ತುಂಡು ಪುರಾವೆಗಳ ಆಧಾರದ ಮೇಲೆ ಗತಕಾಲದ ಮಹತ್ವದ ವಿಷಯ ವಸ್ತುವನ್ನು ಶೋಧಿಸುವ ಪ್ರಯತ್ನವೇ ಇತಿಹಾಸ ಎಂದು ಅರ್ಥೈಸುವುದು ಸಮಂಜಸವಾಗಿ ಕಾಣುತ್ತದೆ. ಈ ಪುರಾವೆಗಳು ಅವಲೋಕನಕಾರರು ದಾಖಲಿಸಿರುವ ಅಭಿಪ್ರಾಯಗಳಾಗಿರುವುದರಿಂದ, ಅವು ಅವಶ್ಯಕವಾದ ಕಚ್ಚಾವಸ್ತುಗಳಾಗಿದ್ದು, ಅವುಗಳ ಶೋಧನಾಕಾರ್ಯವನ್ನು ಇತಿಹಾಸಕಾರ ನಿರ್ವಹಿಸಬೇಕಾಗುತ್ತದೆ. ಒಬ್ಬ ವಿಮರ್ಶಕ ಅಭಿಪ್ರಾಯ ಪಟ್ಟಿರುವಂತೆ, ಸರ್ಕಾರದ ಅಧಿಕೃತ ದಾಖಲೆಗಳಲ್ಲಿಯೂ ಸಹ, ಪ್ರೇಮಪತ್ರದಲ್ಲಿ ಕಂಡುಬರುವಂತೆ, ಸುಳ್ಳಿನ ಸರಮಾಲೆ ಇರುತ್ತದೆ. ಆದ್ದರಿಂದ ಈ ದಾಖಲೆಗಳನ್ನು ಪರಿಶೋಧಿಸಿ ಅವುಗಳ ಪ್ರಾಮಾಣ್ಯವನ್ನು ಇತಿಹಾಸಕಾರರು ಸ್ಥಿರಪಡಿಸಬೇಕಾಗುತ್ತದೆ. ಮಾತ್ರವಲ್ಲ, ಘಟನೆಗಳ ಕಾರ್ಯಕಾರಣ ಸಂಬಂಧ, ಘಟನೆಗಳ ವಸ್ತುನಿಷ್ಠವಾದ ನಿರೂಪಣೆ ಮುಂತಾದ ವಿಷಯಗಳನ್ನು ಕುರಿತಾದ ಚರ್ಚೆಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಐತಿಹಾಸಿಕ ನಿಜಾಂಶಗಳ ಸ್ವರೂಪ ಮತ್ತು ಅರ್ಥ ವಿವರಣೆ

ಇತಿಹಾಸದ ರಚನೆಯು ನಮಗೆ ಲಭ್ಯವಿರುವ ಸುಳಿವು ಅಥವಾ ಕುರುಹುಗಳಿಗೆ ಸೀಮಿತವಾಗಿರುತ್ತದೆ. ಈಗಿನ ನಿದರ್ಶನ ನಮಗೆ ನಿರ್ಣಾಯಕವಾದ ಮೂಲಾಂಶ. ಆದ್ದರಿಂದ ಇತಿಹಾಸದ ಸಂಗತಿಗಳು ಪೂರ್ವಿಕರು ಬಿಟ್ಟಿರುವ ನಿದರ್ಶನಗಳಿಂದ ಪರೋಕ್ಷವಾಗಿ ಮಾತ್ರ ತಿಳಿಯುತ್ತವೆ. ಬೇರೆ ಮಾತಿನಲ್ಲಿ ಹೇಳುವುದಾದರೆ, ನಾವು ನೇರವಾಗಿ ಗ್ರಹಿಸುವುದ ಸಂಗತಿಗಳಲ್ಲ, ಆದರೆ ಇತರರಲ್ಲಿ ಕಂಡುಬರುವ ಆ ಸಂಗತಿಗಳ ಅರಿವು ಅಥವ ಭಾವನೆ ಮಾತ್ರ. ವೈಯಕ್ತಿಕವಾಗಿ ಅವಲೋಕಿಸಿದ ಸಂಗತಿಗಳ ಆಧಾರದ ಮೇಲೆ ತೀರ್ಮಾನಗಳು ಅವಲಂಬಿತವಾಗಿರಬೇಕೆಂಬುದು ಇತಿಹಾಸ ರಚನಕಾರರಿಗೆ ಷರತ್ತಾದರೆ, ಇತಿಹಾಸವು ಸಾಧ್ಯವಾಗದು. ಯಾರೂ ಕೂಡ ಈಗ ಗುಪ್ತಯುಗದಲ್ಲಿ ಜೀವಿಸುವುದು ಸಾಧ್ಯವಿಲ್ಲ. ಅಂತೆಯೇ, ಸಂಗತಿಗಳ ವೈಯಕ್ತಿಕ ಅವಲೋಕನ ಇತಿಹಾಸ ರಚನೆಯ ಆಸರೆಯಾಗಲಾರದು. ಮಾತ್ರವಲ್ಲ, ಒಬ್ಬ ವ್ಯಕ್ತಿಯ ಜೀವನದ ಅವಶ್ಯಕವಾದ ಸಂಗತಿಗಳನ್ನು ಅವಲೋಕಿಸುವುದು ಇತಿಹಾಸಕಾರರ ಸಾಮರ್ಥ್ಯಕ್ಕೆ ಮೀರಿದುದಾಗಿದೆ. ಸಮಕಾಲೀನ ಜೀವನವನ್ನು ತಮ್ಮ ವಿಷಯ ವಸ್ತುವನ್ನಾಗಿ ಹೊಂದಿರುವ ಯಾವ ಇತಿಹಾಸಕಾರರೂ ಎಲ್ಲ ಸಂಗತಿಗಳನ್ನೂ ಪ್ರತ್ಯಕ್ಷವಾಗಿ ಅವಲೋಕಿಸಲಾರರು. ಇತರರ ವರದಿಗಳು ನೀಡುವ ಸಂಗತಿಗಳ ಮೇಲೆ ಆತನು ಅವಲಂಬಿತನಾಗಿರುತ್ತಾನೆ. ಇತಿಹಾಸದ ಸಂಗತಿಗಳು ರೆಬೆನಿಯಾಸ್ ಕಥೆಯಲ್ಲಿ ಪುರೋಹಿತೆಯು ಮದ್ಯವನ್ನು ನೀಡಿದಂತಿರುತ್ತವೆ. ಆ ಮದ್ಯವನ್ನು ಸೇವಿಸಿದವರು ವಿಭಿನ್ನ ರುಚಿಯನ್ನು ಅನುಭವಿಸಿದರು. ಬೇರೆ ಮಾತಿನಲ್ಲಿ ಹೇಳುವುದಾದರೆ, ಇತಿಹಾಸದ ದತ್ತಾಂಶಗಳು ಗತಿಸಿದ, ನಿರ್ಜೀವವಾದ ಮತ್ತು ಕಳೆದುಹೋದವುಗಳಾಗಿವೆ. ವೈಜ್ಞಾನಿಕ ದತ್ತಾಂಸಗಳು ಪ್ರತ್ಯಕ್ಷವೂ, ಅಪೂರ್ಣವೂ ಆಗಿದ್ದು ಇತಿಹಾಸದ ದತ್ತಾಂಶಗಳು ಅವುಗಳಿಗಿಂತ ವಿಭಿನ್ನವಾಗಿರುತ್ತವೆ.

ಇತಿಹಾಸವು ಹೆಚ್ಚಾಗಿ ಸಂಕೀರ್ಣವಾಗಿದ್ದು, ಅದರ ಸಂಗತಿಗಳು ವ್ಯಕ್ತಿ ಮನೋಗತದಿಂದ ಕೂಡಿರುತ್ತವೆ. ಉದಾಹರಣೆಗೆ, ಅಕ್ಬರ್ ಒಬ್ಬ ಪ್ರಸಿದ್ದ ಚಕ್ರವರ್ತಿ ಎಂಬುದು ವಾಸ್ತವಾಂಶ. ಆದರೆ, ಆತನು ಪ್ರಸಿದ್ಧ ಚಕ್ರವರ್ತಿ ಎಂದು ನಂಬಿರುವ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿಯೂ ಆತನ ಪ್ರಸಿದ್ಧಿ ಕುರಿತಾಗಿ ಒಂದೇ ಭಾವನೆ ಇರುತ್ತದೆಯೇ? ಯಾವಾಗಲೂ ಒಂದೇ ರೀತಿಯದಾಗಿತ್ತೆ? ಅಥವಾ ಭವಿಷ್ಯದಲ್ಲಿಯೂ ಏಕರೀತಿಯಲ್ಲಿರುವುದು ಸಾಧ್ಯವೇ? ಅನೇಕ ಐತಿಹಾಸಿಕ ಸಂಗತಿಗಳು ಸರಳವಾಗಿರುವುದಕ್ಕಿಂತ ಬದಲಾಗಿ ಇತರ ಸಂಗತಿಗಳ, ಇತರ ಕೃತ್ಯಗಳ, ಇತರ ಚಿಂತನೆಗಳ ಮತ್ತು ಇತರ ಮನೋಭಾವನೆಗಳ ಸಂಬಂಧಗಳೊಂದಿಗೆಅರ್ಥವನ್ನು ಪಡೆಯುತ್ತವೆ. ಇತಿಹಾಸದ ಹಲವಾರು ಸಂಗತಿಗಳು ನಿರೂಪಣೆಯಲ್ಲಿ ಮಾತ್ರ ಸರಳವಾಗಿರುತ್ತವೆಯೇ ವಿನಾ ಅವುಗಳ ಸಂಬಂಧಗಳಿಂದಲ್ಲ ಮತ್ತು ಪ್ರಾಮುಖ್ಯತೆಯಿಂದಲ್ಲ. ಬೇರೆ ಮಾತಿನಲ್ಲಿ ಹೇಳುವುದಾದರೆ,ಒಂದು ಚಿತ್ರವು ಎಷ್ಟು ನಿಜವಾದುದಾಗಿರುತ್ತದೆಯೋ ಅಷ್ಟೇ ಇತಿಹಾಸವೂ ಕೂಡ ನಿಜವಾದುದಾಗಿರುತ್ತದೆ. ಎಂದು ಹೇಳಬಹುದೇ ವಿನಾ ಭೌತವಿಜ್ಞಾನದಷ್ಟು ನಿಯಮಾನುಸಾರವಾಗಿರುತ್ತದೆಂದು ಹೇಳಲಾಗುವುದಿಲ್ಲ. ಇತಿಹಾಸವು ನೈಜ ಸ್ವರೂಪದ ನಿಸ್ಸಂಶಯವಾದ ಜ್ಞಾನ ಅಥವಾ ಅರಿವನ್ನು ನೀಡುತ್ತದೆಂದು ಹೇಳಬಹುದಾಗಿದೆ. ಆದರೆ ಅದು ಎಲ್ಲ ಸಂದರ್ಭಗಳಿಗೂ ಅನ್ವಯಿಸುವ ಅಥವ ಎಲ್ಲ ಮನುಷ್ಯರಿಗೆ ಅಥವಾ ವಸ್ತುಗಳಿಗೆ ಸಂಬಂಧಿಸಿದ, ಸರ್ವವ್ಯಾಪಿ ಜ್ಞಾನವಾಗಿರುವುದಿಲ್ಲ. ಐತಿಹಾಸಿಕ ಜ್ಞಾನವು ತನ್ನ ಸ್ವಭಾವ ಮತ್ತು ಗುಣಗಳಲ್ಲಿ ಅಪೂರ್ಣವಾಗಿದೆ.

ಅರ್ಥನಿರೂಪಣೆ

ಐತಿಹಾಸಿಕ ನಿಜಾಂಶಗಳ ಸ್ವರೂಪವನ್ನು ಗ್ರಹಿಸಿದ ಮೇಲೆ ಇತಿಹಾಸಕಾರ ಇಡಬೇಕಾಗಿರುವ ಮುಂದಿನ ಹೆಜ್ಜೆ ಅರ್ಥನಿರೂಪಣೆ. ಗತಕಾಲದ ಗುರುತುಗಳು ಅಥವ ಸಂಗತಿಗಳನ್ನು ಸಂಗ್ರಹಿಸಿದ ಮೇಲೆ ಅವುಗಳನ್ನು ಕುರಿತು ಚಿಂತಿಸಿ, ಅವುಗಳ ಮನೋಭಾವವನ್ನು ಜಾಗರೂಕತೆಯಿಂದ ಕಂಡುಹಿಡಿಯಬೇಕು. ಐತಿಹಾಸಿಕ ಸಂಗತಿಗಳು ಅನುಭವಗಳ ವಿಧ್ಯುಕ್ತವಾದ ಹೇಳಿಕೆಗಳಾಗಿದ್ದು ನಿರ್ಣಯಗಳಿಗಿಂತ ಭಿನ್ನವಾದುದಾಗಿರುತ್ತವೆ. ಮೀನು ಮಾರುವವನ ಹಲಗೆಯ ಮೇಲಿರುವ ಮೀನುಗಳಂತೆ ಐತಿಹಾಸಿಕ ಸಂಗತಿಗಳು ವಿಭಿನ್ನ ಆಕಾರಗಳಲ್ಲಿ ನಮಗೆ ಲಭ್ಯವಾಗುತ್ತವೆ. ಇ.ಎಚ್.ಕಾರ್ ಒಂದೆಡೆ ಹೇಳಿರುವಂತೆ, ಮೀನುಗಳನ್ನು ಸಂಗ್ರಹಿಸಿ, ಅವುಗಳನ್ನು ಮನೆಗೆ ಕೊಂಡೊಯ್ದು, ಇಷ್ಟವಾಗುವಂತೆ ಅಡಿಗೆ ಮಾಡಿ, ಉಣಬಡಿಸುವಂತಲ್ಲ, ಇತಿಹಾಸಕಾರನು ಸಂಗತಿಗಳ ಭಾವನೆ, ಅವುಗಳ ಪರಿಸ್ಥಿತಿ, ಅವುಗಳ ಉದ್ದೇಶಗಳು ಮತ್ತು ಅವುಗಳು ಲಕ್ಷಣಗಳ ನಿಷ್ಕೃಷ್ಟವಾದ ಕಲ್ಪನೆಯನ್ನು ಹೊಂದಿರಬೇಕು. ಬೇರೆ ಮಾತಿನಲ್ಲಿ ಹೇಳುವುದಾದರೆ. ಐತಿಹಾಸಿಕ ಸಂಗತಿಗಳ ಯಥಾರ್ಥ ವಾದ ವಿವೇಚನೆಯನ್ನು ಇತಿಹಾಸಕಾರ ಪಡೆದಿರಬೇಕು.

