ಇತಿಹಾಸ ಮತ್ತು ಸಮಾಜಗಳೊಡನೆ ಇರುವ ಸಂಬಂಧಗಳ ಬಗ್ಗೆ ವ್ಯಾಖ್ಯಾನ ಮಾಡಲು ಹೊರಟವರು ಒಂದು ರೀತಿಯಲ್ಲಿ ಸ್ವಯಂವೇದ್ಯ ವಿಚಾರವನ್ನೇ ವಿಸ್ತರಿಸಲು ಉದ್ಯುಕ್ತರಾದವರು. ಸಮಾಜದ ಕಥೆಯೇ ಇತಿಹಾಸ. ಇತಿಹಾಸದಲ್ಲಿ ನಡೆಯುವ ಘಟನೆಗಳೆಲ್ಲವೂ ಮನುಷ್ಯರಿಗೆ ಸಂಬಂಧಿಸಿದ್ದು, ಪ್ರಾಣಿ ಸ್ವರೂಪಿ ಮಾನವರಿಗಲ್ಲ, ಸಮಾಜ ಜೀವಿಯಾದ ಮಾನವರಿಗೆ. ಮನುಷ್ಯ ಸಂಘಜೀವಿಯಾಗಿ ಹೊಂದಿದ ಸಂಬಂಧಗಳು, ಕಟ್ಟಿದ ಸಂಸ್ಥೆಗಳು, ಸ್ಫುರಿಸಿದ ಆಶಯಗಳು, ಗಳಿಸಿದ ವಿಜಯಗಳು, ಸಹಿಸಿದ ಸೋಲುಗಳು, ನಡೆಸಿದ ಕ್ರೌರ್ಯಗಳು, ಪ್ರತಿಪಾದಿಸಿದ ಸಿದ್ಧಾಂತಗಳು, ಅಥವಾ ಕಂಡಂತಹ ಕನಸುಗಳೆಲ್ಲವೂ ಇತಿಹಾಸದ ಕಥನಗಳಲ್ಲಿ ಸೇರಿ ಹೋಗುತ್ತವೆ. ಅವುಗಳನ್ನು ಅವರು ರಚಿಸಬಯಸುವುದೂ, ಹೆಳಲು ಕೇಳಲು ಬಯಸುವುದೂ ಸಹಜ. ಆದರೆ ಈ ಪ್ರಕ್ರಿಯೆಗಳಲ್ಲಿ ಅನೇಕ ರೀತಿಯ ಸಂಕೀರ್ಣತೆಗಳು ಹುದುಗಿಕೊಂಡಿವೆ. ಸಮಾಜವು ಮುಗ್ದವಾಗಿ ರಚನೆಗೊಂಡಿಲ್ಲ. ಅದರ ಬೇರೆ ಬೇರೆ ಘಟಕಗಳೂ ಹಾಗೂ ಸಂಬಂಧಗಳು ಅನೇಕ ಬಗೆಯ ಪ್ರಭುತ್ವಗಳನ್ನು ಸೃಷ್ಟಿಸುತ್ತವೆ. ಆರ್ಥಿಕ, ಸಾಮಾಜಿಕ, ರಾಜಕೀಯ ಅಥವಾ ಧಾರ್ಮಿಕ ನೆಲೆಗಳಲ್ಲಿ ಇವು ಪ್ರಕಟಗೊಂಡು ಶ್ರೇಣೀಕೃತ ವ್ಯವಸ್ಥೆಗಳನ್ನು ಸ್ಥಾಪಿಸುತ್ತವೆ. ಈ ಬಹುಮುಖಿ ಪ್ರಭುತ್ವಗಳು ತಮ್ಮ ಜಾಹೀರಾತನ್ನು ಇತಿಹಾಸದಲ್ಲಿ ನಡೆಸುವಾಗ ಇತಿಹಾಸವು ತಟಸ್ಥವಾಗಿರುವುದಾಗಲೀ, ಮುಗ್ಧವಾಗಿ ಬೆಳೆಯುವುದಾಗಲೀ ದುಸ್ತರವಾಗುತ್ತದೆ. ಸಮಾಜದ ದ್ವಂದ್ವ, ವೈರುಧ್ಯ, ಸಂಕೀರ್ಣತೆಗಳೆಲ್ಲವೂ ಇತಿಹಾಸದಲ್ಲಿ ಪ್ರತಿಧ್ವನಿಸುತ್ತಿವೆ. ಹೀಗಾಗಿಯೇ ಇತಿಹಾಸವು ಅನೇಕ ರಾದ್ಧಾಂತಗಳಲ್ಲಿ ಭಾಗಿಯಾಗುತ್ತಿರುವುದು. ಇತಿಹಾಸಕಾರರು ದಿವ್ಯ ನಾಯಕರಾಗಿಯೋ, ತುಚ್ಛ ಖಳನಾಯಕರಾಗಿಯೋ ಗೋಚರಿಸುತ್ತಾರೆ. ಪ್ರಭುತ್ವಗಳ ಪ್ರತಿಪಾದನೆಯಲ್ಲಿ ಇತಿಹಾಸವು ಸೇರಿ ಹೋದಾಗ ಅದರ ರಚನೆ, ವಸ್ತು ಅಭಿಪ್ರಾಯ, ಜಿಜ್ಞಾಸೆ, ಇತ್ಯರ್ಥಗಳು ಮುಗ್ಧ ಅಧ್ಯಯನವನ್ನು ಮೀರಿ, ಅನೇಕ ಸ್ತರಗಳಲ್ಲಿ ಅಖಾಡಗಳನ್ನು ಸೃಷ್ಟಿಸಿ ಸಕ್ರಿಯಗೊಳಿಸುತ್ತವೆ. ಇದರ ಪರಿಣಾಮ ಇತಿಹಾಸ ರಚನೆ, ಅಧ್ಯಯನ, ಅಧ್ಯಾಪನಗಳ ಮೇಲೆ ನೇರವಾಗಿ ಎರಗುತ್ತವೆ. ಇವಿಗಳ ಲಾಭ ರಾಜಕೀಯವಾಗಿ ಕೆಲವರಿಗೆ ಲಭಿಸಬಹುದಾದ್ದರಿಂದ ಇದರ ಲಾಲನೆ-ಪಾಲನೆ ಪೋಷಣೆಗಳು ಚೆನ್ನಾಗಿ ನಡೆಯುತ್ತವೆ. ಆದರೆ ಇತಿಹಾಸವನ್ನು ಒಂದು ಜ್ಞಾನಪ್ರಕಾರವಾಗಿ ಕಂಡಾಗ ಅದರ ಮೇಲಿನ ಪರಿಣಾಮ ಏನಾಗಬಹುದು ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಸಮಾಜವನ್ನು ಪ್ರತಿನಿಧಿಸುವ ಅಥವಾ ಪ್ರತಿಬಿಂಬಿಸುವ ಇತಿಹಾಸ ಅಥವಾ ತನ್ನ ಅವಶ್ಯಕತೆಗಳನ್ನು ಪೂರೈಸಲು ಕಾಲಕಾಲಕ್ಕೆ ಸಮಾಜವು ರೂಪಿಸಿಕೊಳ್ಳುವ ಇತಿಹಾಸ, ಇದರಲ್ಲಿ ಇತಿಹಾಸಕಾರರ ನೆಲೆ, ಬೆಲೆ ಮೊದಲಾದ ವಿಚಾರಗಳು ಸದಾ ಬದಲಾಗುತ್ತಿರುವ ಸಮಾಜ ಹಾಗೂ ಅದರ ಸಂವೇದನಾ ಸ್ವರೂಪವನ್ನು ತಾಳಬಲ್ಲ, ಇತಿಹಾಸ-ಇವುಗಳೊಡನೆ ಸಂಬಂಧಗಳ ಜಟಿಲತೆ ಅಥವಾ ಪ್ರಶ್ನಾರ್ಥಕತೆಗಳ ಬಗ್ಗೆ ಸ್ವಲ್ಪ ಗಂಭೀರವಾಗಿ ಆಲೋಚಿಸುವುದು ಅವಶ್ಯ.

ಬೇಕು ಬೇಡಗಳ ಪೀಡೆ

ಇತಿಹಾಸ ಮತ್ತು ಅದರ ಅಧ್ಯಯನ ವಿಚಾರವಾಗಿ ನಮ್ಮ ಸಮಾಜವು ಒಂದು ಬಗೆಯ ದ್ವಂದ್ವ ಭಾವವನ್ನು ತಾಳಿದೆ. ಗಣಿತ ವಿಜ್ಞಾನಗಳನ್ನು ಸುಲಭವಾಗಿ ನುಂಗಿ ‘ಜೀರ್ಣೋಭವ’ ಎನ್ನುವಷ್ಟು ಧೈರ್ಯ-ಶಕ್ತಿಯಿಲ್ಲದ ವಿದ್ಯಾರ್ಥಿಗಳಿಗೆ ಹಗುರವಾದ ಪದವಿಯನ್ನು ನೀಡುವಲ್ಲಿ ಇತಿಹಾಸ ಮತ್ತು ಅದರಂತೆ ಇನ್ನು ಕೆಲವು ಲಘು ಅಧ್ಯಯನ ವಿಷಯಗಳೂ ಉಪಯುಕ್ತ ಎಂಬ ಭಾವನೆ ನಮ್ಮಲ್ಲಿ ಅನೇಕರಿಗೆ ಇದೆ. ಗತಕಾಲದ ಹಳಸು ಕಥೆಗಳನ್ನು ತೂಕಡಿಸುವ ವಿದ್ಯಾರ್ಥಿಗಳಿಗೆ ಆಕಳಿಸುವ ಶಿಕ್ಷಕರು ಹೇಳುವ ಇತಿಹಾಸದ ದುರ್ದೆಶೆಯನ್ನು ಆಗಾಗ ಹಳಿಯುವುದುಂಟು. ‘ಅಷ್ಟೆಲ್ಲಾ ಇಸವಿಗಳನ್ನು ನೀವು ಹೇಗೆ ನೆನಪಿಟ್ಟುಕೊಳ್ಳುತ್ತೀರಪ್ಪಾ?’ ಎಂದು ಕರುಣಾಮಿಶ್ರಿತ ಅಚ್ಚರಿಯನ್ನು ಉದ್ಗರಿಸುವವರು ಕೆಲವರಾದರೆ, ಒಳ್ಳೆಯ ಮತ್ತು ಕೆಟ್ಟ ರಾಜರು ಮಾಡಬೇಕಾದ, ಮಾಡಬಾರದ ವಿಚಾರಗಳನ್ನು ದೃಢವಾಗಿ ಪಟ್ಟಿ ಮಾಡಿ ಅದನ್ನು ಯಾವುದೇ ಐತಿಹಾಸಿಕ ಸಂದರ್ಭಗಳಿಗೆ ನಿರ್ದಾಕ್ಷಿಣ್ಯವಾಗಿ ಅಳವಡಿಸಿ ಇತಿಹಾಸದ ಎಲ್ಲಾ ಗಹನ ವಿಚಾರಗಳ ಮೇಲೆ ಲೀಲಾಜಾಲವಾಗಿ ವಿವರಣೆ ನೀಡುವವರು ಇನ್ನು ಕೆಲವರು. ರಮ್ಯವಾಗಿ ಪುಟ ತುಂಬವ ವೈಖರಿಯೇ ಇತಿಹಾಸ ಪರೀಕ್ಷೆಯಲ್ಲಿ ಗೆಲ್ಲುವ ಮಾರ್ಗ ಎಂದು ನಂಬುದ ವಿದ್ಯಾರ್ಥಿಗಳು ಅನೇಕ. ಇತಿಹಾಸ ಬರೇ ಬುರುಡೆ, ಅಂತೆ-ಕಂತೆಗಳ ಸಂತೆ ಎಂಬ ಹೀಯಾಳಿಕೆಯ ಮಾತುಗಳನ್ನು ನಾವು ಕೇಳುವುದು ಅಪರೂಪವೇನಲ್ಲ.

