡ, ಬಡತನ, ನಿರುದ್ಯೋಗ, ಪರಿಸರ ಮಾಲಿನ್ಯ ಇವೇ ಮುಂತಾದ ಕಾರಣಗಳಿಂದಾಗಿ ಅಂಗವೈಕಲ್ಯಗೊಂಡ ಸಮಾಜದ ಸೃಷ್ಟಿಯಾಗುತ್ತದೆ.

ನಗರೀಕರಣದಲ್ಲಿ ಅಸ್ತವ್ಯಸ್ತತೆಗಳು, ಅಸಮತೋಲನಗಳು ಸಹಜವಾಗಿದ್ದರೂ, ನಮಗೆ ಗಾಬರಿಯನ್ನು ಹುಟ್ಟಿಸುತ್ತವೆ. ಅತಿರೇಕದ ನಗರೀಕರಣ ಅಂದರೆ ಸಾಕಷ್ಟು ಪೌರ ಸೌಲಭ್ಯಗಳಿಲ್ಲದೆ ಒಂದೆ ಸಮನೆ ಜನಸಂಖ್ಯೆ ಬೆಳೆಯುವುದು ಮತ್ತು ಅರೆನಗರೀಕರಣ ಅಂದರೆ ಸುತ್ತಲಿನ ಪ್ರದೇಶಗಳಲ್ಲೇ ಭೂಮಿಯನ್ನು ಕೃಷಿಯೇತರ ಕಾರಣಗಳಿಗೆ ಬಳಸುವುದು ಎಂದೇ ಅರ್ಥ. ಆಮೇಲೆ ನಗರ ಮಿತಿಯೊಳಕ್ಕೆ ಸೇರ್ಪಡೆಗೊಳಿಸುವುದು. ಇವು ಕೆಲವು ಗಂಡಾಂತರಗಳನ್ನು ಒಡ್ಡುತ್ತವೆ ಮತ್ತು ನಗರ ಜೀವನದ ಶಾಂತಿಯನ್ನು ಕದಡುತ್ತಲೇ ಇರುತ್ತವೆ. ಈ ಸಂಗತಿಯನ್ನು ನಾವು ಮರೆಯುವಂತಿಲ್ಲ. ವಾಸ್ತವವಾಗಿ ಈ ಪರಿಸ್ಥಿತಿ ಬೆಳೆದು ಒಂದು ದಿನ ಸ್ಫೋಟಕ ಮಟ್ಟ ತಲುಪಬಹುದು. ವ್ಯಾಪಾರ ವ್ಯವಹಾರದಲ್ಲಿ, ತಂತ್ರಜ್ಞಾನದಲ್ಲಿ, ವೈಜ್ಞಾನಿಕತೆಯಲ್ಲಿ ಸಾಕಷ್ಟು ಹೊಸತನವನ್ನು ಗಿಟ್ಟಿಸಿದರೂ ನಗರಜೀವನ ಮಾಲಿನ್ಯಕ್ಕೊಳಪಟ್ಟಿದೆ. ದಿಕ್ಕುದೆಸೆಯಿಲ್ಲದೆ ಪ್ರಗತಿ ಹೊಂದುತ್ತಿರುವ ನಮ್ಮ ನಗರಗಳನ್ನು ಕಂಡಾಗ ಮುಂದೆ ಬರಬಹುದಾದ ಸಮಸ್ಯೆಗಳಿಗೆ ಕಡಿವಾಣ ಹಾಕುವಷ್ಟು ನಾವು ಸಮರ್ಥರೇ ಎನ್ನುವ ಭೀಕರವಾದ ಸಮಸ್ಯೆ ನಮ್ಮ ಮುಂದೆ ಎದುರಾಗುತ್ತದೆ. ಮುಂದುವರಿದ ರಾಷ್ಟ್ರಗಳ ನಗರಗಳು ಆರ್ಥಿಕ ಪ್ರಗತಿಯ ಸಾಧನಗಳಾಗಿವೆ. ಮುಂದುವರಿಯುತ್ತಿರುವ ರಾಷ್ಟ್ರಗಳ ನಗರಗಳು ವಸಾಹತುಶಾಹಿ ಆಳ್ವಿಕೆಯ ಶೋಷಣೆಗೆ ಬುನಾದಿಗಳಾಗಿವೆ. ಈ ಸಂಗತಿಗಳನ್ನು ನಾವು ಮರೆಯುವಂತಿಲ್ಲ ಹಾಗೂ ಈಗ ಅವುಗಳ ಬೆಳವಣಿಗೆಯು ಕುಂಟುತ್ತಾ ಸಾಗುತ್ತಿವೆ. ಇವು ಇತಿಹಾಸದಲ್ಲಿ ಮಹತ್ವದ ಪರೀಕ್ಷೆಗಳನ್ನು ಎದುರಿಸುತ್ತವೆ. ಸಂಪ್ರದಾಯದ ಚೌಕಟ್ಟನ್ನು ಮುರಿದು ಹೊರಬರಲು ಪ್ರಯತ್ನಿಸುವ ಮಾನವ ನಗರ ವ್ಯವಸ್ಥೆಯ ಅವ್ಯವಸ್ಥೆಯಲ್ಲಿ ಭಾಗಿಯಾಗಿ ತನ್ನ ಕೊಡುಗೆಯನ್ನು ನೀಡುತ್ತಾ ಬಂದಿದ್ದಾನೆ. ಇದರಿಂದಾಗಿ ಭ್ರಮನಿರಸನಗೊಂಡ ಸಮಾಜದ ಸೃಷ್ಟಿಯಾಗುತ್ತದೆ. ನಾವು ಇಲ್ಲಿಗೆ ಬಂದದ್ದು ನಗುವುದಕ್ಕೂ ಅಥವಾ ಅಳುವುದಕ್ಕೊ? ನಾವು ಸಾಯುತ್ತಿದ್ದೇವೆಯೊ ಅಥವಾ ಹುಟ್ಟುತ್ತಿದ್ದೇವೆಯೊ ಒಂದೂ ಅರಿಯದ ಕಲ್ಪನಾ ಲೋಕದಲ್ಲಿ ಮಾನವ ಯಾಂತ್ರಿಕವಾಗಿ ಹುಟ್ಟುತ್ತಿರುತ್ತಾನೆ ಮತ್ತು ಸಾಯುತ್ತಿರುತ್ತಾನೆ. ತನ್ನ ಗೋರಿಯನ್ನು ತಾನೇ ನಿರ್ಮಿಸುತ್ತಾನೆ ಎಂದರೂ ತಪ್ಪಾಗಲಾರದು. ಇದು ಆಧುನಿಕ ನಗರೀಕರಣದ ಸಮಸ್ಯೆಗಳಲ್ಲಿ ಕೆಲವು. ಇವನ್ನು ಹಲವು ನೆಲೆಗಳಲ್ಲಿ ವ್ಯಾಖ್ಯಾನಿಸಿಕೊಳ್ಳುವ ಅಗತ್ಯ ಇದೆ.

ಮಾನವ ಸ್ಥಿತಿಗತಿಗಳಿಗೆ ಸಂಬಂಧಿಸಿದಂತೆ ಜಗತ್ತನ್ನು ಅಖಂಡಗೊಳಿಸುವಲ್ಲಿ ಜಾಗತಿಕ ಸ್ವರೂಪದ ಔದ್ಯೋಗೀಕರಣಗಳು ಈ ಹೊತ್ತು ನಮ್ಮ ಮುಂದಿವೆ. ಪಟ್ಟಣಗಳು ಮತ್ತು ನಗರಗಳು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿವೆಯಾದರೂ ಇಂದು ಅವುಗಳ ಸ್ವರೂಪವು ಅಂದಿಗಿಂತಲೂ ವಿಭಿನ್ನ ಬಗೆಯವು ಆಗಿವೆ. ಜಗತ್ತಿನ ಜನಸಂಖ್ಯೆಯಲ್ಲಿ ಇಂದು ನಗರವಾಸಿಗಳ ಶೇಕಡಾವಾರು ಪ್ರಮಾಣವು ಗಣನೀಯವಾಗಿ ಹೆಚ್ಚಿದೆ. ಇಷ್ಟೊಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ನಗರಗಳಲ್ಲೇ ಜೀವಿಸುತ್ತ್ತಿರುವುದು ಮಾನವ ಇತಿಹಾಸದಲ್ಲಿ ಎಂದೂ, ಎಲ್ಲಿಯೂ ಕಂಡುಬಾರದ ಸಂಗತಿಯಾಗಿದೆ. ಇದು ಐತಿಹಾಸಿಕವಾಗಿ ನಾವು ಗಮನಿಸಬೇಕಾದ ಸಂಗತಿ. ಇಂದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ನಗರೀಕರಣ ಪ್ರಕ್ರಿಯೆಯು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗಿಂತ ತೀವ್ರ ಚುರುಕಾಗಿದೆ. ನಗರೀಕರಣವು ಅನೇಕ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ನೈತಿಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆಯಾದರೂ, ಅದು ಪ್ರತಿಯೊಂದು ಸಮಾಜದ ಬೆಳವಣಿಗೆಯ ಅವಶ್ಯಕ ಲಕ್ಷಣವಾಗಿದೆ. ನಗರವು ರಾಷ್ಟ್ರದ ಪ್ರಗತಿಯ ಸೂಚಿಯಾಗಿದೆ ಎಂಬುದು ಇತಿಹಾಸದಿಂದ ತಿಳಿದುಬರುವ ಸಂಗತಿ. ಆದರೆ ನಗರಗಳು, ರಾಷ್ಟ್ರದ ನರನಾಡಿಗಳಂತೆ ಇಂದು ಕಾರ್ಯನಿರ್ವಹಿಸುತ್ತವೆ. ಪ್ರತಿಯೊಂದು ರಾಷ್ಟ್ರದ ಇತಿಹಾಸದಲ್ಲಿ ನಗರಗಳ ಪಾತ್ರ ಹಿರಿದಾದುದು. ಅದನ್ನು ನಾವು ಮರೆಯುವಂತಿಲ್ಲ. ಪ್ರಪಂಚದ ಎಲ್ಲ ನಗರಗಳಲ್ಲೂ ಕಣ್ಣಿಗೆ ಬಡಿದು ತೋರುವ ಗುಣ ವಿಶೇಷಗಳೆಂದರೆ, ಭಿನ್ನರೂಪತೆ, ಮಿತ ಸ್ವರೂಪದ ಸಾಮಾಜಿಕ ಸಂಪರ್ಕಗಳು, ಸ್ವಯಂ ಪ್ರೇರಿತ ಸಂಘ, ಅವೈಯಕ್ತಿಕತೆ, ನೈತಿಕತೆಯ ಶೈಥಿಲ್ಯ ಇತ್ಯಾದಿಗಳೇ ಆಗಿವೆ. ನಗರಗಳಲ್ಲಿ ಅವು ಇಟ್ಟುಕೊಂಡಿರುವ ಸಾಮಾಜಿಕ ಸಂಬಂಧಗಳು ಅನೇಕವೂ, ವೈವಿಧ್ಯಮಯವೂ ಆಗಿವೆ. ಅವುಗಳು ಸಾಮಾನ್ಯವಾಗಿ ಔಪಚಾರಿಕ ಸ್ವರೂಪದವುಗಳಾಗಿವೆ. ಇದನ್ನು ನಾವು ಮರೆಯುವಂತಿಲ್ಲ.

