ಸಂತ ಆಗಸ್ಟೈನ್‌ (ಕ್ರಿ.ಶ. ೩೫೪-೪೩೦)

ಚರ್ಚ್ ಚರಿತ್ರೆ ಲೇಖನ ಪರಂಪರೆಯಲ್ಲೇ ಅತಿ ಮುಖ್ಯವಾದ ವಿದ್ವಾಂಸ ಇವನು. ಪೇಗನ್‌ ಗುಂಪಿಗೆ ಸೇರಿದ್ದ ಇವನಿಗೆ ಕ್ರೈಸ್ತ ಧರ್ಮವು ಉತ್ಕೃಷ್ಟ ಭಾವನಾತ್ಮಕ ನೆಮ್ಮದಿಯನ್ನು ತಂದುಕೊಟ್ಟಿತು. ಇವನು ದಾರ್ಶನಿಕನು, ಗುರುವು, ಪಂಡಿತನು, ಕವಿ ಹಾಗೂ ಆ ಕಾಲದ ಬಹು ದೊಡ್ಡ ಚಿಂತಕನೆನಿಸಿಕೊಂಡಿದ್ದನು. ಪ್ರಾರ್ಥನೆ ಮತ್ತು ಲೇಖನ ಕೃಷಿಯಲ್ಲಿಯೇ ಜೀವನದ ಬಹುಭಾಗವನ್ನು ಕಳೆದನು. ಇವನ ಎರಡು ಕೃತಿಗಳು ಕನ್‌ಫೆಷನ್ಸ್ ಮತ್ತು ಡೆ ಸಿವಿತಾಟ್‌ಡೆಯ್ ಅಥವಾ ಸಿಟಿ ಆಫ್‌ ಗಾಡ್ – ಜಗತ್ತಿನ ಶ್ರೇಷ್ಠ ಕೃತಿಗಳ ಸಾಲಿಗೆ ಸೇರುವಂತಹವು. ಕನ್‌ಫೆಷನ್ಸ್‌ಎನ್ನುವುದು ಅವನ ಆತ್ಮಚರಿತ್ರೆ ಹಾಗೂ ನೇರವಾಗಿ ದೇವರಿಗೆ ಸಂಬೋಧಿಸಿ ಬರೆದಿದ್ದಾನೆ. ಪ್ರಾಮಾಣಿಕತೆಯೇ ಪರಮ ಮೌಲ್ಯವೆಂದು ನಂಬಿ ಈ ಕೃತಿಗಳನ್ನು ರಚಿಸಿದ್ದಾನೆ. ಕನ್‌ಫೆಷನ್ ಕೃತಿಯು ಸುಧೀರ್ಘ ದೇವತಾ ಆರಾಧನೆಯಾಗಿದೆ.

‘ಕನ್‌ಫೆಷನ್ಸ್‌’ನಲ್ಲಿ ಅವನೇ ದಾಖಲಿಸಿಕೊಳ್ಳುವ ಪ್ರಕಾರ ಅವನು ಕ್ರಿ.ಶ. ೩೫೪ರ ನವೆಂಬರ್ ತಿಂಗಳು ೧೩ನೆಯ ತಾರೀಖಿನ ದಿನ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಉತ್ತರ ಆಫ್ರಿಕಾದ ಟಗಸ್ಟೆ ಎಂಬ ಗ್ರಾಮದಲ್ಲಿ ಜನಿಸಿದನು. ಸುಮಾರು ತಾನು ಜೀವಿಸಿದ್ದ ೭೫ ವರ್ಷಗಳನ್ನು ಟಗಸ್ಟೆ, ರೋಮ್, ಕಾರ್ಥೇಜ್, ಮಿಲಾನ್, ಮಡೌರ ಮತ್ತು ಹಿಪ್ಪೊ ಎಂಬ ಆರು ನಗರಗಳಲ್ಲಿ ಕಳೆದನು. ಚಿಕ್ಕಂದಿಲ್ಲಿ ಲ್ಯಾಟಿನ್ ಭಾಷೆ ಮತ್ತು ವ್ಯಾಕರಣವನ್ನು ಕಲಿತು ಸಾಕಷ್ಟು ಅರಗಿಸಿಕೊಂಡನು. ೧೬ನೆಯ ವಯಸ್ಸಿನಲ್ಲಿ ಹಣದ ಮುಗ್ಗಟ್ಟಿನಿಂದ ಶಿಕ್ಷಣವನ್ನು ಮುಂದುವರೆಸದೆ ಮನೆಯಲ್ಲಿದ್ದನು. ನಂತರ ಶ್ರೀಮಂತನೊಬ್ಬನ ಔದಾರ್ಯದಿಂದ ಕಾರ್ಥೇಜಿಗೆ ಹೋಗಿ ಕಾಲೇಜು ವಿದ್ಯಾಭ್ಯಾಸವನ್ನು ಮುಂದುವರೆಸಿದನು. ಅವನ ಈ ಕಾಲದ ಬದುಕು ಮಾನಸಿಕ ಕ್ಷೋಭೆಗೆ ಒಳಗಾಯಿತು. ದೈವವನ್ನು ಕಾಣುವ ಆಂತರ್ಯದ ಒತ್ತಡ ಮಡುಗಟ್ಟತೊಡಗಿತು. ಐಹಿಕ ಆಕರ್ಷಣೆಗಳು ಹಾಗೂ ದೈವದ ಹುಡುಕಾಟದ ಆತ್ಮೋನ್ನತಿಯ ಆದರ್ಶಗಳು ಅವನೊಳಗಡೆ ಒಂದು ಭಾವನಾತ್ಮಕ ಸಂಘರ್ಷವನ್ನೇ ಸೃಷ್ಟಿಸಿದವು. ಈ ಸಂಘರ್ಷಗಳ ತಾಕಲಾಟದಲ್ಲೇ ಒಬ್ಬ ಮಗನನ್ನು ಪಡೆದನು. ಇದಾದ ನಂತರ ಮತ್ತೆ ಕ್ರೈಸ್ತಧರ್ಮದ ಪ್ರಪಂಚಕ್ಕೆ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡನು. ದೈವದ ಸಾಕ್ಷಾತ್ಕಾರದಲ್ಲಿ ಸಂಪೂರ್ಣ ಮುಳುಗಿದ ಇವನು ಐಹಿಕ ಆಕರ್ಷಣೆಗಳಿಂದ ಬಿಡಿಸಿಕೊಂಡನು.

ಇಲ್ಲಿಂದ ನಂತರ ಇವನು ಕ್ಯಾಥೋಲಿಕ್ ಧರ್ಮದ ಪೂರ್ಣಾನುಯಾಯಿಯಾದನು. ಸುಮಾರು ೮ ವರ್ಷಗಳ ಕಾಲ ಕಾರ್ಥೇಜಿನಲ್ಲಿ ಅಧ್ಯಾಪಕನಾಗಿ ಸೇವೆ ಸಲ್ಲಿಸಿದನು. ಆದರೆ ಕೆಲವು ಹುಡುಗರ ನಡತೆಯ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗದೆ, ಹೆದರಿ ರಹಸ್ಯವಾಗಿ ರೋಮಿಗೆ ಓಡಿಹೋದನು. ರೋಮ್‌ನಲ್ಲಿಯೂ ಇಂತಹುದೇ ಅನುಭವವಾದ್ದರಿಂದ ಕೊನೆಗೆ ಮಿಲಾನ್‌ಗೆ ಹೋಗಿ ಅಧ್ಯಾಪಕನಾದನು. ಈ ಘಟನೆಯು ಅವನ ಜೀವನದಲ್ಲಿ ಒಂದು ಮಹತ್ತರ ಬದಲಾವಣೆಯನ್ನು ತಂದಿತು. ಇಲ್ಲಿಯೇ ಇವನು ಬಿಷಪ್ ಅಂಬ್ರೋಸಿಯನ್ನು ಭೇಟಿಯಾದನು. ಅಂಬ್ರೋಸನ ಅದ್ಭುತ ವಾಗ್ಮೀಯತೆ ಹಾಗೂ ಹಳೆಯ ಒಡಂಬಡಿಕೆಯ ದೈವಿಕ ಸ್ಫೂರ್ತಿಯ ಬಗ್ಗೆ ಅವನು ನೀಡಿದ ಪ್ರವಚನಗಳು ಆಗಸ್ಟೈನ್‌ಮೇಲೆ ಅಳಿಸಲಾಗದ ಪ್ರಭಾವನ್ನುಂಟು ಮಾಡಿದವು. ಇಲ್ಲಿಂದ ನಂತರ ಕ್ರೈಸ್ತ ಪವಿತ್ರ ಗ್ರಂಥಗಳನ್ನು ಅಭ್ಯಾಸ ಮಾಡಲಾರಂಭಿಸಿದನು. ಕ್ರೈಸ್ತ ಜೀವನಕ್ರಮವೇ ಶ್ರೇಷ್ಠ ಜೀವನಕ್ರಮವೆಂದು ಸಾರಿ ಹೇಳಿದನು.

ನಂತರ ಹಿಪ್ಪೋರೇಗಿಸ್‌ಗೆ ಬಂದು ಬಿಷಪ್‌ ವ್ಯಾಲರೇಸ್‌ನ ಒತ್ತಾಯಕ್ಕೆ ಕಟ್ಟುಬಿದ್ದು ಪಾದ್ರಿಯಾದನು. ಅಲ್ಲಿಯೆ ಲೌಕಿಕ ಪಾದ್ರಿಗಳಿಗೆ ತರಬೇತಿ ನೀಡಲು ಒಂದು ಧಾರ್ಮಿಕ ಅಧ್ಯಯನ ಶಾಲೆಯನ್ನು ಪ್ರಾರಂಭಿಸಿದನು. ಇದರೊಂದಿಗೆ ರೋಮನ್ ಕ್ಯಾಥೋಲಿಕ್ ಧರ್ಮವನ್ನು ನಿರಾಕರಿಸಿದ ಫಿಲೇಜಿಯಸ್‌ನ ಪಂಥವನ್ನು ವಿರೋಧಿಸಿ ಅನೇಕ ಲೇಖನಗಳನ್ನು ಬರೆದನು. ಭಾವನಾತ್ಮಕ ನೆಲೆಗಳನ್ನು ಕಳೆದುಕೊಂಡವರಿಗೆ ಸಾಂತ್ವನ ಹೇಳುವ, ಪರಿಹಾರಗಳನ್ನು ನೀಡುವ ಧರ್ಮ ಗುರುವಾದನು. ಲೌಕಿಕ ಸಂಕಟಗಳಿಗೆ ಸಿಲುಕಿದವರಿಗೆ ಪರಿಹಾರ ಮಾರ್ಗವನ್ನು ಸೂಚಿಸುವ ಅವರ ಬದುಕಿನ ದೀಪವಾದನು. ಹೀಗೆ ಅವನು ತನ್ನ ಸಮಕಾಲೀನ ಸಂದರ್ಭದಲ್ಲೇ ಜೀವಂತ ದಂತಕತೆಯಾದನು.

ಇಪ್ಪತ್ತೆರಡು ಪ್ರಧಾನ ಭಾಗಗಳಲ್ಲಿರುವ ಸಿಟಿ ಆಫ್ ಗಾಡ್ ಕೃತಿಯು ಕ್ರಿ.ಶ. ೪೧೩ ರಿಂದ ೪೨೬ರ ನಡುವಿನ ಅವಧಿಯಲ್ಲಿ ಮೇರುಕೃತಿಯಾಗಿ ರಚಿಸಲ್ಪಟ್ಟಿತು. ಅಲಾರಿಕ್‌ನ ನೇತೃತ್ವದಲ್ಲಿ ಗೋತ್ಸ್‌ರು ಕ್ರಿ.ಶ. ೪೧೦ ರಲ್ಲಿ ರೋಮ್‌ನಗರವನ್ನು ನಾಶಪಡಿಸಿದರು. ಪೇಗನರು ಎಂದು ಕರೆಯಲ್ಪಡುವ, ಕ್ರೈಸ್ತ ಧರ್ಮದಲ್ಲಿ ನಂಬಿಕೆಯಿಲ್ಲದ ಕೆಲವರು, ಹಳೆಯ ದೇವರುಗಳಲ್ಲಿ ನಂಬಿಕೆಯಿಲ್ಲದೆ ಕೇವಲ ಕ್ರೈಸ್ತ ಧರ್ಮವನ್ನು ವೈಭವೀಕರಿಸಿದ್ದರ ಪರಿಣಾಮವಾಗಿ ಹಳೆಯ ದೇವರುಗಳು ರೋಮ್ ನಗರಕ್ಕೆ ಶಿಕ್ಷೆಯನ್ನಿತ್ತಿದ್ದಾರೆ ಎಂದು ಸಾರಿ ಹೇಳಿದರು. ಈ ಆರೋಪವನ್ನು ಅಥವಾ ನಂಬಿಕೆಯನ್ನು ತೊಡೆದು ಹಾಕಲು ಸುಮಾರು ೧೩ ವರ್ಷಗಳ ಕಾಲದ ಸತತ ಪರಿಶ್ರಮದ ಪರಿಣಾಮ ಸಿಟಿ ಆಫ್ ಗಾಡ್ ಹೊರಬಂದಿತು. ೧೨೦೦ ಪುಟಗಳಷ್ಟಿರುವ ಈ ಬೃಹತ್ ಗ್ರಂಥವು ಮೊದಲ ಪಾಪದಿಂದ (First Sin) ಹಿಡಿದು ಕೊನೆಯ ತೀರ್ಪಿನವರೆಗೆ (Last Judgement) ಅನೇಕ ವಿಷಯಗಳನ್ನು ಒಳಗೊಂಡಿದೆ. ಆಗಸ್ಟೈನ್‌ನ ಪ್ರಕಾರ ರೋಮ್ ಸಾಮ್ರಾಜ್ಯಕ್ಕೆ ವಿನಾಶ ಬಂದದ್ದು ಪೇಗನ್ನರಿಂದಲೇ ಹೊರತು ಹೊಸದಾಗಿ ಆವಿರ್ಭವಿಸಿದ ಕ್ರೈಸ್ತ ಧರ್ಮದಿಂದಲ್ಲ. ಈ ಅಂಶವನ್ನು ಅವನು ನಿರೂಪಿಸಿದ ಯತ್ನದಲ್ಲಿ ಚರಿತ್ರೆಯನ್ನು ತಾತ್ವಿಕ ನೆಲೆಗಟ್ಟಿಗೆ ತಂದು ನೋಡುತ್ತಾನೆ. ಚರಿತ್ರೆಯ ಕಾಲಘಟ್ಟಗಳ ಬಗೆಗೆ ಬರೆಯುವಾಗ ರಾಜಕೀಯ ಚಿಂತಕನಂತೆ ತೋರುತ್ತಾನೆ. ಲೌಕಿಕ ಮತ್ತು ಅಲೌಕಿಕವನ್ನು ಮುಖಾಮುಖಿಯಾಗಿಸುತ್ತಾನೆ ಅಥವಾ ಎರಡು ಜಗತ್ತುಗಳ ಒಳಹೊರಗನ್ನು ಅವನು ಅರ್ಥೈಸಿ ಕೊಂಡಂತೆ ಚಿತ್ರಿಸುತ್ತಾನೆ. ಈ ಚರ್ಚೆಯನ್ನು ಎರಡು ನಗರಗಳ ಚರಿತ್ರೆಯ ಕಥನ ಎಂದು ಹೇಳುವುದರ ಮುಖಾಂತರ ಮೂರ್ತಗೊಳಿಸುತ್ತಾನೆ. ಈ ಎರಡು ನಗರಗಳೇ ದೇವನಗರ (City of God) ಮತ್ತು ಮಾನವ ನಗರ (City of Man).

