ಭಾರತದ ರಾಜ್ಯ ಪದ್ಧತಿಯ ಕುರಿತ ಸೈದ್ಧಾಂತಿಕ ಚೌಕಟ್ಟು

ವಸಾಹತು ಪೂರ್ವ ಭಾರತೀಯ ರಾಜ್ಯ ಪದ್ಧತಿಯ ಕುರಿತು ಚರ್ಚೆಯಲ್ಲಿ ಇರುವ ಸೈದ್ಧಾಂತಿಕ ಚೌಕಟ್ಟುಗಳನ್ನು ಗಮನಿಸಿದಾಗ ಮೇಲ್ನೋಟಕ್ಕೆ ಕಾಣಿಬಹುದಾದ ಒಂದು ಅಂಶವನ್ನು ಸ್ಪಷ್ಟಪಡಿಸಿ ಮುಂದುವರಿಯುವ ಅಗತ್ಯವಿದೆ. ಅದೆಂದರೆ, ಭಾರತೀಯ ಉಪಖಂಡದ ಸಾಹಿತ್ಯ, ಶಾಸನ ಮುಂತಾದವುಗಳಿಂದಲೇ ಮಾಹಿತಿಯನ್ನು ಸಂಗ್ರಹಿಸಿ ಈ ಸಿದ್ಧಾಂತಗಳಿಗೆ ದೃಷ್ಟಾಂತಗಳನ್ನು ನೀಡಲಾಗಿದೆಯಾದರೂ, ಈ ಸಿದ್ಧಾಂತಗಳು ಕಡ್ಡಾಯವಾಗಿ ಸ್ಟೇಟ್ ಎಂಬ ಪರಿಕಲ್ಪನೆಯನ್ನು ಆಧರಿಸಿ ರೂಪುಗೊಂಡಿವೆ. ಈ ಚರ್ಚೆ ಕೂಡ ಇಂಗ್ಲಿಷ್ ಭಾಷೆಯಲ್ಲೇ ರೂಪು ತಳೆದಿದೆಯಾದ್ದರಿಂದ ಅದು ವಸಾಹತು ಪೂರ್ವ ಭಾರತದ ಸ್ಟೇಟ್‌ನ ರಚನೆಯ ಕುರಿತಾದ ಚರ್ಚೆಯೇ ಆಗಿದೆ. ಸ್ಟೇಟ್ ಅನ್ನು ಭಾರತೀಯ ಭಾಷೆಗಳಿಗೆ ಭಾಷಾಂತರಿಸಿದಾಗ ಈ ಚರ್ಚೆ ದಿಕ್ಕು ತಪ್ಪುತ್ತದೆ. ಏಕೆಂದರೆ ನಾವು ಅದಕ್ಕೆ ರಾಜ್ಯ ಎಂದೋ, ಪ್ರಭುತ್ವ ಎಂದೋ ತರ್ಜುಮೆಯನ್ನು ಒದಗಿಸಿದಾ ಇದು ನಮಗೆ ಪರಿಚಯವಾದ ಪರಿಕಲ್ಪನೆಯಂತೆ ಭಾಸವಾಗುತ್ತದೆ. ಈ ರೀತಿ ನಮ್ಮ ಶಬ್ದಗಳನ್ನು ಹಾಗೂ ಸಂಸ್ಥೆಗಳನ್ನು ಸ್ಟೇಟ್‌ಗೆ ಪರ್ಯಾಯಗಳು ಎಂದು ಭಾವಿಸಿಕೊಂಡಾಗ ಆ ಚರ್ಚೆಯ ನಿಬಂಧನೆಗಳು ಸ್ಟೇಟ್ ಕಲ್ಪನೆಯಿಂದ ನಿರ್ಧಾರವಾಗುತ್ತವೆ. ಅಂದರೆ ಸ್ಟೇಟ್‌ನ ಗುಣಲಕ್ಷಣಗಳನ್ನು ಮನಸ್ಸಿನಲ್ಲಿಟ್ಟು ಕೊಂಡು ಭಾರತೀಯ ರಾಜ್ಯ ಪದ್ಧತಿಯನ್ನು ಅದಕ್ಕೆ ತುಲನೆ ಮಾಡುತ್ತಲೇ ಸಿದ್ಧಾಂತಗಳು ಸಾಗುತ್ತವೆ. ಹೀಗೆ ಹೊರಟ ಚರ್ಚೆಯು ಸ್ಟೇಟ್‌ನ ಗುಣಲಕ್ಷಣಗಳನ್ನು ಇಲ್ಲಿ ಕಾಣುವ ಕೊನೆಯಿರದ ಪ್ರಯತ್ನವಾಗುತ್ತದೆ. ಕೊನೆಗೂ ಭಾರತೀಯ ರಾಜ್ಯ ಪದ್ಧತಿ ಹೇಗಿತ್ತು ಎಂಬ ಕುರಿತು ಸಾಕಷ್ಟು ಮಾಹಿತಿಗಳು ನಮಗೆ ಲಭ್ಯವಿದ್ದರೂ ಅದನ್ನು ಗುರುತಿಸಿ ಆ ಮೂಲಕ ಒಂದು ಅಭಿಪ್ರಾಯವನ್ನು ತಳೆಯಲು ಸೋಲುತ್ತೇವೆ. ಭಾರತೀಯ ರಾಜ್ಯ ಪದ್ಧತಿಯ ಕುರಿತ ಚಿತ್ರಣಗಳೆಲ್ಲವೂ ಬಹುತೇಕವಾಗಿ ಇದೇ ದಾರಿಯನ್ನು ಹಿಡಿದಿವೆ ಎಂದರೆ ಅತಿಶಯೋಕ್ತಿಯಲ್ಲ.

ಸ್ಟೇಟ್ ಶಬ್ದ ಹಾಗೂ ಕಲ್ಪನೆ ಯುರೋಪಿನಲ್ಲಿ ಪ್ರಾಚೀನ ಕಾಲದಿಂದಲೇ ಇದ್ದರೂ ಈಗ ಅದನ್ನು ಉಪಯೋಗಿಸುವ ರೀತಿಯಲ್ಲಿ ಅದು ೧೭ನೆಯ ಶತಮಾನದ ನಂತರ ರೂಪುಗೊಂಡಿದೆ. ಐರೋಪ್ಯ ನಾಗರೀಕತೆಯು ಮಾನವ ಜನಾಂಗದ ಅತ್ಯುನ್ನತ ಹಂತವನ್ನು ಪ್ರತಿನಿಧಿಸುತ್ತದೆ ಎಂದು ಯುರೋಪಿನ ಚಿಂತಕರು ನಿರ್ಧರಿಸಲು ಪ್ರಮುಖವಾದ ಮಾನದಂಡವೇ ಈ ಸ್ಟೇಟ್ ಎಂಬ ವ್ಯವಸ್ಥೆ. ಸ್ಟೇಟ್ ಕುರಿತು ವಿಭಿನ್ನ ಪ್ರತಿಪಾದನೆಗಳು ಯುರೋಪಿನಲ್ಲಿ ೧೭ನೆಯ ಶತಮಾನದ ನಂತರ ಪ್ರಚಲಿತದಲ್ಲಿ ಬಂದಿವೆಯಾದರೂ ಅದರ ಕೆಲ ಸಾಮಾನ್ಯ ಲಕ್ಷಣಗಳನ್ನು ಪೂರ್ವಭಾವಿಯಾಗಿ ಇಟ್ಟುಕೊಂಡು ಭಾರತದ ಕುರಿತ ಚರ್ಚೆಗಳು ನಡೆದಿದ್ದು ಕಂಡುಬರುತ್ತದೆ. ಇದೊಂದು ವಿಶಿಷ್ಟವಾದ ಆಳ್ವಿಕೆಯ ವ್ಯವಸ್ಥೆಯಾಗಿದ್ದು ಅದು ಸಾರ್ವತ್ರಿಕವಾಗಿ ಅನ್ವಯವಾಗಬಲ್ಲ ಕಾನೂನಿನ ತಳಪಾಯದ ಮೇಲೆ ನಿಂತಿರುತ್ತದೆ. ಇಲ್ಲಿ ಕಾನೂನುಗಳ ಅಧಿಕಾರ ಸಾರ್ವತ್ರಿಕವಾಗಿದ್ದು ಅದನ್ನಾಧರಿಸಿದ ಸಾರ್ವಭೌಮ (Soverign) ಅಧಿಕಾರ ಶಕ್ತಿ ಒಂದು ನಿರ್ದಿಷ್ಟ ಸೀಮಾರೇಖೆ ಯೊಳಗಿನ (Territory) ಜನಜೀವನವನ್ನು ಸಾರ್ವತ್ರಿಕವಾಗಿ ನಿರ್ದೇಶಿಸುತ್ತಿರುತ್ತದೆ. ಆಳುವವರು ಅದರ ಉದ್ದೇಶಗಳನ್ನು ಜಾರಿಗೆ ತರುವವರಾಗಿದ್ದಾರೆ. ಹಾಗಾಗಿ ಆಡಳಿತವು (Government) ಸ್ಟೇಟ್‌ನ ರಚನೆಯನ್ನು ಅನುಸರಿಸಿ ಅನುಷ್ಠಾನ ಮಾಡುವ ವಿಧಾನವಾಗಿದೆ. ಇದೊಂದು ಸಾಮಾಜಿಕ ಒಪ್ಪಂದವಾಗಿದೆ ಎಂಬುದಾಗಿ ಎನ್ ಲೈಟನ್‌ಮೆಂಟ್‌ಕಾಲದ ನಂತರ ಬಂದ ಚಿಂತಕರಾದ ರೂಸ್ಸೊ, ಥಾಮಸ್ ಹಾಬ್ಸ್, ಜಾನ್ ಲಾಕ್ ಮುಂತಾದವರು ವಾದಿಸಿದರು. ಒಂದು ಉತ್ತಮ ಸ್ಟೇಟ್ ವ್ಯವಸ್ಥೆಯಲ್ಲಿ ಪ್ರಜೆಗಳು ಹಾಗೂ ಪ್ರಭುಗಳು ಇಬ್ಬರೂ ಸುಖದ, ನ್ಯಾಯದ ಹಾಗೂ ಮಾನವ ಕಲ್ಯಾಣದ ಮೌಲ್ಯಗಳ ಸಾಧನೆಗಾಗಿ ಈ ಕಾನೂನುಗಳನ್ನು ರೂಪಿಸಿಕೊಂಡಿರುತ್ತಾರೆ. ಐರೋಪ್ಯರ ಸ್ಟೇಟ್ ವ್ಯವಸ್ಥೆಯು ಮಾನವ ಹಿತಸಾಧನೆಗಾಗಿ ರೂಪಿಸಿದ ಅತ್ಯುತ್ತಮ ಆಳ್ವಿಕೆಯಾಗಿರುವುದರಿಂದ ಅದನ್ನು ಬೆಳೆಸಿಕೊಂಡ ಅವರು ಉಳಿದ ಎಲ್ಲಾ ಜನಾಂಗಗಳಿಗಿಂತ ಅತ್ಯುನ್ನತ ಹಂತದ ನಾಗರಿಕತೆಗೆ ಸಂಕೇತವಾಗಿದ್ದಾರೆ. ಇದನ್ನು ಇನ್ನೂ ಉತ್ತಮವಾಗ ಬೆಳೆಸುವ ನಿಟ್ಟಿನಲ್ಲಿ ಪಾಶ್ಚಾತ್ಯ ಚಿಂತಕರು ಜಿಜ್ಞಾಸೆಗಳನ್ನು ಬೆಳೆಸತೊಡಗಿದ್ದರು. ಐರೋಪ್ಯರು ಅನ್ಯ ಜನರ ಕುರಿತು ಸಂಶೋಧಿಸುವಾಗ ನಿರ್ದಿಷ್ಟವಾಗಿ ಇಂಥ ಪರಿಕಲ್ಪನೆಗಳನ್ನು ಇಟ್ಟುಕೊಂಡು ಅನ್ಯ ಜನಾಂಗಗಳ ಸ್ಟೇಟ್ ಕಲ್ಪನೆಗಳು ಹೇಗಿವೆ ಎಂಬ ಜಿಜ್ಞಾಸೆಯಿಂದ ಪ್ರಾರಂಭಿಸಿದರು. ಈ ರೀತಿ ಅನ್ಯ ಸಂಸ್ಕೃತಿಗಳ ಆಳ್ವಿಕೆಯ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಅವರಿಗೆ ಲಭ್ಯವಿದ್ದ ಪರಿಕಲ್ಪನೆ ಎಂದರೆ ತಮ್ಮದೇ ಆದ ಸ್ಟೇಟ್ ಕುರಿತ ಕಲ್ಪನೆಗಳು. ತಮ್ಮ ಸಂಸ್ಕೃತಿಯ ಚಿಂತನೆಯ ಸಂಪನ್ಮೂಲಗಳನ್ನು ಅವರು ಬಳಸಿಕೊಂಡು ಅನ್ಯರನ್ನು ಅರ್ಥೈಸಿದರು.

