ಚರಿತ್ರೆ, ಬರವಣಿಗೆ ವಿಧಾನ ಕ್ರಮ ಮತ್ತು ಇತಿಹಾಸ ರಚನಾ ಕ್ರಮವೊಂದು ಏನಾದರೂ ಇದ್ದರೆ ಅದು ಖಂಡಿತವಾಗಿಯೂ ಇತಿಹಾಸಕಾರನ ಸೈದ್ಧಾಂತಿಕತೆ/ಹಿನ್ನೆಲೆಯ ಆಧಾರದ ಮೇಲೆಯೇ ರೂಪಿತವಾಗಿರುತ್ತದೆ. ವಸಾಹತು ಕಾಲದಲ್ಲಿ ವಸಾಹತೋತ್ತರ ಕಾಲದ ಆರಂಭಿಕ ದಶಕಗಳಲ್ಲಿ ಅಥವಾ ಈಗಲೂ ಚರಿತ್ರೆ ಬರವಣಿಗೆ ವಿಧಾನ ಎಂಬ ಅಂಶವನ್ನು ಚರಿತ್ರೆ ರಚನಾ ಶಾಸ್ತ್ರದಿಂದ ಬೇರ್ಪಡಿಸಿಯೇ ನೋಡಲಾಗುತ್ತಿದೆ. ವಾಸ್ತವಿಕವಾಗಿ ಬರವಣಿಗೆ ವಿಧಾನ ರೂಪುಗೊಳ್ಳುವುದು ಆಯಾ ಕಾಲಘಟ್ಟದ ಸನ್ನಿವೇಶಗಳಿಂದ ಹಾಗೂ ಅಂತಹ ಸನ್ನಿವೇಶಗಳು ಸೃಷ್ಠಿಸುವ ವಾತಾವರಣದಿಂದಾಗಿದೆ.

ಹೀಗಾಗಿ ಒಂದು ನಿರ್ದಿಷ್ಟ ಸನ್ನಿವೇಶಗಳಲ್ಲಿ ಬಹು ಬಗೆಯ ಜನ ಸಮುದಾಯಗಳು ಘಟನೆಯನ್ನು ಬಹು ವಿಧಗಳಲ್ಲಿ ಗ್ರಹಿಸುತ್ತವೆ. ಉದಾಹರಣೆಗೆ, ಘಟನೆಯೊಂದನ್ನು ಭೂಮಾಲೀಕರು ಮತ್ತು ಕೃಷಿಕೂಲಿಕಾರರು ಭಿನ್ನಭಿನ್ನವಾಗಿ ಅವರವರ ಅನುಭವ ಮತ್ತು ಹಿನ್ನೆಲೆಗಳಿಂದ ಗ್ರಹಿಸುತ್ತಾರೆ. ಹೀಗೆ ಬೇರೆ ಬೇರೆ ವರ್ಗ/ಸಮುದಾಯಗಳಿಂದ ಬಂದ ವ್ಯಕ್ತಿಗಳು/ಚರಿತ್ರೆಕಾರರು ಕೂಡ ವಿವಿಧ ದೃಷ್ಠಿಕೋನಗಳಿಂದ ಘಟನೆಯನ್ನು ಅಥವಾ ಘಟನೆಯೊಂದು ರೂಪಿಸುವ ಚರಿತ್ರೆಯನ್ನು ಕಂಡುಕೊಳ್ಳುತ್ತಾರೆ.

ಹೀಗಾಗಿಯೇ ನಮಗೆ “ಒಂದು ಚರಿತ್ರೆ” ಸಿಗುವುದಿಲ್ಲ. ಬದಲಿಗೆ ಹಲವು ಚರಿತ್ರೆಗಳು ಸಿಗುತ್ತವೆ. ಸರ್ವಾಧಿಕಾರಿ ಆಡಳೀತವಿರುವ ದೇಶಗಳಲ್ಲಿ “ಒಂದೇ ಚರಿತ್ರೆ”ಯನ್ನು ಬಹಳ ಶಿಸ್ತುಬದ್ಧವಾಗಿ ತಯಾರಿಸಿ, ಅವರ ಆಳ್ವಿಕೆಗೆ ಒಳಪಟ್ಟ, ಜನರು ಅದನ್ನು ಒಪ್ಪುವಂತೆ ಅಥವಾ ಒಪ್ಪಲೇಬೇಕಾದಂತೆ ನಿಯಮಗಳನ್ನು ಸೃಷ್ಠಿಸಿರುವುದು ಕಂಡುಬರುತ್ತದೆ. ಆ ಸಂದರ್ಭದಲ್ಲಿ ಒಂದು ಯೂನಿಫಾರ್ಮಾದ ಮೆಥಾಡಲಜಿ ಇರುತ್ತದೆ. ಆಕರಗಳ ಸಂಗ್ರಹಣೆ ಹಾಗೇ ಇರಬೇಕು. ಅದನ್ನು ವ್ಯಾಖ್ಯಾನಿಸುವ ಕ್ರಮ ಹಾಗೇ ಇರಬೇಕು. ಅದನ್ನು ಕೊನೆಗೆ ಪಠ್ಯವನ್ನಾಗಿ ಪ್ರಕಟಿಸುವ ಕ್ರಮಗಳು ಹೀಗೆ ಇರಬೇಕು ಎಂಬ ರೀತಿಯಲ್ಲಿ ಅಧ್ಯಯನ ವಿಧಾನಗಳನ್ನು ರೂಪಿಸಲಾಗಿರುತ್ತದೆ. ವಸಾಹತು ಘಟ್ಟದಲ್ಲಿ ಆಳರಸರು ಮಾಡಿದ್ದು ಹೀಗೆಯೇ. ವಸಾಹತುಕಾರರು ತಮ್ಮ ದೇಶದ ಚರಿತ್ರೆಗೆ ಬಳಸಿದ ವಿಧಾನವನ್ನೂ ಬಹುತೇಕವಾಗಿ ವಸಾಹತುಗಳಲ್ಲಿ ಬಳಸಿದರೂ, ಬ್ರಿಟಿಶ್ ಆಳರಸರನ್ನು ‘ಡೆಮೊಕ್ರೆಟ್ಸ್’ ಎಂದೇ ಬಿಂಬಿಸಿದರು. ಬ್ರಿಟಿಶ್ ಸೈನಿಕರು ದೇಶಕ್ಕಾಗಿ ಹೋರಾಡಿದ/ತ್ಯಾಗ ಮಾಡಿದ ‘ವೀರರಾದರೆ’ ಭಾರತದಂತಹ ದೇಶಗಳಲ್ಲಿ ಈ ವೀರರ ವಿರುದ್ಧ ಬಂಡೆದ್ದ ರೈತರನ್ನು/ಬುಡಕಟ್ಟುಗಳನ್ನು ‘ಕ್ರಿಮಿನಲ್‌ಗಳೆಂದು’ ‘ಕಾನೂನು ಸುವ್ಯವಸ್ಥೆಗೆ ಭಂಗ ತರುವರೆಂದು’ ‘ಅಶಾಂತಿಯನ್ನುಂಟು ಮಾಡುವವರೆಂದು’ ಹಾಗೂ ಕೆಲವೊಮ್ಮೆ “ದರೋಡೆಕೋರರೆಂದು” ಬ್ರಿಟಿಶ್ ಆಲರಸರ ಕೃಪೆಯಲ್ಲಿದ್ದ ಆಡಳಿತಕಾರ ಚರಿತ್ರೆಕಾರರು, ಮಿಶನರಿಗಳು ಹಾಗೂ ಆ ಕಾದ ವಿದ್ವಾಂಸರು ಬಿಂಬಿಸಿದ್ದರು. ನೇರವಾದ ಡಬಲ್ ಸ್ಟಾಂಡರ್ಡ್‌ನ್ನು ಈ ವಸಾಹತುಕಾರರ ಬರವಣಿಗೆಯಲ್ಲಿ ಕಾಣಬಹುದಾಗಿದೆ. ಜಗತ್ತಿನ ಎಲ್ಲ ಯುರೋಪಿನ ಭಿನ್ನಭಿನ್ನ ವಸಾಹತುಕಾರರು ಹೀಗೆಯೇ ಮಾಡಿದರು. ಬ್ರಿಟಿಶ್ ಪಾರ್ಲಿಮೆಂಟ್/ಡೆಮಾಕ್ರಸಿಯ ಚೌಕಟ್ಟಿನಲ್ಲಿ ವಿರೋಧಪಕ್ಷಗಳ ರೀತಿಯಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕ ರಾಷ್ಟ್ರೀಯವಾದಿ ಬರಹಗಾರರಲ್ಲಿಯೂ ಚರಿತ್ರೆ ಬರವಣಿಗೆಗೆ ಸಂಬಂಧಿಸಿದ ಪೂರ್ವಗ್ರಹಗಳು ಮುಂದುವರಿದವು. ರೈತರು, ಕೆಳವರ್ಗ/ ಜಾತಿಗಳು, ದಲಿತರು ಮುಂತಾದ ನಿರ್ಲಕ್ಷ್ಯಕೊಳಪಟ್ಟ ಸಮುದಾಯಗಳ ಸಂಸ್ಕೃತಿ, ಬದುಕು, ಹೋರಾಟಗಳು ವಸಾಹತು ಆಳರಸರ ಕೈಯಲ್ಲಿ ಹೇಗೆ ಗೌಣವಾಯಿತೋ ಅದೇ ರೀತಿಯಲ್ಲಿ ಬಹುತೇಕ ರಾಷ್ಟ್ರೀಯವಾದಿ ವಿದ್ವಾಂಸರ/ಚರಿತ್ರೆಕಾರರ ನಿರ್ಲಕ್ಷ್ಯಕ್ಕೆ ಒಳಗಾಯಿತು. ಅದನ್ನು ಉದ್ದೇಶಪೂರ್ವಕವಾಗಿ ಎಂದು ವಾದಿಸುವುದು ಮತ್ತು ತರ್ಕಿಸುವುದು ಸಮಂಜಸವಲ್ಲ ಬಹುಶಃ ಭಾರತೀಯ ವ್ಯವಸ್ಥೆಯು ರೂಪಿಸಿದ ರಾಷ್ಟ್ರೀಯವಾದಿ ರಾಜಕಾರಣದ ಅಭಿವ್ಯಕ್ತಿಯಾದ ರಾಷ್ಟ್ರೀಯವಾದಿ ಬರಹಗಾರರ ಬಹುದೊಡ್ಡ ಮಿತಿ ಇದು ಎಂದು ಹೇಳುವುದು ಸೂಕ್ತವಾಗುತ್ತದೆ. ಏಕೆಂದರೆ ಇಂಗ್ಲೀಷ್ ಕಲಿತ/ಬಲ್ಲ ರಾಷ್ಟ್ರೀಯವಾದಿ ವಿದ್ವಾಂಸರು ತಮ್ಮ ಆಳರಸರು ಕಟ್ಟಿದ ವ್ಯವಸ್ಥೆಯಲ್ಲಿದ್ದವರು. ಅವರ ಯೋಚನೆ, ಸಿದ್ಧಾಂತಗಳಿಂದ ಪ್ರಭಾವಕ್ಕೊಳಗಾದವರು. ವಸಾಹತುಶಾಹಿಯನ್ನು ವಿರೋಧಿಸುತ್ತಿದ್ದೇವೆ ಎನ್ನುವ ಅಂಶವನ್ನು ಹೊರತುಪಡಿಸಿದರೆ ತಮ್ಮ ಅಧ್ಯಯನಕ್ಕೆ ವಸಾಹತುಶಾಹಿಗಳು ಕಟ್ಟಿಕೊಟ್ಟ ಅಧ್ಯಯನ ವಿಧಾನಗಳನ್ನೇ ಅವರು ಬಳಸಿದರು. ಹೀಗಾಗಿ ಅವರಿಗೆ ವಸಾಹತುಶಾಹಿ ಸರಕಾರವನ್ನು ಉರುಳಿಸಿ ವಸಾಹತೇತರ ಸರಕಾರವನ್ನು ಸ್ಥಾಪಿಸುವಷ್ಟಕ್ಕೆ ಅವರ ಬರವಣಿಗೆಯು ಮಿತಿಗೊಂಡಿತು. ಅದನ್ನು ಆ ಕಾಲದ ಮಿತಿಯೆಂದರೆ ಅದು ಅಸಹಜವಾಗುತ್ತದೆ. ಬದಲಿಗೆ, ವಸಾಹತುಶಾಹಿ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ ಡೆಮಾಕ್ರಟಿಕ್ ಹಾಗೂ ಇಗಾಲಟೇರಿಯನ್ ಸಿದ್ದಾಂತಗಳಿಂದ ಪ್ರಭಾವಕೊಳ್ಳಪಟ್ಟ ಮೇಲ್ವರ್ಗದ ದೇಸೀ ಹೋರಾಟಗಾರರ/ ಚರಿತ್ರೆಕಾರರ/ ವಿದ್ವಾಂಸರ ಮಿತಿಯಾಗಿದೆ. ವಸಾಹತು ಪೂರ್ವ ಭಾರತದಲ್ಲಿ ಆಳುವ ಸಮುದಾಯಗಳಿಂದ ಬಹುತೇಕವಾಗಿ ರೈತಾಪಿ/ಬುಡಕಟ್ಟು ಸಮುದಾಯಗಳನ್ನು ಸಾಂಪ್ರದಾಯಿಕವಾ ಗಿಯೇ ನಿರ್ಲಕ್ಷಿಸಿದ್ದು ಕಂಡುಬರುತ್ತದೆ. ಅದು ವಸಾಹತು ಪೂರ್ವ ಕಾಲದ ವ್ಯವಸ್ಥೆಯ ಒಂದು ಮುಖ್ಯ ಆಯಾಮವಾಗಿದೆ. ಆಶ್ಚರ್ಯವೆಂದರೆ ಆರಂಭ ಹಂತದ ಬಹುತೇಕ ರಾಷ್ಟ್ರೀಯವಾದಿ ಮುಖಂಡರು/ವಿದ್ವಾಂಸರು ವಸಾಹತುಪೂರ್ವ ಭಾರತದ ಆಳುವ ಸಮುದಾಯದವರಾಗಿರುವುದು. ಬ್ರಿಟಿಶರ ವಿರುದ್ಧ ಭಾರತವನ್ನು ಪ್ರತಿನಿಧಿಸುತ್ತೇವೆ ಎಂದವರು ಇವರೇ ವಸಾಹತುಶಾಹಿವಿರೋಧಿ ಹೋರಾಟವನ್ನು “ಅಹಿಂಸಾತ್ಮಕವಾಗಿ” ಮುನ್ನಡೆಸಿಕೊಂಡು ಹೋಗುವ ಚಳವಳಿಯ ಪ್ರಮುಖ ಭಾಗವಾದವರೂ ಇವರೇ. ಈ ಕಾರಣದಿಂದಾಗಿಯೇ ಅಧಿಕಾರ ಬದಲಾವಣೆ ಇವರಿಗೆ ಮುಖ್ಯವಾಯಿತೇ ವಿನಹ ಸಮುದಾಯಗಳ ನಡುವಿನ ಪ್ರಜಾಪ್ರಭುತ್ವೀಯ ಸಂಬಂಧಗಳನ್ನು ಬಲಪಡಿಸುವುದು ಇವರಿಗೆ ಮುಖ್ಯವಾಗಲಿಲ್ಲ. ಇವರಲ್ಲಿ ಹಲವರು ಪ್ರಜ್ಞಾಪೂರ್ವಕವಾಗಿ ಸಮುದಾಯಗಳ ಸಮಾನತೆಯ ಆಶಯಗಳಿಗಾಗಿ ಹೋರಾಟ ಮಾಡಿದರೂ ಅವರು ಬ್ರಿಟಿಶ್ ಪಾರ್ಲಿಮೆಂಟರಿ ವ್ಯವಸ್ಥೆಯ ಭಾಗವಾಗಿದ್ದರಿಂದ ಅವರೂ ಕೂಡ ಗೊತ್ತಿದ್ದೋ/ಗೊತ್ತಿಲ್ಲದೆಯೋ ಅದೇ ಹಾದಿಯನ್ನು ತುಳಿದರು. ಹೀಗಾಗಿ ಭಾರತದ ಸಂದರ್ಭದಲ್ಲಿ ವಸಾಹತುಶಾಹಿ ಹಾಗೂ ರಾಷ್ಟ್ರೀಯವಾದಿ ಚಳವಳಿಕಾರರ ದೃಷ್ಟಿಕೋನವು ಹೊರನೋಟದಲ್ಲಿ ಬೇರೆಬೇರೆಯಾಗಿದ್ದರೂ, ವಾಸ್ತವಿಕವಾಗಿ ಅವು ಒಂದೇ ಬಗೆಯದಾಗಿತ್ತು, ಹೀಗಾಗಿ ಯುರೋಪಿಗೆ “ಸುವರ್ಣಕಾಲವಿದ್ದರೆ” ಭಾರತದ ಚರಿತ್ರೆಗೂ “ಸುವರ್ಣಕಾಲ” ಬಂದಿತು. ಅವರಿಗೆ ಗ್ರೀಕ್ ನಾಟಕಗಳು ಪ್ರಧಾನವಾದರೆ ಭಾರತೀಯರಿಗೆ ಸಂಸ್ಕೃತ ನಾಟಕಗಳು ಪ್ರಧಾನವಾಯಿತು. ಯುರೋಪಿಯನ್ನರಿಗೆ ಮಧ್ಯಕಾಲ “ಅಂಧಯುಗ”ವಾಗಿದ್ದರೆ, ಭಾರತೀಯರಿಗೆ/ಹಿಂದುಗಳಿಗೆ ಮಧ್ಯಯುಗ “ಅಂಧಯುಗ”ವಾಯಿತು. ನೆಪೋಲಿಯನ್ನನಿಗಿಂತ ನೂರಾರು ವರ್ಷ ಮೊದಲೇ ಹುಟ್ಟಿದ್ದರೂ ಸಮುದ್ರಗುಪ್ತನನ್ನು “ಭರತ್ ನೆಪೋಲಿಯನ್” ಎಂದು ಬಿಂಬಿಸಲಾಯಿತು. ಹೀಗಾಗಿ ವಸಾಹತುಕಾರ ವಿದ್ವಾಂಸರ ಮತ್ತು ರಾಷ್ಟ್ರೀಯವಾದಿ ವಿದ್ವಾಂಸರ ಚರಿತ್ರೆ ಬರವಣಿಗೆ ಕ್ರಮಕ್ಕೆ ಅಧ್ಯಯನ ವಿಧಾನ ಒಂದೇ ಆದವು. ಈ ಸಂಪ್ರದಾಯ ಈಗಲೂ ಚಾಲ್ತಿಯಲ್ಲಿದೆ. ದ್ವಂದ್ವಮಾನ ಭೌತಿಕವಾದದ ಮೂಲಕ ಉಳ್ಳವರು ಮತ್ತು ಇಲ್ಲದವರ ನಡುವೆ ಇರುವ ಸಂಘರ್ಷವನ್ನು ಚರಿತ್ರೆಯ ಮೂಲಕ ಕಟ್ಟಬಯಸಿದ ಮಾರ್ಕ್ಸಿಸ್ಟ್ ಚರಿತ್ರೆ ಬರವಣಿಗೆಯ ಅಧ್ಯಯನ ವಿಧಾನವು ಜಾಗತಿಕ ಮಟ್ಟದಲ್ಲೇ ಒಂದೇ ಸ್ವರೂಪವನ್ನು ಇಟ್ಟುಕೊಂಡಿದೆ. ಹಾಗೆಯೇ ಮಾರ್ಕ್ಸಿಸ್ಟ್ ಅಧ್ಯಯ ವಿಧಾನ ಕ್ರಮವು ಬಹುತೇಕವಾಗಿ ಸಾಮಾನ್ಯ ಅಂಶಗಳಿಂದ ಕೂಡಿರುವುದನ್ನು ಕಾಣಬಹುದಾಗಿದೆ. “ಸಾರ್ವಕಾಲಿಕ” ವಿಧಾನಗಳನ್ನು ಮಾರ್ಕ್ಸಿಸ್‌ರ‍್ಟ್ರನ್ನು ಸೇರಿದಂತೆ ಬಹುತೇಕ ಪಂಥಗಳು ವಸಾಹತೋತ್ತರ ಕಾಲಘಟ್ಟದಲ್ಲಿ ಮುಂದುವರಿಸಿದವು ಎಂಬ ಟೀಕೆಯನ್ನು ಬಹುತೇಕ ಸಬಾಲ್ಟರ್ನ್ ಚರಿತ್ರೆಕಾರರು ಮಾಡಿರುವುದನ್ನು ಗಮನಿಸಬಹುದು. “ಯುರೋಪ್ ಕೇಂದ್ರಿತ” ವಾದಗಳನ್ನು/ಚರಿತ್ರೆಯನ್ನು ಮಾರ್ಕ್ಸಿಸ್ಟರು ರಚಿಸುತ್ತಾರೆ ಎಂದು ಸಬಾಲ್ಟರ್ನ್ ಚರಿತ್ರೆಕಾರರು ಮಾಡಿದ ಟೀಕೆಯು ಗಮನಾರ್ಹವಾಗಿದೆ.

