ಮಾನವ ತನ್ನ ಬದುಕನ್ನು ರೂಪಿಸಿಕೊಳ್ಳುವುದಕ್ಕಾಗಿ ನಡೆಸಿದ ಹೋರಾಟ ಹಾಗೂ ಹೊಣದಾಣಿಕೆಗಳ ಕಥನವೇ ಚರಿತ್ರೆ. ಇದಕ್ಕೆ ಗತ ಹಾಗೂ ವರ್ತಮಾನಗಳೆಂಬ ಗರಿಗಳು ಇರುವುದಿಲ್ಲ. ಇದೊಂದು ನಿರಂತರ ಪ್ರಕ್ರಿಯೆ. ಆದರೆ ಅಧಿಕಾರ ಹಾಗೂ ಸವಲತ್ತುಗಳ ಪ್ರಶ್ನೆ ಕಾಣಿಸಿಕೊಂಡಾಗ ಬದುಕನ್ನು ರೂಪಿಸಿಕೊಳ್ಳುವ ವಿಧಾನದಲ್ಲಿ ವ್ಯತ್ಯಾಸಗಳು ಕಾಣಿಸಿ ಕೊಳ್ಳಲಾರಂಭಿಸಿದವು. ಅಲ್ಲಿಂದಲೇ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆ ತನ್ನ ಹುಟ್ಟನ್ನು ಪಡೆದುಕೊಂಡಿತು. ಅದೇ ರೀತಿ ಕೃಷಿ, ನಗರಗಳೆನ್ನುವ ವಿವಿಧ ಸ್ವರೂಪದ ಆರ್ಥಿಕತೆಗಳು ಆಸ್ತಿತ್ವಕ್ಕೆ ಬಂದವು. ಬರವಣಿಗೆಯ ಯುಗ ಆರಂಭವಾಗಿ ಆಳುವ ವರ್ಗ ಅದರ ಮೂಲಕ ಸಮಾಜದ ಮೇಲಿನ ತನ್ನ ಹಿಡಿತವನ್ನು ಬಿಗಿಗೊಳಿಸಿಕೊಂಡಿತು. ರಾಜ್ಯಗಳ ನಿರ್ಮಾಣ ಪ್ರಕ್ರಿಯೆಯಲ್ಲೂ ಬರವಣಿಗೆ ಒಂದು ಪ್ರಮುಖ ಅಸ್ತ್ರವಾಗಿ ಕಾಣಿಸಿಕೊಂಡಿತು. ಬರವಣಿಗೆಗೂ ಪ್ರಭುತ್ವ ರೂಪುಗೊಳ್ಳುವುದಕ್ಕೂ ನೇರ ಸಂಬಂಧವಿರುವುದರಿಂದಾಗಿ ಸಮಾಜದ ಕೆಳಸ್ತರದ ಬೆಳವಣಿಗೆಗಳು ದಾಖಲಾಗದೆ ಹೋದವು. ರಾಜಪ್ರಭುತ್ವ ಹಾಗೂ ಧಾರ್ಮಿಕಪ್ರಭುತ್ವಗಳಿಗೆ ಸಂಬಂಧಿಸಿದ ಬರವಣಿಗೆಗಳು ಸಮಾಜವನ್ನು ಹಿಡಿಯಾಗಿ ಪ್ರಭಾವಿಸಿ ಅದೇ ಅಂದಿನ ಸಂದರ್ಭದ ಚರಿತ್ರೆ ತನ್ನುವ ಭದ್ರ ಛಾಪನ್ನು ಒತ್ತಿದವು. ಹೀಗಾಗಿ ಚರಿತ್ರೆಯುದ್ದಕ್ಕೂ ಈ ಎರಡು ಪ್ರಭುತ್ವಗಳು ಮೂಡಿಸಿದ ಛಾಪು ಮುಂದುವರಿದುಕೊಂಡು ಹೋಯಿತು. ಇಂದು ಚರಿತ್ರೆ ಸಂಶೋಧಕರು ಬದಲಾದ ಅಧ್ಯಯನ ಕ್ರಮದಿಂದಾಗಿ ಈ ಬಗೆಯ ಬರವಣಿಗೆಗಳ ಆಚೆಗೆ ಇಣುಕಿ ನೋಡುವ ಪ್ರಯತ್ನ ಮಾಡುತ್ತಿದ್ದಾರೆ. ಸ್ಥಳೀಯ ಹಾಗೂ ಮೌಖಿಕ ಚರಿತ್ರೆಗಳೆಂಬ ಹೊಸ ಅಧ್ಯಯನ ಕ್ರಮಗಳು ಹುಟ್ಟಿಕೊಂಡ ಬಳಿಕ ಚರಿತ್ರೆ ಕುರಿತಾದ ಹಳೆಯ ಗ್ರಹಿಕೆಗಳು ಸಬಾಲ್ಟರ್ನ್ ನೆಲೆಯ ಹಲವಾರು ಪ್ರಶ್ನೆಗಳನ್ನು ಎದುರಿಸಬೇಕಾಗಿ ಬಂತು. ಹೀಗೆ ಬರವಣಿಗೆಯ ಹುಟ್ಟು, ಅದರ ಹಿಂದಿರುವ ಚಿಂತನೆಗಳು ಹಾಗೂ ಅದು ಕಟ್ಟಿಕೊಡುವ ಚರಿತ್ರೆ ಇಂದು ಹೆಚ್ಚು ಚರ್ಚೆಗೆ ಒಳಗಾಗುತ್ತಿದೆ, ಅದೇ ರೀತಿ ಇಂದು ಚರಿತ್ರೆ ಸಂಶೋಧನೆಯಲ್ಲಿ ಆಕರಗಳ ಜೊತೆಗೆ ಸಿದ್ಧಾಂತಗಳು ಅಥವಾ ಸೈದ್ಧಾಂತಿಕ ದೃಷ್ಟಿಕೋನ ಪ್ರಧಾನವಾಗಿ ಕಂಡುಬರುತ್ತಿದೆ. ಈ ಕಾರಣದಿಂದಾಗಿ ಆಕರಗಳು ವಿಶ್ಲೇಷಣೆಗೆ ಒಳಗಾಗುತ್ತಿವೆ, ಇದರಿಂದಾಗಿ ಚರಿತ್ರೆಯ ಮರು ಓದು ಸಾಧ್ಯವಾಗಿದ್ದು, ಅದರ ಜೊತೆಗೆ ಆಕರಗಳ ಕುರಿತಾದ ಸಾಂಪ್ರದಾಯಿಕ ಗ್ರಹಿಕೆ ಬದಲಾಗುತ್ತಿದೆ.

ಮಾಹಿತಿಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸುವುದು ಹಾಗೂ ಸಂಗ್ರಹಿಸಿದ ಮಾಹಿತಿಯ ವಿಶ್ಲೇಷಣೆ ಸಂಶೋಧನೆಯ ಬಹುಮುಖ್ಯ ಅಂಗ. ಇದಕ್ಕೆ ಅನುಸರಿಸುವ ವಿಧಾನವು ಸಮಾಜ, ಚರಿತ್ರೆ, ಸಾಹಿತ್ಯ ಮತ್ತು ಸಂಸ್ಕೃತಿ ಸಂಶೋಧನೆಗಳಲ್ಲಿ ಬೇರೆ ಬೇರೆಯದಾದರೂ ಉದ್ದೇಶ ಒಂದೇ ಆಗಿರುತ್ತದೆ. ಯಾವುದೇ ಒಂದು ವಸ್ತುವಿನ ಬಗ್ಗೆ ಸಂಶೋಧನೆ ನಡೆಸುವಾಗ ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸಂಶೋಧಕ ಸಂಗ್ರಹಿಸಬೇಕಾಗುತ್ತದೆ. ಮಾಹಿತಿಗಳು ಚದುರಿದ ರೂಪದಲ್ಲಿರುತ್ತವೆಯೇ ಹೊರತು ಒಂದೇ ಕಡೆ ದೊರಕುವುದಿಲ್ಲ. ಆಕರಗಳು ಅಥವಾ ದಾಖಲೆಗಳು ಸಂಶೋಧನೆಗೆ ಆಧಾರಗಳು. ಅವುಗಳ ಆಧಾರದ ಮೇಲೆ ಸಂಶೋಧಕ ತಾನು ಆಯ್ಕೆ ಮಾಡಿಕೊಂಡ ವಿಚಾರದ ಕುರಿತು ಅಧ್ಯಯನ ನಡೆಸಿ, ಫಲಿತಗಳನ್ನು ನೀಡಲು ಸಾಧ್ಯ. ಆಕರ ಸಾಮಗ್ರಗಳು ನಿರ್ಮಾಣಗೊಳ್ಳುವ ಬಗೆ ಹಾಗೂ ಅವುಗಳ ಬಳಕೆ ಚರಿತ್ರೆ ಸಂಶೋಧನೆಯ ಬಹುಮುಖ್ಯ ವಿಚಾರಗಳು. ಇಂದು ಆಕರಗಳಾಗಿ ಕಂಡುಬರುವ ಅದೆಷ್ಟೋ ಚಾರಿತ್ರಿಕ ಸಾಮಗ್ರಿಗಳು ಚರಿತ್ರೆಯ ವಿವಿಧ ಕಾಲಘಟ್ಟಗಳಲ್ಲಿ ರಾಜ್ಯ ನಿರ್ಮಾಣ ಪ್ರಕ್ರ್ರಿಯೆಗೆ ತಳಹದಿ ರೂಪದಲ್ಲಿದ್ದಂತವು. ಅರಸು ಮನೆತನಗಳು ತಾವು ನಿರ್ಮಿಸಿದ ಸ್ಮಾರಕಗಳ ಮೂಲಕ ಇವತ್ತಿಗೂ ಪರಿಚಿತವಾಗಿಯೇ ಉಳಿದಿವೆ. ಹೀಗಾಗಿ ಆಕರಗಳ ಹುಟ್ಟಿನ ಹಿಂದೆ ಒಂದು ಚಿಂತನೆ ಕೆಲಸ ಮಾಡುತ್ತಿರುತ್ತದೆ ಎನ್ನುವುದನ್ನು ಸಂಶೋಧಕರು ತಿಳಿಯಬೇಕಾಗುತ್ತದೆ. ಅದೇ ರೀತಿ ಇಂದು ನಾವು ಯಾವುದೇ ವಿಷಯದ ಕುರಿತು ಸಂಶೋಧನೆ ನಡೆಸುವಾಗ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುತ್ತಿರುತ್ತೇವೆ. ಈ ಸಂಗ್ರಹಣೆಯ ಹಿಂದೆಯೂ ಚಿಂತನೆಯೊಂದು ಕೆಲಸ ಮಾಡುತ್ತಿರುತ್ತದೆ. ಹೀಗಾಗಿ ಆಕರಗಳನ್ನು ವಿಭಿನ್ನ ನೆಲೆಗಳಿಂದ ಅಧ್ಯಯನ ನಡೆಸಬೇಕಾಗುತ್ತದೆ. ಆವಾಗ ಮಾತ್ರ ಆಕರಗಳ ಮೂಲ, ಸ್ವರೂಪ ಹಾಗೂ ಉದ್ದೇಶಗಳು ತಿಳಿದುಬರಲು ಸಾಧ್ಯ.

