ಫ್ಯೂಡಲ್ ರಾಜ್ಯ ವ್ಯವಸ್ಥೆ

ಫ್ಯೂಡಲ್ ರಾಜ್ಯ ವ್ಯವಸ್ಥೆಯ ಕುರಿತು ನಡೆದ ಚರ್ಚೆಗಳು ಸಾಧಾರಣವಾಗಿ ಪ್ರಾದೇಶಿಕ ವೈಶಿಷ್ಟ್ಯಗಳ ಕುರಿತು ಗಮನ ಕೇಂದ್ರೀಕರಿಸುವುದಿಲ್ಲ. ಹಾಗಾಗಿ ಭಾರತಕ್ಕೆ ಸಾರ್ವತ್ರಿಕವಾಗಿ ಅನ್ವಯವಾಗುವಂತೆ ಇಲ್ಲಿನ ನಿರ್ಣಯಗಳು ಇರುತ್ತವೆ. ಕರ್ನಾಟಕದ ಕುರಿತು ನಡೆದ ಚರ್ಚೆಗಳೂ ಕೂಡ ಹೊಸದೇನನ್ನೂ ತೋರಿಸದೇ ಈ ವ್ಯವಸ್ಥೆ ಇಲ್ಲಿ ಹೇಗೆ ಕಂಡುಬರುತ್ತದೆ ಎಂಬುದನ್ನು ನಿರ್ದಶಿಸುವುದಕ್ಕೆ ಸೀಮಿತವಾಗಿವೆ. ಕೊಸಾಂಬಿಯವರು ವಸಾಹತು ಪೂರ್ವ ರಾಜ್ಯ ವ್ಯವಸ್ಥೆಯ ಕುರಿತು ಒಂದು ವಿಶ್ಲೇಷಣೆಯ ಪರಿಕರ ಎಂಬಂತೆ ಮಾರ್ಕ್ಸ್‌ವಾದೀ ಚೌಕಟ್ಟನ್ನು ಬಳಸಿಕೊಳ್ಳುತ್ತ ಮಾರ್ಕ್ಸ್‌ವಾದಿಗಳು ನಂಬದಂತೆ ಭಾರತವು ಬದಲಾವಣೆ ರಹಿತವಾದ ಏಷಿಯಾದ ಉತ್ಪಾದನಾ ವಿಧಾನವನ್ನು ಹೊಂದಿರದೇ ಐತಿಹಾಸಿಕ ಚಲನಶೀಲತೆಯನ್ನು ಹೊಂದಿತ್ತು ಎಂದು ವಾದಿಸುತ್ತ ಫ್ಯೂಡಲ್ ಮಾದರಿಯನ್ನು ಸೂಚಿಸುತ್ತಾರೆ. ಈ ಚೌಕಟ್ಟು ಎಡಪಂಥೀಯ ರಾಜಕೀಯದ ಕಾರ್ಯಕ್ರಮವೂ ಆಗಿದ್ದುದರಿಂದ ಕೆಲ ಸಂದರ್ಭಗಳಲ್ಲಿ ಸತ್ಯ ಘೋಷಣೆಯ ಮಟ್ಟವನ್ನು ಕೂಡ ತಲುಪಿ ತನ್ನ ಸತ್ಯಶೋಧನೆಯ ಆಯಾಮಗಳನ್ನೆಲ್ಲ ಕಳಚಿಕೊಂಡು ಮತ್ತೊಂದು ಜಡ ಚೌಕಟ್ಟಾಗಿ ಪರಿವರ್ತಿತವಾಯಿತು. ಇದನ್ನು ಮಂಡಿಸಿದ ವಿದ್ವಾಂಸರು ಕೂಡ ಮಾರ್ಕ್ಸ್‌ವಾದಿ ಆರ್ಥಿಕ ನಿರ್ಣಾಯಕತೆಯ ಸಿದ್ಧಾಂತವನ್ನು ಪರಮಸತ್ಯ ಎಂದು ಒಪ್ಪಿಕೊಂಡಿದ್ದರಿಂದ ಇದೊಂದು ಮಾನವ ಇತಿಹಾಸದಲ್ಲಿ ಎಲ್ಲೆಡೆಯಲ್ಲೂ ಕಾಣಿಸಿಕೊಂಡ ಒಂದು ಹಂತ ಎಂಬಂತೆ ಭಾವಿಸುತ್ತಾರೆ. ಇವರು ರಾಜಮನೆತನಗಳ ಚೌಕಟ್ಟನ್ನು ಬಿಟ್ಟು ವ್ಯವಸ್ಥೆಯ ಮೇಲೇ ಗಮನ ಕೇಂದ್ರೀಕರಿಸುತ್ತಾರೆ ಹಾಗೂ ಈ ವ್ಯವಸ್ಥೆ ಭಾರತ ವ್ಯಾಪಿಯಾಗಿತ್ತು ಎಂಬುದಾಗಿ ಭಾವಿಸುತ್ತಾರೆ. ಹಾಗಾಗಿ ಅದು ಕರ್ನಾಟಕದಲ್ಲೂ ಇರಬೇಕಾದದ್ದು ಸಹಜವೇ. ಸಂಶೋಧಕನ ಕೆಲಸವೆಂದರೆ ಅದರ ಐತಿಹಾಸಿಕ ಕುರುಹನ್ನು ಗುರುತಿಸುವುದು. ಆ ಕೆಲಸವನ್ನು ಅವರು ಅನುಕೂಲ ಮಾಹಿತಿಗಳ ಮೂಲಕ ಹಾಗೂ ಕೆಲವೊಮ್ಮೆ ಅನುಕೂಲಾರ್ಥಗಳನ್ನು ಕಲ್ಪಿಸಿ ಸುಸ್ಪಷ್ಟವಾಗುವಂತೆ ತಮ್ಮ ವಾದವನ್ನು ಸಮರ್ಥಿಸುವುದರಿಂದ ಅದು ರಾಷ್ಟ್ರೀಯ ಇತಿಹಾಸದಂತೆ ತನ್ನ ಚೌಕಟ್ಟಿನ ಕುರಿತು ಅಸ್ಪಷ್ಟತೆಯನ್ನು ಉಳಿಸುವುದಿಲ್ಲ. ಹಾಗೂ ಅದೊಂದು ಪ್ರಕಟ ಕಾರ್ಯಕ್ರಮವಾಗಿಯೇ ಬಿಂಬಿತವಾಗಿದೆ.

ಕರ್ನಾಟಕದ ರಾಜ್ಯ ವ್ಯವಸ್ಥೆಯ ಕುರಿತು ಅದು ಫ್ಯೂಡಲ್ ಎಂದು ಭಾವಿಸಿಕೊಳ್ಳುವಾಗ ಈ ಲೇಖಕರಿಗೆ ಒಂದು ದೃಢ ವಿಶ್ವಾಸವಿರುವುದು ಕಂಡುಬರುತ್ತದೆ. ಆದರೆ ಕರ್ನಾಟಕವನ್ನು ವಿಶೇಷವಾಗಿ ಅಧ್ಯಯನಕ್ಕೊಳಪಡಿಸಿ ಈ ನಿರ್ಣಯಕ್ಕೆ ಬಂದಂತೇನೂ ಕಂಡುಬರುವುದಿಲ್ಲ. ಆರ್.ಎಸ್.ಶರ್ಮ ಅವರು ತಮ್ಮ ಇಂಡಿಯನ್ ಫ್ಯೂಡಲಿಸಂನಲ್ಲಿ ಕರ್ನಾಟಕದ ಆಧಾರಗಳನ್ನೂ ಉಲ್ಲೇಖಿಸುತ್ತಾರೆಯಾದರೂ ಕರ್ನಾಟಕಕ್ಕೆ ಸಂಬಂಧಿಸಿದ ಅವರ ವಾದಕ್ಕೆ ಆನುಷಂಗಿಕವಾಗಿರುವುದು ಸ್ಪಷ್ಟ. ಆರ್.ಎನ್.ನಂದಿ ಅವರು ತಮ್ಮ ಬರವಣಿಗೆಯಲ್ಲಿ ಕರ್ನಾಟಕದ ಸಂಬಂಧಿಸಿದಂತೆ ಚರ್ಚಿಸುತ್ತಾರೆ. “ಭಾರತದಲ್ಲಿ ಫ್ಯೂಡಲ್ ಬೆಳವಣಿಗೆಯ ಸ್ವರೂಪ ಮತ್ತು ವ್ಯಾಪ್ತಿಯನ್ನು ನಿರ್ಣಯಿಸಿದ ಶಕ್ತಿಗಳನ್ನು ಕರ್ನಾಟಕಕ್ಕೆ ಸಂಬಂಧಿಸಿದಂತೆ ಅರ್ಥಮಾಡಿಕೊಳ್ಳುವುದು” ತಮ್ಮ ಉದ್ದೇಶವೆನ್ನುತ್ತಾರೆ. ಒಂದು ಚೌಕಟ್ಟು ಈಗಾಗಲೇ ಸತ್ಯ ಎಂದು ಸ್ವೀಕೃತವಾಗಿದ್ದು ಸ್ಪಷ್ಟ. ಇನ್ನುಳಿದ ಕೆಲಸ ಎಂದರೆ ಫ್ಯೂಡಲಿಸಂನ ಲಕ್ಷಣಗಳನ್ನು ಇಲ್ಲಿ ಸಿಗುವ ಆಧಾರಗಳ ಮೂಲಕ ನಿದರ್ಶಿಸುವುದು. ಭೂದತ್ತಿಗಳು ಖಾಸಗಿ ಆಸ್ತಿಯನ್ನು ಬೆಳೆಸಿದ್ದು, ಅಗ್ರಹಾರ ಮತ್ತು ದೇವಾಲಯಗಳ ಐಡಿಯಾಲಜಿ ರಚನೆ, ಜೀತದ ಬೆಳವಣಿಗೆ ಹಾಗೂ ಶೋಷಣೆ ಮುಂತಾದವು ಫ್ಯೂಡಲಿಸಂನ ಬೆಳವಣಿಗೆಗೆ ಕಾರಣವಾಗುತ್ತವೆ. ವ್ಯವಸಾಯ ವಿಸ್ತರಣೆ ಮತ್ತು ವ್ಯಾಪಾರ-ವಾಣಿಜ್ಯದ ಬೆಳವಣಿಗೆ, ಸಾಮಾಜಿಕ ಸಂಘರ್ಷ, ಹೊಸ ಐಡಿಯಾಲಜಿಯಾದ ವೀರಶೈವಿಸಂನ ಉದಯ ಇವು ಅದು ಶಿಥಿಲವಾಗಲು ಕಾರಣವಾಗುತ್ತವೆ. ಕ್ರಿ.ಶ. ೬ನೆಯ ಶತಮಾನದಲ್ಲೇ ಹುಟ್ಟಿ ೧೨ನೆಯ ಶತಮಾನದಲ್ಲಿ ಈ ವ್ಯವಸ್ಥೆ ಶಿಥಿಲವಾಗಬೇಕು ಎನ್ನುವುದರಿಂದ ಹಿಡಿದು ಐರೋಪ್ಯ ಇತಿಹಾಸವನ್ನು ಕರ್ನಾಟಕದ ಸಂದರ್ಭದಲ್ಲಿ ಈ ಫ್ಯೂಡಲ್ ಮಾದರಿ ಸಾಧಾರಣೀಕರಿಸುತ್ತದೆ. ಇನ್ನು ಇದು ದೃಷ್ಟಾಂತಪಡಿಸುವ ಆಧಾರ ಹೇಗಿದೆ ಎಂಬುದನ್ನು ಚರ್ಚಿಸಬಹುದಾಗಿದೆ. ವೀರಗಲ್ಲುಗಳು ಸೂಚಿಸುವಂತೆ ಸೈನಿಕರು ತಮ್ಮ ಒಡೆಯನ ಜೊತೆಗೆ ಕರ್ತವ್ಯದ ಋಣಕ್ಕೆ ಕಟ್ಟುಬಿದ್ದು ಪ್ರಾಣಾರ್ಪಣೆ ಮಾಡುತ್ತಿದ್ದರು. ಆ ಒಪ್ಪಂದ ಏನೆಂದರೆ ಒಡೆಯನು ವೀರನ ಕುಟುಂಬಕ್ಕೆ ರಕ್ಷಣೆ ಮತ್ತು ಪ್ರತಿಫಲಗಳನ್ನು ನೀಡುತ್ತಿದ್ದನು. ಇದನ್ನು ಕೆಳಹಂತದಲ್ಲಿ ಫ್ಯೂಡಲ್ ವ್ಯವಸ್ಥೆನ್ನು ಸೃಷ್ಟಿಸುವುದು (Subinfeudation) ಎಂದು ಗುರುತಿಸಲಾಗಿದೆ. ಕರ್ನಾಟಕದ ವೀರಗಲ್ಲು ಶಾಸನಗಳ ಒಂದು ಮೇಲ್ನೋಟದ ಅವಲೋಕನೆ ಕೂಡ ಇದನ್ನು ಸಮರ್ಥಿಸಲಾರದು. ಈ ವೀರರು ಬಹುತೇಕ ಎಲ್ಲಾ ಸಾಮಾಜಿಕ ಸಮೂಹದಿಂದ ಬಂದಿದ್ದು ಅವರಲ್ಲಿ ಗೋವಿಗಾಗಿ, ಗ್ರಾಮಕ್ಕಾಗಿ ಹೋರಾಡಿದವರ ಜೊತೆಗೇ ಹುಲಿಯನ್ನು ಕೊಂದವರು, ಅದರಲ್ಲೂ ನಾಯಿಗಳಿಗೂ ವೀರಗಲ್ಲುಗಳಿವೆ. ಎಲ್ಲ ವೀರರಿಗೂ ಭೂಮಿ ಹಾಕಿಸಿದ ವಿವರಗಳಿಲ್ಲ ಜೊತೆಗೆ ಅನೇಕ ವೀರಗಲ್ಲುಗಳಲ್ಲಿ ಅವರ ಬಂಧುಗಳೇ ದತ್ತಿ ಹಾಕಿಸಿದ ಸಂಗತಿಗಳೂ ಇವೆ. ವೀಳೆಯ ಕೊಡುವ, ಪಟ್ಟುಗಟ್ಟುವ, ಉಂಬಳಿಕೊಡುವ ದಾನಗಳನ್ನು ಇಟ್ಟುಕೊಂಡು ಕೂಡ ಈ ವೀರ ಸಂಸ್ಕೃತಿಯ ಕುರತು ಫ್ಯೂಡಲ್ ಪರಿಭಾಷೆಯಲ್ಲಿ ಮಾತನಾಡಬಹುದೆ ಎಂಬ ಪ್ರಶ್ನೆಯೂ ಇದೆ.

