ಬಹುಸತ್ಯಗಳ ಅನಾವರಣ

ಸತ್ಯವೆಂಬುದು ಒಂದೇ, ಅದನ್ನು ಅನೇಕ ರೀತಿಯಲ್ಲಿ ಪರಿಭಾವಿಸಲಾಗುತ್ತದೆ ಎಂಬ ಮಾತಿದೆ. ಇದನ್ನು ಆಧ್ಯಾತ್ಮಿಕ ವೈಚಾರಿಕತೆಯಲ್ಲಿ ಅತಿ ಗಹನವಾದ ನಿಲುವು ಎಂದೂ ಪರಿಗಣಿಸಲಾಗಿದೆ. ಇದು ದೇವರ ಅಸ್ತಿತ್ವವನ್ನು ಸ್ಥಾಪಿಸುವ ತಾರ್ಕಿಕ ಪರಿಯೂ ಹೌದು. ಅಖಂಡ ಸತ್ಯವನ್ನು ಅನ್ವೇಷಿಸಿ, ಅದನ್ನು ಸಾದರಪಡಿಸುವ ನಿರ್ವಹಣೆಯನ್ನು ತತ್ವಶಾಸ್ತ್ರ ತಜ್ಞರು, ಇತಿಹಾಸತಜ್ಞರು, ಮತ್ತಿತರ ಬಗೆಯ ಚಿಂತಕರು ಕಾಲಕಾಲಕ್ಕೆ ವಹಿಸಿಕೊಂಡರು. ಇತಿಹಾಸವು ದೈವೇಚ್ಛೆಯನ್ನು ಪ್ರಕಟಗೊಳಿಸುವ ಕಥನಾವಳಿಯೆಂದು ಸಂತ ಆಗಸ್ಟಿನ್ ನಂಬಿದ್ದರೆ ಇಹದ ಆರಾಧನೆಯಲ್ಲಿಯೇ ತನ್ನನ್ನು ತಾನು ಹೆಚ್ಚಾಗಿ ತೊಡಗಿಸಿಕೊಂಡ ಯುರೋಪಿನ ‘ಜ್ಞಾನೋದಯ’ದ ಪ್ರವರ್ತಕರು ತಮ್ಮ ಯುಗವನ್ನು ಸಾಧನೆಯ, ಸ್ವಾತಂತ್ರ‍್ಯದ, ಉತ್ತೀರ್ಣತೆಯ ಪರ್ವಕಾಲವೆಂದು ಹೆಮ್ಮೆಪಟ್ಟರು. ಪುರೋಗಾಮಿಯಾಗಿರುವುದು ಇತಿಹಾಸದ ಸಹಜ ಸ್ವಭಾವ; ಹಾಗಾಗಿಯೇ ನಾವು ಸಾಧನೆಯ ಉತ್ತುಂಗ ಸ್ತರದ್ಲಿ ಮೆರೆಯುತ್ತಿದ್ದೇವೆ ಎಂದು ತಿಳಿದರು. ಇತಿಹಾಸದ ಎಲ್ಲಾ ಆಯಾಮಗಳನ್ನೂ ಈ ಪುರೋಗಾಮಿತ್ವದ ಪ್ರಕಟಣೆಗಳು ಎಂದು ಪ್ರತಿಪಾದಿಸಿದರು. ಹೆಗಲ್ ಕಂಡ ಇತಿಹಾಸವೂ ಜಗದಾತ್ಮದ ಸಂಘರ್ಷಕಾರಿ ಪುರೋಗಾಮಿತ್ವದ ನಿರೂಪಣೆ. ಆತ್ಮದ ಅಗೋಚರ ಸತ್ಯ- ಶಕ್ತಿಗಳು ವೇದ್ಯವಾಗುವುದು ಇತಿಹಾಸದ ಘಟನಾವಳಿಗಳಲ್ಲಿ, ಅವುಗಳ ಅರ್ಥೈಸುವಿಕೆಯಲ್ಲಿ, ಜೀವನ ಅನುಭವ, ಸಾಧನೆಗಳೆಲ್ಲವೂ, ಒಂದು ಆತ್ಮದ ತತ್ವದ ಮೂರ್ತರೂಪಗಳು. ಈ ಆದರ್ಶವಾದದ ಸರಣಿಯೇನೋ ಅಮೋಘವೇ, ಆದರೆ ಅದು ಶಿರ್ಷಾಸನದಲ್ಲಿದೆ. ಅದನ್ನು ಗಟ್ಟಿ ನೆಲದ್ಲಿ, ತನ್ನ ಕಾಲಲ್ಲಿ ತಾನೇ ನಿಲ್ಲುವಂತೆ ಮಾಡಿದ್ದೇನೆ ಎಂಬ ಹೆಗ್ಗಳಿಕೆಯಿಂದ ಕಾರ್ಲ್‌ಮಾರ್ಕ್ಸ್ ‘ಭೌತವಾದ’ವನ್ನು ಐತಿಹಾಸಿಕ ನೆಲೆಯಲ್ಲಿ ಪ್ರತಿಪಾದಿಸಿದನು. ಜೀವನವೇ ಪ್ರಜ್ಞೆಯನ್ನು ಸೃಷ್ಟಿಸುತ್ತದೆ ಅಲ್ಲದೆ ಪ್ರಜ್ಞೆಯು ಜೀವನವಾಗಿ ಪರಿಣಮಿಸುವುದಿಲ್ಲ. ಮಾನವನು ತನ್ನ ಆರ್ಥಿಕ – ಸಾಮಾಜಿಕ ಜೀವನಗಳಲ್ಲಿ ಬೆಳೆಸುವ ಸಂಬಂಧಗಳು ಸಂಘರ್ಷಗಳನ್ನು, ಸಾಧನೆಗಳನ್ನು ಸೃಷ್ಟಿಸುತ್ತವೆ. ಆದರೆ ನಿರ್ದಿಷ್ಟ ಕಾಲಘಟ್ಟಗಳಲ್ಲಿ ಈ ಸಂಬಂಧಗಳು ಸಾಧನೆಗಳನ್ನು ಕುಂಠಿತಗೊಳಿಸುತ್ತವೆ; ಸಾಮಾಜಿಕ – ಆರ್ಥಿಕ ಬೆಳವಣಿಗೆಯ ವಾಹಕವಾಗಿ ಸೋಲುತ್ತವೆ. ಆಗ ಹೊಸ ವ್ಯವಸ್ಥೆ-ಸಂಬಂಧಗಳು ಹಳೆಯ ಶಿಥಿಲತೆಗಳನ್ನು ಮೀರಿ ಆವಿರ್ಭಸುತ್ತವೆ; ಸಮಾಜದ ಹೊಸ ಕಾಲಘಟ್ಟದ ಹೊಸ ಅವಶ್ಯಕತೆಗಳನ್ನು ಪೂರೈಸುತ್ತವೆ. ತಾಕಲಾಟ, ಸಂದಿಗ್ಧಗಳೊಡಗೂಡಿದ ಈ ದ್ವಂದ್ವಾತ್ಮಕ ಬೆಳವಣಿಗೆಯು ಸಾಮಾಜಿಕ, ಆರ್ಥಿಕ ನ್ಯಾಯವನ್ನು ಸಂಪೂರ್ಣವಾಗಿ ಗಳಿಸಲು ಸಾಧ್ಯವಾಗುವ ಒಂದು ನಿರ್ವಾಣ ಸ್ಥಿತಿಯನ್ನು ತಲುಪುತ್ತದೆ ಎಂದು ನಂಬಿದ ಮಾರ್ಕ್ಸ್ ಇತಿಹಾಸಕ್ಕೆ ಒಂದು ನಿರ್ದಿಷ್ಟ ರೂಪ, ವಿಕಸನ ಕ್ರಮವನ್ನು ಆರೋಪಿಸಿದನು. ಈ ಎಲ್ಲಾ ಚಿಂತಕರೂ ಇತಿಹಾಸದಲ್ಲಿ ಸತ್ಯವೊಂದು ಅಡಗಿದೆ, ಅದಕ್ಕೆ ಖಚಿತವಾದ ರೂಪ, ಗುರಿ ಎಂಬುದು ಇವೆ, ಅದನ್ನು ಅರಿಯುವುದು ಅರಿತು ನಡೆಯುವುದು ಶ್ರೇಯಸ್ಕರ ಎಂದು ನಂಬಿದ್ದರು. ಇದನ್ನು ಇತ್ತೀಚಿನ ದಿನಗಳಲ್ಲಿ ‘ಆಧುನಿಕತೆ’ಯ (ಅವ) ಲಕ್ಷಣ ಎಂದು ಆಧುನಿಕೋತ್ತರ ಚಿಂತಕರು ಬಣ್ಣಿಸಿದ್ದಾರೆ. ಇತಿಹಾಸವು ನಿರ್ದಿಷ್ಟವಾದ ಸತ್ಯವನ್ನು ಪ್ರಕಟಪಡಿಸುವ ಮಹಾ ಕಥನವಾಗುವುದು ಕೆಲವು ಪ್ರಭುತ್ವಗಳ ಒತ್ತಡಗಳಿಂದ, ಇವೆಲ್ಲವೂ ಹೇರಲ್ಪಟ್ಟ ಸತ್ಯಗಳು, ಯುರೋಪ್ ಕೇಂದ್ರಿತ ಸತ್ಯಗಳು. ಇವು ಯಾವೂ ಸತ್ಯಗಳಾಗಿ ಉಳಿಯಲಿಲ್ಲ. ಜಾಗತಿಕ ಯುದ್ಧಗಳು ಪುರೊಗಾಮಿತ್ವವನ್ನು ಅಲ್ಲಗೆಳೆದವು. ವಸಾಹತುಗಳು ಬೇಡಿಗಳನ್ನು ಕಳಚಿಕೊಂಡು ತಮ್ಮ ಸ್ವಂತಿಕೆಯನ್ನು ಸ್ಥಾಪಸಿಕೊಂಡಂತೆ ಯುರೋಪಿನ ಜಾಗತಿಕ ಪ್ರಭುತ್ವವೂ ಸೊರಗತೊಡಗಿತು. ಬ್ರಿಟಿಶ್ ಸಾಮ್ರಾಜ್ಯದಲ್ಲೂ ಸೂರ್ಯನಿಗೆ ಮುಳುಗುವ ಪರವಾನಿಗೆ ದೊರಕಿತು. ಏಷ್ಯಾ, ಆಫ್ರಿಕಾ, ದಕ್ಷಿಣ ಅಮೆರಿಕಾಗಳಲ್ಲಿ ಸ್ವಂತಿಕೆಯ ದಿಟ್ಟತನವು ಕಾಣತೊಡಗಿತು. ಇದೆಲ್ಲಾ ರಾಜಕೀಯ ನೆಲೆಯಲ್ಲಿ ಮಾತ್ರ ಪರಿಣಮಿಸಿದ್ದಲ್ಲ. ಗಳಿಸಿದವರಲ್ಲೂ ಕಳಕೊಂಡವರಲ್ಲೂ ಇದು ಒಂದು ಹೊಸ ನಿಲುವನ್ನು ಸೃಷ್ಟಿಸಿತು. ಇಷ್ಟು ದಿನ ಸತ್ಯವು ಬಿಳಿರ ಸೊತ್ತಷ್ಟೇ ಆಗಿತ್ತು. ಜಾಗತಿಕ ಇತಿಹಾಸ ಬಿಳಿ ಯುರೋಪಿನ ಸುತ್ತ ಚಲಿಸುವ ವಿಷಯವಾಗಿತ್ತು. ಇದು ಬಹುಮಟ್ಟಿಗೆ ಕಳಚಿಬಿದ್ದಾಗ ಅನೇಕ ಶಕ್ತಿ ಕೇಂದ್ರಗಳು ಹುಟ್ಟಿಕೊಳ್ಳಲು ಸಾಧ್ಯವಾಯಿತು. ಆಗ ಅನೇಕ ಅಸ್ತಿತ್ವಗಳು ಪ್ರಕಟಗೊಂಡವು. ವೈಯಕ್ತಿಕತೆಗಳು ಹೆಚ್ಚು ಧೈರ್ಯಶಾಲಿಗಳಾದವು.