ಆಕರಗಳಿಲ್ಲದೆ ಚರಿತ್ರೆಯಿಲ್ಲ ಎನ್ನುವುದು ಸಾಮಾನ್ಯವಾಗಿ ಕಂಡುಬರುವ ಹೇಳಿಕೆ. ಆದರೆ ಇಂದು ಸಿದ್ದಾಂತಗಳಿಲ್ಲದೆ ಚರಿತ್ರೆಯಿಲ್ಲ ಎನ್ನುವ ಹೇಳಿಕೆ ಹೆಚ್ಚು ಪ್ರಚಾರದಲ್ಲಿದೆ. ಆದರೂ ಸಿದ್ಧಾಂತಗಳ ರೂಪುಗೊಳ್ಳುವಿಕೆಯಲ್ಲೂ ಆಕರಗಳು ನಿರ್ಣಾಯಕವಾಗಿವೆ. ಇದರರ್ಥ ಸಂಗ್ರಹಿಸಿದ ಮಾಹಿತಿಗಳನ್ನು ವಿಶ್ಲೇಷಣೆಗೆ ಒಳಪಡಿಸಿ, ಆ ಮೂಲಕ ತಾತ್ವಿಕತೆಯೊಂದನ್ನು ಹುಟ್ಟುಹಾಕುವುದು. ಆಕರಗಳ ಸಂಗ್ರಹಣೆಯಷ್ಟೇ ಚರಿತ್ರೆಯಾಗುವುದಿಲ್ಲ. ಚರಿತ್ರೆಯಲ್ಲಿ ಘಟಿಸಿದ ಯಾವುದೋ ಒಂದು ಘಟನೆಯ ಕುರಿತು ಅಧ್ಯಯನ ನಡೆಸಬೇಕೆನ್ನುವಾಗ ಮೊದಲು ಮಾಡಬೇಕಾದ ಕೆಲಸವೆಂದರೆ ಆ ಘಟನೆಯ ಕುರಿತು ಮಾಹಿತಿ ನೀಡುವ ದಾಖಲೆಗಳನ್ನು ಸಂಗ್ರಹಿಸುವುದು. ದಾಖಲೆಗಳು ಪ್ರಥಮ ಅಥವಾ ಪ್ರಾಥಮಿಕ ಮೂಲದ್ದಾಗಿರಬಹುದು ಅಥವಾ ಎರಡನೇ (ಸೆಕೆಂಡರಿ) ಅಥವಾ ಆನುಷಂಗಿಕ ಮೂಲದ್ದಾಗಿರಬಹುದು. ಅವುಗಳ ಸಂಗ್ರಹ ಆದ ಬಳಿಕ ಚರಿತ್ರೆಕಾರ. ಅವುಗಳ ಮೂಲಕ ಘಟನೆಯ ಕುರಿತು ಆಲೋಚನೆ ನಡೆಸಿ ತನ್ನ ಸಂಶೋಧನೆಯ ಫಲಿತಗಳನ್ನು ನೀಡುತ್ತಾನೆ. ಆಕರ ಸಾಮಗ್ರಿಗಳ ಸಂಗ್ರಹ ಮೊದಲ ಹಂತದ ಕೆಲಸವಾದರೆ, ಸಂಗ್ರಹಿಸಿದ ಆಕರ ಸಾಮಗ್ರಿಗಳ ವಿಶ್ಲೇಷಣೆ ಎರಡನೇ ಹಂತದ ಕೆಲಸವಾಗುತ್ತದೆ. ಒಂದೇ ಘಟನೆಯನ್ನು ಅದೇ ಸಂದರ್ಭದ ಆಕರಗಳು ಬೇರೆ ಬೇರೆಯದಾಗಿಯೇ ಚಿತ್ರಿಸಬಹುದು. ಉದಾಹರಣೆಗೆ ವಸಾಹತು ಆಳ್ವಿಕೆಗೆ ಸಂಬಂಧಪಟ್ಟಂತೆ ಬ್ರಿಟಿಶ್ ಆಡಳಿತಗಾರರು ನೀಡುವ ವಿವರಣೆಗಳಿಗೂ, ಸ್ಥಳೀಯವಾಗಿ ಸಿಗುವ ಅಭಿಪ್ರಾಯಗಳಿಗೂ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಹೀಗಾಗಿ ದಾಖಲೆಗಳ ಹುಟ್ಟಿನ ಹಿಂದೆ ಆಯಾ ಸಂದರ್ಭದ ಧೋರಣೆಗಳು ಪ್ರಮುಖ ಪಾತ್ರ ವಹಿಸುತ್ತಿರುತ್ತವೆ.

