ಭಾರತೀಯ ಚರಿತ್ರೆ ಅಥವಾ ಇತಿಹಾಸ ಸಂಪ್ರದಾಯವು ಹಿಂದಿನ ಕಾಲದವು ಎನ್ನಲಾದ ಸಂಗತಿಗಳನ್ನು ತಲೆಯಿಂದ ತಲೆಗೆ ದಾಟಿಸುತ್ತದೆಯೇ ಹೊರತೂ ಈ ಇತಿಹಾಸವನ್ನು ಹೇಗೆ ಕಟ್ಟಿದರು ಎಂಬುದನ್ನು ಪರಾಮರ್ಶಿಸುವುದಿಲ್ಲ. ಭಾರತದ ಇತಿಹಾಸ ಲೇಖನದ ಚರಿತ್ರೆ ಪಾಶ್ಚಾತ್ಯ ಸಂಪ್ರದಾಯದ ಕೊಡುಗೆಯಾಗಿದೆ. ೧೯ನೆಯ ಶತಮಾನದಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಚರಿತ್ರೆ ಲೇಖನ ಪರಂಪರೆಯು ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದೆ. ಅದನ್ನು ಈ ಕೆಳಗಿನ ಮೂರು ಹಂತಗಳಲ್ಲಿ ಗುರುತಿಸಬಹುದು.

೧. ಹತ್ತೊಂಬತ್ತನೆಯ ಶತಮಾನದ ಪಾಶ್ಚಾತ್ಯ ಚರಿತ್ರೆ ಲೇಖನದಲ್ಲಿ ಅಂತರ್ಗತವಾಗಿದ್ದ ಮೂಲಭೂತ ಕಲ್ಪನೆ ಎಂದರೆ ‘ನಿಜ’ (fact)ವನ್ನು ಸಾಧಿಸುವುದು. ಗತಕಾಲದ ಸಂಗತಿಗಳನ್ನು ಅವು ಹೇಗಿದ್ದವೋ ಹಾಗೇ ಗ್ರಹಿಸುವುದು ಈ ‘ನಿಜ’ವಾಗಿದೆ. ಈ ರೀತಿಯ ನಿಜಗಳನ್ನು ಕಂಡು ಹಿಡಿಯಲು ವಸ್ತುನಿಷ್ಠತೆ ಅತ್ಯಗತ್ಯವಾಗಿದೆ. ವ್ಯಕ್ತಿಯ ಪೂರ್ವಗ್ರಹಗಳಿಂದ ಬಿಡುಗಡೆ ಹೊಂದುವುದು ವಸ್ತುನಿಷ್ಠತೆ ಎಂದೆನಿಸಿಕೊಳ್ಳುತ್ತದೆ. ಈ ವಸ್ತುನಿಷ್ಠತೆಯನ್ನು ಸಾಧಿಸಲು ವೈಜ್ಞಾನಿಕ ವಿಧಾನಗಳನ್ನು ಹಾಕಿಕೊಳ್ಳಲಾಯಿತು ಹಾಗೂ ಇತಿಹಾಸ ಒಂದು ವಿಜ್ಞಾನ ಎಂದು ಸಾರಲಾಯಿತು. ಚರಿತ್ರೆ ಎಮಬುದು ಒಂದು ಸತ್ಯಶೋಧನೆಯಾಗಿದ್ದರೂ ಪೂರ್ವಗ್ರಹಗಳಿಂದಾಗಿ ಸತ್ಯವನ್ನು ಸಾಧಿಸಲು ಚರಿತ್ರೆಕಾರರು ವಿಫಲರಾಗುತ್ತಾರೆ. ಹಾಗಾಗಿ ಚರಿತ್ರೆಯಲ್ಲಿ ತಲೆಮಾರಿನಿಂದ ತಲೆಮಾರಿಗೆ ನಿರಂತರವಾಗಿ ಸತ್ಯ ಶೋಧನೆ ನಡೆಯುತ್ತಿರಬೇಕು. ಪ್ರತೀ ತಲೆಮಾರಿನವರೂ ತಮಗಿಂತಲೂ ಹಿಂದಿನವರು ಸತ್ಯವನ್ನು ಯಾವ ವಿಧಾನದಿಂದ ಸಾಧಿಸಿದರು ಎಲ್ಲೆಲ್ಲಿ ಎಡವಿದರು ಎಂಬುದನ್ನು ತಿಳಿದುಕೊಳ್ಳಬೇಕು. ಹಾಗಾಗಿ ಹಿಂದಿನ ಇತಿಹಾಸ ಲೇಖನಗಳ ಪರಾಮರ್ಶೆ ಇಂದಿನ ಇತಿಹಾಸವನ್ನು ರಚಿಸಲಿಕ್ಕೆ ಬುನಾದಿಯಾಗುತ್ತದೆ. ಒಂದು ರೀತಿಯಲ್ಲಿ ಚರಿತ್ರೆ ಲೇಖನಶಾಸ್ತ್ರ ಚರಿತ್ರೆ ಸಂಪ್ರದಾಯದ ಆತ್ಮಶೋಧನೆಯಾಗಿದೆ. ಈ ಪ್ರಕ್ರಿಯೆ ಚರಿತ್ರೆಕಾರರು ಸುಳ್ಳಿನಿಂದ ಸತ್ಯದೆಡೆಗೆ ಸಾಗುವ ಪ್ರಗತಿಪಥವಾಗಿದೆ ಎಂದು ೧೯ನೆಯ ಶತಮಾನದ ಇತಿಹಾಸಾರರು ನಂಬಿದ್ದರು.

ಈ ‘ವಸ್ತುನಿಷ್ಠ’ ಚರಿತ್ರೆಯ ಬೇಡಿಕೆಗಳು ಇತಿಹಾಸ ಸಂಶೋಧನೆಯನ್ನು ನಡೆಸಬೇಕಾದರೂ ಆಯಾ ವಿಷಯದ ಕುರಿತು ಇದುವರೆಗೆ ಏನೇನು ಸಂಶೋಧನೆ ನಡೆದಿದೆ? ಹೇಗೆ ನಡೆದಿದೆ? ಇನ್ನೂ ಎಷ್ಟು ಅವಕಾಶ ಇದೆ? ಹಿಂದಿನ ಸಂಶೋಧನಗಳು ಎಲ್ಲಿ ಎಡವಿವೆ? ಇವೇ ಮುಂತಾದ ಪರಾಮರ್ಶೆಯನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಇಂತಹ ಪರಾಮಶೆಯನ್ನು ನಡೆಸದ ಯಾವ ಸಂಶೊಧನೆಗೂ ಗಟ್ಟಿತನ ಬರುವುದಿಲ್ಲ. ಅದನ್ನು ಕೈಗೊಳ್ಳದ ಚರಿತ್ರೆಕಾರರು ಹೊಸ ನೋಟಗಳನ್ನು ನೀಡುವುದು ಸಾಧ್ಯವಿಲ್ಲ. ಹಿಂದಿನ ಇತಿಹಾಸ ಲೇಖನಗಳು ಈ ವರ್ತಮಾನದ ಸಂಶೋಧನೆಗೆ ಆನುಷಂಗಿಕ ಆಕರಗಳೂ ಆಗಿವೆ. ಅವು ಮಾಹಿತಿ ಸಂಗ್ರಹಕ್ಕೆ, ಸಂಶೋಧನಾ ವಿಧಾನ ಹಾಗೂ ತಂತ್ರಗಳ ಕುರಿತು ತಿಳುವಳಿಕೆಯನ್ನು ಹೆಚ್ಚಿಸಲಿಕ್ಕೆ ಅಗತ್ಯವಾಗಿವೆ.

೨. ಈ ಮೇಲಿನ ‘ವಸ್ತು ನಿಷ್ಠ’ ಚರಿತ್ರೆಯ ಮಿತಿಗಳನ್ನು ೨೦ನೆಯ ಶತಮಾನದ ತತ್ವಜ್ಞರು, ಚರಿತ್ರೆಕಾರರು ಎತ್ತಿತೋರಿಸಿದರು. ಅವರು ಚರಿತ್ರೆಯ ‘ನಿಜ’ಗಳು ವಸ್ತುಗಳಂತೇ ಹೊರ ಪ್ರಪಂಚದಲ್ಲಿ ಇಲ್ಲ, ಅವು ಇತಿಹಾಸಕಾರನ ತಲೆಯೊಳಗೇ ವಿಚಾರ ರೂಪದಲ್ಲಿ ಇವೆ. ಹಾಗಾಗಿ ಅದು ವರ್ತಮಾನದ ರಚನೆಯಾಗಿದೆ. ಚರಿತ್ರೆಯ ನಿಜಗಳು ಚರಿತ್ರೆಕಾರರ ಉದ್ದೇಶಕ್ಕೆ ಬದ್ಧವಾಗಿವೆ. ವರ್ತಮಾನವನ್ನು ಗ್ರಹಿಸಲು ಹಾಗೂ ಬದುಕಲು ಹಾಗೂ ಆ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳಲು ಪ್ರತೀ ತಲೆಮಾರಿಗೂ ಅದು ಪ್ರಸ್ತುತವಾಗಿದೆ. ಈ ರೀತಿ ಚರಿತ್ರೆಯನ್ನು ನಮ್ಮ ಅಗತ್ಯಕ್ಕೆ ತಕ್ಕಂತೇ ಗ್ರಹಿಸದೇ ಅನ್ಯ ಮಾರ್ಗವಿಲ್ಲ. ಚರಿತ್ರೆಗಿರುವ ‘ವ್ಯಕ್ತಿನಿಷ್ಠ’ ಸ್ವರೂಪವನ್ನು ಈ ರೀತಿ ಅನಿವಾರ್ಯ ಎಂದು ಗುರುತಿಸಲಾಯಿತು. ಇತಿಹಾಸವನ್ನು ಕಾಲಕಾಲಕ್ಕೆ ಪುನರ್ನಿರೂಪಿಸಿ ಅದರ ಪ್ರಸ್ತುತತೆಯನ್ನು ಉಳಿಸಬೇಕು ಎಂದು ಇವರು ವಾದಿಸಿದರು. ಈ ವಾದವನ್ನು ಪ್ರತಿಪಾದಿಸಿದ ಚರಿತ್ರೆಕಾರರಿಗೆ ಯಾವ ಯಾವ ಚಿಂತನೆಗಳು ಹಾಗೂ ಉದ್ದೇಶಗಳು ಯಾವ ಯಾವ ರೀತಿಯ ಇತಿಹಾಸ ಲೇಖನಗಳನ್ನು ಸೃಷ್ಟಿಸಿದವು ಎಂಬ ತಿಳುವಳಿಕೆ ಅತ್ಯಗತ್ಯವಾಯಿತು. ಯಾವುದೇ ಇತಿಹಾಸ ಲೇಖನವೂ ಕೂಡ ಚರಿತ್ರೆಕಾರನ ಖಾಸಗಿ ಪ್ರಪಂಚ ಹಾಗೂ ಐತಿಹಾಸಿಕ ಸನ್ನಿವೇಶದಿಂದ ಸ್ವತಂತ್ರವಾಗಿ ನಡೆಯಲು ಸಾಧ್ಯವಿಲ್ಲ. ಅದೇ ರೀತಿ ತಾವೂ ಕೂಡ ವರ್ತಮಾನದ ನೈತಿಕ ಅಗತ್ಯವನ್ನು ಪೂರೈಸುತ್ತಿದ್ದೇವೆ ಎಂಬ ಸಮರ್ಥನೆಯನ್ನೂ ಈ ಚರಿತ್ರೆಕಾರರು ಬೆಳೆಸಿಕೊಂಡರು. ಗತಕಾಲದ ಚರಿತ್ರೆಕಾರರು ‘ನಿಜ’ಗಳನ್ನು ಹೇಗೆ ಕಟ್ಟಿದರು ಎಂಬ ಪ್ರರ್ಶನೆಗಿಂತ ಏಕೆ ಹಾಗೆ ಕಟ್ಟಿದರು ಎಂಬ ಪ್ರಶ್ನೆ ಇವರಿಗೆ ಮುಖ್ಯವಾಯಿತು.