ಮೊದಲನೆಯ ನಗರವಾದ ದೇವನಗರವು ಹೆಸರೇ ಸೂಚಿಸುವಂತೆ ದೈವ ನಗರ. ಈ ನಗರವು ಒಬ್ಬನೇ ನಿಜವಾದ ದೇವರನ್ನು ಆರಾಧಿಸುವವರ ನಗರ. ಭೂತ, ವರ್ತಮಾನ ಮತ್ತು ಭವಿಷ್ಯತ್ತಿನಲ್ಲಿಯೂ ಅಸ್ತಿತ್ವದಲ್ಲಿರುವ ನಗರ. ಈ ದೇವ ನಗರವನ್ನು ಸಾಕ್ಷಾತ್ಕರಿಸಿ ಕೊಂಡ ಸ್ಥಳವೇ ಚರ್ಚ್. ಈ ಚರ್ಚು ದೇವರ ದೃಷ್ಟಿಯನ್ನು ಭೂಮಿಯ ಮೇಲೆ ಸಾಕಾರಗೊಳಿಸುವ ಸ್ಥಳ. ಸಿಟಿ ಆಫ್‌ ಗಾಡ್ ಎಂಬ ಈ ಕೃತಿಯು ಕ್ಯಾಥೋಲಿಕ್ ಲೇಖನ ಪರಂಪರೆಯನ್ನು ಪೋಷಿಸಿ ಬೆಳೆಸಿತು. ಜೊತೆಗೆ ದೇವರ ಕಲ್ಪನೆಯು ಚರಿತ್ರೆಯ ಕೇಂದ್ರ ಬಿಂದುವಾಯಿತು. ಆಗಸ್ಟೈನ್‌ ಚರಿತ್ರೆಯ ಕಲ್ಪನೆಯು ಒಳ್ಳೆಯ ಮತ್ತು ಕೆಟ್ಟದ್ದರ, ಗುಣ ಮತ್ತು ಅವಗುಣಗಳ, ದೈವಿಕ ಮತ್ತು ಪೈಶಾಚಿಕಗಳ ನಡುವೆ ಘರ್ಷಣೆಯಾಗಿತ್ತು. ಕ್ರಿ.ಶ. ೪೧೦ ರಲ್ಲಿ ಗಾತ್ ಕುಲದ ಒರಟು ಸ್ವಭಾವದ ಅಲರಿಕ್ ರೋಮ್ ಅನ್ನು ಕೊಳ್ಳೆ ಹೊಡೆದಾಗ, ಜೆರುಸಲೇಂ ನಾಶವಾದಾಗ ಯಹೂದಿಗಳು ದಿಗ್ಭ್ರಮೆಗೊಂಡರು. ಹಾಗೆಯೇ ರೋಮನ್ನರು ಈ ಘಟನೆಗೆ ಕ್ರೈಸ್ತ ಧರ್ಮವೇ ಕಾರಣವೆಂದು ಟೀಕಿಸಿದಾಗ ಅದಕ್ಕೆ ಈ ಗ್ರಂಥವನ್ನು ರಚಿಸಿ ತನ್ನ ಸಿದ್ಧಾಂತವನ್ನು ಸಾರಿದನು. ದೇವರ ಅನುಗ್ರಹವಿಲ್ಲದೆ ಮನುಷ್ಯ ಏನನ್ನು ಮಾಡಲು ಸಾಧ್ಯವಿಲ್ಲ ಎಂದು ಸಾರಿದನು. ದೈವದ ನಿರ್ದೇಶನದಂತೆ ಮನುಷ್ಯನು ಕ್ರಿಯೆಗಳ ಕರ್ತೃವಾಗುತ್ತಾನೆಂದು ಹೇಳಿದನು. ಹಾಗೆಯೇ ಚರಿತ್ರೆಯು ಒಂದೇ ಘಟನೆಗಳಿಂದ ಕೂಡಿರುವುದಾಗಿರುವುದಿಲ್ಲ. ವೃತ್ತ ಪರಿಧಿಯ ಕ್ರಮದಲ್ಲಿ ಚಲಿಸುವ ಚರಿತ್ರೆಯು ಒಳ್ಳೆಯ ಮತ್ತು ಕೆಟ್ಟ ಅಂಶಗಳನ್ನು ಒಳಗೊಂಡು ಚಲಿಸುತ್ತಿರುತ್ತದೆ ಎಂದು ಹೇಳಿದನು. ಹರ್ಬರ್ಟ್ ಬಟರ್‌ಫೀಲ್ಡ್ ಎನ್ನುವ ಲೇಖಕನು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ.

ಎರಡನೆಯ ನಗರವು ಮಾನವನ ನಗರ (City of Man). ಇದರ ವ್ಯಾಪ್ತಿಯು ತುಂಬಾ ಕಿರಿದಾದುದು. ಈ ನಗರದಲ್ಲಿ ಮನುಷ್ಯ ತನ್ನ ಇಚ್ಛೆಯಂತಿರುತ್ತಾನೆ. ಸೈತಾನನಿಂದ ಪ್ರಾರಂಭವಾದ ಈ ನಗರವು ಪೈಶಾಚಿಕ ನಗರವಾಗಿದೆ. ಇಲ್ಲಿ ಕೇವಲ ಐಹಿಕ ಸುಖ-ಭೋಗಗಳಿಗೆ ಮಾತ್ರ ಪ್ರಾಧಾನ್ಯವಿರುತ್ತದೆ. ಆಗಸ್ಟೈನ್‌ ಪ್ರಕಾರ ಕೊನೆಯ ತೀರ್ಪು (Last Judgement) ಬರುವವರೆಗೂ ಈ ಎರಡೂ ನಗರಗಳು ಸಂಪೂರ್ಣ ಬೇರ್ಪಡೆಯಾಗುವುದಿಲ್ಲ.

ಇಲ್ಲಿ ಚರಿತ್ರೆಯ ವಿದ್ಯಾರ್ಥಿಗಳಾದ ನಾವು ಮುಖ್ಯವಾಗಿ ಗ್ರಹಿಸಬೇಕಾದ ವಿಷಯವೆಂದರೆ ಕ್ರೈಸ್ತ ಧರ್ಮವು ಒಂದು ತಾತ್ವಿಕ ಶಕ್ತಿಯಾಗಿ ಬೆಳೆಯಲು ಅರಂಭಿಸಿತು. ದೈವತ್ವದಲ್ಲಿನ ನಂಬಿಕೆಯೆ ಇಲ್ಲಿಯ ಬಹುಮುಖ್ಯವಾದ ಲಕ್ಷಣ ಹಾಗೂ ಮಧ್ಯಕಾಲೀನ ಅಲೋಚನಾಕ್ರಮದ ಪ್ರಮುಖ ಅಂಶ. ಕ್ಯಾಥೋಲಿಕ್ ಧರ್ಮಶ್ರದ್ಧೆಯ ಪೂರ್ಣ ನೋಟವನ್ನು ಆಗಸ್ಟೈನ್‌ನ ದೇವನಗರ ಕೃತಿಯಲ್ಲಿ ಕಾಣಬಹುದು. ಮಧ್ಯಕಾಲೀನ ಚರ್ಚ್‌ಗಳು ರಾಜ್ಯ ವ್ಯವಸ್ಥೆಯನ್ನು ಹೇಗೆ ತಮ್ಮ ಅಧೀನದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಯಿತು ಎಂಬ ಅಂಶದ ಬಗೆಗಿನ ಒಳನೋಟಗಳನ್ನು ಈ ಕೃತಿಯ ಅಭ್ಯಾಸದಿಂದ ಪಡೆಯಬಹುದು. ಕ್ರಿ.ಶ. ೫ನೆಯ ಶತಮಾನದಿಂದ ಮತಶ್ರದ್ಧೆಯ ಚರಿತ್ರೆಯನ್ನೆ ನಾವು ಪ್ರಧಾನವಾಗಿ ಕಾಣುತ್ತೇವೆ. ಸಂತ ಆಗಸ್ಟೈನನು ಇನ್ನೂ ಅನೇಕ ಕೃತಿಗಳನ್ನು ರಚಿಸಿ ಮುಂದಿನ ತಲೆಮಾರಿಗಳಿಗೆ ಬಿಟ್ಟು ಹೋಗಿದ್ದಾನೆ. ಸುಮಾರು ೨೩೨ ಪ್ರಧಾನ ಭಾಗಗಳಿಂದ ಕೂಡಿದ ೯೭ ವಿವಿಧ ಗ್ರಂಥಗಳು ಮತ್ತು ಅನೇಕ ಪ್ರಮುಖ ಧಾರ್ಮಿಕ ಪ್ರಶ್ನೆಗಳನ್ನು ಎತ್ತಿ ಉತ್ತರಗಳನ್ನು ಒಳಗೊಂಡಿರುವ ಸುಮಾರು ೨೨೦ ಪತ್ರಗಳು, ಆನ್ ದಿ ಫೇರ್ ಅಂಡ್ ದಿ ಪಿಟ್, ಏಗೆನ್ಸ್ಟ್‌ದಿ ಅಕಡೆಮಿಕ್, ಆನ್ ದಿ ಹ್ಯಾಪಿಲೈಫ್, ಅನ್ ಆರ್ಡರ್ ಎಗನ್ಸ್ಟ್‌ದ ಸ್ಕೆಪ್ಟಿಕ್ಸ, ಸೋಲಿಲೋಕ್ವಿಸ್, ಡಿವೈನ್ ಪ್ರಾವಿಡೆನ್ಸ್ ಅಂಡ್ ದಿ ಪ್ರಾಬ್ಲೆಂ ಆಫ್ ಈವಿಲ್, ಆನ್ ದಿ ಇಮ್ಮಾರ್ಟ್ಯಾಲಿಟಿ ಆಫ್ ದಿ ಸೋಲ್, ಆನ್ ದಿ ಆಫ್ ದಿ ಸೋಲ್, ಆನ್ ಮ್ಯಾಸಿಕ್, ಆನ್ ಟೀಚಿಂಗ್, ಫ್ರೀಡಂ ಆಫ್ ದಿ ವಿಲ್ ಮುಂತಾದವು ಮುಖ್ಯವಾದವು. ಆನ್ ಕ್ರಿಶ್ಚಿಯಲ್‌ ಇನ್‌ಸ್ಟ್ರಕ್ಸನ್ ಎಂಬುದು ಶಿಕ್ಷಣವನ್ನು ಕುರಿತಾದ ಗ್ರಂಥವಾಗಿದೆ.

ಹಾಗೆಯೇ ಮನಿಚಿ ಪಂಥದ ವಿರುದ್ಧ ಗ್ರಂಥಸ್ಥ ಸಮರವನ್ನು ಸಾರಿದನು. ಇದರ ಪರಿಣಾಮವೇ ‘ಆನ್ ದಿ ಮಾರಲ್ಸ್ ಆಫ್‌ ದಿ ಮನಿಷಿಯನ್ಸ್’, ‘ನೇಚರ್‌ ಆಫ್ ದಿ ಗುಡ್’, ‘ಏಗೆನಸ್ಟ್ ದಿ ಮನಿಷಿಯನ್ಸ್’, ‘ಆನ್ ದಿ ಮಾರಲ್ ಆಫ್‌ ದಿ ಕ್ಯಾಥೋಲಿಕ್ ಚರ್ಚ್’, ‘ಆನ್‌ ಟ್ರೂ ರಿಲಿಜನ್ ಆನ್ ಬಿಸಿನೆಸ್ ಆಗೆನ್ಸ್ಟ್‌ದಿ ಮನಿಷಿಯನ್ಸ್’, ‘ಆನ್ ದಿ ಪ್ರಾಫೆಟ್ ಆಫ್ ಬಿಲೀವಿಂಗ್’ ಮುಂತಾದ ಗ್ರಂಥಗಳು. ಅದೇ ರೀತಿ ಡೋನಾಟಿಸ್ಟರ ವಿರುದ್ಧ ‘ಎ.ಬಿ.ಸಿ. ಬ್ಯಾಲಡ್’, ‘ಏಗೆನ್ಸ್ಟ್ ಡೊನಾಟಿಸ್ಟ್‌ಪಾರ್ಟಿ’ ಮತ್ತು ಫಿಲೇಜಿಯನ್ ಪಂಥದ ವಿರುದ್ಧ ‘ಆನ್ ದಿ ಮೆರಿಟ್ಸ್ ಆಫ್ ಫರ್‌ಗಿವ್‌ನೆಸ್ ಆಫ್ ಸಿನ್ಸ್’, ‘ಆನ್‌ ದಿ ಸ್ಪಿರಿಟ್ ಆಂಡ್ ಲೆಟರ್’, ‘ಆನ್ ನೇಚರ್ ಆಂಡ್ ಗ್ರೇಸ್’, ‘ಆನ್‌ ದಿ ಪ್ರೊಸೀಡಿಂಗ್ಸ್ ಆಫ್‌ ಫಿಲೇಜಿಯಸ್’, ‘ಆನ್‌ ದಿ ಗ್ರೇಸ್ ಆಫ್ ದಿ ಕ್ರೈಸ್ಟ ಆಂಡ್ ಆನ್ ಒರಿಜಿನಲ್ ಸಿನ್’, ‘ಆನ್ ದಿ ಸೋಲ್ ಆಂಡ್ ಇಟ್ಸ್ ಆರಿಜನ್’, ‘ಆನ್‌ ಗ್ರೇಸ್ ಆಂಡ್ ಫ್ರೀವಿಲ್’, ಮುಂತಾದ ಕೃತಿಗಳನ್ನು ರಚಿಸಿದನು. ಆದರೆ ಅವನ ಮೇರುಕೃತಿಗಳೆಂದರೆ ‘ಕನ್‌ಫೆಷನ್ಸ್’, ‘ಆನ್‌ ದಿ ಟ್ರಿನಿಟಿ’ ಮತ್ತು ‘ದಿ ಸಿಟಿ ಆಫ್ ದಿ ಗಾಡ್‌’ ಮಾತ್ರ.

