ಅಕ್ಬರನ ಕಾಲದ ಚರಿತ್ರೆ ಲೇಖನ

ಚರಿತ್ರೆಯ ಬರವಣಿಗೆಯು ಮತ್ತಷ್ಟು ಸಂಕೀರ್ಣವಾಗಿದ್ದು ಮತ್ತು ವಿಸ್ತೃತವಾಗಿದ್ದು ಅಕ್ಬರನ ಆಳ್ವಿಕೆಯಲ್ಲಿ ಕಾಲದಲ್ಲಿ. ನಾಲ್ಕು ಕೃತಿಗಳು ಅವನ ಕಾಲದ ವಿಶೇಷ ಕೊಡುಗೆಗಳು. ಅದರಲ್ಲಿ ಎರಡು ಕೃತಿಗಳು ರಾಜನ ನಿರ್ದೇಶನ ಮೇರೆಗೇ ರಚಿತವಾದುವುಗಳು. ಅವುಗಳೆಂದರೆ ತಾರೀಖಿ ಅಲ್‌ಫಿ ಮತ್ತು ಅಕ್ಬರ್‌ನಾಮಾ. ಅಬುಲ್‌ಫಜಲನ ಅಕ್ಬರ್ ನಾಮ ಹೊರಬರುವ ವೇಳೆಗೆ ಖಾಸಗಿಯಾಗಿ ರಚನೆಗೊಂಡ ನಿಜಾವುದ್ದೀನ ಅಹಮದನ ತಬಕ್ಹತ್ ಐ ಅಕ್ಬರಿ ಮತ್ತು ಅಬ್ದುಲ್ ಕ್ವಾದಿಕ್ ಬದೋನಿಯ ಮುಂತಖಚ್ ಉತ್-ತಾವಾರಿಕ್ ಸಿದ್ಧಗೊಂಡಿದ್ದವು. ಖಾಸಗಿಯಾಗಿ ರಚನೆಗೊಂಡ ಈ ಎರಡೂ ಕೃತಿಗಳು ಬಹಳ ಮುಖ್ಯವಾದವು. ಏಕೆಂದರೆ ಅಬುಲ್ ಫಜಲನ ವೈಭವೀಕರಣದ ಚಿತ್ರಣಕ್ಕೆ ಪರ್ಯಾಯವಾಗಿ ವಾಸ್ತವದ ನೆಲೆಗಳನ್ನು ಅವು ಕಟ್ಟಿಕೊಡುತ್ತವೆ.

ತಾರೀಖಿ ಅಲ್‌ಫಿ ಎನ್ನುವ ಗ್ರಂಥವನ್ನು ರಚಿಸಲು ೧೫೮೨ ರಲ್ಲಿ ಅಕ್ಬರನು ತನಗೆ ಆದೇಶವಿತ್ತನು ಎಂದು ಬದೋನಿ ತಿಳಿಸುತ್ತಾನೆ. ಇಸ್ಲಾಮ್ ಧರ್ಮದ ಒದಲ ಸಹಸ್ರದ ಚರಿತ್ರೆಯನ್ನು ಈ ಗ್ರಂಥದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡುತ್ತಾನೆ. ಇದು ಸುಲ್ತಾನನ ಅಪೇಕ್ಷೆಯೂ ಆಗಿತ್ತು. ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ೧೫೮೫ ರಲ್ಲಿ ಈ ಗ್ರಂಥದ ರಚನೆ ಆರಂಭವಾಯಿತು. ಪ್ರವಾದಿ ಮಹಮದನ ಮರಣದ ನಂತರದ ಮೊದಲ ಇಪ್ಪತ್ತೈದು ವರ್ಷಗಳ ಚರಿತ್ರೆಯನ್ನು ಏಳು ಜನ ವಿದ್ವಾಂಸರು ರಚಿಸಿದರು. ನಿಜಾಮುದ್ದೀನ್ ಅಹಮದ್ ಮತ್ತು ಬದೋನಿಯವರೂ ಸೇರಿ ಏಳು ಜನ ವಿದ್ವಾಂಸರಿದ್ದರು. ಈ ಗ್ರಂಥವನ್ನು ರಚಿಸಿಲು ಬೇರೆ ಬೇರೆ ಸಾಮ್ರಾಜ್ಯ ಪ್ರಭುತ್ವ ಪತ್ರಾಗಾರಗಳಿಂದ ದಾಖಲೆಗಳನ್ನು ಕಲೆಹಾಕಲಾಯಿತು. ಘಟನಾವಳಿಗಳ ದಿನಾಂಕಗಳ ಕ್ರಮವನ್ನನುಸರಿಸಿ ಚರಿತ್ರೆಯನ್ನು ಬರೆದಿದ್ದಾರೆ. ಈ ಗ್ರಂಥವನ್ನು ಹೊಗಳುತ್ತ ಹೆಚ್.ಎಂ. ಇಲಿಯಟ್ ಮತ್ತು ಜಾನ್ ಡೊಸನ್ನರು ಇದರ ರಚನೆಗೆ ಇದ್ದ ಎಲ್ಲಾ ದಾಖಲೆಗಳನ್ನು ಹಾಗೂ ಅವು ಹೊಂದಿದ್ದ ದಂತಕತೆಗಳನ್ನು ಬಳಸಿಕೊಂಡಿದ್ದಾರೆ ಎಂದು ಹೇಳುತ್ತಾರೆ. ಪ್ರವಾದಿ ಮಹಮದನ ಸಾವಿನ ಪ್ರಥಮ ವರ್ಷದಿಂದ ಹಿಡಿದು ಪ್ರತಿ ವರ್ಷವೂ ನಡೆದ ಘಟನಾವಳಿಗಳನ್ನು ಅವುಗಳು ಅನುಕ್ರಮದಲ್ಲಿ ದಾಖಲಿಸಲಾಗಿದೆ. ಈ ಗ್ರಂಥವು ಅಕ್ಬರನ ಆಡಳಿತಾವಧಿಯ ಅಧಿಕೃತ ಚಾರಿತ್ರಿಕ ದಾಖಲೆ ಎಂದು ಮಾನ್ಯಗೊಂಡಿದೆ.

ಅಕ್ಬರನ ಕಾಲದ ಮತ್ತೊಂದು ಗ್ರಂಥ ಕ್ವಜಾ ನಿಜಾಮುದ್ದೀನ್ ಅಹಮದ್ ಬರೆದ ತಬಕ್ಹತ್ ಇ ಅಕ್ಬರಿ. ಇದನ್ನು ೧೫೯೩ ರಲ್ಲಿ ಪೂರ್ಣಗೊಳಿಸಲಾಯಿತು. ನಿಜಾಮುದ್ದೀನ್ ಅಹಮದನು ಅಕ್ಬರನ ಕಾಲದಲ್ಲಿ ಭಕ್ಷಿ ಅಥವಾ ಮಿಲಿಟರಿ ಕಾರ್ಯದರ್ಶಿಯಾಗಿದ್ದನು. ಅವನ ಕಾಲದ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದನು. ತನ್ನ ಗ್ರಂಥವನ್ನು ಬರೆಯಲು ಘಟನಾವಳಿಗಳನ್ನು ಕಾಲಾನುಕ್ರಮದಲ್ಲಿ ದಾಖಲಿಸಿದ ಆಕರಗಳು, ಮೌಖಿಕ ಪರಂಪರೆ ಮತ್ತು ಇತರೆ ಲಿಖಿತ ದಾಖಲೆಗಳನ್ನು ಬಳಸಿಕೊಂಡನು. ಈ ಗ್ರಂಥ ವೈಶಿಷ್ಟ್ಯವೆಂದರೆ ಇದು ಅಕ್ಬರನ ಮೊದಲ ೩೮ ವರ್ಷಗಳ ಅವಧಿಯಲ್ಲಿನ ಅವನ ಅಧೀನದಲ್ಲಿದ್ದ ಪ್ರಾಂತ್ಯಗಳ ಚರಿತ್ರೆಯನ್ನು ದಾಖಲಿಸಿರುವುದು. ಅವನು ಹೀಗೆ ಒಮಬತ್ತು ಪ್ರಾಂತ್ಯಗಳ ತಬಕ್ವಾ ಚರಿತ್ರೆಯನ್ನು ಕಟ್ಟಿಕೊಟ್ಟಿದ್ದಾನೆ. ಆ ಪ್ರಾಂತ್ಯಗಳೆಂದರೆ ದೆಹಲಿ, ದಕ್ಷಿಣದ ಭಾಗ, ಗುಜರಾತ್, ಬಂಗಾಳ, ಮಾಳ್ವ, ಜೌನ್‌ಪುರ್, ಸಿಂಧ್, ಕಾಶ್ಮೀರ ಮತ್ತು ಮುಲ್ತಾನ್. ಈ ಭಾಗಗಳ ಚರಿತ್ರೆಯನ್ನು ಅವುಗಳಲ್ಲಿ ಸಂಭವಿಸಿದ ಘಟನೆಗಳ ಅನುಕ್ರಮದಲ್ಲಿ ಬರೆಯುತ್ತಾನೆ. ಮತ್ತೊಂದು ಮುಖ್ಯ ಅಂಶವೆಂದರೆ ಈ ಪ್ರದೇಶಗಳನ್ನು ಆಳಿದ ಸಾಮಂತರ ವಂಶಾವಳಿಗಳನ್ನು ದಾಖಲಿಸುತ್ತಾನೆ. ಈ ರಾಜರು ನಡೆಸಿದ ಯುದ್ಧಗಳು, ದಂಗೆಗಳು ಮುಂತಾದವು ಇಲ್ಲಿ ದಾಖಲಾಗುತ್ತವೆ. ಆದರೆ ಅವರ ಒಟ್ಟು ಆಡಳಿತದ ಬೇರೆ ಬೇರೆ ಆಯಾಮಗಳನ್ನು ಕಟ್ಟಿಕೊಡುವುದಿಲ್ಲ. ಹಾಗೆಯೇ ಚಾರಿತ್ರಿಕವಾಗಿ ಪ್ರಮುಖ ಎನ್ನಿಸುವ ಘಟನೆಗಳಿಗೆ ಅಷ್ಟೊಂದು ಪ್ರಾಮುಖ್ಯತೆಯನ್ನು ನೀಡಿಲ್ಲದಿರುವುದನ್ನು ಗಮನಿಸಬಹುದು. ಉದಾಹರಣೆಗೆ, ಭೈರಾಮ್ ಖಾನನ ಪದಚ್ಯುತಿ, ಅಥವಾ ಚಾರಿತ್ರಿಕವಾಗಿ ಬಹುಮುಖ್ಯ ಎಂದು ಪರಿಗಣಿಸಲ್ಪಟ್ಟಿರುವ ಅಕ್ಬರನ ಧಾರ್ಮಿಕ ನೀತಿಯ ಅನ್ವೇಷಣೆ. ಈ ಮಿತಿಗಳೊಂದಿಗೆ ಈ ಕೃತಿಯನ್ನು ಅದರ ಇತರೆ ಗುಣಗಳಿಗಾಗಿ ನಾವು ಮೆಚ್ಚಬೇಕಾಗುತ್ತದೆ. ಈ ಕೃತಿಯ ಅನನ್ಯತೆಯಿರುವುದು ರಾಜರಿಗಿಂತ ಅವರ ಕಾಲದ ಘಟನಾವಳಿಗಳಿಗೆ ವಿಶೇಷ ಮಹತ್ವ ನೀಡಿರುವುದು ವ್ಯಕ್ತಿನಿಷ್ಠ ಚರಿತ್ರೆಯ ಬದಲಿಗೆ ಘಟನಾವಳಿಗಳಿಗೆ ನಿಷ್ಠವಾಗಿ ರೂಪುಗೊಂಡಿರುವುದು. ಹರ್ಬನ್ಸ ಮುಖಿಯಾ ಅವರು ತಮ್ಮ ಕೃತಿ ಹಿಸ್ಟಾರಿಯನ್ಸ್ ಆಂಡ್ ಹಿಸ್ಟಾರಿಯೋಗ್ರಫಿ ಡ್ಯೂರಿಂಗ್ ದಿ ರ‍್ಹಿನ್ ಆಫ್ ಅಕ್ಬರ್‌ನಲ್ಲಿ ಹೇಳುವಂತೆ ಈ ಕೃತಿಯ ಪ್ರಾಂತೀಯ ಮತ್ತು ಪ್ರಾದೇಶಿಕ ಚರಿತ್ರೆಯ ಕಲ್ಪನೆಯನ್ನು ೧೬ನೆಯ ಶತಮಾನದಲ್ಲಿ ಕಟ್ಟಿಕೊಟ್ಟಿತು.

