ಪರಿಚಯ

ಇತಿಹಾಸಕಾರ ಬರೆದದ್ದೆಲ್ಲ ಇತಿಹಾಸವಲ್ಲ. ಸಂಶೋಧನೆ ಒಂದು ಹೊಸ ಒಳನೋಟವನ್ನು ಕೊಡುವಂತಿರಬೇಕು. ವಸ್ತುನಿಷ್ಠವಾಗಿರಬೇಕು. ಪಾರದರ್ಶಕ ಮಾದರಯಲ್ಲಿ ಇರಬೇಕು. ಇತಿಹಾಸ ಗತಕಾಲವೆಂಬ ಭೂಮಿಯನ್ನು ಅಗೆದು ಆಕರವೆಂಬ ಮಣ್ಣನ್ನು ಸಂಗ್ರಹಿಸಿ ಆಕರ ವಿಶ್ಲೇಷಣೆ ಎಂಬ ವೈಜ್ಞಾನಿಕ ಪ್ರಕ್ರಿಯೆಯಲ್ಲಿ ಉತ್ಪಾದಿಸಲ್ಪಟ್ಟ ಚಿನ್ನವಾಗಬೇಕು. ಹೆಜ್ಜೆ ಹೆಜ್ಜೆಗೆ ಹಾದಿ ತಪ್ಪುವ ಎಲ್ಲ ಸಂದರ್ಭಗಳು ಸಂಶೋಧಕನಿಗಿದೆ. ಇಂತಹ ಸಂದರ್ಭಗಳನ್ನೆಲ್ಲ ಜಯಿಸಿದರಷ್ಟೆ ಸಾಲದು ಸ್ವಾರ್ಥ, ಪೂರ್ವಗ್ರಹಗಳು, ಸಿದ್ಧಾಂತಗಳು, ಬೇಕುಬೇಡಗಳೆಂಬ ತನ್ನೊಳಗಿರುವ ಅಪಾಯಕಾರಿ ಪ್ರವೃತ್ತಿಯಿಂದಲೂ ಸಂಶೋಧಕ ಹೊರಬರಬೇಕು. ಆಗ ಮಾತ್ರ ಇತಿಹಾಸದ ಸತ್ಯಗಳು ನಮಗೆದುರಾಗುತ್ತವೆ. ಇತಿಹಾಸದ ಸತ್ಯಗಳನ್ನು ಹುಡುಕುವ ಪ್ರಕ್ರಿಯೆಯ ಪ್ರಧಾನ ಅಂಶಗಳೇ ಆಕರಗಳ ಸಂಗ್ರಹ ಮತ್ತು ಆಕರಗಳ ವಿಶ್ಲೇಷಣೆ.

ಆಕರಗಳ ಬಾಹ್ಯ ವಿಶ್ಲೇಷಣೆ

ನಾವು ಸಂಗ್ರಹಿಸಿದ ಆಕರಗಳನ್ನು ಅವುಗಳ ಸತ್ಯಾಸತ್ಯತೆಗೆ ಒಳಪಡಿಸುವುದು ಅಂದರೆ ಆಕರವನ್ನು ಯಾವುದಕ್ಕೆ ಸಂಬಂಧಿಸಿದ್ದೆಂದು ತಿಳಿದಿದ್ದೇವೊ ಅದು ನಿಜವಾಗಿಯೂ ಅದೇ ಆಕರವೇ ಅಥವಾ ನಕಲಿಯೇ ಎಂಬುದನ್ನು ತಿಳಿಯುವುದು ಅಗತ್ಯ. ಹಾಗೆಯೇ ಆ ಆಕರವನ್ನು ಕೇವಲ ಒಬ್ಬ ಬರಹಗಾರ ಬರೆದಿರುವನೇ ಅಥವಾ ಹಲವು ವ್ಯಕ್ತಿಗಳ ಕೈ ಆ ಬರಹದಲ್ಲಿದೆಯೇ ಎಂಬುದು ಬಹಳ ಮುಖ್ಯ. ಆಕರ ಸೃಷ್ಟಿ ಯಾರಿಂದಾಯಿತು ಮತ್ತು ಯಾವ ಸ್ಥಳದಲ್ಲಿ ಆಯಿತೆಂಬದು ಕೂಡ ಬಹಳ ಮುಖ್ಯವಾಗುತ್ತದೆ. ಇದೇ ರೀತಿ ಆಕರ ಸೃಷ್ಟಿಯಾದ ಕಾಲ ಯಾವುದು ಇಡೀ ಆಕರದಲ್ಲಿರುವ ಮಾಹಿತಿ ಒಂದೇ ಕಾಲಕ್ಕೆ ಸಂಬಂಧಿಸಿದ್ದೇ ಅಥವಾ ಬೇರೆ ಬೇರೆ ಕಾಲದಲ್ಲಿ ಬರೆಯಲ್ಪಟ್ಟಿದೆಯೇ ಎಂಬುದು ಕೂಡ ತಿಳಿಯಬೇಕಾಗುತ್ತದೆ. ಉದಾಹರಣೆಗೆ ಅಲಹಾಬಾದ್ ಸ್ತಂಭ ಶಾಸನದಲ್ಲಿ ಅಶೋಕನ ಶಾಸನ ಮತ್ತು ಸಮುದ್ರಗುಪ್ತನ ಶಾಸನಗಳೆರಡೂ ಕಾಣಸಿಗುತ್ತವೆ. ಕೆಲವು ಪ್ರಾಚೀನ ಕೃತಿಗಳು ಒಬ್ಬನಿಂದ ರಚಿತವಾಗಿವೆ ಎಂದು ಹೇಳಿಕೊಳ್ಳುತ್ತಿದ್ದರೂ ಅವು ಹಲವಾರು ಶತಮಾನಗಳಲ್ಲಿ ಬೆಳೆಯುತ್ತ ಬಂದಿರುವುದನ್ನು ನಾವು ನೋಡಬಹುದು. ಉದಾಹರಣೆಗೆ ರಾಮಾಯಣ ಮತ್ತು ಮಹಾಭಾರತ. ಆಕರಗಳ ಸತ್ಯಾಸತ್ಯತೆಯನ್ನು ಪ್ರಮಾಣೀಕರಿಸಲು ಹಲವಾರು ವೈಜ್ಞಾನಿಕ ವಿಧಾನಗಳನ್ನು ನಮ್ಮ ಸಂಶೋಧಕರು ಬಳಸುತ್ತಾರೆ. ಅವುಗಳಲ್ಲಿ ಮುಖ್ಯವಾದ ಕೆಲವು ವಿಧಾನಗಳು ಹೀಗಿವೆ:

ಲಿಪಿಶಾಸ್ತ್ರ

ನಮ್ಮ ಬರವಣಿಗೆ ಶೈಲಿ ಮತ್ತು ಲಿಪಿ ಕಾಲದಿಂದ ಕಾಲಕ್ಕೆ, ದೇಶದಿಂದ ದೇಶಕ್ಕೆ ಬದಲಾಗುತ್ತ ಹೋದದ್ದು ಈಗ ನಮಗೆ ತಿಳಿದ ವಿಷಯವೇ ಸರಿ. ಈಗ ನಮ್ಮ ಸಂಶೋಧಕರು ಯಾವ ಶತಮಾನದಲ್ಲಿ ಯಾವ ಪ್ರದೇಶಗಳಲ್ಲಿ ಯಾವ ತರಹದ ಭಾಷಾ ಶೈಲಿ ಮತ್ತು ಲಿಪಿ ಬಳಕೆಯಲ್ಲಿತ್ತು ಎಂಬುದನ್ನು ಪತ್ತೆ ಹಚ್ಚಿದ್ದಾರೆ. ನಮಗೆ ದೊರಕಿದ ಆಕರದ ಭಾಷಾ ಶೈಲಿ ಮತ್ತು ಲಿಪಿ ಆ ಆಕರದ ಸ್ಥಳ ಮತ್ತು ಕಾಲಮಾನಕ್ಕೆ ಹೊಂದಿಕೆಯಾಗುತ್ತದೆಯೇ ಎಂದು ನಾವು ತಿಳಿದುಕೊಳ್ಳುವುದು ಅಸಾಧ್ಯವೇನಲ್ಲ.

ಪಠ್ಯ ವಿಮರ್ಶೆ

ಉದಾಹರಣೆಗೆ ನಮಗೊಂದು ರವಿಕೀರ್ತಿ ಬರೆದ ಶಾಸನ ದೊರೆಯಿತೆಂದು ಭಾವಿಸಿ ಅದನ್ನು ರವಿಕೀರ್ತಿಯೇ ಬರೆದಿರುವನೇ ಅಥವಾ ಅವನ ಹೆಸರಿನಲ್ಲಿ ಇನ್ನಿತರರು ಬರೆದಿರುವರೇ ಎಂಬುದನ್ನು ದೃಢಪಡಿಸಿಕೊಳ್ಳಬೇಕಾದರೆ ರವಿಕೀರ್ತಿ ಬರೆದಿರುವನೆಂದು ದೃಢಪಟ್ಟ ಐಹೊಳೆ ಶಾಸನದ ಪಠ್ಯ, ಭಾಷಾಶೈಲಿ, ಪದಗಳ ಬಳಕೆ ಇತ್ಯಾದಿಗಳೊಂದಿಗೆ ಹೋಲಿಕೆ ಮಾಡಿ ನೋಡಿದಾಗ ನಮಗೆ ಸತ್ಯಾಸತ್ಯತೆ ತಿಳಿಯುತ್ತದೆ.

ಪಠ್ಯದ ಕರ್ತೃ ಯಾರೆಂಬುದನ್ನು ತಿಳಿಯುವುದು ಕೂಡ ಅಗತ್ಯ

ನಮಗೆ ದೊರಕಿದ ಆಕರದಲ್ಲಿ ಅದನ್ನು ಬರೆದವನಾರೆಂಬುದು ತಿಳಿಸಲ್ಪಟ್ಟಿದ್ದರೆ ಸರಿ. ಒಂದು ವೇಳೆ ಆಕರ ಮಾತ್ರ ದೊರಕಿ ಅದನ್ನು ಬರೆದವನು ಯಾರೆಂಬುದು ತಿಳಿಯದಾದರೆ ಆ ಅನಾಮಿಕನನ್ನು ಊಹಿಸುವುದು ಕೂಡ ಮುಖ್ಯವಾಗುತ್ತದೆ. ಉದಾಹರಣೆಗೆ ವ್ಯಾಸರಿಂದ ರಚಿತವಾಯಿತೆಂದು ತಿಳಿಯಲ್ಪಡುವ ಮಹಾಭಾರತ ಇಂದು ಬೃಹದಾಕಾರವಾಗಿ ಬೆಳೆದುಬಂದಿದೆ. ಇದರಲ್ಲಿರುವ ನಂತರ ಸೇರ್ಪಡೆಗೊಂಡ ಭಾಗಗಳು ಯಾವುವು ಎಂಬುದು ಬಹಳ ಮುಖ್ಯ. ಮೂಲ ಕಥೆ ಯಾವುದು ಎಂಬುದೂ ಮುಖ್ಯ. ಕೌಟಿಲ್ಯನಿಂದ ರಚಿಸಲ್ಪಟ್ಟ ‘ಅರ್ಥಶಾಸ್ತ್ರ’ದಲ್ಲಿ ಗುಪ್ತರ ಕಾಲದ ಶಬ್ದಗಳು ಕಂಡುಬರುವ ಶ್ಲೋಕಗಳು ಇವೆ ಎಂಬುದನ್ನು ಕೆಲವು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಹಾಗೆಯೇ ಅದೆಷ್ಟೋ ಶಾಸನಗಳಲ್ಲಿ ಕಂಡುಬರುವ ಶ್ಲೋಕಗಳನ್ನು ವ್ಯಾಸ, ಮನು, ವಾಲ್ಮೀಕಿ ಮುಂತಾದವರ ಹೆಸರಿನೊಂದಿಗೆ ತಳಕು ಹಾಕಲಾಗಿದೆ. ಆ ಶ್ಲೋಕಗಳಿಗೆ ಮಹತ್ವ ಬರಲಿ ಎಂದು ಹೀಗೆ ಮಾಡಲಾಗಿದೆ.