ಸಂತ ಆಗಸ್ಟೈನನು ವಾದಿಸುವ ಪ್ರಕಾರ ದೇವರು ಆರು ದಿನಗಳಲ್ಲಿ ಸೃಷ್ಟಿಸಿದ ಜಗತ್ತು ಚಾರಿತ್ರಿಕವಾಗಿ ಏಳು ಯುಗಗಳಾಗಿ ಮಾರ್ಪಟ್ಟಿವೆ. ಈ ಏಳು ಯುಗಗಳು ಯಾವುವೆಂದರೆ,

೧. ಆಡಮ್‌ನಿಂದ ಹಿಡಿದು ನೋವ ಎಂಬಾತನ ಕಾಲದ ಮಹಾ ಪ್ರಳಯದವರೆಗಿನ ಕಾಲವು ಪ್ರಥಮ ಯುಗ.

೨. ಈ ಪ್ರಳಯದಿಂದ ಹಿಡಿದು ಅಬ್ರಹಾಂನ ಕಾಲದವರೆಗೆ ಎರಡನೆಯ ಯುಗ.

೩. ಅಬ್ರಹಾಂನ ಕಾಲದಿಂದ ಡೇವಿಡ್‌ನ ಕಾಲದವರೆಗೆ ಮೂರನೆಯ ಯುಗ.

೪. ಡೇವಿಡ್‌ನ ಕಾಲದಿಂದ ಬ್ಯಾಬಿಲೋನಿನಲ್ಲಿ ಯಹೂದ್ಯರ ಗಡೀಪಾರಿನವರೆಗೆ ನಾಲ್ಕನೆಯ ಯುಗ.

೫. ಅಲ್ಲಿಂದ ನಂತರ ಕ್ರಿಸ್ತನ ಜನನದವರೆಗೆ ಐದನೆಯ ಯುಗ.

೬. ಕ್ರಿಸ್ತನ ಪ್ರಥಮ ಹಾಗೂ ದ್ವಿತೀಯ ಆಗಮನದ ಕಾಲ ಆರನೆಯ ಯುಗ.

೭. ಅನಂತರದ ಕಾಲವನ್ನು ಏಳನೆಯ ಯುಗ ಎಂದು ವರ್ಗೀಕರಿಸಿದ್ದಾನೆ. ಹೀಗೆ ಸಂತ ಆಗಸ್ಟೈನನು ತನ್ನ ಬರವಣಿಗೆಯಲ್ಲಿ ಧಾರ್ಮಿಕ ದರ್ಶನದ ಮಿತಿಯೊಳಗೆ ಚರಿತ್ರೆಗೆ ಒಂದು ಮಹಾರೂಪವನ್ನು ನೀಡಿದ್ದಾನೆ.

ಆರನೆಯ ಶತಮಾನದ ಪ್ರಾರಂಭದಿಂದ ಯುರೋಪ್ ‘ಅಂಧ ಪರಂಪರೆಗೆ’ ಸರಿಯಿತು ಎಂದು ಸಾಂಪ್ರದಾಯಿಕ ಚರಿತ್ರೆಕಾರರು ಅಭಿಪ್ರಾಯಪಡುತ್ತಾರೆ. ಅವರ ಪ್ರಕಾರ ಅದು ಸಾಂಸ್ಕೃತಿಕವಾಗಿ ಅನೇಕ ಏರಿಳಿತಗಳಿಗೆ ಒಳಗಾಯಿತು. ಈ ಏರಿಳಿತಗಳ ನಡುವೆಯೂ ಚರ್ಚ್ ಚರಿತ್ರೆ ಲೇಖನ ಪರಂಪರೆಯು ಮುಂದುವರೆಯಿತು. ಈ ಪರಂಪರೆಯಲ್ಲಿ ಟೂಕ್ಸನ ಗ್ರೆಗೊರಿಯು (ಕ್ರಿ.ಶ. ೫೩೯-೫೯೪) ಮುಖ್ಯನಾದವನು. ಅವನ ಜೀವಿತದ ಅವಧಿಯಲ್ಲಿ ಪ್ರಾಂಕ್ಸರ ಆಡಳಿತವನ್ನು ಕಾಣುತ್ತೇವೆ. ಈ ಪ್ರಾಂಕ್ಸರ ಆಡಳಿತವನ್ನು ಕುರಿತು ಹಿಸ್ಟರಿ ಆಫ್ ದಿ ಕಿಂಗ್ಸ್ ಆಫ್ ದಿ ಪ್ರಾಂಕ್ಸ್ ಎಂಬ ಕೃತಿಯನ್ನು ರಚಿಸಿದನು. ಈ ಕೃತಿಯು ಆ ಕಾಲದ ಆರ್ಥಿಕ ಸ್ಥಿತಿ, ವ್ಯಾಪಾರ, ವಾಣಿಜ್ಯ, ಗುಲಾಮಗಿರಿ, ನೈತಿಕತೆ, ಶಿಕ್ಷಣ, ಸಾಮಾಜಿಕ ವರ್ಗಗಳು ಮುಂತಾದ ವಿಷಯಗಳನ್ನು ಕುರಿತಂತೆ ವಿಪುಲ ಮಾಹಿತಿಯನ್ನು ನೀಡುತ್ತದೆ.

ಇವನ ನಂತರ ಚರಿತ್ರೆ ಲೇಖನ ಪರಂಪರೆಯ ಹಿನ್ನೆಲೆಯಲ್ಲಿ ಒಂದು ದೀರ್ಘ ಶೂನ್ಯ ಕಾಲವನ್ನು ಕಾಣಬಹುದು. ವೆನರಬಲ್ ಬೇಡ್ (ಕ್ರಿ.ಶ. ೬೭೩-೭೩೫) ಅನಂತರದ ಪ್ರಮುಖ ಚರಿತ್ರೆಕಾರನು. ಇವನು ಇಂಗ್ಲೆಂಡಿನವನು. ಬೌದ್ಧಿಕವಾಗಿ ಹೊಸ ಎತ್ತರದ ಚರಿತ್ರೆಕಾರನನ್ನು ನಾವು ಬೇಡ್‌ನಲ್ಲಿ ಕಾಣುತ್ತೇವೆ. ಲ್ಯಾಟಿನ್, ಇಂಗ್ಲೀಷ್‌ಮತ್ತು ಐರಿಶ್‌ ಸಂಸ್ಕೃತಿಗಳ ಸಮ್ಮೇಳನದಲ್ಲಿ ಹೊಸ ಬೌದ್ಧಿಕ ಪರಂಪರೆಯ ಕುಡಿಯು ಹೊಮ್ಮಲು ಪ್ರಾರಂಭವಾದದ್ದೇ ಬೇಡ್‌ನಲ್ಲಿ. ಇವನು ಧರ್ಮಶಾಸ್ತ್ರ, ಕಾಲಗಣಶಾಸ್ತ್ರ, ವ್ಯಾಕರಣ, ಗಣಿತ ಮತ್ತು ವಿಜ್ಞಾನ ಮುಂತಾದ ವಿವಿಧ ಮುಖಗಳ ಬೌದ್ಧಿಕ ಚಟುವಟಿಕೆಗಳಲ್ಲಿ ತನ್ನನ್ನು ತೀವ್ರವಾಗಿ ತೊಡಗಿಸಿಕೊಂಡಿದ್ದನು. ಇವನ ಪ್ರಮುಖ ಕೃತಿಯೆಂದರೆ ಕ್ರಿ.ಶ. ೭೩೧ ರಲ್ಲಿ ಲ್ಯಾಟಿನ್ ಭಾಷೆಯಲ್ಲಿ ಪ್ರಕಟವಾದ ‘ಎಕ್ಲಿಸಿಯಾಸ್ಟಿಕಲ್ ಹಿಸ್ಟರಿ ಆಫ್ ದಿ ಇಂಗ್ಲೀಷ್ ನೇಷನ್’. ಇವನ ಪುಸ್ತಕ ರಚನೆಯ ಕ್ರಮದಲ್ಲಿ ಚರಿತ್ರೆಯನ್ನು ವೈಜ್ಞಾನಿಕವಾಗಿ ಬರೆಯಲು ಬೇಕಾದ ಅರ್ಹತೆಗಳಿರುವುದನ್ನು ಕಾಣಬಹುದು. ಇವನ ಇತರ ಕೃತಿಗಳೆಂದರೆ ‘ಲೈವ್ಸ್’, ‘ ಆಫ್ ಕಚ್‌ಬೆರ‍್ಟ್’ (Off Cuthbert). ಇವನನ್ನು ಇಂಗ್ಲೀಷ್ ಚರಿತ್ರೆ ಪರಂಪರೆಯ ಜನಕನೆಂದೇ ಕರೆಯಲಾಗಿದೆ.

ಮಧ್ಯಕಾಲೀನ ಚರ್ಚ್ ಚರಿತ್ರೆ ಲೇಖನ ಪರಂಪರೆಯ ಮತ್ತೊಂದು ವಿಶೇಷವೆಂದರೆ ‘ಅನ್ನಾಲ್’ ಎನ್ನುವ ನಡೆದ ಘಟನೆಗಳನ್ನು ಕಾಲಾನುಕ್ರಮದಲ್ಲಿ ಬರೆದಿರುವ ಪರಿಪಾಠ. ಕ್ರೈಸ್ತ ಧರ್ಮ ಗುರುಗಳ ಕೇಂದ್ರಗಳಿಗೆ ಸಂಬಂಧಿಸಿದಂತೆ ಘಟನೆಗಳ ವಾರ್ಷಿಕ ವರದಿಗಳು ತಯಾರಾಗುತ್ತಿದ್ದವು. ಈ ಪರಂಪರೆಯನ್ನು ಪ್ರಮುಖವಾಗಿ ಇಂಗ್ಲೀಷ್ ಧರ್ಮಕೇಂದ್ರಗಳಲ್ಲಿ (Monastries) ಕಾಣುತ್ತೇವೆ. ಈಸ್ಟರ್‌ನ ಸಂದರ್ಭದಲ್ಲಿ ಬರುವ ವರ್ಷದ ಕಾರ್ಯಕ್ರಮಗಳ ಪಟ್ಟಿಗಳನ್ನು ಬಿಡುಗಡೆ ಮಾಡುತ್ತಿದ್ದರು. ಪ್ರಮುಖ ಸಂತರ ಜಯಂತಿಗಳು, ಭಾನುವಾರಗಳು ಮತ್ತು ಚರ್ಚ್‌ನ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳನ್ನು ಇಲ್ಲಿ ತಿಳಿಸಿ ಹೇಳುತ್ತಿದ್ದರು. ಈ ಪರಂಪರೆಯನ್ನು ಇತರೆ ಪ್ರದೇಶದ ಚರ್ಚ್‌ಗಳು ಅನುಸರಿಸತೊಡಗಿದವು. ಈ ಚರಿತ್ರೆಯನ್ನು ಅಭ್ಯಸಿಸಲು ೧೩ನೆಯ ಶತಮಾನದ ರಿಚರ್ಡ್ ಹೊವ್‌ಡೆನ್‌ನ ‘ದಿ ಆನಲ್ಸ್‌ ಆಫ್ ಇಂಗ್ಲೀಷ್ ಹಿಸ್ಟರಿ’ಯನ್ನು ನೋಡಬಹುದು. ಈ ಪರಂಪರೆಯು ಕ್ರಮೇಣ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಂಡಿತು. ಸಣ್ಣ ಪುಟ್ಟ ಧಾರ್ಮಿಕ ಕೇಂದ್ರಗಳ ಅನ್ನಾಲ್‌ಗಳನ್ನು ಒಟ್ಟಾರೆ ಸೇರಿಸಿ ‘ಕ್ರಾನಿಕಲ್’ ಎಂಬ ಹೊಸ ರೂಪ ಪಡೆಯಿತು. ಕ್ರಾನಿಕಲ್ ಮಾದರಿಯ ಪ್ರಮುಖ ಗ್ರಂಥವೆಂದರೆ ನಾರ್ತುಂಬ್ರಿಯನ್ ಕ್ರಾನಿಕಲ್. ದಕ್ಷಿಣ ಇಂಗ್ಲೆಂಡಿನ ವಿನ್‌ಚೆಸ್ಟರ್ ಈ ರೀತಿಯ ಗ್ರಂಥಗಳನ್ನು ಬರೆಯುವ ಪ್ರಮುಖ ಕೇಂದ್ರವಾಯಿತು. ಪ್ರಸಿದ್ಧ ‘ಆಂಗ್ಲೊ-ಸಾಕ್ಸನ್‌ ಕ್ರಾನಿಕಲ್’ ಆರಂಭಿಕ ಇಂಗ್ಲೀಷ್ ಸಾಹಿತ್ಯದ ಮೇಲಿನ ಚರಿತ್ರೆ ಲೇಖನ ಪರಂಪರೆಯ ಪ್ರಮುಖ ದಾಖಲೆಯಾಗಿದೆ. ಇದು ಕ್ರಿ.ಶ. ೯ನೆಯ ಶತಮಾನದ ದಾಖಲೆಯಾಗಿದೆ. ಈ ಮಾದರಿಯ ಇನ್ನೊಂದು ಪ್ರಮುಖ ಗ್ರಂಥ ‘ದಿ ಕ್ರಾನಿಕಲ್ ಆಫ್ ಸೆಂಟ್ ಆಲ್‌ಬಾನ್ಸ’ ಎಂಬುದು. ಇದು ೧೩ನೆಯ ಶತಮಾನದ ಉತ್ತರಾರ್ಧದಿಂದ ಹಿಡಿದು ೧೫ನೆಯ ಶತಮಾನದ ಮೊದಲೆರೆಡು ದಶಕಗಳ ಘಟನೆಗಳನ್ನು ಒಳಗೊಂಡಿದೆ.