ಮೊಗಲ್ ಚರಿತ್ರೆ ಲೇಖನ ಪರಂಪರೆಯ ಮಾಲಿಕೆಯ ಮತ್ತೊಂದು ಪ್ರಮುಖ ಕೃತಿ ಮುಂತಖಾಬ್ ಉತ್ ತಾವಾರಿಖ್. ಇದನ್ನು ರಚಿಸಿದವನು ಮುಲ್ಲಾ ಅಬ್ದುಲ್ ಕ್ವಾದಿಕ್ ಬದೋನಿ. ಈ ಕೃತಿಯು ಪೂರ್ಣಗೊಂಡಿದ್ದು ೧೫೯೬ ರಲ್ಲಿ. ಇವನು ೧೫೪೦ ರಲ್ಲಿ ರೋಹಿಲ್ ಖಂಡದ ಬದಾನ್ ಎಂಬಲ್ಲಿ ಷೇಕ್‌ ಮುಲುಕ್ ಷಾನ್ ಮಗನಾಗಿ ಜನಿಸಿದನು. ಒಳ್ಳೆಯ ಶಿಕ್ಷಣವನ್ನು ಪಡೆದ ಇವನು ಚರಿತ್ರೆ, ಖಗೋಳ ಶಾಸ್ತ್ರ ಮತ್ತು ಸಂಗೀತದಲ್ಲಿ ವಿಶೇಷ ಪರಿಣತಿಯನ್ನು ಗಳಿಸಿಕೊಂಡನು. ಇದು ಇವನು ಮುಸ್ಲಿಮ್ ಧಾರ್ಮಿಕ ಮುಖಂಡರಾದ ಉಲೇಮಾಗಳಿಗೆ ಮುಖಾಮುಖಿಯಾಗಲು ಸಹಕಾರಿಯಾಯಿತು. ಅಕ್ಬರನಿಗೆ ಉಲೇಮಾಗಳ ಬಗೆಗೆ ಒಂದು ಬಗೆಯ ಅಸಮಾಧಾನವಿತ್ತು. ಬದೋನನನ್ನು ಉಲೇಮಾಗಳ ನಿಯಂತ್ರಣಕ್ಕೆ ಬಳಸಿಕೊಂಡನು. ಅನಂತರದಲ್ಲಿ ಅಕ್ಬರನಿಗೆ ಇವನ ಬಗೆಗೇ ಅನೇಕ ಪ್ರಶ್ನೆಗಳು ಮತ್ತು ಅನುಮಾನಗಳು ಹುಟ್ಟುಕೊಂಡವು. ಅವರ ನಡುವಿನ ಅಂತರ ದೂರವಾಯಿತು. ಅಕ್ಬರನ ಅನ್ಯಧರ್ಮಗಳ ಬಗೆಗಿನ ಸಹಿಷ್ಣತೆ ಬದೋನಿಗೆ ಅಪಥ್ಯವಾಯಿತು. ಜೊತೆಗೆ ಬದೋನಿಯು ಸೂಫಿಗಳನ್ನು, ಶಿಯಾಗಳನ್ನು ಮತ್ತು ಹಿಂದೂಗಳನ್ನು ದ್ವೇಷಿಸುತ್ತಿದ್ದನು. ಒಟ್ಟಾರೆ ಅಕ್ಬರನ ಒಟ್ಟು ಆಡಳಿತ ಕ್ರಮದ ಬಗ್ಗೆ ಅವನು ತೀವ್ರವಾಗಿ ಅಸಮಾಧಾನಗೊಂಡಿದ್ದನು. ಅಕ್ಬರನ ಧಾರ್ಮಿಕ ನೀತಿ, ಆಡಳಿತ, ಸೈನಿಕ ಆಡಳಿತ ಮುಂತಾದವುಗಳನ್ನು ಕುರಿತು ಒಳನೋಟಗಳನ್ನು ರೂಪಿಸಿಕೊಳ್ಳಲು ಈ ಕೃತಿಯು ಸಹಕಾರಿಯಾಗುತ್ತದೆ. ಏಕೆಂದರೆ ಈ ಕೃತಿಯು ಅಕ್ಬರನ ಕಾಲದ ಎಲ್ಲಾ ಬೆಳವಣಿಗೆಗಳನ್ನು ನೇತ್ಯಾತ್ಮಕ ದೃಷ್ಟಿಕೋನದಿಂದಲೇ ನೋಡುತ್ತದೆ. ಇದು ಇಸ್ಲಾಮ್ ಧರ್ಮಕ್ಕೆ ಅಪಚಾರವಾಗುತ್ತಿದೆ ಎಂದು ಬಗೆಯುತ್ತಾನೆ. ಅಬುಲ್ ಫಜಲ್ ಮತ್ತು ಬದೋನಿ ಎರಡು ವಿಭಿನ್ನ ಸಂವೇದನೆಗಳನ್ನು ಸಂಕೇತಿಸುತ್ತಾರೆ. ಅಬುಲ್‌ಫಜಲ್ ಉದಾರವಾದಿ ಮನೋಧರ್ಮಕ್ಕೆ ಸಂಕೇತವಾಗಿದ್ದರೆ, ಬದೋನಿಯು ಸಂಪ್ರದಾಯವಾದಿ ಮನೋಧರ್ಮಕ್ಕೆ ಸಂಕೇತವಾಗುತ್ತಾರೆ. ಹೀಗಾಗಿ ವಸ್ತುನಿಷ್ಠತೆಯ ಪ್ರಶ್ನೆಯ ಹಿನ್ನೆಲೆಯಲ್ಲಿ ಬದೋನಿಯನ್ನು ನೋಡಿದಾಗ ಅವನಿಗೆ ಅದರ ಪರಿವೆಯೇ ಇರಲಿಲ್ಲ ಎಂದು ಹೇಳಬಹುದು. ಚರಿತ್ರೆ ಬರೆಯುವುದೆಂದರೆ ತನ್ನ ಆಯ್ಕೆಯ ಘಟನೆಗಳು, ವಿಷಯಗಳು ಮತ್ತು ಅವುಗಳಿಗೆ ಸಂಬಂಧಿಸಿದ ಅಭಿಪ್ರಾಯಗಳನ್ನು ಮಾತ್ರ ದಾಖಲಿಸುವುದು ಎಂದು ಅವನು ಭಾವಿಸಿದ್ದನು ಎಂದೆನಿಸುತ್ತದೆ. ಈ ಮಿತಿಗಳ ನಡುವೆಯೂ ಬದೋನಿಯ ಕೃತಿ ಮುಖ್ಯವಾಗುವುದು ಅವನ ಕಾಲದ ರಾಜಕೀಯ ಮತ್ತು ಸಾಂಸ್ಕೃತಿಕ ಆಯಾಮಗಳನ್ನು ದಾಖಲಿಸುವ ಕಾರಣಕ್ಕೆ. ಮೊಗಲರ ಚರಿತ್ರೆ ಲೇಖನ ಪರಂಪರೆಗೆ ಸೇರಿದ ಬಹುಮುಖ್ಯ ಕೃತಿ ಇದು.

