ಚರಿತ್ರೆಯೆನ್ನುವುದು ಎಲ್ಲ ನಿನನೆಗಳು ಇಂದಿನ ವರ್ತಮಾನದಲ್ಲಿ ಬದುಕುತ್ತಿರುವುದು ಎಂದರ್ಥ. ಮನುಷ್ಯ ವರ್ತಮಾನ ಮತ್ತು ಭವಿಷ್ಯಮುಖಿಯಾದರೂ ಅವನು ಚರಿತ್ರೆಯ ಶಿಶುವಾಗಿಯೇ ಉಳಿಯುತ್ತಾನೆ. ಹೇಗೆ ಇಂದು, ಈ ಕ್ಷಣವೆನ್ನುವುದು ಎಲ್ಲ ನಿನ್ನೆಗಳ ಮತ್ತು ಗತಿಸಿದ ಕ್ಷಣಗಳ ಮೊತ್ತವೋ ಹಾಗೆಯೇ. ಇವತ್ತಿನ ಮನುಷ್ಯ ಎಲ್ಲ ಹಿಂದಿನ ತಲೆಮಾರುಗಳ ಪ್ರತಿನಿಧಿ. ಎಲ್ಲ ಹಿಂದಿನ ತಲೆಮಾರುಗಳ ಅನುಭವದ ಮೇಲೆ ಇಂದಿನ ಮನುಷ್ಯ ಕುಳಿತಿದ್ದಾನೆ. ಅಜ್ಜನ ಹೆಗಲ ಮೇಲೆ ಕುಳಿತಿರುವ ಮೊಮ್ಮಗನಿಗೆ ಹೇಗೆ ಅಜ್ಜನಿಗಿಂತ ದೂರದ ನೋಟ ಲಭ್ಯವಾಗುವುದೋ ಹಾಗೆ ಇಂದಿನ ಮನುಷ್ಯನಿಗೆ ಎಲ್ಲ ಅಳಿದ ತಲೆಮಾರುಗಳ ಅನುಭವದ ಒತ್ತಾಸೆಯಿಂದ ದೂರಗಾಮಿ ಭವಿಷ್ಯದ ನೋಟದ ಲಭ್ಯವಾಗುತ್ತದೆ.

ಚರಿತ್ರೆ ಹೇಗೆ ರೂಪುಗೊಂಡಿತು? ಈ ಕ್ಷಣದ ಹಂತಕ್ಕೆ ಹೇಗೆ ಬಂದಿತು ಎನ್ನುವ ಪ್ರಶ್ನೆಗಳು ಯಾವುದೇ ಸೃಜನಶೀಲ ಚರಿತ್ರೆಯನ್ನು ಕಾಡುವ ಪ್ರಶ್ನೆಗಳು. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸೃಜನಶೀಲ ಸಂಘರ್ಷ ಮತ್ತು ಹೊಂದಾಣಿಕೆಗಳಲ್ಲಿ ಚರಿತ್ರೆ ರೂಪುಗೊಳ್ಳುತ್ತಿರುತ್ತದೆ. ಅಲೆಮಾರಿ ಬದುಕಿನಿಂದ ಆರಂಭಗೊಂಡ ಮನುಷ್ಯನ ಬದುಕು ಪ್ರಕೃತಿಯ ಜೊತೆ ಒಡಗೂಡಿ ಒಲಿಸಿಕೊಳ್ಳುವ ಮೂಲಕ ನೆಲೆಗೊಂಡ ಜೀವನವನ್ನು ರೂಪಿಸಿಕೊಂಡನು. ಮಾನವಶಾಸ್ತ್ರದ ಅಧ್ಯಯನಗಳನ್ನು ನೋಡಿದರೆ ಹೇಗೆ ಮನುಷ್ಯ ಲೌಕಿಕ, ಅಲೌಕಿಕ ಮತ್ತು ಬೌದ್ಧಿಕ ನೆಲೆಗಳಲ್ಲಿ ವಿಸ್ತರಿಸಿಕೊಳ್ಳುತ್ತ ಸಾಗಿಬಂದನು ಎಂಬುದನ್ನು ಗುರುತಿಸಬಹುದು. ಸಣ್ಣ ಸಣ್ಣ ಗುಂಪುಗಳಲ್ಲಿ ವಿವಿಧ ದಿಕ್ಕುಗಳಲ್ಲಿ ಮನುಷ್ಯ ಚಲಿಸುತ್ತ ನಡೆದುದನ್ನು ಕಾಣುತ್ತೇವೆ. ಬಟ್ಟೆ, ಊಟ ಮತ್ತು ಸೂರಿಗೆ ಮಾತ್ರ ಬದುಕುತ್ತಿದ್ದ ಮನುಷ್ಯ ಸಾಮಾಜಿಕ ಬದುಕನ್ನು ಕಟ್ಟಿಕೊಳ್ಳಲು ಪ್ರಾರಂಭಿಸಿದನು. ಸಾಮಾಜಿಕ ನಿಯಮಗಳನ್ನು ರೂಪಿಸಿಕೊಳ್ಳತೊಡಗಿದನು. ರಾಜಕೀಯ ವ್ಯವಸ್ಥೆಯನ್ನು ಹುಟ್ಟು ಹಾಕಿದನು. ತಾನು ಬದುಕಿದ ಜೀವನ ಕ್ರಮವನ್ನು ದಾಖಲಿಸಿಕೊಂಡು, ಕಾಲ ಮತ್ತು ದೇಶಗಳ ಕಲ್ಪನೆಗಳ ಮೂಸೆಯಲ್ಲಿ ಬದುಕತೊಡಗಿದನು. ಇದು ಬಹುದೊಡ್ಡ ನಾಗರಿಕತೆಗಳ ಏಳಿಗೆಯ ಮತ್ತು ಅವನತಿಯ ಸಂಕಥನ. ಅರ್ನಾಲ್ಡ್ ಟಾಯನ್‌ಬೀಯವರು ತಮ್ಮದ ಸ್ಟಡಿ ಆಫ್‌ ಹಿಸ್ಟರಿಯಲ್ಲಿ ನಾಗರಿಕತೆಗಳ ಹುಟ್ಟು ಏಳಿಗೆ ಮತ್ತು ಅವನತಿಯ ಕಾರಣಗಳ ಆಯಾಮಗಳನ್ನು ಚರ್ಚಿಸುತ್ತ, ಪ್ರಕೃತಿಯ ಸವಾಲುಗಳಿಗೆ ಉತ್ತರ ಕೊಡಲು ಶಕ್ತವಾದ ನಾಗರಿಕತೆಗಳು ಮಾತ್ರ ಬದುಕುಳಿದವು ಎಂಬುದನ್ನು ಚರ್ಚಿಸುತ್ತಾರೆ. ಸೃಜನಶೀಲ ಅಲ್ಪಸಂಖ್ಯಾತರೆಂಬ ಕೆನೆಪದರ ಇದ್ದ ನಾಗರಿಕತೆಗಳು ಮಾತ್ರ ಉಳಿದವು ಹಾಗು ಮತ್ತುಳಿದವು ಅಸ್ತಂಗತವಾದವು ಎಂಬುದನ್ನು ದೀರ್ಘಕಾಲದವರೆಗೂ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ವಿವರಿಸಿದ್ದಾರೆ. ಈ ಅಧ್ಯಯನ ನಾಗರಿಕತೆಗಳನ್ನು ಕಟ್ಟಿ, ಮುನ್ನಡೆಸಿದವರು ಬಿಟ್ಟುಹೋಗಿರುವ ದಾಖಲೆಗಳನ್ನು ಶಿಸ್ತುಬದ್ಧ ರೀತಿಯಲ್ಲಿ, ವೈಜ್ಞಾನಿಕವಾಗಿ ಅಧ್ಯಯನ ಮಾಡಿದ್ದರ ಫಲ. ಇವರ ಹಾಗೆಯೇ ರ‍್ಯಾಂಕೆ, ಸ್ಪೆಂಗ್ಲರ್, ಕಾರ್ಲೈಲ್, ಕಾರ್ಲ್‌‌ಮಾರ್ಕ್ಸ್ ಮುಂತಾದವರು ಚರಿತ್ರೆಯನ್ನು ಅಧ್ಯಯನ ಮಾಡಿ ವಿಭಿನ್ನ ದೃಷ್ಟಿಕೋನಗಳನ್ನು ಕಟ್ಟಿಕೊಟ್ಟಿದ್ದಾರೆ. ಗ್ರೀಕ್‌ ಮತ್ತು ರೋಮನ್‌ ಚರಿತ್ರೆ ಲೇಖನ ಪರಂಪರೆ, ಭಾರತೀಯ ಚರಿತ್ರೆ ಲೇಖನ ಪರಂಪರೆ, ಚರ್ಚ್‌ಚರಿತ್ರೆ ಲೇಖನ ಪರಂಪರೆ ಮತ್ತು ಅರಬ್ ಚರಿತ್ರೆ ಲೇಖನ ಪಂಪರೆಗಳು ವಸ್ತು, ವಿನ್ಯಾಸ, ಉದ್ದೇಶ ಮತ್ತು ಚರಿತ್ರೆಯನ್ನು ದಾಖಲಿಸುವ ಕ್ರಮಗಳಲ್ಲಿ ಭಿನ್ನ ಮಾರ್ಗಗಳನ್ನು ತುಳಿದಿವೆ. ಬದುಕಿನ ಬಗೆಗೆ ಕಟ್ಟಿಕೊಂಡ ದೃಷ್ಟಿಕೋನಗಳ ನೆರಳಲ್ಲಿಯೆ ಚರಿತ್ರೆಯನ್ನು ನೋಡುವ ಕ್ರಮಗಳು ರೂಪುಗೊಂಡಿವೆ. ಹೆರೋಡೊಟಸ್ ಮತ್ತು ಥೂಸಿಡೈಡ್ಸರು ಕ್ರಿ.ಪೂ.೫ನೆಯ ಶತಮಾನದಲ್ಲಿ ಚರಿತ್ರೆಯ ದಾಖಲೀಕರಣದ ಪ್ರಕ್ರಿಯೆಗೆ ಹೊಸ ದೃಷ್ಟಿಕೋನವನ್ನು ತಂದುಕೊಟ್ಟರು. ಅಲ್ಲಿಯವರೆಗೂ ಲಾವಣಿ, ಮಹಾಕಾವ್ಯ ಮತ್ತು ರಾಜರ ಆಳ್ವಿಕೆಯ ಪ್ರಮುಖ ಘಟನೆಗಳನ್ನು ದಾಖಲಿಸುವ ಕ್ರಮದಲ್ಲಿ ಚರಿತ್ರೆ ದಾಖಲಾಗಿತ್ತು. ಮೌಖಿಕ ಪರಂಪರೆಯೆ ಆ ಕಾಲದ ಪ್ರಮುಖ ಲಕ್ಷಣ. ಲಾವಣಿಗಳು ಕ್ರಮೇಣ ಮಹಾಕಾವ್ಯಗಳಾದವು. ಹೋಮರನ ಮಹಾಕಾವ್ಯಗಳು ಸೃಷ್ಟಿಯಾದವು. ಬ್ಯಾಬಿಲೋನಿಯನ್ನರ ಗಿಲ್‌ಗ್ಯಾಮಿಶ್ ಆಗಲಿ, ಗ್ರೀಕರ ಈಲಿಯಡ್ ಆಗಲಿ ಈ ಬಗೆಯಲ್ಲಿ ರೂಪುಗೊಂಡವು. ಕ್ರಮೇಣ ವಂಶಾನುಚರಿತ್ರೆ, ಬಖೈರುಗಳು ಬರತೊಡಗಿದವು.

ಹೆರೋಡೊಡಸ್ ಮತ್ತು ಥೂಸಿಡೈಡ್ಸರು ಚರಿತ್ರೆಯನ್ನು ಬರೆಯುವ ಕ್ರಮದಲ್ಲಿ ‘ದಾಖಲೆಯಿಲ್ಲದೆ ಚರಿತ್ರೆಯಿಲ್ಲ’ ಎನ್ನುವ ಅರಿವನ್ನು ತಂದುಕೊಟ್ಟರು. ಮೌಖಿಕ ರೂಪಕ ಕಥನಗಳು ಚರಿತ್ರೆಯಾಗಲು ಸಾಧ್ಯವಿಲ್ಲ ಎನ್ನುವುದನ್ನು ಸ್ಪಷ್ಟ ರೀತಿಯಲ್ಲಿ ನಿರೂಪಿಸಿದರು. ಚರಿತ್ರೆಯನ್ನು ಬರೆಯಲು ತೀರ್ಮಾನಿಸುವವನು ವಸ್ತು ವಿಷಯವನ್ನು ಆಯ್ಕೆ ಮಾಡಿಕೊಂಡು, ಅದನ್ನು ಕಟ್ಟಲು ದಾಖಲೆಗಳ ಬೆನ್ನತ್ತಿ, ಅವುಗಳ ಸತ್ಯಾಸತ್ಯತೆಯನ್ನು ಒರೆಹಚ್ಚಿ ಅವುಗಳನ್ನು ಬಳಸಿಕೊಂಡು ತನ್ನ ಕೃತಿಯನ್ನು ರಚಿಸಬೇಕೆಂದು ಹೇಳುತ್ತಾರೆ. ಅವರಿಗೆ ಚರಿತ್ರೆಯ ರಚನೆಯ ತಮ್ಮ ಸಮಕಾಲೀನ ಸಂದರ್ಭದ ದಾಖಲಾತಿ ಎನ್ನುವುದಾಗಿತ್ತು. ಚರಿತ್ರೆಯನ್ನು ಬರೆಯುವುದೆಂದರೆ ಅವು ಒಂದು ವಿಶೇಷ ಬಗೆಯ ಬೌದ್ಧಿಕ ಚಟುವಟಿಕೆ ಎನ್ನುವುದನ್ನು ನಿರೂಪಿಸಿದರು. ಹೆರೋಡೊಟಸ್ಸನ ಹಿಸ್ಟರಿ ಆಫ್‌ ದಿ ಪರ್ಶಿಯನ್ ವಾರ್ಸ್‌ ಮತ್ತು ಥೂಸಿಡೈಡ್ಸನ ದಿ ಹಿಸ್ಟರಿ ಆಫ್ ದಿ ಪೆಲೊಪೊನೇಶಿಯಸ್ ವಾರ್‌ ಹೊಸ ಲೇಖನ ಪರಂಪರೆಯನ್ನು ಹುಟ್ಟು ಹಾಕಿತು. ಯುದ್ದದ ಕಥನಗಳೇ ಚರಿತ್ರೆಯನ್ನು ಗ್ರೀಕರ ಲೇಖನಗಳಲ್ಲಿ ಹೊಸ ಬೌದ್ದಿಕ ಶಿಸ್ತಾಗಿ ರೂಪಿಸಿದವು. ಇವರ ಈ ಪ್ರಯತ್ನ ಅನಂತರದಲ್ಲಿ ಬಂದ ಯುರೋಪಿಯನ್ ಚರಿತ್ರೆ ಲೇಖನ ಪರಂಪರೆಗೆ ನಾಂದಿಯನ್ನು ಹಾಡಿತು. ಚರಿತ್ರೆ ಲೇಖನ ಸಂಪ್ರದಾಯ ಸ್ಪಷ್ಟ ಮೂರ್ತ ರೂಪವನ್ನು ಪಡೆಯಿತು.

ಗ್ರೀಕ್‌ ಲೇಖನ ಕಲೆಯ ಮುಂದುವರಿದ ಭಾಗವನ್ನು ರೋಮನ್‌ ಚರಿತ್ರೆಕಾರರಲ್ಲಿ ಕಾಣುತ್ತೇವೆ. ರೋಮನ್ ಲೇಖನ ಪರಂಪರೆಯನ್ನು ಪ್ರೇರೇಪಿಸಿ, ಪ್ರಭಾವಿಸಿದ್ದು ರೋಮನ್ನರ ಯುದ್ಧದಾಹ. ಯುದ್ಧೋನ್ಮಾದದ ಮನಸ್ಥಿತಿಯ ರೋಮನ್ನರು ತಮ್ಮ ಚರಿತ್ರೆಯ ದೀರ್ಘ ಕಥನವನ್ನು ದಾಖಲಿಸಲು ಪ್ರಯತ್ನಿಸಿದರು. ರಚನಾವಿನ್ಯಾಸದ ದೃಷ್ಟಿಯಿಂದ ರೋಮನ್ ಚರಿತ್ರೆಕಾರರು ಗ್ರೀಕರಿಂದ ಹೆಚ್ಚಿನದನ್ನು ಪಡೆದುಕೊಂಡರು. ಇವರು ಬಹುತೇಕ ತಮ್ಮ ರಾಜಕೀಯ ಚರಿತ್ರೆಯನ್ನು ದಾಖಲಿಸುವುದರಲ್ಲೇ ನಿರತರಾದರು. ಒಟ್ಟಾರೆ ಗ್ರೀಕ್ ಮತ್ತು ರೋಮನ್ ಚರಿತ್ರೆ ಲೇಖನ ಸಂಪ್ರದಾಯಗಳು ಚರಿತ್ರೆ ಎಂಬ ಶಿಸ್ತು ರೂಪುಗೊಳ್ಳಲು ಭದ್ರ ಬುನಾದಿಯನ್ನು ನಿರ್ಮಿಸಿದವು.

* * *

ಭಾರತೀಯ ಚರಿತ್ರೆ ಲೇಖನ ಪರಂಪರೆಯ ಹಿಂದೆ ಕೆಲಸ ಮಾಡಿರುವ ತಾತ್ವಿಕ ಜರೂರುಗಳು ಬೇರೆ ಬಗೆಯವು. ಭಾರತೀಯರ ಚರಿತ್ರೆ ಲೇಖನ ಅವರ ಬದುಕಿನ ಬಗೆಗಿನ ದೃಷ್ಟಿಯಲ್ಲಿ ಸಮ್ಮಿಳಿತಗೊಂಡಿದೆ. ಆರಂಭಿಕ ಹಂತದಿಂದ ಹಿಡಿದು ಬಹುಕಾಲದವರೆಗೂ ಅಲೌಕಿಕ ಜೀವನ ದೃಷ್ಟಿಯೇ ಇವರ ಚರಿತ್ರೆಯನ್ನು ನೋಡುವ ದೃಷ್ಟಿಕೋನವನ್ನು ಹಿಡಿದಿಟ್ಟಿದೆ. ಜೀವನ ಕ್ರಮದಲ್ಲಿ ಲೌಕಿಕದ ಪಾತ್ರವಿದ್ದರೂ, ಒಟ್ಟಾರೆ ದೃಷ್ಟಕೋನದಲ್ಲಿ ಅಲೌಕಿಕದ್ದೇ ಮೇಲುಗೈ. ಚರಿತ್ರೀಕರಿಸುವುದಕ್ಕಿಂತ ಪುರಾಣೀಕರಿಸುವುದನ್ನು ಹೆಚ್ಚಾಗಿ ಭಾರತೀಯ ಪರಂಪರೆಯಲ್ಲಿ ನೋಡಬಹುದು.

ಕ್ರಿ.ಶ. ೭ನೆಯ ಶತಮಾನದ ಆರಂಭದಲ್ಲಿ ಬಾಣನು ಥಾಣೇಶ್ವರ ಮತ್ತು ಕನೌಜಿನ ರಾಜನಾದ ಹರ್ಷವರ್ಧನನ ಜೀವನ ಚರಿತ್ರೆಯನ್ನು ಹರ್ಷಚರಿತ ಎಂಬ ಅಪೂರ್ಣಗೊಂಡ ಕೃತಿಯಲ್ಲಿ ನಿರೂಪಿಸಿದ್ದಾನೆ. ಗಂಭೀರ ಸ್ವರೂಪದ ಮಿತಿಗಳಿದ್ದರೂ ಈ ಕೃತಿ ಒಂದು ಹೊಸ ಬೌದ್ಧಿಕ ಶಿಸ್ತಿನ ಯುಗವನ್ನು ಆರಂಭಿಸಿತು. ಇದರ ಅರಳಿದ ಹಂತವನ್ನು ಕಲ್ಹಣನ ರಾಜತರಂಗಿಣಿಯಲ್ಲಿ ಕಾಣಬಹುದು.

ಭಾರತ ಬಹುದೊಡ್ಡ ಬೌದ್ಧಿಕ ಸಂಪತ್ತನ್ನು ಸೃಷ್ಟಿಸಿದೆ. ವೇದಗಳು, ಉಪನಿಷತ್ತುಗಳು, ಪುರಾಣಗಳು, ಬೌದ್ಧ ಸಾಹಿತ್ಯ, ಜೈನ ಸಾಹಿತ್ಯ, ನೂರಾರು ಭಾಷೆಗಳು, ಶಾಶನಗಳು ಹೀಗೆ ಬಹುಶಃ ಜಗತ್ತಿನ ಬೇರಾವ ನಾಗರಿಕತೆ, ರಾಷ್ಟ್ರಗಳು ಸೃಷ್ಟಿಸಲಾರದಷ್ಟು ಸಂಪತ್ತನ್ನು ಸೃಷ್ಟಿಸಿದೆ. ಸುಲಭವಾಗಿ ಯಾವುದೇ ಸೃಜನಶೀಲ ಪ್ರತಿಭೆಗೆ ಊಹಿಸಲು, ಚಿತ್ರಿಸಿಕೊಳ್ಳಲು ಮತ್ತು ಕ್ಷಿತಿಜಕ್ಕೆ ತಂದುಕೊಳ್ಳಲು ಸಾಧ್ಯವಾಗದ ವೇದಗಳು, ಮಹಾಭಾರತ, ರಾಮಾಯಣಗಳು ಸೃಷ್ಟಿಯಾಗಿವೆ. ಭಾರತದ ಪ್ರಾಚೀನ ಕೃತಿಗಳನ್ನು ಚರಿತ್ರೀಕರಿಸುವ ಬೌದ್ಧಿಕ ಕಸರತ್ತುಗಳು ನಡೆಯುತ್ತಿದ್ದರೂ, ಅದು ನಮ್ಮ ವೈಜ್ಞಾನಿಕ ಅಧ್ಯಯನದ ಕ್ರಮಗಳ ಮೂಲಕ ಕಲ್ಪನೆಗೆ ದಕ್ಕಬಹುದಾದ ಚರಿತ್ರೆಯೇ ವಿನಾ ಯುರೋಪ್ ನಿರ್ವಚಿಸಿದ ಚರಿತ್ರೆ ರಚನಾಕ್ರಮದ ಆಧಾರದ ಮೇಲೆ ಬಂದ ಚರಿತ್ರೆ ಕೃತಿಗಳಾಗುವುದಿಲ್ಲ.

ಯುರೋಪಿಯನ್ ಸಂಸ್ಕೃತಿಗಳ ಜೊತೆ ಮುಖಾಮುಖಿಯಾದ ಸಂದರ್ಭದಲ್ಲಿ ‘ಆಧುನಿಕತೆ’ ಎನ್ನುವ ಹೊಸ ಮೌಲ್ಯವ್ಯವಸ್ಥೆಯ ಪರಿಚಯವಾದಂತೆ, ಮಧ್ಯಕಾಲೀನ ಸಂದರ್ಭದಲ್ಲಿ ಇಸ್ಲಾಮಿಕ್ ಜಗತ್ತಿನೊಂದಿಗಿನ ಮುಖಾಮುಖಿ, ಭಾರತದ ರಾಜ್ಯ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಪಲ್ಲಟಗಳನ್ನು ತಂದುಕೊಡುವುದರ ಜೊತೆಗೆ ಬೌದ್ಧಿಕ ದೃಷ್ಟಿಕೋನಗಳನ್ನು ಪರಿಚಯಿಸಿತು. ಇದು ಚರಿತ್ರೆಯನ್ನು ನೋಡುವ ದೃಷ್ಟಿಕೋನದಲ್ಲಿ ಒಂದು ಗುಣಾತ್ಮಕವಾದ ಬದಲಾವಣೆಯನ್ನು ತಂದುಕೊಟ್ಟಿತು. ಕರ್ಮಸಿದ್ಧಾಂತ, ಪುನರ್‌ಜನ್ಮ, ಅದೃಷ್ಟ ಹಾಗೂ ಕಾಲಚಕ್ರದ ಕ್ರಮದಲ್ಲಿ ಯುಗಗಳ ಪುನರಾವರ್ತನೆ ಮುಂತಾದ ನಂಬಿಕೆಗಳ ಪರಿಧಿಯಲ್ಲೇ ಚರಿತ್ರೆಯ ಪರಿಕಲ್ಪನೆಯನ್ನು ರೂಪಿಸಿಕೊಂಡಿದ್ದ ಭಾರತೀಯರಿಗೆ ಮಧ್ಯಕಾಲೀನ ಮತ್ತು ಆಧುನಿಕ ಸಂದರ್ಭದ ರಾಜಕೀಯ ಮುಖಾಮುಖಿಗಳು, ಸಾಂಸ್ಕೃತಿಕ ಪಲ್ಲಟಗಳು ತಲ್ಲಣಗಳನ್ನು ತಂದುಕೊಟ್ಟವು. ಚರಿತ್ರೆ ಲೇಖನ ಕಲೆಗೆ ಸಂಬಂಧಿಸಿದಂತೆ ಮೊಗಲರ ಕಾಲವು ಭಾರತೀಯರಿಗೆ ಹೊಸ ದೃಷ್ಟಿಕೋನವನ್ನು ತಂದುಕೊಟ್ಟಿತು. ಮುಂದೆ ಅಭ್ಯಾಸ ಮಾಡುವ ಭಾರತೀಯ ಚರಿತ್ರೆ ಲೇಖನ ಪರಂಪರೆಗೆ ಸಂಬಂಧಿಸಿದ ಲೇಖನದಲ್ಲಿ ಈ ಬಗೆಯ ಚರ್ಚೆಯನ್ನು ಮಾಡಲಾಗಿದೆ. ಇಬನ್ ಖಾಲ್ದೂನನ ಮಟ್ಟಕ್ಕೆ ಕಾಣುವ ಚರಿತ್ರೆಕಾರರನ್ನು ಈ ಕಾಲದಲ್ಲಿ ಕಾಣದಿದ್ದರೂ ರಾಜಕೇಂದ್ರಿತ ದೃಷ್ಟಿಯ ಮತ್ತು ನಿಷ್ಠೆಯ ರಾಜಕೀಯ ಚರಿತ್ರೆಯನ್ನೇ ಪ್ರಧಾನವಾಗಿ ಕಂಡರೂ ‘ಕಾಲ-ದೇಶ’ಗಳ ಸಂವೇದನೆಗಳನ್ನಂತೂ ಕಾಣುತ್ತೇವೆ. ನಂತರ ವಸಾಹತುಶಾಹಿ ಸಂದರ್ಭದಲ್ಲಿ ‘ಓರಿಯಂಟಲ್’ ಎಂಬ ವಿಶೇಷಣವನ್ನು ಪಡೆದುಕೊಂಡು ಪಾಂಡಿತ್ಯ ಪ್ರಧಾನವಾದ ಪೌರ‍್ವಾತ್ಯ ಅಧ್ಯಯನಗಳನ್ನು ಕಾಣುತ್ತೇವೆ. ಚರಿತ್ರೆ ಅಧ್ಯಯನ ಕ್ರಮಕ್ಕೆ ಒಂದು ಗಂಭೀರ ಸ್ವರೂಪವನ್ನು ತಂದುಕೊಟ್ಟವರೇ ವಿಲಿಯಂ ಜೋನ್ಸ್, ಕೋಲ್‌ಬ್ರೂಕ್, ಮ್ಯಾಕ್ಸ್‌ಮುಲ್ಲರ್‌ ಮತ್ತು ವೈಟ್‌ಎಲ್ಲಿಸ್ ಎಂಬ ಪೌರ‍್ವಾತ್ಯವಾದಿಗಳು. ಭಾಷ್ಯಾಧ್ಯಯನವೇ ಅವರಿಗೆ ಪ್ರಧಾನವಾದರೂ ಅದರ ಮೂಲಕ ಚರಿತ್ರೆಯ ಲೇಖನ ಪರಂಪರೆಯನ್ನು ಕಟ್ಟಿಕೊಟ್ಟಿದ್ದಾರೆ. ಸ್ಥಳ ಮತ್ತು ಕಾಲಗಣನೆಗೆ ಇವರು ನೀಡಿದ ಪ್ರಾಮುಖ್ಯತೆ ಅನನ್ಯವಾದದ್ದು. ಕೃತ, ತ್ರೇತ, ದ್ವಾಪರ ಮತ್ತು ಕಾಲಗಣನೆಗೆ ಇವರು ನೀಡಿದ ಪ್ರಾಮುಖ್ಯತೆ ಅನುಕ್ರಮಣ ಪದ್ಧತಿಯಲ್ಲಿ ಚರಿತ್ರೆಯನ್ನು ನೋಡುವ ಕ್ರಮ, ಒಪ್ಪಿತ ಕ್ರಮವಾಗಿ ಆಚರಣೆಯಲ್ಲಿ ಬಂದಿತು. ಜೇಮ್ಸ್‌ಮಿಲ್ ಇದನ್ನೇ ಮತ್ತೊಂದು ಬಗೆಯಲ್ಲಿ ವಿಸ್ತರಿಸಿದ್ದಾನೆ. ಒಟ್ಟಾರೆ ಪೌರ‍್ವಾತ್ಯವಾದಿಗಳು ಮತ್ತು ಉಪಯುಕ್ತವಾದಿಗಳು ಚರಿತ್ರೆಯ ಕೃಷಿಗೆ ಹೊಸ ಮಾರ್ಗಗಳನ್ನು ತೋರಿಸಿಕೊಟ್ಟರು. ಹೀಗೆ ಅವರು ಮಾಡಲು ವಸಾಹತುಶಾಹಿ ಹಿತಾಸಕ್ತಿಯ ಜರೂರುಗಳು ತಾತ್ವಿಕವಾಗಿ ಮತ್ತು ಹಿನ್ನೆಲೆಯಾಗಿ ಕೆಲಸ ಮಾಡಿದ್ದವೆಂಬುದನ್ನು ನಾವು ಮರೆಯುವ ಹಾಗಿಲ್ಲ. ೧೮ ಮತ್ತು ೧೯ನೆಯ ಶತಮಾನದ ಭಾರತದ ಚಾರಿತ್ರಿಕ ಹಿನ್ನೆಲೆಯ ಜರೂರುಗಳಲ್ಲೇ ಅವರನ್ನಿಟ್ಟು ನೋಡಿದಾಗ ಮಾತ್ರ ಅರ್ಥವಾಗುತ್ತಾರೆ.