ಭಾರತೀಯ ಇತಿಹಾಸದ ಉಳಿದ ಸಮಸ್ಯೆಗಳಂತೆ ಇದು ಕೂಡ ವಸಾಹತು ಯುಗದಲ್ಲಿ ರೂಪು ತಳೆದ ಸಮಸ್ಯೆಯಾಗಿದೆ. ಬಹುಶಃ ಭಾರತೀಯ ರಾಜ್ಯ ಪದ್ಧತಿಯು ವಸಾಹತು ಯುಗದ ಇತಿಹಾಸಕಾರರ ತೀವ್ರ ಆಸಕ್ತಿಯ ವಿಷಯವಾಗಿತ್ತೆಂದೇ ಹೇಳಬೇಕು. ಅದಕ್ಕೆ ಕೆಲ ಪ್ರಾಯೋಗಿಕ ಮಹತ್ವಗಳೂ ಇದ್ದವು. ಭಾರತದಲ್ಲಿ ತಮ್ಮ ಸ್ಟೇಟ್‌ನ ಸ್ಥಾಪನೆ ವಸಾಹತು ದೊರೆಗಳ ಆತ್ಯಂತಿಕ ಸಮಸ್ಯೆಯಾಗಿತ್ತು. ಭಾರತೀಯ ಇತಿಹಾಸವನ್ನು ಸಿದ್ಧಾಂತೀಕರಿಸುವ ಅವರ ಪ್ರಯತ್ನಕ್ಕೆ ಸ್ಫೂರ್ತಿಯಾಗಿ ಈ ಪ್ರಾಯೋಗಿ ಸಮಸ್ಯೆ ಇದ್ದುದು ಸ್ಪಷ್ಟವಾಗೇ ಇದೆ. ಇದರ ಅಂಗವಾಗಿ ಇಲ್ಲಿನ ರಾಜ್ಯ ವ್ಯವಸ್ಥೆಯನ್ನು ಸ್ಟೇಟ್‌ನ ಸಿದ್ಧಾಂತಕ್ಕೆ ಒಗ್ಗಿಸುವ ಪ್ರಯತ್ನವೂ ನಡೆಯಿತು. ಈ ಪ್ರಯತ್ನವು ಎರಡು ಮುಖ್ಯ ಒತ್ತಡಗಳಲ್ಲಿ ನಡೆಯಿತು. ಮೊದಲನೆಯದು ವಸಾಹತು ಕಾರ್ಯಕ್ರಮವಾದರೆ ಎರಡನೆಯದು ಅನ್ಯ ಸಂಸ್ಕೃತಿಯೊಂದನ್ನು ತಗೆ ಲಭ್ಯವಿರುವ ಪರಿಕಲ್ಪನೆಗಳಿಂದಲೇ ಅರ್ಥೈಸುವ ಮಿತಿ. ಅವರ ಪರಿಕಲ್ಪನೆಯ ಪ್ರಕಾರ ಐರೋಪ್ಯ ಸ್ಟೇಟ್‌ಗಳ ಮಾದರಿಗಳಿಗೆ, ಆದರ್ಶಕ್ಕೆ ಹೋಲಿಸಿದರೆ ಇತರೆಡೆ ತಪ್ಪುತಪ್ಪಾಗಿ ಅದು ಪ್ರಚಲಿತದಲ್ಲಿದ್ದುದು ಕಂಡುಬಂದಿತು. ಇಂಥ ಮಿತಿಗಳಲ್ಲಿ ಭಾರತದ ರಾಜ್ಯವ್ಯವಸ್ಥೆಯ ಕುರಿತ ಸಿದ್ಧಾಂತಗಳು ರೂಪುಗೊಂಡವು. ಈ ಸಿದ್ಧಾಂತಗಳು ಭಾರತವನ್ನು ಒಂದು ವಸಾಹತುವಾಗಿ ಲಕ್ಷಣೀಕರಿಸುವಲ್ಲಿ ಹಾಗೂ ವಸಾಹತು ಆಳ್ವಿಕೆಯ ರೂಪುರೇಷೆಗಳನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸಿದವು. ಈ ಕಾಲದಲ್ಲಿ ಮಾಹಿತಿಗಳ ಅಭಾವವೂ ಇತ್ತು. ತಮ್ಮ ಮಾದರಿಯಿಂದ ವಸಾಹತುಪೂರ್ವ ರಾಜ್ಯ ವ್ಯವಸ್ಥೆಗಳನ್ನು ನೋಡಿದಾಗ ಅವರಲ್ಲಿ ಯುಟಿಲಿಟೇರಿಯನ್ನರಂಥ ಕೆಲವರಿಗೆ ಅವು ಅಸಂಬದ್ಧವಾಗಿ ಅಥವಾ ಕಳಪೆಯಾಗಿ ಕಾಣಿಸಿದವು. ರೋಮ್ಯಾಂಟಿಸಿಸ್ಟರಿಗೆ ಅನೇಕ ಗುಣಗಳು ತಮಗಿಂತಲೂ ಉತ್ತಮ ಎಂದೇ ಕಾಣಿಸಿದವು. ಕಳಪೆಯಾಗಿ ಕಾಣಿಸಲಿ, ಉತ್ತಮವಾಗಿ ಕಾಣಿಸಲಿ, ಅವು ಸ್ಟೇಟ್ ಕಲ್ಪನೆಯ ಸಮಸ್ಯೆಗಳಾಗಿದ್ದವೇ ಹೊರತೂ ಭಾರತೀಯರ ವಾಸ್ತವಗಳಲ್ಲ ಎಂಬುದನ್ನು ಗುರುತಿಸುವುದು ಅಗತ್ಯ. ಆದರೆ ವಸಾಹತು ಪ್ರಭುತ್ವದ ವಿರುದ್ಧ ಹೋರಾಡಿ ಸ್ವತಂತ್ರ ಪ್ರಭುತ್ವಕ್ಕಾಗಿ ಕನಸಿದ ರಾಷ್ಟ್ರೀಯ ಇತಿಹಾಸಕಾರರೂ ಕೂಡ ವಸಾಹತು ಪೂರ್ವಕಾಲದ ರಾಜ್ಯಪದ್ಧತಿಯ ಕುರಿತು ಇಂಥ ಪರಿಕಲ್ಪನೆಗಳನ್ನೇನೂ ಬದಲಿಸಲಿಲ್ಲ. ಬದಲಾಗಿ ವಸಾಹತು ಇತಿಹಾಸಕಾರರು ಯಾವ ಸ್ಟೇಟ್‌ನತತ್ವ ಹಾಗೂ ಅನುಷ್ಠಾನ ಭಾರತೀಯ ರಾಜ್ಯಗಳಲ್ಲಿ ವಿಕಲಾವಸ್ಥೆಯಲ್ಲಿ ಕಂಡುಬರುತ್ತದೆ ಎಂದು ವಾದಿಸಿದ್ದರೋ ಅದನ್ನು ಅಲ್ಲಗಳೆದು ಭಾರತಕ್ಕೆ ಈ ಸ್ಟೇಟ್‌ನ ಆದರ್ಶಗಳು ಹೇಗೆ ಪ್ರಾಚೀನ ಕಾಲದಿಂದಲೂ ಪರಿಚಿತವಾಗಿವೆ ಎಂಬುದನ್ನು ನಿರ್ದಶಿಸುವುದಕ್ಕೆ ರಾಷ್ಟ್ರೀಯವಾದಿಗಳು ಹೆಣಗಿದರು. ವಸಾಹತುಪೂರ್ವ ಪ್ರಭುತ್ವಗಳ ಕುರಿತು ಅಗಾಧವಾದ ಮಾಹಿತಿಗಳನ್ನು ಸಂಸ್ಕೃತ, ಪಾಳಿ, ಪ್ರಾಕೃತ ಹಾಗೂ ಪ್ರಾದೇಶಿಕ ಭಾಷೆಗಳ ಸಾಹಿತ್ಯದಿಂದ, ಶಾಸನಗಳಿಂದ ಸಂಗ್ರಹಿಸಿದರು. ಈ ಪ್ರಯತ್ನದಲ್ಲಿ ಸ್ಟೇಟ್ ಎಂಬುದು ಹೇಗೆ ಭಾರತೀಯರ ವಾಸ್ತವವೂ ಆಗಿತ್ತು, ಭಾರತೀಯರು ಐರೋಪ್ಯರಿಗಿಂತ ಕಳಪೆಯಲ್ಲ ಎಂಬುದನ್ನು ನಿದರ್ಶಿಸುತ್ತ ತಮ್ಮ ಅನ್ಯತೆಯನ್ನು ಅಳಸಿಕೊಂಡು ಸ್ಟೇಟ್ ಎಂಬ ಪರಿಕಲ್ಪನೆಯನ್ನು ಸಾರ್ವತ್ರೀಕರಿಸುವಲ್ಲಿ ತಮ್ಮದೇ ಅಳಿಲು ಸೇವೆ ಸಲ್ಲಿಸಿದರು. ಹಾಗಾಗಿ ಈ ಕಾಲದಲ್ಲಿ ವಿವರಗಳು ಲಭ್ಯವಾದವೇ ಹೊರತೂ ಐರೋಪ್ಯರು ಭಾವಿಸಿದ್ದ ಚೌಕಟ್ಟು ಮತ್ತೂ ಗಟ್ಟಿಯಾಯಿತು.

ಇಪ್ಪತ್ತನೆಯ ಶತಮಾನದ ಮಧ್ಯಭಾಗದಲ್ಲಿ ವಸಾಹತು ಆಳ್ವಿಕೆಯು ಕೊನೆಗೊಂಡ ನಂತರ ಅದುವರೆಗೆ ಪ್ರಚಲಿತದಲ್ಲಿದ್ದ ಪರಿಕಲ್ಪನೆಗಳನ್ನು ವಿಮರ್ಶೆಗೊಳಪಡಿಸಲಾಯತು. ಮೊದಲು ಎಡಪಂಥೀಯರು ಈ ಕೆಲಸಕ್ಕೆ ಕೈಹಾಕಿದರು. ಅವರು ಪ್ರಚತಲಿದಲ್ಲಿ ಇದ್ದ ಮಾರ್ಕ್ಸ್‌ವಾದೀ ಸಿದ್ಧಾಂತಗಳನ್ನು ಆಧರಿಸಿ ವಸಾಹತುಪೂರ್ವ ರಾಜ್ಯಗಳ ನಿರ್ಮಾಣ ಹಾಗೂ ರಚನೆಯನ್ನು ಅರ್ಥೈಸಿದರು ಹಾಗೂ ಚರ್ಚೆಗಳನ್ನು ಹುಟ್ಟು ಹಾಕಿದರು. ನಂತರ ೧೯೮೦ರ ದಶಕದ ನಂತರ ಇನ್ನೂ ಅನೇಕ ಅಭಿಪ್ರಾಯ ಭೇದಗಳು, ಊಹೆಗಳು, ಸಿದ್ಧಾಂತ ಮಂಡನೆಗಳು, ಚರ್ಚೆಗಳು ನಡೆದವು. ಈ ಸಿದ್ಧಾಂತಗಳಲ್ಲಿ ವಸಾಹತೋತ್ತರ ವಾದದ ಹಾಗೂ ಐರೋಪ್ಯ ಆಧುನಿಕೋತ್ತರ ವಾದದ ಪ್ರಭಾವ ಕಂಡುಬರುವುದರಿಂದ ವಸಾಹತು ಕಾಲದ ಪರಿಕಲ್ಪನೆಗಳಿಗೆ ಇವು ಪರ್ಯಾಯಗಳನ್ನು ಶೋಧಿಸುತ್ತವೆ. ಯುರೋಪಿನಲ್ಲಿ ಕೂಡ ಆಧುನಿಕ ಕಾಲದ ಸ್ಟೇಟ್‌ಪರಿಕಲ್ಪನೆಯ ಕುರಿತು ಅದಾಗಲೇ ವಿಮರ್ಶೆಗಳು ಬೆಳೆದಿದ್ದವು ಎಂಬುದೂ ಗಮನಿಸಬೇಕಾದ ಸಂಗತಿಯಾಗಿದೆ. ಅಂದರೆ, ಸ್ಟೇಟ್‌ನ ಅಂಗಭೂತವಾಗಿ ಇರುವ ನಾಗರಿಕ (ಸಿವಿಲ್) ಸಂಸ್ಥೆಗಳಾದ ಚರ್ಚ್, ಸ್ಕೂಲ್ ಮುಂತಾದವುಗಳು, ಹಾಗೂ ನಾಗರಿಕ ಸಮಾಜಗಳ ಸ್ವಾಯತ್ತತೆಯನ್ನು ಮಾನ್ಯಮಾಡಿದಲ್ಲಿ ಸ್ಟೇಟ್‌ನ ಅಧಿಕಾರ ವಲಯವು ಮೊಟಕಾಗುತ್ತದೆ. ಹಾಗಾಗಿ ೧೯ನೇ ಶತಮಾನದ ಕಲ್ಪನೆಗಳು ಬದಲಾದವು. ಅದರ ಜೊತೆಗೇ ಯುರೋಪನ್ನುಳಿದು ಅನ್ಯ ಸಮಾಜಗಳ ವ್ಯವಸ್ಥೆಗಳನ್ನು ಐರೋಪ್ಯ ಮಾನದಂಡಗಳಿಗೆ ಒಡ್ಡಿ ಅವುಗಳನ್ನು ಅಳೆಯುವುದನ್ನು ಪ್ರಶ್ನಿಸಲಾಯಿತು. ಈ ರೀತಿಯ ಪರ್ಯಾಯಗಳನ್ನು ಹುಡುಕುವಾಗ ಎರಡು ಮುಖ್ಯ ನಿಲುವುಗಳನ್ನು ಈ ವಿದ್ವಾಂಸರು ಆಯ್ಕೆ ಮಾಡಿಕೊಂಡಿದ್ದು ಕಂಡುಬರುತ್ತದೆ.

೧. ಅನ್ಯ ಸಮಾಜಗಳ ವ್ಯವಸ್ಥೆಗಳು ಹೇಗೆ ಅನನ್ಯವಾಗಿವೆ ಎಂಬುದನ್ನು ಶೋಧಿಸಲು ಐರೋಪ್ಯ ಮಾದರಿಗಳನ್ನು ಬಿಟ್ಟು ಬೇರೆ ಸಮಾಜಗಳ ಕುರಿತ ಮಾದರಿಯನ್ನು ತೆಗೆದು ಕೊಳ್ಳುವುದು.

೨. ಐರೋಪ್ಯ ಚಿಂತನೆಯು ವಸಾಹತು ಸಮಾಜಗಳಿಗೆ ನಿರಾಕರಿಸಿದ ಕರ್ತೃತ್ವವನ್ನು (agency) ಅವುಗಳ ವ್ಯವಸ್ಥೆಯಲ್ಲಿ ಗುರುತಿಸಿ ಅವೂ ಹೇಗೆ ಅರ್ಥಪೂರ್ಣ ಎಂಬುದನ್ನು ನಿದರ್ಶಿಸುವುದು.