ಈ ಚರಿತ್ರೆಕಾರರು ತಮ್ಮ ಹಿಂದಿನ ಚರಿತ್ರೆ ಲೇಖನಗಳನ್ನು ನೈತಿಕ ಪರಾಮರ್ಶೆಗೆ ಒಡ್ಡಿದರು. ಉದಾಹರಣೆಗೆ ಆಧುನಿಕ ಇತಿಹಾಸಕಾರರು ಮಧ್ಯಕಾಲೀನ ಇತಿಹಾಸ ಲೇಖನವನ್ನು ಈ ರೀತಿ ವಿಮರ್ಶೆಗೆ ಒಳಪಡಿಸಿದರೆ, ರಾಷ್ಟ್ರೀಯವಾದ ಚರಿತ್ರೆಕಾರರು ವಸಾಹತುಶಾಹಿ ಚರಿತ್ರೆ ಲೇಖನವನ್ನು ಪರಾಮರ್ಶೆಗೆ ಒಡ್ಡಿದರು. ಮಾರ್ಕ್ಸ್‌ವಾದಿ ಇತಿಹಾಸ ಲೇಖನವು ಬೂರ್ಜ್ವಾ ವರ್ಗದ ಇತಿಹಾಸ ಲೇಖನವನ್ನು ವಿಮರ್ಶಿಸಿತು. ಈ ರೀತಿ ಚರಿತ್ರೆ ಲೇಖನಶಾಸ್ತ್ರ ವೈಜ್ಞಾನಿಕ ಕುತೂಹಲ ಮಾತ್ರವಾಗದೇ ವರ್ತಮಾನದ ಹೋರಾಟ ಹಾಗೂ ವಿಮೋಚನಾ ಕಾರ್ಯಕ್ರಮ ಕೂಡ ಆಯಿತು.

೩. ೨೦ನೆಯ ಶತಮಾನದ ಅಂತ್ಯಭಾಗದಲ್ಲಿ ಪಾಶ್ಚಾತ್ಯರಲ್ಲಿ ಬೆಳೆದು ಬಂದ ಆಧುನಿಕೋತ್ತರ ವಿಚಾರಗಳು ಈ ಮೇಲಿನ ಎರಡೂ ಪ್ರಕಾರದ ಚಿಂತನೆಗಳನ್ನು ತಿರಸ್ಕರಿಸುತ್ತದೆ. ಚರಿತ್ರೆಗೆ ‘ನಿಜ’ವನ್ನು ಕಂಡು ಹಿಡಿಯುವುದು ಅಸಾಧ್ಯ. ಏಕೆಂದರೆ ಚರಿತ್ರೆಕಾರ ಬೇರೆ, ಚರಿತ್ರೆ ಬೇರೆಯಲ್ಲ. ಅದೇ ರೀತಿ ವರ್ತಮಾನದ ಕಾರ್ಯಕ್ರಮವನ್ನು ಐರೋಪ್ಯ ಕೇಂದ್ರಿತ ದೃಷ್ಟಿಯಿಂದಲೇ ಗ್ರಹಿಸುವ ಈ ಚರಿತ್ರೆ ಉಳಿದ ಸಮಾಜಗಳಿಗೆ ಹಿಂಸಾತ್ಮಕವಾಗಿ ಪರಿಣಮಿಸಿದೆ. ಐರೋಪ್ಯ ಚರಿತ್ರೆ ತಾವು ಗತಕಾಲದ ನಿಜವನ್ನು ಕಟ್ಟುವವನು ಎಂದು ಪ್ರತಿಷ್ಠಾಪಿಸಿಕೊಂಡು ಅನ್ಯ ಸಂಪ್ರದಾಯಗಳ ಚರಿತ್ರೆಗಳನ್ನೊಂದೇ ಅಲ್ಲ, ಅನ್ಯ ಜಗತ್ತುಗಳನ್ನೇ ಅನಧಿಕೃತ ಎಂದು ನಾಶ ಮಾಡುತ್ತಿದೆ. ಅನ್ಯರ ಕುರಿತು ಮಾತನಾಡಲು ತನಗೆ ನೈತಿಕ ಹಕ್ಕನ್ನು ಅದು ಈ ಮೂಲಕ ಪಡೆದುಕೊಂಡಿದೆ. ಇದು ಅಂತಿಮವಾಗಿ ಪಾಶ್ಚಾತ್ಯ ನಾಗರಿಕತೆ ಅನ್ಯ ಸಂಸ್ಕೃತಿಗಳ ಮೇಲೆ ತನ್ನ ಬಲವನ್ನು, ದಮನವನ್ನು ಪ್ರಯೋಗಿಸಲು ಅನುಕೂಲ ಮಾಡಿಕೊಟ್ಟಿದೆ ಎಂದು ಆಧುನಿಕೋತ್ತರ ಚಿಂತಕರು ವಾದಿಸುತ್ತಾರೆ. ಈ ಪಾಶ್ಚಾತ್ಯ ಚರಿತ್ರೆ ಕೂಡ ಒಂದು ಪ್ರಕಾರದ ಕಥೆಯೇ ಆಗಿದೆ ಎಂದು ಇವರು ಪ್ರತಿಪಾದಿಸಿದರು.

ಆಧುನಿಕೋತ್ತರರ ಈ ವಾದ ಇತಿಹಾಸ ಲೇಖನಶಾಸ್ತ್ರದ ಮಹತ್ವವನ್ನು ಮತ್ತೂ ಹೆಚ್ಚಿಸಿದವು. ಆಧುನಿಕೋತ್ತರ ಚಿಂತಕರು ಆಧುನಿಕ ವಾದಗಳ ‘ಸುಳ್ಳುಗಳನ್ನು’ ಬಯಲು ಮಾಡಲು ಚಿಂತನೆಗಳ ಚರಿತ್ರೆಯನ್ನೇ ಪುನರ‍್ರಚಿಸಿದರು. ಈ ಕಾಲದಲ್ಲೆ ವಸಾಹತೋತ್ತರ ಚಿಂತೆಗಳು ಹುಟ್ಟಿಕೊಂಡವು. ಈ ವಸಾಹತೋತ್ತರ ಚಿಂತನೆ ಪ್ರಧಾನವಾಗಿ ವಸಾಹತು ಚರಿತ್ರೆಯ ಲೇಖನದ ಪರಮಾರ್ಶೆಯೂ ಆಗಿದೆ.

ಈ ರೀತಿ ಚರಿತ್ರೆಯ ಕುರಿತು ಚಿಂತನೆಗಳು, ಧೋರಣೆಗಳು ಬದಲಾಗುತ್ತ ಬಂದರೂಚರಿತ್ರೆ ಲೇಖನಶಾಶ್ತ್ರದ ಮಹತ್ವ ಮಾತ್ರ ಹೆಚ್ಚುತ್ತಲೇ ಬಂದಿದೆ. ಚರಿತ್ರೆ ಲೇಖನಶಾಸ್ತ್ರದ ಮಹತ್ವವನ್ನು ಈಗ ಈ ಕೆಳಗಿನಂತೇ ವಿಭಿನ್ನ ರೀತಿಯಲ್ಲಿ ವಿಭಿನ್ನ ಚರಿತ್ರೆಕಾರರು ಗುರುತಿಸುತ್ತಾರೆ.

೧. ಇತಿಹಾಸ ಸಂಶೋಧನೆಗೆ ತೀರ ಪ್ರಾಯೋಗಿಕ ಅಗತ್ಯವಾಗಿ ಹಿಂದಿನ ಚರಿತ್ರೆ ಲೇಖನಗಳ ಪರಾಮರ್ಶೆ ಬೇಕಾಗುತ್ತದೆ. ಆಯಾ ಸಂಶೋಧನೆಗೆ ಅಗತ್ಯವಿರುವಷ್ಟೇ ಚರಿತ್ರೆ ಲೇಖನಗಳನ್ನು ಇಲ್ಲಿ ಸಂಶೋಧನಾ ವಿಧಾನವಾಗಿ ಬಳಸಲಾಗುತ್ತದೆ.

೨. ಚರಿತ್ರೆ ಸಂಶೋಧನೆಯ ಸಮಸ್ಯೆ ಹಾಗೂ ಸಾಧ್ಯತೆಗಳನ್ನು ಪರಾಮರ್ಶಿಸಿ ಚರಿತ್ರೆಯ ಕುರಿತು ತಾತ್ವಿಕ ಚಿಂತನೆಗಳನ್ನು ಬೆಳೆಸಿಕೊಳ್ಳಲು ಇದು ಅಗತ್ಯ.

೩. ಚಿಂತನೆಗಳ ಇತಿಹಾಸವನ್ನು (Philosophy of History) ಅಧ್ಯಯನ ಮಾಡುವವರಿಗೆ ಈ ಶಾಸ್ತ್ರ ಅಗತ್ಯವಾಗಿದೆ.

೪. ವಿಭಿನ್ನ ಐತಿಹಾಸಿಕ ಸಂದರ್ಭಗಳ, ಹಿತಾಸಕ್ತಿಗಳ ಅಭಿವ್ಯಕ್ತಿಯಾಗಿ ಚರಿತ್ರೆಯನ್ನು ಗುರುತಿಸುವುದು. ವರ್ತಮಾನದ ಸಮಾಜದಲ್ಲಿ ಬದಲಾವಣೆಯನ್ನು ತರಬಯಸಿದವರ ಹಾಗೂ ಹೋರಾಟದಲ್ಲಿ ತೊಡಗಿಕೊಂಡವರಿಗೆ ದಮನದ ಚರಿತ್ರೆಯನ್ನು ಹೇಗೆ ಕಟ್ಟಲಾಗಿದೆ ಎಂಬ ತಿಳುವಳಿಕೆಗೆ ಈ ಶಾಸ್ತ್ರ ಬೇಕಾಗುತ್ತದೆ.

ಸಾಧಾರಣವಾಗಿ ಚರಿತ್ರೆ ಲೇಖನಶಾಸ್ತ್ರದ ಕುರಿತು ಮಾತನಾಡುವಾಗ ಪಾಶ್ಚಾತ್ಯ ಚರಿತ್ರೆಯನ್ನೇ ಕೇಂದ್ರದಲ್ಲಿಡಲಾಗುತ್ತದೆ. ಏಕೆಂದರೆ ಈ ಪರಂಪರೆಯನ್ನು ಬೆಳೆಸಿದವರೇ ಅವರು. ಅವರ ಚರಿತ್ರೆಯಲ್ಲಿ ಗ್ರೀಕರ ಚರಿತ್ರೆ ಲೇಖನದಿಂದ ಈ ಅಧ್ಯಯನ ಪ್ರಾರಂಭವಾಗುತ್ತದೆ. ನಂತರ ರೋಮನ್ ಇತಿಹಾಸ ಲೇಖನ, ಮಧ್ಯಕಾಲದ ಚರ್ಚ್‌ಇತಿಹಾಸ ಲೇಖನ, ಪುನರುಜ್ಜೀವನ ಯುಗದ ಇತಿಹಾಸ ಲೇಖನ, ಜ್ಞಾನಪರ್ವದ (Age of enlightenment) ಇತಿಹಾಸ ಲೇಖನ, ರೋಮ್ಯಾಂಟಿಸಿಸ್ಟ್ ಚರಿತ್ರೆ ಲೇಖನ, ವಿಗ್ ಲಿಬರಲ್ ಇತಿಹಾಸ ಲೇಖನ, ಮಾರ್ಕ್ಸ್‌ವಾದಿ ಇತಿಹಾಸ ಲೇಖನ ಎಂಬುದಾಗಿ ವಿಭಿನ್ನ ಘಟ್ಟಗಳಲ್ಲಿ ಈ ಅಧ್ಯಯನ ನಡೆಯುತ್ತದೆ. ಈ ಚರಿತ್ರೆ ಲೇಖನದಲ್ಲಿ ಪ್ರಪಂಚದ ಉಳಿದೆಡೆಗಳಲ್ಲಿ ಬೆಳೆದು ಬಂದ ಇತಿಹಾಸ ಲೇಖನಗಳು ಪ್ರಸ್ತುತತೆ ಪಡೆಯುವುದಿಲ್ಲ. ಪ್ರಪಂಚದ ಉಳಿದೆಡೆಗಳಲ್ಲಿ ೨೦ನೆಯ ಶತಮಾನದಲ್ಲಿ ಅವತರಿಸಿದ ರಾಷ್ಟ್ರ ಪ್ರಭುತ್ವಗಳು ತಮ್ಮ ತಮ್ಮ ಇತಿಹಾಸ ಲೇಖನ ಸಂಪ್ರದಾಯವನ್ನು ರಚಿಸಿಕೊಂಡವು. ಉದಾಹರಣೆಗೆ ಭಾರತೀಯ ಇತಿಹಾಸ ಲೇಖನ ಪರಂಪರೆಯಲ್ಲಿ ಪ್ರಾಚೀನ ಭಾರತೀಯ, ಮಧ್ಯಕಾಲೀನ ಮುಸ್ಲಿಮ್ ಸಂಪ್ರದಾಯ, ಆಧುನಿಕ ಕಾಲದ ಚರಿತ್ರೆ ಲೇಖನಗಳನ್ನು ವಿಭಾಗಿಸಲಾಗುತ್ತದೆ. ಆಧುನಿಕ ಕಾಲದಲ್ಲಿ ವಸಾಹತುಶಾಹಿ ಚರಿತ್ರೆ ಲೇಖನ ರಾಷ್ಟ್ರೀಯತಾವಾದಿ ಚರಿತ್ರೆ ಲೆಖನ ಹಾಗೂ ಎಡಪಂಥೀಯ ಚರಿತ್ರೆ ಲೇಖನಗಳೆಂಬ ವಿಭಾಗಗಳನ್ನು ಮಾಡಲಾಗಿದೆ. ವಸಾಹತೋತ್ತರ ಚಿಂತನೆಗಳು ಬೆಳೆದು ಬಂದ ನಂತರ ಓರಿಯೆಂಟಲ್ ವಿದ್ವಾಂಸರ ಚರಿತ್ರೆ ಲೇಖನವು ಪರಿಶೀಲನೆಯ ಕೇಂದ್ರ ವಸ್ತುವಾಗಿದೆ. ಅಂದರೆ ವಸಾಹತು ರಾಷ್ಟ್ರಗಳಿಗೆ ಐರೋಪ್ಯ ಚರಿತ್ರೆ ಲೇಖನಶಾಸ್ತ್ರದ ಪ್ರವೇಶವಾದ ನಂತರ ಅವುಗಳಲ್ಲಿ ಬೆಳೆದು ಬಂದ ಎಲ್ಲ ಸಂಪ್ರದಾಯಗಳಲ್ಲೂ ಪೂರ್ವದೇಶಗಳ ಕುರಿತು ಪಶ್ಚಿಮದ ವಿದ್ವಾಂಸರು ಕಟ್ಟಿದ ಸ್ವಕೇಂದ್ರಿತ ಚರಿತ್ರೆಯ ಲಕ್ಷಣಗಳೇ ಮೂಲಭೂತವಾಗಿವೆ ಎಂದು ವಸಾಹತೋತ್ತರ ಚಿಂತಕರು ವಾದಿಸುತ್ತಾರೆ.

