ಇತಿಹಾಸ ಮತ್ತು ರಾಷ್ಟ್ರೀಯತೆ

ಇತಿಹಾಸ ರಚನೆ, ಅಧ್ಯಯನಗಳು ಮನುಷ್ಯನ ಕುತೂಹಲಕಾರಿ, ಮನೋಧರ್ಮ, ಜ್ಞಾನಪಿಪಾಸೆ, ಅನ್ವೇಷಣಕಾರಿ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತವೆ. ಆದರೆ ಇತಿಹಾಸ ಜ್ಞಾನವನ್ನು ಸೃಷ್ಟಿಸಿ ನಿರೂಪಿಸುವ ಇತಿಹಾಸಕಾರರಿಗೆ ತನ್ನ ಉತ್ಪಾದನೆಯ ಮೇಲೆ ಸ್ವಾಮ್ಯ ಇರುವುದಿಲ್ಲ. ಆ ಜ್ಞಾನದ ಕೆಲವು ಆಯ್ದ ಅಂಶಗಳು ಹೆಪ್ಪುಗಟ್ಟಿ ಸಮಾಜದ ಪಾಲಾಗುತ್ತವೆ. ಅವುಗಳ ಮೇಲೆ ಇತಿಹಾಸಕಾರರು ತಮ್ಮ ಹಕ್ಕನ್ನು ಕಳಕೊಳ್ಳುತ್ತಾರೆ. ಕೆಲವು ಬಗೆಯ ಇತಿಹಾಸದ ಬಗ್ಗೆ ಸಮಾಜವು ತೋರುವ ಅತೀವ ಒಲವು ರಾಷ್ಟ್ರೀಯತೆಯ ಚಿನ್ನೆ ಎಂದು ತಿಳಿಯಲಾಗಿದೆ. ಇದನ್ನು ತಳ್ಳಿಹಾಕುವಂತಿಲ್ಲ. ರಾಷ್ಟ್ರೀಯತೆ ಎಂಬುದು ಒಂದು ಜನಾಂಗ ಒಂದು ಕಾಲಘಟ್ಟದಲ್ಲಿ ತನ್ನ ಅಸ್ತಿತ್ವವನ್ನು ನಿರ್ವಚಿಸಿ ಪ್ರಕಟಪಡಿಸುವ ಪ್ರಕ್ರಿಯೆ. ಇದು ಐತಿಹಾಸಿಕ ಸನ್ನಿವೇಶದ ಚೌಕಟ್ಟಿನಲ್ಲಿ ಬೇರೆ ಬೇರೆ ಶಕ್ತಿ ಒತ್ತಡಗಳ ವಿರುದ್ಧ ತಾಕಲಾಟ ಹಾಗೂ ಅವುಗಳೊಡನೆ ನಡೆಯುವ ಸಂಕೀರ್ಣ ಒಪ್ಪಂದಗಳಿಂದಾಗಿ ಹುಟ್ಟಿಕೊಳ್ಳುತ್ತದೆ. ಇದರ ಒಂದು ಘಟಕ ತನ್ನ ಶಕ್ತಿ ಸತ್ವಗಳ ನಿರೂಪಣೆ. ಇದು ಇನ್ನೊಬ್ಬರಿಂದ ಎರವಲು ಪಡೆದ ಶಕ್ತಿಯಲ್ಲ; ಇದು ಇತ್ತೀಚೆಗೆ ಗಳಿಸಿದ ಸಾಮರ್ಥ್ಯವಲ್ಲ; ಇದು ತನ್ನಲ್ಲೇ ಹುದುಗಿದ್ದ ಸತ್ವ ಕಾರಣವಶಾತ್ ಇದನ್ನು ಮರೆತು ಸತ್ವಹೀನರಾಗಿದ್ದೆವು; ನಮ್ಮ ಶಕ್ತಿ ಹಿರಿಮೆಗಳನ್ನು ಪುನಃ ಕಂಡುಕೊಂಡಾಗ ಗ್ರಹಣ ಮುಕ್ತ ಸೂರ್ಯನಂತೆ ಪ್ರಕಾಶಿಸಬಲ್ಲೆವು – ಎಂಬ ವಿವರಣೆ ರಾಷ್ಟ್ರೀಯತೆಯ ಹುಮ್ಮಸ್ಸಿನ ಧಾಟಿ. ಇಂತಹ ರಾಷ್ಟ್ರೀಯತೆಯ ಕಾವ್ಯ ಪ್ರವಾದ ಹಲವು ಇತಿಹಾಸ ಅದರ ಶ್ರೇಷ್ಠತೆಯ ವೈವಿದ್ಯ ಮತ್ತು ಖಚಿತತೆಗಳು ಜ್ಞಾನ ಸ್ತರದಲ್ಲಿ ಹಾಗೂ ಭಾವುಕತೆಯ ನೆಲೆಯಲ್ಲಿ ನಿರೂಪಿಸಲ್ಪಡುತ್ತವೆ. ಹಾಗಾಗಿಯೇ ರಾಷ್ಟ್ರೀಯತೆಯು ತನ್ನನ್ನು ಹೆಚ್ಚು ಹೆಚ್ಚಾಗಿ ಐತಿಹಾಸಿಕವಾಗಿ ನಿರ್ವಚಿಸಿಕೊಳ್ಳುವುದು. ಆಗ ಇತಿಹಾಸಕಾರರು ಹಿಮ್ಮುಖರಾದ ಪ್ರವಾದಿಯಾಗುತ್ತಾರೆ. ಹಿಂದಿನ ದಿನಗಳಲ್ಲಿ ಹೊಸ ಯುಗವನ್ನು ಕಾಣುವ ಹರಿಕಾರನಾಗುತ್ತಾರೆ. ಕೀಳರಿಮೆಯಿಂದ ಕುಸಿದ ಸಮಾಜಕ್ಕೆ ಶಕ್ತಿ ಪೇಯವನ್ನೀಯುವ ದಾದಿಯಾಗುತ್ತಾರೆ. ಇದೆಲ್ಲಾ ಸ್ವಂತಿಕೆಯನ್ನು ಅರಸುವ ಕೆಲಸ ಇತಿಹಾಸಕಾರರಿಂದ ಆಗುವಂಥದ್ದಲ್ಲ, ತಮ್ಮ ಸ್ವಾತಂತ್ರ್ಯವನ್ನು ರಾಷ್ಟ್ರೀಯತೆಯ ಭಾವ ಪ್ರವಾಹದಲ್ಲಿ ಎಸೆದು ತೇಲಿಬಿಟ್ಟಾಗ ಮಾತ್ರ ಇತಿಹಾಸಕಾರರು ಒಂದು ವಿಲಕ್ಷಣವಾದ ಸಮೀಕೃತ ನಿರ್ವಾಣವನ್ನು ಹೊಂದುತ್ತಾರೆ.

ನಮ್ಮ ಹಿರಿಮೆ ಯೋಗ್ಯತೆಗಳನ್ನು ನಾವು ಕಂಡುಕೊಳ್ಳಲೆಂದೇ ನಮಗೆ ಇತಿಹಾಸವೆಂಬ ಕನ್ನಡಿಯ ಅಗತ್ಯ ಎಂದಾದರೆ ಅದನ್ನು ಯಾರು ಸೃಷ್ಟಿಸಿದ್ದಾರೆ ಎಂಬ ಪ್ರಶ್ನೆಗಿಂತ ಅದನ್ನು ಹೇಗೆ ಉಪಯೋಗಿಸಬಹುದೆಂಬ ವಿಚಾರ ಹೆಚ್ಚು ಮುಖ್ಯವಾಗುತ್ತದೆ. ಉದಾಹರಣೆಗಾಗಿ, ಭಾರತದ ಇತಿಹಾಸದ ಸಂಶೋಧನೆ, ವಿವರಣೆಗಳನ್ನು ದೊಡ್ಡ ಪ್ರಮಾಣದಲ್ಲಿ ಆರಂಭಿಸಿದವರು ವಸಾಹತುಶಾಹಿ ಆಂಗ್ಲರು. ಅವುಗಳಲ್ಲಿ ಅಡಗಿದ್ದ ಸೈದ್ಧಾಂತಿಕ ನಿಲುವುಗಳು, ಜನಾಂಗೀಯ ಭಾವನೆಗಳು, ಆಳರಸರಿಗೆ ಸಹಜವಾದ ಹಮ್ಮು ಬಿಮ್ಮುಗಳನ್ನು ನಮ್ಮ ರಾಷ್ಟ್ರೀಯವಾದಿಗಳು ಸಹಜವಾಗಿಯೇ ಒಪ್ಪಲಿಲ್ಲ. ಯಥಾರ್ಥವಾಗಿ ಇದು ಎರಡು ವಿಧವಾದ, ಪರಸ್ಪರ ವಿರೋಧ ವಾದ ರಾಷ್ಟ್ರೀಯವಾದಗಳ ಹೊಡೆದಾಟ. ಭಾರತದಲ್ಲಿ ವಸಾಹತುಶಾಹಿ ಇತಿಹಾಸ ರಚನೆಯು ಬ್ರಿಟಿಶ್ ರಾಷ್ಟ್ರೀಯತೆಯ ಒಂದು ಅಭಿವ್ಯಕ್ತಿ. ಭಾರತೀಯರನ್ನು ಅದು ರಚಿಸಿದ ಬಗೆ ಬ್ರಿಟಿಷರು ತಮ್ಮ ಹಿರಿಮೆ, ಯೋಗ್ಯತೆಗಳನ್ನು ಜಾಹೀರುಗೊಳಿಸಿದ ಕ್ರಮವೇ. ಪೌರಾತ್ಯ ಸಂಸ್ಕೃತಿಯನ್ನು ಯುರೋಪಿನ ಮಾನದಂಡದಲ್ಲಿ ಅಳೆದು ಮೌಲೀಕರಿಸುವ ಅಧಿಕಾರವನ್ನು ವಸಾಹತುಶಾಹಿ ಬ್ರಿಟಿಶರು ನಿರಾಳವಾಗಿ ಚಲಾಯಿಸಿದರು. ಇದು ಅವರ ಹತೋಟಿಯಲ್ಲಿದ್ದ ವ್ಯವಸ್ಥೆಯ ಒಂದು ಕಾರ್ಯ ವೈಖರಿ. ಇದರ ಬಗ್ಗೆ ನಮ್ಮ ರಾಷ್ಟ್ರೀಯವಾದಿಗಳು ಮುಖ ಸಿಂಡರಿಸಿಕೊಂಡಿದ್ದರೂ, ಇದರ ಹಲವು ಅಂಶಗಳನ್ನು ಅವರು ತಮ್ಮದಾಗಿಸಿಕೊಂಡರು. ಪೌರಾತ್ಯ ವಿದ್ವಾಂಸರು ಇಲ್ಲಿನ ಇತಿಹಾಸ, ಸಂಸ್ಕೃತಿ, ಭಾಷೆ, ಸಾಹಿತ್ಯ, ಕಲೆ, ತತ್ವಶಾಸ್ತ್ರಗಳ ಕುರಿತು ಮಾಡಿದ ಸಂಶೋಧನೆ, ಹೇಳಿದ ಹೊಗಳು ಮಾತುಗಳನ್ನು ನಮ್ಮ ರಾಷ್ಟ್ರೀಯತೆಯ ಐತಿಹಾಸಿಕ ಬುನಾದಿಯಾಗಿ ಉಪಯೋಗಿಸಿಕೊಂಡರು. ಸರ್.ವಿಲಿಯಂ ಜೋನ್ಸ್, ವಿಲ್ಕನ್ಸ್, ಹಾಲ್ಹೆಡ್, ವಿಲ್ಸನ್, ಮ್ಯಾಕ್ಸ್‌ಮುಲ್ಲರ್ ಮೊದಲಾದ ಪೌರ್ವಾತ್ಯ ವಿದ್ವಾಂಸರಿಗೆ ಋಷಿ ಸ್ಥಾನ ದೊರಕಿತು. ವಸಾಹತುಶಾಹಿ ಸಿದ್ಧಾಂತಗಳಿಂದ ಅವರು ಯಾರೂ ಹೊರತಾಗಿರಲಿಲವಾದರೂ, ನಮ್ಮ ಇತಿಹಾಸ, ಸಂಸ್ಕೃತಿಯನ್ನು ಕೊಂಡಾಡಿದವರಾಗಿದ್ದರಿಂದ ಅವರು ವಂದನೀಯರಾದರು. ನಮ್ಮನ್ನಾಳಿದವರು ನೀಡಿದ ಮಾನ ಪತ್ರಕ್ಕೆ ಹೆಚ್ಚು ಬೆಲೆ ಬಂದಿತು. ಆಳುವವರಿಗಿಂತ ನಾವೇನು ಕಮ್ಮಿ ಎಂಬ ಧೈರ್ಯವೂ ಹುಟ್ಟಿತು. ಭಾರತದ ಶೇಕ್ಸ್‌ಪಿಯರ್, ಮ್ಯಾಕಿವೆಲ್ಲಿ, ನೆಪೋಲಿಯನ್, ಕಾನ್‌ಸ್ಟಂಟ್ಯೆನ್ ಅವರನ್ನು ಅಥವಾ ಇಲ್ಲಿನ ಆಗಸ್ಟಸ್ ಯುಗವನ್ನು ಗುರುತಿಸಿ ಕಥನಿಸಿದ ಆಂಗ್ಲ ವಿದ್ವಾಂಸರ ಕೆಲಸ ನಮ್ಮ ಪ್ರಾಚೀನ ಭಾರತದ ವೈಭವವನ್ನು ಅನುಮೋದಿಸಿತು.