ಚರಿತ್ರೆ ಸಂಶೋಧನೆಯಲ್ಲಿ ಮಾಹಿತಿಗಳನ್ನು ಎರಡು ಮೂಲಗಳಿಂದ ಸಂಗ್ರಹಿಸಲಾಗುತ್ತದೆ. ಅವುಗಳೆಂದರೆ ಪ್ರಾಥಮಿಕ ಆಕರಗಳು ಹಾಗೂ ಆನುಷಂಗಿಕ ಆಕರಗಳು. ಆಕರಗಳ ಈ ವರ್ಗೀಕರಣ ಸಾಂಪ್ರದಾಯಿಕವಾಗಿ ಕಂಡು ಬಂದರೂ ಮಾಹಿತಿ ಸಂಗ್ರಹಣೆಯ ದೃಷ್ಟ್ಟಿಯಿಂದ ಅನಿವಾರ್ಯವಾದದ್ದೇ ಆಗಿದೆ. ಚರಿತ್ರೆ ಸಂಶೋಧನೆಯಲ್ಲಿ ಕಡತಗಳು, ದಾಖಲೆಗಳು, ಡೈರಿಗಳು, ಪತ್ರಗಳು, ನಾಣ್ಯಗಳು, ಶಾಸನಗಳು, ಸ್ಮಾರಕಗಳು, ಮೌಖಿಕ ಕಾವ್ಯಗಳು ಮುಂತಾದ ದಾಖಲೆಗಳು ಪ್ರಾಥಮಿಕ ಮಾಹಿತಿ ಮೂಲಗಳಾದರೆ, ಪ್ರಾಥಮಿಕ ಮೂಲಗಳಿಂದ ಮಾಹಿತಿ ಪಡೆದು ನಿರ್ಮಾಣಗೊಂಡ ಆಕರಗಳನ್ನು ಆನುಷಂಗಿಕ ಆಕರಗಳೆಂದು ಕರೆಯಲಾಗಿದೆ. ಪ್ರಾಥಮಿಕ ಆಕರ ಸಾಮಗ್ರಿಗಳನ್ನು ಬಳಸಿಕೊಂಡು ಇವು ನಿರ್ಮಾಣಗೊಳ್ಳುವುದರಿಂದಾಗಿ ಆನುಷಂಗಿಕ ಆಕರಗಳಾಗಿರುತ್ತವೆ. ಈ ನಿಟ್ಟಿನಲ್ಲಿ ಚರಿತ್ರೆ ಸಮಾಜ ವಿಜ್ಞಾನದ ಇನ್ನಿತರ ಶಿಸ್ತುಗಳಿಗಿಂತ ಭಿನ್ನವಾಗಿ ಕಂಡುಬರುತ್ತದೆ. ಸಮಾಜ ಶಾಸ್ತ್ರ, ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರದಂತ ಶಿಸ್ತುಗಳು ತಾವು ಸಂಶೋಧನೆ ನಡೆಸುವ ವಿಷಯಗಳಿಂದ ನೇರ ಮಾಹಿತಿ ಪಡೆಯುತ್ತವೆ. ಸಂಶೋಧನೆ ನಡೆಸುವ ವಿಷಯವೇ ಅವುಗಳಿಗೆ ಪ್ರಾಥಮಿಕ ಮಾಹಿತಿಯ ಮೂಲಗಳಾಗಿರುತ್ತವೆ. ಈ ವಿಷಯದ ಕುರಿತು ಈಗಾಗಲೇ ಪ್ರಕಟಗೊಂಡ ಮಾಹಿತಿಗಳನ್ನು ಬಳಸಿಕೊಂಡರೆ ಅದು ಆನುಷಂಗಿಕ ಮಾಹಿತಿಯಾಗುತ್ತದೆ. ಅಂದರೆ ಚರಿತ್ರೆಯಲ್ಲಿ ಪ್ರಾಥಮಿಕ ಆಕರಗಳು ಎಂದೆನಿಸಿಕೊಂಡವು. ಇತರ ಶಿಸ್ತುಗಳಲ್ಲಿ ಆನುಷಂಗಿಕ ಆಕರಗಳು ಎಂದೆನಿಸಿಕೊಳ್ಳುತ್ತವೆ. ಇದು ಆಯಾ ಶಿಸ್ತಿನ ಅಧ್ಯಯನ ವಿಧಾನಕ್ಕೆ ಸಂಬಂಧಪಟ್ಟ ವಿಷಯವಾಗಿದೆ. ಆದರೂ ಪ್ರಾಥಮಿಕ ಮತ್ತು ಆನುಷಂಗಿಕ ಎನ್ನುವ ವರ್ಗೀಕರಣ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಉದಾಹರಣೆಗೆ ಚರಿತ್ರೆ ಅಧ್ಯಯನದಲ್ಲಿ ಇತ್ತೀಚೆಗೆ ಹೆಚ್ಚು ಚರ್ಚಿತವಾಗುತ್ತಿರುವ ಕ್ಷೇತ್ರವಾದ ಮೌಖಿಕ ಚರಿತ್ರೆ, ಮೌಖಿಕ ಚರಿತ್ರೆ, ನಿರ್ಮಾಣಕ್ಕೆ ಬಳಕೆಯಾಗುವ ಮಾಹಿತಿಗಳು ಯಾವ ಮೂಲದವು ಎನ್ನುವ ಪ್ರಶ್ನೆ ಉತ್ತರ ಕಾಣದೆ ಸಮಸ್ಯೆಯಾಗಿಯೇ ಉಳಿದಿದೆ. ಲಾವಣಿಗಳು, ಪಾಡ್ದನಗಳು, ಬುಡಕಟ್ಟು ಕಾವ್ಯಗಳು ಮುಂತಾದವು ತಲೆಮಾರಿನಿಂದ ತಲೆಮಾರಿಗೆ ನೆನಪಿನ ಮೂಲಕ ಸಂದೇಶಗಳಾಗಿ ಹರಿದು ಬಂದಂತವು. ಇಂದು ಅಧ್ಯಯನಕಾರರು ಅವುಗಳನ್ನು ಸಂಗ್ರಹಿಸಿ ಪುಸ್ತಕರೂಪದಲ್ಲಿ ಪ್ರಕಟಿಸುತ್ತಿದ್ದಾರೆ. ಅನೇಕ ಸಂಶೋಧಕರ ಪ್ರಕಾರ ಸಂಶೋಧಕರು ಹಾಡುಗಳನ್ನು ಹಾಡುಗಾರರ ಮೂಲಕ ಸಂಗ್ರಹಿಸುತ್ತಾರೆ. ಆದರೆ ಈ ಹಾಡುಗಳು ಹಾಡುಗಾರರ ಸ್ವಂತದ ಹಾಡುಗಳಲ್ಲ. ಅವು ತಮ್ಮ ಹಿಂದಿನ ತಲೆಮಾರುಗಳಿಂದ ನಿರಂತರವಾಗಿ ಹರಿದು ಬಂದಂತವು. ಆದರೂ ಹಾಡುಗಳಲ್ಲಿ ಸಾಕಷ್ಟು ಭಿನ್ನತೆಗಳಿರುತ್ತವೆ. ಇಲ್ಲಿ ಪ್ರಾಥಮಿಕ ಯಾವುದು, ಆನುಷಂಗಿಕ ಯಾವುದು ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಹೀಗೆ ಆಕರಗಳ ವರ್ಗೀಕರಣ ಸಂಶೋಧಕರಿಗೆ ಹಲವಾರು ಸಮಸ್ಯೆಗಳನ್ನು ತಂದೊಡ್ಡಿದೆ. ಇದರರ್ಥ ಆಕರಗಳನ್ನು ನೋಡುವ, ಅಭ್ಯಸಿಸುವ ವಿಧಾನದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ ಎನ್ನುವುದು. ಮೌಖಿಕ ಚರಿತ್ರೆಗೆ ಸಂಬಂಧಿಸಿದ ಆಕರಗಳ ಮೂಲದ ಪ್ರಶ್ನೆ ಏನೇ ಇದ್ದರೂ ಮೌಖಿಕ ಚರಿತ್ರೆಯೆನ್ನುವುದೇ ಚರಿತ್ರೆಯ ಪುನರ್‌ನಿರ್ಮಾಣಕ್ಕಾಗಿ ಹೊಸ ಆಧಾರಗಳ ಅನ್ವೇಷಣೆಯಲ್ಲಿ ಮೂಡಿಬಂದಿರುವಂತದ್ದು.

ಚರಿತ್ರೆ ಸಂಶೋಧನೆಯಲ್ಲಿ ಆನುಷಂಗಿಕ ದಾಖಲೆಗಳು ಹೆಚ್ಚು ಬಳಕೆಯಾಗುತ್ತವೆ. ಇವುಗಳ ಸಂಗ್ರಹ ಮಾಡುವಾಗ ಸಂಶೋಧಕ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗುತ್ತದೆ. ಉದಾಹರಣೆಗೆ, ಭಾರತದ ಚರಿತ್ರೆಗೆ ಸಂಬಂಧಿಸಿದಂತೆ ಯಾವುದಾದರೂ ಒಂದು ಅರಸು ಮನೆತನದ ಚರಿತ್ರೆ ರಚನೆಗೆ ತೊಡಗಿಕೊಂಡಾಗ ದಾಖಲೆಗಳು ಹಲವಾರು ಸಿಗುತ್ತವೆ. ಏಕೆಂದರೆ ಅದರ ಕುರಿತು ಈಗಾಗಲೇ ಸಾಕಷ್ಟು ಪುಸ್ತಕಗಳು ಪ್ರಕಟಗೊಂಡಿರುತ್ತವೆ. ಅವುಗಳನ್ನು ಓದಿ ನಾವು ಸಂಶೋಧನೆಗೆ ಆಯ್ಕೆ ಮಾಡಿಕೊಂಡ ವಿಷಯದ ಕುರಿತು ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳಬೇಕು. ಆದರೆ ಪ್ರಕಟಿತ ಮತ್ತು ಅಪ್ರಕಟಿತ ಲೇಖನಗಳು, ಪ್ರಬಂಧಗಳು ಮತ್ತು ಪುಸ್ತಕಗಳಲ್ಲಿ ಹೇಳಿರುವ ವಿಷಯಗಳಿಗಷ್ಟೇ ತೃಪ್ತಿ ಪಡೆದುಕೊಂಡರೆ ಅದು ಸಂಶೋಧನೆಯಾಗುವುದಿಲ್ಲ. ಅಷ್ಟಕ್ಕೇ ತೃಪ್ತಿ ಪಡೆದುಕೊಂಡರೆ ಅದನ್ನು ಈಗಾಗಲೇ ಒಪ್ಪಿದ ಅಥವಾ ಸ್ವೀಕೃತ ಸ್ವೀಕೃತ ಚರಿತ್ರೆ ಎಂಬುದಾಗಿ ಚರಿತ್ರೆ ಸಂಶೋಧನೆಯಲ್ಲಿ ಕರೆಯಲಾಗುತ್ತದೆ. ಸ್ವೀಕೃತ ಎಂದಾಕ್ಷಣ ಅದನ್ನು ಬದಲಿಸಲು ಸಾಧ್ಯವಿಲ್ಲ ಎಂದಲ್ಲ ಅಥವಾ ಆ ವಿವರಣೆಗಳೇ ವಾಸ್ತವಿಕವಾದದ್ದು ಎಂದರ್ಥವಲ್ಲ. ಅದು ತನಗೆ ತಿಳಿದಿರುವ ವಿವರಗಳಿಂದ ನಿರೂಪಿತವಾದ ಚರಿತ್ರೆಯಷ್ಟೇ ಆಗಿರುತ್ತದೆ. ಹೀಗಾಗಿ ಆನುಷಂಗಿಕ ದಾಖಲೆಗಳಿಂದ ನಾವು ಆಯ್ಕೆ ಮಾಡಿಕೊಳ್ಳುವ ಸಂಶೋಧನಾ ವಿಷಯದ ಕುರಿತು ಸಾಮಾನ್ಯ ರೂಪುರೇಷೆಗಳನ್ನು ಮಾತ್ರ ತಿಳಿದುಕೊಳ್ಳಲು ಸಾಧ್ಯ. ಅವುಗಳಿಂದ ಎಲ್ಲಾ ವಿವರಗಳನ್ನು ನಿರೀಕ್ಷಿಸುವುದು ಕೂಡ ತಪ್ಪು ವಿಧಾನ. ಆನುಷಂಗಿಕ ದಾಖಲೆಗಳಲ್ಲಿ ಎರಡು ಬಗೆಯ ಮಾಹಿತಿಗಳು ಸಿಗುತ್ತವೆ. ಮೊದಲನೆಯದಾಗಿ ಆನುಷಂಗಿಕ ದಾಖಲೆ ಮೂಲ ಆಕರಗಳನ್ನು ಅಥವಾ ಪ್ರಾಥಮಿಕ ಆಕರಗಳನ್ನು ಆಧಾರವನ್ನಾಗಿ ತೆಗೆದುಕೊಂಡಿರುತ್ತದೆ. ಮೂಲ ಆಕರಗಳನ್ನು ಬಳಸಿಕೊಂಡು ಇದು ರಚನೆಯಾಗಿರುತ್ತದೆ. ಎರಡನೆಯದಾಗಿ ಮುಲ ಆಕರಗಳ ಕುರಿತಾದ ವಿಮರ್ಶೆಗಳನ್ನು ಹಾಗೂ ತನ್ನದೇ ಆದ ತೀರ್ಮನಗಳನ್ನು ಆನುಷಂಗಿಕ ದಾಖಲೆಗಳು ನೀಡುತ್ತವೆ.