ಸಮಾಜ ವಿಜ್ಞಾನಗಳು ಪ್ರಭಾವಿಯಾಗಿರಬೇಕೆಂಬ ಆಶಯದಿಂದ ಇತ್ತೀಚಿನ ದಶಕಗಳಲ್ಲಿ ವೃತ್ತಿಪರ ವಿದ್ವಾಂಸರು ಸಂಶೋಧನಾ ವಿಧಾನದ ಬಗ್ಗೆ ಬಹಳಷ್ಟು ಲೇಖನಗಳನ್ನು, ಪುಸ್ತಕಗಳನ್ನು ಬರೆದದ್ದುಂಟು. ಇತ್ತೀಚೆಗೆ ಕೆಲವು ಆಸಕ್ತರು ಅಧ್ಯಯನ ವಿದಾನ ಕ್ರಮ ಎಂದರೆ ಅದು ಹೀಗೆಯೇ ಇರಬೇಕೆಂದು ನಿರ್ವಚಿಸಿದ್ದನ್ನು/ನಿರ್ವಚಿಸುತ್ತಿರುವುದನ್ನು ಕಾಣಬಹುದು. ಇಂತಹ ಪಠ್ಯಗಳು ಅಧ್ಯಯನ ವಿಧಾನವನ್ನು ಗಣಿತಶಾಸ್ತ್ರ ಅಥವಾ ವಾಣಿಜ್ಯಶಾಸ್ತ್ರ ದ ವಾಗ್ಮಯದ ರೀತಿಯಲ್ಲಿ ಕರಾರುವಾಕ್ಕಾಗಿರಬೇಕು ಎನ್ನುವ ಧೋರಣೆಯನ್ನು ಅವರು ಏರಿರುವುದನ್ನು ಗಮನಿಸಬಹುದು. ವ್ಯಕ್ತಿಯ ಅಥವಾ ಸಮುದಾಯದ ಬದುಕಿಗಿಂತ, ಬದುಕಿನ ಭಾವನೆಗಳಿಗಿಂತ ಶುಷ್ಕವಾದ ಕೃತಕವೆನ್ನಿಸುವ ಸೂತ್ರಗಳು ಶೈಕ್ಷಣಿಕ ಬರಹಗಳಲ್ಲಿ ಅಲ್ಲಲ್ಲಿ ವಿಜೃಂಭಿಸುತ್ತವೆ ವಿನಹ ಸಂವೇದನೆಗಳನ್ನಲ್ಲ. ಹೀಗಾಗಿ ಸಮಾಜ ವಿಜ್ಞಾನ ಅದರಲ್ಲಿಯೂ ಚರಿತ್ರ ಬರವಣಿಗೆ ವಿಧಾನ ಕ್ರಮಗಳು ಮೂಗಿಗಿಂತ ಮೂಗುತಿ ಭಾರ ಎನ್ನುವಂತೆ ಶೈಕ್ಷಣಿಕ ಬರಹಗಳಲ್ಲಿ/ಸಂಶೋಧನೆಗಳಲ್ಲಿ ಸಲ್ಲದ ತಡೆಗೋಡೆಗಳಾಗಿ ಬರಹದ ಅಭಿವ್ಯಕ್ತಿಯನ್ನು ಮಿತಿಗೊಳಿಸುತ್ತಿರುವುದನ್ನು ಕಾಣಬಹುದು. ವಿಪರ್ಯಾಸವೆಂದರೆ ಆಧುನಿಕ ಅಥವಾ ಆಧುನಿಕೋತ್ತರ ಜ್ಞಾನಶಾಖೆಗಳಿಂದ ವಿಚಾರಗಳನ್ನು, ವಿವರಗಳನ್ನು ಎರವಲು ಪಡೆಯುತ್ತಾ, ಜ್ಞಾನಕ್ಕೆ ಸಂಬಂಧಿಸಿದ ಮೂಲಭೂತ ಸಂಶೋಧನೆಗಳನ್ನು “ಪಾಶ್ಚಾತ್ಯ ಪ್ರಭಾವದವು” ಎಂದು ನಿಂದಿಸುತ್ತಾ, ಅವರವರ ಭಾವಕ್ಕೆ “ದೇಸೀ ಮಾದರಿ ಸಂಶೋಧನೆ” ಕೈಗೆತ್ತಿಕೊಂಡಿರುವವರ ಸಂಶೋಧನಾ ವಿಧಾನ ಮಾರ್ಗಗಳಿಗೆ ಸಂಚಾರಿ ನಿಯಮಗಳೇ ಇಲ್ಲದೆ, ಅವು ಕೆಲವೊಮ್ಮೆ ಭೂಮಿಯ ಮೇಲೆ, ಮತ್ತೂ ಕೆಲವೊಮ್ಮೆ ಭೂಮಿಯ ಕೆಳಗೆ ಹತ್ತು ಹಲವು ಸಲ ಭೂಮಿ ಆಕಾಶಗಳಲ್ಲೆಲ್ಲಾ ಸ್ವಚ್ಛಂದವಾಗಿ ಸಂಚರಿಸುವುದನ್ನು ಗಮನಿಸಬಹುದು. ಗೊತ್ತು ಗುರಿಗಳಿಲ್ಲದ ಹಾಯಾದ ಸಂಶೋಧನಾ ಮಾರ್ಗವಿದು ಆದ್ದರಿಂದ ಈ ಬಗೆಯ ಸಂಶೋಧನೆಗಳಿಗೆ ಸಮುದಾಯಗಳ ಬದುಕು ಜೀವನಕ್ಕೂ, ಶೈಕ್ಷಣಿಕ ಬರಹಕ್ಕೂ ಅವಿನಾಭಾವ ಸಂಬಂಧಗಳಿರುವುದಿಲ್ಲ. ಚರಿತ್ರೆಯ ಸಂದರ್ಭದಲ್ಲಿ ಹೀಗಾಗಿ ಬರಹ ಬೇರೆ ಮತ್ತು ಅಧ್ಯಯನ ವಿಧಾನ ಬೇರೆ ಎನ್ನುವ ಕಂದಕಗಳು ಸ್ಪಷ್ಟವಾಗಿ ಗೋಚರಿಸುತ್ತದೆ. ಪ್ರಸ್ತುತ ಲೇಖನವು ಈ ಹಿನ್ನೆಲೆಯಲ್ಲಿ ಚರಿತ್ರೆ ಬರವಣಿಗೆ ಹಾಗೂ ಚರಿತ್ರೆ ವಿಧಾನಕ್ರಮಗಳು ಹೊಂದಿರುವ/ಹೊಂದಿರಬಹುದಾದ ಅವಿನಾಭಾವ ಸಂಬಂಧಗಳ ಬಗ್ಗೆ ಚರ್ಚಿಸಲು ಪ್ರಯತ್ನಿಸುತ್ತದೆ.