೨೦ನೆಯ ಶತಮಾನದ ಚರಿತ್ರೆ ಲೇಖನ ಪರಂಪರೆಯ ವಿಧಾನದ ದೃಷ್ಟಿಯಿಂದ ವೈಜ್ಞಾನಿಕ ಕ್ರಮವನ್ನು ನೋಡುವ ಪ್ರಯತ್ನ ಮಾಡಲಾಗಿದೆ. ವಸ್ತುವಿನ ಆಯ್ಕೆಯ ವಿಷಯದಲ್ಲಿ ಹಾಗೂ ಭಾರತದ ಚರಿತ್ರೆ ಎಂದು ಅವರು ಬರೆದಿರುವ ಚರಿತ್ರೆಯಲ್ಲಿ ರಿಪಬ್ಲಿಕನ್ ಮನೋಧರ್ಮವನ್ನು ಪ್ರಧಾನವಾಗಿ ಕಾಣುತ್ತೇವೆ. ಬಂಗಾಳದ ಅಥವಾ ಉತ್ತರ ಭಾರತದ ಕೆಲವು ಭಾಗಗಳ ಚರಿತ್ರೆಯೇ ಭಾರತದ ಚರಿತ್ರೆಯಾಗಿದೆ. ಹಾಗೆಯೇ ತಮಿಳುನಾಡಿನ ಚರಿತ್ರೆಯೇ ದಕ್ಷಿಣ ಭಾರತದ ಚರಿತ್ರೆಯಾಗಿದೆ. ರಾಜಾರಾಮ ಮೋಹನರಾಯರು ಆಧುನಿಕ ಭಾರತದ ಹರಿಕಾರರಾಗುತ್ತಾರೆ. ಒಟ್ಟು ಇವರೆಲ್ಲ ಭಾರತಕ್ಕೆ ಅನ್ವಯವಾಗುವ ಸಮಾಜ ಸುಧಾರಕರಾಗುತ್ತಾರೆ. ದಕ್ಷಿಣ ಭಾರತದ ಸುಧಾರಕರಿಗೆ ಇಲ್ಲಿ ಜಾಗವೇ ಇಲ್ಲವಾಗಿದೆ. ಕರ್ನಾಟಕದ ಬಸವಣ್ಣ ಮತ್ತು ವಚನಕಾರರು ಕರ್ನಾಟಕದ ಚರಿತ್ರೆಯ ಪುಸ್ತಕಗಳಲ್ಲಿ ಮಾತ್ರ ಸುಧಾರಕರಾಗಿ ಸ್ಥಾನ ಪಡೆಯುತ್ತಾರೆ. ಮೀರಾಬಾಯಿ, ತುಕಾರಾಂ, ಕಬೀರ್‌, ನಾಮದೇವ ಮುಂತಾದ ಅನೇಕರು ಭಾರತದ ನೆಲೆಯಲ್ಲಿ ಸ್ಥಾನ ಪಡೆಯುತ್ತಾರೆ. ಆದರೆ ಪುರಂದರ, ಕನಕರು ಸ್ಥಾನವನ್ನೇ ಪಡೆಯುವುದಿಲ್ಲ. ತಾತ್ವಿಕವಾಗಿ ಈ ಬಗೆಯ ಅನೇಕ ಪ್ರಶ್ನೆಗಳನ್ನು ನಮ್ಮ ಆಧುನಿಕ ಚರಿತ್ರೆಲೇಖನ ಪರಂಪರೆಗೆ ಸಂಬಂಧಿಸಿದಂತೆ ಕೇಳುವುದಕ್ಕೆ ಅವಕಾಶಗಳಿವೆ. ಸಬಾಲ್ಟರ್ನ್ ಚರಿತ್ರೆಕಾರರು ಈ ಬಗೆಯ ಪ್ರಶ್ನೆಗಳಿಂದಲೇ ತಮ್ಮ ತಾತ್ವಿಕ ಹರವನ್ನು ನಿರ್ಮಿಸಿಕೊಂಡಿದ್ದಾರೆ.

* * *

ಮಧ್ಯಕಾಲೀನ ಕ್ರೈಸ್ತ ಚರಿತ್ರೆ ಲೇಖನ ಪರಂಪರೆ ರೂಪುಗೊಂಡಿದ್ದೆ ಕ್ರೈಸ್ತ ಧರ್ಮದ ಬೆಳವಣಿಗೆಯೊಂದಿಗೆ. ಕ್ರೈಸ್ತ ಧರ್ಮವು ಒಂದು ಶಕ್ತಿಯಾಗಿ ಮೇಲೇರುತ್ತಿದ್ದಂತೆ ಗ್ರೀಕರು ಮತ್ತು ರೋಮನ್ನರು ಕಟ್ಟಿದ ಸಾಂಸ್ಕೃತಿಕ ಸ್ತಂಭಗಳು ಕುಸಿಯಲಾರಂಭಿಸಿದವು. ಅವರ ಸಂಪತ್ತಿನ ಸಂರಕ್ಷಣೆ, ರಾಜ್ಯದ ಹಿತ, ಬಹುಜನರ ಬದುಕಿನ ಬಗೆಗಿನ ಆಶಯಗಳು ಹಿಂದೆ ಸರಿದು ಆತ್ಮೋನ್ನತಿ ಮತ್ತು ಭವಿಷ್ಯದ ಬದುಕು ಎಂಬ ಕ್ರೈಸ್ತ ಧರ್ಮದ ಪ್ರತಿಪಾದನೆಯ ಮತ್ತು ಅದರ ವಿಸ್ತರಣಾ ಸಬಲೀಕರಣದ ಪರಿಕರವಾಗಿಯೆ ನೋಡಿದರು. ಕ್ರೈಸ್ತ ಧರ್ಮಕ್ಕೆ ಸೇರಿದ ಮತ್ತು ಅದರ ಭಾಗವಾಗಿ ದುಡಿದವರ ವಿವರಗಳನ್ನು ದಾಖಲಿಸುವುದು, ಕ್ರೈಸ್ತನನ್ನು ದೈವೀ ಪವಾಡಪುರುಷನನ್ನಾಗಿ ಚಿತ್ರಿಸುವ ಮತ್ತು ಅದನ್ನು ಪ್ರತಿಪಾದಿಸುವುದು, ಮಿಶನರಿ ಜನರ ಕಾರ್ಯಗಳನ್ನು ದಾಖಲಿಸುವುದು ಮುಂತಾದ ರೂಪಗಳಲ್ಲಿ ಈ ಪರಂಪರೆ ನಿರ್ಮಾಣಗೊಳ್ಳಲಾರಂಭಿಸಿತು.

ಕ್ರೈಸ್ತ ಧರ್ಮ ಒಂದು ವಿಶ್ವ ಧರ್ಮ, ಮಾನವರೆಲ್ಲರೂ ಒಂದೇ ರಕ್ತ ಮೂಲದಿಂದ ಸೃಷ್ಟಿಯಾದವರು ಎನ್ನುವ ದೃಷ್ಟಿಕೋನದಿಂದ ಈ ಚರಿತ್ರೆಯ ಲೇಖನ ಪರಂಪರೆ ಆರಂಭವಾಯಿತು. ಈ ಲೇಖನ ಪರಂಪರೆ ಕ್ರಿ.ಶ. ೩ ನೆಯ ಶತಮಾನದಿಂದ ಪ್ರಾರಂಭವಾಗಿ ಅನೇಕ ಬಗೆಯ ಬದಲಾವಣೆಗಳಿಗೆ ಒಳಗಾಯಿತು. ಕ್ರೈಸ್ತನ ಕುರಿತಾದ ಲೇಖನಗಳಿಂದ ಆರಂಭಗೊಂಡು, ನಂತರದಲ್ಲಿ ಕ್ರೈಸ್ತ ಧಾರ್ಮಿಕ ಕೇಂದ್ರಗಳ ಚಟುವಟಿಕೆಗಳ ಋತುಮಾನ ಆಧಾರಿತ ‘ಆನಲ್’ ಚರಿತ್ರೆ ಬರವಣಿಗೆಗಳು ರೂಪುಗೊಂಡವು. ‘ಆನಲ್‌’ ಎಂದರೆ ವಾರ್ಷಿಕ ವರದಿ. ಇಲ್ಲಿ ದಿನಾಂಕಗಳು ಬಹಳ ಮುಖ್ಯವಾದವು. ‘ಆನಲ್’ ಮುಂದೆ ಕ್ರಾನಿಕಲ್ ಆದ ವಿಸ್ತೃತ ರೂಪವನ್ನು ಪಡೆಯಿತು. ಎಲ್ಲ ಘಟನೆಗಳ ದಾಖಲಾತೀಕರಣ ಇದು. ಸಂತ ಆಗಸ್ಟೈನ್ (ಕ್ರಿ.ಶ. ೩೫೪-೪೩೦) ಕ್ರೈಸ್ತ ಚರಿತ್ರೆ ಲೇಖನ ಪರಂಪರೆಯ ದೊಡ್ಡ ಪ್ರತಿಭೆ. ಆಗಸ್ಟೈನನು ಚರಿತ್ರೆ ಬರವಣಿಗೆಯನ್ನು ಕ್ರೈಸ್ತಧರ್ಮದ ಪ್ರತಿಪಾದನೆಗೆ ಬಳಸಿಕೊಂಡನು. ಈ ಕೃತಿಯಲ್ಲಿ ಚರಿತ್ರೆಯ ಪುನರಾವರ್ತನೆಯ ಸಿದ್ಧಾಂತವನ್ನು ತಿರಸ್ಕರಿಸುತ್ತಾನೆ. ಇವನ ನಂತರ ಅನೇಕರು ಈ ಮಾರ್ಗಕ್ಕೆ ಸೇರಿದರು. ಇಲ್ಲಿಯ ಪ್ರಮುಖ ಅಂಶವೆಂದರೆ ಇವರೆಲ್ಲರೂ ಕ್ರೈಸ್ತ ಧರ್ಮದ ಅನುಯಾಯಿಗಳಾಗಿ, ಅದರ ಉನ್ನತೀಕರಣ ಮತ್ತು ವಿಸ್ತರಣೆಯ ರೂವಾರಿಗಳೆಂದು ಭಾವಿಸಿ, ಚರಿತ್ರೆಯನ್ನು ರಚಿಸಿದವರು. ಹೀಗಾಗಿ ಇವರು ಸೃಷ್ಟಿಸಿದ ಲೇಖನ ಪರಂಪರೆಯಲ್ಲಿ ಗಂಭೀರ ಸ್ವರೂಪದ ಮಿತಿಗಳನ್ನು ಗುರುತಿಸಬಹುದು. ಮೊದಲನೆಯದಾಗಿ ಅದನ್ನು ಸಾರ್ವಕಾಲಿಕ ಚರಿತ್ರೆ ಎಂದು ಕರೆದದ್ದೇ ಅದರ ಮಿತಿಯನ್ನು ಸಾರುತ್ತದೆ. ಈ ಜಗತ್ತಿನಲ್ಲಿ ಆಗುವ ಎಲ್ಲ ಘಟನೆಗಳ ಹಿಂದೆ ದೈವೀಶಕ್ತಿಯಿದೆ. ಅದರ ನಿರ್ದೇಶನದ ಮೇಲೆಯೇ ಎಲ್ಲವೂ ಸಾಗುತ್ತದೆ ಎನ್ನುವ ಸಂದೇಶವನ್ನು ಸಾರುವುದೇ ತಮ್ಮ ಧ್ಯೇಯ ಎಂದುಕೊಂಡಿದ್ದು, ಕ್ರೈಸ್ತನ ಬದುಕಿನ ಸುತ್ತಲಿನ ವಿವರಗಳಿಗೇ ಅವರು ಅಂಟಿಕೊಂಡಿದ್ದು ಮುಂತಾದವು ಅದರ ಇತರ ಮಿತಿಗಳು.