ಆನುಷಂಗಿಕ ದಾಖಲೆಗಳಲ್ಲಿರುವ ಮೂಲ ಆಕರಗಳನ್ನು ಸಂಶೋಧಕರು ಬಳಸಿ ಕೊಳ್ಳುವಲ್ಲಿಯೂ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಏಕೆಂದರೆ ಲೇಖಕರು ಮೂಲ ಆಕರಗಳನ್ನು ಎಷ್ಟರ ಮಟ್ಟಿಗೆ ಸರಿಯಾಗಿ ಬಳಸಿಕೊಂಡಿದ್ದಾರೆ ಎನ್ನುವುದನ್ನು ಪರೀಕ್ಷಿಸಬೇಕಾಗುತ್ತವೆ. ಲೇಖಕ ಉದ್ದೇಶಕ್ಕನುಗುಣವಾಗಿ ಆಕರಗಳನ್ನು ತಿರುಚಿಕೊಂಡಿರುವ ಸಾಧ್ಯತೆಗಳೂ ಇರುತ್ತದೆ. ನಿಜವಾಗಿ ಮುಲ ಆಕರಗಳ ಆಶಯಗಳು ಅದಾಗಿರುವುದಿಲ್ಲ. ಚರಿತ್ರೆಕಾರರು ಘಟನೆಗಳ ವಿಶ್ಲೇಷಣೆ ನಡೆಸುವಾಗ ಸಿಗುವ ಆಕರಗಳ ಜೊತೆಗೆ ತಮ್ಮದೇ ಆದ ಅಭಿಪ್ರಾಯಗಳನ್ನು ಸೇರಿಸಿರುತ್ತಾರೆ. ಇತರರ ಅಭಿಪ್ರಾಯಗಳನ್ನು ಸಂಶೋಧಕರು ಮಂಡಿಸುವಾಗ ಅಥವಾ ನಿರಾಕರಿಸುವಾಗ ಅವರ ಅಭಿಪ್ರಾಯಗಳನ್ನು ಸರಿಯಾಗಿ ಗ್ರಹಿಸಬೇಕಾಗುತ್ತದೆ. ಆನುಷಂಗಿಕ ಆಕರಗಳಲ್ಲಿ ಬಳಕೆಯಾದ ಮೂಲ ಆಕರಗಳ ಭಾಗವನ್ನು ಸಂಶೋಧಕರು ಯಥಾವತ್ತಾಗಿ ತೆಗೆದುಕೊಳ್ಳದೆ, ಅವುಗಳ ಮೂಲ ಆಶಯಗಳು ಏನು ಹಾಗೂ ಅವುಗಳು ಆನುಷಂಗಿಕ ಆಕರಗಳಲ್ಲಿ ಯಾವ ರೀತಿ ಅಥವಾ ಯಾವ ಉದ್ದೇಶಕ್ಕೆ ಬಳಕೆಯಾಗಿದೆ ಎನ್ನುವುದನ್ನು ಸಂಶೋಧಕರು ಕಂಡು ಹಿಡಿಯಬೇಕು. ಇಲ್ಲದಿದ್ದರೆ ಅವು ತಪ್ಪಾಗಿ ದಾಖಲಾಗಿದ್ದರೆ ಅದನ್ನೇ ಮುಂದುವರೆಸಿಕೊಂಡು ಹೋಗಿ ತಪ್ಪು ಮಾಹಿತಿಯನ್ನೇ ನಿಜ ಎಂಬುದಾಗಿ ಒಪ್ಪಿಸುವ ಪ್ರಮಾದವಾಗುತ್ತದೆ. ಆನುಷಂಗಿಕ ಆಕರಗಳಿಗೆ ಈ ಮಿತಿಗಳಿರುತ್ತವೆ. ಚರಿತ್ರೆ ಸಂಶೋಧನೆಯಲ್ಲಿ ಈ ಮಿತಿಗಳನ್ನು ಗುರುತಿಸುವ ಪ್ರಯತ್ನಗಳು ಅಷ್ಟಾಗಿ ಕಂಡುಬರುವುದಿಲ್ಲ. ಈ ಕಾರಣದಿಂದಾಗಿ ಅನೇಕ ತಪ್ಪುಗಳು ಯಥಾಪ್ರಕಾರ ಮುಂದುವರಿಯುತ್ತಿರುವುದನ್ನು ಅನೇಕ ಚರಿತ್ರೆ ಪುಸ್ತಕಗಳಲ್ಲಿ ಕಾಣಬಹುದಾಗಿದೆ. ಯಾವ ಮಾಹಿತಿಯನ್ನು ಎಲ್ಲಿಂದ ಪಡೆಯಲಾಗಿದೆ ಎನ್ನುವ ವಿವರಣೆಯನ್ನು ಸಂಶೋಧಕರು ಕೊಡುವುದು ಅತ್ಯವಶ್ಯವಾಗಿದೆ. ಸಂಶೋಧಕರು ತಮ್ಮ ನಿಲುವನ್ನು ಇವುಗಳ ಆಧಾರದ ಮೇಲೆಯೇ ಮಂಡಿಸಬೇಕೆನ್ನುವ ತೀರ್ಮಾನವೇನೂ ಇಲ್ಲ. ಸಮಶೋಧಕರು ತಮ್ಮ ಸಂಶೋಧನೆಗೆ ಪೂರಕವಾಗಿ ಆಕರಗಳನ್ನು ಬಳಸಿಕೊಳ್ಳುತ್ತಾರೆಯೇ ಹೊರತು ಅದು ಅವನನ್ನು ನಿರ್ದೇಶಿಸುವ ರೀತಿಯಲ್ಲಿ ಇರಬಾರದು. ಸಂಶೋಧಕರಿಗೆ ಸ್ವಾತಂತ್ರ್ಯ ವಿರುತ್ತದೆ ಹಾಗೂ ತಮ್ಮ ನಿಲುವುಗಳನ್ನು ಪ್ರತಿಪಾದಿಸಲು ತಮ್ಮದೇ ಆದ ದೃಷ್ಠಿಕೋನಗಳನ್ನು ಹೊಂದಿರಬೇಕಾಗುತ್ತದೆ. ಆಕರಗಳ ನಿರ್ಮಾಣದ ಹಿಂದೆಯು ಇದೇ ರೀತಿಯ ಗ್ರಹಿಕೆಗಳು ಕೆಲಸ ಮಾಡಿರುತ್ತವೆ ಎನ್ನುವ ಎಚ್ಚರಿಕೆ ಸಂಶೋಧಕರಾಗಿರಬೇಕು. ಚರಿತ್ರೆ ಸಂಶೋಧನೆಯಲ್ಲಿ ವಿವಿಧ ಪಂಥಗಳ ಹಿನ್ನೆಲೆಯಲ್ಲಿ ಚರಿತ್ರೆ ನಿರ್ಮಾಣಗೊಳ್ಳುತ್ತಿರುವುದರಿಂದಾಗಿ ಆಕರಗಳು ಸಂಶೋಧಕರ ಉದ್ದೇಶಗಳಿಗೆ ಹೆಚ್ಚಾಗಿ ಬಳಕೆಯಾಗುತ್ತಿರುತ್ತವೆ. ಈ ರೀತಿ ನಿರ್ಮಾಣಗೊಂಡ ಚರಿತ್ರೆ ಬರವಣಿಗೆಗಳು ಪೂರ್ವಗ್ರಹ ಪೀಡಿತವಾಗಿರುತ್ತವೆ. ಹಾಗಾಗಿ ಸಂಶೋಧಕರು ಕೃತಿಯ ಧೋರಣೆಯನ್ನು ಅರ್ಥ ಮಾಡಿಕೊಳ್ಳುವುದರ ಮೂಲಕ ಆಕರಗಳ ಸ್ವರೂಪವನ್ನು ಕಂಡು ಹಿಡಿಯಬೇಕಾಗುತ್ತದೆ. ಆಕರಗಳು ಸಂಶೋಧಕರ ಧೋರಣೆಗಳಿಗನುಗುಣವಾಗಿ ಬಳಕೆಯಾಗಿರುತ್ತವೆ.