ಇತಿಹಾಸವು ಅಣಕು, ಕಟಕಿಗಳಿಗೆ ಈಡಾಗುವುದು ಒಂದೆಡೆಯಾದರೆ ಅದರ ಅನನ್ಯ ಶ್ರೇಷ್ಠತೆಯನ್ನು ಕೊಂಡಾಡುವ ಪರಿ ಇನ್ನೊಂದು. ಇತಿಹಾಸವು ಮಾನವನ ಅನುಭವಗಳ ಬುತ್ತಿ; ಅದರ ಸರಿಯಾದ ತಿಳುವಳಿಕೆ ನಮ್ಮನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ ಎಂಬ ಆಶ್ವಾಸನೆಯನ್ನು ಪ್ರಾನ್ಸಿಸ್ ಬೇಕನ್ ನಮಗೆ ನೀಡಿದ್ದಾನೆ. ನನ್ನ ಮಗ ಇತಿಹಾಸವನ್ನು ಅಭ್ಯಸಿಸಲಿ; ಅದೇ ನಿಜವಾದ ತತ್ವಶಾಸ್ತ್ರ ಎಂದು ನೆಪೋಲಿಯನ್ ಅಪ್ಪಣೆ ಕೊಡಿಸಿದ್ದ. ಆದರೂ ಇತಿಹಾಸವು ಎಷ್ಟೋ ಮಕ್ಕಳಂತೆ ಆ ಮಗ ತಂದೆಯ ಆದೇಶವನ್ನು ಪಾಲಿಸಲಿಲ್ಲ. ಆದರೂ ಇತಿಹಾಸವು ಜ್ಞಾನದಾಯಕವೆಂಬಂತೆ ನಂಬಿಕೆ ಇತಿಹಾಸಪುರುಷರಲ್ಲದವರಲ್ಲೂ ಇತ್ತು. ಈಗಲೂ ಉನ್ನತ ಶಿಕ್ಷಣದಲ್ಲಿ ಇತಿಹಾಸ ಅಧ್ಯಯನ ನಿರುಪಯುಕ್ತ, ಅದರ ಅಂತ್ಯ ವಿಧಿಗಳನ್ನು ಶೀಘ್ರವಾಗಿ ನೆರವೇರಿಸುವುದೇ ಶಿಕ್ಷಣ ಸುಧಾರಣೆಯ ಒಂದು ಮುಖ್ಯವಾದ ಕಾರ್ಯಕ್ರಮ ಎಂದು ನಂಬಿರುವವರೂ ತಮ್ಮ ಭಾಷಣದಲ್ಲಿ ಇತಿಹಾಸದ ಒಕ್ಕಣೆ, ಅಪ್ಪಣೆ, ನಿರೂಪಣೆಗಳ ಬಗೆಗೆ ನಿರರ್ಗಳವಾಗಿ ಮಾತನಾಡುತ್ತಾರೆ. ಇತಿಹಾಸ ಬೇಕು, ಅದರ ಅಧ್ಯಯನ ಮಾತ್ರ ಅನಾವಶ್ಯ ಎಂಬ ಸೂಚನೆ ಅವರದು. ನಮ್ಮ ರಾಜರ ಹಿರಿಮೆ, ನಮ್ಮ ಧರ್ಮದ ಗರಿಮೆ, ನಮ್ಮ ಕಲೆ ಸಾಃಇತ್ಯಗಳ ಪ್ರೌಢಿಮೆಗಳು, ಐತಿಹಾಸಿಕ ಸತ್ಯ. ಅದನ್ನು ಮತ್ತೆ ಮತ್ತೆ ಹೊಗಳುವುದೇ ರಾಷ್ಟ್ರ ಪ್ರೇಮದ ಸಂಕೇತ. ಅದೇ ಕಾರಣಕ್ಕಾಗಿ ಇತಿಹಾಸವು ದೇಶಕ್ಕೆ ಅತೀ ಮುಖ್ಯವಾಗುತ್ತದೆ.

ಇತಿಹಾಸ-ಇತಿಹಾಸದ ಜ್ಞಾನ

ಇತಿಹಾಸ ಎಂದರೇನು ಎಂದು ಪ್ರಶ್ನಿಸಿದಾಗ ಅದು ಗತಕಾಲದ ಪ್ರಾಮುಖ್ಯ ಘಟನಾವಳಿಗಳ ನಿರ್ದಿಷ್ಟ ನಿರೂಪಣೆ ಎಂಬ ಉತ್ತರ ಸಾಮಾನ್ಯವಾಗಿ ದೊರಕುತ್ತದೆ. ಹಿಂದೆ ಅನೇಕ ಘಟನೆಗಳು ನಡೆದಿವೆ; ಅವುಗಳಲ್ಲಿ ಯಾವುದು ಮುಖ್ಯ, ಯಾವುದು ಅಲ್ಲ ಎಂಬ ಸ್ಪಷ್ಟ ಕಲ್ಪನೆ ನಮಗೆ ಇದೆ; ಆ ಪ್ರಕಾರವೇ ಇತಿಹಾಸವನ್ನು ರಚಿಸಲಾಗಿದೆ; ಇದು ಸತ್ಯವನ್ನು ನಿರ್ದಾಕ್ಷಿಣ್ಯವಾಗಿ ಪ್ರತಿಬಿಂಬಿಸುತ್ತದೆ- ಎಂಬ ಎಲ್ಲಾ ಖಚಿತ ಸೂಚನೆಗಳು ಈ ಉತ್ತರದಲ್ಲಿದೆ. ಎಷ್ಟೋ ಬಾರಿ ‘ಇತಿ ಐತಿಹಾಸಿಕ ಸತ್ಯ,’ ‘ಇತಿಹಾಸ ಕೂಗಿ ಹೇಳುತ್ತದೆ,’ ‘ಕಲ್ಲು ಕಲ್ಲು ಕಥೆ ಹೇಳುತ್ತದೆ’ ಎಂಬೆಲ್ಲಾ ಮಾತುಗಳಲ್ಲಿ ಇತಿಹಾಸ ಒಂದು ನಿರ್ದಿಷ್ಟ ಜ್ಞಾನ, ಅದರಲ್ಲಿ ಏನೆಲ್ಲಾ ನಡೆದಿದೆಯೋ ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬ ಧ್ವನಿ ಇದೆ. ಇದಕ್ಕೆ ವಿರೋಧವಾಗಿ ಇತಿಹಾಸವು ಹಿಂದಿನ ಘಟನೆಗಳ ಕುರಿತಾಗಿ ನಡೆಸುವ ಒಂದು ಪರದಾಟ. ಇತಿಹಾಸಕಾರರು ಹಿಡಿಯುವ ಕಂದೀಲು ಭೂತಕಾಲವನ್ನು ಆವರಿಸಿರುವ ಕತ್ತಲನ್ನು ಸಂಪೂರ್ಣವಾಗಿ ಓಡಿಸಲು ಶಕ್ತವಲ್ಲ. ಅತ ಹೆಕ್ಕಿ ರೂಢಿಸಿಕೊಂಡ ಚಿತ್ರಗಳ ಅನೇಕ ಬಾರಿ ಅಸ್ಪಷ್ಟ, ಶಿಥಿಲ. ಇದು ನಿಜವಾದ ಇತಿಹಾಸಕಾರರು ಎದುರಿಸಬೇಕಾದ ಕಷ್ಟ, ಬಿಡಿಸಬೇಕಾದ ಒಗಟು. ಆದರೆ ಓದದೇ ಇತಿಹಾಸವನ್ನರಿತಿರುವ ಅನೇಕಾನೇಕ ಜನರಿಗೆ ಅದರ ಜ್ಞಾನ ಸ್ಪಷ್ಟ, ಅದರ ತೀರ್ಪು ಸಂಶಯಾತೀತ. ಆದರೆ ಸಂಶೋಧನಾತ್ಮಕ ಇತಿಹಾಸಕಾರರಿಗೆ ಪ್ರಶ್ನೆಗಳು ಉದ್ಭವಿಸುತ್ತಲೇ ಇರುತ್ತವೆ. ಕೆಲವು ಪ್ರಶ್ನೆಗಳಿಗೆ ಉತ್ತರ ದೊರಕಿತೆಂದಾಗ ಆ ಉತ್ತರದಿಂದ ಇನ್ನಷ್ಟು ಪ್ರಶ್ನೆಗಳು ಹುಟ್ಟುಕೊಳ್ಳುತ್ತವೆ. ಈ ಪ್ರಕ್ರಿಯೆಯಲ್ಲಿ ಇತಿಹಾಸದ ಅನ್ವೇಷಣೆಯು ಹೊರನೋಟಕ್ಕೆ ಗೊಂದಲಮಯವಾಗಿ ಕಂಡರೂ ಅದು ನಿಜವಾಗಿಯೂ ಫಲಪ್ರದವಾಗುತ್ತದೆ. ಸಂಶೋಧನೆಯಲ್ಲಿ ಉತ್ತರಕ್ಕಿಂತಲೂ ಪ್ರಶ್ನೆಗಳಿಗೆ ಹೆಚ್ಚು ಮಹತ್ವ. ಇತಿಹಾಸದಲ್ಲಿ ಏಕರೂಪಿಯಾದ ಸತ್ಯವು ಹುದುಗಿಕೊಂಡಿದೆ. ಅದನ್ನು ಹೊರಗಡೆಹಿ ಪ್ರಕಟಗೊಳಿಸುವುದೇ ಇತಿಹಾಸಕಾರರ ಕರ್ತವ್ಯ ಎಂಬ ನಂಬಿಕೆ ಇತಿಹಾಸ ರಚನಾಶಾಸ್ತ್ರದಲಿ ಗಾಢವಾಗಿ ನೆಲೆಸಿದ್ದರೂ ಇದು ಅನೇಕ ಬಾರಿ ನಮಗೆ ಸಮಾಧಾನವನ್ನು ನೀಡುವಲ್ಲಿ ವಿಫಲವಾಗಿದೆ. ಅವಿಚ್ಛಿನ್ನವಾದ ಸತ್ಯವೊಂದಿದೆ ಎಂಬುದನ್ನು ತಾರ್ಕಿಕವಾಗಿ, ಆಧ್ಯಾತ್ಮಿಕವಾಗಿ ಅಥವಾ ಭಾವುಕತಗೆಯಿಂದ ನಿರೂಪಿಸಬಹುದು. ಆದರೆ ವಾಸ್ತವತೆ ಅದರಿಂದ ಹೊರಗುಳಿಯುತ್ತದೆ. ಸತ್ಯವು ಅನೇಕ ರೂಪವುಳದ್ದು; ಅವುಗಳ ಹುಡುಕಾಟದಲ್ಲಿಯೇ ಅದರ ಸೃಷ್ಟಿಯಾಗಬಲ್ಲದು. ಅವು ಕಾಲ, ಪ್ರದೇಶಗಳನ್ನು ಹೊರತಾಗಿ ಇರಲಾರವು ಎಂಬ ಅರಿವು ಹೆಚ್ಚು ಸಾಧು. ಇದರಿಂದ ಮೂಲಭೂತವಾದೀ ಚಿಂತನೆ, ಧೋರಣೆಗಳನ್ನು ನಿಗ್ರಹಿಸಲು ಸಾಧ್ಯವಾದೀತು. ಇದರಿಂದ ಸೈದ್ಧಾಂತಿಕ ಜಿಗುಟು ನಿವಾರಣೆಯಾದೀತು.