ಈ ಬಗೆಯ ಕ್ರಿಶ್ಚಿಯನ್ ಚರಿತ್ರೆ ಲೇಖನ ಕ್ರಮ ಯುರೋಪಿಯನ್‌ ಚರಿತ್ರೆ ಲೇಖನ ಪರಂಪರೆಯಾಗಿ ಕಸಿಗೊಂಡು ರೂಪಾಂತರವಾದದ್ದೇ ಒಂದು ರೋಚಕ, ರಮ್ಯ ಕಥೆ. ಧರ್ಮ ಮತ್ತು ರಾಜ್ಯಗಳು ಅಲ್ಲಿಯ ಜನರ ಬದುಕಿನ ಜತೆಗೆ ಚಲ್ಲಾಟ ನಡೆಸಿ, ಅವರ ಮೂಲಭೂತ ಹಕ್ಕುಗಳನ್ನು ನಾಶ ಮಾಡಿದವು. ನಿರಂತರವಾಗಿ ಜರುಗುತ್ತಿದ್ದ ರಾಜಕೀಯ ಘಟನೆಗಳು ಹೊಸ ಆಲೋಚನೆಗಳ ಅಂಕುರಕ್ಕೆ ನಾಂದಿ ಹಾಡಿದವು. ವ್ಯಕ್ತಿ ಸ್ವಾತಂತ್ರ‍್ಯ ಮತ್ತು ಸಮಾನತೆಯ ತತ್ವಗಳ ಮಾರಣಹೋಮಗಳು ಹೊಸ ತಾತ್ವಿಕ ದೃಷ್ಟಿಕೋನಗಳನ್ನು ತಂದವು. ಪುನರುಜ್ಜೀವನ, ವೈಜ್ಞಾನಿಕ ಅನ್ವೇಷಣೆಗಳು, ಜ್ಞಾನೋದಯ, ರಮ್ಯ ಚಳವಳಿ, ಬರ್ಲಿನ್‌ ಕ್ರಾಂತಿ, ನಿಶ್ಚಿತತೆಯ ಸಿದ್ಧಾಂತ ವರ್ಗ ಸಂಘರ್ಷ, ಸಿದ್ಧಾಂತ ವೈಜ್ಞಾನಿಕ ಚರಿತ್ರೆಯ ಸಿದ್ಧಾಂತ, ಚರಿತ್ರೆಯ ಸಾಪೇಕ್ಷ ಸಿದ್ಧಾಂತ, ಪೂರ್ಣ ಚರಿತ್ರೆಯ ದೃಷ್ಟಿಕೋನ, ಆಧುನಿಕೋತ್ತರವಾದ ಮುಂತಾದ ಚಿಂತನ ಪರಂಪರೆಗಳು ಚರಿತ್ರೆಯನ್ನು ವಿಭಿನ್ನ ದೃಷ್ಟಿಕೋನಗಳಲ್ಲಿ ವಿಶ್ಲೇಷಿಸಿವೆ. ಚರಿತ್ರೆಯ ಗಂಭೀರ ವಿದ್ಯಾರ್ಥಿಗೆ ಇವೆಲ್ಲವುಗಳನ್ನು ಅರ್ಥೈಸಿ ಅರಗಿಸಿಕೊಳ್ಳುವುದೇ ಒಂದು ದೊಡ್ಡ ಸವಾಲು. ಇವುಗಳಿಗೆ ಬೌದ್ಧಿಕವಾಗಿ ಮುಖಾಮುಖಿಯಾಗಲು ಬೇರೆ ಬಗೆಯ ತಯಾರಿಯೇ ಇರಬೇಕಾಗುತ್ತದೆ. ಅಂತರ್‌ಶಿಸ್ತುಗಳ ಜೊತೆಗೆ ನಿರಾತಂಕವಾಗಿ ಮತ್ತು ನಿರಾಳವಾಗಿ ಸಂವಾದ ಸಾಧ್ಯವಿದ್ದವರಿಗೆ ಮಾತ್ರ ಹಿಡಿತಕ್ಕೆ ದಕ್ಕುವ ಬೌದ್ಧಿಕ ಕ್ಷೇತ್ರವಿದು. ಆದರೆ ಯುರೋಪಿಯನ್‌ ಚರಿತ್ರೆ ಲೇಖನ ಹಾದಿಯ ಮೂಲವೇ ಚರ್ಚ್‌ಮತ್ತು ಕ್ರೈಸ್ತ ಕೇಂದ್ರಿತ ಚರಿತ್ರೆಯ ದೃಷ್ಟಿಕೋನ ಎಂಬುದನ್ನು ಕಷ್ಟವಾದರೂ ಒಪ್ಪಲೇಬೇಕು.

* * *

ಕ್ರೈಸ್ತ ಚರಿತ್ರೆ ಲೇಖನ ಪರಂಪರೆ ಮತ್ತು ಅರಬ್‌ ಪರಂಪರೆಗಳಲ್ಲಿ ಒಂದು ಸಾಮಾನ್ಯ ಅಂಶವೆಂದರೆ ಇಬ್ಬರೂ ಧರ್ಮಕ್ಕೆ ನಿಷ್ಠರಾಗಿ ಚರಿತ್ರೆಯನ್ನು ಬರೆದಿದ್ದು. ಆದರೆ ಕ್ರೈಸ್ತ ಧರ್ಮದಲ್ಲಿದ್ದಂತೆ ಇಲ್ಲಿ ಬ್ರಹ್ಮಚರ್ಯೆ ಒಪ್ಪಿತ ಬದುಕಿನ ಮೌಲ್ಯವಲ್ಲ.

ಇಸ್ಲಾಮಿಕ್ ಪರಂಪರೆಯಲ್ಲಿ ತಾರೀಕ್ (Ta’rikh) ಎನ್ನುವುದು ಒಂದು ಪ್ರಧಾನವಾದ ಅಂಶ. ಇಸ್ಲಾಂ ಪೂರ್ವದಲ್ಲಿ ಇಲ್ಲಿಯೂ ಚರಿತ್ರೆಯನ್ನು ಅವರ ಲಾವಣಿಗಳಲ್ಲಿ ಮತ್ತು ವಂಶಾವಳಿಯ ಕಥನಗಳಲ್ಲೇ ಕಾಣಬಹುದು. ಅರಬ್ಬರಿಗೆ ಗ್ರೀಕರ ಜೊತೆಗೆ ಒಡನಾಟವಿದ್ದರೂ ಅವರ ವಿಜ್ಞಾನ ಹಾಗೂ ಇತರೆ ಜ್ಞಾನಶಾಖೆಗಳಿಗೆ ತೆರೆದುಕೊಂಡ ಹಾಗೆ ಚರಿತ್ರೆ ಲೇಖನ ಪರಂಪರೆಗೆ ತೆರೆದುಕೊಳ್ಳಲಿಲ್ಲ. ಹೆರೋಡೊಟಸ್ ಆಗಲಿ, ಥೂಸಿಡೈಡ್ಸ್ ಆಗಲಿ ಇವರನ್ನು ಪ್ರಭಾವಿಸಲಿಲ್ಲ. ಚರಿತ್ರೆ ಲೇಖನ ಸೃಷ್ಟಿ ಮೊದಲು ಆರಂಭಗೊಂಡಿದ್ದು ಪರ್ಶಿಯಾದಲ್ಲಿ. ದೇಶಭ್ರಷ್ಟರಾಗಿ ಬಂದು ನೆಲೆಸಿದ್ದ ಗ್ರೀಕ್ ವಿದ್ವಾಂಸರು ಇಲ್ಲಿನ ಚರಿತ್ರೆ ಬರವಣಿಗೆಯ ಆರಂಭಕ್ಕೆ ಉತ್ತೇಜನ ನೀಡಿದರು. ನಂತರ ರೋಮನ್ನರಂತೆ ಅರಬ್ಬರಿಗೂ ರಾಜ್ಯ ಕಟ್ಟುವ ಮತ್ತು ವಿಸ್ತರಿಸುವ ಅದಮ್ಯ ಆಸಕ್ತಿಯಾಯಿತು. ಇವರ ಈ ಗುಣ ಚರಿತ್ರೆಯನ್ನು ಬರೆಯಲು ಪ್ರೇರೇಪಿಸಿತು. ಕ್ರಿ.ಶ. ೭ನೆಯ ಶತಮಾನದ ನಂತರವೇ ಇಲ್ಲಿ ಚರಿತ್ರೆ ಲೇಖನ ಪರಂಪರೆ ಊರ್ಜಿತಗೊಂಡಿತು. ಅವರ ಧರ್ಮನಿಷ್ಠೆ, ರಾಜ್ಯ ಕಟ್ಟುವ, ವಿಸ್ತರಿಸುವ ಬಯಕೆ ಮತ್ತು ಸಂತ ಮಹಮ್ಮದ್ ಪೈಗಂಬರರು ಕ್ರಿ.ಶ. ೬೨೨ ರಲ್ಲಿ ಮಕ್ಕಾದಿಂದ ಮದೀನಕ್ಕೆ ಬಂದದ್ದು ಅವರ ಚರಿತ್ರೆ ಲೇಖನ ಕೃಷಿ ತೀವ್ರಗೊಳ್ಳಲು ಕಾರಣವಾದವು. ಪೈಗಂಬರ ಅವರು ಮದೀನಕ್ಕೆ ಬಂದದ್ದು ಹಿಜಿರಾ ಎಂಬ ಶಕೆಯನ್ನು ಹುಟ್ಟುಹಾಕಿ, ಕಾಲಗಣನೆಗೆ ಚಾಲನೆಯನ್ನು ನೀಡಿತು. ನಂತರದ ಶತಮಾನಗಳಲ್ಲಿ ತೀವ್ರತರ ಚರಿತ್ರೆಯು ಬರವಣಿಗೆಗಳು ಕಾಣಿಸಿಕೊಂಡವು. ‘ಕುಡಯ್-ನಾಮಕ್’ ಗ್ರಂಥದಿಂದ ಆರಂಭಗೊಂಡ ಈ ಪರಂಪರೆ ಅಲ್ ಬರೂನಿ, ಇಬನ್ ಬತೂತಾ, ಇಬನ್ ಖಾಲ್ದೂನ್‌ ಮುಂತಾದ ಪ್ರತಿಭಾವಂತರನ್ನು ಹುಟ್ಟುಹಾಕಿತು. ಇವರ ಇಡೀ ಪರಂಪರೆಯಲ್ಲಿ ಇಬನ್ ಖಾಲ್ದೂನ್‌ ಬಹಳ ಪ್ರಮುಖನು. ಅಂತರ್‌ಶಿಸ್ತೀಯ ನೆಲೆಗಳನ್ನು ಶೋಧಿಸಿ ಅವುಗಳನ್ನು ಚರಿತ್ರೆ ಬರವಣಿಗೆಯಲ್ಲಿ ಬಳಸಿಕೊಂಡ ಅವನ ಕ್ರಮ ಅನನ್ಯವಾದದ್ದು. ವಿಶೇಷವಾಗಿ ಸಮಾಜಶಾಸ್ತ್ರ ಮತ್ತು ಅರ್ಥಶಾಸ್ತ್ರಗಳನ್ನು ಬಳಸಿಕೊಂಡಿದ್ದಾನೆ. ಚರಿತ್ರೆಯನ್ನು ಹೇಗೆ ಗ್ರಹಿಸಿ ಬರೆಯಬೇಕು ಮತ್ತು ಅದರಲ್ಲಿ ಅನುಸರಿಸಬೇಕಾದ ವಿಧಾನ, ಚರಿತ್ರೆಕಾರನಿಗಿರಬೇಕಾದ ಎಚ್ಚರ, ಆಕರಗಳನ್ನು ಒರೆ ಹಚ್ಚಿ ಹೇಗೆ ಬಳಸಿಕೊಳ್ಳಬೇಕು ಎಂಬ ಇಂದಿಗೂ ಪ್ರಸ್ತುತವಾದ ವಿಧಾನವನ್ನು ಅವನು ತನ್ನ ಮುಖದ್ದಿಮಾ ಗ್ರಂಥದಲ್ಲಿ ಚರ್ಚಿಸಿದ್ದಾನೆ. ಕ್ರಿ.ಶ. ೧೪ನೆಯ ಶತಮಾನದಲ್ಲಿ ಇವನೊಂದಿಗೆ ಚರಿತ್ರೆ ಲೇಖನ ಪರಂಪರೆಯ ಒಂದು ಯುಗ ಅಂತ್ಯವಾಯಿತು.