ಆನುಷಂಗಿಕ ಮಾಹಿತಿ ಸಂಗ್ರಹ ಸಂದರ್ಭದಲ್ಲಿ ಸಂಶೋಧಕರಿಗೆ ತಾವು ಯಾವ ವಿಷಯದ ಕುರಿತು ಮಾಹಿತಿ ಸಂಗ್ರಹಿಸಬೇಕೆಂದಿರುತ್ತಾರೋ ಅದರ ಕುರಿತು ಸ್ವಲ್ಪ ಮಟ್ಟಿನ ಪರಿಚಯವಾದರೂ ಇರಬೇಕಾಗುತ್ತದೆ. ಉದಾಹರಣೆಗೆ, ವಿಜಯನಗರದ ಚರಿತ್ರೆಯ ಕುರಿತು ಸಂಶೋಧನೆ ನಡೆಸಲು ಉದ್ದೇಶಿಸಿರುವ ಸಂಶೋಧಕರಿಗೆ ಆ ಸಂದರ್ಭದ ಭಾರತದ ಚರಿತ್ರೆಯ ಬಗೆಗೆ ಮಾಹಿತಿ ಇರಬೇಕಾಗುತ್ತದೆ. ವಿಜಯನಗರದ ಹುಟ್ಟು, ಬೆಳವಣಿಗೆ ಹಾಗೂ ಅವನತಿ ಈ ಮೂರೂ ಹಂತಗಳನ್ನು ಅಂದಿನ ಸಂದರ್ಭದ ಭಾರತದ ರಾಜಕಾರಣದ ಚೌಕಟ್ಟಿನಲ್ಲಿ ಅಧ್ಯಯನ ನಡೆಸಿ ತೀರ್ಮಾನಿಸಬೇಕಾಗುತ್ತದೆ.

ಸ್ವೀಕೃತ ಚರಿತ್ರೆಗಷ್ಟೇ ತೃಪ್ತಿ ಪಟ್ಟರೆ ಅಂಥ ಸಂಶೋಧಕರಿಂದ ಹೆಚ್ಚಿನದ್ದನ್ನೇನೂ ನಿರೀಕ್ಷಿಸಲು ಸಾಧ್ಯವಿಲ್ಲ. ಸಂಶೋಧಕರು ತಾವು ಉಪಯೋಗಿಸುವ ಆಕರ ಸಾಮಗ್ರಿಗಳ ವಿವರಗಳನ್ನು ಟಿಪ್ಪಣಿ ಮಾಡಿಕೊಂಡು, ನಂತರ ಅವುಗಳನ್ನು ಪರಿಶೀಲಿಸಿ ತಮ್ಮ ಅಧ್ಯಯನಕ್ಕೆ ಎಷ್ಟು ಬೇಕೋ ಅಷ್ಟು ಮಾಹಿತಿಗಳನ್ನು ಪಡೆದುಕೊಂಡು, ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿ ಯನ್ನಾಗಿ ಪರಿವರ್ತಿಸಿಕೊಳ್ಳಬೇಕು. ಇದಕ್ಕೆ ಮೊದಲೇ ವಿವರಿಸಿದಂತೆ ಸಂಶೋಧಕರಿಗೆ ಚರಿತ್ರೆಯ ತಿಳಿವಳೀಕೆ ಇರಬೇಕು. ಆನುಷಂಗಿಕ ಆಕರಗಳನ್ನು ಬಳಸುವಲ್ಲಿ ಸಂಶೋಧಕರಿಗೆ ಎದುರಾಗುವ ಇನ್ನೊಂದು ಸಮಸ್ಯೆಯೆಂದರೆ ಅವುಗಳಲ್ಲಿ ಉಲ್ಲೇಖಿತವಾಗಿರುವ ವಿವರಗಳು ದೋಷಪೂರಿತವೆ ಅಥವಾ ದೋಷರಹಿತವೆ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತವೆ.ಇದಕ್ಕೆ ಪ್ರಾಥಮಿಕ ಆಕರಗಳ ನೆರವನ್ನು ಪಡೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಆರಂಭದಲ್ಲಿ ವಿವರಿಸಿದಂತೆ ಚರಿತ್ರೆ ಸಂಶೋಧನೆಗೆ ಪ್ರಾಥಮಿಕ ಮತ್ತು ಆನುಷಂಗಿಕ ಆಕರ ಸಾಮಗ್ರಿಗಳೆರಡೂ ಸಮಪ್ರಮಾಣದಲ್ಲಿ ಬಳಕೆಯಾಗುತ್ತವೆ. ಆನುಷಂಗಿಕ ಆಕರಗಳು ಸಂಶೋಧಕರನ್ನು ಆಕರಗಳು ಸಿಗುವ ಕಡೆಗೆ ಒಯ್ಯುತ್ತವೆ. ಶಾಸನಗಳನ್ನು ಆಧರಿಸಿ ಒಂದು ಕೃತಿ ರಚನೆಯಾಗಿದ್ದರೆ, ಆ ಕೃತಿಯಲ್ಲಿ ಶಾಸನಗಳ ಸಂಪೂರ್ಣ ಪಾಠ ಬಂದಿರುತ್ತದೆ ಎಂಬುದಾಗಿ ತಿಳಿಯಲು ಸಾಧ್ಯವಾಗುವುದಿಲ್ಲ. ಶಾಸನಗಳನ್ನು ಅರಸಕೇಂದ್ರಿತ ಚರಿತ್ರೆ ನಿರ್ಮಾಣಕ್ಕೆ ಹೆಚ್ಚಾಗಿ ಬಳಸಿಕೊಳ್ಳಲಾಗಿದೆ. ಇದರರ್ಥ ಶಾಸನಗಳಲ್ಲಿ ಅಂದಿನ ಸಂದರ್ಭದ ಸಾಮಾಜಿಕ ಮತ್ತು ಆರ್ಥಿಕ ವಿವರಗಳು ಇಲ್ಲ ಎಂದಲ್ಲ. ಸಂಶೋಧಕರು ಆ ವಿವರಗಳನ್ನು ಹುಡುಕಬೇಕಾಗುತ್ತದೆ. ಸಂಶೋಧಕರಿಗೆ ಶಾಸನಗಳನ್ನು ಓದಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇಲ್ಲದಿದ್ದರೆ ಶಾಸನ ತಜ್ಞರ ನೆರವನ್ನು ಪಡೆದು ಮಾಹಿತಿ ಸಂಗ್ರಹಿಸಬಹುದು. ಶಾಸನ ಪ್ರಾಥಮಿಕ ದಾಖಲೆಯಾದರೂ, ಅದನ್ನು ಉಪಯೋಗಿಸಿ ಕೃತಿ ರಚನೆಗೊಂಡಾಗ ಕೃತಿಯು ಆನುಷಂಗಿಕ ದಾಖಲೆಯಾಗುತ್ತದೆ. ಆನುಷಂಗಿಕ ದಾಖಲೆಗಳ ಮೂಲಕ ಶಾಸನಗಳನ್ನು ನೋಡುವಾಗ ಮೇಲೆ ವಿವರಿಸಿದ ಸಮಸ್ಯೆಗಳು ಎದುರಾಗುತ್ತವೆ.