***

ಚರಿತ್ರೆ, ಬರವಣಿಗೆ ಮತ್ತು ಅಧ್ಯಯನ ಕ್ರಮಕ್ಕೆ ಸಂಬಂಧಿಸಿದ ಬಹುತೇಕ ವಾಗ್ವಾದಗಳಿರುವುದು ಆಧುನಿಕತೆ ಮತ್ತು ಆಧುನಿಕತೆಯ ಬಗೆಗಿನ ವಿಮಶೆಗಳ ನಡುವೆ. ಇಂತಹ ವಿಮರ್ಶೆಗಳ ಬಗ್ಗೆ ಚರ್ಚಿಸುವುದು ಲೇಖನದ ಉದ್ದೇಶವಲ್ಲದಿದ್ದರೂ ಅಂತಹ ವಾಗ್ವಾದಗಳು ಚರಿತ್ರೆ ಬರವಣಿಗೆಯ ಸಂಪ್ರದಾಯವನ್ನು ಆವರಿಸಿಕೊಂಡಿರುವ ಬಗ್ಗೆ ಈ ಲೇಖನವು ಚರ್ಚಿಸಲು ಪ್ರಯತ್ನಿಸುತ್ತದೆ.

ಫ್ರೆಂಚ್ ದಾರ್ಶನಿಕ ಜೀನ್ ಫ್ರಾನ್ಸ್ಟ ಲೀಟಾರ‍್ಡ ಬರೆದ ದಿ ಪೋಸ್ಟ್ ಮಾಡರ್ನ್ ಕಂಡೀಶನ್‌ನಲ್ಲಿ (೧೯೮೪) “ವಿವಿಧ ಕೇಂದ್ರಗಳ ಮರಣ” (Death of Centres) ಮತ್ತು ಮಹಾಕಥನಗಳ ಬಗ್ಗೆ ಇರುವ ಅವಿಶ್ವಾಸಗಳನ್ನು ಕೀತ್ ಜಂಕಿನ್ಸ್ ಅವರು ಉಲ್ಲೇಖಿಸುತ್ತಾರೆ. (೨೦೦೩:೭೧). ಜೆಂಕಿನ್ಸ್ ಇದರ ಪ್ರಕಾರ ಹಳೆಯ ಸಂಘಟಿತ ಚೌಕಟ್ಟುಗಳನ್ನು ಅಂದರೆ ಆಂಗ್ಲ ಕೇಂದ್ರಿತ, ಎತ್ನೋಕೇಂದ್ರಿತ, ಲಿಂಗ ಕೇಂದ್ರಿತ.. ಇತ್ಯಾದಿಗಳನ್ನು ಮೀರುವುದೇ ಪೋಸ್ಟ್ ಮಾಡರ್ನ್ ಚರಿತ್ರೆ ಬರವಣಿಗೆಯ ಮುಖ್ಯ ಉದ್ದೇಶವಾಗಿದೆ. ಸರ್ವಕಾಲಿಕವಾದ ವಿಚಾರಗಳ ಬದಲು ಒಂದು ನಿರ್ದಿಷ್ಟ ಆಸಕ್ತಿಗಳನ್ನು ಪ್ರತಿನಿಧಿಸುವುದು ಈ ಬಗೆಯ ಬರವಣಿಗೆಯ ಸ್ವರೂಪವಾಗಿದೆ. ೧೯ನೆಯ ಶತಮಾನದಲ್ಲಿ ದೇವರು ಮತ್ತು ಸೆಕ್ಯುಲರಿಸಂನ ವಿಚಾರಗಳು ಬದಿಗೆ ಸರಿಸಲ್ಪಟ್ಟ ನಂತರ ೨೦ನೆಯ .ಶತಮಾನದಲ್ಲಿ ಕಾರಣವಾದ (Reason) ಮತ್ತು ವಿಜ್ಞಾನಗಳು ಅನೇಕ ಜಿಜ್ಞಾಸೆಗಳನ್ನು ಪರಿಹರಿಸುವಲ್ಲಿ ಸಹಾಯಕವಾದವು. ಪುನರುಜ್ಜೀವನ ಯುಗದ ಆಶಯಗಳಾದ ಮಾನವ ಪ್ರಗತಿ, ಸುಧಾರಣೆ ಮತ್ತು ವಿಮೋಚನೆಗಳು ಈ ಸಂದರ್ಭದಲ್ಲಿ ಮಹತ್ವದ ವಿಚಾರಗಳಾದವು ಹೀಗಾಗಿ ಮಾನವತವಾದ, ಲಿಬರಲಿಸಂ, ಮಾರ್ಕ್ಸಿಸಂ ಮುಂತಾದ ವಾದಗಳು ಪ್ರಮುಖ ಸ್ಥಾನಗಳನ್ನು ಪಡೆದುಕೊಂಡವು.

ವಿಜ್ಞಾನ ಮತ್ತು ಮಿಥ್‌ಗಳ ನಡುವಿನ ಸಂಬಂಧಗಳುಯುರೋಪಿನ ಸಂದರ್ಭದಲ್ಲಿ ಬೇರ್ಪಟ್ಟಿದ್ದು ೧೭ ಮತ್ತು ೧೮ನೆಯ ಶತಮಾನಗಳಲ್ಲಿ. ಆ ಕಾಲಮಾನದಲ್ಲಿ ಬೇಕನ್, ಡಿಪಾರ್ಟೆ, ನ್ಯೂಟನ್ ಮತ್ತಿತರರು ಹಿಂದಿನ ಪರಂಪರೆಯವರು ವಿಜೃಂಭಿಸುತ್ತಿದ್ದ ಪುರಾಣ ಕಥೆಗಳನ್ನು, ಪೌರಾಣಿಕ ಚಿಂತನೆಗಳನ್ನು ವಿರೋಧಿಸಿ ಅವುಗಳ ಬದಲಿಗೆ ವೈಜ್ಞಾನಿಕತೆಯು ಬಹುಮುಖ್ಯವೆಂದು ಪ್ರತಿಪಾದಿಸಿದರು. ಜಗತ್ತನ್ನು ನೋಡುವ, ಗ್ರಹಿಸುವ, ರುಚಿಸುವ ಹಾಗೂ ಐಹಿಕ ಜಗತ್ತನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದು ಗಣಿತಶಾಸ್ತ್ರೀಯ ಭಾಷೆಯಲ್ಲಿರುವ ವೈಜ್ಞಾನಿಕತೆಯಿಂದ ಎನ್ನುವ ವಾತಾವರಣ ನಿರ್ಮಾಣವಾಯಿತು. (ಲೀವಿ ಸ್ಟ್ರಾಸ್ ೧೯೭೮: ೯-೧೦).

ದೈವತ್ವ, ರಕ್ತ, ಜನಾಂಗ, ವಂಶಪಾರಂಪರ‍್ಯಗಳೇ ಆಧುನಿಕಪೂರ್ವದ ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆಗೆ ಮಾನದಂಡವಾಗಿದ್ದು. ಒಬ್ಬ ಮನುಷ್ಯನ ಹುಟ್ಟೇ ಅಲ್ಲಿ ಪ್ರಧಾನವಾಗಿತ್ತು. ಆ ಕಾರಣಕ್ಕಾಗಿಯೇ “ಅವನು ಆಳುವುದಕ್ಕಾಗಿಯೇ ಹುಟ್ಟಿದ,” ಅಥವಾ “ಅವನು ಸೇವೆ ಮಾಡುವುದಕ್ಕಾಗಿಯೇ ಹುಟ್ಟಿದ” ಎನ್ನುವ ನಂಬಿಕೆ ಹುಟ್ಟಿರುವುದು. ಈ ನಂಬಿಕೆಗಳ ಮೂಲಕ ಸದೃಢವಾಗಿ ಬೆಳೆದು ನ್ಯಾಯ ಸಮ್ಮತ ಮಾಡಿಕೊಂಡ ರಾಜಮಹಾರಾಜರು, ಶ್ರೀಮಂತರು ಮತ್ತು ಪುರೋಹಿತರು ಆಧುನಿಕ ಯುಗದ ಆರಂಭದಲ್ಲಿ ವಾಣಿಜ್ಯ, ಆರ್ಥಿಕ ಮತ್ತು ಕೈಗಾರಿಕಾ ಬೂರ್ಜ್ವಾಗಳ ಹೊಡೆತಗಳಿಂದ ತತ್ತರಿಸಿ ಹೋದರು. ಎಲ್ಲ ಬಗೆಯ ವಸ್ತುಗಳನ್ನು ಉತ್ಪಾದಿಸುವಲ್ಲಿ ಮುಳುಗಿ ಹೋಗಿದ್ದ ಈ ಬೂರ್ಜ್ವಾಗಳು ತಾವೇ ಒಂದು ಹೊಸ ಶಕ್ತಿಯಾಗಿ ಬೆಳೆದು ನಿಂತರು. ಪರಿಣಾಮವಾಗಿ “ಕೇವಲ ಹುಟ್ಟಿನ ಮೂಲಕ ಒಬ್ಬ ಸದ್ಗುಣವನ್ನು ಪಡೆಯುವುದಿಲ್ಲ; ಬದಲಿಗೆ ಶ್ರಮಪಟ್ಟು ದುಡಿಯುವ ಮೂಲಕ” ಎನ್ನುವ ಹೊಸ ನಂಬಿಕೆ ಪ್ರಭಾವಶಾಲಿಯಾಯಿತು. ಒಬ್ಬನಿಗೆ ಯೋಗ್ಯತೆ ಬರುವುದಲ್ಲ; ಅದನ್ನು ಪಡೆಯುವುದು ಎನ್ನುವ ವಿಚಾರ ಪ್ರಧಾನವಾಯಿತು. ಕಷ್ಟಪಟ್ಟು ದುಡಿಯುವ ಈ ಬೂರ್ಜ್ವಾವರ್ಗ ಬಂಡವಾಳಶಾಹಿ ಕೇಂದ್ರಿತ ಉತ್ಪನ್ನಗಳನ್ನು ತಯಾರಿಸುವ ವ್ಯವಸ್ಥೆಯಲ್ಲಿ ಪ್ರಬಲರಾದರು. ಸಾಂಪ್ರದಾಯಿಕ ಶಕ್ತಿಗಳಿಗೆ ಈ ಮೂಲಕ ಅವರು ಸಡ್ಡು ಹೊಡೆದರು.