ನಂದಿ ಅವರು ಇದೇ ರೀತಿ ಅಗ್ರಹಾರಗಳು, ದೇವಾಲಯ ಮುಂತಾದವುಗಳು ಫ್ಯೂಡಲ್ ಖಾಸಗಿ ಒಡೆತನಗಳೆನ್ನುತ್ತಾರೆ. ಸಮಧಿಗತ ಪಂಚ ಮಹಾಶಬ್ದವನ್ನು ಫ್ಯೂಡಲ್ ಬಿರುದು ಎನ್ನುತ್ತಾರೆ. ಈ ಬಿರುದನ್ನು ಧರಿಸಿದ ಮಹಾಮಂಡಳೇಶ್ವರರಿಗೂ, ಸಾಮಂತರಿಗೂ ಏನು ವ್ಯತ್ಯಾಸವೆಂಬುದು ಚರ್ಚಿತವಾಗುವುದಿಲ್ಲ ಅಷ್ಟೇ ಅಲ್ಲ, ಶಾಸನಗಳು ವ್ಯಕ್ತಪಡಿಸುವಂತೆ ಮಂಡಳೇಶ್ವರ ಶಬ್ದವು ಯಾವ ಯಾವ ವಿಭಿನ್ನ ಅರ್ಥಗಳಲ್ಲಿ ಬಳಕೆಯಾಗಿದೆ ಎಂಬ ಕುರಿತೂ ಗಮನ ಹರಿಸಲಾಗಿಲ್ಲ. ದೇವಾಲಯಗಳಿಗೆ ಗಾಣಗಳನ್ನು ಬಿಡುವುದು, ಉಳಿದ ಸೇವೆಗಳನ್ನು ಬಿಡುವುದು ಆಯಾ ವೃತ್ತಿಪರರು ದೇವಾಲಯಗಳ ಆಧೀನರಾದ ಸೂಚನೆ ಎಂಬಂತೆ ತೆಗೆದುಕೊಳ್ಳುತ್ತಾರೆ. ಇದರಿಂದ ಶೋಷಣಾತ್ಮಕ ವ್ಯವಸ್ಥೆ ಹುಟ್ಟಿ ಸಂಘರ್ಷ ಏರ್ಪಟ್ಟಿತು ಹಾಗೂ ವೀರಶೈವ ಚಳವಳಿ ವೃತ್ತಿಪರರಿಗೆ ಈ ಫ್ಯೂಡಲ್ ಪರಾಧೀನತೆಯಿಂದ ಬಿಡುಗಡೆ ದೊರಕಿಸಿತು ಎಂದು ವಾದಿಸುತ್ತಾರೆ. ಹಾಗಿದ್ದಲ್ಲಿ ಏಕೆ ಈ ವೃತ್ತಿಪರರು ಈ ಚಳುವಳಿಯ ಕಾಲದಲ್ಲಿ ತಾವೇ ಊರೂರುಗಳಲ್ಲಿ ದೇವಾಲಯ ಸಂಸ್ಥೆಗಳನ್ನು ಹುಟ್ಟುಹಾಕಿ ದಾನಗಳನ್ನು ಶಾಸನಗಳಲ್ಲಿ ದಾಖಲಿಸಿದರು ಎಂಬುದಕ್ಕೆ ಇಲ್ಲಿ ವಿವರಣೆಯಿಲ್ಲ. ಯಾವುದೋ ಒಂದೆರಡು ದಂಗೆ, ಸಂಘರ್ಷಗಳನ್ನು ಅವುಗಳ ಸ್ವರೂಪವನ್ನು ವಿಶ್ಲೇಷಿಸದೇ ಫ್ಯೂಡಲ್ ಎಂದು ಏಕೆ ಕರೆಯಬೇಕೆನ್ನುವುದನ್ನು ಕೂಡ ಸಮರ್ಥಿಸಲಾಗಿಲ್ಲ. ಹೀಗೇ ಸಮಸ್ಯೆಗಳನ್ನು ನಾವು ತೋರಿಸುತ್ತಾ ಸಾಗಬಹುದು. ಒಟ್ಟಾರೆಯಾಗಿ ಒಂದು ಸಿದ್ಧ ಚೌಕಟ್ಟನ್ನು ಕರ್ನಾಟಕದ ಸಂದರ್ಭದಲ್ಲಿ ಮಾಹಿತಿಗಳ ವೈಜ್ಞಾನಿಕ ವಿಶ್ಲೇಷಣೆ ನಡೆಸದೇ ಅಳವಡಿಸಲಾಗಿದೆ ಎಂದು ನಾವು ನಿರ್ಣಯಿಸಬಹುದು.

ಘಟಕಗಳಿಂದ ಕೂಡಿದ ರಾಜ್ಯದಿಂದ ಯಜಮಾನಿಕೆಯ ಪ್ರಭುತ್ವಕ್ಕೆ

ಬರ್ಟನ್ ಸ್ಟೈನ್ ಅವರು ಕರ್ನಾಟಕದ ರಾಜ್ಯಗಳನ್ನಾಧರಿಸಿ ಈ ಸಿದ್ಧಾಂತವನ್ನು ರೂಪಿಸಲಿಲ್ಲ ಅಥವಾ ಅವನ್ನು ಕರ್ನಾಟಕದ ಸಂದರ್ಭದಲ್ಲಿ ವಿಶೇಷವಾಗಿ ಪರೀಕ್ಷಿಸಲೂ ಇಲ್ಲ. ಆದರೆ ಅವರು ವಿಜಯನಗರ ರಾಜ್ಯದ ಕುರಿತು ವಿಸ್ತತವಾಗಿ ತಮ್ಮ ಗ್ರಂಥಗಳಲ್ಲಿ, ಲೇಖನಗಳಲ್ಲಿ ಚರ್ಚಿಸಿದ್ದಾರೆ. ಅವುಗಳಲ್ಲಿ ತಮ್ಮ ವಿಜಯನಗರ ಎನ್ನುವ ಗ್ರಂಥದಲ್ಲಿ ಕರ್ನಟಕದ ಸಂದರ್ಭದಲ್ಲೂ ಸಾಮಾನ್ಯೀಕರಿಸುತ್ತಾರೆ. ಅದಿಲ್ಲದಿದ್ದರೆ ಅವರ ಅಧ್ಯಯನವು ಮುಖ್ಯವಾಗಿ ತಮಿಳುನಾಡಿನ ಮೇಲೆ ಕೇಂದ್ರೀಕರಿಸಿದೆ. ಮೊದಮೊದಲು ವಿಜಯನಗರವು ಚೋಳ ರಾಜ್ಯ ಪದ್ಧತಿಯ ಮುಂದುವರಿಕೆಯಾಗಿದ್ದುದರಿಂದ ಅದೂ ಕೂಡ ಸೆಗ್ಮೆಂಟರಿ ರಾಜ್ಯವಾಗಿದೆ ಎಂಬುದಾಗಿ ಅವರು ನಂಬಿದ್ದರು. ಆದರೆ ನಂತರ ವಿಜಯನಗರ ಕಾಲದಲ್ಲಿ ವ್ಯಾಪಾರ-ವಾಣಿಜ್ಯ, ಯುದ್ಧತಂತ್ರ ಮುಂತಾದವುಗಳಲ್ಲಿ ನಡೆದ ಅಗಾಧ ಬದಲಾವಣೆಗಳು, ಪ್ರಾರಂಭಿಕ ವಸಾಹತು ಯುಗದ ಕೇಂದ್ರೀಕೃತ ರಾಜ್ಯಗಳು ಇವೆಲ್ಲವನ್ನು ವಿವರಿಸು ಸಮಸ್ಯೆ ಅವರಿಗೆ ದುರಾಯಿತು. ಈ ಸಮಸ್ಯೆ ಏಕೆಂದರೆ, ಅವರ ಸೆಗ್ಮೆಂಟರಿ ಚೌಕಟ್ಟು ಒಂದು ಸ್ಟೇಟ್ ಪೂರ್ವ ಅವಸ್ಥೆಯನ್ನು ಕಲ್ಪಿಸುತ್ತದೆ. ಅಂದರೆ ಈ ಅವಸ್ಥೆಯಲ್ಲಿ ಹಳ್ಳಿ ಸಮುದಾಯಗಳು ತಮ್ಮಷ್ಟಕ್ಕೆ ಸ್ವಾಯತ್ತ ಜೀವನವನ್ನು ನಡೆಸುತ್ತಿದ್ದು, ರಜರು ತಾವು ಆಕ್ರಮಿಸಿಕೊಂಡ ಎಲ್ಲ ಪ್ರದೇಶಕ್ಕೂ ನಿಜವಾದ ಸಾರ್ವಭೌಮತ್ವ ನೀಡಲು ಅಸಮರ್ಥರಿರುತ್ತಾರೆ. ಹಾಗಾಗಿ ಕೇಂದ್ರ ಭಾಗದಲ್ಲಿ ಅವರ ಆಡಳಿತ ನೇರವಾಗಿ ಪ್ರಭಾವ ಬೀರುತ್ತಿದ್ದು, ಉಳಿದೆಡೆಯಲ್ಲಿ ಶಾಸ್ತ್ರಕ್ಕೆ ಮಾತ್ರ ಇರುತ್ತದೆ. ಸ್ಟೇಟ್‌ನ ಪರಿಧಿಯಲ್ಲಿ ಬರುತ್ತವೆ ಎಂದು ಭಾವಿಸಲಾದ ಎಷ್ಟೋ ಕಾರ್ಯಕ್ರಮಗಳು, ಆಡಳಿತಗಳು, ಹಾಗೂ ಶಾಸನಗಳು ಖಾಸಗಿ ವ್ಯಕ್ತಿಗಳಿಂದ, ಸಂಸ್ಥೆಗಳಿಂದ ನಿರ್ವಹಣೆಯಾಗುತ್ತಿದ್ದುದು ಇಂಥ ರಜ್ಯಗಳಲ್ಲಿ ಕಂಡುಬರುತ್ತದೆ. ಹೀಗೆ ಕಂಡುಬರುವುದೇ ಇಂಥ ರಾಜ್ಯಗಳ ಸ್ವರೂಪ. ಹೀಗಿರುವಾಗ ಐತಿಹಾಸಿಕ ಬದಲಾವಣೆಯ ಹಿಂದಿನ ಒಂದು ಐಕ್ಯ ಕರ್ತೃತ್ವಶಕ್ತಿಯನ್ನು ಈ ಸಮಾಜ ಪಡೆಯಲಿಕ್ಕೇ ಸಾಧ್ಯವಿಲ್ಲ. ಇದೊಂದು ಸ್ಟೇಟ್ ಮಧ್ಯಪ್ರವೇಶವಿಲ್ಲದ ಜಡವಾದ, ಬದಲಾವಣೆರಹಿತ ಸಮಾಜವಾಗಿಯೇ ಉಳಿಯಬೇಕು. ಆದರೆ ವಿಜಯನಗರ ರಾಜ್ಯದಲ್ಲಿ ಕ್ರಮೇಣ ಬದಲಾವಣೆಗಳು ಕಂಡುಬರುತ್ತವೆ. ಹಾಗಾಗಿ ಇದು ಪ್ರಾರಂಭದಲ್ಲಿ ಸೆಗ್ಮೆಂಟರಿ ಪ್ರಭುತ್ವವಾಗಿದ್ದುದು ಕ್ರಮೇಣ ಪಿತೃಕೇಂದ್ರಿತ (ಪೇಟ್ರಿಮೋನಿಯಲ್) ಪ್ರಭುತ್ವವಾಗಿ ಮಾರ್ಪಟ್ಟಿತು ಎಂಬ ಊಹಾಸಿದ್ಧಾಂತದಿಂದ ಹೊರಡುತ್ತಾರೆ.