ಪಠ್ಯದಲ್ಲಿನ ದೋಷಗಳ ಸಮಸ್ಯೆ ಮತ್ತು ಪರಿಹಾರ

ಸಾಹಿತ್ಯ ಮತ್ತು ಶಾಸನದ ಪಠ್ಯಗಳಲ್ಲಿ ಅದೆಷ್ಟೋ ದೋಷಗಳಿವೆ. ಈ ದೋಷಗಳು ಉದ್ದೇಶಪೂರ್ವಕವಾಗಿರಬಹುದು ಅಥವಾ ಉದ್ದೇಶರಹಿತವಾಗಿರಬಹುದು. ಬರಹಗಾರನ ತಪ್ಪಿನಿಂದ ದೋಷ ಉಂಟಾಗಿರಬಹುದು ಅಥವಾ ಬರಹಗಾರ ಓದುಗನನ್ನು ದಿಕ್ಕು ತಪ್ಪಿಸಲು ತಪ್ಪೆಸಗಿರಬಹುದು. ಪಠ್ಯ ವಿಮರ್ಶೆ (Textual Criticism) ವಿಧಾನದ ಮೂಲಕ ಹಲವು ಸಮಾನ ಪಠ್ಯಗಳನ್ನಿಟ್ಟು ಪರಸ್ಪರ ಹೋಲಿಕೆ ಮಾಡಿ ಈ ತರಹದ ತಪ್ಪುಗಳನ್ನು ನಿವಾರಿಸಬಹುದು.

ಆಕರಗಳ ಕಾಲಮಾನ ಪತ್ತೆ ಹಚ್ಚುವುದು

ಆಕರಗಳಲ್ಲಿ ಕಾಲಮಾನದ ಉಲ್ಲೇಖವಿದ್ದರೂ, ಇಲ್ಲದಿದ್ದರೂ ಅವು ಸೃಷ್ಟಿಯಾದ ಕಾಲವನ್ನು ಅವುಗಳಲ್ಲಿ ಬಳಸಿರುವ ಭಾಷಾಶೈಲಿ (Phililogo) ಯನ್ನು ಆಧರಿಸಿ ನಿರ್ಧರಿಸಬಹುದು. ಯಾವ ತರಹದ ಭಾಷಾಶೈಲಿ ಯಾವ ಶತಮಾನದ್ದೆಂದು ಈಗಾಗಲೇ ವಿದ್ವಾಂಸರಿಗೆ ತಿಳಿದಿದೆ. ಕೇವಲ ಭಾಷಾಶೈಲಿಯನ್ನಾಧರಿಸಿ ಲೊರೆಂಜೋವೆಲ್ಲಾ ಕಾನ್‌ಸ್ಟಂಟೈನ್‌ನ ದೇಣಿಗೆ ಪತ್ರವನ್ನು ನಕಲಿ ಎಂದು ಸಿದ್ಧಪಡಿಸಿದ. ಹಾಗೆಯೇ ಬಳಸಿದ ಶಾಯಿ ಮತ್ತು ವಸ್ತುವನ್ನು ರಾಸಾಯನಿಕ ಪರೀಕ್ಷೆಗೆ ಒಳಪಡಿಸಿದರೆ ದಾಖಲೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಬಹುದು.

ಆಕರಗಳ ಆಂತರಿಕ ವಿಶ್ಲೇಷಣೆ (Internal Criticism)

ಆಕರಗಳ ಬಾಹ್ಯ ವಿಮರ್ಶೆ ಮುಗಿದಾಗ ಆಕರಗಳ ಕಾಲಮಾನ, ಕರ್ತೃ, ಸ್ಥಳ ಮುಂತಾದ ವಿಷಯಗಳ ಸತ್ಯಾಸತ್ಯತೆ ನಮಗೆ ತಿಳಿಯುತ್ತದೆ. ಇದರ ನಂತರ ಪ್ರಾರಂಭವಾಗುವುದೇ ಆಂತರಿಕ ವಿಮರ್ಶೆ. ಆಕರಗಳ ಆಂತರಿಕ ವಿಮರ್ಶೆ ಬಹಳ ಉನ್ನತಮಟ್ಟದ್ದಾಗಿದೆ ಮತ್ತು ಕಷ್ಟಕರವಾಗಿದೆ. ಇದರಲ್ಲಿ ಎರಡು ವಿಧ.

ಧನಾತ್ಮಕ ಆಂತರಿಕ ವಿಮರ್ಶೆ (Positive Internal Criticism)

ಈ ವಿಮರ್ಶೆಯ ಮೂಲ ಉದ್ದೇಶ ಆಕರಗಳ ಶಬ್ದಾರ್ಥವನ್ನು ಸರಿಯಾಗಿ ತಿಳಿದುಕೊಳ್ಳುವುದು. ಲೇಖಕ ಬಳಸಿದ ಪದಗಳ ಅರ್ಥೈಸುವಿಕೆ. ಒಂದೇ ರೀತಿಯ ಪದಗಳು ಬೇರೆ ಬೇರೆ ಸಂದರ್ಭಗಳಲ್ಲಿ ಬಳಕೆಯಾದಾಗ ಬೇರೆ ಬೇರೆ ಅರ್ಥವನ್ನು ಕೊಡುತ್ತವೆ. ಒಂದೇ ಪದ ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ಅರ್ಥವನ್ನು ಪಡೆದುಕೊಳ್ಳುತ್ತದೆ. ಉದಾಹರಣೆಗೆ ವೈದಿಕ ಕಾಲದಲ್ಲಿ ಉಲ್ಲೇಖಿತವಾದ ‘ರಾಜ’ ಎಂಬ ಪದ ಸೂಚಿಸುವುದನ್ನೇ ಗುಪ್ತರ ಕಾಲದ ‘ರಾಜ’ ಎಂಬ ಪದ ಸೂಚಿಸುವುದಿಲ್ಲ. ಈ ಹಂತದಲ್ಲಿ ಬಳಸಿದ ಶಬ್ದಗಳ ಸರಿಯಾದ ಅರ್ಥೈಸುವಿಕೆ ಪ್ರಧಾನವಾದ ಕ್ರಿಯೆ.

ಆಕರದಲ್ಲಿ ಬಳಸಿದ ಶಬ್ದಗಳನ್ನು ಸರಿಯಾಗಿ ಅರ್ಥೈಸಿದ ನಂತರ ಮಾಡಬೇಕಾದ್ದು ಲೇಖಕನ ನಿಜವಾದ ಚಿಂತನೆಗಳು ಏನು? ವಿಚಾರಗಳು ಏನು? ಏನನ್ನು ಹೇಳಲು ಹೊರಟಿದ್ದಾನೆ ಮತ್ತು ಏನಾದರೂ ಮುಚ್ಚಿಡಲು ಪ್ರಯತ್ನಿಸಿದ್ದಾನೆಯೆ ಎಂಬುದನ್ನು ಪತ್ತೆ ಹಚ್ಚಬೇಕು. ಪರೋಕ್ಷ ಹೇಳಿಕೆಗಳು ಸಾಂಕೇತಿಕವಾಗಿ ವಿಚಾರಗಳನ್ನು ಪ್ರಸ್ತುತಪಡಿಸುವ ಕ್ರಮ ಮುಂತಾದವನ್ನು ಸರಿಯಾಗಿ ವಿಶ್ಲೇಷಣೆಗೆ ಒಳಪಡಿಸಬೇಕು. ಇಲ್ಲಿ ಸಂಶೋಧಕ ಕೆಲವು ಅಂಶಗಳನ್ನು ಗಮನದಲ್ಲಿರಿಸಬೇಕಾಗುತ್ತದೆ.

೧. ಆಕರಗಳ ಕಾಲಮಾನದಲ್ಲಿದ್ದ ಭಾಷಾಶೈಲಿ ಮತ್ತು ಪದ ಬಳಕೆಯನ್ನು ಸಂಶೋಧಕ ಸರಿಯಾಗಿ ತಿಳಿದಿರಬೇಕು.

೨. ಆಕರದ ಲೇಖಕನ ಪದ ಬಳಕೆಯನ್ನು ತಿಳಿದಿರಬೇಕು.

೩. ಭಾಷೆಯ ಬಳಕೆ ಊರಿನಿಂದ ಊರಿಗೆ ಕಾಲದಿಂದ ಕಾಲಕ್ಕೆ ಸಮೂಹದಿಂದ ಸಮೂಹಗಳಿಗೆ ವೃತ್ತಿಯಿಂದ ವೃತ್ತಿಗೆ ಬದಲಾಗುತ್ತದೆಂಬ ಅರಿವು ಇರಬೇಕು.

೪. ಸಂದರ್ಭಕ್ಕನುಗುಣವಾಗಿ ಪದಗಳ ಅರ್ಥ ಬದಲಾಗುವುದನ್ನು ಗಮನಿಸಬೇಕು.

೫. ಆಕರಗಳ ವಿಶ್ಲೇಷಣೆಯನ್ನು ಸಂದೇಹದಿಂದ ಪ್ರಾರಂಭಿಸಬೇಕು.

೬. ಪ್ರಾಚೀನ ಪದಗಳಿಗೆ ಆಧುನಿಕ ಅರ್ಥವನ್ನು ಹುಡುಕುವ ಪ್ರಯತ್ನಕ್ಕೆ ಕೈಹಾಕಬಾರದು. ಹೀಗೆ ಮಾಡಿದಾಗ ಮಾತ್ರ ಸಂಶೋಧಕ ಆಕರದ ಪಠ್ಯ ಮತ್ತು ಲೇಖಕನು ಹೇಳಲು ಹೊರಟ ವಿಚಾರ ಚಿಂತನೆಗಳ ಬಗ್ಗೆ ಸರಿಯಾದ ಅರಿವು ಮೂಡುತ್ತದೆ.

ಋಣಾತ್ಮಕ ಆಂತರಿಕ ವಿಶ್ಲೇಷಣೆ (Negative internal criticism)

ಇಲ್ಲಿ ಆಕರಗಳಲ್ಲಿ ದೊರಕಿದ ಚಿಂತನೆ ಮತ್ತು ಮಾಹಿತಿಯನ್ನು ಒರೆಗೆ ಹಚ್ಚಿ ನೋಡಬೇಕಾಗುತ್ತವೆ. ಪ್ರತಿಯೊಂದು ಮಾಹಿತಿಯನ್ನು ಸಹ ಸಂದೇಹದಿಂದ ನೋಡಿದ, ಪರೀಕ್ಷಿಸಿ, ವಿಶ್ಲೇಷಿಸಿ ಮತ್ತೆ ಸತ್ಯವೆಂದು ಕಂಡುಬಂದಲ್ಲಿ ಅದನ್ನು ಒಪ್ಪಿಕೊಳ್ಳಬೇಕು. ಲೇಖಕ ಕೊಟ್ಟ ಮಾಹಿತಿ ಎರಡು ಕಾರಣಗಳಿಂದಾಗಿ ಒತಪ್ಪಾಗಿರಬಹುದು. ಒಂದು ಲೇಖಕನು ಅಸಮರ್ಥನಿರಬಹುದು ಅಥವಾ ಅವನು ಕಪಟಿಯಾಗಿರಬಹುದು.

ದೋಷಪೂರಿತ ಮಾಹಿತಿಗೆ ಕಾರಣವಾಗುವ ಅಂಶಗಳು

ಅಹಂಕಾರ

ಲೇಖಕ ತನ್ನ ಪಠ್ಯದಲ್ಲಿ ತನಗೆ ಬೇಕಾದವರನ್ನು ಅಥವಾ ತನ್ನನ್ನು ವೈಭವೀಕರಿಸಿರಬಹುದು. ಹೊಗಳಿಕೆಯ ಭಾಗಗಳು ಯಾವತ್ತೂ ಸತ್ಯವನ್ನು ಮರೆಮಾಚಿಸುತ್ತವೆ.

ಇನ್ನೊಬ್ಬರನ್ನು ಖುಷಿ ಪಡಿಸುವ ತನಕ, ಕೆಲವು ಬರಹಗಾರರಿಗೆ ಮಾಹಿತಿಗಿಂತಲೂ ತನ್ನ ಭಾಷಾ ಪ್ರೌಢಿಮೆ ಪ್ರರ್ಶಿಸುವ ತವಕ ಇರುತ್ತದೆ. ಇನ್ನು ಕೆಲವೊಮ್ಮೆ ತನಗೆ ಇನ್ನೊಬ್ಬನಿಂದ ಏನಾದರೂ ನಿರೀಕ್ಷೆ ಇದ್ದರೆ ಅಂಥವರನ್ನು ಸ್ವಾರ್ಥದಿಂದ ಹೊಗಳುವ ಪರಿಪಾಠವಿರುತ್ತದೆ. ಲೇಖಕರಿಗೂ ಮಾಹಿತಿಗೂ ಇರುವ ಸಂಬಂಧವನ್ನು ನಾವಿಲ್ಲಿ ಗ್ರಹಿಸಬೇಕು.