ಆನಲ್ಸ್ ಮತ್ತು ಕ್ರಾನಿಕಲ್ ಮಾದರಿಯ ಬರವಣಿಗೆಗಳು ಈ ಕಾಲದ ಆಗುಹೋಗುಗಳ ಬಗ್ಗೆ ಕೈಗನ್ನಡಿಯಾಗಿವೆ. ಆದರೆ ಈ ಬರವಣಿಗೆಗಳ ಮಿತಿಯೆಂದರೆ ಅವರು ಘಟನೆಗಳನ್ನು ದಾಖಲಿಸಿದ್ದಾರೆಯೆ ಹೊರತು ಘಟನೆಗಳ ಹಿಂದಿನ ಕಾರಣಗಳ ಹುಡುಕಾಟ ಮಾಡುವುದಿಲ್ಲ. ಈ ಬರವಣಿಗೆಗಳು ಮಾಹಿತಿ ಗಣಿಗಳು, ಅವುಗಳಲ್ಲಿನ ಪ್ರಸ್ತುತತೆಯನ್ನು ಪ್ರತಿಭಾವಂತ ಚರಿತ್ರೆಕಾರನು ಕಟ್ಟಿಕೊಡಬೇಕು.

ಈ ಕಾಲಘಟ್ಟದ ಮತ್ತೊಂದು ಪ್ರಮುಖ ಅಂಶವೆಂದರೆ ‘ಕ್ಯಾರೋಲಿಂಗನ ಪುನರುಜ್ಜೀವನ’. ಚಾರ್ಲ್‌‌ಮೆಗನನ ಕಾಲದ ಶೈಕ್ಷಣಿಕ ವಿಸ್ತರಣೆಯ ಪ್ರಕ್ರಿಯೆ ಅಥವಾ ಚಳವಳಿಯನ್ನು ಕ್ಯಾರೋಲಿಂಗನ್ ಪುನರುಜ್ಜೀವನ ಎಂದು ಕರೆಯಲಾಗಿದೆ. ಚಾರ್ಲ್‌ಮೆಗನ್ ಕೇವಲ ರಾಜ್ಯ ಪ್ರತಿಸ್ಥಾಪಕನಾಗದೆ, ನಾಗರಿಕತೆಯ ವಿಸ್ತರಣೆಯ ರೂವಾರಿಯೂ ಆಗಿದ್ದನು. ಆ ಕಾಲದ ಶ್ರೇಷ್ಠ ಚಿಂತಕರು, ಬರಹಗಾರರನ್ನು ತನ್ನ ಆಸ್ಥಾನಕ್ಕೆ ಕರೆಯಿಸಿಕೊಂಡು, ಫ್ರಾನ್ಸಿನ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಲು ಅವರ ನೆರವನ್ನು ಪಡೆದನು. ಆಲ್‌ಕ್ಯೂನ್‌, ಥಿಯೋಡಲ್ಸ್, ಆಂಗಿಲ್‌ಬರ್ಟ್, ಐನ್‌ಹಾರ್ಡ ಮುಂತಾದವನು ಈ ಚಳವಳಿಯಲ್ಲಿ ಪಾಲ್ಗೊಂಡರು. ಆಕ್ಸ-ಲಾ-ಚಾಪೆಲ್‌ನಲ್ಲಿನ ಅವನ ಅರಮನೆಯಲ್ಲಿಯೇ ಈ ಚಳವಳಿ ಪ್ರಾರಂಭವಾಯಿತು. ಚಕ್ರವರ್ತಿಯೇ ತನ್ನ ಕುಟುಂಬದೊಂದಿಗೆ ಈ ಕಲಿಕೆಯ ಕ್ರಮದಲ್ಲಿ ಪಾಲ್ಗೊಂಡರು. ಓದುವುದು, ಬರೆಯುವುದು ಮತ್ತು ಗಣಿತವನ್ನು ಮನನ ಮಾಡುವುದು ಕಡ್ಡಾಯವಾಗಿತ್ತು. ಅನೇಕ ಚರಿತ್ರೆಯ ಕೃತಿಗಳು ಈ ಕಾಲದಲ್ಲಿ ಪ್ರಕಟಗೊಂಡವು. ಅವುಗಳಲ್ಲಿ ಪ್ರಮುಖವಾದುವೆಂದರೆ, ಐನ್‌ಹಾರ್ಡನ ಹಿಸ್‌ವಿಟಾ ಕಾರೊಲಿ (ಚಾರ್ಲ್‌‌ಮೆಗನನ ಜೀವನ). ಐನ್‌ಹಾರ್ಡನು ಚಾರ್ಲ್‌ಮೆಗನ್ನನ ಕಾರ್ಯದರ್ಶಿ ಹಾಗೂ ಜೀವನ ಚರಿತ್ರೆಕಾರನಾಗಿದ್ದನು. ಕ್ರಿ.ಶ. ಸುಮಾರು ೮೧೪ ರ ಸಂದರ್ಭದಲ್ಲಿ ಈ ಕೃತಿ ಪ್ರಕಟವಾಯಿತು. ಹಾಗೆಯೆ ಪಾಲ್‌ದಿ ಡೀಕಾನ್‌ಎಂಬುವನು ಇನ್ನೊಬ್ಬ ಪ್ರಮುಖ ಚರಿತ್ರೆಕಾರನಾಗಿದ್ದನು. ಕ್ರಿ.ಶ. ೭೭೪ರ ವೇಳೆಗೆ ಇವನು ಲಂಬಾರ್ಡರ ಚರಿತ್ರೆ ಎಂಬ ಗ್ರಂಥವನ್ನು ಬರೆದನು. ಲಂಬಾರ್ಡ ಜನರ ಮೂಲವನ್ನು ಕುರಿತು ಬರೆಯುತ್ತಾ ಅವರು ಮೂಲತಃ ಸ್ಕಾಂಡಿನೇವಿಯಾ ಪ್ರದೇಶದವರು ಎಂದು ಬರೆಯುತ್ತಾನೆ. ಇನ್ನೊಬ್ಬ ಚರಿತ್ರೆಕಾರ ನಿಧಾರ್ಡ್ ಎಂಬುವನು ಚರಿತ್ರೆಯ ನಾಲ್ಕು ಪುಸ್ತಕಗಳನ್ನು ಬರೆದನು. ಈ ಕೃತಿಯಲ್ಲಿ ಫ್ರಾನ್ಸಿನ ೯ನೆಯ ಶತಮಾನದ ಚರಿತ್ರೆಯ ಬಗೆಗಿನ ಬೆಳಕು ಕಾಣುತ್ತದೆ.

ಮಧ್ಯಕಾಲೀನ ಚರ್ಚ್ ಚರಿತ್ರೆ ಲೇಖನ ಪರಂಪರೆ ಪರಾಕಾಷ್ಟೆಯನ್ನು ತಲುಪುವುದು ಕ್ರಿ.ಶ. ೧೨ನೆಯ ಶತಮಾನದಲ್ಲಿ. ಕ್ರೈಸ್ತಧರ್ಮಿಯರು ಧರ್ಮಯುದ್ಧದಲ್ಲಿ (Crucades) ತೊಡಗುತ್ತಾರೆ. ರಕ್ತಸಿಕ್ತತೆಯೆ ಈ ಕಾಲದ ಚರಿತ್ರೆಯ ಪ್ರಧಾನ ಗುಣ. ಇಡೀ ಯುರೋಪ್ ಖಂಡ ೯ನೆಯ ಶತಮಾನದ ನಂತರ ಅನೇಕ ರಾಜಕೀಯ ಏಳುಬೀಳುಗಳಿಗೆ ಒಳಗಾಯಿತು. ಹನ್ನೊಂದನೆ ಶತಮಾನದ ನಂತರ ಚರಿತ್ರೆ ಕುರಿತಾದ ಚಿಂತನೆಗಳು ಮೂಡಿ ಅನೇಕ ಹೊಸ ಗ್ರಂಥಗಳು ಬಂದವು. ಇದರ ಹಿಂದೆ ಧರ್ಮ ಯುದ್ಧದ ತುಡಿತವೇ ಬಹುಮುಖ್ಯ ಪ್ರಚೋದನೆಯಾಗಿತ್ತು. ಆನಲ್ಸ್ ಮತ್ತು ಕ್ರಾನಿಕಲ್‌ಗಳನ್ನು ಮೀರಿದ ಹೊಸ ಚರಿತ್ರೆಯ ನೋಟ ಮೊಗ್ಗೊಡೆಯಲು ಪ್ರಾರಂಭಿಸಿತು. ಗ್ರೀಕ್ ಚಿಂತನೆಯು ಈ ಕಾಲದ ಬೌದ್ಧಿಕ ಆಸಕ್ತರ ಮೇಲೆ ವಿಶೇಷ ಪರಿಣಾಮ ಬೀರಿತು. ಇವರು ಗ್ರೀಕ್ ಚಿಂತನೆಗಳತ್ತ ಹೊರಳಿದರು. ಹೊಸ ಬೌದ್ಧಿಕ ಚಿಂತನೆಗಳು ಪ್ರಾರಂಭವಾದವು. ಆಧುನಿಕ ವಿಶ್ವಿದ್ಯಾಲಯಗಳ ಪರಿಕಲ್ಪನೆಗಳು ಮೊಳಕೆಯೊಡೆಯತೊಡಗಿದವು. ಆಲ್‌ಬರ್ಟಸ್ ಮ್ಯಾಗ್ನಸ್, ಪೀಟರ್ ಅಬೆಲಾರ್ಡ್ ಮುಂತಾದ ಚಿಂತಕರು ರೂಪುಗೊಂಡರು. ನಗರ ಪ್ರದೇಶಗಳು ಬೆಳೆಯತೊಡಗಿ ವ್ಯಾಪಾರದ ವಿಸ್ತರಣೆ ಹೆಚ್ಚಾಯಿತು. ರೋಮನ್ನರ ಕಾನೂನು ಅಭ್ಯಾಸ ಪ್ರಮುಖ ಆಕರ್ಷಣೆಯಾಯಿತು. ಸಹಜವಾಗಿಯೇ ಚರಿತ್ರೆ ಲೇಖಕರ ಪರಿಪ್ರೇಕ್ಷ್ಯ ತೀವ್ರ ವಿಸ್ತರಣೆಯನ್ನು ಪಡೆಯಿತು. ಚರಿತ್ರೆ ಬರವಣಿಗೆಗಳ ವ್ಯಾಪ್ತಿಯ ತೀವ್ರ ವಿಸ್ತಾರಕ್ಕೊಳಗಾಗಿ ಜಾಗತಿಕ ಚರಿತ್ರೆಯು ರೂಪಗೊಂಡಿತು.

ಈ ಕಾಲದ ಪ್ರಮುಖ ಚರಿತ್ರೆಕಾರರೆಂದರೆ ಗೆಮ್‌ಬ್ಲಾಕ್ಸನ ಸಿಜಿಬೆರ್ಟ್ (Sigibert of Gembloux), ಅಟ್ಟೊವಿನ ಫ್ರೈಸಿಂಗ್ (Otto of Freising), ಗೀಬರ್ಟ ಡಿ ನೊಜೆಂಟ್ (Geribert di Nogent), ಟೈರನ್ ವಿಲಿಯಂ (William of Tyre), ಮ್ಯಾಲ್‌ಮ್ಸನ ವಿಲಿಯಂ (William of Malameshury), ನ್ಯೂಬರ್ಗನ ವಿಲಿಯಂ (William of Newburg), ಹೆನ್ಸಿ ಹಂಟಿಂಗ್‌ಡನ್ (Henry Huntingdon) ಮುಂತಾದವರು.

