ರಾಷ್ಟ್ರೀಯವಾದಿ ಚರಿತ್ರೆ ಲೇಖನ

ಭಾರತೀಯ ರಾಷ್ಟ್ರೀಯ ಚಳುವಳಿಯ ವಾದಗಳನ್ನು ಮೈಗೂಡಿಸಿಕೊಂಡ ಚರಿತ್ರೆಲೇಖನವನ್ನು ರಾಷ್ಟ್ರೀಯವಾತಾವಾದಿ ಚರಿತ್ರೆಲೇಖನ ಎಂದು ಗುರುತಿಸಲಾಗುತ್ತದೆ. ೧೯ನೆಯ ಶತಮಾನದ ಅಂತ್ಯದ ವೇಳೆಗೆ ಭಾರತದಲ್ಲಿ ರಾಷ್ಟ್ರೀಯ ಚಳುವಳಿಯ ಪ್ರಾರಂಭವಾದರೂ ರಾಷ್ಟ್ರೀಯವಾದಿ ಚರಿತ್ರೆಲೇಖನವು ಸೃಷ್ಟಿಯಾದದ್ದು ೧೯೨೦ರ ನಂತರವೇ ಅದರಲ್ಲೂ ನಾವು ಇಂದು ರಾಷ್ಟ್ರೀಯವಾದಿ ಚರಿತ್ರೆಲೇಖನದ ಲಕ್ಷಣಗಳೆಂದು ಗುರುತಿಸುವ ಅಂಶಗಳು ವ್ಯವಸ್ಥಿತವಾಗಿ ಒಂದು ವಾದವಾಗಿ ಚರಿತ್ರೆಯಲ್ಲಿ ಅಂತರ್ಗತವಾದದ್ದು ೧೯೪೦ರ ನಂತರವೇ. ಅದುವರೆಗೆ ಭಾರತೀಯ ರಾಷ್ಟ್ರೀಯವಾದಿಗಳು ವಸಾಹತುಶಾಹಿಯ ಬ್ರಿಟಿಷ್‌ಲಿಬರಲ್ ಇತಿಹಾಸದ ಧೋರಣೆಗಳ ಕುರಿತು ವಿಮರ್ಶೆಯನ್ನು ಸಾಧಿಸಿ ಸ್ವ-ಸಮರ್ಥನೆಗಳನ್ನು ಬೆಳೆಸಿ ಕೊಂಡಿದ್ದರು. ಭಾರತೀಯ ರಾಷ್ಟ್ರೀಯತೆ ಭಾರತೀಯ ಸಮಾಜವು ಅಮೂಲಾಗ್ರವಾಗಿ ಬದಲಾಗಬೇಕೆಂಬ ಆಧುನಿಕ ತರ್ಕಕ್ಕೆ ಪ್ರತಿಯಾಗಿ ಭಾರತೀಯ ಸಂಪ್ರದಾಯಗಳ ಅರ್ಥ ಪೂರ್ಣತೆಯನ್ನು ಪ್ರತಿಪಾದಿಸದ ೧೯ನೇ ಶತಮಾನದ ಪುನರುತ್ಥಾನವಾದಿ ಚಿಂತನೆಗಳನ್ನು ಆಧರಿಸಿತು. ಇದರ ಜೊತೆಗೆ ರೋಮ್ಯಾಂಟಿಸಿಸ್ಟ್ ಚರಿತ್ರೆಕಾರರು ಭಾರತದ ಗತಕಾಲದ ಕುರಿತು ಕಟ್ಟಿದ ಚಿತ್ರವನ್ನು ಅಂತರ್ಗತ ಮಾಡಿಕೊಂಡಿತು. ಒಂದು ದೃಷ್ಟಿಯಲ್ಲಿ ಈ ಚಿತ್ರಗಳೇ ಭಾರತೀಯ ಪುನರುತ್ಥಾನವಾದಿಗಳ ಚರಿತ್ರೆ ಜ್ಞಾನವೂ ಆಗಿದ್ದಿತ್ತು. ರೋಮ್ಯಾಂಟಿಸಿಸ್ಟ್ ಸಂಪ್ರದಾಯದವರು ಬ್ರಿಟಿಷ್ ಲಿಬರಲ್ ಇತಿಹಾಸವನ್ನು ಕುರಿತು ನಡೆಸಿದ ಟೀಕೆಗಳು ಭಾರತೀಯರ ಟೀಕೆಗಳಾಗಿ ಬದಲಾದವು. ಇದರಾಚೆಗೆ ಭಾರತೀಯ ರಾಷ್ಟ್ರೀಯವಾದಿ ಚರಿತ್ರೆ ಭಾರತೀಯ ಎಂಬುದನ್ನು ಸಮರ್ಥಿಸಲು ಕಷ್ಟವಾಗುತ್ತದೆ. ಏಕೆಂದರೆ ರಾಷ್ಟ್ರೀಯವಾದಿ ಚರಿತ್ರೆಯು ಕೂಡಾ ಪಾಶ್ಚಾತ್ಯ ಚರಿತ್ರೆಲೇಖನ ಹಾಗೂ ಚಿಂತನೆಗಳ ಮುಂದುವರಿಕೆಯೇ ಆಗಿದೆ. ಇವರೂ ವಸಾಹತುಶಾಹಿಯು ಭಾರತೀಯ ಸಮಾಜದ ಕುರಿತು ಹುಟ್ಟುಹಾಕಿದ ಪಶ್ಚಿಮ ಕೇಂದ್ರಿತ ನಿರೂಪಣೆಗಳನ್ನು ತಮ್ಮದನ್ನಾಗಿ ಮಾಡಿಕೊಂಡಿದ್ದರು. ಇವರ ಅಂತಿಮ ಉದ್ದೇಶ ಭಾರತವೂ ರಾಷ್ಟ್ರ ಎಂಬುದನ್ನು ಸಾಧಿಸಿ ಬ್ರಿಟಿಷರ ಆಳ್ವಿಕೆಯಿಂದ ವಿಮೋಚನೆ ಪಡೆಯುವುದಾಗಿತ್ತು. ಭಾರತೀಯ ರಾಷ್ಟ್ರೀಯ ಚರಿತ್ರೆಯ ಪ್ರತಿಯೊಂದು ಪ್ರಮುಖ ಲಕ್ಷಣವೂ ಐರೋಪ್ಯ ಚರಿತ್ರೆ ಲೇಖನದ ತರ್ಕದಲ್ಲೇ ರೂಪುಗೊಂಡಿದ್ದು ಕಂಡುಬರುತ್ತದೆ.

ರಾಷ್ಟ್ರೀಯವಾದಿ ಚರಿತ್ರೆಯ ಮಾದರೀಕರಣ ೧೯೪೦ರ ನಂತರ ಆರ್.ಸಿ.ಮಜುಂದಾರ್, ಜವಾಹರಲಾಲ್ ನೆಹರೂ ಮುಂತಾದವರಿಂದ ನಡೆಯಿತಾದರೂ ಅದರ ಕುರಿತ ಮೂಲ ಸಂಶೋಧನೆಗಳು ೧೯೦೦ ರಿಂದಲೇ ಪ್ರಾರಂಭವಾಗಿದ್ದವು. ಈ ಸಂಶೋಧನೆಗಳಲ್ಲಿ ಭಾರತೀಯ ಚರಿತ್ರೆಯ ವಿಭಿನ್ನ ಅಂಶಗಳಾದ ಕಲೆ, ವಾಸ್ತುಶಿಲ್ಪ, ಸಾಹಿತ್ಯ, ಮೂರ್ತಿಶಾಸ್ತ್ರ, ಆಡಳಿತ, ಮತಸಂಪ್ರದಾಯಗಳು, ತತ್ವಶಾಸ್ತ್ರ ಮುಂತಾದ ಭಾರತೀಯತೆಯ ಹೆಮ್ಮೆ ಹಾಗೂ ಅರ್ಥವಂತಿಕೆಯನ್ನು ತುಂಬಿ ಬ್ರಿಟಿಶ್‌ ಲಿಬರಲ್ ವಾದಗಳನ್ನು ಅಲ್ಲಗಳೆಯುವ ಪ್ರಯತ್ನ ಎದ್ದು ಕಾಣುತ್ತದೆ. ಕಲೆಯ ಚರಿತ್ರೆ ಲೇಖನದಲ್ಲಿ ಆನಂದ ಕುಮಾರಸ್ವಾಮಿ ಈ ರಾಷ್ಟ್ರೀಯತೆಯ ಜಾಗೃತಿಗಾಗಿ ಪ್ರಯತ್ನಿಸಿದ್ದರು. ಕೆ.ಪಿ.ಜಯಸ್ವಾಲ್‌ಅವರು “ಪ್ರಾಚೀನ ಹಿಂದೂಗಳ ರಾಜ್ಯಭಾರವನ್ನು” ಮರುರಚಿಸಿ ಭಾರತೀಯರಿಗೆ ರಾಜ್ಯಾಡಳಿತದಲ್ಲಿ ಇದ್ದ ನಿಷ್ಣಾತೆಯನ್ನು ಎತ್ತಿ ಹಿಡಿದರು. ಭಾರತೀಯರೂ ಗಣತಂತ್ರ (ರಿಪಬ್ಲಿಕ್ ಎಂದು ಅನುವಾದಿಸಲಾಗಿದೆ) ವ್ಯವಸ್ಥೆಯನ್ನು ಬ್ರಿಟಿಷರಿಗಿಂತಲೂ ಪೂರ್ವದ ಅವಸ್ಥೆಯಲ್ಲೇ ಸಾಧಿಸಿದ್ದರು. ಇವರೂ ಪ್ರಾತಿನಿಧಿಕ, ಅಧಿಕಾರಶಾಹಿ ಸಾಮ್ರಾಜ್ಯಗಳನ್ನು ಕಟ್ಟಿದ್ದರು ಹಾಗೂ ಏಷ್ಯಾದ ಇತರ ಭಾಗದಲ್ಲಿ ವಸಾಹತುಗಳನ್ನು ಸ್ಥಾಪಿಸಿದ್ದರು ಎಂಬೆಲ್ಲ ವಾದಗಳು ಜಯಸ್ವಾಲರ ನಂತರ ಚರಿತ್ರೆಯ ಜ್ಞಾನಗಳಾದವು. ಆರ್.ಕೆ.ಮುಖರ್ಜಿಯವರು ಭಾರತವು ತನ್ನ ವೈವಿಧ್ಯತೆಗಳನ್ನು ಹೊಂದಿಯೂ ಒಂದು ಅಖಂಡ ಸಾಂಸ್ಕೃತಿಕ ಐಕ್ಯತೆಯನ್ನು ಪ್ರಾಚೀನ ಕಾಲದಿಂದಲೂ ಹೊಂದಿತ್ತು ಎಂಬುದನ್ನು ನಿದರ್ಶಿಸಿದರು. ಹೆಚ್.ಸಿ.ರಾಯ್‌ಚೌಧುರಿಯವರು ಪ್ರಾಚೀನ ಭಾರತದ ರಾಜವಂಶಗಳ ಚರಿತ್ರೆಯನ್ನು ವಿನ್ಸೆಂಟ್‌ಸ್ಮಿತ್‌ಅವರಿಗಿಂತ ಪರಿಪೂರ್ಣವಾಗಿ ಕಟ್ಟಿಕೊಟ್ಟರು. ಗೋಪಿನಾಥ ರಾವ್‌ಅವರು ‘ಹಿಂದೂ ಮೂರ್ತಿಶಾಸ್ತ್ರದ’ ವಿವರಗಳನ್ನು ಕಟ್ಟಿದರು. ಈ ಎಲ್ಲ ಲೇಖನಗಳಲ್ಲೂ ‘ಹಿಂದೂ’ ಎಂಬ ಪದವು ರಾಷ್ಟ್ರೀಯತೆಗೆ ಪರ್ಯಾಯವಾದ ಶಬ್ದವಾಗಿ ಗಟ್ಟಿಯಾದದ್ದು ಕಂಡುಬರುತ್ತದೆ. ಹಾಗೂ ರಾಷ್ಟ್ರೀಯತಾ ಚರಿತ್ರೆ ಪ್ರಧಾನವಾಗಿ ಹಿಂದೂ ಭಾರತ ಅರ್ಥಾತ್ ಪ್ರಾಚೀನ ಭಾರತದ ಚರಿತ್ರೆಯಾಗಿದೆ. ಅದು ಉತ್ತರ ಭಾರತದ ‘ಹಿಂದು’ ಚರಿತ್ರೆಗೆ ಸೀಮಿತವಾಗಿತ್ತು. ಕೆ.ಎ.ನೀಲಕಂಠಶಾಸ್ತ್ರೀ ಅವರಿಂದ ಈ ಸಂಪ್ರದಾಯ ಕೊನೆಗೊಂಡಿತು. ಆ ಮೂಲಕ ದಕ್ಷಿಣ ಭಾರತೀಯ ಇತಿಹಾಸಕ್ಕೆ ರಾಷ್ಟ್ರೀಯ ಚರಿತ್ರೆಯಲ್ಲಿ ಸ್ಥಾನ ಸಿಕ್ಕಿತು.