ಆಧುನಿಕೋತ್ತರ ಜಗತ್ತಿನಲ್ಲಿ ವಿಜೃಂಭಿಸುವುದು ಸತ್ಯ-ಸತ್ಯಗಳೊಡನೆ ನಡೆಯುವ ನೆರಳು ಗುದ್ದಾಟ. ವಿರಾಟ್ ಸತ್ಯವೆಂಬುದು ಬಸವಳಿದು ಕುಸಿದಾಗ ಎದ್ದು ಕುಪ್ಪಳಿಸುವುದು ಹಲವು ವಿಧದ ಸ್ವಂತ ಸತ್ಯಗಳು. ಕೊರಗುವ ಕರಿಯರ ಹಿರಿಮೆ, ಸ್ತ್ರೈಣತೆಯನ್ನು ನಿರಾಕರಿಸುವ ಸ್ತ್ರೀವಾದ, ಲೈಂಗಿಕ ಸ್ವಾತಂತ್ರ‍್ಯವನ್ನು ಎತ್ತಿ ಹಿಡಿಯುವ ಸಲಿಂಗರತಿ ಪ್ರತಿಪಾದನೆ, ಆರ್ಥಿಕ-ಭೌತಿಕ ಬೆಳವಣಿಗೆಯ ಮೇಲಾಟಗಳ ಏಕರೂಪೀ ದೃಷ್ಟಿಯನ್ನು ತಿರಸ್ಕರಿಸುವ ಪರಿಸರವಾದ, ಉಪೇಕ್ಷಿತರನ್ನು ಅಥವಾ ಅನಪೇಕ್ಷಿತರೆಂದೆನಿಸಿಕೊಂಡವರನ್ನು ಇತಿಹಾಸದ ಹೊನಲು ಬೆಳಕಿನೆದರು ಎಳೆದು ತಂದು ನಿಲ್ಲಿಸುವ ಕೆಳಸ್ತರವಾದಿ ಇತಿಹಾಸ. ಇವೆಲ್ಲವೂ ಅಖಂಡ ಸತ್ಯವೆಂಬ ಮಿಥ್ಯೆಯ ದುರಾಡಳಿತವನ್ನು ಪ್ರಶ್ನಿಸಿವೆ. ಭಾಷಾಶಾಸ್ತ್ರದಲ್ಲಿ ಸೊಸ್ಯೊ, ಡೆರಿಕಾ, ತತ್ವಶಾಸ್ತ್ರದಲ್ಲಿ ಕರ್ಕೆಗಾರ್ಡ್‌, ನೀಶೆ, ವಿಟಗೆನ್‌ಸ್ಟಿನ್, ಗಾಡಮರ್, ಮನಶ್ಯಾಸ್ತ್ರದಲ್ಲಿ ಲಕಾನ್, ಸಂಕೇತ ವಿಜ್ಞಾನದಲ್ಲಿ ರೊಲಾಬಾರ್ತ್‌ಇತಿಹಾಸ ಪ್ರೇರಿತ ಜ್ಞಾನ ಪ್ರಕಾರಗಳನ್ನು ಅರ್ಥೈಸುವಲ್ಲಿ ಫ್ರಾಕೊ ಮೊದಲಾದವರು ಏಕತೆಯ ಬದಲಾಗಿ ಛಿದ್ರತೆ, ನಿರಂತರವಾದ ಏಕಮುಖ ಬೆಳವಣಿಗೆಯ ಬದಲು ಆತಂಕಿತತೆ, ನಿರರ್ಗಳತೆಯ ಬದಲಾಗಿ ಉಗ್ಗುವಿಕೆ, ಕೇಂದ್ರತೆಯ ಬದಲಾಗಿ ವಿಕೇಂದ್ರತೆ, ಸಾಂದ್ರತೆಯಬದಲು ಪಸರಣಗಳನ್ನು ಸಂಕೇತವಾಗಿ ಬಳಸಿದರು. ಲೇಖಕನು ನಿರ್ದೇಶಿಸುವ ಸತ್ಯಕ್ಕಿಂತ ಓದುಗರು ಕಂಡುಕೊಳ್ಳುವ ಅಥವಾ ಸೃಷ್ಟಿಸುವ ಶಕ್ತಿಗಳೇ ಹೆಚ್ಚು ಮಹತ್ವದ್ದಾದುವು. ಸತ್ಯದ ವಿಕೇಂದ್ರೀಕರಣ ಹಾಗೂ ಅದನ್ನು ಸೃಷ್ಟಿಸುವ ಶಕ್ತಿ ಅದರ ಏಕಸ್ವಾಮ್ಯವನ್ನು ಮುರಿಯುತ್ತದೆ. ಛಿದ್ರತೆಯನ್ನು ಅನಿಷ್ಟಕಾರಿ ಎಂಬ ಭಾವನೆ ಸತ್ಯದ ಅಖಂಡತೆಯನ್ನು ಸಾರುವ ಇನ್ನೊಂದು ಬಗೆ. ಇದನ್ನು ಸೈದ್ಧಾಂತಿಕವಾಗಿ ಅಲ್ಲಗೆಳೆದಾಗ ಸತ್ಯದ ಏಕಸ್ವಾಮ್ಯವು ಕಳಚಿ ಬೀಳುತ್ತದೆ. ಕಳೆದ ಎರಡು ಶಕಗಳಿಂದ ಹುಲುಸಾಗಿ ಬೆಳೆದ ಇತಿಹಾಸ ಬರವಣಿಗೆಗಳು ಉಪೇಕ್ಷಿತ ವರ್ಗಗಳ ಬಿಡಿ ಕಥನಗಳನ್ನು ಬಿತ್ತರಿಸಿದವು. ‘ಸತ್ಯ’ ಎಂಬುದು ಪ್ರಬಲರ ಮಹಾಕಥನವಾಗಿ ಇತಿಹಾಸದಲ್ಲಿ ಪರಿಣಮಿಸಿದ್ದು ಇತಿಹಾಸಕ್ಕೂ ದುರಂತ, ಕೆಳಸ್ತರದ ವರ್ಗಗಳಿಗೂ ದುರಂತವಾಯಿತು.ಇದನ್ನು ರೂಢಿಸಿಕೊಂಡ ಇತಿಹಾಸ ಅಥವಾ ಅದಕ್ಕೆ ಹೊಂದಿಕೊಂಡ ಜ್ಞಾನಪ್ರಕಾರಗಳು ಹೆಪ್ಪುಗಟ್ಟಿ ಗೊಡ್ಡು ಭಾರವಾಗಿ ಕುಳಿತಾಗ ಅವು ಹೊಸತನ್ನು ಕಳಕೊಳ್ಳುತ್ತವೆ. ಇದನ್ನು ನಿರಾಕರಿಸುವುದು ಬಲಹೀನರ ಶಕ್ತೀಕರಣ ಮಾತ್ರವಲ್ಲ, ಇದು ಸಮಾಜದ ರಾಜಕೀಯ ಹಾಗೂ ನಮ್ಮ ಸಮಗ್ರ ದೃಷ್ಟಿಕೋನಗಳನ್ನು ಬದಲಾಯಿಸಲು ಶಕ್ತವಾಗುತ್ತದೆ. ರಣಜಿತ್ ಗುಹಾ ಮತ್ತು ಅವರ ಸಂಗಡಿಗರು ಹೊರತಂದ ಹೊತ್ತಗೆಗಳಲ್ಲಿ ಅನೇಕ ವಿಕೇಂದ್ರೀಕೃತ ದೃಷ್ಟಿ, ಸತ್ಯಗಳನ್ನು ಪ್ರತಿಪಾದಿಸಲಾಗಿದೆ. ಕೆಳಸ್ತರದವರ ಇತಿಹಾಸು ಪ್ರಬಲರ ಮಹಾಕಥನದ ಪುಂಗಿಯ ನಾದಕ್ಕೆ ಸುಮ್ಮನೆ ತಲೆಯಾಡಿಸಿ ಮೈಯಾಡಿಸುವಂಥಾದ್ದಲ್ಲ. ಶಿಷ್ಟ ಇತಿಹಾಸದ ಯಜಮಾನಿಕೆಯನ್ನು ಮೀರಿ ನಿಲ್ಲುವ ಸ್ವಂತಿಕೆ ಅದರಲ್ಲಿದೆ. ಅದನ್ನು ಗುರುತಿಸಿದಾಗ ಮಾತ್ರ ಕೆಳಸ್ತರದವರ ಇತಿಹಾಸಕ್ಕೆ ಅರ್ಥ ಬರುತ್ತದೆ ಎಂಬುದು ಅದರ ವಾದ. ರೈತ ಬಂಡಾಯಗಳ ಕೆಲವು ನಿದರ್ಶನಗಳು, ಬುಡಕಟ್ಟು ಪಂಗಡಗಳ ಪ್ರಕಟಗೊಂಡ ರೋಷ ಅಥವಾ ಕಾರ್ಮಿಕ ವರ್ಗಗಳ ಹೋರಾಟಗಳು ಇವುಗಳಲ್ಲಿ ಚಿತ್ರಿತಗೊಂಡಿವೆ. ಅವುಗಳ ಹೊಸತನವಿರುವುದು ಕೆಳಸ್ತರದ ಇತಿಹಾಸದ ಸ್ವಂತಿಕೆಯಲ್ಲಿ ತಮ್ಮ ನೆಲೆಯನ್ನು ಅಥವಾ ಇತಿಹಾಸದ ಚೌಕಟ್ಟನ್ನು ಅವರು ಪರಿಭಾವಿಸುವ ರೀತಿ ಭಿನ್ನವಾದದ್ದು. ಇತಿಹಾಸದ ಯಜಮಾನರ ಯೋಜನಾ ವರಸೆ ಅಥವಾ ಕಾರ್ಯವಿಧಾನಗಳ ಸಂಕೋಲೆಗಳನ್ನು ತೊಟ್ಟು ಕೊಳ್ಳದೆ ಅವರು ಸ್ವತಂತ್ರವಾಗಿ ವ್ಯವಹರಿಸುವ ರೀತಿಯನ್ನು ತಿಳಿದಾಗ ಇತಿಹಾಸವು ಪ್ರಭಾವ ಶಾಲಿಗಳ ಮನೆ ಸೊತ್ತಾಗುವುದಿಲ್ಲ. ಕೆಳಸ್ತರದ ಇತಿಹಾಸಗಳು ರಂಗ ಪ್ರವೇಶ ಮಾಡುವುದು ಆ ವರ್ಗಗಳ ಬಂಡಾಯದ ಅಥವಾ ಅವರ ತುಡುಗಣಿತವು ವ್ಯಕ್ತವಾಗುವ ಸಂದರ್ಭಗಳಲ್ಲಿ ಇಲ್ಲವಾದರೆ ಅವರು ಮೂಕರಾಗಿಯೇ ಉಳಿಯುತ್ತಾರೆ ಎಂಬುದು ಸ್ವಲ್ಪಮಟ್ಟಿಗೆ ಸತ್ಯ. ಆದರೆ ಅವರ ಆಚಾರ, ಲೋಕದೃಷ್ಟಿಗಳಲ್ಲಿರುವ ಸ್ವಂತಿಕೆ, ಅನುಭವಜನ್ಯ ಜ್ಞಾನ ಇವೆಲ್ಲಾ ಸಾಂಪ್ರದಾಯಿಕ ದೃಷ್ಟಿ, ರಚನಾ ಕ್ರಮಗಳಿಂದ ಭಿನ್ನವಾಗಿರುತ್ತದೆ. ಅವುಗಳನ್ನು ಗುರುತಿಸಿ, ಮಣೆ ಹಾಕಿದಾಗ ಇತಿಹಾಸದ ಹರವು ಹೆಚ್ಚುತ್ತದೆ, ವೈವಿಧ್ಯಮ ಸಮೃದ್ಧಿಸುತ್ತದೆ. ಶಹೀದ್ ಅಮೀನರ ಪ್ರಬಂಧವೊಂದದರಲ್ಲಿ ಹಳ್ಳಿಯ ಪಾಮರರು ಗಾಂಧೀಜಿಯವರನ್ನು ಮಹಾತ್ಮರಾಗಿ ಹೇಗೆ ಕಂಡರು ಎಂಬ ವಿಶ್ಲೇಷಣೆಯಿದೆ. ಗಾಂಧೀಜಿಯವರು ರಾಜಕೀಯ ವ್ಯಕ್ತಿಯಾಗಿ ಅವರಿಗೆ ಕಾಣಿಸಲೇ ಇಲ್ಲ. ಏಕೆಂದರೆ ರಾಜಕೀಯವು ರಾಜಕೀಯವಾಗಿ ಅರಿಗೆ ಪರಿಚಿತವಲ್ಲ. ಹಾಗಾಗಿ ಅವರು ಗಾಂಧೀಜಿಯವರನ್ನು ಕಂಡದ್ದು ತಮಗೆ ಕೆಲವು ಪರಿಚಿತವಾದ ದುಷ್ಟ ಶಕ್ತಿಗಳನ್ನು ನಿಗ್ರಹಿಸುವ ದೈವೀ ಶಕ್ತಿಯಾಗಿ; ಪವಾಡಗಳನ್ನು ಸೃಷ್ಟಿಸುವ ಅತಿ ಮಾನವನಾಗಿ; ಕೆಲವು ಮುಗ್ಧ ನೈತಿಕತೆಯ ಹರಿಕಾರನಾಗಿ. ಆ ಸಂದರ್ಭದಲ್ಲಿ ಕೇಳಿ ಬಂದ ಪವಾಡ ಕಥೆಗಳಲ್ಲಿನ ಜಮೀನ್ದಾರನ ಉದ್ಧಟತನ, ಗಾಂಧೀಜಿಯವರ ಬೋಧನೆಗಳತ್ತ ಅವನು ತೋರಿದ ತಿರಸ್ಕಾರ, ಕೊನೆಗೆ ಆತನಿಗೆ ಸಂದ ಶಾಸ್ತಿಗಳ ಪುನರುಚ್ಛಾರಗೊಳ್ಳುತ್ತವೆ. ಗಾಂಧೀಜಿಯವರು ಗೋರಖ್‌ಪುರ ಪ್ರದೇಶದಲ್ಲಿ ಪ್ರವಾಸ ಕೈಕೊಂಡಾಗ ನಡೆಯಿತೆಂಬ ಪವಾಡ ಕಥೆಗಳು ಬರೇ ಹಬ್ಬಿದ ವದಂತಿಗಳೇ, ಅಥವಾ ಅವುಗಳಲ್ಲಿ ಸ್ವಲ್ಪ ಮಟ್ಟಿಗಾದರೂ ಸತ್ಯಾಂಶವುಂಟೇ ಎಂಬ ಪ್ರಶ್ನೆ, ಅಥವಾ ಅದಕ್ಕೆ ಉತ್ತರ ಇಲ್ಲಿ ಮುಖ್ಯವಲ್ಲ. ಆ ಕಥೆಗಳು ಸತ್ಯಾಸತ್ಯತೆಯ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದೂ ಬಹು ಕಷ್ಟವೇ. ವಸ್ತುನಿಷ್ಠತೆಯ ಹೆಸರಿನಲ್ಲಿ ಈ ರೀತಿಯ ಪರೀಕ್ಷೆಯನ್ನೊಡ್ಡಿದರೆ ಇತಿಹಾಸದಿಂದ ಹಿಂಡಿ ತೆಗೆಯಬಹುದಾದ ಸತ್ಯ ತೀರ ಸ್ವಲ್ಪ ಹಾಗೂ ಶುಷ್ಕ. ಆ ಕಾರಣದಿಂದಲೇ ಇಂತಹ ಆಕರಗಳು ಸಾಮಾನ್ಯ ಇತಿಹಾಸಕಾರರ ಅಸಡ್ಡೆಗೆ ಒಳಗಾದದ್ದು. ಪರ್ಯಾಯವಾಗಿ ಜನರು ಅವರ ಅನುಭವ, ಅನುಭೂತಿಗಳ ಚೌಕಟ್ಟಿನಲ್ಲಿ ಸೃಷ್ಟಿಸುವ ಸತ್ಯಗಳು ಶಾಸ್ತ್ರಸಿದ್ಧ ಸತ್ಯದಿಂದ ಭಿನ್ನವಾಗಿ, ಹೊಸತಾಗಿ, ಹೊಳಪಾಗಿ ಗೋಚರಿಸುತ್ತವೆ. ಅವುಗಳನ್ನು ಹೆಕ್ಕಿ ಎತ್ತಿ, ಆದರಿಸುವ ಶಕ್ತಿ ಹಾಗೂ ಮನಸ್ಸು ನಮ್ಮಲ್ಲಿರ ಬೇಕು. ರಣಜಿತ್ ಗುಹಾ ಅವರ ‘ಚಂದ್ರಳ ಮರಣ’ ಇನ್ನೊಂದು ರೀತಿಯಲ್ಲಿ ಸತ್ಯದ ಅಖಂಡತೆಯನ್ನು ಸಮರ್ಥವಾಗಿ ಅಲ್ಲಗೆಳೆಯುತ್ತದೆ. ಕಳ್ಳ ಬಸಿರನ್ನು ಜಾರಿಸುವ ಅವಸರದಲ್ಲಿ ಚಂದ್ರಳು ಜೀವ ಕಳಕೊಂಡಾಗ, ಅವಳ ಮರ್ಯಾದೆ-ಜೀವಗಳನ್ನೆರಡನ್ನೂ ಉಳಿಸಲು ಶ್ರಮಿಸಿದವರು ಕಾನೂನಿನ ದೃಷ್ಟಿಯಲ್ಲಿ ತಪ್ಪಿತಸ್ಥರಾದರು. ಇದರಲ್ಲಿ ಹೀನ-ಕುಲೀನ, ಹೆಣ್ಣು-ಗಂಡು, ಮಾನವೀಯತೆ-ಕಾನೂನಿನ ದೃಷ್ಟಿಗಳ ನಡುವಿನ ಅಂತರಗಳು ಪ್ರಕಟವಾಗುತ್ತವೆ. ಕಾನೂನು, ಕುಲೀನ ವರ್ಗಗಳು ಅಥವಾ ಪುರುಷಕೇಂದ್ರಿತ ಸಮಾಜವು ಹೇರುವ ನೀತಿ ಸಂಹಿತೆಗಳು ಶೋಷಿತ ಮಹಿಳೆಯನ್ನು ಸಹಾನುಭೂತಿಯಿಂದ ನೋಡಲಾರವು. ಆ ತಪ್ಪನ್ನು ಮಾಡಿದವರು ಸತ್ಯವನ್ನು ಎತ್ತಿ ಹಿಡಿಯುವವರ ಕೋಪಕ್ಕೆ ಬಲಿಯಾಗುತ್ತಾರೆ ಎಂಬ ನಿದರ್ಶನವೂ ಅರ್ಥಪೂರ್ಣ. ಸಮಾಜದ ಧಮನಿಗಳೊಡನೆ ಸೇರಿಹೋದ ಪ್ರಭುತ್ವವು ಸತ್ಯಕ್ಕೆ ಅಖಂಡತೆಯನ್ನು ಹೇರಿ ಅದನ್ನು ತನ್ನದಾಗಿಸಿಕೊಳ್ಳುತ್ತದೆ. ಇದರ ನಿಜರೂಪವನ್ನು ಅರಿತಾಗ ಇತರರ ಸ್ಥಾನ, ದೃಷ್ಟಿಕೋನಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಆಗ ಇತಿಹಾಸದ ಕುತೂಹಲತೆಯೂ ಹೆಚ್ಚುತ್ತದೆ. ಹೀಗೆಯೇ ಕೆಳಸ್ತರದ ಅಧ್ಯಯನಗಳಲ್ಲಿ ಅನೇಕ ಅಪರೂಪದ ಗಣನೆಗೆ ಬಾರದ ಸೂಕ್ಷ್ಮ ವಿಷಯಗಳು ವಿಶ್ಲೇಷಣೆಗೆ ಒಳಗಾಗಿವೆ. ಸುಮಿತ್ ಸರ್ಕಾರ್ ಅವರು ಆಯ್ದ ‘ವಿಕ್ರಮಪುರದ ಕಲ್ಕಿ ಅವತಾರದ’ ಕಡೆಯು ನ್ಯಾಯಾಲಯವು ಗ್ರಹಿಸಲಸಾಧ್ಯವಾದ ನಿಮ್ನವರ್ಗದವನೊಬ್ಬನ ಆಕ್ರೋಶದ ವ್ಯಥೆಯನ್ನು ದಾಖಲಿಸುತ್ತದೆ. ಮಹಾಶ್ವೇತಾದೇವಿಯವರ ‘ಸ್ತನದಾಯಿನಿ’ಯು ಗಾಯಿತ್ರಿ ಸ್ಪಿವಾಕರ ನಿರಚನೆಗೆ ಒಳಪಟ್ಟಾಗ ಹೊರಹೊಮ್ಮಿದ ಸತ್ಯಗಳೂ ಪ್ರಖರವಾದ ಹೊಸ ಸಂಕೇತಗಳು. ಇಂತಹ ಪಟ್ಟಿ ಬಹಳಷ್ಟು ದೊಡ್ಡದಾಗಬಹುದು.

ಇತಿಹಾಸದಲ್ಲಿ ಅಖಂಡ ಸತ್ಯವನ್ನು ನಿರಾಕರಿಸುವಾಗ ಆಗುವ ಪರಿಣಾಮವೇನು? ಇದು ಅರಾಜಕತೆಗೆ ಆಹ್ವಾನವನ್ನೀಯುವುದಿಲ್ಲವೇ? ಸತ್ಯವು ಸಾಪೇಕ್ಷವಾದರೆ ಎಲ್ಲವೂ ಸತ್ಯವೇ. ಎಲ್ಲರೂ ಅದರ ಯಜಮಾನರೇ. ಅವರವರಿಗೆ ಅವರವರ ಸತ್ಯವೆಂದಾದರೆ ಸತ್ಯಾಸತ್ಯತೆಗಳ ವಿಶ್ಲೇಷಣೆ ಅಸಂಗತವಾಗುತ್ತದೆ. ಇದು ಗೊಂದಲವಲ್ಲವೇ? ಎಂಬ ಪ್ರಶ್ನೆ ಸಹಜವೇ. ಆಧುನಿಕೋತ್ತರ ಚಿಂತನೆಯನ್ನು ವಿರಾಟ್ ಸತ್ಯದ ದಬ್ಬಾಳಿಕೆಯ ನಿರಾಖರಣೆಯೆಂದು ಗ್ರಹಿಸುವುದಾದರೆ, ಅದನ್ನು ಹಲವು ಅಸ್ತಿತ್ವಗಳ ಸೃಷ್ಟಿ ಅಥವಾ ದೃಢೀಕರಣವೆಂದು ಪರಿಗಣಿಸುವುದೂ ಅಷ್ಟೇ ಸಮಂಜಸ. ಅಸ್ತಿತ್ವಗಳ ಸೃಷ್ಟಿಯು ಬದಲಾಗುವ ಸಮಾಜದಲ್ಲಿ ನಡೆಯುತ್ತಲೇ ಇರುತ್ತದೆ. ಇದರ ಗತಿ, ವೈಖರಿಗಳೂ ಬದಲಾಗುತ್ತಿರುತ್ತವೆ. ನಮ್ಮನ್ನು ಮುತ್ತಿದ ಪ್ರಭುತ್ವಗಳು ಪ್ರಶ್ನಿಸಲ್ಪಡುತ್ತವೆ. ಕೇಂದ್ರೀಕೃತ ಸತ್ಯದ ಒಡೆತನ, ಏಕಸ್ವಾಮ್ಯಗಳನ್ನು ಪ್ರಸ್ನಿಸದೆ ಹೊಸ ಸತ್ಯಗಳಿಗೆ ಮಾನ್ಯತೆ ದೊರಕಲು ಅಸಾಧ್ಯ. ಆಜ್ಞಾಧಾರಿಗಳು ಹೊಸ ದಾರಿಯನ್ನು ಹುಡುಕಿದಾಗ ಶಿಸ್ತು ಭಂಗವಾಯಿತೆಂದು ಸಮಾಜವು ಹುಬ್ಬು ಗಂಟಿಕ್ಕುವುದುಂಟು. ಕ್ರಾಂತಿ,ದಂಗೆ, ವಿಪ್ಲವಗಳೂ ರಕ್ತದಿಂದ ತೊಯ್ಯದಿದ್ದರೂ ಅಪಾಯಕಾರಿಯೆಂಬ ಭಾವನೆ ನಮ್ಮಲ್ಲಿದೆ. ನಮಗೆಲ್ಲಾ ಬದಲಾವಣೆ ಬೇಕು. ಆದರೆ ಅದು ಬಂದಾಗ ಆದಷ್ಟು ಒಪ್ಪಿಗೆಯಾಗುವುದಿಲ್ಲ. ಕಳಕೊಂಡದ್ದು ಹೆಚ್ಚು ಅಮೂಲ್ಯವಾಗುತ್ತದೆ. ಹೊಸತು ಅತಿಕ್ರಮಣಕಾರಿಯಾಗಿ ಕಾಣಿಸಿಕೊಳ್ಳುತ್ತದೆ. ಶಿಷ್ಟ ಸಂಪ್ರದಾಯದ ಹಿರಿಮೆಯನ್ನು ಸದಾ ಕೇಳಿಸಿಕೊಂಡು, ಅದರ ಆಳ್ವಿಕೆಯಕ್ರಮಗಳನ್ನು ಒಪ್ಪಿಕೊಂಡು ಬದುಕಿದ ಸಮಾಜದಲ್ಲಿ ಯಾವುದು ಲೇಸು, ಯಾವುದು ಹಾಳು ಎಂಬ ಭಾವನೆಗಳು ಕೆನೆಗಟ್ಟಿರುತ್ತವೆ. ಇವು ಸಂಶಯಾತೀತ, ಪ್ರಶ್ನಾತೀತ ಸತ್ಯಗಳಾಗಿ ನೆಲೆಸುತ್ತವೆ. ಅವುಗಳ ಬಗ್ಗೆ ಸಮಾಜ ಹೆಮ್ಮೆ, ಅಭಿಮಾನಗಳನ್ನು ಹೊಂದುತ್ತದೆ. ಅವುಗಳ ರಕ್ಷಣೆಗಾಗಿ ಹೋರಾಡುತ್ತದೆ. ಇತಿಹಾಸ, ಸಂಸ್ಕೃತಿ, ಮಯಾರ್ದೆಗಳೊಡನೆ ಸೇರಿ ಹೋದ ಈ ಸತ್ಯಗಳನ್ನು ಹೊಸ ಲಂಪಟತನಗಳ ಆಕ್ರಮಣದಿಂದ ರಕ್ಷಿಸುವುದು ಆದ್ಯ ಕರ್ತವ್ಯವಾಗುತ್ತದೆ. ಈ ಉಳಿವಿಗಾಗಿ ಹೋರಾಟವು ಸಮಾಜದಲ್ಲಿ, ಅದರ ಚಿಂತನೆಯಲ್ಲಿ, ಪ್ರಕ್ರಿಯೆ ಪ್ರತಿಕ್ರಿಯೆಗಳಲ್ಲಿ ನಡೆಯುತ್ತಲೇ ಇರುತ್ತದೆ. ಇದರ ತೀಕ್ಷ್ಣ ರೂಪ ಮೂಲಭೂತವಾದ. ಇದರ ಸೌಮ್ಯ, ಸಾಮಾನ್ಯ ರೂಪ ನಮ್ಮಲ್ಲೆಲ್ಲಾ ಇದೆ. ಯಾವುದು ಅತಿರೇಕ, ವಿಕೃತಿ, ಅಪಾಯಕಾರಿಯೆಂಬ ವಿಚಾರ ನಮ್ಮ ಸತ್ಯ ಸ್ಥಾಪನಾ ಶಕ್ತಿಗೆ ಬಿಟ್ಟದ್ದು. ಆದರೆ ಬದಲಾಗುವ ಜಗತ್ತಿನಲ್ಲಿ ಒಂದೇ ಆಳ್ವಿಕೆ ಹೆಚ್ಚು ಸಮಯ ಸಲ್ಲಲಾರದು. ಹೊಸ ಪ್ರಭುತ್ವಗಳು, ಅಸ್ತಿತ್ವಗಳು, ನೆಲೆಗಳು ಹುಟ್ಟಿಕೊಂಡಾಗ ಅಥವಾ ಪುಷ್ಟಿಗೊಂಡಾಗ ಅವುಗಳ ಸ್ವರ ಹೆಚ್ಚು ಸ್ಪಷ್ಟವಾಗಿ ಕೇಳಿ ಬರುತ್ತದೆ. ಅವುಗಳ ಆಶಯಗಳು ಖಚಿತ ರೂಪದಲ್ಲಿ ಪ್ರಕಟಗೊಳ್ಳುತ್ತವೆ. ಆದರೆ ಅವು ಇತರರಿಗೆ ಅಪಸ್ವರವಾಗಿ ಕೇಳಬಹುದು. ಓರಣವಾಗಿದ್ದ ಸಮಾಜವನ್ನು ಕೆದಕಿ, ರಾಡಿಗೊಳಿಸಿದ್ದೆಂದಾಗಲೀ ಅಶಿಸ್ತನ್ನು ಸಾಕಿ ಸಲಹಿದ್ದೆಂದಾಗಲೀ ಆಕ್ಷೇಪಣೆಗಳು ಹುಟ್ಟುವುದು ಅಪರೂಪವೇನಲ್ಲ. ಆದರೆ ಯಾವುದು ಓರಣ, ಯಾವುದು ಶಿಸ್ತು ಎಂಬುದನ್ನು ಕಾಲಕಾಲಕ್ಕೆ ನಾವುನಿರ್ವಚಿಸಬೇಕಾಗುತ್ತದೆ. ನಮ್ಮ ಸಮಾಜದ ಬಗ್ಗೆ, ನಮ್ಮ ತನಗಳ ಬಗ್ಗೆ, ನಮ್ಮನೆಲೆಗಳ ಬಗ್ಗೆ ಸಂವಾದ, ಜಿಜ್ಞಾಸೆಗಳು ನಡೆಯುತ್ತಾ ಇರುವುದು ಬದಲಾವಣೆಗೆ ನಾವು ಸ್ಪಂದಿಸುವ ಕ್ರಮವನ್ನು ಬಿಚ್ಚಿ ಇಡುತ್ತದೆ. ಹೊಸ ಚಿಂತನೆಗಳಲ್ಲಿ ಗೊಂದಲವನ್ನು ಕಾಣುವ ಪ್ರವೃತ್ತಿ ಎಷ್ಟೋ ಬಾರಿ ನಮ್ಮನಿಲುವುಗಳ ಬಗ್ಗೆ ನಮಗೆ ರೂಢಿಯಾದ ನಿಷ್ಠೆಯ ಫಲ. ಇದ್ದಲ್ಲಿಯೇ ಬೆಚ್ಚಗಿದ್ದು ನಮಗೆ ಬಳುವಳಿಯಾಗಿ ಬಂದ ವಿಚಾರಗಳ ತೆಕ್ಕೆಯಲ್ಲಿಯೇ ಸುಖಕಾಣುವುದು ನಾವು ಸಾಮಾನ್ಯವಾಗಿ ಕಾಣುವ ಗುಣ. ಅವುಗಳನ್ನು ಗಟ್ಟಿಯಗಿ ಸಮರ್ಥಿಸುವುದು ಸಂಪ್ರದಾಯವಾದದ ಲಕ್ಷಣ. ಆದರೆ ಸಮಾಜದ ಬದಲಾವಣೆಗಳು ಅದರ ವಿವಿಧ ಘಟಕಗಳನ್ನು ಬೇರೆ ಬೇರೆ ವಿಧವಾಗಿ ತಲುಪುತ್ತದೆ. ಆಗ ಅವುಗಳ ಪ್ರತಿಕ್ರಿಯೆಗಳೂ ಬೇರೆ ಬೇರೆ ರೀತಿಯದ್ದಾಗುತ್ತದೆ. ಅದನ್ನು ಎಲ್ಲರೂ ಯಾವಾಗಲೂ ಒಪ್ಪಲು ಸಾಧ್ಯವಿಲ್ಲ. ಅಷ್ಟು ಮಾತ್ರಕ್ಕೆ ನಾವು ಬದಲಾವಣೆಗಳನ್ನು,ಅವುಗಳ ಗತಿಯನ್ನು ನಿರಾಕರಿಸಿ ಸುಮ್ಮನೆ ಕುಳಿತರೆ ನಾವು ವಾಸ್ತವತೆಯ ವಿರುದ್ಧ ಮುಖ ತಿರುಗಿಸಿದಂತಾಗುತ್ತದೆ. ಬದಲಾವಣೆಗಳನ್ನೆಲ್ಲಾ ನಾವು ಒಪ್ಪಬೇಕೆಂದಿಲ್ಲ. ಆದರೆ ಅವುಗಳನ್ನು ಅರ್ಥ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದಾಗ ಬದಲಾವಣೆಗಳು ಹೊರೆಯಾಗುವುದಿಲ್ಲ. ಅವುಗಳ ಸಂದೇಶಗಳು ಕಹಿಯಾಗುವುದಿಲ್ಲ. ರಿಪ್‌ವಾನ್ ವಿಂಕಲ್‌ನಂತೆ ಬದಲಾವಣೆಗಳನ್ನು ಕಂಡು ಅಚ್ಚರಿಗೊಂಡು ಅಪ್ರಸ್ತುತಗೊಳ್ಳುವ ದುರಂತವೂ ತಪ್ಪಬಹುದು.

ನಮಗೆಂತಹ ಇತಿಹಾಸ ಬೇಕು?

ನಮಗೆಂತಹ ಇತಿಹಾಸಬೇಕು? ಎಂಬ ಪ್ರಶ್ನೆಯಲ್ಲಿ ಬೇರೆ ಬೇರೆ ಧ್ವನಿಗಳಿವೆ. ಈಗ ನಮಗೊಂದು ಇತಿಹಾಸವಿದೆ; ಅದು ಸಮರ್ಪಕವಾಗಿಲ್ಲ; ಅದರ ಬದಲಾಗಿ ನಮಗೆ ಇನ್ನೊಂದು ಇತಿಹಾಸ ಬೇಕು ಎಂಬುದು ಧ್ವನಿ. ನಮ್ಮೆಲ್ಲರಿಗೂ ಒಂದೇ ಇತಿಹಾಸ ಬೇಕು; ಅದು ಯಾವುದು, ಅದು ಹೇಗಿರಬೇಕು ಎಂದು ನಿರ್ಧರಿಸುವ ಶಕ್ತಿ ಮತ್ತು ಅಧಿಕಾರ ಕೆಲವರಿಗೆ ಇದೆ; ಅದನ್ನು ಅವರಿಂದ ಕೇಳಿ ಪಡೆಯುವ ಸ್ವಾತಂತ್ರ‍್ಯ ನಮಗಿದೆ ಎಂಬುದು ಇನ್ನೊಂದು ಸೂಚನೆ. ನಮ್ಮ ನಮ್ಮ ಇತಿಹಾಸವನ್ನು ರಚಿಸುವ ಹಕ್ಕು ನಮ್ಮದು. ಅದನ್ನು ಚಲಾಯಿಸುವ ಹಕ್ಕೂ ನಮ್ಮದೇ ಎಂಬುದು ಇನ್ನೊಂದು ಧ್ವನಿ. ಇವುಗಳಲ್ಲಿ ಯಾವುದನ್ನು ಗ್ರಹಿಸುವುದು ಎಂಬ ಆಯ್ಕೆ ಆಯಾ ಸಮಾಜದ ಬೆಳವಣಿಗೆ, ವಿವೇಚನೆಗಳಿಗೆ ಬಿಟ್ಟದ್ದು.