ಕೆಲವೇ ವರ್ಷಗಳಲ್ಲಿ ಬಡತನ ರೇಖೆಗೆ ಹೆಚ್ಚು ಕಡಿಮೆ ಹತ್ತಿರವಿದ್ದ ದುಡಿಯುವ ವರ್ಗದವರು ಈವರೆಗೆ ಪ್ರಭಾವಶಾಲಿಗಳಾಗಿದ್ದ ಬೂರ್ಜ್ವಾ ವರ್ಗಗಳ ಸ್ಥಾನವನ್ನು ಆಕ್ರಮಿಸುತ್ತಾರೆ. ಈ ದುಡಿಯುವ ವರ್ಗಗಳು ಬೂರ್ಜ್ವಾಗಳನ್ನೇ ವಿರೋಧಿಸತೊಡಗಿದ್ದು ವಿಶೇಷ. ಇಲ್ಲಿ ದುಡಿಯುವವರ ದೃಷ್ಠಿಕೋನ ಪ್ರಬಲವಾಗಿದ್ದನ್ನು ಗುರುತಿಸಬಹುದಾಗಿದೆ. ಮಾರ್ಕ್ಸ್‌ನ ಮೂಲಕ ಈ ವರ್ಗವನ್ನು ತತ್ವಶಾಸ್ತ್ರೀಯವಾಗಿ ಹಾಗೂ ಚಾರಿತ್ರಿಕವಾಗಿ ಅರ್ಥಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಾದವು. ಹೀಗಾಗಿ, ಬೂರ್ಜ್ವಾಗಳು “ಗಳಿಸಿದ್ದ” “ಖಾಸಗಿ ಸ್ವತ್ತನ್ನು” “ದುಡಿಯುವ ವರ್ಗಗಳಿಗೆ” ಹಂಚುವ ಕೈಂಕರ‍್ಯವನ್ನು ಬಿಟ್ಟು, ಖಾಸಗಿ ಸ್ವತ್ತನ್ನೇ ಇಲ್ಲದ ಹಾಗೆ ಮಾಡಬೇಕು; ಆಗ ಮಾತ್ರ ಉಳ್ಳವರು ಮತ್ತು ಇಲ್ಲದವರಿಗೆ ನ್ಯಾಯ ಸಿಗುತ್ತದೆ ಎನ್ನುವ ಸಿದ್ಧಾಂತ ಅತಿ ಮುಖ್ಯವಾಯಿತು. ಮುಂದಿನ ದಿನಗಳಲ್ಲಿ ಎಲ್ಲ ಮನುಷ್ಯರಿಗೆ ಸ್ವಾತಂತ್ರ್ಯ ಸಿಕ್ಕ ಎಲ್ಲ ಕಡೆ ಕಮ್ಯುನಿಸಂ ಹರಡಬೇಕು ಎನ್ನುವ ಉದ್ದೇಶ ದಿನದಿಂದ ದಿನಕ್ಕೆ ಪ್ರಬಲವಾಗತೊಡಗಿತು.

೧೯೧೭ ರಲ್ಲಿ ಉದಯಿಸಿದ ಜಗತ್ತಿನ ಮೊತ್ತ ಮೊದಲ ಕಮ್ಯುನಿಸ್ಟ್ ಎಕ್ಸ್‌ಪರಿಮೆಂಟ್‌ನಲ್ಲಿ “ಜಗತ್ತಿನ ಕಾರ್ಮಿಕರೆಲ್ಲ ಒಂದಾಗಿ” ಎನ್ನುವ ಜಾಗತಿಕ ಮಹತ್ವಾಕಾಂಕ್ಷೆಯಿತ್ತು. ಆದರೆ ಯಾವಾಗ ಕಮ್ಯುನಿಸ್ಟ್ ಸರ್ಕಾರಗಳು ರಾಷ್ಟ್ರೀಯತೆಯ ಪ್ರಶ್ನೆಗಳನ್ನು ಕೈಗೆತ್ತಿಕೊಂಡರೋ ಆಗ ಮಾರ್ಕ್ಸಿಸಂನ ಸಾರ್ವತ್ರೀಕರಣದ ಆಶಯಗಳು ನೆಲಕಚ್ಚಿದವು. ಅದರೊಂದಿಗೆ ಮಾರ್ಕ್ಸಿಸ್ಟ್ ರಾಜಕಾರಣವು ಸ್ಥಳೀಯವಾದವು ಎಂದು ಕೀತ್ ಜೆಂಕಿನ್ಸ್ ಅವರು ವಿಶ್ಲೇಷಿಸಿದ್ದನ್ನು ಗಮನಿಸಬಹುದು. ಮಾರ್ಕ್ಸಿಸ್ಟ್ ವ್ಯವಸ್ಥೆಯು ಸರ್ವಾಧಿಕಾರಿ ಧೋರಣೆಗೆ ಪೂರಕವಾಗುತ್ತ ಹೋದಾಗಲೆಲ್ಲ ಅದು ಬಯಸಿದ್ದ/ಬಯಸುವ “ವಿಮೋಚನಾ” ಸಿದ್ಧಾಂತಗಳು ಬಲಹೀನಗೊಂಡವು/ಬಲಹೀನಗೊಳ್ಳುತ್ತವೆ. ಹೀಗಾಗಿ ಪ್ರಚಲಿತದಲ್ಲಿದ್ದ ಸಮಾಜವಾದವು ತನ್ನನ್ನು ತಾನೇ ನಿರ್ವಚನಕ್ಕೆ ಒಳಪಟ್ಟು/ಒಳಪಡಿಸುತ್ತಾ ದುಡಿಯುವವರ ಬಗ್ಗೆ ಒಂದು ಕಾಲದಲ್ಲಿ ಕಂಡಿದ್ದ ಸ್ವಪ್ನಗಳಿಂದ ದೂರವಾಗುತ್ತಿದೆ (ಜೆಂಕಿನ್ಸ್ ೨೦೦೩:೭೨-೭೪).

ಗ್ರಾಂಸಿ ಪ್ರೇರಿತ ತಳವರ್ಗಗಳ ಅಧ್ಯಯನವನ್ನು ದಕ್ಷಿಣ ಏಷ್ಯಾದಲ್ಲಿ ಕೈಗೊಂಡ ಸಬಾಲ್ಟರ್ನ್ ಚರಿತ್ರೆಕಾರರು ಮಾರ್ಕ್ಸಿಸ್ಟ್ ಪ್ರೇರಿತ ಸಿದ್ಧಾಂತಗಳಿಂದ ಆಕರ್ಷಿತರಾಗಿ, ಅದರ ಅಧ್ಯಯನದ ಕ್ರಮದ ಬಗ್ಗೆನೇ ನಂತರದ ದಿನಗಳಲ್ಲಿ ತೀವ್ರವಾದ ಆಕ್ಷೇಪವನ್ನು ಎತ್ತಿದರು. ಪ್ರಚಲಿತದಲ್ಲಿದ್ದ ಎಲ್ಲ ಬಗೆಯ ಅಧ್ಯಯನ ಕ್ರಮಗಳ ಬಗ್ಗೆ ಕೂಡ ಅವರು ಆಕ್ಷೇಪಗಳನ್ನೆತ್ತಿ ಅವುಗಳನ್ನು ಎಲೈಟ್ ಚರಿತ್ರೆಗಳೆಂದು ವಿಮರ್ಶಿಸಿದರು. ಇವರನ್ನು ಪೋಸ್ಟ್ ಮಾರ್ಕ್ಸಿಸ್ಟ್ ಎಂದು ಗುರುತಿಸುವುದುಂಟು. ಯುರೋಪ್ ಕೇಂದ್ರಿತ ಅಧ್ಯಯನ ಕ್ರಮವನ್ನು ಹಾಗೂ ಎಲ್ಲ ಬಗೆಯ ಸಾರ್ವತ್ರೀಕರಣವನ್ನು ಪ್ರಬಲವಾಗಿ ವಿರೋಧಿಸಿ ಸ್ಥಳೀಯ/ಪ್ರಾದೇಶಿಕ ಶಕ್ತಿಗಳ ಸ್ವಾಯತ್ತತೆಯನ್ನು ಕಂಡುಕೊಂಡ ಸಬಾಲ್ಟರ್ನ್ ಚರಿತ್ರೆಕಾರರು “ಜನರ ಚರಿತ್ರೆ”ಯನ್ನು ತಳದಿಂದ ಬರೆಯಲು ಪ್ರಯತ್ನಿಸುತ್ತಿದ್ದಾರೆ (ತಂಬಂಡ ೨೦೧೦).

ಮಾರ್ಕ್ಸಿಸಂನ ಮುಂದುವರೆದ ಅಥವಾ ಮಾರ್ಪಡಿತವಾದ ಎಂಬ ಅಂಶವನ್ನು ಬಹುತೇಕ ಆಧುನಿಕ ಚರಿತ್ರೆಕಾರರು ಎತ್ತಿ ಹಿಡಿದಿದ್ದಾರೆ. ಮೂಲತಃ ಮಾರ್ಕ್ಸಿಸ್ಟ್ ಚರಿತ್ರೆಕಾರರಾದ ಸುಮಿತ್ ಸರ್ಕಾರ್ ಅವರು ರಣಜಿತ್ ಗುಹಾ ಅವರ ಸಬಾಲ್ಟರ್ನ್ ಯೋಜನೆಯಲ್ಲಿ ತೊಡಗಿಸಿಕೊಂಡು ಆ ನಂತರ ಸಬಾಲ್ಟರ್ನ್ ಚರಿತ್ರೆಯ ವೈಧಾನಿಕತೆ, ವಿಧಾನಕ್ರಮ ಇತ್ಯಾದಿಗಳ ಬಗ್ಗೆ ಕಟು ವಿಮರ್ಶೆ ಮಾಡಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ. ಆದರೆ ಖ್ಯಾತ ಸಬಾಲ್ಟರ್ನ್ ಚರಿತ್ರೆಕಾರ ದೀಪೇಶ ಚಕ್ರವರ್ತಿ ಇದನ್ನು ನಿರಾಕರಿಸುತ್ತಾ, ಸಬಾಲ್ಟರ್ನ್ ಚರಿತ್ರೆಗೆ ಮತ್ತು ಮಾರ್ಕ್ಸಿಸ್ಟರ ಚರಿತ್ರೆಗೆ ಅವಿನಾಭಾವ ಸಂಬಂಧವಿಲ್ಲ ಎಂದಿದ್ದಾರೆ (ಚಕ್ರವರ್ತಿ ೨೦೦೬:೧-೧೯). ಆರಂಭಿಕ ಸಬಾಲ್ಟರ್ನ್ ಚರಿತ್ರೆಕಾರರು ಮಾರ್ಕ್ಸಿಸ್ಟ್ ಪರಂಪರೆಯನ್ನು ಮುಂದುವರಿಸಿ ಕೊಂಡು ಅಥವಾ ಅಲ್ಲಲ್ಲಿ ಮಾರ್ಪಡಿಸಿಕೊಂಡು ಹೋದದ್ದು ಒಂದು ಘಟ್ಟವಾದರೆ, ಮಾರ್ಕ್ಸಿಸ್ಟ್ ವಿಧಾನ ಕ್ರಮವನ್ನೇ ಅಥವಾ ಚರಿತ್ರೆ ಬರವಣಿಗೆ ಕ್ರಮವನ್ನೇ ಕಟು ವಿಮರ್ಶೆಗೆ ಒಡ್ಡಿದ್ದು ಇನ್ನೊಂದು ಘಟ್ಟವಾಗಿದೆ. ಈ ಎಲ್ಲ ಸಂದರ್ಭದಲ್ಲಿ ಬಳಸಿದ ಚರಿತ್ರೆ ವಿಧಾನ ಕ್ರಮಗಳು ಭಿನ್ನ ಭಿನ್ನವಾಗಿರುವುದನ್ನು ಕಾಣಬಹುದಾಗಿದೆ. ಸಬಾಲ್ಟರ್ನ್ ಪಂಥದ ಮಾರ್ಕ್ಸಿಸ್ಟ್ ಪರಂಪರೆಯವರು ವಸಾಹತುಕಾಲದ ಪತ್ರಗಾರ ದಾಖಲೆಗಳನ್ನು ಕೇಂದ್ರಬಿಂದುವಾಗಿ ತೆಗೆದುಕೊಂಡು ಉಳಿದ ಅಸಂಪ್ರದಾಯಿಕ ಆಕರಗಳನ್ನು ಬಳಸಿದ್ದು ಕಂಡುಬರುತ್ತದೆ. ಇದೊಂದು ಸ್ವಾಯತ್ತ ಚರಿತ್ರೆ ಬರವಣಿಗೆ ಕ್ರಮ ಎಂದು ಅವರು ವಾದಿಸಿದ್ದಾರೆ. ಆಧುನಿಕೋತ್ತರ ಚಿಂತನಗಳಿಂದ ತೀವ್ರವಾಗಿ ಪ್ರಭಾವಕ್ಕೊಳಗಾದ ಸಬಾಲ್ಟರ್ನ್ ಚರಿತ್ರೆಕಾರರು ತಮ್ಮ ಅಧ್ಯಯನ ವಿಧಾನದಲ್ಲಿ ಅಂತರ್‌ಶಿಸ್ತೀಯ/ಬಹು ಶಿಸ್ತೀಯ ಅಂಶಗಳನ್ನು (ಮಾರ್ಕ್ಸಿಸ್ಟ್ ಚರಿತ್ರೆಕಾರರು ಅಲ್ಲಲ್ಲಿ ಇದನ್ನು ಗಮನಿಸಿದ್ದಾರೆ) ಹಾಗೂ ಬಹಳ ಮುಖ್ಯವಾಗಿ ಜನಪದ ಆಕರಗಳನ್ನು, ಮೌಖಿಕ ಆಕರಗಳನ್ನು, ನಂಬಿಕೆಗಳನ್ನು, ಭಾವನೆಗಳನ್ನು ಪ್ರಮುಖವಾಗಿ ಬಳಸಿಕೊಂಡದ್ದನ್ನು ನೋಡಬಹುದಾಗಿದೆ.