ಈ ಚರ್ಚೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತದ ಕುರಿತು ಪ್ರಸ್ತಾಪಿಸಲಾದ ಸ್ಟೇಟ್‌ನ ವಿಭಿನ್ನ ಪ್ರಭೇದಗಳನ್ನು ಸಮೀಕ್ಷಿಸಬಹುದು. ಹರ್ಮನ್ ಕುಲ್ಕೆಯವರು ತಾವು ಸಂಪಾದಿಸಿದ ದಿ ಸ್ಟೇಟ್ ಇನ್ ಇಂಡಿಯಾ ೧೦೦೦-೧೭೦೦ ಎನ್ನುವ ಗ್ರಂಥದಲ್ಲಿ ವಸಾಹತು ಪೂರ್ವದ ಭಾರತದ ರಾಜ್ಯವ್ಯವಸ್ಥೆಯ ಕುರಿತು ಅದುವರೆಗೆ ಸೂಚಿಸಲಾದ ವಿವಿಧ ಮಾದರಿಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಿದ್ದಾರೆ. ಅದನ್ನು ಸ್ಥೂಲವಾಗಿ ತೆಗೆದುಕೊಂಡು ಅಗತ್ಯ ಬಿದ್ದಲ್ಲಿ ಕೆಲ ವಿವರಣೆಗಳನ್ನು ಸೇರಿಸಿ ಈ ಕೆಳಗಿನಂತೆ ವಿವರಿಸಲಾಗಿದೆ.

೧. ಪೌರ್ವಾತ್ಯ ನಿರಂಕುಶ ಪ್ರಭುತ್ವ (Oriental depotism)

ಪೌರ್ವಾತ್ಯ ನಿರಂಕುಶ ಪ್ರಭುತ್ವ ಹಾಗೂ ಅದನ್ನಾಧರಿಸಿ ಮಾರ್ಕ್ಸ್ ಅವರು ಸೂಚಿಸಿದ ಏಷಿಯಾದ ಉತ್ಪಾದನಾ ವಿಧಾನ (Asiatic mode of production). ಇದೊಂದು ಬದಲಾವಣೆಯಿಲ್ಲದೇ ಸಾವಿರಾರು ವರ್ಷಗಳಿಂದ ಏಷ್ಯಾ ಖಂಡದಲ್ಲಿ ಪ್ರಚಲಿತದಲ್ಲಿದ್ದ ರಾಜ್ಯ ಪದ್ಧತಿಯಾಗಿತ್ತು. ಇಲ್ಲಿ ರಾಜರಿಗೆ ಯಾವುದೇ ಕಾನೂನಿನ ಚೌಕಟ್ಟು ಇಲ್ಲದೇ ಇದ್ದುದರಿಂದ ಅವರ ಇಚ್ಛೆಗನುಗುಣವಾಗಿ ರಾಜ್ಯ ನಡೆಸುತ್ತಿದ್ದರು. ಹಾಗಾಗಿ ಅವರಿಗೂ ಪ್ರಜೆಗಳಿಗೂ ಒಟ್ಟಾರೆಯಾದ ಕಾನೂನುಗಳ ಬದ್ಧತೆ ಇರಲಿಲ್ಲ. ಪ್ರಜೆಗಳು ಹಳ್ಳಿಯ ಸಮುದಾಯಗಳಾಗಿ ತಮ್ಮದೇ ಆದ ಜಾತೀಯ ಸಂಪ್ರದಾಯಗಳಿಗನುಗುಣವಾಗಿ ವ್ಯವಸ್ಥೆಗೊಂಡಿದ್ದರು. ರಾಜರು ತಮ್ಮ ಅಧಿಕಾರಿಗಳನ್ನು ನೇಮಿಸಿಕೊಂಡು ಕಂದಾಯ ವಸೂಲಿ ಮಾಡುವುದು ಹಾಗೂ ನೀರಾವರಿಯ ಮೂಲಕ ಉತ್ಪಾದನೆಯನ್ನು ಹೆಚ್ಚಿಸುವುದು, ಯುದ್ಧಗಳನ್ನು ಮಾಡುವುದು ಇಷ್ಟಕ್ಕೇ ಸೀಮಿತಗೊಂಡಿದ್ದರು. ಭಾರತದಲ್ಲಿ ಜಾತಿ ಪದ್ಧತಿ ಪ್ರಬಲವಾಗಿ ಇದ್ದುದರಿಂದ ರಾಜರು ಕೂಡ ಅದರ ಆಧೀನರಾಗಿ ಸಾಮಾಜಿಕವಾಗಿ ತಮ್ಮ ಪರಿಣಾಮವನ್ನು ಕಳೆದುಕೊಂಡಿದ್ದರು.

೨. ಭಾರತೀಯ ಇತಿಹಾಸ ಲೇಖನದ ಮಾದರಿ

ಭಾರತೀಯ ಇತಿಹಾಸ ಲೇಖನದ ಮಾದರಿಯು ಮೂಲತಃ ಮೇಲಿನ ಕಲ್ಪನೆಗಳನ್ನು ಪರಿಷ್ಕರಿಸಿದ ರಾಷ್ಟ್ರೀಯ ಮಾದರಿಯಾಗಿದೆ. ಇದರ ಪ್ರಕಾರ ರಾಜನಲ್ಲಿ ಕೇಂದ್ರೀಕೃತವಾದ ಪ್ರಭುತ್ವವನ್ನು ಹೊಂದಿದ ರಾಜ್ಯಗಳು ಇತಿಹಾಸ ಕಾಲದಲ್ಲಿದ್ದವು. ಈ ರಾಜರು ನಿರ್ದಿಷ್ಟವಾದ ಸೀಮೆಗಳಲ್ಲಿ ತಮ್ಮ ಅಧಿಕಾರಶಾಹಿಯಿಂದ ಆಡಳಿತ ನಡೆಸುತ್ತಿದ್ದರು. ಇವರಲ್ಲಿ ಉದಾತ್ತರಾದವರು ಮಂತ್ರಿ ಮಂಡಲವನ್ನು ಹೊಂದಿದ್ದು ಅವರಿಂದ ಸಲಹೆಗಳನ್ನು ಸ್ವೀಕರಿಸುತ್ತಿದ್ದರು. ಪ್ರಜೆಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದರು. ಈ ರೀತಿ ಪ್ರಾಚೀನ ರಾಜತ್ವವು ನಿರಂಕುಶ ಪ್ರಭುತ್ವವಾಗಿರಲಿಲ್ಲ ಎಂಬ ರಾಷ್ಟ್ರೀಯ ತಿದ್ದುಪಡಿಯನ್ನು ಇಲ್ಲಿ ನೋಡುತ್ತೇವೆ.

೩. ಭಾರತೀಯ ಎಡಪಂಥೀಯರ ಫ್ಯೂಡಲ್‌ರಾಜ್ಯ ವ್ಯವಸ್ಥೆಯ ಮಾದರಿ

ಭಾರತೀಯ ಎಡಪಂಥೀಯರ ಫ್ಯೂಡಲ್ ರಾಜ್ಯ ವ್ಯವಸ್ಥೆಯ ಮಾದರಿಯು ಯುರೋಪಿನಲ್ಲಿ ಮಧ್ಯ ಕಾಲದಲ್ಲಿ ಪ್ರಚಲಿತದಲ್ಲಿ ಇದ್ದ ಫ್ಯೂಡಲ್ ವ್ಯವಸ್ಥೆಯನ್ನು ಮಾದಗರಿಯಾಗಿಟ್ಟುಕೊಂಡು ಅದರ ಭಾರತೀಯ ಆವೃತ್ತಿಯನ್ನು ಲಕ್ಷಣೀಕರಿಸುತ್ತದೆ. ಮೌರ‍್ಯ ಕಾಲದ ಕೇಂದ್ರೀಕೃತ ಪ್ರಭುತ್ವವು ಕ್ರಮೇಣ ಶಿಥಿಲವಾಗಿ ರಾಜ್ಯವು ವಿಘಟಿತವಾಗಿ ರಾಜನ ಆಧೀನದಲ್ಲಿ ಒಂದು ಆಳುವ ಮಧ್ಯವರ್ತಿಗಳ ಶ್ರೇಣಿಯೇ ಅಸ್ಥಿತ್ವದಲ್ಲಿ ಬಂದಿತು. ಅದಕ್ಕೆ ಫ್ಯೂಡಲ್ ಸ್ವರೂಪ ಪ್ರಾಪ್ತವಾಯಿತು. ಈ ಕಾಲದಲ್ಲಿ ಯುರೋಪಿನ ಫ್ಯೂಡಲ್ ಯುಗದಲ್ಲಿ ಆದಂತೆಯೇ ವ್ಯಾಪಾರ-ವಾಣಿಜ್ಯದ ಅವನತಿ, ನಗರಗಳ ನಾಶ, ಕೃಷಿಯ ಪ್ರಾಬಲ್ಯ, ಖಾಸಗಿ ಭೂ ಸ್ವಾಮ್ಯ ಇತ್ಯಾದಿಗಳು ಇದರ ಲಕ್ಷಣಗಳಾಗಿ ಕಾಣಿಸಿಕೊಳ್ಳುತ್ತವೆ. ಮೂಲತಃ ಎಡಪಂಥೀಯ ಪರಿಕಲ್ಪನೆಯಲ್ಲಿ ಈ ವಾದವನ್ನು ಮಂಡಿಸಲಾಗುವುದರಿಂದ ವರ್ಗ ವಿಭಜನೆ, ಭೌತಿಕ ವ್ಯವಸ್ಥೆಗೆ ಅನುಗುಣವಾಗಿ ಐಡಿಯಾಲಜಿಯ ನಿರ್ಮಾಣ ಮುಂತಾದ ಸಿದ್ಧಾಂತಗಳ ಪೂರ್ವಗ್ರಹೀತಗಳು ಇಲ್ಲಿವೆ. ಭಾರತೀಯ ಫ್ಯೂಡಲಿಸಂವಾದಿಗಳು ತಮ್ಮ ಚೌಕಟ್ಟನ್ನು ಕ್ರಮೇಣ ಕೇವಲ ಪ್ರಾರಂಭಿಕ ಮಧ್ಯಕಾಲಕ್ಕೆ ಮಾತ್ರ ಸೀಮಿತಗೊಳಿಸುತ್ತಾರೆ.

೪. ಸೆಗ್ಮೆಂಟರಿ ಸ್ಟೇಟ್ ಮಾದರಿ

ಬರ್ಟನ್ ಸ್ಟೈನ್ ಅವರು ೧೯೮೦ರ ದಶಕದಲ್ಲಿ ದಕ್ಷಿಣ ಭಾರತೀಯ ರಾಜ್ಯಗಳ ಸಂದರ್ಭದಲ್ಲಿ ಮಂಡಿಸಿದ ಸೆಗ್ಮೆಂಟರಿ ಸ್ಟೇಟ್ ಮಾದರಿ. ದಕ್ಷಿಣ ಭಾರತದಲ್ಲಿ ಒಂದು ಐಕ್ಯರೂಪದ ಸ್ಟೇಟ್ ಪರಿಪೂರ್ಣ ಅವಸ್ಥೆಯಲ್ಲಿ ರೂಪುಗೊಳ್ಳಲಿಲ್ಲ ಎಂಬುದು ಸ್ಟೈನ್ ಅವರ ವಾದ. ಇದು ಒಂದೆಡೆ ಪಲ್ಲವ-ಚೋಳರಂಥ ಸಾಮ್ರಾಟರ ಪ್ರಭುತ್ವ ಹಾಗೂ ಮತ್ತೊಂದೆಡೆ ಸ್ಥಾನಿಕ ಆಳುವ ಘಟಕಗಳು ತಮ್ಮ ಪ್ರಭುತ್ವಗಳನ್ನು ಉಳಿಸಿಕೊಂಡು ಸ್ಟೇಟ್ ಪೂರ್ವಾವಸ್ಥೆಯಲ್ಲೇ ಮುಂದುವರಿದು ಬಂದ ಸ್ಥಿತಿಯಾಗಿದೆ ಎನ್ನುತ್ತಾರೆ. ಹಾಗಾಗಿ ಈ ರಾಜ್ಯಗಳನ್ನು ಏಕೀಕೃತ ಸ್ಟೇಟ್ ಗಳೆಂದು ಕರೆಯುವ ಬದಲಾಗಿ ಸೆಗ್ಮೆಂಟರಿ ಸ್ಟೇಟ್ ಗಳೆಂದು ಕರೆಯ ಬೇಕೆನ್ನುತ್ತಾರೆ.

೫. ಯಜಮಾನಿಕೆಯ (Patrimonial) ಮಾದರಿಯ ಸ್ಟೇಟ್‌ಗಳು

ಮುಗಲ್‌ಸಾಮ್ರಾಜ್ಯದ ಸಂದರ್ಭದಲ್ಲಿ ಸ್ಟೀಫನ್ ಬ್ಲೇಕ್ ಅವರು ಈ ಮಾದರಿಯನ್ನು ಮಂಡಿಸುತ್ತಾರೆ. ಮೂಲತಃ ಮಾಕ್ಸ್ ವೆಬರ್ ಅವರು ಭಾರತೀಯ ಸುಲ್ತಾನರು ಹಾಗೂ ಮುಗಲ್ ಆಳ್ವಿಕೆಗಳ ಕುರಿತು ನೀಡಿದ ವರ್ಣನೆಯನ್ನು ಆಧರಿಸಿ ಬ್ಲೇಕ್ ಅವರು ತಮ್ಮ ವಿಚಾರಗಳನ್ನು ಇಡುತ್ತಾರೆ. ಈ ಮಾದರಿಯನ್ನು ಇತರ ಅನೇಕರು ಮೆಚ್ಚಿಕೊಂಡಿದ್ದಾರೆ. ಸ್ಟೈನ್ ಅವರು ವಿಜಯನಗರ ಹಾಗೂ ನಾಯಕರ ಕಾಲದ ಆಳ್ವಿಕೆಗೆ ಈ ಮಾದರಿಯನ್ನು ಅನ್ವಯಿಸುತ್ತಾರೆ.