ಈ ಪರಂಪರೆಯಲ್ಲಿ ಅತ್ಯಂತ ವಿಶಿಷ್ಟ ಎನ್ನಬಹುದಾದ ಕೃತಿಗಳೆಂದರೆ ಅಕ್ಬರ್ ನಾಮ ಮತ್ತು ಐನಿ ಅಕ್ಬರಿ. ಈ ಕೃತಿಗಳನ್ನು ರಚಿಸಿದವನು ಆ ಕಾಲದ ಶ್ರೇಷ್ಠ ಚರಿತ್ರೆಕಾರನಾಗಿದ್ದ ಶೇಖ್ ಅಬುಲ್ ಫಜಲ್, ಸೂಫಿ ವಿದ್ವಾಂಸನಾಗಿದ್ದ ಶೇಖ್ ಮುಬಾರಕನ ಮಗನಾಗಿ ೧೪ ಜನವರಿ ೧೫೫೦ ರಲ್ಲಿ ಜನಿಸಿದನು. ತನ್ನ ತಂದೆ ಮತ್ತು ತಾತನಿದ ಬೌದ್ಧಿಕ ಸಂಪತ್ತನ್ನು ಬಳುವಳಿಯಾಗಿ ಪಡೆದ ಅಬುಲ್ ಫಜಲನು ವಿದ್ವಾಂಸನಾಗಿ ಎತ್ತರಕ್ಕೆ ಬೆಳೆದನು. ಫಜಲನ ಸಹೋದರ ಅಬುಲ್ ಫೈಜಿ ಎಂಬುವನು ಇವನನ್ನು ಅಕ್ಬರನಿಗೆ ಪರಿಚಯಿಸಿದನು. ತನ್ನ ಅಸಾಧಾರಣ ಪ್ರತಿಭೆಯಿಂದ ಬಹಳ ಬೇಗ ಅಕ್ಬರನ ಆಸ್ಥಾನದಲ್ಲಿ ಅತಿ ಎತ್ತರಕ್ಕೆ ಬೆಳೆದನು. ಅಕ್ಬರನ ಅಹಂನ ಪರ‍್ಯಾಯ ರೂಪ ಎಂತಲೇ ಇವನು ಪರಿಗಣಿಸಲ್ಪಟ್ಟಿದ್ದಾನೆ. ಇವನು ಅಕ್ಬರ ಪ್ರತಿಪಾದಿಸಿ ಬೆಳೆಸಿದ ದಿನ್ ಇಲಾಹಿಯ ಪೌರೋಹಿತ್ಯವನ್ನು ವಹಿಸಿದ್ದನು. ಇವನ ಪ್ರಭಾವವನ್ನು ಸಹಿಸದ ಅಕ್ಬರನ ಮಗನಾದ ಸಲೀಮನ (ನಂತರ ಜಹಾಂಗೀರ್) ಅಪ್ಪಣೆಯ ಮೇರೆಗೆ ಬೀಕ್ ಸಿಂಗ್ ಎನ್ನುವವನು ಫಜಲನನ್ನು ೧೬೦೨ರಲ್ಲಿ ಕೊಲೆ ಮಾಡಿದನು. ಅಕ್ಬರನು ಇವನ ಕೊಲೆಯ ಸುದ್ದಿಯನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲಾಗದೆ, ದುಃಖ ಭರಿತನಾಗಿ ಸುಮಾರು ಮೂರು ದಿನಗಳ ಕಾಲ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ.

ಅಕ್ಬರನ ಇಚ್ಛೆಯಂತೆ ಫಜಲನು ಅಕ್ಬರನ ಕಾಲದಲ್ಲಿ ಅವನ ಒಟ್ಟು ಚಕ್ರಾಧಿಪತ್ಯದಲ್ಲಿ ನಡೆದ ವಿವಿಧ ಬೆಳವಣಿಗೆಗಳ ವೃತ್ತಾಂತವನ್ನು ರಚಿಸಲು ೧೫೯೫ ರಲ್ಲಿ ಪ್ರಾರಂಭಿಸಿ ೧೬೦೨ರಲ್ಲಿ ಪೂರ್ಣಗೊಳಿಸಿದನು. ಅರಬ್ ಮತ್ತು ಪರ್ಶಿಯನ್ ಚರಿತ್ರೆಗಳ ಆಳವಾದ ಜ್ಞಾನ ಇವನಿಗೆ ಇದ್ದುದರಿಂದ ಇವನಿಗೆ ಅಕ್ಬರನ ಕಾಲದ ಚರಿತ್ರೆಯನ್ನು ರಚಿಸುವುದು ಹೆಚ್ಚು ಶ್ರಮದಾಯಕವಾಗಲಿಲ್ಲ. ಜೊತೆಗೆ ಮನುಷ್ಯರ ನಡವಳಿಕೆಗಳನ್ನು ಬಹುಸೂಕ್ಷ್ಮವಾಗಿ ಅವನು ಗಮನಿಸುತ್ತಿದ್ದವನಾದ್ದರಿಂದ ಚರಿತ್ರೆಯ ಗತಿಯನ್ನು ಗ್ರಹಿಸುವುದು ಅವನಿಗೆ ಕಷ್ಟವಾಗಲಿಲ್ಲ. ಅಬುಲ್ ಫಜಲನಿಗೆ ಚರಿತ್ರೆ ಎನ್ನುವುದು ಭೌತಿಕ ಮತ್ತು ಆಧ್ಯಾತ್ಮಗಳು ಸೃಷ್ಟಿಸುವ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಇರುವ ಬೆಳಕು ಹಾಗೂ ವಿಜ್ಞಾನ. ಈ ಗ್ರಂಥವನ್ನು ರಚಿಸುತ್ತಿರುವುದು ಅಕ್ಬರನ ಸಾಧನೆಗಳನ್ನು ಮುಂದಿನ ಪೀಳಿಗೆಯ ಅನುಕೂಲಕ್ಕಾಗಿ ದಾಖಲಿಸುವುದೇ ಹೊರತು ಪ್ರಶಂಸೆ, ಕೀರ್ತಿ, ಹಣ ಮತ್ತು ಪದವಿಯ ಆಸೆಗಾಗಿ ಅಲ್ಲ ಎಂದು ಸ್ಪಷ್ಟಪಡಿಸುತ್ತಾನೆ.

ಅಬುಲ್‌ಫಜಲನು ಈ ಕೃತಗಳ ರಚನೆಗೆ ನಡೆಸಿದ ತಯಾರಿಯನ್ನೂ ದಾಖಲಿಸಿದ್ದಾನೆ. ಬೇರೆ ಬೇರೆ ಮೂಲಗಳಿಂದ ವಿಷಯವನ್ನು ಸಂಗ್ರಹಿಸುವುದರ ಜೊತೆಗೆ ಅವುಗಳ ಸತ್ಯಾಸತ್ಯತೆಯನ್ನು ಕೂಡ ನಿಷ್ಕರ್ಷಿಸುವ ಪ್ರಯತ್ನ ಮಾಡಲಾಯಿತು ಎಂದು ಹೇಳುತ್ತಾರೆ. ಜೊತೆಗೆ ವಿವಿಧ ವರ್ಗಗಳ ಜನರನ್ನು ಸಂದರ್ಶಿಸಿ ಅವರ ಅಭಿಪ್ರಾಯಗಳನ್ನು ಕಲೆ ಹಾಕಿದನು. ಅವರ ದೃಷ್ಟಿಕೋನಗಳನ್ನು ಪ್ರಮುಖ ಆಧಾರಗಳೆಂತಲೇ ಭಾವಿಸಿ ಬಳಸಿಕೊಂಡುದನ್ನು ನೋಡಬಹುದು. ಚರಿತ್ರೆಯನ್ನು ರಚಿಸುವ ಸಂಶೋಧಕನಿಗೆ ಇರಬೇಕಾದ ಪಾಂಡಿತ್ಯ, ಸಹನೆ ಮತ್ತು ಮತ್ತೆ ಮತ್ತೆ ಪರಿಶೀಲಿಸುವ ಗುಣಗಳನ್ನು ಇವನ ಕೃತಿಗಳಲ್ಲಿ ಕಾಣಬಹುದು. ಆಕೃತಿ ಅಥವಾ ಸ್ವರೂಪದ ದೃಷ್ಟಿಯಿಂದ ಅಕ್ಬರ್‌ನಾಮ ಮತ್ತು ಐನಿ ಅಕ್ಬರಿಗಳು ಪರಸ್ಪರ ಪೂರಕವಾದ ಅವಳಿಗಳೆಂದೇ ಭಾಸವಾಗುತ್ತವೆ. ಅಕ್ಬರನ ಕಾಲದ ಸಂಸ್ಥೆಗಳ ಹಿಂದಿನ ಕಾಳಜಿಗಳನ್ನು ಅಕ್ಬರ್ ನಾಮ ಅನಾವರಣಗೊಳಿಸಿದರೆ, ಐನಿ ಅಕ್ಬರಿಯು ವಿಶಾಲ ಸಾಮ್ರಾಜ್ಯ, ಅಕ್ಬರನು ಜಾರಿಗೊಳಿಸಿದ ಆಡಳಿತಾತ್ಮಕ ಪ್ರಯೋಗಗಳು ಮುಂತಾದವುಗಳನ್ನು ಐದು ಸಂಪುಟಗಳಲ್ಲಿ ವಿವರಿಸುತ್ತದೆ. ಅಕ್ಬರ್‌ನಾಮದ ಮೊದಲ ಭಾಗದಲ್ಲಿ ಬಾಬರ್, ಹುಮಾಯೂನನ ಕಾಲದ ಚರಿತ್ರೆಯನ್ನು ಅಕ್ಬರನ ಕಾಲಕ್ಕೆ ಹಿನ್ನೆಲೆಯಾಗಿ ತೆರೆದಿಡುತ್ತದೆ. ಐನಿ ಅಕ್ಬರಿಯು ಅಕ್ಬರನ ಕಾಲಕ್ಕೆ ಸಂಬಂಧಿಸಿದ ರಾಜಕೀಯ ಸಂಸ್ಥೆಗಳು, ಆಡಳಿತಾತ್ಮಕ ಕಾನೂನುಗಳು, ಪ್ರಾಕೃತಿಕ ಸಂಪತ್ತು, ಕೈಗಾರಿಕೆಗಳು, ವ್ಯಾಪಾರ, ಜನರ ನಂಬಿಕೆಗಳು, ಆಚರಣೆಗಳು ಮುಂತಾದ ಅನೇಕ ವಿಷಯಗಳ ಬಗೆಗೆ ಸಮಗ್ರ ಚಿತ್ರಣವನ್ನು ನೀಡುತ್ತದೆ. ಅಂಕಿ ಅಂಶಗಳೊಂದಿಗೆ ಅಕ್ಬರನ ನಲವತ್ತಾರು ವರ್ಷಗಳ ಕಾಲವನ್ನು ಕಟ್ಟಿಕೊಡುತ್ತಾನೆ. ಹಾಗೆಯೇ ಇದರಲ್ಲಿ ನಮಗೆ ಕಾಣುವ ಮತ್ತೊಂದು ಪ್ರಮುಖ ವಿಚಾರವೆಂದರೆ ಫಜಲನು ಈ ಕೃತಿಯನ್ನು ಒಟ್ಟು ಸಂದರ್ಭವನ್ನು ಹಿಂದೂ-ಮುಸ್ಲಿಮ್ ಅಥವಾ ಹಿಂದೂ-ಇಸ್ಲಾಮ್ ಎನ್ನುವ ವಿಭಜಿತ ದೃಷ್ಟಿಕೋನಗಳಲ್ಲಿ ಗ್ರಹಿಸದೆ, ಮಾನವೀಯ ನೆಲೆಗಳಲ್ಲಿ ಗ್ರಹಿಸಲು ಪ್ರಯತ್ನಿಸಿರುವುದು.

