ವ್ಯಾಜ್ಯರೂಪಿ ಇತಿಹಾಸ

ನಿಜವಾದ ಅರ್ಥದಲ್ಲಿ ಇತಿಹಾಸಜ್ಞಾನವು ವಸ್ತುನಿಷ್ಠವಾಗಲಾರದು. ಹೆಚ್ಚೆಂದರೆ ಅದು ಇತಿಹಾಸ ರಚನೆಯಲ್ಲಿ ತೋರುವ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ, ಅದಕ್ಕಿಂತಲೂ ಹೆಚ್ಚಾಗಿ ಇತಿಹಾಸದ ಬಗ್ಗೆ ಭಾವನಾತ್ಮಕವಾಗಿ ಇರಿಸಿಕೊಳ್ಳುವ ದೂರ ಹಾಗೂ ಅಂತರವು ಅದರ ಸ್ವಂತಿಕೆ ಆಕರ್ಷಣೆಗಳನ್ನು ಕಸಿದೊಯ್ಯುತ್ತವೆ ಎಂಬ ವಿವರಣೆ ಇತಿಹಾಸದ ಸ್ವರೂಪವನ್ನು ತಿಳಿಸುತ್ತದೆ. ಇತಿಹಾಸದ ಬಗ್ಗೆ ನಾವು ಆಕರ್ಷಿತರಾಗುವುದು ನಮಗೆ ಅದರೊಡನೆ ಸಂಬಂಧವಿರುವುದರಿಂದ. ಇದರ ಒಂದು ವಿಲಕ್ಷಣ, ಆತಂಕಕಾರಿ ರೂಪ ಇತಿಹಾಸದ ವ್ಯಾಜ್ಯೀಕರಣ. ಹಿಂದೆ ನಡೆದವೆನ್ನಲಾದ ಅನ್ಯಾಯ, ಅವಮಾನಗಳನ್ನು ನೆನೆದು ಅವುಗಳಿಗೆ ಪರಿಹಾರವನ್ನು ಬಯಸುವುದು ಅಥವಾ ಅವುಗಳ ಸೇಡು ತೀರಿಸುವುದು ನಮ್ಮ ಆತ್ಮ ಗೌರವವೆಂದು ತಿಳಿಯುವುದು ಸಾಮಾನ್ಯ. ಕುಲವೈಷ್ಯಮ್ಯ, ಕಲಹಗಳನ್ನು ಒಂದು ತಲೆಮಾರಿನಿಂದ ಇನೊಂದಕ್ಕೆ ಮುಂದುವರಿಸುವಂತದ್ದು; ಅಪ್ಪ ಮಾಡಿದ ಸಾಲವನ್ನು ಮಗ ತೀರಿಸಬೇಕಾದ್ದಲ್ಲಿ ಅಪ್ಪನಿಗಾದ ಅನ್ಯಾಯದ ಸೇಡನ್ನು ಮಗ ಯಾಕೆ ತೀರಿಸಬಾರದು? ಎಂಬ ವಾದ. ಇದು ಆತ್ಮ ಗೌರವಕ್ಕೆ, ಕುಲಗೌರವಕ್ಕೆ ಸಂಬಂಧಿಸಿದ್ದು. ಇದು ವಸ್ತುಶಃ ಕೆಲವು ಬುಡಕಟ್ಟುಗಳ ನೀತಿ ಸಂಹಿತೆಯ ಅಂಶ. ಅಲ್ಲಿ ಕುಲಗೌರವವನ್ನು ಮೀರಿ ವ್ಯಕ್ತಿಯ ಇರವು ಇಲ್ಲ. ಅದರೊಳಗಿನ ಅವಿನಾಭಾವ ಸಂಬಂಧವು ಗುಂಪು ವೈರ ಜಗಳಗಳನ್ನು ಬಿಸಿಯಾಗಿ ಉಳಿಸುತ್ತದೆ. ಇಲ್ಲಿ ವ್ಯಕ್ತಿಯೊಬ್ಬನು ಕ್ಷಮಾಶೀಲನಾದರೂ ಆತನ ಪಂಗಡ ಅದನ್ನು ಒಪ್ಪಲಾರದು. ಒಂದು ಸಮೂಹದ ಮರ್ಯಾದೆ, ಘನತೆಗಳ ಎದುರು ವ್ಯಕ್ತಿಯ ನಿಲುವು ತೀರ ಗೌಣ. ರೋಮಿಯೋ ಜೂಲಿಯೆಟ್ಟರ ರಮ್ಯ ದುರಂತ ಪ್ರೇಮಗಾಥೆಯನ್ನು ಕುಲವೈಷಮ್ಯದ ಕಥನದೊಡನೆ ಜೋಡಿಸುವುದು ಸಂಧಾನವನ್ನೊಲ್ಲದ ಕಲಹಗಳು ಹೇಗೆ ಅನಾಹುತಕಾರಿಯಾಗಿ ಪರಿಣಮಿಸಿ ಮುಗ್ಧ ಜೀವಿಗಳನ್ನು ಆಹುತಿಯಾಗಿ ಪಡೆಯುತ್ತವೆ ಎಂಬುದನ್ನು ತಿಳಿಸಲು. ಇದು ಸಾಹಿತ್ಯದಲ್ಲಿ ಅಥವಾ ಜಾನಪದದಲ್ಲಿ ದುಃಖ ಅನುಕಂಪಗಳಿಂದ ತೋಯ್ದ ಕಥೆಗಳಾಗಿ ಹೇಳಲ್ಪಟ್ಟರೂ, ಸಮಾಜವು ವೈಷಮ್ಯ ಕಲಹಗಳನ್ನು ಧೈರ್ಯವಾಗಿ ನಿರಾಕರಿಸಿಲ್ಲ. ವ್ಯಕ್ತಿಯ ಅಹಂಭಾವವನ್ನು ಅತಿಯಾಗಿ ಘೋಷಿಸಿದಾಗ ಅದು ಹೇಗೆ ವಿಕಟವಾಗಿ ವಿಜೃಂಭಿಸತೊಡಗುತ್ತದೆಯೋ, ಹಾಗೆಯೇ ಆತನ ಸಮಾಜವು ಈ ರೀತಿಯ ಪ್ರವೃತ್ತಿಯನ್ನು ತೋರಿಸಬಹುದು. ತಾನು ಮೇಲ್ಮೈ ಸಾಧಿಸುವ ಕ್ರೂರ ಸಂಭ್ರಮದಲ್ಲಿ ನಿರ್ದೋಷಿಗಳ ಆಹುತಿ ಅದೇನು ಎಂಬ ಧೋರಣೆ ಆಗಾಗ ಪ್ರಕಟವಾಗುತ್ತದೆ. ಇದರ ಸಮರ್ಥನೆ ನಡೆಯುವುದು ವ್ಯಕ್ತಿಗಿಂತ ಸಮಾಜ, ದೇಶ ದೊಡ್ಡದು ಎಂಬ ಅಮರ ವಾಣಿಯಿಂದ. ನಮ್ಮ ಯುದ್ಧವು ಯಾವಾಗಲೂ ಧರ್ಮ ಯುದ್ಧವೇ. ಅದರಲ್ಲಿ ಭಾಗಿಯಾದಾಗ ದೊರಕುವ ಕೀರ್ತಿಗೆ ಎಣೆಯಿಲ್ಲ, ಇಲ್ಲಿ ಸ್ವರ್ಗ ತಪ್ಪಿದರೆ ಅಲ್ಲಿ ಸಿಕ್ಕೀತು!

ಕುಲಕಲಹ, ವೈಷಮ್ಯಗಳಿಗೆ ಧರ್ಮಯುದ್ಧದ ಹೆಸರು ಸಿಕ್ಕಿದಾಗ ಅವುಗಳ ಘನತೆ ಹೆಚ್ಚುತ್ತದೆ ಇದನ್ನು ಸಮರ್ಥಿಸುವ ಒಂದು ನೆಲೆ ಇತಿಹಾಸ. ಹಿಂದೆ ನಮ್ಮ ಮೇಲೆ ನಡೆಸಲಾದ ಅನ್ಯಾಯ, ಅತ್ಯಾಚಾರಗಳನ್ನು ನೆನೆಸಿ, ಅದರ ಬಗ್ಗೆ ಕ್ರೋಧದಿಂದ ಕುದಿಯುತ್ತಾ, ಅವುಗಳ ಸೇಡನ್ನು ತೀರಿಸಿದಾಗ ಮಾತ್ರ ನಮ್ಮ ಆತ್ಮಕ್ಕೆ ಶಾಂತಿ, ಅದಾಗದೆ ಉಳಿದರೆ ಇತಿಹಾಸವು ನಮಗೆಸೆದ ಸವಾಲನ್ನು ಉತ್ತರಿಸದಿರುವ ಹೇಡಿಗಳಾಗುತ್ತವೆ. ಇದು ನಮ್ಮ ಇಂದಿನ ಅಸ್ತಿತ್ವ, ಮರ್ಯಾದೆಗಳ ಪ್ರಶ್ನೆ. ಆದುದರಿಂದ ಇತಿಹಾಸದ ಎಷ್ಟೋ ಕಲಹ, ವ್ಯಾಜ್ಯಗಳನ್ನು ನಾವು ಮುಂದುವರೆಸುತ್ತೇವೆ. ಜಿದ್ದು ವ್ಯಕ್ತಿ ಪ್ರವೃತ್ತಿಯಷ್ಟೇ ಅಲ್ಲ ಸಮಾಜದ್ದೂ ಕೂಡ. ಇದನ್ನು ದೊಡ್ಡ ಗುಣವೆಂದು ಗರ್ವದಿಂದ ಘೋಷಿಸುವುದು ಅಪರೂಪವೇನಲ್ಲ. ನಾಜೀ ಜರ್ಮನಿಯು ಯಹೂದಿಗಳನ್ನು ಬಗ್ಗು ಬಡಿಯಲು ಹೊರಟದ್ದು ತನಗೆ ಅವರಿಂದ ಇತಿಹಾಸದಲ್ಲಿ ನಡೆಯಿತೆನ್ನಲಾದ ಅನ್ಯಾಯದ ಸೇಡನ್ನು ತೀರಿಸಲು. ಆದರೆ ಇದನ್ನು ಕೇವಲ ಸೇಡಿನ ಮನೋಭಾವ ಎಂದು ಹಿಟ್ಲರಾದಿಗಳು ಒಪ್ಪಲಿಲ್ಲ. ಹಿಂದೆ ಶುದ್ಧ ಜರ್ಮನರು ಈ ಕೀಟಸಮಾನರಾದ ಯಹೂದಿಗಳಿಂದ ಅನುಭವಿಸಿದ ಅವಮಾನ, ಅನ್ಯಾಯ ಇನ್ನೆಂದೂ ನಡೆಯದ ಹಾಗೆ ನೋಡಿಕೊಳ್ಳುವುದು ಐತಿಹಾಸಿಕ ಕರ್ತವ್ಯ ಎಂದು ಅವರು ಪ್ರತಿಪಾದಿಸಿದರು. ಇದನ್ನು ಅಮೂಲ್ಯವಾದ ಪಾಠ ಎಂದರು. ಹಿಂದೆ ನಮ್ಮನ್ನು ಆವರಿಸಿದ್ದ ಅಪಾಯವನ್ನು ನಿರ್ಲಕ್ಷಿಸಿ ಅಥವಾ ಗುರುತಿಸದೆ ಆದ ಅವಮಾನ ಸಾಕು. ಒಮ್ಮೆ ಮಾಡಿದ ತಪ್ಪು ಇನ್ನೊಮ್ಮೆ ಎಸಗುವುದು ಬೇಡ. ಹಿಂದೆ ನಮ್ಮ ವೃತ್ತಿಗಳಿಗೆ ನಾವು ತೋರಿದ ಔದಾರ್ಯ ನಮಗೆ ಉರುಳಾಯಿತು. ಇತಿಹಾಸದಿಂದ ನಾವು ಪಾಠ ಕಲಿಯೋಣ. ಮುಂದಕ್ಕಾದರೂ ನಮ್ಮ ಮತ್ತು ನಮ್ಮ ಶತ್ರುಗಳ ಶಕ್ತಿಯನ್ನು ಅರಿತು ವ್ಯವಹರಿಸೋಣ ಎಂಬ ವಾದ ಯಾರೂ ಒಪ್ಪುವಂಥದ್ದು. ನಮ್ಮ ವರ್ತಮಾನದ ನೆಲೆಗೆ ಐತಿಹಾಸಿಕ ‘ಸತ್ಯ’ವನ್ನು ಜೋಡಿಸಿದಾಗ ತರ್ಕ, ಭಾವುಕತೆ ಹಾಗೂ ವಾಸ್ತವತೆಗಳು ಪರಸ್ಪರ ತಮ್ಮನ್ನು ಹಾರ್ದಿಕವಾಗಿ ಆಲಂಗಿಸಿಕೊಳ್ಳುತ್ತವೆ. ಅವೆಲ್ಲದಕ್ಕೂ ಒಂದು ನೈತಿಕ ಬಲಬರುತ್ತದೆ. ಇದರಲ್ಲಿ ಚಲಾವಣೆಗೆ ಬಂದ ಐತಿಹಾಸಿಕ ‘ಸತ್ಯ’ ಮಾತ್ರ ಒಂದು ಸೃಷ್ಟಿ ವಿಶೇಷ ಎಂದು ತಿಳಿಯುವುದು ಅಷ್ಟು ಸುಲಭವಲ್ಲ. ಅಧಿಕಾರವನ್ನು ಜಿನುಗಿಸುವ ಪ್ರಚಾರಣಾ ‌ವ್ಯವಸ್ಥೆಯಲ್ಲಿ ‘ಸತ್ಯ’ ಮಿಥ್ಯೆಗಳೊಡನೆ ನಿರಾತಂಕವಾಗಿ ಸರಸವಾಡುವ ಜಾಣರಿಗೆ ಬಹಳಷ್ಟು ಅವಕಾಶವುಂಟು. ಗಿಲಿಗಿಲಿ ಎಂದು ತಮ್ಮ ಟೋಪಿಯೊಳಗಿಂದ ಅವರು ಸತ್ಯವನ್ನು ಹೊರತೆಗೆಯುತ್ತಾ ಇರುತ್ತಾರೆ. ನೋಡಗರು ಬೆರಗಾಗಿ ಚಪ್ಪಾಳೆ ತಟ್ಟುತ್ತಿರುತ್ತಾರೆ!