ಪ್ರಸ್ತುತ ಲೇಖನವು ಈ ಹಿನ್ನೆಲೆಯಲ್ಲಿ ಪ್ರಾಚೀನ ಚರಿತ್ರೆ ಬರವಣಿಗೆಯ ಕ್ರಮವನ್ನು ಅಭ್ಯಸಿಸಲು ಪ್ರಯತ್ನಿಸಿದೆ. ಇದರ ಭಾಗವಾಗಿ ಈ ಲೇಖನದ ಮೊದಲನೆಯ ಭಾಗದಲ್ಲಿ ಗ್ರೀಕ್-ರೋಮನ್ನರ ಚರಿತ್ರೆ ಲೇಖನ ಪರಂಪರೆಯನ್ನು, ಎರಡನೆಯ ಭಾಗದಲ್ಲಿ ಅರಬ್ ಮತ್ತು ಚರ್ಚ್‌ ಚರಿತ್ರೆ ಲೇಖನ ಪರಂಪರೆಯನ್ನು ಮತ್ತು ಮೂರನೆಯ ಭಾಗದಲ್ಲಿ ಭಾರತೀಯ ಚರಿತ್ರೆ ಲೇಖನ ಪರಂಪರೆಯನ್ನು ಚರ್ಚಿಸಲಾಗಿದೆ.

೧. ಗ್ರೀಕ್-ರೋಮನ್ನರ ಚರಿತ್ರೆ ಲೇಖನ ಪರಂಪರೆ

ಪಾಶ್ಚಾತ್ಯರಲ್ಲಿ ವಿಶೇಷವಾಗಿ ಗ್ರೀಕರು, ಅದರಲ್ಲೂ ಅಯೋನಿಯಾದ ಜನರು ಚರಿತ್ರೆ ಲೇಖನ ಪರಂಪರೆಗೆ ಅಸ್ತಿಭಾರವನ್ನು ಹಾಕಿದರು. ಇವರೇ ನಾವು ಮುಂದೆ ನೋಡುವ ಲೋಗೋಗ್ರಾಫರ್ಸ್‌ ಅಥವಾ ಗದ್ಯಾತ್ಮಕ ಚರಿತ್ರೆ ಲೇಖಕರು. ಚೀನಿಯರಿಗೆ ಹೋಲಿಸಿದರೆ, ಗ್ರೀಕರು ಚರಿತ್ರೆ ಲೇಖನ ಪರಂಪರೆಗೆ ಒಂದು ದೊಡ್ಡ ಬೌದ್ಧಿಕ ವಿಸ್ತಾರವನ್ನು ಒದಗಿಸಿದರು. ‘ಹಿಸ್ಟೋರಿ’ ಅನ್ನುವ ಗ್ರೀಕ್ ಮೂಲದ ಪದವೇ ಇದಕ್ಕೆ ಸಾಕ್ಷಿ.

ಗ್ರೀಕರಂತೆ ರೋಮನ್ನರು ಚರಿತ್ರೆ ಲೇಖನ ಕಲೆಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ರೋಮನ್ನರ ಚರಿತ್ರೆ ಲೇಖನ ಪರಂಪರೆ ಪ್ರಾರಂಭವಾದುದು ಗ್ರೀಕ್ ಮೂಲದವನಾದ ಪೋಲಿಬಿಯಸ್‌ನಿಂದಲೇ. ರೋಮನ್ನರಾದ ಫೇಬಿಯಸ್ ವಿಕ್ಟರ್‌‘ಮಾರ್ಕಸ್‌ಕ್ಯಾಟೋ’ ಹಿರಿಯ, ಲಿವಿ ಹಾಗೂ ಕಾರ್ನೇಲಿಯಸ್ ಟ್ಯಾಸಿಟಸ್ ಮುಂತಾದ ಚರಿತ್ರೆಕಾರರು ರೋಮನ್ ಚರಿತ್ರೆ ಲೇಖನಶಾಸ್ತ್ರವನ್ನು ಕಟ್ಟಿಬೆಳೆಸಿದರು.

ಅರಬ್ಬರಲ್ಲಿಯೂ ಚರಿತ್ರೆಯನ್ನು ಬರೆಯುವ ಸಂವೇದನೆಯನ್ನು ಕಾನಬಹುದು. ‘ಇಸನಾದ್’ ಹಾಗೂ ‘ಪ್ರಯಾಣ ವೃತ್ತಾಂತಗಳು’ ಅವರು ಚರಿತ್ರೆ ಲೇಖನ ಪರಂಪರೆಗೆ ನೀಡಿರುವ ಪ್ರಥಮ ಪ್ರಮುಖ ಕಾಣಿಕೆಗಳು. ಇಬನ್‌ಇ-ಹಿಷಾಮ್, ಮಹಮದ್ ಇಷಾಕ್, ಇಕನ್-ಇ-ಯಾಹ್ಯ, ವಾದಿಕೆ, ಆಲ್‌ಮದಾನಿ, ಆಲ್‌-ಷಕ್ರೀ ಹಾಗೂ ಪ್ರಮುಖವಾಗಿ ಆಲ್ಬರೂನಿ ಮಸೂದಿ ಮತ್ತು ಇಬನ್‌ಕಾಲ್ದೂನ್ ಅವರನ್ನು ಗಮನಿಸಬಹುದು. ಚರಿತ್‌ಎಯ ಪ್ರಜ್ಞೆ ಇವರಲ್ಲಿ ವಿಶೇಷವಾಗಿತ್ತು ಎಂಬುದನ್ನು ಈ ಮೇಲ್ಕಾಣಿಸಿದ ಲೇಖಕರ ಕೃತಿಗಳೇ ಹೇಳುತ್ತವೆ.

ಮಧ್ಯಯುಗದ ಚರಿತ್ರೆ ಲೇಖನ ಪರಂಪರೆಯಲ್ಲಿ ಚರ್ಚ್ ಸಂಪ್ರದಾಯಕ್ಕೂ ಮಹತ್ವದ ಸ್ಥಾನವಿದೆ. ಕ್ರೈಸ್ತಧರ್ಮದ ಅನುಯಾಯಿಗಳು ಕ್ರಮೇಣ ಚರಿತ್ರೆಯನ್ನು ಸೃಷ್ಟಿಸಲು ಪ್ರಾರಂಭಿಸಿದರು. ಕ್ರೈಸ್ತಧರ್ಮದ ಉಗಮ ಮತ್ತು ಬೆಳವಣಿಗೆಯೇ ಒಂದು ದಡ್ಡ ಚರಿತ್ರೆ. ಇದನ್ನು ಸಂಬಂಧಿಸಿದ ಅಧ್ಯಾಯದಲ್ಲೇ ವಿವರಿಸಲಾಗಿದೆ. ಈ ಸಂಪ್ರದಾಯದಲ್ಲಿ ಕಾಣುವ ಚರಿತ್ರೆಕಾರರೆಂದರೆ ಸೆಕ್ಸಟಸ್, ಸಿವಿರಸ್ ಹಾಗೂ ಸೈಂಟ್ ಅಗಸ್ಟಿನ್ ಮುಂತಾದವರು ಇವರಲ್ಲಿ ಅತಿ ಮುಖ್ಯನಾದವನೆಂದರೆ ಸೈಂಟ್ ಅಗಸ್ಟಿನ್ ಎನ್ನುವವನು.

ಚರಿತ್ರೆ ಲೇಖನ ಪರಂಪರೆ ಬಹುದೊಡ್ಡ ಬದಲಾವಣೆಗಳಿಗೆ ಒಳಗಾದದ್ದು ಆಧುನಿಕ ಕಾಲದಲ್ಲಿ. ಪುನರುಜ್ಜೀವನ ಹಾಗೂ ಜ್ಞಾನೋದಯ ಚಳವಳಿಗಳು ಚರಿತ್ರೆಯನ್ನು ಗ್ರಹಿಸುವ ಕ್ರಮದಲ್ಲಿ ಗುರುತರವಾದ ಬದಲಾವಣೆಗಳನ್ನು ತಂದವು. ಧರ್ಮ, ಮತೀಯ ಕೇಂದ್ರಿತ ಚರಿತ್ರೆ ಲೇಖನ ಪರಂಪರೆಯ ಬದಲಿ ಜಾತ್ಯಾತೀತ ದೃಷ್ಟಿಕೋನಗಳ ಚರಿತ್ರೆ ಲೇಖನ ಪರಂಪರೆ ಪ್ರಾರಂಭವಾಯಿತು. ಬೇರೆ ರೀತಿಯಲ್ಲಿ ಹೇಳುವುದಾದರೆ ಲೌಕಿಕ ದೃಷ್ಟಿಕೋನಗಳಿಂದ ಪ್ರೇರಿತವಾದ ಚರಿತ್ರೆ ಪ್ರಾರಂಭವಾಯಿತು. ಈ ಕಾಲದ ಚರಿತ್ರೆ ಲೇಖನಗಳ ಮುಖ್ಯ ಕಾಳಜಿಗಳ ಸಾಮಾಜಿಕ ವಾಸ್ತವವನ್ನು ಕಟ್ಟಿಕೊಡುವುದು. ಮಾನವೀಯ ನೆಲೆಗಳನ್ನು ಈ ಪರಂಪರೆಗಳು ಶೋಧಿಸತೊಡಗಿದವು. ೧೯ ಮತ್ತು ೨೦ನೆಯ ಶತಮಾನಗಳಲ್ಲಿ ಚರಿತ್ರೆ ಲೇಖನಕ್ರಿಯೆಯು ಒಂದು ದೊಡ್ಡ ಬೌದ್ಧಿಕ ಚಟುವಟಿಕೆಯಾಯಿತು. ವಿಭಿನ್ನ ದೃಷ್ಟಿಕೋನಗಳಿಂದ ಚರಿತ್ರೆಯನ್ನು ವ್ಯಾಖ್ಯಾನಿಸುವ ಪರಂಪರೆ ಬೃಹದಾಕಾರವಾಗಿ ಬೆಳೆಯತೊಡಗಿತು. ಆಧುನಿಕ ಚರಿತ್ರೆ ಲೇಖನ ಪರಂಪರೆಯು ಆಗಸ್ಟ್‌ಕಾಮ್ಟೆ, ಎಡ್ವರ್ಡ್‌‌ಗಿಬ್ಬನ್, ಥಾಮಸ್ ಕಾರ್ಲೈಲ್‌, ಹೆನ್ರಿ ಥಾಮಸ್ ಬಕಲ್‌, ಅರ‍್ನಾಲ್ಡ್ ಟಾಯ್ನಬೀ, ರ‍್ಯಾಂಕೇ, ಸ್ಪೆಂಗ್ಲರ್ ಮುಂತಾದ ಶ್ರೇಷ್ಠ ಚರಿತ್ರೆಕಾರರನ್ನು ಹುಟ್ಟುಹಾಕಿತು. ಆದರೆ ಚರಿತ್ರೆಯು ಉತ್ಕೃಷ್ಠ ಚಲನಶೀಲತೆಯನ್ನು ಪಡೆದುಕೊಂಡಿದ್ದು ಹೆಗೆಲ್ ಮತ್ತು ಕಾರ್ಲ್‌‌ಮಾರ್ಕ್ಸ್‌‌ರ ಲೇಖನಗಳಲ್ಲಿ. ಚರಿತ್ರೆಯೊಂದಿಗಿನ ನಿರಂತರ ಸಂವಾದದಿಂದ ಚರಿತ್ರೆಗೆ ಇರಬಹುದಾದ ದೊಡ್ಡ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ್ದು ಕಾರ್ಲ್‌ಮಾರ್ಕ್ಸ್‌ನು. ಅನೇಕ ದೇಶಗಳ ಒಟ್ಟಾರೆ ವ್ಯವಸ್ಥೆಗಳನ್ನು ಬದಲಿಸಲು ಇವನ ಸಿದ್ಧಾಂತಗಳು ಕಾರಣವಾದುದನ್ನು ಚರಿತ್ರೆಯ ಪುಟಗಳೇ ಹೇಳುತ್ತವೆ. ಈ ಮೇಲೆ ತಿಳಿಸಿದ ಎಲ್ಲ ಚರಿತ್ರೆಕಾರರು ಚರಿತ್ರೆಯನ್ನು ಯಾವ ಯಾವ ದೃಷ್ಟಿಕೋನಗಳಿಂದ ಅರ್ಥೈಸಿಕೊಳ್ಳಲು ಪ್ರಯತ್ನಿಸಿದ್ದಾರೆಂಬುದನ್ನು ತಿಳಿಯುವುದೇ ಒಂದು ಕುತೂಹಲಕಾರಿ ಅಂಶವಾಗಿದೆ.