ಚರಿತ್ರೆಲೇಖನ ಪರಂಪರೆಗೆ ಈ ಮೇಲಿನ ವರ್ಗೀಕರಣಗಳೇ ಅಂತಿಮವಾಗಬೇಕಿಲ್ಲ. ನಿರ್ದಿಷ್ಟ ಸಂಶೋಧನೆಯನ್ನು ಕೈಗೊಳ್ಳಬಯಸಿದ ವಿದ್ವಾಂಸರು ತಮ್ಮ ತಮ್ಮ ಅಧ್ಯಯನಕ್ಕೆ ಪ್ರಸ್ತುತವಾಗುವಂತೇ ಈ ಹೊಸ ಪ್ರಭೇದಗಳನ್ನು ಅಳವಡಿಸಿಕೊಳ್ಳುತ್ತಾರೆ. ಈ ರೀತಿ ವಿಭಿನ್ನ ಐತಿಹಾಸಿಕ ರಾಜ್ಯಗಳ ಕುರಿತು, ಪ್ರಾದೇಶಿಕ ವಿಭಾಗಗಳ ಕುರಿತು, ಚಳುವಳಿಗಳ ಕುರಿತು, ಚಳುವಳಿಗಳ ಕುರಿತು, ಕಲೆ, ಸಂಸ್ಕೃತಿ ಮುಂತಾದ ಸಂಪ್ರದಾಯಗಳ ಕುರಿತು ಇಲ್ಲಿಯವರೆಗೆ ಏನೇನು ಲೇಖನಗಳು ಬಂದಿವೆ ಎಂಬುದನ್ನು ಕೂಡ ಪರಾಮರ್ಶೆಗೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಭಾರತದಲ್ಲಿ ನಾವು ಇಂದು ಕಲಿಯುತ್ತಿರುವ ಹಾಗೂ ಸಂಶೋಧಿಸುತ್ತಿರುವ ಚರಿತ್ರೆ ಲೇಖನ ಪ್ರಾರಂಭವಾದದ್ದು ವಸಾಹತುಯುಗದಲ್ಲಿ. ಭಾರತಕಕೆ ಪಾಶ್ಚಾತ್ಯರ ಆಗಮನದ ನಂತರ ಮೊದಲು ವ್ಯಾಪಾರಿ ಆಸಕ್ತಿಯಾಗಿದ್ದ ಈ ಸಂಪರ್ಕ ಕ್ರಮೇಣವಾಗಿ ಬ್ರಿಟಿಶ್ ಸಾಮ್ರಾಜ್ಯಶಾಹಿಗೆ ಎಡೆಮಾಡಿಕೊಟ್ಟಿತು. ಈ ಸಂದರ್ಭದಲ್ಲಿ ಪಾಶ್ಚಾತ್ಯ ಚರಿತ್ರೆಲೇಖನವೂ ಇಲ್ಲಿ ತಳವೂರಿತು. ಭಾರತೀಯ ಇತಿಹಾಸವನ್ನು ಪಾಶ್ಚಾತ್ಯ ಚರಿತ್ರೆ ಲೇಖನ ವಿಧಾನದ ಸ್ವರೂಪದಲ್ಲಿ ಬರೆಯುವ ಪ್ರಕ್ರಿಯೆ ಪ್ರಾರಂಭವಾಯಿತು. ತದನಂತರ ಇಲ್ಲಿಯವರೆಗೂ ನಾವು ಈ ಸಂಪ್ರದಾಯದಲ್ಲಿ ಕೆಲ ಮುಖ್ಯ ಘಟ್ಟಗಳನ್ನು ಗುರುತಿಸಲೇಬೇಕಾಗುತ್ತದೆ. ಅವೆಂದರೆ:

೧. ವಸಾಹತುಶಾಹಿ ಚರಿತ್ರೆ ಲೇಖನ

೨. ರಾಷ್ಟ್ರೀಯತಾವಾದೀ ಚರಿತ್ರೆ ಲೇಖನ

೩. ಎಡಪಂಥೀಯ ಚರಿತ್ರೆ ಲೇಖನ

ಓರಿಯೆಂಟಲಿಸ್ಟರು

‘ಓರಿಯೆಂಟಲಿಸಂ’ ಅಥವಾ ಪೌರ್ವಾತ್ಯ ಅಧ್ಯಯನಗಳು ಎಂಬ ಶಬ್ದವು ನಿರ್ದಿಷ್ಟವಾದ ಅರ್ಥವನ್ನು ಪಡೆದುಕೊಂಡು ಪ್ರಚಲಿತದಲ್ಲಿ ಬಂದದ್ದು ಎಡ್ವರ್ಡ್‌ಸೈದರ ‘ದಿ ಓರಿಯೆಂಟಲಿಸಂ’ ಕೃತಿಯ ಮೂಲಕ. ಸೈದರು ಪೌರ್ವಾತ್ಯ ಅಧ್ಯಯನಗಳು ಕೇವಲ ಜ್ಞಾನದ ಸೃಷ್ಟಿಯ ಕೆಲಸವಾಗಿರದೇ, ಒಂದು ಸಾಂಸ್ಕೃತಿಕ, ರಾಜಕೀಯ ಶಕ್ತಿಯನ್ನು ಹುಟ್ಟು ಹಾಕುವ ಹಾಗೂ ಪ್ರಯೋಗಿಸುವ ಸಾಧನಗಳೂ ಆಗಿದ್ದವು ಎಂದು ವಾದಿಸುತ್ತಾರೆ. ಸೈದ್ ಅವರವರೆಗೆ, ಪೂರ್ವದಲ್ಲಿ ಪೌರ್ವಾತ್ಯ ಅಧ್ಯಯನಗಳಿಗೆ ಈ ರೀತಿಯ ಅರ್ಥವನ್ನು ನೀಡುವ ಪ್ರಯತ್ನ ನಡೆದಿರಲಿಲ್ಲ. ಹಾಗಾಗಿ ಭಾರತೀಯ ಇತಿಹಾಸದಲ್ಲಿನ ಒಂದು ಯುಗವಾಗ ಮಾತ್ರ ಇದು ಮಹತ್ವ ಪಡೆದಿತ್ತು.

೧೭-೧೮ನೆಯ ಶತಮಾಗಳಲ್ಲಿ ಪಾಶ್ಚಾತ್ಯರು ಪೂರ್ವದ ದೇಶಗಳನ್ನು ತಮ್ಮ ವಸಾಹತು ಚಟುವಟಿಕೆಗಳಿಂದ ರಾಜಕೀಯ, ಆರ್ಥಿಕ ಹಿತಾಸಕ್ತಿಗಳಿಂದ ಶೋಧಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ಆಗ ಪೌರ್ವಾತ್ಯ ದೇಶಗಳ ಸಾಂಸ್ಕೃತಿಕ, ಜನಜೀವನ ಹಾಗೂ ಪರಂಪರೆಯ ಕುರಿತು ಪ್ರಾಯೋಗಿಕ ಹಾಗೂ ತಾತ್ವಿಕ ಜ್ಞಾನದ ಜಗತ್ತನ್ನು ಪೂರೈಸುವ ಕೆಲಸವನ್ನು ವಿದ್ವಾಂಸರು ಕೈಗೆತ್ತಿಕೊಂಡರು. ‘ಪೂರ್ವ’ ಎಂದರೆ ಸ್ಥೂಲವಾಗಿ ಇಂದಿನ ಏಶಿಯಾ ಖಂಡವನ್ನು ಸೂಚಿಸುತ್ತದೆ. ಈ ಪೂರ್ವ ದೇಶಗಳು ಪಶ್ಚಿಮದ ದೇಶಗಳಂತೆ ಇಲ್ಲ ಎಂಬುದನ್ನು ಪ್ರತಿಪಾದಿಸಿದ ಈ ವಿದ್ವಾಂಸರು ಪೂರ್ವದ ಮಹತ್ವವೇನು? ಅದರ ಮಿತಿಗಳೇನು? ಎಂಬ ಚರ್ಚೆಗಳನ್ನು ಹುಟ್ಟುಹಾಕಿದರು. ಈ ರೀತಿ ೧೭೮೪ ರಲ್ಲಿ ವಿಲಿಯಂ ಜೋನ್ಸ್‌ಅವರು ಹುಟ್ಟುಹಾಕದ ‘ರಾಯಲ್ ಏಶಿಯಾಟಿಕ್ ಸೊಸೈಟಿ’ ಈ ಅಧ್ಯಯನಗಳ ಮೊಟ್ಟಮೊದಲ ಸಾಂಸ್ಥಿಕ ರೂಪವಾಗಿದೆ.

ಪೌರ್ವಾತ್ಯ ಅಧ್ಯಯನದ ಹಿಂದೆ ಎರಡು ಪ್ರಮುಖವಾದ ಸ್ಫೂರ್ತಿಗಳಿದ್ದವ. ಮೊದಲನೆಯದು ಸಾಮ್ರಾಜ್ಯಶಾಹೀ ಅಗತ್ಯಗಳು ಮತ್ತು ಎರಡನೆಯದು ಪಾಶ್ಚಾತ್ಯ ರೋಮ್ಯಾಂಟಿಕ್ ಯುಗದ ಸ್ಫೂರ್ತಿಗಳು.

೧. ಸಾಮ್ರ‍್ಯಾಜ್ಯಶಾಹೀ ಅಗತ್ಯಗಳು: ಪೂರ್ವದ ಅನೇಕ ದೇಶಗಳನ್ನು ವಸಾಹತು ಆಳ್ವಿಕೆಗೆ ಒಳಪಡಿಸಿದ ನಂತರ ಅವುಗಳ ಸಂಪನ್ಮೂಲಗಳನ್ನು ಅರಿಯಲು, ಕಂದಾಯ ವ್ಯವಸ್ಥೆ, ಕಾನೂನು ವ್ಯವಸ್ಥೆಗಳನ್ನು ನಿಭಾಯಿಸಲು, ಅಭಿವೃದ್ಧಿ ಸಾಧಿಸಲು, ಅಲ್ಲಿನ ಜನರ ಮನೋಭಾವನೆ, ನಂಬಿಕೆ ಇತಿ-ಮಿತಿಗಳನ್ನು ಅರಿಯಲು ಪೌರ್ವಾತ್ಯ ಅಧ್ಯಯನದ ಅಗತ್ಯವುಂಟಾಗಿದ್ದರಿಂದ ವಸಾಹತು ಸರ್ಕಾರವೇ ಇಂಥ ಅಧ್ಯಯನಗಳನ್ನು ಪ್ರೋತ್ಸಾಹಿಸಿತು. ಈ ಅಧ್ಯಯನಗಳು ಸರ್ಕಾರಿ ಕಾರ್ಯಕ್ರಮಗಳಿಗೆ ಪ್ರಾಯೋಗಿಕ ಸಲಹೆಗಳನ್ನು ರೂಪಿಸುವ ದೃಷ್ಟಿಯನ್ನು ಹೊಂದಿದ್ದರಿಂದ ಐರೋಪ್ಯ ‘ಯುಟಿಲಿಟೇರಿಯನ್’ ಹಾಗೂ ‘ಲಿಬರಲ್’ ದೃಷ್ಟಿಕೋನದಿಂದ ಭಾರತೀಯ ಸಮಾಜವನ್ನು ಅವರು ನಿಷ್ಕರ್ಷಿಸಿ ಯಾವ ನಿಟ್ಟಿನ ಸುಧಾರಣೆಗಳನ್ನು ಇಲ್ಲಿ ಮಾಡಬೇಕಾಗಿದೆ ಎಂಬುದನ್ನು ಸೂಚಿಸಿದರು. ಜೇಮ್ಸ್‌ಮಿಲ್ ಅವರು ಇಂಥ ಇತಿಹಾಸಕಾರರಲ್ಲಿ ಅಗ್ರಗಣ್ಯರಾಗಿದ್ದಾರೆ. ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ಅವರು ಬರೆದ ಎ ಹಿಸ್ಟರಿ ಆಫ್ ಬ್ರಿಟಿಷ್ ಇಂಡಿಯಾ ಈ ನಿಟ್ಟಿನಲ್ಲಿ ಬಹಳ ಪ್ರಮುಖವಾದ ಕೃತಿಯಾಗಿದೆ.