ರಾಷ್ಟ್ರೀಯತೆಯು ನಿರ್ಮಿಸುವ ಇತಿಹಾಸ ಕಥನದಲ್ಲಿ ಶ್ರೇಷ್ಠತೆ, ಹೆಮ್ಮೆಯ ದ್ಯೋತಕಗಳು ನಾಯಕ ಸ್ಥಾನವನ್ನು ಪಡೆದು ಮೆರೆದರಷ್ಟೇ ಸಲದು. ಆ ಚಿತ್ರ ಪೂರ್ಣವಾಗುವುದು ಖಳನಾಯಕನ ಆಗಮನ ಅಟ್ಟಹಾಸಗಳಿಂದ ನಾಯಕನ ಸಾಮರ್ಥ್ಯವು ರಾರಾಜಿಸುವುದು ಪ್ರಬಲ ಖಳನಾಕನೊಡನೆ ಸೆಣಸಾಡಿ, ಆತನನ್ನು ಸದೆಬಡಿದಾಗ ಮಾತ್ರ. ‘ಸತ್ಯಮೇವ ಜಯತೇ’ ಎಂಬ ಆಶ್ವಾಸನೆಯ ಹಿಂದೆ ಅಡಗಿರುವ ಚಿತ್ರ ಸಮರಾಂಗಣ; ಸಂವೇದನೆ ಉದಾತ್ತೀಕರಿಸಿದ ಕದನ ಕುತೂಹಲ, ವಸಾಹತುಶಾಹಿ ಕಹಿ ಅನುಭವ ಮತ್ತು ನೆನಪುಗಳನ್ನು ಬಡಿದಟ್ಟುವ ತವಕ ಸಕ್ರಿಯ ರಾಷ್ಟ್ರೀಯತೆಗೆ ಸಹಜ. ಇದನ್ನು ಬೌದ್ಧಿಕ ಅಥವಾ ರಾಜಕೀಯ ನೆಲೆಯಲ್ಲಿ ಹೊರಗೆಡಹಬಹುದು. ಆದರೆ ಇದೇ ಆಶಯವು ಇತರ ರೂಪಗಳನ್ನು ಹೊಂದಲು ಸಾಧ್ಯ. ವೈರಿಯ ಆವಾಹನೆ ಮತ್ತು ರಾಕ್ಷಸೀಕರಣದ ಸಾಧ್ಯತೆ ಅಪಾರ. ಅದು ಸಾಮಾನ್ಯವಾಗಿ ತಾನೊಲ್ಲದ ನೀಚ ಚಿತ್ರಣವಾಗಿ ಪರಿಣಮಿಸುತ್ತದೆ. ಫಾಸಿಸ್ಟ್ ಸಿದ್ಧಾಂತ ಸರಣಿಯಲ್ಲಿ ತೀವ್ರ ರಾಷ್ಟ್ರೀಯತೆಯ ಪ್ರತಿಪಾದನೆಯಾಗುವುದು ತಮ್ಮ ಸ್ವಾಭಾವಿಕವಾದ, ಅನುವಂಶೀಯವಾದ ಅಥವಾ ದೈವದತ್ತವಾದ ಶ್ರೇಷ್ಠತೆಯನ್ನು ಡಂಗುರಿಸಿದಾಗ ಮಾತ್ರವಲ್ಲ. ತಮ್ಮ ಪರಿಚಯದೊಂದಿಗೆ ತಮ್ಮ ವೈರಿಯ ಪರಿಚಯವನ್ನು ನೀಡುವುದು ಅಷ್ಟೇ ಮುಖ್ಯವಾಗುತ್ತದೆ. ಆ ವೈರವು ಆಕಸ್ಮಿಕವಲ್ಲ, ಅದು ಸ್ವಾಭಾವಿಕ; ಸೃಷ್ಟಿ ಸಹಜ; ತಾರ್ಕಿಕವಾಗಿ ಒಪ್ಪಬೇಕಾದದ್ದು. ಆ ವೈರಿಯ ರಚನೆ, ಸ್ವಭಾವ, ನಡತೆಗಳೆಲ್ಲವೂ ತನ್ನಿಂದ ಭಿನ್ನ, ತಾನೊಪ್ಪಿದ ಆದರ್ಶ, ಮಾದರಿಗಳಿಗೆ ವಿರುದ್ಧ. ಆತನನ್ನು ನಿಗ್ರಹಿಸಿ, ನಿರ್ಮೂಲ ಮಾಡಿದಾಗ ಮಾತ್ರ ಲೋಕಕಲ್ಯಾಣ ಸಾಧ್ಯ. ಇದನ್ನು ಸೈದ್ಧಾಂತಿಕವಾಗಿ ಪ್ರತಿಪಾದಿಸುವಾಗ ವೈರಿಯ ಪ್ರತಿರೂಪವನ್ನು ದಹಿಸಿ ಕರತಾಡನವನ್ನು ಗಿಟ್ಟಿಸಿಕೊಳ್ಳಬಹುದು. ನಿಜ ಸಂದರ್ಭದಲ್ಲಿ ಪ್ರಾಯೋಗಿಕವಾಗಿ ಇಲ್ಲವೇ ಉತ್ಸವರೂಪದಲ್ಲಿ ವೈರಿಯನ್ನು ದೇಹಸಹಿತ ಸುಟ್ಟು ಕರಟಿಸಬಹುದು. ಹಿಟ್ಲರನು ತನ್ನ ಹೊಗೆಯಾಡುವ ಹೊತ್ತಗೆಯಲ್ಲಿ ಅನೇಕ ಯಹೂದಿಗಳನ್ನು ಸೈದ್ಧಾಂತಿಕವಾಗಿ ದಹಿಸಿದ್ದನು. ಅಧಿಕಾರಕ್ಕೆ ಬಂದ ನಂತರ ಆತ ನಡೆಸಿದ ಮಾರಣಹೋಮ ತಾನು ಹಾಕಿಕೊಂಡ ಕಾರ್ಯ ಸೂಚಿಯ ಪ್ರಾಮಾಣಿಕ ಅನುಷ್ಠಾನ ಮಾತ್ರ. ಇದು. ನಮಗೆಷ್ಟೇ ಕ್ರೂರ, ಪೈಶಾಚೀ ಕೃತ್ಯ ಎಂದು ಕಂಡರೂ, ಹಿಟ್ಲರ್ ಹಾಗೂ ಅವನ ಭಕ್ತ ಸಂಕುಲಕ್ಕೆ ಅಲ್ಲಿ ನಡೆದದ್ದು ಒಂದು ಶುಚೀಕರಣ ಕ್ರಿಯೆ. ಕೀಟನಾಶಕ ಪ್ರಯೋಗದಲ್ಲಿ ಅಹಿಂಸೆಯ ಅಪಸ್ವರ ಏಕೆ? ಜರ್ಮನ್ ರಾಷ್ಟ್ರದ ಆತಂಕರಹಿತ ಇರುವಿಕೆಗೆ, ಶುದ್ಧ ಆರ್ಯ ಸಂಸ್ಕೃತಿಯ ಉಳಿವಿಗೆ, ಶ್ರೇಷ್ಠ ಮಾನವ ತಳಿಯ ಅಭಿವೃದ್ಧಿಗೆ ತೊಡಕಾದ ಎಲ್ಲಾ ನೀಚ ಶಕ್ತಿಗಳನ್ನು ಕಿತ್ತೆಸೆಯುವುದು ಧರ್ಮ ಸಮ್ಮತ ಮಾತ್ರವಲ್ಲ, ಪರಮ ಕರ್ತವ್ಯ ಕೂಡ. ಈ ಘನಕಾರ್ಯದ ನೈತಿಕ ನೆಲೆ ಆರ್ಯೇತರ ಜನಾಂಗಗಳ ನಿಕೃಷ್ಟತೆ, ಇದನ್ನು ನಾಜೀ ಪಕ್ಷ – ಸರಕಾರದ ಅಗಾಧ ಪ್ರಚಾರ ವ್ಯವಸ್ಥೆಯು ಸಕಲ ವಿಧದಲ್ಲಿಯೂ ಪ್ರತಿಪಾದಿಸಲು ಶ್ರಮಿಸಿತು. ಇದಕ್ಕೆ ಇತಿಹಾಸಕಾರರನ್ನು, ಪುರಾತತ್ವ ಶಾಸ್ತ್ರಜ್ಞರನ್ನು, ಸಮಾಜ ಶಾಸ್ತ್ರಜ್ಞರನ್ನು, ವಿಜ್ಞಾನಿಗಳನ್ನು ಮತ್ತು ಹಲವು ಬಗೆಯ ಚಿಂತಕರನ್ನು ತನ್ನ ಕಾರ್ಯಪಡೆಗೆ ಸೇರಿಸಿಕೊಂಡಿತು. ನಿಜವಾಗಿಯೂ ಮನಸ್ಸು ಒಪ್ಪಿಯೋ, ಅಧಿಕಾರದ ವಿಕಟೋನ್ಮಾದದ ಒತ್ತಡಕ್ಕೆ ಮಣಿದೋ, ಸ್ವಂತ ಲಾಭದ ಲೆಕ್ಕಾಚಾರದಿಂದಲೋ ಅಥವಾ ವಿಕೃತ ಸಿದ್ಧಾಂತದ ವಶೀಕರಣದಿಂದಲೋ, ಇವರೆಲ್ಲಾ ಒಂದು ವಿಧವಾದ ಸಾಮೂಹಿಕ ಜೀತ ಪದ್ಧತಿಯ ಚೌಕಟ್ಟಿನಲ್ಲಿ ಹಿಟ್ಲರ್ ಕೇಂದ್ರಿತ ಜರ್ಮನ್ ಕಡು ರಾಷ್ಟ್ರೀಯವಾದ ಮತ್ತು ಅದರ ಅಂಗವಾಗಿ ಯಹೂದಿ ಪೈಶಾಚೀಕರಣವನ್ನು ಪ್ರತಿಪಾದಿಸಿದರು. ಬಹುತೇಕ ಜರ್ಮನರೂ ಈ ಸಂಮೋಹನಾಸ್ತ್ರಕ್ಕೆ ಮಣಿದರು. ಇದನ್ನು ಒಪ್ಪದವರಿಗೆ ಹಾಗೂ ಪ್ರತಿಭಟಿಸಿದವರಿಗೆ ನೀಡಿದ ಆಯ್ಕೆ ದೇಶ ತ್ಯಾಗ ಅಥವಾ ದೇಹ ತ್ಯಾಗ. ದೇಶಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧರಾಗಿರಬೇಕಲ್ಲವೇ? ಅಂತಹ ಸಂದರ್ಭಗಳನ್ನು ಹಿಟ್ಲರನು ತನ್ನ ಎಲ್ಲಾ ನಾಜೀ ಅನುಯಾಯಿಗಳಿಗೂ, ವೈರಿಗಳಿಗೂ ನೀಡಿದ್ದನು. ಬರ್ಲಿನ್ ಒಲಂಪಿಕ್ಸಿನಲ್ಲಿ ಒಬ್ಬ ಅಮೆರಿಕನ್ ಕರಿಯ ಜೆಸ್ಸಿ ಒವೆನ್ಸ್ ಹಿರಿಯ ಪರಾಕ್ರಮವನ್ನು ತೋರಿ ವಿಶ್ವದಾಖಲೆಯನ್ನು ಮಾಡಿ, ಚಿನ್ನದ ಪದಕಗಳನ್ನು ದೋಚಿದಾಗ ಹಿಟ್ಲರನ ಮುಖ ಕಪ್ಪಿಟ್ಟಿತು. ಅದನ್ನು ತಗ್ಗಿಸಿ, ಕ್ರೀಡಾಂಗಣದಿಂದ ಗುಡುಗುಡಿಸಿ ಮರೆಯಾದಾಗ ಆತನ ಆರ್ಯ ಗರಿಮೆಯ ಕೀರಲುವಾದ ನಿದರ್ಶನಾತ್ಮಕವಾಗಿ ಸೊರಗಿತು. ಆದರೆ ಕಟ್ಟಾ ನಾಜೀಗಳು ಮಾತ್ರ ತಮ್ಮ ಮೊಂಡು ನಂಬಿಕೆಯನ್ನು ತ್ಯಜಿಸಲಿಲ್ಲ.