ಈ ಕೃತಿಗಳು ೧೬ನೆಯ ಶತಮಾನದ ಭಾರತದ ಚರಿತ್ರೆಯನ್ನು ಕಟ್ಟಿಕೊಡುವ ಕಾರಣಕ್ಕೆ ಮಾತ್ರ ಮುಖ್ಯವಾಗದೇ ಚರಿತ್ರೆಯನ್ನು ಒಂದು ಶಿಸ್ತಾಗಿ ಗ್ರಹಿಸಲು ಕೊಡುವ ಒಳನೋಟಗಳ ಕಾರಣಕ್ಕೂ ಮುಖ್ಯವಾಗುತ್ತವೆ. ಸುಲ್ತಾನರ ಕಾಲದಲ್ಲಿ ರಚನೆಯಾದ ಚರಿತ್ರೆಗಳು ಚರಿತ್ರೆಯ ಕಥನಗಳೇ ಅಲ್ಲ ಎಂದು ಅವನು ಭಾವಿಸುತ್ತಾನೆ ಮತ್ತು ಅವುಗಳನ್ನು ಓದುವುದು ಖಂಡಿತವಾಗಿಯೂ ಕಾಲಹರಣವೆನ್ನುತ್ತಾನೆ. ಮನುಷ್ಯನ ಸಾಧನೆಗಳು, ಅನುಭವಗಳನ್ನು ಕಟ್ಟಿಕೊಡುವ ಇತಿಹಾಸದ ಓದು ಸ್ಫೂರ್ತಿಯನ್ನು ನೀಡುವ ಮೂಲವಾಗಿರುತ್ತದೆ ಎನ್ನುತ್ತಾನೆ. ಚರಿತ್ರೆಯೆನ್ನುವುದು ಮನುಷ್ಯನು ದೈಹಿಕ ಅಥವಾ ಮಾನಸಿಕ ಕ್ಲೇಷಕ್ಕೆ ಒಳಗಾದಾಗ ಎಲ್ಲರಿಗೂ ಸಾಂತ್ವನ ನೀಡುವ ಶಕ್ತಿ, ಕತ್ತಲೆಯನ್ನು ಓಡಿಸಿ ಬೆಳಕನ್ನು ನೀಡುವ ಚೇತನ ಎಂದು ಬರೆಯುತ್ತಾನೆ. ಎಲ್ಲ ದೊಡ್ಡ ಅಥವಾ ಇತರೇ ರಾಜರು ಚರಿತ್ರೆಯಲ್ಲಿ ಬದುಕಿರುವುದೇ ಅವರ ಕಾಲದ ಚರಿತ್ರೆಕಾರರಿಂದ ಎಂದು ಹೇಳುವಾಗ ಚರಿತ್ರೆಕಾರರು ಕಾಲ ದೇಶವನ್ನು ಮೀರಿದ ಶಾಶ್ವತ ಸ್ಥಾನವನ್ನು ತಂದುಕೊಡುವ ಅವಧೂತರು ಎಂದು ಹೆಮ್ಮೆಪಡುತ್ತಾನೆ. ಅಕ್ಬರನು ಕೂಡ ಸಾಮರಸ್ಯದ ಭಾರತಕ್ಕೆ ಬೌದ್ಧಿಕ ಒತ್ತಾಸೆಯನ್ನು ಪಡೆದುಕೊಳ್ಳುವಲ್ಲಿ ಬಹುಶಃ ಅಬುಲ್‌ಫಜಲನನ್ನು ಸಕಾರಣವಾಗಿಯೇ ಬಳಸಿಕೊಂಡಿದ್ದಾನೆ.

ಒಟ್ಟಾರೆ ಅಬುಲ್‌ಫಜಲನು ಚರಿತ್ರೆ ರಚನೆಯಲ್ಲಿ ಹೊಸದಾರಿಯನ್ನು ಸೃಷ್ಟಿಸಿದ್ದಾನೆ. ಅವನ ಕಾಲಕ್ಕಿಂತ ಹಿಂದಿದ್ದ ಮತೀಯ ದೃಷ್ಟಿಯ ಚರಿತ್ರೆ ಲೇಖನ ಪರಂಪರೆಯನ್ನು ಇಡಿಯಾಗಿ ತಿರಸ್ಕರಿಸುತ್ತಾನೆ. ಚರಿತ್ರೆಯನ್ನು ಬರೆಯಲು ಬೇಕಾದ ಹೊಸ ಬೌದ್ಧಿಕ ಕ್ರಮವನ್ನು ಅನುಸರಿಸುತ್ತಾನೆ. ಚರಿತ್ರೆಯೆಂದರೆ ಕೇವಲ ಇಸ್ಲಾಮ್ ಧರ್ಮಕ್ಕೆ ಸೇರಿದ ರಾಜರ ದಾಖಲೆ ಅಥವಾ ಇಸ್ಲಾಮ್ ಧರ್ಮೀಯರಿಗೆ ನೀತಿಬೋಧನೆಯನ್ನು ಹೇಳುವ ಕ್ರಮ ಎನ್ನುವುದನ್ನು ಖಂಡಿಸುತ್ತಾನೆ. ಇವನ ಹಿಂದಿನ ಚರಿತ್ರೆಕಾರರು ನಂಬಿದಂತೆ ಚರಿತ್ರೆ ಎನ್ನುವುದು ಇಸ್ಲಾಮ್ ಮತ್ತು ಹಿಂದೂ ಧರ್ಮೀಯರ ನಡುವಿನ ಸಂಘರ್ಷ ಎನ್ನುವುದನ್ನು ನಂಬುವುದಿಲ್ಲ ಎಂದು ಸ್ಪಷ್ಟಪಡಿಸುತ್ತಾನೆ. ಇವನ ಐನಿ ಅಕ್ಬರಿ ಕೃತಿಯು ಅನ್ಯಧರ್ಮೀಯರನ್ನು ಕೂಡ ಕುರಿತ ದಾಖಲೆಯಾದ್ದರಿಂದ, ಚರಿತ್ರೆಯ ವ್ಯಾಪ್ತಿಯು ವಿಸ್ತಾರಗೊಂಡಿದ್ದನ್ನು ನೋಡಬಹುದು. ಹಿಂದೂಗಳ ಧಾರ್ಮಿಕ ನಂಬಿಕೆಯ ಎರಡೂ ಧರ್ಮೀಯರ ಸಂಘರ್ಷದ ನೆಲೆಯಾಗಿದ್ದಾಗ ಇವನು ಹೇಳುವ ಮಾತುಗಳು ನಿಜಕ್ಕೂ ಮೌಖಿಕವಾದವುಗಳೆ. ಏಕೆಂದರೆ ಹಿಂದೂಗಳ ದೇವರ ಹೆಸರಿನಲ್ಲಿ ವಿವಿಧ ರೂಪಗಳನ್ನು ಆರಾಧಿಸಿದರೂ, ಸೂಕ್ಷ್ಮವಾಗಿ ಗಮನಿಸಿದಾಗ ಕೊನೆಗೆ ದೈವವೆಂಬುದು ಒಂದೇ ಹೊರತು ಅನೇಕವಲ್ಲ ಎಂದು ಹೇಳುತ್ತಾನೆ. ಇಂದಿಗೂ ಈ ಅಂಶ ಬಹುಮುಖ್ಯವಾದದ್ದು.

ಅಲ್ಬರೂನಿಯನ್ನು ಬಿಟ್ಟರೆ ಅವನ ನಂತರದಲ್ಲಿ ಅಬುಲ್ ಫಜಲ್‌ಒಬ್ಬನೇ ಭಾರತೀಯ ಸಮಾಜ, ವಿಶೇಷವಾಗಿ ಹಿಂದೂ ಸಮಾಜವನ್ನು ಒಂದು ಆರೋಗ್ಯವಂತ ನೆಲೆಗಟ್ಟಿನಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದವನು.

ಮೇಲೆ ಹೇಳಿದ ಫಜಲನ ಬಗೆಗಿನ ವಿಶೇಷಣಗಳಿದ್ದರೂ, ಅವನ ಬಗೆಗಿನ ಟೀಕೆಗಳಿಗೂ ಕೊರತೆಯಿಲ್ಲ. ಅವನ ಬಗ್ಗೆಯೂ ಗಂಭೀರ ಸ್ವರೂಪದ ಆರೋಪಗಳಿವೆ. ಅವು ಹೀಗಿವೆ:

ಮೊದಲನೆಯದಾಗಿ ಅವನ ಬಗೆಗೆ ಇರುವ ಆರೋಪವೆಂದರೆ ಅವನು ತನ್ನ ಗ್ರಂಥವನ್ನು ರಚಿಸಲು ಪಡೆದ ಮೂಲ ಆಕರಗಳ ಬಗೆಗೆ ತಿಳಿಸದಿರುವುದು. ಅವನು ಅಕ್ಬರನು ಮಾಡಿದ್ದೆಲ್ಲವನ್ನು ಸಮರ್ಥಿಸುವನಾದದ್ದರಿಂದ ಇವನು ಅಕ್ಬರನ ಹೊಗಳುಭಟ್ಟನಾಗಿದ್ದನು. ಅವನು ಐನಿ ಅಕ್ಬರಿಯನ್ನು ಬರೆಯಲು ಅಬ್ ಬರೂನಿಯ ಗ್ರಂಥದಿಂದ ಸಾಕಷ್ಟು ಮಾಹಿತಿಗಳನ್ನು ಕೃತಿಚೌರ‍್ಯ ಮಾಡಿದ್ದಾನೆ ಎಂಬುದು. ಹಾಗೆಯೇ ಅವನು ಅಕ್ಬರನ ಕಾಲದ ಘಟನೆಗಳನ್ನು ಕುರಿತು ಬರೆಯುವುದಾಗಿ ತನ್ನ ಅಪರಿಮಿತ ಆಯ್ಕೆ ಸ್ವಾತಂತ್ರ‍್ಯವನ್ನು ಬಳಸಿ ಅಕ್ಬರನ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹದದ್ದೇನನ್ನೂ ದಾಖಲಿಸಿಲ್ಲದಿರುವುದು. ವಿಶೇಷವಾಗಿ ಅಕ್ಬರನು ಜಾರಿಗೆ ತಂದ ಕರೋರಿ ಭೂಕಂದಾಯ ಪದ್ಧತಿಯಿಂದ ರೈತರು ಸಂಕಷ್ಟಕ್ಕೆ ಒಳಗಾದದ್ದನ್ನು ಇವನು ಹೇಳುವುದೇ ಇಲ್ಲ. ಇವು ಗಂಭೀರ ಸ್ವರೂಪದ ಮಿತಿಗಳೆ. ಆದರೂ ಅವನ ಸಾಮಾಜಿಕ ದೃಷ್ಟಿಕೋನ, ಸಂಶೋಧನ ಕ್ರಿಯಾಶೀಲತೆ, ಚರಿತ್ರೆ ಬಗೆಗಿನ ದೃಷ್ಟಿಕೋನಗಳನ್ನು ಗಮನಿಸಿದರೆ ಖಂಡಿತವಾಗಿಯೂ ಅವನೊಬ್ಬ ಅನನ್ಯ ಚರಿತ್ರೆಕಾರ ಹಾಗೂ ಮಾನವತಾವಾದಿ.