ಇತಿಹಾಸದ ವ್ಯಾಜ್ಯೀಕರಣದಲ್ಲಿ ಕೆಲವು ಹೊರನೋಟಕ್ಕೆ ತೀರ ಸಮರ್ಥನಿಯವೇ. ಹಿಂದೆ ಕಳೆದು ಹೋದವು ಅಥವಾ ಛಿದ್ರವಾದವು ಎನ್ನಲಾದ, ನಮ್ಮದೆಂದೆನ್ನಿಸಿದ ಸ್ಥಳ, ಪ್ರದೇಶಗಳನ್ನು ಪುನಃ ಒಂದುಗೂಡಿಸಿ ತನ್ನದಾಗಿಸುವ ಆಕಾಂಕ್ಷೆ ಒಂದು ದೇಶದ ಅಥವಾ ಜನಾಂಗದ ಗೌರವ, ಆಶೋತ್ತರಗಳಿಗೆ ಸಂಬಂಧಿಸಿದ್ದು. ಇಂತಹ ಏಕೀಕರಣವಾದ ಆಗಾಗ ರಾಷ್ಟ್ರೀಯತೆಯೊಂದಿಗೆ ಸೇರಿ ಬಿಡುತ್ತದೆ. ಅದರ ರಾಜಕೀಯ ಅಥವ ಭಾವನಾತ್ಮಕ ಕಾರ್ಯಸೂಚಿಯಾಗಿಬಿಡುತ್ತದೆ. ತನ್ನಿಂದ ಕಸಿಯಲ್ಪಟ್ಟ ತನ್ನ ಮಕ್ಕಳನ್ನು ಪುನಃ ಪಡೆಯಲು ತಾಯಿಯಾದವಳಿಗೆ ಹಕ್ಕಿಲ್ಲವೇ? ಈ ಕರುಳಿನ ಕರೆಯೇ ಮುಗಿಯದ ಯುದ್ಧದಲ್ಲಿ ಪಾಲುಗೊಳ್ಳಲು ಆಮಂತ್ರಣ. ಗಡಿ ಸಮಸ್ಯೆಗಳ ಸ್ವರೂಪ ಇದೇ. ಇತ್ತಂಡದವರೂ ತಮ್ಮ ಮೇಲರ್ಜಿಯನ್ನು ಸಮರ್ಪಿಸುವುದು ಇತಿಹಾಸಕ್ಕೆ. ಎರಡು ಪಕ್ಷಗಳಿಗೂ ಈ ವ್ಯಾಜ್ಯದಲ್ಲಿ ಇತಿಹಾಸದ- ಹಾಗಾಗಿ ನೈತಿಕತೆಯ – ಬೆಂಬಲ ಇದ್ದೇ ಇರುತ್ತದೆ. ಜನಾಂಗೀಯ, ಧಾರ್ಮಿಕ ಅಥವಾ ಸಾಂಸ್ಕೃತಿಕ ನೆಲೆಗಳಲ್ಲಿ ಇದು ನಡೆಯುತ್ತದೆ. ಏಕೀಕರಣವಾದದಲ್ಲಿ ತನ್ನನ್ನು ತಾನೇ ಆಕ್ರಮಣಕಾರನೆಂದು ತಿಳಿಯಲು ಅವಕಾಶವಿಲ್ಲ. ಆ ಪಟ್ಟ ಇದಿರಾಳಿಗೇ. ತಾನು ಯಾವಾಗಲೂ ಮುಕ್ತಿದಾಯಕನೇ, ವಿಮೋಚನಾ ರಂಗದ ಅಧ್ಯಕ್ಷನೇ. ವಿವಾದಕ್ಕೊಳಗಾದ ಪ್ರದೇಶಗಳನ್ನು ಸೆಣಸಿ ವಶಪಡಿಸಿಕೊಳ್ಳುವುದು ಅವುಗಳನ್ನು ಮುಕ್ತಗೊಳಿಸಲೆಂದೇ. ಈ ಧೈರ್ಯ ಮತ್ತು ತನ್ನ ಬಗ್ಗೆ ತನಗಿರುವ ಔದಾರ್ಯ ಏಕೀಕರಣ ವಾದಕ್ಕೆ ನೈತಿಕತೆಯ ಮೌಲ್ಯವನ್ನು ನೀಡುತ್ತದೆ. ಇದರೊಳಗಿನ ಆತಂಕ ಅಪಾಯಗಳನ್ನು ಇತರರು ಗುರುತಿಸಿ ತಿಳಿಸಬಲ್ಲರಾದರೂ ತನ್ನ ಘನತೆಯನ್ನು ತಿವಿಯುವುದರಿಂದ ಅದರ ಅನುಮೋದನೆ ಕಷ್ಟ ಸಾಧ್ಯವಾಗುತ್ತದೆ. ಒಪ್ಪಂದವು ಸೋಲಾಗುತ್ತದೆ. ಸಮಸ್ಯೆಯು ಜೀವಂತವಾಗಿರುವುದನ್ನೇ ನಾವು ಬಯಸುತ್ತೇವೆ.

ಕೋಮುವಾದವು ಚಿರಂಜೀವಿಯಾಗಿರುವುದಕ್ಕೆ ಕಾರಣ ಇದೇ. ವಿಪರ್ಯಾಸವೆಂದರೆ ಎಲ್ಲರೂ ಕೋಮುವಾದವನ್ನು ಖಂಡಿಸುವವರೇ. ಯಾರಿಗೂ ಹಿಂಸೆ, ಅಶಾಂತಿ ಬೇಡ. ಸಮಾಜದಲ್ಲಿ ಒಂದುಗೂಡಿ ಸೌಹಾರ್ದದಿಂದ ಬದುಕಬೇಕು ಎಂಬುದು ಎಲ್ಲರ ಆಶೆ. ಇದರಲ್ಲಿ ಒಂದೇ ಒಂದು ಸಮಸ್ಯೆ ಎಂದರೆ ಎಲರೂ ಅವರವರ ಶರ್ತದಲ್ಲಿ ಸಮಾಜವನ್ನು ಒಂದುಗೂಡಿಸ ಹೊರಟವರು. ತಮ್ಮ ಹಿರಿಮೆ ಹೆಗ್ಗಳಿಕೆಯ ಚೌಕಟ್ಟಿನಲ್ಲಿ ಶಾಂತಿ ಸೌಹಾರ್ದವನ್ನು ಸೃಷ್ಟಿಸಲು ಶಕ್ತರಾದವರು. ಕೋಮುವಾದವೆಂದರೆ ಇನ್ನೊಂದು ಕೋಮಿನವರು ಶಾಂತಿಪ್ರಿಯರಾದ ನಮ್ಮ ಮೇಲೆರಗುವಂಥವರು, ಅವರನ್ನು ನಿಗ್ರಹಿಸುವುದು ಸ್ವಧರ್ಮ, ಸಮಾಜದ ಶಾಂತಿ ಅಸ್ತಿತ್ವವನ್ನು ಕಾಪಾಡುವ ಬಗೆ ಎಂಬ ದೃಢ ನಂಬಿಕೆ. ಇದು ವರ್ತಮಾನದ ಪರಿಸ್ಥಿತಿಯಾಗಬೇಕೆಂದಿಲ್ಲ. ವೈರಿಕೋಮಿನ ಆಕ್ರಮಣಕಾರಿ ನಿಲುವನ್ನು ನಿರೂಪಿಸಲು ಇತಿಹಾಸವೇ ಸಾಕು. ಹಿಂದೆ ಅವರು ತೋರಿದ ಕ್ರೌರ್ಯ, ಚೆಲ್ಲಿದ ರಕ್ತ, ಧ್ವಂಸಗೊಳಿಸಿದ ದೇವಾಲಯಗಳು, ಒಡೆದ ದೇವತಾ ವಿಗ್ರಹಗಳು, ದೋಚಿದ ಸಂಪತ್ತು, ಮಾನಕಳೆದ ಹೆಣು ಮಕ್ಕಳು, ತುಚ್ಛೀಕರಿಸಿದ ಸಂಸ್ಕೃತಿ, ಇವೆಲ್ಲವೂ ವೈರಿಕೋಮಿನವರ ಪೈಶಾಚಿ ಮನೋಭಾವ ಹಾಗೂ ಕಾರ್ಯವೈಖರಿಯನ್ನು ವಿಶದೀಕರಿಸುತ್ತವೆ. ಇದಕ್ಕೆ ಸಾಕ್ಷಿ ಇತಿಹಾಸ. ಆ ಸಾಕ್ಷಿಯೂ ಸ್ಪಷ್ಟ, ನಿರರ್ಗಳ, ನಿರ್ದಾಕ್ಷಿಣ್ಯವಾದದ್ದು, ಕಡೆಗಣಿಸಲಾಗದ್ದು, ಹಿಂದೆ ನಡೆದ ಅನ್ಯಾಯಗಳ ಯಾದಿಯನ್ನು ಹೊತ್ತುಕೊಂಡು ನಾವು ಏನು ಮಾಡೋಣ? ಎಂಬ ಪ್ರಶ್ನೆ ಇತಿಹಾಸವನ್ನು ಅಸಂಗತಗೊಳಿಸುತ್ತದೆ. ಹಾಗಾಗಿ ಇತಿಹಾಸವನದನು ಸಾಯಗೊಡದೆ ಜೀವಂತ ಇರಿಸುವುದು ಅವಶ್ಯವಾಗುತದೆ. ಕೋಮು ವೈಷಮ್ಯ ಇಂದಿನ ಸಮಸ್ಯೆಯಾದರೂ ಅದರ ಕಲಹದ ಮೂಲ, ನೆಲೆ ಎಲ್ಲವೂ ಇತಿಹಾಸಕ್ಕೆ ಸೇರಿದ್ದು. ಆದುದರಿಂದ ಇಂದು ನಿನ್ನೆಗಳ ಮಧ್ಯೆ ಇರಬಹುದಾದ ಗೆರೆ ಮಾಸಿ ಅಳಿಯುತ್ತದೆ. ಇಂದಿನ ವ್ಯಾಜ್ಯಗಳು ಹಿಂದಿನದಾಗಿಯೂ ಹಿಂದಿನವು ಇಂದಿನದಾಗಿಯೂ ಪರಿಣಮಿಸುತ್ತದೆ. ಕಳೆದ ಒಂದು ದಶಕಕ್ಕಿಂತಲೂ ಹಿಂದಿನಿಂದ ನಮ್ಮ ದೇಶವನ್ನು ಕಾಡುತ್ತಿರುವ ಮಂದಿರ ಮಸೀದಿ ವ್ಯಾಜ್ಯದಲ್ಲಿ ಯಾವ ಜಾಗ ಯಾರಿಗೆ ಸೇರಿದ್ದು ಎಂಬ ಪ್ರಶ್ನೆಗೆ ನ್ಯಾಯಾಲಯದ ತೀರ್ಪು ಉತ್ತರವಾಗಬಹುದಾದರೂ ಅಲ್ಲಿ ಸೃಷ್ಟಿಯಾದ ವೈಷಮ್ಯದ ಅರ್ಬುದಕ್ಕೆ ಚಿಕಿತ್ಸೆಯಾಗಲಾರದು.ಈ ಕಲಹದಲ್ಲಿ ಭಾಗಿಯಾದವರು ಹಲವರು. ಸರ್ವಸಂಗ ಪರಿತ್ಯಾಗಿಗಳಾದ ಕಾಷಾಯಧಾರಿ ಸನ್ಯಾಸಿಗಳು, ಸಂಶೋಧನೆಯಲ್ಲಿ ಮಗ್ನರಾದ ಇತಿಹಾಸಕಾರರು. ಪುರಾತತ್ವ ಶಾಸ್ತ್ರಜ್ಞರು, ಅಧಕಾರದಲ್ಲಿರುವ ಅಥವಾ ಅದಿಲ್ಲದೆ ಬಾಯಾರಿ ಕ್ರೋಧಗೊಂಡ ರಾಜಕಾರಣಿಗಳು, ಅಜ್ಞರು, ಸರ್ವಜ್ಞರು ಇತ್ಯಾದಿ. ಇದರಲ್ಲಿ ಸೃಷ್ಟಿಯಾದ ಪ್ರತಿಮೆ ಪ್ರತೀಕಗಳೂ ಹೊಸತು. ಬಾಬರಾಂತಕ ಬಾಬರ ಕುಲಕುಠಾರ ಶ್ರೀರಾಮ,ಇತಿಹಾಸವನ್ನು ಮೀರಿ ನಿಂತ ಧರ್ಮ, ನಂಬಿಕೆ: ಧರ್ಮ, ನಂಬಿಕೆಗಳನ್ನು ಅನುಮೋದಿಸುವ ಇತಿಹಾಸ: ಇತಿಹಾಸದ ಅವಮಾನವನ್ನು ಅಳಿಸಲು ಕೆಡವಿದ ಐತಿಹಾಸಿಕ ಸ್ಮಾರಕ, ನಂಬಿಕೆಯನ್ನು ಉಳಿಸುವ ಉತ್ಖನನದ ವೈಖರಿ ಇತ್ಯಾದಿ. ಇವೆಲ್ಲವನ್ನೂ ಬೇರೆ ಬೇರೆ ಪ್ರಮಾಣದಲ್ಲಿ ಸೇರಿಸಿ, ಕಲಸಿ, ಸಮಾಜಕ್ಕೆ ನೀಡುವ ಗುರುತರವಾದ ಕರ್ತವ್ಯವನ್ನು ವಹಿಸಿಕೊಂಡವರು ಧರ್ಮ, ಇತಿಹಾಸ ಸಮಾಜದ ರಕ್ಷಕರಾದ ರಾಜಕಾರಣಿಗಳು. ಇದು ನಿಷ್ಕಾಮ ಸೇವೆಯಾದರೂ ಅದರಿಂದ ಸಿಗಬಹುದಾದ ಫಲ ಅನಪೇಕ್ಷಿತವೇನಲ್ಲ.