ಫಾಸಿಸ್ಟ್ ಸಿದ್ಧಾಂತಗಳ ವಿಕಟಾಟ್ಟಹಾಸ ಕಡು ರಾಷ್ಟ್ರೀಯತೆಯ ಒಂದು ಅಮೋಘ ದುರಂತ. ಅದು ನಡೆದು ಅರ್ಧ ಶತಮಾನ ಕಳೆದರೂ ಆ ದುಃಸ್ವಪ್ನದಿಂದ ಇನ್ನೂ ಜನ ಬೆಚ್ಚಿ ಬೀಳುತ್ತಿದ್ದಾರೆ. ಆದರೆ ರಾಷ್ಟ್ರೀಯತೆಯ ಜ್ವರ ಸಾಮಾನ್ಯ ಅನುಭವ. ದೇಹಕ್ಕಿದ್ದಂತೆಯೇ ರಾಷ್ಟ್ರೀಯತೆಗೂ ಒಂದು ಆರೋಗ್ಯಕರವಾದ, ವೈದ್ಯ ಸಮ್ಮತವಾದ ಉಷ್ಣತೆಯಿದೆ. ಅದು ಕೆಲವೊಮ್ಮೆ ಏರಿ ಜ್ವರವಾಗುತ್ತದೆ. ಅದು ತಾನಾಗಿಯೋ, ತುಸು ಶುಶ್ರೂಷೆಯಿಂದಲೋ ಶಮನವಾಗುತ್ತದೆ. ಇದರಲ್ಲಿ ಹೆಚ್ಚು ಗಾಬರಿಗೊಳ್ಳುವ ಪ್ರಮೇಯವೇನಿಲ್ಲ. ಆದರೆ ಆತಂಕವಾಗುವುದು ಜ್ವರ ತಲೆಗೇರಿ ಉನ್ಮಾದ ಸ್ಥಿತಿ ಬಂದಾಗ. ಕೆಲವು ರಾಷ್ಟ್ರಗಳಿಗೆ ಆಗಾಗ ಈ ಜ್ವರ ಬರುವುದುಂಟು. ಅವುಗಳು ತಮ್ಮ ದೇಹದಲ್ಲಿ ಮಲೇರಿಯಾ ಗಡ್ಡೆ ಹೊತ್ತು ಕೊಂಡಿವೆಯೇ ಎಂಬ ಸಂಶಯ ಹುಟ್ಟುತ್ತದೆ. ಆದರೆ ಇದು ಕಾಲ, ಸನ್ನಿವೇಶಗಳ ಅಧೀನ. ಇತಿಹಾಸದ ಅನುಭವ, ಅದರ ಆಯ್ದ ನೆನಪುಗಳು, ರಾಜಕೀಯ ಕಾರ್ಯಾಚರಣೆ ನೆರೆ ದೇಶಗಳೊಡನೆ ಸಂಬಂಧ ಇತ್ಯಾದಿ ಹಲವು ಅಂಶಗಳು ಇದರಲ್ಲಿ ಸೇರಿಹೋಗುತ್ತವೆ. ಇದನ್ನು ಭಾಷೆ, ಸಂಸ್ಕೃತಿ, ಧರ್ಮಾಭಿಮಾನಗಳ ಚೌಕಟ್ಟಿನಲ್ಲಿ ವ್ಯಾಖ್ಯಾನಿಸುತ್ತಾರೆ. ಆದರೆ ಅಲ್ಲಿ ಬತ್ತಲಾಗಿ ತೋರುವ ಪ್ರವೃತ್ತಿ ‘ನಮ್ಮ’ದೆಂಬುದರ ಬಗ್ಗೆ ಕಟ್ಟಾಭಿಮಾನ, ಆರಾಧನಾ ಮನೋಭಾವ; ನಮ್ಮದಲ್ಲದವುಗಳ ಬಗ್ಗೆ ಅಸಹನೆ, ತೀವ್ರಖಂಡನೆ, ನಿರಾಕರಣೆ, ಇದು ಸ್ವಂತಿಕೆಯ ಅಭಿಮಾನವನ್ನು ಮೀರಿ ನುಗ್ಗುವ, ಹೂಂಕರಿಸಿ ಹಾಯುವ ಭಾವ. ತನ್ನ ಶ್ರೇಷ್ಠತೆಯೊಂದಿಗೆ ಶತ್ರು ಚಿತ್ರಣವನ್ನು ಮಾಡಿ ಅದರೊಡನೆ ಅವುಡುಗಚ್ಚಿ ಸೆಣಸುವ ಗಾಥೆಯನ್ನು ರಚಿಸುವುದು ತೀವ್ರ ರಾಷ್ಟ್ರೀಯವಾದದ ಒಂದು ಸ್ವರೂಪ. ಭಾರತದ ರಾಷ್ಟ್ರೀಯತೆಯು ರೂಪುಗೊಂಡದ್ದು ವಸಾಹತುಶಾಹಿ ಆಳ್ವಿಕೆಯ ಸಂದರ್ಭದಲ್ಲಿ. ಆಗ ಕಂಡುಕೊಂಡ ನಮ್ಮ ಇತಿಹಾಸದ ಪ್ರಾಚೀನತೆ, ಶ್ರೇಷ್ಠತೆಗಳೊಡನೆ ಪರಕೀಯತೆಯ ಅನಿಷ್ಟತೆಯೂ ನಮಗೆ ಮನದಟ್ಟಾಯಿತು. ಆಂಗ್ಲ ಇತಿಹಾಸಕಾರರು ಭಾರತೀಯ ಸಂಸ್ಕೃತಿಯ ಬಹು ದೊಡ್ಡಪಾಲು ಪರಕೀಯರ ಕೊಡುಗೆ ಎಂದು ತಿಳಿಸುವ ಪ್ರಯತ್ನ ಮಾಡಿದ್ದು ವಸಾಹತು ಶಾಹಿಯನ್ನು ಐತಿಹಾಸಿಕವಾಗಿ ಸಮರ್ಥಿಸುವ ಉದ್ದೇಶದಿಂದ. ಇತಿಹಾಸ ಪ್ರಜ್ಞೆ ಇಲ್ಲದ ಜನ ಅದರ ಬಗ್ಗೆ ತಿಳುವಳಿಕೆ ಪಡೆದ್ದು ಹೊರಗಿನವರ ಸಂಪರ್ಕದಿಂದ – ಎಂಬ ಪ್ರತಿಪಾದನೆ ಪರಕೀಯರ ಆಡಳಿತದ ಪರಕೀಯತೆಯ ಕಹಿಯನ್ನು ಕಡಿಮೆಗೊಳಿಸುವ ಯತ್ನ. ಆದರೆ ವಸಾಹತುಶಾಹಿ ಇತಿಹಾಸ ಕಥನದಲ್ಲಿ ಮುಸ್ಲಿಮರ ಧಾಳಿ-ಆಳ್ವಿಕೆಗಳನ್ನು ತುಸು ಹೆಚ್ಚಾಗಿಯೇ ರಾಕ್ಷಸೀಕರಿಸಲಾಗಿದೆ. ಮುಸ್ಲಿಮ್ ದಾಳಿಕೋರರ ಕ್ರೌರ್ಯ, ರಕ್ತ ಪಿಪಾಸೆ, ಮತಾಂಧತೆ, ವಿಷಯ ಲಂಪಟತೆ, ನಿರ್ಲಜ್ಜ ಮಹತ್ವಾಕಾಂಕ್ಷೆ, ನಿರ್ಮೂಲನಾ ಸ್ವಭಾವಗಳನ್ನು ಬಹಳ ಉತ್ಸುಕತೆಯಿಂದ ವಿವರಿಸಿದ್ದಾರೆ, ಭಾರತದಲ್ಲಿ ಮುಸ್ಲಿಮ್ ಆಳ್ವಿಕೆಯನ್ನು ಬಹುತೇಕ ಒಂದು ‘ಅಂಧಕಾರ ಯುಗ’ವಾಗಿ ಚಿತ್ರಿಸಿದ್ದಾರೆ. ಈ ಇತಿಹಾಸಕಾರರು ಶುದ್ಧ ಸುಳ್ಳನ್ನು ಬರೆದಿದ್ದಾರೆ ಎಂದಲ್ಲ. ಕೆಲವೊಂದು ಸತ್ಯಗಳನ್ನು ಉಪೇಕ್ಷಿಸಿ, ಇನ್ನು ಕೆಲವನ್ನು ಉತ್ಪ್ರೇಕ್ಷಿಸಿ, ಕಥೆಯನ್ನು ವಿಕಟೀಕರಿಸುವ ಶಕ್ತಿ ಇವರಿಗೆ ಇತ್ತು; ಅದನ್ನು ಅವರು ಸಮರ್ಪಕವಾಗಿ ಉಪಯೋಗಿಸಿದರು. ಆದರೆ ಇದಕ್ಕೊಂದು ಹಿನ್ನೆಲೆ ಇದೆ. ಕ್ರೈಸ್ತ ಯುರೋಪು ಮೊದಲಿನಿಂದಲೇ ಇಸ್ಲಾಮಿನ ಧಾರ್ಮಿಕ, ರಾಜಕೀಯ ಅಭಿವೃದ್ಧಿಯನ್ನು ಶತ್ರು ಸ್ತರದಲ್ಲಿ ಕಂಡಿತ್ತು. ಇಸ್ಲಾಮ್ ಅಂದರೆ ಒಂದು ಅಪಾಯ, ಅದನ್ನು ನಿಗ್ರಹಿಸುವುದು ಅಗತ್ಯ ಮತ್ತು ಪುಣ್ಯ ಕೆಲಸ ಎಂಬ ಭಾವನೆ ಯುರೋಪಿನಲ್ಲಿ ಬೇರೂರಿತ್ತು. ಚಾರ್ಲ್ಸ್ ಮಾರ್ಟೆಲ್, ಪೋಪ್ ಎರಡನೆಯ ಅರ್ಬನ್, ಪ್ಯಾಲೆಸ್ಟೀನಿನ ಕ್ರೈಸ್ತ ಪುಣ್ಯಸ್ಥಳಗಳನ್ನು ಮುಸ್ಲಿಮರ ಹಿಡಿತದಿಂದ ತಪ್ಪಿಸಲು ೧೧, ೧೨, ೧೩ನೆಯ ಶತಮಾನಗಳಲ್ಲಿ ಧರ್ಮದ ಹೆಸರಿನಲ್ಲಿ ಕೈಕೊಂಡ ದಂಡಯಾತ್ರೆಗಳು, ಸ್ಪೇನಿನಲ್ಲಿ ‘ಮೂರ್’ಗಳ ಬಗ್ಗೆ ಇದ್ದ ಆತಂಕ, ಯುರೋಪಿನಲ್ಲಿ ತುರ್ಕಿ ಸಾಮ್ರಾಜ್ಯದ ಒಲ್ಲದ ಸ್ಥಾನ, ಇವೆಲ್ಲವೂ ಇಸ್ಲಾಮ್ ಧರ್ಮ, ಸಂಸ್ಕೃತಿಗಳ ಬಗ್ಗೆ ಯುರೋಪಿನಲ್ಲಿದ್ದ ಕ್ರೈಸ್ತ ದ್ವೇಷಪೂರಿತ ಶತ್ರು ಭಾವನೆಯ ಪ್ರತೀಕಗಳು. ಆಂಗ್ಲ ಇತಿಹಾಸಕಾರರು ಈ ಪೂರ್ವಗ್ರಹದ ಹೊರೆಯನ್ನು ಹೊತ್ತೇ ಇಲ್ಲಿಗೆ ಬಂದವರು. ಅದಲ್ಲದೆ ವಸಾಹತುಶಾಹಿ ಅಧಿಕಾರ, ಆಳ್ವಿಕೆಯ ನೈತಿಕ ಸಮರ್ಥನೆಗೂ ಈ ಚಿತ್ರಣವನ್ನು ಬಳಸಿದರು. ಬ್ರಿಟಿಶರ ಆಳ್ವಿಕೆಯು ಭಾರತವನ್ನು ಅರಾಜಕತೆಯ ಅಂಧಕಾರದಿಂದ ಆಧುನಿಕ ನಾಗರಿಕತೆ, ಶಿಸ್ತುಬದ್ಧ ರಾಜಕೀಯತೆ ಹಾಗೂ ಅಭಿವೃದ್ಧಿಯತ್ತ ಕೊಂಡೊಯ್ಯುವ ದೈವೀ ವ್ಯವಸ್ಥೆ ಎಂದು ಪರಿಭಾವಿಸಿದಾಗ ಅದು ದೇಶವನ್ನು ಯಾವ ದುರ್ವ್ಯವಸ್ಥೆಯಿಂದ ಪಾರು ಮಾಡಿತು ಎಂಬ ನಿರೂಪಣೆ ಬಹಳ ಮುಖ್ಯವಾಗುತ್ತದೆ. ಸುಲ್ತಾನ್ ಬಾದಶಹರ ನಿರಂಕುಶ ಆಡಳಿತ, ಕ್ರೌರ್ಯಪೂರಿತ ಧರ್ಮಾಂಧತೆ ಹಿಂದೂಗಳು ಎದುರಿಸಬೇಕಾಗಿದ್ದ ಭೀತಿ, ಅಸಹಾಯಕತೆಗಳನ್ನು ಇತಿಹಾಸದ ಪುಟಗಳಲ್ಲಿ ತುಂಬಿದಷ್ಟೂ ಆ ಅಂಧಕಾರ ಯುಗದಿಂದ ಜನರನ್ನು ವಿಮೋಚನೆಗೊಳಿಸಿದ ಬ್ರಿಟಿಶ್ ಆಡಳಿತದ ನೈತಿಕ ಹಿರಿಮೆಯನ್ನು ಜಾಹೀರುಗೊಳಿಸಿದ ಹಾಗಾಯಿತು. ಮುಸ್ಲಿಮ್ ಆಡಳಿತವನ್ನು ಪರಕೀಯರ ಆಡಳಿತವೆಂದು ಮಾತ್ರ ತಿಳಿಸಿದರೆ ತಮ್ಮ ಅಧಿಕಾರವನ್ನು ಪೂರ್ಣವಾಗಿ ಸಮರ್ಥಿಸಿಕೊಳ್ಳಲು ತುಸು ಮುಜುಗರವಾಗಬಹುದು. ಅದಕ್ಕಾಗಿಯೇ ಮುಸ್ಲಿಮ್ ದಾಳಿ, ಆಳ್ವಿಕೆಯ ಮೂಲತಃ ಒಂದು ಪ್ರತ್ಯೇಕ, ವಿಕೃತವಾದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಎಂದು ವಿವರಿಸಿದರು.

ಒಂದೊಂದು ವಿಧವಾದ ಐತಿಹಾಸಿಕ ಚಿತ್ರಣಗಳು ಎಷ್ಟು ಸತ್ಯ ಎಷ್ಟು ಮಿಥ್ಯ ಎಂಬ ಪ್ರಶ್ನೆಗೆ ಸರ್ವಸಮ್ಮತವಾದ ಉತ್ತರ ಸಿಗುವುದು ಕಷ್ಟ. ನಾವೆಲ್ಲರೂ ಸತ್ಯಾನ್ವೇಷಿಗಳೇ. ಒಂದು ನಿರ್ದಿಷ್ಟವಾದ, ಸಂಶಯಾತೀತವಾದ ಸತ್ಯವೊಂದಿದ್ದಲ್ಲಿ ಇಷ್ಟು ಮಂದಿ ಎಸೆದ ಬಲೆಯೊಳಗೆ ಅದು ಹೇಗಾದರೂ ಬೀಳಬೇಕಿತ್ತು. ನಾನು ಹಿಡಿದದ್ದು ಸತ್ಯ ಎಂದು ನಾನು ನಂಬಿದರೂ ಅದನ್ನು ಇನ್ನೊಬ್ಬನು ಒಪ್ಪಲೊಲ್ಲ. ವೈಯಕ್ತಿಕವಾಗಿ ಸಾಧನೆಯ ಸಮಾಧಾನವನ್ನು ಹೊಂದಿದರೂ ಬಲೆ ಬೀಸುವ ಕಾರ್ಯ ನಿಲ್ಲುವುದೇ ಇಲ್ಲ. ಯಾವುದು, ಎಷ್ಟು ಸತ್ಯ ಎಂಬ ಜಿಜ್ಞಾಸೆ ಇತಿಹಾಸದಲ್ಲಿ ಮುಗಿಯದ ವಿಷಯ. ಅದನ್ನು ಇತ್ಯರ್ಥ ಮಾಡುವ ಬದಲು ಇತಿಹಾಸದ ಒಂದು ಚಿತ್ರಣ ಯಾವ ಕಾರ್ಯವನ್ನು ಹೇಗೆ ಮಾಡುತ್ತದೆ ಎಂದು ತಿಳಿಯುವುದು ಹೆಚ್ಚು ಉಪಯುಕ್ತ. ಭಾರತದ ಇತಿಹಾಸದಲ್ಲಿ ಮುಸ್ಲಿಮ್ ಆಡಳಿತದ ಮೌಲೀಕರಣವನ್ನು ವಸಾಹತುಶಾಹಿ ಬರಹಗಾರರು ಮಾಡಿದ್ದು ರಾಜಕೀಯ ಒತ್ತಡಗಳಿಗೆ ಸ್ಪಂದಿಸಿಯೆ. ಅವರು ಇತಿಹಾಸವನ್ನು ರಚಿಸಿದ್ದು ಮತ್ತು ಇತಿಹಾಸವು ಅವರನ್ನು ರಚಿಸಿದ್ದು, ಇವೆರಡೂ ನಿಜವೇ. ಆದರೆ ಅವರು ಸೃಷ್ಟಿಸಿದ ಕೆಲವು ಇತಿಹಾಸದ ಪಡಿಯಚ್ಚುಗಳು ಸಮಾಜದ ಜೋಳಿಗೆಗೆ ಬಿದ್ದವು. ಅವುಗಳನ್ನು ಬೇರೆ ಬೇರೆ ರೀತಿಯಲ್ಲಿ ಉಪಯೋಗಿಸಲಾಯಿತು. ಭಾರತದ ಆಧುನಿಕ ರಾಷ್ಟ್ರೀಯತೆಯೊಡನೆ ಕೆಲವೊಮ್ಮೆ ಪೂರಕವಾಗಿ, ಕೆಲವೊಮ್ಮೆ ವಿರೋಧವಾಗಿ, ಹೆಚ್ಚಾಗಿ ಬಯ್ಯಾಳಿಯಾಗಿ ಬೆಳೆದ ಹಿಂದೂ ರಾಷ್ಟ್ರೀಯತೆಯು ತನ್ನನ್ನು ತನ್ನ ಶ್ರೇಷ್ಠತೆಯಿಂದ ಮಾತ್ರ ಗುರುತಿಸಿಕೊಳ್ಳಲಿಲ್ಲ. ಐತಿಹಾಸಿಕವಾಗಿ ಇಸ್ಲಾಮಿಗೆ ಶತ್ರು ಸ್ಥಾನವನ್ನಿತ್ತು ಅದರೊಡನೆ ನಡೆಯಿತೆನ್ನಲಾದ ದೀರ್ಘ, ಮುಗಿಯದ ಯುದ್ಧವನ್ನು ಚಿತ್ರಿಸಲಾಯಿತು. ವಸಾಹತುಶಾಹಿ ಇತಿಹಾಸ ರಚನೆಯಲ್ಲಿ ಮೂಡಿಬಂದ ವಿಕಟ ಚಿತ್ರಗಳನ್ನು ಸಂಪೂರ್ಣವಾಗಿ ಸ್ವೀಕರಿಸಿ, ಅವುಗಳನ್ನು ತಮ್ಮ ಸೈದ್ಧಾಂತಿಕ ಚೌಕಟ್ಟಿಗೆ ಅಳವಡಿಸಲಾಯಿತು. ಹಿಂದೂ-ಮುಸ್ಲಿಮ್ ವೈರುಧ್ಯವು ಪ್ರತ್ಯರ್ಥಕ ಶಬ್ದಕೋಶಕ್ಕೆ ಸೇರ್ಪಡೆಗೊಂಡಿತು; ಒಬ್ಬರು ವಿಗ್ರಹ ಪೂಜಕರಾದರೆ ಇನ್ನೊಬ್ಬರು ವಿಗ್ರಹ ಭಂಜಕರು ಒಬ್ಬರು; ಪೂರ್ವಾಭಿಮುಖವಾಗಿ ಪ್ರಾರ್ಥಿಸಿದರೆ ಇನ್ನೊಬ್ಬರು ಪಶ್ಚಿಮಾಭಿಮುಖವಾಗಿ ದೇವರನ್ನು ಕೂಗುವವರು; ಒಬ್ಬರು ಗೋರಕ್ಷಕರಾದರೆ, ಇನ್ನೊಬ್ಬರು ಗೋಭಕ್ಷಕರು; ಒಬ್ಬರು ಹಲವು ದೇವರನ್ನು ಓಲೈಸುವವರಾದರೆ ಇನ್ನೊಬ್ಬರು ಕಟ್ಟಾ ಏಕೀಶ್ವರವಾದಿಗಳು – ಇತ್ಯಾದಿ, ಇತ್ಯಾದಿ. ಈ ಸೃಷ್ಟಿ ಸಹಜವಾದುದೆಂಬ ವೈರುಧ್ಯ ಹಿಂದೂ ರಾಷ್ಟ್ರೀಯ ಪ್ರಜ್ಞೆಯೊಳಗೆ ಸಂಪೂರ್ಣವಾಗಿ ಸೇರಿ ಹೋಯಿತು. ಈ ನಿರೂಪಣೆಯನ್ನು ಎಲ್ಲಾ ರೀತಿಯಲ್ಲೂ ಅನುಮೋದಿಸಿದ್ದು, ಮುಸ್ಲಿಮ್ ರಾಷ್ಟ್ರೀಯತೆ. ಹಿಂದೂ ಮುಸ್ಲಿಮರು ಕೂಡಿಬಾಳಲು ಅಸಾಧ್ಯ ಎಂಬುದು ಐತಿಹಾಸಿಕ ಸತ್ಯ ಎಂದು ಎರಡು ಕಡು ರಾಷ್ಟ್ರೀಯತೆಯ ಪ್ರತಿಪಾದಕರೂ ಒಪ್ಪಿದ್ದರು. ಸೈದ್ಧಾಂತಿಕವಾಗಿ ಈ ಇಬ್ಬರೂ ಪರಸ್ಪರ ಆಶ್ರಯಿಸಿಕೊಂಡ ಶತ್ರುಗಳು ಎಂದರೆ ತಪ್ಪಾಗಲಿಕ್ಕಿಲ್ಲ. ಪ್ರತ್ಯೇಕವಾದವು ದೇಶದ ವಿಭಜನೆಯತ್ತ ಹೋದಾಗ ಮುಸ್ಲಿಮ್ ರಾಷ್ಟ್ರೀಯವಾದ ಇನ್ನೊಂದು ರಾಜಕೀಯ ಘಟ್ಟವನ್ನೂ ತಲುಪಿತು. ದೇಶ ಭಂಜಕರಿಗೆ ದೇಶ ದ್ರೋಹದ ಅಪರಾಧವನ್ನು ಹೇರುವುದು ಅಷ್ಟೇನೂ ಕಷ್ಟವಾಗಲಿಲ್ಲ.

ಇವೆಲ್ಲಾ ಸಿದ್ಧಾಂತ ರಾದ್ಧಾಂತಗಳ ಹಿಂದೆ ಇತಿಹಾಸದ ಸಾಕ್ಷಿಗಳಿವೆ. ವಾದಿ-ಪ್ರತಿವಾದಿಗಳಿಬ್ಬರಿಗೂ ಇತಿಹಾಸ ನಿರ್ದಿಷ್ಟ ಸಾಕ್ಷಿಯನ್ನು ಒದಗಿಸುತ್ತದೆ. ಸತ್ಯವನ್ನೇ ಹೇಳುವ, ಪೂರ್ತಿ ಸತ್ಯವನ್ನು ಹೇಳುವ ಸತ್ಯವನ್ನು ಹೊರತು ಬೇರೇನನ್ನೂ ಹೇಳದ ಇತಿಹಾಸಕಾರ ಎರಡೂ ಪಕ್ಷಗಳ ಪ್ರಾಮಾಣಿಕ ಬೆಂಬಲಿನಾಗಬಲ್ಲ. ಈ ಸ್ಥಿತಿಯಲ್ಲಿ ಕೆಲವರು ಇತಿಹಾಸ ದೇವಿಯ ಪಾತಿವ್ರತ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಆಕೆ ರಾಜಕೀಯವಾಗಿ ಹೆಚ್ಚು ಪ್ರಬಲರಾಗಿರುವವರಿಗೆ ಕರೆವೆಣ್ಣಾಗಿ ಸಿಗಬಲ್ಲಳು ಎಂದಿದ್ದಾರೆ. ಇತಿಹಾಸದಲ್ಲಿ ತಪ್ಪೇನು, ಸರಿಯೇನು? ನನಗೆ ಪಥ್ಯವಾದದ್ದು, ಉಪಯುಕ್ತವಾದದ್ದೇ ಸರಿ ಎಂಬ ವಾದವನ್ನು ಕೇಳಿಯೇ ಫ್ರೆಂಚ್ ಚಿಂತಕ ಅರ್ನೆಸ್ಟ್ ರೆನಾ ‘ಇತಿಹಾಸವನ್ನು ತಪ್ಪಾಗಿ ಬರೆಯುವುದೇ ರಾಷ್ಟ್ರೀಯತೆಯ ವಿಶೇಷಾಧಿಕಾರ!’ ಎಂದು ಕಟಕಿಯಾಡಿದ್ದು. ಇದೆಲ್ಲಾ ಚಿಂತಕರ ಸಮಸ್ಯೆ. ಕಂಡಕಂಡ ವಿಷಯಗಳ ಬಗ್ಗೆ ಚಿಂತಿಸದ್ದರೆ ಅವರಿಗೆ ಆ ಹೆಸರಾದರೂ ಏಕೆ? ರಾಷ್ಟ್ರೀಯತೆಯು ಯಾವಾಗಲೂ ಅಪರಂಜಿ ಸತ್ಯದ ಗಟ್ಟಿಗಳನ್ನೇ ಸೃಷ್ಟಿಸುತ್ತದೆ! ಇದರ ಕುರಿತು ಸಂಶಯಪಡುವವರು ನಿಜವಾಗಿಯೂ ರಾಷ್ಟ್ರೀಯವಾದಿಗಳಾದುವುದು ಸಾಧ್ಯವೇ ಇಲ್ಲ.