೬. ಇಂಟಿಗ್ರೇಟೀವ್ ಸ್ಟೇಟ್ ಫಾರ್ಮೇಶನ್

ಮೇಲಿನ ಯಾವ ನಿರ್ದಿಷ್ಟ ಮಾದರಿಗಳನ್ನೂ ಸಾಧಾರಣೀಕರಿಸಲು ಬಯಸದ ಹಾಗೂ ಸ್ಟೇಟ್‌ನ ಕ್ರಿಯಾಶೀಲ ಬದಲಾವಣೆಗಳನ್ನು ಗುರುತಿಸಬಯಸುವವರೂ ಇದ್ದಾರೆ. ಉದಾಹರಣೆಗೆ ಹರ್ಮನ್ ಕುಲ್ಕೆಯವರೇ ಸ್ವತಃ ತಮ್ಮ ಲೇಖನದಲ್ಲಿ ಹೇಗೆ ಸ್ಟೇಟ್ ಎಂಬುದು ವಿಭಿನ್ನ ಹಂತಗಳಲ್ಲಿ ವಿಕಾಸವಾಗುತ್ತಿತ್ತು ಹಾಗೂ ಯಾವ ಯಾವ ರೂಪು ತಳೆಯುತ್ತಿತ್ತು ಎಂಬುದನ್ನು ಶೋಧಿಸುತ್ತಾರೆ. ಇದನ್ನು ಅವರು ಇಂಟಿಗ್ರೇಟೀವ್ ಸ್ಟೇಟ್ ಫಾರ್ಮೇಶನ್ ಎಂದು ಕರೆಯುತ್ತಾರೆ. ಇವರ ಪ್ರಕಾರ ಆಳುವವರ ಪ್ರಯೋಗ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಯ ಸಂದರ್ಭದಲ್ಲಿ ನಿರ್ದಿಷ್ಟ ಉದಾಹರಣೆಗಳನ್ನು ವಿಶ್ಲೇಷಿಸಿ ತಿಳಿಯಬೇಕೇ ಹೊರತೂ ಅದನ್ನೊಂದು ಜಡವಾದ, ಏಕರೂಪಿಯಾದ ಹಾಗೂ ಸಾರ್ವತ್ರಿಕ ಚೌಕಟ್ಟನ್ನಾಗಿ ಗ್ರಹಿಸಬಾರದು.

೭. ಐತಿಹಾಸಿಕ ಕಾರ್ಯಶೀಲವಾದ (ಏಜನ್ಸಿ) ಸ್ಟೇಟ್‌ಗಳು

ಈ ಮೇಲಿನವುಗಳಿಗೆ ಇನ್ನೂ ಒಂದು ವಾದವನ್ನು ಸೇರಿಸುವುದಾದರೆ, ವಸಾಹತೋತ್ತರ ವಾದಿಗಳು ಭಾರತೀಯ ಸ್ಟೇಟ್ ಕೂಡ ಐರೋಪ್ಯ ಸ್ಟೇಟ್‌ಗಳಂತೆಯೇ ಸಾಮಾಜಿಕ ಕಾರ್ಯಕರ್ತಗಳಾಗಿದ್ದವು ಎನ್ನುತ್ತಾರೆ. ಅಂದರೆ, ಭಾರತೀಯ ಸ್ಟೇಟ್‌ಗಳನ್ನು ದುರ್ಬಲವಾದ, ವಿಕಾಸಹೊಂದದ ಹಾಗೂ ರೋಗಗ್ರಸ್ತವಾದ ಮಾದರಿಗಳು ಎಂಬಂತೆ ವಸಾಹತು ಇತಿಹಾಸಕಾರರು ನೋಡಿದ್ದಾರೆ. ಅದನ್ನೇ ಇದುವರೆಗೂ ಒಪ್ಪಿಕೊಳ್ಳಲಾಗಿದೆ. ಆದರೆ ಭಾರತೀಯ ರಾಜತ್ವವು ಸ್ಟೇಟ್‌ನ ಕರ್ತೃತ್ವವನ್ನು ಐರೋಪ್ಯ ಸ್ಟೇಟ್‌ಗಳಂತಲ್ಲದೇ ಇನ್ನಂದು ರೀತಿಯಲ್ಲಿ ನಿಭಾಯಿಸಿದೆ ಎಂಬುದು ವಸಾಹತೋತ್ತರ ವಾದಿಗಳ ಅಭಿಪ್ರಾಯ.

ಈ ಮೇಲಿನ ವಿಭಿನ್ನ ವಾದಗಳನ್ನು ಪರಿಶೀಲಿಸಿದಾಗ ಅವುಗಳ ಹಿಂದಿರುವ ಕೆಲ ಸಾಮಾನ್ಯ ಗ್ರಹಿಕೆಗಳು ಈ ರೀತಿ ಕಂಡುಬರುತ್ತವೆ.

೧. ಸ್ಟೇಟ್ ಎಂಬ ವ್ಯವಸ್ಥೆಗೆ ಕೆಲ ಸಾಮಾನ್ಯ ಲಕ್ಷಣಗಳಿವೆ ಹಾಗೂ ಉದ್ದೇಶಗಳಿವೆ. ವಿಭಿನ್ನ ರೀತಿಯ ಸ್ಟೇಟ್‌ಗಳೂ ಇವೆ. ಭಾರತದಲ್ಲಿರುವವು ಯಾವ ಸ್ವರೂಪದವು ಹಾಗೂ ಅವು ಹೇಗೆ ಕಾರ್ಯ ನಿರ್ವಹಿಸಿದವು ಎಂಬುದನ್ನು ವರ್ಣಿಸುವ ಹಾಗೂ ಸ್ಪಷ್ಟೀಕರಿಸುವ ಕೆಲಸ ನಡೆಯಬೇಕಿದೆ.

೨. ಸ್ಟೇಟ್ ಎಂಬುದು ಒಂದು ನಿರ್ದಿಷ್ಟ ಭೌಗೋಲಿಕ ಗಡಿಯನ್ನನುಸರಿಸಿ ಚಾಲ್ತಿಯಲ್ಲಿರಬೇಕಾದ ಒಂದು ಐಕ್ಯ ಅಧಿಕಾರ ವ್ಯವಸ್ಥೆ. ಆ ಗಡಿಯೊಳಗಿರುವ ವ್ಯವಸ್ಥೆಗಳೆಲ್ಲ ಸ್ಟೇಟಿನೊಳಗೇ ಬರುತ್ತವೆ. ಅವು ಕೇಂದ್ರೀಕೃತವಾಗಿರಬಹುದು ಇಲ್ಲ ವಿಚ್ಛಿನ್ನವಾಗಿರಬಹುದು, ವಿಘಟಿತವಾಗಿರಬಹುದು, ಅದು ಪ್ರಕ್ರಿಯಾತ್ಮಕವಾಗಿ ಸಾಂದರ್ಭಿಕವಾಗಿ ವ್ಯಕ್ತವಾಗಬಹುದು, ಸ್ಟೇಟ್‌ನ ಕುರಿತು ಸ್ವೀಕೃತವಾದ ಯಾವುದೇ ಲಕ್ಷಣಗಳನ್ನೂ ಹೊಂದದೇ ಇರಬಹುದು, ಆದರೂ ಅಲ್ಲಿ ಒಂದು ಸ್ಟೇಟ್ ಇರುತ್ತದೆ.

ಇದರ ಸಮಸ್ಯೆಗಳು ಕೂಡ ಸುವ್ಯಕ್ತವಾಗಿಯೇ ಇವೆ. ಅವುಗಳನ್ನು ಹೀಗೆ ಹೇಳಬಹುದಾಗಿದೆ:

೧. ಭಾರತದಲ್ಲಿ ಐತಿಹಾಸಿಕ ಕಾಲದಲ್ಲಿ ಒಂದೇ ರಾಜ್ಯದಲ್ಲಿದ್ದ ವಿಭಿನ್ನ ಆಳ್ವಿಕೆಗಳು ಹೇಗೆ ಸ್ಟೇಟ್‌ನ್ನು ರಚಿಸುತ್ತವೆ ಎಂಬುದು ಸ್ಪಷ್ಟವಾಗುವುದಿಲ್ಲ. ಅದನ್ನು ಯುರೋಪಿನ ಚಿಂತನೆಯ ಚೌಕಟ್ಟಿನ ಯಾವ ಮಾದರಿಯಿಂದ ವರ್ಣಿಸಬೇಕು ಎಂಬುದು ಸ್ಪಷ್ಟವಾಗುವುದಿಲ್ಲ.

೨. ಭಾರತೀಯ ರಾಜ್ಯಗಳಲ್ಲಿ ವಿಭಿನ್ನ ಆಳ್ವಿಕೆಗಳನ್ನು ನಿರ್ವಹಿಸಿದ ಅಧಿಕಾರಿಗಳನ್ನು ಹಾಗೂ ಅವರ ಕಾರ್ಯಕ್ರಮಗಳನ್ನು ಹೇಗೆ ಸ್ಟೇಟ್ ಕಾರ್ಯಕ್ರಮವನ್ನಾಗಿ ಗ್ರಹಿಸಿಕೊಳ್ಳ ಬೇಕೆಂಬುದು ತಿಳಿಯುವುದಿಲ್ಲ.

೩. ಭಾರತೀಯ ರಾಜತ್ವಕ್ಕೆ ಸಂಬಂಧಿಸಿದ ವಿಭಿನ್ನ ಆಚರಣೆಗಳನ್ನು, ನಂಬಿಕೆಗಳನ್ನು ಒಂದು ಸ್ಟೇಟ್‌ನ ಕಾರ್ಯಕ್ರಮವಾಗಿ ವಿಚಾರದ ಚೌಕಟ್ಟಿನಲ್ಲಿ ಹೇಗೆ ತರಬೇಕೆಂಬುದು ಸ್ಪಷ್ಟವಾಗುವುದಿಲ್ಲ.

೪. ಈ ಮೇಲಿನ ಮೂರೂ ಸಮಸ್ಯೆಗಳು ಏಕೆ ಉದ್ಭವಿಸುತ್ತವೆಯೆಂದರೆ ಇವೆಲ್ಲವನ್ನೂ ಭಾರತೀಯ ಸ್ಟೇಟ್‌ಗಳ ಅಂಗಗಳು ಎಂದು ಭಾವಿಸಿಕೊಳ್ಳಲಾಗಿದೆ. ಈ ಸ್ಟೇಟಿಗೆ ಒಂದು ಏಕೋದ್ದೇಶವಿದೆ ಹಾಗೂ ಅದರ ಸಾಧನೆಗಾಗಿ ಈ ಅಂಗಗಳಿರುತ್ತವೆ. ಮೂಲತಃ ಸ್ಟೇಟ್‌ನ ಉದ್ದೇಶ ಸಾಧನೆಯ ಭಾಗಗಳು ಎಂದು ಐರೋಪ್ಯರಿಗೆ ಪರಿಚಿತವಾದ ಯಾವ ಯಾವ ಅಂಶಗಳು ಇಲ್ಲಿ ಕಂಡುಬರುತ್ತವೆಯೋ ಅವುಗಳ ಉದ್ದೇಶವನ್ನು ಇಲ್ಲಿ ವೈಚಾರಿಕ ವಿವರಣೆಗೆ ಒಗ್ಗಿಸುವುದು ಕಷ್ಟವಾಗುತ್ತಿದೆ ಎಂಬುದು ಈ ಸಮಸ್ಯೆಗಳಿಂದ ವಿದಿತವಾಗುತ್ತದೆ.

ಇವು ಈ ಲೇಖನದ ಪ್ರಾರಂಭದಲ್ಲಿ ಮಾಡಿದ ಹೇಳಿಕೆಯನ್ನು ಧೃಡೀಕರಿಸುತ್ತವೆ. ಈ ಸಮಸ್ಯೆಯನ್ನು ಬಗೆಹರಸುವುದೂ ಅಸಾಧ್ಯ ಎಂಬುದೂ ಸ್ಪಷ್ಟ. ಹಾಗಾಗಿ ಈ ವಾಸ್ತವವನ್ನು ಹಿನ್ನೆಲೆಯಲ್ಲಿಟ್ಟುಕೊಂಡು, ಅದರ ಕುರಿತ ಸಂಶೋಧನೆಗಳನ್ನು ಎದುರು ನೋಡುತ್ತ, ಈಗ ವಸಾಹತುಪೂರ್ವ ಭಾರತೀಯ ರಾಜ್ಯ ಪದ್ಧತಿಯನ್ನು ಕುರಿತು ಬಂದ ಪ್ರಮುಖ ಪರಿಕಲ್ಪನೆಗಳನ್ನು ಹಾಗೂ ಚರ್ಚೆಗಳನ್ನು ಕರ್ನಾಟಕದಂಥ ಪ್ರಾದೇಶಿಕ ಸಂದರ್ಭದಲ್ಲಿ ಇಟ್ಟಾಗ ಅದರ ಸಮಸ್ಯೆಗಳು ಹೇಗೆ ಪ್ರಕಟವಾಗುತ್ತವೆ ಎಂಬುದನ್ನು ನೋಡೋಣ.