ಸ್ಟೈನ್ ಅವರ ಈ ಬದಲಾದ ಚೌಕಟ್ಟಿನ ಪ್ರಕಾರ ವಿಜಯನಗರವು ಕೃಷ್ಣದೇವರಾಯನ ಕಾಲದವರೆಗೆ ಸೆಗ್ಮೆಂಟರಿ ಅವಸ್ಥೆಯಲ್ಲೇ ಇತ್ತು. ಅಂದರೆ, ಸ್ಥಾನಿಕ ಸಂಸ್ಥೆಗಳು ಪ್ರಬಲವಾಗಿದ್ದು ವಿಜಯನಗರದ ಸಾರ್ವಭೌಮತ್ವ ಸೀಮಿತವಾಗಿತ್ತು ಹಾಗೂ ಈ ಪ್ರಭುತ್ವಕ್ಕೆ ಸೆಗ್ಮೆಂಟರಿ ಸ್ಟೇಟ್‌ನ ಸ್ವರೂಪವಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಈ ರಾಜರು ತಮ್ಮ ಸೈನ್ಯ ಬಲ ಹಾಗೂ ಪ್ರಭುತ್ವವನ್ನು ಕೇಂದ್ರೀಕರಿಸಿಕೊಳ್ಳುವ ಅಗತ್ಯ ಬಿದ್ದಿತು. ಈ ಮಿತಿಯಿಂದ ಹೊರಬರಲಿಕ್ಕೆ ೧೪ನೆಯ ಶತಮಾನದ ಅಂತ್ಯಾವಧಿಯಿಂದ ಅಮರನಾಯಕ ಪದ್ಧತಿಯನ್ನು ಆಶ್ರಯಿಸಲಾಯಿತು. ಕೃಷ್ಣದೇವರಾಯನು ತನ್ನ ರಾಜ್ಯಭಾರವನ್ನೇ ಈ ನಾಯಕರನ್ನಾಧರಿಸಿ ನಡೆಸಲು ತೊಡಗಿ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಲಗೊಳಿಸಿದನು. ಸೈನ್ಯ ಸುಧಾರಣೆಕೂಡ ಇದರ ಮತ್ತೊಂದು ಉದ್ದೇಶವಾಗಿತ್ತು. ಆತನು ಸೆಗ್ಮೆಂಟರಿ ಪ್ರಭುತ್ವದ ಕಾರ್ಯವಿಧಾನಗಳಾದ ಸಾಂಪ್ರದಾಯಿಕ-ವಿಧಿಗಳನ್ನೂ ಪ್ರಭುತ್ವವನ್ನು ಗಟ್ಟಿಗೊಳಿಸಲಿಕ್ಕೆ ಬಳಸಿದನು. ಅವನ ಕಾಲದಲ್ಲಿ ಈ ರಾಜ್ಯವು ದುರ್ಗಗಳ ನಿರ್ಮಾಣ ಹಾಗೂ ದಂಡನಾಯಕರು ಹಾಗೂ ನಾಯಕರ ನ್ನಾಶ್ರಯಿಸಿದ ಹೆಚ್ಚು ಕೇಂದ್ರಿ ನಿರ್ದೇಶಿತ ರಾಜ್ಯವಾಗಿ ಬದಲಾಗಿತ್ತು. ಇದು ವಿಜಯನಗರ ರಾಜ್ಯ ರಚನೆಗೆ ಬದಲಾವಣೆಯನ್ನು ತಂದರೂ, ಸ್ಥಾನಿಕ ಸಂಸ್ಥೆಗಳ ಬದಲಾಗಿ ನಾಯಕರು ರಾಜ್ಯಕ್ಕೆ ತೊಡಕಾದರು. ನಾಯಕರು ಸೈನ್ಯ ಸಂಘಟನೆ ಮಾಡಿಕೊಂಡು, ತಮ್ಮ ಪ್ರದೇಶದಲ್ಲಿ ಅಧಿಕಾರವನ್ನು ಕೇಂದ್ರೀಕರಿಸಿ ಅಳಿಯ ರಾಮರಾಯನ ಕಾಲಕ್ಕೇ ಪ್ರಬಲರಾಗಿದ್ದರು. ಇಂಥ ಬದಲಾದ ಸನ್ನಿವೇಶದಲ್ಲಿ ರಾಮರಾಯನು ರಾಜ್ಯವನ್ನು ಪಿತೃಕೇಂದ್ರಿತವನ್ನಾಗಿ ಬದಲಾಯಿಸ ತೊಡಗಿದನು. ಈ ರೀತಿ ನಾಯಕ ಪ್ರಭುತ್ವಗಳು ತಾಳಿಕೋಟೆ ಯುದ್ಧಕ್ಕೂ ಮೊದಲೇ ಅಸ್ತಿತ್ವದಲ್ಲಿ ಬಂದಿದ್ದವು. ಆದರೆ ತಾಳಿಕೋಟೆ ಯುದ್ಧಾನಂತರ ವಿಜಯನಗರ ವಿಘಟನೆಯು ಕಣ್ಣಿಗೆ ಕಾಣಿಸುವಂತಾಯಿತು. ನಾಯಕ ಪ್ರಭುತ್ವದಲ್ಲಿ ಮದ್ದುಗುಂಡುಗಳ ಬಳಕೆ, ಗಾಢವಾದ ಪಶ್ಚಿಮದ ವ್ಯಾಪಾರ ಹಾಗೂ ಅದರ ಮೇಲೆ ನಾಯಕರ ಹಿಡಿತ, ಮುಂತಾದವು ಪ್ರಾರಂಭಿಕ ವಸಾಹತು ಕಾಲದ ಅರೆ ಅಧಿಕಾರಶಾಹಿ ರಾಜ್ಯ ವ್ಯವಸ್ಥೆಯನ್ನು ನಿರ್ಮಿಸಿದವು. ಇದು ಸಂಕ್ಷಿಪ್ತವಾಗಿ ವಿಜಯನಗರ ರಾಜ್ಯದ ಇತಿಹಾಸ.

ಇಲ್ಲಿ ವಿಜಯನಗರ ಅಂತ್ಯಾವಸ್ಥೆಯಲ್ಲಿ ರೂಪುಗೊಳ್ಳುವ ಯಜಮಾನ ಪ್ರಭುತ್ವದ ರಾಜ್ಯದ ಕಲ್ಪನೆಯನ್ನು ಸ್ಟೈನ್ ಅವರು ಸ್ಟೀಫನ್ ಬ್ಲೇಕ್ ಅವರ ಲೇಖನವೊಂದರಿಂದ ತೆಗೆದುಕೊಳ್ಳುತ್ತಾರೆ. ಬ್ಲೇಕ್ ಅವರು ಮ್ಯಾಕ್ಸ್‌ವೆಬರ್ ಅವರ ವಿಚಾರಗಳನ್ನು ಬಳಸಿಕೊಳ್ಳುತ್ತಾರೆ. ಈ ಕಲ್ಪನೆಯ ಪ್ರಕಾರ ರಾಜನು ಒಬ್ಬ ಪಿತೃಪ್ರಧಾನ ಕುಟುಂಬದ ಯಜಮಾನನಾಗಿ ಅದೇ ಮಾದರಿಯಲ್ಲಿ ರಾಜ್ಯಾಡಳಿತವನ್ನೂ ವ್ಯವಸ್ಥಿತಗೊಳಿಸಿ ಕೊಂಡಿರುತ್ತಾನೆ. ಇಲ್ಲಿ ವಿಧೇಯತೆಯು ರಾಜನಿಗೆ ವಯುಕ್ತಿಕವಾಗಿರುತ್ತದೆಯೇ ಹೊರತು ವ್ಯವಸ್ಥೆಯ ಕುರಿತಾಗಿರುವುದಿಲ್ಲ. ರಾಜನ ನಿರ್ಣಯ ಇಲ್ಲಿ ಮಹತ್ವ ಪಡೆಯುತ್ತದೆ. ಈ ರಾಜರು ತಮ್ಮ ರಾಜಕುಟುಂಬದ ವ್ಯಾಪ್ತಿಯ ಅಧಿಕಾರವನ್ನು ವಿಸ್ತರಿಸಿದಂತೆಲ್ಲ ರಾಜತ್ವವು ಹೊರಗಿನ ಅಧಿಕಾರಿಗಳನ್ನು ಆಶ್ರಯಿಸುತ್ತದೆ. ಆದರೆ ಆಳ್ವಿಕೆಯ ಶೈಲಿ ಬದಲಾಗುವುದಿಲ್ಲ. ರಾಜನು ಯಜಮಾನನಂತೆಯೇ ಸೈನ್ಯ, ನ್ಯಾಯಾಡಳಿತ, ಮುಂತಾದವನ್ನು ನಿಭಾಯಿಸುತ್ತಾನೆ. ಹಾಗಾಗಿ ಇಡೀ ಸಾಮ್ರಾಜ್ಯವೇ ವಿಸ್ತಾರವಾದ ಕುಟುಂಬದಂತಾಗುತ್ತದೆ. ಆದರೆ ಯಜಮಾನ ಪ್ರಭುತ್ವವು ಸಾಮ್ರಜ್ಯವಾಗಿ ಬೆಳೆಯುವಾಗ ಮೊಗಲ್ ಸಾಮ್ರಾಜ್ಯದಂತೆ ಅಧಿಕಾರಶಾಹಿಯನ್ನೂ ಸುವ್ಯವಸ್ಥಿತವಾಗಿ ನಿರ್ಮಿಸಿಕೊಳ್ಳುತ್ತದೆ. ವಿಜಯನಗರ ರಾಜರು ನಾಯಕ ಪ್ರಭುತ್ವದ ಮೂಲಕ ಸ್ವಾಯತ್ತ ಆಡಳಿತ ಘಟಕಗಳನ್ನು ಸ್ವಾಧೀನಪಡಿಸಿಕೊಂಡ ನಂತರ ಅವರ ಪ್ರಭುತ್ವವು ಯಜಮಾ ಪ್ರಭುತ್ವದ ರೂಪು ತಳೆಯಲು ಪ್ರಾರಂಭಿಸಿತು. ಈ ಯಜಮಾನಿಕೆಯೇ ರಾಜ್ಯದ ಬೇರೆ ಬೇರೆ ಅಧಿಕಾರಗಳನ್ನು ಹಿಡಿತಕ್ಕೆ ತಂದು, ಸೈನ್ಯ ಮತ್ತು ಕರಕಂದಾಯಗಳನ್ನು ತನಗೆ ಬೇಕಾದಂತೆ ರೂಪಿಸಿಕೊಳ್ಳುತ್ತ ಸಾಮಾಜಿಕ-ಆರ್ಥಿಕ ಬದಲಾವಣೆಗಳನ್ನು ತರಲು ಕಾರಣವಾಯಿತೆಂಬುದು ಸ್ಟೈನ್ ಅವರ ವಾದವಾಗಿದೆ.

ಸ್ಟೈನ್ ಅವರ ಸೆಗ್ಮೆಂಟರಿ ಸ್ಟೇಟ್ ಕಲ್ಪನೆಯ ಕುರಿತು ಸಾಕಷ್ಟು ಟೀಕೆಗಳು ಬಂದಿವೆ. ನಮಗೆ ಅವು ನೇರವಾಗಿ ಸಂಬಂಧಿಸಿಲ್ಲ. ಕರ್ನಾಟಕದ ಸಂದರ್ಭದಲ್ಲಿ ಅವರು ವಿಜಯನಗರದ ಕುರಿತು ಮಂಡಿಸುವ ವಾದಗಳ ಯತಾರ್ಥತೆ ಇಲ್ಲಿ ಮುಖ್ಯ ಚರ್ಚಾಂಶವಾಗಿದೆ. ಪ್ರಾರಂಭಿಕ ವಿಜಯನಗರ ಸೆಗ್ಮೆಂಟರಿ ಪ್ರಭುತ್ವವಾಗಿತ್ತೆ ಎಂಬುದು ಒಂದು ವಿಚಾರವಾದರೆ, ಈ ಸ್ಟೇಟ್‌ನ ಸ್ವರೂಪವು ಕೃಷ್ಣದೇವರಾಯನ ಕಾಲಾನಂತರ ಇಲ್ಲಿ ಬದಲಾದುದಕ್ಕೆ ಆಧಾರಗಳು ಸಿಗುತ್ತವೆಯೆ ಎಂಬುದು ಮತ್ತೊಂದು ವಿಚಾರವಾಗಿದೆ. ಸೆಗ್ಮೆಂಟರಿ ಎಂಬ ಚೌಕಟ್ಟು ಜಡವಾದುದಾಗಿದ್ದು ಈ ರಾಜತ್ವಗಳಿಗೆ ಯಾವುದೇ ಕ್ರಿಯಾಶೀಲತೆಯ ಸಾಧ್ಯತೆಯನ್ನು ತಾರ್ಕಿಕವಾಗಿ ಅಲ್ಲಗಳೆಯುತ್ತದೆ. ಆದರೆ ರಾಜತ್ವವು ಅಂಥ ಜಡ ವ್ಯವಸ್ಥೆಯಾಗಿರಲಿಲ್ಲ ಎಂಬುದು ಸ್ಟೈನ್ ಅವರ ವರ್ಣನೆಯಲ್ಲೇ ಸ್ಪಷ್ಟವಾಗುತ್ತದೆ. ಚೋಳರ, ವಿಜಯನಗರ ರಾಜರ ಕಾಲದಲ್ಲಿನ ವಿಸ್ತೃತ ಅಧ್ಯಯನಗಳು ಈಗಾಗಲೇ ಶಾಸ್ತ್ರಪೂರ್ತಿ ಸಾರ್ವಭೌಮತ್ವದ (Ritual Soveriegnty) ಕಲ್ಪನೆ ಸರಿಯಲ್ಲ ಎಂಬುದನ್ನು ತೋರಿಸಿವೆ. ರಾಜತ್ವವು ಪ್ರಾದೇಶಿಕ ಅಧಿಕಾರ ಘಟಕಗಳ ಮೆಲೆ ಅಧಿಕಾರವನ್ನು ವಿಸ್ತರಿಸುವ ಪ್ರಯತ್ನ ಕ್ರಿಯಾಶೀಲವಾಗಿದ್ದು ರಾಜರಿಂದ ರಾಜರಿಗೆ ಹಾಗೂ ಕಾಲದಿಂದ ಕಾಲಕ್ಕೆ ಅದು ಬದಲಾಗುವುದನ್ನು ಕೂಡ ನೋಡುತ್ತೇವೆ. ವಿಜಯನಗರ ಪ್ರಾರಂಭದಲ್ಲೇ ಕರ್ನಾಟಕದ ಆರಗ ಮತ್ತು ಚಂದ್ರಗುತ್ತಿ ಮುಂತಾದೆಡೆಗಳಲ್ಲಿ ಸಂಗಮ ಸಹೋದರರೇ ಸ್ವತಃ ಆಡಳಿತ ಕೇಂದ್ರಗಳನ್ನು ಸ್ಥಾಪಿಸಿಕೊಂಡರು. ತದನಂತರ ಆರಗದಲ್ಲಿ ೧೫ನೆಯ ಶತಮಾನದ ಅಂತ್ಯದವರೆಗೆ ವಿಜಯನಗರದ ಅಧಿಕಾರಿಗಳು ಆರಗ ೧೮ ಕಂಪಣಗಳನ್ನು ಆಳಿದರು. ಇವರು ನಿಯೋಜಿತ ಅಧಿಕಾರಿಗಳಾಗಿದ್ದರು. ಇದು ವಂಶಪಾರಂಪರ‍್ಯವಾಗಿರಲಿಲ್ಲ. ಆದರೆ ೧೬ನೆಯ ಶತಮಾನದಿಂದ ಈ ಭಾಗವು ಕೆಳದಿ ರಾಜ್ಯದಡಿಯಲ್ಲಿ ಬಂದ ನಂತರ ಈ ಅಧಿಕಾರಿಗಳ ಆಳ್ವಿಕೆ ನಿಂತುಹೋಯಿತು. ಅಷ್ಟೇ ಅಲ್ಲ, ವಿಜಯನಗರದ ಪ್ರಸ್ತುತಿಯೇ ಪರೋಕ್ಷವಾಯಿತು. ನಾವು ಆರಗ ಪ್ರದೇಶದ ಸಂದರ್ಭದಲ್ಲಿ ಸಂಗಮಮ ಕಾಲವನ್ನು ಶಿಥಿಲ ಪ್ರಭುತ್ವ ಎಂಬುದಾಗಿ ವರ್ಣಿಸಿ ಕೆಳದಿ ಕಾಲವನ್ನು ಹೆಚ್ಚು ಕೇಂದ್ರೀಕೃತ ಎನ್ನಬೇಕೆ? ಇನ್ನು ಸ್ಥಾನಿಕ ಸ್ವಾಯತ್ತ ಘಟಕಗಳ ಸಂಬಂಧಿಸಿ ಹೇಳುವುದಾದರೆ, ನಾಡು, ಮಹಾನಾಡು, ಅಗ್ರಹಾರ, ದೇವಾಲಯ, ನಗರ ಇತ್ಯಾದಿಗಳು ವಿಜಯನಗರದ ನಂತರ ಕೂಡ ದಾನದತ್ತಿಗಳ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತವೆ. ವಿಜಯನಗರ ಕಾಲದಲ್ಲಿ ಅವುಗಳ ಕಾರ್ಯನಿರ್ವಹಣೆಯಲ್ಲಿ ಯಾವ ಮೂಲಭೂತ ಬದಲಾವಣೆಯಾದವು ಎಂಬುದು ಇದುವರೆಗೂ ತಿಳಿದುಬಂದಿಲ್ಲ. ಶಿವಮೊಗ್ಗದ ಮಲೆನಾಡಿನ ಭಾಗಗಳಲ್ಲಿ ಹೆಚ್ಚು ಅಗ್ರಹಾರಗಳ ನಿರ್ಮಾಣವಾಗಿದ್ದೇ ಕೆಳದಿ ಕಾಲದಲ್ಲಿ. ವಿಜಯನಗರ ರಾಜ್ಯ ವ್ಯವಸ್ಥೆಯಲ್ಲಿ ಬದಲಾವಣೆಗಳು ನಡೆದಿವೆ ಹಾಗೂ ಅವು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವೂ ಆಗಿರಬಹುದು. ಆದರೆ ಈ ಮೇಲಿನ ಚೌಕಟ್ಟು ಈ ಪ್ರದೇಶಕ್ಕೆ ಹೊಂದುವುದಿಲ್ಲ ಎಂಬುದಂತೂ ಸತ್ಯ.