ಪ್ರಾದೇಶಿಕ ಚರಿತ್ರೆ ಬರವಣಿಗೆಗಳು

ಮೊಗಲು ಭಾರತದ ವಿವಿಧ ಪ್ರದೇಶಗಳ ಮೇಲೆ ತಮ್ಮ ಹಿಡಿತವನ್ನು ಸಾಧಿಸಿದ್ದರು. ಉತ್ತರದಲ್ಲಿ ಕಾಶ್ಮೀರದಿಂದ ದಕ್ಷಿಣದ ಬಹುತೇಕ ಭಾಗಗಳು ಅವರ ಅಧೀನದಲ್ಲಿದ್ದವು. ಅವರ ಅಧೀನದಲ್ಲಿದ್ದ ಅನೇಕ ರಾಜರೂ ಬೇರೆ ಬೇರೆ ಪ್ರದೇಶಗಳನ್ನು ತಮ್ಮ ಹಿಡಿತದಲ್ಲಿಟ್ಟು ಕೊಂಡು ಆಳ್ವಿಕೆಯನ್ನು ನಡೆಸಿದ್ದಾರೆ. ಪ್ರಾದೇಶಿಕ ನೆಲೆಯ ಬರಹಗಳು ಮೊಗಲರು ಮತ್ತು ಅವರ ಅಧೀನದಲ್ಲಿದ್ದ ರಾಜರ ನಡುವಿನ ಸಂಬಂದಗಳನ್ನು ಅನಾವರಣಗೊಳಿಸುತ್ತವೆ. ಫರಿಷ್ತಾ ಎನ್ನುವ ವಿದ್ವಾಂಸನು ೧೯೫೧ ರಲ್ಲಿ ಬಿಜಾಪುರಕ್ಕೆ ವಲಸೆ ಬಂದು ನೆಲೆ ನಿಂತನು. ಇವನ ತಾರೀಖೆ ಫರಿಷ್ತಾ ಗ್ರಂಥವು ದಖನ್ನಿನ ಅನೇಕ ಘಟನೆಗಳನ್ನು ತೆರೆದಿಡುತ್ತದೆ. ತನ್ನ ಗ್ರಂಥವನ್ನು ರಚಿಸಲು ಫರಿಷ್ತಾನು ಹಿಂದಿನ ಅನೇಕ ಗ್ರಂಥಗಳನ್ನು ಬಳಸಿಕೊಂಡಿದ್ದಾನೆ. ದಕ್ಷಿಣ ಭಾರತದ ರಾಜಕೀಯ, ಧಾರ್ಮಿಕ ಚರಿತ್ರೆಯನ್ನು ಅರ್ಥ ಮಾಡಿ ಕೊಳ್ಳಲು ಇದು ತುಂಬಾ ಉಪಯುಕ್ತ ವಾದ ಗ್ರಂಥ. ಗುಜರಾತಿನ ಮಧ್ಯಕಾಲೀನ ಚರಿತ್ರೆಯನ್ನು ತಿಳಿಯಲು ಮೀರ್ ಅಬು ತುರಖ್ ಅಲಿಯ ತಾರೀಖೆ ಗುಜರಾತ್‌ ಎಂಬ ಕೃತಿಯು ನೆರವಾಗುತ್ತದೆ. ಇದೇ ಪ್ರಾಂತ್ಯಕ್ಕೆ ಸಂಬಂಧಿಸಿದ ಮತ್ತೊಂದು ಕೃತಿ ಸಿಕಂದರ್ ಬಿನ್ ಮಹಮದನ ಮೀರತ್ ಸಿಕಂದರಿ ಎಂಬುದು. ಹಾಗೆಯೇ ಸಿಂಧ್ ಪ್ರಾಂತ್ಯದ ಮಧ್ಯಕಾಲೀನ ಚರಿತ್ರೆಯನ್ನು ತಿಳಿಯಲು ಮೀರ್ ಮಹಮದ್ ಮೂಷಮ್‌ನ ತಾರೀಖುಸ್ ಸಿಂಧ್, ಅಲಿಷೇಕ್‌ಖಾನಿಯ ತುಘಾತುಲ್ ಕಿರಾಂ ಹಾಗೂ ಅಬ್ದುಲ್ ಷಕೂರನ ಇಂತೆಖಾಬೆ ಮುಂತೆಖಿ‌ಬ್ ಕಾಲಾಂ ಮುಖ್ಯ ಕೃತಿಗಳು. ಬಂಗಾಳ ಪ್ರಾಂತ್ಯವನ್ನರಿಯಲು ಮಿರ್ಜಾನಾತನ್‌ನ ಬಹಾರಿಸ್ತಾನಿ ಫೆ ಫೈಬಿ, ವಾಬಿಯಾ ನಾವಿಸ್ ಪ್ರಮುಖವಾದವು.

೧೭ ಮತ್ತು ೧೮ನೆಯ ಶತಮಾನದ ಚರಿತ್ರೆ ಲೇಖನ ಪರಂಪರೆ

ಜಹಾಂಗೀರ್‌ಷಹಜಹಾನ್ ಮತ್ತು ಔರಂಗಜೇಬನ ಕಾಲದಲ್ಲಿ ಚರಿತ್ರೆ ಲೇಖನ ಕೃಷಿ ಮುಂದುವರೆಯಿತು. ಇವರ ಕಾಲಕ್ಕೆ ಹಿಂದೆ ಬಂದ ದೊಡ್ಡ ಪ್ರತಿಭೆಯ ಕೃತಿಗಳು ಈ ಕಾಲದಲ್ಲಿ ಬರಲಿಲ್ಲ. ಅಕ್ಬರ್ ನಾಮ ಗ್ರಂಥದಲ್ಲಿ ಕಾಣುವ ಪ್ರತಿಭೆ, ತಯಾರಿ ಮತ್ತು ವಿಸ್ತಾರಗಳನ್ನು ಈ ಕಾಲದ ಕೃತಿಗಳಲ್ಲಿ ಕಾಣುವುದಿಲ್ಲ. ಆದರೆ ಈ ಕಾಲದಲ್ಲಿ ಚರಿತ್ರೆಯನ್ನು ಬರೆಯಲು ಪ್ರಯತ್ನಿಸಿದ ಅನೇಕರಲ್ಲಿ ಜಹಾಂಗೀರ್, ಷಹಜಹಾನ್ ಮತ್ತು ಔರಂಗಜೇಬನ ಕಾಲದ ಹಿಂದಿನ ಚರಿತ್ರೆಯೊಂದಿಗೆ ಬೆಸೆದು ಒಂದು ನಿರಂತರತೆಯನ್ನು ಕಾಯ್ದುಕೊಂಡಿದ್ದಾರೆ. ಉದಾಹರಣೆಗೆ ಮುತಾಮದ್ ಖಾಸ್ ಬರೆದ ಇಕ್ಬಾಲ್‌ನಾಮಾವು ಐ ಜಹಾಂಗೀರಿ ಕೃತಿಯು ಬಾಬರ್, ಹುಮಾಯೂನ್, ಅಕ್ಬರನ ಕಾಲದ ಘಟನೆಗಳನ್ನು ಸೇರಿದಂತೆ ಜಹಾಂಗೀರನ ಕಾಲವನ್ನು ದಾಖಲಿಸುತ್ತದೆ. ಜಹಾಂಗೀರನ ಒಖೈರನ್ನೇ ಆಕರವನ್ನಾಗಿ ನೋಡಿ ಅದರ ಆಧಾರದ ಮೇಲೆ ರೂಪುಗೊಂಡ ಕೃತಿ ಮಾಥಿಕ್ ಐ ಜಹಾಂಗೀರಿ. ೧೬೩೦ ರಲ್ಲಿ ಈ ಕೃತಿಯು ಪೂರ್ಣಗೊಂಡಿತು.

ಮಿರ್ಜಾ ಅಮೆನೈ ಖ್ವಾಜ್ವಿನಿ ಎಂಬುವವನು ಷಹಜಹಾನನಿಂದ ಅವನ ಕಾಲದ ಚರಿತ್ರೆಯನ್ನು ಬರೆಯಲು ನೇಮಕಗೊಂಡನು. ಇವನ ಪ್ರತಿಭೆಯ ಬಗ್ಗೆ ಅನುಮಾನಗೊಂಡ ಷಹಜಹಾನ್ ಇವನ ಜಾಗದಲ್ಲಿ ಅಬ್ದುಲ್‌ಹಮಿದ್ ಲಹೋರಿಯನ್ನು ನೇಮಿಸಿದನು. ಇದರ ಪರಿಣಾಮವೇ ಬಾದ್ ಷಾ ನಾಮ ಎಂಬ ಗ್ರಂಥ. ಲಹೋರಿಯು ತನ್ನ ಗ್ರಂಥವನ್ನು ರಚಿಸಲು ಅಬುಲ್ ಫಜಲನನ್ನು ಆದರ್ಶ ಚರಿತ್ರೆಕಾರನನ್ನಾಗಿ ತೆಗೆದುಕೊಂಡನು. ಇವನ ಕೃತಿ ರಾಜನ ಸುತ್ತಲಿನ ವಾತಾವರಣದ ಬಗ್ಗೆ ಮುಖ್ಯವಾಗಿ ಕೇಂದ್ರೀಕೃತವಾದರೂ, ೧೬೩೦-೩೨ರ ಭೀಕರ ಕ್ಷಾಮ ಹೇಗೆ ದಕ್ಷಿಣ ಭಾರತ ಮತ್ತು ಗುಜರಾತನ್ನು ಬಲಿತೆಗೆದುಕೊಂಡಿತು ಎಂಬುದನ್ನು ಕಟ್ಟಿಕೊಡುತ್ತಾನೆ. ಷಹಜಹಾನನ ಮೊದಲ ಇಪ್ಪತ್ತು ವರ್ಷಗಳ ಆಡಳಿತವನ್ನು ಮಾತ್ರ ಚಿತ್ರಿಸಲು ಸಾಧ್ಯವಾಯಿತು. ಈ ಕೃತಿಯ ಮುಂದುವರಿದ ಭಾಗವನ್ನು ರಚಿಸಲು ತನ್ನ ಶಿಷ್ಯನಾದ ವಾರಿಸ್ ಎಂಬುವವನಿಗೆ ವಹಿಸಿಕೊಡುತ್ತಾನೆ.