ಅಟ್ಟೊವಿನ ಫ್ರೈಸಿಂಗನ ‘ದಿ ಟು ಸಿಟೀಸ್’ ಒಂದು ಪ್ರಮುಖ ಗ್ರಂಥ. ಇದರಲ್ಲಿ ಇವನು ಕ್ರಿಸ್ತ ಶಕದ ಪ್ರಾರಂಭ ಕಾಲದಿಂದ ಯುರೋಪಿನ ಚರಿತ್ರೆಯನ್ನು ಗುರುತಿಸುತ್ತಾನೆ. ಈ ಕೃತಿಯು ಒಂದು ವಿವರಣಾತ್ಮಕ ಗ್ರಂಥ. ಅವನ ಇನ್ನೊಂದು ಗ್ರಂಥ ಚಕ್ರವರ್ತಿ ಒಂದನೇ ಫ್ರೆಡ್ರಿಕನ ಕುರಿತಾದ ಚರಿತ್ರೆ. ೧೨ನೆಯ ಶತಮಾನದ ಗೀಬರ್ಟಿ ಡಿ ನೊಗೆಂಟನು ಧರ್ಮಯುದ್ಧ ಚರಿತ್ರೆಯನ್ನು ಕುರಿತು ಎಂಟು ಸಂಪುಟಗಳನ್ನು ಬರೆದಿದ್ದಾನೆ. ಟೈಕನ ವಿಲಿಯಂನು ಜೆರುಸಲೇಂನ ಚರಿತ್ರೆಯನ್ನು ೨೩ ಪುಸ್ತಕಗಳಲ್ಲಿ ಬರೆದಿದ್ದಾನೆ. ಕ್ರಿ.ಶ. ೧೧೬೯ ರಲ್ಲಿ ಪ್ರಾರಂಭವಾದ ಅವನ ಲೇಖನ ಕೃಷಿ ೧೧೮೪ ರಲ್ಲಿ ಅವನು ಸಾಯುವವರೆಗೂ ಮುಂದುವರೆಯಿತು. ಮ್ಯಾಲ್‌ಮೆಸಬರಿ ವಿಲಿಯಂನ ‘ಲೈವ್ಸ ಆಫ್‌ ದಿ ಕಿಂಗ್ಸ್ ಆಫ್ ಇಂಗ್ಲೆಂಡ್‌ ೪೪೯-೧೧೨೫’ (Lives of the Kings of England 449-1125) ಮತ್ತು ‘ಲೈವ್ಸ್ ಆಫ್‌ ದ ಬಿಷಪ್ಸ್ ಆಂಡ್ ಅಬ್ಬಾಟ್ಸ್‌ ಆಫ್ ಇಂಗ್ಲೆಂಡ್ ೬೦೧-೧೧೨೫’ (Lives of the Bishops and Abbots of England 601-1125) ಪ್ರಮುಖ ಗ್ರಂಥಗಳು. ಈ ಕೃತಿಗಳ ಶೀರ್ಷಿಕೆಗಳೇ ಅವುಗಳ ವಸ್ತುಗಳನ್ನು ಹೇಳುತ್ತವೆ.

ಮತ್ತೊಬ್ಬ ಪ್ರಮುಖ ಬ್ರಿಟಿಷ್ ಚರಿತ್ರೆಕಾರ ಹೆನ್ಸಿ ಹಂಟಿಂಗ್‌ಡನ್‌ ಎಂಬುವನು. ಅವನು ಹಿಸ್ಟೋರಿಯಾ ಆಂಗ್ಲೊರಮ್ ಎಂಬ ಗ್ರಂಥವನ್ನು ಹನ್ನೆರಡು ಸಂಪುಟಗಳಲ್ಲಿ ಪ್ರಕಟಿಸಿದನು. ಈ ಸಂಪುಟಗಳಲ್ಲಿ ಸೀಸರನು ಇಂಗ್ಲೆಂಡಿನ ಆಕ್ರಮಣ ಮಾಡಿದ ದಿನದಂದ ಸ್ಟೀಫನ್ ಎಂಬುವನ ಅರಾಜಕತೆಯ ಆಳ್ವಿಕೆಯವರೆಗಿನ ಚರಿತ್ರೆಯನ್ನು ಕಾಣಬಹುದು.

ಹೀಗೆ ಕ್ರೈಸ್ತ ಚರಿತ್ರೆ ಲೇಖನ ಪರಂಪರೆಯು ಬಹುದೊಡ್ಡ ವಿಸ್ತಾರವನ್ನು ಹೊಂದಿರುವ ಪರಂಪರೆ. ಈ ಪರಂಪರೆಯು ಚರಿತ್ರೆಯನ್ನು ಗ್ರಹಿಸುವ ವಿಧಾನದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿತು. ಧಾರ್ಮಿಕ ನೆಲೆಯಲ್ಲಿಯೇ ಈ ಚರಿತ್ರೆಯನ್ನು ಬರೆದರೂ, ಅದು ಚರಿತ್ರೆಯನ್ನು ವಿಶ್ವ ನೆಲೆಯ ಗ್ರಹಿಕೆಗೆ ತಂದಿತು. ಮನುಷ್ಯನ ಹುಟ್ಟು ಬೆಳವಣಿಗೆಯನ್ನು ಬುಕ್ ಆಫ್ ಜಿನೆಸಿಸ್‌ನಲ್ಲಿ ವಿವರಿಸಿರುವುದೇ ಇದಕ್ಕೇ ಸಾಕ್ಷಿ. ಅನೇಕ ಜನಾಂಗಗಳು ಹುಟ್ಟಿ, ಬೆಳೆದು, ಅವನತಿ ಹೊಂದಿದ ಹಾಗೂ ಒಟ್ಟಾರೆಯಾಗಿ ನಾಗರಿಕತೆಗಳು ರೂಪುಗೊಂಡು ಅವಸಾನವಾದ ಕಥನವನ್ನು ಕ್ರೈಸ್ತ ಚರಿತ್ರೆ ಲೇಖನ ಪರಂಪರೆಯಲ್ಲಿ ಕಾಣಬಹುದು. ಗ್ರೀಕ್ ಮತ್ತು ರೋಮನ್ ಚರಿತ್ರೆ ಪರಂಪರೆಗಳು ಆಯಾ ದೇಶಗಳಿಗೆ ಮಾತ್ರ ಸೀಮಿತವಾಗಿ ರಚಿತವಾದರೆ, ಈ ಪರಂಪರೆಯು ಅನಿವಾರ್ಯವಾಗಿ ಪ್ರಾದೇಶಿಕ ಎಲ್ಲೆಗಳ ಮಿತಿಯನ್ನು ಒಡೆಯಿತು. ಕ್ರೈಸ್ತ ಚರಿತ್ರೆ ಲೇಖನ ಪರಂಪರೆಯ ಮತ್ತೊಂದು ಲಕ್ಷಣವೆಂದರೆ, ಚರಿತ್ರೆ ಗತಿಯನ್ನು ದೈವವೇ ನಿರ್ಧರಿಸುತ್ತದೆ ಎಂಬುದನ್ನು ನಂಬಿದ್ದು. ಹೀಗಾಗಿ ಎಲ್ಲ ಜನರೂ ದೇವರಿಗೆ ಸಮಾನ ಎನ್ನುವ ವಿಶ್ವಪ್ರಜ್ಞೆಯೊಂದರ ಅಂಕುರವಾಯಿತು. ಯಹೂದಿಗಳು ತಾವು ಮಾತ್ರ ದೇವರಿಗೆ ಅತ್ಯಂತ ಪ್ರಿಯವಾದವರು ಎನ್ನುವ ವಾದವು ಕ್ರೈಸ್ತ ಧರ್ಮದ ವಿಶ್ವಪ್ರಜ್ಞೆ ನಾಶಮಾಡಿತು.

ಈ ಪರಂಪರೆಯ ಮತ್ತೊಂದು ಅಂಶವೆಂದರೆ ಏಸು ಕ್ರಿಸ್ತನ ಜೀವನದ ವಿವರಗಳಿಗೆ ಅಂಟಿಕೊಂಡಿದ್ದು. ಕ್ರಿಸ್ತನ ಪೂರ್ವ ಯುಗವು. ಅವನ ಬರುವಿಕೆಗಾಗಿ ತಯಾರಿ ನಡೆಸಿತೆಂದು, ಕ್ರಿಸ್ತನ ಕಾಲವು ಜಗತ್ತಿಗೆ ಬೆಳಕು ತೋರಿಸಿದ ಕಾಲವೆಂದು ನಂಬಲಾಗಿದೆ. ಹೀಗಾಗಿ ಚರಿತ್ರೆ ಪರಂಪರೆಯು ಈ ಕಾಲವನ್ನು ಕತ್ತಲ ಯುಗ ಮತ್ತು ಬೆಳಕಿನ ಯುಗಗಳೆಂದು ಎರಡು ವಿಭಾಗಗಳಾಗಿ ವಿಂಗಡಿಸಿ ನೋಡುತ್ತದೆ. ನೋಡುವ ಈ ಕ್ರಮದಲ್ಲಿಯೇ ಚರಿತ್ರೆಗೆ ಕಾಲಘಟ್ಟಗಳ ಬದ್ಧತೆ ಪ್ರಾಪ್ತವಾಯಿತು. ಚರಿತ್ರೆಯನ್ನು ಅನೇಕ ಕಾಲಗಳಲ್ಲಿ ವಿಂಗಡಿಸಲಾಯಿತು.

ಮೇಲೆ ವಿವರಿಸಿದ ಪ್ರಮುಖ ಲಕ್ಷಣಗಳಂತೆ ಚರ್ಚ್ ಚರಿತ್ರೆ ಲೇಖನ ಸಂಪ್ರದಯವು ಹಲವು ಮಿತಿಗಳನ್ನು ಒಳಗೊಂಡಿದೆ. ಈ ಪರಂಪರೆಯ ಚರಿತ್ರೆಕಾರರು ಸಂಪ್ರದಾಯವನ್ನು ಪ್ರಶ್ನಿಸದೇ ಚಾರಿತ್ರಿಕ ಆಕರವಾಗಿ ಸ್ವೀಕರಿಸಿದ್ದರಿಂದ ಸಂಪ್ರದಾಯವು ಸತ್ಯವಾಗಿ ಪರಿಣಮಿಸಿತು. ಕ್ರೈಸ್ತಧರ್ಮಕ್ಕೆ ಸಂಬಂಧಿಸಿದ ಅಸಂಖ್ಯಾತ ಕತೆಗಳು ವಾಸ್ತವಗಳೆಂದು ಚಿತ್ರೀಕರಿಸಲ್ಪಟ್ಟಿದ್ದರಿಂದ, ಚರಿತ್ರೆ ರಚನೆಯಲ್ಲಿ ಬೇಕಾದ ವಸ್ತುನಿಷ್ಠತೆ ಮೂಡಲೇ ಇಲ್ಲ. ಪ್ರತಿಯೊಂದು ಘಟನೆಯನ್ನು ದೈವತ್ವದ ನೆಲೆಗೆ ಏರಿದ್ದರಿಂದ ಚರಿತ್ರೆಯನ್ನು ಕಟ್ಟುವಲ್ಲಿ ಮನುಷ್ಯನ ಪ್ರಯತ್ನವನ್ನು ನಿರಾಕರಿಸಲಾಯಿತು. ಹಾಗೆಯೇ ಕಾಲಪಟ್ಟಿಗಳ (Periodisation) ಕ್ರಮದಲ್ಲಿ ನೋಡಿದ್ದರಿಂದ ಚರಿತ್ರೆಯನ್ನು ಸರಿಯಾಗಿ ಗ್ರಹಿಸಲಾಗಲಿಲ್ಲ. ಈ ಮಿತಿಗಳ ಜೊತೆಯಲ್ಲಿಯೇ ಚರ್ಚ್ ಚರಿತ್ರೆ ಲೇಖನ ಪರಂಪರೆ ಹೊಸ ಆಲೋಚನಾ ಕ್ರಮಗಳನ್ನು ಹುಟ್ಟುಹಾಕುವಲ್ಲಿ ಸಫಲವಾಯಿತೆಂಬುದನ್ನು ಒಪ್ಪಬೇಕಾಗುತ್ತದೆ. ಮುಂದಿನ ಯುರೋಪಿಯನ್ ಚರಿತ್ರೆ ಚಿಂತನೆಯ ಪರಂಪರೆಯ ಮೇಲೆ ಈ ಪರಂಪರೆ ದಟ್ಟ ಪ್ರಭಾವವನ್ನು ಕಾಣಬಹುದು.

ಚರಿತ್ರೆ ಬರವಣಿಗೆಯ ಮೇಲೆ ಪುನರುಜ್ಜೀವನ ಚಳವಳಿಯ ಪ್ರಭಾವ

ಯುರೋಪಿನ ಚರಿತ್ರೆಯು ಕ್ರಿ.ಶ. ೧೪ನೆಯ ಶತಮಾನದಿಂದ ಬಹುದೊಡ್ಡ ಬದಲಾವಣೆಗಳಿಗೆ ಒಳಗಾಯಿತು. ವೈಚಾರಿಕ ಚಿಂತನಾಕ್ರಮ ಈ ಕಾಲದ ಪ್ರಮುಖ ಲಕ್ಷಣ. ಈ ವೈಚಾರಿಕತೆಯ ಹಿಂದೆ ಮಾನವೀಯ ಮೌಲ್ಯಗಳ ತುಡಿತಗಳು ನಮ್ಮ ಗಮನ ಸೆಳೆಯುತ್ತವೆ. ಹೊಸ ಕಲಿಕೆಯು ಈ ಕಾಲದ ಮುಖ್ಯ ಕಾಳಜಿಯಾಯಿತು. ಕೇಂದ್ರದಲ್ಲಿ ನಿಂತ ಮಾನವನ ಸುತ್ತಮುತ್ತಲಿನ ಆಗುಹೋಗುಗಳನ್ನು ಕುರಿತ ವೈಜ್ಞಾನಿಕ ಚಿಂತನೆ ಒಟ್ಟು ಬೌದ್ಧಿಕ ಮನೋಧರ್ಮವನ್ನು ಆವರಿಸಿತು. ೧೩ನೆಯ ಶತಮಾನದ ನಂತರ ಅರಬ್ಬರು ಮತ್ತು ಯಹೂದಿಗಳು ಪ್ರಾಚೀನ ಗ್ರೀಕರ ಮತ್ತು ರೋಮನ್ನರ ಗ್ರಂಥಗಳನ್ನು ಅನ್ಯಭಾಷೆಗಳಿಗೆ ತರ್ಜುಮೆ ಮಾಡಿದ್ದೇ ಈ ಕ್ರಾಂತಿಗೆ ಬೀಜಾಂಕುರವಾಯಿತು. ವಿಶೇಷವಾಗಿ ಅರಿಸ್ಟಾಟಲನ ಗ್ರಂಥಗಳನ್ನು ಭಾಷಾಂತರಗೊಳಿಸಿದಾಗ ‘ಅಜ್ಞಾತ ಜ್ಞಾನವೊಂದರ’ ಉದಯವಾಯಿತು. ಸೌಂದರ್ಯ, ಸ್ವಾತಂತ್ರ‍್ಯ ಮತ್ತು ಬದುಕಿನಲ್ಲಿರುವ ಉತ್ಕೃಷ್ಟ ಸಂತೋಷದ ಹುಡುಕಾಟವನ್ನು ನಡೆಸಿದರು. ಆದರೆ ಧಾರ್ಮಿಕ ಪ್ರಶ್ನೆಗಳು ಎದುರಾದಾಗ ಸಮಾಜ ವಿಜ್ಞಾನಿಗಳಾಗಿ ಅತ್ಯಂತ ಸೂಕ್ಷ್ಮ ಮತ್ತು ಎಚ್ಚರದ ಮನಸ್ಥಿತಿಯಿಂದ ನೋಡಲಾರಂಭಿಸಿದರು. ಅತಿಮಾನುಷವಾದ ಯಾವುದನ್ನೂ ಸ್ವೀಕರಿಸದೇ ಅವುಗಳಿಗೆ ಮುಖಾಮುಖಿಯಾದರು. ಈ ರೀತಿಯ ಚಿಂತನೆಯು ೧೫ ನೆಯ ಶತಮಾನದಲ್ಲಿ ತಾರಕಕ್ಕೆ ಮುಟ್ಟಿತು. ಮಧ್ಯಕಾಲೀನ ಕ್ರೈಸ್ತಧರ್ಮೀಯ ಚಿಂತನೆಯಿಂದ ಪಶ್ಚಿಮ ಮನುಷ್ಯನನ್ನು ಮುಕ್ತಗೊಳಿಸಿ, ಎಲ್ಲ ಬಂಧನಗಳಿಂದ ಅವನನ್ನು ಬಿಡುಗಡೆಗೊಳಿಸಿ, ಮನುಷ್ಯನ ಚಿಂತನೆಯ ಇತಿಹಾಸದಲ್ಲಿಯೇ ಅಭೂತ ಪೂರ್ವವೆನ್ನಬಹುದಾದ ಈ ಒಟ್ಟು ಬದಲಾವಣೆಯೆ ಪುನರುಜ್ಜೀವನ.