ಕೇವಲ ಐತಿಹಾಸಿಕ ಸಂಗತಿಗಳನ್ನು ಸಂಗ್ರಹಿಸುವುದಕ್ಕೆ ಮಾತ್ರ ಇತಿಹಾಸಕಾರನ ಕರ್ತವ್ಯ ಸೀಮಿತವಾಗಿರುವುದಿಲ್ಲ. ಇದು ಆತನ ಉದ್ದೇಶವೂ, ಗುರಿಯೂ ಆಗಿರಬಾರದು. ತನ್ನ ಕಲ್ಪನಾಶಕ್ತಿ ಮತ್ತು ಯುಕ್ತಾಯುಕ್ತ ಪರಿಜ್ಞಾನದಿಂದ ಸಂಗ್ರಹಿಸಿದ ಸಂಗತಿಗಳ ಅರ್ಥವನ್ನು ನಿರೂಪಿಸಬೇಕು. ಐತಿಹಾಸಿಕ ಸಂಗತಿಗಳು ಗತಿಸಿದ್ದು ಹಾಗೂ ನಿರ್ಜೀವವಾದವಾಗಿದ್ದು ಅವು ತಮ್ಮಷ್ಟಿಗೆ ತಾವೇ ಮಾತನಾಡುವುದಿಲ್ಲ. ಪಿರಾಂಡಲ್ಲೊನಲ್ಲಿ ಬರುವ ಪಾತ್ರವೊಂದರಂತೆ, ಸಂಗತಿ ಒಂದು ಚೀಲವಿದ್ದಂತೆ ಚೀಲಕ್ಕೆ ತುಂಬಿದರೆ ಮಾತ್ರ ಅದು ಎದ್ದು ನಿಲ್ಲುವಂತೆ, ಇತಿಹಾಸಕಾರ ಮಾತನಾಡಿಸಿದರೆ ಮಾತ್ರ ಅವು ಮಾತನಾಡುತ್ತವೆ. ಆದ್ದರಿಂದ ಇತಿಹಾಸದಲ್ಲಿ ಅರ್ಥನಿರೂಪಣೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ ಇಲ್ಲಿ ಇ.ಎಚ್.ಕಾರ್ ಅವರ ಹೇಳಿಕೆ ಉಲ್ಲೇಖಾರ್ಹವಾಗಿದೆ. ಅರ್ಥನಿರೂಪಣೆ ಇತಿಹಾಸದ ಜೀವನಾಧಾರವಾದ ರಕ್ತ ಅಥವಾ ಜೀವರಕ್ತ. ಅರ್ಥನಿರೂಪಣೆ ಇತಿಹಾಸಕ್ಕೆ ಚೈತನ್ಯ ಕೊಡುವ ಪ್ರಭಾವವನ್ನು ಹೊಂದಿರುತ್ತದೆ. ಈ ಕಾರಣಕ್ಕಾಗಿ ಇತಿಹಾಸ ಎಂದರೆ ಅರ್ಥನಿರೂಪಣೆ ಎಂದು ಇ.ಎಚ್.ಕಾರ್ ಮತ್ತೊಂದೆಡೆ ಸ್ಪಷ್ಟವಾಗಿ ನುಡಿದಿದ್ದಾರೆ. ಆದರೆ ಇತಿಹಾಸಕಾರ ಸಂಗತಿಗಳಬಗ್ಗೆ ಜಾಗರೂಕನಾಗಿದ್ದರೆ ದೈವಿಕ ದೂರದೃಷ್ಟಿ ಇತಿಹಾಸದ ಅರ್ಥದ ಬಗ್ಗೆ ನೋಡಿಕೊಳ್ಳುತ್ತದೆ ಎಂಬ ರಾಂಕೆಯವರ ಕರ್ತವ್ಯನಿಷ್ಠ ಹೇಳಿಕೆ ಸಮಂಜಸವಾಗಿ ತೋರುವುದಿಲ್ಲ. ಇದು ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಿರುವ ವಸ್ತುಗಳನ್ನು ಜೋಡಿಸದಂತಾಗುತ್ತದೆ. ಇತಿಹಾಸಕಾರ ಮಾಡಬೇಕಾಗಿರುವ ಆದ್ಯ ಕರ್ತವ್ಯವೆಂದರೆ ಸಂಗತಿಗಳನ್ನು ಪ್ರಾಮಾಣಿಕವಾಗಿ ಸಂಗ್ರಹಿಸಿ, ತರ್ಕಬದ್ಧವಾಗಿ ಆಲೋಚಿಸಿ, ನಂತರ ಅರ್ಥನಿರೂಪಣೆಯಲ್ಲಿ ತೊಡಗಬೇಕು. ಇಲ್ಲಿ ಸಂಗತಿಗಳು ಪರಿಶುದ್ಧವಾದವು, ದೃಢಾಭಿಪ್ರಾಯ ಅಥವಾ ದೃಢನಂಬಿಕೆ ಸ್ವತಂತ್ರವಾದುದು ಅಥವಾ ಬಂಧಿತವಲ್ಲದ್ದು ಎಂಬ ಸಿ.ಪಿ.ಸ್ಕಾಟ್ ಅವರ ವಿಧ್ಯುಕ್ತವಾದ ಹೇಳಿಕೆ ಗಮನಾರ್ಹ.

ಮೇಲೆ ತಿಳಿಸಿರುವಂತೆ ಐತಿಹಾಸಿಕ ಸಂಗತಿಗಳನ್ನು ಸಂಗ್ರಹಿಸಿದರೆ ಸಾಲದು. ನಮ್ಮ ಕಲ್ಪನಾಶಕತಿ ಮತ್ತು ನಮ್ಮ ಯುಕ್ತಾಯುಕ್ತ ಪರಿಜ್ಞಾನವನ್ನು ಉಪಯೋಗಿಸಿ ಸಂಗತಿಗಳ ಅರ್ಥ ನಿರೂಪಿಸಬೇಕು. ಅವುಗಳನ್ನು ಪರಿಶೀಲಿಸಿ, ಮೌಲ್ಯಮಾಪನ ಮಾಡಿ, ಸಮಯೋಚಿತ ವಾದ ಹಿನ್ನೆಲೆಯಲ್ಲಿ ಅನುಗೊಳಿಸಬೇಕು. ಅದು ಸಂಗತಿಗಳ ಮಹತ್ವದ ಅರಿವು ತೋರುವ ಪ್ರತಿಫಲನ ಅಥವಾ ಪ್ರತಿಬಿಂಬವಾಗಿರಬೇಕು. ಮಾತ್ರವಲ್ಲ, ಈ ಸಂಗತಿಗಳನ್ನು ಅವುಗಳ ಕಾಲ ಮತ್ತು ಸ್ಥಳಗಳ ಸಂಬಂಧಗಳ ನೆಲೆಯಲ್ಲಿ ಅವಲೋಕಿಸಬೇಕು. ಯಥಾರ್ಥದ ಒಳನೋಟವಿಲ್ಲದಿದ್ದಾಗ ಜೀವಿಸುತ್ತಿರುವ ವ್ಯಕ್ತಿಗಳಿಗೆ ಇತಿಹಾಸ ಯಾವ ಸಜೀವ ಅರ್ಥವಿಲ್ಲವಾಗುತ್ತದೆ. ಒಂದು ಯುಗದ ಅಥವಾ ಘಟನೆಯ ಮಾನಸಿಕ ಚಿತ್ರವನ್ನು ರೂಪಿಸಿಕೊಂಡ ಮೇಲೆ ಕಥನದ ನಿರೂಪಣೆಯನ್ನು ಪ್ರಾರಂಭಿಸಬೇಕು. ಒಬ್ಬ ಇತಿಹಾಸಕಾರ ಹೇಳಿರುವಂತೆ, ಇಟ್ಟಿಗೆಯನ್ನು ಮಾಡುವವರು ಅವಶ್ಯಕ, ಆದರೆ ಇತಿಹಾಸದ ಕಟ್ಟಡಕ್ಕೆ ಒಬ್ಬ ವಾಸ್ತುಶಿಲ್ಪಿ ಅವರಿಗಿಂತ ಅತ್ಯಾವಶ್ಯಕ. ನಿಜಾಂಶಗಳನ್ನು ಕಂಡುಹಿಡಿದ ಮೇಲೆ ಇತಿಹಾಸಕಾರನು ಅದರ ಪ್ರಸರಣದಲ್ಲಿ ಮುಂದಾಗಬೇಕು. ಕೋಹೆನ್ ತಿಳಿಸಿರುವಂತೆ, ಇತಿಹಾಸಕಾರನು ತಾನು ವರದಿ ಮಾಡುವ ಘಟನೆಗಳನ್ನು ಸೃಷ್ಟಿಸುವುದಿಲ್ಲ. ಪ್ರಾಮಾಣಿಕವಾಗಿ ವರದಿ ಮಾಡಬಲ್ಲನೆಂಬುದನ್ನು ವಾಸ್ತವಿಕವಾಗಿ ನಿರ್ಣಯಿಸಿದ ನಂತರ ಇತಿಹಾಸಕಾರನು ಯಥಾದೃಷ್ಟ ರೂಪಣವನ್ನು ಆಯ್ದುಕೊಳ್ಳುತ್ತಾನೆ. ಹೀಗೆ ಇತಿಹಾಸಕಾರನು ಯಥಾದೃಷ್ಟ ರೂಪಣವನ್ನು ಆಯ್ದು ಕೊಳ್ಳುತ್ತಾನೆ. ಹೀಗೆ ಇತಿಹಾಸಕಾರನು ಗತಕಾಲವನ್ನು ವರ್ತಮಾನದೊಂದಿಗೆ ಅರ್ಥ ನಿರೂಪಿಸುತ್ತಾನೆಯೇ ವಿನಾ ವರ್ತಮಾನ ಕಾಲಕ್ಕಾಗಿಯಲ್ಲ.

ಕಾರ್ಯಕಾರಣ ಸಂಬಂಧ

ಇತಿಹಾಸ ರಚನಾದೃಷ್ಟಿಯಿಂದ ವಿವೇಚಿಸಿದಾಗ ಕಾರ್ಯ ಎಂಬ ಪದವಿಯನ್ನು ಪರಿಣಾಮ, ಗತಿಸಿದ ಘಟನೆ, ನಡೆದದ್ದು, ಸಂಭವಿಸಿದ್ದು, ಆದುದು ಮುಂತಾಗಿ ಆರ್ಥೈಸಬಹುದು. ಕೆಲವು ಘಟನೆಗಳು ಪರಸ್ಪರ ಸಂಬಂಧವನ್ನು ಹೊಂದಿರುತ್ತವೆ. ಈ ವಿಶೇಷ ಸಂಬಂಧ ಸೂಚಕವನ್ನು ಕಾರಣವಾದ ಎಂದು ಕರೆಯಲಾಗಿದೆ. ಕಾರಣವು ಒಂದು ಸಮರ್ಥ ಒತ್ತಾಯ ಅಥವಾ ಅಪೇಕ್ಷೆ ಎಂದು ಮೂಲತಃ ಭಾವಿಸಲಾಗಿದೆ. ಮನೋವಿಜ್ಞಾನದ ದೃಷ್ಟಿಯಿಂದ ನೋಡಿದಾಗ ಕಾರಣದಲ್ಲಿ ಸಕಾರೇತ್ವರತ್ವವಾದ ಹಾಗೂ ಅಧ್ಯಾತ್ಮ ಯೋಗ ಇವುಗಳ ಅಂಶವನ್ನು ಕಾನಬಹುದು. ಕಾರಣ, ಮನುಷ್ಯ ಶಕ್ತಿರೂಪ ಅಥವ ಕ್ರಿಯಾಶಕ್ತಿಯಾಗಿದೆ ಎಂದು ಹೇಳಬಹುದು. “ಕಾರಣ” ಎಂಬ ಪದವು “ಕಾಸ” ಎಂಬ ಲ್ಯಾಟಿನ್ ಭಾಷೆಯ ಪದಕ್ಕೆ ಸಂವಾದಿಯಾಗಿದೆ. ಅದನ್ನು ಸಾಮಾಜಿಕ ಅಥವಾ ನ್ಯಾಯಸೂಚಕ ಪದವಾಗಿ ಬಳಸಲಾಗುತ್ತಿತ್ತು. ಈಗಲೂ ಸಹ ಈ ಪದವು ಅದರ ಮೂಲ ಅರ್ಥದಲ್ಲಿಯೇ ಬಳಕೆಯಾಗುತ್ತಿರುವುದನ್ನು ಗಮನಿಸಬಹುದಾಗಿದೆ.

ಇತಿಹಾಸದ ಕ್ರಮ ಅಥವ ವಿಧಾನಗಳನ್ನು ಕುರಿತಾದ ಜಿಜ್ಞಾಸೆಗಳಿಂದ ಕಾರಣವಾದಕ್ಕೆ ಇತಿಹಾಸದಲ್ಲಿ ಪ್ರಮುಖವಾದ ಸ್ಥಾನವನ್ನು ನೀಡಲಾಗಿದೆ. ಮಾನವನ ವ್ಯವಹಾರಗಳು ವಿಶಿಷ್ಟವಾದ ಘಟಕಾಂಶಗಳನ್ನು ಹೊಂದಿರುವುದರಿಂದ ಕಾರಣ ಸಂಬಂಧವೂ ವೈಶಿಷ್ಟ್ಯದಿಂದ ಕೂಡಿರುತ್ತದೆ. ವಿವರಗಳಿಗೆ ಹೆಚ್ಚು ಮಹತ್ವವಿರುವುದರಿಂದ, ಕಾಲ ಕ್ರಮೇಣದಲ್ಲಿ ವಿವರಣಾತ್ಮಕವಲ್ಲದ, ಆಸಕ್ತಪೂರ್ಣವಲ್ಲದ ಹಲವಾರು ಘಟಕಾಂಶಗಳು ಇತಿಹಾಸದ ಒಳಹೊಕ್ಕವು. ಇತಿಹಾಸವು ನಾಗರಿಕ ಸಮಾಜಗಳಲ್ಲಿ ಜೀವಿಸುವ ವ್ಯಕ್ತಿಗಳ ಅನುಭವಗಳಿಂದ ಕಥನವಾಗಿರುವುದರಿಂದ, ಸಮಾಜದ ಬಯಕೆ ಇದಕ್ಕಿಂತ ಭಿನ್ನವಾಗಿತ್ತು. ವಿವರಣೆಗಿಂತ ಮಿಗಿಲಾಗಿ, ಗತಕಾಲ ಮತ್ತು ವರ್ತಮಾನ ಕಾಲಗಳ ಅನುಭವಗಳ ತುಲನಾತ್ಮಕ ಅಧ್ಯಯನವನ್ನು ಸಮಾಜವು ಅಪೇಕ್ಷಿಸಿತು. ಈ ಕಾರಣದಿಂದ ಇತಿಹಾಸಕಾರನು ತನ್ನ ಪೂರ್ವ ನಿಲುವನ್ನು ಬದಲಾಯಿಸಿ ಸಮಾಜ ಅಪೇಕ್ಷಿಸಿದ ಇತಿಹಾಸದ ಅಧ್ಯಯನವನ್ನು ಪ್ರಾರಂಭಿಸಿದನು. ಸಮಾಜದ ಬೇಡಿಕೆಗಳಿಗೆ ಸ್ಪಂದಿಸುವುದು ಇತಿಹಾಸಕಾರನ ಆದ್ಯ ಕರ್ತವ್ಯವೂ ಹೌದು.