ಆನುಷಂಗಿಕ ಮೂಲಗಳಿಂದ ಮಾಹಿತಿಯನ್ನು ದಾಖಲಿಸಿಕೊಳ್ಳುವಾಗ ಮತ್ತೊಂದು ಮೂಲಗಳಿಂದಲೂ (ಪ್ರಾಥಮಿಕ) ಮಾಹಿತಿಯನ್ನು ಪಡೆಯಲಾಗುತ್ತದೆ. ಮೂಲ ಆಕರಗಳು ಆನುಷಂಗಿಕ ಆಕರಗಳಲ್ಲಿ ಉಲ್ಲೇಖಿತವಾಗಿರುತ್ತವೆ. ಮಾಹಿತಿ ಮೂಲವನ್ನು ಸಂಶೋಧಕರು ನೀಡುವಾಗ ಸರಿಯಾದ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಯಾವ ಮೂಲದಿಂದ ಮಾಹಿತಿಯನ್ನು ಪಡೆಯಲಾಗಿದೆ ಎನ್ನುವುದನ್ನು ಸಂಶೋಧಕರು ಸ್ಪಷ್ಟಪಡಿಸದಿದ್ದರೆ ಅದೊಂದು ದೋಷವಾಗಿ ಉಳಿಯುತ್ತದೆ. ಆನುಷಂಗಿಕ ಆಕರಗಳು ನಾನಾ ಮೂಲಗಳಿಂದ ಮಾಹಿತಿಗಳನ್ನು ಸಂಗ್ರಹಿಸಿ ನಿರ್ಮಾಣಗೊಂಡಿರುತ್ತವೆ. ಹೀಗಾಗಿ ಸಂಶೋಧಕರು ಅವುಗಳನ್ನು ಬಿಡಿ ಬಿಡಿಯಾಗಿಯೇ ದಾಖಲಿಸಬೇಕಾಗುತ್ತದೆ. ಸಂಶೋಧಕರು ತಮ್ಮ ಸಂಶೋಧನೆಗೆ ಬಳಸಿಕೊಂಡ ಆನುಷಂಗಿಕ ದಾಖಲೆಗಳ ಮಾಹಿತಿಯನ್ನು ನೀಡದಿದ್ದರೆ ಮೂಲ ಮಾಹಿತಿ ಪರಿಚಯವಾಗಲು ಸಾಧ್ಯವಿಲ್ಲ. ಅದೇ ರೀತಿ ಮೂಲ ಮಾಹಿತಿ ಯಾವುದು, ಅದರ ಆಶಯಗಳೇನು ಹಾಗೂ ಸಂಶೋಧಕರ ಅಭಿಪ್ರಾಯಗಳೆನು ಅಥವಾ ಸಂಶೋಧಹರು ಮೂಲ ಮಾಹಿತಿಗಳನ್ನು ನೋಡುವ ಬಗೆ ಹೇಗೆ ಅಥವಾ ಸಂಶೋಧಕರ ಅಧ್ಯಯನ ವಿಧಾನಗಳೇನು ಎನ್ನುವುದು ತಿಳಿಯಲು ಸಾಧ್ಯವಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಆನುಷಂಗಿಕ ಆಕರಗಳಲ್ಲಿ ಸಿಗುವ ಮೂಲ ಮಾಹಿತಿಗಳ ವಿವರಗಳು ತಪ್ಪಾಗಿ ದಾಖಲಾಗಿರುತ್ತವೆ. ಕೃತಿಯನ್ನು ಬರೆದವರ ಹೆಸರುಗಳು ಅಥವಾ ಕೃತಿಯ ಹೆಸರು ತಪ್ಪಾಗಿ ದಾಖಲಾಗಿರುತ್ತವೆ. ಸಂಶೋಧಕರು ಆನುಷಂಗಿಕ ಆಕರಗಳಲ್ಲಿ ಸಿಗುವ ವಿವರಗಳಿಗಷ್ಟೇ ತೃಪ್ತಿಪಟ್ಟರೆ, ಅದರಲ್ಲಿರುವ ತಪ್ಪುಗಳನ್ನು ಯಥಾಪ್ರಕಾರ ದಾಖಲಿಸಿ ಮುಂದೆ ಸಂಶೋಧನೆ ನಡೆಸುವವರೆಗೂ ತಪ್ಪು ಮಾಹಿತಿಯನ್ನೇ ನೀಡುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಸಾಧ್ಯವಾದಷ್ಟು ಮಟ್ಟಿಗೆ ಮೂಲ ಆಕರಗಳನ್ನು ನೋಡುವ ಹಾಗೂ ಅದರಲ್ಲಿರುವ ಮಾಹಿತಿಗಳನ್ನು ಸಂಗ್ರಹಿಸುವ ಕೆಲಸವನ್ನು ಸಂಶೋಧಕರು ಮಾಡಬೇಕಾಗುತ್ತದೆ. ಇದರರ್ಥ ಅದರಲ್ಲಿರುವ ಮಾಹಿತಿಗಳನ್ನು ಸಂಗ್ರಹಿಸುವ ಒಪ್ಪಿಕೊಳ್ಳಬೇಕು ಎಂದಲ್ಲ. ಒಪ್ಪಿಕೊಳ್ಳವುದು ಅಥವಾ ನಿರಾಕರಿಸುವುದು ತಾತ್ವಿಕತೆಗೆ ಸಂಬಂಧಿಸಿದ ವಿಚಾರವಾಗುತ್ತದೆ,. ಚರಿತ್ರೆ ಸಂಶೋಧನೆiಲ್ಲಿ ವಾಸ್ತುಶಿಲ್ಪ, ಶಿಲ್ಪಶಾಸ್ತ್ರ, ದೇವಾಲಯಗಳು ಅಥವಾ ವಸಾಹತು ಸಂದರ್ಭದ ವರದಿಗಳು ಮತ್ತು ದಾಖಲೆಗಳು ಮುಂತಾದುವುಗಳಿಗೆ ಸಂಬಂಧಿಸಿದ ವಿಚಾರಗಳು ಆನುಷಂಗಿಕ ಆಕರಗಳಲ್ಲಿ, ಸರಿಯಾಗಿ ದಾಖಲಾಗಿರುತ್ತವೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ವಸಾಹತು ಸಂದರ್ಭದ ವರದಿಗಳು ಮತ್ತು ದಾಖಲೆಗಳಿಂದ ಮಾಹಿತಿ ಸಂಗ್ರಹಿಸುವಾಗ ಸಂಶೋಧಕರಿಗೆ ವಸಾಹತು ಶಾಹಿ ಧೋರಣೆ ಏನು ಎನ್ನುವುದು ತಿಳಿದಿರಬೇಕು ಅವು ಹೆಚ್ಚಾಗಿ ಅಧಿಕಾರಿಗಳ ದೃಷ್ಟಿಕೋನದ ಹಿನ್ನೆಲೆಯಲ್ಲಿ ನಿರ್ಮಾಣವಾದಂತವು. ಅಷ್ಟೇ ಅಲ್ಲದೇ, ಅಧಿಕೃತ ದಾಖಲಗಳು ಎಂದು ಘೋಷಿಸಿಕೊಂಡಂತವು. ಹೀಗಾಗಿ ಇವುಗಳನ್ನು ಆಧರಿಸಿ ರಚನೆಗೊಂಡ ಕೃತಿಗಳನ್ನು ಎಚ್ಚರಿಕೆಯಿಂದ ಅಭ್ಯಸಿಸಿಕೊಳ್ಳಬೇಕಾಗುತ್ತದೆ. ದೇವಾಲಯಗಳ ಕುರಿತು ಅಧ್ಯಯನ ನಡೆಸುವವರಿಗೆ ವಾಸ್ತುಶಿಲ್ಪ, ಶಿಲ್ಪಶಾಸ್ತ್ರ ಹಾಗು ವಿವಿಧ ಶೈಲಿಗಳ ಕುರಿತು ಸ್ವಲ್ಪಮಟ್ಟಿನ ಮಾಹಿತಿಯಾದರೂ ಇರಬೇಕಾಗುತ್ತದೆ. ಇಂಥ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಆನುಷಂಗಿಕ ಆಕರಗಳು ಸಂಪೂರ್ಣ ನೆರವಿಗೆ ಬರುವುದಿಲ್ಲ. ಮೂಲ ಆಕರಗಳನ್ನು ನೋಡುವುದುಅನಿವಾರ್ಯವಾಗುತ್ತದೆ. ಆನುಷಂಗಿಕ ಆಕರಗಳಲ್ಲಿನ ಈ ಮಿತಿಗಳನ್ನು ಸಂಶೋಧಕರು ಗುರುತಿಸಿಕೊಳ್ಳಬೇಕು.