೨. ಪಾಶ್ಚಾತ್ಯ ರೋಮ್ಯಾಂಟಿಕ್ ಯುಗದ ಸ್ಫೂರ್ತಿಗಳು: ಪಾಶ್ಚಾತ್ಯ ರೋಮ್ಯಾಂಟಿಕ್ ತಾತ್ವಿಕತೆ ಪಾಶ್ಚಾತ್ಯ ಜ್ಞಾನೋದಯ ಯುಗದ ವೈಚಾರಿಕತೆಯ ಕುರಿತು ವಿಮರ್ಶಾತ್ಮಕವಾಗಿತ್ತು. ಈ ಚಿಂತಕರು ಯುರೋಪಿನ ದೇಶಗಳು ಪ್ರತಿಪಾದಿಸುವ ವೈಚಾರಿಕತೆಗಿಂತ, ಪೂರ್ವದೇಶಗಳ ಸಮಾಜಗಳಲ್ಲಿ ಇರುವ ಆಧ್ಯಾತ್ಮಿಕ ಕಾಣ್ಕೆ ಹೆಚ್ಚು ಮೌಲಿಕವಾದದ್ದು ಎಂದು ಭಾವಿಸಿದ್ದರು. ಈ ಆಧ್ಯಾತ್ಮಿಕ ದರ್ಶನವನ್ನು ಪಾಶ್ಚಾತ್ಯ ಆಧುನಿಕತೆಯು ಕಳೆದುಕೊಂಡ ಒಂದು ಅಮೂಲ್ಯ ನಿಧಿ ಎಂಬಂತೆಯೂ ನೋಡಲಾಯಿತು.

ಆದರೆ ಈ ಮೇಲಿನ ಎರಡೂ ಪ್ರಕಾರದವರಲ್ಲೂ ಪೂರ್ವದ ಕುರಿತು ಇದ್ದ ಗ್ರಹಿಕೆಗಳಲ್ಲಿ ಮೂಲಭೂತ ವ್ಯತ್ಯಾಸಗಳೇನಿರಲಿಲ್ಲ. ಪೂರ್ವದೇಶಗಳು ಮಾನವ ನಾಗರಿಕತೆಯಲ್ಲಿ ಪ್ರಾಚೀನ ಅವಸ್ಥೆಯನ್ನು ತೊಡೆದುಕೊಳ್ಳದೇ ಹಾಗೇ ಉಳಿಸಿಕೊಂಡು ಬಂದಿವೆ ಹಾಗೂ ಪಶ್ಚಿಮವು ಆ ಅವಸ್ಥೆಯಿಂದ ಆಧುನಿಕತೆಯನ್ನು ಸಾಧಿಸಿದೆ. ಹಾಗಾಗಿ ಪೂರ್ವದಲ್ಲಿ ಮಾನವ ನಾಗರಿಕತೆಯ ಪ್ರಗತಿ ಪಶ್ಚಿಮದಂತೇ ಸಿದ್ಧಿಯನ್ನು ಹೊಂದಿಲ್ಲ. ಈ ಎಲ್ಲ ಕಲ್ಪನೆಗಳಿಗೆ ಮೂಲದಲ್ಲಿ ‘ಪೌರ್ವಾತ್ಯ ನಿರಂಕುಶ ಪ್ರಭುತ್ವ’ ಪರಿಕಲ್ಪನೆ ಇದೆ. ಪಾಶ್ಚಾತ್ಯರು ಪೂರ್ವದೇಶಗಳ ಹಿಂದುಳಿದ ಅವಸ್ಥೆಯನ್ನು ಈ ‘ನಿರಂಕುಶ ಪ್ರಭುತ್ವ’ (ಡೆಸ್ಟಾಟಿಸಂ-ಕಾನೂನುಗಳ ವ್ಯವಸ್ಥೆ ರಹಿತವಾದ ಆಡಳಿತ) ಶಬ್ದದಿಂದ ಬಣ್ಣಿಸಿದ್ದರು.

‘ರೋಮ್ಯಾಂಟಿಸಿಸಂ’ ತಾತ್ವಿಕತೆಯ ವಿದ್ವಾಂಸರು ಭಾರತದ ಈ ಅವಸ್ಥೆಯನ್ನು ಮನುಕುಲದ ‘ಬಾಲ್ಯ’ ‘ಮುಗ್ಧಾವಸ್ಥೆ’ ಎಂಬಂತೇ ಬಣ್ಣಿಸಿದರು. ಇದರ ಜೊತೆಗೇ ಭಾರತದ ಆಧ್ಯಾತ್ಮಿಕ ಕಾಣ್ಕೆ, ಸಾಂಪ್ರದಾಯಿಕ ಮೌಲ್ಯಗಳು, ಸಂಸ್ಕೃತಿ ಮುಂತಾದವುಗಳ ಕುರಿತು ‘ರೋಮ್ಯಾಂಟಿಸಿಸಂ’ನ ಗ್ರಹಿಕೆಯ ಮೂಲಕವೇ ಅರ್ಥೈಸಿದಿರು. ಹಾಗಾಗಿ ಭಾರತದ ಆಧ್ಯಾತ್ಮಿಕ ಕಾಣ್ಕೆಯನ್ನು ಕ್ರಿಶ್ಚಿಯನ್ ಮತದ ಪರಿಭಾಷೆಯಲ್ಲೇ ಗ್ರಹಿಸಿದ್ದರಿಂದ ಹಿಂದೂಯಿಸಂ, ಬುದ್ಧಿಸಂ, ಜೈನಿಸಂ ಎಂದೆಲ್ಲ ಕ್ರಿಶ್ಚಿಯನ್ ಮಾದರಿಯ ಮತಗಳನ್ನು ಭಾರತದಲ್ಲಿ ಕಲ್ಪಿಸಿದರು. ಇವರಿಂದ ಭಾರತೀಯ ಇತಿಹಾಸದ ಕುರಿತು ಪ್ರಚಲಿತದಲ್ಲಿ ಬಂದ ಕೆಲ ಮುಖ್ಯ ಸಂಗತಿಗಳೆಂದರೆ;

೧. ಭಾರತದಲ್ಲಿ ವಿವಿಧ ಭಾಷಾ ಜನಾಂಗಗಳಿದ್ದು, ಅವರಲ್ಲಿ ಆರ್ಯರು ಮೂಲತಃ ಐರೋಪ್ಯ ಜನಾಂಗಗಳ ಪೂರ್ವಜರಾಗಿದ್ದರು. ಭಾರತದಲ್ಲಿ ಆರ್ಯ ಆಕ್ರಮಣ ನಡೆದು ದ್ರಾವಿಡರು ದಕ್ಷಿಣಕ್ಕೊತ್ತಲ್ಪಟ್ಟರು.

೨. ಭಾರತೀಯರು ಅಧ್ಯಾತ್ಮಿಕ ಒಲವುಳ್ಳ ಜನರಾಗಿದ್ದು. ಭೌತಿಕ ನಾಗರಿಕತೆಯತ್ತ ವಿಮುಖತೆಯನ್ನು ಹೊಂದಿದ್ದರು.

೩. ಭಾರತೀಯ ಮತ ಹಾಗೂ ಸಂಸ್ಕೃತಿ ಮಾನವಕುಲದ ವಿಕಾಸದ ಪ್ರಾರಂಭಿಕ ಅವಸ್ಥೆಯನ್ನು ಇಂದೂ ಜೀವಂತವಾಗಿ ಇರಿಸಿಕೊಂಡಿದೆ.

೪. ಭಾರತೀಯ ಸಂಸ್ಕೃತಿಯನ್ನು ಅರ್ಥೈಸಲಿಕ್ಕೆ ಅಲ್ಲಿನ ಪಠ್ಗಳನ್ನು ಓದುವುದು ಅತ್ಯವಶ್ಯಕ. ಏಕೆಂದರೆ ಸಂಸ್ಕೃತಿಗಳ ವರ್ತನೆಗಳು ಪಠ್ಯ ನಿರ್ದೇಶನವನ್ನು ಆಧರಿಸಿರುತ್ತವೆ. ಭಾರತದ ಸಂಸ್ಕೃತಿ ಈ ರೀತಿ ಸಂಸ್ಕೃತಿ ಪಠ್ಯಗಳನ್ನೇ ಪ್ರಧಾನವಾಗಿ ಆಧರಿಸಿ ರೂಪುಗೊಂಡಿದೆ.

ಈ ಮೊದಲೇ ಉಲ್ಲೇಖಿಸಿದ ಎಡ್ವರ್ಡ್ ಸೈದರ ವಾದಕ್ಕೆ ಬಂದರೆ ಈ ಮೇಲೆ ನಿರೂಪಿಸಿದ ಅಧ್ಯಯನಗಳೆಲ್ಲ ಪಾಶ್ಚಾತ್ಯ ಪ್ರಭುತ್ವ ನಿರ್ಮಾಣದ ಅವಿಭಾಜ್ಯ ಅಂಗಗಳಾಗಿದ್ದವು. ಸೈದರು ಫ್ರಾನ್ಸಿನ ಮೈಕೆಲ್ ಫೂಕೋ ಎಂಬ ಆಧುನಿಕೋತ್ತರ ಚಿಂತಕರ ‘ಜ್ಞಾನವು ಶಕ್ತಿಯಾಗಿದೆ’ ಎಂಬ ವಿಚಾರವನ್ನು ಆಧರಿಸಿ ಪೌರ್ವಾತ್ಯ ಜ್ಞಾನವು ಹೇಗೆ ಸಾಮ್ರಾಜ್ಯಶಾಹಿ ಶಕ್ತಿಯಾಗಿ ಪರಿವರ್ತನೆಯಾಯಿತು ಎಂಬುದನ್ನು ತಿಳಿಸುತ್ತಾರೆ. ಅಂದರೆ ಐರೋಪ್ಯರು ಅನ್ಯ ಜನಸಮುದಾಯಗಳನ್ನು ಎದುರಿಸಿದಾಗ ಅವರನ್ನು ಕುರಿತು ಸಂಶೋಧಿಸಿ, ತಿಳದುಕೊಂಡು, ಅನ್ಯರ ಕುರಿತು ತಮ್ಮದೇ ಜಗತ್ತಿನ ಒಂದು ಪರಿಚಿತ ಅಂಗವನ್ನಾಗಿ ಮಾರ್ಪಡಿಸಿಕೊಳ್ಳುತ್ತ ಅವರ ಮೇಲೆ ಅಧಿಕಾರ ಚಲಾಯಿಸುವ, ಅವರನ್ನು ಸುಧಾರಿಸುವ ಪಾತ್ರವನ್ನು ವಹಿಸಿಕೊಂಡರು. ಇದು ಪಾಶ್ಚಾತ್ಯರು ಪೌರ್ವಾತ್ಯರನ್ನು ಆಳ್ವಿಕೆಗೆ ಒಳಪಡಿಸುವ ಒಂದು ವಿಧಾನವಾಯಿತು.