ಸಮಾಜದ ಈ ಅಪೇಕ್ಷೆಯು ಇತಿಹಾಸ ರಚನೆಗೆ ಒಂದು ಹೊಸ ಚೈತನ್ಯವನ್ನು ನೀಡಿತು. ಇತಿಹಾಸ ಕೇವಲ ವಿವರಣೆಯನ್ನೇ ತನ್ನ ಪ್ರಮುಖ ಧ್ಯೇಯವನ್ನಾಗಿಟ್ಟುಕೊಳ್ಳದೆ, ವಿವರಣೆಗೆ ಯೋಗ್ಯವಲ್ಲದ, ಅಥವ ಅವಶ್ಯಕವಲ್ಲದ ಅಥವ ಪರಿಣಾಮಕಾರವಲ್ಲದ ಘಟನೆಗಳನ್ನು ದೂರೀಕರಿಸಿ, ಉಪಯುಕ್ತವಾದ ಅಥವ ಪರಿಣಾಮಕಾರಿಯಾದ, ಸಮಾಜದ ವಿಭಿನ್ನ ಬೆಳವಣಿಗೆಗೆ ಕಾರಣವಾದ ಘಟನೆಗಳನ್ನು ಗುರುತಿಸಿ, ಆ ಘಟನೆಗೆ ಕಾರಣ, ಅದರ ಉದ್ದೇಶ ಮತ್ತು ಅದರ ಪರಿಣಾಮಗಳನ್ನು ಕಂಡುಹಿಡಿಯುವ ಸಫಲ ಪ್ರಯತ್ನವನ್ನು ಮಾಡಿತು. ಘಟನೆಗೆ ಕಾರಣವಿರುತ್ತದೆಂಬುದು ಸಾಮಾನ್ಯ ವಿಷಯ. ಕಾರಣವಿಲ್ಲದ ಘಟನೆಗಳು ಸಂಭವಿಸಲು ಸಾಧ್ಯವಿಲ್ಲ. ಇತಿಹಾಸದ ಯಾವ ಘಟನೆಯನ್ನೂ ಅಂತ್ಯ ಕಾಣದ ಕಾಲದಿಂದ ಬೇರ್ಪಡಿಸಲಾಗುವುದಿಲ್ಲ. ಆದ್ದರಿಂದ ಸಂದರ್ಭವು ಘಟನೆಯ ಗುಣವನ್ನು ನಿರ್ದರಿಸುತ್ತದೆ.

ಘಟನೆ ಹಾಗೂ ಕಾರಣಕ್ಕೆ ಸಂಬಂಧವಿದೆ ಎಂಬ ಹೇಳಿಕೆಯನ್ನು ಪ್ರತಿಯೊಬ್ಬ ಚರಿತ್ರೆಕಾರರೂ ಒಪ್ಪಿಕೊಂಡಿದ್ದಾರೆ. ಘಟನೆಗೆ ಕಾರಣವನ್ನು ಅನ್ವೇಷಿಸುವುದು ಇತಿಹಾಸಕಾರರ ಆದ್ಯ ಕರ್ತವ್ಯವಾಗಿದೆ. ಪ್ರತಿ ಪೂರ್ವದ ಸಂಗತಿಗಳನ್ನು ಆನುಷಂಗಿಕವು ಅನುಸರಿಸುತ್ತದೆ, ಅಂತೆಯೇ ಇತಿಹಾಸಕಾರ ತನ್ನ ಕಥನ ನಿರೂಪಣೆಯಲ್ಲಿ ಆದಕಾರಣ ಅಥವಾ ಏಕೆಂದರೆ, ಅದರ ಪ್ರಯುಕ್ತ, ಅದರ ಪರಿಣಾಮವಾಗಿ ಮುಂತಾದ ಪದಗಳನ್ನು ಪದೇ ಪದೇ ಉಪಯೋಗಿಸುವುದು ಸಾಮಾನ್ಯ ಸಂಗತಿ. ಈ ಪದಗಳು ನಂತರ, ತರುವಾಯ, ಅನಂತರ, ಈ ನಡುವೆ, ಮುಂತಾದ ಪದಗಳಷ್ಟೇ ಅನಿವಾರ್ಯ. ಹೀಗಿದ್ದಲ್ಲಿ ಹಾಗೆ ಆಗುತ್ತದೆ ಎಂಬುದು ಕಾಕತಾಳೀಯ ನ್ಯಾಯವಲ್ಲ. ಇವೆರಡಕ್ಕೆ ಸಂಬಂಧ ಕಲ್ಪಿಸಲು ಸಾಕಷ್ಟು ಪುರಾವೆಗಳು ಇಲ್ಲದಿರಬಹುದು. ಈ ಸಂಬಂಧವನ್ನು ಗುರುತಿಸಿ ತಿಳಿಯಪಡಿಸುವುದೇ ಕಾರಣತಾವಾದದ ಸಾರಭೂತ ಅರ್ಥವಾಗಿದೆ. ಆದ್ದರಿಂದ ಕಾರಣವಾದವು ಇತಿಹಾಸಕಾರರ ಪರಿಚಿತವಾದ ಉಪಕರಣವಾಗಿದೆ ಮತ್ತು ಚಾರಿತ್ರಿಕ ಶಿಸ್ತಿನ ಒಂದು ಸಾರಭೂತ ವೈಶಿಷ್ಟ್ಯವಾಗಿದೆ. ಒಂದು ರೀತಿಯ ಘಟನೆಗಳನ್ನು ಅವಲೋಕಿಸಿದಾಗಲೂ ಅವುಗಳಿಗೆ ಸಂಬಂಧಿಸಿದ ಕಾರಣಗಳನ್ನು ಊಹಿಸುತ್ತೇವೆ. ಈ ಊಹೆ ತಾರ್ಕಿಕವಾಗಿ ಪರಿಣಾಮಕ್ಕೆ ಕಾರಣವಾದ ಘಟನೆಗಿಂತ ವಿಭಿನ್ನವಾಗಿರಲು ಸಾಧ್ಯವುಂಟು.

ಇತಿಹಾಸವು ಸೂಕ್ಷ್ಮವಾದ ಘಟನಾವಳಿಗಳಿಂದ ಕೂಡಿದ್ದು, ಅವು ಕಾಲ ಮತ್ತು ಅವಧಿಯ ನಿರರ್ಥಕ ಅಂತರದಿಂದ ಪ್ರತ್ಯೇಕಿಸಲ್ಪಟ್ಟಿರುತ್ತವೆ. ಇತಿಹಾಸವು ನಿರಂತರವಾಗಿ ಸಾಗುವುದರಿಂದ ಅದರಲ್ಲಿ ಅಂತರಗಳಿಗೆ ಅವಕಾಶವಿಲ್ಲ. ಇತಿಹಾಸವು ತುಂಡಿಲ್ಲದ ಸರಪಣಿಯಿದ್ದಂತೆ. ಗತಕಾಲವು ವರ್ತಮಾನ ಕಾಲದಲ್ಲಿ ಮುಂದುವರಿಯುತ್ತದೆ. ಭವಿಷ್ಯಕಾಲವು ವರ್ತಮಾನದ ಶಿಶು. ಪ್ರಾಚೀನ ಭಾವನೆಗಳು, ಕಲ್ಪನೆಗಳು, ಆಚಾರ ವಿಚಾರಗಳು, ಅಭ್ಯಾಸಗಳು, ಮೂಢನಂಬಿಕೆಗಳು, ನಾಯತ್ವ ಮುಂತಾದುವು ಪ್ರಚಲಿತ ಜನಜೀವನದಲ್ಲಿ ಬೇರೂರಿರುವುದು ಮೇಲಿನ ಹೇಳಿಕೆಗೆ ಸಾದೃಶ್ಯವಾಗಿದೆ. ಹೀಗೆ ಪ್ರತಿಯೊಂದು ಘಟನೆಯೂ ಇತಿಹಾಸದ ವಿಶಾಲ ಕ್ಷೇತ್ರದ ಒಂದು ಅವಿಭಾಜ್ಯ ಅಂಗ. ಆದ್ದರಿಂದ ಕಾರ್ಯ ಕಾರಣ ಅಥವಾ ಕಾರಣ ಪರಿಣಾಮಗಳ ಸಂಬಂಧಗಳನ್ನು ಕಂಡುಹಿಡಿಯುವುದೆಂದರೆ ಇವು ಹೇಗೆ ಇತಿಹಾಸದ ಒಂದು ಅವಿಭಾಜ್ಯ ಅಂಗವೆಂಬುದನ್ನು ಸಂಶೋಧಿಸುವುದೇ ಆಗಿದೆ. ಘಟನೆಗೆ ಕಾರಣ ಮತ್ತು ಪರಿಣಾಮಗಳ ಕಾರ್ಯಕಾರಣ ಸಂಬಂಧವನ್ನು ಗುರುತಿಸುವುದು ಮೂಲತಃ ಘಟನೆಯನ್ನು ಗುರುತಿಸುವುದೇ ಆಗಿದೆ. ಇತಿಹಾಸಕಾರರು ಈ ಕ್ರಿಯೆಯಿಂದ ಮುಕ್ತರಾಗುವಂತಿಲ್ಲ. ಮಾತ್ರವಲ್ಲ, ಈ ಸಂಬಂಧಗಳನ್ನು ಗುರುತಿಸದೆ ಸಂಭವಿಸಿದ ವಿಪ್ಲವಗಳು ಅಥವಾ ಕ್ರಾಂತಿಗಳು, ಯುದ್ಧಗಳು ಮುಂತಾದುವು ಇತಿಹಾಸದ ಗತಿಯನ್ನು ಒಂದು ರೀತಿಯಲ್ಲಿ ಬದಲಿಸಿದ ಪ್ರಸಿದ್ಧ ಘಟನೆಗಳ ಯಥಾರ್ಥವಾದ ಅರಿವು ನಮಗುಂಟಾಗುವುದಿಲ್ಲ. ಕಾರಣವಾದದ ಸಮಸ್ಯೆಯೆಂದರೆ ಸಂಬಂಧಗಳನ್ನು ವ್ಯಕ್ತಿಶಃಗೊಳಿಸುವುದಾಗಿದೆ. ಕಾರಣವಾದವು ತನ್ನ ಚೈತನ್ಯರೂಪದಲ್ಲಿ ಘಟನೆಗೆ ಅಗತ್ಯವಾದ ಪರಿಸ್ಥಿತಿ ಅಥವಾ ಸನ್ನಿವೇಶಗಳನ್ನು ತೋರ್ಪಡಿಸುತ್ತದೆ.

ಒಂದು ಸಂದರ್ಭದಿಂದ ಘಟನೆಯು ಜರುಗಿದ್ದಲ್ಲಿ, ಆ ಸಂದರ್ಭವು ಕಾರಣವಾಗಲಾರದು. ಅಂತೆಯೇ, ಜನಪ್ರಿಯ ಉಪನ್ಯಾಸಗಳು ಮತ್ತು ಚಿಂತನೆಗಳು ಈ ಕಾರಣದ ವ್ಯಾಪ್ತಿಗೆ ಒಳಪಡುವುದಿಲ್ಲ. ಇದರಿಂದ ವ್ಯಕ್ತವಾಗುವುದೆಂದರೆ ಘಟನೆಗೆ ಅನೇಕ ಕಾರಣಗಳಿರಬಹುದೆಂಬ ಅಂಶ. ಇದು ತಪ್ಪು ಕಲ್ಪನೆ, ಯಥಾರ್ಥವಾದ ಕಾರಣಗಳನ್ನು ಗೊತ್ತುಪಡಿಸಲು ವಿಫಲಗೊಂಡಾಗ ಒಂದು ಘಟನೆಗೆ ಒಂದಕ್ಕಿಂತ ಹೆಚ್ಚು ಕಾರಣಗಳನ್ನು ಕೊಡಲು ಯತ್ನಿಸುತ್ತೇವೆ. ಇತಿಹಾಸದ ಒಂದು ದೊಡ್ಡ ಸಮಸ್ಯೆ ಎಂದರೆ ಗೊತ್ತಿರುವುದರಿಂದ ಗೊತ್ತಿಲ್ಲದ್ದನ್ನು ಕಂಡುಹಿಡಿಯುವುದು ಅಥವ ಪರಿಣಾಮದಿಂದ ಕಾರಣವನ್ನು ಅನ್ವೇಷಿಸುವುದ. ಹೀಗಾಗಿ ಇತಿಹಾಸಕಾರರು ಸಮರ್ಪಕವಾದ ನಿರೂಪಣೆಯನ್ನು ಕೊಡಬೇಕಾಗಿರುವುದರಿಂದ ಕಾರಣವಾದದಲ್ಲಿ ಬಿಗಿ ನಿಲುವು ತಾಳದೆ ಕಾರಣಗಳುಳ್ಳಂತೆ ಕಂಡುಬರುವ ಕೆಲವು ಸಂದರ್ಭಗಳನ್ನು ಕಾರಣಗಳೆಂದೇ ಭಾವಿಸುವುದುಂಟು. ಈ ವಿಧಾನವು ಅವಶ್ಯಕವಾಗಿ ಕಂಡುಬಂದರೂ ಕೂಡ ಮಾನವನ ಮೌಲ್ಯಗಳಿಗೆ ಅನುಗುಣವಾಗಿ ತಮ್ಮ ವಿಧಾನವನ್ನು ಬದಲಿಸಿ ಯಥಾರ್ಥವಾದ ಕಾರಣವನ್ನು ಶೋಧಿಸುವ ದಿಸೆಯಲ್ಲಿ ಮುಂದಡಿಯಿಡಬೇಕು. ಆದರೆ ಕಾರಣವನ್ನು ಶೋಧಿಸುವ ಕಾರ್ಯವನ್ನು ಕೈಬಿಡಬಾರದು. ಈ ಕ್ರಿಯೆಯನ್ನು ತೊರೆದಾಗ ಐತಿಹಾಸಿಕ ಸಾಹಿತ್ಯವು ರೂಪ ಹಾಗೂ ಅರ್ಥವಿಲ್ಲದ್ದಾಗಿ ಪರಿಣಮಿಸುತ್ತದೆ. ಹೀಗಾಗಿ, ಇತಿಹಾಸಕಾರರ ವೃತ್ತಿಗೆ ಕಾರಣದ ಶೋಧನೆ ಒಂದು ಮಹತ್ವದ ಭಾವನಾತ್ಮಕ ಮತ್ತು ತಾಂತ್ರಿಕ ಪ್ರತಿಭಟನೆಗಳನ್ನು ಒಡ್ಡುತ್ತವೆಂಬುದನ್ನು ನಾವು ಒಪ್ಪಬೇಕಾಗಿದೆ.