ಮಧ್ಯಕಾಲದ ಕುರಿತು ಹಿಂದೂ ಚರಿತ್ರೆಕಾರರು ಅಷ್ಟಾಗಿ ಆಸ್ಥೆಯಿಂದ ಬರೆಯಲಿಲ್ಲ. ಜಾದೂನಾಥ ಸರ್ಕಾರ್‌ ಅವರು ಮೊಗಲ್ ಕಾಲದ ಚರಿತ್ರೆಯಲ್ಲಿ ಪ್ರಕಾಂಡ ಪಂಡಿತರಾಗಿದ್ದು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಆದರೆ ಮುಸ್ಲಿಮ್ ಅರಸರು ಹಿಂದೂಗಳ ಕುರಿತು ದಮನಕಾರಿ ನೀತಿಯನ್ನು ಹೊಂದಿದ್ದರು ಎಂಬ ಅಭಿಪ್ರಾಯವನ್ನು ಅವರು ತಳೆಯುತ್ತಾರೆ. ಒಟ್ಟಾರೆಯಾಗಿ ಈ ರಾಷ್ಟ್ರೀಯ ಚರಿತ್ರೆಕಾರರು ಇಂದಿನ ಮತೀಯವಾದಿ ಚರಿತ್ರೆಯನ್ನು ಗಟ್ಟಿಗೊಳಿಸಿದ್ದಂತೂ ಹೌದು. ಅದು ಅವರಿಗೆ ವಸಾಹತು ಚರಿತ್ರೆಲೇಖನದ ಬಳುವಳಿಯಾಗಿದೆ. ಪ್ರಾಚೀನ ಭಾರತವು ಹಿಂದೂಗಳ ಯುಗವಾಗಿದ್ದು ಭಾರತ ರಾಷ್ಟ್ರದ ಉಚ್ಛ್ರಾಯ ಕಾಲವಾಗಿದ್ದರೆ ಮಧ್ಯಯುಗವು ಮುಸ್ಲಿಮ್ ಪರಕೀಯರ ಆಕ್ರಮಣ ಹಾಗೂ ಹಿಂದೂ ಸಂಸ್ಕೃತಿಯ ಪರಾಧೀನ ಕಾಲವಾಗಿದೆ. ಈ ಮೂಲಕ ಬ್ರಿಟಿಷರು ಭಾರತೀಯ ಚರಿತ್ರೆಯಲ್ಲಿ ಮಾಡಿದ ಮತೀಯ ವಿಭಾಗಗಳು ರಾಜಕೀಯ ಶಕ್ತಿಗಳಾಗಿ ಹಾಗೂ ರಾಷ್ಟ್ರಗಳಾಗಿ ಅವತರಿಸತೊಡಗಿದವು. ಮಧ್ಯಕಾಲದ ಮುಸ್ಲಿಮರು ಭಾರತ ರಾಷ್ಟ್ರದ ಒಂದು ಭಾಗವಾಗಲು ವಿಫಲರಾದರು. ಈ ರೀತಿ ಮುಸ್ಲಿಮ್ ಪ್ರತ್ಯೇಕತೆ ರಾಷ್ಟ್ರೀಯ ರಾಜಕಾರಣದ ಒಂದು ಅಂಶವಾಗಿ ಉಳಿಯದೇ ಮಧ್ಯಯುಗಕ್ಕೂ ಚಾಚಿತು. ರಾಷ್ಟ್ರೀಯ ಹೋರಾಟ ಹಾಗೂ ರಾಷ್ಟ್ರದ ಪರಾಧೀನತೆ ಕೂಡ ಮಧ್ಯಕಾಲದಲ್ಲೇ ಪ್ರಾರಂಭವಾದುದಾಗಿ ಇವರು ಗ್ರಹಿಸಿದರು. ಹಿಂದೂ ರಾಷ್ಟ್ರ ವೇದಕಾಲದಿಂದಲೇ ಅಖಂಡವಾಗಿ ಅಸ್ತಿತ್ವದಲ್ಲಿದ್ದು ಮಧ್ಯಕಾಲದಲ್ಲಿನ ರಾಜಕೀಯ ಅನೈಕ್ಯತೆಯಿಂದಾಗಿ ಪರಕೀಯರಿಗೆ ಇದನ್ನು ಆಕ್ರಮಿಸುವುದು ಸಾಧ್ಯವಾಯಿತು ಎಂಬ ಚರಿತ್ರೆಯನ್ನೂ ಬರೆಯಲಾಯಿತು. ರಾಷ್ಟ್ರೀಯತಾವಾದಿ ಚರಿತ್ರೆಕಾರರಲ್ಲಿ ತಾರಾಚಂದ್‌ರಂಥವರು ಅಪವಾದಕ್ಕೆಂಬಂತೆ ಹಿಂದೂ ಮುಸ್ಲಿಮ್ ಸಾಂಸ್ಕೃತಿಕ ಸಮನ್ವಯದ ಚರಿತ್ರೆಯನ್ನು ಕಟ್ಟಿದರು.

ಹಿಂದೂ ಸಂಸ್ಕೃತಿ ಸ್ವತಂತ್ರವಾಗಿ ಮೆರೆದ ಪ್ರಾಚೀನ ಭಾರತದ ಕುರಿತು ವೈಭವೀಕರಣ ರಾಷ್ಟ್ರೀಯತಾ ಇತಿಹಾಸದ ಒಂದು ಲಕ್ಷಣವಾಗಿದೆ. ಗುಪ್ತರ ಯುಗವನ್ನು ಭಾರತೀಯ ಚರಿತ್ರೆಯ ಸುವರ್ಣಯುಗ ಎಂದು ಇವರು ವರ್ಣಿಸಿದರು. ಕೆಲ ಸಾಹಿತ್ಯ, ಶಾಸನ ಹಾಗೂ ವಿದೇಶಿ ಪ್ರವಾಸಿಗರ ಬರವಣಿಗೆಗಳ ಆಯ್ದ ಸಾಲುಗಳನ್ನು ಸರಳೀಕರಿಸಿ ಮತ್ತು ಸಾಮಾನ್ಯೀಕರಿಸಿ ಈ ‘ವೈಭವ’ವನ್ನು ಕಟ್ಟಲಾಯಿತು. ಈ ಹಿಂದೂ ಸಂಸ್ಕೃತಿಯ ಸಾರ ವೈದಿಕ ಹಾಗೂ ತದನಂತರದ ಸಂಸ್ಕೃತ ಸಾಹಿತ್ಯದಲ್ಲಿ ಅಡಕವಾಗಿದೆ ಎಂಬ ಅಭಿಪ್ರಾಯಗಳು ಗಟ್ಟಿಯಾದವು. ಈ ಕಲ್ಪನೆಯನ್ನು ಆಧರಿಸಿಯೇ ತರ್ಕಮಾನದ ರಾಷ್ಟ್ರ ಸಂಸ್ಕೃತಿಯ ನಿರೂಪಣೆಯೂ ನಡೆದದ್ದು ಕಂಡುಬರುತ್ತದೆ. ‘ಹಿಂದೂ’ ಎಂಬ ಪ್ರಬೇಧದಲ್ಲಿ ಶೈವ, ವೈಷ್ಣವ, ಶಕ್ತಿ ಮುಂತಾದ ಆಸ್ತಿಕ ಮತ ಸಂಪ್ರದಾಯಗಳನ್ನೆಲ್ಲ ಒಗ್ಗೂಡಿಸಿ ಬೌದ್ಧ, ಜೈನ ಮುಂತಾದ ನಾಸ್ತಿಕ ಮತಗಳನ್ನು ಈ ಪ್ರಬೇಧದಿಂದ ಹೊರಗಿಟ್ಟದ್ದು ಮೂರ್ತಿಶಿಲ್ಪ, ಕಲೆ, ವಾಸ್ತುಶಿಲ್ಪ ಮುಂತಾದ ಅಧ್ಯಯನಗಳಲ್ಲಿ ಕಂಡು ಬರುತ್ತದೆ. ಅಷ್ಟೇ ಅಲ್ಲದೇ ಮೌರ‍್ಯ ಸಾಮ್ರಾಜ್ಯ ಪತನವಾಗಲು ಅಶೋಕನು ಬೌದ್ಧ ಮತವನ್ನು ಸ್ವೀಕರಿಸಿದ್ದೇ ಕಾರಣ ಎಂಬಂಥ ವಾದಗಳೂ ಬಂದವು. ಈ ವಾದ ಜಾದೂನಾಥ ಸರ್ಕಾರರ ‘ಔರಂಗಜೇಬನ ಧಾರ್ಮಿಕ ನೀತಿ ಮೊಗಲ್ ಸಾಮ್ರಾಜ್ಯ ಪತನಕ್ಕೆ ಕಾರಣವಾಯಿತು’ ಎಂಬ ವಾದವನ್ನು ಹೋಲುತ್ತದೆ.

ರಾಷ್ಟ್ರೀಯವಾದಿಗಳು ಕಟ್ಟಿದ ಪ್ರಾಚೀನ ಚರಿತ್ರೆ ರಾಜವಂಶಗಳ ‘ರಾಜಾವಳಿ’ ಕಥನವಾಗಿದೆ. ಇಲ್ಲಿ ರಾಜರ ಹೆಸರು ಮತ್ತು ಇಸವಿಗಳು ಪ್ರಧಾನವಾಗಿರುತ್ತವೆ. ರಾಜರ ಯುದ್ಧಗಳು ಅವರ ರಾಜಕೀಯವಾಗಿ ಬರುತ್ತವೆ. ಅವರ ಆಡಳಿತ ಕೆಲ ಸರಳ ವಿವರಗಳನ್ನು ಒಳಗೊಳ್ಳುತ್ತದೆ. ನಂತರ ಆಯಾ ರಾಜರ ಕಾಲದ ಧರ್ಮ, ಸಾಹಿತ್ಯ ಕಲೆ, ಸಂಸ್ಕೃತಿ ಮುಂತಾದವು ಇರುತ್ತವೆ. ‘ಸಂಸ್ಕೃತಿ’ ಎಂಬ ಪರಿಕಲ್ಪನೆ ಇವರ ಚರಿತ್ರೆಯಲ್ಲಿ ತೀರ ಅಸ್ಪಷ್ಟವಾಗಿದೆ. ಈ ರಾಜಮನೆತನಗಳ ಹುಟ್ಟು ಹಾಗೂ ಪತನ, ಪತನದ ಕಾರಣಗಳು ತೀರ ಕಡ್ಡಾಯವಾಗಿ ಇಲ್ಲಿರುತ್ತವೆ. ಈ ಚರಿತ್ರೆ ಕಟ್ಟಿಕೊಡುವ ಸಾಮಾಜಿಕ ಚರಿತ್ರೆ ಮತ್ತೂ ಸರಳವಾಗಿದೆ. ಯಾವುದೇ ಕಾಲದ ಸಮಾಜದ ವರ್ಣನೆಯೂ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ವಿಭಾಗವನ್ನೇ ಹೊಂದಿರುವುದು ಹಾಗೂ ಕೆಲ ಧರ್ಮಶಾಸ್ತ್ರ, ಸಾಹಿತ್ಯಗಳ ವರ್ಣನೆಗಳನ್ನು ಒಳಗೊಂಡಿರುವುದು ಕಂಡುಬರುತ್ತದೆ. ಸಾಮಾಜಿಕ, ಆರ್ಥಿಕ, ಧಾರ್ಮಿಕ ಎಂಬೆಲ್ಲ ವಿಚಾರಗಳು ಒಂದಕ್ಕೊಂದು ಸಂಬಂಧವಿಲ್ಲದ ಪ್ರತ್ಯೇಕ ಪ್ರಪಂಚಗಳಾಗಿ ಇಲ್ಲಿ ಕಾಣಿಸಿಕೊಳ್ಳುವುದೊಂದೇ ಅಲ್ಲದೆ, ಅವೆಲ್ಲ ರಾಜಮನೆತನಗಳ, ರಾಜರ ಕೃಪಾಛತ್ರದಲ್ಲಿ ಅಸ್ತಿತ್ವದಲ್ಲಿ ಪಡೆದಿರುವಂತೇ ನಿರೂಪಿಸಲಾಗುತ್ತದೆ. ಈ ರೀತಿ ಈ ಮೇಲಿನ ಚರಿತ್ರೆ ಲೇಖನ ಐರೋಪ್ಯ ಚರಿತ್ರೆ ಲೇಖನದ ಪುನರುತ್ಪಾದನೆಯೇ ಆಗಿದೆ. ಐರೋಪ್ಯ ನಾಗರಿಕತೆಯ ಅಂಶಗಳು ಶ್ರೇಷ್ಠವಾದವು ಎಂದು ಪರಿಭಾವಿಸಿ ನಮ್ಮ ಚರಿತ್ರೆಯೂ ಹಾಗೇ ಇದೆ ಎಂದು ಬಿಂಬಿಸುವ ಪ್ರಯತ್ನ ಇಲ್ಲಿ ಕಾಣುತ್ತದೆ. ಪೌರಾತ್ಯ ರೋಮ್ಯಾಂಟಿಕ್ ಚರಿತ್ರೆಕಾರರಿಗೂ ರಾಷ್ಟ್ರೀಯವಾದಿಗಳಿಗೂ ಈ ಕುರಿತಂತೆ ಇದ್ದ ಭಿನ್ನತೆ ಎಂದರೆ, ರಾಷ್ಟ್ರೀಯವಾದಿಗಳು ಭಾರತೀಯ ಸಂಸ್ಕೃತಿಯು ಪಾಶ್ಚಾತ್ಯರು ಇಂದು ಏನನ್ನು ಸಾಧಿಸಿದ್ದಾರೆಯೋ ಅದನ್ನು ಪ್ರಾಚೀನ ಕಾಲದಲ್ಲೇ ಸಾಧಿಸಿತ್ತು ಎಂಬ ವಾದವನ್ನು ಗಟ್ಟಿಮಾಡಲು ಪ್ರಯತ್ನಿಸುತ್ತಿದ್ದರು. ಇದರೊಂದಿಗೆ, ವರ್ತಮಾನದ ಹಿಂದುಳಿದಿರುವಿಕೆಗೆ ಪರಕೀಯರು ಸಂಸ್ಕೃತಿಯ ಮೇಲೆ ಮಾಡಿದ ಆಕ್ರಮಣವೇ ಪ್ರಧಾನ ಕಾರಣ ಎಂದು ಅವರು ವಿವರಿಸಿದರು.

ಪಾಶ್ಚಾತ್ಯ ನಾಗರಿಕತೆಯ ಶ್ರೇಷ್ಠತೆಯನ್ನು, ಬಲವನ್ನು ಅಲ್ಲಗಳೆಯಲಾಗದ ರಾಷ್ಟ್ರೀಯವಾದಿ ಚರಿತ್ರೆಕಾರರು ತಮ್ಮ ಸಂಸ್ಕೃತಿಯ ಶ್ರೇಷ್ಠತೆನ್ನೂ ಬೇರೆಯದೇ ಆದ ಮಾನದಂಡದಿಂದ ಸಮರ್ಥಿಸಿದರು. ಅದೆಂದರೆ ಭಾರತದ ಆಧ್ಯಾತ್ಮಿಕ ಸಾಧನೆ. ಈ ವಿಚಾರ ಕೂಡ ಪಾಶ್ಚಾತ್ಯ ರೋಮ್ಯಾಂಟಿಸಿಸ್ಟ್ ಚರಿತ್ರೆಕಾರರ ಬಳುವಳಿ ಎಂಬುದನ್ನು ಈಗಾಗಲೇ ನೋಡಿದ್ದೇವೆ. ಆನಂದ ಕುಮಾರಸ್ವಾಮಿಯವರು ಭಾರತೀಯ ಕಲೆ ತನ್ನ ಆಧ್ಯಾತ್ಮಿಕ ಹೂರಣದಿಂದಾಗಿ ವಿಶಿಷ್ಟವಾಗಿದ್ದು ಪಾಶ್ಚಾತ್ಯರ ಮಾನದಂಡಕ್ಕೆ ನಿಲುಕುವುದಿಲ್ಲ ಎಂದು ಪ್ರತಿಪಾದಿಸಿದರು.