ಇನ್ನು ಯಜಮಾನಿಕೆಯ ಪ್ರಭುತ್ವಕ್ಕೆ ಬಂದರೆ, ಈ ಚೌಕಟ್ಟು ಕರ್ನಾಟಕದ ಎಲ್ಲಾ ಮನೆತನಗಳಿಗೂ ಹೊಂದುವಂತಿದೆ. ಅಷ್ಟೇ ಏಕೆ, ಭಾರತದ ಎಲ್ಲಾ ರಾಜಮನೆತನಗಳಿಗೂ ಹೊಂದುತ್ತದೆ. ಆ ಕಾರಣಕ್ಕೆ ಭಾರತದ ಸಮಸ್ತ ಐತಿಹಾಸಿಕ ರಾಜ್ಯ ವ್ಯವಸ್ಥೆಯನ್ನು ಇದೊಂದೇ ಚೌಕಟ್ಟಿನಲ್ಲಿ ಇಡಬಹುದಾದರೆ ಇದೊಂದು ಚೌಕಟ್ಟೇ ಅಲ್ಲ ಎಂದೇ ಹೇಳಬೇಕಾಗುತ್ತದೆ. ಏಕೆಂದರೆ ಇದು ಏನನ್ನೂ ನಿರ್ದಿಷ್ಟಗೊಳಿಸುವುದಿಲ್ಲ. ಮ್ಯಾಕ್ಸ್ ವೆಬರ್ ಅವರು ಭಾರತೀಯ ರಾಜತ್ವವನ್ನು ಕುರಿತು ನೀಡಿದ ವರ್ಣನೆ ಇದಾಗಿದೆಯೇ ಹೊರತೂ ಸ್ಟೇಟ್ ಕುರಿತ ೨೦ನೆಯ ಶತಮಾನದ ಅಂತ್ಯಭಾಗದಲ್ಲಿ ಹುಟ್ಟಿದ ಚರ್ಚೆ ಇದಲ್ಲ. ಇದು ೨೧ನೆಯ ಶತಮಾನದಲ್ಲಿ ಏಕೆ ಗಮನ ಸೆಳೆಯಿತೆಂದರೆ ಸ್ಟೇಟ್ ಎಂಬ ಸರ್ವವ್ಯಾಪಿ, ಅವ್ಯಕ್ತ ವ್ಯವಸ್ಥೆಯ ರೂಪುರೇಷೆಗಳನ್ನು ರಾಜತ್ವದೊಳಗೆ ಹುಡುಕಿ ಗೊಂದಲಕ್ಕೆ ಬಿದ್ದಾಗ ಅಂಥ ಅವ್ಯಕ್ತ ವ್ಯವಸ್ಥೆ ಇಲ್ಲದೇ ಇದು ಹೇಗೆ ಚಾಲ್ತಿಯಲ್ಲಿರಬಹುದು ಎಂಬುದಕ್ಕೆ ಯಜಮಾನಿಕೆಯ ಪ್ರಭುತ್ವವು ಮಾದರಿಯನ್ನು ನೀಡುತ್ತದೆ. ಸ್ಟೈನ್ ಅವರಿಗೆ ಇದು ಆಕರ್ಷಕವೇಕಾಯಿತೆಂದರೆ ಇದು ಐತಿಹಾಸಿಕ ಬದಲಾವಣೆಯನ್ನು ವಿವರಿಸಲು ಸಹಕರಿಸುತ್ತದೆ.

ಸ್ಟೇಟ್ ಇಲ್ಲದೇ ಐತಿಹಾಸಿಕ ಬದಲಾವಣೆ ಸಾಧ್ಯವಿಲ್ಲ ಎಂಬ ದೃಢ ವಿಶ್ವಾಸವೇ ಈ ಸಮಸ್ಯೆಯನ್ನು ಸೃಷ್ಟಿಸಿದೆ. ಈ ವಿಶ್ವಾಸವು ಹೊರಡಿಸುವ ನಿರ್ಣಯದ ಒಂದು ಉದಾಹರಣೆ ಹೀಗಿದೆ: ವಿಜಯನಗರ ಕಾಲದಲ್ಲಿ ದೇವಾಲಯವೇ ಮುಂತಾದ ಸ್ವಾಯತ್ತ ಸಂಸ್ಥೆಗಳು, ಖಾಸಗಿ ವ್ಯಕ್ತಿಗಳು ನೀರಾವರಿ ವ್ಯವಸ್ಥೆಯನ್ನು ನಿರ್ಮಿಸಿ ನಿರ್ವಹಿಸಿಕೊಂಡು ಹೋದ ದೃಷ್ಟಾಂತಗಳಿವೆ. ಸ್ಟೈನ್ ಅವರು ಇದನ್ನು ಚರ್ಚೆಗೆ ಎತ್ತಿಕೊಳ್ಳುತ್ತಾರೆ. ವಿಜಯನಗರ ರಾಜ್ಯಕ್ಕೆ ನೀರಾವರಿ ಇಲಾಖೆಯಾಗಲೀ, ಅಧಿಕಾರಿಗಳಾಗಲೀ ಇರಲಿಲ್ಲ. ಆದರೆ ನೀರಾವರಿ ರಾಜ್ಯದ ಕಾಳಜಿಯಾಗಿರಲಿಲ್ಲ ಎನ್ನಲಾಗದು. ರಾಜ್ಯವು ಈ ಸಂಸ್ಥೆಗಳಿಗೆ ಬೇರೆ ಕಾರಣಗಳಿಗೆ ದಾನ ನೀಡುತ್ತಿತ್ತು. ಈ ರೀತಿ ಸ್ಟೇಟ್‌ನ ಕಾರ್ಯಕ್ರಮ ಪರೋಕ್ಷವಾಗಿ ಈಡೇರುತ್ತಿತ್ತು. ಇದು ಸ್ಟೈನ್ ಅವರು ತೀರ ಪ್ರಾರಂಭದಲ್ಲಿ ವಿಜಯನಗರಕ್ಕೆ ಅನ್ವಯಿಸಿದ ಪ್ರಗತಿವಾದಿಯಾದ ಆಧುನಿಕ ಸ್ಟೇಟ್‌ನ ಕಲ್ಪನೆ. ಹಾಗೂ ಸ್ಟೈನ್ ಅವರ ಸಮಸ್ಯೆ ಈ ರೀತಿ ಬಗೆಹರಿಯಿತು. ನಂತರ ಅದು ಸೆಗ್ಮೆಂಟರಿಯಾಗಿ ಸಮಸ್ಯೆ ಮತ್ತೊಂದು ರೀತಿ ಬಗೆಹರಿಯಿತು. ಅಂದರೆ ಒಂದು ಐಕ್ಯ ವ್ಯವಸ್ಥೆಯ ಗೈರು ಹಾಜರಿಯೇ ಇಲ್ಲಿ ಒಂದು ಪ್ರಕಾರದ ಸ್ಟೇಟ್ ಆಗುತ್ತದೆ. ಇಲ್ಲಿ ಈ ವ್ಯಾಖ್ಯಾನಗಳೇ ಸ್ಟೇಟ್ ಎಂಬ ಸಂಗತಿಯನ್ನು ಸೃಷ್ಟಿಸುತ್ತಿರುವುದನ್ನು ಗಮನಿಸದೇ ಇರಲಾರೆವು.