ಇತಿಹಾಸದಲ್ಲಿ ಕಾರಣವಾದದ ಉಪಯೋಗಗಳು

ಏನು ಸಂಭವಿಸಿತು ಅಥವಾ ನಡೆಯಿತು ಎಂಬುದು ಒಂದು ಸುಲಭವಾದ ಅಥವಾ ಮೂಲರೂಪದ ಪ್ರಶ್ನೆ. ಅದು ಏಕೆ ಸಂಭವಿಸಿತು ಎಂಬುದು ಒಂದು ಕಷ್ಟಕರವಾದ ಮತ್ತು ಸಾಕ್ಷೇಪ ಪ್ರಶ್ನೆ. ವಿಷಯ ನಿರೂಪಣೆಗೆ ಇತಿಹಾಸಕಾರರು ವರ್ತಮಾನದಿಂದ ಗತಕಾಲದ ವಿಷಯಗಳ ಅನ್ವೇಷಣೆಯಲ್ಲಿ ತೊಡಗಿದಾಗ, ಗತಕಾಲದಲ್ಲಿ ಘಟನೆಗಳು ಹೇಗೆ ಸಂಭವಿಸಿದವು ಎಂಬುದನ್ನು ಸಮರ್ಪಕವಾಗಿ ವಿವರಿಸುವಾಗ ಇತಿಹಾಸಕ್ಕೂ ಮತ್ತು ಕಲ್ಪನಾ ಕಥೆಗಳಿಗೂ ಇರುವ ವ್ಯತ್ಯಾಸ ಬೆಳಕಿಗೆ ಬರುತ್ತದೆ. ಕ್ಲೀಯೋಪಾತ್ರಾಳ ಮೂಗು ಉದ್ದವಾಗಿದ್ದರೆ ಇಡೀ ಜಗತ್ತಿನ ಇತಿಹಾಸ ವಿಭಿನ್ನವಾಗಿರುತ್ತಿತ್ತು ಎಂಬುದು ಹಾಸ್ಯಾಸ್ಪದವಾಗುತ್ತದೆ. ಒಂದು ಪ್ರತಿಷ್ಠಿತ ಘಟನೆಗೆ ಕಾರಣವನ್ನು ಕೊಡಲು ಯತ್ನಿಸುವುದು ಊಹೆಯ ಬೆನ್ನಟ್ಟಿದಂತಾಗುತ್ತದೆ. ಒಬ್ಬ ಪ್ರತಿಭಾವಂತ ವ್ಯಕ್ತಿ ಹಿಂದೆ ಯಾರೋ ಸಾಧಿಸಿದ ಕಾರ್ಯವನ್ನು ಹೇಗೆ ಸಾಧಿಸಿದ ಎಂಬ ಪ್ರಶ್ನೆಗೆ ಯಥಾರ್ಥವಾದ ಉತ್ತರವನ್ನು ಕೊಡುವುದು ಇತಿಹಾಸಕಾರರಿಗಾಗಲಿ ಅಥವ ಸಮಾಜಶಾಸ್ತ್ರ ವಿಜ್ಞಾನಿಗಾಗಲಿ ಸಾಧ್ಯವಾಗುವುಇದಲ್ಲ. ಮಾನವ ಇತಿಹಾಸದ ಘಟನೆಗಳನ್ನು ಕೆಲವು ತತ್ವ ಅಥವಾ ನಿಯಮಗಳಿಗೆ ಅನುಸಾರವಾಗಿ ಸಂಬಂಧಿಸಲು ಸಾಧ್ಯವಿಲ್ಲವೆಂದು ಹೇಳುವುದಕ್ಕೆ ಆಗದಿದ್ದರೂ, ಈ ನಿಯಮಗಳು ಭೌತಶಾಸ್ತ್ರ, ಖಗೋಳಶಾಸ್ತ್ರ ಮುಂತಾದ ಭೌತಿಕ ವಿಜ್ಞಾನಗಳ ತತ್ವಗಳಂತೆ ಸಾಮಾನ್ಯವಾಗಿರುತ್ತವೆ ಎಂಬ ಅಭಿಪ್ರಾಯಕ್ಕೆ ಬರಲಾಗುವುದಿಲ್ಲ. ನಾಗರಿಕತೆ ಲೋಕೋತ್ತರ ಘಟನೆಯಾಗಿದ್ದು ಬಹು ತೊಡಕಾಗಿರುತ್ತದೆ. ಆದ್ದರಿಂದ ಇತಿಹಾಸದಲ್ಲಿ ಒಂದು ತತ್ವವನ್ನು ಅನ್ವೇಷಿಸುವಾಗ ಸಮಾಜ ಜೀವನದಲ್ಲಿನ ದೈಹಿಕ, ಮಾನಸಿಕ ಮತ್ತು ಜೀವ ವೈಜ್ಞಾನಿಕ ಈ ಮೂರು ಹಂತಗಳನ್ನೂ ಪರಿಗಣಿಸಬೇಕು. ಸಮಾಜ ಜೀವನದಲ್ಲಿ ಮಾನವನ ಚಿಂತನೆ ಮತ್ತು ಭಾವನೆಗಳಲ್ಲಿ ಸೂಕ್ಷ್ಮ ವ್ಯತ್ಯಾಸಗಳು ಈ ಪರಿಗಣನೆಯಿಂದ ವ್ಯಕ್ತವಾಗುತ್ತವೆ. ಈ ಅಂಶಗಳು ಇತಿಹಾಸ ರಚನೆಗೆ ಅತಿ ಮುಖ್ಯವೂ ಹೌದು.

ಇತಿಹಾಸವು ಒಂದು ಮುಂದುವರಿಯುತ್ತಿರುವ ಕಥನವೆಂದು ಪರಿಗಣಿಸಿ, ಇಲ್ಲಿನ ಘಟನೆಗಳನ್ನು ಕೆಲವು ತತ್ವಗಳಿಂದ ನಿರ್ಣಯಿಸಲಾಗುವುದಿಲ್ಲ. ಕೆಲವು ತತ್ವಗಳ ಆಧಾರದ ಮೇಲೆ ಗ್ರಹಣಗಳನ್ನು ನಿರ್ಣಯಿಸಬಹುದು. ಇದರಲ್ಲಿ ವೈಶಿಷ್ಟ್ಯವೇನೂ ಕಂಡು ಬರುವುದಿಲ್ಲ. ಇತಿಹಾಸದಲ್ಲಿಯೂ ಘಟನೆಗಳು ಪುನರಾವರ್ತಿತವಾಗುತ್ತವೆ ಎಂಬುದನ್ನು ನಿರಾಕರಿಸಲಾಗದಿದ್ದರೂ ಇಲ್ಲಿ ನಿರಿಂದ್ರಿಯ ಭೌತಶಾಸ್ತ್ರದಂತಹ ಸಾಮಾನ್ಯವಾದ ನಮೂನೆಯನ್ನು ಹೊಂದಿರುವುದಿಲ್ಲವೆಂಬುದನ್ನು ಗಮನಿಸುವುದು ಅವಶ್ಯಕ. ಇತಿಹಾಸದ ತತ್ವಗಳು ಜೀವನಶಾಸ್ತ್ರದಲ್ಲಿ ಕಂಡುಬರುವಂತೆ ಅನೇಕ ಹಂತಗಳ ಬೆಳವಣಿಗೆ ಉಳ್ಳದ್ದಾಗಿವೆ. ಆದರೆ ಈ ಹಂತಗಳನ್ನು ಯಥಾರ್ಥವಾಗಿ ಗುರುತಿಸಿ ಅವುಗಳನ್ನು ಸ್ವೀಕರಿಸುವುದು ಸುಲಭವಲ್ಲ. ಉದಾಹರಣೆಗೆ, ಎರಡನೆಯ ಜಾಗತಿಕ ಯುದ್ಧ ಸೆಪ್ಟೆಂಬರ್ ೧೯೩೯ ರಲ್ಲಿ ತಲೆದೋರಿತು ಎಂಬ ಪ್ರಶ್ನೆಗೆ ಹಿಟ್ಲರ್ ಜರ್ಮನ್ ಸೇನೆಯನ್ನು ಪೋಲೆಂಡ್ ಗಡಿಗೆ ಅಡ್ಡಲಾಗಿ ಕಳುಹಿಸಿದ್ದರಿಂದ ಎಂಬ ಸಾಮಾನ್ಯ ಉತ್ತರವು ಸಮಂಜಸವಾಗುವುದಿಲ್ಲ. ಏಕೆಂದರೆ ಇದಕ್ಕೆ ಮುಂಚಿನ ತಿಂಗಳುಗಳಲ್ಲಿ ಆತನು ಜರ್ಮನ್ ಸೇನೆಯನ್ನು ಆಸ್ಟ್ರಿಯ ಮತ್ತು ಜಕಾಸ್ಲೋವೇಕಿಯ ದೇಶಗಳ ಮೇಲೆ ಕಳುಹಿಸಿದ್ದ, ಆದರೆ ಅದು ಯುದ್ಧದಲ್ಲಿ ಪರಿಣಮಿಸಲಿಲ್ಲ. ಈ ಎರಡು ಘಟನೆಗಳ ನಡುವೆ ಕಂಡುಬರುವ ವ್ಯತ್ಯಾಸಗಳೇನು? ಈ ವ್ಯತ್ಯಾಸವೆಂದರೆ, ಪೋಲೆಂಡ್ ಜರ್ಮನ್ ದಾಳಿಯನ್ನು ‌ಪ್ರತಿಭಟಿಸಿದ್ದು, ಮತ್ತು ಫ್ರಾನ್ಸ್ ಹಾಗೂ ಬ್ರಿಟನ್‌ಗಳು ಪೋಲೆಂಡ್ ಜೊತೆ ಕೈಜೋಡಿಸಲು ತೀರ್ಮಾನಿಸಿದ್ದು. ಈ ಉತ್ತರಗಳು ಮತ್ತೆ ಕೆಲವು ಪ್ರಶ್ನೆಗಳಿಗೆ ಎಡೆಮಾಡಿಕೊಡುತ್ತವೆ. ಪೋಲೆಂಡ್ ವಿರುದ್ಧವಾಗಿ ಜರ್ಮನ್ ಸೇನೆಯನ್ನು ಕಳುಹಿಸಲು ತೀರ್ಮಾನಿಸಿದ್ದೇಕೆ? ಬ್ರಿಟಿಶ್ ಮತ್ತು ಫ್ರೆಂಚ್ ನಾಯಕರು ಜರ್ಮನಿಯ ವಿಸ್ತರಣೆಯನ್ನು ತಡೆಯಲು ನಿರ್ಧರಿಸಿದ್ದೇಕೆ? ಹೀಗೆ ವಿಭಿನ್ನ ಮಜಲುಗಳನ್ನು ಗುರುತಿಸುವುದು ಅವಶ್ಯಕವಾಗುತ್ತದೆ.

ಮಾನವನ ಇತಿಹಾಸದಲ್ಲಿ ಕಾರಣವಾದವನ್ನು ಪ್ರಯೋಗಿಸಲು ಅಡ್ಡಬರುವ ಮತ್ತೊಂದು ತೊಡಕೆಂದರೆ ಭವಿಷ್ಯವನ್ನು ನಿರ್ಣಯಿಸಲು ಇತಿಹಾಸಕ್ಕೆ ಸಾಧ್ಯವಿಲ್ಲದಿರುವುದು. ಇತಿಹಾಸದ ವಿಷಯ ವಸ್ತುವು ಮಾನವನನ್ನು ಕುರಿತದ್ದಾಗಿದೆ. ಮಾನವನ ವಿಚಾರಗಳಲ್ಲಿ ಕೆಲವು ಸಂದರ್ಭಗಳು ಅಸ್ತಿತ್ವದಲ್ಲಿ ಹೀಗೆಯೇ ನಡೆಯುತ್ತದೆ ಎಂದು ನಿರ್ಧರಿಸಲಾಗುವುದಿಲ್ಲ. ಏಕೆಂದರೆ ಮಾನವನು ತನ್ನ ತಪ್ಪುಗಳನ್ನು ಅರಿತು, ಸುಧಾರಿಸಿಕೊಂಡು, ನಮ್ಮ ಹೇಳಿಕೆಯನ್ನು ಸುಳ್ಳಾಗಿಸಬಹುದು. ಮಾನವನ ವ್ಯವಹಾರಗಳು ಆತನ ಆಸೆ ಅಥವಾ ಬಯಕೆಯನ್ನು ಅವಲಂಬಿಸಿರುತ್ತವೆ. ಆತನ ಬಯಕೆಯೂ ಕಾಲಕಾಲಕ್ಕೆ ಬದಲಾಗುತ್ತಿರುವುದರಿಂದ ಆ ಬಯಕೆ ಹೇಗಿರುತ್ತದೆಂಬುದನ್ನು ಖಚಿತವಾಗಿ ನಿರ್ಧರಿಸುವುದು ಕಷ್ಟವಾಗುತ್ತದೆ. ಮಾತ್ರವಲ್ಲ, ಒಂದು ಸನ್ನಿವೇಶದಲ್ಲಿ ಒಬ್ಬ ಏಕೆ ಒಂದು ವಿಚಿತ್ರವಾದ ರೀತಿಯಲ್ಲಿ ವರ್ತಿಸಿದನೆಂಬುದು ಆತನಿಗೇ ತಿಳಿಯದಿರುವಾಗ ಅದನ್ನು ಗೊತ್ತುಪಡಿಸುವುದು ಇತಿಹಾಸಕಾರನಿಗೆ ಸಾಧ್ಯವಾಗದು.

ಸಂಸ್ಕೃತಿಯ ಅನುಗ್ರಹವನ್ನು ಪಡೆಯಲು ಮಾನವನು ನಡೆಸಿದ ಹೋರಾಟವೇ ಇತಿಹಾಸ ಎಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಈ ವಾದವು ನಿಜವಾಗಿದ್ದಲ್ಲಿ, ಅದರಲ್ಲಿ ಅವರ ಸೋಲು, ಗೆಲುವು ಮತ್ತು ಜುಗುಪ್ಸೆಗಳು ಸೇರಿರಬೇಕು. ಜಯ ಮತ್ತು ಅಪಜಯ ಇವೆರಡನ್ನೂ ಇತಿಹಾಸಕಾರರು ಸರಿದೂಗಿಸಬೇಕು. ಇಲ್ಲದ ಭಾಗದಲ್ಲಿ ಅವರ ಹಾಗೂ ಇತಿಹಾಸದ ಧ್ಯೇಯವನ್ನು ಸಾಧಿಸಿದಂತಾಗುವುದಿಲ್ಲ. ಈ ದಿಸೆಯಲ್ಲಿ ಕಂಡುಬರುವ ಕೊರತೆ ಎಂದರೆ ಮಾನವನಲ್ಲಿ ಬೇರೂರಿರುವ ಜಡತೆ. ಈ ಜಡತೆಯಿಂದಾಗಿ ಸ್ವೇಚ್ಛೆಯಿಂದ ಕಾರಣವನ್ನು ನಿರ್ಧರಿಸಲಿಕ್ಕೂ ಸಾಧ್ಯ ಉದಾಹರಣೆಗೆ ಕ್ಲಿಯೋಪಾತ್ರಳ ಮೂಗು ಉದ್ದವಾಗಿದ್ದರೆ ಇಡೀ ಜಗತ್ತಿನ ಇತಿಹಾಸ ವಿಭಿನ್ನವಾಗಿರುತ್ತಿತ್ತು. ಮತ್ತೊಂದು ತೊಡಕೆಂದರೆ, ನಮ್ಮಲ್ಲಿನ ಅಜ್ಞಾನ. ವಿಜ್ಞಾನ ಕ್ಷೇತ್ರದಲ್ಲಿ ನಡೆದಿರುವ ಹೆಚ್ಚಿನ ಬೆಳವಣಿಗೆಯಿಂದಾಗಿ ಮಾನವ ಈ ದಿಸೆಯಲ್ಲಿ ಅಲ್ಪ ಪ್ರಗತಿ ಸಾಧಿಸಿದ್ದರೂ ಸಹ ಆತನ ಉದ್ದೇಶಗಳಲ್ಲಿ ಸ್ಪಷ್ಟತೆ ಕಾಣದಾಗಿದೆ. ಅಲ್ಲದೆ ನಮಗೆ ತಿಳಿವು ಅಥವಾ ಅರಿವು ಇಲ್ಲದಿರುವುದು ಮಿಥ್ಯ ಎಂಬ ಭಾವನೆ ಸತ್ಯವನ್ನು ಶೋಧಿಸುವ ಹಾದಿಗೆ ಅಡ್ಡವಾಗಿದೆ.