ದೇವತೆಗಳು ರಾಕ್ಷಸರಾಗುವುದು

ನಮ್ಮ ಪುರಾಣ ಕಥೆಗಳ ಪ್ರಕಾರ ದೇವತೆಗಳು ಮತ್ತು ರಾಕ್ಷಸರು ಒಂದೇ ವೀರ್ಯದಿಂದ ಜನಿಸಿದವರಾದರೂ ಅವರು ಪರಸ್ಪರ ವಿರುದ್ಧವಾದ ಗುಣಗಳನ್ನು ಪ್ರತಿನಿಧಿಸುವವರು. ಕಥೆಗಳು ಹೆಚ್ಚಾದಾಗ ಚಿತ್ರಣವು ತನ್ನ ಸ್ಪಷ್ಟತೆಯನ್ನು ಕಳೆದುಕೊಳ್ಳುವುದುಂಟು. ದೇವೇಂದ್ರನಲ್ಲಿ ಆಗಾಗ ಕೊನರುವ ನೀಚಬುದ್ಧ, ರಾಕ್ಷಸೇಂದ್ರರ ಉದಾತ್ತತೆಗಳನ್ನು ತೋರುವ ಪುರಾಣ ಕಥೆಗಳು ಸಂಕೀರ್ಣ ತತ್ವಗಳನ್ನು ಹೊರಗೆಡಹುವುದೆಂದು ತಿಳಿದರೂ ವಸ್ತುತಃ ಈ ಕಥೆಗಳು ಹೇಳಬಯಸುವುದು ದೇವದಾನವರ ವೈರುಧ್ಯವನ್ನು. ಕೆಲವೊಮ್ಮೆ ಪುರಾಣ ಕಥೆಗಳಲ್ಲಿ ದೇವತೆಗಳು ಶಾಪಗ್ರಸ್ತರಾಗಿ ರಾಕ್ಷಸ ರೂಪವನ್ನು ಪಡೆಯುವುದುಂಟು. ಹಾಗೆಯೇ ದಾನವರು ವರ ಪ್ರಭಾವದಿಂದಲೋ, ಪುಣ್ಯ ವಿಶೇಷದಿಂದಲೋ, ದೇವತೆಗಳ ಸಮಾನವಾದ ಸ್ಥಾನವನ್ನು ಗಳಿಸುವುದುಂಟು. ಆದರೆ ಈ ಬದಲಾವಣೆ ಹಂಗಾಮಿ ವ್ಯವಸ್ಥೆ ಮಾತ್ರ. ಇತಿಹಾಸದ ಪುಟಗಳನ್ನು ಆಲಂಕರಿಸುವ ವ್ಯಕ್ತಿಗಳಿಗೆ ಎಷ್ಟೋ ಬಾರಿ ಸಮಾಜದ, ರಾಜಕೀಯದ ಪರವಾನಿಗೆ ಅವಶ್ಯ ಎಂಬುದನ್ನು ಮರೆತು ಬಿಡುತ್ತೇವೆ. ಇತಿಹಾಸದ ಪ್ರತಿಮಾಗೃಹದಲ್ಲಿ ಸ್ಥಾನವನ್ನು ಗಳಿಸುವುದು ತಮ್ಮ ಅತಿಶಯವಾದ ಯೋಗ್ಯತೆ, ಸಾಧನೆಗಳಿಂದ ಮಾತ್ರವಲ್ಲ. ಅದು ಕೆಲವು ರಾಜಕೀಯ ತೀರ್ಮಾನಗಳನ್ನು ಅವಲಂಭಿಸಿದೆ. ಈ ತೀರ್ಮಾನಗಳು ಸಮಾಜದ ಅನುಮೋದನೆಯನ್ನು ಸ್ಪಷ್ಟಿಸುತ್ತವೆ. ಮಹತ್ತರವಾದ ಕೆಲಸವನ್ನು ಮಾಡಿ ಶಾಶ್ವತ ಕೀರ್ತಿಯನ್ನು ಪಡೆಯುವುದು, ಇತಿಹಾಸ ಪುರುಷನಾಗುವುದು, ಅಮರತ್ವವನ್ನು ಹೊಂದುವುದು ಮೊದಲಾದ ಆಶಯಗಳು ಸ್ವಾಭಾವಿಕವಾದರೂ, ಈ ಸ್ಥಾನವನ್ನು ಗಳಿಸುವುದು ಕೆಲವು ಐತಿಹಾಸಿಕ ಸನ್ನಿವೇಶ ಪ್ರಭಾವಿಗಳ ಮೂಲಕವೇ. ಯಾಚಿಸದೆ, ಸೂಚಿಸದೆ, ಶಿಫಾರಿಸದೆ ಪ್ರಶಸ್ತಿ, ಸನ್ಮಾನವನ್ನು ಪಡೆದವರೆಷ್ಟು ಮಂದಿ? ಹಾಗೆಯೇ, ಪ್ರಶಸ್ತಿಯನ್ನು ನೀಡುವವರ ಔದಾರ್ಯವೂ ಮುಗ್ಧವಲ್ಲ. ಪ್ರಭಾವ ವರ್ಚಸ್ಸುಗಳು ಪ್ರಕಟನೆಗೊಳ್ಳುವುದು ಅವುಗಳ ವಿತರಣೆಯಲ್ಲೆ. ಇದರೊಳಗೆ ಅನೇಕ ಸಂಕೀರ್ಣ ಸಂಬಂಧಗಳು ಹುಟ್ಟುಕೊಳ್ಳುತ್ತವೆ. ಅವುಗಳಲ್ಲಿ ಹೆಚ್ಚಿನವು ಹೊರನೋಟಕ್ಕೆ ಕಾಣುವಂಥದ್ದಲ್ಲ. ಒಮ್ಮೊಮ್ಮೆ ಮಾತ್ರ ಇವುಗಳೆ ಮೇಲಿನ ಸೆರಗು ಜಾರುವುದುಂಟು. ಆಗ ಕಸಿವಿಸಿಕೊಂಡು ಮುಖ ಕೆಂಪೇರಿಸಿಕೊಳ್ಳುವವರು ಅಪರೂಪದ ಕೆಲವರಾದರೆ, ಇದೇನು ದೊಡ್ಡ ಮಹಾ? ಎಂದು ಏನೂ ಆಗದಂತೆ ನಿರುದ್ವೇಗದಿಂದ ವರ್ತಿಸುವವರು ಹೆಚ್ಚು ಮಂದಿ. ರಾಜಕೀಯ ಅಧಿಕಾರ, ಪ್ರಭಾವಗಳೊಡನೆ ಒಂದು ದಿವ್ಯ ನಿರ್ಲಜ್ಜತೆಯು ಸಮ್ಮಿಳಿತವಾಗುವುದು ಸರ್ವೇ ಸಾಮಾನ್ಯ.

ಈ ಸಿನಿಕತೆ ತೀರ ಅಪ್ರಸ್ತುತ ಅಲ್ಲ. ರಾಜಕೀಯತೆಯ ವರ್ಚಸ್ಸಿನ ಮೂಲಕ ಇತಿಹಾಸದಲ್ಲಿ ಸ್ಥಾನಗಿಟ್ಟಿಸಿದ ಅನೇಕರಿಗೆ ತಮ್ಮ ಅಮರತ್ವದ ನಶ್ವರತೆಯ ಅರಿವಾಗಿದೆ. ಹಿಟ್ಲರ್, ಮುಸಲೋನಿ ಮೊದಲಾದವರು ಜಗತ್ತನ್ನು ಆಳುವ ಮಹತ್ವಾಕಾಂಕ್ಷೆ ಹಿಂದಿದವರು. ಇತಿಹಾಸವನ್ನೂ ತಮ್ಮ ಮೂರು ಹೆಜ್ಜೆಗಳಲ್ಲಿ ಅಳೆಯ ಹೊರಟವರು. ಅವರ ಜನಕ್ಕೆ ದೇವರಾಗಿ ಪರಿಣಮಿಸಿದವರು. ಆದರೆ ಈಗ ಅವರ ಹೆಸರು ಇತಿಹಾಸದ ದುಷ್ಟಶಕ್ತಿಗಳ ಯಾದಿಯಲ್ಲಿ ಸೇರಿವೆ. ೧೯೧೭ರ ರಷ್ಯಾದ ಕ್ರಾಂತಿಯ ಬಳಿಕ ಆ ದೇಶದಲ್ಲಿ ಎಲ್ಲಾ ರೀತಿಯಲ್ಲೂ ಹೊಸ ಇತಿಹಾಸವನ್ನು ಬರೆಯಲಾಯಿತು. ಆ ಇತಿಹಾಸದಲ್ಲಿ ಮೆರೆದ ಚಿರಂಜೀವಿಗಳು ಒಬ್ಬರನ್ನೊಬ್ಬರು ಹೊರದಬ್ಬುವ ಕಾರ್ಯದಲ್ಲಿ ಪ್ರವೃತ್ತರಾದರು. ಟ್ರಾಟ್ಸ್‌ಸ್ಕಿ, ಸ್ಟಾಲಿನ್, ಕ್ರುಶ್ಚೇವ್, ಬ್ರೆಜ್ನೇವ್, ಕೊನೆಗೆ ಲೆನಿನ್ ಕೂಡ ಇತಿಹಾಸದಲ್ಲಿ ದಫನಗೊಂಡರು. ಲೆನಿನ್ ಗ್ರಾಡ್, ಸ್ಟಾಲಿನ್‌ಗ್ರಾಡ್ ತಮ್ಮ ಹೆಸರನ್ನು ಕಳಚಿಕೊಂಡು ಹಿಂದಿನ ಹೆಸರುಗಳನ್ನು ಈಗ ಹೊತ್ತು ಮರೆಯುತ್ತಿವೆ. ಆಳಿದ ಜಾರ್ ಮಹಾಶಯರ ನೆನಪುಗಳನ್ನು ಅಡಗಿಸಿ ಅಳಿಸಿದ ಸೋವಿಯಟ್ ವ್ಯವಸ್ಥೆ ಕುಸಿದೊಡನೆ ಹಿಂದಿನ ರಾಜ ಮನೆತನದ ಆಳ್ವಿಕೆಯ ನೆನಪು ರಷ್ಯನ್ನರಿಗೆ ಪುನಃ ಆಗತೊಡಗಿತು. ಪೀಟರ್, ನಿಕಾಲಸರ ಪ್ರತಿಮೆಗಳಿಗೆ ಸಾರ್ವಜನಿಕ ಸ್ಥಳಾವಕಾಶ ಸಿಗತೊಡಗಿದೆ. ಕಮ್ಯುನಿಸ್ಟ್ ಯುಗದ ಸೋತ ಪ್ರವರ್ತಕರ ಪುತ್ಥಳಿಗಳು ವಸ್ತುಸಂಗ್ರಹ ಶಾಲೆಗಳ ಉಗ್ರಾಣಗಳಲ್ಲಿ ಬಿದ್ದಿವೆ. ಅಷ್ಟು ವರ್ಷ ಶವಪೆಟ್ಟಿಗೆಯಲ್ಲಿ ಆರಾಧನೆಗೊಂಡು ಅಮರತ್ವವನ್ನು ಸಹಿಸಿದ ಲೆನಿನ್ ಕಳೇಬರಕ್ಕೂ ಮುಕ್ತಿ ದೊರೆಯಿತು. ನಮ್ಮ ದೇಶದ ಇತಿಹಾಸದಲ್ಲೇ ನೋಡಿ. ಸ್ವಾತಂತ್ರ್ಯ ಪೂರ್ವ ಇತಿಹಾಸದಲ್ಲಿ ನಮ್ಮನ್ನು ಜಗ್ಗಾಡಿದ ಬ್ರಿಟಿಷ್ ಗವರ್ನರ್ ವೈಸರಾಯಿಗಳ ಅಬ್ಬರವೇ ಅಬ್ಬರ. ಇಪ್ಪತ್ತನೆಯ ಶತಮಾನದ ಆದಿಯಲ್ಲಿ ವಿನಿಲಯಂ ಹಂಟರನ ಸಂಪಾದಕತ್ವದಲ್ಲಿ ಹೊರಬಂದ ಭಾರತದ ಆಳರಸರು ಎಂಬ ಮಾಲಿಕೆಯಲ್ಲಿ ಅವರದೇ ರಾಜ್ಯ. ಈಗ ನಮ್ಮ ಇತಿಹಾಸದಲ್ಲಿ ಅವರ ಅಟ್ಟಹಾಸ ಅಡಗಿದೆ. ಅವರ ಸೊಲ್ಲು ಕ್ಷೀಣಿಸಿದೆ. ಸಿಪಾಯಿ ದಂಗೆಯನ್ನು ಬಗ್ಗುಬಡಿದ ಬ್ರಿಟಿಶ್ ಸೇನಾನಿಗಳು ಅವರ ರಾಷ್ಟ್ರ ಹಿರಿಮೆಯ ದ್ಯೋತಕಗಳಾದರು. ಅವರ ವೀರಗಾಥೆಯ ಆದರ್ಶ ಕಥನವಾಯಿತು. ಬ್ರಿಟಿಶರ ಯೋಗ್ಯತೆಯನ್ನು ಬಿಂಬಿಸುವ ನಿದರ್ಶನವಾಯಿತು. ಆದರೆ ಈಗ ಭಾರತೀಯರಿಗೆ ಈ ಎಲ್ಲಾ ಇತಿಹಾಸ ಅಪಥ್ಯ. ಹ್ಯಾವಲಿಕ್, ನಿಕಲ್ಸನ್, ಹೆನ್ರಿಲಾರೆನ್ಸ್‌ನ ಪರಾಕ್ರಮ ಬ್ರಿಟಿಶರ ಆಕ್ರಮಣ ಕ್ರೌರ್ಯಗಳ ಕಥೆಯಾಯಿತು. ಹಾಗೆಯೇ ಅನಿಷ್ಟ ಬಂಡುಕೋರರೆಂದು ಬ್ರಿಟಿಶರಿಂದ ದೂಷಿಸಲ್ಪಟ್ಟ ನಾನಾಸಾಹೇಬ, ತಾತ್ಯಾಟೋಪಿ, ಮಂಗಲಪಾಂಡೆ ಮುಂತಾದವರು ನಮ್ಮ ಇತಿಹಾಸದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮರಾದರು. ಸರ್ವಧರ್ಮ ಸಮಾನತೆಯ ಆದರ್ಶವನ್ನು ರೂಢಿಸಿಕೊಂಡಿದ್ದೇವೆ ಎಂದುಕೊಂಡ ಸ್ವಾತಂತ್ರ್ಯ ನಂತರದ ಭಾರತೀಯರಿಗೆ ಅಕ್ಬರನು ಆದರ್ಶಪ್ರಾಯನಾದರೆ, ಅದನ್ನೊಲ್ಲದವರಿಗೆ ಆತ ಓರ್ವ ಒಳ್ಳೆತನದ ಸೋಗನ್ನು ಹಾಕಿದ, ಯೋಗ್ಯತೆಗಿಂತ ಹೆಚ್ಚು ಪ್ರಚಾರ ಪಡೆದ ಅದೃಷ್ಟವಂತ ರಾಜ. ಇವರಿಗೆ ಔರಂಗಜೇಬನು ಧರ್ಮಾಂಧನಾದ ಕ್ರೂರ ದೊರೆಯಾದರೆ ಇನ್ನು ಕೆಲವರಿಗೆ ಇವನು ಇಸ್ಲಾಮ್ ಧರ್ಮಾಚರಣೆಯ ಶುಭ್ರ ಪ್ರತೀಕ, ಅದರ ಅನನ್ಯ ಘನತೆಯನ್ನು ಮೆರೆದ ಕೊನೆಯ ಬಾದಶಹ. ಒಮ್ಮೆ ಒಂದೇ ದೇಶವಾಗಿದ್ದ ಭಾರತ-ಪಾಕಿಸ್ತಾನಗಳ ಅಧಿಕೃತೀಕರಿಸಿದ ಇತಿಹಾಸದ ಪುಟಗಳಲ್ಲಿ ಅಕ್ಬರ್-ಔರಂಗಜೇಬರ ಚಿತ್ರಣ ಪರಸ್ಪರ ವಿರೋಧವಾದದ್ದು. ಇದರ ರಾಜಕೀಯ ನೆಲೆ ಸರ್ವವಿಧಿತ. ಈಗಿನ ಮರಾಠಾ ಇತಿಹಾಸ ಗಾಥೆಯಲ್ಲಿ ಶಿವಾಜಿ ಮಹಾರಾಜನಿಗೆ ಸಿಕ್ಕಿದ ಪೂಜೆ ಪುರಷ್ಕಾರ ಇತರರಿಗೆ ದೊರೆತಿಲ್ಲ. ಹದಿನೆಂಟನೆಯ ಶತಮಾನದ ಛಿದ್ರ ರಾಜಕೀಯದಲ್ಲಿ ಪೇಶ್ವೆಗಳ ಸಾಹಸ, ಸಾಧನೆಗಳು ದೊಡ್ಡದೇ. ಆದರೆ ಅವುಗಳ ಉಲ್ಲೇಖದಲ್ಲಿ ಉತ್ಸಾಹ ತುಸು ಕಡಮೆಯೇ. ಅವರದ್ದು ಕೊನೆಗೆ ದುರಂತ ಕಥೆಯಾದುದು ಮಾತ್ರ ಈ ನಿರುತ್ಸಾಹಕ್ಕೆ ಕಾರಣವಲ್ಲ. ಅದರೊಳಗೆ ರಾಜಕೀಯ ಮತ್ತು ಅದನ್ನು ಬೆನ್ನಲ್ಲಿ ಹೊತ್ತಿರುವ ಸಾಮಾಜಿಕ, ಜಾತಿ ವ್ಯವಸ್ಥೆಗಳ ಒತ್ತಡಗಳು ಸೇರಿಹೋಗಿವೆ. ಹಾಗೆಯೇ ನಮ್ಮ ರಾಜಕೀಯ ಪಕ್ಷಗಳು ತಮ್ಮ ಅಧಿವೇಶನಗಳನ್ನು ನಡೆಸುವ ವೈಖರಿಯನ್ನು ಸ್ವಲ್ಪ ಸೂಕ್ಷ್ಮಣವಾಗಿ ನೋಡಿದಾಗ ಅವರು ಐತಿಹಾಸಿಕ ವ್ಯಕ್ತಿಗಳನ್ನು ಯಾವ ರೀತಿಯಲ್ಲಿ ಉಪಯೋಗಿಸುತ್ತಾರೆ ಎಂದು ತಿಳಿಯುತ್ತದೆ. ವರಿಷ್ಠರು ಆಸೀನರಾಗುವ ವೇದಿಕೆಯ ಹಿಂದೆ ಗೋಡೆಯಲ್ಲಿ ಪಕ್ಷವು ತನ್ನದಾಗಿಸಿಕೊಂಡ ಇತಿಹಾಸ ಪುರುಷರ ಭವ್ಯ ಚಿತ್ರಗಳನ್ನು ಅಳವಡಿಸಲಾಗುತ್ತದೆ- ಇವರ ಕೃಪಾಕಟಾಕ್ಷ, ಆಶೀರ್ವಾದ ತಮ್ಮ ಮೇಲೆ ಸದಾ ಇರಲಿ ಎಂಬ ಆಶಯದಿಂದ. ಇದು ಇತಿಹಾಸದ ಅಂಗೀಕಾರವನ್ನು ಗಳಿಸುವ ಒಂದು ಮಧುರ ವರಸೆ. ಅದರಲ್ಲೂ ಕೆಲವು ಸೂಕ್ಷ್ಮಗಳಿವೆ. ಈ ಆರಾಧ್ಯರ ಚಿತ್ರ ಪ್ರದರ್ಶನದಲ್ಲಿ ಸ್ಥಳೀಯ ಇತಿಹಾಸ ಪುರುಷನಿಗೆ ಒಂದು ಮುಖ್ಯ ಸ್ಥಾವನ್ನೀಯುತ್ತಾರೆ. ರಾಷ್ಟ್ರಸ್ತರದ ನಾಯಕ ಶ್ರೇಷ್ಠರು ಸ್ಥಳೀಯ ನಾಯಕರನ್ನು ಹೇಗೆ ರಾಷ್ಟ್ರೀಕರಣಗೊಳಿಸುವುದು ಕೇವಲ ಉದಾರತೆಯ ಲಕ್ಷಣವಲ್ಲ. ಇದು ಸ್ಥಳೀಯ ಬೆಂಬಲವನ್ನು ಕೊಳ್ಳುವ ಒಂದು ವಿಧಾನ. ಇದರಲ್ಲಿ ಇನ್ನೂ ಸೂಕ್ಷ್ಮವಾದ ಜಾತಿ, ಮಹಾಜಾತಿ, ಒಳಜಾತಿಗಳಿಗೆ ಸಂಬಂಧಿಸಿದ ಲೆಕ್ಕಾಚಾರಗಳು ಅಡಗಿರುತ್ತದೆ. ಇದು ವೃತ್ತಿಪರ ರಾಜಕಾರಣಿಗಳಿಗೆ ಮಾತ್ರ ಗೋಚರವಾಗುವ ಸತ್ಯ. ಆದರೆ ಈ ಸ್ಥಳೀಯ ನಾಯಕರಿಗೆ ಇತಿಹಾಸದಲ್ಲಿ ಕೊಡಮಾಡಿದ ಅಮರತ್ವ ಸೀಮಿತವಾದದ್ದು. ಅಧಿವೇಶನವು ಇನ್ನೊಂದು ಸ್ಥಳದಲ್ಲಿ ನಡೆಯುವಾಗ ಈ ಧುರೀಣರು ಚಲಾವಣೆಯಿಂದ ಹೊರಹೋಗುತ್ತಾರೆ. ಆಗ ಹೊಸಬರಿಗೆ ಆ ಸರದಿ.