ಸಬಾಲ್ಟರ್ನ್ ಪಂಥದ ಪಾರ್ಥ ಚಟರ್ಜಿ ಅವರು ಜನರ ಚರಿತ್ರೆಯನ್ನು “ವರ್ಗಗಳ” ಬದಲು “ಸಂವೇದನೆಗಳ” ಮೂಲಕ ಅಭ್ಯಸಿಸಲೇಬೇಕೆಂದು ಆಗ್ರಹಿಸಿದ್ದನ್ನು ನೋಡಬಹುದು. ವಸ್ತುಸ್ಥಿತಿ ಹೀಗಿರುವಾಗ, ಚರಿತ್ರೆ ಬರವಣಿಗೆಯ ವಿಧಾನ ಎನ್ನುವುದು ಪ್ರತ್ಯೇಕ ಯೂನಿಟ್ ಎನ್ನುವ ರೀತಿಯಲ್ಲಿ ಬಿಂಬಿಸುವುದು ಅಭಾಸವಾಗುತ್ತದೆ. ಕಾರಣತಾವಾದ, ವಸ್ತುನಿಷ್ಠವಾದ, ಆಂತರಿಕವಿಮರ್ಶೆ, ಬಾಹ್ಯ ವಿಮರ್ಶೆ ಇತ್ಯಾದಿಗಳೆಲ್ಲ ಅನುಷ್ಠಾನಕ್ಕೆ ಬರುವುದು ಅಂತಿಮವಾಗಿ ಚರಿತ್ರೆಕಾರರು ತೆಗೆದುಕೊಳ್ಳುವ ಸೈದ್ಧಾಂತಿಕ ನಿಲುವಿನಿಂದ ಪ್ರೇರಿತವಾಗಿರುತ್ತದೆ ಎಂಬುದು ಇಲ್ಲಿ ಮುಖ್ಯ ಸಂಗತಿಯಾಗಿದೆ.

* * *

ಭಾರತದ ಚರಿತ್ರೆಯನ್ನು ‘ಕಾಲದ’ ಮೂಲಕ ವಿವರಿಸಲು ಯತ್ನಿಸಿದ ರೊಮಿಲಾ ಥಾಪರ್ ಅವರ “ಟೈಮ್ ಆಸ್ ಎ ಮೆಟಾಫರ್ ಆಫ್ ಹಿಸ್ಟರಿ: ಅರ‍್ಲಿ ಇಂಡಿಯಾ” (೧೯೯೭) ಎನ್ನುವ ಕೃತಿಯಲ್ಲಿ ಈಗ ಚಾಲ್ತಿಯಲ್ಲಿರುವ ಚರಿತ್ರೆ ಬರವಣಿಗೆ ಕ್ರಮದ ಅಧ್ಯಯನ ವಿಧಾನವನ್ನೇ ಪ್ರಶ್ನಿಸಿರುವುದು ಕಂಡುಬರುತ್ತದೆ. ಚರಿತ್ರೆಯನ್ನು ಘಟನೆಗಳಲ್ಲಿ ನಿರೂಪಿಸುವಾಗ ಕಾಲಮಾನವನ್ನು ಮೌಲ್ಯಮಾಪನವನ್ನಾಗಿ ಬಳಸುತ್ತೇವೆ. ಭಾರತೀಯ ಚರಿತ್ರೆಯನ್ನು ನಿರೂಪಿಸುವ ಸಂದರ್ಭದಲ್ಲಿ ಪ್ರವರ್ಧಮಾನದಲ್ಲಿರುವ ಕಾಲಮಾನದ ಮಾಪನವನ್ನಾಗಿ ಪಾಶ್ಚಾತ್ಯರಲ್ಲಿ ಬಹುತೇಕವಾಗಿ ಪರಿಗಣಿಸಿದ “ಸರಳರೇಖಾತ್ಮಕ ಕಾಲಮಾನದ” (ಲೀನಿಯರ್) ಕ್ರಮವನ್ನು ಅನುಸರಿಸುತ್ತಿದ್ದೇವೆ. ಭಾರತ ಉಪಖಂಡದ ಭೂಭಾಗಗಳು ವಸಾಹತುಶಾಹಿ ಆಡಳಿತದ ಪರಿಧಿಗೆ ಒಳಪಟ್ಟಿದ್ದು ಇದಕ್ಕೆ ಕಾರಣವೆಂದರೆ ಕಾಕತಾಳೀಯವೆನಲ್ಲ. ಭಾರತದ ಲಿಖಿತ ಪರಂಪರೆಯಲ್ಲಿ ಈ ಬಗೆಯ ಕುರುಹುಗಳು ಅಲ್ಬೆರೊನಿ ಮತ್ತಿತರ ವಿದ್ವಾಂಸರಲ್ಲಿ ಕಂಡುಬಂದಿದ್ದರೂ, ಅವು ಬಹಳ ಜನಪ್ರಿಯ ವಿಧಾನಗಳೇನೂ ಆಗಿರಲಿಲ್ಲ. ಯುರೋಪಿಯನ್ ಚಿಂತನೆಯ ಕೇಂದ್ರವಾದ ಗ್ರೀಕೋ-ರೋಮನ್ ಜಗತ್ತು “ಭಾರತೀಯ ನಾಗರೀಕತೆಯ” ಒಳಗಡೆ ಕಾಣಸಿಗದ್ದರಿಂದ ೧೮ನೆಯ ಶತಮಾನದ ಓರಿಯಂಟಿಲಿಸ್ಟರು “ಭಾರತೀಯ ಪಠ್ಯಗಳ” ಬಗ್ಗೆ ಮಾತನಾಡುವ ಸಂದರ್ಭದಲ್ಲೆಲ್ಲಾ ಬೈಬಲಿನ ಮತ್ತು ಯುರೋಪಿನ ಸಾಂಪ್ರದಾಯಿಕ ಅಂಶಗಳನ್ನು ತುಲನಾತ್ಮಕವಾಗಿ, ಆದರೆ ಅಯಶಸ್ವಿಯಾಗಿ ಮಂಡಿಸಿದರು. ಮೇಲಿಂದ ಮೇಲೆ ಅವರೆಲ್ಲರೂ ಈ ರೀತಿಯಾಗಿ ತಮ್ಮ ಸಿದ್ಧಾಂತಗಳನ್ನು ಮಂಡಿಸುತ್ತಾ, ಭಾರತೀಯರಲ್ಲಿ “ಪಾಶ್ಚಾತ್ಯರಂತೆ” “ಇತಿಹಾಸ ಪ್ರಜ್ಞೆ” ಮತ್ತು “ಸರಳರೇಖಾತ್ಮಕ ನೆಲೆಯಲ್ಲಿ ಕಂಡುಕೊಂಡ ಕಾಲದ” ಹಿನ್ನೆಲೆ ಇಲ್ಲದಿರುವುದನ್ನು ಎತ್ತಿ ತೋರಿಸಲು ಪ್ರಯತ್ನಿಸಿದರು. ೧೮ನೆಯ ಶತಮಾನದ ಅಂತ್ಯ ಭಾಗದಲ್ಲಿ ಪ್ರವರ್ಧಮಾನಕ್ಕೆ ಬಂದ ಸಿದ್ಧಾಂತವು ಭಾರತೀಯರ ‘ಕಾಲ’ ಜ್ಞಾನಕ್ಕೆ ಸಂಬಂಧಿಸಿದಂತೆ ವಿಮರ್ಶಿಸಿತು. ಭಾರತೀಯರ ಕಾಲದ ಅನುಭವವು ಚಕ್ರದೋಪಾದಿಯಾಗಿದ್ದು (ಸೈಕ್ಲಿಕ್), ಅವು ಚಕ್ರದಂತೆ ನಿರಂತರವಾಗಿ ತಿರುಗುತ್ತಿರುತ್ತವೆ. ಅದನ್ನು ಕಾಲಚಕ್ರ ಎನ್ನುವ ವಾಡಿಕೆ ಭಾರತೀಯರಲ್ಲಿದೆ. ಅದಕ್ಕೆ ಕೊನೆಯೇ ಇಲ್ಲ. ಹೀಗಾಗಿ ಅದರ ಮೂಲಕ “ಚಾರಿತ್ರಿಕ ಬದಲಾವಣೆಯನ್ನು” ನೋಡುವುದು ಕಷ್ಟ. ಚರಿತ್ರೆಯ ‘ಪ್ರಜ್ಞೆ’ ಭಾರತೀಯರಿಗಿಲ್ಲದ ಕಾರಣ ಅವರಿಗೆ ಮಿಥ್‌ಗಳು ಮತ್ತು ಚರಿತ್ರೆಯ ನಡುವಿನ ವ್ಯತ್ಯಾಸಗಳಿರುವುದಿಲ್ಲ ಎನ್ನುವುದು ಓರಿಯಂಟಲಿಸ್ಟರ ನಿಲುವು. ೧೮೩೦ರ ದಶಕದಲ್ಲಿ ಜೇಮ್ಸ್‌ಮಿಲ್ ಅವನ ಸಮಕಾಲೀನರಂತೆ ತಾನೂ ಈ ಬಗೆಯ ಅಭಿಪ್ರಾಯವನ್ನು ಹೊಂದಿದ್ದನು.