ಅನೇಕ ರಾಜಕೀಯ ಬೆಳವಣಿಗೆಗಳು ಈ ಬಗೆಯ ಬೆಳವಣಿಗೆಗೆ ಕಾರಣವಾದವು. ಕಾನ್‌ಸ್ಟಾಂಟಿನೋಪಲ್ ಟರ್ಕರ ವಶವಾಗಿ ಪೂರ್ವ ರೋಮನ್ ಸಾಮ್ರಾಜ್ಯ ಅವನತಿಯಾಯಿತು. ಪವಿತ್ರ ರೋಮನ್ ಸಾಮ್ರಾಜ್ಯದ ಪತನವು ಊಳಿಗಮಾನ್ಯ ವ್ಯವಸ್ಥೆಯ ಅಳಿವನ್ನು ಹುಟ್ಟು ಹಾಕಿತು. ಭೌಗೋಳಿಕ ಅನ್ವೇಷಣೆ, ವಾಣಿಜ್ಯಾಭಿವೃದ್ಧಿ, ಹೊಸ ರೀತಿಯ ರಾಜ್ಯಗಳ ಉದಯ, ಕ್ರೈಸ್ತಮತ ಸುಧಾರಣೆಯನ್ನು ಅನುಸರಿಸಿದವು. ಗ್ರೀಕ್ ಮತ್ತು ರೋಮನ್ ವಿದ್ವಾಂಸರು ಹಳೆಯ ಚಿಂತನೆಗಳಿಗೆ ಮರುಹುಟ್ಟು ನೀಡಿದರು. ಇದೇ ಪುನರುಜ್ಜೀವನ ಚಳವಳಿಯ ಕೇಂದ್ರಧಾತು. ಚರಿತ್ರೆಯನ್ನು ಕುರಿತ ವಿಶೇಷ ಆಸಕ್ತಿಗಳು ಮೊಳೆಯಲಾರಂಭಿಸಿದವು. ಮನುಷ್ಯಕೇಂದ್ರಿತ ಕಾಳಜಿಯ ಚಿಂತನೆಗಳು ಬೃಹತ್‌ರೂಪದಲ್ಲಿ ರೂಪುಗೊಳ್ಳತೊಡಗಿದವು. ಈ ಕಾಲದ ಚರಿತ್ರೆಯ ಬರವಣಿಗೆಯಲ್ಲಿ ಈ ಅಂಶವು ಪ್ರಧಾನವಾಗಿರುವುದನ್ನು ಗಮನಿಸಬಹುದು. ಪುನರುಜ್ಜೀವನ ಹೊಸದೊಂದೇ ಸಂವೇದನೆಯನ್ನು ಹುಟ್ಟುಹಾಕಿತು. ಗ್ರೀಕ್ ಮತ್ತು ರೋಮನ್ ಹಳೆಯ ಕೃತಿಗಳನ್ನು ಹೊಸ ದೃಷ್ಟಿಕೋನಗಳಿಂದ ನೋಡಲಾರಂಭಿಸಿದ್ದೇ ಈ ಸಂವೇದನೆ ಬೃಹತ್ತಾಗಿ ರೂಪುಗೊಳ್ಳಲು ಕಾರಣವಾಯಿತು. ಈ ಕಾಲದ ಚಿಂತಕರು ಮನುಷ್ಯನಿಗೆ ಸೀಮಾತೀತ ಸಾಮಾರ್ಥ್ಯವಿದೆ ಎಂದು ನಂಬಿದರು. ಮನುಷ್ಯ ತನ್ನನ್ನು ತಾನೇ ರೂಪಿಸಿಕೊಳ್ಳಬಲ್ಲ ಎಂದು ಸಾರಿದರು. ಮನುಷ್ಯನಿಗೆ ಈ ರೀತಿಯ ಶಕ್ತಿ ಸಾಮರ್ಥ್ಯಗಳಿವೆ ಎಂಬ ನಂಬಿಕೆ ಚರಿತ್ರೆ ಲೇಖನ ಪರಂಪರೆ ಮೇಲೆ ತೀವ್ರ ರೀತಿಯ ಪರಿಣಾಮವನ್ನುಂಟು ಮಾಡಿತು. ಸಾಹಿತ್ಯ, ತತ್ವಜ್ಞಾನ, ರಾಜಕೀಯಶಾಸ್ತ್ರ, ವಿಜ್ಞಾನ, ಕಲೆ, ಗಣಿತಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಸ್ವರೂಪದ ಬದಲಾವಣೆಗಳಾದವು. ಅನೇಕ ಹೊಸ ಸಾಧನೆಗಳು ಆವಿಷ್ಕಾರಗೊಂಡವು.

ಈ ನೂತನ ಚಿಂತನಾಕ್ರಮವು ಚರಿತ್ರೆಯಬರವಣಿಗೆಯ ಮೇಲೆ ಪರಿಣಾಮವನ್ನುಂಟು ಮಾಡಿತು ಎಂಬುದಕ್ಕೆ ೧೪ನೆಯ ಶತಮಾನದಲ್ಲಿಯೇ ಪೆಟ್ರಾರ್ಕ (೧೩೦೪-೧೩೭೪) ಪ್ರಾಚೀನ ಇತಿಹಾಸವನ್ನು ತೀವ್ರಾಸಕ್ತಿಯಿಂದ ನೋಡಲಾರಂಭಿಸಿದ್ದೇ ಸಾಕ್ಷಿ. ಇವನು ಲಿವಿಯ ಪುಸ್ತಕಗಳನ್ನು ಮೆಚ್ಚಿಕೊಂಡೇ ಅವನು ಹೇಗೆ ತನಗೆ ವರ್ತಮಾನದಲ್ಲಿ ಪ್ರಸ್ತುತನಾಗುತ್ತಾನೆ ಎಂದು ಬರೆಯುತ್ತಾನೆ. ಗತ ಹೇಗೆ ವರ್ತಮಾನದಲ್ಲಿ ಬದುಕುತ್ತಿದೆ ಎಂಬುದನ್ನು ಚರ್ಚಿಸುತ್ತಾನೆ. ಮೆಕೆವಲೆಯು ೧೬ನೆಯ ಶತಮಾನದಲ್ಲಿ ಲಿವಿಯ ಬರವಣಿಗೆಯನ್ನು ವಿಮರ್ಶಕನಾಗಿಯೆ ಮೆಚ್ಚಿಕೊಳ್ಳುವ ಕ್ರಮ ಒಂದರ್ಥದಲ್ಲಿ ಪೆಟ್ರಾರ್ಕನ ಮುಂದುವರೆದ ಭಾಗವೆಂದೇ ಹೇಳಬಹುದು. ಹಾಗೆಯೇ ಇಟಲಿಯ ಲಿಯೋನಾರ್ಡೊ ಬ್ರೂವಿಯು ಪುನರುಜ್ಜೀವನ ಚರಿತ್ರೆ ಲೇಖನ ಕಲೆಯ ಆರಂಭಿಕ ಬರಹಗಾರನಾಗಿದ್ದನ್ನು ಗಮನಿಸಬಹುದು. ‘ಫ್ಲಾರಂಟೈನ್ ಹಿಸ್ಟರೀಸ್’ ಹಾಗೂ ‘ಕಾಮೆಂಟರೀಸ್’ ಅವನ ಕೃತಿಗಳು. ಈ ಕೃತಿಗಳಲ್ಲಿ ದೈವಿಕ ಅಂಶಗಳನ್ನು ನಿರಾಕರಿಸಿ ಮನುಷ್ಯ ಪ್ರಯತ್ನಗಳನ್ನು ಎತ್ತಿ ಹಿಡಿಯುತ್ತಾನೆ. ಮನುಷ್ಯನ ಬೌದ್ಧಿಕ ಪ್ರಯತ್ನಗಳ ಅನಾವರಣವೇ ಅವನ ಪ್ರಧಾನ ಆಶಯವಾಗಿದ್ದುದನ್ನು ಕಾಣಬಹುದು. ಈ ಆರಂಭಿಕ ಪ್ರಯತ್ನಗಳಿಂದಲೇ ಚರಿತ್ರೆ ಲೇಖನ ಪರಂಪರೆ ಜಾತ್ಯಾತೀತಗೊಂಡಿದ್ದನ್ನು ಕಾಣಬಹುದು.

ಮತ್ತೊಂದು ಪ್ರಮುಖ ಅಂಶವೆಂದರೆ ಪುನರುಜ್ಜೀವನ ಚಳವಳಿಯು ಹಿಂದೆಂದೂ ಕಾಣದ ರೀತಿಯಲ್ಲಿ ಭೂತಕಾಲಕ್ಕೆ ಮುಖಾಮುಖಿಯಾದದ್ದು. ಚರಿತ್ರೆಗೆ ಸಂಬಂಧಿಸಿದಂತಹ ದಾಖಲೆಗಳನ್ನು ಕಲೆಹಾಕುವುದೇ ಒಂದು ಚಳವಳಿಯ ರೀತಿಯಲ್ಲಿ ನಡೆಯಿತು. ಮನುಷ್ಯನ ಹಿಂದಿನ ಚರಿತ್ರೆಯನ್ನು ಅರಿಯಬೇಕೆನ್ನುವ ದಾಹ ತೀವ್ರವಾಯಿತು. ಅಲ್ಲಿಯ ಎಲ್ಲ ಬಗೆಯ ಚರಿತ್ರೆಯ ಕುರುಹುಗಳ ಬಗೆಗೆ ತೀವ್ರ ಶೋಧ ಪ್ರಾರಂಭವಾಯಿತು. ಅಲ್ಲಿಯವರೆಗೆ ಚರಿತ್ರೆಯ ಸ್ಮಾರಕಗಳಲ್ಲಿ ಇಟಲಿಯನ್ನರು ಸೇರಿದಂತೆ ಯಾರಿಗೂ ತೀವ್ರ ಆಸಕ್ತಿ ಇರಲಿಲ್ಲ. ೧೪ನೆಯ ಶತಮಾನದ ನಂತರ ಅವರ ದೃಷ್ಟಿಕೋನ ಬದಲಾಗಿ ಶಾಸನಗಳ, ನಾಣ್ಯಗಳ, ಪ್ರಶಸ್ತಿ, ಪದಕಗಳ, ಹಳೆ ಕಡತಗಳ, ಚಾರಿತ್ರಿಕ ಮೌಲ್ಯವನ್ನು ಮನಗಂಡು, ಚರಿತ್ರೆ ಲೇಖನಗಳನ್ನು ಬರೆಯುವಾಗ ಅವುಗಳನ್ನು ಬಳಸಿಕೊಳ್ಳತೊಡಗಿದರು. ಟಾನಿಟಸನ ‘ಅಗ್ರಿಕೋಲ’ ಮತ್ತು ‘ಜೆರ‍್ಮೇನಿಯಾ’ ಹಾಗೂ ಅವನ ‘ಆನಲ್ಸ್’ ಕೃತಿಯ ಭಾಗಗಳನ್ನು ೧೪೫೫ ಮತ್ತು ೧೫೦೬ರ ನಡುವೆ ಬೆಳಕಿಗೆ ತಂದರು. ಇದೇ ಆಲದಲ್ಲಿ ಪಾಲಿಬಿಯಸನ ಕೃತಿಯ ಲ್ಯಾಟಿನ್ ಅನುವಾದ ಬಂದಿತು. ಫ್ಲಾರೆನ್ಸಿನ ಚರಿತ್ರೆಕಾರನಾದ ಪೋಗ್ಗೀಯಾ ಬ್ರಾನಿಯೊಲಿನಿ ಎಂಬುವನು ಹಳೆಯ ಕಡತಗಳನ್ನು ಹುಡುಕುವ ಬೇಟೆ ಪ್ರಾರಂಭಿಸಿದನು. ನಿಕೊಲೊ ನಿಕೊಲಿ, ಲೊರೆಂಜೊಡ ಮೆಡಿಸಿ ಈ ರೀತಿಯ ಪ್ರಯತ್ನಗಳನ್ನು ಮಾಡಿದರು. ಮೆಡಿಸಿ ಎಂಬುವನು ತನ್ನ ಅರಮನೆಯಲ್ಲಿಯೇ ಒಂದು ಸಂಗ್ರಹಾಲಯವನ್ನು ಪ್ರಾರಂಭಿಸಿದನು. ಹಾಗೆಯೆ ನಾಲ್ಕನೆಯ ಪೋಪ್ ಸಿಕ್ಸಟಸ್‌ನು ಕ್ಯಾಪಿಟೊಲಿನ್ ಎನ್ನುವ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿದನು. ಪ್ರಾಕ್ತನ ಶಾಸ್ತ್ರವು ಒಂದು ಅಧ್ಯಯನ ವಿಜ್ಞಾನವಾಗಿ ಬೆಳೆಯಲು ಆರಂಭವಾದದ್ದೇ ಈ ಕಾಲದಲ್ಲಿ.