ಇತಿಹಾಸ ಎಂದರೆ ಸ್ಪಷ್ಟವಾಗಿ ಇಂಥದ್ದೇ ಎನ್ನುವ ಬದಲಾಗಿ ಅದು ಹಿಂದೆ ನಡೆದಿರಬಹುದಾದ ಘಟನೆಗಳ ಕುರಿತಾಗಿ ನಮಗಿರುವ ಜ್ಞಾನ ಎಂಬ ಅರಿವು ಬಹಳ ಮುಖ್ಯ. “ಇತಿಹಾಸವೆಂದರೇನಯ್ಯಾ? ಹಿಂದಿನ ರಾಜರ ಕತೆಗಳನ್ನು ಪದೇ ಪದೇ ಹೇಳುವುದು- ಚರ್ವಿತ ಚರ್ವಣ ಎಂಬಂತೆ ಅದೇನು ಬದಲಾಗುತ್ತದೆಯೇ? ಅದೇ ಅಶೋಕ, ಅದೇ ಅಕ್ಬರ್, ಅದೇ ಧ್ವನಿಸುರಳಿಗಳ ಶ್ರವಣ” ಎಂದು ಲೇವಡಿ ಮಾಡುವ ಜನಕ್ಕೆ ಇತಿಹಾಸ ಒಂದು ಬದಲಾಗುವ ಅಪೂರ್ಣ ಜ್ಞಾನ; ನಾವೀಗ ತಿಳಿದದ್ದು ಹಿಂದಿನವರಿಗೆ ತಿಳಿದಿರಲಿಲ್ಲ; ನಮಗೀಗ ತಿಳಿಯದ್ದು ಮುಂದಿನವರು ತಿಳಿದಾರು ಎಂಬ ವಿಚಾರದ ಅರಿವಿಲ್ಲ. ನಮ್ಮ ಇತಿಹಾಸ ಬಲು ಪ್ರಾಚೀನ ಅಮೋಘ ಎನ್ನುವ ಹೆಚ್ಚಿನ ಮಹನೀಯರಿಗೆ ಅದರ ಜ್ಞಾನ ತೀರ ಇತ್ತೀಚಿನದು ಎಂದು ತಿಳಿದಿಲ್ಲ. ಇತಿಹಾಸವು ನಮ್ಮಲ್ಲಿ ಒಂದು ಅಧ್ಯಯನ ವಿಷಯವಾದದ್ದು ನಮ್ಮ ಐರೋಪ್ಯ ಸಂಪರ್ಕದಿಂದ. ಗತಕಾಲದ ಘಟನೆಗಳಲ್ಲಿ ಪ್ರಾಮುಖ್ಯವೇನೆಂದು ನಿರ್ಧರಿಸಿ ಅದನ್ನು ಸೀಮಿತ ಶ್ರೋತೃವೃಂದಕ್ಕೆ ಪ್ರಕಟಪಡಿಸುವ ಪದ್ಧತಿ ನಮ್ಮಲ್ಲಿ ಬಹಳ ಹಿಂದೆಯೇ ಇತ್ತು. ಅದನ್ನು ರಾಜತ್ವದ ವೈಭವೀಕರಣಕ್ಕಾಗಿ ಅಥವಾ ಸಮಾಜದ ಪ್ರಭಾವಕಾರಿ ಪಂಗಡಗಳು ತಮ್ಮ ಪ್ರಭಾವವನ್ನು ಪ್ರಕಟಪಡಿಸಲು ಕ್ರಮವಾಗಿ ವಿಶೇಷವಾಗಿ ಬಳಲಾಗಿತ್ತು. ಶಾಸನಗಳ ಪ್ರಶಸ್ತಿ ಭಾಗ, ಆಸ್ಥಾನ ಕವಿಗಳು ರಚಿಸಿದ ಕಾವ್ಯ ಪ್ರಶಸ್ತಿಗಳು ಮತ್ತು ರಾಜನನ್ನು ಹಾಗೂ ಆತನ ವಂಶಾವಳಿಯನ್ನು ಸ್ತುತಿಸುವ ಚರಿತ್ರೆಗಳು ನಮ್ಮ ಸೀಮಿತ ಇತಿಹಾಸ ಪ್ರಜ್ಞೆಯನ್ನು ಬಿಂಬಿಸುತ್ತದೆಯಾದರೂ, ಇತಿಹಾಸವು ಒಂದು ಪ್ರಬುದ್ಧವಾದ ಸಂಶೋಧನಾ ವಿಚಾರ, ಅಧ್ಯಯನ ವಿಷಯ, ಇಡೀ ಸಮಾಜವನ್ನು ಅರ್ಥೈಸುವ ಮಾಧ್ಯಮ ಎಂಬ ಅರಿವು ನಮಗಾದದ್ದು ನಮ್ಮ ವಸಾಹತುಶಾಹಿ ಕಾಲಘಟ್ಟದಲ್ಲಿ. ಭಾರತದ ಅದರಲ್ಲೂ ವಿಶೇಷವಾಗಿ ಅಲ್ಲಿನ ಜನಗಳ, ಪ್ರದೇಶಗಳ ಭಾಷಾ ಪಂಗಡಗಳ ಇತಿಹಾಸ, ಸಂಸ್ಕೃತಿಗಳ ಅನ್ವೇಷಣೆಯನ್ನು ಆಂಗ್ಲ ವಿದ್ವಾಂಸರು ವೈಯಕ್ತಿಕ ಅಥವಾ ಸಾಂಸ್ಥಿಕ ನೆಲೆಯಲ್ಲಿ ಕೈಕೊಂಡಾಗ ಅದರಲ್ಲಿ ಅನೇಕ ಸೈದ್ಧಾಂತಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಪೂರ್ವಗ್ರಹಗಳು ಪ್ರಕಟವಾದದ್ದು ಸಹಜ. ಇತಿಹಾಸ ರಚನೆಯು ಇದನ್ನು ಸಂಪೂರ್ಣವಾಗಿ ಮೀರಿ ನಿಲ್ಲಲು ಅಸಾಧ್ಯ. ಆದರೆ ಇತಿಹಾಸವು ಒಂದು ವಿಶಿಷ್ಟ ಬಗೆಯ ಜ್ಞಾನ. ಅದರ ಅನ್ವೇಷಣೆ, ಸಂಶೋಧನೆಯು ಸಮಾಜ ಜೀವಿಯಾದ ಮಾಣವನು ತನ್ನ ಅಸ್ತಿತ್ವವನ್ನು ಗ್ರಹಿಸಿಕೊಳ್ಳುವ, ಅದರ ವಿಚಾರವಾಗಿ ಹುಟ್ಟಿಕೊಂಡ ಕುತೂಹಲ, ಜಿಜ್ಞಾಸೆಗಳನ್ನು ನೀಗಿಸುವ ಪ್ರಯತ್ನದಲ್ಲಿ ಭಾಗಿಯಾಗಬಲ್ಲದು ಎಂಬ ವಿಚಾರ ನಮ್ಮಲ್ಲಿ ಬಹಳ ಪ್ರಾಚೀನವಾದುದಲ್ಲ.

ಇತಿಹಾಸ ಸಮಾಜದ ಜ್ಞಾಪಕತೆಯೇ

ಇತಿಹಾಸದ ಮಹತ್ವವನ್ನು ಉದ್ಧರಿಸುವಾಗ, “ಅದು ಸಮಾಜದ ಸ್ಮರಣಶಕ್ತಿ ಇದ್ದಂತೆ; ಜ್ಞಾಪಕಶಕ್ತಿಯನ್ನು ಕಳೆದುಕೊಂಡ ವ್ಯಕ್ತಿಯು ಹೇಗೆ ಸಂವೇದನಾರಹಿತವಾಗಿ, ಗೊಡ್ಡು ಗೊಡ್ಡಾಗಿ ಬಿದ್ದಿರುತ್ತಾನೋ ಹಾಗೆಯೇ ತನ್ನ ಗತಕಾಲದ ಬಗ್ಗೆ ಅರಿವಿಲ್ಲದ ಸಮಾಜವು ಒಂದು ಬಗೆಯ ಮಾನಸಿಕ ನಿರ್ಜೀವತೆಯನ್ನು ಪಡೆಯುತ್ತದೆ” ಎಂಬ ಮಾತನ್ನು ಹೇಳಿದ್ದುಂಟು. ನಿನ್ನೆಯ ಅನುಭವಗಳನ್ನು ಉಳಿಸಿಕೊಂಡಲ್ಲಿ ಮಾತ್ರ ಇಂದಿನ ವ್ಯವಹಾರಗಳು ಅಥವಾ ಮುಂದಿನ ಕಲ್ಪನೆಗಳೂ ಸಾಧ್ಯ. ಮನುಷ್ಯ ಜೀವಿಸುವುದು ವರ್ತಮಾಣದಲ್ಲೇ ಆದರೂ ಅದು ನಿಜವಾಗಿಯೂ ಸಾಧ್ಯವಾಗುವುದು ಆತ ತನ್ನ ಅನುಭವ-ಆಶಯಗಳನ್ನು ಸಂಯೋಜಿಸಿಕೊಂಡಾಗ ಮಾತ್ರ. ಇಲ್ಲವಾದರೆ ಒಂದು ಅಮುಕ್ತ, ಹೆಪ್ಪುಗಟ್ಟಿದ ವರ್ತಮಾನವು ಆತನಿಗೆ ದಾಸ್ಯ ಶೃಂಖಲೆಯನನು ತೋಡಿಸುತ್ತದೆ. ತನ್ನ ದೃಷ್ಟಿ, ಗಮನಗಳನ್ನು ಹಿಂದೆ ಮುಂದೆ ಹಾಯಿಸುವ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಾಗ ಮಾತ್ರ ವ್ಯಕ್ತಿಯ ಹಾಗೂ ಸಮಾಜದ ಸ್ಪಂದನಶೀಲ ಇರುವ ಸಾಧ್ಯವಾಗುತ್ತದೆ. ಗತಕಾಲದತ್ತ ದೃಷ್ಟಿ ಹರಿಸುವುದು ಬದುಕಿರುವ, ಬೆಳೆಯುವ ಸಮಾಜದಲ್ಲಿ ಮಾತ್ರ ಸಾಧ್ಯ. ಅದಕ್ಕಾಗಿಯೇ ಇತಿಹಾಸವು ಸಮಾಜದ ಜ್ಞಾಪಕಶಕ್ತಿ ಇದ್ದಂತೆ ಎಂದದ್ದು. ಈ ಮಾತು ಹೊರನೋಟಕ್ಕೆ ಶತಸತ್ಯವೆಂದು ಕಂಡರೂ, ಒಳಹೊಕ್ಕಿ ನೋಡಿದಾಗ ಅದರ ನಿಜವಾದ ಸಂಕೀರ್ಣತೆಯ ಅರಿವಾಗುತ್ತದೆ.