ವೈಯಕ್ತಿಕ ಆಕಾಂಕ್ಷೆ

ಸತ್ಯದ ಒಂದು ಮುಖವನ್ನು ಮುಚ್ಚಿಟ್ಟು ಇನ್ನೊಂದು ಮುಖವನ್ನು ಮಾತ್ರ ಪ್ರಕಟಪಡಿಸಿ ತನಗೆ ಬೇಕಾದವರನ್ನು ರಕ್ಷಿಸುವ ಅಥವಾ ಮಾನ ಕಾಪಾಡುವ ಕೆಲ ಕೆಲವೊಮ್ಮೆ ಲೇಖಕ ಮಾಡುವುದಿದೆ. ಪ್ರಾಚೀನ ಮತ್ತು ಮಧ್ಯಯುಗೀನ ಕಾಲದಲ್ಲಿ ರಾಜಾಶ್ರಯದಲ್ಲಿದ್ದ ಲೇಖಕರಂತೂ ಸಂಪೂರ್ಣ ಪೂರ್ವಗ್ರಹ ಪೀಡಿತರಾಗಿರುವುದುಂಟು.

ವೈಯಕ್ತಿಕ ಅಭಿಪ್ರಾಯ ಭೇದ

ಒಂದು ಘಟನೆಯನ್ನು ವಿವರಿಸುವಾಗ ಲೇಖಕನು ಅಭಿಪ್ರಾಯಗಳು ಅಡ್ಡಬಂದು ಮಾಹಿತಿ ತಿರುಚುವುದಿದೆ. ಉದಾಹರಣೆಗೆ ಬಿರ್ಕ್ ಫ್ರೆಂಚ್ ಕ್ರಾಂತಿಯಲ್ಲಿ ಕೆಟ್ಟದನ್ನೇ ಕಾಣುತ್ತಾನೆ. ಬಿದೌನಿ ಅಕ್ಬರನಲ್ಲಿ ಕೆಟ್ಟ ಅಂಶಗಳ ಪಟ್ಟಿ ಮಾಡುವುದನ್ನು ಮರೆಯುವುದಿಲ್ಲ. ತನ್ನ ಜಾತಿ, ವರ್ಗ, ಸಮೂಹ, ಭಾಷೆ, ಧರ್ಮ ಅಥವಾ ಅದಕ್ಕೆ ವಿರುದ್ಧವಾದದ್ದರ ಬಗ್ಗೆ ಬರೆಯುವಾಗಲಂತೂ ವಸ್ತುನಿಷ್ಠತೆಯಿಂದ ಜಾರಿ ಹೋಗುವ ಸಂದರ್ಭಗಳೇ ಜಾಸ್ತಿ.

ಒತ್ತಡಗಳು

ಅಧಿಕಾರ ಭಯ, ಸಂಪ್ರದಾಯಗಳ ಬಗ್ಗೆ ಭಯ, ಸಮಾಜದ ಭಯ ಮುಂತಾದ ಭಯಗಳು ಸತ್ಯ ಹೇಳಬೇಕೆಂದು ಮನಸ್ಸಿರುವ ಲೇಖಕರಿಗೂ ಸತ್ಯ ಹೇಳದಂತೆ ತಡೆಯುವ ಒತ್ತಡಗಳನ್ನು ಕಾನಬಹುದು.

ಹಾಗೆಯೇ ಸತ್ಯವಂತನೂ ವಸ್ತುನಿಷ್ಠನೂ ಆಗಿರುವ ಲೇಖಕನ ಬರವಣಿಗೆಗಳಲ್ಲಿ ಕೂಡ ದೋಷಗಳಿರಬಹುದು ಅವುಗಳಿಗೆ ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು:

ಸತ್ಯ ಹೇಳುವ ಸಾಮರ್ಥ್ಯ : ಲೇಖಕ ವ್ಯಕ್ತಿ ಅಥವಾ ಘಟನೆಗೆ ಸಮೀಪವಿದ್ದಾನೆಯೆ ಮತ್ತು ಘಟನೆಯನ್ನು ಏಕಾಗ್ರತೆಯಿಂದ ಗ್ರಹಿಸಿದ್ದಾನೆಯೆ ಎಂಬುದರಿಂದ ವಸ್ತುನಿಷ್ಠತೆ ಹೆಚ್ಚುತ್ತದೆ. ಘಟನೆ ನಡೆಯುವಾಗ ಸಮೀಪವಿಲ್ಲದವನು, ಇದ್ದರೂ ಏಕಾಗ್ರತೆಯಿಂದ ಗಮನಿಸಿದವನು ಕೊಟ್ಟ ಮಾಹಿತಿ ವಸ್ತುನಿಷ್ಠವಲ್ಲ.

ಪ್ರಬಲ ಇಚ್ಛಾಶಕ್ತಿಯ ಕೊರತೆ: ಲೇಖಕರಿಗೆ ಕೆಲವೊಮ್ಮೆ ಸತ್ಯವನ್ನು ಹೇಳುವ ಇಚ್ಛಾಶಕ್ತಿಯ ಕೊರತೆ ಇರಬಹುದು ಅಥವಾ ಸತ್ಯ ಹೇಳುವುದರಿಂದ ಬಹುಜನರ ಮನಸ್ಸಿಗೆ ನೋವಾಗಬಹುದು ಎಂಬ ಭಾವನೆಗಳು ಕೆಲವೊಮ್ಮೆ ಸತ್ಯವನ್ನು ಮರೆಮಾಚಲು ಕಾರಣವಾಗುತ್ತದೆ.

ವೀಕ್ಷಣೆ ದೋಷಗಳು: ಮಾಹಿತಿದಾರನಿಗೆ ವೀಕ್ಷಣೆ ದೋಷಗಳಿರಬಹುದು. ತನ್ನ ನೋಟದಲ್ಲಾದ ತಪ್ಪುಗಳು ನೋಡುಗನಿಗೆ ತಿಳಿದಿರುವುದಿಲ್ಲ. ವೀಳ್ಯೆದೆಲೆ ಹಾಕಿ ಉಗಿಯುವವನನ್ನು ನೋಡಿ ಅವನು ರಕ್ತ ಕಾರುತ್ತಿರಬಹುದೆಂದು ಭಾವಿಸಿದ ವಿದೇಶಿ ಬರಹಗಳಿವೆ.

ಒತ್ತಡದ ಸಂದರ್ಭದಲ್ಲಿ ವೀಕ್ಷಣೆ: ತನ್ನಿಂದ ದೂರವಿರುವ, ಸರಿಯಾಗಿ ಕಾಣಿಸದ, ಕೇಳಿಸದ ಜನರ ಗುಂಪಿನ ಮಧ್ಯದಲ್ಲಿ ನೋಡಿದ ಗುಂಪು ಘರ್ಷಣೆಯಲ್ಲಿ ಅಕಸ್ಮಾತ್ ಕಂಡುಬಂದ ನೋಟಗಳನ್ನು ಬರೆದಿಡುವುದು ಬಲುಕಷ್ಟ. ಅಂಥ ಒತ್ತಡದಲ್ಲಿ ಬರೆಯಲ್ಪಟ್ಟ ಬರವಣಿಗೆಗಳು ವಸ್ತುನಿಷ್ಠವಲ್ಲ.

ತನ್ನದೇ ಬೇಕು ಬೇಡಗಳ ಪ್ರಭಾವ: ಲೇಖಕ ಒಬ್ಬ ಮಾನವನಾಗಿರುವುದರಿಂದ ಅವನಿಗೆ ತನ್ನದೇ ಬೇಕುಬೇಡಗಳಿರುವುದರಿಂದ ನಮಗೆ ಬೇಕಾದ ಮಾಹಿತಿಯನ್ನು ಅವನು ನಗಣ್ಯವೆಂದು ಭಾವಿಸಬಹುದು. ಒಬ್ಬ ಸಂಪ್ರದಾಯಸ್ಥನಿಗೆ ಶೂದ್ರರ ಶೋಷಣೆ ಸಹಜವೆಂದು ಕಾಣಬಹುದು.

ಅನುಭವ ಮತ್ತು ವಿವೇಕ: ಲೇಖಕ ಅಥವಾ ವರದಿಗಾರ ಸತ್ಯವಂತ ಮತ್ತು ವಸ್ತುನಿಷ್ಠ ನಾಗಿದ್ದರಷ್ಟೆ ಸಾಲದು. ಅವನು ಅನುಭವಿ ಜ್ಞಾನಿ ಮತ್ತು ವಿವೇಕಿ ಆಗಿರಬೇಕಾಗುತ್ತದೆ. ಇಲ್ಲದಿದ್ದರೆ ಅವನಿಗೆ ಸಮಾಜವನ್ನು, ಸಮಾಜದ ಆಗುಹೋಗುಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ.

ಮಾಹಿತಿ ವರದಿ ಮಾಡಿದ ಸಮಯ: ಘಟನೆ ನಡೆದ ತಕ್ಷಣ ವರದಿಯಾಗಿದೆಯೇ ಅಥವಾ ತುಂಬಾ ಸಮಯದ ನಂತರ ಅದರ ವರದಿಯಾಗಿದೆಯೇ ಎಂಬುದು ಮುಖ್ಯ. ಈ ಮೇಲಿನ ಅಂಶಗಳನ್ನೆಲ್ಲ ಸಂಶೋಧಕ ವೈಜ್ಞಾನಿಕವಾಗಿ ಪರಿಶೀಲಿಸಿದಾಗ ಗತಕಾಲದ ಸತ್ಯದ ಮುಖಗಳು ನಮಗೆ ಗೋಚರಿಸಲು ಸಾಧ್ಯ.

ಟಿಪ್ಪಣಿ ಮಾಡುವ ವಿಧಾನ

ಸಂಶೋಧಕ ಸಂಶೋಧನಾ ಪ್ರಬಂಧ ಬರೆಯುವ ಮೊದಲು ಮಾಹಿತಿಯ ಟಿಪ್ಪಣಿ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲಿ ಸಂಶೋಧಕ ಮುಖ್ಯವಾಗಿ ಗಮನಿಸಬೇಕಾದ ನೀತಿ ಏನೆಂದರೆ:

೧. ಯಾವುದನ್ನು ಟಿಪ್ಪಣಿ ಮಾಡಬೇಕು.
೨. ಹೇಗೆ ಟಿಪ್ಪಣಿ ಮಾಡಬೇಕು.
೩. ಹೇಗೆ ಮಾಹಿತಿ ವಿಂಗಡಣೆ ಮಾಡಬೇಕು.
೪. ಟಿಪ್ಪಣಿಯನ್ನು ಹೇಗೆ ಸಂಯೋಜಿಸಬೇಕು.