ಕೇಂದ್ರೀಕೃತ ರಾಜ್ಯು ಹಾಗೂ ಸ್ಥಾನಿಕ ಸ್ವಯಂ ಆಡಳಿತ ಘಟಕಗಳು

ಕರ್ನಾಟಕ ಪ್ರದೇಶವನ್ನು ಆಳಿದ ವಿಭಿನ್ನ ರಾಜಮನೆತನಗಳ ಕುರಿತು ನಡೆದ ಬಹುತೇಕ ಅಧ್ಯಯನಗಳು ರಾಷ್ಟ್ರೀಯ ಇತಿಹಾಸ ಲೇಖನದ ಸೈದ್ಧಾಂತಿಕ ಚೌಕಟ್ಟನ್ನು ಪೂರ್ವಭಾವಿಯಾಗಿ ಇಟ್ಟುಕೊಳ್ಳುತ್ತವೆ. ಏಕೆಂದರೆ ಒಂದೋ, ಅವು ರಾಷ್ಟ್ರೀಯ ಇತಿಹಸ ಸಂಶೋಧನೆಯ ಒಂದು ಭಾಗವಾಗಿ ಹೊರಬಂದಿವೆ. ಇಲ್ಲ, ಅದರ ಕರ್ನಾಟಕದ ಆವೃತ್ತಿಯಾಗಿವೆ. ಹಾಗಾಗಿ ಈ ರಾಜ್ಯಗಳು ಯಾವ ರೀತಿಯ ಸ್ಟೇಟ್‌ಗಳಾಗಿದ್ದವು ಎಂಬ ಕುರಿತ ಚರ್ಚೆಗಳು ಇಲ್ಲಿ ಅಪ್ರಸ್ತುತವಾಗಿವೆ. ಇವು ಆಡಳಿತದ ವಿವರಗಳ ಶೋಧನೆಗೆ ತಮ್ಮನ್ನು ತೊಡಗಿಸಿಕೊಳ್ಳುತ್ತವೆ. ಆದರೆ ಈ ವಿವರಗಳು ರಾಜ್ಯವನ್ನೊಂದು ಐಕ್ಯ ವ್ಯವಸ್ಥೆಯನ್ನಾಗಿ ಭಾವಿಸಿಕೊಳ್ಳುವುದರಿಂದ ಇವು ಸ್ಟೇಟ್ ಕಲ್ಪನೆಯನ್ನು ಬಳಸಿಕೊಂಡು ತಮ್ಮ ಮಾಹಿತಿಯನ್ನು ಅರ್ಥೈಸುತ್ತಿವೆ ಎಂಬುದು ವಿದಿತವಾಗುತ್ತದೆ. ಹಾಗಾಗಿ ರಾಜ್ಯಗಳನ್ನು ಕೇಂದ್ರೀಕೃತ ವ್ಯವಸ್ಥೆಗಳು ಎಂಬಂತೆ ವರ್ಣಿಸಲಾಗುತ್ತದೆ. ಆದರೆ ಪೂರಕ ಮಾಹಿತಿಗಳು ಇಲ್ಲದಿದ್ದರೂ, ಇಂಥ ನಿರ್ಣಯಗಳಿಗೆ ಅವುಗಳ ಅಗತ್ಯ ಕಂಡುಬರುವುದಿಲ್ಲ. ಈ ರೀತಿ ಮಾಹಿತಿಗಳ ಗೈರುಹಾಜರಿಯಲ್ಲಿ ಈ ವ್ಯವಸ್ಥೆಯನ್ನು ಭಾವಿಸಿಕೊಳ್ಳಲಾಗುವುದರಿಂದ ಅದೊಂದು ಸ್ವೀಕೃತ ಚೌಕಟ್ಟು ಎಂಬುದು ಸ್ಪಷ್ಟ. ಸಂಶೋಧಕರು ಒಂದು ರಾಜ್ಯದ ಆಡಳಿತವನ್ನು ವಿವರಿಸುವಾಗ ನೇರವಾಗಿ ಕೇಂದ್ರಾಡಳಿತ, ಪ್ರಾಂತ್ಯಾಡಳಿತ, ಅಧಿಕಾರಿಗಳು, ಮಂತ್ರಿಗಳು, ಸೈನ್ಯ, ಕಂದಾಯ ಇಲಾಖೆ ಇತ್ಯಾದಿಯಾಗಿ ವಿವರಿಸಿಕೊಂಡು ಹೋಗುತ್ತಾರೆ. ಈ ರಾಜ್ಯಗಳ ಒಳಗೇ ಸ್ವಾಯತ್ತ ಆಡಳಿತ ನಡೆಸಿಕೊಳ್ಳುವ ನಾಡು, ಮಹಾನಾಡು, ಅಗ್ರಹಾರ, ಊರು ಇತ್ಯಾದಿಗಳು ಬರುತ್ತವೆ. ವಸಾಹತುಪೂರ್ವದ ಯಾವುದೇ ರಾಜ್ಯದ ಕುರಿತು ಇದೇ ಚೌಕಟ್ಟಿನಲ್ಲಿ ವಿವರಗಳನ್ನು ಜೋಡಿಸುವುದು ತೀರಾ ರೂಢಿಗತವಾದ, ಜನಪ್ರಿಯವಾದ ವಿಧಾನವಾಗಿದೆ ಎಂಬುದು ಕೈಗೆ ಸಿಕ್ಕ ಯಾವುದೇ ಪುಸ್ತಕವನ್ನು ಪರೀಕ್ಷಿಸಿದರೂ ಕಂಡುಬರುವ ಸತ್ಯವಾಗಿದೆ.

ಈ ಮಾರ್ಗದ ಇತಿಹಾಸ ಲೇಖನಗಳ ಒತ್ತು ಹಾಗೂ ವೈಶಿಷ್ಟ್ಯತೆಗಳನ್ನು ಗುರುತಿಸದಿದ್ದರೆ ಈ ಬಗೆಯ ಅಧ್ಯಯನಗಳ ಮಹತ್ವವನ್ನು ಮನಗಾಣುವುದು ಸಾಧ್ಯವಾಗಲಾರದು. ರಾಜ್ಯ ರಚನೆಯಾಗಲೀ, ರಾಜ್ಯಾಡಳಿತವಾಗಲೀ ಇಂತಹ ಅಧ್ಯಯನಗಳ ಗುರಿಯಲ್ಲ. ಅವು ರಾಜಮನೆನತಗಳ ಚರಿತ್ರೆಗಳು. ಆ ಮನೆತನಗಳು ಪ್ರಾರಂಭ ಹೇಗಾದವು, ಅಂದರೆ ಅವುಗಳ ಸಂಸ್ಥಾಪನೆ ಹೇಗಾಯಿತು, ಯಾವ ಯಾವ ರಾಜರು ಆಳಿದರು, ಅವರ ಸಾಧನೆಯೇನು, ಅದರಲ್ಲೂ ಮುಖ್ಯವಾಗಿ ಅವರ ವಿಜಯ ಯಾತ್ರೆಗಳು, ಸಾಮ್ರಾಜ್ಯ ವಿಸ್ತಾರ, ಕಲೆ, ಸಂಸ್ಕೃತಿಗಳಿಗೆ ಅವರ ಕೊಡುಗೆ ಇತ್ಯಾದಿಗಳು ಇಲ್ಲಿನ ವಿಷಯಗಳು. ಇವೆಲ್ಲವನ್ನೂ ರಾಜಮನೆತನದ ಚೌಕಟ್ಟಿನಲ್ಲೇ ಗ್ರಹಿಸಲಾಗುತ್ತದೆ. ಹಾಗಾಗಿ ಈ ಮನೆತನಗಳ ವಂಶಾವಳಿ, ಪ್ರತ್ಯೇಕ ರಾಜರ ಯುದ್ಧ ಸಾಧನೆಗಳು ಬಹುಭಾಗ ತುಂಬಿರುತ್ತವೆ, ಇಲ್ಲ ಬರೀ ಅವುಗಳೇ ಇದ್ದರೂ ಆಶ್ಚರ್ಯವಿಲ್ಲ. ಕೊನೆಯಲ್ಲಿ ಡೀ ಮನೆತನಕ್ಕೆ ಸಾಮಾನ್ಯವಾಗಿ ಅನ್ವಯವಾಗುವಂತೆ ಅವುಗಳ ಆಡಳಿತ, ಕಲೆ ಸಂಸ್ಕೃತಿಗಳಿಗೆ ಅವುಗಳ ಕೊಡುಗೆ ಇರುತ್ತವೆ. ಈ ವರ್ಣನೆಗಳನ್ನು ಎಷ್ಟು ಅಸಂಗತವಾಗಿ ರಾಜಮನೆತನಗಳಿಗೆ ಸೇರಿಸಲಾಗುತ್ತದೆಯೆಂದರೆ, ಅವರಾಳಿದರೆನ್ನಲಾದ ಪ್ರದೇಶದಲ್ಲಿ ಹಾಗೂ ಕಾಲದಲ್ಲಿ ಯಾವುದೇ ಗ್ರಂಥ ರಚನೆಯಾಗಲಿ, ಯಾವುದೇ ದೇವಾಲಯ ನಿರ್ಮಾಣವಾಗಲಿ, ಅದನ್ನು ಯಾರೇ ಮಾಡಿರಬಹುದು, ಅದರ ಹಕ್ಕು ಹಾಗೂ ಶ್ರೇಯಸ್ಸು ಈ ರಾಜರಿಗೆ ಸಲ್ಲುತ್ತದೆ. ಕಾರಣ ಏನೆ ಇರಬಹುದು, ಆದರೆ ಈ ಇತಿಹಾಸಗಳು ವ್ಯಕ್ತಿತ್ವ ಪ್ರಧಾನವಾಗಿದ್ದಂತೂ ಹೌದು. ಒಂದು ರೀತಿಯಲ್ಲಿ ಇವು ರಾಜರ ಜೀವನಚರಿತ್ರೆಗಳಾಗಿದ್ದು ವ್ಯವಸ್ಥೆಗಳ ಚರಿತ್ರೆಯಲ್ಲ. ರಾಜವಂಶಗಳ ಬದಲಾವಣೆಗೂ ರಾಜ್ಯವ್ಯವಸ್ಥೆಗೂ ಏನು ಸಂಬಂಧ, ರಾಜವಂಶದ ಸಂಸ್ಥಾಪನೆ ರಾಜ್ಯ ವ್ಯವಸ್ಥೆಯ ಸಂಸ್ಥಾಪನೆಯೆ, ಸಾಮ್ರಾಜ್ಯ ವಿಸ್ತಾರ ಎಂದರೇನು, ರಾಜ ಮನೆತನಗಳ ಅವನತಿಯಿಂದ ರಾಜ್ಯ ವ್ಯವಸ್ಥೆ ವಿನಾಶವಾಯಿತೆ ಇಲ್ಲ ಮನೆತನ ಅಂತ್ಯವಾಯಿತೆ, ಆಡಳಿತದ ಕುರಿತು ಮಾತನಾಡುವಾಗ ಕೂಡ ಒಟ್ಟಾರೆಯಾಗಿ ಅಧಿಕಾರ ರಚನೆ, ನಿಯೋಗ, ಸ್ವಾಯತ್ತತೆ ಮುಂತಾದವುಗಳು ಕುರಿತು ವಿಶ್ಲೇಷಣೆಗಳು ಕಂಡುಬರದೇ ಯಾವುದೋ ಒಂದು ಸಿದ್ಧ ವಿಚಾರವನ್ನು ಒಪ್ಪಿಕೊಂಡು ಅದನ್ನು ದೃಷ್ಟಾಂತಪಡಿಸುವ ಧೋರಣೆ ಇರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಎರಡು ಕೃತಿಗಳನ್ನು ವಿಶ್ಲೇಷಿಸಿದರೆ ಸಮಸ್ಯೆ ಅರಿವಾಗುತ್ತದೆ. ಈ ಎರಡೂ ಕೃತಿಗಳೂ ಮೇಲಿನ ಸಾಮಾನ್ಯ ವರ್ಗಗಳಿಗೆ ಅಪವಾದವಾಗಿವೆ. ಏಕೆಂದರೆ ಅವು ರಾಜಮನೆತನಗಳನ್ನು ಬಿಟ್ಟು ಅವುಗಳ ಆಡಳಿತದ ಕುರಿತು ಕೇಂದ್ರೀಕರಿಸುತ್ತವೆ. ಮೊದಲನೆಯದು ದಿನಕರ ದೇಸಾಯಿ ಅವರ ಮಹಾಮಂಡಳೇಶ್ವರಾಸ್ ಅಂಡರ್ ದಿ ಚಾಲುಕ್ಯಾಸ್ ಆಫ್ ಕಲ್ಯಾಣಿ ಮತ್ತು ಎರಡನೆಯದು ಜಿ.ಎಸ್.ದೀಕ್ಷಿತ ಅವರ ಲೋಕಲ್ ಸೆಲ್ಫ್‌ಗೌವರ‍್ನಮೆಂಟ್ ಇನ್ ಮಿಡಿವೆಲ್ ಕರ್ನಾಟಕ ಎನ್ನುವ ಕೃತಿಗಳು ಆಡಳಿತಕ್ಕೆ ಸಂಬಂಧಪಟ್ಟ ವಿಷಯಗಳನ್ನೇ ನಿರೂಪಿಸುವಾಗ ಸಮಸ್ಯೆಯನ್ನು ಹೇಗೆ ಗುರುತಿಸುತ್ತವೆ ಎಂಬುದನ್ನು ಚರ್ಚಿಸಬಹುದಾಗಿದೆ. ದಿನಕರ ದೇಸಾಯಿ ಅವರು ಚಾಲುಕ್ಯರ ಕಾಲದ ಅನೇಕ ಮಹಾಮಂಡಳೇಶ್ವರರ ಕುರಿತು ಚರ್ಚಿಸಿದರು ಅವರು ಪ್ರತ್ಯೇಕ ಮಂಡಳೇಶ್ವರ ಮನೆತನಗಳ ಇತಿಹಾಸವನ್ನು ಕಟ್ಟಿಕೊಡುವಲ್ಲಿ ಅರ್ಧಕ್ಕಿಂತ ಹೆಚ್ಚು ಭಾಗವನ್ನು ವಿನಿಯೋಗಿಸುತ್ತಾರೆ. ಈ ಇತಿಹಾಸಗಳು ರಾಜಮನೆತನಗಳ ಇತಿಹಾಸದ ಜಾಡಿನಲ್ಲೇ ಇವೆ. ಅವರೂ ಯುದ್ಧ ಮಾಡುತ್ತಾರೆ, ಗಡಿ ವಿಸ್ತಾರ ಮಾಡುತ್ತಾರೆ, ಆಶ್ರಯ ನೀಡುತ್ತಾರೆ. ಹೀಗೆ ತುಲನೆ ಮಾಡುತ್ತ ಹೋದರೆ ಅವರ ಸಾಧನೆಗಳಿಗೂ ರಾಜರ ಸಾಧನೆಗಳಿಗೂ ವ್ಯತ್ಯಾಸವೇನೂ ಕಾಣುವುದಿಲ್ಲ. ಮಹಾಮಂಡಳೇಶ್ವರರಿಗೂ ಕೂಡ ಅಧೀನ ಅಧಿಕಾರಿಗಳ ಶ್ರೇಣಿಯೇ ಇದೆ. ಅದು ಹಳ್ಳಿಯ ಗಾವುಂಡರವರೆಗೆ ಇದೆ. ಆದರೆ ಇವರು ಚಾಲುಕ್ಯರ ಅಧಿಕಾರಿಗಳು ಹೇಗಾಗುತ್ತಾರೆ? ಚಾಲುಕ್ಯರ ಸಾಮ್ರಾಜ್ಯದ ಬಹುಭಾಗದಲ್ಲಿ ಇವರೇ ಆಳ್ವಿಕೆ ನಡೆಸಿದ್ದರೆ ಅಲ್ಲಿ ನಿಜವಾಗಿಯೂ ಇದ್ದ ರಾಜ್ಯ ಯಾರದು? ಆದರೆ ದೇಸಾಯಿ ಅವರು ಇದನ್ನು ವಿವರಿಸುವುದು ಹೀಗೆ: ಆಡಳಿತದ ಕುರಿತು ವಿವರಿಸುವಾಗ,