ರಾಷ್ಟ್ರೀಯವಾದಿ ಚರಿತ್ರೆ ಲೇಖನವು ಈ ಮೇಲಿನ ಎಲ್ಲ ವೈಶಿಷ್ಟ್ಯತೆಗಳನ್ನು ಹೊಂದಿಯೂ ತನ್ನದೇ ಐತಿಹಾಸಿಕ ಮಹತ್ವವನ್ನು ಪಡೆದಿದೆ. ಇವರು ಭಾರತೀಯ ಚರಿತ್ರೆಯನ್ನು ಕುರಿತು ತಮ್ಮ ಪಾಂಡಿತ್ಯದಿಂದ ಸಾಧ್ಯವಾದಷ್ಟೂ ಮಾಹಿತಿಗಳನ್ನು ಬೆಳಕಿಗೆ ತಂದರು. ಇಂಥ ಮಾಹಿತಿಗಳನ್ನು ಸಂಗ್ರಹಿಸುವಾಗ ಪಠ್ಯವಿಮರ್ಶೆ, ಆಕರ ಸಂಶೋಧನೆ ಮುಂತಾದ ಕೆಲಸಗಳನ್ನು ೧೯ನೆಯ ಶತಮಾನದ ಬ್ರಿಟಿಶ್ ಪಂಡಿತರ ವೈಜ್ಞಾನಿಕ ಮಾದರಿಯನ್ನೇ ಯಥಾವತ್ತಾಗಿ ಅನುಸರಿಸಿದರು. ಈ ರೀತಿ ಹಲವಾರು ಚರಿತ್ರೆಕಾರರ ಪರಿಶ್ರಮದಿಂದಾಗಿ ಭಾರತೀಯ ಚರಿತ್ರೆಯ ನಾನಾ ಅಂಶಗಳು ನಮಗೆ ಇಂದು ಲಭ್ಯವಿವೆ. ಇದಕ್ಕೆ ಒಂದು ಉದಾಹರಣೆ ಪಿ.ವಿ.ಕಾಣೆಯವರ ‘ಹಿಸ್ಟರಿ ಆಫ್ ಧರ್ಮಶಾಸ್ತ್ರಾಸ್’ ಎಂಬ ಬಹು ಸಂಪುಟಗಳ ಕೃತಿ. ಈ ಪಂಡಿತರು ರಾಷ್ಟ್ರೀಯ ಕಾರಣಕ್ಕಾಗಿ ಆಧಾರಗಳನ್ನು ಅವೈಜ್ಞಾನಿಕವಾಗಿ ನಿರೂಪಿಸುವ ಕೆಲಸವನ್ನು ಮಾಡಲಿಲ್ಲ. ಹಾಗಾಗಿ ಅವರಲ್ಲಿ ವೈಜ್ಞಾನಿಕ ನಿಷ್ಠುರತೆ ಹಾಗೂ ‘ವಸ್ತುನಿಷ್ಠತೆ’ಯ ಕುರಿತು ಗಾಢಶ್ರದ್ಧೆಗಳನ್ನು ನೋಡುತ್ತೇವೆ. ಆದರೆ ಅವರ ವಸ್ತುನಿಷ್ಠತೆಗೆ ಅವರದೇ ಆದ ಮಿತಿಗಳಿದ್ದವು. ಹಾಗಾಗಿ ಆಕರಗಳಿಂದ ಮಾಹಿತಿಯನ್ನು ತೆಗೆಯುವಲ್ಲಿ ಹಾಗೂ ಮಾಹಿತಿಗಳನ್ನು ರಾಜಕೀಯ ಚರಿತ್ರೆಯನ್ನಾಗಿ ಪರಿವರ್ತಿಸುವಲ್ಲಿ ವಸ್ತುನಿಷ್ಠತೆಯನ್ನು ಸಾಧಿಸಿದರೂ, ಅದನ್ನು ಕಾರಣ ಸಂಬಂಧಗಳಲ್ಲಿ ನಿರೂಪಿಸುವಾಗ ಹಾಗೂ ವಿವೇಚಿಸುವಾಗ ಅವರಿಗೆ ತಮ್ಮ ವರ್ತಮಾನದ ಪೂರ್ವಗ್ರಹಗಳನ್ನು ಮೀರುವುದು ಸಂಪೂರ್ಣವಾಗಿ ಸಾಧ್ಯವಾಗಲಿಲ್ಲ.

ಮಾರ್ಕ್ಸ್‌ವಾದಿ ಚರಿತ್ರೆಯ ಅಧ್ಯಯನಗಳು

‘ಮಾರ್ಕ್ಸ್‌‌ವಾದ’ ಎಂಬ ಹೆಸರೇ ಸೂಚಿಸುವಂತೇ ಇದು ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಕಾರ್ಲ್‌ಮಾರ್ಕ್ಸ್ ಅವರು ಮಂಡಿಸಿದ ಸಿದ್ಧಾಂತವಾಗಿದೆ. ೨೦ನೆಯ ಶತಮಾನದ ಪ್ರಾರಂಭದಲ್ಲಿ ರಷ್ಯಾದಲ್ಲಿ ಅಧಿಕಾರವನ್ನು ಹಿಡಿದ ಕಮ್ಯುನಿಸ್ಟ್ ಮಾರ್ಕ್ಸ್‌‌ವಾದಿಗಳು ಇದಕ್ಕೊಂದು ರಾಜಕೀಯ ಕಾರ್ಯಕ್ರಮದ ಸ್ವರೂಪವನ್ನು ನೀಡಿದರು. ಆ ಸಂದರ್ಭದಲ್ಲಿ ಮಾರ್ಕ್ಸ್‌‌ವಾದದ ಒಂದು ನಿರ್ದಿಷ್ಟ ಮಾರ್ಗದ ನಿರೂಪಣೆಗಳು ಕಮ್ಯುನಿಸಂ ಕಾರ್ಯಕ್ರಮದ ಅಂಗವಾಗಿ ಜಗತ್ತಿನ ಬೇರೆ ಬೇರೆ ಭಾಗದಲ್ಲಿ ಪ್ರಚಲಿತದಲ್ಲಿ ಬಂದವು. ಈ ಸಂಪ್ರದಾಯವು ಮಾರ್ಕ್ಸ್‌ನ ಚಿಂತನೆಗಳನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಬೆಳೆಸಿತ್ತು ಹಾಗೂ ಈ ಬೆಳವಣಿಗೆಯೇ ೨೦ನೆಯ ಶತಮಾನದ ಆದಿಭಾಗದಲ್ಲಿ ಮಾರ್ಕ್ಸ್‌ವಾದವೆಂದರೆ ಇದೇ ಎಂಬಂಥ ನಿರೂಪಣೆಗಳನ್ನು ಗಟ್ಟಿಮಾಡಿತು. ಆ ಪ್ರಕಾರದ ಮಾರ್ಕ್ಸ್‌ವಾದವನ್ನು ಇಂದು ‘ಆರ್ಥಿಕ ನಿರ್ಣಾಯಕತೆ’ (Economic determinism) ಎಂದು ಇಂದಿನ ಮಾರ್ಕ್ಸ್‌ವಾದಿಗಳನೇಕರು ಗುರುತಿಸುತ್ತಾರೆ. ಇದರ ಪ್ರಧಾನ ಗ್ರಹಿಕೆಗಳನ್ನು ಸರಳೀಕರಿಸುವುದಾದರೆ ಈ ಮುಂದಿನಂತೆ ಇದನ್ನು ಗ್ರಹಿಸಬಹುದು.

ಈ ಸಮಾಜದ ಕೆಲವು ಚಟುವಟಿಕೆಗಳನ್ನು ‘ಆಧಾರಭೂತ’ ಅಂಶಗಳು ಎಂದು ಗ್ರಹಿಸಿ ಇನ್ನುಳಿದ ಚಟುವಟಿಕೆಗಳು ಅದನ್ನು ‘ಆಧರಿಸಿದ ನಿರ್ಮಾಣಗಳು’ ಎಂಬ ವಿಭಾಗವನ್ನು ಮಾಡಲಾಗುತ್ತದೆ. ಇದನ್ನು ತಳಪಾಯ (Base) ಹಾಗೂ ಮೇಲ್ಕಟ್ಟಡ (Superstructure) ಎಂಬ ಪರಿಭಾಷೆಯಲ್ಲಿ ಸೂಚಿಸಲಾಗುತ್ತದೆ. ‘ಆಧಾರಭೂತ’ವಾದ ಅಂಶವೇ ‘ಆರ್ಥಿಕತೆ’ ಅಥವಾ ಉತ್ಪಾದನಾ ವಿಧಾನವಾಗಿದೆ ಹಾಗೂ ಅದೇ ಒಂದು ಸಮಾಜದ ಇತರ ಚಟುವಟಿಕೆಗಳಾದ ಚಿಂತನೆಗಳು, ಮತ, ಧರ್ಮ, ಕಲೆ ಸಾಮಾಜಿಕ ಮೌಲ್ಯಗಳು ಮುಂತಾದವನ್ನು ನಿರ್ಧರಿಸುತ್ತದೆ. ಮಾರ್ಕ್ಸ್‌ವಾದವು ಐರೋಪ್ಯ ಇತಿಹಾಸವನ್ನೇ ಗಮನದಲ್ಲಿ ಇರಿಸಿಕೊಂಡು ಇತಿಹಾಸದ ಗತಿಯನ್ನು ಕುರಿತು ಕೂಡಾ ಈ ‘ಆರ್ಥಿಕ ನಿರ್ಣಾಯಕತೆ’ಯ ಹಿನ್ನೆಲೆಯಲ್ಲಿ ಬರೆಯಿತು. ಯುರೋಪಿನಲ್ಲಿ ಆದಿಮ ಸಮತೆಯ ಸಮಾಜಗಳ ಅವಸ್ಥೆಯ ನಂತರ ನಾಗರಿಕತೆ ಮತ್ತು ರಾಜ್ಯಗಳು ಬೆಳೆದು ಬರುವಾಗ ಸಾಮಾಜಿಕ ವರ್ಗಗಳ ನಿರ್ಮಾಣವಾಯಿತು. ಇದರಲ್ಲಿ ಆಳುವ ಹಾಗೂ ಉಳ್ಳವರ ವರ್ಗ ಉತ್ಪಾದಕ ವರ್ಗವನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಂಡು ಉತ್ಪಾದನೆಯ ವ್ಯವಸ್ಥೆಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಮೊತ್ತಮೊದಲು, ಗುಲಾಮ ಪದ್ಧತಿಯ ಉತ್ಪಾದನೆ ಈ ವರ್ಗ ಸಮಾಜದಲ್ಲಿ ಪ್ರಚಲಿತದಲ್ಲಿ ಬಂದಿತು. ಆದರೆ ಕಾಲದಿಂದ ಕಾಲಕ್ಕೆ ಈ ಉತ್ಪಾದನಾ ವ್ಯವಸ್ಥೆ ವರ್ಗ ಸಂಘರ್ಷದಿಂದಾಗಿ ಬದಲಾಗುತ್ತಲೇ ಬಂದಿದೆ. ಗುಲಾಮ ಪದ್ಧತಿಯ ನಂತರ ಊಳಿಗಮಾನ್ಯ (ಫ್ಯೂಡಲ್) ವ್ಯವಸ್ಥೆ ಬಂದಿತು ಹಾಗೂ ೧೩-೧೪ನೆಯ ಶತಮಾನದ ನಂತರ ಫ್ಯೂಡಲ್ ವ್ಯವಸ್ಥೆ ನಾಶವಾಗಿ ಬಂಡವಾಳಶಾಹಿ ವ್ಯವಸ್ಥೆ ಬಂದಿತು. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಉತ್ಪಾದಕ ವರ್ಗವಾದ ಕಾರ್ಮಿಕರು, ಶ್ರಮಿಕರು ಕ್ರಾಂತಿಯನ್ನು ಮಾಡುತ್ತಾರೆ. ಪರಿಣಾಮವಾಗಿ ಬಂಡವಾಳಶಾಹಿ ವ್ಯವಸ್ಥೆ ಕೊನೆಗೊಂಡು ಸಮತಾ ಸಮಾಜ ಬರುತ್ತದೆ. ಕಮ್ಯುನಿಸಂ ಭವಿಷ್ಯದ ವ್ಯವಸ್ಥೆಯಾಗಿದ್ದರಿಂದ ಬಂಡವಾಳಶಾಹಿಯ ಅಳಿವು ಪೂರ್ವನಿರ್ಧಾರಿತ.

ಚರಿತ್ರೆಗೆ ಒಂದು ಪೂರ್ವನಿರ್ಧಾರಿತ ಗತಿ ಈ ಮೇಲೆ ವಿವರಿಸಿದಂತೇ ಇದೆ ಎಂದು ಈ ಸಂಪ್ರದಾಯದವರು ಪ್ರತಿಪಾದಿಸಿದರು. ಅಂದರೆ ಇದು ಚರಿತ್ರೆಯ ಗತಿಯನ್ನು ನಿರ್ದೇಶಿಸುವ ಒಂದು ಅಂತರ್ಗತವಾದ ತರ್ಕ. ಇದನ್ನು ಗತಿತಾರ್ಕಿಕೆಂದು ಅವರು ಅನುವಾದಿಸುತ್ತಾರೆ. ಚರಿತ್ರೆಯ ವರ್ಗ ಸಂಘರ್ಷದ ದ್ವಂದ್ವದಲ್ಲೇ ರೂಪುಗೊಳ್ಳುತ್ತದೆ ಹಾಗೂ ಆ ತರ್ಕ ಹೀಗಿದೆ ಎಂದು ಮಾರ್ಕ್ಸ್‌ವಾದ ವಿವರಿಸುತ್ತದೆ ಎಂದು ಈ ಚರಿತ್ರೆಕಾರರು ನಂಬಿದ್ದರು. ಈ ಕಾರಣಗಳಿಂದ ಮಾರ್ಕ್ಸ್‌ವಾದಿ ಚರಿತ್ರೆ ೨೦ನೆಯ ಶತಮಾನದ ಪೂರ್ವಾರ್ಧದಲ್ಲಿ ಮನುಕುಲದ ಸಾಮಾನ್ಯ ಚರಿತ್ರೆಯಾಗಿ ಮೈದಳೆಯಿತು, ಹಾಗೂ ಐರೋಪ್ಯ ಇತಿಹಾಸ ಈ ಚರಿತ್ರೆಯ ಮಾದರಿ ಹಾಗೂ ಆಕರವಾಯಿತು. ಆದ್ದರಿಂದ ಈ ಚರಿತ್ರೆಯೂ ಐರೋಪ್ಯ ಮಾನವವಾದಿ ಚರಿತ್ರೆಯನ್ನು ಮೈಗೂಡಿಸಿಕೊಂಡಿದೆ. ಅಂದರೆ ಮನುಕುಲ ಯುರೋಪಿನಲ್ಲಿ ಈ ವಿವಿಧ ಹಂತಗಳನ್ನು ದಾಟಿ ಬಂದಿದ್ದರೆ ಪ್ರಪಂಚದ ಉಳಿದ ಭಾಗಗಳು ಇನ್ನೂ ಚರಿತ್ರೆಯ ಯಾವುದೋ ಹಂತದಲ್ಲಿ ಸ್ಥಬ್ಧವಾಗಿ ಬಿಟ್ಟಿವೆ. ಯುರೋಪಿನ ಮಧ್ಯಪ್ರವೇಶದಿಂದ ವಸಾಹತುಶಾಹಿಯ ರೂಪದಲ್ಲಿ ಆ ಸಮಾಜಗಳೂ ಚಲನಶೀಲವಾಗಬಹುದು ಎಂಬ ತರ್ಕ ಈ ಚರಿತ್ರೆ ಲೇಖನದ ಒಂದು ನಿರ್ಣಯವಾಗುತ್ತದೆ.