ಇತಿಹಾಸವು ಒಂದು ಜ್ಞಾನ ಪ್ರಕಾರ ಎಂದು ಒಪ್ಪಿಕೊಳ್ಳೂವುದಾದರೆ ಅದು ಅನ್ವೇಷಣೆ, ಸಂಶೋಧನೆಗಳ ಫಲ; ಅಪೂರ್ಣತೆಯೊಡನೆ ನಡೆಸುವ ನಿರಂತರ ಸಮರ ಎಂದು ತಿಳಿಯಬೇಕಾಗುತ್ತದೆ. ಇತಿಹಾಸವು ಗತಕಾಳದ ಕುರಿತಾಗಿ ಕೆಲವೊಂದು ಮಾಹಿತಿಗಳನ್ನು ನೀಡುತ್ತದೆ ಅಥವಾ ನಿರೂಪಣೆಯನ್ನು ಸೃಷ್ಟಿಸುತ್ತದೆ. ಹಿಂದೆ ನಡೆದ ಘಟನೆಗಳು ಅಥವಾ ವಿಚಾರಗಳ ಬಗ್ಗೆ ನಮಗೆ ಇಂದು ಇರುವ ಮಾಹಿತಿ ಅಥವಾ ಜ್ಞಾನ ನಿನ್ನೆ ಇರಲೇಬೇಕೆಂದಿಲ್ಲ. ಹರಪ್ಪಾ ಸಂಸ್ಕೃತಿಯ ವಿಚಾರವಾಗಿ ಈಗ ಭರತದ ಇತಿಹಾಸಕಾರರಲ್ಲಿ ಬಹಳಷ್ಟು ಚರ್ಚೆ ನಡೆದಿದೆ. ಇದರಲ್ಲಿ ರಾಷ್ಟ್ರೀಯತೆ ಅಥವಾ ಅದರ ಆರೋಪಣೆ, ಸೈದ್ಧಾಂತಿಕ ನಿಲುವುಗಳು ಮತ್ತು ನಿರ್ಲಜ್ಜ ರಾಜಕೀಯತೆಯು ಸೇರಿ ಹೋಗಿವೆ. ಆಧುನಿಕ ತಂತ್ರಜ್ಞಾನದ ಗಾರುಡಿಯನ್ನು ಬಳಸಿಕೊಂಡು ಅದನ್ನು ತಿಳಿಸಲಾಗಿದೆ ಅಥವಾ ತಿರುಚಲಾಗಿದೆ. ಸಿಂಧೂ ನದೀ ನಾಗರಿಕತೆಗೆ ಸಂಬಂಧಿಸಿದ ಹೆಚ್ಚಿನ ಪ್ರದೇಶಗಳು ಪಾಕಿಸ್ತಾನದ ಪಾಳಿಗೆ ಹೋದ ಮೇಲಂತೂ ಆ ನಾಗರಿಕತೆಗೆ ಹೊಸ ನಾಮಕರಣ ಮಾಡುವ ತವಕ ನಮ್ಮಲ್ಲಿ ಅತಿವವಾಗಿದೆ. ನಮ್ಮ ಒಂದು ಪ್ರಾಚೀನ ಭವ್ಯ ನಾಗರಿಕತೆಯನ್ನು ಇನ್ನೊಬ್ಬರಿಗೆ, ಅದೂ ‘ವೈರಿ ರಾಷ್ಟ್ರಕ್ಕೆ’ ಹಸ್ತಾಂತರಿಸುವುದು ಹೇಗೆ? ಹರಪ್ಪಾ ನಾಗರಿಕತೆಯ ಪ್ರಾಚೀನತೆ, ಆಧುನಿಕತೆ, ವೈಭವಗಳು ನಮ್ಮ ರಾಷ್ಟ್ರದ ಅಪೂರ್ವ ಸೊತ್ತು. ಅದನ್ನು ಸದಾ ಸ್ಮರಿಸುವುದು ನಮ್ಮ ರಾಷ್ಟ್ರೀಯತೆಯ ಸಂಕೇತ ಎಂದು ಪರಿಭಾವಿಸಿದರೆ ತಪ್ಪಲ್ಲ. ಆದರೆ ಈ ಅಪೂರ್ವ ಸ್ಮರಣೆ ೧೯೨೨ರ ಮೊದಲು ಎಲ್ಲಿತ್ತು? ವಾಸ್ತವವಾಗಿ ಅದು ಹುಟ್ಟಿಕೊಂಡದ್ದು ಸರ್ ಜಾನ್ ಮಾರ್ಷಲ್, ಆರ್.ಡಿ.ಬ್ಯಾನರ್ಜಿ, ದಯಾರಾಮ್ ಸಹನಿ ಮೊದಲಾದವರು ತಮ್ಮ ಉತ್ಖನನದ ಫಲವನ್ನು ಜಗತ್ತಿಗೆ ತಿಳಿಸಿದ ನಂತರವೇ. ಅಂದರೆ, ಐದು ಸಾವಿರ ವರ್ಷದಷ್ಟು ಪ್ರಾಚೀನವಾದ ನಮ್ಮ ಈ ನಾಗರಿಕತೆಯ ಕುರಿತಾದ ಜ್ಞಾನ ಕಳೆದ ಎಂಬತ್ತು ವರ್ಷಗಳಷ್ಟು ಮಾತ್ರ ಹಿಂದಿನದು. ಜೇಮ್ಸ್ ಪ್ರಿನ್ಸೆಪ್ ಬ್ರಾಹ್ಮಿ ಬರಹವನ್ನು ಒದುವ ಮೊದಲು (೧೮೩೭) ಅಶೋಕ ಮೌರ‍್ಯನ ವಿಚಾರ ನಮಗೆ ಏನೂ ತಿಳಿದಿರಲಿಲ್ಲ. ಅಜಂತಾ ಗುಹೆಗಳು ಅಥವಾ ಎಲ್ಲೋರಾದ ಕಲಾವೈಭವದ ಬಗ್ಗೆ ನಾವು ಕೇಳಿದ್ದು ಹತ್ತೊಂಬತ್ತೆಯ ಶತಮಾನದಲ್ಲಿ. ಈ ರೀತಿಯ ಪಟ್ಟಿ ಬಹಳ ದೊಡ್ಡದು. ಆಂಗ್ಲ ಇತಿಹಾಸಕಾರರಿಗೆ ಅಥವಾ ಅನ್ವೇಷಣಕಾರರಿಗೆ ಧನ್ಯವಾದ ಸಮರ್ಪಣೆಗೋಸ್ಕರ ಈ ವಿಚಾರವನ್ನೆತ್ತಿದ್ದಲ್ಲ. ಇತಿಹಾಸದ ಕುರಿತಾಗಿ ಜ್ಞಾನ ನಮ್ಮಲ್ಲಿ ಹದಿನೆಂಟನೆಯ ಶತಮಾನದ ಉತ್ತರ ಭಾಗದಿಂದ ಮೊದಲಾಗಿ ಅನೇಕ ಅಧ್ಯಯನಶೀಲ ಮಹನೀಯರ ಶ್ರಮದ ಫಲವಾಗಿ, ಕೆಲವೊಮ್ಮೆ ಆಕಸ್ಮಿಕವಾಗಿ, ಒಟ್ಟಾರೆ ಕ್ರಮೇಣವಾಗಿ ನಮಗೆ ಲಭ್ಯವಾದದ್ದು ಎನ್ನುವುದನ್ನು ಮಾತ್ರ ಸ್ಪಷ್ಟೀಕರಿಸಿದ್ದು. ನಮಗೆ ಈಗ ಇರುವ ಇತಿಹಾಸ ಜ್ಞಾನವೆಲ್ಲಾ ನೂರೈವತ್ತು ವರ್ಷಗಳ ಹಿಂದೆ ಇರಲಿಲ್ಲ. ಒಂದು ರೀತಿಯಲ್ಲಿ ಅಂದು, ಪರೀಕ್ಷೆ ಬರೆದ ವಿದ್ಯಾರ್ಥಿಗಳು ಅದೃಷ್ಟವಂತೇ. ಅವರು ಗ್ರಹಿಸಬೇಕಾಗಿದ್ದ ವಿಷಯದ ಹರವು, ಸಾಂದ್ರತೆ ಎರಡೂ ಕಡಿಮೆಯೇ; ಪುಸ್ತಕಗಳ ಸಂಖ್ಯೆಯೂ ಕಡಿಮೆ. ಪ್ರಾಯಶಃ ಈಗಿನ ಜ್ಞಾನ ಬಾಹುಳ್ಯವೇ ಇಂದಿನ ವಿದ್ಯಾರ್ಥಿಗಳ ವೈರಾಗ್ಯಕ್ಕೆ ಕಾರಣವಿರಬಹುದು ಎಂಬ ತುಂಟ ಸಂಶಯ ನಮ್ಮಲ್ಲಿ ಕೆಲವರನ್ನು ಕಾಡುತ್ತಿದೆ!

ಪ್ರಾಚೀನ ಇತಿಹಾಸದ ಜ್ಞಾನವು ಅರ್ವಾಚೀನ ಎಂಬ ಸತ್ಯ ಮನದಟ್ಟಾದಾಗ ಇತಿಹಾಸವು ಸಮಾಜದ ಸ್ಮರಣಶಕ್ತಿ ಇದ್ದಂತೆ ಎಂಬ ಹೇಳಿಕೆಯನ್ನು ಸಂಪೂರ್ಣ ಬಾವುಕತೆಯಿಂದ ಒಪ್ಪಲಾಗುವುದಿಲ್ಲ. ಸಮಾಜದ ಜ್ಞಾಪಕತೆಯಲ್ಲಿ ಎರಡು ವಿದ: ತನ್ನೊಳಗೆ ಹುದುಗಿರುವ ಜ್ಞಾಪಕತೆ ಒಂದು, ಇತಿಹಾಸ ಜ್ಞಾನವನ್ನು ಗ್ರಹಿಸಿ ಸೃಷ್ಟಿಸಿಕೊಂಡ ಜ್ಞಾಪಕತೆ ಇನ್ನೊಂದು. ಮೊದಲನೆಯದು ಸಮಾಜದ ಬದುಕು ಸಂವೇದನೆಗಳಲ್ಲಿ ಸೇರಿ ಹೋದದ್ದು, ಜಾನಪದ ದೃಷ್ಟಿ, ತಿಳುವಳಿಕೆ, ಅದರ ಒಲವು ನೋವುಗಳು ಸಮಾಜದ ಅಮೂರ್ತ ಸ್ಮರಣೆಗಳ ಒಸರು. ತನ್ನಿಂದ ತಾನಾಗಿಯೇ ಪ್ರಕಟವಾಗುವ ನೆನಪಿಸಿ ಗುಳುಗುಳಿಸುವ ಬುಗ್ಗೆ. ಇದು ಪಂಡಿತರ ಜ್ಞಾನ ಕೈಂಕರ್ಯದಿಂದ ಸೃಷ್ಟಿಯಾದದ್ದಲ್ಲ. ಇದು ಸಮಾಜವು ಸಹಜವಾಗಿಯೇ ಉಳಿಸಿಕೊಂಡ ನೆನಪುಗಳು. ಆದರೆ ಇತಿಹಾಸವು ಒಂದು ಜ್ಞಾನ ಪ್ರಕಾರವಾಗಿ ಬೆಳೆಯುವಾಗ ಅದರ ಕೆಲವು ಕಥೆ ವ್ಯಥೆಗಳು, ರೂಪಕ-ಕಲ್ಪನೆಗಳು ಹರಳುಗಟ್ಟಿ ಸಮಾಜದ ಗ್ರಾಹಕರಿಗೆ ಲಭ್ಯವಾಗುತ್ತದೆ. ಇವು ಕಾಲಕಾಲಕ್ಕೆ ಸಮಾಜದ ಜ್ಞಾಪಕತೆಗೆ ಸೇರಿ ಹೋಗುತ್ತವೆ. ಇತಿಹಾಸದ ಜ್ಞಾನ ವಿವರವೆಲ್ಲವೂ ಸಮಾಜಕ್ಕೆ ಇಂಗಿ ದೊರಕುವುದಿಲ್ಲ. ಅದೆ ಎಷ್ಟೋ ಸಂಕೀರ್ಣ ವಿಷಯಗಳು, ಪ್ರೌಢ ಜಿಜ್ಞಾಸೆಗಳು ಸಂಶೋಧನೆಯ ಸ್ತರದಲ್ಲೇ, ಪಾಂಡಿತ್ಯದ ಭಾಷೆಗೆ ಮೀಸಲಾಗಿಯೇ ಉಳಿಯುತ್ತವೆ.