ಒಟ್ಟಿನಲ್ಲಿ ಯಾವುದಾದರೊಂದು ಅಸ್ತಿತ್ವದಲ್ಲಿರುವುದು ಅಥವಾ ತನ್ನದೇ ಆದ ರೀತಿಯಲ್ಲಿ ಅಸ್ತಿತ್ವದಲ್ಲಿರುವುದು ಅಥವಾ ಅದು ಇರುವ ಸ್ಥಿತಿಗೆ ಬರುವಂತೆ ಮಾಡಿದುದು, ಈ ಪ್ರಭಾವಗಳಿಗೆ ಕಾರಣವೆಂದು ಹೇಳಬಹುದು. ಯಾವುದಾದರೊಂದು ಮತ್ತೊಂದರ ಮೇಲೆ ಬೀರುವ ಪ್ರಭಾವಕ್ಕೆ ಕಾರಣವೆಂದು ಹೆಸರಿಸಬಹುದು. ಒಂದು ಸನ್ನಿವೇಶವು ಕಾರಣದ ಕ್ರಿಯೆಗೆ ನೆರವಾಗುತ್ತದೆ. ಆದರೆ ಯಾವ ವಸ್ತು ಅಥವಾ ವಿಷಯ ಅದು ಇರುವ ಸ್ಥಿತಿಗೆ ಕಾರಣವಾಗುವುದಿಲ್ಲ. ಪ್ರಾಚೀನ ಹಾಗೂ ಆಧುನಿಕ ಇತಿಹಾಸಕಾರರು ಕಾರಣವಾದದ ಕಲ್ಪನೆಯನ್ನು ಒಪ್ಪಿಕೊಂಡಿದ್ದಾರೆ. ಆದರೆ ಕಾರಣ ಪರಿಣಾಮಗಳ ಕಲ್ಪನೆಯನ್ನು ಕ್ರಮಾನುಗತಿ ಘಟನೆಗಳ ಕ್ರಮಾನುಗತಿಯನ್ನು ನೆಲೆಗೊಳಿಸುವುದು ಮಾನವನ ಮನಸ್ಥಿತಿಗೆ ತೃಪ್ತಿ ನೀಡುವುದಿಲ್ಲ. ಏಕೆಂದರೆ ಮುಂದಿನ ಪ್ರಶ್ನೆ ನಮ ಮನಸ್ಸಿನಲ್ಲಿ ಏಳುತ್ತದೆ. ಈ ಕ್ರಮಾನುಗತಿಯೇ ಏಕೆ ಬೇರೆಯದಾಗದೆ ಇತ್ಯಾದಿ. ಒಂದೇ ರೀತಿಯ ಕಾರಣಗಳು ಒಂದೇ ರೀತಿಯ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂಬ ತತ್ವದ ಆಧಾರದ ಮೇಲೆ ಘಟನೆಗಳನ್ನು ಮುನ್ಸೂಚಿಸಲು ತರ್ಕಸಮ್ಮತವಾದ ನೆಲೆ ಈ ಕ್ರಮಾನುಗತಿಯಲ್ಲಿ ಕಂಡುಬರುವುದಿಲ್ಲ. ಒಂದು ಶಿಸ್ತಗಿ ಮತ್ತು ಒಂದು ಮಾರ್ಗದರ್ಶಿಯಾಗಿ ಕಾರಣವಾದವು ಇತಿಹಾಸಕ್ಕೆ ಮೌಲ್ಯವನ್ನು ಗಳಿಸಿಕೊಡುತ್ತದೆ. ದೈನಂದಿನ ಜೀವನದಲ್ಲಿರುವಂತೆ, ಇತಿಹಾಸದಲ್ಲಿಯೂ ಕಾರಣದ ಕಾರ್ಯಶಕ್ತಿ ತತ್ವವನ್ನು ಅನುಸರಿಸದಿದ್ದರೆ ಯಾವ ಗುರಿಯನ್ನೂ ಸಾಧಿಸಲಾಗುವುದಿಲ್ಲ.

ಕೆಲವು ಪರಿಣಾಮಗಳು ಕಾರಣಗಳ ಒಂದು ಕಲ್ಪನೆಯನ್ನು ತಿಳಿಸುತ್ತವೆ. ಈ ಕಲ್ಪನೆ ಅಥವಾ ಭಾವನೆ ಸಾಕಷ್ಟು ಪುರಾವೆಗಳಿಂದ ಆಧಾರತಿವಾಗಿದ್ದಲ್ಲಿ ಅದು ಇತಿಹಾಸದಲ್ಲಿ ಪ್ರಯೋಗಿಸಲು ಯೋಗ್ಯವಾಗುತ್ತದೆ. ವೈಜ್ಞಾನಿಕವಾಗಿ ಈ ಘಟನೆಗಳನ್ನು ವಿಶ್ಲೇಷಿಸಿದಾಗ ನಿಜ ಸಂಗತಿಯ ಸಮೀಪವನ್ನಾದರೂ ತಲುಪಬಹುದು. ಇತಿಹಾಸಕಾರನ ಗುರಿ ಈ ಉದ್ದೇಶದಿಂದ ಕೂಡಿರುತ್ತದೆ. ೧೯೧೪ ರಲ್ಲಿ ಆಸ್ಟ್ರಿಯಾದ ಯುವರಾಜ ಫರ್ಡಿನೆಂಡ್ ಕೊಲ್ಲಲ್ಪಡದಿದ್ದರೆ ಏನಾಗುತ್ತಿತ್ತೆಂಬುದು ತಿಳಿಯಲಾರರು.

ವಸ್ತುನಿಷ್ಠತೆ ಮತ್ತು ಪೂರ್ವಗ್ರಹಗಳು

ವಸ್ತುನಿಷ್ಠತೆ

ಇತಿಹಾಸವು ವಿಷಯದ ಜ್ಞಾನ ಅಥವಾ ಅರಿವಿನ ಆಸರೆಯುಳ್ಳ ಕ್ರಿಯೆ. ಆದರೆ ಐತಿಹಾಸಿಕವಾದ ಈ ಕ್ರಿಯೆಯು ಮುಖ್ಯವೂ ಮತ್ತು ಅಗತ್ಯವೂ ಆದ ಕಥೆಯನ್ನು ಸಮಂಜಸವಾಗಿ ಹೇಳುವುದಕ್ಕೆ ಸೀಮಿತವಾಗಿದೆ. ಇತಿಹಾಸಕಾರನು ಸಮಾಜದ ಪ್ರತಿನಿಧಿ. ಆತನ ಶಿಸ್ತು ಇತರ ಮಾನವಿಕ ಶಿಸ್ತುಗಳ ಹಾಗೆ ಪ್ರಕೃತಿ ವಿಜ್ಞಾನಗಳಿಗಿಂತ ವಿಭಿನ್ನವಾಗಿದೆ. ವಿವೇಚನಾಪರ ಕಾರ್ಯಕರ್ತರಿಗೆ ಹೋಲಿಸಿದಾಗ ಇತಿಹಾಸಕಾರನ ಪರಿಸ್ಥಿತಿ ಅಸಾಧಾರಣವಾದುದು. ಏಕೆಂದರೆ ಆತನು ಎದುರಿಸಬೇಕಾಗಿರುವ ಕ್ರಮಬದ್ಧ ವರ್ಗೀಕರಣ, ನೈತಿಕ ಹಾಗೂ ಸಾಮಾಜಿಕ ಸಮಸ್ಯೆಗಳು ಇತರ ಬೌದ್ಧಿಕ ಚಟುವಟಿಕೆಗಳಲ್ಲಿ ಉದ್ಭವಿಸುವುದಿಲ್ಲ. ಮಾತ್ರವಲ್ಲ, ಈ ಸಮಸ್ಯೆ ಆತನ ಕಥನ ಘಟನೆಗಳಿಗೆ ಮಾತ್ರ ಸಂಬಂಧಿಸಿರದೆ ಸಾಮಾನ್ಯ ಸೂತ್ರ ನಿರೂಪಣೆ, ಸ್ಪಷ್ಟೀಕರಣ ಮತ್ತು ಅದಕ್ಕೆ ಸಂಬಂಧಿಸಿದ ಇತರ ಘಟಕಾಂಶಗಳನ್ನು ಒಳಗೊಂಡಿರುತ್ತದೆ.

ಇತಿಹಾಸವನ್ನು ರಚಿಸುವಾಗ ಅಥವಾ ತನ್ನ ಕಥನವನ್ನು ನಿರೂಪಿಸುವಾಗ ಇತಿಹಾಸಕಾರ ನಿಷ್ಪಕ್ಷಪಾತಿಯಾಗಿರಬೇಕೆ? ಇಲ್ಲಿ ಒಂದು ನಿಜವಾದ ಸಮಸ್ಯೆ ಎದುರಾಗುತ್ತದೆ. ಇತಿಹಾಸಕಾರರ ನಿಶ್ಚಿತ ಪಾತ್ರದ ಬಗ್ಗೆ ಇತಿಹಾಸ ಸಂಶೋಧನಾ ವಿಧಾನದ ಪರಿಣತರು ಮತ್ತು ಜವಾಬ್ದಾರಿಯುತ ಇತಿಹಾಸಕಾರರಲ್ಲಿ ಒಮ್ಮತ ಕಂಡುಬರುವುದಿಲ್ಲ. ಕಥೆಯು ಜರುಗಿದಂತೆಯೇ ಅದನ್ನು ವಿವರಿಸುವುದು ಇತಿಹಾಸಕಾರರ ಕರ್ತವ್ಯವೆಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಇತಿಹಾಸಕಾರರು ತಮ್ಮ ರಚನೆಯಲ್ಲಿ ತಮಗೆ ಇಷ್ಟವಾದ ಘಟನೆಗಳನ್ನು ಆರಿಸಿಕೊಳ್ಳುವುದಾಗಲಿ, ಅವುಗಳಿಗೆ ಬೇರೆ ಬೇರೆ ಏನಾದರೂ ಸೇರಿಸುವುದಾಗಲಿ ಮತ್ತು ಮೂಲ ಆಧಾರಗಳಲ್ಲಿ ಕಂಡುಬರದ ಮಾತುಗಳನ್ನು ತಮ್ಮ ಹಂಚಿಕೆಗೆ ಅನುಗುಣವಾಗಿ ಅಳವಡಿಸಿಕೊಂಡು ರಚಿಸುವುದಾಗಲಿ ಮಾಡಬಾರದು. ಸಂಗತಿಗಳು ಅಥವಾ ಘಟನೆಗಳು ತಮ್ಮ ಕಥೆಯನ್ನು ಸ್ವತಂತ್ರವಾಗಿ ಹೇಳಲು, ಇತಿಹಾಸಕಾರರು ಮಧ್ಯ ಪ್ರವೇಶಿಸದೆ, ಅವಕಾಶವನ್ನು ಕಲ್ಪಿಸಬೇಕು. ಯಾವ ಕಾರಣದಿಂದಲೂ ಇತಿಹಾಸಕಾರರು ತಮ್ಮ ವಿಷಯ ವಸ್ತುವಿನಲ್ಲಿ ಅನಗತ್ಯವಾಗಿ ಪ್ರವೇಶಿಸಬಾರದು. ಸಂಭವಿಸಿದ ಘಟನೆಗಳನ್ನು ಯಥಾರ್ಥವಾಗಿ ಹಾಗೂ ವಿಶ್ವಸನೀಯವಾಗಿ ಪುನಾರಚಿಸಬೇಕು. ಇತಿಹಾಸಕಾರರು ಈ ಕ್ರಮಗಳನ್ನು ಅನುಸರಿಸಿ ಗತಕಾಲದ ಕಥನವನ್ನು ಪಕ್ಷಪಾತವಿಲ್ಲದೆ ರಚಿಸುವುದಕ್ಕೆ ಐತಿಹಾಸಿಕ ವಸ್ತುನಿಷ್ಠತೆ ಅಥವಾ ವಾಸ್ತವತೆ ಎಂದು ಕರೆಯುತ್ತೇವೆ.

ಇಲ್ಲಿ ಒಂದು ಸ್ಪಷ್ಟತೆ ಅಗತ್ಯವಾಗುತ್ತದೆ. ಪಕ್ಷಪಾತವಿಲ್ಲದಿರುವುದು ಎಂದ ಮಾತ್ರಕ್ಕೆ ಅದು ನಿಶ್ಯಂಕೆಯ ಜ್ಞಾನ ಅಥವಾ ಅರಿವು ಎಂದು ಅರ್ಥ ಬರುವುದಿಲ್ಲ. ಅವೆರಡೂ ಒಂದೇ ಎಂದು ಭಾವಿಸುವುದು ತಪ್ಪಾಗುತ್ತದೆ. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ಗತಕಾಲದ ಒಂದು ಭಾಗದ ಅಥವಾ ಪರಿಚ್ಛೇದ ಕುರಿತ ಇತಿಹಾಸಕಾರರ ಕಥನ ವಿಶ್ವಸನೀಯವೂ, ನಿಷ್ಠೆಯುಳ್ಳದ್ದೂ ಮತ್ತು ಪೂರ್ಣವಾದ ಪುನಾರಚನೆಯಾಗಿರುವ ಸಾಧ್ಯತೆ ಕಡಿಮೆ. ಈ ವಿಷಯವನ್ನು ಸಂಶೋಧಕರು ಅರಿತಿರುವುದು ಅಗತ್ಯ.

ವಸ್ತುನಿಷ್ಠತೆ ಸಾಧಿಸುವ ಪ್ರಯತ್ನದಲ್ಲಿ ೧೯ನೆಯ ಶತಮಾನದಲ್ಲಿ ಕೆಲವು ಬೆಳವಣಿಗೆಗಳನ್ನು ಕಾಣುತ್ತೇವೆ. ಈ ಶತಮಾನದಲ್ಲಿ ವೃತ್ತಿನಿರತ ಇತಿಹಾಸಕಾರರು ವಿಜ್ಞಾನವನ್ನು ತಿಳಿವಿನ ಮಾದರಿಯನ್ನಾಗಿ ತೆಗೆದುಕೊಂಡರು. ಪ್ರಾಕೃತಿಕ ವಿಜ್ಞಾನಿ ಹಾಗೂ ಇತಿಹಾಸಕಾರನ ಕಾರ್ಯವಿಧಾನಗಳಿಗಿರುವ ಸಾದೃಶ್ಯಗಳಿಂದ ಚಕಿತರಾಗಿ ಇತಿಹಾಸವೂ ವಿಜ್ಞಾನವೆಂಬ ನಿರ್ಣಯಕ್ಕೆ ಬಂದರು. ಈ ವೃತ್ತಿನಿರತ ಇತಿಹಾಸಕಾರರ ವೈಜ್ಞಾನಿಕ ಸ್ವರೂಪದ ವಿಚಾರಣಾ ಭಾವನೆಯಿಂದ ಪೂರ್ಣವಾಗಿ ಬೆಳೆದ ವಿಚಾರ ಸರಣಿ ಮತ್ತು ಭಾವನಾ ಸಮುಚ್ಛಯವು ಬೆಳಕಿಗೆ ಬಂದಿತು. ಈ ವಿಧದ ಬರವಣಿಗೆಯು ಇತಿಹಾಸದ ಅಧ್ಯಯನವನ್ನು ವಿವರಿಸಲು ಮತ್ತು ಪ್ರತಿಪಾದಿಸಲು ನೆರವಾಯಿತು. ಈ ವಿಚಾರಣೆಯು ಎರಡು ಸ್ತಂಭಗಳ ಮೇಲೆ ಆಧರಿತವಾಗಿತ್ತು. ಒಂದು, ಸಂಗತಿಗಳು ಅಸ್ತಿತ್ವದಲ್ಲಿರುವುದು ಎರಡು, ವೈಜ್ಞಾನಿಕವಾಗಿ ಅವುಗಳೊಂದಿಗೆ ವ್ಯವಹರಿಸಲು ಸಮರ್ತವಾದ ಒಂದು ವಿಧಾನವಿದೆಯೆಂಬುದು. ಭೂಗರ್ಭಶಾಸ್ತ್ರಜ್ಞನ ನಿಷ್ಕರ್ಷೆಯಂತೆ, ಇತಿಹಾಸದ ವಿಧಾನದಿಂದ ಇತಿಹಾಸಕಾರನು ಸಂಗತಿಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ಸಂಗತಿಗಳು ಅಸ್ತಿತ್ವದಲ್ಲಿದ್ದು ಶೋಧನೆಯ ನಿರೀಕ್ಷಣೆಯಲ್ಲಿರುತ್ತವೆ. ಟೈನ್ ಹೇಳಿರುವಂತೆ ಸಂಗತಿಗಳನ್ನು ಸಂಗ್ರಹಿಸಿದ ನಂತರ ಕಾರಣಗಳ ಅನ್ವೇಷಣೆ ಪ್ರಾರಂಭವಾಗುತ್ತದೆ. ಆದ್ದರಿಂದ ಸಂಗತಿಗಳು ಸಂಗ್ರಹಿಸಬಲ್ಲ, ಕಂಡು ಹಿಡಿಯಬಲ್ಲ, ಜೋಡಿಸಬಲ್ಲ, ಅನಂತರ ವಿಚಾರಣೆ ಮಾಡಿ ವಿವರಿಸಬಲ್ಲ ವಸ್ತುಗಳ ದೃಢತೆಯನ್ನು ಹೊಂದಿರುತ್ತವೆ.