ಔರಂಗಜೇಬನ ಚರಿತ್ರೆ ಬರೆಯುವುದನ್ನು ಪ್ರೋತ್ಸಾಹಿಸಲಿಲ್ಲ. ತನ್ನ ಕಾಲದ ಘಟನೆಗಳನ್ನು ಯಾರೂ ಕುರಿತು ದಾಖಲಿಸಬಾರದೆಂದು ಆಜ್ಞೆ ಮಾಡಿದನು ಎಂಬ ನಂಬಿಕೆಯಿದೆ. ಅನಂತರದಲ್ಲಿ ತನ್ನ ಅಭಿಪ್ರಾಯವನ್ನು ಬದಲಿಸಿ ಮಹಮದ್ ಖಾಸಿಂ ಎಂಬುವವನಿಗೆ ತನ್ನ ಆಡಳಿತ ಕಾಲದ ಘಟನೆಗಳನ್ನು ಕುರಿತು ಬರೆಯಲು ಆದೇಶಿಸಿದನು. ಅಲಂಗಿರ್ ನಾಮ ಎನ್ನುವ ಹೆಸರಿನ ಕೃತಿಯನ್ನು ರಚಿಸಲು ಪ್ರಾರಂಭಿಸಿ, ಔರಂಗಜೇಬನ ಆಡಳಿತದ ಹನ್ನೊಂದನೆಯ ವರ್ಷದ ಚರಿತ್ರೆಯನ್ನು ಬರೆದು ಮುಗಿಸುವ ವೇಳೆಗೆ ಚಕ್ರವರ್ತಿಯು ಇವನಿಗೆ ನೀಡಿದ ಅನುಮತಿ ಅಥವಾ ಆಜ್ಞೆಯನ್ನು ಹಿಂತೆಗೆದುಕೊಂಡನು. ಬಹುಶಃ ತನ್ನ ಸಾಧನೆಗಳನ್ನು ಅಥವಾ ಕಾಲದ ಘಟನೆಗಳನ್ನು ವಿಜೃಂಭಿಸುವುದನ್ನು ತಿರಸ್ಕರಿಸಿದನು. ವಿಜೃಂಭಣೆ ಅಥವಾ ವಿನೋದ ಪ್ರವೃತ್ತಿಯ ವಿರೋಧಿಯಾದ ಔರಂಗಜೇಬನು ಅಂತರಂಗದಲ್ಲಿ ಧರ್ಮಶುದ್ಧಿವಾದಿ (Puritan) ಯಾಗಿರಲು ನಿರ್ಧರಿಸಿದನು.

ಔರಂಗಜೇಬನು ಎಷ್ಟೇ ನಿಯಂತ್ರಣಗಳನ್ನು ಚರಿತ್ರೆ ಬರೆಯುವ ವಿಷಯದಲ್ಲಿ ಹೇರಿದರೂ ಖಾಸಗಿಯಾಗಿ ಪ್ರಯತ್ನಗಳು ಮುಂದುವರೆದವು. ಸಯ್ಯದ್ ಮಹಮದ್ ಬಿಲ್ ಗ್ರಾಮಿಯು ರಚಿಸಿದ ತಬಿಸರುಲ್ ನಜರೀಸ್, ಘುಕೂರನ ಮುಫೀದುಲ್ ಮವಾರಿಖಿ, ಮಹಮದ್ ಸಾಕಿ ಮುಸ್ತೇಯಿದ್ ಖಾನನ ಮಾಥಿಕ್‌ಐ ಅಲಂಗಿರಿ ಮುಂತಾದವು ಔರಂಗಜೇಬನ ಸಮಕಾಲೀನ ಚರಿತ್ರೆಯನ್ನು ದಾಖಲಿಸುತ್ತದೆ. ಮಸ್ತೇಯಿದ್ ಖಾನನ ಕೃತಿಯ ಬಗ್ಗೆ ವಿಮರ್ಶಕರಿಂದ ಶ್ಲಾಘನೆಯಿದೆ.

ಮೊಗಲ್ ಸಾಮ್ರಜ್ಯವು ಔರಂಗಜೇಬನ ಆಳ್ವಿಕೆಯ ದ್ವಿತೀಯಾರ್ಧದಲ್ಲಿ ಅವನತಿಯ ಗತಿಯನ್ನು ತಲುಪಿತು. ಔರಂಗಜೇಬನು ಆಡಳಿತದ ಮೇಲೆ ತನ್ನ ಹಿಡಿತವನ್ನು ಕಳೆದುಕೊಂಡನು. ರಾಜಕೀಯ ಅಸ್ತಿರತೆಯ ತಾಂಡವವಾಡತೊಡಗಿತು. ಅರಮನೆಯ ಹೊರಗಡೆ ಮಾತ್ರವಲ್ಲದೆ ಅವನ ಅರಮನೆಯೊಳಗೆ ಒಳಸಂಚುಗಳು ಪ್ರಾರಂಭವಾದವು. ಸಾಮಂತರ ಸಂಚುಗಳನ್ನು ರೂಪಿಸಲು ಆರಂಭಿಸಿದರು ಮತ್ತು ಇತರರು ರೂಪಿಸಿದ ಸಂಚುಗಳಲ್ಲಿ ಭಾಗಿಯಾದರು. ರಾಜಕೀಯವಾಗಿ ಮತ್ತು ನೈತಿಕವಾಗಿಯೂ ಈ ಕಾಲ ದಿವಾಳಿ ಸ್ಥಿತಿಯನ್ನು ತಲುಪಿದ ಈ ಬೆಳವಣಿಗೆಯನ್ನು ಖಾಫಿಖಾನ್ ಮತ್ತು ಮಹಮದ್ ಖಾಸಿಮರು ದಾಖಲಿಸಿದ್ದಾರೆ. ಖಾಫಿಖಾನನ ಮುಂತಖಾಬ್ ಉಲ್ ಲುಖಾಬ್ ಮತ್ತು ಮಹಮದ್ ಖಾಸಿಮನ ಅಹ್ವಲ್‌ಉಲ್‌ಖಾ ವಾಖಿನ್‌ಎಂಬ ಎರಡು ಗ್ರಂಥಗಳು ಚಾರಿತ್ರಿಕವಾಗಿ ಪ್ರಮುಖ ಗ್ರಂಥಗಳು. ಫರುಖ್‌ಸಿಯಾಕನ ಕಾಲದಲ್ಲಿ ದಿವಾನನಾಗಿ ನೇಮಕಗೊಂಡ ಖಾಫಿಖಾನನು ಔರಂಗಜೇಬನ ಕಾಲದ ಅನೇಕ ಬೆಳವಣಿಗೆಗಳಿಗೆ ಸಾಕ್ಷಿ ಪ್ರಜ್ಞೆಯಾಗಿದ್ದನು. ಇವನ ಎಲ್ಲ ಘಟನೆಗಳನ್ನು ಖಾಸಗಿಯಾಗಿ ದಾಖಲಿಸುತ್ತಿದ್ದನು. ಅವನು ಹೀಗೆ ದಾಖಲಿಸುತ್ತಿದ್ದುದು ಈ ಕೃತಿಯ ರಚನೆಗೆ ಕಾರಣವಾಯಿತು. ವಸ್ತುನಿಷ್ಠತೆಯ ಬಗೆಗಿನ ಅವನ ವಿಶೇಷ ಕಾಳಜಿಯು ಅವನ ಹೆಗ್ಗಳಿಕೆ. ತನ್ನ ಕೃತಿಯನ್ನು ಇವನು ೧೭೩೩ ರಲ್ಲಿ ಪೂರ್ಣಗೊಳಿಸಿದನು. ಈ ಕೃತಿಯ ಮತ್ತೊಂದು ವಿಶೇಷವೆಂದರೆ ಇದು ಮೊಗಲರ ಕಾಲದ ಪ್ರಮುಖ ಅಂಶಗಳಾದ ಜಹಗೀರ‍್ದಾರಿ ಪದ್ಧತಿ, ಮನ್ಸಬ್‌ದಾರಿ ಪದ್ಧತಿ, ಮೊಗಲರ ಮರಾಠರ ಸಂಬಂಧಗಳು, ಇಜರ್‌ದಾರಿ ಕಂದಾಯ ವಸೂಲಿ ಕ್ರಮ ಮತ್ತು ಅದರಲ್ಲಿ ನಡೆದ ಅಕ್ರಮಗಳು ಮುಂತಾದುವುಗಳನ್ನು ದಾಖಲಿಸಿದೆ. ಮಹಮದ್ ಖಾಸಿಮನು ತನ್ನ ಕೃತಿಯಲ್ಲಿ ತಾನು ನೋಡಿದ ಘಟನೆಗಳನ್ನು ದಾಖಲಿಸಿದ್ದಾನೆ. ಔರಂಗಜೇಬನ ನಂತರದ ಕಾಲದ ಸುಮಾರು ೩೦ ವರ್ಷಗಳ ಚರಿತ್ರೆಯನ್ನು ಬರೆದಿದ್ದಾನೆ. ಔರಂಗಜೇಬನ ಕಾಲದ ಅಂತ್ಯದಲ್ಲಿ ಸ್ಫೋಟಗೊಂಡ ಬೆಳವಣಿಗೆಗಳ ಮೂಲ ಅವನ ಅರಮನೆಯಲ್ಲಿತ್ತು ಎಂದು ವಿವರಿಸುತ್ತಾನೆ. ರಾಜನನ್ನು ದಿಕ್ಕು ತಪ್ಪಿಸಿದವರೇ ಅರಮನೆಯಲ್ಲಿದ್ದ ಕುಲೀನರು ಎಂದು ಬರೆಯುತ್ತಾನೆ. ಶೀಯಾ ಸುನ್ನಿ ಸಂಘರ್ಷಗಳನ್ನು ದಾಖಲಿಸಿದ್ದಾನೆ. ಒಟ್ಟಾರೆ ಮೊಗಲರ ಕಾಲದ ಅವನತಿಯ ಆರಂಭವನ್ನು, ಅದು ರೂಪುಗೊಂಡ ಕ್ರಮ ಮತ್ತು ಕುಸಿದ ರೀತಿಯನ್ನು ಸಮಗ್ರವಾಗಿಯೇ ದಾಖಲಿಸುವ ಪ್ರಯತ್ನ ನಡೆಸಿದ್ದಾನೆ.