ಮಾರ್ಕ್ಸ್‌‌ವಾದಿ ಚರಿತ್ರೆ ಲೇಖನ ಕ್ರಮವು ಭಾರತೀಯ ಪ್ರಾರಂಭಿಕ ಎಡಪಂಥೀಯ (ಮಾರ್ಕ್ಸ್‌ವಾದಿ) ಚರಿತ್ರೆಕಾರರಲ್ಲಿ ಮಾದರಿಯಾಗಿತ್ತು. ಆದರೆ ಯುರೋಪಿನಲ್ಲಿ ೨೦ನೆಯ ಶತಮಾನದ ಉತ್ತರಾರ್ಧದಲ್ಲಿ ಮಾರ್ಕ್ಸ್‌ವಾದಿ ಚರಿತ್ರೆಲೇಖನ ಹಾಗೂ ಚಿಂತನೆಗಳಲ್ಲಿ ಆಮೂಲಾಗ್ರ ಬದಲಾವಣೆಗಳಾದವ. ಅದು ೨೦ನೆಯ ಶತಮಾನದ ಪೂರ್ವಾರ್ಧದಲ್ಲಿ ಇಟಲಿಯ ಫಾಸಿಸಂ ಬೆಳವಣಿಗೆಗೆ ಸಾಕ್ಷಿಯಾಗಿದ್ದ ಆಂಟೋನಿಯೋ ಗ್ರಾಂಸಿಯವರ ‘ಸೆರೆಮನೆ ಟಿಪ್ಪಣಿ’ಗಳಲ್ಲಿ ಪ್ರಪ್ರಥಮ ಬಾರಿಗೆ ಕಾಣಿಸಿಕೊಳ್ಳುತ್ತದೆ. ಅವನು ಆರ್ಥಿಕ ನಿರ್ಣಾಯಕತೆ ಹಾಗೂ ವರ್ಗ ನಿರ್ಣಾಯಕತೆಯಲ್ಲಿ ಮೂಲೆಗುಂಪಾಗಿದ್ದ ‘ಸಂಸ್ಕೃತಿ’ಯನ್ನು ಪ್ರಧಾನ ಸ್ಥಾನಕ್ಕೆ ತಂದು ನಿ‌ಲ್ಲಿಸುತ್ತಾನೆ. ಯಾವುದೇ ಆಳ್ವಿಕೆ ಭೌತಿಕ ಬಲ ಪ್ರಯೋಗದ ಮೂಲಕವೇ ಅಸ್ತಿತ್ವಕ್ಕೆ ಬರುವುದಿಲ್ಲ. ಅದನ್ನು ಧರಿಸಬಲ್ಲ ಸಾಂಸ್ಕೃತಿಕ ಯಾಜಮಾನ್ಯ ಆ ಸಮಾಜದಲ್ಲಿ ಬೆಳೆಯುವುದು ಆಳ್ವಿಕೆಯ ಅಸ್ತಿತ್ವಕ್ಕೆ ನಿರ್ಣಾಯಕ ಎನ್ನುತ್ತಾನೆ. ಅಲ್ತೂಸರ್ ಎಂಬ ಚಿಂತಕನು ಸಂಸ್ಕೃತಿ, ಚಿಂತನೆ, ಉತ್ಪಾದನೆ ಮುಂತಾದವೆಲ್ಲ ಪರಸ್ಪರಗಳನ್ನು ರೂಪಿಸುತ್ತಿರುತ್ತವೆ ಎಂಬ ರಚನಾವಾದಿ (Structuralist) ಪರಾಮರ್ಶೆಯನ್ನು ನಡೆಸಿದರು. ಇದೆಲ್ಲಕ್ಕಿಂತ ಮಾರ್ಕ್ಸ್‌ವಾದಿ ಚರಿತ್ರೆ ಲೇಖನಕ್ಕೆ ತೀರ ಮಹತ್ವಪೂರ್ಣವಾದ ಬೆಳವಣಿಗೆ ಎಂದರೆ ‘ಅಭಿನವ ಎಡ ಪಂಥೀಯರು’ (New Leftist). ಈ ಚಿಂತಕರು ೧೯೬೦ರ ಸುಮಾರಿಗೆ ಇಂಗ್ಲೆಂಡಿನಲ್ಲಿ ಪ್ರಾಧಾನ್ಯತೆ ಪಡೆದರು. ಇವರು ರಷ್ಯಾದ ಮಾರ್ಕ್ಸ್‌ವಾದಿಗಳ ಆರ್ಥಿಕ ನಿರ್ಣಾಯಕತೆ, ವರ್ಗಸಂಘರ್ಷದ ತರ್ಕ ಮುಂತಾದವುಗಳನ್ನು ಪ್ರಶ್ನಿಸಿದರು. ಅದು ಮಾರ್ಕ್ಸ್‌ನ ಬರವಣಿಗೆಯ ತಪ್ಪು ನಿರೂಪಣೆ ಎಂಬುದನ್ನು ತೋರಿಸಿದರಲ್ಲದೆ ಮಾರ್ಕ್ಸ್‌ನ ಬರವಣಿಗೆಯಲ್ಲೇ ಇದ್ದ ಮಿತಿಗಳನ್ನೂ ಸಂದಿಗ್ಧಗಳನ್ನೂ ಕೂಡ ವಿಶ್ಲೇಷಿಸಿದರು. ಮನುಷ್ಯನ ಸಂಸ್ಕೃತಿ, ಅನುಭವ ಮುಂತಾದ ‘ಮೇಲ್ಕಟ್ಟಡ’ಗಳನ್ನು ಹೆಚ್ಚು ಸೂಕ್ಷ್ಮ ಅಧ್ಯಯನಗಳಿಗೊಳಪಡಿಸಿ ಬೇಸ್ ಹಾಗೂ ಸೂಪರ್ ಸ್ಟ್ರಕ್ಚರ್ ಎಂಬ ಪ್ರತ್ಯೇಕತೆಯನ್ನು ನಿರಾಕರಿಸಿದರು. ಈ ಇತಿಹಾಸಕಾರರಲ್ಲಿ ಇ.ಪಿ. ಥಾಮ್ಸನ್ ಪ್ರಮುಖರಾಗಿದ್ದಾರೆ. ಈ ರೀತಿ ಮಾರ್ಕ್ಸ್‌ವಾದಿ ಚರಿತ್ರೆ ಲೇಖನ ಎಂಬುದು ಏಕರೂಪು ಸಂಪ್ರದಾಯವಲ್ಲ. ಅದು ಸದಾ ತನ್ನ ಮಿತಿಗಳನ್ನು ಪರಾಮರ್ಶೆಗೊಳಪಡಿಸಿಕೊಳ್ಳುತ್ತ ಬೆಳೆದ ಮಾರ್ಗವಾಗಿದೆ. ಆದರೆ ಈ ಚಿಂತನೆಗಳೆಲ್ಲವೂ ಕಾರ್ಲ್ ಮಾರ್ಕ್ಸ್‌ನ ತತ್ವ ಹಾಗೂ ಬರೆಹಗಳನ್ನಾಧರಿಸಿಯೇ ಇದ್ದುದರಿಂದ ಮಾತ್ರ ಅವನ್ನು ‘ಮಾರ್ಕ್ಸ್‌ವಾದಿ’ ಎಂದು ಕರೆಯಬಹುದು.

ಭಾರತೀಯ ಮಾರ್ಕ್ಸ್‌ವಾದಿ ಚರಿತ್ರೆಲೇಖನದ ಹಾದಿ ಎಂದರೆ ರಷ್ಯನ್ ಮಾರ್ಕ್ಸ್ ವಾದದಿಂದ ನಿರಂತರವಾಗಿ ತನ್ನ ತನವನ್ನು ಪ್ರತ್ಯೇಕಿಸಿಕೊಳ್ಳುವ ಪ್ರಯೋಗದಂತಿದೆ. ಹಾಗಾಗಿ ಅದು ಅಂತಿಮವಾಗಿ ಒಂದು ಪರಿಷ್ಕರಿಸಿದ ಸೆಕ್ಯುಲರ್ ರಾಷ್ಟ್ರೀಯ ಚರಿತ್ರೆಯಾಗಿ ತನ್ನನ್ನು ತಾನು ಕಂಡುಕೊಂಡಿದೆ. ಈ ಬೆಳವಣಿಗೆಯ ಹಿಂದೆ ಸೋವಿಯೆಟ್ ರಷ್ಯಾದ ವಿಘಟನೆ ಹಾಗೂ ಪತನಗಳು ವಹಿಸಿದ ಪಾತ್ರಕ್ಕಿಂತ ಭಾರತೀಯ ಮಾರ್ಕ್ಸ್‌ವಾದಿ ಚರಿತ್ರೆಯ ಹಾಗೂ ಭಾರತೀಯ ರಾಷ್ಟ್ರ ರಾಜಕಾರಣದ ಬೆಳವಣಿಗೆಗಳೇ ನಿರ್ಣಾಯಕವಾಗಿರುವುದು ಕಂಡುಬರುತ್ತದೆ. ಹಾಗಾಗಿ ೧೯೫೦ ರಲ್ಲೇ ಪಕ್ಷರಾಜಕೀಯದ ಒರಟು ಮಾರ್ಕ್ಸ್‌ವಾದದ ಹಾಗೂ ಚರಿತ್ರಕಾರರ ಮಾರ್ಕ್ಸ್ ವಾದಗಳು ಬೇರೆ ಬೇರೆ ಎಂದು ಚರಿತ್ರೆಕಾರರು ಗುರುತಿಸಿಕೊಂಡಿದ್ದನ್ನು ಡಿ.ಡಿ.ಕೊಸಾಂಬಿಯವರ ಬರಹಗಳಲ್ಲಿ ಗಮನಿಸಬಹುದು.

ಭಾರತೀಯ ಚರಿತ್ರೆಯ ಕುರಿತು ಭಾರತೀಯರಿಂದಲೆ ಬಂದ ಪ್ರಪ್ರಥಮ ಗ್ರಂಥವೆಂದರೆ ಎಸ್.ಎ. ಡಾಂಗೆಯವರ ‘ಇಂಡಿಯಾ ಫ್ರಮ್ ಪ್ರಿಮಿಟಿವ್ ಕಮ್ಯುನಿಸಂ ಟು ಸ್ಲೇವರಿ’ ರಷ್ಯಾದ ಮಾರ್ಕ್ಸ್‌ವಾದಿ ಚರಿತ್ರೆಯ ಪುನರುತ್ಪಾದನೆಯಾಗಿದೆ. ೧೯೫೦ರ ದಶಕದಲ್ಲಿ ಭಾರತೀಯ ಚರಿತ್ರೆಲೇಖನವನ್ನು ಪ್ರಕಟಿಸಲು ತೊಡಗಿದ ಡಿ.ಡಿ. ಕೊಸಾಂಬಿಯವರು ಪ್ರಮುಖವಾಗಿ ಎರಡು ಸಂಪ್ರದಾಯಗಳನ್ನು ಪರಿಷ್ಕರಿಸುತ್ತಿದ್ದರು. ಅವೆಂದರೆ ರಷ್ಯನ್ ಮಾರ್ಕ್ಸ್‌ವಾದಿ ಚರಿತ್ರೆಲೇಖನ ಹಾಗೂ ಭಾರತೀಯ ರಾಷ್ಟ್ರೀಯತಾವಾದಿ ಚರಿತ್ರೆಲೇಖನ. ರಷ್ಯನ್ ಮಾರ್ಕ್ಸ್‌ವಾದಿಗಳ ಪ್ರಕಾರ ಏಶಿಯಾದ ದೇಶಗಳಲ್ಲಿ ಉತ್ಪಾದನಾ ವಿಧಾನಗಳ ಏಳು ಬೀಳು ಹಾಗೂ ವಿಕಾಸ ನಡೆಯಲಿಲ್ಲ, ಹಾಗಾಗಿ ಅದೊಂದು ‘ಜೇಮ್ಸ್ ಮಿಲ್’ನಂಥ ಇತಿಹಾಸಕಾರರ ಚಿತ್ರಣದಂತೆಯೇ ಇತ್ತು. ಮಾರ್ಕ್ಸ್ ಕೂಡ ತನ್ನ ಬರಹದಲ್ಲಿ ‘ಏಶಿಯಾಟಿಕ್ ಮೊಡ್ ಆಫ್ ಪ್ರೊಡಕ್ಷನ್ (ಏಶಿಯಾಟಿಕ್ ಉತ್ಪಾದನಾ ವಿಧಾನ) ಎಂಬ ಪ್ರತ್ಯೇಕ ಪರಿಭಾಷೆಯನ್ನು ಒಮ್ಮೆ ಅನುಮಾನದಿಂದ ಬಳಸಿದ್ದರೂ, ನಂತರದ ರಷ್ಯನ್ ಮಾರ್ಕ್ಸ್‌ವಾದಿಗಳು ಅದನ್ನು ಗಟ್ಟಿಮಾಡಿದ್ದರು. ಡಿ.ಡಿ. ಕೊಸಾಂಬಿಯವರು ಭಾರತೀಯ ಚರಿತ್ರೆ ಕೂಡ ಇಂಥ ಸಾಮಾಜಿಕ ವಿಕಾಸವನ್ನು ಕಂಡಿದೆ ಎಂದು ತಮ್ಮ ಮೊದಲ ಕೃತಿ ‘ಇಂಟ್ರಡಕ್ಷನ್ ಟು ಇಂಡಿಯನ್ ಹಿಸ್ಟರಿ’ಯಲ್ಲಿ ಪ್ರಸ್ತಾಪಿಸುತ್ತಾರೆ. ಹಾಗಾಗಿ ಮಾರ್ಕ್ಸ್‌ನ ಅಭಿಪ್ರಾಯವನ್ನು ಅವರು ಅಲ್ಲಗಳೆಯುತ್ತಿದ್ದಾರೆ ಎಂದು ರಷ್ಯನ್‌ ಮಾರ್ಕ್ಸ್‌ವಾದಿಗಳು ಟೀಕಿಸಿದರು. ರಾಷ್ಟ್ರೀಯವಾದಿಗಳು ವಸಾಹತು ಚರಿತ್ರೆ ಲೇಖನ ಪರಂಪರೆಯನ್ನು ಎದುರಿಸಿದಂತೆಯೇ ಕೊಸಾಂಬಿಯವರು ರಷ್ಯನ್ ಮಾರ್ಕ್ಸ್‌ವಾದಿಗಳ ಗ್ರಹಿಕೆಯನ್ನು ಅಲ್ಲಗಳೆದು ಭಾರತೀಯ ಚರಿತ್ರೆಗೂ ಒಂದು ಸ್ವಂತಿಕೆಯನ್ನು ನೀಡಲು ಪ್ರಯತ್ನಿಸಿದ್ದು ಇಲ್ಲಿ ಕಂಡುಬರುತ್ತದೆ. ಆದರೆ ಅವರು ಅಂದಿನ ಮಾರ್ಕ್ಸ್‌ವಾದಿ ಚೌಕಟ್ಟಿನಲ್ಲೇ ಚರಿತ್ರೆಯನ್ನು ಕಟ್ಟಿದರು. ಕೊಸಾಂಬಿಯವರು ತಮ್ಮ ಕಾಲದ ಮಾರ್ಕ್ಸ್‌ವಾದವನ್ನು ತೀರ ಸೂಕ್ಷ್ಮವಾದ ಹಾಗೂ ಭಾರತೀಯ ಸಂದರ್ಭಕ್ಕೆ ಪ್ರಸ್ತುತವಾದ ರೀತಿಯಲ್ಲಿ ಚರಿತ್ರೆಯನ್ನಾಗಿ ಪರಿವರ್ತಿಸಿದರು. ಹಾಗಾಗಿ ಅವರಿಗೆ ‘ಮಿಥ್ ಆಂಡ್ ರಿಯಾಲಿಟಿ’ಯ ಪ್ರಕಾರ ಗ್ರಂಥಗಳನ್ನು ರಚಿಸಲು ಸಾಧ್ಯವಾಯಿತು. ಮಿಥ್ ಆಂಡ್ ರಿಯಾಲಿಟಿಯಲ್ಲಿ ರಾಷ್ಟ್ರೀಯವಾದಿ ಸಾಂಸ್ಕೃತಿಕ ಇತಿಹಾಸದ ವೈದಿಕ ಹಾಗೂ ಸಂಸ್ಕೃತ ಪ್ರಧಾನ ನಿರೂಪಣೆಗಳನ್ನು ನಿರಾಕರಿಸಿ ಜಾನಪದ ಅಧ್ಯಯನ, ಪ್ರಾಕ್ತನಶಾಸ್ತ್ರ ಹಾಗೂ ಕ್ಷೇತ್ರಕಾರ್ಯ ವಿಧಾನಗಳ ಮೂಲಕ ಭಾರತದ ಸಾಂಸ್ಕೃತಿಕ ವರ್ತಮಾನವನ್ನು ಗ್ರಹಿಸಿ ಬರೆದರು. ಹಾಗಾಗಿ ಭಾರತೀಯ ಸಾಂಸ್ಕೃತಿಕ ಚರಿತ್ರೆ ಲೇಖನಕ್ಕೆ ಅವರು ಹೊಸ ಮಾನದಂಡವನ್ನು ಸೃಷ್ಟಿಸಿದರು.