ಸರಳರೇಖಾತ್ಮಕ ಕಾಲಮಾನ (ಲೀನಿಯರ್) ಮಾದರಿಗಿಂತ ವಿರುದ್ಧವಾದ ದಿಕ್ಕಿನಲ್ಲಿ ಚಕ್ರದೋಪಾದಿಯಾದ ಕಾಲಮಾನದ ಮಾದರಿಯು ಇರುತ್ತದೆ. ಲೀನಿಯರ್ ಕಾಲಮಾನವು ಬದಲಾವಣೆಗಳನ್ನು ಗುರುತಿಸುತ್ತದೆ. ಹೀಗಾಗಿ ೧೯ನೆಯ ಶತಮಾನದ ಆದಿಯಲ್ಲಿ ಬ್ರಿಟಿಶ್ ವಿದ್ವಾಂಸರು ಭಾರತೀಯರ ಕಾಲಮಾನವು ಚಕ್ರದೋಪಾದಿಯಾಗಿರುವುದರಿಂದ ಅದು ಚಾರಿತ್ರಿಕ ಬದಲಾವಣೆಗಳನ್ನು ಗುರುತಿಸುವುದಿಲ್ಲ. ಹೀಗಾಗಿ ಚಕ್ರದೋಪಾದಿಯಾದ ಕಾಲಕ್ರಮವು ಪ್ರಿಮಿಟಿವ್/ಗತಕಾಲಕ್ಕೆ ಸಂಬಂಧಪಟ್ಟವು ಎಂದು ಹೀಗಳೆಯುತ್ತಾರೆ. ಈ ಮೂಲಕ ಭಾರತೀಯರು ತಮ್ಮ ಗತವನ್ನು ಮತ್ತು ವರ್ತಮಾನವನ್ನು ಗ್ರಹಿಸುತ್ತಿದ್ದ ಕಾಲಚಕ್ರವು ವಸಾಹತುಶಾಹಿ ಆಳರಸರ ಮತ್ತು ಅವರ ವಿದ್ವಾಂಸರ ಅವಜ್ಞೆಗೆ ಗುರಿಯಾಯಿತು. ನಂತರ ತೀರಾ ಇತ್ತೀಚಿನವರೆಗೂ ಬ್ರಿಟಿಶ್ ಆಳರಸರ ಈ ಬಗೆಯ ಚಿಂತನೆಗಳು ಕಾಲಕ್ರಮೇಣದಲ್ಲಿ ಭಾರತೀಯವಾಗಿಬಿಟ್ಟಿತು.

ಜೇಮ್ಸ್ ಮಿಲ್ ಅಭಿಪ್ರಾಯಿಸಿದ ಸುಮಾರು ಇನ್ನೂರು ವರ್ಷಗಳ ನಂತರ ಅಂದರೆ ೧೯೫೯ ರಲ್ಲಿ ಧಾರ್ಮಿಕ ಇತಿಹಾಸಕಾರರ ಮಿರ್ಸಿಯಾ ಎಲಿಡಾ ಅವರು ಭಾರತೀಯ ಕಾಲಮಾನಕ್ಕೆ ಸಂಬಂಧಿಸಿದ ವಿವರಗಳನ್ನು ಪುನರ್ ವಿಮರ್ಶಿಸಿದರು. ಲೀನಿಯರ್ ಕಾಲಮಾನ ಕ್ರಮವು “ಡಯಲೆಕ್ಟಿಕಲ್ ಬದಲಾವಣೆಗಳನ್ನು” ಅಂತರ್ಗತ ಮಾಡಿಕೊಂಡಿದೆ. ಲೀನಿಯರ್ ಕಾಲಮಾನವು ಆಡಂ ಮತ್ತು ಈವ್… ಯಹೂದಿ ಪ್ರವಾದಿಗಳಿಂದ ಕ್ರಿಸ್ತನವರೆಗಿನ ಮತ್ತು ಕೊನೆಗೆ, ಸತ್ತವರ ಆತ್ಮಗಳು ಒಂದೋ ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವ ದಿನವಾದ “ಜಡ್ಜ್‌ಮೆಂಟ್ ಡೇ” ಯವರೆಗಿನ ವಿದ್ಯಮಾನಗಳನ್ನು ಒಳಗೊಂಡಿದೆ. ಇಲ್ಲಿ ಕಾಲಮಾನವು ನೇರವಾಗಿ, ಸರಳರೇಖಾತ್ಮಕವಾಗಿ ಹಾಗೂ “ಪ್ರಗತಿಶೀಲವಾಗಿರುವುದನ್ನು” (ಪ್ರೋಗ್ರೆಸೀವ್) ನೋಡಬಹುದು. ಇಲ್ಲಿ ಕಾಲದ ಉಗಮ ಮತ್ತು ಅಂತ್ಯಗಳೆರಡೂ ಸ್ಪಷ್ಟವಾಗಿರುವುದನ್ನು ಒಂದು ಕಡೆ ಗಮನಿಸಬಹುದಾದರೆ, ಇನ್ನೊಂದೆಡೆಯಲ್ಲಿ ಭಾರತೀಯ ಆಕರಗಳು ಈ ಬಗೆಯ ಉಗಮ ಮತ್ತು ಅಂತ್ಯಗಳೆರಡಕ್ಕೆ ಸಂವಾದಿಯಾಗದಿರುವುದನ್ನು ನಾವು ಗಮನಿಸಬಹುದು. ಹೀಗಾಗಿ ಕಾಲಮಾನದ ಉಗಮ ಮತ್ತು ಅಂತ್ಯಗಳೆರಡನ್ನು ಸೂಚಿಸುವ ಲೀನಿಯರ್ ಕಾಲಮಾನವು ಕ್ರಿಶ್ಚಿಯನ್ ಮತ್ತು ಇಸ್ಲಾಂ ಸಂಪ್ರದಾಯಗಳಲ್ಲಿ ಪ್ರಚಲಿತದಲ್ಲಿದೆ. ಇದರೊಂದಿಗೆ, ೧೯ನೆಯ ಶತಮಾನದಲ್ಲಿ “ಬದಲಾವಣೆಗಳು ಪ್ರಗತಿಪರವಾಗಿರುತ್ತವೆ” ಎಂಬ ರೀತಿಯಲ್ಲಿ ನಿರ್ವಚಿಸಲ್ಪಟ್ಟ ನಂಬಿಕೆಗಳನ್ನು ಲೀನಿಯರ್ ಕಾಲಕ್ರಮವು ಚರಿತ್ರೆ ಬರವಣಿಗೆಯಲ್ಲಿ ಅಂತರ್ಗತಗೊಳಿಸಿತು. ಮಿರ್ಸಿಯಾ ಎಲಿಡಾ ಅವರು ಭಾರತೀಯ ಕಾಲಮಾನದ ಮೂಲವಾದ ಚಕ್ರಾಧಾರಿತ ಕಾಲಮಾನ ಕ್ರಮದ ಕೆಲವೊಂದು ವಿಶಿಷ್ಟವಾದ ಅಂಶಗಳನ್ನು ಗುರುತಿಸಿದ್ದಾರೆ. ಅನಂತಾನಂತವಾದ ಚಕ್ರಾಧಾರಿತ ಕಾಲಮಾನವು ಆಗಿಂದಾಗ್ಗೆ ಪುನರಾವರ್ತಿತವಾಗುತ್ತದೆ. ಅಲ್ಲಿ ಮನುಷ್ಯರ ಕ್ರಿಯೆಗಳು ಅನಂತಾನಂತವಾದ ಕಾಲದ ಪ್ರಕ್ರಿಯೆಯ ಸಂದರ್ಭದಲ್ಲಿ ನಗಣ್ಯವಾಗಿರುವುದನ್ನು ಅವರು ವಿಶ್ಲೇಷಿಸಿದ್ದಾರೆ. ಆರಂಭ ಮತ್ತು ಅಂತ್ಯಗಳಿಲ್ಲದ ಚಕ್ರಾಧಾರಿತ ಕಾಲಮಾನವು ಎಲ್ಲೂ ಸ್ಥಗಿತಗೊಳ್ಳದೆ ಸದಾಕಾಲ ಮುಂದುವರಿಯುತ್ತಲೇ ಇರುತ್ತವೆ. ಇದಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಹೀಗಾಗಿ ಇದು “ಚರಿತ್ರೆಯನ್ನು” ನಿರಾಕರಿಸುತ್ತದೆ. ಭಾರತೀಯ ಕಾಲಚಕ್ರದಲ್ಲಿ ಯಾವುದೂ ಶಾಶ್ವತವಾಗಿರುವುದಿಲ್ಲ; ಯಾವುದೇ ಘಟನೆಗಳು ಯೂನಿಕ್ ಆಗಿರುವುದಿಲ್ಲ. ಬಹುತೇಕ ಘಟನೆಗಳು ಮುಂದಿನ ಕಾಲಚಕ್ರದಲ್ಲಿ ಪುನರಾವರ್ತಿತವಾಗುತ್ತವೆ. ‘ಕಾಲಕ್ಕೆ’ ಎರಡು ಅರ್ಥಗಳಿವೆ. ‘ಲೆಕ್ಕ ಮಾಡು’ ಎನ್ನುವುದು ಅದಕ್ಕಿರುವ ಒಂದರ್ಥವಾದರೆ ‘ದಮನ ಮಾಡು’ ಎನ್ನುವುದು ಇದರ ಇನ್ನೊಂದು ಅರ್ಥ. ಎರಡನೆಯ ಅರ್ಥವನ್ನೇ ವ್ಯಾಖ್ಯಾನಿಸಿದರೆ ಅದು ಜಗತ್ತಿನ ಕೊನೆಯನ್ನು ನೋಡುವ ಜಡ್ಜ್‌ಮೆಂಟ್ ಡೇ ಅಂತಹ ಧರ್ಮಶಾಸ್ತ್ರವನ್ನು ನೆಗೆಟೀವ್ ಆಗಿ ನೋಡಿದಂತೆ. ಇದೇ ವಾದವನ್ನು ಮುಂದುವರಿಸುವುದಾದರೆ ಕಾಲಚಕ್ರವು ಪವಿತ್ರತೆಯಿಂದ ಕೂಡಿದೆ ಎಂದು ಭಾರತೀಯರು ಭಾವಿಸುತ್ತಾರೆ. ಅಂತಹ ಪವಿತ್ರತೆಗೆ ಸಂಬಂಧಪಟ್ಟಿಲ್ಲದಿರುವುದು ಲೀನಿಯರ್ ಕ್ರಮವಾಗಿದೆ.

ಸದ್ಯಕ್ಕೆ ಎಲ್ಲೆಡೆ ಚಾಲ್ತಿಯಲ್ಲಿರುವ ಲೀನಿಯರ್ ಕಾಲಕ್ಕೆ ಆದಿ ಇದೆ ಹಾಗೂ ಅಂತ್ಯ ಇದೆ. ಇಲ್ಲಿ ಪುನರಾವರ್ತನಕ್ಕೆ ಅವಕಾಶವಿಲ್ಲ. ಹೀಗಾಗಿ ಚರಿತ್ರೆ ಕೂಡ ಪುನರಾವರ್ತನದಿಂದ ಮುಕ್ತವಾಗಿದೆ. ಇಲ್ಲಿ ಕಾಲವು ಮತ್ತೊಮ್ಮೆ ಪುನರಾವರ್ತನವಾಗುವುದಿಲ್ಲ. ಇದು ಚರಿತ್ರೆಯನ್ನು ಮಿಥ್‌ಗಳಿಂದ ಪ್ರತ್ಯೇಕಿಸುತ್ತದೆ. ಕಾಲದೊಡನೆ ಬೆಸೆದಿರುವ “ಪ್ರಗತಿಯನ್ನು” ಇಲ್ಲಿ ಕಾಣಬಹುದು. ಇದು ಭಾರತೀಯ ಕಾಲಚಕ್ರದಲ್ಲಿ ಕಂಡುಬರುವುದಿಲ್ಲ. ೧೯೮೦ರ ದಶಕದ ಅನೇಕ ಧಾರ್ಮಿಕ ಚರಿತ್ರೆಕಾರರು, ಮಾನವಶಾಸ್ತ್ರಜ್ಞರು ಮತ್ತು ವಿಮರ್ಶಕರು ಕಾಲಚಕ್ರದ ಬಗೆಗಿನ ಈ ಬಗೆಯ ಅಭಿಪ್ರಾಯಗಳನ್ನು ಸಮ್ಮತಿಸಿದ್ದಾರೆ. ರೊಮಿಲಾ ಥಾಪರ್ ಅವರು ಈ ಬಗೆಯ ಅಭಿಪ್ರಾಯಗಳು ಭಾರತದ ರಾಜಕೀಯ ಮತ್ತು ಧರ್ಮಕ್ಕೆ ಸಂಬಂಧಿಸಿದ ಪ್ರಾಚೀನ ಚರಿತ್ರೆಯನ್ನು ಹೊಸ ರೀತಿಯಲ್ಲಿ ರಚಿಸಲು ಸಹಾಯವಾಗುವುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಾಚೀನ ಭಾರತೀಯ ಪರಂಪರೆಯು ಮಿಥ್ ಹಾಗೂ ಚರಿತ್ರೆಯ ನಡುವೆ ಯಾವುದೇ ವ್ಯತ್ಯಾಸವನ್ನುಂಟುಮಾಡದ್ದರಿಂದ ಭಾರತೀಯ ಕಾಲಚಕ್ರಾನುಸಾರ ಅದನ್ನು ಅಭ್ಯಸಿಸಬಹುದು ಎಂದು ಥಾಪರ್ ಅವರು ವಿಶ್ಲೇಷಿಸಿರುವುದು ಗಮನಾರ್ಹ (೧೯೯೭: ೩-೯) (ತಂಬಂಡ ೨೦೦೪).