ಕರ್ತೃತ್ವದ ಮರುಗಳಿಕೆ: ವಸಾಹತೋತ್ತರ ಶೈಲಿ

ವಸಾಹತುಪೂರ್ವ ರಾಜತ್ವದ ಕುರಿತು ವಸಾಹತು ಇತಿಹಾಸವು ಕಟ್ಟಿಕೊಟ್ಟ ಅಭಿಪ್ರಾಯಗಳನ್ನು, ಮಂಡಿಸಿದ ವಾದಗಳನ್ನು ವಿಮರ್ಶಾತ್ಮಕವಾಗಿ ನೋಡುವ ಸಾಹಿತ್ಯವೂ ಸಾಕಷ್ಟು ಸೃಷ್ಟಿಯಾಗಿದೆ. ಐರೋಗ್ಯ ಕೇಂದ್ರಿತ ವಿಚಾರಗಳು, ಭಾರತೀಯರ ಕುರಿತ ಪೂರ್ವಗ್ರಹಗಳು, ವಸಾಹತು ಕಾಲದ ಅಧಿಕಾರಶಕ್ತಿ ಮತ್ತು ಜ್ಞಾನದ ಸಂಬಂಧ ಇತ್ಯಾದಿಗಳ ಬೆಳಕಿನಲ್ಲಿ ನಾವು ಸತ್ಯವೆಂದು ನಂಬಿಕೊಂಡ ವಿಚಾರಗಳನ್ನು ಪುನರಾವಲೋಕನೆ ನಡೆಸುವುದು ಈ ಬರಹಗಳ ಕಾರ್ಯಕ್ರಮವಾಗಿದೆ. ಭಾರತೀಯ ಇತಿಹಾಸವು ಬದಲಾವಣೆಯನ್ನು ಕಾಣದೇ ಸಾವಿರಾರು ವರ್ಷ ಒಂದೇ ರೀತಿ ಇದೆ ಎಂಬ ಕಲ್ಪನೆ ಪೌರ್ವಾತ್ಯ ನಿರಂಕುಶ ಪ್ರಭುತ್ವ, ಏಶಿಯಾದ ಉತ್ಪಾದನಾ ವಿಧಾನ ಮುಂತಾದ ಗ್ರಹಿಕೆಗಳ ರೂಪದಲ್ಲಿ ವಸಾಹತುಕಾಲದಲ್ಲಿ ಪ್ರಚಲಿತಗೊಂಡಿದೆ. ಇವು ನೇರವಾಗಿ ಭಾರತೀಯ ರಾಜ್ಯದ ಕುರಿತ ಟೀಕೆಗಳೇ ಆದವು. ಸ್ಟೇಟ್ ಎಂಬುದು ಐತಿಹಾಸಿಕ ಬದಲಾವಣೆಯ ಕರ್ತಾರನಾಗಿದ್ದು, ಅದರ ಭಾರತೀಯ ಪ್ರತಿರೂಪ ರಾಜತ್ವವಾಗಿದ್ದಲ್ಲಿ ಇಲ್ಲಿ ಇತಿಹಾಸ ಇಂತ ನೀರಾಗಲಿಕ್ಕೆ ರಾಜತ್ವದ ಕ್ಲೈಬ್ಯತೆಯೇ ಕಾರಣವಾಗಿದೆ. ಈ ರಾಜತ್ವವನ್ನು ಸಾಮಾಜಿಕ ಪದ್ಧತಿಯಾದ ಜಾತಿವ್ಯವಸ್ಥೆ ನಿಯಂತ್ರಿಸಿತ್ತು ಹಾಗಾಗಿ ಜಾತಿವ್ಯವಸ್ಥೆಯನ್ನು ರೂಪಿಸಿ ಪೋಷಿಸುತ್ತಿರುವ ಬ್ರಾಹ್ಮಣರು ರಾಜನನ್ನು ನಿಯಂತ್ರಿಸುತ್ತಾರೆ. ಅವರು ಅವನನ್ನು ನಿಯಂತ್ರಿಸುವ ವಿಧಾನವೇ ಮೂಢ ಆಚಾರಗಳು ಹಾಗೂ ವಿಧಿಗಳು. ರಾಜರಿಗೆ ಸಮಾಜದ ಮೇಲೆ ಹತೋಟಿಯೇ ಇಲ್ಲ.. ಈ ರೀತಿ ವಸಾಹತು ಇತಿಹಾಸವು ಭಾರತೀಯ ರಾಜತ್ವಕ್ಕೆ ಕರ್ತೃತ್ವ ಶಕ್ತಿಯೇ ಇಲ್ಲ ಎಂಬಂತೆ ನೋಡುತ್ತದೆ. ಈ ಧೋರಣೆ ನಂತರವೂ ಮುಂದುವರಿಯಿತು. ಉದಾಹರಣೆಗೆ ಎಡಪಂಥೀಯರು ಈ ರಾಜತ್ವವನ್ನು ಫ್ಯೂಡಲ್ ಎಂಬುದಾಗಿ ವರ್ಣಿಸಿ ಹೇಗೆ ಅಗ್ರಹಾರ, ದೇವಾಲಯ ಮುಂತಾದವು ಈ ರಾಜತ್ವಕ್ಕೆ ಅನಿವಾರ್ಯವಾಗಿದ್ದವು, ಭೌತಿಕ ಶಕ್ತಿಯನ್ನೇ ಹೊಂದದ ಈ ರಾಜನಿಗೆ ಮೇಲಿನವರ ರಕ್ಷಣೆ, ವಿಧಿಕರ್ಮಗಳಿಂದ ಮಾನ್ಯತೆ ಅಗತ್ಯವಿದ್ದವು ಎಂಬುದಾಗಿ ಭಾವಿಸುತ್ತಾರೆ. ಇದು ಭಾರತೀಯ ರಾಜತ್ವವನ್ನು ರೋಗಿಷ್ಠ ಎಂಬಂತೆ, ವಿಕೃತ ಎಂಬಂತೆ ಚಿತ್ರಿಸುತ್ತದೆ. ವಸಾಹತು ಸ್ಟೇಟಿಗೆ ಇದರಿಂದಾಗಿ ಭಾರತದಲ್ಲಿ ಪ್ರಸ್ತುತತೆ ಒದಗುತ್ತದೆ. ಆಧುನಿಕ ಇತಿಹಾಸವು ಭಾರತೀಯ ರಾಜತ್ವಕ್ಕೆ ಅದರ ಪಾಲಿನ ಕರ್ತೃತ್ವವನ್ನು ನಿರಾಕರಿಸಿ ವಂಚಿಸುತ್ತದೆ. ಇದು ವಸಾಹತೋತ್ತರ ವಾದಿಗಳ ನಿಲುವು.

ದಕ್ಷಿಣ ಭಾರತದ ಸಂದರ್ಭದಲ್ಲಿ ಇಂಥ ವಾದಗಳನ್ನು ಮುಂದಿಟ್ಟವರಲ್ಲಿ ನಿಕೋಲಸ್ ಡರ್ಕ್ಸ್ ಮತ್ತು ರೊನಾಲ್ಡ್ ಇಂಡೆಂನ್ ಪ್ರಮುಖರು. ಡರ್ಕ್ಸ್ ಅವರು ತಮ್ಮ ದಿ ಹ್ಯಾಲೋ ಕ್ರೌನ್ ಎನ್ನುವ ಕೃತಿಯಲ್ಲಿ ಹಾಗು ಇತರ ಕೆಲ ಲೇಖನಗಳಲ್ಲಿ ದಕ್ಷಿಣ ಭಾರತದಲ್ಲಿ ರಾಜತ್ವವು ಹೇಗೆ ಈ ಸಾಮಾಜಿಕ ಕರ್ತೃತ್ವವನ್ನು ಹೊಂದಿತ್ತು ಎಂಬುದನ್ನು ನಿದರ್ಶಿಶಲು ಪ್ರಯತ್ನಿಸುತ್ತಾರೆ. ಅವರ ಪ್ರಕಾರ ಈ ರಾಜರು ಜಾತಿಪದ್ಧತಿ ಹಾಗೂ ವಿಧಿಕರ್ಮಗಳ ಕೈಗೊಂಬೆಗಳಾಗಿರಲಿಲ್ಲ. ಬದಲಾಗಿ ತೀರ ಕೆಳಜಾತಿಗಳಿಂದ ಬಂದ ಪಾಳೆಯಗಾರರು ತಮ್ಮ ರಾಜ್ಯದ ಸಂದರ್ಭದಲ್ಲಿ ಜಾತಿಗಳಿಗೆ ಚಲನೆಯನ್ನು ನೀಡುತ್ತಾರೆ ಹಾಗೂ ಅವುಗಳ ಹೊಸ ನಿರೂಪಣೆಯನ್ನು ಸಾಧಿಸುತ್ತಾರೆ. ಜಾತಿ ಸಮಾಜ ಎನ್ನುವುದು ಈ ರೀತಿ ಪ್ರಭುತ್ವದ ನಿರೂಪಣೆಗೆ ಒಳಗಾಗಿ ಬೆಳೆದುಕೊಂಡು ಬಂದ ಸಮಾಜವಾಗಿದೆ ಹಾಗೂ ಪ್ರಭುತ್ವ ಹೇಗೆ ತನ್ನನ್ನು ನಿರ್ಣಾಯಕ ಶಕ್ತಿಯನ್ನಾಗಿ ಸ್ಥಾಪಿಸಿಕೊಳ್ಳಲು ಅಸ್ತಿತ್ವದಲ್ಲಿರುವ ಸಾಂಸ್ಕೃತಿಕ ಅಂಶಗಳನ್ನು, ವಿಧಿಗಳನ್ನು ಬಳಸಿಕೊಳ್ಳುತ್ತದೆ ಎಂಬುದು ಅವರ ವಾದವಾಗಿದೆ. ಇದೇ ವಾದವನ್ನೇ ಇಂಡೆನ್ ಅವರು ರಾಷ್ಟ್ರಕೂಟರ ಸಂದರ್ಭದಲ್ಲಿ ತಮ್ಮ ಇಮೇಜಿನಿಂಗ್ ಇಂಡಿಯಾದಲ್ಲಿ ಮಾಡುತ್ತಾರೆ. ಇಂಡೆನ್ ಅವರು ಕರ್ನಾಟಕ ಪ್ರದೇಶದ ಐತಿಹಾಸಿಕ ವಿವರಗಳನ್ನು ತಮ್ಮ ವಾದ ವಿವರಣೆಗೆ ಬಳಸಿಕೊಳ್ಳುವುದರಿಂದ ಅವರ ವಾದದ ಬಗ್ಗೆ ಚರ್ಚಿಸಬಹುದಾಗಿದೆ. ಮೊದಲನೆಯದಾಗಿ ಇಂಡೆನ್ ಅವರು ವಸಾಹತು ಕಾಲದಲ್ಲಿ ಪ್ರಚಲಿತದಲ್ಲಿ ಬಂದ ಭಾರತೀಯ ರಾಜತ್ವದ ಕುರಿತ ವಿಚಾರಗಳು ಭಾರತದ ಕುರಿತ ಐರೋಪ್ಯ ಪೂರ್ವಾಗ್ರಹಗಳಾಗಿವೆ ಎನ್ನುತ್ತಾರೆ. ಇವು ಭಾರತೀಯ ರಾಜತ್ವಕ್ಕೆ ನೀಡಬೇಕಾದ ಕರ್ತೃತ್ವವನ್ನು ನಿರಾಕರಿಸಿವೆ. ಅವರ ಪ್ರಕಾರ ಪಶ್ಚಿಮದ ಸ್ಟೇಟ್‌ಗಳು ಆಧುನಿಕ ರಾಜಕೀಯ, ಆರ್ಥಿಕ ಆದರ್ಶಗಳನ್ನು ಮೈಗೂಡಿಸಿಕೊಂಡ ವ್ಯವಸ್ಥೆಗಳಾಗಿವೆ. ಪಾಶ್ಚಾತ್ಯರ ಸ್ಟೇಟ್ ಕಲ್ಪನೆ ಒಂದು ಆದರ್ಶಪೂರ್ಣವಾದ ಸ್ವಕೇಂದ್ರಿತ, ಐಕ್ಯ, ಏಕರೂಪಿ ಹಾಗೂ ನಿರಂತರವಾದ ಸಂಗತಿಯಾಗಿದ್ದು ಪ್ರಾಯೋಗಿಕವಾಗಿ ಅಪೂರ್ಣವಾಗಿ ಮಾತ್ರ ಸಾಧ್ಯವಾಗುವಂಥದ್ದಾಗಿತ್ತು. ಭಾರತದಲ್ಲಿ ಈ ಸ್ಟೇಟ್ ಜಾತಿ-ಸಮಾಜ ಹಾಗೂ ಸಂಪ್ರದಾಯಕ್ಕೆ ಬಲಿಯಾಗಿ ಒಂದು ದುರ್ಬಲ ವ್ಯವಸ್ಥೆಯಾಗಿದೆ. ಈ ಕಾರಣದಿಂದ ರಾಜತ್ವ ಒಂದೆಡೆ ಹಾಗೂ ಸ್ವಾಯತ್ತ ಖಾಸಗಿ ಆಳುವ ಘಟಕಗಳು ಮತ್ತೊಂದೆಡೆ ಪರಸ್ಪರ ಸಂಬಂಧವೇ ಇಲ್ಲದಂತೆ ಅಸ್ತಿತ್ವದಲ್ಲಿ ಇದ್ದವು. ರಾಜನು ತನ್ನ ವೈಯಕ್ತಿಕ ಸಂಕಲ್ಪದಿಂದ ಹಾಗೂ ಸಾಮರ್ಥ್ಯದಿಂದ ಈ ಆಳುವ ವ್ಯವಸ್ಥೆಗಳನ್ನು ಆಳ್ವಿಕೆಗೆ ಒಳಪಡಿಸಬೇಕಾಗಿತ್ತೇ ಹೊರತೂ ರಾಜನನ್ನು ಹಾಗೂ ಪ್ರಜೆಗಳನ್ನು ಐಕ್ಯಗೊಳಿಸುವ ಒಂದು ಅವ್ಯಕ್ತ ಆದರ್ಶ ಈ ಆಳ್ವಿಕೆಗೆ ಇರಲಿಲ್ಲ. ಹಾಗಾಗಿ ರಾಜನು ಈ ಬದಲಾವಣೆಯಿಲ್ಲದ, ಅಥವಾ ರಾಜತ್ವಕ್ಕೆ ಹೊರತಾಗಿ ವಿಕಾಸಶೀಲವಾಗಿದ್ದ ಈ ಸಂಪ್ರದಾಯಗಳನ್ನು ನಿಷ್ಪಕ್ಷಪಾತಿಯಾಗಿ ಪಾಲಿಸುವ ಪಾತ್ರವನ್ನು ಮಾತ್ರ ವಹಿಸಿದ್ದರು. ಈ ರೀತಿಯ ಗ್ರಹಿಕೆಗೆ ಕಾರಣವೆಂದರೆ ಸ್ಟೇಟ್ ಕುರಿತ ಪಾಶ್ಚಾತ್ಯರ ಕಲ್ಪನೆಯು ಅವರು ಕರ್ತೃತ್ವದ ಕುರಿತು ಬೆಳೆಸಿಕೊಂಡಿದ್ದ ವ್ಯಾಖ್ಯಾನಗಳಿಂದ ನಿರ್ಬಂಧಿತವಾಗಿತ್ತು. ಅವರ ವ್ಯಾಖ್ಯಾನಕ್ಕೆ ಭಾರತೀಯ ರಾಜತ್ವವು ಅವೈಚಾರಿಕವಾಗಿ, ಅಸಂಗತವಾಗಿ ತೋರಿತ್ತು.

ಇಂಡೆನ್ ಅವರು ಈ ಪಾಶ್ಚಾತ್ಯ ಕಲ್ಪನೆಯ ಮಿತಿಗಳಿಂದ ಸ್ಟೇಟ್ ಮತ್ತು ಕರ್ತೃತ್ವವನ್ನು ಹೊರತೆಗೆದು ಹೇಗೆ ಭಾರತದಲ್ಲೂ ಇವು ಪ್ರವೃತ್ತವಾಗಿದ್ದವು ಎಂಬುದನ್ನು ನಿದರ್ಶಿಸಲು ಪ್ರಯತ್ನಿಸುತ್ತಾರೆ. ಭಾರತದಲ್ಲಿ ಪಾಶ್ಚಾತ್ಯ ವ್ಯಕ್ತಿವಾದೀ ಕಲ್ಪನೆಗೆ ಸ್ಥಾನವಿಲ್ಲದಿದ್ದರೂ ಬೇರೆ ಬೇರೆ ಆಳುವ ಘಟಕಗಳು ಸಂಕೀರ್ಣ ಮಾನವ ಕರ್ತೃತ್ವವನ್ನು ರಚಿಸಿದ್ದವು. ಇದನ್ನಾಧರಿಸಿದ ರಾಜಕೀಯವನ್ನು ಸಾಮ್ರಾಜ್ಯ ನಿರ್ಮಾಣ (Imperial Formation) ಎಂದು ಇಂಡೆನ್ ಹೆಸರಿಸುತ್ತಾರೆ.