ಈ ರೀತಿ ಕೊಸಾಂಬಿಯವರು ತಮ್ಮ ಕಾಲದವರೆಗೆ ಬೆಳೆದುಕೊಂಡು ಬಂದು ಸರ್ವವ್ಯಾಪಿಯಾಗಿದ್ದ ರಾಷ್ಟ್ರೀಯತಾ ಇತಿಹಾಸ ಮಾರ್ಗವನ್ನು ತ್ಯಜಿಸಿ ಹೊಸ ಮಾರ್ಗವನ್ನು ಹುಟ್ಟುಹಾಕಿದರು. ಅವರ ಚರಿತ್ರೆ ರಾಜವಂಶಗಳ ಚರಿತ್ರೆ ಆಗಿರದೇ ಸಾಮಾಜಿಕ ಆರ್ಥಿಕ ಹಾಗೂ ಸಾಂಸ್ಕೃತಿಕ ನಿರ್ಮಾಣಗಳ ಚರಿತ್ರೆಯಾಗಿದೆ. ಈ ಚರಿತ್ರೆಯ ರಚನೆಗೆ ಮಾರ್ಕ್ಸ್‌ವಾದಿ ಚಿಂತನೆಗಳನ್ನು ಅವರು ಆಶ್ರಯಿಸಿದ್ದರೂ ಯಾವುದೇ ಘೋಷಿತ ಮಾರ್ಕ್ಸ್‌ವಾದಿ ಕಾರ್ಯಕ್ರಮಗಳನ್ನು ಉದ್ದೇಶಪೂರ್ವಕವಾಗಿ ಪ್ರತಿಪಾದಿಸಲು ಹೋಗಲಿಲ್ಲ ಹಾಗೂ ಅಂತಹ ಪ್ರಯತ್ನ ಮಾರ್ಕ್ಸ್‌ವಾದದ ಉದ್ಧಾರವನ್ನು ಮಾಡಲಾರದೆಂದು ನಂಬಿದ್ದರು.

ಕೊಸಾಂಬಿಯವರ ಕಾಲದಿಂದಲೇ ಭಾರತದ ಚರಿತ್ರೆಯ ವಿವಿಧ ಯುಗಗಳ ಕುರಿತು ಚರಿತ್ರೆಯನ್ನು ಬರೆದ ಅನೇಕ ಎಡಪಂಥೀಯ ಚರಿತ್ರೆಕಾರರು ಕಂಡುಬರುತ್ತಾರೆ. ದೇವೀಪ್ರಸಾದ ಚಟ್ಟೋಪಾಧ್ಯಾಯರು ಭಾರತದ ತಾತ್ವಿಕ ಸಂಪ್ರದಾಯಗಳಲ್ಲಿ ಭೌತವಾದದ ಎಳೆಗಳನ್ನು ಗುರುತಿಸಿದರು. ಆರ್.ಎಸ್.ಶರ್ಮ ಅವರು ಭಾರತೀಯ ‘ಫ್ಯೂಡಲಿಸಂ’ ಯುಗದ ಕುರಿತು ವಿಶೇಷವಾಗಿ ಸಂಶೋಧನೆ ನಡೆಸಿದರು. ೧೯೭೦ರ ದಶಕದಲ್ಲಿ ‘ಫ್ಯೂಡಲಿಸಂ’ ಕುರಿತ ಚರ್ಚೆ ಭಾರತೀಯ ಪ್ರಾಚೀನ-ಮಧ್ಯಕಾಲೀನ ಚರಿತ್ರೆಯಲ್ಲಿ ಚರಿತ್ರೆಕಾರರ ಮೂಲವಸ್ತುವಾಯಿತು. ಪ್ರಾಚೀನ ಭಾರತೀಯ ರಾಜಕೀಯ, ಮತಸಂಪ್ರದಾಯ, ತಾತ್ವಿಕತೆ, ಅರ್ಥವ್ಯವಸ್ಥೆ, ಸಮಾಜ, ಕಲೆ ವಾಸ್ತು ಶಿಲ್ಪ ಮುಂತಾದವುಗಳಲ್ಲಿ ‘ಫ್ಯೂಡಲ್‌ವ್ಯವಸ್ಥೆ’ ಹೇಗೆ ಅಭಿವ್ಯಕ್ತಿಯಾಗುತ್ತದೆ ಎಂಬುದನ್ನು ಪರಿಶೀಲಿಸುವ ‘ಸೈದ್ಧಾಂತಿಕ’ ಕುತೂಹಲಕ್ಕೆ ಅನೇಕ ಇತಿಹಾಸಕಾರರು ಬದ್ಧರಾದರು. ಅವರಲ್ಲಿ ಡಿ.ಎನ್.ಝಾ., ಬಿ.ಎನ್.ಎಸ್. ಯಾದವ, ಆರ್.ಎನ್.ನಂದಿ, ದೇವಾಂಗೂ ದೇಸಾಯಿ ಮುಂತಾದವರು ಪ್ರಮುಖರಾಗಿದ್ದಾರೆ. ಪ್ರಾಚೀನ ಭಾರತೀಯ ಚರಿತ್ರೆ ಲೇಖನದಲ್ಲಿ ಈ ಎಲ್ಲ ಪ್ರಭಾವಗಳಿಂದಲೂ ತಪ್ಪಿಸಿಕೊಂಡು ತಮ್ಮದೇ ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡ ಒಬ್ಬ ಇತಿಹಾಸಕಾರರೆಂದರೆ ರೊಮಿಲಾ ಥಾಪರ್ ಅವರು. ಅವರು ಎಡಪಂಥೀಯ ಚಿಂತನೆ ಹಾಗೂ ಚರಿತ್ರೆಲೇಖನ ಸಂಪ್ರದಾಯದಲ್ಲೇ ಬರುತ್ತಾರಾದರೂ ಅವರ ಸಂಶೋಧನೆಗಳು ಈ ಮಾರ್ಕ್ಸ್‌ವಾದಿ ಯುಗಗಳ ಚೌಕಟ್ಟನ್ನು ಅತ್ಯಂತಿಕ ಎಂದು ಸಿದ್ಧಪಡಿಸುವ ಕಾರ್ಯ ಕ್ರಮಗಳಿಗೆ ಬದ್ಧವಾಗಿಲ್ಲ. ಅವರು ಪ್ರಧಾನವಾಗಿ ಮೌರ‍್ಯ ಹಾಗೂ ಮೌರ‍್ಯ ಪೂರ್ವಕಾಲದ ರಾಜ್ಯ ನಿರ್ಮಾಣ ಹಾಗೂ ಸಾಮಾಜಿಕ ಸಾಂಸ್ಕೃತಿಕ ಇತಿಹಾಸದ ಕುರಿತು ಅನೇಕ ಒಳನೋಟಗಳನ್ನು ನೀಡುತ್ತಾರೆ. ತಾಪರ್ ಅವರ ಈ ಎಲ್ಲ ಲೇಖನಗಳೂ ನಮ್ಮ ಭಾರತೀಯ ‘ಸೆಕ್ಯುಲರ್ ರಾಷ್ಟ್ರ’ ಪರಿಕಲ್ಪನೆಯನ್ನು ನಿರ್ಮಿಸಿಕೊಳ್ಳಲಿಕ್ಕೆ ಹಾಗೂ ಹಿಂದೂ ರಾಷ್ಟ್ರವಾದಿಗಳ ಸಾಂಸ್ಕೃತಿಕ ಚರಿತ್ರೆಯನ್ನು ಅಲ್ಲಗಳೆಯಲಿಕ್ಕೆ ಹಾಗೂ ರಾಷ್ಟ್ರೀಯತಾ ಯುಗದ ಸಾಮಾಜಿಕ ಚರಿತ್ರೆಯ ಜಡ ಚೌಕಟ್ಟನ್ನು ಮೀರಿ ಚಲನಶೀಲತೆಯನ್ನು ಗ್ರಹಿಸಲಿಕ್ಕೆ ಸಮರ್ಥವಾದ ಆಕರಗಳಾಗಿವೆ. ರೋಮಿಲಾ ಥಾಪರ್ ಅವರಂತೇ ಎಡಪಂಥೀಯ ಚರಿತ್ರೆಕಾರರಲ್ಲಿ, ವಿಶಿಷ್ಟವಾಗಿ ನಿಲ್ಲುವವರೆಂದರೆ ಬಿ.ಡಿ.ಚಟ್ಟೋಪಾಧ್ಯಾಯರು. ಅವರು ಭಾರತೀಯ ಚರಿತ್ರೆಲೇಖನ ಈ ‘ಫ್ಯೂಡಲಿಸಂ’ ಚರ್ಚೆಯ ಚೌಕಟ್ಟನ್ನು ಮೀರಿ ಭಾರತೀಯ ವಾಸ್ತವವನ್ನು ಗ್ರಹಿಸುವ ನಿಟ್ಟಿನಲ್ಲಿ ಬೆಳೆಯಬೇಕೆಂಬುದನ್ನು ತಮ್ಮ ಲೇಖನದಲ್ಲಿ ನಿದರ್ಶಿಸಿದ್ದಾರೆ.

ಮಧ್ಯಕಾಲೀನ ಭಾರತದ ಚರಿತ್ರೆಯ ಕುರಿತು ಎಡಪಂಥೀಯರ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಬರೆಯುವ ಸಂಪ್ರದಾಯಕ್ಕೆ ಮಹಮ್ಮದ ಹಬೀಬ್ ಅವರು ಬುನಾದಿ ಹಾಕಿದರು. ಇರ್ಫಾನ್ ಹಬೀಬ್ ಅವರು ಮಧ್ಯಕಾಲೀನ ಚರಿತ್ರೆ ಲೇಖನದಲ್ಲಿ ನಾವು ಗುರುತಿಸಬಹುದಾದ ಸರ್ವಶ್ರೇಷ್ಠ ಚರಿತ್ರೆಕಾರರಾಗಿದ್ದಾರೆ. ಅವರು ಒಗಲ್ ಕಾಲದ ಆಡಳಿತ, ಕೃಷಿ, ವಾಣಿಜ್ಯ ವ್ಯವಸ್ಥೆಯ ಕುರಿತು ಹಾಗೂ ಭೂಗೋಲದ ಕುರಿತು ವಿಸ್ತೃತ ಅಧ್ಯಯನವನ್ನು ನಡೆಸಿದ್ದಾರೆ. ಈ ಮೇಲಿನ ಇಬ್ಬರೂ ವಿದ್ವಾಂಸರು ರಾಷ್ಟ್ರೀಯತಾವಾದಿ ಚರಿತ್ರೆಯು ಮಧ್ಯಕಾಲದ ಕುರಿತು ಕಟ್ಟಿದ ಕೆಲ ಪೂರ್ವಗ್ರಹಪೀಡಿತ ನಿರ್ಣಯಗಳನ್ನು ಅಲ್ಲಗಳೆಯುವ ಕಾರ್ಯಕ್ರಮವನ್ನು ಕೂಡ ಹೊಂದಿದ್ದರು. ಎಡಪಂಥೀಯ ವಿಶ್ಲೇಷಣೆ ಅವರಿಗೆ ಒಂದು ಸಾಧನ ಆಯಿತು. ಜೊತೆಗೇ ವಸಾಹತುಶಾಹಿ ಚರಿತ್ರೆ ಲೇಖನ ಮಧ್ಯ ಕಾಲದ ಕುರಿತು ಕಟ್ಟಿದ ನಿರೂಪಣೆಗಳನ್ನು ಕೂಡ ಇವರು ತಿದ್ದುಪಡಿ ಮಾಡುತ್ತಾರೆ. ಮಧ್ಯಕಾಲೀನ ಚರಿತ್ರೆಯ ಕುರಿತು ಇವರಲ್ಲದೆ ಹರ್ಬನ್ಸ್ ಮುಖಿಯಾ, ಸತೀಶ್‌ಚಂದ್ರ, ಸಂಜಯ್ ಸುಬ್ರಹ್ಮಣ್ಯ ಮುಂತಾದ ವಿದ್ವಾಂಸರನ್ನು ಇಲ್ಲಿ ಉಲ್ಲೇಖಿಸಬಹುದು.