ಈ ಧರ್ಮಯುದ್ಧದಲ್ಲಿ ಇತಿಹಾಸಕಾರರ ಸ್ಥಾನ ತುಸು ಮುಜುಗರದ್ದೇ. ಧರ್ಮರಕ್ಷಣೆಯ ಮಹತ್ತರವಾದ ಕರ್ತವ್ಯವನ್ನು ಇತಿಹಾಸಕಾರರ ಅಥವಾ ಪುರಾತತ್ವ ಶಾಸ್ತ್ರಜ್ಞರ ಮೇಲೆಹೇರಿ ಅವರನ್ನು ಪ್ರಶ್ನಿಸಿದಾಗ ಅವರ ನಿಷ್ಠೆಯನ್ನು ಯಾರು ಯಾರಿಗೆ ಹಂಚಿಕೊಡಬೇಕು ಎಂಬ ಸಂದಿಗ್ದ ಎದುರಾಗುತ್ತದೆ. ಉದಾಹರಣೆಗೆ ಮಂದಿರ ಮಸೀದಿ ವ್ಯಾಜ್ಯದಲ್ಲಿ ಏಳುವ ಮೊದಲ ಪ್ರಶ್ನೆ ಧರ್ಮಾಭಿಮಾನ. ನಮ್ಮ ಧರ್ಮದ ಮೇಲೆ ನಮಗೆ ಗೌರವವಿಲ್ಲ ಎಂದು ಘೋಷಿಸುವವರು ಇರಬಹುದೇ? ಶ್ರೀರಾಮನನ್ನು ನಂಬದವರೆಷ್ಟೋ ಮಂದಿ? ಆತನ ಜನ್ಮ ಸ್ಥಾನದ ಬಗ್ಗೆ ಭಕ್ತಿ ಅಭಿಮಾನ ಇಲ್ಲದವರು ಯಾರೂ ಇಲ್ಲ. ಇವೆಲ್ಲಾ ಧರ್ಮನಿಷ್ಠೆಯ ಪ್ರಶ್ನೆಗಳಾದರೆ, ಅಲ್ಲಿ ಇತ್ತು ಎನ್ನಲಾದ ಮಂದಿರ ಅದನ್ನು ಕೆಡವಿದ ಧರ್ಮಾಂಧ ಬಾಬರ ಅಥವಾ ಆತನ ಚೇಲ ಮೀರ್‌ಬಕಿ, ನೆಲಸಮಗೊಂಡ ಮಂದಿರದ ಮೇಲೆ ನಿರ್ಮಿಸಲಾದ ಮಸೀದಿ ಮೊದಲಾದ ವಿಷಯಗಳೂ ಇತಿಹಾಸಕ್ಕೆ ಸಂಬಂಧಿಸಿದವುಗಳು. ಇವುಗಳ ಕುರಿತ ಅಭಿಪ್ರಾಯ ಅಥವಾ ತೀರ್ಮಾನಗಳನ್ನು ನಿಡುವುದು ಇತಿಹಾಸಕಾರರ ಕರ್ಮ, ಕರ್ತವ್ಯಗಳಾದರೂ ಈ ವ್ಯಾಜ್ಯವನ್ನು ಪರಿಹರಿಸುವಲ್ಲಿ ಅವರ ಪಾತ್ರ ತೀರಾ ಕೃಶವಾದದ್ದು. ಅವರ ತೀರ್ಮಾನ ತಮ್ಮ ಪರವಾಗಿದ್ದರೆ ಅವರು ತಮ್ಮ ಪರ ಸಾಕ್ಷಿ, ಇಲ್ಲವಾದರೆ ನಕಲಿ ಬುದ್ಧಿಜೀವಿ, ತನ್ನ ಪರ ಸಾಕ್ಷಿ ಹೇಳುವ ಇತಿಹಾಸಕಾರರೂ ಅವರ ಕರ್ತವ್ಯ ಪಾಲನೆಯಾದ ನಂತರ ಅತಿ ಮುಖ್ಯರಾಗುವುದಿಲ್ಲ. ಅವರು ಬಾಬರನ ವಿರುದ್ಧವಾಗಿ ತೀರ್ಮಾನ ನೀಡಿದ ನಂತರ ಅವರಿಗೆ ಅದರ ಬಗ್ಗೆ ಬೇರೆ ಪ್ರಶ್ನೆಗಳನ್ನು ಎತ್ತುವ ಹಕ್ಕು ಉಳಿಯುವುದಿಲ್ಲ. ದುಷ್ಟ ಬಾಬರನು ಹದಿನಾರನೆಯ ಶತಮಾನದಲ್ಲಿ ಎಸಗಿದ ದುಷ್ಕೃತ್ಯವನ್ನು ನಾವೆಲ್ಲರೂ ಸಾಮೂಹಿಕವಾಗಿ ಇಪ್ಪತ್ತನೇ ಶತಮಾನದಲ್ಲಿ ಎಸಗೋಣವೇ ಎಂಬ ಪ್ರಶ್ನೆಯನ್ನು ಎತ್ತುವ ಹಕ್ಕನ್ನು ಅವರು ಕಳಕೊಂಡು ಬಿಡುತ್ತಾರೆ. ಏಕೆಂದರೆ ಇದು ಇತಿಹಾಸದ ಸತ್ಯಾಸತ್ಯತೆಗಳ ಪ್ರಶ್ನೆಯೇ ಅಲ್ಲ. ಇದು ಇತಿಹಾಸದ ಹೆಸರಿನಲ್ಲಿ ನಡೆಯುವ ಚಾಲ್ತಿ ಕಲಹ. ಇದರಲ್ಲಿ ಅನೇಕ ಪ್ರಕ್ರಿಯೆಗಳು ಸಂಕೀರ್ಣವಾಗಿ ನಡೆಯುತ್ತದೆ. ‘ಹಿಂದು’ ಎಂದರೆ ಯಾರು? ಧರ್ಮ ಎಂದರೇನು? ಧರ್ಮಾಭಿಮಾನ ಎಂದರೇನು? ಧರ್ಮಾಭಿಮಾನ ದೇಶಾಭೀಮಾನಗಳ ನಂಟು ಎಂಥಾದ್ದು? ಇವುಗಳನ್ನು ಪ್ರಕಟಿಸುವ ನಮೂನೆಗಳು ಯಾವುವು? ನಮ್ಮ ಸಮಾಜ, ಸಂಸ್ಕೃತಿಗಳ ಸ್ವರೂಪವೇನು? ಅವುಗಳ ಕೇಂದ್ರ ಶಕ್ತಿ ಯಾವುದು? ಈ ಎಲ್ಲಾವಿಷಯಗಳನ್ನು ನಿರ್ವಚಿಸಿ ವಿಶದೀಕರಿಸುವಾಗ ಇವುಗಳ ವೈರಿಚಿತ್ರಣಗಳನ್ನೂ ವಿಸ್ತಾರವಾಗಿ ಮಾಡಬೇಕಾಗುತ್ತದೆ. ಅವುಗಳನ್ನು ನಿರ್ಧಿಷ್ಟವಾಗಿ ಗುರುತಿಸಬೇಕಾಗುತ್ತದೆ. ಹಿಂದೆ ಅಂದರೆ ಯಾರು ಎಂಬುದಕ್ಕಿಂತ ಯಾರು ಅಲ್ಲ ಎಂಬ ವಿವರಣೆ ಸುಲಭವಾಗುತ್ತದೆ. ಧರ್ಮ ಎಂದರೆ ಇಂಥಾದ್ದು ಎಂಬ ಕಾಯ್ದೆಯನ್ನು ರೂಪಿಸುವ ಹಕ್ಕು, ಪರವಾನಿಗೆಗಳನ್ನು ಒಂದು ಪ್ರಭಾವಶಾಲಿ ಗುಂಪು ಕಸಿದುಕೊಂಡು ವಿಜೃಂಭಿಸುತ್ತದೆ. ನಾವು ನೀವು ಹಿಂದುಗಳೆನಿಸಿಕೊಳ್ಳಬೇಕಾದರೆ ಇದರ ದೃಡೀಕರಣ ಪತ್ರ ಪಡೆಯಬೇಕಾಗುತ್ತದೆ. ಎಲ್ಲಾ ಧರ್ಮಗಳ ಮೂಲಭೂತವಾದ ಇದೇ. ನಾಲ್ಕು ಮುಲ್ಲಾಗಳು ನಲ್ವತ್ತು ಕೋಟಿ ಮುಸ್ಲಿಮರಿಗೆ ಇಸ್ಲಾಂ ಧರ್ಮ ಹೀಗೆ, ಹೀಗಲ್ಲ ಎಂಬ ಕಾಯ್ದೆಗಳನ್ನು ಮಾಡುವುದು ಅಥವಾ ಧರ್ಮ ಸಂಸ್ಥಾಪನೆಗಾಗಿಯೇ ಜನ್ಮ ತಾಳಿದ ಒಂದು ಗುಂಪು ಹಿಂದೂಗಳಿಗೆ ಗುರುತಿನಚೀಟಿ ನೀಡುವ ವಿಸ್ತ್ರತಕಾರ್ಯವನ್ನು ಹಮ್ಮಿಕೊಳ್ಳುವುದು ಇದರ ವಿವಿಧ ರೂಪಗಳು. ಇವೆಲ್ಲವೂ ದೈವ ಸಂತೃಪ್ತಿಗಾಗಿಯೇ, ಮಾನವ ಕಲ್ಯಾಣಕ್ಕಾಗಿಯೇ ನಡೆಯುವಂಥಾದ್ದು. ಇದರಲ್ಲಿ ಕಲಶ್ನಿಕೋವ್, ಕರವಾಳ ತ್ರಿಶೂಲಗಳು ಬಳಕೆಯಾದರೆ ಅವು ಧರ್ಮಯುದ್ಧದ ಅಂಶಗಳಾಗುತ್ತವೆ. ಹಿಂದೆ ಪಾಕಿಸ್ತಾನದ ನಾಯಕ ಹೇಳಿದ ಸಾವಿರ ವರ್ಷಗಳ ಯುಧ್ಧ, ಈಚೆಗೆ ಬಹಳಷ್ಟು ಚಲಾವಣೆಯಲ್ಲಿರುವ ಜಿಹಾದ್ ಅಥವಾ ನ್ಯಾಯಾಲಯದ ವ್ಯಾಪ್ತಿಗೆ ಮೀರಿದ ಶ್ರೀರಾಮನೂ ಇತ್ಯರ್ಥ ಮಾಡಲು ಅಸಾಧ್ಯವಾದ, ಧರ್ಮದ ಮೇಲೆ ಏಕಸ್ವಾಮ್ಯವನ್ನು ಪ್ರಕಟಿಸುವ ವಿಧಾನಗಳು, ಮಧ್ಯಯುಗದಲ್ಲಿ ಸಂಭವಿಸಿದ ಚರ್ಚೆ ಅಥವಾ ಅದರ ಪ್ರಭಾವಕ್ಕೆ ಅಧೀನರಾದ ರಾಜರು ನಡೆಸಿದ ಕಾರ್ಯ ವೈಖರಿಯೇ ಇಂದಿನ ಸ್ವತಂತ್ರ ಅಥವಾ ಮುಕ್ತ ಎಂದುಕೊಳ್ಳುವ ಸಮಾಜದ್ದೂ ಕೂಡ. ಎಷ್ಟೋ ಬಾರಿ ನಾವು ಹಲವು ಅನಧಿಕೃತ, ಅಗೋಚರ ಶಾಸಕಾಂಗಗಳ ಪ್ರಭಾವಳಿಗಳಿಗೆ ಒಳಗಾಗುತ್ತೇವೆ. ಧರ್ಮ, ನೀತಿಗಳ ವೇಷ ಧರಿಸಿದಾಗಲಂತೂ ಅವುಗಳು ಹೆಚ್ಚು ಅಪ್ಯಾಯಮಾನವಾಗುತ್ತವೆ. ಮಾನವೀಯತೆಯನ್ನು ಹೇಡಿತನವೆಂದು ತಿಳಿದಾಗ, ಪ್ರತೀಕಾರವನ್ನು ಧೀರೋದ್ದಾತ ಶೌರ‍್ಯವೆಂದು ಬಣ್ಣಿಸಿಕೊಂಡಾಗ, ಸಾಮಾಜಿಕ ನೈತಿಕತೆಗೆ ಹೊಸ ವಿಲಕ್ಷಣವಾದ ಅರ್ಥ ಬರುತ್ತದೆ. ಇದನ್ನು ಧರ್ಮ ಅಥವಾ ದೇಶ ರಕ್ಷಣೆಯಂತಹ ಘನಸೇವೆಗೆ ಮುಡುಪಾಗಿಟ್ಟಾಗ ಈ ನವ ನೈತಿಕತೆ ಒಂದು ಪ್ರವೃತ್ತ ಅಮಲನ್ನು ಸೃಷ್ಟಿಸುತ್ತವೆ. ಅದರ ಪ್ರಭಾವದಲ್ಲಿ ಋಜು ಸಮಾಜವೂ ಹಿಂಸೆ, ರಕ್ತಪಾತವನ್ನು ನಿರಾಳವಾಗಿ ಅನುಮೋದಿಸುತ್ತದೆ. ಅದನ್ನು ಖಂಡಿಸುವವರನ್ನು ಖಂಡಿಸುತ್ತದೆ. ಬಾಬ್ರಿ ಮಸೀದಿಯು ಕರಸೇವಕರ ಕರಕೌಶಲ್ಯಕ್ಕೆ ಮಣಿದು ನೆಲಕಚ್ಚಿದ ನಂತರ ದೇಶದಲ್ಲಿ ಭುಗಿಲೆದ್ದ ಹಿಂಸೆಯನ್ನು ಮೌಖಿಕವಾಗಿ ಖಂಡಿಸಿದವರಿಗೆ ದೂರವಾಣಿ ಮೂಲಕ ಹಲವು ಅನಾಮಧೇಯರು ಧಮೋಪದೇಶ ನೀಡಿದ್ದರು. ಇಸ್ಲಾಂ ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ಅಮಾನವೀಯವೆಂದು ಖಂಡಿಸಿದ ಎಷ್ಟೋ ಮಂದಿ ಮುಸ್ಲಿಮರ ಬಾಯಿ ಮುಚ್ಚಿಸಲಾಗಿದೆ. ಸೌಮ್ಯವಾದಿಗಳಿಗೆ ಈ ಜಾಗಲ್ಲ ಎಂಬ ಮಾತು ಆಗಾಗ ಕೇಳಿ ಬರುತ್ತದೆ. ಧರ್ಮ, ದೇಶ ಮರ್ಯಾದೆಗಳ ಪ್ರಶ್ನೆ ಬಂದಾಗ ಎಂಥಾ ಸೌಮ್ಯವಾದ? ಧ್ಯೇಯವು ಮಹತ್ತರವಾಗಿದ್ದಾಗ, ಕಾಲಾತೀತವಾಗಿದ್ದಾಗ, ಹಿಂಸೆ ಅಹಿಂಸೆಗಳ ಪ್ರಶ್ನೆ ಗೌಣವಾಗುತ್ತವೆ. ಧರ್ಮವೀರನಿಗೆ ಜಯದ ಗುರಿ ಮುಖ್ಯ. ಅದರೊಂದಿಗೆ ಹುತಾತ್ಮನಾಗುವ ಹಂಬಲ ತೀವ್ರವಾಗಿದ್ದರೆ ಆತ ಧರ್ಮ ರಕ್ಷಣೆಗಾಗಿ ಬಿಚ್ಚುಗತ್ತಿಯ ಸೇನಾನಿಯಾಗುತ್ತಾನೆ. ಎಷ್ಟೋ ಬಾರಿ ಆ ಬಿಚ್ಚುಗತ್ತಿ ಇತರ ಉದ್ಯೋಗಗಳನ್ನು ಅರಸುವುದುಂಟು. ಅವುಗಳಿಗೆ ಧರ್ಮ, ಕರ್ತವ್ಯಗಳ ಮುದ್ರೆಯನ್ನೊತ್ತುವುದುಂಟು ಈ ಧರ್ಮ, ಕರ್ತವ್ಯ, ಕಲಹ ಅಭೀಮಾನ, ದ್ವೇಷ, ಮರ್ಯಾದೆಗಳ ಘೋರ ಮಿಶ್ರಣ ಸ್ವಯಂ ಚಾಲನೆ ಪಡೆದು ಮೆರೆಯುವಾಗ ಸಮಾಜದ ಸ್ವಭಾವವೇ ಬದಲಾಗುತ್ತದೆ. ಅದನ್ನು ವಿಕೃತಿ ಎಂದು ಗುರುತಿಸುವ ಶಕ್ತಿಯೂ ಕ್ಷೀಣವಾಗುತ್ತದೆ. ಕೋಮುವಾದ, ಮೂಲಭೂತವಾದ, ಹಿಂಸಾವಾದಗಳೆಲ್ಲವೂ ಸೈದ್ಧಾಂತಿಕ ನೆಲೆ ಪಡೆದಾಗ ಅವು ಸಮಾಜದ ಧಮನಿಗಳೊಡನೆ ಹೊಕ್ಕಿ ಸೇರಿಬಿಡುತ್ತವೆ. ಆಗ ಇತಿಹಾಸಕ್ಕಾಗಲೀ ಇತಿಹಾಸಕಾರರಿಗಾಗಲೀ ಸ್ವಂತಿಕೆ ಉಳಿಯುವುದಿಲ್ಲ.