ಇತಿಹಾಸ ಜ್ಞಾನದ ಅಧಿಕೃತ ಉತ್ಪಾದಕರು ಇತಿಹಾಸಕಾರರೇ ಅದರೂ ಎಷ್ಟೋ ಬಾರಿ ಅದು ಅವರ ಸೊತ್ತಾಗಿ ಉಳಿಯುವುದಿಲ್ಲ. ಇತಿಹಾಸವನ್ನು ಗಂಭೀರವಾಗಿ, ವಿಸ್ತಾರವಾಗಿ ಅಧ್ಯಯನ ಮಾಡದ ಅನೇಕರು ಇತಿಹಾಸದ ಕೆಲವು ಘನೀಕೃತ ಚಿತ್ರಣಗಳನ್ನು ಹೆಕ್ಕಿಕೊಂಡು ತಮ್ಮದಾಗಿಸಿಕೊಳ್ಳುತ್ತಾರೆ; ಕೊಂಚವೂ ಅಳುಕಿಲ್ಲದೆ ಅದರಲ್ಲಿ ವ್ಯವಹರಿಸುತ್ತಾರೆ. ಇತಿಹಾಸವನ್ನು ತೀಕ್ಷ್ಣವಾಗಿ ಅಭ್ಯಸಿಸುವುದರಿಂದ ಅನೇಕ ಸಂಶಯಗಳು ಕಾಡುತ್ತವೆ, ಅನೇಕ ಪ್ರಶ್ನೆಗಳೂ ಎದುರಾಗುತ್ತವೆ. ಆದ್ದರಿಂದ ಅಧ್ಯಯನಶೀಲ ಜಿಜ್ಞಾಸುಗಳು ಸುಲಭವಾಗಿ ನಿರ್ದಿಷ್ಟ ತೀರ್ಪನ್ನು ನೀಡಲಾರರು. ಅವರು ಉತ್ತರ-ಪ್ರಶ್ನೆಗಳ ಸಂವಾದದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಅದರಲ್ಲಿ ಹುಟ್ಟುವ ಸಂಶಯ ಅನ್ವೇಷಣಕಾರೀ ಮನೋಭಾವದ ಫಲ. ಅದು ಗೊಂದಲವಲ್ಲ. ತಾವು ಇನ್ನಷ್ಟು ಅರಿಯಬೇಕು ತಿಳಿಯುವುದೆಷ್ಟೋ ಇದೆ ಎಂಬ ತೃಷೆ ಇದಿದ್ದಾಗ ಮಾತ್ರ ಹೊಸತು ಹುಟ್ಟೀತು.

ಒಮ್ಮೆ ಪ್ರಸಿದ್ಧ ಇತಿಹಾಸಕಾರ್ತಿ ರೊಮಿಲಾ ಥಾಪರ್ ಒಂದು ವಿಶ್ವವಿದ್ಯಾನಿಲಯದಲ್ಲಿ ವಿಶೇಷ ಉಪನ್ಯಾಸ ನೀಡುತ್ತಿದ್ದರು. ಅವರ ಅಶೋಕ ಮತ್ತು ಮೌರ‍್ಯರ ಅವನತಿ ಎಂಬ ಗ್ರಂಥ ಆಗಲೇ ಬಹಳಷ್ಟು ಪ್ರಸಿದ್ಧಿ ಪಡೆದಿತ್ತು. ಉಪನ್ಯಾಸದ ಬಳಿಕ ಒಬ್ಬ ವಿಧ್ಯಾರ್ಥಿ ಅವರನ್ನು ಪ್ರಶ್ನಿಸಿದ; ‘ಮ್ಯಾಡಂ, ಅಶೋಕನು ನಿಜವಾಗಿಯೂ ಶ್ರೇಷ್ಠ ರಾಜನೇ?’ ಅದಕ್ಕೆ ರೋಮಿಲಾ ಥಾಪರ್ ಉತ್ತರಿಸಿದ್ದು ಹೀಗೆ “ನನ್ನ ಪ್ರೀತಿಯ ವಿಧ್ಯಾರ್ಥಿ ಮಿತ್ರನೇ, ನೀನೆತ್ತಿದ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಲೇ ಇದ್ದೇನೆ!” ಆ ವಿಧ್ಯಾರ್ಥಿ ಕೇಳಿದ ಪ್ರಶ್ನೆಯನ್ನು ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಅಥವಾ ಕಾಲೇಜುಗಳಲ್ಲಿ ಇತಿಹಾಸ ಬೋಧಿಸುವವರನ್ನು ಕೇಳಿದ್ದರೆ ನಿರ್ದಿಷ್ಟ ಉತ್ತರ ಸಿಗುತ್ತಿತ್ತು. “ಅಶೋಕನ ಶ್ರೇಷ್ಠತೆ, ಘನತೆಯ ಬಗ್ಗೆ ಯಾಕ್ರೀ ಸಂಶಯ? ಕಳಿಂಗವನ್ನು ಮಣಿಸಿದ್ದು, ಯುದ್ಧವನ್ನು ಎರಡರ್ಥದಲ್ಲಿ ಗೆದ್ದದ್ದು, ಬೌದ್ಧನಾದದ್ದು, ಆಸ್ಪತ್ರೆಗಳನ್ನು ಕಟ್ಟಿದ್ದು, ಸಾಲು ಮರಗಳನ್ನು ನೆಡಸಿದ್ದು, ಕೆರೆಗಳನ್ನು ತೋಡಿಸಿದ್ದು ಮತ್ತೆ ಏನು ಹೇಳುತ್ತದೆ?” ಇನ್ನೂ ಬೇಕೆಂದರೆ ಹೆಚ್.ಜಿ.ವೇಲ್ಸ್ ಅಶೋಕನ ಬಗ್ಗೆ ಹೇಳಿದ ಹೊಗಳು ಮಾತುಗಳನ್ನು ಉಲ್ಲೇಖಿಸಿದರೆ ಸಾಕು. ಒಂದು ರೀತಿಯಲ್ಲಿ ಇದು ವಿಪರ್ಯಾಸವೇ. ವರ್ಷಗಟ್ಟಲೆ ಅಶೋಕನ ಕುರಿತು ಸಂಶೋಧನೆ ನಡೆಸಿ, ಆತನ ಶ್ರೇಷ್ಠತೆ ಬಗ್ಗೆ ಮನದಟ್ಟಾಗದಿದ್ದರೆ ಹೇಗೆ? ಅಷ್ಟೂ ತಿಳಿಯದಿದ್ದರೆ ಹೇಗೆ ನಮ್ಮ ಇತಿಹಾಸದ ಮೇಷ್ಟ್ರುಗಳೇ ವಾಸಿ! ಕಲಿತಾಗ ಸಂಶಯಗಳು ಹೆಚ್ಚುತ್ತವೆಯಾದರೆ ಕಲಿಯದಿರುವುದೇ ಲೇಸು!

ಬರೇ ಕುಚೋದ್ಯಕ್ಕೆ ಈ ಮಾತನ್ನು ಹೇಳುತ್ತಿಲ್ಲ. ಕೆಲವು ಚಿತ್ರಗಳು, ಕೆಲವು ಅಭಿಮತಗಳು ಅಥವಾ ತೀರ್ಪುಗಳು ಹೆಪ್ಪುಗಟ್ಟಿ ಸಮಾಜದ ಸೊತ್ತಾಗುತ್ತವೆ. ಆ ಸೊತ್ತನ್ನು ಸಮಾಜ ಮೈಯೆಲ್ಲಾ ಕಣ್ಣಾಗಿ ಕಾಯುತ್ತದೆ. ಪಾಮರಗ್ರಹಿತ ಇತಿಹಾಸದ ರೂಪ-ರೇಷೆಗಳು ಸ್ಪಷ್ಟ, ಖಚಿತ. ಅದರ ಚಿತ್ರಗಳು ಪತ್ರಿಕೆಗಳಲ್ಲಿ, ನಾಟಕ, ಸಿನಿಮಾ, ಟಿ.ವಿ.ಗಳ ಮೂಲಕ, ಸುಲಭೀಕರಿಸಿದ ಸಚಿತ್ರ ಪುಸ್ತಕಗಳ ಮೂಲಕ ಜನರಿಗೆ ತಲುಪುತ್ತವೆ. ಈ ಚಿತ್ರಗಳು ಕಥಾನಕದ ಚೌಕಟ್ಟಿನಲ್ಲಿ ವಿತರಣೆಗೊಳ್ಳುತ್ತವೆ. ಇದರಲ್ಲಿ ನಾಯಕ ಯಾರು? ಖಳನಾಯಕ ಯಾರು? ಇದರ ಸಂಘರ್ಷ, ಪರಿಣಾಮಗಳೇನು ಈ ಎಲ್ಲಾ ವಿಚಾರಗಳ ಬಗ್ಗೆ ಖಚಿತವಾದ ನಿರೂಪಣೆಯು ಲಭ್ಯವಾಗುತ್ತದೆ. ಇದರಲ್ಲಿ ಹೆಮ್ಮೆ ಪಡಬೇಕಾದದ್ದು, ಪುಳಕಿತಗೊಳ್ಳಬೇಕಾದದ್ದು, ವ್ಯಥೆ ಪಡಬೇಕಾದುದ್ದು, ಕನಲಿ ವ್ಯಗ್ರಗೊಳ್ಳಬೇಕಾದುದ್ದು ಯಾವ್ಯಾವವು ಎಂಬುದು ನಿರ್ಧಾರವಾಗುತ್ತದೆ. ಅಷ್ಟಾದ ಮೇಲೆ ಇತಿಹಾಸಕಾರರ ಹೆಚ್ಚಿನ ಅರ್ಧಯನ ಅಥವಾ ಅದರಲ್ಲಿ ಮೂಡಿ ಬಂದ ಪ್ರಶ್ನೆ ಸಂಶಯಗಳು ನಗಣ್ಯ. ಅವರ ಪಾಂಡಿತ್ಯ ಸ್ವಲ್ಪ ಹೆಚ್ಚಾಗಿಯೇ ಪ್ರಕಟವಾಯಿತೆಂದರೆ ಅವರನ್ನು ಅಧಿಕಪ್ರಸಂಗಿಗಳೆಂದೋ ಖೋಟಾ ಪ್ರಾಜ್ಞಾರೆಂದೋ ಬದಿಗೆ ತಳ್ಳುವುದು ಅಪರೂಪವೇನಲ್ಲ. ಹೆಚ್ಚು ಲೊಚಗುಟ್ಟುವ ಇತಿಹಾಸಕಾರರು ಅಸಡ್ಡೆಗೆ ಮಾತ್ರ ಗುರಿಯಾದರೆ ಅದು ಸಣ್ಣ ಪುಣ್ಯ; ಎಷ್ಟೋ ಬಾರಿ ಕೆಂಗಂಣ್ಣಿನ ಕ್ರೌರ್ಯಕ್ಕೂ ಬಲಿಯಾದದ್ದುಂಟು.