ಆಧುನಿಕ ಚರಿತ್ರೆಯ ಎಡಪಂಥೀಯ ನಿರೂಪಣೆಗಳು ೧೯೪೦ರ ದಶಕದಲ್ಲಿ ಪ್ರಾರಂಭವಾಗುತ್ತದೆ. ಆರ್.ಪಾಮೆದತ್ ಅವರ ‘ಇಂಡಿಯಾ ಟುಡೆ’ ಅಂಥ ಪ್ರಥಮ ಪ್ರಯತ್ನವಾಗಿದ್ದು ವಸಾಹತು ಶಾಹಿಯ ಆರ್ಥಿಕ ಅಂಶಗಳನ್ನು ಅದು ವಿಶ್ಲೇಷಿಸುತ್ತದೆ. ಎ.ಆರ್. ದೇಸಾಯಿಯವರ ‘ಸೋಶಿಯಲ್ ಬ್ಯಾಕ್‌ಗ್ರೌಂಡ್ ಆಫ್ ಇಂಡಿಯನ್ ನ್ಯಾಶನಲಿಸಂ’ ರಾಷ್ಟ್ರೀಯ ಚಳುವಳಿಯ ವರ್ಗ ವಿಶ್ಲೇಷಣೆಯಾಗಿದೆ. ಇವರ ಜೊತೆಗೆ ಇ.ಎಂ.ಎಸ್. ನಂಬೂದರಿಪಾಡ್ ಅವರನ್ನೂ ಉಲ್ಲೇಖಿಸಬಹುದು. ಇವರೆಲ್ಲ ವಸಾಹತುಶಾಹಿಯ ಶೋಷಣಾತ್ಮಕ ವ್ಯವಸ್ಥೆ ಹಾಗೂ ರಾಷ್ಟ್ರೀಯ ಚಳುವಳಿಯ ಮಿತಿಗಳನ್ನು ರಷ್ಯನ್ ಮಾರ್ಕ್ಸ್‌ವಾದದ ಪರಿಭಾಷೆಯಲ್ಲಿ ಅರ್ಥೈಸುತ್ತಾರೆ. ವಸಾಹತುಶಾಹಿ ಬಂಡವಾಳಶಾಹಿಯ ಒಂದು ಬೆಳೆದ ಅವಸ್ಥೆಯಾಗಿದ್ದು ಭಾರತೀಯ ರಾಷ್ಟ್ರೀಯ ಚಳುವಳಿ ಬೂರ್ಜ್ವಾ ವರ್ಗದವರು ತಮ್ಮ ಅಧಿಕಾರಕ್ಕಾಗಿ ನಡೆಸಿದ ಹೋರಾಟ ಎಂದು ಅರ್ಥೈಸಿದರು. ಏಕೆಂದರೆ ಲಿಬರಲ್ ರಾಷ್ಟ್ರೀಯತಾವಾದಿ ಚಳುವಳಿಯು ಯುರೋಪಿನಲ್ಲಿ ಬಂಡವಾಳ ಶಾಹಿಯು ಹಳೆಯ ವ್ಯವಸ್ಥೆಯನ್ನು ಕಿತ್ತೊಗೆಯಲು ಹುಟ್ಟಿಕೊಂಡ ಬೂರ್ಜ್ವಾಗಳ ಚಳುವಳಿಯಾಗಿದೆ ಎಂಬ ಸ್ಟಾಲಿನ್ ಕಾಲದ ವಾದವನ್ನು ಅವರು ಭಾರತಕ್ಕೆ ಅಳವಡಿಸಿದರು. ಇವರು ಭಾರತೀಯ ಸಮಾಜದ ವೈಶಿಷ್ಟ್ಯಗಳಾದ ಜಾತಿಯನ್ನು ಒಂದು ಸಾಮಾಜಿಕ ವಾಸ್ತವವನ್ನಾಗಿ ವಿಶ್ಲೇಷಣೆಗೆ ತೆಗೆದುಕೊಳ್ಳಲಿಲ್ಲ. ಭಾರತದಲ್ಲಿ ತಲೆ ಎತ್ತುತ್ತಿದ್ದ ಕೋಮುವಾದವನ್ನು ಸಾಮಾಜಿಕವಾಗಿ ವಿಶ್ಲೇಷಿಸುವ ವಿಧಾನಗಳನ್ನು ಹುಡುಕಲಿಲ್ಲ. ಬದಲಾಗಿ ಅದೊಂದು ವರ್ಗ ಸಂಘರ್ಷ ಎಂಬಂತೇ ನೊಡಿದರು.

ಆದರೆ ಈ ಮೇಲಿನ ವಾದಗಳನ್ನು ಬಿಪನ್ ಚಂದ್ರ ಅವರು ಅಲ್ಲಗಳೆಯುತ್ತಾರೆ. ಅವರು ರಾಷ್ಟ್ರೀಯ ಹೋರಾಟವು ಬೂರ್ಜ್ವಾ ಸ್ವರೂಪದ್ದಾಗಿರಲಿಲ್ಲ ಎನ್ನುವುದಲ್ಲದೇ ರಾಷ್ಟ್ರೀಯ ಹೋರಾಟವು ವಸಾಹತುಶಾಹಿಯನ್ನು ಕೊನೆಗೊಳಿಸಲಿಕ್ಕೆ ಅಗತ್ಯವಾಗಿತ್ತು ಎಂದು ಅಭಿಪ್ರಾಯಪಡುತ್ತಾರೆ. ರಾಷ್ಟ್ರೀಯ ಹೋರಾಟದ ಮುಂದಾಳತ್ವವನ್ನು, ಅದರಲ್ಲೂ ಗಾಂದಿಯುಗವನ್ನು ಟೀಕಿಸುವವರು ವಸಾಹತುಶಾಹಿ ಪರವಾದ ವಾದವನ್ನು ಮಂಡಿಸಿದಂತೇ ಆಗುತ್ತದೆ. ಎಂದ ಬಿಪಿನ್ ಚಂದ್ರ ಅವರು ಭಾರತಕ್ಕೆ ವಸಾಹತುಶಾಹಿಯಿಂದ ಯಾವ ರೀತಿ ಹಿಂದುಳಿದಿರುವಿಕೆಯ ಪಟ್ಟ ಬಂತು ಎಂಬುದನ್ನು ತಮ್ಮ ಲೇಖನಗಳಲ್ಲಿ ನಿದರ್ಶಿಸುತ್ತಾರೆ. ಈ ಕಾಲದಲ್ಲಿ ಬೆಳೆದು ಬಂದ ಕೋಮುವಾದವು ಒಂದು ಸುಳ್ಳು ನಿರೂಪಣೆ ಎನ್ನುವ ಮೂಲಕ ನಿಜವಾದ ರಾಷ್ಟ್ರೀಯತೆಯು ಸೆಕ್ಯೂಲರ್ ಆಗಿತ್ತು ಎನ್ನುತ್ತಾರೆ. ಒಟ್ಟಿನಲ್ಲಿ ಬಿಪನ್ ಚಂದ್ರ ಅವರ ಕಾಲದಿಂದ ಎಡಪಂಥೀಯರ ಆಧುನಿಕ ಚರಿತ್ರೆಲೇಖನವು ರಾಷ್ಟ್ರೀಯವಾದಿಯಾಗಿ ಪರಿವರ್ತನೆ ಹೊಂದಿತು ಹಾಗೂ ‘ಸೆಕ್ಯುಲರಿಸಂ’ನ ವಕ್ತಾರರಾಗಿ ಈ ಚರಿತ್ರೆಕಾರರು ಮಹತ್ವ ಗಳಿಸಿದರು. ಇವರಲ್ಲಿ ಕೆ.ಎನ್.ಪಣಿಕ್ಕರ್, ಸರ್ವಪಳ್ಳಿ ಗೋಪಾಲ, ಸುಮಿತ್ ಸರ್ಕಾರ್ ಮುಂತಾದವರನ್ನು ಹೆಸರಿಸಬಹುದು.

ಭಾರತೀಯ ಎಡಪಂಥೀಯ ಚರಿತ್ರಕಾರರು ೧೯೮೦ರ ನಂತರ ಭಾರತದಲ್ಲಿ ಹಿಂದೂ ರಾಷ್ಟ್ರವಾದವು ಪ್ರಬಲವಾಗುತ್ತಿದ್ದಂತೇ ಸೆಕ್ಯುಲರ್ ವಾದವನ್ನು ಚರಿತ್ರೆಯ ಮೂಲಕ ಕಟ್ಟಿಕೊಡುವ ಕಾಯಕಕ್ಕೆ ಬದ್ಧರಾದರು. ಇವರು ಭಾರತೀಯ ಸಂಸ್ಕೃತಿಯು ಹೇಗೆ ಹಿಂದೂ ರಾಷ್ಟ್ರವಾದಿ ನಿರೂಪಣೆಗೆ ಒಗ್ಗುವುದಿಲ್ಲ ಎಂಬುದನ್ನು ಒಂದು ರಾಜಕೀಯ ಬದ್ಧತೆಗಾಗಿ ಆಧ್ಯತೆ ನೀಡಿ ವಾದಿಸಿದರು. ಜೊತೆಗೇ ಹಿಂದೂ ರಾಷ್ಟ್ರವಾದದ ಪುನರುತ್ಥಾನವಾದಿ ಹಾಗೂ ಪ್ರತಿಗಾಮಿ ಪ್ರವೃತ್ತಿಯನ್ನೂ ಎಡಪಂಥೀಯ ಚಿಂತಕರಾಗಿ ಖಂಡಿಸಿದರು. ಆದರೆ ಸಾಂಪ್ರದಾಯಿಕತೆ, ದೈವೀಶ್ರದ್ಧೆ ಮತ್ತು ರೂಢಿಗಳು ಜನಜೀವನದಲ್ಲಿ ಯಾವ ರೀತಿ ವಾಸ್ತವಗಳಾಗಿವೆ ಎಂಬುದನ್ನು ಅವರು ವಿಶ್ಲೇಷಣೆಗೆ ಒಡ್ಡಲಿಲ್ಲ. ಬದಲಾಗಿ ತೀರ ವಿಚಾರವಾದಿಗಳಾಗಿ ಆ ಜಗತ್ತನ್ನು ತಮ್ಮ ನಿರೂಪಣೆಯಿಂದ ಹೊರಗಿಟ್ಟರು, ಇಲ್ಲವೇ ರಷ್ಯನ್ ಮಾರ್ಕ್ಸ್‌ವಾದದ ಬೇಸ್, ಸೂಪರ್‌ಸ್ಟ್ರಕ್ಚರ್ ಮಾದರಿಯಲ್ಲಿ ಅವನ್ನು ಜೋಡಿಸಿ ಅವುಗಳ ಆರ್ಥಿಕ ನಿರ್ಣಾಯಕತೆಯ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸಿದರು. ಮಧ್ಯಕಾಲದ ‘ಫ್ಯೂಡಲಿಸಂ’ ಬಗ್ಗೆ ವಾದಿಸುವ ಚಾರಿತ್ರೆಕಾರರಂತೂ ೧೯೮೦ರ ದಶಕದಲ್ಲಿ ಈ ಮೇಲಿನ ಸಿದ್ಧಾಂತಕ್ಕೆ ಇಡೀ ಚರಿತ್ರೆಯನ್ನು ಭಟ್ಟಿ ಇಳಿಸುವ ಕಾರ್ಯ ನಡೆಸಿದ್ದು ಕಮಡುಬರುತ್ತದೆ. ಆದರೆ ಕಳೆದೊಂದು ದಶಕದಿಂದ ಈ ಚರಿತ್ರೆಕಾರರು ತಮ್ಮ ಈ ಮಿತಿಯನ್ನು ಅರಿತು ಹೊಸ ಹಾದಿಗಳನ್ನು ಆವಿಷ್ಕರಿಸುತ್ತಿದ್ದಾರೆ.

ತನ್ನ ಎಲ್ಲ ಮಿತಿಗಳ ಜೊತೆಗೂ ಮಾರ್ಕ್ಸ್‌ವಾದಿ ಚರಿತ್ರೆ ಲೇಖನವು ಭಾರತೀಯ ಚರಿತ್ರೆ ಲೇಖನದಲ್ಲಿ ತುಂಬ ಮಹತ್ವಪೂರ್ಣವಾದ ಘಟ್ಟವಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ಮೊಟ್ಟಮೊದಲನೆಯದಾಗಿ ಭಾರತೀಯ ಚರಿತ್ರೆಯನ್ನು ಮಾಹಿತಿಗಳ ಜೋಡಣೆ, ರಾಜವಂಶಗಳ ರಾಜಾವಳಿಯ ಹಂತದಿಂದ ಒಂದು ಸಾಮಾಜಿಕ ರಚನೆಗಳ ವಿಶ್ಲೇಷಣೆಯ ಹಂತಕ್ಕೆ ಇವರು ಏರಿಸಿದ್ದಾರೆ. ಈ ಇತಿಹಾಸಕಾರರು ರಾಷ್ಟ್ರೀಯತಾ ಯುಗದ ಮಾಹಿತಿಗಳ ಜೊತೆಗೇ ತಮ್ಮ ವಿಶ್ಲೇಷಣೆಗೆ ಪೂರಕವಾದ ಅಗಾಧ ಮಾಹಿತಿಯನ್ನು ಕೂಡ ಸಂಗ್ರಹಿಸಿದ್ದಾರೆ. ಮಾಹಿತಿ ಸಂಗ್ರಹವನ್ನಷ್ಟೇ ಅಲ್ಲದೇ ವಿಶ್ಲೇಷಣೆಯನ್ನೂ ವೈಜ್ಞಾನಿಕವಾಗಿ ಹೇಗೆ ನಿರ್ವಹಿಸಬಹುದೆಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಇದೆಲ್ಲಕ್ಕಿಂತ ಮಹತ್ವಪೂರ್ಣ ವಾದದ್ದೆಂದರೆ ಭಾರತೀಯ ಸಂಸ್ಕೃತಿಯ ಬಹುಮುಖತೆಯನ್ನು ಇವರು ಶೋಧಿಸಿ ಕೋಮುವಾದಕ್ಕೆ ಜಾರಿಕೊಳ್ಳುತ್ತಿದ್ದ ಭಾರತೀಯ ಚರಿತ್ರೆಯನ್ನು ‘ಸೆಕ್ಯುಲರ್’ ಅಡಿಪಾಯದ ಮೇಲೆ ನಿಲ್ಲಿಸುವ ಕಾಯಕಕ್ಕೆ ಬದ್ಧರಾಗಿದ್ದಾರೆ. ಅಂದರೆ ೨೦ನೆಯ ಶತಮಾನದ ಮಧ್ಯಭಾಗದಲ್ಲಿ ಅವರು ಪ್ರಾರಂಭಿಸಿದ ದಾರಿಯಲ್ಲಿ ಭಾರತೀಯ ಅರ್ಥವಂತಿಕೆಯನ್ನೂ, ರಾಷ್ಟ್ರೀಯ ಚರಿತ್ರೆಯ ಪರಿಷ್ಕೃತ ರೂಪವನ್ನು ಶೋಧಿಸುತ್ತ ಇಂದು ರಾಷ್ಟ್ರೀಯ ಚರಿತ್ರೆಕಾರರಾಗಿ ತಮ್ಮನ್ನು ಕಂಡುಕೊಂಡಿದ್ದಾರೆ.