ಇತಿಹಾಸದಲ್ಲಿ ನಮಗೂ ಕೊಂಚ ಜಾಗ

ಇತಿಹಾಸವು ಅಧಿಕಾರದ ಅಡಿಯಾಳಾಗುವುದು ಅಥವಾ ಅಧಿಕಾರ ಗ್ರಹಣಕ್ಕೆ ಎರವಾಗುವುದು ಸಾಮಾನ್ಯ. ಇಂತಹ ಇತಿಹಾಸಕ್ಕೂ ನಮ್ಮ ಸಿನಿಮಾಗಳ ಖಳನಾಯಕರು ಗಹಗಹಿಸಿ ಅಬಲೆಯನ್ನು ಬಲಾತ್ಕರಿಸುವ ದೃಶ್ಯಕ್ಕೂ ಸಾಮ್ಯವಿದೆ. ಆದರೆ ಇತಿಹಾಸವು ನನ್ನ ಸೊತ್ತಾಗಬೇಕು ಎಂಬ ತೀವ್ರ ತವಕ ಇನ್ನೂ ಹಲವು ರೀತಿಯಲ್ಲಿ ಹೆಚ್ಚು ಉನ್ಮಾದ, ಅಟ್ಟಹಾಸವಿಲ್ಲದೆ ಅರ್ಥಪೂರ್ಣವಾಗಿ ಪ್ರಕಟವಾಗಬಲ್ಲದು. ರಾಜಕೀಯವಾಗಿ ಅಥವಾ ಸಾಮಾಜಿಕವಾಗಿ ಹೆಚ್ಚು ಪ್ರಭಾವಶಾಲಿಗಳು ಇತಿಹಾಸದ ರಂಗಸ್ಥಳದಲ್ಲಿ ಕುಣಿದು ‘ಬಲ್ಲರೇನಯ್ಯ’ ಎಂದು ಬೀಗಿದ್ದೇ ಹೆಚ್ಚು ಹಾಗೆಯೇ ಇತಿಹಾಸವು ಬಹುತೇಕ, ರಾಜತರಂಗಿಣಿಯಾಗಿಯೇ ನಮಗೆ ಲಭಿಸಿದ್ದು. ಮೊದಲು ಅದೆಷ್ಟು ರೋಚಕವಾದರೂ ಅದರ ಪುನಾರವರ್ತನೆ ಆಯಾಸ, ಬೇಸರವನ್ನು ನೀಡಿತು. ಇದೇ ಕಥೆಯೇ? ಎಂಬ ಪರಿಚಯ ಜನ್ಮ ಆಸಡ್ಡೆಯನ್ನು ಪ್ರಕಟಿಸಿತು. ಇತಿಹಾಸದ ವಸ್ತು ನವೀಕರಣಗೊಳ್ಳಬೇಕು, ಇತಿಹಾಸಕಾರರ ಕಾರ್ಯಕ್ಷೇತ್ರ ವಿಸ್ತಾರಗೊಳ್ಳಬೇಕು. ಅದು ಸಮಾಜದ ವಿವಿಧ ಅಂಶಗಳ, ಸಂಬಂಧಗಳ, ಸಮಸ್ಯೆಗಳ ಮುಖ ಕನ್ನಡಿಯಾಗಬೇಕು, ವಿಶ್ಲೇಷಣೆಯ ಸಾಧನವಾಗಬೇಕು ಎಂಬ ವಿಚಾರ ಇತಿಹಾಸ ಚಿಂತಕರಲ್ಲಿ ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದಲ್ಲಿ ಬಂದಿತ್ತು. ಆ ಪ್ರಕಾರ ಇತಿಹಾಸದ ವಸ್ತು, ರಚನೆಗಳಲ್ಲಿ ಬಹಳಷ್ಟು ಹೊಸತನ ಹುಟ್ಟಿತು.

ಇಪ್ಪತ್ತನೆಯ ಶತಮಾನದಲ್ಲಿ ಇತಿಹಾಸವು ಹೊಸ ವಸ್ತುಗಳನ್ನು ಅರಸುವ ಕಾರ‍್ಯಕ್ರಮವನ್ನು ವಿಸ್ತಾರವಾಗಿ ಹಮ್ಮಿಕೊಂಡಿತು. ಮಾನವನ ಆರ್ಥಿಕ ಹಾಗೂ ಸಾಮಾಜಿಕ ಜೀವನ, ಸಂವೇದನೆ ಸಂಘರ್ಷಗಳನ್ನು ತಿಳಿಸುವ ಇತಿಹಾಸ ಮುಕುಟದಾರಿಗಳ ಕಥನಕ್ಕಿಂತ ಹೆಚ್ಚು ಅರ್ಥಪೂರ್ಣ ಎಂದು ಗ್ರಹಿಸಿತು. ಇದನ್ನು ಇತಿಹಾಸಕಾರರ ವೈಯಕ್ತಿಕ ನಿರ್ಧಾರ ಎನ್ನುವುದಕ್ಕಿಂತ ಸಮಾಜ ರಾಜಕೀಯದಲ್ಲಿ ಆಗುತ್ತಿದ್ದ ಬದಲಾವಣೆಗಳ ಪರಿಣಾಮ ಎಂದು ಗುರುತಿಸುವುದು ಬಹಳ ಮುಖ್ಯ. ಜಾಗತಿಕವಾಗಿ ವಸಾಹತುಶಾಹಿ ಮುಷ್ಟಿಗಳು ಸಡಿಲಗೊಳ್ಳುವ ಸಂದರ್ಭದಲ್ಲಿ ಬೇರೆ ಬೇರೆ ದೇಶಗಳಲ್ಲಿ ವಿವಿಧ ಪಂಗಡಗಳು ತಮ್ಮ ಪ್ರಭಾವವನ್ನು ಕಳೆದುಕೊಂಡವು ಅಥವಾ ಹೊಸದಾಗಿ ಪಡೆದುಕೊಂಡವು. ಹಾಗೆಯೇ ಪ್ರಜಾಪ್ರಭುತ್ವಗಳನ್ನು ಅನೇಕ ಕಡೆಗಳಲ್ಲಿ ನಾಟಿ ಹಾಕಲಾಯಿತು. ಜನತೆಯೇ ಜನಾರ್ಧನ ಎಂಬ ಸೊಲ್ಲು ಹೆಚ್ಚಾಗಿ ಕೇಳಿಬಂದಂತೆ ಅದರ ಅರ್ಥವೂ ಜನರಿಗೆ ಆಗತೊಡಗಿತು. ಸಾಮಾನ್ಯ ಜನರೆಂದು ಉಪೇಕ್ಷೆಗೆ ಒಳಗಾದವರು ಚುನಾವಣೆ ಕಾದಲ್ಲಿ ಶ್ರೀ ಸಾಮಾನ್ಯರೆಂದು ಹೊಗಳಿಸಿಕೊಂಡು ಆರಾಧನೆಯ ಪೀಡನೆಗೆ ಒಳಗಾಗಿ, ಆಮೇಲೆ ಎಂದಿನಂತೆ ಮೇಲಿರುವ ಅನಾಥರಕ್ಷಕನನ್ನು ನಂಬಿ ಬದುಕುವುದು ಅಪ್ರಬುದ್ಧ ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ಸಂಗತಿಯಾದರೂ, ಈ ಮಹತ್ವಪೂರ್ಣ ಪ್ರಯೋಗವು ನಡೆದಂತೆ ಬಡಜನತೆ ತನ್ನ ಶಕ್ತಿಯನ್ನು ಕಂಡುಕೊಳ್ಳುತ್ತದೆ. ಸಮಾಜದ ವಿವಿಧ ಪಂಗಡಗಳು ಪ್ರಭಾವವನ್ನು ನಿರೂಪಿಸಲು ಮುಂದಾಗುತ್ತವೆ. ತಾನುತೀರ ದುರ್ಬಲ ಎಂದು ತಿಳಿದುಕೊಂಡವರಲ್ಲಿ ಅಗಾಧ ಶಕ್ತಿ ಇದೆ ಎಂದು ಗುರುತಿಸಿ ಹೊರಗೆಳೆಯುವ ಜಾಂಬವಂತ ಮಹಾತ್ಮೆ ಪ್ರಜಾಪ್ರಭುತ್ವದಲ್ಲಿ ಆಗಾಗ ಕಾಣಬರುತ್ತದೆ. ಇದು ಜನತೆಯು ಸಬಲೀಕರಣಗೊಳ್ಳುವ ಪ್ರಕ್ರಿಯೆ. ಅಧಿಕಾರ ಪ್ರಭಾವಗಳು ಒಬ್ಬರ ಅಥವಾ ಕೆಲವರ ಹಕ್ಕಲ್ಲ. ಅವುಗಳನ್ನು ಹಿಡಿದು ಚಲಾಯಿಸಲು ತಾನೂ ಸಮರ್ಥ ಎಂಬ ಅರಿವು, ಧೈರ‍್ಯ ದುರ್ಲಬರೆಂಬುವವರಲ್ಲಿ ಮೂಡಿದಾಗ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರುತ್ತದೆ. ಶ್ರೇಣಿಕೃತ ವ್ಯವಸ್ಥೆಯನ್ನು ತಿರಸ್ಕರಿಸುವುದು, ಪುರೋಹಿತಶಾಹಿ ಸಮಾಜವನ್ನು ಧಿಕ್ಕರಿಸುವುದು, ಶೋಷಿತ ವರ್ಗಗಳ ಬಗ್ಗೆ ಅನುಕಂಪ, ಕಾಳಜಿಯನ್ನು ತೋರುವ ಬದಲು ಅವರ ಹಕ್ಕು ಸ್ಥಾನಗಳ ಬಗ್ಗೆ ಹೋರಾಟ, ಸಾಮಾಜಿಕ ನ್ಯಾಯ, ಆರ್ಥಿಕ ಬೆಳವಣಿಗೆಯೊಡನೆ ಅದರ ಫಲಗಳ ಬಗ್ಗೆ ನ್ಯಾಯವಾದ ವಿತರಣೆ.ಬಹುಸಂಸ್ಕೃತಿ ಸಮಾಜದಲ್ಲಿ ಎಲ್ಲರ ವಿಕಾಸಕ್ಕೂ ಮುಕ್ತ ಅವಕಾಶ. ಅಲ್ಪ ಸಂಖ್ಯಾತರನ್ನು ಅವಗಣಿಸದೆ ಅವರ ರಕ್ಷಣೆ ಅಭಿವೃದ್ಧಿಯ ಬಗ್ಗೆ ಕ್ರಮ ತೆಗೆದುಕೊಳ್ಳುವುದು ಧರ್ಮ, ಮಾಡುತ್ತದೆ. ಸ್ವಾತಂತ್ರ್ಯದೊಂದಿಗೆ ಸರ್ವಧರ್ಮ ಸಮಭಾವವನ್ನು ಸಾಧಿಸುವುದು ಮೊದಲಾದ ಪುರೋಗಾಮಿ ಗುರಿಗಳನ್ನು ಇಟ್ಟುಕೊಂಡು ಅವುಗಳನ್ನು ತಲುಪುವ ಪ್ರಯತ್ನ ಪ್ರಜಾಪ್ರಭುತ್ವ ಮಾಡುತ್ತದೆ.ಇವೆಲ್ಲವನ್ನು ಎಷ್ಟೋ ಬಾರಿ ರಾಜಕೀಯ ಅಥವಾ ಸೈದ್ಧಾಂತಿಕ ನೆಲೆಗಳಲ್ಲಿ ವಿಶೇಷವಾಗಿ ಪ್ರತಿಪಾದಿಸುವುದು ಇಲ್ಲವೇ ಪ್ರತಿರೋಧಿಸುವುದು ಕಂಡು ಬರುತ್ತದೆ. ಆದರೆ ಪ್ರಜಾಪ್ರಭುತ್ವದ ಅರ್ಥಯುತ ಸಾಧನೆಗೆ ಈ ಎಲ್ಲಾ ಆದರ್ಶಗಳು ಅತ್ಯವಶ್ವ. ಅವು ಇಲ್ಲದಿದ್ದರೆ ಪ್ರಜಾತಂತ್ರ ವ್ಯವಸ್ಥೆಯು ಕೇವಲ ಓಟುಗಳಿಗೆ ನಡೆಯುವ ಮೇಲಾಟವಾಗುತ್ತದೆ. ಇದು ಪಾಶ್ಚಾತ್ಯ ದೇಶಗಳ ಮಾದರಿಯನ್ನು ನೋಡಿ ಮೌಲೀಕರಿಸುವ ವಿಷಯವೂ ಅಲ್ಲ. ಪ್ರಜಾತಂತ್ರದ ಯಶಸ್ಸು ಆಯಾ ದೇಶದ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸ್ಥಿತಿಗಳಿಗೆ ಸಂಬಂಧಿಸಿದ್ದು. ಇವುಗಳನ್ನು ಹೊರಗಿಟ್ಟು ನಡೆಯುವ ಯಾವ ರಾಜಕೀಯ ಪ್ರಯೋಗಗಳು ಅರ್ಥಹೀನವಾಗುತ್ತವೆ.