ಚಾಲುಕ್ಯರ ವಿಸ್ತಾರವಾದ ಸಾಮ್ರಾಜ್ಯವನ್ನು ಪ್ರಾಂತಗಳನ್ನಾಗಿ ವಿಭಾಗಿಸಿದ್ದುದು ಸಹಜ. ಅದರ ಬಹುಪಾಲು ಮಹಾಮಂಡಳೇಶ್ವರರೆಂಬ ಫ್ಯೂಡಾಟರಿಗಳು ಆಳುತ್ತಿದ್ದರು. ಅವರು ಸಾಮ್ರಾಟರ ಸರ್ವೋಚ್ಛ ಅಧಿಕಾರವನ್ನು ಒಪ್ಪಿಕೊಂಡರೂ.. ಅವರು ಸ್ವತಂತ್ರ ರಾಜರೇ ಆಗಿದ್ದರು. ಕೆಲವೊಮ್ಮೆ ಸರ್ವೋಚ್ಛ ಅಧಿಕಾರಿಗಳು ಅವರನ್ನು ಬಗ್ಗುಬಡಿದು ಅಧೀನರನ್ನಾಗಿ ಮಾಡುವುದು ಅನಿವಾರ್ಯವಾಗಿತ್ತು.. ಸಾಮಂತ
ರಾಜಕುಮಾರರು ಅರೆ ಸ್ವತಂತ್ರ ಸ್ಥಾನಮಾನವನ್ನು ಹೊಂದಿದ್ದರು…

ಎಂದು ಒಂದೆಡೆ ಹೇಳಿದರೆ, ಮತ್ತೊಂದೆಡೆ “ಚಾಲುಕ್ಯರ ಕರ್ನಾಟಕದಲ್ಲಿ ರಾಜನು ತಾತ್ವಿಕವಾಗಿ ಸರ್ವಸ್ವತಂತ್ರನಾಗಿದ್ದ, ಆದರೆ ಪ್ರಾಯೋಗಿಕವಾಗಿ ಹಾಗಿರಲಿಲ್ಲ. ಅವನ ಅಧಿಕಾರವು ತಡೆಗಳು ಮತ್ತು ಸಮತೋಲನಗಳಿಂದ ನಿಯಂತ್ರಿತವಾಗಿತ್ತು…” ಎಂದು ಸಾಮಂತರ ಸಂದರ್ಭದಲ್ಲಿ ಹೇಳುತ್ತಾರೆ.

ಲೋಕಲ್ ಸೆಲ್ಫ್ ಗೌವರ‍್ನಮೆಂಟ್ ಇನ್ ಮಿಡಿವೆಲ್ ಕರ್ನಾಟಕದಲ್ಲಿ ಸ್ಥಾನಿಕ ಆಡಳಿತ ಘಟಕಗಳಾದ ಮಹಾನಾಡು, ನಾಡು, ಅಗ್ರಹಾರ, ಊರು, ನಗರ, ಇತ್ಯಾದಿಗಳ ಕುರಿತು ವಿವರಣೆ ಇದೆ. ಈ ಘಟಕಗಳ ಆಡಳಿತಗಾರರು, ಅವರ ನೇಮಕಾತಿ, ಸಂಬಳ ಇತ್ಯಾದಿಗಳು ಆಡಳಿತ ನಿರ್ವಹಣೆ, ಸಭೆಗಳು, ಸಮಿತಿಗಳು ಇತ್ಯಾದಿಗಳ ಕುರಿತು ಮಾಹತಿಯನ್ನು ಶಾಸನಗಳಿಂದ ಸಂಗ್ರಹಿಸಲಾಗಿದೆ. ಈ ಯಾವ ಕೆಲಸಗಳನ್ನೂ ರಾಜರಾಗಲೀ ಅವರ ಅಧಿಕಾರಿಗಳಾಗಲೀ ನಿರ್ವಹಿಸಿದಂತೆ ಇಲ್ಲ. ಆದರೆ ಈ ಗ್ರಂಥದಲ್ಲಿ ವಿಷಯ ಪ್ರವೇಶವನ್ನು ರಾಜಕೀಯ ಇತಿಹಾಸದಿಂದ ಮಾಡಲಾಗಿದೆ. ಈ ರಾಜಕೀಯವು ಪ್ರಾರಂಭವಾಗುವುದೇ ಚಾಲುಕ್ಯ, ಹೊಯ್ಸಳರಂಥ ಮನೆತನಗಳ ಇತಿಹಾಸದಿಂದ, ದೀಕ್ಷಿತರು ತಿಳಿಸುವಂತೆ,

ನಾವು ಸ್ಥಾನಿಕ ಸ್ವಾಯತ್ತ ಆಡಳಿತದ ಕುರಿತು ಪರಿಶೀಲಿಸುತ್ತಿರುವುದುರಿಂದ ರಾಜಕೀಯ ಇತಿಹಾಸವು ನಮ್ಮ ಕೇಂದ್ರ ಕಾಳಜಿಯಲ್ಲ… ಅದೇ ವೇಳೆಗೆ ಸ್ಥಾನಿಕ ಸ್ವಾಯತ್ತ ಆಡಳಿತವನ್ನು ಚೆನ್ನಾಗಿ ತಿಳಿದುಕೊಳ್ಳಬೇಕಾದರೆ ಪ್ರಾದೇಶಿಕ ವಿಭಾಗಗಳ ರಾಜಕೀಯ ಇತಿಹಾಸದ ಸಮೀಕ್ಷೆ ಅವಶ್ಯಕವಾಗಿದೆ. ಪ್ರಾಚೀನ ಭಾರತದಲ್ಲಿ ರಾಜಮನೆತನಗಳ ವಾರಸುದಾರಿಕೆಯ ಕಲಹ, ದಂಗೆ, ಸಾಮ್ರಾಜ್ಯಗಳ ಏಳು ಬೀಳುಗಳು ಹಳ್ಳಿ ಸಮುದಾಯಗಳ ಮೇಲೆ ಪರಿಣಾಮ ಬೀರುತ್ತಿರಲಿಲ್ಲ…

ದೀಕ್ಷಿತರು ಈ ಎರಡೂ ವಿಚಾರಗಳನ್ನು ಬೇರೆ ಬೇರೆ ಎಂಬುದಾಗಿಯೇ ಗ್ರಹಿಸುತ್ತಾರೆ. ರಾಜಕೀಯ ಇತಿಹಾಸದಲ್ಲಿ ಕೇಂದ್ರ ಆಡಳಿತ, ಅದರ ಖಾತೆಗಳು, ಪ್ರಾಂತೀಯ ಆಡಳಿತ ಹಾಗೂ ಪ್ರಾಂತೀಯ ವಿಭಾಗಗಳು ಮುಂತಾದವುಗಳ ಕುರಿತ ಚರ್ಚೆ ಇದೆ. ನಂತರ ಸ್ಥಾನಿಕ ಘಟಕಗಳ ಕುರಿತು ಪ್ರಾರಂಭಿಸುವಾಗ “ಈಗ ಆಡಳಿತದ ಸಲುವಾಗಿ ದೇಶವನ್ನು ಯಾವ ರೀತಿ ವಿಭಾಗಿಸಲಾಗಿತ್ತು ಎಂಬುದನ್ನು ನೋಡಿರುವುದರಿಂದ ಮತ್ತೊಂದು ಹಂತದಲ್ಲಿ ಇದ್ದ ಸ್ಥಾನಿಕ ಸ್ವಾಯತ್ತ ಆಡಳಿತ ಘಟಕಗಳನ್ನು ಕೈಗೆತ್ತಿಕೊಳ್ಳೋಣ…” ಎನ್ನುತ್ತಾರೆ. ಸಾಮ್ರಾಜ್ಯಗಳ ಆಡಳಿತ ವಿಭಾಗಗಳಲ್ಲೂ ನಾಡು, ಬಾಡ, ಗ್ರಾಮ, ಊರು ಇತ್ಯಾದಿಗಳು ಕಾಣಿಸಿಕೊಳ್ಳುತ್ತವೆ. ಒಂದು ನಾಡು ಯಾವಾಗ ಸಾಮ್ರಾಜ್ಯದ ವಿಭಾಗವಾಗುತ್ತದೆ ಹಾಗೂ ಯಾವಾಗ ಸ್ವಾಯತ್ತ ಘಟಕವಾಗುತ್ತದೆ ಎಂಬುದು ಸ್ಪಷ್ಟವಿಲ್ಲ. ಒಟ್ಟಾರೆಯಾಗಿ ಈ ಸ್ಥಾನಿಕ ಘಟಕಗಳೆಲ್ಲ ರಾಜ್ಯದ ಆಡಳಿತ ವೈಖರಿಗಳೇ ಎಂಬುದಾಗಿ ಗ್ರಹಿಸಿದರೆ ಮಾತ್ರ ಇದು ಅರ್ಥವಾಗುತ್ತದೆ.

ಈ ಮೇಲಿನ ಎರಡೂ ಅಧ್ಯಯನಗಳು ಸಮಸ್ಯೆಯನ್ನು ಸಮಸ್ಯೀಕರಿಸುವುದಿಲ್ಲ. ಏಕೆಂದರೆ ಈ ಲೇಖಕರಿಗೆ ಈ ಸಮಸ್ಯೆಯನ್ನು ವಿವರಿಸುವ ಒಂದು ಮಾದರಿ ಇದೆ. ದೇಸಾಯಿ ಅವರಿಗೆ ಇರುವ ಮಾದರಿ ಇದು:

ಮಹಾಮಂಡಲೇಶ್ವರರದು ವಿಶಿಷ್ಟವಾದ ಸ್ಥಾನಮಾನವಾಗಿತ್ತು.. ಪರಿಪೂರ್ಣ ಸಾರ್ವಭೌಮತ್ವಕ್ಕೆ ಒಯ್ಯುವ ಸ್ವಾತಂತ್ರ‍್ಯವೂ ಅಲ್ಲ, ಅಥವಾ ಆಧುನಿಕ ಭಾರತದ ದಕ್ಷಿತ ದೇಶೀ ಸ್ಟೇಟ್‌ಗಳ ಹಾಗೆ ಪರಿಪೂರ್ಣ ಆಧೀನತೆಯೂ ಅಲ್ಲ… ಅವರು ಪರಸ್ಪರ ಯುದ್ಧ ಮಾಡುವ ಹಕ್ಕನ್ನು ಹೊಂದಿದ್ದರು… ಆ ಹಕ್ಕನ್ನು ಇಂದಿನ ಸಹಾಯಕ ರಾಜ್ಯಗಳಿಗೆ ನಿರಾಕರಿಸಲಾಗಿದೆ…