ದೇಶಕ್ಕೊಂದು ಇತಿಹಾಸವಿದೆ ಎಂದಾಗ ನಮ್ಮಲ್ಲೊಂದು ಏಕತೆಯಿದೆ. ಅಭಿಪ್ರಾಯಗಳ ಸುಲಭ ಹೊಂದಾಣಿಕೆ ಇದೆ ಎಂಬ ಆಶ್ವಾಸನೆಯ ಸುಖ ನಮಗೆ ಲಭಿಸುತ್ತದೆ. ಆ ಇತಿಹಾ ಇಂಥದ್ದೇ ಎಂಬ ಖಚಿತ ಅಭಿಪ್ರಾಯವು ನಿರ್ದೇಶನವಾಗಿ, ಸುಗ್ರೀವಾಜ್ಞೆಯಾಗಿ ಪರಿಣಮಿಸಿದಾಗ ಅದು ಅಧಿಕಾರದ ವಲಯದೊಳಗೆ ಸೇರಿಬಿಡುತ್ತದೆ. ಇತಿಹಾಸವು ಜ್ಞಾನ ಪ್ರಕಾರವಾಗದೆ ಶಾಸನೀಕರಣದ ವಸ್ತುವಾಗುತ್ತದೆ. ಇತಿಹಾಸ ರಚನೆಯು ಅಧಿಕಾರತ ನೆಲೆಯಲ್ಲಿ ನಡೆದಾಗ ಆದ ಸರಿ ತಪ್ಪುಗಳು ಸರಕಾರದ ಅಥವಾ ಅದನ್ನು ಪರದೆಯ ಹಿಂದೆ ನಿಂತು ಆಡಿಸುವ ಪಕ್ಷ ಅಥವಾ ಅದನ್ನು ಆಧರಿಸುವ ಬಣಗಳ ನಿರ್ಧಾರಗಳಾಗುತ್ತವೆ.ಇತಿಹಾಸದಲ್ಲಿ ದೇವರು ಯಾರು, ದಾನವರು ಯಾರು ಎಂಬ ನಿಷ್ಕರ್ಷೆಯನ್ನು ರಾಜಕೀಯದ ಅವಶ್ಯಕತೆಗಳೇ ನಡೆಸುತ್ತವೆ. ಸರಕಾರಿ ಕಮ್ಮಟದಿಂದ ಹೊರಬಿದ್ದ ಇತಿಹಾಸವು ಅಧಿಕೃತಗೊಂಡು ಪಠ್ಯ ಪುಸ್ತಕಗಳೊಳಗೆ ನುಗ್ಗಿ, ನೆಲೆಯೂರಿ ಅಲ್ಲಿಂದ ಪಾಠ ಹೇಳುವವರ, ಅದನ್ನು ಒಮ್ಮೊಮ್ಮೆ ಕೇಳುವವರ ಪುಸ್ತಕಗಳೊಳಗೆ ಹೊಕ್ಕಿ ಹೆಪ್ಪುಗಟ್ಟುತ್ತದೆ. ಅದನ್ನೊಪ್ಪದ ಅಥವಾ ಅದರಿಂದ ಭಿನ್ನವಾದ ವಿಚಾರಗಳೂ ತಿರಸ್ಕಾರಕ್ಕೊಳಗಾಗುತ್ತವೆ. ಆದರೆ ಈ ಸ್ಥಿತಿ ಶಾಶ್ವತವೇನಲ್ಲ. ರಾಜಕೀಯದ ಹವೆ ಬದಲಾದಾಗ, ನಮಗೆ ಹೊಸ ಆಳರಸರು ಬಂದಾಗ ಸತ್ಯ ಹುಸಿಯಾಗುತ್ತ, ಗರತಿ ವಾರಾಂಗನೆಯಾಗುತ್ತಾಳೆ. ಇತಿಹಾಸದ ಅಧಿಕಾರ ಅಥವಾ ಪಕ್ಷ ರಾಜಕೀಯಕ್ಕೆ ಅಡವಾದಾಗ ಅದರ ಗತಿ ಇಷ್ಟೇ, ಬದಲಾಗಿ ಇತಿಹಾಸವನ್ನು ಜ್ಞಾನ ಪ್ರಕಾರವೆಂದು ಗ್ರಹಿಸಿದಾಗ, ಅದನ್ನುಮುಕ್ತ ಸಂಶೋಧನೆಯ ಅನಂತ ಸಾಧ್ಯತೆಯೆಂದು ತಿಳಿದಾಗ ಅದು ಕರಗಿ, ತಿಳಿಯಾಗಿ ಹರಿಯುತ್ತದೆ. ಇತಿಹಾಸಕಾರರಿಗೆ ರಾಜಕೀಯ, ಸೈದ್ಧಾಂತಿಕ ನಿಲುವುಗಳಿರಬಹುದು. ಅವು ಅವರು ಇತಿಹಾಸದ ಬಗ್ಗೆ ಎತ್ತುವ ಪ್ರಶ್ನೆಗಳನ್ನು ಸೃಷ್ಟಿಸುತ್ತವೆ. ಆದರೆ ಇತಿಹಾಸ ರಚನೆಯಲ್ಲಿ ಪಾರದರ್ಶಕತೆ ಇದ್ದಲ್ಲಿ ಅರ್ಥಪೂರ್ಣ ಸಂವಾದ ಸಾಧ್ಯ. ಪಂಡಿತರ ಸ್ತರದಲ್ಲಿ ನಡೆಯುವ ಚರ್ಚೆ ಜಿಜ್ಞಾಸೆಗಳೆಲ್ಲಾ ಇತಿಹಾಸದ ಸಾಮಾನ್ಯ ಗ್ರಾಹಕ ವರ್ಗಕ್ಕೆ ತಲುಪಲು ಅಸಾಧ್ಯ. ಹಾಗಾಗಿ ಪಂಡಿತರನ್ನು ‘ಪ್ರಜ್ಞಾವಂತ’ ರೆಂದು ಲೇವಡಿ ಮಾಡುವುದುಂಟು. ಇದು ಬರೇ ಗ್ರಾಹಕ ವರ್ಗವು ಸ್ವತಂತ್ರವಾಗಿ ಮಾಡುವ ಪ್ರತಿಕ್ರಿಯೆ ಅಲ್ಲ. ಇದು ಸೈದ್ಧಾಂತಿಕತೆಯ ಸೋಗಿನಲ್ಲಿ ರಾಜಕೀಯ ಶಕ್ತಿಗಳು ನಡೆಸುವ ಕಾರ್ಯವೈಖರಿ. ಸಾಮಾನ್ಯ ಗ್ರಾಹಕರಿಂದ ಇತಿಹಾಸ ಪಂಡಿತರನ್ನು ಗೇಲಿ ಮಾಡಿಸಿದಾಗ ಸಿಗುವ ರಾಜಕೀಯ ಲಾಭವು ಇಲ್ಲಿ ಮುಖ್ಯವಾಗುತ್ತದೆ. ಪ್ರತಿಕೆ ಮತ್ತು ಇತರ ಮಾಹಿತಿ ಮಾಧ್ಯಮಗಳು ಇದರಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಪ್ರಜಾಪ್ರಭುತ್ವದ ಮಾದರಿ ಲೋಕದಲ್ಲಿ ಇವು ಸ್ವತಂತ್ರವಾಗಿ ಹೊಣೆಗಾರಿಕೆಯಿಂದ ಕೆಲಸ ಮಾಡುವುದು ಮುಖ್ಯ. ಕೆಲವೊಮ್ಮೆ ಸ್ವೇಚ್ಛೆಯಿಂದ ಅಥವಾ ತೀವ್ರ ಒತ್ತಡಗಳಿಂದಾಗಿ ಅವು ರಾಜಕೀಯ ಶಕ್ತಿಗಳ ಅಡಿಯಾಳಾಗಿ, ನೆರಳವಾಗಿ ಕೆಲಸ ಮಾಡುತ್ತವೆ. ಇವುಗಳ ಪ್ರಖರವಾದ ನೆಲೆ ಹಂಗಾಮಿಯಾದರೂ ಈ ವಿಧವಾದ ಕಾರ್ಯವೈಖರಿ ಸಾಂಸ್ಥಿಕತೆಯ ತಳಹದಿಯನ್ನು ಪಡೆಯುತ್ತದೆ. ಹೀಗಾಗಿ ಇತಿಹಾಸದ ಪುನರಾಚನೆಯು ಅಧಿಕಾರ ವ್ಯವಸ್ಥೆಯ ಅಧೀನವಾಗುತ್ತದೆ. ದೇಶಕ್ಕೆ ಎಂತಹ ಇತಿಹಾಸಬೇಕು ಎಂಬುದನ್ನು ನಿರ್ಧರಿಸುವುದು ಈ ವ್ಯವಸ್ಥೆಯ ಹೊಣೆಗಾರಿಕೆಯೆಂದು ತಿಳಿಯಲಾಗುತ್ತದೆ. ಇದಕ್ಕೆ ರಾಷ್ಟ್ರಿಯತೆಯ, ದೇಶಾಭಿಮಾನದ ಅಂಕಿತ ದೊರೆತಾಗ ಇದು ದೇಶದ, ಸಮಾಜದ ಅಧಿಕೃತ ಇತಿಹಾಸವಾಗುತ್ತದೆ. ಇತಿಹಾಸ ಪುನಾರನೆಯು ಅಧಿಕಾರಸತ್ತೆಯ ಹೊಣೆಗಾರಿಕೆಯಾದಾಗ, ಅದರ ಸರಿತಪ್ಪುಗಳು ನಿರ್ದೇಶಿಸಲ್ಪಟ್ಟಾಗ ಇತಿಹಾಸ ಜ್ಞಾನದ ಸ್ವತಂತ್ರ ಬೆಳವಣಿಗೆಯು ದುಸ್ತರವಾಗುತ್ತದೆ.

ಇತಿಹಾಸದ ಪುನಾರಚನೆ ಎಂದರೆ ಒಂದು ಸಾಂಸ್ಥಿಕವಾಗಿ ನಡೆಯುವ ಕ್ರಿಯೆ ಎಂದು ತಿಳಿಯಲಾಗಿದೆ. ಅದಕ್ಕೆ ಸಿಗುವ ಪ್ರೇರಣೆ, ಪೋಷಣೆ ಹಾಗೂ ಜಾಹೀರಾತುಗಳು ಅದಕ್ಕೊಂದು ಸಮ್ಮತಿಯನ್ನೂ ಸೃಷ್ಟಿಸುತ್ತದೆ. ಆದರೆ ಸ್ವತಂತ್ರ ಸಮಾಜದಲ್ಲಿ ಇತಿಹಾಸ ಜ್ಞಾನವು ಮುಕ್ತವಾಗಿ ಬೆಳೆಯಬೇಕಾದರೆ ಈ ರೀತಿಯ ವ್ಯವಸ್ಥೆ ನಿಜವಾಗಿ ಆತಂಕಕಾರಿಯೇ. ಸಂಶೋಧನೆಗಳು ನಿರಾತಂಕವಾಗಿ ನಡೆದಾಗ, ಹೊಸ ಪ್ರಶ್ನೆಗಳು ಹುಟ್ಟಿದಾಗ ಅಥವಾ ಹೊಸ ಉತ್ತರಗಳು ಲಭಿಸಿದಾಗ, ಹೊಸ ಸಂವಾದಗಳು ನಡೆದಾಗ ಇತಿಹಾಸವು ಹೊಸತುಗೊಳ್ಳುತ್ತದೆ. ಪುನಾರಚನೆಗೊಳ್ಳುತ್ತಿರುತ್ತದೆ. ಇದನ್ನು ಅಧಿಕೃತರಾದ ಯಾರೂ ಉದ್ಘಾಟಿಸುವ ಅಥವಾ ಸಮಾರೋಪಗೊಳಿಸುವ ಅಗತ್ಯವಿಲ್ಲ. ಇತಿಹಾಸದ ಪುನಾರಚನೆಯು ಸಮಾಜದ ಬದಲಾವಣೆಗಳನ್ನು ಸ್ವತಂತ್ರವಾಗಿ ಪ್ರತಿಬಿಂಬಿಸುವ ಶಕ್ತಿಯನ್ನೂ ಪಡೆಯಬೇಕು. ಆಗ ಇತಿಹಾಸದ ಹರವು ಹೆಚ್ಚುತ್ತದೆ. ಹೊಸ ಅಭಿಪ್ರಾಯ, ದೃಷ್ಟಿಕೋನಗಳೂ ಮೂಡಿ ಬರುತ್ತವೆ; ಅಭಿಪ್ರಾಯ ಭೇದಗಳೂ ಹೆಚ್ಚುತ್ತವೆ. ಅವುಗಳನ್ನು ಅಧಿಕೃತ ನೆಲೆಯಲ್ಲಿ ವಿಕೃತಿಗಳೆಂದು ಘೋಷಿಸಿ ಹಾದರೀಕರಿಸುವುದು ಅಸಹನೆಯ ಅಧಿಪತ್ಯಗಳೇ. ಪ್ರಜಾತಂತ್ರದ ಬೆಳವಣಿಗೆಗೆ ಅಡ್ಡಿಯಾಗಿಯೇ ಪರಿಣಮಿಸುತ್ತಾರೆ. ಇತಿಹಾಸಕ್ಕೆ ಸಾಂಸ್ಥಿಕ ಪೋಷಣೆ ಬೇಡವೆಂದಲ್ಲ. ಆದರೆ ಅದರೊಳಗೆ ನಿರ್ದಿಷ್ಟ ಹಿತಾಸಕ್ತಿಗಳು ಬೆರೆತಾಗ ಇತಿಹಾಸಜ್ಞಾನದ ಸ್ವತಂತ್ರ ಬೆಳವಣಿಗೆಯು ಕುಂಠಿತಗೊಳ್ಳುತ್ತದೆ. ಇತಿಹಾಸವು ಯಾರೂ ಕೆಲವರು ಸೊತ್ತಾಗುತ್ತದಲ್ಲದೆ ಜ್ಞಾನ ವಸ್ತುವಾಗುವುದಿಲ್ಲ.