ಪ್ರಜಾಪ್ರಭುತ್ವದಲ್ಲಿ ತಮ್ಮ ಸ್ವಂತಿಕೆ. ಶಕ್ತಿಯನ್ನು ಕಂಡುಕೊಂಡಾಗ ಸಮಾಜದ ಅನೇಕ ವರ್ಗಗಳು ತಮ್ಮ ನೆಲೆಗಳನ್ನು ರೂಪಿಸಿಕೊಳ್ಳುತ್ತವೆ. ಊಳಿಗಮಾನ್ಯ ವ್ಯವಸ್ಥೆಯಲ್ಲಿ ದುರ್ಬಲರಿಗೆ ಒಂದಿಷ್ಟು ಜಾಗವಿದ್ದರೆ ಅದು ಇಳೆಯೊಡೆಯನ ಕೃಪೆಯಿಂದ ಮಾತ್ರ. ‘ದೋ ಬೀಗಾ ಜಮೀನ್’ ಅಥವಾ ‘ಚೋಮನ ದುಡಿ’ಯಲ್ಲಿ ಯಾಚಕನ ತೀರದ ಆಶಾವಾದ ಈ ಜಗತ್ತಿನ ಚಿತ್ರಣ. ಆದರೆ ಪ್ರಜಾಪ್ರಭುತ್ವದಲ್ಲಿ ವಿಸ್ತ್ರತಗೊಂಡ ಸಾಮಾಜಿಕ ನ್ಯಾಯ-ಸಂವೇದನೆಗಳುಮೂಕ ವರ್ಗಗಳಿಗೆ ಸ್ಪಂದನ ಮಾಡಿದವು. ಹೊಸ ಸಮಾಜವನ್ನು ಕಟ್ಟುವಾಗ ಹಳೆಯ ಹವ್ಯಾಸ, ನೀತಿ ಸಂಹಿತೆಗಳು ಅಸಂಗತವಾಗುತ್ತವೆ ಎಂದು ಈ ವರ್ಗಳಿಗೆ ಅರ್ಥವಾಗ ತೊಡ- ಗಿತು. ಅಲ್ಲಿ ಸಲ್ಲಲು ಸಿಗುವ ಅರ್ಶವಾಸನೆಗಿಂತ ಇಲ್ಲಿ ಸಲ್ಲುವುದು ಹೆಚ್ಚು ಮುಖ್ಯ. ಅದಕ್ಕೆ ನಡೆಸುವ ಹೋರಾಟವನ್ನು ತಮ್ಮ ಇರವನ್ನು ದೃಢೀಕರಿಸುವ ವಿಧಾನ ಎಂಬ ವಿಚಾರ ವಿಪ್ಲವಕಾರಿಯೆಂದೆನ್ನಿಸಿಕೊಂಡರೂ, ಅದು ಹೊಸಯುಗಕ್ಕೆ ಸ್ವಂತಿಕೆಯ ಮುದ್ರೆಯನ್ನೊತ್ತಿತ್ತು. ಪ್ರಜಾತಂತ್ರದಲ್ಲಿ ಅಧಿಕಾರಕ್ಕೆ ನಾವೆಲ್ಲರೂ ಪಾಲುದಾರರೆಂಬ ತಿಳುವಳಿಕೆ ಅನೇಕ ವರ್ಗಗಳನ್ನು ಪುನಶ್ಚೆತನಗೊಳಿಸಿತ್ತು. ನೇಗಿಲಯೋಗಿಯೆಂದು ವಿನಾಕಾರಣವಾಗಿ ಹೊಗಳಿಸಿಕೊಂಡು ಶೀಷನೆಯ ನೊಗವನ್ನೇ ಹೆಚ್ಚಾಗಿ ಹೊತ್ತ ರೈತ ಜನಕ್ಕೆ ತಮ್ಮ ಸಂಘಟನಾ ಶಕ್ತಿಯ ಅರಿವಾದಾಗ ಸಮಾಜದ ಬಗ್ಗೆ ಅವನ ನಿಲುವು ಬದಲಾಗತೊಡಗಿತು. ಹೋರಾಟ ಸಂಘರ್ಷಗಳು ಅವರ ಬದುಕಿನ ಮುಖ್ಯ ಅಂಶ ಎಂದು ತಿಳಿದಾಗ ಅದರ ಐತಿಹಾಸಿಕ ಅನುಭವವನ್ನು ಹುಡುಕುವ ಪ್ರಯತ್ನಗಳು ನಡೆದವು. ಇತಿಹಾಸದಲ್ಲಿ ‘ರೈತ ಅಧ್ಯಯನ’ಗಳು ಚಿಗುರಿ ಹುಲುಸಾಗಿ ಬೆಳೆದದ್ದು ಅರ್ಥಪೂರ್ಣ. ರೈತರಿಗೂ ಇತಿಹಶ ಇದೆ. ಅವರು ನೊಗಹೊತ್ತ ಎತ್ತಿನಂತೆ ಮೂಕರಾಗಿ ದುಡಿದು ಇತರರಿಗೆ ಅನ್ನ ನೀಡಿದ್ದಲ್ಲ. ಆತ ಸಮಾಜದ ಇತರ ವರ್ಗಗಳೋಡನೆ ಹೋರಾಡಿದ್ದುಂಟು, ಸಹಿಸಿದ್ದುಂಟು, ಗಳಿಸಿದ್ದುಂಟು, ಮುಂದಿನ ಪೀಳಿಗೆಗೆ ಅನುವು ಮಾಡಿದ್ದುಂಟು. ಅವರ ವೃತ್ತಿ, ಜೀವನ ಶೈಲಿಯಲ್ಲಿರುವ ಏಕತಾನತೆಯಲ್ಲೂ ಸಂಗೀತದ ಅಲುಗು ಇದೆ, ಹೋರಾಟದ ಮೆರುಗು ಇದೆ. ಆಶೆಯ ಹೊಳಪು ಇದೆ ಎಂಬ ಅನೇಕ ವಿಚಾರಗಳು ಇಂತಹ ಅಧ್ಯಯನಗಳಲ್ಲಿ ಮೂಡಿಬಂದವು. ಇದು ರೈತ ವರ್ಗದ ಹೊಸ ಚೇತನದ ಪ್ರಕಟಣೆ. ಅದೇ ರೀತಿಯಲ್ಲಿ ಕಾರ್ಮಿಕ ವರ್ಗ, ಬುಡಕಟ್ಟು ಸಮಾಜಗಳು, ನಿಮ್ನ ವರ್ಗಗಳು, ಮಹಿಳೆಯರು, ಉಪೇಕ್ಷಿತ ಪಂಗಡಗಳು, ಹೊಸ ವರ್ತಮಾನದಲ್ಲಿ ತಮ್ಮನ್ನು ನಿರ್ಧಿಷ್ಟವಾಗಿ ರೂಢಿಸಿಕೊಳ್ಳುವಾಗ ಇತಿಹಾಸದಲ್ಲಿ ತಮ್ಮ ಸ್ಥಾನವನ್ನು ಸ್ಥಾಪಿಸುವ ಪ್ರಯತ್ನ ಮಾಡಿದವು. ಇವರು ಯಾರೂ ಇನ್ನೊಬ್ಬರ ಸ್ಥಾನವನ್ನು ಕಿತ್ತುಕೊಳ್ಳಲಿಲ್ಲ. ರಾಜ ರಾಣಿಯರನ್ನು ಇತಿಹಾಸದಿಂದ ಹೊರದಬ್ಬಲಿಲ್ಲ. ಅಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸುವಾಗ ಇತಿಹಾಸದ ಹಠವನ್ನು ಮಾತ್ರ ಹೆಚ್ಚಿಸಿದರು. ಇದರಿಂದ ಇತಿಹಾಸಕಾರರ ಕಾರ್ಯ ವ್ಯಾಪ್ತಿ ವೃದ್ಧಿಸಿತು. ಇತಿಹಾಸವು ಶ್ರೀಮಂತವಾಗುವುದು ಹೀಗೆಯೇ. ಹೊಸ ಆಕರಗಳುದೊರೆತಾಗ ಇತಿಹಾಸದ ಬಗ್ಗೆ ಹೆಚ್ಚು ಮಾಹಿತಿ ಸಿಗಬಹುದು. ಆರೆ ಅಲ್ಲಿ ಹೊಸ ಅಧ್ಯಯನ ವಿಷಯಗಳು ಹುಟ್ಟಬೇಕಾದರೆ ಅದಕ್ಕೆ ಬರೇ ಇತಿಹಾಸಕಾರರ ಕುತೂಹಲವಷ್ಟೇ ಸಾಲದು. ಅದಕ್ಕೆ ಚಾಲನೆ ನೀಡಲು ಸಾಮಾಜಿಕ ಕಳಕಳಿ, ಸಂವೇದನೆಗಳು ಬೇಕು. ತನ್ನತನವನ್ನು ಹುಡುಕುವ ಗಳಿಸುವ ಪ್ರೇರಣೆ ಬೇಕು.

ಇವೆಲ್ಲವೂ ಇತಿಹಾಸದ ಹೊಸ ಆವಿಷ್ಕಾರ, ನಿಜವಾಗಿ ನಡೆದ ಘಟನೆಗಳನ್ನು ಮರೆಸಿ ತಮ್ಮಿಷ್ಟದ ಕತೆಗಳನ್ನು ಹೇಳೂವ ಕುಚೋದ್ಯ: ಘರ್ಷಣೆ, ಶೋಷಣೆಗಳ ಬಗ್ಗೆ ಕಿರುಚಿ ಸಮಾಜದ ಸನಾತನ ಹಿರಿಮೆ, ಸಮತೋಲನ, ಸಹಬಾಳ್ವಯನ್ನು ಕೆಡಿಸಿ, ಕೆಡೆದು ಹಾಕಲು ಎಡಪಂಥೀಯರು ಸುದ್ಧಾಂತದ ಹೆಸರಿನಲ್ಲಿ ರಾಜಕೀಯವಾಗಿ ನಡೆಸುವ ಹುನ್ನಾರ ಎಂಬ ಆಕ್ಷೇಪಣೆಗಳು ಕೇಳಿ ಬರುವುದುಂಟು. ಸೈದ್ಧಾಂತಿಕವಾಗಿ, ರಾಜಕೀಯವಾಗಿ ನಮ್ಮ ಆಯ್ಕೆ ನಮಗೆ ಆದರೆ ಸಮಾಜವು ಬದಲಾಗುವಾಗ, ಅದಕ್ಕೆ ಅದರ ಅರಿವು ಆಗುವಾಗ ಅದರ ವಿವಿಧ ವರ್ಗಗಳು ಇತಿಹಾಸದಲ್ಲಿ ತಮ್ಮನ್ನು ಕಾಣಬಯಸುತ್ತವೆ. ಇಲ್ಲಿನ ಸಂಘರ್ಷ, ಆಶಯಗಳು ಅಲ್ಲಿ ಅರಸುತ್ತವೆ. ಇತಿಹಾಸದ ಬಗ್ಗೆ ಹೊಸ ಪ್ರಶ್ನೆಗಳು ಹುಟ್ಟುವುದು ಆಗ. ಇತಿಹಾಸದ ಬಗ್ಗೆ ಏನನ್ನು ಹುಡುಕಬೇಕು ಎಂಬುದರ ಮೇಲೆ ಅದರ ವಿಸ್ತಾರ, ಹೊಸತನ ನಿಂತಿದೆ. ನಮ್ಮ ಇತಿಹಾಸದ ವಯಸ್ಸನ್ನು ಆದಷ್ಟು ಹಿಂದೆ ದೂಡುವುದು ಅಲ್ಲಿ ನಮ್ಮ ಸಿಂಗರಿಸಿದ ಪ್ರತಿಬಿಂಬವನ್ನು ನೋಡಿ ಮೈಮರೆಯುವುದು, ಅಲ್ಲಿನ ಕೆಲವು ರಾಜರ ಕಥನವೇ ನಮ್ಮ ಸಮೃದ್ಧಿಇತಿಹಾಸವೆಂದು ಪರಿಭಾವಿಸುವುದೇ ಹೊಸತನ ಎಂದು ಕೊಂಡರೆ ಅದು ಒಂದು ಬಗೆಯ ಒಲವು. ಅದಕ್ಕೆ ರಾಜಕೀಯ, ಸೈದ್ಧಾಂತಿಕ ಪೋಷಣೆ ಇದೆ ಆದರೆ ಇದು ಮಾತ್ರ ಹೊಸತನ ಆಗುವುದಿಲ್ಲ. ಅದು ಆಗುವುದು ಇತಿಹಾಸ ಹೊಸ ಕೃಷಿಯನ್ನು ಅಣಿಗೊಳಿಸಿದಾಗ ತನ್ನ ಸುತ್ತು ಕ್ಷೇತ್ರವನ್ನು ವಿದ್ತರಿಸಿದಾಗ ನವೀನ ವಿಧಾನಗಳನ್ನು ತನ್ನದಾಗಿಸಿದಾಗ, ಆಗ ಅಧ್ಯಯನ ಕ್ಷೇತ್ರಗಳ ಸುತ್ತು ಕಟ್ಟಿದ್ದಬೇಲಿಗಳು ಕುಸಿದು ಜ್ಞಾನಾರ್ಜನೆಗೆ ಒಂದು ನೂತನ ಸ್ವಾತಂತ್ರ್ಯ ಲಭಿಸುತ್ತದೆ. ಇದನ್ನು ಯಾವ ನೆವದಿಂದ ಪಡೆದರೂ ಲಾಭ ನಮ್ಮದೇ. ಸೈದಾಂತಿಕ ನಿಲುವುಗಳು ಕಣ್ಯಾಪುಗಳಾಗದಂತೆ ನಮ್ಮ ಮೇಲೆ ನಾವು ಹೊರಿಸಿಕೊಂಡ ಸಂಕೋಲೆಗಳಾಗದಂತೆ ನೋಡಿಕೊಳ್ಳುವ ಭಾರ ನಮ್ಮದು. ಸೈದ್ದಾಂತಿಕತೆಯು ನಾವು ಬದುಕನ್ನು ನೋಡುವ, ಹೊಸ ದೃಷ್ಟಿಯನ್ನೀಯುವ, ಹೊಸ ಪ್ರಶ್ನೆಗಳನ್ನು ಕೇಳುವ ಶಕ್ತಿಯನ್ನು ಹೊಂದಿದೆ. ಆದರೆ ಅದನ್ನು ತಮ್ಮ ಸ್ವಂತ ಲಾಭಕ್ಕೆ ಬಳಸಿಕೊಳ್ಳಬೇಕೊ ಅಥವಾ ಅದರ ಕಾಲಬುಡಕ್ಕೆ ನಮ್ಮ ಸ್ವಂತಿಕೆಯನ್ನು ಸಮರ್ಪಿಸಬೇಕೋ ಎಂಬ ಆಯ್ಕೆ ನಮ್ಮದೇ.