ಸಾಕಷ್ಟು ಮಾಹಿತಿ ಸಂಗ್ರಹಿಸಿದ ನಂತರ ಲೇಖಕ ಮಾಹಿತಿಯನ್ನು ಕಾರ್ಡ್ ಅಥವಾ ಸ್ಲಿಪ್ ಮಾದರಿಯಲ್ಲಿ ಸಿದ್ಧಪಡಿಸಿಕೊಳ್ಳಬೇಕು. ಈ ಕಾರ್ಡ್ ಅಥವಾ ಸ್ಲಿಪ್‌ಗಳು ಆಕರದಲ್ಲಿ ಚಿಕ್ಕದಾಗಿದ್ದರೆ ಒಳಿತು. ನಾವದನ್ನು ಸುಲಭವಾಗಿ ಸಂಗ್ರಹಿಸಬಹುದು ಅಥವಾ ನಮ್ಮೊಂದಿಗೆ ಒಯ್ಯಬಹುದು. ಒಂದೇ ಆಕರದಲ್ಲಿ ವಿವಿಧ ವಿಷಯಕ್ಕೆ ಸಂಬಂಧಿಸಿದ ಮಾಹಿತಿಗಳಿರಬಹುದು. ಇದನ್ನು ಬೇರೆ ಬೇರೆ ಕಾರ್ಡ್‌ಗಳಲ್ಲಿ ಸಂಗ್ರಹಿಸಬಹುದು. ಒಮ್ಮೆ ಒಂದು ಮಾದರಿಯನ್ನು ಆಯ್ದುಕೊಂಡ ಮೇಲೆ ಅದನ್ನು ಆಗೊಮ್ಮೆ ಈಗೊಮ್ಮೆ ಬದಲಿಸಬಾರದು. ಸಂಶೋಧನಾ ವಿಧಾನದಲ್ಲಿ ಒಂದು ಏಕರೂಪತೆ ಇರಬೇಕು. ಈ ಕಾರ್ಡ್ ಅಥವಾ ಸ್ಲಿಪ್‌ಗಳಲ್ಲಿ ಇರಬೇಕಾದ ಮಾಹಿತಿಗಳು ಕೆಳಕಂಡಂತೆ ಇರಬಹುದು. ಅವುಗಳೆಂದರೆ:

೧. ಕಾರ್ಡಿನ ಮೇಲೆ ‘ವಿಷಯ’ವನ್ನು ಬರೆಯಬೇಕು.
೨. ಕಾರ್ಡಿನ ಬಲತುದಿಯಲ್ಲಿ ಆಕರದ ದಿನಾಂಕವನ್ನು ನಮೂದಿಸಬೇಕು.
೩. ಕಾರ್ಡಿನಲ್ಲಿ ಇರುವ ಮಾಹಿತಿ ಪುಸ್ತಕದ್ದೋ, ನಿಯತಕಾಲಿಕೆಯದ್ದೋ, ಶಾಸನದ್ದೋ ಎಂಬುದನ್ನು ನಮೂದಿಸಿರಬೇಕು.
೪. ಮಾಹಿತಿಯನ್ನು ಸ್ಪಷ್ಟವಾಗಿ ಬರೆಯಬೇಕು.
೫. ಮಾಹಿತಿಯನ್ನು ಪಡೆದ ಪುಸ್ತಕದ ಪುಟಸಂಖ್ಯೆಯನ್ನು ಬರೆದಿರಬೇಕು.
೬. ಒಂದು ಪುಸ್ತಕದ ಹಲವು ಪುಟಗಳಿಂದ ಮಾಹಿತಿ ಪಡೆದಿದ್ದರೆ ಆ ಎಲ್ಲಾ ಪುಟಸಂಖ್ಯೆಗಳನ್ನು ನಮೂದಿಸಿರಬೇಕು.
೭. ಕಾರ್ಡಿನಲ್ಲಿರುವ ಮಾಹಿತಿಯನ್ನು ಕೊಟ್ಟ ಲೇಖಕನ ಹೆಸರು, ಅದನ್ನು ಪ್ರಕಟಿಸಿದವರು, ಇತ್ಯಾದಿ ವಿವರಗಳಿದ್ದರೆ ಒಳಿತು.

ಕಾರ್ಡಿನ ಉಪಯೋಗಗಳು

ಈ ಕಾರ್ಡ್ ಅಥವಾ ಸ್ಲಿಪ್ ಮಾದರಿಯಲ್ಲಿ ಹಲವು ಉಪಯೋಗಗಳು ಇವೆ. ಇವುಗಳನ್ನು ನಮಗೆ ಬೇಕಾದ ಹಾಗೆ ಸಂಯೋಜನೆ, ಪುನಃ ಸಂಯೋಜನೆ ಮಾಡಬಹುದು. ಒಂದು ಕಡೆಯಿಂದ ಒಂದು ಕಡೆಗೆ ಸುಲಭವಾಗಿ ಒಯ್ಯಬಹುದು. ಹೆಚ್ಚು ಮಾಹಿತಿಯನ್ನು ಪುನಃ ಸೇರಿಸಬಹುದು. ಒಂದೇ ಸಮಸ್ಯೆ ಎಂದರೆ ಕಾರ್ಡಿನಲ್ಲಿ ಎಲ್ಲ ಮಾಹಿತಿ ಬರೆಯಲು ನೆನಪಿರಬೇಕು. ಹಾಗೆಯೇ ಬಿಡಿ ಬಿಡಿಯಾದ ಕಾರ್ಡ್‌ಗಳನ್ನು ಜೋಪಾನವಾಗಿ ಕಾಪಾಡಬೇಕಾಗುತ್ತದೆ. ಸಂಶೋಧಕನಿಗೆ ಆಕರಗಳನ್ನು ಓದುವಾಗ ಎಲ್ಲ ಮಾಹಿತಿ ಬೇಕು ಎಂದು ಎನಿಸಬಹುದು. ಆದರೆ ಯಾವುದು ಸಂಶೋಧನೆಗೆ ಪ್ರಾಮುಖ್ಯವೊ ಅದನ್ನು ಮಾತ್ರ ಅವರು ದಾಖಲಿಸಬೇಕು.

ಆಕರ ವಿಶ್ಲೇಷಣೆ

ಇತಿಹಾಸ ‘ಸತ್ಯ’ವನ್ನು ನಿರ್ದಾಕ್ಷಿಣ್ಯವಾಗಿ ಹೇಳುತ್ತದೆ. ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ. ‘ಇತಿಹಾಸ’ ಒಂದು ನಿರ್ದಿಷ್ಟ ಜ್ಞಾನ ಎಂಬ ಅಭಿಪ್ರಾಯ ಹೊಂದಿದವನು ಸುಖಜೀವಿ. ಆದರೆ ಇಲ್ಲಿ ಮುಂದಿನ ಸಂಶೋಧನೆಗೆ ಅವಕಾಶವಿಲ್ಲ. ಈ ಅಭಿಪ್ರಾಯದಂತೆ ‘ಇತಿಹಾಸ’ವನ್ನು ಸ್ವಾಭಾವಿಕವಾಗಿ ಸಮಾಜ ರಕ್ಷಿಸಿಕೊಂಡು ಬಂದಿದೆ ಎಂಬ ತಿಳಿವು ಇದೆ. ಇದಕ್ಕೆ ಬದಲಾಗಿ ಇತಿಹಾಸವು ಹಿಂದಿನ ಘಟನೆಗಳ ಕುರಿತಾಗಿ ನಡೆಸುವ ಒಂದು ಪರದಾಟ. ಇತಿಹಾಸಕಾರರ ಕೈಯಲ್ಲಿರುವ ಟಾರ್ಚ್‌ಭೂತ ಕಾಲವನ್ನು ಅವಲೋಕಿಸುವ ಕತ್ತಲನ್ನು ಸಂಪೂರ್ಣವಾಗಿ ನಿವಾರಿಸಲಾರದು. ಆಗ ರೂಢಿಸಿಕೊಂಡ ಚಿತ್ರಗಳು ಅಸ್ಪಷ್ಟ, ಶಿಥಿಲ. ಭೂತಕಾಲವನ್ನು ಅರಿಯುವುದು ಒಂದು ಒಗಟು ಎಂಬುವವರಿಗೆ ಸಂಶೋಧನೆಯಲ್ಲಿ ಬಹಳ ಅವಕಾಶವಿದೆ.

ಇತಿಹಾಸಕಾರರಿಗೆ ಪ್ರಶ್ನೆಗಳು ಉದ್ಭವಿಸುತ್ತಲೇ ಇರಬೇಕು. ಪ್ರಶ್ನೆಗಳಿಗೆ ಉತ್ತರ ದೊರಕಿದಾಗ ಇನ್ನಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ‘ಇತಿಹಾಸ’ ಮತ್ತು ನಮಗಿರುವ ಇತಿಹಾಸದ ಜ್ಞಾನದ ಎರಡೂ ಸಮಾನ ಅಲ್ಲ. ಇತಿಹಾಸದ ಜ್ಞಾನ ಇತಿಹಾಸಕಾರನ ಸೃಷ್ಟಿ. ಅದು ಸಹಜವಾಗಿ ಸಮಾಜದಲ್ಲಿ ಹುದುಗಿರುವುದಿಲ್ಲ. ಹೇಗೆ ಚಿನ್ನ ಭೂಮಿಯಲ್ಲಿದ್ದರೂ ಸಹಜವಾಗಿ ದೊರಕಲಾರದೋ, ವಿಭಿನ್ನ ಹಂತಗಳಲ್ಲಿ ಶುದ್ಧೀಕರಣಕ್ಕೊಳಪಟ್ಟಾಗ ಅದು ನಮಗೆ ಕಾಣುತ್ತದೋ ಹಾಗೆ ನಮ್ಮ ಸಮಾಜದ ಗತಕಾಲದ ಕುರುಹುಗಳನ್ನು ಇತಿಹಾಸಕಾರರು ವಿಭಿನ್ನ ವೈಜ್ಞಾನಿಕ ಸಂಶೋಧನಾ ಪ್ರಕ್ರಿಯೆಗಳ ಮೂಲಕ ರಚಿಸುತ್ತಾರೆ. ಇಷ್ಟಾದರೂ ಇತಿಹಾಸಕಾರರಿಗಾದ ದರ್ಶನ ಅವಿಚ್ಛಿನ್ನ ಕೃತ್ಯವಲ್ಲ. ಸತ್ಯ ಏಕರೂಪಿಯಲ್ಲ. ಸತ್ಯ ಅನೇಕ ರೂಪವುಳ್ಳದ್ದು ಎಂಬ ಅರಿವು ನಮಗಿರಬೇಕು. ಒಬ್ಬ ಸಂಶೋಧಕ ನೋಡದ ಸತ್ಯವನ್ನು ಇನ್ನೊಬ್ಬ ನೋಡಬಲ್ಲ ಎಂಬ ಜ್ಞಾನ ನಮಗಿರಬೇಕು.

ಇತಿಹಾಸವನ್ನು ಲೇವಡಿ ಮಾಡುವ ಜನಕ್ಕೆ ಇತಿಹಾಸ ಒಂದು ಅಪೂರ್ಣ, ಆದರೆ ಬೆಳೆಯುತ್ತಿರುವ ಜ್ಞಾನ. ನಾವೀಗ ತಿಳಿದದ್ದು ಹಿಂದಿನವರಿಗೆ ತಿಳಿದಿರಲಿಲ್ಲ. ನಮಗಾಗಿ ತಿಳಿಯದ್ದು ಮುಂದಿನವರು ತಿಳಿದಾರು ಎಂಬ ವಿಚಾರದ ಅರಿವಿಲ್ಲ. ನಮ್ಮ ಪ್ರಾಚೀನ ಇತಿಹಾಸದ ಜ್ಞಾನ ಮಾತ್ರ ಇತ್ತೀಚಿನದು ಎಂದು ಜನ ತಿಳಿದಾಗ ಘಾತಕ್ಕೊಳಗಾಗುತ್ತಾರೆ. ಇತಿಹಾಸ ಎಂಬ ಜ್ಞಾನ ಶಾಖೆ ನಿರಂತರ ಅನ್ವೇಷಣೆ ಮತ್ತು ಸಂಶೋಧನೆಗಳ ಫಲವಾಗಿ ಬೆಳೆದು ಬಂದಿದೆ. ಇದು ಅಪೂರ್ಣತೆಯೊಡನೆ ನಡೆಸುವ ನಿರಂತರ ಸಮರ.

ಇತಿಹಾಸದಲ್ಲಿ ಪ್ರಮುಖವಾದ ಪ್ರಶ್ನೆ ಈಗಾಗಲೇ, ಗತಿಸಿಹೋದ ಗತಕಾಲವನ್ನು ಅರಿಯಬಹುದೇ ಎಂಬುದು. ಇದಕ್ಕೆ ಉತ್ತರ ಇಲ್ಲ ಎನ್ನುವುದಾದರೆ ಇತಿಹಾಸ ಇಲ್ಲ. ಇದಕ್ಕೆ ಉತ್ತರ ಇದೆ ಎನ್ನುವುದಾದರೆ ಗತಕಾಲವನ್ನು ಅರಿಯುವ ಬಗೆ ಹೇಗೆ ಎನ್ನುವ ಪ್ರಶ್ನೆ ಮುಖ್ಯವಾಗುತ್ತದೆ. ಮಾನವನ ಸ್ಮರಣಶಕ್ತಿ ಸೀಮಿತ. ಕಾಲಕಳೆದಂತೆ ಅದು ಅಸ್ಪಷ್ಟವಾಗುತ್ತ ಹೋಗುತ್ತದೆ ಅಥವಾ ತನಗೆ ಅಗತ್ಯವೆಂದುಕೊಂಡು ಬಂದ ಘಟನೆಗಳನ್ನು ಮಾತ್ರ ನೆನಪಿನಲ್ಲಿಡುತ್ತದೆ.