ಇತಿಹಾಸದ ಜ್ಞಾನವು ಸಮೃದ್ಧವಾಗಿ ಬೆಳೆಯಬೇಕಾದರೆ ಮುಕ್ತ ಅವಕಾಶವಿರಬೇಕು. ಅದಕ್ಕೆ ಸ್ವಾತಂತ್ರ‍್ಯದ ಆಮ್ಲಜನಕ ಒದಗಬೇಕು ಎಂದಾಗ ಕೆಲವು ಮುಖ್ಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಸ್ವಾತಂತ್ರ‍್ಯವನ್ನು ಬಯಸುವ ಇತಿಹಾಸಕಾರರಿಗೆ ಸಾಮಾಜಿಕ ಹೊಣೆಗಾರಿಕೆ ಇಲ್ಲವೆ? ಇದ್ದರೆ ಅದರ ಸ್ವರೂಪ, ಭಾರ ಅಥವಾ ಇತಿ-ಮಿತಿಗಳು ಏನು? ನಿರ್ಲಿಪ್ತ ಅಧ್ಯಯನ ಶೀಲತೆಯನ್ನಷ್ಟೇ ರೂಡಿಸಿಕೊಂಡ ಇತಿಹಾಸಕಾರರು ಎಷ್ಟು ಪ್ರಸ್ತುತ? ಅಧ್ಯಯನದಲ್ಲಿ ಮುಗ್ಧತೆ ಎಂಬುದು ಇದೆಯೇ? ತನ್ನ ಅಧ್ಯಯನದ ವಿಷಯ ಅಥವಾ ಅದರಿಂದ ಉದ್ಭವಿಸಬಹುದಾದ ಪ್ರಶ್ನೆಗಳು ಅಥವಾ ತೀರ್ಮಾನಗಳು ಸಮಾಜದ ಶಾಂತಿಯನ್ನು ಕಲಕಿ ಕಲುಷಿತಗೊಳಿಸುವುದಾದರೆ, ಇತಿಹಾಸಕಾರರು ಎಷ್ಟರ ಮಟ್ಟಿಗೆ ಸಹ್ಯರಾಗಬಲ್ಲರು ಎಂಬ ವಿಚಾರವೂ ಗಂಭೀರವಾದದ್ದೇ. ಇತಿಹಾಸದಲ್ಲಿ ಸಂವಾದಗೊಳ್ಳುವ ವಿಚಾರಗಳೆಲ್ಲವೂ ಸಮಾಜಕ್ಕೆ ಸಂಬಂಧಿಸಿದ್ದು ಇತಿಹಾಸಕಾರರು ಅವುಗಳ ವಾಹಕ ಮಾತ್ರ ಎಂಬ ಮಾತಿದೆ. ಆದರೆ ಎಷ್ಟೋ ಬಾರಿ ಸಮಾಜದ ಸಂದುಗೊಂದುಗಳಲ್ಲಿ ಹುದುಗಿ ಹೋದ ನೋವು. ಆಕ್ರೋಶಗಳನ್ನು ಅಗೆದು ಹೊರ ತೆಗೆದು ಅವುಗಳಿಗೆ ನಿರ್ದಿಷ್ಟ ರೂಪವನ್ನೋ ವಿರೂಪವನ್ನೋ ನೀಡಿ, ಅವುಗಳನ್ನು ಸಕ್ರಿಯಗೊಳಿಸುವ ಶಕ್ತಿ ಇತಿಹಾಸಕಾರನಿಗೆ ಇದೆ ಎಂದು ಗುರಿತಿಸಲಾಗಿದೆ. ಜಾಡಿಯ ಬಿರಡೆಯನ್ನು ಕಿತ್ತೆಸೆದು ಅದರೊಳಗೆ ಬಂಧಿಸಲ್ಪಟ್ಟ ಅನಾಹುತಕಾರಿ ಶಕ್ತಿಯನ್ನು ಮುಕ್ತಗೊಳಿಸುವ ತುಂಟತನವನ್ನು ಇತಿಹಾಸಕಾರರು ಎಸಗಬಹುದು. ಆಗ ಅವರು ಸಮಾಜಕ್ಕೆ ಆತಂಕಕಾರಿಯಾಗಿ ಪರಿಣಮಿಸುತ್ತಾರೆ. ಹಾಗಾದಂತೆ ನೋಡುವ ಜವಾಬ್ದಾರಿ ಅವರದ್ದೇ. ಅದನ್ನು ಅವರು ನಿಭಾಯಿಸದಿದ್ದಲ್ಲಿ, ಅವರನ್ನು ಸರಿದಾರಿಗೆ ತರುವ ಹೊಣೆ ಸಮಾಜದ್ದೇ. ಸಮಾಜದ ಹಿತಕ್ಕಾಗಿ ಆತನ ಸ್ವಾತಂತ್ರ‍್ಯವನ್ನು ಮೊಕಟುಗೊಳಿಸುವುದು ಸಾಧು ಎಂಬ ವಾದವಿದೆ. ಸ್ವಾತಂತ್ರ‍್ಯ ಬೇಕೆಂದು ಹೊರಟವರು ಅದೇನೋ ಅನಿವಾರ್ಯವಲ್ಲ ಎಂಬ ತೀರ್ಮಾನಕ್ಕೆ ಬಂದ ಹಾಗೆ, ಸ್ವಾತಂತ್ರ‍್ಯವು ಎಷ್ಟೋ ಬಾರಿ ಹೊರಲಾರದ ಹೊರೆಯಾಗಿ ಅದರಿಂದ ಮುಕ್ತಿಯನ್ನು ಬಯಸುವ ವಿಪರ್ಯಾಸದ ಸನ್ನಿವೇಶ ಅಪರೂಪವೇನಲ್ಲ. ಅದು ಹೇಗೆ ಇರಲಿ, ಸಾಮಾಜಿಕ ಜವಾಬ್ದಾರಿ ಎಂಬ ಗುರುತರವಾದ ನೆವದಲ್ಲಿ ಇತಿಹಾಸದ ಮುಕ್ತ ಕೃಷಿಯನ್ನು ನಿಲ್ಲಿಸಬೇಕೇ ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ‘ಸ್ವತಂತ್ರ ಸಮಾಜ, ಮುಕ್ತ ಸನ್ನಿವೇಶ’ ಎಂದಾಗ ಅದು ಇತಿಹಾಸಕಾರರಿಗೆ ಮಾತ್ರ ಸೀಮಿತವಾದುದಲ್ಲ, ಅದು ಜ್ಞಾನಾರ್ಜನೆ ಹಾಗೂ ಅದರ ಸಂವಹನೆಗಳಿಗೆ ಒಟ್ಟಾರೆ ಸಂಬಂಧಿಸಿದ್ದು. ಇತಿಹಾಸಕಾರನಿಗೆ ಯಾವುದೇ ವಿಷಯದ ಕುರಿತಾಗಿ ಯಾವುದೇ ಅಡ್ಡಿ ಇಲ್ಲದೆ ಅಧ್ಯಯನ ನಡೆಸುವ ಸ್ವಾತಂತ್ರ‍್ಯ ಅಗತ್ಯ. ಅವರ ಅಭಿಪ್ರಾಯವನ್ನು ನಿರ್ಭೀತರಾಗಿ ಹೇಳುವ ಸ್ವಾತಂತ್ರ‍್ಯ, ಶಕ್ತಿಗಳೂ ಅವಶ್ಯ. ಇತರರಿಗೆ ಅದರಿಂದ ನೋವಾಗುವ ಪ್ರಸಂಗಗಳು ಬಹಳಷ್ಟು ಸೃಷ್ಟಿಯಾದ್ದರಿಂದ ಈ ಬಗೆಯ ಸ್ವಾತಂತ್ರ‍್ಯದ ಇತಿಮಿತಿಗಳೇನು? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಇತಿಹಾಸದಲ್ಲಿ ಮನನೋಯುವ ವಿಚಾರವಿದ್ದರೆ ಅದು ಇತಿಹಾಸದ್ದಲ್ಲ; ಅದುಇಂದಿನ ರಾಜಕೀಯದ ಸೃಷ್ಟಿ. ಇತಿಹಾಸದಲ್ಲಿ ನಡೆದದ್ದು, ನಡೆಯಲಾಗದ್ದು, ಗಳಿಸಿದ್ದು, ಗಳಿಸಲಾಗದ್ದು ಇಂದು ವೃಣವಾಗಿ ಪೀಡಿಸಿದರೆ ಅದು ಇಂದಿನ ಬೇಕು ಬೇಡಗಳ ಫಲ. ಬೇರೆ ಬೇರೆ ಕಾಲಘಟ್ಟಗಳಲ್ಲಿ, ಸಂದರ್ಭಗಳಲ್ಲಿ ನಡೆದ ಘಟನೆಗಳಿಗೆ ಈಗ ಯಾರು ಹೊಣೆಗಾರರು ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಇತಿಹಾಸದಲ್ಲಿ ಮನನೋಯುವ ವಿಚಾರವಿದ್ದರೆ ಅದು ಇತಿಹಾಸದ್ದಲ್ಲ; ಅದು ಇಂದಿನ ರಾಜಕೀಯದ ಸೃಷ್ಟಿ. ಇತಿಹಾಸದಲ್ಲಿ ನಡೆದದ್ದು, ನಡೆಯಲಾಗದ್ದು, ಗಳಿಸಿದ್ದು, ಗಳಿಸಲಾಗದ್ದು ಇಂದು ವೃಣವಾಗಿ ಪೀಡಿಸಿದರೆ ಅದು ಇಂದಿನ ಬೇಕು ಬೇಡಗಳ ಫಲ. ಬೇರೆ ಬೇರೆ ಕಾಲಘಟ್ಟಗಳಲ್ಲಿ, ಸಂದರ್ಭಗಳಲ್ಲಿ ನಡೆದ ಘಟನೆಗಳಿಗೆ ಈಗ ಯಾರು ಹೊಣೆಗಾರರು ಎಂಬ ಪ್ರಶ್ನೆ ಇತಿಹಾದ್ದಲ್ಲ,ಒಂದು ಬಗೆಯ ರಾಜಕೀಯದ್ದು. ಈ ಪ್ರಶ್ನೆಯನ್ನು ಎತ್ತಿದಾಕ್ಷಣವೇ ನಾವು ಇತಿಹಾಸ ಜ್ಞಾನಕ್ಕೆ ಮುಕ್ತ ಅವಕಾಶವನ್ನು ನಿರಾಕರಿಸಿದಂತಾಗುತ್ತದೆ. ನಮಗೆ ಒಗ್ಗದ ವಿಚಾರಗಳು ಇತಿಹಾಸದಲ್ಲಿ ಅನೇಕ ನಡೆದಿವೆ. ನಮ್ಮ ಪೂರ್ವಜರು ಗೋಮಾಂಸ ಭಕ್ಷಕರೆಂದಾಕ್ಷಣ ನಾವು ಅದನ್ನು ಸಮರ್ಥಿಸಬೇಕೆಂದಾಗಲೀ, ನಾವು ಅದರ ಪಾಪದ ಪಾಲುದಾರರೆಂದಾಗಲೀ ಎಂದರ್ಥವಲ್ಲ. ಅದಕ್ಕಿಂತಲೂ ಮೊದಲು ನಮ್ಮ ಪೂರ್ವಜರು ಗುಹೆಯಲ್ಲಿ ವಾಸಿಸುತ್ತಿದ್ದರು; ಸ್ವಂತ ಬೇಟೆಯಾಡಿಯೋ, ಅದರ ಮೊದಲು ದೊಡ್ಡ ಪ್ರಾಣಿಗಳು ಬೇಟೆಯಾಡಿ ತಿಂದು ಉಳಿದದ್ದನ್ನು ಕಸಿದೋ ಬದುಕುತ್ತಿದ್ದರು. ಗಂಡುಹೆಣ್ಣುಗಳು ಲೈಂಗಿಕ ಸಂಬಂಧಗಳೂ ಮದುವೆಯೆಂಬ ಸಾಮಾಜಿಕ ಕಟ್ಟುಪಾಡು ನಿಯಂತ್ರಿಸುವ ಮೊದಲು ಸಮೃದ್ಧವಾಗಿಯೇ ಇತ್ತು. ಯಾವುದು ಈಗ ಹಾದರವೆನಿಸಿಕೊಳ್ಳುತ್ತದೋ ಅದು ಸ್ವಾಭಾವಿಕವಾಗಿಯೇ ಇತ್ತು. ನದಿ ಮೂಲ, ಋಷಿಮೂಲಗಳನ್ನು ಹುಡುಕ ಹೋಗಬೇಡಿ ಎಂದು ಬಲ್ಲವರು ಆದೇಶಿಸಿದ್ದಾರೆ. ಮುಜುಗರ ಪಟ್ಟುಕೊಳ್ಳುವ ಸನ್ನಿವೇಶಗಳನ್ನು ವೃಥಾ ಹೆಚ್ಚಿಸುವುದೇಕೆ ಎಂದು ಅವರು ಆ ಯಾದಿಯನ್ನು ದೊಡ್ಡದು ಮಾಡದೆ ಬಿಟ್ಟಿರಬೇಕು! ಇತಿಹಾಸವನ್ನು ಓದುವಾಗ ನಾವು ನಡೆಸುವ ಸಾಮಾನ್ಯ ಕ್ರಿಯೆ ಅಲ್ಲಿ ನಮ್ಮ ಪ್ರತಿಬಿಂಬವನ್ನು ಅರಸುವುದು ಅಥವಾ ನಮ್ಮ ವೈಭವೀಕೃತ ಆಶಯಗಳನ್ನು ಸೃಷ್ಟಿಸಿ ಅವುಗಳನ್ನು ಓಲೈಸುವುದು. ಇದರಲ್ಲಿ ಒದು ಬಗೆಯ ಉನ್ಮಾದ, ಅಮಲು ಪ್ರಾಪ್ತಿಯಾಗುವುರಿಂದ ಇತಿಹಾಸಕ್ಕೆ ಒಂದು ವಿಲಕ್ಷಣವಾದ ಮೋಹಕತೆ ಬರುತ್ತದೆ. ಹಾಗೆಯೇ ಇದಕ್ಕೆ ಧಕ್ಕೆ ಬಂದಾಗ ಆಕ್ರೋಶ ದುಮ್ಮಾನಗಳೂ ಹೆಚ್ಚುತ್ತವೆ. ನಮ್ಮಿಂದ ಇತಿಹಾಸವನ್ನು ಯಾರೋ ಕಸಿದುಕೊಂಡ ಭಾವನೆ ಬರುತ್ತದೆ. ಅವರನ್ನು ನಿಗರಹಿಸಿ ಇತಿಹಾಸವನ್ನು ರಕ್ಷಿಸುವ ತವಕ ಅತೀವವಾಗುತ್ತದೆ. ಪರ್ಯಾಯವಾಗಿ ಇತಿಹಾಸವು ನಿರ್ದಿಷ್ಟ ಕಾಲ, ಸನ್ನಿವೇಶಗಳಲ್ಲಿ ಘಟಿಸಿದ್ದು; ಅದರ ರಚನೆ, ವಿಶ್ಲೇಷಣೆಗಳಲ್ಲಿ ಜ್ಞಾನ ಕುತೂಹಲ, ಪ್ರಾಮಾಣಿಕತೆ, ಪಾರದರ್ಶಕತೆಗಳು ದಿವ್ಯ ಭಾವುಕತೆಯನ್ನು ನಿಯಂತ್ರಿಸುವುದು ಮುಖ್ಯ ಎಂಬ ತಿಳುವಳಿಕೆ ಅತ್ಯವಶ್ಯ. ಜ್ಞಾನಾರ್ಜನೆಯಲ್ಲಿ ಸ್ವಾತಂತ್ರ‍್ಯವೆಂದರೆ ತಮ್ಮ ಅವಶ್ಯಕತೆಗಳಿಗೆ ಅನುಗುಣವಾದ ಕೆಲವು ಸತ್ಯಗಳ ಸೃಷ್ಟಿಗೆ ಸೀಮಿತವಾದುದಲ್ಲ. ನಾವು ಎತ್ತುವ ಪ್ರಶ್ನೆಗಳನ್ನು, ನಮ್ಮ ಸಂಶಯಗಳನ್ನು ಮುಚ್ಚುಮರೆಯಿಲ್ಲದೆ ಮುಂದಿಟ್ಟು ಅವುಗಳಿಗೆ ಹುಡುಕಿದ ಉತ್ತರ, ಸಮಾಧಾನಗಳ ಎಲ್ಲಾ ಪದರು ಮಗ್ಗುಲುಗಳನ್ನು ಬಿಚ್ಚಿಟ್ಟು ನಮ್ಮ ಅಭಿಪ್ರಾಯ ತೀರ್ಮಾನಗಳನ್ನು ಮುಕ್ತವಾಗಿ ಚರ್ಚಿಸಲು ಅನುವು ಮಾಡಿಕೊಡುವ ಪರಿಸರವನ್ನು ಜ್ಞಾನ ಸ್ವಾತಂತ್ರ‍್ಯವು ಅಪೇಕ್ಷಿಸುತ್ತದೆ. ಅದು ಒದಗಿ ಬಂದಾಗ ಮಾತ್ರ ಇತಿಹಾಸದ ಸಮೃದ್ಧ ಬೆಳವಣಿಗೆ ಸಾಧ್ಯ. ಇಲ್ಲವಾದರೆ ನಾವು ನಮ್ಮ ಸ್ವಾತಂತ್ರ‍್ಯವನ್ನು ಮಾತ್ರ ಪ್ರತಿಪಾದಿಸಿದಂತಾಗುತ್ತದೆ. ನಮಗೆ ಸರಿಕಂಡದ್ದು ಸತ್ಯ. ಇತರರದ್ದು ಅಪಥ್ಯ, ಅಸಹ್ಯ ಎಂಬ ಧೋರಣೆ ನಿಜವಾದ ಸ್ವಾತಂತ್ರ‍್ಯದ ನಿರಾಕರಣೆಯಾಗುತ್ತದೆ.

ಇತಿಹಾಸದಲ್ಲಿ ಯಾವ ವಸ್ತುವಿನ ಅಧ್ಯಯನ ನಡೆಸಬೇಕು, ಯಾವ ಪ್ರಶ್ನೆಗಳನ್ನು ಎತ್ತಬೇಕು, ಯಾವ ಸೈದ್ಧಾಂತಿಕ ನಿಲುವನ್ನು ತಾಳಬೇಕು, ಯಾವ ಸತ್ಯವನ್ನು ಅರಸಬೇಕು ಎಂಬ ಆಯ್ಕೆ, ನಿರ್ಧಾರಗಳು ಇತಿಹಾಸಕಾರರದ್ದೇ. ಅದು ಹೀಗೆಯೇ ಇರತಕ್ಕದ್ದು ಎಂಬ ಆದೇಶ ಮೇಲಿನಿಂದ ಬಂದಾಗ ಇತಿಹಾಸಕಾರರ ಸ್ವಾತಂತ್ರ‍್ಯವನ್ನು ಅಣಕಿಸಿದಂತಾಗುತ್ತದೆ. ಸಮಾಜದಲ್ಲಿ ಅನೇಕ ಸಂಕೀರ್ಣ ಶಕ್ತಿಗಳು ಇತಿಹಾಸಕಾರರನ್ನು ರೂಪಿಸುತ್ತದೆ. ಇದು ಸಹಜವೆ. ಈ ಅರ್ಥದಲ್ಲಿ ಯಾರೂ ಸ್ವತಂತ್ರಲ್ಲ. ವಾಸ್ತವವಾಗಿ ನಮಗೆ ಬೇಕಾಗಿರುವುದು ಮುಕ್ತ ಅವಕಾಶ; ನಮ್ಮ ಅಭಿಪ್ರಾಯಗಳನ್ನು ತಿಳಿಸುವ ಸ್ವಾತಂತ್ರ‍್ಯ ಹಾಗೂ ಸೌಲಭ್ಯ ನಮ್ಮ ನಿಲುವುಗಳನ್ನು ಪ್ರತಿಪಾದಿಸುವ ಸ್ವಾತಂತ್ರ‍್ಯ ನಮಗೆ ಅಗತ್ಯವಿರುವಂತೆ, ಅವುಗಳನ್ನು ವಿಶ್ಲೇಷಿಸುವ, ಚರ್ಚಿಸುವ ನಿರಾಕರಿಸುವ ಸ್ವಾತಂತ್ರ‍್ಯವು ಇನ್ನೊಬ್ಬರಿಗೆ ಬೇಕು. ಆಗ ಮಾತ್ರ ನಿಜವಾದ ಪಜ್ಞಾವಂತರೊಳಗೆ ಮುಕ್ತ ಸಂವಾದವು ಸಾಧ್ಯವಾಗುತ್ತದೆ. ಜ್ಞಾನಾರ್ಜನೆಯಲ್ಲಿ ಸ್ವಾತಂತ್ರ‍್ಯದ ಆಶಯ ಹಾಗೂ ಆ ಬಗ್ಗೆ ನಡೆಯುವ ಹೋರಾಟದಲ್ಲಿ ಸೇರಬೇಕಾದ ಅಂಶವೆಂದರೆ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ. ಇವುಗಳನ್ನು ಸಾಧಿಸಿದಾಗ ಅಭಿಪ್ರಾಯ ಭೇದಕ್ಕೆ ಎಡೆಯಿದೆ. ಪ್ರಜ್ಞಾವಂತರ ಮುಕ್ತ ಸಂವಾದ ಎಂದಾಗ ಪಂಡಿತ ಪಾಮರ ಎಂಬ ಅಂತರವನ್ನು ಒಪ್ಪಿಕೊಂಡಂತಾಗುವುದಿಲ್ಲವೇ ಎಂಬ ಪ್ರಶ್ನೆ ಹುಟ್ಟುತ್ತದೆ. ಎಲ್ಲಾ ಸಂವಾದವು ಕೆಲವು ನಿರ್ದಿಷ್ಟ ಸ್ತರದಲ್ಲಿ ನಡೆಯುತ್ತದೆ. ಅದರಲ್ಲಿ ತಿಳಿದವರು ಅಥವಾ ತಿಳಿಯಲು ಶಕ್ತರಾದವರು ಮಾತ್ರ ಅರ್ಥಪೂರ್ಣವಾಗಿ ಪಾಲುಗೊಳ್ಳಬಹುದಷ್ಟೆ. ಎಲ್ಲರೂ ಎಲ್ಲರೊಡನೆ ನಡೆಸುವ ಮಾತುಕತೆ ಗುಲ್ಲೆಬ್ಬಿಸಬಹುದು. ಅದಕ್ಕಿಂತ ಹೆಚ್ಚೇನೂ ಸೃಷ್ಟಿಸಲು ಅಸಾಧ್ಯ. ಕೆಲವೊಮ್ಮೆ ಇತಿಹಾಸದ ಅಧ್ಯಯನದಲ್ಲಿ ಮೂಡಿ ಬಂದ ಸಮಸ್ಯೆಗಳನ್ನು ಪ್ರಜಾಪ್ರಭುತ್ವದ ಕಟಕಟೆಯಲ್ಲಿ ನಿಲ್ಲಿಸಿ ಇತ್ಯರ್ಥಗಳನ್ನು ಹುಡುಕುವುದುಂಟು. ಜನರೆಲ್ಲರೂ ಒಪ್ಪಿದ್ದು ಸತ್ಯ ಎಂಬ ಧೋರಣೆ ಜನಪ್ರಿಯವಾಗಬಹುದು. ಆದರೆ ಅದು ಸತ್ಯವೇ ಆಗಬೇಕೆಂದಿಲ್ಲ. ಭೂಮಿ ಚಪ್ಪಟೆಯಾಗಿದೆ, ಅದನ್ನು ಸೂರ್ಯ ಚಂದ್ರ ತಾರೆಗಳು ನಿರಂತರವಾಗಿ ಸುತ್ತುತ್ತಿರುತ್ತವೆ ಎಂದು ಒಂದು ಕಾಲದಲ್ಲಿ ಜನರೆಲ್ಲರೂ ನಂಬಿದ್ದರು. ಅದು ಸುಳ್ಳು ಎಂದವರ ಮೇಲೆ ಸಿಡಿದು ಬಿದ್ದರು. ಇಂದು ಅದನ್ನೆಲ್ಲಾ ನೆನಸಿಕೊಂಡಾಗ ಕಸಿವಿಸಿಯಾಗುತ್ತದೆ. ಹಾಗೆಯೇ ಇತಿಹಾಸದ ಅಧ್ಯಯನದಲ್ಲಿ ಸತ್ಯಾಸತ್ಯಗಳ ಇತ್ಯರ್ಥ ಮತಗಟ್ಟೆಯಲ್ಲಿ ನಡೆಯುವಂತದ್ದಲ್ಲ. ಅದು ನಿರಾತಂಕ ಅಧ್ಯಯನದಲ್ಲೇ ದೊರಕುವಂತದ್ದು, ನಮಗೆ ಅಂತಹ ಇತಿಹಾಸಬೇಕು.