ಇತಿಹಾಸ – ಇಂದಿನ ರಾಜಕೀಯ

ಹತ್ತೊಂಬತ್ತೆಯ ಶತನಮಾದ ಕೆಲವು ಇತಿಹಾಸಕಾರರು-ಫ್ರೀಮನ್, ಸೀಲಿ ಮೊದಲಾದವರು ಇತಿಹಾಸವನ್ನು ಹಿಂದಿನ ರಾಜಕೀಯದ ವೃತ್ತಾಂತ ಎಂದು ನಿರ್ವಚಿಸಿದರು. ಅದೆಷ್ಟು ಸೂಕ್ತ ಎಂಬ ಚರ್ಚೆ ಇಲ್ಲಿ ಪ್ರಸ್ತತ ಅಲ್ಲ, ಆದರೆ ಇತಿಹಾಸಕ್ಕೆ ಇಂದಿನ ರಾಜಕೀಯದ ನೇರ ನಂಟಿದೆ ಎಂದರೆ ಏನೂ ತಪ್ಪಿಲ್ಲ. ಇದು ಇತ್ತೀಚಿನ ಬೆಳವಣಿಗೆಯೂ ಅಲ್ಲ. ಬ್ರಿಟನ್ನಿನ ಇತಿಹಾಸವನ್ನು ಬರೆಯುವಾಗ ಅದರ ನಿರ್ದಿಷ್ಟ ಗುರಿ ಪಾರ್ಲಿಮೆಂಟಿನ ಸಂಪೂರ್ಣ ವಿಜಯ, ಅದನ್ನು ಗಳಿಸುವ ಪರಿ, ಅದರತ್ತ ಇಟ್ಟ ಹೆಜ್ಜೆ, ಅದಕ್ಕಾಗಿ ಮಾಡಿದ ಸಂಘರ್ಷಗಳ ಕಥನವೇ ಬ್ರಿಟನ್ನಿನ ಇತಿಹಾಸದ ಹಿರಿಮೆ ಎಮದು ಸೂಚಿಸಿದ ಮೆಕಾಲೆ ಮೊದಲಾದ ಇತಿಹಾಸಕಾರರನ್ನು ಗುರುತಿಸಿ, ಇದನ್ನು ಹರ್ಬರ್ಟ್ ಬಟರ್ ಫೀಲ್ಡ್ ಎಂಬುವರು ವಿಗ್ ಇತಿಹಾಸ ನಿರೂಪಣೆ ಎಂದು ಕರೆದರು. ಒಂದು ಸ್ತರದಲ್ಲಿ ಇದು ನಿರ್ದಿಷ್ಟ ರಾಜಕೀಯ ಆಶಯವನ್ನು ಐತಿಹಾಸಿಕವಾಗಿ ಸ್ಪಷ್ಟಿಸಿ, ವಿಷಾದ ಪಡಿಸುವ ವರಸೆ, ಆದರೆ ಬಟರ್ ಫೀಲ್ಡ್ ಇದನ್ನು ಇತಿಹಾಸಕಾರರಲ್ಲಿ ಕಂಡುಬರುವ ಒಂದು ವಿಧವಾದ ಚಾಳಿ, ಇತಿಹಾಸವನ್ನು ಅರ್ಥೈಸುವ ವಿಧಾನದ ಒಂದು ವಿಕೃತಿ ಎಂದು ಟೀಕಿಸಿದ್ದಾರೆ. ಇತಿಹಾಸದ ಚಲನೆಗೆ ಗುರಿಯನ್ನು ನಿರ್ಧರಿಸುವುದು ಇತಿಹಾಸಕರ. ತನ್ನದೇ ಆದ ಗುರಿ ಇಲ್ಲ. ಅದರ ಗಮನ, ದಿಸೆಗಳನ್ನು ಆರೋಪಿಸುವುದು ಇತಿಹಾಸ ನಿರೂಪಣೆಯ ಪ್ರಕ್ರಿಯೆಯಲ್ಲಿ. ಇದರೊಳಗಿನ ತುಡಿತ ಸೈದ್ಧಾಂತಿಕ ರಾಜಕೀಯತೆ, ಅದನ್ನು ಇಹ-ಪರಗಳಲ್ಲಿ ಸಮರ್ಥಿಸುವ ತವಕ. ಇದು ಇತಿಹಾಸದ ವಸ್ತುನಿಷ್ಟ ಗ್ರಹಿಕೆಗೆ ಅಡ್ಡಿಯಾಗುವುದರಿಂದ ಇತಿಹಾಸಕಾರರು ಈ ಚಾಳಿಯನ್ನು ಮೀರಿ ಬೆಳೆಯಬೇಕೆಂಬ ಉದ್ದೇಶ ಸಾಧುವಾದರೂ, ಇದರ ಪಾಲನೆ ಎಷ್ಟರಮಟ್ಟಿಗೆ ಸಾಧ್ಯ ಎಂಬ ಪ್ರಶ್ನೆ ನಮ್ಮನ್ನು ಸದಾ ಅಣಕಿಸುತ್ತಿರುತ್ತದೆ.

ಬಟರ್ ಫೀಲ್ಡ್ ನೀಡುವ ದೃಷ್ಟಾಂತ ಹಾಗೂ ವಿವರಣೆಗಳು ಇತಿಹಾಸ ರಚನೆಯ ಕುರಿತಾದ ಗಂಭೀರ ಜಿಜ್ಞಾಸೆಯ ವಸ್ತು; ಇತಿಹಾಸಕಾರರು ಕೆಲವು ಉದಾತ್ತ ರಾಜಕೀಯ ಧ್ಯೇಯಗಳತ್ತ ಆಕರ್ಷಿಸಲ್ಪಟ್ಟು ಅದನ್ನು ಐತಿಹಾಸಿಕವಾಗಿ ಪ್ರಸ್ತುತಪಡಿಸುವ ಕ್ರಮ. ಎಷ್ಟೋ ಬಾರಿ ಅದನ್ನು ಪ್ರಜ್ಞಾಪೂರ್ವಕವಾಗಿ ರಆಜಕೀಯ ಪ್ರೇರಿತವಾಗಿ ಅಥವಾ ರಾಜಕೀಯ ಲಾಭಕ್ಕಾಗಿ ಮಾಡುವುದಿಲ್ಲ, ಸೈದ್ಧಾಂತಿಕ ಉತ್ಸುಕತೆ ತನ್ನರಿವಿಲ್ಲದೆಯೇ ಪ್ರಕಟಗೊಳ್ಳುತ್ತದೆ. ಇದು ಇತಿಹಾಸ ರಚನೆಯ ಒಂದು ಸಮಸ್ಯೆ ಇಂಥದ್ದಿದೆ ಎಂಬ ಅರಿವು ಇದನ್ನು ನಿಗ್ರಹಿಸುವತ್ತ ಇಡಬಹುದಾದ ಮೊದಲ ಹೆಜ್ಜೆ. ಆದರೆ ಇತಿಹಾಸಕಾರರಿಗೆ ಯಾವ ರಾಜಕೀಯ ಒಲವೂ ಸಲ್ಲ; ಇದ್ದರೂ ಅದನ್ನು ಕಿಂಚಿತ್ತಾದರೂ ಹೊರಗೆಡವುದೂ ತಪ್ಪು ಎಂಬ ನಿಷೇಧಾಜ್ಞೆಯು ಕಠೋರ. ಅದನ್ನು ಪ್ರಾಮಾಣಿಕವಾಗಿ ಪಾಲಿಸುವ ಶಕ್ತಿಯೂ ತೀರ ದುರ್ಲಭ. ಇದನ್ನು ನಿಸ್ಸಹಾಯಕತೆ ಎನ್ನುವುದಕ್ಕಿಂತ ಇತಿಹಾಸಕಾರರು ಸಾಮಾಜಿಕ ವ್ಯಕ್ತಿಗಳಾಗಿ ಹೊಂದುವ ಸೀಮಿತತೆ ಎಂದು ತಿಳಿಯುವುದು ಹೆಚ್ಚು ಸೂಕ್ತ. ಈ ರೀತಿಯ ಸಮಸ್ಯೆ ಇತಿಹಾಸ ರಚನೆಯಲ್ಲಿ ಸೇರಿ ಹೋಗಿರುವುದನ್ನು ಗುರುತಿಸಿ ಅದನ್ನು ಪರಿಹರಿಸುವ ಬಗೆಯನ್ನು ಹುಡುಕುವುದು ಇತಿಹಾಸಕಾರರ ವೃತ್ತಿ ಕರ್ತವ್ಯ. ಆದರೆ ಇದಕ್ಕಿಂತಲೂ ಹೆಚ್ಚು ಗಂಭೀರವಾದ ಸಮಸ್ಯೆ ಎಂದರೆ ರಾಜಕೀಯವೇ ಇತಿಹಾಸವನ್ನು ತನ್ನ ಸ್ವಂತ ಲಾಭಕ್ಕಾಗಿ ಪಳಗಿಸಿ ಉಪಯೋಗಿಸುವ ರೀತಿ. ರಾಜತ್ವದ ಶಕ್ತಿ ಮತ್ತು ಅದರ ಪ್ರದರ್ಶನ ವಿಧಾನಗಳು ಹಲವು. ನ್ಯಾಯಸಂಹಿತೆ ದಂಡಸಂಹಿತೆಗಳು ಅದರ ನೇರ ಸ್ವರೂಪ ಪೊಲೀಸಿನ ಲಾಠಿ, ವಾಸಕ್ಕೆ ಕಾರಾಗೃಹ ಅದರ ಪ್ರತೀಕಗಳು. ಆದರೆ ರಾಜತ್ವದ ಶಕ್ತಿಯು ಪರೋಕ್ಷವಾಗಿ, ಮೃದುವಾಗಿ, ಬೇರೆ ಬೇರೆ ರೀತಿಯಲ್ಲಿ ಪ್ರಸ್ತುತಗೊಳ್ಳುತ್ತದೆ. ಆಳುವ ಒಡೆಯನು ತನ್ನ ಶ್ರೇಷ್ಠತೆಯನ್ನು ಸಾರುವ ಬಗೆ ಹಲವು. ಝಗಝಗಿಸುವ ಸಿಂಹಾಸನ, ಕಿರೀಟ, ಆಡಂಬರದ ಆಸ್ಥಾನ, ತನಗೆ ತಾನೇ ದಯಪಾಲಿಸಿದ ಉದ್ದುದ್ದ ಬಿರುದು-ಬಾವಲಿಗಳು, ಸದಾ ಸ್ತುತಿಸುವ ಕವಿ, ವಂದಿ-ಮಾಗಧರು, ಪೂರೈಸಿದ ಯಜ್ಞ-ಯಾಗಗಳು, ನೀಡಿದ ಉಂಬಳಿ ದಾನಗಳು, ಬರೆಯಿಸಿದ ಶಾಸನಗಳು, ದೇವರಿಗಾಗಿ ನಿರ್ಮಿಸಿದ ದೇಗುಲಗಳು ಅಥವಾ ತನಗಾಗಿ ಅಥವಾ ತನ್ನವರಿಗಾಗಿ ಕಟ್ಟಿಸಿದ ಗೋರಿಗಳು, ಇವೆಲ್ಲವೂ ರಾಜತ್ವವು ಪ್ರಕಟಗೊಳ್ಳುವ ಕೆಲವು ರೀತಿಗಳು. ದೇವರನ್ನು ರಾಜನೆಂದು ಹಾಗೂ ರಾಜನನ್ನು ದೇವರ ರೂಪವೆಂದು ವಿವರಿಸುವ ಸಿದ್ಧಾಂತಗಳು ಮಾಡುವ ಕೆಲಸ ಇದೇ. ಹಾಗೆಯೇ ರಾಜನು ತನ್ನ ಮತ್ತು ತನ್ನ ವಂಶದ ಐತಿಹಾಸಿಕ ಹಿರಿಮೆಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಆಸ್ಥಾನದಲ್ಲಿ ಅಧಿಕೃತ ಇತಿಹಾಸಕರರನ್ನು ಯೋಜಿಸಿ ಪಾಲಿಸುವುದು ವಾಡಿಕೆ. ರಾಜನು ಶ್ರೇಷ್ಠನಾಗಿದ್ದರಷ್ಟೇ ಸಾಲದು; ಆತನ ಶ್ರೇಷ್ಠತೆಯ ನೆನಪು ಆಚಂದಾರ್ಕವಾಗಿ ಉಳಿಯಬೇಕು. ಇತಿಹಾಸದಲ್ಲಿ ನೆಲೆಯೂರಬೇಕು. ಈ ಅಮರತ್ವದ ಹಂಬಲವನ್ನು ಈಡೇರಿಸಲು ಇತಿಹಾಸಕಾರರು ಶಕ್ತ. ಅವರಿಗೆ ವೀಳ್ಯ ನೀಡಿ, ಪೋಷಿಸಿ ಅವರಿಂದ ತನ್ನನ್ನು ಇತಿಹಾಸ ಪುರುಷನಾಗಿಸುವ ಕೌಶಲವನ್ನು ಆಳಿದ ರಾಜರನೇಕರು ಹೊಂದಿದ್ದರು. ತನ್ನ ಪೋಷಕರ ನಿಜವಾದ ಯೋಗ್ಯತೆ ಸಾಧನೆಗಳನ್ನು ಉತ್ಪ್ರೇಕ್ಷಿಸಿ ಸ್ತುತಿಸುವ ಲೇಖನಿವೀರರು ಅಬುಲ್ ಫಜಲ್ ಎಂಬಂಥವರು ಕೆಲವರು. ಆದರೆ ಎಷ್ಟೋ ಮಂದಿ ಅರಸರ ಯೋಗ್ಯತೆ ಹಿರಿಮೆಗಳನ್ನು ಸೃಷ್ಟಿಸಿದ್ದು ಅವರ ಆಸ್ಥಾನ ಕವಿ, ಇತಿಹಾಸಕಾರರ ಉಪ್ಪಿನ ಋಣ. ಹೇಳಬೇಕಾದದ್ದನ್ನು ಹೇಳದೆ, ಹೇಳಬಾರದುದನ್ನು ಮರೆಸಿ, ತನ್ನ ಪೋಷಕ ರಾಜನ ಮತ್ತು ಆತನ ವಂಶದ ಚರಿತ್ರೆಯನ್ನು ಬರೆಯಬೇಕಾದ ಕೃತಜ್ಞತೆಯ ಗೋಳು ಅಪರೂಪವೇನಲ್ಲ. ಇದರಲ್ಲಿ ಅವರ ಕಲ್ಪನಾಶಕ್ತಿ, ಕವಿತ್ವಗಳು ಪ್ರದರ್ಶನಗೊಂಡಿವೆಯೇ ಹೊರತು ಯಥಾರ್ಥತೆಯಲ್ಲ. ಹೆಚ್ಚು ಶ್ರಮ, ತಾಳ್ಮೆಯಿಂದ ಗಣಿಗಾರಿಕೆ ನಡೆಸಿದಾಗ ಮಾತ್ರ ಕೆಲವೊಮ್ಮೆ ಕೆಲವು ಸತ್ಯದ ಹರಗಳುಗಳನ್ನು ಹೆಕ್ಕಿ ತೆಗೆಯಲು ಸಾಧ್ಯ. ಇಂತಹ ಸನ್ನಿವೇಶ ಇತಿಹಾಸ ರಚನೆಗೆ ಹೊರಟಾಗ ಇದಿರಾಗುವುದು ಸಾಮಾನ್ಯ. ಇದನ್ನು ಸೆಣಸಿ, ಪರಿಹರಿಸಲೆಂದೇ ಇತಿಹಾಸ ರಚನಾಶಾಸ್ತ್ರದಲ್ಲಿ ಆಂತರಿಕ ವಿಮರ್ಶೆಯನ್ನು ನಿಗದಿಸಿದ್ದು. ಆಸ್ಥಾನದ ಬರಹಗಾರರು ‘ಸತ್ಯಂ ಭ್ರೂಯಾತ್’ ಎನ್ನುವುದಕ್ಕಿಂತ ‘ಪ್ರಿಯಂ ಭ್ರೂಯಾತ್’ ಎಂಬ ಧ್ಯೇಯವನ್ನಿಟ್ಟು ಕೊಂಡವರು; ಅವರ ಕಥನವನ್ನು ಪೂರ್ಣವಾಗಿ ನಂಬುವ ಹುಂಬನಾಗಬೇಡ ಎಂಬ ಉಪದೇಶ ಆಂತರಿಕ ವಿಮರ್ಶೆಯಲ್ಲಿದೆ. ಈ ಸಮಸ್ಯೆಯ ಮೂಲ ರಾಜತ್ವದ ಶಕ್ತಿಯು ಇತಿಹಾಸದಲ್ಲಿ ತನ್ನ ಖಾಸಗಿ ಆಸ್ತಿಯನ್ನು ವಿಕ್ರಯಿಸುವ ಕಾತರ. ಇದು ‘ಇತಿಹಾಸ ಸತ್ಯವಾಗಿ’ ಚಲಾವಣೆಗೊಳ್ಳುತ್ತದೆ ಎಂಬ ವಿಚಾರವೂ ಮುಖ್ಯ.