ಇತರ ಪ್ರಕಾರಗಳು

ಭಾರತೀಯ ಚರಿತ್ರೆಲೇಖನದಲ್ಲಿ ಈ ಮೇಲಿನ ಸಂಪ್ರದಾಯಗಳಲ್ಲದೇ ಇನ್ನೂ ಕೆಲ ಪ್ರಕಾರಗಳನ್ನು ಗುರುತಿಸಬಹುದು. ಅವುಗಳಲ್ಲಿ ೧೯೭೦ರ ದಶಕದಲ್ಲಿ ದಕ್ಷಿಣ ಭಾರತೀಯ ಚರಿತ್ರೆಯ ಕುರಿತು ಸಾಕಷ್ಟು ಜನಪ್ರಿಯವಾದ ಬರ್ಟನ್ ಸ್ಟೇನ್ ಎಂಬ ಇತಿಹಾಸಕಾರರ ವಾದಗಳನ್ನು ಹೆಸರಿಸಬಹುದು. ಸ್ಟೇನ್ ಅವರು ಮಾರ್ಕ್ಸ್‌ವಾದಿ ಸಂಪ್ರದಾಯ ‘ಫ್ಯೂಡಲ್’ ವ್ಯವಸ್ಥೆಯ ಪ್ರತಿಪಾದನೆಯನ್ನು ಅಲ್ಲಗಳೆದು ಮಧ್ಯಕಾಲೀನ ದಕ್ಷಿಣ ಭಾರತೀಯ ರಾಜ್ಯದ ರಚನೆ ‘ಸೆಗ್ಮೆಂಟರಿ’ ಸ್ವರೂಪವನ್ನು ಹೊಂದಿತ್ತೆಂದು ವಾದಿಸಿದರು. ಈ ಸೆಗ್ಮೆಮಟರಿ ಪ್ರಭುತ್ವದಲ್ಲಿ ಒಂದು ಸಾಮ್ರಾಜ್ಯದಲ್ಲಿನ ಆಳ್ವಿಕೆಯ ಘಟಕಗಳು ಕೇಂದ್ರೀಕೃತ ಪ್ರಭುತ್ವಕ್ಕೆ ಒಳಪಟ್ಟಿರದೇ ಬಿಡಿ ಬಿಡಿಯಾದ ಸ್ವಯಂಪೂರ್ಣವಾದ ಆಡಳಿತ ವ್ಯವಸ್ಥೆಗಳಾಗಿ ಅಸ್ತಿತ್ವವನ್ನು ಉಳಿಸಿಕೊಂಡಿರುತ್ತವೆ. ಸಾಮ್ರಾಜ್ಯವು ತನ್ನ ಕೇಂದ್ರ ಭಾಗದಲ್ಲಿ ಪಾರಂಪರಿಕವಾದ ಆಳ್ವಿಕೆಯನ್ನು ವಾಸ್ತವವಾಗಿ ನಡೆಸುತ್ತಿದ್ದು, ಕೇಂದ್ರದಿಂದ ಹೊರಗಿನ ಭಾಗಗಳಲ್ಲಿ ಕೇವಲ ವಿಧಿ ಆಚರಣೆಯ ಮಟ್ಟಿಗೆ ಅಸ್ತಿತ್ವದಲ್ಲಿ ಇರುತ್ತದೆ. ಇದೊಂದು ಪ್ರಭುತ್ವ ವ್ಯವಸ್ಥೆ, ಇನ್ನೂ ವಿಕಾಸವಾಗದ ಅವಸ್ಥೆಯಾಗಿದ್ದು, ಸಾಮ್ರಾಜ್ಯಕ್ಕೆ ಪ್ರಭುತ್ವದ ಅನೇಕ ಆಡಳಿತ ಕಾರ್ಯಕ್ರಮಗಳ ಅಗತ್ಯವೇ ಇಲ್ಲಿ ಸೃಷ್ಟಿಯಾಗಿರುವುದಿಲ್ಲ. ಹಾಗಾಗಿ ಈ ಸಾಮ್ರಜ್ಯವನ್ನು ಕೇಂದ್ರೀಕೃತ ಪ್ರಭುತ್ವವೆನ್ನುವುದಾಗಲೀ ಫ್ಯೂಡಲ್ ಪ್ರಭುತ್ವವೆನ್ನುವುದಾಗಲೀ ಸಮಂಜಸವಲ್ಲ. ಈ ಸೆಗ್ಮೆಂಟರಿ ವಾದವು ಭಾರತೀಯ ಸಮಾಜದ ಕುರಿತು ಇದೊಂದು ಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಾಗಿ ವಿಕಾಸವಾಗದ ಅವಸ್ಥೆ ಎಂಬ ಗ್ರಹಿಕೆಯನ್ನು ಹುಟ್ಟುಹಾಕುತ್ತದೆ. ಇದು ರಷ್ಯನ್ ಮಾರ್ಕ್ಸ್‌ವಾದಿಗಳ ‘ಏಶಿಯಾಟಿಕ್ ಉತ್ಪಾದನಾ ವಿಧಾನ’ ಕಲ್ಪನೆಯ ಮತ್ತೊಂದು ರೂಪವಾಗಿದೆ ಎಂದು ಸ್ಟೇನ್ ಅವರನ್ನು ಟೀಕಿಸವ ಎಡಪಂಥೀಯ ಚರಿತ್ರೆಕಾರರು ಅಭಿಪ್ರಾಯಪಡುತ್ತಾರೆ. ಈ ಸೆಗ್ಮೆಂಟರಿ ಪ್ರಭುತ್ವ ಕಲ್ಪನೆಯನ್ನು ಇತರ ಕೆಲ ಚರಿತ್ರೆಕಾರರೂ ತಮ್ಮ ಚರಿತ್ರೆ ಲೇಖನಕ್ಕೆ ೧೯೯೦ರ ದಶಕದಲ್ಲಿ ಬಳಸಿಕೊಂಡರು. ೧೯೯೦ರ ನಂತರ ಈ ವಾದವು ತೀವ್ರವಾದ ಟೀಕೆಗೆ ಒಳಗಾಯಿತು ಹಾಗೂ ಸ್ಟೇನ್ ಅವರ ಗ್ರಹಿಕೆಗೆ ವಿರುದ್ಧವಾದ ಮಾಹಿತಿಗಳನ್ನು ಜಪಾನಿನ ಸಂಶೋಧಕರಾದ ನೊಬೊರು ಕಾರಾಶಿಮಾ ಅವರು ಸಾಕಷ್ಟು ನಿದರ್ಶಿಸಿದ್ದರಿಂದ ಆ ವಾದವು ದುರ್ಬಲವಾದುದು ಎಂಬ ಅಭಿಪ್ರಾಯವೂ ಇಂದು ಬಲವಾಗುತ್ತಿದೆ.

ಭಾರತೀಯ ಸ್ವಾತಂತ್ರ‍್ಯ ಸಂಗ್ರಾಮ ಕಾಲದ ಚರಿತ್ರೆಯನ್ನು ಪುನರ್ನಿರೂಪಿಸುವ ಹಂಬಲವುಳ್ಳ ‘ಸಬಾಲ್ಟರ್ನ್ ಅಧ್ಯಯನ’ ಲೇಖನ ಕ್ರಮವು ಕೂಡ ೧೯೮೦-೯೦ರ ದಶಕದಲ್ಲಿ ಸಾಕಷ್ಟು ಮಹತ್ವವನ್ನೂ – ವಿಚಾರಗಳನ್ನೂ ಸೃಷ್ಟಿಸಿದೆ.[1] ರಣಜಿತ್ ಗುಹಾ, ಪಾರ್ಥ ಚಟರ್ಜಿ ಮುಂತಾದ ಚರಿತ್ರೆಕಾರರು ಈ ಲೇಖನ ಪಂಥದ ವಕ್ತಾರರಾಗಿದ್ದಾರೆ. ‘ಸಬಾಲ್ಟರ್ನ್’ ಎಂದರೆ ‘ಕೆಳಗಿನ’ ಸಮುದಾಯಗಳ ಚರಿತ್ರೆಯಾಗಿದೆ. ಈ ಕಲ್ಪನೆಯನ್ನು ಇಟಲಿಯ ಮಾರ್ಕ್ಸ್‌ವಾದೀ ಚಿಂತಕ ಆಂಟೋನಿಯೋ ಗ್ರಾಂಸಿಯವರ ‘ಸೆರೆಮನೆ ಟಿಪ್ಪಣಿಗಳು’ ಎಂಬ ಸಂಗ್ರಹದಿಂದ ಆಯ್ದುಕೊಳ್ಳಲಾಗಿದೆ. ಈ ಕೆಳಸಮುದಾಯಗಳು ಒಂದು ಪ್ರಭುತ್ವದ ಸಂಸ್ಕೃತಿಯ ಯಜಮಾನಿಕೆಗೆ ಒಳಪಟ್ಟು ಸಮಾಜಗಳಾಗಿದ್ದು ಅವುಗಳ ಭೌತಿಕ ವಾಸ್ತವ ಪ್ರಭುತ್ವದ ಸಂಸ್ಕೃತಿಗೆ ವಿರೋಧಿಯಾದ ಅಥವಾ ಅರ್ಥಪೂರ್ಣವಲ್ಲದ ಲೋಕದೃಷ್ಟಿಯನ್ನು ಒಳಗೊಂಡಿರುತ್ತವೆ. ಇಲ್ಲಿಯವರೆಗಿನ ಚರಿತ್ರೆ ಲೇಖನಗಳು ಪ್ರಭುತ್ವ ಸಂಸ್ಕೃತಿಯ ಲೋಕದೃಷ್ಟಿಯಿಂದಲೇ ಸೃಷ್ಟಿಯಾಗಿವೆ. ಅವುಗಳಿಗೆ ಎಡಪಂಥೀಯ ಚರಿತ್ರೆಯೂ ಹೊರತಾಗಿಲ್ಲ ಎಂದು ‘ಸಬಾಲ್ಟರ‍್ನ’ ಚರಿತ್ರೆಕಾರರು ವಾದಿಸುತ್ತಾರೆ. ಭಾರತೀಯ ಸ್ವಾತಂತ್ರ‍್ಯ ಸಂಗ್ರಾಮದ ಲೋಕದೃಷ್ಟಿ ಕೂಡ ಪ್ರಭುತ್ವದ ಲೋಕದೃಷ್ಟಿಯೇ ಆಗಿದೆ. ಬ್ರಿಟೀಶರ ಪ್ರಭುವವನ್ನು ವಿರೋಧಿಸಿದ ಈ ರಾಷ್ಟ್ರೀಯತಾವಾದಿಗಳು ಅವರ ಪ್ರಭುತ್ವವನ್ನು ಅಂತರ್ಗತಮಾಡಿಕೊಂಡು ಅದನ್ನು ತಾವೇ ಪಡೆಯಲಿಕ್ಕಾಗಿ ಹೋರಾಟ ನಡೆಸಿದರು. ಈ ಹೋರಾಟಕ್ಕೆ ಅನೇಕ ಸಬಾಲ್ಟರ್ನ್ ಸಮುದಾಯಗಳಾದ ರೈತ ಹಾಗೂ ಬುಡಕಟ್ಟಿನ ಸಮಾಜಗಳನ್ನು ಬಳಸಿಕೊಂಡರು. ಈ ಬಳಸಿಕೊಳ್ಳುವಿಕೆ ಗಾಂಧಿಯವರ ಕಾಲದಲ್ಲಿ ಪ್ರಾರಂಭವಾಯಿತು. ಕೆಳಗಿನ ಸಮುದಾಯಗಳು ತಮ್ಮ ಲೋಕದೃಷ್ಟಿ ಬೇರೆಯಾಗಿದ್ದರೂ ಈ ಹೋರಾಟದಲ್ಲಿ ಹೇಗೆ ಒಳಪಟ್ಟವು ಎಂಬುದನ್ನೂ ಈ ಚರಿತ್ರೆಕಾರರು ವಿಶ್ಲೇಷಿಸಿದ್ದಾರೆ. ಒಂದು ರೀತಿಯಲ್ಲಿ ಭಾರತೀಯ ಸ್ವಾತಂತ್ರ‍್ಯ ಹೋರಾಟದ ಪ್ರಭುತ್ವ ಸ್ಥಾಪನೆಯ ರಾಜಕೀಯವನ್ನು ಇದು ಬಯಲು ಮಾಡುತ್ತದೆ.

೧೯೮೦-೯೦ರ ಅವಧಿಯ ಸಬಾಲ್ಟರ್ನ್ ಚರಿತ್ರೆಲೇಖನಗಳು ಮಾರ್ಕ್ಸ್‌ವಾದಿ ಸೈದ್ಧಾಂತಿಕ ಚೌಕಟ್ಟಿಗೆ ಹೊಂದಿಕೊಳ್ಳುವಂತೇ ರಚನೆಯಾದವು. ಏಕೆಂದರೆ ಈ ಚರಿತ್ರೆಕಾರರು ಮಾರ್ಕ್ಸ್‌ವಾದಿಗಳೇ ಆಗಿದ್ದರು. ಈ ಹಂತದಲ್ಲಿ ಅತ್ಯಂತ ಪ್ರಮುಖವಾಗಿ ಬರೆದವರೆಂದರೆ ಸುಮಿತ್ ಸರ್ಕಾರ್ ಅವರು. ಆದರೆ ೧೯೯೦ರ ನಂತರ ‘ಸಬಾಲ್ಟರ್ನ್’ ಅಧ್ಯಯನಗಳು ಆಧುನಿಕೋತ್ತರ ಚಿಂತನೆಯನ್ನು ವ್ಯಕ್ತಪಡಿಸತೊಡಗಿದವು. ಅಂದರೆ ಮಾರ್ಕ್ಸ್‌ವಾದವನ್ನೂ ಸೇರಿಸಿದಂತೇ ಎಲ್ಲ ಪಾಶ್ಚಾತ್ಯ ಚಿಂತನೆಗಳೂ ಅನ್ಯ ದೇಶಗಳ ಮೇಲೆ ಪಾಶ್ಚಾತ್ಯರ ‘ವಿಚರ’ಗಳ ಪ್ರಭುತ್ವವನ್ನೂ ಸೃಷ್ಟಿ ಮಾಡುತ್ತವೆ. ಈ ವಿಚಾರಗಳು ಮೂಲತಃ ಯುರೋಪಿನ ಜ್ಞಾನೋದಯ ಯುಗದ ಆಧುನಿಕ ಚಿಂತನೆಗಳಾಗಿವೆ. ಈ ಚಿಂತನೆಗಳು ಅನ್ಯ ಸಂಸ್ಕೃತಿಗಳ ಅಸ್ತಿತ್ವವನ್ನು ಅಲ್ಲಗಳೆಯುತ್ತವೆ. ಈ ಅನ್ಯ ಚಿಂತನಾಮಾರ್ಗಗಳನ್ನು ಅರ್ಥಹೀನ ಎಂದು ಇವು ತಿರಸ್ಕರಿಸುತ್ತವೆ. ಆಯಾ ದೇಶಗಳಿಗೆ ವಾಸ್ತವವಲ್ಲದ ಕಾಲ್ಪನಿಕ ಪ್ರಭೇದಗಳನ್ನು ಐರೋಪ್ಯ ಚಿಂತನೆಗಳಿಗೆ ಪೂರಕವಾಗುವಂತೇ ದೇಶಿ ಚಿಂತಕರು ಸೃಷ್ಟಿಸುತ್ತಾರೆ.ಅಂಥ ಪ್ರಭೇದಗಳಲ್ಲಿ ‘ರಾಷ್ಟ್ರ’, ಹಿಂದೂ ಧರ್ಮ, ಚರಿತ್ರೆ (ಹಿಸ್ಟರಿ), ಮುಂತಾದವುಗಳು ಪ್ರಮುಖವಾಗಿವೆ. ಭಾರತದಲ್ಲಿ ಈ ಪ್ರಭೇದಗಳು ಹೇಗೆ ಆಧುನಿಕ ಸೃಷ್ಟಿಗಳಾಗಿವೆ ಎಂಬುದನ್ನು ಪಾರ್ಥ ಚಟರ್ಜಿಯವರಂಥ ಚರಿತ್ರೆಕಾರರು ತಮ್ಮ ‘ನೇಶನ್ ಆಂಡ್ ಇಟ್ಸ್ ಫ್ರಾಗ್ಮೆಂಟ್ಸ್’ ಮುಂತಾದ ಕೃತಿಗಳಲ್ಲಿ ತೋರಿಸುತ್ತಾರೆ. ದೀಪೇಶ್ ಚಕ್ರವರ್ತಿ, ಗಾಯತ್ರಿ ಚಕ್ರವರ್ತಿ ಸ್ಪಿವಾಕ್ ಮುಂತಾದವರೂ ಈ ಸಾಲಿನಲ್ಲಿ ಸೇರುತ್ತಾರೆ.