* * *

ಲೀವಿ ಸ್ಟ್ರಾಸ್ ಅವರು ೧೯೭೮ ರಲ್ಲಿ ಮಿಥ್ ಆಂಡ್ ರಿಯಾಲಿಟಿ ಎನ್ನುವ ಕೃತಿಯಲ್ಲಿ ಕಾಲಚಕ್ರಕ್ಕೆ ಅಂದರೆ ಅದರ ಸುತ್ತು ಆವರಿಸಿರುವ ಮಿಥ್‌ಗಳ ಸಂವೇದನೆಗಳ ಬಗ್ಗೆ ಅಭ್ಯಾಸ ಮಾಡಿದರು. ಈ ಸಂದರ್ಭದಲ್ಲಿ ಆಧುನಿಕತೆ ಮತ್ತು ಅದರ ಪ್ರಮುಖ ಅಭಿವ್ಯಕ್ತಿಯಾದ ಎಂಪಿರಿಕಲ್ ದೃಷ್ಟಿಕೋನಗಳನ್ನು ತೀವ್ರವಾಗಿ ಟೀಕಿಸಿದ ಅವರು,

ಇಂಗ್ಲಿಶ್ ಭಾಷಿಕರ ನಡುವೆ ಅದರಲ್ಲಿಯೂ ಎಂಪಿರಿಕಲ್ ದೃಷ್ಠಿಕೋನ ಇರುವ ಜನರ ನಡುವೆ ಮಿಥ್‌ಗಳ ಬಗ್ಗೆ ಮಾತಾಡುವುದೆಂದರೆ ಅಪ್ರಸ್ತುತ ಎಂದು ಭಾವಿಸುವ ಮಂದಿಯೇ ಹೆಚ್ಚು. ನನ್ನ ಜೀವನಕ್ಕೆ ಮಿಥ್ ಹತ್ತಿರ ಇದೆ ಎನ್ನುವ ಕಾರಣಕ್ಕೆ ಮಿಥ್‌ಗಳಿಗೆ ನಾನು ಹೆಚ್ಚು ಮಾನ್ಯತೆ ನೀಡುತ್ತೇನೆ (೧೯೭೮:೧).

ಮುಂದುವರಿದು ಅವರು, ಆಧುನಿಕ ವಿಜ್ಞಾನ ಮತ್ತು ಅದರ ಬೆಳವಣಿಗೆಗಳ ಮೂಲಕವೇ ಎಲ್ಲವೂ ನಡೆಯುತ್ತಿದೆ ಎಂಬ ಚಿಂತನೆ ಆಧುನಿಕ ಯುಗದಲ್ಲಿ ಬಹಳ ಆಳವಾಗಿದೆ ಎನ್ನುತ್ತಾರೆ. ತಾನು ಬಹುವಾಗಿ ಮೆಚ್ಚು “ಸೈಂಟಿಫಿಕ್ ಅಮೆರಿಕನ್” ನಿಯತಕಾಲಿಕೆ ಕೂಡ ಇದೇ ಅಂಶವನ್ನು ಮೈಗೂಡಿಸಿಕೊಂಡಿದೆ ಎಂದು ಲಿವೀಸ್ ಸ್ಟ್ರಾಸ್ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ಎಲ್ಲೋ ಕೆಲವು ಗಂಭೀರ ವಿಷಯಗಳು ಬಿಟ್ಟು ಹೋಗಿದ್ದಾವೆ ಎಂಬ ಪ್ರಬಲವಾದ ಭಾವನೆಯನ್ನು ಅವರು ತಿಳಿಸುತ್ತಾ, ಅವುಗಳನ್ನು ಮತ್ತೆ ತರಲಿಕ್ಕೆ ಸಾಧ್ಯ ಎಂದು ತಿಳಿಸುತ್ತಾರೆ. ಅವುಗಳನ್ನು ಮತ್ತೆ ತರುವುದು ಕಷ್ಟವಾದರೂ ಅವುಗಳ ಇರುವಿಕೆಯನ್ನು ಅಲ್ಲಗಳೆಯಲಿಕ್ಕಾಗು ವುದಿಲ್ಲ. “ವೈಜ್ಞಾನಿಕ ವಿಶ್ಲೇಷಣೆ”ಯಲ್ಲಿ ಅವುಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಎಂದು ಅವರು ವಿಮರ್ಶಿಸಿದ್ದಾರೆ (೧೯೭೮: ೩-೪).

“ಇಂಟ್ರಡಕ್ಷನ್ ಟು ಎ ಸೈನ್ಸ್ ಆಫ್ ಮಿಥಾಲಜಿ” ಬರೆದ ಸಂದರ್ಭಧಲ್ಲಿ ಲೀವಿ ಸ್ಟ್ರಾಸ್ ಎದುರಾದ ಅನುಭವ ವಿಶಿಷ್ಟವಾದುದು. ಹಗಲು ಬೆಳಕಿನಲ್ಲೇ ಯಾವುದೋ ಒಂದು ಬುಡಕಟ್ಟು ಗ್ರಹಗಳನ್ನು ವೀಕ್ಷಿಸುತ್ತದೆ ಎಂಬ ವಿಚಾರವನ್ನು ಒಪ್ಪಿಕೊಳ್ಳುವುದು ಅಸಾಧ್ಯವಾದುದು. ಆಧುನಿಕ ವಿಜ್ಞಾನದ ದೃಷ್ಟಿಕೋನದಲ್ಲಿ ಇದು ಸಾಧ್ಯವಿಲ್ಲ ಎಂದನ್ನಿಸಿದರೂ ಲೀವಿ ಸ್ಟ್ರಾಸ್ಸ್‌ಗೆ ಸಮುದ್ರಯಾನ ಮಾಡಿದ ಪ್ರಾಚೀನ ಕಾಲ ನಾವಿಕರಿಗೆ ಇದು ಸಾಧ್ಯವಿತ್ತು ಎನ್ನುವ ಅಂಶ ಗೊತ್ತಾಯಿತು. ಆಗ ಬುಡಕಟ್ಟೊಂದರ ಅನುಭವ ಅಥವಾ ಅದರ ಸಾಧ್ಯತೆ ನಮ್ಮ ಆಧುನಿಕ ವಿಜ್ಞಾನದ ದೃಷ್ಟಿಕೋನಕ್ಕಿಂತ ಭಿನ್ನವಾದುದು ಎನ್ನುವಂತಹ ನಿರೂಪಣೆ ಮುಖ್ಯವಾಗುತ್ತದೆ (೧೯೭೮: ೧೪).

* * *

ಯುರೋಪಿನಲ್ಲಿ ಪ್ರಬಲಗೊಂಡ ರ‍್ಯಾಶನಲಿಸ್ಟ್ ಚಿಂತನೆಗಳು ಹಂತಹಂತವಾಗಿ ಅವುಗಳ ವಸಾಹತುಗಳಿಗೂ ಪಸರಿಸತೊಡಗಿದವು. ಅದು ಆ ಸಂದರ್ಭದಲ್ಲಾದ ಅನಿವಾರ‍್ಯ ಚಾರಿತ್ರಿಕ ಪ್ರಕ್ರಿಯೆ. ವಸಾಹತು ಬೌದ್ಧಿಕತೆಯು ವಿಮರ್ಶಾತೀತವಾಗಿ ತಮ್ಮದೇ ಎನ್ನುವಂತೆ ಒಪ್ಪಿಕೊಂಡ ಒಂದು ಬಗೆಯ ಚಿಂತಕರ ಗುಂಪಿದ್ದರೆ, ವಸಾಹತು ವಿರೋಧಿ ಆಶಯಗಳನ್ನು ಹೊಂದಿದ್ದರೂ ವಸಾಹತುಶಾಹಿತ್ವ ಹೆಣೆದ ಬೌದ್ಧಿಕ ವಿನ್ಯಾಸದ ಬಲೆಗೆ ಬಿದ್ದ ವಿದ್ವಾಂಸರ ಗುಂಪು ಇನ್ನೊಂದು. ಇವೆರಡು ಗುಂಪು ತಮ್ಮ ಪರ ವಿರೋಧಗಳನ್ನು ಒಂದೇ ನೆಲೆಗಟ್ಟಿನ ಆಶಯದಿಂದ ಮಂಡಿಸಿದ್ದು ಗಮನಾರ್ಹ. ಈ ಸಂದರ್ಭದಲ್ಲಿ ವಿಚಾರಗಳ ಅಭಿಪ್ರಾಯಗಳು ಭಿನ್ನವಾಗಿದೆಯೇ ಹೊರತು ತಾತ್ವಿಕ ನೆಲೆಗಟ್ಟಿನಲ್ಲಿ ಅಲ್ಲ. ಹೀಗಾಗಿ ಬಹುತೇಕರಿಗೆ ವಸಾಹತುಶಾಹಿ ಬೌದ್ಧಿಕತೆಯ ಅಮಲು ವಸಾಹತೋತ್ತರ ದಿನಗಳಲ್ಲಿ ಬಿಡಲು ಸಾಧ್ಯವಾಗಲಿಲ್ಲ.

ಭಾರತದ ವಸಾಹತು ವಿರೋಧಿ ವ್ಯಾಖ್ಯಾನಗಳನ್ನು ಖಂಡತುಂಡವಾಗಿ ಆದರೆ ತಾಳ್ಮೆಯಿಂದ ತುಂಡರಿಸುವ ಕೇಂಬ್ರಿಜ್ಜ್ ಇತಿಹಾಸಕಾರರು ಭಾರತದಂತಹ ದೇಶಗಳಲ್ಲಿ ವಸಾಹತುಶಾಹಿಗಳ ಹೆಸರಿನಲ್ಲಿ ಭಾರತದ ಉನ್ನತ ವರ್ಗಗಳು ಮತ್ತು ಸಮುದಾಯಗಳು ನಿಜವಾದ ಅರ್ಥದಲ್ಲಿ ರಾಜ್ಯಭಾರ ಮಾಡಿಕೊಂಡು, ಅವುಗಳ ಉನ್ನತೀಕರಣಕ್ಕೆ ರ್ಶರಮಿಸಿದವು ಎಂದಿರುವುದು ಗಮನಾರ್ಹ. ಬ್ರಿಟಿಶ್ ಆಳರಸರ ಸ್ಥಳೀಯ ಸಹಯೋಗಿಗಳಾಗಿ (ಲೋಕಲ್ ಕೊಲಾಬರೇಟರ್ಸ್‌) ಬಹುಸಂಖ್ಯಾತ ಭಾರತೀಯರನ್ನು ಬ್ರಿಟಿಶರ ಪರವಾಗಿ ಮತ್ತು ಕೆಲವೊಮ್ಮೆ ಬ್ರಿಟಿಶರಂತೆ ಆಳಿದ್ದನ್ನು ಅವರು ಉಲ್ಲೇಖಿಸುತ್ತಾರೆ. ಇದರ ಮುಂದುವರಿದ ಭಾಗವು ಎನ್ನುವಂತೆ ಸಬಾಲ್ಟರ‍್ನ ಅಧ್ಯಯನಕಾರರು ಆಧುನಿಕ ಚರಿತ್ರೆಯಲ್ಲಿ ಆಳುವ ವರ್ಗಗಳ/ ಸಮುದಾಯಗಳ ಚರಿತ್ರೆಯೇ ಭಾರತದ ರಾಷ್ಟ್ರೀಯ ಹೋರಾಟದ ಚರಿತ್ರೆಯಾದದ್ದರ ಬಗ್ಗೆ ತಕರಾರು ಎತ್ತಿದ್ದನ್ನು ಕಾಣಬಹುದು. ಈ ಸಂದರ್ಭದಲ್ಲಿ ಭಾರತದ ಬಹುಸಂಖ್ಯಾತರಾದ ಬುಡಕಟ್ಟುಗಳ, ಕೆಳಜಾತಿಗಳ, ದಲಿತರ ಚರಿತ್ರೆಗಳು ಆಳುವ ವರ್ಗಗಳಿಗೆ ಅಮುಖ್ಯವಾದದ್ದರ ಬಗ್ಗೆ ಅವರು ಟೀಕಿಸಿದರು. ರಾಷ್ಟ್ರೀಯವಾದಿ ಚರಿತ್ರೆಕಾರರನ್ನು ಕಟುವಾಗಿ ವಿಮರ್ಶೆ ಮಾಡಿದ ಮಾರ್ಕ್ಸಿಸ್ಟ್ ಚರಿತ್ರೆಕಾರರನ್ನು ಸಬಾಲ್ಟರ್ನ್ ವಿದ್ವಾಂಸರು ಈ ದಿಸೆಯಲ್ಲಿ ಹೊರತುಪಡಿಸಿಲ್ಲ. ಹೀಗಾಗಿ ಮಾರ್ಕ್ಸ್ ವಾದಿಗಳು ಸಬಾಲ್ಟರ್ನ್ ವಿದ್ವಾಂಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ರೈತರ, ಕಾರ್ಮಿಕರ ಹೋರಾಟಗಳನ್ನು ಸ್ವಾತಂತ್ರ್ಯ ಪೂರ್ವ ದಿನಗಳಿಂದಲೂ ದಾಖಲಿಸಿದ ಮಾರ್ಕ್ಸಿಸ್ಟ್ ಅಧ್ಯಯನ ಕ್ರಮದ ಮುಂದುವರಿದ ಭಾಗ ಸಬಾಲ್ಟರ್ನ್ ಚರಿತ್ರೆ ಅಧ್ಯಯನ ಕ್ರಮದ್ದು ಎನ್ನುವುದನ್ನು ನೆನಪಿಸುತ್ತಾರೆ.