ವಸಾಹತುಶಾಹಿ ಚರಿತ್ರೆ ಲೇಖನ

೧೮ ಮತ್ತು ೧೯ನೆಯ ಶತಮಾನದಲ್ಲಿ ಪಾಶ್ಚಾತ್ಯ ಚರಿತ್ರೆ ಲೇಖನದ ಸಂಪ್ರದಾಯದ ಮೂಲಕ ಭಾರತೀಯ ಚರಿತ್ರೆ ರಚನೆಗೆ ಬುನಾದಿ ಹಾಕಲಾಯಿತು. ಅಂದಿನ ಪಾಶ್ಚಾತ್ಯ ಚರಿತ್ರೆ ಲೇಖನದಲ್ಲಿ ಪ್ರಾಧಾನ್ಯತೆ ಪಡೆದ ಚಿಂತನೆಗಳು ಹಾಗೂ ವಿಧಾನಗಳು ಭಾರತೀಯ ಆಧುನಿಕ ಚರಿತ್ರೆ ಲೇಖನದ್ಲಿ ಅಂತರ್ಗತವಾಗಿವೆ. ಆ ಕಾಲದಲ್ಲಿ ಪಾಶ್ಚಾತ್ಯರಲ್ಲಿ ಪ್ರಮುಖವಾಗಿ ಎರಡು ಚಿಂತನಾ ಸಂಪ್ರದಾಯಗಳು ಚರಿತ್ರೆ ಲೇಖನವನ್ನು ಪ್ರಭಾವಿಸಿದ್ದವು. ಮೊದಲನೆಯದು ಜ್ಞಾನಪರ್ವದ (Age of enlightenment) ಚಿಂತನೆಗಳು ಹಾಗೂ ರೋಮ್ಯಾಂಟಿಸಿಸ್ಟ್ ಚಿಂತನೆಗಳು. ಜ್ಞಾನಪರ್ವದ ಚಿಂತನೆಗಳು ಬ್ರಿಟಿಷ್ ಸ್ವಯಂತಂತ್ರವಾದಿ (ಲಿಬರಲ್) ಚರಿತ್ರೆ ಲೇಖನದಲ್ಲಿ ಕಂಡುಬರುತ್ತವೆ. ಇಲ್ಲಿ ಯುಟಿಲಿಟೇರಿಯನ್ ವಾದವು ಪ್ರಧಾನವಾಗಿತ್ತು. ಅಂದರೆ ಆಧುನಿಕ ಪ್ರಭುತ್ವವು ಬಹುಸಂಖ್ಯಾತರ ಹಿತವನ್ನು ಕಾಪಾಡುವಂತೇ ರಚನೆಯಾಗಬೇಕು. ಹಾಗಾದಾಗಲೇ ಈ ಪ್ರಭುತ್ವಕ್ಕೆ ಸಮರ್ಥನೆ ಬರುತ್ತದೆ ಎಂದು ಯುಟಿಲಿಟೇರಿಯನ್ ಚಿಂತಕರು ಪ್ರತಿಪಾದಿಸಿದ್ದರು. ಇತಿಹಾಸವು ಮಾನವ ಸಮಾಜದ ಪ್ರಗತಿಯ ಕಥನವಾಗಿದ್ದು, ಮನುಷ್ಯ ಸ್ವಾತಂತ್ರ‍್ಯ, ವೈಚಾರಿಕತೆ, ಐಹಿಕ ಅಭಿವೃದ್ಧಿ, ವಾಣಿಜ್ಯದ ಬೆಳವಣಿಗೆ ಇವುಗಳ ವಿಕಾಸವನ್ನು ಎತ್ತಿ ಹಿಡಿದ ಈ ಚರಿತ್ರೆಕಾರರು ಮಧ್ಯಯುಗವನ್ನು ಅಂಧಶ್ರದ್ಧೆ ಹಾಗೂ ವ್ಯಕ್ತಿ ಸ್ವಾತಂತ್ರ‍್ಯದ ದಮನದ ಯುಗ ಎಂದು ಗ್ರಹಿಸಿದ್ರು. ಆಧುನಿಕ ಪಾಶ್ಚಾತ್ಯರೊಂದೇ ಈ ನಾಗರಿಕ ಹಂತವನ್ನು ತಲುಪಿದವರಾಗಿದ್ದು ಉಳಿದೆಲ್ಲ ಸಮಾಜಗಳು ಇನ್ನೂ ಅನಾಗರಿಕ ಹಂತದಲ್ಲೇ ಇವೆ ಎಂದು ಅವರು ಭಾವಿಸಿದ್ದರು. ಈ ಚರಿತ್ರೆಕಾರರನ್ನು ‘ವಿಗ್’ ಚರಿತ್ರೆಕಾರರೆಂದೂ ಕರೆಯುತ್ತಾರೆ. ಇವರು ಪ್ರಪಂಚದಲ್ಲಿನ ಮಾನವ ಸಮಾಜಗಳನ್ನು ತಮ್ಮಂತೇ ನಾಗರಿಕ ಹಂತಕ್ಕೆ ತರುವುದು ಐರೋಪ್ಯರ ಕರ್ತವ್ಯ ಎಂದೂ ಭಾವಿಸಿದ್ದರು.

೧೯ನೆಯ ಶತಮಾನದ ಅಂತ್ಯ ಭಾಗದಲ್ಲಿ ಚರಿತ್ರೆ ರಚನಾಕಾರರ ವಿಚಾರವಾದದ ಮೇಲಿನ ಶ್ರದ್ಧೆ ಗಾಢವಾಯಿತು. ಚರಿತ್ರೆಯೂ ಒಂದು ವಿಜ್ಞಾನ ಎಂದು ಸಾರಿದ ಇವರು ಚರಿತ್ರೆಯ ಮಾಹಿತಿಗಳನ್ನು ಆಕರಗಳಿಂದ ತೆಗೆಯುವ ವಿಮರ್ಶಾಪದ್ಧತಿಗಳನ್ನು ವೈಜ್ಞಾನಿಕವಾಗಿ ಬೆಳೆಸಿದರು. ಇವರಲ್ಲೇ ಒಂದು ಗುಂಪು ಮತ್ತೂ ಮುಂದೆ ಹೋಗಿ ಚರಿತ್ರೆಯ ಜ್ಞಾನ ಮಾನವ ಚರಿತ್ರೆಯ ಅಂತರ್ಗತ ನಿಯಮಗಳನ್ನು ದರ್ಶನಮಾಡಿಸಬೇಕು ಹಾಗೂ ವಿಜ್ಞಾನದಂತೇ ಚರಿತ್ರೆ ಕೂಡ ಭವಿಷ್ಯವನ್ನು ರೂಪಿಸಲು ಅನುಕೂಲವಾದ ಸತ್ಯಗಳನ್ನು ಕಂಡುಹಿಡಿಯಬೇಕು ಎಂದು ವಾದಿಸಿದರು. ಇವರನ್ನು ಪೊಸಿಟಿವಿಸ್ಟ್ ಚರಿತ್ರೆಕಾರರೆಂದು ಕರೆಯುತ್ತಾರೆ.

೧೮ನೇ ಶತಮಾನದಲ್ಲಿ ಪ್ರಚಲಿತಕ್ಕೆ ಬಂದ ರೋಮ್ಯಾಂಟಿಸಿಸ್ಟ್ ಚಿಂತನೆಗಳು ಜ್ಞಾನಪರ್ವದ ವೈಚಾರಿಕತೆ ಹಾಗೂ ಐರೋಪ್ಯ ಆಧುನಿಕತೆಗೆ ಪ್ರತಿಕ್ರಿಯಿಸಿದವು. ಸತ್ಯ ಎನ್ನುವುದು ಕೇವಲ ವಿಚಾರಕ್ಕೆ ಸೀಮಿತವಾಗುವುದಿಲ್ಲ. ಮನುಷ್ಯ ಭಾವನೆಗಳೂ ಅಷ್ಟೇ ಮುಖ್ಯ ಎಂದು ಇವರು ಪರಿಗಣಿಸಿದ್ದರು. ಜೊತೆಗೆ ಇವರು ನಿಸರ್ಗದ ನಿಗೂಢಗಳ ಹಾಗೂ ಅತೀಂದ್ರಿಯ ಸಂಗತಿಗಳ ಕುರಿತು ನಂಬಿದ್ದರು. ಇವರು ಮಧ್ಯಕಾಲವನ್ನು ಅಂಧಕಾರದ ಯುಗ ಎಂದು ಭಾವಿಸಿರಲಿಲ್ಲ. ಬದಲಾಗಿ ಯುರೋಪಿನಲ್ಲಿ ಬೆಳೆದು ಬಂದ ಕೈಗಾರಿಕೀಕರಣ, ಯಾಂತ್ರಿಕತೆ ಹಾಗೂ ಐಹಿಕ ಅಭ್ಯುದಯ ಮಾನವನ ಸಂಸ್ಕೃತಿಯನ್ನು ಬರಡಾಗಿಸುತ್ತಿದೆ ಎಂಬ ಅಭಿಪ್ರಾಯವನ್ನು ಹೊಂದಿದ್ದರು. ಮಾನವನು ಇದರಿಂದ ತಪ್ಪಿಸಿಕೊಂಡು ನಿಸರ್ಗದ ಜೊತೆ ತಾನು ಕಳೆದುಕೊಳ್ಳುತ್ತಿರುವ ಸಂಬಂಧವನ್ನು ಮರಳಿ ಗಳಿಸಬೇಕು ಎಂಬ ಹಪಹಪಿಕೆ ಕೂಡ ಇವರಲ್ಲಿ ಕಾಣುತ್ತದೆ. ಹಾಗಾಗಿ ಪ್ರಾಚೀನ ಸಂಸ್ಕೃತಿಗಳತ್ತ ಇವರು ಆಸೆಗಣ್ಣಿನಿಂದ ನೋಡಿದರು.

ಭಾರತದ ಕುರಿತು ಚರಿತ್ರೆಯನ್ನು ಕಟ್ಟಿದವರಲ್ಲಿ ರೋಮ್ಯಾಂಟಿಸಿಸ್ಟ್ ಸಂಪ್ರದಾಯದವರು ಪ್ರಾರಂಭದಿಂದಲೂ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಾರೆ. ೧೭೮೪ ರಲ್ಲಿ ವಾರ್ನ್‌ಹೇಸ್ಟಿಂಗ್ಸ್ ಅವರು ರಾಯಲ್ ಏಶಿಯಾಟಿಕ್ ಸೊಸೈಟಿಯನ್ನು ಸ್ಥಾಪಿಸಿದರು. ಅದರ ಉದ್ದೇಶ ಆಳುವವರು ಆಳಲ್ಪಡುವವರ ಚರಿತ್ರೆ ಸಾಮಾಜಿಕ ಕಟ್ಟುಪಾಡುಗಳು, ಧರ್ಮ, ನ್ಯಾಯಾಂಗ ಪದ್ಧತಿ, ನಡವಳಿಕೆಗಳು ಮುಂತಾದವುಗಳ ಅರಿವನ್ನು ಹೊಂದಿರಬೇಕು ಎಂಬುದಾಗಿತ್ತು. ಏಶಿಯಾದ ದೇಶಗಳ ಇತಿಹಾಸ, ವಿಜ್ಞಾನ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗಳನ್ನು ಕುರಿತು ಅಭ್ಯಸಿಸುವುದು. ಏಶಿಯಾಟಿಕ್ ಸೊಸೈಟಿ ಇಂಥ ಸಂಶೋಧನೆಗಳಿಗೆ ವೇದಿಕೆಯಾಯಿತು. ಈ ಸಂಶೋಧಕರು ಭಾರತವು ಮಾನವ ನಾಗರಿಕತೆಯ ಉನ್ನತ ವಿಚಾರಗಳೆಲ್ಲ ಹುಟ್ಟಿದ ಜಾಗ ಎಂದು ಭಾವಿಸಿದ್ದರು. ಹಾಗಾಗಿ ಭಾರತೀಯ ಭಾಷೆಗಳಲ್ಲಿದ್ದ ಮತಶಾಸ್ತ್ರ, ಧರ್ಮಶಾಸ್ತ್ರ, ವಿಜ್ಞಾನ, ಸಾಹಿತ್ಯ ಮುಂತಾದವುಗಳನ್ನು ಐರೋಪ್ಯರಿಗೆ ಪರಿಚಯಿಸಿದರು. ಈ ಕಾಲದಲ್ಲೇ ಕಾಳಿದಾಸನ ಶಾಕುಂತಲವು ಯುರೋಪಿನ ಅನೇಕ ಭಾಷೆಗಳಿಗೆ ಅನುವಾದವಾಗಿ ರೋಮ್ಯಾಂಟಿಸಿಸ್ಟರ ಮೆಚ್ಚುಗೆಗೆ ಪಾತ್ರವಾಯಿತು ಮಾತ್ರವಲ್ಲ. ಗೈತೆಯ ಮೆಚ್ಚುಗೆಗೆ ಪಾತ್ರವಾದ ಈ ಕೃತಿ ಇಂಡೋ-ಆರ್ಯನ್ ಸಿದ್ಧಾಂತಕ್ಕೂ ಕಾರಣವಾಯಿತು. ಮುಖ್ಯವಾಗಿ, ಬ್ರಿಟನ್ನಿನ ಯುಟಿಲಿಟೇರಿಯನ್ ಸಿದ್ಧಾಂತದಿಂದ ಬೇಸತ್ತ ಇವರು ಪ್ರಾಚೀನ ಭಾರತೀಯ ಸಾಹಿತ್ಯದಲ್ಲಿ ‘ಅಮೂಲ್ಯ ನಿಧಿ’ಯನ್ನು ಕಂಡರು. ಭಾರತೀಯ ಖಗೋಲಶಾಸ್ತ್ರ, ಗಣಿತಶಾಸ್ತ್ರ ಮುಂತಾದ ವಿಜ್ಞಾನಗಳಲ್ಲಿ ಆಧುನಿಕ ಯುರೋಪಿನ ವೈಜ್ಞಾನಿಕ ಜ್ಞಾನದ ಅನೇಕ ಅಂಶಗಳನ್ನು ಗುರುತಿಸಲಾಯಿತು.