ಹಾಗಾದರೆ ಸಾವಿರಾರು ವರ್ಷಗಳ ಇತಿಹಾಸವನ್ನು ಪುನಾರಚಿಸುವುದು ಸಾಧ್ಯವೇ? ಸಾಧ್ಯ ಎನ್ನುತ್ತದೆ ಇತಿಹಾಸಶಾಸ್ತ್ರ. ಇದಕ್ಕೆ ಮೂಲಾಧಾರವೇ ಆಕರಗಳು. ಭೂತಕಾಲ ಯಾವಾಗಲೂ ತನ್ನ ಕುರುಹುಗಳನ್ನು ವರ್ತಮಾನಕ್ಕೆ ಬಿಟ್ಟು ಹೋಗುತ್ತದೆ. ಈ ಕುರುಹುಗಳನ್ನಾಧರಿಸಿ ಭೂತಕಾಲದ ದರ್ಶನ ಸಾಧ್ಯ ಎನ್ನುವುದರ ಮೇಲೆ ಇತಿಹಾಸ ಶಾಸ್ತ್ರ ನಿಂತಿದೆ. ಹಾಗಾದರೆ ಈ ಕೆಲಸ ಸುಲಭವೇ? ಯಾರು ಬೇಕಾದರೂ ಮಾಡಬಹುದೇ? ಇಲ್ಲ. ಗತಕಾಲ ತನ್ನೆಲ್ಲ ಕುರುಹುಗಳನ್ನು ವರ್ತಮಾನಕ್ಕೆ ಬಿಟ್ಟು ಹೋಗಿದ್ದರೆ ಈ ಕೆಲಸ ಅಷ್ಟೇನೂ ಕಷ್ಟವಲ್ಲ.

ಆದರೆ ಭೂತಕಾಲ ತನ್ನೆಲ್ಲ ಕುರುಹುಗಳನ್ನು ಬಿಟ್ಟು ಹೋಗುವುದಿಲ್ಲ. ಬಿಟ್ಟು ಹೋದ ಕುರುಹುಗಳೆಲ್ಲ ದೀರ್ಘಾವಧಿ ಉಳಿಯುವುದಿಲ್ಲ. ಉಳಿದ ಕುರುಹುಗಳೆಲ್ಲ ಸಂಶೋಧಕರಿಗೆ ದೊರಕದಿರಬಹುದು. ದೊರಕಿದ ಆಕರಗಳನ್ನು ಅರ್ಥೈಸಲು ಇತಿಹಾಸಕಾರರು ವಿಫಲರಾಗಬಹುದು. ಸಿಕ್ಕಿದ ಆಕರಗಳಲ್ಲಿ ವಿದ್ಯೆ, ವೈಭವೀಕರಣ, ಪೂರ್ವಾಗ್ರಹಗಳು, ಏಕಮುಖಿ ಸತ್ಯ ತುಂಬಿರಬಹುದು. ಇತಿಹಾಸ ಸಂಶೋಧಕರ ಕೆಲಸ ಅಥವಾ ಇತಿಹಾಸ ಪುನಾರಚನೆ ಸುಲಭವೋ ಅಥವಾ ಕಷ್ಟವೋ ಎಂಬುದು ಸಂಕೀರ್ಣವಾದ ವಿಚಾರ. ಇತಿಹಾಸಕಾರರಿಗೆ ಒಬ್ಬಕವಿಯಂತೆ ಕೇವಲ ಸೃಜನಶೀಲ ಮನಸ್ಸಿದ್ದರೆ ಸಾಲದು. ಅವರಿಗೆ ಮೂಲ ಆಕರಗಳಿಲ್ಲದ ಏನೂ ಬರೆಯಲು ಸಾಧ್ಯವಿಲ್ಲ. ಹಾಗೆ ಬರೆದರೆ ಅದು ಇತಿಹಾಸವಾಗಲಾರದು.

ಆಕರಗಳ ಸಂಗ್ರಹಣೆ ಮತ್ತು ವಿಶ್ಲೇಷಣೆ ಪ್ರಕ್ರಿಯೆಯಲ್ಲಿ ಇತಿಹಾಸದ ಪುನಾರಚನೆಯ ಸೃಷ್ಟಿಯಾಗತ್ತದೆ. ಗತಕಾಲ ಬಿಟ್ಟು ಹೋದ ಕುರುಹುಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ, ವರ್ಗೀಕರಿಸಿದಾಗ ನಮಗೆ ಮೂಲ ಆಕರಗಳು ದೊರಕುತ್ತವೆ. ಇದು ಒಬ್ಬ ಕಟ್ಟಡ ನಿರ್ಮಾಪಕ ಕಟ್ಟಡಕ್ಕೆ ಬೇಕಾದ ಇಟ್ಟಿಗೆ, ಕಲ್ಲು, ಸಿಮೆಂಟು, ಮರಗಳು ಮುಂತಾದ ವಸ್ತುಗಳನ್ನು ಸಂಗ್ರಹಿಸುವ ಹಂತದಂತೆ. ಆಕರಗಳು ಬಹುವಿನ್ಯಾಸಗಳುಳ್ಳದ್ದು. ಲಿಖಿತ ಸಾಹಿತ್ಯ, ಅಲಿಖಿತ ಸಾಹಿತ್ಯ, ಶಾಸನಗಳು, ನಾಣ್ಯಗಳು, ಸ್ಮಾರಕಗಳು, ಉತ್ಖನನ ಸಾಮಗ್ರಿಗಳು ಇತ್ಯಾದಿ. ಇವುಗಳನ್ನು ಮುಖ್ಯವಾಗಿ ಪ್ರಾಥಮಿಕ ಆಕರಗಳು ಮತ್ತು ದ್ವಿತೀಯ ದರ್ಜೆಯ ಆಕರಗಳು ಎಂದು ವರ್ಗೀಕರಿಸುತ್ತಾರೆ.

ಸಾಮಾನ್ಯ ಜನರಿಗೆ ಅರ್ಥವಾಗದ, ಚದುರಿಹೋಗಿರುವ, ಆದರೆ ಘಟನೆಯ ಕಾಲಕ್ಕೆ ಘಟನೆಗೆ ನೇರವಾಗಿ ಸಂಬಂಧಿಸಿದ ದಾಖಲೆಯನ್ನು ಪ್ರಾಥಮಿಕ ಆಕರಗಳು ಎನ್ನಬಹುದು. ಇತಿಹಾಸ ಸಂಶೋಧಕರ ಮುಖ್ಯ ಆಧಾರಗಳೇ ಪ್ರಾಥಮಿಕ ಆಕರಗಳು. ಪ್ರಾಥಮಿಕ ಆಕರಗಳನ್ನು ಬಳಸಿ ಮಾಡಿದ ಸಂಶೋಧನೆಗೆ ಹೆಚ್ಚು ಮಹತ್ವ. ಯಾಕೆಂದರೆ ಈ ಆಕರಗಳು ಹೆಚ್ಚು ವಿಶ್ವಾಸಾರ್ಹವಾದವುಗಳು. ನೇರವಾಗಿ ಭೂತಕಾಲದ ಘಟನೆಗೆ ಸಂಬಂಧಿಸಿದವು. ಅದೇ ಕಾಲದಲ್ಲಿ ಸೃಷ್ಟಿಯಾದವು. ಈ ಕಾರಣಕ್ಕಾಗಿ ಪ್ರಾಥಮಿಕ ಆಕರಗಳೇ ಸಂಶೋಧನೆಯಲ್ಲಿ ಪ್ರಧಾನವಾದವು. ಜರ್ಮನಿಯ ಇತಿಹಾಸಜ್ಞ ರಾಂಕೆ ಈ ಆಕರಗಳಿಗೆ ಬಹಳ ಒತ್ತು ಕೊಡುತ್ತಾನೆ. ಈ ಆಕರಗಳಲ್ಲಿ ದೊರಕುವ ‘ಸತ್ಯ’ಗಳನ್ನು ಯಥಾವತ್ತಾಗಿ ಜನರಿಗೆ ಕೊಡುವುದೇ ಇತಿಹಾಸದ ಉದ್ದೇಶ ಎಂಬುದು ಇವರ ಅಭಿಮತ. ಆದರೆ ಇದು ಸ್ವಲ್ಪ ಕಷ್ಟದ ಕೆಲಸವೇ ಸರಿ.

ಆನುಷಂಗಿಕ ಆಕರಗಳು (Secondary Sources) ಎಂದರೆ ಇತಿಹಾಸಕಾರರು ಪ್ರಾಥಮಿಕ ಆಕರಗಳನ್ನು ಬಳಸಿಕೊಂಡು ತಮ್ಮ ವಿಶ್ಲೇಷಣೆ ಹಾಗೂ ನಿರೂಪಣೆಯೊಂದಿಗೆ ಜನರಿಗೆ ನೀಡಿದ ಬರವಣಿಗೆಗಳು.[1] ಮಾಡಿದ ಸಂಶೋಧಕರಿದ್ದಾರೆ. ಆದರೆ ಅದು ಅಪರೂಪ. ಈ ತರಹದ ಸಂಶೋಧನೆಗಳಲ್ಲಿ ತನಗಿಂತ ಹಿಂದಿನ ಸಂಶೋಧನ ಅಭಿಪ್ರಾಯಗಳು ಸೇರಿಕೊಂಡಿರುತ್ತವೆ. ಆನುಷಂಗಿಕ ಆಕರಗಳನ್ನು ನಾವು ಕಡೆಗಣಿಸುವಂತಿಲ್ಲ. ಇಂದು ಸಂಶೋಧನೆಗೆ ಹೊರಟ ಇತಿಹಾಸಕಾರ ತನಗಿಂತ ಹಿಂದೆ ತನ್ನ ಸಂಶೋಧನಾ ಕ್ಷೇತ್ರದಲ್ಲಿ ಎಷ್ಟೆಲ್ಲಾ ಕೆಲಸಗಳಾಗಿವೆ ಏನಾಗಬೇಕಾಗಿದೆ ಎಂಬುದನ್ನು ತಿಳಿದುಕೊಳ್ಳಲು ದ್ವಿತೀಯ ದರ್ಜೆಯ ಆಕರಗಳು ಸಹಕಾರಿಯಾಗುತ್ತವೆ.

ಕಚ್ಚಾ ಪ್ರಾಥಮಿಕ ಆಕರಗಳನ್ನು ಇತಿಹಾಸವನ್ನಾಗಿ ಮಾರ್ಪಡಿಸುವ ಕೆಲಸ ಗಂಭೀರವಾದದ್ದು. ಆಕರಗಳ ವಿಶ್ಲೇಷಣೆಯ ಪ್ರಾಮುಖ್ಯತೆ ಬರುವುದು ಇಲ್ಲಿ. ಆಕರಗಳೇನೋ ಮಾಹಿತಿಯನ್ನು ತುಂಬಿಕೊಂಡಿವೆ. ಚದುರಿಹೋದ ಮಾಹಿತಿ ಸಂಗ್ರಹಣೆ ಮಾತ್ರ ಸಂಶೋಧಕನ ಕೆಲಸವೇ. ಇರುವೆಗಳೂ ಆಹಾರವನ್ನು ಸಂಗ್ರಹಿಸುತ್ತವೆ. ಆದರೆ ಸಂಸ್ಕರಿಸುವುದಿಲ್ಲ. ಸಂಶೋಧಕ ಇರುವೆಗಳ ಕೆಲಸ ಮಾಡಿದರೆ ಸಾಲದು. ಜೇನುನೊಣಗಳು ಮಕರಂದವನ್ನು ಸಂಗ್ರಹಿಸಿ, ನಂತರ ಪರಿಷ್ಕರಿಸಿ, ಸಂಸ್ಕರಿಸಿ ಸಿಹಿಯಾದ ಜೇನುತುಪ್ಪ ತಯಾರಿಸಿದಂತೆ ಮಾಹಿತಿಯನ್ನು ಕಲೆಹಾಕಿ ಪರಿಷ್ಕರಿಸಿ, ವಿಶ್ಲೇಷಿಸಿ ಜನರಿಗರ್ಥವಾಗದ ಒಳ್ಳೆಯ ಒಳನೋಟಗಳನ್ನು ನೀಡುವ ಇತಿಹಾಸವನ್ನು ಪುನಾರಚಿಸುವುದು ಇತಿಹಾಸಕಾರರ ಕೆಲಸ.