ನಗರ ನಾಗರಿಕತೆಯು ಮಾನವನಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನುಂಟು ಮಾಡಿದೆ. ಈ ಬದಲಾವಣೆಯನ್ನು ಒತ್ತಾಯಿಸುವ ಶಕ್ತಿಗಳು ವಿವಿಧ ರೂಪಗಳಲ್ಲಿ ನಮ್ಮೊಡನೆ ಸಂವರ್ಧಿಸಿವೆ. ಅವುಗಳು ಒಂದರೊಳಗೊಂದು ಮೇಳೈಸಿ ಪ್ರತ್ಯೇಕಿಸಲು ಬಾರದ ರೀತಿಯಲ್ಲಿ ಸಂಕೀರ್ಣ ಸ್ವರೂಪವನ್ನು ತಳೆದಿವೆ. ಅವುಗಳ ಒಲವುಗಳು ಇಂತಹದೇ ನಿರ್ದಿಷ್ಟ ಪರಿಣಾಮಗಳನ್ನು ಬೀರಬಹುದೆಂಬುದನ್ನು ಭವಿಷ್ಯೋಕ್ತಿಯಾಗಿ ನಿರ್ಧರಿಸುವುದು ಇಂದು ಕಷ್ಟಕರವಾಗಿದೆ. ಹೀಗಾಗಿ ನರಗಳ ಅಧ್ಯಯನವು ಕ್ಲಿಷ್ಟ ವಿಷಯವನ್ನೊಳಗೊಂಡಿವೆ. ನಗರ ವ್ಯವಸ್ಥೆ ವಿಭಿನ್ನ ಸ್ವರೂಪದ ಮಾನವ ಬದುಕಿನ ಮತ್ತು ದುಡಿಮೆಯ ತಾಣ ಮತ್ತು ನಿರಂತರತೆಯನ್ನೊಳಗೊಂಡ ಸಂಘಟಿತ ಸಮಾಜವಾಗಿದೆ. ನಗರ ಜೀವನದ ಸಂಕೀರ್ಣತೆ ಮತ್ತು ತೋರಿಕೆಯಲ್ಲಿ ಕಂಡುಬರುವ ಅಸ್ತವ್ಯಸ್ತತೆಯ ಮಧ್ಯೆ ಸಂಘಟನೆ ಎದುರಿಗೆ ಇದೆ. ನಗರ ಜೀವನದ ಈ ಎಲ್ಲ ಸಂಕೀರ್ಣ ಹಾಗೂ ಬಹುರೂಪಿ ಮುಖಗಳು ಇತಿಹಾಸದ ಬೆಳವಣಿಗೆಯ ಗತಿಯನ್ನು ನಿರ್ಧರಿಸುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ. ನಗರಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಅವು ವಾಸಕ್ಕೋಸ್ಕರ ಜನಸಂದಣಿಯು ಹಂಚಿಕೆ ಮಾಡಿಕೊಂಡಿರುವ ತಾಣ ಮಾತ್ರವಾಗಿಲ್ಲ ಎಂಬುದು ವೇದ್ಯವಾಗುತ್ತದೆ. ಇದನ್ನು ಹಲವು ರೀತಿಯಲ್ಲಿ ವ್ಯಾಖ್ಯಾನಿಸಲು, ಅಧ್ಯಯನ ಮಾಡಲು ದಾರಿಗಳಿವೆ. ಅವುಗಳ ಒಂದು ಮಗ್ಗುಲನ್ನು ಈಗ ನೋಡೋಣ.

ಇತಿಹಾಸದಲ್ಲಿ ನಗರಗಳ ಬಗ್ಗೆ ನಾವು ಅಧ್ಯಯನ ಮಾಡುವಾಗ ನಾಗರೀಕರಣ, ನಗರತ್ವ, ಔದ್ಯೋಗೀಕರಣ, ನಗರ ಸಮಾಜ, ನಗರ ಸಂಸ್ಕೃತಿ, ನಗರಾಡಳಿತ, ನಗರ ಯೋಜನೆ, ಕಾರ್ಮಿಕ ಸಮಸ್ಯೆಗಳು ಮುಂತಾದ ಅನೇಕ ವಿಷಯಗಳ ಬಗ್ಗೆ ಚರ್ಚಿಸಬೇಕಾಗುತ್ತದೆ. ವಿಶ್ವವಿದ್ಯಾನಿಲಯಗಳು, ನಗರ ಯೋಜನಾ ಪ್ರಾಧಿಕಾರಗಳು ನಗರಗಳ ಬಗ್ಗೆ ಸಂಶೋಧನಾತ್ಮಕ ಸಮೀಕ್ಷೆಗಳನ್ನು ಕೈಗೊಂಡು ನಗರಗಳ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಶಾಂತಿ, ಸುಭದ್ರತೆ, ನಿಶ್ಚಿಂತತೆಯ ಅನಿಸಿಕೆ, ಸುವ್ಯವಸ್ಥೆ ನೆಲೆಗೊಳ್ಳಲಾರದು. ನಗರಗಳಲ್ಲಿ ಸಂಘಟನೆ, ವಿಘಟನೆ, ಸಂಘರ್ಷ ಮತ್ತು ಹೊಂದಾಣಿಕೆಗಳು ಸರ್ವೇಸಾಮಾನ್ಯವಾಗಿದ್ದರೂ, ಇವು ನಗರಗಳ ಸ್ವರೂಪವನ್ನೇ ಬದಲಾಯಿಸಬಲ್ಲವು. ನಗರಗಳು ನಿತ್ಯ ಪರಿವರ್ತನೆಗೆ ಒಳಗಾಗುವುದರಿಂದ ನಗರ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಆದರೆ, ನಗರಗಳನ್ನು ತನ್ನ ಪಾಡಿಗೆ ತಾನು ಬೆಳೆಯಲು ಬಿಟ್ಟರೆ ಅದು ಅಸ್ತವ್ಯಸ್ತ ರೀತಿಯಲ್ಲಿ ಬೆಳೆಯಬಹುದು. ಭಾರತದ ಮುಂಬಯಿ, ಕಲ್ಕತ್ತಾ, ದೆಹಲಿಗಳು, ಅಮೆರಿಕಾದ ಸ್ಯಾನ್‌ಫ್ರಾನ್ಸಿಸ್ಕೊ, ರಷ್ಯಾದ ಲೆನಿನ್‌ಗ್ರಾಡ್ ಇಂಥವೇ ಹಲವಾರು ನಗರಗಳು ಉದಾಹರಣೆಗಳಾಗಿ ನಮ್ಮ ಮುಂದಿವೆ. ನಗರಗಳನ್ನು ಅಪೇಕ್ಷಿತ ರೀತಿಯಲ್ಲಿ ಯೋಜನಾಬದ್ಧವಾಗಿ ನಿಯಂತ್ರಿಸುವ ಅವಶ್ಯಕತೆ ಇದೆ. ನಗರದ ದೀರ್ಘಕಾಲೀನ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು ದೂರದೃಷ್ಟಿತ್ವದ ಆಲೋಚನೆಯಿಂದ ಕೂಡಿದ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಈ ಹೊತ್ತು ಇದು ಅನಿವಾರ್ಯ ಮಾತ್ರವಲ್ಲ ಅದು ಅಗತ್ಯ ಕೂಡಾ.

ನಗರ ಜೀವನದ ಗುಣ ವಿಶೇಷಗಳು ಜಗತ್ತಿನ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಭಿನ್ನವಾಗಿರುತ್ತವೆ. ಒಂದೇ ಪ್ರದೇಶದಲ್ಲಿರುವ ನಗರಗಳಲ್ಲಿಯೂ ಹಲವು ಬಗೆಯ ಭಿನ್ನತೆಗಳು ಇರುವುದು ಕಂಡುಬರುತ್ತದೆ. ಈ ಭಿನ್ನತೆಗಳು ಸಾಂಸ್ಕೃತಿಕ ವ್ಯತ್ಯಾಸಗಳಾಗಿದ್ದರೆ ಅವುಗಳು ಅಪೇಕ್ಷಿತ ವೈವಿಧ್ಯಗಳಾಗುತ್ತವೆ. ತಂತ್ರಜ್ಞಾನ, ಆರ್ಥಿಕತೆ, ಸಂಘಟನೆ ಮತ್ತು ಆಡಳಿತ ವಿಷಯಗಳಲ್ಲಿ ಕೂಡಾ ನಗರತ್ವವು ಜಾಗತಿಕ ಸಾದೃಶ್ಯಗಳ ನಿಟ್ಟಿನಲ್ಲಿ ಮುಂದುವರಿಯುತ್ತಿದ್ದು, ಇಂತಹ ಸಾದೃಶ್ಯಗಳು ಜೀವನ ಮಟ್ಟಗಳನ್ನು ಎತ್ತರಿಸುವಲ್ಲಿ ನೆರವಾಗುತ್ತಿವೆ. ಇಷ್ಟೇ ಅಲ್ಲದೆ, ವಿಭಿನ್ನ ನಗರ ಪ್ರದೇಶಗಳ ಸಾಂಸ್ಕೃತಿಕ ಹೆಚ್ಚುಗಾರಿಕೆ ಅಥವಾ ವೈಶಿಷ್ಟಯ ವೈವಿಧ್ಯತೆಗಳಿಗೆ ಮಾರಕಪ್ರಾಯವಾಗುವುದಿಲ್ಲ. ಆದಕಾರಣ ಇಂತಹ ಬೆಳವಣಿಗೆಯು ಅಪೇಕ್ಷಿತವೂ, ಸ್ವಾಗತಾರ್ಹವೂ ಆಗಿದೆ. ಮಾನವ ಸ್ಥಿತಿಗತಿಗಳಿಗೆ ಸಂಬಂಧಿಸಿದಂತೆ ಜಗತ್ತನ್ನು ಅಖಂಡಗೊಳಿಸುವಲ್ಲಿ ಜಾಗತಿಕ ಸ್ವರೂಪದ ನಗರತ್ವ ನೆರವಾಗಿದೆ. ಜಾಗತಿಕ ನಗರೀಕರಣದ ಒಟ್ಟು ಸ್ವರೂಪ ಅಂದರೆ, ನಗರ ಯೋಜನೆ, ನಗರ ಸಿದ್ಧಾಂತ, ನಗರ ಆಡಳಿತ, ನಗರ ಸಂಪನ್ಮೂಲ, ನಗರ ಸಂಬಂಧ, ನಗರ ಬೆಳವಣಿಗೆಯ ಹಂತಗಳೇ. ಇಂದು ಇವೆಲ್ಲಾ ಮೂಲಭೂತ ಪ್ರಾಮುಖ್ಯವುಳ್ಳವಾಗಿವೆ. ಇವು ಒಂದು ದೇಶದಿಂದ ಇನ್ನೊಂದಕ್ಕೆ ಭಿನ್ನವಾಗಿದ್ದರೂ ನಗರೀಕರಣದ ಮೂಲ ಸ್ವರೂಪದಲ್ಲಿ ಹೊಂದಾಣಿಕೆ ಇರುವುದನ್ನು ನಾವು ಕಾಣಬಹುದು.