ಇದು ಪಶ್ಚಿಮದ ಯಾವ ರಾಜಕೀಯವನ್ನೂ ಹೋಲುತ್ತಿರಲಿಲ್ಲ. ಈ ನಿರ್ಮಾಣವು ಅನೇಕ ರಾಜ್ಯಗಳನ್ನು ಒಳಗೊಂಡ ಒಂದು ಸಾಮ್ರಾಜ್ಯದ ರೂಪದಲ್ಲಿ ಅಸ್ತಿತ್ವಕ್ಕೆ ಬರುತ್ತಿತ್ತು. ಅದು ಒಂದರಮೇಲೊಂದು ಸೇರಿಕೊಂಡ ರಾಜಕೀಯ ಹಾಗೂ ರಾಜತ್ವಗಳ ಶ್ರೇಣಿಯಾಗಿತ್ತು. ಆದರೆ ಇದು ಜಡವಾದ ಶ್ರೇಣೀಕರಣವಾಗಿರಲಿಲ್ಲ. ಸಾಮ್ರಾಜ್ಯ ಪ್ರಭುತ್ವಗಳು ಈ ರಾಜ್ಯಗಳ ಜೊತೆಗಿನ ಪೈಪೋಟಿಯಲ್ಲಿ ಉಚ್ಛ ಶ್ರೇಣಿಯಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದವು. ಇದು ಕ್ರಿಯಾಶೀಲವಾಗಿ, ಚಕ್ರವರ್ತಿತ್ವ, ರಾಜತ್ವ ಹಾಗೂ ಆಳುವ ಘಟಕಗಳ ನಡುವಿನ ಸಂವಾದದ ಸ್ವರೂಪದಲ್ಲಿ ಇತ್ತು. ಈ ಪ್ರಭುತ್ವಗಳು ಐರೋಪ್ಯ ಸ್ಟೇಟ್‌ಗಳಂತೆ ಯುಟೋಪಿಯನ್ ಆಗಿರಲಿಲ್ಲ. ಅವು ತಮ್ಮ ರಾಜಕೀಯವ ಲೌಕಿಕ ಮಿತಿಗಳನ್ನು ಮೀರುವಂಥದ್ದು ಎಂದು ಭಾವಿಸಿರಲಿಲ್ಲ. ಬದಲಾಗಿ ಅದರ ಪ್ರಯೋಗದಲ್ಲೇ ಅಸ್ತಿತ್ವದಲ್ಲಿ ಇರುವಂಥದ್ದು ಎಂಬುದಾಗಿ ಭಾವಿಸಿದ್ದವು. ಅದು ಲೌಕಿಕ ಅಪೂರ್ಣತೆ, ಅಜ್ಞಾನ, ಕೆಡುಕುಗಳನ್ನು ಒಳಗೊಂಡಿದ್ದು ಎಂದು ಭಾವಿಸಿದ್ದರು… ಹಾಗಾಗಿ ಚಕ್ರವರ್ತಿತ್ವವು ಒಂದು ಸಮಸ್ಯಾತ್ಮಕ ವಾದ ಅವಸ್ಥೆಯಂಬುದನ್ನು ಒಪ್ಪಿಕೊಂಡಿದ್ದರು. ಚಕ್ರವರ್ತಿತ್ವವನ್ನು ಉಳಿಸಿಕೊಳ್ಳಲು ರಾಜನೀತಿಯಲ್ಲಿ ನಿಷ್ಣಾತತೆಯನ್ನು ಹೊಂದುವುದೇ ಮಾರ್ಗ ಎಂದುಕೊಂಡಿದ್ದರು. ಹಾಗಾಗಿ ವಿಗ್ರಹದ ಜೊತೆಗೆ ಸಂಧಿಯನ್ನು ಅವಶ್ಯಕ ಎಂದು ಒಪ್ಪಿಕೊಂಡಿದ್ದರು. ಕೆಳಗಿನ ದೇವತೆಗಳನ್ನು ದೇವತೆಗಳೆಂದು ಒಪ್ಪಿಕೊಂಡಿದ್ದರು. ಕೆಳಗಿನ ದೇವತೆಗಳನ್ನು ದೇವತೆಗಳೆಂದು ಒಪ್ಪಿಕೊಂಡಿದ್ದರು ಹಾಗೂ ಕೆಳಗಿನ ರಾಜರನ್ನು ರಾಜರೆಂದು ಒಪ್ಪಿಕೊಂಡಿದ್ದರು. ಈ ಕಾರಣದಿಂದಲೇ ಅವರು ತಮ್ಮ ರಾಜತ್ವದಲ್ಲಿ ಒಂದು ಏಕ ದೈವ ಕಲ್ಪನೆಯಿಂದ ರೂಪಿಸಿದ ಪರಿಪೂರ್ಣ ಸಂಕಲ್ಪಕ್ಕೆ ಅವಕಾಶ ನೀಡಲಿಲ್ಲ. ಬದಲಾಗಿ ಚಕ್ರವರ್ತಿತ್ವವನ್ನು ವಿಭಿನ್ನ ರಂಗಗಳಲ್ಲಿ ಉತ್ಪಾದಿಸಿ ಪ್ರದರ್ಶಿಸುವುದರಲ್ಲಿ ನಿರತರಾಗಿದ್ದರು. ರಾಜತ್ವಕ್ಕೆ ಸಂಬಂಧಿಸಿದ ಅಸಂಖ್ಯ ವಿಧಿ ವಿಧಾನಗಳನ್ನು, ಉತ್ಸವಗಳನ್ನು, ಸಂಪ್ರದಾಯದ ಪೋಷಣೆಯನ್ನು ಈ ನಿಟ್ಟಿನಿಂದ ನೋಡಬೇಕು

ಎಂಬುದು ಇಂಡೆನ್ ಅವರ ವಾದವಾಗಿದೆ. ಅವರು ರಾಷ್ಟ್ರಕೂಟ ಪ್ರಭುತ್ವದ ಸಂದರ್ಭದಲ್ಲಿ ಈ ವಿಚಾರಗಳನ್ನು ವಿಶ್ಲೇಷಿಸಿ ಈ ನಿರ್ಣಯಕ್ಕೆ ಬರುತ್ತಾರೆ.

ಇಂಡೆನ್ ಅವರ ವಾದದ ಹಿಂದೆ ವಸಾಹತೋತ್ತರ ವಾದದ ಮಿತಿಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಬಾಲಗಂಗಾಧರ ಅವರು ತೋರಿಸುತ್ತಾರೆ. ಮೊದಲನೆಯದಾಗಿ, ಪಾಶ್ಚಾತ್ಯ ಚಿಂತನೆಯ ಮಿತಿಗಳನ್ನು ಮೀರಲು ಬಯಸಿದ ಇಂಡೆನ್ ಅವರು ಯಾವ ಪರ್ಯಾಯಗಳನ್ನು ಕಲ್ಪಿಸುತ್ತಾರೋ ಅವು ಕೂಡ ಪಾಶ್ಚಾತ್ಯ ಚಿಂತಕರನ್ನೇ ಆಧರಿಸಿವೆಯಷ್ಟೇ ಅಲ್ಲ, ಪಾಶ್ಚಾತ್ಯ ಚಿಂತನೆಯ ಅವೇ ಮಿತಿಗಳನ್ನೇ ಪ್ರದರ್ಶಿಸುತ್ತವೆ. ಯಾವ ಪಾಶ್ಚಾತ್ಯ ಚಿಂತನೆಯ ಮಿತಿಯಿಂದ ಮಾನವ ಕರ್ತೃತ್ವದ ಕಲ್ಪನೆ ಭಾರತದಲ್ಲಿ ಕಾಣದಂತಾಗಿದೆಯೋ ಅದನ್ನು ಕಾಣಲು ಮತ್ತೆ ಪಾಶ್ಚಾತ್ಯ ಚಿಂತಕರೇ ಪ್ರಮಾಣವಾಗಬೇಕೆ? ಅವರೇ ಪ್ರಮಾಣವಾಗಬೇಕೆಂದರೆ ಇಂಡೆನ್ ಅವರು ಉಲ್ಲೇಖಿಸುವ ಕಾಲಿಂಗ್ ವುಡ್, ಗ್ರಾಂಸಿ ಅವರೇ ಏಕಾಗಬೇಕು? ಪಾಶ್ಚಾತ್ಯರು ಪೂರ್ವದ ಕುರಿತು ಸೃಜಿಸಿದ ಜ್ಞಾನದ ಮಿತಿಗಳನ್ನು ಮೀರುವ ಹೆಸರಿನಲ್ಲಿ ಅವೇ ಮಿತಿಗಳೇ ವಸಾಹತೋತ್ತರವಾದಿಗಳಿಂದ ಪುನರುತ್ಪಾದನೆಯಾಗುತ್ತಿವೆ ಎಂಬ ವಿಷಯದ ಕುರಿತು ಬಾಲಗಂಗಾಧರ ಅವರು ನಮ್ಮ ಗಮನ ಸೆಳೆಯುತ್ತಾರೆ. ಮೂಲತಃ ಭಾರತೀಯ ಸಮಾಜವು ಸಂಪ್ರದಾಯ ಸಮಾಜವಾಗಿದೆ. ಇದು ರಿಲಿಜಿಯಸ್ ಸಮಾಜವಾಗಿಲ್ಲ. ಪಾಶ್ಚಾತ್ಯ ಸಂಸ್ಕೃತಿ ಕ್ರಿಶ್ಚಿಯನ್ ರಿಲಿಜನ್ನಿನ ಕುರಿತ ಥಿಯಾಲಜಿಯ ಲೋಕದೃಷ್ಟಿಯಿಂದ ರೂಪುಗೊಂಡಿದೆ. ಇದರಿಂದ ರೂಪುಗೊಂಡ ಪಾಶ್ಚಾತ್ಯ ಚಿಂತನೆಗಳು ಬೆಳೆಸಿದ ಪರಿಭಾಷೆಗಳು ಹಾಗೂ ಪರಿಕಲ್ಪನೆಗಳು ಭಾರತದಲ್ಲಿ ಇರುವುದು ಸಾಧ್ಯವಿಲ್ಲ. ಅವುಗಳನ್ನು ಭಾರತದಲ್ಲಿ ಕಾಣದೇ ಹೋದುದರಿಂದಲೇ ಪಾಶ್ಚಾತ್ಯ ಚಿಂತಕರು ಭಾರತೀಯ ಸಂಸ್ಕೃತಿಯಲ್ಲಿ ಏನೋ ಐಬಿದೆ ಎಂದು ತರ್ಕಿಸಿದರು. ಈ ಲೋಕದೃಷ್ಟಿಯಿಂದ ಭಾರತವನ್ನು ನೋಡುತ್ತಿರುವವರೆಗೂ ಅದರ ಕುರಿತು ಎಷ್ಟು ಅನುಕಂಪವಿದ್ದರೂ ಭಾರತದ ಐಬಿಗೆ ಸಮಜಾಯಿಷಿ ನೀಡುತ್ತಲೇ ಇರಬೇಕಾಗುತ್ತದೆ. ಇಂಡೆನ್ ಮಾತ್ರ ಆ ಕೆಲಸವನ್ನು ಮಾಡುತ್ತಿಲ್ಲ, ವಸಾಹತೋತ್ತರವಾದವೇ ಇದರಲ್ಲಿ ತೊಡಗಿದೆ.