ಈ ಮಾದರಿಯ ಅಧ್ಯಯನದೊಂದಿಗೆ ವಿಮರ್ಶಾತ್ಮಕ ದೃಷ್ಟಿಕೋನವು ಬೆಳೆಯತೊಡಗಿತು. ಇದರ ಪರಿಣಾಮ ಭಾಷಾಧ್ಯಯನಗಳು, ಸಂಸ್ಕೃತಿ ಅಧ್ಯಯನಗಳು, ಚರಿತ್ರೆ ಅಧ್ಯಯನಗಳು ಹೊಸದಾಗಿಯೆ ಪ್ರಾರಂಭಗೊಂಡವು. ‘ಮಾನವ ಕೇಂದ್ರಿತ’ ಈ ಬಗೆಯ ಅಧ್ಯಯನಗಳನ್ನು ಅನೇಕರು ಕೈಗೊಂಡರು. ಲೊರೆನ್‌ಜೊ ವಲ್ಲ (೧೪೦೬-೫೭), ಜೀನ್ ಬೊದಿನ್, ಪಾಲಿಡೋರ್ ವರ್ಜಿಲ್, ಎಲ್.ವಿ. ಡಲಾ ಪೋಪ್‌ಲೀನಿಯರ್ ಮುಂತಾದವರು. ಇವರು ಆಗ ಚಾಲ್ತಿಯಲ್ಲಿದ್ದ ಅನೇಕ ಬಗೆಯ ಮಿಥ್‌ಗಳನ್ನು ಬಯಲಿಗೆಳೆಯುವಲ್ಲಿ ಸಫಲರಾದರು. ಇಟಲಿಯಲ್ಲಿ ಪ್ರಾರಂಭವಾದ ಈ ಚಳವಳಿಯನ್ನು ಅನೇಕ ಇಟಲಿಯನ್ನರೆ ಜರ್ಮನಿ, ಫ್ರಾನ್ಸ್, ಇಂಗ್ಲೆಂಡ್, ಸೈನ್, ಹಂಗೇರಿ ಮತ್ತು ಪೊಲಾಂಡ್ ಮುಂತಾದ ದೇಶಗಳಿಗೆ ಕೊಂಡೊಯ್ದರು.

ಇಟಲಿಯಲ್ಲಿ ಈ ಚಳವಳಿ ರೂಪುಗೊಳ್ಳಲು ಮತ್ತೊಂದು ಕಾರಣವಿದೆ. ಪ್ರಮುಖ ನಗರಗಳಾದ ಲಂಬಾರ್ಡಿ, ಪೀಡ್ ಮಾಂಟ್ ಮತ್ತು ಟಸ್ಕನಿಗಳಲ್ಲಿ ಚರ್ಚುಗಳ ಪ್ರಭಾವ ಅಷ್ಟೇನು ತೀವ್ರವಾಗಿರಲಿಲ್ಲ ಹಾಗೂ ಇದ್ದುದರಲ್ಲಿ ಇಲ್ಲಿಯ ಜನವರ್ಗಗಳು ಹೆಚ್ಚು ಸ್ವತಂತ್ರರಾಗಿದ್ದರು. ಈ ಜನತಾಂತ್ರಿಕ ಸ್ವರೂಪವೇ ಅವರಲ್ಲಿ ಮುಕ್ತ ಹಾಗೂ ವಾಸ್ತವವಾದಿ ಚಿಂತನೆಯನ್ನು ಪ್ರೇರೇಪಿಸಿತು.

ಈ ಚಳವಳಿಯ ಆರಂಭಿಕ ಕಾಲದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವರು ಎಂದರೆ ಫ್ಲೇವಿಯೊ ಬಿಯಾಂಡೊ (೧೩೮೮-೧೪೬೩), ಹಾಗೂ ಅವನ ಸಮಕಾಲೀನ ಲಿಯೊನಾಡೊ ಬ್ರೂನಿ ಮುಖ್ಯರು, ಬಿಯಾಂಡೊವಿನ ‘ಡಿಕೇಡ್ಸ’ ಅಥವಾ ‘ಹಿಸ್ಟರಿ ಫ್ರಂ ದಿ ಡಿಕ್ಲೈನ್‌ ಆಫ್ ದಿ ರೋಮನ್ ಎಂಪೆರ್’ ಬಹುಮುಖ್ಯ ಕೃತಿಗಳು. ಒಂದರ್ಥದಲ್ಲಿ ಗಿಬ್ಬನ್ನನ ‘ದಿ ಡಿಕ್ಲೈನ್ ದಿ ರೋಮನ್ ಎಂಪೈರ್‌’ ಕೃತಿಯ ಮುನ್ನುಡಿ ಇದಾಗಿತ್ತು. ಅವನು ಚರಿತ್ರೆಯನ್ನು ಒಂದು ವಿಶೇಷ ಬಗೆಯ ತಾರ್ಕಿಕ ಅಧ್ಯಯನವೆಂದು ಸಾರಿದನು. ಪುನರುಜ್ಜೀವನವು ರೋಮನ್‌ಸಾಮ್ರಾಜ್ಯದ ಪತನದ ಮುಂದುವರಿದ ಹಂತವೆಂದೇ ಭಾವಿಸಿದನು. ಲಿಯೊನಾರ್ಡೊ ಬ್ರೂನಿಯು ಪ್ರಥಮ ಆಧುನಿಕ ಚರಿತ್ರೆಕಾರ ಎಂದೇ ಪರಿಗಣಿತನಾಗಿದ್ದಾನೆ. ಚರಿತ್ರೆಯ ಅಧ್ಯಯನಕ್ಕೆ ಮನಃಶಾಸ್ತ್ರೀಯ ಆಯಾಮವನ್ನು ತಂದುಕೊಟ್ಟನು. ಅವನು ‘ಹಿಸ್ಟರಿ ಆಫ್‌ ದ ಫ್ಲಾರೆಂಟೈನ್ ಪೀಪಲ್’ ಈ ಹಿನ್ನೆಲೆಯ ಪ್ರಮುಖ ಕೃತಿ. ಯುರೋಪಿನ ಅನೇಕ ರಾಷ್ಟ್ರಗಳಲ್ಲಿ ಬ್ರೂನಿ ಮಾದರಿಯ ಚರಿತ್ರೆಕಾರರನ್ನು ಕಾಣಬಹುದು.

ನಿಕೊಲೊ ಮೆಕೆವಲೆಯು ಪುನರಜ್ಜೀವನ ಚಳವಳಿಯ ಅಂತಃಶಕ್ತಿಯ ಪ್ರತೀಕ. ಇವನು ಪುನರುಜ್ಜೀವನ ಚಳವಳಿಯ ಬಹುಮುಖಿ ಆಯಾಮಗಳನ್ನು ಅನಾವರಣಗೊಳಿಸುತ್ತಾನೆ. ಇವನು ರಾಜನೀತಿಜ್ಞ, ನಾಟಕಕಾರ, ದಾರ್ಶನಿಕ ಮತ್ತು ಚರಿತ್ರೆಕಾರನಾಗಿದ್ದನು. ನೇರ ಪ್ರಯತ್ನಗಳಲ್ಲಿ ಅವನು ಸೋಲನ್ನೇ ಕಂಡರೂ, ಚರಿತ್ರೆಯಲ್ಲಿ ಅವನ ಸಮಕಾಲೀನರಿಗಿಂತ ಪ್ರಭಾವಿಯಾಗಿದ್ದನೆಂದು ಪ್ರಸಿದ್ಧ ಚರಿತ್ರೆಕಾರ್ ವಿಲ್‌ಡ್ಯುರಾಂಬಲ್ ಬರೆಯುತ್ತಾನೆ.

ಅವನ ಅನೇಕ ಸಮಕಾಲೀನರಿಗೆ ಅಸಂಗತ ಮನುಷ್ಯರಂತೆ ಭಾಸವಾದರೂ, ಮೆಕೆವಲೆಯೂ ತೀಕ್ಷ್ಣ ಸ್ವಭಾವದ ಮನುಷ್ಯನಾಗಿದ್ದನು. ಎಲ್ಲ ಕಾಲಗಳಲ್ಲೂ ಮನುಷ್ಯನ ಸ್ವಭಾವವು ಬಹುತೇಕ ಒಂದೇ ತೆರನಾಗಿದ್ದುದರಿಂದಲೇ ಹಿಂದಿನ ಘಟನೆಗಳು, ಸಮಕಾಲೀನ ಘಟನೆಗಳನ್ನು ಹೋಲುತ್ತವೆ ಎಂದು ತಿಳಿದಿದ್ದನು. ಹಿಂದೆ ತಿಳಿಸಿರುವಂತೆ ಮೆಕೆವಲ್ಲಿಗೆ ಪ್ರಿಯನಾದ ಚರಿತ್ರೆಕಾರನೆಂದರೆ ಲಿವಿ. ಲಿವಿಯ ‘ಹಿಸ್ಟರಿ ಆಫ್‌ ರೊಂ’ನ ಮೊದಲ ಹತ್ತು ಸಂಪುಟಗಳನ್ನು ಕುರಿತು ವಿಮರ್ಶೆಯನ್ನು ಬರೆಯುವ ಪ್ರಯತ್ನ ನಡೆಸಿದನು. ಅವನು ಪೂರ್ಣಗೊಳಿಸಲು ಸಾಧ್ಯವಾದದ್ದು ಕೇವಲ ಮೊದಲ ಮೂರು ಸಂಪುಟಗಳನ್ನು ಕುರಿತು ಮಾತ್ರ. ಅವನ ಪ್ರಸಿದ್ಧ ಕೃತಿ ‘ದಿ ಪ್ರಿನ್ಸ್’ ಇದು ರಾಜಕೀಯ ಚಿಂತನೆಯ ಚರಿತ್ರೆಯಲ್ಲಿ ಬಹುದೊಡ್ಡ ಕ್ರಾಂತಿಯನ್ನುಂಟು ಮಾಡಿತು. ಅನೇಕ ರಾಜರಿಗೆ ಕೈಪಿಡಿಯಾಯಿತು. ಅವನ ಮೂರನೆಯ ಕೃತಿ ‘ದಿ ಹಿಸ್ಟರಿ ಆಫ್ ಫ್ಲಾರೆನ್ಸ್’. ಇದು ರೋಮನ್ ಸಾಮ್ರಾಜ್ಯದ ಅವನತಿಯ ಅನಾವರಣದಿಂದ ಪ್ರಾರಂಭವಾಗಿ ೧೫ನೆಯ ಶತಮಾನದ ರಾಜಕೀಯ ಘಟನೆಗಳ ಸುತ್ತಲು ಸುತ್ತುತ್ತವೆ. ಹೀಗಾಗಿಯೆ ರಾಜಕೀಯ ಚಿಂತಕರಿಗೆ ಕೊನೆಯವರೆಗಿನ ರಾಜಕೀಯ ವಿದ್ಯಮಾನಗಳನ್ನು ಚರ್ಚಿಸುತ್ತದೆ. ಅವನ ಬರವಣಿಗೆಗಳು ರಾಜಕೀಯ ಘಟನೆಗಳ ಸುತ್ತಲೇ ಸುತ್ತುತ್ತವೆ. ಹೀಗಾಗಿಯೇ ರಾಜಕೀಯ ಚಿಂತಕರಿಗೆ ಅವನು ಅಷ್ಟೊಂದು ಆಪ್ಯಾಯಮಾನವಾದದ್ದು. ಅವನ ಬರವಣಿಗೆಯಲ್ಲಿ ತರ್ಕಬದ್ಧ ನಿರೂಪಣೆಯನ್ನು ಕಾಣಬಹುದು. ಘಟನೆಗಳ ಕಾರಣಗಳು ಮತ್ತು ಪರಿಣಾಮಗಳನ್ನು ಮಗ್ನನಾಗಿ ವಿವರಿಸುತ್ತಾನೆ. ವಿಶೇಷವಾಗಿ ಚರ್ಚ್‌‌ನ ಬಗೆಗೆ ಬರೆಯುವಾಗ ಹೇಗೆ ಚರ್ಚ್ ತನ್ನ ಪರಮಾಧಿಕಾರವನ್ನು ಉಳಿಸಿಕೊಳ್ಳಲು ಇಟಲಿಯನ್ನು ವಿಭಜಿಸಿತು ಎಂದು ವಿವರಿಸುತ್ತಾನೆ. ‘ದಿ ಹಿಸ್ಟರಿ ಆಪ್ ಫ್ಲಾರೆನ್ಸ್’ ಕೃತಿಯನ್ನು ಬರೆಯಲು ಅವನಿಗೆ ಐದು ವರ್ಷಗಳು ಬೇಕಾದವು. ಸಂತ ಆಗಸ್ಟೈನ್ನನು ಚರ್ಚಿಗೆ ಅನನ್ಯ ಸ್ಥಾನವನ್ನು ದಕ್ಕಿಸಿಕೊಟ್ಟಿದ್ದನ್ನು ಮೆಕೆವಲ್ಲಿಯು ನಿರ್ನಾಮ ಮಾಡುತ್ತಾನೆ. ಮನುಷ್ಯನ ಕಪಟ ನಾಟಕ ಮುಂತಾದ ಗುಣಗಳನ್ನು ಕುರಿತು ಬರೆದಿದ್ದಾನೆ. ಆದ್ದರಿಂದಲೇ ಮನುಷ್ಯರು ಸಮಾಜದಲ್ಲಿ ಒಟ್ಟಿಗಿರಲು ಬಲಪ್ರಯೋಗ ಅನಿವಾರ್ಯ ಎನ್ನುತ್ತಾನೆ. ಇಂತಹ ಮೆಕೆವಲ್ಲಿ ಬಡತನದ ಬೇಗೆಯಲ್ಲಿಯೇ ಸಾಯುತ್ತಾನೆ.