ಸಾಂಪ್ರದಾಯಿಕ ಪಟ್ಟಣಗಳು ಗ್ರಾಮೀಣ ಪ್ರದೇಶದ ಲಕ್ಷಣಗಳನ್ನು ಹೊಂದಿರುತ್ತವೆ. ಭಾರತದ ನಗರೀಕರಣದ ಸಂದರ್ಭದಲ್ಲಿ ಈ ಅಂಶವನ್ನು ಗಮನಿಸಬಹುದು. ಗ್ರಾಮೀಣ ಪ್ರದೇಶ ಹಾಗೂ ಸಾಂಪ್ರದಾಯಿಕ ಪಟ್ಟಣಗಳ ಸಾಮ್ಯತೆಯನ್ನು ಸರಳೀಕರಣಗೊಳಿಸುವ ಪ್ರಯತ್ನವೂ ಇಂದು ಅಧ್ಯಯನದಲ್ಲಿ ನಡೆದಿದೆ. ಆಧುನಿಕ ನಗರೀಕರಣದ ಪ್ರಭಾವ ಸಾಂಪ್ರದಾಯಿಕ ನಗರೀಕರಣದ ಮೇಲೆ ಆದಾಗ ಅದು ಕೆಲವೊಂದು ಎಡವಟ್ಟುಗಳಿಗೆ ಕಾರಣವಾಗುತ್ತದೆ ಮತ್ತು ಹೊಸತನವನ್ನು ಪ್ರತಿಬಿಂಬಿಸುತ್ತದೆ. ಎರಡೂ ಬಗೆಯ ಕಾರಣಗಳಿಗೂ ಅವಕಾಶವಗಳಿವೆ. ಇಲ್ಲಿ ನಾವು ಸಾಂಪ್ರದಾಯಿಕ ನಗರದಲ್ಲಿನ ದ್ವಂದ್ವವನ್ನು ಕಾಣಬಹುದು. ಈ ರೀತಿಯ ಬದಲಾವಣೆಯಾದಾಗ ನಗರೀಕರಣವು ಹೊಸ ನಗರದ ವ್ಯವಸ್ಥೆಗೂ ಕಾರಣವಾಗುತ್ತದೆ. ಸಾಂಪ್ರದಾಯಿಕ ಪಟ್ಟಣಗಳಿಗೆ ಆಧುನಿಕತೆಯ ಸೋಂಕು ತಗಲಿದಾಗ ಉಂಟಾಗುವ ಮಾರ್ಪಾಡುಗಳು ಸಾಂಪ್ರದಾಯಿಕ ನಗರಗಳ ಅವನತಿಗೆ ಕಾರಣವಾಗುವುದಿಲ್ಲ. ಇದನ್ನು ನಾವು ಮೊದಲು ತಿಳಿಯಬೇಕು. ಆದರೆ ಇಲ್ಲಿ ಅವನತಿಯನ್ನು ಕಾಣುವುದು ಸಾಂಪ್ರದಾಯಿಕ ಎನ್ನುವ ವ್ಯವಸ್ಥೆ ಮಾತ್ರ. ಆದರೂ ಹಲವು ನಗರಗಳ ಮೂಲಭಾಗಗಳಲ್ಲಿ ಕೆಲವು ಹೊಂದಾಣಿಕೆ, ಅಳವಡಿಕೆಗಳೊಂದಿಗೆ ಸಾಂಪ್ರದಾಯಿಕ ಜೀವನ ವಿಧಾನವೇ ನಡೆಯುತ್ತಿದೆ.

ನಗರಗಳ ಬೆಳವಣಿಗೆಯು ಒಂದು ಸಂಕೀರ್ಣ ಪ್ರಕ್ರಿಯೆ ಎಂದು ಈ ಹಿಂದೆ ಹೇಳಿದೆ. ಒಂದು ಸಮಾಜ ನಾಗರಿಕ ಜೀವನಕ್ರಮದತ್ತ ಪ್ರಗತಿ ಹೊಂದುವ ಸಂಕೇತ. ಯಾವುದೇ ಸರಳ ಮತ್ತು ಬೇರ್ಪಟ್ಟ ವ್ಯಾಖ್ಯಾನಗಳಿಂದ ನಗರಗಳ ಬೆಳವಣಿಗೆಯನ್ನು ವಿಶ್ಲೇಷಿಸುವುದು ಕಷ್ಟ ಸಾಧ್ಯ. ಹಳ್ಳಿಗಾಡಿನ ಜನಜೀವನದ ರೀತಿ ನೀತಿಗಳ ಮೇಲಣ ನಗರದ ಜೀವನಕ್ರಮದ ಪರಿಣಾಮ, ಪ್ರಭಾವ ಮತ್ತು ಬದಲಾವಣೆಗಳನ್ನು ನಗರೀಕರಣ ಪದ ಸೂಚಿಸುತ್ತದೆ. ಗ್ರಾಮೀಣ ಪ್ರದೇಶ ಪಟ್ಟಣವಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಯನ್ನು ನಗರೀಕರಣವೆಂದು ಕರೆಯಬಹುದು. ಈ ಪ್ರಕ್ರಿಯೆಯಿಂದಾಗಿ ನಗರತ್ವ ರೂಪುಗೊಳ್ಳುತ್ತದೆ. ನಗರದ ಜೀವನ ಕ್ರಮವನ್ನು ನಾವು ಸಧ್ಯಕ್ಕೆ ನಗರತ್ವ ಎಂಬ ನೆಲೆಯಲ್ಲಿ ವ್ಯಾಖ್ಯಾನಿಸಬಹುದು. ಇದೊಂದು ವಿಶೇಷ ಪರಿಕಲ್ಪನೆಯಾಗಿದ್ದು, ನಗರ ಜೀವನ ಮಾದರಿಯನ್ನು ಸಂಕೇತಿಸುತ್ತದೆ. ನಗರ ಜೀವನದ ವೈವಿಧ್ಯತೆ, ಭಿನ್ನರೂಪತೆ, ನಗರವಾಸಿಗಳ ಪರಸ್ಪರ ಅವಲಂಬನೆಯಲ್ಲಿಯ ಹೆಚ್ಚಳ, ವೈಚಾರಿಕತೆ ಪ್ರಧಾನ ಜೀವನ, ಸಾಮಾಜಿಕ ಸಂಬಂಧಗಳಲ್ಲಿಯ ಪ್ರತ್ಯೇಕತೆ ಮೊದಲಾದ ನಗರ ಜೀವನ ಶೈಲಿಯ ಪ್ರಧಾನ ಗುಣ ವಿಶೇಷಗಳನ್ನು ನಗರತ್ವ ಪರಿಕಲ್ಪನೆಯು ಒಳಗೊಳ್ಳುತ್ತದೆ. ನಗರೀಕತಣವು ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ನಗರ ಬೆಳವಣಿಗೆಯ ಹೊರನೋಟದ ಮುಖಗಳನ್ನು ಸಂಕೇತಿಸಿದರೆ, ನಗರತ್ವವು ನಗರ ಬೆಳವಣಿಗೆಯ ಒಳನೋಟವನ್ನು ಸಂಕೇತಿಸುತ್ತದೆ.

ನಗರೀಕರಣವು ಪ್ರಪಂಚದ ಯಾವುದೇ ಭಾಗದಲ್ಲಿ ಆಗುತ್ತಿದ್ದರೂ ಅದು ಅಲ್ಲಿನ ಸಾಮಾಜಿಕ, ರಾಜಕೀಯ, ಆರ್ಥಿಕ, ಭೌಗೋಳಿಕ ಮತ್ತು ಧಾರ್ಮಿಕ ಅಂಶಗಳಿಂದ ಪ್ರೇರೇಪಣೆಗೊಂಡಿರುತ್ತದೆ. ಯಾವುದೇ ಒಂದು ಅಂಶ ಸ್ವತಂತ್ರವಾಗಿ ಒಂದು ಹಳ್ಳಿ ಪ್ರದೇಶ ನಗರಕೇಂದ್ರವಾಗಿ ಪರಿವರ್ತನೆಗೊಳ್ಳುವುದಕ್ಕೆ ಪೂರಕವಾಗಲಾರದು. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಕರು ಹೆಚ್ಚುವರಿ ಸಂಪತ್ತನ್ನು ಉತ್ಪಾದಿಸದಿದ್ದರೆ ಹೊಸ ರಾಜಕೀಯ ವ್ಯವಸ್ಥೆ ರೂಪುಗೊಳ್ಳುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಈ ರಾಜಕೀಯ ವ್ಯವಸ್ಥೆ ಹೆಚ್ಚುವರಿ ಸಂಪತ್ತು ನಗರ ಪ್ರದಶಗಳಿಗೆ ಸರಿಯಾದ ರೀತಿಯಲ್ಲಿ ಹರಿದು ಬರುವುದಕ್ಕೆ ಮತ್ತು ಅದರ ಹಂಚಿಕೆ ಮರುಹಂಚಿಕೆಗೆ ಸಹಕಾರಿಯಾಗುತ್ತದೆ. ಇದು ಅಶಾಂತಿ ಮತ್ತು ಅರಾಜಕತೆ ತಲೆದೋರದಂತೆ ತಡಗಟ್ಟುತ್ತದೆ. ಇನ್ನೊಂದು ಅವಶ್ಯಕವಾದ ಅಂಶ ವ್ಯಾಪಾರ ವರ್ಗ. ಇವರು ವ್ಯಾಪಾರ ವಸ್ತುಗಳು ಒಂದು ಪ್ರದೇಶದಿಂದ ಇನ್ನೊಂದೆಡೆಗೆ ವರ್ಗಾವಣೆ ಹೊಂದುವುದಕ್ಕೆ ಮುಖ್ಯ ಕಾರಣರು. ಇದರಿಂದಾಗಿ ಆರ್ಥಿಕ ಸ್ಥಗಿತ ಉಂಟಾಗಲಾರದು. ಆದ್ದರಿಂದ ಈ ಮೂರು ಅಂಶಗಳು ನಗರಗಳ ಬೆಳವಣಿಗೆಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತವೆ. ನಗರ ಕೇಂದ್ರಗಳ ಉಗಮಕ್ಕೆ ಕಾರಣವಾದ ಕೆಲವೊಂದು ಅಂಶಗಳನ್ನು ಇಲ್ಲಿ ಚರ್ಚಿಸಬೇಕಾಗುತ್ತದೆ.