ಇದೆಲ್ಲಾ ರಾಜ ಮಹಾರಾಜರು ಆಳಿದಾಗ ನಡೆದ ಮಾತು; ಅವರ ವಿಕಟಾಲಂಕಾರಕ್ಕೆ ಎಣೆಯೆಲ್ಲಿ? ಇಂದಿನ ಸ್ವಾತಂತ್ರ್ಯ ಯುಗದಲ್ಲಿ, ಪ್ರಜಾಪ್ರಭುತ್ವದಲ್ಲಿ ಇವೆಲ್ಲಾ ನಡೆಯುವುದಿಲ್ಲ, ಎಂಬ ಭರವಸೆಯನ್ನು ಇಟ್ಟುಕೊಂಡೆವಾದರೆ ಮಾತ್ರ ತಪ್ಪಾದೀತು. ರಾಜತ್ವ ಪ್ರಕಟಗೊಳ್ಳಲು ರಾಜರೇ ಇರಬೇಕೆಂದಿಲ್ಲ, ಇದು ಪ್ರಭುತ್ವದ ಪ್ರತೀಕ. ಇದು ವಂಶದ ಹೆಸರಿನಲ್ಲಿ, ಪ್ರಜೆಗಳಿಗಾಗಿ, ಸೈದ್ಧಾಂತಿಕ ನೆಲೆಯಲ್ಲಿ ಅಥವಾ ಜನರಿಗೂ ಮಂಗಳವನ್ನುಂಟು ಮಾಡುವ ನೆವದಲ್ಲಿ ಒಬ್ಬ ಅಥವಾ ಅವನೊಡನೆ ಇರುವ ಕೆಲವರು ಚಲಾಯಿಸುವ ಶಕ್ತಿ. ಇದರ ಮೂರ್ತ, ಅಮೂರ್ತ, ರೂಪಗಳು ನಿರಂತರವಾಗಿ ಪ್ರಕಟಗೊಳ್ಳುತ್ತಿರುತ್ತವೆ. ಇತಿಹಾಸವನ್ನು ಎಳೆದು ತನ್ನದಾಗಿಸುವ ಎದೆಗಾರಿಕೆ ಇದರ ಒಂದು ಅಂಶ. ಇಂದಿನ ಪ್ರಭುತ್ವವನ್ನು ಸ್ಥಾಪಿಸಲು ಇತಿಹಾಸದ ಮೇಲೆ ಒಡೆತನ ಸ್ಥಾಪಿಸುವುದು ಅವಶ್ಯ. ಬಲವಂತವಾಗಿಯಾದರೂ ಸರಿಯೇ. ನಮ್ಮ ವಿವಾಹ ಪದ್ಧತಿಯಲ್ಲಿ ಆರ್ಷ, ದೈವ, ಗಾಂಧರ್ವ ಮಾದರಿಗಳಲ್ಲದೆ, ಪೈಶಾಚವೂ ಒಂದು. ಅದನ್ನೇಕೆ ಮರೆಯಬೇಕು? ಬಲಪ್ರಯೋಗದಲ್ಲಿ ವೀರತ್ವವೂ ಅಡಗಿಲ್ಲವೆ? ತರ್ಕಗಳೇನೇ ಇರಲಿ, ಇತಿಹಾಸಕಾರರನ್ನು ರಾಜಕೀಯದ ಒತ್ತೆಯಾಳಾಗಿ ನಡೆಸಿಕೊಳ್ಳುವ ಕ್ರಮ ಎಲ್ಲಾ ಪ್ರಭುತ್ವ, ಪ್ರಭೇದಗಳಿಗೂ ಸೇರಿದ್ದು. ಒಂದು ವಿಧ ಇತಿಹಾಸವನ್ನು ಅಧಿಕೃತೀಕರಿಸುವುದು, ಇತಿಹಾಸದಲ್ಲಿ ಯಾವುದು ಮುಖ್ಯ, ಯಾವುದು ಗೌಣ; ಯಾರು ಮಿತ್ರ, ಯಾರು ಶತ್ರು ಎಂಬ ಚಿತ್ರಣವನ್ನು ಅಧಿಕೃತವಾಗಿ ಸಾರುವುದು ಇದರ ಕಾರ್ಯ.