ವಸಾಹತುಗಳ ಮೇಲೆ ಬ್ರಿಟಿಶರು ಸ್ಥಾಪಿಸಿದ ಸ್ಟೇಟ್‌ ಇಲ್ಲಿನ ಮಾದರಿಯಾಗಿದ್ದುದು ಸ್ಪಷ್ಟ. ಮಹಾಮಂಡಳೇಶ್ವರರ ಸಂದರ್ಭದಲ್ಲಿ ಸ್ವಾತಂತ್ರ‍್ಯ, ಹಕ್ಕು ಮುಂತಾದವುಗಳನ್ನು ಮಂಜೂರು ಮಾಡಲಿಕ್ಕೆ ಸ್ಟೇಟ್ ಇರಲೇಬೇಕಲ್ಲವೆ? ಅಂದ ಮೇಲೆ ಸಮಸ್ಯೆ ಎಲ್ಲಿಂದ ಬಂತು? ಅದೇ ರೀತಿ ದೀಕ್ಷಿತರೂ ಕೂಡ ತಮ್ಮ ಗ್ರಂಥದ ಅಂತ್ಯದಲ್ಲಿ ಫಲಿತಾಂಶಗಳನ್ನು ಪಟ್ಟಿಮಾಡಿದ್ದಾರೆ. ಅಲ್ಲಿ ಸಹಕಾರತತ್ವ, ವಿಕೇಂದ್ರೀಕರಣ, ಪ್ರಜಾಪ್ರಭುತ್ವ ಮುಂತಾದ ಅಂಶಗಳ ಕುರಿತು ತಿಳಿಸುತ್ತಾರೆ. “ಈ ಆಡಳಿತಗಳು ಜನರೇ ಸ್ವತಃ ಸಹಕಾರದ ಮಹತ್ವವನ್ನು ಅರಿತುಕೊಂಡು ಸಂಪೂರ್ಣವಾಗಿ ಸ್ವಯಂಸ್ಫೂರ್ತಿಯಿಂದ ಮಾಡಿದ ಪ್ರಯತ್ನಗಳಾಗಿವೆ. ಕೇಂದ್ರ ಸರ್ಕಾರ ಬದಲಾದರೂ ಕಾಯ್ದೆ ಕಾನೂನುಗಳನ್ನು ತಾವು ನಿರ್ವಹಿಸಿಕೊಂಡು ಹೋಗುತ್ತೇವೆ ಎಂಬುದಾಗಿ ಜನರಿಗೆ ಅವು ಆಶ್ವಾಸನೆ ನೀಡಿದವು…” ವಿಭಿನ್ನ ಘಟಕಗಳು ಒಟ್ಟಿಗೆ ಬರಲಿಕ್ಕೆ ಈ ಸಹಕಾರ ತತ್ವ ಸಹಾಯಕ್ಕೆ ಬಂದರೆ, “ಅಧಿಕಾರ ನಿಯೋಗದ ಲಾಭವನ್ನು ಪಡೆದು ಕೊಳ್ಳಲಿಕ್ಕೆ ವಿಕೇಂದ್ರೀಕರಣವನ್ನು ಸಾಧಿಸಲಾಯಿತು…” ಹಾಗೂ ಇದರಲ್ಲಿ ಪ್ರಜಾಪ್ರಭುತ್ವದ ಸದ್ಗುಣಗಳಾದ ಪ್ರಾತಿನಿಧ್ಯ, ಚರ್ಚೆ ಮಾಡಿ ನಿರ್ಣಯಿಸುವುದು, ಸಾಮೂಹಿಕ ಸಂಘಟನೆ, ಸಾಂವಿಧಾನಿಕ ಪ್ರಯೋಗಗಳು, ಹಾಗೂ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ಮುಂತಾದವು ಇವೆ. ಇದು ಸ್ವತಂತ್ರ ಭಾರತದ ಸ್ಟೇಟ್ ಅನ್ನು ಮನಸ್ಸಿನಲ್ಲಿಟ್ಟು ಕೊಂಡು ಅದರ ಆದರ್ಶಗಳನ್ನು ಇತಿಹಾಸದಿಂದ ದೃಷ್ಟಾಂತೀಕರಿಸುವ ಕೆಲಸವಾಗಿದೆ. ವಸಾಹತು ಮತ್ತು ಸ್ವತಂತ್ರ ಭಾರತೀಯ ರಾಜಕೀಯ ಚಿಂತನೆಗಳು ಯಾವ ಇತಿಹಾಸವನ್ನು ಕಲ್ಪಿಸಿಕೊಂಡಿದ್ದವೋ ಅವೇ ಹಳ್ಳಿ ಸಮುದಾಯಗಳು, ಸಡಿಲವಾದ ಹಾಗೂ ಐಕ್ಯತೆಯನ್ನು ಸಾಧಿಸಲಿಕ್ಕೆ ಸೋತ ರಾಜ ಪ್ರಭುತ್ವ, ಇಂಥ ಕಲ್ಪನೆಗಳೇ ಈ ವಿಚಾರಗಳ ಮೂಲವಸ್ತಗಳು. ನಾವು ನೋಡುವುದು ಅವುಗಳ ಪುನರುತ್ಪಾದನೆಯನ್ನು.

ಕೇಂದ್ರ, ತಿರುಳು ಮತ್ತು ಅಂಚು

ಮೇಲೆ ಉಲ್ಲೇಖಿಸಿದ ರಾಜ್ಯ ವ್ಯವಸ್ಥೆಯ ಕಲ್ಪನೆಗಳು ಆಧುನಿಕ ಸ್ಟೇಟ್ ಕಲ್ಪನೆಯನ್ನು ಪೂರ್ವಭಾವಿಯಾಗಿಟ್ಟುಕೊಂಡಿವೆ. ಹಾಗಾಗಿ ಅವು ಕೇಂದ್ರೀಕೃತ ವ್ಯವಸ್ಥೆಯನ್ನು ತಮ್ಮ ಮಾಹಿತಿಯ ಬೆಳಕಿನಲ್ಲಿ ವಿಮರ್ಶೆಗೊಡ್ಡದೇ ಒಪ್ಪಿಕೊಳ್ಳುವುದು ಈ ಇತಿಹಾಸ ಲೇಖನದ ಸಂಪ್ರದಾಯದ ಒಂದು ಅಸಂಗತತೆಯಾಗಿದೆ. ರೊಮಿಲಾ ಥಾಪರ್ ಅವರು ಮೌರ‍್ಯ ರಾಜ್ಯದ ಸಂದರ್ಭದಲ್ಲಿ ಈ ಕುರಿತು ತಮ್ಮ ಜಿಜ್ಞಾಸೆಯನ್ನು ಮಂಡಿಸಿದ್ದಾರೆ. ಕರ್ನಾಟಕದಲ್ಲಿ ಮೌರ‍್ಯ ರಾಜ್ಯದ ವಿಸ್ತರಣೆಯಾದ ಸಂಗತಿ ಇತಿಹಾಸಕಾರರಿಗೆ ಇಲ್ಲಿ ದೊರಕುವ ಅಶೋಕನ ಧರ್ಮ ಶಾಸನಗಳು, ಹಾಗೂ ಇತರ ಆಧಾರಗಳಿಂದ ಸ್ಪಷ್ಟವಾಗುತ್ತದೆ. ಹಾಗೂ ಈ ಮೇಲೆ ಉಲ್ಲೇಖಿಸಿದ ಇತಿಹಾಸ ಲೇಖನಕ್ಕೆ ಇದು ಸಮಸ್ಯೆಯಾಗಲಿಲ್ಲ. ಅವರು ಕರ್ನಾಟಕ ಮೌರ‍್ಯ ರಾಜ್ಯದ ಒಂದು ಪ್ರಾಂತ್ಯವಾಗಿತ್ತು ಹಾಗೂ ಅದರ ಅಧಿಕಾರಿಗಳನ್ನು ಇಲ್ಲಿ ನೇಮಿಸಲಾಗಿತ್ತು ಎಂಬುದಾಗಿ ಭಾವಿಸಿಕೊಳ್ಳುತ್ತಾರೆ. ರೊಮಿಲಾ ಥಾಪರ್ ತಮ್ಮ ಪ್ರಾರಂಭಿಕ ಬರವಣಿಗೆಗಳಲ್ಲಿ ಇದೇ ಚೌಕಟ್ಟನ್ನು ಸ್ವೀಕರಿಸಿದ್ದರೂ ನಂತರ ತಮ್ಮ ಅಭಿಪ್ರಾಯವನ್ನು ಪುನರ್ಪರಿಶೀಲಿಸಲು ತೊಡಗಿದರು. ಈ ಆತ್ಮಾವಲೋಕನೆಯ ಹಿಂದೆ ೧೯೮೦ರ ದಶಕದಲ್ಲಿ ವಸಾಹತುಪೂರ್ವ ಭಾರತೀಯ ರಾಜ್ಯ ರಚನೆಯ ಕುರಿತು ಚರ್ಚೆ ಎದ್ದಿದ್ದೂ ಕಾರಣವಾಗಿದೆ. ವಿದ್ವಾಂಸರು ಫ್ಯೂಡಲ್ ವ್ಯವಸ್ಥೆಯ ಕುರಿತು ೬೦ರ ದಶಕದಲ್ಲೇ ಚರ್ಚೆಯನ್ನು ಹುಟ್ಟುಹಾಕಿದ್ದರೂ ಕೂಡ ಅವರೆಲ್ಲ ಮೌರ್ಯ ರಾಜ್ಯ ಕೇಂದ್ರೀಕೃತವಾಗಿತ್ತು ಹಾಗೂ ಅದರ ವಿಘಟನೆ ಫ್ಯೂಡಲ್ ರಾಜ್ಯ ವ್ಯವಸ್ಥೆಗೆ ಎಡೆಮಾಡಿತು ಎಂದೇ ಭಾವಿಸಿದ್ದರು. ಆದರೆ ೮೦ರ ದಶಕದಲ್ಲಿ ಭಾರತೀಯ ರಾಜ್ಯ ವ್ಯವಸ್ಥೆಯ ಕುರಿತ ಗ್ರಹಿಕೆಗಳು ಚರ್ಚಾಸ್ಪದವಾದವು. ಬಹುಶಃ ವಸಾಹತೋತ್ತರ ವಾಸ್ತವವೂ ವಸಾಹತುಗಳ ಕುರಿತು ಐರೋಪ್ಯ ಸಾಧಾರಣೀಕರಣಗಳನ್ನು ಮರು ಚಿಂತಿಸುವಂತೆ ಮಾಡಿರಬಹುದು. ಒಟ್ಟಿನಲ್ಲಿ ಈ ಚರ್ಚೆಯ ಒಂದು ಸ್ಪಷ್ಟವಾದ ಫಲಿತಾಂಶವೆಂದರೆ ನಾವು ವಸಾಹತು ಪೂರ್ವ ರಾಜ್ಯ ವ್ಯವಸ್ಥೆಯ ಕುರಿತು ಸ್ವೀಕರಿಸಿದ ಚೌಕಟ್ಟು ಸಮಸ್ಯಾತ್ಮಕವಾಗಿದೆ ಎಂಬುದು ಇತಿಹಾಸಕಾರರ ಅರಿವಿಗೆ ಬಂದಿತು.

ಥಾಪರ್ ಅವರು ತಮ್ಮ ಮೌರ‍್ಯಾಸ್ ರಿವಿಸಿಟೆಡ್ ಎನ್ನುವ ಕಿರುಹೊತ್ತಿಗೆಯಲ್ಲಿ ಈ ಮರಪರಿಶೀಲನೆಯ ಕೆಲಸವನ್ನು ಪ್ರಾರಂಭಿಸುತ್ತಾರೆ. ಇದಕ್ಕೂ ಪೂರ್ವದಲ್ಲಿ ಅವರು ಫ್ರಂ ಲೀನಿಯೇಜ್ ಟು ಸ್ಟೇಟ್‌ನಲ್ಲಿ ಪ್ರಾಚೀನ ಭಾರತದಲ್ಲಿ ಸ್ಟೇಟ್ ನಿರ್ಮಾಣದ ಹಮತಗಳನ್ನು ಗುರುತಿಸಿ ಮೌರ್ಯ ರಾಜ್ಯವು ಅದರ ಮುಕ್ತಾಯ ಎಂಬಂತೆ ಚಿತ್ರಿಸಿದ್ದರು. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಲೇಖನದಲ್ಲಿ ಮರುಚಿಂತನೆ ನಡೆಸುವುದನ್ನು ನಾವು ನೋಡುತ್ತೇವೆ. ಈ ಕುರಿತು ಅವರ ವಿಚಾರಗಳನ್ನು ಇನ್ನೂ ಸ್ಪಷ್ಟವಾಗಿ ತಮ್ಮ ಎ ಹಿಸ್ಟ್ರಿ ಆಫ್ ಇಂಡಿಯಾದ (ಸಂಪುಟ-೧) ಸುಧಾರಿತ ಆವೃತ್ತಿಯಾದ ಅರ‍್ಲೀ ಇಂಡಿಯಾದಲ್ಲಿ ವಿಮರ್ಶಿಸಿದ್ದಾರೆ. ಇದರ ಪ್ರಕಾರ ಮೌರ‍್ಯ ರಾಜ್ಯವು ಅದರ ಗಡಿ ಪ್ರದೇಶದಲ್ಲೆಲ್ಲ ಏಕಪ್ರಕಾರವಾಗಿ ಪ್ರವರ್ತಿಸದೇ ಕೇಂದ್ರಭಾಗ (ಮೆಟ್ರೋಪಾಲಿಸ್) ತಿರುಳು (ಕೋರ್) ಹಾಗೂ ಅಂಚು (ಪೆರಿಫರಿ) ಎಂಬ ತಾರತಮ್ಯವನ್ನು ಹೊಂದಿತ್ತು. ಕೇಂದ್ರಭಾಗವು ಮೌರ‍್ಯರ ರಾಜಧಾನಿ ಹಾಗೂ ಅದರ ನೇರ ಹಿಡಿತದ ಪ್ರದೇಶಗಳಾಗಿವೆ. ಇದರ ಆಚೆಗೆ ಸಾಮ್ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಅದು ತನ್ನ ಆಡಳಿತವನ್ನು ಕೇಂದ್ರೀಕರಿಸಿತ್ತು. ಇವು ತಿರುಳನ್ನು ರಚಿಸಿದವು. ಇವೆಲ್ಲ ಅದರ ಪ್ರಾಂತ್ಯ ವಿಭಾಗಗಳಾಗಿದ್ದವು. ಅಲ್ಲಿನ ಸಂಪನ್ಮೂಲಗಳ ಲಭ್ಯತೆ ಹಾಗೂ ಅದನ್ನು ಕ್ರೋಢೀಕರಿಸುವಲ್ಲಿ ಬೇಕಾಗುವ ಅಧಿಕಾರ ಯಂತ್ರದ ಸ್ಥಾಪನೆಯಿಂದಾಗಿ ಪ್ರಾಂತ್ಯದ ಕೆಲ ಭಾಗಗಳು ಅದರ ನೇರ ಹಿಡಿತಕ್ಕೆ ಬಂದವು. ಅಂಥಲ್ಲಿ ಆಡಳಿತಗಾರರ ಅಧೀನದಲ್ಲಿ ಆಡಳಿತ ನಡೆಸಲಾಯಿತು. ಇಂಥ ಭಾಗಗಳಲ್ಲಿ ಎರಡನೆಯ ಹಂತದ ರಾಜ್ಯ ನಿರ್ಮಾಣಗಳಾದವು. ಅಶೋಕನ ಶಾಸನಗಳು ಸಿಗುವ ಕರ್ನಾಟಕದ ಒಳನಾಡು ಕೂಡ ಇಂಥದೊಂದು ಭಾಗವಾಗಿದೆ. ಇಲ್ಲಿನ ಬಂಗಾರದ ನಿಕ್ಷೇಪ ಬಹುಶಃ ಮುಖ್ಯ ಆಕರ್ಷಣೆಯಾಗಿತ್ತು ಎಂಬುದು ಅವರ ಅಭಿಪ್ರಾಯ. ಈ ತಿರುಳುಗಳ ಅಂಚುಗಳು ಸಾಮ್ರಾಜ್ಯದ ಲಕ್ಷ್ಯವನ್ನು ಸೆಳೆಯುವಂಥದ್ದಾಗಿರಲಿಲ್ಲ. ಅವು ದೂರವೇ ಉಳಿದ ಭಾಗಗಳಾಗಿದ್ದವು. ಹಾಗಾಗಿ ಅವರ ಅಧಿಕಾರ ಕೂಡ ಇಲ್ಲಿ ಸಡಿಲವಾಗಿತ್ತು ಅಥವಾ ಕಾಣಿಸುವಂತೆ ಇರಲಿಲ್ಲ. ಇವು ಅಡವಿ ಪ್ರದಶಗಳಾಗಿದ್ದು ಆಟವಿಕ ಜನಾಂಗಗಳಿಂದ, ಅವರ ರಾಜ್ಯಗಳಿಂದ ಕೂಡಿದ್ದವು. ಭಾರತದ ಪ್ರಾದೇಶಿಕ ವೈವಿಧ್ಯತೆಗನುಗುಣವಾಗಿ ವೈವಿಧ್ಯಪೂರ್ಣವಾಗಿ ಈ ರಾಜ್ಯಗಳು ಅಸ್ಥಿತ್ವದಲ್ಲಿದ್ದವು. ಈ ರೀತಿ ಥಾಪರ್ ಅವರ ಮಾದರಿ ಈ ಹಿಂದಿನ ಗ್ರಹಿಕೆಗಿಂತ ಭಿನ್ನವಾಗಿರುವುದೊಂದೇ ಅಲ್ಲದೇ ರಾಜ್ಯದ ಏಕರೂಪತೆಯನ್ನು ಅಲ್ಲಗಳೆಯುವಂತೆ ಮೇಲ್ನೋಟಕ್ಕೆ ತೋರುತ್ತದೆ.