ಮೊಗಲರ ಅಂತ್ಯ ಮತ್ತು ಬ್ರಿಟಿಷರ ಸಾಮ್ರಾಜ್ಯಶಾಹಿಯ ಆರಂಭದ ಹಂತವನ್ನು ಗುಲಾಮ್ ಹುಸೇನ್ ಸಲೀಂ, ಸಯದ್ ಗುಲಾಮ್ ಹುಸೇನ್ ಖಾನ್ ತಬತಬಾಯ್ ಮತ್ತು ಸಲೀಮ್ ವುಲ್ಲಾ ಮುಂತಾದವರು ಕಟ್ಟಿಕೊಟ್ಟಿದ್ದಾರೆ. ಗುಲಾಂ ಹುಸೇನ್ ಸಲೀಮನ ರಿಯಜುಸ್ ಸಲಾತಿನ್ ಮತ್ತು ತಬತಬಾಯನ ಸಿಯರ್ ಉಲ್ ಮುಮತಖೇರಿಸ್ ಮುಖ್ಯವಾದವು. ಈ ಕೃತಿಗಳ ವಿಮರ್ಶಾತ್ಮಕ ಅಧ್ಯಯನ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಆರಂಭಿಕ ಹಂತದ ಸ್ವರೂಪವನ್ನು ಅರಿಯಲು ಸಹಾಯಕವಾಗುತ್ತದೆ.

ಕೊನೆಯಲ್ಲಿ ಹಿಂದೂ ಚರಿತ್ರೆಕಾರರು ಮೊಗಲ್ ಚರಿತ್ರೆಯನ್ನು ದಾಖಲಿಸಿರುವುದನ್ನು ಪರಿಗಣಿಸಬೇಕಾಗುತ್ತದೆ. ಪರ್ಶಿಯನ್ ಭಾಷೆಯಲ್ಲಿಯೇ ಇವರು ತಮ್ಮ ಕೃತಿಗಳನ್ನು ರಚಿಸಿದ್ದಾರೆ. ಈ ಪರಂಪರೆಯಲ್ಲಿ ಮುಖ್ಯವಾಗಿ ನಾಲ್ಕು ಜನ ಚರಿತ್ರೆಕಾರರನ್ನು ಕಾಣಬಹುದು. ಇವರೆಂದರೆ ಭೀಮ್‌ಸೆನ್, ಬರಹಾನ್ ಪುರಿ, ರಾಯ್ ಬೃಂದಾಬಿನ್ ಮತ್ತು ಈಶ್ವರದಾಸ್ ನಗರ್ ಮತ್ತು ಸುಜನ್ ರೈ.

ಭಿಮ್‌ಸೇನ್, ಬರಹಾನ್ ಪುರಿಯ ನುಸ್ಕ ಐ ದಿಲ್ಕುಷ್ ಒಂದು ಪ್ರಮುಖವಾದ ಗ್ರಂಥ. ದಕ್ಷಿಣದಲ್ಲಿ ಮೊಗಲರ ರಾಜಕೀಯ ಚಟುವಟಿಕೆಗಳನ್ನು ಗ್ರಹಿಸಲು ತುಂಬಾ ಉಪಯುಕ್ತವಾದ ಗ್ರಂಥವಿದು. ಇದು ದಿನಚರಿ ರೂಪದ ನಿಯತಕಾಲಿಕೆಯಾಗಿದ್ದು ೧೭೦೯ ರಲ್ಲಿ ಕೊನೆಗೊಂಡಿದೆ. ಈ ಆಕರವು ಔರಂಗಜೇಬನ ಒಟ್ಟು ಆಡಳಿತವನ್ನು ಒಬ್ಬ ಹಿಂದೂವಿನ ದೃಷ್ಟಿಕೋನದಿಂದ ನೋಡಿದೆ. ಎಲ್ಲ ಘಟನೆಗಳ ಹಿಂದಿನ ಪ್ರೇರಣೆಗಳು, ದಕ್ಷಿಣಾಮುಖದ ಯುದ್ಧಗಳು, ಜನರ ಸ್ಥಿತಿಗತಿಗಳು, ಆಹಾರ ಪದಾರ್ಥಗಳ ಬೆಲೆಗಳು, ಆರ್ಥಿಕ ಸಂಕಷ್ಟಗಳು ಮುಂತಾದವುಗಳ ಬಗೆಗೆ ಈ ಆಕರವು ಬೆಳಕನ್ನು ಚೆಲ್ಲುತ್ತದೆ. ವಿಶೇಷವಾಗಿ ಮೊಗಲ ಮತ್ತು ಮರಾಠರ ನಡುವಿನ ಸಂಘರ್ಷಗಳು, ಸೈನಿಕರ ಬವಣೆಗಳು, ಅವರು ನಿರಂತರ ಯುದ್ಧಗಳಲ್ಲಿ ತೊಡಗಿ ಕೊಂಡಿದ್ದರಿಂದ ಅವರ ಮನಸ್ಸಿನ ಮೇಲಾದ ಆಘಾತಗಳು ಮುಂತಾದ ಆಸಕ್ತಿದಾಯಕ ವಿಷಯಗಳನ್ನು ಇವು ಅನಾವರಣಗೊಳಿಸುತ್ತದೆ.

ಸುಜನ್‌ರೈಯ ಖುಲಾಸಾತುಕ್ ತವಾರೀಖ್ ಔರಂಗಜೇಬನ ಕಾಲದ ಆರ್ಥಿಕ ಸ್ಥಿತಿಯ ವಿವರಣೆಯನ್ನು ನೀಡಿದರೆ, ರಾಯ್ ಬೃಂದಾಬಿನ್ನನ ಲೂಬ್ಬೂತ್ ತವಾರಿಖೆ ಹಿಂದೂ ಎನ್ನುವ ಕೃತಿಯು ತೈಮೂರಿನಿಂದ ಪ್ರಾರಂಭವಾಗಿ ಔರಂಗಜೇಬನ ಕಾಲದ ಅಂತ್ಯದವರೆಗೆ ಅವರು ನಡೆಸಿದ ಆಕ್ರಮಣಗಳನ್ನು ವಿವರಿಸುತ್ತದೆ. ಈ ಸಾಮ್ರಾಟರು ಏಳಿಗೆ ಹೊಂದಿ ನಂತರ ಹೇಗೆ ಅವನತಿಯನ್ನು ಎಂಬುದನ್ನು ತಿಳಿಸುತ್ತದೆ. ಕೊನೆಯದಾಗಿ, ಈಶ್ವರದಾಸ್ ಸಾಗರ್‌ಎಂಬುವನು ರಚಿಸಿದ ಫುತೂದಾತೆ ಅಲಂಗೀರಿ ಕೃತಿಯ ಔರಂಗಜೇಬನ ಮೂವತ್ನಾಲ್ಕು ವರ್ಷಗಳ ಕಥನವನ್ನು ದಾಖಲಿಸುತ್ತದೆ. ಮೇಲೆ ಹೇಳಿದ ಎಲ್ಲ ಕೃತಿಗಳೂ ಮೊಗಲ್‌ಸಾಮ್ರಾಜ್ಯದ ಅಂತಿಮ ಹಂತವನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗಿವೆ. ಇದರ ಜೊತೆಗೆ ಇವುಗಳ ಸಾಹಿತ್ಯಕ ಮೌಲ್ಯಗಳು ಮೌಲಿಕವಾದವುಗಳಾಗಿವೆ.

ಮೊಗಲ್ ಚರಿತ್ರೆ ಲೇಖನ ಪರಂಪರೆಯ ಪ್ರಾಮುಖ್ಯತೆ

ಮೊಗಲ್ ಚರಿತ್ರೆ ಲೇಖನ ಪಂಪರೆಯನ್ನು ಕುರಿತು ವಿವಿಧ ಚರಿತ್ರೆಕಾರರು ಬಹುಮುಖಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆರ್.ಸಿ. ಮಜುಂದಾರ್, ಎಚ್.ಎಂ. ಇಲಿಯಟ್, ಸಿ.ಎಚ್.ಫಿಲಿಪ್ಸ್, ಹರ್ಬನ್ಸ ಮುಖಿಯಾ ಮುಂತಾದವರು ಮೊಗಲ್ ಚರಿತ್ರೆ ಲೇಖನ ಪರಂಪರೆಯನ್ನು ವಿಶ್ಲೇಷಿಸಿದ್ದಾರೆ. ಎಚ್.ಎಂ. ಇಲಿಯಟ್‌ನ ಪ್ರಕಾರ ಒಬ್ಬನೇ ವಿಶ್ವಾಸಾರ್ಹ ಮುಸ್ಲಿಂ ಚರಿತ್ರೆಕಾರನೆಂದರೆ ಇಬನ್ ಖಾಲ್ದೂನ್. ಉಳಿದವರಿಗೆ ಚರಿತ್ರೆಯ ಮೂಲ ರಸಾಯನ ಮಿಶ್ರಣ ಅರ್ಥವಾಗಿಲ್ಲವೆನ್ನುತ್ತಾನೆ. ಆದರೆ ಲೀಸ್ ಎಂಬ ಲೇಖಕನು ಆಸ್ಥಾನ ಚರಿತ್ರೆಕಾರರಾಗಿ ಅವರು ಚರಿತ್ರೆಯನ್ನು ಬರೆದರೂ, ಅವುಗಳಿಗೆ ಬೆಲೆಯಿಲ್ಲವೆನ್ನುವುದು ಸರಿಯಾದ ದೃಷ್ಟಿಕೋನವಲ್ಲವೆನ್ನುತ್ತಾನೆ. ಇಡಿಯಾಗಿ ಮೊಗಲ್ ಚರಿತ್ರೆ ಲೇಖನ ಪರಂಪರೆಯನ್ನು ನೋಡಿದಾಗ ಅದು ಖಂಡಿತವಾಗಿಯೂ ಚರಿತ್ರೆ ಬರವಣಿಗೆಯ ಸ್ವರೂಪಕ್ಕೆ ಅನನ್ಯತೆಯನ್ನು ತಂದುಕೊಟ್ಟಿದೆ ಎಂಬುದನ್ನು ಮಾನ್ಯ ಮಾಡಲೇಬೇಕಾಗುತ್ತದೆ. ಆಧುನಿಕ ಚರಿತ್ರೆ ಲೇಖನ ವಿಧಾನದ ಆರಂಭಿಕ ಹೆಜ್ಜೆಗಳನ್ನು ಅಬುಲ್ ಫಜಲ್‌ನಲ್ಲಿ ಕಾಣಬಹುದು. ಆಕರಗಳನ್ನು ಅವನು ನೋಡುತ್ತಿದ್ದ ಕ್ರಮದಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಗುರುತಿಸಬಹುದು. ಇವನು ಚರಿತ್ರೆಯನ್ನು ರಾಷ್ಟ್ರೀಯ ಪರಿಪ್ರೇಕ್ಷ್ಯದಲ್ಲಿ ಇಡಿಯಾಗಿ ನೋಡುವ ಪ್ರಯತ್ನ ಮಾಡಿದ್ದಾನೆಯೇ ಹೊರತು ಘಟನೆಗಳನ್ನು ಬಿಡಿಬಿಡಿಯಾಗಿ ನೋಡಿಲ್ಲ ಮತ್ತು ಕೇವಲ ರಾಜರಿಗೆ ನಿಷ್ಠವಾಗಿಯೇ ಇವನು ಚರಿತ್ರೆಯನ್ನು ಬರೆಯಲಿಲ್ಲ. ಅವನ ಕಾಲದ ಒಟ್ಟು ಸಂದರ್ಭವನ್ನು ಗಮನದಲ್ಲಿರಿಸಿಕೊಂಡು ನೋಡಿದರೆ ಅವನ ಪ್ರಯತ್ನ ನಮಗೆ ಅರ್ಥವಾಗುತ್ತದೆ. ಆದರೆ ಬಹುತೇಕರು ಅರಮನೆಗೆ ನಿಷ್ಠರಾಗಿಯೇ ಬರೆದರು ಎನ್ನುವುದನ್ನು ತಳ್ಳಿಹಾಕಲಾಗುವುದಿಲ್ಲ.