ಚರಿತ್ರೆ ಲೇಖನ ಕಲೆಯ ಪ್ರಾರಂಭ

ಚರಿತ್ರೆ ಲೇಖನ ಕಲೆಯ ಪರಂಪರೆಗೆ ವಿಸ್ತಾರವಾದ ತಳಹದಿಯನ್ನು ಸೃಷ್ಠಿಸಿದವರು ಗ್ರೀಕ್ ಮತ್ತು ರೋಮನ್ ಚರಿತ್ರೆಕಾರರು. ಅಲ್ಲಿಯವರೆವಿಗೂ ಚರಿತ್ರೆಯನ್ನು ಕುರಿತಾದ ನಿರ್ದಿಷ್ಟ ಗ್ರಹಿಕೆಯಿರಲಿಲ್ಲ. ಚರಿತ್ರೆ ಎಂಬ ಹೊಸ ಜ್ಞಾನ ಶಾಖೆಯನ್ನು ಆವಿಷ್ಕರಿಸಿದವರೇ ಇವರು. ಅದರಲ್ಲೂ ಇದರ ಕೀರ್ತಿ ಗ್ರೀಕರಿಗೆ ಸಲ್ಲಬೇಕಾಗಿದೆ. ಚರಿತ್ರೆಯನ್ನು ಬರೆಯಲು ಇದ್ದ ಪ್ರೇರಣೆಗಳು ಒಂದೊಂದು ಯುಗದಲ್ಲೂ ಬೇರೆ ಬೇರೆಯಾಗಿದ್ದವು. ಗ್ರೀಕರಿಗೆ ಮತ್ತು ರೋಮನ್ನರಿಗೆ ಇದ್ದ ಪ್ರೇರಣೆಗಳು, ಕ್ರಿಶ್ಚಿಯನ್ನರಿಗೆ ಮತ್ತು ಅರಬ್ ಚರಿತ್ರೆಕಾರರಿಗದ್ದ ಪ್ರೇರಣೆಗಳಿಗಿಂತ ಭಿನ್ನವಾಗಿದ್ದವು. ಚರಿತ್ರೆಯನ್ನು ಕುರಿತಾದ ಸಂವೇದನೆಗಳಲ್ಲಿ ವೈವಿಧ್ಯತೆಯನ್ನು ಕಾಣುತ್ತೇವೆ. ಚರಿತ್ರೆಯ, ಆಧುನಿಕ ಕಾಲದಲ್ಲಿ ಆಮೂಲಾಗ್ರ ಬದಲಾವಣೆಗಳಿಗೆ ಒಳಗಾಯಿತು.

ಗ್ರೀಕ್ ಮತ್ತು ರೋಮನ್ ಚರಿತ್ರೆಕಾರರು ಯುದ್ಧ ಮತ್ತು ರಾಜಕೀಯ ವಿವರಣೆಗೆ ಕಟ್ಟುಬಿದ್ದು ಚರಿತ್ರೆಯನ್ನು ರಚಿಸಿದರು. ಅದರಿಂದಾಚೆಗೆ ಚರಿತ್ರೆಯನ್ನು ಅವರು ಗ್ರಹಿಸಲಿಲ್ಲ. ಅವರು ನಮಗೆ ಮುಖ್ಯರಾಗುವುದು ಚರಿತ್ರೆಯ ಬಹುಮುಖಿ ವಿಸ್ತಾರಗಳನ್ನು ಗ್ರಹಿಸದಿರುವ ಕಾರಣಕ್ಕಲ್ಲ; ಅವರು ಆಯ್ದುಕೊಂಡ ಚರಿತ್ರೆಯನ್ನು ಕಟ್ಟುವಾಗ ಬಳಸಿದ ಕ್ರಮಕ್ಕೆ ಹೊಸ ಮಾರ್ಗಗಳನ್ನು ಹುಟ್ಟುಹಾಕುವವರಿಗೆ ತಪ್ಪುಗಳನ್ನು ಮಾಡುವ ಹಕ್ಕಿರುತ್ತದೆಂಬುದನ್ನು ಬಹುಶಃ ನಾವು ಒಪ್ಪಬೇಕಾಗುತ್ತದೆ. ಈ ಎರಡು ಸಂಪ್ರದಾಯದವರು ಒಂದು ಸೀಮಿತ ಅರ್ಥದಲ್ಲಿ ವೈಜ್ಞಾನಿಕ ವಿಧಾನಗಳನ್ನೇ ಬಳಸಿ ಚರಿತ್ರೆಯನ್ನು ಹೆಣೆದದ್ದು ವಿಶೇಷ. ಈ ಎರಡೂ ಚರಿತ್ರೆ ಲೇಖನ ಸಂಪ್ರದಾಯಗಳನ್ನು ಓದುವುದರ ಮುಖಾಂತರ ನಾವು ಚರಿತ್ರೆಯೆಂಬ ಪರಂಪರೆಗೆ ಪ್ರವೇಶವನ್ನು ಮಾಡಬಹುದು.

ವಿವಿಧ ಕಾಲಘಟ್ಟಗಳಲ್ಲಿ ಚರಿತ್ರೆ ಹೇಗೆ ರೂಪುಗೊಂಡಿತು ಎಂದು ಅಧ್ಯಯನ ಮಾಡುವುದಕ್ಕೆ ಚರಿತ್ರೆ ಲೇಖನಶಾಸ್ತ್ರವೆಂದು ಹೇಳುತ್ತೇವೆ. ಚರಿತ್ರೆ ಲೇಖನ ಶಾಸ್ತ್ರವನ್ನು ಇಂಗ್ಲಿಷ್ ಪದ ಹಿಸ್ಟೊರಿಯೊಗ್ರಫಿ (Historiography) ಎಂಬುದಕ್ಕೆ ಲಿಖಿತ ಸಂವಾದಿಯಾಗಿ ಬಳಸಲಾಗಿದೆ. ಒಂದರ್ಥದಲ್ಲಿ ಚರಿತ್ರೆಯು ಲೇಖನ ಚರಿತ್ರೆಯೇ ಆಗಿದೆ. ಚರಿತ್ರೆಕಾರನು ಆಕರಗಳ ಮೂಲಕ ತನಗೆ ದಕ್ಕಿದ ಅರಿವನ್ನು ನೇಯುತ್ತಾನೆ. ಇದೇ ಚರಿತ್ರೆ ಲೇಖನಶಾಸ್ತ್ರ. ನಾವು ಯಾವುದನ್ನು ಚರಿತ್ರೆ ಎಂದು ಕರೆಯುತ್ತೇವೆಯೋ ಅದು ಮೆಡಿಟರೇನಿಯನ್ ಪ್ರದೇಶದಲ್ಲಿ ಪ್ರಾರಂಭವಾಯಿತು.

ಚರಿತ್ರೆ ಲೇಖನ ಪರಂಪರೆಗೆ ಒಂದು ದೀರ್ಘ ಚರಿತ್ರೆ ಇದೆ. ಕ್ರಿ.ಪೂ. ೬ನೆಯ ಶತಮಾನದಿಂದಲೇ ಇಂತಹ ಪರಂಪರೆ ಬೆಳೆಯಲು ಪ್ರಾರಂಭವಾದುದನ್ನು ಕಾನಬಹುದು. ಈ ಪರಂಪರೆಯು ಗ್ರೀಕರಿಂದ ಪ್ರಾರಂಭವಾಯಿತು. ಯುರೋಪಿನ ಬೌದ್ಧಿಕ ಪರಂಪರೆಯ ಅನೇಕ ಜ್ಞಾನ ಶಾಖೆಗಳಿಗೆ ಭದ್ರ ನೆಲೆಯನ್ನು ನಿರ್ಮಿಸಿದ ಗ್ರೀಕರೇ ಚರಿತ್ರೆಯ ಲೇಖನ ಶಾಸ್ತ್ರಕ್ಕೆ ಭದ್ರ ಬುನಾದಿಯನ್ನು ಹಾಕಿದರು. ಬಹು ಆಯಾಮಗಳ ಆಲೋಚನಾಕ್ರಮವು ಅವರು ಚರಿತ್ರೆ ಬರೆಯಲು ಬಹುಶಃ ಪ್ರೇರೇಪಿಸಿದ್ದಿರಬೇಕು, ಕ್ರಮೇಣ ಈ ಪರಂಪರೆ ಒಟ್ಟಾರೆ ಚರಿತ್ರೆ ಬರವಣಿಗೆಗೆ ವಿಸ್ತಾರ ನೆಲೆಯನ್ನು ಒದಗಿಸಿತು. ರೋಮನ್ನರು ಈ ಪರಂಪರೆಗೆ ಮತ್ತಷ್ಟು ವಿಸ್ತಾರವನ್ನು ಒದಗಿಸಿದರು.

ಈ ಅಧ್ಯಾಯದಲ್ಲಿ ಗ್ರೀಕ್ ಮತ್ತು ರೋಮನ್ ಚರಿತ್ರೆ ಲೇಖನ ಸಂಪ್ರದಾಯಗಳು ಬೆಳೆದ ರೀತಿಯನ್ನು ವಿವರಿಸಲು ಪ್ರಯತ್ನಿಸಲಾಗಿದೆ. ವಿಶೇಷವಾಗಿ ಗ್ರೀಕರು ಸುದ್ರದೊಂದಿಗೆ ಹೊಂದಿದ್ದ ಒಡನಾಟ, ನಗರ ರಾಜ್ಯಗಳಲ್ಲಿದ್ದ ಅಟಾನಮಿ, ಪ್ರಕೃತಿ ಮತ್ತು ಬದುಕಿನ ನಿಗೂಢಗಳ ಹಿಂದಿನ ಸತ್ಯವನ್ನು ಅರಿಯಲು ಕನಸಿನ ಕತೆಗಳನ್ನು ಹೆಣೆದು ವಿವರಿಸಿಕೊಳ್ಳಲು ಪ್ರಯತ್ನಿಸದೇ, ವಾಸ್ತವವಾದಿ ನೆಲೆಗಳನ್ನು ಅರಿಯಲು ಪ್ರಯತ್ನಿಸಿದ ಅವರ ಕ್ರಮದಲ್ಲಿ ಚರಿತ್ರೆ ಲೇಖನ ಶಾಸ್ತ್ರವನ್ನು ಕಟ್ಟುವ ಪ್ರಯತ್ನದ ಹಿನ್ನೆಲೆ ಇದೆ. ವಾಸ್ತವ ತಿಳಿಯಲು ತವಕಿಸುತ್ತಿದ್ದ ಗ್ರೀಕ್ ಮನೋಧರ್ಮದಲ್ಲೇ ಚರಿತ್ರೆಯನ್ನು ಬರೆಯುವ ತುಡಿತವಿತ್ತು. ಹೀಗಾಗಿ ಗ್ರೀಕರ ಕಾಲದಿಂದಷ್ಟೇ ನಾವು ಚರಿತ್ರೆಯ ಕಥನ ಮತ್ತು ಬರವಣಿಗೆಯ ಇತಿಹಾಸವನ್ನು ಗುರುತಿಸಲೂ ಸಾಧ್ಯವಾಗಿದೆ. ಗ್ರೀಕ್ ಕವಿ ಹೋಮರನ ‘ಇಲಿಯಡ್’ ಮತ್ತು ‘ಒಡಿಸ್ಸಿ’ ಸಾಹಿತ್ಯ ಕೃತಿಗಳು ಐತಿಹಾಸಿಕ ಗ್ರಂಥಗಳೆನಿಸಿದ್ದವು. ಇವುಗಳು ಭಾರತದ ‘ರಾಮಾಯಣ’ ಮತ್ತು ‘ಮಹಾಭಾರತ’ಗಳಿದ್ದಂತೆ.

ಕ್ರಿ.ಪೂ. ೬ನೆಯ ಶತಮಾನದಿಂದ ಗ್ರೀಕರು ಚರಿತ್ರೆ ಲೇಖನ ಕಲೆಯ ಪರಂಪರೆಯನ್ನು ಆರಂಭಿಸಿದರು. ಅನೇಕ ಜ್ಞಾನ ಶಾಖೆಗಳ ಉದಯಕ್ಕೆ ಕಾರಣರಾದಂತೆ, ಚರಿತ್ರೆಯ ಲೇಖನ ಕಲೆಯ ಆರಂಭಕ್ಕೂ ಅವರೇ ಮೂಲ ಕಾರಣಕರ್ತರಾದರು. ಕ್ರಿ.ಪೂ. ೬ನೆಯ ಶತಮಾನದಿಂದ ಸ್ಥಳೀಯ ಘಟನೆಗಳನ್ನು, ವ್ಯಕ್ತಿಗಳನ್ನು ಆಧರಿಸಿದ ಲಾವಣಿಗಳು ಮತ್ತು ಕಿರುಕಾವ್ಯಗಳನ್ನು ಕಟ್ಟಿ ಹಾಡುವ ಸಂಪ್ರದಾಯ ಇವರಲ್ಲಿ ಬೆಳೆಯಿತು. ಅವರ ಸಾಹಿತ್ಯ ಸೃಷ್ಟಿಯ ಗರ್ಭದಲ್ಲೇ ಇತಿಹಾಸ ಬರವಣಿಗೆಯ ಉಗಮವನ್ನು ಕಾಣುತ್ತೇವೆ. ಸಾಹಿತ್ಯ ಸೃಷ್ಟಿಯ ಸಾಮಾಜಿಕ ಆಯಾಮ ಚರಿತ್ರೆ ಬರವಣಿಗೆಗೆ ಕಾರಣವಾಯಿತು. ಘಟನೆಗಳನ್ನು ಕಣ್ಣಾರೆ ನೋಡಿದ್ದರಿಂದ ಅವರ ರಚನೆಗಳಲ್ಲಿ ವಿಫುಲ ವಿವರಣೆಗಳಿರುತ್ತಿದ್ದವು. ಜೊತೆಗೆ ವಿಷಯಗಳನ್ನು ಅರಿಯುವ ಕುತೂಹಲ ಹಾಗೂ ವಿಮರ್ಶಿಸುವ ಪ್ರಶ್ನಾಗುಣಗಳು ಅವರ ಬರವಣಿಗೆಯಲ್ಲಿ ಕಾಣುತ್ತದೆ. ಅವರ ವಿಶೇಷ ಗುಣಗಳನ್ನು ಕಂಡಾಗ ಆಧುನಿಕ ಪರಿಭಾಷೆಯಾದ ‘ವಸ್ತುನಿಷ್ಠತೆ’ ಅದರ ಪ್ರಾರಂಭ ಹಂತದಲ್ಲಿ ಗ್ರೀಕರಲ್ಲಿತ್ತು ಎಂಬುದನ್ನು ಗಮನಿಸಬಹುದು.