ಆದರೆ ಇದುವರೆಗಿನ ಗ್ರಹಿಕೆಗಿಂತ ಥಾಪರ್ ಯಾವ ರೀತಿಯಲ್ಲಿ ಭಿನ್ನರಾಗುತ್ತಾರೆ ಎಂಬುದನ್ನು ಗಮನಿಸಿದಾಗ ಇದರ ಸಮಸ್ಯೆಗಳು ಪ್ರಕಟವಾಗುತ್ತವೆ. ಅವರು ಮೌರ‍್ಯ ರಾಜ್ಯವು, ಕೃಷಿ, ವಾಣಿಜ್ಯ ಮತ್ತು ನೈಸರ್ಗಿಕ ಸಂಪನ್ಮೂಲವನ್ನು ಕ್ರೋಢೀಕರಿಸುವ ಉದ್ದೇಶದಿಂದ ಅಸ್ತಿತ್ವದಲ್ಲಿ ಬಂದ ಒಂದು ವ್ಯವಸ್ಥೆ ಎಂಬುದಾಗಿ ಗ್ರಹಿಸುತ್ತಾರೆ. ಇದಕ್ಕಾಗಿ ಅದು ಒಂದು ಕೇಂದ್ರೀಕೃತ ಅಧಿಕಾರಶಾಹಿಯನ್ನು ಹೊಂದಿತ್ತು. ಆದರೆ ಈ ಕೇಂದ್ರೀಕೃತ ಆಡಳಿತವು ಹಿಂದಿನವರು ಅಂದುಕೊಂಡಂತೆ ಎಲ್ಲೆಡೆಯಲ್ಲೂ ಒಂದೇ ರೀತಿ ಇರಲಿಲ್ಲ ಎಂಬುದೊಂದೇ ಅವರ ಹೊಸ ವಾದ. ಅದಕ್ಕೆ ಅವರು ಹಾಕಿಕೊಳ್ಳುವ ಮಾದರಿ ಎಂದರೆ ಮೆಟ್ರೋಪಾಲಿಸ್ (ಕೇಂದ್ರಭಾಗ) ಕೋರ್ (ತಿರುಳು) ಹಾಗೂ ಪೆರಿಫರಿ (ಅಂಚು) ಎಂಬ ಪರಿಭಾಷೆಗಳು. ಮೆಟ್ರೊಪಾಲಿಸ್ ಎಂಬುದು ಗಂಗಾಬಯಲಿನಲ್ಲಿ ಈಗಾಗಲೇ ಸ್ಟೇಟ್‌ನಂತೆ ರೂಪುತಳೆದ ಒಂದು ವ್ಯವಸ್ಥೆಯಾಗಿದೆ. ಈ ಭಾಗವು ದೀರ್ಘಕಾಲದಿಂದ ಸ್ಟೇಟ್ ವ್ಯವಸ್ಥೆಗೆ ಒಗ್ಗಿಕೊಂಡತ್ತು. ಈ ಸ್ಟೇಟ್ ಮೌರ‍್ಯರ ರಾಜ್ಯ. ಈ ರಾಜ್ಯವು ವಿಸ್ತರಣೆಯಾಗುವ ಪ್ರಕ್ರಿಯೆಯನ್ನು ಅವರು ಒಂದು ವಸಾಹತು ವಿಸ್ತರಣೆಯೆಂಬಂತೆ ಆ ಶಬ್ದವನ್ನು ನೇರವಾಗಿ ಉಪಯೋಗಿಸದೇ ವಿವರಿಸುತ್ತಾರೆ. ಅದು ತನ್ನ ಕಾರ್ಯತಂತ್ರಕ್ಕೆ ನಿರ್ಣಾಯಕವಾದ ಭಾಗಗಳನ್ನು ಗೆದ್ದು ತನ್ನ ಹೆಜೆಮೊನಿಯನ್ನು ಸ್ಥಾಪನೆ ಮಾಡುತ್ತದೆ. ಅಷ್ಟೇ ಅಲ್ಲ ಆ ಭಾಗಗಳಿಂದ ಬಂದ ಉತ್ಪನ್ನದಿಂದ ಮೆಟ್ರೊಪಾಲಿಸ್ ಅನ್ನು ಪುಷ್ಟಿಗೊಳಿಸುತ್ತದೆ. ಎಲ್ಲೆಲ್ಲಿ ಬಹಳ ಗಾಢವಾಗಿ ಆ ಕೆಲಸ ಮಾಡಬೇಕಾಗಿದೆಯೋ ಅಲ್ಲಲ್ಲಿ ಆಡಳಿತಗಾರರನ್ನು ಇಟ್ಟು ಅವರ ಮೂಲಕ ಆ ಕೆಲಸವನ್ನು ನಡೆಸುತ್ತದೆ. ಆದರೂ ಇಂಥ ಪ್ರಾಂತ್ಯಗಳು ಆಡಳಿತಗಾರರ ನಿಯಂತ್ರಣದಲ್ಲಿದ್ದು ಕೇಂದ್ರದ ಹಿಡಿತ ಕಡಿಮೆ ಇರುತ್ತದೆ. ಅಂಥ ಪ್ರಾಂತ್ಯಗಳಲ್ಲಿನ ಆರ್ಥಿಕ ವ್ಯವಸ್ಥೆಯನ್ನು ಕೇಂದ್ರವು ತನಗೆ ಬೇಕಾದಂತೆ ಪುನರ‍್ರಚಿಸಿ ಮೆಟ್ರೊಪೊಲಿಸ್‌ಗೆ ಅನುಕೂಲವಾಗಿ ನಿರ್ಮಿಸಿಕೊಳ್ಳುತ್ತದೆ. ಹಾಗೂ ಇದನ್ನು ಸೆಗ್ಮೆಂಟರಿ ಸ್ಟೇಟ್ ಘಟಕಗಳ ಪ್ರಭುತ್ವ ಎಂದು ಗೊಂದಲ ಮಾಡಿಕೊಳ್ಳಬಾರದೆಂದು ಥಾಪರ್ ತಿಳಿಸುತ್ತಾರೆ. ಕೇಂದ್ರದ ನಿಯಂತ್ರಣವು ಈ ಮೂರೂ ಭಾಗಗಳ ಮೇಲೆ ವ್ಯತ್ಯಾಸವಾಗಿರಲಿಲ್ಲ, ಬದಲಾಗಿ ಪ್ರಾದೇಶಿಕ ವೈವಿಧ್ಯತೆಗನುಗುಣವಾಗಿ ನಿರ್ವಹಣೆ ಭಿನ್ನಭಿನ್ನವಾಗಿತ್ತು. ಹಾಗೂ ಇಂದು ಮಾರುಕಟ್ಟೆ ಹಾಗೂ ಉತ್ಪಾದನೆಗೆ ಸಂಬಂಧಿಸಿದಂತೆ ಇಂಥ ಶಬ್ದಗಳು ಬಳಕೆಯಲ್ಲಿದ್ದು ತಾವು ಅಲ್ಲಿಂದ ಪರಿಭಾಷೆಗಳನ್ನು ಆಯ್ದುಕೊಂಡಿದ್ದಾಗಿ ತಿಳಿಸುತ್ತಾರೆ.

ಹಾಗಾಗಿ ಇಲ್ಲಿ ಹೊಸದಾದ ವಿಚಾರವೆಂದರೆ ಈ ಸ್ಟೇಟ್ ವಸಾಹತು ಪ್ರಭುತ್ವವನ್ನು ಪ್ರಚ್ಛನ್ನವಾಗಿ ಹೋಲುತ್ತದೆ. ಈ ಸ್ಟೇಟ್‌ ಇಂಗ್ಲೆಂಡಿನ ಬದಲಾಗಿ ಗಂಗಾಬಯಲಿನಲ್ಲಿ ಸ್ಥಿತವಾಗಿದ್ದು ಭಾರತದ ಉಳಿದ ಭಾಗಗಳ ಸಂಪನ್ಮೂಲವನ್ನು ಗಂಗಾಬಯಲಿಗೆ ಹರಸುವ ಕಾರ್ಯಕ್ರಮವನ್ನು ಹೊಂದಿತ್ತು. ಈ ಪ್ರಕ್ರಿಯೆಯಲ್ಲಿ ಸ್ಟೇಟ್‌ನ ಮಾದರಿ ಭಾರತದ ಉಳಿದ ಭಾಗಗಳಿಗೆ ಪಸರಿಸುತ್ತದೆ. ವಸಾಹತು ಸ್ಟೇಟ್‌ನ ಕುರಿತ ಆರ್ಥಿಕ ವಿಶ್ಲೇಷಣೆಗಳೇ ಇಲ್ಲಿ ಮೌರ‍್ಯ ರಾಜ್ಯದ ಕುರಿತ ವಿವರಣೆಗಳಾಗುವುದನ್ನು ನಾವು ಮನಗಾಣುತ್ತೇವೆ. ಮೌರ‍್ಯ ಕಾಲದಲ್ಲಿ ಈ ವಿಭಿನ್ನ ಪ್ರಾಂತ್ಯಗಳಲ್ಲಿ ನಮಗೆ ಸಿಗುವ ತೀರ ಅಪೂರ್ಣ ಆಧಾರಗಳನ್ನು ಬಳಸಿ ಈ ನಿರ್ಣಯವನ್ನು ತೆಗೆದುಕೊಳ್ಳುವುದು ಎಷ್ಟು ತೊಡಕಿನದೋ ಅಷ್ಟೇ ತೊಡಕು ವಸಾಹತು ರಾಜ್ಯದ ಉದ್ದೇಶಗಳನ್ನು, ಕಾರ್ಯತಂತ್ರವನ್ನು ಎರಡು ಸಾವಿರ ವರ್ಷಗಳಿಗೂ ಹಿಂದಿನ ರಾಜ್ಯ ಪದ್ಧತಿಗೆ ಆರೋಪಿಸುವುದರಲ್ಲಿದೆ. ಥಾಪರ್ ಅವರು ರಾಜ್ಯವನ್ನು ಸ್ಟೇಟ್ ಪರಿಕಲ್ಪನೆಯಿಂದ ಅರ್ಥೈಸುತ್ತಾರೆ ಎಂಬುದನ್ನು ಅವರ ಬರವಣಿಗೆಯಲ್ಲೇ ಸ್ಪಷ್ಟಗೊಳಿಸಿದ್ದಾರೆ. ಹಾಗಾಗಿ ಭಾರತದಲ್ಲಿ ಅವರು ಸ್ಟೇಟ್‌ನ ನಿರ್ಮಾಣವನ್ನು ಗುರುತಿಸತೊಡಗುತ್ತಾರೆ. ಆದರೆ ಅವರು ಉದಾಹರಿಸುವುದು ಮೌರ‍್ಯ ರಾಜ್ಯವನ್ನು. ಇದರ ಹಿಂದಿನ ಗ್ರಹಿಕೆಯೆಂದರೆ ರಾಜ್ಯವು ಪರಿಪೂರ್ಣವಾಗಿಯಲ್ಲದಿದ್ದರೂ ಮೂಲಭೂತವಾಗಿ ಸ್ಟೇಟ್ ಆಗಿದೆ. ಅವರು ತಮ್ಮ ವಿವರಗಳಿಗೆ ಬಲವಾಗಿ ಆಧರಿಸುವ ಕೌಟಿಲ್ಯನ ಅರ್ಥಶಾಸ್ತ್ರವನ್ನು ಬಳಸಿಕೊಂಡಂತೂ ಈ ರೀತಿಯ ರಾಜ್ಯವನ್ನು ಊಹಿಸಲು ಸಾಧ್ಯವಿಲ್ಲ. ಏಕೆಂದರೆ ಅರ್ಥಶಾಸ್ತ್ರದ ಪ್ರಕಾರ ರಾಜ್ಯವು ಸಪ್ತಾಂಗವಾಗಿದೆ. ಈ ಏಳೂ ಅಂಗಗಳಲ್ಲಿ ಪ್ರತೀ ನಂತರದ್ದೂ ಮೊದಲನಯದರಷ್ಟು ಅನಿವಾರ್ಯವಲ್ಲ. ಅವುಗಳು ಒಟ್ಟಾರೆಯಾಗಿ ರಚಿಸುವ ಚಿತ್ರ ಕೂಡ ಸ್ಟೇಟ್‌ಗಿಂತ ಮೂಲಭೂತವಾಗಿ ಭಿನ್ನವಾಗಿರುವ ಸಾಧ್ಯತೆ ಇದೆ.