ಇತಿಹಾಸದಲ್ಲಿ ತಮ್ಮ ಜಾಗವನ್ನು ಕೇಳುವ ವರ್ಗಗಳು ಅವರವರ ಕಥೆಯನ್ನು ಅವರವರೇ ಬರೆಯಬೇಕೆಂಬ ಶರ್ತವೇನಿಲ್ಲ. ಈ ಕಾರ್ಯವನ್ನು ಇನ್ನೊಬ್ಬರೂ ಮಾಡಬಹುದು. ಆರ್. ಎಸ್. ಶರ್ಮಾ ಅವರು ಪ್ರಾಚೀನ ಭಾರತದಲ್ಲಿ ಶೂದ್ರರ ಕುರಿತಾಗಿ ಬರೆದಾಗ ಅಥವಾ ದೇವರಾಜ ಚನನಾ ಅವರು ಗುಲಾಮಗಿರಿಯ ಬಗ್ಗೆ ಬರೆದಾಗ ಅವರು ಯಾರೂ ಒಂದು ವರ್ಗದ ನೇರ ಅಥವಾ ಪರ್ಯಾಯವಾದ ಮುಖವಾಣಿಯಾಗಿ ಬರೆಯಲಿಲ್ಲ. ಅವರು ಒಂದೊಂದು ಕಾಲಘಟ್ಟದಲ್ಲಿ ಸಾಮಾಜಿಕ ಸಮೀಕರಣ, ತಾಕಲಾಟಗಳನ್ನು ಪರಿಶೀಲಿಸಿ, ಅಲ್ಲಿ ಬೇರೆ ಬೇರೆ ವರ್ಗಗಳ ಸ್ಥಾನ, ಸಂವೇದನೆಗಳನ್ನು ಅರ್ಥೈಸುವ ಪ್ರಯತ್ನ ಮಾಡಿದರು. ಇದು ವರ್ಗ ಶ್ರೇಷ್ಠತೆಯ ಕುರಿತಾದ ಜಾಹಿರಾತು ಅಲ್ಲ. ಸಂಕೀರ್ಣ ಸಮಾಜದಲ್ಲಿ ಬೇರೆ ಬೇರೆ ವರ್ಗಗಳು ನಡೆದದ್ದೆಷ್ಟು, ಪಡೆದದ್ದೆಷ್ಟು, ನಿಡಿದ್ದೆಷ್ಟು, ಪೀಡಿಸಿದ್ದೆಷ್ಟು, ದುಡಿದಿದ್ದೆಷ್ಟು, ದುಡಿಸಿಕೊಂಡದ್ದೆಷ್ಟು ಎಂಬೆಲ್ಲಾ ವಿಚಾರಗಳನ್ನು ಇತಿಹಾಸದ ಪುಟಗಳಿಂದ ಹಿಂಡಿ ಹೊರತರುವ ಪ್ರಯತ್ನ, ಅವರವರ ಜಾತಿ ವರ್ಗಗಳಿಗೆ ಮೀಸಲಾಗಬೇಕೆಂದಿಲ್ಲ. ಸಾಮಾಜಿಕ ಕಳಕಳಿ ವರ್ಗಾಧೀನವಲ್ಲ. ನೋವನ್ನು ಅರ್ಥ ಮಾಡಿಕೊಳ್ಳಲು ಅದನ್ನು ಅನುಭವಿಸಲೇಬೇಕೆಂದಿಲ್ಲ. ನಮ್ಮಲ್ಲಿ ಪರಾನುಭೂತಿ ಶಕ್ತಿ ಇರಬಹುದು. ಅದು ಮಾನವೀತೆಯನ್ನು ಪೂರ್ಣಗೊಳಿಸುವಲ್ಲಿ ಅಥವಾ ಪ್ರಕಟಗೊಳಿಸುವಲ್ಲಿ ನೆರವಾಗುತ್ತದೆ. ಅನುಭವಿಸಿದವರ ಮತ್ತು ಅದನ್ನು ಕಂಡು ಮರುಗಿದವರ ಅನುಭವಗಳು ಭಿನ್ನವಾದರೂ ಅವುಗಳಲ್ಲಿ ಒಂದು ನಿಜ, ಮತ್ತೊಂದು ಹುಸಿ ಎಂದೆನ್ನಲಾಗುವುದಿಲ್ಲ. ವರ್ಣಭೇದವನ್ನು ಪ್ರತಿಭಟಿಸಿ ಕರಿಯರ ಹಿರಿತನವನ್ನು ಪ್ರತಿಪಾದಿಸುವ, ಲಿಂಗಭೇದವನ್ನು ತಿರಸ್ಕರಿಸಿ ಮಹಿಳೆಯರ ಸ್ಥಾನಮಾನಗಳಿಗಾಗಿ ಹೋರಾಡುವ, ಜಾತಿ ವ್ಯವಸ್ಥೆಯನ್ನು ಖಂಡಿಸಿ ಶೋಷಿತ ವರ್ಗಗಳ ಹಿತರಕ್ಷಣೆಯನ್ನು ಬಯಸುವ ವಿಚಾರ ಸರಣಿ ಹಾಗೂ ಬರವಣಿಗೆಗಳಲ್ಲಿ ಸ್ವಾಭಾವಿಕ ವ್ಯಗ್ರತೆ ಇದೆ. ಶೋಷಿತರು ತಮ್ಮ ಮೋಕ್ಷದ ಜವಾಬ್ದಾರಿಯನ್ನು ಇನ್ನೊಬ್ಬರ ಕೈಯಲ್ಲಿ ತಯಾರಿಲ್ಲ. ಶೋಷಕರನ್ನು ನಂಬುವ ಶಕ್ತಿಯನ್ನು ಅವರು ಕಳಕೊಂಡಿರುತ್ತಾರೆ. ಇದು ಸಹಜವೇ ಆದರೂ ವಾಸ್ತವವಾಗಿ ಬದಲಾವಣೆಯನ್ನು ಕ್ರಿಯಾಶೀಲ ಸಮಾಜದ ಅಂತಃಕರಣವು ಬಯಸುತ್ತದೆ. ವರ್ಗಹಿತ ರಕ್ಷಣೆಯು ಸಾಮಾನ್ಯ ಪ್ರತಿಕ್ರಿಯೆಯಾದರೂ ಸುಧಾರಣಾ ಮನೋಭಾವ ಮತ್ತು ಸೈದ್ಧಾಂತಿಕ ಒಲವುಗಳು ಅದನ್ನು ಮಿರಿ ನಿಲ್ಲಲು ಸಾಧ್ಯ. ಸಾಮಾಜಿಕ ವ್ಯವಸ್ಥೆಯು ಬದಲಾಗುವ ಸಂಘರ್ಷ, ಉದ್ವೇಗ, ಬಿಗುಪುಗಳು ಪ್ರಕಟಗೊಳ್ಳುವುದರೊಡನೆ ಅಲ್ಲಿನ ತಾದ್ಯಾನುಭೂತಿ, ಇರಗೊಡುವ ಮನೋಭಾವಗಳೂ ಹೊರಹೊಮ್ಮುತ್ತವೆ. ಬದಲಾವಣೆಯನ್ನು ಕ್ರಾಂತಿಯಾಗಿ ಕಂಡಾಗಲೂ ಎಷ್ಟೋ ಬಾರಿ ಅದು ರಕ್ತಸಿಕ್ತವಾಗದೆ ಇರುವುದಕ್ಕೆ ಇದೇ ಕಾರಣ. ಇತಿಹಾಸದಲ್ಲಿ ಕ್ರಾಂತಿಗಳೆಲ್ಲವೂ ಹಿಂಸಾತ್ಮಕವಾಗಿರುವುದಿಲ್ಲ. ಹಾಗಾಗಿ ಅದು ಕಣ್ಣು ಕೋರೈಸುವುದಿಲ್ಲ. ಅಬ್ಬರದ ತಲೆಯುರುಳುವ ಬದಲಾವಣೆಗಳು ವಿಪ್ಲವಗಳೆಂದೆನಿಸಿಕೊಂಡು ಇತಿಹಾಸ ಪುಟಗಳಲ್ಲಿ ರಂಜಿಸುವುದು ಹೆಚ್ಚು. ಹೊಡೆದಾಟ, ಕ್ರೌರ್ಯ, ಮಾನಭಂಗಗಳನೊಡಗೂಡಿದ ಗರಮ್ ಮಸಾಲೆ ಸಿನಿಮಾಗಳಂತೆ, ಶಿಳ್ಳು, ಚಪ್ಪಾಳೆಗಳು ಅವುಗಳ ಪಾಲಿಗೆ ಹೆಚ್ಚು. ಹಿಂಸಾತ್ಮಕವಾದ ಕ್ಷಿಪ್ರಕ್ರಾಂತಿಗಳು ನಗಣ್ಯವಲ್ಲದಿದರೂ, ಇತಿಹಾಸದ ಹೆಚ್ಚಿನ ಬದಲಾವಣೆಗಳು ಮಂದ್ರಲಯದವುಗಳು. ಅವು ಬೇಕುಬೇಡಗಳ ನಿರಂತರ ಸಂಘರ್ಷಗಳ ಮೇಲೆ ನಿಂತಿದ್ದರೂ ಎಷ್ಟೋ ಸ್ತರಗಳಲ್ಲಿ ಅವು ಬದಲಾವಣೆಗಳನ್ನು ಹೆಚ್ಚು ಸದ್ದಿಲ್ಲದೆ ಅಳವಡಿಸಿಕೊಂಡು ಬಿಡುತ್ತವೆ. ಹಳೆಯದೆಲ್ಲಾ ಚಿನ್ನ ಎನ್ನುವವರೂ ನಿಧಾನವಾಗಿಯಾದರೂ ಹೊಸತನ್ನು ಒಪ್ಪಿಕೊಳ್ಳುತ್ತಾರೆ. ಸಮಾಜದಲ್ಲಿರುವ ಪರಿವರ್ತನಾಗುಣವು ಅದರೊಳಗಿನ ಜಿಗುಟನ್ನು ಕರಗಿಸುತ್ತದೆ. ಅದರ ಗತಿಯಲ್ಲಿ ಮಾತ್ರ ವ್ಯತ್ಯಾಸವಿರುವದು ಸಾಧ್ಯ. ಈ ರೀತಿಯ ಪ್ರತಿಪಾದನೆಯು ಕ್ರಾಂತಿ ವಿರೋಧಿ ಸಂಪ್ರದಾಯಿಕತೆಯನ್ನು ವೈಚಾರಿಕವಾಗಿ ಹಿಂಬಾಗಿಲಿನಿಂದ ಒಳದೂಡುವ ವರಸೆಯಲ್ಲ. ಸಮಾಜದಲ್ಲಿ ಪರಿವರ್ತನೆಗಳು ಬೇರೆ ಬೇರೆ ಸ್ತರದಲ್ಲಿ ಬೇರೆ ಬೇರೆ ಗತಿಯಲ್ಲಿ ನಡೆಯುತ್ತವೆ. ಆ ಪ್ರಕಾರವೇ ವಿವಿಧ ವರ್ಗಗಳು ತಮ್ಮ ಇಂದಿನ ಸ್ಥಾನಗಳನ್ನು ಸ್ಥಾಪಿಸಿಕೊಳ್ಳುತ್ತವೆ. ಅದೇ ಹುಮ್ಮಸ್ಸಿನಲ್ಲಿ ಇತಿಹಾಸದಲ್ಲೂ ತಮ್ಮ ಸ್ಥಾನವನ್ನು ಅರಸುತ್ತವೆ. ಇದನ್ನು ಅವರಾಗಿಯೇ ಮಾಡಬಹುದು ಅಥವಾ ಅವರ ಪರವಾಗಿ ಸಮಾಜದ ಇತರರೂ ಮಾಡಬಹುದು. ಒಟ್ಟಾರೆ ಇದು ಬದಲಾವಣೆಯನ್ನು ಗುರುತಿಸುವ, ರೂಢಿಸಿಕೊಳ್ಳುವ ಕ್ರಿಯೆ. ಇದು ಜೀವಂತ ಸಮಾಜದಲ್ಲಿ ನಡೆಯುತ್ತಲೇ ಇರುತ್ತದೆ. ಹಾಗಾಗಿ ಇತಿಹಾಸದ ಹರವು, ಅರ್ಥ, ನಿರೂಪಣೆಗಳು ಬದಲಾಗುತ್ತಲೇ ಇರುತ್ತವೆ. ಬೇರೆ ಬೇರೆ ವರ್ಗಗಳು ಇತಿಹಾಸದಲ್ಲಿ ತಮ್ಮದೇ ಮನೆ ಮಾಡಿ ತಮ್ಮದೇ ಕ್ಷೇತ್ರದಲ್ಲಿ ಕೃಷಿ ಮಾಡಿ ತಮ್ಮ ಅಸ್ತಿತ್ವವನ್ನು ಹೊಸೆದುಕೊಳ್ಳುತ್ತವೆ. ಸ್ವಾತಂತ್ರ‍್ಯದ ನಿಜವಾದ ಹವೆಯಲ್ಲಿ ಸಮಾಜದ ವಿವಿಧ ವರ್ಗಗಳು ತಮ್ಮ ಶಕ್ತಿಯನ್ನು ಕಂಡುಕೊಳ್ಳುವ ಮುಕ್ತ ಅವಕಾಶವಿದ್ದರೂ ಅದೆಂದೂ ಸಮಾರೋಪಗೊಳ್ಳುವ ಕಾರ್ಯಕ್ರಮವಾಗುವುದಿಲ್ಲ. ಅಸ್ತಿತ್ವದ ಅನ್ವೇಷಣೆಯು ನಿರಂತರವಾಗಿ ನಡೆಯುವ ಕ್ರಿಯೆ. ಆ ಬಗ್ಗೆ ಚರ್ಚೆ, ಸಂವಾದ, ಗುರುಗಾಟ, ಒಪ್ಪಂದ ತಾಕಲಾಟಗಳು ನಡೆಯುತ್ತಲೇ ಇರುತ್ತವೆ. ಅದೇ ರೀತಿ ಇತಿಹಾಸದಲ್ಲಿ ಅವರ ಸ್ಥಾನದ ಬಗ್ಗೆ ಕಕ್ಷಿ ನಡೆಯುತ್ತಲೇ ಇರುತ್ತದೆ.