ಇತಿಹಾಸದಲ್ಲಿ ಗಳಿಸುವ ಸ್ಥಾನಮಾನಗಳು ಅರ್ಥಹೀನ, ಅದೆಲ್ಲಾ ಕಸಿದುಕೊಂಡದ್ದು ಅಥವಾ ಗಿಟ್ಟಿಸಿಕೊಂಡದ್ದು. ಯೋಗ್ಯತೆಗೆ ಸಂಬಂಧಿಸಿದವುಗಳಲ್ಲ ಎಂಬ ವಾದ ಇದಲ್ಲ. ಇತಿಹಾಸದಲ್ಲಿ ಯೋಗ್ಯರು-ಅಯೋಗ್ಯರು ಮಹಾನ್ ವ್ಯಕ್ತಿಗಳು ಅಥವಾ ಅಷ್ಟೇನೂ ದೊಡ್ಡವರಲ್ಲದವರು ಎಂಬವರಿಗೆ ವ್ಯತ್ಯಾಸವೇನೂ ಇಲ್ಲ ಎಂಬ ಪ್ರತಿಪಾದನೆಯೂ ಅಲ್ಲ. ಇತಿಹಾಸ ಸಂದುಹೋದ ಘಟನೆಗಳನ್ನು ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ಇತಿಹಾಸಕಾರರು ಆಯಾ ಕಾಲ, ಪ್ರದೇಶ, ರಾಜಕಾರಣ ಇತ್ಯಾದಿ ಅನೇಕ ಒತ್ತಡಗಳಿಗೆ ಮಣಿದು ನಡೆಸುವ ಕಾರ್ಯ; ಆ ಕಾರಣದಿಂದ ಅದರ ನಾಯಕ-ಖಳನಾಯಕರ ಸ್ಥಾನ ಸ್ಥಿರವಲ್ಲ; ಕೆಲವರು ತಮ್ಮ ಪಟ್ಟಾಭಿಷೇಕದ ಮುನ್ನ, ಇನ್ನು ಕೆಲವರು ಅದರ ನಂತರ, ವನವಾಸ, ಅಜ್ಞಾತವಾಸಗಳು ಅನುಭವಿಸುತ್ತಾರೆ ಇದು ಅವರ ಕರ್ಮಫಲವಲ್ಲ ಇದು ಬದಲಾಗುವ ರಾಜಕೀಯತೆ, ಆರ್ಥಿಕತೆ, ಸಾಮಾಜಿಕ ಸಮೀಕರಣಗಳು ಹಾಗೂ ಸೈದ್ಧಾಂತಿಕತೆಗಳ ಮೇಲೆ ಅವಲಂಬಿಸಿದೆ ಎಂಬ ವಿಚಾರಗಳನ್ನು ಸೂಚಿಸಿದ್ದು, ಇತಿಹಾಸವು ಒಂದು ನಿರ್ದಿಷ್ಟ ಜ್ಞಾನ ಎಂಬ ಭ್ರಮೆಯನ್ನು ಇಟ್ಟುಕೊಂಡಾಗ ಈ ವಿಚಾರಗಳು ಅಸ್ವಾಭಾವಿಕವಾಗಿಯೋ, ಅಸಹನೀಯವಾಗಿಯೋ ಕಾಣುತ್ತವೆ. ಆದರೆ ಅದೊಂದು ಕಾಲಕಾಲಕ್ಕೆ ವಿವಿಧ ಒತ್ತಡಗಳಿಗೆ ಸ್ಪಂದಿಸಿ, ಸೃಷ್ಟಿಯಾಗುವ ಜ್ಞಾನ ಎಂದು ಗ್ರಹಿಸಿದಾಗ ರಾಜಕೀಯದೊಡನೆ ಅದರ ನಂಟು, ಅದರಿಂದುಂಟಾಗುವ ಚಂಚಲತೆ, ಅನಿಶ್ಚಿತತೆಗಳು ಅರ್ಥವಾಗುತ್ತವೆ. ಅವುಗಳನ್ನು ತುಸು ಅನುಕಂಪದಿಂದ ಕಾಣುವ ಪ್ರಯತ್ನವೂ ಸಾಧ್ಯವಾಗುತ್ತದೆ.

ವಸ್ತುನಿಷ್ಠತೆ ಎಂದರೇನು?

ಬದಲಾಗುವ, ಬದಲಾಯಿಸುವ ಇತಿಹಾಸವನ್ನು ಗುರುತಿಸಿ, ಅದರ ಕಾರಣಗಳನ್ನು ವಿಶ್ಲೇಷಿಸಿ ಅವುಗಳ ಬಗ್ಗೆ ತೀರ ಅಸಹನೆ, ಅಥವಾ ಅಂಥಾದ್ದೇನೂ ಇಲ್ಲವೇ ಇಲ್ಲ ಎಂದು ಮರಳಿನಲ್ಲಿ ತಲೆಮರೆಸಿ ನಿರಾತಂಕವನ್ನು ತೋರದಾಗ ಎದುರಾಗುವ ಒಗಟು ಇತಿಹಾಸದ ವಸ್ತುನಿಷ್ಠತೆಯದ್ದು. ‘ಸತ್ಯಂ ವದ’ ಎಂಬ ಆದೇಶವನ್ನು ಪಾಲಿಸುವಾಗ ಅದೆಷ್ಟೋ ಬಾರಿ ‘ದ’ಕಾರವು ಮಹಾಪ್ರಾಣವಾಗಿ ಸಂಭವಿಸುತ್ತದೆಯಾದರೂ ಆ ಉಪದೇಶದ ಬಗ್ಗೆ ಸಾಮಾನ್ಯವಾಗಿ ಯಾರೂ ಬಹಿರಂಗವಾಗಿ ಸಂಶಯವನ್ನು ವ್ಯಕ್ತಪಡಿಸುವುದಿಲ್ಲ. ನಾವೆಲ್ಲ ಸತ್ಯ ಸಂಧರೇ. ನ್ಯಾಯಾಲಯದಲ್ಲಿ ಮತಗ್ರಂಥವನ್ನು ಮುಟ್ಟಿ ಸತ್ಯದ ಹೊರತು ಬೇರೇನನ್ನೂ ಹೇಳುವುದಿಲ್ಲ ಎಂದು ಪ್ರಮಾಣ ಮಾಡಿದರೂ, ನ್ಯಾಯಾಲಯವು ಸಾಕ್ಷಿಯನ್ನು ನಂಬುವುದು ಪ್ರಮಾಣದ ಪ್ರಕ್ರಿಯೆಯನ್ನಲ್ಲ, ಅನುಭವದಲ್ಲಿ ಅದಕ್ಕೂ ಗೊತ್ತು ಸತ್ಯ ಎಲ್ಲಿದೆ ಎಂದು. ಆ ಕಾರಣಕ್ಕೆಂದೇ ಸತ್ಯಸಂಧರು ಮುಟ್ಟಿ ಪ್ರಮಾಣ ಮಾಡುವ ಪುಣ್ಯ ಗ್ರಂಥಕ್ಕೆ ಕೆಂಪು ಬಟ್ಟೆಯ ಕವಚವನ್ನು ತೊಡಿಸಿರುವುದು. ಕೈ ಬೆವರಿನಿಂದ ಗ್ರಂಥವನ್ನು ರಕ್ಷಿಸಲು ಮಾತ್ರ ಅದನ್ನು ತೊಡಿಸಿಲ್ಲ ಎಂದು ಸ್ಪಷ್ಟ. ಆದರೂ ನಮ್ಮ ಸತ್ಯದ ಪ್ರೇಮ ಗಾಢವಾದುದೇ.