ಇದೇ ಅವಧಿಯಲ್ಲಿ ‘ಲೋಗೋಗ್ರಫರ್ಸ್‌’ಗಳಿಂದ (ಗದ್ಯ ಬರಹಗಾರರು) ಚರಿತ್ರೆ ಲೇಖನಶಾಸ್ತ್ರ ಪ್ರಾರಂಭವಾಯಿತೆನ್ನಬಹುದು. ಮುಂದೆ ಈ ಶಾಸ್ತ್ರವು ಹೆಚ್ಚಿನ ವಿಸ್ತಾರಕ್ಕೆ ಬೆಳೆಯಲು ಇವರ ಪ್ರಯತ್ನ ಅಗತ್ಯ ಸಾಂಸ್ಕೃತಿಕ ಹಿನ್ನೆಲೆಯನ್ನು ಒದಗಿಸಿಕೊಟ್ಟಿತು. ಈ ಸಮಯದಿಂದ ಗ್ರೀಕ್ ಚರಿತ್ರೆಕಾರರು ತಮ್ಮಲ್ಲಿದ್ದ ಕಟ್ಟುಕತೆಗಳ ಮೇಲಿನ ನಂಬಿಕೆಯನ್ನು ತ್ಯಜಿಸಿ ಸಮಾಜದ ವಾಸ್ತವ ನೆಲೆಗಳ ಬಗೆಗೆ ಅಭಿರುಚಿ ಹಾಗೂ ಆಸಕ್ತಿಯನ್ನು ಬೆಳೆಸಿಕೊಂಡರು. ‘ಲೋಗೋಗ್ರಫರ್‌’ಗಳ ಗದ್ಯ ಬರವಣಿಗೆಯ ಮೂಲಕ ಸಾಮಾಜಿಕ ಚರಿತ್ರೆಯ ಪ್ರಕಾರ ಪ್ರಾರಂಭವಾಯಿತು. ಇತಿಹಾಸ ಲೇಖನ ಕಲೆಯನ್ನು ಒಂದು ವಿಶಿಷ್ಟ ರೂಪವನ್ನಾಗಿ ಬೆಳೆಸಲು ಪ್ರಾರಂಭಿಸಿದರು.

ಹೆರೊಡೋಟಸ್‌ಗಿಂತ ಹಿಂದೆ ರಚಿತವಾದ ಕೆಲವು ಕೃತಿಗಳು ಉಲ್ಲೇಖಾರ್ಹವಾಗಿವೆ, ಅವನ ಚಿಂತನೆಯನ್ನು ರೂಪಿಸಿದ ಮೂಲ ಆಕರಗಳಾಗಿ ಇವು ನಮಗೆ ಮುಖ್ಯವಾಗುತ್ತವೆ. ‘ಪರ್ಸಿಕ’ ಎಂಬ ಕೃತಿಯನ್ನು ಡೈಯೋನಿಸಸ್ ಎಂಬುವನು ಐದು ಸಂಪುಟಗಳಲ್ಲಿ ಕ್ರಿ.ಪೂ. ೬ನೆಯ ಶತಮಾನದಲ್ಲಿ ರಚಿಸಿದನು. ಈ ಸಂಪುಟಗಳು ಗ್ರೀಕ್‌ ಮತ್ತು ಪರ್ಶಿಯಾದ ಚರಿತ್ರೆಯನ್ನು ವಿವರಿಸುತ್ತವೆ. ಕಾರ್ಡಸ್ ಎಂಬುವನು ‘ಮಿಲಿಟಸ್’ ನಗರದ ಚರಿತ್ರೆಯನ್ನು ರಚಿಸಿದನು. ಹಾಗೆಯೇ ಯೂನಿಯನ್ ಎಂಬ ಲೇಖನು ಸಮೋಸ ನಗರದ ಚರಿತ್ರೆಯನ್ನು ಬರೆದನು. ಚಾರನ್ ಎಂಬುವನು ‘ಹಿಸ್ಟರಿ ಆಫ್ ಗ್ರೀಸ್’ ಮತ್ತು ‘ಹಿಸ್ಟರಿ ಆಫ್‌ ಪರ್ಶಿಯ’ ಎಂಬ ಗ್ರಂಥಗಳನ್ನು ರಚಿಸಿದನು. ಜಗ್ಸಂತನು ಲಿಡಿಯಾ ನಗರದ ಇತಿಹಾಸವನ್ನು ಬರೆದನು. ಇನ್ನೊಬ್ಬ ಪ್ರಮುಖ ಲೇಖಕ ಹೆಕೆಟಿಯಸ್ ಎಂಬುವನು ‘ಹಿಸ್ಟೋರಿಯಾ’ ‘ಸರ್ಕೂಟ್‌ ಆಫ್‌ ದಿ ಅರ್ಥ’, ‘ಟ್ರಾವೆಲರ್ಸ್ ಅರೌಂಡ್ ದಿ ವರ್ಲ್ಡ್’ ಹಾಗೂ ‘ಲೋಕಲ್ ಜೀನಿಯಾ ಲಜೀಸ್’ ಎಂಬ ಕೃತಿಗಳನ್ನು ರಚಿಸಿದನು. ಈ ಕೃತಿಗಳು ಹೆರೊಡೋಟಸ್‌ನ ಬೌದ್ಧಿಕ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಿವೆ.

ಹೆರೊಡೋಟಸ್ (ಕ್ರಿ.ಪೂ. ೪೮೪-೪೨೫)

ಗದ್ಯಾತ್ಮಕ ಲೇಖನ ಪರಂಪರೆಯ ಮಾಗಿದ ಹಂತವನ್ನು ನಾವು ಹೆರೊಡೋಟಸ್‌ನಲ್ಲಿ ಕಾಣುತ್ತೇವೆ. ಅಯೋನಿಯಾದಲ್ಲಿ ಬೆಳೆದ ವಿಮರ್ಶಾಶಾಸ್ತ್ರ ಇವನ ಮೇಲೆ ಪ್ರಭಾವ ಬೀರಿತು. ಚರಿತ್ರೆಯ ಕೃತಿ ರಚಿಸಲು ಬೇಕಾದ ಕೆಲವು ಮೂಲಭೂತ ನಿಯಮಗಳನ್ನು ಇವನು ಅರ್ಥಮಾಡಿಕೊಂಡಂತೆ ಕಾಣುತ್ತಾನೆ. ಘಟನೆಗಳನ್ನು ನೋಡುವಾಗ, ನಿರೂಪಿಸುವಾಗ ವೈಜ್ಞಾನಿಕ ದೃಷ್ಟಿಕೋನ ಇವನಲ್ಲಿ ಜಾಗೃತವಾಗಿರುವುದನ್ನು ಕಾನಬಹುದು. ಆದರೂ ಓದುಗನಿಗೆ ಬೇಸರವಾಗಬಾರದು ಎನ್ನುವ ಕಾರಣಕ್ಕೆ ಹೋಮರ್ ಕವಿಯಂತೆ ತಾನೂ ಅಲ್ಲಲ್ಲಿ ಸಂಭಾಷಣೆಗಳನ್ನು ತಂದು ಸಾಹಿತ್ಯಕ ಗುಣವನ್ನು ಉಳಿಸಿಕೊಂಡಿದ್ದಾನೆ. ಹೆರೊಡೋಟಸ್ಸನು ಲಿಕ್ಸಸ್‌ನ ಮಗನಾಗಿ ಗ್ರೀಸ್ ದೇಶದ ವಸಾಹತುಗಳಲ್ಲೊಂದಾದ ಏಷ್ಯಾಮೈನರ್‌ನ ಪಶ್ಚಿಮ ಕರಾವಳಿಯ ಹಾಲಿಕಾರ್ನಸಸ್ ಎಂಬಲ್ಲಿ ಕ್ರಿ.ಪೂ. ೪೮೪ ರಲ್ಲಿ ಜನಿಸಿದನು. ತನ್ನ ಕಾಲಕ್ಕಿಂತ ಹಿಂದೆ ರೂಪುಗೊಂಡ ಚಿಂತನೆಯ ಇತಿಹಾಸದ ಬೇರೆ ಬೇರೆ ಪ್ರಕಾರಗಳ ಸಾಹಿತ್ಯ, ಪಯಣದ ಕತೆಗಳು, ಚರಿತ್ರೆ ಮುಂತಾದುವನ್ನು ಗಾಢವಾಗಿ ಓದಿಕೊಂಡನು. ಸ್ವಾತಂತ್ರ‍್ಯವನ್ನು ಒಂದು ಮೌಲ್ಯವಾಗಿ ಆರಾಧಿಸತೊಡಗಿದನು. ಇದರಿಂದ ಅನಂತರದ ದಿನಗಳಲ್ಲಿ ತೊಂದರೆಗೂ ಒಳಗಾದನು.

ಹೆರೊಡೋಟಸ್‌ನು ಹುಟ್ಟಿದ ಕಾಲಕ್ಕೆ ಆರ‍್ಟಿಮಿಸಿಯಾ ಆ ನಗರದ ಮುಖ್ಯಸ್ಥಳಾಗಿದ್ದಳು. ಈಕೆಯು ಯುದ್ಧಪ್ರಿಯಳಾಗಿದ್ದಳು. ಅವಳ ಮೊಮ್ಮಗ ಲಿಗ್‌ಡಾಮೀಸನು ಒಬ್ಬ ಕೆಟ್ಟ ನಿರಂಕುಶಾಧಿಕಾರಿಯಾಗಿದ್ದನು. ಇದನ್ನು ವಿರೋಧಿಸುತ್ತಿದ್ದ ಹೆರೊಡೋಟಸನು ಒಂದು ಕ್ರಾಂತಿಕಾರ ಪಕ್ಷವನ್ನು ಸೇರಿದನು. ದುರದೃಷ್ಟವಶಾತ್ ಕ್ರಾಂತಿಕಾರಿ ಪಕ್ಷದ ನಾಯಕನನ್ನು ಲಿಗ್‌ಡಾಮೀಸನು ಕೊಲ್ಲಿಸಿದನು. ತನ್ನ ಅಸ್ತಿತ್ವಕ್ಕೆ ಅತಂತ್ರ ಬಂದಾಗ ಹೆರೊಡೋಟಸನು ಹೆರಿಕಾಸ್‌ನ್ನು ತೊರೆದು ಸಮೋಸಗೆ ಓಡಿಹೋದನು. ಮುಂದಿನ ಎಂಟು ವರ್ಷಗಳು ಅಲ್ಲಿಯೇ ನೆಲೆಸಿದನು.

ಮತ್ತೆ ರಾಜಕೀಯ ಸನ್ನಿವೇಶ ಬದಲಾದಂತೆ ತನ್ನ ತಾಯ್ನಾಡಿಗೆ ವಾಪಸ್ಸು ಬಂದನು. ಆದರೆ ಬದಲಾದ ಸನ್ನಿವೇಶವೂ ಅವನ ಜಾಯಾಮಾನಕ್ಕೆ ಒಗ್ಗದ್ದರಿಂದ ಅಲೆದಾಟದ ಜೀವನವನ್ನು ಪ್ರಾರಂಭಿಸಿದನು. ಈ ಅವಧಿಯಲ್ಲಿ ಬ್ಯಾಬಿಲಾನ್‌, ಕ್ರಿಮಿಯಾ, ಸೂಸ, ಲಿಬಿಯಾ, ಈಜಿಫ್ಟ್, ಈಜಿಯಾನ್‌, ಪೊಯೀಷಿಯಾ, ‘ಥ್ರೇಸ್’ ಸಿಥಿಯ ಹಾಗೂ ಗ್ರೀಸ್‌ನ ಎಲ್ಲಾ ಪ್ರಮುಖ ಪ್ರದೇಶಗಳಲ್ಲಿ ವ್ಯಾಪಕವಾಗಿ ಸಂಚರಿಸಿದನು. ಅನೇಕ ಘಟನೆಗಳನ್ನು ಕಣ್ಣಾರೆ ಕಂಡು ಅನೇಕ ಜನರನ್ನು ಭೇಟಿಯಾದನು. ಬೇರೆ ಬೇರೆ ಪ್ರದೇಶಗಳ ಹವಾಗುಣ, ಭೂಗೋಳ, ಪ್ರಾಕೃತಿಕ ಲಕ್ಷಣಗಳು ಹಾಗೂ ಭಿನ್ನ ಭಿನ್ನ ಸಮಾಜಗಳ ಸಾಂಸ್ಕೃತಿಕ ವಿನ್ಯಾಸಗಳನ್ನು ಕಣ್ಣಾರೆ ಕಂಡನು. ಅಲ್ಲಿನ ರಾಜಕೀಯ ವಿದ್ಯಮಾನಗಳನ್ನು ಅರಿತುಕೊಂಡನು. ಚರಿತ್ರೆಯ ಅನ್ವೇಷಣೆಯ ಚರಿತ್ರೆಕಾರನೊಬ್ಬ ಕೈಗೊಂಡ ಅಧ್ಯಯನದ ಪ್ರಥಮ ಪ್ರಯಾಣವಾಗಿತ್ತು. ಈ ಅನುಭವಗಳು ಅವನ ಬರವಣಿಗೆಯ ಉದ್ದಕ್ಕೂ ಹಾಸುಹೊಕ್ಕಾಗಿವೆ. ಅವನ ‘ಹಿಸ್ಟೋರೀಸ್’ ಕೃತಿಯು ಅವನ ಓಡಾಟದ ಅನುಭವಗಳ ಫಲಿತಾಂಶವಾಗಿದೆ.