ಪ್ರಥಮವಾಗಿ ಮೂಲಭೂತವಾದ ಅಂಶವೆಂದರೆ ಹೆಚ್ಚುವರಿ ಆಹಾರದ ಉತ್ಪಾದನೆ. ನಗರ ಕೇಂದ್ರಗಳು ಹುಟ್ಟಿಕೊಂಡಿದ್ದೇ ಕೃಷಿಕರು ಹೆಚ್ಚುವರಿ ಉತ್ಪಾದನೆ ಆರಂಭಿಸಿದಾಗಿನಿಂದ. ಈ ಹೆಚ್ಚುವರಿ ಉತ್ಪಾದನೆಯು ಜನರ ತಾಂತ್ರಿಕತೆಯನ್ನು ಅವಲಂಬಿಸಿಕೊಂಡಿದೆ. ಬ್ರೂಸ್ ಟ್ರಿಗರ್‌ರವರ ಪ್ರಕಾರ ನಗರದಲ್ಲಿ ಜೀವಿಸುತ್ತಿರುವವರಲ್ಲಿ ಕೆಲವರು ತಾತ್ಕಾಲಿಕ ಅಥವಾ ಅರೆಕಾಲಿಕ ನೆಲೆಯಲ್ಲಿ ನಗರಗಳ ಆಸುಪಾಸಿನ ಪರಿಸರದಲ್ಲಿ ಆಹಾರ ಉತ್ಪಾದನೆಯಲ್ಲಿ ತೊಡಗುತ್ತಿದ್ದರು. ಆದರೆ ಟ್ರಿಗರ್‌ರವರು ಅಭಿಪ್ರಾಯಪಡುವಂತೆ, ಇದು ಸಂಪ್ರದಾಯ ನಗರಗಳಿಗೆ ಸಂಬಂಧಪಟ್ಟದ್ದು ಎನ್ನುವುದು ಮನವರಿಕೆಯಾಗುತ್ತದೆ. ನಗರಗಳು ಆಹಾರ ಉತ್ಪಾದನೆಯಲ್ಲಿ ತೊಡಗುತ್ತಿರಲಿಲ್ಲ. ಅವು ಕರಕುಶಲ, ಕೈಗಾರಿಕಾ ಮತ್ತು ವ್ಯಾಪಾರದಲ್ಲಿ ತೊಡಗುತ್ತಿದ್ದವು. ನಗರವಾಸಿಗಳು ಆಹಾರವನ್ನು ಹಳ್ಳಿಗರಿಂದ ಖರೀದಿಸುತ್ತಿದ್ದರು. ಅದಕ್ಕೆ ಬದಲಾಗಿ ಸಿದ್ಧಪಡಿಸಿದ ವಸ್ತುಗಳನ್ನು ಮತ್ತು ಉದ್ಯೋಗಾವಕಾಶವನ್ನು ಹಳ್ಳಿಗರಿಗೆ ಒದಗಿಸುತ್ತಿದ್ದರು. ಇದರಿಂದಾಗಿ ನಗರವಾಸಿಗಳಿಗೆ ಬೇಕಾದ ಆಹಾರ ಮತ್ತು ಕೃಷಿಕರಿಗೆ ಬೇಕಾದ ಉಪಕರಣಗಳು ಲಭ್ಯವಾಗುತ್ತಿದ್ದರು. ಈ ರೀತಿಯ ಆತ್ಮೀಯ ಮತ್ತು ನೇರ ಸಂಪರ್ಕ ಗ್ರಾಮ ಮತ್ತು ನಗರ ಜೀವನದ ಕೊಂಡಿಯನ್ನು ಬಲಪಡಿಸುತ್ತಿತ್ತು. ಇದು ಒಂದು ಮುಖವಾದರೆ ಇದರ ಇನ್ನೊಂದು ಮುಖವನ್ನೂ ನಾವು ಕಾನಬಹುದು. ಚೀನಾ ದೇಶದ ಇತಿಹಾಸವನ್ನು ನೋಡಿದಾಗ ಅಲ್ಲಿನ ಸಾಂಪ್ರದಾಯಿಕ ನಗರ ಕೇಂದ್ರಗಳು ತಮ್ಮ ಬಲಪ್ರಯೋಗಿಸಿ ಗ್ರಾಮೀಣ ಪ್ರದೇಶದಿಂದ ಆಹಾರವನ್ನು ದೋಚುತ್ತಿದ್ದವು ಮತ್ತು ಹಳ್ಳಿಗಳನ್ನು ಶೋಷಿಸುತ್ತಿದ್ದವು. ಅತಿಯಾದ ತೆರಿಗೆಯ ರೂಪದಲ್ಲಿಯೂ ಆಹಾರವನ್ನು ಸಂಪಾದಿಸುತ್ತಿದ್ದರು. ಮುಖ್ಯವಾಗಿ ಇದರಲ್ಲಿ ಸರಕಾರಿ ಅಧಿಕಾರಿಗಳು, ಸೈನಿಕರು, ಜಮೀನ್ದಾರರು ಶಾಮೀಲಾಗುತ್ತಿದ್ದರು.

ನಗರ ಕೇಂದ್ರಗಳ ಉಗಮಕ್ಕೆ ಭೌಗೋಳಿಕ ಸನ್ನಿವೇಶವೂ ಪ್ರಮುಖವಾದ ಅಂಶವಾಗಿದೆ. ಇಲ್ಲಿ ಮುಖ್ಯವಾಗಿ ಪರಿಸರ, ಮಳೆ, ಭೂಮಿಯ ಫಲವತ್ತತೆ, ಸಾಗರ, ನದಿ, ನೈಸರ್ಗಿಕ ಸಂಪನ್ಮೂಲಗಳು, ಇವೆಲ್ಲಾ ನಗರ ಕೇಂದ್ರಗಳ ಅಸ್ತಿತ್ವವನ್ನು ನಿರ್ಧರಿಸುವ ಅಂಶಗಳಾಗಿವೆ. ಕೆಲವು ವ್ಯಾಪಾರಿ ಕೇಂದ್ರಗಳು ಮುಖ್ಯವಾದ ವ್ಯಾಪಾರ ಪಥದಲ್ಲಿ ಇರುವುದರಿಂದ ಪ್ರಗತಿಯನ್ನು ಹೊಂದಿವೆ. ಕರಾವಳಿ ಪ್ರದೇಶದಲ್ಲಿ ಅನೇಕ ಪಟ್ಟಣಗಳು ಸಮುದ್ರ ಮಾರ್ಗದ ಮೂಲಕ ತಮ್ಮ ವ್ಯಾಪಾರವನ್ನು ವೃದ್ಧಿಸಿಕೊಂಡವು. ನದಿಗಳ ಆಸುಪಾಸಿನ ಪರಿಸರಗಳಲ್ಲಿ ನಗರ ಕೇಂದ್ರಗಳು ಬೆಳೆದವು. ಇವೆಲ್ಲಾ ಆಯಾ ದೇಶದ ಭೌಗೋಳಿಕ ಪರಿಸ್ಥಿತಿಯನ್ನು ಅವಲಂಬಿಸಿದೆ.

ಆಡಳಿತಾತ್ಮಕ ಒತ್ತಡಗಳು ನಗರಗಳ ಬೆಳವಣಿಗೆಗೆ ಪೂರಕವಾದ ಅಂಶ. ನಗರಗಳು ವ್ಯವಸ್ಥಿತ ರೂಪದಲ್ಲಿ ರೂಪುಗೊಳ್ಳುವುದಕ್ಕೆ ಆಡಳಿತ ವರ್ಗದ ಅವಶ್ಯಕತೆಯಿದೆ. ನಗರ ಆಡಳಿತ, ನಗರ ಯೋಜನೆ ಮತ್ತು ನಗರ ಸಿದ್ಧಾಂತವನ್ನು ಕ್ರಮಬದ್ಧವಾಗಿ ಮತ್ತು ಶಿಸ್ತುಬದ್ಧವಾಗಿ ಅನುಷ್ಠಾನಕ್ಕೆ ತರಲು ಆಡಳಿತ ವ್ಯವಸ್ಥೆಯ ಅಗತ್ಯವಿದೆ. ಗ್ರಾಮೀಣ ಪ್ರದೇಶದಿಂದ ಹರಿದು ಬರುವ ಹೆಚ್ಚುವರಿ ಸಂಪತ್ತು ನಗರ ಪ್ರದೇಶದಲ್ಲಿ ವ್ಯವಸ್ಥಿತವಾಗಿ ಹಂಚಿಕೆಯಾದರೆ ಮಾತ್ರ ನಗರಗಳ ಸಮಗ್ರ ಬೆಳವಣಿಗೆ ಸಾಧ್ಯ. ಎಲ್ಲ ಅಧಿಕಾರಗಳ ವರ್ಗದವರೂ ನಗರಗಳಲ್ಲಿಯೇ ವಾಸ ಮಾಡುವುದರಿಂದ ಅರಾಜಕತೆಗೆ ಅವಕಾಶವಿರುವುದಿಲ್ಲ. ಪ್ರಾಚೀನ, ಮಧ್ಯಯುಗೀನ ಮತ್ತು ಆಧುನಿಕ ಇತಿಹಾಸದಲ್ಲಿ ನಾವು ಗಮನಿಸುವ ಮುಖ್ಯ ಅಂಶವೆಂದರೆ ಆಯಾ ಕಾಲದ ಅರಸರು ಮತ್ತು ಅಧಿಕಾರಿಗಳು ವಾಸಿಸುತ್ತಿದ್ದ ಪ್ರದೇಶಗಳೇ ನಗರಗಳಾಗಿ ಪರಿವರ್ತನೆಗೊಂಡವು ಹಾಗೂ ಬೆಳೆದವು. ಈ ನಗರಗಳ ಪ್ರಭಾವಕ್ಕೊಳಗಾಗಿ ಇನ್ನಿತರ ರಾಜಕೀಯ ಕೇಂದ್ರಗಳೂ ಶ್ರೀಮಂತ ನಗರ ಕೇಂದ್ರಗಳಾದವು. ಇದು ಚಾರಿತ್ರಿಕವಾಗಿ ನಮಗೆ ಎದ್ದು ಕಾಣುತ್ತದೆ.

ನಗರಗಳ ಬೆಳವಣಿಗೆಯ ಹಂತದಲ್ಲಿ ಜಮೀನ್ದಾರರ ಕೊಡುಗೆ ಅಪಾರವಾದದ್ದಾಗಿದೆ. ಜಮೀನ್ದಾರರು ಹೆಸರೇ ಸೂಚಿಸುವಂತೆ ಜಮೀನಿಗೆ ಸಂಬಂಧಪಟ್ಟವರಾದರೂ ಹಳ್ಳಿ ಜೀವನವನ್ನು ಇಷ್ಟಪಡದೆ ನಗರಗಳ ಪ್ರಭಾವಕ್ಕೆ ಒಳಗಾದವರು. ಏಕೆಂದರೆ ಹಳ್ಳಿಯ ಕಷ್ಟ ಜೀವನದಿಂದ ನಗರದ ಸುಖಜೀವನ ಇವರಿಗೆ ಸಹಜವಾಗಿಯೇ ಹೆಚ್ಚು ಆಕರ್ಷಣೀಯವಾಗಿತ್ತು. ಗ್ರಾಮೀಣ ಆರ್ಥಿಕ ಪರಿಸ್ಥಿತಿಯಲ್ಲಿ ಹತೋಟಿಯನ್ನು ಸಾಧಿಸಿರುವ ಜಮೀನ್ದಾರರು ನಗರದ ಆರ್ಥಿಕತೆಯಲ್ಲೂ ತಮ್ಮ ಮೇಲುಗೈಯನ್ನು ಸಾಧಿಸಿರುವುದು ಇತಿಹಾಸದಿಂದ ತಿಳಿದುಬರುವ ಸತ್ಯ. ಹಳ್ಳಿಗಳಲ್ಲಿ ಈ ಭೂಮಾಲೀಕರ ಅಧೀನದಲ್ಲಿರುವವರು ಇವರ ಪರವಾಗಿ ಸಾಗುವಳಿ ಮಾಡಿ ಬಂದ ಹಣವನ್ನು ನಗರಗಳಲ್ಲಿ ವಾಸಿಸುತ್ತಿರುವ ತಮ್ಮ ಒಡೆಯರಿಗೆ ಕಳುಹಿಸುತ್ತಿದ್ದರು. ಈ ಗೈರು ಹಾಜರಾಗಿರುವ ಭೂಮಾಲೀಕರು ತಮ್ಮ ಜಮೀನಿನಿಂದ ಬಂದ ಹಣವನ್ನು ನಗರಗಳಲ್ಲಿ ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ವಿನಿಯೋಗಿಸಿ ಅದ್ಧೂರಿಯ ಜೀವನವನ್ನು ನಡೆಸುತ್ತಿದ್ದರು. ಈ ರೀತಿಯಾಗಿ ಗ್ರಾಮ ಮತ್ತು ನಗರವೆಂಬ ಎರಡೂ ವ್ಯವಸ್ಥೆಯಲ್ಲಿಯೂ ಭೂಮಾಲೀಕರು ನಿರ್ಣಾಯಕ ಪಾತ್ರವನ್ನು ವಹಿಸುತ್ತಿದ್ದರು.