ಇತಿಹಾಸವೆನಿಸಿಕೊಳ್ಳದ ಇತಿಹಾಸ

ಇತಿಹಾಸವೆಂದರೆ ಇದು ಮಾತ್ರ, ಉಳಿದುದು ಅಲ್ಲ ಎಂಬ ನಿರ್ದಿಷ್ತೆ ಅಧ್ಯಯನದ ಚೌಕಟ್ಟಿನಲ್ಲಿ ಹುಟ್ಟುವುದು ಸಾಮಾನ್ಯ. ಆದರೆ ಅದು ಕಾಲಕಾಲಕ್ಕೆ ಬದಲಾಗುವುದೂ ಅಷ್ಟೇ ಸತ್ಯ. ಇದು ಮೇಲುನೋಟಕ್ಕೆ ಒಂದು ವಿರೋಧಾಭಾಸವಾಗಿ ಕಂಡುಬಂದರೂ ಇತಿಹಾಸ ಕಥನಾಶಾಸ್ತ್ರವನ್ನು ಒಟ್ಟಾಗಿ ಪರಿಶೀಲಿಸಿದಾಗ ಇದರ ಅರ್ಥ ನಮಗಾಗುತ್ತದೆ. ಇತಿಹಾಸಕ್ಕೆ ನಿರ್ದಿಷ್ಟ ಚೌಕಟ್ಟನ್ನು ಆರೋಪಿಸಿದಾಗಲೇ ಯಾರು ಅಥವಾ ಯಾವುದು ಅದರೊಳಗೆ ಸೇರಬೇಕು ಅಥವಾ ಹೊರಗುಳಿಯಬೇಕು ಎಂಬುದು ನಿರ್ಧಾರವಾಗುತ್ತದೆ. ಇದು ಸಡಿಲಗೊಂಡಾಗ ಅಲ್ಲಿ ಹೆಚ್ಚು ಮಂದಿಗೆ ಜಾಗ ದೊರಕುತ್ತದೆ. ಆದರೆ ಎಷ್ಟೋ ಬಾರಿ ಇತಿಹಾಸವು ಒಂದು ಶಿಷ್ಟತೆಯ ಪಡೆಸನ್ನು ಪಡೆಯುತ್ತದೆ. ಇತಿಹಾಸವು ಇತಿಹಾಸವಾಗಬೇಕಾಗಿದ್ದರೆ ಅದಕ್ಕೆ ಲಿಖಿತಾಧಾರಗಳಿರಬೇಕು; ಅವುಗಳ ಕಾಲ, ಸ್ಥಳ, ಲೇಖಕರ ಬಗ್ಗೆ ಸ್ಪಷ್ಟ ಮಾಹಿತಿಯಿರಬೇಕು; ಅವುಗಳ ಸತ್ಯಾಸತ್ಯತೆಯನ್ನು ಪರಾಂಬರಿಸಿ, ಅಲ್ಲಿ ದೊರಕುವ ವಸ್ತುನಿಷ್ಠ ಚಿತ್ರಣವನ್ನು ಗ್ರಹಿಸುವಂತಾಗಬೇಕು. ಈ ಎಲ್ಲಾ ಶರ್ತಗಳನ್ನು ಪೂರೈಸಿದಾಗ ಇಂದು ಸ್ವಚ್ಛ ನಂಬಿಕೆಗೆ ಅರ್ಹವಾದ ಇತಿಹಾಸವು ಲಬ್ಧವಾಗುತ್ತದೆ ಎಂಬ ದೃಢನಂಬಿಕೆಯೊಂದಿಗೆ, ಇವುಗಳಿಲ್ಲದ ಬರವಣಿಗೆಗಳು ನಿರುಪಯೋಗಿ ಕತೆಗಳು ಎಂಬ ಭಾವನೆ ನಮ್ಮಲ್ಲಿದೆ. ಇತಿಹಾಸವು ಒಂದು ವಿಜ್ಞಾನ, ಅಥವಾ ಅದಕ್ಕೇನೂ ಕಡಿಮೆ ಇಲ್ಲದ ಜ್ಞಾನಪ್ರಕಾರ ಎಂಬ ಅಭಿಮಾನ, ಆಶಯಗಳು ಈ ಭಾವನೆಯನ್ನು ಆಧರಿಸುತ್ತವೆ.

ಇತಿಹಾಸವು ಕ್ರೋಢಿಕೃತ ಜ್ಞಾನ ಪ್ರಕಾರವಾದಾಗ ಅದು ಪಡೆಯುವ ಮಡಿವಂತಿಕೆಯು ಸಮಾಜವು ಪ್ರಕಟಪಡಿಸುವ ಕೆಲವು ಬಗೆಯ ಐತಿಹಾಸಿಕತೆಯ ಬಗ್ಗೆ ಉದಾಸೀನ ಭಾವವನ್ನು ತಾಳುತ್ತದೆ. ಜಾನಪದ ಮೌಖಿಕ ಆಕರಗಳನ್ನು ತೀಕ್ಷ್ಣವಾಗಿ ಗಮನಿಸಿದಾಗ ಸಮಾಜದ ಐತಿಹಾಸಿಕ ಸಂವೇದನೆಗಳು ಹೊಸ ರೀತಿಯಲ್ಲಿ ಹೊರಹೊಮ್ಮುವುದನ್ನು ಕಾಣುತ್ತೇವೆ. ಅಧ್ಯಯನದ ನೆಲೆ, ನಿಲುವುಗಳು ವಿಶ್ಲೇಷಣಕಾರಿಯಾಗದಿದ್ದಲ್ಲಿ ಅವುಗಳು ರಮಯ ವಿಲಕ್ಷಣ ಕಥನಗಳಾಗಿಯೇ ಉಳಿಯುತ್ತವೆ. ಸಮಾಜದ ಕೆಲವು ಪದರುಗಳಲ್ಲಿ ಜಿನುಗಿ ಹೊರಬಂದ ಭಾವನೆ-ವೇದನೆಗಳನ್ನು ಗುರುತಿಸಿ, ಪ್ರಶ್ನಿಸಿದಾಗ ಅವುಗಳು ಹೆಚ್ಚು ಹೆಚ್ಚಾಗಿ ಬಿಚ್ಚಿಕೊಳ್ಳುತ್ತವೆ. ತುಳುನಾಡಿನ ಭೂತಾರಾಧನೆಗೆ ಸಂಬಂಧಿಸಿದ ಪಾಡ್ದನಗಳು ಹೇಳುವ ಕಥೆಗಳನ್ನೇ ನೋಡಿ. ಅವೆಲ್ಲಾ ಜನಪದ ಆರಾಧನಾ ವಿಶೇಷಗಳಿಗೆ ಸೇರಿದ್ದು. ಗೌಜಿಗದ್ದಲಗಳ ಮಧ್ಯೆ ಅವುಗಳನ್ನು ಕೇಳುವವರು ಯಾರು, ಕೇಳಿ ತಿಳಿಯುವವರು ಯಾರು? ಪುರೋಹಿತರು ಸಿಡಿಸುವ ಮಂತ್ರಗಳ ಅರ್ಥ ಕೇಳುವವರೆಷ್ಟು ಮಂದಿ? ಆದರೆ ಪಾಡ್ದನಗಳನ್ನು ಬಿಡಿಸಿ, ಅಲ್ಲಿನ ಒಗಟುಗಳನ್ನು ಬಿಚ್ಚಿ ನೋಡಿದಾಗ ಅವುಗಳು ತಿಳಿಸುವ ಸತ್ಯದ ಸ್ವರೂಪ, ತೀವ್ರತೆಗಳು ಭಿನ್ನವಾಗಿ ಪ್ರಕಟವಾಗುತ್ತವೆ. ಅರಸನೊಬ್ಬ ಗೊಮ್ಮಟನ ಮಹಾಶಿಲಾ ವಿಗ್ರಹವನ್ನು ಕೆತ್ತಿಸಿ ಸ್ಥಾಪಿಸಿದಾಗ ಆತನ ಕೀರ್ತಿ ಇತಿಹಾಸದಲ್ಲಿ ಶಾಶ್ವತ ಎಂದು ತಿಳಿಯುವುದು ಶಿಷ್ಟ ಇತಿಹಾಸದ ವಾಡಿಕೆ. ರಾಜ ಮಹಾರಾಜರು ಗುಡಿಗೋಪರಗಳನ್ನು ಕಟ್ಟುವುದು ಕೇವಲ ಅವರ ಭಕ್ತಿಯ ಜಾಹೀರಾತಾಗಿ ಮಾತ್ರ ಅಲ್ಲ; ಅದು ಅವರ ಪ್ರಭುತ್ವದ ಅಭಿವ್ಯಕ್ತಿ ಕೂಡ. ಅದನ್ನು ಇತಿಹಾಸದ ಸಾಮಾನ್ಯ ಗ್ರಾಹಕರು ನಿರಾಳವಾಗಿ ಒಪ್ಪುತ್ತಾರೆ. ಗುಡಿಗೋಪುರ ಕಟ್ಟಿದವರು ಆದರ್ಶ ಅರಸರು, ಅವುಗಳನ್ನು ಕೆಡವಿದವರು ಖೂಳರು ಎಂಬುದು ಸರ್ವಸಮ್ಮತ ಸತ್ಯವಾಗಿ ಪರಿಗಣಿಸಲಾಗಿದೆ. ಆದರೆ ಪಾಡ್ದನಗಳಲ್ಲಿ ಹೊರಗೆ ಇಣುಕುವ ಸತ್ಯಗಳು ಸ್ವಲ್ಪ ಭಿನ್ನವೇ. ಕಲ್ಕುಡ-ಕಲ್ಲುರ್ಟಿ ಪಾಡ್ದನದಲ್ಲಿ ಮಹಾಶಿಲಾಮೂರ್ತಿ ಗೊಮ್ಮಟವನ್ನು ಕೆತ್ತಿಸಿದ ಭೈರರಸ ಶಿಲ್ಪಿಯ ಕೈಯನ್ನೂ ಕಾಲನ್ನೂ ಕಡಿಸಿ, ಶಿಲ್ಪವನ್ನು ಅದ್ವೀತಯವಾಗಿ ಉಳಿಸುವ ವಿಕೃತ ಕೃತಘ್ನತೆಯನ್ನು ತೋರುತ್ತಾನೆ. ಅದಕ್ಕಾಗಿ ಅವನು ಮತ್ತು ಅವನ ಪ್ರಜೆಗಳೂ ಶಿಕ್ಷೆ ಅನುಭವಿಸುತ್ತಾರೆ. ಈ ಕಥನದ ಎಲ್ಲಾ ವಿವರಗಳನ್ನು ಅಥವಾ ತಿರುವುಗಳನ್ನು ಶಿಷ್ಟ ಇತಿಹಾಸದ ದೇಶ, ಕಾಲ ಅಥವಾ ಆಕರಗಳ ನಿಖರವಾದ ತನಿಖೆಗೆ ಒಳಪಡಿಸಿದರೆ ಅವು ತೇರ್ಗಡೆಯಾಗಲಾರವು. ಜಾನಪದೀಯ ಒಲವು ನೋವುಗಳು ಮೌನವಾಗಿ ಹರಿದು ಬಂದವುಗಳು. ಅವುಗಳ ಉಗಮ ಎಲ್ಲಿ, ಅವುಗಳ ಆಯ್ದ ದಾರಿ ಯಾವುದು ಎಂಬ ಪ್ರಶ್ನೆಗಳಿಗೆ ನಿರ್ದಿಷ್ಟ ಉತ್ತರ ಸಿಗುವುದು ಕಷ್ಟ. ಜಾನಪದ ಸಂವೇದನೆಗಳು ಪ್ರತೀಕ ರೂಪದಲ್ಲಿ ದೊರಕುವಂಥವು. ಕಲೆಗೆ ಆಶ್ರಯದಾತನೆಂಬ ಹಿರಿಮೆಯನ್ನು ಹೊತ್ತ ಅರಸನನ್ನು ಕೃತಘ್ನನನ್ನಾಗಿ, ಕ್ರೂರಿಯನ್ನಾಗಿ, ಶೋಷಕನನ್ನಾಗಿ ಚಿತ್ರಿಸುವುದು ಜಾನಪದದಲ್ಲಿ ಅಪರೂಪವಲ್ಲ. ಇದು ಯಾರೊಬ್ಬ ಲೇಖಕರ ಆಕ್ಷೇಪಣೆಯೂ ಅಲ್ಲ. ರಾಜನನ್ನು ಪ್ರತ್ಯಕ್ಷ ದೇವರು ಎಂದು ದೇವಭಾಷೆ ಸಂಸ್ಕೃತದಲ್ಲಿ ವರ್ಣಿಸಿದ್ದುಂಟು. ಅದುವೇ ರಾಜನ ಬಗ್ಗೆ ಜನರಿಗೆ ಇದ್ದ ನಿಜವಾದ ಭಾವನೆ ಎಂಬ ತೀರ್ಮಾನವನ್ನು ಇತಿಹಾಸದಲ್ಲಿ ಮಾಡಿದ್ದುಂಟು. ಯಾವುದು ಶಾಸ್ತ್ರ ಸಿದ್ಧವೋ ಅದು ಯಥಾರ್ಥವಾಗಬೇಕೆಂದಿಲ್ಲ. ಒಂದು