ಪ್ರಾಥಮಿಕ ಆಕರಗಳು ಗತಕಾಲದ ಮೂಲ ದಾಖಲೆಯಾಗಿರುವುದರಿಂದ ಅವುಗಳನ್ನು ವಿಶ್ಲೇಷಣೆಗೆ ಒಳಪಡಿಸುವ ಅಗತ್ಯತೆ ಏನು ಎಂಬ ಪ್ರಶ್ನೆ ಸಹಜ. ಮೊದಲೇ ಹೇಳಿದಂತೆ ಇತಿಹಾಸದ ಜ್ಞಾನ ಇತಿಹಾಸಕಾರರ ಸೃಷ್ಟಿ. ಈ ಸೃಷ್ಟಿಕ್ರಿಯೆಯಲ್ಲಿ ಮೂಲ ಆಕರಗಳು ಪ್ರಧಾನವೇ ಹೊರತು ಅಂತಿಮವಲ್ಲ. ಏಕೆಂದರೆ ಈ ಆಕರಗಳು ನಿಜವಿರಬಹುದು, ನಕಲಿ ಇರಬಹುದು, ಅಪೂರ್ಣವಿರಬಹುದು, ಅಮೂರ್ತ ಕಲ್ಪನೆಗಳಿಂದ ಮಾಡಿರಬಹುದು. ಸಾಂಕೇತಿಕ, ಪಾರಿಭಾಷಿಕ ಶಬ್ದಗಳಿಂದ ಕೂಡಿರಬಹುದು. ಯಥಾವತ್ತಾಗಿ ಅವುಗಳನ್ನು ಸ್ವೀಕರಿಸಿದರೆ ನಮ್ಮ ತೀರ್ಮಾನಗಳು ತಪ್ಪಾಗಬಹುದು.

ಆಕರಗಳ ವೈಜ್ಞಾನಿಕ ವಿಶ್ಲೇಷಣೆ ಮಾಡದಿದ್ದರೆ ಅವು ಹೊಂದಿರುವ ಪೂರ್ವಗ್ರಹಗಳು, ಅತಿರೇಕ ಹೊಗಳಿಕೆಗಳು, ಏಕಮುಖೀ ಸತ್ಯಗಳು, ಅತಿಶಯೋಕ್ತಿಗಳನ್ನು ನಾವು ನಿಜವೆಂದು ಭಾವಿಸಿ ಸ್ವೀಕರಿಸಬೇಕಾಗುತ್ತದೆ. ಆಗ ಗತ ಕಾಲವನ್ನು ಅರ್ಥೈಸುವ ನಮ್ಮ ಪ್ರಯತ್ನಗಳು ವಿಫಲವಾಗುತ್ತದೆ. ಈ ಕಾರಣಕ್ಕಾಗಿಯೇ ಆಕರಗಳ ವಿಶ್ಲೇಷಣೆ ಬಹು ಪ್ರಾಮುಖ್ಯತೆಯನ್ನು ಹೊಂದಿದೆ. ಇಲ್ಲಿ ಇನ್ನೊಂದು ಬಹು ಮುಖ್ಯ ಪ್ರಶ್ನೆ ಆಕರ ವಿಶ್ಲೇಷಣೆ ಮಾಡುವಾಗ ಸಂಶೋಧಕ ತನ್ನ ಪೂರ್ವಗ್ರಹಗಳನ್ನು ಮೀರಿ ವಸ್ತು ನಿಷ್ಠತೆ ಕಾಪಾಡಿಕೊಳ್ಳುವುದು ಸಾಧ್ಯವೇ ಎನ್ನುವುದು. ಇತಿಹಾಸದ ವಸ್ತು, ಮಾನವ ಸಮಾಜ ಸಂಶೋಧಕರೂ ಮಾನವ ಸಮಾಜದ ಭಾಗವಾದ್ದರಿಂದ ಅವರ ಮನಸ್ಸು ಮುಕ್ತವಾಗಿರಲು ಸಾಧ್ಯವೇ? ತಮ್ಮ ಕುತೂಹಲ, ಆಸೆ, ಆಸಕ್ತಿಗಳು ಅವರನ್ನು ಇತಿಹಾಸ ಅರಿಯುವಂತೆ ಮಾಡುತ್ತವಲ್ಲವೇ? ಗತಕಾಲದ ಕುರುಹುಗಳು ಸಾಕ್ಷಿಯಾಗಿ ರೂಪುಗೊಳ್ಳುವುದು ಅಧ್ಯಯನ ಪ್ರಕ್ರಿಯೆಯಲ್ಲಿ. ಆದರೆ ಇವು ಕೇವಲ ಮೂಕ ಸಾಕ್ಷಿಗಳು. ಇತಿಹಾಸಕಾರರು ಅವುಗಳನ್ನು ವಾಚಾಳಿಗಳನ್ನಾಗಿಸುತ್ತಾರೆ. ಅವುಗಳಿಗೆ ಹೊಸ ಹೊಸ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ಅವರು ಕೇಳುವ ಹೊಸ ಪ್ರಶ್ನೆಗಳು ಸ್ಫುರಿಸುವುದು ಅವರ ನಂಬಿಕೆ, ಸಿದ್ಧಾಂತ, ಆಸಕ್ತಿ,ಒಲವು ಮುಂತಾದುವುಗಳಿಂದ. ಹಾಗಾದರೆ ಅವರ ಪ್ರಶ್ನೆಗಳು ಮತ್ತು ಉತ್ತರಗಳು ವಸ್ತುನಿಷ್ಠವಾಗಲು ಸಾಧ್ಯವೇ ಎನ್ನಿಸುವುದು ಸಹಜ. ವಾಸ್ತವಿಕವಾಗಿ ಇತಿಹಾಸ ಅಧ್ಯಯನದಲ್ಲಿ ಸಂಪೂರ್ಣ ವಸ್ತುನಿಷ್ಠತೆ ಸಾಧ್ಯವಿಲ್ಲ. ಇಲ್ಲಿ ವಸ್ತುನಿಷ್ಠತೆ ಎಂದರೆ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ. ಇತಿಹಾಸದ ಆಕರಗಳನ್ನು ಮುಕ್ತ ಮನಸ್ಸಿನಿಂದ ಕೂಲಂಕುಷವಾಗಿ ಹುಡುಕಿ ಅಧ್ಯಯನ ಮಾಡಿ ಅರ್ಥೈಸಿ ವ್ಯಾಖ್ಯಾನಿಸಿದ್ದು ಎಂದಷ್ಟೇ. ಸಾಕ್ಷಿಗಳನ್ನು ತಿರುಚಿ, ವಿಕೃತಗೊಳಿಸಿ ಅವುಗಳನ್ನು ಹಾಜರುಪಡಿಸದಿರುವ ಮತ್ತು ಅವುಗಳ ಬಾಯಿ ಮುಚ್ಚಿಸುವ ಕೆಲಸ ಮಾಡದಿರುವುದೇ ವಸ್ತುನಿಷ್ಠತೆ ಎನ್ನಬಹುದು ಆಕರಗಳನ್ನು ವಿಮರ್ಶೆಗೊಳಪಡಿಸುವಾಗ ಗತ ಹೇಗಿತ್ತು ಎಂಬ ಕುತೂಹಲವಿರಬೇಕೇ ಹೊರತು ಹೇಗಿರಬೇಕಿತ್ತು ಎಂಬ ಚಿಂತನೆ ಅಪಾಯಕಾರಿ. ಹಾಗೆಯೇ, ನಮ್ಮ ವರ್ತಮಾನವನ್ನೇ ಭೂತಕಾಲದಲ್ಲಿ ಕಾಣಿಸುವುದು ಕೂಡ ಸರಿಯಲ್ಲ.

ಇತ್ತೀಚಿನ ಇತಿಹಾಸ ಸಂಶೋಧಕರಿಗೆ ಹಲವು ಸೌಲಭ್ಯಗಳಿವೆ. ಆಕರಗಳು ಸುಲಭವಾಗಿ ದೊರಕುತ್ತವೆ. ಮಾಹಿತಿಯನ್ನು ಬಹು ಬೇಗ ಕಲೆ ಹಾಕಬಹುದು. ಹಿಂದಿನ ಸಂಶೋಧಕರು ನಡೆದ ದಾರಿ ಇದೆ. ಆದರೆ ಒಂದು ಬಹು ದೊಡ್ಡ ಅಪಾಯವೂ ಇದೆ. ಅದೇನೆಂದರೆ ಹಿಂದಿನ ಇತಿಹಾಸಕಾರು ತಮ್ಮ ಪಠ್ಯಗಳಲ್ಲಿ ಬರೆದದ್ದನ್ನು ಸಮಾಜ ಸತ್ಯವೆಂದು ಸ್ವೀಕರಿಸಿದೆ. ಶಾಲಾ ಪುಸ್ತಕಗಳಲ್ಲಿ ನಾವು ಬಾಲ್ಯದಲ್ಲಿ ಕೆಲವು ಇತಿಹಾಸ ಪಠ್ಯಗಳನ್ನು ಅಂತರ್ಗತ ಮಾಡಿಕೊಂಡಿರುತ್ತೇವೆ. ಈ ಅಭಿಪ್ರಾಯಗಳನ್ನು ಸುಲಭವಾಗಿ ಒಡೆಯುವುದು ನಮ್ಮ ಮನಸ್ಸಿಗೆ ಸಾಧ್ಯವಾಗುವುದಿಲ್ಲ. ಸಂಶೋಧಕರಿಗೆ ಹೊಸ ದೃಷ್ಟಿಕೋನ ಹೊಸ ಪ್ರಶ್ನೆಗಳು ಬಾರದಂತೆ ನಮ್ಮ ಮನಸ್ಸಿನಲ್ಲಿರುವ ದೃಢೀಕೃತ ಅಭಿಪ್ರಾಯಗಳು ತಡೆಯುತ್ತವೆ. ಸಂಶೋಧಕ ಮುಕ್ತ ಅಂದರೆ ತನ್ನ ಮನಸ್ಸಿನಲ್ಲಿ ಗಟ್ಟಿಯಾಗಿರುವ ವಿಚಾರಗಳನ್ನು ಮೀರಿ ಬೆಳೆಯಬೇಕಾಗುತ್ತದೆ. ಹೆಚ್ಚಿನ ಸಂಶೋಧನೆಗಳಲ್ಲಿ ಅದೇ ಹಳೆಯ ವಿಚಾರಗಳ ಚರ್ವಿತಚರ್ವಣ ಆಗುವುದನ್ನು ನಾವು ನೋಡುತ್ತೇವೆ. ಇದಕ್ಕೆ ಸಂಶೋಧಕರಲ್ಲಿ ಹೊಸ ಪ್ರಶ್ನೆಗಳು ಉದ್ಭವಿಸದಿರುವುದೇ ಕಾರಣ.

ಆಕರ ವಿಶ್ಲೇಷಣೆ-ವಿಧಾನಗಳು

ಆಕರ ವಿಶ್ಲೇಷಣೆಯಲ್ಲಿ ಎರಡು ವಿಧಗಳು. ಒಂದು ಬಾಹ್ಯ ವಿಶ್ಲೇಷಣೆ ಮತ್ತು ಆಂತರಿಕ ವಿಶ್ಲೇಷಣೆ. ಬಾಹ್ಯ ವಿಶ್ಲೇಷಣೆ ಸಂಶೋಧಕ ಕಷ್ಟಪಟ್ಟು ಸಂಗ್ರಹಿಸಿದ ಆಕರಗಳನ್ನು ಬಾಹ್ಯ ವಿಶ್ಲೇಷಣೆಗೆ ಒಳಪಡಿಸಬೇಕಾಗುತ್ತದೆ. ಅಂದರೆ ಆಕರಗಳ ಸತ್ಯಾಸತ್ಯತೆಯನ್ನು ದೃಢಪಡಿಸಿಕೊಳ್ಳುವುದು, ನಾವು ಆಕರವನ್ನು ಯಾವುದಕ್ಕೆ ಸಂಬಂಧಿಸಿದ್ದೆಂದು ತಿಳಿದಿದ್ದೇವೋ ಅದು ನಿಜವಾಗಿಯೂ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ದೃಢಪಡಿಸಿಕೊಳ್ಳುವುದು.