ವ್ಯಾಪಾರ ಮತ್ತು ಮಾರುಕಟ್ಟೆಗಳು ನಗರಗಳ ಬೆಳವಣಿಗೆಯಲ್ಲಿ ನಿಶ್ಚಿತ ಪಾತ್ರವನ್ನು ವಹಿಸಿರುವುದು ಸ್ಪಷ್ಟ. ನಗರಗಳ ಪ್ರಗತಿಯನ್ನು ನಿರ್ಧರಿಸುವ ಅಂಶವಾಗಿ ವ್ಯಾಪಾರ ಮತ್ತು ಮಾರುಕಟ್ಟೆಗಳು ಕಾರ್ಯನಿರ್ವಹಿಸಿವೆ. ವ್ಯಾಪಾರವು ಗ್ರಾಮ ಮತ್ತು ನಗರವೆಂಬ ಎರಡು ಭಿನ್ನ ಉತ್ಪಾದನಾ ವ್ಯವಸ್ಥೆಯ ನಡುವಿನ ಕೊಂಡಿಯಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದ್ದು ಚಾರಿತ್ರಿಕ ಸತ್ಯ. ಗ್ರಾಮ ಮತ್ತು ನಗರಗಳ ವ್ಯಾಪಾರದ ವ್ಯಾಪ್ತಿ ಕಿರಿದಾದದ್ದು. ಒಂದು ನಗರ ಕೇಂದ್ರ ತನಗೆ ಹತ್ತಿರವಿರುವ ಗ್ರಾಮದೊಡನೆ ಮಾತ್ರ ವ್ಯಾಪಾರ ಸಂಬಂಧವನ್ನು ಹೊಂದಿರಲು ಸಾಧ್ಯ. ದೂರ ಪ್ರದೇಶದ ಆಂತರಿಕ ವ್ಯಾಪಾರದಲ್ಲಿ ಒಂದು ನಗರಕೇಂದ್ರ ಇನ್ನೊಂದು ನಗರ ಕೇಂದ್ರದೊಡನೆ ಮಾತ್ರ ವ್ಯಾಪಾರ ಸಂಬಂಧವನ್ನು ಹೊಂದಿರಲು ಸಾಧ್ಯ. ದೂರ ಪ್ರದೇಶದ ಗ್ರಾಮದೊಡನೆ ನೇರವಾಗಿ ವ್ಯವಹರಿಸಲು ಸಾಧ್ಯವಾಗುವುದಿಲ್ಲ ಮತ್ತು ಹೆಚ್ಚಿನ ಭದ್ರತೆ ಮತ್ತು ರಕ್ಷಣೆಯ ಪ್ರಶ್ನೆಯೂ ಉದ್ಭವಿಸುತ್ತಿದೆ. ವಿದೇಶಿ ವ್ಯಾಪಾರದಲ್ಲೂ ಇದೇ ತತ್ವವನ್ನು ಅನುಸರಿಸಲಾಯಿತು. ನಗರಗಳ ಬೆಳವಣಿಗೆಯ ಹಂತದಲ್ಲಿ ನಾವು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಒಂದು ಹೊಸ ಉಪವ್ಯವಸ್ಥೆಯ ಇರುವಿಕೆಯನ್ನು ಕಾಣಬಹುದಾಗಿದೆ. ಕೆಲವು ಕಸುಬುದಾರರು ವ್ಯಾಪಾರೇತರ ವರ್ಗದವರ ಆಶ್ರಯದಲ್ಲಿ ಇದ್ದುಕೊಂಡು ವಸ್ತುಗಳನ್ನು ಉತ್ಪಾದಿಸುತ್ತಿದ್ದರು. ಹೀಗೆ ಉತ್ಪಾದನೆಗೊಂಡ ವಸ್ತುಗಳ ಉಸ್ತುವಾರಿಯನ್ನು ವ್ಯಾಪಾರೇತರ ವರ್ಗದವರೇ ನೋಡಿಕೊಳ್ಳುತ್ತಿದ್ದರು. ಈ ವರ್ಗವು ನಗರಗಳ ಬೆಳವಣಿಗೆಗೆ ತನ್ನದೇ ಆದ ಕೊಡುಗೆಯನ್ನು ನೀಡಿರುವುದನ್ನು ನಾವು ಗುರುತಿಸಬಹುದು.

ನಗರಗಳ ಹುಟ್ಟು ಮತ್ತು ಬೆಳವಣಿಗೆಯನ್ನು ಅಧ್ಯಯನ ಮಾಡುವಾಗ ಬೇರೆ ಬೇರೆ ರೀತಿಯ ನಗರ ಕೇಂದ್ರಗಳನ್ನು ಕಾಣುತ್ತೇವೆ. ನಗರ ಕೇಂದ್ರಗಳಲ್ಲಿ ಕೆಲವು ಆಡಳಿತ ಕೇಂದ್ರಗಳಾಗಿದ್ದವು, ಕೆಲವು ವಾಣಿಜ್ಯ ಕೇಂದ್ರಗಳಾಗಿದ್ದವು ಹಾಗೂ ಕೆಲವು ಶೈಕ್ಷಣಿಕ ಕೇಂದ್ರಗಳಾಗಿದ್ದವು. ಇನ್ನೂ ಕೆಲವು ಪ್ರಾಚೀನವೂ, ಪವಿತ್ರವೂ ಆದ ಧಾರ್ಮಿಕ ಕೇಂದ್ರಗಳಾಗಿದ್ದವು. ಯಾವುದೋ ಒಂದು ಪ್ರಧಾನ ಲಕ್ಷಣವನ್ನು ಹೊಂದಿದ್ದರೂ ತಕ್ಕ ಪ್ರಮಾಣದಲ್ಲಿ ಮಿಕ್ಕ ಹಲವು ಹತ್ತು ಕಾರ್ಯಚಟುವಟಿಕೆಗಳೂ ಅಲ್ಲಿ ನಡೆಯುತ್ತಿದ್ದವು. ಒಂದು ಆಡಳಿತ ಕೇಂದ್ರವು ವಾಣಿಜ್ಯ ಕೇಂದ್ರವೂ ಆಗಿರುತ್ತಿತ್ತು ಮತ್ತು ಶೈಕ್ಷಣಿಕ, ವೈದ್ಯಕೀಯ ಸೌಲಭ್ಯಗಳೂ ಅಲ್ಲಿರುತ್ತಿದ್ದವು. ಫ್ರೆಂಚರು ಮತ್ತು ಪೋರ್ಚುಗೀಸರು ಭಾರತದಲ್ಲಿ ಹೆಚ್ಚು ನಗರಗಳನ್ನೇನೂ ನಿರ್ಮಿಸಲಿಲ್ಲ. ಆದರೆ ಅವರು ನಿರ್ಮಿಸಿದ ಕೆಲವು ನಗರಗಳು ಇಂದಿಗೂ ಉಳಿದು ಬಂದಿದೆ. ಅವು ಕೆಲವು ವಿಶೇಷ ಲಕ್ಷಣಗಳನ್ನು ಒಳಗೊಂಡಿವೆ. ಬ್ರಿಟಿಸರು ಬಹು ದೀರ್ಘಕಾಲ ಇಲ್ಲಿ ಇದ್ದುದರಿಂದಾಗಿ ಭಾರತ ದೇಶದ ನಗರೀಕರಣದ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿದ್ದರು. ಮುಂಬಯಿ, ಕಲ್ಕತ್ತಾ, ಮದರಾಸು ಈ ಮೂರು ಪ್ರೆಸಿಡೆನ್ಸಿ ನಗರಗಳ ಬೆಳವಣಿಗೆಗೆ ಅವರೇ ಮುಖ್ಯವಾಗಿ ಕಾರಣರಾಗಿದ್ದಾರೆ. ಇನ್ನೂ ಹಲವು ನಗರಗಳು, ಕಂಟೋನ್ಮೆಂಟು, ಸಿವಿಲ್ ಲೈನುಗಳು ಬ್ರಿಟಿಷ್ ವಿನ್ಯಾಸದ ಮುದ್ರೆಗಳನ್ನು ಉಳಿಸಿಕೊಂಡಿವೆ. ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಔದ್ಯೋಗೀಕರಣದ ಬೆಳವಣಿಗೆಗೆ ಚಾಲನೆ ದೊರೆತದ್ದರಿಂದಾಗಿ ಭಾರತದಲ್ಲಿ ಅನೇಕ ನಗರಗಳು ತೀವ್ರ ತರದಲ್ಲಿ ಬೆಳವಣಿಗೆ ಹೊಂದಿದವು.

ಯಂತ್ರಯುಗ ಆರಂಭವಾದ ನಂತರ ಬೃಹತ್ ಯಂತ್ರಗಳು ದೊಡ್ಡ ಪ್ರಮಾಣದಲ್ಲಿ ಅತ್ಯುತ್ತಮ ಮಟ್ಟದ ಸರಕುಗಳನ್ನು ಉತ್ಪಾದನೆ ಮಾಡಿ, ಅವುಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡತೊಡಗಿದವು. ಇದು ಜಾಗತಿಕ ನಗರೀಕರಣದ ಮೈಲಿಗಲ್ಲು. ಕೈಗಾರಿಕಾ ಕ್ರಾಂತಿ ನಗರೀಕರಣ ಪ್ರಕ್ರಿಯೆಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ಉಂಟುಮಾಡಿತು. ಕೈಗಾರಿಕಾ ಕ್ರಾಂತಿಯನ್ನೇ ಕೇಂದ್ರವಾಗಿಟ್ಟುಕೊಂಡು ಕೈಗಾರಿಕಾಪೂರ್ವ ಹಾಗೂ ಕೈಗಾರಿಕೋತ್ತರ ನಗರಗಳೆಂದು ನಗರಗಳನ್ನು ವಿಂಗಡಿಸಲಾಯಿತು. ಕೈಗಾರಿಕಾಪೂರ್ವ ನಗರಗಳು ಊಳಿಗಮಾನ್ಯ ಪದ್ಧತಿಯ ಹಿಡಿತದಲ್ಲಿದ್ದವು ಎನ್ನುವುದು ಪ್ರಚಲಿತ ವಾದ. ನಗರಗಳ ಅವನತಿಗೆ ಊಳಿಗಮಾನ್ಯ ಪದ್ಧತಿಯೂ ಒಂದು ಮುಖ್ಯ ಕಾರಣ ಎಂದು ಗುರುತಿಸಲಾಗಿದೆ. ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ನಗರೀಕರಣ ವ್ಯವಸ್ಥಿತವಾಗಿ ನಡೆಸಲು ಸಾಧ್ಯವಿಲ್ಲ. ಕೈಗಾರಿಕಾ ಕ್ರಾಂತಿಯ ನಂತರ ಈ ವ್ಯವಸ್ಥೆ ಬದಲಾಯಿತು. ಆದರೂ ಕೈಗಾರಿಕೆಯು ನಗರೀಕರಣದ ಮುಖ್ಯವಾಹಿನಿಯಲ್ಲಿ ಒಂದು ಅಂಶ ಮಾತ್ರ. ಹಾಗಾಗಿ, ಕೈಗಾರಿಕೀಕರಣ ಮತ್ತು ಊಳಿಗಮಾನ್ಯ ಪದ್ಧತಿ ಇವೆರಡೂ ಸಮಾನಾಂತರ ಪರಿಕಲ್ಪನೆಗಳಲ್ಲ ಎನ್ನುವುದು ನಾವು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಔದ್ಯೋಗೀಕರಣವಿಲ್ಲದೆ ನಗರೀಕರಣವು ಅಸ್ತಿತ್ವದಲ್ಲಿ ಇರಬಹುದಾಗಿದೆ. ಔದ್ಯೋಗೀಕರಣವು ಬೃಹತ್ ಪ್ರಮಾಣದಲ್ಲಿ ನಗರೀಕರಣಕ್ಕೆಡೆ ಮಾಡಿಕೊಟ್ಟರೂ ನಗರೀಕರಣವು ಕೇವಲ ಔದ್ಯೋಗೀಕರಣಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ತಾಂತ್ರಿಕ ಹಿನ್ನೆಲೆಯಲ್ಲಿ ನೋಡಿದರೆ ನಗರೀಕರಣ ಎಂಬ ಪರಿಕಲ್ಪನೆ ಹೆಚ್ಚು ವ್ಯಾಪಕಾರ್ಥವನ್ನುಳ್ಳದ್ದು ಎನ್ನುವ ಅಂಶ ಸ್ಪಷ್ಟವಾಗುತ್ತದೆ.