ಸಬಾಲ್ಟರ್ನ್ ಅಧ್ಯಯನದ ಕುರಿತು ಭಾರತೀಯ ಎಡಪಂಥೀಯ ಇತಿಹಾಸಕಾರರಿಂದ ಅವ್ಯಾಹತ ಟೀಕೆಗಳು ಬಂದಿವೆ. ಅವರಲ್ಲಿ ಮೊದಲು ಈ ‘ಸಬಾಲ್ಟರ್ನ್ ಅಧ್ಯಯನ’ ಗುಂಪಿನಲ್ಲಿದ್ದು ನಂತರ ಅದರಿಂದ ಹೊರ ಬಂದ ಸುಮಿತ್ ಸರ್ಕಾರ್ ಅವರೇ ಪ್ರಮುಖರು. ಅವರು ತಮ್ಮ ‘ರೈಟಿಂಗ್ ಸೋಶಿಯಲ್ ಹಿಸ್ಟರಿ’ ಗ್ರಂಥದಲ್ಲಿ ೧೯೯೦ರ ನಂತರ ಈ ಅಧ್ಯಯನಗಳಲ್ಲಿ ಆದ ತಾತ್ವಿಕ ಬದಲಾವಣೆಗಳನ್ನು ಪಡೆಯುವ ಲಾಲಸೆಯಿಂದ ಮತ್ತು ತೀರಾ ಪ್ರತಿಷ್ಠಿತ ಸಂಸ್ಕೃತಿಯ ವಕ್ತಾರನಾಗುವ ಹಂಬಲವನ್ನು ಗುರುತಿಸಿದ್ದಾರೆ. ‘ಸಬಾಲ್ಟರ್ನ್’ ಅಧ್ಯಯನದ ತಾತ್ವಿಕ ಗ್ರಹಿಕೆಗಳು ಟೀಕೆಗೆ ಗುರಿಯಾಗಿವೆ. ಬಿಪನ್ ಚಂದ್ರ ಅವರು ಒಟ್ಟಾರೆಯಾಗಿ ಈ ಅಧ್ಯಯನವು ರಾಷ್ಟ್ರೀಯತಾ ಹೋರಾಟದ ಪ್ರಾಮಾಣಿಕತೆಯನ್ನು ಸಂಶಯಿಸುವುದರಿಂದ ಕೇಂಬ್ರಿಜ್ಜ್ ವಸಾಹತುಶಾಹಿ ಚರಿತ್ರೆಗೆ ಪೂರಕವಾಗಿದೆ ಎಂದು ಟೀಕಿಸಿದ್ದಾರೆ.

ಫ್ರಾನ್ಸಿನಲ್ಲಿ ಹುಟ್ಟಿ ಬೆಳೆದ ‘ಆನಲ್ಸ್’ ಚರಿತ್ರೆ ಸಂಪ್ರದಾಯವು ಕೂಡ ಭಾರತೀಯ ಚರಿತ್ರೆಕಾರರ ಮೇಲೆ ಪ್ರಭಾವ ಬೀರಿದೆ. ೧೯೨೯ರಲ್ಲಿ ಮಾರ್ಕ್‌ಬ್ಲಾಕ್ ಮತ್ತು ಲ್ಯೂಸಿಯನ್ ಫೆವರ್ ಅವರು ಆನಲ್ಸ್-ಇಕಾನಮಿಸ್, ಸೊಸೈಟೀಸ್, ಸಿವಿಲೈಸೇಷನ್ಸ್ ಎಂಬ ನಿಯತಕಾಲಿಕೆಯನ್ನು ಹುಟ್ಟುಹಾಕಿ ಅದರ ಮೂಲಕ ಹೊಸ ರೀತಿಯ ಚರಿತ್ರೆ ಲೇಖನವನ್ನು ಫ್ರಾನ್ಸಿಲ್ಲಿ ಪ್ರಚಲಿತದಲ್ಲಿ ತಂದರು. ಈ ಹೊಸ ಚರಿತ್ರೆ ಲೇಖನವನ್ನು ‘ಆನಲ್ಸ್’ ಚರಿತ್ರೆಲೇಖನವೆಂದು ಇಂದು ಗುರುತಿಸಲಾಗುತ್ತದೆ. ಈ ಸಂಪ್ರದಾಯದಲ್ಲಿ ಬಂದ ಇನ್ನಿತರ ಪ್ರಮುಖ ಚರಿತ್ರೆ ಲೇಖಕರೆಂದರೆ ಫರ್ಡಿನಾಂಡ್ ಬ್ರಾದೆಲ್ ಹಾಗೂ ಲದೂರೆ. ಇವರು ರಾಷ್ಟ್ರೀಯ ಚರಿತ್ರೆಯ ಚೌಕಟ್ಟನ್ನು ಬಿಟ್ಟು ವಿಷಯ ವ್ಯಾಪ್ತಿಗೆ ಮಹತ್ವ ನೀಡಿದರು. ಇವರು ಆಧುನಿಕ ವಿಜ್ಞಾನವನ್ನು ಪ್ರತ್ಯೇಕಿಸುವ ಹಲವಾರು ವಿಭಾಗೀಕರಣವನ್ನು (ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಇತ್ಯಾದಿ) ಬಿಟ್ಟು ಮನುಷ್ಯನ ಗತಕಾಲವನ್ನು ಸಮಗ್ರವಾಗಿ ಗ್ರಹಿಸಬೇಕೆಂದು. ಅಧ್ಯಯನ ಮಾಡುವ ವಿಷಯಕ್ಕೆ ಪ್ರಸ್ತುತವಾಗಬಲ್ಲ ಎಲ್ಲ ಪ್ರಕಾರದ ಪರಾಮರ್ಶೆಗಳನ್ನು ಒಳಗೊಂಡಷ್ಟೂ ಮನುಷ್ಯನ ಗತಕಾಲ ಇಡಿಯಾಗಿ ನಮಗೆ ಗ್ರಹಿಕೆಯಾಗುತ್ತದೆ. ಅಂಥ ಚರಿತ್ರೆಯಿಂದ ನಾವು ಚಾರಿತ್ರಿಕ ತತ್ವಗಳನ್ನು ಕಂಡುಕೊಳ್ಳಬೇಕೇ ಹೊರತೂ ಯಾವುದೇ ಸಿದ್ಧಾಂತಗಳನ್ನು ಮೊದಲು ಒಪ್ಪಿಕೊಂಡು ಅದರ ಚೌಕಟ್ಟಿನಲ್ಲಿ ಚರಿತ್ರೆಯನ್ನು ಇಳಿಸುವುದರಿಂದ ಯಥಾರ್ಥ ಗ್ರಹಿಕೆ ಸಾಧ್ಯವಾಗಲಾರದು. ಹೀಗೆ ಆನಲ್ಸ್ ಸಂಪ್ರದಾಯದವರು ಯುರೋಪಿನ ಚರಿತ್ರೆಗೆ ತೀರ ಹೊಸ ಪರಿಭಾಷೆಗಳನ್ನು, ಅರ್ಥಗಳನ್ನು ನೀಡಿದರು. ಭಾರತದಲ್ಲಿ ತೀರ ಈಚೆಗೆ, ೧೯೯೦ರ ನಂತರ ಈ ಚರಿತ್ರೆ ಲೇಖನ ಕ್ರಮವು ಪರಿಚಯಿಸಲ್ಪಟ್ಟಿದೆ. ಸಬಾಲ್ಟರ್ನ್ ಚರಿತ್ರೆಯಂತೇ ಇದೂ ಕೂಡ ಭಾರತದ ಎಡಪಂಥೀಯ ಚರಿತ್ರೆಕಾರರು ಮಾರ್ಕ್ಸ್‌ವಾದಿ ಚೌಕಟ್ಟಿನಿಂದ ಹೊರಬರಲು ನಡೆಸಿದ ಪ್ರಯತ್ನವನ್ನಾಗಿ ಗುರುತಿಸಬಹುದು.

ಪರಾಮರ್ಶನ ಗ್ರಂಥಗಳು

೧. ಕಾಥಲೀನ್ ಘೋ, ೧೯೮೧. ರೂರಲ್ ಸೊಸೈಟಿ ಇನ್ ಸೌತ್ ಈಸ್ಟ್ ಏಶಿಯಾ, ಕೇಂಬ್ರಿಡ್ಜ್: ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್.

೨. ಕೊಸಾಂಬಿ ಡಿ.ಡಿ. ೧೯೫೬. ಎನ್ ಇಂಟ್ರಡಕ್ಸಷನ್ ಟು ದ ಸ್ಟಡಿ ಆಫ್ ಇಂಡಿಯನ್ ಹಿಸ್ಟರಿ, ಬಾಂಬೆ: ಪಾಪ್ಯುಲರ್ ಪ್ರಕಾಶನ.

೩. ಗೋಪಾಲ್. ಎಸ್. ಮತ್ತು ರೋಮಿಲಾ ಥಪರ್ (ಸಂ). ೧೯೬೩. ಪ್ರಾಬ್ಲಂಸ್ ಆಫ್ ಹಿಸ್ಟಾರಿಕಲ್ ರೈಟಿಂಗ್ ಇನ್ ಇಂಡಿಯಾ, ನ್ಯೂಡೆಲ್ಲಿ: ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್.

೪. ಪೀಟರ್ ಲ್ಯಾಂಬೆರ್ಟ್ ಮತ್ತು ಫಿಲಿಪ್ ಸ್ಕೋಫೀಲ್ಡ್ (ಸಂ). ೨೦೦೪. ಮೇಕಿಂಗ್ ಹಿಸ್ಟರಿ ಎನ್ ಇಂಟ್ರೂಡಕ್ಷನ್ ಟು ದ ಹಿಸ್ಟರಿ ಅಂಡ್ ಪ್ರಾಕ್ಟೀಸಸ್ ಆಫ್ ದಿ ಡಿಸಿಪ್ಲಿನ್, ಲಂಡನ್: ರಾಟ್‌ಲೆಡ್ಜ್.

೫. ಫಿಲಿಪ್ಸ್. ಸಿ.ಹೆಚ್. (ಸಂ), ೧೯೬೧. ಹಿಸ್ಟಾರಿಯನ್ಸ್ ಆಫ್ ಇಂಡಿಯಾ, ಪಾಕಿಸ್ತಾನ್ ಅಂಡ್ ಸಿಲೋನ್.

೬. ಬಿಪಿನ್ ಚಂದ್ರ, ೧೯೮೪. ಕಮ್ಯುನಿಲಿಸಂ ಇನ್ ಮಾರ್ಡನ್ ಇಂಡಿಯ, ನ್ಯೂಡೆಲ್ಲಿ: ವಿಕಾಸ್ ಪಬ್ಲಿಶಿಂಗ್ ಹೌಸ್.

೭. ಮಜುಂದಾರ್. ಆರ್.ಸಿ., ೧೯೭೦. ಹಿಸ್ಟಾರಿಯೋಗ್ರಫಿ ಇನ್ ಮಾರ್ಡನ್ ಇಂಡಿಯಾ, ಬಾಂಬೆ: ಏಶಿಯಾ ಪಬ್ಲಿಷಿಂಗ್.

೮. ರಣಜಿತ್ ಗುಹಾ (ಸಂ), ಸಬಾಲ್ಟರ್ನ್ ಸ್ಟಡೀಸ್, ಸಂಪುಟ ೧- ರೈಟಿಂಗ್ಸ್ ಆನ್ ಸೌತ್ ಏಶಿಯನ್ ಹಿಸ್ಟರಿ, ನ್ಯೂಡೆಲ್ಲಿ: ಆಕ್ಸಫರ್ಡ್ ಯುನಿವರ್ಸಿಟಿ ಪ್ರೆಸ್.

೯. ರಣಜಿತ್ ಗುಹಾ, ೧೯೮೩. ಎಲಿಮೆಂಟರಿ ಅಸ್ಟೆಕ್ಟ್ಸ್ ಆಫ್ ಪೆಸೆಂಟ್ ಇನ್‌ಸರ್‌ಜೆನ್ಸಿ ಇನ್ ಕಲೋನಿಯಲ್ ಇಂಡಿಯಾ, ನ್ಯೂಡೆಲ್ಲಿ: ಆಕ್ಸಫರ್ಡ್ ಯುನಿವರ್ಸಿಟಿ ಪ್ರೆಸ್.

೧೦. ರಣಜಿತ್ ಗುನಾ ೧೯೮೮. ಎನ್ ಇಂಡಿಯನ್ ಹಿಸ್ಟಾರಿಯೋಗ್ರಫಿ ಆಫ್ ಇಂಡಿಯಾ – ಎ ನೈನ್‌ಟೀನ್ತ್ ಸೆಂಚುರಿ ಅಜೆಂಡಾ ಅಂಡ್ ಇಟ್ಸ್ ಇಂಪ್ಲಿಕೇಶನ್ಸ್, ಕಲ್ಕತ್ತಾ.

೧೧. ರೋಮಿಲಾ ಥಾಪರ್. ೧೯೭೮. ಏನ್ಸಿಯಂಟ್ ಇಂಡಿಯನ್ ಸೋಶಿಯಲ್ ಹಿಸ್ಟರಿ, ನ್ಯೂಡೆಲ್ಲಿ.

೧೨. ರೋಮಿಲಾ ಥಾಪರ್, ಹರ್ಬನ್ಸ್ ಮುಖಿಯಾ, ಬಿಪಿನ್ ಚಂದ್ರ (ಸಂ). ಕಮ್ಯುನಲಿಸಂ ಅಂಡ್ ದ ರೈಟಿಂಗ್ ಆಫ್ ಇಂಡಿಯನ್ ಹಿಸ್ಟರಿ, ನ್ಯೂಡೆಲ್ಲಿ.

೧೩. ಶರ್ಮ. ಆರ್.ಎಸ್. ೧೯೫೪. ಇಂಡಿಯನ್ ಫ್ಯೂಡಲಿಸಂ, ನ್ಯೂಡೆಲ್ಲಿ: ಮ್ಯಾಕ್‌ಮಿಲನ್.

೧೪. ಶ್ರೀಧರನ್.ಈ. ೨೦೦೪. ಎ ಟೆಕ್ಸ್ಟ್ ಬುಕ್ ಆಫ್ ಹಿಸ್ಟಾರಿಯೋಗ್ರಫಿ (ಕ್ರಿ.ಪೂ. ೫೦೦ರಿಂದ ಕ್ರಿ.ಶ. ೨೦೦೦ರವರೆಗೆ), ನ್ಯೂಡೆಲ್ಲಿ: ಓರಿಯಂಟ್ ಲಾಂಗ್‌ಮನ್.

೧೫. ಸ್ಮಿತ್.ಬಿ.ಜಿ. ೧೯೯೮. ದಿ ಜೆಂಡರ್ ಆಫ್ ಹಿಸ್ಟರಿ. ಮೆನ್, ವುಮೆನ್ ಅಂಡ್ ಹಿಸ್ಟಾರಿಕಲ್ ಪ್ರಾಕ್ಟಿಸಸ್.

* * *

 

[1] ಇದರ ಬಗ್ಗೆ ವಿವರಗಳನ್ನು ಪ್ರಸ್ತುತ ಕೃತಿಯ ಪುಟ ೨೧೫-೨೯೭ರ ಪುಟಗಳಲ್ಲಿ ಚರ್ಚಿಸಲಾಗಿದೆ – ಸಂ.