ಆಕರಗಳ ಸ್ಥಳ, ದಿನಾಂಕ, ಮತ್ತು ಬರವಣಿಗೆಗಾರ ನಿಜವಾಗಿಯೂ ಅಸಲಿಯೇ ಅಥವಾ ನಕಲಿಯೇ ಎಂಬುದು ಮುಖ್ಯ. ಯಾರದೋ ಹೆಸರಿನಲ್ಲಿ ಇನ್ಯಾರೋ ಈ ಆಕರವನ್ನು ಬರೆದಿರಬಹುದೇ ಎಂಬುದು ಕಂಡುಕೊಳ್ಳಬೇಕಾದ ವಿಷಯ.ಉದಾಹರಣೆಗೆ ನಾವು ಐಹೊಳೆ ಶಾಸನವನ್ನು ರವಿಕೀರ್ತಿ ಪುಲಕೇಶಿಯ ಬಗ್ಗೆ ಏಳನೆಯ ಶತಮಾನದಲ್ಲಿ ಬರೆದಿದ್ದಾನೆಂದು ಪೂರ್ವದಲ್ಲಿ ನಮಗೆ ತಿಳಿದ ಮಾಹಿತಿಯನ್ನು ಪರೀಕ್ಷೆಗೊಳಪಡಿಸಬೇಕಾಗುತ್ತದೆ. ಪ್ರಾಚೀನ ಮತ್ತು ಮಧ್ಯಕಾಲೀನ ದಾಖಲೆಗಳಲ್ಲಿ ಅದೆಷ್ಟೋ ಪ್ರಾಚೀನ ದಾಖಲೆಗಳು ಮತ್ತು ಮಧ್ಯಕಾಲೀನ ದಾಖಲೆಗಳಲ್ಲಿ ಅದೆಷ್ಟೋ ದಾಖಲೆಗಳು ನಕಲಿಯಾಗಿದೆ. ಹಳೆಯ ದಾಖಲೆಗಳನ್ನು ಕಳೆದುಕೊಂಡಾಗ ಹೊಸ ದಾಖಲೆ ನಿರ್ಮಿಸಲೆಂದೋ ಅಥವಾ ಘನತೆ, ಗೌರವ, ಸಂಪತ್ತು, ಆಸ್ತಿ ಗಳಿಸಲೆಂದೋ ಇಂತಹ ದಾಖಲೆಗಳ ನಿರ್ಮಾಣವಾಗುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಕಾನ್‌ಸ್ಟಂಟೈನ್‌ನ ದೇಣಿಗೆ ಪತ್ತೆ. ಈ ಎಂಟನೆಯ ಶತಮಾನದ ದಾಖಲೆ ಇಟಲಿಯ ಮೇಲೆ ಪೋಪ್‌ಗೆ ಅಧಿಕಾರ ನಡೆಸಲು ಅನುಮತಿ ಕೊಡುತ್ತದೆ. ಆದರೆ ಇದರ ಬಾಹ್ಯ ವಿಶ್ಲೇಷಣೆ ಮಾಡಿದಾಗ ಇದೊಂದು ನಕಲಿ ಬರಹ, ಸ್ವಾರ್ಥ ಸಾಧನೆಗಾಗಿ ನಿರ್ಮಿಸಿದ್ದೆಂದು ದೃಢಪಟ್ಟಿತು.

ಆಕರಗಳ ಸತ್ಯಾಸತ್ಯತೆಯನ್ನು ಪ್ರಮಾಣಿಕರಿಸಲು ಹಲವಾರು ವೈಜ್ಞಾನಿಕ ವಿಧಾನಗಳನ್ನು ನಮ್ಮ ಸಂಶೋಧಕರು ಬಳಸುತ್ತಾರೆ. ಲಿಖಿತ ದಾಖಲೆಗಳನ್ನು ಪರಿಶೀಲಿಸುವಾಗ ದಾಖಲೆಯ ಲಿಪಿ ಮತ್ತು ಬಳಸಿದ ಭಾಷೆಯ ಶೈಲಿಯನ್ನು ನಾವು ಆ ದಾಖಲೆಯ ಸ್ಥಳ ಮತ್ತು ಕಾಲಮಾನಕ್ಕೆ ಹೊಂದಾಣಿಕೆಯಾಗುತ್ತದೆಯೇ ಎಂದು ನೋಡಬೇಕಾಗುತ್ತದೆ. ನಕಲಿ ಆಕರಗಳಾದರೆ ಅವುಗಳ ಲಿಪಿ ಮತ್ತು ಭಾಷಾ ಶೈಲಿ ಆ ಆಕರದ ಸ್ಥಳ ಮತ್ತು ಕಾಲಮಾನಕ್ಕೆ ಹೊಂದುವುದಿಲ್ಲ. ಇದಕ್ಕೆ ಲಿಪಿ ತಜ್ಞರ ಮತ್ತು ಭಾಷಾ ಶೈಲಿಯ ತಜ್ಞರ ಮಾರ್ಗದರ್ಶನ ಇತಿಹಾಸಕಾರನಿಗೆ ಬೇಕಾಗುತ್ತದೆ. ಕೇವಲ ಭಾಷಾ ಶೈಲಿಯನ್ನಾಧರಿಸಿಯೇ ಲೊರೆಂಜೊವೆಲ್ಲಾ ಕಾನ್‌ಸ್ಟಂಟೈನ್‌ನ ದೇಣಿಗೆ ಪತ್ರವನ್ನು ಮಕಲಿ ಎಂದು ಸಿದ್ಧಪಡಿಸಿದ. ಹಾಗೆಯೇ ಬರವಣಿಗೆಗೆ ಬಳಸಿದ ಶಾಯಿ ಮತ್ತು ವಸ್ತುವನ್ನು ರಾಸಾಯನಿಕ ಪರೀಕ್ಷೆಗೆ ಒಳಪಡಿಸಿದರೆ ದಾಖಲೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಬಹುದು.

ಆಕರಗಳ ಸತ್ಯಾಸತ್ಯತೆಯನ್ನು ಪ್ರಮಾಣೀಕರಿಸಿದ ನಂತರ ಬಹು ಮುಖ್ಯವಾದ ವಿಮರ್ಶೆ ಪ್ರಾರಂಭವಾಗುತ್ತದೆ. ಅದೇ ಆಕರಗಳ ಆಂತರಿಕ ವಿಶ್ಲೇಷಣೆ ಆಕರಗಳು ಕೊಟ್ಟ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಬಹು ಮುಖ್ಯ. ಮೂಲ ಆಕರಗಳಲ್ಲಿ ದೊರಕಿದ ಮಾಹಿತಿ ಎಲ್ಲವೂ ವಸುನಿಷ್ಠವಾಗಿರುತ್ತದೆ ಎಂದೇನು ಅಲ್ಲ. ಏಕೆಂದರೆ ಆ ದಾಖಲೆಯನ್ನು ಬರೆದವನು ಕೂಡ ಸಂಶೋಧಕನಂತೆ ಒಬ್ಬ ಮನುಷ್ಯ. ಅವನು ಅವನ ಕಾಲದ ಸಮಾಜದ ಒಂದು ಅಂಶ. ಇಷ್ಟೇ ಅಲ್ಲ ಮೂಲ ಆಕರಗಳ ಭಾಷೆ ಕ್ಲಿಷ್ಟವಾಗಿರಬಹುದು, ಅದನ್ನು ಸಂಶೋಧಕ ಅರ್ಥೈಸದೇ ಅಥವಾ ತಪ್ಪಾಗಿ ಅರ್ಥೈಸಬಹುದು. ಇದು ಬಹುಮುಖ್ಯ. ಯಾಕೆಂದರೆ ಒಂದೇ ಶಾಸನವನ್ನು ಬೇರೆ ಬೇರೆ ರೀತಿಯಲ್ಲಿ ಇತಿಹಾಸಕಾರರು ಓದಿದ ಉಲ್ಲೇಖಗಳು ದೊರಕುತ್ತವೆ. ಹಾಗೆಯೇ ಶಬ್ದಗಳು ಕಾಲದಿಂದ ಕಾಲಕ್ಕೆ ಪ್ರದೇಶದಿಂದ ಪ್ರದೇಶಕ್ಕೆ ಬೇರೆಬೇರೆ ಅರ್ಥಗಳನ್ನು ಕೊಡುತ್ತವೆ. ಉದಾಹರಣೆಗೆ ವೈದಿಕ ಸಾಹಿತ್ಯದಲ್ಲಿ ಉಲ್ಲೇಖಿತವಾದ ‘ರಾಜ’ ಎಂಬ ಶಬ್ದ ಸೂಚಿಸುವುದನ್ನೇ ಗುಪ್ತರ ಕಾಲದ ‘ರಾಜ’ ಎಂಬ ಶಬ್ದ ಸೂಚಿಸುವುದಿಲ್ಲ. ಋಗ್ವೇದ ಕಾಲದಲ್ಲಿ ಗೃಹಪತಿ ಎಂದರೆ ಕುಟುಂಬದ ಹಿರಿಯ ವ್ಯಕ್ತಿ ಯಜ್ಞ ಯಾಗ ಮಾಡುವಾಗ ಮೊದಲ ಯಜಮಾನ. ವೇದೋತ್ತರ ಕಾಲದಲ್ಲಿ ಗೃಹಪತಿ ಎಂದರೆ ಗ್ರಾಮೀಣ ಶ್ರೀಮಂತ ದೊಡ್ಡ ಭೂಮಾಲೀಕ, ದಾನ್ಯದ ಕಣಜಗಳ ಒಡೆಯ ಎಂಬ ಅರ್ಥ ಬೀರುತ್ತದೆ.

ಇನ್ನು ಕೆಲವೊಮ್ಮೆ ಇತಿಹಾಸಕಾರ ಮೂಲ ಆಕರವನ್ನು ಅರ್ಥ ಮಾಡಿಕೊಳ್ಳುವಾಗ ತನ್ನ ಆಧುನಿಕತೆ ಮತ್ತು ವರ್ತಮಾನವನ್ನೇ ಪ್ರಾಚೀನ ವಿದ್ಯಮಾನಗಳಲ್ಲಿ ಕಾಣುವ ಅಪಾಯವಿದೆ ಇದನ್ನು ಬಹಳ ಜಾಗರೂಕತೆಯಿಂದ ನಿವಾರಿಸಿಕೊಳ್ಳಬೇಕು. ಸಂಶೋಧಕರಿಗೆ ತನಗೆ ದೊರಕಿದ ದಾಖಲೆಯನ್ನು ಅರ್ಥೈಸಲು ಆ ಕಾಲಮಾನದ ಸಾಹಿತ್ಯದ ವಿಶಾಲ ಓದು ಇರಬೇಕು. ಆ ಆಕರದ ಭಾಷಾ ಶೈಲಿ ಮತ್ತು ಪಾರಿಭಾಷಿಕ ಶಬ್ದಗಳ ಅರಿವಿರಬೇಕು.

ಇನ್ನೊಂದು ಬಹಳ ಮುಖ್ಯ ಪ್ರಶ್ನೆ, ಆಕರಗಳ ಲೇಖಕ ನಿಜವಾಗಿಯೂ ಸತ್ಯವಾದ ಮಾಹಿತಿಯನ್ನು ಕೊಡಲು ಸಮರ್ಥನೇ, ಲೇಖಕ ವಿದ್ಯಾವಂತ ಅಥವಾ ಸಾಹಿತಿಯೇ, ಆ ವ್ಯಕ್ತಿಗೆ ವಿದ್ಯಮಾನಗಳು ಸರಿಯಾಗಿ ಅರ್ಥವಾಗಿದೆಯೇ ಎಂಬುದನ್ನೆಲ್ಲಾ ತಿಳಿದುಕೊಳ್ಳ ಬೇಕಾಗುತ್ತದೆ. ಮೂಲ ಮಾಹಿತಿದಾರ ಘಟನೆಗೆ ನೇರ ಸಾಕ್ಷಿಯೇ ಅಥವಾ ಅವನು ಇತರರಿಂದ ಮಾಹಿತಿ ಸಂಗ್ರಹಿಸಿರಬಹುದೇ, ಘಟನೆಯ ನೇರ ಸಾಕ್ಷಿಯಾಗಿದ್ದರೆ ಆ ಮಾಹಿತಿಗೆ ಹೆಚ್ಚು ಮಹತ್ವವಿರುತ್ತದೆ. ಉದಾಹರಣೆಗೆ ಅಬ್ದುಲ್ ಫಜಲ್, ಅಕ್ಬರನ ಹಲವು ಯುದ್ಧಗಳಲ್ಲಿ ನೇರವಾಗಿ ಭಾಗಿಯಾಗಿ ಬರೆದಿಟ್ಟ ದಾಖಲೆಗಳಿವೆ. ಇಂತವು ಹೆಚ್ಚು ಉಪಕಾರಿ. ತಾನು ಇತರರಿಂದ ಕೇಳಿದ ಮಾಹಿತಿಯಾದರೆ ಅದರಲ್ಲಿ ಗಾಳಿಮಾತು, ಹರಟೆ, ವೈಭವೀಕರಣ, ತಪ್ಪು ಅಭಿಪ್ರಾಯಗಳಿರಬಹುದು.