ಇತಿಹಾಸಕಾರರೇನೋ ಇದಕ್ಕೆ ಹೊರತಲ್ಲ. ಹೆರಡೂಟಸ್, ಥೂಸಿಡೈಡಿಸರಿಂದ ಮೊದಲಾಗಿ ನಮ್ಮ ಕಲ್ಹಣ, ಬರಣಿ, ಅಬುಲ್ ಫಜಲ್ ಅವರೆಲ್ಲಾ ಸತ್ಯವನ್ನೇ ಹೇಳಹೊರಟ ಮಹನೀಯರು. ಇತಿಹಾಸವು ಒಂದು ಕಥನವೆಂದು ಪರಿಭಾವಿಸಿದಾಗ ಅದು ಕಟ್ಟು ಕಥೆಗಳಿಂದ ಹೇಗೆ ಭಿನ್ನಾಗಿರುತ್ತದೆ ಎಂದು ತಿಳಿಸುವುದು ಅನಿವಾರ್ಯವಾಗುತ್ತದೆ. ‘ಒಂದಾನೊಂದು ಕಾಲದಲ್ಲಿ’ – ಎಂದು ಪ್ರಾರಂಭವಾಗುವ ಕಥೆ ಹುಟ್ಟುವುದು ಕತೆಗಾರನ ಕಲ್ಪನೆಯ ಮೂಸೆಯಿಂದ. ಅದಕ್ಕೆ ನೈಜತೆಯ ಮೆರಗು ಬಂದಾಗ ಅದು ಹೆಚಚು ಮನೋಜ್ಞವಾಗಬಹುದಾದರೂ ಅದು ವಾಸ್ತವತೆಯನ್ನು ಅವಲಂಬಿಸಿಲ್ಲ. ಇತಿಹಾಸವನ್ನು ಕಥನೀಕರಿಸುವಾಗ ಅದನ್ನು ಆರಂಭ-ಕೊನೆಗಳ ಚೌಕಟ್ಟಿನೊಳಗೆ, ಅದರ ಬೆಳವಣಿಗೆ, ಉಚ್ಛ್ರಾಯತೆ, ಅಲ್ಲಿನ ಸಾಹಸ, ಸಾಧನೆಗಳ, ಸೋಲು-ಗೆಲುವುಗಳು, ಸಾವು-ನೋವುಗಳು ಹಾಗೂ ಅವು ನೀಡಬಹುದಾದ ಸ್ಫೂರ್ತಿ, ಹೇಳಬಹುದಾದ ಪಾಠಗಳನ್ನು ವಿವರಿಸುತ್ತಾರೆ. ಇತಿಹಾಸವು ಕಥೆಯ ವಿನ್ಯಾಸ ಪಡೆಯುತ್ತದೆ. ಇತಿಹಾಸದಲ್ಲಿರುವುದು ಘಟನೆಗಳು, ಅವುಗಳನ್ನು ಕಥನೀಕರಿಸುವುದು ಇತಿಹಾಸಕಾರ, ಆತನ ಸಮಾಜ ಬರೇ ಘಟನೆಗಳು ಅಸಂಗತ, ಅರ್ಥರಹಿತ. ಅವುಗಳನ್ನು ಅರ್ಥೈಸಿ, ನಿರೂಪಿಸುವಾಗ ಅವು ತಮ್ಮದಾಗುತ್ತದೆ. ಅದು ಸಾಧ್ಯವಾಗುವುದು ಕಥನೀಕರಣದ ಪ್ರಕ್ರಿಯೆಯಲ್ಲಿ. ಇತಿಹಾಸವು ಕಥೆಯಾದಾಗ ಅದರಲ್ಲಿ ನಮ್ಮನ್ನು ನಾವು ಕಾಣುತ್ತೇವೆ. ಅದರಲ್ಲಿ ನಾವು ನೆಲಸಿ, ನಮ್ಮ ಹಕ್ಕನ್ನು ಸ್ಥಾಪಿಸುತ್ತೇವೆ. ಇದು ನಮ್ಮ ನಿಯಂತ್ರಣದಲ್ಲಿಲ್ಲದ ಒಂದು ವಿಧವಾದ ಭಾವನಾತ್ಮಕವಾದ ಅಗೋಚರವಾದ ಕ್ರಿಯೆ. ಇದು ಇತಿಹಾಸದ ವಸ್ತುನಿಷ್ಠ ಇರುವಿಕೆಯನ್ನು ಅಲ್ಲಗಳೆಯುತ್ತದೆ. ಹೀಗೆ ಗ್ರಹಿಸುವ ಇತಿಹಾಸಕಾರನನ್ನು ಅಥವಾ ಸಮಾಜವನ್ನು ಮೀರಿದ ಇತಿಹಾಸವೊಂದಿದ್ದರೆ ಅದು ಅಲಭ್ಯ. ಅದರ ಗೊಡವೆ ನಮಗೆ ಬೇಕಿಲ್ಲ. ಹದಿನೆಂಟನೆಯ ಶತಮಾನದ ಇಟಲಿಯ ಚಿಂತಕ ಗ್ಯಾಂಬತಿಸ್ಟ ವಿಕೊ ವಿವರಿಸಿದಂತೆ ಇತಿಹಾಸವು ಮಾವನ ಕೇಂದ್ರಿತವಾದದ್ದು. ಅದು ಆತನ ಕಥೆ. ಅದನ್ನು ಅರ್ಥೈಸುವುದೋ ಆತನೇ. ಆ ಶಕ್ತಿಯೂ ಆತನಲ್ಲಿದೆ. ಅದರಲ್ಲಿ ಅವನ ದೃಷ್ಟಿಕೋನವೇ ಸರಿ, ಅದೇ ಅಂತಿಮವಾದದ್ದು. ಇದಕ್ಕೆ ಹೊರತಾದ ಅಥವಾ ಇದನ್ನು ಮೀರಿದ ಅತಿಮಾನವ ಶಕ್ತಿಯು ಮಾತ್ರ ಗಹಿಸಬಲ್ಲ ಸತ್ಯವಿದ್ದಲ್ಲಿ ಅದು ಇತಿಹಾಸಕಾರನ ಕಾರ್ಯಕ್ಷೇತ್ರದಿಂದ ಹೊರಗುಳಿಯುತ್ತದೆ. ಜ್ಞಾನ ಮೀಮಾಂಸೆಯೊಳಗೆ ಇತಿಹಾಸದ ಅಸ್ತಿತ್ವವನ್ನು ಸಮರ್ಥಿಸಲು ಮಾನವ ಗ್ರಾಹ್ಯವಾದ ಮಾನವ ಕಥೆಯೇ ಸಾಕು. ಅದು ಆಧ್ಯಾತ್ಮಿಕವಾಗಿ ಸೀಮಿತವೆಂದು ಕಂಡರು ಅನುಭವಾತ್ಮಕವಾಗಿ ಬಹಳಷ್ಟು ಶ್ರೀಮಂತವಾಗಿದೆ.

ತಾತ್ವಿಕವಾಗಿ ಇತಿಹಾಸವು ವಸ್ತುನಿಷ್ಠವಾಗಿರಲು ಅಸಾಧ್ಯವೆಂದಾದರೆ ಅದನ್ನು ಯಾರು ಹೇಗೆ ಬರೆದರೇನು? ಇತಿಹಾಸದ ಸತ್ಯವೆಲ್ಲವೂ ಸಾಪೇಕ್ಷವಾಗಿದ್ದಲ್ಲಿ ಅದರ ಅರ್ಥ. ದುರುಪಯೋಗದ ಬಗ್ಗೆ ಯೋಚನೆ ರೋದನಗಳೇಕೆ? ಅವರವರ ಇತಿಹಾಸ ಅವರವರಿಗೆ! ನಮಗೆ ಸಹ್ಯವಾದ, ರೋಚಕವಾದ ಇತಿಹಾಸ ನಮಗೆ. ಅದು ಸರಿಯೇ? ತಪ್ಪೇ? ಎಂಬ ಪ್ರಶ್ನೆಯನ್ನು ನಮಗೆ ನಾವಾಗಲೀ, ಇನ್ನೊಬ್ಬರನ್ನಾಗಲೀ ಕೇಳುವ ಅಗತ್ಯವಿಲ್ಲ ಎಂಬ ವಾದ ಇದರಿಂದ ಹುಟ್ಟಬಹುದು. ಆದರೆ ಇದೊಂದು ಉದ್ಧಟತನ ಅಥವಾ ವಿಕೃತಿ ಎಂಬುದು ಹೆಚ್ಚಿನವರಿಗೆ ವೇದ್ಯವಾದೀತು. ಇಂತಹ ವಾದವನ್ನು ಬಹಿರಂಗವಾಗಿ ಯಾರೂ ಮಂಡಿಸುವುದಿಲ್ಲ. ಎಲ್ಲರೂ ತಮ್ಮ ಇತಿಹಾಸದ ವಸ್ತುನಿಷ್ಠತೆಯ ಬಗ್ಗೆ ಆಶ್ವಾಸನೆ ನೀಡುತ್ತಾರೆ. ಅವರಿಗೆ ಸಂಶಯವಿರುವುದು ಇತರರ ಇತಿಹಾಸದ ಬಗ್ಗೆ ಮಾತ್ರ. ಉದಾಹರಣೆಯಾಗಿ, ಒಬ್ಬ ರಾಜ ದುಷ್ಟನೇ, ಮತಾಂಧನೇ ಎಂಬ ಪ್ರಶ್ನೆಗೆ ಖಚಿತವಾದ, ನಿರ್ವಿವಾದವಾದ ಉತ್ತರ ಪಡೆಯುವುದು ಇತಿಹಾಸದ ವಸ್ತುನಿಷ್ಠ ಪ್ರತಿಪಾದನೆ ಎಂದು ಅನ್ನುವುದುಂಟು. ಯಾವುದು ಖಚಿತವೋ, ಸ್ಪಷ್ಟವೊ, ಅದರ ಕುರಿತು ಚರ್ಚೆಯಾದರೂ ಏಕೆ ನಡೆಯಬೇಕು? ಆ ರಾಜ ದುಷ್ಟನೆಂಬುದು ನಮಗೆ ಸ್ಪಷ್ಟ; ಇನ್ನೊಬ್ಬರಿಗೆ ಅದು ಸ್ಪಷ್ಟವೂ ಅಲ್ಲ, ಪಥ್ಯವೂ ಅಲ್ಲ. ಆಗ ಅದು ನಿರ್ವಿವಾದವಾಗುವುದಿಲ್ಲ. ಇಬ್ಬರೂ ಒಪ್ಪಿಕೊಂಡ ಸತ್ಯ ವಸ್ತುನಿಷ್ಠವೂ ಆಗಬೇಕೆಂದಿಲ್ಲ. ಇದು, ಇದೇ ಸತ್ಯ ಎಂದು ತೀರ್ಮಾನಿಸುವ ಅಧಿಕಾರವನ್ನು ಶಾಶ್ವತವಾಗಿ ಪಡೆದವರು ಯಾರೂ ಇಲ್ಲ. ಅದು ಕಾಲ, ಪ್ರದೇಶಗಳಿಗೆ ಸೀಮಿತವಾದದ್ದು. ಅಂತಹ ಅಧಿಕಾರವನ್ನು ಯಾರಾದರೂ ಕಸಿದುಕೊಂಡು ಜಂಬದಿಂದ ಚಲಾಯಿಸಿದರೆ ಅವರ ಪ್ರಭಾವ ಸ್ವಲ್ಪ ಸಮಯದಲ್ಲಿ ಸೊರಗಿ ಕರಗುವುದನ್ನು ನಾವು ಕಾಣುತ್ತೇವೆ. ಸತ್ಯವು ವಿಪರೀತಗಳನ್ನು ತ್ಯಜಿಸಿ ಅವುಗಳ ಮಧ್ಯದಲ್ಲಿ ನೆಲೆಸುವಂಥದ್ದು ಎಂದು ಕಕ್ಷೆಯನ್ನು ಕೊನೆಗಾಣಿಸಿ, ಸಾಂತ್ವನ ನೀಡುವ ರೀತಿಯಲ್ಲಿ ಹೇಳುವುದು ವಾಡಿಕೆಯಾದರೂ, ಆ ‘ಮಧ್ಯಪ್ರದೇಶವು’ ತೀರಾ ವಿಸ್ತಾರವೂ, ಅನಿರ್ವಚನೀಯವೂ ಆಗಿರುವುದರಿಂದ ಆ ಬಗ್ಗೆ ಜಗಳ, ವಿವಾದ ತಪ್ಪಿದ್ದಲ್ಲ. ಇತಿಹಾಸದಲ್ಲಿ ವಸ್ತುನಿಷ್ಠವಾದ ಸತ್ಯ ಮರೀಚಿಕೆಯೇ. ಆದರೂ ಅದನ್ನು ಗ್ರಹಿಸಿದ ಭ್ರಮೆ, ಅದಕ್ಕಾಗಿ ಪರದಾಟ ಇತಿಹಾಸಕಾರನಿಗೆ ಬಂದ ಬಳುವಳಿ. ಇದನ್ನು ಸಂಪೂರ್ಣವಾಗಿ ಮೀರಿ ಆತ ವ್ಯವಹರಿಸಲಾರ. ಇದು ಅದ್ವೈತ ವೇದಾಂತದ ಮಾಯೆಯಂತೆ. ಅದಕ್ಕೆ ಒಂದು ಶಾಶ್ವತ ನೆಲೆಯಲ್ಲಿ ಅಸ್ತಿತ್ವವಿಲ್ಲದಿದ್ದರೂ ಅದು ವ್ಯಾವಹಾರಿಕವಾಗಿ ಇಜವೇ ! ಅದನ್ನು ಅಲ್ಲ ಗಳೆಯುವುದು ಜೀವನವನ್ನು ನಿರಾಕರಿಸಿದಂತೆ.