ಹೆರೊಡೋಟಸನ ಕಾಲಕ್ಕೆ ಪರ್ಷಿಯ ಮತ್ತು ಅಥೆನ್ಸ್‌ಗಳ ನಡುವೆ ಯುದ್ಧವೇರ್ಪಟ್ಟಿತು. ಜೆರಕ್ಸೆಸ್‌ನ ದಂಡಯಾತ್ರೆಗಳನ್ನು ಕುರಿತು ದಾಖಲೆಯೊಂದನ್ನು ಸಿದ್ಧಪಡಿಸಬೇಕೆಂದು ಮೊದಲು ಪ್ರಯತ್ನಿಸಿದನು. ಎರಡು ದೇಶಗಳ ರಾಜಕೀಯ ಸಂಘರ್ಷಗಳು ಸಾಂಸ್ಕೃತಿಕ ಸಂಘರ್ಷಗಳಾಗಿ ಮಾರ್ಪಡುವುದನ್ನು ಗ್ರಹಿಸಿದ ಇವನು ಅವುಗಳನ್ನು ದಾಖಲಿಸುವ ಕೆಲಸವನ್ನು ಮಾಡಿದನು.

ಗ್ರೀಕ್ ಮತ್ತು ಪರ್ಶಿಯನ್ನರ ನಡುವಣ ಯುದ್ಧವು ಹೆರೊಡೋಟಸನ ಚರಿತ್ರೆ ರಚನೆಯ ಕೇಂದ್ರ ವಸ್ತುವಾಯಿತು. ಇದನ್ನು ಎಷ್ಟು ತಾದ್ಯಾತ್ಮದಿಂದ ಬರೆದಿದ್ದಾನೆಂದರೆ ಅದು ಬರಿಯ ಯುದ್ಧ ನಿರೂಪಣೆಯಾಗದೆ, ಒಂದು ಜನಾಂಗದ ಚರಿತ್ರೆಯೇ ಆಯಿತು. ಗ್ರೀಕ್‌ ಮತ್ತು ಪರ್ಶಿಯನ್ನರ ಐತಿಹಾಸಿಕ ಕಥನವೇ ಆಯಿತು. ಇದರಲ್ಲಿ ರಾಜಕೀಯ ಅಂಶಗಳು ಪ್ರಧಾನವಾಗಿದ್ದರೂ, ಸಾಂಸ್ಕೃತಿಕ ಕಥನಗಳು ಹಾಸುಹೊಕ್ಕಾಗಿವೆ. ತನ್ನ ‘ಹಿಸ್ಟೋರೀಸ್’ ಗ್ರಂಥವನ್ನು ಒಂಬತ್ತು ಭಾಗಗಳಲ್ಲಿ ರಚಿಸಿದ್ದಾನೆ. ಪ್ರತಿಭಾಗಕ್ಕೂ ಗ್ರೀಕ್‌ ಕಲಾಭಿಮಾನಿ ದೇವತೆಯ ಹೆಸರನ್ನಿಟ್ಟಿದ್ದಾನೆ. ಆದರೆ ಚರಿತ್ರೆಯ ಅಧಿದೇವತೆಯಾದ ಕ್ಲಿಯೋವಿಗೆ ಪ್ರಥಮ ಹಾಗೂ ಪ್ರಮುಖ ಸ್ಥಾನವನ್ನು ನೀಡಿದನು.

ಇವನ ಒಂಬತ್ತು ಸಂಪುಟಗಳ ಗ್ರಂಥವು ಒಂದು ಮಿತಿಯಲ್ಲಿ ಯುರೋಪಿನ ಚರಿತ್ರೆಯ ಪ್ರಥಮ ದಾಖಲೆಯಾಯಿತು. ಇವನು ಯುದ್ಧದ ಕಥನಗಳನ್ನು ಹೇಳುವಾಗ ವಿಫುಲ ದಂತಕಥೆಗಳನ್ನು ಬಳಸುತ್ತಾನೆ. ಆದರೆ ಅವನಲ್ಲಿನ ವಿಮರ್ಶಕ ಚರಿತ್ರೆಕಾರ ಈ ದಂತ ಕಥೆಗಳ ಮಿತಿಯನ್ನು ತಿಳಿಸುತ್ತಾನೆ. ಅನೇಕ ದಂತಕಥೆಗಳು ನಂಬಿಕೆಗೆ ಅರ್ಹವಲ್ಲವೆಂದೂ ತಿಳಿಸುತ್ತಾನೆ. ಕೊನೆಗೆ ಇವುಗಳ ಮೇಲೆ ತನ್ನ ತೀರ್ಪನ್ನು ನೀಡುತ್ತಾನೆ. ಐತಿಹಾಸಿಕ ರುಜುವಾತುಗಳು ದಾಖಲೆಗಳಲ್ಲಿ ಕಂಡಾಗ ಮಾತ್ರ ಸ್ವೀಕರಿಸುತ್ತಾನೆ. ಸಮಕಾಲೀನ ಸಂದರ್ಭವನ್ನು ತನ್ನ ಅಧ್ಯಯನದ ವ್ಯಾಪ್ತಿಗೆ ತಂದಿದ್ದರಿಂದ ಅವುಗಳ ಬಗೆಗೆ ವಸ್ತುನಿಷ್ಠವಾದ ವಿವರಗಳನ್ನು ಕೊಡಲು ಸಾಧ್ಯವಾಯಿತು. ಅನಿರ್ಬಂಧಿತ ಕುತೂಹಲ, ಅನ್ವೇಷಣಾ ಮನೋಧರ್ಮ, ಸೂಕ್ಷ್ಮವಾಗಿ ಗ್ರಹಿಸುವ ಶಕ್ತಿಗಳು ಅವನಲ್ಲಿ ಹೇರಳವಾಗಿತ್ತು ಎಂಬುದನ್ನು ಅವನ ಕೃತಿ ಹೇಳುತ್ತದೆ. ಘಟನೆಗಳು ಬಿಡಿ ಬಿಡಿಯಾಗಿದ್ದರೂ ಅವುಗಳ ನಡುವೆ ಸಂಬಂಧವಿದೆಯೆಂಬುದನ್ನು ಗ್ರಹಿಸಿ ಸಂಬಂಧಗಳ ಕಾರಣಗಳನ್ನು ಹುಡುಕುವುದು ಚರಿತ್ರೆಕಾರನ ಕೆಲಸವೆಂದು ನಂಬಿದ್ದನು.

ಒಂದು ನಂಬಿಕೆಯ ಪ್ರಕಾರ ಅವನು ತನ್ನ ಗ್ರಂಥದ ಆಯ್ದ ಭಾಗಗಳನ್ನು ಅಥೆನ್ಸ್ ನಗರದ ಜನರ ಮುಂದೆ ಪಠಿಸುತ್ತಿದ್ದನು. ಗ್ರೀಕರಿಗೆ ಈಜಿಫ್ಟಿಯನ್ನರ ಧಾರ್ಮಿಕ ನಂಬಿಕೆಗಳು, ಅವರ ವ್ಯವಸಾಯದ ಕ್ರಮಗಳನ್ನು ವಿವರಿಸುತ್ತಿದ್ದನು. ಇವುಗಳನ್ನು ಒಂದು ಅದ್ಭುತ ಕಥನ ರೂಪಕ್ಕೆ ತಂದು ಹೇಳುತ್ತಿದ್ದನು. ಅವನಿಂದ ರಂಜನೆಯನ್ನು ಪಡೆದ ಜನರು ಒಂದು ಸಾರ್ವಜನಿಕ ನಿಧಿಯಿಂದ ದತ್ತಿಯೊಂದನ್ನು ಕೊಟ್ಟರೆಂಬ ನಂಬಿಕೆಯಿದೆ. ಆರಂಭದಿಂದ ಅಂತ್ಯದವರೆಗೆ ಅಸ್ತವ್ಯಸ್ತವಾಗಿದ್ದ ನೈಜ ಘಟನೆಗಳನ್ನು ಸಮರ್ಪಕವಾಗಿ ಸಂಯೋಜಿಸಿ ಕಥೆ ಹೇಳುತ್ತಿದ್ದನು. ಈ ಕಥಾನಕ ಗುಣವು ಅವನಿಗೆ ಅನೇಕ ಮಿತಿಗಳನ್ನು ತಂದೊಡ್ಡಿದವು. ಅವನ ಬರವಣಿಗೆಗಳ ದೊಡ್ಡಮಿತಿ ಅವುಗಳ ನಾಟಕೀಯ ಗುಣದಲ್ಲಿದೆ. ಚರಿತ್ರೆ ಬರವಣಿಗೆ ಗಳಿಗೆ ಅವಶ್ಯಕವಲ್ಲದ ರಮ್ಯತೆಯನ್ನು ತಂದುಕೊಡುತ್ತಾನೆ. ಇವನ ಅತಿಮುಖ್ಯ ಮಿತಿಯೆಂದರೆ ಭಾಷೆಗಳ ಕಲಿಕೆಯ ಮಿತಿ. ಭಿನ್ನ ಭಿನ್ನ ಸಮಾಜಗಳ ಬಗೆಗೆ ಬರೆಯುವಾಗ ಆಯಾ ಭಾಷೆಗಳ ಜ್ಞಾನವಿಲ್ಲದೆ ಹೋದಾಗ ಅವರ ಕುರಿತಾದ ಚರಿತ್ರೆಯ ಬರವಣಿಗೆ ಒಂದು ದೊಡ್ಡ ಮಿತಿಯನ್ನು ಹೊಂದಿರುತ್ತದೆ. ಪರ್ಶಿಯನ್ ಮತ್ತು ಈಜಿಫ್ಟಿಯನ್ ಭಾಷೆಗಳನ್ನು ಅವನು ಕಲಿತಿರಲಿಲ್ಲ ವಾದ್ದರಿಂದ ಅಷ್ಟರಮಟ್ಟಿಗೆ ಅವನು ರಚಿಸಿದ ಅವರ ಚರಿತ್ರೆಗಳು ಮಿತಿಗೊಳಪಟ್ಟಿವೆ. ಮೂರನೆಯದಾಗಿ ಅವನು ಕೇಳಿಸಿಕೊಂಡ ಕಥೆಗಳನ್ನು ಬಳಸಿಕೊಂಡಿರುವುದರಿಂದ ಆ ರೀತಿಯ ಕಥೆಗಳ ಹಿಂದಿನ ಚರಿತ್ರೆಯ ವಾಸ್ತವವನ್ನು ಗ್ರಹಿಸಲು ಸಾಧ್ಯವಾಗಿಲ್ಲ.

ಹೆರೊಡೋಟಸನು ವಿಭಿನ್ನ ಸಂಪ್ರದಾಯಗಳನ್ನು ಕುರಿತು ಹೇಳಿದ್ದರೂ, ಆ ಸಂಪ್ರದಾಯ ಗಳಿಗೆ ಹೊರಗಿನವನಾಗಿಯೇ ಉಳಿದಿದ್ದನು. ಮನುಷ್ಯರ ನಡುವೆ ನಡೆಯುವ ಘಟನೆಗಳಿಗೆ ದೈವಿಶಕ್ತಿಯೇ ಕಾರಣವೆಂದು ಪ್ರತಿಪಾದಿಸುತ್ತಾನೆ. ಕೆಲವು ರಾಷ್ಟ್ರಗಳಿಗೆ ಭೇಟಿ ನೀಡದೆಯೇ ಕೇಳಿಸಿಕೊಂಡಿದ್ದರ ಆಧಾರದ ಮೇಲೆ ಅಧಿಕೃತ ಮುದ್ರೆಯನ್ನೊತ್ತುವ ಪ್ರಯತ್ನ ಮಾಡುತ್ತಾನೆ. ಆದರೂ ಘಟನೆಯ ಬಗೆಗೆ ವಾಸ್ತವಿಕ ಅಂಶಗಳನ್ನು ಹುಡುಕುವ ಪ್ರಯತ್ನ ಮಾತ್ರ ಮಾಡುತ್ತಾನೆ. ಹೀಗಾಗಿಯೇ ಚರಿತ್ರೆಯನ್ನು ಒಂದು ಶಾಸ್ತ್ರದ ಮಟ್ಟಕ್ಕೆ ತರಲು ಅವನಿಗೆ ಸಾಧ್ಯವಾಯಿತು.

ಈತನು ಗೆದ್ದ ರಚನೆಗೆ ಒಂದು ದೊಡ್ಡ ಚಾಲನೆಯನ್ನು ನೀಡಿದನು. ಪ್ರಾಚ್ಯ ಪ್ರದೇಶಗಳ ಬಗ್ಗೆ ಅವನು ನೀಡುವ ವಿವರಗಳು ಪ್ರವಾಸ ಕಥನ ಕಾವ್ಯಗಳು ಅವನನ್ನು ವಿಶಿಷ್ಟ ಬರಹಗಾರನನ್ನಾಗಿ ಮಾಡಿವೆ. ಇಂದಿಗೂ ಅವನು ಚರಿತ್ರೆ ರಚಿಸಲು ಅನುಸರಿಸಿದ ಮಾರ್ಗಗಳು ಪ್ರಸ್ತುತವಾಗಿವೆ ಹಾಗೂ ಚರಿತ್ರೆ ಲೇಖನಶಾಸ್ತ್ರದ ಖಾಲಿ ಕಪ್ಪು ಹಲಗೆಯ ಮೇಲೆ ಮೂಲ ಗೆರೆಯನ್ನು ಮೂಡಿಸಿದ ಕೀರ್ತಿ ಅವನದು. ವೈಜ್ಞಾನಿಕ, ವೈಚಾರಿಕ, ನಿರೂಪಣಾತ್ಮಕ ವಿಧಾನವನ್ನು ಸೀಮಿತ ವ್ಯಾಪ್ತಿಯಲ್ಲಿ ಬಳಸಿದನು. ಅದ್ದರಿಂದಲೇ ಅವನು ಚರಿತ್ರೆ ಲೇಖನ ಶಾಸ್ತ್ರದ ಪಿತಾಮಹನೆನಿಸಿಕೊಂಡಿದ್ದಾನೆ. ಕ್ರ.ಪೂ. ೪೨೫ ರಲ್ಲಿ ಇವನು ತೀರಿಕೊಂಡನು.