ಮೊಗಲ್ ಚರಿತ್ರೆ ಲೇಖನ ಪರಂಪರೆಯು ಕೇವಲ ರಾಜಕೀಯ ಘಟನೆಗಳನ್ನು ವಿವರಿಸಲು ಸೀಮಿತವಾಗಲಿಲ್ಲ. ಹರ್ಬನ್ಸ್‌ಮುಖಿಯಾ ತಿಳಿಸುವಂತೆ ಈ ಪರಂಪರೆಯು ತಾತ್ವಿಕ ಹಾಗೂ ಅನುಭಾವಿ ಆಯಾಮಗಳನ್ನು ಒಳಗೊಂಡಿತ್ತು. ಈ ಪರಂಪರೆಯ ಇನ್ನೊಂದು ಮುಖ್ಯ ಗುಣವೆಂದರೆ ಕೇವಲ ಧರ್ಮ ಮತ್ತು ಮತೀಯ ನೆಲೆಗಳಲ್ಲಿ ಮಾತ್ರ ಚರಿತ್ರೆಯ ಕೃಷಿ ನಿಲ್ಲದೆ, ಜಾತ್ಯತೀತ ಆಶಯಗಳನ್ನೂ ತನ್ನ ಒಪ್ಪಂದದಲ್ಲಿ ಸೇರಿಸಿಕೊಳ್ಳಲು ಪ್ರಯತ್ನಿಸಿದ್ದು. ತನ್ನ ರೂಪ, ವಸ್ತು ಮತ್ತು ಆಶಯಗಳಲ್ಲಿ ಈ ಅಂಶವನ್ನು ಗಮನಿಸಬಹುದು. ವಸ್ತುನಿಷ್ಠತೆಯನ್ನು ಒಂದು ಗಂಭೀರ ಮೌಲ್ಯವಾಗಿ ಸ್ವೀಕರಿಸಿ ಅದನ್ನು ಅನುಷ್ಠಾನಗೊಳಿಸದಿದ್ದರೂ ಅದರ ಆರಂಭವನ್ನು ಈ ಪರಂಪರೆಯಲ್ಲಿ ಗಮನಿಸಬಹುದು. ಒಟ್ಟಾರೆ ಚರಿತ್ರೆಯ ಗ್ರಹಿಕೆಯ ನೆಲೆಗಳಲ್ಲಿ ಹೊಸ ದಾರಿಗಳನ್ನು ಹುಡುಕುವ ಪ್ರಯತ್ನವನ್ನು ಕಾಣಬಹುದು. ಚರಿತ್ರೆ ಬರವಣಿಗೆಯೆಂದರೆ ಕೇವಲ ದಾಖಲೆಗಳನ್ನು ದಾಖಲೆಯ ಭಾಷೆಯಲ್ಲಿಯೇ ವಿವರಿಸುವುದಲ್ಲ. ದಾಖಲೆಗಳನ್ನು ಅರ್ಥೈಸಿಕೊಳ್ಳುವುದು ನಿಜವಾದ ಚರಿತ್ರೆಕಾರನ ಗುಣ ಎನ್ನುವ ಅಂಶವನ್ನು ಈ ಪರಂಪರೆಯನ್ನು ಕಟ್ಟಿದ ಅನೇಕರ ಕೃತಿಗಳಲ್ಲಿ ಕಾಣಬಹುದು. ಈ ಪರಂಪರೆಯನ್ನು ಗಮನಿಸದೆ ಆಧುನಿಕ ಲೇಖನ ಪರಂಪರೆಗೆ ಪ್ರವೇಶ ಪಡೆಯಲಾಗುವುದಿಲ್ಲ ಎನ್ನುವುದು ಮಾತ್ರ ಸಾರ್ವಕಾಲಿಕ ಸತ್ಯ.

ಪರಾಮರ್ಶನ ಗ್ರಂಥಗಳು

೧. ಕೀತ್‌ಎ.ಬಿ., ಎ ಹಿಸ್ಟರಿ ಆಫ್‌ ಸ್ಯಾನ್‌ಸ್ಕ್ರಿಟ್‌ ಲಿಟರೇಚರ್, ನ್ಯೂಡೆಲ್ಲಿ : ಮೋತಿಲಾಲ್ ಬನಾರಸಿದಾಸ್.

೨. ಗೋಪಾಲ್‌ಎಸ್. ಮತ್ತು ರೋಮಿಲಾ ಥಾಫರ್ (ಸಂ), ೧೯೬೩. ಪ್ರಾಬ್ಲಮ್ಸ್ ಆಫ್‌ ಹಿಸ್ಟಾರಿಕಲ್ ರೈಟಿಂಗ್ ಇನ್ ಇಂಡಿಯಾ, ನ್ಯೂಡೆಲ್ಲಿ: ಇಂಡಿಯಾ ಇಂಟರ್‌ನ್ಯಾಶನಲ್‌ಸೆಂಟರ್.

೩. ಮಜುಂದಾರ್, ಆರ್.ಸಿ., ೧೯೭೦. ಹಿಸ್ಟಾರಿಯಾಗ್ರಫಿ ಇನ್‌ ಮಾಡರ್ನ್ ಇಂಡಿಯಾ, ಬಾಂಬೆ : ಏಶಿಯಾ ಪಬ್ಲಿಶಿಂಗ್ ಹೌಸ್.

೪. ಮೊಹಿಬ್ಬುಲ್‌ಹಸನ್ ಸಂತ, ಹಿಸ್ಟಾರಿಯನ್ಸ್‌ ಆಫ್ ಮಿಡೀವಿಯಲ್ ಇಂಡಿಯಾ, ಮೀರತ್‌: ಮೀನಾಕ್ಷಿ ಪ್ರಕಾಶನ.

೫. ವಿಜಯ್‌ಪೂಣಚ್ಚ ತಂಬಂಡ (ಸಂ). ೨೦೦೨. ಚರಿತ್ರೆ ವಿಶ್ವಕೋಶ, ವಿದ್ಯಾರಣ್ಯ : ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೬. ವೆಂಕಟರತ್ನಂ ಎ.ವಿ., ಪದ್ಮ ಎಂ.ಬಿ., ಇತಿಹಾಸ ಸಂಶೋಧನಾ ಮಾರ್ಗ, ಬೆಂಗಳೂರು ಪ್ರಿಂಟಿಂಗ್ ಮತ್ತು ಪಬ್ಲಿಶಿಂಗ್‌ಕಂ. ಲಿ., ಬೆಂಗಳೂರು.

೭. ಶ್ರೀಧರನ್‌. ಇ., ೨೦೦೪, ಎ ಟೆಕ್ಸ್ಟ್‌ಬುಕ್ ಆಫ್ ಹಿಸ್ಟಾರಿಯಾಗ್ರಫಿ – ೫೦೦೦ ಬಿ.ಸಿ. ಟು ಎ.ಡಿ. ೨೦೦೦, ನ್ಯೂಡೆಲ್ಲಿ: ಓರಿಯಂಟ್‌ಲಾಂಗ್‌ಮನ್.

೮. ಶ್ರೀನಿವಾಸಮೂರ್ತಿ. ಹೆಚ್.ವಿ., ೨೦೦೦. ಇತಿಹಾಸ ಸಂಶೋಧನಾ ಸಮೀಕ್ಷೆ, ಬೆಂಗಳೂರು : ಪದ್ಮ ಪ್ರಕಾಶನ.

೯. ಷೇಕ್ ಅಲಿ. ಬಿ. ೨೦೦೧. ಹಿಸ್ಟರಿ ಇಟ್ಸ್ ಥಿಯರಿ ಆಂಡ್ ಮೆಥೆಡ್, ನ್ಯೂಡೆಲಿ: ಮ್ಯಾಕ್‌ ಮಿಲನ್ ಇಂಡಿಯಾ ಲಿಮಿಟೆಡ್.

೧೦. ಸರ್ಕಾರ್ ಜೆ.ಎಸ್., ಸ್ಟಡೀಸ್ ಇನ್ ಮೊಗಲ್‌ ಇಂಡಿಯಾ, ಕಲ್ಕತ್ತಾ : ಎಂ.ಸಿ. ಶಂಕರ್ ಆಂಡ್ ಸನ್ಸ್.

೧೧. ಸತೀಶ್‌ ಕೆ. ಬಜಾಜ್‌, ೧೯೮೮. ರೀಸೆಂಟ್ ಟ್ರೆಂಡ್ಸ್ ಇನ್ ಹಿಸ್ಟಾರಿಯಾಗ್ರಫಿ, ನವದೆಹಲಿ: ಅನ್‌ಮೋಲ್‌ ಪಬ್ಲಿಕೇಶನ್ಸ್.

* * *