ನಮ್ಮ ಮೂಲ ಆಕರಗಳ ಕಥನ ಘಟಿಸಿ ನಡೆದ ಕೂಡಲೇ ಅದನ್ನು ದಾಖಲಿಸಿರಬಹುದೇ ಅಥವಾ ಅವನ ಸ್ಮರಣಶಕ್ತಿ ಕುಂದಿದ ನಂತರ ಮಾಹಿತಿಯನ್ನು ದಾಖಲಿಸಿರಬಹುದೇ ಎನ್ನುವ ಪ್ರಶ್ನೆಗಳು ಸಂಶೋಧನಾ ಬರವಣಿಗೆಯಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತವೆ. ಹೆಚ್ಚಾಗಿ ಜೀವನ ಚರಿತ್ರೆಗಳು ಈ ತರಹದ ಬರವಣಿಗೆಗಳಿಂದ ಕೂಡಿರುತ್ತವೆ. ತಮ್ಮ ವೃದ್ಧಾಪ್ಯದಲ್ಲಿ ಬರೆಯಲ್ಪಡುವ ಆತ್ಮಕಥನಗಳು ಕೇವಲ ಜ್ಞಾಪನಾಶಕ್ತಿಯನ್ನೇ ಆಧರಿಸಿರುತ್ತವೆ. ದಾಖಲಿಸಿದ ಮಾಹಿತಿ ಪೂರ್ಣವಾಗಿದೆಯೇ ಅಥವಾ ಅದನ್ನು ದಾಖಲಿಸುವಾಗ ಲೇಖಕ ತನಗಿಷ್ಟವಾದ ಮಾಹಿತಿಯನ್ನು ಮಾತ್ರ ಆಯ್ದುಕೊಂಡು ತನಗಿಷ್ಟವಿಲ್ಲದ ಮಾಹಿತಿಯನ್ನು ಬಿಟ್ಟಿರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಉದಾಹರಣೆಗೆ ಹರ್ಷವರ್ಧನನ ಆಸ್ಥಾನ ಕವಿ ಬಾಣಭಟ್ಟ ತನ್ನ ಹರ್ಷಚರಿತದಲ್ಲಿ ಹರ್ಷ, ಪುಲಿಕೇಶಿಯ ಕೈಯಲ್ಲಿ ಸೋತ ಮಾಹಿತಿ ದಾಖಲಿಸಿಲ್ಲ.

ಇತಿಹಾಸ ಸಂಶೋಧನೆಯಲ್ಲಿ ಊಹೆಯ ಪ್ರಾಮುಖ್ಯತೆ

ಇತಿಹಾಸ ಯಾವತ್ತೂ ದಾಖಲೆಯನ್ನು ಆಧರಿಸಿರಬೇಕು, ಊಹೆಯನ್ನೆಲ್ಲ ಎಂಬುದನ್ನು ನಾವು ಬಹಳ ಸಲ ಕೇಳಿದ್ದೇವೆ. ಆದರೆ ಇಲ್ಲಿ ಯಾಕೆ ಊಹೆಯ ಬಗ್ಗೆ ಪ್ರಸ್ತಾಪ ಎಂದು ಗಾಬರಿಪಡಬೇಕಾದ್ದಿಲ್ಲ. ಇಲ್ಲಿ ಊಹೆ ಅಥವಾ ಕಲ್ಪನೆ ಎಂದರೆ ಇತಿಹಾಸಕಾರನ ಸ್ವಚ್ಛಂದ ಕಲ್ಪನೆ ಅಲ್ಲ. ಇಲ್ಲಿ ಅತ್ಯಂತ ಸೀಮಿತ ಪ್ರಮಾಣದ ಊಹೆ ಬಳಕೆಯಾಗುತ್ತದೆ. ಇದನ್ನು ಹೇಳಲು ನಾವು ಹಿಂಜರಿಯಬಾರದು.

ಯಾವುದೇ ಗತಕಾಲದ ಪುನಾರಚನೆ ಎಂದರೂ ಕೂಡ ಅದು ಗತಕಾಲದ ಪಾತ್ರ, ಸನ್ನಿವೇಶ, ಘಟನೆ ಪ್ರಕ್ರಿಯೆ, ಸಿದ್ಧಾಂತಗಳನ್ನು ಪುನಃ ಸೃಷ್ಟಿ ಮಾಡುವುದೇ ಆಗಿದೆ. ಆಕರಗಳು ತನ್ನಷ್ಟಕ್ಕೆ ತಾನೇ ಬರಡಾಗಿರುತ್ತವೆ. ಇತಿಹಾಸಕಾರರ ಊಹೆ ಅಥವಾ ಕಲ್ಪನೆಗಳು ಆಕರಗಳ ಜೊತೆ ಸೇರಿ ಚರ್ಚೆ ನಡೆಸಿದಾಗ ಒಳನೋಟಗಳಿಣದ ಕೂಡಿದ ಅರ್ಥಪೂರ್ಣ ಇತಿಹಾಸದ ಸೃಷ್ಟಿಯಾಗುತ್ತದೆ. ಇದೇ ಕಾರಣದಿಂದಾಗಿ ಒಂದೇ ಆಕರಗಳನ್ನು ಬಳಸಿ ಇಬ್ಬರು ಬರೆದ ಇತಿಹಾಸ ವಿಭಿನ್ನವಾಗಿರುತ್ತದೆ. ಆದರೆ ಊಹೆಯ ಸ್ವಾತಂತ್ರ್ಯ ಸೀಮಿತವಾಗಿರುತ್ತದೆ. ಇದೊಂದು ಮಕ್ಕಳ ಆಟ, ಒಂದು ಆನೆಯ ಚಿತ್ರ ಪೂರ್ತಿಯಾಗಲು ನೂರು ತುಂಡುಗಳನ್ನು ಸರಿಯಾಗಿ ಜೋಡಿಸಬೇಕು ಎಂದಿಟ್ಟುಕೊಳ್ಳಿ. ನೂರು ತುಂಡುಗಳು ಸರಿಯಾಗಿ ಜೋಡಣೆಯಾದರೆ ಮಾತ್ರ ಆನೆಯ ಚಿತ್ರ ನಮ್ಮ ಎದುರು ಬರುತ್ತದೆ. ಆ ಜೋಡಣೆ ತಪ್ಪಾದರೆ ಚಿತ್ರ ತಪ್ಪಾಗುತ್ತದೆ. ಆದರೆ ಆ ಮಗು ೨೫ ತುಂಡುಗಳನ್ನು ಕಳೆದುಕೊಂಡಿತು ಎಂದು ಭಾವಿಸಿ. ಆಗ ಸರಿಯಾಗಿ ಜೋಡಿಸಿದರೂ ಮಧ್ಯೆ ಮಧ್ಯೆ ಖಾಲಿ ಸ್ಥಳ ಉಳಿದು ಚಿತ್ರ ಅಪೂರ್ಣವಾಗುತ್ತದೆ. ಆದರೂ ಕೂಡ ನಮ್ಮ ಸಾಮಾನ್ಯ ಜ್ಞಾನ, ಲೋಕಾನುಭವ ಊಹೆಯನ್ನು ಬಳಸಿ ಅಪೂರ್ಣವಾದ ಚಿತ್ರ ಆನೆಯದೇ ಹೊರತು ಹುಲಿ ಅಲ್ಲ ಎಂದು ತಿಳಿದುಕೊಳ್ಳಬಹುದು. ಇದೇ ರೀತಿ ಇತಿಹಾಸಕಾರ ಕೂಡ ಗತಕಾಲ ಎಲ್ಲ ಕುರುಹುಗಳು ದೊರಕದೇ ಹೋದರೂ ತನ್ನಲ್ಲಿರುವ ಅಪೂರ್ಣ ಮಾಹಿತಿಯನ್ನು ಬಳಸಿ ಅದಕ್ಕೆ ತನ್ನ ಅನುಭವವನ್ನು ಸೇರಿಸಿ ಮಾಡಿದ ಊಹೆ ವಾಸ್ತವಕ್ಕೆ ಹತ್ತಿರವಿರುತ್ತದೆ.

ಈ ಊಹೆಯನ್ನು ಬಳಸುವ ಸಂಶೋಧಕರಿಗೆ ವಿವಿಧ ಕ್ಷೇತ್ರಗಳ ಅನುಭವವಿದ್ದರೆ ಒಳಿತು. ಉದಾಹರಣೆಗೆ ರಾಜಕೀಯ, ವಿದೇಶಾಂಗ ನೀತಿ, ವ್ಯವಹಾರ ಸೈನ್ಯಾಡಳಿತ, ಹಣಕಾಸು ನಿರ್ವಹಣೆ ಮುಂತಾದ ಕ್ಷೇತ್ರದಲ್ಲಿ ಗಳಿಸಿದ ಅನುಭವ ರಾಜಕೀಯ ಇತಿಹಾಸದ ಪುನಾರಚನೆಗೆ ಸಹಕಾರಿಯಾಗುತ್ತದೆ.

ಇತಿಹಾಸಕಾರರಿಗೆ ಉತ್ತಮ ಬರವಣಿಗೆ ಇರಬೇಕಾದುದು ಮುಖ್ಯ. ಆಕರಗಳನ್ನು ಅವಲಂಬಿಸಿ ತಾನು ಮನಸ್ಸಿನಲ್ಲಿ ಪುನಃಸೃಷ್ಟಿ ಮಾಡಿಕೊಂಡ ಗತಕಾಲವನ್ನು ಜನರಿಗೆ ಮನದಟ್ಟು ಮಾಡಿದಾಗಲೇ ಅವರ ಕೆಲಸ ಪೂರ್ತಿಯಾಗುತ್ತದೆ. ಜನರನ್ನು ಮುಟ್ಟುವುದಕ್ಕೆ ಇತಿಹಾಸಕಾರರಿಗೆ ಒಳ್ಳೆಯ ಸಂವಹನಾ ಸಾಮರ್ಥ್ಯ ಮತ್ತು ಭಾಷೆಯ ಮೇಲಿನ ಹಿಡಿತ ಪ್ರಧಾನವಾಗಿದೆ.

ಪರಾಮರ್ಶನ ಗ್ರಂಥಗಳು

೧. ಕ್ಲೈವ್‌ಸೀಲ್(ಸಂ), ೧೯೯೮. ರಿಸಚಿಂಗ್ ಸೊಸೈಟಿ ಆಂಡ್ ಕಲ್ಚರ್, ಡೆಲ್ಲಿ: ಸೇಜ್ ಪಬ್ಲಕೇಷನ್ಸ್.

೨. ಪೀಟರ್ ಬರ್ಕ್ (ಸಂ) ೧೯೯೨, ನ್ಯೂ ಪರ್ಸ್ಪೆಕ್ಟಿವ್ಸ್ ಆನ್ ಹಿಸ್ಟಾರಿಕಲ್ ರೈಟಿಂಗ್ಸ್, ಕೇಂಬ್ರಿಡ್ಜ್: ಪಾಲಿಟಿ ಪ್ರೆಸ್.

೩. ರಾಬರ್ಟ್ ಜೋನ್ಸ್ ಶೇಫರ್ (ಸಂ) ೧೯೯೧, ಎ ನೈಡ್ ಟು ಹಿಸ್ಟಾರಿಕಲ್ ಮೆಥಡ್, ಇಲಿವಾಯ್ಸ್: ದಿ ಡೋರ್‌ಸೆ ಪ್ರೆಸ್.

೪. ರೆನಿಯರ್ ಜಿ.ಜೆ. ೧೯೬೧, ಹಿಸ್ಟರಿ: ಇಟ್ಸ್ ಪರ್‌ಪಸ್ ಅಂಡ್ ಮೆಥಡ್, ಜಾರ್ಜ್ ಅಲೆನ್ ಅಂಡ್ ಅನ್‌ವಿನ್, ಲಿಮಿಟೆಡ್.

* * *

 

[1] ಇದರ ಬಗ್ಗೆ ವಿವರಗಳನ್ನು ಪ್ರಸ್ತುತ ಕೃತಿಯ ಪುಟ ೫೪೪-೫೬೩ರ ಪುಟಗಳಲ್ಲಿ ಚರ್ಚಿಸಲಾಗಿದೆ – ಸಂ.