ವಸಾಹತೋತ್ತರ ಕಾಲಘಟ್ಟದಲ್ಲಿ ಚರಿತ್ರೆ ಬರವಣಿಗೆಯ ಜಿಜ್ಞಾಸೆಗಳು ಗಂಭೀರ ಸ್ವರೂಪ ಪಡೆಯುತ್ತಲೇ ಇದ್ದರೂ ಸಮಾಜ ವಿಜ್ಞಾನ/ಚರಿತ್ರೆ ವಿಧಾನಕ್ರಮವೊಂದು ಪ್ರತ್ಯೇಕವಾಗಿದೆ ಎಂದು ಬಿಂಬಿಸುವುದು ಉಚಿತವಲ್ಲ. ಬರವಣಿಗೆ ಕ್ರಮದಿಂದ ಚರಿತ್ರೆ ವಿಧಾನಗಳು ರೂಪುಗೊಳ್ಳುತ್ತವೇ ಹೊರತು ವಿಧಾನ ಕ್ರಮಗಳಿಂದಾಗಿ ಚರಿತ್ರೆಯು ರೂಪುಗೊಳ್ಳುತ್ತವೆ ಎನ್ನುವ ಅಂಶಗಳು ಕೃತಕವಾಗುತ್ತವೆ. ರೊಮಿಲಾ ಥಾಪರ್ ಅವರು ‘ಕಾಲದ’ ಬಗ್ಗೆ ಎತ್ತಿರುವ ಮಹತ್ವದ ಪ್ರಶ್ನೆಗಳು ಸಂಶೋಧನಾ ಅಧ್ಯಯನ ಸಂದರ್ಭದಲ್ಲಿ ಬಹುಮುಖ್ಯವಾಗುತ್ತದೆ. ಚಕ್ರದೋಪಾದಿ ಕಾಲಕ್ರಮದ ಮೂಲಕ ‘ಚರಿತ್ರೆಯನ್ನು’ ಅಭ್ಯಸಿಸಲು ಹೊರಟರೆ ಅದು ‘ಚರಿತ್ರೆಯ’ ಆಧುನಿಕ ಸ್ವರೂಪವನ್ನೇ ಬದಲಿಸುವ ಸಾಧ್ಯತೆಗಳೂ ಇವೆ. ಲೀವಿ ಸಟ್ರಾಸ್ ಕೂಡ ಈ ಹಿನ್ನೆಲೆಯಲ್ಲೆ ಮಿಥ್‌ಗಳ ಮೂಲಕ ಜನರ ಚರಿತ್ರೆಯನ್ನು ಅರ್ಥಮಾಡಿಕೊಳ್ಳುವ ಸಾಧ್ಯತೆಗಳ ಬಗ್ಗೆ ಚರ್ಚಿಸಿದ್ದು ಗಮನಾರ್ಹವಾಗಿದೆ. ಆಧುನಿಕ ವಿಜ್ಞಾನ ಮತ್ತು ಮಿಥ್‌ಗಳ ನಡುವಿನ ತಾರ್ಕಿಕ ಸಂಬಂಧಗಳ ಬಗ್ಗೆ ಗಂಭೀರವಾದ ವಿಮರ್ಶೆ ಮಾಡಿದ ಲೀವಿ ಸ್ಟ್ರಾಸನ ಬರಹಗಳು ಇಂದಿಗೂ ಸಕಾಲಿಕವಾಗಿದೆ. ಭಾರತದ ಸಂದರ್ಭದಲ್ಲಿ ರೊಮಿಲಾ ಥಾಪರ್ ಅವರಂತಹ ಚರಿತ್ರೆಕಾರರು ಈ ದಶಕದಲ್ಲಿ ತಮ್ಮ ಹಿಂದಿನ ಹೆಜ್ಜೆಗಳನ್ನು ಅಲ್ಲೇ ಬಿಟ್ಟು, ಹೊಸ ಹಾದಿಯತ್ತ ದಾಪುಗಲಾನ್ನಿಟ್ಟಿರುವುದು ಚರಿತ್ರೆ ವಿಧಾನ ಕ್ರಮದ ವಿದ್ಯಾರ್ಥಿಗಳಿಗೆ ಒಳ್ಳೆಯ ಉದಾಹರಣೆಯಾಗಬಲ್ಲದು.

ಮಿಥ್‌ಗಳನ್ನೇ ಮುಂದಿಟ್ಟುಕೊಂಡು ಉಳಿದವನ್ನೆಲ್ಲ ೨೧ನೆಯ ಶತಮಾನದ ಈ ಹೊತ್ತಿನಲ್ಲಿ ಬದಿಗೆ ಸರಿಸುವುದು ಎಂದರೆ ಅದು ಇನ್ನೊಂದು ಅತಿರೇಕ. ಚರಿತ್ರೆಯು ವರ್ತಮಾನಕ್ಕೆ ಸಂವಾದಿಯಾಗಿರುವ ಬಹುಮುಖ್ಯ ಸ್ವರೂಪವನ್ನು ಇಟ್ಟುಕೊಂಡಾಗ ವರ್ತಮಾನದಲ್ಲಿರುವ ಸ್ಥಾಪಿತ ವ್ಯವಸ್ಥೆಯ ವಿವಿಧ ಆಯಾಮಗಳನ್ನು ನಿರ್ಲಕ್ಷಿಸುವುದು ಉಚಿತವಲ್ಲ. ವರ್ತಮಾನದ ವ್ಯವಸ್ಥೆಯಲ್ಲಿ ಬಲಾಢ್ಯವಾಗಿರುವ ವಿಜ್ಞಾನ ಸಂಬಂಧೀ ವಿಷಯಗಳ ಜೊತೆಜೊತೆಗೆ ಮಿಥ್‌ಗಳನ್ನು ಸಂವಾದಿಯಾಗಿಸುವ ವಿಧಾನಕ್ರಮವು ಚರಿತ್ರೆ ಬರವಣಿಗೆಯ ಹೊಸ ಹೊಸ ಮಗ್ಗಲುಗಳನ್ನು ನೋಡಲು ಸಹಾಯವಾಗಬಹುದು.

ವಿದ್ಯಾರ್ಥಿಗಳ/ಸಂಶೋಧಕರ ಹಿತದೃಷ್ಟಿಯಿಂದ ಚರಿತ್ರೆ ವಿಧಾನವನ್ನು ಪ್ರತ್ಯೇಕವಾಗಿ ಅಭ್ಯಸಿಸುವುದು ಇಂದಿನ ಅನಿವಾರ‍್ಯವಾದರೂ ಅದರ ವಿವಿಧ ಆಯಾಮಗಳನ್ನು ವಿಮರ್ಶೆಗೆ ಒಡ್ಡುವುದು ಈ ಸಂದರ್ಭದ ಒತ್ತಾಸೆಯಾಗಿದೆ. ಹೀಗಾಗಿಯೇ ಚರಿತ್ರೆ ಬರವಣಿಗೆ ಕ್ರಮದ ಅವಿಭಾಜ್ಯ ಅಂಗವಾಗಿ ಚರಿತ್ರೆ ಅಧ್ಯಯನ ವಿಧಾನವೂ ರೂಪುಗೊಳ್ಳುತ್ತದೆ. ಕಾಲದಿಂದ ಕಾಲಕ್ಕೆ, ಘಟನೆಯಿಂದ ಘಟನೆಗೆ, ಸ್ಥಳದಿಂದ ಸ್ಥಳಕ್ಕೆ ಇವುಗಳ ವ್ಯಾಪ್ತಿಯಲ್ಲಿ ಭಿನ್ನತೆ ಕಂಡುಬಂದರೂ ವಾಸ್ತವಿಕವಾಗಿ ಅವುಗಳ ಆಶಯ ಒಂದೇ ಆಗಿರುತ್ತದೆ.

ಪರಾಮರ್ಶನ ಗ್ರಂಥಗಳು

೧. ಕೀತ್ ಜೆಂಕಿನ್ಸ್, ೨೦೦೩, ರೀ ಥಿಂಕಿಂಗ್ ಹಿಸ್ಟರಿ, ಲಂಡನ್: ರೂಟ್ಲೇಜ್.

೨. ದೀಪೇಶ್ ಚಕ್ರವರ್ತಿ, ೨೦೦೬. ಹೆಬಿಟೇಶನ್ಸ್ ಆಫ್ ಮಾರ್ಡನಿಟಿ – ಎಸ್ಟೇಸ್ ಇನ್ ದಿ ವೇಕ್ ಆಫ್ ಸಬಾಲ್ಟರ್ನ್ ಸ್ಟಡೀಸ್, ದೆಹಲಿ: ಪರ್ಮನೆಂಟ್ ಬ್ಲ್ಯಾಕ್.

೩. ರೊಮಿಲಾ ಥಾಪರ್, ೧೯೯೭, ಟೈಮ್ ಆಸ್ ಎ ಮೆಟಾಫರ್ ಆಫ್ ಹಿಸ್ಟರಿ – ಅರ‍್ಲಿ ಇಂಡಿಯಾ, ದೆಹಲಿ: ಆಕ್ಸ್‌ಫರ್ಡ್ ಇಂಡಿಯಾ ಪ್ರೆಸ್.

೪. ಲೀವೀ ಸ್ಟ್ರಾಸ್, ೧೯೭೮. ಮಿಥ್ ಆಂಡ್ ಮೀನಿಂಗ್, ಲಂಡನ್: ರೂಟ್ಲೆಜ್ ಮತ್ತು ಕೆಗಾನ್ ಪೌಲ್.

೫. ವಿಜಯ್ ಪೂಣಚ್ಚ ತಂಬಂಡ, ೨೦೦೪. ಪಳಮೆ: ಮೌಖಿಕ ಆಕರಗಳು ಕಟ್ಟಿಕೊಡುವ ಕನ್ನಡ-ಕೊಡಗು-ತುಳುನಾಡಿನ ಅಧ್ಯಯನ, ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೬. ವಿಜಯ್ ಪೂಣಚ್ಚ ತಂಬಂಡ, ೨೦೧೦. ಕೆಳವರ್ಗಗಳ ಪ್ರತಿಭಟನೆ: ಸಬಾಲ್ಟರ್ನ್ ಚರಿತ್ರೆ ಬರವಣಿಗೆ ಕ್ರಮ ಮತ್ತು ವಿಮರ್ಶೆ, ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೭. ಸುರೇಂದ್ರರಾವ್ ಬಿ. ೨೦೧೦. ಹಿಸ್ಟರಿ ಆಸ್ ಹಿಸ್ಟಾರಿಯಾಗ್ರಪಿ, ಬೆಂಗಳೂರು: ಐ.ಸಿ.ಹೆಚ್.ಆರ್. ಪ್ರಾದೇಶಿಕ ಕಛೇರಿ ಬೆಂಗಳೂರು.

* * *