ಮುಂದುವರಿದು ಈ ನಿಲುವಿನ ಇತಿಹಾಸಕಾರರು ಸಂಗತಿಗಳ ವಾಸ್ತವಿಕ ಅಥವಾ ವಸ್ತುನಿಷ್ಠತೆಯ ನಿರೂಪಣೆಯನ್ನು ಮಾರ್ಗದರ್ಶಕ ಆದರ್ಶವಾಗಿ ಘೋಷಿಸಿದರು. ಸಂಗತಿಗಳನ್ನು ಶೋಧಿಸಿ ಕ್ರಮಪಡಿಸುವುದು ಇತಿಹಾಸಕಾರನ ಉದ್ದೇಶ ಎಂದು ಕ್ರೈಗ್‌ಟನ್ ವರ್ಣಿಸಿದರು. ಸಮಾಜಜೀವಿಗಳಿಗಾಗಿ ಮಾನವನ ಚಟುವಟಿಕೆಗಳ ಬೆಳವಣಿಗೆಯನ್ನು ಮತ್ತು ಅವುಗಳ ಕಾರ್ಯಕಾರಣ ಸಂಬಂಧಗಳನ್ನು ಶೋಧಿಸಿ ವಿಮರ್ಶಿಸುವ ವಿಜ್ಞಾನವೇ ಇತಿಹಾಸ ವಿಜ್ಞಾನ ಎಂದು ಆಕ್ನಿಸ್ಟ್ ಬರ್ನಿಂ ಘೋಷಿಸಿದ್ದಾರೆ.

ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಬ್ಯೂರಿ ಅವರು ವೈಜ್ಞಾನಿಕ ಇತಿಹಾಸದ ಪ್ರಮಾಣಭೂತ ಸೂತ್ರವೊಂದನ್ನು ನಿರೂಪಿಸಿದರು. ಸಂಗತಿಗಳು ಬ್ಯೂರಿ ಅವರ ವಿಚಾರಸರಣಿಯ ತಳಹದಿಯಾಗಿದೆ. ವೈಜ್ಞಾನಿಕ ಮೂಲಸಿದ್ಧಾಂತಗಳಂತೆ ಇತಿಹಾಸದ ಸಂಗತಿಗಳೂ ಸಿದ್ಧವಾಗಿ ದೊರೆಯುತ್ತವೆ. ವಸ್ತುನಿಷ್ಠತೆಯಿಂದ ಅವುಗಳನ್ನು ವ್ಯವಸ್ಥೆಗೊಳಿಸಿದಲ್ಲಿ ನೈಜವಾದ ಕಥನವಾಗುತ್ತದೆ. ಬೇರೆ ಮಾತಿನಲ್ಲಿ ಹೇಳುವುದಾದರೆ, ಸಂಗತಿಗಳನ್ನು ಕ್ರಮವಾಗಿ ಒಂದುಗೂಡಿಸಿದಾಗ ಅವು ತಮ್ಮ ಸ್ವರೂಪವನ್ನು ಉಳಿಸಿಕೊಳ್ಳುತ್ತವೆ. ಆದರೆ ಸಂಗತಿಗಳ ಪ್ರಾಮಾಣಿಕತೆಯನ್ನು ಕಾಪಾಡಿಕೊಂಡು ಬರಬೇಕು. ಬ್ಯೂರಿ ಅವರು ಇಷ್ಟುಮಾತ್ರ ಹೇಳಿದರೇ ವಿನಾ ಸಂಗತಿಗಳೇ ತಮ್ಮ ಕಥೆಯನ್ನು ಬಿಚ್ಚಿಡುತ್ತವೆ ಅಥವಾ ಸಂಗತಿಗಳನ್ನು ಸಮಂಜಸವಾಗಿ ನಿಷ್ಕರ್ಷಿಸುವುದರಲ್ಲಿ ಮಾತ್ರ ತೃಪ್ತಿಪಟ್ಟುಕೊಳ್ಳಬೇಕೆಂದು ಹೇಳಲಿಲ್ಲ. ಸಂಗತಿಗಳಿಗೆ ಸಲ್ಲಿಸಬೇಕಾದ ಗೌರವವನ್ನು ತೋರಿದಲ್ಲಿ ಅವು ಇತಿಹಾಸಕಾರರನ್ನು ತಮ್ಮ ಗುರಿಯ ಸಮೀಪಕ್ಕೆ ಕರೆದೊಯ್ಯುತ್ತದೆಂಬುದು ಬ್ಯೂರಿ ಅವರ ಭಾವನೆ. ಈ ಭಾವನೆಯನ್ನು ಅನೇಕ ಇತಿಹಾಸಕಾರರು ಸಮರ್ಥಿಸಿದ್ದಾರೆ. ಲ್ಯಾಂಗ್‌ಲಾಯ್ಸ್ ಮತ್ತು ಸೈನ್ ಭೋಸ್ ಅವರೂ ಇತಿಹಾಸದ ವೈಜ್ಞಾನಿಕ ಸ್ವಭಾವವು ಸಿಂಧುವೆಂದು ಸಾರಿದ್ದಾರೆ.

ಇತಿಹಾಸದ ಈ ವೈಜ್ಞಾನಿಕ ಸ್ವಭಾವ ಅಥವಾ ಸ್ವರೂಪವನ್ನು ಕಟುವಾಗಿ ವಿರೋಧಿಸಿದ ಅಮೆರಿಕಾದ ಇತಿಹಾಸಕಾರರಾದ ಚಾರ್ಲ್ಸ್ ಬಿಯರ್ಡ್ ಮತ್ತು ಕಾರ್ಲ್ ಬೇಕರ್ ಅವರು ಮೊದಲಿಗೆ ಸಂಬಂಧ ಹೊಂದಿದ ಕಲ್ಪನೆಗಳತ್ತ ವಾಲಿ ಅಂತ್ಯದಲ್ಲಿ ಸಪ್ರಮಾಣವಾದಿಗಳಾಗಿ ಪರಿಣಮಿಸಿದರು. ಅವರ ಪ್ರಕಾರ, ಇತಿಹಾಸದ ಸಾಪೇಕ್ಷತೆಯು ನಿರಾಧಾರವಾದುದು. ಇತಿಹಾಸಕಾರರ ಚಟುವಟಿಕೆ ಅನ್ಯವಿವೇಚನೆಗೆ ಖೇದ್ಯವಾಗಿರುತ್ತದೆ. ಇತಿಹಾಸದ ಸಂಗತಿಗಳು ವಿಭಿನ್ನವಾಗಿರುವುದರಿಂದ ಅವುಗಳನ್ನು ಪ್ರಾಕೃತಿಕ ವಿಜ್ಞಾನಗಳ ಸಂಗತಿಗಳಷ್ಟು ನಿಷ್ಕಷೇಯಿಂದ ಸ್ಥಾಪಿಸಲು ಸಾಧ್ಯವಾಗುವುದಿಲ್ಲ. ಮಿಗಿಲಾಗಿ, ಇತಿಹಾಸಕಾರರಿಗೆ ಅವಶ್ಯಕವಾದ ಸಂಗತಿಗಳನ್ನು ಗೊತ್ತುಪಡಿಸಿದ ಮತ್ತು ಸಾರ್ವತ್ರಿಕವಾಗಿ ಅಂಗೀಕರಿಸಿದ ವಿಧಾನಗಳಿಂದ ವಿಶ್ಲೇಷಿಸ ಲಾಗುವುದಿಲ್ಲ, ಮಾತ್ರವಲ್ಲ, ಇತಿಹಾಸಕಾರರ ಚಿತ್ರದ ಚೌಕಟ್ಟು ಶಿಥಿಲವಾಗಿದ್ದು ಬೇಕಾದ ಹಾಗೆ ಹೊಂದಿಸಲಾಗುವಂತಿರುತ್ತದೆ. ಸಂಗತಿಗಳ ಅಸ್ತಿತ್ವವೇ ಸಮಸ್ಯಾತ್ಮಕವಾಗಿರುತ್ತವೆ. ಕಡೆಯದಾಗಿ, ಇತಿಹಾಸಕಾರ ಮಾನವ ಜೀವಿಗಳೊಂದಿಗೆ ವ್ಯವಹರಿಸುವುದರಿಂದ ಮತ್ತು ಆತನ ಮೌಲ್ಯಗಳೇ ಇಲ್ಲಿ ಒಳಗೊಂಡಿರುವುದರಿಂದ, ಆತನು ಅವುಗಳನ್ನು ಅನುಮೋದಿಸುತ್ತಾನೆ ಅಥವಾ ನಿರಾಕರಿಸುತ್ತಾನೆ. ನೈತಿಕ ವ್ಯಕ್ತಿಯಾಗಿ ರಾಜಕೀಯ ನಡವಳಿಕೆಗಳ ಬಗ್ಗೆ ಆತನ ಮನೋವೃತ್ತಿಯು ಭೂಗರ್ಭಶಾಸ್ತ್ರಜ್ಞನ ಆಲಿಪ್ತತೆಯನ್ನು ಹೊಂದಿರುವುದಿಲ್ಲ.

ಇದು ಇತಿಹಾಸದ ವಸ್ತುನಿಷ್ಠತೆ ಕುರಿತಾದ ವಾದವಿವಾದಗಳು. ಈ ವಾದವಿವಾದಗಳು ವ್ಯಕ್ತಿಯ ಮನೋಗತದ ಮೇಲೆ ಕೇಂದ್ರೀಕೃತವಾಗಿವೆ. ಆದರೆ ಇಂದು ವ್ಯಕ್ತಿಮನೋಗತ ಎಂಬ ಪದವು ದಿಗಿಲು ಹುಟ್ಟಿಸುವುದಿಲ್ಲ. ತಿಳುವಳಿಕೆಯುಳ್ಳ ಮೌಲ್ಯಗಳು ಮತ್ತು ಅನುಭವಗಳು ಯಶಸ್ವಿಯಾಗಿ ಗೆಲ್ಲಲಾಗದಂತಹ ಸ್ವನಿಷ್ಠವಾದ ಆತಂಕಗಳೇನಲ್ಲ. ಮಾತ್ರವಲ್ಲ ಅವು ಗತಕಾಲದ ಅಧ್ಯಯನಕ್ಕೆ ಅವಶ್ಯಕ ಉಪಕರಣಗಳಾಗಿವೆ. ಕ್ರೋಚ್ ಅವರ ಮಾತಿನಲ್ಲಿ ಹೇಳುವುದಾದರೆ, ನಾವು ಇತಿಹಾಸ ವಿಚಾರಣೆಯ ವ್ಯಕ್ತಿ ಮನೋಗತದ ವಾಸ್ತವಿಕ ಸ್ವಭಾವವನ್ನು ಪರಿಗಣಿಸುತ್ತೇವೆ. ಪಕ್ಷಪಾತದ ಅಪಾಯವನ್ನು ನಿರಾಕರಿಸಲಾಗದಿದ್ದರೂ, ಗತಕಾಲವನ್ನು ಅರ್ಥ ಮಾಡಿಕೊಳ್ಳಲು ಇತಿಹಾಸಕಾರನು ತನ್ನ ಮನಸ್ಸು ಮತ್ತು ಚೈತನ್ಯಗಳ ಸಾಮರ್ಥ್ಯಗಳನ್ನು ಉಪಯೋಗಿಸಿಕೊಳ್ಳಬೇಕು. ತನ್ನ ಸ್ವಂತ ಅನುಭವಗಳನ್ನು ವಿಷಯದ ಮೇಲೆ ಹೊರಿಸುವುದರಿಂದ ನಿರೂಪಣೆಯು ಭ್ರಷ್ಟವಾಗಲು ಅಥವಾ ದೋಷಿತಗೊಳ್ಳಲು ತಾನೇ ಕಾರಣನಾಗುತ್ತಾನೆ. ಇತಿಹಾಸಕಾರರ ಸನ್ನಿವೇಶದ ಚೌಕಟ್ಟಿನಲ್ಲಿ ಈ ಅಪಾಯವು ಅಡಗಿರುವುದರಿಂದ ಅವರು ಎಚ್ಚರಿಕೆಯಿಂದ ಇರುವುದು ಅಗತ್ಯ.

ಲೋಕಸಿದ್ಧವಾದಿಗಳ ಪಾಸಿಟಿವಿಸ್ಟ್ (Positivists) ವಿದ್ವಾಂಸರ ಪ್ರಕಾರ, ವಸ್ತುನಿಷ್ಠತೆ ಜ್ಞಾನದ ಪ್ರಧಾನವಾದ ಗುಣ. ಆದ್ದರಿಂದ ಸ್ವನಿಷ್ಠವಾದವು ಮುಖ್ಯವಾದ ಆತಂಕವಾಗುತ್ತದೆ. ಆದರೆ ಭೂಗರ್ಭಶಾಸ್ತ್ರದಲ್ಲಿ ಕಂಡುಬರುವ ವಸ್ತುನಿಷ್ಠತೆಯು ಇತಿಹಾಸಕ್ಕೆ ಅಪ್ರಸ್ತುತ. ಇತಿಹಾಸಕಾರರು ಮುಟ್ಟಬಲ್ಲ ಸೀಮಿತವಾದ ವಸ್ತುನಿಷ್ಠತೆಯು ನೈತಿಕವೂ, ಬೌದ್ಧಿಕವೂ ಆಗಿದೆ. ಹಾಗಾದರೆ, ನಾವು ಐತಿಹಾಸಿಕ ವಸ್ತುನಿಷ್ಠತೆಯನ್ನು ಹೀಗೆ ಸಾಧಿಸಬಹುದು.

ಮೇಲಿನ ಪ್ರಶ್ನೆಗೆ ಬರ್ಲಿನ್ ಅವರು ತಮ್ಮ “ಹಿಸ್ಟಾರಿಕಲ್ ಇನ್‌ಎವಿಟಬಿಲಿಟಿ” ಎಂಬ ಗ್ರಂಥದಲ್ಲಿ ಉತ್ತರವಾಗಿ ಬರೆಯುತ್ತ, ಮಾನವಜೀವಿಗಳ ಬಗ್ಗೆ ಬರೆಯುವಾಗ ಅಥವಾ ಮಾತನಾಡುವಾಗ ನೈತಿಕ ತೀರ್ಪುಗಳನ್ನು ಕೊಡದೆ ನಾವು ಇರಲಾರೆವು. ನಾವು ಉಪಯೋಗಿಸುವ ಭಾಷೆ, ನೈತಿಕ ಸೂಚನೆಗಳಿಂದ ಕೂಡಿರುತ್ತದೆ ಎಂದು ಹೇಳಿದ್ದಾರೆ. ಆದರೆ, ನಾವು ಕೊಡುವ ಈ ತೀರ್ಪುಗಳು ಬಹಳ ಹಿಂದೆಯೇ ಮರಣಹೊಂದಿದವರನ್ನು ಮುಟ್ಟುವುದಿಲ್ಲವೆಂಬ ಹಾಗೂ ಅವರನ್ನು ಹೊಗಳುವುದರಿಂದ ಅಥವಾ ತೆಗಳುವುದರಿಂದ ಅವರನ್ನು ಸುಧಾರಿಸಲು ಸಾಧ್ಯವಿಲ್ಲವೆಂಬ ಅರಿವು ಇತಿಹಾಸಕಾರರಿಗೆ ಉಂಟಾದಲ್ಲಿ ಅವರು ತಮ್ಮ ಈ ಪ್ರೇರಣೆಯಿಂದ ತಪ್ಪಿಸಿಕೊಳ್ಳಬಹುದು. ಕೃತ್ಯಗಳಿಗೆ ಮಾರ್ಗದರ್ಶಿಯಾಗಿರುವುದು ಈ ನೈತಿಕ ತೀರ್ಪುಗಳ ಪ್ರಕ್ರಿಯೆಯಾಗಿದ್ದಲ್ಲಿ ಇಂತಹ ನೈತಿಕ ತೀರ್ಪುಗಳು ಕರ್ತವ್ಯ ಹೀನವಾಗುತ್ತವೆ. ಈ ಐತಿಹಾಸಿಕ ಅಂತರದ ಅರಿವಿನಿಂದ ಇತಿಹಾಸಕಾರರು ನಿಷ್ಪಕ್ಷಪಾತಿಯಾಗಿರಬಹುದು.