ಮೆಕೆವಲಿಯ ಸಮಕಾಲೀನನಾದ ಫ್ರಾನ್‌ಸೆಸಕೊ ಗ್ಯೂಸಿಯಾರ್ಡಿನಿಯೂ (ಕ್ರಿ.ಶ. ೧೪೮೩-೧೫೪೦) ಅವನಂತೆಯೆ ತೀಕ್ಷ್ಣ ಸ್ವಭಾವದವನಾಗಿದ್ದನು. ಫ್ಲಾರೆನ್ಸಿನ ನಿವಾಸಿಯಾದ ಇವನು ‘ದಿ ಹಿಸ್ಟರಿ ಆಫ್ ಫ್ಲಾರೆನ್ಸ್’ ಎಂಬ ಕೃತಿಯನ್ನು ತನ್ನ ೨೭ನೆಯ ವಯಸ್ಸಿನಲ್ಲಿಯೇ ಬರೆದನು. ೧೩೭೮ ರಿಂದ ೧೫೦೯ರ ನಡುವಿನ ಫ್ರಾರೆನ್ಸಿನ ಚರಿತ್ರೆಯನ್ನು ಸಮರ್ಥ ವಿವರಣೆಗಳೊಂದಿಗೆ ಬರೆದನು. ವಿಲ್‌ಡ್ಯೂರಾಂಟ್ ಎಂಬ ಚರಿತ್ರೆಕಾರನೇ ಇವನ ಈ ಕೃತಿಯ ಮೌಲ್ಯವನ್ನು ಕೊಂಡಾಡಿದ್ದಾನೆ. ಸಮಾಜದ ಎಲ್ಲ ವರ್ಗದ ಜನರನ್ನು ಕುರಿತು ಬರೆದಿದ್ದಾನೆ. ಇವನ ಮತ್ತೊಂದು ಮುಖ್ಯ ಕೃತಿ ‘ದಿ ಹಿಸ್ಟರಿ ಆಫ್ ಇಟಲಿ’. ಇದರ ಉಪಶೀರ್ಷಿಕೆ ‘ದಿ ಹಿಸ್ಟರಿ ಆಫ್‌ ದಿ ವಾರ್ಸ್‌’. ಈ ಕೃತಿಯನ್ನು ಇಟಾಲಿಯನ್ ಭಾಷೆಯಲ್ಲಿ ೧೦ ಸಂಪುಟಗಳಲ್ಲಿ ಬರೆದಿದ್ದಾನೆ. ಇದು ಆ ಕಾಲದ ಯುರೋಪಿನ ರಾಜಕೀಯ ಕುರಿತಾದ ಸಮಗ್ರ ಕೃತಿ. ಪುನರುಜ್ಜೀವನ ಚಳವಳಿಯ ಸಂದರ್ಭದ ಮಹತ್ವದ ಕೃತಿಯೆಂದೂ ಬಣ್ಣಿಸಲ್ಪಟ್ಟಿದೆ. ನಿಸ್ಸಂದೇಹವಾಗಿಯೂ ಇವನು ೧೬ನೆಯ ಶತಮಾನದ ಶ್ರೇಷ್ಠ ಚರಿತ್ರೆಕಾರನಾಗಿದ್ದಾನೆ. ಅವನ ‘ಕನ್‌ಸಿಡರೇಷನ್ಸ ಆನ್‌ ದಿ ಡಿಸ್ಕೋರ್ಸ್ಸಸ್ ಆಫ್ ಮೆಕೆವಲಿ’ (೧೫೩೦) ಹೊಸ ಬರವಣಿಗೆಯ ಮಾದರಿಯೊಂದನ್ನು ತೋರಿಸುತ್ತದೆ. ಪುನರುಜ್ಜೀವನ ಚಳವಳಿಯ ಉಳಿದ ಚರಿತ್ರೆಕಾರರು ಹಾಗೂ ಚಿಂತಕರೆಂದರೆ ಜೀನ್ ಬೋದಿನ್ (ಕ್ರಿ.ಶ. ೧೫೩೦-೧೫೯೬) ಮತ್ತು ಫ್ರಾನ್ಸಿಸ್ ಬೇಕನ್ (೧೫೬೧-೧೬೨೬) ಎಂಬುವವರು. ಜೀನ್ ಬೋದಿನ್ ಎಂಬುವನು ಒಬ್ಬ ಫ್ರೆಂಚ್ ಚರಿತ್ರೆಕಾರ. ಅವನು ಚರಿತ್ರೆಯನ್ನು ಹೇಗೆ ಗ್ರಹಿಸಬೇಕೆಂದು ತಿಳಿಸಲು ‘ದಿ ಮೆಥಡ್ ಫಾರ್ ದಿ ಈಸಿ ಕಾಂಪ್ರೆಹೆನ್‌ಷನ್ ಆಫ್ ಹಿಸ್ಟರಿ’ ಗ್ರಂಥವನ್ನು ರಚಿಸಿದನು. ಚರಿತ್ರೆಯೆಂಬುದು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ನಿರಂತರ ಸಂಘರ್ಷವೆಂದು ಭಾವಿಸಿ, ಒಳ್ಳೆಯದೇ ಕೊನೆಗೂ ಜಯವನ್ನು ಸಾಧಿಸುತ್ತದೆನ್ನುವ ಆಂತರಿಕ ಆಸೆಯನ್ನು ಸಾಬೀತುಗೊಳಿಸುವ ಪ್ರಯತ್ನ ಮಾಡುತ್ತಾನೆ. ಭೌಗೋಳಿಕ ಅಂಶಗಳು ಚರಿತ್ರೆಯನ್ನು ರೂಪುಗೊಳಿಸುವ ಕ್ರಮವನ್ನು ವಿವರಿಸುತ್ತಾನೆ. ಭೂಗೋಳ ಮನುಷ್ಯನ ಗುಣಗಳನ್ನು ರೂಪಿಸುತ್ತದೆ ಎಂದು ಭಾವಿಸುತ್ತಾನೆ. ಪರ್ವತಗಳ ಅಂಚಿನಲ್ಲಿ ವಾಸಿಸುವ ಜನರ ಗುಣಧರ್ಮಗಳು, ಬಯಲು ಸೀಮೆಯಲ್ಲಿ ಬದುಕುವ ಅಥವಾ ಸಮುದರದ ಅಂಚಿನಲ್ಲಿ ಬದುಕುವ ಜನರ ಗುಣಧರ್ಮಗಳಿಂದ ಸಂಪೂರ್ಣ ಭಿನ್ನವಾಗಿರುತ್ತದೆ ಎಂಬುದನ್ನು ನಿರೂಪಿಸುವ ಪ್ರಯತ್ನಗಳನ್ನು ಮಾಡುತ್ತಾನೆ. ಈ ಚಿಂತನಕಾರರ ಮಾಲಿಕೆಯಲ್ಲಿ ಬರುವ ಈ ಕಾಲಘಟ್ಟದ ಕೊನೆಯ ಬೃಹತ್‌ಪ್ರತಿಭೆಯೆಂದರೆ ಫ್ರಾನ್ಸಿಸ್‌ಬೇಕನ್. ವಿಜ್ಞಾನ ಮತ್ತು ತತ್ವಶಾಸ್ತ್ರದ ಚಿಂತಕನಂತೆ ಚರಿತ್ರೆಕಾರನೂ ಆಗಿದ್ದನು. ಅವನ ಪ್ರಮುಖ ಕೃತಿ ‘ದಿ ಹಿಸ್ಟರಿ ಆಫ್ ದಿ ರಿನ್ ಆಫ್ ಕಿಂಗ್ ಹೆನ್ರಿ VII’ ಅವನ ಚಿಂತನ ‌ಕ್ರಮಕ್ಕೆ ಹಿಡಿದ ಕನ್ನಡಿಯಾಗಿದೆ. ಇವನ ಕಾಳಜಿ ಚರಿತ್ರೆಯನ್ನು ವಾಸ್ತವಿಕ ನೆಲೆಯಲ್ಲಿ ಕಟ್ಟಿಕೊಡುವುದು. ಹೀಗಾಗಿ ವಿವರಗಳೇ ಇವನ ಬರವಣಿಗೆಯ ಪ್ರಮುಖ ಲಕ್ಷಣಗಳಾಗಿವೆ. ಇವನು ಚರಿತ್ರೆಯನ್ನು ಬರೆಯುವಾಗ ವಿಮರ್ಶೆಯ ಭಾಷೆಯನ್ನು ಬಳಸುತ್ತಾನೆ. ಈ ರೀತಿಯ ಬಳಕೆಯಿಂದ ಭಾಷೆಗೆ ಹೊಸತನವೊಂದು ದಕ್ಕಿತು.

ಹೀಗೆ ಪುನರುಜ್ಜೀವನ ಚಳವಳಿಯ ಉತ್ಪನ್ನವಾದ ಚರಿತ್ರೆಯು ಹೊಸ ಸಂವೇದನೆಗಳನ್ನು ಸೃಷ್ಟಿಸಿತು. ಚರಿತ್ರೆಯನ್ನು ನೋಡುವ ಬಗೆಯನ್ನು ಸಂಪೂರ್ಣ ಬದಲಾಯಿಸಿತು. ದೇವರು, ಧಾರ್ಮಿಕ ಸಂಸ್ಥೆಗಳು, ಮಠಾಧೀಶರ ಪ್ರಾಮುಖ್ಯತೆಯನ್ನು ಹಾಗೂ ಈ ಸಾಂಸ್ಕೃತಿಕ ಶಕ್ತಿಗಳು ಸಮಾಜದ ಮೇಲೆ ಪಡೆದಿದ್ದ ಮೇಲ್ಮೈಯನ್ನು ಈ ಲೇಖನ ಪರಂಪರೆಯು ಸ್ಪಷ್ಟವಾಗಿ ನಿರಾಕರಿಸಿತು. ಚರಿತ್ರೆಯನ್ನು ಅವರು ಜಾತ್ಯಾತೀತ ಭೂಮಿಕೆಯ ಮೇಲೆ ಕಟ್ಟಿದರು. ಚರಿತ್ರೆಯ ವಿಸ್ತಾರವನ್ನು ಹೆಚ್ಚು ಮಾಡಿದರು. ಪ್ರಾಕ್ತನಶಾಸ್ತ್ರ ಹಾಗೂ ಸಾಹಿತ್ಯಿಕ ಕೃತಿಗಳ ಅಧ್ಯಯನದಿಂದ ಅವುಗಳಲ್ಲಿರುವ ಒಳಧ್ವನಿಗಳನ್ನು ವೈಜ್ಞಾನಿಕ ವಿಧಾನಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದರು. ಕೇವಲ ಘಟನೆಗಳನ್ನು ದಾಖಲಿಸುವ ಪದ್ಧತಿಯನ್ನು ಬಿಟ್ಟು ದಾಖಲೆಗಳ ಹಿಂದಿರುವ ಕಾರಣಗಳು ಹಾಗೂ ಅವುಗಳ ಪರಿಣಾಮಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸಿದರು. ಈಗಾಗಲೇ ಹೇಳಿರುವಂತೆ ಈ ಚಳವಳಿಯು ರೂಪುಗೊಂಡಿದ್ದೇ ಗ್ರೀಕ್ ಮತ್ತು ರೋಮನ್ ಕೃತಿಗಳನ್ನು ಅಧ್ಯಯನ ಮಾಡಿ ಅವುಗಳಿಗೆ ಹೊಸ ಅರ್ಥ ಸಾಧ್ಯತೆಗಳನ್ನು ಸಾದೃಶ್ಯ ಪಡಿಸುವ ಕಾರ್ಯದಿಂದ. ಚರಿತ್ರೆಯನ್ನು ಅದು ನೀಡಬಹುದಾದ ಪಾಠಗಳಿಗೋಸ್ಕರ ಅಧ್ಯಯನ ಮಾಡಲು ಈ ಚರಿತ್ರೆಕಾರರು ಪ್ರಯತ್ನಿಸಿದರು. ಏಕೆಂದರೆ ಅವರ ಕೇಂದ್ರ ಕಾಳಜಿ ಮನುಷ್ಯ ಮತ್ತು ಅವನು ಕಟ್ಟಿಕೊಳ್ಳಬೇಕಾದ ಮಾನವೀಯ ಸಮಾಜದ ಕಡೆಗಿದ್ದದ್ದು. ಭೂತ, ವರ್ತಮಾನ ಹಾಗೂ ಭವಿಷ್ಯತ್‌ಗಳ ನಡುವಿನ ಬಿಡಿಸಲಾಗದ ಅನನ್ಯ ಸಂಬಂಧಗಳು, ಸಮಾಜದ ಅಸ್ತಿತ್ವದಲ್ಲೇ ಅವಿನಾಭಾವವಾಗಿ ಅವು ಇರುವ ಕ್ರಮವನ್ನು ಈ ಲೇಖನ ಪರಂಪರೆಯು ಪ್ರತಿಫಲಿಸುತ್ತದೆ. ಒಟ್ಟಾರೆ ಚರಿತ್ರೆ ಬರವಣಿಗೆಯ ಈ ಘಟ್ಟವು ಚರಿತ್ರೆಯು ಒಂದು ವಿಶಿಷ್ಟ ಶಿಸ್ತಾಗಿ ರೂಪುಗೊಳ್ಳುವುದಕ್ಕೆ ಕಾರಣವಾಯಿತು.