ಭಾರತೀಯ ಸಂಸ್ಕೃತಿಯ ಕುರಿತು ಇಷ್ಟೆಲ್ಲ ಕುತೂಹಲ ಹಾಗೂ ಮೆಚ್ಚುಗೆಯನ್ನು ಇವರು ತೋರಿಸಿದರೂ ಆಧುನಿಕ ಐರೋಪ್ಯರೆಲ್ಲರಿಗೂ ಸಾಮಾನ್ಯವಾಗಿ ಇದ್ದ ಗ್ರಹಿಕೆಗಳನ್ನು ಇವರೂ ಹಂಚಿಕೊಂಡಿದ್ದರು. ಭಾರತೀಯ ಸಮಾಜ ಮತ್ತು ಚರಿತ್ರೆ ಮಾನವ ಜನಾಂಗದ ಬಾಲ್ಯಾವಸ್ಥೆಯನ್ನು ವ್ಯಕ್ತಪಡಿಸುತ್ತದೆ ಹಾಗೂ ಇದು ಐರೋಪ್ಯದ ಆಧುನಿಕ ನಾಗರಿಕ ಅವಸ್ಥೆಗಿಂತ ಕೆಳಗಿನ ಅಥವಾ ಮೊದಲಿನ ಅವಸ್ಥೆ ಎಂದು ಈ ಚರಿತ್ರೆಕಾರರೂ ತಿಳಿದಿದ್ದರು. ಈ ರೀತಿ ಇಡೀ ಮನುಕುಲದ ಚರಿತ್ರೆಯನ್ನು ಏಕೈಕ ವಿಕಾಸಪಥದಲ್ಲಿ ಗುರುತಿಸುವುದು ಐರೋಪ್ಯದ ಮಾನವವಾದಿ ಚಿಂತನೆಗಳಿಂದ ಬಂದಿದೆ. ರೋಮ್ಯಾಂಟಿಸಿಸ್ಟರು ಈ ಹಿಂದಿನ ಅವಸ್ಥೆಗಳನ್ನು ತುಚ್ಛೀಕರಿಸದೇ ಆಸ್ಥೆಯಿಂದ ನೋಡಿದ್ದರು. ಭಾರತೀಯ ಸಮಾಜ ಹಿಂದಿನ ಅವಸ್ಥೆಯಾದರೂ ಐರೋಪ್ಯರು ಕಳೆದುಕೊಂಡ ಬಾಲ್ಯದ ದಿವ್ಯಾನುಭವವನ್ನು ಹಾಗೂ ಆಧ್ಯಾತ್ಮಿಕತೆಯನ್ನು ಭಾರತೀಯ ಚರಿತ್ರೆಯ ಮೂಲಕ ಮರಳಿ ಗಳಿಸಬಹುದು ಎಂಬ ಆಸೆಯನ್ನು ಹೊಂದಿದ್ದರು.

ಐರೋಪ್ಯ ರೋಮ್ಯಾಂಟಿಸಿಸ್ಟ್ ಸಂಪ್ರದಾಯದ ಈ ಆಶಯ ೧೯ನೆಯ ಶತಮಾನದಲ್ಲಿ ಭಾರತೀಯ ಗತಕಾಲದ ವೈಭವೀಕರಣಕ್ಕೆ ಮೂಲ ಸಾಮಗ್ರಿಯಾಯಿತು. ಈ ಅವಧಿಯಲ್ಲಿ ಜರ್ಮನ್ ಪಂಡಿತರು ವಿಶೇಷವಾಗಿ ಭಾರತೀಯ ಗ್ರಂಥಗಳನ್ನು ಓದಿ, ಅನುವಾದಿಸಿ ಆ ಮೂಲಕ ಐರೋಪ್ಯರಿಗೆ ತಾವೊಂದು ವಿಶೇಷ ಸೇವೆ ಸಲ್ಲಿಸುತ್ತಿದ್ದೇವೆ ಎಂದು ಭಾವಿಸಿದರು. ಮ್ಯಾಕ್ಸ್‌ಮುಲ್ಲರ್ ಮತ್ತು ಇವರಿಗೆ ಮುನ್ನ ವಿಲಿಯಂ ಜೋನ್ಸ್, ಚಾರ್ಲರ್ ವಿಲಿಯಮ್ಸ್, ಬ್ಲೂಮ್‌ಫೀಲ್ಡ್ ಮುಂತಾದ ಇಂಗ್ಲಿಷ್ ವಿದ್ವಾಂಸರು ಎಂಬ ಪಂಡಿತರು ವೈದಿಕ ಸಾಹಿತ್ಯದಲ್ಲಿ ಇಂಥ ಜ್ಞಾನರಾಶಿ ಇದೆ ಎಂದು ಪ್ರತಿಪಾದಿಸಿದರು. ಇದು ಭಾರತೀಯರಿಗೆ ತಮ್ಮ ಗತಕಾಲದ ಕುರಿತು ಹೆಗ್ಗಳಿಕೆಯನ್ನು ಹೊಂದಲು ಸ್ಫೂರ್ತಿಯಾಯಿತು.

ಈ ಐರೋಪ್ಯ ಪಂಡಿತರು ಭಾರತವನ್ನೊಂದೇ ಅಲ್ಲದೆ ಇಡೀ ಏಶಿಯಾವನ್ನೇ ಈ ಮೇಲಿನ ರೀತಿ ಬಣ್ಣಿಸಿದರು ಹಾಗೂ ಏಶಿಯಾದ ಚರಿತ್ರೆಗೆ ಬುನಾದಿ ಹಾಕಿದರು. ಇವರನ್ನು ಪೌರಾತ್ಯ ವಿದ್ವಾಂಸರು ಎಂದು ವಿಶೇಷವಾಗಿ ಕರೆಯುತ್ತಾರೆ. ಇಂದಿನ ವಸಾಹತೋತ್ತರ ಚಿಂತಕರು ಪೌರಾತ್ಯ ವಿದ್ವಾಂಸರ ಮಿತಿಗಳನ್ನು ಕುರಿತು ಪರಾಮರ್ಶಿಸಿದ್ದಾರೆ. ಅವರ ಪ್ರಕಾರ ಪೌರಾತ್ಯ ದೇಶಗಳ ಕುರಿತು ಈ ವಿದ್ವಾಂಸರು ತಮ್ಮದೇ ಆದ ಐರೋಪ್ಯ ಕೇಂದ್ರಿತ ಕಥನಗಳನ್ನು ಕಟ್ಟಿದರು. ಹಾಗಾಗಿ ಈ ಕಥನಗಳು ಇಂತಹ ಚರಿತ್ರೆಕಾರರ ಬಿಂಬಗಳಾದವು ಮತ್ತು ಈ ಮೂಲಕ ಪೌರಾತ್ಯ ಸಂಸ್ಕೃತಿಗಳ ಮೇಲೆ ತಮ್ಮ ಯಜಮಾನಿಕೆಯನ್ನು ಸ್ಥಾಪಿಸಲು ಅನುವು ಮಾಡಿಕೊಟ್ಟವು. ಪೌರಾತ್ಯ ಸಮಾಜಗಳ ಸತ್ಯ ಅವರಿಗಿಂತ ತಮಗೇ ಸರಿಯಾಗಿ ತಿಳಿದಿದೆ ಎಂಬ ಪ್ರತಿಪಾದನೆ ಪಾಶ್ಚಾತ್ಯರಲ್ಲಿ ಬೆಳೆದಿದ್ದರಿಂದ ಪೌರಾತ್ಯರ ಮೇಲೆ ತಮ್ಮ ಆಳ್ವಿಕೆಯನ್ನು ಸ್ಥಾಪಿಸಲು ಅವರಿಗೆ ಸಾಧ್ಯವಾಯಿತು ಎಂಬುದು ವಸಾಹತೋತ್ತರ ಚಿಂತಕರ ವಾದವಾಗಿದೆ.

ಭಾರತದಲ್ಲಿ ವಸಾಹತುಶಾಹಿ ಪ್ರಭುತ್ವದ ಸ್ಥಾಪನೆ ೧೮೦೦ ರ ಸುಮಾರಿಗೆ ಒಂದು ಹಂತಕ್ಕೆ ಬಂದಿತು. ತದನಂತರ ಈ ವಸಾಹತು ಪ್ರಜೆಗಳಲ್ಲಿ ತಮ್ಮ ಆಳ್ವಿಕೆಯನ್ನು ನೆಲೆ ನಿಲ್ಲಿಸಲು ಪ್ರಯತ್ನಗಳು ನಡೆದವು. ಈ ಹಂತದಲ್ಲಿ ಬ್ರಿಟಿಶ್ ಅಧಿಕಾರಶಾಹಿಗೆ ಭಾರತದ ಕುರಿತ ವೈಭವೀಕೃತ ಚಿತ್ರಗಳು ಅಪ್ರಸ್ತುತ ಹಾಗೂ ಅನನುಕೂಲಕರವಾಗಿ ಪರಿಣಮಿಸಿದವು. ಈ ಹಂತದಲ್ಲಿ ಬ್ರಿಟಿಶ್‌ ವಿಗ್‌ಲಿಬರಲ್ ಚರಿತ್ರೆ ಸಂಪ್ರದಾಯವು ವಸಾಹತು ಆಳ್ವಿಕೆಗೆ ತಾತ್ವಿಕ ಸಮರ್ಥನೆಗಳನ್ನು ಒದಗಿಸಿತು. ಈ ಸಂಪ್ರದಾಯದ ಜೇಮ್ಸ್ ಮಿಲ್ ಎಂಬ ಅಧಿಕಾರಿ ೧೮೧೭ ರಲ್ಲಿ ‘ಎ ಹಿಸ್ಟರಿ ಆಫ್ ಬ್ರಿಟಿಷ್ ಇಂಡಿಯಾ’ ಎಂಬ ಗ್ರಂಥವನ್ನು ರಚಿಸಿದನು. ಭಾರತೀಯ ಇತಿಹಾಸವನ್ನು ಸಮಗ್ರವಾಗಿ ಕಟ್ಟಿಕೊಡುವ ಉದ್ದೇಶವನ್ನು ಹೊಂದಿದ ಚರಿತ್ರೆಗಳಲ್ಲಿ ಈ ಮೇಲಿನದು ಪ್ರಪ್ರಥಮ ಗ್ರಂಥವಾಗಿದೆ. ಅಲ್ಲಿಯವರೆಗಿನ ವಿದ್ವಾಂಸರು ಬೇರೆ ಬೇರೆ ವಿಷಯಗಳ ಕುರಿತು ಬರೆದಿದ್ದರೇ ವಿನಾ ಭಾರತದ ಚರಿತ್ರೆಯನ್ನು ಬರೆಯಲು ಪ್ರಯತ್ನಿಸಲಿಲ್ಲ. ಈ ಚರಿತ್ರೆಯನ್ನು ರಚಿಸುವಾಗ ಕಾಲಾನುಕ್ರಮಣಿಕೆಯಲ್ಲಿ ಒಂದು ಕಥನವನ್ನು ಕಟ್ಟಬೇಕಾಗುತ್ತದೆ ಹಾಗೂ ಇತಿಹಾಸದ ಗತಿಯನ್ನು ಗ್ರಹಿಸಬೇಕಾಗುತ್ತದೆ. ಜೇಮ್ಸ್‌ಮಿಲ್ ಈ ಎರಡೂ ಕೆಲಸಗಳನ್ನೂ ನಿರ್ವಹಿಸಿದನು. ಜೇಮ್ಸ್‌ಮಿಲ್‌ನ ಕಥನ ಹಾಗೂ ಚಿಂತನೆ ಎರಡೂ ಬ್ರಿಟಿಷ್ ಲಿಬರಲ್ ಸಂಪ್ರದಾಯದವೇ ಆಗಿವೆ. ಮಾನವಕುಲದ ಏಕರೇಖಾತ್ಮಕ ವಿಕಾಸ ಅಥವಾ ಪ್ರಗತಿಯ ಕಥನ ಅದಾಗಿದೆ. ಅದರ ಪ್ರಕಾರ, ಆ ಪ್ರಗತಿಯ ತುಟ್ಟತುದಿಯಲ್ಲಿ ಐರೋಪ್ಯ ದೇಶಗಳಿದ್ದರೆ ಭಾರತದಂತಹ ದೇಶ ಅಂಧಕಾರದ ಜಗತ್ತಾಗಿತ್ತು.