ಇತಿಹಾಸಕಾರರು ತಮ್ಮ ಯುಗದ ಮಾನವರಾಗಿರುವುದರಿಂದ ತಮ್ಮದೇ ಆದ ನೈತಿಕ ಮತ್ತು ರಾಜಕೀಯ ನಂಬಿಕೆಗಳನ್ನು ಹೊಂದಿದ್ದು ತಮ್ಮ ಸಮಕಾಲೀನರು ಅವುಗಳನ್ನು ಅಂಗೀಕರಿಸುವಂತೆ ಪ್ರೇರೇಪಿಸುತ್ತಾರೆಂಬ ವಾದವನ್ನು ಸುಲಭವಾಗಿ ವಿರೋಧಿಸಬಹುದು. ಅಲಿಪ್ತತೆ ಮತ್ತು ವಸ್ತುನಿಷ್ಠತೆಯಲ್ಲಿ ಇತಿಹಾಸಕಾರರ ತರಬೇತಿ, ಐತಿಹಾಸಿಕ ಕಲ್ಪನಾಶಕ್ತಿಯ ಅಭ್ಯಾಸದಿಂದ ಅವರ ಕಣ್ಣುಮುಂದೆ ಹಾಯುವ ವಿವಿಧ ನೈತಿಕ ಅಭಿಪ್ರಾಯಗಳು ಮತ್ತು ಪಕ್ಷಪಾತ ಸಾಧ್ಯತೆಯ ವಿಮರ್ಶಾತ್ಮಕ ಅರಿವು ಈ ಪ್ರೇರಣೆಗಳನ್ನು ದೂರೀಕರಿಸಲು ನೆರವಾಗುತ್ತವೆ, ಇದಕ್ಕಿರುವ ಏಕಮಾತ್ರ ರಕ್ಷಣೆ ಎಂದರೆ ಶಿಸ್ತಿನಿಂದ ಕೂಡಿದ ಸಂಶೋಧನೆಯ ಸಂಪ್ರದಾಯ, ವಸ್ತುನಿಷ್ಠತೆ ಮತ್ತು ಅಲಿಪ್ತತೆಯಿಂದ ಕೂಡಿದ ಇತಿಹಾಸವು ಮುಖ್ಯವಾದ ಪ್ರಭಾವವನ್ನು ಬೀರಬಲ್ಲದೆಂಬ ನಿರೀಕ್ಷೆ, ಪ್ರತಿಯುಗದ ಮನೋಧರ್ಮಕ್ಕೆ ಅನುಗುಣವಾಗಿ ಇತಿಹಾಸವನ್ನು ಪುನಾರಚಿಸುವುದು ಉಪಯುಕ್ತ ಮತ್ತು ಅಗತ್ಯ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ.

ಐತಿಹಾಸಿಕ ಯೋಜನೆಯು ಒಂದು ಐತಿಹಾಸಿಕ ವಿಧಾನವಾಗಿ ಇತಿಹಾಸದ ಅಧಿಕ ಅಂಶಗಳ ಮತ್ತು ಅವುಗಳ ವಿವಿಧ ಅಂತರ ಸಂಬಂಧಗಳ ಒಂದು ಅನುಭವಾತ್ಮಕ ಹಾಗೂ ಸ್ವಮತಾಭಿಮಾನವಿಲ್ಲದ ಮಾರ್ಗವಾಗಿದೆ. ತನ್ನ ನೈತಿಕ ಹಾಗೂ ರಾಜಕೀಯ ತತ್ವಗಳನ್ನು ಗತಕಾಲದಲ್ಲಿ ಕಾಣಲು ಪ್ರಯತ್ನಿಸಬಾರದು. ಉದಾಹರಣೆಗೆ, ಪ್ರಾಚೀನ ಭಾರತದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿತ್ತು. ಆ ಗಣರಾಜ್ಯಗಳು ಈಗಿನ ಗಣರಾಜ್ಯಗಳ ಮಾದರಿಯಲ್ಲಿ ಆಡಳಿತವನ್ನು ನಿರ್ವಹಿಸುತ್ತಿದ್ದವು, ಇತ್ಯಾದಿ, ತನ್ನ ಯಾವ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಇತಿಹಾಸಕಾರ ಯತ್ನಿಸಬಾರದು. ಐತಿಹಾಸಿಕ ಸಂಶೋಧನೆಯಲ್ಲಿ ಇತಿಹಾಸಕಾರರು ಧಾರ್ಮಿಕ, ತತ್ವಜ್ಞಾನ ಮತ್ತು ನೈತಿಕ ಅಭಿಪ್ರಾಯಗಳ ಪ್ರಭಾವವನ್ನು ನಿರಾಕರಿಸಬೇಕು.

ಇತಿಹಾಸಕಾರರ ವಸ್ತುಸ್ಥಿತಿಯಲ್ಲಿ ಕೆಲವು ಸ್ಪಷ್ಟವಾದ ಮೂಲಾಂಶಗಳಿವೆ. ಈ ಅಂಶಗಳು ಇತಿಹಾಸಕಾರರ ಸಾಧುವಾದ ಐತಿಹಾಸಿಕ ಜ್ಞಾನ, ಅವರ ಸಮಸ್ಯೆಯ ಅರಿವು, ಸತ್ಯಕ್ಕಾಗಿ ಅವರ ಬದ್ಧ ಸ್ಥಿತಿ, ವಿಮರ್ಶಾತ್ಮಕ ವಿಚಾರ ಸರಣಿ ಹಾಗೂ ವಿಶ್ಲೇಷಣೆಗೆ ಅವರ ಸಾಮರ್ಥ್ಯ ಮೊದಲಾದವುಗಳನ್ನು ಸಾಧ್ಯವಾಗಿಸುತ್ತವೆ. ಇತಿಹಾಸವು ತನ್ನ ವಸ್ತು ವಿಷಯಕ್ಕೆ ಸಿದ್ಧವಿರುವಾಗ ಮತ್ತು ಎರಡು ವರದಿಗಳಲ್ಲಿ ಯಾವುದಾದರೂ ಒಂದನ್ನು ಮಾತ್ರ ಆಯ್ದುಕೊಳ್ಳಬಹುದಾದ ಅವಕಾಶವನ್ನು ಹೊಂದಿ, ಪರಿಣಾಮಕಾರಿಯಾಗಿ ಸ್ಪರ್ಧಿಸುವಾಗ ಮತ್ತು ಗತಕಾಲವನ್ನು ಅದು ಯಥಾರ್ಥವಾಗಿ ನೋಡುವ ಒಂದು ಶುದ್ಧ ಪ್ರಯತ್ನವಾಗಿದ್ದರೆ ಇತಿಹಾಸಕಾರರು ತನ್ನ ಕೃತಿಯು ವಸ್ತುನಿಷ್ಠೆಯಿಂದ ಕೂಡಿದ್ದೆಂದು ಪ್ರತಿಪಾದಿಸಬಹುದಾಗಿದೆ ಎಂಬುದು ಬಹುತೇಕ ವಿದ್ವಾಂಸರ ಅಭಿಪ್ರಾಯವಾಗಿದೆ.

ಪೂರ್ವಗ್ರಹಗಳು

“ಪಕ್ಷಪಾತ” ಮತ್ತು “ಪೂರ್ವಗ್ರಹ” ಈ ಪದಗಳನ್ನು ಸಮಾನಾರ್ಥಕವೆಂದು ಪರ್ಯಾಯ ಕ್ರಮದಲ್ಲಿ ಬಳಸುವುದು ವಾಡಿಕೆ. ಆದರೆ ಅವು ಸಮಾನಾರ್ಥವನ್ನು ಸೂಚಿಸುವುದಿಲ್ಲ. ಇತಿಹಾಸಕಾರರು ತಮ್ಮ ವೈಯಕ್ತಿಕ ಮೌಲ್ಯಗಳನ್ನು ಇತಿಹಾಸದ ವ್ಯಕ್ತಿಗಳಲ್ಲಿ ಅರಸುವುದು ಅಥವಾ ಐತಿಹಾಸಿಕ ಘಟನೆಗಳನ್ನು ತಮ್ಮ ವೈಯಕ್ತಿಕ ಮೌಲ್ಯಗಳಿಂದ ಅರ್ಥೈಸುವುದು ಪೂರ್ವಗ್ರಹವಾಗುತ್ತದೆ. ಅನೇಕ ಮೌಲ್ಯಗಳನ್ನು ಇತರರೊಂದಿಗೆ ಹಂಚಿಕೊಂಡಿರುವುದರಿಂದ, ಗುಂಪುಗಳಲ್ಲಿ ಸರ್ವಸಮ್ಮತವಾದ ಆಸಕ್ತಿಗಳಿದ್ದು ಕೆಲವು ಪ್ರಚೋದನೆಗಳಿಗೆ ಒಂದೇ ವಿಧದ ಪ್ರತಿಕ್ರಿಯೆಗಳು ಕಂಡುಬರುವುದು ಸಹಜ. ಆದರೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದ ಗತಿಯಲ್ಲಿ ತನ್ನದೇ ಆದ ನೈಜ ಜಗತ್ತನ್ನು ಅಂತರ್ಗತ ಮಾಡಿಕೊಂಡಿರುತ್ತಾನೆ. ಇದು ಮನೋನುಕೂಲದ (Psychological) ಮಾತೃಕೆಯಾಗಿದ್ದು ಇದರಿಂದ ಆತನ ಉದ್ದೇಶಪೂರ್ವಕ ನಡೆವಳಿ ಜನಿಸುತ್ತದೆ. ಬೈಬಲ್ಲಿನ ನಾಣ್ಣುಡಿಯಂತೆ, “ಆತನ ಹೃದಯಲ್ಲಿ ಯೋಚಿಸುತ್ತಿರುವಂತೆ ಆತನಿದ್ದಾನೆ.” “ಆತನು ಹೆಚ್ಚಿನ ಪರಿಣಾಮದಲ್ಲಿ ಆತನು ಎಣಿಸಿದಂತೆ ಅಥವಾ ಭಾವಿಸಿದಂತೆ ಇರುತ್ತಾನೆ” ಎನ್ನುವಂತಹ ಮಾತುಗಳು ಗಮನಾರ್ಹವಾಗಿವೆ.

ಪುರಾವೆಗಳನ್ನು ಪೂರ್ಣವಾಗಿ ಪರ್ಯಾಲೋಚಿಸದೆ ಅಥವಾ ಪರೀಕ್ಷಿಸದೆ ನಿರ್ಣಯಿಸುವುದೇ ಪಕ್ಷಪಾತ. ಮಾತ್ರವಲ್ಲ, ಇಂದು ನಿರ್ದಿಷ್ಟ ಅಭಿಪ್ರಾಯ ಅಥವಾ ನಂಬಿಕೆಯ ಕಟ್ಟುಪಾಡಿಗೆ ಒಳಗಾಗಿರುವುದು, ಒಂದು ನಿರ್ದಿಷ್ಟ ಮನೋಭಾವ ಅಥವಾ ದೃಷ್ಟಿಯನ್ನು ಹೊಂದಿರುವುದು ಅಥವಾ ಯಾವ ಸಂಶಯಕ್ಕೂ ಅವಕಾಶವೇ ಇಲ್ಲದಂತೆ ಒಂದು ಕಾರಣವನ್ನು ಪ್ರಬಲವಾಗಿ ಪರಿಗಣನೆಗೆ ತೆಗೆದುಕೊಳ್ಳುವುದು, ತನ್ನ ನಿಲುವಿಗೆ ವಿರುದ್ಧವಾದ ಪುರಾವೆಗಳು ಮತ್ತು ಆ ನಿಲುವನ್ನು ವಿರೋಧಿಸುವ ಅಭಿಪ್ರಾಯಗಳ ಅರಿವಿದ್ದೂ ಅವುಗಳನ್ನು ಪರಿಗಣಿಸದಿರುವುದು ಪಕ್ಷಪಾತವಾಗುತ್ತದೆ. ತಾವು ಪಕ್ಷಪಾತದಿಂದ ವಿಮುಕ್ತವಾಗಿದ್ದೇವೆಂದು ಹೇಳಿಕೊಳ್ಳುವ ವಿದ್ವಾಂಸರ ಸಂಖ್ಯೆ ವಿರಳ ಮತ್ತು ಹಾಗೆ ಹೇಳಿಕೊಳ್ಳುವುದು ನ್ಯಾಯಯುತವೂ ಆಗುವುದಿಲ್ಲ. ಪಕ್ಷಪಾತಗಳನ್ನು ಬೇರುಮಟ್ಟ ಕಿತ್ತುಹಾಕುವುದು ನಮಗೆ ಸಾಧ್ಯವಾಗುವುದಿಲ್ಲ. ಆದರೆ ಅದರ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡಬಹುದಾಗಿದೆ. ಇತಿಹಾಸ ರಚನೆಯಲ್ಲಿ ಪಕ್ಷಪಾತ ವಿರುದ್ಧವಿರುವ ರಕ್ಷಣೋಪಾಯವೆಂದರೆ ಅನುಪಯುಕ್ತ ನಿರ್ಣಯಗಳನ್ನು ಸ್ವೇಚ್ಛೆಯಿಂದ ಮಾಡುವುದರಿಂದಲ್ಲ. ಬದಲಿಗೆ ಒಬ್ಬ ವ್ಯಕ್ತಿಯ ಪೂರ್ವಭಾವನೆಗಳನ್ನು ಒಳಹೊಕ್ಕು ಪರಿಶೋಧಿಸುವುದರಿಂದ, ಅವುಗಳನ್ನು ಮುಚ್ಚುಮರೆಯಿಲ್ಲದೆ ವ್ಯಕ್ತಪಡಿಸುವುದರಿಂದ ಮತ್ತು ಅವುಗಳಲ್ಲಿ ಯಾವುದಾದರೂ ಒಂದು ಮಾತ್ರ ಆಯ್ದುಕೊಳ್ಳಬಹುದಾದ ಅವಕಾಶವನ್ನು ಪರಿಗಣಿಸುವುದರಿಂದ ಎಂದು ಹೇಳಬಹುದು. ಈ ರಕ್ಷಣೋಪಾಯದಿಂದ ಚರಿತ್ರೆಕಾರನು ಪಕ್ಷಪಾತದಿಂದ ಬಹುತೇಕವಾಗಿ ವಿಮುಕ್ತನಾಗಬಹುದು.