ಪ್ರತಿಮಾಗೃಹ

ಇತಿಹಾಸದಲ್ಲಿ ಅಧಿಕೃತೀಕರಿಸಿದ ನಾಯಕ-ನಾಯಕಿಯರನ್ನು ಪ್ರತಿಮಾಗೃಹದಲ್ಲಿ ಸ್ಥಾಪಿಸುವ ವಾಡಿಕೆ ಇನ್ನೂ ನಿಂತಿಲ್ಲ. ಭಾಸ ಕವಿ ಚಿತ್ರಿಸಿದ್ದು ಸೂರ್ಯವಂಶಕ್ಕೆ ಸೇರಿದ ಖಾಸಗಿ ಪ್ರತಿಮಾಗೃಹವಾದರೆ ಈಗಿನದು ರಾಜಕೀಯ ಪ್ರಭಾವವನ್ನು ಹೊಂದಿದವರ ಸಾರ್ವಜನಿಕವೆಂದು ಪ್ರಸ್ತುತಪಡಿಸಿದ ಸ್ವಂತ ಪ್ರದರ್ಶನ ಭವನ. ಇಲ್ಲಿ ಸ್ಥಾಪಿಸಲಾದ ಪ್ರತಿಮೆಗಳು ಅಧಿಕೃತೀಕರಿಸಲ್ಪಟ್ಟ ಐತಿಹಾಸಿಕ ಚಿತ್ರಣ ಅಥವಾ ನಾಯಕ-ನಾಯಕಿಯರು. ಇವು ಪೂಜನೀಯ ವಸ್ತುಗಳು. ಅವುಗಳು ಶ್ರೇಷ್ಠತೆಯ ಪಾಲುದಾರಿಕೆಯನ್ನು ಪೋಷಿಸಿಕೊಳ್ಳುವ ರಾಜಕೀಯ ಶಕ್ತಿಗಳು ಅವುಗಳ ಆರಾಧನೀಯತೆಯ ವಿಚಾರವಾಗಿ ಯಾವ ರೀತಿಯ ಒಪ್ಪಂದವನ್ನೂ ಮಾಡಲು ತಯಾರಿರುವುದಿಲ್ಲ. ಇತಿಹಾಸದ ವ್ಯಕ್ತಿಗಳು ಕುಲದೇವತೆಗಳಾದಾಗ ಅವರು ವಿಮರ್ಶೆ, ವಿಶ್ಲೇಷಣೆಗಳನ್ನು ಮೀರಿ ಬೆಳೆಯುತ್ತಾರೆ. ಅವರ ವಿಗ್ರಹಗಳನ್ನು ಸಾರ್ವಜನಿಕರ ಆರಾಧನೆಗೆ ಸ್ಥಾಪಿಸಿದ ಬಳಿಕ ಅವುಗಳ ಮೇಲೆ ಸಲುಗೆ ತೋರುವ ಸ್ವಾತಂತ್ರ್ಯ ಕಾಗೆ, ಪಾರಿವಾಳಗಳಿಗೆ ಮಾತ್ರ. ಬೇರೆ ಯಾರಾದರೂ ಈ ಆರಾಧನೀಯರನ್ನು ವಿಮರ್ಶೆಗೊಳಪಡಿಸಿ, ಅವರ ಬಗ್ಗೆ ಅನಗತ್ಯ ಪ್ರಶ್ನೆಗಳನ್ನೆತ್ತಿದರೆ ಅವರನ್ನು ಧರ್ಮ ಭ್ರಷ್ಟರಿಗೆಂದು ಮೀಸಲಾಗಿರುವ ನರಕಕ್ಕೆ ರವಾನಿಸುವ ಸಾಧ್ಯತೆ ಹೆಚ್ಚು. ನಂಬಿ ಕೆಟ್ಟವರಿಲ್ಲ ಎಂಬ ಆಶ್ವಾಸನೆಯೊಂದಿಗೆ ನಂಬದಿರುವ ಬಿಕನಾಸಿಗಳಿಗೆ ಕಾದಿರುವ ದುರ್ಗತಿಯನ್ನೂ ಪ್ರಕಟಿಸಲಾಗುವುದು. ಆಯ್ಕೆ ನಮ್ಮದು. ರಾಜಕೀಯ ಪಕ್ಷಗಳು, ಪ್ರಭಾವಶಾಲಿ ಬಣಗಳು, ವ್ಯವಸ್ಥಿತ ಜಾತಿ-ಪಂಗಡಗಳು ತಮ್ಮ ತಮ್ಮ ಅಭಿಮಾನಿ ಸಂಘಗಳನ್ನು ಕಟ್ಟಿ ಪೂಜಾ ಸಂಹಿತೆಗಳನ್ನು ಅಂಗೀಕರಿಸುತ್ತವೆ. ಇದರಿಂದ ವ್ಯಕ್ತಿಗಳು ಶಕ್ತಿಗಳಾಗಿ, ಪವಾಡ ಪುರುಷರಾಗಿ ಅವರ ಸುತ್ತ ಒಂದು ಬಗೆಯ ದೈವೀ ಪ್ರಭಾವಲಯ ನಿರ್ಮಾಣವಾಗುತ್ತದೆ. ಇವರು ಕೇವಲ ಮನುಷ್ಯರ ವಿಮರ್ಶೆಗಳನ್ನು ನಿರಾಕರಿಸುತ್ತಾರೆ. ಸತ್ಯಶೋಧನೆ, ಪ್ರಜ್ಞಾವಂತರ ಕುತೂಹಲ, ಜಿಜ್ಞಾಸೆ ಎಂಬೆಲ್ಲಾ ನೆವಗಳು ನಂಬಿಕೆಯನ್ನು ಕದಡಿ, ಕಲುಷಿತಗೊಳಿಸುವ ಹುನ್ನಾರ ಸಾಧನಗಳಾಗುತ್ತವೆ. ಇವುಗಳನ್ನು ಹತ್ತಿಕ್ಕುವುದು ಒಂದು ವಿಧವಾದ ಧರ್ಮಯುದ್ಧ ಎಂಬ ಭಾವನೆಯನ್ನು ಆರಾಧಕರು ಇಟ್ಟುಕೊಳ್ಳುತ್ತಾರೆ. ಉದಾಹರಣೆಯಾಗಿ ಛತ್ರಪತಿ ಶಿವಾಜಿಯನ್ನು ತೆಗೆದುಕೊಳ್ಳಿ. ಲೋಕಮಾನ್ಯ ತಿಲಕರು ಶಿವಾಜಿ ಉತ್ಸವವನ್ನು ಆರಂಭಿಸಿದ ನಂತರ ಶಿವಾಜಿಯು ಓರ್ವ ಐತಿಹಾಸಿಕ ವ್ಯಕ್ತಿಯಿಂದ ಮಹಾರಾಷ್ಟ್ರೀಯ ಶಕ್ತಿಯಾಗಿ ಬೆಳೆದ ಆದರ್ಶ ಪುರುಷನಾದ. ದೇವಿ ಭವಾನಿಯ ಅನುಗ್ರಹ, ಆಕೆಯಿಂದ ಪಡೆದ ವಿಶೇಷ ಖಡ್ಗ, ಗುರು ರಾಮದಾಸರ ಆಶೀರ್ವಾದ ಇವೆಲ್ಲವೂ ಆತನ ವಿಸ್ಮಯಕಾರಿ ವಿಜಯ ಸಾಧನೆಗಳಿಗೆ ದೈವಸಂಕಲ್ಪದ ಮೆರಗನ್ನು ನೀಡಿದವು. ಮುಂದೆ ಶಿವಸೇನೆಯ ಕೈಯಲ್ಲಿ ಇದೇ ಚಿತ್ರಣ ಮಹಾರಾಷ್ಟ್ರೀಯತೆ ಹಾಗೂ ಕಾರ್ಯೋನ್ಮುಖ ಹಿಂದುತ್ವದ ಪ್ರತಿಪಾದನೆಗೆ ಮೀಸಲಾಯಿತು. ಆದಿಲ್ ಷಾಹಿ-ಮೊಗಲ್ ಷಾಹಿಗಳ ನಿಗ್ರಹದ ದೈವೀ ಪ್ರತೀಕವಾಗಿ ಶಿವಾಜಿಯು ಈ ಕಥನದಲ್ಲಿ ಮೂಡಿ ಬರುತ್ತಾನೆ. ಇದನ್ನು ಪ್ರಶ್ನಿಸುವ ಸಾಹಸ ಮಾಡಿದ ಇತಿಹಾಸಕಾರರು ಬಹಳ ದಿನ ನಿರ್ಶಚಿಂತೆಯಿಂದ ನಿದ್ರೆ ಮಾಡಿಲ್ಲ ಎಂಬುದು ನಿಜ. ಹಾಗೆಯೇ ಗುರುಗ್ರಂಥ ಸಾಹೇಬವನ್ನು ಭಾಷಾ ಶಾಸ್ತ್ರದ ಓರೆಗೆ ಹಚ್ಚ ಹೊರಟ ವಿದ್ವಾಂಸರೊಬ್ಬರು ಆಸ್ತಿಕ ಬಂಧುಗಳ ಪಾದರಕ್ಷೆಗಳನ್ನು ಸ್ವಚ್ಚಗೊಳಿಸಿ ಪ್ರಾಯಶ್ಚಿತ ಪಡೆದ ನಿದರ್ಶನವೂ ಇದೆ. ವೇದಕಾಲದಲ್ಲಿ ಗೋ ರಕ್ಷಣ ಭಕ್ಷಣದ ವಿಚಾರವಾಗಿ ಚರ್ಚೆ, ಪ್ರಾಚೀನ ಭಾರತದಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಜಿಜ್ಞಾಸೆ, ಬಸವಣ್ಣನವರ ಜೀವನ, ಟಿಪ್ಪು ಸುಲ್ತಾನರ ಧಾರ್ಮಿಕ ನಿಲುವು ಅಥವಾ ಜಾನಪದ ಅವಳಿ ವೀರ ಕೋಟಿ-ಚೆನ್ನಯರ ಬದುಕಿನ ಬಗ್ಗೆ ಹೆಚ್ಚಿನ ಕುತೂಹಲ, ಪ್ರಶ್ನೆಗಳು ಬೇರೆ ಬೇರೆ ಪಂಗಡಗಳಿಗೆ ಅತೀವ ನೋವನ್ನುಂಟು ಮಾಡಿವೆ ಎಂದು ಘೋಷಿಸಿ, ಅವುಗಳ ವಿಚಾರವಾಗಿ ಬಹಳಷ್ಟು ರಾದ್ಧಾಂತಗಳನ್ನು ನಡೆಸಲಾಗಿದೆ. ಇತಿಹಾಸಕಾರ, ಸಾಹಿತಿ, ಚಿಂತಕರನ್ನು ನ್ಯಾಯಾಲಯದ ಅಥವಾ ಜನಾಭಿಪ್ರಾಯವೆಂಬ ಕಟಕಟೆಗೆ ಏರಿಸಿದ್ದಾರೆ. ಅವರೆಲ್ಲ ಸಂವಾದಕ್ಕೆ ಯೋಗ್ಯರಲ್ಲ, ಬರೇ ನಿಂದಾರ್ಹರು ಎಂಬ ತೀರ್ಮಾನವನ್ನೂ ನೀಡಿದ್ದಾರೆ. ಧರ್ಮ ರಕ್ಷಣೆಯ ಹೆಸರಿನಲ್ಲಿ ಕೆಲವರಿಗೆ ಧರ್ಮನಿಂದಕರೆಂದೂ, ಧರ್ಮ ಭ್ರಷ್ಟರೆಂದೂ ಹಣೆಪಟ್ಟಿ ಕಟ್ಟಿ, ಅವರನ್ನು ಕ್ರೂರ ತನಿಖೆಗೆ ಗುರಿ ಮಾಡಿ, ತಪ್ಪಿತಸ್ಥರೆಂದು ಕಂಡು ಬಂದವರ ಅಮೂಲ್ಯ ಆತ್ಮವನ್ನು ಶಾಶ್ವತ ಶಾಪದಿಂದ ತಪ್ಪಿಸಲು ಅವರ ನಶ್ವರ ದೇಹವನ್ನು ಸಾರ್ವಜನಿಕರ ಸಮಕ್ಷಮದಲ್ಲಿ ಸುಟ್ಟು ಬೂದಿ ಮಾಡುವ ಪುಣ್ಯ ಕೆಲಸವನ್ನು ಹದಿನಾರು-ಹದಿನೇಳನೆಯ ಶತಮಾನದ ಯುರೋಪಿನ ಚರ್ಚಿನ ವಿಶೇಷ ನ್ಯಾಯ ವ್ಯವಸ್ಥೆ ಈಗ ಇತಿಹಾಸ ಪುಟಗಳಲ್ಲಿ ಮುಜುಗರದಿಂದ ಮುಖಮುಚ್ಚಿ ಅವಿತುಕೊಂಡಿದ್ದರೂ, ಅದರ ಹೊಸ ಆವೃತಿಗಳನ್ನು ನಮ್ಮ ಸ್ವಾತಂತ್ರ್ಯ ಪ್ರಿಯ ಪ್ರಜಾಪ್ರಭುತ್ವವು ಚೆನ್ನಾಗಿ ರೂಢಿಸಿಕೊಂಡಿದೆ. ನಮ್ಮ ಇತಿಹಾಸವನ್ನು ನಾವೇ ನಿರ್ಮಿಸಬೇಕು; ನಮಗೆ ಬೇಕಾದಂತೆ ನಿರ್ಮಿಸಬೇಕು; ಅದರಲ್ಲಿ ಇತರರ ಹಸ್ತಕ್ಷೇಪ ಸಲ್ಲದು; ಅದನ್ನು ನಮ್ಮಿಂದ ಕಸಿದೊಯ್ಯದಂತೆ ಬಿಚ್ಚುಗತ್ತಿಯಿಂದ ಕಾಯುತ್ತಿರಬೇಕು; ನಮ್ಮ ಇತಿಹಾಸದ ಕುರಿತು ಇನ್ನೊಬ್ಬರು ತೀರಾ ಹೊಗಳು ಮಾತನ್ನು ಹೇಳದಿದ್ದರೆ, ನಮ್ಮ ದೌರ್ಬಲ್ಯವನ್ನು ಬೊಟ್ಟು ಮಾಡಿ ತೋರಿಸಿದರೆ, ಅದನ್ನು ನಮ್ಮ ಆಸ್ತಿಯ ಮೇಲಾದ ಅತಿಕ್ರಮಣವೆಂದು ಸಾರಿ ಯುದ್ಧ ಸನ್ನದ್ಧರಾಗುತ್ತೇವೆ.

 

* ಪ್ರಸ್ತುತ ಲೇಖನವು ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ೨೦೦೫ ರಲ್ಲಿ ಪ್ರಕಟಿಸಿದ “ಸಮಾಜ ಮತ್ತು ಚರಿತ್ರೆ” ಎನ್ನುವ ಕೃತಿಯ ಮೂಲರೂಪವಾಗಿದೆ. ಇದನ್ನು ಬಳಸಲು ಅನುಮತಿ ನೀಡಿದ ಲೇಖಕರಿಗೆ ಆಭಾರಿಯಾಗಿದ್ದೇವೆ. – ಸಂ.