ಸಂಶೋಧಕರಿಗೆ ಆಯ್ಕೆ ಸ್ವಾತಂತ್ರ್ಯವಿರುತ್ತದೆ. ತಪ್ಪು ಅಧ್ಯಯನ ನಡೆಸುವ ವಿಷಯದ ಕುರಿತು ಆಕರಗಳನ್ನು ಆಯ್ಕೆ ಮಾಡಿಕೊಳ್ಳುವಾಗ ವಿಷಯದ ಮೇಲಿನ ತಿಳುವಳಿಕೆ ಸಹಾಯಕ್ಕೆ ಬರುತ್ತದೆ. ಟಿಪ್ಪಣಿ ಮಾಡಿಕೊಳ್ಳುವಾಗ ಎಲ್ಲ ವಿಚಾರಗಳನ್ನು ಸಂಗ್ರಹಿಸಿಕೊಂಡರು, ನಂತರದ ಹಂತದಲ್ಲಿ ಅವುಗಳನ್ನು ಪರೀಕ್ಷೆಗೆ ಗುರಿ ಪಡಿಸಿ ಅಸ್ಪಷ್ಟವಾಗಿರುವ ಹಾಗೂ ದೋಷಪೂರಿತ ವಾಗಿರುವ ಆಕರ ಸಾಮಗ್ರಿಗಳನ್ನು ಕೈಬಿಡಬೇಕಾಗುತ್ತದೆ. ಸಂಶೋಧಕರು ತಮಗೆ ಅವಶ್ಯಕ ವೆನಿಸಿದ ಹಾಗೂ ಪ್ರಾಮಾಣಿಕವೆನಿಸಿದ ಆಕರಗಳನ್ನು ಮಾತ್ರ ಸ್ವೀಕರಿಸಬೇಕು. ಆನುಷಂಗಿಕ ಆಕರಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ದಾಖಲೆಯನ್ನು ತಿರುಚುವ ಪ್ರಯತ್ನವೂ ಚರಿತ್ರೆಯಲ್ಲಿ ನಡೆಯುತ್ತಿರುವುದರಿಂದಾಗಿ ಸಂಶೋಧಕರು ಎಷ್ಟು ಎಚ್ಚರಿಕೆಯ ಹೆಜ್ಜೆಯನ್ನಿಟ್ಟರೂ ಕಡಿಮೆಯೇ ಸರಿ. ಏಕೆಂದರೆ ಅವು ಸಮಾಜದ ಮೇಲೆ ಬೀರುವ ಪರಿಣಾಮಗಳು ಮಾರಣಾಂತಿಕ ವಾಗಿರುತ್ತದೆ. ವೈಯಕ್ತಿಕ ಉದ್ದೇಶಗಳ ಈಡೇರಿಕೆಗೆ ಅನೇಕ ಆಕರಗಳು. ಅದರಲ್ಲೂ ರಾಜ ಪ್ರಭುತ್ವದ ಸಂದರ್ಭದಲ್ಲಿ, ಹುಟ್ಟಿಕೊಂಡಿರುವುದು ಚರಿತ್ರೆಯ ಸೂಕ್ಷ್ಮ ಅಧ್ಯಯನದಿಂದ ತಿಳಿದುಬರುತ್ತದೆ. ಈ ರೀತಿಯ ಆಕರಗಳು ಆನುಷಂಗಿಕ ಆಕರಗಳಲ್ಲಿ ಭದ್ರ ಸ್ಥಾನವನ್ನು ಪಡೆದುಕೊಂಡಿರುತ್ತವೆ. ಇವು ನಿಜವಾಗಲೂ ದೋಷಪೂರಿತ ಆಕರಗಳು. ಇವುಗಳನ್ನು ಪರೀಕ್ಷಿಸಬೇಕಾದರೆ ಅಂದಿನ ಸಮಕಾಲೀನ ಸಂದರ್ಭದ ಇನ್ನಿತರ ಆಕರಗಳೊಂದಿಗೆ ತುಲನೆ ಮಾಡಬೇಕಾಗುತ್ತದೆ. ಆಕರ ಸಾಮಗ್ರಿಗಳನ್ನು ಇಟ್ಟುಕೊಂಡು ಅವುಗಳಿಂದ ಹೊರಡುವ ಚರಿತ್ರೆಯನ್ನು ಮಾತ್ರ ನಿರ್ಮಿಸಬೇಕೆನ್ನುವ ತೀರ್ಮಾನದೊಂದಿಗೆ ಸಂಶೋಧನೆಗೆ ಹೊರಟರೆ ಈ ಕಾರ್ಯ ಸಾಧ್ಯವಾಗದು. ಚರಿತ್ರೆಯನ್ನು ವ್ಯಾಖ್ಯಾನಿಸಿ ಅದನ್ನು ಚಲನಶೀಲಗೊಳಿಸುವ ಉದ್ದೇಶ ಹೊಂದಿದ್ದರೆ ಆನುಷಂಗಿಕ ಆಕರಗಳು ನಿಜವಾಗಲೂ ಚರಿತ್ರೆ ನಿರ್ಮಾಣಕ್ಕೆ ಅತ್ಯಮೂಲ್ಯವಾದ ಆಕರ ಸಾಮಗ್ರಿಗಳಾಗುತ್ತವೆ. ಆನುಷಂಗಿಕ ಆಕರಗಳು ಸಂಶೋಧಕರಿಗೆ ಎಲ್ಲ ಬಗೆಯ ಮಾಹಿತಿಗಳ ಪರಿಚಯವನ್ನು ಮಾಡಿಸುತ್ತವೆ. ಉದಾಹರಣೆಗೆ ವಿಶ್ವವಿದ್ಯಾಲಯ ಮಟ್ಟದಲ್ಲಿ ರಚನೆಗೊಳ್ಳುವ ಮಹಾ ಪ್ರಬಂಧಗಳು ಬಹುತೇಕ ಎಲ್ಲ ಪಿ.ಎಚ್.ಡಿ. ಮಹಾಪ್ರಬಂಧಗಳು ಪ್ರಾಥಮಿಕ ಮತ್ತು ಆನುಷಂಗಿಕ ಮೂಲಗಳಿಂದ ಮಾಹಿತಿಗಳನ್ನು ಪಡೆದುಕೊಂಡು ನಿರ್ಮಾಣವಾಗಿರುತ್ತವೆ. ಸಂಶೋಧಕರು ಅಲ್ಲಿ ಸ್ಪಷ್ಟವಾದ ಉದ್ದೇಶವನ್ನು ಹೊಂದಿರುತ್ತಾರೆ. ತಮ್ಮ ಅಧ್ಯಯನದ ವಿಷಯಕ್ಕೆ ಪೂರಕವಾದ ಮಾಹಿತಿಗಳೆಲ್ಲವನ್ನೂ ಆರಂಭದ ಅಧ್ಯಾಯದಲ್ಲಿ ಚರ್ಚಿಸಿರುತ್ತಾರೆ ಹಾಗೂ ತಾವು ಯಾಕಾಗಿ ಈ ಅಧ್ಯಯನ ವಿಷಯವನ್ನು ಆಯ್ಕೆ ಮಾಡಿಕೊಂಡೆವು ಎಂಬುದಕ್ಕೆ ಸೃಷ್ಟೀಕರಣವನ್ನೂ ಕೊಟ್ಟಿರುತ್ತಾರೆ. ಅಲ್ಲಿ ಆಕರಗಳ ಶೋಧ ಮಾತ್ರವಲ್ಲದೆ ಆಕರಗಳ ಅಭ್ಯಾಸವನ್ನೂ ಕಾಣಬಹುದು. ಪಿ.ಎಚ್.ಡಿ. ಸಂಶೋಧನೆಯಲ್ಲಿ ಆಕರಗಳ ಲಭ್ಯತೆ ಬಹುಮುಖ್ಯವಾದದ್ದು. ಕೆಲವು ವಿಷಯಗಳಿಗೆ ಆನುಷಂಗಿಕ ಆಕರಗಳು ಸಿಗದೇ ಇರಬಹುದು. ಅಂಥ ಸಂದರ್ಭಗಳಲ್ಲಿ ಪ್ರಾಥಮಿಕ ಆಕರಗಳಿಂದಲೇ ಮಾಹಿತಿಗಳನ್ನು ಸಂಗ್ರಹಿಸಬೇಕಾಗುತ್ತದೆ ಹಾಗೂ ಆ ಮೂಲಕ ಸಂಶೋಧಕರು ಆನುಷಂಗಿಕ ಆಕರವೊಂದನ್ನು ನಿರ್ಮಿಸಿರುತ್ತಾರೆ.