ಕಸುಬುದಾರರು ತಮ್ಮ ವೃತ್ತಿಗಳಲ್ಲಿ ಗುಣಾತ್ಮಕ ಹಾಗೂ ಪರಿಮಾಣಾತ್ಮಕ ಮೇಲ್ಮೆಯನ್ನು ಸಾಧಿಸಲು ಹೊರಟಾಗ ಇದು ಬಂಡವಾಳಶಾಹಿತ್ವದ ಬೆಳವಣಿಗೆಗೂ ಪರ್ಯಾಯವಾಗಿ ಪೋಷಕವಾಯಿತೆಂಬುದನ್ನೂ ತಿಳಿಯಬಹುದಾಗಿದೆ. ಊಳಿಗಮಾನ್ಯ ವ್ಯವಸ್ಥೆಯ ಶೋಷಣೆಯಿಂದ ತಪ್ಪಿಸಿಕೊಳ್ಳಲು ಕಸುಬುದಾರರು ಈ ವ್ಯವಸ್ಥೆಯ ಹೊರವಲಯದಲ್ಲಿ ಸ್ವತಂತ್ರವಾಗಿ ಆರಂಭಿಸಿದ ವೃತ್ತಿಗಳು ಉತ್ಪಾದನಾ ಸಂಬಂಧದಲ್ಲಿ ಬದಲಾವಣೆ ತಂದು, ಸಾಮಾಜಿಕ ಪರಿವರ್ತನೆಗೆ ಅಡಿಪಾಯವಾದವು. ಈ ಬೆಳವಣಿಗೆಯನ್ನು ಕೈಗಾರಿಕಾ ಕ್ರಾಂತಿಯ ಹಿನ್ನೆಲೆಯಿಂದಲೇ ನೋಡಬೇಕು ಎನ್ನುವ ವಾದ ತಪ್ಪಾಗುತ್ತದೆ. ಏಕೆಂದರೆ ಕೈಗಾರಿಕಾ ಕ್ರಾಂತಿ ಯುರೋಪ್‌ನಲ್ಲಾದ ಒಂದು ಚಾರಿತ್ರಿಕ ಬೆಳವಣಿಗೆ. ಇದು ಬೇರೆ ಪ್ರದೇಶದಲ್ಲೂ ಪುನರಾವರ್ತನೆಗೊಳ್ಳುವುದು ಅಸಂಭವ. ಆದರೆ ಯುರೋಪ್ ಕೇಂದ್ರಿತ ಅಧ್ಯಯನಗಳಲ್ಲಿ ಕಂಡುಬರುವ ವಿಷಯವೆಂದರೆ, ಕೈಗಾರಿಕಾ ಕ್ರಾಂತಿಯಿಂದಾಗಿ ಪ್ರಪಂಚದ ಎಲ್ಲ ಭಾಗದಲ್ಲೂ ಉತ್ಪಾದನಾ ಸಂಬಂಧಗಳಲ್ಲಿ ಬದಲಾವಣೆಗಳು ಉಂಟಾಗಿವೆ ಮತ್ತು ಇದು ನೇರವಾಗಿ ಸಾಮಾಜಿಕ ಪರಿವರ್ತನೆಗೂ ಕಾರಣವಾಗುತ್ತದೆ ಎನ್ನುವುದು ಹಿಂದುಳಿದ ರಾಷ್ಟ್ರಗಳಲ್ಲಿ ವಸಾಹತುಶಾಹಿ ನೀತಿಯ ಅನುಷ್ಠಾನದಿಂದಾಗಿ ಕೈಗಾರಿಕೀಕರಣಕ್ಕೆ ಪೂರಕವಾಗುವಂತಹ ಉತ್ಪಾದನಾ ವ್ಯವಸ್ಥೆಗೆ ಒತ್ತು ನೀಡಲಾಯಿತು. ಈ ರೀತಿಯ ಬೆಳವಣಿಗೆಯಿಂದಾಗಿ ನಗರೀಕರಣ ಪ್ರಕ್ರಿಯೆಯ ಮೂಲ ಸ್ವರೂಪವನ್ನೇ ತಪ್ಪಾಗಿ ಅರ್ಥೈಸಿಕೊಳ್ಳಲಾಯಿತು. ನಗರೀಕರಣವನ್ನು ವಸಾಹತುಶಾಹಿ ಪರಿಕಲ್ಪನಾತ್ಮಕ ಚೌಕಟ್ಟಿನಲ್ಲಿ (ಸಂಕುಚಿತಾರ್ಥದಲ್ಲಿ) ಅಭ್ಯಸಿಸಿದಾಗ ಮತ್ತು ವಿಶಾಲಾರ್ಥದಲ್ಲಿ ಅಧ್ಯಯನ ನಡೆಸಿದಾಗ ಸಿಗುವ ಫಲಿತಾಂಶ ಬೇರೆ ಬೇರೆಯದೇ ಆಗಿರುತ್ತದೆ ಎನ್ನುವ ವಾಸ್ತವ ವಿಚಾರ ನಮ್ಮಲ್ಲಿ ಜಾಗೃತವಾಗಿರಬೇಕಾಗುತ್ತದೆ.

ನಗರೀಕರಣದ ಬಗ್ಗೆ ಅಧ್ಯಯನ ನಡೆಸುವುದು ಇತ್ತೀಚಿನ ಬೆಳವಣಿಗೆಯಾದರೂ, ನಗರಗಳ ಇತಿಹಾಸವು ಮಾನವನ ನಾಗರಿಕತೆಯ ಉಗಮದಿಂದಲೇ ಆರಂಭವಾಗಿದೆ ಎನ್ನುವ ಅಂಶ ಇತಿಹಾಸದಿಂದ ನಮಗೆ ತಿಳಿದುಬರುತ್ತದೆ. ಅಲೆಮಾರಿ ಗುಂಪುಗಳು ಒಂದೇ ಕಡೆಗೆ ನೆಲೆನಿಂತು ಖಾಯಂ ಆಗಿ ವೃತ್ತಿಯಲ್ಲಿ ತೊಡಗಿದ್ದು ನಗರೀಕರಣ ಪ್ರಕ್ರಿಯೆಯ ಪ್ರಥಮ ಹೆಜ್ಜೆಯಾಗಿದೆ. ಇದೇ ವ್ಯಾಪಾರಕ್ಕೆ ಎಡೆಮಾಡಿಕೊಟ್ಟು ನಗರ ಕೇಂದ್ರಗಳು ಅಸ್ತಿತ್ವಕ್ಕೆ ಬರಲು ದಾರಿಯಾಯಿತು. ಭಾರತ ಉಪಖಂಡದ ಇತಿಹಾಸವನ್ನು ಅವಲೋಕಿಸಿದಾಗ ಕ್ರಿ.ಪೂ. ೬ನೇ ಶತಮಾನದ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆಗಳು ನಗರೀಕರಣ ಪ್ರಕ್ರಿಯೆಗೆ ಚಾಲನೆ ಒದಗಿಸಿರುವ ಅಂಶ ವೇದ್ಯವಾಗುತ್ತದೆ. ನಗರಗಳ ಉಗಮಕ್ಕೆ ಪೂರಕವಾದ ಅಂಶಗಳು ಪ್ರಬಲವಾಗುತ್ತಾ ಬಂದ ಹಾಗೆ ನಗರಗಳು ತಮ್ಮ ಸ್ವರೂಪದಲ್ಲಿ ಬದಲಾಗುತ್ತಾ ಹಂತ ಹಂತವಾಗಿ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸುತ್ತಾ ಮಾನವನ ಬದುಕಿನ ಹೊಸ ಆಯಾಮಗಳು ರೂಪುಗೊಳ್ಳುವುದಕ್ಕೆ ಸಹಕಾರಿಯಾದವು. ಇತ್ತೀಚಿನ ವರ್ಷಗಳಲ್ಲಿ ಜಗತ್ತಿನಾದ್ಯಂತ ನಗರೀಕರಣ ಕುರಿತು ಅಧ್ಯಯನದ ಬಗ್ಗೆ ವಿದ್ವಾಂಸರು ಗಮನ ಹರಿಸಿದ್ದು, ನಗರಗಳ ಸಮಗ್ರ ಅಧ್ಯಯನದ ದೃಷ್ಟಿಯಿಂದ ಗುಣಾತ್ಮಕವಾದ ಬೆಳವಣಿಗೆಯಾಗಿದೆ. ಆದರೆ ಈ ಅಧ್ಯಯನಗಳು ನಗರ ಕೇಂದ್ರಗಳ ಅದ್ಧೂರಿ ಜೀವನವನ್ನಷ್ಟೆ ಪ್ರತಿನಿಧಿಸದೆ ಭೀಕರ ಸಮಸ್ಯೆಗಳ ಕಡೆಗ ಗಮನ ಹರಿಸುವುದು ನಗರಗಳ ಭವಿಷ್ಯದ ದೃಷ್ಟಿಯಿಂದ ಅನಿವಾರ್ಯವಾಗಿದೆ.