ಉಪಸಂಹಾರ

ಭಾರತೀಯ ರಾಜ್ಯ ವ್ಯವಸ್ಥೆಯ ಕುರಿತ ಚರ್ಚೆಗಳು ಹೇಗೆ ಸ್ಟೇಟ್ ಎಂಬ ಪರಿಕಲ್ಪನೆಯ ಜಾಲದಲ್ಲಿ ಸಿಲುಕಿಕೊಂಡಿವೆ ಹಾಗೂ ಆ ಮೂಲಕ ಪಾಶ್ಚಾತ್ಯ ಮಾದರಿಗಳನ್ನು ತಂದು ಇಲ್ಲಿ ಪೇರಿಸಿವೆ ಎಂಬುದನ್ನು ಇದುವರೆಗೆ ಗಮನಿಸಲಾಗಿದೆ. ಹೀಗೆ ಇಷ್ಟೊಂದು ಪ್ರಯತ್ನಗಳು, ವಾದಗಳು ಬಂದರೂ ಇವುಗಳ ಹಿಂದೆ ಪಾಶ್ಚಾತ್ಯರು ಸ್ಟೇಟ್ ಕುರಿತು ನಡೆಸಿದ ಕೆಲ ನಿರ್ದಿಷ್ಟ ಜಿಜ್ಞಾಸೆಗಳೇ ಮಾನದಂಡವಾಗಿ ಇರುವುದು ಕಂಡುಬರುತ್ತದೆ. ಅದೆಂದರೆ, ಸ್ಟೇಟ್ ಎನ್ನುವುದು ಈ ಲೌಕಿಕ ಆಡಳಿತ ವ್ಯವಸ್ಥೆಯ ಅಂತರ್ಗತವಾಗಿ ಅದನ್ನು ನಿರ್ದೇಶಿಸುವ, ಹಾಗೂ ನಿಯಂತ್ರಿಸುವ ಒಂದು ಐಕ್ಯ ಸಾರ್ವಭೌಮ ಅಧಿಕಾರ ವ್ಯವಸ್ಥೆ. ಇದೊಂದು ಅವ್ಯಕ್ತ ಆದರ್ಶ. ಇದು ತನ್ನ ಆಳ್ವಿಕೆಗೊಳಪಟ್ಟ ಪ್ರಜಾಸಮೂಹವನ್ನು ಹೊಂದಿರುತ್ತದೆ. ಹಾಗಾಗಿ ಪ್ರಜೆಗಳೆಂದರೆ ಈ ಅಧಿಕಾರಕ್ಕೆ ಒಳಪಟ್ಟವರು. ಅಧಿಕಾರಕ್ಕೆ ಒಳಪಡುವುದು ಅತ್ಯವಶ್ಯಕವಾದ್ದರಿಂದ ಆ ಪ್ರಜೆಗಳು ಯಾವ ಸ್ಟೇಟಿಗೆ ಸೇರಿದ್ದಾರೆ ಎಂಬುದನ್ನು ನಿಶ್ಚಿತವಾಗಿ ಗುರುತಿಸಲು ಒಂದು ಗಡಿರೇಖೆ ಇರಬೇಕಾಗುತ್ತದೆ. ಈ ರೀತಿ ಪ್ರಜೆಗಳು, ಗಡಿ, ಆಡಳಿತ ಮತ್ತು ಸಾರ್ವಭೌಮತ್ವ ಇವು ಸ್ಟೇಟನ್ನು ರಚಿಸುವ ಅಂಗಗಳು. ಆದರೆ ಈ ಅಂಶಗಳು ಅನ್ಯ ಸಂಸ್ಕೃತಿಗಳಲ್ಲಿ ಸಂಪೂರ್ಣವಾಗಿ ಕಂಡುಬರದಿದ್ದರೆ ಆಗ ಆ ಸ್ಟೇಟಿನ ರಚನೆ ಯಾವ ಸ್ವರೂಪದ್ದು ಎಂಬ ಕುರಿತು ಚರ್ಚೆ ಹುಟ್ಟಿಕೊಳ್ಳುತ್ತದೆ. ಈಗಾಗಲೇ ವಿದ್ವಾಂಸರು ಗಮನಿಸಿದಂತೆ ಸ್ಟೇಟ್ ವ್ಯವಸ್ಥೆ ಭಾವಿಸುವ ಸ್ವರೂಪದ ಸಾರ್ವಭೌಮತ್ವವಾಗಲೀ, ಗಡಿರೇಖೆಯಾಗಲೀ ಭಾರತದಲ್ಲಿ ಇರಲಿಲ್ಲ. ಇವೆರಡೂ ಇರಲಿಲ್ಲ ಎಂದ ಮೇಲೆ ರಾಜನ ಅಧಿಕಾರದ ಸ್ವರೂಪವಾಗಲೀ, ಪ್ರಜೆಯ ಸ್ವರೂಪವಾಗಲೀ ಐರೋಪ್ಯ ಕಲ್ಪನೆಗೆ ಹೊಂದಲು ಕಾರಣವಿಲ್ಲ. ಇದು ಹೊಂದಿದ್ದ ಮೇಲೆ ಅದನ್ನೇ ಆಧರಿಸಿ ಇದ್ದ ಐಕ್ಯ, ಅವ್ಯಕ್ತ ಶಕ್ತಿಯಾದ ಸ್ಟೇಟ್‌ಗೆ ಭೌತಿಕ ಆಧಾರವೇ ಇಲ್ಲದಂತಾಗುತ್ತದೆ.

ಈ ವಿಪರ್ಯಾಸವನ್ನು ಎದುರಿಸಿದ ವಸಾಹತು ಚಿಂತಕರಿಗೆ ಈ ಪರಿಸ್ಥಿತಿಗೆ ತನ್ನದೇ ಆದ ಒಂದು ವಿವರಣೆಯೂ ಇತ್ತೆನ್ನಬಹುದು. ಸ್ಟೇಟ್ ಒಂದು ಆದರ್ಶವಾಗಿದ್ದು ಅದನ್ನು ಅರಿತು ಆಚರಣೆಯಲ್ಲಿ ತರುವ ಮಾನವನ ನಿರಂತರ ಪ್ರಯತ್ನವನ್ನು ನಾವು ಅದರ ಇತಿಹಾಸದಲ್ಲಿ ನೋಡುತ್ತೇವೆ. ಒಮ್ಮೆ ಇಡೀ ಮನುಕುಲದ ಇತಿಹಾಸವೇ ಏಕೈಕ ಗುರಿಯತ್ತ ಸಾಗುವ ಪ್ರಯಾಣ ಎಂಬ ಕಲ್ಪನೆಯನ್ನು ಇಟ್ಟುಕೊಂಡಾಗ, ಆಧುನಿಕ ಐರೋಪ್ಯರ ಸ್ಟೇಟ್ ಅತ್ಯುತ್ಕೃಷ್ಟ ಆವೃತ್ತಿ ಎಂಬುದಾಗಿ ಒಪ್ಪಿಕೊಂಡಾಗ ಉಳಿದ ಮಾದರಿಗಳೆಲ್ಲ ಅಪೂರ್ಣವಾಗಿ, ವಿಕಾಸದ ಕೆಳಹಂತದಲ್ಲಿರುವವು ಎಂಬ ದೃಷ್ಟಿಕೋನ ಹುಟ್ಟಿಕೊಳ್ಳುತ್ತದೆ. ಹಾಗಾಗಿ ಇತಿಹಾಸದಲ್ಲಿನ ಒಂದು ಘಟ್ಟದಲ್ಲಿ ನಮಗೆ ಕಂಡುಬರುವ ಆಡಳಿತ ವ್ಯವಸ್ಥೆಯ ಹಿಂದೆ ಅದಕ್ಕೆ ಆಧಾರವಾದ ಸ್ಟೇಟ್ ಯಾವ ಸ್ವರೂಪದಲ್ಲಿದೆ ಎಂದು ತಿಳಿದುಕೊಳ್ಳುವುದು ಈ ಸಂಸ್ಥೆಯ ವಿಕಾಸವನ್ನು ತಿಳಿಯಲು ತೀರಾ ಮೂಲಭೂತವಾಗಿ ಅಗತ್ಯವಾಗಿದೆ.

ಸ್ವಾತಂತ್ರ‍್ಯೋತರ ಭಾರತದ ಇತಿಹಾಸ ಲೇಖನದಲ್ಲಿ ಅದುವರೆಗೆ ವಸಾಹತುಪೂರ್ವ ರಾಜ್ಯ ಪದ್ಧತಿಯ ಕುರಿತು ಇರುವ ಕಲ್ಪನೆಗಳಿಗೆ ಪರ್ಯಾಯವನ್ನು ಹುಡುಕುವ ಪ್ರಯತ್ನ ಸತತವಾಗಿ ನಡೆದರೂ ಅವು ಅದರಿಂದ ಹೊರಬರುವುದರಲ್ಲಿ ವಿಫಲವಾಗುತ್ತವೆ. ಇದಕ್ಕೆ ಕಾರಣವೆಂದರೆ ಈ ಎಲ್ಲ ಪ್ರಯತ್ನಗಳೂ ತಾವು ಯಾವುದರಿಂದ ಬಿಡುಗಡೆ ಪಡೆಯಬೇಕೆನ್ನುತ್ತವೆಯೋ ಆ ಚಿಂತನೆಗಳ ಮೂಲ ಸಿದ್ಧಾಂತಗಳನ್ನು ಆಧರಿಸಿದ ಅನ್ಯ ಚಿಂತನೆಗಳನ್ನು ಆತುಕೊಳ್ಳುತ್ತವೆ. ಲಿಬರಲ್ ಅಥವಾ ಯುಟಿಲಿಟೇರಿಯನ್ ಸಿದ್ಧಾಂತಗಳನ್ನು ಬಿಟ್ಟು ಗ್ರಾಂಸಿ ಅಥವಾ ನವ ಮಾರ್ಕ್ಸ್‌‌ವಾದವನ್ನು ಆಶ್ರಯಿಸಲಾಯಿತು. ಭಾರತವು ಓರಿಯೆಂಟಲ್ ನಿರಂಕುಶ ಪ್ರಭುತ್ವವಲ್ಲ, ಇದರದು ಏಶಿಯಾಟಿಕ್ ಉತ್ಪಾದನಾ ವಿಧಾನವಲ್ಲ, ಇಲ್ಲೂ ಕೂಡ ಐತಿಹಾಸಿಕ ಬದಲಾವಣೆ ನಡೆದಿದೆ ಎಂದು ಕೊಸಾಂಬಿ ಅಂಥವರು ಎಂದಾಗ ಏನೋ ಪರ್ಯಾಯ ಕಂಡಂತೆನಿಸುತ್ತದೆ. ಆದರೆ ಆ ಪರ್ಯಾಯ ಕಂಡಂತೆನಿಸುತ್ತದೆ. ಆದರೆ ಆ ಪರ್ಯಾಯ ಮಾರ್ಕ್ಸ್ ಐರೋಪ್ಯ ಸಮಾಜಕ್ಕೆ ಮೀಸಲಿಟ್ಟ ಕಲ್ಪನೆಗಳನ್ನು ಭಾರತಕ್ಕೂ ವಿಸ್ತರಿಸುವ ಪ್ರಯತ್ನವಷ್ಟೇ ಆಗುತ್ತದೆ. ೧೯೮೦ರ ದಶಕದಲ್ಲಿ ಬಂದ ಎಡಪಂಥೀಯ ಅಧ್ಯಯನಗಳು ಕೂಡ ಸ್ಟೇಟ್‌ನ ವ್ಯಾಖ್ಯೆಯನ್ನು ಆಧುನಿಕ ಪಾಶ್ಚಾತ್ಯ ಚಿಂತನೆಗಳಿಂದ ತೆಗೆದುಕೊಂಡು ಅದನ್ನು ಭಾರತಕ್ಕೆ ಅನ್ವಯಿಸುವುದಕ್ಕೆ ಸೀಮಿತವಾಗುತ್ತವೆ.

ಅದೇ ರೀತಿ ಐರೋಪ್ಯ ಸ್ಟೇಟ್ ಕಲ್ಪನೆಗಳನ್ನು ತಿರಸ್ಕರಿಸಿ ಅಚ್ಚ ದೇಶೀ ಕಲ್ಪನೆಯನ್ನು ನೀಡಲು ಹೊರಟ ಸೆಗ್ಮೆಂಟರಿ ಸಿದ್ಧಾಂತವು ಆಫ್ರಿಕಾದ ಕುರಿತು ಪಾಶ್ಚಾತ್ಯ ಮಾನವಶಾಸ್ತ್ರವು ರೂಪಿಸಿದ ಮಾದರಿಯನ್ನು ಅನುಸರಿಸುತ್ತದೆ. ಹಾಗಾಗಿ ಎಲ್ಲಿಂದಲೋ ಓರಿಯೆಂಟಲ್ ನಿರಂಕುಶಾಧಿಕಾರವು ಆಫ್ರಿಕಾದ ಮೂಲಕ ಮತ್ತೆ ಹಿಂದಿನ ಬಾಗಿಲಿನಿಂದ ಭಾರತದೊಳಗೆ ನುಸುಳಿಬಿಡುತ್ತದೆ. ಇನ್ನು ಭಾರತೀಯ ವ್ಯವಸ್ಥೆಗಳಿಗೆ ಕರ್ತೃತ್ವನ್ನು ನೀಡುವ ಪ್ರಯತ್ನವಂತೂ ಮನುಷ್ಯನ ಜೀವನದ ಉದ್ದೇಶ ಹಾಗೂ ಅರ್ಥಗಳ ಕುರಿತ ಪಾಶ್ಚಾತ್ಯ ಸಿದ್ಧಾಂತಗಳನ್ನು ಸಾರ್ವತ್ರೀಕರಿಸುವ ಮೂಲಕ ಇವರ ಕುರಿತು ಅಳಿದುಳಿದ ಅನ್ಯತೆಯನ್ನೂ ಅಳಿಸುವ ಪ್ರಯತ್ನವಾಗುತ್ತದೆ.