ಜೇಮ್ಸ್ ಮಿಲ್ ತನ್ನ ಇತಿಹಾಸ ಕಥನವನ್ನು ಯುರೋಪಿನ ಚರಿತ್ರೆಯನ್ನು ಮಾದರಿಯಾಗಿಟ್ಟುಕೊಂಡು ಕಟ್ಟಿದನು. ಹಾಗಾಗಿ ಇಲ್ಲಿಯೂ ಮೂರು ಐತಿಹಾಸಿಕ ಯುಗಗಳು ಗುರುತಿಸಲ್ಪಟ್ಟವು. ಅವೆಂದರೆ ಹಿಂದೂ ಯುಗ (ಪ್ರಾಚೀನ ಕಾಲಕ್ಕೆ ಸಂವಾದಿಯಾಗಿದೆ). ಮೊಹಮ್ಮದನ್ ಯುಗ (ಮಧ್ಯಕಾಲಕ್ಕೆ ಸಂವಾದಿಯಾಗಿದೆ). ಬ್ರಿಟಿಷ್ ಯುಗ (ಆಧುನಿಕ ಕಾಲಕ್ಕೆ ಸಂವಾದಿಯಾಗಿದೆ). ಈ ರೀತಿಯ ಯುಗ ವಿಭಾಗ ಬ್ರಿಟಿಷ್ ಪೂರ್ವಕಾಲವನ್ನು ಒಂದು ಮತೀಯ ಚರಿತ್ರೆಯನ್ನಾಗಿ ಪರಿವರ್ತಿಸಿತು. ಈ ತ್ರಿಭಾಗ ಇತಿಹಾಸದ ಚೌಕಟ್ಟಿನಿಂದ ಹೊರಬರಲು ಭಾರತೀಯರಿಗೆ ಇನ್ನೂ ಸಾಧ್ಯವಾಗಿಲ್ಲ.

ಭಾರತೀಯ ಗತಕಾಲದ ಕುರಿತು ಜೇಮ್ಸ್‌ಮಿಲ್ ಯಾವುದೇ ರೀತಿಯ ರಿಯಾಯಿತಿಯನ್ನು ತೋರಿಸಲಿಲ್ಲ. ಭಾರತದ ಕುರಿತು ರೋಮ್ಯಾಂಟಿಸಿಸ್ಟರ ಆಸ್ಥೆ ಅವನಿಗೆ ಅಸಹಜವಾಗಿ ಕಂಡಿತು. ಇದಕ್ಕೆ ಕಾರಣ ಎಂದರೆ ಆತನು ನಂಬಿದ ಚರಿತ್ರೆ ಸಂಪ್ರದಾಯ ಮಧ್ಯಯುಗೀನ ಸಮಾಜವನ್ನು ಮೂಢಲೋಕ ಎಂದು ಬಗೆದಿತ್ತು. ಅವನ ಆಸ್ಥೇ ಇದ್ದುದು ಆಧುನಿಕ ಲಿಬರಲ್ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಭಾರತವನ್ನೂ ಒಂದು ನಾಗರಿಕ ಪ್ರಪಂಚವನ್ನಾಗಿ ಮಾಡುವಲ್ಲಿ. ಈ ಸಾಧನೆಯನ್ನು ಬ್ರಿಟಿಶ್ ಆಳ್ವಿಕೆ ಮಾತ್ರ ಮಾಡಲು ಸಾಧ್ಯ. ಭಾರತೀಯರು ಮಧ್ಯಕಾಲದ ಅಥವಾ ಅದಕ್ಕೂ ಹಿಂದಿನ ಅನಾಗರಿಕ ಅವಸ್ಥೆಯಲ್ಲಿ ಇದ್ದಾರೆ. ಇದೊಂದು ಜಡವಾದ, ಚಲನೆಯನ್ನು ಕಳೆದುಕೊಂಡ ಸಮಾಜವಾಗಿದ್ದು ದೀರ್ಘಕಾಲ ನಿರಂಕುಶ ಪ್ರಭುತ್ವಕ್ಕೆ ಒಳಪಟ್ಟು ಯಾವುದೇ ಲಿಬರಲ್ ಮೌಲ್ಯಗಳೂ ಈ ಜನಕ್ಕೆ ಗೊತ್ತಿರುವುದು ಸಾಧ್ಯವಿಲ್ಲ. ಹಾಗಾಗಿ ಬ್ರಿಟಿಶ್ ಆಳ್ವಿಕೆ ತನ್ನ ಐತಿಹಾಸಿಕ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂಬ ಆಶಯ ಅವನದು. ಈ ರೀತಿ ಬ್ರಿಟಿಷ್ ಆಳ್ವಿಕೆಗೊಂದು ದಿವ್ಯವಾದ ಗುರಿಯನ್ನೂ, ಸಮರ್ಥನೆಯನ್ನು ಸೃಷ್ಟಿಸುವಲ್ಲಿ ಈ ಚರಿತ್ರೆ ಸಾಧನವಾಯಿತು. ೧೯ನೆಯ ಶತಮಾನದಲ್ಲಿ ಪ್ರಗತಿಪರವಾದ ಐರೋಪ್ಯ ಚಿಂತಕರು ಜೇಮ್ಸ್‌ಮಿಲ್ಲನ ಈ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದು ಕೂಡ ಕಂಡು ಬರುತ್ತದೆ. ಬ್ರಿಟಿಷ್ ವಸಾಹತುಶಾಹಿ ೧೯ನೆಯ ಶತಮಾನದ ಪೂರ್ವಾರ್ಧದಲ್ಲಿ ಭಾರತೀಯ ಸಮಾಜದ ಸುಧಾರಣೆಯತ್ತ ಗಮನ ಹರಿಸಿದ್ದೂ ಇಂಥ ಚಿಂತನೆಗಳ ಸ್ಫೂರ್ತಿಯಿಂದಲೇ. ಜೇಮ್ಸ್ ಮಿಲ್ಲನ ಚರಿತ್ರೆ ಬ್ರಿಟಿಷ್ ಆಡಳಿತಾಧಿಕಾರಿಗಳಿಗೆ ತರಬೇತಿಯನ್ನು ನೀಡುವ ಪಠ್ಯವಾಗಿ ಸಾಕಷ್ಟು ಕಾಲ ಪ್ರಚಲಿತದಲ್ಲಿ ಇದ್ದುದೂ ಕಂಡುಬರುತ್ತದೆ.

ವಸಾಹತುಶಾಹಿಯ ಚರಿತ್ರೆಯು ತನ್ನ ಕೆಲ ಮೂಲ ಧೋರಣೆ ಹಾಗೂ ಚಿಂತನೆಗಳನ್ನು ಉಳಿಸಿಕೊಂಡೂ ಐತಿಹಾಸಿಕ ಸನ್ನಿವೇಶಗಳಿಗೆ ಹಾಗೂ ಅಗತ್ಯಗಳಿಗೆ ತಕ್ಕಂತೆ ಬದಲಾವಣೆಯನ್ನು ಕೂಡ ಧರಿಸಿ ಬೆಳೆಯಿತು. ಪೌರಾತ್ಯ ವಿದ್ವತ್ತು ಹಾಗೂ ಅಧಿಕಾರಿಶಾಹಿ ಚರಿತ್ರೆಗೆ ಮೂಲಭೂತವಾಗಿ ಅನೇಕ ಸಾಮಾನ್ಯ ಅಂಶಗಳು ಇದ್ದವು. ಭಾರತದ ಚರಿತ್ರೆಯ ಕುರಿತ ಧೋರಣೆಯಲ್ಲಿ ಮಾತ್ರ ಇವೆರಡೂ ಸಂಪ್ರದಾಯಗಳೂ ಪ್ರಾರಂಭದಲ್ಲಿ ಭಿನ್ನವಾಗಿದ್ದವು. ಆದರೆ ಕ್ರಮೇಣವಾಗಿ ಭಾರತೀಯರ ರಾಷ್ಟ್ರೀಯತೆಯ ವಾಸ್ತವವನ್ನು ಅಧಿಕಾರಶಾಹಿ ಇತಿಹಾಸ ಕೂಡ ಪರಿಗಣಿಸಬೇಕಾಯಿತು. ಜೊತೆಗೆ ಈ ರಾಷ್ಟ್ರೀಯತೆಯನ್ನು ನಿಭಾಯಿಸಲು ಹೊಸ ತಂತ್ರಗಳನ್ನು ರೂಪಿಸಬೇಕಾಯಿತು. ಉದಾಹರಣೆಗೆ ಭಾರತದಲ್ಲಿನ ಹಿಂದೂ, ಮುಸ್ಲಿಮ್, ಬ್ರಾಹ್ಮಣ, ಶೂದ್ರ ಎಂಬ ದ್ವಂದ್ವಗಳನ್ನು ಉಪಯೋಗಿಸಿ ೧೯ನೆಯ ಶತಮಾನದ ಅಂತ್ಯಭಾಗದಲ್ಲಿ ಬ್ರಿಟಿಶ್ ಅಧಿಕಾರಶಾಹಿಯ ರಾಜಕೀಯ ಬೆಳೆಯಿತು. ೧೯ನೆಯ ಶತಮಾನದಲ್ಲಿ ಭಾರತೀಯ ಚರಿತ್ರೆಯ ಕುರಿತು ಅವರ ಜ್ಞಾನವೂ ಅತ್ಯಲ್ಪ ಹಾಗೂ ಅಪೂರ್ಣವಾಗಿತ್ತು. ಈ ಹಿನ್ನೆಲೆಯಲ್ಲಿ ನಾವು ಎಲಿಯೆಟ್ ಅವರು ಸಂಪಾದಿಸಿದ ಭಾರತೀಯ ಇತಿಹಾಸದ ಕುರಿತ ಎಂಟು ಸಂಪುಟಗಳನ್ನೂ, ಹಂಟರ್ ಅವರ ‘ರೂಲರ್ಸ್‌ ಆಫ್ ಇಂಡಿಯಾ’ ಸರಣಿಯ ೨೮ ಸಂಪುಟಗಳನ್ನೂ, ಎಲ್‌ಫಿನ್‌ಸ್ಟನ್ ಅವರ ‘ಹಿಸ್ಟರಿ ಆಫ್ ಹಿಂದೂ ಆಂಡ್ ಮಹಮ್ಮದನ್ ಇಂಡಿಯಾ’ ಹಾಗೂ ಮೋರೆಲ್ಯಾಂಡ್ ಅವರ ಆರ್ಥಿಕ ಚರಿತ್ರೆಗೆ ಸಂಬಂಧಿಸಿದ ಗ್ರಂಥಗಳನ್ನು ಪರಾಮರ್ಶಿಸಬೇಕಾಗುತ್ತದೆ. ಐರೋಪ್ಯ ಕ್ರಿಶ್ಚಿಯನ್ ಚರಿತ್ರೆಕಾರರಿಗೆ ಮುಸ್ಲಿಮ್ ಸಂಸ್ಕೃತಿಯ ಕುರಿತು ಇದ್ದ ಮತೀಯ ಪೂರ್ವಗ್ರಹಗಳು ಎಲಿಯೆಟ್ ಮುಂತಾದ ಚರಿತ್ರೆಕಾರರಲ್ಲಿ ಕಾಣುತ್ತವೆ. ಎಲ್‌ಫಿನ್‌ಸ್ಟನ್ ಅವರು ರೋಮ್ಯಾಂಟಿಸಿಸ್ಟ ಚಿಂತನೆಗಳಿಂದ ಪ್ರಭಾವಿತರಾದ್ದರಿಂದ ಜೇಮ್ಸ್ ಮಿಲ್ ಅವರು ಭಾರತೀಯರ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ತಿರಸ್ಕರಿಸಿದರು. ಭಾರತೀಯ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳುವ ವಿಧಾನ ಮಿಲ್ ಅವರದಲ್ಲ. ಅದನ್ನು ಐರೋಪ್ಯ ಚರಿತ್ರೆಯಂತೇ ಆಸ್ಥೆಯಿಂದ ಗ್ರಹಿಸಬೇಕು ಎಂದು ಅವರು ತಮ್ಮ ಚರಿತ್ರೆಯನ್ನು ಆ ನಿಟ್ಟಿನಲ್ಲಿ ನಿರೂಪಿಸಿದರು. ಮೋರೆಲ್ಯಾಂಡ್‌ಅವರು ೨೦ನೆಯ ಶತಮಾನದ ಆದಿಭಾಗದಲ್ಲಿ ಬರೆದ ಆರ್ಥಿಕ ಚರಿತ್ರೆಯಲ್ಲಿ ಬ್ರಿಟಿಷರು ಭಾರತದಲ್ಲಿ ಆಳ್ವಿಕೆಯನ್ನು ಸ್ಥಾಪಿಸುವಾಗ ಹೇಗೆ ಭಾರತೀಯ ಅರ್ಥ ವ್ಯವಸ್ಥೆ ಶಿಥಿಲವಾಗಿತ್ತು ಎಂಬುದನ್ನು ಮೊಗಲರ ಅಂತ್ಯಕಾಲಕ್ಕೆ ಒತ್ತು ಕೊಟ್ಟು ನಿರೂಪಿಸಿದರು. ಅವರ ಈ ವಾದವು ರಾಷ್ಟ್ರೀಯವಾದಿಗಳ ‘ಆರ್ಥಿಕ ಸೋರಿಕೆ’ ಹಾಗೂ ‘ಬ್ರಿಟಿಶ್ ಆಳ್ವಿಕೆಯಿಂದ ಭಾರತಕ್ಕೆ ಬಡತನ ಬಂತು’ ಎಂಬ ವಿಚಾರಗಳನ್ನು ಅಲ್ಲಗಳೆಯುವ ಗುರಿಯನ್ನು ಹೊಂದಿತ್ತು.