ಲೇಖನದ ಈ ಭಾಗದಲ್ಲಿ ಚರಿತ್ರೆಯ ವಿವಿಧ ಅವಧಿಗಳಲ್ಲಿ ನಗರ ಕೇಂದ್ರಗಳು ಹುಟ್ಟಿ ಬೆಳೆದ ಬಗೆಯನ್ನು ವಿವರಿಸುವ ಉದ್ದೇಶವನ್ನು ಹೊಂದಿದೆ. ನಗರ ಚರಿತ್ರೆಯನ್ನು ಅರ್ಥೈಸಿಕೊಳ್ಳಬೇಕಾದರೆ ಅವುಗಳ ಕುರಿತಾದ ಸಿದ್ಧಾಂತ ಮತ್ತು ಅಧ್ಯಯನ ವಿಧಾನದ ಕುರಿತು ಚರ್ಚಿಸುವುದು ಅವಶ್ಯಕವಾಗುತ್ತದೆ. ನಗರಗಳು ಪ್ರಾಚೀನ ಕಾಲದಿಂದಲೇ ಅಸ್ತಿತ್ವದಲ್ಲಿವೆಯಾದರೂ ಅವುಗಳ ಬಗ್ಗೆ ಅಧ್ಯಯನ ಮಾಡುವುದು ಇತ್ತೀಚೆಗೆ ಬೆಳೆದು ಬಂದಿರುವ ಶೈಕ್ಷಣಿಕ ಶಿಸ್ತು. ನಗರಗಳನ್ನು ಯಾವುದೇ ಒಂದು ಶಿಸ್ತಿಗೆ ಸಂಬಂಧಿಸಿದ್ದು ಎಂಬುದಾಗಿ ವ್ಯಾಖ್ಯಾನಿಸಲು ಸಾಧ್ಯವಾಗುವುದಿಲ್ಲ. ಚರಿತ್ರೆ, ಪುರಾತತ್ವ, ಭೂಗೋಳಶಾಸ್ತ್ರ, ಮಾನವಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ ಮುಂತಾದ ವಿಷಯಗಳ ನೆಲೆಗಳಲ್ಲಿ ನಗರಗಳ ಅಧ್ಯಯನ ನಡೆಸಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ನಗರ ಅಧ್ಯಯನ ಕುರಿತ ವಿವಿಧ ಶಿಸ್ತಿಗೆ ಸಂಬಂಧಿಸಿದ ವಿದ್ವಾಂಸರ ವ್ಯಾಖ್ಯಾನಗಳು, ಸೈದ್ಧಾಂತಿಕ ನಿಲುವುಗಳು ಹಾಗೂ ತಳೆದ ತೀರ್ಮಾನಗಳು ಪ್ರಾಮುಖ್ಯವೆನಿಸುತ್ತವೆ.

ನಗರ ಪ್ರದೇಶಗಳ ಅಧ್ಯಯನ ವ್ಯವಸ್ಥಿತವಾಗಿ ಆರಂಭಗೊಂಡಿರುವುದು ಹತ್ತೊಂಬತ್ತನೆಯ ಶತಮಾನದ ದ್ವಿತೀಯಾರ್ಧದಿಂದೀಚೆಗೆ. ಅಲ್ಲಿಂದ ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿಯೂ ನಗರ ಅಧ್ಯಯನ ಎನ್ನುವ ಹೊಸ ಅಧ್ಯಯನ ವಿಧಾನವೊಂದು ಕಾಣಿಸಿಕೊಂಡಿತು. ಈ ಅಧ್ಯಯನ ವಿಧಾನವನ್ನು ಹುಟ್ಟು ಹಾಕಿದವರು ಸಮಾಜ ವಿಜ್ಞಾನಿಗಳು. ಇವರ ಅಧ್ಯಯನ ಪ್ರಾಚೀನ ನಾಗರಿಕತೆಗಳಿಂದ ಆಧುನಿಕ ಸಂದರ್ಭದವರೆಗೂ ಮುಂದುವರಿಯಿತು. ಎರಡು ಮಹಾಯುದ್ಧಗಳಲ್ಲಿ ಯುರೋಪ್ ಮತ್ತು ಇತರ ಪ್ರದೇಶಗಳಲ್ಲಿ ನಗರ ಪ್ರದೇಶಗಳು ನಾಶ ಹೊಂದಿರುವುದು ನಗರ ಅಧ್ಯಯನಕಾರರಿಗೆ ಹೊಸ ಸವಾಲನ್ನು ಒಡ್ಡಿತು. ಅದೇ ರೀತಿ ನಗರ ಅಧ್ಯಯನ ಎರಡನೆಯ ಜಾಗತಿಕ ಯುದ್ಧದ ನಂತರ ಚುರುಕುಗೊಳ್ಳಲಾರಂಭಿಸಿತು. ನೂರಾರು ಗ್ರಂಥಗಳು ಹಾಗೂ ಲೇಖನಗಳು ಈ ದಿಸೆಯಲ್ಲಿ ಪ್ರಕಟಗೊಂಡವು. ನಗರ ಅಧ್ಯಯನ ಕುರಿತ ಹಲವಾರು ಪತ್ರಿಕೆಗಳು, ನಿಯತಕಾಲಿಕೆಗಳು ಹುಟ್ಟಿಕೊಂಡವು. ಉದಾಹರಣೆಗೆ, ಅನಾಲ್ಸ್ ಆಫ್ ದ ಅಸೋಸಿಯೇಶನ್ಸ್, ಆಫ್ ಅಮೆರಿಕನ್ ಜಿಯಾಗ್ರಾಫರ್ಸ್‌ (ವಾಷಿಂಗ್ಟನ್), ಜರ್ನಲ್ ಆಫ್ ಟೌನ್ ಪ್ಲಾನಿಂಗ್ ಇನ್‌ಸ್ಟಿಟ್ಯೂಟ್ (ಲಂಡನ್), ಟೌನ್ ಪ್ಲಾನಿಂಗ್ ರಿವ್ಯೂ (ಲಿವರ್‌ಪೂಲ್), ಇಂಡಿಯನ್ ಜಿಯಾಗ್ರಾಫಿಕಲ್ ಜರ್ನಲ್ (ಚನ್ನೈ) ಇತ್ಯಾದಿ. ಇವುಗಳೆಲ್ಲವೂ ಪೇಟೆ-ಪಟ್ಟಣ, ನಗರ, ನಗರೀಕರಣ, ನಗರತ್ವ ಮುಂತಾದ ಪರಿಕಲ್ಪನೆಗಳನ್ನು ವ್ಯಾಖ್ಯಾನಿಸುವ ಹಾಗೂ ಅವುಗಳಿಗೆ ಒಂದು ಸೈದ್ಧಾಂತಿಕ ಚೌಕಟ್ಟನ್ನು ನೀಡುವ ಕೆಲಸವನ್ನು ಮಾಡಿದವು.

‘ನಗರ’ ಪದದ ವ್ಯಾಖ್ಯಾನದ ಕುರಿತು ವಿದ್ವಾಂಸರಲ್ಲಿ ಒಮ್ಮತದ ಅಭಿಪ್ರಾಯವಿಲ್ಲ. ನಗರಗಳನ್ನು ಒಂದು ವಿಶಿಷ್ಟವಾದ ಸಮಾಜ ಎಂಬುದಾಗಿ ಅನೇಕ ವಿದ್ವಾಂಸರು ಗುರುತಿಸಿದ್ದಾರೆ. ಪ್ರಾಚೀನ ಜಗತ್ತಿನ ಪ್ಲೇಟೋ, ಅರಿಸ್ಟಾಟಲ್, ಕೌಟಿಲ್ಯ ಮತ್ತು ಆಗಸ್ಟಿನ್, ಮಧ್ಯಕಾಲದ ಮೆಕ್ಕಾವಿಲಿ, ಹದಿನೇಳನೆಯ ಶತಮಾನದ ಜಿಯಾನ್ ಬೊದಿನ್, ಹದಿನೆಂಟನೆಯ ಶತಮಾನದ ರೂಸೋ, ಹತ್ತೊಂಬತ್ತನೆಯ ಶತಮಾನದ ಕಾರ್ಲ್ ಮಾರ್ಕ್ಸ್, ಫ್ರೆಡರಿಕ್ ಏಂಗೆಲ್ಸ್, ಇಪ್ಪತ್ತನೆಯ ಶತಮಾನದ ಗೋರ್ಡನ್ ಚೈಲ್ಡ್, ಟಾಯನ್‌ಬಿ, ಮುಮ್‌ಫರ್ಡ್, ವೇಬರ್ ಇವರೆಲ್ಲರ ಚಿಂತನೆಗಳು ನಗರಗಳನ್ನು ಒಂದು ವಿಶೇಷವಾದ ಸಮಾಜ ಎಂದು ಗುರುತಿಸಿದೆ. ಅದೇ ರೀತಿ ನಗರ ವ್ಯವಸ್ಥೆ ವಿಭಿನ್ನ ಸ್ವರೂಪದ ಮಾನವ ಬದುಕಿನ ಮತ್ತು ದುಡಿಮೆಯ ತಾಣ ಮತ್ತು ನಿರಂತರತೆಯನ್ನೊಳಗೊಂಡ ಸಂಘಟಿತ ಸಮಾಜ. ನಗರ ಜೀವನದ ಸಂಕೀರ್ಣತೆ ಹಾಗೂ ಬಹುರೂಪಿ ಲಕ್ಷಣಗಳು ಚರಿತ್ರೆಯ ಬೆಳವಣಿಗೆಯ ಗತಿಯನ್ನು ನಿರ್ಧರಿಸುವ ಮತ್ತು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿವೆ. ಒಂದು ಹಳ್ಳಿ ಪ್ರದೇಶ ಪಟ್ಟಣವಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಯೇ ಈ ಎಲ್ಲ ಅಂಶಗಳನ್ನು ಒಳಗೊಂಡಿರುತ್ತದೆ. ಈ ಪ್ರಕ್ರಿಯೆಯನ್ನು ಆಧಾರವನ್ನಾಗಿಟ್ಟುಕೊಂಡು ನಗರ ವ್ಯವಸ್ಥೆಯನ್ನು ವ್ಯಾಖ್ಯಾನಿಸಲಾಗಿದೆ. ‘ಗ್ರಾಮೀಣ’ ಎನ್ನುವ ಪದವು ಹಳ್ಳಿ ಪ್ರದೇಶವನ್ನು ಸೂಚಿಸಿದಂತೆ, ‘ನಗರ’ ಪದವು ಪೇಟೆ-ಪಟ್ಟಣಗಳನ್ನು ಸೂಚಿಸುತ್ತವೆ. ಇದರಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ಎನ್ನುವ ವಿಂಗಡನೆಗಳಿವೆ. ಅದೇ ರೀತಿ ಪೇಟೆ-ಪಟ್ಟಣ, ಕೈಗಾರಿಕಾ ನಗರ, ಮಹಾನಗರ, ಮೆಗಾಸಿಟಿ ಮುಂತಾದ ವಿವಿಧ ಹಂತಗಳೂ ಇವೆ. ಪ್ರಸ್ತುತ ಲೇಖನದಲ್ಲಿ ಇವುಗಳ ಅಂಕಿ-ಅಂಶಗಳ ವಿವರಣೆಯನ್ನು ನೀಡದೆ ತಾತ್ವಿಕ ವಿಚಾರಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ.