ಇಲ್ಲದ ವಸ್ತುನಿಷ್ಠತೆಯನ್ನು ಅರಸುವುದೆಂದರೇನು? ತಾನು ನಿರೂಪಿಸುವ ಇತಿಹಾಸವು ಪ್ರಾಮಾಣಿಕವಾದುದು; ಇತಿಹಾಸದ ಆಕರಗಳನ್ನು ಮುಕ್ತ ಮನಸ್ಸಿನಿಂದ ಕೂಲಂಕಷವಾಗಿ ಹುಡುಕಿ, ಅಧ್ಯಯನ ಮಾಡಿ ಅರ್ಥೈಸಿ, ವ್ಯಾಖ್ಯಾನಿಸಿದ್ದು ಎಂದಷ್ಟು ಮಾತ್ರ ಅರ್ಥ. ಇತಿಹಾಸದ ಸಾಕ್ಷಿಗಳನ್ನು ಬಾಯಿ ಮುಚ್ಚಿಸದೆ ಮುಕ್ತವಾಗಿ ಹೊರಗೆಡಹುವ ಧೈರ್ಯ, ಪ್ರಾಮಾಣಿಕತೆಯನ್ನು ತೋರಿದ್ದೇನೆ ಎಂಬ ಅರಿಕೆ. ಇಂತಹ ಆಶ್ವಾಸನೆ ಇತಿಹಾಸ ರಚನೆಯಲ್ಲಿ ಅತಿ ಮುಖ್ಯ ವಾದುದಾದರೂ, ಇದು ಇತಿಹಾಸದಲ್ಲಿ ವಸ್ತುನಿಷ್ಠತೆ ಸಾಧ್ಯತೆಯನ್ನು ದೃಢೀಕರಿಸುವುದಿಲ್ಲ. ಒಂದು ವಿಷಯ ಅಧ್ಯಯನದ ವಸ್ತುವಾಗುವುದು ನಮ್ಮ ಕುತೂಹಲದಿಂದ ಅದು ನಮಗೆ ಸಂಬಂಧವಿರುವುದರಿಂದ ನಮ್ಮ ಮನಸ್ಸು ಎಂದಿಗೂ ಸ್ವಚ್ಛ ಪಟಲವಾಗಿರುವುದೇ ಇಲ್ಲ. ನಮ್ಮ ಅಭಿರುಚಿಗೆ, ನಮ್ಮ ಸಮಾಜಕ್ಕೆ, ನಮ್ಮ ಸೈದ್ಧಾಂತಿಕ ಒಲವಿಗೆ ಸಂಬಂಧವಿರುವ ವಿಷಯವನ್ನು ತಿಳಿಯುವಾಗ ಮನಸ್ಸು ಮುಕ್ತವಾಗಲು ಸಾಧ್ಯವೇ ಇಲ್ಲ. ಇತಿಹಾಸದಲ್ಲಿ ಸಾಕ್ಷಿಗಳು ಅಧ್ಯಯನ ವಸ್ತುವಿಗೆ ಸಂಬಂಧಿಸಿದ್ದು. ತಾವು ಒಬ್ಬ ಸಂಶೋಧಕರೆಂದು ಘೋಷಿಸಿಕೊಂಡಾಗ ಏಳುವ ಪ್ರಶ್ನೆ-ಸಂಶೋಧನೆ ಯಾವ ಕುರಿತಾದದ್ದು? ಒಂದು ನಿರ್ದಿಷ್ಟ ವಸ್ತು, ಅದರ ಬಗ್ಗೆ ಜ್ಞಾನ ಕುತೂಹಲ, ಕಳಕಳಿ ಇಲ್ಲದಿದ್ದಾಗ ಯಾವ ಶೋಧನೆಯೂ ಅಸಾಧ್ಯ. ಹಿಂದೆ ನಡೆದ ಘಟನೆಗಳು ತಮ್ಮ ಕುರುಹುಗಳನ್ನು ಬಿಟ್ಟಿರಬಹುದು. ಆದರೆ ಕುರುಹುಗಳು ಸಾಕ್ಷಿಯಾಗಿ ರೂಪುಗೊಳ್ಳುವುದು ಇತಿಹಾಸಕಾರರ ಅಧ್ಯಯನ ವಿಷಯಕ್ಕೆ ಸಂಬಂಧಿಸಿದಾಗ. ಒಂದು ಶಿಲಾಶಾಸನವು ಇತಿಹಾಸ ರಚನೆಗೆ ಅಮೂಲ್ಯ ಆಕರ ಎಂದು ತಿಳಿಯುವವರು ಅದರ ಬಗ್ಗೆ ಜ್ಞಾನವುಳ್ಳವರು. ಅದಿಲ್ಲದವರಿಗೆ ಆ ಶಾಸನದ ಉಪಯೋಗ ಅಂಗಳದ ಹಾಸು ಕಲ್ಲಾಗಿ ಅಥವಾ ಬಟ್ಟೆ ಒಗೆಯುವ ಕಲ್ಲು ಚಪ್ಪಡಿಯಾಗಿ. ಇತಿಹಾಸದ ಆಕರವೆಂದು ತಿಳಿದ ಮೇಲೂ ಆ ಶಾಸನದ ಉಪಯೋಗ ಇತಿಹಾಸಕಾರನು ತನ್ನ ಅಧ್ಯಯನದಲ್ಲಿ ಎತ್ತುವ ಪ್ರಶ್ನೆ, ಬಿಡಿಸ ಹೊರಟ ಸಮಸ್ಯೆಗಳಿಗೆ ಸಂಬಂಧಿಸಿದೆ. ರಾಜ-ರಾಣಿಯರನ್ನು ಬೆಂಬತ್ತಿ ಹೋಗುವ ಇತಿಹಾಸಕಾರರಿಗೆ ಶಾಸನದ ‘ಪ್ರಶಸ್ತಿ’ ಭಾಗವೇ ಮುಖ್ಯವಾಗುತ್ತದೆ; ಅವರ ಬಿರುದುಗಳು, ಸಾಹಸ ಔದಾರ್ಯಗಳ ಉಲ್ಲೇಖ ಹೆಚ್ಚು ಪ್ರಸ್ತುತವಾಗುತ್ತವೆ. ಸಂಶೋಧನೆಯ ವಸ್ತು ಬೇರೆಯಾದಾಗ ಶಾಸನದಲ್ಲಿ ಸೂಕ್ಷ್ಮವಾಗಿ ಅವಿತಿರುವ ಸಂಜ್ಞೆಗಳು, ಹೇಳದಿರುವ ವಿಚಾರಗಳು ಅರ್ಥ ಪಡೆಯುತ್ತವೆ. ಮೂಕಸಾಕ್ಷಿಗಳನ್ನು ವಾಚಾಳಿಗರನ್ನಾಗಿಸುವುದು ಪ್ರಶ್ನಿಗರ ಶಕ್ತಿ, ಜಾಣ್ಮೆಗಳು., ಇಲ್ಲವಾದರೆ ಸಾಕ್ಷಿಗಳು ಸಾಕ್ಷಿಗಳೇ ಅಲ್ಲ, ಅವು ಏನನ್ನೂ ಹೇಳುವುದಿಲ್ಲ. ಇದು ಯಾವ ತನಿಖಾಧಿಕಾರಿಗೂ ತಿಳಿದ ವಿಷಯ. ಇತಿಹಾಸದಲ್ಲಿ ಹೊಸತು ಮೂಡುವುದು ಇತಿಹಾಸಕಾರರ ಎತ್ತುವ ಪ್ರಶ್ನೆಗಳಿಂದ, ಸಕ್ಷಿಗಳೊಡನೆ ಅವರ ವ್ಯವಹಾರ ವೈಖರಿಯಿಂದ.

ಆದರೆ ಈ ವ್ಯವಹಾರ ಪ್ರಾಮಾಣಿಕವಾಗಿರುವುದು ಅತಿ ಮುಖ್ಯ. ಸಾಕ್ಷಿಗಳನ್ನು ತಿರುಚಿ, ವಿಕೃತಗೊಳಿಸುವ, ಅವುಗಳನ್ನು ಹಾಜರುಪಡಿಸದಿರುವ ಅಥವಾ ಅವುಗಳ ಬಾಯಿ ಮುಚ್ಚಿಸುವ ಇತಿಹಾಸಕಾರರು ವೃತ್ತಿ ದ್ರೋಹಿಯಾಗುತ್ತಾರೆ. ಇದನ್ನು ಮಾಡದವರ ಹೆಗ್ಗಳಿಕೆ ವಸ್ತು ನಿಷ್ಠತೆಯದ್ದಲ್ಲ. ಪ್ರಮಾಣಿಕತೆಯದ್ದು. ಒಬ್ಬ ರಾಜನು ಒಳ್ಳೆಯವನೆಂದು, ದುಷ್ಟನೆಂದು ಇತಿಹಾಸದ ಆಕರಗಳನ್ನಾಧರಿಸಿ ಚಿತ್ರಿಸಬಹುದು. ಇದರಲ್ಲಿ ಸಮಾಜವು ಸಾಮಾನ್ಯವಾಗಿ ಒಪ್ಪಿಕೊಂಡಿರುವ ಮೌಲ್ಯಗಳನ್ನು ಜೋಡಿಸಿ ವಿಶ್ಲೇಷಿಸಬಹುದು. ಇದು ಚರ್ಚಾತೀತ ವಾಗದಿದ್ದರೂ ಇತಿಹಾಸದ ಸಾಕ್ಷಿಗಳೊಡನೆ ನಾವು ವ್ಯವಹಾರದ ಕುರಿತು ಪಾರದರ್ಶಕ ನಿಲುವನ್ನು ಪ್ರಕಟಿಸಬಹುದು. ಆದರೆ ಆ ರಾಜನನ್ನು ಒಳ್ಳೆಯವನೆಂದೂ, ನೀಚನೆಂದೂ, ಪ್ರತಿಪಾದಿಸುವ ಘನಕಾರ್ಯದ ಹಿಂದೆ ಇರುವ ಉದ್ದೇಶ ಏನು? ಇದೊಂದು ಮುಗ್ಧ ನಿಸ್ಸಹ ಅಧ್ಯಯನದ ವಿಷಯವೇ? ಇಂತಹ ಪ್ರತಿಪಾದನೆಗಳು ಕೇವಲ ಇತಿಹಾಸದ ಮಾಹಿತಿಯಷ್ಟೇ ಅಲ್ಲ. ಅವು ಇಂದಿನ ಸಮಾಜ, ರಾಜಕೀಯ ವ್ಯಕ್ತಿ ಸಂಬಂಧಗಳಿಗೆ ನೇರವಾಗಿ ಜೋಡಣೆಗೊಂಡಿವೆ ಎಂಬುದು ಸತ್ಯ. ವರ್ತಮಾನದ ಆಶಯ, ಕ್ರೋಧಗಳನ್ನು ಇತಿಹಾಸದ ಪಟಲದಲ್ಲಿ ಪ್ರಕ್ಷೇಪಿಸಿ ಸಮರ್ಥಿಸಿಕೊಳ್ಳುವುದರಿಂದಲೇ ಇಂತಹ ಚಿತ್ರಣಗಳು ಹುಟ್ಟುತ್ತವೆ. ಹಿಂದೆ ಹೀಗೆ ನಡೆದಿತ್ತು ಎಂಬ ಚಿತ್ರ ಹೀಗಿರಬೇಕಾಗಿತ್ತು ಎಂಬ ಚಿತ್ರಣದೊಂದಿಗೆ ಸೇರಿ ಹೋದಾಗ ಇತಿಹಾಸದೊಡನೆ ನಮ್ಮ ವ್ಯವಹಾರ ಸುಲಭವಾಗುತ್ತದೆ, ನಿರಾತಂಕವಾಗುತ್ತದೆ. ಇದನ್ನು ಸಾಧಿಸುವ ಪ್ರಯತ್ನ ನಾವು ಮಾಡುತ್ತಲೇ ಇರುತ್ತೇವೆ. ಇದಿಲ್ಲದಾಗ ಇತಿಹಾಸವು ಒಂದು ದೂರದ, ಅಸಂಬದ್ಧ ಅನಾವಶ್ಯಕ ವಸ್ತುವಾಗುತ್ತದೆ. ಅದರ ಬಗ್ಗೆ ಸೆಳೆತ ಆಕರ್ಷಣೆಗಳೂ ಕೃಶವಾದಾಗ ಇತಿಹಾಸವು ಅಧ್ಯಯನ ವಿಷಯವಾಗಿ ಉಳಿಯುವುದಿಲ್ಲ; ಉಳಿದರು ಬೆಳೆಯುವುದಿಲ್ಲ.