ತನ್ನ ಉದ್ದೇಶ ಸಾಧನೆಗಾಗಿ ಅಥವಾ ಒಬ್ಬ ವ್ಯಕ್ತಿಯನ್ನು ಅತಿಶಯಿಸುವ ಅಥವಾ ತೆಗಳುವ ಉದ್ದೇಶದಿಂದ ರಚಿಸುವ ಕೃತಿ ಪೂರ್ವಗ್ರಹದಿಂದ ಕೂಡಿರುತ್ತದೆ. ಉದಾಹರಣೆಗೆ, ಮೊದಲನೆಯ ಜಾಗತಿಕ ಯುದ್ಧದಲ್ಲಿ ಅಮೆರಿಕಾ ನಡುವೆ ಪ್ರವೇಶಿಸಿದಾಗ ಅಂದಿನ ಆ ದೇಶದ ಅಧ್ಯಕ್ಷ ವುಡ್ರೋ ವಿಲ್ಸನ್ ಕೆಳಕಂಡ ಹೇಳಿಕೆಯನ್ನು ನೀಡಿದ್ದಾನೆಂದು ಹೇಳಲಾಗಿದೆ. ಅವನ ಪ್ರಕಾರ,

ಒಂದು ಸಾರಿ ಈ ಜನರನ್ನು ಯುದ್ಧದಲ್ಲಿ ತೊಡಗಿಸಿಕೊಂಡು ಹೋದ ಮೇಲೆ ತಾಳ್ಮೆ ಅಥವಾ ಸಹನೆ ಇತ್ತೆಂಬುದನ್ನು ಮರೆಯುತ್ತಾರೆ. ಹೋರಾಡಲು ನೀವು ಕ್ರೂರಿ ಮತ್ತು ನಿರ್ದಯಿಗಳಾಗಿರಬೇಕು. ಈ ಕ್ರೂರ ನಿಷ್ಕರುಣೆ ಅಥವಾ ತಾಳ್ಮೆಯ ಪ್ರಕೃತಿ ನಮ್ಮ ರಾಷ್ಟ್ರೀಯ ಜೀವನವನ್ನು ಪ್ರವೇಶಿಸಿ, ನಮ್ಮ ಕಾಂಗ್ರೆಸ್, ನ್ಯಾಯಾಲಯಗಳು, ಗಸ್ತುತಿರುಗುವ ಪೇದೆ, ರಸ್ತೆಯಲ್ಲಿರುವ ಜನ ಎಲ್ಲರನ್ನೂ ಕಲುಷಿತಗೊಳಿಸುತ್ತದೆ.

ಅಧ್ಯಕ್ಷ ವುಡ್ರೋವಿಲ್ಸನ್ ಕುರಿತಾದ ಕೃತಿಗಳಲ್ಲಿ ಹಾಗೂ ಮೊದಲನೆಯ ಜಾಗತಿಕ ಯುದ್ಧದಲ್ಲಿ ಅಮೆರಿಕಾದ ಮಧ್ಯಪ್ರವೇಶ ಕುರಿತಾದ ಕೃತಿಗಳಲ್ಲಿ ಪ್ರತಿಯೊಬ್ಬ ಪ್ರಸಿದ್ಧ ಇತಿಹಾಸಕಾರನು ಈ ಹೇಳಿಕೆಯು ವಿಲ್ಸನ್ ಮಾಡಿದ್ದೆಂದು ಉಲ್ಲೇಖಿಸಿದ್ದಾರೆ. ಇತ್ತೀಚಿನ ಸಂಶೋಧನೆಗಳಿಂದ ಅಧ್ಯಕ್ಷ ವಿಲ್ಸನ್ ಆ ಹೇಳಿಕೆಯನ್ನು ಮಾಡಿರಲಿಲ್ಲವೆಂಬುದು ವ್ಯಕ್ತವಾಗುತ್ತದೆ. ಮಾತ್ರವಲ್ಲ, ಅಲ್ಲಿನ ಶಾಂತಿ ಪ್ರತಿಪಾದಕರಾದ ಮ್ಯಾಕ್ಸ್‌ವೆಲ್ ಆಂಡರ್‌ಸನ್ ಮತ್ತು ಲಾರೆನ್ಸ್‌ಸ್ಟಾಲಿಂಗ್ಸ್ ಯುದ್ಧದ ಪರಿಣಾಮಗಳ ಬಗ್ಗೆ ವಿಲ್ಸನ್ ಭವಿಷ್ಯ ಜ್ಞಾನವುಳ್ಳವನಾಗಿದ್ದನೆಂದು ತೋರಿಸುವ ಸಲುವಾಗಿ ಸೃಷ್ಟಿಸಿದ್ದಾಗಿದೆ ಎಂಬುದನ್ನು ಈ ಸಂಶೋಧನೆಗಳು ದೃಢಪಡಿಸಿವೆ. ಅಂತೆಯೇ, ಬಿಲ್ಹಣನ ವಿಕ್ರಮಾಂಕದೇವ ಚರಿತ ಮತ್ತು ಅಬುಲ್ ಫಸಲ್‌ನ ಐನ್‌ಇ-ಅಕ್ಬರಿ ಮತ್ತು ಅಕ್ಬರ್‌ನಾಮ ತಮ್ಮ ಆಶ್ರಯದಾತನನ್ನು ಪ್ರಶಂಶಿಸುವ ಪೂರ್ವಗ್ರಹದಿಂದ ಪೀಡಿತವಾಗಿದ್ದರೆ ಬದೌನಿಯ ಮುಂತಕಾಬ್-ವುಲ್-ತವಾರಿಕ್ ತನ್ನ ಪೋಷಕನ ನ್ಯೂನತೆಗಳನ್ನು ಎತ್ತಿ ತೋರಿಸುವುದಕ್ಕೆ ಮೀಸಲಾಗಿದೆ.

ಒಂದು ಧರ್ಮ ಸಂಸ್ಥೆ ಅಥವಾ ಧಾರ್ಮಿಕ ಭಾವನೆಗಳು, ಅಥವಾ ರಾಜಕೀಯ ಪಕ್ಷ ಅಥವಾ ರಾಜಕೀಯ ಅಭಿಪ್ರಾಯಗಳಿಗೆ ಮಿತಿಮೀರಿದ ಒಲವು, ಅಥವಾ ಕೆಲವು ವೃತ್ತಿ ಅಥವಾ ಗಾಢವಾದ ಅಸಹ್ಯತೆ ಇವೂ ಪೂರ್ವಗ್ರಹಕ್ಕೆ ಉದಾಹರಣೆಗಳು. ಸಾಮ್ರಾಜ್ಯಶಾಹಿ ಇತಿಹಾಸಕಾರರು ರಚಿಸಿರುವ ಭಾರತೀಯ ಇತಿಹಾಸ ಕುರಿತಾದ ಹೆಚ್ಚಿನ ಕೃತಿಗಳು ಪೂರ್ವಗ್ರಹದಿಂದ ಕೂಡಿವೆ.

ಇತಿಹಾಸ ರಚನೆಯಲ್ಲಿ ಆಯ್ಕೆಯ ನಿಯಮವು ತೊಡಕುಂಟು ಮಾಡುತ್ತದೆ. ಇತಿಹಾಸಕಾರರು ತಾವು ಸೇರಿಸಲು ಇಷ್ಟಪಡುವ ಸಂಗತಿಗಳನ್ನಲ್ಲದೆ ತಾವು ಘಟನೆಗಳಿಗೆ ಕೊಡಲಿರುವ ಕಾರಣಗಳನ್ನೂ ಸಹ ಆಯ್ದುಕೊಳ್ಳುವುದು ಎಲ್ಲರಿಗೂ ತಿಳಿದ ಸಂಗತಿ. ಈ ಪ್ರವೃತ್ತಿ, ಇತಿಹಾಸಕಾರರು ತಮ್ಮ ವಿಚಿತ್ರ ಭಾವನೆ ಮತ್ತು ಪೂರ್ವಗ್ರಹಕ್ಕೆ ಅನುಗುಣವಾಗಿ ನಿರ್ಮಿಸಿವುದೇ ಇತಿಹಾಸ ಎಂಬ ಇತಿಹಾಸ ವಿರೋಧಿಗಳ ಅಭಿಪ್ರಾಯವನ್ನು ಸಮರ್ಥಿಸಿದಂತಾಗುತ್ತದೆ. ಈ ಪ್ರಯತ್ನ “ಇತಿಹಾಸವು ಪೊಳ್ಳು ಮಾತು ಅಥವಾ ಬೂಟಾಟಿಕೆ.” ಎಂದು ಹೆನ್ರಿ ಪೋರ್ಡ್ ಘೋಷಿಸುವಂತೆ ಮಾಡಿತು. ಈ ಅಪಾಯವನ್ನು ತಳ್ಳಿಹಾಕುವಂತಿಲ್ಲ. ಆದರೆ ನಿಷ್ಕಪಟ ಅಥವಾ ಪ್ರಾಮಾಣಿಕತೆಯುಳ್ಳ ಇತಿಹಾಸಕಾರರು ತನಗೆ ಸಾಧ್ಯವಾದಷ್ಟು ಎಚ್ಚರಿಕೆ ಯಿಂದಿರುವುದು ಅಗತ್ಯ. ತಾನು ಒಂದು ಘಟನೆಯನ್ನು ಚಿತ್ರಿಸುವ ಕ್ರಿಯೆಯಲ್ಲಿ ತೊಡಗಿರುವ ನೆಂಬುದನ್ನು ನೆನಪಿಸಿಕೊಂಡು ತನ್ನ ಪೂರ್ವಗ್ರಹಗಳು ಮತ್ತು ವೈಯಕ್ತಿಕ ಅಭಿಪ್ರಯಗಳನ್ನು ಮೆಟ್ಟಿ ನಿಲ್ಲಲು ಪ್ರಯತ್ನಿಸಬೇಕು. ಒಂದು ವಿಷಯವನ್ನು ವಿಚಾರಮಾಡುವಲ್ಲಿ ಅದರ ತಥ್ಯಾಂಶವು ಹೀಗಿರಬಹುದೆಂದು ಊಹಿಸಿದ ಮೇಲೆ ಅಥವಾ ನಿಷ್ಕರ್ಷೆ ಮಾಡಿದ ಮೇಲೆ, ಅದನ್ನು ಕಠಿಣತರ ಪರೀಕ್ಷೆಗೆ ಹಾಗೂ ಅದನ್ನು ಬೆಂಬಲಿಸುವ ಅಥವಾ ವಿರೋಧಿಸುವ ಪುರಾವೆಗಳನ್ನು ಪರಿಶೀಲಿಸಲು ಪ್ರಯತ್ನಿಸಬೇಕು. ಮಿಗಿಲಾಗಿ, ಚರಿತ್ರೆಕಾರರು ತಮ್ಮ ವೈಯಕ್ತಿಕ ಮೌಲ್ಯಗಳು ತಮ್ಮ ಕಥನದಲ್ಲಿ ಒಳಸೇರದಂತೆ ನೋಡಿಕೊಂಡು, ಎಲ್ಲ ಮಹತ್ವದ ಮತ್ತು ಸುಸಂಬದ್ಧವುಳ್ಳ ಪುರಾವೆಗಳ ಸಮಗ್ರ ವಿಷಯ ಕಥನವನ್ನು ಮಮಡಿಸಿದಾಗ ಪೂರ್ವಗ್ರಹ ದೋಷದಿಂದ ಪಾರಾಗಬಹುದು. ತನ್ನ ಚಿತ್ತವೃತ್ತಿ, ಮೌಲ್ಯ ನಿರ್ಣಯ, ಭಾವನಾತ್ಮಕ ಒಲವು, ರಾಜಕೀಯ ಒತ್ತಡ, ಸಮೂಹ ಮುನ್ನೊಲವು, ಸಂಕುಚಿತ ಸಾಮಾಜಿಕ ಧೋರಣೆ ಮುಂತಾದ ಪ್ರಲೋಭನೆಗಳಿಗೆ ಒಳಗಾಗದೆ ಹಾಗೂ ಜಾತಿ, ವರ್ಗ, ಮತ, ಪಂಥ, ಭಾಷೆ ಮುಂತಾದ ಉದ್ರೇಕಗಳಿಗೆ ಒಳಗಾಗದೆ, ಇತಿಹಾಸಕಾರರು ಯಥಾರ್ಥವಾದ ಕಥನ ನಿರೂಪಣೆಯತ್ತ ತಮ್ಮ ಗಮನವನ್ನು ಕೇಂದ್ರೀಕರಿಸುವುದು ಅವಶ್ಯಕವಾಗಿದೆ.

ಪರಾಮರ್ಶನ ಗ್ರಂಥಗಳು

೧. ಅಬನ್ ನೆವಿಸ್, ೧೯೬೧. ದಿ ಗೇಟ್ ವೆ ಟು ಹಿಸ್ಟರಿ, ನ್ಯೂಯಾರ್ಕ್.

೨. ಕಾಲಿಂಗ್‌ವುಡ್ ಆರ್.ಜಿ., ೧೯೬೧. ದಿ ಐಡಿಯಾ ಆಫ್ ಹಿಸ್ಟರಿ, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರಸ್.

೩. ಕಾರ್ ಇ.ಎಚ್., ೧೯೬೪. ವಾಟ್ ಈಸ್ ಹಿಸ್ಟರಿ, ಪೆಲಿಕನ್ ಪಬ್ಲಿಷರ್ಸ್‌.

೪. ಮಾರ್ವಿಕ್ ಆರ್ಥರ್, ೧೯೭೧. ದಿ ನೇಚರ್ ಆಫ್ ಹಿಸ್ಟರಿ, ಮ್ಯಾಕ್‌ಮಿಲನ್.

೫. ರೆನಿಯರ್ ಜಿ.ಜೆ., ೧೯೬೧. ಹಿಸ್ಟರಿ : ಇಟ್ಸ್ ಪರ್‌ಪಸ್ ಆಮಡ್ ಮೆಥೆಡ್. ಜಾರ್ಜ್‌ಅಲೆನ್ ಅಂಡ್ ಅನ್‌ವಿನ್, ಲಿಮಿಟೆಡ್.

೬. ರಾಬರ್ಟ್ ಜೋನ್ಸ್ ಶೇಫರ್ (ಸಂ), ೧೯೬೧. ಎ ನೈಡ್ ಟು ಹಿಸ್ಟಾರಿಕಲ್ ಮೆಥೆಡ್, ಇಲಿನಾಯ್ಸ್: ದಿ ಡೋರ್‌ಸೆ ಪ್ರೆಸ್.

೭. ವೆಂಕಟರತ್ನಂ ಎ.ವಿ. ಪದ್ಮ ಎಂ.ಬಿ. ೧೯೮೫. ಇತಿಹಾಸ ಸಂಶೋಧನಾ ಮಾರ್ಗ, ಬಾಪ್ಕೋ ಪ್ರಕಾಶನ.

೮. ಶ್ರೀನಿವಾಸಮೂರ್ತಿ ಎಚ್.ವಿ., ೨೦೦೦. ಇತಿಹಾಸ ಸಂಶೋಧನಾ ಸಮೀಕ್ಷೆ, ಪದ್ಮ ಪ್ರಕಾಶನ.

೯. ಹೊಮರ್ ಸಿ. ಹಾಕೆಟ್, ೧೯೫೫. ದಿ ಕ್ರಿಟಿಕಲ್ ಮೆಥಡ್ ಇನ್ ಹಿಸ್ಟಾರಿಕಲ್ ರಿಸರ್ಚ್ ಆಂಡ್ ರೈಟಿಂಗ್, ನ್ಯೂಯಾರ್ಕ್.

* * *