ಚರಿತ್ರೆ ಸಂಶೋಧನೆಯಲ್ಲಿ ಪ್ರಾಥಮಿಕ ಮತ್ತು ಆನುಷಂಗಿಕ ಆಕರಗಳು ಮೇಲ್ನೋಟಕ್ಕೆ ಮೂಲ ಮತ್ತು ದ್ವಿತೀಯ ಮತ್ತು ಸಾಮಗ್ರಿಗಳೆಂದು ಕಂಡುಬಂದರೂ ಅಥವಾ ಆ ರೀತಿ ಅರ್ಥೈಸಿಕೊಳ್ಳಲಾಗಿದ್ದರೂ ಅವುಗಳ ಉಪಯೋಗದ ದೃಷ್ಟಿಯಿಂದ ನೋಡಿದಾಗ ಅವೆರಡೂ ಅವಶ್ಯಕ ಹಾಗೂ ಅನಿವಾರ್ಯವಾದದ್ದೇ ಆಗಿವೆ. ಮಿತಿಗಳು ಈ ಎರಡೂ ಸ್ವರೂಪದ ಆಕರಗಳಿಗಿವೆ. ರಾಜಪ್ರಭುತ್ವ, ಧಾರ್ಮಿಕ ಪ್ರಭುತ್ವ, ಮತ್ತು ವಸಾಹತು ಪ್ರಭುತ್ವದ ಹಿನ್ನೆಲೆಯಿಂದ ನಿರ್ಮಾಣಗೊಂಡ ಅಥವಾ ಅವುಗಳನ್ನು ಪುಷ್ಟೀಕರಿಸುವ ಉದ್ದೇಶವನ್ನಿಟ್ಟುಕೊಂಡ ಸಾಮಗ್ರಿಗಳು ಉದಾಹರಣೆಗೆ, ಸ್ಮಾರಕಗಳು, ವರದಿಗಳು, ದಾಖಲೆಗಳು ಮುಂತಾದುವು ಪೂರ್ವಾಗ್ರಹ ಪೀಡಿತವಾಗಿಯೇ ಇರುತ್ತದೆ. ಇವುಗಳನ್ನು ಬಳಸಿಕೊಂಡು ನಿರ್ಮಾಣಗೊಳ್ಳುವ ಆನುಷಂಗಿಕ ಆಕರಗಳು ಅಧ್ಯಯನಕಾರರ ಪೂರ್ವಗ್ರಹಗಳಿಗೆ ಒಳಗಾಗಿರುತ್ತವೆ. ದಾಖಲಿಸುವ ಅಥವಾ ಉಲ್ಲೇಖಿಸುವ ಸಂದರ್ಭಗಳಲ್ಲಿ ಆನುಷಂಗಿಕ ಆಕರಗಳಲ್ಲಿನ ದೋಷಗಳು ಎದ್ದುಕಾಣುತ್ತವೆ. ಆದರೆ ಪ್ರಾಥಮಿಕ ಆಕರಗಳ ಹುಟ್ಟಿನ ಹಿಂದಿನ ಧೋರಣೆಗಳು ಎಷ್ಟೋ ಸಂದರ್ಭಗಳಲ್ಲಿ ಚರಿತ್ರೆಕಾರರ ವಿಶ್ಲೇಷಣೆಯೊಳಗೆ ಸೇರಿಕೊಳ್ಳದೆ ಜಾರಿಕೊಳ್ಳುವ ಸಂಭವವೇ ಹೆಚ್ಚು. ಇದು ಚರಿತ್ರೆಯ ತಾತ್ವಿಕತೆಯ ಪ್ರಶ್ನೆಯಾದರೂ ಆಕರಗಳ ಸ್ವರೂಪದ ಚರ್ಚೆ ಬಂದಾಗ ಚರಿತ್ರೆಕಾರರು ಪ್ರಶ್ನಿಸಲೇ ಬೇಕಾಗಿರುವಂತದ್ದು. ಆನುಷಂಗಿಕ ಆಕರಗಳು ಕೇವಲ ಆಕರಗಳ ದೊರಕುವಿಕೆಯ ಹಿನ್ನೆಲೆಯಲ್ಲಿ ಅಥವಾ ಸಂಶೋಧಕರಿಗೆ ಆಕರಗಳು ಸಿಗುವ ದಿಕ್ಕನ್ನು ಸೂಚಿಸುವ ಹಿನ್ನೆಲೆಯಲ್ಲಷ್ಟೇ ಪ್ರಮುಖವಾಗುತ್ತವೆಯೇ ಹೊರತು ಅವು ಹೇಳುವ ವಿಚಾರಗಳಿಂದಲ್ಲ ಎನ್ನುವುದು ಸಾಮಾನ್ಯ ಗ್ರಹಿಕೆ. ಇದರಲ್ಲಿ ಸತ್ಯಾಂಶವಿದ್ದರೂ ಆನುಷಂಗಿಕ ಆಕರಗಳನ್ನು ಅಷ್ಟಕ್ಕೇ ಸೀಮಿತಗೊಳಿಸಿ ನೋಡುವುದೂ ತಪ್ಪು ವಿಧಾನವಾಗುತ್ತದೆ. ಜನಸಮುದಾಯಗಳೇ ಚರಿತ್ರೆಗೆ ನೇರವಾಗಿ ಆಕರ ಸಾಮಗ್ರಿಗಳಾಗುತ್ತಿರುವ ಇಂದಿನ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಆನುಷಂಗಿಕ ಎನ್ನುವ ಸಾಂಪ್ರದಾಯಿಕ ವರ್ಗೀಕರಣ ತನ್ನ ಹಿಂದಿನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಇಂದಿನ ಸಂದರ್ಭದಲ್ಲಿ ಚರಿತ್ರೆ ಅಧ್ಯಯನ ವಿಧಾನವೇ ಬದಲಾಗುತ್ತಿದೆ. ದಲಿತ ಚರಿತ್ರೆ, ಮಹಿಳಾ ಚರಿತ್ರೆ, ನಗರ ಚರಿತೆ ಮುಂತಾದ ಹೊಸ ವಿಚಾರಗಳು ಸಂಶೋಧನೆಗೊಳ್ಳುತ್ತಿರುವಾಗ ಆಕರ ಸಾಮಗ್ರಿಗಳ ಹಿಂದಿನ ಗ್ರಹಿಕೆಯೂ ಬದಲಾಗುತ್ತಿದೆ. ಆಕರಗಳ ಹಿಂದಿರುವ ಧೋರಣೆಗಳು ಇಂದು ಹೆಚ್ಚು ಚರ್ಚೆಗೆ ಒಳಗಾಗಿತ್ತಿವೆ. ಚರಿತ್ರೆಗೆ ಪ್ರವೇಶ ಪಡೆದ ಆಕರಗಳು ಅಂದರೆ, ಇವಷ್ಟೇ ಚರಿತ್ರೆಯನ್ನು ನಿರ್ಮಾಣಗೊಳಿಸುವ ಸಾಮರ್ಥ್ಯ ಹೊಂದಿರುವ ಆಕರಗಳು ಹಾಗೂ ಚರಿತ್ರೆಗೆ ಪ್ರವೇಶ ಪಡೆಯದ ಆಕರಗಳು ಅಂದರೆ, ಚರಿತ್ರೆಗೆ ಪ್ರವೇಶ ಪಡೆಯುವ ಯೋಗ್ಯತೆ ಇಲ್ಲ ಎಂಬುದಾಗಿ ತೀರ್ಮಾನಿಸಲಾದ ಆಕರಗಳು ಇಂದು ಚರಿತ್ರೆ ಸಂಶೋಧನೆಯ ಕೇಂದ್ರಬಿಂದುಗಳಾಗಿವೆ. ಹೀಗೆ ಚರಿತ್ರೆ ಸಂಶೋಧನೆಯಲ್ಲಿ ಮಾಹಿತಿ ಸಂಗ್ರಹದ ಹಾಗೂ ವಿಶ್ಲೇಷಣೆಯ ನೆಲೆಗಳು ಬದಲಾಗುತ್ತಿವೆ ಹಾಗೂ ಆಕರಗಳೂ ತಮ್ಮ ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬರುತ್ತಿವೆ. ಆಧುನಿಕ ಹಾಗೂ ಆಧುನಿಕೋತ್ತರ ಚಿಂತನೆಗಳು ಚರಿತ್ರೆ ಅಧ್ಯಯನದ ಒಟ್ಟು ಸ್ವರೂಪವನ್ನೇ ಬದಲಾಯಿಸಿಬಿಟ್ಟಿವೆ. ಹೀಗಾಗಿ ಆಕರಗಳ ಸಂಗ್ರಹ, ವಿಂಗಡನೆ ಹಾಗೂ ವಿಶ್ಲೇಷಣೆ ಇವುಗಳೆಲ್ಲವೂ ಚಿಂತನೆಯ ಭಾಗಗಳಾಗಿ ಬೇರೆ ಬೇರೆ ಸಿದ್ಧಾಂತಗಳ ರೂಪುಗೊಳ್ಳುವಿಕೆಯಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತಿವೆ.

ಪರಾಮರ್ಶನ ಗ್ರಂಥಗಳು

೧. ಕ್ಲೈವ್ ಸೀಲ್ (ಸಂ) ೧೯೯೮, ರಿಸರ್ಚಿಂಗ್ ಸೊಸೈಟಿ ಆಂಡ್ ಕಲ್ಚರ್, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಷನ್ಸ್.

೨. ಪಾರ್ಥನಾಥ ಮುಖರ್ಜಿ (ಸಂ.), ೨೦೦೦, ಮೆಥಡ್ ಇನ್ ಸೋಷಿಯಲ್ ರಿಸರ್ಚ್ ಡೈಲೆಮಾಸ್ ಅಂಡ್ ಪರ್ಸ್ಪಕ್ಟಿವ್ಸ್, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಷನ್ಸ್.

೩. ಪೀಟರ್ ಬರ್ಕ್ (ಸಂ) ೧೯೯೨, ನ್ಯೂ ಪರ್ಸ್ಪೆಕ್ಟಿವ್ಸ್ ಆನ್ ಹಿಸ್ಟಾರಿಕಲ್ ರೈಟಿಂಗ್ಸ್, ಕೇಂಬ್ರೀಡ್ಜ್: ಪಾಲಿಟಿ ಪ್ರೆಡಸ್.

೪. ವಿಲಿಯಂ ಜೆ. ಗುಡೆ ಮತ್ತು ಪೌಲ್ ಹ್ಯಾಟ್, ೧೯೫೨. ಮೆಥಡ್ಸ್ ಇನ್ ಸೋಶಿಯಲ್ ರಿಸರ್ಚ್, ಮೆಕ್‌ಗ್ರೊ ಹಿಲ್ ಬುಕ್ ಕಂಪೆನಿ.

* * *