ಇತಿಹಾಸದಲ್ಲಿ ಭಾವುಕತೆಗೆ ಸ್ಥಾನೇ ಇಲ್ಲವೆ? ‘ನಮ್ಮ ಮತ್ತು ನಮ್ಮದಲ್ಲದ’ ಇತಿಹಾಸದಲ್ಲಿ ವ್ಯತ್ಯಾಸವೇನೂ ಇಲ್ಲವೆ? ಇತಿಹಾಸಕಾರನು ಯಂತ್ರ ಮಾನವನಾಗಿ ಯಾವುದೇ ಉದ್ವೇಗ, ವಿಕಾರಗಳಿಗೆ ಒಳಗಾಗದೆ ಅಧ್ಯಯನ ನಡೆಸಲು ಸಾಧ್ಯವೇ? ಎಂಬ ಪ್ರಶ್ನೆಗಳು ಹುಟ್ಟುವುದು ಸಹಜ. ‘ನಮ್ಮ’ ಇತಿಹಾಸದ ಬಗ್ಗೆ ಅಕ್ಕರೆ, ಅಭಿಮಾನ ಅಥವಾ ಒಂದು ಬಗೆಯ ಮಾಲಕತ್ವ ನಮ್ಮಲ್ಲಿರುವುದು ಸಹಜ. ಅವು ಒಂದರ್ಥದಲ್ಲಿ ಅವಶ್ಯ ಕೂಡ. ಅವು ಇದ್ದಾಗ ಮಾತ್ರ ನಮ್ಮ ಇತಿಹಾಸದ ಬಗ್ಗೆ ನಮಗೆ ಕಾಳಜಿ, ಕುತೂಹಲ ಇರುತ್ತವೆ. ಆದರೆ ಇತಿಹಾಸವು ಭಾವನಾಪ್ರಧಾನವಾಗಿ ಉಳಿದರೆ ಅದು ಜ್ಞಾನಪ್ರಕಾರವಾಗಿ ಸೋಲುತ್ತದೆ. ಅಧ್ಯಯನ ಸಂಶೋಧನೆಗಳಲ್ಲಿ ಅಭಿಮಾನವನ್ನು ಮೀರುವ ಕುತೂಹಲ, ಕುತೂಹಲ ಜನ್ಯವಾದ ಪರಿಶೀಲನೆ, ಪರಿವೀಕ್ಷಣೆ, ವಿಶ್ಲೇಷಣೆ, ಅನುಮೋದನೆಯಲ್ಲಿ ನಿರಾಕರಣೆ, ನಿರಾಕರಣೆಯಲ್ಲಿ ಅನುಮೋದನೆ, ತೀರ್ಮಾನಗಳ ಬಗ್ಗೆ ಸಂಶಯ, ಸಂಶಯಗಳ ಬಗ್ಗೆ ತೀರ್ಮಾನದ ಯತ್ನ ಇವೆಲ್ಲಾ ಸಂಕೀರ್ಣ ಕ್ರಿಯೆಗಳುನಡೆಯಬೇಕು. ನಮ್ಮ ತೀರ್ಮಾನದಲ್ಲಿ ನಾವು ಸೌಖ್ಯವನ್ನು ಕಾಣುವ ಸುಲಭ ಪ್ರವೃತ್ತಿ ಹೆಚ್ಚಿನ ಅಧ್ಯಯನಕ್ಕೆ ಹಿತಕಾರಿಯಲ್ಲ. ಭಾವನಾತ್ಮಕವಾಗಿ ಇತಿಹಾಸ ಮುಂದಿನ ಅಧ್ಯಯನವನ್ನು ಅಪ್ರಸ್ತುತಗೊಳಿಸುತ್ತದೆ ಅಥವಾ ಅದನ್ನು ತಮ್ಮ ನಿರ್ದಿಷ್ಟ ಅಭಿಪ್ರಾಯವನ್ನು ಮೇಳೈಸುವ ಹಾದಿಯಲ್ಲಿ ಒಯ್ಯುತ್ತದೆ. ಇತಿಹಾಸದ ಬಗ್ಗೆ ನಮ್ಮ ತೀರ್ಮಾನಗಳು ಅಲ್ಲಿ ನಾವು ಅರಸುವ ಸತ್ಯಗಳನ್ನು ಸೃಷ್ಟಿಸುವುದಾರೆ ನಮ್ಮ ಅಧ್ಯಯನವು ನಮ್ಮ ಪೂರ್ವಗ್ರಹ, ಭಾವುಕತೆಗಳ ಅಡಿಯಾಳಾಗುತ್ತದೆ. ನಾವು ಸ್ವಾತಂತ್ರ‍್ಯಕ್ಕೆ ಅನರ್ಹರಾಗುತ್ತೇವೆ. ಇತಿಹಾಸವು ನಮ್ಮ ದೇಶದ ಒಂದು ಕಥೆ, ಒಂದು ವ್ಯಥೆ ಎಂದಾದಾಗ ಹಿಂದೆ ನಡೆಯಿತೆನ್ನಲಾದ ಇತಿಹಾಸವನ್ನು ಭಾವನಾತ್ಮಕವಾಗಿ ರೂಪಿಸುವ ಪ್ರಕ್ರಿಯೆಯನ್ನು ಕಾಣುತ್ತೇವೆ. ಅದರಲ್ಲಿ ಮರೆಯಬಾರದ್ದನ್ನು, ಮರೆಯಲಾಗದ್ದನ್ನು, ಮುಖ್ಯವಾದದ್ದನ್ನು, ಗೌಣವಾದದ್ದನ್ನು ತೋರಿಸಿ ಹೇಳುವ ಪ್ರಯತ್ನವನ್ನು ಕಂಡುಬರುತ್ತದೆ. ಇಲ್ಲಿ ಭಾವನೆಗಳು, ನೋವಿನ ನೆನಪುಗಳು, ಮಾಸದ ಗಾಯಗಳು, ಮಾಡಿದ ಸಾಹಸಗಳು, ಗಳಿಸಿದ ಜಯಗಳು-ಇವೆಲ್ಲವೂ ಗಾಥೆಗಳಾಗಿ ಒದಗಿ ಬರುತ್ತವೆ. ‘ಮರೆತು ಹೋದ ಸಾಮ್ರಾಜ್ಯವನ್ನು ಮರೆಯಲಾಗದ ಸಾಮ್ರಾಜ್ಯವಾಗಿ ಚಿತ್ರಿಸುವುದು’ ನಮ್ಮ ದಿವ್ಯ ಭಾವುಕತೆಯ ಪ್ರತೀಕವಾಗಬಹುದು. ಆದರೆ ಇತಿಹಾಸದ ಅಧ್ಯಯನವು ಭಾವುಕತೆಯನ್ನು ಮೀರಿ ನಿಲ್ಲುವುದು ಮುಖ್ಯ. ಇಲ್ಲವಾದರೆ ನಮ್ಮ ಭಾವುಕತೆಯೇ ನಮ್ಮ ಉಸಿರುವ ಕಟ್ಟಿಸಬಹುದು. ಇತಿಹಾಸದಲ್ಲಿ ಮರೆಯಬೇಕಾದ ವಿಚಾರಗಳು ಅನೇಕ ಇವೆ. ಇದು ಪರೀಕ್ಷೆ ಬರೆಯುವ ಇತಿಹಾಸದ ವಿದ್ಯಾರ್ಥಿಗಳಿಗೆ ಹೇಳುವ ಕಿವಿ ಮಾತಲ್ಲ. ಹಿಂದೆ ನಡೆದ ಘಟನೆಗಳನ್ನು ಜೀವಂತವಿರಿಸಿ ಅವುಗಳಿಗೆ ಈಗಿನ ಸಮಾಜದಲ್ಲಿ ಉತ್ತರವನ್ನು, ಶಾಸ್ತ್ರಿಯನ್ನು ಹುಡುಕುವ ಕೆಲಸವನ್ನು ಈಗಿನ ಸಮಾಜದ ಆರೋಗ್ಯದ ದೃಷ್ಟಿಯಿಂದ ಹಾಳೋ, ಲೇಸೋ ಎಂಬ ನಿರ್ಧಾರವನ್ನೂ ಈಗಿನ ಸಮಾಜವೇ ಹೊಣೆಯರಿತು ಮಾಡಬೇಕು. ಆಗ ಇತಿಹಾಸದಲ್ಲಿ ಯಾವುದನ್ನು ಮರೆಯಬೇಕು, ಯಾವುದನ್ನಲ್ಲ ಎಂಬ ವಿಚಾರ ಗುರುತರವಾಗುತ್ತದೆ. ಇತಿಹಾಸದಲ್ಲಿ ಅನೇಕ ಘಟನೆಗಳು ನಡೆದಿರಬಹುದು. ಅವುಗಳನ್ನು ಇತಿಹಾಸಕಾರರು ಹೇಳಿದ ಮಾತ್ರದಲ್ಲಿ ಅವರು ಅವುಗಳನ್ನು ಸೃಷ್ಟಿಸಿದರೆಂದಾಗಲೀ, ಅನುಮೋದಿಸಿದರೆಂದಾಗಲೀ ಅರ್ಥೈಸುವುದಲ್ಲ. ಅವರ ವೃತ್ತಿಪರ ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಸ್ಥೈರ್ಯಗಳು ಇತಿಹಾಸವನ್ನು ಜ್ಞಾನಪ್ರಕಾರವಾಗಿ ಮುಂದುವರೆಸಲು ಸಾಧ್ಯ. ಆದರೆ ಇತಿಹಾಸದ ದುರುಪಯೋಗವು ಬೇರೆಸ್ತರದಲ್ಲಿ ನಡೆಯುವಂಥದ್ದು. ಇದರ ಹೊಣೆಗಾರಿಕೆ ಸಮಾಜದ್ದೇ. ವಿಜ್ಞಾಣದ ಬೆಳವಣಿಗೆ ಅನಾಹುತಕಾರಿಯಾದಾಗ ವಿಜ್ಞಾನಿಗಳು ಅದಕ್ಕೆಷ್ಟು ಪಾಲುದಾರರು? ವಿಜ್ಞಾನವನ್ನು ವಿಕೃತ ರೂಪದಲ್ಲಿ ಉಪಯೋಗಿಸಿಕೊಂಡ ಸಮಾಜ, ಅದರ ಅವಶ್ಯಕತೆಯನ್ನು ಕಂಡು ಸಮಾಜ, ವಿಜ್ಞಾನಿಗಳತ್ತ ಆಕ್ಷೇಪ ದೃಷ್ಟಿ ಹರಿಸಿದಂತೆ ಇತಿಹಾಸವನ್ನೂ ರಾಜಕೀಯದ ನೊಗಕ್ಕೆ ಹೂಡಿ ಉಪಯೋಗಿಸಿಕೊಂಡರು. ವಾಸ್ತವವಾಗಿ ಇತಿಹಾಸವನ್ನಾಗಲೀ,ಇತಿಹಾಸಕಾರರನ್ನಾಗಲೀ ಕ್ಷುದ್ರ ದೃಷ್ಟಿಯಲ್ಲಿ ನೋಡುವ ಅಧಿಕಾರವನ್ನು ಅವರು ಹೊಂದಿಲ್ಲ. ನಾವೆಲ್ಲ ಒಂದು ರೀತಿಯಲ್ಲಿ ಒಂದಲ್ಲಾ ಒಂದು ಬಗೆಯ ರಾಜಕೀಯ ಲೇಪವನ್ನು ತಿಳಿದೋ ತಿಳಿಯದೆಯೋ ಹಚ್ಚಿಕೊಂಡರವೇ. ರಾಜಕೀಯಕ್ಕೆ ಇತಿಹಾಸದ ಆಕರ್ಷಣೆಯ ಉಪಯೋಗ ಇದ್ದದ್ದೆ. ಈ ಪಾಪಗ್ರಸ್ತ ವ್ಯವಸ್ಥೆಯಲ್ಲಿ ಮುಗ್ಧ ಇತಿಹಾಸ ಅಧ್ಯಯನ ಸಾಧ್ಯವೇ ಎಂಬ ಸಂಶಯ ನಿಜವಾದದ್ದೇ. ಆದರೂ ಈ ವ್ಯವಸ್ಥೆಯಲ್ಲೂ ಇತಿಹಾಸವನ್ನು ಒಂದು ಜ್ಞಾನ ಪ್ರಕಾರವಾಗಿ ಬೆಳೆಯಲು ಬಿಡುವುದು ಅವಶ್ಯ. ರಾಜಕೀಯತೆ ಇಂದು ನಾಳೆಗಳ ಗೊಂದಲ, ಅದನ್ನು ಮೀರಿ ಇತಿಹಾಸದ ಅಧ್ಯಯನ ರಚನೆ ಸಾಧ್ಯವಾಗಬಹುದು ಎಂಬ ಕ್ಷೀಣವಾದರೂ ಮೌನವಲ್ಲದ ಆಶಯ ಇತಿಹಾಸಕಾರರಿಗೆ ಇದೆ.

* * *