ಮಾತಿದೆ, ‘ರಾಜ ದೃಷ್ಟಿ ಹಾಳು, ಅದರಿಂದ ದೂರವಿರು, ರಾಜ ದೃಷ್ಟಿ ಬಿದ್ದವನಿಗೆ ಕಂಟಕ ತಪ್ಪಿದ್ದಲ್ಲ’ ಎಂದು. ರಾಜನು ದೇವರ ಪ್ರತಿರೂಪವೇ ಆಗಿದ್ದರೆ ಆತನ ದೃಷ್ಟಿ ಮಂಗಳಕರವಾಗಬೇಕಷ್ಟೇ? ರಾಜತ್ವದಲ್ಲಿ ಅಧಿಕಾರವಿದೆ. ಅಧಿಕಾರದಲ್ಲಿ ಮದ-ಅಟ್ಟಹಾಸವಿದೆ. ವಿಕೃತ ಚಂಚಲತೆ ಇದೆ. ಅದರ ಅಪಾಯ ವಲಯದಿಂದ ದೂರವಿರುವುದೇ ಕ್ಷೇಮ ಎಂಬ ಭಾವನೆ ಬಂದಿದ್ದರೆ ಆಶ್ಚರ್ಯವೇನಿಲ್ಲ. ಕರ ರೂಪದಲ್ಲಿ ಸಂಪತ್ತು ಕಸಿದುಕೊಳ್ಳುವ ಅಧಿಕಾರವಿರುವ ರಾಜತ್ವದ ದೃಷ್ಟಿಯಿಂದ ದೂರವಿರುವುದೇ ಲೇಸು ಎಂದು ಹಣವಿದ್ದವರೂ, ಹೆಚ್ಚೇನೂ ಇಲ್ಲದವರೂ ತಿಳಿದಿದ್ದರೆ ಅದು ಹೂವನ್ನು ಸೊರಗಿಸದೆ ಮುದ್ದಿಟ್ಟು ದುಂಬಿಯು ಮಕರಮದವನ್ನು ಹೀರುವಂತೆ ರಾಜನು ಕರವನ್ನು ಕರಗತ ಮಾಡಿಕೊಳ್ಳಬೇಕು ಎಂಬ ಶಾಸ್ತ್ರೋಕ್ತಿಯಿಂದ ತೀರ ಭಿನ್ನವಾದ ವಾಸ್ತವತೆ. ಅರಮನೆಯ ಮುಂದೆ, ಕತ್ತೆಯ ಹಿಂದೆ ಸುಳಿಯಬೇಡ ಎಂಬ ಮಾತು ಕೂಡ ಎರಡು ಅಪಾಯ ವಲಯಗಳನ್ನು ಗುರುತಿಸುತ್ತದೆ. ಶಾಸ್ತ್ರಗಳಲ್ಲಿ ಬ್ರಾಹ್ಮಣರನ್ನು ಭೂಸುರರೆಂದು ಬಣ್ಣಿಸಿದ್ದು ಅವರಿಗೆ ನೀಡುವ ದಾನ ಮರ್ಯಾದೆಗಳೆಲ್ಲವೂ ದೇವರಿಗೆ ಸಂದಂತೆ, ಅಷ್ಟೇ ಪುಣ್ಯಕಾರಕ ಎಂದು ಹೇಳಲಾಗಿದೆ. ಶಾಸ್ತ್ರಗಳನ್ನು ಬರೆದ ಶಾಸ್ತ್ರಿಗಳ ಅಭಿಪ್ರಾಯವು ಸಮಾಜದ ವರ್ಗ ಸಂಬಂಧಗಳ ಪ್ರಾಮಾಣಿಕ ಪ್ರತಿಬಿಂಬವೇ? ಹಾಗಾದರೆ ಒಂಟಿ ಬ್ರಾಹ್ಮಣವನ್ನು ಕಂಡರೆ ಅಪಶಕುನ ಎಂಬ ಮಾತೇಕೆ? ಹಾಗೆಯೇ ಮಲೆಯಾಳದಲ್ಲಿ ಒಂದು ಮಾತಿದೆ: ಕುಲೀನನೊಬ್ಬ ಸತ್ತರೆ ನೀನೊಬ್ಬರಿಗೆ ಬಗ್ಗಿ, ದಾರಿ ಬಿಡುವುದು ತಪ್ಪೀತು! ಇದು ಕೆಲಜಾತಿಯವರ ಹೃದಯದಲ್ಲಿ ಕುದಿಯುವ ಭಾವನೆ ಎಂದು ಬೇರೆ ಹೇಳಬೇಕಿಲ್ಲ. ರಾಮನೋ, ರಾವಣನೋ ಯಾರು ಆಳಿದರೇನು? ಸೀತೆಯ ಅವಸ್ಥೆ ಅದೇ ಎಂಬ ತಮಿಳಿನ ನಾಣ್ಣುಡಿ ಸ್ತ್ರೀ ವರ್ಗದ ನಿಟ್ಟುಸಿರನ್ನು ಹಿಡಿದಿಟ್ಟಿದೆ. ಇವೆಲ್ಲವೂ ಸಮಾಜದಲ್ಲಿ ವಿವಿಧ ಜಾತಿ ವರ್ಗಗಳು ಇತರರನ್ನು ಮೌಲೀಕರಿಸುವ ಕ್ರಮ. ಇದು ಮಾತು ಭಾಷೆಗಳಲ್ಲಿ ಸೇರಿಹೋದ ಗಾದೆ, ಒಗಟು, ನಾಣ್ಣುಡಿ ಅಥವಾ ನಂಬಿಕೆಗಳಲ್ಲಿ ಪ್ರಕಟಗೊಳ್ಳುತ್ತದೆ. ಇದು ಹಿಂದೆ ಎಂದು ಹುಟ್ಟಿತು, ಹೇಗೆ ಬೆಳೆಯಿತು ಎಂಬ ಪ್ರಶ್ನೆಗೆ ಉತ್ತರ ಸಿಕ್ಕುವುದು ಕಷ್ಟ. ಆದರೆ ನಮ್ಮಲ್ಲಿರುವುದು ನಾವು ನಾವು ಗಳಿಸಿದ್ದು, ಅನುಭವಿಸಿದ್ದು, ಅವೆಲ್ಲವೂ ಇತಿಹಾಸದ ತುಣುಕುಗಳು. ಇತ್ತೀಚಿನವರೆಗೆ ಶಿಷ್ಟ ಇತಿಹಾಸದ ಉಗ್ರಾಣವು ಅವುಗಳಿಗೆ ಜಾಗವನ್ನು ನಿರಾಕರಿಸಿತ್ತು. ಇದು ಒಂದು ವಿಧದ ಪ್ರತಿಕ್ರಿಯೆಯಾದರೆ, ಗುಳೆ ಹೋಗುವುದು ಇನ್ನೊಂದು. ಶೋಷಿಕತರ ಜಾನಪದೀಯ ಆರಾಧನೆಗಳು ಶೋಷಿತರಿಗೆ ಸಮಾಜದಲ್ಲಿ ಸಂದ ಅನ್ಯಾಯಗಳನ್ನು ಸಾಂಕೇತಿಕವಾಗಿ ಪ್ರದರ್ಶಿಸುವ ವಿಧಾನವೇ ಕೋರ್ದಬ್ಬು, ತನ್ನಿಮಾನಿಗ, ಕೋಟಿ-ಚೆನ್ನಯ್ಯರು ಆರಾಧನೆಗೊಳ್ಳುವದು ಅವರ ಅತಿಮಾನವ, ದೈವೀಶಕ್ತಿಗಳಿಗಾಗಿ ಮಾತ್ರವಲ್ಲ. ಅವರು ಮಾಡಿದ ಪವಾಡಗಳು ಭಕ್ತರ ನಂಬಿಕೆಯನ್ನು ಆಧರಿಸುತ್ತವೆ. ಆದರೆ ಈ ಆರಾಧ್ಯ ದೈವಗಳ ಸಾಮಾಜಿಕ ಪರಿಸರ, ಅವರ ಕಥನಗಳಲ್ಲಿ ಕಾಣುವ ಅನ್ಯಾಯದ ಚಿತ್ರಣ, ಅಲ್ಲಿಯ ವರ್ಣಭೇದ-ವರ್ಗಭೇದಗಳ ರೂಪಕಗಳು – ಇವೆಲ್ಲವೂ ಶಿಷ್ಟ ಸಂಪ್ರದಾಯಕ್ಕೆ ಸಡ್ಡು ಹೊಡೆದಂತೆ ಭಾಸವಾಗುತ್ತವೆ. ಹಾಗೆಯೇ ಇನ್ನೊಂದು ಸ್ತರದಲ್ಲಿ ಶಿಷ್ಟ ಸಂಪ್ರದಾಯದ ಅನುಕರಣೆಯೂ ಇದೇ ಕೆಲಸ ಮಾಡುತ್ತದೆ. ಖ್ಯಾತ ಸಮಾಜ ಶಾಸ್ತ್ರಜ್ಞ ಎಂ.ಎನ್.ಶ್ರೀನಿವಾಸ್ ಅವರ ಅಭಿಪ್ರಾಯದಲ್ಲಿ ಇದು ಸಂಸ್ಕೃತಾನುಸರಣ. ನಿಮ್ನ ವರ್ಗದ ಜನ ಶಿಷ್ಟ ಸಂಪ್ರದಾಯದ ಆಚಾರ-ವಿಚಾರಗಳನ್ನು ಅನುಸರಿಸಿ ಅವರ ಮಟ್ಟಕ್ಕೆ ಏರಲು ತೋರುವ ಉತ್ಕಟೇಚ್ಚೆ; ‘ನೀಚ’ ಸಂಸ್ಕೃತಿಯು ಸುಸಂಸ್ಕೃತಗೊಳ್ಳುವ ವಿಧಾನ. ಆದರೆ ಇದು ಹಿರಿಯ ಸಂಸ್ಕೃತಿಯನ್ನು ಅಭಿಮಾನಪೂರ್ವಕ ಅನುಸರಿಸುವ ಕ್ರಿಯೆ ಆಗಬೇಕಾಗಿಲ್ಲ, ಬದಲಾಗಿ ಇದು ತಮಗೆ ನಿರಾಕರಿಸಲ್ಪಟ್ಟ ಸಂಸ್ಕೃತಿಯ ನೆಲೆಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಕ್ರಾಂತಿಕಾರಿ ನಿಲುವಾಗಬಹುದು. ಇದನ್ನು ಶ್ರೀನಿವಾಸ್ ಅವರು ಹೆಚ್ಚಾಗಿ ಗಮನಿಸಿಲ್ಲ. ಶ್ರೀ ನಾರಾಯಣ ಗುರುಗಳು ಶಿವಾಲಯವೊಂದನ್ನು ಸ್ಥಾಪಿಸಿದಾಗ ಕರ್ಮಠ ಬ್ರಾಹ್ಮಣರು ತಮ್ಮ ಏಕಸ್ವಾಮ್ಯ ಕಸಿಯಲ್ಪಟ್ಟಿತೆಂದು ಬಹಳಷ್ಟು ಆಕ್ಷೇಪವೆತ್ತಿದರು. ಆಗ ಶ್ರೀ ನಾರಾಯಣ ಗುರುಗಳು ಹೇಳಿದ ಮಾತಿಷ್ಟೇ: ಸ್ವಾಮಿ ನಾನು ಬ್ರಾಹ್ಮಣರ ಶಿವನನ್ನು ಇಲ್ಲಿ ಸ್ಥಾಪಿಸಲಿಲ್ಲ, ನಾನಿಲ್ಲಿ ಸ್ಥಾಪಿಸಿದ್ದು ಈಳವರ ಶಿವನ್ನು ಮಾತ್ರ. ಇದು ದೇವರನ್ನು ಸ್ವಂತ ಆಸ್ತಿಯೆಂದು ಪರಿಗಣಿಸುವ ಜಾತಿ ವ್ಯವಸ್ಥೆ, ಉದ್ಧಟತನಗಳ ವಿರುದ್ಧ ಸಿಡಿದೆದ್ದ ಭಾವನೆ. ಇದು ಶಿಷ್ಟ ಸಂಸ್ಕೃತಿಯ ದೀನ ಅನುಕರಣೆಯಲ್ಲ, ಹಿರಿಯ ಸಂಸ್ಕೃತಿ ಎಂಬುದು ಯಾರೊಬ್ಬರ ಸೊತ್ತಲ್ಲ. ಅದು ನಮ್ಮೆಲ್ಲರದ್ದು ಎಂಬ ಧೈರ್ಯವಾದ, ಆತ್ಮಗೌರವದ ಘೋಷಣೆ. ಇದನ್ನು ಅರ್ಥೈಸುವ ಶಕ್ತಿ ಮಾತ್ರ ನಮ್ಮಲ್ಲಿ ಬೇಕು. ಅದು ಇದ್ದಾಗ ಇತಿಹಾಸವು ಸಮಾಜದ ಭಾವನೆಗಳಿಗೆ, ಬದಲಾವಣೆಗಳಿಗೆ ಸ್ಪಂದಿಸಲು ಶಕ್ತವಾಗುತ್ತದೆ.