ಭಾರತದ ಐತಿಹಾಸಿಕ ರಾಜಕೀಯ ವ್ಯವಸ್ಥೆಯನ್ನು ಅರ್ಥೈಸುವಾಗ ಇದುವರೆಗೂ ಬಳಸಲಾದ ಒಂದೇ ಒಂದು ಮಾದರಿ ಎಂದರೆ ಅದು ಸ್ಟೇಟ್ ಎಂಬುದು ಈ ಎಲ್ಲಾ ಚರ್ಚೆಗಳಿಂದ ಹೊರಹೊಮ್ಮುವ ವಿಚಾರ. ಹಾಗಾಗಿ ಭಾರತದ ಹಾಗೂ ಅದರ ಒಂದು ಅಂಗವಾದ ಕರ್ನಾಟಕದ ಇತಿಹಾಸ ಕಾಲದ ರಾಜ್ಯ ಪದ್ಧತಿಗಳ ಕುರಿತು ನಡೆದ ಚರ್ಚೆಗಳೆಂದರೆ ಸ್ಟೇಟ್‌ನ ರಚನೆಯ ಕುರಿತ ಚರ್ಚೆಗಳೇ. ಇಲ್ಲಿ ಅನೇಕ ವಾದಗಳು ಅನೇಕ ಮಾದರಿಗಳನ್ನು ಸೂಚಿಸುತ್ತಿವೆ ಎಂದು ಮೇಲ್ನೋಟಕ್ಕೆ ತೋರಬಹುದಾದರೂ, ನಿಜವಾಗಿ ನೋಡಿದರೆ ಅವೆಲ್ಲ ಸ್ಟೇಟ್‌ನ ವಿಭಿನ್ನ ಪ್ರಭೇದಗಳ ಕುರಿತು ತಿಳಿಸುತ್ತಿವೆ. ಸ್ಟೇಟ್‌ನ ಲಕ್ಷಣಗಳಿಗೆ ನಮ್ಮ ಮಾಹಿತಿಯನ್ನು ಒಗ್ಗಿಸುವ, ಅದರ ವೈವಿಧ್ಯತೆಗಳನ್ನು ಗುರುತಿಸುವ, ಅದರ ಭಾರತೀಯ ಆವೃತ್ತಿಯನ್ನು ಲಕ್ಷಣೀಕರಿಸುವ ಹಾಗೂ ಈ ಕುರಿತ ಐರೋಪ್ಯ ನಿಷ್ಕರ್ಷೆಗಳನ್ನು ಇಲ್ಲಿ ಸಾಂದರ್ಭೀಕರಿಸುವ ಹಾಗೂ ವಿಮರ್ಶಿಸುವ ಮೂಲಕ ಈ ಕೆಲಸ ನಡೆದಿದೆ. ಹಾಗಾಗಿ ಸ್ಟೇಟ್‌ನ ಭೌತಿಕ ಪ್ರಸ್ತುತಿಯೇ ಇಲ್ಲ ಎಂಬುದೂ ಒಂದು ಪ್ರಕಾರದ ಸ್ಟೇಟ್‌ನ ಲಕ್ಷಣವೇ ಆಗುವುದನ್ನು ಸೆಗ್ಮೆಂಟರಿ ಸ್ಟೇಟ್ ಕಲ್ಪನೆಯಲ್ಲಿ ನೋಡುತ್ತೇವೆ. ಈ ಸ್ಟೇಟ್‌ನ ಪರಿ ಕಲ್ಪನೆಯನ್ನಿಟ್ಟುಕೊಂಡು ಪಾಶ್ಚಾತ್ಯ ಮಾದರಿಗಳಿಗೆ ಪರ್ಯಾಯಗಳನ್ನು ಕಲ್ಪಿಸಿದರೂ ಅದು ಪಾಶ್ಚಾತ್ಯ ಚಿಂತನೆಗಳನ್ನು ಪುನರುತ್ಪಾದಿಸುವ ಕೆಲಸವಾಗಿ ಪರಿಸಮಾಪ್ತಿಯಾಗುತ್ತದೆಯೋ ಹೊರತೂ ಭಾರತದ ರಾಜ್ಯ ಪದ್ಧತಿಯನ್ನು ಅರಿಯಲು ಸಹಕರಿಸುವುದಿಲ್ಲ ಎಂಬುದನ್ನೂ ಮನಗಂಡಿದ್ದೇವೆ.

ಬಹುಶಃ ಭಾರತೀಯ ರಾಜ್ಯ ಪದ್ಧತಿಯನ್ನು ವೈಜ್ಞಾನಿಕ ವಿಶ್ಲೇಷಣೆಗೊಳಪಡಿಸಬೇಕಾದರೆ ಕೆಲ ಪೂರ್ವ ನಿಬಂಧನೆಗಳನ್ನು ಪೂರೈಸಿಕೊಳ್ಳಬೇಕಾಗುತ್ತದೆ. ಅಂದರೆ, ಭಾರತೀಯ ಸಂಸ್ಕೃತಿ ಹೇಗೆ ಐರೋಪ್ಯ ಸಂಸ್ಕೃತಿಯಿಂದ ಭಿನ್ನವಾಗುತ್ತದೆ ಎಂಬುದನ್ನು ಕುರಿತು ಸಿದ್ಧಾಂತಗಳನ್ನು ಬೆಳೆಸಿದ ಹೊರತೂ ಈ ಕೆಲಸ ಫಲಪ್ರದವಾಗಲಾರದು. ಮೊದಲನೆಯದಾಗಿ ಐರೋಪ್ಯರು ಏಕ ಸ್ಟೇಟ್ ಕುರಿತು ಈ ರೀತಿಯ ವಿಚಾರಗಳನ್ನು ಬೆಳೆಸಿಕೊಂಡಿದ್ದಾರೆ ಹಾಗೂ ಎಲ್ಲೆಡೆಯಲ್ಲೂ ಅದನ್ನೇ ಮಾನಂಡವಾಗಿ ಇಟ್ಟುಕೊಂಡಿದ್ದಾರೆ ಎಂಬುದನ್ನು ತಿಳಿಯಲು ಅವರ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇದುವರೆಗೂ ಈ ಕುರಿತು ಚರ್ಚಿಸಿದ ವಿದ್ವಾಂಸರೆಲ್ಲರೂ ಭಾರತೀಯ ಸಂಸ್ಕೃತಿಗೆ ಒಂದು ರಿಲಿಜನ್ ಹಾಗೂ ಲೋಕದೃಷ್ಟಿ ಇದೆ ಎಂಬ ಗ್ರಹೀತದಿಂದ ಹೊರಡುತ್ತಾರೆ. ಹೀಗೆ ಅವರು ಗ್ರಹಿಸುವುದರಿಂದ ಈ ಸಂಸ್ಕೃತಿಗೆ ಒಂದು ಐಕ್ಯ ಸಾಮಾಜಿಕ ವ್ಯವಸ್ಥೆ ಇದೆ, ಅದು ವರ್ಣಜಾತಿ ವ್ಯವಸ್ಥೆ, ಇಲ್ಲಿ ಪುರೋಹಿತಶಾಹಿ ಇದೆ, ಈ ಸಮಾಜವು ಒಂದು ಉದ್ದೇಶಕ್ಕನುಗುಣವಾಗಿ ವ್ಯವಸ್ಥಿತವಾಗಿದೆ ಎಂದುಕೊಳ್ಳುವುದು ಅವರಿಗೆ ಸಹಜವೇ ಆಗಿ ಕಾಣುತ್ತದೆ. ಎರಡನೆಯದಾಗಿ, ಭಾರತೀಯ ಸಂಸ್ಕೃತಿಯನ್ನು ಈ ಮಾನದಂಡವನ್ನು ಬಿಟ್ಟು ವೈಜ್ಞಾನಿಕವಾಗಿ ಅರ್ಥೈಸುವುದು. ಅಂದರೆ ಭಾರತದಲ್ಲಿ ಕಾಣುವ ಭಿನ್ನತೆಗಳನ್ನು ಐರೋಪ್ಯ ಸಂಸ್ಕೃತಿಯ ಭಿನ್ನ ರೂಪಗಳು ಎಂಬುದಾಗಿ ಭಾವಿಸಿ ವಿವರಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಈ ಭಿನ್ನತೆಗಳು ಬೇರೆಯದೇ ಆದ ಒಂದು ಸಂಸ್ಕೃತಿಯನ್ನು ರಚಿಸುತ್ತಿರಬಹುದು ಎಂಬ ಅಂಶವನ್ನು ಇಲ್ಲ ಗಣನೆಗೆ ತೆಗೆದುಕೊಳ್ಳಲಾಗಿಲ್ಲ. ಈ ನಿಟ್ಟಿನಲ್ಲಿ ಮತ್ತೊಂದು ವಾದವನ್ನು ಗಮನಿಸಿ ಭಾರತೀಯರಲ್ಲಿ ರಿಲಿಜನ್ ಮತ್ತು ಅದರಿಂದ ಹುಟ್ಟುವ ಲೋಕದೃಷ್ಟಿ ಇಲ್ಲ ಎಂಬುದಾಗಿ ಬಾಲಗಂಗಾಧರ ಅವರು ವಾದಿಸಿದ್ದಾರೆ. ಭಾರತೀಯ ಸಾಂಪ್ರದಾಯಿಕ ವಿಧಿಗಳಿಗೆ ಅರ್ಥವೇ ಇಲ್ಲ, ಅಂದರೆ ಯಾವ ಅರ್ಥವನ್ನು ಕೂಡ ಆರೋಪಿಸಿಬಹುದು ಎಂಬುದಾಗಿ ಕೂಡ ವಾದಿಸಲಾಗಿದೆ. ಇಂಥ ವಾದಗಳ ಪರಿಣಾಮವು ಸ್ಟೇಟ್ ಕುರಿತ ಚರ್ಚೆಯ ಮೇಲೆ ಖಂಡಿತ ಆಳವಾದ ಪರಿಣಾಮವನ್ನು ಬೀರುತ್ತದೆ. ಲೋಕವನ್ನು ಏಕತ್ರವಾಗಿ ವ್ಯವಸ್ಥಿತಗೊಳಿಸುವ ವೈಚಾರಿಕ ರಚನೆಗಳು ಭಾರತೀಯರಲ್ಲಿ ಇಲ್ಲ, ವಿಧಿ ಆಚರಣೆಗಳಿಗೆ ಅರ್ಥವಿಲ್ಲ, ಪುರಾಣ-ಇತಿಹಾಸಗಳು ನಿಜವೂ ಅಲ್ಲ/ಸುಳ್ಳು ಅಲ್ಲ ಮುಂತಾದವು ಭಾರತೀಯ ಸಂಸ್ಕೃತಿಯ ವಾಸ್ತವಗಳಾದರೆ, ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೇ ನಡೆಸಿದ ಸ್ಟೇಟ್ ಕುರಿತ ಚರ್ಚೆಗಳ ಸ್ಥಾನಮಾನ ಏನಾಗಬಹುದು? ಭಾರತೀಯ ರಾಜತ್ವದ ವಿಧಿ ಆಚರಣೆಗಳನ್ನು ಮನುಷ್ಯ ಕರ್ತೃತ್ವದ ಮೀಮಾಂಸೆಗೆ ಒಳಪಡಿಸುವ ಪ್ರಯತ್ನಗಳು ವಾಸ್ತವಿಕವಾಗುತ್ತವೆಯೆ? ಇತಿಹಾಸವನ್ನು ನಿರ್ಮಾಣ ಮಾಡುವ ಕಾರಣ ಶಕ್ತಿಯೆಂಬಂತೆ, ಮನುಕುಲದ ಐಕ್ಯ ಉದ್ದೇಶ ಸಾಧನೆ ಎಂಬಂತೆ ಸ್ಟೇಟ್ ಅನ್ನು ಐರೋಪ್ಯರು ಭಾವಿಸಿಕೊಳ್ಳಲು ಕಾರಣವಿದೆ. ಆದರೆ ಭಾರತೀಯರಿಗೆ ರಿಲಿಜನ್ ಹಾಗೂ ಅದರಿಂದ ಹುಟ್ಟಿಕೊಳ್ಳಬಲ್ಲ ಲೋಕದೃಷ್ಟಿಯೇ ಇಲ್ಲದಿದ್ದರೆ ಅವರು ಈ ಐರೋಪ್ಯರಂತೆ ಭಾವಿಸಿಕೊಳ್ಳಲು ಕಾರಣವಿಲ್ಲ. ಹಾಗಾಗಿ ಈ ಲೋಕವನ್ನು ಭಾರತೀಯರು ಹೇಗೆ ಗ್ರಹಿಸುತ್ತಾರೆ ಹಾಗೂ ಇದರಲ್ಲಿ ಹೇಗೆ ತೊಡಗಿಸಿಕೊಳ್ಳುತ್ತಾರೆ ಎಂಬುದನ್ನು ಗೊತ್ತು ಮಾಡಿಕೊಳ್ಳದೇ ಇಲ್ಲಿನ ರಾಜ್ಯ ವ್ಯವಸ್ಥೆಯಿರಲಿ, ಯಾವ ವ್ಯವಸ್ಥೆಯ ಕುರಿತೂ ಯತಾರ್ಥವಾಗಿ ಮಾತನಾಡಲಾರೆವು.

ಪರಾಮರ್ಶನ ಗ್ರಂಥಗಳು

೧. ನಂದಿ ಆರ್‌.ಎನ್., ೧೯೮೭. “ಅಗ್ರೇರಿಯನ್ ಗ್ರೋತ್ ಆಂಡ್ ಸೋಶಿಯಲ್ ಕಾನ್‌ಫ್ಲಿಕ್ಟ್ಸ್‌ಇನ್ ಅರ‍್ಲಿ ಇಂಡಿಯಾ,” ಡಿ.ಎನ್. ಝಾ (ಸಂ), ಫ್ಯೂಡಲ್ ಸೋಶಿಯಲ್ ಫಾರ್ಮೇಶನ್ ಇನ್ ಅರ‍್ಲಿ ಇಂಡಿಯಾ, ದೆಹಲಿ

೨. ಬರ್ಟನ್ ಸ್ಟೈನ್, ೧೯೮೯, ವಿಜಯನಗರ, ದಿ ನ್ಯೂ ಕೇಂಬ್ರಿಡ್ಜ್ ಹಿಸ್ಟರಿ ಆಫ್ ಇಂಡಿಯಾ, ಕೇಂಬ್ರಿಡ್ಜ್: ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್.

೩. ಬಾಲಗಂಗಾಧರ್ ಎಸ್.ಎನ್. ೨೦೦೫. ಹೀದನ್ ಇನ್ ಹಿಸ್ ಬ್ಲೈಂಡ್‌ನೆಸ್ ದಿ ವೆಸ್ಟ್ ಆಂಡ್ ದಿ ಡೈನಮಿಕ್ ಆಫ್ ರಿಲೀಜನ್, ದೆಹಲಿ: ಮನೋಹರ್.

೪. ರೋನಾಲ್ಡ್ ಇಂಡೇನ್, ೧೯೯೦. ಇಮ್ಯಾಜಿನಿಂಗ್ ಇಂಡಿಯಾ, ಆಕ್ಸ್‌ಫರ್ಡ್: ಬ್ಯಾಸಿಲ್‌ಬ್ಲ್ಯಾಕ್‌ವೆಲ್.

೫. ರೋಮಿಲಾ ಥಾಪರ್, ೨೦೦೨. ಅರ‍್ಲಿ ಇಂಡಿಯಾ, ಪೆಂಗ್ವಿನ್ ಬುಕ್ಸ್‌ ಆಫ್ ಇಂಡಿಯಾ.

೬. ಹರ್ಮನ್ ಕುಲ್ಕೆ (ಸಂ.) ೧೯೯೫. ದಿ ಸ್ಟೇಟ್ ಇನ್ ಇಂಡಿಯಾ ೧೦೦೦-೧೭೦೦, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್.

* * *