ನಗರ ಚರಿತ್ರೆಯ ಅಧ್ಯಯನಕ್ಕೆ ಹೊಸ ಆಯಾಮಗಳನ್ನು ನೀಡಿದ ವಿದ್ವಾಂಸರಲ್ಲಿ ಪ್ರಮುಖರೆಂದರೆ, ಆರ‍್ನಾಲ್ಡ್ ಟಾಯಿನ್‌ಬಿ, ಸ್ಪೆಂಗ್ಲರ್, ಗೋರ್ಡನ್ ಚೈಲ್ಡೆ, ಕಿಂಗ್‌ಸ್ಲೀ ಡೇವಿಸ್, ಜಿ.ಎಸ್.ಘುರ್ಯೆ, ಹೆನ್ರಿ ಪೈರೆನ್, ರಾಬರ್ಟ್ ಮೆಕ್‌ಕಾರ್‌ಮಿಕ್, ಜಿ.ಎ.ಕ್ವಿನ್, ಲೂಯಿ ವಿರ್ತ್, ಲೂಯಿ ಮುಮ್‌ಫರ್ಡ್, ಮ್ಯಾಕ್ಸ್‌ವೇಬರ್, ಗಿಡ್ಯಾನ್ ಸ್ಜೋಬರ್ಗ್, ಬ್ರೂಸ್ ಟ್ರಿಗರ್, ನೆಲ್ಸ್ ಆಂಡರ್‌ಸನ್, ಫ್ರೆಡರಿಕ್ ಹ್ಯೋರ್ಸ್‌, ಎ.ಎಫ್.ವೇಬರ್, ಜಿ.ಬೊತೆರೊ, ಪಿ.ಗಿಡ್ಡೀಸ್, ಮಾನ್ಯುಲ್ ಕಾಸ್ಟೆಲ್ಸ್ ಮುಂತಾದವರು. ಭಾರತದಲ್ಲಿ ನಗರ ಕೇಂದ್ರಗಳ ಬಗ್ಗೆ ಅನೇಕ ವಿದ್ವಾಂಸರು ಅಧ್ಯಯನ ನಡೆಸಿದ್ದಾರೆ. ಅವರೆಂದರೆ, ಬಿ.ಬಿ.ದತ್ತ, ಸ್ಟುವರ್ಟ್ ಪಿಗ್ಗಾಟ್, ಜಿ.ಎಸ್.ಘುರ್ಯೆ, ಅಮಿತ್ ರಾಯ್, ಬಿ.ಎನ್.ಪುರಿ, ಎ.ಘೋಷ್, ಆರ್.ಎಸ್.ಶರ್ಮ, ವಿಜಯ ಕುಮಾರ್ ಟಾಕೂರ್, ಇಂದು ಬಂಗಾ, ಚಂಪಕ ಲಕ್ಷ್ಮಿ, ಹೆನ್ರಿ ಪೈರೆನ್, ಓಮ್ ಪ್ರಕಾಶ್ ಪ್ರಸಾದ್, ಮಹೇಂದ್ರಪಾಲ್ ಸಿಂಗ್, ದಿಲೀಪ್ ಕೆ.ಬಸು, ಜೆ.ಎಸ್.ಗ್ರೆವಾಲ್, ಮೀರಾ ಕೊಸಾಂಬಿ, ಆಶಿನ್‌ದಾಸ್ ಗುಪ್ತಾ, ರಜತ್‌ಕಾಂತ ರೇ, ಆಶಿಸ್ ಬೋಸ್, ಎಂ.ಎನ್.ಶ್ರೀನಿವಾಸ್, ಎಂ.ಎಸ್.ಎ. ರಾವ್, ಇರ್ಫಾನ್ ಹಬೀಬ್, ನೂರುಲ್ ಹಸನ್, ಕೆ.ಎಸ್.ಮ್ಯಾಥ್ಯು, ಐ.ಪಿ. ಗುಪ್ತ ಮೊದಲಾದವರು. ಈ ವಿದ್ವಾಂಸರು ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಸಂದರ್ಭದ ನಗರ ಕೇಂದ್ರಗಳ ವಿವರಣಾತ್ಮಕ ಮತ್ತು ವಿಶ್ಲೇಷಣಾತ್ಮಕ ಅಧ್ಯಯನವನ್ನು ನಡೆಸಿದ್ದಾರೆ.

ಆರ‍್ನಾಲ್ಡ್ ಟಾಯಿನ್‌ಬಿ ಅವರು ತಮ್ಮ ಎ ಸ್ಟಡಿ ಹಿಸ್ಟರಿ (ಲಂಡನ್ ೧೯೩೫) ಮತ್ತು ಸಿಟೀಸ್ ಆನ್ ದ ಮೂವ್ (ಲಂಡನ್ ೧೯೭೦) ಗ್ರಂಥಗಳಲ್ಲಿ ನಗರಗಳ ವ್ಯಾಖ್ಯಾನ ಹಾಗೂ ಅವುಗಳ ಅಧ್ಯಯನದ ಚಾರಿತ್ರಿಕ ಮಹತ್ವವನ್ನು ವಿವರಿಸಿದ್ದಾರೆ. ಅವರ ಪ್ರಕಾರ,

ನಗರವು ಒಂದು ಜನಸಮುದಾಯ, ಅಲ್ಲಿನ ನಿವಾಸಿಗಳು ಅನುತ್ಪಾದಕ ವರ್ಗಕ್ಕೆ ಸೇರಿದವರು. ಅವರಿಗೆ ಬೇಕಾದ ಆಹಾರ ನಗರ ಪ್ರದೇಶದ ವ್ಯಾಪ್ತಿಯೊಳಗೆ ಉತ್ಪಾದನೆಗೊಳ್ಳುವುದಿಲ್ಲ. ಆದರೆ ನಗರಗಳು ಕೇವಲ ಗ್ರಾಮೀಣ ಪ್ರದೇಶಗಳಿಂದ ಆಹಾರೋತ್ಪನ್ನ ಹಾಗೂ ಇನ್ನಿತರ ಸರಕುಗಳನ್ನು ಖರೀದಿಸುವ ಮತ್ತು ವ್ಯಾಪಾರ ನಡೆಸುವ ಕೇಂದ್ರಗಳು ಮಾತ್ರ ಅಲ್ಲ. ದಟ್ಟವಾದ ಜನಸಂದಣಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಜೀವಿಸುವುದಷ್ಟೇ ಒಂದು ಪ್ರದೇಶವನ್ನು ನಗರ ಪ್ರದೇಶವನ್ನಾಗಿ ಮಾಡಲಾರದು. ಅಲ್ಲಿ ವಾಸಿಸುವ ಜನರಿಗೆ ನಗರಜೀವನ ವಿಧಾನ ಗೊತ್ತಿರಬೇಕು, ನಗರಪ್ರಜ್ಞೆ ಇರಬೇಕು. ಒಂದು ವಿಶಿಷ್ಟ ಜೀವನಕ್ರಮವನ್ನು ಹುಟ್ಟು ಹಾಕುವ, ಸಂಘ ಜೀವನ ನಡೆಸುವ ವ್ಯವಸ್ಥೆಯೊಂದು ಕಾಣಿಸಬೇಕು. ಅಂಥ ಪ್ರದೇಶವನ್ನು ಮಾತ್ರ ನಗರ ಪ್ರದೇಶ ಎಂಬುದಾಗಿ ಸೂಚಿಸಬಹುದು.

ಪ್ರಪಂಚದ ಚರಿತ್ರೆಯೆಂದರೆ ಅದು ನಗರ ಚರಿತ್ರೆ. ಏಕೆಂದರೆ ನಗರಗಳು ನಾಗರಿಕತೆಯ ಕನ್ನಡಿಗಳಿದ್ದಂತೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.

ಬಿ. ಸ್ಪೆಂಗ್ಲರ್ ಅವರ ದಿ ಡಿಕ್ಲೈನ್ ಆಫ್ ದ ವೆಸ್ಟ್ (ನ್ಯೂಯಾರ್ಕ್ ೧೯೨೮) ಕೃತಿಯಲ್ಲಿ ನಗರ ಚರಿತ್ರೆ ಅಧ್ಯಯನದ ಪ್ರಾಮುಖ್ಯತೆಯ ವಿವರಣೆಯಿದೆ. ಪ್ರಪಂಚದ ಚರಿತ್ರೆಯನ್ನು ಅರ್ಥೈಸಿಕೊಳ್ಳಬೇಕಾದರೆ ನಗರ ಚರಿತ್ರೆಯ ಅಧ್ಯಯನ ಅತ್ಯವಶ್ಯಕ ಹಾಗೂ ನಗರ ಚರಿತ್ರೆಯೆಂದರೆ ಅದು ನಾಗರಿಕತೆಗಳ ಏಳು-ಬೀಳುಗಳ ಚರಿತ್ರೆ ಎನ್ನುವ ಅಭಿಪ್ರಾಯ ಸ್ಪೆಂಗ್ಲರ್ ಅವರದು. ಲೂಯಿ ವಿರ್ತ್ ಅವರು ತಮ್ಮ ದಿ ಅರ್ಬನ್ ಸೊಸೈಟಿ ಆಂಡ್ ಸಿವಿಲೈಸೇಷನ್‌ನಲ್ಲಿ (೧೯೪೦) ನಗರಗಳು ನಾಗರಿಕತೆಗಳ ಸಂಕೇತಗಳು ಎಂದಿದ್ದಾರೆ. ಅವರ ಪ್ರಕಾರ ನಾಗರಿಕತೆಗಳ ಚರಿತ್ರೆಯನ್ನು ಬರೆಯುವುದೆಂದರೆ ಅದು ನಗರಗಳ ಚರಿತ್ರೆಯನ್ನು ಬರೆದಂತೆ. ಹೆನ್ರಿ ಪೈರೆನ್ ಅವರು ಮಿಡೀವಲ್ ಸಿಟೀಸ್ (ಪ್ರಿನ್‌ಸಿಟಾನ್ ೧೯೨೫) ಕೃತಿಯಲ್ಲಿ ನಗರವನ್ನು ಆರ್ಥಿಕ ಅಂಶಗಳ ಆಧಾರದ ಮೇಲೆ ವಿವರಿಸಲು ಪ್ರಯತ್ನಿಸಿದ್ದಾರೆ. ಮಾರ್ಕ್ಸ್‌ವಾದಿ ವಿಚಾರಧಾರೆಯನ್ನು ಅಳವಡಿಸಿಕೊಂಡಿರುವ ಪೈರೆನ್ ಅವರು ಮಧ್ಯಕಾಲೀನ ನಗರಗಳ ಆರ್ಥಿಕ ಚರಿತ್ರೆಯನ್ನು ನಿರ್ಮಿಸಿದರು. ಅದೇ ರೀತಿ ಪೇಟೆ-ಪಟ್ಟಣ, ನಗರ ಮುಂತಾದ ಕಲ್ಪನೆಗಳ ವ್ಯಾಖ್ಯಾನವನ್ನೂ ನೀಡಿದ್ದಾರೆ. ಮಾಕ್ಸ್‌ವೆಬರ್ ತಮ್ಮ ದಿ ಸಿಟಿ (ನ್ಯೂಯಾರ್ಕ್ ೧೯೫೮) ಎನ್ನುವ ಗ್ರಂಥದಲ್ಲಿ ನಗರದ ಸ್ವರೂಪವನ್ನು ಮತ್ತು ಅದರ ರಾಜಕೀಯ, ಆರ್ಥಿಕ ಕಾರ್ಯಗಳನ್ನು ಪರೀಕ್ಷಿಸುವ ಕೆಲಸ ಮಾಡಿದರು. ಜಿ.ಎಸ್.ಘುರ್ಯೆ ಅವರು ಸಿಟೀಸ್ ಸಿವಿಲೈಸೇಷನ್ (ಬಾಂಬೆ ೧೯೬೨) ಎನ್ನುವ ಗ್ರಂಥದಲ್ಲಿ ನಗರಗಳ ಸಾಮಾಜಿಕ ಅಧ್ಯಯನವನ್ನು ನಡೆಸಿದರು. ಅವರು ನಗರೀಕರಣದ ಚಾರಿತ್ರಿಕ ಹಾಗೂ ತೌಲನಿಕ ಅಧ್ಯಯನವನ್ನು ಮತ್ತು ಗ್ರಾಮ=ನಗರ ಸಮಾಜಗಳ ಸಂಬಂಧಗಳ ಕುರಿತು ಅಧ್ಯಯನ ನಡೆಸಿದರು. ಆರ್.ಇ.ಪಾರ್ಕ್ ಅವರು ನಗರವು ಅದರದೇ ಆದ ಭೌತಿಕ ಮತ್ತು ನೈತಿಕ ಕ್ರಮಗಳ ನಿಯಮಗಳುಳ್ಳ ಒಂದು ಪ್ರಾಕೃತಿಕ ರಚನೆಯಾಗಿದೆ ಎಂದಿದ್ದಾರೆ.