ವಸಾಹತು ಅಧಿಕಾರಶಾಹಿ ಚರಿತ್ರೆಕಾರರಲ್ಲಿ ವಿನ್ಸೆಂಟ್ ಸ್ಮಿತ್‌ಅವರ ಸ್ಥಾನ ವಿಶಿಷ್ಟವಾದುದು. ಭಾರತೀಯ ರಾಷ್ಟ್ರೀಯ ಚರಿತ್ರೆಕಾರರ ಮೇಲೆ ಅವರು ಅಗಾಧವಾದ ಪ್ರಭಾವವನ್ನು ಮೂಡಿಸಿದ್ದರು. ಹಾಗಾಗಿ ಅವರ ಉದ್ದೇಶಗಳ ವಿಶ್ಲೇಷಣೆ ಸ್ವಲ್ಪ ಕಷ್ಟವಾಗಿದೆ. ಇದೇ ಕಷ್ಟ ಈ ಕಾಲದ ಅನೇಕ ಪೌರಾತ್ಯ ವಿದ್ವಾಂಸರಿಗೂ, ಪ್ರಾಕ್ತನ ಸಂಶೋಧಕರಿಗೂ ಸಂಬಂಧಿಸಿದ್ದಾಗಿದೆ. ಏಕೆಂದರೆ ಇವರೆಲ್ಲ ಭಾರತೀಯ ರಾಷ್ಟ್ರೀಯ ಚರಿತ್ರೆ ಲೇಖನವನ್ನು ರೂಪಿಸಿದ ಪಾಶ್ಚಾತ್ಯರಾಗಿದ್ದಾರೆ.

೧೯ನೆಯ ಶತಮಾನದಲ್ಲಿ ಭಾರತದ ಪ್ರಾಚೀನ ಕಾಲ ಖಂಡದ, ಅಂದರೆ ಹಿಂದೂ ಯುಗದ ಚರಿತ್ರೆಯನ್ನು ಬರೆಯಲು ವಿಶ್ವಾಸಾರ್ಹ ಆಧಾರಗಳೇ ಸರಿಯಾಗಿ ಇರಲಿಲ್ಲ. ಆದರೆ ಭಾರತೀಯ ರಾಷ್ಟ್ರೀಯತೆ ಹಿಂದೂ ಮುಸ್ಲಿಮ್ ಎಂಬ ದ್ವಿಮುಖಗಳನ್ನು ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಪ್ರಾಚೀನ ಭಾರತದ ಕುರಿತಾದ ಶಾಸನ, ನಾಣ್ಯ ಹಾಗೂ ಸ್ಮಾರಕಗಳ ಅಧ್ಯಯನಗಳು ಪ್ರಾಕ್ತನಶಾಸ್ತ್ರಜ್ಞರಿಂದ ನಡೆದು ಸಾಕಷ್ಟು ಮಾಹಿತಿ ಸಂಗ್ರಹವಾಯಿತು. ಇದನ್ನೆಲ್ಲ ಸೇರಿಸಿ ‘ಹಿಂದೂ ಭಾರತ’ದ ಚರಿತ್ರೆಯನ್ನು ರೂಪಿಸಿದ ಪ್ರಪ್ರಥಮ ವಿದ್ವಾಂಸರು ವಿನ್ಸೆಂಟ್ ಸ್ಮಿಥ್ ಅವರಾಗಿದ್ದಾರೆ. ಅವರ ‘ಅರ‍್ಲಿ ಹಿಸ್ಟರಿ ಆಫ್ ಇಂಡಿಯಾ’ ೧೯೦೪ ರಲ್ಲಿ ಪ್ರಕಟವಾಯಿತು. ಇದರಲ್ಲೇ ಪ್ರಾಚೀನ ಇತಿಹಾಸ ಅಥವಾ ‘ಹಿಂದೂ ಭಾರತ’ದ ಚರಿತ್ರೆಯ ಗತಿಯನ್ನು ನಿರೂಪಿಸಲಾಯಿತು. ಆ ಪ್ರಕಾರ ಗುಪ್ತರ ಕಾಲವನ್ನು ‘ಕ್ಲಾಸಿಕಲ್’ ಅಥವಾ ‘ಅಭಿಜಾತ’ ಸಂಸ್ಕೃತಿ ಎಂದು ಗುರುತಿಸಲಾಯಿತು. ಇದೇ ಅಭಿಪ್ರಾಯವೇ ಮುಂದೆ ‘ಸುವರ್ಣಯುಗ’ವಾಗಿ ರಾಷ್ಟ್ರೀಯ ಚರಿತ್ರೆಯಲ್ಲಿ ಮಹತ್ವ ಪಡೆಯಿತು. ಹೀಗಾಗಿ ೧೧-೧೨ನೆಯ ಶತಮಾನ ಒಂದು ಹಿಂದೂ ಭಾರತದ ಜಡ ಅಥವಾ ಅವಸಾನದ ಅವಸ್ಥೆಯಾಯಿತು. ವಿನ್ಸೆಂಟ್ ಸ್ಮಿತ್ ಅವರು ಅಶೋಕ, ಹರ್ಷವರ್ಧನ ಮುಂತಾದ ಪ್ರಾಚೀನ ರಾಜರ ವ್ಯಕ್ತಿತ್ವ, ಸಾಧನೆಗಳನ್ನು ಹಾಗೂ ರಾಜಮನೆತನಗಳ ಇತಿಹಾಸವನ್ನು ಕಟ್ಟಿಕೊಟ್ಟರು. ಅಲೆಗ್ಸಾಂಡರನ ದಾಳಿ ಪ್ರಾಚೀನ ಭಾರತೀಯ ನಾಗರಿಕತೆಯ ಪ್ರಾರಂಭ ಎಂಬಂತೆ ಈ ಚರಿತ್ರೆಯಲ್ಲಿ ಭಾಸವಾಗುತ್ತದೆ. ಸ್ಮಿತ್ ಅವರು ಭಾರತವು ವೈವಿಧ್ಯಪೂರ್ಣತೆಯನ್ನು ಹೊಂದಿದ್ದರೂ ‘ಮನುಕುಲದ ಸಾಮಾಜಿಕ-ಮತೀಯ ಹಾಗೂ ಜ್ಞಾನದ ಇತಿಹಾಸದ ಒಂದು ಘಟಕ’ ಎಂಬ ವಾದವನ್ನು ಇಟ್ಟರು. ಈ ವಾದವು ಕೂಡ ರಾಷ್ಟ್ರೀಯ ಚರಿತ್ರೆಕಾರರ ‘ವಿವಿಧತೆಯಲ್ಲಿ ಏಕತೆ’ ಎಂಬ ಘೋಷಣೆಗೆ ಪೂರ್ವಭಾವಿಯಾಗಿದೆ. ಆದರೆ ಈ ಸಮಯಕ್ಕಾಗಲೇ ಭಾರತ ಒಂದು ಏಕ ಸಂಸ್ಕೃತಿಯ, ಮತದ ನಾಡಲ್ಲವಾದ್ದರಿಂದ ಅಲ್ಲಿನ ರಾಷ್ಟ್ರೀಯತೆ ಸಾಧ್ಯವಿಲ್ಲ ಎಂಬ ವಾದ ವಸಾಹತು ಅಧಿಕಾರಿಗಳಲ್ಲಿ ಬಲವಾಗಿತ್ತು. ಆ ನಿಟ್ಟಿನಲ್ಲಿ ರಾಜಕೀಯವನ್ನು ಕೂಡ ಬ್ರಿಟಿಷರು ಬೆಳೆಸಿದ್ದರು. ಸ್ವಾತಂತ್ರ‍್ಯೋತ್ತರ ದಿನಗಳಲ್ಲಿ ಭಾರತದ ರಾಷ್ಟ್ರೀಯವಾದಿ ಚರಿತ್ರೆ ಬರವಣಿಗೆಗಳನ್ನು ತೀವ್ರವಾಗಿ ವಿಮರ್ಶೆಗೊಡ್ಡಿದ ಕೇಂಬ್ರಿಜ್ಜ್ ಇತಿಹಾಸಕಾರರ ಒಂದು ಹೊಸ ಪಂಥ ಪ್ರಭಾವಿಯಾಗಿ ಬೆಳೆಯಿತು. ರಾಷ್ಟ್ರೀಯ ಕಾಂಗ್ರೆಸ್ ನೇತಾರರು ಭಾರತೀಯರನ್ನೆಲ್ಲ ಪ್ರತಿನಿಧಿಸುವುದಿಲ್ಲ ಹಾಗೂ ಇವರ ಹೋರಾಟಗಳು ಸಾಮ್ರಾಜ್ಯಶಾಹಿಯ ದಮನದಿಂದ ವಿಮೋಚನೆ ಪಡೆಯುವ ಉದ್ದೇಶಕ್ಕಿಂತ ತಾವು ಅಧಿಕಾರವನ್ನು ಪಡೆಯುವ ಉದ್ದೇಶವನ್ನು ಹೊಂದಿವೆ ಎಂಬ ವಾದವನ್ನು ಕೇಂಬ್ರಿಜ್ಜ್‌ನ ಚರಿತ್ರೆಕಾರರು ಮುಂದಿಟ್ಟರು. ಅವರಲ್ಲಿ ಅನಿಲ್ ಸೀಲ್ ಅವರು ಅಧಿಕಾರಕ್ಕಾಗಿ ಬ್ರಿಟಿಷ್‌ರ ಕೃಪಾಕಟಾಕ್ಷಕ್ಕಾಗಿ ಭಾರತೀಯ ಮೇಲ್ವರ್ಗದ ಮುಂದಾಳುಗಳು (ಎಲೈಟ್‌ಗಳು) ಪೈಪೋಟಿ ನಡೆಸಿದ್ದರಿಂದ ಆಂತರಿಕ ಒಡಕುಗಳು ಹಾಗೂ ಮತೀಯ ರಾಜಕೀಯ ಬೆಳೆಯಿತು ಎಂದು ಅರ್ಥೈಸುತ್ತಾರೆ. ಈಚೆಗೆ ಜ್ಯೂಡಿತ್‌ಬ್ರೌನ್ ಅವರು ಗಾಂಧಿಯವರು ಕಾಂಗ್ರೆಸ್ ಅಧಿಕಾರ ಗ್ರಹಣಕ್ಕಾಗಿ ಜನಸಮುದಾಯವನ್ನು ಅತೀ ಬೃಹತ್ ಪ್ರಮಾಣದಲ್ಲಿ ಒಟ್ಟುಗೂಡಿಸಿದ ಮುಂದಾಳು ಎಂಬಂತೇ ಚಿತ್ರಿಸುತ್ತಾರೆ. ಒಟ್ಟಿನಲ್ಲಿ ಪಶ್ಚಿಮದ ವಿದ್ವಾಂಸರು ಭಾರತೀಯ ರಾಷ್ಟ್ರೀಯ ಚಳುವಳಿಯ ಪ್ರಾಮಾಣಿಕತೆಯನ್ನು ಪ್ರಶ್ನಿಸುವ ತಂತ್ರವನ್ನು ವಸಾಹತು ಆಳ್ವಿಕೆ ಕೊನೆಗೊಂಡರೂ ಬಿಡಲಿಲ್ಲ.